ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡಗಳಿಗೆ ತುಂಬಾ ಗೌರವದ ಸ್ಥಾನವಿದೆ. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ರಂಗಭೂಮಿ ಮುಂತಾದ ಕಲೆಗಳು ಈ ನೆಲದಲ್ಲಿ ಸಮೃದ್ಧವಾಗಿ ಬೆಳೆದಿವೆ. ಧಾರವಾಡ, ಹುಬ್ಬಳ್ಳಿಗಳನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸಿ ಸಂಗೀತ ಗಂಗೆಯು ಅತ್ಯಂತ ವೈಭವದಿಂದ ಇಲ್ಲಿ ಹರಿಯುತ್ತಿದ್ದಾಳೆ. ಇಲ್ಲಿ ಕಂಠ ಸಂಗೀತದೊಡನೆ ತಂತುವಾದನ, ಸುಷಿರ ಹಾಗೂ ಘನವಾದನಕಾರರೂ ಸಾಧನೆ ಮಾಡಿ ಪರಿಣಿತ ಕಲಾವಿದರಾಗಿ ನಾಡಿಗೆ ಕೀರ್ತಿ ತಂದ ಹಿರಿಮೆಗೆ ಪಾತ್ರರಾಗಿದ್ದಾರೆ.

ಈ ಸ್ವರಲತೆಯ ಹೂಬಳ್ಳಿಯಲ್ಲಿ ಅನೇಕ ಕಲಾ ಕುಸುಮಗಳು ವಿಕಸಿತವಾಗಿವೆ. ಇವುಗಳಲ್ಲಿ ಖ್ಯಾತ ಬೀನಕಾರರಾದ ಡಾ. ಬಿಂದುಮಾಧವ ಪಾಠಕರೂ ಒಬ್ಬರಾಗಿದ್ದಾರೆ.

ತಂತುವಾದ್ಯವಾದ ರುದ್ರವೀಣೆಗೆ ಬೀನ್‌ ಎಂದೂ ಕರೆಯುವರು. ವೈದಿಕ ಕಾಲದಿಂದಲೂ ರುದ್ರವೀಣೆಗೆ ವಿಶಿಷ್ಟ ಸ್ಥಾನವಿದೆ. ವೇದ ಮಂತ್ರಗಳ ಪಠಣದ ಜೊತೆಗೆ ರುದ್ರವೀಣೆಯನ್ನೂ ನುಡಿಸುತ್ತಿದ್ದರು. ರುದ್ರವೀಣೆಯ ಆವಿಷ್ಕಾರ ಶಿವನಿಂದಾಯಿತೆಂಬ ಪ್ರತೀತಿ ಇದೆ. ಪಾರ್ವತಿಯ ಶಯನಮುದ್ರೆಯನ್ನು ಕಂಡ ಶಿವನು ಮೋಹಿತನಾಗಿ ಅದೇ ಆಕಾರದ ವೀಣೆಯನ್ನು ಸೃಷ್ಟಿಸಿದ. ಅದೇ ರುದ್ರವೀಣೆ ಎಂದು ತಿಳಿಯಲಾಗುತ್ತಿದೆ.

ಇಂದು ಅಖಿಲ ಭಾರತ ವ್ಯಾಪ್ತಿಯಲ್ಲಿ ಅತಿವಿರಳವಾದ ವಾದ್ಯ ಇದಾಗಿದೆ. ಡಾ. ಬಿಂದುಮಾಧವ ಪಾಠಕರು ಕಳೆದ ಐದು ದಶಕಗಳಿಂದ ರುದ್ರವೀಣಾ, ವಾದನದಲ್ಲಿ ಅನುಪಮ ಸಾಧನೆ ಮಾಡಿದ ಕಲಾವಿದರಾಗಿದ್ದಾರೆ. ಕಣ್ಮರೆಯಾಗುತ್ತಿರುವ ರುದ್ರವೀಣೆಯನ್ನು ಪ್ರಚಾರ ಮಾಡಿ ಅನೇಕ ಶಿಷ್ಯರನ್ನು ತಯಾರು ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಡಾ. ಬಿಂದುಮಾಧವ ಪಾಠಕರು ೧೯೩೫ರ ಏಪ್ರಿಲ್‌ ಒಂಬತ್ತರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರದು ಸಂಗೀತ ಪರಂಪರೆಯ ಮನೆತನ. ತಂದೆ ದತ್ತೋಪಂತ ಹಾಗೂ ಚಿಕ್ಕಪ್ಪ ಸಖಾರಾಮ್‌ ಅವರು ಬೀನ್‌ವಾದಕರು. ಅವರು ಪ್ರಸಿದ್ಧ ಬೀನ್‌ಕಾರರಾದ ಉಸ್ತಾದ ಮುರಾದಖಾನರ ಶಿಷ್ಯರು. ದತ್ತೋಪಂತರ ಪೂರ್ವಜರು ಮೂಲತಃ ಧಾರವಾಡ ಜಿಲ್ಲೆಯ ಬಂಕಾಪುರದ ರೈತ ಮನೆತನದವರು. ಹುಬ್ಬಳ್ಳಿಗೆ ಬಂದು ನೆಲೆಸಿದ ಪಾಠಕ ಮನೆತನ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿತು. ಬಾಲ್ಯದಿಂದಲೇ ಬಿಂದುಮಾಧವ ಸಂಗೀತದ ವಾತಾವರಣದಲ್ಲಿ ಬೆಳೆದುದರಿಂದ ರಕ್ತಗತವಾದ ಸಂಗೀತದ ಎಡೆಗೆ ಸಹಜವಾಗಿ ಆತನಿಗೆ ಒಲವು ಮೂಡಿತು. ದಿನವೂ ತಂದೆ ನುಡಿಸುತ್ತಿದ್ದ ರುದ್ರವೀಣೆಯ ನಾದಮಾಧುರ್ಯ ಬಿಂದುಮಾಧವನ ಅಂತರಂಗವನ್ನು ಮಿಡಿಯುತ್ತಿತ್ತು. ಈ ಬಾಲಕ ತನಗರಿವಿಲ್ಲದಂತೆಯೇ ಸಂಗೀತೆದ ದಾಸನಾಗಿ ಬಿಟ್ಟ. ಮನೆಯಲ್ಲಿ ಬಿಂದುಮಾಧವನ ಅಕ್ಕ ಗಾಯನ ಕಲಿಯುತ್ತಿದ್ದುದರಿಂದ ಕಂಠಸಂಗೀತದ ಪ್ರಭಾವವೂ ಆಯಿತು. ಮನೆಯಲ್ಲಿದ್ದ ಎಲ್ಲ ವಾದ್ಯಗಳನ್ನೂ ಬಾರಿಸುವ ಹವ್ಯಾಸ ಈ ಬಾಲಕನಿಗೆ ಬೆಳೆಯಿತು. ತಬಲಾ, ಬೀನ್‌ಗಳನ್ನು ನುಡಿಸುತ್ತಿದ್ದ. ಹಾಡನ್ನೂ ಹಾಡುತ್ತಿದ್ದ. ಶಾಲೆಯ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗೆಲ್ಲುತ್ತಿದ್ದ. ಮ್ಯಾಟ್ರಿಕ್‌ ಆದ ನಂತರ ತಂದೆ ದತ್ತೋಪಂತರು “ವಿಜ್ಞಾನ ಕಾಲೇಜಿಗೆ ಸೇರಿ ಡಾಕ್ಟರ್ ಆಗು” ಎಂದು ಒತ್ತಾಯಿಸಿದರು. ತನಗೆ ಅದರಲ್ಲಿ ಅಭಿರುಚಿ ಇಲ್ಲವೆಂದು ಹಟಮಾಡಿ ಕಲಾ ಮಹಾವಿದ್ಯಾಲಯಕ್ಕೆ ಸೇರಿಕೊಂಡ. ಆದರೆ ತಂದೆಗೆ ಸಂಗೀತದಲ್ಲಿ ಮಗನಿಗೆ ಇಷ್ಟೊಂಧು ಆಸಕ್ತಿಯಿದೆಯೆಂಬುದು ಗೊತ್ತಿರಲಿಲ್ಲ. ಬಿಂದುಮಾಧವನ ಸಂಗೀತಸಾಧನೆ ಮಾತ್ರ ತಂದೆಗೆ ತಿಳಿಯದಂತೆ ನಡೆದಿತ್ತು. ಆದಾಗ್ಯೂ ಚಿಕ್ಕಪುಟ್ಟ ಕಾರ್ಯಕ್ರಮ ಮಾಡುವಷ್ಟರ ಮಟ್ಟಿಗೆ ಮಗ ತಯಾರಾಗಿದ್ದು ತಂದೆಗೆ ಮಾತ್ರ ಇದರ ಸುಳಿವು ಹತ್ತಿರಲಿಲ್ಲ.

ಕಾಲೇಜು ಶಿಕ್ಷಣ ಪ್ರಾರಂಭವಾದ ನಂತರ ಈ ಯುವಕ ಬಿಂದುಮಾಧವ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಭಾಗವಹಿಸಿ ಬೀನ್‌ವಾದನದಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿದ. ಇದರ ಅಂತರ ವಿಶ್ವವಿದ್ಯಾಲಯ ಯುವಮೇಳ ದಿಲ್ಲಿಯಲ್ಲಿ ನಡೆಸಲಾಗುತ್ತಿತ್ತು.

ಹೀಗಾಗಿ, ಬಿಂದುಮಾಧವನಿಗೆ ತಂದೆಗೆ ಹೇಳದೆ ವಿಧಿಯಿರಲಿಲ್ಲ. ಏನಾದರಾಗಲಿ ಎಂದು ಹೆದರುತ್ತಾ ತಂದೆಗೆ ಹೇಳಿದಾಗ ಮೊದಲು ತಂದೆ ಏನೂ ಮಾತನಾಡದೆ ಸುಮ್ಮನೆ ಕುಳಿತುಬಿಟ್ಟರು. ಸ್ವಲ್ಪ ಸಮಯದ ನಂತರ, “ಅದೇನು ಬಾರಿಸುವಿಯೋ ಮೊದಲು ನನ್ನೆದುರು ಬಾರಿಸು, ಆಮೇಲೆ ನೋಡೋಣ” ಎಂದರು. ಬಿಂದುಮಾಧವ ಬಾರಿಸಿದಾಗ ಅವನಲ್ಲಿಯ ಸಮಗೀಥದ ಹಸಿವು, ಪರಿಶ್ರಮಗಳನ್ನು ಅರಿತರು. ಅವನ ಮುಂದಿನ ಸ್ಪರ್ಧೆಗೆ ತಾವೇ ತಿದ್ದಿ ಕಲಿಸಿ ತಯಾರಿ ಮಾಡಿಸಿದರು. ಮುಂದೆ ಬಿಂದುಮಾಧವನಿಗೆ ದಿಲ್ಲಿಯಲ್ಲೂ ಪ್ರಥಮ ಬಹುಮಾನ ಬಂದಾಗ ತಂದೆಗೆ ಸಂತೋಷವಾಗಿ ಅವನಿಗೆ ದಿನ ನಿತ್ಯ ರುದ್ರವೀಣೆಯ ತಾಳೀಮನ್ನು ಕೊಡಹತ್ತಿದರು. ದಿಲ್ಲಿಯಲ್ಲಿ ನಿರ್ಣಾಯಕರಾಗಿ ಬಂದ ಖ್ಯಾತ ಸಂಗೀತಗಾರ ಪಂ. ರತನ್‌ಝನಕರರು ಬಿಂದುಮಾಧವನಿಗೆ “ನೀನು ಚೆನ್ನಾಗಿ ಬಾರಿಸುತ್ತಿ, ನಿನ್ನ ಬಾಜ್‌ ಪ್ರಭಾವಶಾಲಿಯಾಗಬೇಕಾದರೆ ಕಂಠ ಸಂಗೀತವನ್ನು ಕಲಿಯಬೇಕು” ಎಂದು ಹೇಳಿದರು. ಆದ್ದರಿಂದ ಮನೆಯಲ್ಲಿ ಅಕ್ಕ ಸುಮನಳ ಸಂಗೀತಾಭ್ಯಾಸಕ್ಕೆ ತಬಲಾ ಸಾಥ್‌ ನೀಡುತ್ತಿದ್ದ ಬಿಂದುಮಾಧವನಿಗೆ ಗಾಯನದ ಅಭ್ಯಾಸ ಮಾಡಲು ತೊಂದರೆಯಾಗಲಿಲ್ಲ. ಪಂ. ದತ್ತೋಪಂತ ದೇಸಾಯಿಯವರಿಂದ ಸಂಗೀತ ಅಭ್ಯಾಸ ಮಾಡತೊಡಗಿದ. ಗಣಪತಿ ಉತ್ಸವದಲ್ಲಿ, ರಾಯರ ಮಠದಲ್ಲಿ, ಹೀಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ.

ತಂದೆ ದತ್ತೋಪಂತರು ಮಗನಿಗೆ ಗುರುವಾಗಿ ಗಂಡಾಕಟ್ಟಿ ಸಂಗೀತ ವಿದ್ಯೆಗೆ ಶ್ರೀಕಾರ ಹಾಕಿದರು. ಹೆಚ್ಚಿನ ಬೀನ್‌ ವಿದ್ಯೆಗಾಗಿ ಮಗನನ್ನು ಮಧ್ಯಪ್ರದೇಶದ ದೇವಾಸದಲ್ಲಿಯ ಪ್ರಸಿದ್ಧ ಬೀನ್‌ಕಾರ ಉಸ್ತಾದ್‌ ರಜಬ್ ಅಲಿಖಾನರಲ್ಲಿಗೆ ಕಳಿಸಿದರು. ಅಲ್ಲಿಯ ಕಠಿಣ ಪರಿಶ್ರಮ, ಗುರುಸೇವಾ ಕೆಲಸಗಳಿಗೆ ಅಂಜಿ ಬಿಂದುಮಾಧವರು ಕೆಲವೇ ದಿನಗಳಲ್ಲಿ ಮನೆಗೆ ಮರಳಿದರು. ಆದರೆ ತಂದೆ ಕೋಪಿಸಿ ಪುನಃ ದೇವಾಸಕ್ಕೆ ಕಳಿಸಿದರು. ಅಲ್ಲಿ ಒಂದೆರಡು ವರ್ಷ ಬೀನ್‌ದಲ್ಲಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದಾಗ ಬೀನ್‌ವಾದನದಲ್ಲಿ ನೈಪುಣ್ಯತೆಯನ್ನು ಸಾಧಿಸಿದರು. ನಂತರ ಬೀನ್‌ ವಾದನದಂತೆ ಸಿತಾರ್ ವಾದನದಲ್ಲಿಯೂ ಸಾಧನೆ ಮಾಡುವುದರೊಂದಿಗೆ ಪ್ರಾವೀಣ್ಯತೆಯನ್ನು ಪಡೆದರು.

ಜೀವನೋಪಾಯಕ್ಕಾಗಿ ೧೯೫೮ರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕಛೇರಿಯಲ್ಲಿ ಕೆಲಸ ಮಾಡಲಾರಂಭಿಸಿದರು. ಸುದೈವದಿಂದ ೧೯೬೩ರಲ್ಲಿ ಶಿರಸಿಯ ಎಂ.ಎಂ. ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರೆಂದು ನಿಯುಕ್ತರಾದಾಗ ಸಂಗೀತ ಸಾಧನೆಗೆ ಆಧಾರ ದೊರೆತಂತಾಯಿತು. ವೃತ್ತಿಯೊಂದಿಗೆ ಉನ್ನತ ಪದವಿ ಪಡೆಯಬೇಕೆಂಬ ಬಯಕೆ ಇವರಿಗಿತ್ತು. ಆದ್ದರಿಂದ ೧೯೬೫ರಲ್ಲಿ ಇಂಗ್ಲೀಷ್‌ನಲ್ಲಿ ಎಂ.ಎ. ಪವಿ ಗಳಿಸಿದರು. ಅದರಂತೆ ಫ್ರೆಂಚ್‌ ವಿಷಯದಲ್ಲಿ ಸರ್ಟಿಫಿಕೇಟ್‌ ಕೋರ್ಸ್ ಮಾಡಿಕೊಂಡರು.

೧೯೬೧ರಲ್ಲಿ ಸಾಠೇ ಮನೆತನದ ಕನ್ಯೆ ವಿಜಯಲಕ್ಷ್ಮಿಯವರೊಡನೆ ಬಿಂದುಮಾಧವರ ಮದುವೆಯಾಯಿತು. ಪತ್ನಿ ವಿಜಯಲಕ್ಷ್ಮಿ ನಿಜಕ್ಕೂ ಬಿಂದುಮಾಧವರ ಸಂಗೀತ ಸಾಧನೆಗೆ ಸ್ಪೂರ್ತಿಯ ಸೆಲೆಯಾದರು. ಅದರಂತೆ, ರಾಗದಾರಿಯಲ್ಲಿ ಉದಯರಾಗ, ಭಕ್ತಿಗೀತೆಗಳನ್ನು ಹಾಡುತ್ತಿದ್ದ ತಾಯಿ ಉಮಾಬಾಯಿಯವರ ಆಧ್ಯಾತ್ಮಿಕ ಜೀವನ ಬಿಂದುಮಾಧವರಿಗೆ ಪ್ರೇರಕ ಶಕ್ತಿಯಾಗಿ ಆಶೀರ್ವಾದವಾಗಿ ಸಂಗೀತದಲ್ಲಿ ಕೀರ್ತಿ ಸೋಪಾನಕ್ಕೆ ಎಡೆಮಾಡಿತು.

೧೯೮೧ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸತೊಡಗಿದರು. ೧೯೮೩ರಲ್ಲಿ ಸಂಗೀತ ವಿಷಯ ಕುರಿತು ಹಿಂದಿಯಲ್ಲಿ ಪಿಎಚ್‌.ಡಿ. ಪದವಿ ಸಂಪಾದಿಸಿದರು. ಜೊತೆಗೆ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು ಇವರ ಮಾರ್ಗದರ್ಶನದಲ್ಲಿ ಐದು ಜನ ವಿದ್ಯಾರ್ಥಿಗಳು ಪಿ.ಎಚ್‌.ಡಿ. ಪದವಿ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಪ್ರಾದೇಶಿಕ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೫ರಲ್ಲಿ ವೃತ್ತಿಯಿಂದ ನಿವೃತ್ತರಾದರು.

ಡಾ. ಬಿಂದುಮಾಧವರು ಸಂಗೀತ ವಿಷಯ ಕುರಿತು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಅನೇಕ ನಿಯತಕಾಲಿಕಗಳಲ್ಲಿ ಅವ ಪ್ರಕಟಗೊಂಡಿವೆ.

ಡಾ. ಪಾಠಕರು ಭಾರತೀಯ ಸಂಗೀತದ ಚರಿತ್ರೆ ಮತ್ತು ಡಾ. ಪುಟ್ಟರಾಜ ಗವಾಯಿ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ. ಮೊದಲ ಗ್ರಂಥವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ್ದು ಈ ಗ್ರಂಥಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅತ್ಯುತ್ತಮ ಗ್ರಂಥವೆಂಬ ಪ್ರಶಸ್ತಿ ದೊರೆತಿದೆ. ಎರಡನೆಯ ಗ್ರಂಥವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಕಟಿಸಿದೆ.

ಡಾ. ಪಾಠಕರು ೧೯೫೦ರಿಂದಲೆ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ೧೯೫೫ರಲ್ಲಿ ಅಖಿಲ ಭಾರತ ಆಕಾಶವಾಣಿ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ದೊರೆಯಿತು. ೧೯೫೬ರಲ್ಲಿ ಅಂತರ ವಿಶ್ವವಿದ್ಯಾಲಯದ ಯುವಜನೋತ್ಸವ ಬಹುಮಾನ ಪ್ರಾಪ್ತವಾಯಿತು. ೧೯೫೮ರಲ್ಲಿ ಲಖನೌ ಯುವ ಕಾಂಗ್ರೆಸ್‌ ಅಧಿವೇಶನದಲ್ಲಿ, ೧೯೫೯ರಲ್ಲಿ ದೆಹಲಿಯ ನೆಹರು ನಿವಾಸ ತೀಮನೂರ್ತಿ ಭವನದಲ್ಲಿ, ೧೯೭೭ರಲ್ಲಿ ಪುಣೆ ಸವಾಯಿ ಗಂಧರ್ವ ಪುಣ್ಯತಿಥಿಯಲ್ಲಿ, ೧೯೮೨ರಲ್ಲಿ ಭೋಪಾಲದ ದುರ್ಲಭ ವಾದ್ಯ ವಿನೋದ ಸಮ್ಮೇಳನದಲ್ಲಿ, ಬೆಂಗಳೂರಿನ ಸಾರ್ಕ್ ಸಮ್ಮೇಳನದಲ್ಲಿ, ಮೈಸೂರಿನ ದಸರಾ ಉತ್ಸವದಲ್ಲಿ ಹಾಗೂ ಆಕಾಶವಾಣಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಇವರು ಬೀನ್‌ ನುಡಿಸಿದ್ದಾರೆ. ಧಾರವಾಡ ಆಕಾಶವಾಣಿ ಹಾಗೂ ದೂರದರ್ಶನದ ಎ ಟಾಪ್‌ ಶ್ರೇಣಿಯ ಬೀನ್‌ವಾದನ ಕಲಾಕಾರರು.

ಡಾ. ಬಿಂದುಮಾಧವರ ಬೀನ್‌ವಾದನ ಶೈಲಿಯು ಧೃಪದ ಅಂಗದ ಗೌರಿಹಾರಿ ಬಾನಿಯದಾಗಿದೆ. ಹಾಗೂ ಕಿರಾಣಾ ಘರಾನಾದ ಖ್ಯಾಲ್‌ ಅಂಗದ್ದಾಗಿದೆ. ಸ್ವರಮಾಧುರ್ಯ, ರಾಗವಿಸ್ತಾರ, ಆಲಾಪ, ಜೋಡ್‌, ಝಾಲಾ, ಸಾಂಪ್ರಾದಾಯಿಕ ಗತ್‌ಗಳ ಶೈಲಿ ಇವರ ವಾದನದಲ್ಲಿ ಸಮೃದ್ಧವಾಗಿವೆ. ಇವರು ಪಖಾವಾಜ್‌ ಸಾಥ್‌ ಬದಲಾಗಿ ತಬಲಾ ಸಾಥ್‌ದೊಂದಿಗೆ ಬೀನ್‌ ನುಡಿಸುವರು. ಇವರ ಶಿಷ್ಯರಲ್ಲಿ ಪ್ರಮುಖವಾಗಿ ಪ್ರೊ. ರಾಮಚಂದ್ರ ಹೆಗಡೆ, ಶ್ರೀಮತಿ ಜ್ಯೋತಿ ಹೆಗಡೆ, ಹಾಗೂ ಮಗ ಡಾ. ಶ್ರೀಕಾಂತ ಪಾಠಕ ಇದ್ದಾರೆ.

ಡಾ. ಬಿಂದುಮಾಧವ ಪಾಠಕರ ಸಾಧನೆ, ಸಿದ್ಧಿಗೆ ಅನೇಕ ಪ್ರಶಸ್ತಿಗಳು, ಪುರಸ್ಕಾರಗಳು ದೊರೆತಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯತ್ವ, ಹಾಗೂ ಅಕಾಡೆಮಿಯ ಕರ್ನಟಕ ಕಲಾತಿಲಕ ಪ್ರಶಸ್ತಿ, ೧೯೯೫ನೇ ಸಾಲಿನ ಕರ್ನಾಟಕ ಸರಕಾರದ ಅತ್ಯುನ್ನತ ಸಂಗೀತ ಪ್ರಶಸ್ತಿಯಾದ ಕನಕ ಪುರಂದರ ಪ್ರಶಸ್ತಿ, ಆರ್ಯಭಟ ಸಂಸ್ಥೆಯ ಸಂಗೀತ ವಿದ್ಯಾಪ್ರಪೂರ್ಣ ಬಿರುದುಗ ಳು ದೊರೆತಿವೆ. ಅಲ್ಲದೆ ಕ.ವಿ.ವಿ. ಧಾರವಾಡ ಹಾಗೂ ಗೋವಾದ ಕಲಾ ಅಕಾಡೆಮಿಯ ಸಂಗೀತ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಕ.ವಿ.ವಿ. ಧಾರವಾಡ, ಸಂಗೀತದ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಕ.ವಿ.ವಿ. ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿ, ಪಶ್ಚಿಮ ಬಂಗಾಲದ ಭಾರತೀಯ ಸಂಗೀತದ ಕಾಂಗ್ರೆಸ್‌ ಸದಸ್ಯರಾಗಿ, ಬರೋಡಾದ ಇಂಡಿಯನ್‌ ಮ್ಯುಜಿಕಾಲಾಜಿಕಲ್‌ ಸೊಸೈಟಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು.

ಡಾ. ಪಾಠಕರದು ತುಂಬಾ ಸುಖಮಯ ಸಂಗೀತಮಯ ಪರಿವಾರ. ಇವರಿಗೆ ಮೂರು ಜನ ಮಕ್ಕಳು. ಮಗ ಡಾ. ಶ್ರೀಕಾಂತನು ಗದುಗಿನ ಪುಟ್ಟರಾಜ ಗವಾಯಿಗಳ ಸಂಗೀತ ಮಹಾವಿದ್ಯಾಲಯದಲ್ಲಿ ಸಿತಾರ್ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿರುವನು. ಇನ್ನೊಬ್ಬ ಮಗ ಗಿರೀಶನು ಶಾಲೆಯಲ್ಲಿ ಶಿಕ್ಷಕನಾಗಿದ್ದಾನೆ. ಮಗಳು ಸಂಗೀತಾ ಸಂಗೀತದಲ್ಲಿ ಎಂ.ಎ. ಪದವಿ ಪಡೆದಿದ್ದು ಮದುವೆಯಾಗಿ ಈಗ ಪೂನಾದಲ್ಲಿ ಸುಖಸಂಸಾರ ಸಾಗಿಸುತ್ತಿದ್ದಾಳೆ. ಡಾ. ಬಿಂದುಮಾಧವರು ಕಲಾವಿಧರಾಗಿ, ಸಂಗೀತ ಶಾಸ್ತ್ರಜ್ಞರಾಗಿ, ಶಿಕ್ಷಕರಾಗಿ ಅನೇಕ ಕ್ಷೇತ್ರಗಳಲ್ಲಿ ಕೆಲಸಮಾಡಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.