ದೇಶದಲ್ಲಿ ನಡೆಯುತ್ತಿರುವ ಅನೇಕ ವಿನಾಶಕಾರಿ ಕೋಮು ಸಂಘರ್ಷಗಳಲ್ಲಿ ದಲಿತರು ಪ್ರತ್ಯಕ್ಷವಾಗಿ ಭಾಗಿಯಾಗುತ್ತಿರುವುದರ ಬಗ್ಗೆ ಮತ ನಿರಪೇಕ್ಷ ಶಕ್ತಿಗಳು ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ. ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರೋಧಿ ಕೋಮು ಹತ್ಯಾಕಾಂಡದ ಆನಂತರದಲ್ಲಿ ವಿಚಾರವಾದಿಗಳು, ಕಮ್ಯುನಿಸ್ಟರು, ಸಮಾಜವಾದಿಗಳಾದಿಯಾಗಿ ಎಲ್ಲ ವರ್ಗದ ಸೆಕ್ಯುಲರ್ ಚಿಂತಕರೂ ದಲಿತರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಕ್ರೋಶದ ಜೊತೆಯಲ್ಲಿಯೇ ದಲಿತ ಸಮುದಾಯಗಳ ನೈತಿಕ ಬದ್ಧತೆಯನ್ನೇ ಪ್ರಶ್ನಿಸಲಾರಂಭಿಸಿದ್ದಾರೆ. ಹಿಂದೂ ಮತಾಂಧರ ಕೋಮುವಾದಿ ನರಮೇಧಕ್ಕೆ ಬಲಿಯಾದವರು ಕೇವಲ ಮುಸ್ಲಿಮರು ಮಾತ್ರವೇ ಅಲ್ಲ ಕ್ರೈಸ್ತ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ದಲಿತ ಯುವಕರು ಕೋಮು ಗಲಭೆಗಳಲ್ಲಿ ಹಿಂದುತ್ವದ ಪರವಾಗಿ ನಿಂತು ನರಮೇಧದಲ್ಲಿ ಭಾಗವಹಿಸಿದ ಗುಜರಾತಿನ ವಿದ್ಯಮಾನಕ್ಕೆ ವ್ಯಕ್ತವಾಗುತ್ತಿರುವ ಈ ಪ್ರತಿಕ್ರಿಯೆಯನ್ನು ಹೇಗೆ ವಿಶ್ಲೇಷಿಸಬೇಕೆಂಬ ಪ್ರಶ್ನೆ ಚಿಂತಕರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ದಲಿತರ ನೈತಿಕತೆಯನ್ನೇ ಏಕೆ ಪ್ರಶ್ನಿಸಬೇಕು ಎಂಬ ತಾರ್ಕಿಕ ಪ್ರಶ್ನೆಯೂ ಉದ್ಭವಿಸಬಹುದು. ಹೀಗೆ ದಲಿತರನ್ನು ಮಾತ್ರ ಪ್ರತ್ಯೇಕಿಸಿ ಸಂಶಯಿಸುವುದರಿಂದ, ಇತರ ಸಮುದಾಯಗಳಲ್ಲಿ ಮತ ನಿರಪೇಕ್ಷ ಲಕ್ಷಣಗಳು ಸ್ವಾಭಾವಿಕವಾಗಿರುತ್ತವೆ. ಅವುಗಳು ಸಂಶಯಾತೀತ ಎಂದು ಹೇಳಿದಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ನಿರೀಕ್ಷಿಸುವುದು ಕಷ್ಟ ಸಾಧ್ಯವಿರುವುದರಿಂದ ಇಲ್ಲಿ ಮತ್ತೊಂದು ಪ್ರಶ್ನೆಯನ್ನು ಎತ್ತಬೇಕಾಗುತ್ತದೆ. ಕೋಮು ಹತ್ಯಾಕಾಂಡಗಳಲ್ಲಿ, ನರಮೇಧದಲ್ಲಿ ಕಾರಣ ಏನು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ಪ್ರಶ್ನೆಯನ್ನು ವಿಭಿನ್ನವೂ ಸೀಮಿತಗೊಳಿಸಿದ ದೃಷ್ಟಿಕೋನದಿಂದ ನೋಡಿದಾಗ ದಲಿತ ಸಮುದಾಯವು ಈ ವಿಷಯದಲ್ಲಿ ಯಾರಿಗೂ ಜವಾಬು ನೀಡಬೇಕಾದ ಅವಶ್ಯಕತೆ ಇಲ್ಲ ಎಂದುಬಿಡಬಹುದು. ಆದರೆ ಭಾರತೀಯ ದಲಿತ ಸಮುದಾಯಗಳು ಹಿಂದೂ ಮೂಲಭೂತವಾದ ಮತ್ತು ಬಹುಸಂಖ್ಯಾತ ಕೋಮುವಾದೀ ಶಕ್ತಿಗಳ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರಲು ಬಯಸುವುದೇ ಆದರೆ ಈ ಪ್ರಶ್ನೆಗೆ ನೈತಿಕ ನೆಲೆಗಟ್ಟಿನಲ್ಲಿ ಸ್ಪಷ್ಟವಾದ ಉತ್ತರ ನೀಡಬೇಕಾಗುತ್ತದೆ.

ಈ ಪ್ರಶ್ನೆಗೆ ಉತ್ತರವನ್ನು ಶೋಧಿಸುತ್ತಲೇ ಎರಡು ಪ್ರಮುಖ ವಿದ್ಯಮಾನಗಳನ್ನು ಅಥವಾ ಖಾರಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ದಲಿತ ಸಮುದಾಯವು, ವಿಶೇಷವಾಗಿ ಯುವಜನತೆ, ಕೋಮುವಾದಿಗಳೊಡನೆ ಶಾಮೀಲಾಗಲು ಜಾಗತೀಕರಣ ಪ್ರಕ್ರಿಯೆಯು ಒಂದು ರೀತಿ ಸಹಾಯಕವಾದರೆ ಇನ್ನೊಂದೆಡೆ ಮತನಿರಪೇಕ್ಷ ಸಮುದಾಯದ ನಿರ್ಮಾಣದ ಸಾಹಸಕ್ಕೆ ಕೈಹಾಕಲು ಅವಶ್ಯವಾದ ಬಂಡವಾಳವಿಲ್ಲದಿರುವುದೂ ಕಾರಣವಾಗಿದೆ. ಸಂಘಟಿತ ದಲಿತ ಚಳುವಳಿಯ ಇತಿಹಾಸವನ್ನು ಅವಲೋಕನ ಮಾಡಿದರೆ ಹಿಂದುತ್ವ ಶಕ್ತಿಗಳು ದಲಿತ ಸಮುದಾಯಗಳನ್ನು ತಮ್ಮ ಚಳುವಳಿಯೊಳಗೆ ಸೇರಿಸಿಕೊಳ್ಳುವುದು ಹಿಂದೆಂದೂ ಸಾಧ್ಯವಾಗಿರಲಿಲ್ಲವೆಂಬ ಅಂಶ ಸ್ಪಷ್ಟವಾಗುತ್ತದೆ. ದೇಶದ ಬಹುಪಾಲು ಮತಕ್ಷೇತ್ರಗಳಲ್ಲಿ ದೇಶದ ಬಹುತೇಕ ಪ್ರಾಂತ್ಯಗಳಲ್ಲಿ ದಲಿತ ಸಮುದಾಯಗಳು ಬ್ರಾಹ್ಮಣರ ಅಥವಾ ಬ್ರಾಹ್ಮಣೇತರರ ಜಾತಿಸೂಚಕ ಶಕ್ರಿಗಳ ವಿರುದ್ಧ ಹೋರಾಡುತ್ತಲೇ ಬಂದಿರುವುದನ್ನು ಕಾಣಬಹುದು. ೧೯೨೦ರ ದಶಕದಲ್ಲಿ ಪ್ರಚಲಿತವಾಗಿದ್ದ ‘ಬ್ರಾಹ್ಮಣೇತರ’ ಎಂಬ ಪದಕ್ಕೂ ಇರುವ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ಗ್ರಹಿಸಬೇಕಾಗುತ್ತದೆ.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾರಾಷ್ಟ್ರ, ಮೈಸೂರು (ಇಂದಿನ ಕರ್ನಾಟಕ), ಮತ್ತು ಮದ್ರಾಸ್ (ತಮಿಳುನಾಡು) ಪ್ರಾಂತ್ಯಗಳಲ್ಲಿ ಬ್ರಾಹ್ಮಣೇತರರು ದಲಿತರ ಹಿತಾಸಕ್ತಿಗಳ ಕಡುವಿರೋಧಿಗಳಾಗಿರಲಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ಮೊದಲನೆಯದೆಂದರೆ, ದಲಿತ ಸಮುದಾಯಗಳ ರಾಜಕೀಯ ಪ್ರತಿಪಾದನೆಗಳು ಬ್ರಾಹ್ಮಣವಾದದ ಸಾಮಾಜಿಕ ಶೋಷಣೆಯ ವಿರುದ್ಧವಾಗಿದ್ದವು. ಬ್ರಾಹ್ಮಣೇತರ ಇತರ ಸಮುದಾಯಗಳೂ ಈ ಶೋಷಣೆಗೆ ಬಲಿಯಾಗಿದ್ದವು. ಎರಡನೆಯ ಕಾರಣವೆಂದರೆ, ದಲಿತ ಸಮುದಾಯಗಳಲ್ಲಿ ವ್ಯವಸ್ಥೆಯನ್ನು ಬುಡಮೇಲು ಆಡುವ ಸುಪ್ತವಾಗಿ ಪ್ರಜ್ಞಾಸ್ಥಿತಿಗೆ ಪ್ರತಿಯಾಗಿ ತಮ್ಮದೇ ಆದ ನಿಲುವುಗಳನ್ನು ಪರತಿಪಾದಿಸುವ ಆರ್ಥಿಕ ಸ್ಥೈರ್ಯ ಸಾಮರ್ಥ್ಯ ಬ್ರಾಹ್ಮಣೇತರ ಸಮುದಾಯಗಳಿಗೆ ಇರಲಿಲ್ಲ. ಸ್ವಾತಂತ್ರೋತ್ತರ ಅವಧಿಯಲ್ಲಿ ಸಾಮುದಾಯಿಕವಾಗಿ ಈ ಸಾಮರ್ಥ್ಯವನ್ನು ಗಳಿಸಿದ ನಂತರವೇ ಬ್ರಾಹ್ಮಣೇತರ ಗುಂಪುಗಳು ದಲಿತರ ಚಿಂತನೆಗೆ ಪ್ರತಿಯಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಲಾರಂಭಿಸಿದ್ದನ್ನು ಗಮನಿಸಬಹುದು. ಈ ಪ್ರಬಲ ಸಮುದಾಯಗಳ ಮತ್ತು ಆಕ್ರಮಣಕ್ಕೊಳಗಾದ ಸಮುದಾಯಗಳ ನಡುವಿನ ಸಂಘರ್ಷಗಳನ್ನು ಆಂಡ್ರಿಬಿಟೇಲ್ ಮತ್ತು ಎಂ. ಎನ್. ಶ್ರೀನಿವಾಸ್ ಅವರ ಸಂಶೋಧನಾ ಕೃತಿಗಳ ವ್ಯಾಖ್ಯಾನಗಳಲ್ಲಿ ಕಾಣಬಹುದು. ಮಹಾರಾಷ್ಟ್ರದ ಸೃಜನಾತ್ಮಕ ಮಾರ್ಕ್ಸ್‌ವಾದಿ ಚಿಂತಕ ಶರದ್ ಪಾಟೀಲರು ಬ್ರಾಹ್ಮಣವಾದಕ್ಕೆ ವಿರುದ್ಧವಾಗಿ ಅ-ಬ್ರಾಹ್ಮಣಿ (ಅ-ಬ್ರಾಹ್ಮಣಿ) ಎಂಬ ಪದವನ್ನು ಬಳಸುತ್ತಾರೆ. ಶದರ್ ಪಾಟೀಲರು ಅವರ ಬರಹಗಳಲ್ಲಿ ಅ-ಬ್ರಾಹ್ಮಣಿ ಎಂಬ ಪದವನ್ನು ಬಳಸುವಾಗ ಅದನ್ನು ಸ್ವಮೌಲ್ಯವುಳ್ಳ ಪರಿಕಲ್ಪನೆಯಾಗಿ ಬಳಸುತ್ತೇನೆಂದು ಹೇಳಿಕೊಳ್ಳುತ್ತಾರೆ. ಅದೇ ರೀತಿ ಜ್ಯೋತಿಬಾಪುಲೆಯವರೂ ಸಹ ದಲಿತ ಸಮುದಾಯವನ್ನು ಬ್ರಾಹ್ಮಣೇತರ ಸಮುದಾಯಗಳಲ್ಲಿ ಅಂತರ್ಗತಗೊಳಿಸಲು ಹಿಂಜರಿಯುತ್ತಾರೆ. ಫುಲೆಯವರು ಬ್ರಾಹ್ಮಣೇತರ ಎಂಬ ಪದವನ್ನು ಬಳಸದೆ, ಬ್ರಾಹ್ಮಣವಾದದ ವಿರುದ್ಧದ ರಾಜಕೀಯ ಹೋರಾಟದಲ್ಲಿ ಶೂದ್ರ ಮತ್ತು ಅತಿ ಶೂದ್ರ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಸಮಕಾಲೀನ ಸನ್ನಿವೇಶದಲ್ಲಿ ಬರಾಹ್ಮಣರೇತರರನ್ನು ಮಡಿ-ಮೈಲಿಗೆಗಳ ಸಿದ್ಧಾಂತಗಳ ಪರಿಮಿತಿಯಲ್ಲಿ ವಿಶ್ಲೇಷಿಸಲ್ಪಡುವ ಸಾಮಾಜಿಕ ವಾಸ್ತವತೆಗಳ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ. ಈ ಜಾತಿ ಸಮೂಹಗಳು ದೇಶದಾದ್ಯಂತ ದಲಿತ ಸಮುದಾಯಗಳ ವಿರುದ್ಧ ಸ್ಥಾಪಿಸಿಕೊಂಡಿರುವ ಸಾಂಸ್ಕೃತಿಕ ಮತ್ತು ಪುರುಷ ಪ್ರಧಾನ ಅಧಿಪತ್ಯವನ್ನಾಧರಿಸಿ ಸಮಕಾಲೀನ ಬ್ರಾಹ್ಮಣೇತರರನ್ನು ಗ್ರಹಿಸಬೇಕಾಗುತ್ತದೆ. ಹಿಂದುತ್ವ ಶಕ್ತಿಗಳು ರಾಜಕೀಯ ಪ್ರಾಬಲ್ಯವುಳ್ಳ ಮಧ್ಯಮ ವರ್ಗದ ಈ ಜಾತಿ ಸಮುದಾಯಗಳನ್ನು ಪ್ರಚೋದಿಸಿ ದಲಿತರ ವಿರುದ್ಧ ಎತ್ತಿಕಟ್ಟಿರುವ ಪ್ರಕ್ರಿಯೆಯನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಕಾಣಬಹುದಾಗಿದೆ. ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಮುಂಬೈನಲ್ಲಿ ನಡೆದಿರುವ ಅನೇಕ ಕೋಮು ಗಲಭೆಗಳನ್ನು ಅಧ್ಯಯನ ಮಾಡಿರುವ ಸಂದರ್ಭದಲ್ಲಿ ನನಗೆ ಕಂಡುಬಂದ ಸತ್ಯಾಂಶವೆಂದರೆ ದಲಿತ ಸಮುದಾಯಗಳು ಯಾವುದೇ ಸಮಯದಲ್ಲಿ ಕೋಮು ಗಲಭೆಗಳಲ್ಲಿ ಭಾಗಿಯಾಗಿರುವ ಪ್ರವೃತ್ತಿ ಕಂಡುಬರುವುದಿಲ್ಲ. ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದಲ್ಲೂ ಸಹ ದಲಿತರು ಬಹುತೇಕವಾಗಿ ಮುಸ್ಲಿಮರ ಪರವಾಗಿಯೇ ನಿಂತಿರುವುದನ್ನು ಕಣಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುತ್ವವಾದಿಗಳು ಹಿಂದೂಗಳನ್ನು ಕ್ರೋಢೀಕರಿಸುವ ತಮ್ಮ ಕೈಂಕರ್ಯದಲ್ಲಿ ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಲು ಎಷ್ಟೇ ಪ್ರಚೋದಿಸಿದರೂ ದಲಿತ ಸಮುದಾಯಗಳು ಈ ಕುತಂತ್ರಗಳಿಗೆ ಬಲಿಯಾಗದಿರುವುದನ್ನೂ ಇಲ್ಲಿ ಸ್ಮರಿಸಬಹುದು.

ನಿದರ್ಶನ ರೂಪದಲ್ಲಿ ಹೇಳಬಹುದಾದರೆ, ಕೆಲವು ಹಿಂದೂ ಮಹಾಸಭಾ ನಾಯಕರು ದಲಿತರನ್ನು ಮುಸ್ಲಿಂ ವಿರೋಧಿಗಳೆಂದು ಬಿಂಬಿಸಲು ಯತ್ನಿಸಿದ್ದುಂಟು. ಆದರೆ ಮುಸ್ಲಿಮರನ್ನು ಒಂದು ಶೋಷಕ ವರ್ಗವಾಗಿ ಪರಿಗಣಿಸಿ ದಲಿತರು ವಿರೋಧ ವ್ಯಕ್ತಪಡಿಸಿದ್ದರೇ ಹೊರತು, ಧಾರ್ಮಿಕ ದೃಷ್ಟಿಕೋನದಿಂದಲ್ಲ. ಅದೇ ವೇಳೆ ಕ್ರೈಸ್ತ ಸಮದಾಯದ ಸಮಾಜ ಸೇವಾ ಕಾರ್ಯಗಳ ಪರಿಣಾಮವಾಗಿ, ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ದಲಿತರನ್ನು ಕ್ರೈಸ್ತರ ವಿರುದ್ಧ ಎತ್ತಿಕಟ್ಟುವುದು ಹಿಂದುತ್ವವಾದಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೂ ದಲಿತರು ಕ್ರೈಸ್ತ ಮಿಷನರಿಗಳ ಬಗ್ಗೆ ತಮ್ಮದೇ ಆದ ಸಂಶಯಗಳನ್ನು ಹೊಂದಿದ್ದರೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದ ದಲಿತರೂ ಸಹ ಈ ಸಂಶಯಗಳಿಂದ ಹೊರಬರಲಾಗಲಿಲ್ಲ. ಮಹಾರಾಷ್ಟ್ರದಲ್ಲಿ ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಲು ಹಿಂದುತ್ವವಾದಿಗಳಿಗೆ ಅನೇಕ ಅಡಚಣೆಗಳಿದ್ದವು. ಪ್ರಾರಮಬಿಕ ಹಂತದಲ್ಲಿ ಅಂಬೇಡ್ಕರ್ ರವರ ಪ್ರಭಾವ, ಅಲ್ಪಸಂಖ್ಯಾತರು ಹಾಗೂ ದಲಿತರಲ್ಲಿದ್ದ ಸಮಾನ ಸಾಂಸ್ಕೃತಿಕ ಆಚರಣೆಗಳು (ಗೋಮಾಂಸ ಭಕ್ಷಣೆ) ಮತ್ತು ‘ಸಮಾಜ’ದ ಪರಿಕಲ್ಪನೆಯ ಪ್ರಾತಿನಿಧ್ಯತೆಗಳು ಇದಕ್ಕೆ ಮುಖ್ಯ ಕಾರಣಗಳೆಂದು ಗುರುತಿಸಬಹುದು. ಹಿಂದುತ್ವ ಶಕ್ತಿಗಳು ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯಾನಂತರದಲ್ಲೂ ದಲಿತ ಸಮುದಾಯವನ್ನು ಸಾಮಾಜಿಕ ಅಪಮಾನ ಮತ್ತು ಉಪೇಕ್ಷೆಗೊಳಪಡಿಸುವ ಕ್ರಿಯೆಯಲ್ಲಿ ತೊಡಗಿವೆ. ಇದರ ವಿರುದ್ಧ ದಲಿತರ ಹೋರಾಟ. ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಾಮಾಜಿಕವಾಗಿ ಪ್ರಬಲವಾದ ಜಾತಿಗಳ ಶೋಷಣೆಯ ವಿರುದ್ಧ ದೇಶಾದ್ಯಂತ ಹೋರಾಟಗಳಲ್ಲಿ ದಲಿತರು ನಿರತರಾಗಿದ್ದಾರೆ. ಅಂದರೆ ದಲಿತ ಸಮುದಾಯಗಳು ತಮ್ಮ ಸಾಮುದಾಯಿಕ ಸಾಮಾಜಿಕ ಘನತೆಗಾಗಿ ಹೋರಾಡುವುದರ ಮೂಲಕವೇ ಸಾಮಾಜಿಕ ಘನತೆಯನ್ನು ಗಳಿಸಲು ಯತ್ನಿಸುತ್ತಿದ್ದಾರೆಂದು ಹೇಳಬಹುದು. ಈ ‘ಸಮಾಜ’ ಎಂಬ ಪರಿಕಲ್ಪನೆಯೇ ಭಾರತೀಯ ಸಮಾಜದಲ್ಲಿನ ಸಂಘರ್ಷಮಯ ಸಾಮಾಜಿಕ ಸಂಬಂಧಗಳನ್ನು ರೂಪಿಸುತ್ತಿದೆಯೆಂದು ಹೇಳಬಹುದು. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಸಹ ಈ ಸಾಮಾಜಿಕ ಘನತೆಗಾಗಿ ಹೋರಾಡುವ ವಿದ್ಯಮಾನವನ್ನು ಇತ್ತೀಚೆಗೆ ಕಾಣಬಹುದಾಗಿದೆ. ಪಟ್ನಾದಲ್ಲಿನ ಮುಸ್ಲಿಂ ಪಸ್ಮಂಡ ಸಮಾಜ್‌ಮತ್ತು ರೆವರೆಂಡ್‌ಅರವಿಂದ್ ನಿರ್ಮಲ್ ರವರು ಪ್ರಾರಮಭಿಸಿರುವ ದಲಿತ ಕ್ರೈಸ್ತ ವಿಮೋಚನಾ ಚಳುವಳಿಗಳು ಆಯಾ ಧರ್ಮೀಯ ವಿಭಾಗಗಳಲ್ಲಿ ಘನತೆಗಾಗಿ ನಡೆಯುತ್ತಿರುವ ಹೋರಾಟಗಳಿಗೆ ನಿರ್ದೇಶನಗಳಾಗಿವೆ. ಆದಾಗ್ಯೂ ಘನತೆಗಾಗಿ ನಡೆಯುತ್ತಿರುವ ಹೋರಾಟಗಳಿಗೆ ಹಿಂದುತ್ವವೇ ಮೂಲ ವೇದಿಕೆಯಾಗಿದೆ ಎನ್ನಬಹುದು.

ದಲಿತ ಸಮುದಾಯಗಳು ತಮಗೆ ರಾಜಕೀಯವಾದ ಅನಿವಾರ್ಯತೆ ಎಂಬ ಅಂಶವನ್ನು ಹಿಂದುತ್ವವಾಗಿಗಳು ಅರಿತಿದ್ದಾರೆ. ಹಾಗಾಗಿ ಜಾತಿ ಪ್ರಶ್ನೆ ಎದುರಾದಾಗ ಹಿಂದುತ್ವವಾದಿಗಳು ರಕ್ಷಣಾತ್ಮಕ ನಿಲುವು ತಾಳುವುದೇ ಅಲ್ಲದೆ ದಲಿತರೊಡನೆ ಯಾವುದೇ ರೀತಿಯ ಘರ್ಷಣೆಯಾಗದಂತೆ ನೋಡಿಕೊಳ್ಳಲು ಮಿತ್ರರಂತೆ ವರ್ತಿಸುತ್ತಾರೆ. ಹಿಂದುತ್ವವಾದವನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವವರು ಕಚೇರಿಗಳಲ್ಲಿ ಹಿಂದುಳಿದ ವರ್ಗಗಳ ಅಥವಾ ಇತರ ಮೇಲ್ವರ್ಗಗಳ ಅಧಿಕಾರಿಗಳಿಗಿಂತಲೂ ದಲಿತ ಅಧಿಕಾರಿಗಳನ್ನು ಬೆಂಬಲಿಸುವುದನ್ನು ಕಾಣಬಹುದು. ಬ್ಯಾಂಕ್ ಮತ್ತ ಎಲ್‌. ಐ. ಸಿ. ಕಚೇರಿಗಳಲ್ಲಿ ಬ್ರಾಹ್ಮಣ ಅಧಿಖಾರಿಗಳು ಒಬ್ಬ ಮರಾಠಾ ಅಧಿಕಾರಿಗಿಂತಲೂ ದಲಿತ ಅಧಿಕಾರಿಯನ್ನು ಹೆಚ್ಚು ಬೆಂಬಲಿಸುವುದನ್ನು ಇಲ್ಲಿ ಉಲ್ಲೇಖಿಸಬಹುದು. ಮಹಾರಾಷ್ಟ್ರದ ಸಾರ್ವಜನಿಕ ಇಲಾಖೆಗಳಲ್ಲಿ ಪ್ರಾರಮಭಿಕ ದಿನಗಳಲ್ಲಿ ಈ ಬಗೆಯ ವರ್ತನೆಯನ್ನು ಮೇಲ್ಜಾತಿಯ ಅಧಿಕಾರಿಗಳಲ್ಲಿ ಕಾಣಬಹುದಾಗಿತ್ತು. ಇತರ ಹಿಂದುಳಿದ ಜಾತಿಗಳು (ಒಬಿಸಿ) ಮತ್ತು ಮಧ್ಯವರ್ತಿ ಜಾತಿಗಳ ವಿರುದ್ಧ ಒಂದು ವಿರೋಧಿ ಕೂಟವನ್ನು ಬೆಳೆಸಲು ದಲಿತರು ಒಂದು ಪ್ರಬಲ ಸಮುದಾಯವಾಗಿ ರೂಪುಗೊಳ್ಳುತ್ತಾರೆಂಬ ಚಿಂತನೆಯನ್ನು ಆರೆಸ್ಸೆಸ್‌ನಡೆಸಿತ್ತು. ಕಾಂಗ್ರೆಸ್ ಅಧಿಪತ್ಯದಲ್ಲಿ ಬ್ರಾಹ್ಮಣೇತರ ವಿರುದ್ಧದ ಹಿಂದುತ್ವ ಶಕ್ತಿಗಳ ಆಕ್ರೋಶ ಮತ್ತು ಅಸಮಾಧಾನಗಳು ತೀವ್ರವಾಗಿದ್ದುದೇ ಅಲ್ಲದೆ ಅಪಾಯಕಾರಿಯಾಗಿಯೂ ಇದ್ದವು. ಬ್ರಾಹ್ಮಣ ಸಮುದಾಯವನ್ನು ಅಧಿಕಾರಯುತ ಸ್ಥಾನಗಳಿಂದ ಪದಚ್ಯುತಗೊಳಿಸಿದ ನವೀನ ಅಧಿಕಾರ ಸಂರಚನೆಗಳ ವಿರುದ್ಧ ತಮ್ಮ ಹೋರಾಟವನ್ನು ತೀಕ್ಷ್ಣಗೊಳಿಸಿ ಕ್ರೋಢೀಕರಿಸುವುದು ಹಿಂದುತ್ವವಾದಿಗಳ ಹುನ್ನಾರವಾಗಿತ್ತು. ಈ ರಣತಾಂತ್ರಿಕ ಕಾರಣಗಳಿಗಾಗಿಯೇ ದಲಿತರನ್ನು ಮುಸ್ಲಿಮರ ವಿರುದ್ಧ ಕ್ರೋಢೀಕರಿಸುವುದರಲ್ಲಿ ಹಿಂದುತ್ವವಾದಿಗಳು ವಿಫಲರಾಗಿದ್ದರು. ಈ ಮೊದಲೇ ಹೇಳಿದಂತೆ ಮುಸ್ಲಿಂ ಭೂಮಾಲೀಕರು ದಲಿತರನ್ನು ಶೋಷಣೆಗೊಳಪಡಿಸಿರುವ ಮತ್ತು ದಲಿತರು ಹಿಂದೂ ಮತ್ತು ಮುಸ್ಲಿಂ ಭೂಮಾಲೀಕರ ವಿರುದ್ಧ ಹೋರಾಡಿರುವ ಪ್ರಸಂಗಗಳು ವಿರಳವಾಗಿ ಕಂಡುಬರುತ್ತವೆ.

ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ದಲಿತರು ಹಿಂದುತ್ವದೆಡೆಗೆ ಚಲಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಮೂರು ಮೂಲಭೂತ ಕಾರಣಗಳನ್ನು ಗ್ರಹಿಸಬಹುದು. ಮೊದಲನೆಯದಾಗಿ, ಒಂದು ಕಾಲಘಟ್ಟದಲ್ಲಿ ದಲಿತರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟ ಸಾರ್ವಜನಿಕ ಉದ್ದಿಮೆಗಳು ಈಗ ಅದೇ ಅವಕಾಶಗಳನ್ನು ನೀಡುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳಲ್ಲಿ, ಕಚೇರಿಗಳಲ್ಲಿ ನೇಮಕಾತಿ ಪ್ರಕ್ರಿಯೆಯೇ ಸ್ಥಗಿತಗೊಂಡಿರುವುದರಿಂದ ದಲಿತರಿಗೆ ಅಲ್ಲಿ ಅವಕಾಶ ದೊರೆಯುತ್ತಿಲ್ಲ. ಮೇಲ್ಜಾತಿಯವರ ಶೋಷಣೆ ಮತ್ತು ದಬ್ಬಾಳಿಕೆಯನ್ನು ಎದುರಿಸುವ ನಿಟ್ಟಿನಲ್ಲಿ ಈ ಸಾರ್ವಜನಿಕ ವಲಯಗಳು ದಲಿತರಲ್ಲಿ ಆತ್ಮಸ್ಥೈರ್ಯ ಉಂಟುಮಾಡಿದ್ದವು. ಸಾರ್ವಜನಿಕ ವಲಯದಲ್ಲಿ ಮೇಲ್ಜಾತಿಯವರ ಪ್ರಾಬಲ್ಯ ಹೆಚ್ಚಾಗಿದ್ದುದರಿಂದಲೇ ಕಾನ್ಷಿರಾಂರವರಿಗೆ ದಲಿತರನ್ನು ಸಂಘಟಿಸುವುದು ಸುಲಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಮೇಲ್ಜಾತಿಯ ಪ್ರಾಬಲ್ಯ ಅಷ್ಟಾಗಿ ಕಂಡುಬರುವುದಿಲ್ಲ. ಏಕೆಂದರೆ ಬಹುತೇಕ ಮೇಲ್ಜಾತಿಯ ಅಧಿಕಾರಿಗಳು, ನೌಕರ ವರ್ಗವು ಖಾಸಗಿ ವಲಯಕ್ಕೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಸಾರ್ವಜನಿಕ ವಲಯವೇ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಹಾಗಾಗಿ ಈ ವಲಯದಲ್ಲಿ ಜಾತಿ ಆಧಾರಿತ ಶೋಷಣೆಯಾಗಲೀ, ತಾರತಮ್ಯವಾಗಲೀ ಅಷ್ಟಾಗಿ ಕಂಡುಬರುವುದಿಲ್ಲ. ಸಾರ್ವಜನಿಕ ವಲಯವು ನಾಶವಾಗುತ್ತಿರುವುದು ಸಂಘಟಿತ ದಲಿತರ ದಲಿಯು ಶಿಥಿಲಗೊಳ್ಳಲು ಕಾರಣವಾಗಿದೆ ಎಂದು ಹೇಳಬಹುದು.

ಎರಡನೆಯದಾಗಿ, ದಲಿತರನ್ನು ಸಂಘಟಿತ ವೇದಿಕೆಯ ಮೇಲೆ ತರಲು ಉತ್ತಮ ಸಾಧನವಾಗಿದ್ದ ಮೀಸಲಾತಿ ಸೌಲಭ್ಯ ಕಡಿಮೆಯಾಗುತ್ತಿರುವುದರಿಂದಲೂ ದಲಿತ ರಾಜಕೀಯವು ಜಾತಿ ತಾರತಮ್ಯದವ ರುದ್ಧ ಪರಿಣಾಮಕಾರಿಯಾಗಿ ಹೋರಾಡದಿರಲು ಕಾರಣವೆಂದು ಹೇಳಬಹುದು. ಕೆಲವುವಷರ್ಷಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾದಂತೆ, ವಿಶ್ವಬ್ಯಾಂಕು ತನ್ನ ವರದಿಯೊಂದರಲ್ಲಿ, ಸಾರ್ವಜನಿಕ ವಲಯದ ನೇಮಕಾತಿಗಳಲ್ಲಿ ಅರ್ಹತೆಗೆ ಪ್ರಾಧಾನ್ಯತೆ ನೀಡಬೇಕೆಂದು ಶಿಫಾರಸ್ಸು ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು. ಮೀಸಲಾತಿಯು ಜಾತಿ ಸಂಘರ್ಷಕ್ಕೆ ಸೂಕ್ತವಾದ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದು ಈಗ ಸಾರ್ವಜನಿಕ ವಲಯದಲ್ಲಿ ಒಂದು ಅವಕಾಶದ ರೂಪದಲ್ಲಿ ಮೀಸಲಾತಿ ಸೌಲಭ್ಯ ಶಿಥಿಲಗೊಳ್ಳುತ್ತಿರುವುದರಿಂದ ದಲಿತೇತರೊಡನೆ ಸಂಘರ್ಷಮಯ ವಾತಾವರಣ ರೂಪುಗೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಈಗ ದಲಿತ ಸಮುದಾಯಗಳು ಬಂಡವಾಳ ಶಾಹಿಗಳ ಭದ್ರ ಕೋಟೆಗಳ ಲಗ್ಗೆ ಇಟ್ಟು ಖಾಸಗಿ ವಲಯದಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವುದರಿಂದ ಜಾತಿ ಸಂಘರ್ಷದ ನೆಲೆಗಳು ರಾಜಕೀಯ ರಂಗದಲ್ಲಿ ಗೋಚರಿಸುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಈ ಆಗ್ರಹವು ಸಾಮಾಜಿಕ ನ್ಯಾಯದ ಹಂತದಲ್ಲೇ ಇರುವುದಾದರೂ ದಲಿತ ಸಮುದಾಯವು ಬಂಡವಾಳಶಾಹಿಗಳಿಗೆ ಒಡ್ಡಿರುವ ಈ ಸವಾಲಿನ ಹಿಂದೆ ಮಧ್ಯಮ ವರ್ಗದ ಆಶೋತ್ತರಗಳೇ ಪ್ರಧಾನ ಪಾತ್ರ ವಹಿಸಿದ್ದು ತನ್ನದೇ ಆದ ಇತಿಮಿತಿಗಳನ್ನು ಹೊಂದಿರುವುದು ಸ್ಪಷ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದಲಿತ ಸಮುದಾಯಗಳಿಗೆ ಖಾಸಗಿ ವಲಯವು ಗಗನ ಕುಸುಮವಾಗಿದೆ. ಈ ಜಿಗುಪ್ಸೆ ಮತ್ತು ನಿರಾಶೆಗಳ ಪರಿಣಾಮವಾಗಿಯೇ ವಿದ್ಯಾವಂತ ನಿರುದ್ಯೋಗಿ ದಲಿತರು ಮತ್ತು ಪಟ್ಟಣ ಪ್ರದೇಶದ ದಲಿತ ಯುವಕರು ಹೆಚ್ಚು ಹೆಚ್ಚಾಗಿ ಹಿಂದುತ್ವವಾದಿಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಶ್ರೀ ದಿನೇಶ್‌ಥಿಟೆಯವರು ಪುಣೆಯ ಸಿದ್ಧಾರ್ಥ ಮಂಡಲ್‌ಎಂಬ ತರುಣನ ಬಗ್ಗೆ ಆಡಿರುವ ಸಂಶೋಧನೆಯಲ್ಲಿ ಈ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ವಿದ್ಯಮಾನಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲೂ ಕಾಣಬಹುದಾಗಿದೆ.

ಸಾರ್ವಜನಿಕ ವಲಯಗಳು ನೌಕರಿಯಲ್ಲಿ ದಲಿತರಿಗೆ ಯಾವುದೇ ಅವಕಾಶ ನೀಡದಿರುವುದು ಮತ್ತು ಖಾಸಗೀ ಕ್ಷೇತ್ರದ ಬಂಡವಾಳಶಾಹಿಗಳು ದಲಿತರಿಗೆ ಬಾಗಿಲು ಮುಚ್ಚಿರುವುದರಿಂದ ತಮ್ಮ ಕೌಟುಂಬಿಕ ವಲಯಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ದಲಿತ ಯುವಕರಿಗೆ ಹಿಂದುತ್ವದೊಡನೆ ಗುರುತಿಸಿಕೊಳ್ಳುವುದು ಮತ್ತು ಆಧ್ಯಾತ್ಮಿಕ ಸಂತೃಪ್ತಿಗಿಂತಲೂ, ಭೌತಿಕ ಅನುಕೂಲಗಳಿಗಾಗಿ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿ ಬಿಡುತ್ತದೆ. ಈ ವಿದ್ಯಾವಂತ ನಿರುದ್ಯೋಗಿ ದಲಿತ ಯುವಕರೇ ಹಿಂದುತ್ವದ ಕಾರ್ಯಸೂಚಿಯನ್ನು ಬೆಂಬಲಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಆದರೆ, ಈ ಯುವಕರಿಗೆ ಹಿಂದುತ್ವದ ಪರಿಕಲ್ಪನೆಯಲ್ಲಿ ಯಾವುದೇ ಪ್ರಾತಿನಿಧ್ಯವಿರದೆ, ಕೇವಲ ಗಣಪತಿ, ದುರ್ಗಾ ಪೂಜೆಗಳಲ್ಲಿ ಪಾಲ್ಗೊಳ್ಳುವ ಮಟ್ಟಿಗೆ ಮಾತ್ರ ಅವರ ಆಸಕ್ತಿಗಳು ಸೀಮಿತವಾಗಿರುತ್ತವೆ. ಈ ಸಾಂಸ್ಕೃತಿಕ-ಧಾರ್ಮಿಕ ಆಚರಣೆಗಳು ದಲಿತ ಯುವಕರಿಗೆ ಎರಡು ರೀತಿಯಲ್ಲಿ ಸಹಾಯಕವಾಗಿರುತ್ತವೆ; ಭೌತಿಕ ಅನುಕೂಲಗಳೇ ಅಲ್ಲದೆ, ಖರ್ಚಿಗಾಗಿ ಅಲ್ಪಸ್ವಲ್ಪ ಹಣ ಸಂಪಾದಸಿಸುವುದರೊಂದಿಗೆ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ ನೀಡುತ್ತವೆ. ಎರಡನೆಯದಾಗಿ ಸಾಂಸ್ಕೃತಿಕ ಸಂತೃಪ್ತಿಯನ್ನೂ ಒದಗಿಸುತ್ತವೆ.

ಇದೇ ದಲಿತ ಯುವಕರು ಬೌದ್ಧಧರ್ಮದೆಡೆಗೆ ಆಕರ್ಷಿತರಾಗಿದ್ದವರೇ ಆದರೂ ಅಂಬೇಡ್ಕರ್ ಪ್ರತಿಪಾದಿಸಿ, ಸ್ವೀಕರಿಸಿದ ಬೌದ್ಧ ಧರ್ಮವು ತಾತ್ವಿಕ ಆಯಾಮವನ್ನು ಹೊಂದಿದ್ದು ನೈತಿಕತೆಗೆ ಹೆಚ್ಚು ಒತ್ತ ಕೊಡುತ್ತದೆ. ಹಿಂದುತ್ವದ ಸಾಂಸ್ಕೃತಿಕ ಕ್ಷೇತ್ರ ನೀಡಬಲ್ಲ ರೋಚಕತೆಯನ್ನು ಬೌದ್ಧಧರ್ಮದ ನೈತಿಕ ತತ್ವಗಳು ನೀಡಲಾರವು. ಸಾಂಸ್ಕೃತಿಕ ಅವಶ್ಯಕತೆಗಳನ್ನು ದಿನನಿತ್ಯ ಪೂರೈಸಬೇಕಾಗಿರುವುದರಿಂದ, ಬೌದ್ಧಧರ್ಮದ ವಿಚಾರವಾದವು ಈ ನಿಟ್ಟಿನಲ್ಲಿ ವಿಫಲವಾಗುತ್ತದೆ. ಹಾಗಾಗಿ ಅಂತಿಮವಾಗಿ ದಲಿತ ಯುವಕರು ಹಿಂದುತ್ವದೆಡೆಗೆ ಆಕರ್ಷಿತರಾಗುತ್ತಾರೆ. ಈ ರೀತಿ ಸೃಷ್ಟಿಯಾಗುವ. ಸಾಂಸ್ಕೃತಿಕ ಶೂನ್ಯವನ್ನು ಭರಿಸಲು, ವ್ಯಾಪಕವಾಗಿರುವ ವಿದ್ಯುನ್ಮಾನ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ತಮ್ಮ ಸಾಂಸ್ಕೃತಿಕ ಸಂಕೇತಗಳನ್ನು ದಲಿತರ ಮೇಲೆ ಹೇರಲು ಹಿಂದುತ್ವವಾದಿಗಳು ಪ್ರಯತ್ನಿಸುತ್ತಾರೆ. ದಲಿತ ಮಹಿಳೆಯರು ಬುದ್ಧ ವಂದನೆ ಕಾರ್ಯಕ್ರಮಕ್ಕೆ ಹೋಗದೆ, ಟಿ. ವಿಯಲ್ಲಿ ‘ಸಾಸ್-ಬಹು’ ನಂತಹ ಧಾರವಾಹಿಗಳನ್ನು ನೋಡಲು ಅತಿಯಾಗಿ ಮುಗಿಬೀಳುತ್ತಾರೆ ಎಂಬಂಶವನ್ನು ಇಲ್ಲಿ ಗಮನಿಸಬಹುದು. ದಲಿತ ಸಮುದಾಯದೊಳಗಿನ ಸಾಮುದಾಯಿಕ ಬಾಂಧವ್ಯವನ್ನು ವೃದ್ಧಿಸುವುದರಲ್ಲಿ ಸಹಾಯಕವಾಗದ ಪಾಶ್ಚಿಮಾತ್ಯ ಮಾಧ್ಯಮಗಳು ದಲಿತರಿಗೆ ಒಂದು ಪರ್ಯಾಯವಾಗುವುದಿಲ್ಲ. ಏಕೆಂದರೆ ದಲಿತರ ದೈನಂದಿನ ಬದುಕಿಗೆ ಸ್ಪಂದಿಸದಂತಹ ಗ್ರಾಹಕ ಸಂಸ್ಕೃತಿ ಮತ್ತು ವ್ಯಕ್ತಿವಾದವನ್ನು ಹೆಚ್ಚಾಗಿ ಪ್ರತಿಬಿಂಬಿಸುತ್ತಿವೆ.

ಜಾಗತೀಕರಣದ ಸಂದರ್ಭದಲ್ಲಿ ಪ್ರತಿಪಾದಿಸಲಾಗುತ್ತಿರುವ ಸಾಂಸ್ಕೃತಿಕ ಪರ್ಯಾಯಗಳೂ ದಲಿತರಿಗೆ ಪ್ರಬಲವಾದ ಪರ್ಯಾಯ ಎನಿಸುವುದಿಲ್ಲ. ಜಾಗತಿಕ ಸಂಸ್ಕೃತಿಯನ್ನು ಆಸ್ವಾದಿಸಲು ಹಣಬಲದ ಅವಶ್ಯಕತೆ ಇರುತ್ತದೆ. ಆದರೆ ದಲಿತರಿಗೆ ಹಣ ಬಲವಿರುವುದಿಲ್ಲ. ಉದಾಹರಣೆಗೆ ದಲಿತ ಯುವಕರಿಗೆ ಪಿಡ್ಜಾ ತಿನ್ನಬೇಕೆನಿಸಿದಲ್ಲಿ ಕನಿಷ್ಠ ಪಕ್ಷ ಐವತ್ತು ರೂ. ಗಳು ಬೇಕಾಗುತ್ತದೆ. ಜಾಗತಿಕ ಮಟ್ಟಗಳ ಉಡುಪು ಧರಿಸಲಿಚ್ಛಿಸಿದರೆ ಅವರಲ್ಲಿ ಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ದಲಿತೇತರ ಮಧ್ಯಮವರ್ಗದ ಯುವಕರಿಗೆ ತದ್ವಿರುದ್ಧವಾಗಿ ದಲಿತ ಯುವಕರು ಸ್ಥಳೀಯ ಮಟ್ಟದಲ್ಲೇ ಮೈಕೆಲ್ ಜಾಕ್ಸನ್‌ರಂತಾಗುವುದೋ ಅಥವಾ ಸ್ಥಳೀಯವಾಗಿ ಮಾಡಿದ ಪಿಡ್ಜಾ ತಿನ್ನುವುದರಲ್ಲೋ ಅಥವಾ ಕೋಲಾ-ಪೆಪ್ಸಿಗಳ ಬದಲಿಗೆ ಬಣ್ಣದ ಪಾನೀಯವನ್ನು ಸೇವಿಸುವುದರಲ್ಲೋ ತೃಪ್ತಿ ಪಟ್ಟುಕೊಳ್ಳುತ್ತಾರೆ. ಈ ದೌರ್ಬಲ್ಯಗಳನ್ನು ವಿರೋಧಿಸುವ ನೈತಿಕ ಶಕ್ತಿಯೂ ಇಲ್ಲದ ಯುವಕರು ಹಿಂದುತ್ವ ಶಕ್ತಿಗಳು ನಡೆಸುವ ಸಾಂಸ್ಕೃತಿಕ ಹಬ್ಬಗಳಿಗೆ ಬಲಿಯಾಗಿರುತ್ತಾರೆ. ಹಾಗಾಗಿ ದಲಿತರನ್ನು ಹಿಂದುತ್ವದೆಡೆಗೆ ಆಕರ್ಷಿಸುವ ಪ್ರಕ್ರಿಯೆ ನೈಜ ಪ್ರಕ್ರಿಯೆಯಾಗಿದ್ದು, ಭ್ರಮೆ ಎಂದು ಭಾವಿಸುವಂತಿಲ್ಲ. ದಲಿತ ಯುವಕರ ಈ ಆಯ್ಕೆ ವಾಸ್ತವಿಕವೆನ್ನುವುದಕ್ಕಿಂತಲೂ ವ್ಯಾವಹಾರಿಕವೆಂದು ಹೇಳಬಹುದು. ಈ ನಿಟ್ಟಿನಲ್ಲಿ ಜಾಗತಿಕ ಸಂಸ್ಕೃತಿಯ ಪ್ರವೃತ್ತಿಗಳಾದ ಗ್ರಾಹಕ ಸಂಸ್ಕೃತಿಯ ಜೀವನ ಶೈಲಿ, ಚಿಂತನೆಗಳು, ನಡಾವಳಿಗಳು, ವಸ್ತ್ರಸಂಹಿತೆಗಳು, ಹೊಸ ಮಾದರಿಗಳು ಹಾಗೂ ವಿಶ್ವ ಸಮುದಾಯದ ಸದಸ್ಯರಾಗುವ ಪರಿಕಲ್ಪನೆಗಳೆಲ್ಲವೂ ಕೇವಲ ತಾತ್ವಿಕವಾದ ಸಾಧ್ಯತೆಗಳು ಆತ್ರ ಎಂದು ಹೇಳಬಹುದು.

ಹಾಗೊಮ್ಮೆ ಇದು ಸಾಧ್ಯವೇ ಆದರೂ ದಲಿತರು ವಾಸ್ತವವಾಗಿ ಅಲ್ಲದಿದ್ದರೂ ಸಾಂಸ್ಕೃತಿಕವಾಗಿ ಬಂಡವಾಳಶಾಹಿಗಳಾಗಬೇಕೇ ಎಂಬ ಪ್ರಶ್ನೆ ಏಳುತ್ತದೆ. ಈ ವಿದ್ಯಾವಂತ ನಿರುದ್ಯೋಗಿ ದಲಿತ ಯುವಕರು ಸಾಂಕೇತಿಕವಾಗಿ ಬಂಡವಾಳಶಾಹಿಗಳಾಗುವ ಅವಕಾಶವಿರುವುದಿಲ್ಲ. ಅವಕಾಶ ಲಭ್ಯವಾಗಬಹುದಾದ ಎಲ್ಲಾ ಕ್ಷೇತ್ರ ಮತ್ತು ಸಂರಚನೆಗಳಲ್ಲೂ ವಂಚಿರತಾಗಿ ನಿರಾಶೆಯಿಂದ ಬಳಲುತ್ತಿರುವ ಈ ಯುವಕರಿಗೆ ಬಂಡವಾಳಿಗರಾಗುವುದು ಬಹುಶಃ ಕನಸಾಗಿಯೇ ಉಳಿಯಬಹುದು. ಎರಡನೆಯದಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಬಂಡವಾಳಶಾಹಿಗಳಾಗುವ ಅವಕಾಶಗಳೂ ದಲಿತ ಯುವಕರಿಗೆ ಲಭ್ಯವಿಲ್ಲದಿರುವುದನ್ನು ಕಾಣಬಹುದು. ಏಕೆಂದರೆ ಬಂಡವಾಳ ಶಾಹಿಗಳಾಗುವುದೆಂದರೆ ಶೋಷಣೆಯನ್ನು ಅಂಗೀಕರಿಸಬೇಕಾಗುತ್ತದೆ. ಮತ್ತೊಬ್ಬರನ್ನು ಶೋಷಣೆ ಮಾಡುವುದರಿಂದಲೇ ಬಂಡವಾಳಶಾಹಿ ವ್ಯವಸ್ಥೆ ಊರ್ಜಿತವಾಗಿರುವುದರಿಂದ ದಲಿತರು ದಲಿತರನ್ನೇ ಶೋಷಣೆ ಮಾಡಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ದಲಿತರು ಬಂಡವಾಳಿಗರಾಗಿ, ದಲಿತ ಸಮುದಾಯವನ್ನೇ ಶೋಷಿಸುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾದಾಗ ಸಕಾರಾತ್ಮಕ ಉತ್ತರ ನೀಡಲಾಗುವುದಿಲ್ಲ.

ಜಾತಿ ಸಂಘರ್ಷಗಳಿಗೆ ವೇದಿಕೆಯಾಗಿದ್ದ, ದಲಿತರ ವರ್ಗ ಪರಿಕಲ್ಪನೆಯನ್ನು ನಾಶಮಾಡುವ ಅನೇಕ ಸಂರಚನೆಗಳು ಕ್ರಮೇಣವಾಗಿ ನಾಶವಾಗತೊಡಗಿದ್ದು, ದಲಿತರು ಹಿಂದುತ್ವದೆಡೆಗೆ ಚಲಿಸುತ್ತಿರುವ ಪ್ರಕ್ರಿಯೆಗೆ ಮತ್ತೊಂದು ಕಾರಣವೆಂದು ಹೇಳಬಹುದು. ಈ ಸಂರಚನೆಗಳಿಗೆ ಜಾತಿಯ ಪರಿಕಲ್ಪನೆಯನ್ನು ಮತ್ತಾವುದೇ ಹಿಂದುಳಿದ ವರ್ಗಕ್ಕೆ ಪರಿವರ್ತಿಸುವ ಅಗತ್ಯತೆ ಇರಲಿಲ್ಲ. ವರ್ಗ ಪ್ರಜ್ಞೆಯನ್ನು ಶಿಥಿಲಗೊಳಿಸಲು ಕೈಗಾರಿಕಾ ಬಂಡವಾಳಕ್ಕೆ ಜಾತಿ ಅವಶ್ಯವಾಗಿತ್ತು. ಹಾಗಾಗಿ ಭಾರತೀಯ ಬಂಡವಾಳಶಾಹಿಗಳಿಗೆ ಕಾರ್ಮಿಕ ವರ್ಗವನ್ನು ವಿಭಜಿಸಲು ಯಾವುದೇ ರೀತಿಯ ಕೋಮು ಸಿದ್ಧಾಂತದ ಅವಶ್ಯಕತೆ ಕಂಡುಬರಲಿಲ್ಲ. ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಂತೀಯತೆಯ ಮನೋಭಾವವನ್ನು ಅನುಸರಿಸಿದ ಬಂಡವಾಳಶಾಹಿಗಳು ಕಾರ್ಮಿಕ ಸದಾಕಾಲವೂ ಜಾತಿ ಆಧಾರದ ಮೇಲೆ ವಿಭಜಿತರಾಗಿರುವಂತಹ ನೀತಿಗಳನ್ನು ಅನುಸರಿಸಿದರು. ನಿದರ್ಶನದಲ್ಲಿ ಮುಂಬೈನ ಜವಳಿ ಉದ್ಯಮಿಗಳು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಜವಳಿ ಕಾರ್ಖಾನೆಗಳ ಬಳಿ ಜಾತಿ ಆಧಾರಿತ ಬಿ. ಡಿ. ಡಿ. ಕಾಲೋನಿಗಳನ್ನು ನಿರ್ಮಿಸಿದ್ದುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಕಾಲೋನಿಗಳ ನಿರ್ಮಾನದ ಮುಖಾಂತರ ದುಡಿಯುವ ವರ್ಗಗಳನ್ನು ಜಾತಿ ಆಧಾರದ ಮೇಲೆ ಸದಾಕಾಲವೂ ಒಡೆದು ಆಳುವ ತಂತ್ರವನ್ನು ಇಲ್ಲಿ ಕಾಣಬಹುದು. ಆದರೆ ತಮ್ಮ ಪ್ರಯತ್ನದಲ್ಲಿ ಬಂಡವಾಳಶಾಹಿಗಳು ಯಶಸ್ಸು ಕಾಣಲಿಲ್ಲ. ಹಾಗೊಮ್ಮೆ ಈ ಕ್ರಮದ ಮೂಲಕ ಜಾತಿ ವೈಷಮ್ಯ ಉಂಟುಮಾಡುವುದರಲ್ಲಿ ಸಫಲರಾಗಿದ್ದರೂ ಅದು ನಗಣ್ಯವೆಂದೇ ಹೇಳಬಹುದು. ಅಷ್ಟಾದರೂ ಆಳುವ ವರ್ಗಗಳಿಗೆ ಜನರನ್ನು ಒಡೆದು ಆಳಲು ಕೋಮುವಾದ ಒಂದು ಅಸ್ತ್ರವಾಗಿ ಪರಿಣಮಿಸಲಿಲ್ಲ. ಕೈಗಾರಿಕಾ ಬಂಡವಾಳಕ್ಕೆ ಸಮಾಜದಲ್ಲಿ ಬೇರೂರಿದ್ದ ಜಾತಿ ವಿಭಜನೆಯೇ ಅನುಕೂಲಕರವಾಗಿದ್ದರಿಂದ ಕೋಮುವಾದವು ಆಕರ್ಷಣೀಯವಾಗಿರಲಿಲ್ಲ.

ಜಾಗತೀಕರಣ ಯುಗದಲ್ಲಿ ಮುಂಬೈನ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯ ಕೈಗಾರಿಕಾ ಕ್ಷೇತ್ರದಲ್ಲಿ ನಡೆಯದೆ ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಹಾಗಾಗಿ ಇಲ್ಲಿ ಬಂಡವಾಳ ಶಾಹಿಗಳಿಗೆ ಜಾತಿ ವೈರುಧ್ಯಗಳ ಅವಶ್ಯಕತೆ ಕಂಡುಬರುತ್ತಿಲ್ಲ. ಜಾಗತಿಕ ಮತ್ತು ವಾಣಿಜ್ಯ ಬಂಡವಾಳದ ಪ್ರಭಾವದಿಂದ ವಿನಾಶದ ಹಾದಿ ಹಿಡಿದಿರುವ ಜವಳಿ ಉದ್ಯಮ ಕಾರ್ಮಿಕರನ್ನು ಬಿ. ಡಿ. ಡಿ. ಕಾಲೋನಿಗಳಿಂದ ಕ್ರಮೇಣವಾಗಿ ಉಚ್ಛಾಟಿಸುತ್ತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಬಂಡವಾಳಕ್ಕೆ ಈ ಕಾಲೋನಿಗಳು ಸ್ಥಿರಾಸ್ತಿ ಬೆಳವಣಿಗೆಗೆ ಸಹಾಯಕವಾಗಿ ಪರಿಣಮಿಸುತ್ತದೆ. ಇಲ್ಲಿ ನೆಲೆಸಿದ್ದ ಕಾರ್ಮಿಕರು ತಮ್ಮ ಬಡತನದ ಬೇಗೆಯನ್ನು ತೀರಿಸಿಕೊಳ್ಳಲು ಇರುವ ಅಲ್ಪ ಮೌಲ್ಯದ ಸ್ಥಿರಾಸ್ತಿಗಳನ್ನು ಮಾರಿಕೊಂಡು ಮುಂಬೈ ನಗರದ ಹೊರವಲಯಕ್ಕೆ ಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಜವಳಿ ಉದ್ಯಮದ ವಿನಾಶದಿಂದ ನೌಕರಿ ಕಳೆದುಕೊಂಡು ಕಂಗಾಲಾಗಿರುವ ಈ ಕಾರ್ಮಿಕರು ಜೀವನೋಪಾಯಕ್ಕಾಗಿ ತಮ್ಮ ಹಳ್ಳಿಗಳಿಗೆ ಹಿಂದಿರುಗಬೇಕಾಗುತ್ತದೆ ಅಥವಾ ಮುಂಬೈನ ಕೊಳೆಗೇರಿಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳಬೇಕಾಗುತ್ತದೆ.

ಕೊಳೆಗೇರಿಗಳಲ್ಲಿ ಜಾತಿಗಳು ಸಾಮಾಜಿಕ ವಾಸ್ತವತೆಗಳಾಗಿರುವುದೇ ಹೊರತು ರಾಜಕೀಯ ಅನಿವಾರ್ಯತೆಗಳಾಗಿರುವುದಿಲ್ಲ. ಹಾಗಾಗಿ ಜಾತಿಯನ್ನು ಈಗ ರಾಜಕೀಯವಾಗಿ ಉಪಯುಕ್ತವಾಗಬಲ್ಲ ಅಂಶವನ್ನಾಗಿ ಪರಿಗಣಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಜಾತಿಯನ್ನು ಪಳೆಯುಳಕೆಯ ವರ್ಗಕ್ಕೆ ಸೇರಿಸಿದರೂ ಅತಿಶಯೋಕ್ತಿಯಾಗಲಾರದು. ಸಾಮಾನ್ಯ ಜನತೆಗೆ ಜಾತಿ ಒಂದು ಲೌಕಿಕ ವಾಸ್ತವತೆಯಾಗಿ ಮಾತ್ರ ಪರಿಣಮಿಸುತ್ತದೆ. ಈ ಪ್ರಕ್ರಿಯೆಯೇ ಹಿಂದುತ್ವವಾದಿಗಳ ಹಾದಿಯನ್ನು ಸುಗಮಗೊಳಿಸಿದೆ. ಈ ಸನ್ನಿವೇಶದಲ್ಲಿ ಹಿಂದುತ್ವ ಶಕ್ತಿಗಳು ದಲಿತ ಯುವಕರ ಜಾತಿ ಪ್ರಜ್ಞೆಯನ್ನು ಸುಲಭವಾಗಿ ಧಾರ್ಮಿಕ ಪ್ರಜ್ಞೆಯಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ತಮ್ಮ ಜಾತಿ ವೈರುಧ್ಯಗಳನ್ನು ಮತ್ತು ಪ್ರತಿಕೂಲ ಅಸ್ಮಿತೆಗಳನ್ನು ಮರೆತು ಈ ಪರಿವರ್ತನಾ ಪ್ರಕ್ರಿಯೆಗೆ ಸುಲಭವಾಗಿ ತುತ್ತಾಗುತ್ತಾರೆ. ಆದ್ದರಿಂದಲೇ ಹಿಂದುತ್ವ ಶಕ್ತಿಗಳು ಮುಂಬೈನ ಕೊಳೆಗೇರಿಗಳಲ್ಲಿ ಅಥವಾ ಇತರೆಡೆಗಳಲ್ಲಿ ಯಶಸ್ಸು ಕಂಡಿರುವುದನ್ನು ಗಮನಿಸಬಹುದು. ಅಹಮದಾಬಾದಿನಲ್ಲೂ ಸಹ ದಲಿತರು ಹಿಂದುತ್ವದೆಡೆಗೆ ಚಲಿಸುತ್ತಿರುವುದರ ಹಿಂದೆ ಇದೇ ವಿದ್ಯಮಾನವನ್ನು ಕಾಣಬಹುದು. ಜೊತೆಗೆ ಕೋಮುವಾದಿ ವಿರೋಧಿ ಕ್ರಮಗಳಿಗೆ ಸೂಕ್ತವಾದ ಬೆಂಬಲ ಸೂಚಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಈ ಬೆಳವಣಿಗೆಗೆ ಪೂರಕವಾಗಿದೆ. ಬಂಡವಾಳ ಶಕ್ತಿಗಳು ತಾವು ಹೂಡುತ್ತಿರುವ ಬಂಡವಾಳವನ್ನು ಹೆಚ್ಚಾಗಿ ಸಟ್ಟಾ ವ್ಯಾಪಾರದಲ್ಲಿ ತೊಡಗಿಸುತ್ತಿರುವುದರಿಂದ, ಕೋಮು ಸಂಘರ್ಷದ ಬೆಂಕಿ ಈ ಬಂಡವಾಳವನ್ನು ಸುಡುವುದಿಲ್ಲ. ಹಾಗಾಗಿ ಬಂಡವಾಳ ಶಕ್ತಿಗಳಿಗೆ ಈಗ ಕೋಮು ಗಲಭೆಗಳ ಬಗ್ಗೆ ಹೆಚ್ಚಿನ ಆತಂಕ ಇರುವುದಿಲ್ಲ. ಹಾಗಾಗಿ ಬಂಡವಾಳಶಾಹಿಗಳು ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸುವ ಬಗ್ಗೆ ಚಿಂತಿಸುವುದಿಲ್ಲ.

ಈ ಸಂದರ್ಭದಲ್ಲಿ ದಲಿತರು ಗ್ರಹಿಸಬೇಕಾಗಿರುವುದೇನು? ಇಂದಿಗೂ ದೇಶದ ಪ್ರಮುಖ ಸಮಸ್ಯೆಯಾಗಿರುವ ಜಾತಿಯ ಪ್ರಶ್ನೆಗೆ ದಲಿತರು ಮರುಳಬೇಕಾಗಿದೆ. ಹಿಂದುತ್ವ ಶಕ್ತಿಗಳನ್ನು ಈ ನಿಟ್ಟಿನಲ್ಲಿ ಪ್ರಶ್ನಿಸಬೇಕಾಗಿದೆ. ಈ ಕಾರ್ಯವನ್ನು ದಲಿತರು ಮುಖ್ಯವಾಹಿನಿಯ ದಲಿತ ರಾಜಕೀಯ ಶಕ್ತಿಗಳ ಮೂಲಕ ಕೈಗೊಳ್ಳಬೇಕೇ ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿಯೇ ಉತ್ತರಿಸಬೇಕಾಗುತ್ತದೆ. ಏಕೆಂದರೆ ಅವಕಾಶವಾದಿ ರಾಜಕಾರಣವು ತನ್ನ ನೈತಿಕ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ದಲಿತರನ್ನು ಕೋಮುವಾದದೆಡೆಗೆ ಸೆಳೆಯುತ್ತಿರುವ ಶಕ್ತಿಗಳು ಮತ್ತು ದಲಿತರು ಕೋಮುವಾದಿಗಳೆಡೆಗೆ ಚಲಿಸುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿರುವ ಜಾಗತೀಕರಣ ಪ್ರಕ್ರಿಯೆ, ಈ ಎರಡೂ ಪ್ರಕ್ರಿಯೆಗಳನ್ನು ಎದುರಿಸಿ ಹೋರಾಟಲು ದಲಿತರಿಗೆ ಕ್ರಾಂತಿಕಾರಿ ರಾಜಕೀಯವೊಂದೇ ವರ್ಗವಾಗಿದೆ.

ಟಿಪ್ಪಣಿಗಳು

೧. ಆಂಡ್ರೆ ಬಿಟೆಲ್‌, Castes: Old and New: Essays in Social Structure and Social Stratification (ಲಂಡನ್: ಏಷ್ಯಾ ಪಬ್ಲಿಷಿಂಗ್, ೧೯೬೯)

೨. ಎಂ. ಎನ್. ಶ್ರೀನಿವಾಸ್, Collected Eassays (ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ೨೦೦೨)

೩. ಶದರ್ ಪಾಟೀಲ್, ಮಾರ್ಕ್ಸ್‌ವಾದ್ ಫುಲೆವಾದ್ ಅಂಬೇಡ್ಕರ್ ವಾದ್ (ಪೂನ, ಸುಗಾವ ೧೯೯೪)

೪. ವೈ. ಡಿ. ಫಡಕೆ (ಸಂ), ಮಹಾತ್ಮ ಫುಲೆ ಸಮಗ್ರ ವಾಗ್ಮಯ್‌(ಮುಂಬೈ: ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಸಂಸ್ಕೃತಿ ಮಂಡಲ್‌೧೯೯೧)

೫. ಗೋಪಾಲ್‌ಗುರು, Understanding Communal Riots in Maharashtra, EPW ೯೦೩ ( 8 1993)

೬. ದಿನೇಶ್‌ಥಿಟೆ, Culture Mobilisation and Politics in an Urban Setting, Ph. d. diss. Dept. Politics and Public Administration, University of Pune, 2002.

ಪರಾಮರ್ಶನ ಗ್ರಂಥಗಳು

೧. ವಿ. ಡಿ. ಸಾವರ್ಕರ್, ‘ಸಂಗೀತ್ ಉಷ್ರುಪ್’ (೧೯೨೭) ಸ್ವತಂತ್ರ ವೀರ್ ಸಾವರ್ಕರ್, ರಾಷ್ಟ್ರೀಯ ಸ್ಮಾರಕ, ಸಾವರ್ಕರ್ ಸಾಂಗಾರ್, ಸಂ. ೪ (ನವದೆಹಲಿ, ಪ್ರಭಾತ್ ಪ್ರಕಾಶನ್, ೨೦೦೦)

೨. ಗೋಪಾಲ್‌ಗುರು, Understanding Communal Riots in Maharashtra, EPW ೯೦೩ ( 8 1993)

೩. ವೈ. ಡಿ. ಫಡಕೆ (ಸಂ), ಮಹಾತ್ಮ ಫುಲೆ ಸಮಗ್ರ ವಾಗ್ಮಯ್‌ (ಮುಂಬೈ: ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಸಂಸ್ಕೃತಿ ಮಂಡಲ್‌ ೧೯೯೧)

—-
* ಹಿಂದುತ್ವ ಮತ್ತು ದಲಿತರು: ಕೋಮುವಾದಿ ರಾಜಕಾರಣ ಒಂದು ತಾತ್ವಿಕ ಪರಾಮರ್ಶೆ (ಸಂ) ಆನಂದ ತೇಲ್‌ತುಂಬ್ಡೆ, ಅನುವಾದ: ಪ್ರೊ. ಬಿ. ಗಂಗಾಧರಮೂರ್ತಿ, ಚಿಂತಕ ಪುಸ್ತಕ, ಬೆಂಗಳೂರು ೪೧, ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಮತ್ತು ಅನುವಾದಕರಿಗೆ ವಂದನೆಗಳು (ಸಂ)