ಪ್ರವೇಶ

ಇಂದು ಇಂಡಿಯಾದ ಬಹುತೇಕ ಎಲ್ಲ ಪ್ರಮುಖ ಭಾವನೆಗಳಲ್ಲೂ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕಾಣಬಹುದಾಗಿದೆ. ಅದರಲ್ಲೂ ಇಂಗ್ಲಿಷ್‌ನಲ್ಲಂತೂ ಲೋಕದ ಹಲವಾರು ವಿದ್ವಾಂಸರು ಅವರ ಜೀವನದ ಸರ್ವ ವಿವರಗಳನ್ನೂ ಸಂಶೋಧನ ವಿಧಾನದಿಂದ ಕಲೆಹಾಕಿ, ಅವರ ಜೀವನ ಹಾಗೂ ಸಾಧನೆಗಳನ್ನು ಆಧುನಿಕ “ಜೀವನ ಚರಿತ್ರೆ”ಯ ಶಿಸ್ತಿನಲ್ಲಿ ಚಿತ್ರಿಸಿರುವುದನ್ನೂ ಕಾಣಬಹುದಾಗಿದೆ; ಆದಾಗ್ಯೂ ಒಂದು ಮಾತಂತೂ ಸತ್ಯವಾದುದು: ಅಂದೆಂದರೆ ಇಂದು ಇಂಗ್ಲಿಷ್‌ಹಾಗೂ ಭಾರತೀಯ ಭಾಷೆಗಳಲ್ಲಿ ಕಾಣಬಹುದಾದ ಅಂಬೇಡ್ಕರರ ಜೀವನ ಚರಿತ್ರೆಗಳಿಗೆ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿರುವ ಸಾಮಗ್ರಿಗಳೇ ಮೂಲ ಆಕರಗಳು ಎಂಬುದನ್ನು ಮರೆಯುವಂತಿಲ್ಲ. ಬಹುಶಃ ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುವಂತೆ ತೋರುತ್ತದೆ. ಮೊದಲನೆಯದಾಗಿ, ಅಂಬೇಡ್ಕರರ ಮಾತೃಭಾಷೆ ಮರಾಠಿ, ಎರಡನೆಯದಾಗಿ, ಅಂಬೇಡ್ಕರರ ಜೀವನ ಹಾಗೂ ಸಮಗ್ರ ಹೋರಾಟದ ನೆಲೆ ಬಹುತೇಕ ಹಿಂದಿ ಮಾತನಾಡುವ ಅಥವಾ ಮರಾಠರಿಗೆ ಸಮೀಪವೆನಿಸುವ ಹಿಂದಿ ಪ್ರದೇಶ. ಜೊತೆಗೆ ಅನ್ಯ ಭಾಷೆಗಳಲ್ಲಿ ನಾವಿಂದು ಕಾಣುವ ಅವರ ಜೀವನ ಚರಿತ್ರೆಗಳು ಬಹುತೇಕ ಅವರ ಮಹಾಪರಿನಿರ್ಮಾಣದ ನಂತರ ರಚಿತವಾಗಿರುವಂಥವು.

ಅಂದರೆ, ಇಷ್ಟು ವಿವರಗಳ ಮುಖೇನ ಸ್ಪಷ್ಟಪಡಿಸಲು ಯತ್ನಿಸುತ್ತಿರುವುದೇನಂದರೆ, ಈಗ ಇಂಗ್ಲಿಷ್‌ಹಾಗೂ ಕನ್ನಡ ಭಾಷೆಗಳಲ್ಲಿ ಉಪಲಬ್ಧವಿರುವ ಅಂಬೇಡ್ಕರರ ಜೀವನವನ್ನು ಕುರಿತ ಸಾಮಗ್ರಿಗಳನ್ನು ಪರಿಶೀಲಿಸಿದ ಬಳಿಕ ಅತ್ಯಂತ ಮುಖ್ಯವಾದ ಸಂಗತಿಯೊಂದು ಕಂಡುಬರುತ್ತದೆ: ಅದೆಂದರೆ, ಅಂಬೇಡ್ಕರರ ಜೀವನವನ್ನು ಕುರಿತಂತೆ ಅಪಾರ ಸಂಖ್ಯೆಯಲ್ಲಿ ಕೃತಿಗಳ ಪ್ರಕಟಣೆಯಾಗಿದೆಯೇ ಹೊರತು, ಅವರ ವ್ಯಕ್ತಿಗಳ ಜೀವನವನ್ನೂ, ಆ ಜೀವನದ ಘಟನಾವಳಿಗಳನ್ನೂ ವೈಜ್ಞಾನಿಕವೂ ವಿಶ್ಲೇಷಣಾತ್ಮಕವೂ ಆದ ಒಂದು ಅಧ್ಯಯನಕ್ಕೆ ಅಳವಡಿಸಿ, ತನ್ಮೂಲಕ ಅವರ ಬಾಲ್ಯ ಅಥವಾ ವಿದ್ಯಾರ್ಥಿ ಜೀವನದ ಘಟನಾವಳಿಗಳು, ಅನಂತರದ ಅವರ ಹೋರಾಟದ ಸಾರ್ವಜನಿಕ ನೆಲೆಯಲ್ಲಿ ಪಡೆದುಕೊಂಡಿರುವ ಸ್ವರೂಪವೇನೆಂಬುದನ್ನು ಕಂಡುಕೊಳ್ಳುವ ಯಾವ ಯತ್ನವೂ ಈವರೆಗೆ ನಡೆದಿರುವಂತೆ ತೋರುವುದಿಲ್ಲ. ಅಥವಾ ನಮ್ಮ ಸ್ವಾತಂತ್ರ್ಯ ಯುಗಧರ್ಮದಿಂದ ಮೂಡಿ ಬಂದ ಅಂಬೇಡ್ಕರರಂಥ ಮಹಾಪುರುಷರ ವಿದ್ಯಾರ್ಥಿ ಜೀವನವನ್ನು ಕುರಿತು ವೈಜ್ಞಾನಿಕ ಜಿಜ್ಞಾಸೆಯ ಯಥಾರ್ಥತೆಯನ್ನು ಕಡೆಗಣಿಸಲು ಕಾರಣವಿರುವಂತೆಯೂ ತೋರುವುದಿಲ್ಲ. ಬದಲಾಗಿ, ನವಭಾರತ ನಿರ್ಮಾಪಕರಾದ ಅನ್ಯ ಮಹಾಪುರುಷರ ಬಾಲ್ಯಜೀವನಕ್ಕಿಂತಲೂ ಅಂಬೇಡ್ಕರರಂಥ ಮಹಾಪುರುಷರ ವಿದ್ಯಾರ್ಥಿ ಜೀವನವನ್ನು ಕುರಿತು ವೈಜ್ಞಾನಿಕ ಜಿಜ್ಞಾಸೆಯ ಯಥಾರ್ಥತೆಯನ್ನು ಕಡೆಗಣಿಸಲು ಕಾರಣವಿರುವಂತೆಯೂ ತೋರುವುದಿಲ್ಲ. ಬದಲಾಗಿ, ನವಭಾರತ ನಿರ್ಮಾಪಕರಾದ ಅನ್ಯ ಮಹಾಪುರುಷರ ಬಾಲ್ಯಜೀವನಕ್ಕಿಂತಲೂ ಅಂಬೇಡ್ಕರರ ಬಾಲ್ಯ ಜೀವನ ವಿಶಿಷ್ಟವಾದರೂ ವಿಶೇಷ ಅಧ್ಯಯನಾರ್ಹವಾದದ್ದು ಎಂದೆನಿಸುತ್ತದೆ.

ಆದ್ದರಿಂದ ಪ್ರಸ್ತುತ ಅಂಬೇಡ್ಕರ್ ಅವರ ಬಾಲ್ಯ ಅಥವಾ ವಿದ್ಯಾರ್ಥಿ ಜೀವನದ ಘಟನಾವಳಿಯನ್ನು ಸಮಗ್ರವಾಗಿಯೂ ಹಿನ್ನೆಲೆಯಲ್ಲಿ ಇರಿಸಿಕೊಂಡು, ಆ ಘಟನಾವಳಿಯಲ್ಲಿ ಅತ್ಯಂತ ಮುಖ್ಯವಾದ ಕೆಲವನ್ನು ಹೆಕ್ಕಿ ತೆಗೆದು ಅವುಗಳನ್ನು ಜೀವನ ಚರಿತ್ರೆಯ ಶಿಸ್ತಿನಲ್ಲಿ ವರದಿ ಮಾಡುವ ಬದಲು, ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡುವುದು ಇಲ್ಲಿನ ಉದ್ದೇಶವಾಗಿದ್ದು, ಸದ್ಯ ಇದೊಂದು ಅಪೂರ್ವವೂ ಬಹುಶಃ ಹೆಚ್ಚು ಪ್ರಯೋಜನಕಾರಿಯೂ ಆದ ಅಧ್ಯಯನವೆನಿಸಬಹುದೆಂದು ತೋರುತ್ತದೆ. ಅಲ್ಲದೆ, ಈ ಅಧ್ಯಾಯದಲ್ಲಿ ಅವರ ಬಾಲ್ಯಜೀವನವನ್ನಷ್ಟೇ ಚರ್ಚೆಗೆ ಎತ್ತಿಕೊಂಡಿದ್ದರೂ ಅವರ ಆನಂತರದ ಹೋರಾಟಮಯ ಜೀವನ ಹಾಗೂ ಅವರ ಪ್ರೌಢ ಚಿಂತನೆಯ ಎತ್ತರ-ವಿಸ್ತಾರಗಳೆಲ್ಲವೂ ಮುಂದಿನ ಅಧ್ಯಯನಗಳಲ್ಲಿ ಸ್ವಯಂಸಿದ್ಧವಾಗಿ ವ್ಯಕ್ತವಾಗುವುದನ್ನು ಕಾಣಬಹುದಾಗಿದೆ.

ಈ ಅಧ್ಯಯನಕ್ಕೆ ಇಂಗ್ಲಿಷ್‌ಹಾಗೂ ಕನ್ನಡ ಭಾಷೆಗಳಲ್ಲಿ ಈವರೆಗೆ ಪ್ರಕಟವಾಗಿರುವ ಹಾಗೂ ಪರಸ್ಪರ ಪೂರಕವಾಗಿಯೂ ಇರುವ ಬಹುತೇಕ ಎಲ್ಲ ಸಾಮಗ್ರಿಗಳನ್ನೂ ಮೂಲ ಆಕಾರಗಳನ್ನಾಗಿ ಆಧರಿಸಲಾಗಿದೆ.

ಇಲ್ಲಿ ಮೂಡಬಹುದಾದ ಇನ್ನೊಂದು ಸ್ಪಷ್ಟೀಕರಣವೆಂದರೆ, ಅಂಬೇಡ್ಕರ್ ಅವರ ವಿದ್ಯಾರ್ಥಿ ಜೀವನವನ್ನು ಕುರಿತ ಪ್ರಸ್ತುತ ವಿಶ್ಲೇಷಣೆಯಲ್ಲಿ, ಆ ಜೀವನದ ವ್ಯಾಪ್ತಿಯನ್ನು ಶೈಕ್ಷಣಿಕವಾಗಿ ಅವರು ಪಡೆದ ಎಂ. ಎ ಪದವಿಯ ಹಂತದವರೆಗೆ ಮಾತ್ರ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎರಡು ಕಾರಣಗಳು ಮೊದಲನೆಯದಾಗಿ, ಬಿ. ಎ. , ಪದವಿಯ ನಂತರದ ಅವರ ಸ್ನಾತಕೋತ್ತರ ಹಾಗೂ ತದನಂತರದ ಬಹುತೇಕ ಶೈಕ್ಷಣಿಕ ಸಂಶೋನಾಧಾರಿತ ಹಾಗೂ ಗೌರವದ ಪದವಿಗಳೆಲ್ಲಾ ಅವರಿಗೆ ಅಮೆರಿಕ, ಇಂಗ್ಲೆಂಡ್‌, ಸಿಲೋನ್‌ಹಾಗೂ ಜರ್ಮನಿಯ ಬಾನ್‌ವಿಶ್ವವಿದ್ಯಾಲಯ ಮುಂತಾದ ಪ್ರಪಂಚದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಿಂದ ಲಭ್ಯವಾದವು. ಹಾಗೆಯೇ ಉಸ್ಮಾನಿಯ ವಿಶ್ವವಿದ್ಯಾನಿಲಯ ಅವರಿಗೆ ಡಿ. ಲಿಟ್‌ಪದವಿ ನೀಡಿ ಗೌರವಿಸಿದ್ದು ಕೂಡ ಅವರು ವಿದೇಶಗಳಿಂದ ಬಂದ ನಂತರವೆ. ಅಂದರೆ ಸ್ನಾತಕೋತ್ತರ ಪದವಿಯ ನಂತರದ ಅವರ ಶೈಕ್ಷಣಿಕ ಸಾಧನೆ ಹಾಗೂ ಸಂಘಟನಾತ್ಮಕ ಹೋರಾಟದ ಮಜಲುಗಳು ಚರಿತ್ರೆಯ ಅಧ್ಯಾಯಗಳೆನಿಸಿವೆ. ಅಂತೆಯೇ, ಈ ಮಹಾಪ್ರಬಂಧದ ಮುಂದಿನ ಅಧ್ಯಾಯಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಈ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿಯೂ, ವಿಸ್ತಾರವಾಗಿಯೂ ಅರಿತುಕೊಳ್ಳಲು ಯತ್ನಿಸಬಹುದೆನಿಸುತ್ತದೆ. ಅಂದರೆ, ಈ ಅಧ್ಯಾಯದಲ್ಲಿ ಕೇವಲ ಅವರ ವಿದ್ಯಾರ್ಥಿ ಜೀವನದ ಎಂ. ಎ. ವರೆಗಿನ ಮುಖ್ಯ ಘಟನೆಗಳನ್ನು ಮಾತ್ರ ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಗಿದೆ.

ಇನ್ನು ಎರಡನೆಯ ಕಾರಣವೆಂದರೆ, ಅಂಬೇಡ್ಕರರು ಕೇವಲ ತಮ್ಮ ಬಿ. ಎ. ಪದವಿಯವರೆಗೆ ಮಾತ್ರ ಇಂಡಿಯಾದಲ್ಲಿ ವ್ಯಾಸಂಗ ಮಾಡಿದ್ದು ಎಂಬುದು ಎಂತೋ, ಅಂತೆಯೇ ಅಲ್ಲಿಯವರೆಗಿನ ಅವರ ಜೀವನವೇ ಅತ್ಯಂತ ಯಾತನಾಮಯವಾದುದು. ಯಾವುದೇ ಹೃದಯವಂತ ಮಾನವ ಎದೆಯನ್ನು ತಲ್ಲಣಗೊಳಿಸುವಂಥದ್ದು; ಅಂತೆಯೇ ಅವರ ಮುಂದಿನ ಬಹುದೀರ್ಘ ಹೋರಾಟದ ಜೀವನದ ಹೆಜ್ಜೆ ಹೆಜ್ಜೆಯ ಮೇಲೂ ಜ್ವಲಂತ ಪರಿಣಾಮವನ್ನು ಬೀರಿದುದು ಕೂಡ. ಅದೂ ಅಲ್ಲದೆ, ಭಾರತದಲ್ಲಿನ ಅಂಬೇಡ್ಕರರ ವಿದ್ಯಾರ್ಥಿ ಜೀವನ ಎಷ್ಟೊಂದು ಯಾತನಾಮಯವಾಗಿತ್ತು ಎಂಬುದನ್ನು, ಇದೇ ವಿದ್ಯಾರ್ಥಿ ಅಮೆರಿಕದಲ್ಲಿ ತೋರಿದ ಅಸಾಧಾರಣ ಪ್ರತಿಭೆಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲೂ ಬಹುದಾಗಿದೆ; ಏಕೆಂದರೆ, ೧೯೧೫ರಲ್ಲಿ ಅಂಬೇಡ್ಕರ್ ಅವರು ತಮ್ಮ ಫೈನಲ್‌ಎಂ. ಎ. ಪದವಿಗಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ “Administration and Finance of East India Company” ಎಂಬ ಡೆಸರ್ಟೇಷನ್‌ಪ್ರಬಂಧದಲ್ಲಿನ ಪ್ರೌಢ ಚಿಂತನೆ ಹಾಗೂ ಸಂಶೋಧನೆಯ ಶಿಸ್ತನ್ನೂ, ಆನಂತರದ ೧೯೧೬ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಜಗತ್ಪ್ರಸಿದ್ಧ ಡಾ. ಗೋಯಿಡೇನ್‌ವೀಸೇರ್ ರ ಮಾನವಶಾಸ್ತ್ರ ವಿಚಾರ ಸಂಕೀರಣದಲ್ಲಿ ಇದೇ ಇಪ್ಪತ್ತನಾಲ್ಕು ವರ್ಷ ವಯಸ್ಸಿನ ಅಂಬೇಡ್ಕರ್ ಅವರು ಮಂಡಿಸಿದ “Castes in India” ಎಂಬ ಪ್ರಬಂಧದಲ್ಲಿ, ಒಬ್ಬ ಅತ್ಯಂತ ಪ್ರಬುದ್ಧ ಲೇಖಕನಾಗುವ ಸ್ಪಷ್ಟ ಸೂಚನೆಯನ್ನೂ ಕಾಣಬಹುದಾಗಿದೆ. ಹಾಗೆಯೇ, ಇದೇ ಹಂತದಲ್ಲಿ ಮೂಡಬಹುದಾದ ಇನ್ನೊಂದು ಮುಖ್ಯ ಸೂಚನೆಯೆಂದರೆ, ಅಂಬೇಡ್ಕರ್ ಅವರ ಜೀವನ ಮಾತ್ರವಲ್ಲದೆ, ಅವರ ಶೋಧನೆ ಹಾಗೂ ಬರವಣಿಗೆಗಳೆಲ್ಲವೂ ಬಹುತೇಕ ಇಂಗ್ಲಿಷ್‌ಭಾಷೆಯಲ್ಲೇ ಇರುವುದರಿಂದ ಈ ಮಹಾಪ್ರಬಂಧದ ಯಾವುದೇ ಅಧ್ಯಾಯಕ್ಕೆ ಸಂಬಂಧಿಸಿದ, ಯಾವುದೇ ನಿದರ್ಶನವನ್ನು ಉದ್ಧರಿಸುವಾಗಲೂ ಅದರ ಮೂಲವನ್ನು ಮೊದಲು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿಕೊಂಡು, ತದನಂತರವೇ ಅದರ ಚರ್ಚೆಯಲ್ಲಿ ತೊಡಗಲಾಗುವುದು. ಆದಾಗ್ಯೂ ಅದೇ ಸಂದರ್ಭದಲ್ಲಿ ಮೂಲದ ಸೊಗಸನ್ನು ಉಳಿಸಿಕೊಳ್ಳುವ ಸಂದರ್ಭಗಳಲ್ಲಿ ಇಂಗ್ಲಿಷ್‌ನಲ್ಲೇ ಉದ್ಧರಣೆಗಳನ್ನು ಮಾಡಿಕೊಂಡು, ಅವುಗಳನ್ನು ಕುರಿತ ಜಿಜ್ಞಾಸೆಯನ್ನು ಸಹಜವಾಗಿಯೇ ಕನ್ನಡದಲ್ಲಿ ನಡೆಸಿಕೊಂಡು ಹೋಗುವುದಾಗಿದೆ.

ಬಾಲ್ಯದ ಸಂದರ್ಭ

ಅಂಬೇಡ್ಕರ್ ಅವರ ಬಾಲ್ಯ ಜೀವನವನ್ನು ವಿಶ್ಲೇಷಿಸಿ ಚರ್ಚಿಸುವ ಈ ಸಂದರ್ಭದಲ್ಲಿ ಈ ಚರಿತ್ರೆಪುರುಷನ ಹುಟ್ಟಿಗೂ ಮುಂಚಿನ ಇಂಡಿಯಾದ ಸಾಮಾಜಿಕ ವ್ಯವಸ್ಥೆಯ ಚಿತ್ರವನ್ನು ಅತ್ಯಂತ ಸ್ಥೂಲವಾಗಿಯಾದರೂ ಮೂಡಿಸುವ ಮೂಲಕ, ವಿಶೇಷವಾಗಿ ಅಂಬೇಡ್ಕರ್ ಅವರ ಜೀವನದ ಸಂದರ್ಭದಲ್ಲಾದರೂ, ಆ ಸಾಮಾಜಿಕ ವ್ಯವಸ್ಥೆಯ ಒಂದು ಸ್ವಲ್ಪ ಕಲ್ಪನೆಯನ್ನು ಮಾಡಿಕೊಳ್ಳುವುದು ವಿಷಯದ ಪರಿಣಾಮಕಾರಿಯಾದ ಸ್ಪಷ್ಟೀಕರಣಕ್ಕೆ ಅನುಕೂಲವೆಂದು ತೋರುತ್ತವೆ. ಏಕೆಂದರೆ ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದವರೆಗೂ ಅತ್ಯಂತ ಶೀಘ್ರಗತಿಯಲ್ಲೂ ತುಂಬಾ ದೊಡ್ಡ ಪ್ರಮಾಣದಲ್ಲೂ ಇಂಡಿಯಾದ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಣಿಸಿಕೊಂಡು ಸಮಾಜ ಸುಧಾರಣೆಯ ಚರಿತ್ರೆಯನ್ನು, ಅಮೂಲಾಗ್ರವಾಗಿ ಅಧ್ಯಯನ ಮಾಡಿದ ಬಳಿಕ ಗೋಚರವಾಗುವ ಬಹುಮುಖ್ಯವಾದ ಒಂದು ಸಂಗತಿ ಎಂದರೆ, ಅದುವರೆಗಿನ ಎಲ್ಲ ಸುಧಾರಣಾಕಾರರೂ ಕೇವಲ ಜಾತಿ ವ್ಯವಸ್ಥೆಯ ಕಾಠಿಣ್ಯವನ್ನು ಮಾತ್ರ, ಅದು ಕೇವಲ ಸ್ವಲ್ಪಮಟ್ಟಿಗೆ ಶಮನಗೊಳಿಸುವ, ಇಲ್ಲವೇ ಕೇವಲ ಸುಧಾರಿಸುವ “ಹಿಂದೂ ಸಮಾಜ ಸುಧಾರಣೆ” ಎಂಬಂಥ ಕಾರ್ಯಕ್ರಮಗಳಾಗಿದ್ದುವೇ ಹೊರತು, ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿಯೂ ಮೂಲೋತ್ಪಾದನೆ ಮಾಡಬೇಕೆಂಬುದಾಗಲಿ ಅಥವಾ ಅದಕ್ಕಿಂತಲೂ ಘೋರವಾಗಿದ್ದ ಅಸ್ಪೃಶ್ಯತೆಯಂಥ ಅಮಾನುಷ ಪದ್ಧತಿಯತ್ತ ಲೋಕದ ಗಮನ ಸೆಳೆದು, ತತ್ಪ್ರಣೀತೆ ಧೋರಣೆಯ ದಿಗ್ದರ್ಶನದಲ್ಲಿ ಅದರ ವಿನಾಶಕ್ಕಾಗಿ ಆಂದೋಲನಕ್ಕೆ ಸಜ್ಜುಗೊಂಡ ವ್ಯವಸ್ಥಿತ ಆಂದೋಲನಗಳಾಗಲಿ ನಡೆದಿರುವಂತೆ ತೋರುವುದಿಲ್ಲ.

ಈ ವಿಷಯವನ್ನು ರಾಜಾರಾಮ್‌ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ, ದಯಾನಂದ ಸರಸ್ವತಿ ಮುಂತಾದ ಅಂದಿನ ಸಮಾಜ ಸುಧಾರಕರನ್ನು ಕುರಿತ ಚರಿತ್ರೆಯಲ್ಲೂ, ಅವರ ಚಿಂತನೆಯಲ್ಲೂ ಸಾಧಾರವಾಗಿ ಕಂಡುಕೊಳ್ಳಬಹುದಾಗಿದೆ. ಆದರೆ ಇವರಲ್ಲಿ ಆಧುನಿಕ ಭಾರತದ ಹತ್ತೊಂಬತ್ತನೇ ಶತಮಾನದ ಆರಂಭದಿಂದಲೂ ಅಸ್ಪೃಶ್ಯತೆಯನ್ನು ಜಾತಿ ವ್ಯವಸ್ಥೆಗಿಂತಲೂ ಮೊದಲಾಗಿಯೂ ಈ ಎರಡು ಪೈಶಾಚಿಕ ಪದ್ಧತಿಗಳನ್ನೂ ಜೊತೆ ಜೊತೆಯಾಗಿಯೂ, ತಮ್ಮ ಆಂದೋಲನದ ಹೆಜ್ಜೆ ಹೆಜ್ಜೆಯಲ್ಲೂ ಎಡಬಿಡದೆ ಕೊಂಡೊಯ್ದವರು ಮಹಾರಾಷ್ಟ್ರದ ಮಹಾತ್ಮ ಜ್ಯೋತಿಬಾ ಫುಲೆಯವರೊಬ್ಬರೇ ಎಂಬುದನ್ನು ಕಾಣಬಹುದಾಗಿದೆ. ಬಹುಶಃ ಇದಕ್ಕೆ ಕಂಡುಬರುವ ಬಹುಮುಖ್ಯವಾದ ಕಾರಣವೆಂದರೆ, ರಾಜಾರಾಮ್‌ಮೋಹನ್‌ರಾಯ್‌, ದಯಾನಂದ ಸರಸ್ವತಿ ಮುಂತಾದ ಬಹುತೇಕ ಎಲ್ಲ ಸಮಾಜ ಸುಧಾರಕರೂ ಸಾಮಾಜಿಕವಾಗಿ ಮೇಲಿನ ಶ್ರೇಣಿಯಿಂದ ಬಂದವರು ಅಥವಾ ಅಸ್ಪೃಶ್ಯರಲ್ಲದವರು. ಅಂದರೆ ವೈದಿಕ ವ್ಯವಸ್ಥೆಯ ಸಾಮಾಜಿಕ ಧಾಇðಕ ಕ್ರೌರ್ಯಗಳನ್ನು ಶಮನಗೊಳಿಸಿ ಸುಧಾರಿಸಬೇಕೆಂಬ ವಿಷಯದಲ್ಲಿ ಅವರಿಗಿದ್ದ ಅಚಲ ನಂಬಿಕೆಯನ್ನಾಗಲಿ, ತಜ್ಜನಿತ ಚಳವಳಿಯ ಹಿಂದಿನ ಅವರ ಪ್ರಾಮಾಣಿಕತೆಯನ್ನಾಗಲಿ ಅನುಮಾನಿಸುವುದು ಅದರರ್ಥವಲ್ಲ. ಬದಲಾಗಿ, ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಯ ಹೇಯ ನಡವಳಿಕೆಯೂ ಅದರಿಂದುಂಟಾದ ಅವಮಾನವೂ, ಹುಟ್ಟಿನಿಂದ ಹೂವಾಡಿಗರಾದ ಜ್ಯೋತಿಬಾ ಫುಲೆ ಅವರನ್ನಾಗಲಿ, ಅಸ್ಪೃಶ್ಯರೇ ಆದ ಅಂಬೇಡ್ಕರರನ್ನಾಗಲಿ ಬಾಧಿಸದಂತೆ ರಾಜಾರಾಮ್‌ಮೋಹನ್‌ರಾಯ್‌ಮುಂತಾದವರನ್ನು ಬಾಧಿಸುವಂತಿರಲಿಲ್ಲ ಎಂದು ಮಾತ್ರ ಇದರರ್ಥ.

ಈ ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಕ್ರಿ. ಪೂ. ದ ಬುದ್ಧನ ಕಾಲದಲ್ಲೇ ಆರಂಭವಾಯಿತೆಂಬ ಚರಿತ್ರೆಯಿದ್ದರೂ, ಪ್ರಸ್ತುತ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳು ಭಾರತವನ್ನು ಆಳಿದ ಕಾಲಾವಧಿಯಲ್ಲೂ, ತದನಂತರ ನಿರ್ದಿಷ್ಟವಾಗಿ ಬ್ರಿಟಿಷ್‌ಆಡಳಿತ ಕಾಲದಲ್ಲೂ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾದ ಬದಲಾವಣೆಗಳ ನಿರಂತರ ಪ್ರತಿಕ್ರಿಯೆಯಲ್ಲಿ ಅಸ್ಪೃಶ್ಯತೆಯ ಸಮಸ್ಯೆಗೂ ಸ್ವತಃ ಅಸ್ಪೃಸ್ಯರಿಗೂ ಲಭ್ಯವಾದ ಉಪಶಮನ ಹಾಗೂ ಅವಕಾಶಗಳ ಒಂದು ಸ್ಥೂಲ ಚಿತ್ರಣವನ್ನು ಈಗ ಕಾಣಲೆತ್ನಿಸಬಹುದು. ಭಾರತದಲ್ಲಿ ಅತ್ಯಂತ ಉಚ್ಛ್ರಾಯ ಸ್ತರದಲ್ಲಿ ಮೆರೆದ

ಮಧ್ಯಕಾಲೀನ ಇಸ್ಲಾಂ ಯುಗದಲ್ಲಿ ಶೂದ್ರರಿಗೂ ಅಸ್ಪೃಶ್ಯರಿಗೂ ಶಿಕ್ಷಣ ಹಾಗೂ ಸವಾತಂತ್ರ್ಯವೇ ಮೊದಲಾದಮಾನವಹಕ್ಕುಗಳನ್ನು ನಿರಾಕರಿಸಲಾಯಿತು. ಬದಲಾಗಿ ಮುಸಲ್ಮಾನ್ಸಾಮ್ರಾಟರು ಹಿಂದೂಗಳಲ್ಲೇ ಕುಲೀನರು ಅಥವಾ ಸರದಾರರೆಂಬ ಒಂದು ವರ್ಗವನ್ನೇ ಹುಟ್ಟುಹಾಕಿದರು. ಅಂದರೆ, ಅವಕಾಶಗಳನ್ನು ಅಸ್ಪೃಶ್ಯರಿಗೆ ನಿರಾಕರಿಸಿದರು. ಇದಕ್ಕಿದ್ದ ಕಾರಣವೂ ತುಂಬಾ ಸರಳವಾಗಿತ್ತು. ಒಂದು ವೇಳೆ ಅಸ್ಪಶ್ಯರಿಗೂ ಅಂಥ ಅವಕಾಶಗಳನ್ನೂ ಕಲ್ಪಿಸಿದಲ್ಲಿ ಆಡಳಿತಗಾರರಾಗಿ ತಾವು ಸವರ್ಣೀಯರ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ದೂರಗಾಮಿ ಸತ್ಯವನ್ನು ಮುಸ್ಲಿಂ ಸಾಮ್ರಾಟರು ಬಲ್ಲವರಾಗಿದ್ದರು. ಅಷ್ಟೇ ಅಲ್ಲ, ಮರಾಠ ಸಾಮ್ರಾಜ್ಯದಲ್ಲಿ ಕೂಡ ಅಸ್ಪೃಶ್ಯರು ಅಥವಾಮಹರ್ ಯೋಧರು ಸೈನಿಕರಾಗಿ ಮುಸ್ಲಿಂ ಸೇನೆಯ ವಿರುದ್ಧ ವೀರತ್ವದಿಂದ ಹೋರಾಡಿದ ಅಸ್ಪೃಶ್ಯರು, ಮರಾಠ ಸಾಮ್ರಾಜ್ಯದ ಸುಭದ್ರತೆಗೆ ಮೂಲಕಾರಣರೇ ಆದರೂ, ಯಾವುದೇ ರೀತಿಯ ನಾಗರಿಕ ಅವಕಾಶಗಳೂ ಅಸ್ಪೃಶ್ಯರನ್ನು ಸ್ಪರ್ಶಿಸದಂತೆ ಮರಾಠ ದೊರೆಗಳು ಎಚ್ಚರ ವಹಿಸಿದರು. ಅಷ್ಟೇ ಏಕೆ? ಹಿಂದೂ ಸಾಮ್ರಾಜ್ಯವಾದಿಯಾದ ಛತ್ರಪತಿ ಶಿವಾಜಿ ಕೂಡ ಅಸ್ಪೃಶ್ಯತೆಯಂಥ ಪದ್ಧತಿಯನ್ನು ತೊಡೆದು ಹಾಕುವ ಕಿಂಚಿತ್ ಯತ್ನವನ್ನೂ ಮಾಡಲಿಲ್ಲ.

ಡಾ. ವಾಮನ ನಾರಾಯಣ ಕುಬೇರರ ಈ ಅಭಿಪ್ರಾಯದಲ್ಲಿ ಗಮನಾರ್ಹವಾದ ಕೆಲವು ಸಂಗತಿಗಳು ಅಡಕವಾಗಿರುವಂತೆ ತೋರುತ್ತದೆ.

೧. ಅಂಬೇಡ್ಕರರ ಬಾಲ್ಯ ಜೀವನಕ್ಕೆ ಲಭ್ಯವಾದ ಸಮಾಜಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವ ಪ್ರಸ್ತುತ ಈ ಯತ್ನದಲ್ಲಿ ಅತ್ಯಂತ ಸ್ಥೂಲವಾದ ನಮ್ಮ ಚರ್ಚೆಯನ್ನು ಇಸ್ಲಾಂ ಧರ್ಮದ ಆಳ್ವಿಕೆಯಿಂದ ಆರಂಭಿಸಿದ್ದೇವೆ ಎಂಬುದನ್ನು ನೆನಪಿಡಬೇಕು.

೨. ಅಸ್ಪೃಶ್ಯರು ಹಾಗೂ ಶೂದ್ರರನ್ನು ಎಲ್ಲ ರೀತಿಯ ಮಾನವ ಸ್ವಾತಂತ್ರ್ಯಗಳಿಂದಲೂ ವಂಚಿಸಿದ ಮುಸ್ಲಿಂ ಸಾಮ್ರಾಟರು, ಸುವರ್ಣ ಹಿಂದೂ ಜನಾಂಗದಲ್ಲೇ ‘ಕುಲೀನರು’ ಹಾಗೂ ‘ಸರದಾರರು’ ಎಂಬುದಾಗಿ, ಅಂದರೆ ಹಿಂದಿಲ್ಲದಿದ್ದ ಒಂದು ವರ್ಗವನ್ನೇ ಹುಟ್ಟು ಹಾಕಿದರೆಂಬ ಅಭಿಪ್ರಾಯದಲ್ಲಿ ಅಡಗಿರುವ, ನಿಷ್ಠುರ ವಾಸತವ ಸತ್ಯದ ಅಗಾಧ ಸ್ವರೂಪವನ್ನು ಕಂಡುಕೊಳ್ಳಲೆತ್ನಿಸಬೇಕು. ಕಾರಣ, “ಒಡೆದು ಆಳುವ ನೀತಿ”ಯನ್ನು ಬ್ರಿಟಿಷರು ಜಾರಿಗೆ ತಂದರು ಎಂಬ ಚರಿತ್ರೆಗಾರರ ಮಾತು ಎಷ್ಟರ ಮಟ್ಟಿಗೆ ಸತ್ಯ ದೂರವಾದುದು ಎಂಬುದು ಇಂತಲ್ಲಿ ತುಂಬಾ ಸರಳವಾಗಿಯೂ ಮನವರಿಕೆಯಾಗುತ್ತದೆ. ಏಕೆಂದರೆ, ಹಿಂದೂ ಜನಾಂಗವನ್ನು ಆಳುವ ದೃಷ್ಟಿಯಲ್ಲಿ ಒಡೆದು, ವಿಭಜಿಸಿ, ಛಿದ್ರಗೊಳಿಸುವ ಪ್ರಮೇಯ ಬ್ರಿಟಿಷರಿಗೆ ಮಾತ್ರವೇಕೆ? ಅವರಿಗಿಂತ ಹಲವಾರು ಶತಮಾನಗಳಷ್ಟು ಹಿಂದಿನವರಾದ ಮುಸ್ಲಿಂ ಸಾಮ್ರಾಟರಿಗೂ ಆ ಪ್ರಮೇಯವಿರಲಿಲ್ಲ. ಇದರರ್ಥವಿಷ್ಟೆ, ಕಾಲಾನುಕಾಲದಿಂದಲೂ, ತಮ್ಮ ತಮ್ಮಲ್ಲೇ ಹರಿದು ಹಂಚಿಹೋಗಿ, ಒಡೆದು ಛಿದ್ರವಾಗಿಯೂ, ತಾವೊಂದು ಜನಾಂಗ, ತಮ್ಮದೊಂದು ಸಮಾಜ ಎಂಬ ನಿತ್ಯಭ್ರಮೆಯಲ್ಲೇ ಬದುಕಿದ್ದ ಹಿಂದೂ ಜನಾಂಗವನ್ನು, ಮೊದಲೇ ಒಡೆದು ಹೋಳಾಗಿದ್ದ ನಿಜ ಸ್ಥಿತಿಯ ಮೇಲೆ, ಅತಿ ಸುಲಭವಾಗಿಯೇ ಅವರು ತಮ್ಮ ದಾಸ್ಯವನ್ನು ಹೇರಿ, ಹಿಂದೂಗಳನ್ನು ಬಹುಕಾಲ ಆಳಿದವರು ಮುಸ್ಲಿಂ ಸಾಮ್ರಾಟರು ಹಾಗೂ ಬ್ರಿಟಿಷ್‌ಚಕ್ರಾಧಿಪತಿಗಳು ಎಂಬುದು ಇದುವರೆಗಿನ ಬಹುತೇಕ ಚರಿತ್ರೆಗಾರರ ಪಕ್ಷಪಾತಕ್ಕೆ ಗುರಿಯಾಗಿರುವ ಸತ್ಯ.

೩. ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಕನಸುಗಾರನಾದ ಮತಾಂಧ ಛತ್ರಪತಿ ಶಿವಾಜಿ ಮುಸ್ಲಿಂ ಜನಾಂಗವನ್ನೇ ನಾಶ ಮಾಡುವ ಪಣತೊಟ್ಟು, ಮಹಾರಾಷ್ಟ್ರದ ಬೆಟ್ಟ, ಗುಡ್ಡಗಳಲ್ಲಿ ಓಡಾಡಿದ; ಆದರೆ, ಧಾರ್ಮಿಕವಾಗಿ ಒಂದು ವಿಛಿತ್ರಕಾರಕ ಶಕ್ತಿಯಾಗಿ, ಹಿಂದೂ ಧರ್ಮದೊಳಗೆ ಇದ್ದ, ಅಸ್ಪೃಶ್ಯತೆಯಂಥ ಪೈಶಾಚಿಕ ಪದ್ಧತಿಯ ನೆನಪೇ ಈ ಶೂದ್ರ ಶಿವಾಜಿಗೆ ಇದ್ದಂತಿರಲಿಲ್ಲ ಎಂಬುದು ಕಾಕತಾಳಿಯವೆಂದೇನೂ ಬಗೆಯಬೇಕಾದ್ದಿಲ್ಲ.

೪. ಈ ಮೇಲೆ ಉದ್ಧರಿಸಿರುವ ಕುಬೇರರ ಅಭಿಪ್ರಾಯದಲ್ಲಿ ಈ ಮುಂದೆ ಹೇಳುತ್ತಿರುವ ಮಾತು ಇಲ್ಲವೆಂಬುದು ಸತ್ಯವಾದರೂ, ಮುಸ್ಲಿಂ ಹಾಗೂ ಮರಾಠ ಸಾಮ್ರಾಜ್ಯಗಳ ಚರಿತ್ರೆಯಲ್ಲಿ ಈ ಸತ್ಯ ಅತ್ಯಂತ ನಿಗೂಢವಾಗಿ ಅಡಗಿದೆ ಎಂಬುದನ್ನು ಮರೆಯದಿರಬೇಕು. ಅದೆಂದರೆ, ಮುಸ್ಲಿಂ ಹಾಗೂ ಮರಾಠ ಸಾಮ್ರಾಟರ ಸೈನ್ಯಗಳ ಯೋಧರೆನಿಸಿ, ಅವರವರ ಸಾಮ್ರಾಜ್ಯಗಳಿಗಾಗಿ ನಿಜ ವೀರತ್ವದಿಂದ ಹೋರಾಡಿದವರು ಈ ಮಹರ್ ಅಸ್ಪೃಶ್ಯ ಜನಾಂಗ ಎಂಬುದು. ಆದರೆ ಈ ಎರಡು ಸಾಮ್ರಾಜ್ಯಗಳಲ್ಲೂ ಯಾವುದೇ ರೀತಿಯ ಮಾನವ ಸ್ವಾತಂತ್ರ್ಯವೂ ಇಲ್ಲದೆ, ಈ ಇಬ್ಬರಲ್ಲೂ ಇಬ್ಬಗೆಯ ಗುಲಾಮಗಿರಿಯನ್ನು ಅನುಭವಿಸಿದವರು ಅಸ್ಪೃಶ್ಯರು ಮಾತ್ರ ಎಂಬ ತೀರ್ಮಾನಕ್ಕೆ ಬರಲು ಬಹುಶಃ ಯಾವ ಚರಿತ್ರೆಗಾರನ ನೆರವೂ ಅಗತ್ಯವಿದ್ದಂತಿಲ್ಲ.

ನಾವಿನ್ನೂ ಅಂಬೇಡ್ಕರರ ವಿದ್ಯಾರ್ಥಿ ಜೀವನದ ಘಟನಾವಳಿಗಳನ್ನು ಪ್ರವೇಶಿಸಿಲ್ಲವೆಂಬುದು ನೆನಪಿದೆ. ಆದರೆ ಇಂದು ನಾವು ಚರಿತ್ರೆಯಲ್ಲಿ ಕಾಣುವ ಅಂಬೇಡ್ಕರರ ಅಗಾಧ ವ್ಯಕ್ತಿ ಸ್ವರೂಪ ಹಾಗೂ ವ್ಯಕ್ತಿತ್ವಗಳು ತಮ್ಮದೇ ಆದಂಥ ರೂಪಧಾರಣ ಮಾಡಿದುದಕ್ಕೆ, ಅವರ ಜೀವನದ ಆರಂಭದ ಕಾಲ ಹೇಗಿದ್ದಿರಬೇಕು ಎಂಬುದುದನ್ನು ಕಲ್ಪಸಿಕೊಳ್ಳಬೇಕಾದರೆ, ಇದುವರೆಗೆ ನಾವು ಚರ್ಚಿಸಿರುವ ಸಾಮಾಜಿಕ ಹಿನ್ನೆಲೆ ಮಾತ್ರವಲ್ಲದೆ, ಇಸ್ಲಾಂ ಧರ್ಮದ ನಂತರ ಭಾರತವನ್ನು ಆಳಿದ ಕ್ರೈಸ್ತಧರ್ಮದ ಆಳ್ವಿಕೆಯ ಕಾಲದ, ಕೇವಲ ಶೈಕ್ಷಣಿಕ ಹಿನ್ನೆಲೆಯನ್ನಾದರೂ ಇಲ್ಲಿ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಬೇಕಾದುದು ಅನಿವಾರ್ಯವೆನಿಸುತ್ತದೆ. ಏಕೆಂದರೆ, ಭರತದ ಸ್ವಾತಂತ್ರ್ಯಪೂರ್ವದ ದಶಕಗಳಲ್ಲಿ, ಇಡೀ ದೇಶದಲ್ಲಿ ಅಂಬೇಡ್ಕರರಿಗೆ ಸರಿಸಾಟಿಯೆನಿಸುವ ಶೈಕ್ಷಣಿಕ ಪದವಿಗಳನ್ನು ಹೊಂದಿದ್ದ ಇನ್ನೊಬ್ಬ ಅಭ್ಯರ್ಥಿಯಿದ್ದಂತೆ ಕಂಡುಬರುವುದಿಲ್ಲ. ಏಕೆಂದರೆ, ಒಬ್ಬ ಯಕಚ್ಚಿತ್‌ಅಸ್ಪೃಸ್ಯರ ಹುಡುಗನಾದ ಅಂಬೇಡ್ಕರರಲ್ಲಿ ಇಂಥ ಸರಿಸಾಟಿಯಿಲ್ಲದ ಶೈಕ್ಷಣಿಕ ಪದವಿಗಳ ಸಾಧನೆಯ ಮಹದಂಬಲ ಉಂಟಾಗಬೇಕೆಂಬುದು ತಾರ್ಕಿಕವಾಗಿ ಸತ್ಯವಾದರೂ, ಆ ಸಂಕಲ್ಪಕ್ಕೆ ಸೂಕ್ತವಾದ ಶೈಕ್ಷಣಿಕ ಅವಕಾಶವೂ ಸ್ವತಃ ಸಾಮಾಜಿಕ ವ್ಯವಸ್ಥೆಯಲ್ಲೇ ಸಾರ್ವತ್ರಿಕವಾಗಿಯೇ ಚಾಲ್ತಿಯಲ್ಲಿದ್ದಿರಬೇಕಷ್ಟೆ. ಅಂತೆಯೇ ಇನ್ನು ಕ್ರೈಸ್ತಧರ್ಮದ ಆಳ್ವಿಕೆಯ ಕಾಲದಲ್ಲಿನ ಅಸ್ಪೃಶ್ಯರ ಸ್ಥಿತಿಗಳನ್ನು ಸ್ವಲ್ಪ ತಿಳಿಯಲೆತ್ನಿಸಬಹುದು. ಇಸ್ಲಾಂ ಧರ್ಮದ ನಂತರ ಭಾರತದ ಗದ್ದುಗೆಯನ್ನೇರಿದ ಕ್ರೈಸ್ತಧರ್ಮದ ಆಳ್ವಿಕೆಯ ಕಾಲದಲ್ಲಿ ಕೂಡ ಅಸ್ಪೃಶ್ಯರ ಸ್ಥಿತಿಗತಿಗಳು ಉತ್ತಮಗೊಳ್ಳಲು ಸಾಧ್ಯವಾಗಲಿಲ್ಲ. ಅಸ್ಪೃಶ್ಯರ ಆರ್ಥಿಕ, ಸಾಮಾಜಿಕ ಸ್ಥಿತಿಗಳು ಉತ್ತಮಗೊಳ್ಳಲು ಸಾಧ್ಯವಾಗಲಿಲ್ಲ. ಅಸ್ಪೃಶ್ಯರ ಆರ್ಥಿಕ, ಸಾಮಾಜಿ ಸ್ಥಿತಿಗತಿಗಳು, ನಿಶ್ಚಿಲವಾಗಿ ನಿಂತುಹೋದುದು ಮಾತ್ರವಲ್ಲದೆ, ವೈದಿಕ ಜಾತಿ ವ್ಯವಸ್ಥೆಯಲ್ಲಿ ಬ್ರಿಟಿಷ್‌ಸಾಮ್ರಾಜ್ಯದ ಕೊನೆಗಾಲದವರೆಗೂ ಅಸ್ಪೃಶ್ಯರ ಬದುಕು ಅತ್ಯಂತ ಶೋಚನೀಯ ಸ್ಥಿತಿಯನ್ನು ಮುಟ್ಟಿದ್ದಿತ್ತು.

ಸಾರ್ವತ್ರಿಕ ಶಿಕ್ಷಣ ನೀತಿ

ಸ್ವಾತಂತ್ರ್ಯಪೂರ್ವ ಇಂಡಿಯಾದ ಶೈಕ್ಷಣಿಕ ಹಿನ್ನೆಲೆಯ ಚರಿತ್ರೆಯನ್ನು ಅಧ್ಯಯನ ಮಾಡಿದ ಬಳಿಕ, ತುಂಬಾ ತೀವ್ರವಾಗಿ ಗಮನ ಸೆಳೆಯುವ ಅತ್ಯಂತ ಗಮನಾರ್ಹವಾದ ಅಧ್ಯಾಯವೆಂದರೆ, ಬ್ರಿಟಿಷ್‌ಶಿಕ್ಷಣತಜ್ಞ ಮೆಕಾಲೆ ಜಾರಿಗೆ ತಂದ ಸಾರ್ವತ್ರಿಕ ಶಿಕ್ಷಣ ನೀತಿ. ಇದು ಸಾಂದರ್ಭಿಕವಾಗಿ ತುಂಬಾ ಆಕಸ್ಮಿಕ ಎಂಬುದು ಸತ್ಯವೇ ಆದರೂ, ಈ ಶಿಕ್ಷಣ ನೀತಿ ಇಡೀ ದೇಶದ ಜನಜಾಗೃತಿಯ ಚರಿತ್ರೆಯಲ್ಲಿ, ಅದರಲ್ಲೂ ವಿಶೇಷವಾಗಿ, ನಾಡಿನ ಶೂದ್ರಾತಿಶೂದ್ರ ಜನಕೋಟಿಯ ಸಾಮೂಹಿಕ ಜನಜಾಗೃತಿಯ ಚರಿತ್ರೆಯಲ್ಲಿ ಈ ಮೆಕಾಲೆ ಶಿಕ್ಷಣ ನೀತಿ ಒಂದು ಅಪೂರ್ವ ಮೈಲಿಗಲ್ಲು. ಅಂತೆಯೇ, ಅಂಬೇಡ್ಕರರ ಜೀವನದಲ್ಲಿ ಲಭ್ಯವಾದ ಶೈಕ್ಷಣಿಕ ಅವಕಾಶಗಳ ಮೂಲಗಳಲ್ಲಿ ಇದು ಬಹುಮುಖ್ಯವಾದುದೆಂಬುದು ಕೂಡ ಸ್ವಾಭಾವಿಕವಾಗಿಯೇ ಇದೆ. ಈ ಪಾಶ್ಚಾತ್ಯ ಶಿಕ್ಷಣ ನೀತಿ ಭಾರತೀಯ ಜೀವನ ಸಂದರ್ಭದಲ್ಲಿ ಒಂದು ಹೊಸ ಬಗೆಯ ಧಾರ್ಮಿಕ ಹಾಗೂ ರಾಜಕೀಯ ಚಿಂತನೆಗೆ ಬುನಾದಿಯಾಯಿತು. ಭಂಡಾರ್ ಕರ್ , ಮಹಾದೇವ ಗೋವಿಂದ ರಾನಡೆ, ಚಿಪಲೂಂಕರ್ ತಿಲಕ್ , ಅಗರ್ ಕರ್ , ಗೋಖಲೆ ಮುಂತಾದವರು ಮಹಾರಾಷ್ಟ್ರದಲ್ಲೂ, ವಿಜಯ ರಾಘವಾಚಾರ್ಯ, ಪಂತುಲಾ, ರಂಗಯ್ಯನಾಯ್ಡು, ಜೀ. ಸುಬ್ರಮಣ್ಯ ಅಯ್ಯರ್ ಮೊದಲಾದವರು ಮದರಾಸ್ ಪ್ರಾಂತ್ಯದಲ್ಲೂ, ಬಂಗಾಳದಲ್ಲಿ ಅರಬಿಂದೂ, ವಿವೇಕಾನಂದ, ಜೆ. ಸಿ. ಬೋಸ್, ಪಿ. ಸಿ. ರಾಯ್‌ಮುಂತಾದವರು ಹಾಗೆಯೇ ಪಂಜಾಬ್‌ನಲ್ಲಿ ಹಂಸರಾಜ್‌, ಶ್ರದ್ಧಾಂದ, ಲಾಲಾ ಲಜಪತರಾಯ್‌ಮುಂತಾದ ಹಲವಾರು ನೇತಾರರು ಈ ಪಾಶ್ಚಾತ್ಯ ಶಿಕ್ಷಣದಿಂದಲೇ ಮೂಡಿ ಬಂದವರಾಗಿದ್ದು, ಇವರು ಇಡೀ ದೇಶದ ಸಾಮಾಜಿಕ, ಧಾರ್ಮಿಕ ಆಂದೋಲನವನ್ನೇ ತಂತಮ್ಮ ಧ್ಯೇಯ ದೃಷ್ಟಿಕೋನಗಳಲ್ಲಿ ಮುನ್ನಡೆಸಿದ, ಭಾರತೀಯ ಜನಜಾಗೃತಿ ಆಂದೋಲನದ ಪ್ರಥಮ ಶ್ರೇಣಿಯ ನೇತಾರರು ಕೂಡ ಆಗಿದ್ದಾರೆ. ಸರ್ವ ಸಮಾನತಾ ಆಂದೋಲನವನ್ನು ಇಡೀ ಮಹಾರಾಷ್ಟ್ರದಾದ್ಯಂತ ಮುನ್ನಡೆಸಿದವರು ಜ್ಯೋತಿಬಾ ಫುಲೆಯವರು. ೧೮೭೩ರಲ್ಲಿ ಅವರು ಸ್ಥಾಪಿಸಿದ ಸಂಸ್ಥೆ “ಸತ್ಯಶೋಧಕ ಸಮಾಜ” ಹಿಂದೂ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ಇರಬೇಕೆಂಬುದೇ ಫುಲೆಯವರ ಹೋರಾಟದ ಪರಮ ಗುರಿ. ಅಷ್ಟೇ ಅಲ್ಲದೆ, ಅಸ್ಪೃಶ್ಯ ಮಾನವ ಚೇತನಗಳನ್ನು ಜಾಗೃತಗೊಳಿಸುವ ಮೂಲಕ, ಇಡೀ ದೇಶದ ಜನಸಮುದಾಯದ ಅಂತಃಕರಣದಲ್ಲಿ ಸ್ವಾಭಿಮಾನದ ಸಂಚಯನ ಮೂಡಿಸಿದ ಏಕೈಕ ವ್ಯಕ್ತಿ ಜ್ಯೋತಿಬಾ ಫುಲೆ”. ಅಂದರೆ, ಭಾರತದಲ್ಲಿ ಇದು ಬ್ರಿಟಿಷ್‌ಶಿಕ್ಷಣ ತಜ್ಞ ಮೆಕಾಲೆ ಯುಗವೂ ಎನಿಸಿದ್ದು, ಇಡೀ ದೆಶದಲ್ಲಿ ಪ್ರಪ್ರಥಮ ಭಾರಿಗೆ ಒಂದು ಸಾರ್ವತ್ರಿಕ ಶಿಕ್ಷಣ ನೀತಿಯನ್ನು ಜಾರಿಗೊಳಿದಂತಾಯಿತು.

ಮೇಲೆ ತಿಳಿಸಿರುವ ಪಟ್ಟಿಯಷ್ಟೇ ಅಲ್ಲದೆ, ಲಾಲಾ ಲಜಪತ್‌ರಾಯರ ತಲೆಮಾರಿನ ನೂರಾರು ಜನರ ರಾಷ್ಟ್ರಮಟ್ಟದ ನಾಯಕರು ಕೂಡ, ಇಂಗ್ಲೆಂಡಿನಲ್ಲಿ ಪಾಶ್ಚಾತ್ಯ ಶೈಲಿಯ ಶಿಕ್ಷಣವನ್ನು ಪಡೆದವರಾಗಿದ್ದು, ಅವರ ನಾಯಕತ್ವದಲ್ಲಿ ಇಡೀ ದೇಶವೇ ಒಂದು ರೀತಿಯಲ್ಲಿ ಒಂದು ಅಪೂರ್ವ ಶೈಕ್ಷಣಿಕ ಅವಕಾಶವನ್ನು ಪಡೆದುಕೊಂಡಂತಾಗಿತ್ತು. ಆದರೂ ಮೆಕಾಲೆ ಶಿಕ್ಷಣ ನೀತಿಯಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಭಾರತದಲ್ಲಿ ಬ್ರಿಟಿಷ್‌ಸರ್ಕಾರಕ್ಕೆ ನಿಷ್ಠರಾದ ಕೇವಲ ಗುಮಾಸ್ತರನ್ನು ಸೃಷ್ಟಿಸುವುದು ಮಾತ್ರ ಮೆಕಾಲೆ ಶಿಕ್ಷಣ ನೀತಿಯ ಪರಮ ಧ್ಯೇಯವೆನಿಸಿತ್ತು. ಆದರೆ ಬ್ರಿಟಿಷ್‌ಸರ್ಕಾರ ಜಾರಿಗೆ ತಂದ ಈ ಶಿಕ್ಷಣ ನೀತಿಯ ಉದ್ದೇಶವೇನೇ ಆಗಿದ್ದರೂ, ಅದರ ಪರಿಣಾಮ ಮಾತ್ರ ಬ್ರಿಟಿಷರ ಸದ್ಯದ ಉದ್ದೇಶದ ಎಲೆಲಯನ್ನು ಮೀರಿ, ಒಂದು ಬಗೆಯ ಅನುದ್ದೇಶಿತ ಗುರಿಯತ್ತ ಬ್ರಿಟಿಷ್‌ಸರಕಾರವನ್ನೂ, ಇಡೀ ದಶದ ಸಾಮಾಜಿಕ ಜೀವನವನ್ನೂ ಕೊಂಡೊಯ್ದಿತು ಎಂಬುದು ಆನಂತರದ ಚರಿತ್ರೆಯಾಗಿದೆ. ಇದೇನೇ ಇದ್ದರೂ, ಇಡೀ ದೇಶದ ಉದ್ದಗಲಕ್ಕೂ ಬೀಸಿಹೋದ ಈ ಅಪೂರ್ವ ಶೈಕ್ಷಣಿಕ ನೀತಿಯ ಹೊಸಗಾಳಿ ಮತ್ತು ಅದರ ಫಲ ಅಂಬೇಡ್ಕರರಿಗೂ, ಅವರಂಥವರಿಗೂ ಅತ್ಯಂತ ಸ್ವಾಭಾವಿಕವಾಗಿಯೇ ಲಭ್ಯವಾಗುವುದು ಎಷ್ಟರಮಟ್ಟಿಗೆ ಸ್ವಾಭಾವಿಕವಾಯಿತೆಂದರೆ, ಆ ಕಾಲದಲ್ಲಿ ಶಾಲೆಗೆ ಬರುವ ಅಂಬೇಡ್ಕರರಂಥ ಅಸ್ಪೃಶ್ಯರ ಮಕ್ಕಳಿಗೆ ವೈದಿಕ ಉಪಾಧ್ಯಾಯರು ಕಿರುಕುಳ ಕೊಡಬಹುದಿತ್ತೇ ಹೊರತು, ಸಾರ್ವಜನಿಕವಾದ ಅಂದಿನ ಶೈಕ್ಷಣಿಕ ಅವಕಾಶಗಳನ್ನೇ ಅಥವಾ ಸರಕಾರದ ಶಿಕ್ಷಣ ನೀತಿಯನ್ನೇ ತಡೆಯುವ ಯಾವ ಯತ್ನವೂ ಬ್ರಿಟಿಷ್‌ಸರಕಾರಕ್ಕೆ ಸಹನಯೋಗ್ಯವಾಗಿರಲಿಲ್ಲ. ಏಕೆಂದರೆ, ಅದು ಬ್ರಿಟಿಷ್‌ಸರಕಾರದ್ದೇ ಆದ ಶಿಕ್ಷಣ ನೀತಿಯಾಗಿತ್ತು. ಅಂತೆಯೇ ಈ ಸ್ಥಿತಿಯನ್ನು ಸ್ವತಃ ಅಂಬೇಡ್ಕರರ ಶಾಲಾ ಜೀವನದಲ್ಲೂ ಕಂಡುಕೊಳ್ಳಬಹುದಾಗಿದೆ.

ಶಾಲಾ ಜೀವನದ ಘಟನಾವಳಿ

ಬಹುಶಃ ಇಲ್ಲಿಂದ ಮುಂದಕ್ಕೆ ಅಂಬೇಡ್ಕರರ ಶಾಲಾ ಜೀವನದ ಸ್ವತಃ ಘಟನಾವಳಿಗಳನ್ನೇ ನೇರವಾಗಿ ಪ್ರವೇಶಿಸಬಹುದೆನಿಸುತ್ತದೆ. ಇನ್ನೊಂದು ಮಾತು; ಅಂಬೇಡ್ಕರರ ವಿದ್ಯಾರ್ಥಿ ಜೀವನದ ಅನೇಕ ಹಂತದಲ್ಲಿ ಹಲವಾರು ಘಟನೆಗಳೂ ಸಂಗತಿಗಳು ಜರುಗಿಹೋಗಿದ್ದರೂ, ಪ್ರಸ್ತುತ ಅಮುಖ್ಯ ಘಟನೆಗಳನ್ನು ಕೇವಲ ಚಿತ್ರಣ ಮಾಡಿ ಬಿಡುತ್ತ, ಉಳಿದಂತೆ ಮನಕಲಕುವಂತಿರುವ ಅನ್ಯ ಕೆಲವು ಮುಖ್ಯ ಘಟನೆಗಳನ್ನು ವಿಶ್ಲೇಷಿಸುತ್ತಾ ಹೋಗಬಹುದೆಂದು ತೋರುತ್ತದೆ. ಏಕೆಂದರೆ ಈಗಾಗಲೇ ಸೂಚಿಸಿರುವಂತೆ ಅಂಬೇಡ್ಕರರ ಬಾಲ್ಯ ಜೀವನದ ತೀವರ ಅನುಭವಗಳು, ಆನಂತರದ ಅವರ ಸಂಘರ್ಷಾತ್ಮಕ ಪ್ರಣಾಳೀಕೆಯೇ ಆಗಿಯೂ ವ್ಯಕ್ತಿಗತ ಜೀವನದ ಮಾರ್ಗವೂ ಆಗಿ, ಅವರ ಚಿಂತನೆಯ ಮೇಲೆ ಅವು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಎಂಬುದನ್ನು ಕಂಡುಕೊಳ್ಳುವುದೇ ಪ್ರಸ್ತುತ ವಿವೇಚನೆಯ ಉದ್ದೇಶವಾಗಿದೆ.

ಈಗ ನೇರವಾಗಿ ವಿಷಯವನ್ನು ಪ್ರವೇಶಿಸುವ ಮೊದಲು, ಅಂಬೇಡ್ಕರರ ಜೀವನವನ್ನು ಕುರಿತ ಪ್ರಸ್ತುತ ವಿಶ್ಲೇಷಣೆಯ ಸಂದರ್ಭದಲ್ಲಿ ತುಂಬಾ ಗಮನಾರ್ಹವೆನಿಸುವ ಎರಡು ಪ್ರಶ್ನೆಗಳನ್ನು ಪರಿಶೀಲಿಸುವುದು ಅರ್ಥಪೂರ್ಣವೆನಿಸುತ್ತದೆ. ಉದಾಹರಣೆಗೆ: ಅಂಬೇಡ್ಕರರ ಬಾಲ್ಯ ಜೀವನದ ವೈಶಿಷ್ಟ್ಯವೇನು? ಹಾಗೆಯೇ, ಅಂಬೇಡ್ಕರರ ಯುಗದ ರಾಷ್ಟ್ರಮಟ್ಟದ ಉಳಿದ ನಾಯಕರ ಬಾಲ್ಯ ಜೀವನಕ್ಕಿಂತ ಭಿನ್ನವೆನಿಸಿದೆ? ಬಹುಶಃ ಈ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕೆಂದರೆ, ಸ್ವಾತಂತ್ರ್ಯಪೂರ್ವ ಇಂಡಿಯಾದ ಸಮಸ್ತ ರಾಷ್ಟ್ರ ನಾಯಕರ ಚರಿತ್ರೆಯಲ್ಲಿ, ಅವರು ಬಂದಂಥ ಕೌಟುಂಬಿಕ ಸಾಮಾಜಿಕ ಹಿನ್ನೆಲೆಯ ವಿವರಗಳನ್ನು ಸಮಗ್ರವಾಗಿ ಸಾಧ್ಯವಿಲ್ಲದಿದ್ದರೂ, ಸ್ಥೂಲವಾಗಿಯಾದರೂ ಅವಲೋಕಿಸಲೇಬೇಕಾದುದು ಅನಿವಾರ್ಯವೆನಿಸುತ್ತದೆ. ಆದ್ದರಿಂದ ಪ್ರಸ್ತುತ ನಿದರ್ಶನಕ್ಕಾಗಿ ಕೆಲವು ಮಾಹಿತಿಗಳನ್ನಾದರೂ ಸ್ಥೂಲವಾಗಿ ಮನನಮಾಡಿಕೊಳ್ಳಬಹುದು. ಅಂದಿನ ಬಹುತೇಕ ರಾಷ್ಟ್ರನಾಯಕರು ಸಾಮಾಜಿಕವಾಗಿ ಮೇಲಿನ ಶ್ರೇಣಿಯಿಂದ ಬಂದವರು ಮಾತ್ರವಾಗಿರದೆ, ಆರ್ಥಿಕವಾಗಿಯೂ ಕೆಲವರು ಅತ್ಯಂತ ಶ್ರೀಮಂತಿಕೆಯಿಂದಲೂ, ಮತ್ತೆ ಕೆಲವರು ಸಾಮಾನ್ಯ ಶ್ರೀಮಂತಿಕೆಯ ಮನೆತನಗಳಿಂದಲೂ ಬಂದವರಾಗಿರುತ್ತಾರೆ ಎಂಬುದನ್ನು ಈಗಾಗಲೇ ಒಂದು ಮಾತಿನಲ್ಲಿ ತಿಳಿಸಲಾಗಿದೆ. ಉದಾಹರಣೆಗೆ; ಇಂಡಿಯಾದ ಪ್ರಥಮ ಶ್ರೇಣಿಯ ಸ್ವಾತಂತ್ರ್ಯ ಯೋಧರೆನಿಸಿರುವ ಸುಭಾಷ್‌ಚಂದ್ರ ಬೋಸರು ಒರಿಸ್ಸಾದ ಕಟಕ್ ಪ್ರಾಂತ್ಯದಲ್ಲಿ ಒಂದು ಸುಪ್ರಸಿದ್ಧ ವಕೀಲರ ಹಾಗೂ ಜಮೀನ್ದಾರರ ಮನೆತನದಿಂದ ಬಂದವರು. ಅವರ ತಂದೆ ಕೊಲ್ಕತ್ತ ಪಟ್ಟಣದಲ್ಲಿ ಒಬ್ಬ ಸುಪ್ರಸಿದ್ಧ ವಕೀಲರು ಮಾತ್ರವಲ್ಲದೆ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡಾ ಆಗಿದ್ದರು. ಅವರ ಪೂರ್ವದಲ್ಲಿ ಹಲವಾರು ಮಂದಿ ಬ್ರಿಟಿಷ್‌ಮಿಲ್ಟ್ರಿಯಲ್ಲಿ ಭೂಸೇನೆ ಹಾಗೂ ನೌಕಾಸೇನೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದವರು”. ಹಾಗೆಯೇ, ಕಾಶ್ಮೀರ ಬ್ರಾಹ್ಮಣ ಕುಟುಂಬದಿಂದ ಬಂದ ಪಂಡಿತ್‌ಜವಾಹರಲಾಲ್‌ನೆಹರುರವರ ತಂದೆ ಪಂಡಿತ್‌ಮೋತಿಲಾಲ್‌ನೆಹರು ಅವರು ಆ ಕಾಲದಲ್ಲಿ ಇಡೀ ದೇಶದಲ್ಲಿ ಕೇವಲ ಕೆಲವು ವಕೀಲರಲ್ಲಿ ಒಬ್ಬರಾಗಿದ್ದುದು ಮಾತ್ರವಲ್ಲದೆ, ಸತತವಾಗಿ ಎರಡು ಬಾರಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು.

ಇನ್ನು ಆಧ್ಯಾತ್ಮದ ಮೂಲಕವೂ ದೇಶದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರೆಂದರೆ, ಅರವಿಂದಘೋಷ್‌, ವಿವೇಕಾನಂದ, ಎಂ. ಕೆ. ಗಾಂಧಿ ಮುಂತಾದವರು. ಉದಾಹರಣೆಗೆ, ಅರವಿಂದಘೋಷ್‌ಕೂಲ ಕಲ್ಕತ್ತಾ ಪಟ್ಟಣದಲ್ಲೇ ಒಂದು ಹೆಸರಾಂತ ಮನೆತನದಿಂದ ಬಂದವರು. ಅವರ ತಂದೆ ಕೃಷ್ಣಾಧನ್‌ಘೋಷ್‌ಅಂದಿಗೆ ಪ್ರಸಿದ್ಧ ವೈದ್ಯರು. ಅವರ ತಾಯಿ ಸ್ವರ್ಣಲತಾದೇವಿ ಅಂದಿನ ಬಂಗಾಳಿ ಸಾಹಿತ್ಯದಲ್ಲಿ ಒಬ್ಬ ಪ್ರಸಿದ್ಧ ಕವಯಿತ್ರಿ ಹಾಗೂ ಲೇಖಕಿ. ಹಾಗೆಯೇ ಎಂ. ಕೆ. ಗಾಂಧಿಯವರ ತಂದೆ ಕಾಬಾ ಗಾಂಧಿ ರಾಜ್‌ಕೋಟ್‌ಸಾಮ್ರಾಜ್ಯದ ದಿವಾನರಾಗಿದ್ದುದು ಮಾತ್ರವಲ್ಲದೆ, ಅವರ ಚಿಕ್ಕಪ್ಪ ತುಳಸಿದಾಸ್‌ಗಾಂಧಿ ಪೋರಬಂದರ್ ರಾಜ್ಯದ ದಿವಾನರಾಗಿದ್ದರೆಂಬುದನ್ನು ತಿಳಿಯಬಹುದಾಗಿದೆ. ಹಾಗೆಯೇ ಬೆನಿಯಾ ಎಂಬ ಶೂದ್ರ ಜಾತಿಗೆ ಸೇರಿದ ಗಾಂಧಿಯವರ ಮನೆತನ, ಗುಜರಾತಿನ ಪ್ರಸಿದ್ಧ ವಣಿಕರ ಕೋಮಿಗೆ ಸೇರಿದ್ದರೆಂಬುದನ್ನೂ ತಿಳಿಯಬಹುದಾಗಿದೆ. ಅಂದರೆ ಈಗಾಗಲೇ ತಿಳಿಸಿರುವಂತೆ ಸ್ವಾತಂತ್ರ್ಯ ಪೂರ್ವದ ಬಹುತೇಕ ಎಲ್ಲ ರಾಷ್ಟ್ರೀಯ ನಾಯಕರೂ, ಮಹಾಪುರುಷರೂ ಸಾಮಾಜಿಕವಾಗಿ ಮೇಲಿನ ಶ್ರೇಣಿಯಿಂದ ಬಂದವರು ಮಾತ್ರವಲ್ಲದೆ, ಆರ್ಥಿಕವಾಗಿ ಕೂಡ ತುಂಬಾ ಪ್ರಸಿದ್ಧ ಮನೆತನಗಳಿಂದಲೇ ಬಂದವರಾಗಿದ್ದಾರೆ. ಅಂದ ಮಾತ್ರಕ್ಕೆ ಅವರಲ್ಲಿ ಬಡತನದ ಹಿನ್ನೆಲೆಯಿಂದ ಬಂದವರು ಯಾರೂ ಇರಲಿಲ್ಲವೆಂದೇನೂ ಇದರರ್ಥವಲ್ಲ. ಉದಾಹರಣೆಗೆ: ಲಾಲಾ ಲಜಪತ್‌ರಾಯರ ತಂದೆ ಒಬ್ಬ ಸಾಮಾನ್ಯ ಪ್ರೈಮರಿ ಶಾಲಾ ಮಾಸ್ತರರು. ಹೀಗೆ ಈ ಬಗೆಯ ಇನ್ನೂ ಹಲವಾರು ನಿದರ್ಶನಗಳನ್ನು ಕಾಣಬಹುದಾಗಿದೆ. ಆದರೆ ಅಂಬೇಡ್ಕರರ ಬದುಕಿನ ಹಿನ್ನೆಲೆ ಇವರೆಲ್ಲರಿಗಿಂತಲೂ ಭಿನ್ನವಾಗಿರುವುದೇ ಪ್ರಸ್ತುತ ಗಮನಾರ್ಹವಾದ ವಿಚಾರ. ಏಕೆಂದರೆ ಆರ್ಥಿಕವಾಗಿ ಅಂಬೇಡ್ಕರರು ಹುಟ್ಟುತ್ತಲೇ ಕಿತ್ತು ತಿನ್ನುವ ದಾರಿದ್ರ್ಯದಂಥ ಬಡತನದಲ್ಲಿ ಹುಟ್ಟಿ ಬಂದವರು. ಅವರ ತಂದೆ ಸಕ್ಪಾಲ್‌ರಾಮ್‌ಜಿ, ಬ್ರಿಟಿಷ್‌ಮಿಲಿಟರಿಯಿಂದ ನಿವೃತ್ತರಾದ ಒಂದು ವರ್ಷಕ್ಕೆ, ಅದೂ ಹದಿನಲ್ಕನೇ ಮಗುವಾಗಿ ಹುಟ್ಟಿದವರು ಅಂಬೇಡ್ಕರರು. ಅಂದರೆ ದುಡಿದು ತರುವವರಾಗಲಿ ಚರಾಚರ ಆಸ್ತಿಯಾಗಲಿ ಅಥವಾ ಇನ್ನಾವುದೇ ರೀತಿಯ ಪಿತ್ರಾರ್ಜಿತವಾದ ಸ್ವತ್ತಾಗಲಿ ಮನೆಯಲ್ಲಿರಲಿಲ್ಲ. ಒಂದೆಡೆಗೆ ಹುಟ್ಟಿದ ನಾಲ್ಕೈದು ವರ್ಷಗಳಲ್ಲೇ ತಾಯಿಯನ್ನು ಕಳೆದುಕೊಂಡ ತಬ್ಬಲಿ ಮಗು ಅಂಬೇಡ್ಕರರು; ಇನ್ನೊಂದೆಡೆಗೆ ನಿಸರ್ಗದತ್ತವಾದ ಮಾನವ ಚೇತನವನ್ನು, ವಿನಾಕಾರಣ ಅವಮಾನಗೊಳಿಸಿ, ಪತನದ ಪ್ರಪಾತಕ್ಕೆ ತಳ್ಳಿ ವ್ಯಕ್ತಿಯ ಅಭ್ಯರ್ಥಿತ್ವವನ್ನು ಒಂದು ಸಾಮಾನ್ಯ ನಾಗರಿಕ ಜೀವನಕ್ಕೂ ಅನರ್ಹಗೊಳಿಸುವ ಅಸ್ಪೃಶ್ಯತೆಯಲ್ಲಿ ಹುಟ್ಟಿದವರು ಅಂಬೇಡ್ಕರರು.

ಆದಾಗ್ಯೂ, ಅಂಬೇಡ್ಕರ್ ರ ಬಾಲ್ಯದ ಬಗೆಗೆ ಇಷ್ಟನ್ನೆಲ್ಲಾ ಹೇಳುವಾಗ, ಬಹುಮುಖ್ಯವಾದ ಒಂದು ಅಂಶವನ್ನು ಸರ್ವತಾ ಮರೆಯದಿರಬೇಕೆನಿಸುತ್ತದೆ. ಏಕೆಂದರೆ, ಅಂಬೇಡ್ಕರರ ಹೊರತಾಗಿ ಉಳಿದೆಲ್ಲ ರಾಷ್ಟ್ರನಾಯಕರೂ ಮಹಾಪುರುಷರೂ ಸಾಮಾಜಿಕವಾಗಿ ಮೇಲಿನ ಶ್ರೇಣಿಯಿಂದ ಬಂದವರೂ ಶ್ರೀಮಂತರ ಮಕ್ಕಳೂ ಆಗಿದ್ದಾರೆ ಎಂಬುದು ನಿಜವಾದರೂ, ಈ ರಾಷ್ಟ್ರವನ್ನು ಕಟ್ಟಲು ಅವರು ಮಾಡಿದ ತ್ಯಾಗ-ಬಲಿದಾನಗಳು ಗೌಣವೆಂದು ಭಾವಿಸುವುದು ಈ ವಿಶ್ಲೇಷಣೆಯ ಉದ್ದೇಶವಲ್ಲ, ನೆನಪಿರಲಿ. ಅಷ್ಟೇ ಅಲ್ಲ, ಈ ಮಹಾಪುರುಷರು ಇಲ್ಲಿನ ಅಸ್ಪೃಶ್ಯತೆ ಮತ್ತು ಜಾತಿಯತೆಗಳಿಗೆ ಕಾರಣರಾಗಿದ್ದಾರೆ ಎಂಬರ್ಥದಲ್ಲೂ ಈ ಮಾತನ್ನು ಹೇಳುತ್ತಿಲ್ಲ. ಬದಲಾಗಿ, ಈ ರಾಷ್ಟ್ರವನ್ನು ಕಟ್ಟುವ ಮಹತ್ಕಾರ್ಯದಲ್ಲೂ ಅದಕ್ಕೆ ಸರಿಸೂಕ್ತವಾದ ಅರ್ಹತೆಯನ್ನು ಪಡೆದುಕೊಳ್ಳುವಲ್ಲೂ ಇಲ್ಲಿನ ಜಾತಿಯ ವ್ಯವಸ್ಥೆ, ಮೇಲಿನ ಜಾತಿಯನ್ನು ಪುರಸ್ಕರಿಸಿ ಬರಮಾಡಿಕೊಳ್ಳುವುದಕ್ಕೂ, ಒಬ್ಬ ಅಸ್ಪೃಶ್ಯನನ್ನು ತಿರಸ್ಕರಿಸಿ ಹೀಗಳೆಯುವುದಕ್ಕೂ ಇರುವ ಮೂಲಭೂತ ವ್ಯತ್ಯಾಸದ ಭೀಕರ ವಾಸ್ತವತೆಯನ್ನು ಮನವರಿಕೆ ಮಾಡಿಕೊಳ್ಳುವುದು ಮಾತ್ರ ಈ ವಿಶ್ಲೇಷಣೆಯ ಮೂಲುದ್ದೇಶವಾಗಿದೆ. ಉದಾಹರಣೆಗೆ, ಡಾ. ರಾಮನೋಹರ ಲೋಹಿಯಾರವರ ಜೀವನದ ಒಂದು ಘಟನೆಯನ್ನಿಲ್ಲಿ ನೋಡಬಹುದು. ಲೋಹಿಯಾರವರು

ಬಿ. . , ಪಾಸು ಮಾಡುವ ಹೊತ್ತಿಗೆ ಅವರ ಮೇಲೆ ರಾಷ್ಟ್ರೀಯತೆಯ ಪ್ರಭಾವ ಎಷ್ಟ ಮಟ್ಟಿಗೆ ಬಿದ್ದಿತ್ತೆಂದರೆ, ವಿದೇಶದಲ್ಲಿ ಅಧ್ಯಯನ ಮಾಡಬೇಕಾದ ಪ್ರಶ್ನೆ ಬಂದಾಗ, ಅವರ ಮನಸ್ಸು ಲಂಡನ್ನಿನಲ್ಲಿರಲು ಸಮ್ಮತಿಸಲಿಲ್ಲ. ಅಲ್ಲಿ ಒಂದು ನಿಮಿಷವೂ ಸಹ ತಾನು ಗುಲಾಮ ದೇಶದ ನಿವಾಸಿ ಎಂಬುದನ್ನು ಮರೆತಿರಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ.

ಅಂದರೆ ಹುಟ್ಟಿನಿಂದ ಶೂದ್ರರಾದ ಡಾ. ಲೋಹಿಯಾರವರು ಭಾರತ ಬ್ರಿಟಿಷರ ದಾಸ್ಯದಲ್ಲಿದ್ದಾಗ ಮಾತ್ರ ಗುಲಾಮಿತನ ಅವರನ್ನು ಕಾಡಿರಲಿಕ್ಕೆ ಸಾಧ್ಯವಿದ್ದು, ಅವರಂತೆಯೇ ಶೂದ್ರ ವರ್ಗದಿಂದ ಬಂದಂಥ ಇನ್ನೂ ಎಷ್ಟೋ ಜನ ಸ್ವಾತಂತ್ರ್ಯ ಹೋರಾಟಗರರಿಗೆ ಭಾರತ ಬ್ರಿಟಿಷರ ಆಡಳಿತದಲ್ಲಿದ್ದಾಗ ಮಾತ್ರ ಗುಲಾಮಿತನ ಅವರನ್ನು ಕಾಡಿದೆ. ಏಕೆಂದರೆ, ಬ್ರಿಟಿಷರ ಗುಲಾಮಗಿರಿ ಕೇವಲ ತಾತ್ಕಾಲಿಕವಾದುದು. ಆದರೆ ಅಂಬೇಡ್ಕರರಿಗೆ, ಅದೇ ಭಾರತ ಬ್ರಿಟಿಷರ ದಾಸ್ಯದಲ್ಲಿದ್ದಾಗ ಮಾತ್ರವಲ್ಲದೇ, ಅದು ಬ್ರಿಟಿಷರಿಂದ ಸ್ವತಂತ್ರವಾದ ಬಳಿಕವೂ ತಾವೊಬ್ಬ ಭಾರತದ ಗುಲಾಮ ವ್ಯವಸ್ಥೆಯ ಈ ನೆಲದ ಒಂದು ಶಾಸ್ವತ ಗುಲಾಮಗಿರಿಯೆನಿಸಿದೆ. ಅಂತೆಯೇ, ಡಾ. ಲೋಹಿಯಾರವರನ್ನು ಕುರಿತ ಈ ನಿದರ್ಶನದ ಹಿನ್ನೆಲೆಯಲ್ಲಿ ಅಂಬೇಡ್ಕರರನ್ನು ಕುರಿತ ಇನ್ನೊಂದು ನಿದರ್ಶನವನ್ನೂ ಇಲ್ಲಿ ಸುಮ್ಮನೆ ನೆನೆಯಬಹುದಾಗಿದೆ. ಉದಾಹರಣೆಗೆ ಅಂಬೇಡ್ಕರರು ಈ ಕಡೆ, ಭಾರತದಲ್ಲಿನ ತಮ್ಮ ಶಾಲಾ ದಿನಗಳಲ್ಲಿ ಅನುಭವಿಸಿದ ಘೋರಯಾತನೆಯೂ, ಆ ಕಡೆ ವಿದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಅವರಿಗೆ ಸಂದ ಅತ್ಯುಚ್ಚ ಮಟ್ಟದ ಶೈಕ್ಷಣಿಕ ಗೌರವವೂ ಸದ್ಯ ಇದಕ್ಕೆ ಸರಿಸೂಕ್ತವೆನಿಸುವ ನಿದರ್ಶನವೆನ್ನಬಹುದಾದರೂ, ಈ ವಿವರಗಳನ್ನು ಮುಂದಿನ ಪುಟಗಳಲ್ಲಿ ಕಾಣಬಹುದಾಗಿರುವುದರಿಂದ, ಸದ್ಯ ಇಲ್ಲೊಂದು ಹೋಲಿಕೆಯನ್ನು ಮಾತ್ರ ಮಾಡಿ, ತನ್ಮೂಲಕ ಊಹಾತ್ಮಕವಾದ ಒಂದು ಚಿತ್ರವನ್ನು ಮಾತ್ರ ಕಲ್ಪಿಸಿಕೊಂಡು ಅದರ ತಾತ್ಪರ್ಯವನ್ನು ವಾಸ್ತವದ ನೆಲೆಯಲ್ಲಿ ಚರ್ಚಿಸುವುದು ಇಲ್ಲಿ ಹೆಚ್ಚು ಕುತೂಹಲಕಾರಿಯೂ, ಪ್ರಯೋಜನಕಾರಿಯೂ ಆದುದೆನಿಸುತ್ತದೆ.