ಏಪ್ರಿಲ್ ೧೪ ದಿನ. . .

ಮತ್ತೊಂದು ಏಪ್ರಿಲ್ ೧೪ ಬರುತ್ತಿದೆ. ಅದು ಬಂದೇ ಬರುತ್ತದೆ. ಯಾಕೆಂದರೆ ಅಂದು ಅಂಬೇಡ್ಕರ್ ಹುಟ್ಟಿದ ಆ ದಿನ ರಾಜ್ಯ ಹಾಗೂ ಕೇಂದ್ರ ಸರಕಾರಗಳು, ಕೆಲವು ದೊಡ್ಡ, ಸಣ್ಣ ಹಾಗೂ ಅತಿಸಣ್ಣ ಸಂಘ ಸಂಸ್ಥೆಗಳು ಅಂಬೇಡ್ಕರ್ ದಿನಾಚರಣೆಯನ್ನು ಆಚರಿಸುತ್ತವೆ. ಅವುಗಳಲ್ಲಿ ಅಂಬೇಡ್ಕರ್ ರರನ್ನು ಗೌರವಿಸುವ ಹಾಗೂ ಗುಪ್ತವಾಗಿ ವಿರೋಧಿಸುವ ಎರಡು ಆಸಕ್ತಿಗಳೂ ಇರುತ್ತವೆ. ಅದರಲ್ಲಿ ಬುದ್ಧಿಜೀವಿಗಳು, ನೌಕರರು, ಅಧಿಕಾರಿಗಳು, ವಿವಿಧ ಶೋಷಿತ ಜನರು ಇದಲ್ಲದೆ ಶೋಷಕರು ಪಾಲ್ಗೊಳ್ಳುತ್ತಾರೆ, ಮಾರನೆ ದಿನ ಮಾಧ್ಯಮಗಳಲ್ಲಿ, ಕಾರ್ಯಕ್ರಮದ ಭಾವ ಚಿತ್ರಗಳು ‘ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ: ಅವರು ಈ ದೇಶದ ನಾಯಕರು’ ‘ಅಂಬೇಡ್ಕರ್ ತತ್ವಗಳನ್ನು ಪಾಲಿಸಲು ಕರೆ’ ಮುಂತಾದ ಸುದ್ದಿಗಳು ಪ್ರಕಟವಾಗುತ್ತವೆ

ದಲಿತ ಸಂಘಟನೆಗಳು ತಾವು ತಮ್ಮ ಸಿದ್ಧಾಂತ ಹಾಗೂ ಹೋರಾಟದ ಅಡಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಮಾಡಬೇಕಿತ್ತು. ಆದರೆ ಈಗ ಅದನ್ನು ಆಳುವ ವರ್ಗ, ಸರಕಾರಿ ಇಲಾಖೆಗಳು ಹಾಗೂ ದಲಿತೇತರ ಸಂಘ ಸಂಸ್ಥೆಗಳು ಅನಾಮತ್ತಾಗಿ ಒತ್ತುವರಿ ಮಾಡಿಕೊಂಡು ಆಕ್ರಮಿಸಿಕೊಂಡಿವೆ. ಅವುಗಳು ಇದನ್ನು ರೊಟ್ಟಿಯೆ ಮುರಿದು ತುಪ್ಪಕ್ಕೆ ಬಿದ್ದ ಸಂತೋಷದಲ್ಲಿ ಸ್ವೀಕರಿಸಿವೆ. ಅಂದು ಕೆಲವು ಕಡೆ ಸಾರಾಯಿ ಪ್ಯಾಕೇಟುಗಳ ಆಸೆ ತೋರಿಸಿ ದುಡಿವ ದಲಿತರನ್ನು ಕೇರಿಗಳಿಂದ ಲಾರಿಗೆ ಹತ್ತಿಸಿಕೊಂಡು, ತಾಲೂಕು ಕೇಂದ್ರಕ್ಕೋ, ಜಿಲ್ಲಾ ಕೇಂದ್ರಕ್ಕೊ ಕರೆತರಲಾಗುತ್ತದೆ. ದಲಿತರ ಉದ್ಧಾರವನ್ನು ಕುರಿತು, ಅಂಬೇಡ್ಕರ್ ರ ಪ್ರಸಿದ್ಧ ಜೀವನ ವಿವರಗಳನ್ನು ಕುರಿತು ಭಾರೀ ಭಾಷಣ ಬಿಗಿಯಲಾಗುತ್ತದೆ. ಕೊನೆಗೆ ‘ನೀವೆಲ್ಲ ಅಂಬೇಡ್ಕರ್ ರಂತೆ ಆಗಿ’ ಎಂಬ ಉಚಿತ ಉಪದೇಶವನ್ನು ದಯಪಾಲಿಸಲಾಗುತ್ತದೆ. ಆ ಕಾರ್ಯಕ್ರಮಕ್ಕೆ ಕೆಲವರು ಸಾರಾಯಿ ಪ್ಯಾಕೇಟಿನ ಆಸೆಗೆ, ಕೆಲವರು ಸ್ಥಳೀಯ ಪುಡಾರಿ ರಾಜಕಾರಣಿಗಳ ಮರ್ಜಿಗೆ, ಮತ್ತೆ ಕೆಲವರು ತಮಗೆ ಎಷ್ಟು ಜನ ಹಿಂಬಾಲಕರಿದ್ದಾರೆ ಎಂಬುದನ್ನು ಜಾಹೀರಾತು ಮಾಡುವುದಕ್ಕೆ, ಕೆಲವರು ನಾನೂ ಕೂಡ ದಲಿತರ ಹಿತಚಿಂತಕ ಎಂಬುದನ್ನು ತೋರಿಸಿಕೊಳ್ಳುವುದಕ್ಕೆ, ಕೆಲವರು ಬಾಲ್ಯದಲ್ಲಿ ನನಗೂ ಕಷ್ಟಗಳಿದ್ದವು ಆದರೆ ಅವನ್ನೆಲ್ಲ ನಾನು ಸಹ ಅಂಬೇಡ್ಕರ್ ರಂತೆ ಹೋರಾಡಿ ಗೆದ್ದು ಮೇಲೆ ಬಂದೆ ಎಂಬುದನ್ನು ಹೇಳಿಕೊಂಡು ಆ ಮೂಲಕ ದಲಿತರ ಸಹಾನುಭೂತಿಯನ್ನು ಸೃಷ್ಟಿಸಿಕೊಳ್ಳುವದಕ್ಕೆ ಬಂದಿರುತ್ತಾರೆ.

ಎಲ್ಲೆಲ್ಲಿ ಅಂಬೇಡ್ಕರ್ ?

ಈಗ ಅಂಬೇಡ್ಕರ್ ಎಲ್ಲೆಂದರೆ ಅಲ್ಲಿ ಬೇರೆ ಬೇರೆ ರೂಪಗಳಲ್ಲಿ, ವಿಭಿನ್ನ ಸಾಂಕೇತಿಕ ರೂಪಗಳಲ್ಲಿ ಕಾಣಸಿಗುತ್ತಾರೆ. ಅಂಬೇಡ್ಕರ್ ರಸ್ತೆ, ಅಂಬೇಡ್ಕರ್ ಸರ್ಕಲ್‌, ಅಂಬೇಡ್ಕರ್ ಭವನ, ಅಂಬೇಡ್ಕರ್ ಕಾಲೋನಿ, ಅಂಬೇಡ್ಕರ್ ನಗರ, ಅಂಬೇಡ್ಕರ್ ಯುವ ಸಂಘ, ಅಂಬೇಡ್ಕರ್ ಯುವತಿ ಮಂಡಳಿ, ಅಂಬೇಡ್ಕರ್ ಹೈಸ್ಕೂಲ್‌, ಅಂಬೇಡ್ಕರ್ ಕಾಲೇಜು, ಅಂಬೇಡ್ಕರ್ ಹಾಸ್ಟೆಲ್, ಅಂಬೇಡ್ಕರ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಪ್ರತಿಮೆಗಳು, ಅಂಬೇಡ್ಕರ್ ಅಧ್ಯಯನ ಪೀಠಗಳು, ಅಂಬೇಡ್ಕರ್ ಸಂಶೋಧನ ಕೇಂದ್ರಗಳು, ಅಂಬೇಡ್ಕರ್ ಫೆಲೊಶಿಪ್‌ಗಳು, ಅಂಬೇಡ್ಕರ್ ಪ್ರಶಸ್ತಿಗಳು, ಅಂಬೇಡ್ಕರ್ ಸಾಹಿತ್ಯ, ಅಂಬೇಡ್ಕರ್ ಸ್ಪೆಷಲಿಸ್ಟ್‌ಹೀಗೆ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ಅಂಬೇಡ್ಕರ್ ರನ್ನು ಭೌತಿಕವಾಗಿ ಅಷ್ಟೇ ವ್ಯಾಪಕವಾಗಿ ಸಾಂಕೇತಿಕಗೊಳಿಸಲಾಗಿದೆ. ಇದರಲ್ಲಿ ಒಂದು ಕಡೆ ದಲಿತರ ಸ್ವಾಭಿಮಾನ ಹಾಗೂ ಅನನ್ಯತೆಯ ಆಯಾಮವಿದೆ. ಮತ್ತೊಂದು ಕಡೆ ಆಳುವ ವರ್ಗದ ಪಿತೂರಿ ಹಾಗೂ ಕುತಂತ್ರವಿದೆ.

ಒಂದು ಕಡೆ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಮತ್ತೊಂದು ಕಡೆ ಆ ಪ್ರತಿಮೆಗಳಿಗೆ ಅಪಮಾನ ಮಾಡಲಾಗುತ್ತಿದೆ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಎಂದು ಹೋರಾಟ ಮಾಡುವವರೂ ದಲಿತರೆ. ಅದಕ್ಕೆ ಅಪಮಾನ ಮಾಡಿದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಕೇಳುವವರೂ ದಲಿತರೆ. ಅದಕ್ಕೆ ಅಪಮಾನ ಮಾಡಿದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಕೇಳುವವರೂ ದಲಿತರೇ. ಕಳೆದ ೩೫ ವರ್ಷಗಳ ಅವಧಿಯಲ್ಲಿ ದಲಿತರು ಈ ವಿಷಯಗಳಿಗಾಗಿ ಮಾಡಿರುವ ಹೋರಾಟ, ಹೂಡಿರುವ ಶ್ರಮ, ಹಾಕಿರುವ ಪ್ರಯತ್ನ ಬಹಳ ದೊಡ್ಡದು. ಈಗಲೂ ಅಂಬೇಡ್ಕರ್ ಅವರನ್ನು ಸಾಂಕೇತಿಕವಾಗಿ ರಕ್ಷಿಸುವ ಅಥವಾ ಕಾಯುವ ಕೆಲಸವನ್ನೂ ದಲಿತರಿಗೆ ವಹಿಸಿಕೊಟ್ಟಿದೆ.

ಕರ್ನಾಟಕದಲ್ಲಿ ಡಿಎಸ್‌ಎಸ್‌ಹುಟ್ಟಿದ ಮೇಲೆ ಈ ನಾಡಿನ ಬಹುತೇಕ ಕೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಮಾಡಲಾಗಿದೆ. ಈಗಲೂ ಮಾಡಲಾಗುತ್ತಿದೆ. ಅಕ್ಷರಸ್ಥರ ಹಾಗೂ ಕೆಲವು ನೌಕರಸ್ಥ ದಲಿತರ ಮನೆಗಳಲ್ಲಿ ಅಂಬೇಡ್ಕರ್ ಫೋಟೋಗಳಿವೆ. ದಲಿತ ಸಮೂಹಕ್ಕೆ ಅಂಬೇಡ್ಕರ್ ಬಗ್ಗೆ ಒಂದು ಬಗೆಯ ಅಭಿಮಾನ ಮೂಡಿದೆ. ಆ ಮೂಲಕ ಒಂದು ಸ್ವಾಭಿಮಾನ ಕೂಡ ಹುಟ್ಟಿದೆ. ಇದು ದಲಿತರಿಗೆ ಒಂದು ಬಗೆಯ ಸ್ವಾಭಿಮಾನವನ್ನೂ, ಸಂಘಟಿತ ಶಕ್ತಿಯನ್ನೂ, ದಲಿತೇತರ ಶೋಷಕರಿಗೆ ಕ್ರೂರ ಅಸೂಯೆ ಹಾಗೂ ವಿಕೃತ ಅಸಹನೆಯನ್ನೂ ಉಂಟು ಮಾಡಿದೆ. ಕರ್ನಾಟಕದಲ್ಲಿ ಡಿಎಸ್‌ಎಸ್‌ಹುಟ್ಟಿದ ಮೇಲೆ ಶೋಷಕ ಹಾಗೂ ಆಳುವ ವರ್ಗದವರಲ್ಲಿ ಈ ಬಗೆಯ ಅಸಹನೆ ಹಾಗೂ ಅಸೂಯೆ ಹೆಪ್ಪುಗಟ್ಟಿ ಸಂಘಟಿತ ರೂಪ ಪಡೆಯುತ್ತಿದೆ. ಪ್ರತೀಕಾರದ ಸ್ವರೂಪದಲ್ಲಿ ಬೆಳೆಯುತ್ತಿದೆ; ದಲಿತರ ಮೇಲೆ, ದಲಿತರ ಕೇರಿಗಳ ಮೇಲೆ ಭೂಮಾಲಿಕರು ತಮ್ಮ ಪೂರ್ವನಿಯೋಜಿತ ಸಂಚನ್ನು ಪ್ರಯೋಗಿಸಿದ್ದಾರೆ.

ಶೋಷಕ ವರ್ಗದಲ್ಲಿ ಮೂಡಿದ ಈ ವಿಕೃತಿಯು ಡಿಎಸ್‌ಎಸ್‌ಅನ್ನು ಹೇಗೆ ಬಲಿ ತೆಗೆದುಕೊಂಡಿತು ಎಂಬುದು ನಾಡಿನ ಇತಿಹಾಸದಲ್ಲಿ ತುಂಬ ರೋಚಕವಾದ ಅಧ್ಯಾಯ. ಈ ಆಯಾಮವನ್ನು ನಯವಾಗಿ ಮುಚ್ಚಿಡುವ ಸಲುವಾಗಿ ಕೆಲವು ದಲಿತ ನಾಯಕರನ್ನು ಕಟಕಟೆಯ ಮೇಲೆ ನಿಲ್ಲಿಸಿ ಬೆತ್ತಲೆ ಮಾಡುವ ವ್ಯರ್ಥ ಪ್ರಯತ್ನಗಳೂ ನಡೆಯುತ್ತಿವೆ. ಡಿಎಸ್‌ಎಸ್‌ಹೋಳಾಗಲು, ಆಮೇಲೆ ಅವುಗಳ ಅನೇಕ ಬಣಗಳು ವ್ಯವಸ್ಥೆಯ ಲಾಭ ಪಡೆಯಲು ಮಾಡುತ್ತಿರುವ ಕಸರತ್ತುಗಳಲ್ಲಿ ಶೋಷಕರ ಪೂರ್ವನಿಯೋಜಿತ ಸಂಚುಗಳೂ ಪರಿಣಾಮಕಾರಿ ಕೆಲಸ ಮಾಡಿವೆ.

ಅಂಬೇಡ್ಕರ್ ಅಪಹರಣ ಮತ್ತು ವೈಭವೀಕರಣ

ದಲಿತ ಚಿಂತಕರು, ನಾಯಕರು ಅಂಬೇಡ್ಕರ್ ರರನ್ನು ಪ್ರಶ್ನಾತೀತವಾಗಿ, ವಿಮರ್ಶಾತೀತವಾಗಿ ಒಂದೇ ಸಮನೆ ವೈಭವೀಕರಿಸುತ್ತಿದ್ದಾರೆ. ಅಂಬೇಡ್ಕರ್ ರು ಮಾಡಿದ ಹೋರಾಟವನ್ನು ಸಮಾಜದಲ್ಲಿ ಸಮಗ್ರವಾಗಿ ಜಾರಿಗೆ ತರುವ ಕೆಲಸ ಈಗ ವಿಶ್ರಾಂತಿ ಪಡೆದಿದೆ. ಅಂಬೇಡ್ಕರ್ ರರ ಫೋಟೋಗಳು ಹಾಗೂ ಪುಸ್ತಕಗಳು ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಯಾವುದೋ ಮರ್ಜಿಗೆ ಪಾಲ್ಗೊಂಡ ತಮ್ಮ ಪೋಟೋಗಳನ್ನು ಶೋಕೇಸಿನಲ್ಲಿ ಭದ್ರವಾಗಿ ಇಡಲಾಗಿದೆ. ಅಂಬೇಡ್ಕರ್ ರರಿಗೆ ಆಳುವ ವರ್ಗ ದಯಪಾಲಿಸಿರುವ ಬಿರುದು ಬಾವಲಿಗಳನ್ನು ದಲಿತ ನಾಯಕರು ಹಾಗೂ ಚಿಂತಕರು ಪ್ರಶ್ನಾತೀತವಾಗಿ ಕಂಠಪಾಟ ಮಾಡಿಕೊಂಡು ವೈಭವೀಕರಿಸುತ್ತಿದ್ದಾರೆ. ‘ಭಾರತ ರತ್ನ’ ‘ಸಂವಿಧಾನ ಶಿಲ್ಪಿ’, ‘ಆಧುನಿಕ ಮನು’‘ಮಹಾನ್ ಮಾನವತಾವಾದಿ’ ಇವೇ ಮುಂತಾದ ಹತ್ತಾರು ಬಿರುದು ಬಾವಲಿಗಳು ಅಂಬೇಡ್ಕರ್ ಅವರ ಹೆಸರಿನ ಜೊತೆಗೆ ಸಂದಾಯವಾಗಿವೆ. ದಲಿತ ನಾಯಕರು ಹಾಗೂ ಚಿಂತಕರು ಹಾಗೂ ಇವನ್ನು ಬಾಯಿತುಂಬ ಹೇಳಿ ಅಂಬೇಡ್ಕರ್ ರನ್ನು ವೈಭವೀಕರಣ ಮಾಡಿದ್ದಾರೆ. ಮತ್ತೊಂದು ಕಡೆ ಶೋಷಕರು ಅಂಬೇಡ್ಕರ್ ರ ಹೋರಾಟದ ದಾರಿಗಳನ್ನು, ಅದರ ದಿಟ್ಟತನಗಳನ್ನು, ಅವರ ವಿಮೋಚನೆಯ ಆಶಯಗಳನ್ನು ಅಪಹರಣ ಮಾಡಿದ್ದಾರೆ.

ಈ ನಾಡಿನಲ್ಲಿ ಒಬ್ಬ ವ್ಯಕ್ತಿಯನ್ನು ಅಥವಾ ಆತನ ಚಿಂತನೆಗಳನ್ನು ಕೊಲ್ಲಬೇಕೆಂದರೆ ಫ್ರೀಯಾಗಿ ವೈಭವೀಕರಿಸಿ ಹೊಗಳಿ ಬಿಟ್ಟರೆ ಸಾಕು. ಅದು ಕಳಚಿದ ಹಾವಾಗುತ್ತದೆ. ತಮ್ಮ ಪುಂಗಿಗೆ ನೇರವಾಗಿ ಸುಲಭವಾಗಿ ತಲೆದೂಗುತ್ತದೆ. ಅಂಬೇಡ್ಕರ್ ರರ ವಿಷಯದಲ್ಲಿ ಹಾಗೂ ‘ಅಂಬೇಡ್ಕರ್ ರು ಸಂವಿಧಾನ ಶಿಲ್ಪಿ’ ಎಂಬ ವಿಷಯದಲ್ಲಿಯೂ ಇದೇ ಪರಿಣಾಮ ಆಗಿದೆ. ಕಳೆದ ೫೮ ವರುಷಗಳ ತಳ ದಲಿತರ ಸಮಗ್ರ ವಿಮೋಚನೆಗೆ ಸರಿಯಾದ ದಾರಿಯನ್ನು ಆಳುವ ವರ್ಗವಾಗಲಿ ಅಥವಾ ದಲಿತ ಹೋರಾಟಗಳಾಗಲಿ ಸೃಷ್ಟಿಮಾಡಿಲ್ಲ. ಅವರ ಹಸಿವು, ಅಪಮಾನಗಳು ದ್ವಿಗುಣಗೊಂಡಿವೆ. ದಲಿತರ ಗುಡಿಸಲು ಸುಡುವುದು, ಬಹಿಷ್ಕಾರ ಹಾಕುವುದು, ಬೆತ್ತಲುಗೊಳಿಸುವುದು, ಕೊಳ ತೊಡಿಸುವುದು, ಹೇಲು ತಿನ್ನಿಸುವುದು ನಡೆದೇ ಇದೆ. ಆದರೆ ಸಂವಿಧಾನದ ವಿಷಯಕ್ಕೆ ಬಂದ ತಕ್ಷಣ ಮಾತ್ರ ಅದನ್ನು ಅಂಬೇಡ್ಕರರೇ ಬರೆದುದು ಎಂದು ಎತ್ತಿ ಮತ್ತು ಒತ್ತಿ ಹೇಳಲಾಗುತ್ತದೆ. ನಾವೀಗ ಒಂದು ಮುಖ್ಯ ಪ್ರಶ್ನೆಯನ್ನು ಕೇಳಬಹುದು. ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದವರಿಗೆ ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಯಾವ ಶಿಕ್ಷೆಯಾಯಿತು? ಇಲ್ಲ: ಯಾವುದೇ ಶಿಕ್ಷೆ ಆಗಲಿಲ್ಲ. ಹಾಗಾದರೆ ಆ ಸಂವಿಧಾನವನ್ನು ಸ್ವತಃ ಅಂಬೇಡ್ಕರರೇ ಬರೆದುದು ಎಂಬುದನ್ನು ಎಲ್ಲಿಯವರೆಗೆ ಭ್ರಮಿಸುತ್ತ ಕುರಲು ಸಾಧ್ಯ? ಇಂಡಿಯಾದ ಶೋಷಕರು, ಬಂಡವಾಳಶಾಹಿಗಳು ಹಾಗೂ ಭಾರೀ ಭೂಮಾಲಿಕರು ಸಂವಿಧಾನವನ್ನು ಅಂಬೇಡ್ಕರ್ ರರ ಮೂಲಕ ಬರೆಸಿಕೊಂಡರು. ತಮಗೆ ಬೇಕಾದ ರೀತಿಗಳಲ್ಲಿ ಬರೆಸಿಕೊಂಡರು. ಆದರೆ ಅದನ್ನು ಸ್ವತಃ ಅಂಬೇಡ್ಕರ್ ರೇ ಬರೆದುದು ಎಂದು ಆಳುವ ವರ್ಗದವರು ಮೇಲಿಂದ ಹೇಳಿ ಹೇಳಿ ಸಂವಿಧಾನದ ಬಗ್ಗೆ ದಲಿತರು ಹಾಗೂ ದುಡಿವ ವರ್ಗದವರು ಪ್ರಶ್ನ ಮಾಡದೆ ಹಾಗೆ ತಕರಾರು ತೆಗೆಯದ ಹಾಗೆ ಮಾಡಿದ್ದಾರೆ.

ಅಂಬೇಡ್ಕರ್ ಅವರ ಆಲೋಚನೆಗಳನ್ನು, ಅವರು ಮಾಡಿದ ಜಾತಿ ಅಸ್ಪೃಶ್ಯತೆ ವಿರೋಧಿ ಹೋರಾಟಗಳನ್ನು ಇಂದಿನ ಪರಿಸ್ಥಿತಿಗೆ ಪರಿಷ್ಠರಿಸಿಕೊಂಡು ದಲಿತ ಹೋರಾಟಗಳು ಅವುಗಳನ್ನು ಮುಂದುವರಿಸಬೇಕಿತ್ತು. ಆದರೆ ದುರಂತವೇನಾಗಿದೆ ಎಂದರೆ, ದಲಿತ ನಾಯಕರು ಚಿಂತಕರು ಅಂಬೇಡ್ಕರ್ ರನ್ನು ಶೋಷಕರ ಪರಿಭಾಷೆಯಲ್ಲಿ ಹೊಗಳುತ್ತ, ವೈಭವೀಕರಿಸುತ್ತ ವಿಶ್ರಾಂತಿ ಪಡೆದಿದ್ದಾರೆ. ಅಂಬೇಡ್ಕರ್ರರನ್ನು ಹೊಗಳುವುದಾದರೆ ದಲಿತರ ಆಲೋಚನೆಯಲ್ಲಿ, ದಲಿತರ ಪರಿಭಾಷೆಯಲ್ಲಿ ಹೊಗಳಿದರೆ ಕೊನೆಪಕ್ಷ ಅದಕ್ಕೊಂದು ಅರ್ಥ ಬರುತ್ತದೆ. ಆದರೆ ಶೋಷಕರ ಪರಿಭಾಷೆಯಲ್ಲಿ ಅಂಬೇಡ್ಕರ್ ರರನ್ನು ‘ಸಂವಿಧಾನ ಶಿಲ್ಪಿ’ ‘ಭಾರತ ರತ್ನ’ ಎಂಬ ಪದಗಳನ್ನು ಬಳಸುವುದು ಅಂಬೇಡ್ಕರ್ ಮಾಡಿದ ಹೋರಾಟಗಳಿಗೆ ಗೌರವ ಸಲ್ಲಿಸಿದಂತೆ ಆಗುವುದಿಲ್ಲ. ಶೋಷಕ ವ್ಯವಸ್ಥೆ ದಲಿತರನ್ನು ಬದಲಾಗುತ್ತಿರುವ ಶೋಷಣ ವಿಧಾನಗಳನ್ನು ಒಪ್ಪಿಕೊಂಡು ಅವುಗಳಿಗೆ ಒಗ್ಗಿಕೊಂಡು ಹೋಗುವಂತೆ ಮಾಡುತ್ತಿದೆ. ದಲಿತರನ್ನು ಬದಲಾಗುತ್ತಿರುವ ವಿವಿಧ ಶೋಷಣೆಗಳಿಗೆ ಬಲಿಕೊಡುವ ಸಲುವಾಗಿ ಹಾಗೂ ಅದರ ಪ್ರತ್ಯಕ್ಷ ಕೌರ್ಯವನ್ನು ಮುಚ್ಚಿಡುವ ಸಲುವಾಗಿ ಅಂಬೇಡ್ಕರ್ ರಿಗೆ ಬಿರುದುಗಳನ್ನು ದಯಪಾಲಿಸುವ ಕುತಂತ್ರ ಸಾಗಿದೆ. ೯೦ರ ದಶಕವು ಭಾರತವನ್ನು ನೇರವಾಗಿ ಸಾಮ್ರಾಜ್ಯಶಾಹಿಯ ಪಾದಗಳಿಗೆ ಒತ್ತೆ ಇಟ್ಟ ಕಾಲ. ಅದು ಪ್ರಧನವಾಗಿ ಕೃಷಿಕೂಲಿಗಳಾದ ಬಹುಸಂಖ್ಯೆಯ ದಲಿತರ ಬದುಕನ್ನು ಬೀದಿಪಾಲು ಮಾಡಿತು. ಕೃಷಿ ವಲಯದಲ್ಲಿ ಕೊನೆಯ ಪಕ್ಷ ಕೂಲಿಯೂ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮತ್ತೊಂದು ಕಡೆ ದಲಿತರಿಗಿದ್ದ ಮೀಸಲಾತಿ ಅವಕಾಶಗಳು ಜಾಗತೀಕರಣ ಹಾಗೂ ಉದಾರೀಕರಣಗಳಿಂದ ಮುಚ್ಚಿಹೋದವು. ಈ ಎರಡು ವರ್ಗ ತನ್ನ ಈ ಜನವಿರೋಧಿ ನೀತಿಯನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ, ಒಂದು ಕಡೆ ದಲಿತ ಅಂಬೇಡ್ಕರ್ ರನ್ನು ವೈಭವೀಕರಿಸಿ ಹೊಗಳಲು ಶುರುಮಾಡಿತು. ಮತ್ತೊಂದು ಕಡೆ ದಲಿತ ಸಮೂಹದಲ್ಲಿ ‘ಹೊಲೆ ಮಾದಿಗರ’ ನಡುವೆ ಮೀಸಲಾತಿಗೆ ಸಂಬಂಧಿಸಿದ ವಿಷಬೀಜವನ್ನು ಬಿತ್ತಿತ್ತು. ಒಳಮೀಸಲಾತಿಗಾಗಿ ಹೋರಾಟ ಮಾಡುವವರು ಅದನ್ನು ಜಗತ್ತಿನ ಹೊಸ ಸಂಶೋಧನೆ ಎನ್ನುವಂತೆ ಜೊತೆಗೆ ಒಳಮೀಸಲಾತಿ ಜಾರಿಯ ಮೂಲಕ ಮಾತ್ರವೇ ನಮ್ಮೆಲ್ಲರ ವಿಮೋಚನೆ ಸಾಧ್ಯ ಎಂದು ಪರಿಗಣಿಸಿದರು. ಒಳಮೀಸಲಾತಿಗೆ ಕೇಳುವುದು ಸಾಮಾನ್ಯ ಹಕ್ಕು ಕೇಳಲಿ. ಆದರೆ ಯಾವುದರಲ್ಲಿ ಕೇಳಬೇಕು ಹೇಗೆ ಕೇಳಬೇಕು ಎಂಬುದು ಮುಖ್ಯ. ಈ ದೇಶದ ಎಲ್ಲ ಬಗೆಯ ಸಂಪತ್ತಿನಲ್ಲಿ ಒಳಮೀಸಲಾತಿಯನ್ನು ಕೇಳಬೇಕಾಗಿದೆ. ಈ ದೇಶದ ಆಸ್ತಿಯಲ್ಲಿ ದಲಿತರು ಒಳಮೀಸಲಾತಿಯನ್ನು ಕೇಳಬೇಕಾಗಿದೆ. ಅದರ ಜೊತೆಯಲ್ಲೆ ಆಳುವವರ ಅಧಿಕಾರವನ್ನು ಬಲತ್ಕಾರದಿಂದ ಬದಲು ಮಾಡಬೇಕಿದೆ.

ಅಂಬೆಡ್ಕರ್ ವಿರಚಿತ ಸಂವಿಧಾನವು ಇವತ್ತು ಯಾರ ಕೈಲಿದೆ, ಯಾರು ಅದನ್ನು ಯಾರ ಹಿತಾಸಕ್ತಿಗೆ ಬಳಸುತ್ತಾರೆ ಎಂಬ ಪ್ರಾಥಮಿಕ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಇವತ್ತು ಸಾಮ್ರಾಜ್ಯಶಾಹಿಗಳಿಗೆ ಗುಲಾಮವಾಗಿಸಿದ್ದಾರೆ. ಆ ಸಂವಿಧಾನ ಇವತ್ತು ದಲಿತರ ಬೆವರು ಮತ್ತು ಕಣ್ಣೀರನ್ನು ಪನ್ನೀರೆಂದು ಕುಡಿವವರ ತಲೆದಿಂಬಾಗಿದೆ. ‘ಸಂವಿಧಾನ ಶಿಲ್ಪಿ’ಅಂಬೇಡ್ಕರ್ ಎಂದು ಹೇಳುತ್ತಲೇ ದಲಿತರನ್ನು ನಿತ್ಯ ಸುಟ್ಟುಸುಟ್ಟು ತಿನ್ನುತ್ತಿದ್ದಾರೆ. ದಲಿತರನ್ನು ಮೋಸ ಮಾಡುವುದಕ್ಕೆ. ದಲಿತರನ್ನು ಕ್ರೂರವಾಗಿ ಹಾಗೂ ನಯವಾಗಿ ಶೋಷಣೆ ಮಾಡುವ ಸಲುವಾಗಿ ಬಂಡವಾಳಶಾಹಿಗಳು, ಭಾರೀ ಭೂಮಾಲೀಕರು ಹಾಗೂ ಸಾಮ್ರಾಜ್ಯಶಾಹಿಗಳು ಸಂವಿಧಾನದ ನೆರವು ಪಡೆದಿದ್ದಾರೆ.

ಸಂವಿಧಾನದಲ್ಲಿ ತಾತ್ವಕವಾಗಿ ಭಾರತೀಯ ಪ್ರಜೆಗಳಿಗೆ ಅನೇಕ ಹಕ್ಕುಗಳನ್ನು ಕೊಡಲಾಗಿದೆ. ಆದರೆ ಅವೆಲ್ಲ ವಾಸ್ತವದಲ್ಲಿ ಸಾಧ್ಯವಾಗಿದೆಯೇ ಎಂದರೆ ಆಗಿಲ್ಲ ಎಂಬುದೇ ಕಟುವಾಸ್ತವ. ಉದಾ: ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಇದೆ. ಆದರೆ ಕೂಲಿ ಮಾಡುವ ಕೂಲಿಕಾರ್ಮಿಕ ನ್ಯಾಯವಾಗಿ ಕೂಲಿ ಕೇಳಿದರೆ ಅವನನ್ನು ಕೊಲೆ ಮಾಡಿರುವ/ಮಾಡುವ ಕ್ರೂರ ವಾಸ್ತವವಿದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಆಶಯವಿದೆ. ಆದರೆ ಸಮಾಜದಲ್ಲಿ ಜಾತಿ ಶ್ರೇಣಿಕರಣ ಹಾಗೂ ಆರ್ಥಿಕ ಶ್ರೇಣಿಕರಣಗಳು ಹಾಗೆಯೇ ಮುಂದುವರಿದಿವೆ.

ಅಕಾಡೆಮಿಕ್ ವಲಯದಲ್ಲಿ ಅಂಬೇಡ್ಕರ್

ಅಕಾಡೆಮಿಕ್ ವಲಯದಲ್ಲಿ ಅಂಬೇಡ್ಕರ್ ರರನ್ನು ಹಾಗೂ ಅವರ ಚಿಂತನೆಗಳನ್ನು ದೂಳುವರೆಸಿ ಕ್ಲೀನ ಮಾಡಿ ಷೋಕೇಸಿನಲ್ಲಿ ಭದ್ರಮಡುವ ಕೆಲಸ ಮೃದುವಾಗಿ ಮುಂದುವರೆದಿದೆ. ವ್ಯವಸ್ಥೆಯ ಬಗ್ಗೆ ತಮಗೆ ಯಾವ ಅಭಿಪ್ರಾಯವಿದೆಯೊ ಅದನ್ನು ಭದ್ರಪಡಿಸಿ ಮಂಡಿಸುವ ಸಲುವಾಗಿ ಅಂಬೇಡ್ಕರ್ ರರನ್ನು ಬಳಸಲಗುತ್ತಿದೆ. ಭಾರತದಲ್ಲಿ ೯೦ರ ದಶಕದ ನಂತರ ಕೋಮುವಾದವು ವಿಕೇತ ರೂಪವನ್ನು ಪಡೆಯಿತು. ಅನಂತರ ‘ವೈದಿಕ ಧರ್ಮದ’ ವಿರೋಧ, ‘ಹಿಂದೂ ಧರ್ಮ’ದ ವಿರೋಧಗಳು ಒಂದೇ ಸಮನೆ ನಡೆಯಲು ಶುರುವಾದವು. ಅನೇಕರು ತಮ್ಮ ಈ ನಿಲುವು ಮತ್ತು ನಿರೂಪಣೆಗೆ ಅಂಬೇಡ್ಕರ್ ವಿಚಾರಗಳನ್ನು ಅನಾಮತ್ತಾಗಿ ಬಳಸಿಕೊಂಡರು.

ಅಕಾಡೆಮಿಕ್ ವಲಯದಲ್ಲಿ ಅಂಬೇಡ್ಕರ್ ಒಂದು ಬಂಡವಾಳವಾಗಿದ್ದಾರೆ. ಅಂಬೇಡ್ಕರ್ ಹೆಸರಿನಲ್ಲಿ ಅಧ್ಯಯನ ಪೀಠಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನ ಸಂಸ್ಥೆಗಳು ಶುರುವಾಗಿವೆ. ಅವುಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಣಕಾಸನ್ನು ಮಂಜೂರು ಮಾಡುತ್ತವೆ. ಇವಲ್ಲದೆ ಇನ್ನೂ ಬೇರೆ ಕೆಲವು ಮೂಲಗಳಿಂದಲೂ ಆರ್ಥಿಕ ನೆರವು ಬರುತ್ತದೆ. ಇವನ್ನು ಬಳಸಿಕೊಂಡು ಕೆಲವು ಸಂಸ್ಥೆಗಳು ಮಾತ್ರ ಗುಣಾತ್ಮಕ ಕೆಲಸಗಳನ್ನು ಮಾಡಿವೆ. ಉಳಿದ ಸಂಸ್ಥೆಗಳಲ್ಲಿ ನಾಮಕಾವಸ್ಥೆ ಕೆಲಸಗಳು ಮಾತ್ರ ನಡೆಯುತ್ತ್ತಿವೆ. ಅಂಬೇಡ್ಕರ್ ಹೆಸರು ಮಾತ್ರ ಬಳಕೆಯಾಗುತ್ತಿದೆ.

ಕಳೆದ ಶತಮಾನದಲ್ಲಿ ಅಂಬೇಡ್ಕರ್ ಇಡೀ ಇಂಡಿಯಾದಲ್ಲಿ ಗಣನೀಯವಾದ ಅಕಾಡೆಮಿಕ್ ಕೆಲಸಗಳನ್ನು ಮಾಡಿದರು. ಇಂದಿನ ವಿದ್ವಾಂಸರಿಗೆ ಅವುಗಳನ್ನು ಓದಿ ಅರ್ಥಮಾಡಿಕೊಂಡು ಜೀರ್ಣಿಸಿಕೊಳ್ಳುವುದೂ ಕೂಡ ಕಷ್ಟ. ಅಂಬೇಡ್ಕರ್ ರ ಚಿಂತನೆಗಳಿಗೆ ಸಾಮಾಜಿಕ ಪರಿಣಾಮದ ನೇರ ಸಂಬಂಧವಿದೆ. ಹಾಗಾಗಿ ಅವುಗಳನ್ನು ಮುಚ್ಚಿಡುವ ಸಲುವಾಗಿ, ಅಂಬೇಡ್ಕರ್ ರ ಪ್ರಸ್ತಾಪ ಬಂದಾಗಲೆಲ್ಲ ಅವರ ಬದಲಿಗೆ ಲೋಹಿಯಾ ಅವರನ್ನೊ, ಗಾಂಧಿಯನ್ನೊ ಚರ್ಚೆಗೆ ತರುವ ಕೆಲಸವನ್ನು ಕೆಲವು ತಾಂತ್ರಿಕ ಬುದ್ಧಿಜೀವಿಗಳು ಮಾಡುತ್ತಿದ್ದಾರೆ.

ದಲಿತ ವಲಯದಲ್ಲಿ ಅಂಬೇಡ್ಕರ್

ದಲಿತ ಚಿಂತಕರು ಅಂಬೇಡ್ಕರ್ ರನ್ನು ಸಮಕಾಲೀನಗೊಳಿಸುವುದು ಹೇಗೆ ರಾಜಕೀಯ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ. ಈ ದೇಶಕ್ಕೆ ಜಾಗತೀಕರಣವನ್ನು ಒತ್ತಾಯಪೂರ್ವಕವಾಗಿ ಜಾರಿ ಮಾಡಿದ ಮೇಲೆ ಎಲ್ಲಾ ವಲಯಗಳನ್ನೂ ಸೇರಿದಂತೆ ಕೃಷಿ ವಲಯದ ಮೇಲೆ ಭಾರಿ ದುಷ್ಪರಿಣಾಮ ಉಂಟಾಯಿತು. ದಲಿತರೆಂದರೆ ಈ ದೇಶದಲ್ಲಿ ಕೃಷಿಕೂಲಿ ಕಾರ್ಮಿಕರು. ಕೃಷಿ ವಲಯದಲ್ಲಿ ಉಂಟಾದ ಬಿಕ್ಕಟ್ಟು ನೇರವಾಗಿ ಕೃಷಿಕೂಲಿ ದಲಿತ ವರ್ಗವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅಲ್ಲಿ ಕೊನೆ ಪಕ್ಷ ಕೂಲಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಯಿತು. ಇದೇ ಪರಿಸ್ಥಿತಿ ಬೇರೆ ಬೇರೆ ಕ್ಷೇತ್ರಗಳಲ್ಲೂ ಅನುಸರಿಸಿತು. ಒಂದು ಕಡೆ ಜಾಗತೀಕರಣ, ಉದಾರೀಕರಣಗಳು ದಲಿತರನ್ನು ಬಿಡುಗಡೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಇದಕ್ಕೆ ವಿರುದ್ಧವಾಗಿ ಅದೇ ಜಾಗತೀಕರಣ ಹಾಗೂ ಉದಾರೀಕರಣಗಳು ದಲಿತರನ್ನು ನೇರವಾಗಿ ಬಲಿತೆಗೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರರನ್ನು ಎಲ್ಲಿ ಪ್ಲೇಸ್‌ಮಾಡಬೇಕೆಂಬ ಗೊಂದಲ ದಲಿತ ಚಿಂತಕರಿಗೆ ಎದುರಾಯಿತು. ಅಂತಿಮವಾಗಿ ಅವರು ‘ಜಾಗತೀಕರಣದಿಂದಲೂ ದಲಿತರಿಗೆ ಒಳ್ಳೆಯದಾಗುವುದಾದರೆ ಆಗಲಿ, ದಲಿತರು ಜಾಗತೀಕರಣ ಲಾಭ ಪಡೆಯುವುದಾದದರೆ ಪಡೆಯಲಿ’ ಎಂಬ ಹತಾಶ ಸ್ಥಿತಿಯನ್ನು ತಲುಪಿದರು.

ದಲಿತ ಚಳವಳಿಯಲ್ಲಿ ಅಂಬೇಡ್ಕರ್

ಈ ದೇಶಕ್ಕೆ ೧೯೪೭ರಲ್ಲಿ ಬಿಳಿಯರಿಂದ ಅದಿಕಾರ ಹಸ್ತಾಂತರ ಆಯಿತು ಎಂಬುದು ಒಂದು ನಂಬಿಕೆ. ಆದಾಗಿ ೨೦-೨೫ ವರ್ಷಗಳು ಕಳೆದರೂ ಈ ದೇಶದ ದುಡಿವವರ, ಶೋಷಿತರ ಹಾಗೂ ದಲಿತರ ಬದುಕು ಬದಲಾಗಲಿಲ್ಲ. ಅಲ್ಲಲ್ಲಿ ಅಕ್ಷರ ಕಲಿತ ದಲಿತ ಸಮೂಹ ತಮ್ಮ ಮೇಲಿನ ಅಪಮಾನ ಹಾಗೂ ಶೋಷಣೆಯನ್ನು ವಿರೋಧಿಸಲು ತೊಡಗಿದರು. ಆದರೆ ಅಂತಹದೇ ಹೋರಾಟವನ್ನು ಅಂಬೇಡ್ಕರ್ ರು ಮಾಡಿದ್ದರು ಎಂಬುದು ಸ್ವತಃ ದಲಿತರು ತಾವು ಹೋರಾಟಕ್ಕೆ ಇಳಿದ ಮೇಲೆ ಗೊತ್ತಾಯಿತು. ಅಲ್ಲಿಯವರೆಗೆ ಆಳುವ ವರ್ಗ ಅಂಬೇಡ್ಕರ್ ರನ್ನು ಮುಚ್ಚಿಟ್ಟಿತ್ತು. ದಲಿತರು ತಮ್ಮ ಹೋರಟದ ಮೂಲಕ ಅಂಬೇಡ್ಕರ್ ರನ್ನು ನಾಡಿಗೆ, ಊರಿಗೆ, ಕೇರಿಗೆ ಹಾಗೂ ಗುಡಿಸಲುಗಳಿಗೆ ಪರಿಚಯಿಸಿದರು. ಇದು ದಲಿತರಲ್ಲಿ ಹೋರಾಟದ ಪರಂಪರೆ ಇದೆ ಎಂಬುದನ್ನು ಮೊಟ್ಟಮೊದಲ ಬಾರಿಗೆ ತೋರಿಸಿ ಕೊಟ್ಟಿತು. ದಲಿತ ಹೋರಾಟ ಅಲ್ಲಿಂದ ಸ್ಫೂರ್ತಿ ಪಡೆಯಿತು. ಆ ಮೂಲಕ ದಲಿತರಲ್ಲಿ ಒಂದು ಬಗೆಯ ಜಾಗೃತಿಯನ್ನು ಹಾಗೂ ಸ್ವಾಭಿಮಾನವನ್ನು ಮೂಡಿಸಿತು. ಅದೇ ಕಾಲಕ್ಕೆ ಮತ್ತೊಂದು ಕಡೆ ಶೋಷಕರಿಗೆ ಇದು ನುಂಗಲಾರದ ತುತ್ತಾಯಿತು.

ದಲಿತರು ಅಂಬೇಡ್ಕರ್ ರ ವಿಚಾರಗಳಿಂದ ಹಾಗೂ ಅಂಬೇಡ್ಕರ್ ರು ಮಾಡಿದ ಹೋರಾಟಗಳಿಂದ ಸ್ಫೂರ್ತಿ ಪಡೆಯುವುದು ಆಳುವ ವರ್ಗದವರಿಗೆ ಬೇಕಾಗಿರಲಿಲ್ಲ. ಹಾಗಾಗಿ ಅಂಬೇಡ್ಕರ್ ವಿಚಾರಗಳಿಂದ ದಲಿತರನ್ನು ದೂರ ಮಾಡುವ ಕುತಂತ್ರಗಳನ್ನು ಪ್ರಯೋಗಿಸಿದರು. ಪರಿಣಾಮವಾಗಿ ಅಂಬೇಡ್ಕರ್ ಪ್ರಶಸ್ತಿ, ಅಂಬೇಡ್ಕರ್ ಫೆಲೊಶಿಪ್‌ಮುಂತಾದವು ನಯವಾಗಿ ಜಾರಿಗೆ ಬಂದವು. ಕೇರಿಗಳ ವಿಕೃತ ಶೋಷಣೆಯಿಂದ ಹೊರ ಬಂದಿರುವ ಹೊಟ್ಟೆ ತುಂಬಿದ ದಲಿತರು ಲಾಬಿಯಿಂದ ಅವುಗಳ ಲಾಭ ಪಡೆದು ಸಂಭ್ರಮಿಸತೊಡಗಿದರು. ಆದರೆ ಕೇರಿಗಳಲ್ಲಿ ದಲಿತರ ಶೋಷಣೆಯ ಕ್ರೌರ್ಯ ಹಾಗೆಯೇ ಮುಂದುವರಿಯಿತು.

ದಲಿತ ಹೋರಾಟ ಹಾಗೂ ದಲಿತ ಚಳವಳಿ ಅಂಬೇಡ್ಕರರಿಂದ ಅತ್ಯಂತ ಮೇಲುಸ್ತರದ ಭಾವನಾತ್ಮಕ ಸ್ಫೂರ್ತಿಯಷ್ಟನ್ನೇ ಪಡೆಯಿತು. ಆಮೇಲೆ ನೌಕರಸ್ಥ ದಲಿತರು, ಅಧಿಕಾರಸ್ಥ ದಲಿತರು ಹಾಗೂ ದಲಿತ ರಾಜಕಾರಣಿಗಳು ತಮ್ಮ ಶಕ್ತ್ಯಾನುಸಾರ ಅಂಬೇಡ್ಕರ್ ಹೆಸರಿನಲ್ಲಿ ಏನೆಲ್ಲ ಲಾಭ ಪಡೆದರು. ಮನೆಗಳಲ್ಲಿ ಮಾತ್ರ ಸತ್ಯನಾರಾಯಣ ವ್ರತ ಸತ್ಯನಾರಾಯಣ ವ್ರತ ಮಾಡಿಸಿದರು. ಆ ಕಡೆ ಕೇರಿಗಳಲ್ಲಿ ಹುಳು ಹಿಡಿದ ಮುಗ್ಗಲು ಅಕ್ಕಿ ತರಲು ಹಸಿರು ಕಾರ್ಡಿಗೂ ಪರದಾಡುವ ಪರಿಸ್ಥಿತಿ ಪಾತಾಳಕ್ಕೆ ಹೋಯಿತು. ಅಲ್ಲಿ ಅಂಬೇಡ್ಕರ್ ಹೆಸರಿನ ಪ್ರಶಸ್ತಿ, ಪೀಠ, ಸಂವಿಧಾನ ಯಾವುದೂ ಕೇರಿಯವರ ನೆರವಿಗೆ ಬರಲಿಲ್ಲ. ಹಾಗಿದ್ದರೆ ಈವರೆಗೆ ಅಂಬೇಡ್ಕರ್ ರಿಂದ ಲಾಭ ಪಡೆದವರು ಯಾರು ಎಂಬುದನ್ನು ಮನವರಿಗೆ ಮಾಡಿಕೊಳ್ಳಬೇಕಾಯಿತು.

ಅಂಬೇಡ್ಕರ್ ದಲಿತರಿಗೆ ಸ್ಫೂರ್ತಿ, ಅಂಬೇಡ್ಕರ್ ದಲಿತ ನಾಯಕರಿಗೆ, ದಲಿತ ರಾಜಕಾರಣಿಗಳಿಗೆ ಶಕ್ತಿ. ಅಂಬೇಡ್ಕರ್ ಶೋಷಕರಿಗೆ ಹಾಗೂ ಆಳುವ ವರ್ಗಕ್ಕೆ ಅಸ್ತ್ರ. ದಲಿತರು ಒಂದು ಕಡೆ ಅಂಬೇಡ್ಕರ್ ರನ್ನು ಶಕ್ತಿಯನ್ನಾಗಿ ಪರಿಗಣಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಕಾಲಕ್ಕೆ ಶೋಷಕರು ಅಂಬೇಡ್ಕರ್ ರನ್ನು ಅಸ್ತ್ರವನ್ನಾಗಿ ಮಾರ್ಪಡಿಸಿ ಬಿಟ್ಟಿದ್ದಾರೆ. ಆ ಅಸ್ತ್ರದಿಂದಒ ದು ಕಡೆ ದಲಿತರನ್ನೂ ಮತ್ತೊಂದು ಕಡೆ ಅಂಬೇಡ್ಕರರನ್ನೂ ದಾರಿ ತಪ್ಪಿಸಿದ್ದಾರೆ. ಅಂಬೇಡ್ಕರ್ ರನ್ನು ಕೇವಲ ಪದಗಳ ಮೂಲಕ ಹಾಗೂ ಪದವಿಗಳ ಮೂಲಕ ಗೌರವಿಸಿ ಹೊಗಳಿ ಹೊನ್ನ ಶೂಲಕ್ಕೇರಿಸಿದ್ದಾರೆ. ದಲಿತ ಚಿಂತಕರು, ದಲಿತ ನಾಯಕರೂ ಅದನ್ನು ಅನುಮತ್ತಾಗಿ ಅನುಸರಿಸುತ್ತಿದ್ದಾರೆ; ಹಿಂಬಾಲಿಸಿದ್ದಾರೆ.

ದಲಿತರ ವಾಸ್ತವ ಪರಿಸ್ಥಿತಿ ಮತ್ತು ಅಂಬೇಡ್ಕರ್

ವರ್ಷದ ೩೬೫ ದಿನ ಅಂಬೇಡ್ಕರ್ ಹೆಸರಿನಿಂದ ಲಾಭ ಪಡೆದವರಿಗೆ, ದಲಿತ ನಾಯಕರಿಗೆ ಅಂಬೇಡ್ಕರ್ ಅಪರಿಚಿತರು. ಏಪ್ರಿಲ್‌೧೪ ಮತ್ತು ಡಿಸೆಂಬರ್ ೬ ಈ ಎರಡು ದಿನ ಮಾತ್ರ ಅಂಬೇಡ್ಕರ್ ಪೂರ್ತಿ ಪರಿಚಿತರು. ದಲಿತ ಹೋರಾಟದ ಆರಂಭದ ದಿನಗಳಲ್ಲಿ ನಾಡಿನಾದ್ಯಂತ ದಲಿತ ಅಧ್ಯಯನ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಆ ಶಿಬಿರಗಳು ದಲಿತ ವಿದ್ಯಾರ್ಥಿಗಳಿಗೆ ಅವರು ಔಪಚಾರಿಕವಾಗಿ ಓದುತ್ತಿದ್ದ ತರಗತಿಗಳು ನೀಡದ ನಿಜವಾದ ಸಾಮಾಜಿಕ ತಿಳಿವಳಿಕೆಯನ್ನು ನೀಡುತ್ತಿದ್ದವು. ಆದರೆ ಇಂದು ಅಂತಹ ಶಿಬಿರಗಳು ಕಡಿಮೆಯಾಗಿವೆ. ಪರಿಣಾಮವಾಗಿ ದಲಿತ ಹೋರಾಟಗಳೂ ಕೂಡ ಅಂಬೇಡ್ಕರ್ ರ ಬಗ್ಗೆ ಅಧ್ಯಯನ ಹಾಗೂ ತರಬೇತಿ ಪಡೆಯುತ್ತಿಲ್ಲ. ಅಂಬೇಡ್ಕರ್ ರ ಕೆಲವು ಜೀವನ ವಿರಗಳು ಹಾಗೂ ಅಂಬೇಡ್ಕರ್ ರ ಕೆಲವು ಸೂಕ್ತಿಗಳು ಅವರಿಗೆ ಕಂಠಪಾಠವಾಗಿವೆ. ಅವುಗಳಲ್ಲೇ ಏಪ್ರಿಲ್‌೧೪ ಹಾಗೂ ಡಿಸೆಂಬರ್ ೬ ಈ ಎರಡು ದಿನಗಳನ್ನು ತಳ್ಳುತ್ತಾರೆ.

ಮೀಸಲಾತಿಯಿಂದ ಅಧಿಕಾರಕ್ಕೆ ಹೋದವರು (ದಲಿತ ನೌಕರರು ಮತ್ತು ದಲಿತ ರಾಜಕಾರಣಿಗಳು) ತಮ್ಮ ಮಕ್ಕಳಿಗೆ ಇಂದು ಐಟಿಬಿಟಿ ಶಿಕ್ಷಣ ಕೊಡಿಸುತ್ತಿದ್ದಾರೆ. ಇದು ಸರಿಯೊ ತಪ್ಪೊ ಅದು ಬೇರೆ ಪ್ರಶ್ನೆ. ಅವರನ್ನು ಕೇಳಿದರೆ ನಮ್ಮ ಮಕ್ಕಳು ಕೂಲಿ ಮಾಡಬೇಕಾ ಅಥವಾ ಅಮೆರಿಕದಲ್ಲಿ ಇಂಜಿನಿಯರ್ ಆಗಬೇಕಾ? ಎಂಬ ಕಮರ್ಷಿಯಲ್‌ಉತ್ತರವನ್ನು ಹೇಳಿಯಾರು. ಹೀಗೆ ಹೇಳುವ ಮೂಲಕ ಮೇಲು ಮಧ್ಯಮ ವರ್ಗದ ದಲಿತರು ಕಮರ್ಷಿಯಲ್‌ಆಗಿದ್ದಾರೆ. ಅವರಿಗಾಗಲಿ, ಅವರ ಮಕ್ಕಳಿಗಾಗಲಿ ಅಂಬೇಡ್ಕರ್ ಸಂಪೂರ್ಣ ಅಪರಿಚಿತ. ಐಟಿ ಬಿಟಿಗಳು ಮಾತ್ರ ಪರಿಚಿತ. ಕೊನೆಪಕ್ಷ ಆರ್ಥಿಕವಾಗಿ ಬಡತನದಿಂದ ಬಂದಿರುವ ದಲಿತ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಭಾಗಗಳಲ್ಲಿ ಓದುತ್ತಾರೆ. ಕೊನೆ ಪಕ್ಷ ಅವರಿಗಷ್ಟೇ ಅಂಬೇಡ್ಕರ್ ಸ್ವಲ್ಪ ಪರಿಚಯ ಅಷ್ಟೆ.

ಒಂದು ಕಾಲಕ್ಕೆ ದಲಿತ ಹೋರಾಟ ಅಂಬೇಡ್ಕರ್ ರಿಂದ ಸ್ಫೂರ್ತಿ ಪಡೆದಿತ್ತು. ಇಂದು ಅನೇಕ ದಲಿತ ಹೋರಾಟಗಳಿಗೆ ಪರಿಪಕ್ವ ಸಿದ್ಧಾಂತ ಸಿದ್ದಿಸಿಲ್ಲ. ಅವರೆಲ್ಲ ಆಳುವ ವರ್ಗದ ಪರಭಾಷೆಯಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಡುತ್ತಿದ್ದಾರೆ. ಶೋಷಕರ ಪ್ರಜ್ಞೆ ದಲಿತರ ಪ್ರಜ್ಞೆಯನ್ನು ಆಕ್ರಮಿಸಿಕೊಂಡಿದೆ. ಆಳುವ ವರ್ಗವು ಅಂಬೇಡ್ಕರರನ್ನು ವಿಕೃತ ನಾಟಕದ ಮೂಲಕ ಪೂಜೆ ಮಾಡುತ್ತಿದ್ದಾರೆ. ಕಾಯಿ ಒಡೆಯುತ್ತಿದ್ದಾರೆ. ಆರತಿ ಬೆಳಗುತ್ತಿದ್ದಾರೆ. ಮಂಗಳಾರತಿಯನ್ನೂ ಮಾಡುತ್ತಿದ್ದಾರೆ. ಕೆಲವು ದಲಿತರು ಅಲ್ಲಿ ಒಳಮೀಸಲಾತಿ ಕೇಳುತ್ತಿದ್ದಾರೆ.

ಸಾಮ್ರಾಜ್ಯಶಾಹಿಯ ಜಾಗತೀಕರಣದಿಂದ ದಲಿತರ ಬದುಕು ಏನಾಗಿದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ದಲಿತರೆಂದರೆ ಕೇವಲ ದಲಿತ ಸಾಹಿತಿಗಳಲ್ಲ, ದಲಿತ ನೌಕರರಲ್ಲ, ದಲಿತ ಅಧಿಕಾರಿಗಳಲ್ಲ, ದಲಿತ ರಾಜಕಾರಣಿಗಳಲ್ಲ, ದಲಿತರೆಂದರೆ ಹಸಿವು ಮತ್ತು ಅಪಮಾನ ಎಂಬುದಕ್ಕೆ ಮತ್ತೊಂದು ಹೆಸರು. ಹಸಿವು ಮತ್ತು ಅಪಮಾನಗಳ ಸಾಮಾಜಿಕ ವಾಸ್ತವದ ಮತ್ತೊಂದು ಹೆಸರು ದಲಿತರು. ಇದನ್ನು ಮುಚ್ಚಿಟ್ಟು ದಲಿತರನ್ನು ವ್ಯಾಖ್ಯಾನಿಸಲು ಬರುವುದಿಲ್ಲ. ದಲಿತರನ್ನು ಸರಕಾರಿ ಪರಿಭಾಷೆಯಲ್ಲಿ ಗ್ರಹಿಸುವುದನ್ನು ಮೊದಲು ಬಿಡಬೇಕು. ಹಸಿವು ಮತ್ತು ಅವಮಾನ ಎಂಬುದಕ್ಕೆ ನಿಘಂಟಿನಲ್ಲಿ ಅರ್ಥಗಳಿಲ್ಲ. ಅಷ್ಟು ಮಾತ್ರವಲ್ಲ; ಶೋಷಣೆ ಎಂಬುದಕ್ಕೂ ನಿಘಂಟಿನಲ್ಲಿ ವಿವರಣೆ ಇಲ್ಲ. ಹಸಿವು ಮತ್ತು ಅಪಮಾನಗಳ ಬೇಗುದಿಯ ದಲಿತರು ಇಂದು ಹಳ್ಳಿಗಳ ಭೂಮಾಲೀಕರ ಜಮೀನುಗಳಲ್ಲಿ ಬೆವರಿಳಿಸಿ ದುಡಿಯುತ್ತಿದ್ದಾರೆ. ಅವರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ವಿವಿಧ ಕಾಮಗಾರಿ ಕೆಲಸಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದಿರುವ ಸಾವಿರಾರು ದಲಿತರು ಬೆವರು ಕಣ್ಣೀರಿನಲ್ಲಿ ಬದುಕು ದೂಡುತ್ತಿದ್ದಾರೆ. ಇನ್ನು ದಲಿತ ವಿದ್ಯಾರ್ಥಿ ಯುವಜನರ ಪಾಡು, ದಲಿತ ಹೆಣ್ಣುಮಕ್ಕಳ ಪಾಡು ಮತ್ತೊಂದು ದುರಂತಹ ಲೋಕ. ಇತ್ತೀಚಿನ ದಿನಗಳಲ್ಲಿ ದಲಿತ ಹೋರಾಟಕ್ಕೆ ದಲಿತರ ವಾಸ್ತವ ಪರಿಸ್ಥಿತಿಯನ್ನು ಒಟ್ಟಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಕಳೆದ ಹತ್ತಾರು ವರ್ಷಗಳಿಂದ ಇಡೀ ದಲಿತ ಸಮೂಹಕ್ಕೆ ಸಂಬಂಧಿಸಿದ ಯಾವ ಹಕ್ಕೊತ್ತಾಯವನ್ನೂ, ಯಾವ ಕಾರ್ಯಕ್ರಮವನ್ನೂ ದಲಿತ ಹೋರಾಟ ಕೈಗೆತ್ತಿಕೊಳ್ಳಲಾಗಿಲ್ಲ. ಎಲ್ಲಾ ದಲಿತರ ವಾಸ್ತವ ಪರಿಸ್ಥಿತಿಯನ್ನೂ ಅರಿಯಲು ಅಂಬೇಡ್ಕರ್ ಆಲೋಚನೆಯ ಮೂಲಕ ಪ್ರವೇಶ ಮಾಡುವುದಾದರೆ ಅಂಬೇಡ್ಕರ್ ರು ಈ ದೇಶದ ಗ್ರಾಮೀಣ ಪರಿಸ್ಥಿತಿಗಳ ಬಗ್ಗೆ ಅಲ್ಲಿನ ದುಡಿಮೆಯ ಸಂಬಂಧಗಳ ಬಗ್ಗೆ ಮಾಡಿರುವ ಅಧ್ಯಯನಗಳನ್ನು ಮೊದಲು ಓದಬೇಕು. ಆ ನಿಟ್ಟಿನಲ್ಲಿ ಈಗ ಬದಲಾಗಿರುವ ದಲಿತರ ವಾಸ್ತವ ಪರಿಸ್ಥಿತಿಗಳನ್ನೂ, ಅವರ ಸಮಸ್ಯೆಗಳನ್ನೂ ಅಧ್ಯಯನ ಮಾಡಿ, ಸಮಕಾಲೀನ ಪರಿಸ್ಥಿತಿಯಲ್ಲಿ ದಲಿತರ ವಿಮೋಚನೆಗೆ ಹೊಸ ದಾರಿಗಳನ್ನು ತುಳಿಯಬೇಕಿದೆ.

ಮತ್ತೆ ಬಂತು ಏಪ್ರಿಲ್೧೪

ಹೌದು, ಅದೊಂದು ಕಾಲವಿತ್ತು. ಏಪ್ರಿಲ್‌೧೪ ದಲಿತರ ಸ್ವಾಭಿಮಾನದ ದಿನವಾಗಿತ್ತು. ಕೇರಿಗಳಲ್ಲಿ ಅಂಬೇಡ್ಕರ್ ಬಗೆಗಿನ ಗೌರವ ಭಾವನೆ ಸ್ವಾಭಿಮಾನವಾಗಿ ದಲಿತರ ಎದೆಗಳನ್ನು ತಟ್ಟುತ್ತಿತ್ತು. ಅನಾದಿಕಾಲದಿಂದ ಶೋಷಣೆಯ ವ್ಯವಸ್ಥೆ ಹೇರಿದ್ದ ಆಕ್ರಂದನಗಳನ್ನು ಕೊನೆಪಕ್ಷ ಸಮಾಧಾನಪಡಿಸುವ ದಿನವಾಗಿತ್ತು. ಅಂದು ತಮ್ಮ ಕೂಲಿ ಕೆಲಸ ಬಿಟ್ಟು ತಾಲೂಕು ಇಲ್ಲವೆ ಜಿಲ್ಲಾ ಕೇಂದ್ರಗಳಲ್ಲಿ ನಡೆಸುತ್ತಿದ್ದ ಅಂಬೇಡ್ಕರ್ ಜಯಂತಿಗೆ ಇವರು ಹೋಗುತ್ತಿದ್ದರು. ಶತಮಾನಗಳಿಂದ ಈ ಶೋಷಕ ವ್ಯವಸ್ಥೆ ಅವರಲ್ಲಿ ಅದುಮಿಟ್ಟ ತಮ್ಮ ಅಸಹನೆ, ಆಕ್ರೋಶಗಳನ್ನು ಮೆರವಣಿಗೆಯಲ್ಲಿ ಸಾಮೂಹಿಕ ಘೋಷಣೆಗಳ ಮೂಲಕ ಹೊರಹಾಕುತ್ತಿದ್ದರು. ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಅಂಬೇಡ್ಕರ್ ರ ಜೀವನ ವಿವರ, ವಿಚಾರ ಮತ್ತು ಅವರು ಮಾಡಿದ ಹೋರಾಟಗಳನ್ನು ಮೆಲುಕು ಹಾಕುತ್ತಿದ್ದರು. ನಮ್ಮವನೊಬ್ಬ ಇಂತಹ ಪುಣ್ಯಾತ್ಮನಿದ್ದನೆ ಎಂದು ಆಶ್ಚರ್ಯಪಡುತ್ತಿದ್ದರು. ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ, ಅಪಮಾನ, ಹಲ್ಲೆ, ದೌರ್ಜನ್ಯಗಳಿಗೆ ಕಾರಣಗಳೇನು, ಅದಕ್ಕೆ ಅಂಬೇಡ್ಕರ್ ಯಾವ ರೀತಿ ಹೋರಾಟ ಮಾಡಿದರು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದರು.

ಕಳೆದ ಶತಮಾನದ ೭೦ ಮತ್ತು ೮೦ ದಶಕಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಆಶಯಗಳನ್ನಿಟ್ಟುಕೊಂಡ ಶೋಷಿತರ ಮತ್ತು ದುಡಿವ ವರ್ಗದವರ ಹೋರಾಟಗಳು ಶುರುವಾದವು. ಇಂತಹ ಹೋರಾಟಗಳಿಗೆ ಅಂಬೇಡ್ಕರ್ ರ ಆಲೋಚನೆಗಳು ಮತ್ತು ಅವರು ಮಾಡಿದ ಹೋರಾಟಗಳು ಪ್ರಭಾವ ಮಾಡಿದವು. ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಅಂಬೇಡ್ಕರ್ ರ ಬರಹಗಳು ಅನುವಾದವಾದವು. ಕರ್ನಾಟಕದಲ್ಲಿ ದಲಿತ ಹೋರಾಟ ಮೆತ್ತಗಾಗುತ್ತ ಬಂದ ಮೇಲೆ ಅಂಬೇಡ್ಕರ್ ರ ಬರಹಗಳು ಕನ್ನಡಕ್ಕೆ ಬಂದವು. ಇವೆಲ್ಲವನ್ನೂ ಸರಕಾರವೇ ಮಾಡಿದ್ದು ಎಂಬುದು ಒಂದು ವಿಶೇಷ. ನಂತರ ಅಂಬೇಡ್ಕರ್ ರನ್ನು ಕುರಿತು ವೈಚಾರಿಕ ಮತ್ತು ಸೃಜನಾತ್ಮಕ ಸಾಹಿತ್ಯವೂ ಬಂತು.

೧೯೯೦-೯೧ರಲ್ಲಿ ಅಂಬೇಡ್ಕರ್ ಅವರಿಗೆ ಕೇಂದ್ರ ಸರ್ಕಾರ “ಭಾರತ ರತ್ನ” ಪ್ರಶಸ್ತಿ ಘೋಷಿಸಿ, ಏಪ್ರಿಲ್‌೧೪ನ್ನು ಕೇಂದ್ರ ಸರಕಾರಿ ರಜೆಯನ್ನಾಗಿಯೂ ಘೋಷಿಸಿತು. ಇದರಿಂದ ದಲಿತ ಚಿಂತಕರು ಮತ್ತು ಹೋರಾಟಗಾರರು ಭಾವನಾತ್ಮಕವಾಗಿ ಖುಷಿಪಟ್ಟರು. ಅಂಬೇಡ್ಕರ್ ಅವರ ವಿಚಾರಗಳನ್ನು ಸರಕಾರವೇ ಮುಂದೆ ನಿಂತು ಜಾರಿ ಮಾಡುತ್ತಿರುವಾಗ ಇನ್ನು ನಮ್ಮ ಕೆಲಸ ಕಡಿಮೆಯಾಯಿತು. ಎಂದುಕೊಂಡರು. ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಪೀಠ, ಸಂಸ್ಥೆಗಳು ಆರಂಭವಾದವು. ರೋಡು, ಸರ್ಕಲ್‌, ಕೇರಿ, ಓಣಿ, ಹಾಸ್ಟೆಲ್‌ಗಳಿಗೆ ಅಂಬೇಡ್ಕರ್ ಹೆಸರಿಡಲಾಯಿತು. ಇವೆಲ್ಲವೂ ದಲಿತರಿಗೆ ಭಾವನಾತ್ಮಕವಾಗಿ ಖುಷಿಕೊಟ್ಟಿವೆ.

ಆದರೆ ಅಂಬೇಡ್ಕರ್ ರನ್ನು ದಲಿತರಿಂದ ಮತ್ತು ದಲಿತ ಹೋರಾಟಗಳಿಂದ ಪ್ರತ್ಯೇಕಿಸಿ ದೂರ ಮಾಡಿದಾಗ ದಲಿತ ನಾಯಕರು/ಚಿಂತಕರು ಖುಷಿಪಡುತ್ತಿರುವುದು ಮಹಾನ್‌ವ್ಯಂಗ್ಯ! ದಲಿತರು ತಮ್ಮ ಊರುಕೇರಿಗಳಲ್ಲಿ ಮಾಡುವ ಹಬ್ಬಹರಿದಿನಗಳನ್ನು ನೇರವಾಗಿ ಸರಕಾರ ವಹಿಸಿಕೊಂಡು, ಅದನ್ನು ಅವರ ಊರುಕೇರಿಯಿಂದ ಪ್ರತ್ಯೇಕಿಸಿ ಮಾಡುತ್ತದೆನ್ನಿ. ಅದಕ್ಕೆ ದಲಿತರನ್ನೂ ಕರೆಯುತ್ತದೆ ಎಂದುಕೊಳ್ಳೋಣ. ಇದು ದಲಿತರಿಗೆ ಮುಜುಗರ, ನಾಚಿಕೆ ಮತ್ತು ಅವಮಾನ ಉಂಟುಮಾಡುವ ಸಂಗತಿಯಲ್ಲವೆ? ಇಂದು ಅಂಬೇಡ್ಕರ್ ಜಯಂತಿಯ ಪರಿಸ್ಥಿತಿ ಕೂಡ ಅದೇ ಆಗಿದೆ. ಅದನ್ನು ಕೇರಿಗಳಿಂದ ಬೇರ್ಪಡಿಸಿ, ದಲಿತ ಸಂಘಟನೆಗಳಿಂದ ಬೇರ್ಪಡಿಸಿ ಮತ್ತು ದಲಿತರಿಗೆ ಬೇಕಾಗಿರುವ ವಿಚಾರಗಳಿಂದ ಬೇರ್ಪಡಿಸಿ ರಾಜಕಾರಣಿಗಳ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಒಂದು ಕಾಲದಲ್ಲಿ ಅಂಬೇಡ್ಕರ್ ಜಯಂತಿಯಂದು ದಲಿತರು ಯಾವ ಸ್ಫೂರ್ತಿ ಪಡೆಯುತ್ತಿದ್ದರೋ ಆ ಯಾವುದೇ ಸ್ಫೂರ್ತಿ ಇಂದು ದಲಿತರಿಗೆ ಸಿಗುತ್ತಿಲ್ಲ. ಶೋಷಕ ಸರಕಾರ ಅಂಬೇಡ್ಕರ್ ಜಯಂತಿಗೆ ದಲಿತರನ್ನು ಬಾಡಿಗೆ ಸಭಿಕರನ್ನಾಗಿ ಬಳಸುತ್ತಿರುವುದು ವಿಷಾದದ ವಿಚಾರ.

ಅಂಬೇಡ್ಕರ್ ಅವರು ಶೋಷಕ ಸಮಾಜದಲ್ಲಿ ಶೋಷಿತರ ಆಶಾಕಿರಣ. ಶೋಷಿತರ ಧ್ವನಿ. ಅವರ ಜೀವನವೇ ಒಂದು ಮಹಾನ್‌ಹೋರಾಟ. ಶೋಷಿತರಿಗೆ ಬೇಕಾಗಿರುವುದೇ ಹೋರಾಟದ ಪರಂಪರೆ. ೭೦ರ ದಶಕದಲ್ಲಿ ಶುರುವಾದ ದಲಿತ ಹೋರಾಟಗಳು ಅಂತಹ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದ್ದವು. ಇದರ ಸೂಕ್ಷ್ಮವನ್ನು ತಿಳಿದ ಆಳುವ ವರ್ಗ ದಲಿತರನ್ನು ಹೋರಾಟದ ಪರಂಪರೆಯಿಂದ ಬೇರ್ಪಡಿಸುವ ನೀಚಕೃತ್ಯದಲ್ಲಿ ತೊಡಗಿತು. ಕೇಂದ್ರ ಸರಕಾರ ೮೦ರ ದಶಕದಲ್ಲಿ ಹೊಸ ಆರ್ಥಿಕ ನೀತಿ, ಹೊಸ ಕೈಗಾರಿಕಾ ನೀತಿ, ಹೊಸ ಶೈಕ್ಷಣಿಕ ನೀತಿಗಳನ್ನು ಜಾರಿಗೊಳಿಸಿತು. ಆ ಮೂಲಕ ವಿದೇಶಿ ಸುಲಿಗೆಕೋರರಿಗೆ ದೇಶದೊಳಗೆ ಅಧಿಕೃತ ಹಾಸಿಗೆ ಹಾಸಿತು. ಇದರಿಂದ ಮೊದಲ ಹಂತದಲ್ಲಿ ಕೃಷಿ ವಲಯದಲ್ಲಿ ಮೊಟ್ಟಮೊದಲ ಬಾರಿಗೆ ನಿರುದ್ಯೋಗ ಅನುಭವಿಸಿದರು.

ಆಳುವ ವರ್ಗ ೯೦ರ ದಶಕದಲ್ಲಿ ಸಾಮ್ರಾಜ್ಯಶಾಹಿ ಶೋಷಣೆಯ ಕ್ರೂರ ನೀತಿಗಳನ್ನು ಜಾರಿಗೊಳಿಸಿತು. ಇಡೀ ದೇಶದ ದುಡಿವ ವರ್ಗದ ಜೀವನವನ್ನು ಅಲ್ಲೋಕಲ್ಲೋಲ ಮಾಡಿತು. ಜಾಗತೀಕರಣವೇ ಅಭಿವೃದ್ಧಿ ಎಂದಿತು. ಅಂಬೇಡ್ಕರ್ ರಿಂದ ರಚನೆಯಾಯಿತೆಂದು ಹೇಳಲಾಗುವ ಸಂವಿಧಾನವನ್ನು ಸಂಪೂರ್ಣ ಗಾಳಿಗೆ ತೂರಿತು. ಇದರ ಪರಿಣಾಮವಾಗಿ ದಲಿತರ ಹಸಿವು ಮತ್ತು ಅಪಮಾನಗಳು ತೀವ್ರಗೊಂಡವು. ದುಡಿವ ವರ್ಗದ ದಲಿತರಲ್ಲಿ ಹತಾಶೆ, ಅಸಹನೆ ಮತ್ತು ಆಕ್ರೋಶಗಳು ಮಡುಗಟ್ಟಿದವು. ಇವನ್ನು ಮೇಲುವರ್ಗದ ದಲಿತರ ಮೂಲಕ ಶತಮನಗೊಳಿಸುವ ಹುನ್ನಾರವಾಗಿ ಅದೇ ೯೦ರ ದಶಕದಲ್ಲಿ ಅಂಬೇಡ್ಕರ್ ರಿಗೆ “ಭಾರತ ರತ್ನ” ಪ್ರಶಸ್ತಿ ಘೋಷಿಸಿತು. ಕಳೆದ ೧೫ ವರ್ಷಗಳಿಂದ ಪ್ರಧಾನವಾಗಿ ಕೃಷಿ ವಲಯವನ್ನು ಒಳಗೊಂಡಂತೆ ಉಳಿದೆಲ್ಲ ಕ್ಷೇತ್ರಗಳಲ್ಲಿ ನಿರುದ್ಯೋಗ ಸೃಷ್ಟಿಯಾಗಿದ್ದು, ಇದು ಇಡಿಯಾಗಿ ಸಮಾಜವನ್ನು ಆವರಿಸಿಕೊಂಡಿದೆ. ದಲಿತರು ಕೂಲಿಗಾಗಿ, ತುತ್ತು ಅನ್ನಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇಲ್ಲವೆ ಅಸಹಾಯಕರಾಗಿ ನಲುಗಿ ಹೋಗಿದ್ದಾರೆ. ದಲಿತ ಹೋರಾಟಗಳಿಗೆ ಸರಕಾರಗಳೇ ಉಚಿತವಾಗಿ ನಿದ್ದೆ ಮಾತ್ರೆ (ಗುಳಿಗೆ)ಕೊಟ್ಟಿವೆ. ಅವೆಲ್ಲ ಈಗ ಜೊಂಪು ನಿದ್ದೆ ಮಾಡುತ್ತ ಹೊಟ್ಟೆ ತುಂಬಿದವರ ಬಗ್ಗೆ ಮತ್ತು ಹೊಟ್ಟೆ ತುಂಬಿದ ದಲಿತರ ಬಗ್ಗೆ ಚಿಂತಿಸುತ್ತಿವೆ. ಆಳುವ ವರ್ಗ ಕೊಟ್ಟಿರುವ ನಿದ್ದೆ ಮಾತ್ರ (ಗುಳಿಗೆ) ತುಂಬ ಚೆನ್ನಾಗಿ ಕೆಲಸ ಮಾಡುತ್ತಿದೆ. ಬಡವರಿಗೆ ಪಡಿತರ ಚೀಟಿಗಳನ್ನು ಸರಿಯಾಗಿ ಕೊಡದ ಸರಕಾರ ಒಂದನೇ ತರಗತಿಯಿಂದ ಇಂಗ್ಲಿಷ್‌ಕಲಿಸಲು ಹೊರಟಿದೆ. ಈಗ ಪರೀಕ್ಷೆಗಳಲ್ಲಿ ನೂರಕ್ಕೆ ೬೦ ಅಂಕಗಳನ್ನು ತೆಗೆಯದಿದ್ದರೆ ಹಾಸ್ಟೆಲ್‌ಪ್ರವೇಶ ನಿಷೇಧ ಎಂಬ ಕಾನೂನು ಹೊರಡಿಸುತ್ತಿದೆ. ವಿಶಾಲವಾಗಿರುವ ದಲಿತರನ್ನು ಶಿಕ್ಷಣದಿಂದ ನೇರವಾಗಿ ಹೊರಗಿಟ್ಟು ಅವರನ್ನು ಆಧುನಿಕ ಜೀತಕ್ಕೆ ಅನ್ಯಾಯದಿಂದ ಬಲಾತ್ಕಾರವಾಗಿ ತಳ್ಳುವ ಕ್ರೂರ ವಿಧಾನವಾಗಿದೆ. ಬಡವರ, ದಲಿತರ ಬದುಕು ದಿವಾಳಿಯೆದ್ದು ಹೋಗಿರುವಾಗ ಇದು ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸಿ ಹೊಟ್ಟೆ ತುಂಬಿದ ದಲಿತರ ಶಹಬ್ಬಾಶ್‌ಗಿರಿ ಪಡೆಯಲು ಕೆಲವು ಚಿಂತಕರು ‘ಒಂದನೇ ತರಗತಿಯಿಂದಲೇ ಇಂಗ್ಲಿಷ್‌ಕಲಿಸಿ’ ಎಂದು ಭ್ರಮಿಸಿದರು. ಆದರೆ ಕೇಂದ್ರ ಸರಕಾರ ಜಾರಿ ಮಾಡಿರುವ ‘ಜ್ಞಾನ ಆಯೋಗದ ವರದಿ’ಯಲ್ಲೇ ಒಂದನೇ ತರಗತಿಯಿಂದ ಇಂಗ್ಲಿಷ್‌ಕಲಿಸಬೇಕೆಂಬ ಅಂಶವಿದೆ. ಸರಕಾರ ಅದನ್ನೇ ಜಾರಿ ಮಾಡಿತೇ ಹೊರತು ಯಾರ ಬೇಡಿಕೆಯನ್ನೂ ಅಲ್ಲ.

ದಲಿತರಲ್ಲಿ ಹೊಟ್ಟೆ ತುಂಬಿದವರು ಮತ್ತು ಹೊಟ್ಟೆ ತುಂಬದವರು ಎಂಬ ಎರಡು ವರ್ಗಗಳು ನಿರ್ಮಾಣವಾಗಿವೆ. ಹೊಟ್ಟೆ ತುಂಬಿದ ದಲಿತರ ಮೂಲಕ ಆಳುವ ವರ್ಗಗಳು ಅಂಬೇಡ್ಕರ್ ತೋರಿಸಿದ ದಾರಿಯನ್ನು ನಯವಾಗಿ ತಿರುಚುತ್ತಿವೆ. ಹೊಟ್ಟೆ ತುಂಬಿದ ದಲಿತರೆಲ್ಲರೂ ಆಳುವ ವರ್ಗದ ಆಲೋಚನೆಗಳಿಗೆ ಮತ್ತು ಅದರ ಹಿತಾಸಕ್ತಿಗೆ ಅನುಗುಣವಾಗಿ ಅಂಬೇಡ್ಕರ್ ರನ್ನು ವಿವರಿಸುತ್ತಿದ್ದಾರೆ. ಆ ಮೂಲಕ ಅಂಬೇಡ್ಕರ್ ರನ್ನು ಕೇರಿಗಳ ಸಕಲ ಸಂಕಟಗಳಿಂದ ಬೇರ್ಪಡಿಸಿ ಶೋಷಕರ ಪರ ವಕಾಲತ್ತು ವಹಿಸುವ ಸಂಕೇತವನ್ನಾಗಿ ಮಾಡಿದ್ದಾರೆ. ಅಂಬೇಡ್ಕರ್ ರ ಆಲೋಚನೆಯ ಮತ್ತು ಹೋರಾಟದ ಕೇಂದ್ರಭಾಗ ಏನಿತ್ತೊ ಅದನ್ನು ಸಂಪೂರ್ಣ ಮುಚ್ಚಿಡಲಾಗಿದೆ. ಅಂಬೇಡ್ಕರ್ ರು ಭೂಮಿ ಮತ್ತು ಸಂಪತ್ತನ್ನು ಕುರಿತು ತಾಳಿದ್ದ ನಿಲುವನ್ನು ಯಾವ ದಲಿತ ಚಿಂತಕರೂ, ದಲಿತ ಹೋರಾಟಗಳೂ ಆಲೋಚಿಸುತ್ತಿಲ್ಲ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಮಾಡಿದ ಹೋರಾಟ ಒಂದು ಭಾಗವಾದರೆ; ಅವರು ಮಾಡಿದ ಚಿಂತನೆಗಳು ಮತ್ತೊಂದು ಭಾಗ. ಜಾತಿ, ಅಸ್ಪೃಶ್ಯತೆ, ಧರ್ಮ, ಭಾಷೆ, ಲಿಂಗ, ಸಮುದಾಯ, ಅಲ್ಪಸಂಖ್ಯಾತರು, ಆರ್ಥಿಕತೆ, ರಾಜಕೀಯ, ಸಮಾಜ, ಸಂಸ್ಕೃತಿ ಇನ್ನೂ ಮುಂತಾದ ವಿಷಯಗಳಲ್ಲಿ ಅಂಬೇಡ್ಕರ್ ಸೀಮಿತ ಮಾಡಿರುವುದು ಅವರಿಗೆ ಮಾಡಿರುವ ಅವಮಾನವೇ ಸರಿ.

ಊಳಿಗಮಾನ್ಯ ಶೋಷಣೆಯನ್ನು ಕಾಪಾಡುವುದರಲ್ಲೇ ರಾಮರಾಜಯದ ಕನಸು ಕಂಡ ಎಂ. ಕೆ. ಗಾಂಧಿ, ಕಮ್ಯುನಿಸಮ್‌ನ ವಿರುದ್ಧ ಬಂಡವಾಳಶಾಹಿ ಸಮಾಜವಾದದ ಕನಸು ಕಂಡು ನೆಹರು ಇವರ ನಡುವೆ ಅಂಬೇಡ್ಕರ್ ಈ ದೇಶದ ಅಪಮಾನಿತರ ಹಾಗೂ ಶೋಷಿತರ ವಿಮೋಚನೆಯನ್ನು ಕುರಿತು ಆಲೋಚಿಸಿದ್ದು ಒಂದು ಕ್ರಾಂತಿಕಾರಿ ಹೆಜ್ಜೆ. ಇಡೀ ದೇಶದ ಭೂಮಿ ಮತ್ತು ಸಂಪತ್ತನ್ನು ರಾಷ್ಟ್ರೀಕರಣ ಮಾಡಬೇಕು ಎಂಬುದು ಅಂಬೇಡ್ಕರರ ಮುಖ್ಯ ಗುರಿಯಾಗಿತ್ತು. ಆ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬಹುದು ಎಂಬುದು ಅವರ ನಿಲುವಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದು ಇಡೀ ದೇಶದ ಭೂಮಿ ಮತ್ತು ಸಂಪತ್ತನ್ನು ವಿದೇಶಿ ಲೂಟಿಕೋರರಿಗೆ ತೆರೆದಿಡಲಾಗಿದೆ. ಇದರಿಂದ ಆಳುವ ವರ್ಗಗಳು ಮತ್ತು ಹೊಟ್ಟೆ ತುಂಬಿದ ದಲಿತರು ಒಟ್ಟಾಗಿ ಅಂಬೇಡ್ಕರ್ ರ ಆಲೋಚನೆ ಮತ್ತು ಹೋರಾಟಗಳನ್ನು ದಾರಿ ತಪ್ಪಿಸಿದ್ದಾರೆ. ಭೂಮಾಲಿಕರು ಮತ್ತು ವಿದೇಶಿ ಲೂಟಿಕೋರರು ಒಟ್ಟಾಗಿ ತಮ್ಮ ಮೇಲೆ ನಡೆಸುತ್ತಿರುವ ಶೋಷಣೆಯ ವಿರುದ್ಧ ಹೋರಾಡಲು ನಿಜವಾದ ಶೋಷಿತ ದಲಿತರು ಅಂಬೇಡ್ಕರ್ ರನ್ನು ಹೊಸ ಸ್ಪೂರ್ತಿಯಾಗಿ ಸ್ವೀಕರಿಸಬೇಕಿದೆ. ಇಡೀ ದೇಶದ ಭೂಮಿ ಮತ್ತು ಸಂಪತ್ತನ್ನು ರಾಷ್ಟ್ರೀಕರಣ ಮಾಡಬೇಕೆಂಬ ಅಂಬೇಡ್ಕರ್ ರ ನಿಲುವನ್ನು ವರ್ತಮಾನದಲ್ಲಿ ಪರಿಷ್ಕರಿಸಿ ಅದನ್ನು ಶೋಷಿತರಿಗೆ ಮತ್ತು ದಲಿತರಿಗೆ ದಕ್ಕುವಂತೆ ಮಾಡುವ ದಾರಿಯನ್ನು ಹಿಡಿಯಬೇಕಾಗಿದೆ. ಆಳುವ ವರ್ಗದ ಪರವಾಗಿರುವ ಹೊಟ್ಟೆ ತುಂಬಿದ ದಲಿತರ ಮೂಲಕ ಇಡೀ ದಲಿತ ಸಮೂಹವನ್ನು ಶೋಷಣೆಯ ವ್ಯವಸ್ಥೆಗೆ ಹೊಂದಿಸಿಕೊಳ್ಳುವ ಕೆಲಸ ನಡೆದಿದೆ. ಇದಕ್ಕೆ ಅಂಬೇಡ್ಕರ್ ಜಯಂತಿ ಸೂಕ್ತ ವೇದಿಕೆಯಾಗಿದೆ. ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕಿದೆ. ಇದು ದಲಿತರು ನಿಜವಾಗಿಯೂ ಅಂಬೇಡ್ಕರ್ ರನ್ನು ಗೌರವಿಸುವ ರೀತಿ.

ಶೋಷಿತರು ಕಂಡುಕೊಳ್ಳಬೇಕಾದ ವಿಮೋಚನೆಯ ದಾರಿ

ಅಂಬೇಡ್ಕರ್ ಹುಟ್ಟಿದ್ದು ೧೮೯೩ನೇ ಇಸ್ವಿ, ೧೪ನೇ ತಾರೀಖು. ೨೦೦೪ನೇ ಇಸ್ವಿ, ಏಪ್ರಿಲ್ ೧೪ನೇ ತಾರೀಖಿಗೆ ಅಂಬೇಡ್ಕರ್ ಹುಟ್ಟಿ ೧೧೧ ವರ್ಷಗಳಾಗುತ್ತವೆ. ಅಂಬೇಡ್ಕರ್ ತೀರಿಕೊಂಡದ್ದು ೧೯೫೬ನೇ ಇಸ್ವಿ, ಡಿಸೆಂಬರ್ ೬ನೇ ತಾರೀಖು. ಬರುವ ಡಿಸೆಂಬರ್ ಗೆ ಅಂಬೇಡ್ಕರ್ ತೀರಿಕೊಂಡು ೪೮ ವರ್ಷಗಳಾಗುತ್ತವೆ. ಕಳೆದ ಶತಮಾನದ ಪೂರ್ವರ್ಧದಲ್ಲಿ ಅಂಬೇಡ್ಕರ್ ರು ನಡೆಸಿದ ಹೋರಾಟಗಳು, ಮಾಡಿದ ಚಿಂತನೆಗಳು ಗಂಭೀರವಾದವು. ಅವು ಭಾರತದ ರಾಜಕೀಯ-ಸಾಮಾಜಿಕ ಇತಿಹಾಸದ ಅವಿಭಾಜ್ಯ ಭಾಗಗಳು. ಅಂಬೇಡ್ಕರ್ ಬದುಕಿದ್ದ ಕಾಲದಲ್ಲಿ ಅವರಿಗೆ ಇದ್ದ ರಾಜಕೀಯ-ಸಾಮಾಜಿಕ ಮಾನ್ಯತೆಗೂ, ಅವರ ಮರಣದ ನಂತರ ಅವರ ಸುತ್ತ ಸೃಷ್ಟಿಯಾದ ಮಹತ್ವಕ್ಕೂ ಬಹಳ ವ್ಯತ್ಯಾಸವಿದೆ. ಅಂಬೇಡ್ಕರ್ ಬಗ್ಗೆ ನಾನಾ ಪ್ರತಿಕ್ರಿಯೆಗಳು, ನಿರೂಪಣೆಗಳು, ಪರಿಶೀಲನೆಗಳು, ವ್ಯಾಖ್ಯಾನಗಳು, ವಿಮರ್ಶೆಗಳು, ಮೌಲ್ಯಮಾಪನಗಳು ಬಂದಿವೆ. ಸಮಾಜದ ವಿವಿಧ ವರ್ಗದ ಸಮೂಹಗಳು ಅಂಬೇಡ್ಕರ್ ಅವರನ್ನು ವಿವಿಧ ರೀತಿಗಳಲ್ಲಿ ಪರಿಭಾವಿಸಿ ಕೆಲವು ವಿಶೇಷಣಗಳಲ್ಲಿ ಗುರುತಿಸಲಾಗಿದೆ. ಕ್ರಾಂತಿ, ಗಾಂಧಿ ವಿರೋಧಿ, ಸುಧರಣಾವಾದಿ, ಪಲಯನಾವಾದಿ, ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ದಲಿತರ ನಾಯಕ, ಎಲ್ಲಾ ಶೋಷಿತರ ನಾಯಕ, ಇಡೀ ಭಾರತದ ನಾಯಕ. . . ಇತ್ಯಾದಿ. ಹಳ್ಳಿಗಳಲ್ಲಿ, ನಗರ-ಪಟ್ಟಣ, ಮುಖ್ಯ ಊರುಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳು, ಸಾರ್ವಜನಿಕ ಸಂಘ-ಸಂಸ್ಥೆ, ಕಚೇರಿ ಕಟ್ಟಡಗಳಲ್ಲಿ ಅಂಬೇಡ್ಕರ್ ಭಾವಚಿತ್ರಗಳು ಸಾಮಾನ್ಯವಾಗಿವೆ. ಅಂಬೇಡ್ಕರ್ ಅವರ ಜನ್ಮದಿನ, ಸ್ಮರಣ ದಿನಗಳಲ್ಲಿ ಅವರ ಪ್ರತಿಮೆಗಳಿಗೆ, ಭಾವಚಿತ್ರಗಳಿಗೆ ಮಾಲಾರ್ಪಣೆ, ಅವರ ಕುರಿತು ಗುಣಗಾನ ನಿರಂತರವಾಗಿ ಮುಂದುವರಿದಿದೆ. ಒಂದು ಕಡೆ ಅಂಬೇಡ್ಕರ್ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಹೊಗಳಿ, ಗುಣಗಾನ ಮಾಡಿ, ಆ ಹೊಗಳಿಕೆಯ ಮೂಲಕ ದಲಿತರ, ಶೋಷಿತರ ಮನವೊಲಿಸುವ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ. ಮತ್ತೊಂದು ಕಡೆ ದಲಿತರು ಹಸಿವು, ಅವಮಾನ, ಹಿಂಸೆ, ಸಂಕಟಗಳಿಂದ ಬೆಂದು ಬಸವಳಿದು ಹೋಗುತ್ತಿದ್ದಾರೆ.

ಅಂಬೇಡ್ಕರ್ ಅವರ ಮರಣದ ನಂತರ ಭಾರತದ ರಾಜಕೀಯ ಇತಿಹಾಸದಲ್ಲಿ ಅವರಿಗೆ ಮಹತ್ವ ಬಂದುದು ೭೦ರ ದಶಕದ ನಂತರ. ಈ ಮಹತ್ವ ಒಂದು ಕಡೆ ಆಳುವ ಜನರಿಂದ ಬಂದರೆ ಮತ್ತೊಂದು ಕಡೆ ಶೋಷಿತ ಜನರಿಂದ ಬಂದಿದೆ. ೧೯೪೭ರ ನಂತರ ಇಂಡಿಯಾದ ಶೋಷಿತರ ಬದುಕು ಹಸನವಾಗುತ್ತದೆ, ಹಸಿವು ಇಂಗುತ್ತದೆ, ಅವಮಾನ ಅಳಿಯುತ್ತದೆ, ಎಲ್ಲರೂ ಮನುಷ್ಯರಾಗಿ ಬಾಳುವ ಬದುಕು ಬರುತ್ತದೆ ಎಂದು ನಂಬಲಾಗಿತ್ತು. ಆದರೆ ಆದದ್ದೇ ಬೇರೆ. ಈ ನೆಲದಲ್ಲಿ ಹಸಿವು ಅವಮಾನಗಳು ಅಳಿಯಲಿಲ್ಲ. ದಲಿತರ ಶೋಷಿತರ ಬದುಕು ಬದಲಾಗಲಿಲ್ಲ. ಎಲ್ಲರೂ ಸಮಾನರಾಗಿ, ಮನುಷ್ಯರಾಗಿ ಬಾಳುವ ಬದುಕು ಬರಲಿಲ್ಲ. ಯಾಕೆ ಇದು ಸಾಧ್ಯವಾಗಲಿಲ್ಲ. ಇದನ್ನು ಸಾಧ್ಯ ಮಾಡುವುದು ಹೇಗೆ ಎಂಬುದೇ ಇಂದು ನಮ್ಮ ಮುಂದಿರುವ ಪ್ರಶ್ನೆ ಮತ್ತು ಅಂದು ಅಂಬೇಡ್ಕರ್ ಅವರ ಮುಂದಿದ್ದ ಪ್ರಶ್ನೆ.

ಇಂಡಿಯಾವು ವರ್ಗ ರಾಜಕೀಯ ಮತ್ತು ಸಾಮಾಜಿಕ ಅಸಮಾನತೆಗಳಿಂದ ಕೂಡಿದೆ. ಯಾವುದೇ ರಾಜಕೀಯ ಚಿಂತನೆ ಇಲ್ಲವೆ ರಾಜಕೀಯ ಹೋರಾಟ ಮೂಲಭೂತವಾಗಿ ಈ ಎರಡನ್ನೇ ಗುರಿಯನ್ನಾಗಿ ಇಟ್ಟುಕೊಳ್ಳುವುದು ಅನಿವಾರ್ಯ. ಇದುವರೆಗಿನ ಎಲ್ಲಾ ರಾಜಕೀಯ ಸಾಮಾಜಿಕ ಹೋರಾಟಗಳು ಮುಖ್ಯವಾಗಿ ಈ ಎರಡು ನೆಲೆಗಳಲ್ಲೇ ನಡೆದಿವೆ. ಅಂಬೇಡ್ಕರ್ ಮಾಡಿದ ಹೋರಾಟ ವರ್ಗ ಹೋರಾಟವೋ, ಸಾಮಾಜಿಕ ಹೋರಾಟವೋ ಎಂಬ ಪ್ರಶ್ನೆಯನ್ನು ಅನೇಕರು ಈಗಾಗಲೇ ಕೇಳಿದ್ದಾರೆ ಮತ್ತು ಅದಕ್ಕೆ ಉತ್ತರಿಸಿದ್ದಾರೆ. ಅಂತವರ ಪ್ರಕಾರ ಅಂಬೇಡ್ಕರ್ ರ ಹೋರಾಟ ಸಾಮಾಜಿಕ-ಧಾರ್ಮಿಕ ಹೋರಾಟ ಎಂಬುದಾಗಿದೆ.

ಅಂಬೇಡ್ಕರರರ ರಾಜಕೀಯ ಹಿತಾಸಕ್ತಿ ಯಾರ ಪರವಾಗಿತ್ತು. ಯಾರ ವಿರುದ್ಧ ಇತ್ತು ಎಂಬುದನ್ನು ಖಚಿತಮಾಡಿಕೊಳ್ಳಬೇಕು. ಆಗ ಅವರ ಹೋರಾಟದ ರಾಜಕೀಯ ನೆಲೆ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ರರು ಈ ನೆಲದ ಎಲ್ಲಾ ಶೋಷಿತರ ಬಗ್ಗೆ, ಅವರ ಐತಿಹಾಸಿಕ ಮತ್ತು ಸಮಕಾಲೀನ ವಸ್ತುನಿಷ್ಠ ಪರಿಸ್ಥಿತಿಯ ಬಗ್ಗೆ ಚಿಂತಿಸಿದರು, ಅಧ್ಯಯನ ಮಾಡಿದರು, ಬರೆದರು ಹಾಗೂ ಹೋರಾಟ ಮಾಡಿದರು. ಇನ್ನು ಯಾರ ವಿರುದ್ಧ ಎಂಬುದನ್ನು ಅಂಬೇಡ್ಕರ್ ರ ಸಂದರ್ಭದಲ್ಲಿ ಸರಳವಾಗಿ ಹೇಳುವುದು ಕಷ್ಟ. ಈಗಾಗಲೇ ಗುರುತಿಸಿರುವುದು ಮೇಲ್ಜಾತಿ, ಬ್ರಾಹ್ಮಣ, ಪುರೋಹಿತಶಾಹಿ, ಹಿಂದೂಧರ್ಮದ ವಿರುದ್ಧ ಅವರು ಇದ್ದರು ಎಂದು. ಇದರಲ್ಲಿ ಅರ್ಧ ಸತ್ಯವಿದೆ; ಅರ್ಧ ಸುಳ್ಳಿದೆ. ಯಾಕೆಂದರೆ ಅವರು ಕೇವಲ ಮೇಲ್ಜಾತಿಗಳ ವಿರುದ್ಧ ಮಾತ್ರವಿರಲಿಲ್ಲ. ಆ ಮೇಲ್ಜಾತಿಗಳನ್ನು ಸಾಮಾಜಿಕವಾಗಿ ಪೋಷಿಸುತ್ತಿದ್ದ ಊಳಿಗಮಾನ್ಯಶಾಹಿ ವಿರುದ್ಧ ಇದ್ದರು. ಊಲಿಗಮಾನ್ಯಶಾಹಿಯ ಸಾಮಾಜಿಕ ಸಂಬಂಧಗಳನ್ನು, ಮೌಲ್ಯಗಳನ್ನು, ನಂಬಿಕೆಗಳನ್ನು, ಆಚರಣೆಗಳನ್ನು ಅವರು ಅತ್ಯಂತ ಬಲವಾಗಿ ಮತ್ತು ಅಷ್ಟೇ ನಿರ್ದಾಕ್ಷಿಣ್ಯವಾಗಿ ವಿರೋಧಿಸಿದರು. ಈ ವಿರೋಧಕ್ಕೆ ಕೇವಲ ಬ್ರಾಹ್ಮಣರು ಮಾತ್ರ ಸೇರುವುದಿಲ್ಲ. ಇದರಲ್ಲಿ ಜಮೀನುದಾರರೂ ಸೇರುತ್ತಾರೆ. ಇದಕ್ಕೂ ಮುಖ್ಯವಾಗಿ ಜಮೀನ್ದಾರಿಕೆಯ ಸಾಮಾಜಿಕ ಸಂಬಂಧಗಳು, ನಂಬಿಕೆಗಳು ಸೇರುತ್ತವೆ. ಈ ಎಲ್ಲವನ್ನೂ ಅಂಬೇಡ್ಕರ್ ಅವರು ನಿರ್ದಾಕ್ಷಿಣ್ಯವಾಗಿ ಖಂಡಿಸಿದರು ಮತ್ತು ವಿರೋಧಿಸಿದರು. ಈ ವಿರೋಧ ಅಂಬೇಡ್ಕರ್ ರಿಗೆ ಎರಡು ಕಡೆಯಿಂದ ಬಂದಿದೆ. ಮೊದಲನೆಯದು ಇಂಡಿಯಾದ ಗ್ರಾಮಗಳ ಜಾತಿ-ಅಸ್ಪೃಶ್ಯತೆ-ಅಂಧಾನುಕರಣೆ ಮುಂತಾದವು. ಇವು ದಲಿತರ ಏಳಿಗೆಗೆ ಅಡ್ಡಿಯಾಗಿವೆ ಎಂದು ಅಂಬೇಡ್ಕರರು ತಿಳಿದಿದ್ದರು. ಇವು ಯಾಕೆ ಸೃಷ್ಟಿಯಾದವು ಎಂಬುದಕ್ಕೆ ಅವರು ರಾಮಾಯಣ, ಮಹಾಭಾರತ, ಮನಧರ್ಮಶಾಸ್ತ್ರ ಮುಂತಾದವು ಕಾರಣವೆಂದು ತಿಳಿದು ಅವುಗಳ ಮೇಲೆ ಕಟುಟೀಕೆ ಮಾಡಿದರು ಮತ್ತು ಮನುಧರ್ಮಶಾಸ್ತ್ರವ್ನನು ಸುಟ್ಟರು.

ಅಂಬೇಡ್ಕರ್ ಬದುಕಿದ್ದ ಕಾಲದಲ್ಲಿ ಇಂಡಿಯಾದಲ್ಲಿ ಕೈಗಾರಿಕಾ ಬಂಡವಾಳಶಾಹಿ ಬೆಳೆಯುತ್ತಿತ್ತು. ಅದು ಇಲ್ಲಿನ ಊಳಿಗಮಾನ್ಯಶಾಹಿಯ ಸಾಮಾಜಿಕ ಸಂಬಂಧಗಳಾದ ಜಾತಿ, ಅಸ್ಪೃಶ್ಯತೆ, ಧಾರ್ಮಿಕ ಅಂಧಾನುಕರಣೆ, ಮೂಢನಂಬಿಕೆ ಮುಂತಾದವುಗಳನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿತು. ಇದು ನಿರ್ಣಾಯಕವಾಗಿ ಕೈಗಾರಿಕಾ ಬಂಡವಾಳಶಾಹಿಯ ಬೆಳವಣಿಗೆಯಾಗಿತ್ತು. ಆದರೆ ಅಂಬೇಡ್ಕರರು ಈ ಬೆಳವಣಿಗೆಯಲ್ಲೇ ದಲಿತರ ವಿಮೋಚನೆ ಸಾಧ್ಯವೆಂದು ನಂಬಿದರು. ಅದರಿಂದ ಬೃಹತ್‌ಕೈಗಾರಿಕೆಗಳು ಭಾರತೀಯ ಸಮಾಜದ ಹಳೆಯ ನಂಬಿಕೆಗಳನ್ನು, ಹಳೆಯ ಸಾಮಾಜಿಕ ಸಂಬಂಧಗಳನ್ನು ನಾಶಪಡಿಸುತ್ತದೆ ಎಂದು ಅವರು ಭಾವಿಸಿದ್ದರು. ಅಂದರೆ ಕೈಗಾರಿಕಾ ಬಂಡವಾಳಶಾಹಿಯಿಂದ ದಲಿತರ ಬಿಡುಗಡೆ ಸಾಧ್ಯವೆಂದು ಅವರು ಪರೋಕ್ಷವಾಗಿ ಭಾವಿಸಿದ್ದರು. ಕೈಗಾರಿಕಾ ಬಂಡವಾಳಶಾಹಿಯನ್ನು ಇಂಡಿಯಾದ ಊಳಿಗಮಾನ್ಯಶಾಹಿಗೆ ಸಮರ್ಥ ಪರ್ಯಾಯವೆಂದು ನಂಬಿದ್ದರು. ಆದರೆ ಇಂಡಿಯಾದಲ್ಲಿ ಇದು ಆಗಲಿಲ್ಲ. ಕೈಗಾರಿಕಾ ಬಂಡವಾಳಶಾಹಿಯು ಊಳಿಗಮಾನ್ಯಶಾಹಿಯೊಂದಿಗೆ ರಾಜಿ ಮಾಡಿಕೊಂಡಿತು. ಪರಿಣಾಮವಾಗಿ ಈ ಎರಡೂ ಕೂಡಿ ದಲಿತರನ್ನು ಹೊಸ ಬಗೆಯಲ್ಲಿ ಶೋಷಣೆ ಮಾಡತೊಡಗಿದವು.

ಕೈಗಾರಿಕಾ ಬಂಡವಾಳಶಾಹಿಯ ಜೊತೆಯಲ್ಲೆ ಅದರ ಕೂಸಾದ ಬಂಡವಾಳಶಾಹಿ ವಿಚಾರವಾದ ಕೂಡ ಔಪಚಾರಿಕ ಶಿಕ್ಷಣದ ಮೂಲಕ ಬಂತು. ಅದು ಇಂಡಿಯಾದ ದೇವರು, ಧರ್ಮ, ಧರ್ಮಗ್ರಂಥ ಇತ್ಯಾದಿ ಹಳೆಯ ಸಾಮಾಜಿಕ ವಿಷಯಗಳನ್ನು ವಿರೋಧಿಸಿತು. ಅದರ ಜಾಗದಲ್ಲಿ ತನ್ನ ವೈಚಾರಿಕತೆಯನ್ನು ಸ್ಥಾಪಿಸುವುದು ಅದರ ಉದ್ದೇಶವಾಗಿತ್ತು. ಆದರೆ ಇದು ಅಂಬೇಡ್ಕರ್ ರಿಗೆ ದಲಿತರ ಸಾಮಾಜಿಕ ಬಿಡುಗಡೆಯ ದಾರಿಯಾಗಿ ಕಂಡಿತು. ಅದರಿಂದಲೇ ಅವರು ಭಾರತೀಯ ಶಿಷ್ಟಧರ್ಮ, ಧರ್ಮಗ್ರಂಥ ಮುಂತಾದವುಗಳನ್ನು ಕಟುವಾಗಿ ವಿರೋಧಿಸಿದರು.

ಅಂಬೇಡ್ಕರ್ ರನ್ನು ವಿವರಿಸುತ್ತಿರುವ, ವರ್ಣಿಸುತ್ತಿರುವ ಮತ್ತು ಬೆಲೆಕಟ್ಟುತ್ತಿರುವ ವಿಧಾನ ಯಾವುದು ಎಂಬುದನ್ನು ಗಮನಿಸಬೇಕು. ಇದನ್ನು ಸರಿಯಾಗಿ ತಿಳಿಯಬೇಕಾದರೆ, ಅಂಬೇಡ್ಕರ್ ರನ್ನು ಯಾವ ವರ್ಗ ಚರ್ಚಿಸುತ್ತದೆ ಎಂಬುದನ್ನು ಸ್ಪಷ್ಟಮಾಡಿಕೊಳ್ಳಬೇಕು. ಮುಖ್ಯವಾಗಿ ಮೂರು ವರ್ಗದವರು ಅಂಬೇಡ್ಕರರನ್ನು ಕುರಿತು ಚರ್ಚಿಸುತ್ತಾರೆ. ೧. ಆಳುವ ವರ್ಗದ ರಾಜಕಾರಣಿಗಳು. ೨. ಬುದ್ಧಿಜೀವಿಗಳು ಮತ್ತು ೩. ದಲಿತರು. ರಾಜಕಾರಣಿಗಳು ದಲಿತರಿಗೆ ನೀತಿ ಬೋಧನೆ ಮಾಡಲು, ಉಪದೇಶ ಮಾಡಲು ಮತ್ತು ದಲಿತರು ಆತ್ಮವಿಮರ್ಶೆ ಮಾಡಿಕೊಳ್ಳಲು ತಾವೇ ಹೇಳಬೇಕಾದ ವಿಚಾರದ ಜಾಗದಲ್ಲಿ ಅಂಬೇಡ್ಕರ್ ರನ್ನು ಸೇರಿಸುತ್ತಾರೆ. ಅಂಬೇಡ್ಕರರಿಗಿದ್ದ ಕಷ್ಟಕೋಟಲೆಗಳನ್ನು ಬಾಯಿ ತುಂಬಾ ಹೊಗಳುತ್ತಾರೆ. ಇದರಿಂದ ಅಂಬೇಡ್ಕರ್ ರರ ಬಗ್ಗೆ ಮತ್ತು ದಲಿತರ ಬಗ್ಗೆ ತಮಗೆ ಎಂತಹ ಒಲವು ಇದೆ ಎಂಬುದನ್ನು ಒಟ್ಟಿಗೆ ಸಾಬೀತುಮಾಡುವ ಕುಟಿಲ ಪ್ರಯತ್ನ ಇದು. ಈ ಕುಟಿಲ ಪ್ರಯತ್ನದಲ್ಲಿ ಅನೇಕ ದಲಿತ ರಾಜಕಾರಣಿಗಳೂ, ಕೆಲವು ದಲಿತ ನಾಯಕರೂ ತೊಡಗಿದ್ದಾರೆ. ಅನೇಕ ದಲಿತರು ಅಂಬೇಡ್ಕರ್ ರನ್ನು ಸ್ವಾಭಿಮಾನದ ಸಂಕೇತವಾಗಿ, ಸಾಮಾಜಿಕ-ರಾಜಕೀಯ ಬಿಡುಗಡೆಯ ಶಕ್ತಿಯಾಗಿ ಪರಿಗಣಿಸಿದ್ದಾರೆ. ಆದರೆ ೭೦ರ ದಶಕದಲ್ಲಿ ಭಾವನಾತ್ಮಕ ಸಂಬಂಧ ಇತ್ತೀಚೆಗೆ ಕಡಿಮೆಯಾಗಿದೆ. ದಲಿತರ ಒಳಗೆ ಹೊಲೆಯ-ಮಾದಿಗ ಎಂಬ ಬಿರುಕುಗಳನ್ನು ಸೃಷ್ಟಿಸಲಾಗಿದ್ದು ದಲಿತರು ಈ ಅಸ್ತ್ರಗಳನ್ನು ತಮ್ಮ ಬಿಡುಗಡೆಗೆ ಎಂಬಂತೆ ಬಳಸುತ್ತಿದ್ದಾರೆ. ಇದರ ಒಂದು ಪರಿಣಾಮವು ಅಂಬೇಡ್ಕರ್ ರರ ಜಾಗದಲ್ಲಿ ಜಗಜೀವನ್‌ರಾಮ್ ಅವರ ಕಡೆಗೆ ಗಮನ ಸೆಳೆದಿದೆ. ಇದರಿಂದ ಒಂದು ಕಡೆ ಮಾದರಿಗರಿಗೆ ಹೊಲೆಯರು ತಮ್ಮ ಶತ್ರುಗಳು ಎಂಬ ಭಾವನೆ ಮೂಡುವಂತಾಗಿದೆ. ಇದು ನಿಚ್ಚಳವಾಗಿ ಆಳುವ ವರ್ಗದ ಕುತಂತ್ರ ಈಗಾಗಲೇ ಬ್ರಾಹ್ಮಣೇತರ ಜಮೀನ್ದಾರಿ ವರ್ಗದ ಬುದ್ಧಿಜೀವಿಗಳು ದಲಿತರನ್ನು ಬ್ರಾಹ್ಮಣರ ಮೇಲೆ ಎತ್ತಿಕಟ್ಟಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ದಲಿತ ಜೀವಗಳು ಜಮೀನದಾರರ ನಿತ್ಯ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಆದರೆ ದಲಿತ ಬುದ್ಧಿಜೀವಿಗಳು ಮಾತ್ರ ಭೂಮಾಲಿಕ ಬುದ್ಧಿಜೀವಿಗಳು ಹೇಳಿಕೊಟ್ಟಿರುವ ಬ್ರಾಹ್ಮಣ ವಿರೋಧವನ್ನು ಕಂಠಪಾಠ ಮಾಡಿಕೊಂಡು ನಿತ್ಯ ಪಠಿಸುತ್ತಿದ್ದಾರೆ. ಈ ಮೂಲಕ ಭೂಮಾಲೀಕ ಬುದ್ಧಿಜೀವಿಗಳಿಂದ ಉಚಿತ ಸಹಭಾಶ್‌ಗಿರಿ ಪಡೆಯುತ್ತಿದ್ದಾರೆ. ಇದು ಹೊಸ ತಲೆಮಾರಿನ ಯುವದಲಿತರನ್ನು ದಾರಿ ತಪ್ಪಿಸುತ್ತಿದೆ. ಅದರಿಂದ ಒಬ್ಬ ದಲಿತ (ಬುದ್ಧಿಜೀವಿ) ಬ್ರಾಹ್ಮಣರ ವಿರುದ್ಧ ಮಾತನಾಡಿದರೆ ಅದು ಭೂಮಾಲೀಕರ ಸಂರಕ್ಷಣೆಯ ಅಸ್ತ್ರವಾಗಿರುತ್ತದೆ. ಅಂತಹ ವಿಚಾರದ ಬಗ್ಗೆ ಎಚ್ಚರದಿಂದ ಇರಬೇಕು. ಇನ್ನು ಅಕಾಡೆಮಿಕ್ ಬುದ್ಧಿಜೀವಿಗಳು ಅಂಬೇಡ್ಕರ್ ರರ ಬಗ್ಗೆ ಆಳವಾದ, ವಿಶೇಷ ಅಧ್ಯಯನ, ಸಾಮಾಜಿಕ ಅಧ್ಯಯನ, ಸಾಂಸ್ಕೃತಿಕ ಅಧ್ಯಯನ, ಲಿಂಗ ಸಂಬಂಧಿ ಅಧ್ಯಯನ ಇತ್ಯದಿ ತಳಬುಡವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಅಂಬೇಡ್ಕರ್ ರ ಬಗ್ಗೆ ಕೃತಕ ಆಸಕ್ತಿ ತೋರಿಸುತ್ತ ಮುತ್ತಿನಂತಹ ಮಾತುಗಳನ್ನು ಆಡುತ್ತಿದ್ದಾರೆ. ಆದರೆಆಚರಣೆಯಲ್ಲಿ ಮಾತ್ರ ಪಕ್ಕಾ ದಲಿತ ವಿರೋಧಿಗಳಾಗಿದ್ದಾರೆ. ದಲಿತರ ಮೇಲೆ ಅತ್ಯಾಚಾರ ಮಾನಭಂಗ ನಡೆದಾಗ, ದಲಿತರ ಮನೆಗಳನ್ನು ಸುಟ್ಠಗ, ದಲಿತರ ಕೊಲೆಯಾದಾಗ ದಿನ್ಯ ಮೌನ ವಹಿಸುತ್ತಾರೆ. ಏಕೆಂರೆ ಇಂತಹ ಕುಕೃತ್ಯಗಳಿಗೆ ಇಂತವರೂ ಪರೋಕ್ಷ ಇಲ್ಲವೆ ಮೂಲಭೂತ ಕಾರಣರಾಗಿರುತ್ತರೆ. ಇಂತಹ ತಮ್ಮ ಕ್ರೂರತನವನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿಇವರು ಮೇಲ್ನೋಟಕ್ಕೆ ಅಂಬೇಡ್ಕರ್ ರ ಪರವಾಗಿ, ದಲಿತರ ಪರವಾಗಿ ಪುಂಖಾನುಪುಂಖವಾಗಿ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ. ಇತ್ತೀಚೆಗೆ ಇಂತಹವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇಂತಹವರು ರಾಷ್ಟ್ರೀಯ-ಅಂತರಾಷ್ಟ್ರೀಯ ಬುದ್ದಿಜೀವಿಗಳ ಆಕರ್ಷಕ ಬ್ರ್ಯಾಂಡುಗಳಲ್ಲಿ ಸಿಗುತ್ತಾರೆ. ಮೇಲೆಲ್ಲ ಸಮಾನತೆಯ, ಜಾತ್ಯಾತೀತತೆಯ, ಸಾಮಾಜಿಕ ನ್ಯಾಯದ ಮಾತನಾಡುತ್ತಾರೆ. ಇಂತಹವರು ತಮ್ಮ ಅಸ್ತತ್ವಕ್ಕೆ, ಐಡೆಂಟಿಟಿಗೆ. ವಿಚಾರ ಮಂಡನೆಗೆ, ಅಧ್ಯಯನ ಸಂಶೋಧನೆಗೆ, ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಅಧ್ಯಯನ ಮಡುವುದಕ್ಕೆ, ಈ ಎಲ್ಲದರ ಮೂಲಕ ಭಾರಿ ಹಣ ಮಾಡುವುದಕ್ಕೆ, ಪ್ರಶಸ್ತಿ ಗಳಿಸುವುದಕ್ಕೆ ಅಂಬೇಡ್ಕರ್ ರರನ್ನು ಜೊತೆಗೆ ದಲಿತರನ್ನು ಏಕಕಾಲದಲ್ಲಿ ಯಶಸ್ವಿಯಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ನೆಲದ ಒಬ್ಬ ಸಾಮಾನ್ಯ ದಲಿತನಿಗೆ ಅಂಬೇಡ್ಕರ್ ಅವಾಜ್ ಯೋಜನೆಯಲ್ಲಿ ಒಂದು ಗುಡಿಸಲು ಕೂಡ ಸಿಕ್ಕಿಲ್ಲ. ಆದರೆ ಈ ಬುದ್ದಿಜೀವಿಗಳು ಅಂಬೇಡ್ಕರ್ ರರು ಮತ್ತು ದಲಿತರ ಹೆಸರೇಳಿಕೊಂಡು ಹಣ, ಆಸ್ತಿ ಗಳಿಸುತ್ತಿದ್ದಾರೆ. ಇಂತಹವರಿಗೆ ಅಂಬೇಡ್ಕರ್ ರರು ಇಂದು ಕೇವಲ ಸರಕಾಗಿದ್ದಾರೆ.

ಇನ್ನು ಎನ್. ಜಿ. ಓ. ಗಳ ನೆಟ್ವರ್ಕ್ ಬೇರೆ ಇದೆ. ಒಂದು ಕಡೆ ಅವರು ದಲಿತರೊಳಗೇ ಹೊಲೆ-ಮಾದಿಗ ಬಿಕ್ಕಟ್ಟನ್ನು ತಂದಿಟ್ಟಿದ್ದಾರೆ. ಅಂಬೇಡ್ಕರ್ ರರು ದಲಿತರಿಗೆ ಪರ್ಯಾಯವಲ್ಲ ಜಗಜೀವನ್‌ರಾಮ ಪರ್ಯಾಯ ಎಂಬಂತೆ ಬಿಂಬಿಸುತ್ತಿದ್ದಾರೆ. ಮತ್ತೊಂದು ಕಡೆ ಅಂಬೇಡ್ಕರ್ ರರನ್ನು ದಲಿತರು ವೈಭವೀಕರಿಸುವಂತೆ ಪ್ರಚೋದಿಸುತ್ತಾ, ದಲಿತರು ಮಾರ್ಕ್ಸ್ವಾದವನ್ನು ವಿರೋಧಿಸುವಂತೆ ಕುತಂತ್ರ ಹೂಡಿದ್ದಾರೆ. ಅದರಿಂದ ದಲಿತ ಬುದ್ದಿ ಜೀವಿಗಳು ದಲಿತ ಸಮೂಹ ಮಾರ್ಕ್ಸ್ವಾದದ ಕಡೆಗಡ ಮುಖ ಮಾಡದಂತಹ ನಿಲುವನ್ನು ಮಂಡಿಸುತ್ತಿದ್ದಾರೆ. ಅಂಬೇಡ್ಕರ್ ರನ್ನು ನಾನಾ ಆಯಾಮಗಳಲ್ಲಿ ಅವಿಮರ್ಶಾತ್ಮಕವಾಗಿ ವೈಭವೀಕರಿಸುವ ಕೆಲಸ ನಿರಂತರವಾಗಿ ಮುಂದುವರಿದಿದೆ.

ಸಮಾಜದ ಪ್ರತಿಯೊಂದು ವರ್ಗವೂ ತನ್ನ ಹಿತಾಸಕ್ತಿಗೆ ಅಂಬೇಡ್ಕರ್ ರನ್ನು ನಿರೂಪಿಸುತ್ತಿದೆ, ವರ್ಣಿಸುತ್ತಿದೆ. ಕಳೆದ ೫೦ ವರುಷಗಳ ಅವಧಿಯಲ್ಲಿ ಅಂಬೇಡ್ಕರ್ ರರನ್ನು ವೈಭವೀಕರಿಸುವ ಮತ್ತು ಅಪವ್ಯಾಖ್ಯಾನಿಸುವ ಕೆಲಸ ನಿರಂತರವಾಗಿ ನಡೆಯುತ್ತಾ ಬಂದಿದೆ. ಸಾಮ್ರಾಜ್ಯಶಾಹಿಯ ಜಾಗತೀಕರಣದ ಹಗಲು ದರೋಡೆಯಲ್ಲಿ ದಲಿತರು ಮತ್ತು ದುಡಿಯುವ ವರ್ಗಗಳು ಏಕಕಾಲಕ್ಕೆ ಜೀವನ್ಮರಣದ ಕ್ರೂರ ಸ್ಥಿತಿಗೆ ತಲಿಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಲಿತರಿಗೆ ತಮ್ಮ ಮೂಲಭೂತ ಸಮಸ್ಯೆಗಳಾದ ಹಸಿವು ಮತ್ತು ಅಪಮಾನಗಳ ವಿರುದ್ಧ ಹೋರಾಡಲು ಸಮರ್ಥವಾದ ಸೈದ್ಧಾಂತಿಕ ಪಥಬೇಕಾಗಿದೆ. ಅದಕ್ಕೆ ಅಂಬೇಡ್ಕರರ ವಿಚಾರಗಳಿಂದ ಮತ್ತು ಅವರು ಮಾಡಿರುವ ಹೋರಾಟಗಳಿಂದ ಸ್ಪೂರ್ತಿ ದೊರೆಯುತ್ತದೆ. ಅಲ್ಲಿ ನಿಂತು ದುಡಿಯುವ ವರ್ಗವನ್ನು ರಾಜಕೀಯವಾಗಿ ನಿರೂಪಿಸಿ ಅದರ ವಿಮೋಚನೆಗೆ ಸರಿಯಾದ ದಾರಿಯನ್ನು ಕಂಡುಕೊಳ್ಳಬೇಕಾದ ಜವಾಬ್ದಾರಿ ದಲಿತರ ಮತ್ತು ಎಲ್ಲಾ ದುಡಿಯುವ ವರ್ಗಗಳ ಮುಂದಿದೆ.

ಪರಾಮರ್ಶನ ಗ್ರಂಥಗಳು

೧. ಮುಖಾ-ಮುಖಿ ಸಮಾಜ ಸಂಸ್ಕೃತಿ ಚಳುವಳಿ, ಡಾ. ಬಿ. ಎಂ. ಪುಟ್ಟಯ್ಯ, ಸಿದ್ಧಾರ್ಥ ಪ್ರಕಾಶನ ಎಂ. ಪಿ. ಪ್ರಕಾಶ ನಗರ, ಹೊಸಪೇಟೆ, ೨೦೦೮

೨. ದಲಿತರು ಮತ್ತು ಭೂಮಿಯ ಪ್ರಶ್ನೆ, ಡಾ. ಬಿ. ಎಂ. ಪುಟ್ಟಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ,೨೦೦೯.

೩. ಕದಡು: ಡಾ. ಬಿ. ಎಂ. ಪುಟ್ಟಯ್ಯ, ಸಿದ್ದಾರ್ಥ ಪ್ರಕಾಶನ, ಎಂ. ಪಿ. ಪ್ರಕಾಶ ನಗರ ಹೊಸಪೇಟೆ, ೨೦೦೯.

—-
* ಮುಖಾಮುಖಿ: ಸಮಾಜ ಸಂಸ್ಕೃತಿ ಚಳವಳಿ, ಡಾ. ಬಿ. ಎಂ. ಪುಟ್ಟಯ್ಯ, ಸಿದ್ಧಾರ್ಥ ಪ್ರಕಾಶನ, ಎಂ. ಪಿ. ಪ್ರಕಾಶ ನಗರ, ಹೊಸಪೇಟೆ, ೨೦೦೮. ಕೃತಿಯಿಂದ ಆಯ್ದ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ವಂದನೆಗಳು (ಸಂ).