ಕರ್ನಾಟಕದಲ್ಲಿ ಹಿಂದುತ್ವಕ್ಕೆ ದಲಿತರ ಪ್ರತಿಕ್ರಿಯೆ ಎಂತಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಈ ವಿದ್ಯಮಾನವನ್ನು ದೇಶದ ಮತ್ತು ನಮ್ಮ ರಾಜ್ಯದ ಸಂದರ್ಭದಲ್ಲಿ ಇಟ್ಟು ನೋಡಬೇಕಾಗುತ್ತದೆ. ಕರ್ನಾಟಕದಲ್ಲಿ ದಲಿತ ಚಳವಳಿಯು ರಾಷ್ಟ್ರಮಟ್ಟದ ಹಲವಾರು ಬೆಳವಣಿಗೆಗಳ ಪ್ರಭಾವಕ್ಕೆ ಒಳಗಾಗಿ ನಂತರ ಕರ್ನಾಟಕದ ವಿಶಿಷ್ಟ ಸನ್ನಿವೇಶಕ್ಕೆ ಅನುಗುಣವಾಗಿ ದಿಕ್ಕು-ದಿಶೆಗಳನ್ನು ಕಂಡುಕೊಂಡಿದೆ. ಮೊದಲನೆಯದಾಗಿ, ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯೋತ್ತರದ ಪ್ರಾರಂಭದ ವರ್ಷಗಳಲ್ಲಿ ಅಂಬೇಡ್ಕರ್ ನೇತೃತ್ವದ ದಲಿತ ಚಳವಳಿಯ ಪ್ರಭಾವವು ಕಲ್ಬುರ್ಗಿ ಪ್ರದೇಶವನ್ನು ಹೊರತುಪಡಿಸಿದರೆ ಕರ್ನಾಟಕದ ಒಟ್ಟಾರೆ ದಲಿತ ಚಳವಳಿಯ ಮೇಲೆ ಅಷ್ಟಾಗಿ ಉಂಟಾಗಲಿಲ್ಲ. ಕಲ್ಬುರ್ಗಿಯಲ್ಲಿ ಮಾತ್ರ ಶ್ಯಾಮಸುಂದರ್ ನೇತೃತ್ವದಲ್ಲಿ ಅಂಬೇಡ್ಕರ್ ವಾದಿ ಚಳವಳಿ ನಡೆಯಿತು. ಇವತ್ತಿಗೂ ಅವರನ್ನು ಕರ್ನಾಟಕದ ಅಂಬೇಡ್ಕರ್ ಎಂತಲೇ ಕರೆಯುತ್ತಾರೆ. ಆದರೆ ಈ ಚಳವಳಿಯು ಆ ಪ್ರದೇಶದ ಆಸುಪಾಸನ್ನು ದಾಟಿ ವಿಸ್ತಾರಗೊಳ್ಳಲಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕದಲ್ಲಿ ದಲಿತ ರಾಜಕೀಯ (ಅಂತಹದೊಂದು ಇತ್ತು ಎಂದಾದರೆ) ಎಂಬುದು ರಾಷ್ಟ್ರೀಯವಾದಿ ಕಾಂಗ್ರೆಸ್‌ಪಕ್ಷದ ಮೇಲ್ಜಾತಿ ಪೋಷಕ ನಿಲುವಿನ ಸೃಷ್ಟಿಯಾಗಿದ್ದು ಅದನ್ನು ಹರಿಜನರಿಗಾಗಿ ರಚನಾತ್ಮಕ ಕಾರ್ಯಕ್ರಮದ ಮೂಲಕ ಸಾಧಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಕಾಂಗ್ರೆಸ್ ಪಕ್ಷದ ಈ ಕೃಪಾಕಟಾಕ್ಷ ಹರಿಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಉದ್ದೇಶವನ್ನೇನೂ ಇಟ್ಟುಕೊಂಡಿರಲಿಲ್ಲ. ದಲಿತರು ಮೇಲ್ಜಾತಿಯವರನ್ನು ಮತ್ತಷ್ಟು ಅವಲಂಬಿಸುವಂತೆ ಮಾಡುವುದೇ ಅದರ ಉದ್ದೇಶವಾಗಿತ್ತು. ನೆರೆ ರಾಜ್ಯಗಳಲ್ಲಿದ್ದ-ಕಾಂಗ್ರೆಸ್ಸಿನ ಊಳಿಗಮಾನ್ಯ ಪದ್ಧತಿ ಮತ್ತು ಬ್ರಾಹ್ಮಣಪರ ಧೋರಣೆಯನ್ನು ವಿರೋಧಿಸುತ್ತ ದಲಿತರನ್ನು ವಿವಿಧ ಅಜೆಂಡಾಗಳ ಅಡಿಯಲ್ಲಿ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದ- ತೆಲಂಗಾಣ ಕಮ್ಯುನಿಸ್ಟ್‌ಚಳವಳಿಯಾಗಲಿ ಮತ್ತು ತಮಿಳುನಾಡಿನ ಆತ್ಮಗೌರವ ಚಳವಳಿಯಾಗಲಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳಲಿಲ್ಲ. ರಾಷ್ಟ್ರೀಯತೆಯ ಮತ್ತೊಂದು ಉಪನದಿಯಾದ ಕನ್ನಡ ರಾಷ್ಟ್ರೀಯತೆ ಎಂಬುದು ಮೊದಲಿನಿಂದಲೂ ತಿಲಕರ ಕಾಂಗ್ರೆಸ್‌ವಾದದಿಂದ ಪ್ರಭಾವಿತವಾಗಿ ಜಾತಿ ಆಧಾರಿತ ಊಳಿಗಮಾನ್ಯ ಪದ್ಧತಿ ಹಾಗೂ ಬ್ರಾಹ್ಮಣೀಯ (ಹಿಂದೂ) ಸಂಸ್ಕೃತಿಯ ಕಡೆ ಒಲವನ್ನು ಉಳ್ಳದ್ದಾಗಿತ್ತು.

ಕನ್ನಡ ರಾಷ್ಟ್ರೀಯತೆಯ ನಾಯಕರೆಲ್ಲರೂ ಮೇಲ್ಜಾತಿ ಹಿನ್ನೆಲೆಯಿಂದ ಬಂದವರಾಗಿದ್ದರು. ಕನ್ನಡ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಅದರ ಆದ್ಯ ಪ್ರವರ್ತಕರಾದ ಆಲೂರು ವೆಂಕಟರಾಯರು ಮತ್ತು ಇತರರು ಭಾರತೀಯ ರಾಷ್ಟ್ರೀಯತೆಯ ಕಲ್ಪನೆಯೊಳಗೆ ಗೂಡು ಕಟ್ಟಿಕೊಂಡಿದ್ದ ಹಿಂದೂ ರಾಷ್ಟ್ರೀಯತೆಗೆ ಬದ್ಧರಾಗಿಯೇ ಇದ್ದವರು. ಅಧಿಕಾರ ವರ್ಗವು ನೀಡಿದ ಪದಕಗಳನ್ನು ಧರಿಸಿದ್ದ ಈ ನಾಯಕರುಗಳು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಎದ್ದ ರೈತರ ಮತ್ತು ಕಾರ್ಮಿಕರ ಧ್ವನಿಗೆ ಬೆಂಬಲ ನೀಡಲಿಲ್ಲ. ಬದಲಾಗಿ ಕಾಂಗ್ರೆಸ್‌ನಲ್ಲಿದ್ದ ಭೂ ಮಾಲೀಕರ ಜೊತೆಗೂಡಿಕೊಂಡಿದ್ದರು. ಹೀಗೆ ಕನ್ನಡ ರಾಷ್ಟ್ರೀಕತೆಯ ಎಂಬುದು ದಲಿತರ ಅಥವಾ ಶ್ರಮಜೀವಿಗಳ ಆಶಯಗಳನ್ನು ವ್ಯಕ್ತಪಡಿಸುವಲ್ಲಿ ವಿಫಲವಾಯಿತು. ಬೀದರ್, ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಹೈದರಾಬಾದ್ ಕರ್ನಾಟಕ ಪ್ರದೇಶದ ತೆಲಂಗಾಣ ಚಳವಳಿಯು ತೀವ್ರವಾದ ಮುಸ್ಲಿಂ-ವಿರೋಧಿ ಧೋರಣೆಯನ್ನು ಹೊಂದಿದ್ದರೆ ಇದೇ ಚಳವಳಿಯು ಆಂಧ್ರದಲ್ಲಿ ಸಶಸ್ತ್ರ ಹೋರಾಟವನ್ನು ಒಳಗೊಂಡಿದ್ದ ಒಂದು ಪರ್ಯಾಯ ರಾಜಕೀಯ ಅಜೆಂಡಾದ ಕೆಳಗೆ ಭೂಮಾಲೀಕ-ವಿರೋಧಿ ಅಂಶವನ್ನು ಹೊಂದಿತ್ತು. ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಕರ್ನಾಟಕದಲ್ಲಂತೂ ಇದು (ಕನ್ನಡ ರಾಷ್ಟ್ರೀಯತೆ) ಓಬಿಸಿಗಳನ್ನು ಒಳಗೊಂಡ ಪ್ರಭುತ್ವ ಬೆಂಬಲಿತ ಬ್ರಾಹ್ಮಣೇತರ ಚಳವಳಿಯಾಗಿಯೇ ಬೆಳೆದು ದಲಿತರನ್ನು ಹೊರಗೇ ಇಟ್ಟಿತ್ತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಈ ಯಾವ ಚಳವಳಿಗಳೂ ದಲಿದ ಪ್ರಶ್ನೆಯನ್ನು ಮುಖ್ಯವೆಂದು ಪರಿಗಣಿಸುವ ಅಥವಾ ದಲಿತರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಲಿಲ್ಲ. ಆದ್ದರಿಂದ ದಲಿತ ಪ್ರಜ್ಞೆಯು ಸೈದ್ಧಾಂತಿಕ ಸೀಮಾರೇಖೆಯ ಒಳಗೇ ಉಳಿಯಿತು. ಸ್ವಾತಂತ್ರ್ಯ ಪೂರ್ವ ಕರ್ನಾಟಕದಲ್ಲಿ ದಲಿತರ-ಪರ ರಾಜಕೀಯ ಚಳವಳಿಗಳು ಇಲ್ಲದುದರ ಜೊತೆಗೆ ತಮ್ಮದೇ ಆದ ಅನನ್ಯವಾದ ಅಜೆಂಡಾವನ್ನು ಹೊಂದಿದ ದಲಿತ ಮಧ್ಯಮವರ್ಗವು ಗಮನಾರ್ಹವಾಗಿ ಕಾಣಿಸಿಕೊಂಡಿರಲಿಲ್ಲ.

ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಅದರ ಸೈದ್ಧಾಂತಿಕ ಪ್ರಾಬಲ್ಯವು ಎಲ್ಲಾ ಕ್ಷೇತ್ರಗಳಲ್ಲೂ ಹಾಗೆಯೇ ಮುಂದುವರೆಯಿತು. ೧೯೪೭ರ ನಂತರದ ಎರಡು ದಶಕಗಳ ಕಾಲ ಇತರೆ ರಾಜ್ಯಗಳಲ್ಲಿನಂತೆ ಕರ್ನಾಟಕದಲ್ಲಿ ಕೂಡ ರಾಜಕೀಯ ಸ್ತಬ್ಧತೆಯ ವಾತಾವರಣವು ನೆಲೆಗೊಂಡಿತ್ತೆನ್ನಬಹುದು. ಸಂವಿಧಾನಾತ್ಮಕ ಮೀಸಲಾತಿಯಿಂದಾಗಿ ಒಂದು ಹೊಸ ದಲಿತ ಮಧ್ಯಮವರ್ಗ ಮತ್ತು ಹಸಿರು ಕ್ರಾಂತಿಯಿಂದಾಗಿ ಹಲವಾರು ಶೂದ್ರ ರೈತಾಪಿ ವರ್ಗಗಳು ರಾಜಕೀಯ ರಂಗವನ್ನು ಪ್ರವೇಶಿಸಿದವು. ಹೊಸ ಕೃಷಿ ಅರ್ಥವ್ಯವಸ್ಥೆಯಿಂದಾಗಿ “ಸಂಪನ್ನರಾದ” ಶೂದ್ರ ಜಾತಿಗಳು ಒಂದೆಡೆ ಆರ್ಥಿಕತೆಯಲ್ಲಿ ಮತ್ತು ಅಧಿಕಾರದಲ್ಲಿ ತಮ್ಮ ಪಾಲಿನ ಸಮರ್ಥನೆಗಾಗಿ ಹಾತೊರೆಯುತ್ತಿದ್ದರೆ ಇನ್ನೊಂದೆಡೆ ಹೊಸದಾಗಿ ಸೃಷ್ಟಿಗೊಂಡ, ಆದರೆ ರಾಜಕೀಯವಾಗಿಯೂ ಸಂಖ್ಯೆಯ ದೃಷ್ಟಿಯಿಂದಲೂ ಇನ್ನೂ ದುರ್ಬಲವಾಗಿದ್ದ, ದಲಿತ ಮಧ್ಯಮ ವರ್ಗವು ಕ್ರಮೇಣ ಅಸ್ತಿತ್ವವನ್ನು ಕಂಡುಕೊಳ್ಳತೊಡಗಿತ್ತು. ೧೯೭೦ರ ದಶಕದ ಪ್ರಾರಂಬದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ದೇವರಾಜ ಅರಸು ಸರ್ಕಾರವು ಈ ಪ್ರಕ್ರಿಯೆಯು ಇನ್ನಷ್ಟು ಹರಿತಗೊಳ್ಳಲು ನೆರವಾಯಿತು.

ಭೂಮಾಲೀಕ ವರ್ಗಗಳ ಹಿತಾಸಕ್ತಿಗಳು ಮತ್ತು ಪ್ರಭಾವಗಳು ಹೆಚ್ಚಾದಂತೆಲ್ಲಾ ಒಂದೆಡೆ ಕಾಂಗ್ರೆಸ್‌ಪಕ್ಷವು ಹೊಸ ರಾಜಕೀಯ ಧೋರಣೆಗಳು ಕಾಣಿಸಿಕೊಳ್ಳದಂತೆ ತನ್ನ ಹಿಡಿತವನ್ನು ಬಿಗಿಗೊಳಿಸಿದರೆ ಇನ್ನೊಂದೆಡೆ ಓಬಿಸಿ ಮತ್ತು ದಲಿತ ಮಧ್ಯಮ ವರ್ಗಗಳ ಪ್ರಜ್ಞಾವಂತ ಸಮೂಹವು ಕಾಂಗ್ರೆಸ್‌ರಾಜಕೀಯದ ಹೊರಗಡೆ ಪ್ರಗತಿಪರ ಆಶಯಗಳಿಗಾಗಿ ಧ್ವನಿ ಎತ್ತಲು ಪ್ರಯತ್ನಿಸತೊಡಗಿತು. ಈ ವರ್ಗಕ್ಕೆ ಲೋಹಿಯಾ ಬಣವು ತನ್ನ ಕಾಂಗ್ರೆಸ್‌ವಿರೋಧಿ ನೀತಿಯಿಂದಲೂ ರೈತ-ಪರ ಕಾರ್ಯಕ್ರಮಗಳಿಂದಲೂ ಬೆಂಬಲವಾಗಿ ನಿಂತಿತು. ಜಾತಿ ನಿರ್ಮೂಲನ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ್ದ ಮತ್ತು ಅದೇ ಸಮಯದಲ್ಲಿ ಕಮ್ಯುನಿಷ್ಟ್‌ವಿರೋಧಿಯೂ ಆಗಿದ್ದ ಲೋಹಿಯಾವಾದವು. ಈ ಹೊಸ ಮಧ್ಯಮ ವರ್ಗಗಳ ಅದರಲ್ಲೂ ಓಬಿಸಿ ವರ್ಗಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು ಮತ್ತು ನಂತರದಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷದ ಉಗಮಕ್ಕೂ ಕಾರಣವಾಯಿತು. ಈ ಸನ್ನಿವೇಶದಲ್ಲಿ ಸಂಸದೀಯ ರಾಜಕಾರಣದ ಕಮ್ಯುನಿಸ್ಟ್‌ಪಕ್ಷಗಳು ಗ್ರಾಮೀಣ ಕರ್ನಾಟಕದಲ್ಲಿ ದುರ್ಬಲವಾಗಿದ್ದವು. ಅದೂ ಅಲ್ಲದೆ ಜಾತಿ ವ್ಯವಸ್ಥೆಯ ಬಗೆಗಿನ ತಪ್ಪುಗ್ರಹಿಕೆಯಿಂದಾಗಿ ಅವು ದಲಿತ ಚಳವಳಿಯ ಮೇಲೆ ಯಾವುದೇ ಪ್ರಭಾವ ಬೀರಲಾರದ ಸ್ಥಿತಿಯಲ್ಲಿದ್ದವು. ಇವೆಲ್ಲವುಗಳ ಪರಿಣಾಮವಾಗಿ ತೀವ್ರ ಸ್ವರೂಪದ ದಲಿತ ರಾಜಕೀಯವು ಕರ್ನಾಟಕದಲ್ಲಿ ಹುಟ್ಟಿಕೊಳ್ಳಲಾಗಲಿಲ್ಲ.

೧೯೭೦ರ ದಶಕದ ಅಂತಿಮ ವರ್ಷಗಳಲ್ಲಿ ದಲಿತ ರಾಜಕೀಯವು ಅಂಬೇಡ್ಕರ್ ಹಾದಿಯನ್ನು ತುಳಿಯಿತು. ದಲಿತ ರಾಜಕಾರಣದ ಹುಟ್ಟು ಮತ್ತು ಹರಿಜನ ಎಂಬ ‘ಗುಲಾಮ’ ಪ್ರಜ್ಞಾವಲಯದಿಂದ ಅಂಬೇಡ್ಕರ್ ವಾದಿ ಸ್ವಾಭಿಮಾನಿ ಪ್ರಜ್ಞಾವಲಯಕ್ಕೆ ಪರಿವರ್ತನೆಗೊಂಡ ಈ ಐತಿಹಾಸಿಕ ಸಂದರ್ಭದಲ್ಲಿ ಹೊಸದಾಗಿ ಮೈದಳೆದ ದಲಿತ ಮಧ್ಯಮ ವರ್ಗವು ದಲಿತ ರಾಜಕಾರಣದಲ್ಲೂ “ದಲಿತ ಸಂಘರ್ಷ ಸಮಿತಿ”ಯ ರಚನೆಯಲ್ಲೂ ಮುಖ್ಯಪಾತ್ರ ವಹಿಸಿತು. ಈ ದಲಿತ ಪ್ರಜ್ಞೆಯು ಸಹ ಲೋಹಿಯಾವಾದ ಮತ್ತು ಕಾಂಗ್ರೆಸ್-ವಿರೋಧದ ನೆಲದಲ್ಲಿ ಚಿಗುರಿದರೂ ಇದರ ಬೆಳವಣಿಗೆಯ ಮೇಲೆ ದಲಿತ್ ಪ್ಯಾಂಥರ್ಸ್ ಮತ್ತು ನಕ್ಸಲ್ ಚಳವಳಿಗಳು ಸಾಕಷ್ಟು ಪ್ರಭಾವ ಬೀರಿದವು. ಈ ವಿದ್ಯಮಾನವು ದಲಿತ ಚಳವಳಿಯನ್ನು ಸಾಂಸ್ಕೃತಿಕ ಮತ್ತು ಮೇಲ್ಪದರಕ್ಕೆ ಮಾತ್ರ ಸೀಮಿತಗೊಳಿಸದೆ ಜಾತಿ ಸಮಸ್ಯೆಯ ಕೀಲಕ ಪ್ರಶ್ನೆಯಾದ ಭೂಮಿ ಪ್ರಶ್ನೆಯನ್ನು ಎತ್ತುವಂತೆ ಮಾಡಿ ಭೂ-ಮಾಲಿಕ ವಿರೋಧಿ ವಲಯಕ್ಕೆ ವಿಸ್ತರಿಸಿತು. ಹಾಗೂ ಅದರ ಜೊತೆಯಲ್ಲೇ ಜಾತಿ-ವಿರೋಧಿ ಚಳವಳಿಯನ್ನು ಭದ್ರಪಡಿಸಿತು. ಈ ಕ್ರಾಂತಿಕಾರಿ ಪ್ರಜ್ಷೆಯ ನೆಲೆಯಲ್ಲಿ ದಸಂಸ ಪರ್ಯಾಯ ಸಮಾಜ ನಿರ್ಮಾಣದ ದಕ್ಕಿನಲ್ಲಿ ಉದ್ಯುಕ್ತವಾಯಿತು. ಇದರ ಸೈದ್ಧಾಂತಿಕ ಸಾರವನ್ನು ಮಾರ್ಕ್ಸ್‌, ಲೋಹಿಯಾ ಮತ್ತು ಅಂಬೇಡ್ಕರರ ಚಿಂತನೆಗಳ ಮಿಶ್ರಣವೆಂದು ಹೇಳಬಹುದು. ಈ ರೀತಿಯ ತೀವ್ರ ಚಿಂತನೆಯು ಸಮಾಜದಲ್ಲಿದ್ದ ಹಲವಾರು ಪ್ರಗತಿಪರ ಶಕ್ತಿಗಳನ್ನು ವಿಭಿನ್ನ ಜಾತಿಗಳು ಮತ್ತು ಸೈದ್ಧಾಂತಿಕ ಒಲವುಗಳನ್ನು ಹೊಂದಿದ್ದ ಬಣಗಳನ್ನು ಚಳವಳಿಗಳ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಬಿಡುಗಡೆಗಾಗಿಯೂ ಹೋರಾಟಗಳು ಪ್ರಾರಂಭವಾದವು. ಈ ರೀತಿಯಾಗಿ ದಲಿತ ಪ್ರಶ್ನೆಯು ರಾಜಕೀಯದ ಹೊರವರ್ತುಲದಿಂದ ಕರ್ನಾಟಕದ ರಾಜಕೀಯದಲ್ಲಿನ ಕೇಂದ್ರ ವಲಯಕ್ಕೆ ಬಂದು ಸೇರಿತು.

ಇಷ್ಟಾದರೂ ದಲಿತ ನಾಯಕರ ಮಧ್ಯೆ ಚಳವಳಿಯ ದಿಕ್ಕು-ದೆಶೆಗಳ ಬಗ್ಗೆ ಹಾಗೂ ಇತರರೊಡನೆ ಮಾಡಿಕೊಳ್ಳಬೇಕಾದ ಒಪ್ಪಂದಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದವು. ನಾಯಕತ್ವದ ಒಂದು ಬಣಿವು ಅಧಿಕಾರದಲ್ಲಿ ಪಾಲು ಪಡೆಯಲು ಕೆಲವು ರಾಜಿಗಳಿಗೆ ತಯಾರಾಗಿದ್ದಾರೆ. ಈ ಮಾರ್ಗದಲ್ಲಿನ ಅಪಾಯಗಳ ಬಗ್ಗೆ ಅರಿವಿದ್ದ ಬಣಗಳು ರಾಜಿ ರಾಜಕಾರಣಕ್ಕೆ ಹಿಂಜರಿಯುತ್ತಿದ್ದವು. ಆದರೆ ಇವು ಅಧಿಕಾರದಿಂದ ದೂರವಿದ್ದರೂ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗಲಿಲ್ಲ. ಈ ಗೊಂದಲಗಳು ಸಮಯಸಾಧಕ ಪ್ರವೃತ್ತಿಗೆ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಿದ್ದರಿಂದಾಗಿ ಮತ್ತು ಅದನ್ನು ರಾಮಕೃಷ್ಣ ಹೆಗಡೆ ಚಾಣಾಕ್ಷತೆಯಿಂದ ಬಳಸಿಕೊಂಡದ್ದರಿಂದಾಗಿ ಜನತಾದಳವು ೧೯೮೩ ಮತ್ತು ೧೯೮೫ರಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ಹೆಗಡೆಯವರ ಆಡಳಿತ ಕಾಲದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತರಬಲ್ಲ ಹಲವಾರು ಸಾಮಾಜಿಕ ಚಳವಳಿಗಳು ಪ್ರಭುತ್ವದ ಅಧಿಕಾರವಲಯದಲ್ಲಿ ವಿಲೀನಗೊಂಡವು. ಈ ಚಳವಳಿಗಳಲ್ಲಿದ್ದ ಸಮಯಸಾಧಕ ಶಕ್ತಿಗಳನ್ನು ಪೋಷಿಸಿ ಪ್ರಭುತ್ವದ ಭಾಗವನ್ನಾಗಿ ಮಾಡಿಕೊಳ್ಳಲಾಯಿತು; ಸಮಯ ಸಾಧಕತೆಯನ್ನು ರಾಜಕೀಯ ತಂತ್ರದಂತೆ ಬಿಂಬಿಸಲಾಯಿತು. ಈ ರೀತಿಯ ಅಧಿಕಾರ ದಾಹವು ದಸಂಸದ ಒಳಗೆ ಬಿರುಕುಗಳಿಗೆ ಕಾರಣವಾಗಿ ಸಂಘಟನೆಯಲ್ಲಿ ಉಂಟಾದ ಹಲವು ರೀತಿಯ ಮೈತ್ರಿಗಳು, ಒಪ್ಪಂದಗಳು ಮತ್ತು ರಾಜಿಗಳ ಪರಿಣಾಮವಾಗಿ ದಲಿತ ಚಳವಳಿಯು ಕೆಳಸ್ತರದ ಜನ-ಬೆಂಬಲದ ಆಧಾರವನ್ನು ಕೈಬಿಟ್ಟು ಹಾಗೂ ಚಳವಳಿ ರಾಜಕಾರಣವನ್ನು ಕೈಬಿಟ್ಟು “ಅಧಿಕಾರ” ರಾಜಕಾರಣದತ್ತ ಮುಖ ಮಾಡಿತು. ಅಧಿಕಾರ ಸಂಪಾದಿಸಿಕೊಳ್ಳುವ ಮಾರ್ಗದಲ್ಲಿ ಅನಿವಾರ್ಯವಾಗಿ ತಲೆ ಎತ್ತಿದ ಭ್ರಷ್ಟತೆಯ ಒತ್ತಡಗಳು ಸಂಘಟನೆಯನ್ನು ಹೋರಾಟದ ಹಾದಿಯಿಂದ ವಿಮುಖಗೊಳಿಸಿದವು. ಈ ನೈತಿಕ ಕುಸಿತವು ದಲಿತ ರಾಜಕಾರಣಕ್ಕೆ ವಿನಾಶಕಾರಿಯಾಗಿ ಪರಿಣಮಿಸಿತು. ಸಾಮಾನ್ಯ ದಲಿತರು ಅದರಲ್ಲೂ ಯುವಕರು ದಿಕ್ಕು ತೋಚದೆ ನಾಯಕತ್ವವಿಲ್ಲದೆ ದಾರಿ ಕಾಣದಾದರು. ಜೊತೆಗೆ ಗುಂಪು ರಾಜಕೀಯ ಮತ್ತು ಸಂಕುಚಿತ ಸೈದ್ಧಾಂತಿಕ ಪ್ರವಾಹವೊಂದು ದಲಿತ ಚಳವಳಿಯೊಳಕ್ಕೆ ಪ್ರವೇಶಿಸಿತು. ಜಾತಿ-ಆಧಾರಿತ ರಾಜಕೀಯ ಮತ್ತು ಸಮಯಸಾಧಕ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡಿದ್ದ ಭ್ರಷ್ಟ ದಲಿತ ಮಧ್ಯಮ ವರ್ಗದ ಗುಂಪು ಮತ್ತು ದಲಿತ ಅಧಿಕಾರಿ ವರ್ಗವು ಈ ಬಣಗಳನ್ನು ಕ್ರಾಂತಿಕಾರಿ ದಲಿತ ಶಕ್ತಿಗಳಿಗೆ ವಿರುದ್ಧವಾಗಿ ಬೆಳೆಸಿದವು. ಪ್ರಗತಿಶೀಲ ಶಕ್ತಿಗಳನ್ನು ಮೊಟಕುಗೊಳಿಸಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದೊಂದೇ ಈ ವರ್ಗಗಳ ಏಕೈಕ ಉದ್ದೇಶವಾಗಿತ್ತು. ಇದರ ಒಟ್ಟಾರೆ ಪರಿಣಾಮವಾಗಿ ದಲಿತ ಚಳವಳಿ ಮತ್ತು ಅದರ ನಾಯಕತ್ವವು ಮೂಲಭೂತ ಪರಿವರ್ತನೆಯ ದಾರಿಯಿಂದ ದೂರ ಸರಿಯುವಂತಾಯಿತು.

ಈ ರೀತಿಯಾಗಿ ೧೯೯೦ರ ದಶಕದ ಅಂತಿಮ ವರ್ಷಗಳಲ್ಲಿ ಬಹುಪಾಲು ದಲಿತ ಸಂಘಟನೆಗಳು, ಅಪರೂಪದ ಕೆಲವು ಅಪವಾದಗಳನ್ನು ಹೊರತುಪಡಿಸಿ, ಪಟ್ಟಣ ಹಾಗೂ ನಗರಗಳಿಗೆ ಸರಿದು ಸಮಯಸಾಧಕತನ ಹಾಗೂ ಮೂಲಭೂತವಾದದ ದಾರಿ ತಿಳಿದವು. ಇದೇ ಸಮಯದಲ್ಲಿ ಜಾಗತೀಕರಣದ ಪ್ರಭಾವವು ಕೂಡ ದಲಿತರ ಮೇಲಾಗತೊಡಗಿತು. ಮಾರುಕಟ್ಟೆಯ ಶಕ್ತಿಗಳನ್ನು ಹಾಗೂ ಸಮ್ರಾಜ್ಯಶಾಹಿ ಅಜೆಂಡಾವನ್ನು ಅನುಸರಿಸುವ ಜಾಗತೀಕರಣದ ಮೂಲಕ ಸರ್ಕಾರದ ಆರ್ಥಿಕ ನೀತಿಗಳಿಗೆ ಸಾಮಾನ್ಯ ಜನಗಳು ಸಿಕ್ಕಿಬಿದ್ದು ಬಡತನ ಮತ್ತು ದಾರಿದ್ರ್ಯದ ನಿತ್ಯ ಅನುಭವದಲ್ಲಿ ನರಳುತ್ತಿದ್ದಾರೆ. ಜಾಗತೀಕರಣದಿಂದಾಗಿ ಜನಪರ ಹೋರಾಟಗಳಂತೂ ಅತ್ಯಂತ ಕಷ್ಟಕ್ಕೆ ಒಳಗಾಗಿವೆ. ಸರ್ಕಾರವು ‘ಜನ-ಹಿತ ಪ್ರಭುತ್ವ’ದ ಕಲ್ಪನೆಯಿಂದ ದೂರ ಸರಿದು ನವ ಉದಾರೀಕರಣದ ಹಾದಿಯಲ್ಲಿ ಸಾಗುತ್ತಿದ್ದು ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಳ್ಳದಿರುವುದು ಮಂದಗಾಮಿ ಸಾಮಾಜಿಕ ಚಳವಳಿಗಳನ್ನೂ ಕೂಡ ಸರ್ಕಾರದ ದೌರ್ಜನ್ಯಕ್ಕೆ ಹೆದರುವಂತೆ ಮಾಡಿಬಿಟ್ಟಿದೆ. ನವಉದಾರೀಕರಣಕ್ಕೆ ಬದ್ಧವಾಗಿರುವ ಸರ್ಕಾರವನ್ನು ಎದುರಿಸಲಾಗದೆ ಸಾಮಾಜಿಕ ಚಳವಳಿಗಳನ್ನೂ ಕೂಡ ಸರ್ಕಾರದ ದೌರ್ಜನ್ಯಕ್ಕೆ ಹೆದರುವಂತೆ ಮಾಡಿಬಿಟ್ಟಿದೆ. ನವ ಉದಾರೀಕರಣಕ್ಕೆ ಬದ್ಧವಾಗಿರುವ ಸರ್ಕಾರವನ್ನು ಎದುರಿಸಲಾಗದೆ ಸಾಮಾಜಿಕ ಚಳವಳಿಗಳೆಲ್ಲ ಒತ್ತಡಕ್ಕೆ ಮಣಿದು ಭ್ರಷ್ಟಗೊಂಡಿರುವ ಸನ್ನಿವೇಶ ನಿರ್ಮಾಣವಾಗಿದೆ. ಮತ್ತೊಂದೆಡೆ ಜಾಗತೀಕರಣವು ಸಮಾಜದಲ್ಲಿ ಬಲವಿದ್ದವನು ಮಾತ್ರ ಬದುಕಬಲ್ಲಂಥ ಮೌಲ್ಯಪದ್ಧತಿಯನ್ನು ಸೃಷ್ಟಿಸಿರುವುದರಿಂದ ಸಮಾಜದಲ್ಲೂ ಹಿಂದೆಂದೂ ಇಲ್ಲದ ಮಟ್ಟಿಗೆ ಸ್ವಾರ್ಥ, ಕೊಳ್ಳುಬಾಕ ಸಂಸ್ಕೃತಿಗಳು ಬೆಳೆದು ಚಳವಳಿಗೆ ಅಗತ್ಯವಾದ ನ್ಯಾಯ ಪ್ರಜ್ಞೆ ಮತ್ತು ಸೌಹಾರ್ದತೆಯ ಮೌಲ್ಯಗಳು ಕುಸಿತ ಕಾಣುತ್ತಿವೆ. ದಲಿತ ಚಳವಳಿ ಕೂಡ ಇದಕ್ಕೆ ಹೊರತಾಗಿಲ್ಲ. ಹೊಸದಾಗಿ ಕಾಣಿಸಿಕೊಂಡಿರುವ ದಲಿತ ಮೂಲಭೂತವಾದವು ತಮ್ಮಲ್ಲಿರುವ ಪ್ರಗತಿಪರ ಶಕ್ತಿಗಳನ್ನು ವಿರೋಧಿಸುತ್ತ ದಲಿತ ವಿರೋಧಿ ಸರ್ಕಾರಕ್ಕೆ ಮಣಿದು ಹಿಂದೂ ಕೋಮವಾದಿ ಶಕ್ತಿಗಳ ಜೊತೆ ಮೈತ್ರಿ ಬೆಳೆಸಿಕೊಂಡಿರುವುದನ್ನು ಕಾಣಬಹುದು.

ದಲಿತ ರಾಜಕಾರಣದ ಸಂದರ್ಭದಲ್ಲಿ ಹೊಸದಾಗಿ ಬಹುಜನ ಸಮಾಜ ಪಕ್ಷವು ಪ್ರವೇಶಿಸಿರುವುದು ಸಮಯ ಸಾಧಕರಿಗೆ ಹಾಗೂ ರಾಜಕೀಯವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವವರಿಗೆ ಸೈದ್ಧಾಂತಿಕ ಸಮರ್ಥನೆಯನ್ನು ಒದಗಿಸಿದೆ. ಕೆಲವು ದಲಿತ ನಾಯಕರು ಇದರ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿ ಒಂಟಿಯಾಗಿ ಬೆಳೆಯುವ ಸ್ವತಂತ್ರ ರಾಜಕೀಯವರು ಪ್ರಗತಿಪರ ದಲಿತ ಪ್ರಜ್ಞೆಯ ಮೇಲೆ ದುಷ್ಪರಿಣಾಮವನ್ನು ಬೀರುವುದಲ್ಲದೇ ಹಿಂದುತ್ವದ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಉದಾಹರಣೆಗೆ ಬಿಎಸ್‌ಪಿ, ಫ್ಯಾಸಿಸ್ಟ್‌ ಧೋರಣೆಯ ಆರೆಸ್ಸೆಸ್ಸನ್ನು ಒಂದು ಕೋಮುವಾದಿ ದಲಿತ ವಿರೋಧಿ ಸಂಸ್ಥೆಯಾಗಿ ಕಾಣುವ ಬದಲು ದೇಶಭಕ್ತಿಯುಳ್ಳ ಶಿಸ್ತುಬದ್ಧ ಸಾಂಸ್ಕೃತಿಕ ಸಂಘಟನೆಯೆಂದು ಭಾವಿಸುತ್ತದೆ. ಬಿಎಸ್‌ಪಿ ನಾಯಕತ್ವ ಇತರೆ ಎಲ್ಲ ಜಾತಿಗಳು ಮನುವಾದಿಗಳೆಂದು ಪರಿಗಣಿಸಿ ಅವುಗಳ ಮೇಲೆ ದ್ವೇಷ ಕಾರುತ್ತದೆ. ದಲಿತರು ಬೇರೆ ಯಾವುದೇ ಜಾತ್ಯಾತೀತ ಚಳವಳಿಯಲ್ಲೂ ಸೇರದಂತೆ ಪ್ರಚೋದಿಸುತ್ತದೆ. ಹೋರಾಟ ನಡೆಸಲು ರಾಜಕೀಯ ಸಂಘಟನೆಯ ಕಡೆ ಗಮನಹರಿಸದೆ ವ್ಯಕ್ತಿ-ಪೂಜೆ ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ-ಬಿಎಸ್‌ಪಿ ಮೈತ್ರಿ ಇದ್ದ ಸಮಯದಲ್ಲಿ ಗುಜರಾತಿನ ಹತ್ಯಾಕಾಂಡವನ್ನು ಎಲ್ಲರೂ ಖಂಡಿಸಿದರೂ ಮೋದಿ ಸರ್ಕಾರಕ್ಕೆ ಮಾಯಾವತಿ ನೀಡಿದ ಬೆಂಬಲವು ಬಿಎಸ್‌ಪಿಯ ಮುಸಲ್ಮಾನ ವಿರೋಧಿ ಧೋರಣೆಯನ್ನು ಗಗನಕ್ಕೇರಿಸಿತು. ಈ ರೀತಿಯ ಸೈದ್ಧಾಂತಿಕ ದೊಂಬರಾಟಗಳಿಂದಾಗಿ ಹಿಂದೂ ಕೋಮುವಾದಿ ಧೋರಣೆಯು ದಲಿತರಿಗೆ ನ್ಯಾಯಸಮ್ಮತವೆನಿಸಿ ಮುಸಲ್ಮಾನ ವಿರೋಧಿ ಭಾವನೆಗಳನ್ನು ತೀವ್ರಗೊಳ್ಳುತ್ತಿವೆ. ಇವೆರಡೂ ಪ್ರಕ್ರಿಯೆಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕೆಲವು ದಲಿತ ಚಿಂತಕರು ಭಾವಿಸುವಂತೆ ಜಾತಿ ಶ್ರೇಣಿಯ ಪೂರ್ವಾಗ್ರಹವನ್ನು ಮರೆತು ಹಿಂದುತ್ವದ ಉಳಿದ ಎಲ್ಲಾ ಅಂಶಗಳನ್ನೂ ಒಪ್ಪಿಕೊಳ್ಳುವಂತಹ ಒಂದು ಬಗೆಯ ದಲಿತ ರಾಜಕಾರಣ ಈಗ ನಮ್ಮಲ್ಲಿ ಸಮ್ಮತಿ ಪಡೆಯುತ್ತಿದೆ.

ಹಿಂದೂ ಮೂಲಭೂತವಾದಿಗಳು ದಲಿತರ ಮನ ಒಲಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದು ಈ ಸನ್ನಿವೇಶದಲ್ಲೇ. ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡಿದಂತೆ ಇಲ್ಲೂ ಪ್ರಾರಂಭಕ್ಕೆ ಅಂಬೇಡ್ಕರ್ ರನ್ನು ಹಿಂದುತ್ವದ ಪ್ರಮುಖ ನಾಯಕರನ್ನಾಗಿ ಚಿತ್ರಿಸಲಾಯಿತು. ಸಂಘಪರಿವಾರದ ಇತರ ಸಂಸ್ಥೆಗಳು ಪ್ರಭಾವಶಾಲಿಯಾಗಿದ್ದ ಸ್ಥಳಗಳಲ್ಲಿ ಪ್ರಗತಿಪರ ಚಳವಳಿಗಳು ಹಿಂದೆ ಸರಿಯುವಂತಾಯಿತು. ದಲಿತ ಸಂಘಟನೆಗಳು ಹೋರಾಟದ ಹಾದಿಯನ್ನು ಕೈಬಿಟ್ಟ ಕಾರಣ ಹಿಂದೂ ಕೋಮುವಾದಿಗಳು ವ್ಯಾಪಕವಾಗಿ ಹರಡಿ ಕೋಮುವಾದದ ವಿಷವನ್ನು ತುಂಬಲು ಮತ್ತು ದುರ್ಬಲ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಲು ಸಾಧ್ಯವಾಯಿತು. ಜನಪರ ರಾಜಕಾರಣದಿಂದ ದಲಿತ ಕಾರ್ಯಕರ್ತರು ದೂರ ಸರಿದದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೆಸ್ಸೆಸ್‌ಶಾಖೆಗಳ ಮೂಲಕ ಹಿಂದುತ್ವದ ಬೋಧನೆ ನಡೆಸಲು ದಾರಿ ಮಾಡಿಕೊಟ್ಟಿತು. ಹೀಗೆ ದಲಿತ ರಾಜಕೀಯ ಶಕ್ತಿಯ ದಿವಾಳಿತನದಿಂದಾಗಿ ಹಿಂದೂ ಕೋಮುವಾದಕ್ಕೆ ಮಾನ್ಯತೆ ದೊರಕುವುದಂತಾಯಿತು. ಕೆಲವು ದಲಿತ ನಾಯಕರು ಕೂಡ ಇದರಲ್ಲಿ ಬಾಗಿಯಾದದ್ದು ಈ ವಿದ್ಯಮಾನಕ್ಕೆ ಪೂರಕವಾಯಿತು.

ಕರ್ನಾಟಕದ ದಲಿತರ ಮೇಳೆ ಉಂಟಾದ ಹಿಂದುತ್ವದ ಪ್ರಭಾವವನ್ನು ಈ ಹಿನ್ನೆಲೆಯಲ್ಲಿ ಗುರುತಿಸಬೇಕಾಗಿದೆ. ಇತ್ತೀಚಿನ ಎರಡು ಬೆಳವಣಿಗೆಗಳು ಈ ವಿದ್ಯಮಾನಕ್ಕೆ ನಿದರ್ಶನವನ್ನೊದಗಿಸಿವೆ. ೨೦೦೩ರಲ್ಲಿ ಹಾವೇ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಹಲವಾರು ಮುಸ್ಲಿಮರ ಕೊಲೆಯಾಗಿ ಅವರ ಮನೆಗಳು ಭಸ್ಮವಾದವು. ನೆರೆ ಜಿಲ್ಲೆಯೊಂದರಿಂದ ಬಂದ ಭಜರಂಗದಳದವರು ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದರು. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಭೆ ಇದು. ಹಳ್ಳೆಗಾಗಿ ಅವರು ದಲಿತರನ್ನು ಸಂಘಟಿಸಿದ್ದರು. ಆ ಹಳ್ಳಿಯಲ್ಲಿ ದಲಿತರು ಹಾಗೂ ಮುಸ್ಲಿಮರ ಸ್ಮಶಾನಗಳು ಪಕ್ಕ-ಪಕ್ಕದಲ್ಲಿವೆ. ಮುಸ್ಲಿಮರು ದಲಿತರಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆಂದು ಭಜರಂಗದಳದವರು ದಲಿತರನ್ನು ಪ್ರಚೋದಿಸಿದರು. ಮುಸಲ್ಮಾನರ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಅಡ್ಡ ನಿಂತು ಕಸಿದುಕೊಂಡ ಭೂಮಿಯನ್ನು ಹಿಂತಿರುಗಿಸುವವರೆಗೆ ಜಗ್ಗಬಾರದೆಂದು ದಲಿತರಿಗೆ ಹೇಳಿಕೊಡಲಾಯಿತು. ಇದರಿಂದ ಉಂಟಾದ ಉದ್ರಿಕ್ತ ವಾತಾವರಣವು ಕೊನೆಗೆ ಗಲಭೆಯಲ್ಲಿ ಮುಕ್ತಾಯವಾಯಿತು. ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಮಾನವ ಹಕ್ಕುಗಳ ತಂಡವೊಂದು ಸರಿಯಾದ ನಾಯಕತ್ವ ಇಲ್ಲದ ಕಾರಣ ಸಾಮಾನ್ಯ ದಲಿತರು ಭಜರಂಗದಳದಂತಹ ಕೋಮುವಾದಿಗಳ ಮಾತಿಗೆ ಮರುಳಾಗಿದ್ದಾರೆಂದು ಅಭಿಪ್ರಾಯಪಟ್ಟಿತು. ಇನ್ನೊಂದು ಸಂದರ್ಭದಲ್ಲಿ, ಹಿಂದೆ ಜನಪ್ರಿಯ ಕಮ್ಯುನಿಸ್ಟರಾಗಿದ್ದ ಪ್ರಮುಖ ದಲಿತ ನಾಯಕರೊಬ್ಬರು ಬಿಜೆಪಿಗೆ ಸೇರಿದರು. ಕರ್ನಾಟಕದಲ್ಲಿ ಇವೆರಡೂ ಘಟನೆಗಳು ವರ್ತಮಾನಕ್ಕೆ ಹಿಡಿದ ಕನ್ನಡಿಯಂತಿವೆ.

ದಲಿತರ ಮಧ್ಯೆ ಹಿಂದುತ್ವದ ಪ್ರಭಾವ ಹೆಚ್ಚಾಗಲು ಕಾರಣಗಳು

ರಾಜಿಯ ಹಾದಿ ಹಿಡಿದಿರುವ ಪ್ರಗತಿಪರ ಶಕ್ತಿಗಳು: ಚುನಾವಣಾ ಚೌಕಟ್ಟಿನ ಹೊರಗೆ ಭೂಮಿ ಪ್ರಶ್ನೆ ಇತ್ಯಾದಿ ಪ್ರಜಾಸತ್ತಾತ್ಮಕ ಸಮಸ್ಯೆಗಳನ್ನೆತ್ತಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ದಲಿತರನ್ನು ಸಂಘಟಿಸುವ ಯಾವುದೇ ಪ್ರಯತ್ನವು ಕಳೆದ ಒಂದು ದಶಕದಿಂದೀಚೆಗೆ ನಡೆದಿಲ್ಲ. ನಗರವಾಸಿ ದಲಿತರನ್ನು ಕೂಡ ಪರಿಣಾಮಕಾರಿಯಾಗಿ ಸಂಘಟಿಸುವುದೂ ಸಾಧ್ಯವಾಗಿಲ್ಲ. ದಲಿತರಲ್ಲಿರುವ ಒಳಗುಂಪುಗಳು ಒಂದು ಕಾರಣವಾದರೆ ಕೆಲವು ನಾಯಕರು ಭೂ-ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಮತ್ತೊಂದು ಕಾರಣವಾಗಿದೆ. ಇನ್ನು ಕೆಲವು ಅಧಿಕಾರಸ್ಥರೊಡನೆ ಚೌಕಾಶಿ ಮಾಡುವುದಕ್ಕಾಗಿ ದಳ್ಳಾಳಿಗೆ ನಿಂತು ಸಾಮಾನ್ಯ ದಲಿತ ಸಮೂಹವನ್ನು ಬಳಸಿಕೊಳ್ಳುತ್ತಿದ್ದಾರೆ. ಜಾತಿ ಪದ್ಧತಿ ವಿರುದ್ಧ ಸಂಘಟಿಸುವ ಪ್ರಯತ್ನವಾಗಲೀ ರಾಜಕೀಯ ಪ್ರಜ್ಞೆಯನ್ನು ಬೆಳೆಸುವುದರಲ್ಲಾಗಲೀ ತೀವ್ರವಾಗಿ ತೊಡಗಿಸಿಕೊಂಡ ಚಳವಳಿಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಈ ದಿಕ್ಕಿನಲ್ಲಿ ಸಂಘಟಿಸುವ ಪ್ರಯತ್ನಗಳು ಮುಂದುವರೆದಿದ್ದರೆ ಹಿಂದುತ್ವವು ದಲಿತ ಸಮುದಾಯದೊಳಗೆ ಪ್ರವೇಶಿಸಲು ಆಗುತ್ತಿರಲಿಲ್ಲ. ೧೯೮೦ರ ದಶಕದಲ್ಲಿ ಶಿಕ್ಷಣವಂತ ಹಾಗೂ ನಗರವಾಸಿ ದಲಿತರು ಗ್ರಾಮೀಣ ಪ್ರದೇಶದ ದಲಿತರನ್ನು ಸಂಘಟಿಸಿ ಇತರೆ ವಂಚಿತ ವರ್ಗಗಳ ಜೊತೆ ಸೇರಿ ಮೇಲ್ಜಾತಿಯ ಭೂಮಾಲಿಕರ ವಿರುದ್ಧ ಹೋರಾಟಕ್ಕೆ ಸಿದ್ಧ ಪಡಿಸಿದ ರೀತಿಯಲ್ಲಿಯೇ ಒಕ್ಕೂಟವನ್ನು ಬಲಪಡಿಸುವ ಸಾಧ್ಯತೆಗಳಿದ್ದವು. ಆದರೆ ಇವತ್ತಿನ ಬಹುಪಾಲು ದಲಿತ ನಾಯಕರೆಲ್ಲ ಕಂಡು ಬರುವುದು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ. ಈ ರೀತಿ ಗ್ರಾಮೀಣ ಪ್ರದೇಶದಲ್ಲಿ ಉಂಟಾದ ಖಾಲಿ ಜಾಗವನ್ನು ಹಿಂದುತ್ವದ ಶಕ್ತಿಗಳು ಆಕ್ರಮಿಸಿಕೊಂಡಿವೆ.

ದಲಿತ ಸಮುದಾಯಗಳ ಮಧ್ಯೆ ಸಂಘಪರಿವಾರದ ವ್ಯವಸ್ಥಿತ ಪ್ರವೇಶ

ಬಿಜೆಪಿ ದಲಿತ ನಾಯಕರನ್ನೂ ಅಜೆಂಡಾಗಳನ್ನೂ ತನ್ನ ಚುನಾವಣಾ ಲೆಕ್ಕಾಚಾರಗಳೊಳಗೆ ಜಾಗ ಮಾಡಿ ಸೇರಿಸಿಕೊಳ್ಳುವ ಸಮಯೋಚಿತ ತಂತ್ರಗಳನ್ನು ಪ್ರಯೋಗಿಸಿದರೆ ಆರೆಸ್ಸೆಸ್ ತನ್ನದೇ ಆದ ಶಿಕ್ಷಣ ಅಭಿಯಾನಗಳನ್ನು ಪರಾರಂಭಿಸಿ ದಲಿತ ಸಮುದಾಯಗಳನ್ನು ಪ್ರವೇಶಿಸಿದೆ. ಇದು ಕರ್ನಾಟಕದ ಪಟ್ಟಣಗಳು ಹಾಗೂ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಿದೆ. ಉದಾಹರಣೆಗೆ ಬೆಂಗಳೂರಿನಲ್ಲಿರುವ ಆರೆಸ್ಸೆಸ್ ನೂರಾರು ಕೊಳಚೆ ಪ್ರದೇಶಗಳಲ್ಲಿ ಶಿಕ್ಷಣ ಅಭಿಯಾನಗಳನ್ನು ನಡೆಸುತ್ತಿದೆ. ಇದು ರಾಷ್ಟ್ರೋತ್ಥಾನ ಪರಿಷತ್ತಿನ ಯೋಜನೆಯಾಗಿದ್ದು, ಇದಕ್ಕೆ ಬೇಕಾದ ಹಣವನ್ನು ಇನ್ಫೋಸಿಸ್‌ ಮತ್ತು ವಿಪ್ರೋ ಸಂಸ್ಥೆಗಳು ಒದಗಿಸುತ್ತಿವೆ. ಈ ಎರಡೂ ಸಂಸ್ಥೆಗಳು ಸಹಾಯಕ ದತ್ತಿಗಳ ಮೂಲಕ ರಾಷ್ಟ್ರೋತ್ಥಾಣ ಪರಿಷತ್ತಿಗೆ ಹಣ ನೀಡಿ ತನ್ನ ವಿಷಭರಿತ ಹಿಂದೂ ಕೋಮುವಾದಿ ಪುಸ್ತಕಗಳನ್ನು ದಲಿತ ಮಕ್ಕಳಿಗೆ ಉಚಿತವಾಗಿ ನೀಡುತ್ತಿವೆ. ಇದನ್ನು ಆರೆಸ್ಸೆಸ್‌ನ ಪ್ರಚಾರಕರು ಸಾಕ್ಷರತಾ ಮತ್ತು ಶೈಕ್ಷಣಿಕ ಕಾರ್ಯಕ್ರಮದ ಹೆಸರಿನಲ್ಲಿ ನಡೆಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಂಬೇಡ್ಕರ್ ಬಗ್ಗೆಯೂ ಪುಸ್ತಕಗಳಿವೆ. ಒಂದು ಪುಸ್ತಕದಲ್ಲಿ ಅಂಬೇಡ್ಕರ್ ಆರೆಸ್ಸೆಸ್‌ನಲ್ಲಿ ಅಸ್ಪೃಶ್ಯತೆಯು ಕಂಡು ಬರುವುದಿಲ್ಲವೆಂದೂ ಭಾರತದ ವಿಭಜನೆಗೆ ಮುಸ್ಲಿಮರೇ ಕಾರಣ ಎಂದೂ ಹೇಳಿದ್ದಾಗಿ ಬರೆಯಲಾಗಿದೆ. ಇತರೆ ಪುಸ್ತಕಗಳೆಲ್ಲ ಹಿಂದೂ ಕೋಮುವಾದಿ ನಾಯಕರ ಮತ್ತು ಅವರ ಕೋಮುವಾದಿ ಚಿಂತನೆಗಳನ್ನು ಒಳಗೊಂಡಿವೆ. ಈ ಯೋಜನೆಗೆ ದಲಿತ ಸಂಘಟನೆಗಳಿಂದ ಪರಿಣಾಮಕಾರಿ ವಿರೋಧ ಕಂಡುಬರದೇ ಇರುವುದು ದಲಿತ ಚಳವಳಿಯ ಇವತ್ತಿನ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಸಂಘಪರಿವಾರದ ಇತರೆ ಅಂಗಗಳು ಕೂಡ ಕೊಳಚೆ ಪ್ರದೇಶಗಳಲ್ಲಿ ದಲಿತರಿಗೆ ಕೋಮುವಾದಿ ಉಪದೇಶಗಳನ್ನು ಬೋಧಿಸುತ್ತಿವೆ. ಇದರ ಜೊತೆಗೆ ನಿರುದ್ಯೋಗಿ ದಲಿತ ಯುವಕರನ್ನು ಹಿಂದೂ ಕೋಮುವಾದಿಗಳನ್ನಾಗಿ ಮಾಡಿ ಹೊಣೆಗೇಡಿ ದಲಿತ ಯುವಕರಿಗೆ ಒಂದಿಷ್ಟು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ದಲಿತ ಮಧ್ಯಮವರ್ಗದ ಬ್ರಾಹ್ಮಣೀಕರಣ

ನಿರುದ್ಯೋಗಿ ದಲಿತ ಯುವಜನರಲ್ಲಿನ ಅರಾಜಕತೆ: ದಲಿತರ ಮೇಲೆ ಹಿಂದುತ್ವದ ಪ್ರಭಾವ ಬೆಳೆಯಲು ದಲಿತ ಮಧ್ಯಮ ವರ್ಗ ಹಾಗೂ ನಿರುದ್ಯೋಗಿ ಹೊಣೆಗೇಡಿ ದಲಿತ ಯುವಕ ಗುಂಪುಗಳು ಪರೋಕ್ಷವಾಗಿ ಕಾರಣವಾಗಿವೆ. ಇವರುಗಳು ಹಿಂದುತ್ವದ ಅಜೆಂಡಾವನ್ನು ದಲಿತ ಸಮೂಹದಲ್ಲಿ ಹರಡುವ ವಾಹಕಗಳಾಗಿ ಕೆಲಸ ಮಾಡುತ್ತಿವೆ. ಒಂದು ಕಡೆ ದಲಿತ ಮಧ್ಯಮ ವರ್ಗದಲ್ಲಿನ ಪ್ರಗತಿಶೀಲರು ದಲಿತ ರಾಜಕೀಯವನ್ನು ಮತ್ತಷ್ಟು ಸತ್ವಯುತಗೊಳಿಸುವ ಪ್ರಯತ್ನದಲ್ಲಿದ್ದರೆ ಮತ್ತೊಂದು ಬಹುದೊಡ್ಡ ವಿಭಾಗವು ಈ ಭಿನ್ನ ಮತೀಯರನ್ನು ಮಟ್ಟ ಹಾಕಿ ಬ್ರಾಹ್ಮಣ ಆಚರಣೆಗಳನ್ನು (ಉದಾಹರಣೆಗೆ ಸತ್ಯನಾರಾಯಣ ಪೂಜೆ) ಸಾಮಾಜಿಕವಾಗಿ ದಲಿತರ ಮಧ್ಯೆ ಅನುಷ್ಠಾನಗೊಳಿಸುತ್ತಿದ್ದಾರೆ. ಇಂಥಾ ಪ್ರಯತ್ನವು ಹಿಂದುತ್ವಕ್ಕೆ ರಾಜಕೀಯ ಹಾಗೂ ಸೈದ್ಧಾಂತಿಕ ಮಾನ್ಯತೆ ದೊರಕಿಸಿಕೊಟ್ಟಂತಾಗಿದೆ.

ಪ್ರಗತಿಪರ ದಲಿತ ರಾಜಕಾರಣವಿಲ್ಲದ ಸಂದರ್ಭದಲ್ಲಿ ಅರೆ-ಉದ್ಯೋಗಿ ಮತ್ತು ನಿರುದ್ಯೋಗಿ ದಲಿತ ಯುವಕರನ್ನು ಕ್ರಮೇಣ ಹಿಂದುತ್ವದ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಈ ಯುವಕರಿಗೆ ತಮ್ಮ ನೋವನ್ನು ಹೇಳಿಕೊಳ್ಳಲು ಬೇರೆ ಯಾವ ದಾರಿ ಇಲ್ಲದ ಕಾರಣ ಅವರು ಹಿಂದುತ್ವದ ಪ್ರಬಾವಕ್ಕೆ ಒಳಗಾದರು. ಮುಸ್ಲಿಂ-ವಿರೋಧಿ ಮತ್ತು ಪಾಕಿಸ್ತಾನಿ ವಿರೋಧಿ ಪ್ರಚಾರಕ್ಕೆ ಇದು ನೆರವಾದ ಅಂಶಗಳಾಗಿವೆ. ಮಹಾರಾಷ್ಟ್ರ ಗಡಿಯ ಸಮೀಪವಿರುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಈ ಬೆಳವಣಿಗೆ ಕಂಡು ಬರುತ್ತದೆ. ಇದೇ ಪ್ರಕ್ರಿಯೆಯು ಕೋಲಾರ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಈ ಪ್ರದೇಶಗಳೆಲ್ಲವೂ ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ ಹಾಗೂ ದಲಿತ ವರ್ಗಗಳಿಗೆ ದುರ್ಬರ ಬದುಕಿನ ಪ್ರದೇಶಗಳಾಗಿವೆ ಎಂಬುದು ಗಮನಿಸಬೇಕಾದ ಅಂಶ. ಉತ್ತರ ಕರ್ನಾಟಕದಲ್ಲಿ ಮೊದಲಿನಿಂದಲೂ ದಲಿತ ಚಳವಳಿಗಳು ದುರ್ಬಲವಾಗಿದ್ದುದು ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ನಾಯಕತ್ವ ಕೊರತೆಗಳು ಹಾಗೂ ಸಂಘಟನಾತ್ಮಕ ಸಮಸ್ಯೆಗಳಿಂದಾಗಿ ಸಂಘ ಪರಿವಾರಕ್ಕೆ ಅನುಕೂಲ ಪರಿಸ್ಥಿತಿಯನ್ನು ಉಂಟುಮಾಡಿದೆ. ಪ್ರಗತಿಪರ ರಾಜಕಾರಣವು ಹಿನ್ನಡೆ ಅನುಭವಿಸುತ್ತಿರುವುದು ಹಿಂದುತ್ವಕ್ಕೆ ಸಹಾಯ ಮಾಡಿದಂತಾಗಿದೆ.

ಹಿಂದುತ್ವ ಬಲಪಂಥೀಯತೆಯನ್ನು ಅಧಿಕೃತಗೊಳಿಸುವ ಪ್ರಯತ್ನಗಳು

ಸಮಾಜದ ಮುಖ್ಯವಾಹಿನಿಯಲ್ಲಿ ಹಿಂದುತ್ವವನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಅಧಿಕೃತಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವುದು, ಅಧಿಕಾರ ವಲಯಕ್ಕೆ ಸಮೀಪವರ್ತಿಗಳಾಗುವ ಪ್ರಯತ್ನಗಳು ಮತ್ತು ಅದು ಅಧಿಕಾರದ ಮೂಲಕ ಹತೋಟಿಯನ್ನು ಸಾಧಿಸುತ್ತಿರುವುದು ಹಿಂದೂ ಕೋಮುವಾದಕ್ಕೆ ಮಾನ್ಯತೆ ಸಿಗಲು ಇರುವ ಕಾರಣಗಳಲ್ಲಿ ಕೆಲವು. ಇತ್ತೀಚಿನ ಚುನಾವಣೆಗಳಲ್ಲಿ ದೇಶದ ಬೇರೆ ಕಡೆಗಳಲ್ಲಿ ಸೋಲನ್ನು ಅಪ್ಪಿದ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಭೌಗೋಳಿಕವಾಗಿಯೂ ಸಾಮಾಜಿಕವಾಗಿಯೂ ಮುನ್ನಡೆ ಸಾಧಿಸಿದೆ. ಜನರ ಅಭಿಪ್ರಾಯದಲ್ಲಿ ಬಿಎಸ್‌ಪಿಯ ಪ್ರವೇಶವು ಬಿಜೆಪಿಗೆ ವರವಾಗಿ ಪರಿಣಮಿಸಿದ್ದು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳಿಗೆ ನಷ್ಟವನ್ನು ತಂಡುಕೊಟ್ಟಂತಾಗಿದೆ ಎಂಬ ಭಾವನೆ ಕಂಡು ಬರುತ್ತದೆ. ಓಬಿಸಿ ಮತ್ತು ದಲಿತರ ಮಧ್ಯೆ ಸಂಘಪರಿವಾರವು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದು ಕೂಡ ಈ ಪರಿಸ್ಥಿತಿಗೆ ಕಾರಣವಾಗಿದೆ. ೨೦೦೪ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಸಮಾಜೋತ್ಸವಗಳನ್ನು ಏರ್ಪಡಿಸಿದ ಸಂಘ ಪರಿವಾರವು ಮುಖ್ಯವಾಗಿ ದಲಿತರನ್ನು ಸಂಘಟಿಸುವುದರ ಕಡೆ ಹೆಚ್ಚು ಗಮನಕೊಟ್ಟಿತು. ಅಸ್ಪೃಶ್ಯತೆಯ ವಿರುದ್ಧ ಘೋಷಣೆಗಳು ಕೇಳಿ ಬಂದವು. ಅವರು ಈ ಸಂದರ್ಭದಲ್ಲಿ ದಲಿತ ಯುವಕರಿಗೆ ಕೊಟ್ಟ “ಓಂ” ಅಕ್ಷರವಿರುವ ಬನಿಯನ್‌ಗಳನ್ನಾಗಲಿ ಮುಸ್ಲಿಂ-ವಿರೋಧಿ ಘೋಷಣೆಗಳನ್ನು ಮುದ್ರಿಸಿದ ಬನಿಯನ್‌ಗಳನ್ನಾಗಲಿ ಧರಿಸಿಕೊಳ್ಳುವುದರಲ್ಲಿ ಯಾವುದೇ ಆಕ್ಷೇಪವಿಲ್ಲದ್ದು ವಿಶೇಷ ಸಂಗತಿ. ಈ ರೀತಿಯ ನಡವಳಿಕೆಯನ್ನು ೧೯೮೦ರ ದಶಕದಲ್ಲಿ ಕಲ್ಪಿಸಿಕೊಳ್ಳುವುದು ಅಸಾಧ್ಯವಾದ ಸಂಗತಿಯಾಗಿತ್ತು.

ದಲಿತ ಪ್ರಜ್ಞೆಯನ್ನು ಕ್ರಾಂತಿಕಾರಿ ರಾಜಕಾರಣದಿಂದ ವಿಮುಖಗೊಳಿಸುವ ಪ್ರಯತ್ನ

೧೯೮೦ರ ದಶಕದಲ್ಲಿ ಅಂಬೇಡ್ಕರ್ ವಾದಿ ಪ್ರಜ್ಞೆ ಮತ್ತು ಇತರೆ ಸೈದ್ಧಾಂತಿಕ ಪ್ರಭಾವಗಳಿಂದಾಗಿ ದಲಿತರ ಅಜೆಂಡಾ ತೀವ್ರತೆಯನ್ನೂ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಶಯಗಳನ್ನು ವ್ಯಕ್ತಪಡಿಸುವಲ್ಲಿ ಸ್ವಾಭಿಮಾನದ ಪ್ರಶ್ನೆಯಾಗಲೀ, ಮಿಕ್ಕ ವಿಷಯಗಳಲ್ಲಿ ತಮ್ಮ ಆಶಯಗಳನ್ನು ವ್ಯಕ್ತಪಡಿಸುವಲ್ಲಿ ಅಪೇಕ್ಷೆಗಳಾಗಲೀ ದಲಿತ ಸಂಘಟನೆಗಳಲ್ಲಿ ಕಂಡು ಬರುತ್ತಿಲ್ಲ. ಕೇವಲ ಅಸ್ತಿಪಂಜರದ ಚೌಕಟ್ಟನ್ನು ಇಟ್ಟುಕೊಂಡು ದಲಿತ ನಾಯಕತ್ವವು ತಮ್ಮ ಸ್ವಂತ ಹಿತಾಸಕ್ತಿ ಮತ್ತು ಬೆಳವಣಿಗೆಗಳನ್ನು ನೋಡಿಕೊಳ್ಳುವ ಅಜೆಂಡಾ ಮಾತ್ರ ಉಳಿದಿದೆ. ಈ ಪರಿಸ್ಥಿತಿ ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುವಂತೆಯೇ ಕರ್ನಾಟಕದಲ್ಲೂ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಎಲ್ಲಾ ಗುಂಪುಗಳೂ ಅಂಬೇಡ್ಕರ್ ವಾದದ ಮುಖ್ಯ ಅಂಶವಾದ ಜಾತಿ ವಿರೋಧದ ಹೋರಾವನ್ನೇ ಮರೆತುಬಿಟ್ಟಂತಾಗಿದೆ. ಅಂಬೇಡ್ಕರ್ ಅವರಿಗೆ ಬಹುಮುಖ್ಯವೆನಿಸಿದ್ದ ಭೂ ಒಡೆತನದ ಪ್ರಶ್ನೆ ಸಂಪೂರ್ಣವಾಗಿ ಕೈಬಿಟ್ಟ ಹಾಗೆ ಕಾಣುತ್ತದೆ. ಸ್ವಂತ ವೈಯಕ್ತಿಕ ಬೆಳವಣಿಗೆಯೊಂದೇ ಈಗ ಮುಖ್ಯವಾದದ್ದು ಎಂಬ ಈ ಸಂಘಟನೆಗಳ ಧೋರಣೆಯು ಹಿಂದುತ್ವದ ಶಕ್ತಿಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಿದೆ.

ಇಷ್ಟರ ಮಧ್ಯೆ ಈ ಸಮಕಾಲೀನ ವಿದ್ಯಮಾನಗಳು ಅವಿರೋಧವಾಗಿ ಸಾಗುತ್ತಿವೆ ಎಂಬ ತೀರ್ಮಾನಕ್ಕೆ ಜಿಗಿಯಬೇಕಿಲ್ಲ. ಹಲವು ರಾಜಕೀಯ ಶಕ್ತಿಗಳು ತಮ್ಮದೇ ಆದ ಸಾಮಾಜಿಕ ದಿಟ್ಟ ಹೋರಾಟದ ಕಾರ್ಯಕ್ರಮಗಳೊಂದಿಗೆ ಕೆಲಸ ಮಾಡುತ್ತಿರುವುದು ಆಶಾದಾಯಕವಾಗಿದೆ. ಈ ಸಾಲಿನಲ್ಲಿ ಬಾಬಾ ಬುಡನ್‌ಗಿರಿಯನ್ನು ಸಂಘಪರಿವಾರವು ಕೇಸರೀಕರಣಗೊಳಿಸುವ ಯತ್ನವನ್ನು ಮುರಿಯಲು ಜಾತ್ಯಾತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿದ್ದು ಒಂದು ಪ್ರಮುಖ ಬೆಳವಣಿಗೆಯಾಗಿದೆ. ೨೦೦೩ನೇ ಸಾಲಿನಲ್ಲಿ ಬಹಳಷ್ಟು ದಲಿತ ಯುವಕರು ಸಂಘಪರಿವಾರದ ಪ್ರಚಾರವನ್ನು ನಂಬಲು ಸಿದ್ಧರಾಗಿದ್ದರು. ಈ ಸನ್ನಿವೇಶವು ಬಿರುಸಾರ ವಾತಾವರಣವನ್ನೂ ಸೃಷ್ಟಿಸಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಸಂಘಪರಿವಾರದ ‘ರ್ಯಾಲಿ’ಯಲ್ಲಿ ಭಾಗವಹಿಸಿದ ದಲಿತ ಯುವಕರ ಸಂಖ್ಯೆ ಕಡಿಮೆಯಾಗಿ ಅವರಲ್ಲಿ ಅಧಿಕ ಮಂದಿ ಜಾತ್ಯಾತೀತ ಚಳವಳಿಗಳಲ್ಲಿ ಭಾಗವಹಿಸುವಂತಹ ಸನ್ನಿವೇಶ ಉಂಟಾಗಿದೆ. ದಲಿತ ರಾಜಕಾರಣವು ತೀವ್ರಗೊಂಡು ತಳಮಟ್ಟದ ಬದಲಾವಣೆಗಾಗಿ ಹೋರಾಡುವುದಕ್ಕೆ ಸಿದ್ಧವಾದರೆ ಹಿಂದುತ್ವ ಶಕ್ತಿಗಳ ಪ್ರಭಾವವನ್ನು ತಡೆಯಬಹುದೆಂಬುದಕ್ಕೆ ಈ ಬೆಳವಣಿಗೆಯು ಸಾಕ್ಷಿಯಾಗಿದೆ. ಈ ತರಹದ ಸಿದ್ಧತೆಯು ಕರ್ನಾಟಕದಲ್ಲಿ ಅತ್ಯಗತ್ಯವಾಗಿರುವುದರಿಂದ ದಲಿತರು ಹಾಗೂ ದಲಿತೇತರರ ಸಂಘಟನೆಗಳು ಒಟ್ಟು ಗೂಡಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಟಿಪ್ಪಣಿ

ಭಾರತದ ಪ್ರಭುತ್ವವು ಜನ-ಹಿತ ಪ್ರಭುತ್ವವೋ ಅಲ್ಲವೋ ಆ ವಿಷಯ ಬೇರೆ. ಆದರೆ ನವ ಉದಾರವಾದಿ ಅರ್ಥವ್ಯವಸ್ಥೆಯ ಮಾದರಿಯನ್ನು ಅಳವಡಿಸಿಕೊಳ್ಳಿವ (೧೯೮೦ರ ದಶಕದ ಮಧ್ಯಭಾಗ ಮುಂಚಿನ ವರ್ಷಗಳಲ್ಲಿ ಜನ-ಹಿತ ಕಾರ್ಯಕ್ರಮಗಳ ಬಗ್ಗೆ ಒಂದಿಷ್ಟು ಕಾರ್ಯಕ್ರಮಗಳನ್ನು ಹೊಂದಿತ್ತು) ಎನ್ನಲಡ್ಡಿಯಿಲ್ಲ.

ಪರಾಮರ್ಶನ ಗ್ರಂಥಗಳು

೧. ಸಂ. ಡಾ. ಆನಂದ ತೇಲ್ತುಂಬ್ಡೆ, ಅನುವಾದಕರು: ಪ್ರೊ. ಬಿ. ಗಂಗಾಧರ ಮೂರ್ತಿ, ಹಿಂದುತ್ವ ಮತ್ತು ದಲಿತರು: ಕೋಮವಾದಿ ರಾಜಕಾರಣ ಒಂದು ತಾತ್ವಿಕ ಪರಾಮರ್ಶೆ, ಚಿಂತಾ ಪುಸ್ತಕ, ಬೆಂಗಳೂರು, ೨೦೦೯.

೨. ಆನಂದ ತೇಲ್ತುಂಬ್ಡೆ, ಅನುವಾದ: ರಾಹು, ಅಂಬೇಡ್ಕರೋತ್ತರ ದಲಿತ ಸಂಘರ್ಷ, ದಾರಿ-ದಿಕ್ಕು, ಚಿಂತನ ಪುಸ್ತಕ, ಬೆಂಗಳೂರು, ೨೦೦೯.

—-
* ಕೋಮುವಾದಿ ಕಾರ್ಯಾಚರನೇ ಮತ್ತು ದಲಿತ ಪ್ರತಿಸ್ಪಂದನೆ. (ಸಂ. ) ಆನಂದ ತೇಲ್‌ತುಂಬ್ಡೆ ಅನುವಾದ ಸಂಯೋಜನೆ. ಪ್ರೊ. ಬಿ. ಗಂಗಾಧರಮೂರ್ತಿ, ಶಿವಸುಂದರ, ಲಡಾಯಿ ಪ್ರಕಾಶನ, ಗದಗ, ೨೦೧೦ ಕೃತಿಯಿಂದ ಆಯ್ದ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ. )