ಮತಾಂತರದಿಂದ ದಲಿತರ ಮೀಸಲಾತಿಗೆ ಸಂಬಂದಿಸಿದಂತೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಮೀಸಲಾತಿ ಬೇಕೆನ್ನುವವರಿಗೆ ಸರ್ಕಾರ ಭರವಸೆಯನ್ನು ಕೊಡಬಲ್ಲದು. ಅದಕ್ಕೆ ಅನೇಕ ರಾಜಕೀಯ ಕಾರಣಗಳು ಉದಾಹರಣೆಗಳಾಗಿ ನಮ್ಮ ಮುಂದಿವೆ. ಏಕೆಂದರೆ ಇದಕ್ಕೆ ಸಂಬಂಧಪಟ್ಟ ೧೮೫೦ರ ಶಾಸನದ ನಿಬಂದನೆಗಳ ಪ್ರಕಾರ ಒಬ್ಬ ವ್ಯಕ್ತಿಯ ಅಥವಾ ಅವನ ವಾರಸುದಾರನ ಹಕ್ಕುಗಳು ಅವನ ಮತಾಂತರದಿಂದ ಮಾರ್ಪಾಡಾಗುವುದಿಲ್ಲ ಎಂಬ ಅಂಶವನ್ನು ಇಂದಿನ ದಲಿತರು ಮನಗಾಣಬೇಕಾಗಿದೆ. ಎರಡನೆಯ ಸಂಶಯವು ರಾಜಕೀಯ ಹಕ್ಕುಗಳಿಗೆ ಸಂಬಂಧಪಟ್ಟದ್ದು. ದಲಿತರು ಮತಾಂತರ ಹೊಂದಿದರೆ ಅವರ ರಾಜಕೀಯ ಹಕ್ಕುಗಳಿಗೆ ಸಂಭವಿಸುತ್ತದೆ ಎಂಬ ಭಯವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ ಈ ಹಂತದಲ್ಲಿ ದಲಿತರು ರಾಜಕೀಯ ಹಕ್ಕುಗಳನ್ನೆ ಪೂಣ್ವಾಗಿ ಅವಲಂಬಿಸುವುದು ಸೂಕ್ತವಲ್ಲವೆಂದು ಹೇಳಿದರೆ ತಪ್ಪಾಗದು. ಏಕೆಂದರೆ ಈ ರಾಜಕೀಯ ರಕ್ಷಣೆಗಳು ಶಾಶ್ವತವಾಗಿರುವವೆಂದು ಹೇಳಲಾಗುವುದು. ಒಂದು ಕಾಲಕ್ಕೆ ಅವುಗಳೆಲ್ಲಾ ಕೊನೆಗಾಣಲೇಬೇಕು. ಅಂದು ಬ್ರಿಟಿಷ್ ಸರ್ಕಾರದ ಕೋಮುವಾರು ಒಪ್ಪಂದದ ಪ್ರಕಾರ ದಲಿತರ ರಾಜಕೀಯ ರಕ್ಷಣೆಗಳು ೨೦ ವರ್ಷಗಳ ತನಕ ಮಿತಿಗೊಳಿಸಲ್ಪಟ್ಟಿದ್ದವು ಎಂದು ಅಂಬೇಡ್ಕರ್ ಅವರು ಉಲ್ಲೇಖಿಸುತ್ತಾರೆ. ಪೂನಾ ಒಪ್ಪಂದಂತೆ ಅಂತಹ ಮಿತಿಯನ್ನು ನಿಗದಿ ಮಾಡದಿದ್ದರೂ ಅವು ಇಂದಿಗೂ ಅಥವಾ ಮುಂದೂ ಶಾಶ್ವತವಾಗಿರುವವೆಂದು ಯಾರೂ ಹೇಳಲಾರರು. ಆ ರಕ್ಷಣೆಗಳನ್ನೇ ಅವಲಂಬಿಸಿರುವವರು ಅವುಗಳನ್ನು ವಾಪಸು ತೆಗೆದುಕೊಂಡಾಗ ತಮಗೆ ಏನಾಗಬಹುದೆಂದು ಚಿಂತಿಸಬೇಕು. ನಮ್ಮ ಹಕ್ಕುಗಳು ಕೊನೆಗಾಣುವ ದಿನದಿಂದ ದಲಿತರು ಸಮಾಜದ ಶಕ್ತಿಯನ್ನು ಅವಲಂಬಿಸಬೇಕಾಗುತ್ತದೆ. ಈ ಸಾಮಾಜಿಕ ಶಕ್ತಿಗೆ ನಮ್ಮಲ್ಲಿ ಕೊರತೆಯಿದೆ ಎಂಬುದು ಪ್ರಸ್ತುತ ದಲಿತ ಸಮಾಜದಲ್ಲಿ ಕಂಡುಬರುತ್ತಿರುವ ದೊಡ್ಡ ಸಮಸ್ಯೆ. ಈ ಸಾಮಾಜಿಕ ಶಕ್ತಿಯನ್ನು ದಲಿತರು ಮತಾಂತರ ಹೊಂದದೆ ಸಾಧಿಸಲಾರರೆಂದು ಅಂಬೇಡ್ಕರ್ ಅವರು ತಮ್ಮ ಖಚಿತ ಮಾತುಗಳಲ್ಲೇ ಹೇಳುತ್ತಾರೆ.

ಈ ಸನ್ನಿವೇಶಗಳಲ್ಲಿ ಶಾಶ್ವತವಾಗಿ ಪ್ರಯೋಜನಕಾರಿಯಾದುದು ಯಾವುದೆಂಬುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ದಲಿತನೂ ಯೋಚಿಸಬೇಕು. ದಲಿತರ ಅಭಿಪ್ರಾಯದಲ್ಲಿ ಮತಾಂತರ ಹೊಮದುವುದೊಂದೇ ಶಾಶ್ವತವಾದ ಪರಮ ಸುಖಕ್ಕೆ ಏಕೈಕ ಮಾರ್ಗ ಎಂಬುದಾಗಿದೆ ಎಂದಾದರೆ ದಲಿತರು ಸಿದ್ಧರಿದ್ದಾರೆಯೇ. ಈ ಉದ್ದೇಶ ಸಾಧನೆಗಾಗಿ ರಾಜಕೀಯ ಹಕ್ಕುಗಳನ್ನು ತ್ಯಾಗ ಮಾಡಲು ಇಂದಿನ ದಲಿತರು ಸಿದ್ದರಿದ್ದಾರೆಯೇ. ಇಂದಿನ ಮತಾಂತರವು ರಾಜಕೀಯ ರಕ್ಷಣೆಗಳಿಗೆ ಯಾವ ಕೇಡನ್ನು ತರುವುದಿಲ್ಲ. ಮತಾಂತರದಿಂದ ರಾಜಕೀಯ ರಕ್ಷಣೆಗಳು ಗಂಡಾಂತರಕ್ಕೆ ಸಿಕ್ಕಿಕೊಳ್ಳುವುದಿಲ್ಲವೇ ಎಂಬ ಪ್ರಶ್ನೆಗಳು ಸಹ ಮೂಡುತ್ತಿವೆ. ದಲಿತರು ಎಲ್ಲಿಗೆ ಹೋದರೂ ಅವರ ರಾಜಕೀಯ ಹಕ್ಕುಗಳು ಮತ್ತು ರಕ್ಷಣೆಗಳು ಅವರ ಜೊತೆಯಲ್ಲಿಯೇ ಬರುತ್ತವೆ ಎಂಬ ಅನುಮಾನ ಕೆಲವರಲ್ಲಿದೆ. ಆದರೆ ದಲಿತರು ಮುಸಲ್ಮಾನರಾದರೆ, ಮುಸಲ್ಮಾನರೆಂದು ಪರಿಗಣಿಸಿ ಅವರಿಗೆ ಸಲ್ಲುವ ಹಕ್ಕುಗಳು ದಲಿತರಿಗೆ ದೊರಕುತ್ತವೆ. ಕ್ರೈಸ್ತರಾದರೆ, ಕ್ರೈಸ್ತರಿಗೆ ಸಲ್ಲುವ ಹಕ್ಕುಗಳೂ, ಸಿಖ್‌ರಾದರೆ ಅವರಿಗೆ ಸಲ್ಲುವ ಹಕ್ಕುಗಳೂ ದಲಿತರಿಗೆ ಸಿಗುತ್ತವೆ. ಅಂದರೆ ಅವರ ರಾಜಕೀಯ ಹಕ್ಕುಗಳೂ ಅವರನ್ನು ಹಿಂಬಾಲಿಸುತ್ತವೆ. ಒಂದು ವೇಳೆ ದಲಿತರು ಹಿಂದೂಗಳಾಗಿಯೇ ಉಳಿದುಕೊಂಡು ಮತಾಂತರ ಹೊಂದದಿದ್ದರೆ ಅವರ ಹಕ್ಕುಗಳು ಸುರಕ್ಷಿತವಾಗಿ ಉಳಿಯುತ್ತವೆಯೇ ಎಂಬುದನ್ನು ದಲಿತರು ಬಹು ಎಚ್ಚರಿಕೆಯಿಂದ ಯೋಚಿಸಬೇಕು. ಅಸ್ಪೃಶ್ಯತೆಯನ್ನು ಒಂದು ದಂಡನೀಯ ಅಪರಾಧವಾಗಿ ಮಾಡಿ ಅದರ ಆಚರಣೆಯನ್ನು ವಿರೋಧಿಸಿ ಹಿಂದೂಗಳು ಕಾನೂನು ಮಾಡಿದರೆಂದರೆ

ನಾವು ಕಾನೂನು ಪ್ರಕಾರವಾಗಿ ಅಸ್ಪೃಶ್ಯತೆಯನ್ನು ತೆಗೆದು ಹಾಕಿದ್ದೇವೆ, ಆದ್ದರಿಂದ ದಲಿತರು ಇನ್ನು ಮುಂದೆ ಅಸ್ಪೃಶ್ಯರಲ್ಲ

ಎಂಬುದಾಗಿ ಅವರು ದಲಿತದನ್ನು ಕೇಳಬಹುದು. ಈ ವಾಸ್ತವಿಕ ದೃಷ್ಟಿಯಿಂದ ನೋಡುವುದಾದರೆ ಮತಾಂತರವು ಅಡಚಣೆಯಾಗುವುದರ ಬದಲು ರಾಜಕೀಯ ರಕ್ಷಣೆಗಳನ್ನು ಬಲಪಡಿಸಲು ಒಂದು ಹಾಕಿಯಾಗುತ್ತದೆ. ದಲಿತರು ಹಿಂದೂಗಳಾಗಿಯೇ ಉಳಿದರೆ ತಮ್ಮ ರಾಜಕೀಯ ರಕ್ಷಣೆಗಳನ್ನು ಕಳೆದುಕೊಳ್ಳುವುದು ಖಂಡಿತ ಎಂದು ಹೇಳಲು ಸತ್ಯಾಂಶವಿರುತ್ತದೆ. ಇದನ್ನು ಉಳಿಸಿಕೊಳ್ಳಬೇಕಾದರೆ ಈ ಧರ್ಮವನ್ನು ತ್ಯಜಿಸಿ, ಖೇವಲ ಮತಾಂತರದಿಂದಲೇ ನಿಮ್ಮ ರಾಜಕೀಯ ರಕ್ಷಣೆಗಳು ಶಾಶ್ವತವಾಗುವವು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಅರ್ಥೈಸುವ ಸಾಮರ್ಥ್ಯ ಇಂದಿನ ದಲಿತರಲ್ಲಿ ಮೂಡಬೇಕಾಗಿದೆ.

ಡಾ. ಅಂಬೇಡ್ಕರ್ ಅವರು ಅಂದೇ

ಹಿಂದೂ ಧರ್ಮವು ನನ್ನ ಆತ್ಮಸಾಕ್ಷಿಗೆ ಇಷ್ಟವಾಗುವುದಿಲ್ಲ. ನನ್ನ ಆತ್ಮ ಗೌರವಕ್ಕೆ ಒಪ್ಪಿಗೆಯಾಗುವುದಿಲ್ಲ. ಏನೇ ಆದರೂ ಮತಾಂತರವು ನಿಮಗೆ ಪ್ರಾಪಂಚಿಕ ಮತ್ತು ಆಧ್ಯಾತ್ಮಕಿ ಉನ್ನತಿಯನ್ನು ತರುತ್ತದೆ. ಪ್ರಾಪಂಚಿಕ ಲಾಭಕ್ಕಾಗಿ ಮತಾಂತರವೆಂಬುದನ್ನು ಕೆಲವರು ಪರಿಹಾಸ್ಯ ಮಾಡಬಹುದು. ನಾನು ಅಂತಹವರನ್ನು ಬುದ್ಧಿಹೀನರೆಂದು ಕರೆಯಲು ಹಿಂಜರಿಯುವುದಿಲ್ಲ ಎಂದರು.

ಅಂದೇ ಅವರು ಹಿಂದೂ ಮೂಲಭೂತವಾದಿಗಳಿಗೆ ನೀಡಿದ ಸಂದೇಶವೆಂದರೆ ಮನುಷ್ಯನಿಗಾಗಿ, ಧರ್ಮ, ಧರ್ಮಕ್ಕಾಗಿ ಮನುಷ್ಯನಲ್ಲ ಎಂಬುದು. ಹಿಂದೂಗಳೂ ಹಾಗೂ ಇತರರು ನಿಮ್ಮನ್ನು ಕಾಲಾನಂತರ ಮಾನವರಂತೆ ಕಾಣಬೇಕೆಂದರೆ ನೀವು ಮತಾಂತರ ಹೊಂದಿ ಎಂದು ಹೇಳಿದ್ದರು. ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಯಾವ ಕಾರಣಕ್ಕಾಗಿ ಮತಾಂತರ ಹೊಂದಬೇಕೆಂದು ಪ್ರತಿಪಾದಿಸುತ್ತಾರೆಂದರೆ,

ಸಂಘಟಿತರಾಗಲು ಮತಾಂತರ ಹೊಂದಬೇಕು.
ಶಕ್ತಿಯುತರಾಗಲು
ಮತಾಂತರ ಹೊಂದಬೇಕು.
ಸಮಾನತೆ
ಪಡೆಯಲು ಮತಾಂತರ ಹೊಂದಬೇಕು.
ಸ್ವಾತಂತ್ರ್ಯ
ಪಡೆಯಲು ಮತಾಂತರ ಹೊಂದಬೇಕು.

ನಿಮ್ಮ ಸಂಸಾರ ಜೀವನ ನೆಮ್ಮದಿಯಿಂದಿರಲು, ಸುಖ ಸಂತೋಷದಿಂದಿರಲು ಮತಾಂತರ ಹೊಂದಬೇಕು ಎಂಬ ಬಹುಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಇಂದಿನ ದಲಿತ ಸಂಘಟಕರು, ಮುಖಂಡರು ವಿವಿಧ ಕಾರಣಗಳಿಗಾಗಿ ನಿರ್ಭಯವಾಗಿ ನಿರ್ದಾಕ್ಷಿಣ್ಯವಾಗಿ ಒಳ್ಳೆಯದಾಗುವುದು, ಕೆಟ್ಟದಾಗುವುದು ಎಂದು ಹೇಳುವುದನ್ನು ಮರೆತಿದ್ದಾರೆ. ಅಥವಾ ಜಾಣ ಮರೆವಿನ ರೀತಿಯಲ್ಲಿ ಇದ್ದ ಅವಕಾಶವಾದಿಗಳಾಗಿದ್ದಾರೆ. ಇವರನ್ನು ಮುಖಂಡರೆಂದು ಪರಿಗಣಿಸಬಹುದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ದಲಿತರು ಇಷ್ಟಪಡದಿದ್ದರೂ ಅವರಿಗೆ ಒಳ್ಳೆಯದಾವುದು ಎಂಬುದನ್ನು ಅಂಬೇಡ್ಕರ್ ಅವರು ತಮ್ಮ ಕರ್ತವ್ಯವೆಂದು ತಿಳಿದು ಕೆಲವು ಅಂಶಗಳನ್ನು ತಿಳಿಸಿದ್ದಾರೆ. ಅದನ್ನು ಮಾಡಿ ತೋರಿಸಿದ್ದಾರೆ. ಅವರು ತೋರಿಸಿರುವ ಮಾರ್ಗದಲ್ಲಿ, ಅವರ ತೀರ್ಮಾನಗಳನ್ನು ಉಳಿಸುವ, ನಿರ್ವಹಿಸುವ ಜವಾಬ್ದಾರಿ ನಮ್ಮ ಮುಂದಿರುವ ಸವಾಲಾಗಿದೆ.

೧೯೩೬ನೇ ಇಸವಿ ಮೇ ೩೦ ಮತ್ತು ೩೧ ರಲ್ಲಿ ಬೊಂಬಾಯಿಯಲ್ಲಿ ನಡೆದ ಅನುಸೂಚಿತ ಜಾತಿಗಳ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಮರಾಠಿಯಲ್ಲಿ ಮಾಡಿದ ಭಾಷಣವನ್ನು ವಸಂತಮೂರ್ತಿಯವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ೧೯೮೧ನೇ ಇಸವಿ ಏಪ್ರಿಲ್ ೧೬ರಂದು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದ ‘ಲೋಕರಾಜ್ಯ’ದ ವಿಶೇಷ ಸಂಚಿಕೆಯಿಂದ ಉದ್ಧರಿಸಿದ ಭಾಗದ ಕನ್ನಡ ಅನುವಾದವನ್ನು ಇಲ್ಲಿ ನೀಡಲಾಗಿದೆ. ಇದು ಓದುಗರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಎಂದೆನ್ನಿಸುತ್ತದೆ.

ಭಾರತದಲ್ಲಿ ಬೌದ್ಧ ಧರ್ಮವನ್ನು ಮರಳಿ ಕರೆತರಲು, ಹರಡಲು ಅಂಬೇಡ್ಕರ್ ನಿರ್ಧಾರ ಮಾಡಿದರು ಎಂದರೆ ತಪ್ಪಾಗದು. ೧೯೫೪ರಲ್ಲಿ ರಂಗೂನಿನಲ್ಲಿ, ವಿಶ್ವ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದ ಅವರು ಧರ್ಮದ ಪ್ರಸಾರ ಮತ್ತು ಧ್ಯೇಯದ ಬಗ್ಗೆ ವಿಚಾರಪೂರ್ಣ ಭಾಷಣವನ್ನು ಮಾಡಿರುವುದು ಅವರ ಬರವಣಿಗೆಗಳಲ್ಲಿ ಕಂಡುಬರುತ್ತದೆ.

ಬೌದ್ಧ ಧರ್ಮವನ್ನು ಭಾರತ ದೇಶದಲ್ಲಿ ಪ್ರಚಾರ ಮಾಡುವುದಕ್ಕಾಗಿ ಕಾರ್ಯಕರ್ತರನ್ನು ತರಬೇತಿ ಮಾಡಲು ಬೌದ್ಧ ಕೇಂದ್ರವನ್ನು ಬೆಂಗಳೂರಿನಲ್ಲಿ ಕೂಡ ಸ್ಥಾಪಿಸಲಾಯಿತು. ೧೯೫೪ ರಲ್ಲಿ ಬೆಂಗಳೂರಿನಲ್ಲಿ ಅಂಬೇಡ್ಕರ್ ಹಾಗೂ ಜಯಚಾಮರಾಜ ಒಡೆಯರ್ ಭೇಟಿಯಾದಾಗ ಮೈಸೂರು ಮಹಾರಾಜರು ಬೆಂಗಳೂರಿನಲ್ಲಿ ಐದು ಎಕರೆ ಭೂಮಿಯನ್ನು ಅಂಬೇಡ್ಕರ್ ರಿಗೆ ಕೊಟ್ಟಿದ್ದರು. ಇದು ಬರ್ಮಾ ದೇಶದಲ್ಲಿ ಅಂಬೇಡ್ಕರ್ ಕೊಟ್ಟ ಎರಡು ಸಂದರ್ಶನಗಳ ಪರಿಣಾಮವಾಗಿತ್ತು. ಈ ಭೂಮಿ ಈಗ ಪಿ. ಇ. ಎಸ್. (ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ) ಸಂಸ್ಥೆಯ ಒಡೆತನದಲ್ಲಿದೆ.

ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿಗಳಿಗೆ ಬೌದ್ಧ ಧರ್ಮ ಕುರಿತು ಉಪನ್ಯಾಸ ಮಾಡಿದಾಗ ಅವರು ಕೊಟ್ಟ ಕೆಲವು ಹೇಳಿಕೆಗಳನ್ನು ಇತಿಹಾಸ ಪ್ರಾಧ್ಯಾಪಕರಾದ ಡಾ. ಕೆನಿಯವರು ಅತಿಥಿಗೆ ವಂದನಾರ್ಪಣೆ ಮಾಡುವಾಗ ಸಹಜವಾಗಿ ಟೀಕೆ ಮಾಡಿದರು. ಶಿಸ್ತುಭಂಗವನ್ನು ಮಾಡಿದುದರಿಂದ ಆ ಪ್ರಾಧ್ಯಾಪಕರನ್ನು ಸಂಸ್ಥೆಯ ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರವೂ ಸಹ ಕೈಗೊಂಡಿತು.

ಅಂಬೇಡ್ಕರ್ ಅವರು ೧೯೫೬ರಲ್ಲಿ ಬುದ್ಧ ಮತ್ತು ಬೌದ್ಧ ಧರ್ಮದ ಮೇಲಿನ ಪುಸ್ತಕ ಸಿದ್ಧಪಡಿಸಿದರು. ಈ ಪುಸ್ತಕವನ್ನು ಪ್ರಕಟಣೆಗೂ ಮುನ್ನ ಖಾಸಗಿ ಅಭಿಪ್ರಾಯಕ್ಕಾಗಿ ಸುಮಾರು ೫೦ ಪ್ರತಿಗಳನ್ನು ಸಂಬಂದಿಸಿದ ಚಿಂತಕರಿಗೆ ಕಳುಹಿಸಿಕೊಡಲಾಗಿತ್ತು. ೧೯೫೬ರ ಫೆಬ್ರವರಿಯಲ್ಲಿ ‘ದೇವರಿಲ್ಲ’ ‘ಆತ್ಮವೆಂಬುದಿಲ್ಲ’ ಎಂಬ ಎರಡು ಹೊಸ ಅಧ್ಯಾಯಗಳು ಅದಕ್ಕೆ ಸೇರಿಸಲ್ಪಟ್ಟವು.

೧೯೫೬ರ ಮೇ ತಿಂಗಳಲ್ಲಿ ಲಂಡನ್ನಿನ ಬಿ. ಬಿ. ಸಿ. ಯವರು ಅಂಬೇಡ್ಕರ್ ಅವರನ್ನು “ನಾನು ಬೌದ್ಧ ಧಮೌವನ್ನೇಕೆ ಪ್ರೀತಿಸುತ್ತೇನೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿಗೆ ಅದು ಹೇಗೆ ಪ್ರಯೋಜನಕಾರಿಯಾಗಿದೆ” ಎಂಬ ವಿಷಯ ಕುರಿತು ಭಾಷಣವನ್ನು ಮಾಡಲು ಆಹ್ವಾನಿಸಿ ಬಿತ್ತರಿಸಿತ್ತು. ಬೌದ್ಧ ಧರ್ಮವು ಪ್ರಜ್ಞಾ, ಕರುಣೆ ಮತ್ತು ಸಮಾನತೆಯನ್ನು ಹೊಂದಿದೆ. ದೇವರಾಗಲಿ, ಆತ್ಮವಾಗಲಿ ಸಮಾಜವನ್ನು ರಕ್ಷಿಸುವುದಿಲ್ಲ ಎಂಬ ಅಭಿಪ್ರಾಯ ಮೂಡುವ ಹಾಗೆ ಅಂಬೇಡ್ಕರ್ ವಿವರವಾಗಿ ವಿವರಿಸಿದರು. ಇದು ಅಂದೇ ದೇಶದ ದಲಿತರಲ್ಲಿ ಆತ್ಮವಿಶ್ವಾಸವನ್ನು ಉಂಟುಮಾಡಿತ್ತು.

ಬೌದ್ಧ ಧರ್ಮ ಸ್ವೀಕಾರ ಮಾಡುವುದಾಗಿ ಬೊಂಬಾಯಿಯಲ್ಲಿ ೧೯೫೬ ಮೇ ೨೪ರಂದು ಘೋಷಿಸಿದರು. ಮತಾಂತರವನ್ನು ಇನ್ನು ಮುಂದೂಡುವುದಿಲ್ಲ. ನನ್ನೊಂದಿಗೆ ಸೇರಬಯಸುವವರಿಗೆ ಸ್ವಾಗತ. ಉಳಿದವರು ಅವರಿಗೆ ಇಷ್ಟ ಇರುವ ಕಡೆ ಹೋಗಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದರು. ಅಂಬೇಡ್ಕರ್ ಮತ್ತು ಅವರ ಪತ್ನಿ ೧೯೫೬ರ ಅಕ್ಟೋಬರ್ ೧೧ ರಂದು ನಾಗಪುರವನ್ನು ತಲುಪಿದರು. ಬೌದ್ಧ ಧರ್ಮದ ದೀಕ್ಷೆ ನೀಡಲು ಬಿಕ್ಕು ಚಂದ್ರಮಣಿಯವರನ್ನು ಅಂಬೇಡ್ಕರ್ ಆಹ್ವಾನಿಸಿದರು. “ಭಗವಾನ್ ಬುದ್ಧನಿಗೆ ಜಯವಾಗಲಿ, ಬಾಬಾ ಸಾಹೇಬರಿಗೆ ಜಯವಾಗಲಿ” ಎಂಬ ಘೋಷಣೆಗಳು ಮೊಳಗಿದವು; ಪುರುಷರು, ಮಹಿಳೆಯರು ಮತ್ತು ಮಕ್ಕಳು ರೈಲುಗಾಡಿ, ಬಸ್ಸು, ಎತ್ತಿನ ಗಾಡಿಗಳಲ್ಲಿ ನಾಗಪುರಕ್ಕೆ ಬರತೊಡಗಿದರು.

ವೇದಿಕೆಯ ಮೇಲೆ ಅಂಬೇಡ್ಕರ್, ಪತ್ನಿ ಮತ್ತು ರತ್ತು ಇದ್ದರು. ಬಿಕ್ಕು ಚಂದ್ರಮಣಿ ಮತ್ತು ಇತರೆ ಬಿಕ್ಕುಗಳು ಇದ್ದರು. ಪಂಚಶೀಲ ತತ್ವವನ್ನು ಬೋಧಿಸಿದರು “ನಾನು ಹಿಂದೂ ಮತವನ್ನು ತ್ಯಜಿಸಿದ್ದೇನೆ” ಎಂದು ಘೋಷಿಸಿದಾಗ ಗಂಟಲು ಕಟ್ಟಿತು. ಅವರೊಂದಿಗೆ ಐದು ಲಕ್ಷ ಅನುಯಾಯಿಗಳು ಬೌದ್ಧ ಧರ್ಮವನ್ನು ಅಪ್ಪಿದರು. ೧೪. ೧೦. ೧೯೫೬ರಂದು ಮತಾಂತರ ಮುಗಿದು ಬುದ್ಧಧರ್ಮದ ಅನುಯಾಯಿಗಳಾಗಿ, ಮಹಾರ್ಬದ್ಧ ಬಿಕ್ಷುವೇ ಆದರು.

ತಮಿಳುನಾಡಿನಲ್ಲಿ ಮತಾಂತರ: ಭಾರತ ಚರಿತ್ರೆಯಲ್ಲಿ ಅಂಬೇಡ್ಕರ್ ಅವರ ಮಹಾಮತಾಂತರ್ ಚರಿತ್ರೆ ಒಂದಾದರೆ, ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ನಡೆದ ದಲಿತರು ಸಾಮೂಹಿಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಘಟನೆ ಹೆಚ್ಚು ಚರ್ಚೆಗೀಡಾಯಿತು. ಇಲ್ಲಿ ನಡೆದ ಸಾಮೂಹಿಕ ಮತಾಂತರಕ್ಕೆ ಕಾರಣಗಳನ್ನು ಹುಡುಕಿದಾಗ ಮುಖ್ಯವಾಗಿ ಮೂರು ಅಂಶಗಳು ಕಣ್ಣಿಗೆ ಕಾಣುತ್ತವೆ. ತಮಿಳುನಾಡು ಸರ್ಕಾರ ಮತ್ತು ವಿಶ್ವ ಹಿಂದೂ ಪರಿಷತ್ತು ಹಾಗೂ ಸತ್ಯಶೋಧಕ ಸಮಿತಿಯಂಥ ಪ್ರತಿಗಾಮಿ ಸಂಘಟನೆಗಳ ಪ್ರಕಾರ ಮತಾಂತರಕ್ಕೆ ಮೂಲ ಕಾರಣ ಪೆಟ್ರೊಡಾಲರ್ ಮತ್ತು ಪೊಲೀಸ್ ದೌರ್ಜನ್ಯಗಳಾಗಿವೆ. ಇವರು ೧೯೮೧ರಲ್ಲಿ ಒಂದು ದೊಡ್ಡ ಸಮಾರಂಭ ನಡೆಸಿ ಬಾರಿ ಭೋಜನ ಮಾಡಿಸಿ ಅದ್ದೂರಿಯಾಗಿ ಖರ್ಚು ಮಾಡಿ; ತಲಾ ರೂ. ೫೦೦ ರಂತೆ ಮತಾಂತರಿಗಳಿಗೆ ನೀಡಿದರು ಎಂದು ಹೇಳಲಾಗಿತ್ತು.

ತಮಿಳುನಾಡಿನ ಮೀನಾಕ್ಷಿಪುರಂ, ಅಲ್ಲಾಪುರಂ ಮುಂತಾದ ಸ್ಥಳಗಳಲ್ಲಿ ದಲಿತರು ಸಾಮೂಹಿಕವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು. ಇದು ದೇಶದಾಸ್ಯಂತ ಜನರ ಗಮನ ಸೆಳೆದಿರುವುದಲ್ಲದೆ ಹಿಂದೂ ಧರ್ಮದ ಬೇರುಗಳನ್ನೇ ಅಲುಗಾಡಿಸಿದಂತಾಯಿತು. ಈ ಘಟನೆಯು ಹಿಂದೂ ಸಂಪ್ರದಾಯವಾದಿಗಳನ್ನು ನಿದ್ದೆಗೆಡಿಸಿತ್ತು.

ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಕಾರ “ಮೀನಾಕ್ಷಿಪುರಂ ಅಪಾಯದ ಸಂಕೇತವಾಗಿದೆ. ಮೊದಲು ನಮ್ಮನ್ನು ನಾವು ತಿದ್ದುಕೊಳ್ಳಬೇಕು. ಯಾರನ್ನೂ ನಿಂದಿಸುವುದಲ್ಲ” ಎಂದರೆ, ರಾಜಕಾರಣಿ ಹಾಗೂ ದಲಿತ ಚಿಂತಕರಾದ ರಾಮವಿಲಾಸ್ ಪಾಸ್ವಾನ್ ಅವರು “ಹರಿಜನರು ಹಳೆಯ ವೈದ್ಯರಲ್ಲಿ ವಿಶ್ವಾಸ ಕಳೆದುಕೊಂಡ ರೋಗಿಗಳಂತಾಗಿದ್ದಾರೀಗ” ಎನ್ನುತ್ತಾರೆ. ದಲಿತರ ಮೇಲಿನ ಪೊಲೀಸ್ ದೌರ್ಜನ್ಯ ಈಗ ಶೇಕಡ: ೮೦ ರಷ್ಟು ಹೆಚ್ಚಾಗಿದೆ. ದಲಿತರ ಮೇಲಿನ ಹಲ್ಲೆ, ದೌರ್ಜನ್ಯಗಳ ಸಂಖ್ಯೆ ೧೯೭೪ ರಲ್ಲಿ ೧೦,೭೩೫ ಇದ್ದುದ್ದು, ೧೯೮೦ರಲ್ಲಿ ೧೮,೦೦೦ ಆಗಿದೆ. ೧೯೯೦ರಲ್ಲಿ ೨೬,೮೩೦ ಇದ್ದುದ್ದು ೨೦೦೦ದ ಸಂದರ್ಭದಲ್ಲಿ ೩೦,೦೦೦ ಗಡಿ ದಾಟಿದೆ. ಇದರ ಸಂಖ್ಯೆ ಜಾಮಿತಿಯ ಪ್ರಮಾಣದಲ್ಲಿ ಹೆಚ್ಚುತ್ತ ಹೋಗುತ್ತಿದೆ. ಸದ್ಯಕ್ಕಂತು ಇದು ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

ದಲಿತರ ಮೇಲೆ ಹಿಂದೂ ಧರ್ಮ ತೋರಿದ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಮುಂತಾದವುಗಳೇ ಮತಾಂತರಕ್ಕೆ ಕಾರಣವೆಂದು ಹರಿಜನ-ಗಿರಿಜನ ಕಲ್ಯಾಣ ಇಲಾಖೆ ನಿರ್ದೇಕರಾಗಿದ್ದ ಶ್ರೀ. ಕೆ. ಆರ್ಮುಗಂ ಅವರ ವರದಿ ತಿಳಿಸುತ್ತದೆ. ಭಾರತವೇ ಇಸ್ಲಾಂ ರಾಷ್ಟ್ರವಾಗುತ್ತದೆ ಎಂಬ ಭಯ ಹಾಗೂ ಕಳವಳಗಳಿಂದ ಹಿಂದೂ ಸಮಾಜ ನೆಲ ಕುಸಿದಂತೆ ಚೀತ್ಕರಿಸುತ್ತಿದೆ. ಅದೆ ಅಂದು ಕ್ರಿಶ್ಚಿಯನ್ ಧರ್ಮಕ್ಕೆ ದಲಿತರು ಮತಾಂತರಗೊಂಡಾಗ ಮೌನವಾಗಿ ಇದ್ದರು ಈ ಹಿಂದೂ ಸಮಾಜದವರು. ಈ ಹಂತದಲ್ಲಿ ದಲಿತರ ಮತಾಂತರ ಕುರಿತ ಚರ್ಚೆಗೆ ಒಂದರ್ಥದಲ್ಲಿ ಕಾಲ ಮೀರಿದೆ ಎನ್ನಬಹುದು.

ದಲಿತರ ಮೇಲೆ ಹಲ್ಲೆ ದೌರ್ಜನ್ಯಗಳು ನಡೆದಾಗ, ಹೆಣ್ಣು ಮಕ್ಕಳ ಮಾನಭಂಗ ನಡೆದಾಗ, ಅವರ ಗುಡಿಸಲುಗಳಿಗೆ ಬೆಂಕಿ ಬಿದ್ದಾಗ ಯಾರೂ ಚಕಾರವೆತ್ತುವುದಿಲ್ಲ. ದಲಿತರು ಮತಾಂತರಗೊಂಡಾಗ ಹಿಂದೂ ಸಮಾಜ, ಹಿಂದೂ ಮಠಾಧೀಶರು ಬೊಬ್ಬೆಹಾಕುತ್ತಾರೆ ಎಂಬುವುದು ಸಾಮಾನ್ಯವಾದ ಆಕ್ಷೇಪಣೆ ಹಾಗೂ ವಾದ ಕೂಡ. ಮತಾಂತರದ ವಿರುದ್ಧ ಮಧ್ಯಪ್ರದೇಶ, ಗುಜರಾತ್, ಒರಿಸ್ಸಾ ಕರ್ನಾಟಕ ಮತ್ತಿತರ ಕಡೆಗಳಲ್ಲಿ ಹಿಂದೂ ಸನಾತನವಾದಿ ಸಂಘಟನೆಗಳು ಕೆಲ ವರ್ಷಗಳಿಂದ ಪ್ರಚಾರ ಕಾರ್ಯ ಕೈಗೊಂಡಿದ್ದೇ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರಕ್ಕೆ ನಾಂದಿಯಾಯಿತು. ಮತಾಂತರ ವ್ಯಕ್ತಿಯ ವೈಯಕ್ತಿಕ ವಿಷಯ ಎಂಬುದನ್ನು ಮೊದಲೆ ಚರ್ಚಿಸಲಾಗಿದೆ. ಇದರಲ್ಲಿ ಯಾವುದೇ ಧರ್ಮದ ಸಂಘಟನೆಗಳು ಒತ್ತಡಗಳು ಇರಬಾರದು. ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ ಅಸಹನೆ, ಆಕ್ರೋಶಗಳನ್ನು ಬೆಳೆಸಬಾರದು. ಪರಧರ್ಮ ಸಹಿಷ್ಣುತೆ ಬದಲು ಇಂಥ ಅಸಹನೆಗಳನ್ನು ಪ್ರಚೋದಿಸುವ ಸಂಘಟನೆಗಳು ಹೆಚ್ಚುತ್ತಿರುವುದು ಅಲ್ಪಸಂಖ್ಯಾತರ ಕೊಲೆ, ಧಾರ್ಮಿಕ ಕೇಂದ್ರಗಳ ಲೂಟಿ, ಧ್ವಂಸಗಳಂಥ ಹೇಯ ಕೃತ್ಯಗಳಿಗೆ ಕಾರಣವಾಗುತ್ತದೆ. ಭಾರತದ ಸಾಮಾಜಿಕ, ರಾಜಕೀಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಇಂಥ ಸಂಘಟನೆಗಳನ್ನು ಹತ್ತಿಕ್ಕುವುದು ಅಗತ್ಯ.

ಧಾರ್ಮಿಕ ಅಸಹಿಷ್ಣುತೆ

ಭಾರತೀಯ ಸಂಪ್ರದಾಯವಾದಿ ಧಾರ್ಮಿಕ ಅಸಹಿಷ್ಣುತೆ ಯಾವ ಪ್ರಮಾಣದಲ್ಲಿದೆ ಎಂದರೆ ಈ ಘಟನೆಯನ್ನು ಅವಲೋಕಿಸಬಹುದು. ಒರಿಸ್ಸಾದ ಮನೋಹರಪುರ ಗ್ರಾಮದಲ್ಲಿ ತಮ್ಮ ಜೀಪಿನಲ್ಲಿ ಮಲಗಿದ್ದ ಗ್ರಹಾಂಸ್ಟೇನ್ಸ್ ಮತ್ತು ಅವರ ಇಬ್ಬರು ಎಳೆಯ ಮಕ್ಕಳಾದ ಟಿ. ಮೋದಿ ಮತ್ತು ಫಿಲಿಪ್‌ರನ್ನು ಜನವರಿ ೨೨,೧೯೯೯ರಲ್ಲಿ ಜೀವಂತವಾಗಿ ಚಿತೆ ಹಾಕಿ ಸುಡಲಾಯಿತು.

ಗ್ರಹಾಂಸ್ಟೇನ್ಸ್ ಪ್ರವಾದಿಯಾಗಿ ಒಳ್ಳೆಯ ಕೆಲಸದಲ್ಲಿ ತೊಡಗಿ ಸ್ಥಳೀಯ ಆದಿವಾಸಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತದ ಸಂವಿಧಾನದ ಭಾರತೀಯ ದಂಡ ಸಂಹಿತೆಗಳು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಮಾದರಿ ರಕ್ಷಣೆಗಳನ್ನು ಒದಗಿಸುತ್ತವೆ ಎಂದು ಉಲ್ಲೇಖಗೊಂಡಿದೆ. ನಾಗರಿಕ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ ಎಂದು ತನ್ನನ್ನು ತಾನೇ ಘೋಷಿಸಿಕೊಂಡಿದೆ. ಆದರೂ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಸುವವರ ಸದ್ದಡಗಿಸಲು ಹಾಗೂ ಹಿಂಸಾಚಾರ ನಡೆಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರಕ್ಕೆ ಹೆಚ್ಚಿನ ರಾಜಕೀಯ ಸಂಕಲ್ಪ ಬಲವಿಲ್ಲವೆಂಬುದನ್ನು ಮೇಲಿನ ಪ್ರಕರಣ ವ್ಯಕ್ತಪಡಿಸುತ್ತದೆ. ಹಾಗೂ ಅದು ೨೦೦೮ರ ಸೆಪ್ಟೆಂಬರ್ ಆಗಸ್ಟ್ ಗಳಲ್ಲಿ ಕರ್ನಾಟಕದಲ್ಲಿ ನಡೆದ ಚರ್ಚ್ ಗಳ ಮೇಲಿನ ದಾಳಿಯನ್ನು ಸಹ ಸೂಚಿಸುತ್ತದೆ.

ಭಾರತದಲ್ಲಿ ಮೂಲಭೂತವಾದವು ಯಾವುದೇ ಒಂದು ಸಂಘಟನೆಗೆ ಸೀಮಿತವಲ್ಲ ಹಾಗೂ ಇಂತಹ ದ್ವೇಷದ ಅಪರಾಧಗಳೂ ಹೊಸದಲ್ಲ. ಭಾರತದಲ್ಲಿ ನಿರಂತರವಾಗಿ, ವ್ಯವಸ್ಥಿತವಾಗಿ, ಹತ್ಯೆಗಳು ನಡೆಯುತ್ತಿವೆ. ಸರ್ಕಾರಗಳನ್ನು ನಡೆಸುವ ಆಡಳಿತ ಪಕ್ಷಗಳು ಜನರ ಹಿತ ಹಾಕುವಲ್ಲಿ ವಿಫಲವಾಗುತ್ತಿವೆ. ಬೆಳೆಯುತ್ತಿರುವ ಹಿಂದೂ ಮೂಲಭೂತವಾದ ಹಾಗೂ ಶಾರ್ಮಿಕರ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ಆಕ್ರಮಣ, ಹಿಂಸಾಚಾರ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ವಿರೋಧಿ ಹಿಂಸಾಚಾರಕ್ಕೆ ಪ್ರತಿಯಾಗಿ ಮತಾಂತರಿಗಳ ದಾಳಿಗಳು ಚರ್ಚೆಗಳು ನಡೆಯುತ್ತಿವೆ.

ಸ್ಪೇನ್ಸ್ ಹತ್ಯೆಯನ್ನು ಕುರಿತು ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಡಿ. ಪಿ. ವಾದ್ವಾ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗವೊಂದನ್ನು ಭಾರತ ಸರ್ಕಾರ ನೇಮಿಸಿತು. ಗ್ರಾಹಾಂ ಸ್ಟೇನ್ಸ್ ಆದಿವಾಸಿಗಳನ್ನು ಕ್ರೈಸ್ತ ಮತಕ್ಕೆ ಪರಿವರ್ತಿಸುತ್ತಿದ್ದಾರೆಂಬ ಆಪಾದನೆ ಮೇಲೆ ಹತ್ಯೆಗಳನ್ನು ಸಮರ್ಥಿಸಿಕೊಳ್ಳಲು ಹಿಂದೂ ಸಂಘಟನೆಗಳು ಪ್ರಯತ್ನಿಸಿದವು. ಅಲ್ಪಸಂಖ್ಯಾತರ ವಿರುದ್ಧ ಒಂದು ವರ್ಷದಿಂದ ನಡೆಯುತ್ತಿರುವ ಸಾರ್ವಜನಿಕ ಅಭಿಪ್ರಾಯಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರ ಭಾರತ ಸರ್ಕಾರ ಮೇಲಿನ ಆಯೋಗವನ್ನು ನೇಮಿಸಿತ್ತು. ಭಾರತ ಸರ್ಕಾರ ಹತ್ಯೆಗಳನ್ನು ಖಂಡಿಸಿ ಇದನ್ನು ಸಹಿಷ್ಣುತೆಯ ನಾಡಿನಲ್ಲಿನ ಕಪ್ಪು ಚುಕ್ಕೆ ಎಂದು ಘೋಷಿಸಿತು. ಆದರೆ ಈ ಅಕ್ರಮಗಳ ಹಿಂದೆ ವಿವಿಧ ಹಿಂದೂ ಮೂಲಭೂತವಾದಿ ಸಂಘಟನೆಗಳು ಇರುವುದನ್ನು ಯಾರೂ ನಿರಾಕರಿಸುವುದಿಲ್ಲ.

ವರದಿಯಲ್ಲಿ ಭಜರಂಗದಳದ ಪ್ರಾಬಲ್ಯದಿಂದ ಬೆಳೆಯುತ್ತಿರುವ ಅಲ್ಪಸಂಖ್ಯಾತರ ವಿರೋಧಿ ಭಾವನೆಗಳನ್ನು ಆಯೋಗ ಪರೋಕ್ಷವಾಗಿ ಗುರುತಿಸಿದೆ ಎಂದು ದಿನಾಂಕ ೧೮. ೦೩. ೨೦೦೭ರ ಪ್ರಜಾವಾಣಿ ದಿನಪತ್ರಿಕೆಯ ವಿಚಾರ ಮಂಥನದ ಕಾಲಂನಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಸಾಮಾನ್ಯ ಜನತೆಯನ್ನು ಆಯೋಗ ಸಂದರ್ಶಿಸಿದಾಗ ಹಾಗೂ ಸ್ಟೇನ್ಸ್ ಅವರ ಮೇಲಿದ್ದ ಮತಾಂತರದ ಆರೋಪಗಳನ್ನು ಪರಿಶೀಲಿಸಿದಾಗ ಸ್ಟೇನ್ಸ್‌ಪ್ರವಾದಿಯಾಗಿ ಮತಾಂತರದಲ್ಲಿ ತೊಡಗಿರಲಿಲ್ಲ, ಬದಲಾಗಿ ಒಳ್ಳೆಯ ಕೆಲಸದಲ್ಲಿ ತೊಡಗಿದ್ದರು ಎಂಬ ವಿಷಯ ವ್ಯಕ್ತವಾಗಿದೆ. ಆದರೆ, ತಮ್ಮ ವಿರುದ್ಧ ಭಾವಪ್ರವಾಹವೊಂದು ಹರಿಯುತ್ತಿರುವುದನ್ನು ಸ್ಟೇನ್ಸ್ ಅರಿತುಕೊಳ್ಳಲಿಲ್ಲ. ಆಯೋಗಕ್ಕೆ ವಿಧಿಸಲಾಗಿದ್ದ ಕಾರ್ಯಷರತ್ತುಗಳೂ ಈ ವಿರುದ್ಧ ಭಾವಪ್ರವಾಹದ ಕಾರಣಗಳು ಅಥವಾ ವ್ಯಾಪಕ ಪರಿಣಾಮಗಳ ತನಿಖೆಗೆ ಅವಕಾಶ ನೀಡಿರಲಿಲ್ಲ ಎಂಬುದು ಅತ್ಯಂತ ಗಂಭೀರವಾದ ಲೋಪವೆನ್ನಬಹುದು.

ದೇಶದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರ ಮೇಲೆ ಅದರಲ್ಲಿಯೂ ಕ್ರೈಸ್ತರ ಮೇಲೆ ನಡೆಯುತ್ತಿರುವ ಹಲ್ಲೆಗಳು, ಹತ್ಯೆಗಳು ಅಲ್ಪಸಂಖ್ಯಾತರಲ್ಲಿ ಆತಂಕ ಮೂಡಿಸುವುದರ ಜೊತೆಗೆ ಅಲ್ಪಸಂಖ್ಯಾತರಲ್ಲಿ ಸಹಜವಾಗಿಯೇ ಭೀತಿಗೆ ಕಾರಣವಾಗುತ್ತಿದೆ. ಒರಿಸ್ಸಾದ ಮಯೂರಭಂಜ್ ಜಿಲ್ಲೆಯಲ್ಲಿ ಕೇವಲ ಒಂದು ವಾರದ ಹಿಂದೆಯಷ್ಟೇ ಮುಸ್ಲಿಂ ವ್ಯಕ್ತಿಯಬ್ಬರ ಹತ್ಯೆ ನಡೆದ ಬೆನ್ನ ಹಿಂದೆಯೇ ಮತ್ತೆ ಕ್ರೈಸ್ತ ಪಾದ್ರಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ಸರಣಿ ದಾಳಿಗಳು ನಡೆದಿವೆ.

ಗುಡ್ಡಗಾಡು ಜನರ ಸ್ಥಿತಿಗತಿ ಸುಧಾರಿಸಿ ಅವರಿಗೆ ಹೊಸಜೀವನ ನೀಡುವ ಕಾರ್ಯದಲ್ಲಿ ನಿರತರಾಗಿದ್ದ ಸ್ಟೇನ್ಸ್ ಅವರು ಮತಾಂತರ ಕಾರ್ಯದಲ್ಲಿ ತೊಡಗಿದ್ದೇ ಅವರ ಹತ್ಯೆಗೆ ಕಾರಣ ಎಂದು ಹೇಳಲಾಗಿತ್ತು. ಆದರೆ ಹತ್ಯೆಗೆ ಈಡಾದ ರೋಮನ್‌ಕ್ಯಾಥೋಲಿಕ್ ಮಿಷನ್ನಿನ ಪಾದ್ರಿ ಅರುಳ್‌ದಾಸ್ ಅವರು ಗುಡ್ಡಗಾಡು ಜನರಿಂದಲೇ ಕೊಲೆಗೀಡಾಗಿದ್ದಾರೆಂಬುದು ಶೋಷನೀಯ. ಅರುಳ್‌ದಾಸ್ ಮತ್ತು ಅವರ ಜೊತೆ ಇದ್ದ ಇನ್ನಿಬ್ಬರ ಮೇಲೆ ಗುಡ್ಡಗಾಡು ಜನರ ಗುಂಪೊಂದು ಹಲ್ಲೆ ನಡೆಸಿದಾಗ ಜೀವ ಉಳಿಸಿಕೊಳ್ಳಲು ಓಡಲು ಯತ್ನಿಸಿದ ಅರುಳ್‌ದಾಸ್ ಅವರನ್ನು ಬಾಣದಿಂದ ಹೊಡೆದು ಹತ್ಯೆ ಮಾಡಲಾಗಿದೆ. ಇದು ಮತಾಂತರ ವಿರುದ್ಧದ ಸೇಡಿನ ಕ್ರಮ ಎನ್ನುವವರೂ ಇಲ್ಲದಿಲ್ಲ. ಈ ಮೂರು ಹತ್ಯಾಕಾಂಡಗಳು ಭಾರತೀಯ ಪರ್ವದಿನಗಳಂದೇ ನಡೆದಿದ್ದೊಂದು ವಿಪರ್ಯಾಸ. ಸ್ಟೇನ್ಸ್ ಹತ್ಯೆ ಸರಸ್ವತಿ ಪೂಜೆಯ ದಿನ ನಡೆಸಿದ್ದರೆ, ಮುಸ್ಲಿಂ ಯುವಕನ ಕೊಲೆ ರಕ್ಷಾ ಬಂಧನದ ದಿನ ಮತ್ತು ಅರುಳ್‌ದಾಸ್ ಹತ್ಯೆ ಕೃಷ್ಣಾಷ್ಟಮಿಯ ದಿನ ನಡೆದಿದ್ದು ಗಮನಾರ್ಹ. ಈ ಎಲ್ಲಾ ಹತ್ಯೆಗಳಲ್ಲಿ ಹಿಂದೂಮೂಲಭೂತವಾದಿಗಳ ಕೈವಾಡ ಸ್ಪಷ್ಟವಾಗಿ ಕಂಡುಬಂದಿದೆ. ಸ್ಟೇನ್ಸ್ ಹತ್ಯಾ ಪ್ರಕರಣದಲ್ಲಿ ಭಜರಂಗದಳಕ್ಕೆ ಸೇರಿದವರೆನ್ನಲಾದ ದಾರಾಸಿಂಗ್ ಮುಖ್ಯ ಆರೋಪಿ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರ ಹೇಳಿಕೆ ಪ್ರತಿಯೊಬ್ಬ ನಾಗರಿಕರನ್ನು ಗಾಬರಿಪಡಿಸುವಂತಿತ್ತು. ಹಿಂದೂ ಧರ್ಮದ ರಕ್ಷಣೆಗಾಗಿ ನಾನು ಈ ಕಾರ್ಯ ಮಾಡಿದೆ ಎಂಬುವುದು ಅವರ ಹೇಳಿಕೆ. ಯಾವ ಧರ್ಮದ ರಕ್ಷಣೆ, ಯಾವ ಜಾತಿಯ ಜನಾಂಗದವರ ರಕ್ಷಣೆ ಎಂಬ ಪ್ರಶ್ನೆಗಳು ಇಲ್ಲಿ ಸಹಜವಾಗಿಯೇ ಮೂಡುತ್ತವೆ.

ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಹತ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಡೆಯುವಲ್ಲಿ ವಿಫಲವಾಗುತ್ತವೆ ಎಂದು ಕೆಲವು ಎಡಪಂಥೀಯ ಚಿಂತಕರು ಗುಡುಗಿದ್ದಾರೆ. ಹಿಂದೆ ಕೇವಲ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿದ್ದ ಹಲ್ಲೆ, ಹತ್ಯೆಗಳು ಈಗ ಕ್ರಿಶ್ಚಿಯನ್ನರತ್ತ ವಾಲುತ್ತಿದೆ. ಭಾರತದಲ್ಲಿ ಈಗ ಮುಸ್ಲಿಂ ಭಯೋತ್ಪಾದಕರು ಸೃಷ್ಟಿಯಾದರಂತು ದೇಶದ ಭದ್ರತೆಗೆ ಧಕ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ವ್ಯವಸ್ಥಿತವಾಗಿ ನಡೆಯುತ್ತಿರುವಂತಿದೆ. ಸರ್ಕಾರಗಳು ಹಲ್ಲೆಗಳನ್ನು ತಡೆದು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಮುಂದಾಗಬೇಕಿದೆ.

ಪರಾಮರ್ಶನ ಗ್ರಂಥಗಳು

೧. ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಭಾರತೀಯ ಸಮಾಜ ಮತ್ತು ದಲಿತರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೮.

೨. ಡಾ. ಎನ್. ಚಿನ್ನಸ್ವಾಮಿ ಸೋಸಲೆ, ದಲಿತರು ಮತ್ತು ಮತಾಂತರ: ಒಂದು ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೮.

೩. ಕರ್ನಾಟಕದಲ್ಲಿ ಬೌದ್ಧ ಧರ್ಮ (ದಲಿತ ಸಂವೇದನೆಯ ನೆಲೆಯಲ್ಲಿ) ಸಂಶೋಧಕರು ಬಿ. ಕೆ. ಎಸ್. ವರ್ಧನ್, ಮಾರ್ಗದರ್ಶಕರು, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಚರಿತ್ರೆ ವಿಭಾಗ, ಕವಿಹಂ, ೨೦೦೬, ಅಪ್ರಕಟಿತ ನಿಬಂಧ.

೪. ಆಧುನಿಕ ಕನ್ನಡ ಸಾಹಿತ್ಯ ಮತ್ತು ಮತಾಂತರ: ಸಂಶೋಧಕಿ: ಬಿ. ವಿ. ನಾಗವೇಣಿ, ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (೨೦೦೭ ರಲ್ಲಿ ಪಿ. ಎಸ್. ಡಿ. ಪದವಿ ಪಡೆಯಲಾಗಿದೆ). ಅಪ್ರಕಟಿತ ನಿಬಂಧ.

—-
*
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮತಾಂತರ ಪ್ರಕ್ರಿಯೆ, ಸಂಶೋಧಕರು ಬಿ. ವಿ. ನಾಗವೇಣಿ, ಮಾರ್ಗದರ್ಶಕರು ಡಾ. ಕರೀಗೌಡ ಬೀಚನಹಳ್ಳಿ, ಭಾಷಾಂತರ ಅಧ್ಯಯನ ವಿಭಾಗ, ಕವಿಹಂ, ೨೦೦೭ ರಲ್ಲಿ ಪಿಎಚ್‌. ಡಿ. ಪದವಿ ಪಡೆದ ಅಪ್ರಕಟಿತ ನಿಬಂಧದಿಂದ ಆಯ್ದುಕೊಂಡ ಲೇಖನ. ಇದಕ್ಕೆ ಒಪ್ಪಿಗೆ ನೀಡಿದ ಸಂಶೋಧಕಿ ಅವರಿಗೆ ವಂದನೆಗಳು (ಸಂ.)