ಭಾರತೀಯ ಎಡಪಂಥೀಯರು ಮತ್ತು ಅಂಬೇಡ್ಕರ್ ಚಿಂತನೆಗಳು

ಅಂಬೇಡ್ಕರ್ ರ ರಾಜಕೀಯ, ಸಾಮಾಜಿಕ ಚಿಂತನೆಗಳು ಭಾರತೀಯ ಸಮಾಜವಾದಿಗಳು ಮತ್ತು ಕಮ್ಯುನಿಷ್ಟರ ನಂಬಿಕೆಗಳ ನಡುವೆ ಎಲ್ಲೋ ಇರುವಂತೆ ಕಾಣುತ್ತದೆ. ಸಮಾಜವಾದಿಗಳು ವಿಕೇಂದ್ರೀಕರಣವನ್ನು ಪ್ರತಿಪಾದಿಸಿದರೆ ಅಂಬೇಡ್ಕರ್ ಬಹುಮಟ್ಟಿಗೆ ವಿಕೇಂದ್ರೀಕರಣವನ್ನು ವಿರೋಧಿಸುತ್ತಿದ್ದರು. ಅವರು ಬಲಿಷ್ಠ ಕೇಂದ್ರ ಸರ್ಕಾರದ ಪ್ರತಿಪಾದಕರು, ಅಷ್ಟೇ ಅಲ್ಲ ಗ್ರಾಮ ಸ್ವರಾಜ್ಯವನ್ನು ಖಂಡ ತುಂಡವಾಗಿ ನಿರಾಕರಿಸುತ್ತಾರೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ, ಅವರ ಈ ಮಾತುಗಳನ್ನು ಗಮನಿಸಿ:

ಗ್ರಾಮ ಸ್ವರಾಜ್ಯವೇ ಹಿಂದೆ ಭಾರತವನ್ನು ಹಾಳುಗೆಡವಿದ್ದು, ಗ್ರಾಮವೆಂದರೇನು? ಸಂಕುಚಿತ ಪ್ರಾಂತೀಯತೆಯ ತವರು, ಮೌಢ್ಯ, ಸಣ್ಣತನ ಮತ್ತು ಜಾತ್ಯಂಧತೆಯಿಂದ ಕೂಡಿದ ಗೂಡು.

ಈ ಮಾತುಗಳನ್ನು ಗಾಂಧೀಜಿಯ ಗ್ರಾಮಸ್ವರಾಜ್ಯ ಕಲ್ಪನೆಯ ವಿರುದ್ಧದ ಮಾತುಗಳೆಂದು ತಳ್ಳಿಹಾಕುವಂತೇನೂ ಇಲ್ಲ. ಅಧಿಕಾರ ವಿಕೇಂದ್ರೀಕರಣ ಜಾತಿ ಆಧಾರಿತ ಮೇಲು ಕೀಳುಗಳೇ ಎಲ್ಲವನ್ನೂ ನಿರ್ಧರಿಸುವ ಭಾರತೀಯ ಸಮಾಜದಲ್ಲಿ, ಕೆಳವರ್ಗಗಳಿಗೆ ಉರುಳಾಗಬಹುದೆಂದು ಅವರು ಹೆದರಿದ್ದು ಸಹಜ. ಜಾತಿವ್ಯವಸ್ಥೆ ಮತ್ತು ಆಧುನಿಕ ವಿಕೇಂದ್ರೀಕರಣದ ಪರಿಕಲ್ಪನೆ ಪರಸ್ಪರ ವಿರುದ್ಧವಾದವು. ಸಮಾನತೆಯಿದ್ದಾಗ ಗ್ರಾಮಸ್ವರಾಜ್ಯ ಪ್ರಗತಿದಾಯಕವಾಗುತ್ತದೆ. ಇಲ್ಲದಿದ್ದಾಗ ಅದು ಅಂಬೇಡ್ಕರ್ ಹೇಳುವಂತೆ ದುರ್ವಾಸನೆ ಬೀರುವ ಕೊಳಚೆ ಗುಂಡಿಯಾಗುತ್ತದೆ.

ಅಂಬೇಡ್ಕರ್ ಈ ಯೋಚನೆಗಳು ಅವರ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಕೃತಿಯಲ್ಲಿವೆ. ಈ ಕೃತಿಯಲ್ಲೂ ಅವರು ‘ಪ್ರಭುತ್ವ ಸಮಾಜವಾದ’ದ ಬಗ್ಗೆ ಮಾತನಾಡಿರುವವರೇ ಹೊರತು ವಿಕೇಂದ್ರೀಕರಣದ ಬಗ್ಗೆ ಅಲ್ಲ. ಸ್ವತಂತ್ರ ಭಾರತದ ರಾಜಕೀಯ ಅರ್ಥವ್ಯವಸ್ಥೆಯ ಬಗ್ಗೆ ಅವರು ಸೂಚಿಸುವುದೆಂದರೆ

೧. ಭೂಮಿ ರಾಜ್ಯದ ಸ್ವಾಮ್ಯಕ್ಕೆ ಒಳಪಟ್ಟಿರಬೇಕು

೨. ವಿಮೆ, ಪ್ರಮುಖ ಮತ್ತು ಅತ್ಯಾವಶ್ಯಕ ಕೈಗಾರಿಕೆಗಳು ರಾಜ್ಯದ ಹತೋಟಿಯಲ್ಲಿರಬೇಕು.

೩. ಸಾಮೂಹಿಕ ಬೇಸಾಯ ಪದ್ಧತಿಯಿರಬೇಕು.

ಸಮಾಜ ಆರ್ಥಿಕ ರಚನೆ ಮತ್ತು ವ್ಯಕ್ತಿ ಸ್ವಾತಂತ್ರ್ಯ ಒಂದೇ ನಾಣ್ಯದ ಎರಡು ಮುಖಗಳೆಂದು ಅವರು ದೃಢವಾಗಿ ನಂಬಿದ್ದರು. ವ್ಯಕ್ತಿ ತನ್ನ ಹಕ್ಕುಗಳನ್ನು ಚಲಾಯಿಸಲು ಸಮಾಜದ ಆರ್ಥಿಕ ರಚನೆ ಅನುಕೂಲಕರವಾಗಿರಬೇಕು. “ಆರ್ಥಿಕ ಸ್ವಾತಂತ್ರ ಎಲ್ಲ ಹಕ್ಕುಗಳ ಚಲಾವಣೆಗೂ ಮೂಲಭೂತವಾದದ್ದು, ಒಂದು ಇಲ್ಲದೆ ಮತ್ತೊಂದು ಇರಲು ಸಾಧ್ಯವಿಲ್ಲ. ಖಾಸಗಿ ಉದ್ಯಮ ರಾಜಕೀಯ ಸ್ವಾತಂತ್ರ್ಯವನ್ನು ಇಲ್ಲವಾಗಿಸುತ್ತದೆ. ಪ್ರಭುತ್ವ ಸಮಾಜವಾದವಲ್ಲದೆ ಬೇರೆ ಯಾವ ಮಾರ್ಗದಿಂದಲೂ ಜನತಂತ್ರ ಸಫಲವಾಗುವುದಿಲ್ಲ”ವೆಂದು ಅವರು ಅಭಿಪ್ರಾಯಪಟ್ಟರು.

ಸಮಾಜವಾದಿಗಳು ಬಹಳವಾಗಿ ಮೆಚ್ಚುವ ಸಂಸದೀಯ ಪ್ರಜಾಸತ್ತೆಯಲ್ಲೂ ಅವರಿಗೆ ಪೂರ್ತಿ ವಿಶ್ವಾಸವಿರಲಿಲ್ಲ. ಏಕೆಂದರೆ, ಹಿಂದುಳಿದ, ಅಸಮತೆಯಿರುವ ಭಾರತದ ಪರಿಸರದಲ್ಲಿ ಸಂಸದೀಯ ಪ್ರಜಾಸತ್ತೆ ಯಶಸ್ವಿಯಾಗುವುದರ ಬಗ್ಗೆ ಅವರಿಗೆ ಗಾಢ ಅನುಮಾನಗಳಿದ್ದವು. ಈ ಮಾತುಗಳನ್ನು ನೋಡಿ:

ಸಂಸದೀಯ ಪ್ರಜಾಸತ್ತೆಯಲ್ಲಿ ಪ್ರಭುತ್ವ ಸಮಾಜವಾದ ಖಾಯಂ ಆಗಿ ಇರಲಿ ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ, ಶಾಸಕಾಂಗರಾಜ್ಯಾಂಗಗಳು ಬಹುಮತವಿದ್ದವರ ಕೈಲಿದ್ದು, ಅವರ ನೀತಿಗಳೇ ಸರ್ಕಾರದ ನೀತಿಯಾಗಿಬಿಡುತ್ತದೆ. ಒಮ್ಮೆ ಚುನಾಯಿತರಾದವರಿಗೆ ಪ್ರಭುತ್ವ ಸಮಾಜದಲ್ಲಿ ನಂಬಿಕೆಯಿದ್ದು ಅನಂತರ ಸರ್ಕಾರ ರಚಿಸಿದವರು ಇದಕ್ಕೆ ವಿರುದ್ದವಾಗಿರಬಹುದು. ಆದ್ದರಿಂದ ಪ್ರಭುತ್ವಸಮಾವಾದ ಶಾಶ್ವತವಾಗಿರಲು ಅದು ಸಂವಿಧಾನದ ಒಂದು ಮೂಲಭೂತ ಕಟ್ಟಳೆ ಯಾಗಿರಬೇಕು ಮತ್ತು ನೀತಿಯನ್ನು ಬದಲಾಯಿಸಲು ಯಾರಿಗೂ ಸಾಧ್ಯವಿರಕೂಡದು. . . .

ಮತ್ತೊಂದು ಸಂದರ್ಭದಲ್ಲಿ ಅವರು ಸಂಸದೀಯ ಪ್ರಜಾಸತ್ತೆಯ ಬಗ್ಗೆ ಇದಕ್ಕೂ ಮಿಗಿಲಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಇಟಲಿ, ಜರ್ಮನಿ, ಸ್ಪೇನ್‌ಗಳಲ್ಲಿ ಸಂಸದೀಯ ಜನತಂತ್ರ ವಿಫಲವಾದ ಬಗ್ಗೆ ಹೇಳುತ್ತಾ

ಸಂಸದೀಯ ಜನತಂತ್ರದ ಬಗೆಗಿನ ಮರುಚಿಂತನೆ ಇಂದು ಎಲ್ಲರಿಗಿಂತಲೂ ಭಾರತೀಯರಿಗೆ ತುರ್ತಾಗಿದೆ. ಯಾಕೆಂದರೆ ನಾವು ಅದರ ಬಗ್ಗೆ ಒಲವುಳ್ಳವರಾಗಿದ್ದೇವೆ. ಧೈರ್ಯದಿಂದ ಯಾರಾದರೂ ಮಾತುಗಳನ್ನು ಹೇಳಬೇಕಾಗಿದೆಸಂಸದೀಯ ಪ್ರಜಾಸತ್ತೆಯ ಬಗ್ಗೆ ಎಚ್ಚರಿಕೆ! ಅದು ಮೇಲುನೋಟಕ್ಕೆ ಕಾಣುವಷ್ಟು ಒಳ್ಳೆಯ ವ್ಯವಸ್ಥೆಯೇನಲ್ಲ. ಪ್ರಭುತ್ವ ಸಮಾಜವಾದ ಖಾಯಂ ವ್ಯವಸ್ಥೆಯಾಗಿರಬೇಕು; ಸಂವಿಧಾನದ ಅಡಿಪಾಯವಾಗಿರಬೇಕು. ಸ್ವಾತಂತ್ರ್ಯಸಮಾನತೆಗಳ ನಡುವೆ ಸಮತೋಲನ ಏರ್ಪಡಬೇಕು. ಹಲವಾರು ದೇಶಗಳಲ್ಲಿ ಸಂಸದೀಯ ಜನತಂತ್ರ ವಿಫಲವಾಗಿದೆ. ಸರ್ವಾಧಿಕಾರಿ ಶಕ್ತಿಗಳು, ಫ್ಯಾಸಿಸ್ಟರು ವಿಜೃಂಭಿಸಿದ ಉದಾಹರಣೆಗಳಿವೆ.

ಸಂಸದೀಯ ಜನತಂತ್ರ ಈ ಸಮತೋಲನವನ್ನು ಸಾಧಿಸುವ ಬಗ್ಗೆ ಅಂಬೇಡ್ಕರ್ ಗೆ ಬಲವಾದ ಸಂಶಯವಿತ್ತು. ಈ ಸಂಶಯಗಳು ಧ್ವನಿಸುವುದಾದರೂ ಏನನ್ನು? ಸಂಸದೀಯ ಪ್ರಜಾಸತ್ತೆ ಭಾರತದಲ್ಲಿ ಶ್ರೀಮಂತರ ಕೈಗೊಂಬೆಯಾಗಿಬಿಡಬಹುದೆಂದು ಅಂಬೇಡ್ಕರ್ ಅನುಮಾನಿಸಿದ್ದು ಸರಿಯಾಗಿಯೇ ಇದೆ. ಜೊತೆಗೆ ಈ ವ್ಯವಸ್ಥೆಯ ಯಶಸ್ವಿ-ವೈಫಲ್ಯಗಳೆರಡೂ ಇಡೀ ಭಾರತೀಯ ಜನಸಮುದಾಯದ ಮೇಲೆ ಅವಲಂಬಿತವಾಗಿದ್ದು, ಅವರಲ್ಲಿ ಬಹುಸಂಖ್ಯಾತರು ಸಂಸದೀಯ ಪ್ರಜಾಸತ್ತೆಯ ಬಗ್ಗೆ ಏನೂ ತಿಳಿಯದವರಾಗಿದ್ದು, ಯಜಮಾನ ಸಂಸ್ಕೃತಿಯ ಮೇಲ್ಜಾತಿಯವರು ಹೇಳಿದಂತೆ ನಡೆದು, ಶೋಷಕ ವರ್ಗವನ್ನೇ ಬೆಂಬಲಿಸುವ ಅಪಾಯವಿದೆಯೆಂದು ಅವರು ಯೋಚಿಸಿದಂತೆ ಕಾಣುತ್ತದೆ ಮತ್ತು ಭಾರತೀಯ ಜನತಂತ್ರ ‘ಕೋಮುವಾದಿ ಬಹುಸಂಖ್ಯಾತ’ರ ನಿಯಂತ್ರಣಕ್ಕೆ ಒಳಪಡುತ್ತದೆ. ಈ ಬಹುಸಂಖ್ಯಾತರು ಶೋಷಕರೂ ಆಗಿದ್ದುದರಿಂದ ಅಲ್ಪಸಂಖ್ಯಾತರು ಮತ್ತು ದೀನದಲಿತರ ವಿರೋಧಿಗಳಾಗಿರುತ್ತಾರೆಂದೂ ಅಂಬೇಡ್ಕರ್ ಹೆದರಿದ್ದರು. ಆದ್ದರಿಂದಲೇ ಅವರ ಈ ಅನುಮಾನಗಳು.

‘ಭಾರತದ ಸಂವಿಧಾನ ಪಿತ’, ಆಧುನಿಕ ಮನು ಎಂದೆಲ್ಲಾ ಅಂಬೇಡ್ಕರರನ್ನು ಬಣ್ಣಿಸಲಾಗುತ್ತಿದೆ. ನಿಜ, ಸಂಸದೀಯ ಜನತಂತ್ರವೇ ಭಾರತೀಯ ಸಂವಿಧಾನ ಎತ್ತಿ ಹಿಡಿಯುವ ವ್ಯವಸ್ಥೆ ಸಂವಿಧಾನವನ್ನು ಬರೆದು ಅದನ್ನು ತಮ್ಮ ನೈಪುಣ್ಯದಿಂದ ಘಟನಾ ಸಭೆಯಲ್ಲಿ ಪಾಸು ಮಾಡಿಸಿದ ಅಂಬೇಡ್ಕರ್ ಗೆ ಅದರ ಬಗ್ಗೆ ನಿರಾಸೆ ಮೂಡಿತ್ತು. ಅದು ಸ್ಪಷ್ಟವಾಗಿಯೇ ನಮಗೆ ಅವರ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ:

ಸ್ವತಂತ್ರ ಭಾರತದ ಸಂವಿಧಾನದ ಶಿಲ್ಪಿಯೆಂದು ಜನ ನನ್ನನ್ನು ಕರೆಯುತ್ತಾರೆ. ಅದಕ್ಕೆ ನನ್ನ ಉತ್ತರವಿದುನಾನೊಂದು ಬಾಡಿಗೆ ಕುದುರೆಯಾಗಿದ್ದೆ. ನನಗೆ ಇಷ್ಟವಿಲ್ಲದಿದ್ದರೂ ನಾನು ಬೇರೆಯವರ ಮರ್ಜಿಯಂತೆ ಅದೆಲ್ಲಾ ಮಾಡಿದೆ. ಅದನ್ನು ಸುಟ್ಟು ಬೂದಿ ಮಾಡುತ್ತೇನೆ ಎಂದು ಹೇಳಲು ನಾನು ಸಿದ್ಧನಾಗಿದ್ದೇನೆ. . . . ಭಾರತದ ಸಂಸದೀಯ ಪ್ರಜಾಸತ್ತೆಯ ಭವಿಷ್ಯದ ಬಗ್ಗೆ ಕೂಡಾ ಅಂಬೇಡ್ಕರ್ ಅನುಮಾನ ವ್ಯಕ್ತಪಡಿಸುತ್ತಾಸಂಸದೀಯ ಜನತಂತ್ರ ಯಶಸ್ವಿಯಾಗಲು ಬಲಿಷ್ಠ ವಿರೋಧಪಕ್ಷ. ನೈತಿಕತೆ, ನಿಷ್ಪಕ್ಷಪಾತ ಮುಕ್ತ ಚುನಾವಣೆ ಅತ್ಯಾವಶ್ಯಕ. ಆದರೆ ಭಾರತದಲ್ಲಿ ಇದರಲ್ಲಿ ಯಾವುದೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿಯಲು ಸಾಧ್ಯವಿರಬಾರದು. ಸಂಸದೀಯ ಜನತಂತ್ರ ವಿಫಲವಾದರೆನಾನು ಹೇಳಿದ ಮೇಲಿನ ಕಾರಣಗಳಿಂದ ಅದು ವಿಫಲವಾಗುವುದು ಖಂಡಿತಆಗುವ ಪರಿಣಾಮ, ದಂಗೆ, ಅರಾಜಕತೆ, ಕಮ್ಯುನಿಸಂ. . . .

ಅಂಬೇಡ್ಕರ್ ಈ ಮಾತುಗಳನ್ನು ಹೇಳಿ ಸುಮಾರು ನಾಲ್ಕು ದಶಕಗಳೇ ಕಳೆದಿವೆ. ಅವರ ಅನುಮಾನಗಳೆಲ್ಲಾ ಬಹುತೇಕ ನಿಜವಾಗುತ್ತಿವೆ. ಇಷ್ಟೆಲ್ಲ ಅನುಮಾನಗಳಿದ್ದರೂ ಅವರು ಸಂಸದೀಯ ಜನತಂತ್ರದ ಪರವಾಗಿಯೇ, ಅನಿವಾರ್ಯವೆಂಬಂತೆ ಇದ್ದರು. ಮೇಲೆ ಕಾಣಿಸಿದ ಕಾರಣಗಳಿಂದ ಅಂಬೇಡ್ಕರ್ ಭಾರತೀಯ ಸಮಾಜವಾದಿಗಳಿಗಿಂತ ಭಿನ್ನವಾಗಿ ಯೋಗಿಸುತ್ತಿದ್ದರು. ಮತ್ತು ಅವರಿಗಿಂತ ಹೆಚ್ಚು ಮುಕ್ತ ವಿಚಾರಶೀಲರಾಗಿದ್ದರು ಎಂದು ಹೇಳಬಹುದು. ಇನ್ನು ಭಾರತೀಯ ಕಮ್ಯುನಿಷ್ಟರು ಅವರ ಜೊತೆಗಿನ ಅಂಬೇಡ್ಕರರ ಸಂಬಂಧ ಮತ್ತು ಅಭಿಪ್ರಾಯಗಳ ಬಗ್ಗೆ ಗಮನಹರಿಸಬಹುದು.

ಭಾರತೀಯ ಕಮ್ಯುನಿಷ್ಟರು ಮತ್ತು ಅಂಬೇಡ್ಕರ್ ಜೊತೆಗೂಡಿ ಹೋರಾಟಕ್ಕೆ ಇಳಿದಿದ್ದು ಒಂದು ಭಾರಿ ಮಾತ್ರ. ಅದು ೧೯೩೮ರಲ್ಲಿ ಬಾಂಬೆ ಪ್ರಾಂತ್ಯ ಸರ್ಕಾರ ಶಾಸನಸಭೆಯಲ್ಲಿ ಮಂಡಿಸಿದ ‘ಕೈಗಾರಿಕಾ ಮಸೂದೆ’ಯ ವಿರುದ್ಧ ನಡೆದ ಮುಷ್ಕರದಲ್ಲಿ. ಅನಂತರ ಅದು ಮುಂದುವರೆಯಲಿಲ್ಲ. ಕಮ್ಯುನಿಸ್ಟರನ್ನು ಮತ್ತು ತಮ್ಮ ಅಭಿಪ್ರಾಯದಲ್ಲಿ ‘ಆಕ್ರಮಣಕಾರಿ ರಷ್ಯಾ’ವನ್ನೂ ವಿರೋಧಿಸುತ್ತಿದ್ದ ಅಂಬೇಡ್ಕರ್. ಮಾರ್ಕ್ಸ್‌ವಾದವನ್ನು ಎಂದೂ ಟೀಕಿಸಲಿಲ್ಲ. ಇದು ಬಹಳ ಮುಖ್ಯವೆಂದು ನನ್ನ ಅಭಿಪ್ರಾಯ. ಮಾರ್ಕ್ಸ್ ವಾದ ಕೆಳವರ್ಗದವರಿಗೆಲ್ಲಾ ಭರವಸೆ, ತೃಪ್ತಿ ಕೊಡುವಂಥದ್ದು; ಅಂಬೇಡ್ಕರ್ ರ ಮಾತಿನಲ್ಲಿ ಹೇಳುವುದಾದರೆ ಮಾರ್ಕ್ಸ್ ವಾದ “ಮಾರ್ಗದರ್ಶಿ, ಜಡವಾದುದಲ್ಲ, ಚೈತನ್ಯಶೀಲ” ಅಂದರೆ ಅವರಿಗೆ ಮಾರ್ಕ್ಸ್‌ವಾದದ ಬಗ್ಗೆ ಮೋಹ, ಕಮ್ಯುನಿಸ್ಟರ ಬಗ್ಗೆ ತಿರಸ್ಕಾರ. ಇದು ವಿಲಕ್ಷಣವೇ? ಅಥವಾ ಭಾರತೀಯ ಕಮ್ಯುನಿಸ್ಟರು ಮಾರ್ಕ್ಸ್ ವಾದವನ್ನು ದೇಶೀಯ ವಿಶಿಷ್ಠತೆಗೆ- ಪರಿಸ್ಥಿತಿಗೆ ಸರಿಯಾಗಿ ಅಳವಡಿಸಿಕೊಂಡಿಲ್ಲವೆಂಬ ಅಸಮಾಧಾನವೇ?

ಸ್ವಾತಂತ್ರ್ಯಪೂರ್ವದಲ್ಲಿ ಬಹುತೇಕ ಕಮ್ಯುನಿಸ್ಟರು ಕಾಂಗ್ರೆಸ್ಸಿನೊಂದಿಗೆ ಇದ್ದವರು. ಕಾಂಗ್ರೆಸ್ಸಿನ ರಾಷ್ಟ್ರೀಯ ಹೋರಾಟಗಳನ್ನು ಬೆಂಬಲಿಸಿದವರು. ಗಾಂಧೀಜಿಯನ್ನು ಅನಿವಾರ್ಯವೆಂಬಂತೆ ಒಪ್ಪಿದವರು. ವರ್ಗ ಹೋರಾಟಗಳನ್ನು ಸಂಘಟಿಸಿಯೂ ಜಾತ್ಯಾಧಾರಿತ ಅಸಮತೆ-ಶೋಷಣೆಯ ಬಗ್ಗೆ ಅಷ್ಟಾಗಿ ಯೋಚಿಸದೆ ಹೋದವರು. ಬಹುತೇಕ ಎಲ್ಲ ನಾಯಕರೂ ಮೇಲ್ಜಾತಿಗಳಿಮಂದಲೇ ಬಂದವರು. ೧೯೪೨ರ ವರೆಗೆ, ಅಂದರೆ ಸೋವಿಯೆತ್ ರಷ್ಯಾ ಎರಡನೆ ಜಾಗತಿಕ ಮಹಾಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರೆಗೂ, ಕಾಂಗ್ರೆಸ್‌ಏನೇ ಮಾಡಲಿ ಅಂತಿಮವಾಗಿ ಅದನ್ನು ಸಮರ್ಥಿಸಿದವರು. ಗಾಂಧೀಜಿಯನ್ನು, ಎಲ್ಲ ವಿಷಯಗಳಲ್ಲೂ ಬೆಂಬಲಿಸಿದವರು. ಯಾಕೆಂದರೆ, ಅವರಿಗೂ ಗಾಂಧೀಜಿ ಮತ್ತು ಕಾಂಗ್ರೆಸ್‌ಸಾಮ್ರಾಜ್ಯಶಾಹೀ ಶಕ್ತಿಯ ವಿದ್ಧ ಹೋರಾಡುತ್ತಿರುವ ಮಹಾನ್ ಹೋರಾಟಗಾರ ಮತ್ತು ಸಂಸ್ಥೆಯೆಂಬ ನಂಬಿಕೆ ಇತ್ತು.

ಆದರೆ, ಆ ವೇಳೇಗಾಗಲೇ ಗಾಂಧಿ-ಕಾಂಗ್ರೆಸ್ ಎಂದರೆ ನಾನಾ ಕಾರಣಗಳಿಗಾಗಿ ಅಂಬೇಡ್ಕರ್ ಸಿಡಿಯುತ್ತಿದ್ದರು. ಬ್ರಿಟಿಷರ ಬಗೆಗಿನ ಅಂಬೇಡ್ಕರ್ ಮತ್ತು ಭಾರತೀಯ ಕಮ್ಯುನಿಸ್ಟರ ನಿಲುಗಳಲ್ಲಿ ವ್ಯತ್ಯಾಸಗಳಿದ್ದವು. ಸ್ವಾತಂತ್ರ ಬಂದ ಅನಂತರದಲ್ಲೂ ಅಂಬೇಡ್ಕರ್ ಮತ್ತು ಕಮ್ಯುನಿಸ್ಟರು ಪರಸ್ಪರ ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಲಿಲ್ಲ. ಇಂದಿನವರೆಗೂ ಭಾರತೀಯ ಕಮ್ಯುನಿಸ್ಟರು, ಅಂಬೇಡ್ಕರ್ ಚಿಂತನೆ ಹೋರಾಟಗಳ ಬಗ್ಗೆ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡಂತೆ ಕಾಣುವುದಿಲ್ಲ. ಬೇರೆಲ್ಲಾ ಪಕ್ಷ-ಪಂಥಗಳವರೂ ಈ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದರು. ಅದು ಯಾವ ಕಾರಣಕ್ಕೇ ಇರಲಿ, ಕಮ್ಯುನಿಸ್ಟರು ಹಾಗೆ ಮಾಡಿದಂತೆ ಕಾಣುತ್ತಿಲ್ಲ. ಅಂಬೇಡ್ಕರ್ ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲೂ ಕಮ್ಯುನಿಸ್ಟರು ಅವರ ವಿರುದ್ಧ ಕೆಲಸ ಮಾಡಿದರು. ಅಂಬೇಡ್ಕರ್ ರನ್ನು ಬೆಂಬಲಿಸುತ್ತಿದ್ದ ದಲಿತ ಕಾರ್ಮಿಕರನ್ನು ಕಮ್ಯುನಿಸ್ಟ್‌ಕಾರ್ಮಿಕ ನಾಯಕರು ತಮ್ಮ ನಿಯಂತ್ರಣದಲ್ಲಿದ್ದ ಕಾರ್ಮಿಕ ಸಂಘಟನೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಯಶಸ್ಸನ್ನೂ ಪಡೆದಿದ್ದರು. ಈ ಬಗ್ಗೆ ಅಂಬೇಡ್ಕರರಿಗೆ ಬಹಳ ಕೋಪವೂ ಇತ್ತು. ಕಮ್ಯುನಿಸ್ಟ್ ನಾಯಕ ಡಾಂಗೆಯವರಿಂದಾಗಿ ತಾವು ಚುನಾವಣೆಯಲ್ಲಿ ಸೋತೆನೆಂದು ಅವರು ತಿಳಿದಿದ್ದರು.

ರಾಜ್ಯವ್ಯವಸ್ಥೆ ನೈತಿಕ ತಳಹದಿಯ ಮೇಲಿರಬೇಕು. ನೈತಿಕ ತಳಹದಿ ಧರ್ಮದಿಂದ ರೂಪಿತವಾಗಲು ಸಾಧ್ಯ. ಕಮ್ಯುನಿಸ್ಟರು ಇದನ್ನು ಮುಖ್ಯವೆಂದು ಪರಿಗಣಿಸುವುದಿಲ್ಲ. ತಾವು ಪವಿತ್ರ ಮತ್ತು ಅನಿವಾರ್ಯವೆಂದು ತಿಳಿದ ಧಾರ್ಮಿಕ ವಿಷಯಗಳಲ್ಲಿ ಕಮ್ಯುನಿಸ್ಟರಿಗೆ ನಂಬಿಕೆ ಇಲ್ಲವೆಂದು ಅವರು ತಿಳಿದಿದ್ದರು. ಅಂಬೇಡ್ಕರರ ಉದಾರವಾದಿ ಪ್ರಜ್ಞೆ, ರಷ್ಯಾದ ಕಮ್ಯುನಿಸಂ ಸರ್ವಾಧಿಕಾರಿಯಾದದ್ದು ಎಂದೇ ಪರಿಭಾವಿಸಿತ್ತು. ಅಮೆರಿಕಾ, ಬ್ರಿಟನ್ನುಗಳಲ್ಲಿ ವ್ಯಾಸಂಗ ಮಾಡಿದ್ದ ಅಂಬೇಡ್ಕರ್ ಈ ದೇಶಗಳ ಪ್ರಜಾಸತ್ತೆ ಮಿಕ್ಕೆಲ್ಲ ದೇಶಗಳ ರಾಜಕೀಯ ವ್ಯವಸ್ಥೆಗಳಿಗಿಂತ ತಮ್ಮೆಲ್ಲ ನ್ಯೂನತೆಗಳೊಂದಿಗೂ ಉತ್ತಮವಾದದ್ದು ಎಂದು ನಂಬಿದ್ದರು. ಮಾರ್ಟಿನ್‌ಲೂಥರ್ ಕಿಂಗ್‌ರಂಥ ಅಮೆರಿಕಾದ ಉದಾರವಾದಿ ಸಮಾಜ ಸುಧಾರಕರು ಅವರ ನೆಚ್ಚಿನವರಾಗಿದ್ದರು. ರಷ್ಯಾವಿರುದ್ಧದ ಅಮೆರಿಕಾ-ಇಂಗ್ಲೆಂಡ್‌ಗಳ ನಿಲುವನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಅಂಬೇಡ್ಕರರ ಈ ನಿಲುವಿಗೆ ಸಮರ್ಥನೆಯೂ ಇತ್ತು. ಸ್ಟಾಲಿನ್ನನ ರಷ್ಯಾ ಸರ್ಕಾರದ ಜನತಂತ್ರ ವಿರೋಧಿ ಚಟುವಟಿಕೆಗಳು, ಸಾಮಾಜಿಕ ನ್ಯಾಯಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರರಂಥವರಿಗೆ ರಷ್ಯಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಸಾಧ್ಯವಿರಲಿಲ್ಲ.

ಭಾರತೀಯ ಕಮ್ಯುನಿಸ್ಟರು ರಷ್ಯಾದ ಅನುಯಾಯಿಗಳು. ಜಾತಿ ಪ್ರಜ್ಞೆ ಅವರನ್ನು ಬಿಟ್ಟಿಲ್ಲ. ಆದ್ದರಿಂದಲೇ ಜಾತಿ ವಿರುದ್ಧದ ಹೋರಾಟ ಅವರಿಗೆ ಮುಖ್ಯವೆನ್ನಿಸುತ್ತಿಲ್ಲ. ಅಸ್ಪೃಶ್ಯತೆ ಒಂದು ಪ್ರತಿಪಾದಿಸುವ ಕಮ್ಯುನಿಸ್ಟರು. ದುಡಿಯುವವರೇ ಜಾತಿ ಆಧಾರದ ಮೇಲೆ ಕಚ್ಚಾಡುವುದನ್ನು ಈ ಕಚ್ಚಾಟ ಅವರ ಒಗ್ಗಟ್ಟಿಗೆ ಅಡ್ಡಿಯಾಗಿದೆ ಎನ್ನುವುದನ್ನು ತಿಳಿದಿದ್ದರೂ ಆ ಬಗ್ಗೆ ಅವರು ಕುರುಡಾಗಿದ್ದಾರೆ. ಬಟ್ಟೆ ಗಿರಣಿಗಳಲ್ಲಿ, ನೇಯ್ಗೆ ವಿಭಾಗದಿಂದ ಅಸ್ಪೃಶ್ಯರನ್ನು ಹೊರಗಿಟ್ಟು, ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೂ, ಕಾರ್ಮಿಕರನ್ನು ಸಂಘಟಿಸಿ, ಕ್ರಾಂತಿ ಮಾಡುತ್ತೇವೆನ್ನುವ ಕಮ್ಯುನಿಸ್ಟರು, ಅದನ್ನು ಕಾಣದಂತೆ ನಟಿಸುತ್ತಾ ಅಸ್ಪೃಶ್ಯತೆಯ ಆಚರಣೆಯನ್ನು ಪರೋಕ್ಷವಾಗಿಯಾದರೂ ಬೆಂಬಲಿಸುತ್ತಿದ್ದಾರೆ. ಇದು ಕಾರ್ಮಿಕರಿಗೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಆತ್ಮವಂಚನೆ ಎಂದೇ ಅಂಬೇಡ್ಕರ್ ನಂಬಿದ್ದಂತೆ ಕಾಣುತ್ತದೆ.

ಕಮ್ಯುನಿಸ್ಟರ ಈ ನಿಲುವು ಅವರಿಗೆ ಗಾಂಧಿ-ಕಾಂಗ್ರೆಸ್‌ನ ನಿಲುವಿಗಿಂತ ಭಿನ್ನವಲ್ಲವೆನ್ನಿಸಿತ್ತು. ಭಾರತೀಯ ಕಮ್ಯುನಿಸ್ಟ್ ಪಕ್ಷ-ಕಾರ್ಮಿಕ ಸಂಘಟನೆಗಳು ಬ್ರಾಹ್ಮಣರ ಹಿಡಿತದಲ್ಲಿವೆ. ಆದ್ದರಿಂದ ಅವರು ಅಸ್ಪೃಶ್ಯರನ್ನು, ಜಾತಿ ಕ್ರೌರ್ಯವನ್ನು ಕಡೆಗಣಿಸುತ್ತಾರೆ ಎಂದೇ ಅವರ ಅಭಿಪ್ರಾಯ. ಇವೆಲ್ಲಾ ಅಂಬೇಡ್ಕರರನ್ನು, ಕಮ್ಯುನಿಸ್ಟರ ವಿರುದ್ಧ ನಿಲ್ಲುವಂತೆ ಪ್ರೇರೇಪಿಸಿರಬೇಕು.

ಭಾರತೀಯ ಕಮ್ಯುನಿಸ್ಟರೂ ಅಂಬೇಡ್ಕರ ಚಟುವಟಿಕೆಗಳನ್ನು ಕಾಮಾಲೆ ಕಣ್ಣುಗಳಲ್ಲಿ-ಭೂತಗನ್ನಡಿಯಲ್ಲಿ ನೋಡಿದಂತೆ ಆಡಿದ ಕಣ್ಣು ಮುಚ್ಚಾಲೆಯಾಟ, ಪ್ರತ್ಯೇಕ ಚುನಾವಣೆಗಳ ಸವಲತ್ತಿಗಾಗಿ ನಡೆಸಿದ ಹೋರಾಟ, ಕಮ್ಯುನಿಸ್ಟರ ಬಗೆಗಿನ ಅವರ ಮಾತುಗಳು, ಸ್ವಾತಂತ್ರ ಬಂದ ತಕ್ಷಣ ಅಲ್ಲಿಯವರೆಗೆ ವಿರೋಧಿಸುತ್ತಿದ್ದ ಕಾಂಗ್ರೆಸ್ಸಿನ ಮಂತ್ರಿಮಂಡಲ ಸೇರಿಕೊಂಡದ್ದು, ಇವೆಲ್ಲವೂ ಸಮಯ ಸಾಧಕತನವೆಂದು ಕಮ್ಯುನಿಸ್ಟರಿಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ, ಇಲ್ಲಿಯೇ ಎಲ್ಲೋ ಇಬ್ಬರ ಗ್ರಹಿಕೆಗಳಲ್ಲೂ ಲೋಪವಿದ್ದಂತೆ ಕಾಣುತ್ತದೆ.

ಬಹಳ ಕಾಲ ಭಾರತೀಯ ಕಮ್ಯುನಿಸ್ಟರು ಜಾತಿ ಸಮಸ್ಯೆಯನ್ನು ಕುರಿತು ಗಂಭೀರವಾಗಿ ತಲೆಕೆಡಿಸಿಕೊಂಡಿರಲಿಲ್ಲವೆಂದರೆ ತಪ್ಪೇಲಿನ್ನ. ಅಸಮತೆ-ಬಡತನ ಒಂದು ಕಡೆ ಬಂಡವಾಳಶಾಹಿಯ ಶೋಷಣೆಯ ವಿಜೃಂಭಣೆ ಇನ್ನೊಂದು ಕಡೆಗಿದ್ದೂ ಕ್ರಾಂತಿಕಾರಿ ಚಳುವಳಿಗಳು ಸೈದ್ಧಾಂತಿಕ ಚೌಕಟ್ಟಿನಲ್ಲಿ ಬೆಳೆಯುತ್ತಿಲ್ಲವೆಂದು ಕಂಡ ಮೇಲೆ ಈ ನಿಟ್ಟಿನಲ್ಲಿ ಅವರ ಯೋಜನೆಗಳು ಸಾಗಿವೆ. ಬೆಳೆಯುತ್ತಿರುವ ಬಂಡವಾಳವಾದಿ ಉತ್ಪಾದನಾ ಸಂಬಂಧಗಳು, ಜಾತಿ ಸಮಸ್ಯೆಗೆ ಪರಿಹಾರ ಒದಗಿಸುತ್ತವೆಂದು ಅವರು ಪ್ರಾರಂಭಿಕ ಹಂತದಲ್ಲಿ ತಿಳಿದಿರಬೇಕು.

ಬೆಳೆಯುತ್ತಿರುವ ಆಧುನಿಕ ಸಾರಿಗೆ ಸಂಪರ್ಕ, ಹಿನ್ನೆಲೆಯಲ್ಲಿ ಕಿರಿದಾಗುತ್ತಿರುವ ಜಗತ್ತು, ಒಂದಾಗುತ್ತಿರುವ ಮಾರುಕಟ್ಟೆಯಂತ್ರ ನಾಗರಿಕತೆ ಬೆಳೆಯುವ ಪ್ರಕ್ರಿಯೆಯಲ್ಲಿ ಸಾಂಪ್ರದಾಯಿಕ ಭಾರತೀಯ ಸಮಾಜ ಚಲನಶೀಲವಾಗುತ್ತದೆ.

ಎನ್ನುವ ಮಾರ್ಕ್ಸಂನ ಮಾತುಗಳು ಸರಿಯೇ. ಹಾಗೆಂದು ಜಾತಿ ವಿನಾಶ ತಾನೇ ತಾನಾಗಿ ಆಗಿ ಹೋಗುತ್ತದೆಂದು ತಿಳಿಯುವುದು ತಪ್ಪು. ಭಾರತದ ಜಾತಿವ್ಯವಸ್ಥೆ ಪ್ರಜಾಸತ್ತೆ ಮತ್ತು ವೈಜ್ಞಾನಿಕ ಸಮಾಜವಾದಗಳ ಶತ್ರುವೆಂದು ಪರಿಗಣಿಸಿ ಅದರ ಪ್ರತಿಗಾಮಿತನದ ವಿರುದ್ಧ ಜನಾಭಿಪ್ರಾಯ ರೂಪಿಸಿ ಹೋರಾಟ ಮಾಡುವುದು ಅನಿವಾರ್ಯ. ಅದನ್ನು ಮಾರ್ಕ್ಸ್ ನ ತತ್ವಗಳಲ್ಲೇ ಇರಬೇಕೆಂದು ಬಯಸುವುದು ಅತಿಯಾಗುತ್ತದೆ.

ರೈಲ್ವೆ ಸಾಗಾಣೆಯಿಂದಾಗಿ ಬೆಳೆಯುವ ಆಧುನಿಕ ಕೈಗಾರಿಕೆ, ಭಾರತೀಯ ಸಮಾಜದ ಪ್ರಗತಿಗೆ, ಶಕ್ತಿಗೆ ಅಡ್ಡಿಯಾಗಿರುವ ಅನುವಂಶಿಕತೆಯನ್ನು, ಅನೈಕ್ಯತೆಯ ಅಡಿಪಾಯವಾಗಿರುವ ಜಾತಿಗಳನ್ನು ನಾಶ ಮಾಡುತ್ತದೆ. ಇದು ಮಾರ್ಕ್ಸ್‌ನ ಅಭಿಪ್ರಾಯ. ಅಂಬೇಡ್ಕರರೇ ವಿವರಿಸಿದಂತೆ ಮಾರ್ಕ್ಸ್ ವಾದ ಒಂದು ಮಾರ್ಗದರ್ಶಿ. ಜಡವಸ್ತುವಲ್ಲ. ಗುರಿಮುಟ್ಟಲು ದಾರಿತೋರಿಸುತ್ತದೆ. ತಾನೇ ದಾರಿಯಲ್ಲ. ಹಾದಿಯಲ್ಲಿರುವ ಕಲ್ಲು. ಮುಳ್ಳುಗಳನ್ನು ನಿವಾರಿಸಿಕೊಂಡು ಗುರಿಮುಟ್ಟುವ ಹೊಣೆ ದಾರಿಹೋಕರದು.

ಈ ಹಿನ್ನೆಲೆಯಲ್ಲೇ ಅಂಬೇಡ್ಕರರು ಸಮಾಜವಾದಿಗಳನ್ನು ಕಮ್ಯುನಿಸ್ಟರನ್ನು ತರಾಟೆಗೆ ತೆಗೆದುಕೊಂಡದ್ದನ್ನು ಗಮನಿಸುವುದು ಅರ್ಥಪೂರ್ಣ. ಅವರ ಈ ಮಾತುಗಳನ್ನು ಗಮನಿಸಿ:

ಆರ್ಥಿಕ ಸಮಾನತೆ ತರಲು ಅಧಿಕಾರವಿರಬೇಕು. ಈ ಅಧಿಕಾರ ಕೂಡ ದುಡಿಯುವ ವರ್ಗದ ಕ್ರಾಂತಿಯಿಂದ ಲಭಿಸುವಂಥದ್ದು. ಆದರೆ ಕ್ರಾಂತಿಯನ್ನು ಮಾಡಲು ಭಾರತದ ದುಡಿಯುವ ವರ್ಗದವರೆಲ್ಲಾ ಒಂದುಗೂಡುತ್ತಾರೋ? ಬೇರೆಲ್ಲಾ ಸರಿಯಿದ್ದು ಕ್ರಾಂತಿಯ ನಂತರ ಎಲ್ಲರೂ ಸಮಾನರು. ಜಾತಿವರ್ಗ ಭೇದಗಳಿರುವುದಿಲ್ಲ ಎಂದಾದರೆ ಶೋಷಿತರೆಲ್ಲಾ ಸಮಸಮಾಜ ತರುವ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೇವಲ ಸಮಾಜವಾದಿಯೊಬ್ಬನ ಭರವಸೆಯೊಂದೇ ಇದಕ್ಕೆ ಸಾಕಾಗುವುದಿಲ್ಲ.

ಭಾರತೀಯ ಸಮಾಜದ ಕಟುವಾಸ್ತವ ಈ ಮಾತುಗಳಲ್ಲಿದೆ. ಇದು ಸಮಾಜವಾದಿಗಳಿಗೆ ಕಮ್ಯುನಿಸ್ಟರಿಗೆ ತಿಳಿದಿರಲಿಲ್ಲವೆಂದಲ್ಲ. ಆದರೆ ಅವರೂ ಕಾಂಗ್ರೆಸ್ಸಿಗರಂತೆಯೇ ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮೊದಲು ಪಾರುಮಾಡಬೇಕು ಎಂಬ ಕಡೆಗೆ ಹೆಚ್ಚು ಒತ್ತುಕೊಟ್ಟರು.

ಜಾತಿ ವ್ಯವಸ್ಥೆಯ ಕ್ರೌರ್ಯದ ಕಡೆಗೆ ಬೇರಾರು ಗಮನಕೊಡದ ಸ್ಥಿತಿಯಲ್ಲಿ ಅಸ್ಪೃಶ್ಯತೆ-ಜಾತಿ ಪದ್ಧತಿ ಇವೆರಡೂ ಅಡಿಪಾಯವಾಗಿದ್ದ ಹಿಂದೂಮತಾಂಧತೆ ವಿರುದ್ಧ ಅಂಬೇಡ್ಕರರ ಮನಸ್ಸು ಹಿರಿಯಿತು. ಫುಲೆ, ರಾನಡೆ, ಗೋಖಲೆಯರಂಥ ಭಾರತ ಮಿತಿವಾದಿಗಳು-ಉದಾರವಾದಿಗಳು ಅಂಬೇಡ್ಕರರ ಮೇಲೆ ಮೊದಲೇ ಅಪಾರ ಪ್ರಭಾವ ಬೀರಿದ್ದರು. ಜಾನ್‌ಸ್ಟೂವರ್ಟ್‌ಮಿಲ್, ಎಡ್ಮಂಡ್ ಬರ್ಕ್‌, ಬೂಕರ್ ಟಿ. ವಾಷಿಂಗ್ಟನ್‌ನಂಥ ಪಾಶ್ಚಾತ್ಯರು ಅವರನ್ನು ಸೆರೆಹಿಡಿದಿದ್ದರು. ಅಮೆರಿಕಾ ಇಂಗ್ಲೆಂಡುಗಳ ಪಾಶ್ಚಾತ್ಯ ಉದಾರವಾದಿ ಜನತಂತ್ರ ಅಂಬೇಡ್ಕರರಿಗೆ, ತನ್ನೆಲ್ಲಾ ಮಿತಿಗಳೊಂದಿಗೂ ಹಿಡಿಸಿತ್ತು. ಆದ್ದರಿಂದಲೇ ಅವರು ಆ ಮಾರ್ಗ ಹಿಡಿದು ಅನಿವಾರ್ಯವಾಗಿ ಹಲವಾರು ತಾತ್ವಿಕೆ ಗೊಂದಲಗಳಿಗೆ ಒಳಗಾದರೂ ಅನಿಸುತ್ತದೆ. ೧೯೪೨ರ ನಂತರ ಅಂಬೇಡ್ಕರ್ ಯಾವ ಸಂಘಟಿತ ಸಮೂಹ ಹೋರಾಟಗಳನ್ನೂ ಮಾಡಲಿಲ್ಲ ಎನ್ನುವುದನ್ನು ಗಮನಿಸಿದಾಗ ಅವರ ಉದಾರವಾದ ಮನದಟ್ಟಾಗುತ್ತದೆ.

ಸಾಮಾಜಿಕ-ಆರ್ಥಿಕ ಸ್ವಾತಂತ್ರವಿಲ್ಲದ ಪ್ರಜಾಸತ್ತೆ, ಸ್ವಾತಂತ್ರ-ಸಮಾನತೆಗಳ ನಡುವೆ ಸಮತೋಲನವಿರದ ಪ್ರಜಾಸತ್ತೆ “ತನ್ನ ಗರ್ಭದಲ್ಲಿ ರಕ್ತಕ್ರಾಂತಿಯ ಬೀಜಗಳನ್ನು ಒಳಗೊಂಡಿರುತ್ತದೆ” ಎಂದು ಹೇಳುತ್ತಲೇ ವ್ಯವಸ್ಥೆಯ ತೆಕ್ಕೆಗೆ ಸೇರಿ, ತಾವು ವಿರೋಧಿಸುತ್ತಿದ್ದವರನ್ನು ಅಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕಿ, ಕೊನೆಗೆ ಭ್ರಮನಿರಸನಗೊಂಡು ಆಧ್ಯಾತ್ಮ-ಧರ್ಮಗಳಲ್ಲಿ ಅಂಬೇಡ್ಕರ್ ಲೀನವಾದರು.

ಮೇಲಿನ ವಿವರಗಳ ಹಿನ್ನೆಲೆಯಲ್ಲಿ ಅಂಬೇಡ್ಕರರ ಚಿಂತನೆ ಭಾರತೀಯ ಸಮಾಜವಾದಿಗಳು ಮತ್ತು ಕಮ್ಯುನಿಷ್ಟರ ಚಿಂತನೆಗಳಿಗಿಂತ ಭಿನ್ನವಾದದ್ದೆಂದು ಹೇಳಬಹುದು. ಆದರೆ ಕೊನೆಗೆ ಅವರ ಮನಸ್ಸನ್ನು ಆಕ್ರಮಿಸಿಕೊಂಡದ್ದು ಸಮಾಜವಾದಿಗಳು ಪ್ರತಿಪಾದಿಸುವ ಸಂಸದೀಯ ಜನತಂತ್ರವೂ ಅಲ್ಲ. ಕಮ್ಯುನಿಸ್ಟರ ವರ್ಗಸಂಘಟನೆಯೂ ಅಲ್ಲ. ಮಾರ್ಕ್ಸ್‌ವಾದ ಮತ್ತು ಬೌದ್ಧಧರ್ಮಗಳು.

ಈಗ ಅಂಬೇಡ್ಕರ್ ಚಿಂತನೆಯ ಪ್ರಸ್ತುತತೆಯ ಕಡೆ ಗಮನಹರಿಸಬಹುದು. ಅಂಬೇಡ್ಕರರ ಒಂದು ಹಂತದ ಚಿಂತೆ-ಸಂಘಟನೆ-ಹೋರಾಟಗಳು ನಮ್ಮ ಸಂದರ್ಭಕ್ಕೆ ಪ್ರಸ್ತುತವಾಗಬಲ್ಲವು. ಕೃಷಿ ಕೂಲಿಗಳನ್ನು, ಸಣ್ಣ ರೈತರನ್ನು, ಕಾರ್ಮಿಕರನ್ನು, ಅಸ್ಪೃಶ್ಯರನ್ನು, ಮಹಿಳೆಯರನ್ನು ಸಂಘಟಿಸಿ ‘ಕೋಟ್’ ಮತ್ತು ‘ಮಹರ್ ವತನ್’ ಗಳ ರದ್ಧತಿಗಾಗಿ ಹೋಡಾಟ ಮಾಡಿದ, ಮಹದ್, ನಾಸಿಕ್ ಸತ್ಯಾಗ್ರಹಗಳನ್ನು ನಡೆಸಿದ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿರಬೇಕೆಂದು ಪ್ರತಿಪಾದಿಸಿದ ಅಂಬೇಡ್ಕರ್ ನಮಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಸಮಾಜವಾದ, ಸಮಾನತೆಗಳನ್ನು ಪ್ರತಿಪಾದಿಸಿ, ಬಡತನ-ಶೋಷಣೆಗಳ ವಿರುದ್ಧ ನಿರಂತರ ಹೋರಾಟ ಅನಿವಾರ್ಯವೆಂದ ಅಂಬೇಡ್ಕರ್ ನಮಗೆ ಪ್ರಸ್ತುತರು.

ಆದರೆ ಬೌದ್ಧಧರ್ಮವನ್ನು ಆದರ್ಶೀಕರಿಸಿ, ಅದು ಮಾರ್ಕ್ಸ್‌ವಾದಕ್ಕೆ ಪರ್ಯಾಯವಾಗುತ್ತದೆ ಎನ್ನುವ ಅವರ ವಾದ ಅಚಾರಿತ್ರಿಕವಾಗುತ್ತದೆ. ಮತಾಂತರದಿಂದ ಜಾತಿ ಕ್ರೌರ್ಯದ ಸಮಸ್ಯೆಗೆ ಪರಿಹಾರ ಸಿಗುತ್ತದೆನ್ನುವ ಅವರ ವಾದ, ಗಾಂಧೀಜಿಯ ಹೃದಯ ಪರಿವರ್ತನೆ, ಟ್ರಸ್ಟೀಷಿಪ್‌ಪರಿಕಲ್ಪನೆಗಳಷ್ಟೇ ಅಸಂಗತವಾದದ್ದು. ಈ ಎರಡೂ ಬಗೆಯ ಪರಿಕಲ್ಪನೆ, ಕ್ರಿಯೆಗಳೂ ಹಲವಾರು ದಶಕಗಳಿಂದ ನಮ್ಮ ಮುಂದಿವೆ. ಮತಾಂತರದಿಂದಾಗಲೀ, ಟ್ರಸ್ಟೀಷಿಪ್‌ದಿಂದಾಗಲೀ ಯಾವ ಸಮಸ್ಯೆಗಳೂ ಪರಿಹಾರವಾಗಿಲ್ಲ.

ಅಂಬೇಡ್ಕರರ ಹೋರಾಟದ ಹಾದಿ ಕವಲೊಡೆದು ಅವರು ಹಲವಾರು ಪರಸ್ಪರ ವಿರುದ್ಧವಾದ ನಿಲುವುಗಳನ್ನು ತೆಗೆದುಕೊಂಡ ಮೇಲೂ, ಹಾಗೆಯೇ ಅವರ ಆಧ್ಯಾತ್ಮಕ-ಧಾರ್ಮಿಕ ಮನಸ್ಸು ಬೌದ್ಧಧರ್ಮಕ್ಕೆ ಶರಣಾದ ಮೇಲೂ, ಅವರನ್ನು ತೀವ್ರವಾಗಿ ಕಲಕಿದ ಎರಡು ಮುಖ್ಯ ವಿಷಯಗಳೆಂದರೆ ಬೌದ್ಧಧರ್ಮ ಮತ್ತು ಮಾರ್ಕ್ಸ್ ವಾದ. ನಿಧನರಾಗುವ ಹಿಂದಿನ ದಿನದವರೆಗೂ (ಡಿಸೆಂಬರ್, ೯ ೧೯೫೬) ಅವರ ಒಡನಾಟ ಮಾರ್ಕ್ಸ್ ಮತ್ತು ಬುದ್ಧರ ತತ್ವಗಳನ್ನೊಳಗೊಂಡ ಪುಸ್ತಕಗಳ ಜೊತೆಗೆ.

ಮಾರ್ಕ್ಸ್ ವಾದಕ್ಕೆ ಪರ್ಯಾಯವಾಗಿ ಬೌದ್ಧಧರ್ಮ ಒಪ್ಪಿಕೊಂಡ ನಂತರವೂ ಅವರು ಅಸಮತೆ, ಶೋಷಣೆಗಳನ್ನು ನಿರ್ಮೂಲನೆ ಮಾಡುವುದರ ಬಗ್ಗೆಯೇ ಯೋಚಿಸುತ್ತಿದ್ದರು. ಅಂಬೇಡ್ಕರ್ ಬೌದ್ಧ ಧರ್ಮವನ್ನು ಅರ್ಥೈಸಿದ್ದೂ ಈ ಹಿನ್ನೆಲೆಯಲ್ಲಿಯೇ ಅನ್ನುವುದು ಗಮನಾರ್ಹ. ಬುದ್ಧನು ‘ಶೋಷಣೆ’ ಎಂಬ ಪದ ಬಳಸದಿದ್ದರೂ ‘ದುಃಖ’ ಎಂಬ ಪದವನ್ನು ‘ಆಸ್ತಿ’ಯೆಂಬ ಅರ್ಥದಲ್ಲಿಯೇ ಬಳಸುತ್ತಾನೆ. ಯಾವ ಭಿಕ್ಷುವೂ ಖಾಸಗಿ ಆಸ್ತಿ ಹೊಂದಿರಬಾರದೆಂದೇ ಬುದ್ಧ ವಿಧಿಸುತ್ತಾನೆ. ಕಾರ್ಲ್ಸ್‌ಮಾರ್ಕ್ಸ್ ನೂ ಖಾಸಗಿ ಆಸ್ತಿ ಶೋಷಣೆಗೆ ಮೂಲ. ಆಸ್ತಿಯ ಹಕ್ಕು ಬಡವ-ಶ್ರೀಮಂತ ಎಂದು ಸಮಾಜವನ್ನು ವರ್ಗೀಕರಿಸುತ್ತದೆ. ಉತ್ಪಾದನಾ ಅಂಗಗಳ ಮೇಲೆ ಸರ್ಕಾರಿ ಸ್ವಾಮ್ಯವಿರಬೇಕು. ಶ್ರಮಿಕರ ಕೈಲಿ ಸಂಪೂರ್ಣ ಅಧಿಕಾರವಿರಬೇಕು ಎನ್ನುತ್ತಾನೆ. ಖಾಸಗಿ ಆಸ್ತಿಯ ಬಗೆಗಿನ ತತ್ವಗಳು ಬುದ್ಧನ ಧರ್ಮದಲ್ಲಿವೆ. ಆದರೆ ಬುದ್ಧ-ಮಾರ್ಕ್ಸ್‌ವಾದಗಳಲ್ಲಿ ಒಂದು ಮುಖ್ಯ ವ್ಯತ್ಯಾಸವೆಂದರೆ, ಬುದ್ಧ ಮನಃಪರಿವರ್ತನೆಯ ಮೂಲಕ ಸಾಧಿಸುವ ಅಹಿಂಸಾತ್ಮಕ ಮಾರ್ಗವನ್ನು ಪ್ರತಿಪಾದಿಸುತ್ತಾನೆ. ಆದ್ದರಿಂದ ದುಃಖ ನಿವಾರಣೆಗೆ, ಅಂದರೆ ಖಾಸಗಿ ಆಸ್ತಿಯ ನಿವಾರಣೆಗೆ ಬುದ್ಧನ ಮಾರ್ಗವೇ ಸೂಕ್ತ. ಸಂಕ್ಷಿಪ್ತವಾಗಿ ಇದು ಅಂಬೇಡ್ಕರರ ವಿಚಾರ ಈ ವಾದವನ್ನು ಬೌದ್ಧರು ಸಂಪೂರ್ಣವಾಗಿ ತಿರಸ್ಕರಿಸಿದರು. ಹಾಗೆಯೇ ಅಂಬೇಡ್ಕರರ ‘ಬುದ್ಧ ಮತ್ತು ಅವರ ಧರ್ಮ’ ಎಂಬ ಪುಸ್ತಕವನ್ನು ‘ಅಂಬೇಡ್ಕರ್ ಮತ್ತು ಅವರ ಧರ್ಮ’ವೆಂದು ಮಾತ್ರ ಕರೆಯಬಹುದು ಎಂದೇ ಬೌದ್ಧ ವಿಮರ್ಶಕರು ಬಣ್ಣಿಸಿದರು.

ಅಂಬೇಡ್ಕರ್ , ಬೌದ್ಧ ಧರ್ಮ ಮಾರ್ಕ್ಸ್‌ವಾದಕ್ಕೆ ಪರ್ಯಾಯವಾಗುತ್ತದೆಂದು ಹೇಳುತ್ತಿದ್ದರೂ, ಸಂಸದೀಯ ಪ್ರಜಾಸತ್ತೆಯ ಬಗ್ಗೆ ಇದ್ದ ಹಾಗೆಯೇ ಬೌದ್ಧಧರ್ಮ ಯಶಸ್ವಿಯಾಗುವ ಬಗ್ಗೆ ಕೂಡಾ ಅವರಲ್ಲಿ ಬಲವಾದ ಅನುಮಾನಗಳಿದ್ದವು. ಪ್ರಜಾಸತ್ತೆ ಯಶಸ್ವಿಯಾಗದಿದ್ದರೆ ಒಂದು ರೀತಿಯ ಕಮ್ಯುನಿಸಂ ಪರ್ಯಾಯವಾಗುತ್ತದೆ. ಹಾಗೆಯೇ ಮಾನವ ಸಮಾಜ ಮುಂದಿನ ಪೀಳಿಗೆಯ ಸಮಯಕ್ಕಾದರೂ ಬುದ್ಧನನ್ನಾಗಲೀ ಮಾರ್ಕ್ಸ್‌ನನ್ನಾಗಲೀ ಒಪ್ಪುವುದು ಅನಿವಾರ್ಯವೆಂದು ಹೇಳುತ್ತಿದ್ದರು.

ಅಂಬೇಡ್ಕರ್ ಈ ಮಾತುಗಳನ್ನು ಹೇಳಿ ಸುಮಾರು ನಾಲ್ಕು ದಶಕಗಳು ಸಂದಿವೆ, ಭಾರತೀಯ ಚರಿತ್ರೆ ಅಷ್ಟು, ಹಾದಿ ಸವೆಸಿದೆ. ಅವರು ಜಾತಿ ವಿನಾಶ-ಸಮಾಜವಾದಿ ಕ್ರಾಂತಿ. ಬೌದ್ಧ ಧರ್ಮ-ಮಾರ್ಕ್ಸ್‌ವಾದಗಳ ಬಗ್ಗೆ ಮಾತನಾಡುತ್ತಿದ್ದ ಚಾರಿತ್ರಿಕ ಘಟ್ಟದಲ್ಲಿ ಬಂಡವಾಳವಾದಿ, ನವಸಾಮ್ರಾಜ್ಯವಾದಿ ಶೋಷಣೆ ತೀವ್ರವಾಗಿರಲಿಲ್ಲ. ಶೋಷಿತರೆಲ್ಲಾ ಒಗ್ಗಟ್ಟಾಗಬೇಕೆಂಬ ಅರಿವು ಮೂಡಲು ಪ್ರಾರಂಭವಾಗಿತ್ತು. ಜಾತ್ಯಂಧತೆ ಅಸ್ಪೃಶ್ಯತೆ ತಾಂಡವವಾಡುತ್ತಿದ್ದವು. ಅದ್ದರಿಂದಲೇ ಅಂಬೇಡ್ಕರ್ ಸಮಾಜವಾದಿ ಕ್ರಾಂತಿಯ ಬಗ್ಗೆ ವ್ಯಕ್ತಪಡಿಸಿದ ಶಂಕೆ ಅಂದಿನ ಚಾರಿತ್ರಿಕ ಸಂದರ್ಭದಲ್ಲಿ ಸೂರಣವಾದದ್ದೆನ್ನಬೇಕು. ವ್ಯಕ್ತಿ ಸಮಾಜದ ನಡುವಿನ ಸಂಬಂಧಗಳು ಬದಲಾಗುವುದು ಪ್ರಕೃತಿ ಚಾರಿತ್ರಿಕ ನಿಯಮ. ಬಂಡವಾಳವಾದ, ಬೃಹತ್ ಕೈಗಾರಿಕೆ, ನಗರೀಕರಣ ಅವುಗಳ ಜೊತೆಗೇ ಶೋಷಣೆ, ಬಡತನ, ಬಡವ-ಸಿರಿವಂತರ ನಡುವೆ ಅಂತರ ಅವುಗಳೂ ಬೆಳೆಯುತ್ತಾ ಶೋಷಿತರನ್ನೂ, ದುಡಿಯುವವರನ್ನೂ ಜಾಗೃತರನ್ನಾಗಿಸುತ್ತಿವೆ.

ಅಂದು ತಾಂಡವವಾಡುತ್ತಿದ್ದ ಅಸ್ಪೃಶ್ಯತೆ ಪೂರ್ತಿ ಮಾಯವಾಗಿಲ್ಲ ನಿಜ. ಆದರೆ ಅದರ ತೀಕ್ಷಣತೆ ಕೊಂಚವಾದರೂ ಕಡಿಮೆಯಾಗಿದೆ ಎನ್ನುವುದು ಒಪ್ಪಬೇಕಾದ ಮಾತು. ದಲಿತ-ಶೋಷಿತರಲ್ಲಿ ಮೂಡುತ್ತಿರುವ ಎತ್ತರದಿಂದಾಗಿ ಅಂದು ನಮಗೆ ಸಂಘಟಿತ ರೂಪದಲ್ಲಿ ಕಾಣದಿದ್ದ ದಲಿತ, ಶೋಷಿತ-ಶೋಷಕರ ನಡುವಿನ ಹೋರಾಟಗಳು ಹೆಚ್ಚುತ್ತಿವೆ. ಇಂಥ ಹೋರಾಟಗಳಿಗೆ ಬರಿ ಜಾತಿಬಣ್ಣ ಹಚ್ಚುವ ಪಿತೂರಿಕಾರರೂ ಹೇರಳವಾಗಿದ್ದಾರೆ. ಜಾತಿ ಗಲಭೆಯೆಂದು ಬಣ್ಣಿಸಲಾಗುವ ಯಾವುದೇ ಕರ್ಮಕಾಂಡದ ಹಿನ್ನೆಲೆಯನ್ನು ಆಳವಾಗಿ ಕೆದಕಿ ನೋಡಿದಾಗ ಅಲ್ಲಿ ಕಾಣುವುದು ಶ್ರೀಮಂತ ಜಾತಿವಾದಿಗಳು ಪಟ್ಟಭದ್ರರು ತಮ್ಮ ಹಿತರಕ್ಷಣೆಗಾಗಿ ನಡೆಸಿರುವ ಮಸಲತ್ತು. ಶೋಷಿತರೆಲ್ಲಾ ಒಗ್ಗೂಡಿ ಸಂಘಟಿತರಾಗುವವರೆಗೂ ಇವು ನಡೆಯುವಂಥವೇ. ಆದ್ದರಿಂದಲೇ ಶೋಷಣಾರಹಿತ ಸಮಾಜ ನಿರ್ಮಾಣದ ಬಗ್ಗೆ ಅಂಬೇಡ್ಕರ್ ಹೇಳಿತ ಮಾತು ಮತ್ತು ಹಾಕಿಕೊಟ್ಟ ಹಾದಿಗಳನ್ನು ನೆನೆಯುವುದು ಸೂಕ್ತವೆನಿಸುತ್ತದೆ.

ಪರಾಮರ್ಶನ ಗ್ರಂಥಗಳು

೧. ಚಂದ್ರಶೇಖರ ಎಸ್. Dimensions of Socio-Political Change in Mysore, ೧೯೧೮-೧೯೪೦ (ನವದೆಹಲಿ ೧೯೮೫).

೨. ಚಾರ್ಲ್ಸ್‌ ಹೇಮ್‌ಸತ್, Nationalism and Hindu –Social Reform (ಪ್ರಿನ್ಸ್‌ಟನ್ ೧೯೬೪).

೩. ಅಂಬೇಡ್ಕರ್ ಬಿ. ಆರ್. States and Minorities (ಬಾಂಬೆ ೧೯೪೭)

—-
* ಅಂಬೇಡ್ಕರ್ ಮತ್ತು ಗಾಂಧಿ, ಎಸ್. ಚಂದ್ರಶೇಖರ್, ಅಕ್ಷರ ಪ್ರಕಾಶನ, ಹೆಗ್ಗೋಡು (ಸಾಗರ) ಕರ್ನಾಟಕ, ೧೯೯೨ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ವಂದನೆಗಳು (ಸಂ. )