ಡಾ. ಬಾಬಾ ಸಾಹೇಬ ಅಂಬೇಡ್ಕರ್ ೨೦ನೆಯ ಶತಮಾನದ ಮಹಾನ್ ಹೋರಾಟಗಾರರು. ಜೀವನದುದ್ದಕ್ಕೂ ದಮನಕಾರಿ ಹಿಂದೂ ಸಂಸ್ಕೃತಿ, ವ್ಯವಸ್ಥೆ ಮತ್ತು ಸಿದ್ಧಾಂತದ ವಿರುದ್ಧ ಸಮರವನ್ನೇ ಸಾರಿದವರು. ಅವರು ಕ್ರಾಂತಿ ಸಂಕೇತ. ಯಾವ ಹಿಂದೂ ಧರ್ಮವು ದಲಿತರನ್ನು ಶತಮಾನಗಳ ದಾರಿದ್ರ್ಯ, ಶೋಷಣೆ ಮತ್ತು ದಬ್ಬಾಳಿಕೆಗಳಿಗೆ ಒಳಪಡಿಸುತ್ತೋ ಅಂಥವರ ಬಾಳಿನಲ್ಲಿ ಆಶಾಕಿರಣವಾಗಿ ಅವರ ಶಕ್ತಿಯಾಗಿ ಭಾರತದ ಇತಿಹಾಸದಲ್ಲಿ ಧೂಮಕೇತುವಿನಂತೆ ಉದಯಿಸಿ, ಅಸ್ಪೃಶ್ಯರ ಬಾಳಿನ ಅರುಣೋದಯವಾದರು. ಇಂದು ಅಂಬೇಡ್ಕರ್ ಅವರ ಹೆಸರು ಶೋಷಕರ ಎದೆಯಲ್ಲಿ ಬಾಂಬ್ ಸಿಡಿಸಿದಂತೆ ಹಾಗೂ ದೀನ ದಲಿತರ ಮನದಲ್ಲಿ ಕರುಣೆ ಹಾಗೂ ಮಾನವೀಯತೆಯ ಬುಗ್ಗೆಯೊಡೆದಂತೆ ಕಂಡುಬಂದಿದೆ.

ಅಂಬೇಡ್ಕರ್ ಕೋಪ ಕೇವಲ ವೈಯಕ್ತಿಕವಾಗಿರಲಿಲ್ಲ. ಮೂಲಭೂತವಾದಿ ಹಿಂದೂ ಧರ್ಮವು ಇಡೀ ದಲಿತ ಜನಾಂಗಕ್ಕೆ ಎಸಗಿದ್ದ ಘೋಷ ಅನ್ಯಾಯ ಮತ್ತು ಬರ್ಬರ ಅತ್ಯಾಚಾರದ ವಿರುದ್ಧ ಎಸಗಿದ ಬಂಡಾಯದ ಪ್ರತಿಭಟನೆಯಾಗಿತ್ತು. ಸಮಾನತೆ ಮತ್ತು ಭಾತೃತ್ವವನ್ನು ಅಸಮಾನತೆಯ ನಾಡಿನಲ್ಲಿ ಹುಟ್ಟು ಹಾಕುವುದು, ದಲಿತ ಮತ್ತು ಹಿಂದುಳಿದವರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಹಕ್ಕನ್ನು ಕಲ್ಪಿಸಿಕೊಟ್ಟ ಅವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಅವರ ಹೋರಾಟದ ಮೂಲ ಆಶಯವಾಗಿತ್ತು.

ಮನುಷ್ಯ ಮನುಷ್ಯರಲ್ಲಿನ ಅಮಾನವೀಯ ವರ್ತನೆ ಮತ್ತು ಬಲಿಷ್ಟರು ಅಬಲರನ್ನು ಶೋಷಿಸುವುದನ್ನು ಅವರು ತೀವ್ರವಾಗಿ ಖಂಡಿಸಿದ್ದರು. ಈ ಕೆಟ್ಟ ಪರಂಪರೆಯ ನಾಶಕ್ಕಾಗಿ ಜೀವನದುದ್ದಕ್ಕೂ ದೊಡ್ಡ ಹೋರಾಟವನ್ನೇ ಮಾಡಿದರು. ದಲಿತೋದ್ಧಾರಕ್ಕೆ ಅವರು ತಮ್ಮನ್ನು ಹಚ್ಚಿಕೊಂಡಿದ್ದ ರೀತಿ ಮನಸ್ಸಿಗೆ ನಾಟುವಂತಾದ್ದು. ಮುಂಬಯಿ ವಿಧಾನಸಭೆಯಲ್ಲೊಮ್ಮೆ ಮಾತನಾಡುತ್ತಾ ಅವರು ತಮ್ಮ ಸಮರ್ಪಣೆಯನ್ನು ಈ ಮಾತಿನಲ್ಲಿ ವಿವರಿಸಿದ್ದರು. “ನನ್ನ ಸ್ವಂತ ಹಿತಾಸಕ್ತಿ ಮತ್ತು ರಾಷ್ಟ್ರದ ಹಿತಾಸಕ್ತಿ ಮತ್ತು ಹಿಂದುಳಿದ ಹಿತಾಸಕ್ತಿಗೆ ಧಕ್ಕೆಯಾದಾಗ ನಾನು ಹಿಂದುಳಿದವರ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತೇನೆ”. ಒಂದು ರಾಷ್ಟ್ರದ ಏಳಿಗೆ ಅಲ್ಲಿನ ಹಿಂದುಳಿದವರ ಏಳಿಗೆಯಲ್ಲಿ ಅಡಗಿದೆ ಎಂಬುದು ಅವರ ಗಾಢ ನಂಬಿಕೆಯಾಗಿತ್ತೆಂಬುದು ಇದರಿಂದ ನಾವು ಅರಿಯಬಹುದು.

ಒಬ್ಬ ಗುಲಾಮನಿಗೆ ನೀನು ಗುಲಾಮ ಎಂದು ಪದೇ ಪದೇ ಎಂದರೆ ಅವನಿಗೆ ಅದರ ಅರ್ಥ ತಿಳಿಯುತ್ತದೆ.

ಎನ್ನುವ ಗ್ರೀಕ್ ಇತಿಹಾಸಜ್ಞ ಥೋಸಿಡೇಸ್ ಅವರ ಮಾತನ್ನು ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಸ್ಮರಿಸಿಕೊಂಡರು. ಸಾವಿರಾರು ವರ್ಷಗಳ ಕಾಲ ಮಲಗಿದ ಜನಾಂಗವನ್ನು ಬಡಿದೆಬ್ಬಿಸುವ ಸಲುವಾಗಿ ಅವರು ಹಮ್ಮಿಕೊಂಡಿದ್ದ ಶಿಕ್ಷಣ-ಸಂಘಟನೆ-ಹೋರಾಟ ಎಂಬ ಸಮಾಜಮುಖಿ ತತ್ವವನ್ನು ಜಾರಿಗೊಳಿಸಲು ದಲಿತರಿಗೆ ಸ್ಫೂರ್ತಿಯ ಸೆಲೆಯಾದರು.

My heart breaks to see the pitiable sight of your faces and to hear your sad voices, you have been growing from time immemorial and yet you are not ashamed to hug your helplessness as an inevitability. Why did you not perish in the prenatal stage instead? Why do you worsen and sadden the picture of the sorrows, poverty, slavery and burdens of the world with your deplorable, despicable and detestable miserable life? You had better die and relieve this world if you can not rise to a new life and if you can not rejuvenate yourselves…… if you believe in self-help, which is the best help.

ನಿಮ್ಮ ಈ ದಮನೀಯವಾದ, ಧಾರುಣವಾದ ಪರಿಸ್ಥಿತಿಗಳನ್ನು ನಿಮ್ಮಿಂದ ಸುಧಾರಿಸಿಕೊಳ್ಳಲಾದಿದ್ದರೆ ನಿಮ್ಮ ಈ ಜಗತ್ತಿನಲ್ಲಿ ಬದುಕಿರುವುದಕ್ಕಿಂತ ಸಾಯುವುದೇ ಸರಿ ಎಂದು ಹೇಳಿದ ಡಾ. ಅಂಬೇಡ್ಕರ್ ತನ್ನ ಜನಾಂಗದ ಬಿಡುಗಡೆಯೇ ಎಲ್ಲಕ್ಕಿಂತ ಮುಖ್ಯವೆಂದು ತನ್ನ ಜೀವನದ ಕಡೆಗಳಿಗೆಯವರಿಗೆ ಹೋರಾಡಿದರು.

ಅಂಬೇಡ್ಕರ್ ಚಿಂತನೆಯ ಯಶಸ್ಸಿರುವುದು ಅದರ ವಾಸ್ತವಿಕ ಮನೋಧರ್ಮದಲ್ಲಿ ಅವರ ಚಿಂತನೆಯು ಎಷ್ಟು ವಿಶಾಲವಾಗಿತ್ತೆಂದರೆ ಅದು ವರ್ತಮಾನಕ್ಕೆ ಸಲ್ಲುವ ಮತ್ತು ಭವಿಷ್ಯವನ್ನು ರೂಪಿಸುವ ಚೈತನ್ಯವನ್ನು ಪಡೆದುಕೊಂಡಿತ್ತು. ಆದ್ದರಿಂದಲೇ ಜಾತಿಯ ಪ್ರಶ್ನೆ ಅವರ ಚಿಂತನೆಯ ಬಹುಭಾಗವನ್ನು ಆಕ್ರಮಿಸಿದೆ. ಒಂದೊಂದಾಗಿ ಹಿಂದೂ ಧರ್ಮದ ಅಮಾನವೀಯ ಸಂಗತಿಗಳನ್ನು ನಾಶಗೊಳಿಸಿದವು ಮತ್ತು ದಲಿತರ ಆತ್ಮಗೌರವವನ್ನು ಕಾಪಾಡುವ ಕ್ರಿಯಾತ್ಮಕ ಯೋಜನೆಯನ್ನು ಅಂಬೇಡ್ಕರ್ ರೂಪಿಸಿಕೊಂಡರು. ಅಲ್ಲದೇ ಅವರು ಬೌದ್ಧ ಧರ್ಮವನ್ನು ಒಪ್ಪಿಕೊಂಡಿದ್ದು ಕೂಡ ಅವರ ಪ್ರಾಯೋಗಿಕ ಮತ ಧರ್ಮವನ್ನು ಸೂಚಿಸುತ್ತದೆ. ಕನ್ನಡದ ಖ್ಯಾತ ಚಿಂತಕರಾಗಿದ್ದ ಡಿ. ಆರ್. ನಾಗರಾಜ್ ಅವರು ಹೇಳಿರುವ ಮಾತುಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಂಬೇಡ್ಕರ್ ರಿಗೆ ಬೌದ್ಧ ಧರ್ಮ ಎನ್ನುವುದು ತಮ್ಮ ಹೋರಾಟಕ್ಕೆ ಸಿಕ್ಕಿದ್ದ ಚಾರಿತ್ರಿಕ ಸಮರ್ಥನೆ, ಚಾರಿತ್ರಿಕವಾದ ನೀತಿಯೊಂದನ್ನು ವರ್ತಮಾನಕ್ಕೆ ತಲುಪುವ ಮೂಲಕ ತಮ್ಮ ಹೋರಾಟಕ್ಕೆ ಹೆಚ್ಚು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುವ ಮಹಾನ್ ಪ್ರಯತ್ನದ ಭಾಗ ಅದು. ಈಗ ನಡೆಯುತ್ತಿರುವ ದಲಿತ ಮತ್ತು ಹಿಂದುಳಿದ ಚಳವಳಿಗಳು ಅಂಬೇಡ್ಕರ್ ಚಿಂತನೆಯ ಫಲವಾಗಿದೆ. ಅಂಬೇಡ್ಕರ್ ತಮ್ಮ ಕೊನೆಗಾಲದಲ್ಲಿ ಬೌದ್ಧ ಧರ್ಮದ ಪರವಾದ ನಿಲುಗಳನ್ನು ಏಕೆ ತಳೆದಿದ್ದರು ಎಂಬುದನ್ನು ಅವಲೋಕಿಸಿ, ಬೌದ್ಧ ಧರ್ಮದ ಮಾನವೀಯ ಅಂಶಗಳನ್ನು ಗಂಭೀರವಾಗಿ ಅರ್ಥಯಿಸುವ ಜರೂರು ಇದೆ. ಇಂದು ದಲಿತರು ತಮ್ಮ ಹೋರಾಟದಲ್ಲಿ ಬಸವಣ್ಣನವರ ಹೋರಾಟದ ಕೆಚ್ಚನ್ನು, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ತಮ್ಮ ಚಳವಳಿಯ ಜೀವಸತ್ವವನ್ನಾಗಿ ಸ್ವೀಕರಿಸಬೇಕಾದ ಅಗತ್ಯವಿದೆ ಎಂದೆನಿಸುತ್ತದೆ.

ವಿಚಿತ್ರವೆಂಬದರೆ ಅಂಬೇಡ್ಕರ್ ಅವರನ್ನು ಕೇವಲ ದಲಿತರು ನಾಯಕರೆಂದು ಪ್ರತಿಬಿಂಬಿಸುವುದು ಚಾರಿತ್ರಿಕ ತಪ್ಪುಗಳಾಗುತ್ತಿವೆ. ಅಂಬೇಡ್ಕರ್ ದಲಿತರು ಹಿಂದುಳಿದವರು ಮಹಿಳೆಯರು ಅಲ್ಪಸಂಖ್ಯಾತರು ಒಟ್ಟಾರೆ ದಮನಿತರ ಪರವಾಗಿ ದನಿ ಎತ್ತಿದ ಚಿಂತಕರು. ಅವರು ರೂಪಿಸಿದ ಸಂವಿಧಾನವನ್ನು ಗಮನಿಸಿದರೆ, ಅವರ ಕಾಳಜಿಗಳು ಎಷ್ಟು ಜೀವಪರವಾಗಿದ್ದವು ಎನ್ನುವುದು ತಿಳಿಯುತ್ತದೆ. ಅಕ್ಷರ, ಅಧಿಕಾರ, ಆತ್ಮಾಭಿಮಾನ ಅವರ ಚಿಂತನೆಯ ಮೂರು ಮುಖ್ಯ ಕೇಂದ್ರಗಳಾಗಿದ್ದವು. ಇವು ಯಾವುದೇ ಒಂದು ವರ್ಗಕ್ಕೆ ದಕ್ಕಬೇಕು ಎಂಬುವುದಕ್ಕಿಂತ ಭಾರತದ ಎಲ್ಲಾ ತಳಸಮುದಾಯಗಳಿಗೂ ಒದಗಬೇಕೆಂದು ಅವರ ಹಂಬಲವಾಗಿತ್ತು. ಅವರು ಕೇಳಿದ್ದು ಅಂಚಿನ ಸಮುದಾಯದ ಆತ್ಮಗೌರವ. ಆ ಆತ್ಮಗೌರವದಲ್ಲಿಯೇ ಭಾರತದ ಆತ್ಮಗೌರವ ಅಡಗಿದೆ ಎಂದು ಅವರು ಬಲವಾಗಿ ನಂಬಿದ್ದರು. ಅಂಬೇಡ್ಕರ್ ಈ ದೇಶದ ಎಲ್ಲಾ ಶೋಷಿತರ ನಾಯಕರಾಗಿದ್ದರು. ಎಲ್ಲಾ ಶೋಷಿತ ಜನಾಂಗಗಳನ್ನು ಒಂದು ಕಡೆ ಸೇರಿಸಿ, ಬಲಿಷ್ಠ ರಾಜಕೀಯ ಪಕ್ಷ ಕಟ್ಟಿ ಈ ಜನರು ಆಳುವುದನ್ನು ನೋಡಬೇಕೆಂಬುದು ಅವರ ಆಸೆಯಾಗಿದ್ದಿತು. ಅವರು ಕಟಟಿದ “ಇಂಡಿಪೆಂಡೆಂಟ್‌ ಲೇಬರ್ ಪಾರ್ಟಿ” ಇದಕ್ಕೊಂದು ನಿದರ್ಶನ. ಆರ್ಥಿಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ದೀನ ದಲಿತರಿಗೆ ವಿಶೇಷ ಸವಲತ್ತು. ಆದರೆ ಎಂದಿಗೂ ಅಸಮಾನತೆ ಹೋಗದಂತೆ ಯೋಜನೆ ಜಾರಿಗೊಳಿಸುವ ಸರ್ಕಾರಗಳು ಅಂಬೇಡ್ಕರ್ ಆಶೋತ್ತರಗಳನ್ನು ಮತ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಜಾತಿ ಮತದ ವಿರುದ್ಧ ಸಮರ ಸಾರಿದ ಅಂಬೇಡ್ಕರ್ ಮತ್ತೊಂದು ರೀತಿಯಲ್ಲಿ ಮತ ರಾಜಕೀಯಕ್ಕೆ ಸ್ವಾರ್ಥ ರಾಜಕಾರಣಕ್ಕೆ ದಾಳವಾಗುತ್ತಿರುವುದು ಇಂದಿನ ಮಹಾನ್ ವ್ಯಂಗಗಳಲ್ಲಿ ಒಂದಾಗಿದೆ.

ದಲಿತರು ಮತ್ತು ಧರ್ಮ

ಎಲ್ಲಿಯವರೆಗೆ ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಸಮಾನತೆಗಳಿರುವುದಿಲ್ಲವೋ ಅಲ್ಲಿಯ ತನಕರ ಜಕೀಯ ಸ್ಥಿರತೆ ಇರುವುದಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಸಮಾನತೆ ಉಂಟಾಗದೇ ಹೋದರೆ ವಿಪ್ಲವವಾಗುವುದು ಖಂಡಿತ ಎಂದಿರುವ ಅಂಬೇಡ್ಕರ್ ಅವರ ಮಾತು ಭಾರತಕ್ಕೆ ಇಂದಿಗೂ ಅನ್ವಯವಾಗುತ್ತದೆ. ಸಾಮಾಜಿಕ ಸಾಮರಸ್ಯ ಮಾತ್ರ ಭಾರತದ ರಾಜಕೀಯ ಸ್ವಾಯತ್ತತೆಗೆ, ಅಖಂಡತೆಗೆ ಹಾಗೂ ಆರ್ಥಿಕ ಪ್ರಗತಿಗೆ, ಸರ್ವಾಂಗೀಣ ಅಭ್ಯುದಯಕ್ಕೆ ದೃಢವಾದ ಅಸ್ತಿಭಾರವನ್ನು ಒದಗಿಸಬಲ್ಲದು ಎಂದು ಅವರು ಬಲವಾಗಿ ನಂಬಿದ್ದರು. ಸಮಾಜದ ಸಮಗ್ರ ಉನ್ನತಿಗೆ ಭಾರತದ ಜನಸಮಖ್ಯೆಯ ಐದರಲ್ಲೊಂದು ಭಾಗದಷ್ಟಿರುವ, ಹಿಂದಿನಿಂದ ಅಸ್ಪೃಶ್ಯರೆಂದು ಪರಿಗಣಿತರಾಗಿರುವ ಕೆಳವರ್ಗದವರಿಗೆ ವಿಶಾಲ ಸ್ಥಾನಮಾನ ದೊರೆತು ಅವರು ಶಿಕ್ಷಣ, ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುವ ಅವಶ್ಯಕತೆಗಳನ್ನು ಒತ್ತಿ ಹೇಳಿದರು. ತನ್ನ ಯಾವುದೇ ಮೂಲಭೂತ ಹಕ್ಕುಗಳನ್ನು ಕುರಿತು ಯೋಚಿಸುವಾಗ ಪ್ರತಿಯೊಬ್ಬ ಭಾರತೀಯನೂ ಅಂಬೇಡ್ಕರ್ ಅವರ ಹೆಸರನ್ನು ಕೃತಜ್ಞತೆಯಿಂದ ನೆನೆಯಬೇಕು.

ಇಂದು ಆಚರಣೆಯಲ್ಲಿರುವ ಹಿಂದೂ ಧರ್ಮದಲ್ಲಿ ದೇವರೂ ಇಲ್ಲ, ನೈತಿಕತೆಯೂ ಇಲ್ಲ. ಜನರ ಮನಸ್ಸು ಅತ್ಯಂತ ಹದಗೆಟ್ಟಿರುವ ಸ್ಥಿತಿ ಇದು. ಈ ಸ್ಥಿತಿಯನ್ನು ಹೋಗಲಾಡಿಸಿ ಧರ್ಮದ ಶುದ್ಧ ಉದಾತ್ತ ರೂಪವನ್ನು ಪುನಃ ಸ್ಥಾಪಿಸುವುದು ಮುಂದಿನ ಪೀಳಿಗೆಯ ಕೆಲಸ ಎಂದು ಹಿಂದೂ ಧರ್ಮದ ಬಗೆಗೆ ಚಿಂತನೆ ನಡೆಸಿದ ಅವರು ೧೯೩೩ರ ಫೆಬ್ರವರಿ ೧೨ರಂದು ಗಾಂಧೀಜಿಯವರಿಗೆ ಹೀಗೆ ಪತ್ರ ಬರೆದರು. ಸಾಮಾಜಿಕ ಸಮಾನತೆಯನ್ನು ಅಂಗೀಕರಿಸಿದ್ದಲ್ಲಿ ಮಾತ್ರ ಹಿಂದೂ ಧರ್ಮವನ್ನು ಅಸ್ಪೃಶ್ಯಜಾತಿಯವರು ಒಪ್ಪುತ್ತಾರೆ. ಇದು ಅಸಾಧ್ಯವಾದಲ್ಲಿ ದೇವಾಲಯ ಪ್ರವೇಶದ ಮಾತಿರಲಿ, ಹಿಂದೂ ಧರ್ಮವನ್ನೇ ತಿರಸ್ಕಾರಿಸಬೇಕಾಗುತ್ತದೆ ಎಂದರು. ಅಂದು ಅಂಬೇಡ್ಕರ್ ರು ಹೇಳಿದ್ದು ಇಂದು ಸತ್ಯವಾಗುತ್ತಿದೆ. ನಮ್ಮಲ್ಲಿ ಸಾಮಾಜಿಕ ಅಸಮಾನತೆ ಹಾಗೂ ಜಾತಿ ವ್ಯವಸ್ಥೆ ಮುಂದುವರೆದಿದ್ದು, ಇದನ್ನು ಸಹಿಸದ ಅನೇಕರು ದೇಶೀಯ ಧರ್ಮವಾಗಿರುವ ಬೌದ್ಧಧರ್ಮ, ವಿದೇಶಿಯರು ಕ್ರೈಸ್ತ ಧರ್ಮಗಳನ್ನು ಸ್ವೀಕರಿಸುತ್ತಿರುವುದು ಇಂದಿನ ಕಟುಸತ್ಯ.

ಅಂಬೇಡ್ಕರ್ ಅವರ ಪ್ರತಿಭಟನಾತ್ಮಕ ಹೋರಾಟಕ್ಕೆ ಪ್ರೇರಕ ಶಕ್ತಿ ಅಸ್ಪೃಶ್ಯತೆ ಮತ್ತು ಅಸಮಾನತೆಯ ನೀತಿಗಳು. ಶೋಷಣೆ, ಇವುಗಳಿಗೆ ಆಶ್ರಯ ಹಿಂದೂ ಧರ್ಮ, ವರ್ಣ ವ್ಯವಸ್ಥೆ, ಜಾತಿ, ತಾರತಮ್ಯ ಇವುಗಳೆಲ್ಲವನ್ನೂ ಭಾರತದ ಸಮಾಜವನ್ನು, ಚರಿತ್ರೆಯನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸೈದ್ಧಾಂತಿಕವಾಗಿ ವಿವರಿಸಿದ ಕೆಲವೇ ಕೆಲವು ಸಮಾಜಶಾಸ್ತ್ರಜ್ಞರಲ್ಲಿ ಅಂಬೇಡ್ಕರ್ ಅಗ್ರ ಗಣ್ಯರು. ಅಷ್ಟೇ ಅಲ್ಲ ಧರ್ಮ ಮೀಮಾಂಸಕರಾಗಿ, ರಾಜಕಾರಣಿಯಾಗಿ, ಕಾನೂನು ತಜ್ಞರಾಗಿ, ಚಿಂತಕರಾಗಿ ಈ ರಾಷ್ಟ್ರಕ್ಕೆ ಕಾಣಿಕೆ ಸಲ್ಲಿಸಿದ್ದಾರೆ.

ಅಂಬೇಡ್ಕರ್ ಅವರ ಹಲವು ಸಂಘಟನೆಗಳಲ್ಲಿ, ನಮ್ಮೆದುರಿಗಿರುವ ಅವರ ಬರಹಗಳಲ್ಲಿ ಈ ದೇಶದ ಶೋಷಿತರ ದುಃಖ ದುಮ್ಮಾನಗಳು ಮತ್ತು ಅವುಗಳಿಗೆ ತಕ್ಕುದಾದ ಪರಿಹಾರೋಪಾಯಗಳೇ ತುಂಬಿಕೊಂಡಿವೆ. ತಮ್ಮ ಜೀವಮಾನವಿಡೀ ಅಂಬೇಡ್ಕರ್ ಈ ದೇಶದ ಅಸಹಾಯಕರ, ಶೋಷಿತರ ಕುರಿತು ಚಿಂತಿಸಿದ್ದಾರೆ. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಅವರ ಇಡೀ ಬದುಕೇ ಹೋರಾಟ ಮಯವಾಗಿತ್ತು ಎಂದು ಅವರ ಬರಹಗಳಲ್ಲಿ ಅರಿಯಬಹುದಾಗಿದೆ. ಅವರ ಇಡೀ ಚಿಂತನೆಯಲ್ಲಿ ಹುಟ್ಟಿನ ಕಾರಣದಿಂದ ಎಲ್ಲ ಬಗೆಯ ಹಕ್ಕು ಅಧಿಕಾರಗಳಿಂದ ವಂಚಿತರಾಗಿರುವ ಸಮುದಾಯಗಳ ಕುರಿತು ತೀವ್ರ ಕಾಳಜಿ ವ್ಯಕ್ತವಾಗಿದೆ. ಭಾರತದ ಸಮಾಜ ಶತಮಾನಗಳಿಂದ ಸಾಕಿಕೊಂಡು ಹಾಗೂ ಆಚರಿಸಿಕೊಂಡು ಬಂದ ಹಿಂಸೆ ಮತ್ತು ಅಮಾನವೀಯ ಕ್ರೌರ್ಯಗಳ ಕುರಿತು ಉಗ್ರ ಆಕ್ರೋಶ ಮಡುಗಟ್ಟಿದೆ. ಸ್ವತಃ ಅಸ್ಪೃಶ್ಯರಾಗಿದ್ದ ಕಾರಣಕ್ಕೋ ಅಥವಾ ತಮ್ಮ ಸಮಕಾಲೀನ ಬದುಕನ್ನು ಗ್ರಹಿಸುವ ಸೂಕ್ಷ್ಮಜ್ಞನಾಗಿದ್ದಕ್ಕೋ ಏನೋ ಅಂಬೇಡ್ಕರ್ ಮಡುಗಟ್ಟಿದ ಅಸಹಾಯಕ ಪ್ರತಿರೋಧಗಳ ಸಾಕ್ಷಿ ಪ್ರಜ್ಞೆಯಂತೆ ಕಂಡುಬರುತ್ತಾರೆ. ತಣ್ಣಗಿನ ಕ್ರೌರ್ಯವನ್ನು ಇಡಿಯಾಗಿ ಧ್ವಂಸ ಮಾಡಿಬಿಡುವ ಜ್ವಾಲಾಮುಖಿಯಂತೆ ಅಂಬೇಡ್ಕರ್ ಗೋಚರಿಸುತ್ತಾರೆ. ಹಿಂದೂ ಧರ್ಮದ ಚಾರಿತ್ರಿಕ ಕ್ರೌರ್ಯವನ್ನು ತಕ್ಕ ಪುರಾವೆಗಳ ಮೂಲಕ ನಮ್ಮೆದುರಿಗಿಡುತ್ತಾರೆ. ಅವರ ಇಡೀ ಬರಹಗಳಲ್ಲಿ ಅವರು ಹಿಂದೂ ಧರ್ಮ ಕುರಿತು ಎತ್ತುವ ಪ್ರಶ್ನೆಗಳಿಗೆ ಪ್ರಾಯಶಃ ಯಾವ ಹಿಂದೂ ಮತಾವಲಂಬಿಯೂ ಉತ್ತರಿಸಲಾರ. ಶೋಷಕ ವರ್ಷ, ಶೋಷಣೆಗೆ ಒಳಗಾದ ವರ್ಗವನ್ನು ಸೈದ್ಧಾಂತಿಕವಾಗಿ ವಿವರಿಸಿದವರು.

ಧರ್ಮವೆನ್ನುವುದು ಅಲೌಕಿಕ ಆಚರಣೆಗಳ, ಅರ್ಥವಾಗದ ಶ್ಲೋಕ ನುಡಿಗಟ್ಟುಗಳಿಂದ ಕೂಡಿದ, ಶೂನ್ಯಕ್ಕೆ ಸಂಬಂಧಿಸಿದ ವಿಷಯವಲ್ಲ. ಧರ್ಮ ಮನುಷ್ಯನಿಗೆ ಸಂಬಂಧಿಸಿದ್ದು. ಅದು ಮನುಷ್ಯನ ಕಲ್ಯಾಣಕ್ಕೆ ಮತ್ತು ಮಾನವತೆಯ ನಿರ್ಮಾಣಕ್ಕೆ ಸಂಬಂಧಿಸಿದ್ದು ಎಂಬುದು ಅಂಬೇಡ್ಕರ್ ವಾದದ ಬಹಳ ಮುಖ್ಯ ತಿರುಳುಗಳಲ್ಲೊಂದು. ಅದಕ್ಕೆ ಅಂಬೇಡ್ಕರ್

ಧರ್ಮವನ್ನು ಸ್ವೀಕರಿಸಿ ಬದುಕುವ ವ್ಯಕ್ತಿಗೆ ಧರ್ಮದಿಂದ ಸಮಾಜಕ್ಕೆ ಎಷ್ಟರ ಮಟ್ಟಿಗೆ ಕಲ್ಯಾಣ ಸಾಧನೆಯಾಗಿದೆ ಎಂದು ಪ್ರಶ್ನಿಸುವ ಹಕ್ಕು ಇರಬೇಕಾದದ್ದು ಅಗತ್ಯ ಎನ್ನುತ್ತಾರೆ.

ಪಾಯಶಃ ಆಧುನಿಕ ಜಗತ್ತಿನಲ್ಲಿ ಸದ್ದಿಲ್ಲದೆ ಹಿಂಸೆಗೆ ಕಾರಣವಾಗುವ ನಡುವೆ ಇದೆ ಎಂದುಕೊಳ್ಳುವ ಧರ್ಮವೊಂದನ್ನು ಎದುರಿಗೆ ನಿಲ್ಲಿಸಿ, ಗಟ್ಟಿ ದನಿಯಲ್ಲಿ ಪ್ರಶ್ನೆ ಮಾಡುತ್ತಾ ನಿರುತ್ತರಗೊಳಿಸಿದವರು ಸಹ ವಿರಳವೆ. ಧರ್ಮ ಮತ್ತು ಪರಂಪರೆಯ ಕುರಿತು ಈ ಬಗೆಯ ವೈಚಾರಿಕ ಪ್ರತಿರೋಧ ಅಂಬೇಡ್ಕರ್ ವಾದದ ಬಹುದೊಡ್ಡ ಹೆಚ್ಚುಗಾರಿಗೆ ಹಾಗೂ ಅದರ ಮಿತಿಯೂ ಹೌದು. ಹೆಚ್ಚುಗಾರಿಕೆ ಯಾವುದೆಂದರೆ, ಪರಂಪರೆಯೊಂದರೆ ಭಾಗವಾಗಿ ಬದುಕುತ್ತಲೇ ಅದರ ಚಾರಿತ್ರಿಕ ಅನ್ಯಾಯಗಳ ವಿರುದ್ಧ ಬಂಡೆದ್ದು ಸೆಣೆಸಾಡಲು ಸಿದ್ಧವಾಗುವುದು ಅಂಬೇಡ್ಕರ ಅವರ ಬೌದ್ಧ ಧರ್ಮದ ಆಯ್ಕೆಯು ಅವರ ಚಾರಿತ್ರಿಕ ಮತ್ತು ಸಮಕಾಲೀನ ಹಿಂದೂ ಧರ್ಮದ ಅಸಮಾನತೆಯನ್ನು ಸೈದ್ಧಾಂತಿಕವಾಗಿ ಮಣಿಸಿತು.

ಅಂಬೇಡ್ಕರ್ ಗೆ ಸಹಜವಾಗಿಯೇ ಮೊದಲ ಶತ್ರುವಾಗಿದ್ದುದು ಹಿಂದೂ ಧರ್ಮ. ಅನಂತರ ಈ ಧರ್ಮವನ್ನು ರಾಜಕೀಯವಾಗಿ ಪೋಚಿಸಲು ಹೆಣಗುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ಈ ಧರ್ಮಕ್ಕೆ ಹಸುವಿನ ಮುಖವಾಡ ತೊಡಿಸಿ ಸೈದ್ಧಾಂತಿಕವಾಗಿ ಸಮರ್ಥಿಸಲು ಯತ್ನಿಸುತ್ತಿದ್ದ ಗಾಂಧೀಜಿಯವರು. ಅಂಬೇಡ್ಕರ್ ಈ ಮೂರು ಶತ್ರುಗಳನ್ನು ತಮ್ಮ ಜೀವಮಾನವಿಡೀ ಪ್ರತಿರೋಧಿಸುತ್ತಲೇ ಬಂದರು. ಅವರ ಬಹುಪಾಲು ಬರಹ ಭಾಷಣಗಳಲ್ಲಿ ಈ ಮೂರು ಸಂಗತಿಗಳೇ ಆಕ್ರಮಿಸಿಕೊಂಡಿವೆ. ಇವುಗಳ ವಿರುದ್ಧ ಪ್ರತಿಭಟಿಸುತ್ತ ಪರಿಹಾರ ಕಾಣಲು ಪ್ರಯತನಿಸಿದರು.

ಅಂಬೇಡ್ಕರ್ ಅವರ ಹೋರಾಟ ಏನನ್ನು ಸಾಧಿಸಿತು ಎಂದು ಪ್ರಶ್ನಿಸಿಕೊಂಡಾಗ ತತ್‌ಕ್ಷಣ ಕಂಡುಬರುವ ಉತ್ತರ ಸ್ವಾಭಿಮಾನ ಮತ್ತು ಸ್ವಾವಲಂಬನೆ, ಮಾನವತೆಯ ಆಗ್ರಹ, ಬದುಕಿನಲ್ಲಿ ದೈನ್ಯತೆಗೆ ಆಸ್ಪದ ಕೊಡದಿರುವುದು, ಭಾರತೀಯರೆಂದು ಎಲ್ಲ ಕ್ಷೇತ್ರಗಳಲ್ಲಿ ದೊರೆಯಬೇಕಾದ ಅಧಿಕಾರಗಳಿಗಾಗಿ ಆಗ್ರಹಪಡಿಸುವುದು, ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವುದು, ಅವಕಾಶ ಸಿಕ್ಕ ಹಾಗೆ ಸ್ವ ಉತ್ಕರ್ಷ ಸಾಧಿಸುವುದು, ಹಿಂದೂಗಳೊಡನೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆಗಾಗಿ ಹೋರಾಡುವುದು. ಇವೆಲ್ಲ ಅಂಬೇಡ್ಕರ್ ಅವರ ಹೋರಾಟದ ಮುಖ್ಯಾಂಶಗಳು. ತ್ಯಾಗ ಮತ್ತು ಸಂಘರ್ಷವಿಲ್ಲವೆ ಸಾರ್ಥಕತೆ ಪ್ರಾಪ್ತಿಯಾಗುವುದಿಲ್ಲವೆಂದು ಅವರು ಹೇಳಿದ್ದಾರೆ. “ಹಿಂದೂ ಸಮಾಜದೊಳಗಿನ ದಮನಶೀಲ ಪ್ರವೃತ್ತಿಯ ವಿರುದ್ಧದ ಬಂಡಾಯದ ಪ್ರತೀಕ” ಎಂದು ನೆಹರೂರವರು ಅಂಬೇಡ್ಕರ್ ಅವರನ್ನು ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ. ಜೀವನದುದ್ದಕ್ಕೂ ಹೋರಾಟದ ಬದುಕು ಅವರದಾಗಿತ್ತು. ಕೊನೆಯವರೆಗೂ ಸಂಘರ್ಷಶೀಲರಾಗಿದ್ದು, ಹೊಸ ಬದುಕಿಗಾಗಿ ಹಾತೊರೆಯುತ್ತಿದ್ದರು ಅಂಬೇಡ್ಕರ್. ಅಂಬೇಡ್ಕರ್ ಅವರು ದಲಿತರ ಸ್ವಾಭಿಮಾನದ ಸಂಕೇತ. ಭಾರತದ ಸಾಮಾಜಿಕ ಬದುಕನ್ನು ಆಳವಾಗಿ ಅಧ್ಯಯನ ಮಾಡಿ, ಸ್ವತಃ ಅನುಭವಿಸಿ ಆ ನೋವಿನ ಕಾರಣಗಳಿಂದಲೇ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಂಗಗಳಲ್ಲಿ ಪ್ರತಿಭಟನಾತ್ಮಕ ಹೋರಾಟವನ್ನು ಹುಟ್ಟು ಹಾಕಿದರು. ಹಿಂದೂ ಧರ್ಮದ ಸಾಮಾಜಿಕ ವಿಷಯಸ್ಥಿತಿಗೆ ಬ್ರಾಹ್ಮಣೀಕರಣ ಹಾಗೂ ಬಂಡವಾಳಶಾಹೀಗಳೇ ಕಾರಣವೆಂದು ವಿಶ್ಲೇಷಿಸಿದರು. ಅದನ್ನು ಈ ಕೆಳಗಿನಂತೆ ಗುರುತಿಸಿದರು.

೧. ಅಸಮಾನತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುವುದು.

೨. ಅಸ್ಪೃಶ್ಯರನ್ನು ಮತ್ತು ಶೂದ್ರರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿಸುವುದು.

೩. ಅಧಿಕಾರ, ಸ್ಥಾನಗಳನ್ನು ಶೂದ್ರರು ಮತ್ತು ಅಸ್ಪೃಶ್ಯರು ಹೊಂದದಂತೆ ಷಡ್ಯಂತ್ರಗಳನ್ನು ರಚಿಸುವುದು.

೪. ಶೂದ್ರರು ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ದೊರೆಯದಂತೆ ನಿಷೇಧ ಹೇರುವುದು.

೫. ಶೂದ್ರರಿಗೆ ಮತ್ತು ಅಸ್ಪೃಶ್ಯರಿಗೆ ಆಸ್ತಿ ನಿರಾಕರಣೆ ಮಾಡುವುದು.

೬. ಮಹಿಳೆಯರಿಗೆ ಸ್ವಾತಂತ್ರ್ಯ ನಿರಾಕರಿಸುವುದು.

ಅಂಬೇಡ್ಕರ್ ಅವರ ಪ್ರಕಾರ ಈ ಎಲ್ಲ ವಿಧಗಳಿಂದಲೂ ಸಮಾನತೆಯನ್ನು ಸಾಂಸ್ಥೀಕರಿಸುವುದೇ ‘ಬ್ರಾಹ್ಮಿನಿಸಂ’, ‘ಯಜಮಾನಿ’ ಸಂಸ್ಕೃತಿಗಳ ಅಧಿಕೃತ ತತ್ವವಾಗಿದೆ. ಇದನ್ನು ತಪಸ್ಪರ್ಶಿಯಾಗಿ ವಿರೋಧಿಸಿದ ಅವರು ದಲಿತ ಏಳಿಗೆಗಾಗಿ ಸ್ವ ಸುಧಾರಣೆ, ಸ್ವ ಪ್ರಗತಿ, ಸ್ವಾವಲಂಬನೆ, ಸ್ವಪ್ರಯತ್ನ ಇವನ್ನು ಬಲವಾಗಿ ಪ್ರತಿಪಾದಿಸಿದರು. ತಮ್ಮ ಹೋರಾಟದ ಮೂಲ ಮಂತ್ರಗಳನ್ನಾಗಿ ಶಿಕ್ಷಣ, ಸಂಘಟನೆ, ಹೋರಾಟ ಎಂದು ಪೋಷಿಸಿದರು. ಇವೇ ಅಂಬೇಡ್ಕರ್ ವಾದದ ಮೂಲ ಆಶಯಗಳು ಕೂಡ ಆಗಿವೆ. ಶೋಷಣಾರಹಿತ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಹೇಳಿದ ಆತು ಸಹಾ ಮನನೀಯವಾದದ್ದು. ಶ್ರೀಮಂತರ ಸಿರಿತನ ದರಿದ್ರರ ಬಡತನದಲ್ಲಿದೆ. ಇದನ್ನು ನಿವಾರಿಸಬೇಕಾದರೆ ದುಡಿಯುವವರೆಲ್ಲ ಪ್ರತಿನಿಧಿಸುವವರು ನಾಯಕರಾಗಲು ಸಾಧ್ಯ. ಹಾಗಾದಾಗ ಎಲ್ಲರ ಅಗತ್ಯತೆಗಳನ್ನು ಪೂರೈಸಬಹುದು. ಸಂಪತ್ತನ್ನು ಉತ್ಪಾದಿಸುವವರು, ಹಸಿವೆಯಿಂದ ಸಾಯಬೇಕಾಗಿಲ್ಲ ಎಂದರು. ಅಂಬೇಡ್ಕರ್ ಅಸಮಾನತೆಯ ನಿವಾರಣೆಗೆ ಹೋರಾಟ ಮಾಡಬೇಕು ಎನ್ನುವುದರ ಜೊತೆಗೆ ಸಮಸ್ಯೆ ನಿವಾರಣೆಗೆ ಪರಿಹಾರ ನೀಡಿರುವುದು ವಿಶೇಷ. ಹೀಗಾಗಿ ಅವರ ವಿವಾರಗಳು ಇಂದು ಸಹಿತ ಪ್ರಸ್ತುತವೆನಿಸುತ್ತವೆ.

ದಲಿತರು ಮತ್ತು ಜಾತಿ

ಜಾತಿ ಪದ್ದತಿಯ ದುರಂತವನ್ನು ಕುರಿತು ಮಾತಾಡುವುದು, ಬರೆಯುವುದು ಈಗ ಸುಲಭವಾಗಿದೆ. ಜಾತಿ, ಜಾತೀಯತೆಯನ್ನು ಕುರಿತು ಮಾತಾಡುವುದಾಗ ನಮ್ಮ ಹಿರಿಯರು ಹೇಳುವ ರೀತಿಯಲ್ಲಿ ಇಂದು ಭಯ ಇಲ್ಲವಾಗಿದೆ. ಆತಂಕ ಸಂಪೂರ್ಣ ಮಾಯವಾಗಿದೆ. ಜಾತಿಯನ್ನು ಕಟ್ಟಿಕೊಂಡೇ ಹುಟ್ಟಿದ ಭಾರತೀಯನನ್ನು ಜಾತಿ ಯಾವ ಯಾವ ರೀತಿಯಲ್ಲಿ ಮುತ್ತಿಕೊಂಡಿರುತ್ತದೆ ಎಂಬುದನ್ನು ಯೋಚಿಸಿದರೆ ಮೇಲಿನ ಮಾತಿನ ಇಂಗಿತ ತಿಳಿಯುತ್ತದೆ. ಊಟ ಪದ್ಧತಿಯಿಂದ ದಿನನಿತ್ಯದ ಕ್ರಿಯೆಗಳನ್ನೊಳಗೊಂಡು ವಿವಾಹ ಪದ್ಧತಿಯವರೆಗೆ ಹುಟ್ಟಿದ ಈ ಜಾತಿ ಪದ್ಧತಿ ಮನುಷ್ಯ ಜೀವನದ ಪ್ರತಿಯೊಂದು ಮುಖವನ್ನು ಆವರಿಸಿದೆ. ನಮ್ಮ ಆಧುನಿಕ ವಿಧ್ಯಾಭ್ಯಾಸದಿಂದಲಾದರೂ ಜಾತೀಯತೆ ಕಡಿಮೆಯಾಗಿ ಜಾತಿಪದ್ಧತಿ ಸಡಿಲಗೊಳ್ಳಬಹುದುದೆಂದು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಯಾಕೆಂದರೆ, ಯಾವುದೇ ಆರೋಗ್ಯವಂತ ಸಮಾಜ ತನ್ನ ಸರ್ವತೋಮುಖ ಏಳಿಗೆಗಾಗಿ, ಸಮಾನತೆಯನ್ನು ಸಾಧ್ಯಗೊಳಿಸುವುದಕ್ಕಾಗಿ ಮಾಡುವ ಮೀಸಲಾತಿ ಕೂಡ ನಮ್ಮ ಅನಾರೋಗ್ಯಕರ ಆರ್ಥಿಕ ವ್ಯವಸ್ಥೆಯಲ್ಲಿ ಜಾತೀಯತೆಯನ್ನು ಹೆಚ್ಚಿಸಿದಂತೆ ಕಾಣುತ್ತದೆ. ಇದಕ್ಕಿಂತ ಆವೃತ ಸ್ಥಿತಿಯನ್ನು ನೋಡಿದರೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಈ ಸಮಾಜದಲ್ಲಿ ಯಾವುದೇ ಉದ್ಯೋಗಕ್ಕಾಗಿ, ಯಾವುದೇ ಆದಾಯಕ್ಕಾಗಿ ಜಾತೀಯ ಸಂಬಂಧಿಗಳು ಮತ್ತು ವರದಕ್ಷಿಣೆ ತರಹದ ಅನಿಷ್ಟಗಳನ್ನು ನೆಚ್ಚುವ ಘಟ್ಟಕ್ಕೆ ಈ ಸಮಾಜ ತಲುಪಿದೆ. ಜಾತಿಪದ್ಧತಿಯ ನೀಚತನದ ಬಗ್ಗೆ ಸಂಕೋಚ ಆತಂಕದಿಂದ ಮಾತನಾಡುತ್ತಿದ್ದವೇ ಈವತ್ತು ಈ ಪದ್ಧತಿಯೊಂದು ತಮ್ಮ ವ್ಯಕ್ತಿತ್ವದಿಂದ ಎಲ್ಲೊ ಹೊರಗಡೆ ಇರುವ ದುಷ್ಟತನವೆಂಬಂತೆ, ಅದೊಂದು ಚರ್ಚೆಗೆ ಒಳ್ಳೆಯ ವಿಷಯ ಮಾತ್ರವೆಂಬಂತೆ ನಿರಾಳವಾಗಿ ಮಾತಾಡುವ ವರಸೆ ಕಂಡುಬರುತ್ತಿದೆ. ಜಾತಿಯ ಬಗ್ಗೆ ಈವತ್ತು ಸಿನಿಕತನ, ಮೂರ್ಖತನ, ಹುಂಬತನಗಳೆಲ್ಲ ಒಂದಾಗಿರುವುದರಿಂದ ಈ ಅನಿಷ್ಟ ಪದ್ಧತಿ ಮುಂದುವರಿಯುತ್ತಲೇ ಇದೆ.

ಈ ಸಮಾಜದಲ್ಲಿ ಅಸ್ಪೃಶ್ಯತೆ ಎಲ್ಲುವುದು ಒಂದು ಗಂಭೀರ ಸಮಸ್ಯೆಯಾಗಿದೆ. ದೇಶದ ಕಾಲು ಭಾಗದಷ್ಟಿರುವ ಅತಿದೊಡ್ಡ ಸಮುದಾಯವನ್ನು ಭೇದ, ಅವಮಾನಗಳಿಗೆ ಸಿಕ್ಕಿಸಿ, ಈ ಸಂಕೋಲೆಯಿಂದ ತಾನೆ ಹೊರಬರಲಾಗದೇ ನರಳುತ್ತಿರುವ ಭಾರತದ ಉಜ್ವಲ ಸಂಸ್ಕೃತಿಯೆಂದು ಹೇಳುವ ಶೋಚನೀಯ ದುರಂತ ನಮ್ಮದು. ಇಂಥ ಅನಿಷ್ಟ ಆಚರಣೆಯ ವಿರುದ್ಧ ಪ್ರತಿಭಟಿಸಿದ ನಮ್ಮ ಸಂತರು, ಸುಧಾರಕರು ಇನ್ನಿಲ್ಲದಂತೆ ಈ ಭೇದದ ವಿರುದ್ಧ ಸಮಯ ಸಾರಿದರೂ ಮತ್ತೆ ಮತ್ತೆ ಅದರ ಬೇರುಗಳು ಆಳವಾಗುತ್ತಿವೆ, ಬಾಹುಗಳು ವಿಸ್ತಾರಗೊಳ್ಳುತ್ತಿವೆ. ಒಂದರ್ಥದ್ಲಿ ಜಂದಿನ ಜಾಗತಿಕ ಸಂದರ್ಭದಲ್ಲಿ ದಲಿತರು ಹಾಗೂ ದಲಿತರ ಮೇಲಿನ ‘ಅಸ್ಪೃಶ್ಯತೆ’ ಸ್ವರೂಪವು ಸಂಕೀರ್ಣವಾಗುತ್ತಿದೆ. ಇದು ಜಾತಿ ಪದ್ಧತಿ ಮತ್ತು ವರ್ಣಾಶ್ರಮ ಧರ್ಮದ ‘ಗರ್ಭಶಿಶು’ವಾಗಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ನಿಜರೂಪದಲ್ಲಿ ಇದು ವರ್ಣಾಶ್ರಮದ ಶಿಶುವಾಗಿದ್ದರೂ ಸಹ ಇದನ್ನು ಸಾಕಿ ಸಲುಹಿದವರು ಹಾಗೂ ಇಂದಿಗೂ ತಮ್ಮ ಮನೆಯ ಮಗನಂತೆ ಸಾಕುತ್ತಿರುವವರು ಈ ರಾಷ್ಟ್ರದ ಊಳಿಗಮಾನ್ಯಶಾಹಿಗಳು ಹಾಗೂ ಬಂಡವಾಳಶಾಹಿಗಳು ಎಂದರೆ ಹೆಚ್ಚಿನ ಚರ್ಚೆಗೆ ಎಡೆಮಾಡಿಕೊಡುತ್ತದೆ.

ಭಾರತಕ್ಕೆ ಇರುವುದು ಎರಡು ಸಂವಿಧಾನಗಳು. ಒಂದು ಪ್ರಜಾಪ್ರಭುತ್ವ ಲಿಖಿತ ಸಂವಿಧಾನ. ಮತ್ತೊಂದು ಭಾರತೀಯ ಸಾಮಾಜಿಕ ರಚನೆಯ ಅಲಿಖಿತ ಸಂವಿಧಾನ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವುದು ಲಿಖಿತ ಸಂವಿಧಾನ. ನಾವೆಲ್ಲರೂ ಒಪ್ಪಿಕೊಂಡಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿ “ಸಂವಿಧಾನಶಿಲ್ಪಿ” ಯಾಗಿರುವ ಬೃಹತ್ ಲಿಖಿತ ಸಂವಿಧಾನ. ಇದು ರಾಷ್ಟ್ರದ ಸಾಮಾಹಿಕ ಕಾನೂನುಗಳನ್ನು ಮತ್ತು ಸಮಾನತೆ, ಐಕ್ಯತೆಯನ್ನು ಸರ್ವರಿಗೂ ಸಮಪಾಲು ಎನ್ನುವ ಆಧಾರದ ಮೇಲೆ ರಚಿತವಾಗಿದೆ. ಈ ಸಂವಿಧಾನಕ್ಕೆ ಅದರದೇ ಆದ ಚೌಕಟ್ಟೂ ಇದೆ. ಆದರೆ ಶತ ಶತಮಾನಗಳಿಂದಲೂ ಈ ರಾಷ್ಟ್ರದ ಸಮಾಜದಲ್ಲಿರುವ ಅಲಿಖಿತ ಸಂವಿಧಾನದ ಮುಂದೆ ನಮ್ಮ ಬೃಹತ್ ಲಿಖಿತ ಸಂವಿಧಾನ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಏಕೆಂದರೆ ಲಿಖಿತ ಸಂವಿಧಾನಕ್ಕೆ ನೀತಿ ನಿಯಮಗಳಿವೆ. ಆದರೆ ಅಲಿಖಿತ ಸಂವಿಧಾನ ಯಾವ ಸಂದರ್ಭದಲ್ಲಾದರೂ ತನ್ನ ವ್ಯಗ್ರ ರೂಪವನ್ನು ಪ್ರದರ್ಶಿಸುತ್ತದೆ, ಹಾಗೆಯೇ ಎಲ್ಲಿಬೇಕಾದರೂ ಅದು ಯಾವ ರೂಪದಲ್ಲಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಂದಾಗುತ್ತದೆ. ಈ ಅಲಿಖಿತ ಸಂವಿಧಾನ ಆಧಾರದ ಮೇಲೆಯೇ ಭಾರತೀಯ ಸಮಾಜ ನಿರ್ಮಾಣವಾಗಿದೆ. ಹಾಗೂ ಅದೇ ರೀತಿಯಲ್ಲಿ ಮುನ್ನಡೆಯುತ್ತಿದೆ. ಈ ಉನ್ನತ ಜಾತಿ, ಜಮೀನ್ದಾರಿಕೆ ವರ್ಗದ ಗ್ರಾಮ ಸಮಾಜಗಳೇ ಹೆಚ್ಚಾಗಿ ಅಲಿಖಿತ ಸಂವಿಧಾನವನ್ನು ರಕ್ಷಿಸಿ ಪೋಷಿಸಿ ಬೆಳೆಸಿ ಆಚರಿಸಿಕೊಂಡು ಬರುತ್ತಿವೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗವೇ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವುದರಿಂದ ಇದು ಸಮಾಜದ ಅಲಿಖಿತ ಸಂವಿಧಾನ ಕಾನೂನು, ನೀತಿಗಳನ್ನು ಲಕ್ಷಿಸಲು ಕಂಕಣ ಬದ್ಧವಾಗಿರುತ್ತದೆ. ಬೃಹತ್ ಭಾರತ ಅರವತ್ತನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸಹ ಈ ಪ್ರಶ್ನೆಗಳು ಪ್ರಜ್ಞಾವಂತರನ್ನು ಮುಖಾಮುಖಿಯನ್ನಾಗಿಸುವ ಸ್ಥಿತಿಯನ್ನು ನಿರ್ಮಾಣಮಾಡಿವೆ. ಒಂದರ್ಥದಲ್ಲಿ ಇದು ಭಾರತೀಯ ಸಮಾಜದ ಅರ್ಧಪತನದ ಕಾರಣವೂ ಆಗಿದೆ.

ನಿಜಾರ್ಥದಲ್ಲಿ ಅಸ್ಪೃಶ್ಯ ಲೋಕ ಕಣ್ಣಳತೆಗೂ ಮೀರಿದ್ದು. ಮೊದಲೇ ಹೇಳಿದ ಹಾಗೆ ಅಸ್ಪೃಶ್ಯತೆಯ ಸ್ವರೂಪ ಆಧುನಿಕ ಪ್ರಕ್ರಿಯೆಗಳೊಂದಿಗೆ ಅನೇಕ ಮಾಯಾ ರೂಪಗಳನ್ನು ತಾಳುತ್ತಾ ಸಂಕೀರ್ಣಗೊಂಡಿದೆ. ಇದನ್ನು ದಾಖಲಿಸಲು ತಕ್ಕ ಅರಿವಾಗಲಿ, ಭಾಷೆಯಾಗಲಿ ಇನ್ನು ಸಿದ್ಧಗೊಂಡಿಲ್ಲರಿದುವುದು ಇಂಥ ವಿಷಯದ ಬರವಣಿಗೆಯಲ್ಲಿ ಕಂಡುಬರುತ್ತದೆ. ಪ್ರತಿಯೊಬ್ಬ ಭಾರತೀಯನು ಕೂಡ ‘ಭೇದ’ ಅಥವಾ ‘ತಾರತಮ್ಯ’ವನ್ನು ಸಾರ್ವಜನಿಕವಾಗಿ ‘ತಪ್ಪು’ ಎನ್ನುತ್ತಾನೆ. ಆದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಯಾವ ದ್ವಂದ್ವವೂ ಇಲ್ಲದೆ ‘ಸರಿ’ ಎಂಬಂತೆ ಆಚರಿಸುತ್ತಾನೆ. ಇಂತಹ ಅಪ್ಪಟ ಆತ್ಮವಂಚನೆಯ ಭಾರತೀಯ ಸಮಾಜದ ಮನಸ್ಸನ್ನು ಪರಿಶುದ್ಧಗೊಳಿಸಿ ಮಾನವೀಯಗೊಳಿಸುವುದು ಹೇಗೆ ಎಂಬ ಪ್ರಶ್ನೆ ಪ್ರತಿಯೊಬ್ಬರ ಮುಂದಿದೆ. ಇದುವರೆಗೆ ಮಹಾತ್ಮರು, ಸಾಧಕರು, ಸುಧಾರಕರು, ಚಳವಳಿಗಾರರು, ಬಾಬಾಸಾಹೇಬ್ ಅಂಬೇಡ್ಕರ್ ಅಂಥವರು ಆಯಾ ಕಾಲದ ಸಾಮಾಜಿಕ ಆಂದೋಲಗಳ ಮೂಲಕ ‘ಆಗು’ ಮಾಡಿದ್ದನ್ನು ಮರೆವಿಗೆ ಸರಿಸಿ, ‘ಏನೂ ಆಗಿಯೆ ಇಲ್ಲ’ ಎಂಬಂತೆ ನಿರ್ಮಲವಾಗಿರುವ ಸಮಾಜ ವ್ಯವಸ್ಥೆ ನಮ್ಮದು. ಅಸ್ಪೃಶ್ಯತೆಯ ಬೇರು ಭಾರತೀಯ ಸ್ಪೃಶ್ಯ ಸಮಾಜದಲ್ಲಿ ಹೊರಗೆಲ್ಲೋ ಕಾಣುವಂತಿದ್ದರೆ ಅದಕ್ಕೊಂದು ಪರಿಹಾರ ಮಾರ್ಗವೂ ಸಾಧ್ಯವಾಗಬಹುದಿತ್ತೇನೋ? ಆದರೆ ಅದರ ಬೇರಿರುವುದು ಮನಸ್ಸಿನಲ್ಲಿ ಎಂಬುದನ್ನು ಪ್ರತಿಯೊಬ್ಬರ ನೆನಪಿನಲ್ಲಿರಬೇಕು. ಇದು ಹೀಗೆ ಇರಬೇಕೆನ್ನುವ ಸಾಮಾಜಿಕ ಪ್ರಜ್ಞೆಯಲ್ಲಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಂಡಿದೆ. ಒಂದರ್ಥದಲ್ಲಿ ಭಾರತದಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆಗೆ ಕೈಗೊಂಡ ಎಲ್ಲಾ ಕಾರ್ಯಗಳು ಹುತ್ತ ಬಡಿಯುವ ಮಾದರಿಯದಾಗಿದೆ. ಒಂದು ಪ್ರದೇಶದ ಹುತ್ತ ಬಡಿದರೆ ಮತ್ತದೆ ಪ್ರದೇಶದ ಬೇರೊಂದು ಕಡೆ ಬೃಹತ್ ಹುತ್ತ ಜನ್ಮ ತಾಳಿರುತ್ತದೆ. ಈ ಮಾದರಿಯಲ್ಲಿ ಭಾರತ ಸರ್ಕಾರಗಳು ಹಾಗೂ ಅಸ್ಪೃಶ್ಯತೆಯ ನಿರ್ಮೂಲನಾ ಕಾನೂನುಗಳು ಕಾರ್ಯನಿರ್ವಹಿಸುತ್ತಿದೆ.

ಭಾರತ ಸರ್ಕಾರ ಮಾನವ ಹಕ್ಕುಗಳ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ನಮ್ಮ ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ನಿರ್ದೇಶನಾಲಯವನ್ನು ಸ್ಥಾಫಿಸಿ, ಮಂತ್ರಿಮಂಡಲದಲ್ಲಿ ಪ್ರತ್ಯೇಕ ಮಂತ್ರಿಯನ್ನೇ ನೇಮಿಸಿಕೊಂಡಿದೆ. ಇದೆಲ್ಲವೂ ಮುಖ್ಯವಾಗಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕಂಡಿರಬೇಕೆನಿಸುತ್ತದೆ. ಅಂದರೆ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಮನೆಯಲ್ಲಿ ಸಾಕುವ ಪ್ರಾಣಿಗಿಂತಲೂ ಕೀಳು ಬದುಕು ಸಾಹಿಸಬೇಕೆಂದು ಬಯಸುವ ಸ್ಪೃಶ್ಯರ ಮನೋಜ್ಞನದಿಂದ ಅಸ್ಪೃಶ್ಯತೆಯನ್ನು ಕಾಪಾಡಲಾಗುತ್ತಿದೆ.

ದಲಿತರ ಮೇಲೆ ದೌರ್ಜನ್ಯ

ಮೇಲಿನ ಮಾತು ಮೇಲ್ನೋಟಕ್ಕೆ ಅತಿಶಯವೆನ್ನಿಸಬಹುದು, ಆದರೆ ವಾಸ್ತವದಲ್ಲಿ ಇದು ಸತ್ಯ. ಕರ್ನಾಟಕದಲ್ಲಿಯೇ ಅಲ್ಲದೆ ಇಡೀ ಭಾರತ ದೇಶದಲ್ಲಿಯೇ ದಿನನಿತ್ಯ ಹಾಗೂ ಪ್ರತಿಕ್ಷಣ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಭಾರತೀಯ ಭವ್ಯ ಸಮಾಜ ಈ ಪ್ರಪಂಚಕ್ಕೆ ‘ಅಸ್ಪೃಶ್ಯರು’ ಎಂಬ ಹೀನಾಯ ಬದುಕಿನ ಜನರನ್ನು ಕೊಡುಗೆ ನೀಡಿದೆ. ಹಾಗೂ ಈ ರೀತಿಯಲ್ಲಿ ಬದುಕುವ ಹಾಗೆ ಮಾಡಿದ ಪರಂಪರೆ ಹೊಂದಿರುವ ಈ ಸಮಾಜದಲ್ಲಿ ಇದಕ್ಕೆ ಅದರದೇ ಆದ ಅರ್ಥಗಳು ಕಾಲಕಾಲಕ್ಕೆ ಬಂದಿವೆ, ಬರುತ್ತಿವೆ. ಇಂದಂತು ದಿನನಿತ್ಯ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗಳು ನಾಗರಿಕ ಸಮಾಜವನ್ನು ಪ್ರಶ್ನೆ ಮಾಡುವಂತಾಗಿವೆ. ಅತ್ಯಾಚಾರ, ಕೊಲೆ, ಅಸ್ಪೃಶ್ಯತೆ, ನಿಂದನೆ, ಬಹಿಷ್ಕಾರ, ಅನಿಷ್ಟ ಆಚರಣೆಗಳು, ಜಾತಿಸೂಚಕ ಬೈಗುಳಗಳು ಒಂದರ್ಥದಲ್ಲಿ ಸರ್ಕಾರ ಹಾಗೂ ಸಮಾಜವನ್ನು ಮುಖಾಮುಖಿಯಾಗುವಂತೆ ಮಾಡುತ್ತಿವೆ. ಇಂಥಹ ಸನ್ನಿವೇಶದಲ್ಲಿ ಗೆಲ್ಲುವ ಕುದುರೆ ಎಂದರೆ ಮೇಲೆ ಹೇಳಿದ ಅಲಿಖಿತ ಸಂವಿಧಾನದ ನಿಯಮಗಳೇ. ಏಕೆಂದರೆ ಈ ಅಲಿಖಿತ ಸಂವಿಧಾನಕ್ಕೆ ಯಾವುದೇ ರೀತಿಯ ನಿಬಂðನೆಗಳಿರುವುದಿಲ್ಲ. ಎಲ್ಲಿ ಯಾವಾಗ ಬೇಕಾದರೂ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಈ ಸ್ವರೂಪದಿಂದಲೇ ಅದು ಇಂದಿನ ದಿನದಲ್ಲಿಯೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.

ದಿನನಿತ್ಯ ಕರ್ನಾಟಕದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿದೆ. ಉದಾಹರಣೆಗೆ ಇಂದಿಗೂ ಈ ಜನ ದೇವಾಲಯಗಳಿಗೆ ಪ್ರವೇಶ ಮಾಡುವಂತಿಲ್ಲ. ಕೆರೆಯ ನೀರನ್ನು ಮುಟ್ಟುಂವತಿಲ್ಲ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ದಲಿತ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಕೂರುವಂತಿಲ್ಲ. ದಲಿತ ಮಹಿಳೆಯರು ಅಡುಗೆ ಮಾಡಿದರೆ ಸವರ್ಣೀಯ ಮಕ್ಕಳು ಊಟ ಮಾಡುವುದಿಲ್ಲ. ಗ್ರಾಮೀಣ ಪ್ರದೇಶದ ಸವರ್ಣೀಯರ ಮಾಲೀಕತ್ವದ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನಿಷೇಧ. ಹೋಟೆಲುಗಳ ಹೊರಗೆ ನಿಂತೇ ಅವರೇ ಇಟ್ಟಿರುವ ಗ್ಲಾಸ್ ನಲ್ಲಿ ಚಹಾ ಕುಡಿದು ತೊಳೆದು ಇಡುವುದು ದಲಿತರ ಆದ್ಯ ಕರ್ತವ್ಯವಾಗಿದೆ. ಇಂದು ಪ್ಲಾಸ್ಟಿಕ್ ಗ್ಲಾಸ್‌ಗಳು ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ. ಗ್ರಾಮೀಣ ಪ್ರದೇಶದ ಮೀಸಲಾತಿ ಆಧಾರಿತ ಗ್ರಾಮ ಪಂಚಾಯ್ತಿ ಮಟ್ಟದ ರಾಜಕೀಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘಟನೆ ಹಾಗೂ ಅಸ್ಪೃಶ್ಯತೆಯ ಸ್ವರೂಪ ವಿಶೇಷವಾದದ್ದು. ದಲಿತ ಜನಪ್ರತಿನಿಧಿಗಳಿಗೆ ಹಾಗೂ ಪಂಚಾಯ್ತಿ ಮುಖಂಡರಿಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಹಾಗೂ ಅವರ ಹಕ್ಕುಗಳ ಉಲ್ಲಂಘಟನೆ ದಿನಂಪ್ರತಿ ನಡೆಯುತ್ತಿರುತ್ತವೆ. ಬದುಕಿನ ಆಶ್ರಯವೇ ಗ್ರಾಮವಾಗಿರುವುದರಿಂದ ಎಷ್ಟೋ ದಲಿತರು ಈ ದೌರ್ಜನ್ಯವನ್ನು ಮನೆ ಮನದಲ್ಲಿಯೇ ಅಡಗಿಸಿ ಅದರ ನೆರಳಿನಲ್ಲಿಯೇ ದಿನಂಪ್ರತಿ ಬದುಕು ಸಾಗಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಇಂದಿಗೆ ೮೦ ವರ್ಷಗಳ ಹಿಂದೆಯೇ (೧೯. ೨೦. ೧೯೨೭ ಚೌದರ್ ಕೆರೆ ನೀರ ಕುಡಿದ ಚಳವಳಿಯ ದಿನ) ಬಾಬಾಸಾಹೇಬ್ ಅಂಬೇಡ್ಕರ್ ಅವರು

Tell the slave, that he is slave, and he will revolt

ಎಂದು ನುಡಿದರು. ಈ ಮೂಲಕ ಭಾರತದಲ್ಲಿ (ಭಾರತ ಉಪಖಂಡಗಳಲ್ಲಿ) ಮಾನವ ಹಕ್ಕುಗಳ ಆಂದೋಲನವನ್ನೇ ಆರಂಭಿಸಿದರು. ನೈಸರ್ಗಿಕವಾಗಿ ಸಂಗ್ರಹವಾದ ಕೆರೆ ನೀರನ್ನು ಕುಡಿಯಲು, ಸಾರ್ವಜನಿಕವಾಗಿರುವ ದೇವಾಲಯಗಳನ್ನು ಪ್ರವೇಶ ಮಾಡಲು, ಸರ್ವರ ಜೊತೆ ದಲಿತರೂ ಶಿಕ್ಷಣ ಪಡೆಯಲು, ಎಲ್ಲಾ ಮಾನವರ ಜೊತೆ ಜೀವಿಸುವ ಹಕ್ಕನ್ನು ಪಡೆಯಲು ದಲಿತರಿಗೆ ಕರೆ ನೀಡಿದರು. ಇದಕ್ಕಾಗಿ ಅಹಿಂಸಾತ್ಮಕ ಹೋರಾಟವನ್ನೇ ಹುಟ್ಟು ಹಾಕಿದರು. ಇದೆಲ್ಲವೂ ಇಂದು ಇತಿಹಾಸ. ಆದರೆ ಇಂದಿಗೂ ಭಾರತದ ೧೦೦% ರಷ್ಟು ಗ್ರಾಮೀಣ ಪ್ರದೇಶದ ದಲಿತರು ನಿಸರ್ಗದತ್ತವಾಗಿ ಎಲ್ಲಾ ಪ್ರಾಣಿಗಳಿಗೂ ಲಭ್ಯವಿರುವ ಸಂಪನ್ಮೂಲಗಳು, ಸೌಲಭ್ಯಗಳು ಹಾಗೂ ಆಚರಣೆಗಳಿಂದ ವಂಚಿತರಾಗಿದ್ದಾರೆ. ಇದನ್ನು ತಮ್ಮ ಹಕ್ಕು ಎಂದು ಕಾನೂನು ಮೂಲಕ ಪ್ರತಿಪಾದಿಸಿದ ದಲಿತರ ಮೇಲಿನ ದೌರ್ಜನ್ಯ ಬೃಹತ್ ಪ್ರಜಾಪ್ರಭುತ್ವ ಸರ್ಕಾರವನ್ನು ಕಾಡದೆ ಇರದು. ಈ ಹಂತದಲ್ಲಿ ದಲಿತರಿಗೆ ದನಿಯಿಲ್ಲದ್ದಾಗಿದೆ.

ದಲಿತರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡುತ್ತಿರುವುದು ಮೇಲ್ನೋಟಕ್ಕೆ ಕಂಡರೂ ಚಳುವಳಿಯ ಸ್ಥಿತಿ ಇಂದಿನ ಕಾಲದವರೆಗೂ ಯಾವ ರೀತಿಯದ್ದಾಗಿದೆ ಎಂಬುದನ್ನು ಲಿಖಿತ ದಾಖಲೆಗಳಿಗಿಂತಲೂ ಮುಖ್ಯವಾಗಿ ‘ಕಾಲ’ವೆಂಬ ದಾಖಲೆಯು ಒದಗಿಸುತ್ತದೆ. ಏಕೆಂದರೆ ಯಾವುದೇ ವಿಷಯದ ಆಳವಾದ ಅಧ್ಯಯನಕ್ಕೆ ಇಂದಿನ ವರ್ತಮಾನದಲ್ಲಿನ ಅನಿಷ್ಟ ಆಚರಣೆಗಳು ಹೆಚ್ಚಾಗಿ ಸಹಾಯ ಮಾಡುತ್ತಿವೆ. ಇಂದಿಗೂ ಸಹ ನಮ್ಮ ಗ್ರಾಮೀಣ ಪ್ರದೇಶದಲ್ಲಿ ದಲಿತರು ತಮ್ಮ ಕೇರಿಯಲ್ಲಿರುವ ಬಾವಿಗಳ ಹೊರತು ಬೇರೆಯಾದ ಬಾವಿಯ (ಕೊಳವೆಬಾವಿಗಳು ಇತ್ತೀಚೆಗೆ ಸ್ಥಾನ ಪಡೆದಿವೆ) ಹತ್ತಿರ ಸುಳಿಯುವಂತಿಯೂ ಇಲ್ಲ. ಈ ವಿಷಯ ಅತ್ಯಂತ ಶೋಚನೀಯವಾದದ್ದೆ. ಕೆರೆ-ಕಾಲುವೆಗಳಲ್ಲಿ ನೀರನ್ನು ಉಪಯೋಗಿಸುವುದರಲ್ಲಿಯೂ ದಲಿತರಿಗೆ ನಿಷೇಧಗಳಿವೆ. (ಸವರ್ಣೀಯರು ಬಳಸುವ ಸ್ಥಳದಲ್ಲಿ) ದಿನನಿತ್ಯ ಇಂಥ ಸುದ್ಧಿಗಳನ್ನು ಮುದ್ರಿತ ಹಾಗೂ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳು ನಾಗರಿಕ ಸಮಾನಕ್ಕೆ ಮನಮುಟ್ಟುವಂತೆ ಪ್ರಕಟಿಸುತ್ತಲೇನೋ ಇವೆ. ಆದರೆ ಇದಕ್ಕೆ ದಲಿತರಲ್ಲದೆ ಬೇರ್ಯಾರೂ ವಿರೋಧ ವ್ಯಕ್ತಪಡಿಸದೇ ಇರುವುದು ಈ ರಾಷ್ಟ್ರದ ಸಾಮಾಜಿಕ ಅಧೋಗತಿಗೆ ಸಾಕ್ಷಿಯಾಗಿದೆ. ಶೇಕಡ ೧೦೦೦ ರಷ್ಟು ದಲಿತರು ಇಂದಿಗೂ ಸವರ್ಣೀಯ ಕೇರಿಯ ಬಾವಿಗಳಲ್ಲಿ ನೀರನ್ನು ತರುವಂತಿಲ್ಲ. ಸಾಮಾನ್ಯ ಸನ್ನಿವೇಶದಲ್ಲಿ ಸವರ್ಣೀಯರೇ ಬಾವಿಗಳಿಂದ ನೀರನ್ನು ತೆಗೆದು ದಲಿತರ ಕೊಡಗಳಿಗೆ ಸುರಿದು ತಮ್ಮ ವಿಕೃತ ಮಾನವೀಯತೆ ಮೆರೆದು ‘ಪಾಪ ಬದುಕಲಿ’ ಎಂಬ ಭಾವನೆಯಲ್ಲಿರುವುದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಸವರ್ಣೀಯರು ತಮ್ಮ ಒಡೆತನದಲ್ಲಿರಲು ಬಯಸುವ ನಿಯಮಗಳೆಂದರೆ.

೧. ಹಿಂದೂಗಳ ವಾಸಸ್ಥಾನಗಳಿಂದ ದೂರವಾಗಿ ಪ್ರತ್ಯೇಕ ಜಾಗದಲ್ಲಿ ಅಸ್ಪೃಶ್ಯರು ವಾಸಿಸಬೇಕು. ಈ ಬೇರ್ಪಡಿಸುವಿಕೆಯ ನಿಯಮವನ್ನು ಮುರಿಯುವುದಾಗಲಿ, ಅದರಿಂದ ತಪ್ಪಿಸಿಕೊಳ್ಳುವುದಾಗಲಿ ಕೂಡದು.

೨. ಅಸ್ಪೃಶ್ಯರ ವಾಸ (ಹೊಲೆಯ-ಮಾದಿಗರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ) ಪ್ರದೇಶವು ಹಳ್ಳಿಯ ದಕ್ಷಿಣ ದಿಕ್ಕಿನಲ್ಲಿರಬೇಕು. ಏಕೆಂದರೆ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ಅತ್ಯಂತ ಅಮಂಗಳವಾದುದು.

೩. ಅಸ್ಪೃಶ್ಯರು ಭೂಮಿ, ಹಣ, ಚಿನ್ನ ಇತ್ಯಾದಿ ರೂಪದ ಸಂಪತ್ತನ್ನು ಪಡೆದುಕೊಳ್ಳುವಂತಿಲ್ಲ.

೪. ಅಸ್ಪೃಶ್ಯರು ಹೆಂಚಿನ ಅಥವಾ ಆರ್. ಸಿ. ಸಿ. ಹೊದಿಕೆಯಿರುವ ಮನೆಗಳನ್ನು ಕಟ್ಟಿಕೊಳ್ಳುವಂತಿಲ್ಲ.

೫. ಅಸ್ಪೃಶ್ಯರು ತಮ್ಮ ಮಕ್ಕಳಿಗೆ ಸೊಗಸಾದ ಹೆಸರುಗಳನ್ನಿಡಕೂಡದು. ಅವರಿಡುವ ಹೆಸರುಗಳು ತಿರಸ್ಕಾರ ಸೂಚಿಕವಾಗಿರಬೇಕು. ಒಂದು ರೀತಿಯಲ್ಲಿ ಅವರು ಸೊಗಸಾದ ಹೆಸರುಗಳನ್ನಿಟ್ಟರೂ ಸಹ ಸವರ್ಣೀಯರು ಕರೆಯುವ ರೀತಿಗೆ ಪ್ರಶ್ನೆ ಮಾಡುವ ಹಕ್ಕು ಇರಕೂಡದು.

೬. ಒಬ್ಬ ಸ್ಪೃಶ್ಯನ ಸಮ್ಮುಖದಲ್ಲಿ ಕುರ್ಚಿಯ ಮೇಲೆ ಕೂರುವುದಾಗಲಿ, ಸಮಾನನೆಂದು ಗುರ್ತಿಸಿಕೊಳ್ಳುವುದಾಗಲಿ ಕೂಡದು.

೭. ಸ್ಪೃಶ್ಯರಿಗೆ ತಲೆ ಬಾಗಿ ನಮಸ್ಕರಿಸಬೇಕು.

೮. ವೈಭವದ ಮೆರವಣಿಗೆಗಳನ್ನು ಸ್ಪೃಶ್ಯರ ಕೇರಿ ಅಥವಾ ಅವರ ಎದುರಿಗೆ ಮಾಡಕೂಡದು.

೯. ಅಸ್ಪೃಶ್ಯರು ಸ್ಪೃಶ್ಯರಂತೆ ಬಹಿರಂಗ ಗುರುತುಗಳನ್ನು ಧರಿಸಕೂಡದು ಮತ್ತು ಸ್ಪೃಶ್ಯರಂತೆ ಕಾಣಕೂಡದು.

೧೦. ಗ್ರಾಮಗಳಲ್ಲಿ ಅಸ್ಪೃಶ್ಯರು ಸ್ಕೂಟರ್, ಬೈರ್, ಕಾರು ಇತರೇ ಆಧುನಿಕ ವಸ್ತುಗಳನ್ನು ಹೊಂದಿದ್ದರೂ ಸಹ ಸ್ಪೃಶ್ಯರ ಎದುರಿಗೆ ಹೋಗುವಾಗ ತಲೆಬಾಗಿ ನಮಸ್ಕರಿಸಿ ಮುನ್ನಡೆಯಬೇಕು.

೧೧. ಗ್ರಾಮೀಣ ಪ್ರದೇಶದಲ್ಲಿ ದಲಿತರು ಜನಾಂಗೀಯ ‘ಸಂಘ’ಗಳನ್ನು ಸ್ಥಾಪಿಸಕೂಡದು, ಸಂಘ ಸ್ಥಾಪಿಸಿದರೂ ಅದು ಸ್ಪೃಶ್ಯರ ಮಾರ್ಗದರ್ಶನದಂತೆ ನಡೆಯಬೇಕು.

ಈ ಮೇಲಿನ ಎಲ್ಲವೂ ಸಾಮಾನ್ಯವಾಗಿ ದಿನಂಪ್ರತಿ ನಮ್ಮ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘಟನೆಯಾಗಿದೆ. ಇಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಯಾವ ಬೆಲೆಯೂ ಇಲ್ಲದಾಗಿದೆ. ಆಧುನಿಕ ಕಾಲದಲ್ಲಿ ದಲಿತರ ಹಕ್ಕುಗಳು ವಿಶಿಷ್ಟ ರೀತಿಯಲ್ಲಿ ಉಲ್ಲಂಘನೆ ಹಾಗೂ ನಿರಂತರ ದೌರ್ಜನ್ಯಕ್ಕೆ ಸಿಲುಕಿರುವುದು ಈ ಕೆಳಗಿನಂತೆ ಗುರ್ತಿಸಬಹುದು. ಈ ಮೇಲಿನ ದೌರ್ಜನ್ಯಗಳಿಗಿಂತ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದೌರ್ಜನ್ಯವು ಅತ್ಯಂತ ಗಂಭೀರವಾದುದ್ದಾಗಿದೆ. ಈ ವರ್ಗದ ದಲಿತರು ದಿನಂಪ್ರತಿ ಅನುಭವಿಸುತ್ತಿರುವ ದೌರ್ಜನ್ಯದ ಮಾದರಿಗಳೆಂದರೆ-