ಶುದ್ಧಜಾತಿಗಳಿಗೂ ಹಲವು ವರ್ಗದ ನೀಚಜಾತಿಗಳಿಗೂ ನಡುವೆ ದೈಹಿಕ ಸಂಪರ್ಕವನ್ನು ನಿವಾರಿಸಬೇಕು. ಅಸ್ಪೃಶ್ಯತೆಯ ಆಚರಣೆಗೆ ದಕ್ಷಿಣ ಭಾರತವು ಅತಿರೇಕದ ನಿದರ್ಶನಗಳನ್ನು ನೀಡಿತು. ಕೆಲವು ಅತಿ ನೀಚ ಜಾತಿಗಳ ಜನರನ್ನು ನೋಡುವುದೇ ಮೈಲಿಗೆ ಎಂದು ಭಾವಿಸಲಾಗುತ್ತಿತ್ತು. ಕೆಲವು ಜಾತಿಯವರ ನೆರಳು ಸೋಂಕುವುದೂ ಮೈಲಿಗೆ ಎಂದು ನಂಬಲಾಗಿತ್ತು. ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಕ್ರೂರ ಪದ್ಧತಿ ಆಚರಣೆಯಲ್ಲಿತ್ತು. ಕೇರಳದ ತೀಯನ್ (ಹೆಂಡ ಇಳಿಸುವವರು) ಜಾತಿಯವರು ನಂಬೂದಿರಿ ಬ್ರಾಹ್ಮಣರಿಂದ ಮೂವತ್ತಾರು ಹೆಜ್ಜೆ ದೂರದಲ್ಲಿರಬೇಕು; ಪುಲ್ಯನ್‌(ಬೇಸಾಯ ಮಾಡುವವರು) ತೊಂಬತ್ತಾರು ಹೆಜ್ಜೆ ಅಂತರದಲ್ಲಿರಬೇಕಾಗಿತ್ತು. ಅತ್ಯಂತ ಸಾಮಾನ್ಯವಾದಿ ಮತ್ತು ಅತಿ ಕಡಿಮೆ ಕ್ರೂರವಾದ ರೀತಿಯ ಅಸ್ಪೃಶ್ಯತೆಯೆಂದರೆ ಶುದ್ಧಜಾತಿಗಳೊಂದಿಗೆ ದೈಹಿಕ ಸಂಪರ್ಕ ಪಡೆಯಕೂಡದು ಎನ್ನುವುದು ಹಾಗೂ ಅವರ ಮನೆಗಳಿಗೆ ಪ್ರವೇಶ ನಿಷಿದ್ಧ ಎನ್ನುವುದು. ಅಸ್ಪೃಶ್ಯ ಜಾತಿಗಳಿಗೆ ಊರಿನ ದೇವಾಲಯದೊಳಕ್ಕೆ ಪ್ರವೇಶವಿರಲಿಲ್ಲ; ಕುಡಿಯುವ ನೀರಿನ ಬಾವಿಯನ್ನು ಅವರು ಬಳಸುವಂತಿರಲಿಲ್ಲ. ಅವರು ತಮ್ಮ ವಸತಿಗಳನ್ನು ಹಳ್ಳಿಯಿಂದ ಹೊರಗೆ, ಅನೇಕ ವೇಳೆ ಸ್ವಲ್ಪ ದೂರದಲ್ಲಿ ಕಟ್ಟಿಕೊಳ್ಳಬೇಕಾಗಿತ್ತು. ಟೀ ಅಂಗಡಿಗಳಲ್ಲೂ ಕೂಡ ಅವರು ಬೇರೆಯೇ ಬಟ್ಟಲುಗಳಲ್ಲಿ ಕುಡಿದು ಅವರೇ ಅವುಗಳನ್ನು ತೊಳೆದು ಪ್ರತ್ಯೇಕವಾಗಿ ಇಡಬೇಕಾಗಿತ್ತು. ಈಗ ಕಾನೂನು ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಅನುಸೂಚಿತ ಜಾತಿಗಳನ್ನು ಇತರರೊಂದಿಗೆ ಸಮಾನವಾಗಿ ಪರಿಗಣಿಸತಕ್ಕದ್ದು ಎಂದು ತಾತ್ವಿಕವಾಗಿ ಹೇಳಿದೆ. ಆದರೆ ರೋಷವುಕ್ಕಿಸುವಂತಹ ಭೇದಗಳು ಇವತ್ತಿಗೂ ಆಚರಣೆಯಲ್ಲಿವೆ. ಸೂಕ್ಷ್ಮ ರೂಪದ ಪಕ್ಷಪಾತಗಳನ್ನು ಮಾಡಲಾಗುತ್ತಿದೆ.

ಇವತ್ತಿಗಿಂತ ಹೆಚ್ಚು ಪ್ರಮಾಣದಲ್ಲಿ ಹಿಂದೆ ಒಂದು ಜಾತಿಯ ಸದಸ್ಯರು ಒಂದು ಸಮಾನ ಸಂಸ್ಕೃತಿಯನ್ನು ಹಂಚಿಕೊಂಡಿದ್ದರು. ಆಗಲೂ ಈ ನಿಯಮಕ್ಕೆ ಅಪವಾದಗಳಿರಲಿಲ್ಲವೆಂದಲ್ಲ, ಬಹುತೇಕ ಜಾತಿಗಳು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಂಡಿದ್ದವು. ಅವು ಪರಾದೇಶಿಕವಾದೊಂದು ಸಂಸ್ಕೃತಿಯ ಭಾಗದಲ್ಲಿದ್ದುವು. ಜೊತೆಗೆ ನಿರ್ದಿಷ್ಟ ಜಾತಿಯ ಕೆಲವು ವಿಶಿಷ್ಟ ಸಾಂಸ್ಕೃತಿಕ ಲಕ್ಷಣಗಳನ್ನೂ ಹೊಂದಿದ್ದವು. ರಾಜಪುತ್ರರು ಇಂತಹ ಒಂದು ಅಪವಾದ ಸ್ಪಷ್ಟವಾಗಿ ಒಡೆದು ಕಾಣುವ ಪ್ರಾದೇಶಿಕ ಭಿನ್ನತೆ ಅವರಲ್ಲಿದ್ದಿತು. ಸ್ವಗೋತ್ರ ವಿವಾಹವನ್ನು ಅವರು ವಿಧಿಸಲಿಲ್ಲ. ಸಂಸ್ಕೃತಿಯಲ್ಲಿ, ಭಾಷೆಯಲ್ಲಿ ಬೇರೆ ಬೇರೆ ಪ್ರಾದೇಶಿಕ ವರ್ಗಗಳು ಭಿನ್ನತೆ ಹೊಂದಿದ್ದುವು. ಆದರೆ ಅವು ಯಾವುವೂ ಅಂತರ್ ವಿವಾಹವನ್ನು ವಿರೋಧಿಸಲಿಲ್ಲ. ಅಧಿಕಾರ ಮತ್ತು ಸಂಪತ್ತು ಒಂದು ವರ್ಗಕ್ಕೆ ಕೆಲವು ಸಾಂಸ್ಕೃತಿಕ ಲಕ್ಷಣಗಳನ್ನು ನೀಡಿದುವು, ಮಿಕ್ಕ ಜಾತಿಗಳಿಗೆ ಆ ಸೌಲಭ್ಯ ದೊರಕಲಿಲ್ಲ. ಬಹುತೇಕ ಗ್ರಾಮಗಳಲ್ಲಿ ತಮ್ಮಲ್ಲಿನ ವ್ಯಾಜ್ಯಗಳನ್ನೂ, ಅಂತರ- ಗ್ರಾಮ ವ್ಯಾಜ್ಯಗಳನ್ನೂ ಪರಿಹರಿಸಿಕೊಳ್ಳುವ ಒಂದು ವ್ಯವಸ್ಥೆಯಿತ್ತು. ಇಂದು ಅವು ದುರ್ಬಲವಾಗುತ್ತಿದ್ದರೂ ಅವು ಇದ್ದುದನ್ನು ತಳ್ಳಿಹಾಕುವಂತಿಲ್ಲ.

ಜಾತಿಯ ಧಾರ್ಮಿಕಾಚರಣೆಯ ಮುಖ ಈ ಆಧುನಿಕ ಕಾಲದಲ್ಲಿ ಸಾಕಷ್ಟು ಸವಕಳಿಯನ್ನು ಕಂಡಿದೆ. ಆದರೆ, ಅದೇ ಸಮಯದಲ್ಲಿ ಜಾತಿಯು ಅನಿರೀಕ್ಷಿತ ಮೂಲದಿಂದ ಹೆಚ್ಚಿನ ಬಲವನ್ನು ಪಡೆದುಕೊಂಡಿದೆ. ಪ್ರಜಾಸತ್ತಾತ್ಮಕ ಚುನಾವಣೆಗಳಿಗೆ ಒಂದುಗೂಡಿಸಿ ಸಜ್ಜುಗೊಳಿಸಿದ ಆಧಾರಗಳು ಬೇಕು. ಜಾತಿಯ ಒಗ್ಗೂಡುವಿಕೆ ಬಲವಾದ ರಾಜಕೀಯ ಪ್ರಭಾವವನ್ನು ಹೊಂದಿರುವಂತೆ ತೋರುತ್ತದೆ. ಅದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅನೇಕ ಮತಕ್ಷೇತ್ರಗಳಲ್ಲಿ ಮುಖ್ಯ ಸ್ಪರ್ಧಾಳುಗಳು ಒಂದೇ ಜಾತಿಯವರಾಗಿರುತ್ತಾರೆ. ಇದು ರಾಜಕೀಯದಲ್ಲಿ ಜಾತಿಪಟ್ಟಿಯ ಪರಿಣಾಮವನ್ನು ಸ್ವಲ್ಪಮಟ್ಟಿಗೆ ಕುಗ್ಗಿಸುತ್ತದೆ. ಈಗ ಇನ್ನೂ ಒಂದು ಪ್ರವೃತ್ತಿ ಗೋಚರಿಸುತ್ತದೆ. ಶ್ರೀಮಂತ ಮತ್ತು ಸಶಕ್ತ ಜಾತಿಗಳು ಒಂದುಗೂಡಿ ಗ್ರಾಮವನ್ನು ತಮ್ಮ ಅಂಕೆಗೆ ತೆಗೆದುಕೊಳ್ಳುತ್ತವೆ. ಈ ಕೂಡಿಕೆಯು ಭಯೋತ್ಪಾದಕವಾಗಿರುತ್ತದೆ. ಅದರ ರಾಜಕೀಯ ಮತ್ತು ಆರ್ಥಿಕ ಪ್ರಭಾವಗಳು ಕೆಳಜಾತಿಗಳನ್ನು ಅಧೀನ ಮಾಡಿಬಿಡುತ್ತವೆ. ಪ್ರತಿಭಟನೆಯ ಅತಿಸಣ್ಣ ಕುರುಹನ್ನೂ, ಹಿಂಸಾಚಾರದಿಂದ (ಮಾನಭಂಗ, ಕೊಲೆಗಳು ಕೂಡಿದಂತೆ) ಸದ್ದಡಗಿಸಲಾಗುತ್ತದೆ. ಕೊಯಿಲಿಗೆ ನಿಂತ ಬೆಳೆಗಳಿಗೆ ಬೆಂಕಿ ಹಚ್ಚುವುದು, ಇಡೀ ಹಳ್ಳಿಗೆ ಬೆಂಕಿ ಹಚ್ಚುವುದು ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗಲಾಗುತ್ತದೆ. ಬಡಜನರನ್ನು ತಮ್ಮ ಜಾತಿಯ ಅಭ್ಯರ್ಥಿಗೇ ವೋಟು ಹಾಕುವಂತೆ ಒತ್ತಾಯ ಪಡಿಸುವುದರಿಂದ ಅಥವಾ ಪ್ರಭಾವಶಾಲಿಗಳಾದವರ ಕಡೆಯ ಅಭ್ಯರ್ಥಿಗಳಿಗೆ ವೋಟು ಹಾಕಿಸುವುದರಿಂದ ಅಥವಾ ಮತವನ್ನೇ ಚಲಾಯಿಸದೆ ಸುಮ್ಮನಿರುವಂತೆ ಮಾಡುವುದರಿಂದ ತಮಗೆ ಬೇಕಾದ ಫಲಿತಾಂಶವನ್ನು ಪಡೆಯಲಾಗುತ್ತದೆ. ಹೀಗೆ ಅಧಿಕಾರವನ್ನೂ, ಜಾತಿಯನ್ನೂ ಸಂಬಂಧಗೊಳಿಸುವುದರಿಂದ ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತವೆ.

ಭಾರತದ “ಜಾತಿ” ಪದ್ಧತಿಯನ್ನು ಸ್ವದೇಶದಲ್ಲೂ ವಿದೇಶಗಳಲ್ಲೂ ಬಹುವಾಗಿ ಖಂಡಿಸಲಾಗಿದೆ. ಆದರೂ ವರ್ಣ ಮತ್ತು ಜಾತಿ ಅಸಾಧಾರಣ ರೀತಿಯಲ್ಲಿ ಬೇರುಬಿಟ್ಟು ನಿಂತೇ ಇವೆ. ಅವುಗಳ ಮೇಲೆ ಎಂಥೆಂಥ ಆಕ್ರಮಣ ನಡೆದರೂ ಚೆಂಡು ಪುಟಿದೇಳುವಂತೆ ಅವು ಒಂದಲ್ಲ ಒಂದು ರೂಪದಲ್ಲಿ ಉಳಿದೇ ಇವೆ. ಆದರೆ, ಬದಲಾದ ಕಾಲಕ್ಕೆ ತನ್ನ ಹಾಗೆ ಅವೂ ಸ್ವಲ್ಪ ಮಟ್ಟಿಗೆ ಬದಲಾಗಬೇಕಾಯಿತು. ಉದಾಹರಣೆಗೆ ಅಸ್ಪೃಶ್ಯತೆ, ಸಹಜೀವನ, ಜಾತ್ಯಾಧಾರಿತ ವೃತ್ತಿಗಳು ಮೊದಲಾದ ಅಂಶಗಳಲ್ಲಿ ಸ್ವಲ್ಪಮಟ್ಟಿಗೆ ಸಡಿಲಿಕೆ ಕಂಡುಬಂದಿದೆ. ಆದರೆ ಅದೇ ಸಮಯಕ್ಕೆ ಅವು ನೂತನವಾಗಿ ರಾಜಕೀಯವಾದ ಪಾತ್ರಗಳನ್ನೂ, ನಿರ್ವಹಿಸತೊಡಗಿವೆ. ಹಾಗಾಗಿ ಸ್ವಾತಂತ್ರ್ಯ ಪಡೆದ ನಲವತ್ತು ವರ್ಷಗಳ ಬಳಿಕವೂ ವರ್ಣ-ಜಾತಿ ಕಟ್ಟುಗಳು ಹೊಸ ಹೊಸದಾಗಿ ಬಲಗೊಳ್ಳುತ್ತಲೇ ಇರುವುದು ವಿಪರ್ಯಾಸ.

ಕ್ರೈಸ್ತ, ಇಸ್ಲಾಂ ಧರ್ಮ ಮತ್ತು ದಲಿತರು

ಬೇರೆ ಕಡೆಯಿಂದ ಬಂದು ಇಲ್ಲಿ ನೆಲೆಗೊಂಡು ಧರ್ಮಗಳು-ವಿಶೇಷವಾಗಿ ಕ್ರೈಸ್ತಧರ್ಮ ಮತ್ತು ಇಸ್ಲಾಂ ಧರ್ಮ- ಇಲ್ಲಿನ ವರ್ಣ, ಜಾತಿ ವ್ಯವಸ್ಥೆಯೊಂದಿಗೆ ಕಟ್ಟುಪಾಡು ಮಾಡಿಕೊಳ್ಳಬೇಕಾಯಿತು. ಮೂಲತಃ ತಮ್ಮದಲ್ಲದ ಕೆಲವು ಲಕ್ಷಣಗಳನ್ನು ಅವುಗಳಿಂದ ಪಡೆದು ಸೇರಿಸಿಕೊಳ್ಳಬೇಕಾಯಿತು ಎಂಬುದನ್ನು ದಲಿತ ಸಮಾಜ ಮತ್ತು ಮತಾಂತರ ಎಂಬ ಕೊನೆಯ ಅಧ್ಯಯನದಲ್ಲಿ ಗಮನಿಸಬಹುದಾಗಿದೆ. ಇವು ಇಂದಿಗೂ ಹಾಗೆಯೇ ಉಳಿದಿರುವುದು ಅಚ್ಚರಿಯ ಸಂಗತಿಯಾಗಿದೆ.

ಕ್ರಿಶ್ಚಿಯನರು ಮತ್ತು ಮುಸ್ಲಿಮರಲ್ಲಿ ಅತ್ಯಂತ ಸ್ಪಷ್ಟವಾದ ವರ್ಣ ವಿಭಜನೆ ಕಂಡುಬರುವುದಿಲ್ಲವಾದರೂ ಮತಾಂತರಗಳಲ್ಲೇ ಮೇಲುಜಾತಿ ಮತ್ತು ಕೆಳಜಾತಿ ಎಂಬ ಭೇದ ಇರುವುದನ್ನು ನೋಡಬಹುದು. ಮೊದಲಿನವರು ತಮ್ಮನ್ನು ಬ್ರಾಹ್ಮಣ ಕ್ರಿಶ್ಚಿಯನರು ಅಥವಾ ಲಿಂಗಾಯಿತ ಕ್ರಿಶ್ಚಿಯನರು ಅಥವಾ ರಜಪೂತ ಅಥವಾ ತ್ಯಾಗಿ ಮುಸ್ಲಿಂರು ಎಂದು ಪ್ರತ್ಯೇಕಗೊಳಿಸಿಕೊಳ್ಳುತ್ತಾರೆ. ಮಂಡಲ್ ಆಯೋಗವು (೧೯೮೦) ಹೀಗೆ ಹೇಳಿದೆ: “. . . . ಜಾತಿ ಹಾಗೂ ಸಾಂಸ್ಕೃತಿಕ ಲಕ್ಷಣದ ಮೇಲೆ ಅಳಿಸಲಾಗದ ಗುರುತನ್ನು ಉಳಿಸುತ್ತದೆ. ”

೧೯೮೮ ಜನವರಿಯಲ್ಲಿ ತಮಿಳುನಾಡಿನ ಬಿಷಪ್ಪರು ತಮ್ಮ ವಾರ್ಷಿಕ ಸಭೆಯಲ್ಲಿ ಹೀಗೆ ಅಭಿಪ್ರಾಯಪಟ್ಟರು.

ಅನುಸೂಚಿಯ ಜಾತಿಯ ಕ್ರಿಶ್ಚಿಯನರು, ಮತಾಂತರಗೊಂಡಾದ ಮೇಲೆಯೂ ಸಾಂಪ್ರದಾಯಿಕವಾದ ಅಸ್ಪೃಶ್ಯತೆಯಿಂದ ಬಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಕೆಗೆ ಪಕ್ಕಾಗಿದ್ದಾರೆ.

ತಮಿಳುನಾಡಿನ ಕ್ಯಾಥೋಲಿಕ್ ಬಿಷಪ್ಪರು ೧೯೮೮ ಫೆಬ್ರವರಿಯಲ್ಲಿ ಹೊರಡಿಸಿದ ಒಂದು ಮಥೀಯ ಪರಿಪತ್ರದಲ್ಲಿ ಕ್ರಿಶ್ಚಿಯನ್‌ಸಾಮಾಜಿಕ ಜೀವನದಲ್ಲಿ ಮತ್ತು ಧಾರ್ಮಿಕಾಚರಣೆಯಲ್ಲಿ ಜಾತಿ ಭಿನ್ನತೆಗಳು ಮತ್ತು ಅವುಗಳ ಫಲವಾದ ಅನ್ಯಾಯ ಮತ್ತು ಹಿಂಸಾಚಾರಗಳು ಇನ್ನೂ ಮುಂದುವರಿದಿವೆ. ಈ ಪರಿಸ್ಥಿತಿ ನಮಗೆ ಅರಿವಾಗಿದೆ. ಅಪಾರ ವಿಷಾದದಿಂದ ಅದನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದು ನುಡಿದರು.

ಇಂದು ೨೩ ಮಿಲಿಯನ್ ಭಾರತೀಯ ಕ್ರೈಸ್ಟರಲ್ಲಿ ಶೇ. ೭೦ರಷ್ಟು ಜನ ಹೀಗೆ ಜಾತೀಯ ಪಕ್ಷಪಾತ ಧೋರಣೆಗೆ ಗುರಿಯಾಗಿದ್ದಾರೆ. ದ್ವಿತೀಯ ದರ್ಜೆಯ ಕ್ರಿಶ್ಚಿಯನ್ನರನ್ನಾಗಿ ಅಥವಾ ಇನ್ನೂ ಕೀಳಾಗಿ ಅವರ ಬಗೆಗೆ ವ್ಯವಹರಿಸಲಾಗುತ್ತಿದೆ ಎಂಬುದಾಗಿ ಭಾರತೀಯ ಚರ್ಚ್‌ ಕಂಡುಕೊಂಡಿದೆ. ದಕ್ಷಿಣದಲ್ಲಿ ಅನುಸೂಚಿತ ಜಾತಿಗಳಿಂದ ಮತಾಂತರಗೊಂಡು ಕ್ರೈಸ್ತರಾದವರನ್ನು ವಸತಿಯಲ್ಲೂ, ಚರ್ಚ್‌ನಲ್ಲೂ ಪ್ರತ್ಯೇಕವೆಂದೇ ಪರಿಗಣಿಸಲಾಗುತ್ತದೆ. ಅವರ ಕೇರಿ ಅಥವಾ ಬಡಾವಣೆಯು ಊರಿನಿಂದ ದೂರದಲ್ಲಿ ಇರುತ್ತದೆ. ಇತರರಿಗೆ ದೊರಕುವ ಪೌರ ಸೌಲಭ್ಯಗಳು ಇವರಿಗೆ ದೊರಕುವುದಿಲ್ಲ. ಚರ್ಚ್‌ ಸರ್ವಿಸುಗಳಲ್ಲಿಯೂ ಕೂಡ ಇವರನ್ನು ಪ್ರತ್ಯೇಕವಾಗಿ ಬಲಗಡೆ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ. ಸರ್ವೀಸ್ ಸಮಯದಲ್ಲಿ ಶಾಸ್ತ್ರಗ್ರಂಥವನ್ನು ಓದಲು ಅಥವಾ ಪಾದ್ರಿಗೆ ನೆರವಾಗಲು ಇವರಿಗೆ ಅವಕಾಶವಿಲ್ಲ. ಶುದ್ಧಸ್ನಾನ, ಸ್ಥಿರೀಕರಣ ಮತ್ತು ವಿವಾಹ ಸಂದರ್ಭಗಳಲ್ಲಿ ಇವರು ಪವಿತ್ರ ಪ್ರಸಾದವನ್ನು ಎಲ್ಲರ ನಂತರ ಕೊನೆಗೆ ಪಡೆಯಬೇಕು. ಕೆಳಜಾತಿಗಳ ಕ್ರಿಶ್ಚಿಯನರ ಮದುವೆ ಮೆರವಣಿಗೆಯಾಗಲಿ, ಮರಣದ ನಂತರ ಅಂತಿಮ ಯಾತ್ರೆಯಾಗಲಿ ಮುಖ್ಯ ಬಡಾವಣೆಯ ಬೀದಿಗಳಲ್ಲಿ ಹಾದು ಹೋಗುವಂತಿಲ್ಲ. ಕ್ರೈಸ್ತ ಮತಕ್ಕೆ ಬಂದ ಅನುಸೂಚಿತ ಜಾತಿಗಳವರಿಗೇ ಪ್ರತ್ಯೇಕವಾದ ರುದ್ರಭೂಮಿಗಳುಂಟು. ಅವರಲ್ಲಿ ಸತ್ತವರಿಗಾಗಿ ಚರ್ಚಿನ ಗಂಟೆ ಮೊಳಗುವುದಿಲ್ಲ ಅಥವಾ ಸತ್ತವರ ಮನೆಗೆ ಪ್ರಾರ್ಥನೆ ಸಲ್ಲಿಸಲು ಪುರೋಹಿತನು ಬರುವುದೂ ಇಲ್ಲ. ಅಂತಿಮ ಕ್ರಿಯೆಯ ಸಲುವಾಗಿ ಅವರಲ್ಲಿನ ಮೃತದೇಹಗಳನ್ನು ಚರ್ಚೆಗೆ ಒಯ್ಯುವಂತಿಲ್ಲ. ಮೇಲುಜಾತಿಯ ಕ್ರಿಶ್ಚಿಯನರಿಗೂ ಕೆಳಜಾತಿಯ ಕ್ರಿಶ್ಚಿಯನರಿಗೂ ಅಂತರ್ ವಿವಾಹವಂತೂ ಇಲ್ಲವೇ ಇಲ್ಲ. ಸಹಪಂಕ್ತಿ ಭೋಜನವೂ ಇಲ್ಲ. ಅವರ ನಡುವೆ ಸಂಘರ್ಷ ಪದೇ ಪದೇ ಸಂಭವಿಸುತ್ತದೆ. ಕೆಳಜಾತಿಯ ಕ್ರಿಶ್ಚಿಯನರು ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಚರ್ಚು ಅದಕ್ಕೆ ಪ್ರತಿಸ್ಪಂದಿಸುತ್ತಿದೆ. ಆದರೆ ಇಷ್ಟು ದಿನಗಳಾದರೂ ಅರ್ಥವತ್ತಾದ ಬದಲಾವಣೆ ಯಾವುದೂ ಕಂಡುಬಂದಿಲ್ಲ. ಮೇಲುಜಾತಿಯ ಕ್ರಿಶ್ಚಿಯನರಲ್ಲೂ ತಮ್ಮ ಜಾತಿ ಮೂಲವನ್ನು ನೆನಪಿಗೆ ತಂದುಕೊಂಡು ಸಾಮಾಜಿಕ ಸಂಬಂಧಗಳಲ್ಲಿ ಅದರ ವರ್ಣಛಾಯೆಯನ್ನು ಬೀಳಿಸುವುದುಂಟು.

ಇನ್ನೂ ಮುಸ್ಲಿಂರಲ್ಲಿ ಪರಿಸ್ಥಿತಿ ಬೇರೆಯೇ ತೆರನಾದದ್ದು. ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಎಲ್ಲರೂ ಹೋಗಬಹುದು. ಅಲ್ಲಿ ಅಸ್ಪೃಶ್ಯತೆಯ ಆಚರಣೆ ಸ್ಪಷ್ಟ ಗೋಚರವಾಗಿಲ್ಲ. ಆದರೂ ವರ್ಣ-ಜಾತಿ ಭೇದಗಳ ಹಾಗೆ ಸಾಮಾಜಿಕ ಅಂತಸ್ತನ್ನು ಸೂಚಿಸುವ ಹಾಗೂ ಸಾಮಾಜಿಕ ಅಂತರ್-ಕ್ರಿಯೆಗಳಿಗೆ ಆಧಾರವಾಗುವ ಭೇದ ಕಲ್ಪನೆಗಳು ಅಲ್ಲೂ ಇದ್ದೇ ಇವೆ. ಅಶ್ರಫ್ ಮತ್ತು ಅಜ್ಲಫ್ ವರ್ಗಗಳನ್ನು ಕುರಿತಾಗಿ ಈ ಮೊದಲೇ ಉಲ್ಲೇಖಿಸಿದ್ದಾಗಿದೆ. ಷರೀಫ್ (ಜಾಟ್ ಉತ್ತಮ ಮೂಲದ, ಕೆಳಜಾತಿ ರೀತಿಯ ರಚನೆ)ಗಳ ಬಗೆಗೆ ಮಾತನಾಡುವುದೂ ಸಾಮಾನ್ಯವಾಗಿದೆ. ಈ ಭೇದಗಳು ವಿವಾಹ, ಸಹಭೋಜನ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವಿಕೆ ಮೊದಲಾದ ಸಾಮಾಜಿಕ ಅಂತರ್ ಕ್ರಿಯೆಗಳನ್ನು ನಿರ್ಧರಿಸುತ್ತವೆ. ಮೂಲಜಾತಿಗಳನ್ನು ಸ್ಮರಣೆಯಲ್ಲಿ ಇಟ್ಟುಕೊಂಡು, ಹಿಂದೂ ಜಾತಿ ಸಂಬಂಧದ ವೃತ್ತಿಗಳನ್ನೇ ಆಚರಿಸುತ್ತಾರೆ. ಮೊಗಲ್ ಕಾಲದಲ್ಲಿ ಸಯ್ಯದ್, ಶೇಖ್, ಮುಫಲ್‌ ಮತ್ತು ಪಠಾಣ್ ಎಂಬ ವಿಭಜನೆಯನ್ನು ಅನೇಕ ವೇಳೆ ಹಿಂದೂ ಸಮಾಜದ ವರ್ಣ ವಿಭಜನೆಯೊಂದಿಗೆ ಸಮೀಕರಿಸಲಾಗುತ್ತಿತ್ತು. ಭಾರತದ ಕೆಲವು ಭಾಗಗಳಲ್ಲಿ ಇಸ್ಲಾಮಿಗೆ ಮತಾಂತರಗೊಂಡವರು ಈ ಯಾವುದಾದರೂ ಒಂದು ವರ್ಗದಲ್ಲಿ ದಾಖಲಾಗುವುದು ಅಗತ್ಯವೆಂದು ಭಾವಿಸುತ್ತಿದ್ದರು. ಇದು ಇಸ್ಲಾಂ ರ್ಧಮದ ತತ್ವಕ್ಕೆ ತಕ್ಕದ್ದೇ ಅಲ್ಲವೆ ಎಂಬುದು ಬೇರೆ ಪ್ರಶ್ನೆ. ಅದು ನಡೆಯುತ್ತಿದ್ದುದಂತೂ ವಾಸ್ತವ. ಸಯ್ಯದರು ಪ್ರವಾದಿ ಮಹಮ್ಮದನ ಮಗಳ ಮೂಲಕವಾಗಿ ಬಂದ ವಂಶಕ್ಕೆ ಸೇರಿದವರು; ಅವರು ಅರಬ್ ಮೂಲದವರು. ಆದರೆ ಇಸ್ಲಾಮಿಗೆ ಮತಾಂತರಗೊಂಡ ಹಲವು ಮೇಲುಜಾತಿಗಳವರೂ ಈ ಸ್ಥಾನವನ್ನು ಬಯಸಿದರು.

ಬ್ರಾಹ್ಮಣರಾಗಿದ್ದ ಮತಾಂತರಿಗಳು ತಮ್ಮನ್ನು ಸಯ್ಯದ್ ಸ್ಥಾನದಲ್ಲಿರಿಸಿಕೊಂಡು ಅದನ್ನು ಅಕ್ಬರ್ ಚಕ್ರವರ್ತಿಯೂ ಸ್ಥಿರೀಕರಿಸಿದ್ದನು ಎಂದು ಹೇಳಿದರು. ಶೇಖರೂ ಅರಬ್ ಮೂಲದವರೇ. ಆದರೆ ಪ್ರವಾದಿಯ ವಂಶಜರಲ್ಲ. ಮೊದಲ ಪೀಳಿಗೆಯ ಮತಾಂತರಿಗಳೂ ತಮ್ಮನ್ನು ಶೇಖರೆಂದು ಕರೆದುಕೊಂಡರು. ಆ ನಂತರದ ಸ್ಥಾನ ದೆಹಲಿಯ ಆಳುವ ಅಂಶವಾದ ಮುಘಲರದು. ಅವರು          ಟರ್ಕಿ ಮೂಲದವರು. ಆದರೆ ಟರ್ಕಿಯ ಆಟೋಮನ್ ಅರಸರಿಂದ ತಮ್ಮನ್ನು ಬೇರೆಯಾಗಿ ತೋರಿಸಿಕೊಳ್ಳುವ ಸಲುವಾಗಿ ಈ ಪದವಿಯನ್ನು ಪಡೆದುಕೊಂಡರು. ಪಠಾಣರು ಆಫಘನ್‌ ಮೂಲದವರು. ಅನೇಕರಿಗೆ ಅಫ್ಘಾನಿಸ್ಥಾನದೊಂದಿಗೆ ಅತಿ ದೂರದ ಕೂದಲೆಳೆಯಷ್ಟು ಸಂಬಂಧವಿಲ್ಲದೆ ಹೋದರೂ ಅವರು ಈ ಸ್ಥಾನವನ್ನು ಬಯಸಿದರು. ಸಾಕಷ್ಟು ಪ್ರಮಾಣದಲ್ಲಿ ಹಂತಗಳಲ್ಲಿ ನೆಗೆತ, ಸಾಮಾಜಿಕವಾಗಿ ಏರುವಿಕೆಗಳು ನಡೆದವು. ಅಷ್ಟು ಉತ್ತಮ ಅಭಿರುಚಿಯಲ್ಲದ ಒಂದು ತಮಾಷೆ ಈ ಪ್ರವೃತ್ತಿಯನ್ನು ಚಿತ್ರಿಸುತ್ತದೆ: “ಕಳೆದ ವರ್ಷ ನಾನೊಬ್ಬ ಜುಲಹಾ (ನೆಯ್ಗೆಯವನು) ಆಗಿದ್ದೆ; ಈ ವರ್ಷ ಶೇಖ್ ಆದೆ; ಮುಂದಿನ ವರ್ಷ ಫಸಲು ಉತ್ತಮವಾಗಿದ್ದರೆ ಸಯ್ಯದ್ ಆಗುತ್ತೇನೆ. ” ರಾಜಪೂಜ್, ಜಾಟ್ ಮತ್ತು ಅಹಿರ್ ಮೊದಲಾದ ಮೇಲುಜಾತಿಗಳು ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಂಡುವು. ಜುಲಹಾ, ತೇಲಿ, ಭಟ್, ಕಲಾಲ್ ಮತ್ತು ಭಿಷ್ಟಿ ಮೊದಲಾದ ಹಲವು ಜಾತಿಗಳನ್ನು ಹಿಂದೂ ಜಾತಿಗಳೊಂದಿಗೆ ಹೋಲಿಸಬಹುದು. ವಿಶಿಷ್ಟ ಕಸುಬನ್ನು ಹೊಂದಿ ಸ್ತರೀಕೃತ ಸ್ಥಾನಮಾನಗಳುಳ್ಳ ಜಾತಿಗಳು ಇವು. ಹೀಗೆ ಜಾತಿ ಭೇದವನ್ನು ಉಳಿಸಿಕೊಂಡಿರುವುದು ಮುಸ್ಲಿಂ ದೇವತಾ ಶಾಸ್ತ್ರಜ್ಞರಿಗೆ ಹಾಗೂ ಸಮಾಜ ಸುಧಾರಕರಿಗೆ ದೊಡ್ಡ ತಲೆನೋವಾಗಿದೆ. ಆದರೆ ಇತ್ತೀಚೆಗೆ ಫಂಡಮೆಂಟಲಿಸಂ (ಕ್ರೈಸ್ತವೇದ ಪ್ರಮಾಣ್ಯವಾದ) ಅಲೆಯು ಬೀಸಿದ್ದರೂ ಆ ಪದ್ಧತಿಯನ್ನು ಅಳಿಸಿಹಾಕಲು ಸಾಧ್ಯವಾಗಿಲ್ಲ.

ಜೈನಧರ್ಮ, ಬೌದ್ಧಧರ್ಮ ಮತ್ತು ಸಿಖ್ ಧರ್ಮ-ಈ ಭಾರತ ಮೂಲವಾದ ಧರ್ಮಗಳಲ್ಲಿ ಜಾತಿಪದ್ಧತಿಯ ಮುಂದುವರಿಕೆಗೆ ಸಾಕ್ಷಿಗಳಿವೆ. ನವಬೌದ್ಧರು ಹಿಂದಿನ ಜಾತಿ ಸ್ಥಾಣಮಾನಗಳಿಂದ ತಮ್ಮನ್ನು ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ಸಿಖ್ ಧರ್ಮದ ಜಾತ್ಯಾತೀತ ನಿಲುವು ಜಾತಿಯ ಅಸ್ತಿತ್ವದಿಂದ, ಹಾಗೂ ಅಸ್ಪೃಶ್ಯತೆಯ ಆಚರಣೆಯಿಂದ ಮೊಂಡಾಗಿವೆ. ವರ್ಣ ಮತ್ತು ಜಾತಿಯ ಹಿಡಿತ ಎಷ್ಟು ತೀವ್ರವಾಗಿದೆಯೆಂದರೆ, ಅವು ಹಿಂದೂ ಧರ್ಮವನ್ನೂ ಮೀರಿ ಭಾರತೀಯ ಸಮಾಜದ ಎಲ್ಲ ವರ್ಗಗಳಲ್ಲೂ ಪ್ರವೃತ್ತಿಸುತ್ತಿರುವುದನ್ನೂ ನೋಡಬಹುದಾಗಿದೆ. ಸಮಾಜ ಸುಧಾರಕರಿಗೆ ಈ ಪ್ರವೃತ್ತಿಯನ್ನು ಬದಲಾಯಿಸುವುದು, ಅವರಲ್ಲಿ ಕೆಲವರು ಅದಕ್ಕಾಗಿ ವಿಶೇಷವಾಗಿ ಶ್ರಮಿಸಿದ್ದರೂ, ಸಾಧ್ಯವಾಗಿಲ್ಲ.

ಸಮಕಾಲೀನ ಭಾರತೀಯ ಸಮಾಜವು ಸಂಪ್ರದಾಯ ಮತ್ತು ಆಧುನಿಕತೆಗಳ ಪರಸ್ಪರ ವಿರುದ್ಧ ಸೆಳೆತಗಳಿಗೆ ಒಳಗಾಗಿದೆ. ಅವುಗಳ ಸಂಘರ್ಷದಿಂದ ಕೆಲವು ವಿಚಿತ್ರ ಫಲಿತಾಂಶಗಳು ಕಂಡುಬಂದಿವೆ. ಒಂದು ಕಡೆ ದೇಶವು ಪ್ರಜಾಪ್ರಭುತ್ವ, ಜಾತ್ಯಾತೀತೆ ಮತ್ತು ಸಾಮಾಜಿಕ ನ್ಯಾಯಗಳ ಆದರ್ಶಗಳನ್ನು ಒಪ್ಪಿಕೊಂಡು ಅದನ್ನು ಪ್ರಸರಿಸುತ್ತಿದೆ. ಇನ್ನೊಂದು ಕಡೆ ಆದಿಮ ಜಾತಿನಿಷ್ಠೆಗಳು ಹಾಗೆಯೇ ಮುಂದುವರಿದಿವೆ. ಶೋಷಕ ಲಕ್ಷಣಗಳನ್ನು ಗಂಭೀರವಾಗಿ ಯಾರೂ ಎದುರಿಸಿಲ್ಲ. ರಾಜಕೀಯ ಲಾಭಗಳಿಗೋಸ್ಕರವಾಗಿ ಸಂಪ್ರದಾಯದ ಸ್ಮರಣೆಯನ್ನು ಉಳಿಸಿಕೊಳ್ಳಲಾಗಿದೆ. ಧಾರ್ಮಿಕ ಪುನಶ್ಚೇತನ ಅನಂತರ ಶಾಸ್ತ್ರ ಪ್ರಾಮಾಣ್ಯವಾದ ಇವುಗಳನ್ನು ಗಂಭೀರವಾಗಿ ನಿರ್ವಹಿಸಿಲ್ಲ. ಭಾವನಾತ್ಮಕ ಮತ್ತು ಬೌದ್ಧಿಕ ಅರಿವಿನ ಹಂತದಲ್ಲಿ ವರ್ಣ ಮತ್ತು ಜಾತಿಯ ಚೌಕಟ್ಟಿಗೆ ಸೇರಿಕೊಂಡ ಅಸಮಾನತೆ ಮತ್ತು ಅಮಾನವೀಯತೆಗಳನ್ನೂ ತೊರೆದಿದ್ದರೂ ಅವನ್ನು ತೊಡೆದು ಹಾಕಲು ಅರ್ಹವಾದ ಪ್ರಯತ್ನವನ್ನೇನೂ ಮಾಡಿದಂತೆ ತೋರುವುದಿಲ್ಲ. ದೇಶದ ಜನತೆಯ ಸುಮಾರು ಅರ್ಧಭಾಗ ಮುಖ್ಯವಾಗಿ ಅನುಸೂಚಿತ ಜಾತಿ ಮತ್ತು ಜನವರ್ಗಗಳು ಮತ್ತು ಇತರ ಹಿಂದುಳಿದ ಸಮುದಾಯಗಳಿಂದ ಕೂಡಿದೆ. ಇವರು ಇಡೀ ವ್ಯವಸಾಯ ಭೂಮಿಯ ಶೇ. ೧೦ನ್ನು ಮಾತ್ರ ಹಂಚಿಕೊಂಡಿದ್ದಾರೆ. ಬಡವರಿಗೆ-ಪರಂಪರೆಯಿಂದ ಜೀ ತದಾಳಾದವರು ಮತ್ತು ನೀಚ ವೃತ್ತಿಗಳನ್ನು ನಿರ್ವಹಿಸುವವರು-ತಮ್ಮ ದುರದೃಷ್ಟ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಲು ಕೆಲವು ದಾರಿಗಳೇನೋ ಇವೆ. ಜೀತ ಪದ್ಧತಿಯ ರದ್ಧತಿಯಿಂದ ಆಗಿರುವುದಾದರೂ ಏನು? ಒಂದು ಬಗೆಯ ಜೀತದಿಂದ ಇನ್ನೊಂದು ಬಗೆಯ ಜೀತಕ್ಕೆ ವರ್ಗಾವಣೆಗೊಂಡಂತಾಗಿರುವುದು. ಭಾರತದಲ್ಲಿ ಇಂದಿಗೂ ೪೧,೦೦,೦೦೦ ತೆರೆದ ಕಕ್ಕಸುಗಳಿವೆ. ಒಂದು ಜಾತಿಯವರು ಅವುಗಳಿಂದ ಮಲವನ್ನು ಮುಚ್ಚಿದ ಡಬ್ಬಗಳಲ್ಲೋ, ತೆರೆದ ಮಂಕರಿಗಳಲ್ಲೋ ತಮ್ಮ ತಲೆಯ ಮೇಲೆ ಹೊತ್ತು ಒಯ್ಯಬೇಕು. ವರ್ಣ ಮತ್ತು ಜಾತಿಯನ್ನು ರಾಜಕೀಯಗೊಳಿಸಿದ್ದರಿಂದ ಕೆಳಜಾತಿಗಳ ಮೇಲೆ ವಿವಿಧ ರೀತಿಯ ಅನ್ಯಾಯಗಳನ್ನು ಹೇರಲು, ಅವರನ್ನು ಶೋಷಿಸಲು ಅವಕಾಶವುಂಟಾಗಿದೆ. ಅವರು ತಮ್ಮ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಸಲುವಾಗಿ ತಮ್ಮ ಮತಕ್ಷೇತ್ರವನ್ನು ಮುಕ್ತವಾಗಿ ಬಳಸಲು ಅವರಿಗೆ ಅವಕಾಶ ಕೊಡುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲೇನೋ ಜಾತಿಯ ಹಿಡಿತ ದುರ್ಬಲವಾಗಿರುವುದು ಹೌದು. ಆದರೆ ಇತರ ಕ್ಷೇತ್ರಗಳಲ್ಲಿ ಅದು ಇನ್ನೂ ಗರಿಗಟ್ಟಿಕೊಂಡಿದೆ. ಬಲಗೊಂಡಿದೆ. “ತುಳಿಯಲ್ಪಟ್ಟವರಿಗಾಗಿ”, ದುರ್ಬಲರಿಗಾಗಿ, ಅಸಹಾಯಕರಿಗಾಗಿ, ಭಾರತದ ಸಮಾಜ, ಅರ್ಥವ್ಯವಸ್ಥೆ ಮತ್ತು ರಾಜ್ಯ ವ್ಯವಸ್ಥೆಗಳು ಕೆಲವು ತುಟಿಮಾತ್ರದ ಸಹಾನುಭೂತಿ ತೋರಿಸಿವೆ. ಅವರ ಸಮಸ್ಯೆಗಳಿಗೆ ನಿಜವಾದ ಪರಿಹಾರವನ್ನು ತೋರಿಸಲು ಶಕ್ತವಾಗಲಿಲ್ಲ. ಇದರಿಂದ ಸ್ಪಷ್ಟವಾಗಿ ಕಾಣುತ್ತಿರುವ ಫಲಿತಾಂಶವೆಂದರೆ ವಿರೋಧ ಮತ್ತು ಪ್ರತಿಭಟನೆ. ಎರಡೂ ಸುಲಭವಾಗಿ ಅರ್ಥವಾಗುತ್ತದೆ. ಸಂಪ್ರದಾಯಕ್ಕೆ ಅದರದ್ದೇ ಕೆಲವು ಉಪಯೋಗಗಳಿವೆ. ಆದರೆ ಸಂಪ್ರದಾಯಕ್ಕೆ ಮನ್ನಣೆ ಕೊಡಬೇಕೆನ್ನುವುದು ಶೋಷಣೆ, ಅಸಮಾನತೆ, ಅನ್ಯಾಯಳನ್ನು ಮುಂದುವರಿಸಿಕೊಂಡು ಹೋಗಲು ಒಂದು ರಕ್ಷಾಕವಚವಾಗಬಾರದು. ವರ್ಣ ಮತ್ತು ಜಾತಿಯ ಆಚರಣೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆಯೇನೋ ಆಗಿದೆ. ಆದರೆ ಅದು ಅತಿ ನಿಧಾನ ಮತ್ತು ಅತ್ಯಲ್ಪ. ಕಾನೂನು ಒಂದು ಕಡೆ ಅಸ್ಪಶ್ಯತೆಯ ಹಾಗೂ ಜೀತ ಪದ್ಧತಿಯ ನಿಷೇಧ, ಶಿಕ್ಷಣ, ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲಿ ಪರಿಹಾರ ರೂಪದ ಪಕ್ಷಪಾತ, ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯ ಇತ್ಯಾದಿಗಳನ್ನು ಕೊಟ್ಟಿದೆ; ಆದರೆ ಇನ್ನೊಂದು ಕೈಯಿಂದ ಅವುಗಳನ್ನು ಕಿತ್ತುಕೊಂಡಿದೆ. ಇದಕ್ಕೆ ಅಜಾಗರೂಪತೆ ಮತ್ತು ಅಸಮರ್ಪಕ ರೀತಿಯಲ್ಲಿ ಜಾತಿಗೊಳಿಸುವುಕೆಗಳೇ ಕಾರಣ. ಇಂಥಹ ಭಾರತೀಯ ಸಮಾಜವನ್ನು ಮೊದಲಬಾರಿಗೆ ಮನಮುಟ್ಟುವಂತೆ ಪ್ರಶ್ನೆ ಮಾಡಿದವರು ಡಾ. ಬಿ. ಆರ್. ಅಂಬೇಡ್ಕರ್ ರವರು.

ಗಾಂಧೀಜಿ ಅಸ್ಪೃಶ್ಯತೆಯ ನಿವಾರಣೆಗಾಗಿ ಕಾರ್ಯಕ್ರಮ ಹೊಂದಿದ್ದರೂ ಕೂಡ ಅವರು ಚಾರ್ತುವರ್ಣವನ್ನು ಎತ್ತಿಹಿಡಿಯುತ್ತಿದ್ದರು. ಆದ್ದರಿಂದ ಅಂಬೇಡ್ಕರ್ ಒಂದು ವರ್ಗವು ವಿದ್ಯೆಯನ್ನು ಕಲಿಯಲಿ, ಒಂದು ವರ್ಗ ಶಸ್ತ್ರ ಹಿಡಿಯಲಿ, ಒಂದು ವರ್ಗ ವ್ಯಾಪಾರ ಮಾಡಲಿ, ಉಳಿದೊಂದು ವರ್ಗ ಬರಿಯ ಸೇವೆಯನ್ನು ಮಾಡಿಕೊಂಡಿರಲಿ ಎಂಬ ಧರ್ಮ ನನಗೆ ಒಪ್ಪಿಗೆಯಾಗದು. ಒಂದು ವರ್ಗಕ್ಕೆ ವಿದ್ಯೆಯನ್ನೂ, ಸಂಪತ್ತು ಗಳಿಕೆಯ ಹಕ್ಕನ್ನು, ಶಾಸ್ತ್ರವನ್ನು ನಿರ್ಬಂಧಿಸುವ ಧರ್ಮ ಧರ್ಮವಲ್ಲ, ಅದೊಂದು ಹುಚ್ಚು ಎಂದು ಆರ್ಭಟಿಸಿದರು. ಜಾತಿ ವರ್ಣಗಳ ಕುರಿತು ಇರುವ ತಾರತಮ್ಯ ಭಾವವನ್ನು ಮರೆಯಲು ಬಯಸಿದ್ದರು. ಆ ಕಾರಣಕ್ಕಾಗೇ ಅವರು ಮಹಾಡದ ಸಾರ್ವಜನಿಕ ಕೆರೆಯಿಂದ ಅಸ್ಪೃಶ್ಯರು ನೀರನ್ನು ತಾವೇ ತೆಗೆದು ಕುಡಿಯುವ, ನಾಸಿಕ ದೇವಸ್ಥಾನದ ಪ್ರವೇಶ, ಮನ ಧರ್ಮ ಶಾಸ್ತ್ರವನ್ನು ಸುಡುವ ಸತ್ಯಾಗ್ರಹವನ್ನು ಮಾಡಿದರು. ಇವು ದೇಶದಲ್ಲೇ ತಲ್ಲಣ ಉಂಟು ಮಾಡಿದವು. ಅಂಬೇಡ್ಕರ್ ತಮ್ಮ ಮೂಕನಾಯಕ ಪತ್ರಿಕೆ ಮತ್ತು ಬಹಿಷ್ಕೃತ ಹಿತಕಾರಣಿ ವೇದಿಕೆಯ ಮೂಲಕ ಹೋರಾಟ ನಡೆಸಿದರು.

ಭಾರತೀಯರಾದ ನಾವು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಹಾಗೂ ಆರ್ಥಿಕ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಮವಿಧಾನವನ್ನು ಒಪ್ಪಿಕೊಂಡು ಆರು ದಶಕಗಳೇ ಕಳೆದಿವೆ. ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವು ನಮ್ಮದೆಂದು ಎಷ್ಟೇ ಹೇಳಿಕೊಂಡರೂ, ವರ್ಣಾಶ್ರಮ ವ್ಯವಸ್ಥೆ ಹಾಗೂ ಬಂಡವಾಳಶಾಹಿ, ಊಳಿಗಮಾನ್ಯಶಾಹಿಗಳ ಬಂಧನದಿಂದ ಭಾರತೀಯ ಸಮಾಜದ ಜಾತಿ ವ್ಯವಸ್ಥೆಗೆ ಅದರದೇ ಇತಿಹಾಸವಿದೆ. ಊಳಿಗಮಾನ್ಯ ವ್ಯವಸ್ಥೆಯ ಕರಾಳ ರೂಪ ಆದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಪುರುಷ ಸೂಕ್ತವು ನಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದೇ ಸೃಷ್ಟಿಸಿಕೊಂಡ ಬ್ರಾಹ್ಮಣರ ಹಾಗೂ ಬ್ರಾಹ್ಮಣೇತರ ಮೇಲ್ಜಾತಿಯವರ ಚಿತಾವಣಿಯ ಕುತಂತ್ರವೆಂಬುದನ್ನು ಅಂಬೇಡ್ಕರ್ ಅವರು ತಮ್ಮ ಬರವಣಿಗೆಯಲ್ಲಿ ಗಂಭೀರವಾಗಿ ಚರ್ಚಿಸಿದ್ದಾರೆ.

“ಪುರುಷ ಸೂಕ್ತ” ಚಾತುವರ್ಣವನ್ನು ಪವಿತ್ರ ನಿಯಮ ಹಾಗೂ ದೈನಿಕ ಕಟ್ಟಳೆಯನ್ನಾಗಿಯೂ ಮಾಡಿದೆ. ಪುರುಷನ ಬಾಯಿಯಾಗಿ ಬ್ರಾಹ್ಮಣ, ಕೈಗಳಾಗಿ ಕ್ಷತ್ರಿಯ, ತೊಡೆಗಳಾಗಿ ವೈಶ್ಯ ಹಾಗೂ ಶೂದ್ರರನ್ನು ಪಾದವನ್ನಾಗಿ ವರ್ಣಿಸಲಾಗಿದೆ. ಸೂಕ್ರವನ್ನು ಇಡೀ ವಿಶ್ವದ ಸೃಷ್ಟಿ ಶಾಸ್ತ್ರವೆಂದು ಹೇಳಲಾಗಿದೆ. ೧೧ ಮತ್ತು ೧೨ನೆಯ ಚರಣಗಳು ನಿರ್ದಿಷ್ಟಪಡಿಸಿದ ಸಾಮಾಜಿಕ ರಚನೆಯನ್ನು ಗೌತಮ ಬುದ್ಧನ ಹೊರತು ಬೇರಾರು ಪ್ರಶ್ನಿಸಿಲ್ಲ ಎಂದರು. ಪುರುಷ ಸೂಕ್ತದ ಕಲ್ಪನೆಯನ್ನು ಅನುಶಾಸನವೇ ವೇದವೆಂದು ಒತ್ತಿ ಹೇಳಬಹುದು. ಈ ಪದ್ಧತಿಯು ಅಂದಿಗಿಂತಲೂ ಹೆಚ್ಚಾಗಿ ಅಂತಿನ ಆಧುನಿಕ ಕಾಲದಲ್ಲಿ ತನ್ನ ಪ್ರಚಂಡ ನೃತ್ಯವನ್ನು ಪ್ರದರ್ಶಿಸುತ್ತಿದೆ. ಈ ದೃಷ್ಟಿಯಲ್ಲಿ. ಇಂದಿನ ಸಂಶೋಧನೆಗಳು ಭಾರತೀಯ ಸಮಾಜದ ಚಾತುರ್ವರ್ಣ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ವರ್ಣದ ನೆಲೆಯನ್ನು ಕುರಿತು ಚರ್ಚಿಸಲಾಗುತ್ತಿದೆ. ಮೂಲಭೂತವಾಗಿ ಚಾತುರ್ವರ್ಣ ವ್ಯವಸ್ಥೆಯಿಂದಾಗಿಯೇ ಶೂದ್ರ ಅಸ್ಪೃಶ್ಯ ವ್ಯವಸ್ಥೆ ಬಂದವೆಂದು ಭಾರತದಲ್ಲಿ ನೂರೆಂಟು ಜಾತಿ, ಉಪಜಾತಿ, ಪಂಗಡ, ಒಳಪಂಗಡಗಳು ಸೃಷ್ಟಿಯಾದವೆಂದು ಹೇಳಬಹುದು. ಈ ಸಾಮಾಜಿಕ ರಚನೆಯನ್ನು ಪಿರಾಮಿಡ್‌ಗೆ ಹೋಲಿಸಿ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳಗಿನವರು ಬಹುಸಂಖ್ಯಾತರು ಇವರಿಗೆ ಜಾತಿ ಶೋಷಣೆ, ಅಸ್ಪೃಶ್ಯತೆ, ಹಿಂಸೆ, ಅವಮಾನ, ದೌರ್ಜನ್ಯ ಮುಂತಾದವು ಮೇಲಿನವರಿಂದ ಒತ್ತಾಯ ಪೂರ್ವಕವಾಗಿ ಹೇರಲ್ಪಟ್ಟಿವೆ. ಭರಿಸಿಕೊಳ್ಳಲಾಗದಂತೆ ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ ಹಾಗೂ ಮನುಸ್ಮೃತಿ ಈ ವ್ಯವಸ್ಥೆಗೆ ಪ್ರಭಾವಿಸಿವೆ. ಈ ಹಂತದಲ್ಲಿ ರಾಮಾಯಣ, ಮಹಾಭಾರತ ಹಾಗೂ ಮನುಸ್ಮೃತಿಯ ಬಗ್ಗೆ ಅಂಬೇಡ್ಕರ್ ರರು ಪ್ರಖರವಾಗಿ ವಿಮರ್ಶೆಯನ್ನು ಬರೆದರು. ಪಾರಂಪರಿಕವಾಗಿ ಹಿಂದೂ ಧರ್ಮದ ತಾತ್ವಿಕತೆಗೂ ಮತ್ತು ಚಾತುರ್ವರ್ಣಕ್ಕೂ ನೇರವಾದ ಸಂಬಂಧವಿದೆ ಎನ್ನುವುದು ಇಂದಿಗೂ ಬಲವಾದ ತಿಳುವಳಿಕೆ. ಅದರಿಂದಾಗಿ ಚಾತುರ್ವರ್ಣ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಪರಿವರ್ತನೆ ಆಗಬೇಕೆಂದರೆ, ಅದು ಹಿಂದೂ ಧರ್ಮದ ಸನಾತನ ದೃಷ್ಟಿಕೋನದಲ್ಲಿ ಸಮಗ್ರ ಬದಲಾವಣೆಯಾಗಬೇಕಾಗಿದೆ ಎಂಬುದು ಮುಖ್ಯವಾದ ವಿಚಾರವಾಗಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತೀಯತೆಯ ಸಾಮಾಜಿಕ ಚಲನೆಯಿಂದ ಮಾತ್ರ (ಜಾತಿ, ಅಸ್ಪೃಶ್ಯತೆಗಳು) ಸಡಿಲಗೊಳ್ಳಬಲ್ಲವು. ಶಿಕ್ಷಣ ಮತ್ತು ಆಧುನಿಕ ಸೌಲಭ್ಯಗಳ ಮೂಲಕ ಮುಂದುವರಿದಾಗ ಮಾತ್ರ ನಿವಾರಣೆ ಸಾಧ್ಯವೆಂದು ಬಯಸಬಹುದು. ಬಹುಮುಖ್ಯವಾಗಿ ಈ ಹಂತದಲ್ಲಿ ಸಾಮಾಜಿಕ, ಧಾರ್ಮಿಕ ಹೋರಾಟಗಳು ಮುಖ್ಯವಾಗಿ ತಮ್ಮ ಪಾತ್ರವನ್ನು ವಹಿಸುತ್ತವೆ.

ಪುರುಷ ಸೂಕ್ತ ಸಮಾಜ ರಚನೆಯನ್ನು ಅಂಬೇಡ್ಕರ್ ಅವರು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಹಿಂದೂಧರ್ಮ ಕೊಳಕು ವಾಸ್ತವತೆಯನ್ನೇ ಶಾಶ್ವತವಾದ ಉನ್ನತ ಆದರ್ಶದ ಮಟ್ಟಕ್ಕೆ ಏರಿಸಲಾಗಿದೆ. ತಾನು ವಿಭಜಿಸಿದ ನಾಲ್ಕು ವರ್ಗಗಳನ್ನು ಒಂದು ಸಿದ್ಧಾಂತವಾಗಿ ಮಾಡಿದೆ. ಇದು ಜೀವ ವಿರೋಧಿಯ, ಇದರ ಉದ್ದೇಶಗಳು ಅತ್ಯಂತ ಹೀನವಾದ್ದು, ಫಲಿತಾಂಶಗಳು ಸಮಾಜ ವಿರೋಧಿಯಾಗಿವೆ. ವಿದ್ಯೆ, ಜ್ಞಾನಗಳ ಒಡೆಯರಾಗಿ ಬ್ರಾಹ್ಮಣರನ್ನು, ಯುದ್ಧಕ್ಕಾಗಿ ಕ್ಷತ್ರಿಯರನ್ನು, ವ್ಯಾಪಾರ, ವಾಣಿಜ್ಯಕ್ಕೆ ವೈಶ್ಯರು, ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ದಲಿತರನ್ನು ಅತ್ಯಂತ ಹೊಲಸು ಕೆಲಸ ಮಾಡುವ ಗುಲಾಮರನ್ನಾಗಿ ಮಾಡಲಾಗಿದೆ. ಇವರು ಎಲ್ಲ ಹಕ್ಕುಗಳಿಂದಲೂ ವಂಚಿತರು, ಇವರಿಗೆ ಅನೇಕ ರೀತಿಯ ಹಿಂದೆ, ಅವಮಾನಗಳನ್ನು ಮಾಡಲಾಗುತ್ತಿದೆ. ಜ್ಞಾನದಿಂದ, ಆಚರಣೆಗಳಿಂದ ಸಂಪತ್ತು ಮತ್ತು ವಿದ್ಯೆಗಳಿಂದ ದಲಿತರನ್ನು ದೂರ ಇಡಲಾಗಿದೆ. ಇದಕ್ಕಿಂತ ಹೀನವಾದ ಬದುಕು ಅಸ್ಪೃಶ್ಯರೆಂದು ಕರೆಸಿಕೊಳ್ಳುತ್ತಿದ್ದ ಹೊಲೆಯ ಮಾದಿಗರದಾಗಿದೆ. ಅಸ್ಪೃಶ್ಯತೆ ಎಂದರೆ ಮೈಲಿಗೆ, ಕೀಳು ಜಾತಿಯಲ್ಲಿ ಹುಟ್ಟಿದವನನ್ನು ಮುಟ್ಟುವುದರಿಂದ ಮೈಲಿಗೆಯಾಗುವವನು ಎನ್ನಲಾಗಿದೆ. ಮನುಷ್ಯರಲ್ಲಿ ಮೇಲು ಕೀಳು ಜಾತಿಗಳನ್ನು ನಿರ್ಮಿಸಿ, ಮನುಷ್ಯನು ಮುಟ್ಟುವುದರಿಂದ ಮೈಲಿಗೆಯಾಗುತ್ತದೆ ಎನ್ನುವ ಹಿಂದೂ ನಾಗರಿಕತೆಯು ನಾಗರಿಕತೆಯೇ ಅಲ್ಲ. ಇದೇ ಮಾನವೀಯತೆಯನ್ನೇ ತುಳಿದು, ಗುಲಾಮಗಿರಿಗೆ ತಳ್ಳುವ ವೈಶಾಚಿಕ ನಿರಂತರ ಯೋಜನೆಯೇ ಹಿಂದೂ ನಾಗರೀಕತೆ ಎಂದಿದ್ದಾರೆ. ಅಂಬೇಡ್ಕರ್. ಕೊಳಕು ಕೆಲಸ ಮಾಡುವ ವ್ಯಕ್ತಿಗೇ ಮೈಲಿಗೆಯನ್ನಂಟಿಸಿ, ಅವನನ್ನು ಮುಟ್ಟುವುದರಿಂದಲೇ ಮೈಲಿಗೆಯಾಗುತ್ತದೆನ್ನುವ ಪದ್ಧತಿಯನ್ನು ಹುಟ್ಟು ಹಾಕಲಾಯಿತು.

ಹೀಗೆ ಮೈಲಿಗೆ ಎಂಬ ಮಾನಸಿಕ ಕಲ್ಪನೆಯನ್ನು ವ್ಯಕ್ತಿಯೊಬ್ಬರಿಗೆ ಭೌತಿಕವಾಗಿ ವರ್ಗಾಯಿಸುವುದರ ಮೂಲಕ ಅಸ್ಪೃಶ್ಯತೆ ಆಚರಣೆಗೆ ಬಂದಿತು. ಇತಿಹಾಸವನ್ನು ಗಮನಿಸಿದಾಗ ಅಂಬೇಡ್ಕರ್ ಅವರ ಪ್ರಕಾರ ಅಸ್ಪೃಶ್ಯತೆ ಆಚರಣೆಗೆ ಬಂದಿತು. ಇತಿಹಾಸವನ್ನು ಗಮನಿಸಿದಾಗ ಅಂಬೇಡ್ಕರ್ ಅವರ ಪ್ರಕಾರ ಅಸ್ಪೃಶ್ಯರು ವರ್ಣವ್ಯಸ್ಥೆಯ ಹಿಡಿತದಲ್ಲಿಲ್ಲ. ಶೂದ್ರರು ವರ್ಣವ್ಯವಸ್ಥೆಯಲ್ಲಿರುವ “ಸವರ್ಣೀಯ”ರಾಗಿದ್ದಾರೆ, ಅಸ್ಪೃಶ್ಯರು “ಅವರ್ಣೀಯ”ರಾಗಿದ್ದಾರೆ. ಹಿಂದೂ ಸಿದ್ಧಾಂತದಲ್ಲಿನ “ಸೃಷ್ಟಿ ಪ್ರಾಮುಖ್ಯತೆ”ಯು ಅಸ್ಪೃಶ್ಯನಿಗೆ ಅನ್ವಯಿಸುವುದಿಲ್ಲ. ಅಸ್ಪೃಶ್ಯರನ್ನು ಅಂತ್ಯ, ಅಂತ್ಯಜ ಮತ್ತು ಅಂತ್ಯವಾಸಿನ್ ಎಂದು ಕರೆಯಲಾಗಿದೆ. ಅಂತ್ಯ ಎಂದರೆ ಸೃಷ್ಟಿಯ ಕೊನೆಯಲ್ಲಿ ಊರಿನ ಕೊನೆ ಎಂದು ಅರ್ಥ. ಊರ ಹೊರಗಿನ ಅಂಚಿನಲ್ಲಿ ವಾಸ ಮಾಡುವವರನ್ನು ಅಂತ್ಯಜ ಎಂದು ಕರೆಯಲಾಗುತ್ತಿತ್ತು. ಮಹಾರಾಷ್ಟ್ರದ ಮಹಾರ್ ಜಾತಿಯವರು ಕರ್ನಾಟಕದ ಹೊಲೆಯ, ಮಾದಿಗರು ಆದಿಕಾಲದಿಂದಲೂ ಊರ ಹೊರಗಡೆಯೇ ನೆಲೆಸಿದ್ದರು. ಏಕೆಂದರೆ, ಕೃಷಿ ಪ್ರದೇಶಗಳ ಒಡೆತನ ಹೊಂದಿದ್ದ ಗುಂಪುಗಳಿಗೆ ಇವರು ಸೇರಿರಲಿಲ್ಲ. ಅಸ್ಪೃಶ್ಯರು ಬೇರೆಯ ಬುಡಕಟ್ಟು ಮತ್ತು ಪ್ರತ್ಯೇಕ ವೃತ್ತಿಗಳಿಗೆ ಸೇರಿದ್ದರಿಂದ ಪ್ರತ್ಯೇಕವಾಗಿ ತಳ್ಳಿಹಾಕಿ ಚಾತುರ್ವರ್ಣ ವ್ಯವಸ್ಥೆಯ ಆಧಾರಸ್ತಂಭವೇ ಅಸಮಾನತಾ ತತ್ವವಾಗಿದೆ ಎನ್ನಬಹುದು. ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರು, ಅಸಮಾನತೆಯನ್ನು ಆಧರಿಸಿ, ತಮ್ಮ ಮೇಲಿನವರಿಗೆ ಗುಲಾಮರಾಗಿದ್ದು, ಹಾಗೆಯೇ ಮೇಲಿನವರ ಸೇವೆಯ ಹೆಸರಿನಲ್ಲಿ ಅನೇಕ ಹೊಲಸು ಕೆಲಸಗಳನ್ನು ಇವರು ಮಾಡಿರುತ್ತಾರೆ. ಆದರೆ, ಅವರ್ಯಾರೂ ಅಸ್ಪೃಶ್ಯರಾಗಿಲ್ಲ. ಹಾಗಿರುವಲ್ಲಿ ವೃತ್ತಿಯಿಂದ ಅಸ್ಪೃಶ್ಯತೆ ಹುಟ್ಟಿತೆಂದು ಹೇಳುವುದು ಸಮರ್ಥನೀಯವಲ್ಲ. ಇದರಿಂದ ಭಾರತೀಯ ಸಮಾಜದ ರಚನೆಯ ಕುರಿತು ನೂರಾರು ಪ್ರಶ್ನೆಗಳು ಮುಡುತ್ತವೆ. ಇಲ್ಲಿ ಪ್ರಶ್ನೆಗಳು ಹುಟ್ಟಬೇಕು. ಇಲ್ಲದಿದ್ದರೆ ಇಡೀ ಈ ವಾದಕ್ಕೆ ‘ಜಡತ್ವ’ ಬರುತ್ತದೆ. ಆಗ ಅದು ತನ್ನ ಮೌಲ್ಯವನ್ನು ಕಳೆದುಕೊಂಡು ‘ಇದು, ಇರುವುದು ಹೀಗೆಯೇ’ ಎಂಬ ತೀರ್ಮಾನಕ್ಕೆ ಬರುವ ಹಾಗೆ ಮಾಡುತ್ತದೆ. ಈ ವಿಷಯದಲ್ಲಿ ಇಂದಿನ ಯುವ ದಲಿತ ವರ್ಗ ಚಿಂತಿಸಬೇಕಾಗಿದೆ.

ಅಪಾರ ಪಾಂಡಿತ್ಯ, ಸತತ ಅಭ್ಯಾಸ, ನಿರಂತರ ಶ್ರಮಜೀವಿಯಾಗಿದ್ದ ಅಂಬೇಡ್ಕರ್ ಅಸ್ಪೃಶ್ಯತೆಯ ಮೂಲಗಳ ಶೋಧನೆಗೆ ಇಳಿದರು. ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ Caste in India, their mechanism geneses and development ಎಂಬ ಪ್ರಬಂಧವನ್ನು ಮಂಡಿಸಿ ತಮ್ಮ ಇಡೀ ಜೀವನದ ಹೋರಾಟದ ಗತಿಯನ್ನು ಸೂಕ್ಷ್ಮವಾಗಿ ತೋರಿದ್ದರು. “Gosts are used for sacrificial offerings and not lions” ಎಂದು ಭಾರತದ ರಾಜಕೀಯ, ಸಾಮಾಜಿಕ ರಂಗದಲ್ಲಿ ಕೊಳೆಯನ್ನು ತೊಳೆಯಲು ಸಿಂಹದಂತೆ ಗರ್ಜಿಸತೊಡಗಿದರು. ಅವರ ಪ್ರತಿಭಟನಾತ್ಮಕ ಹೋರಾಟಗಳ ಗುರಿ ನಿಮ್ಮ ವರ್ಗದವರಿಗೆ ಒಂದು ಗೌರವದ ಬದುಕನ್ನು ನೀಡುವುದಾಗಿತ್ತು. ಇಂದಿಗೂ ಅಂಬೇಡ್ಕರ್ ವಿಚಾರಗಳು ಆಳತೊಡಗಿವೆ. ಅವರು ಆರಂಭಿಸಿದ ಜಾತಿ ನಿರ್ಮೂಲನ, ಮೀಸಲಾತಿ, ಮತಾಂತರ, ಶಿಕ್ಷಣ, ಸಂಘಟನೆ, ದಲಿತರಲ್ಲಿ ಹೊಸ ವಿಚಾರಗಳ ಸಂಚಲನದ ಜೊತೆಗೆ ಜಾಗೃತಿಗೆ ಕಾರಣವಾಗಿವೆ.

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿದ ನಂತರ ಅಂಬೇಡ್ಕರ್ ತಮಗೆ ಮತ್ತು ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ವಿಧಾಯಕ ರೀತಿಯಲ್ಲಿ ಪ್ರತಿಭಟಿಸಬೇಕೆಂದು ಸಂಕಲ್ಪ ಮಾಡಿದರು. ಕೊಲ್ಲಾಪುರದ ಮಹಾರಾಜರ ನೆರವಿನಿಂದ ಮೂಕ ನಾಯಕ ಎಂಬ ಪತ್ರಿಕೆಯನ್ನು ಅವರು ಹೊರಡಿಸಿದರು, ಅದು ಅವರ ಅಭಿಪ್ರಾಯಗಳ ಮಂಡನೆಯ ವೇದಿಕೆಯಾಗಿತ್ತು. ಅದರ ಪ್ರಥಮ ಸಂಚಿಕೆಯಲ್ಲಿ ಅವರು ಹೀಗೆ ಬರೆದರು; ಭಾರತ ಅಸಮಾನತೆಯ ತವರು. ಹಿಂದೂ ಸಮಾಜ ಒಂದು ಎತ್ತರವಾದ ಗೋಪುರವಿದ್ದಂತೆ, ಅದಕ್ಕೆ ಹಲವು ಅಂತಸ್ತುಗಳುಂಟು. ಆದರೆ ಅದಕ್ಕೆ ಬಾಗಿಲುಗಳಾಗಲೀ, ಅದನ್ನೇರಲು ಏಣಿಯಾಗಲೀ ಇಲ್ಲ. ಒಂದು ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೇ ಅಂತಸ್ತಿನಲ್ಲಿ ಸಾಯಬೇಕು. ಇವನ್ನು ಬಿಟ್ಟು ಅನ್ಯ ಮಾರ್ಗವೇ ಅವರಿಗಿಲ್ಲ. ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಬ್ರಾಹ್ಮಣೇತರು ಮತ್ತು ಅಸ್ಪೃಶ್ಯರು ಎಂದು ಮೂರು ಭಾಗಗಳಿವೆ. “ಈಶಾವಾಸ್ಯಮಿದಂ ಸರ್ವಂ” ಎಂದು ಹಿಂದೂಗಳೂ ಉದ್ಘೋಷಿಸುತ್ತಾರೆ. ಆದರೆ ತಮ್ಮ ಧರ್ಮದವರೇ ಆದ ಕೆಲವರನ್ನು ಅಸ್ಪೃಶ್ಯರೆಂದು ಕಡೆಗಣಿಸುತ್ತಾರೆ. ಜ್ಞಾನ ಪ್ರಸಾರವಾಗಲೀ, ವಿದ್ಯಾ ಪ್ರಸಾರವಾಗಲೀ, ಬ್ರಾಹ್ಮಣರ ಹಾಗೂ ಸವರ್ಣೀಯ ಹಿಂದೂಗಳ ನಿಜವಾದ ಗುರಿಯಾಗಿಲ್ಲ. ಏಕಸ್ವಾಮ್ಯವೇ ಅವರ ಧ್ಯೇಯ. ಇದು ದುಃಖಕರವಾದ ಸಂಗತಿ. ಅಸ್ಪೃಶ್ಯರು ಹಿಂದುಳಿದಿರುವುದಕ್ಕೆ ಕಾರಣ ಅವರಿಗೆ ಸರಿಯಾದ ಶಿಕ್ಷಣವಿಲ್ಲದಿರುವುದು, ನಿರಂತರವಾದ ದಾಸ್ಯ ದಾರಿದ್ರ ಮತ್ತು ಅಜ್ಞಾನಗಳಿಂದ ದಲಿತ ವರ್ಗಗಳನ್ನು ಪಾರು ಮಾಡಲು, ಅವರಲ್ಲಿ ಜಾಗೃತಿಯುಂಟು ಮಾಡಲು ಭಗೀರಥ ಪ್ರಯತ್ನವನ್ನೇ ಮಾಡಬೇಕು ಎನ್ನುವ ಮಾತುಗಳನ್ನು ಬರೆದರು. ಈ ಕಾರ್ಯಗಳನ್ನು ಇಂದು ಸಾಕಾರಗೊಳಿಸಬೇಕಿದ್ದರೆ ಇದಕ್ಕಾಗಿ ಮತ್ತೊಬ್ಬ ಅಂಬೇಡ್ಕರ್ ಹುಟ್ಟಿಬರಬೇಕು.

ಭಾರತ ದೇಶಕ್ಕೆ ತಾನು ಸ್ವಾತಂತ್ರವಾಗುವುದು ಮಾತ್ರ ಸಾಲದು. ಅದು ಎಲ್ಲ ವರ್ಗದವರಿಗೂ ಸಮಾನವಾದ ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳನ್ನು ಒದಗಿಸುವ ಅವಕಾಶಗಳನ್ನು ಮತ್ತು ಅದಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡುವ ಸ್ವಾತಂತ್ರ್ಯ ಬೇಕಾಗಿದೆ. ಬ್ರಿಟಿಷರ ಅನ್ಯಾಯಕರವಾದ ಆಡಳಿತದ ಬಗ್ಗೆ ಬರಾಹ್ಮಣರು, ಬಂಡವಾಳಶಾಹಿಗಳು ಪ್ರತಿಭಟಿಸುವುದು ಸಮರ್ಥನೀಯವಾಗಿದ್ದರೆ, ಅಧಿಕಾರದ ಹಸ್ತಾಂತರವಾಗಿ ಬ್ರಾಹ್ಮಣ ಹಾಗೂ ಸ್ಥಳೀಯ ಮಟ್ಟದಲ್ಲಿ ಜಮೀನ್ದಾರರ ಆಡಳಿತ ಹೇರುವುದನ್ನು ವಿರೋಧಿಸುವುದಕ್ಕೂ ದಲಿತರಿಗೆ ನೂರು ಪಟ್ಟು ಸಮರ್ಥನೆಯಿದೆ. ದಲಿತರ ಮೂಲಭೂತ ಹಕ್ಕುಗಳನ್ನು ಮಾನ್ಯ ಮಾಡದ ಸ್ವರಾಜ್ಯ ಸ್ವರಾಜ್ಯವಲ್ಲ. ಅದು ಮತ್ತೊಂದು ಬಗೆಯ ಗುಲಾಮಗಿರಿ. ೧೯೨೩ರ ಸುಮಾರಿಗೆ ಭಾರತದಲ್ಲಿ ಸಾಮಾಜಿಕ ಸುಧಾರಣಾ ಚಳವಳಿ ನಿಧಾನವಾಗಿ ಹಬ್ಬತೊಡಗಿತು. ಈ ವೇಳೆಯಲ್ಲಿ ಅಂಬೇಡ್ಕರ್ ಹೇಳಿರುವ ಮಾತುಗಳಉ ಇಂದಿಗೂ ಚರಿತ್ರಾರ್ಹವಾಗಿದೆ. “ನಾವು ಎಲ್ಲರಂತೆ ಭಾರತೀಯರು, ಹಿಂದುಗಳು ನಮಗೆ ತೋರಬೇಕಾಗಿರುವುದು ಕರುಣೆಯಲ್ಲ. ನೀಡಬೇಕಾದ್ದ ದಾನವಲ್ಲ, ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯ. ನೆಲ-ಜಲ-ಗಾಳಿ-ಬೆಳಕು-ದೇವರು ಯಾರ ಸ್ವತ್ತೂ ಅಲ್ಲ. ಅದನ್ನು ಅನುಭವಿಸಲು ಯಾರ ಹಂಗೂ ಬೇಕಿಲ್ಲ. ನಾವು ಆತ್ಮಗೌರವವನ್ನು ಸ್ವ ಪ್ರತಿಷ್ಠೆಯನ್ನು ದಿಟ್ಟ ನಿಲುವನ್ನು ರೂಢಿಸಿಕೊಳ್ಳಬೇಕು. ಸಾವಿರಾರು ವರ್ಷಗಳಿಂದ ಸವರ್ಣೀಯರ ಅಡಿಗೆ ಮುಡಿ ಚಾಚಿ ಕಳೆದುಕೊಂಡಿರುವ ಸ್ವಾಭಿಮಾನ ಸ್ವಾತಂತ್ರ್ಯಗಳನ್ನು ಮತ್ತಡ ಪಡೆಯಲು ಎಡರುಗಳಿಗೆ ಎದೆಗೆಡದೆ ಸಂಯಮದಿಂದ ಹೋರಾಟಬೇಕು” ಎಂದು ತನ್ನ ರಾಷ್ಟ್ರದ ನಿಜವಾದ ವಾರಸುದಾರರಿಗೆ ಕರೆ ನೀಡಿದರು. ಈ ಕರೆ ಇಂದಿಗೂ ಪ್ರತಿಯೊಬ್ಬ ದಲಿತನು ಮನ ಮಾಡಬೇಕಾಗಿರುವ ಅಂಶವಾಗಿದೆ.

ಇಂದು ಕೂಡ ಭಾರತದಲ್ಲಿ ಜಾತಿ ವ್ಯವಸ್ಥೆ ಸ್ಥಿರವಾಗಿದೆ. ಒಂದು ವರ್ಗವಂತೂ ಅಸ್ಪೃಶ್ಯರಾಗಿಯೇ ಜೀವನ ನಡೆಸುತ್ತಿದ್ದಾರೆ. ಅಸ್ಪೃಶ್ಯತೆ ಎನ್ನುವುದು ಭಾರತದ ಸಮಾಜಕ್ಕಂಟಿಕೊಂಡು ಬಂದ ಅನಿಷ್ಟ ಪದ್ಧತಿ. ಈ ರಾಷ್ಟ್ರದ ಜಮೀನ್ದಾರಿಕೆಯ ವರ್ಗ ಹಾಗೂ ಬ್ರಾಹ್ಮಣೇತರ ಊಳಿಗಮಾನ್ಯ ಶಾಹಿ ವರ್ಗ ಭಾರತದ ಮಣ್ಣಿನಲ್ಲಿ ಇತಿಹಾಸದುದ್ದಕ್ಕೂ ಚಾಚೂ ತಪ್ಪದೆ ತಪ್ಪನ್ನು ಮಾಡಿಕೊಂಡು ಬಂದಿದೆ. ಇವರ ಅಲಿಖಿತ ಸಂವಿಧಾನದ ಮುಂದೆ ನಮ್ಮ ಲಿಖಿತ ಸಂವಿಧಾನ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇದು ಬಾರತದ ಜಾತಿಯಲ್ಲಿರುವುದು ಮೇಲ್ಜಾತಿಯವರ ಅಲಿಖಿತ ಸಂವಿಧಾನವೆ ಹೊರತು ಬೃಹತ್ ಪ್ರಜಾಪ್ರಭುತ್ವ ಮಾದರಿಯ ಭಾರತದ ಲಿಖಿತ ಸಂವಿಧಾನವಲ್ಲ. ಈ ದಿಸೆಯಲ್ಲಿ ಅಸಮಾನತೆ ಎನ್ನುವುದು ಸ್ಥಿರಗೊಳ್ಳುತ್ತಿದೆ. ಈ ಕಳಂಕವನ್ನು ಸಾರಾಸಗಟಾಗಿ ಕಿತ್ತು ಹಾಕುವ ನಿಟ್ಟಿನಲ್ಲಿ ದುಡಿದವರು ಬದ್ಧ, ಬಸವ, ಅಂಬೇಡ್ಕರ್. ಇವರು ವರ್ಣ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಗಂಭೀರವಾಗಿಯೇ ಪ್ರತಿಭಟಿಸಿದ್ದಾರೆ. ಇವರು ಈ ಸಾಮಾಜಿಕ ಅನಿಷ್ಟಗಳ ವಿರುದ್ಧ ಪ್ರತಿಭಟಿಸುವುದರಿಂದ ದಲಿತರಿಗೆ ಈ ನೆಲದಲ್ಲಿ ಒಂದಷ್ಟು ಸ್ಥಾನಮಾನಗಳು ದೊರೆತಿವೆ ಹಾಗೂ ದೊರೆಯುತ್ತಿವೆ. ಆದರೆ ಭರತ ಖಂಡವನ್ನು ಅಂದು, ಇಂದು ಭಾರತವನ್ನು ಹಿಂದೂಸ್ಥಾನವೆಂದು ಕರೆಯುವುದರೊಂದಿಗೇ ಉದಯವಾದ ಸಾಮಾಜಿಕ ಅಸಮಾನತೆಯನ್ನು ಈ ರಾಷ್ಟ್ರದಿಂದ ತೊಡೆದು ಹಾಕುವ ಕೆಲಸ ಇನ್ನಷ್ಟು ಮಂದಿ ಪ್ರವಾದಿಗಳಿಂದಲೂ, ಸಮಾಜ ಸುಧಾರಕರಿಂದಲೂ ನೂರಾರು ಕ್ರಾಂತಿಕಾರಿಗಳಿಂದಲೂ ಅಸಾಧ್ಯವೆಂಬುದು ನಗ್ನ ಸತ್ಯ. ಜಾತಿ ಬೀಜಗಳಿಂದ ಹುಟ್ಟಿ ಬೆಳೆದಿರುವ ಈ ಅಕ್ಟೋಪಸಿಯನ್ನು ಕಿತ್ತೊಗೆಯಲು ಈ ರಾಷ್ಟ್ರ ಎಷ್ಟು ಮುಂದುವರಿದರೂ ಸಹಾಯವಾಗದು. ಎಷ್ಟು ಸುಧಾರಕರು ಹುಟ್ಟಿದರೂ, ಎಷ್ಟೇ ಸುಧಾರಣೆಗಳು ನಡೆದರೂ ಆಗದು. ಜಾತಿ-ಜಾತಿಗಳ ಮಧ್ಯೆ, ಮತ-ಮತಗಳ ಮಧ್ಯೆ ಅಂತರವನ್ನು ಕಾಪಾಡಿಕೊಂಡು ಬರಲು ಒಂದು ವರ್ಗ ಶತಾಯಗತಾಯ ಜೀವ ತೇಯುತ್ತಿರುವಾಗ ಈ ಸಮಾಜದ ಸಾಮಾಜಿಕ ಅಸಮತೋಲನವನ್ನು ಸರಿದೂಗಿಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಧರ್ಮವನ್ನು ವೃದ್ಧಿಸುವುದೆಂದರೆ ಜಾತಿವ್ಯವಸ್ಥೆಯನ್ನು ಬೆಳೆಸುವುದೆಂದೇ ಅರ್ಥ. ಪ್ರತಿಯೊಬ್ಬ ಪ್ರಜೆಗೂ ತನ್ನ ಜಾತಿಯೇ ಪ್ರಧಾನ. ಆತನೆಂದೂ ತಾನು ಭಾರತೀಯನೆಂದು ಹೇಳಿಕೊಳ್ಳುವ ಯಾವ ಸಂದರ್ಭವೂ ಇಲ್ಲ. ಮಿಗಿಲಾಗಿ ಅವನು ತನ್ನ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಹೀಗೆ ಸಾರ್ವಜನಿಕವಾಗಿ ತಮ್ಮ ಜಾತಿಯ ಹೆಸರನ್ನು ಹೇಳಿಕೊಳ್ಳುವವರು ಮೇಲ್ಜಾತಿಯವರು ಮಾತ್ರ. ಕೆಳಜಾತಿಯೆಂಬ ಹಣೆಪಟ್ಟಿ ಕಟ್ಟಿಸಿಕೊಂಡ ಅಸ್ಪೃಶ್ಯರು ಅಥವಾ ಪಂಚಮರು ತಾವು ಒಂದು ಮತಕ್ಕೆ ಸೇರಿದವರೆಂದು ಎಂದೂ ಹೇಳಿಕೊಳ್ಳುವುದಿಲ್ಲ ಹಾಗೂ ಭಾರತೀಯನೆಂದೂ ಹೇಳಿಕೊಳ್ಳುವುದಿಲ್ಲ. ಆತ ತಮ್ಮ ಜಾತಿಯ ಹೆಸರನ್ನೂ ಸಾರ್ವಜನಿಕವಾಗಿ ಹೇಳಿಕೊಳ್ಳಲಾರ. ಇದಕ್ಕೆ ಬಲವಾದ ಕಾರಣ ಈ ರಾಷ್ಟ್ರ ಅವನನ್ನು ನಡೆಸಿಕೊಂಡು ಬಂದ ಅಮಾನವೀಯ ರೀತಿ-ನೀತಿಗಳು. ಪ್ರಾಣಿಗಳಲ್ಲಿ ಜಾತಿವ್ಯವಸ್ಥೆ ಇಲ್ಲದಿರುವುದು ಪ್ರಕೃತಿಯಷ್ಟೇ ಸತ್ಯ. ಒಂದು ವರ್ಗವನ್ನು ಪ್ರಾಣಿಗಿಂತಲೂ ಕಡೆಯಾಗಿ ಕಾಣುವ, ನಡೆಸಿಕೊಂಡು ಬರುತ್ತಿರುವ ಒಂದು ಸಮಾಜದ ಅನೈತಿಕ ಮಾರ್ಗವೇ ಈ ಜಾತಿ ಪದ್ಧತಿ.

ಇಂತಹ ಸಾಮಾಜಿಕ ವ್ಯವಸ್ಥೆಗೆ ಘೋರವಾಗಿ ಬಲಿಯಾದವರು ಅಸ್ಪೃಶ್ಯರು. ಇವರಿಂದ ಎಲ್ಲಾ ಸಾಮಾಜಿಕ ಸ್ವಾತಂತ್ರ್ಯವನ್ನು ಕಸಿದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿರಂತರವಾಗಿ ಶೋಷಣೆ ಮಾಡಿ ಅವರು ಹಿಂದೆ ಬೀಳುವಂತೆ ಮಾಡಿದ್ದು ಈ ಸಮಾಜವೆನ್ನುವುದರಲ್ಲಿ ಎರಡು ಮಾತಿಲ್ಲ.