ವಸಾಹತುಶಾಹಿ ಮತ್ತು ರಾಷ್ಟ್ರೀಯತೆಗಳನ್ನು ಕುರಿತಂತೆ ಹಲವು ಬಗೆಯ ಬರಹಗಳಿವೆ. ಸಾಮಾಜಿಕ-ಧಾರ್ಮಿಕ ಚಳುವಳಿಗಳನ್ನು ಕುರಿತಂತೆಯೂ ಗಂಭೀರ ಮತ್ತು ಜನಪ್ರಿಯ ಅಧ್ಯಯನಗಳಿವೆ. ಆದರೆ ಸಾಮಾಜಿಕ ಚಳವಳಿಗಳು ಅದೂ ಕೆಳವರ್ಗ ಜಾತಿಗಳನ್ನು ಕುರಿತ ಮತ್ತು ವಸಾಹತುಶಾಹಿಗಳನ್ನು ಕುರಿತಂತೆ ಅಧ್ಯಯನಗಳು ತೀರಾ ಕಡಿಮೆ. ಆಧುನಿಕ ಜಗತ್ತಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಈ ವಿಷಯವನ್ನು ಕುರಿತ ಬರಹಗಳಲ್ಲಿ ಕೆಲವು ಹಲವಾರು ಮಿತಿಗಳಿಂದ ಬಳಲಿದರೆ ಮಿಕ್ಕವು ವಸಾಹತುಶಾಹಿ ಅಥವಾ ಸಾಮಾಜಿಕ ಚಳವಳಿ ಇವೆರಡರಲ್ಲಿ ಒಂದರ ಬಗೆಯೇ ಕೇಂದ್ರೀಕೃತವಾಗಿವೆ. ಭಾರತದ ಸಂದರ್ಭದಲ್ಲಂತೂ ಇದೊಂದು ಗಂಭೀರ ಕೊರತೆ, ಯಾಕೆಂದರೆ ಇಂದಿನ ನಮ್ಮ ರೋಗಗ್ರಸ್ತ ಸಾಮಾಜಿಕ ವ್ಯವಸ್ಥೆಯ ಇಲಾಖೆಗೆ ಈ ವಿಷಯದ ಅಧ್ಯಯನ, ತಿಳುವಳಿಕೆಗಳು ಸಹಾಯಕವಾಗಬಲ್ಲವು. ಈ ಲೇಖನದಲ್ಲಿ ಬ್ರಿಟಿಷ್ ವಸಾಹತುಶಾಹಿ ಮತ್ತು ಸಾಮಾಜಿಕ ಚಳವಳಿಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮತ್ತು ಅವರ ನಾಯಕತ್ವದ ದಲಿತ ಚಳವಳಿಯನ್ನು ಕುರಿತು ವಿಶೇಷವಾಗಿ ಚರ್ಚಿಸಲಾಗಿದೆ.

ಹತ್ತೊಂಬತ್ತನೇ ಶತಮಾನದ ಧಾರ್ಮಿಕ ಸಾಮಾಜಿಕ ಚಳವಳಿಗಳೇ ಭಾರತ ರಾಷ್ಟ್ರೀಯ ಚಳವಳಿಯ ಮಂದ್ರಸ್ವರೂಪಗಳೆಂದು ಸಾಮಾನ್ಯ ತಿಳುವಳಿಕೆ, ಈ ಚಳುವಳಿಗಳ ಎಲ್ಲ ನೇತಾರರೂ ಮೇಲುವರ್ಗ ಮತ್ತು ಜಾತಿಗಳಿಗೆ ಸೇರಿದವರು. ಕೆಳವರ್ಗ ಮತ್ತು ಜಾತಿಗಳಿಗೆ ಸೇರಿದ ಜ್ಯೋತಿರಾವ್ ಫುಲೆಯವರಂಥ ಸುಧಾರಕರಿದ್ದರೂ ಇತ್ತೀಚಿನವರೆಗೆ ಅವರು ಚರಿತ್ರಾರ್ಹರಾಗಿರಲಿಲ್ಲ. ಇಂದಿಗೂ ಅಂಥವರ ಪಾತ್ರ ನಮ್ಮ ಚರಿತ್ರೆಯಲ್ಲೆ ಗೌಣವಾಗಿ ಈ ಸುಧಾರಕರೆಲ್ಲಾ ಬ್ರಿಟಿಷ್‌ ಆಡಳಿತ ದೇವರು ಕೊಟ್ಟ ವರವೆಂದು ಭಾವಿಸಿ ತಮ್ಮ ಸುಧಾರಣಾ ಸಂಸ್ಥೆಗಳ ಮೂಲಕ, ಬದಲಾದ ಸನ್ನಿವೇಶದಲ್ಲಿ ಹಿಂದೂ ಮೇಲ್ಜಾತಿ ಕುಟುಂಬಗಳು ತಾತ್ವಿಕವಾಗಿ ಉದಾರವಾದಿ ಪರಿಸರಕ್ಕೆ ಹೊಂದಿಕೊಳ್ಳುವಂಥ ಸುಧಾರಣೆಗಳಿಗೆ ಪ್ರಯತ್ನಿಸಿದರು. ಅವರು ಮೌಢ್ಯ ತುಂಬಿದ ತಮ್ಮ ಕುಟುಂಬ ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಪಟ್ಟರು ನಿಜ. ಆದರೆ, ಎಂದೂ ಸಮಾಜದ ಕೆಳಸ್ತರ-ಜಾತಿಗಳ ಬಗ್ಗೆ ಯೋಚಿಸಲೇ ಇಲ್ಲ. ಈ ವಿಷಯ ಅವರ ಸುಧಾರಣಾ ಚೌಕಟ್ಟಿನಿಂದ ಆಚೆ ಅಂದರೆ ಅಸ್ಪೃಶ್ಯವಾಗಿಯೇ ಉಳಿಯಿತು. ಏಕೆಂದರೆ ಕೆಳಜಾತಿ-ಅಸ್ಪೃಶ್ಯರ ಸುಧಾರಣೆ ಭೂನಿಯಂತ್ರಣವೂ ಒಳಗೊಂಡಂತೆ ಭಾರತೀಯ ಧಾರ್ಮಿಕ- ಸಾಮಾಜಿಕ- ರಾಜಕೀಯ-ಆರ್ಥಿಕ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡಿದ್ದಾಗಿತ್ತು. ಅವರು ಭಾರತದೊಳಗೆ ಸ್ಥಳೀಯವಾಗಿ ಆರ್ಥಿಕ ವ್ಯವಸ್ಥೆ ಉತ್ಪಾದನಾ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ತರುವ ಬಗ್ಗೆ ಯೋಚಿಸಲೇ ಇಲ್ಲ. ಅಂಬೇಡ್ಕರ್ ಯಾರನ್ನು ಮಹಾನ್ ಸುಧಾರಕರೆಂದು, ತಮ್ಮ ಮೇಲೆ ಪ್ರಭಾವ ಬೀರಿದ ಹಿರಿಯರೆಂದು ಗೌರವಿಸಿ ಅವರ ಉದಾರವಾದಿ ಪಕ್ಷದ (Liberal Party)ದ ಅವನತಿಯ ಬಗ್ಗೆ ಬೇಸರಪಟ್ಟುಕೊಂಡರೋ ಅಂಥ ರಾನಡೆಯವರ ನಂಬಿಕೆ ಅವರ (ರಾನಡೆಯವರ) ಮಾತುಗಳಲ್ಲೇ ಹೇಳಬೇಕೆಂದರೆ ಎಲ್ಲ ದೇಶಗಳಲ್ಲೂ ಆಸ್ತಿ (Property) ಭೂಮಿಯಾಗಲಿ, ಬೇರೆಯವಾಗಲಿ ಯಾವಾಗಲೂ ಹೆಚ್ಚು ಬುದ್ಧಿವಂತರ, ಮುಂಜಾಗ್ರತೆಯುಳ್ಳವರ ಮತ್ತು ಸಂಯಮಶೀಲ (Abstinence) ರಾದವರ ಕೈಯಲ್ಲೇ ಇರಬೇಕು ಮತ್ತು ಅಮಾಯಕರ, ಮುನ್ನೆಚ್ಚರಿಕೆಯಿಲ್ಲದವರ ಮತ್ತು ತಮ್ಮ ಸಂಪತ್ತಿನಿಂದಲೇ ಜೀವಿಸಲಾರದವರ ಕಡೆಯಿಂದ ಅದು ಹೆಚ್ಚು ಜಾಣರಾದವರ ಕೈಸೇರಬೇಕು. ಇದು ವಿಧಿನಿಯಾಮಕ (Law of Providence) ಯಾವ ರಾಜನೀತಿ ನಿಪುಣನೂ ಭ್ರಮಾಧೀನನಾಗಿ, ಭಾವಾತಿರೇಕಕ್ಕೆ ಒಳಗಾಗಿ ಈ ನಿಯಮವನ್ನು ಕಡೆಗಣಿಸಕೂಡದು.

ಹೀಗೆ ಈ ಸಮಾಜ ಸುಧಾರಕರು ಯಥಾಸ್ಥಿತಿವಾದಿಗಳಷ್ಟೇ ಆಗಿರಲಿಲ್ಲ. ಅವರು “ಅಮಾಯಕರ ಕೈಲಿರಬಹುದಾದ ಆಸ್ತಿಯೆಲ್ಲಾ ಬುದ್ಧಿವಂತರ ಕೈಸೇರಬೇಕು” ಎಂದು ಪ್ರತಿಪಾದಿಸುವವರಾಗಿದ್ದರು. ಉತ್ಪಾದನಾ ಸಾಮಗ್ರಿಗಳ ನಿಯಂತ್ರಣ ಮತ್ತು ಸಾಮಾಜಿಕ ಸುಧಾರಣೆಯ ನಡುವಣ ಸಂಬಂಧವನ್ನು ಈ ಸುಧಾರಕರು ಎಲ್ಲಿಯವರೆಗೆ ಅರ್ಥಮಾಡಿಕೊಳ್ಳಲಿಲ್ಲವೋ ಅಥವಾ ಅದರ ಬದಲಾವಣೆಯನ್ನು ಬಯಸಲಿಲ್ಲವೋ ಅಲ್ಲಿಯವರೆಗೆ ಅದರ ಸುಧಾರಣಾ ತಾತ್ವಿಕತೆಯೇ ಪೊಳ್ಳಾಗಿದ್ದು, ವಾಸ್ತವವಾಗಿ ಯಾವುದೇ ಸಾಮಾಜಿಕ ಸುಧಾರಣೆಯನ್ನು ತರಲು ಅದು ಶಕ್ತವಾದದ್ದಾಗಿರಲಿಲ್ಲ. ಆದ್ದರಿಂದ ಅವರ ಪ್ರಯತ್ನಗಳು ಒಂದು ಕಡೆ ಜನ ಬೆಂಬಲಗಳಿಸಿಕೊಳ್ಳುವಲ್ಲಿ ಸೋತಡೆ ಇನ್ನೊಂದೆಡೆ ಸಮಾಜ ಸುಧಾರಣಾ ವಿರೋಧಿಯಾಗಿ ರಾಜಕೀಯ ಸುಧಾರಣಾವಾದಿಗಳಾದ ತಿಲಕರಂಥವರು ಅವರನ್ನು ಟೀಕಿಸಲು ಸಹಾಯಕವಾಯಿತು. ಹೀಗಾಗಿ ಈ ಸುಧಾರಣಾ ಪಂಥಗಳು ಗರಿಗಟ್ಟಿಕೊಳ್ಳಲಿಲ್ಲ. ಇಲ್ಲಿ ನಮಗೆ ಮುಖ್ಯವಾಗುವ ಇನ್ನೊಂದು ಅಂಶವೆಂದರೆ ಬ್ರಿಟಿಷ್‌ ವಸಾಹತುಶಾಹಿಯ ಬಗ್ಗೆ ಈ ಸಮಾಜ ಸುಧಾರಕರ ನಿಲುವು. ಈ ಗುಂಪು ಖಂಡಿತವಾಗಿಯು ವಸಾಹತುಶಾಹಿ ಶೋಷಣೆಯ ವಿರೋಧವಿತ್ತು. ಆದರೆ ಇದರ ಬದಲಿಗೆ ಅವರು ಬಯಸುತ್ತಿದ್ದುದಾದರೂ ಏನು? ಉತ್ಪಾದನಾ ಅಂಗಗಳ ಮೇಲೆ ಭಾರತೀಯ ಮೇಲ್ವರ್ಗಗಳ ನಿಯಂತ್ರಣ, ರಾಜಕೀಯ ಸುಧಾರಕರ ನಿಲುವು ಕೂಡ ಇದರಿಂದ ಭಿನ್ನವೇನಲ್ಲ. ಈ ಎರಡೂ ಬಣಗಳ ನಡುವಣ ಒಂದೇ ವ್ಯತ್ಯಾಸವೆಂದರೆ; ರಾಜಕೀಯ ಸುಧಾರಕರು ತಮ್ಮದೇ ಆದ ಮೇಲ್ಜಾತಿ ವಿದ್ಯಾವಂತ ಶ್ರೀಮಂತ ವರ್ಗಕ್ಕೆ ಹೆಚ್ಚಿನ ಸರ್ಕಾರಿ ನೌಕರಿ, ಅಧಿಕಾರವಿಲ್ಲದ ವಿಧಾನ ಪರಿಷತ್ತುಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮುಂತಾದವುಗಳಿಗೆ ಹೋರಾಡಿದರೆ, ಸಮಾಜ ಸುಧಾರಕರು ಇವುಗಳ ಜೊತೆಗೆ ತಮ್ಮ ಕುಟುಂಬಗಳ ಸುಧಾರಣೆಗಾಗಿ, ಸರ್ಕಾರಿ ವಿಧೇಯಕಗಳಿಗಾಗಿ ಬಾಡಿಕೆ ಸಲ್ಲಿಸುತ್ತಿದ್ದರು. ೧೯ನೆಯ ಶತಮಾನದ ಕೊನೆಯ ದಶಕದಲ್ಲಿ ಈ ಎರಡು ಬಣಗಳು ಸಮಾಜ ಸುಧಾರಣೆಯನ್ನು ಒಂದು ಗಂಭೀರ ವಿವಾದದ ಮಟ್ಟಕ್ಕೆ ಕೊಂಡೊಯ್ಯುವ ಹೊತ್ತಿಗೆ ವಸಾಹತುಶಾಹಿ ಸರ್ಕಾರ, ಸಮಾಜ ಸುಧಾರಣೆ ಮತ್ತು ರಾಷ್ಟ್ರೀಯ ಚಳವಳಿಗಳೊಂದಿಗೆ ಈ ಬಣಗಳ ಸಂಬಂಧ ಹೇಗೆ ರೂಪುಗೊಳ್ಳಬಹುದೆಂದು ಬಹುತೇಕ ತೀರ್ಮಾನವಾಗಿ ಬಿಟ್ಟಿತು. ಬ್ರಿಟಿಷ್ ಅಳರಸರು ಮೇಲ್ ಜಾತಿಗಳಿಗೆ ಹೆಚ್ಚು ತುರ್ತಾಗಿ ಅನ್ವಯವಾಗುವ ಸತಿಪದ್ಧತಿ, ಬಾಲ್ಯವಿವಾಹಗಳ ನಿರ್ಬಂಧ ಮತ್ತು ವಿಧವಾ ವಿವಾಹಗಳ ಸಕ್ರಮಗೊಳಿಸುವಿಕೆ ಮುಂತಾದ ಕೆಲವು ಸಮಾಜ ಸುಧಾರಣಾ ಕಾನೂನುಗಳನ್ನು ಮಾಡುವ ಮೂಲಕ ಸಮಾಜ ಸುಧಾರಣಾವಾದಿ ಬಣದವರ ಮನಸ್ಸುಗಳಿಗೆ ಹತ್ತಿರವಾಗಿದ್ದರು. ತಿಲಕ್ ಬಣದವರು ೧೮೯೧ರ ಬಾಲ್ಯವಿವಾಹ ನಿಷೇಧ ವಿಧೇಯಕವನ್ನು ವಿರೋಧಿಸಿ ನಂತರ ಭಾರತೀಯ ಸಮಾಜ ಸಮಾವೇಶ (Indian Social Conference) ದ ಅಧಿವೇಶನ ಎಂದಿನ ಹಾಗೆ ರಾಷ್ಟ್ರೀಯ ಕಾಂಗ್ರೆಸ್ಸಿನ ಜೊತೆ, ಅದೇ ಜಾಗದಲ್ಲಿ ನಡೆಯಕೂಡದೆಂದು ಪ್ರತಿಭಟಿಸಿ ಪುಂಡಾಟಿಕೆ ನಡೆಸಿದಾಗ, ವಸಾಹತುವಾದಿ ಪತ್ರಿಕೆಗಳು ಮತ್ತು ಅಧಿಕಾರಿಗಳು ಸುಧಾರಕರ ಪರ ವಹಿಸಿದರು. ಈ ಪರಿಸ್ಥಿತಿಯಲ್ಲಿ ತಮ್ಮ ಅಸಂಬದ್ಧ ಸುಧಾರಣಾ ತಾತ್ವಿಕತೆ ಮತ್ತು ವಿರೋಧಾಭ್ಯಾಸಗಳಿಂದಾಗಿ ಸುಧಾರಕರ ಬಣ ವಸಾಹತುಶಾಹಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ಸಿನ ರಾಜಕೀಯ ಬಣಗಳಿಂದ ಸಮಾನ ದೂರದಲ್ಲಿರಲು ತೀರ್ಮಾನಿಸಿದ್ದು ಆಶ್ಚರ್ಯಕರವೇನೂ ಅಲ್ಲ.

ಜಾತಿ ಆಧಾರಿತ ಬ್ರಾಹ್ಮಣೇತರ ಸಂಘಗಳು ಹುಟ್ಟಿಕೊಳ್ಳುವವರೆಗೂ ಈ ಕಥೆ ಹೀಗೇ ಮುಂದುವರಿಯಿತು. ಇಲ್ಲಿ ಕುತೂಹಲಕಾರಿ ಅಂಶವೆಂದರೆ, ಸಮಾಜ ಸುಧಾರಣಾ ಬಣದವರು ಜಾತಿ ಆಧಾರಿತ ಸಂಘಟನೆಗಳನ್ನು ಮತ್ತು ಆ ಚೌಕಟ್ಟಿನಲ್ಲೇ ಸುಧಾರಣೆಗಳನ್ನು ಬೆಂಬಲಿಸಿದ್ದು. ಸಮಾಜ ಸುಧಾರಕರು ಶೋಷಣಾತ್ಮಕ ಜಾತಿ ವ್ಯವಸ್ಥೆ ಮತ್ತು ಭಾರತೀಯ ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆಯೊಳಗೇ ಸುಧಾರಣೆಯನ್ನು (ಅದು ಎಷ್ಟೇ ಅಸಾಧ್ಯವಾದದ್ದಿರಲಿ) ಪ್ರತಿಪಾದಿಸಿದರೆ, ರಾಜಕೀಯ ಸುಧಾರಕರು ಮೇಲ್‌ಜಾತಿ ಶ್ರೀಮಂತರಿಗೆ ಮತ್ತು ಬೆಳೆಯುತ್ತಿದ್ದ ವಿದ್ಯಾವಂತ ಮಧ್ಯಮ ವರ್ಗಗಳಿಗೆ ಪ್ರಿಯವಾಗಬಲ್ಲಿ ಧಾರ್ಮಿಕ ಸಂಕೇತಗಳ ಮೂಲಕ ಸಾಮ್ರಾಜ್ಯಶಾಹಿ ವಿರೋಧಿ ಭಾವನೆಗಳನ್ನು ಉದ್ದೇಶಿಸುವಲ್ಲಿ ಕೆಲವು ಮಟ್ಟಿಗೆ ಯಶಸ್ವಿಯಾದರು. ಹೀಗಾಗಿ ತಮ್ಮ ಚಟುವಟಿಕೆಗಳ ಮೂಲಕ ಬ್ರಿಟಿಷ್‌ ಚಕ್ರಾಧಿಪತ್ಯಕ್ಕೆ ಯಾವುದೇ ತೊಂದರೆ ಮಾಡದ ಸಮಾಜ ಸುಧಾರಕರು ಬ್ರಿಟಿಷ್ ಸರ್ಕಾರಕ್ಕೆ ಪ್ರಿಯರಾದದ್ದೇ ಅಲ್ಲದೆ ಅವರ ಒಡೆದು ಆಳುವ ನೀತಿಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿ ರಾಜಕೀಯ ಸುಧಾರಕರಿಂದ ಬಹುತೇಕ ದೂರವಾದರು. ರಾಜಕೀಯ ಸುಧಾರಕರು ರಾಷ್ಟ್ರೀಯ ಭಾರತದೊಳಗೆ ಯಥಾಸ್ಥಿತಿವಾದಿಗಳಾದರೂ ಸ್ಪಷ್ಟವಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರೋಧಿ ನೀತಿ ತಳೆದಿದ್ದರಿಂದ, ಬ್ರಿಟಿಷ್ ಆಳರಸರು ಅವರನ್ನು ತಮ್ಮ ಶತ್ರುಗಳೆಂದು ತೀರ್ಮಾನಿಸಿ ಸಮಾಜ ಸುಧಾರಕತಿಗೆ ಬಾಯಿ ಮಾತಿನ ಬೆಂಬಲ ಸೂಚಿಸಿ ಅವರ ನಡುವೆ ಅಂತರ ಹೆಚ್ಚಾಗುವಂತೆ ನೋಡಿಕೊಂಡರು. ಬ್ರಿಟಿಷರ ಈ ನೀತಿ ಅವರು ಸಮಾಜ ಸುಧಾರಕರಂತೆಯೇ ಜಾತಿ ಆಧಾರಿತ ಸಂಘಟನೆಗಳಿಗೆ ಬೆಂಬಲ ಕೊಟ್ಟಿದ್ದರಲ್ಲಿ ಸ್ಪಷ್ಟವಾಗುತ್ತದೆ. ರಾಜಕೀಯ ಸುಧಾರಕರು ಈ ಸಂಘಟನೆಗಳ ವಿರೋಧಿಗಳಾಗಿದ್ದರು ಎನ್ನುವ ಹಿನ್ನೆಲೆಯಲ್ಲಿ ಈ ಬೆಂಬಲ ಗಮನಾರ್ಹವಾದದ್ದು. ಯಾಕೆಂದರೆ ಜಾತಿ ಸಂಘಟನೆಗಳ ನಾಯಕರು ರಾಷ್ಟ್ರೀಯ ಕಾಂಗ್ರೆಸ್, ರಾಜಕೀಯ ಮತ್ತು ವಿದ್ಯಾಕ್ಷೇತ್ರ, ಸರ್ಕಾರಿ ನೌಕರಿ ಮುಂತಾದವು ಮೇಲ್ಜಾತಿಯವರ ಹಿಡಿತದಲ್ಲಿದ್ದುದರಿಂದ ಮತ್ತು ಮೇಲ್‌ಜಾತಿ ನಾಯಕರಿಗೆ ಇತರರನ್ನು ಕಂಡರೆ ಸಹಾನುಭೂತಿಯಿಲ್ಲದೇ ಇದ್ದುದರಿಂದ ತಮ್ಮನ್ನು ಈ ಎಲ್ಲ ಕ್ಷೇತ್ರಗಳಿಂದ ಹೊರಗಿಟ್ಟಂತಾಗಿದೆ ಎಂದು ತಿಳಿಯಲಾರಂಭಿಸಿದ್ದರು. ಜಾತಿ ಸಂಘಟನೆಯ ನಾಯಕರು ವಿದ್ಯಾವಂತರಾಗಿ ಸರ್ಕಾರಿ ಸೇವೆ ಸೇರುವುದರಿಂದ ತಾವೂ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಬಹುದೆಂದು ಭಾವಿಸಿದರು. ಯಾಕೆಂದರೆ ಮೇಲ್‌ಜಾತಿಯವರು ಪ್ರಭುದ್ಧ ಮಾನಕ್ಕೆ ಬಂದದ್ದು ಹಾಗೆಯೇ ತಾನೆ? ಅದೂ ಬ್ರಿಟಿಷರನ್ನು ವಿರೋಧಿಸಿಯಲ್ಲ ಎಂಬುದು ಅವರು ಲೆಕ್ಕಾಚಾರವಾಗಿತ್ತು.

ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ಮೇಲ್‌ಜಾತಿಗಳವರು ಬ್ರಿಟಿಷ್‌ರನ್ನು ಓಲೈಸಿಯೇ ಮುಂದುವರೆದಿದ್ದರು. ಆದ್ದರಿಂದ ತಾವೂ ಹಾಗೆಯೇ ನಡೆಯಬೇಕೆಂದು ಅವರು ತಿಳಿದಿದ್ದರಲ್ಲಿ-ರಾಜಕೀಯ ಸುಧಾರಕರು ಸಹಾನುಭೂತಿಯಿಂದ ಅದು ಸರಿಯಿಲ್ಲವೆಂದು ತಿಳಿಸಿಕೊಡದೆ ಅವರು ಸಂಘಟಿತರಾಗುವುದನ್ನೇ ವಿರೋಧಿಸಿದಾಗ-ಆಶ್ಚರ್ಯವೇನೂ ಇಲ್ಲ. ಇಲ್ಲಿ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸುವುದು ಅವಶ್ಯಕ. ಆ ಘಟ್ಟದಲ್ಲಿ ಸಾಮಾಜಿಕ ಸಮಾಜತೆಯನ್ನು ಒತ್ತಾಯಿಸುತ್ತಾ ಹುಟ್ಟಿಕೊಂಡ ಜಾತಿಸಂಘಗಳು ಭಾರತೀಯ ಪರಿಸರದಲ್ಲಿ ನಿಯಮವೋ ಎಂಬಂತೆ ಬ್ರಾಹ್ಮಣ ವಿರೋಧಿ ನೆಲೆಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲೇ ಏಕೆ ಜಾಗತಿಕ ಮಟ್ಟದಲ್ಲೂ ಬೆಳೆಯುತ್ತಿದ್ದ ಜನತಾಂತ್ರಿಕ ಪ್ರಜ್ಞೆಯ ಕುರುಹಾಗಿದ್ದವು. ಇದನ್ನು ಅರ್ಥ ಮಾಡಿಕೊಳ್ಳಲಾಗದೆ ರಾಷ್ಟ್ರೀಯ ರಾಜಕೀಯ ಚಳವಳಿಯ ಮುಂಚೂಣಿಯಲ್ಲಿದ್ದ ವೈದಿಕರು ವಿರೋಧ ತಳೆದು, ಜಾತಿ ಸಂಘಟನೆಗಳ ನಾಯಕರು ಸಾಮ್ರಾಜ್ಯ ಶಾಹಿಯ ಮರ್ಜಿ ಹಿಡಿಯುವಂತೆ ಮಾಡಿದ್ದು, ರಾಜಕೀಯ ನಾಯಕರ ಸಂಕುಚಿತ ಮನೋಭಾವವನ್ನೂ ಪಟ್ಟಭದ್ರ ಹಿತಾಸಕ್ತಿಯನ್ನೂ ತೋರಿಸುತ್ತದೆ. ಜನಬಾಹುಳ್ಯವಿದ್ದ ಈ ಬ್ರಾಹ್ಮಣೇತರ ಸಂಘಟನೆಗಳು ಮಾಲ್ಜಾತಿಯವರ ಕೈಲಿದ್ದ ರಾಷ್ಟ್ರೀಯ ನಾಯಕತ್ವವನ್ನೇ ಕಿತ್ತುಕೊಳ್ಳುವ ಭಯ ಅವರನ್ನು ಕಾಡಿರಲು ಸಾಕು. ಭಾರತದಲ್ಲಿ ಬ್ರಿಟಿಷ್‌ ಆಳರಸರು ಇಲ್ಲದಿದ್ದರೆ ಬ್ರಾಹ್ಮಣ-ಬನಿಯಾಗಳಿಂದ ಶೂದ್ರ ಬಹುಮುಖ ಶೋಷಣೆ ಹೆಚ್ಚಾಗುತ್ತದೆ ಎನ್ನುವ ಬ್ರಾಹ್ಮಣೇತರ ಕೆಳಜಾತಿಯವರು ವ್ಯಕ್ತಪಡಿಸಿದ ಭಯವನ್ನು ಅರ್ಥಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯನ್ನೇ.

ಪುಲೆಯವರ ಸತ್ಯಶೋಧಕ ಸಮಾಜದ ಚಳವಳಿ ಜಾತಿವಿರೋಧಿ ಚಳವಳಿಯಾಗಿ ಆರಂಭವಾದರೂ ಅವರ ನಂತರದಲ್ಲಿ ಅದು ಸರ್ಕಾರಿ ಸವಲತ್ತಿಗಾಗಿ ಮರ್ಜಿಹಿಡಿಯುವ ಸ್ವಾರ್ಥಸಾಧಕ ಮೇಲ್ಜಾತಿ ಶೂದ್ರ ಪಟ್ಟಭದ್ರರ ಪಕ್ಷವಾಗಿ ದಲಿತ-ಶೋಷಿತರಿಂದ ದೂರಸರಿದು ಈ ಮೂಲಕ ನೈಜರಾಷ್ಟ್ರೀಯ ವಾಹಿನಿಯಿಂದಲೂ ದೂರ ಉಳಿಯಿತು. ಕಾಂಗ್ರೆಸ್‌ ನಾಯಕತ್ವದಂತೆ, ಈ ಬ್ರಾಹ್ಮಣೇತರ ನಾಯಕರ ವರ್ಗ ಹಿತಾಸಕ್ತಿಯೂ ಅವರನ್ನು ಕೃಷಿಕೂಲಿಕಾರರು ಮತ್ತು ದಲಿತ ಅಸ್ಪೃಶ್ಯರ ವಿರೋಧಿಯನ್ನಾಗಿಸಿತು. ಬ್ರಾಹ್ಮಣೇತರ ನಾಯಕರೂ ಸಾಮಾನ್ಯವಾಗಿ ತಮ್ಮ ಕ್ಷುಲ್ಲಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಾಮ್ರಾಜ್ಯಶಾಹಿಯ ಪರವಾಗಿದ್ದು ಪಕ್ಷಕ್ಕೆ ಜನ ಬೆಂಬಲಗೊಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಪರವಾಗಿರಲಿಲ್ಲ. ಕಾರಣವೆಂದರೆ ಅಂಥ ಕ್ರಮ ಅವರ ಸ್ವಾರ್ಥಸಾಧನೆ ಮತ್ತು ನಾಯಕತ್ವಕ್ಕೆ ಎರವಾಗಿ ಬಿಡುತ್ತಿತ್ತು.

ಈ ಘಟ್ಟದಲ್ಲಿಯೇ ಪಾಶ್ಚಾತ್ಯದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಂಬೇಡ್ಕರ್ ಭಾರತಕ್ಕೆ ಬಂದು ಇಲ್ಲಿಯವರೆಗೆ ಯಾರೂ ಸಂಘಟಿಸಲು ಕೈ ಹಾಕದಿದ್ದ ಅಸ್ಪೃಶ್ಯ-ಶೋಷಿತರ ಸಂಘಟನೆಗೆ ತೊಡಗಿ ಅವರ ನಾಯಕತ್ವ ವಹಿಸಲು ಮುಂದಾದರು. ಅಂಬೇಡ್ಕರ್ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಸಹಾಯಮಾಡಿದವರು ಬರೋಡ ಮತ್ತು ಕೊಲ್ಹಾರದ ಮಹಾರಾಜರು ಅನ್ನುವುದನ್ನು ಇಲ್ಲಿ ಜ್ಞಾಪಕದಲ್ಲಿಡಬೇಕು. ಕೊಲ್ಹಾಪುರದ ಮಹಾರಾಜರಂತೂ ಬ್ರಾಹ್ಮಣೇತರ ಪಕ್ಷಗಳಿಗೆ ಮಹಾ ಒತ್ತಾಸೆಯಾಗಿದ್ದವರು. ಬರೋಡ ಮಹಾರಾಜರು ಶೂದ್ರ-ದಲಿತ ವಿಷಯದಲ್ಲಿ ಮಹಾ ಉದಾರಿಯೆನಿಸಿದ್ಧರು. ಆದರೂ ಎಲ್ಲ ದೇಶೀರಾಜರೂ ಊಳಿಗಮಾನ್ಯ ವ್ಯವಸ್ಥೆಯ ಪಳಯುಳಿಕೆಗಳು ಮತ್ತು ಜನತಾಂತ್ರಿಕ ಯುಗದಲ್ಲಿ ಬ್ರಿಟಿಷ್ ವಿರೋಧಿ-ಬಂಡವಾಳಶಾಹಿ ವಿರೋಧಿ-ಶ್ರೀಮಂತ ವಿರೋಧಿಗಳನ್ನೆಲ್ಲಾ ತಮ್ಮ ಶತ್ರುಗಳೆಂದು ದಮನ ಮಾಡುತ್ತಿದ್ದವರು. ಈ ರಾಜರಿಂದ ದಲಿತರ ಸಮಸ್ಯೆಗೆ ಪರಿಹಾರ ಸಿದ್ದೀತೆಂಬ ಭ್ರಮೆ ಅಂಬೇಡ್ಕರ್ ಅವರಿಗಿರಲಿಲ್ಲ. ಏಕೆಂದರೆ ಬರೋಡಾದಲ್ಲೇ ತಮ್ಮ ಸನ್ನಿಧಾನದಲ್ಲಿಯೇ ಮಹಾವಿದ್ಯಾವಂತ ಅಂಬೇಡ್ಕರ್ ಗೆ ಆದ ಅಮಾನವೀಯ ಅವಮಾನದ ಬಗ್ಗೆ ಬರೋಡಾ ಮಹಾರಾಜರು ಸೊಲ್ಲೆತ್ತಲಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ಅಂಬೇಡ್ಕರ್ ಓದುತ್ತಿದ್ದ ಕಾಲ ಉದಾರವಾದಯುಗದ ಪರ್ವಕಾಲ ಮತ್ತು ರಾಜಕೀಯವಾಗಿ ಉದಾರವಾದ ಕೊನೆಯವರೆಗೂ ಅಂಬೇಡ್ಕರ್ ಚಿಂತನೆಯನ್ನು ಪ್ರಭಾವಿಸುತ್ತಲೇ ಇತ್ತು. ಹಾಗಿದ್ದೂ ಅವರು ವಿವಿಧ ಯುಕ್ತಿ (Strategy)ಗಳ, ಸಂಘಟನೆಗಳ ಮತ್ತು ಪರಿಕರ (Tools) ಗಳ ಮೂಲಕ ದಲಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯೋಗಗಳನ್ನು ನಡೆಸುತ್ತಲೇ ನಡೆದರು. ವಿಲಾಯಿತಿಯಿಂದ ಹಿಂದುರಿಗಿದ ಅಂಬೇಡ್ಕರ್ ಹಿಂದಿನ ಎಲ್ಲಾ ಸುಧಾರಕರಂತೆಯೇ ಭಾರತಕ್ಕೆ ಒಂದೇ ಸರ್ಕಾರ ಕೊಟ್ಟ ಮತ್ತು ವಿವಿಧ ಧರ್ಮಗಳ ಭಾರತೀಯರು ಒಂದೇ ಸರ್ಕಾರ ದಡಿಯಲ್ಲಿರುವವರೆಂಬ ಭಾವ ಬೆಳೆಯಲು ಅವಕಾಶ ಕಲ್ಪಿಸಿದ ಕೀರ್ತಿ ಬ್ರಿಟಿಷರಿಗೇ ಸಲ್ಲಬೇಕು ಎಂದು ನಂಬಿದ್ದರು. ದಲಿತರನ್ನು ಮತ್ತು ಅವರ ಏಳಿಗೆಯ ಕಾರ್ಯಕ್ರಮಗಳನ್ನು ತನ್ನದಾಗಿಸಿಕೊಳ್ಳದ ಚಳವಳಿ ಖಂಡಿತ ರಾಷ್ಟ್ರೀಯ ಚಳವಳಿಯಾಗಲಾರದು ಎಂದು ಅವರು ಗುಡುಗಿದರು. ಆದರೆ ಕ್ರಮೇಣ ಬ್ರಿಟಿಷ್ ಸರ್ಕಾರದ ಬಗೆಗಿನ ಅವರ ಅಭಿಪ್ರಾಯ ಬದಲಾಯಿತು. ಅವರಲ್ಲಿನ ಉಗ್ರ ರಾಷ್ಟ್ರೀಯ ಪ್ರಜ್ಞೆ-ಎಲ್ಲರಿಗೂ ಆಶ್ಚರ್ಯವಾಗುವಂತೆ ಮೊದಲನೆ ದುಂಡು ಮೇಜಿನ ಪರಿಷತ್ತಿನಲ್ಲಿ ಸಿಡಿದೆದ್ದಿತು.

ಬ್ರಿಟಿಷ್‌ಸರ್ಕಾರ ಇದೇ ರೀತಿ ಮುಂದುವರೆಯುವವರೆಗೂ, ರಾಜಕೀಯ ಅಧಿಖಾರದಲ್ಲಿ ನಮಗೆ ಯಾವ ಪಾಲೂ ಸಿಕ್ಕುವ ಸಾಧ್ಯತೆಯಿಲ್ಲವೇ ಇಲ್ಲ, ಸ್ವತಂತ್ರ ಸಂವಿಧಾನದಲ್ಲಿ ಮಾತ್ರ, ರಾಜಕೀಯ ಅಧಿಕಾರ ನಮ್ಮದಾಗಬಲ್ಲದು. ಅದಿಲ್ಲದೆ (ಸ್ವರಾಜ್ಯ ಸಂವಿಧಾನ) ನಮ್ಮ ಜನರ ವಿಮುಕ್ತಿ ಸಾಧ್ಯವಿಲ್ಲ.

ಎಂದು ಅವರು ಗುಡುಗಿದರು. ಬ್ರಿಟಿಷ್ ಚಕ್ರಾಧಿಪತ್ಯದ ಕೇಂದ್ರ ಲಂಡನ್ನಿನಲ್ಲಿ. ಅವರ ಪ್ರಧಾನಿ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಭಾರತೀಯ ನಾಯಕರ ಎದುರು ಅಂಬೇಡ್ಕರ್ ಸಾಮ್ರಾಜ್ಯಶಾಹಿಯನ್ನು ಖಂಡತುಂಡವಾಗಿ ಖಂಡಿಸಿದರು. ಅವರ ಮಾತುಗಳನ್ನು ಗಮನಿಸಿ.

ಬ್ರಿಟಿಷ್‌ಪೂರ್ವ ಭಾರತದಲ್ಲಿದ್ದ ನಮ್ಮ (ಅಸ್ಪೃಶ್ಯರ) ಹೀನಸ್ಥಿತಿಯನ್ನು ಇಂದಿನ ಸ್ಥಿತಿಗೆ ಹೋಲಿಸಿ ನೋಡಿದರೆ ನಮಗೆ ಕಾಣುವುದೇನು, ಪ್ರಗತಿ ಪಥದಲ್ಲಿ ಮುಂದುವರಿಯುವ ಬದಲಿಗೆ ನಾವು ಕೇವಲ ದಿನಗಳನ್ನು ದೂಡುತ್ತಿದ್ದೇವೆ. ಬ್ರಿಟಿಷರ ಆಗಮನಕ್ಕೆ ಮುನ್ನ ನಾವು ಹೀನಸ್ಥಿತಿಯಲ್ಲಿದ್ದೆವು. ಅದನ್ನು ನಿವಾರಿಸಲು ಬ್ರಿಟಿಷ್ ಪ್ರಭುತ್ವ ಏನಾದರೂ ಕ್ರಮ ಕೈಗೊಂಡಿದೆಯೇ? ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಮುನ್ನ ನಮಗೆ ದೇವಾಲಯ ಪ್ರವೇಶವಿರಲಿಲ್ಲ. ಈಗ ಅದು ಸಾಧ್ಯವಿದೆಯೇ? ಮುಂಚೆ ಸೈನ್ಯದಲ್ಲಿ ನಮಗೆ ಅವಕಾಶವಿರಲಿಲ್ಲ. ಈಗ ಅದು ಸಾಧ್ಯವಿದೆಯೇ? ಮುಂಚೆ ಪೊಲೀಸ್‌ದಳಕ್ಕೆ ನಮ್ಮನ್ನು ಸೇರಿಸುತ್ತಿರಲಿಲ್ಲ. ಬ್ರಿಟಿಷ್ ಸರ್ಕಾರ ನಮ್ಮನ್ನು ಸೇರಿಸುತ್ತಿವೆಯೇ? ಮುಂಚೆ ಸೈನ್ಯದಲ್ಲಿ ನಮಗೆ ಅವಕಾಶವಿರಲಿಲ್ಲ. ಈಗ ಅದು ಸಾಧ್ಯವಿದೆಯೇ? ಯಾವ ಪ್ರಶ್ನೆಗೂ ನಾವು ಹೌದೆಂದು ಉತ್ತರ ಕೊಡುವ ಹಾಗಿಲ್ಲ. . . ನಮ್ಮ ಮೂಲಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. . . ನಮ್ಮ ಸ್ಥಿತಿಗೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರ, ಹಿಂದಿನ ಸಾಮಾಜಿಕ ಏರ್ಪಾಟನ್ನು ಹಾಗೆಯೇ ಒಪ್ಪಿಕೊಂಡು ಅದಕ್ಕೆ ವಿಧೇಯರಾಗಿ ಮುಂದುವರಿಸುತ್ತಿದ್ದಾರೆ.

ಅಂಬೇಡ್ಕರ್ ಬ್ರಿಟಿಷ್‌ ಸರ್ಕಾರ ಶೋಷಕ ಸಮಾಜ ವ್ಯವಸ್ಥೆಯನ್ನು ಸಮರ್ಥಿಸುತ್ತದೆ ಎಂದು ತಿಳಿದು, ವ್ಯಾಖ್ಯಾನಿಸಿದ ಮೊದಲ ದಲಿತ; ಅವರ ಹೋರಾಟದ ಬದುಕಿನಲ್ಲಿ ೧೯೩೦-೧೯೩೯ರ ಅವಧಿ ಬಹಳ ಮಹತ್ವ ಪೂರ್ಣವಾದದ್ದು; ಹಾಗೆಯೇ ಭಾರತೀಯ ದುಡಿಯುವ ವರ್ಗದ ಬದುಕಿನಲ್ಲೂ, ಬ್ರಿಟಿಷ್ ಆಳರಸ ನಿಜವಾದ ಶೋಷಕ ಮುಖವನ್ನು ಮತ್ತು ರಾಷ್ಟ್ರೀಯ ನಾಯಕರ ವರ್ಗ ಗುಣವನ್ನು ಈ ಅವಧಿಯಲ್ಲೇ ಅವರು ನಿಚ್ಚಳವಾಗಿ ಬಯಲಿಗೆಳೆದರು. ಆ ದೃಷ್ಟಿಯಿಂದ ಅವರ ವಿಮರ್ಶೆ ಅಂದಿನ ಕಮ್ಯುನಿಸ್ಟ್, ಸೋಷಿಯಲಿಸ್ಟ್‌ರಿಗಿಂತಲೂ ನಿಶ್ಚಿತವಾದದ್ದು. ೧೯೩೫ರ ವರೆಗೂ ಅಂಬೇಡ್ಕರ್ ಬ್ರಿಟಿಷ್ ಸರ್ಕಾರ ಶೋಷಕರಿಗೆ ಕೊಟ್ಟ ಬೆಂಬಲ ಮತ್ತು ಕೆಳರ್ವದವರನ್ನು ದಮನ ಮಾಡಿದ ಬಗೆಯನ್ನು ಕುರಿತು ಪ್ರಚಾರ ಮಾಡಿದರು. ೧೯೩೫-೧೯೩೯ರ ಅವಧಿಯಲ್ಲಿ, ತಮ್ಮ ಭಾಷಣ, ಬರವಣಿಗೆ ಮತ್ತು ಸಂಘಟಿತ ಹೋರಾಟಗಳ ಮೂಲಕ ರೈತರು, ಕಾರ್ಮಿಕರು ಮತ್ತು ಎಲ್ಲ ಶೋಷಿತರ ಬಗೆಗಿನ ಕಾಂಗ್ರಸ್ಸಿನ ನೀಡಿಯನ್ನು ಖಂಡಿಸಿ ಅವರನ್ನು ಬಯಲಿಗೆಳೆದರು. ೧೯೩೭ರ ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್‌ ಹೇಗೆ ಬಂಡವಾಳಗಾರರ ಮತ್ತು ಜಮೀಂದಾರರ ಕಪಿಮುಷ್ಟಿಯಲ್ಲಿದ್ದು ರೈತ, ಕಾರ್ಮಿಕ ವಿರೋಧಿಯಾಗಿದೆ ಎಂದು ಎತ್ತಿ ತೋರಿಸಿದರು. ಚುನಾವಣಾ ನಂತರ ರಚಿತವಾದ ಬಾಂಬೆ ಸರ್ಕಾರ ವಲ್ಲಭಾಯಿ ಪಟೇಲರ ಕೈಗೊಂಬೆ ಮತ್ತು ಶಾಸಕರು “ಗುಜರಾತಿ ಬಂಡವಾಳಗಾರರ ಮನೆಯ ನಾಯಿಗಳಿದ್ದಂತೆ” ಎಂದು ಕಟುವಾಗಿ ಟೀಕಿಸಿದರು. ಅಖಿಲ ಭಾರತ ಕಿಸಾನ್ ಸಭಾದ ನಾಯಕ ಸ್ವಾಮಿ ಸಹಜಾನಂದರು ಅಂಬೇಡ್ಕರರನ್ನು ಕಾಂಗ್ರೆಸ್ ಸೇರಲು ಆಮಂತ್ರಿಸಿದಾಗ ಅವರು ಒಪ್ಪಲಿಲ್ಲ. ಅದಕ್ಕೆ ಕಾರಣ ಕೊಡುತ್ತಾ, ಕಾಂಗ್ರೆಸ್ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಕ್ಕೆ ಬದ್ಧವಾದ ಸಂಘಟನೆಯಲ್ಲ. ಸಂವಿಧಾನಾತ್ಮಕ ಸವಲತ್ತುಗಳನ್ನೂ, ರೈತರು ಮತ್ತು ಕಾರ್ಮಿಕರನ್ನು ಶೋಷಿಸಲು, ಬಂಡವಾಳಿಗರನ್ನು ರಕ್ಷಿಸಲು ಉಪಯೋಗಿಸಿಕೊಳ್ಳುತ್ತಿರುವ ಪಕ್ಷವೆಂದು ಸ್ಪಷ್ಟವಾಗಿಯೇ ಹೇಳಿದರು.

ಈ ಅವಧಿಯಲ್ಲಿಯೇ ಸಾಮ್ರಾಜ್ಯಶಾಹಿ ವಿರೋಧಿ ಅಂಬೇಡ್ಕರ್ ಬ್ರಿಟಿಷರು ಪ್ರತಿಪಾದಿಸಿದ ಒಕ್ಕೂಟ (Federation)ವನ್ನು

ಭಾರತೀಯರ ಭವಿಷ್ಯವನ್ನು ತೀರ್ಮಾನಿಸುವ ಕಾರ್ಯವನ್ನು ದೇಶೀ ರಾಜರ ಮರ್ಜಿಗೆ ಒಪ್ಪಿಸುವ ಮತ್ತು ಅವರ ಒಪ್ಪಿಗೆ ಇಲ್ಲದೆ ನಾವು ರಾಜಕೀಯವಾಗಿ ಮುಂದುವರಿಯಲಾಗದಂತೆ ತಡೆಯುವ ವ್ಯವಸ್ಥೆಯೆಂದು ತಿರಸ್ಕರಿಸಿದರು.

ದೇಶೀ ರಾಜರು ಊಳಿಗಮಾನ್ಯ ವ್ಯವಸ್ಥೆಯ ಯಜಮಾನರು, ಬ್ರಿಟಿಷ್‌ಚಕ್ರಾಧಿಪತ್ಯದ ಆಧಾರಸ್ತಂಭಗಳು ಮತ್ತು ದೇಶೀ ರಾಝ್ಯಗಳಲ್ಲಿ ಜನತಾಂತ್ರಿಕ ಆಶಯಗಳನ್ನು ಹತ್ತಿಕ್ಕುತ್ತಿರುವವರು ಎಂದು ವಾಖ್ಯಾನಿಸಿದ ಕೆಲವೇ ಭಾರತೀಯರಲ್ಲಿ ಅಂಬೇಡ್ಕರ್ ಪ್ರಮುಖರು. ಒಕ್ಕೂಟದ ಪ್ರತಿಪಾದನೆ “ರಾಜರ ಮುಖೇನ ಸಾಮ್ರಾಜ್ಯಶಾಹಿಗೆ ಬೆಂಬಲಗಳಿಸಿಕೊಳ್ಳಲು ಬಲಿಷ್ಟವಾಗುತ್ತಿರುವ ರಾಷ್ಟ್ರೀಯ ಭಾವನೆಯನ್ನು ದಮನ ಮಾಡಲು ಹೂಡಿರುವ ಹಂಚಿಕೆ”ಯೆಂದು ಎಚ್ಚರಿಸಿದ ಮಹಾನ್ ರಾಷ್ಟ್ರಪ್ರೇಮಿ ಅಂಬೇಡ್ಕರ್. ಆದರೆ ಅವರ ಈ ನಿಲುವು ಸಂತತವಾದದ್ದಲ್ಲ. ಗಾಂಧಿ ಮತ್ತು ಕಾಂಗ್ರೆಸ್ಸಿನವರ ವಿರುದ್ಧದ ಅವರ ಸೆಣಸಾಟ, ಜನರಲ್ಲಿ ಬಲಗೊಳ್ಳುತ್ತಿದ್ದ ಗಾಂಧಿಯ ಬಗೆಗಿನ ಭಕ್ತಿ, ವಿಶ್ವಾಸ ಮತ್ತು ಕಾಂಗ್ರೆಸ್ ನೇತೃತ್ವದ ಚಳವಳಿ, ಅವುಗಳೊಡನೆ ರಾಜಿ ಮಾಡಿಕೊಳ್ಳಲೊಪ್ಪದ ಅವರ ಸ್ವಭಾವ ಅವರಲ್ಲಿ ಅದೇ ಊಳಿಗಮಾನ್ಯ ವಿರೋಧಿ ಸಾಮ್ರಾಜ್ಯಶಾಹಿ ವಿರೋಧಿ ವಸಾಹತುಶಾಹಿ ವಿರೋಧಿ ತೀಕ್ಷ್ಣತೆಯನ್ನು ಉಳಿಸಲಾರದಾದವು.

ದುಂಡುಮೇಜಿನ ಪರಿಷತ್ತಿನ ಸಂದರ್ಭ ಮತ್ತು ಪೂನಾ ಒಪ್ಪಂದಗಳಲ್ಲಿ ಅಂಬೇಡ್ಕರರೊಂದಿಗೆ ಮುಖಾಮುಖಿಯಾದ ಗಾಂಧೀಜಿ ಗಮನಾರ್ಹ ಯಶಸ್ಸನ್ನೂ ಪಡೆದರು. ಅದಕ್ಕಾಗಿ ಅವರು ಸಕ್ರೀಯ ರಾಜಕಾರಣದಿಂದ ಎರಡು ವರ್ಷ ಕಾಲ ಬಿಡುವನ್ನು ಪಡೆದು ವಿಶೇಷವಾಗಿ ‘ಹರಿಜನ’ ಕಾರ್ಯಕ್ರಮವನ್ನು ಹಾಕಿಕೊಂಡದ್ದು ಗಮನಾರ್ಹ. ಅಂಬೇಡ್ಕರ್ ಆದರೂ ವಿಶಾಲ ತಳಹದಿಯ ಶೋಷಿತರ ಸಂಘಟನೆಯಾದ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಪ್ರಾರಂಭಿಸಿ, ರೈತ, ಕಾರ್ಮಿಕರನ್ನು ಸಂಘಟಿಸಿ ಖೊಟ್ ಮತ್ತು ವತನ್ ಪದ್ಧತಿಯ ನಿರ್ಮೂಲನೆಗಾಗಿ ದುಡಿದರು. ಆದರೆ ಅವರ ಹಾದಿ ಸುಗಮವಾಗಿರಲಿಲ್ಲ. ಹೇರಳ ಅಡಚಣೆಗಳಿದ್ದವು. ಪೂನಾ ಒಪ್ಪಂದವಾಗುವ ಹೊತ್ತಿಗೆ, ಗಾಂಧೀಜಿಯವರ ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ವಿರುದ್ಧದ ಉಪವಾಸ ಸತ್ಯಾಗ್ರಹ ಅಂಬೇಡ್ಕರ್ ರ ವಿರುದ್ಧ ಹಿಂದೂಗಳಲ್ಲಿ ಅತೀವ ದ್ವೇಷ ಬೆಳೆಯಲು ಕಾರಣವಾಯಿತು. ಅವರನ್ನು ಸಾಮ್ರಾಜ್ಯಶಾಹಿ ಬೆಂಬಲಿಗ, ರಾಷ್ಟ್ರ ವಿರೋಧಿಯೆಂದು ಜರಿಯಲಾಯಿತು. ಇದರ ಜೊತೆಗೆ ಕಾರ್ಮಿಕರಲ್ಲಿ ಅವರಿಗಿದ್ದ ಬೆಂಬಲವೂ ಕಮ್ಯೂನಿಷ್ಟರ ಕಡೆ ವಾಲಿ ಇಳಿಮುಖವಾಯಿತು. ಅವರ ಅನೇಕ ಅನುಯಾಯಿಗಳು ಅವರನ್ನು ತೊರೆದರು. ತಮ್ಮ ಜೀವನದ ಧ್ಯೇಯವಾಗಿದ್ದ ದಲಿತರ ಸಮಸ್ಯೆ ಪರಿಹಾರವಾಗದೆ ಉಳಿದಿದ್ದು, ಎಲ್ಲ ಪ್ರತಿಕೂಲವೇ ಆಗದ ಸ್ಥಿತಿಯಲ್ಲಿ ಅವರು ತಮ್ಮ ನಿಲುವನ್ನು ಬದಲಾಯಿಸಲಾರಂಭಿಸಿದರು. ಗಾಂಧಿ ಮತ್ತು ಕಾಂಗ್ರೆಸ್ಸಿನ ವಿರುದ್ಧದ ಟೀಕೆ ಸಹಜವಾಗಿಯೇ ಬ್ರಿಟಿಷರಿಗೆ ಸಹಾಯಕವಾಯಿತು.

೧೯೩೦ರ ದುಂಡುಮೇಜಿನ ಪರಿಷತ್ತಿನಲ್ಲಿ ದಲಿತ ಸಮಸ್ಯೆಯ ಪರಿಹಾರಕ್ಕೆ ಬ್ರಿಟಿಷರ ಸಹಾಯವನ್ನು ಖಂಡತುಂಡವಾಗಿ ಅಲ್ಲಗಳೆದು ತಿರಸ್ಕರಿಸಿದ ಅಂಬೇಡ್ಕರ್, ೧೯೩೮ರವರೆಗೂ ಬಂಡವಾಳಗಾರರನ್ನೂ, ಸಾಮ್ರಾಜ್ಯವಾದವನ್ನೂ ಖಂಡಿಸಿ ಹೋರಾಡಿದ ಅಂಬೇಡ್ಕರ್ , ೧೯೪೫ರಲ್ಲಿ ಅಸ್ಪೃಶ್ಯ-ಹಿಂದೂಗಳ ವಿವಾದವನ್ನು ಅಂತರರಾಷ್ಟ್ರೀಯ ಮಂಡಲಿಯ ತೀರ್ಪಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ,

ಭಾರತೀಯ ಬ್ರಿಟಿಷರ ಇಂಗಿತವನ್ನು ಪೂರ್ಣ ಅನುಮಾನದಿಂದಲೇ ಯಾಕೆ ನೋಡಬೇಕೆನ್ನುವುದಕ್ಕೆ ಅಸ್ಪಶ್ಯರಿಗಂತೂ ಯಾವುದೇ ಕಾರಣವಿಲ್ಲವೆಂದು ಹೇಳಿಕೆಯಿತ್ತರು. ಈ ಮಾತುಗಳಂತೂ ತೀರಾ ಗೊಂದಲಪೂರಿತವಾದವು. ಆದರೆ ಇಲ್ಲಿ ಗಮನಿಸಬೇಕಾದದ್ದೆಂದರೆ ಅಂಬೇಡ್ಕರ್ ಈಗ ಸಮೂಹ ಹೋರಾಟದ ವ್ಯಕ್ತಿಯಾಗಿ ಉಳಿದಿರಲಿಲ್ಲ. ಬ್ರಿಟಿಷ್ ಭಾರತ ಸರ್ಕಾರದ ಒಂದು ಭಾಗವಾಗಿ ಕೇಂದ್ರ ಕಾರ್ಮಿಕ ಮಂತ್ರಿಯಾಗಿದ್ದರು. ಆದ್ದರಿಂದ ಅವರ ನಿಲುವು ಯಾರಿಗೂ ಆಶ್ಚರ್ಯವನ್ನುಂಟು ಮಾಡಲಿಲ್ಲ.

ಸಾಮಾಜಿಕ ಸುಧಾರಣಾವಾದಿಗಳ ನಿಲುವಿನಲ್ಲಿನ ಮಾರ್ಪಾಟುಗಳು ಬಹುತೇಕ ಅವರ ತಾತ್ವಿಕ ಗೊಂದಲ ಮತ್ತು ನ್ಯೂನತೆಗಳಿಗೆ ಹುಟ್ಟಿಬಂದವು. ಸಮಾಜದ ಆರ್ಥಿಕ ರಚನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದದ್ದಕ್ಕಾಗಿ ಅಥವಾ ಅರ್ಥವಾದರೂ ಅವರ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿಮೂಡಿಬಂದವು. ಅಂಬೇಡ್ಕರ್ ಈ ವಿಷಯದಲ್ಲಿ ಇತರ ಸುಧಾರಕರಿಗಿಂತ ವಾಸ್ತವವಾದಿಯಾದರೂ, ಅಸ್ಪೃಶ್ಯರು ಅನುಭವಿಸುತ್ತಿದ್ದ ಯಾತನೆಗಳು, ಜಾತಿ ಆಧಾರಿತ ಅಸಮತೆ, ಕ್ರೌರ್ಯಗಳು ಅವರಲ್ಲಿ ಎಲ್ಲ ಶೋಷಿತರ ಜಂಟಿ ಹೋರಾಟಗಳ ಯಶಸ್ಸು ಮತ್ತು ಅದರಿಂದ ಅಸ್ಪೃಶ್ಯರ ಸಮಸ್ಯೆಯ ಪರಿಹಾರಗಳ ಬಗ್ಗೆ ಸಂದೇಹ ಮೂಡಿಸಿದ್ದುವು. ಮೇಲಾಗಿ ಜಂಟಿ ಹೋರಾಟಗಳಿಗೆ ಯಶಸ್ಸು ಸಿಕ್ಕ ಮೇಲೆ ಸ್ಪೃಶ್ಯ ಶೋಷಿತರು ಅಸ್ಪೃಶ್ಯ ಶೋಷಿತರನ್ನು ತಮ್ಮ ಸಮಾನರೆಂದು ನಡೆಸಿಕೊಳ್ಳುವರೆಂದು ಖಾತ್ರಿಯಾದರೂ ಏನು? ಈ ಪ್ರಶ್ನೆ ಯಾವಾಗಲೂ ಅವರ ಮುಂದೆ ಧುತ್ತೆಂದು ನಿಲ್ಲುತ್ತಿತ್ತು. ಜಾತಿ ಆಧಾರಿತ ಅಸಮಾನತೆ-ಶೋಷಣೆಗಳನ್ನು ಕಡೆಗಣಿಸಿ, ಎಲ್ಲ ಶೋಷಿತರ ಜಂಟಿ ಹೋರಾಟಗಳ ಪ್ರತಿಪಾದಕರಾದ ಕಮ್ಯುನಿಷ್ಟರು ಶೋಷಿಯಲಿಷ್ಟರನ್ನು ಅವರು ಹೀಗೆ ಛೇಡಿಸುತ್ತಿದ್ದರು. ಭಾರತದ ಶೋಷಿತವರ್ಗವೆಲ್ಲಾ ಒಂದಾಗಿ ಈ ಕರಾಂತಿ ಮಾಡಲು ಸಾಧ್ಯವೇ? ಈ ಕ್ರಾಂತಿಯ ನಂತರ ಎಲ್ಲರೂ ಸರಿಸಮಾನರೆಂದು ಕಾಣಲಾಗುತ್ತದೆ ಮತ್ತು ಜಾತಿ ಮತ ಆಧಾರಿತ ಪಕ್ಷಪಾತವಿರುವುದಿಲ್ಲವೆಂದು ಕೆಳಜಾತಿ ದಲಿತರಿಗೆ ಮನದಟ್ಟಾಗುವವರೆಗೆ ಜನ ಕೇವಲ ಆಸ್ತಿಯ ಸಮಾನತೆಗಾಗಿ ಕ್ರಾಂತಿಯೊಂದರಲ್ಲಿ ಭಾಗಿಯಾಗಲಾರರು. ಕ್ರಾಂತಿಯು ಸಮಾಜವಾದಿ ನೇತಾರನೊಬ್ಬನ, ನನಗೆ ಜಾತಿಯಲ್ಲಿ ನಂಬಿಕೆಯಿಲ್ಲವೆನ್ನುವ ಘೋಷಣೆ ಜನರಲ್ಲಿ ನಂಬಿಕೆ ಹುಟ್ಟಿಸಲಾರದು. ಭಾರತೀಯ ಶೋಷಿತರೆಲ್ಲಾ-ಅವರೆಲ್ಲಾ ಬಡವರೇ ಸರಿ-ಬಡವ ಮತ್ತು ಬಲ್ಲಿದ ಎನ್ನುವ ಅಂತರವನ್ನು ಬಿಟ್ಟು ಬೇರೆ ಯಾವ ಅಂತರಗಳಲ್ಲೂ ನಂಬಿಕೆಯಿಲ್ಲದವರೆಂದು ಹೇಳಲೂ ಸಾಧ್ಯವೋ? ಬಡವರ ಸಂಯುಕ್ತ ರಂಗವೊಂದು ಸಂಘಟಿತವಾಗದಿದ್ದರೆ ಕ್ರಾಂತಿಯಾಗಲು ಹೇಗೆ ಸಾಧ್ಯ?

ಅಂಬೇಡ್ಕರ್ ರ ಬರಹಗಳು ಮತ್ತು ಭಾಷಣಗಳು ಇಂಥ ನಿಷ್ಕಪಟ ಸಂದೇಹಗಳಿಂದ ತುಂಬಿವೆ. ಆದರೂ ರಾಷ್ಟ್ರೀಯ ಚಳವಳಿ ಮತ್ತು ವಸಾಹತುಶಾಹಿ ಇವೆರಡೆ ನಡುವಿನ ಆಯ್ಕೆಯ ಪ್ರಶ್ನೆ ಬಂದಾಗ ಅಂಬೇಡ್ಕರ್ ಹೋರಾಟಗಳು ವಿಶಿಷ್ಟ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಮೊದಲನೆಯದಾಗಿ ಅವರ ರಾಷ್ಟ್ರೀಯತಾ ಪರಿಕಲ್ಪನೆ: ಹಲವಾರು ರಾಜಕೀಯ-ಧಾರ್ಮಿಕ ರಾಷ್ಟ್ರೀಯವಾದಿಗಳಂತೆ ಅಂಬೇಡ್ಕರ್ ಎಂದೂ ರಾಷ್ಟ್ರವೆಂದರೆ ಅದೊಂದು ಭಾವನಾ ಪ್ರಪಂಚವೆಂದು ತಿಳಿದಿರಲಿಲ್ಲ. ರಾಷ್ಟ್ರವೆಂದರೆ ಜನಸಮೂಹ. ಸಮಾಜ, ಸಂಸ್ಕೃತಿ, ಅದರಲ್ಲೂ ಭಾರತ ಒಂದು ಬಹುಮುಖಿ ಸಮಾಜಸ್ತರಗಳ ರಾಷ್ಟ್ರವೆಂದು ಸರಿಯಾಗಿಯೇ ತಿಳಿದಿದ್ದರು. ಈ ಸ್ತರಗಳನ್ನು ಒಂದುಗೂಡಿಸಿ ರಾಷ್ಟ್ರವಾಗಿ ಬೆಸೆಯಬಲ್ಲ ಪರಿಕರಗಳ ಹುಡುಕಾಟವೇ ಅವರ ಜೀವನದ ಹೇಗ್ಗುರಿಯಾಗಿತ್ತು. ಭಾರತದ ಶೇಕಡಾ ೨೫ರಷ್ಟು ಜನಸಂಖ್ಯೆಯುಳ್ಳ ಅಸ್ಪೃಶ್ಯರನ್ನು ಒಳಗೊಳ್ಳದೆ ಅದು ನಿಜವಾದ ರಾಷ್ಟ್ರವಾಗಲಾರದೆಂದು ಅವರು ತಿಳಿದಿದ್ದರು. ಅವರ ಬಯಕೆ, ಹೋರಾಟ, ಹುಡುಕಾಟಗಳನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳವುದರಲ್ಲಿ ರಾಷ್ಟ್ರೀಯ ಚಳವಳಿಯ ನಾಯಕತ್ವ ವಿಫಲವಾಯಿತು. ತಾನು ವಿಫಲವಾಗುವುದರ ಜೊತೆಗೆ ಅಂಬೇಡ್ಕರರನ್ನು ದೇಶ ದ್ರೋಹಿಯೆಂದು ಕರೆದಾಗ ಅವರ ಸಹನೆಯ ಕಟ್ಟೆಯೊಡೆಯಿತು. ಅಂಬೇಡ್ಕರ್ ನಡೆಸಿದ ಖೋಟ್ ಮತ್ತು ವತನ್ ಚಳುವಳಿಗಳನ್ನು ಬಾಂಬೆ ಪ್ರದೇಶದ ಕಾಂಗ್ರೆಸ್ ಸರ್ಕಾರ ವಿರೋಧಿಸಿತು. ಅವರು ಸಹಜವಾಗಿಯೇ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.

ಬ್ರಾಹ್ಮಣೇತರ ಚಳವಳಿ ಮತ್ತು ಆತ್ಮಗೌರಡ (Self Respect) ಚಳವಳಿಗಳ ಬಗ್ಗೆ ಇಷ್ಟೇ ಉದಾತ್ತವಾದ ಮಾತುಗಳನ್ನು ಹೇಳಲಾಗದು. ಯಾಕೆಂದರೆ ಚಳವಳಿಗಳು ಬಹುತೇಕ ದಲಿತ ವಿರೋಧಿ, ದುಡಿಯುವ ವರ್ಗ ವಿರೋಧಿ ನಿಲುವನ್ನು ತಳೆದಿದ್ದವು. ೧೯೩೦ರ ನಂತರವಂತೂ ಅವುಗಳ ನಾಯಕರು ಸ್ಪಷ್ಟವಾಗಿಯೇ ರಾಷ್ಟ್ರೀಯ ಚಳವಳಿಯ ವಿರೋಧಿಗಳೂ ಆಗಿದ್ದರು. ಕೆಲವರಂತೂ ಸಾಮ್ರಾಜ್ಯಶಾಹಿಗಳ ಪರವಾಗಿದ್ದುದೇ ಅಲ್ಲದೆ ಭಾರತದ ವಿಭಜನೆಯನ್ನು ಬೆಂಬಲಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ‘ಶೋಕ ದಿನಾಚರಣೆ’ಯನ್ನಾಗಿ ಆಚರಿಸಲು ಕರೆಕೊಟ್ಟರು.

ಜಾತಿ ವಿರೋಧಿಯಾದ ಪಂಜಾಬಿನ ಆದಿಧರ್ಮಚಳವಳಿ, ಬಂಗಾಳದ ನಾಮ ಶೂದ್ರ ಚಳವಳಿ, ನಂತರದ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಬ್ರಾಹ್ಮಣೇತರ ಚಳವಳಿಗೆ ಹೋಲಿಸಿದಾಗ ಅಂಬೇಡ್ಕರ್ ತಮ್ಮ ದಲಿತ ವಿಮೋಚನಾ ಚಳವಳಿಯನ್ನು ಪ್ರಾರಂಭಿಸಿದ್ದು ಚರ್ಚಾಸ್ಪದವಾದ ಅಂಶ. ಆದರೆ ದಲಿತಚಳವಳಿಯನ್ನು ಆಗ ಪ್ರಾರಂಭಿಸಿದ್ದಲ್ಲಿ, ಅವರ ಸಮಸ್ಯೆಗಳು ರಾಜಕೀಯ ಸ್ವರೂಪ ಪಡೆಯದೆ ಮೇಲ್ಜಾತಿಯವರು ಅವರ ಸಮಸ್ಯೆಯನ್ನು ಕಡೆಗಣಿಸುವ ಸಾಧ್ಯತೆಯಿತ್ತು. ಜೊತೆಗೆ-ಎಷ್ಟೆ ಅಸಮರ್ಪಕವಾಗಿರಲಿ, ದೋಷಪೂರಿತವಾಗಿರಲಿ-ದಲಿತರಿಗೆ ಸಿಕ್ಕ ಕೆಲವು ಸವಲತ್ತುಗಳೂ ಅವರಿಗೆ ಆಗ ದಕ್ಕುವುದು ಅಸಾಧ್ಯವಾಗುತ್ತಿತ್ತು. ಇಲ್ಲಿ ಪ್ರಸ್ತುತವಾದ ಇನ್ನೊಂದು ಅಂಶವೆಂದರೆ ಅಂದಿನ ರಾಷ್ಟ್ರೀಯ ನಾಯಕತ್ವ, ಭಾರತದಲ್ಲಿ ಸಾಮಾಜಿಕ-ಆರ್ಥಿಕ ಸಮಾನತೆಗಾಗಿಯೂ ಕಾರ್ಯಕ್ರಮ ರೂಪಿಸಿಕೊಂಡು ರಾಷ್ಟ್ರೀಯ ಚಳವಳಿಯ ಜೊತೆಗೆ ಜಾರಿಗೆ ತರಲು ಪ್ರಯತ್ನಪಟ್ಟಿದ್ದರೆ, ಜಾತಿವಾರು ಚಳವಳಿಗಳ ಹಿಂದಿದ್ದ ಕಾರಣಗಖೇ ಇಲ್ಲವಾಗುತ್ತಿದ್ದವು. ಆದರೆ ನಾಯಕತ್ವದ ವರ್ಗ-ಜಾತಿ ಹಿತಾಸಕ್ತಿಗಳು ಈ ಪ್ರಕ್ರಿಯೆಗೆ ನೇರವಾಗಿ ಜಾತಿ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾದವು.

ಈ ಚಳವಳಿಗಳಲ್ಲಿ ಅಂಬೇಡ್ಕರ್ ನಾಯಕತ್ವದ ಚಳವಳಿಯೊಂದೇ ಎಲ್ಲ ಕಾಲಕ್ಕೂ ಭೂ ಒಡೆತನ, ಉತ್ಪಾದನಾ ಅಂಗಗಳು, ಜಾತಿ-ವರ್ಗ ಹಿತಾಸಕ್ತಿಗಳ ನಡುವಿನ ಸಂಬಂಧವನ್ನು ಅರಿತು ಭೂಮಿ, ಕೈಗಾರಿಕೆ ಮತ್ತು ವಿಮೆಗಳನ್ನು ರಾಷ್ಟ್ರೀಕರಿಸಬೇಕೆಂದು ಒತ್ತಾಯಿಸುತ್ತಿತ್ತು.

ಅಂಬೇಡ್ಕರ್ ಸಾಮ್ರಾಜ್ಯವಾದಿ ಶೋಷಣೆ ಮತ್ತು ಮೇಲ್ಜಾರಿ ಹಿಂದೂಗಳ ಶೋಷಣೆಗಳನ್ನು ಸಮಾನವಾಗಿ ವಿರೋಧಿಸುತ್ತಿದ್ದರು. ಮೇಲ್ಜಾತಿಯವರು ಅಂಬೇಡ್ಕರ್ ರನ್ನೂ ದ್ವೇಷಿಸಿ ಜರೆದಾಗ ಅವರು ಕಟುವಾಗಿ ಉತ್ತರಿಸಿದ್ದೂ ನಿಜ. ಅದನ್ನೇ ದೇಶದ್ರೋಹಿ ಮಾತುಗಳೆಂದು ಅವರ ವಿರೋಧಿಗಳು ಜರೆದರು. ಆದರೆ ಅಂಬೇಡ್ಕರ್ ಸಾಮ್ರಾಜ್ಯವಾದ-ಮೇಲ್ಜಾತಿಗಳ ಶೋಷಣೆಗಳ ನಡುವೆ ಅಂತರವನ್ನೇನ್ನೂ ಕಾಣಲಿಲ್ಲ. ದೈನಂದಿನ ಜೀವನದಲ್ಲಿ ಹಿಂದೂ ಜಮೀನ್ದಾರರ, ಬಂಡವಾಳಿಗರ ದಬ್ಬಾಳಿಕೆ, ಶೋಷಣೆಗಳಿಗೆ ಒಳಗಾಗಿ ಯಾತನೆಯನ್ನು ಅನುಭವಿಸುತ್ತಿದ್ದ ಮತ್ತು ತಾವೇ ಅನುಭವಿಸಿದ ಅವಮಾನ, ಯಾತನೆಗಳು ಅವರನ್ನು, ಜಾತಿ ವಿರೋಧಿಯನ್ನಾಗಿಸಿದ್ಧರಲ್ಲಿ ಅಸಹಜವಾದದ್ದೇನೂ ಇಲ್ಲ. ಭಿನ್ನವಾಗಿದ್ದೂ ದಲಿತರಕ್ಷಕ-ನಾಯಕರೆನಿಸಿಕೊಂಡ ಗಾಂಧೀಜಿ ಮತ್ತವರ ಕಾಂಗ್ರೆಸ್‌ಬಗ್ಗೆ ಅಂಬೇಡ್ಕರ್ ಗೆ ಕೋಪ, ಈ ಕೋಪ ಅವರನ್ನು ಒಮ್ಮೊಮ್ಮೆ ಎಲ್ಲಿಯವರೆಗೆ ಕೊಂಡೊಯ್ದಿತೆಂದರೆ ತಮ್ಮ ಹೋರಾಟಗಳ ಮಹಾನ್ ಶತ್ರುಗಳಾಗಿದ್ದ ಧರ್ಮಾಂಧ ಹಿಂದೂಗಳ ಮೈತ್ರಿಯವರೆಗೆ, ಇಲ್ಲದಿದ್ದರೆ ಮೂಂಜೆ, ಸಾವರ್ಕರ್, ಬೋಪಟ್‌ಕರ್ ಮತ್ತು ಕೇತಕರ್ ರಂಥವರೊಂದಿಗಿನ ಅವರ ಹೊಂದಾಣಿಕೆಗೆ ವಿವರಣೆ ಸಾಧ್ಯವೇ ಇಲ್ಲ. ಹಾಗೆಯೇ ಅವರು ವಸಾಹತುಶಾಹಿ ಸರ್ಕಾರದ ಪರವಹಿಸಿ ಮಾತನಾಡಿದ್ದಕ್ಕೂ. ಹೀಗಾಗಿ ನಾವು ಅಂಬೇಡ್ಕರರನ್ನು ಸಾಮಾನ್ಯವಾಗಿ ರುಜುಮಾರ್ಗದಲ್ಲೇ ಕಂಡರೂ ಒಮ್ಮೊಮ್ಮೆ ಅವರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವೆಂಬಂತೆ ಭಿನ್ನ ಮಾರ್ಗದಲ್ಲೂ ಕಾಣಬರುತ್ತಾರೆ.