ಶಿಕ್ಷಣ ಕ್ಷೇತ್ರದಲ್ಲಿ ದಲಿತ ಉಪನ್ಯಾಸಕರು ಎಷ್ಟೇ ಚೆನ್ನಾಗಿ ಪಾಠ ಮಾಡಿ, ಉತ್ತಮ ಫಲಿತಾಂಶ ತೋರಿಸಿದರೂ ಸವರ್ಣೀಯ ಉಪನ್ಯಾಸಕರು ಅವರನ್ನು ಬೆನ್ನುತಟ್ಟುವ ಬದಲಿ ವಿನಾಕಾರಣ ಕಾಲುಕೆರೆದು ಕದನಕ್ಕಿಳಿಯುವ ಕೆಲಸ ಸರ್ವೇಸಾಮಾನ್ಯವಾಗಿರುತ್ತದೆ. ಒಂದು ವೇಳೆ ದಲಿತನೇನಾದರೂ ಆ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಅಥವಾ ಪ್ರಾಂಶುಪಾಲನೋ ಆದರಂತು ಮುಗಿಯಿತು. ಮೂಲಭೂತವಾದಿಗಳ ಜೊತೆ ಬಂಡವಾಳಶಾಹಿ ಹಾಗೂ ಸ್ಪೃಶ್ಯ ಶೂದ್ರರೂ ಸೇರಿಕೊಂಡು ಆ ಸಂಸ್ಥೆಯಿಂದ ಅವರು ತೊರೆದು ಹೋಗುವಂತೆ ತಂತ್ರ ರೂಪಿಸುತ್ತಾರೆ. ಒಂದು ವೇಳೆ ದಲಿತರು ಅವರ ವಿರುದ್ಧ ಕಾನೂನು ಸಮರ ಸಾರಿದರೆ ನಡೆಯುವುದೊಂದೆ ಕಂಬಾಲಪಲ್ಲಿ ಅಥವಾ ಬದನವಾಳು ಘಟನೆಯನ್ನು ಮೀರಿಸುವಂತಹದ್ದು.

ಈ ಹಂತದಲ್ಲಿ ದಲಿತ ಮಹಿಳೆಯರು ಇದ್ದರೆ ನಡೆಯುವ ದೌರ್ಜನ್ಯ ಹಾಗೂ ಅವರ ಹಕ್ಕು ಉಲ್ಲಂಘನೆ ವಿಕೃತವಾಗಿರುತ್ತದೆ. ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು ಒಂದರ್ಥದಲ್ಲಿ ಅಖಿಲ ಮಟ್ಟದ ಭಾರತೀಯ ಲಕ್ಷಣವನ್ನು ಅನುಸರಿಸುತ್ತದೆ. ಬಹುತೇಕ ಕೊಲೆಗಳು ಅವಮಾನವನ್ನುಂಟು ಮಾಡುವುದರ ಜೊತೆಯಲ್ಲಿಯೇ ನಡೆಯುತ್ತವೆ. ಉದಾಹರಣೆಗೆ, ಸವರ್ಣೀಯ ಸಮಾಜವೊಂದು ದಲಿತ ಮಹಿಳೆಯನ್ನು ಅತ್ಯಾಚಾರಕ್ಕೊಳಪಡಿಸಲು ಅಥವಾ ಆಕೆಯ ಮಾನ ಅಪಹರಿಸಲು ತೊಡಗುವಾಗ ಅದು ಅತಿ ಹೆಚ್ಚು ಮಂದಿಗೆ ತಿಳಿಯುವಂತೆ ಮಾಡಲಾಗುತ್ತದೆ. ಈ ತರ್ಕದಿಂದಲೇ ಅತ್ಯಾಚಾರಕ್ಕೆ ಮೊದಲು ಮಹಿಳೆಯನ್ನು ಬೆತ್ತಲೆ ಮಾಡಲಾಗುತ್ತದೆ. ಕೆಲವು ಸಂದರ್ಭದಲ್ಲಿ ದೈಹಿಕ ಗಾಯಗಳೇನೊ ಇರದಿದ್ದರೂ ಅವಮಾನ ಮಾತ್ರ ಇರುತ್ತದೆ. ಇಲ್ಲಿರುವಂತಹ ಸಂದೇಶವೆಂದರೆ ದಲಿತರು ತಮ್ಮ ಸಾಮಾಜಿಕ ಸ್ಥಾನವನ್ನು ತಿಳಿದಿರುವುದಾಗಿರುತ್ತದೆ. ಬಳ್ಳಾರಿಯ ವಣೇನೂರು, ಕೋಲಾರದ ಮುಳಬಾಗಿಲುಗಳಂತಹ ಬೆತ್ತಲೆ ಪ್ರಕರಣಗಳು ಇವುಗಳಿಗೆ ನಿದರ್ಶನವಷ್ಟೆ. ಅಂಥ ಅನಾಕರಿಕ ಘಟನೆಗಳು ಭಾರತದಾದ್ಯಂತ ಸಾಮಾನ್ಯವಾದುದು.

ಸರ್ಕಾರಿ ಕಚೇರಿಯೊಂದರಲ್ಲಿ ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥನಾಗಿರುವ ದಲಿತರು ನಿರ್ದೇಶನದಂತೆ ಕೆಲಸ ಮಾಡಲು ಸವರ್ಣೀಯರು ಮುಜುಗರ ಪಡುತ್ತಾರೆ. ಆತನ ಹೆಸರು ಕೆಡಿಸಲು ಬ್ರಹ್ಮರಾಕ್ಷಸನನ್ನೇ ಸೃಷ್ಟಿಸುತ್ತಾರೆ. ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ದಲಿತರಿಗೆ ಓಟು ಕೊಡಲು ಸವರ್ಣೀಯರು ಅಸಡ್ಡೆ ತೋರುವುದು ಸರ್ವೇಸಾಮಾನ್ಯ. ಸಾಮಾನ್ಯವಾಗಿ ಆ ಕ್ಷೇತ್ರದಲ್ಲಿ ಚುನಾವಣೆಯ ‘ಕಾವು’ಕಂಡು ಬರುವುದಿಲ್ಲ. ಚುನಾವಣೆ ನಡೆದರೂ ಮತದಾನ ಶೇಕಡ ೪೦ ದಾಟುವುದಿಲ್ಲ. ಇನ್ನೂ ಚುನಾವಣೆಯಲ್ಲಿ ಗೆದ್ದು ಶಾಸಕನೋ, ಮಂತ್ರಿಯೋ ಆದರೆ ಅವರು ಸ್ಥಳೀಯ ಸವರ್ಣೀಯರ, ಬಂಡವಾಳಶಾಹಿಗಳ ಅಥವಾ ಮನುವಾದಿಗಳ ಕೈಗೊಂಬೆಯಂತೆ ವರ್ತಿಸಬೇಕಷ್ಟೆ. ಇಂದು ಜಾರಿಯಲ್ಲಿರುವ ಜಿಲ್ಲಾ ಪಂಚಾಯತಿ, ತಾಲ್ಲೂರು ಪಂಚಾಯತಿಗಳನ್ನು ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಗೆದ್ದ ದಲಿತ ಪ್ರತಿನಿಧಿಗಳ ಸ್ಥಿತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಂತದಲ್ಲಿ ಅವರ ಹಕ್ಕುಗಳಿಗೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ.

ಸರ್ಕಾರದ ಮುಜರಾಯಿ ಇಲಾಖೆಯ ದೇವಾಲಯಗಳು ಅಥವಾ ಗ್ರಾಮೀಣ ಪ್ರದೇಶದ ದೇವಾಲಯಗಳಿಗೆ ಇನ್ನೂ ದಲಿತರಿಗೆ ಪ್ರವೇಶಾವಕಾಶಗಳನ್ನು ನಿರಾಕರಿಸುತ್ತಿದೆ. ದಲಿತರು ದೇವಾಲಯಗಳಿಗೆ ಪ್ರವೇಶಿಸುವ ಪ್ರಸ್ತಾಪವನ್ನು ಸವರ್ಣೀಯರೆದುರು ಮಾಡಿದರೆ ದಲಿತರ ತೋಟ, ಗದ್ದೆ, ಮನೆ, ಕೆರೆ, ಜಾನುವಾರಗಳ ಆಹಾರವಾಗಿರುವ ಹುಲ್ಲಿನ ಮೆದೆ (ಬಣವೆ); ದನಕರುಗಳ ಅಗ್ನಿ ಇಲ್ಲವೆ ಬೇರೆ ದುರಂತಗಳಿಗೆ ಆಹುತಿಯಾಗುವುದನ್ನು ಯಾವ ಸಂವಿಧಾನ ಅಥವಾ ಸರ್ಕಾರ ತಪ್ಪಿಸಲು ಸಾಧ್ಯವಿಲ್ಲ.

ಊರಹಬ್ಬ, ಜಾತ್ರೆ, ಉತ್ಸವಗಳಲ್ಲಿ ದಲಿತರಿಗೆ ಬೇರೆ, ಸವರ್ಣೀಯರಿಗೆ ಬೇರೆ ಪೂಜೆ ಹಾಗೂ ಬಲಿ ಮಾಡಿಕೊಳ್ಳಬೇಕು. ದಲಿತರೇನಾದರೂ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಲು ನಿಂತರೇ ಊರ ಹಬ್ಬವೇ ನಿಂತು ಹೋಗುತ್ತದೆ. ಇದಕ್ಕೆ ನೂರಾರು ಜ್ವಲಂತ ಸಾಕ್ಷಿಗಳು ಕಣ್ಮುಂದಿವೆ. ಈ ಹಂತದಲ್ಲಿ ‘ಬಡವನ ಕೋಪ ದವಡೆಗೆ ಮೂಲ’ ಎನ್ನುವ ಸ್ಥಿತಿ ದಲಿತರದಾಗಿದೆ.

ರಾಷ್ಟ್ರದ ರಕ್ಷಣೆ ಅಂದರೆ ಇಲ್ಲಿಯ ಗಡಿ, ಜನ, ಭಾಷೆ, ಸಂಪತ್ತು ಹಾಗೂ ಪ್ರಮುಖವಾಗಿ ಜನತೆಯ ರಕ್ಷಣೆ ಎಂದಾಗುತ್ತದೆ. ಇದನ್ನು ರಕ್ಷಣೆ ಮಾಡಬೇಕಾದವರು ಸೈನಿಕರು ಹಾಗೂ ಪೊಲೀಸ್‌ನವರು ಅಂದರೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಪಾರ್ಥ ಕೊಡುವ ಮಾದರಿಯಲ್ಲಿ ಬರೆಯುವ ಸಾಧ್ಯವಿಲ್ಲ. ಆದರೆ ದಲಿತರ ವಿಷಯ ಬಂದಾಗ ಇದು ಸತ್ಯವಾಗುತ್ತದೆ. ಮೊದಲೆ ಹೇಳಿರುವ ಹಾಗೆ ದಲಿತರು ಸಮಾಜದಿಂದಲೇ ಹೊರಹಾಕಲ್ಪಟ್ಟ ಅಸ್ಪೃಶ್ಯರು. ಪೊಲೀಸ್ ಇಲಾಖೆಯಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಪ್ರಭಾವಿ ಪ್ರಬಲ ಕೋಮಿನವರು ದಲಿತರ ಮೇಲೆ ನಡೆಸುತ್ತಿರುವ ಘೋರ ಅಪರಾಧ ಹೇಳತೀರದು. ಯಾರು ಕಾನೂನು ರಕ್ಷಕರಾಗಬೇಕೋ, ಅವರೇ ದಲಿತರ ವಿಷಯದಲ್ಲಿ ಭಕ್ಷಕರಾಗಿರುವುದಕ್ಕೆ ನೂರಾರು ಜ್ವಲಂತ ಸಾಕ್ಷಿಗಳಿವೆ. ಎಷ್ಟೋ ದಲಿತರ ಅಹವಾಲುಗಳು ಠಾಣೆಯಲ್ಲಿ ದಾಖಲಾಗುವುದೇ ಇಲ್ಲ. ದಾಖಲಾದರೂ ಅದು ‘ಪ್ರಥಮ ಮಾಹಿತಿ’ (FIR) ನಿಂದ ದೂರು ಉಳಿದಿರುತ್ತದೆ. ನಂತರ ರಾಜಕೀಯ ಮುಖಂಡರು ಹಾಗೂ ಸ್ಥಳೀಯ ಸವರ್ಣೀಯರ ನಾಯಕತ್ವದಲ್ಲಿ ದಲಿತರೊಂದಿಗೆ ‘ರಾಜಿ’ಸೂತ್ರ ನಡೆಸಿ ತಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ನಗೆ ಚೆಲ್ಲುತ್ತಾರೆ. ಪೊಲೀಸರು ದಲಿತರೊಂದಿಗೆ ಇದ್ದೇವೆ ಹಾಗೂ ಅವರ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿಕೆ ನೀಡಿ ಪ್ರಚಾರ ಮಾಡುತ್ತಾರೆ. ಕೈ ಕೈ ಹಿಡಿದು ಛಾಯಾಚಿತ್ರ ತೆಗಿಸಿ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಪ್ರಕಟಿಸುತ್ತಾರೆ. ಇದು ದಲಿತರು ನಿರಂತರವಾಗಿ ದಿನಂಪ್ರತಿ ರಾತ್ರಿಕಂಡ ಬಾವಿಗೆ ಹಗಲು ಬೀಳುವ ಕ್ರಿಯೆಯಲ್ಲಿ ಮುನ್ನಡೆಯುತ್ತಿದೆ.

ಪ್ರತಿಸಲ ಈ ರೀತಿಯ ಹಿಂಸಾತ್ಮಕ ದೌರ್ಜನ್ಯ ನಡೆದ ನಂತರ ರಾಜಿ ಮಾಡಿಕೊಳ್ಳಲು ಮುಮದೆ ಬರಬೇಕಾದವರು ಪೊಲೀಸರು ಹಾಗೂ ಸವರ್ಣೀಯರ ಪ್ರಕಾರ ದಲಿತರೆ. ಇದು ಗಂಭೀರವಾದ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ‘ಶಾಂತಿ’ ‘ರಾಜಿ’ಗಳೆಂದರೆ ಪ್ರಬಲವಾಗಿರುವ ಸವರ್ಣೀಯರ ಹಾಗೂ ಪೊಲೀಸರ ನಿರ್ಧಾರಗಳನ್ನು ದಲಿತರು ಉಸಿರುಬಿಡದೆ ಒಪ್ಪಿಕೊಳ್ಳುವುದು. ಈ ಹಂತದಲ್ಲಿ ದೌರ್ಜನ್ಯಕ್ಕೆ ತುತ್ತಾದ ಜನಕ್ಕೆ ನ್ಯಾಯ ದೊರಕುವುದು ದೂರದ ಮಾತೆ ಸರಿ. ದೌರ್ಜನ್ಯಕ್ಕೆ ಒಳಗಾದವರು, ನಂತರ ರಾಜಿ ಮಾಡಿಕೊಳ್ಳುವುದು, ಮತ್ತೆ ದೌರ್ಜನ್ಯ ಮತ್ತೆ ರಾಜಿ. ಇದು ಗ್ರಾಮೀಣ ದಲಿತರ ಜೀವನದಲ್ಲಿ ಮುಗಿಯದ ಶೋಷಣೆಯ ಚಕ್ರವಾಗಿದೆ.

ದಲಿತರ ಮೇಲೆ ನಡೆಯುವ ದೌರ್ಜನ್ಯ ಬಳಿಕ ಅಪರಾಧಿಗಳಿಗೆ ಶಿಕ್ಷೆ ದಂಡ ಎಚ್ಚರಿಕೆ ಇವು ಯಾವುವೂ ಗಂಭೀರ ಪರಿಣಾಮ ಬೀರದ ಉದಾಹರಣೆಗಳು ಇಲ್ಲ. ಏಕೆಂದರೆ ಸಾಮಾಜಿಕ ಬಹಿಷ್ಕಾರದ ದೆಸೆಯಿಂದ ತೊಳಲಾಡುವಾಗ ಸರ್ಕಾರದ ಕಾನೂನುಗಳು ಸಂಪೂರ್ಣವಾಗಿ ಕುರುಡಾಗಿರುತ್ತದೆ. ಕಾನೂನು ಪರಿಪಾಲನೆ ವ್ಯವಸ್ಥೆಯು ನಿಷ್ಕ್ರಿಯವಾಗಿರುತ್ತದೆ. ಕೆಲವು ಪ್ರಮುಖ ಘಟನೆಗಳು ಪೊಲೀಸ್ ಠಾಣೆಗೆ ಹೋಗುವುದೇ ಇಲ್ಲ. ಹೋದರೂ ಅದು ಪ್ರಥಮ ಮಾಹಿತಿ (FIR) ಯಲ್ಲಿ ದಾಖಲಾಗಿರುವುದಿಲ್ಲ. ದಲಿತರು ಧೈರ್ಯಮಾಡಿ ಪೊಲೀಸ್ ಠಾಣೆಯಲ್ಲಿ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಲು ಮುಂದಾದರೆ, ಇವರಿಗಿಂತ ಸವರ್ಣೀಯರೆ ಮೊದಲು ಪೊಲೀಸ್‌ಠಾಣೆಯಲ್ಲಿ ತಮ್ಮ ಪ್ರಭಾವದ ಪ್ರಬಲ ಪ್ರಯತ್ನವನ್ನು ಬಿರುಸಿನಿಂದಲೇ ಮಾಡಿರುತ್ತಾರೆ. ದಿನದ ಊಟಕ್ಕೆ ಪರದಾಡುವ ದಲಿತರಿಗೆ ಕೋರ್ಟಿನ ಮೆಟ್ಟಿಲು ಪದೆ ಪದೆ ಹತ್ತಿ ಇಳಿಯುವ ಧೈರ್ಯ ಎಲ್ಲಿಂದ ಬರಬೇಕು. ದಿನದ ತುತ್ತಿನ ಚೀಲ ತುಂಬಿಸಲು ಸೆಣಸಾಡುವ ಈ ಜನಾಂಗಕ್ಕೆ ಆರ್ಥಿಕ ಶಕ್ತಿಯಾಗಲಿ, ಮಾನಸಿಕ ಹಾಗೂ ದೈಹಿಕ ಧೈರ್ಯ ಚೈತನ್ಯವಾಗಲಿ ಎಲ್ಲಿಂತ ತಾನೆ ಬರಬೇಕು?

ಭಾರತೀಯ ಗ್ರಾಮಗಳಲ್ಲಿ ಎರಡು ಸವರ್ಣೀಯರ ಪರಸ್ಪರ ವಿರೋಧಿ ಬಣಗಳಲ್ಲಿ ದಲಿತರು ಯಾವುದಾದರೂ ಒಂದು ಬಣಕ್ಕೆ ಅನಿವಾರ್ಯವಾಗಿ ಬೆಂಬಲ ನೀಡಿದರೆ ಅವರ ಗತಿ ಹೇಳತೀರದು. ಸಾಮಾನ್ಯವಾಗಿ ಸವರ್ಣೀಯರಿಗೆ ಬಲಿಯಾಗುವ ಮೊದಲು ಸನಾಂಗವೇ ದಲಿತರು. ಈ ನಿಜಾರ್ಥದಲ್ಲಿ ೨೦೦೪ ರಲ್ಲಿ ನಡೆದ ಭೀಕರ ದುರ್ಘಟನೆಯಾದ ಕರ್ನಾಟಕದ ಕೋಲಾರ ಜಿಲ್ಲಯಲ್ಲಿನ ಕಂಬಾಲಪಲ್ಲಿಯ ಎಂಟು ಜನ ದಲಿತರು ಸಜೀವ ದಹನದ ಪ್ರಕರಣವೂ ಈ ಮಾತಿಗೆ ಪೂರಕವಾಗಿಯೇ ಇದೆ. ಅಲ್ಲಿನ ರೆಡ್ಡಿ (ಒಕ್ಕಲಿಗೆ ಜನಾಂಗ) ಜನಾಂಗದ ಎರಡು ಬಣಗಳಲ್ಲಿ ಒಂದು ವರ್ಗಕ್ಕೆ ದಲಿತರು ಸಂಪೂರ್ಣವಾಗಿ ಸಹಕರಿಸುತ್ತಿದ್ದುದೇ ಈ ದುರ್ಘಟನೆಗೆ ನಾಂದಿಯಾಗಿದೆ. ಇದರ ಜೊತೆಗೆ ಸ್ಥಳೀಯ ರಾಜಕೀಯ ತನ್ನ ಕರಾಳ ಕೈಗಳನ್ನು ವಿಸ್ತಾರವಾಗಿಯೇ ಚಾಚಿರುತ್ತದೆ.

ಅಸ್ಪೃಶ್ಯತೆಯಿಂದಾಗಿಯೇ ದಲಿತರ ಮೇಲೆ ದೌರ್ಜನ್ಯ ಹಾಗೂ ಶೋಷಣೆಗಳಾಗುತ್ತಿದ್ದರೂ ಜಾತಿಯ ದೌರ್ಜನ್ಯವನ್ನು ತಡೆಗಟ್ಟಲು ವಿಶೇಷ ಕಾನೂನು ನೆರವುಗಳು ಈ ಜನರಿಗೆ ಲಭ್ಯವಿರುದಿಲ್ಲ. ನಾಗರಿಕ ಹಕ್ಕು ಪಾಲನ ಶಾಸನ (Civil Rights Enforment Act) ಅಥವಾ ಇತ್ತೀಚೆಗೆ ಜಾರಿಗೆ ಬಂದ ದೌರ್ಜನ್ಯ ವಿರೋಧ (ಎಸ್. ಸಿ) ಶಾಸನ. ೧೯೮೯ (Prevention of Arocities (S. C) Act, 1989) ಇವುಗಳ ವ್ಯಾಪ್ತಿ ವಿಶಾಲವಾಗಿದ್ದರೂ ಇವು ತಲುಪುವುದು ಮಾತ್ರ ಅಲ್ಪ ಪ್ರಮಾಣದ್ದಾಗಿದೆ. ತಮಗಾಗುತ್ತಿರುವ ಈ ರೀತಿಯ ದೌರ್ಜನ್ಯಕ್ಕೆ ಅಸ್ಪೃಶ್ಯತೆ ಎಂಬ ಮೂಲವೇ ಎಂದು ದಲಿತರು ಮನಗಾಣುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಅವರೇ ಸ್ವಯಂ ವಿಶ್ಲೇಷಿಸಿಕೊಳ್ಳುತ್ತಿದ್ದಾರೆ. ಅವರ ಪ್ರಕಾರ ತಾವು ಅನುಭವಿಸುತ್ತಿರುವ ಈ ಜಾತಿ ದೌಜ್ಜನ್ಯ ಕಷ್ಟ ಕಿರುಕುಳ ಹಿಂಸೆಗಳಿಗೆ ಈ ಕೆಳಗಿನವು ಕಾರಣಗಳೆಂದು ಹೇಳುತ್ತಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ದಲಿತರು ಅನುಭವಿಸುತ್ತಿರುವ ಜಾತಿ ಕಿರುಕುಳಕ್ಕೆ ಎರಡು ಕಾಡಣಗಳನ್ನು ಗುರುತಿಸಲಾಗಿದೆ. ಶೇ. ೬೦ ರಷ್ಟು ದಲಿತರು ‘ಅಸ್ಪೃಶ್ಯತೆಯೇ” ಮೂಲ ಕಾರಣ ವೆಂದು ಹೇಳಿದರೆ, ಮತ್ತೆ ಕೆಲವರು ‘ತಪ್ಪು ಮಾಡಿದಾಗ ಮಾತ್ರ ನಮಗೆ ಕಿರುಕುಳ ನೀಡುತ್ತಾರೆ’ ಎಂದು ಶೇ. ೩೧ರಷ್ಟು ಜನ ಹೇಳಿರುತ್ತಾರೆ. ತಮ್ಮ ಅಸ್ಪೃಶ್ಯ ಮೂಲವೇ ಕಾರಣವೆಂದು ಹಾಸನ, ಮಂಡ್ಯ, ಗದಗ, ಬಿಜಾಪುರ, ಗುಲ್ಬರ್ಗ, ಬೆಳಗಾಂ, ಬೀದರ್, ಚಿತ್ರದುರ್ಗ, ಮೈಸೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳ ಆಯ್ಕೆ ಮಾಡಿದ ಗ್ರಾಮಗಳಲ್ಲಿ ದಲಿತರು ಹೇಳಿದರೆ, ತಮ್ಮ ದುರ್ನಡತೆ ಹಾಗೂ ಆಜ್ಞೆಗಳನ್ನು ಪಾಲಿಸದಿದ್ದರೆ, ತಪ್ಪು ಮಾಡಿದರೆ ಸವರ್ಣೀಯರು ದೌರ್ಜನ್ಯ ಎಸಗುತ್ತಾರೆಂದು ಹೈದರಾಬಾದ್, ಕರ್ನಾಟಕದ ದಲಿತರು ಅಸಹಾಯಕತೆಯಿಂದ ನುಡಿಯುತ್ತಾರೆ. ಇಂತಹ ಗಂಭೀರ ಅಧ್ಯಯನದ ಸಂದರ್ಭದಲ್ಲಿ ಈ ಪ್ರಾದೇಶಿಕ ವ್ಯತ್ಯಾಸ ಗಮನಾರ್ಹವಾದದ್ದು. ಇನ್ನೊಂದು ಮುಖ್ಯವಾದ ವ್ಯತ್ಯಾಸವೆಂದರೆ ಉತ್ತರ ಕರ್ನಾಟಕದಲ್ಲಿ ದಲಿತ ಮಹಿಳೆಯರು ಶೇ. ೭೦ ರಷ್ಟು ‘ಅಸ್ಪೃಶ್ಯ ಮೂಲ’ವೆಂದರೆ, ದಕ್ಷಿಣ ಕರ್ನಾಟಕದಲ್ಲಿ ಮಹಿಳೆಯರು ಶೇ. ೪೦ ರಷ್ಟು ದಲಿತ ಮಹಿಳೆಯರು ಈ ವಾದವನ್ನು ಒಪ್ಪುತ್ತಾರೆ. ತಮ್ಮ ಶೋಷಣೆಗೆ ಮೂಲ ಕಾರಣದ ಅರಿವು ಬಿಟ್ಟರೆ ಹೆಚ್ಚಿನ ದಲಿತ ಮಹಿಳೆಯರಿಗೆ ಪ್ರಸ್ತುತ ಸಂದರ್ಭದ ಸ್ಥಿತಿಗತಿ ಅರಿವು ತಿಳಿದಿರುವುದೇ ಇಲ್ಲ.

ಇಲ್ಲಿ ದಲಿತರು ಹೇಳಿದ ಎರಡು ರೀತಿಯ ಅಸ್ಪೃಶ್ಯತಾ ಆಚರಣೆಯ ಕಾರಣಗಳಲ್ಲಿ ಎರಡನೆಯದಾದ ‘ನಾವು ತಪ್ಪು ಮಾಡಿದರೆ ನಮಗೆ ಕಿರುಕುಳ ಕೊಡುತ್ತಾರೆ’ ಎಂಬುದು ಮಹತ್ವದ ಗಂಭೀರ ವಿಷಯವಾಗಿದೆ. ನಾವು ತಪ್ಪು ಮಾಡಿದರೆ ನಮಗೆ ಕಿರುಕುಳ ಕೊಡುತ್ತಾರೆ. ಈ ಮಾತಿನ ಅರ್ಥವೇನು? ದಲಿತರು ಸವರ್ಣೀಯರಿಗೆ ಮಾಡುವ ‘ತಪ್ಪು’ಗಳಾದರೂ ಏನು? ಸಾಲ ಮರುಪಾವತಿ ಮಾಡುವಲ್ಲಿ ಅನಿವಾರ್ಯವಾಗಿ ವಿಳಂಬವಾಗುವುದು, ಬಿಟ್ಟಿ ಸೇವೆ ಮಾಡಲು ಒಪ್ಪದಿರುವುದು, ಪರಂಪರಾಗತವಾಗಿ ಬಂದಿರುವ ಕೆಲವು ಹೀನ ಕೆಲಸಗಳನ್ನು ಮಾಡಲು ನಿರಾಕರಿಸುವುದು, ಇವೇ ಮೊದಲಾದವು ಅಸ್ಪೃಶ್ಯರು ಮಾಡುವ ತಪ್ಪುಗಳು. ಆ ತಪ್ಪುಗಳು ಸವರ್ಣೀಯರಿಗೆ ಸಿಟ್ಟಿಗೆಬ್ಬಿಸುವ ಸನ್ನಿವೇಶವನ್ನು ತಪ್ಪುಗಳು ಎನ್ನಬಹುದೇ? ಇವು ಶಿಕ್ಷಾರ್ಹವೇ? ಒಂದು ವೇಳೆ ದಲಿತರು ತಪ್ಪು ಮಾಡಿದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಸವರ್ಣೀಯರಿಗೆ ಇದೆಯೇ? ಇವು ಸಾಮಾನ್ಯವಾಗಿ ಹಗಲು ರಾತ್ರಿ ಎನ್ನದೆ ಕ್ಷಣಕ್ಷಣಕ್ಕೂ ಒಬ್ಬ ಪ್ರಜ್ಞಾವಂತ ಪ್ರಜೆಗೆ ಕಾಡಿಸುವ ಪ್ರಶ್ನೆಗಳು. ದಲಿತರ ಬೇಡಿಕೆಯ ಪ್ರಶ್ನೆ ಬಂದಾಗ ಮಾತ್ರ ತೀರಾ ಸಣ್ಣ ಪುಟ್ಟ ಕಾರಣಕ್ಕೂ ದಲಿತೇತರರು ಅವರಿಗೆ ಕಿರುಕುಳವನ್ನು ಕೊಡುತ್ತಾರೆ. ‘ನಾವು ತಪ್ಪು ಮಾಡಿದರೆ ನಮಗೆ ಕಿರುಕುಳ ಕೊಡುತ್ತಾರೆ’ ಎಂದು ದಲಿತರ ನೊಂದ ದನಿಯಲ್ಲಿ ಸವರ್ಣೀಯರು ಮಾಡುತ್ತಿರುವ ಶೋಷಣೆ ಹಾಗೂ ಕೊಡುತ್ತಿರುವ ಕಿರುಕುಳದ ಛಾಯೆ ಅಡಗಿದೆ.

“ಸವರ್ಣೀಯರಿಗೆ ನಮ್ಮ ಮೇಲೆ ಹೊಟ್ಟೆಕಿಚ್ಚು” “ಸವರ್ಣೀಯರು ವಿನಾಕಾರಣ ನಮಗೆ ಕಿರುಕುಳ ಕೊಡುತ್ತಾರೆ” (ದಕ್ಷಿಣ ಕರ್ನಾಟಕದಲ್ಲಿ ದಲಿತರು ಸವರ್ಣೀಯರನ್ನು ಉತ್ತಮರು, ಗೌಡರು ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಮೇಲ್ಜಾತಿಯವರು, ದಣಿಯಾವ್ರು ಎಂದು ಸಂಬೋಧಿಸುತ್ತಾರೆ). ಅವರು ನಮಗ್ಯಾಕೆ ಕಿರುಕುಳ ಕೊಡುತ್ತಾರೆಂಬುದು ಗೊತ್ತಿಲ್ಲ. ಸವರ್ಣೀಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಾರೆ. ಇವೇ ಜನ ನೋವಿನಿಂದ ಹೇಳುವ ಸತ್ಯ ಸಂಗತಿಗಳು. ಈ ಸ್ಥಿತಿಗೆ ಅವರ ಅಸ್ಪೃಶ್ಯತೆಯೇ ಮೂಲ ಕಾರಣವೆಂದು ಸಮಾಜ ಚಿಂತಕರು ಗ್ರಹಿಸಿದ್ದಾರೆ. ಈ ದೃಷ್ಟಿಯಿಂದ ಭಾರತೀಯ ಸಮಾಜದಲ್ಲಿ ದಲಿತರು ಪ್ರಸ್ತುತ ಸಂದರ್ಭದಲ್ಲಿ ಯಾವ ದಿಕ್ಕಿನೆಡೆಗೆ ಚಿಂತನೆ ನಡೆಸುತ್ತಿದ್ದಾರೆ ಹಾಗೂ ಇಂದು ದೇಶವ್ಯಾಪಿ ದಲಿತರಲ್ಲಿ ಕಂಡುಬರುತ್ತಿರುವ ಹಿಂದೂ ಧರ್ಮ ವಿರೋಧಿ ಭಾವನೆಯಿಂದಾಗಿ ದಲಿತರಲ್ಲಿ ಉಂಟಾಗಿರುವ ಮತಾಂತರ ಪ್ರಜ್ಞೆ, ಅದಕ್ಕೆ ಪ್ರಸ್ತುತ ಸಂದರ್ಭದ ಆಯ್ಕೆಗಳನ್ನು ಕುರಿತು ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಏಕೆಂದರೆ ಭಾರತದಲ್ಲಿ ಮತಾಂತರ ಪ್ರಕರಣಗಳು ಧಾರ್ಮಿಕ ನಂಬಿಕೆಗಳ ಮತಾಂತರಗಳಾಗದೆ ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ವಿರುದ್ಧದ ನೇರ ಪ್ರತಿಭಟನೆಗಳಾಗಿವೆ. ಮತಾಂತರಗಳು ಹೆಚ್ಚಾಗಿ ಏಣಿ ಮೆಟ್ಟಿಲಿನ ದೈಹಿಕ ಹಲ್ಲೆಗಳಿಂದ ಪಾರಾಗುವ ಏಕೈಕ ಮಾರ್ಗವಾಗಿ ಮತಾಂತರಗೊಂಡಿರುವುದರಲ್ಲಿ ಗೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಎರಡನೆಯದಾಗಿ ಮತಾಂತರ ಸ್ವಾಭಿಮಾನದ ಸಂಕೇತ ಕೂಡ ಆಗಿರುತ್ತದೆ. ಸಹ ಮಾನವರ ಬಗ್ಗೆ ಕಿಂಚಿತ್ತೂ ಸಹಾನುಭೂತಿ, ಪ್ರೀತಿ ಕರುಣೆಗಳನ್ನು ತೋರುವ ಧರ್ಮದಿಂದ ದೂರವಾಗುವುದೇ ಸರಿಯಾದದ್ದೆಂದು ಭಾವಿಸಿ ಅಸ್ಪೃಶ್ಯರಾದಿಯಾಗಿ ಅನೇಕ ಕೆಳಜಾತಿಗಳು ಗುಂಪುಗಳಾಗಿ ಮತಾಂತರವಾಗುತ್ತಿದ್ದಾರೆ. ಮತಾಂತರಗಳು ಆರ್ಥಿಕ ಸಮಾನತೆಯನ್ನು ತಾರದಿದ್ದರೂ ಮಾನಸಿಕವಾಗಿ ಬಿಡುಗಡೆಯ ಅಸ್ತ್ರಗಳಾಗಿ ಪರಿಣಮಿಸಿದೆ ಎಂದು ಇಂದು ಹೆಚ್ಚಾಗಿ ದಲಿತರು ನಂಬುತ್ತಿದ್ದಾರೆ.

ಮತಾಂತರ ಕುರಿತಂತೆ ಸರ್ಕಾರ ಸಂವಿಧಾನದ ೨೫ನೇ ವಿಧಿಯನ್ವಯ ಪ್ರತಿಯೊಬ್ಬ ನಾಗರಿಕನೊ/ಳೊ ತನಗಿಷ್ಟವಾದ ಧರ್ಮದಲ್ಲಿ ವಿಶ್ವಾಸವಿರಿಸಲು, ಅದನ್ನನುಸರಿಸಿ ಜೀವಿಸಲು, ಪ್ರಚಾರ ಮಾಡಲು ಮೂಲಭೂತ ಅವಕಾಶ ಕಲ್ಪಿಸಿದೆ. ತಾನು ಯಾವ ಧರ್ಮದಲ್ಲಿ ವಿಶ್ವಸವಿಡಬೇಕು, ಯಾವ ಜೀವನ ಕ್ರಮವನ್ನು ಪಾಲಿಸಬೇಕು ಎಂಬುವುದು ಆಯಾ ವ್ಯಕ್ತಿಯ ಸ್ವತಂತ್ರ ಆಯ್ಕೆಗೆ ಬಿಟ್ಟ ವಿಚಾರ ಮತ್ತು ಹಕ್ಕು ಕೂಡ ಆಗಿದೆ. ಅದನ್ನು ಪ್ರಶ್ನಿಸುವ ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಈ ಹಂತದಲ್ಲಿ ಡಾ. ಅಂಬೇಡ್ಕರ್ ಅವರು ಹೇಳಿರುವ ‘ಮನುಷ್ಯನಿಗಾಗಿ ಧರ್ಮವಿದೆ, ಧರ್ಮಕ್ಕೋಸ್ಕರ ಮನಷ್ಯನಿಲ್ಲ’ ಎಂಬ ಮಾತು ಅತ್ಯಂತ ಅರ್ಥಪೂರ್ಣವೆನಿಸಿದೆ.

ಈ ತತ್ವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮನಗಾಣಬೇಕಾಗಿದೆ. ಏಕೆಂದರೆ ಭಾರತೀಯ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆಯ ಆಚರಣೆ ಜಾರಿಯಲ್ಲಿದೆ. ಇದನ್ನು ಸಂವಿಧಾನ ಬಾಹಿರವೆಂದು ಘೋಷಿಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಉಗ್ರವಾದ ಕಾನೂನುಗಳಿದ್ದರೂ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಬಂದಿವೆ. ಸಹಸ್ರಾರು ಮೊಕದ್ದಮೆಗಳು ದಾಖಲಾಗಿದ್ದರೂ ಶಿಕ್ಷೆಗೊಳಪಟ್ಟವರು ಬೆರಳೆಣಿಕೆಯಷ್ಟು ಮಾತ್ರ. ಪರಿಶಿಷ್ಟರಿಗೆ ಮೀಸಲಾತಿಯನ್ನು ಸಂವಿಧಾನ ಬದ್ಧಗೊಳಿಸಿದರೂ ಆಜ್ಞೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಸಾವಿರಾರು ಕೋಟಿ ಹಣವನ್ನು ಈ ದಿಸೆಯಲ್ಲಿ ಖರ್ಚು ಮಾಡುತ್ತಿದ್ದರೂ ನಿಗದಿತ ಪ್ರಮಾಣದಲ್ಲಿ ಈ ಜನಾಂಗದ ಅಭಿವೃದ್ಧಿಯಾಗುತ್ತಿಲ್ಲ. ಇಂದಿಗೂ ಬಡತನದ ರೇಖೆಗಿಂತ ಕಡಿಮೆ ಇರುವುದು ಶೇಕಡಾ ೭೫ ಭಾಗಕ್ಕಿಂತಲೂ ಹೆಚ್ಚು. ಈ ಬಗ್ಗೆ ಗಂಭೀರವಾದ ಈ ರಾಷ್ಟ್ರದ ಅಭಿವೃದ್ಧಿ ಎಂಬ ಪ್ರಜ್ಞೆಯೂ ಚಿಂತಿಸಬೇಕಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತು ವಸಂತಗಳು ಕಳೆದಿವೆ. ಆದರೂ ಈ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ದುಸ್ಥಿತಿಯನ್ನು ಮುಂದುವರಿಸಿದರೆ ಇನ್ನೂ ಒಂದು ಶತಮಾನಗಳಾದರೂ ಏಷ್ಯಾದ ದಲಿತರ ಬದುಕಿನಲ್ಲಿ ಬದಲಾವಣೆಯನ್ನೇನೂ ಕಾಣಲಾಗದು ಎಂದೆನಿಸದೆ ಇರದು.

“ಕ್ಯಾಸ್ಟ್” ಎನ್ನುವುದು ಗೊಂದಲ ಉಂಟುಮಾಡುವ ಪದ. ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ಬೇರೆ ಬೇರೆ ಅರ್ಥ ಕೊಡುವಂತೆ ಉಪಯೋಗಿಸಲಾಗಿದೆ. ಬೇರೆ ಬೇರೆ ಸಾಮಾಜಿಕ ಅಂತಸ್ತುಗಳನ್ನು ಅದು ಸೂಚಿಸುತ್ತದೆ. ಧಾರ್ಮಿಕಾಚರಣೆಗಳನ್ನು ಹೆಚ್ಚು ಕಡಿಮೆ ಸ್ಪಷ್ಟವಾಗಿ ನಿರ್ದಿಷ್ಟಪಡಿಸಿರುವ, ಸಂಪ್ರದಾಯದಿಂದ ಅಂಟಿಕೊಂಡು ಬಂದ ಯಾವುದೇ ಒಂದು ವೃತ್ತಿಯಿರುವ, ಸ್ವಗೋತ್ರ ವಿವಾಹ ಪದ್ಧತಿಯಿರುವ ಒಂದು ಸಮುದಾಯ ಎಂಬ ಅರ್ಥದಲ್ಲಿ ಜಾತಿ ಎಂಬ ಪದವನ್ನು ಬಳಸುವುದು ಸೂಕ್ತವೆಂದು ತೋರುತ್ತದೆ. ಇಲ್ಲಿ ಎರಡು ಎಚ್ಚರಿಕೆಗಳು ಅಗತ್ಯ.

೧. ಮೊದಲ ಮೂರು ವರ್ಣಗಳನ್ನು ಅವುಗಳ ಸಾಮಾನ್ಯ ಲಕ್ಷಣಗಳಿಂದಲೇ ಇಂದಿನ ದಲಿತ ಸಮಾಜವನ್ನು ಪ್ರಶ್ನೆ ಮಾಡುತ್ತದೆ. ವಾಸ್ತವವಾಗಿ ಜಾತಿಗಳು ಅವುಗಳ ಉಪವಿಭಾಗಗಳಾಗಿರುತ್ತವೆ.

೨. ಕೆಲವು ಜಾತಿಗುಚ್ಛಗಳಿಗೆ ಸಮಾನವಾದ ಒಂದು ಹೆಸರಿರುತ್ತದೆ. ಅದರ ಮುಂದೋ, ಹಿಂದೋ, ಒಂದು ಪ್ರತ್ಯಯ ಸೇರಿಸಿ ನಿರ್ದಿಷ್ಟ ಜಾತಿಯನ್ನು ಗುರುತಿಸಲಾಗುತ್ತದೆ.

ಉತ್ತರ ಭಾರತದಲ್ಲಿ ಬ್ರಾಹ್ಮಣರನ್ನು ಹಲವು ಸ್ವಗೋತ್ರ ವಿವಾಹವುಳ್ಳ ಜಾತಿಗಳನ್ನಾಗಿ ವಿಂಗಡಿಸಲಾಗಿದೆ-ಕನ್ಯಾಕುಬ್ಜ, ಸರಯೂಪರೀನ್, ಗೌರ್ ಇತ್ಯಾದಿ. ಮಹಾರಾಷ್ಟ್ರದಲ್ಲಿ ಅವರ ವಿಭಜನೆ ದೇಶಸ್ಥ, ಕೊಂಕಣಸ್ಥ, ಕರ್ಹಾಡೆ ಮತ್ತು ಸಾರಸ್ವತ ಎಂದಿರುತ್ತದೆ. ತಮಿಳುನಾಡಿನಲ್ಲಿ ಎರಡು ಮುಖ್ಯ ವರ್ಗಗಳು-ಅಯ್ಯಂಗಾರ್ ಮತ್ತು ಅಯ್ಯರ್. ಈ ಜಾತಿಗಳಲ್ಲಿ ಇನ್ನೂ ಹಲವು ಶಾಖೆಗಳು ಸ್ವತಂತ್ರವಾಗಿರಬಹುದು. ಅವಕ್ಕೂ ಬಿಡಿಯಾಗಿ ನಿರ್ದಿಷ್ಟ ಲಕ್ಷಣಗಳಿರಬಹುದು. ಇವು ಹಲವು ಬಗೆ. ಉದಾಹರಣೆಗೆ ಕನ್ಯಾಕುಬ್ಜರಿಗೆ ಲಕ್ಷಣಗಳ ಇಪ್ಪತ್ತು ಪಾಯಿಂಟುಗಳ ಮಾನಕದಲ್ಲಿ ಬಿಸ್ವಾ ಪದವಿ ಸೇರಿಸಲಾಗುತ್ತದೆ. ಬಿಸ್ವಾಗಳ ಸಂಖ್ಯೆ ಎಷ್ಟು ಹೆಚ್ಚಾಗಿರುತ್ತದೋ ಆ ತಂಡದ ಸ್ಥಾನಮಾನ ಅಷ್ಟು ಹೆಚ್ಚಿನದಾಗಿರುತ್ತದೆ. ಬಿಸ್ವ ಎಂದರೆ ಇಪ್ಪತ್ತು. ಎಲ್ಲಾ ಇಪ್ಪತ್ತು ತಂಡಗಳು ಅವು ಹೊಂದಿರುವ ಬಿಸ್ವಾಗಳ ಲೆಕ್ಕದ ಪ್ರಕಾರ ವಿಲೋಮ ಕ್ರಮದಲ್ಲಿ ಕೆಳಗಿನ ಸ್ಥಾನಗಳನ್ನು ಪಡೆಯುತ್ತವೆ. ಇಪ್ಪತ್ತೋ, ಹದಿನೆಂಟೋ ಬಿಸ್ವಾಗಳನ್ನು ಹೊಂದಿರುವ ತಂಡಗಳು ಇಂದಿಗೂ ಆ ಸಂಖ್ಯೆಯ ಬಗೆಗೆ ಗರ್ವ ಪಡುವುದೀಗ ಆಶ್ಚರ್ಯದ ಸಂಗತಿ. ಸರಯೂಪರೀನ್ ಬ್ರಾಹ್ಮಣರಲ್ಲಿ ಮತಾಚರಣೆಯ ಪರಿಶುದ್ಧಿಯ ಹಂತಗಳನ್ನನ್ನುಸರಿಸಿ ವಿಭಾಗಗಳಿವೆ. ಅತ್ಯುನ್ನತರಾದವರು ಪಂಕ್ತಿಪಾವನರು. ತಾವು ಅತ್ಯಂತ ಪರಿಶುದ್ಧರು ಎಂದು ಹೇಳಿಕೊಳ್ಳುತ್ತಾರೆ. ಊಟದ ಸಮಯದಲ್ಲಿ ಈ ಗುಂಪಿನವರು ಬೇರೆಯಾಗೇ ಕುಳಿತುಕೊಳ್ಳುತ್ತಾರೆ. ಅವರಿಗಿಂತ ಕಡಿಮೆ ಪರಿಶುದ್ಧಿಯುಳ್ಳವರು ಅವರೂ ಸರಯೂಪರೀನ್ ಆಗಿದ್ದರೂ ಅವರ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡುವಂತಿಲ್ಲ. ಈ ಕಟ್ಟುನಿಟ್ಟಾದ ಆಚರಣೆಗಳನ್ನು ಪಾಲಿಸುವುದು ಕಿರಿಯ ಪೀಳಿಗೆಯವರಿಗೆ ತುಂಬ ಕಷ್ಟವಾಗುತ್ತದೆ. ಆದರೇನು, ಒಂದು ವರ್ಗವು ತಮ್ಮ ಅತ್ಯಂತ ಶ್ರೇಷ್ಠ ಪರಿಶುದ್ಧಿಯ ಬಗೆಗೆ ಮಧುರವಾದ ನೆನಪುಗಳನ್ನು ಹೊಂದಿದೆ. ಮೇಲುವರ್ಗಗಳು ಕೆಳವರ್ಗಗಳೊಡನೆ ವಿವಾಹ ಸಂಬಂಧವನ್ನು ಮಾಡಬಹುದು; ಕೆಳವರ್ಗಗಳಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಡುವುದಿಲ್ಲ; ತಮ್ಮ ಗುಂಪಿನಲ್ಲಿ ಸಮಾನ ನೆಲೆಯುಳ್ಳ ಕುಟುಂಬದ ಹೆಣ್ಣು ಸಿಕ್ಕದೇ ಹೋದ ಸಂದರ್ಭದಲ್ಲಿ ಕೆಳವರ್ಗದಿಂದ ತಂದುಕೊಳ್ಳುತ್ತಾರೆ. ದ್ವಿಜರಲ್ಲದವರಲ್ಲೂ ಹಲವು ನಿರ್ದಿಷ್ಟ ಸ್ವಗೋತ್ರ ವಿವಾಹದ ಸಮುದಾಯ ಶಾಖೆಗಳು ಒಟ್ಟಾಗಿ ಈ ಗುಚ್ಛವಾಗಿದ್ದರೂ ಅವುಗಳಲ್ಲಿ ಸಮಾನವಾದ ಹೆಸರೊಂದಿರುವುದುಂಟು. ಹೊರಗಿನವರ ಕಣ್ಣಿಗೆ ಅದು ಸಮಾನ ಸ್ಥಾನಮಾನವುಳ್ಳ ಒಂದೇ ಘಟಕವಾಗಿರುತ್ತದೆ. ಆದರೆ ಒಳಗೆ ಸ್ವಗೋತ್ರ ವಿವಾಹದ ಕಟ್ಟುನಿಟ್ಟಾದ ಗಡಿರೇಖೆಗಳಿರುತ್ತವೆ. ಅವುಗಳಲ್ಲೇ ಅತಿ ಸೂಕ್ಷ್ಮವಾದ ಸ್ಥಾನಮಾನ ವ್ಯತ್ಯಾಸವಿರುತ್ತದೆ. ದಕ್ಷಿಣ ನೀಲಗಿರಿಯಲ್ಲಿ ಬಡಗ ಎಂಬ ಸಮಾನ ಹೆಸರಿರುವ ಜಾತಿ ಗುಚ್ಛವಿದೆ. ಅದರಲ್ಲಿ ಹಲವು ಸ್ವಗೋತ್ರ ವಿವಾಹದ ಜಾತಿಗಳಿವೆ. ಪ್ರತಿಯೊಂದಕ್ಕೂ ಬೇರೆ ಬೇರೆ ಹೆಸರಿದೆ. ಜಾತಿಗುಚ್ಛದೊಂದಿಗೆ ಹೊಂದಿಸುವ ಸಾಮಾನ್ಯ ಲಕ್ಷಣಗಳು ಕೆಲವಿರುತ್ತವೆ.

ಮಹಾರಾಷ್ಟ್ರದ ಕುಂಬಿಗಳಲ್ಲಿ, ಗುಜರಾತಿನ ಪತಿದಾರ್ ಮತ್ತು ಬಾರಿಯಾರಲ್ಲಿ ಅದನ್ನು ನೋಡಬಹುದು. ಮಧ್ಯಪ್ರದೇಶದ ಛತ್ತೀಸಘರ್ ಪ್ರದೇಶದಲ್ಲಿ ದನಗಾಹಿಗಳು ಮತ್ತು ನೀರು ಹೊರುವ ತಂಡಗಳಿಗೆ ರಾವತ್ ಎಂದು ಹೆಸರು. ಅವರಲ್ಲೇ ಹಲವು ಸ್ವಗೋತ್ರವಿವಾಹ ಜಾತಿಗಳಿವೆ-ಕನೋಜಿಯ, ಝೇರಿಯ, ಕೊಸಾರಿಯ, ಒರಿಯಾ ಮತ್ತು ಇನ್ನೂ ಹಲವು. ಇದೇ ರೀತಿ ಕ್ರೌರಿಕರು, ಅಗಸರು; ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಮೊದಲಾದ ಜಾತಿಗುಚ್ಛಗಳಲ್ಲಿ ಇಂಧವೇ ಸ್ವಗೋತ್ರ ವಿವಾಹ ತಂಡಗಳು ಕಂಡುಬರುತ್ತವೆ. ಈ ಸರಳವಾದ ನಿರೂಪಣೆಯೂ ದಿಕ್ಕುಗೆಡಿಸುವಂತಿದೆ. ಅದು ಹಾಗಿರುವುದು ಅನಿವಾರ್ಯವಾಗಿದೆ. ಏಕೆಂದರೆ ಸಾಮಾಜಿಕ ವಾಸ್ತವತೆ ಅನಂತ ಸಂಕೀರ್ಣತೆಯುಳ್ಳದ್ದು. ಹಲವಾರು ಪ್ರಾದೇಶಿಕ ಸಂದರ್ಭಗಳಲ್ಲಿ ವಿವಿಧ ವರ್ಗಗಳ ಮತ್ತು ವ್ಯವಸ್ಥೆಗಳ ಹೊಂದಾಣಿಕೆ ಪ್ರವೃತ್ತಿಯಲ್ಲಿ ಅಚ್ಚುಕಟ್ಟಾದ ಒಂದು ರಚನೆಯುಳ್ಳ ಮಾದರಿ ಇರುವುದು ಸಾಧ್ಯವಿಲ್ಲ. ಅದರಲ್ಲಿ ವಿವಿಧ ಘಟಕಗಳು ಮತ್ತು ಅಂಗಗಳು ಒಂದು ತರ್ಕಬದ್ಧವಾದ, ಸುಸಂಗತವಾದ ರಚನೆಯಾಗಲು ಸಾಧ್ಯವಿಲ್ಲ. ಹಾಗಾಗಿ ನಾವು ಈ ವ್ಯವಸ್ಥೆಯನ್ನು ಮೂರು ಹಂತಗಳಲ್ಲಿ ಕಲ್ಪಿಸಿಕೊಳ್ಳಬೇಕು. ಮೇಲುತುದಿಯಲ್ಲಿ ಅಧೀಕೃತವಾಗಿ ಮನ್ನಣೆ ಪಡೆದ ನಾಲ್ಕು (ಅಂಗೀಕರಿಸಿಲ್ಲದ ಒಂದು) ವರ್ಣಗಳಿವೆ. ಇವು ಅನುವಂಶಿಕವಾದವು. ಹೆಚ್ಚು ಕಡಿಮೆ ಒಂದೇ ಬಗೆಯ ಆಚರಣೆಗಳುಳ್ಳವು. ಮಧ್ಯದ ಹಂತದಲ್ಲಿ ಜಾತಿಗುಚ್ಛಗಳಿವೆ. ಇವಕ್ಕೆ ಸಮಾನವಾದ ಹೆಸರುಗಳಿದ್ದರೂ, ಸ್ವಗೋತ್ರ ವಿವಾಹ ಪದ್ಧತಿಯಿರುವ ಉಪವಿಭಾಗಗಳಿರುತ್ತವೆ. ಕೆಳಗಿನ ಹಂತದಲ್ಲಿ ಬಿಡಿಜಾತಿಗಳಿರುತ್ತವೆ. ಅವು ವರ್ಗೀಕರಿಸಬಹುದಾದ ಆಚರಣೆಯ ಸ್ಥಾನಮಾನ ನಿರ್ದೇಶಕರಾಗಿರುತ್ತವಲ್ಲದೆ ಸಾಮಾಜಿಕ ರಚನೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತವಾಗಿರುವ ಘಟಕಗಳಾಗಿರುತ್ತವೆ.

ಈಗ ಜಾತಿಯ ಕೆಲವು ಮುಖ್ಯ ಲಕ್ಷಣಗಳನ್ನು ಪರಿಶೀಲಿಸೋಣ.

೧. ಜಾತಿಗಳು ಸ್ವಗೋತ್ರ ವಿವಾಹ ಪದ್ಧತಿಯಿರುವ ಘಟಕಗಳು.

೨. ಅವುಗಳನ್ನು ಸ್ಥಾನಾನುಗುಣವಾಗಿ ಶ್ರೇಣೀಕರಿಸಲಾಗಿದೆ.

೩. ಸಾಮಾನ್ಯವಾಗಿ ಜಾತಿ ಸಂಬಂಧಿಯಾದ ವೃತ್ತಿಯೊಂದಿರುತ್ತದೆ.

೪. ಪರಿಶುದ್ಧಿ ಮತ್ತು ಮಲಿನತೆ ಇವು ವಿಭಿನ್ನ ಘಟಕಗಳ ನಡುವೆ ಸಂಬಂಧವನ್ನು ನಿರ್ಧರಿಸುತ್ತವೆ.

೫. ಒಂದು ಜಾತಿಯ ಸದಸ್ಯರು ಸಾಮಾನ್ಯವಾಗಿ ಒಂದು ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ. ಆಲೋಚನೆ ಮತ್ತು ನಡವಳಿಕೆಗಳಲ್ಲಿ ಸಾಂಪ್ರದಾಯಿಕ ವಿನ್ಯಾಸಗಳನ್ನು ಹೊಂದಿರುವ ಜೀವನ ವಿಧಾನವಿರುತ್ತದೆ. (ನಂಬಿಕೆಗಳು, ಮೌಲ್ಯಗಳು, ನಡವಳಿಕೆಯ ನಿಯಾಮವಳಿ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆ ಮೊದಲಾದುವೆಲ್ಲ ಇದರಲ್ಲಿ ಸೇರುತ್ತವೆ). ಈ ಅಂಶಗಳು ಒಂದು ಪೀಳಿಗೆಯಿಂದ ಇನ್ನೊಂದು ಕೇವಲ ಅನುವಂಶೀಕತೆಯಿಂದಲ್ಲದೆ, ಕಲಿಕೆಯಿಂದ ಹರಿದುಬರುತ್ತವೆ.

೬. ಭಾರತದ ಹಲವು ಭಾಗಗಳಲ್ಲಿ ಜಾತಿಗಳು ಸಾಮಾಜಿಕ ನಿಯಂತ್ರಣ ಮತ್ತು ನ್ಯಾಯ ನಿರ್ಣಯಗಳಿಗೆ ಹಳ್ಳಿಯ ಒಳಗೂ, ಹಲವು ಹಳ್ಳಿಗಳ ನಡುವೆಯೂ ವಿಶಿಷ್ಟ ಕಾರ್ಯ ತಂತ್ರಗಳನ್ನು ಹೊಂದಿರುತ್ತವೆ.

ಈ ಲಕ್ಷಣಗಳನ್ನು ವ್ಯಾಪಕವಾಗಿ ಮತ್ತು ಸ್ಥೂಪವಾಗಿ ಎಲ್ಲ ಕಡೆಗೂ ಅನ್ವಯಿಸಬಹುದು. ಆದರೆ, ಅವುಗಳಲ್ಲಿ ಒಂದೊಂದಕ್ಕೂ ಅಪವಾದಗಳೂ ಇವೆ. ಜಾತಿ ಒಂದು ಸ್ವಗೋತ್ರ ವಿವಾಹದ ಘಟಕವಾದರೂ ಕೆಲವು ಕೆಳಜಾತಿಗಳ್ಲಲಿ ವಿವಾಹ ಸಂಬಂಧವಾಗಿ ತಮ್ಮಲ್ಲಿಗೆ ಬರುವ ಗಂರಸನ್ನೊ, ಹೆಂಗಸನ್ನೋ ತಮ್ಮೊಳಗೆ ಅರಗಿಸಿಕೊಂಡುಬಿಡುತ್ತವೆ. ಇಂತಹ ಸಂಪರ್ಕಗಳಿಂದ ಜನಿಸುವ ಸಂತಾನಗಳನ್ನು ಜಾತಿಯಲ್ಲಿ ಅಂಗೀಕರಿಸಲಾಗುತ್ತದೆ. ಕೆಲವು ಮೇಲುಜಾತಿಗಳಲ್ಲೂ, ಅನ್ಯಗೋತ್ರ ಸಂಬಂಧಗಳನ್ನು ಕೆಲವೊಮ್ಮೆ ಅನುಮತಿಸಿರುವುದುಂಟು. ಒಬ್ಬ ಗಂಡಸು, ತನ್ನದಕ್ಕಿಂತ ಸ್ವಲ್ಪ ಕೆಲಮಟ್ಟದ ಕೆಲವು ಜಾತಿಗಳ ಹೆಣ್ಣನ್ನು ಮದುವೆಯಾಗಬಹುದು. ಅವನ ಸಂತಾನಕ್ಕೆ ಈ ಸಂಕರದ ಕಳಂಕ ತಟ್ಟುವುದಿಲ್ಲ. ಜಾತಿಯ ಪೂರ್ಣ ಸದಸ್ಯತ್ವ ದೊರಕುತ್ತದೆ. ಸ್ಥಾನಾನುಕ್ರಮವು ಒಂದು ಮುಖ್ಯವಾದ ಲಕ್ಷಣವೇ ಸರಿ. ಆದರೆ ಸ್ಥಾನವನ್ನೂ ಅನುಕ್ರಮಣಿಯ ನೆಲೆಯನ್ನೂ ನಿರ್ದೇಶಿಸುವ ಮಾನಕಗಳು ಖಚಿತವಾಗಿಲ್ಲ. ಅವು ಸ್ಪಷ್ಟವಾಗಿ ನಿರೂಪಿತವಾಗಿಲ್ಲ. ಮೂರು ದ್ವಿಜ ಹಂತದ ಜಾತಿಗಳಲ್ಲಿ ಒಂದೊಂದೂ ತನ್ನದೇ ಅತ್ಯುತ್ತಮವಾದ ಸ್ಥಾನ ಎಂದು ಹೇಳಿಕೊಳ್ಳುತ್ತದೆ. ಅದೇ ಹಂತದ ಇತರ ಜಾತಿಗಳು ತಾವೇ ಅತ್ಯುತ್ತಮರೆಂದು ಹೇಳಿಕೊಳ್ಳುವುದನ್ನು ಖಂಡಿಸುತ್ತದೆ. ನಾಲ್ಕನೆಯ ಶೂದ್ರ ಹಂತದಲ್ಲಿ ಗೊಂದಲ ಇನ್ನೂ ಹೆಚ್ಚು. ಹಲವು ಜಾತಿಗಳು ಪೌರಾಣಿಕವಾದ ತಮ್ಮ ಪ್ರಾಚೀನತೆಯನ್ನು ಪುನರ್ ನಿರ್ಮಿಸಲು ಹೆಣಗಾಡುತ್ತವೆ. ಈಗ ತಮಗೆ ದೊರೆತಿರುವುದಕ್ಕಿಂತ ಉತ್ತಮ ತರವಾದ ಸ್ಥಾನವನ್ನು ಪಡೆಯಲು ಶ್ರಮಿಸುತ್ತವೆ. ಅವರಲ್ಲಿ ಯಜ್ಞೋಪವೀತವನ್ನು ಧರಿಸುವ ಹಕ್ಕು ಪಡೆಯಲು ಸ್ವರ್ಧೆ. ಕೆಲವು ಧಾರ್ಮಿಕ ಸಂಸ್ಥೆಗಳೋ, ಅಧಿಕಾರಿಗಳೋ ಪ್ರತಿಫಲವನ್ನು ಪಡೆದು ಈ ಯಜ್ಞೋಪವೀತ ಧಾರಣೆಯ ಹಕ್ಕನ್ನು ಅವರಿಗೆ ನೀಡುತ್ತವೆ. ಜಾತಿಗಳ ಅಸ್ಪೃಶ್ಯ ಹಂತದಲ್ಲಿ ಇನ್ನೂ ಅಸ್ಪೃಶ್ಯತೆಯ ಆಚರಣೆ ರೂಢಿಯಲ್ಲಿದೆ. ಆಂಧ್ರಪ್ರದೇಶದಲ್ಲಿ ಮಾಳರು ತಾವು ಮಾದಿಗರಿಗಿಂತ ಮೇಲು ಎಂದುಕೊಳ್ಳುತ್ತಾರೆ. ಮಹಾರಾಷ್ಟ್ರದ ಮಾಹರ್ ಪಂಗಡದವರು ಧೇಡ್, ಮಂಗ್ ಮತ್ತು ಇತರ ದಲಿತ ವರ್ಗಗಳಿಗಿಂತ ಮೇಲು ಮಟ್ಟದವರೆಂದು ಭಾವಿಸುತ್ತಾರೆ. ಉತ್ತರ ಪ್ರದೇಶದ ಮತ್ತು ಬಿಹಾರಗಳಲ್ಲಿ ಚಮ್ಮಾರರು ಅನುಸೂಚಿತ ಜಾತಿಗಳಲ್ಲಿ ಮೇಲಿನ ಜಾತಿ ಎಂದುಕೊಂಡರೆ ಕರ್ನಾಟಕದಲ್ಲಿ ಹೊಲಿಯರು ಮಾದಿಗರಿಗಿಂತ ಮೇಲು ಎಂದು ಹೇಳಿಕೊಳ್ಳುತ್ತಾರೆ.

ಅನುಕ್ರಮ ಶ್ರೇಣೀ ಮತ್ತು ವೃತ್ತಿ ಲಕ್ಷಣಗಳು ಪರಸ್ಪರ ಸಂಬಂಧಿಸಿವೆ. ಬೇರೆ ಬೇರೆ ವರ್ಣ ಹಂತಗಳಲ್ಲೂ ಒಂದೇ ವರ್ಣ ಹಂತದ ಬೇರೆ ಬೇರೆ ಜಾತಿಗಳಲ್ಲೂ ಅದಕ್ಕಿಂತ ಹೊರಗೂ ಸಾಮಾಜಿಕವಾದ ಮತ್ತು ಆಚರಣೆಗೆ ಸಂಬಂಧಿಸಿದ ಅಂಗೀಕೃತ ಅಂತರಗಳಿವೆ. ಮೂಲಭೂತವಾದ ಮತ್ತು ಇಂತಿಷ್ಟು ಪ್ರಮಾಣದ ಆಚರಣ ಶುದ್ಧಿಯಿದೆಯೆಂದು ಅಂಗೀಕರಿಸಲಾಗುತ್ತದೆ. ಆಕಸ್ಮಿಕವಾಗಿ ವ್ಯಕ್ತಿಯು ಒಂದು ಕುಟುಂಬದಲ್ಲಿ ಹುಟ್ಟುವುದರಿಂದ ಅದು ಅವನಿಗೆ ಬರುತ್ತದೆ. ಸ್ಥೂಲವಾಗಿ ಬೇಕಾದರೆ “ಶುದ್ಧ”ವಾದ ಮತ್ತು “ಉದಾತ್ತ”ವಾದ ವೃತ್ತಿಯು ಜಾತಿಗೆ ಮೇಲುಮಟ್ಟದ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನವನ್ನು ನೀಡುತ್ತದೆ; “ಅಶುದ್ಧವೂ”, “ಮಲಿನವೂ” ಆದ ವೃತ್ತಿಯು ಅದನ್ನು ಕೆಳನೂಕುತ್ತದೆ ಎಂದು ಹೇಳಬಹುದು. ವೇದಾಧ್ಯಯನ, ಅಧ್ಯಾಪನ, ಪುರೋಹಿತ ಕಾರ್ಯಗಳು ಇವೆಲ್ಲ “ಶುದ್ಧ” ಮತ್ತು “ಉದಾತ್ತ”. ಹಾಗಾಗಿ ಅವು ಬ್ರಾಹ್ಮಣನಿಗೆ ಶ್ರೇಣಿಯಲ್ಲಿ ಅತಿ ಉನ್ನತ ಸ್ಥಾನವನ್ನು ಕೊಡುವವು. ತೊಗಲು ಹದ ಮಾಡುವುದು ಅಥವಾ ಕಕ್ಕಸು ತೊಳೆಯುವುದು (ಮಾನವ ಮಲವನ್ನು ಎತ್ತಿ ಹಾಕಿ ಶುಚಿಗೊಳಿಸುವುದೂ ಸೇರಿ) “ಅಶುದ್ಧ” ಮತ್ತು “ಮಲಿನ”; ಆದ್ದರಿಂದ ಈ ವೃತ್ತಿಗಳನ್ನು ನಿರ್ವಹಿಸುವವರದು ಕೆಳಜಾತಿ. ಹೀಗೆ ಶುದ್ಧಿ-ಅಶುದ್ಧಿ, ನಿರ್ಮಲ-ಮಲಿನ ಭಾವನೆಗಳು ಅಂತರ್ಜಾತೀಯ ಹಾಗೂ ಜಾತಿಯೊಳಗಣ ನಡವಳಿಕೆ ಮತ್ತು ಪರಸ್ಪರ ಸಂಬಂಧಗಳ ಮೇಳೆ ಪರಿಣಾಮ ಬೀರುತ್ತವೆ. ಇವು ಹಿಂದೂ ಮನೋವಿಜ್ಞಾನದ ಭಾಗವಾಗಿ ಪರಿಣಮಿಸಿವೆ. ಆದರೆ ಪರಿಸ್ಥಿತಿ ಬದಲಾಗುತ್ತಿದೆ. ಇಂದಿನ ವಾಸ್ತವ ಚಿತ್ರ ಸಂಪ್ರದಾಯದಿಂದ ದೂರ ಸರಿಯುತ್ತಿದೆ.

ಈ ಸಂದರ್ಭದಲ್ಲಿ ಸಾಮಾನ್ಯವಾದ ಇನ್ನೊಂದು ಸೂತ್ರವನ್ನೂ ಹೇಳಿಬಿಡಬಹುದು. ಜಾತಿಯು ಮೇಲುಮಟ್ಟದ್ದಾದಷ್ಟೂ ಅದು ಹೆಚ್ಚು ಜಟಿಲವಾಗುತ್ತಾ ಹೋಗುತ್ತದೆ. ಶುದ್ದಿಯನ್ನು ಕಾಪಾಡಿಕೊಳ್ಳುವ ಹಾಗೂ ಅಶುದ್ಧಿಯನ್ನು ನಿವಾರಿಸುವ ವಿಸ್ತಾರವಾದ ನಿಯಮಾವಳಿ ರೂಪುಗೊಳ್ಳುತ್ತದೆ. ಅಂತರ-ಜಾತಿ ಅಶುದ್ಧಿಯ ಬಗೆಗೆ ಹೇಳುವುದಾದರೆ, ಆಹಾರ ಮತ್ತು ದೈಹಿಕ ಸಂಪರ್ಕದಿಂದ ಅಶುದ್ಧಿ ಉಂಟಾಗುತ್ತದೆ ಎಂಬ ಅಂಶವನ್ನು ಗಮನಕ್ಕೆ ತಂದುಕೊಳ್ಳಬೇಕು. ಈ ಸಂದರ್ಭದಲ್ಲಿ ಎತ್ತುವ ಪ್ರಶ್ನೆಗಳು ಯಾವ ಆಹಾರ? ಯಾರು ಬೇಯಿಸಿದ್ದು? ಯಾವ ಜಾತಿಯವರೊಂದಿಗೆ ಕುಳಿತು ನೀವು ತಿನ್ನುತ್ತೀರಿ ಎಂಬುವು. ಸಾತ್ವಿಕ ಆಹಾರ-ಹಣ್ಣು, ಹಾಲು, ಅನೇಕ ಬಗೆಯ ಗೆಡ್ಡೆಗೆಣಸುಗಳು ಮತ್ತು ಸಾಮಾನ್ಯವಾಗಿ ಶಾಖಾಹಾರ- “ಶುದ್ಧತೆ”ಯ ಶ್ರೇಣಿಯಲ್ಲಿ ಮೊದಲನೆಯ ಸ್ಥಾನ ಪಡೆಯುತ್ತದೆ. ಅತ್ಯಂತ ನೀಚ ಜಾತಿಯ ವ್ಯಕ್ತಿಯು ತಂದುಕೊಟ್ಟ ಹಣ್ಣನ್ನಾದರೂ ಬ್ರಾಹ್ಮಣ ಸೇವಿಸಬಹುದು. ಇದ್ದುದರಲ್ಲಿ ಮೇಲುಜಾತಿಯವನು ಸೇದಿಕೊಟ್ಟ ನೀರಿನಿಂದ ಅದನ್ನು ಚೆನ್ನಾಗಿ ತೊಳೆದು ಸೂಕ್ತವಾಗಿ ಮಡಿಗೊಳಿಸಿದ ಶುಭ್ರವಾದ ವಸ್ತ್ರದಿಂದ ಒರೆಸಿಕೊಟ್ಟರೆ; ಹಾಲು, ಮೊಸರುಗಳದ್ದು ಸ್ವಲ್ಪ ಸಮಸ್ಯೆ. ನೀರಿನೊಂದಿಗೆ ಸುಲಭವಾಗಿ ಬೆರೆತು ಅಶುಚಿಯಾಗುವ ಸಾಧ್ಯತೆ ಇದೆ. ಬಹುತೇಕ ಹಳ್ಳಿಗಳಲ್ಲಿ ಮಡಿವಂತ ಜಾತಿಗಳಿಗೆ ಬೇರೆ ಕುಡಿಯುವ ನೀರಿನ-ಬಾವಿಗಳು, ಅನುಸೂಚಿತ ಜಾತಿಗಳಿಗೇ ಬೇರೆ ಭಾಗಗಳಿರುವುವು. ಊರಿನಲ್ಲಿ ಒಂದೇ ಬಾವಿಯಿದ್ದರೆ ಅದನ್ನು “ಶುದ್ಧ” ಜಾತಿಯವರು ಮಾತ್ರವೇ ಉಪಯೋಗಿಸುತ್ತಾರೆ. ಅನುಸೂಚಿತ ಜಾತಿಗಳವರು ಬಾವಿಯನ್ನು ಮುಟ್ಟಲು ಅವಕಾಶವಿರುವುದಿಲ್ಲ. ಸಾಂಪ್ರದಾಯಿಕವಾಗಿ ನೀರು ಹೊರುವವರು ಎಲ್ಲರೂ ಬಳಸುತ್ತಾರೆ. ಪರಿಶುದ್ಧಿಯ ಅತ್ಯುನ್ನತ ನೆಲೆಯಲ್ಲಿ ಇರುವವರ ಹೊರತಾಗಿ, ತಮ್ಮಷ್ಟೇ “ಶುದ್ಧ” ರಾದವರು ಅದರಲ್ಲೂ ವ್ಯಕ್ತಿಗತವಾಗಿ ಶುಚಿಯಾದವನು ತಂದುಕೊಡುವ ನೀರೇ ಆಗಬೇಕು ಅವರಿಗೆ. ರಾಜಸಿಕ ಮತ್ತು ತಾಮಸಿಕ ಆಹಾರಗಳ ನಡುವೆ ವ್ಯತ್ಯಾಸ ತೋರಿಸುವುದು ಕಷ್ಟ. ಅವುಗಳ ವಿವರಣೆಯಲ್ಲಿ ಪ್ರಾದೇಶಿಕ ಭಿನ್ನತೆಗಳು ಹಲವಿದೆ ಮತ್ತು ಸಂಕೀರ್ಣವಾಗಿವೆ. ಜಿಂಕೆಯ ಮಾಂಸ ರಾಜಸಿಕ ಎಂದು ಭಾವಿಸಲಾಗುತ್ತಿತ್ತು; ಹಾಗೆಯೇ ದ್ರಾಕ್ಷಿ ಮತ್ತು ಇತರ ಕೆಲವು “ಅಶುದ್ಧ” ವಲ್ಲದ ಹಣ್ಣುಗಳ ರಸವೂ ಅಷ್ಟೇ.

ಖಾರವಾದ ಮತ್ತು ಕಟುವಾದ ವಾಸನೆಯುಳ್ಳ ಈರುಳ್ಳಿ, ಬೆಳ್ಳುಳ್ಳಿ ಮೊದಲಾದ ತರಕಾರಿಗಳು ತಾಮಸಿಕ ವೆನಿಸುತ್ತಿದ್ದುವು. ಎಮ್ಮೆ ಮತ್ತು ಹಂದಿಯ ಮಾಂಸವೂ ಅಷ್ಟೆ. ಕಾಡುಹಂದಿ ಮತ್ತು ಕಾಡುಕೋಳಿಗಳು ಸಾಕಿದವುಗಳಿಗಿಂತ ಪರಿಶುದ್ಧಗಳು. ಬ್ರಾಹ್ಮಣ ಮತ್ತು ವೈಶ್ಯ ಜಾತಿಗಳು ಸಾತ್ವಿಕ ಆಹಾರಕ್ಕೆ ಸೀಮಿತಗೊಂಡಿದ್ದುವು. ಇದಕ್ಕೆ ಅಪವಾದವಿರಲಿಲ್ಲವೆಂದಲ್ಲ. ಕಾಶ್ಮೀರೀ ಪಂಡಿತರು, ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ಸಾರಸ್ವತರು, ಬಂಗಾಳ ಮತ್ತು ಒರಿಸ್ಸಾಗಳಲ್ಲಿನ ಬ್ರಾಹ್ಮಣರು ಮೀನನ್ನೂ, ಮಾಂಸವನ್ನೂ ತಿನ್ನುತ್ತಾರೆ. ಕ್ಷತ್ರಿಯರು ರಾಜಸಿಕ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಶೂದ್ರರಿಗೆ ತಾಮಸಿಕ ಆಹಾರವನ್ನು ವಿಧಿಸಲಾಗಿತ್ತು. ಅವರಿಗಿಂತ ಕೆಳಗಿನವರು ನಿಷೇಧಿತ ಆಹಾರವನ್ನು ಸೇವಿಸಬಹುದಾಗಿತ್ತು. “ಮಡಿ” ಜಾತಿಗಳಲ್ಲಿ ಕಚ್ಚಾ ಆಹಾರ ಮತ್ತು ಪಕ್ಕಾ ಆಹಾರಗಳ ನಡುವೆ ಭೇದ ಕಲ್ಪಿಸಲಾಗುತ್ತದೆ. ಮೊದಲನೆಯ ಆಹಾರವನ್ನು ಬೇಯಿಸುವಲ್ಲಿ ನೀರು ಒಂದು ಅಗತ್ಯ ವಸ್ತು; ಎರಡನೆಯ ಬಗೆಯ ಆಹಾರ ಎಣ್ಣೆಯಲ್ಲೋ, ತುಪ್ಪದಲ್ಲೋ, ಕರಿದದ್ದು. ದ್ರವವಸ್ತು ಬೇಕಾಗಿರುವಾಗ (ಉದಾಹರಣೆಗೆ ಗೋಧಿಹಿಟ್ಟನ್ನು ಕಲಸಿ ನಾದ ಬೇಕಾದಾಗ) ನೀರಿಗೆ ಬದಲು ಹಾಲನ್ನು ಬಳಸಬೇಕು. ಖೀರು ಅಥವಾ ಪಾಯಸವು ಪರಿಶುದ್ಧವೆಂದು ಪರಿಗಣಿಸಲಾಗುತ್ತದೆ, ಅಕ್ಕಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಆ ಮೇಲೆ ಹಾಲಿನಲ್ಲಿ ಬೇಯಿಸಿ ತಯಾರಿಸಿದ್ದರೆ, ಕಚ್ಚಾ ಆಹಾರವನ್ನು ತನಗಿಂತ ಮೇಲ್ಪಟ್ಟ ಜಾತಿಯವರು ಮಾತ್ರ ಸೇವಿಸಬಹುದು. ಕೆಲವು ಸಂದರ್ಭಗಳಲ್ಲಿ ತನ್ನದೇ ಸಮಾನ ಸ್ಥಾನವುಳ್ಳ ಜಾತಿಯವರೂ ಸೇವಿಸಬಹುದು. ಪಕ್ಕಾ ಆಹಾರದ ವಿಷಯದಲ್ಲಿ ಇನ್ನೂ ಸ್ವಲ್ಪ ಕೆಳಕ್ಕೆ ಬರಬಹುದು. ಶುಚಿ ಜಾತಿಯವರು ಕ್ಷೌರಿಕ, ಅಗಸ, ಮೇದ, ಮೊದಲಾದ ಅಶುಚಿ ಶೂದ್ರರಿಂದ ಪಕ್ಕಾ ಆಹಾರವನ್ನು ಕೂಡ ತೆಗೆದುಕೊಳ್ಳುವಂತಿಲ್ಲ. ಸಾಂಪ್ರದಾಯಿಕವಾಗಿ ಅಸ್ಪೃಶ್ಯರೆಂದು ಪರಿಗಣಿತರಾಗಿರುವ ಸಮುದಾಯಗಳಿಂದ ನಾಲ್ಕು ವರ್ಣಗಳ ಯಾವ ಜಾತಿಗಳವರೂ ಪಕ್ಕಾ ಆಹಾರವನ್ನೂ ಸ್ವೀಕರಿಸುವುದಿಲ್ಲ.

ಸಹಜೀವನವನ್ನು ಕುರಿತ ನಿಯಮಗಳೂ ಕೂಡ ದಿಕ್ಕುಗೆಡಿಸುವಷ್ಟು ಜಟಿಲವಾಗಿವೆ. ಒಂದೇ ಜಾತಿಯಲ್ಲೇ ಸಹಪಂಕ್ತಿ ಭೋಜನವನ್ನು ನಿಷೇಧಿಸುವ ವಿಭಿನ್ನ ಸ್ತರಗಳಿರಬಹುದು. ಕನ್ಯಾಕುಬ್ಜ ಬ್ರಾಹ್ಮಣರನ್ನು ಕುರಿತ ಒಂದು ಗಾದೆಯೇ ಇದೆ. ತೀನ್‌ಕನೋಜಿಯಾ ತೇರಾ ಚುಲ್ಹೇ-ಮೂವರು ಕಾನ್ಯಕುಬ್ಜ ಬ್ರಾಹ್ಮಣರು ಹದಿಮೂರು ಒಲೆಗಳಲ್ಲಿ ಆಹಾರವನ್ನು ಬೇಯಿಸಿಕೊಳ್ಳುತ್ತಾರೆ ಎಂದು. ಈ ಉಕ್ತಿ ಉತ್ಪ್ರೇಕ್ಷೆಯಿರಬಹುದು. ಆದರೆ ಚಿತ್ರ ಎಷ್ಟು ಗೊಂದಲಮಯವಾಗಿದೆ ಎಂಬುದನ್ನು ಅದು ಸೂಚಿಸುತ್ತದೆ. ಇಲ್ಲಿ ಬರುವ ಮುಖ್ಯ ಪ್ರಶ್ನೆ: ಒಟ್ಟಿಗೆ ಊಟ ಮಾಡಲು ಕುಳಿತಾಗ ಯಾರಿಗೆ ಯಾರು ಮೈಲಿಗೆ ಉಂಟು ಮಾಡುತ್ತಾರೆ? ಪಕ್ಕಾ ಆಹಾರದ ವಿಷಯದಲ್ಲಿ ನಿಷಿದ್ಧ ವರ್ಗಗಳು ಕಡಿಮೆ, ಕಚ್ಚಾ ಆಹಾರದ ವಿಷಯದಲ್ಲಿ ಹೆಚ್ಚು. ಜಾತಿಗಳ ನಡುವೆ ಸಾಮಾಜಿಕ ದೂರವನ್ನು ಇರುವ ಅತ್ಯುತ್ತಮ ಮಾರ್ಗವೆಂದರೆ, ಪೂರ್ವ ನಿದರ್ಶನವನ್ನೂ ವ್ಯವಸ್ಥೆಯನ್ನೂ; ಮದುವೆಯ ಔತಣಗಳಲ್ಲಿ ಬೇರೆ ಬೇರೆಯಾಗಿರುವುದು, ಒಟ್ಟಾಗುವುದು; ಮರಣಾನಂತರ ಹನ್ನೊಂದು ಮತ್ತು ಹದಿಮೂರನೆಯ ದಿನದ ಶೌಚಕ್ರಿಯೆಗಳು, ಪಾಪಕಾರ್ಯ ಅಥವಾ ಗಂಭೀರ ರೂಪಕ ಸಾಮಾಜಿಕ ಅಕೃತ್ಯ ನಡೆಸಿದಾಗ ಅದರ ಶುದ್ಧಿಗಳು ನಡೆಸುವ ಪ್ರಾಯಶ್ಚಿತ್ತ ರೂಪದ ಕ್ರಿಯೆಗಳು ಇವುಗಳನ್ನೂ ಗಮನಿಸುವುದು. ನಿರ್ದಿಷ್ಟ ಸಂದರ್ಭದ ಹಿನ್ನೆಲೆಯಲ್ಲಿ ಅವು ಒಂದು ಜಾತಿಯ ಅನುಕ್ರಮಸ್ಥಾನ ನಿರ್ದೇಶನ ಮಾಡುತ್ತವೆ.