ಕೆಲವು ದಿನಗಳ ಹಿಂದೆ ಯುವಕನೊಬ್ಬ ತನ್ನ ನಿಲ್ಲಿಸಿ ಏನ್ರಿ ನೀವು ಸಹ ಜಾತಿವಾದಿಯಾಗಿ ಬಿಟ್ರಿ ಎಂದು ಕೋಪದಿಂದ ಪ್ರಶ್ನಿಸಿದ. ನಾನು ಕೆಲವು ಕ್ಷಣ ತಡೆದು, ಸಾವಧಾನವಾಗಿ ವಿಚಾರಿಸಿದಾಗ ಆತ ಹೇಳಿದಿಷ್ಟು. ನಾನು ಕೆಳಜಾತಿ-ವರ್ಗ ಸಂಘಟನೆಗಳಿಗೆ ಬೆಂಬಲ ನೀಡಿ ಕನ್ನಡ ಭಾಷಾ ಚಳವಳಿಗೆ ಬಂಬಲ ನೀಡುತ್ತಿಲ್ಲ ಎಂಬುದೇ ಆತನ ಆಕ್ಷೇಪಣೆಯಾಗಿತ್ತು. ಇಂಥ ಹೇಳಿಕೆಗಳ ಗ್ರಹೀತವೆಂದರೆ, ಯಾರು? ಅವರೇಕೆ ಶೋಷಿತರಾಗುತ್ತಿದ್ದಾರೆಂದು ಪ್ರಶ್ನೆಗಳನ್ನು ಕೇಳಿದಲ್ಲಿ, ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಪ್ರಶ್ನೆ ಕೇಳಿದ ವ್ಯಕ್ತಿಯ ಮೇಲೆ ಜಾತಿ-ಗೂಬೆಯನ್ನು ಕೂರಿಸಿ ಬಿಡುವುದು. ಹೀಗೆ ನಮ್ಮ ಈ ದೇಶದಲ್ಲಿ ಹುಟ್ಟು, ಸಾವೂ. . . . ಊಟ ಪದ್ಧತಿಯಿಂದ ದಿನನಿತ್ಯದ ಕ್ರಿಯೆಗಳನ್ನೊಳಗೊಂಡು ವಿವಾಹ ಪದ್ಧತಿಯವರೆಗೆ ಹಬ್ಬಿದ ಈ ಜಾತಿಪದ್ಧತಿ ಮನುಷ್ಯನನ್ನು ನುಂಗಿ ಜೀರ್ಣಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇಂದಿನ ಜಾಗತೀಕರಣ ಉಚ್ಛ ಜಾತಿಗಳಿಗೆ ವರದಾನವಾಗಿ ಬಿಟ್ಟಿದೆ. ಕೆಳಜಾತಿ-ವರ್ಗಗಳಲ್ಲಿ ಎಂದೂ ಇಲ್ಲದ ಕೀಳರಿಮೆಯನ್ನು ತುಂಬಿ ಶಿಕ್ಷಿತರನ್ನು ಬಿಡದೆ ಕಾಡಿದೆ ಈ ಜಾತಿ ಪದ್ಧತಿ. ಹಾಗಾಗಿ ಸಾಮಾಜಿಕ ನ್ಯಾಯ-ಸಮಾನತೆಯನ್ನು “ಮೀಸಲಾತಿ” ಒದಗಿಸಬಹುದೆಂದು ಯೋಚಿಸಿದವರಿಗೆ, ಜಾಗತೀಕರಣದ ಆರ್ಥಿಕ ವ್ಯವಸ್ಥೆ ಜಾತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದೇ ಹೇಳಬೇಕು. ಜಾತಿಯನ್ನು ವಿರೋಧಿಸುವವರೂ ಸಹ ಒಂದು ಜಾತಿಗೆ ಜೋತು ಬೀಳುತ್ತಾರೆ. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಲೋಹಿಯವರವರು ಹೀಗೆಂದಿದ್ದಾರೆ.

ಜಾತಿಯೆನ್ನುವುದು ಬದಲಾಯಿಸಕ್ಕಾಗದ ಚೌಕಟ್ಟು, ಅದರೊಳಗೆ ಬದುಕಬೇಕೆಂದರೆ ಭಾರಿ ಚಾತುರ್ಯ, ಆಲೋಚನೆ ಹಾಗೂ ದ್ವಿಪಾತ್ರ, ತ್ರಿಪಾತ್ರ ಹೀಗೆ ಹಲವಾರು ಭೂಮಿಕೆಯಲ್ಲಿ ನಟನೆ ಅವಶ್ಯವಾಗುತ್ತದೆ.

ಅಂದರೆ ಮೋಸ ಮಾಡಿ ಬದುಕಬೇಕೆಂಬ ಅರ್ಥವಲ್ಲ. ಲೋಹಿಯವರೇ ಮತ್ತೊಂದೆಡೆಯಲ್ಲಿ

ಜಾತಿ ಪದ್ಧತಿ ಬದಲಾವಣೆಯನ್ನು ವಿರೋಧಿಸುವುದರ ಜೊತೆಗೆ ಸ್ಥಿರತೆಯ ಭಯಂಕರ ಶಕ್ತಿಯಾಗಿದೆ. ಅದು ಪ್ರಚಲಿತವಿರುವ ಎಲ್ಲ ಬಗೆಯ ಕ್ಷುದ್ರತೆ, ಅಗೌರವ, ಸುಳ್ಳನ್ನು ದೃಢೀಕರಿಸುವ ಶಕ್ತಿಯೂ ಹೌದು. . . . ಶತಮಾನಗಳಿಂದ ಬಹುತೇಕ ಜನ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದದ್ದರಿಂದ ಅವರು ಹಾಗೂ ಅವರ ದೇಶ ಪಾರ್ಶ್ವವಾಯುವಿಗೆ ತುತ್ತಾಗಬೇಕಾಯಿತು. (ಆದ್ದರಿಂದಲೇ) ಶೇಕಡ ಒಂದರಷ್ಟಿರುವ ಇಂಗ್ಲಿಷ್‌ಗೆ ಮೊರೆಹೊಕ್ಕ ಶ್ರೀಮಂತರು, ಉಚ್ಛ ಜಾತಿಯವರು ಹಾಗೂ ವಿಶೇಷಾಧಿಕಾರ ಹೊಂದಿದ ಜನ ಭಾರತದ ಜನಸಂಖ್ಯೆ ಶೇಕಡ ೯೯ ರಷ್ಟು ಜನರನ್ನು ನಿರಂತರ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

(ಕಳೆದ ಲೇಖನಗಳಲ್ಲಿ ಜಾಗತೀಕರಣ ಹೇಗೆ ಅಧಿಕಾರವನ್ನು ನಮ್ಮ ಮೇಲೆ ಚಲಾಯಿಸುತ್ತಿದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ) ಆದ್ದರಿಂದ ಈ ಲೇಖನದಲ್ಲಿ ಸ್ಥಳೀಯವಾಗಿ ‘ಜಾತಿ ಪದ್ಧತಿ’ ಹೇಗೆ ಜಾಗತೀಕರಣಕ್ಕೆ ಸಹಕರಿಸುತ್ತಿದೆ ಎಂಬುದನ್ನು ಚರ್ಚಿಸಲಿದ್ದೇನೆ. ಹಾಗೆಯೇ ಸ್ಥಳೀಯವಾಗಿ ಜಾತಿ ವ್ಯವಸ್ಥೆಯ ಅತಿ ಕೆಳಸ್ತರದಲ್ಲಿ ಜೀವಿಸುತ್ತಿರುವ ಬದುಕಿನತ್ತ ಗಮನಹರಿಸಲಿದ್ದೇನೆ.

ಜಾತಿ ಪದ್ಧತಿಯ ಸೂಕ್ಷ್ಮಗಳು

ಹಲವಾರು ವರ್ಷಗಳ ಕಾಲ ಹಳ್ಳಿಯಿಂದ ಹಿಡಿದು ನಗರ ಪ್ರದೇಶದಲ್ಲಿರುವ ಕೊಳಚೆಗೇರಿಯವರೆಗೆ ನನ್ನ ಬದುಕು ಹರಡಿಕೊಳ್ಳಲು ಅಲ್ಲಿನ ಬದುಕು ನನ್ನಲ್ಲಿ ವಿಶೇಷ ಬದಲಾವಣೆಗಳಿಗೆ ಕಾರಣವಾಗಿವೆ. ಅವಮಾನ ಶೋಷಣೆಗಳಿಗೊಳಗಾದ ಅಲ್ಲಿನ ಜನರ ಹೆಮ್ಮೆಯ ಆಸ್ತಿಯೆಂದರೆ ಅನಕ್ಷರತೆ, ಶಕ್ತಿಹೀನತೆ ಮತ್ತು ಅಸಹಾಯಕತೆ. ಇದನ್ನು ತಮ್ಮ ಕರ್ಮವೆಂದು ಈ ಜನ ಸಮುದಾಯಗಳು ಒಪ್ಪಿಕೊಂಡುಬಿಟ್ಟುವೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬರು ತಮ್ಮ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆಂಬುದು ಇನ್ನು ಈ ಜನಕ್ಕೆ ತಿಳಿದಿಲ್ಲ! ತಿಳಿದಿದ್ದರೂ ಈ ವ್ಯವಸ್ಥೆ ನೀಡುವ ಸಹಿಸಿದವನು ಬಾಳಿಯಾನು ಎಂಬ ಗುಣವನ್ನು ಒಪ್ಪಿ ಬದುಕುತ್ತಿದ್ದಾರೆಯೇ ವಿನಃ ತಮ್ಮ ನೋವನ್ನು, ಅವಮಾನವನ್ನು ತಿರಸ್ಕರಿಸುವ ಧೈರ್ಯವನ್ನು ತೋರುತ್ತಿಲ್ಲ. ಆದ್ದರಿಂದಲೇ ಬಹು ನಾಜೂಕಾಗಿ ಈ ಕೆಳಗಿನ ನಾಣ್ಣುಡಿಗಳು ಶೋಷಣೆಯನ್ನು ಹೇರುತ್ತಿರುವುದು.

ಚರಿತ್ರೆ ಯಾವಾಗಲೂ ಜಯಶಾಲಿಯಿಂದ ಮಾತ್ರ ಬರೆಯಲಾಗುತ್ತದೆ. ಹದ್ದು ಯಾವಾಗಲೂ ಕೋಳಿಮರಿಗಳ ಮೇಲೆ ಮಾತ್ರ ಎರಗುತ್ತಿದೆ ಬಲಿಕೊಡುವಾಗ ಯಾವಾಗಲೂ ಸಾಧು ಪ್ರಾಣವನ್ನು ಮಾತ್ರ ಬಲಿ ಕೊಡಲಾಗುತ್ತದೆ.

ಅಂದರೆ, ಪ್ರಕೃತಿಯ ಪ್ರಾಣಿ-ಪಕ್ಷಿಗಳ ಸಂಕೇತಗಳನ್ನು ಉಪಯೋಗಿಸಿ ಆ ಅನಾರೋಗ್ಯಕರ ವ್ಯವಸ್ಥೆಗೆ ಸಹಜತೆಯ ಚೌಕಟ್ಟನ್ನು ಒದಗಿಸಲಾಗುತ್ತದೆ. ಅಲ್ಲದೆ ಯಜಮಾನಿಕೆಯನ್ನು ಮುಂದುವರಿಸುವ ಸಾರ್ವಜನಿಕ ಅಭಿಪ್ರಾಯವಾಗಿ ಬಿಡುತ್ತದೆ.

ಈ ತಂತ್ರವನ್ನು ಭೇದಿಸುವ ಶಿಕ್ಷಿತ ಮನಸ್ಸು ಸಹ ಕೊನೆಗೆ ಇದೆಲ್ಲ ಅನಿವಾರ್ಯವೆಂಬಂತೆ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುತ್ತದೆ. ಏಕೆಂದರೆ ಜಾತಿಪದ್ಧತಿ ತನ್ನೊಳಗಿನ ವಿರೋಧಾಭ್ಯಾಸಗಳಾದ ಶುದ್ಧ-ಅಶುದ್ಧ, ಮಡಿ-ಮೈಲಿಗೆ, ಶಿಷ್ಠ-ಪರಿಶಿಷ್ಠ, ಕನಿಷ್ಠ- ಶ್ರೇಷ್ಠ,, ಸ್ಪೃಶ್ಯ-ಅಸ್ಪೃಶ್ಯ, ಪಾಪ-ಪುಣ್ಯ ಎಂಬಂಥ ಭಾವನೆಗಳ ಮೂಲಕ ಎಲ್ಲವನ್ನು, ಎಲ್ಲರನ್ನು ಕಪ್ಪು-ಬಿಳುಪು ಬಣ್ಣಗಳೊಳಗೆ ನಿಷ್ಕ್ರಿಯರನ್ನಾಗಿ ಮಾಡಿಬಿಟ್ಟಿದೆ. ಉತ್ತರ ಕರ್ನಾಟಕದ ಕಡೆ ಹೋಗಿದ್ದಾಗ ಅಲ್ಲಿ ಕಂಡಂಥ ಒಂದು ವಿಚಿತ್ರ ಸಂಗತಿಯೆಂದರೆ ಹಗಲಲ್ಲಿ ಅಸ್ಪೃಶ್ಯತೆಂದು ಭಾವಿಸುವ ಸ್ಪೃಶ್ಯ ಜಾತಿಯವರಿಗೆ, ರಾತ್ರಿಯಲ್ಲಿ ಅಸ್ಪೃಶ್ಯ ಹೆಣ್ಣು ಸ್ಪೃಶ್ಯವಾಗಿ ಬಿಡುತ್ತಾಳೆ. ಅಂದರೆ ಜಾತಿಯ ಈ ‘ಗೋಮುಖ ವ್ಯಾಘ್ರ’ ನೀತಿಯನ್ನು ನಾವೇಕೆ ಒಪ್ಪಿಕೊಂಡಿದ್ದೇವೆ?

ಅಲ್ಲದೆ ಅಸ್ಪೃಶ್ಯ ಜಾತಿಗಳ ಅವಮಾನವನ್ನು ಸಹಿಸಿಕೊಳ್ಳುದಲ್ಲದೆ, ಸ್ಪೃಶ್ಯಜಾತಿಗಳು ಆಜ್ಞಾಪಿಸಿದಂತೆ ನಡೆದುಕೊಳ್ಳುತ್ತವೆ. ಇಂದಿಗೂ ಸಹ ಹಳ್ಳಿಗಳಲ್ಲಿ ಸಾರ್ವಜನಿಕವಾಗಿ ಎಲ್ಲರಂತೆ ವರ್ತಿಸುವ ಹಾಗಿಲ್ಲ. ಹೋಟೆಲ್ಲುಗಳಲ್ಲಿ ಅವರಿಗೇ ಪ್ರತ್ಯೇಕ ಸ್ಥಳಗಳು! ಕಾನೂನುಬಾಹಿರವೆಂಬ ಸಂವಿಧಾನಾತ್ಮಕವಾಗಿ ಪರಿಗಣಿಸಿದರೂ ಸಹ ಕಾನೂನು ಕ್ರಮ ಜರುಗಿಸುವವರು ಯಾರು? ಅಲ್ಪ-ಸ್ವಲ್ಪ ವಿದ್ಯಾಭ್ಯಾಸ ಪಡೆದುಕೊಂಡ ಮೇಲ್ಜಾತಿ ಯುವಕ-ಯುವತಿಯರು ಬಾಹ್ಯದಲ್ಲಿ ಜಾತ್ಯಾತೀತರೆಂದು ಹೇಳಿಕೊಳ್ಳುತ್ತಾರೆ. ಅದೇ ಕೆಳಜಾತಿ ಯುವಜನ ತಮ್ಮ ಜಾತಿಯನ್ನು ಮೀರಲು “ಜಾತಿ ವಿರುದ್ಧ” ಘೋಷಣೆಗಳನ್ನು ಕೂಗುತ್ತಾರಷ್ಟೆ. ಎಲ್ಲರಿಗೂ ತಿಳಿದಿರುವಂತೆ ಇದು ಹೇಗೆ ನಡೆಯುತ್ತದೆಯೆಂದರೆ ಅತ್ತ ಕೋಲೂ ಮುರಿಯಬಾರದು ಇತ್ತ ಹಾವೂ ಸಾಯಬಾರದು.

ಮೇಲ್ಜಾತಿಯ ಬುದ್ಧಿ ಜೀವಿಗಳು ತಮ್ಮ ಜಾತಿಯ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಿಕೊಳ್ಳಲು ಹೆಣಗುತ್ತಿರುತ್ತಾರೆ. ಈ ಶತಮಾನದ ಮೂವತ್ತರ ದಶಕದಲ್ಲಿ ಮಹಾರಾಷ್ಟ್ರದ ನಾಗಪುರ ಮತ್ತು ತಮಿಳುನಾಡಿನ ರಾಮೇಶ್ವರಮ್‌ನಲ್ಲಿ ನಡೆದ ಎರಡು ಬ್ರಾಹ್ಮಣ ಮಹಾಸಮಾವೇಶಗಳಲ್ಲಿ ನಿರ್ಣಯಗಳು ಮಾತ್ರ ಏಕಮುಖವಾಗಿದ್ದವು. ಆ ನಿರ್ಣಯಗಳಂತೆ ದಲಿತ ಜಾತಿಗಳು ಕೆಳಗಿನ ನಿಯಮಗಳನ್ನು ಚಾಚು ತಪ್ಪದೆ ಅನುಸರಿಸಬೇಕಾಗಿತ್ತು.

೧. ಈ ಜಾತಿಗಳಿಗೆ ಜಮೀನಿನ ಮೇಲೆ ಒಡೆತನ ಇರಕೂಡದು.

೨. ಕೂಲಿ ಮಾಡಿ ಬದುಕುವುದು.

೩. ಇವರ ಮಕ್ಕಳು ಶಾಲೆಗೆ ಹೋಗುವಂತಿಲ್ಲ.

೪. ಇವರ್ಯಾರೂ ಚಪ್ಪಲಿಗಳನ್ನು ಧರಿಸುವಂತಿಲ್ಲ.

೫. ಈ ಜಾತಿಗಳ ಹೆಂಗಸರು-ಕುಪ್ಪಸಗಳನ್ನು ಧರಿಸುವಂತಿಲ್ಲ.

೬. ಇವರ್ಯಾರೂ ಮಣ್ಣಿನ ಮಡಕೆಗಳನ್ನು ಹೊರತುಪಡಿಸಿ ಬೇರೆ ಪಾತ್ರೆಗಳಲ್ಲಿ ಅಡಿಗೆ ಮಾಡುವಂತಿಲ್ಲ.

ಈ ನಿಯಮವನ್ನು ಪಾಲಿಸದಿದ್ದಲ್ಲಿ ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತಿತ್ತು. ಇಲ್ಲಿ ಮುಖ್ಯವಾದ ವಿಷಯವೆಂದರೆ ಇತರ ಜಾತಿಗಳ ಬಗ್ಗೆ ನಿರ್ಧರಿಸಲು ಇವರಿಗೆ ಇದ್ದಂತಹ ಹಕ್ಕೇನು? ಅಥವಾ ಈ ಕೆಳಜಾತಿಗಳು ಮಾಡಿದ ಅಪರಾಧವಾದರೂ ಏನಿತ್ತು? ಕೇವಲ ಆಯಾ ಜಾತಿಯಲ್ಲಿ ಹುಟ್ಟಿದ್ದು ತಪ್ಪಾಯಿತೆ? ಜಾತಿ ಹಿತಾಸಕ್ತಿ ಏನನ್ನು ಮೂಡಿಸಬಹುದು!

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಈ ಕೆಳಜಾತಿಗಳ ಬದುಕೇನು ಉತ್ತಮವಾಗಿಲ್ಲ. ಜಾತಿಪದ್ಧತಿ ಮತ್ತಷ್ಟು ತನ್ನ ಅಸ್ತಿತ್ವವನ್ನು ಸ್ಥಾಪಿಸಿತಷ್ಟೆ. ಅಂದರೆ ಈ ಪದ್ಧತಿಯೊಳಗೆ ದಲಿತ ಜಾತಿಗಳು ಹೇಗೆ ಬದುಕುತ್ತಿವೆ ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ವಿವರಿಸಬಹುದು: ನಿಮಗೆ ಹೊಟ್ಟೆ ನೋವು ಬರುತ್ತದೆ. ಆಗ ನೀವು ಡಾಕ್ಟರ್ ಬಳಿ ಹೋಗುತ್ತೀರಿ. ಡಾಕ್ಟರು ನಿಮಗೆ ಔಷಧಿ ನೀಡುತ್ತಾರೆ. ಆ ಮೂಲಕ ನಿಮ್ಮ ಹೊಟ್ಟೆ ಶುದ್ಧವಾಗಿ ಗುಣವಾಗುತ್ತೀರಿ. ಇಲ್ಲಿ ಡಾಕ್ಟರಿಗೆ ಹಣ-ಗೌರವ ಎರಡೂ ದೊರೆಯುತ್ತದೆ. ಆದರೆ ಜಾತಿ ವ್ಯವಸ್ಥೆಯಲ್ಲಿ ನಡೆಯುವುದು ಇದಕ್ಕೆ ವಿರುದ್ಧವಾಗಿ ದಲಿತ ಜಾತಿಗೆ ಸೇರಿದ ಭಂಗಿ ಜನ ಹಿಂದಿನಿಂದಲೂ ತಲೆ ಮೇಲೆ ಮಲ ಹೊರುತ್ತಿದ್ದಾರೆ. ಇಲ್ಲಿ ಕಕ್ಕಸ್ಸು ಮಾಡುವುದು ಮೇಲ್ಜಾತಿ ಜನ. ಅದನ್ನು ಸ್ವಚ್ಛ ಮಾಡುವವರು ಈ ಭಂಗಿ ಜನ. ಇಲ್ಲಿ ಮರ್ಯಾದೆ ಇರುವುದು ಕಕ್ಕಸ್ಸು ಮಾಡುವವರಿಗೆ ಮಾತ್ರ. ಅದನ್ನು ಶುದ್ಧ ಮಾಡುವವರಿಗಲ್ಲ! ಇದೇ ಜಾತಿ ಪದ್ಧತಿಯಲ್ಲಿನ ಶೋಷಣೆಯ ಮುಖ. ಶೋಷಿತ ಜನಗಳ ನೆನಪುಗಳನ್ನು ಮರೆಮಾಚಿ ಅಲ್ಲಿ ಹಿಂಸಾತ್ಮಕ ನೆನಪುಗಳನ್ನು ಒತ್ತಾಯ ಪೂರ್ವಕವಾಗಿ ಹೇರಲಾಗುತ್ತದೆ. ಈ ಮೂಲಕ ಕೆಳಜಾತಿಗಳ ದೇಹ ಮತ್ತು ಮನಸ್ಸುಗಳೆರಡರ ಮೇಲೂ ಅತ್ಯಾಚಾರ ಎಸೆಗಲಾಗುತ್ತಿದೆ. ಇದು ನಡೆಯುವುದು ಸಾಂಸ್ಕೃತಿಕವಾದ ನಂಬಿಕೆಗಳ ಮೂಲಕ.

ಈ ಕಾರ್ಯವನ್ನು ಮೀರಬೇಕೆನ್ನುವ ವ್ಯಕ್ತಿ ಸೃಜನಾತ್ಮಕವಾಗಿ ಹಲವೊಂದು ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ, ಆತನಿಗೆ ಅರಿವಿಲ್ಲದಂತೆ ಆತನ ಎಲ್ಲ ಚಟುವಟಿಕೆಗಳನ್ನು ಶತಮಾನಗಳಿಂದ ಬೆಳೆದು ಬಂದ ಪರಂಪರೆ-ಸಂಪ್ರದಾಯಗಳ ಮೂಲಕ ಹಕ್ಕಿತ್ತಲಾಗುತ್ತದೆ. ಅಲ್ಲದೆ ಶೋಷಣೆಯ ವಿರುದ್ಧ ಹೋರಾಡುವ ಪ್ರೇರಣೆಯನ್ನು ಶೋಷಕನೇ ನೀಡುತ್ತಿರುತ್ತಾನೆ! ಈ ಅಂಶ ಕರ್ನಾಟಕದ ಚರಿತ್ರೆಯನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇಲ್ಲಿ ಬ್ರಿಟೀಷರ ಆಡಳಿತ ಸಂದರ್ಭದಲ್ಲಿ ಮದ್ರಾಸ್ಸಿನ ಬ್ರಾಹ್ಮಣ ದಿವಾನರು ಮೈಸೂರು ಆಡಳಿತವನ್ನು ನಿರ್ವಹಿಸುತ್ತಿದ್ದರು. ಇದನ್ನು ಕಂಡ ಸ್ಥಳೀಯ ಲಿಂಗಾಯಿತರು ಮತ್ತು ಒಕ್ಕಲಿಗರು ಸಂಘಟಿತರಾಗಿ ತಮ್ಮ ಪಂಗಡದವರನ್ನೇ ದಿವಾನರನ್ನಾಗಿ ನೇಮ ಮಾಡುವಂತೆ ಒತ್ತರ ಹೇರುವುದರಲ್ಲಿ ಯಶಸ್ವಿಯಾದರು. ಆ ಸಂದರ್ಭದಲ್ಲಿ ದಲಿತ ಸಮುದಾಯಗಳು ಒಕ್ಕಲಿಗ ಮತ್ತು ಲಿಂಗಾಯಿತದಿಂದ ಮತ್ತಷ್ಟು ಶೋಷಣೆ ಒಳಗಾಗಲು, ಅಧಿಕಾರ ಕಳೆದುಕೊಂಡ ಬ್ರಾಹ್ಮಣ ನಾಯಕರು, ಈ ದಲಿತ ಗುಂಪುಗಳನ್ನು ಸಂಘಟಿಸಿ, ಪುನಃ ಅಧಿಕಾರ ಪಡೆಯುವುದರಲ್ಲಿ ಯಶಸ್ವಿಯಾದರು. ಇದೇ ಸ್ಥಿತಿ ಇಂದಿನ ಕರ್ನಾಟಕದಲ್ಲೂ, ಭಾರತದಲ್ಲೂ ನಡೆದಿರುವುದು ಚರಿತ್ರೆ ಮರುಕಳಿಸಿದೆ ಎನ್ನಬೇಕೆನೋ! ಇಲ್ಲಿ ಮುಖ್ಯವಾಗಿ ಗಮನಿಸತಕ್ಕ ಅಂಶವೆಂದರೆ ದೈಹಿಕವಾಗಿ ದುಡಿಯುವ ಜನ ಎಂದೂ ಶ್ರಮವನ್ನು ಪ್ರತಿಭೆ ಬುದ್ಧಿಯೆಂದು ಗುರುತಿಸುವುದಿಲ್ಲ. ಆ ರೀತಿ ಮಾಡಲು ಜಾತಿ ವ್ಯವಸ್ಥೆ ಬಿಡುವುದೂ ಇಲ್ಲ.

ಕರ್ನಾಟಕದಲ್ಲಿ ದಲಿತರು

ಈಗಾಗಲೇ ನೀವು ಗಮನಿಸಿರುವಂತೆ ದಲಿತರೆಂದರೆ; ೧. ಅಸ್ಪೃಶ್ಯ ಸಮುದಾಯಗಳು, ೨. ಶೂದ್ರ ಅಥವಾ ಕೆಳಜಾತಿ-ವರ್ಗ ಸಮುದಾಯಗಳು ಅಥವಾ ಜಾತಿಯ ಹೆಸರಿನಲ್ಲಿ ಶೋಷಿತರಾದವರು. ನಾನು ದಲಿತ ಎನ್ನುವ ಪದವನ್ನು ಈವರೆಗೆ ಎರಡೂ ಅರ್ಥಗಳಲ್ಲಿ ಬಳಸಿದ್ದೇನೆ. ಇನ್ನು ಮುಂದೆ ‘ದಲಿತ’ ಪದವನ್ನು ಕೇವಲ ಪರಿಶಿಷ್ಟ-ಜಾತಿ ಮತ್ತು ವರ್ಗವ್ಯವಸ್ಥೆಯ ಅತೀ ಕೆಳ ತುದಿಯಲ್ಲಿ ನಿಂತು ನರಕ ಯಾತನೆಯನ್ನು ಅನುಭವಿಸುತ್ತಾ ದುಡಿಯಲು ಮತ್ತು ಹಿಂಸೆಯನ್ನು ಉಣ್ಣಲು ಮೊದಲಾಗಿ ಫಲವನ್ನು ಪಡೆಯಲು ಕಡೆಯವರಾಗಿ ಪರಿಗಣಿತರಾಗಿರುವುದಿಲ್ಲ.

ಬ್ರಿಟೀಷರ ಮೂಲಕ ಈ ನಾಡಿಗೆ ಪಾದಾರ್ಪಣೆ ಮಾಡಿದ “ಆಧುನಿಕ” ದಲಿತ ಸಮುದಾಯಗಳಿಗೆ ನಿರಾಳವಾಗಿ ಉಸಿರಾಡುವ ಅವಕಾಶವನ್ನು ಒದಗಿಸಿತ್ತೆಂದೇ ಹೇಳಬಹುದು. ಈ ಮಧ್ಯ ವಸಾಹತು ನೀತಿಯನ್ನು ಜಾರಿಗೊಳಿಸಲೆಂದೇ ಜಾರಿಯಾದ ಸಾರ್ವಜನಿಕ ಶಿಕ್ಷಣ, ಜಾತಿ ವ್ಯವಸ್ಥೆಯಲ್ಲಿ ಚಲನೆಯನ್ನುಂಟು ಮಾಡಿತು. ದಲಿತ ಪಂಗಡಗಳು ಈ ಶಿಕ್ಷಣ ಸೌಲಭ್ಯವನ್ನು ಪಡೆದು ಆಧುನಿಕತೆ ನೀಡಿದ ಅನುಕೂಲತೆಗಳನ್ನು ಅನುಭವಿಸತೊಡಗಿದರು. ಅಲ್ಲದೆ ಉಳಿದವರೂ ಸಹ ಈ ಆಧುನಿಕ ಸವಲತ್ತುಗಳನ್ನು ಪಡೆಯಲು ೭೦ರ ದಶಕಗಳಲ್ಲಿ ದಲಿತ ಸಂಘರ್ಷ ಸಮಿತಿಯೊಂದನ್ನು ಅಖಿಲ ಕರ್ನಾಟಕ ಮಟ್ಟದಲ್ಲಿ ಕಟ್ಟಿದರು. ಈ ಮೂಲಕ ಸವರ್ಣೀಯರ ವಿರುದ್ಧ ಹಂತ ಹಂತವಾಗಿ ಪ್ರತಿಭಟನೆಯನ್ನು ಸೂಚಿಸತೊಡಗಿದರು. ಆದರೂ ಒಟ್ಟಾರೆಯಲ್ಲಿ ಅವರ ಸಾಧನೆ ಏನೂ ಇಲ್ಲವೆನ್ನಬೇಕು.

ಅಂಕಿ-ಅಂಶಗಳ ಪ್ರಕಾರ ಇಂದಿನ ಕರ್ನಾಟಕದಲ್ಲಿ ದಲಿತ ಪಂಗಡಗಳು ಅಂದರೆ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟವರು ಶೇಕಡ ೩೬ರಷ್ಟು ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಇವರ್ಯಾರು ಈ ನಾಡಿನಲ್ಲಿ ಮುಖ್ಯಮಂತ್ರಿಯಾಗಲಿಲ್ಲ. ಕೇವಲ ಶೇಕಡ ೧೩ ಮತ್ತು ೧೭ರಷ್ಟಿರುವ ಒಕ್ಕಲಿಗರು ಮತ್ತು ಲಿಂಗಾಯತರು ಹಾಗೂ ಶೇಕಡ ೩. ೪ ರಷ್ಟಿರುವ ಬ್ರಾಹ್ಮಣರು ರಾಜಕೀಯವನ್ನು ನಡೆಸುತ್ತಿದ್ದಾರೆ. ಅಧಿಕಾರ ಈ ಮೇಲ್ಜಾತಿಗಳಲ್ಲಿಯಷ್ಟೆ ಹಸ್ತಾಂತರಗೊಳ್ಳುತ್ತಿರುತ್ತದೆ. ಅಲ್ಲದೆ ಭೂಮಿಯು ಹಂಚಿಕೆ ಕೂಡ ಭಯ ಹುಟ್ಟಿಸುತ್ತದೆ. ಪ್ರತಿ ನೂರು ಮಂದಿ ದಲಿತರಿಗೆ ಇರುವ ಭೂಮಿ ಕೇವಲ ೩೪. ೯೨೨ ಎಕ್ರೆಗಳು. ಅದೇ ನೂರು ಮಂದಿ ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ಕ್ರಮವಾಗಿ ೨೦. ೧೩ ಎಕ್ರೆ ಮತ್ತು ೧೩೨. ೩ ಎಕ್ರೆಗಳು. ಹಾಗೂ ನೂರು ಮಂದಿ ಬ್ರಾಹ್ಮಣರಿಗೆ ೧೫೦. ೯ ಎಕ್ರೆಗಳು. ಇವತ್ತಿಗೂ ಸಹ ದಲಿತರಲ್ಲಿ ಶೇಕಡ ೭೮ರಷ್ಟು ಅನಕ್ಷರಸ್ತರು. ಅದೂ ಅಲ್ಲದೆ ಹೆಣ್ಣು ಮಕ್ಕಳಲ್ಲಿ ಸಾಕ್ಷ್ಯರತೆ ಕೇವಲ ಶೇಕಡ ೮ ಮೀಸಲಾತಿ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ ನಿಜ. ಆದರೆ ಹಳ್ಳಿಯಲ್ಲಿ ಬದುಕುವ ಈ ದಲಿತರಿಗೆ ಅದು ನಿಜವಾಗಿಯೂ ಸಹಾಯಕವಾಗಿದೆಯೇ? ಹಾಗೆಯೇ ಸರ್ಕಾರಿ ನೌಕರಿಯಲ್ಲಿರುವವರ ಅಂಕಿ-ಅಂಶಗಳನ್ನು ಕೊಡುತ್ತಾ ಹೋಗಬಹುದು. ಆದರೆ ಅದರಿಂದೇನೂ ಪ್ರಯೋಜನವಿಲ್ಲ. ಕಿತ್ತು ತಿನ್ನುವ ಬಡತನದಲ್ಲಿ ಬದುಕುವ ಈ ಜನತೆ ಸಂಘಟಿತರಾಗುವುದು ಎಂದರೇನು?

ಜಾಗತೀಕರಣದ ಸಂದರ್ಭದಲ್ಲಿ ದಲಿತರು

ಈ ದಶಕದಲ್ಲಿ ಸ್ಪಷ್ಟವಾಗಿ ಮುಕ್ತಮಾರುಕಟ್ಟೆ ಮತ್ತು ಹೊಸ ಆರ್ಥಿಕ ವ್ಯವಸ್ಥೆಯ ಮೂಲಕ ಕಾಣಿಸಿಕೊಂಡ ಜಾಗತೀಕರಣ ಭಾರತ ಎಲ್ಲ ಜಾತಿಗಳಿಗೂ ಅನೇಕ ಆಸೆ-ಆಮಿಷಗಳನ್ನು ಒಡ್ಡಿತ್ತೇನೊ ಹೌದು. ಇದರಿಂದ ದಲಿತರೇನು ಹೊರತಾಗಿಲ್ಲ. ಅಂದರೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನ ಸುತ್ತಮುತ್ತಲೂ ಜೀವಿಸುತ್ತಿದ್ದ ದಲಿತರು ಇಂದು ದಿಕ್ಕು ತಪ್ಪಿದಂತಾಗಿದ್ದಾರೆ. ಇದ್ದ ಅಲ್ಪ-ಸ್ವಲ್ಪ ಭೂಮಿ ಬಂಡವಾಳಗಾರನಿಗೆ ಮಾರಲಾಗಿದೆ. ಬಂದ ಹಣ ಮಾರುಕಟ್ಟೆಯ ಮೂಲಕ ಪುನಃ ಬಂಡವಾಳ ಶಾಹಿ ಜೇಬಿಗೇ ಹೋಗಿಬಿಟ್ಟಿದೆ. ಇದ್ದ ಅಲ್ಪ-ಸ್ವಲ್ಪ ಅವಕಾಶಗಳು ಖಾಸಗೀ ರಂಗದಲ್ಲಿ ಹುದುಗಿಹೋಗಿವೆ. ದಲಿತ ಸಂಘರ್ಷ ಸಮಿತಿ ವಿಭಾಗವಾಗಿ ಕೆಲವು ರಾಜಕೀಯ ಪಕ್ಷಗಳ, ಉಪ-ಪಕ್ಷಗಳಾಗಿವೆ. ಸಂಘಟನೆಯೆನ್ನುವುದು ಸ್ವಯಂ ಸೇವಾ ಸಂಸ್ಥೆಗಳ ಗುತ್ತಿಗೆಗೆ ಒಳಪಟ್ಟಿದೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಬಗ್ಗೆ ಬಿ. ಎಂ. ಪುಟ್ಟಯ್ಯನವರು ಮಾಡಿರುವ ವಿಶ್ಲೇಷಣೆ ಬಹಳ ಮುಖ್ಯವಾದುದು. ಅವರ ಪ್ರಕಾರ ೧೯೮೫ರಿಂದ ಇಲ್ಲಿಯವರೆಗೆ ದ. ಸಂ. ಸಮಿತಿ ಸಂಪೂರ್ಣ ನಿಂತು, ಕೊಳೆತು ನೀರಾಗಿದೆ. ನಾಯಕರೆನಿಸಿಕೊಂಡವರು ರಾಜಕೀಯ ಎಂಜಲಿಗೆ ಮುಗಿಬಿದ್ದಿದ್ದಾರೆ. ಉಳಿದ ಕೆಲವರು ಸರ್ಕಾರಿ ಸೌಲಭ್ಯವನ್ನು ಕೂಡಿಸುವುದಕ್ಕಷ್ಟೆ ದ. ಸಂ. ಸ. ಯನ್ನು ಸೀಮಿತಗೊಳಿಸಿ ಕಮಿಷನ್ ಏಜೆಂಟರಾಗಿದ್ದಾರೆ. ಇದರಿಂದಾಗಿ ಅದು ತಾತ್ವಿಕವಾಗಿ ಒಂದು ಚಳುವಳಿ ಆಗಿ ಇಂದು ಉಳಿದಿಲ್ಲ. . . . ೬೦-೭೦ರ ದಶಕಗಳಲ್ಲಿ ವಸಾಹತು ಶಿಕ್ಷಣ ಪಡೆದ ದಲಿತರಲ್ಲಿ ಕೆಲವರು ನೌಕರಿ ಪಡೆದರು. ಇದರಿಂದ ಇವರ ಜೀವನ ಕ್ರಮ ಉತ್ತಮಗೊಂಡು, ಈ ಉತ್ತಮಿಕೆಯನ್ನೇ ಸಮಸ್ತ ದಲಿತರ ವಿಮೋಚನೆ ಎಂದು ಸಾಮಾನ್ಯೀಕರಿಸಲಾಯಿತು. ಆದ್ದರಿಂದ ನೌಕರಿ ಮತ್ತು ರಾಜಕೀಯದಲ್ಲಿ ಯಾವ ಜಾತಿ ಎಷ್ಟೆಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಗಟ್ಟಿಯಾಗಿ ಹಿಡಿಯಲಾಯಿತು. ಹೀಗೆ ಹೋರಾಟ ಬ್ರಾಹ್ಮಣಶಾಹಿ ಪುರೋಹಿತಶಾಹಿ ಮುಂತಾದ ಘೊಷಣೆಗಳಿಗಷ್ಟೇ ಸೀಮಿತವಾಯ್ತು. ಇಲ್ಲಿ ಮುಖ್ಯವಾದ ಪ್ರಶ್ನೆಗಳೆಂದರೆ ಭೂಮಿ ಮುಂತಾದ ಸಂಪತ್ತಿನ ಒಡೆಯರು ಯಾರು? ದಲಿತರ ಶತ್ರುಗಳು ಬ್ರಾಹ್ಮಣರೇ? ಜಾಗತೀಕರಣದ ಸಂದರ್ಭದಲ್ಲಿ ಅವಕಾಶಗಳು ಯಾರ ಪಾಲಾಗಿವೆ?

ಈ ಪ್ರಶ್ನೆಗಳನ್ನು ಕೆದಕಿದಾಗ ಅಲ್ಲಿ ಕಾಣುವ ಅಂಶವೆಂದರೆ ಜಾಗತೀಕರಣದ ಪರಿಣಾಮವಾಗಿ ಆಸೆಬುರುಕರಾದ ಜನಮುಕ್ತ ಮಾರುಕಟ್ಟೆಯಲ್ಲಿ ಶೋಷಣೆಗೆ ಒಳಗಾಗುತ್ತ, ತಮ್ಮೊಳಗೆ ಅನುಮಾನ, ಗೊಂದಲಕ್ಕೆ ಒಳಗಾದರು. ಇಂದಿನ ಜಾಗತೀಕರಣ ಕಾಯಕ ಮಹತ್ವವನ್ನು ಅಪಮೌಲ್ಯಗೊಳಿಸಿ ಬುದ್ಧಿಪ್ರಧಾನ ಉದ್ಯೋಗಕ್ಕೆ ಶ್ರೇಷ್ಠ ಸ್ಥಾನವನ್ನು ನೀಡುವುದರ ಮೂಲಕ ಕೈಗಾರಿಕಾ ಉತ್ಪಾದನಾ ಲಾಭವನ್ನು ಮೇಲ್ಜಾತಿಗಳಿಗೆ ಅನುಕೂಲವಾಗುವಂತೆ ಮಾಡಿ, ದಲಿತ ವಿರೋಧಿಯಾಗಿದೆ. ಅಂದರೆ ಜಾತಿವ್ಯವಸ್ಥೆಯಲ್ಲಿ ಬಹಿಷ್ಕೃತವಾದ ಅಸ್ಪೃಶ್ಯನ ದುಡಿಮೆ ಸಮಾಜದಲ್ಲಿ ಮೇಲ್ಜಾತಿಯನ್ನು ಅವಲಂಬಿಸಿರುವ ಮತ್ತು ಪೋಷಿಸುತ್ತಿರುವ ಉಪಕಸುಬಾಗಿದೆ. ಈ ಉಪಕಸುಬು ಕೀಳೆಂದು ಸ್ಥಾಪಿಸುತ್ತಾ ಸಾಗಿರುವುದು ಶೋಷಣೆಯ ಮತ್ತೊಂದು ಮುಖ.

ಹಾಗಾಗಿ ಜಾಗತೀಕರಣದ ಮೂಲವನ್ನು ವಸಾಹತುಶಾಹಿ ಆಡಳಿತದಲ್ಲಿ ನೋಡಬೇಕಿದೆ. ನಮ್ಮ ಪ್ರಜ್ಞೆ ಅದರಿಂದಲೇ ರೂಪುಗೊಂಡಿರುವುದು. ಇದನ್ನು ನಿರಾಕರಿಸಿ ಬರೆಯುವುದೆಂದರೆ ನಮ್ಮ ಚರಿತ್ರೆಯನ್ನು ಮರೆತಂತಾಗುತ್ತದೆ. ನಾವು ಕಟ್ಟುವ ಸಂಬಂಧಗಳು ವಸಾಹತು ಮುಕ್ತಮಾರುಕಟ್ಟೆಯ ಪ್ರಜೆಗಳಾಗಿ ಮಾತ್ರ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ ಮೂರನೇ ಜಗತ್ತಿನ ಸಂಕೀರ್ಣವಾದ ನಗರ ಕೇಂದ್ರಿತ ವ್ಯವಸ್ಥೆಯಲ್ಲಿ ಜೀವಿಸುವ ವ್ಯಕ್ತಿಯೊಬ್ಬ ಗ್ರಾಮೀಣ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲು ಹೋಗಿ ಅಲ್ಲಿಯ ತಿಪ್ಪೆ ಗುಂಡಿಗಳ ಕೆಟ್ಟವಾಸನೆಗೆ ಹೆದರಿ ಮರಳಿ ಓಡಿ ಹೋದಂತೆ ನಮ್ಮ ಬದುಕಿನ ಅರ್ಥ ದ್ವಂದ್ವಾತ್ಮಕವಾಗಿದೆ. ಇಲ್ಲಿ ಜೀವಂತ ವ್ಯಕ್ತಿ ಏಕಾಂತವಾಗುತ್ತಾನೆ. ಸಂಘಟನೆ-ಚಳವಳಿಗಳು ವಿರಳವಾಗುತ್ತವೆ. ವ್ಯಕ್ತಿ ಕೊನೆಗೆ ಅಸ್ವಸ್ಥನೆಂಬ ಭ್ರಮೆ ಒಳಗಾಗುತ್ತಾನೆ. ಆದರೂ ಫುಕೋ ಹೇಳುವಂತೆ ವ್ಯಕ್ತಿಯ ಆಲೋಚನೆಗಳು ಸದಾ ಸುವ್ಯವಸ್ಥೆ ರೂಪದಲ್ಲೇ ಹೊರಗೆ ಕಾಣಿಸಿಕೊಳ್ಳುತ್ತವೆ. ಇದೇ ಜಾಗತೀಕರಣದ ಮಾರಿ ಶಕ್ತಿಯುತವಾಗಲು ಕಾರಣ. ಆದ್ದರಿಂದ ಜಾಗತೀಕರಣದ ಆಲೋಚನೆ ಏನು ಎಂಬುದನ್ನು ಅರಿಯಬೇಕಾಗುತ್ತದೆ. ನಾವು ಆರ್ಥಿಕವಾಗಿ ಬಡವರೇ ಹೊರತು, ಸಾಂಸ್ಕೃತಿಕವಾಗಿ ಬಡವರಲ್ಲ ಎಂಬುದನ್ನು ಅರಿಯಬೇಕಾಗುತ್ತದೆ.

ಜಾಗತೀಕರಣ ಮತ್ತು ಧರ್ಮ

ದೇವರು ಶ್ರೀಮಂತರಿಗೆ ಸುಖಭೋಗ
ದೇವರು
ಮಧ್ಯಮವರ್ಗದವರಿಗೆ ಒಂದು ಸರಕು
ದೇವರು
ಬಡವರಿಗೆ ಒಂದು ಜೀವನೋಪಾಯ

ಓದುಗರೇ, ನೀವು ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಲ್ಪ ಸಾಗಿಬನ್ನಿ. ರಸ್ತೆಯ ಅಕ್ಕಪಕ್ಕ ನಿಗಾಯಿಟ್ಟು ಬನ್ನಿ. ಅಲ್ಲಿ ದೈತ್ಯಾಕಾರದ ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚುಗಳು ನಿಮ್ಮನ್ನು ಆದರದಿಂದ ಸ್ವಾಗತಿಸುತ್ತವೆ. ಅಲ್ಲಿ ನೀವು ಹೋಗಿ ಮೈಮರೆತು ಕುಳಿತುಕೊಂಡಾಗ, ಇತ್ತ ರಸ್ತೆ ಬದಿಯ ಭೂಮಿ ಧರ್ಮ ಸಂಸ್ಥೆಯಗಳ ಸೊತ್ತಾಗಿವೆ, ಇಲ್ಲವೇ ಖಾಸಗೀ ಕಂಪೆನಿಯೊಂದರ ಒಡೆತನಕ್ಕೆ ಬಂದಿರುತ್ತದೆ. ಕೆರೆಗಳು ತುಂಬಿದ್ದರೂ, ಕೆರೆಕೆಳಗಿನ ಭೂಮಿ ಬಂಜೆಯಾಗಿ, ಬೇಸಾಯ ಧರ್ಮದ ಬದಲು ‘ಹಣಾಯ ಧರ್ಮ’ ಎಲ್ಲ ಕಡೆ ಪೈಪೋಟಿ ನಡೆಸುತ್ತದೆ. ಕೊನೆಯ ಪೈಪೋಟಿಯಲ್ಲಿ ಸೋತ ಬೇಸಾಯ ಧರ್ಮ ತಿರುಪತಿ. ಅಯ್ಯಪ್ಪ, ವೇಲಾಂಗಣಿ, ಪೊಟ್ಟ, ಮೆಕ್ಕಾ ಮುಂತಾದ ಕ್ಷೇತ್ರಗಳಿಗೆ ತೀರ್ಥಯಾತ್ರೆಯನ್ನು ಕೈಗೊಂಡು ಕೈಲಾಸ ಸೇರಲು ದಾಪುಗಾಲು ಇಡುತ್ತದೆ. ಈ ಮಧ್ಯೆ ನಿರಾಶ್ರಿತರಾದ ಬಹುಮಂದಿ ಬೇರೆ ದಾರಿಗಾಣದೆ ಅಗ್ಗ ಬೆಲೆಗೆ ತಮ್ಮ ಶ್ರಮವನ್ನು ಮಾರಿಕೊಂಡು ಜಾಗತೀಕರಣದ ಪ್ರಗತಿಗೆ ಒದಗಿಸುವುದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಹೀಗೆ ಅವರು ‘ಗೇಣು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಹೆಣಗುತ್ತಾ, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತೆ ಆಗಿ ಹೋಯ್ದಾಡುತ್ತಿದ್ದಾರೆ.

ಈ ಹಿಂದೆ ಪ್ರಸ್ತಾಪಿಸಿದ ಆಫ್ರಿಕಾದ ಕವಿಯೊಬ್ಬರ ಮಾತು ಇಲ್ಲಿ ಮುಖ್ಯವೆನಿಸುತ್ತದೆ. “ಬ್ರಿಟೀಷರು ನಮ್ಮಲ್ಲಿಗೆ ಬಂದಾಗ, ಅವರ ಬೈಬಲ್‌ ಇತ್ತು, ನಮ್ಮ ಹತ್ತಿರ ಭೂಮಿ ಇತ್ತು. ಆದರೆ ಇಂದು ನಮ್ಮ ಹತ್ತಿರ ಬೈಬಲ್ ಇದೆ, ಅವರ ಹತ್ತಿರ ಭೂಮಿ ಇದೆ. ” ಇದು ಅಕ್ಷರಶಃ ಸತ್ಯ! ಹೀಗೆ ಆದದ್ದಾದರೂ ಹೇಗೆ? ಎಂಬ ಪ್ರಶ್ನೆ ಕೇಳುವ ಮೊದಲೇ ವ್ಯಕ್ತಿ ತಿಪ್ಪೆಗೆ ಎಸೆಯಲ್ಪಟ್ಟಿದ್ದಾನೆ. ಜಾಗತೀಕರಣ ದೇವರ ಅಸ್ತಿತ್ವವನ್ನು ಪಲ್ಲಟಗೊಳಿಸಿ, ದೈವವನ್ನು ಕೇವಲ ಒಂದು ಸರಕನ್ನಾಗಿಸಿದೆ. ಹಿಂದೆ ‘ಧರ್ಮದ ಹೊರಗೆ ಮೋಕ್ಷ ಇಲ್ಲ’ ಎಂಬುದು ಇಂದು ‘ಜಾಗತೀಕರಣದ ಮಾರ್ಕೆಟ್ ಹೊರಗೆ ಮುಕ್ತಿ ಇಲ್ಲ’ ಎಂದಾಗಿದೆ. ಅಂದರೆ ಮಾನವನ ಆದರ್ಶೀಕೃತ ತತ್ವಗಳೆಲ್ಲ ಪಲಾಯನಗೊಂಡು ಆತ/ ಆಕೆ ಕೇವಲ ಗ್ರಾಹಕ/ ಸರಕಾಗಿ ಪರಿವರ್ತನೆಯಾಗಿದ್ದಾನೆ/ಳೆ. ಇದನ್ನು ಸಾಂಸ್ಕೃತಿಕ ಅನ್ಯತೆ ಹೇಗೆ ಕಾರಣವಾಗಿತ್ತು ಎಂಬುದನ್ನು ಹಿಂದಿನ ಭಾಗದಲ್ಲಿ ವಿವರಿಸಿಕೊಂಡಿದ್ದೇವೆ. ಜಾಗತೀಕರಣ ನಮ್ಮ ಬಯಕೆಗಳ ಶಿಖರವನ್ನೇ ಸೃಷ್ಟಿಸಿ, ತಾಕತ್ತಿರುವ ವ್ಯಕ್ತಿಗೆ ಎಲ್ಲ ಸಿಗುತ್ತೆ ಎನ್ನೋ ಬೊಗಳೆ ಹೊಡೆಯುತ್ತಿದೆ. ಏನೂ ಇಲ್ಲದವನನ್ನು ಮತ್ತಷ್ಟು ಹೀನ ಸ್ಥಿತಿಗೆ ತಳ್ಳುತ್ತದೆ. ‘ಹಣ’ದ ಮುಂದೆ ಯಾವುದೇ ಮೌಲ್ಯವೂ ಸಹ ನಾಚಿ ನೀರಾಗಿದೆ:

ಧರ್ಮದ ಮೂಲಕ ಒಂದು ಸಮಗ್ರತೆಯನ್ನು ಕಂಡುಕೊಂಡಿದ್ದ ಮನುಷ್ಯ ಇಂದು ಏಕದೈವ ಕಲ್ಪನೆಯನ್ನು “ದುಡ್ಡೇ ದೊಡ್ಡಪ್ಪ”ನಲ್ಲಿ ಲೀನವಾಗಿಸಿ ಬಿಟ್ಟಿದ್ದಾನೆ. ಏಕದೈವದಲ್ಲಿ ನಿಷ್ಠೆಯೆಂದರೆ ಜಾಗತೀಕರಣದಲ್ಲಿ ನಿಷ್ಠೆಯಾಗಿದೆ. ಹಾಗಾಗಿ ಪುರೋಹಿತ, ದೇವರ ಮೂಲಕ ಜನಸಾಮಾನ್ಯರ ಭಾವನೆಗಳನ್ನು ಕೆದಕಿ, ಅವರ ರೋಷವನ್ನು, ಕ್ರಿಯಾಶೀಲತೆಯನ್ನು ನಿರಸನ ಗೊಳಿಸಿದ್ದಾನೆ. ಈ ಮೂಲಕ ಕೋಮುಗಲಭೆ, ಮತಾಂಧತೆ ಮತ್ತು ಮೂಲಭೂತ ವಾದಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಜಾಗತೀಕರಣ ಮತ್ತು ಧರ್ಮ’ ಹಲವು ಹೊಳಹುಗಳನ್ನು ಪ್ರಸ್ತುತ ಬದುಕಿನ ಬಗ್ಗೆ ಚೆಲ್ಲಲು ಪ್ರಯತ್ನಿಸುತ್ತದೆ.

ಎಸ್. ಎಸ್. ಹಿರೇಮಠರು ತಮ್ಮ ಲೇಖನ, “ನಾಶವಾಗಬೇಕಾದುದು ಜಾತಿಯೇ, ಧರ್ಮವೇ?” ಎನ್ನುವುದರಲ್ಲಿ ಹೀಗೆ ಹೇಳಿದ್ದಾರೆ. “ತುಂಬಾ ಗೌರವಿಸಲ್ಪಡುತ್ತಿರುವ ಮತ್ತು ಪ್ರಶ್ನಾತೀತವೆಂದು ಭಾವಿಸಲಾಗಿರುವ ಧರ್ಮ ಭಾರತದ ಸಂದರ್ಭದಲ್ಲಿ ರಿಲಿಜನ್ ಅಲ್ಲ ಎಂಬುದನ್ನು ವಿದ್ವಾಂಸರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಹೀಗೆ ಹೇಳುವುದಕ್ಕೆ ವಿಶೇಷ ಅರ್ಥವಿದೆ. ಏಕೆಂದರೆ ಆರ್ಯ ವೈದಿಕರು ಹುಟ್ಟು ಹಾಕಿದ ಧರ್ಮ ಎಂಬ ವಂಚನೆಯ ಪರಿಕಲ್ಪನೆ ಮತ್ತು ಪರಂಪರೆ ಮಾಡಿದಷ್ಟು ಸಾಮಾಜಿಕ-ಆರ್ಥಿಕ ಅನ್ಯಾಯವನ್ನು ಬೇರ್ಯಾವುದೂ ಈ ದೇಶದಲ್ಲಿ ಮಾಡಿಲ್ಲ. ಅಂದರೆ ವರ್ಗ-ವರ್ಣ ಸಮಸ್ಯೆಯ ಒಂದು ಮುಖ್ಯ ಭಾಗವಾಗಿ ಈ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ” ಈ ಹೇಳಿಕೆಯನ್ನು ಸ್ವಲ್ಪ ಮುಂದುವರಿಸಿ ವರ್ಗ-ವರ್ಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಹಾಗೂ ದೇಶೀ ಮಟ್ಟದಲ್ಲಿ ಧಾರ್ಮಿಕ ಭಾಷೆಯ ಮೂಲಕ ಹೇಗೆ ಮತ್ತಷ್ಟು ಹೇರಳವಾಗುತ್ತಿದೆ ಎಂಬುದನ್ನು ಈ ಭಾಗದ ಮುಖ್ಯ ಚರ್ಚೆಯೆಂದು ಭಾವಿಸುತ್ತೇನೆ.

ಮೊದಲಿಗೆ ಧರ್ಮಪದ ಹೇಗೆ ಹುಟ್ಟಿಕೊಂಡಿತು. ಅದರ ಅರ್ಥವ್ಯಾಪ್ತಿ ಎಷ್ಟಿದೆ, ಚಾರಿತ್ರಿಕವಾಗಿ ಅದು ಹೇಗೆ ಬದಲಾಗುತ್ತಾ ಬಂದಿದೆ ಎಂಬುದನ್ನು ವಿವರಿಸಿಕೊಂಡು ವಿಶೇಷಣೆಯತ್ತ ಸಾಗೋಣ.

ಧರ್ಮ ಪದದ ಅರ್ಥ

ಸಂಸ್ಕೃತದ ಕ್ರಿಯಾಧಾತು “ರ್ಹ್ತ” (Rhta)ನಿಂದ ಧರ್ಮ ಪದ ಹುಟ್ಟಿದೆ. ಹಿಡಿ, ಆಸರೆಯಾಗಿರುವುದು, ಪೋಷಿಸುವುದು ಎಂಬಂಥಹ ಅರ್ಥಗಳನ್ನು ಅದು ಒಳಗೊಂಡಿದೆ. ವರ್ಣಾಶ್ರಮಗಳ ಕರ್ತವ್ಯ ಕ್ರಮಗಳೇ ‘ಧರ್ಮ’ ಎಂಬ ಪರಿಕಲ್ಪನೆಯನ್ನು ಮನು ಯಜ್ಞವಲ್ಕ್ಯ ಮೊದಲಾದ ಸ್ಕೃತಿಕಾರರು ಮುಂದಿಡುತ್ತಾರೆ. ಮನುವಿನ ವ್ಯಾಖ್ಯಾನಕಾರ ಮೇಧಾತಿಥಿ ಐದು ವಿಧದ ಧರ್ಮಗಳನ್ನು ಹೇಳುತ್ತಾನೆ. ೧. ವರ್ಣ, ೨. ಆಶ್ರಮ, ೩. ವರ್ಣಾಶ್ರಮ, ೪. ನೈಮಿತ್ತಿಕ ಧರ್ಮ (ಪ್ರಾಯಶ್ಚಿತ್ತದಂತೆ), ೫. ಗುಣಧರ್ಮ ಅಂದರೆ ವೈಧಿಕ ಧರ್ಮದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನೇ ಈ ಮೂಲಕ ನಿರೂಪಿಸಲಾಗಿದೆ. ಒಟ್ಟುನಲ್ಲಿ ಬ್ರಾಹ್ಮಣರ ಒಟ್ಟಾರೆ ಜೀವನವನ್ನು ಗಮನದಲ್ಲಿಟ್ಟುಕೊಂಡೇ ಧರ್ಮವನ್ನು ವ್ಯಾಖ್ಯಾನಿಸಲಾಗಿದೆ. ಆ ವೈದಿಕ ನಾಸ್ತಿಕ ಪಂಥಗಳಾದ ಜೈನ, ಬೌದ್ಧ ಧರ್ಮಗಳೂ ಸಹ ಕೊನೆಗೆ ಇದೇ ನೆಲೆಯನ್ನು ತಲುಪುತ್ತವೆ. ಧರ್ಮ ಪದಕ್ಕೆ ಸಂವಾದಿಯಾಗಿ ಮತ (ರಿಲಿಜನ್) ಪದವನ್ನು ಸಹ ಬಳಸುತ್ತಾರೆ. ಧರ್ಮ ಮತದ ತಿರುಳಾಗಿಯೂ, ಮತ ಧರ್ಮದ ಅಭಿವ್ಯಕ್ತಿಯಾಗಿಯೂ ಬಳಕೆಯಾಗುತ್ತದೆ.

ಇಂದಿನ ಎಲ್ಲ ಧರ್ಮಗಳು ಏಕಮುಖವಾಗಿ ಬದುಕಿನ ವಿಸ್ತಾರತೆಯನ್ನು ಅದರಲ್ಲಿನ ಬಹುಸ್ತರಗಳನ್ನು ಜೀರ್ಣಿಸಿಕೊಂಡು ಇವತ್ತಿನ ರಾಜಕೀಯ, ಆರ್ಥಿಕ ಹಿತಾಸಕ್ತಿಗಳನ್ನು ತನ್ನ ಒಡಲಿನೊಳಗೆ ಒಟ್ಟುಕೊಂಡಿರುತ್ತವೆ.

ಭಾರತೀಯ ಸಂದರ್ಭದಲ್ಲಿ ವೈದಿಕ ಧರ್ಮದ ಯಜಮಾನಿಕೆಯನ್ನು ವಿರೋಧಿಸಿ ಚರ್ವಾಕ ಮತ್ತು ಲೋಕಾಯುತ ಗುಂಪುಗಳು ಉದಯಿಸಿದವು. ಆದರೆ ಅವುಗಳ ಬೆಳವಣಿಗೆಯನ್ನು ಸಹಿಸದೆ ಧಾರ್ಮಿಕ ವ್ಯಕ್ತಿಗಳು ಅವರನ್ನು ಭೌತಿಕವಾದಿಗಳೆಂದು ಕರೆದು ಅವರ ಗ್ರಂಥಗಳನ್ನು ಸುಟ್ಟು ಹಾಕಿದರು. ಕ್ರಿ. ಪೂ. ಆರನೇ ಶತಮಾನದಲ್ಲಿ ಮೂಡಿಬಂದ ಬುದ್ಧ ಮತ್ತು ಮಹಾವೀರರು ಅಂದಿನ ಬುಡಕಟ್ಟು ಸಂಪ್ರದಾಯ ಪರಂಪರೆಗಳು ಹತ್ತಿಕ್ಕಲ್ಪಟ್ಟು ಸಾಮ್ರಾಜ್ಯಶಾಹಿ ಪ್ರಭುತ್ವಗಳು ತಲೆಯೆತ್ತಿದಾಗ, ಅವನ್ನು ವಿರೋಧಿಸಿದರು. ಆದರೆ ಅವರ ವಿರೋಧ ಯಥಾಪ್ರಕಾರ ಭಾವನಾವಾದಕ್ಕೆ ತೆಕ್ಕೆ ಬಿದ್ದು ಮುಗುಚಿಕೊಂಡಿತು. ಮತ-ಧರ್ಮಗಳಿಗೆ ನಿಜವಾದ ಸವಾಲು ಎದುರಾದುದು ೧೮ನೇ ಶತಮಾನದ ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞರಿಂದಲೇ. ಅವರಲ್ಲಿ ಪ್ರಮುಖರೆಂದರೆ ಕಾರ್ಲ್‌ಮಾರ್ಕ್ಸ್‌, ಸಿಗ್ಮಂಡ್‌ಫ್ರಾಯ್ಡ್‌ಹಾಗೂ ಡೇವಿಡ್‌ಹ್ಯೂಮ್‌ನವರಿಂದ.

ಕಾರ್ಲ್‌ಮಾರ್ಕ್ಸ್ ನ ಪ್ರಕಾರ, “ಧಾರ್ಮಿಕ ಯಾತನೆಯು ನಿಜ ಯಾತನೆಯ ಅಭಿವ್ಯಕ್ತಿಯಾಗಿದೆ ಹಾಗೂ ಅದೇ ವೇಳೆಯಲ್ಲಿ ನಿಜವಾದ ಯಾತನೆಯ ವಿರುದ್ಧದ ಪ್ರತಿಭಟನೆಯೂ ಆಗಿದೆ. ಮತ ಧರ್ಮವು ಶೋಷಿತ ಜೀವಿಯ ನಿಟ್ಟುಸಿರಾಗಿದೆ. ಹೃದಯಹೀನ ಜಗತ್ತಿನಲ್ಲಿ ಹೃದಯವಾಗಿ ಆತ್ಮಹೀನ ಪರಿಸ್ಥಿತಿಗಳ ಆತ್ಮವಾಗಿದೆ. ಅದು ಜನರ ಅಫೀಮು (ಮಾದಕ ವಸ್ತು) ಆಗಿರುತ್ತದೆ. ” ಅಂದರೆ ಜನರ ಬದುಕಿನಲ್ಲಿ ತಲೆದೋರವ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮರೆಸಿ, ಅವರ ಸಾಂಸ್ಕೃತಿಕ ಚರಿತ್ರೆಯನ್ನು ವಿಸ್ಕೃತಿಗೆ ತಳ್ಳಿ, ಚರಿತ್ರಹೀನ ಸಮುದಾಯವನ್ನಾಗಿ ಮಾಡಲಾಗುತ್ತದೆ. ಆದ್ದರಿಂದ ಮಾರ್ಕ್ಸ್‌ನ ಪ್ರಕಾರ, “ಧರ್ಮವನ್ನು ಒಂದು ಭ್ರಾಮಕ ಸುಖವನ್ನಾಗಿ ನಾಶಪಡಿಸುವುದು, ಜನರ ನಿಜವಾದ ಸುಖಕ್ಕಾಗಿ ಒತ್ತಾಯಿಸುವುದೇ ಆಗಿರುತ್ತದೆ. (To abolish religion as the illusory happiness of the people is to demand their real happiness) ಹಾಗೆಯೇ ಮತ್ತೊಬ್ಬ ತತ್ತ್ವಶಾಸ್ತ್ರಜ್ಞ ಫ್ರೆಡ್ರಿಕ್ ನಿಶೆ ‘ದೇವರು ಸತ್ತ’ ಎಂಬ ಪುಸ್ತಕದಲ್ಲಿ ದೇವಕಲ್ಪನೆ ಮಾನವನ ಪ್ರಗತಿಗೆ ಮಾರಕ ಎನ್ನುತ್ತಾರೆ. ಈತನ ಅಭಿಪ್ರಾಯದಲ್ಲಿ ಎಲ್ಲಿ ನೋವು, ದುಃಖವಿರುತ್ತದೊ ಅಲ್ಲಿ ಧರ್ಮ ಗುರುಗಳು ರಣಹದ್ದುಗಳಂತೆ ಎರಗಿ, ಜನರಲ್ಲಿ ನರಕದ ಕಲ್ಪನೆಯನ್ನು ಬಿತ್ತಿ, ಭಯ ತುಂಬಿಬಿಡುತ್ತಾರೆ. ಸಿಗ್ಮಂಡ್ ಫ್ರಾಯ್ಡ್ ತನ್ನ ಪುಸ್ತಕ ‘ಧರ್ಮಗಳ ಹುಟ್ಟಿನಲ್ಲಿ’ ವ್ಯಕ್ತಿ ತನ್ನ ಇಂಗದ ಬಯಕೆಗಳ. ಈಡೇರಿಕೆಗಾಗಿ ಅವಾಸ್ತವಿಕವಾದ ಧರ್ಮದ ಮೊರೆ ಹೋಗುತ್ತಾರೆ (ವ್ಯಕ್ತಿ ನರಕದಲ್ಲಿ ನಿಂತು ಸ್ವರ್ಗವನ್ನು ಯೋಚಿಸುತ್ತಿರುತ್ತಾನೆ).

ಹೀಗೆ ಅನೇಕರು ಅನೇಕ ವಿಚಾರಗಳನ್ನು ಮುಂದಿಟ್ಟು ಈ ಪರಾಪಂಚಿಕ ಸತ್ಯವನ್ನು ನಿರೂಪಿಸಲು, ಅಲೌಕಿಕ ಸತ್ಯವನ್ನು ಪರದ ಕಲ್ಪನೆಯನ್ನು ಹೊರದೂಡಬೇಕೆನ್ನುತ್ತಾರೆ. ಅವರೇನೇ ಹೇಳಿದ್ರೂ ಇಂದು ದೇವಾಲಯಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡು ಸಮುದಾಯದ ಸಾಂಸ್ಕೃತಿಕ ಸ್ವಪ್ರಜ್ಞೆಯನ್ನು ತಪ್ಪು ದಾರಿಗೆ ಎಳೆಯುತ್ತಿವೆ.

ಪ್ರಭುತ್ವ/ ರಾಜತ್ವ ಮತ್ತು ಧರ್ಮ ಚಾರಿತ್ರಿಕವಾಗಿ

ಚರಿತ್ರೆಯಲ್ಲಿ ಧರ್ಮ ಯಾವಾಗಲೂ ಆಳುವ ವರ್ಗದ ಅನುಕೂಲಕ್ಕಾಗಿ ಒಂದು ಸಾಧನವಾಗಿ ಬಂದಿದೆಯಷ್ಟೆ ಅಥವಾ ಯಾವುದೇ ಒಂದು ಗುಂಪು ಸಾಮಾಜಿಕವಾಗಿ, ರಾಜಕೀಯವಾಗಿ ಮೇಲೇಳಲು ಧರ್ಮ ಒಂದು ಅನುಕೂಲಕರ ಸಾಧನವನ್ನಾಗಿ ಉಪಯೋಗಿಸಲಾಗಿದೆ. ಏಕೆಂದರೆ ಧರ್ಮ ಜನರ ಭಾವನೆಗಳಿಗೆ ಅಭಿವ್ಯಕ್ತಿಯಾಗಿರುವುದರಿಂದ. ವ್ಯಕ್ತಿಯೊಬ್ಬ ತನ್ನ ಕಡೆ ಆದಷ್ಟು ಜನರನ್ನು ಸೆಳೆದುಕೊಳ್ಳಬಹುದು. ಹಾಗಾಗಿ ಧರ್ಮ ರಾಜಕೀಯದೊಂದಿಗೆ ಬೆಸೆದುಕೊಂಡಿರುತ್ತದೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಅನುಭೂತಿಯೂ ಒಂದು ನಿರ್ದಿಷ್ಟ ಸಮಾಜದ, ಒಂದು ಕಾಲದ ರಾಜಕೀಯ ಮತ್ತು ಧಾರ್ಮಿಕ ಸಂಬಂಧಗಳನ್ನು ಒಳಗೊಂಡೇ ರೂಪುಗೊಂಡಿರುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಇದಕ್ಕೆ ನರಸಿಂಹರಾವ್ ಮತ್ತು ಚಂದ್ರಸ್ವಾಮಿ, ದೇವೇಗೌಡ ಮತ್ತು ಆದಿ ಚುಂಚನಗಿರಿ ಮಠ. . . . ಇತ್ಯಾದಿಯಾಗಿ ಅನೇಕ ಉದಾಹರಣೆಗಳನ್ನು ನೋಡಬಹುದು. ಹೀಗಾಗಿ ರಾಜಕೀಯ ಮತ್ತು ಧಾರ್ಮಿಕ ಸಂಬಂಧಗಳು ಒಂದರೊಡನೆ ಮತ್ತೊಂದು ಬೆಸೆದುಕೊಂಡಿರುವುದರಿಂದ ಹೊರತುಪಡಿಸಿ ನೋಡುವ ನೋಟದಿಂದ ವಸ್ತುಸ್ಥಿತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಹೀಗೆ ರೂಪುಗೊಂಡ ಪ್ರಭುತ್ವಗಳು ಧರ್ಮ ಪೀಠಗಳ ದಿಗ್ದರ್ಶನಕ್ಕೆ ಜೋತುಬಿದ್ದು ಗೊರಕೆ ಹೊಡೆಯುತ್ತವೆ. ಅಲ್ಲದೆ ಪ್ರಪಂಚದ ಬಗೆಗಿನ ದೃಷ್ಟಿಯನ್ನು ತಿರುವು ಮುರುವು ಮಾಡಿ ತೋರುತ್ತವೆ. ಹೀಗೆ ಮನುಷ್ಯನ ಆಲೋಚನೆಯ ಮೇಲೆ ಧಾರ್ಮಿಕ ವಿಚಾರಗಳ ಅನಿಷ್ಟಕಾರಿ ಹೊಡೆತ ಬೀಳುತ್ತದೆ. ಇದರಿಂದ ಸಮಾಜ ಜೀವನದಲ್ಲಿ ಭ್ರಾಮಕ ಕಲ್ಪನೆ, ಭೀತಿಯೇ ಮೊದಲಾದ ವಿಚಾರಗಳು ಬೆಳೆಯುತ್ತವೆ.

ಪ್ರಭುತ್ವ ಮತ್ತು ಧರ್ಮಗಳು ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡರೂ ಕೂಡ ಕ್ರಿಯಾವರ್ತನೆಯಲ್ಲಿ ಎರಡು ಒಂದೇ. ಧರ್ಮದ ವಿಮರ್ಶೆಯೆಂದರೆ ಅದರಲ್ಲಿನ ತತ್ತ್ವಾರ್ಥ ವ್ಯಾಖ್ಯಾನ ಎಂದು ನಂಬಲಾಗಿದೆ. ಆದರೆ ಅದೊಂದು ತಪ್ಪು ಕಲ್ಪನೆ ಮಾತ್ರವಲ್ಲ, ಸಮಾಜ ವಿರೋಧಿ ಧೋರಣೆಯೂ ಆಗುತ್ತದೆ. ಸಾಮಾಜಿಕ ಸಂಬಂಧ ಮತ್ತು ಉತ್ಪಾದನೆಗೆ ಧರ್ಮ ಹೇಗೆ ಅಪಾಯ ತಂದೊಡ್ಡಿದೆಯೆಂಬ ಅಂಶವು ೧೦ನೇ ಶತಮಾನದ ಕರ್ನಾಟಕವನ್ನು ಗಮನಿಸಬಹುದು. ಅಲ್ಲಿ ಧರ್ಮ ಶ್ರದ್ಧೆಯ ಆಂತರ್ಯದಲ್ಲಿ ಜಾತಿ, ರಾಜಕಾರಣ ಬೆರೆತುಕೊಂಡಿರುತ್ತದೆ. ರಾಜತ್ವವನ್ನು ಕುರಿತ ಆಧ್ಯಾತ್ಮಿಕ ವಿವರಣೆ (ರಾಜ ಪ್ರತ್ಯಕ್ಷ ದೇವತೆ) ಆ ಹೊತ್ತಿನ ವಿವಿಧ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡಿರುವುದಾಗಿದೆಯೆಂದು ಕಿ. ರಂ. ನಾಗರಾಜರವರ ಅಭಿಪ್ರಾಯ. ಅವರೇ ವಿವರಿಸುವಂತೆ ರಾಜ್ಯವು ದೇವತೆಗಳಿಂದ ಮತ್ತು ಬಲ್ಲವರಿಂದ ಆಳಲ್ಪಡುತ್ತದೆ. ಏಕೆಂದರೆ ಪುರೋಹಿತರು ಮತ್ತು ಬಲ್ಲವರು ಇಡೀ ಜಗತ್ತಿನ ಚಲನೆಯ ಸ್ವರೂಪವನ್ನು ತಿಳಿದವರೆಂದು ನಂಬಲಾಗಿತ್ತು. ಮಾರುಕಟ್ಟೆಯಲ್ಲಿ ದೊರಕುವ ವಸ್ತುವೇ ಮ್ಯಾಜಿಕ್ ಸಂದರ್ಭದಲ್ಲಿ ಮತ್ತೆ ಕಾಣುವಂತೆ ರಾಜನು ಪುರೋಹೊತರ ಮ್ಯಾಜಿಕ್ಕಿನ ವಾಹಕನಾಗಿದ್ದ. ರಾಜತ್ವ ನೆಲೆಗೊಳ್ಳಲು ಅಗತ್ಯವಾದ ನೈತಿಕ ಕರ್ತವ್ಯದಲ್ಲಿ ಮಗ್ನತೆ ಮತ್ತು ತಮ್ಮ ತಮ್ಮ ಸ್ಥಾನಗಳಲ್ಲಿ ವಿಚಲಿತಗೊಳ್ಳದಿರುವಂತೆ ಮಾಡುವ ಪುರೋಹಿತ ವರ್ಗದ ಬುದ್ಧಿವಂತಿಕೆ ಕಾರಣವಾಯ್ತು. ಹೀಗೆ ಧರ್ಮದಿಂದ ನಿಯಂತ್ತಿತವಾದ ರಾಜ್ಯವನ್ನು ರಕ್ಷಿಸುವುದು ರಾಜನ ಕೆಲಸವಾಗಿತ್ತು. ಸಾಮ, ದಾನ, ಭೇದ ಮತ್ತು ದಂಡ ಇವುಗಳನ್ನು ಅಧಿಕಾರದ ಭದ್ರತೆಗೆ ಭಂಗ ಬಂದರೆ ಅದಕ್ಕೆ ಕಾರಣರಾದವರನ್ನು ದಂಡಿಸುವ ಪದ್ಧತಿ ಮುಖ್ಯವಾಗಿತ್ತು. ಸತ್ಯ-ಧರ್ಮ-ನ್ಯಾಯಗಳ ಮಾತು ರಾಜನ ಪರವಾದ ಮಾತುಗಳೇ ಹೊರತು ಅದರ ಯಥಾರ್ಥ ವಿವೇಚನೆ ಮುಖ್ಯವಾಗಿರಲಿಲ್ಲ. ಇದನ್ನೇ ಧರ್ಮ ಪೀಠಗಳು ಆಗ್ರಹಿಸುತ್ತಿದ್ದವು. ಪ್ರಭುತ್ವಕ್ಕೆ ವಿರೋಧಿ ಮನ್ನಿಸಲಾಗುತ್ತಿರಲಿಲ್ಲ. ವ್ಯವಸ್ಥಿತವಾದ ಹೋರಾಟದಿಂದ ಗೊಂದಲವನ್ನು ಪರಿಹರಿಸಿಕೊಂಡು ನಡೆಯುವ ವ್ಯವಸ್ಥೆಯ ಚಿತ್ರ ‘ಮತ್ಸ್ಯನ್ಯಾಯ’ದಲ್ಲಿ ಕಾಣಬಹುದು. ಅಂದರೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗುವುದು. ಸಣ್ಣ ಮೀನು ತನಗಿಂತ ಸಣ್ಣ ಮೀನನ್ನು ನುಂಗುವುದು. ಇವತ್ತಿನ ಆರ್ಥಿಕ ಜಾಗತೀಕರಣದಲ್ಲೂ ಇದೇ ಬಹಳ ವ್ಯವಸ್ಥಿತವಾಗಿ ನಡೆದಿದೆಯಷ್ಟೆ. ಇಲ್ಲಿ ಮುಖ್ಯವಾಗಿ ಒಂದು ಸಂಗತಿಯನ್ನು ಗಮನಿಸಬೇಕು. ಹಿಂಸೆ ರಾಜತ್ವ-ದೈವತ್ವಗಳಲ್ಲಿ ಮೂಲಭೂತವಾಗಿ ಬೇರೂರಿದ್ದರೂ ಸಹ ‘ಅಹಿಂಸೆ’ಯನ್ನು ಉಪದೇಶಿಸಲಾಗುತ್ತಿತ್ತು. ಅಂದರೆ ಧರ್ಮ ರಾಜತ್ವದ ಮೂಲಕ ವರ್ತಕ ಸಮಾಜವನ್ನು ಮುನ್ನಡೆಸುತ್ತಿತ್ತು.

ಈ ಮೇಲಿನ ಚರ್ಚೆಯನ್ನು ಸಂಕ್ಷಿಪ್ತಗೊಳಿಸುವುದಾದರೆ ಪ್ರಭುತ್ವ/ ರಾಜತ್ವ, ಹುಟ್ಟು-ಸಾವು ಧರ್ಮದ ಉನ್ನತಿ ಮತ್ತು ಪತನ ಇವುಗಳ ನಡುವೆ “ಅಧಿಕಾರ” ಮುಖ್ಯವಾಗಿರುತ್ತದೆ. ಈ ‘ಅಧಿಕಾರ’ ವರ್ಗದಲ್ಲೇ ಉಳಿದುಕೊಳ್ಳುತ್ತದೆ. ಹೀಗೆ ಧರ್ಮ ಉದಯದಲ್ಲಿ ಸಾಮಾಜಿಕವಾಗಿ, ಅನಂತರದಲ್ಲಿ ಅದು ಬೆಳೆಯಲು ರಾಜಕೀಯ ಅಸ್ತ್ರವಾಗುತ್ತದೆ. ಮುಂದೆ ಸಂಪತ್ತನ್ನೂ ಕ್ರೋಢೀಕರಿಸುವ ಸಂಸ್ಥೆಯಾಗುತ್ತದೆ.

ಜಾಗತೀಕರಣದ ಸಂದರ್ಭದಲ್ಲಿ ಧರ್ಮದ ವಿಶ್ಲೇಷಣೆ

ಯಾವುದೇ ಸಮುದಾಯ ಅಥವಾ ಗುಂಪು ಉತ್ಪಾದನಾ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ಆ ನಿಯಂತ್ರಣವನ್ನು ಕಾಯ್ದುಕೊಳ್ಳಲು ತನ್ನ ಹೊಟ್ಟೆಯೊಳಗಿನಿಂದಲೇ ಒಬ್ಬ ಪ್ರವಾದಿಯನ್ನು ಹುಟ್ಟುಹಾಕುತ್ತದೆ. ಅದರ ಮೂಲಕ ಬದಲಾಗುತ್ತಿರುವ ಉತ್ಪಾದನಾ ಸಂಬಂಧಗಳಿಗೆ ತಕ್ಕಂತೆ ಅಧಿಕಾರವನ್ನು ಹೊಂದಿಸಿಕೊಳ್ಳುತ್ತವೆ. ಕಾರ್ಲ್ ಮಾರ್ಕ್ಸ್‌ಹೇಳುವಂತೆ ಧರ್ಮವಿಲ್ಲದೆ ಸಂಪತ್ತು ನಗರ ಕೇಂದ್ರಗಳಿಗೆ ಹರಿಯುವುದಿಲ್ಲ. ಇನ್ನೊಂದು ಅತ್ಯುತ್ತಮ ನಿದರ್ಶನವೆಂದರೆ ಮಾರ್ವಾಡಿಗಳು. ಅವರು ಗೋವುಗಳನ್ನು ಪೂಜಿಸುತ್ತಲೇ ವ್ಯಾಪಾರದಲ್ಲಿ ತೊಡಗಿ ಕೊಳ್ಳೆ ಹೊಡೆಯುವುದನ್ನು ಎಲ್ಲೂ ಕಾಣಬಹುದಾಗಿದೆ. ಹೀಗೆ ಸಂಪತ್ತನ್ನು ಕ್ರೋಢೀಕರಿಸಲು ಧರ್ಮ ಕೇಂದ್ರಗಳು, ದೇವಸ್ಥಾನಗಳು ನಾಯಿಕೊಡೆಗಳಂತೆ ಏಳುತ್ತಿವೆ. ಆದ್ದರಿಂದ ಹಿಂದಿನ ಮ್ಯಾಜಿಕ್ ನಿಂದ ಇವತ್ತಿನ ವಿಜ್ಞಾನದ ತನಕ ಧರ್ಮ ತನ್ನ ಯಜಮಾನಿಕೆಯನ್ನು ನಿರಂತರವಾಗಿ ಉಳಿಸಿಕೊಳ್ಳುತ್ತಲೇ ಬಂದಿದೆ. ಮೊನ್ನೆ ತರಂಗದಲ್ಲಿ ಪ್ರಕಟವಾದ ‘ಪ್ರಳಯ’ವು ಸಹ ಅಂತಹ ಯಜಮಾನಿಕೆಯನ್ನು ಉಳಿಸಿಕೊಳ್ಳಲು ಮಾಡಿದ ಚಾತುರ್ಯವಷ್ಟೆ.

೧೯ನೆಯ ಶತಮಾನದಲ್ಲಿ ವಸಾಹತುಶಾಹಿ ಮಿಲಿಟರಿ-ಸೈನ್ಯದ ಮೂಲಕ ಆಕ್ರಮಣವನ್ನು ಕೈಗೊಂಡಿತು. ಅದನ್ನು ಧರ್ಮ ಆಶೀರ್ವಾದಿಸಿ, ಅವಿಶ್ವಾಸಿಗಳನ್ನು (ಸ್ಥಳೀಯರನ್ನು) ಗೆಲ್ಲುವಂತೆ ಆದೇಶಿಸಿತು. ಇದಕ್ಕೆ ಬೇಕಾದಷ್ಟು ನಿದರ್ಶನಗಳು ಚರಿತ್ರೆಯಲ್ಲಿ ಸಿಗುತ್ತವೆ. ೧೯ನೇ ಶತಮಾನದಲ್ಲಿ ಬಂಡವಾಳಶಾಹಿ ಅಂದರೆ ವ್ಯಾಪಾರಸ್ಥ ವರ್ಗ ಧರ್ಮ ಕ್ರೋಢೀಕರಿಸಿಟ್ಟ ಆಸ್ತಿಗೆ ಲಗ್ಗೆಯಿಟ್ಟಾಗ ಧರ್ಮ ತುಸು ಹಿಂದೆ ಸರಿದು, ರಾಜಕೀಯ ವ್ಯಾಪಾರ ತನಗೆ ಸಂಬಂಧಿಸಿಲ್ಲವೆಂಬ ನಿಲುವನ್ನು ತಾಳಿತು. ಈ ರೀತಿ ಮಾಡಿ, ತನ್ನಲ್ಲಿದ್ದ ಸಂಪತ್ತನ್ನು ದೊಡ್ಡ ದೊಡ್ಡ ಕಂಪನಿಗಳಲ್ಲಿ ತೊಡಗಿಸಿತಷ್ಟೆ. ಆ ಮೂಲಕ ಮತ್ತಷ್ಟು ಲಾಭ ಪಡೆಯುವುದೇ ಆಗಿದೆ. ಚರ್ಚ್‌, ಮಸೀದಿ ಮತ್ತು ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಬಾಡಿಗೆಗೆ, ವ್ಯಾಪಾರಕ್ಕೆ ಕಟ್ಟಡಗಳು ಎಷ್ಟೊಂದು ಇವೆ ಎಂಬುದನ್ನು ಎಲ್ಲ ನಗರಗಳಲ್ಲೂ ಕಾಣಬಹುದು. ಹೀಗೆ ಕೈಗಾರಿಕಾ ಕ್ರಾಂತಿಯು ವಸಾಹತುಶಾಹಿಯನ್ನು ಎರಡು ಸಾಧನಗಳ ಮೂಲಕ ಸ್ಥಾಫಿಸುತ್ತದೆ.

೧. ಆರ್ಥಿಕ: ಈ ಮೂಲಕ ರೂಢಿಗತ ಬೇಸಾಯವನ್ನು ಬೆಂಬಲಿಸುವ ಘಟನೆಯಲ್ಲೇ ವಾಣಿಜ್ಯ ಬೆಳೆಗಳಿಗೆ ಒತ್ತು ನೀಡಿ ಸಂಪನ್ಮೂಲಗಳನ್ನು ದೋಷಲಾಗುತ್ತದೆ.

೨. ಧಾರ್ಮಿಕ: ಕ್ರೈಸ್ತದ ಧರ್ಮದ ಪ್ರಚಾರ ಮತ್ತು ದೇಶೀ ಎನ್ನುವುದು ಹಾಗೇ ಉಳಿದುಕೊಳ್ಳಲು ಅನುವು ದೊರೆತದ್ದು.

ಅಂದರೆ ಧರ್ಮವು ಸೇವೆಯ ಹೆಸರಿನಲ್ಲಿ ಜನರ ಮನಸ್ಸುಗಳನ್ನು ತಿದ್ದಿ, ಹೊಸ ಜಾಗತೀಕರಣದ ವ್ಯವಸ್ಥೆಗೆ ಬುನಾದಿಯನ್ನು ೧೯ನೇ ಶತಮಾನದಲ್ಲೇ ಹಾಕಿತು. ೨೦ನೆಯ ಶತಮಾನದಲ್ಲಿ ಇರುವ ವ್ಯವಸ್ಥೆಗೆ ತಕ್ಕಂತೆ ಧರ್ಮ ಜನರಿಗೆ ಅರ್ಥವಂತಿಕೆಯ ಮುಖವಾಡವನ್ನು ಹೊತ್ತು ಸಾರ್ವಜನಿಕ ಕ್ಷೇತ್ರಗಳಾದ ಶಿಕ್ಷಣ, ವೈದ್ಯಕೀಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿದೆ. ಈ ಮೂಲಕ ಜಾಗತೀಕರಣಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ತಯಾರಿಸುತ್ತೆನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದರಿಂದಾಗಿಯೇ ೧೯೭೩ರಲ್ಲಿ ಭಾರತದಲ್ಲಿ ೭೪೦ರಷ್ಟು ಇದ್ದ ಪಾಶ್ಚಾತ್ಯ ಕಂಪನಿಗಳು ೧೯೭೭ರ ಹೊತ್ತಿಗೆ ೮೪೯೮ ಆದವೆಂದು ಸ್ಟ್ಯಾನಿ ಲೂರ್ದಸ್ವಾಮಿ ತಮ್ಮ ಪುಸ್ತಕ ರಿಲಿಜನ್ ಒಂದು ರಾಜಕೀಯ ಆಯುಧದಲ್ಲಿ ಹೇಳಿದ್ದಾರೆ. ಜಗತ್ತಿನಲ್ಲಿರುವ ಪ್ರಮುಖ ೫೦ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ೨೩ ಇಂದು ಭಾರತದಲ್ಲಿ ಕ್ರಿಯಾಶೀಳವಾಗಿದೆ. ಈ ಕಂಪನಿಗಳು ಮಾರ್ಕೆಟ್‌ನ ಮೂಲಕ ಜನರ ಯಾವತ್ತೂ ಅಭಿರುಚಿಗಳನ್ನು ತೀಡಿ ಬೆಳೆಸುತ್ತಿದ್ದರೆ, ಧರ್ಮ ಜನರ ಅತೃಪ್ತ ಭಾವನೆಗಳಿಗೆ ರಹದಾರಿಯನ್ನು ಒದಗಿಸಿ, ಅವರು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಬಹಳ ನಾಜೂಕಾಗಿ ಮಾಡುತ್ತವೆ. ನಮಗದು ಸಹಜವೂ, ವೈಜ್ಞಾನಿಕವೂ ಆಗಿ ನ್ಯಾಯಬದ್ಧವಾಗಿ ಕಾಣುತ್ತದೆ.

ಏಕದೈವದಲ್ಲಿನ ‘ಭಕ್ತಿ’ ಇಂದು ವ್ಯಕ್ತಿಯನ್ನು ಕೇಂದ್ರೀಕರಣದತ್ತ ಹೊಯ್ದು ಜಾಗತೀಕರಣಕ್ಕೆ ಬಿಗಿಯುತ್ತದೆ. ಇದನ್ನು ಸ್ವಲ್ಪ ವಿವರವಾಗಿ ಚರ್ಚಿಸುವುದಾದರೆ ಇವತ್ತಿನ ಮಾರುಕಟ್ಟೆಯಲ್ಲಿ ಉತ್ಪಾದಕ, ಉತ್ಪಾದನೆ ಮತ್ತು ಗ್ರಾಹಕ ಇರುವಂತೆ ಧಾರ್ಮಿಕ ಪರಿಸರದಲ್ಲೂ ಅದೇ ಅಂಶಗಳನ್ನು ಕಾಣಬಹುದು. ಒಬ್ಬ ಧರ್ಮ ಗುರು ಇಲ್ಲಿ ಉತ್ಪಾದಕನಾಗುತ್ತಾನೆ. ಅವನು ಉತ್ಪಾದಿಸುವ ವಸ್ತುಗಳೆಂದರೆ ಪೂಜೆ, ಸಂಸ್ಕಾರ, ಜಪನ, ಮಂತ್ರ ಇತ್ಯಾದಿ. ಚರ್ಚ್‌ಮಸೀದಿ ಮತ್ತು ದೇವಸ್ಥಾನಗಳೆಂಬ ಮಾರ್ಕೆಟ್‌ನಲ್ಲಿ ಭಕ್ತರು (ಗ್ರಾಹಕರು) ಬಂದು ಪೂಜೆ, ಸಂಸ್ಕಾರ, ಜಪ, ಮಂತ್ರ ಇತ್ಯಾದಿಗಳನ್ನು ಸ್ವೀಕರಿಸುತ್ತಾರೆ. ದೈನಂದಿನ ಜಂಟಾಟದಲ್ಲಿ ಮುಳುಗಿರುವ ಮಾನವರು ಕ್ಷಣ ಹೊತ್ತು ಈ ಧಾರ್ಮಿಕ ಮಾರ್ಕೆಟ್‌ನಲ್ಲಿ ಕೂತು ನೆಮ್ಮದಿಯ ನಿಟ್ಟುಸಿರು ಬಿಟ್ಟು, ‘ಇಲ್ಲಿ ಇರುವುದು ಸುಮ್ಮನೆ, ಅಲ್ಲಿದೆ ನಮ್ಮನೆ’ ಎಂದು ಮೈಮರೆತು, ಹೊರಗೆ ಬಂದಾಕ್ಷಣ ಮಾರ್ಕೆಟ್ ಮಾಯಾಮೃಗಕ್ಕೆ ಡಿಕ್ಕಿ ಹೊಡೆದು ಶರಣಾಗುತ್ತಾರೆ. ಹಾಗಾಗಿ ಇಂದು ಧರ್ಮ ಮತ್ತು ಜಾಗತೀಕರಣಗಳ ಮಧ್ಯೆ ಜನಸಾಮಾನ್ಯ ಹೇಗಾಗಿದ್ದಾನೆಂದರೆ, ಕೋಣಗಳೆರಡೆ ಮಧ್ಯೆ ಗಿಡ ಬಡವಾಯ್ತು” ಎಂಬಂತೆ ಕ್ಷೀಣಿಸುತ್ತಿದ್ದಾನೆ. ಏಕೆಂದರೆ ಧರ್ಮ ಭಾವನಾತ್ಮಕವಾಗಿ ವ್ಯಕ್ತಿಯನ್ನು ಮರೆಮಾಚುತ್ತದೆ. ಇದನ್ನೆ ನಾನು ‘ಮಿಥ್ಯಾಪ್ರಜ್ಞೆ’ ಎಂದು ಕರೆಯುವುದು. ಅಂದರೆ ಧರ್ಮ ಜನರನ್ನು ಭ್ರಮೆಯ ಜಾಲದೊಳಗೆ ಕಟ್ಟುಹಾಕುತ್ತದೆ. ಈ ಕ್ರಿಯೆ ಭ್ರಮಾತ್ಮೀಕರಣ ಸ್ಥಿತಿಗೆ ಒಳಪಟ್ಟಾಗ ವಾಸ್ತವದಲ್ಲಿ ಏನು ಸಂಭವಿಸುತ್ತಲಿದೆ ಹಾಗೂ ಏನು ಆಡಲಾಗುತ್ತಿದೆ ಎಂಬ ಬಗೆಗೆ ಒಂದು ರೀತಿಯ ಹುಸಿ ಕಲ್ಪನೆಯನ್ನು ಸೃಷ್ಟಿಸುತ್ತದೆ. ಹಾಗಾಗಿ ಇಂದಿನ ಮಾರ್ಕೆಟ್ ಸಂಸ್ಕೃತಿಗೆ ಜನ ಬೇಗ ಮರುಳಾಗಿ ಬಿಡುತ್ತಾರೆ.

ಈ ಭ್ರಮಾತ್ಮೀಕರಣಕ್ಕೆ ಎರಡು ಆಯಾಮಗಳಿವೆ. ೧. ಭ್ರಮೆಗೆ ಒಳಪಡಿಸುತ್ತಿರುವ ಕ್ರಿಯೆ. ೨. ಈಗಾಗಲೇ ಭ್ರಮೆಗೆ ಒಳಪಟ್ಟಿರುವ ಸ್ಥಿತಿ. ಭ್ರಮೆಗೆ ಒಳಪಡಿಸುತ್ತಿರುವ ಕ್ರಿಯೆಯೆಂದರೆ ಬೇರೆಯವರನ್ನು ಗೊಂದಲಕ್ಕೀಡು ಮಾಡುವುದು, ತಮ್ಮವರಲ್ಲದರಿಂದ ಏನನ್ನೋ ಮರೆಮಾಚುವುದು. ಸೂಕ್ಷ್ಮ ವಿರಗಳನ್ನು ಗೋಜಲುಗೊಳಿಸುವುದು, ಅನುಭವ ಕ್ರಿಯೆ-ಪ್ರಕ್ರಿಯೆಗಳನ್ನು ಮುಚ್ಚಿಟ್ಟು ನಿಗೂಢಗೊಳಿಸುವದು. ನೈಜ ಸಂಗತಿಗಳ ಮೇಲೆ, ವಾಸ್ತವ ವಿಷಯಗಳ ಮೇಲೆ ಪರದೆ ಎಳೆದ ಕಾರಣವಾಗಿ ತೆರೆಮರೆಯಲ್ಲಿ ನಿಜಕ್ಕೂ ಸಂಗತಿಗಳ ಮೇಲೆ, ವಾಸ್ತವ ವಿಷಯಗಳ ಮೇಲೆ ಪರದೆ ಎಳೆದ ಕಾರಣವಾಗಿ ತೆರೆಮರೆಯಲ್ಲಿ ನಿಜಕ್ಕೂ ಏನು ಘಟಿಸುತ್ತಿದೆ ಎಂಬ ವಿವೇಚನೆ ತಪ್ಪಿ ಹೋಗಿ, ಭ್ರಮೆ-ವಾಸ್ತವಗಳ ಕುರಿತಾಗಿ ನೈಜ ವಿವೇಕವೂ ಇಲ್ಲವಾಗುತ್ತದೆ. ಹೀಗಾದಾಗ ನಿಜಗಳ ಬದಲು ಮಿಥ್ಯೆಗಳು ಮುನ್ನೆಲೆಯಲ್ಲಿ ವಿಜೃಂಭಿಸುತ್ತವೆ. ಜನರು ಮಿಥ್ಯೆಗಳೊಡನೆ ಗುದ್ದಾಡುತ್ತಾ ತಮ್ಮ ಸೃಜನಾಶೀಲತೆಯನ್ನು ಹುಸಿಗೊಳಿಸುತ್ತಾರೆ. ಇಂದು ಧರ್ಮ ಮತ್ತು ತಂತ್ರಜ್ಞಾನ ಎರಡೂ ಜನರನ್ನು ಈ ಕ್ರಿಯೆಗೆ ಒಳಪಡಿಸುತ್ತಿದೆ.

ಭ್ರಮೆಗೆ ಒಳಪಟ್ಟ ಸ್ಥಿತಿಯೇ ಗೊಂದಲದಲ್ಲಿರುವ ಭಾವವನ್ನು ವಿಶದೀಕರಿಸುತ್ತದೆ. ಈ ಭಾರವನ್ನು ಭ್ರಮೆಯ ಕ್ರಿಯೆಯೇ ಉಂಟುಮಾಡುತ್ತದೆ. ಇಂಥಲ್ಲಿ ಗೊಂದಲದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾರದ್ದಾಗಿರುತ್ತದೆ. ಗೊಂದಲದಲ್ಲಿದ್ದರೂ ಗೊಂದಲದಲ್ಲಿದ್ದೇವೆ ಎಂಬ ಪ್ರಜ್ಞೆ ಅಲ್ಲಿ ಇರುವುದಿಲ್ಲ. ಆದ್ದರಿಂದ ಅಲ್ಲಿ ಆಳುವ ಅಳಿಸಿಕೊಳ್ಳುವವ, ಕೂಲಿಯವ, ಯಜಮಾನ, ದುಡಿಯುವವ-ತಿನ್ನುವವ ಇವರ ಮಧ್ಯೆ ಸಂಘರ್ಷವೇ ಗೌಣವಾಗಿಬಿಡುತ್ತದೆ. ಆಗಾಗ್ಗೆ ಸಂಘರ್ಷದ ತೀವ್ರತೆ ಕಂಡುಬಂದರೂ ಅದಕ್ಕೆ ಭ್ರಮೆಯ ಕವಚವನ್ನು ಹೊಸಿದಲಾಗುತ್ತದೆ. ಇಂಥ ಸಂದರ್ಭಗಳೇ ಮಿಥ್ಯಾಶಾಂತಿ, ಸುಳ್ಳು ಸುಭೀಕ್ಷೆ, ಸ್ವರ್ಗ-ಸಾಮ್ರಾಜ್ಯ, ರಾಮರಾಜ್ಯ, ಸುವರ್ಣಯುಗ, ಧರ್ಮ ಸಮನ್ವಯ, ಜಾತ್ಯಾತೀತ ರಾಷ್ಟ್ರ ಮುಂತಾಗಿ ಚರಿತ್ರೆಯನ್ನು ನೇಯಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ಪರಿಕಲ್ಪನೆಗಳಾದ ಆತ್ಮ, ಕರ್ಮ, ಪುನರ್ಜನ್ಮ, ಪಾಪ-ಪುಣ್ಯ, ಸ್ವರ್ಗ-ನಗರ, ಇತ್ಯಾದಿಗಳನ್ನು ಇಂದು ವ್ಯಕ್ತಿಯ ಘಟನೆಗಳಿಗೆ ಹೊಂದಿಸಲಾಗುತ್ತದೆ. ಇಲ್ಲಿ ವ್ಯಕ್ತಿ ತನ್ನ ಘಟನೆಗಳಿಗೆ ತಾನು ಜವಾಬ್ದಾರನಲ್ಲನೆಂಬ ಸ್ಥಿತಿ ನಿರ್ಮಾಣವಾಗಿ ಕಾಣದ ಶಕ್ತಿಗೆ ಮೊರೆ ಹೋಗುತ್ತಾನೆ. ಈ ಕರಿಯೆಯೇ ಮುಂದುವರಿದು ಇವತ್ತಿನ ಉತ್ಪಾದನಾ ಸಂಬಂಧಗಳಲ್ಲಿ ದುಡಿಯುವವ ಮತ್ತು ತಿನ್ನುವವನ ಮಧ್ಯೆ ಗೊತ್ತಿಲ್ಲದ ಸಂಬಂಧ ವ್ಯಾಪಾರದಲ್ಲಿ ಒಳಗೊಳ್ಳುತ್ತದೆ. ಕೊನೆಗೆ ವ್ಯಕ್ತಿ ಪ್ರತಿಭಟಿಸದೆ ತನ್ನಷ್ಟಕ್ಕೆ ಜೀವಿಸುತ್ತಿರುತ್ತಾನೆ. ಉಳ್ಳವನು ಶಿವಾಲಯ ಕಟ್ಟುತ್ತಿರುತ್ತಾನೆ. ಕೆಳಗಿನವರು ಪುನಃ ಭ್ರಮೆಗೆ ಒಳಗಾಗುತ್ತಿರುತ್ತಾರೆ. ಇದಕ್ಕೆ ಧರ್ಮ ಪೂರಕವಾಗಿ ಬರುತ್ತದೆಯಷ್ಟೆ. ಇವತ್ತಿನ ಜಾಗತೀಕರಣದ ಬಗ್ಗೆ ಧರ್ಮ ಮಾತನಾಡುತ್ತಿದ್ದರೂ ಅಂತರ್ಯದಲ್ಲಿ ಎರಡರ ಕ್ರಿಯೆ ಮಾತ್ರ ಒಂದೇ ಆಗಿರುತ್ತದೆ.

ಪರಾಮರ್ಶನ ಗ್ರಂಥಗಳು

೧. ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಲು, ಡಾ. ಡೊಮಿನಿಕ್ ಡಿ. , ಸಖಿ ಪ್ರಕಾಶನ, ಹೊಸಪೇಟೆ, ೨೦೦೭

೨. ಡಾ. ಅರವಿಂದ ಮಾಲಗತ್ತಿ, ಡಾ. ಅಂಬೇಡ್ಕರ್ ವಿಚಾರಧಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು-೧೯೯೧.

೩. ಡಾ. ಮೊಗಳ್ಳಿ ಗಣೇಶ್, ‘ದಲಿತರು ಮತ್ತು ಜಾಗತೀಕರಣ’, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

—-
* ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು, ಡಾ. ದೊಮಿನಿಕ್ ಡಿ. , ಸಖಿ ಪ್ರಕಾಶನ, ಹೊಸಪೇಡೆ, ೨೦೦೭ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ವಂದನೆಗಳು (ಸಂ)