ಹಿಂದೂ ಜನಾಂಗದಲ್ಲಿ ಹುಟ್ಟಿದ ಮಹಾ ವ್ಯಕ್ತಿಗಲ್ಲೊಬ್ಬರಾದ ಗಾಂಧಿ ತನ್ನ ಯುಗಧರ್ಮದ ಮೇಲೆ ಅಳಿಸಲಾಗದ ಮುದ್ರೆಯೊತ್ತಿದ್ದಾರೆ. ಹಿಂದೂ ಧರ್ಮದಂತೆಯೇ ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ. “ಧಾರ್ಮಿಕ ಬುದ್ಧಿಜೀವಿ. ” “ರಾಜಕೀಯ ಲೀಡರ್”, “ಹಿಂದೂ ಲೀಡರ್”, “ಸನ್ಯಾಸಿಗಳಲ್ಲೇ ರಾಜಕಾರಣಿ”, ರಾಜಕಾರಣಿಗಳಲ್ಲೇ ಸನ್ಯಾಸಿ”, “ಸನ್ಯಾಸಿ ವೇಷದ ಚತುರ ರಾಜಕಾರಣಿ” ಎಂದು ಮುಂತಾಗಿ ವರ್ಣಿಸಲಾಗಿದೆ, ಗಣ್ಯ ಇತಿಹಾಸಗಾರರಾದ ಆರ್. ಸಿ. ಮಜುಂದಾರ್ ಅವರು “ಗಾಂಧಿ, ಇತಿಹಾಸದ ಮಹಾಸೋಲು” ಎನ್ನುತ್ತಾರೆ. ಪಾಕಿಸ್ತಾನದ ನಿರ್ಮಾಣಗಾರರೆನಿಸಿದ ಮಹದಮದಲಿ ಜಿನ್ನಾ “ಗಾಂಧಿ, ಹಿಂದೂ ಜನಾಂಗದ ಮಹಾನಾಯಕ” ಎನ್ನುತ್ತಾರೆ. ಡಾ. ಅಂಬೇಡ್ಕರ್ ದೃಷ್ಟಿಯಲ್ಲಿ “ಗಾಂಧಿ ಒಬ್ಬ ಯಶಸ್ವಿ ನಯವಂಚಕ”. ಮತಾಂಧ ಹಿಂದುವೊಬ್ಬ ಬಿರ್ಲಾ ಭವನದ ಹುಲ್ಲಿನ ಅಂಗಳದಲ್ಲಿ ಗಾಂಧಿಯನ್ನು ಹತ್ಯೆ ಮಾಡಿದಾಗ, ಅವರ ಗೆಳೆಯರು, ಆಪ್ತರು, ರಾಜಕೀಯ ವಿರೋಧಿಗಳು, ಅವರ ಟೀಕೆಗಾರರು ಪ್ರತಿಯೊಬ್ಬರೂ ವ್ಯಸನಪಟ್ಟರು. ಉಳಿದ ಕಾಂಗ್ರೆಸಿಗರಂತೆ ಗಾಂಧಿ ಮಾರ್ಗದರ್ಶನದಲ್ಲೇ ನಡೆದುಬಂದ ಪಂಡಿತ್‌ಜವಹರಲಾಲ್‌ನೆಹರು, ತಮ್ಮ ಪ್ರಸಿದ್ಧ ಭಾಷಣದಲ್ಲಿ “ನಮ್ಮ ಬದುಕಿನ ಬೆಳಕು ಹಾರಿ ಹೋಗಿದೆ. ಎಲ್ಲೆಲ್ಲೂ ಕಗ್ಗತ್ತಲೆಯೇ ಕವಿದಿದೆ” ಎಂದರು. ಆದರೆ ಡಾ. ಅಂಬೇಡ್ಕರ್ ಆ ಅವಿಸ್ಮರಣೀಯ ಸಂಜೆಯಲ್ಲಿ ಒಂದೇ ಒಂದು ಶಬ್ದವನ್ನೂ ಉಚ್ಚರಿಸಲಿಲ್ಲ. ಇದಾದ ಎಷ್ಟೋ ದಿನಗಳ ದುಗುಡದ ನಂತರ ಮಾತ್ರ “ನನ್ನ ನಿಜವೈರಿ ತೊಲಗಿದ. ಗ್ರಹಕಾಟ ಕಳೆಯಿತು. ಈ ಸುಸಮಯಕ್ಕೆ ವಂದನೆಗಳು” ಎಂದರು. ಗಾಂಧಿ ಬದುಕಿದ್ದಾಗ “ಬೇರೊಂದು ಭಾರತ”ಕ್ಕಾಗಿ ದುಡಿದ ಅವರು, ಕೆಲವರಿಗೆ ಪರಿಚಿತ, ಕೆಲವರಿಗೆ ಅಲ್ಪಸ್ವಲ್ಪ ಗುರುತಸ್ಥ; ಅಂತೂ ಇಂಡಿಯಾದ ದಿಗಂತದ ಮೇಲೆ ಒಂದು ಗ್ರಹದಂತೆ ಮಿಂಚಿ ಮಾಯವಾದರು ಗಾಂಧಿ.

ಹುಟ್ಟಿ ಬೆಳೆದದ್ದು ಇಂಡಿಯಾದ ತೀರಾ ಸಂಪ್ರದಾಯಸ್ಥ ಬನಿಯಾ (ವ್ಯಾಪಾರಸ್ಥ) ಜಾತಿಯಲ್ಲಿ. ಗುಜರಾತಿನಲ್ಲಿ ಆಗರ್ಭ ಶ್ರೀಮಂತ ಮನೆತನ ಅವರದು. ಪಾಶ್ಚಾತ್ಯ ತಿಳಿವಳಿಕೆಯಿಂದ ದೊರೆತದ್ದೂ ಸಾಕಷ್ಟು. ತದನಂತರ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣ ಮಾಡಿದ ಮೇಲೆ, ಪಾಶ್ಚಾತ್ಯ ಮಾದರಿಯ ಉಡುಗೆಗಳನ್ನು ಕಳಚಿಟ್ಟರು. ಧೋತಿ ಹೊದ್ದುಕೊಂಡರು. ‘ಸಹಜ ಸಾವಿನಿಂದಲೇ’ ಸತ್ತಿರಬಹುದಾದ ಹಸುವಿನ ಚರ್ಮದ ಎಕ್ಕಡಗಳನ್ನು ಮೆಟ್ಟಿದರು, ಭಾರತದ ಹಳ್ಳಿ-ದಿಲ್ಲಿಗಳಲ್ಲೆಲ್ಲಾ ಅಡ್ಡಾಡಿದರು.

ಗಾಂಧಿ ಯಾವೊಬ್ಬ ಪ್ರವಾದಿಗೂ ಕಮ್ಮಿಯಿಲ್ಲ. ಮತ್ತು ವಿಷ್ಣುಪರಮಾತ್ಮನ ‘ಅವತಾರ’ ಎಂದಿತು ಹಿಂದು ಸಮಾಜ. ಭಗವದ್ಗೀತೆಯ ಪ್ರಕಾರ ಭೂಮಿಯಲ್ಲಿ ವಿಶೇಷವಾಗಿ ಭಾರತದಲ್ಲಿ ಹಿಂದೂಗಳ ಧರ್ಮಕ್ಕೆ ದುರ್ಗತಿ ಒದಗಿದಾಗ ವಿಷ್ಣು ಅವತರಿಸುತ್ತಾನೆ. ಎಂಬುದವರ ನಂಬಿಕೆ.

ಇಪ್ಪತ್ತನೆಯ ಶತಮಾನದ ಉಳಿದ ರಾಷ್ಟ್ರೀಯ ನಾಯಕರು ತಮ್ಮ ಸ್ವಾತಂತ್ರ್ಯ ಸಾಧನೆಗೆ ಅನುಸರಿಸಿದ ವಿಧಾನಗಳು ಅತ್ಯಂತ ಸರಳ ಮತ್ತು ನೇರ. ಆದರೆ ಗಾಂಧಿ ವಿಧಾನ ಮಾತ್ರ ಅತ್ಯಂತ ಕ್ಲಿಷ್ಟವಾದುದು-ವ್ಯರ್ಥದ್ದು; ಕಾಲ, ಹಣ ಮತ್ತು ಮಾನವ ಜೀವಗಳನ್ನು ತೆರಬೇಕಾದುದು. ಗಾಂಧಿ ಅನುಸರಿಸಿದ ಈ ವಿಧಾನ ಎಂಥ ದಡ್ಡನಿಗೂ ಅರ್ಥವಾಗುವಂತದ್ದು; ಆದರೆ, ಅವರ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಅಮೆರಿಕದ ಇತಿಹಾಸಗಾರನಾದ ಪೆರ್ಸಿವಲ್‌ಸ್ಪಿಯರ್ ನ ಮಾತುಗಳಲ್ಲೇ ಹೇಳುವುದಾದರೆ

ಅರ್ಥ ವಿವರಣೆಗಳನ್ನು ರಹಸ್ಯವಾಗಿಟ್ಟು ಸಂಪುಟಗಟ್ಟಲೆ ಭಾಷಣ ಮಾಡುವವರಲ್ಲೊಬ್ಬರು ಗಾಂಧಿ. ಇವರು ಯಾವಾಗಲೂ ತಮ್ಮನ್ನು ತಾವೇ ವಿವರಿಸಿಕೊಳ್ಳುತ್ತಾರೆ; ಆದರೆ ತಮ್ಮನ್ನು ತಾವು ಎಂದೂ ಅರ್ಥಮಾಡಿಕೊಂಡೇ ಇರುವುದಿಲ್ಲ. ಇವರ ನಡತೆಯ ಯಾವುದಾದರೂ ಒಂದು ಅಂಶದಿಂದ ಪ್ರಭಾವಿತರಾಗಿರುವ ಒಂದೇ ಒಂದು ವ್ಯಕ್ತಿ ಕಣ್ಣಿಗೆ ಬಿದ್ದರೆ ಸಾಕು; ಮೂಲಕ ತಾನೋರ್ವ ಮತಾಂಧ, ದಾರ್ಶನಿಕ, ಚತುರ ಕ್ರಿಯಾಶೀಲ ಸಂತ, ಪ್ರವಾದಿ ಅಥವಾ ಒಬ್ಬ ದೂರ್ತ ಎಂದು ಏನಂತ ಬೇಕಾದರೂ ನಂಬಿಸಬಿಡಬಲ್ಲಂಥವರು. ಆದರೆ, ಅವರದು ಇಂದಿಗೂ ಅತ್ಯಂತ ಆಶ್ಚರ್ಯಕರವಾದ ವ್ಯಕ್ತಿತ್ವ. ಅಷ್ಟೇ ಅಲ್ಲ, ತನ್ನ ಯುಗದ ಅನಂತರದ ಪೀಳಿಗೆಯ ಮೇಲೆ ಅನನ್ಯ ಪ್ರಭಾವ ಬೀರಿದ ವ್ಯಕ್ತಿ ಎಂಬುದರಲ್ಲಿ ಸಂಶಯವಿಲ್ಲ.

ಗಾಂಧಿಯ ಅಹಿಂಸಾ ಸಂಗ್ರಾಮದಲ್ಲಿ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ನೇರವಾಗಿ ಭಾಗಿಯಾಗುವುದರಿಂದ ಮಾತ್ರ ರಾಜಕೀಯ ಸ್ವಾತಂತ್ರ್ಯ ಸಾಧ್ಯವೆಂದು ಅವರು ನಂಬಿದ್ದರು. ಜನಸಾಮಾನ್ಯರ ಜಾಗೃತಿ, ಅವರ ಸ್ವಸಾಮರ್ಥ್ಯದಲ್ಲಿ ನಂಬಿಕೆ ಮತ್ತು ಧೈರ್ಯ ಸ್ವಾಭಿಮಾನಗಳನ್ನು ಬಿಟ್ಟು ಕದಲದ ಧೋರಣೆಯನ್ನು ಅವರು ಜನತೆಗೆ ಕಲಿಸಿಕೊಟ್ಟರು. ಸನ್ಯಾಸಿ ವೇಷದ ಗಾಂಧಿ, ಅವರಲ್ಲಿದ್ದ ಅಲಕ್ಷ್ಯ ಭಾವನೆ ಮತ್ತು ಸೋಮಾರಿತನಗಳನ್ನು ಹೋಗಲಾಡಿಸಿದರು. ಯಾವ ಜನತೆಯಲ್ಲಿ ರಾಷ್ಟ್ರೀಯ ಭಾವನೆಗಳ ಗಂಧವೇ ಇರಲಿಲ್ಲವೋ, ಅವರಲ್ಲಿ ಅದರ ಬೀಜಾಂಕುರ ಮಾಡಿದವರು ಗಾಂಧಿ. ಜನತೆಯಲ್ಲಿ ಸ್ವಾಭಿಮಾನದ ಬಿರುಗಾಳಿ ಎಬ್ಬಿಸಿದವರು ಗಾಂಧಿ.

ಸ್ವತಂತ್ರ ಪ್ರಜೆಗಳಂತೆ ನಡೆಯಿರಿ ಎಂದವರನ್ನು ಮುನ್ನಡೆಸಿದರು. ನಮ್ಮನ್ನು ನಾವು ಆಳಿಕೊಳ್ಳುವ ಬುದ್ಧಿಯನ್ನು ಎಂದಿಗೆ ನಾವು ಕಲಿಯುತ್ತೇವೋ ಅಂದಿಗೇ ಸ್ವರಾಜ್ಯ ನಮ್ಮ ಕೈಗೆ ಬರುತ್ತದೆ. ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸುವಂತಾಯಿತು.

ಸನ್ಯಾಸಿ ವೇಷದ ಗಾಂಧಿಯ ಮಾತು ಮಾತಿಗೂ ಮಾಂತ್ರಿಕ ಶಕ್ತಿಯಿತ್ತು. ಸರಳ ಜೀವನ ಕ್ರಮದಿಂದ ಅಥವಾ ಆ ರೀತಿ ನಟಿಸುವಂತಾದರೂ ಜನಸಾಮಾನ್ಯರದೇ ಆದ ಭಾಷೆಯಲ್ಲಿ, ಅವರನ್ನುದ್ದೇಶಿಸಿ ಮಾತನಾಡುವ ತಂತ್ರ ಇವೆಲ್ಲವೂ ಸೇರಿ ಜನ ಸಾಮಾನ್ಯರ ನಡುವೆ ಗಾಂಧಿಗೊಂದು ಸ್ಥಾನ ನಿರ್ಮಿಸಿಕೊಟ್ಟವು. ಗಾಂಧಿ ಜೀವನಕ್ರಮ, ಮಾತಿನ ರೀತಿ ಎಲ್ಲವೂ ಜನತೆಯಲ್ಲಿ ಅವರ ಬಗೆಗೆ ಜ್ವಲಂತವಾದ ದೈವಿಕ ಭಾವನೆ ಹಾಗೂ ರಾಜಕೀಯ ಆಕಾಂಕ್ಷೆಗಳನ್ನು ಪ್ರೇರೇಪಿಸಿದವು. ಕಾರಣ, ಗಾಂಧಿ ಧರಿಸಿದ್ದ ಧ್ಯೇಯದ ಮಹತ್ವ ಹಾಗೂ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಜಕೀಯವಾಗಿ ಇರಲಿ, ಆರ್ಥಿಕವಾಗಿ ಇರಲಿ, ಜತೆ ಜತೆಯಲ್ಲೇ ಸುಮವರ್ತಿಯನ್ನಾಗಿ ನಡೆಸಿಕೊಳ್ಳುವ ಗಾಂಧಿಯ ತಂತ್ರ ಜನ ಸಮುದಾಯವನ್ನು ಮಂತ್ರಮುಗ್ಧರನ್ನಾಗಿಸಿತು. ಅಂದರೆ ಭಾರತದಂಥ ದೇಶದಲ್ಲಿ ಇದೇನೂ ತೀರಾ ಸಾಮಾನ್ಯವಾದ ಸಾಧನೆಯಲ್ಲ.

ತನ್ನನ್ನೇ ಉದಾಹರಿಸಿಕೊಳ್ಳುತ್ತ, ಯಾವ ದೈವಿಕ ಶಕ್ತಿಯಲ್ಲಿ ತುಂಬಾ ಸಾಮಾನ್ಯ ಭಾರತೀಯನಿಗೂ ಅದಮ್ಯ ನಂಬಿಕೆಯಿದೆಯೋ ಅಂಥವರನ್ನು “ಧೀರರು ಹುತಾತ್ಮರನ್ನಾಗಿಯೂ ಪರಿವರ್ತಿಸಿದ ವ್ಯಕ್ತಿ ಗಾಂಧಿ”. ಭಾರತಕ್ಕೆ ಅದೇ ಅವರು ಸಲ್ಲಿಸಿದ ಮಹಾ ಕೊಡುಗೆ. ಯಾವುದು ತುಂಬಾ ಅದ್ಭುತವಾದ ಶಕ್ತಿಯೆನಿಸುವುದೋ ಅಂಥ ಶಕ್ತಿಗೆ, ತೀರಾ ಹಳೆಯ ಕಾಲದ ಅಜ್ಞಾನಿಯಿರಲಿ, ಸೋಮಾರಿ ಜನರೂ ಸಹ ಶರಣು ಹೋಗುತ್ತಾರೆ. ಅಷ್ಟೇ ಏಕೆ? ಶಿಕ್ಷಣ ಕ್ಷೇತ್ರದಲ್ಲಿ ಮಹಾಮಹಾ ಪದವಿಗಳನ್ನು ಧರಿಸಿರುವ ವಿದ್ಯಾವಂತ ಗಂಡಸರು, ಹೆಂಗಸರೂ ಸಹ ಅಂಥ ಭ್ರಮೆ, ಅವಿವೇಕ ಮತ್ತು ಅಜ್ಞಾನದ ಭಾವನೆಗಳಲ್ಲೇ ಮುಳುಗಿ ತೇಲಾಡುತ್ತಾರೆ. ಈ ಯಾವ ಭಾವನೆಯಲ್ಲಿ ಜನ ಇಷ್ಟು ಅಗಾಧವಾದ ನಂಬಿಕೆಯಿಟ್ಟಿರುತ್ತಾರೋ, ಆ ಜನ ಆ ನಂಬಿಕೆ ಯಾವ ಸತ್ಯ ಸತ್ಯವನ್ನು ಆಧರಿಸಿದೆ? ಎಂಬ ಪ್ರಶ್ನೆಯತ್ತ ಜನ್ಮೇಪಿ ಅವರು ದೃಷ್ಟಿ ಹೊರಳಿಸಲಾರರು. ಸತ್ಯೆವೆಂಬುದು ಒಂದು ಸಾಪೇಕ್ಷಾರ್ಥವುಳ್ಳ ಮಾತೆಂಬುದು ನಿಜ. ಆದರೆ ಅದೇ ಸತ್ಯ ಒಬ್ಬನಿಗೆ ಅಜ್ಞಾನವಾಗಿದ್ದು, ಇನ್ನೊಬ್ಬನಿಗೆ ಅದೇ ಧರ್ಮಜ್ಞಾನವಾಗಿ ಬಿಡಲೂಬಹುದು. ಅರ್ಥಾತ್‌ಒಬ್ಬನಿಗೆ ಸತ್ಯವಾಗಿ ಕಂಡದ್ದು, ಇನ್ನೊಬ್ಬನಿಗೆ ಅಸತ್ಯವಾಗಿ ಕಾಣಬಹುದೆಂಬುದು ಸರ್ವೇ ಸಾಮಾನ್ಯವಾದ ಅನುಭವ.

ಬಿಹಾರ್ ಮತ್ತು ಕಾಂಗ್ರದಲ್ಲಿ ಸಂಭವಿಸಿದ ಭೂಕಂಪಕ್ಕೆ ಕಾರಣ ಅಸ್ಪೃಶ್ಯತೆ ಆಚರಣೆಯಂಥ ಪಾಪಕೃತ್ಯವೆಂದು, ಗಾಂಧಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಮಾತ್ರವಲ್ಲ, ಬಹಿರಂಗ ಭಾಷಣಗಳಲ್ಲಿ ಕೂಡ ಬೋಧಿಸಿದರು. ಗುಹ್ಯ ರೋಗಗಳಿಗೆ ಚಿಕಿತ್ಸೆ ಮಾಡಬಾರದೆಂದರು ಗಾಂಧಿ. ಏಕೆಂದರೆ, ವ್ಯಬಿಚಾರದಂಥ ಪಾಪಕೃತ್ಯಕ್ಕೆ ಶಿಕ್ಷೆ ವಿಧಿಸುವ ಸಲುವಾಗಿ, ವಿಷ್ಣು ಪರಮಾತ್ಮನು ಗುಹೆರೋಗದ ರೂಪ ಧರಿಸಿ ಲೋಕದಲ್ಲಿ ಅವತರಿಸುತ್ತಾನೆ ಎಂದು ನಂಬಿದ್ದರು. ಗುಜರಾತಿನಲ್ಲಿ ಪ್ಲೇಗಿನಂಥ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಕೂಡ ಇಲಿ ಮತ್ತು ನೊಣಗಳನ್ನು ಕೊಲ್ಲಬಾರದೆಂದು ಗಾಂಧಿ ಜನರಿಗೆ ಬಹಿರಂಗವಾಗಿ ಆಜ್ಞೆಗೈದರು. ತಿನ್ನುವುದು ಕೆಟ್ಟ ಕೃತ್ಯ ಎಂದವರು ಹೇಳಿದರು. ರೈಲು ಪ್ರಯಾಣ, ಹಡಗು ಪ್ರಯಾಣ, ಆಸ್ಪತ್ರೆಗಳು ಎಲ್ಲವೂ ಪಾಪಕೃತ್ಯದ ಕೇಂದ್ರಗಳು ಎಂದವರು ಸಾರಿದರು. ನೀರಾವರಿ ಕಾರ್ಯಾಗಾರಗಳು ಎಲ್ಲವನ್ನೂ ಗಾಂಧಿ ವಿರೋಧಿಸಿದರು. ಪಾಶ್ಚಾತ್ಯ ನಾಗರಿಕತೆಯನ್ನು “ಸೈತಾನಿ ನಾಗರಿಕತೆ” ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಇದ್ದರೂ ‘ಹಿಂದೂ ಧರ್ಮವೇ ಶ್ರೇಷ್ಠ ಧರ್ಮ’ ಎಂದವರು. ಘೋಷಿಸಿದರು. ಸದೃಡ ಬ್ರಹ್ಮಚರ್ಯ, ವ್ಯಕ್ತಿಯಲ್ಲಿ ಸೃಷ್ಟಿಶೀಲ ಶಕ್ತಿಯನ್ನು ತೀವ್ರಗೊಳಿಸಬಲ್ಲದು ಎಂಬ ಭ್ರಾಂತಿ ಗಾಂಧಿಯವರದು. ಲೈಂಗಿಕ ನಿಯಂತ್ರಣದ ವಿಚಾರದಲ್ಲಿ ಗಾಂಧಿ ಎಂಥ ಭ್ರಾಂತವ್ಯಕ್ತಿಯೆಂದರೆ, ಬಂಜೆಯಾದ ಗಂಡಸರ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿದರಂತೆ. ಒಮ್ಮೆ ಆಫ್ರಿಕಾದ ಅವರ ಆಶ್ರಮದ್ಲಲಿ, ಒಂದು ಹುಡುಗಿಯೊಡನೆ ಇಬ್ಬರು ಹುಡುಗರು ರತಿ ಕ್ರೀಡೆಯಲ್ಲಿ ತೊಡಗಿದ್ದುದು ಕಂಡುಬಂದು, ಆ ಹುಡುಗಿಗೆ ಗಾಂಧಿ ತಲೆಬೋಳಿಸಿಕೊಳ್ಳುವ ಶಿಕ್ಷೆ ವಿಧಿಸಿದರಂತೆ.

ತಮ್ಮ ಮುದಿ ವಯಸ್ಸಿನಲ್ಲಿ ಕೂಡ ತಮ್ಮ ಹಾಸಿಗೆಯ ಮೇಲೆ ಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಮಲಗಿಸಿಕೊಂಡು ತನ್ನ ಲೈಂಗಿಕ ಉದ್ರೇಕವನ್ನು ನಿಯಂತ್ರಿಸಬಲ್ಲನೆ ಇಲ್ಲವೇ ಎಂದು ಪ್ರಯೋಗ ಮಾಡುತ್ತಿದ್ದರಂತೆ. ಮಹಾತ್ಮರೆನಿಸಿಕೊಂಡ ಗಾಂಧಿಯ ಇಂಥ ಕ್ಷುಲ್ಲಕ ಪ್ರಯೋಗಗಳಿಂದ ಬೇಸರಗೊಂಡ ಅವರ ಇಬ್ಬರು ಸ್ತ್ರೀ ಕಾರ್ಯದರ್ಶಿಗಳು ರಾಜೀನಾಮೆ ಕೊಟ್ಟು ಹೊರಟು ಹೋದರು. ಸಾಂಕ್ರಾಮಿಕ ರೋಗಗಳು ಹರಡುವಿಕೆಯಲ್ಲಿ ಗಾಂಧಿಗೆ ನಂಬಿಕೆಯಿರಲಿಲ್ಲ. ಸಣ್ಣಪುಟ್ಟ ಗಾಯಗಳಾದಲ್ಲಿ, ಅವುಗಳಿಗೆ ಬಿಗಿಯಾದ ಮಣ್ಣು ಮೆತ್ತಿಕೊಳ್ಳುತ್ತಿದ್ದರು. ಜಲಚಿಕಿತ್ಸೆ ಮತ್ತು ನಿಸರ್ಗ ಚಿಕಿತ್ಸೆಗಳನ್ನು ಅವರು ಯಾವಾಗಲೂ ಹೇಳುತ್ತಿದ್ದರು. ಯಂತ್ರ ಸಾಧನಗಳಿಗೂ “ಸಂಕಲ್ಪ ಶಕ್ತಿ ಮತ್ತು ಪ್ರಜ್ಞೆ” ಇರುವುದರಿಂದಲೇ ಕೆಲವೊಮ್ಮೆ ನಮ್ಮನ್ನು ಕಂಡು ಅವುಗಳಿಗೆ ಕೋಪ ಬರುತ್ತದೆ ಎಂದವರು ಹೇಳುತ್ತಿದ್ದರು. ರಾಮ ನಾಮೋಚ್ಚಾರಣೆಯಿಂದ ಮಾನವನ ಎಲ್ಲಾ ಭಯಭೀತಿಗಳೂ ಮಾಯವಾಗಿ, ತನ್ನ ಎಲ್ಲ ಪಾಪಗಳಿಂದಲೂ ಅವನು ಮುಕ್ತನಾಗುತ್ತಾನೆ ಎಂಬುದು ಅವರ ನಂಬಿಕೆಯಾಗಿತ್ತು. ಉಳಿದ ಹಿಂದೂ ಸಂತರಂತೆಯೇ, ಗಾಂಧಿ ಓದಿದ್ದು ತುಂಬಾ ಕಡಿಮೆ. ಆದರೆ ಅವರ ನಂಬಿಕೆಗಳು ತುಂಬಾ ಗಾಢವಾಗಿದ್ದವು. ಗಟ್ಟಿಯಾಗಿ ಮಾತಾಡಿಕೊಂಡು ಯೋಚಿಸುವುದರಲ್ಲೇ ಅವರಿಗೆ ಅಪಾರ ತೃಪ್ತಿ.

ಹಿಂದೂ ಧರ್ಮಶಾಸ್ತ್ರಗಳ ಪ್ರತಿಯೊಂದು ಪದವೂ ಶ್ರೇಷ್ಠವಾದದ್ದು. ಆದ್ದರಿಂದಲೇ ಲೋಕದಲ್ಲಿ ಹಿಂದೂಧರ್ಮ ಒಂದೇ ಪರಮ ಶ್ರೇಷ್ಠವಾದದ್ದು. ಮಾನವ ಜನಾಂಗಕ್ಕೆ ಏಕೈಕ ಸತ್ಯವಂಥ ಧರ್ಮವೆಂದರೆ ಅದು “ಹಿಂದೂ ಧರ್ಮ ಮಾತ್ರ” ಎಂದು ಗಾಂಧಿ ಬೋಧಿಸಿದರು. ಅಸ್ಪೃಶ್ಯತೆ ಆಚರಿಸಿದವರಿಗೆ ಶಿಕ್ಷೆ ವಿಧಿಸಬೇಕೆಂದಾಗ ಗಾಂಧಿ ಅದನ್ನು ವಿರೋಧಿಸಿದರು. ಏಕೆಂದರೆ, ಅವರ ನಂಬಿಕೆಯಂತೆ, ಹಿಂದೂ ಶಾಸ್ತ್ರಗಳಲ್ಲಿ ಅಸ್ಪೃಶ್ಯತೆ ಇಲ್ಲ ಮತ್ತು ಹಿಂದೂ ಧರ್ಮಶಾಸ್ತ್ರಗಳನ್ನು ಪಾಂಡಿತ್ಯದಿಂದ ವ್ಯಾಖ್ಯಾನಿಸುವವರನ್ನೂ ಅವರು ಖಂಡಿಸುತ್ತಾ “ಶಾಸ್ತ್ರಗಳಲ್ಲಿ ಗ್ರಹಿಸಬೇಕಾಗಿರುವುದ ಶಬ್ಧಾರ್ಥವನ್ನಲ್ಲ, ಅವುಗಳ ಹಿಂದಿರುವ ದೈವೀಸ್ಫೂರ್ತಿಯನ್ನು” ಎಂದು ವಾದಿಸಿದ್ದರು. ಗಾಂಧಿ ತಮ್ಮ “ದೈವಿಶಕ್ತಿ”ಯನ್ನು ಎಲ್ಲಿಯತನಕ ತೆಗೆದುಕೊಂಡು ಹೋದರೆಂದರೆ, ಇಂಡಿಯಾದ ಬ್ರಿಟಿಷ್‌ವೈಸರಾಯ್‌ಆಗಿದ್ದ ಲಾರ್ಡ್‌ಲಿನ್‌ಲಿತ್‌ಗೂ ಅವರಲ್ಲಿಗೆ ಹೋಗಿ “ಬಂದೂಕು ಹಿಡಿದು ಜರ್ಮನಿಯರ ವಿರುದ್ಧ ನೀವು ಯುದ್ಧ ಮಾಡುವುದು ಸರಿಯಲ್ಲ” ಎಂದು ತಿಳಿವಳಿಕೆ ಕೊಟ್ಟರು. ಮಹಾತ್ಮರ ಈ ಮಾತು ಕೇಳಿದ ಕ್ಷಣದಲ್ಲಿ ವೈಸ್‌ರಾಯ್‌ಸಾಹೇಬರು ಕುರ್ಚಿ ಸಮೇತ ಪಾತಾಳಕ್ಕೆ ಕುಸಿದಂತಾಗಿ, ಪರಮಾಶ್ಚರ್ಯದಿಂದ ಮಹಾತ್ಮರ ಕಣ್ಣುಗಳನ್ನೇ ನೋಡುತ್ತಿದ್ದರಂತೆ. ಪಾಪ ಬಡಪಾಯಿ! ಮರುಕ್ಷಣದಲ್ಲೇ ಈ ಮಹಾತ್ಮೆ ಶಿಖಾಮಣಿಯನ್ನು ಕಿಡಕಿಯಿಂದ ಆಚೆಗೆ ಎಸೆದು ಬಿಡುವಂಥ ಭಯಂಕರ ಕೋಪದಿಂದ ನೋಡುತ್ತಿದ್ದರಂತೆ. ಆ ಉಗ್ರ ಕೋಪದ ಬಿಸಿಯಲ್ಲಿ, ಗಾಂಧಿಯನ್ನು ಕಳಿಸಲು ಕಾರು ಬರಹೇಳುತ್ತಿದ್ದ ವೈಸರಾಯ್‌ಸಾಹೇಬರ ಮಾಮೂಲು ಕ್ರಿಯೆ ಕೂಡ ಮರೆತುಹೋಗಿತ್ತಂತೆ. ಇಂಥದೇ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಒಮ್ಮೆ ಗಾಂಧಿಯನ್ನು “ಈತ ಹುಚ್ಚನಾಗಿರಬೇಕು ಅಥವಾ ಕಾಡು ಮಾನವನಂತೂ ಆಗಿರಲೇಬೇಕು” ಎಂದಿದ್ದರು.

ಬ್ರಿಟಿಷರು ಮತ್ತು ಭಾರತೀಯರು ಇಬ್ಬರಿಗೂ ಗಾಂಧಿ ಹೇಳಿದ್ದೇನು? ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕು. ಭರತೀಯರು ತಮ್ಮ ಮಿಲಿಟರಿ ರೆಜಿಮೆಂಟ್‌ಗಳನ್ನೆಲ್ಲಾ ವಿಸರ್ಜಿಸಬೇಕು, ವೈರಿಯನ್ನು ಯಾವಾಗಲೂ ಆತ್ಮಶಕ್ತಿಯಿಂದಲೇ ಗೆಲ್ಲಬೇಕು. ಬನಿಯಾ ಜಾತಿಯ ಗಾಂಧಿ ಕಟ್ಟಾ ಸಸ್ಯಾಹಾರಿ. ಕರ್ಮಠ ಅಹಿಂಸಾವಾದಿ. ಹಾಲಿಗೂ ಗಾಂಧಿಗೂ ಪರಮ ವೈರಿ. ಏಕೆಂದರೆ ಅವರ ಪ್ರಕಾರ ಹಾಲು ಕುಡಿದರೆ ಕಾಮ ಕೆರಳುತ್ತದೆ. “ಹಾಲು ಎಂದರೆ ಹಸು ಅಥವಾ ಎಮ್ಮೆ ಹಾಲು ಕುಡಿದರೆ ಮಾತ್ರ. ಆಡಿನ ಹಾಲಲ್ಲ”. ಗಾಂಧಿ ಅಭಿಪ್ರಾಯದಲ್ಲಿ ಹಸು ಮುಖ್ಯವೇ ಹೊರತು ದೇಶದ ಸ್ವಾತಂತ್ರ್ಯವಲ್ಲ. ಒಮ್ಮೆ ಅವರು ಕಲ್ಕತ್ತಾಗೆ ಭೇಟಿಯಿತ್ತಾಗ, ಧರ್ಮದ ಹೆಸರಿನಲ್ಲಿ, ಕಾಳಿ ದೇವತೆಯ ಮುಂದೆ ಬಡ ಪ್ರಾಣಿಗಳಾದ ಆಡುಗಳನ್ನು ಕತ್ತರಿಸಿ ಮಲಗಿಸಿರುವುದನ್ನು ಕಂಡು ಅಸಾಧ್ಯ ಆವೇಶದಿಂದ ಅವರ ಕಾರ್ಯದರ್ಶಿ ಮಹದೇವ ದೇಸಾಯಿಗೆ ಹೇಳಿದರಂತೆ.

ಈಗಿಂದಿಗಲೇ ನಾನು ಕಲ್ಕತ್ತಾಗೆ ಹೋಗಬೇಕು. ಧರ್ಮದ ಹೆಸರಿನಲ್ಲಿ ಪ್ರಾಣಿವಧೆ ಮಾಡುವುದನ್ನು ನಿಲ್ಲಿಸಬೇಕು. ಅಲ್ಲಿ ಕಾಳಿಘಟ್ಟದಲ್ಲಿ ಆಡುಗಳನ್ನು ಅಸ್ಪೃಶ್ಯರಿಗಿಂತಲೂ ಹೀನಾಯವಾಗಿ ಹಿಂಸಿಸುತ್ತಿದ್ದಾರೆ. ಆಡುಗಳು ತಮ್ಮ ಕೊಂಬುಗಳನ್ನು ತೋರಿಸಿಕೊಂಡು ಮನುಷ್ಯರ ಮೇಲೆ ದಬ್ಬಾಳಿಕೆ ಮಾಡುತ್ತೆವೆಯೇನು? ಅಥವಾ ಆಡುಗಳು ತಮ್ಮ ನಡುವೆ ಒಬ್ಬ ಅಂಬೇಡ್ಕರ್ ರನನ್ನು ಹುಟ್ಟಿಸಲು ಸಾಧ್ಯವೇನು? ಅಂಥ ಹಿಂಸೆಗಳನ್ನು ಕಂಡಾಗ ನನ್ನ ರಕ್ತ ಕುದಿಯುತ್ತದೆ.

ಇಂಡಿಯಾದ ಬಂಡವಾಳಶಾಹಿಗಳು ಮತ್ತು ಬಡ್ಡಿ ದುಡ್ಡಿನ ಶ್ರೀಮಂತರನ್ನು ಕುರಿತು ಗಾಂಧಿ “ಅವರಲ್ಲಿ ಬಹಳ ಮಂದಿ ಬಡವರ ಆಸ್ತಿಯನ್ನು ರಕ್ಷಿಸುತ್ತಾ ಬಂದಿದ್ದಾರೆ”, ಎಂದು ತುಂಬಾ ಪ್ರಾಮಾಣಿಕವಾಗಿಯೇ ನಂಬಿದ್ದರು. ಒಮ್ಮೆ ಅಮೆರಿಕದ ‘ಲೈಫ್‌’ ಪತ್ರಿಕೆಯ ಸುದ್ದಿಗಾರ ಮಾರ್ಗೆಟ್‌ಬರ್ಕೇವೈಟ್‌ಗಾಂಧಿಯನ್ನು ಸಂದರ್ಶಿಸಿದಾಗ, ಸವರ್ಣೀಯ ಮಾರ್ವಾಡಿ ಎನಿಸಿರುವ ಕೋಟ್ಯಾಧಿಪತಿ, ಬಿರ್ಲಾನ ಬಗೆಗೆ ಅಧಿಕೃತ ದಾಟಿಯಲ್ಲಿ ಗಾಂಧಿ

ಅವರು ತುಂಬಾ ಒಳ್ಳೆಯ ಲೇವಾದೇವಿಗಾರರು. ಅವರಂತೆಯೇ ಇನ್ನೂ ಅನೇಕ ಮಂದಿ ಇದ್ದಾರೆ. ನನ್ನ ಸಲಹೆಯಂತೆಯೇ ಅವು ನಡೆದುಕೊಳ್ಳುತ್ತಾರೆ. ಅವರು ಮಾಳಿಗೆ ಮನೆಯಲ್ಲಿ ನಾನು ಇರುತ್ತಲೇ ಇರಲಿಲ್ಲ. ಅಷ್ಟೇ ಅಲ್ಲ, ತುಂಬಾ ದಿನಗಳಿಂದಲೂ ಅವರು ನನಗೆ ಪರಿಚಿತರೂ ಕೂಡ. ಒಬ್ಬ ಲೇವಾದೇವಿಗಾರ ಎನಿಸಿಕೊಂಡು ಅವನು ಸಂಪಾದಿಸಿದರೆ, ಅದು ಅವನೊಬ್ಬನಿಗೆ ಸೇರಿದ್ದಲ್ಲ. ಒಟ್ಟು ಲೇವಾದೇವಿಗಾರ ಕಮಿಶನ್ಪಡೆಯಲೇಬೇಕಾಗುತ್ತದೆ. . . ಅವರೊಡನೆ ವ್ಯವಹರಿಸುವ ವ್ಯಕ್ತಿನೀವು ತಿಂಗಳಿಗೆ ಐದು ರೂಗಿಂತ ಹೆಚ್ಚು ಕಮಿಶನ್ತೆಗೆದುಕೊಳ್ಳಬಾರದು. ಎಂದು ಹೇಳಿದ ಅಂದುಕೊಳ್ಳಿ! ಆಗ ತನಗಿಷ್ಟವಿದ್ದರೆ ಒಪ್ಪುತ್ತಾನೆ. ಇಲ್ಲವೇ ಬಿಡುತ್ತಾನೆ.

ಪ್ರಾರ್ಥನೆ ಪಿಸುಗುಟ್ಟಿಕೊಂಡು, ಆಟಂಬಾಬುಗಳನ್ನು ನೋಡುತ್ತಿದ್ದರಂತೆ ಗಾಂಧಿ. “ಸುರಂಗದೊಳಗೆ ನಾನು ಹೋಗುವುದಿಲ್ಲ. ಸುರಂಗದೊಳಕ್ಕೆ ಮಾತ್ರವ್ಲಲ, ಮನೆಯೊಳಕ್ಕೂ ನಾನು ಹೋಗುವುದಿಲ್ಲ, ನಾನು ಬಯಲಲ್ಲೇ ಇರುತ್ತೇನೆ. ಅವರ ವಿರುದ್ಧ ನನ್ನ ಯಾವುದೇ ದೋಷಾರೋಪಯಿಲ್ಲವೆಂಬುದನ್ನು ಪೈಲೆಟ್‌ನೋಡಿ ತಿಳಿಯಲಿ” ಎಂದು ನಿಶ್ಚಯ ನಿಸ್ಸಂಕೋಚವಾಗಿ ಬರ್ಕೆಗೆ ಹೇಳಿದವರು ಇವರೇ ಆ ಮಹಾತ್ಮಾ ಎಂಬ ಗಾಂಧಿ.

ಗಾಂಧಿ ಬದುಕಿದ್ದ ಕಾಲದಲ್ಲಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ತುಂಬಾ ಹೆಸರುವಾಸಿಯಾದುವು ಎರಡು ೧. “Indian Home Rule’’ (1908) ೨. “My experiments with truth’’ ಎಂಬ ಅವರ ಆತ್ಮಕಥೆ. ಗಾಂಧಿ ಹೆಸರಿನಲ್ಲಿ ಪ್ರಕಟವಾಗಿರುವ ಬಹುತೇಕ ಪುಸ್ತಕಗಳು, ಅವರು “ಯಂಗ್‌ಇಂಡಿಯಾ” ಹಾಗೂ “ಹರಿಜನ” ಪತ್ರಿಕೆಗಳಲ್ಲಿ ಆಗಾಗ ಬರೆದ ಲೇಖನ ಸಂಗ್ರಹಗಳು. ದೇವರಲ್ಲಿ ತಮಗಿರುವ ನಂಬಿಕೆಯಿಂದ ಹಿಡಿದು ಭೂಮಿಯ ಮೇಲಿರುವ ಮಾನವ ಹಾಗೂ ಪ್ರಾಣಿ ವಸ್ತುಗಳನ್ನೆಲ್ಲಾ ಕುರಿತು ಗಾಂಧಿ ಬರೆಯತೊಡಗಿದ್ದರು. ಅಹಿಂಸಾವಾದವೇ ಪರಮ ಶ್ರೇಷ್ಠವೆಂದು ಶಿಖರದ ಮೇಲಿಂದ ಸಾರುತ್ತ, ನೈತಿಕ ಸಿದ್ಧಾಂತಗಳನ್ನು ಪಠಿಸುತ್ತ, ದೇಶದ ಸ್ವಾತಂತ್ರ್ಯದಂಥ ಮಹಾ ಸಂಗ್ರಾಮದಲ್ಲಿ ಒಂದು ನವ ವಿಧಾನವಾದಂಥ ಅಹಿಂಸಾ ಮಾರ್ಗವೇ ಸೂಕ್ತ ಸಾಧನವೆಂದು ಸಾರಿದರು. ಅದರೊಡನೆ ನೈತಿಕ ಸಿದ್ಧಾಂತಗಳನ್ನು ಸಾರ್ವಜನಿಕ ಜೀವನದಲ್ಲಿ ವ್ಯಾಪಕವಾಗಿ ಅಳವಡಿಸತೊಡಗಿದರು. ಆದ್ದರಿಂದಲೇ ಪ್ರಪಂಚದಲ್ಲಿ ಅವರೊಬ್ಬ ಪರಸಿದ್ಧ ವ್ಯಕ್ತಿಯೆನಿಸಿದರು. ಅವರ ವಿಚಿತ್ರವಾದ ನಡವಳಿಕೆ ಹಾಗೂ ವಿಲಕ್ಷಣವಾದ ಉಡುಪುಗಳಿಂದಾಗಿ ಎಲ್ಲ ಕಣ್ಣುಗಳೂ ಅವರತ್ತ ತಿರುಗಿದವು. ಜೀವನ ಚರಿತ್ರೆಯ ದೃಷ್ಟಿಯಲ್ಲಿ ಗಾಂಧಿ ತುಂಬಾ ಕುತೂಹಲಕಾರಿಯಾದ ವ್ಯಕ್ತಿ. ಲೋಕದ ಮಹಾಪುರುಷರೆನಿಸಿದ ರೊಮೈನ್‌ರೋಲ್ಯಾಂಡ್‌, ಸಿ. ಎಸ್‌. ಆಂಡ್ರಿಯೂ, ರವೀಂದ್ರನಾಥ ಠಾಗೂರ್ , ಪಂ. ಜವಾಹರಲಾಲ್‌ನೆಹರು, ಹಾಗೆಯೇ ಲೂಯಿಪಿಷರ್ , ವಿನ್ಸೆಂಟ್‌ಶೀನ್‌, ಡಿ. ಎಫ್. ಕಾರಕ, ರಾಬರ್ಟ್‌ಪೆಯ್ನೆ ಹೀಗೆ ನೂರಾರು ಜನ ಲೋಕಪ್ರಸಿದ್ಧ ಲೇಖಕರೆಲ್ಲಾ ಗಾಂಧಿಯನ್ನು ಕುರಿತು ಬರೆದಿದ್ದಾರೆ. ಸುಮಾರು ನಾಲ್ಕು ದಶಕಗಳವರೆಗೂ ಯಾರನ್ನು ಬ್ರಿಟಿಷ್ ಸಾರ್ವಜನಿಕರು ವಿರೋಧಿಸಿದ್ದರೋ ಅದೇ ಜನ ಸ್ವತಃ ತಮ್ಮ ದೇಶದಲ್ಲೇ ಗಾಂಧಿಯನ್ನು ಆವೇಶದಿಂದ ಹೊಗಳಿದರು.

ಭಾರತ ಸರಕಾರದ ವೈಸರಾಯ್‌ಹಾಗೂ ಗವರ್ನರ್ ಜನರಲ್‌ಆಗಿದ್ದ ಮತ್ತು ಗಾಂಧಿ ಇರ್ವಿನ್‌ಒಪ್ಪಂದಕ್ಕೆ ಸಹಿ ಮಾಡಿದ್ದ ಲಾರ್ಡ್‌ಪಾಲಿಪಾಕ್ಸ್‌ಕೂಡ ವರದಿಯನ್ನು ಕುರಿತು ಬರೆದಿದ್ದಾರೆ.

ಅವರ ಕೊಲೆಯಂಥ ದುರಂತ ಸಂಭವಿಸಿದ ಮೇಲೆ ಅವರ ಗುಣಗಳನ್ನು ಕುರಿತು ಬೇಕಾದಷ್ಟು ಜನ ಮಾತಾಡಿದ್ದಾರೆ, ಬರೆದಿದ್ದಾರೆ. ಹೀಗೆ ಪ್ರಪಂಚದ ಪ್ರತಿಯೊಂದು ರಾಷ್ಟ್ರವೂ ಮಾನವ ಮೂರ್ತಿಯತ್ತ ಸದುದ್ದೇಶಿತ ದೃಷ್ಟಿ ಹರಿಸಿದೆ. ಎಲ್ಲಾ ಮಹಾಪುರುಷರಲ್ಲೂ ಕಾಣುವಂತೆ ಭಿನ್ನಭಿನ್ನ ದೃಷ್ಟಿಗೆ ವಿಭಿನ್ನವಾದ ಗುಣಗಳು ಕಾಣುವುದುಂಟು. ಹಾಗಾಗಿ ಭಾರತದಲ್ಲಿ ಅವರ ಸ್ಥಾನಮಾನಗಳು ಏನೇ ಆಗಿದ್ದರೂ, ಪಾಶ್ಚಾತ್ಯ ರಾಷ್ಟ್ರಗಳ ಗೆಳೆಯರಿಂದ ಅವರಿಗೆ ಲಭ್ಯವಾದ ಗೌರವಾದರಗಳು ಭಿನ್ನ ಸ್ವರೂಪದ್ದೆಂದೇ ಹೇಳಬೇಕು.

ನಮ್ಮಲ್ಲಿಯಾದರೂ, ಪ್ರಚಾರ, ಅಪಪ್ರಚಾರ, ಸ್ಪರ್ಧೆ ಮತ್ತು ಗುಣಮಟ್ಟ ಮುಂತಾದುವೆಲ್ಲಾ, ಹಣ, ಹರ್ಷ, ಪ್ರಸಿದ್ಧಿಯ ಸುತ್ತಲೂ ತಿರುಗುತ್ತವೆ. ತತ್ಪರಿಣಾಮವಾಗಿ ಗಾಂಧಿಯನ್ನು ಕುರಿತು ಎಷ್ಟೆಲ್ಲಾ ಉತ್ಸಾಹಿ ಲೇಖಕರು ಬರೆದಿದ್ದಾರೋ, ಅವೆಲ್ಲ ಒಟ್ಟಾರೆ ಬರಿಯ ಸುಳ್ಳು. ಅವುಗಳಲ್ಲಿ ಬಹುತೇಕ ಬರೆಯಲೇಬಾರದಿದ್ದಂಥವು. ಉಳಿದ ಮಹಾಪುರುಷರಂತೆಯೇ ಗಾಂಧಿಯನ್ನೂ ಅವರ ಶಿಷ್ಯವೃಂದ ಹಾಗೂ ಹೊಗಳು ಭಟ್ಟರುಗಳಿಂದ ರಕ್ಷಿಸಿಡಬೇಕಾದ ಅಗತ್ಯವಿದೆ. ಭಾಷಾಂತರಕಾರರು ಮತ್ತು ವ್ಯಾಖ್ಯಾನಕಾರರೆಲ್ಲಾ ಸೇರಿ ಮಹಾಪುರುಷರ ಬರವಣಿಗೆಗಳನ್ನೆಲ್ಲಾ ಹಾಳುಗೆಡುವಿದ್ದಾರೆ. ವಿಮರ್ಶೆ ಮಾಡುವ ಜನರಂತೂ, ಅಕ್ಷರ ಅಕ್ಷರವನ್ನೂ ಹಿಡಿದು ಕೃತಿಯ ಮೂಲಸ್ಥಿತಿಯಲ್ಲಿ ಏನಿಲ್ಲವೊ ಅವುಗಳನ್ನೆಲ್ಲಾ ಸೃಷ್ಟಿಸಿ ಅವರ ಮೇಲೆ ಹೊರಿಸಿದ್ದಾರೆ.

ಲೆನಿನ್‌, ಸ್ಟಾಲಿನ್‌, ಮಾವೊ ತ್ಸೆ ತುಂಗ್‌, ಹೊಚಿಮಿನ್‌, ಡಿಗಾಲೆ ಮತ್ತು ಫೀಡಲ್‌ಕ್ಯಾಸ್ಟರೋ ಮುಂತಾದ ಮಹಾವ್ಯಕ್ತಿಗಳಂತೆಯೇ ಗಾಂಧಿಯೂ ಸಹ, ತನ್ನ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಸ್ವಾತಂತ್ರ್ಯ ಸಂಗ್ರಾಮವ್ನನು ಬಹುಮಟ್ಟಿಗೆ ಮುನ್ನಡೆಸಿದ ಮಹಾವ್ಯಕ್ತಿ ಗಾಂಧಿ. ಭಾರತವನ್ನು ಬಿಡಲು ಆಗಲೇ ಅರ್ಧ ಸಿದ್ಧತೆಯಲ್ಲಿದ್ದ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸತತವಾಗಿ ಹೋರಾಡಿದ ರಾಷ್ಟ್ರೀಯ ನಾಯಕ ಗಾಂಧಿ. ಆದರೆ ಮೇಲೆ ಹೇರಿಸಿದ ರಾಷ್ಟ್ರವೀರರು ಅನುಸರಿಸಿದ್ದ ಹಿಂಸಾತ್ಮಕ ಕ್ರಾಂತಿಯ ವಿಧಾನವನ್ನು ತ್ಯಜಿಸಿದ ಗಾಂಧಿ, ತಮ್ಮ ನಾಡಿನ ಸ್ವಾತಂತ್ರ್ಯ ಸಾಧನೆಗೆ ತಮ್ಮದೇ ಆದ ಬೇರೊಂದು ವಿಧಾನವನ್ನು ಅನುಸರಿಸಿದರು. ಮಾವೋ, ಹೊಚಿಮಿನ್‌, ಕ್ಯಾಸ್ಟ್ರೊ ಮುಂತಾದವರು ಗೆರಿಲ್ಲಾ ಯುದ್ಧ ನೀತಿಯನ್ನು ಅನುಸರಿಸಿದರು. ಗಾಂಧಿ ತಮ್ಮ ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಸಾಧಿಸುವ ಪ್ರಯೋಗ ಮಾಡಿದುದು ಗಮನಾರ್ಹ ಸಂಗತಿಯೇ ಸರಿ. ಆದಾಗ್ಯೂ ಅವರ ಎಲ್ಲಾ ರೀತಿಯ ಶಾಂತವಿದಾನಗಳೂ ಕೊನೆಗೆ ಸಾವು, ನಷ್ಟ ಮತ್ತು ಹಿಂಸೆಯಲ್ಲಿ ಕೊನೆಯಾಗುತ್ತಿದ್ದವೆಂಬುದನ್ನು ಮಾತ್ರ ಅಲ್ಲಗಳೆಯಲಾಗದು. ಏನೇ ಆಗಲಿ, ಮಾನವೀಯತೆಗೆ ಇದೊಂದು ಅತ್ಯಂತ ಅರ್ಥಗರ್ಭಿತವಾದ ಆರಂಭವೆಂತಲೇ ಹೇಳಬೇಕು.

ಯುದ್ಧ ಕಲೆಯಲ್ಲಿ ಗೆರಿಲ್ಲಾ ಯುದ್ಧ ನೀತಿ ಒಂದು ಹೊಸ ತಂತ್ರ. ಪ್ರಸಿದ್ಧ ನಾಟಕರಾರೆನಿಸಿದ ಜಿ. ಬಿ. ಷಾರವರ ಗೆಳೆಯನೂ ಶ್ಲಾಘಕನೂ ಹಾಗೂ “ಲಾರೆನ್ಸ್‌ಆಫ್‌ಅರೇಬಿಯಾ” ಎಂತಲೇ ಖ್ಯಾತಿ ಪಡೆದ ಟಿ. ಇ. ಲಾರೆನ್ಸ್‌ಒಂದು ರೀತಿಯ ನಿಗೂಢವಾದ ಆಧ್ಯಾತ್ಮಿಯೂ ಹೌದು. ಈತ ಒಂದು ರೀತಿಯ ಮಹಾತ್ಮಿಕೆಯನ್ನು ತನ್ನಲ್ಲೇ ರೂಢಿಸಿಕೊಂಡಿದ್ದ. ಆ ತಂತ್ರವನ್ನು ತುರ್ಕಿಯರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿಯೇ ಅಲ್ಲದೇ, ಜರ್ಮನಿಯರ ಹಾಗೂ ತುರ್ಕಿಯರ ನಡುವಿನ ಗೆಳೆತನದ ವಿರುದ್ಧವೂ ಅದನ್ನೇ ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಿದ್ದನಂತೆ. ನಮ್ಮ ಯುಗದಲ್ಲಿ ಕೂಡ ಮಾವೋ ಮತ್ತು ಚೆಗಾವೇರಾ ಮುಂತಾದವರು ಅದೇ ಕಲೆಯನ್ನು ಮತ್ತೊಂದು ರೀತಿಯ ಯುದ್ಧ ಕೌಶಲವನ್ನಾಗಿ ಪರಿವರ್ತಿಸಿದರು. ಅಹಿಂಸಾವಾದದಂತೆಯೇ ಆ ತಂತ್ರವೂ ದುರ್ಬಲರಿಗೊಂದು ಆಯುಧವಾಯಿತು. “ಅನೇಕರನ್ನು ಅವಲಂಬಿಸಿಕೊಂಡು ಕೆಲವರು ಮಾತ್ರ ಹೋರಾಡುವ ಯುದ್ಧ ತಂತ್ರವನ್ನು ಗೆರಿಲ್ಲಾ ಯುದ್ಧ ಎನ್ನುತ್ತಾರೆ. ಹಾಗೆಯೇ ಅಹಿಂಸಾಯುದ್ಧ ಕೂಡ ಅನೇಕ ಜನರ ಬೆಂಬಲವನ್ನು ಅವಲಂಬಿಸಿರುತ್ತದೆ. ಆದರೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಅಳವಡಿಸಲಾದ ಈ ಗಾಂಧಿ ವಿಧಾನ ಪೌರ್ವಾರ್ತ್ಯ ರಾಷ್ಟ್ರಗಳಿಗೆ ಸರಿ ಕಾಣಲಿಲ್ಲ. ಕಾರಣ ಗೆರಿಲ್ಲಾ ಯುದ್ಧ ತಂತ್ರ ತುಂಬಾ ಬದಲಾವಣೆಗಳನ್ನು ತಂದಿತ್ತು.

ಗಾಂಧಿಯನ್ನು ಕುರಿತು ಬರೆಯಲ್ಪಟ್ಟ ಬಹುತೇಕ ಪುಸ್ತಕಗಳು ಅವರ ವ್ಯಕ್ತಿತ್ವವನ್ನು ಅಥವಾ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕುರತವೇ ಆಗಿವೆ. ಕೆಲವು ಪುಸ್ತಕಗಳು, ಗಾಂಧೀಜಿಯವರ ನಂಬಿಕೆ ಹಾಗೂ ಅವರು ಅಳವಡಿಸಿದ್ದ ವಿಧಾನಗಳನ್ನು ವಿವೇಚಿಸಿವೆ. ಆದರೆ ಅವರ ಅಸ್ಪೃಶ್ಯತೆ ಆಂದೋಲನವನ್ನು ಕುರಿತು ಮಾತ್ರ ಒಂದೇ ಒಂದು ಪುಸ್ತಕವೂ ಇಲ್ಲ. ಭಾರತದಿಂದ ಹೊರಗಿನವರು ಮತ್ತು ಪಾಕಿಸ್ತಾನದ ಕೆಲವೇ ಮಂದಿ ಮಾತ್ರ ಅಸ್ಪೃಶ್ಯತೆ ಎಂದರೇನು ಎಂಬುದನ್ನು ನಿಜವಾಗಿಯೂ ಅರ್ಥ ಮಾಡಿಕೊಂಡಿರಬಹುದು. ಅಥವಾ ಅಸ್ಪೃಶ್ಯರ ಸಮಸ್ಯೆಗಳೇನು ಎಂಬುದಾದರೂ ಅವರಿಗೆ ಪರಿಚಯವರಲಿಕ್ಕೂ ಸಾಕು. ಗಾಂಧಿಯ ಹೊಗಳುಭಟ್ಟರು ಹಾಗೂ ಅವರ ಭಕ್ತಶಿಖಾಮಣಿಗಳು ಮಹಾತ್ಮ ಗಾಂಧಿಯವರು ಅಸ್ಪಶ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದಾರೆ ಎಂಬ ಪ್ರಚಾರವನ್ನು ತುಂಬಾ ವ್ಯವಸ್ಥಿತವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ ಮೇಲಿನ ಮಾತು ಎಂಥ ಸುಳ್ಳಿನ ಕಂತೆ ಎಂಬುದನ್ನು ಪ್ರತಿದಿನವೂ ಇಂದು ದೇಶಾದ್ಯಂತ ನೋಡುತ್ತಿದ್ದೇವೆ. ನಿಮ್ನ ವರ್ಗ ಹಾಗೂ ಜಾತಿಗಳ ಕಮೀಷನರ್ ಅವರ ವರದಿಯ ಪ್ರತಿಯನ್ನು ತೆರೆದು ನೋಡಿದಾಗ ತಿಳಿಯುವುದೇನು? ಇಂಡಿಯಾದಲ್ಲಿ ಅಸ್ಪೃಶ್ಯತೆ ನಿರ್ಮೂಲನವಾಗಲ್ಲ ಮಾತ್ರವಲ್ಲ, ಹಿಂದೂ ಧರ್ಮದ ಲೀಡರುಗಳಿಂದ ಅದು ಇನ್ನಷ್ಟು ಉತ್ತೇಜಿತವಾಗಿ, ಅದು ಎಂದಿಗಿಂತಲೂ ಭಯಂಕರವಾಗಿ ಸಮಾಜದೊಳಗೆ ಎಲೆ ಎತ್ತಿ ನಿಂತಿದೆ. ೧೯೫೪ರಲ್ಲಿ ಪಾಸು ಮಾಡಿದ ಅಸ್ಪೃಶ್ಯತೆ ನಿಷೇಧ ಕಾನೂನನ್ನು ಸಂವಿಧಾನಾತ್ಮಕವಾಗಿ ಕ್ರೂಢೀಕರಿಸಲ್ಪಟ್ಟಿದೆ. ಆದರೆ ಹಳ್ಳಿಗಳಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲೂ ಅಸಹಾಯಕ ಅಸ್ಪೃಶ್ಯರ ಮೇಲಿನ ಸವರ್ಣೀಯರ ಹಿಂಸೆ ದೌರ್ಜನ್ಯಗಳು ಸುದ್ಧಿ ಪತ್ರಿಕೆಗಳಲ್ಲಿ ಪ್ರತಿದಿನವೂ ಪ್ರಕಟವಾಗುತ್ತಲೇ ಇವೆ. ೧೯೫೪ರ ಅಸ್ಪೃಶ್ಯತೆ ನಿಷಿದ್ಧ ಅಧಿನಿಯಮವನ್ನು ಎಷ್ಟು ನಿರ್ಲಕ್ಷ್ಯವಾಗಿ ರಚಿಸಿ ಜಾರಿಗೊಳಿಸಲಾಗಿದೆಯೊ ಅಷ್ಟರ ಮಟ್ಟಿಗೆ ಅಸ್ಪೃಶ್ಯರ ಮೇಲಿನ ದೌರ್ಜನ್ಯಗಳು ಸಾಗುತ್ತಿವೆ. ಅಷ್ಟೇ ಅಲ್ಲ ಒಟ್ಟು ಸಾರ್ವಜನಿಕ ಅಭಿಪ್ರಾಯ ಕೂಡ ಅಸ್ಪೃಶ್ಯರಿಗೆ ವಿರುದ್ಧವೆಂಬಂತೆ ಕಾಣುವುದಿಲ್ಲ.

ಮಹಾತ್ಮ ಗಾಂಧಿಯೂ ಮೋಸದ ಪ್ರಚಾರದ ವಿರುದ್ಧ ಕೂಗುಹಾಕಿ ನಿಂತ್ರ ಏಕಮಾತ್ರ ವ್ಯಕ್ತಿ ಡಾ. ಅಂಬೇಡ್ಕರ್. ಆದರೆ ಅವರ ಕೂಗೂ ಕೊನೆಗೆ ಬತ್ತಿಹೋಯಿತು. ಆದರೆ ಯಾವುದೇ ಪ್ರಚಾರವಾಗಲಿ, ಗಂಟಲು ಬಿರಿಯುವಂಥ ಘೋಷಣೆಗಳಿರಲಿ, ಕೊನೆಗೆ ಬಂದೂಕುಗಳ ಗರ್ಜನೆ ಕೂಡ ಸತ್ಯವನ್ನು ಬಹಳ ಕಾಲ ಹತ್ತಿಕ್ಕಲಾಗದು. ಡಾ. ಬಾಬಾಸಾಹೇಬ್‌ಅಂಬೇಡ್ಕರ್ ಅವರ ಕೂಗು ಕೇಳಿಸುತ್ತಿದೆ: ಅವರು ಕೇಳಿದ್ದು ನ್ಯಾಯವೇ ಹೊರತು, ದಾನ-ದಕ್ಷಿಣೆಯನ್ನಲ್ಲ. ಆದರೆ ಆ ನ್ಯಾಯ ಕೇಳಿದ್ದು ಯಾರಿಂದ? ಯಾರಿಗೆ ನ್ಯಾಯವೆಂಬುದರ ಅರ್ಥವೇ ಗೊತ್ತಿಲ್ಲವೋ ಅವರಿಂದ. ಆದರೆ ಅಂಬೇಡ್ಕರ್ ರ ಕೂಗು ಪ್ರತಿಯೊಂದು ಹಳ್ಳಿ-ಪಟ್ಟಣಗಳಿಂದ ಮಾತ್ರವಲ್ಲ ಅಸ್ಪೃಶ್ಯರು ವಾಸಿಸುತ್ತಿರುವ ದೇಶದ ಮೂಲೆ ಮೂಲೆಗಳಿಂದಲೂ ಕೇಳಿ ಬರುತ್ತಿದೆ. ಆ ಕೂಗನ್ನು ಹತ್ತಿಕ್ಕುವುದು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಮೇಲಿನ ದೌರ್ಜನ್ಯ ಅತಿರೇಕವನ್ನು ಮುಟ್ಟುತ್ತಿದ್ದಂತೆಯೇ, ಅಸ್ಪೃಶ್ಯರ ಕ್ರಾಂತಿಯ ಸಿಡಿಲು ನೆಲ ಸೀಳಿಕೊಂಡು ಮೇಲೇಳುತ್ತಿದೆ. ಅಸ್ಪೃಶ್ಯರ ಕೂಗು ಗೆಲ್ಲಲೇಬೇಕೆಂಬುದು ನಾಳೆ ಬೆಳಿಗ್ಗೆ ಸೂರ್ಯ ಪಶ್ಚಿಮದಲ್ಲೇ ಮೂಡುತ್ತಾನೆ ಎಂಬಷ್ಟು ನಿಶ್ಚಿತ ಸತ್ಯವಾಗಿದೆ.

ಪಂಡಿತ್‌ಜವಹರಲಾಲ್‌ನೆಹರು, ಗಾಂಧಿಯನ್ನು ಒಪ್ಪಲಿಲ್ಲವಾದರೂ, ಕೆಲ ವಿಚಾರಗಳಲ್ಲಿ ರಾಜಿ ಮಾಡಿಕೊರ್ಳಳುತ್ತಿದ್ದುದು ಅವರ ರೂಢಿಯಾಗಿತ್ತು. ಬ್ರಾಹ್ಮಣರು ಹಾಗೂ ಅವರ ಅರ್ಥಹೀನ ಧಾರ್ಮಿಕ ಕ್ರಿಯೆಗಳು ಮತ್ತು ಸಮಾರಂಭಗಳನ್ನು ಕಟುವಾಗಿ ಟೀಕಿಸುತ್ತಿದ್ದ ನೆಹರು, ಕೊನೆಗೆ ಇಕ್ಕಟ್ಟಿನ ಪರಿಸ್ಥಿತಿ ಒದಗಿದಾಗ, ಅದೇ ಸಂಪ್ರದಾಯಗಳಿಗೆ ಶರಣು ಹೋಗುತ್ತಿದ್ದರು. ತಂದೆ ಮತ್ತು ಹೆಂಡತಿ ತೀರಿಕೊಂಡಾಗ, ಈ ಎರಡು ಸಂದರ್ಭಗಳಲ್ಲಿ ನೆಹರು ನಡೆಸಿದ ಧಾರ್ಮಿಕ ಕ್ರಿಯೆಗಳಿಂದ ನೆಹರು ಒಪ್ಪಿಕೊಂಡಿದ್ದ ವಿಚಾರಕ್ಕೆ ಎಷ್ಟರ ಮಟ್ಟಿಗೆ ಬದ್ಧರಾಗಿದ್ದರೆಂಬುದನ್ನು ತಿಳಿಯಬಹುದು. ಪಾಶ್ಚಾತ್ಯ-ಪೌರ್ವಾತ್ಯಗಳ ನಡುವೆ, ಸಕಾರಣ ವಿನಾಕಾರಣಗಳ ನಡುವೆ, ಸತ್ತ ಹಳೆ ಪ್ರಪಂಚ ಮತ್ತು ಅದರ ಭಗ್ನಾವಶೇಷಗಳಿಂದ ಹುಟ್ಟಿ ಬರುವ ಹೊಸ ಪ್ರಪಂಚಗಳ ನಡುವೆ, ಹಳೆಯ ಹೊಸ ಮೌಲ್ಯಗಳ ನಡುವೆ ನೆಹರು ಮನಸ್ಸು ಪೆಂಡಲಂನಂತೆ ಒದ್ದಾಡಿರುವುದುನ್ನು ಅನೇಕ ನಿದರ್ಶನಗಳಿಂದ ತಿಳಿಯಬಹುದಾಗಿದೆ. ನೆಹರು ಬುದ್ಧಿ-ಮನಸ್ಸುಗಳು ಪರಸ್ಪರ ವಿರುದ್ಧ ಶಕ್ತಿಗಳ ಘರ್ಷಣೆಯಲ್ಲಿ ನಿರಂತರವಾಗಿ ಸೆಣಸಾಡಿರುವುದನ್ನು ಕಾಣಬಹುದು. ಗಾಂಧೀಜಿ ಧೋರಣೆ ನೆಹರು ವಿರೋಧಿಸಿದರಾದರೂ ಕೊನೆಗಾಲದವರೆಗೂ ಗಾಂಧಿಯನ್ನು ಅವರು ಅನುಸರಿಸದೆ ಅನ್ಯ ದಾರಿ ಕಾಣಲಿಲ್ಲ. ಅದೇ ಯುವ ಪೀಳಿಗೆಯ ನಾಯಕರಲ್ಲಿ, ಸುಭಾಷ್‌ಚಂದ್ರಬೋಸ್‌ಮಾತ್ರ ಗಾಂಧಿಯನ್ನು ಕಟುವಾಗಿ ವಿರೋಧಿಸಿದರು. ಅವರು ತಮ್ಮ ದಿನಚರಿಯಲ್ಲಿ ಬರೆದಿರುವ ಮಾತಿದು

ಇಂಡಿಯಾದ ಜನರಿಗೆ ಮಾತ್ರ ಅರ್ಥವಾಗುವಂಥ ಏನೋ ಇದೆ ಗಾಂಧಿಯಲ್ಲ. ವ್ಯಕ್ತಿ ಇನ್ನಾವ ದೇಶದಲ್ಲಾದರೂ ಹುಟ್ಟಿದ್ದರೆ ಪಶುವಿನಂತಿರಬಹುದಿತ್ತು. ಅವರ ಅಹಿಂಸಾವಾದವೇ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬಹುದಿತ್ತು. ಆದರೆ ಇಂಡಿಯಾದಲ್ಲಿ ಅದು ಆಗಿಲ್ಲ. . . ಗಾಂಧಿ ಲೋಕದ ಯಾವ ಮೂಲೆಯಲ್ಲಿ ಕಾಣಿಸಿಕೊಂಡರೂ ಇದು ಇಂಡಿಯಾದ ಮಣ್ಣಿನ ಪ್ರಜೆ ಎಂಬುದು ಪ್ರತಿಯೊಬ್ಬ ಬಡವರಲ್ಲೇ ಅತಿ ಬಡವನಿಗೂ ಅರ್ಥವಾಗಿಬಿಡುತ್ತದೆ, ಅದರ ಮೂಳೆ ಮಾಂಸದ ತುಕಡಿ ಇದು ಎಂಬುದು ಯಾರಿಗಾದರೂ ತಿಳಿದುಬಿಡುತ್ತದೆ.

ಗಾಂಧಿ ಓರ್ವ ಭ್ರಾಮಕ ಬುದ್ಧಿಜೀವಿ ಎಂಬುದು ಅನೇಕ ಅರ್ಥಗಳಲ್ಲಿ ಸತ್ಯಸಂಗತಿ. ಒಂದು ಅರ್ಥದಲ್ಲಿ ಓರ್ವ ಚತುರ ರಾಜಕಾರಣಿಯೂ ಹೌದು. ಕೆಲವೊಮ್ಮೆ ತೀರಾ ಮತಾಂಧ ಕಠಿಣ ವ್ಯಕ್ತಿ ಎನಿಸಿದರೆ, ಮತ್ತೆ ಕೆಲವೊಮ್ಮೆ ಮಗುವಿನಂತೆ ಯಾರ ಹಿಡಿತಕ್ಕಾದರೂ ಎಟುಕುವಂಥ ವ್ಯಕ್ತಿ. ರಾಜಕಾರಣದ ಸಾಂದರ್ಭಿಕ ಮೌಲ್ಯ ವಿವೇಚನೆಯಲ್ಲಿ ಗಾಂಧಿಗೆ ಅಂಥ ಹಿಡಿತವಿಲ್ಲ. ಅವರ ಆಲೋಚನೆಯ ಸೂಕ್ಷ್ಮ ಪರಿಜ್ಞಾನವನ್ನು ಅಪೇಕ್ಷಿಸಬಹುದಾಗಿದ್ದ ೧೯೨೧ರಂಥ ಸಂದರ್ಭಗಳಲ್ಲೂ ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ತುಂಬಾ ಕಾಠಿಣ್ಯತೋರಿ, ಎಲ್ಲವನ್ನೂ ವಿಕಾರಗೊಳಿಸಿ, ಎಲ್ಲರನ್ನೂ ತಲೆಕೆಡಿಸಿದರು.

ಹೀಗೆ ಆಲೋಚಿಸುತ್ತಾ ಹೋದಾಗ, ಚತುರ ರಾಜಕಾರಣಿಗಳೆನಿಸಿದ ಬ್ರಿಟಿಷರ ಜನತೆಗೆ ನಾಲಾಯಖ್ಖಾದ ರಾಜಕಾರಣಿ ಗಾಂಧಿ ಎಂದು ಯಾರಿಗಾದರೂ ಅನಿಸದಿರದು. ಗಾಂಧಿ ಅನೇಕ ತೆರನಾಗಿ ವರ್ತಿಸಿರುವುದನ್ನು ಅವರ ವ್ಯಕ್ತಿತ್ವದಿಂದ ತೆಗೆಯಬಹುದು. ಕೆಲವು ಬಾರಿ ಶುದ್ಧ ರಾಜಕಾರಣಿಯಂತೆ ಮಾತನಾಡುತ್ತಾರೆ. ಮರುಕ್ಷಣದಲ್ಲೇ ತಾನೋರ್ವ ಅವತಾರದ ಪ್ರವಾದಿಯೋ ಎಂಬಂತೆ ಮಾತನಾಡುತ್ತಾರೆ. ಆದ್ದರಿಂದಲೇ ಗಾಂಧಿ ಕೆಲ ಸಂದರ್ಭಗಳಲ್ಲಿ ರಾಜಕಾರಣಿಯಾಗಿ ವರ್ತಿಸಿ, ಅನಂತರ ಇದ್ದಕ್ಕಿಂತೆಯೇ ರಾಜಕಾರಣಿಗಳಲ್ಲೇ ಒಬ್ಬ ಪ್ರವಾದಿಯೋ ಎಂಬಂತೆ ತೋರಿಸಿಕೊಳ್ಳುತ್ತಾರೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಸಂಪ್ರದಾಯಬದ್ಧವಾದ ಹಿಂದೂ ಧರ್ಮವನ್ನು, ತಮ್ಮ ಜೀವನದಲ್ಲಿ ಬೇರೆಲ್ಲದಕ್ಕಿಂತಲೂ ಮಿಗಿಲಾಗಿ ಪ್ರೇಮಿಸಿದರು. ಹಿಂದೂ ಧರ್ಮದ ಉದ್ಧಾರ ಪುರುಷ ಗಾಂಧಿ ಎಂಬುದನ್ನು, ಇಷ್ಟು ಮಾತ್ರವೂ ಮರುಮಾತಿಲ್ಲದೆ ಒಪ್ಪಿಕೊಂಡುಬಿಡಬೇಕೆಂಬುದು ಗಾಂಧಿಯ ಅಪೇಕ್ಷೆ. ಇಷ್ಟಾದರೂ ಗಾಂಧಿಯನ್ನು ಕೊಂದ ಜನ ಗಾಂಧಿ ಬದುಕಿದ್ದರೇ ತಮ್ಮ ಧರ್ಮಕ್ಕೆ ಅಪಾಯವೆಂದು ಬಗೆದುದು ಮಾತ್ರ, ಅದೃಷ್ಟವೆಂಬುದರ ಹಾಸ್ಯಾಸ್ಪದ ‘ಸ್ಥಿತಿ’. ಅನಂತರ ಗಾಂಧಿ ತಮ್ಮದೇ ಆದ ಮಾಗದಲ್ಲಿ ಪ್ರಪಂಚಕ್ಕೆ ಬೋಧನೆ ಮಾಡಿದರು, ಯಾವುದೇ ಗಂಡಾಂತರಕ್ಕೂ ಗುರಿಯಾಗದ ರೀತಿಯಲ್ಲಿ ತಮ್ಮ ಖ್ಯಾತಿಯನ್ನೂ ಕಾಪಾಡಿಕೊಂಡರು.

ಗಾಂಧಿ ಓರ್ವ ಸಮಾಜ ಸುಧಾರಕ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಅವರು ನಂಬಿದ್ದ ಸಾಮಾಜಿಕ ವ್ಯವಸ್ಥೆ, ಆರ್ಥಿಕವಾಗಿ ವೈಜ್ಞಾನಿಕವಾಗಿ ಮತ್ತು ತಾತ್ವಿಕವಾಗಿ ಯಾವುದೇ ವೈಚಾರಿಕ, ಯಾವ ಕ್ರಾಂತಿಕಾರಿಕ ಬದಲಾವಣೆಗಳು ಎಂದರೆ ಅವರು ಹೆದರಿಬಿಡುತ್ತಿದ್ದರು. ಪ್ರತಿಯೊಬ್ಬರಿಗೂ ತಾನು ಪ್ರಿಯರೆನಿಸಿಕೊಳ್ಳಬೇಕೇಂಬುದು ಅವರ ಉದ್ದೇಶ. ಧರ್ಮವನ್ನು ಕುರಿತು ಅಧಿಕೃತ ಧಾಟಿಯಲ್ಲಿ ಮಾತಾಡತೊಡಗಿದ ಅವರ ಆ ಪ್ರಕ್ರಿಯೇ ಅವರ ಮುಂದಿನ ಅಧ್ಯಯನವನ್ನು ಹತ್ತಿಕ್ಕಿತೆನ್ನಬಹುದು. ಸಂತರು ಹಾಗೂ ಆಧ್ಯಾತ್ಮಿಗಳಂತೆಯೇ ತಮ್ಮ ವಿಚಾರಗಳನ್ನು ಸಕಾರಣದ ವಿಮರ್ಶೆಗೆ ಒಳಪಡಿಸುವುದನ್ನು ಗಾಂಧಿ ಎಂದೂ ಸಹಿಸುತ್ತಿರಲಿಲ್ಲ. ಇಂಥ ಅನೇಕ ಕಾರಣಗಳಿಂದಾಗಿ ಯುವ ಪೀಳಿಗೆಯಲ್ಲಿ ಗಾಂಧಿ ಬಗೆಗೆ ಗೊಂದಲ ಸಂಶಯ ಹುಟ್ಟಿಕೊಂಡು, ಕೊನೆಗೆ ಯಾವುದನ್ನು ಗಾಂಧಿ ಶ್ರೇಷ್ಠ, ಪವಿತ್ರ ಎಂದು ಸಾರಿದ್ದರೋ, ಅವುಗಳ ಬಗೆಗೆ ತುಂಬಾ ಅಸಹ್ಯ ಭಾವನೆಗಳು ಅವರಲ್ಲಿ ಮೊಳೆಯತೊಡಗಿದವು. ಇಷ್ಟೆಲ್ಲಾ ಆದರೂ, ಯಾವ ವ್ಯಕ್ತಿಯ ಕ್ರೂರ ನಂಬಿಕೆಗಳಿಂದಾಗಿ ದೇಶದಲ್ಲಿ ಬೇಜಬ್ದಾರಿತನ, ಅಜ್ಞಾನ ಮತ್ತು ಅಶಿಸ್ತುಗಳು ಉತ್ತೇಜಿತಗೊಂಡು, ತತ್ಪರಿಣಾಮವಾಗಿ ಗೊಂದಲ ಮತ್ತು ಅಸಂಘಟನೆಗೆ ಬೀಜಾಂಕರುವಾಯಿತೋ ಆ ವ್ಯಕ್ತಿಯನ್ನು ಶಿಕ್ಷಿತ ಹಾಗೂ ಪ್ರತಿಭಾವಂತ ಯುವಪೀಳಿಗೆ ಕುರುಡಾಗಿ ಅನುಕರಣ ಮೂರ್ತಿಯನ್ನಾಗಿ ಆರಿಸಿಕೊಂಡ, ಇಂಡಿಯಾದಂಥ ನತದೃಷ್ಟ ದೇಶಲ ಕದ ಬೇರೆಲ್ಲಿಯೂ ಇರಲಾರದು.

ಸಂತರು ಮತ್ತು ಮಹಾತ್ಮರು ಇಂಡಿಯಾದಲ್ಲಿ ಲೆಕ್ಕವಿಲ್ಲದಷ್ಟು. ಈ ಸಂತರು ಮತ್ತು ಮಹಾತ್ಮರು ಇಂಡಿಯಾದಲ್ಲಿ ಎಷ್ಟಿದ್ದಾರೆ ಎಂದರೆ, ಅವರ ಅಗತ್ಯಿರುವ ದೇಶಗಳಿಗೆ ಹಲವಾರು ದಶಕಗಳವರೆಗೆ ಅವರು ರಫ್ತು ಮಾಡಬಹುದು. ಮಹಾತ್ಮನ ಉದ್ಯೋಗ ತುಂಬಾ ಲಾಭದಾಯಕವಾದದ್ದು. ಅದಕ್ಕೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಟ್ರೈನಿಂಗ್‌ನ ಚಿಂತೆಯಿಲ್ಲ. ಜೀವನದ ಬಗೆಗೆ ಯೋಚನೆ ಇಲ್ಲ, ಸುಖಜೀವನ, ಅವರಿಗಿರುವಷ್ಟು ಸ್ವಾತಂತ್ರ್ಯ ಅನ್ಯರಿಗಿಲ್ಲ. ಎಲ್ಲಿ ಹೋದರೂ ಮೊದಲ ಪೂಜ್ಯಗೌರವ ಅವರಿಗೆ ಸಂದಾಯ. ನಿಜಕ್ಕೂ ಇಂಡಿಯಾದಲ್ಲಿ ಮಹಾತ್ಮರ ಜೀವನವೆಂದರೆ ಸಾಮಾನ್ಯರ ಕಲ್ಪನೆಗೂ ನಿಲುಕರಾರದ್ದು. ಇಂಡಿಯಾದ ಯಾವ ಮಹಾತ್ಮನಿಗೂ ಶಿಕ್ಷಣದಲ್ಲಿ ನಂಬಿಕೆಯಿಲ್ಲ. ಸಾರ್ವಜನಿಕರ, ಬೀದಿಹೋಕರ, ಮನವೊಲಿಸಿಕೊಳ್ಳಲು ತಮ್ಮ ಕೀವುಗಟ್ಟಿದ ಗಾಯಗಳನ್ನೆಲ್ಲಾ ತೋರಿಸಿಕೊಂಡು, ಆಹಾಕಾರ ಮಾಡುವ ಇಂಡಿಯಾದ ಭಿಕ್ಷುಕರಂತ ಈ ಮಹಾತ್ಮರು ತಮ್ಮ ವೈಲಕ್ಷಣ್ಯಗಳನ್ನೆಲ್ಲಾ ಪ್ರದರ್ಶಿಸುತ್ತಾರೆ. ಮದ್ದು-ನಾದಕಗಳಲ್ಲೇ ಒರಲುತ್ತ ಹುಚ್ಚುಚ್ಚಾಗಿ ಮಂಬೂ ಜಂಬೂ ಮಾತನಾಡಿಕೊಂಡು ಅನಕ್ಷರಸ್ಥರು ಅವಿವೇಕಿಗಳು ಮೊದಲ ತಿಳಿಗೇಡಿಗಳ ಸಮಕ್ಷಮದಲ್ಲಿ ತಮ್ಮ ಅರ್ಥಹೀನ ತತ್ವಗಳನ್ನೆಲ್ಲಾ ಒದರುತ್ತಾರೆ, ಈ ಮಹಾತ್ಮರು. ಜತೆಗೆ ಇಂಡಿಯಾದ ಸನ್ಯಾಸಿಗಳ ಮುಖ್ಯ ಉದ್ಯೋಗವೇನೆಂದರೆ, ರಾಜಮಹಾರಾಜರನ್ನು ದೇವ ದೇವತೆಗಳೆಂದು ವರ್ಣಿಸಿಕೊಂಡು ಹಾಡುವುದು, ಜನತೆಯನ್ನು ಅಜ್ಞಾನದ ಅಂಧಕಾರಕ್ಕೆ ಎಳೆದುಕೊಂಡು ಹೋಗುವುದು, ಮನುಷ್ಯನಿಗೆ ಬಡತನವೇ ಶ್ರೇಷ್ಠವೆಂದು ಕಡುಬಡತನಕ್ಕೆ ಅವರನ್ನು ತಳ್ಳುವುದು, ಶಿಕ್ಷಣವನ್ನು ಕುರಿತು ತುಚ್ಛವಾಗಿ ಮಾತನಾಡುವುದು, ಯಾವುದನ್ನು ತಿರಸ್ಕರಿಸಬೇಕೊ ಅದನ್ನು ಪುರಸ್ಕರಿಸಿ ಪಟ್ಟಕ್ಕೇರಿಸುವುದು, ಈ ಲೋಕದಲ್ಲಿ ಕಷ್ಟವಿದ್ದರೆ, ಲೋಕದಲ್ಲಿ ಸುಖ-ಶಾಂತಿ ದೊರೆತೇ ದೊರೆಯುವುದೆಂದು ಆಶ್ವಾಸನೆ ಕೊಡುವುದು. ಸುಖ, ಸಂತಾನ, ಆಸ್ತಿ ಎಂದು ಮುಂತಾಗಿ ಮಾತಾಡಿಕೊಂಡು, ಹಸಿದ ರೈತನ ಹೊಲದ ಕಾಳು, ಬೇರುಗಳನ್ನು ತಿಂದು ಜೀವಿಸುವ ಹಂದಿಗಳೊಂದಿಗೆ ಇಂಡಿಯಾದ ಈ ಸಂತರು-ಮಹಾತ್ಮರ ಸಂತಾನ ಇಂಥ ಮಹಾತ್ಮರು, ಸನ್ಯಾಸಿಗಳು, ಸಂತ ಮಹಾಶಯರಿಂದ ವಿಪರೀತ ಬೇಸತ್ತು ಹೋದ ಡಾ. ಅಂಬೇಡ್ಕರ್ , ಈ ಮಹಾತ್ಮರು ಇಡೀ ರಾಷ್ಟ್ರಕ್ಕೆ ಕಳಂಕ ಎನ್ನುತ್ತಿದ್ದರು.

ಮಹಾತ್ಮರು ಬಂದರು, ಮಹಾತ್ಮರು ಹೋದರು. ಆದರೆ ಬಂದವರು, ಜನ ಜೀವನದಲ್ಲಿ ಅಸಾಧ್ಯ ವೈಷಮ್ಯದ ಧೂಳೆಬ್ಬಿಸಿಕೊಂಡೇ ಹೋದರು. ಆದ್ದರಿಂದ, ಎಷ್ಟು ಬೇಗನೆ ಮಹಾತ್ಮರಿಂದ ಬಿಡಿಸಿಕೊಳ್ಳಬಹುದೋ ಅಷ್ಟೆಲ್ಲಾ ಮಾನವೀಯತೆಗೆ ಶ್ರೇಯಸ್ಕರವೇ.

ಡಾ. ಬಾಬಾ ಸಾಹೇಬ್‌ಅಂಬೇಡ್ಕರ್ ರವರೇ ಹೇಳಿರುವಂತೆ, ಸಮಾಜ ಸುಧಾರಣೆಯಂಥ ಕಾರ್ಯಕ್ಕೆ ಗಾಂಧಿ ಅನುಸರಿಸಿದ ವಿಧಾನವನ್ನು ಡಾ. ಅಂಬೇಡ್ಕರ್ ವಿರೋಧಿಸಿದರೇ ಹೊರತು, ಸ್ವತಃ ಗಾಂಧಿಯನ್ನೇ ಅವರು ದ್ವೇಷಿಸಲಿಲ್ಲ. ಇವರಿಬ್ಬರ ಭಿನ್ನಾಭಿಪ್ರಾಯಗಳು ಆರಂಭವಾದ ಮೂಲಬಿಂದು, ಲಂಡನ್ನಿನಲ್ಲಿ ನಡೆದ ಚಕ್ರಾಧಿವೇಶನ ಅತ್ಯಂತ ಮಹತ್ವದ್ದಾಗಿದೆ.

ಚಕ್ರಾಧಿವೇಶನದಲ್ಲಿನ ಗಾಂಧಿಯವರ ನಡೆತ, ಮಹಾತ್ಮ ಎನಿಸಿಕೊಂಡ ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತದ್ದಾಗಿರಲಿಲ್ಲ. ಅಧಿವೇಶನದಲ್ಲಿ ಮುಸಲ್ಮಾನರು, ಹಿಂದೂಗಳು, ಕ್ರಿಶ್ಚಿಯನ್ನರು ಸಿಖ್ಖರು ಮತ್ತು ದಲಿತರು ಅಥವಾ ಅಸ್ಪೃಶ್ಯರು ಎಲ್ಲರನ್ನೂ ತಾವೇ ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಂಡು ಗಾಂಧಿ ಓಡಾಡಿದರು. ಆದರೆ ಯಾವ ವರ್ಗದ ಪ್ರತಿನಿಧಿಗಳೂ ಗಾಂಧಿಯ ಈ ಹಳಿಕೆಯನ್ನು ಒಪ್ಪಲಿಲ್ಲ. ಹಾಗೆಯೇ ಗಾಂಧಿಯೂ ಸಹ ಮುಸಲ್ಮಾನರು ಕ್ರಿಶ್ಚಿಯನ್ನರು ಅಥವಾ ಸಿಖ್ಖರು ಯಾರ ಬೇಡಿಕೆಗಳನ್ನೂ ವಿರೋಧಿಸಲಿಲ್ಲ. ಆದರೆ ಭಾರತೀಯ ಸಮಾಜದಲ್ಲಿ ಅತ್ಯಂತ ದುರ್ಬಲರೆನಿಸಿದ ದಲಿತರ ಬೇಡಿಕೆಗಳನ್ನು ಮಾತ್ರ ನಿರ್ದಾಕ್ಷಿಣ್ಯವಾಗಿ ವಿರೋಧಿಸಿದರು. ಅವರ ಈ ವಿರೋಧ ದಲಿತ ವರ್ಗದ ಉದ್ಧಾರಕ್ಕಲ್ಲ. ಅವರ ಹಿಂದೂ ಧರ್ಮದ ಪ್ರಾಬಲ್ಯಕ್ಕೆ ಮಾನವ ಸಂಘಟನೆಗೆ ಮಾರಕವಾದ ಅವರ ಹಿಂದೂ ಧಮಕ್ಕಾಗಿ, ಯಾವ ಧರ್ಮನ್ಯಾಯ ಸಮಾನತೆಯನ್ನೇ ಅಲ್ಲಗೆಳಯುವುದೋ, ಯಾವ ಧರ್ಮ ಪ್ರಜಾತಂತ್ರದ ಅಡಿಗಲ್ಲುಗಳಾದ ಸ್ವಾತಂತ್ರ್ಯ ಸಮತೆ, ಸೋದರತೆಯಂಥ ಉದಾತ್ತ ತತ್ವಗಳನ್ನು ಅಲ್ಲಗಳೆಯುವುದೋ, ಆ ಧರ್ಮಕ್ಕಾಗಿ ಯಾವ ಧರ್ಮ ಮಾನವೀಯತೆಯನ್ನು ಪತನದ ಪಾತಾಳಕ್ಕೆ ತಳ್ಳುತ್ತಿದೆಯೋ ಆ ಧರ್ಮಕ್ಕಾಗಿ ಯಾವ ಧರ್ಮ ಮಾನವೀಯತೆಯನ್ನು ನೆಟ್ಟಗೆ ಮತ್ತು ಅಡ್ಡಕ್ಕೆ ಸೀಳುತ್ತಿದೆಯೋ ಆ ಧರ್ಮಕ್ಕಾಗಿ, ಯಾವ ದೇಶದ ನಾಲ್ಕನೆ ಮೂರು ಭಾಗ ಜನಾಂಗವನ್ನು ಶಿಕ್ಷಣವೆಂಬುದರ ಗಡಿಯಾಚೆಗೆ ತಳ್ಳಿದೆಯೋ ಆ ಧರ್ಮಕ್ಕಾಗಿ, ಯಾವ ಧರ್ಮ ಮಾನವ ಜೀವಿಗಳನ್ನು ಪ್ರಾಣಿಗಳಂತೆ ದಂಡಿಸಿ, ಅಸ್ಪೃಶ್ಯ ಜನಾಂಗದ ರಾಷ್ಟ್ರೀಯ ಭಾವನೆಯನ್ನು ಮುರುಟಿಹಾಕಿ, ಕೇವಲ ಜಾತಿಯ ಭಾವನೆಯನ್ನು ಮಾತ್ರ ಬಿತ್ತರಿಸಿದೆಯೋ ಆ ಧರ್ಮಕ್ಕಾಗಿ, ಯಾವ ಧರ್ಮ ಜನತೆಯಲ್ಲಿ ಪಶುತ್ವ, ಪ್ರಾಂತೀಯತೆಯನ್ನು ಉದ್ರೇಕಿಸುತ್ತ ದೇಶದೊಳಗಿನ ಹರಿದು ತಿನ್ನುವ ಬಡತನ, ಅಜ್ಞಾನ, ಅನಕ್ಷರತೆ, ಸೋಮಾರಿತನಗಳನ್ನೇ ವೈಭವದ ಪಲ್ಲಕ್ಕಿಯ ಮೇಲೇ ಮೆರೆಸಿದೆಯೋ, ಆ ಧರ್ಮವನ್ನು ಉದ್ಧರಿಸುವ ಸಲುವಾಗಿ, ಯಾವ ಧರ್ಮ ತನ್ನದೆ ಜನತೆಯನ್ನು ಶತಶತಮಾನಗಳಿಂದಲೂ ಅಸ್ಪೃಶ್ಯರೆಂದು ಕರೆದು ನಿರಂತರವಾಗಿ ಚಿತ್ರಹಿಂಸೆಯಲ್ಲಿ ಕೊಲ್ಲುತ್ತಾ ಬಂದಿದೆಯೋ, ಆ ಧರ್ಮದ ರಕ್ಷಣೆಗಾಗಿ ಶ್ರೀಮಾನ್‌ಗಾಂಧಿಯವರು ಅಸ್ಪೃಶ್ಯರ ಸ್ವಾತಂತ್ರ್ಯವನ್ನು ಬ್ರಿಟಿಷರೆದುರು ಧಿಕ್ಕರಿಸಿ ನಿಂತರು. ಇದು ಅವರ ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಲೋಕದ ಇಡೀ ಮಾನವೀಯತೆಗೆ ಅವರು ಹಚ್ಚಿರುವ ಮಹಾ ಕಳಂಕ. ದಲಿತರ ಸಶಕ್ತ ಪ್ರತಿನಿಧಿಗಳು, ತಮ್ಮ ಜನಾಂಗದ ಬೇಡಿಕೆಯನ್ನು ಮಂಡಿಸಿದಾಗ, ಅದಕ್ಕೆ ದಿಕ್ಕಾರ ಹಾಕಿ ನಿಂತವರು ಶ್ರೀಮಾನ್‌ಗಾಂಧಿ. ಅವರ ಬೇಡಿಕೆಗಳನ್ನು ಧಿಕ್ಕರಿಸಿದದು ಮಾತ್ರವಲ್ಲ, ಮುಸಲ್ಮಾನರನ್ನೂ ಜತೆಗೆ ಸೇರಿಸಿಕೊಂಡು ಅಸ್ಪೃಶ್ಯರನ್ನು ತುಳಿಯುವ ಮಹಾಯತ್ನ ಮಾಡಿದವರು ಈ ಮಹಾತ್ಮರು.

ಆದರೆ ಗಾಂಧಿಯ ಆಟ ಮುಸಲ್ಮಾನರ ಹತ್ತಿರ ನಡೆಯಲಿಲ್ಲಕೊನೆಗೆ ನಿರಾಶರಾಗಿ ಗಾಂಧಿ ಇಂಗ್ಲೆಂಡಿನಿಂದ ಹಿಂತಿರುಗಿದರು: ಅದಕ್ಕೆ ಕಾರಣ, ಬಾಬಾ ಸಾಹೇಬ್ಅಂಬೇಡ್ಕರ್ ಅವರ ಮಾತಿನಲ್ಲೇ ಹೇಳುವುದಾದರೆ ಅಲ್ಲಿ ಗಾಂಧಿಯನ್ನು ಟೀಕಿಸುವ ಜನರಿದ್ದರೆ ವಿನಾ, ಅವರ ಭಕ್ತಶಿಖಾಮಣಿಗಳಿರಲಿಲ್ಲ.

ಇಂಡಿಯಾಗೆ ಬಂದ ಮೇಲೆ ಅಸಹಕಾರ ಚಳವಳಿ ಪ್ರಾರಂಭಿಸಿದರು. ಬಂಧಿಸಲ್ಪಟ್ಟು ಪೂನಾದ ಯರವಾಡ ಜೈಲಿನಲ್ಲಿ ಹಾಕಲ್ಪಟ್ಟರು. ಅಸ್ಪೃಶ್ಯ ಜನಾಂಗದ ಮಹಾನಾಯಕರೆನಿಸಿದ ಡಾ. ಅಂಬೇಡ್ಕರ್ ಅವರಂಥ ಮೇಧಾವಿಗಳನ್ನೆಲ್ಲಾ ಎದುರು ಹಾಕಿಕೊಂಡು, ಜೈಲಿನಲ್ಲಿ ಗೋಳಾಡಿ, ಫಜೀತಿ ಪಟ್ಟ ಗಾಂಧೀಜಿಯವರು, ಕೊನೆಗೆ ಅಂಬೇಡ್ಕರ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಭಾರತದ ರಾಜಕೀಯ ಜೀವನದಲ್ಲಿ ಅಸ್ಪೃಶ್ಯರನ್ನು ಪ್ರತ್ಯೇಕ ವರ್ಗವನ್ನಾಗಿ ಪರಿಗಣಿಸುತ್ತಿದ್ದೇ ಆದರೆ, ಆಮರಣಾಂತ ಸತ್ಯಾಗ್ರಹ ಮಾಡುವುದಾಗಿ ಬ್ರಿಟಿಷ್‌ಸರಕಾರಕ್ಕೆ ಜೈಲಿನಿಂದಲೇ ಬೆದರಿಕೆ ಹಾಕಿದರು. ಶ್ರೀಮಾನ್‌ ಗಾಂಧಿ ಅದಕ್ಕೆ ಮುಂಚೆ ಇಂಗ್ಲೆಂಡಿನಲ್ಲಿ ಅಸ್ಪೃಶ್ಯರ ರಾಜಕೀಯ ಬೇಡಿಕೆ ಮತ್ತು ಪ್ರತ್ಯೇಕ ಚುನಾವಣಾ ಕ್ಷೇತ್ರ ವಿಧಾನವನ್ನು ಅಲ್ಲಗೆಳೆಯುತ್ತ, ತಮ್ಮ ವಾದ ಸಮರ್ಥನೆಗೆ ಅವರು ಕೊಟ್ಟ ಕಾರಣಗಳನ್ನು ವಿವೇಕಿಯಾದ ಯಾವೊಬ್ಬನೂ ಒಪ್ಪುವುದಿಲ್ಲವೆಂಬುದನ್ನು ತಿಳಿಯಬಹುದು.

ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣೆ ಕ್ಷೇತ್ರ ನಿರ್ಮಿಸುವುದರಿಂದ ಜೀತ ಪದ್ಧತಿಯೇ ಅವರಿಗೆ ಗತಿ. ಪ್ರತ್ಯೇಕ ಚುನಾವಣೆಯ ಅವಕಾಶ ದೊರಕಿಸಿಕೊಂಡ ಮಾತ್ರಕ್ಕೆ ಮುಸಲ್ಮಾನರು ಮುಸಲ್ಮಾನರಾಗಿಯೇ ಉಳಿಯುತ್ತಾರೆ ಎಂದು ಹೇಳಲಾಗುವುದಿಲ್ಲ. ಅಸ್ಪೃಶ್ಯರು ಎಂದೆಂದಿಗೂ ಅಸ್ಪೃಶ್ಯರಾಗಿಯೇ ಉಳಿಯಬೇಕೇನು? ಅವರಿಗೆ ಪ್ರತ್ಯೇಕ ಚುನಾವಣೆಯ ಅವಕಾಶ ಕೊಟ್ಟದ್ದೇ ಆದರೆ, ಅವರ ಮೇಲಿನ ಅಸ್ಪೃಶ್ಯತೆಯ ಕಳಂಕ ಮತ್ತಷ್ಟು ಭೀಕರವಾಗುವುದು ನಿಶ್ಚಿತ. ಪ್ರೌಢ ಮತದಾನ ಪದ್ಧತಿಯಿಂದ ಮಾತ್ರ ಅಸ್ಪೃಶ್ಯರಿಗೆಸಂಪೂರ್ಣ ರಕ್ಷಣೆದೊರೆಯಲು ಸಾಧ್ಯ. ಏಕೆಂದರೆ ಆಗ ಮಾತ್ರ ಸವರ್ಣೀಯರೂ ಸಹ ಓಟಿಗಾಗಿ ಅಸ್ಪೃಶ್ಯರ ಮನೆ ಬಾಗಿಲಿಗೇ ಬರುತ್ತಾರೆ.