ಸಾಂಸ್ಕೃತಿಕ ಬಿಕ್ಕಟ್ಟುಗಳು

ಭಾರತದ ಸಾಮಾಜಿಕ ಪದ್ಧತಿಯ ಪ್ರಧಾನ ಲಕ್ಷಣ ಎಂದರೆ ಜಾತಿ. ಇದು ಸಾಮಾಜಿಕ ವ್ಯವಸ್ಥೆಗೆ ಅಡಿಪಾಯವಷ್ಟೇ ಅಲ್ಲ, ಸಾಮಾಜಿಕ ಸಂಸ್ಥೆಯಾಗಿ ಬಲಗೊಂಡು ಪ್ರಾಚೀನ ಕಾಲದಿಂದ ಇಂದಿನ ಆಧುನಿಕ ಕಾಲದವರೆಗೂ ಮುಂದುವರೆಯುತ್ತದೆ. ಜಾತಿ ಎಂದರೆ ಆಳುವ ವರ್ಗಗಳು ಶ್ರಮ, ಶೋಷಣೆಗೆ ನಿರ್ಮಿಸಿಕೊಂಡ ಕೆಟ್ಟ ವ್ಯವಸ್ಥೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪ್ರಾಚೀನ ಕಾಲದಿಂದ ಇಂದಿನ ಆಧುನಿಕ ಕಾಲದವರೆಗೂ ದುಡಿಯುವ ಸಮೂಹಗಳನ್ನು ಶೋಷಿಸುವ ಹಾಗೂ ದಮನಿಸುವ ವಿಧಾನಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಆಧುನಿಕ ಸನ್ನಿವೇಶಕ್ಕೆ ಹೋಲಿಸಿ ಹೇಳುವುದಾದರೆ ಪೂಜಾರಿಯ ಸ್ಥಳದಲ್ಲಿ ಪುರೋಹಿತ, ಪಟೇಲನ ಸ್ಥಳದಲ್ಲಿ ಪೊಲೀಸ್, ವರ್ತಕನ ಜಾಗದಲ್ಲಿ ಜಾಗತೀಕರಣ, ಜಮೀನುದಾರರ ಜಾಗದಲ್ಲಿ ಖಾಸಗೀಕರಣಗಳು ಬಂದು ಕೂತಿವೆ. ಯಾವ ಹಾವಾದರೇನು ವಿಷವೊಂದು ಎಂಬಂತೆ ವೈರಿ ಯಾರಾದರೇನು ಅವರೆಲ್ಲ ಒಂದೆ ಎನ್ನುವ ಸಂದರ್ಭದಲ್ಲಿ ಇಂದು ದಲಿತರು ಜೀವನ ಸಾಗಿಸಬೇಕಾಗಿದೆ.

ಮನುಷ್ಯ ಪ್ರಾಣಿ ಪ್ರಪಂಚದಿಂದ ಬೇರ್ಪಟ್ಟು ನಂತರ ಸಮಾಜದ ಅಭಿವೃದ್ದಿ ಕ್ರಮಗಳನ್ನು ನಾವು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಹಾಗೂ ಪರಿಶೀಲಿಸಿದಾಗ ಮಾತ್ರ “ಜಾತಿ-ವರ್ಗ” ಪ್ರಶ್ನೆ ಕುರಿತು ಒಂದು ಸ್ಪಷ್ಟವಾದ ಅಭಿಪ್ರಾಯ ಅಥವಾ ನಿಲುವು ತೆಗೆದುಕೊಳ್ಳಲು ಸಾಧ್ಯವಾಗಬಹುದು. ಜಾತಿ, ವರ್ಗ ಸಮಾಜದ ಬೆಳವಣಿಗೆಗೆ ರಾಜ್ಯದ (ಪ್ರಭುತ್ವ) ಉಗಮ, ಉಳಿಗಮಾನ್ಯ ಉತ್ಪಾದನಾ ವಿಧಾನದ ಬೆಳವಣಿಗೆ ಹಾಗೂ ನಿರಂತರವಾದ, ಆದರೆ ತಮ್ಮದೇ ರೂಢಿ ಆಚರಣೆಗಳನ್ನು ಶೋಷಣಾ ವ್ಯವಸಾಯದ ಆರ್ಥಿಕತೆಯೊಂದಿಗೆ ನಿರ್ಬಂಧಿತವಾಗಿ ಅಂತರ್ಗತ ಮಾಡಿಕೊಂಡಿರುವುದರೊಂದಿಗೆ ಬೇರ್ಪಡಿಸಲಾರದಂತೆ ಬೆಸೆದುಕೊಂಡಿದೆ.

ಅಂಬೇಡ್ಕರ್ ಜಾತಿ ಕುರಿತು

A reformer rebuilds the old structure, A revolutionary blows up the ond structure and builds a new one ಎಂದು ಅಭಿಪ್ರಾಯಪಡುತ್ತಾರೆ.

ಪರಿಹಾರ ರೂಪವಾಗಿ ಜಾತಿ ಕುರಿತು ಇದ್ದುದ್ದು-ಅದನ್ನು ನಿರ್ಮೂಲನ ಮಾಡುವ ತೀವ್ರ ಹಠದ ಕಡೆಗೆ ಹೊರತು, ಅದನ್ನು ಸುಧಾರಿಸುವುದರ ಕಡೆಗೆ ಅಲ್ಲ ಎಂದರು. ಜಾತಿಯ ಭೂತವನ್ನು ಕಿತ್ತೆಸೆಯಲು ಜೀವನದುದ್ದಕ್ಕೂ ಹೋರಾಟ ಕೈಗೊಂಡರು. ಭಾರತದ ಇತಿಹಾಸದಲ್ಲಿಯೇ ವರ್ಗ-ಜಾತಿಯನ್ನು-ಅದರಲ್ಲಿರುವ ಕರಾಳ ಮುಖವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜಾತಿಯನ್ನು-ಜಾತಿಗೆ ಸಂರಕ್ಷಕವಾಗಿ ನಿಂತಿರುವ ಹಿಂದೂ ಧರ್ಮವನ್ನು ಕಟುವಾಗಿ ಪರೀಕ್ಷೆಗೆ ಒಳಪಡಿಸಿದವರು. ಇದರ ಮೂಲಕ ಭಾರತೀಯ ಸಮಾಜವನ್ನು ಮುಖಾ-ಮುಖಿಯಾಗುವಂತೆ ಮಾಡಿದರು.

ಭಾರತೀಯ ಹಿಂದೂ ಸಮಾಜದಲ್ಲಿ ಜಾತಿ ಎನ್ನುವುದು ಒಂದು ಕೋಟೆ. ಜಾತಿ ಎನ್ನುವುದು ಒಂದು ಪರಿವೇಷ್ಟಿತ ವರ್ಗ, ಜಾತಿ ಎನ್ನುವುದು ಒಂದು ಪೂರ್ವ ನಿಶ್ಚಿತ ಬದುಕಿನ ವಿಧಾನ. ಭಾರತದಲ್ಲಿ ಜಾತಿ ಇರುವವರೆಗೂ ಹಿಂದೂಗಳೂ ಅಂತರ್ಜಾತಿ ವಿವಾಹವಾಗಲು ಅಥವಾ ಹೊರಗಿನವರೊಂದಿಗೆ ಸಾಮಾಜಿಕ ಸಂಬಂð ಹೊಂದಲು ಅಥವಾ ಹಿಂದೂಗಳು ಪ್ರಪಂಚದ ಬೇರೆ ಭಾಗಗಳಿಗೆ ವಲಸೆ ಹೋಗಲು ಸಾಧ್ಯವಿಲ್ಲ. ಭಾರತದ ಜಾತಿಯು ಒಂದು ಲೋಕ ಸಮಸ್ಯೆಯಾಗಿ ಪರಿಣಿಸುತ್ತದೆ. ಏಕೆಂದರೆ ಈ ಹಂತದಲ್ಲಿ ಜಾತಿ ಸಮಸ್ಯೆಯೆನ್ನುವುದು ಜಗತ್ತಿನ ಯಾವ ದೇಶಗಳಲ್ಲೂ ಕಾಣದೆ ಭಾರತಕ್ಕೆ ವಿಶೇಷವಾಗಿ ತಗುಲಿರುವ ಪಾಪವೆಂದು ನಿಖರವಾಗಿ ಹೇಳಬಹುದು.

ಜಾತಿ ಎನ್ನುವುದು ಸಮಾಜದೊಳಗೆ ಪ್ರತ್ಯೇಕಗೊಂಡ ವಿಭಿನ್ನವಾದ ವಿಶೇಷ ಘಟಕ. ಅದು ಇನ್ನೊಂದು ಘಟಕದೊಂದಿಗೆ ಯಾವುದೇ ಸಂಬಂಧವನ್ನು ನಿರಾಕರಿಸುತ್ತದೆ. ಒಟ್ಟಿಗೆ ಊಟ ಮಾಡುವಂತಿಲ್ಲ. ವಿವಾಹವಾಗುವಂತಿಲ್ಲ. ಕಸುಬನ್ನು ಜೊತೆಯಲ್ಲಿ ಮಾಡುವಂತಿಲ್ಲ. ಹೀಗೆ ಅಡ್ಡ ಗೋಡೆಗಳು ನಿರ್ಮಾಣವಾಗಿ ಬಿಟ್ಟಿವೆ. ಜಾತಿಗಳು ಮತ್ತೊಂದು ಜಾತಿಯಾಗಿ ಉತ್ಪತ್ತಿಯಾಗಿ ಭಾರತದ ತುಂಬಾ ಈ ಜಾತಿ-ಉಪಜಾತಿಗಳೇ ತುಂಬಿ ಹೋಗಿವೆ. ಭಾರತದಲ್ಲಿ ಹೀಗೆ ಜಾತಿಗಳು ಒಡೆದು ಹೋಳಾಗಿ ಹಬ್ಬುತ್ತಾ ಹೋಗುವ ದ್ವಿಗುಣಗಳೇ ಇಂದಿನ ಆಧುನಿಕ ಕಾಲದಲ್ಲಿ ಸಮಾಜದ ಮುಂದಿರುವ ಸವಾಲುಗಳಾಗಿ ಪರಿಣಮಿಸಿವೆ.

೧. ಕಸುಬು

೨. ಬುಡಕಟ್ಟು ಜನಾಂಗದ ಸಂಘಟನೆಯ ಪಳೆಯುಳಿಕೆಗಳು

೩. ಹೊಸ ನಂಬಿಕೆಯ ಉದಯ

೪. ಅಂತರ್ಜಾತಿಯ ಸಂತಾನ

೫. ವಲಸೆ

ಈ ಕಾರಣಗಳಿಂದ ಜಾತಿಗಳು ಅಸಂಖ್ಯಾತವಾಗಿ ಸೃಷ್ಟಿಯಾಗುತ್ತ ಬೆಳೆದಿವೆ ಎಂದು ಚಿಂತಕರು ಹೇಳುತ್ತಾರೆ. ಅಂಬೇಡ್ಕರ್ ಜಾತಿಗಳು ಮನುವಿಗಿಂತ ಮೊದಲಿದ್ದವು ಎನ್ನುತ್ತಾರೆ. ಆರಂಭದಲ್ಲಿದ್ದ ಜಾತಿಯ ವರ್ಗಗಳೆಂದರೆ.

೧. ಬ್ರಾಹ್ಮಣರು ಅಥವಾ ಪುರೋಹಿತವರ್ಗ

೨. ಕ್ಷತ್ರಿಯರು ಅಥವಾ ಸೈನಿಕ ವರ್ಗ

೩. ವೈಶ್ಯರು ಅಥವಾ ವರ್ತಕ ವರ್ಗ

೪. ಶೂದ್ರರು ಮತ್ತು ಕಸುಬುದಾರರು- ಮುಂದೆ ಈ ವರ್ಗಗಳ ನಡುವೆ ಸಂಕರಗೊಂಡ ಜನ ಅಥವಾ ಯುದ್ಧದಲ್ಲಿ ಸೆರೆ ಸಿಕ್ಕವರು ‘ಪಂಚಮ’ ಅಥವಾ ‘ಅಸ್ಪೃಶ್ಯ’ರಾಗಿರಬಹುದು ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇಂಥ ಜಾತಿ ವ್ಯವಸ್ಥೆಯನ್ನು ಸೈದ್ಧಾಂತಿಕಗೊಳಿಸಿದವನು, ಕಟ್ಟುನಿಟ್ಟಿನ ಅಲಿಖಿತ ಸಂವಿಧಾನವನ್ನು ರೂಪಿಸಿದವನು ‘ಮನು’ ಎಂದು ಅಂಬೇಡ್ಕರ್ ಧೈರ್ಯವಾಗಿ ಹೇಳಿದ್ದಾರೆ. ಒಂದರ್ಥದಲ್ಲಿ ಅಂಬೇಡ್ಕರ್ ಅವರಿಗೆ ಮನುವನ್ನು ಕಂಡರೆ ಕೆಂಡಂತಹ ಕೋಪ. ಭಾರತೀಯ ಸಮಾಜದ ಕಾನೂನು ಜನಕನಾದ ಮನು, ಈ ವ್ಯಕ್ತಿ ಬದುಕಿದ್ದು ನಿಜವೇ ಆಗಿದ್ದರೆ ನಿಶ್ಚಿಲವಾಗಿಯೂ ಆತ ನಿರ್ಲಜ್ಯ ವ್ಯಕ್ತಿಯೇ ಸರಿ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರು ಮನುಸ್ಮೃತಿಯು ಅಸಮಾನತೆಯ ವಿಚಾರಗಳನ್ನು ಪ್ರತಿಪಾದಿಸುತ್ತದೆ ಎಂದು ೨೫. ೧೨. ೧೯೨೭ರಂದು ಸಾರ್ವಜನಿಕವಾಗಿ ಅದನ್ನು ಸುಟ್ಟು ಹಾಕಿದರು.

ಜಾತಿ ವ್ಯವಸ್ಥೆಯನ್ನು ಕುರಿತು ಅಂಬೇಡ್ಕರ್ ತಮ್ಮ ಅಧ್ಯಯನಗಳಲ್ಲಿ ೪ ಅಂಶಗಳನ್ನು ಉಲ್ಲೇಖಿಸಿರುವರು.

೧. ಹಿಂದೂ ಜನಾಂಗ ಒಂದು ಸಂಕೀರ್ಣ ರಚನೆಯಾಗಿದ್ದರೂ, ಅದರಲ್ಲೊಂದು ಆಳವಾದ ಚಿಂತನಾಕ್ರಮವನ್ನು ಉಲ್ಲೇಖಿಸಿರುವರು.

೨. ವ್ಯಾಪಕವಾದ ಸಾಂಸ್ಕೃತಿಕ ಘಟಕದ ಪ್ರತಿಯೊಂದು ಭಾಗವನ್ನು ಜಾತಿಯು ಹೆಣೆದು ಕಟ್ಟಿದೆ.

೩. ಪ್ರಾರಂಭದಲ್ಲಿದ್ದುದು ಒಂದೇ ಜಾತಿ.

೪. ಅನುಕರಣೆಯಿಂದಲೂ ಮತ್ತು ಬಹಿಷ್ಕೃರಿಸಿದ್ದರಿಂದಲೇ ವರ್ಗಗಳೇ ಜಾತಿಗಳಾಗಿ ಪರಿಣಿಸಿವೆ.

ಅನುಕರಿಸುವ ಮತ್ತು ಬಹಿಷ್ಕೃತ ಸಮೂಹವನ್ನು ಉಳಿದ ಜಾತಿಗಳು ಮತ್ತೊಂದು ಜಾತಿಯಾಗಲು ಒತ್ತಾಯಿಸುವ ಒಳಸಂಚನ್ನು ಗುರುತಿಸಬಹುದು. ಒಂದು ಹಂತದಲ್ಲಿ ಜಾತಿಯ ನೈತಿಕ, ಧಾರ್ಮಿಕ, ಸಾಮಾಜಿಕ ಸಂಹಿತೆಯನ್ನು ಗಂಭೀರವಾಗಿ ವಿರೋಧಿಸುವ ಹೊಸ ಬದಲಾವಣೆಯನ್ನು ಜಾತಿಯು ಸಹಿಸಲಾರದು. ಸಂಹಿತೆಯನ್ನು ಉಲ್ಲಂಘಿಸುವ ಧೈರ್ಯಶಾಲಿಗೆ ಜಾತಿಗಳು ದಯೆ ತೋರುವುದಿಲ್ಲ. ಈ ರೀತಿಯ ಜಾತಿಯೊಳಗಡೆ ಅಡಗಿಕೊಂಡಿರುವ ಕ್ರೌರ್ಯ ತನ್ನನ್ನು ತಾನು ಸಂರಕ್ಷಿಸಿಕೊಳ್ಳಲು ಹಲವು ಹುನ್ನಾರಗಳನ್ನು ನಿರ್ಮಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ.

೧. ಸತಿ ಪದ್ಧತಿ ಅಥವಾ ಸತಿಯನ್ನು ಪರಿಯೊಂದಿಗೆ ಸುಟ್ಟು ಬಿಡುವುದರಿಂದ ಜಾತಿ ಸಂಕಟವನ್ನು ತಪ್ಪಿಸಲೆತ್ನಿಸುತ್ತದೆ.

೨. ವಿಧವೆ ಮರುಮದುವೆಯಾಗದಂತೆ ಆಕೆಗೆ ಕಠೋರ ರೀತಿಯ ಆಚರಣೆ ಹೇರುವುದು.

೩. ಬಾಲ್ಯ ವಿವಾಹ ಮಾಡಿ ಬಿಡುವುದು.

“ಜಾತಿ ನಿರ್ಮೂಲನೆ” ಎಂಬ ಪುಸ್ತಕವನ್ನು ಬರೆದ ಡಾ. ಅಂಬೇಡ್ಕರ್ ಅವರು ಅದರಲ್ಲಿ ಗಾಂಧೀಜಿ ಹಾಕಿಕೊಂಡ ಹರಿಜನೋದ್ಧಾರ ಕಾರ್ಯಕ್ರಮಗಳ ಉದ್ದೇಶವನ್ನು ಪ್ರಶ್ನಿಸುತ್ತಾರೆ. ಹಾಗೆಯೇ ಅಸ್ಪೃಶ್ಯರನ್ನು “ಹರಿಜನ” ಎಂಬ ಹೆಸರಿನಿಂದ ಸಂಭೋಧಿಸುವುದನ್ನು ಖಂಡಿಸುತ್ತಾರೆ. ಅಸ್ಪೃಶ್ಯರಿಗೆ –“ಹರಿಜನ” ಎನ್ನುವ ಪದ ಕಂಡರಾಗದು. ಅದರ ವಿರುದ್ಧ ಅನೇಕರು ಆಕ್ಷೇಪಣೆಯೆತ್ತಿದ್ದಾರೆ. ಮೊದಲನೆಯ ಆಕ್ಷೇಪವೆಂದರೆ ಇದರಿಂದ ಅಸ್ಪೃಶ್ಯರ ಸ್ಥಿತಿಯಂತೂ ಸುಧಾರಣೆಯಾಗಿಲ್ಲ ಎಂಬುವುದಾಗಿತ್ತು. ಹೊಸ ಹೆಸರು ಕೊಟ್ಟಾಕ್ಷಣೆ ಅಸ್ಪೃಶ್ಯತೆಯ ಶಾಪದಿಂದ ಅವರು ಮುಕ್ತರಾಗಿಲ್ಲ. ಹಳೆಯ ಹೆಸರಿದ್ದಾಗ ಅವರು ಎಷ್ಟು ನಿಕೃಷ್ಟರಾಗಿದ್ದರೆ, ಎರಡನೆಯದಾಗಿ ಅವರಿಗೆ ‘ಅಸ್ಪೃಶ್ಯ’ ಎಂದು ಕರೆಸಿಕೊಳ್ಳುವುದೇ ಇಷ್ಟ. ಅವರ ವಾದವೇನೆಂದರೆ ಕೆಟ್ಟದ್ದನ್ನು ಅದರ ಹೆಸರು ಹಿಡಿದು ಕರೆದರೇ ಸರಿ. ರೋಗಿಗೆ ತನ್ನ ಕಾಯಿಲೆ ಏನೆಂದು ತಿಳಿದರೇ ಉತ್ತಮ. ಅನ್ಯಾಯ ಇದ್ದಷ್ಟು ಕಾಲ ಅದನ್ನು ನಿವಾರಿಸುವ ಒಳ್ಳೆ ಪ್ರಯತ್ನಗಳನ್ನು ಮಾಡುತ್ತಿರಬಹುದು. ಒಬ್ಬ ಗುಲಾಮನನ್ನು ಪದೇ ಪದೇ ಗುಲಾಮ ಎಂದರೆ ಅವನಿಗೆ ಆ ಗುಲಾಮ ಪದದ ಅರ್ಥ ಗೊತ್ತಾಗುತ್ತದೆ ಎಂಬುವುದು ಅಂಬೇಡ್ಕರ್ ಅವರ ಸಂದೇಶವಾಗಿತ್ತು. ಇದ್ದ ವಿಷಯಗಳನ್ನು ಬಚ್ಚಿಟ್ಟರೆ ವಾಸ್ತವದ ಬಗ್ಗೆ ತಪ್ಪು ಅಭಿಪ್ರಾಯಗಳು ಮೂಡಬಹುದು. ಹೊಸ ಹೆಸರಿನಿಂದ ಸತ್ಯವನ್ನು ಬಚ್ಚಿಡಲು ಪ್ರಯತ್ನಿಸಿದರೆ ಅದು ಅಸ್ಪೃಶ್ಯತಿಗೆ ಎಸಗಿದ ಅನ್ಯಾಯ ಮತ್ತು ಹಿಂದೂಗಳಿಗೆ ತಕ್ಕುದಲ್ಲದ ಹೊಗಳಿಕೆ ಸಿಕ್ಕಂತೆಯೇ ಸರಿ. ಮೂದನೆಯದಾಗಿ-‘ಹರಿಜನ’ ಎನ್ನುವ ಹೆಸರು ದಯೆ, ಅನುಕಂಪಗಳನ್ನು ಸೂಚಿಸುವಂಥಾದ್ದು. ‘ಅಸ್ಪೃಶ್ಯ’ ಎನ್ನುವುದು ಒಂದು ಕೆಟ್ಟ ಹೆಸರು. ಅದರಲ್ಲಿ ನಿಷೇಧ, ತಿರಸ್ಕಾರ ಮತ್ತು ದುರ್ವಾಸನೆಗಳಿವೆ. ‘ಅಸ್ಪೃಶ್ಯ’ ಎಂದ ಕೂಡಲೇ ಅವನನ್ನು ಕುರಿತ ಒಬ್ಬ ಹಿಂದೂ ವ್ಯಕ್ತಿಯ ಧೋರಣೆ ಖಚಿತಗೊಂಡಿರುತ್ತದೆ ಎಂದು ಗಾಂಧಿಯವರನ್ನು ತರಾಟೆಗೆ ತೆಗೆದುಕೊಳ್ಳುವ ಅಂಬೇಡ್ಕರ್, ಅಸ್ಪೃಶ್ಯರು ದೇವರ ಮಕ್ಕಳಾದರೆ – ಸ್ಪೃಶ್ಯರು ರಾಕ್ಷಸರ ಮಕ್ಕಳೇ? ಎಂದು ಪ್ರಶ್ನಿಸಿದರು. ಅಸ್ಪೃಶ್ಯ ಗಣ್ಯರೆಲ್ಲರೂ ಈ ಹೆಸರಿನಲ್ಲಿ ಸೂಚಿತವಾಗಿರುವ ಅವಮಾನಕರ ಅರ್ಥಗಳನ್ನು ವಿರೋಧಿಸಿದ್ದಾರೆ. ಈ ಹೊಸ ಹೆಸರಿನ ಬಗ್ಗೆ ಅಸ್ಪೃಶ್ಯರಿಗೆ ಎಷ್ಟು ಕಾನೂನಿನ ಸಮರ್ಥನೆ ನೀಡಲು ಕಾಂಗ್ರೆಸ್ ಸರ್ಕಾರ ಮಸೂದೆ ಮಂಡಿಸಿದಾಗ ಎಲ್ಲಾ ಅಸ್ಪೃಶ್ಯ ಸದಸ್ಯರೂ ಸಭಾತ್ಯಾಗ ಮಾಡಿ ವಿರೋಧ ಸೂಚಿಸಿದರು. ನರಸಿ ಮೇಹ ಎಂಬ ಗುಜರಾತಿ ಕವಿ ಮೊದಲು ಹರಿಜನ ಎಂಬ ಪದವನ್ನು ಬಳಸಿದ ನಂತರ ಗಾಂಧೀಜಿ ಅದನ್ನು ಪ್ರಚಾರಕ್ಕೆ ತಂದರು.

ಕಾಂಗ್ರೆಸ್‌ ಹಾಗೂ ಗಾಂಧೀಜಿ ಅವರು ಹಮ್ಮಿಕೊಂಡಿದ್ದ ಹರಿಜನೋದ್ಧಾರ ಕಾರ್ಯಕ್ರಮಗಳು ಕೇವಲ ಮೇಲ್ವರ್ಗದವರು ಹಮ್ಮಿಕೊಂಡಿರುವ ಮೇಲಿನ ಹಂತದ ಉದ್ದೇಶಗಳಾಗಿದ್ದು, ಅವುಗಳಿಂದ ಹರಿಜನರ (ಅಂಬೇಡ್ಕರ್ ಇವರನ್ನು ನಿಮ್ನ ವರ್ಗದವರು ಎಂದು ಸಂಬೋಧಿಸುತ್ತಾರೆ) ಬಿಡುಗಡೆ ಸಾಧ್ಯವಾಗಲಿಲ್ಲವೆಂದು ಹೇಳಬಹುದು. ಆಶ್ಚರ್ಯವೆಂದರೆ ಅಂಬೇಡ್ಕರ್ ಅವರು ಹಾಕಿಕೊಂಡಿದ್ದ ದಲಿತರ ದೇವಾಲಯ ಪ್ರವೇಶ. ಮಹಾಡ್ ಕೆರೆಯ ನೀರು ಸ್ವಾಕೀರ ಮೊದಲಾದ ಕಾರ್ಯಕ್ರಮಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದವರು ಕಾಂಗ್ರೆಸ್ಸಿಗರೇ ಆಗಿದ್ದರು. ಈ ಸಂದರ್ಭದಲ್ಲಿ ಅವರು ಗಾಂಧೀಜಿಯವರಿಗೆ ಒಂದು ಉಗ್ರವಾದ ಪತ್ರ ಬರೆದಿರುವುದು ಆಧಾರಗಳಿಂದ ಕಂಡುಕೊಳ್ಳಬಹುದು. ಗಾಂಧೀಜಿಯ ಕಾರ್ಯಕ್ರಮಗಳು ಎಷ್ಟೊಂದು ನಿರುಪಯೋಗಿ ಎಂಬುದನ್ನು ಇಂದು ಚರ್ಚೆಗೆ ಎಡೆಮಾಡುವುದಾದರೆ

೧. ಜಾತಿ ಪದ್ಧತಿ ಹಿಂದೂಗಳನ್ನು ಹಾಳುಗೆಡವಿದೆ.

೨. ಚಾತುರ್ವಣ್ಯದ ಮೇರೆಗೆ ಹಿಂದೂ ಸಮಾಜವನ್ನು ಪುನರ್ ಸಂಘಟಿಸುವುದು ಅಸಾಧ್ಯ.

೩. ಇಂಥ ಸಂಘಟನೆ ಅಪಾಯಕಾರಿ, ಏಕೆಂದರೆ ವರ್ಣ ವ್ಯವಸ್ಥೆ ಸಾಮಾನ್ಯ ಸಮೂಹಕ್ಕೆ ಜ್ಞಾನ ಸಂಪಾದನೆ ಹಾಗೂ ಶಾಸ್ತ್ರಭ್ಯಾಸದ ಅವಕಾಶವನ್ನು ನಿರಾಕರಿಸುವುದರಿಂದ ಜನ ಸಾಮಾನ್ಯರ ಅವನತಿಗೆ ಕಾರಣವಾಗುತ್ತದೆ.

೪. ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವ ತತ್ವಗಳನ್ನೊಳಗೊಂಡ ಧರ್ಮವನ್ನು ಆಧರಿಸಿಯೇ ಹಿಂದೂ ಸಮಾಜ ಪುನರ್ ನಿರ್ಮಾಣವಾಗತಕ್ಕದ್ದು.

೫. ಈ ಗುರಿಯನ್ನು ಸಾಧಿಸಬೇಕಾದರೆ ವರ್ಗ ಮತ್ತು ಜಾತಿಗಳ ಕುರಿತಾದ ಗೌರವ ಭಾವನೆ ನಷ್ಟವಾಗತಕ್ಕದ್ದು.

೬. ಶಾಸ್ತ್ರಗಳು ದೇವವಾಣಿಯೆಂಬ ಭಾವನೆಯನ್ನು ನಾಶಗೊಳಿಸುವುದರಿಂದ ಮಾತ್ರ ಜಾತಿ ವರ್ಣಗಳ ಮೇಲಿನ ಗೌರವ ನಾಶವಾಬಲ್ಲದು.

ಅಸ್ಪೃಶ್ಯತೆ-ಅಸ್ಪೃಶ್ಯರನ್ನು ವಿರೋಧಿಸುವುದಕ್ಕಿಂತ ಅವನ್ನು ರೂಪಿಸಿದ ವೇದ, ಸ್ಮೃತಿ ಹಾಗೂ ಅವನ್ನು ಚಾಚುತಪ್ಪದೆ ಆಚರಣೆಗೆ ತಂದ ಬ್ರಾಹ್ಮಣೇತರ ಸವರ್ಣೀಯ ಹಿಂದೂಗಳನ್ನು, ಶಾಸ್ತ್ರಗ್ರಂಥಗಳನ್ನು, ಪುರೋಹಿತಶಾಹಿಯನ್ನು ತೀವ್ರವಾಗಿ ಖಂಡಿಸಬೇಕಾಗುತ್ತದೆ ಎಂಬ ಗಂಭೀರವಾದ ಸವಾಲು ಇಂದಿನ ದಲಿತರ ಮುಂದಿದೆ. ದಲಿತರು ಇಂದು ಎದುರಿಸಬೇಕಾದ ವೈರಿಗಳು ಜಾತಿನಿಷ್ಠ ಸಮಾಜದಲ್ಲಿದ್ದರೆ ಅವರಿಗೆ ಈ ಧರ್ಮವನ್ನು ಬೋಧಿಸಿದ ಶಾಸ್ತ್ರಗಳೇ ಶತ್ರು. ಶಾಸ್ತ್ರಗಳಲ್ಲಿ ಜನರಿಗಿರುವ ನಿಷ್ಟೆಯನ್ನು ನಾಶಪಡಿಸುವುದೇ ನಿಜವಾದ ಮಾರ್ಗ. ಜಾತಿ ಬಹಳ ಪವಿತ್ರವೆಂಬ ಭ್ರಾಂತಿ ಹುಟ್ಟಿದ್ದು ನಿಮ್ಮ ಧರ್ಮದಿಂದ ಎಂಬ ಮಾತುಗಳನ್ನು ಹಿಂದೂಗಳಿಗೆ ಹೇಳುವ ಧೈರ್ಯ ದಲಿತರಲ್ಲಿ ಬರಬೇಕು. ಧರ್ಮ ಗುರುವಾಗತಕ್ಕಂತಹ ಮನುಷ್ಯ ಕ್ರಾಂತಿಕಾರನಲ್ಲ. ಧರ್ಮ ಗುರುವಾಗಿರುವ ಮನುಷ್ಯ ಕ್ರಾಂತಿಕಾರನಾಗ ಬಯಸುವುದಿಲ್ಲ. ಇಂದು ಮಾರ್ಮಿಕವಾಗಿ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಜಾತಿಯ ಮಠಗಳು ಜಾತಿಯನ್ನು ಪೋಷಿಸುತ್ತವೆ ಹೊರತು ಜಾತಿಯನ್ನು ವಿನಾಶಗೊಳಿಸ ವುದಿಲ್ಲವೆಂಬ ವಿಚಾರವನ್ನು ಗಂಭಿರವಾಗಿ ಚಿಂತಿಸುವ ಜರೂರು ದಲಿತರ ಮೇಲಿದೆ.

ಜಾತಿಯೆಂಬುದನ್ನು ಭೇದಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲಿ ಎಂಬುದನ್ನು ಹಾಗೂ ಅದು ಅಬಾಧಿತವಾಗಿ ತಲೆಮಾರುಗಳಿಗೆ ಮುಂದುವರೆದುಕೊಂಡು ಹೋಗಲು ಪ್ರಬಲವಾದ ಕಾರ್ಯತಂತ್ರಗಳನ್ನು ರೂಢಿಸಿಕೊಮಡಿದೆ ಎಂಬುದನ್ನು ಇಂದಿನ ಅಸ್ಪೃಶ್ಯರು ತಿಳಿಯಬೇಕಾಗಿದೆ. ಊಟ, ವಾಸಸ್ಥಾನ, ಮದುವೆ, ಧಾರ್ಮಿಕ ವಿಧಿ ವಿಧಾನ, ಕಸುಬು, ವೇಷಭೂಷಣ ಹೀಗೆ ಇಡೀ ಬದುಕನ್ನು ನಿಯಂತ್ರಿಸುವ ಈ ಜಾತಿಯು ಕಟ್ಟಿಕೊಡುವ ಕೋಟೆ ದುರ್ಬಲವಾಗಿದೆ ಎನ್ನಬಹುದು. ಬುದ್ಧಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಈ ಹಂತದಲ್ಲಿ ಅಂಬೇಡ್ಕರ್ ಅವರು ಮಾತು ಪ್ರಸ್ತುತವೆನಿಸುತ್ತದೆ. ಒಂದು ಮಾತನ್ನು ನೆನಪಿಡಿ, ಈ ದುರ್ಗದ ಒಳಗೆ ಬುದ್ಧಿವಂತ ವರ್ಗದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ನೀತಿಗೂ ಬುದ್ದಿಗೂ ಅವಕಾಶವಿಲ್ಲದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ಸಿಡಿಮದ್ದು ಹಾಕಿ ಸುಡಬೇಕು ಎಂಬ ಆಕ್ರೋಶವನ್ನು ಜಾತಿಯ ವಿರುದ್ಧ ಪರಿಭಟಿಸಬಹುದಾಗಿದೆ. ಅಂಬೇಡ್ಕರ್ ಸುಮಾರು ಆರು ದಶಕಗಳ ಹಿಂದೆಯೇ ಹೇಳಿದಂತೆ, ಯಾವುದೂ ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಯಾವುದೂ ಸನಾತನವಲ್ಲ, ಎಲ್ಲವೂ ಬದಲಾಗುತ್ತಿದೆ. ಬದಲಾವಣೆ ವ್ಯಕ್ತಿಗಳ ಮತ್ತು ಸಮಾಜ ಜೀವನದ ನಿಯಮ, ಈ ಸಾರ್ವತ್ರಿಕ ನಿಯಮಕ್ಕೆ ಯಾವೊಂದು, ಯಾರೊಬ್ಬರೂ ಹೊರತಲ್ಲ ಎಂಬುದು ಇಂದಿನ ಸಮಾಜಕ್ಕೆ ಕೈಗನ್ನಡಿಯಂತಿದೆ.

ಜಾತಿಗಳು ಇರುವಷ್ಟು ಕಾಲವೂ ಜಾತಿ ಬಹಿಷ್ಕೃತರು ಇದ್ದೇ ಇರುತ್ತಾರೆ. ಜಾತಿ ಪದ್ಧತಿಯ ವಿನಾಶಹೊಂದದ ಹೊರತು ಮತ್ತಾವುದರಿಂದಲೂ ಜಾತಿ ಬಹಿಷ್ಕೃತರ ವಿಮೋಚನೆ ಸಾಧ್ಯವಿಲ್ಲವೆಂದು ಹೇಳಬಹುದು. ಹಿಂದೂಗಳು ಪಶುಪ್ರಾಣಿಗಳನ್ನು, ನಾಯಿಯನ್ನು ಕೂಡ ತಮ್ಮ ಮನೆಯೊಳಕ್ಕೆ ಕರೆದುಕೊಳ್ಳಬಲ್ಲರು, ಆದರೆ ತಮ್ಮದೇ ರೂಪದ ಮನುಷ್ಯರನ್ನು ಮನುಷ್ಯರಂತೆ ಕಾಣದಾದರು. ಅಸ್ಪೃಶ್ಯರನ್ನು ಕುರಿತು ಹಿಂದೂಗಳಲ್ಲಿ ಅಸಾಧಾರಣವಾದ ಕ್ರೌರ್ಯ ತುಂಬಿಕೊಂಡಿದೆ. ಜಾತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಎದುರಾದಲ್ಲಿ ಅದು ಸಮಾಜ ವಿರೋಧಿಯೂ ಆಗಿ ಕೆಲಸ ಮಾಡಬಲ್ಲದು. ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದುವು ನೀಚನಾಗಿದ್ದಾನೆ. ನೀಚತನ ಕ್ರೌರ್ಯ-ಕ್ರೂರಿಯ ವಂಚನೆಗಿಂತ ಕೆಟ್ಟದ್ದು. ಮಹಮ್ಮದೀಯರಿಂದ ಹಾಗೂ ಸಿಖ್‌ರಿಂದ ಹಿಂದೂವು ಭಿನ್ನವಾಗಿರುವುದು ತನ್ನ ಅಂಜುಗುಳಿತನ ಅಥವಾ ಹೇಡಿತನದಿಂದ. ಹಿಂದುವು ಆತ್ಮರಕ್ಷಣೆಗಾಗಿ ಠಕ್ಕತನವನ್ನು, ದ್ರೋಹವನ್ನು ಮಾಡುತ್ತಾನೆ. ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಹೊಣೆಗಾರಿಕೆ ಅವನ ಜಾತಿಗೆ ಸೀಮಿತವಾದವು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. ಇದು ಇಂದಿನ ಜಾಗತಿಕ ಸನ್ನಿವೇಶದಲ್ಲಿಯೂ ಬೆಳೆದುಕೊಂಡು ಬರುತ್ತಿದೆ.

ಜಾತಿ ಇಷ್ಟೆಲ್ಲಾ ಅನ್ಯಾಯ ಮತ್ತು ಕೆಕಿನ ಕಾರಣವಾಗಿದ್ದರೂ, ಬಹು ಸಂಖ್ಯಾತರಾದ ಅಸ್ಪೃಶ್ಯರು ಏಕೆ ದಂಗೆ ಎದ್ದಿಲ್ಲ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬಹುದು. ಅದಕ್ಕೆ ಉತ್ತರ, ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಸಾಮಾಜಿಕ ಕ್ರಾಂತಿಗಳಾಗಿವೆ. ಭಾರತದಲ್ಲಿ ಸಾಮಾಜಿಕ ಕ್ರಾಂತಿಗಳು ಏಕೆ ನಡೆಯಲಿಲ್ಲ. ಈ ಪ್ರಶ್ನೆಗೆ ಒಂದೇ ಉತ್ತರ, ಅದೇನೆಂದರೆ ಚಾತುರ್ವರ್ಣ್ಯ ಹಾಗೂ ಊಳಿಗ ಮಾನ್ಯ ಶಾಹಿ ಪದ್ಧತಿಯ ಪರಿಣಾಮವಾಗಿ ಹಿಂದೂ ಸಮಾಜದ ಕೆಳವರ್ಗಗಳು ದಂಗೆ ಏಳಲಾರದಷ್ಟು ದುರ್ಬಲಗೊಳಿಸಲ್ಪಟ್ಟಿವೆ ಎಂಬುವುದು. ಎಲ್ಲಿಯವರೆಗೆ ಜಾತಿ ಮತ್ತು ಜಾತಿಪದ್ಧತಿಗೆ ಆಧಾರವಾಗಿರುವ, ಹಾಗೂ ಇವುಗಳನ್ನು ರಕ್ಷಿಸುವ ಊಳಿಗಮಾನ್ಯ ಪದ್ಧತಿ ಇರುತ್ತದೋ ಅಲ್ಲಿಯವರೆಗೆ ದಲಿತರಿಗೆ ಮುಕ್ತಿ ಇಲ್ಲ ಎಂದರೆ ಸತ್ಯಕ್ಕೆ ಹತ್ತಿರವಾದಂತೆ ಎನ್ನಬಹುದು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ ಬ್ರಿಟಿಷರೇ ತೊಲಗಿ ಅನ್ನುತ್ತಿದ್ದಾಗ ಅಂಬೇಡ್ಕರ್ ಅಸ್ಪೃಶ್ಯತೆ ತೊಲಗಿ-ಅಸ್ಪೃಶ್ಯತೆಯನ್ನಾಚರಿಸುವ ಹಿಂದೂಗಳೇ ತೊಲಗಿ ಎಂದು ಘರ್ಜಿಸುತ್ತಿದ್ದರು. ಈ ಮಾತುಗಳನ್ನೇ ಅವರು ತಮ್ಮ ಒಂದು ಭಾಷಣದಲ್ಲಿ ಹೀಗೆ ಹೇಳಿದ್ದಾರೆ.

You know well that the Satyagraha movement started by Gandhi was backed up by the people as it was against a foreign domination our struggle is against the mass of caste Hindus and naturally we have little support from outside. Taking these facts into consideration, I feel, we should not antogonise the Government and put it on the side of out opposition. It is not beneficial either.

ಎಂಬ ಈ ಮಾತುಗಳು ಯಾಕಾಗಿ ಅಂಬೇಡ್ಕರ್ ಬ್ರಿಟಿಷರ ಪರವಾಗಿದ್ದವು ಎಂಬುದನ್ನು ಬಹು ಸೂಚ್ಯವಾಗಿ ಹೇಳುವಂತಿದೆ. ದುರ್ಬಲಗೊಂಡಿರುವ ಅಸ್ಪೃಶ್ಯ ವರ್ಗ ಏಕಕಾಲಕ್ಕೆ ಎರಡು ವೈರಿಗಳನ್ನು ಎದುರಿಸಿ ತಾಳಳಾರದು. ಮೇಲ್ಜಾತಿ ಹಿಂದಿವಿನ ವಿರುದ್ಧ ತಮ್ಮ ಸಮರದಲ್ಲಿ ತಾವು ಬ್ರಿಟಿಷರ ವಿರೋಧಿಗಳೂ ಆದಲ್ಲಿ ತಮಗೆ ಯಾವ ಪ್ರಯೋಜನವೂ ದಕ್ಕದು. ಬ್ರಿಟಿಷರಿಗೆ ಅನುಕೂಲದಿಂದ, ಅವರ ಬೆಂಬಲದಿಂದ ಜಾತಿ ಪದ್ಧತಿಯ ವಿರುದ್ಧ ಹೋರಾಡಬಹುದೆಂದು ಅಂಬೇಡ್ಕರ್ ನಿಲುವಾಗಿತ್ತು. ಆದ್ದರಿಂದಲೇ ಬ್ರಿಟಿಷರ ಜೊತೆಗೆ ಯಾವುದೇ ಬಗೆಯ ಪ್ರಬಲ ಬೇಡಿಕೆಯನ್ನು ಮುಂದಿಡುವ ಪ್ರಶ್ನೆ ಬಂದಾಗ ಇವರು ಮಾತ್ರ ನಿಮ್ನ ವರ್ಗದವರ ಬಿಡುಗಡೆ ಕುರಿತ ಪ್ರಶ್ನೆಯನ್ನೇ ಮುಂದಿಡುತ್ತಿದ್ದರು.

ಇಂದಿಗೂ ಮುಂದಿಗೂ ಅಂಬೇಡ್ಕರ್ ಚಿಂತನೆಯ ದಲಿತ ಚಳವಳಿಯ ಸೈದ್ಧಾಂತಿಕ ಬುನಾದಿಯಾಗಿ ಕಾರ್ಯನಿರ್ವಹಿಸುತ್ತದೆ. ಜಾತಿ ವಿನಾಶ ಹೋರಾಟದ ಬೆನ್ನೆಲುಬಾಗಿ ಅವರ ಚಿಂತನೆಗಳು ನಿಂತಿವೆ. ಅವರು ಜಾತಿ ಪದ್ಧತಿಯನ್ನು ತಿರಸ್ಕರಿಸಿದರು. ಈ ವ್ಯವಸ್ಥೆಯನ್ನು ಕುರಿತಂತೆ ಅವರದು ಅತ್ಯಂತ ಕಟುವಾದ ಟೀಕೆಯಾಗಿತ್ತು. ಅವರ ವಿಚಾರಗಳು ಅತ್ಯಂತ ವೈಚಾರಿಕ ಹಾಗೂ ಪ್ರಸ್ತುತವಾಗಬಲ್ಲವು. ಆದರೆ, ಗಾಂಧೀಜಿಯವರ ಆಲೋಚನೆಯೇ ಬೇರೆಯದಾಗಿತ್ತು. ಅವರ ಪ್ರಕಾರ ಹಿಂದೂಗಳ ಮತ್ತು ಅಸ್ಪೃಶ್ಯರ ನಡುವಿನ ಜಗಳ ಒಂದು ಮನೆಯೊಳಗಿನ ದಾಯಾದಿಗಳ ಜಗಳವಿದ್ದಂತೆ. ಮೊದಲು ಹೊರಗಿನ ವೈರಿಯನ್ನು ಒಟ್ಟಿಗೆ ಸೇರಿ ಓಡಿಸೋಣ. ನಂತರ ನಮ್ಮ ಜಗಳವನ್ನು ಬಗೆಹರಿಸಿಕೊಳ್ಳೋಣ ಎಂಬುದಾಗಿತ್ತು. ಆದರೆ ಅಂಬೇಡ್ಕರ್ ಅವರು ಹೊಎಗಿನ ವೈರಿ ಇರುವುದರಿಂದ ಮತ್ತು ಅವರ ಆಗಮನದಿಂದ ನಮಗಷ್ಟು ಇಷ್ಟು ಸೌಲಭ್ಯಗಳು ದೊರೆತಿವೆ. ಅವರು ಹೋದ ಮೇಲೆ ಪುನಃ ಜಾತಿ ಹಿಂದೂಗಳ ಕೈಗೆ ಅಸ್ಪೃಶ್ಯರು ಸಿಕ್ಕು ಪುನಃ ಯಥಾಸ್ಥಿತಿ ಮುಂದುವರಿಯುತ್ತದೆ. ಆದ್ದರಿಂದ ನಮಗೆ ದೇಶದ ಸ್ವಾತಂತ್ರ್ಯಕ್ಕಿಂತ ನಮ್ಮ ಸ್ವಾತಂತ್ರ್ಯ ಮುಖ್ಯ ಎಂದು ಪ್ರತಿಪಾದಿಸಿದ್ದರು.

Ambedkar was on the dilemma. Had he opposed the Britisher statesmen, and taken sides with Gandhi, he would ont have gained anything for his people from Britishers, and Gandhi would not have given his people any time more than words of blessings and hollow platitudes.

ಎಂದು ನಂಬಿದ್ದರು. ಅಂಬೇಡ್ಕರ್ ಇಂಥ ಗೊಂದಲಕ್ಕೆ ಸಿಕ್ಕಿ ಬಿದ್ದಿದ್ದರ ಚಾರಿತ್ರಿಕ ಅನಿವಾರ್ಯತೆ ಇವತ್ತು ಬಹು ಜನರಿಗೆ ಅರ್ಥವಾಗುತ್ತಿದೆ. ಇದರಲ್ಲಿ ಅಂದು ಅಂಬೇಡ್ಕರ್ ಅವರನ್ನೇ ದೇಶದ್ರೋಹಿ ಎಂದು ಕರೆದವರೂ ಸೇರಿದ್ದಾರೆ. ಭಾರತದ ಚರಿತ್ರೆಯಲ್ಲಿಯೇ ಭಾರತದ ಜಾತಿ ವ್ಯವಸ್ಥೆಯನ್ನು ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿದವರು, ಅದರ ವಿರುದ್ಧ ಹೋರಾಡಿದವರು ಮತ್ತೊಬ್ಬರು ಇರಲಿಕ್ಕಿಲ್ಲ. ಏಕೆಂದರೆ ಉಳಿದ ಸಮಾಜ ಸುಧಾರಕರು ಜಾತಿ ವ್ಯವಸ್ಥೆಯನ್ನು ವಿರೋಧಿ, ಅದರಲ್ಲಿ ಬದಲಾವಣೆ ತರಲು ಹೋರಾಟ ಮಾಡಿರಬಹುದು. ಆದರೆ ಅಂಬೇಡ್ಕರ್ ರ ಹಾಗೆ ಜಾತಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ವಿಶ್ಲೇಷಿಸಿ ವಿವರಿಸಿದವರಿಲ್ಲ. ಈ ಹಂತದಲ್ಲಿ ಅಂಬೇಡ್ಕರ್ ಅವರಿಗೆ ಜಾತಿ ಒಂದು ದೊಡ್ಡ ಒಗಟಿನ ಹಾಗೆ ಕಂಡಿದೆ. ಈ ಒಗಟನ್ನು ಬಿಡಿಸುವ ನಿರಂತರ ಪ್ರಯತ್ನಕ್ಕೆ ತಾವು ಹಾಗೂ ತನ್ನ ಜನರನ್ನು ಹೋರಾಟದೊಡನೆ ಮುಖ ಮಾಡುವಂತೆ ಮಾಡುವಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡರು.

ಹಿಂದೂ ಸಮಾಜದ ಸಂರಚನೆ ತುಂಬ ಸಂಕೀರ್ಣವಾದದ್ದು. ಅದರೊಳಕ್ಕೆ ಸ್ವತಃ ನೇಯ್ದುಕೊಂಡಿರುವ ಒಬ್ಬ ವ್ಯಕ್ರಿಗಲ್ಲದೆ ಬೇರೆಯವರಿಗೆ ಇದರ ವಿನ್ಯಾಸ ಕ್ರಮವನ್ನು ಅರಿತುಕೊಳ್ಳುವುದು ಕಷ್ಟವೇ. ಇಂದಿನ ಸಮಾಜ ಶಾಸ್ತ್ರಜ್ಞರಿಗೆ ಹಾಗೂ ಭಾರತೀಯ ಸಮಾಜದ ಅಧ್ಯಯನಕಾರರಿಗೆ ಈ ಮಾದರಿಯ ಸಾಮಾಜಿಕ ವಿನ್ಯಾಸರ ಅಧ್ಯಯನ ಮಾದರಿಯಾಗುತ್ತದೆ.

ಈ ರೀತಿಯಾಗಿ ಮನುಷ್ಯರನ್ನು ವಿಭಜಿಸಿರುವ ಜಾತಿಯು ಸಮಾಜದಲ್ಲಿ ಸೃಷ್ಟಿಸಿರುವ ಶಾಶ್ವತ ಕಂದರವನ್ನು ಈ ಕೆಳಗಿನ ರೀತಿಯಲ್ಲಿ ಪಟ್ಟಿಮಾಡಬಹುದು.

೧. ಜಾತಿಗಳು ದುಡಿಮೆಗಾರರನ್ನು ಪ್ರತ್ಯೇಕಿಸುತ್ತವೆ.

೨. ಆಸಕ್ತಿ ಮತ್ತು ದುಡಿಮೆಯನ್ನು ಜಾತಿಗಳು ಪರಸ್ಪರ ಹೊಂದಿಸುವುದಿಲ್ಲ.

೩. ಬುದ್ದಿವಂತಿಕೆಗೂ, ದೈಹಿಕ ಶ್ರಮಕ್ಕೂ ಇರವು ಸಂಪರ್ಕವನ್ನು ಜಾತಿ ಕಡಿದುಹಾಕುತ್ತದೆ.

೪. ತನ್ನ ನಿಜವಾದ ಆಸಕ್ತಿಯನ್ನು ಬೆಳೆಸಿಕೊಳ್ಳುವುದನ್ನು ನಿರಾಕರಿಸುವುದರಿಂದ ಜಾತಿಯು ವ್ಯಕ್ತಿಯನ್ನು ನಿವೀರ್ಯಗೋಳಿಸುತ್ತದೆ.

೫. ಜಾತಿಯು ಚಲನೆಯನ್ನು ಸ್ಥಗಿತಗೊಳಿಸುತ್ತದೆ. ಜಾತಿ ವ್ಯವಸ್ಥೆಯು ಕೇವಲ ಕೆಲಸಗಳ ವಿಂಗಡಣೆಯಲ್ಲ. ಅದು ಕೆಲಸಗಾರರನ್ನು ವಿಭಾಗಿಸುತ್ತದೆ.

ಇಂಥ ಏಣೀಕೃತ ಶ್ರೇಣಿಯನ್ನು ಸೃಷ್ಟಿಸಿ, ಅವುಗಳ ಮಧ್ಯೆ ಪರಸ್ಪರ ಈರ್ಷೆ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿದ ಸಂಹಿತೆಗಳ ಬಗ್ಗೆ ಇಂದು ಗಂಭೀರ ಅಧ್ಯಯನಗಳು ನಡೆಯಬೇಕಾಗಿದೆ. ಆಕ್ರೋಶ ಸಾಮಾಜಿಕ ಹಕ್ಕುಗಳ ಬಗೆಗೆ ಮನು ಧರ್ಮಸಂಹಿತೆಯಂತಹ ದುಷ್ಟ ಕಾನೂನುಗಳು ಇನ್ನೆಲ್ಲಿಯೂ ಇಲ್ಲ. ಸಾಮಾಜಿಕ ಅನ್ಯಾಯದ ಯಾವುದೇ ದೇಶದ ಉದಾಹರಣೆಗಳು ಇದರ ಮುಂದೆ ಸಪ್ಪೆಯಾಗಿ ಬಿಡುತ್ತದೆ. ಮನುಷ್ಯ ಸಮೂಹದ ಈ ಸಾಮಾಜಿಕ ಬಂಡಾಯಗಳು ಏಕೆ ನಡೆಯಲಿಲ್ಲವೆಂಬುದು ಯಾವಾಗಲೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ಕೊಡಬಹುದಾದ ಉತ್ತರ ಒಂದೇ, ಕೆಳವರ್ಗದ ಹಿಂದೂಗಳು ನೇರ ಕ್ರಮಕ್ಕೆ ತೊಡಗದಂತೆ ಅವರನ್ನು ಪ್ರತಿಬಂಧಿಸಿದ್ದು ಈ ಕೊಳಕು ಚಾತುರ್ವರ್ಣ್ಯ ಹಾಗೂ ಊಳಿಗಮಾನ್ಯ ಶಾಹಿಗಳ ಕಟ್ಟುನಿಟ್ಟಿನ ಪದ್ಧತಿ ಹಾಗೂ ಇಂಥ ಪದ್ಧತಿಯನ್ನು ಸೃಷ್ಟಿಸಿದ ಮನುವನ್ನು ಜರ್ಮನಿಯ ತತ್ವಜ್ಞಾನಿ ನಿಶೆಗೆ ಹೋಲಿಸಿದ ಅಂಬೇಡ್ಕರ್, ನಿಶೆಯ ವಿಚಾರಗಳು ಎಷ್ಟೋ ಪಾಲಿನಲ್ಲಿ ಮೇಲ ಎನ್ನುತ್ತಾರೆ. ಜಾತಿ ಪದ್ಧತಿಯನ್ನು ನಾಶ ಮಾಡಲು, ಶೋಷಣೆಯ ಅಂತ್ಯಕ್ಕಾಗಿ ಅಂಬೇಡ್ಕರ್ ರು ಆಡಿರುವ ಶ್ರೀಮಂತರು, ಬಡವರು, ಶೋಷಕರು, ಶೋಷಿತರು, ಆದರೆ ಅದು ತೀರಾ ಸಣ್ಣದು. ಶ್ರೀಮಂತರ ಸಿರಿತನ ಬಡವರ ಬವಣೆಯಲ್ಲಿದೆ, ಇದನ್ನು ನಿವಾರಿಸಬೇಕಾದರೆ ದುಡಿಯುವವರೆಲ್ಲ ಜಾತಿ ಮತಗಳನ್ನು ಧಿಕ್ಕರಿಸಿ ಸಂಘಟಿತರಾಗಬೇಕು. ಇಂತಹ ಸಂಘಟನೆ ಮಾತ್ರ ಬಡವರನ್ನು ಪ್ರತಿನಿಧಿಸಲು ಸಾಧ್ಯ. ಹಾಗಾದಾಗ ಎಲ್ಲರೂ ಎಲ್ಲವನ್ನೂ ಹಂಚಿಕೊಳ್ಳಬಹುದು. ಆಗ ಮಾತ್ರ ಸಂಪತ್ತನ್ನು ಉತ್ಪಾದಿಸುವ ಜನ ಹಸಿವೆಯಿಂದ ಸಾಯುವುದಿಲ್ಲ ಎಂದರು. ಸೈದ್ಧಾಂತಿಕವಾಗಿ ಅಂಬೇಡ್ಕರ್ ಅವರು ಉದಾರ ಪ್ರಜಾಪ್ರಭುತ್ವವಾದಿ ಹಾಗೂ ಬಂಡವಾಳಶಾಹಿ ಸುಧಾರಕರಾಗಿದ್ದರೆಂಬುದನ್ನು ಅವರ ವಿಚಾರಗಳಿಂದ ನಾವು ಗುರುತಿಸಬಹುದಾಗಿದೆ. ಇಂಥ ಅರ್ಥಪೂರ್ಣವಾದ ಮಾಹಿತಿಗಳನ್ನು ಇಂದಿನ ದಲಿತರು ಮನಗಾಣಬೇಕಾಗಿದೆ.

ಪರಾಮರ್ಶನ ಗ್ರಂಥಗಳು

೧. ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಭಾರತೀಯ ಸಮಾಜ ಮತ್ತು ದಲಿತರು, ಪ್ರಸಾರಾಂಗ, ಕನ್ನಡ ಮತ್ತು ವಿಶ್ವವಿದ್ಯಾಲಯ, ಹಂಪಿ, ೨೦೦೪.

೨. ಡಾ. ಮ. ನ. ಜವರಯ್ಯ, ಅಂಬೇಡ್ಕರ್ ವಿಚಾರ ಸಾಹಿತ್ಯ: ಸಮಗ್ರ ಅಧ್ಯಯನ, ಮೈಸೂರು, ೧೯೯೪.

೩. ಡಾ. ಎನ್. ಚಿನ್ನಸ್ವಾಮಿ ಸೋಸಲೆ, ದಲಿತರು ಮತ್ತು ಮತಾಂತರ: ಒಂದು ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೯.