ಯರವಾಡ ಜೈಲಿನಿಂದ ಇಂಗ್ಲೆಂಡಿನ ಪ್ರಧಾನಿಗೆ ಗಾಂಧಿ ಒಂದು ಪತ್ರ ಬರೆದರು:

ಅಲ್ಪ ಸಂಖ್ಯಾತ ವರ್ಗಗಳ ಬಗೆಗೆ ಬ್ರಿಟಿಷ್ಸರಕಾರ ತೆಗೆದುಕೊಂಡ ನಿರ್ಣಯವನ್ನು ಓದಿ ತುಂಬ ವ್ಯಸನವಾಗಿದೆ. ನವೆಂಬರ್ ೧೩೧೯೩೧ರಂದು ಸೈಂಟ್ಜೇಮ್ಸ್ಪ್ಯಾಲೇಸ್ನಲ್ಲಿ ಜರುಗಿದ ಚಕ್ರಾಧಿವೇಶನದಲ್ಲಿ ಅಲ್ಪಸಂಖ್ಯಾತರ ಸಮಿತಿಯಲ್ಲೇ ನನ್ನ ಜೀವನವನ್ನು ಪಣಕ್ಕಿಟ್ಟು ನಿಮ್ಮ ನಿರ್ಣಯವನ್ನು ವಿರೋಧಿಸಿದ್ದೇನೆ. ಸಾಮ್ಯುಲ್ಹೋರೆ ಅವರಿಗೆ ಬರೆದ ಪತ್ರದಲ್ಲೂ ಅದನ್ನೇ ನಾನು ಸ್ಪಷ್ಟಪಡಿಸಿದ್ದೇನೆ. ಇನ್ನು ಕೊನೆಯದಾಗಿ ನಾನು ಮಾಡಬೇಕಾದದ್ದು ಒಂದೇ ಒಂದಿದೆ; ಅನ್ನ, ನೀರು, ಉಪ್ಪು ಮತ್ತು ಸೋಡವನ್ನೂ ಬಿಟ್ಟು ನಾನು ಅಮರಣಾಂತ ಸತ್ಯಾಗ್ರಹ ಮಾಡಬೇಕಾಗುತ್ತದೆ. ಆದ್ದರಿಂದ ಬ್ರಿಟಿಷ್ ಸರಕಾರ ತನ್ನಿಚ್ಚೆಯಿಂದಲೋ ಅಥವಾ ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿಯೋ ಸರಕಾರದ ನಿರ್ಣಯವನ್ನು ಪರಿಷ್ಕರಿಸಬೇಕು, ಇಲ್ಲವೆ ಹಿಂತೆಗೆದುಕೊಳ್ಳಬೇಕು. ದಲಿತ ವರ್ಗಗಳಿಗೆ ಪ್ರತ್ಯೇಕ ಚುನವಣೆಯ ಕ್ಷೇತ್ರ ನಿರ್ಮಾಣವನ್ನು ಪ್ರತಿಪಾದಿಸುತ್ತಿರುವಕೋಮು ತೀರ್ಪನ್ನುರದ್ದುಪಡಿಸಬೇಕು. ದಲಿತ ವರ್ಗಗಳು ಪ್ರೌಢ ಮತದಾನ ಪದ್ಧತಿಯಂತೆ, ಸಾಮಾನ್ಯ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಬೇಕು, ಅವು ಎಷ್ಟೇ ವಿಶಾಲವಾದವಾಗಿದ್ದರೂ ಚಿಂತೆಯಿಲ್ಲ.

ದಲಿತ ವರ್ಗಗಳಿಗೆ ಕೋಮು ತೀರ್ಪಿನಿಂದ ದೊರೆತಿದ್ದ ಅವಕಾಶಗಳನ್ನು ಸಮರ್ಥಿಸಿ ಅದರಲ್ಲಿ ಯಾವುದೇ ಬದಲಾವಣೆಗೂ ಒಪ್ಪದಂತೆ ಭರವಸೆ ನೀಡಿದ್ದ ಬ್ರಿಟಿಷ್‌ಪ್ರಧಾನಮಂತ್ರಿಯ ನಿಲುವನ್ನು ಸ್ಪಷ್ಟಪಡಿಸುತ್ತ, ರಾಜ್ಯ ಕಾರ್ಯದರ್ಶಿಯವರು ಗಾಂಧಿಯವರಿಗೊಂದು ಪತ್ರ ಬರೆದರು.

ಮೊದಲನೆಯದಾಗಿ, ದಲಿತ ವರ್ಗಗಳ ಸಂಘ ಸಂಸ್ಥೆಗಳಿಂದ ಅನೇಕ ಮನವಿ ಪತ್ರಗಳು ಬಂದಿರುತ್ತವೆ. ಎರಡನೆಯದಾಗಿ, ಅವರ ಸಾಮಾಜಿಕ ದುಬರ್ಲತೆಯೂ ಜನಜನಿತ ಸಮಸ್ಯೆಯೇ ಆಗಿದ್ದು, ಅದು ನಿಮಗೂ ಗೊತ್ತಿದೆ. ಆದ್ದರಿಂದ ದಲಿತ ವರ್ಗಗಳ ಹಿತರಕ್ಷಣೆಯ ದೃಷ್ಟಿಯಿಂದ, ನಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯ ಸವಲತ್ತುಗಳನ್ನು ಅವರಿಗೆ ಒದಗಿಸಿಕೊಡುವುದು ನಮ್ಮ ಕರ್ತವ್ಯವೆಂದು ನಾವು ಭಾವಿಸಿದ್ದೇವೆ. ಅಷ್ಟೇ ಅಲ್ಲ, ದಲಿತರಿಗೆ ಅಂಥ ವಿಶೇಷ ರಾಜಕೀಯ ಸವಲತ್ತುಗಳನ್ನು ನಿರ್ಮಿಸುವುದರಿಂದ ಅವರು ಹಿಂದೂ ಸಮಾಜದಿಂದ ಪ್ರತ್ಯೇಕವಾಗದಂತೆಯೂ ನಾವು ಎಚ್ಚರಿಕೆ ವಹಿಸುತ್ತಲೇ ಬಂದಿದ್ದೇವೆ. ಶಾಸಕಾಂಗಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ಕೊಡಬೇಕೆಂಬುದಕ್ಕೆ ನಿಮ್ಮ ವಿರೋಧವಿಲ್ಲವೆಂಬುದು ಮಾರ್ಚ್೧೦ರ ನಿಮ್ಮ ಪತ್ರದಿಂದ ನಮಗೆ ತಿಳಿದು ಬಂದಿದೆ.

ಸರಕಾರದ ಈಗಿನ ಸ್ಕೀಂನಂತೆ, ದಲಿತ ವರ್ಗಗಳು ಹಿಂದೂ ವರ್ಗದ ಅವಿಭಾಜ್ಯ ಅಂಗವಾಗಿಯೇ ಉಳಿದಿದ್ದಾ. ಸುಮಾರು ೨೦ ವರ್ಷಗಳ ಅವಧಿಯ ತನಕ ಹಿಂದೂಗಳ ಜತೆಯಲ್ಲೇ, ಸಾಮಾನ್ಯ ಕ್ಷೇತ್ರಗಳಲ್ಲೇ ಅವರು ಓಟು ಮಾಡುತ್ತಾರೆ. ಅಲ್ಲದೆ ರಾಜಕೀಯವಾಗಿಯೂ ಸಹ ಅವರು ಹಿಂದೂ ವರ್ಗದ ಅವಿಭಾಜ್ಯ ಅಂಗವಾಗಿಯೇ ಇರುತ್ತಾರೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಅವರ ಹಕ್ಕು ಬಾಧ್ಯತೆಗಳನ್ನು ಪರಿಗಣಿಸಲೇಬೇಕಾಗಿರುವ ಅನಿರ್ವಾಯತೆಯಿಂದಾಗಿ, ಒಂದು ನಿಯಮಿತ ಸಂಖ್ಯೆಯಲ್ಲಿ ಕೆಲವೊಂದು ವಿಶೇಷ ಕ್ಷೇತ್ರಗಳಲ್ಲಿ ಮಾತ್ರ ಅವರು ಓಟು ಮಾಡುತ್ತಾರೆ, ಅಷ್ಟೇ.

ಕೋಮು ತೀರ್ಪಿನಿಂದ ಅಸ್ಪೃಶ್ಯರಿಗೆ ದೊರೆತಿದ್ದ ಹಕ್ಕುಬಾಧ್ಯತೆಗಳನ್ನು ಹತ್ತಿಕ್ಕಲು ಎದ್ದುನಿಂತ ವ್ಯಕ್ತಿ ಗಾಂಧಿ. ಅಸ್ಪೃಶ್ಯರಿಗೆ ದೊರೆತ ಆ ಅವಕಶಗಳನ್ನು ಹತ್ತಿಕ್ಕುವ ತಮ್ಮ ಅಮರಣಾಂತ ಸತ್ಯಾಗ್ರಹವನ್ನು ಸೆಪ್ಟೆಂಬರ್ ೨೦, ೧೯೩೨ರಂದು ಆರಂಭಿಸಿಯೇ ಬಿಟ್ಟರು.

ಇನ್ನಾವುದಾದರೂ ದೇಶದಲ್ಲಾಗಿದ್ದರೆ ಮಹಾತ್ಮರ ಈ ಕಾರ್ಯವನ್ನು ಹಿಂಸೆ ಅಥವಾ ರಾಜಕೀಯ ದರೋಡೆ ಎಂದು ಕರೆಯುತ್ತಿದ್ದರು. ಆದರೆ ಭಾರತದಲ್ಲಿ ಅದು ಹಾಗಲ್ಲ. ಮಹಾತ್ಮರವರ ಸತ್ಯಾಗ್ರಹವನ್ನು ಅವರ ಪ್ರಿಯರೊಬ್ಬರು “ಮಹಾಸತ್ಯಾಗ್ರಹ” ಎಂದು ಚಿತ್ರಫಮೆಯಲ್ಲಿ ವರ್ಣಿಸಿದ್ದಾರೆ. ಪ್ಯಾರಲಾಲ್‌ಅವರು ಗಾಂಧಿಯವರ ಖಾಸಗಿ ಕಾರ್ಯದರ್ಶಿಗಳಲ್ಲಿ ಒಬ್ಬರು. ‘Epic Fast’ಎಂಬ ಹೆಸರಿನಲ್ಲಿ ಅವರು ಪುಸ್ತಕ ಬರೆದಿದ್ದಾರೆ. ಅಂತೂ ಗಾಂಧಿಯ ಈ ನೀಚ ಕಾರ್ಯವನ್ನು, ಅತ್ಯುಚ್ಛ ಮಟ್ಟದಲ್ಲಿ ವೈಭವೀಕರಿಸುವ ಕೆಲಸದಲ್ಲಿ, ಈ ಹಿಂದೂ ಮಹಾಶಯರು ಮಹಾ ಸಾಹಸವನ್ನೇ ಮಾಡಿದ್ದಾರೆ. ಹಾಗೆ ಮಾಡಿ ಪ್ರಪಂಚವನ್ನೆಲ್ಲಾ ನಿಬ್ಬೆರಗುಗೊಳಿಸಬೇಕೆಂಬುದು ಇವರ ಉದ್ದೇಶ. ಅದೇ ಪುಸ್ತಕವನ್ನು ಡಾ. ಬಾಬಾ ಸಾಹೇಬ್‌ಅಂಬೇಡ್ಕರ್ “ಅದರಲ್ಲಿ ಗಮನಾರ್ಹವಾದ್ದದೇನೂ ಇಲ್ಲ. ಒಬ್ಬ ದಗಾರಕೋರನ ದಗಾಕೋರತವನ್ನು ಇನ್ನೊಬ್ಬ ದಗಾಕೋರ ಬರೆದಿದ್ದಾನೆ, ಅಷ್ಟೆ” ಎಂದರು.

ಬ್ರಿಟಿಷರೊಡನೆ ವ್ಯವಹರಿಸುವಾಗ ಏನಾದರೂ ವಿಪರೀತವಾಗಿ ಬಿಟ್ಟರೆ ಏನು ಗತಿಯೆಂದು, ಅಂಥ ಸಂದರ್ಭ ಘಟಿಸಬಹುದಾದಂತ ಸೂಚನೆಗಳು ಕಂಡುಬಂದ ತಕ್ಷಣ ಗಾಂಧಿ ಹೇಗೆ ಬಚಾವ್‌ಆಗುತ್ತಿದ್ದರು ಎಂಬುದಕ್ಕೆ “ಬ್ರಿಟಿಷ್‌ಸರಕಾರದ ವಿರುದ್ಧ ನಾನೇನೂ ಸತ್ಯಾಗ್ರಹ ಮಾಡುತ್ತಿಲ್ಲ” ಎಂದು ನುಡಿದ ಅವರ ಈ ಮಾತೇ ಸಾಕ್ಷಿ. ಅಥವಾ ಅವರ ಸತ್ಯಾಗ್ರಹ ಸವರ್ಣೀಯರ ವಿರುದ್ಧವೂ ಆಗಿರಲಿಲ್ಲ. ಗಾಂಧಿಯ ಸತ್ಯಾಗ್ರಹ ಹತಭಾಗ್ಯ ಅಸ್ಪೃಶ್ಯರ ವಿರುದ್ಧ; ಇಂಡಿಯಾದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಮಹಾತ್ಮಿಕೆಯ ಠಕ್ಕುತನವನ್ನು ಹೊರಲೋಕಕ್ಕೆ ತೋರಿಸಿಕೊಟ್ಟ ಅವರ ಏಕಮಾತ್ರ ನಾಯಕರೆನಿಸಿದ ಡಾ. ಅಂಬೇಡ್ಕರ್ ವಿರುದ್ಧ, ಅಸ್ಪೃಶ್ಯರ ವಿರುದ್ಧ ಗಾಂಧಿ ಎಸಗಿದ ನೀಚಕೃತ್ಯಗಳನ್ನೆಲ್ಲಾ ಮೆಟ್ಟಿನಿಂತು, ಇಂಡಿಯಾ ರಾಜಕೀಯ ಭೂಪಟದಲ್ಲಿ ತನ್ನ ಜನಾಂಗಕ್ಕೊಂದು ರಾಜಕೀಯ ಸ್ವಾತಂತ್ರ್ಯ ನಿರ್ಮಿಸಿಕೊಡುವ ಸಲುವಾಗಿ, ಬದುಕಿನುದ್ದಕ್ಕೂ ಹೋರಾಡಿದ ಡಾ. ಅಂಬೇಡ್ಕರ್ ಅವರ ವಿರುದ್ಧ ನಡೆದುದು ಗಾಂಧಿ ಸತ್ಯಾಗ್ರಹ. ಗಾಂಧಿ ಸತ್ಯಾಗ್ರಹದಿಂದ ಸವರ್ಣ ಹಿಂದೂ ಸಮಾಜಕ್ಕೆ ಕ್ಷಯರೋಗ ತಟ್ಟಿತು. ಗಾಂಧಿ ಸತ್ಯಾಗ್ರಹವನ್ನು ಸತ್ಯವಾಗಿಯೂ ಬೆಂಬಲಿಸಿ ಸವರ್ಣೀಯ ಸಮಾಜ ಡಾ. ಅಂಬೇಡ್ಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದವು. ತಮ್ಮ ಮಹಾ ಮಹಾತ್ಮರ ಬೇಡಿಕೆಗೆ ವಿರುದ್ಧ ನಿಂತದ್ದೇ ಆದರೆ, ಭೀಕರ ಕುತ್ತು ನಿಮಗೆ ಕಾದಿದೆಯೆಂದು ರಕ್ತದಿಂದ ಬರೆದ ಅನೇಕ ಪತ್ರಗಳ ರಾಶಿ ಅಂಬೇಡ್ಕರ್ ಅವರ ಆಫೀಸ್‌ನಲ್ಲಿ ಬಂದು ಸುರಿದವು. ಹಿಂದೂ ಲೀಡರುಗಳೆನಿಸಿದ ಚಕ್ರವರ್ತಿ ಸಿ. ರಾಜಗೋಪಾಲಚಾರಿ, ಶ್ರೀತೇಜಬಹದ್ದೂರ್ ಸಪ್ಪು ಮುಂತಾದ ಅನೇಕರು ಒಂದು ರಾಜಿ ಸೂತ್ರಕ್ಕೆ ಸಹಿ ಮಾಡಬೇಕೆಂದು ಡಾ. ಅಂಬೇಡ್ಕರ್ ಅವರನ್ನು ಒತ್ತಾಯಿಸಿದರು. ತಮಾಷೆ ಎಂದರೆ, ಈ ರಾಜಿ ಸೂತ್ರ ಅಸ್ಪೃಶ್ಯರ ಉದ್ಧಾರಕ್ಕಲ್ಲ, ಮಹಾತ್ಮರ ಉದ್ಧಾರಕ್ಕೆ. ಮಹಾತ್ಮ ಗಾಂಧೀಯವರ ನಾಯಕತ್ವದಲ್ಲಿ ಹಿಂದೂ ಲೀಡರುಗಳು, ಗಾಂಧಿಭಕ್ತರು, ಗೆಳೆಯರು ಮುಂತಾದವರೆಲ್ಲಾ ಗಾಂಧಿ ಬೇಡಿಕೆಯನ್ನು ಪಟ್ಟು ಹಿಡಿದು ನಿಂತರೆ, ತನ್ನ ಜನಾಂಗಕ್ಕಾಗಿ ಚಕ್ರಾಧಿವೇದಲ್ಲಿ ಪಡೆದುಬಂದಿದ್ದ ಹಕ್ಕುಗಳ ರಕ್ಷಣೆಗಾಗಿ ಪಟ್ಟು ಹಿಡಿದು ನಿಂತ ಏಕೈಕ ನಾಯಕರು ಡಾ. ಬಾಬಾಸಾಹೇಬ್‌ಅಂಬೇಡ್ಕರ್. ಈ ಸಂದರ್ಭದಲ್ಲಿ ಗಾಂಧಿ ಜೀವನ ಉಳಿಸಬೇಕೊ ಅಥವಾ ತನ್ನ ಜನಾಂಗದ ಹಕ್ಕುಗಳನ್ನು ಕಾಯಬೇಕೋ ಎಂಬುದು ಡಾ. ಅಂಬೇಡ್ಕರ್ ಅವರಿಗೆ ಅತ್ಯಂತ ತೊಡಕಿನ ಸಮಸ್ಯೆಯಾಯಿತು. ಕೊನೆಗೆ ಸವಣ ಹಿಂದೂ ಲೀಡರುಗಳ ಪ್ರಯತ್ನಗಳೆಲ್ಲಾ ವಿಫಲವಾದವು: ಕೊಟ್ಟ ಕೊನೆಯಲ್ಲಿ, ಎರಡು ವರ್ಗಗಳ ನಾಯಕರೂ ಸೇರಿ ಒಪ್ಪಂದಕ್ಕೆ ಸಹಿ ಮಾಡಿದರು. ಅದೇ ಇತಿಹಾಸ ಪ್ರಸಿದ್ಧವಾದ “ಪೂನಾ ಒಪ್ಪಂದ” (Poona Pact). ಆದರೆ, ಗಾಂಧಿ ಮಾತ್ರ ಈ ಒಪ್ಪಂದಕ್ಕೆ ಸಹಿ ಮಾಡಲಿಲ್ಲ. ಇದಾದ ಮೇಲೆ ಒಪ್ಪಂದಕ್ಕೆ ಸಹಿ ಮಾಡಿದ್ದ ಹಿಂದೂ ಲೀಡರುಗಳೆಲ್ಲಾ ಸೇರಿ, ಈ ಒಪ್ಪಂದವನ್ನೇ ಗಾಂಧಿ ವಿಜಯ ಎಂದು ವಿಜಯೋತ್ಸವವಾಹದಿಂದ ಅಡ್ಡಾಡತೊಡಗಿದರು. ಆದರೆ ಡಾ. ಅಂಬೇಡ್ಕರ್ ಅವರು ಇದನ್ನು ಸಹಿಸಲಿಲ್ಲ. ಇದಾದ ಮುಂದಿನ ವರ್ಷಗಳಲ್ಲಿ ಹಿಂದೂ ಲೀಡರುಗಳ ಈ ಕೃತ್ಯವನ್ನು “ಸೆಂಟಿಮೆಂಟಲ್‌ಅವಿವೇಕಿ” ಎಂದರು.

ಈ ಹಿಂದೂ ಮಹಾತ್ಮರು ತಮ್ಮ ನೀಚ ಕೃತ್ಯವನ್ನು ಇಲ್ಲಿಗೇ ನಿಲ್ಲಿಸಲೂ ಇಲ್ಲ. ದಲಿತರ ನ್ಯಾಯಸಮ್ಮತವಾದ ಹಕ್ಕುಗಳ ರಕ್ಷಣೆ ಮಾಡುವುದಾಗಿ ನಂಬಿಸಿ, ಯಾವ ಹಿಂದೂಗಳಿಗೆ ನ್ಯಾಯ ನೀತಿಯ ಅರ್ಥಗೊತ್ತಿಲ್ಲವೋ, ಆ ಜನರ ನಡುವೆ ಮತ್ತೆ ಆ ದಲಿತ ನಾಯಕರನ್ನು ಕರೆದುಕೊಂಡು ಹೋಗಿ ಈ ಮಹಾತ್ಮ ಮಾಡಬಾರದಂಥ ನೀಚ ಪ್ರಮಾಣ ಮಾಡಿಸಿದರು. ಧರ್ಮದ ಹೆಸರಿನಲ್ಲಿ ನಿರಪರಾಧಿ ಶಂಭೂಕನನ್ನು ಕೊಲ್ಲಿಸಿದರು. ಆ ದೊರೆಯ ಸತ್ಪ್ರಜೆಗಳಲ್ಲವೇ ಈ ಹಿಂದೂಗಳು? ಸ್ವಸಾಮರ್ಥ್ಯದಿಂದ ಬಿಲ್ವಿದ್ಯೆ ಕಲಿತ ಸರಿಸಾಟಿಯಿಲ್ಲದ ವೀರ ಮುಗ್ಧ ಏಕಲವ್ಯನ ಬೆರಳು ಕತ್ತರಿಸಿ, ಪಾಠ ಕಲಿಸಿಕೊಡದಿದ್ದರೂ ಅದಕ್ಕೆ ಗುರುದಕ್ಷಿಣೆ ಎಂದು ಹೆಸರಿಟ್ಟು, ತಮ್ಮ ಷಂಡತನವನ್ನು ಮುಚ್ಚಿಕೊಂಡ ಮಹಾಸತ್ಯ ಸಂಧರಲ್ಲವೆ ಈ ಹಿಂದೂ ಜನಾಂಗ? ಅವರ ಪುರಾಣ ಇತಿಹಾಸಗಳೆಲ್ಲಾ ಇವನ್ನಲ್ಲದೆ ಬೇರೆ ಹೇಳುತ್ತವೆ? ಸ್ವಂತ ಬುದ್ಧಿಯಿಲ್ಲದ ವ್ಯಕ್ತಿ ಶ್ರೀಮಾನ್‌ಗಾಂಧಿ ಅವರ ಹಿಂದೂ ಧರ್ಮ ಏನು ಹೇಳಿದರೆ ಹಾಗೆ ಮಾಡಿಕೊಂಡು ಬಂದಂಥ ಮಹಾತ್ಮ ಈ ಗಾಂಧಿ. ಈಗ ಮಾತ್ರ ಒಂದು ಸತ್ಯದ ದಲಿತ ಸಮಾಜಕ್ಕೆ ಗೋಚರವಾಗಿದೆ. ಹಿಂದೂ ಧರ್ಮದ ಸರ್ವನಾಶದಿಂದ ಮಾತ್ರ ದಲಿತ ಸಮಾಜದ ಪುರುದ್ಧಾರವಾಗಬೇಕಾಗಿದೆ. ‘ಪೂನಾ ಒಪ್ಪಂದ’ ಕಾರ್ಯಗತವಾಗತೊಡಗಿದ ಮೇಲೆ, ಅಸ್ಪೃಶ್ಯರು ಮತ್ತು ಡಾ. ಅಂಬೇಡ್ಕರ್ ರ ನಡುವೆಯೇ ವೈಷಮ್ಯ ಹುಟ್ಟಿಸುವ ಪ್ರಯತ್ನಗಳು ದೇಶಾದ್ಯಂತ ಎಸಗಲ್ಪಟ್ಟಿವೆ. ಈ ವೈಷಮ್ಯಕ್ಕಾಗಿ ತಮ್ಮ ವಿಷಾದದ ಭಾವತುಮುಲವನ್ನು ಡಾ. ಬಾಬಾ ಸಾಹೇಬ್‌ತಮ್ಮದೇ ಆದ ಮಾತುಗಳಲ್ಲಿ ಬರೆದಿಟ್ಟಿದ್ದಾರೆ:

ಪೂನಾ ಒಪ್ಪಂದದಿಂದ ಭಿನ್ನ ಭಿನ್ನ ರೀತಿಯ ಪ್ರತಿಕ್ರಿಯೆಗಳು ಹುಟ್ಟಿಕೊಂಡವು. ಅಸ್ಪೃಶ್ಯರ ಕಡೆಯಿಂದ ಅಸಮಾಧಾನ ಅವರ ಅಸಮಧಾನಕ್ಕೆ ಕಾರಣವೂ ಇಲ್ಲದಿಲ್ಲ ಹಾಗೆಯೇ ಇದನ್ನು ಅಲ್ಲಗಳೆಯುವ ಜನರಿಗೂ ಕೊರತೆಯಿಲ್ಲ. ಅಲ್ಲದೆ, ಬ್ರಿಟಿಷ್ಪ್ರಧಾನಮಂತ್ರಿ ತಮ್ಮ ಕೋಮುತೀರ್ಪುನಲ್ಲಿ ಅಸ್ಪೃಶ್ಯರಿಗೆ ಎಷ್ಟು ಸ್ಥಾನಗಳನ್ನು ಕೊಟ್ಟಿದ್ದರೋ, ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪೂನಾ ಒಪ್ಪಂದದಿಂದ ಕೊಡಲಾಗಿದೆ ಎಂಬುದನ್ನು ಅವರು ಮರೆಯಬಾರದು. ಕೋಮುತೀರ್ಪಿನಿಂದ ಅಸ್ಪೃಶ್ಯರಿಗೆ ಕೇವಲ ೭೮ ಸ್ಥಾನಗಳು ದೊರೆಯುತ್ತಿದ್ದವು. ಆದರೆ ಪೂನಾ ಒಪ್ಪಂದದಿಂದ ೧೪೮ ಸ್ಥಾನಗಳು ದೊರೆತವು. ದೃಷ್ಟಿಯಿಂದ ಆಲೋಚಿಸಿದಾಗ, ಅಸ್ಪೃಶ್ಯರಿಗೆ ಪೂನಾ ಒಪ್ಪಂದ ಗಮನಾರ್ಹವೇ ಹೊರತು, ಕೋಮು ತೀರ್ಪಲ್ಲವೆಂಬುದನ್ನು ನೆನಪಿಡಬೇಕು.

ಈ ಇತಿಹಾಸ ಪ್ರಸಿದ್ಧ ಘಟನೆ ಸಂಭವಿಸಿದ ನಂತರವೇ ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧಿಯ ವಿಚಾರದ ರೀತಿ ಮತ್ತು ಅವರ ವಕ್ರ ಬುದ್ಧಯನ್ನು ಕುರಿತು ಬರೆಯತೊಡಗಿದುದು. ಇವೆಲ್ಲಾ ಏನೇ ಆದರೂ ಅವರ ಅವಿರತ ಹೋರಾಟದಿಂದ ಪಡೆದಿದ್ದ ದಲಿತರ ರಾಜಕೀಯ ಹಕ್ಕುಗಳನ್ನು ಹತ್ತಿಕ್ಕುವಸಲುವಾಗಿ, ಚಕ್ರಾಧಿವೇಶನ ಮತ್ತು ಸತ್ಯಾಗ್ರಹ ಸಂದರ್ಭಗಳಲ್ಲಿ ಗಾಂಧಿ ನಡೆದುಕೊಂಡ ರೀತಿಯಿಂದ ಡಾ. ಅಂಬೇಡ್ಕರ್ ಅಸಮಾಧಾನಗೊಳ್ಳಲಿಲ್ಲವೆಂದೇ ಹೇಳಬೇಕು. ಆದರೆ ಗಾಂಧಿ ಅಂತ ಧೋರಣೆಯಿಂದ ಅಸ್ಪೃಶ್ಯರ ಹಕ್ಕುಗಳನ್ನು ಹತ್ತಿಕ್ಕುವ ಯತ್ನಮಾಡಿದ್ದರೊ,ಅದೇ ಧೋರಣೆಯಲ್ಲಿ ಬೋಧಿಸುತ್ತ ಮತ್ತು ಬರೆಯಲು ತೊಡಗಿದುದು ಮಾತ್ರ ಗಾಂಧಿಯ ಮೇಲಿನ ಸಹನೆ ವೀರುವಂತಾಯಿತು, ಗಾಂಧಿಯವರೇ ಬರೆದಿರುವ ಕೆಳಗಿನ ಮಾತುಗಳು ವಿಚಾರಾರ್ಹವಾದವು.

ನನ್ನ ಅಭಿಪ್ರಾಯದಲ್ಲಿ ಇಂದಿನ ನಮ್ಮ ಸ್ಥಿತಿಗೆ ಕಾರಣ ಜಾತಿಪದ್ಧತಿಯಲ್ಲ. ನಮ್ಮನ್ನು ಇಂದಿನ ದಾಸ್ಯಕ್ಕೆ ನೂಕಿರುವುದು ನಮ್ಮ ದುರಾಶೆ ದುರಭಿಮಾನಗಳು. ಹರಿದು ಹಂಚಿಹೋಗಬಹುದಾಗಿದ್ದ ಹಿಂದೂ ಧರ್ಮ ಇಂದು ಅವಿಭಾಜ್ಯವಾಗಿ ಉಳಿದಿರುವುದಕ್ಕೆ ಮೂಲಕಾರಣ ಅದರ ಜಾತಿ ಪದ್ಧತಿ. ನಾಲ್ಕು ವರ್ಣಗಳೇ ಮೂಲಭೂತವಾದವೆಂಬುದು ನನ್ನ ಸ್ಪಷ್ಟವಾದ ಅಭಿಪ್ರಾಯ. ಅಷ್ಟೇ ಅಲ್ಲ, ವರ್ಣ ವಿಭಜನೆ ಸಹಜವಾದದ್ದು ಮಾತ್ರವಲ್ಲ, ಅತ್ಯಗತ್ಯವಾದದ್ದೂ ಹೌದು. ಆದ್ದರಿಂದ ಮೂಲಭೂತವಾದ ವರ್ಣ ವಿಭಜನೆಯನ್ನು ನಾಶಮಾಡುವ ಯಾವುದೇ ಪ್ರಯತ್ನವನ್ನು ನಾನುಸಹಿಸಲಾರೆ. ಜಾತಿ ಪದ್ಧತಿಗೆ ಆಧಾರ ಅಸಮಾನತೆಯಲ್ಲ.

ನನ್ನ ಹುಟ್ಟಿನಿಂದ ಹಾಗೂ ಕರ್ಮ ಸಿದ್ಧಾಂತದಿಂದ ವರ್ಣಾಶ್ರಮ ಧರ್ಮದಲ್ಲಿ ನನಗೆ ನಂಬಿಕೆಯಿದೆ. ಅದೇ ಒಬ್ಬ ಕಸ ಗುಡಿಸುವ ಭಂಗಿಯನ್ನು ಕೀಳಾಗಿ ಕಾಣುವುದರಲ್ಲಿ ನನಗೆ ನಂಬಿಕೆಯಿಲ್ಲ.

ಮನುಷ್ಯನ ಸ್ವಭಾವದಲ್ಲೇ ವರ್ಣಾಶ್ರಮ ಸಿದ್ಧಾಂತವಿದೆಯೆಂಬುದು ನನ್ನ ಅಭಿಪ್ರಾಯ. ಅದನ್ನೇ ಹಿಂದೂ ಧರ್ಮ ವೈಜ್ಞಾನಿಕವಾಗಿ ಹೇಳಿದೆ. ಆದರೆ ಅದು ಹುಟ್ಟನ್ನು ಆಧರಿಸಿಲ್ಲ. ವ್ಯಕ್ತಿಯೂ ತನ್ನಿಷ್ಟ ಬಂದಂತೆ ವರ್ಣವನ್ನು ಬದಲಾಯಿಸಿಕೊಳ್ಳಲು ಬರುವುದಿಲ್ಲ. ತನ್ನ ವರ್ಣವನ್ನು ತಾನು ಗೌರವಿಸಲಿಲ್ಲವೆಂದರೆ ಅವನ ವಂಶಪಾರಂಪರ್ಯಕ್ಕೆ ಅವನು ಅಗೌರವವೆಸಗಿದಂತೆಯೇ.

ಜಾತಿ ಪದ್ಧತಿಗೆ ವೈಜ್ಞಾನಿಕ ತಳಹದಿಯಿದೆಂಬುದು ನನ್ನ ತಿಳುವಳಿಕೆ. ಅಂದ ಬಳಿಕ ಸಕಾರಣೀಯ ವಿಚಾರವಾದ ಅದನ್ನು ವಿರೋಧಿಸಲಾರದು. ಜಾತಿಪದ್ಧತಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಜಾತಿ ಪದ್ಧತಿ ಒಂದು ಸಂಪ್ರದಾಯ. ಅದರ ಹುಟ್ಟು ನನಗೇನೂ ಗೊತ್ತಿಲ್ಲ. ನನ್ನ ಆಧ್ಯಾತ್ಮಿಕ ತೃಪ್ತಿಗೆ ತಿಳುವಳಿಕೆಯ ಅಗತ್ಯವೂ ಇಲ್ಲ.

ಅಂದರೆ ಕಸ ಗುಡಿಸುವ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ, ಕಸ ಗುಡಿಸುವ ಉದ್ಯೋಗದಿಂದಲೇ ಬದುಕಬೇಕು. ಆಮೇಲೆ ಅವನು ಏನು ಬೇಕಾದರೂ ಮಾಡಿಕೊಳ್ಳಲಿ, ಚಿಂತೆಯಿಲ್ಲ. ಒಬ್ಬ ಜಾಡುಮಾಲಿಗೂ ಒಬ್ಬ ಲಾಯರ್ ಅಥವಾ ನಿಮ್ಮ ಅಧ್ಯಕ್ಷರಿಗೂ ಏನೂ ವ್ಯತ್ಯಾಸವಿಲ್ಲ. ನನ್ನ ದೃಷ್ಟಿಯಲ್ಲಿ ಇದೇ ಹಿಂದೂ ಧರ್ಮ.

ಯಾವ ವ್ಯಕ್ತಿ ಸಂದೇಹಪಟ್ಟುಕೊಂಡು ತನ್ನ ಜಾತಿಯನ್ನು ಬಿಡುವ ಯತ್ನ ಮಾಡುತ್ತಾನೋ ಅವನು ತನ್ನ ಅನುವಂಶಿಕವಾದ ಸಂಪ್ರದಾಯವನ್ನು ಮುರಿಯುತ್ತಿದ್ದಾನೆ ಎಂದು ಅರ್ಥ. ಒಬ್ಬ ಬ್ರಾಹ್ಮಣ ಹಜಾಮ ವೃತ್ತಿಯಿಂದಲೋ ಅಥವಾ ಇಂಜಿನಿಯರ್ ಆಗಿಯೋ ಅವನು ಬದುಕುತ್ತಿದ್ದಾನೆ ಎಂದರೆ, ಅವನು ತನ್ನ ಅನುವಂಶಿಕವಾದ ಜಾತಿಯನ್ನು ಮುರಿಯುತ್ತಿದ್ದಾನೆ. ಎಂದು ಅರ್ಥ. ಹಾಗೆಯೇ ಒಬ್ಬ ಹಜಾಮ ಇಂಜಿನಿಯರ್ ಅದೇನೆಂದರೆ, ಅವನೂ ಸಹ ತನ್ನ ಜಾತಿಯನ್ನು ಮುರಿದು ಇಲ್ಲದ ಗೊಂದಲ ಎಬ್ಬಿಸಿದ್ದಾನೆ ಎಂದರ್ಥ.

ಹಿಂದೂ ಧರ್ಮವನ್ನು ನಾನು ಮೇಲೆತ್ತಬೇಕು, ಅಸ್ಪೃಶ್ಯರು ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ ಎಂಬುದರಲ್ಲಿ ನನಗೆ ತುಂಬಾ ಗೌರವವಿದೆ. ಒಬ್ಬನೇ ಒಬ್ಬ ಭಂಗಿ ಹಿಂದೂ ಧರ್ಮವನ್ನು ಬಿಟ್ಟನೆಂದರೆ ನನಗೆ ಅಸಾಧ್ಯ ನೋವಾಗುತ್ತದೆ. ಆದರೆ ಎಲ್ಲಾ ವರ್ಗ ವಿಭಜನೆಯನ್ನು ತೊಡೆದು ಹಾಕಬಹುದೆಂಬುದು ಹುರುಳಿಲ್ಲದ ಮಾತು.

ಮದುವೆ ಎಂಬುದು ಎಷ್ಟರಮಟ್ಟಿಗೆ ಸಹಜ ಸಂಭವನೀಯವೋ, ಹುಟ್ಟೂ ಅಷ್ಟೇ ಸಹಜವಾದದ್ದು. ಹುಟ್ಟು ಸಾವುಗಳಿಂದ ಮುಕ್ತರಾಗುವುದೇಸ್ವಾತಂತ್ರ್ಯ. ಅಂತರ ಜಾತಿ ಮದುವೆಗಳು ಮತ್ತು ಊಟದ ಕೂಟಗಳನ್ನು ಅತ್ಯಗತ್ಯವಾಗಿ ತಡೆಗಟ್ಟಲೇಬೇಕು. ಇಲ್ಲವಾದರೆ ಅತ್ಮೋನ್ನತಿ ಅಸಾಧ್ಯ. ಮಾದಕ ಪಾನೀಯಗಳು, ವಿಶೇಷವಾಗಿ ಆಧ್ಯಾತ್ಮಿಕ ಔನ್ನತ್ಯವನ್ನು ಮುಟ್ಟಲು ಶಕ್ಯವಿದೆ.

ಬ್ರಾಹ್ಮಣರು, ಕ್ಷತ್ರೀಯರು ಮತ್ತು ಶೂದ್ರರು ಎಲ್ಲರೂ ಗೋಮಾತೆಯನ್ನು ರಕ್ಷಿಸಲೇಬೇಕಲ್ಲವೇ? ಗೋಮಾತೆಗಾಗಿ ಆತ್ಮ ತ್ಯಾಗ ಮಾಡುವುದಕ್ಕಾದರೂ ಸಿದ್ಧರಿಲ್ಲವಾದಲ್ಲಿ ಅಂಥವರೆಲ್ಲಾ ಹಿಂದೂಗಳಾಗಿ ಉಳಿಯಲು ಸಾಧ್ಯವೇನು.

ಗಾಂಧಿಯ ಈ ಅಭಿಪ್ರಾಯಗಳಿಂದ ತಿಳಿಯುವುದೇನು? ಗಾಂಧಿ ಅಸ್ಪೃಶ್ಯರ ವೈರಿ ಮಾತ್ರವಲ್ಲ, ಅಸ್ಪೃಶ್ಯರಿಗೆ ಗಾಂಧಿ ಮಾಡಿದ ಅನ್ಯಾಯವನ್ನು ಬೇರಾರೂ ಮಾಡಲಿಲ್ಲವೆಂಬುದೂ ಇದರಿಂದ ಸ್ಪಷ್ಟಪಡುತ್ತದೆ. ಬಾಬಾ ಸಾಹೇಬ್‌ಅಂಬೇಡ್ಕರ್ ಅವರೇ ಹೇಳಿರುವಂತೆ “ಗಾಂಧಿ ವಿಭ್ರಾಂತ ಪ್ರಪಂಚದ ಮತಹೀನ ವ್ಯಕ್ತಿ. ” ನೀಚ ಹಿಂದೂ ಸಂಪ್ರದಾಯಗಳನ್ನು ಬುದ್ಧಿ ಸ್ಥಿತಿಮಿತದಲ್ಲಿರುವ ಯಾವೊಬ್ಬ ಸ್ವಾಭಿಮಾನಿ ಅಸ್ಪೃಶ್ಯರೂ ಒಪ್ಪುವುದಿಲ್ಲ. ಬಾಬಾ ಸಾಹೇಬ್‌ಅಂಬೇಡ್ಕರ್ ಗಾಂಧಿಯ ಆಚಾರ-ವಿಚಾರಗಳನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸುತ್ತಾ ನಡೆದರು. ಗಾಂಧಿ ಉಪದೇಶದಿಂದ ಅಸ್ಪೃಶ್ಯರಿಗೆ ಅಸ್ಪೃಶ್ಯರೇ ಅನೇಕ ರೀತಿಯ ವೈರಿಗಳಾಗಿ ಹುಟ್ಟಿಕೊಂಡು ಎಡಬಿಡಂಗಿ ವಿದ್ಯಾವಂತ ಯುವಜನ ಅಧಿಕಾರರೂಢ ಕಾಂಗ್ರೆಸ್ಸಿನ ಎಂಜಲಿಗೆ ತಮ್ಮನ್ನು ತಾವು ಮಾರಿಕೊಂಡರು. ಇಂಥ ಅಸಾಧ್ಯ ದುರಂತ ಸನ್ನಿವೇಶದಲ್ಲಿ ಯಾತನೆ ಸಹಿಸಲಾರದೆ ಡಾ. ಬಾಬಾ ಸಾಹೇಬ್‌ಲೇಖನಿ ಹಿಡಿದು ಕುಳಿತರು; ಗಾಂಧಿ ಮತ್ತು ಕಾಂಗ್ರೆಸ್ಸಿನ ನೀಚತನವನ್ನು ಬೀದಿಗಿಳಿಯುತ್ತ, ಬರೆಯುತ್ತ ನಡೆದರು. ಸಮುದ್ರದ ಅಲೆಯ ಅಬ್ಬರದಂಥ ವ್ಯಕ್ತಿಗಳೂ ಸಹ, ಒಂದಾನೊಂದು ಕಾಲದಲ್ಲಿ ಕಟ್ಟಾ ಗಾಂಧಿ ಭಕ್ತರಾಗಿದ್ದವರು, ಆಮೇಲೆ ಗಾಂಧಿಯ ನೀಚತನದ ಅರಿವಾಗಿ, ಹಿಂದೂ ಲೀಡರುಗಳ ವೇದಿಕೆಯಿಂದ ಕೆಳಗಿಳಿದರು. ಅನಂತರ ೧೯೪೨ರಲ್ಲಿ ಸಂಘಟಿಸಲಾಗಿದ್ದ ಪಕ್ಷ ರಹಿತ ಸಮ್ಮೇಳನದ ಸಂಚಾಲರಿಕಗೆ ಶ್ರೀ ರಾಜಾರವರು ಬರೆದ ಪತ್ರದಲ್ಲಿ, ಅವರ ಧೋರಣೆ ಪ್ರಕಟವಾಗಿದೆ:

ಅನ್ಯವರ್ಗಗಳ ಜೊತೆಗೆ ಸಹಕರಿಸುವುದರಿಂದ ದಲಿತ ವರ್ಗಕ್ಕೆ ಏನಾದರೂ ಸಹಕಾರವಾಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ನಮ್ಮ ಸಹಕಾರವನ್ನೆಲ್ಲಾ ಪಡೆದುಕೊಂಡು, ಕಗ್ಗಾಡಿನಲ್ಲಿ ಕೈಬಿಟ್ಟಂತೆ ನಮ್ಮನ್ನು ಕಡೆಗಣಿಸಿದರು. ಉದಾಹರಣೆಗೆ, ೧೯೩೨ರಲ್ಲಿ ನೀವು ಮತ್ತು ಪಂ. ಮಾಲವೀಯರಂಥವರ ಜತೆಯಲ್ಲಿ ನಾವು ಸಂಪೂರ್ಣವಾಗಿ ಸಹಕರಿಸಿದೆವು. ನಮ್ಮ ರಾಜಕೀಯ ಹಕ್ಕುಗಳನ್ನು ಬಲಿಕೊಟ್ಟು ಶ್ರೀಮಾನ್ಗಾಂಧಿಯನ್ನು ಉಳಿಸಿದೆವು. ನಮಗೆ ಬ್ರಿಟಿಷ್ಸರಕಾರ ಕೊಟ್ಟಿದ್ದ ಪ್ರತ್ಯೇಕ ಚುನಾವಣೆಯ ಹಕ್ಕುಗಳನ್ನೆಲ್ಲಾ ತೊರೆದು, ಸವರ್ಣೀಯರೊಡನೆ ಜಂಟಿ ಚುನಾವಣೆಗೆ ಒಪ್ಪಿದೆವು. ಮೂಲಕ ಒಂದು ಒಪ್ಪಂದವೂ ಆಯಿತು. ಆದರೆ ಅದರಿಂದಾದ ಪರಿಣಾಮವೇನು? ಕಾಂಗ್ರೆಸ್ಸಿನ ಮೇಲೆ ತಮ್ಮ ಸರ್ವಾಧಿಕಾರ ಸ್ಥಾಪಿಸಿದ್ದ ಹಿಂದೂಗಳು ನಿಜವಾಗಿಯೂ ದಲಿತ ವರ್ಗಗಳನ್ನು ಪ್ರತಿನಿಧಿಸಿದವು ಪ್ರತಿಭಾವಂತರು ಮತ್ತು ಪ್ರಾಮಾಣಿಕ ದಲಿತ ಅಭ್ಯರ್ಥಿಗಳನ್ನು ಬಹಿರಂಗವಾಗಿ ತುಳಿಯತೊಡಗಿದಿರಿ. ಅಲ್ಲದೆ, ದಲಿತ ಜನಾಂಗಕ್ಕೆ ಹುಸಿ ಆಶ್ವಾಸನೆ ಕೊಡುತ್ತ ನಡೆದ ಹಿಂದೂಗಳು ನನ್ನ ಜನರನ್ನು ಕಾಂಗ್ರೆಸ್ಸಿನೊಳಗೆ ಕೂಡಿ ಹಾಕಿದರು. ಇದರಿಂದಾಗಿ ದಲಿತರು ದುರ್ಬಲರಾದರು. ಅವರ ರಾಜಕೀಯ ಸಂಘಟನೆ ಮುರಿದು ಹೋಯಿತು, ಕಡೆಯಲ್ಲಿ ದಲಿತ ಪ್ರತಿಭೆ ಕಾಂಗ್ರೆಸ್ಸಿನ ಬಾಲಹಿಡಿದು ತಿರುಗುವಂತಾಯಿತು.

ಲಾಹೋರ್ ನಲ್ಲಿ ನಡೆಯಬೇಕಾಗಿದ್ದ ಜಾತಿಪಾತ ತೋಡಕ ಮಂಡಲಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಲು, ಬಾಬಾ ಸಾಹೇಬ್‌ಅಂಬೇಡ್ಕರ್ ಆಹ್ವಾನಿತರಾಗಿದ್ದರು. ಆದರೆ ಸಮ್ಮೇಳನಕ್ಕಾಗಿ ಅವರು ಸಿದ್ಧಪಡಿಸಿದ್ದ ಅಧ್ಯಕ್ಷ ಭಾಷಣದ ಕೆಲವೊಂದು ಭಾಗಗಳನ್ನು ಕೈಬಿಡಬೇಕೆಂದು ಮಂಡಲಿ ಕೇಳಿದಾಗ ಬಾಬಾ ಸಾಹೇಬರು ಅದನ್ನು ಒಪ್ಪಲಿಲ್ಲ. ಕೊನೆಗೆ ಅದೇ ಭಾಷಣವನ್ನು “Annihilation of caste” ‘ಜಾತಿ ವಿನಾಶ’ ಎಂಬ ಹೆಸರಿನಲ್ಲಿ ಪುಸ್ತಕವನ್ನಾಗಿ ಪ್ರಕಟಿಸಿದರು. ಆ ಪುಸ್ತಕ ಪ್ರಕಟವಾದ ಕೂಡಲೇ ಗಾಂಧಿ ತಮ್ಮ “ಹರಿಜನ್‌” ಪತ್ರಿಕೆಯಲ್ಲಿ ಡಾ. ಅಂಬೇಡ್ಕರ್ ಅವರನ್ನು ಟೀಕಿಸತೊಡಗಿದರು. ಈಗ ಮಾತ್ರ ಬಾಬಾ ಸಾಹೇಬರ ಪ್ರಕಾಂಡ ಪ್ರತಿಭೆ ಕೆರಳಿಹೋಯಿತು. ಆದರೆ ಪಾಪ! ಲೋಕಮಾನ್ಯ ಮೇಧಾವಿ ಎನಿಸಿದ್ದ ಡಾ. ಅಂಬೇಡ್ಕರ್ ಎಲ್ಲಿ? ಸನ್ಯಾಸಿ ವೇಷದ ಪೆದ್ದ ಗಾಂಧಿ ಎಲ್ಲಿ? ಎಲ್ಲಿಂದ ಎಲ್ಲಿಗೆ ಸಂಬಂಧ? ಕೊನೆಗೆ ಗಾಂಧಿ ತಮ್ಮ ಟೀಕೆಗಳನ್ನು ಹಿಂತೆಗೆದುಕೊಂಡು ಸನ್ಯಾಸಿ ವೇಷದಲ್ಲಿ ಮೌನವಾದರು.

ಇದಾದ ನಂತರ ಮಹಾದೇವ ಗೋವಿಂದ ರಾನಡೆಯವರ ೧೦೧ನೇ ಜನ್ಮ ದಿನಾಚರಣೆಯೆಂದು ಬಾಬಾ ಸಾಹೇಬ್‌ಮಾಡಿದ ಭಾಷಣವನ್ನೂ “Randle, Gandhi and Jinnah”-(ರಾನಡೆ, ಗಾಂಧಿ ಮತ್ತು ಜಿನ್ನಾ) ಎಂಬ ಪುಸ್ತಕವನ್ನಾಗಿ ಪ್ರಕಟಿಸಿದರು. ಗಾಂಧಿ ಧೋರಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ಭಾರತದಲ್ಲಿ ಅಸ್ಪೃಶ್ಯರ ಸಮಸ್ಯೆಯನ್ನು ಕುರಿತು ೧೯೪೦ರಲ್ಲಿ ನಡೆದ “Pracific Relations Conference”ಗೆ ಒಂದು ದೀರ್ಘ ಪ್ರಬಂಧ ಸಿದ್ಧಪಡಿಸಿದರು. ಆಮೇಲೆ ಆ ಪ್ರಬಂಧವು “Mr. Gandhi and emancipation of the untouchables” ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಬಾಬಾ ಸಾಹೇಬರ ಅತ್ಯಂತ ಪ್ರಸಿದ್ಧವಾದ ಮತ್ತು ಮಹಾಕೃತಿ “What Congress and Gandhi have done to the untouchables?” ಗಾಂಧಿ ದೌಷ್ಟ್ಯದ ಇತಿಹಾಸ ಈ ಕೃತಿ. ಅನಂತರ ಬಾಬಾ ಸಾಹೇಬರು ಗಾಂಧಿ ಮತ್ತು ಗಾಂಧಿವಾದವನ್ನು ಕುರಿತು ಬಹಳ ಆಲೋಚಿಸಲಿಲ್ಲ; ತಮ್ಮ ಹೋರಾಟದ ಅಸ್ತ್ರವನ್ನು ಈಗ ಅಧಿಕಾರ ರೂಢರ ಕಡೆಗೆ ತಿರುಗಿಸಿದರು.

ಗಾಂಧಿ ಸರಿಯೆಂದು ಸಾಧಿಸ ಹೊರಟಿದ್ದಕ್ಕೆಲ್ಲಾ ಒಂದಕ್ಕೊಂದು ಪರ್ಯಾಯ ಮಾರ್ಗವನ್ನು ಡಾ. ಅಂಬೇಡ್ಕರ್ ಕಂಡುಕೊಂಡರು. ಸ್ವಜನ ಮತ್ತು ಸ್ವರಾಷ್ಟ್ರ ಪ್ರೇಮ ಅವರ ಚಿಂತನೆಯ ಮೂಲ ತುಡಿತವಾಯಿತು; ಹಿಂದೂ ಸಮಾಜದ ಜಾತಿವಿನಾಶವಾಗಬೇಕೆಂಬುದು, ರಾಷ್ಟ್ರದ ಜನತೆಯನ್ನು ತುಂತು ತುಂತುಗಳನ್ನಾಗಿ ವಿಂಗಡಿಸಿ, ರಾಷ್ಟ್ರದ ದಾರಿದ್ರ್ಯ-ದೌರ್ಬಲ್ಯಗಳಿಗೆಲ್ಲಾ ಮೂಲ ಹೇತುವಾಗಿರುವ, ವರ್ಣಾಶ್ರಮ ಧರ್ಮ ಸಿದ್ಧಾಂತವನ್ನು ನಾಶ ಮಾಡಬೇಕೆಂಬುದು ಅವರ ಪರಮ ಧ್ಯೇಯವಾಯಿತು. ನನ್ನ ರಾಷ್ಟ್ರ ಸಭ್ಯ, ಸಶಕ್ತ ಸಂಪದ್ಭರಿತ ರಾಷ್ಟ್ರವಾಗಬೇಕೆಂಬುದು ಅವರ ದೃಷ್ಟಿಯ ಏಕೈಕ ಗುರಿ. ರಾಷ್ಟ್ರೀಯ ಭಾವನೆ ಯಾವೊಬ್ಬ ವ್ಯಕ್ತಿಯ ಅಥವಾ ಪಕ್ಷದ ಆಸ್ತಿಯಲ್ಲವೆಂಬುದನ್ನು ಅನೇಕ ಬಾರಿ, ಸಾರಿ ಸಾರಿ ಹೇಳಿದ್ದಾರೆ. ರಾಮ, ಕೃಷ್ಣ ಮುಂತಾದ ಪುರಾಣ ದೊರೆಗಳಿಂದ ಹಿಡಿದು, ಧಾರ್ಮಿಕ ವ್ಯಾಪಾರದ ಸಂತರು ಮಹಾತ್ಮರೆಲ್ಲಾ ಸೇರಿರುವ, ಹಿಂದೂಗಳ ಕೋಟ್ಯಾನುಕೋಟಿ ದೇವತೆಗಳನ್ನು ಖಂಡಿಸಿದ ಡಾ. ಅಂಬೇಡ್ಕರ್ ಶುದ್ಧ ಮೂರ್ತಿ ಭಂಜಕ. ದಲಿತ ಜನಕೋಟಿ, ಸಾರ್ವಜನಿಕ ಜೀವನ ರಂಗದಲ್ಲಿ ಎದ್ದುನಿಲ್ಲಬೇಕೆಂದವರು ಕರೆಕೊಟ್ಟರು. ಭಾರತವನ್ನು ಸರ್ವ ರೀತಿಯಲ್ಲಿ ಒಂದು ಸಮರ್ಥಶಾಲಿ ರಾಷ್ಟ್ರವನ್ನಾಗಿ ಕಟ್ಟಬೇಕೆಂದು ಮಾತ್ರವಲ್ಲ, ಒಂದು ಅತ್ಯಾಧುನಿಕ ಕೈಗಾರಿಕಾ ರಾಷ್ಟ್ರವನ್ನಾಗಿ ಕಟ್ಟಿನಿಲ್ಲಿಸಬೇಕೆಂಬುದೂ ಅವರ ಧ್ಯೇಯವಾಗಿತ್ತು. ಹಾಗೆಯೇ ಜೀವನ ಮಟ್ಟವನ್ನು ಸರ್ವರೀತಿಯಲ್ಲೂ ಪರಿಷ್ಕರಿಸಿ, ಉದಾತ್ತಗೊಳಿಸಬೇಕೆಂಬುದನ್ನವರು ಎಂದೂ ಮರೆಯಲಿಲ್ಲ. “ಜೀವನ ಮಟ್ಟವನ್ನಷ್ಟೇ ಬೆಳೆಸಿದರೆ ಸಾಲದು. ಏಕೆಂದರೆ, ನೈತಿಕ ಸಾಂಸ್ಕೃತಿಕ ಮೌಲ್ಯಗಳು ಸಮಸ್ತ ಜೀವನದ ತಳಹದಿ” ಎಂಬುದು ಅವರ ಘೋಷಣೆಯಾಗಿತ್ತು.

ಬಾಬಾ ಸಾಹೇಬ್‌ಅಂಬೇಡ್ಕರ್ ಅವರು ಗಾಂಧಿಯ ವ್ಯಕ್ತಿತ್ವವನ್ನು ಎಂದೂ ಟೀಕಿಸಿದವರೇ ಅಲ್ಲ, ಗಾಂಧಿಯ ವಿಚಾರ ಮತ್ತು ಅವರ ಸಾರ್ವಜನಿಕ ಜೀವನ ಕ್ರಮವನ್ನಷ್ಟೇ ಅವರು ಟೀಕಿಸಿದರು. ವಾಸ್ತವವಾಗಿ ಮಹಾವ್ಯಕ್ತಿಗಳನ್ನು ಡಾ. ಅಂಬೇಡ್ಕರ್ ಅವರು ತುಂಬಾ ಗೌರವಿಸುತ್ತಿದ್ದರು. ಅವರ ಟೀಕೆಯೂ ಸಹ ಒಂದು ನೈಜ ರಾಷ್ಟ್ರೀಯ ಉದ್ದೇಶದಿಂದ ಪ್ರಣೀತವಾಗಿರುತ್ತಿತ್ತು. “ನಾನು ಗಾಂಧಿಯನ್ನು ಟೀಕಿಸಿದ್ದೇನೆ; ಏಕೆಂದರೆ ಗಾಂಧಿಗಿಂತ ನನ್ನ ರಾಷ್ಟ್ರವೇ ನನಗೆ ಪರಮವಾದದ್ದು” ಎಂತಲೇ ಡಾ. ಅಂಬೇಡ್ಕರ್ ಬರೆದಿದ್ದಾರೆ! ಎಂದ ಮೇಲೆ ಗಾಂಧಿಯನ್ನ ಅವರು ಟೀಕಿಸಿದರೆಂಬುದಕ್ಕೆ ಬೇರೊಂದು ಕಾರಣ ಇರಲಿಕ್ಕಿಲ್ಲ.

ನಾನೊಬ್ಬ ಸತ್ಯದ ಆರಾಧಕ. ಅಂದ ಬಳಿ, ಯಾವ ಸಂದರ್ಭದಲ್ಲಿ ನನಗೆ ಏನು ಅನ್ನಿಸುವುದೊ ಅದನ್ನು ನಿಸ್ಸಂಕೋಚವಾಗಿ ಹೇಳಬೇಕಾದುದು ನನ್ನ ಕರ್ತವ್ಯ.

ಎಂದರು. ಗಾಂಧಿ. ಅವರ ಧೋರಣೆಯ ಸತ್ಯವನ್ನು ಹುಡುಕುತ್ತಲೇ ಬಾಬಾ ಸಾಹೇಬ್‌ಹಿಡಿದು ನಿಂತರು. ಅಷ್ಟೇ. ಸ್ವಜನ ಮತ್ತು ಸ್ವರಾಷ್ಟ್ರದ ಹಿತದೃಷ್ಟಿಯಿಂದ ಯಾವುದು ಯುಕ್ತವೆಂದು ತೋರಿತೋ ಅದನ್ನೇ ಮತ್ತೆ ಮತ್ತೆ ತಮ್ಮ ಚಿಂತನೆಯಿಂದ ಪರಿಶೀಲಿಸುತ್ತ, ಹೇಳುತ್ತ ನಡೆದರು.

ನಾನು ಅಸ್ಪೃಶ್ಯರ ಪ್ರತಿನಿಧಿ, ನಾನು ಅವರ ಉದ್ಧಾರ ಪುರುಷ ಎಂದೆಲ್ಲ ಹೇಳುತ್ತಿದ್ದ ಗಾಂಧಿಯ ಢೋಂಗಿತನವನ್ನು ಬಾಬಾ ಸಾಹೇಬ್‌ಬೀದಿಗೆಳೆದರು. ಗಾಂಧಿಯ ಆ ಢೋಂಗಿತನವನ್ನು ಸಾಬೀತುಪಡಿಸಲು ಅವರು ಕೊಟ್ಟ ನಿದರ್ಶನಗಳನ್ನು, ಗಾಂಧಿ ಸುತ್ತಲೂ ತಿರುಗುತ್ತಿದ್ದ ಯಾವ ಗಾಂಧಿವಾದಿ ಪಂಡಿತನೂ ಅಲ್ಲಗಳೆಯಲಾಗಲಿಲ್ಲ. ಆ ಪ್ರತಿಯೊಂದು ಮಾತು ಮಾತಿನಲ್ಲೂ ತುಂಬಿದ್ದ ಸ್ವಜನ ಮತ್ತು ಸ್ವರಾಷ್ಟ್ರ ಪ್ರೇಮವನ್ನು ಹೀಗಳೆಯುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಬಾಬಾಸಾಹೇಬರ ಚರಿತ್ರಾಕೃತಿ “What Congress and Gandhi have done to the untouchables”? ಯಲ್ಲಿ ಇಂಥ ಬೇಕಾದಷ್ಟು ಚಾರಿತ್ರಿಕ ಸತ್ಯ ಸಂಗತಿಗಳನ್ನು ಮನಗಾಣಬಹುದು. ಗಾಂಧಿ ಮತ್ತು ಕಾಂಗ್ರೆಸನ್ನು ಕುರಿತು ಆ ಕೃತಿಯಲ್ಲಿ ಮಂಡಿಸಲಾಗಿರುವ ಒಂದೇ ಒಂದು ನಿದರ್ಶನವನ್ನು ಸುಳ್ಳೆಂದು ತೋರಿಸಿಕೊಡಬಲ್ಲ ಎದೆಗಾರ ಕಾಂಗ್ರೆಸ್ಸಿಗ ಅವರೆದುರಿಗೆ ಬರಲಿಲ್ಲ. ಭಗವದ್ಗೀತೆಯನ್ನು ಹಿಡಿದು ಗಾಂಧಿ ಪ್ರಮಾಣ ಮಾಡುತ್ತಿದ್ದರು. ಆದರೆ ಭಗವದ್ಗೀತೆ “ನೈತಿಕ ಮೌಲ್ಯಗಳ ಅರಿವಿಲ್ಲದ ಬೇಜವಾಬ್ದಾರಿ ಪುಸ್ತಕ ಅದು” ಎಂದರು ಡಾಕ್ಟರ್ , ಗಾಂಧಿಗೆ ದೇಶದ ಸ್ವಾತಂತ್ರ್ಯಕ್ಕಿಂತ ಹಿಂದೂಧರ್ಮ ಮುಖ್ಯವಾಗಿತ್ತು. ಆದರೆ ಅಂಬೇಡ್ಕರ್ ದೃಷ್ಟಿಯಲ್ಲಿ, ಯಾವುದೇ ವಾದ ಅಥವಾ ವ್ಯಕ್ತಿ ರಾಷ್ಟ್ರಕ್ಕಿಂತ ಪರಮವಲ್ಲ. ಗಾಂಧಿ ಬಲವಾಗಿ ಅಪ್ಪಿಕೊಂಡದ್ದು ‘ಅಹಿಂಸಾವಾದ’- ಆದರೆ ಅವರ ಪಕ್ಷದ ಬಹುತೇಕ ಮಂದಿ ಅದನ್ನು ಉಲ್ಲಂಘಿಸುತ್ತಲೇ ನಡೆದರೂ ಗಾಂಧಿ ಆ ಬಗ್ಗೆ ಆಲೋಚಿಸಲೇ ಇಲ್ಲ. ಒಮ್ಮೆ ಓರ್ವ ಪತ್ರಿಕಾ ಬಾತ್ಮೀದಾರನೊಡನೆ ಮಾತನಾಡುತ್ತಿದ್ದ ಮೌಲಾನ ಅಜಾದ್‌“ಗಾಂಧಿಯವರಿಗೆ ಇದು ನಂಬಿಕೆಯ ಪ್ರಶ್ನೆ, ಆದರೆ ನಮಗೆ ಇದು ರಾಜಕೀಯ ಪ್ರಶ್ನೆ” ಎಂದು ನಿಸ್ಸಂಕೋಚವಾಗಿ ನುಡಿದರು. ಬಾಬಾ ಸಾಹೇಬ್‌ಅಂಬೇಡ್ಕರ್ ಅವರು ಅಹಿಂಸಾವಾದದ ಸಿದ್ಧಾಂತಗಳನ್ನು ಒಪ್ಪಿಕೊಂಡರ; ಆದರೆ, ಮಾರ್ಗದಾತ ತತ್ವಜ್ಞಾನಿ ಭಗವಾನ್‌ಬುದ್ಧ ಹೇಳಿದ ರೀತಿಯಲ್ಲಿ ಆ ಸಿದ್ಧಾಂತವನ್ನು ಅವರು ಒಪ್ಪಿಕೊಂಡದ್ದು. “ಅಹಿಂಸಾವಾದ ಎಲ್ಲಿ ಸಾಧ್ಯ ಮತ್ತು ಹಿಂಸಾವಾದ ಎಲ್ಲಿ ಅನಿವಾರ್ಯ ಎಂಬ ತಾರತಮ್ಯದ ಎಚ್ಚರವಿರಬೇಕು” ಎಂಬುದು ಅಂಬೇಡ್ಕರ್ ಅವರ ಆಲೋಚನೆಯ ರೀತಿ.

ಗಾಂಧಿ ಅಹಿಂಸಾವಾದ ಸ್ವೀಕರಿಸಿದ್ದು ಜೈನರ ವೈಪರಿತ್ಯ ತತ್ವಸಿದ್ಧಾಂತಗಳಿಂದ. ಅಲ್ಲಿಂದ ಆರಿಸಿಕೊಂಡ ನಾಲ್ಕು ಖೋಟಾ ಆಯುಧಗಳನ್ನು ಸತ್ಯಾಗ್ರಹ, ಬಹಿಷ್ಕಾರ, ಅಸಹಕಾರ ಮತ್ತು ಉಪವಾಸ ಇವುಗಳನ್ನು ಗಾಂಧಿ ತಮ್ಮ ರಾಜಕೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಳಸಿಕೊಂಡರು. ಆದರೆ ಈ ಆಯುಧಗಳನ್ನು ಒಂದು ನಿರ್ಮಿತಿಯವರೆಗೆ ಮಾತ್ರ ಸಮರ್ಥಿಸಿದ ಬಾಬಾ ಸಾಹೇಬರು, “ಎಲ್ಲಿಯವರೆಗೆ ವಿದೇಶಿಯರಿಂದ ತನ್ನ ಸ್ವಾತಂತ್ರ್ಯಕ್ಕಾಗಿ ಇಂಡಿಯಾ ಹೋರಾಡುವುದೋ ಅಲ್ಲಿಯವರೆಗೆ ಮಾತ್ರ” ಅವುಗಳನ್ನು ಉಪಯೋಗಿಸಬೇಕು ಎಂದರು. ಏಕೆಂದರೆ ಈಗ ನಮ್ಮದೇ ಆದ ಲಿಖಿತ ಸಂವಿಧಾನವಿದೆ. ಈ ಸಂವಿಧಾನ ಮುಂದೆಯೂ ಅದೇ ಅಸ್ತ್ರಗಳನ್ನು ಬಳಸಿದ್ದೇ ಆದರೆ, ಅದು ‘ಅನಾಯಕತ್ವದ ವ್ಯಾಕರಣ’ ಎಂಬ ಮಾತುಗಳಿಂದ ಪ್ರಶ್ನಿಸಬೇಕೇ ಹೊರತು, ಅದು “ಹಿಂಸಾ ಮಾರ್ಗವೇ” ಅಥವಾ “ಅಹಿಂಸಾ ಮಾರ್ಗವೇ” ಎಂಬ ಮಾತುಗಳಿಂದಲ್ಲ. ಗಾಂಧಿಯ ಈ ಅಹಿಂಸಾವಾದ ರಾಷ್ಟ್ರದ ಚೈತನ್ಯವನ್ನು ದುರ್ಬಲಗೊಳಿಸಿತು. ಕಾನೂನಿಗೆ ಅಗೌರವ ಎಸಗಿದ್ದು ಮಾತ್ರವಲ್ಲ, ರಾಷ್ಟ್ರವನ್ನು ಅಸಾಧ್ಯ ದುರಂತಕ್ಕೆ ತಳ್ಳಿದುದು ಗಾಂಧಿಯ ಈ ಅಹಿಂಸಾವಾದವೇ. ಇಂಥ ವಿಧಾನಗಳನ್ನು ಪ್ರೋತ್ಸಾಹಿಸಿದ ಯಾವ ರಾಷ್ಟ್ರದಲ್ಲೂ ಪ್ರಗತಿಪರ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು.

ಆದರೆ ಗಾಂಧಿ ಅನುಸರಿಸಿದ ವಿಧಾನಗಳಿಂದ, ರಾಷ್ಟ್ರವನ್ನು ಸಮಗ್ರವಾಗಿ ಉಳಿಸಲಾಗಲಿಲ್ಲವೆಂಬುದು ತುಂಬಾ ನತದೃಷ್ಟ ಸಂಗತಿ. ಲಕ್ಷೋಪಲಕ್ಷ ಮುಗ್ಧ ಜನತೆಯನ್ನು ಬಲಿಕೊಟ್ಟದ್ದು ಮಾತ್ರವಲ್ಲ, ರಾಷ್ಟ್ರವನ್ನು ಇಬ್ಬಾಗಮಾಡಿ, ಪಾಕಿಸ್ತಾನ ನಿರ್ಮಾಣವಾದುದು, ಗಾಂಧಿವಾದಕ್ಕೆ ಒದಗಿದ ಒಂದು ಮಹಾದುರಂತ. ಗಾಂಧಿಗೆ ಒದಗಿದ ಒಂದು ಮಹಾ ಸಂಕಟ. ಅಷ್ಟೇ ಅಲ್ಲ, ಅವರ ಅಸ್ಪೃಶ್ಯತೆ ಆಂದೋಲನಕ್ಕೆ ಒದಗಿದ್ದೂ ಇದೇ ಸ್ಥಿತಿ; ಹಿಂದೂ ಮುಸಲ್ಮಾನರನ್ನು ಹತ್ತಿರ ಹತ್ತಿರ ತರಬೇಕೆಂದು ಎಷ್ಟು ಬಗೆಯಲ್ಲಿ ಅವರು ಯತ್ನಿಸಿದರೂ, ಅಷ್ಟೇ ಭೀಕರ ವೈರ ಆ ಎರಡು ವರ್ಗಗಳ ನಡುವೆ ಎದು ನಿಂತಿತು. ಪಾಕಿಸ್ತಾನ ನಿರ್ಮಾಣವಂತೂ ಗಾಂಧಿ ಸೋಲಿನ ಮಹಾಪ್ರತೀಕ. ಶಿಕ್ಷಣ ಪದ್ಧತಿಯ ಬಗೆಗೆ ಗಾಂಧಿ ರೂಪಿಸಿದ್ದ ಸಿದ್ಧಾಂತಗಳೂ ಅಗೌರವದ ಅಪಹಾಸ್ಯಕ್ಕೀಡಾದವು. ೧೯೪೬-೪೭ರ ವೇಳೆಗೆ ಗಾಂಧಿಯ ಖ್ಯಾತಿ-ಪ್ರಖ್ಯಾತಿಗಳೆಲ್ಲಾ ಹೆಜ್ಜೆ ಹೆಜ್ಜೆಗೂ ಮುಗ್ಗರಿಸುತ್ತ, ಕೊನೆ ಕೊನೆಯಲ್ಲಿ ಒಂದು ಹಿಡಿಯಷ್ಟು ಜನಮಾತ್ರ ಅವರ ಪ್ರಾರ್ಥನಾ ಸಭೆಗಳಿಗೆ ಹೋಗುತ್ತಿದ್ದರು. ೧೨೫ ವರ್ಷಗಳವರೆಗೆ ಬದುಕಬೇಕೆಂದು ಆಸೆಯಿಟ್ಟುಕೊಂಡಿದ್ದ ಮುದಿ ಗಾಂಧಿ, ಕೊನೆಗೆ ಹತಾಶರಾಗಿ ಮಲಗಿದ್ದರು. ತಮ್ಮ ಕೊಲೆಯ ಕೆಲವೊಂದು ಘಂಟೆಗಳ ಹಿಂದೆ, ಇದೇ ಮಾತನ್ನು ಅವರು ಒಬ್ಬ ಪತ್ರಿಕಾ ವರದಿಗಾರನ ಹತ್ತಿರ ತುಂಬಾ ವ್ಯಸನದಿಂದ ಹೇಳಿಯೇ ಬಿಟ್ಟಿದ್ದರು. ವರ್ಣಾಶ್ರಮಧರ್ಮ ಮತ್ತು ಮರ್ಯಾದ ಧರ್ಮತತ್ವಗಳನ್ನು ಗಾಂಧಿ ಮತ್ತೆ ಮತ್ತೆ ಪ್ರತಿಪಾದಿಸಿದರೆ; ಅವುಗಳಿಂದ ರಾಷ್ಟ್ರಕ್ಕೆ ಮಹಾದುರಂತ ಒದಗುವುದು ನಿಶ್ಚಿತವೆಂದು ಗಗನಭೇದ್ಯವಾಗಿ ಘೋಷಿಸಿದರು ಡಾ. ಅಂಬೇಡ್ಕರ್ ಭಾರತವನ್ನು ಒಂದು ಸಂಪದ್ಭರಿತ ಹಾಗೂ ಶಕ್ತಿಮಾನ್‌ರಾಷ್ಟ್ರವನ್ನಾಗಿ ಮಾತ್ರವಲ್ಲ. ಅಬಲರಾದ ನೆರೆರಾಷ್ಟ್ರಗಳ ಸಂಕಟಗಳಲ್ಲೂ ಭಾಗಿಯಾಗುವಂಥ ಒಂದು ಉದಾತ್ತ ರಾಷ್ಟ್ರವನ್ನಾಗಿ ಕಟ್ಟಬೇಕೆಂಬುದು ಬಾಬಾ ಸಾಹೇಬರ ಜೀವನದ ಧ್ಯೇಯವಾಗಿತ್ತು. ಗಾಂಧಿಯ ಇಡೀ ಆಂದೋಲನ ಅರ್ಥಹೀನ ಪ್ರಾಚೀನತೆಯ ಕಡೆಗೆ ಮುಖಮಾಡಿಕೊಂಡು ಹೊರಟಿತ್ತು. ಆದರೆ, ಗಾಂಧಿಯ ಈ ಕ್ರಮವನ್ನು ಅಂಬೇಡ್ಕರ್ ಅಲ್ಲಗಳೆಯಲಿಲ್ಲ. ಕೊನೆ ಕೊನೆಯಲ್ಲಿ ಮಾನವನ ದುಃಖ ದುಮ್ಮಾನಗಳಿಗೆಲ್ಲಾ ಪರಿಹಾ ತೋರಿದ, ಮಾರ್ಗದಾತ ಭಗವಾನ್‌ಬುದ್ಧನನ್ನು ಅನುಸರಿಸಿದ ಬಾಬಾ ಸಾಹೇಬ್‌, ಮಾನವೀಯತೆಯ ಎಲ್ಲಾ ಸಂಕಟಗಳಿಗೂ ಪರಿಹಾರ ಬೌದ್ಧಧರ್ಮದಲ್ಲಿದೆ ಎಂದು ಸಾರಿದರು.

ಭಾರತದ ಈ ಎರಡು ಮಹಾಪುತ್ರರು ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ಹೋರಾಟಕ್ಕೆ ಹಿಡಿದ ಮಾರ್ಗ ಪರಸ್ಪರ ವಿಭಿನ್ನವಾದವು. ಆದರೆ ಅವರು ಧರಿಸಿದ್ದ ಧ್ಯೇಯ ಮಾತ್ರ ಭವ್ಯವಾದದ್ದು, ಧರಿಸಿಕೊಂಡ ಆ ಧ್ಯೇಯ ಸಾಧನೆಯಲ್ಲಿ ಕೋಪ-ತಾಪಗಳು ಉದ್ಭವಿಸುವುದು ಸಹಜ. ಆದರೆ, ಅಳೆದು ಹೇಳಲು ಅಸಾಧ್ಯವಾದ ಅವರ ಕಾರ್ಯನಿಷ್ಠೆ ವಿಚಾರ ಸಮನ್ವಯ ಇವೆಲ್ಲವೂ ಭಾರತವನ್ನು ಒಂದು ಸಮರ್ಥಶಾಲಿ ರಾಷ್ಟ್ರವನ್ನಾಗಿ ಕಟ್ಟಿ, ಲೋಕದಲ್ಲೇ ಶಾಂತಿ ಸೌಹಾರ್ದಕ್ಕೆ ಹೆಸರಾದ ಏಕಮಾತ್ರ ರಾಷ್ಟ್ರವನ್ನಾಗಿ ಕಟ್ಟುವ ಸಲುವಾಗಿಯೇ ಈ ಎರಡು ಮಹಾವೀರರ ನಿರಂತರ ಹೋರಾಟ ನಡೆದದ್ದು.

ಇಂದು ಭಾರತ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ಲೋಕದಲ್ಲಿ ತನ್ನ ಬದುಕಿಗಾಗಿ ಭಾರತ, ಮಾರ್ಕ್ಸ್‌ ಮತ್ತು ಮಾವೋತ್ಸೆ-ತುಂಗರು ನಿರ್ಮಿಸಿದ ಹಾದಿಯಲ್ಲಿ ನಡೆಯಬೇಕು. ಇಲ್ಲವೇ ಗಾಂಧಿ ಮತ್ತು ಅಂಬೇಡ್ಕರ್ ನಿರ್ಮಿಸಿರುವ ಮಾರ್ಗವೇ ತನಗೆ ಏಕೈಕ ಪರ್ಯಾಯ ಮಾರ್ಗ ಎಂಬುದನ್ನು ತಿಳಿಯಬೇಕು. ಈ ಆಯ್ಕೆ ಮತ್ತೆ ಡಾ. ಬಾಬಾ ಸಾಹೇಬ್‌ಅಂಬೇಡ್ಕರ್ ಅವರು ಬೆನ್ನು ತಟ್ಟಿ ನಿಲ್ಲಿಸಿರುವ ದಲಿತ ಜನಾಂಗದ ಬೆಂಬಲವನ್ನೇ ಆಧರಿಸಿ ನಿಂತಿದೆ. ಆ ಜನಾಂಗದ ಶಕ್ತಿ ಸಾಮರ್ಥ್ಯಗಳಿಂದ ಮಾತ್ರ ಈ ಮಾರ್ಗ ಸುಗಮವಾಗಿ ಸಾಗಬಹುದಾಗಿದೆ. ಅವರ ನಿರ್ಧಾರ ಮತ್ತು ಕ್ರಿಯಾಶೀಲತೆ ಮಾತ್ರ ಇಂಡಿಯಾದ ಭವಿಷ್ಯವನ್ನು ನುಡಿಯಬೇಕಾಗಿದೆ. ಆ ಮಹಾಪುರುಷರು ನಿರಂತರ, ನಿಃಸ್ವಾರ್ಥ ಚೈತನ್ಯ, ಭಾವತೀವ್ರತೆ, ಪ್ರಖರವಾದ ಚಿಂತನೆ ಈ ರಾಷ್ಟ್ರ ಜೀವನಕ್ಕೆ ಬೆಳಕು ತೋರಬೇಕಾಗಿದೆ. ಬಾಬಾ ಸಾಹೇಬ್‌ಅಂಬೇಡ್ಕರ್ , ಲೋಕದಲ್ಲಿ ಯಾರನ್ನೂ ದ್ವೇಷಿಸಲಿಲ್ಲ. ಅದೇ ಭಾವನೆ ನಮ್ಮಲ್ಲೂ ಇರಬೇಕಾಗಿದೆ. ಇಂತ ಸಹನೆ ಮತ್ತು ಅರ್ಥವಂತಿಕೆಯಿಂದ ಓದುಗರು ಈ ಗ್ರಂಥವನ್ನು ಓದುತ್ತಾರೆ ಎಂದು ಭಾವಿಸಿದ್ದೇವೆ.

ಅಡಿ ಟಿಪ್ಪಣಿಗಳು

೧. India by Perceival Paper.

೨. Proceedings of Round Table Conference 13-11-1931.

೩. Dr. B. R. Ambedkar. What Congress and Gandhi have done to the Untouchables?

೪. ಅದೇ ಗ್ರಂಥ.

೫. Dawn Dt. 26-12-1942.

ಪರಾಮರ್ಶನ ಗ್ರಂಥಗಳು

೧. Dr. B. R. Ambedkar, What congress abd Gandhi have done to the untouchables? Maharastra Government, Bombay.

೨. ಧನಂಜಯ ಕೇರ್. ಡಾ. ಅಂಬೇಡ್ಕರ್ ಜೀವನ ಸಾಧನೆ.

೩. ಮ. ನ. ಜವರಯ್ಯ, ಮೂಲ ಡಾ. ಅಂಬೇಡ್ಕರ್ , ಜಾತಿವಿನಾಶ

—-
ಡಾ. ಅಂಬೇಡ್ಕರ್ ವಿಚಾರಧಾರೆ ಸಂ: ಅರವಿಂದ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೧. ಡಾ. ಬಿ. ಆರ್. ಅಂಬೇಡ್ಕರ್ ಅವರ “ಗಾಂಧಿ ಮತ್ತು ಗಾಂಧಿವಾದ” ಕೃತಿಯನ್ನು ಡಾ. ಮನಜ ಅವರು ಅನುವಾದಿಸಿದ್ದಾರೆ. ಈ ಕೃತಿಗೆ ಪ್ರಸ್ತಾವನೆ ರೂಪದಲ್ಲಿ ಇರುವ ಈ ಲೇಖನವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಇದಕ್ಕೆ ಒಪ್ಪಿಗೆ ನೀಡಿದ ಸಂಪಾದಕರಿಗೆ ವಂದನೆಗಳು (ಸಂ).