ಅಕ್ಟೋಬರ್ ೧೩, ೧೯೩೫ರಲ್ಲಿ ಅಂಬೇಡ್ಕರ್ ಅವರು “ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇ ತಪ್ಪು; ಆದರೆ ಹಿಂದೂವಾಗಿ ಸಾಯುವುದಿಲ್ಲ” ಎಂದು ಘೋಷಿಸಿದರು. ಹಾಗೆಯೇ “ಹಿಂದೂ ಧರ್ಮವನ್ನು ತ್ಯಜಿಸುತ್ತೇನೆ. ಹಿಂದೂ ದೇವತೆಗಳನ್ನು ನಿರಾಕರಿಸುತ್ತೇನೆ” ಎಂದು ಸಾರಿದರು. ಹಿಂದೂ ಧರ್ಮದಲ್ಲಿದ್ದುಕೊಂಡು ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸುತ್ತೇವೆ ಎಂದು ಹೇಳುವುದೆಂದರೆ ನೀರಿನ ಮೇಲೆ ಗೆರೆಗಳನ್ನು ಎಳೆದಂತೆ ಎಂಬುದು ಅಂದೇ ಅಂಬೇಡ್ಕರ್ ಅವರಿಗೆ ಮನವರಿಕೆಯಾಗಿತ್ತು. ಸಾಮಾಜಿಕ ಸಂಘಟನೆಯ ಬೆಂಬಲವಿಲ್ಲದೆ ರಾಜಕೀಯ ಸಂಘಟನೆ ಹೆಚ್ಚು ಸಮಯದವರೆಗೆ ಬದುಕುಳಿಯುವುದಿಲ್ಲ ಎಂಬುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಹಿಂದೂ ಧರ್ಮ ಎಂಥ ಸಮಾಜಕ್ಕೆ ಜನ್ಮ ಕೊಟ್ಟಿತ್ತೊ ಆ ಸಮಾಜದಲ್ಲಿ ಸಂಘಟನೆ ರೂಪಿತಗೊಳ್ಳುವುದಾಗಲಿ ಅಥವಾ ಉಳಿದುಕೊಂಡು ಬರುವುದಾಗಲಿ ಅಸಂಭವದ ಮಾತಾಗಿತ್ತು. ಆದರೆ, ದಲಿತರ ರಕ್ಷಣೆ, ಅಭಿವೃದ್ಧಿ ಮತ್ತು ಉನ್ನತಿಗಾಗಿ ಸಂಘಟನೆ ಅವಶ್ಯ. ಇದಿಲ್ಲದೆ ಕಷ್ಟಗಳನ್ನೆದುರಿಸುವುದಾಗಲಿ ಅಥವಾ ಅತ್ಯಾಚಾರಗಳ ವಿರುದ್ಧ ಹೋರಾಡುವುದಾಗಲಿ ಸಾಧ್ಯವಾಗುವುದಿಲ್ಲ ಎಂದು ದಲಿತರಿಗೆ ಧರ್ಮ ಪರಿವರ್ತನೆ ಮಾಡಿಕೊಳ್ಳಲು ಆದೇಶ ನೀಡಿದರು. ಭಾರತದ ಪ್ರಗತಿಗಾಗಿ, ಉನ್ನತಿಗಾಗಿ ಬ್ರಿಟಿಷರ ದಾಸ್ಯತ್ವದಿಂದ ಮುಕ್ತವಾಗುವುದು ಎಷ್ಟು ಅವಶ್ಯಕವೋ ಹಾಗೆಯೇ ದಲಿತ ಜನಾಂಗ ತಮ್ಮನ್ನು ತಾವು ಹಿಂದೂಗಳಿಗೆ ಸರಿಸಮಾನರೆಂದು ಭಾವಿಸಿಕೊಂಡು ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಂಘಟಿಸಲು ಅನುಕೂಲವಾಗಲೆಂದು ಹಿಂದೂ ಧರ್ಮದಿಂದ ವಿಮೋಚನೆ ಪಡೆಯುವುದು ಅಂಬೇಡ್ಕರ್ ದೃಷ್ಟಿಯಲ್ಲಿ ಮುಖ್ಯವಾಗಿತ್ತು. ದಲಿತರು ತಮ್ಮನ್ನ ತಾವು ರಕ್ಷಿಸಿಕೊಳ್ಳಲು, ಹಳ್ಳಿಗಳಲ್ಲಾಗುತ್ತಿರುವ ಅತ್ಯಾಚರಗಳನ್ನು ತಪ್ಪಿಸಲು ಬೇರೆಯೇ ಆದ ಹಳ್ಳಿಗಳ ನಿರ್ಮಾಣಕ್ಕೆ ಅವರು ಕರೆ ಕೊಟ್ಟರು. ನಿಜ, ಆದರೆ ದಲಿತರು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯಿಂದ ಬೇರೆಯಾಗುವುದನ್ನು ತಡೆದರು. ಬೇರುಗಳೇ ಇಲ್ಲದ ಗಿಡಗಳಂತಾಗಬಾರದು ದಲಿತರು ಎಂದು ಬಯಸುತ್ತಿದ್ದ ಅವರು ಇಡೀ ಭಾರತದ ಜನರು ಸಮಾಜದ, ಭಾತೃಭಾವ ಹಾಗೂ ಮಾನವೀಯತೆಯ ಉತ್ಥಾನಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೋರಾಡಬೇಕೆಂದು ಇಚ್ಛಿಸಿದ್ದರು. ಅವರಿಗೆ ಬೌದ್ಧ ಧರ್ಮದಲ್ಲಿ ಒಂದು ಆಶಾಕಿರಣ ಕಂಡಿತ್ತು. ಅವರ ಪ್ರಕಾರ ಬೌದ್ಧ ಧರ್ಮ ಒಂದು ಧರ್ಮವಾಗಿರದೆ ಒಂದು ಜೀವನಕ್ರಮವಾಗಿತ್ತು. ‘ನಾನು ಐದು ವರ್ಷಗಳ ಕಾಲ ಬದುಕಿರುವುದೇ ಆದರೆ ಇಡೀ ಭಾರತವನ್ನೇ ಬೌದ್ಧಮಯವಾಗಿ ಮಾಡಿ ಬಿಡುತ್ತೇನೆ’ ಎಂದೆನ್ನುತ್ತಿದ್ದರು. ದಲಿತ ಮನುಷ್ಯನ ಮಟ್ಟವನ್ನು ಮೇಲಕ್ಕೆತ್ತುವುದೇ ಅವರ ಉದ್ದೇಶವಾಗಿತ್ತು. ಧರ್ಮ ಪರಿವರ್ತನೆಯ ತೀರ್ಮಾನವನ್ನು ಘೋಷಿಸಿದ ನಂತರ ಮುಸ್ಲಿಮರು, ಕ್ರೈಸ್ತರು ಹಾಗೂ ಸಿಖ್ ಧರ್ಮದ ನಾಯಕರು ಬಹಳ ಕುತೂಹಲವನ್ನು ತೋರಿಸಿದರು. ಅಷ್ಟೇ ಅಲ್ಲ ಒತ್ತಾಯ ತಂದರು. ಇದಕ್ಕೆ ಅವರ ಪ್ರತಿಕ್ರಿಯೆ

ಮತಾಂತರವು ಮಕ್ಕಳ ಆಟವಲ್ಲ; ಅದು ಮನೋರಂಜನೆಯ ವಿಷಯವೂ ಅಲ್ಲ; ಅದು ಮಾನವ ಜೀವನವನ್ನು ಸಫಲಗೊಳಿಸುವ ಮಾರ್ಗವನ್ನು ಕುರಿತದ್ದಾಗಿದೆಎಂಬುದಾಗಿತ್ತು.

ಜನಸಾಮಾನ್ಯರಿಗೆ ಮತಾಂತರವು ಒಂದು ಅತಿ ಪ್ರಾಮುಖ್ಯ ವಿಚಾರ. ಆದರೆ ಅದನ್ನು ಅರಿಯಲು ಅವರಿಗೆ ಕಠಿಣವಾಗಿದೆ ಎಂದು ಅದರ ಸೂಕ್ಷ್ಮತೆಯನ್ನು ಬಿಡಿಸಿ ಹೇಳಿದರು.

ಸ್ವರೂಪ

ಮತಾಂತರಕ್ಕೆ ಎರಡು ರೂಪಗಳಿವೆ. ಒಂದು ಸಾಮಾಜಿಕ ರೂಪ, ಇನ್ನೊಂದು ಧಾರ್ಮಿಕ ರೂಪ. ಪ್ರಾಪಂಚಿಕ ಮತ್ತು ಆಧ್ಯಾತ್ಮಕ ರೂಪಗಳೇನೇ ಇರಲಿ ಅಸ್ಪೃಶ್ಯತೆಯ ಮೂಲವನ್ನು ಅದರ ಸ್ವರೂಪ ಮತ್ತು ಆಚರಣೆಯನ್ನೂ ಅರಿಯುವುದು ಅತ್ಯಗತ್ಯ. ಈ ಅರಿವಿಲ್ಲದೆ ಮತಾಂತರದ ನೈಜ ಅರ್ಥವನ್ನು ದಲಿತರು ಗ್ರಹಿಸಲಾರರು. ಅಸ್ಪೃಶ್ಯತೆ ಮತ್ತು ವಾಸ್ತವಿಕ ಜೀವನದಲ್ಲಿ ಅದರ ಆಚರಣೆಯ ಸ್ಪಷ್ಟ ಅರಿವನ್ನು ತಿಳಿಯಬೇಕಾದರೆ ದಲಿತರ ಮೇಲೆ ಎಸಗಿರುವ ಕಿರುಕುಳದ ಪ್ರಸಂಗಗಳನ್ನು ಕಲ್ಪಿಸಿಕೊಂಡದರೆ ಅರ್ಥೈಸಬಹುದು. ಆದರೆ ಅದರ ಕಾರಣವನ್ನು ನಿಮ್ಮಲ್ಲಿ ಕೇವಲ ಕೆಲವರು ಮನಗಂಡಿರಬಹುದು. ಅದರ ದಬ್ಬಾಳಿಕೆಯ ಮೂಲವನ್ನು ಗ್ರಹಿಸುವುದು ಅತ್ಯವಶ್ಯ.

ಅಸ್ಪೃಶ್ಯತೆಯು ಇಬ್ಬರು ಎದುರಾಳಿಗಳಲ್ಲಿರುವ ವೈಷಮ್ಯವಲ್ಲ. ಆ ಸಮಸ್ಯೆಯು ಸವರ್ಣೀಯ ಹಿಂದೂಗಳಿಗೂ ಅಸ್ಪೃಶ್ಯರಿಗೂ ಇರುವ ವರ್ಗ ಹೋರಾಟಕ್ಕೆ ಸಂಬಂಧಿಸಿದೆ. ಅದು ಒಬ್ಬನ ವಿರುದ್ಧ ಮಾಡುವ ಅನ್ಯಾಯವಲ್ಲ. ಒಂದು ವರ್ಗವು ಮತ್ತೊಂದು ವರ್ಗದ ಮೇಲೆ ಎಸಗುವ ಅನ್ಯಾಯ. ಈ ವರ್ಗ ಹೋರಾಟವು ಸಮಾಜದ ಸ್ಥಾನಮಾನಕ್ಕೆ ಸಂಬಂಧಿಸಿದುದು. ಒಂದು ವರ್ಗವು ಮತ್ತೊಂದು ವರ್ಗದೊಡನೆ ತನ್ನ ಸಂಬಂಧವನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ. ದಲಿತರು ಇತರರ ಸಂಗಡ ಸಮಾನತೆಯಿಂದ ವರ್ತಿಸಲು ಯತ್ನಿಸಿದ ಕೂಡಲೆ ಈ ಹೋರಾಟವು ಆರಂಭವಾಗುತ್ತದೆ.

ಸವರ್ಣೀಯರ ಸಿಟ್ಟಿಗೆ ಕಾರಣ ತೀರ ಸಾಮಾನ್ಯವಾದುದೆ. ದಲಿತರು ಅವರ ಸಂಗಡ ಸಮಾನತೆಯಿಂದ ವರ್ತಿಸುವುದೇ ಅವರಿಗೆ ಅವಮಾನ ಮಾಡಿದಂತೆ. ಅಸ್ಪೃಶ್ಯತೆಯು ತಾತ್ಕಾಲಿಕವಾದುದಲ್ಲ; ಅದು ಶಾಶ್ವತವಾದುದು. ನೇರವಾಗಿ ಹೇಳುವುದಾದರೆ, ಹಿಂದೂಗಳ ಮತ್ತು ಅಸ್ಪೃಶ್ಯರ ಹೋರಾಟವೂ ಶಾಶ್ವತವಾದ ಅಸಾಧಾರಣ ಘಟನೆಯಾಗಿದೆ. ದಲಿತರನ್ನು ಸಮಾಜದ ತೀರ ಕೆಳ ಮಟ್ಟದಲ್ಲಿರುವ ಹಿಂದೂ ಧರ್ಮವೂ ಶಾಶ್ವತವಾದುದರಿಂದ ಈ ಹೋರಾಟವೂ ಶಾಶ್ವತವಾಗಿ ಉಳಿಯುವುದೆಂದು ಸವರ್ಣ ಹಿಂದೂಗಳ ನಂಬಿಕೆಯಾಗಿದೆ. ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಯಾವ ಬದಲಾವಣೆಯೂ ಆಗುವಂತಿಲ್ಲ. ಒಂದರ್ಥದಲ್ಲಿ ದಲಿತರು ಈ ದಿನ ಏಣಿಯ ರೀತ ಕೆಳಗಿನ ಮಟ್ಟದಲ್ಲಿದ್ದಾರೆ ಮತ್ತು ದಲಿತರು ಎಂದೆಂದಿಗೂ ಆ ಕೀಳು ಮಟ್ಟದಲ್ಲಿಯೇ ಉಳಿಯುತ್ತಾರೆ. ಅಂದರೆ ಹಿಂದೂಗಳ ಮತ್ತು ದಲಿತರ ಹೋರಾಟವು ಎಂದೆಂದಿಗೂ ಮುಂದುವರಿಯಲೇಬೇಕು. ಈ ಹೋರಾಟದಲ್ಲಿ ದಲಿತರು ಹೇಗೆ ಉಳಿಯುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ. ಇದನ್ನು ಕುರಿತು ದಲಿತರು ಯೋಚಿಸಲೇಬೇಕು; ಅನ್ಯ ಮಾರ್ಗವೇ ಇಲ್ಲ. ಹಿಂದೂಗಳ ಕಟ್ಟಪ್ಪಣೆಯಂತೆ ಜೀವನ ನಡೆಸುವವರು, ಅವರ ಗುಲಾಮರಾಗಿ ಉಳಿಯಲು ಇಚ್ಚಿಸುವವರು ಈ ಸಮಸ್ಯೆಯನ್ನು ಕುರಿತು ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಆತ್ಮಗೌರವದಿಂದಲೂ, ಸಮಾನತೆಯಿಂದಲೂ ಬಾಳಬೇಕೆನ್ನುವವರು ಇದನ್ನು ಕುರಿತು ಯೋಚಿಸಲೇ ಬೇಕಾಗಿದೆ. ದಲಿತರು ಈ ಹೋರಾಟದಲ್ಲಿ ಹೇಗೆ ಉಳಿಯುತ್ತಾರೆ? ಈ ಪ್ರಶ್ನೆಗೆ ಉತ್ತರಿಸುವುದು ದಲಿತರಿಗೆ ಕಠಿಣವಲ್ಲ. ಆದರೆ, ಯಾವುದೇ ಹೋರಾಟದಲ್ಲಿ ಶಕ್ತಿಶಾಲಿಗಳೇ ಗೆಲ್ಲುವರೆಂದು ನಾವೆಲ್ಲರೂ ಒಪ್ಪುತ್ತೇವೆ. ಶಕ್ತಿಯಿಲ್ಲದವರು ಜಯವನ್ನು ನಿರೀಕ್ಷಿಸುವಂತೆಯೇ ಇಲ್ಲ. ಇದು ಅನುಭವದಿಂದ ದೃಢಪಟ್ಟಿದೆ. ಉದಾಹರಣೆಗಳನ್ನು ಕೊಡುವ ಅಗತ್ಯವಿಲ್ಲ.

ಮತಾಂತರ, ಈ ಹೋರಾಟದಲ್ಲಿ ದಲಿತರು ಉಳಿಯಲು ಸಾಕಷ್ಟು ಶಕ್ತಿಯಿದೆಯೇ ಎಂಬುದು ಈಗ ಪರ್ಯಾಲೋಚಿಸಬೇಕಾದ ಪ್ರಶ್ನೆ. ಮಾನವನಿಗೆ ಮೂರು ಬಗೆಯ ಶಕ್ತಿಗಳು ತಿಳಿದಿವೆ. ೧. ಜನಶಕ್ತಿ, ೨. ಧನಶಕ್ತಿ, ೩. ಜ್ಞಾನಶಕ್ತಿ. ಇವುಗಳಲ್ಲಿ ದಲಿತರಲ್ಲಿರುವುದೇನು? ಜನಶಕ್ತಿಯಲ್ಲಿ ದಲಿತರು ಅಲ್ಪಸಮಖ್ಯಾತರೆನ್ನುವುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ಅಸ್ಪೃಶ್ಯರು ಒಟ್ಟು ಜನಸಂಖ್ಯೆಯ ಎಂಟರಲ್ಲಿ ಒಂದು ಭಾಗವಿದ್ದರೆ ಅವರಲ್ಲಿಯೂ ಒಗ್ಗಟ್ಟೆಂಬುದೇ ಇಲ್ಲ. ಕಾರಣವೇನೆಂದರೆ, ಅವರಲ್ಲಿರುವ ಒಳಜಾತಿಗಳು ಅವರು ಒಗ್ಗಟ್ಟಾಗಿರಲು ಅವಕಾಶ ಕೊಡುವುದಿಲ್ಲ ಎಂಬುವುದು ಒಂದಾದರೆ, ದಲಿತರು ಹೆಚ್ಚು ಜನಸಂಖ್ಯೆಯಲ್ಲಿ ಒಂದೊಂದು ಕಡೆ ವಾಸಿಸದೆ ಹಳ್ಳಿಗಳಲ್ಲೆಲ್ಲಾ ಹಂಚಿಹೋಗಿದ್ದಾರೆ. ಈ ಸನ್ನಿವೇಶದಲ್ಲಿ ಅಲ್ಪಸಂಖ್ಯೆಯ ಜನರು ಆಪತ್ಕಾಲದಲ್ಲಿ ಶಿಸ್ತಿನಿಂದ ಹೋರಾಟಲಾರರು. ಧನಶಕ್ತಿಯೂ ಅಷ್ಟರಲ್ಲಿಯೇ ಇದೆ. ಅಲ್ಪಸ್ವಲ್ಪ ಜನಶಕ್ತಿಯಿದೆಯೆಂದರೂ ಧನವಂತೂ ಇಲ್ಲವೇ ಇಲ್ಲವೆಂಬುದು ನಿರ್ವಿವಾದ ಸಂಗತಿ. ದಲಿತರಲ್ಲಿ ಉದ್ಯಮವಿಲ್ಲ, ವ್ಯಾಪಾರವಿಲ್ಲ, ಕೆಲಸವಿಲ್ಲ, ಜಮೀನಿಲ್ಲ. ಮೇಲ್ಜಾತಿಯವರು ಎಸೆದ ಕೂಲಿಯ ಚೂರುಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ. ಮೇಲ್ಜಾತಿಯವರ ಜಮೀನು ಹಾಗೂ ಮನೆಯಲ್ಲಿ ದಿನಕೂಲಿ ಮಾಡಿ ಬರುವ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಇವರಿಗೆ ಯಾವುದೇ ರೀತಿಯ ಜೀವನ ಭದ್ರತೆ ಇರುವುದು ಕಂಡುಬರುವುದೇ ಇಲ್ಲ. ದಲಿತರಿಗೆ ಆಹಾರವಿಲ್ಲ ಬಟ್ಟೆಯಿಲ್ಲ. ನ್ಯಾಯಾಲಯಗಳಿಂದ ಪರಿಹಾರ ಪಡೆಯಲು ದಲಿತರಲ್ಲಿ ಧನಶಕ್ತಿಯಿದೆಯೇ? ಸಾವಿರಾರು ಜನ ಅಸ್ಪೃಶ್ಯರು ಗ್ರಾಮೀಣ ಪ್ರದೇಶದ ಸವರ್ಣೀಯರಿಂದ ಆಗಿವ ಅವಮಾನ, ದಬ್ಬಾಳಿಕೆ ಮತ್ತು ತುಳಿತಗಳಿಗೆ ದೂರನ್ನು ಕೊಡುವ ಧೈರ್ಯವಿಲ್ಲದೆ ಸಹಿಸಿಕೊಂಡಿರಬೇಕಾದರೆ ನ್ಯಾಯಾಲಯದ ವೆಚ್ಚವನ್ನು ಕೊಡಲು ಹಣವಿಲ್ಲದಿರುವುದೇ ಕಾರಣ. ಜ್ಞಾನಶಕ್ತಿಯಲ್ಲಿ ಅವರ ಸ್ಥಿತಿ ಅತಿ ನಿಕೃಷ್ಟ. ಪ್ರತಿಭಟಿಸದೆ, ದೂರು ಕೊಡದೆ, ಅವಮಾನ ಮತ್ತು ದಬ್ಬಾಳಿಕೆಯನ್ನು ಸಹಿಸಿಕೊಳ್ಳುತ್ತಿರುವುದರಿಂದ ಸೇಡು ತೀರಿಸಿಕೊಳ್ಳುವ ಮತ್ತು ದಂಗೆಯೇಳುವ ಪ್ರವೃತ್ತಿಯೇ ದಲಿತರಲ್ಲಿ ನಾಶವಾಗಿದೆ. ಆತ್ಮವಿಶ್ವಾಸ, ಉತ್ಸಾಹ ಮತ್ತು ಆಕಾಂಕ್ಷೆ ಇವುಗಳು ಇವರಲ್ಲಿ ಸಂಪೂರ್ಣ ಮಾಯವಾಗಿವೆ. ದಲಿತರೆಲ್ಲರೂ ಕೈಲಾಗದವರೂ, ನಿರುತ್ಸಾಹಿಗಳೂ ಮತ್ತು ಮಂಕು ಹಿಡಿದವರೂ ಆಗಿದ್ದಾರೆ. ಎಲ್ಲೆಲೆಲಿಯೂ ಸೋಲಿನ ಮತ್ತು ಪ್ರಪಂಚವೇ ದುಃಖಮಯವೆಂಬ ನಿರಾಶಾ ವಾತಾವರಣವೇ ಇದೆ. ಏನಾದರೂ ಆಡೋಣವೆಂಬ ಅತ್ಯಲ್ಪ ಭಾವನೆಯೂ ದಲಿತರ ಮನಸ್ಸಿನಲ್ಲಿ ಸುಳಿಯುವುದೇ ಇಲ್ಲ ಎಂಬುದು ಮಾರ್ಮಿಕವಾದ ಮಾತನ್ನು ಹೇಳಲೇಬೇಕಾಗಿದೆ.

ಮೇಲಿನ ವಿವರಣೆಯೂ ಸರಿಯಾದರೆ ಮುಂದಿನ ನಿರ್ಧಾರಕ್ಕೆ ಬರಲೇಬೇಕಾಗಿದೆ. ಅದೇನೆಂದರೆ ಸ್ವಂತ ಶಕ್ತಿಯಿಂದಲೇ ಹಿಂದೂ ಹಾಗೂ ಹಿಂದೂ ಸವರ್ಣೀಯರ ದಬ್ಬಾಳಿಕೆಯನ್ನು ದಲಿತರು ಎಂದೆಂದಿಗೂ ಎದುರಿಸಲಾರರು ಎಂಬುವುದು. ದಲಿತರಿಗೆ ಶಕ್ತಿಯಿಲ್ಲದುದರಿಂದಲೇ ಸವರ್ಣೀಯರಿಂದ ತುಳಿಯಲ್ಪಟ್ಟರು ಎಂಬ ವಿಚಾರದಲ್ಲಿ ಸಂದೇಹವೇ ಇಲ್ಲ. ದಲಿತರು ಮಾತ್ರ ಅಲ್ಪಸಂಖ್ಯಾತರೆಂದಲ್ಲ, ಮುಸ್ಲ್ಮಾನರೂ ಸಂಖ್ಯೆಯಲ್ಲಿ ದಲಿತರಷ್ಟೇ ಕಡಿಮೆ ಇದ್ದಾರೆ. ಹೊಲೆಯ ಹಾಗೂ ಮಾದಿಗರಂತೆ ಅವರ ಮನೆಗಳೂ ತೀರ ಕಡಿಮೆ. ಆದರೆ ದಲಿತರು ಮಾತ್ರ ದಬ್ಬಾಳಿಕೆ ಯಾವಾಗಲೂ ತುತ್ತಾದರೂ ಮುಸಲ್ಮಾನರಿಗೆ ತೊಂದರೆ ಕೊಡಲು ಯಾರಿಗೂ ಧೈರ್ಯವಿಲ್ಲ. ಇದಕ್ಕೆ ಕಾರಣವೇನು? ಒಂದು ಹಳ್ಳಿಯಲ್ಲಿ ಮುಸಲ್ಮಾನರ ಮನೆಗಳು ಕೇವಲ ಎರಡನೇ ಇದ್ದರೂ ಅವರನ್ನು ಯಾರೂ ಪೀಡಿಸಲಾರರು. ಆದರೆ ದಲಿತರ ಮನೆಗಳು ಹತ್ತು ಇದ್ದರೂ ಇಡೀ ಹಳ್ಳಿಯೇ ಅವರ ವಿರುದ್ಧ ದಬ್ಬಾಳಿಕೆ ನಡೆಸುತ್ತದೆ. ಹೀಗಾಗಲು ಕಾರಣವೇನು? ಇದು ಬಹು ಸಮಂಜಸವಾದ ಪ್ರಶ್ನೆ. ಇದಕ್ಕೆ ದಲಿತರೇ ಸೂಕ್ತ ಉತ್ತರವನ್ನು ಕೊಡಬೇಕು. ನನಗೆ ತಿಳಿದಂತೆ ಇದಕ್ಕೆ ಒಂದೇ ಒಂದು ಉತ್ತರವಿದೆ. ಒಂದು ಹಳ್ಳಿಯ ಎರಡು ಮನೆಗಳ ಮುಸಲ್ಮಾನರಿಗೆ ಬೆಂಬಲವಾಗಿ ಭಾರತದ ಇಡೀ ಮುಸಲ್ಮಾನರ ಶಕ್ತಿಯಿದೆಯೆಂಬುದು ಹಿಂದೂಗಳಿಗೆ ಮನವರಿಕೆಯಾಗಿದೆ. ಆ ಎರಡು ಮನೆಯವರು ಸ್ವತಂತ್ರ ಹಾಗೂ ನಿರ್ಭಯದ ಸುಖಜೀವನವನ್ನು ನಡೆಸುತ್ತಾರೆ. ಏಕೆಂದರೆ ಯಾವ ಹಿಂದೂವೇ ಆಗಲಿ ಅವರ ಮೇಲೆ ಆಕ್ರಮಣ ನಡೆಸಿದರೆ ಪಂಜಾಬಿನಿಂದ ಮದರಾಸಿನವರೆಗೆ ಇಡೀ ಮುಸಲ್ಮಾನ ಸಮುದಾಯವು ಏನೇ ಆಗಲಿ ತಮ್ಮ ತಕ್ಷಣೆಗೆ ಧಾವಿಸುವರೆಂದು ಅವರಿಗೆ ತಿಳಿದಿದೆ. ಆದರೆ ದಲಿತರ ರಕ್ಷಣೆಗೆ ಯಾರೂ ಬರುವುದಿಲ್ಲವೆಂದೂ, ಧನಸಹಾಯವು ಅವರಿಗೆ ದೊರಕದೆಂದು ಹಿಂದೂಗಳಿಗೆ ದೃಢವಾದ ನಂಬಿಕಾಯಾಗಿದೆ. ತಹಶೀಲ್ದಾರರು, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪೊಲೀಸಿನವರು ಸವರ್ಣೀಯರಾಗಿದ್ದು ಹಿಂದೂ-ಅಸ್ಪೃಶ್ಯರ ವಿವಾದದಲ್ಲಿ ಅವರು ಕರ್ತವ್ಯನಿಷ್ಠರಾಗುವ ಬದಲು ಜಾತಿನಿಷ್ಠರಾಗಿರುತ್ತಾರೆ. ದಲಿತರು ನಿಸ್ಸಹಾಯಕರೆಂದೇ ಹಿಂದೂಗಳು ಅವರ ಮೇಲೆ ಅನ್ಯಾಯ ಮತ್ತು ದಬ್ಬಾಳಿಕೆ ನಡೆಸುವುದು. ಮೇಲಿನ ಚರ್ಚೆಯಿಂದ ಎರಡು ಸತ್ಯಾಂಶಗಳು ಸ್ಪಷ್ಟವಾಗುತ್ತವೆ. ಒಂದನೆಯದು ಶಕ್ತಿಯಿಲ್ಲದೆ ದಲಿತರು ದಬ್ಬಾಳಿಕೆಯನ್ನು ಎದುರಿಸಲಾರರು ಎಂಬುದು. ಎರಡನೆಯದು ಅದನ್ನು ಅವರು ಎದುರಿಸಲು ದಲಿತದಲ್ಲಿ ಸಾಕಷ್ಟು ಶಕ್ತಿ ಇಲ್ಲವೆಂಬುದು. ಈ ಎರಡು ನಿರ್ಧಾರಗಳಿಂದ ಮೂರನೆಯದು ಅನಿವಾರ್ಯವಾಗುತ್ತದೆ. ಅದೇನೆಂದರೆ, ಈ ದಬ್ಬಾಳಿಕೆಯನ್ನು ಎದುರಿಸುವ ಶಕ್ತಿಯನ್ನು ಹೊರಗಿನಿಂದ ದಲಿತರು ಪಡೆಯಬೇಕಾಗುತ್ತದೆ ಎಂಬುದೇ. ಇದನ್ನು ಹೊರಗಿನಿಂದ ಪಡೆಯುವುದು ಹೇಗೆ ಎಂಬುದೇ ನಿಜವಾಗಿಯೂ ಮುಖ್ಯ ಪ್ರಶ್ನೆ. ಇದನ್ನು ಕುರಿತು ದಲಿತರು ನಿಷ್ಪಕ್ಷಪಾತವಾಗಿ ಚಿಂತಿಸುವುದು ಅವಶ್ಯ.

ಇದರಿಂದ ಒಂದಂಶವನ್ನು ಮನಗಾಣಬಹುದು. ಅದೇನೆಂದರೆ ಬೇರೆ ಯಾವುದಾದರೂ ಒಂದು ಸಮಾಜದ ಜೊತೆ ದಲಿತರು ನಿಕಟ ಸಂಬಂಧವನ್ನು ಬೆಳೆಸಿಕೊಳ್ಳದ ಹೊರತು, ಅಂದರೆ ಬೇರೆ ಯಾವುದಾದರೂ ಧರ್ಮಕ್ಕೆ ದಲಿತರು ಸೇರಿಕೊಳ್ಳದ ಹೊರತು ಹೊರಗಿನಿಂದ ದಲಿತರಿಗೆ ಬೆಂಬಲ ದೊರಕುವುದಿಲ್ಲವೆಂಬುದು ಸತ್ಯ. ಈಗಿನ ಧರ್ಮವನ್ನು ತ್ಯಜಿಸಿ ಬೇರೆ ಯಾವುದಾದರೂ ಸಮಾಜದ ಜೊತೆಯಲ್ಲಿ ಮಿಳಿತವಾಗಬೇಕೆಂಬುಂದನ್ನು ಅದು ಸ್ಪಷ್ಟ ಪಡಿಸುತ್ತದೆ. ಅದಾಗದ ಹೊರತು ಆ ಬೆಂಬಲವು ದಲಿತರಿಗೆ ಲಭಿಸುವುದಿಲ್ಲ. ದಲಿತರಿಗೆ ಶಕ್ತಿಯಿಲ್ಲದ ತನಕ ಅವರು ಮತ್ತು ಅವರ ಮುಂದಿನ ಪೀಳಿಗೆಯು ಇದೇ ರೀತಿಯ ಶೋಚನೀಯ ಸ್ಥಿತಿಯಲ್ಲಿಯೇ ಇದ್ದುಕೊಂಡು ಜೀವನ ಸಾಗಿಸಬೇಕಾಗಿ ಬರುತ್ತದೆ ಎಂಬುದನ್ನು ಇಂದಿನ ದಲಿತ ಜನ, ಸಂಘಟನೆಗಳು ತಿಳಿಯಬೇಕಾಗಿದೆ.

ಮತಾಂತರ ಮತ್ತು ಆಧ್ಯಾತ್ಮಿಕ

ಇದುವರೆಗೆ ದಲಿತರು ಪ್ರಾಪಂಚಿಕ ಸುಖಸಂಪತ್ತನ್ನು ಗಳಿಸಲು ಮತಾಂತರವು ಎಷ್ಟು ಅವಶ್ಯವೆಂಬುದನ್ನು ಚರ್ಚಿಸಲಾಗಿದೆ. ಈಗ ಮತಾಂತರವು ಆಧ್ಯಾತ್ಮಿಕ ಹಿತಕ್ಕೂ ತುಂಬಾ ಅಗತ್ಯವೆಂಬುದನ್ನು ಕುರಿತು ಇತ್ತೀಚಿನ ಚರ್ಚೆ ಹಾಗೂ ಆಲೋಚನೆಗಳನ್ನು ಚರ್ಚಿಸಬಹುದಾಗಿದೆ. ಧರ್ಮವೆಂದರೇನು? ಅದರ ಅಗತ್ಯವೇನು? ಜನರನ್ನು ವ್ಯವಸ್ಥಿತವಾಗಿ ನಡೆಸುವುದೇ ಧರ್ಮ. ಅದು ಧರ್ಮದ ನಿಜವಾದ ಅರ್ಥ. ಹಿಂದೂ ಸಮಾಜದಲ್ಲಿ ದಲಿತ ವ್ಯಕ್ತಿಗೆ ಸ್ಥಾನಮಾನವಿಲ್ಲ. ಹಿಂದೂ ಧರ್ಮವು ವರ್ಗದ ಕಲ್ಪನೆಯ ಮೇಲೆ ರಚಿತವಾಗಿದೆ. ಅದು ಒಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯೊಡನೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಬೋಧಿಸುವುದಿಲ್ಲ. ವ್ಯಕ್ತಿಯನ್ನು ಗಮನಕ್ಕೆ ತೆಗೆದುಕೊಳ್ಳದ ಧರ್ಮವು ದಲಿತರಿಗೆ ಸ್ವತಃ ಒಪ್ಪಿಗೆಯಾಗಲಾರದು ಎಂಬುದು ಇಂದಿನ ದಲಿತರ ನಿಲುವಾಗುತ್ತಿದೆ.

ಒಬ್ಬ ವ್ಯಕ್ತಿಯ ಉನ್ನತಿಗೆ ಬೇಕಾಗಿರುವುದು ಮೂರು ಅಂಶಗಳು. ಅವುಗಳೆಂದರೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ. ದಲಿತರ ಅನುಭವದಲ್ಲಿ ಈ ಮೂರು ಅಂಶಗಳಲ್ಲಿ ಯಾವುದಾದರೂ ಒಂದು ಅಂಶವು ಹಿಂದೂ ಧರ್ಮದಲ್ಲಿಯೆಂದು ಯಾರಾದರೂ ಹೇಳುವರೇ? ಅದರಲ್ಲಿರುವ ಅಸಮಾನತೆಯ ಜೀವಂತ ಉದಾಹರಣೆಯೂ ಪ್ರಪಂಚದಲ್ಲೆಲ್ಲಿಯೂ ಕಂಡುಬರುವುದಿಲ್ಲ. ಅಸ್ಪೃಶ್ಯತೆಗಿಂದ ಹೆಚ್ಚು ತೀವ್ರವಾದ ಅಸಮಾನತೆಯೂ ಮಾನವ ಇತಿಹಾಸದ ಯಾವುದೇ ಕಾಲದಲ್ಲಾಗಲೀ ಕಂಡುಬರುವುದಿಲ್ಲ. ದಲಿತರು ಹಿಂದೂಗಳಾಗಿ ಉಳಿದಿರುವುದರಿಂದಲೇ, ಹಾಗೂ ಈ ಸ್ಥಿತಿಗೆ ನೂಕಲ್ಪಟ್ಟಿದ್ದಾರೆಂದು ಭಾವಿಸಬಹುದಾಗಿದೆ. ರಾಷ್ಟ್ರದಲ್ಲಿರುವ ಮುಸಲ್ಮಾನರನ್ನು ಅಸ್ಪೃಶ್ಯರೆಂದಾಗಲೀ ಅಸಮಾನರೆಂದಾಗಲೀ ಕಾಣುತ್ತಿಲ್ಲ. ಇಂದು ಕ್ರೈಸ್ತರಾಗಿ ಮತಾಂತರ ಹೊಂದಿದವರ (ಒಂದು ವರ್ಗದಲ್ಲಿ ಮಾತ್ರ. ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಕ್ರೈಸ್ತರ ಸ್ಥಿತಿ ಮೂಲದಲ್ಲಿಯೇ ಇದೆ) ವಿಷಯದಲ್ಲಿಯೂ ಇದೇ ಮಾತನ್ನು ಹೇಳಬಹುದು.

ದೇವರು ಸರ್ವವ್ಯಾಪಿಯೆಂಬುದು ವಿಜ್ಞಾನದ ಒಂದು ತತ್ವಳ ಅದು ಧರ್ಮತತ್ವವಲ್ಲ. ಏಕೆಂದರೆ ಧರ್ಮಕ್ಕೂ ಮಾನವನ ನಡತೆಗೂ ನೇರ ಸಂಬಂಧವಿದೆ. ನುಡಿಗೂ ನಡೆಗೂ ತೀರ ವಿರುದ್ಧವಾಗಿರುವ ಕ್ರೂರ ಜನರ ವರ್ಗಕ್ಕೆ ಹಿಂದೂಗಳೆಂದು ಗುರುತಿಸಿಕೊಂಡಿರುವ ಪುರೋಹಿತಶಾಹಿಗಳು ಹಾಗೂ ಊಳಿಗಮಾನ್ಯ ಶಾಹಿಗಳನ್ನು ಸೇರಿಸಬಹುದು. ನಾಲಿಗೆಯಲ್ಲಿ ರಾಮನಾಮ ಇತ್ತೀಚೆಗೆ ವಂದೇಮಾತರಂ ಪಠಿಸುತ್ತ ಕಂಕುಳಲ್ಲಿ ಚಾಕುವನ್ನಿಟ್ಟುಕೊಂಡಿರುವವರು ಸವರ್ಣೀಯರು ಹಾಗೂ ವೈದಿಕರು. ಸಂತರಂತೆ ನುಡಿಯುತ್ತ ಕಡುಕರಂತೆ ನಡೆದುಕೊಳ್ಳುತ್ತಿರುವವರು. ಹೀಗೆ ಹಿಂದೂಗಳು ದಲಿತರನ್ನು ತುಚ್ಛವಾಗಿ ಕಾಣುವುದರ ಪರಿಣಾಮವಾಗಿ ದಲಿತರು ಹಿಂದೂಗಳ ದೃಷ್ಟಿಯಿಂದ ಮಾತ್ರ ಕೀಳಾಗಿಲ್ಲ ಇಡೀ ಭಾರತವೇ ಇವರನ್ನು ಅತಿ ಕೀಳಾಗಿ ಕಾಣುತ್ತದೆ ಎಂದು ಹೇಳಬಹುದಾಗಿದೆ. ಇದಕ್ಕೆ ಇಂದಿನ ರಾಜಕೀಯ ಸನ್ನಿವೇಶಗಳನ್ನು ಉದಾಹರಣೆಗಳನ್ನಾಗಿ ನೀಡಬಹುದು. ಈ ನಾಚಿಕೆಗೇಡಿನ ಸ್ಥಿತಿಯಿಂದ ದಲಿತರು ಪಾರಾಗಬೇಕಾದರೆ ಈ ಕೊಳೆಯನ್ನು ತೊಳೆದು ಜೀವನವನನ್ನು ಸದುಪಯೋಗಪಡಿಸಿಕೊಳ್ಳಲು ಒಂದೇ ಒಂದು ಮಾರ್ಗವುಂಟು. ಅದೇನೆಂದರೆ ದಲಿತರನ್ನು ಬಂಧಿಸಿರುವ ಹಿಂದೂ ಧರ್ಮದ ಮತ್ತು ಹಿಂದೂ ಸಮಾಜದ ಸಂಕೋಲೆಗಳನ್ನು ಕಿತ್ತೊಗೆಯುವುದೇ. ಒಂದು ವಸ್ತುವಿನ ರುಚಿಯನ್ನು ಬದಲಿಸಬಹುದು. ಅದರ ವಿಷವನ್ನು ಅಮೃತವಾಗಿ ಮಾಡಲಾಗದು. ಜಾತಿಗಳನ್ನು ನಿರ್ಮೂಲನ ಮಾಡುವೆವೆಂದು ಹೇಳುವುದು ವಿಷವನ್ನು ಅಮೃತವನ್ನಾಗಿ ಮಾರ್ಪಡಿಸುವೆವೆಂದು ಹೇಳಿದಂತೆಯೇ. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಬ್ಬ ಮನುಷ್ಯನು ಮತ್ತೊಬ್ಬನನ್ನು ಕುಷ್ಠರೋಗಿಯಂತೆ ಕಾಣಲು ಬೋಧಿಸುವ ಧರ್ಮದಲ್ಲಿ ದಲಿತರು ಉಳಿದಿರುವತನಕ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಮತ್ತು ಜಾತಿಯ ಹೆಸರಿನಲ್ಲಿ ಮಾಡುವ ಪಕ್ಷಪಾತದ ಮನೋಭಾವನೆ ಹೋರಲಾರದು. ಅಸ್ಪೃಶ್ಯರಲ್ಲಿರುವ ಜಾತಿಗಳನ್ನೂ ಅಸ್ಪೃಶ್ಯತೆಯನ್ನೂ ನಿರ್ಮೂಲ ಮಾಡಬೇಕಾದರೆ ಮತಾಂತರವೊಂದೇ ಮದ್ದು ಎಂಬ ನಿಲುವನ್ನು ಇಂದಿನ ದಲಿತರು ಮನಗಾಣುತ್ತಿದ್ದಾರೆ.

ಈ ರೀತಿಯ ಆಲೋಚನೆಗಳು, ಚರ್ಚೆಗಳು ನಡೆಸುವ ಸಂದರ್ಭದಲ್ಲಿ ಮತಾಂತರದಲ್ಲಿ ವಿಚಿತ್ರವೇನಾದರೂ ಇದೆಯೇ? ನಿಜವಾಗಿ ಹೇಳುವುದಾದರೆ ಈಗ ಸವರ್ಣೀಯ ಹಿಂದೂಗಳ ಜೊತೆಗಿರುವ ಸಾಮಾಜಿಕ ಸಂಬಂಧವು ಯಾವ ರೀತಿಯದಾಗಿದೆ? ಎಂಬ ಪ್ರಶ್ನೆ ಮೂಡುತ್ತದೆ. ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳಿಂದ ಎಷ್ಟರಮಟ್ಟಿಗೆ ಪ್ರತ್ಯೇಕವಾಗಿದ್ದಾರೋ ಅಷ್ಟರಮಟ್ಟಿಗೆ ದಲಿತರೂ ಪ್ರತ್ಯೇಕವಾಗಿದ್ದಾರೆ. ಹಾಗೆಯೇ ಅವರ ಸಂಬಂಧವು ದಲಿತರೊಂದಿಗೆ ಅಷ್ಟೇ ಇದೆ. ಸಮಾಜ ಮತ್ತು ಹಿಂದೂಗಳ ಸಮಾಜಗಳೆರಡೂ ಭಿನ್ನಗುಂಪುಗಳಾಗಿವೆ. ಮತಾಂತರದಿಂದ ಒಂದು ಸಮಾಜವು ಛಿದ್ರವಾಯಿತೆಂದು ಯಾರೂ ಹೇಳಲಾರರು ಅಥವಾ ಭಾವಿಸಲಾರರು. ಹಿಂದೂಗಳಿಂದ ಈಗ ಪ್ರತ್ಯೇಕವಾಗಿರುವಷ್ಟೇ ಆಗಲೂ ಇದ್ದರು. ಈ ಮತಾಂತರದಿಂದ ಹೊಸತೇನೂ ಉಂಟಾಗುವುದಿಲ್ಲ. ಇದು ನಿಜವಾಗಿದ್ದರೆ ಮತಾಂತರಕ್ಕೆ ಕೆಲವರು ಏಕೆ ಅಂಜಬೇಕು. ದಲಿತರಿಗಂತೂ ಈ ರೀತಿ ಅಂಜಿಕೆಗೆ ಯಾವ ಕಾರಣವೂ ಕಾಣುವುದಿಲ್ಲ ಎನ್ನುವವಾದ ದಲಿತ ಸಂಘರ್ಷ ಸಮಿತಿಯವರ (ಡಾ. ಕೃಷ್ಣಪ್ಪ) ವಾದವಾಗಿದೆ.

ಒಂದು ಧರ್ಮವನ್ನು ಬದಲಾಯಿಸುವುದು ಒಂದು ಹೆಸರನ್ನು ಬದಲಾಯಿಸಿದಂತೆ ಇರುವುದು. ಧರ್ಮವನ್ನು ಬದಲಾಯಿಸಿ ಹೆಸರನ್ನೂ ಬದಲಾಯಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಸಲ್ಮಾನನೆಂದಾಗಲೀ, ಕ್ರೈಸ್ತನೆಂದಗಲೀ, ಬೌದ್ಧನೆಂದಾಗಲೀ, ಸಿಖ್ಖ್‌ನೆಂದಾಗಲೀ ಒಬ್ಬನು ಕರೆದುಕೊಳ್ಳುವುದು ಕೇವಲ ಧರ್ಮವನ್ನು ಬದಲಾಯಿಸಿದಂತಲ್ಲದೆ ಹೆಸರನ್ನೂ ಬದಲಾಯಿಸಿದಂತಾಗುವುದು. ಮತಾಂತರ ಚಳವಳಿಯ ಪ್ರಾರಂಭದಿಂದಲೂ ವಿವಿಧ ಜನರು ವಿವಿಧ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಅಂತಹ ಆಕ್ಷೇಪಣೆಗಳಲ್ಲಿ ಏನಾದರೂ ಸತ್ಯಾಂಶವಿದೆಯೇ ಎಂಬುದನ್ನು ಈಗ ಪರಿಶೀಲಿಸಬೇಕಾದ ಜರೂರಿದೆ.

ನಮ್ಮ ಧರ್ಮವು ನಮ್ಮ ಪೂರ್ವಿಕರ ಧರ್ಮವಾದುದರಿಂದ ಅದಕ್ಕೆ ನಾವು ಬಲವಾಗಿ ಅಂಟಿಕೊಳ್ಳಬೇಕೆಂದು ಹುಟ್ಟು ಪೆದ್ದನು ಮಾತ್ರ ಹೇಳುತ್ತಾನೆ ಎನ್ನಿಸುತ್ತದೆ. ಅಂತಹ ಹೇಳಿಕೆಯನ್ನು ಬುದ್ದಿ ನೆಟ್ಟಗಿರುವವರು ಯಾರೂ ಒಪ್ಪಲಾರರು, ಹೇಲಲೂ ಆಗದು. ಅಂತಹ ವಾದ ಹೂಡುವವರು ಇತಿಹಾಸ ಅಧ್ಯಯನ ಮಾಡಿದವರಲ್ಲವೆಂದು ಹೇಳಬಹುದು. ಪುರಾತನ ಕಾಲದಲ್ಲಿ ಆರ್ಯಧರ್ಮವನ್ನು ವೇದಗಳ ಧರ್ಮವೆಂದು ಕರೆಯುತ್ತಿದ್ದರು. ಅದರಲ್ಲಿ ಮೂರು ಸ್ಪಷ್ಟ ಲಕ್ಷಣಗಳಿವೆ. ದನದ ಮಾಂಸ ಭಕ್ಷಣೆ, ಕುಡಿತ ಹಾಗೂ ಸಂತೋಷ ಸಂಭ್ರಮದಲ್ಲಿರುವುದು ಆಗಿನ ಧರ್ಮದ ಒಂದು ಅಂಗವಾಗಿತ್ತು. ಭಾರತದಲ್ಲಿ ಸಾವಿರಾರು ಜನರು ಅದನ್ನು ಅನುಸರಿಸಿದರು. ಈಗಲೂ ಕೂಡ ಕೆಲವರು ಅದಕ್ಕೆ ಹಿಂದಿರುಗಬೇಕೆಂದು ಕನಸು ಕಾಣುತ್ತಾರೆ. ಪ್ರಾಚೀನ ಧರ್ಮಕ್ಕೆ ಬಲವಾಗಿ ಅಂಟಿಕೊಳ್ಳಬೇಕೆಂಬ ಭಾರತದ ಜನರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧಮತವನ್ನು ಅಂಗೀಕರಿಸಿದ್ದೇಕೆ. . . ? ಅಂತೆಯೇ ಈ ಹಿಂದೂ ಧರ್ಮವು ಭಾರತದ ದಲಿತ ವರ್ಗದ ಪೂರ್ವಿಕರ ಧರ್ಮವಲ್ಲ. ಆದರೆ ಅದು ಅವರ ಮೇಲೆ ಹೇರಲಾದ ಧಾರ್ಮಿಕ ಹಾಗೂ ಸಾಮಾಜಿಕ ಗುಲಾಮಗಿರಿಯಾಗಿದೆ. ಹಿಂದೂ ಧರ್ಮವನ್ನು ಸುಧಾರಿಸುವುದು ದಲಿತರ ಗುರಿಯೂ ಅಲ್ಲ, ಅವರ ಕಾರ್ಯಕ್ಷೇತ್ರವೂ ಅಲ್ಲ. ಅವರ ಗುರಿಯು ಸ್ವಾತಂತ್ರ್ಯಗಳಿಸುವುದು ಮಾತ್ರ. ಬೇರೆ ವಿಚಾರಗಳಿಗೂ ದಲಿತರಿಗೂ ಏನೇನೂ ಸಂಬಂಧವಿಲ್ಲ. ಮತಪರಿವರ್ತನೆಯಿಂದ ದಲಿತರು ಸ್ವಾತಂತ್ರ್ಯ ಗಳಿಸುವುದಾದರೆ ಹಿಂದೂ ಧರ್ಮವನ್ನು ಸುಧಾರಿಸುವ ಹೊಣೆಯನ್ನು ದಲಿತರೇಕೆ ಹೊರಬೇಕು? ಅಲ್ಲದೆ ದಲಿತರ ಶಕ್ತಿ ಮತ್ತು ಆಸ್ತಿಪಾಸ್ತಿಯನ್ನು ಅದಕ್ಕಾಗಿ ಅವರೇಕೆ ಬಲಿ ಕೊಡಬೇಕು? ಮತಾಂತರ ಚಳವಳಿಯ ಉದ್ದೇಶವು ಹಿಂದೂ ಸಮಾಜದ ಸುಧಾರಣೆಯೆಂದು ಯಾರೂ ತಪ್ಪಾಗಿ ತಿಳಿಯಬಾರದು. ಈ ಚಳವಳಿಯ ಉದ್ದೇಶವು ಅಸ್ಪೃಶ್ಯರಿಗೆ ಸ್ವಾತಂತ್ರ್ಯವನ್ನು ಗಳಿಸಿಕೊಡುವುದೇ ಆಗಿದೆ. ಮತಾಂತರ ಹೊಂದದೆ ಈ ಸ್ವಾತಂತ್ರ್ಯವನ್ನು ಪಡೆಯಲಾಗದೆಂಬುದು ಅಷ್ಟೇ ಸತ್ಯವಾದುದು ಎಂಬ ನಿರ್ಧಾರಕ್ಕೆ ಇಂದಿನ ಪ್ರಜ್ಞಾವಂತ ದಲಿತರು ಬಂದಿದ್ದಾರೆ.

ಇದರ ಜೊತೆಗೆ ಅಸ್ಪೃಶ್ಯರಿಗೆ ಸಮಾನತೆಯೂ ಅಗತ್ಯವೆನ್ನುವುದನ್ನು ನಾವೆಲ್ಲರೂ ಒಪ್ಪಲೇಬೇಕಾದ ಮಹತ್ವದ ವಿಷಯವಾಗಿದೆ. ಸಮಾಜತೆಯನ್ನು ಗಳಿಸುವುದೂ ಸಹ ಇದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ ಹಿಂದೂಗಳಾಗಿ ಉಳಿದುಕೊಂಡರೆ ಮಾತ್ರ ಸಮಾನತೆಯನ್ನು ಸಾಧಿಸಬಹುದೆಂದೂ, ಅನ್ಯಥಾ ಆಗದೆಂದೂ ಯಾರೂ ಹೇಳಲಾರರು. ಸಮಾನತೆಯನ್ನು ಸಾಧಿಸಲು ಎರಡು ಮಾರ್ಗಗಳಿವೆ. ಒಂದು, ಹಿಂದೂ ಸಮಾಜದಲ್ಲಿಯೇ ಉಳಿಯುವುದರಿಂದ. ಮತ್ತೊಂದು, ಅದನ್ನು ತ್ಯಜಿಸಿ ಮತಾಂತರ ಹೊಂದುವುದರಿಂದ. ಹಿಂದೂ ಸಮಾಜದಲ್ಲಿ ಉಳಿದುಕೊಂಡು ಮುಟ್ಟಿಸಿಕೊಳ್ಳುವವನು ಮತ್ತು ಮುಟ್ಟಬಾರದವನು ಎಂಬ ಮನೋಭಾವನೆಯನ್ನು ಬಿಡುವುದರಿಂದಲೇ ಸಮಾನತೆಯನ್ನು ಸಾಧಿಸಲಾಗುವುದಿಲ್ಲ. ಅಂತರ್ಜಾತಿ ಭೋಜನ ಮತ್ತು ವಿವಾಹಗಳು ನಡೆದರೆ ಮಾತ್ರ ಸಮಾನತೆಯನ್ನು ಸಾಧಿಸಬಹುದು. ಅಂದರೆ ಚತುರ್ವರ್ಣವನ್ನು ತೊಡೆದುಹಾಕುವುದಲ್ಲದೆ ವೈದಿಕ ಸಂಸ್ಕೃತಿಯನ್ನು ಬೇರು ಸಹಿತ ಕಿತ್ತುಹಾಕಬೇಕಾಗುವುದು. ಅದು ಸಾಧ್ಯವೇ? ಅದು ಸಾಧ್ಯವಲ್ಲದಿದ್ದರೆ, ಹಿಂದೂ ಧರ್ಮದಲ್ಲಿಯೇ ಉಳಿದುಕೊಂಡು ಸಮಾನತೆಯನ್ನು ನಿರೀಕ್ಷಿಸುವುದು ದಲಿತರಿಗೆ ವಿವೇಕವೇ. ಸಮಾನತೆಯನ್ನು ಗಳಿಸುವುದರಲ್ಲಿ ದಲಿತರ ಪ್ರಯತ್ನಗಳು ಸಫಲವಾಗುವುದೇ? ಎಂಬುವ ಪ್ರಶ್ನೆ ಉದ್ಭವಿಸಬಹುದು. ಉತ್ತರ ನಿಸ್ಸಂದೇಹವಾಗಿಯೂ ಇಲ್ಲ. ಇದಕ್ಕಿಂತ ಮತಾಂತರ ಮಾರ್ಗವು ತುಂಬಾ ಸರಳವಾದುದು. ಹಿಂದೂ ಸಮಾಜವು ಮುಸಲ್ಮಾನರನ್ನೂ ಕ್ರೈಸ್ತರನ್ನೂ ಸಮಾನತೆಯಿಂದ ಕಾಣುತ್ತದೆ.

ಮತಾಂತರದಿಂದ ಸಮಾನತೆಯನ್ನು ಸುಲಭವಾಗಿ ಸಾಧಿಸಬಹುದೆಂಬುದು ನಿಸ್ಸಂಶಯವಾದುದು. ಹೀಗಿರುವಲ್ಲಿ ಮತಾಂತರವೆಂಬ ಸರಳ ಮಾರ್ಗವನ್ನೇಕೆ ದಲಿತರು ಅನುಸರಿಸಬಾರದು? ಎಂದು ಡಾ. ಮೂಡ್ನಕೂಡು ಚಿನ್ನಸ್ವಾಮಿ ಅವರು ಅಭಿಪ್ರಾಯ ಪಡುತ್ತಾರೆ.

ಮತಾಂತರವು ಅಸ್ಪೃಶ್ಯರಿಗೂ ಹಿಂದೂಗಳಿಗೂ ಸಂತೋಷವನ್ನು ತರುವುದಾಗಿದೆ. ದಲಿತರು ಹಿಂದೂಗಳಾಗಿರುವತನಕ ಸಾಮಾಜಿಕ ವ್ಯವಹಾರದಲ್ಲಿಯೂ, ಆಹಾರಕ್ಕಾಗಿಯೂ, ನೀರಿಗಾಗಿಯೂ ಮತ್ತು ಅಂತರ್ಜಾತಿ ವಿವಾಹಗಳಿಗಾಗಿಯೂ, ಹೆಣಗಾಡಬೇಕಾಗುತ್ತದೆ. ಈ ಕಲಹ ಎಲ್ಲಿಯವರೆಗೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ದಲಿತರು ಮತ್ತು ಹಿಂದೂಗಳು ಎಂದೆಂದಿಗೂ ಶತ್ರುಗಳಾಗಿಯೇ ಉಳಿಯುತ್ತಾರೆ. ಮತಾಂತರ ಹೊಂದುವುದರಿಂದ ಕಾಲಾನಂತರದ ದಿನಗಳಲ್ಲಿ ಎಲ್ಲ ಕಲಹಗಳ ಬೇರುಗಳೇ ನಾಶವಾಗುವುವು. ಹೀಗೆ ಮತಾಂತರದಿಂದ ಸಮಾನತೆಯನ್ನು ಸಾಧಿಸಿ, ಹಿಂದೂಗಳ ಮತ್ತು ಅಸ್ಪೃಶ್ಯರ ನಡುವೆ ಸಾಮರಸ್ಯ ಉಂಟಾಗುವುದರಿಂದ ಈ ಸರಳ ಮತ್ತು ಸಂತೋಷಕರವಾದ ಮಾರ್ಗವನ್ನು ಅಸ್ಪೃಶ್ಯರು ಏಕೆ ಅನುಸರಿಸಬಾರದು? ಈ ದೃಷ್ಟಿಯಿಂದ ಈ ಸಮಸ್ಯೆಯನ್ನು ನೋಡಿದರೆ ಅಂತಿಮವಾಗಿ ಸಮಾನತೆಯ ಗುರಿ ಮುಟ್ಟಲು ಮತಾಂತರ ಮಾರ್ಗವು ಸ್ವಾತಂತ್ರ್ಯವಾದ ಹಾಗೂ ಸರಿಯಾದ ಏಕೈಕ ಮಾರ್ಗವೆಂಬುದು ಅರಿವಾಗುವುದು. ಅದು ಹೇಡಿತನವೂ ಅಲ್ಲ. ನುಣಿಚಿಕೊಳ್ಳುವ ಮಾರ್ಗವೂ ಅಲ್ಲ ಎಂಬ ಅಂಶ ಇಂದಿನ ದಲಿತ ಚಿಂತಕದಲ್ಲಿ ಪ್ರಧಾನವಾಗಿ ಕಂಡುಬರುತ್ತಿದೆ.

ಮುಸಲ್ಮಾನ ಮತ್ತು ಕ್ರೈಸ್ತರಲ್ಲಿ ಒಂದು ರೀತಿಯ ಜಾತಿಗಳಿದ್ದರೂ ಅವುಗಳನ್ನು ಹಿಂದೂಗಳಲ್ಲಿರುವ ಜಾತಿಗಳಿಗೆ ಹೋಲಿಸುವುದು ನೀಚತನವೆನಿಸುವುದು. ಹಿಂದೂ ಜಾತಿ-ಪದ್ಧತಿಗೂ ಮುಸಲ್ಮಾನ ಮತ್ತು ಕ್ರೈಸ್ತರ ಜಾತಿಗಳಿಗೂ ಒಂದು ದೊಡ್ಡ ವ್ಯತ್ಯಾಸವಿದೆ. ಮೊದಲನೆಯದು, ಕ್ರೈಸ್ತರು ಮತ್ತು ಮುಸಲ್ಮಾನರಲ್ಲಿ ಜಾತಿಗಳಿದ್ದರೂ ಅವರ ಸಾಮಾಜಿಕ ವ್ಯವಸ್ಥೆಯಲ್ಲಿ ಅವುಗಳಿಗೆ ಪ್ರಾಮುಖ್ಯತೆಯಿಲ್ಲವೆಂಬುದನ್ನು ಗಮನಿಸಬೇಕಾಗಿದೆ. ಎರಡನೆಯದು, ಹಿಂದೂಗಳಲ್ಲಿ ಜಾತಿಪದ್ಧತಿಗೆ ಧರ್ಮ ಅಸ್ತಿಬಾರವಿದೆ. ಬೇರೆ ಧರ್ಮಗಳಲ್ಲಿರುವ ಜಾತಿಗಳಿಗೆ ಧರ್ಮಗಳ ಅನುಮತಿ ಇಲ್ಲ. ಹಿಂದೂಗಳು ತಮ್ಮ ಧರ್ಮವನ್ನು ನಾಶ ಮಾಡದ ಹೊರತು ತಮ್ಮ ಜಾತಿಗಳನ್ನು ನಾಶ ಮಾಡಲಾಗುವುದಿಲ್ಲ. ಮುಸಲ್ಮಾನರೂ, ಕ್ರೈಸ್ತರೂ ತಮ್ಮ ಜಾತಿಗಳನ್ನು ತೊಡೆದು ಹಾಕಲು ತಮ್ಮ ಧರ್ಮಗಳನ್ನು ನಾಶ ಮಾಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರ ಧರ್ಮಗಳು ಅಂತಹ ಚಳವಳಿಗೆ ಹೆಚ್ಚು ಬೆಂಬಲ ನೀಡುತ್ತವೆ ಎಂಬ ಅಂಶ ಗಮನಾರ್ಹವಾಗಿದೆ.

ಕೇವಲ ಮತಾಂತರ ಹೊಂದುವುದರಿಂದ ಏನನ್ನು ಸಾಧಿಸಬಹುದು ಎನ್ನುವ ಪೇಜಾವರ ಸ್ವಾಮಿಗಳ ಮಾತಿನಿಂದ ದಲಿತರಿಗೆ ಅಚ್ಚರಿಯಾಗದೆ ಇರದು. ಭಾರತದಲ್ಲಿರುವ ಈಗಿರುವ ಬಹುಜನ ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೆ ಹಿಂದೂಗಳಾಗಿದ್ದವರೇ. ಅವರಲ್ಲಿಯೂ ಬಹುಸಂಖ್ಯೆಯವರು ಅಸ್ಪೃಶ್ಯ ಜಾತಿಗೆ ಸೇರಿದವರು. ಹಿಂದೂ ಸಮಾಜವನ್ನು ತ್ಯಜಿಸಿ ಸಿಖ್‌ಧರ್ಮವನ್ನೋ, ಕ್ರೈಸ್ತಧರ್ಮವನ್ನೋ ಅವಲಂಬಿಸಿದವರು ಯಾವ ಪ್ರಗತಿಯನ್ನು ಹೊಂದಿಲ್ಲವೆಂದು ಈ ಸಾಮಾಜಿಕ ಚಿಂತಕರು ಭಾವಿಸುತ್ತಾರೆಯೇ? ಇದು ನಿಜವಲ್ಲದಿದ್ದರೆ ಮತ್ತು ಮತಾಂತರದಿಂದ ಅವರ ಸ್ಥಿತಿಗತಿಗಳಲ್ಲಿ ಸ್ಪಷ್ಟ ಅಭಿವೃದ್ಧಿಯಾಗಿದೆಯೆಂದು ಒಪ್ಪುವುದಾದರೆ ಮತಾಂತರದಿಂದ ಅಸ್ಪೃಶ್ಯರಿಗೆ ಪ್ರಯೋಜನವಾಗುವುದಿಲ್ಲವೆಂದು ಹೇಳುವುದರಲ್ಲಿ ಏನೂ ಅರ್ಥವಿರುವುದಿಲ್ಲ.

ಸಮಸ್ಯೆಯನ್ನು ಆಳವಾಗಿ ಯೋಚಿಸಿದರೆ ಭಾರತಕ್ಕೆ ಸ್ವರಾಜ್ಯವು ಎಷ್ಟು ಪ್ರಮುಖ್ಯವೋ ಅಸ್ಪೃಶ್ರಿಗೆ ಮತಾಂತರವೂ ಅಷ್ಟೇ ಮುಖ್ಯವಾದುದೆಂದು ಪ್ರತಿಯೊಬ್ಬನೂ ಒಪ್ಪಲೇಬಾಕಾಗುವುದು. ಇವೆರಡರ ಅಂತಿಮ ಗುರಿ ಒಂದೇ ಆಗಿದ್ದು, ಅವುಗಳಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಈ ಅಂತಿಮ ಗುರಿ ಸ್ವಾತಂತ್ರ್ಯವನ್ನು ಸಾಧಿಸುವುದೇ ಆಗಿದೆ. ಮಾನವನ ಜೀವನಕ್ಕೆ ಸ್ವಾತಂತ್ರ್ಯವು ಅಗತ್ಯವಾಗುವಲ್ಲಿ ಅಸ್ಪೃಶ್ಯರಿಗೆ ಪೂರ್ಣ ಸ್ವಾತಂತ್ರ್ಯವನ್ನು ತರಬಲ್ಲ ಮತಾಂತರವನ್ನು ನಿಷ್ಪ್ರಯೋಜಕವೆಂದು ಯಾರೂ ಹೇಳಲಾರರು. ಆದರೆ ಇದು ತಕ್ಷಣದ ಪರಿಣಾಮವಲ್ಲ. ಶತಮಾನಗಳವರೆಗೆ ಇದರ ಪರಿಣಾಮಕ್ಕಾಗಿ ಕಾಯುವ ಶಕ್ತಿ ದಲಿತರಿಗೆ ಬೇಕಾಗುತ್ತದೆ. ದಲಿತರು ಇಂದು ಎದುರಿಸುತ್ತಿರುವ ಆರ್ಥಿಕ ಪ್ರಗತಿ ಮತ್ತು ಮತಾಂತರ ಈ ಎರಡರಲ್ಲಿ ಯಾವುದನ್ನು ಮೊದಲು ಮಾಡಬೇಕೆಂಬುದನ್ನು ಕುರಿತು ಇಲ್ಲಿ ಚರ್ಚಿಸುವುದು ಅಗತ್ಯ. ಆರ್ಥಿಕ ಪ್ರಗತಿಯು ಮುಂದಾಗಿ ಬರಬೇಕು ಎಂಬ ಅಭಿಪ್ರಾಯವನ್ನು ದಲಿತರು ಒಂದರ್ಥದಲ್ಲಿ ಒಪ್ಪುವುದಿಲ್ಲ. ದಲಿತರ ಪ್ರಗತಿಯ ಮಾರ್ಗದಲ್ಲಿ ಅಸ್ಪೃಶ್ಯತೆಯು ಒಂದು ಶಾಶ್ವತವಾದ ಅಡಚಣೆಯಾಗಿದೆ ಮತ್ತು ಅದನ್ನು ತೆಗೆದು ಹಾಕದ ಹೊರತು ದಲಿತರ ದಾರಿ ಸುಗಮವಾಗುವುದಿಲ್ಲ ಎಂಬುದನ್ನು ಹೆಚ್ಚಾಗಿ ನಂಬುತ್ತಾರೆ. ಮತಾಂತರ ಹೊಂದದೆ ಈ ಅಡಚಣೆಯನ್ನು ತೆಗೆದುಹಾಕಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದುದರಿಂದ ಅರ್ಹತೆಗೆ ಮನ್ನಣೆ ದೊರಯಬೇಕೆಂದೂ ವಿದ್ಯೆಯಿಂದ ದಲಿತರಿಗೆ ಏನಾದರೂ ಪ್ರಯೋಜನವಾಗಬೇಕೆಂದೂ ಸವರ್ಣೀಯರು ಮನಃಪೂರ್ವಕವಾಗಿ ಇಚ್ಚಿಸುವುದಾದರೆ ಅಸ್ಪೃಶ್ಯತೆಯ ಸಂಕೋಲೆಗಳನ್ನು ಹಿಂದೂಗಳು ಕಿತ್ತೊಗೆಯಬೇಕು. ಅಂದರೆ ಹಿಂದೂ ಧರ್ಮದ ತತ್ವಗಳನ್ನೇ ಬದಲಾಯಿಸಬೇಕು. ಇದು ಸಾಧ್ಯವೇ?