ಐಕ್ಯತೆ ಮತ್ತು ಪ್ರಭುತ್ವ

ಐಕ್ಯ ಭಾರತ ಎಂಬುದು ಇದೆಯೇ? ಅನೇಕತೆಗಳಲ್ಲಿ ಏಕತೆ ಎನ್ನುವುದು ಎಷ್ಟು ಸರಿ? ಪ್ರಭುತ್ವದ ವ್ಯವಸ್ಥೆಗೂ ಬಹುತ್ವದ ಆಶಯಗಳಿಗೂ ರಾಜಿ ಒಪ್ಪಂದ ಸಾಧ್ಯವೆ? ಬಹುಭಾರತದ ಬಹುತ್ವ ವ್ಯವಸ್ಥೆಯಲ್ಲೇ ಇರುವ ಮಿತಿಗಳಿಗೆ ಪರ್ಯಾಯ ಏನಿದೆ? ಇಂತಹ ಹತ್ತಾರು ಚರ್ಚೆಗಳು ಈಗ ಅನೇಕ ನೆಲೆಗಳಿಂದ ಆರಂಬವಾಗಿವೆ. ಭಾರತದ ಕೆಳಜಾತಿಗಳ ಸಂದರ್ಭದಲ್ಲಿ ಹೇಳುವುದಾದರೆ ನಮ್ಮ ಪ್ರಭುತ್ವ ಪ್ರಧಾನ ರಾಜಕಾರಣಕ್ಕೆ ಐಕ್ಯತೆ ಯಾಕೆ ಬೇಕಿದೆ ಎಂಬ ಪ್ರಶ್ನೆ ಕೇಳಿಕೊಂಡರೆ ಅದರ ಅಧಿಕಾರ ಮತ್ತು ಆಳುವ ಸ್ವರೂಪಗಳು ತೆರೆದುಕೊಳ್ಳುತ್ತವೆ. ಪ್ರತ್ಯೇಕತಾ ಚಳುವಳಿಗಳು ತಮ್ಮ ಸಾಂಸ್ಕೃತಿಕ ಭೌಗೋಳಿಕ ಆರ್ಥಿಕ ಹಾಗೂ ರಾಜಕೀಯ ನೆಲೆಗಳಿಂದ ಬಲಗೊಳ್ಳುತ್ತಿರುವಾಗ ಪ್ರಭುತ್ವ ಅದನ್ನು ಸದೆಬಡಿದು ಐಕ್ಯಮಂತ್ರವನ್ನು ಪಠಿಸುವುದು ಅದರ ಮಿತಿಗಳನ್ನು ಉದ್ದೇಶಗಳನ್ನು ಏಕಕಾಲಕ್ಕೆ ಧ್ವನಿಸುತ್ತದೆ. ಯಾವುದೇ ಪ್ರಭುತ್ವ ಕೇವಲ ರಾಜಕೀಯ ಹಿತಾಸಕ್ತಿಯಿಂದ ಮಾತ್ರ ಐಕ್ಯತೆಯನ್ನು ಬಯಸುತ್ತಿರುತ್ತದೆ. ಹೀಗೆ ಐಕ್ಯತೆ ಬಯಸುವಾಗ ಭಾರತದ ಕೆಳಜಾತಿಗಳ ಸ್ಥಿತಿಯನ್ನು ಚರಿತ್ರೆಯ ಉದ್ದಕ್ಕೂ ಗಮನಿಸುವುದಾದರೆ ಭಾರತದ ಪ್ರಭುತ್ವ ವ್ಯವಸ್ಥೆ ಎಂತಹ ಭಂಡತನದ ನೀಚ ಕುತಂತ್ರದ ಲಾಲಸೀ ಪ್ರವೃತ್ತಿಯೆಂದು ತಿಳಿಯುತ್ತದೆ. ಸವಲತ್ತುಗಳ ವೇಳೆಯಲ್ಲಿ ಸಮುದಾಯಗಳನ್ನು ಪ್ರತ್ಯೇಕಿಸುತ್ತಾ ತನಗೆ ಹೆಚ್ಚು ಲಾಭ ಬರುವ ಸಂದರ್ಭಗಳಲ್ಲೆಲ್ಲ ಐಕ್ಯತೆಯನ್ನು ಬೆಂಬಲಿಸುತ್ತಾ ನಮ್ಮ ಪ್ರಭುತ್ವವೇ, ಹಾಕುತ್ತಲೇ ಇರುತ್ತದೆ. ಓಟಿನ ರಾಜಕಾರಣದಲ್ಲಿ ಮಾತ್ರ ಐಕ್ಯತೆ ಏಕತೆ ಸಮಾನತೆಯನ್ನು ಬಯಸುವ ಭಾರತದ ರಾಜಕಾರಣ ಸಮಗ್ರ ಬದಲಾವಣೆಯ ಸಂದರ್ಭದಲ್ಲಿ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತದೆ. ಇದು ಪರೋಕ್ಷವಾಗಿ ಐಕ್ಯತೆ ಎನ್ನುವುದನ್ನೇ ಬಮಡವಾಳವಾಗಿಸಿ ಎಲ್ಲ ಜಾತಿಗಳೂ ಒಂದು ಎಂಬ ಹುಸಿಬದ್ಧತೆಗೆ ಒಳಗಾಗಿಸಿ ತನ್ನ ಪ್ರಭುತ್ವವನ್ನು ಬಲಪಡಿಸಿಕೊಳ್ಳುತ್ತಲೇ ಸಾಗುವ ರೀತಿಯನ್ನು ತೋರುತ್ತದೆ. ಜಾತಿ ಪ್ರಧಾನ ಪ್ರಭುತ್ವ ಜಾತಿಗಳನ್ನು ಗಟ್ಟಿಗೊಳಿಸುತ್ತ ಬೆಳೆಯುವುದರಿಂದಲೇ ರಾಷ್ಟ್ರೀಯತೆ ಎನ್ನುವುದು ಭಾರತದ ಕೆಳಜಾತಿಗಳಿಗೆ ಭಿನ್ನವಾಗಿ ಕಂಡು ಪ್ರತ್ಯೇಕತೆಯನ್ನು ಗುರುತಿಸಿಕೊಳ್ಳುವುದು. ಹಾಗೆಯೇ ಜಾತಿನಿಷ್ಠವಾದ ರಾಜಕಾರಣ ಅನೇಕ ಸಮುದಾಯಗಳನ್ನು ದಾರಿತಪ್ಪಿಸುತ್ತಾ ಮಾನವೀಕರಣ ರಾಜಕೀಯ ಇಚ್ಚಾಶಕ್ತಿಯನ್ನೇ ಇಲ್ಲದಂತೆ ಮಾಡುವುದು ನಮ್ಮ ಈ ಕಾಲದ ದೊಡ್ಡ ಸಮಸ್ಯೆಯಾಗಿದೆ. ಇದು ಪರೋಕ್ಷವಾಗಿ ಜಾತಿಗಳನ್ನು ಅನೇಕ ಹಂತಗಳನ್ನು ಕೊಬ್ಬಿಸುತ್ತಾ ಹೋಗುತ್ತದೆ. ಇಂತಹ ಪ್ರಭಾವವೇ ನಮ್ಮ ಯೋಜನೆಗಳನ್ನು ನಿಯಂತ್ರಿಸುತ್ತಿರುವುದು. ಬಹು ಭಾರತದ ಪ್ರಜ್ಞೆಯೇ ನಮ್ಮ ರಾಜಕಾರಣಕ್ಕೆ ಬೇಕಿಲ್ಲ. ಅದು ತನ್ನ ಅಧಿಕಾರ ಕೇಂದ್ರಿತ ಕಾಳಜಿಗಳಿಂದಲೇ ಎಲ್ಲವನ್ನು ಅಳೆಯುತ್ತದೆ. ಐಕ್ತಯ ಭಾರತ ಎಂಬುದು ಒಂದು ಹುಸಿ ಅಷ್ಟೆ. ಐಕ್ತಯತೆಯನ್ನು ಭಂಜಿಸುವುದೇ ಹಿಮದೂ ಧರ್ಮದ ಮೂಲ ಗುಣ. ಅದರ ಮೂಲಕವೇ ಬೆಳೆದ ಸಮುದಾಯಗಳಿಗೆ ಇಪ್ಪತ್ತನೆ ಶತಮಾನದ ಕೊನೆಯ ಹೊತ್ತಿಗೆ ಒಂದು ಬಗೆಯ ವಿಚಿತ್ರ ಆಶಯಗಳು ಬೆಳೆದುಬಿಟ್ಟಿವೆ. ಜಾತಿಯಿಂದ ಸಮುದಾಯವನ್ನು ಕಟ್ಟಬಹುದು ಎಂತಲೂ ಜಾತಿಯ ಆಧಾರದಿಂದಲೇ ಓಟಿನ ರಾಜಕಾರಣವಿರಬಹುದು ಶಿಕ್ಷಣದ ಬದಲಾವಣೆಗಳಿರಬಹುದು ಆರ್ಥಿಕ ಸಾಮಾಜಿಕ ಸ್ಥಿತ್ಯಂತರಗಳಿರಬಹುದು; ಒಟ್ಟಿನಲ್ಲಿ ಇಂತಹ ಅನೇಕ ನೆಲೆಗಳಿಂದಲೇ ತಮ್ಮ ಸಾಂಸ್ಕೃತಿಕ ರಾಜಕೀಯ ಸಾಮಾಜಿಕ ಚಹರೆಯನ್ನು ಗುರುತಿಸಿಕೊಳ್ಳಲು ಯತ್ನಿಸುವುದು ಸಹಜವೆನಿಸಿ ಬಿಟ್ಟಿದೆ.

ಇಂತಾದ್ದರಲ್ಲಿ ನಮ್ಮ ಅನೇಕ ಮಹಿಳಾ ಸಮುದಾಯಗಳು, ಆದಿವಾಸಿಗಳು ಅಲೆಮಾರಿಗಳು ಮತ್ತು ಕೆಳಜಾತಿಗಳು ಎಂತಹ ಸವಾಲುಗಳಿಗೆ ಒಳಗಾಗಬಹುದೆಂಬುದನ್ನು ಊಹಿಸಿಕೊಳ್ಳಬಹುದು. ಸ್ಥಿರೀಕೃತ ಸಮಾಜವನ್ನು ಬದಲಿಸಬೇಕೆಂಬ ಉದ್ದೇಶದಿಂದಲೇ ಅನೇಕ ಅಪಾಯಗಳನ್ನು ನಮ್ಮ ಚಿಂತನೆಗಳು ತಂದುಕೊಳ್ಳುತ್ತಿವೆ. ಒಂದರ ಸಮಸ್ಯೆ ಇನ್ನೊಂದರ ಸಮುದಾಯಕ್ಕೆ ಅರ್ಥಪೂರ್ಣ ಅನಿಸದೇ ಹೋಗುವ ವಿಪರ್ಯಾಸ ಎಲ್ಲ ಹಂತಗಳಲ್ಲೂ ವ್ಯಾಪಿಸಿಕೊಂಡಿದೆ. ದಲಿತರ ರಾಷ್ಟ್ರೀಯತೆ ಎನ್ನುವುದು ಈ ನಿಟ್ಟಿನಲ್ಲಿ ಗ್ರಹಿಸುವಾಗ ಅನಿವಾರ್ಯವಾಗಿ ಇವತ್ತಿನ ಪ್ರಬುತ್ವದ ನೆನ್ನೆಯ ಕುರೂಪಗಳನ್ನು ವಿಮರ್ಶಿಸುತ್ತಲೇ ಹೋಗಬೇಕಾಗುತ್ತದೆ. ಭಾರತಕ್ಕೆ ಐಕ್ಯತೆಯ ಪ್ರವೃತ್ತಿಯೇ ಇಲ್ಲ. ಜಾತಿಕಾರಣಕ್ಕೆ ಬಂದ ಪ್ರತ್ಯೇಕತೆಗಳೇ ಇವತ್ತು ದಲಿತರಲ್ಲಿ ಪ್ರತ್ಯೇಕ ಪ್ರಾದೇಶಿಕ ರಾಷ್ಟ್ರೀಯ ಅರಿವನ್ನು ಬೆಳೆಸಿದೆ. ಇದು ಉಳಿದಂತೆ ಇತರೆ ಸಮುದಾಯಗಳಿಗೂ ನಕಾರಾತ್ಮಕ ಸಂಬಂಧಗಳು ಬೆಳೆಯುವಂತೆ ಮಾಡಿದೆ. ಎಲ್ಲ ಭಾರತೀಯ ಸಮುದಾಯಗಳ ಐಕ್ಯತೆಯನ್ನು ರೂಪಿಸುವ ಗಾಂಧಿಯ ಆಶಯ ಇವತ್ತಿನ ಪ್ರಭುತ್ವಕ್ಕೆ ಯಾವ ಕಾರಣಕ್ಕೂ ಬೇಕಾಗಿಲ್ಲ ಅನಿಸುತ್ತದೆ. ನಮ್ಮನ್ನು ಆಳುವ ಈ ಧೂರ್ತ ಪ್ರಭುತ್ವಗಳು ಇಡೀ ಭಾರತವನ್ನೇ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಿ ಬಿಡುವ ಕಾಲ ದೂರವಿಲ್ಲ. ಹೀಗಿರುವಲ್ಲಿ ಅಲಕ್ಷಿತರ ಪ್ರಾದೇಶಿಕ ರಾಷ್ಟ್ರೀಯ ಬಯಕೆಗಳಿಗೆ ಅರ್ಥವೇ ಇರುವುದಿಲ್ಲ.

ಕೇಂದ್ರದ ವ್ಯಾಪ್ತಿಯಲ್ಲೇ ಪ್ರಭುತ್ವ ಸಾಗುವುದರಿಂದ ಭಾರತದ ಐಕ್ಯತೆ ಸಾಧ್ಯವಿಲ್ಲ. ಹೀಗೆ ಐಕ್ಯತೆಯನ್ನು ಸಾಧಿಸುವುದು ಕೂಡ ಈ ಕಾಲದ ಒತ್ತಡಗಳನ್ನು ಗಮನಿಸಿದಾಗ ಸೂಕ್ತವೆಂದು ತೋರುವುದಿಲ್ಲ. ಎಲ್ಲ ಸಮುದಾಯಗಳಿರುವ ಸಾಂಸ್ಕೃತಿಕ ಪ್ರಭುತ್ವವೇ ಅವರವರನ್ನು ಸದಾ ರಾಜಕೀಯ ಪ್ರಭುತ್ವದ ವಿರುದ್ಧ ಎಚ್ಚರವಿರುವಂತೆ ಮಾಡುತ್ತದೆ. ಐಕ್ಯತೆಗೆ ವಿರುದ್ಧವಾಗಿ ಪ್ರಾದೇಶಿಕ ಸಾಂಸ್ಕೃತಿಕ ಇಚ್ಛೆಗಳು ಕೆಲಸ ಮಾಡುತ್ತಿರುತ್ತವೆ. ಆದರಿಂದಲೆ ದಲಿತರ ಚಳುವಳಿಗಳು ಸಾಂಸ್ಕೃತಿಕವಾಗಿ ಅಭಿವ್ಯಕ್ತಗೊಂಡು ಪ್ರಭುತ್ವವನ್ನು ಪ್ರಶ್ನಿಸುವುದು. ದಲಿತರ ಒಟ್ಟು ಚಳುವಳಿಗಳನ್ನೇ ಗಮನಿಸಿದರೂ ಅದು ತಿಳಿಯುತ್ತದೆ. ಪ್ರಭುತ್ವದ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರತ್ಯೇಕತೆಯನ್ನು ಆಶಿಸುವ ಅಂತಹ ಚಳುವಳಿಗಳಲ್ಲಿ ಅವರವರ ದೇಸೀ ರಾಷ್ಟ್ರೀಯ ಅಭಿವ್ಯಕ್ತಿ ಶಕ್ತಿ ಅಡಗಿರುತ್ತದೆ. ಇಲ್ಲದಿದ್ದರೆ ಆದಿವಾಸಿ ಅಥವಾ ಅಲ್ಪಸಂಖ್ಯಾತ ಕೋಮುಗಳ ಚಳುವಳಿಗಳು ಇಷ್ಟೊಂದು ಪ್ರಮಾಣದಲ್ಲಿ ಭಾರತದ ಉದ್ದಕ್ಕೂ ಘಟಿಸುತ್ತಿರಲಿಲ್ಲ. ನಮ್ಮ ಪ್ರಭುತ್ವಗಳು ಬ್ರಿಟಿಷರು ಹೇಳಿಕೊಟ್ಟ ಒಡೆದು ಆಳುವ ನೀತಿಗೆ ಬದ್ಧರಾಗಿರುವುದರಿಂದ ಗಾಂಧಿ, ಲೋಹಿಯಾ, ಅಂಬೇಡ್ಕರ್ ಜಯಪ್ರಕಾಶ ನಾರಾಯಣ್ ತರದವರ ಚಿಂತನೆಗಳು ಬಿದ್ದು ಹೋಗುವುದು. ಹಾಗೆಯೇ ಇಂತಹ ರಾಜಕೀಯ ರಾಜಕೀಯ ನೀತಿಯಿಂದ ಜರ್ಜರಿತವಾದ ಸಮುದಾಯಗಳು ಪ್ರತ್ಯೇಕತೆಯನ್ನು ನಿರೀಕ್ಷಿಸಿ ಹೋರಾಡುವುದು.

ಒಬ್ಬನ ಹಿತ ಮತ್ತೊಬ್ಬನ ಅಹಿತದಿಂದಲೇ ತೀರ್ಮಾನವಾಗಬೇಕಾದ ಸಾಮಾಜಿಕ ಒಪ್ಪಂದಗಳು ರಾಜಕೀಯ ಸಂಬಂಧಗಳು ಇರುವುದರಿಂದಲೇ ಭಾರತದ ಅನೇಕ ದಲಿತ ಸಮುದಾಯಗಳು ರಾಷ್ಟ್ರೀಯ ಕಾಂಗ್ರೆಸ್ ಹೇಳುವಂತಹ ರಾಷ್ಟ್ರೀಯತೆಗೆ ಒಳಗಾಗಲು ಸಾಧ್ಯವಾಗಲಿಲ್ಲ. ವಂದೇ ಮಾತರಂ ಎಂಬ ಮಂತ್ರವಾಗಲೀ ಅನೇಕ ಭಾರತದ ಕೇಂದ್ರ ಭಾರತವಾಗಲಿ ಐಕ್ಯ ಸಂಸ್ಕೃತಿಯಾಗಲಿ ಇದರಿಂದಲೇ ನಮ್ಮಲ್ಲಿ ಸಾಧ್ಯವಾಗದ ಆಧುನಿಕ ಭಾರತದಲ್ಲಿ ಬಹುಭಾರತದ ಧ್ವನಿಗಳು ಈಗ ಸಂಘಟಿತವಾಗುತ್ತಿರುವುದು. ಭಾರತದ ಶಕ್ತಿ ರಾಜಕಾರಣ ಇದನ್ನು ಹಲ್ಲೆಯಿಂದ ಹತ್ತಿಕ್ಕಿದರೂ ಕೂಡ ಭವಿಷ್ಯದ ಭಾರತದಲ್ಲಿ ಇಂತಹ ಪ್ರತ್ಯೇಕತಾ ಸಂಹಿತೆಗಳು ಗಾಢವಾಗಿ ಬೆಳೆದೇ ಬೆಳೆಯುತ್ತವೆ. ಅನೇಕತೆಯಲ್ಲಿ ಏಕತೆ ಎನ್ನುವುದು ಕೇವಲ ಒಂದು ಆಶಯವಾಗಿ ರಾಷ್ಟ್ರೀಯ ಚಳುವಳಿಗಾರರ ಭಾವನೆಯಲ್ಲಿತ್ತೇ ಹೊರತು ಅಸ್ತಿತ್ವದಲ್ಲಿರಲಿಲ್ಲ. ಬಹುತ್ವ ರಾಷ್ಟ್ರೀಯತೆಗಳನ್ನು ಆಳುವ ಕೇಂದ್ರಕ್ಕೆ ಆಯಾ ಸಮುದಾಯಗಳ ಸಾಂಸ್ಕೃತಿಕ ಚಿಂತನೆ ವಿಕಾಸ ಅದರ ಸಂಕಥನದ ವಿಕಾಸದ ಬಗ್ಗೆ ವಿಶೇಷ ಕಾಳಜಿಯೇ ಇಲ್ಲ. ಆದಿವಾಸಿಗಳನ್ನು ಕಾಡುಬಿಟ್ಟು ಪೇಟೆಗೆ ಬನ್ನಿ ಎಂಬಂತೆ ವಾಸಿಸುವುದರಲ್ಲೇ ಬದಲಾವಣೆಯನ್ನು ಕಾಣುವ ಸರ್ಕಾರಗಳಿಗೆ ನೆಲದ ಸಮುದಾಯಗಳ ಪ್ರಾಥಮಿಕ ಅರಿವೇ ಇದ್ದಂತಿಲ್ಲ.

ಹಾಗೆ ನೋಡಿದರೆ ಈ ಪ್ರತ್ಯೇಕತಾ ಚಳುವಳಿಗಳು ಮತ್ತು ದಲಿತರ ಸಾಮಾಜಿಕ ಹೋರಾಟಗಳು ಏನನ್ನು ಧ್ವನಿಸುತ್ತವೆ ಎಂದರೆ ಈ ಸಮುದಾಯಗಳು ಈಗ ತಾನೆ ತಮ್ಮ ಸ್ವಾತಂತ್ರ್ಯ ಚಳುವಳಿಯನ್ನು ಆರಂಬಿಸಿವೆ ಎಂದೇ ಅರ್ಥ. ದಲಿತರ ಚರಿತ್ರೆಯನ್ನು ಗಮನಿಸಿದರೆ ಅವರ ರಾಜಕೀಯ ಆರ್ಥಿಕ ಸ್ವಾತಂತ್ರ್ಯ ನಿರಂತರವಾಗಿ ಒಂದು ಪ್ರಭುತ್ವದಿಂದ ಇನ್ನೊಂದು ಪ್ರಭುತ್ವಕ್ಕೆ ಒಂದು ಸಮುದಾಯದಿಂದ ಇನ್ನೊಂದು ಸಮುದಾಯಕ್ಕೆ ಹಸ್ತಾಂತರವಾಗುತ್ತಾ ಬಂದಿರುವುದರಿಂದ ಪೂರ್ಣಪ್ರಮಾಣದ ರಾಜಕೀಯ ಸ್ವಾತಂತ್ರ್ಯ ಅವರಿಗೆ ಇನ್ನೂ ಬಂದಿಲ್ಲ. ಇದೇ ಸಮಸ್ಯೆ ಆದಿವಾಸಿ ಮತ್ತು ಮಹಿಳೆಯರಿಗೂ ಹೋಲುತ್ತದೆ. ಪ್ರಭುತ್ವವನ್ನು ಪ್ರಶ್ನಿಸುವ ಈ ಪರಿಯೇ ಪ್ರಾದೇಶಿಕವಾದ ದೇಸೀ ಸ್ವಾತಂತ್ರ್ಯ ಚಳುವಳಿಗೆ ಭಾರತದ ಅನೇಕ ಸಮುದಾಯಗಳು ಅಮೂರ್ತವಾಗಿ ಅಗೋಚರವಾಗಿ ನಿಗೂಢವಾಗಿ ಸಜ್ಜಾಗುತ್ತಿವೆ ಎಂಬ ಅಂಶ ಹೊಳೆಯುತ್ತದೆ. ಭಾರತದ ಸ್ವಾತಂತ್ರ ಚಳವಳಿಯೂ ಹೆಚ್ಚು ಕಡಿಮೆ ಇದೆ ಸ್ವರೂಪದಲ್ಲಿ ಬ್ರಿಟಿಷ್ ಪ್ರಭುತ್ವದ ವಿರುದ್ಧವಾಗಿತ್ತೆಂದು ಕಾಣುತ್ತದೆ. ಬ್ರಿಟಿಷರ ಕೈಕೆಳಗಿದ್ದುಕೊಂಡೇ ಸಂಸ್ಥಾನಗಳು ಒಳಗೇ ಪ್ರತ್ಯೇಕತೆಯನ್ನು ಸದಾ ನಿರೀಕ್ಷಿಸುತ್ತಿದ್ದುದ್ದು ಈಗ ಚರಿತ್ರೆಯಲ್ಲಿ ಐಕ್ಯವಾಗಿದೆ ಅಥವಾ ಹೀಗೆ ಸಜ್ಜಾಗುತ್ತಿವೆ ಎಂಬ ಬೆನ್ನ ಹಿಂದೆಯೇ ಗುರಿ ಇಲ್ಲದೆ ಅನೇಕ ಸಮುದಾಯಗಳ ಪರಂಪರೆ ಮತ್ತು ಅವು ರೂಪಿಸಿಕೊಂಡಿದ್ದ ರಾಷ್ಟ್ರೀಯತೆ ನಾಶವಾಗುತ್ತಿದೆ ಎಂದು ಅನಿಸುತ್ತಿದೆ. ಚರಿತ್ರೆಯಲ್ಲಿ ಇಂತಹ ಘಟನೆಗಳು ಸಾಕಷ್ಟು ಘಟಿಸಿದ್ದು ಎಷ್ಟೋ ಸಮುದಾಯಗಳ ಚರಿತ್ರೆ ಈಗ ಕಣ್ಮರೆಯಾಗಿದೆ.

ಸ್ವಾತಂತ್ರ್ಯ ಚಳುವಳಿ ಮತ್ತು ದಲಿತರ ರಾಷ್ಟ್ರೀಯತೆ

ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ದಲಿತರ ಪಾತ್ರವನ್ನು ಕುರಿತು ವಿವರ ಕೊಡುವುದು ಬೇರೆ, ಅಂತಹ ವಿವರಗಳು ಎಲ್ಲ ಕಾಲದಲ್ಲಿ ಎಲ್ಲ ಸಂದರ್ಭಗಳಲ್ಲಿ ಸಿಗಬಲ್ಲವು. ಆದರೆ ಅಲಕ್ಷಿತರ ಚರಿತ್ರೆಯ ನೆಲೆಯಿಂದ ಸ್ವಾತಂತ್ರ್ಯ ಚಳುವಳಿಯನ್ನು ನೋಡಿದರೆ ಅಲ್ಲಿರುವ ಅನೇಕ ವೈರುದ್ಯಗಳೂ ಮತ್ತು ವಿಪರ್ಯಾಸಗಳೂ ಕಣ್ಣಿಗೆ ರಾಚುತ್ತವೆ. ಸ್ವಾತಂತ್ರ್ಯವನ್ನು ಯಾರು ಈ ದೇಶದಲ್ಲಿ ಮೊದಲು ಕಳೆದುಕೊಂಡಿದ್ದರು ಎಂಬುದು ಮುಖ್ಯ. ಯಾರು ನಾಗರಿಕತೆಗಾಗಿ ಪಶ್ಚಿಮಾಭಿಮುಖವಾಗಿ ಕುಳಿತಿದ್ದರೆಂಬುದು ಗಮನಾರ್ಹ. ದ್ರಾವಿಡ ಮೂಲ ಚರಿತ್ರೆಯನ್ನು ಬಲ್ಲವರಿಗೆ ಇದೆಲ್ಲ ತೆರೆದ ಸತ್ಯ. ಅನೇಕ ಯುಗಗಳಿಂದ ದಲಿತರು ಪ್ರಭುತ್ವ ಮತ್ತು ರಾಜಕಾರಣದ ಶಕ್ತಿಯನ್ನು ಕಳೆದುಕೊಂಡದ್ದು ಎಲ್ಲರಿಗೂ ತಿಳಿದದ್ದೇ. ರಾಜಶಾಹಿಯಿಂದ ಪುರೋಹಿತಶಾಹಿಯಿಂದ ಅಧಿಕಾರ ಕಳೆದುಕೊಂಡು ತುಳಿತಕ್ಕೆ ಒಳಗಾದ ದಲಿತ ಸಮುದಾಯಗಳು ಯಾರ ವಿರುದ್ಧ ಹೋರಾಡಬೇಕಿತ್ತೆಂಬುದು ಚರ್ಚಿತವಾಗಬೇಕು. ಮೇಲಿನ ಮೂರು ಪ್ರಭುತ್ವಗಳ ಸಂಕೋಲೆಯಿಂದ ತತ್ತರಿಸಿದ್ದ ಜನ ಈ ಮೂವರಲ್ಲಿ ಹೆಚ್ಚು ಯಾರನ್ನು ಒಪ್ಪಬೇಕಿತ್ತು ತಿರಸ್ಕರಿಸಬೇಕಿತ್ತು ಎಂದರೆ ಈ ಮೂರು ಶಕ್ತಿಗಳನ್ನು ಒಪ್ಪದ ಸ್ಥಿತಿಯಲ್ಲಿ ದಲಿತ ಸಮುದಾಯಗಳಿದ್ದವು. ಅವುಗಳನ್ನು ತಿರಸ್ಕರಿಸುವುದೆಂದರೆ ಅಸ್ತಿತ್ವವವೇ ಇರುತ್ತಿರಲಿಲ್ಲ. ಅಂದರೆ ಈ ಮೂರು ಶಕ್ತಿಗಳಿಂದ ಜರ್ಜಿರಿತವಾಗಿ ಸ್ವಾತಂತ್ರ್ಯ ಕಳೆದುಕೊಂಡಿದ್ದಾಗ ಇವರ ಜೊತೆಗೂಡಿ ವಸಾಹತು ಪ್ರಭುತ್ವದ ವಿರುದ್ಧ ಹೋರಾಡುವುದು ಅತ್ಯಂತ ಇಕ್ಕಟ್ಟಿನ ಕೆಲಸವಾಗಿತ್ತು. ತಾತ್ವಿಕವಾಗಿ ಇಂತಹ ಒಪ್ಪಂದವೇ ಅಪವಿತ್ರವೆನಿಸುತ್ತಿತ್ತು. ಅಧಿಕಾರ ಕಳೆದುಕೊಂಡವರು ಆ ತಕ್ಷಣಕ್ಕೆ ಮೇಲ್‌ಜಾತಿಗಳೂ ಮತ್ತು ಅಂತಹ ವ್ಯವಸ್ಥೆಗಳಾಗಿದ್ದವೇ ಹೊರತು ದಲಿತರಿಗೆ ಬ್ರಿಟಿಷ್‌ಪ್ರಭುತ್ವದಿಂದ ನೇರವಾದ ತೊಂದರೆಗಳು ವಿಶೇಷವಾಗಿ ಇರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವ ಅನೇಕ ಬೇರೆ ಸಮುದಾಯಗಳು ಇರುವ ಕಾಲದಲ್ಲೇ ಸ್ವಾತಂತ್ರ್ಯ ಎಂದರೆ ಏನು ಎಂಬ ಪ್ರಜ್ಞೆಯೇ ಇಲ್ಲದ ಸಂಕೀರ್ಣ ಮುಗ್ಧಸ್ಥಿತಿಯಲ್ಲಿ ಅನೇಕರು ಭಾರತದ ಉದ್ದಕ್ಕೂ ಇದ್ದರು. ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ ಮಾತ್ರವೇ ಆ ಹೋರಾಟದ ಬಿಸಿ ಗ್ರಾಮ ಭಾರತಕ್ಕೂ ಒಂದಿಷ್ಟು ತಟ್ಟಿತ್ತಷ್ಟೆ. ನಿಸ್ಸಂದೇಹವಾಗಿ ಸ್ವಾತಂತ್ರ್ಯಕ್ಕಾಗಿ ಮಡಿಯುವ ಸಮಷ್ಠಿ ಸಹಭಾಗಿತ್ವ ದಲಿತ ಸಮುದಾಯಗಳಿಗೆ ಬಂದಿರಲಿಲ್ಲ. ಸ್ವತಃ ಅಂಬೇಡ್ಕರ್ ಅವರೇ ಸ್ವಾತಂತ್ರ್ಯ ಚಳುವಳಿಗೆ ಬೆಂಬಲಿಸಿಯೂ ಅವರು ದಲಿತ ಸಮುದಾಯದ ಬಗ್ಗೆ ಎತ್ತುತ್ತಿದ್ದ ವಾಗ್ವಾದಗಳೂ ಚಿಂತನೆಗಳು ಬೇರೆಯಾಗಿದ್ದವು. ಭಾರತದ ಚರಿತ್ರೆಯ ನೆನಪಿದ್ದ ಕಾರಣದಿಂದಲೇ ನಾಳೆ ಸ್ವಾತಂತ್ರ್ಯ ಭಾರತದಲ್ಲಿ ದಲಿತರಿಗೆ ಪ್ರತ್ಯೇಕ ಸ್ಥಾನ ಇರಲೆಂಬಂತೆ ಪ್ರತ್ಯೇಕತೆಯ ಒತ್ತಾಯಗಳನ್ನು ಮಂಡಿಸಿದ್ದು. ಗಾಂಧಿಯವರ ಸಮಷ್ಠಿ ಕಾಣ್ಕೆಯ ಮಾನವೀಕರಣದ ರಾಜಕಾರಣದ ಹಿತಾಸಕ್ತಿಯಿಂದ ಅದು ಸಾಧ್ಯವಾಗಲಿಲ್ಲ. ದಲಿತರಿಗೆ ಪ್ರತ್ಯೇಕ ಸ್ಥಾನಮಾನಗಳು ಬೇಕೆಂಬ ಅಂಬೇಡ್ಕರ್ ಅವರ ವಾದದಲ್ಲಿ ಪ್ರಾದೇಶಿಕ ಸಾಂಸ್ಕೃತಿಕ ರಾಷ್ಟ್ರೀಯ ಪ್ರಜ್ಞೆಯ ಬೇರುಗಳಿವೆ. ಆ ಕಾಲಕ್ಕೆ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಅಂಬೇಡ್ಕರ್ ಅವರ ಚಿಂತನೆಗಳು ಅರ್ಥವಾಗಿರಲಿಲ್ಲ. ಅರ್ಥವಾಗಿದ್ದರೂ ಪ್ರತ್ಯೇಕತೆಯನ್ನು ಒಪ್ಪುವಂತಹ ಸ್ಥಿತಿಯಲ್ಲಿರಲಿಲ್ಲ. ಒಂದು ವೇಳೆ ದಲಿತರಿಗೆ ಪ್ರತ್ಯೇಕಭಾಗವನ್ನು ಹಂಚಿಕೊಟ್ಟಿದ್ದರೆ ಇಡೀ ಭಾರತ ಖಂಡವೇ ಜಾತಿವಾರು ಪ್ರಾಂತ್ಯಗಳಾಗಿ ಹಂಚಿಹೋಗುವ ದುರಂತದಲ್ಲಿ ಸಿಲುಕಿಹೋಗುತ್ತಿತ್ತು. ಗಾಂಧಿಯವರಿಗೆ ಇಂತಹ ದೂರದೃಷ್ಟಿ ಇಲ್ಲದಿದ್ದರಿಂದಲೇ ಆ ಸ್ಥಿತಿ ಸಾಧ್ಯವಾಗಲಿಲ್ಲ. ಒಂದು ವೇಳೆ ಜಾತಿವಾರುವಾಗಿ ಇಡೀ ಭಾರತವನ್ನು ವಿಂಗಡಿಸಿ ಭಾರತ ಪಾಕಿಸ್ತಾನದಂತೆ ಬೇರೆ ಬೇರೆ ದೇಶಗಳನ್ನಾಗಿಸಿದಂತೆಯೇ ಜಾತಿಗೊಂದೊಂದು ಪ್ರತ್ಯೇಕ ಪ್ರಾಂತ್ಯಗಳನ್ನು ಕೊಟ್ಟು ಬಿಟ್ಟಿದ್ದರೆ ಭಾಗಶಃ ಇವತ್ತು ಎಂತಹ ಸ್ಥಿತಿಗಳಿಗೆ ನಾವು ಹೋಗುತ್ತಿದ್ದೆವು ಗೊತ್ತಿಲ್ಲ.

ಹಾಗಾದರೆ ಇವತ್ತು ಭಾರತದಲ್ಲಿ ಎದ್ದಿರುವ ಪ್ರತ್ಯೇಕತಾ ಚಿಂತನೆ, ಹೋರಾಟಗಳು ಕೂಡ ನಾಶವನ್ನೇ ತರಬಲ್ಲವೆಂಬ ಅನುಮಾನ ಬರುವುದು ಸಹಜ. ನನ್ನ ಮಟ್ಟಿಗೆ ಹೇಳುವುದಾದರೆ ಇಂತಹ ಇಕ್ಕಟ್ಟುಗಳನ್ನು ನಮ್ಮ ವಸಾಹಾತೊತ್ತರ ರಾಜಕೀಯ ಪ್ರಭುತ್ವಗಳೇ ನಿರ್ಮಿಸಿದ್ದು. ಈ ಪ್ರಭುತ್ವವನ್ನು ಸರಿಪಡಿಸಿ ಪರ್ಯಾಯವನ್ನು ಕಂಡುಕೊಳ್ಳುವುದರಿಂದಲೇ ಬಿಡುಗಡೆ ಇದೆ. ಗಾಂಧಿ ಮತ್ತು ಅಂಬೇಡ್ಕರ್ ಅವರಂತೆ ಈ ಸಮಾಜವನ್ನು ಅರಿತು ಬುದ್ಧ ಬಸವರ ತಾತ್ವಿಕ ತಳಹದಿಯ ಮೇಲೆ ಆಧುನಿಕ ಮಾನವೀಯ ರಾಜಕಾರಣದ ಪ್ರಭುತ್ವವನ್ನು ಕಟ್ಟಿದಾಗ ಮಾತ್ರ ಭಾರತದ ಇಂತಹ ಪ್ರತ್ಯೇಕತಾ ಚಳುವಳಿ ಅಥವಾ ಬಹುರಾಷ್ಟ್ರೀಯತೆಗಳ ಸವಾಲುಗಳ ಸಮಸ್ಯೆಗಳು ಪರಿಹಾರವಾಗುವುದು.

ಹೀಗಾಗುತ್ತೆ ಎಂದು ಅಂದುಕೊಂಡಾಗಲೂ ಕೂಡ ನಮ್ಮ ದಾರಿಗಳು ಇನ್ನೆಲ್ಲಿಗೋ ಕೊಂಡೊಯ್ಯುತ್ತವೆ. ಅಂದರೆ; ದಲಿತ ಸಮುದಾಯಗಳು ಸಾಂಸ್ಕೃತಿಕವಾಗಿ ಹೊಂದಿರುವ ರಾಷ್ಟ್ರೀಯ ಪ್ರಜ್ಞೆಯನ್ನು ರಾಜಕೀಯ ಪ್ರತ್ಯೇಕತೆಯಿಂದ ಗುರುತಿಸುವುದು ತಪ್ಪು. ಬಹು ಭಾರತದ ಬಹುರಾಷ್ಟ್ರೀಯತೆಗಳ ಬಹುಸಂಸ್ಕೃತಿಗಳ ಕೂಡು ಸಂಗಮ ಎಲ್ಲಿ ಘಟಿಸುತ್ತದೆ ಎಂದು ನಮ್ಮ ರಾಜಕಾರಣ ಈವರೆಗೆ ಕಂಡುಕೊಂಡಿಲ್ಲ. ಹಾಗೆಯೇ ನಮ್ಮ ಸಮಾಜ ವಿಜ್ಞಾನಿಗಳು ಕೂಡ ವಿಶೇಷವಾಗಿ ಇಂತಹ ರಾಷ್ಟ್ರೀಯತೆಗಳನ್ನು ಆಧುನಿಕ ಸವಾಲುಗಳ ಮಧ್ಯೆ ಇಟ್ಟು ಚರ್ಚಿಸಿಲ್ಲ. ಈ ಅಂಶಗಳನ್ನೆಲ್ಲ ಕೆದಕುವಾಗ ದಲಿತರ ರಾಷ್ಟ್ರೀಯತೆ ಎನ್ನುವುದು ಅವರ ಪರಂಪರೆಯಲ್ಲೇ ಇದ್ದು, ಅದು ಅವರ ಜಾನಪದ ಸಂಸ್ಕೃತಿಯಲ್ಲಿ ಅಭಿವ್ಯಕ್ತಗೊಂಡಿರುತ್ತದೆ. ಮಲೆಮಾದೇಶ್ವರ ಮಂಟೇಸ್ವಾಮಿ, ಕಾಳಿಂಗರಾಯ ಕುಮಾರರಾಮ ಎಲ್ಲಮ್ಮ ಸಿರಿ ಮುಂತಾದವರ ಸಂಕಥನದಲ್ಲಿ ಮೌಖಿಕವಾಗಿ ಆಚರಣಾತ್ಮಕವಾಗಿ ದಲಿತರ ನಿಜವಾದ ಸಾಂಸ್ಕೃತಿಕ ವೀರರಾಗಿರುವಂತೆಯೇ ಅವರ ಪ್ರಾದೇಶಿಕ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ವ್ಯಕ್ತಿಗಳಾಗಿ ಬೆಳೆದಿದ್ದಾರೆ. ಈ ಹಿನ್ನೆಲೆಯ ರಾಷ್ಟ್ರೀಯತೆಯನ್ನು ಒಟ್ಟು ಅಲಕ್ಷಿತ ಭಾರತೀಯ ಪರಂಪರೆ ಉಳಿಸಿಕೊಂಡಿದೆ. ತನ್ನ ವ್ಯಾಪ್ತಿಯಲ್ಲೇ ಅನೇಕ ಸಮುದಾಯಗಳನ್ನು ತುಂಬಿಕೊಳ್ಳುವ ಭಾರತೀಯ ಪರಂಪರೆಗೆ ಕೇವಲ ಎಲ್ಲವನ್ನು ಹತ್ತಿರಕ್ಕೆ ಕರೆತರುವ ಶಕ್ತಿಯಿದೆಯೇ ಹೊರತು ಎಲ್ಲವನ್ನು ಒಂದೇ ಆಗಿ ಮಾಲು ಆಗುವುದಿಲ್ಲ. ಭಾರತದಲ್ಲಿ ಎಲ್ಲರ ಸಮಸ್ಯೆಗಳೂ ಒಂದೇ ರೀತಿ ಇರುವುದಿಲ್ಲ. ಹಾಗೆಯೇ ಒಂದೇ ಉದ್ದೇಶಕ್ಕೆ ಎಲ್ಲರೂ ಒಂದೇ ರೀತಿ ತುಡಿಯುವುದಿಲ್ಲ.

ಇದರಿಂದಲೇ ದಲಿತ ಸಮುದಾಯಗಳು ಪ್ರತ್ಯೇಕತೆಯನ್ನು ಬಯಸಿದಾಗ ಅದು ಪೂರ್ಣಪ್ರಮಾಣದ ದೋಷ ಅಲ್ಲ. ಎಲ್ಲರ ನೆಮ್ಮದಿಗೂ ಪೂರಕವಾದ ನ್ಯಾಯ ತೀರ್ಮಾನ ಸಾಧ್ಯವಾಗದ ಹೊತರು ನಮ್ಮ ಬಹುರಾಷ್ಟ್ರೀಯತೆಗಳ ಸಮಸ್ಯೆಗಳು ಬಗೆಹರಿಯಲಾರವು. ಸಾಂಸ್ಕೃತಿಕ ರಾಜ್ಯಗಳಾಗಿ ವಿಭಾಗ ಬಯಸುವ ಇಂತಹ ರಾಷ್ಟ್ರೀಯತೆಗಳಿಗೆ ವಿಶೇಷವಾದ ಪ್ರಭುತ್ವ ಮೋಹ ಇರುವುದಿಲ್ಲ. ಪ್ರತ್ಯೇಕತೆಯನ್ನು ತೊಡಕು ಎಂದು ಭಾವಿಸುವಾಗಲೆಲ್ಲ ವಿಕಾಸವಾಗುತ್ತಿರುವಲ್ಲೆಲ್ಲ ಸದಾ ತನಗೆ ಮಾತ್ರ ಅನನ್ಯ ಎನಿಸುವ ಪ್ರತ್ಯೇಕತೆಯನ್ನು ಬಯಸುವುದು ಒಟ್ಟು ಈ ಕಾಲದ ಪ್ರವೃತ್ತಿ. ಇಂತಹ ನೂರಾರು ಆತಂಕಗಳಲ್ಲೇ ಕೆಳ ಸಮುದಾಯಗಳ ರಾಷ್ಟ್ರೀಯ ಚಳವಳಿಗಳು ರೂಪುಗೊಳ್ಳುವುದು. ಇವತ್ತಿನ ದಲಿತರ ಪ್ರತ್ಯೇಕತೆಯ ಚಿಂತನೆಗಳು ಚರಿತ್ರೆಯ ಹಳೆಯ ತಕರಾದು ಎಂದೇ ತಿಳಿಯಬೇಕಾಗಿದೆ.

ಸಮಷ್ಟಿ ರಾಷ್ಟ್ರೀಯತೆ ಮತ್ತು ವಿಶ್ವದ ಏಕಾಕಾರ ಪರಧಿಯ ಲೋಕ

ಜಾಗತೀಕರಣದ ಈ ಹೊತ್ತಿನಲ್ಲಿ ಇಡೀ ಜಗತ್ತಿಗೆಲ್ಲ ಒಂದೇ ರಾಷ್ಟ್ರೀಯತೆ ಇದ್ದರೆ ಸಾಕು ಎಂಬ ಪಶ್ವಿಮಮುಖಿ ಅಭಿಪ್ರಾಯಗಳೂ ನಮ್ಮ ಎದಿರು ಇವೆ. ವಸಾಹತುಶಾಹಿ ಸಾಮ್ರಾಜ್ಯ ಜಗತ್ತಿಗೆಲ್ಲ ಒಂದೇ ರಾಷ್ಟ್ರೀಯತೆ ಇರಬೇಕೆಂದು ವಾದಿಸಿದ್ದರ ನೆನಪು ಕೂಡ ಈಗ ಹಳೆಯದಾಗಿದೆ. ವಿಶ್ವದ ಏಕಾಕಾರದಿಂದ ಪ್ರಪಂಚದ ಬಹು ಆಕಾರಗಳನ್ನು ಸಂವೇದನೆಗಳನ್ನು ಸ್ವಾತಂತ್ರ್ಯದ ಹಂಬಲಗಳನ್ನು ಕಾಣುವುದು ಸೂಕ್ತವಲ್ಲ. ಜಗತ್ತಿನ ಒಂದು ಶ್ರೇಷ್ಠ ಮಾದರಿಗೆ ಬದ್ಧವಾಗಿ ಜಾಗತಿಕ ರಾಷ್ಟ್ರೀಯ ಕಲ್ಪನೆಯಲ್ಲಿ ಯಾರೂ ಇರಬೇಕಾದ್ದಿಲ್ಲ. ಜಗತ್ತು ಎಂದರೆನೇ ವಿವಿಧ ಸಂಸ್ಕೃತಿಗಳ ನಿರಂತರ ಆಕರ್ಷಣೆ ಮತ್ತು ಕರ್ಷಣೆ. ಇದರ ಒಳಗೇ ಎಲ್ಲದರ ಅಸ್ತಿತ್ವ ಹುಡುಕಾಟ ಹಂಬಲಗಳು ಕಾಣಿಸಿಕೊಳ್ಳುವುದು.

ಆದರೆ ಭಾರತದ ಮಟ್ಟಿಗೇ ಹೇಳುವುದಾದರೆ ನಮಗಿನ್ನೂ ಸಮಷ್ಠಿ ರಾಷ್ಟ್ರೀಯತೆ ಸಾಧ್ಯವಾಗಿಲ್ಲ. ಎಲ್ಲ ಪರಂಪರೆಯ ಸಮುದಾಯಗಳ ಏಕಾಶಯ ಬಹುತ್ವ ಪರಂಪರೆಯಲ್ಲಿ ಸಾಧ್ಯವಾಗುವುದೇ ಸಮಷ್ಠಿ ರಾಷ್ಟ್ರೀಯತೆ. ಇಂತಹ ಏಕಾಶಯದ ರಾಷ್ಟ್ರೀಯತೆಯನ್ನು ಬಯಸುವುದು ಹಿಂದಿನಿಂದಲೂ ನಡೆಯುತ್ತ ಬಂದಿದ್ದರೂ ಅದರ ಐಕ್ಯತೆಯ ನಿರ್ಧಾರದಲ್ಲಿ ಅನೇಕ ತೊಡಕುಗಳಿವೆ. ಒಂದು ಸಮುದಾಯದ ಹಿತ ಮತ್ತೊಂದು ಸಮುದಾಯದ ಹಿತಕ್ಕೆ ಯಾವಾಗ ಧಕ್ಕೆ ತರುವುದಿಲ್ಲವೋ ಅಂತಹ ರಾಷ್ಟ್ರೀಯತೆಯೇ ಈಗ ಭಾರತಕ್ಕೆ ಬೇಕಾಗಿರುವುದು. ಮೀಸಲಾತಿಯ ನ್ಯಾಯದಿಂದ ಏಕಾಶಯವನ್ನು ಏಕ ರಾಷ್ಟ್ರೀಯತೆಯನ್ನು ರೂಪಿಸಲು ಸಾಧ್ಯವಿಲ್ಲ ಎಂದು ಎಲ್ಲಿ ನೆನಪಿಸಬೇಕಾಗುತ್ತದೆ. ಧರ್ಮವನ್ನು ರಾಜಕಾರಣದ ತಂತ್ರವಾಗಿಸಿಕೊಳ್ಳುವುದರಿಂದಲೂ ಬಹುತ್ವದ ಸಮಷ್ಠಿ ರಾಷ್ಟ್ರೀಯತೆಯನ್ನು ತರಲು ಸಾಧ್ಯವಾಗುವುದಿಲ್ಲ ಎಂಬುದು ಈಗಾಗಲೇ ಅನುಭವಕ್ಕೆ ಬಂದಿದೆ. ಹೀಗೆ ಧರ್ಮವನ್ನು ಅದರಲ್ಲೂ ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳನ್ನು ಉಳಿದೆಲ್ಲ ಸಮುದಾಯಗಳ ಪ್ರಾತಿನಿಧಿಕ ಧರ್ಮ ಎಂಬಂತೆ ಸ್ಥಿರೀಕೃತ ವಾದಿಗಳು ವಾಸಿಸುವುದು ಕೂಡ ಸಮಷ್ಠಿ ರಾಷ್ಟ್ರೀಯತೆಗೆ ಧಕ್ಕೆ ತಂದೊದಗಿಸಿದೆ. ಆಯಾಯ ಭಾಷಾ ವಲಯ ವರ್ಗ ಗುಂಪುಗಳು ಕೂಡ ಅವರವರ ಸಮಷ್ಠಿ ರಾಷ್ಟ್ರೀಯತೆಯನ್ನು ಬಿಂಬಿಸಿರುವಾಗ ಏಕ ಭಾಷೆಯ ಹೇರಿಕೆಯಿಂದಲೂ ಅನೇಕ ದಲಿತ ಸಮುದಾಯಗಳನ್ನು ಹೊರಗಿಟ್ಟಂತೆ ಮಾಡುತ್ತದೆ. ಇದೇ ವೇಳೆಗೆ ಜಾಗತೀಕರಣವೂ ಬಹುರಾಷ್ಟ್ರೀಯ ಪ್ರಭುತ್ವವೂ ನಮ್ಮೊಳಗೆ ಮಿಳಿತವಾಗುತ್ತಿರುವಾಗ ಅನೇಕ ತಳ ಸಮುದಾಯಗಳು ಒಂದೋ ಆ ಬಗೆಯ ವಿದೇಶಿ ರಾಷ್ಟ್ರೀಯತೆಗಳಲ್ಲಿ ಮುಳುಗಿ ತನ್ನ ರೂಪವನ್ನೂ ಆಶಯವನ್ನೂ ಕಳೆದುಕೊಳ್ಳುತ್ತವೆ, ಇಲ್ಲವೇ ಭಾರತದ ಯಾವುದೇ ಒಂದು ವೈದಿಕ ರಾಷ್ಟ್ರೀಯತೆಗೆ ಬಲಿಯಾಗಿ ಬಿಡುತ್ತದೆ. ಹೀಗೂ ಆಗದೆ ಪ್ರತ್ಯೇಕತೆಯನ್ನು ಮತ್ತಷ್ಟು ಗಾಢವಾಗಿ ಒತ್ತಾಯದಿಂದ ರೂಪಿಸಿಕೊಂಡು ವಿಚ್ಛಿದ್ರಕಾರಿ ಭೂಗತ ಚಟುವಟಿಕೆಗಳಲ್ಲಿ ಇಂತಹ ಸಮುದಾಯಗಳ ಇಳಿಯುವಂತೆ ಮಾಡುತ್ತದೆ. ಇವತ್ತು ಭಾರತದಲ್ಲಿ ಹುಟ್ಟಿಕೊಂಡಿರುವ ನಕ್ಸಲ್ ಚಳುವಳಿಗಳಾಗಲಿ ಭಯೋತ್ಪಾದಕ ಕಾರ್ಯಚಟುವಟಿಕೆಗಳಾಗಲಿ ಮುಂದೆ ಇಂತಹ ಸಮಸ್ಯೆಗಳ ಭಿನ್ನ ಸ್ವರೂಪವಾಗಿ ರೂಪಾಂತರಗೊಳ್ಳಬಲ್ಲವೆಂಬ ಊಹೆ ಹತ್ತಿರವಾಗುತ್ತದೆ.

ಹೀಗಾಗಿ ಸಮಷ್ಠಿ ರಾಷ್ಟ್ರೀಯತೆಯನ್ನು ಆಶಿಸುವ ದಾರಿಯಲ್ಲೆ ಭಾರತದ ಪ್ರಜಾಪ್ರಭುತ್ವ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಜೊತೆಗೆ ವಿಶ್ವದ ಏಕ ಮಾದರಿಗಳಿಂದ ಆಕರ್ಷಿತವಾಗುತ್ತಿರುವ ನಮ್ಮ ಸಮಾಜಗಳು ಸಾಂಸ್ಕೃತಿಕ ವಿಸ್ಮೃತಿಗಿಂತಲೂ ರಾಜಕೀಯ ವಿಸ್ಮೃತಿಯನ್ನು ಅಪೇಕ್ಷಿಸುತ್ತಿರುವಂತಿದೆ. ಏಕಮಾದರಿಗಳು ಎಂದರೆ ವಿಶ್ವದ ಮಾರುಕಟ್ಟೆಯನ್ನು ಗಮನಿಸಿದರೆ ಹೊಳೆಯುತ್ತದೆ. ಇವತ್ತಿನ ಇಂಟರ್ ನೆಟ್ ಸಂಸ್ಕೃತಿಯಾಗಲಿ, ಮುಕ್ತ ರಾಷ್ಟ್ರೀಯತೆಯಾಗಲಿ ಜಗತ್ತಿನ ಎಲ್ಲರ ಸಂವೇದನೆಗಳನ್ನು ಆರ್ಥಿಕ ನೀತಿಗಳು ಒಂದು ಮಾಡುತ್ತಿರುವುದಾಗಲಿ ಇವೆಲ್ಲ ವಿಶ್ವದ ಅನುಭೋಗಿ ಪರಂಪರೆಯನ್ನು ಏಕತ್ರಗೊಳಿಸುತ್ತ ಸಂವೇದನೆಯನ್ನು ನಿರ್ಧರಿಸುವ ಆಯಾಮಗಳಾಗಿ ಬಿಡುತ್ತವೆ. ಇಂತಹ ಮಾದರಿಗಳು ದೇಶೀ ನೆಲೆಯ ಸಂವೇದನೆಯನ್ನು ಅರಿವನ್ನೂ ಮುಚ್ಚಿ ಹಾಕಿ ಬಿಡುವಷ್ಟು ಪ್ರಬಲವಾಗಿರುತ್ತವೆ. ನಮ್ಮ ಎಲ್ಲ ಆರ್ಥಿಕ ಚಿಂತನೆಗಳು ಕೊನೆಗೆ ವಿಶ್ವದ ಯಾವುದೋ ಒಂದು ಪ್ರಬಲ ಮಾರುಕಟ್ಟೆಯ ರಾಜಕಾರಣದ ಅಂಕುಶಕ್ಕೆ ಒಳಗಾಗಿ ದೇಸೀ ರಾಷ್ಟ್ರೀಯ ನೆಲೆಗಟ್ಟುಗಳು ಸಡಿಲವಾಗುತ್ತವೆ. ಇಂತಹ ಅನೇಕ ಸವಾಲುಗಳಿಗೆ ಒಳಪಡುವ ಸಮುದಾಯಗಳು ರಾಷ್ಟ್ರೀಯ ಹತಾಶೆ ಕ್ಷೋಬೆಗೆ ಒಳಗಾಗಿ ದಿಕ್ಕು ತಪ್ಪುವುದರಿಂದ ಮುಂದೆ ಅಪಾಯಗಳೇ ಹೆಚ್ಚಿವೆ.

ಗಾಂಧಿ ಯುಗದ ಪ್ರತಿಬಿಂಬದಲ್ಲಿರುವ ಈಗಿನ ನಾವು ಗಾಂಧಿಯ ನೆನಪೇ ಇಲ್ಲದಂತೆ ನೀತಿ ಸಂಹಿತೆಗಳನ್ನು ರೂಪಿಸಿಕೊಳ್ಳುತ್ತಿರುತ್ತೇವೆ. ಗಾಂಧೀಜಿಯ ಗ್ರಾಮ ರಾಜ್ಯದ ಕಲ್ಪನೆಯೇ ದೇಸೀ ಆರ್ಥಿಕ ಚಿಂತನೆಗಳಿಂದ ಬಂದದ್ದು. ಗಾಂಧಿಯ ಆರ್ಥಿಕ ಅರಿವು ಭಾರತದ ಸಾಂಪ್ರದಾಯಕ ಕುಶಲ ಕರ್ಮಿಗಳನ್ನು ತಾಂತ್ರಿಕ ವಿವೇಕವನ್ನು ಅಂತಹ ಸಮುದಾಯಗಳಿಂದ ಬಂದ ಆರ್ಥಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಂಡಿತ್ತು. ಹೀಗಾಗಿಯೇ ಅವರು ವಿವಿಧ ಸಮುದಾಯಗಳನ್ನು ಒಂದು ಆಕಾರಕ್ಕೆ ಕಾಯಕದ ನೆಲೆಯಿಂದ ದೇಸೀ ಉದ್ದಿಮೆಗಳ ಕಲ್ಪನೆಯಿಂದ ಗುಡಿ ಕೈಗಾರಿಕೆಯನ್ನು ಪ್ರತಿಪಾದಿಸಿದ್ದು ಭಾರತದಲ್ಲಿ ಇಂತಹ ಬಿಡಿಬಿಡಿಯಾದ ಆದರೆ ಒಂದರ ಉತ್ಪನ್ನ ಮತ್ತೊಂದರ ಉತ್ಪನ್ನಕ್ಕೆ ಹೊಂದಿಕೆಯಾಗುವ ಒಂದು ಇನ್ನೊಂದನ್ನು ಆಧರಿಸಿಯೆ ಬೆಳೆಯುವ ಸಮೂಹ ಬದ್ಧವಾದ ತಾಂತ್ರಿಕ ಕೌಶಲ್ಯದ ಸಮಷ್ಠಿ ಆರ್ಥಿಕ ಯೋಜನೆಗಳನ್ನು ಗಾಂಧೀಜಿ ಬಹಳ ಆಳದಿಂದ ಬಲ್ಲವರಾಗಿದ್ದರು. ಅವರವರ ತಾಂತ್ರಿಕ ಕೌಶಲ್ಯದ ಉತ್ಪನ್ನ ವಿಧಾನವೇ ಎಷ್ಟೋ ಬಾರಿ ಅವರವರ ಸಾಮಾಜಿಕ ಆರ್ಥಿಕ ರಾಜಕೀಯ ರಾಷ್ಟ್ರೀಯತೆಯನ್ನು ತೀರ್ಮಾನಿಸುವಂತಿದ್ದವು.

ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಇವರಿಬ್ಬರ ದೃಷ್ಟಿಕೋನಗಳನ್ನು ರಾಷ್ಟ್ರೀಯ ಕಲ್ಪನೆಗಳಲ್ಲಿ ಹೋಲಿಸಿ ಭಿನ್ನವಾಗಿ ನೋಡಬಹುದು. ಗಾಂಧಿ ಅಂಬೇಡ್ಕರ್ ಇವರಿಬ್ಬರೂ ನನ್ನ ಮಟ್ಟಿಗೆ ಇಪ್ಪತ್ತನೆ ಶತಮಾನದ ಬಹುದೊಡ್ಡ ಸೇಜನಶೀಲರೂ ಸಾಂಸ್ಕೃತಿಕ ವೀರರೂ ಹೌದು. ಸಮುದಾಯದ ಅಥವಾ ಸಮಷ್ಠಿ ಧ್ಯಾನ ಚಿಂತನೆಯ ಪರಂಪರೆಯನ್ನು ನಿರೂಪಿಸುತ್ತಾ ಕಾಲದೇಶದ ಎಲ್ಲೆಗಳನ್ನೂ ನಿರ್ಜಾತಿ ನಿರ್ವರ್ಗೀಕರಣದಿಂದ ದಾಟುತ್ತಾ ಸಮುದಾಯದ ಮಿತಿಗಳನ್ನು ಮುರಿಯುವ ಹಾಗೆ ಆ ಸಮುದಾಯದ ಅಂತಃಸಾಕ್ಷಿಯನ್ನು ಬಲಪಡಿಸುವ ನಾಳಿನ ಆಶಯಗಳನ್ನು ಕಟ್ಟುವ ಮತ್ತು ಪರಂಪರೆಯ ಪುರಾಣಗಳನ್ನು ಹೊಸನಾದದಲ್ಲಿ ಬಿಂಬದಲ್ಲಿ ಮತ್ತೆ ಸೃಷ್ಟಿಸುವ ಯಾರೇ ಆದರೂ ಸಾಂಸ್ಕೃತಿಕ ವೀರರಾಗಿರುತ್ತಾರೆ. ಒಂದು ಕಾಲಘಟ್ಟದ ಪುರಾಣವನ್ನು ಸೀಳಿ ಅದರೊಳಗೆ ತನ್ನ ಮತ್ತು ನಾಳಿನ ಹಾಗೂ ಹಿಂದಿನ ಎಲ್ಲ ಅನುಭವವನ್ನು ಹೊಸ ಛಾಪಿನಿಂದ ರೂಪಿಸುವವರೇ ಸಾಂಸ್ಕೃತಿಕ ವೀರರು. ಗಾಂಧಿ ಮತ್ತು ಅಂಬೇಡ್ಕರ್ ಆಧೂನಿಕ ಭಾರತದ ಸಾಂಸ್ಕೃತಿಕ ವೀರರಾಗಿದ್ದು ಇವರಿಬ್ಬರನ್ನು ಪ್ರತ್ಯೇಕವಾಗಿಟ್ಟು ನೋಡುವುದು ಸೂಕ್ತವಲ್ಲ. ದಲಿತ ಬಂಡಾಯದ ಅನೇಕ ಬರಹಗಾರರು ಸಂಸ್ಕೃತಿ, ಸಾಹಿತ್ಯ ಚರಿತ್ರೆ ಸಂಗತಿಗಳ ಚೌಕಟ್ಟಿನಲ್ಲಿ ಇವರಿಬ್ಬರನ್ನೂ ಬಲಾಡ್ಯರಾದ ಇಬ್ಬರು ಕುಸ್ತಿ ಪಟುಗಳಂತೆ ನಿಲ್ಲಿಸಿ ಒಬ್ಬೊಬ್ಬರ ಪರ ವಕಾಲತ್ತು ವಹಿಸಿ ಹುಮ್ಮಸ್ಸಿನಿಂದ ಅದರ ವಿಚಾರಗಳ ಕಾಳಗವನ್ನು ಹೂಡಿ ಇಬ್ಬರನ್ನೂ ತಪ್ಪಾಗಿ ವ್ಯಾಖ್ಯಾನಿಸುವ ಮಹಾಕಾರ್ಯವನ್ನು ಮಾಡುತ್ತಿರುತ್ತಾರೆ. ಇಂತಹ ಬರಹ ಮಾತು ವಿಚಾರಗಳು ಇವತ್ತು ಒಂದು ರೋಗ ಎನ್ನುವ ಮಟ್ಟಕ್ಕೆ ಹೋಗಿರುವುದು ಹಾಗೂ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ವಿರುದ್ಧವೂ ಹುಳುಕ ಕಂಡುಹಿಡಿದವರಂತೆ ತಪ್ಪು ವ್ಯಾಖ್ಯಾನಗಳಿಗೆ ಒಳಪಡಿಸುವುದು ತುಂಬಾ ಅನ್ಯಾಯದ ಕೆಲಸ. ನನ್ನ ಮಟ್ಟಿಗೆ ಗಾಂಧೀ ಅಂಬೇಡ್ಕರ್ ಇಬ್ಬರೂ ಒಂದೇ ವ್ಯಕ್ತಿತ್ವದ ಎರಡರ ಒಂದೇ ಪ್ರತಿ ಬಿಂಬಗಳು. ತಾತ್ವಿಕವಾದ ಕೆಲವೊಂದು ಭಿನ್ನಾಭಿಪ್ರಾಯಗಳನ್ನು ಹೊರತು ಪಡಿಸಿದರೆ ಇಬ್ಬರೂ ನನಗೆ ಒಂದೇ ಆಗಿ ಕಾಣುತ್ತಾರೆ.

ನೋಡುವಲ್ಲಿ ಇಬ್ಬರೂ ಎರಡು ಧ್ರವಗಳಂತೆ ಕಂಡರೂ ದಲಿತ ಸಮುದಾಯಗಳ ರಾಷ್ಟ್ರೀಯ ಪ್ರಜ್ಞೆಯ ಆಳಕ್ಕೆ ಪೂರಕವಾದ ಒಳದನಿಯನ್ನು ಹೊಂದಿದವರಾಗಿದ್ದರು. ಗಾಂಧೀ ಬಟ್ಟೆಯನ್ನು ಬಚ್ಚಿಕೊಂಡು ಕಚ್ಚೆ ಪಂಜೆ ಹಾಕಿಕೊಂಡು ಭಾರತದ ಅತ್ಯಂತ ಕೆಳವರ್ಗದ ಜಾತಿಯ ಬಡ ಭಾರತೀಯನನ್ನು ಅದರಲ್ಲೂ ಗ್ರಾಮೀಣ ಭಾರತದ ಒಬ್ಬ ಅಸಹಾಯಕನ ವೇಷದಂತೆ ರೂಪಾಂತರಗೊಂಡು ಪಶ್ಚಿಮದ ವೇಷವನ್ನು ಕಳಚಿಟ್ಟು ನಿಜವಾದ ಭಾರತದ ದೇಸೀ ವ್ಯಕ್ತಿಯಾಗಿ ಮಾರ್ಪಟ್ಟದ್ದು, ನಿಸ್ಸಂದೇಹವಾಗಿ ಸಾಂಸ್ಕೃತಿಕ ವಿಸ್ತರಣೆ. ಭಾರತಕ್ಕೆ ಬೇಕಿದ್ದುದು ಅಂತಾದ್ದೇ ಸಮಷ್ಠಿ ರಾಷ್ಟ್ರೀಯತೆಯನ್ನು ರೂಪಿಸಲು ಗಾಂಧಿಗೆ ಇದ್ದ ದಾರಿ ಅದೊಂದೇ. ಬೆತ್ತಲಾಗಿರುವ ಭಾರತದಲ್ಲಿ ಗಾಂಧಿ ಅರೆಬೆತ್ತಲಾದದು, ಸಾಂಸ್ಕೃತಿಕ ಸಂಕೇತವಾಗಿದ್ದಂತೆಯೇ ಗಾಂಧಿಯ ಅಗಾಧವಾದ ಸೂಕ್ಷ್ಮತೆಯ ವೈಚಾರಿಕ ಪ್ರತಿಮೆಯೂ ಆಗಿತ್ತು. ಭಾರತದ ರಾಷ್ಟ್ರೀಯತೆ ಹುಟ್ಟಬೇಕಾದದ್ದು ಗಾಂಧಿಯ ಇಂತಹ ವೈಚಾರಿಕ ನಿಲುವಿನಿಂದಾಗಬೇಕಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್ಸಿಗೆ ಅಂತಹ ವೈಚಾರಿಕ ಆಕೃತಿಗಳನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಸ್ವಾತಂತ್ರ್ಯ ನಂತರದ ಭಾರತಕ್ಕೆ ಅದು ಇನ್ನೂ ದೂರವಾಗಿ ಕಂಡು ಮರೆಯಾಯಿತು.

ಇದಕ್ಕೆ ಭಿನ್ನವಾಗಿ ಅಂಬೇಡ್ಕರ್ ಅವರು ಬಟ್ಟೆಯನ್ನು ಮೈತುಂಬ ಮುಚ್ಚಿಕೊಂಡತು. ಯುರೋಪಿನ ವೇಷ ಶೈಲಿ ಅವರಿಗೆ ಹತ್ತಿರವಾಗಿ ಕಂಡಿತ್ತು. ಗಾಂಧಿಯ ಜನ ನಿರಂತರವಾಗಿ ಚೆಂದದ ಬಟ್ಟೆಗಳನ್ನು ಮೈತುಂಬ ಹೊದ್ದುಕೊಂಡು ಆನ ಮುಚ್ಚಿಕೊಳ್ಳುವ ಪರಿಯಲ್ಲಿದ್ದಾಗ ಗಾಂಧಿಗೆ ಬಟ್ಟೆಯನ್ನು ತ್ಯಜಿಸಿ ಅರೆಬೆತ್ತಲಾಗಿದ್ದು ಬಡ ಭಾರತೀಯನನ್ನು ಸಾಂಕೇತಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅದೇ ಅಂಬೇಡ್ಕರ್ ಅವರ ಜನಗಳಿಗೆ ಬಟ್ಟೆಯೇ ಇರಲಿಲ್ಲ. ಮೈ ಮನಸ್ಸು ಮಾನ ಏನನ್ನು ಮುಚ್ಚಿಕೊಳ್ಳಲು ಏನೂ ಇಲ್ಲದಂತಹ ಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಅಂಬೇಡ್ಕರ್ ತನ್ನ ಸಮುದಾಯದ ಪ್ರತೀಕವಾಗಿ ಮೈ ತುಂಬ ಯುರೋಪಿನ ವೇಷ ಶೈಲಿಯನ್ನು ಧರಿಸುವುದು ಅಷ್ಟೇ ಅನಿವಾರ್ಯವಾಗಿತ್ತು. ಅದರಲ್ಲೂ ಹಿಂದೂ ಧರ್ಮದ ವೇಷವನ್ನು ಬಿಟ್ಟು ಯುರೋಪಿನ ವೇಷವನ್ನೇ ತೊಡಗಬೇಕಾಗಿತ್ತು. ಅಂಬೇಡ್ಕರ್ ಅವರಿಗೆ ಅಂತಹ ಬಟ್ಟೆ ತೊಡುವುದು ಆತ್ಮ ಗೌರವವಾದಂತೆ ಗಾಂಧೀಗೂ ಅವರ ವೇಷ ಆತ್ಮ ಗೌರವದ ಸಂಕೇತವಾಗಿತ್ತು. ಇದು ಪರೋಕ್ಷವಾಗಿ ಇವರಿಬ್ಬರ ನಂಬಿಕೆಯ ಜಗತ್ತನ್ನು ತೋರುತ್ತದೆ.

ಇದರಂತೆಯೇ ಗಾಂಧೀಜಿಯವರ ಸಮನ್ವಯ ನೀತಿಯ ಬಹು ರಾಷ್ಟ್ರೀಯಗಳನ್ನು ಸಮಷ್ಠಿ ರಾಷ್ಟ್ರೀಯತೆಯ ವ್ಯಾಪ್ತಿಗೆ ಒಳಪಡಿಸುವಂತಾದ್ದಾಗಿತ್ತು. ಗಾಂಧಿಯ ಹೋರಾಟಗಳೆಲ್ಲ ದೇಸೂ ಹಾಗೂ ಪ್ರಾದೇಶಿಕ ಸ್ವಭಾವದಾಗಿದ್ದವೆಂಬುದನ್ನು ಅವರ ವಿಚಾರಗಳಲ್ಲಿ ಕಂಡುಕೊಳ್ಳಬಹುದು. ಒಂದು ಬಗೆಯಲ್ಲಿ ಗಾಂಧಿಯ ರಾಷ್ಟ್ರೀಯತೆ ಮಾತೃ ಮೂಲ ಸಂವೇದನೆಯದು. ತಾಯ್ತನದ ವ್ಯಕ್ತಿತ್ವ ಅವರಿಗಿದ್ದ ಕಾರಣದಿಂದಲೇ ಬಹು ಭಾರತದ ಎಲ್ಲ ಸಮುದಾಯಗಳನ್ನು ಆತ್ಮೀಯವಾಗಿ ಕಾಣುವಂತೆ ಮಾಡಿತ್ತು. ಅದರಿಂದಾಗಿಯೇ ತನ್ನ ಕೊನೆಯ ಅಸಹಾಯಕ ಮಕ್ಕಳನ್ನು ತಾಯಿ ಬಹು ಪ್ರೀತಿ ಹಾಗೂ ಎಚ್ಚರದಿಂದ ವಾತ್ಸಲ್ಯ ಕರುಣೆಯಿಂದ ಕಾಣುವಂತೆ ಮಾಡಿದಂತೆ ಗಾಂಧಿಗೆ ದಲಿತರನ್ನು ಹಾಗೆ ನೋಡುವಂತೆ ಮಾಡಿತ್ತು. ಇದರಿಂದಾಗಿಯೇ ಸಮನ್ವಯ ನೀತಿ ಅವರಲ್ಲಿ ಹುಟ್ಟಿಕೊಂಡಿದ್ದು. ಆದರೆ ಗಾಂಧಿ ನಂತರದ ಭಾರತದ ರಾಜಕೀಯ ಗುರಿಗಳೆಲ್ಲ ಸಮನ್ವಯವನ್ನು ಹೇಳುತ್ತಾ ಅಸಮನ್ವಯವನ್ನು ತಾಳುತ್ತಾ ಆ ಬಗೆಯ ಅಸಮನ್ವಯ ರಾಜಕೀಯ ಸಂಬಂಧವನ್ನು ಹೊಂದಿದ್ದ ಕಾರಣದಿಂದಲೇ ಸಮನ್ವಯದ ನಿಜವಾದ ಶಕ್ತಿ ಬಿದ್ದು ಹೋದದ್ದು.

ಅನೇಕ ಏಕಾಕಾರಗಳನ್ನು ಅವುಗಳ ಅನನ್ಯತೆಯ ಒಟ್ಟಿಗೇ ಇಟ್ಟುಕೊಳ್ಳುವ ಸಮನ್ವಯ ಪ್ರಜ್ಞೆಗಾಂಧಿಗಿತ್ತು. ಇಂತಹ ಸಮನ್ವಯ ಸರ್ವೋದಯವನ್ನು ತರುತ್ತದೆಂಬ ಗಾಢ ವಿಶ್ವಾಸ ಅವರಿಗೆ ಇದ್ದರಿಂದಲೇ ಒಟ್ಟು ಅವರ ಚಳುವಳಿಗೆ ಬಹುತ್ವ ಬಲ ಸಾಧ್ಯವಾಗಿದ್ದು. ಅನೇಕ ಸಮುದಾಯಗಳ ಐಕ್ಯತೆಯೇ ಸರ್ವೋದಯ ಮತ್ತು ಸಮನ್ವಯತೆ ಇಂತಾದ್ದರಿಂದ ಹುಟ್ಟುವ ರಾಷ್ಟ್ರೀಯತೆಯೇ ಸಮಷ್ಠಿ ರಾಷ್ಟ್ರೀಯತೆ. ಅಂದರೆ ಒಂದೇ ನಾಡಿನಲ್ಲಿ ಹಲವು ಸಮುದಾಯಗಳ ನಾಡಿ ಬಡಿತವನ್ನು ಹಿಡಿಯುವ ಕೆಲಸವನ್ನು ಗಾಂಧಿಯವರು ಮಾಡಿದ್ದರು. ಇಂತಾದ್ದರ ಪ್ರಭಾವದಿಂದಾಗಿಯೇ ಗಾಂಧಿ ಆಧುನಿಕ ಭಾರತದ ಸಾಂಸ್ಕೃತಿಕ ವೀರನಾಗಲು ಸಾಧ್ಯವಾದದ್ದು. ಇದೆ ಬಗೆಯಲ್ಲಿ ಅಂಬೇಡ್ಕರ್ ಅವರನ್ನು ನೋಡಬಹುದು. ಗಾಂಧಿ ಹೇಳಿದ ಸಮನ್ವಯ ಸರ್ವೋದಯ ಸಮಾನತೆಗಳು ಅಂಬೇಡ್ಕರ್ ಅವರಲ್ಲಿ ಭಿನ್ನವಾಗಿ ರೂಪಾಂತರಗೊಂಡಿವೆ. ಹಲವು ಸಮುದಾಯಗಳ ಸಮಷ್ಠಿ ರಾಷ್ಟ್ರೀಯತೆಗಿಂತ ಅಂಬೇಡ್ಕರ್ ಅವರಿಗೆ ಆಯಾಯ ಸಮುದಾಯಗಳ ರಾಷ್ಟ್ರೀಯತೆಯನ್ನು ಅನನ್ಯತೆಯನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿ ಇತ್ತು. ಅಂದರೆ ಗಾಂಧಿ ಇವರೆಲ್ಲರನ್ನು ಒಂದೇ ಮನೆಯಲ್ಲಿರಿಸಿ ಸರ್ವೋದಯ ಸರ್ವ ಸಮಾನತೆಯನ್ನು ನಿರೀಕ್ಷಿಸಿದರೆ ಅಂಬೇಡ್ಕರ್ ಅವರು ಅವರವರ ಅನನ್ಯತೆ ಸಂಸ್ಕೃತಿ ಪರಂಪರೆ ಮತ್ತು ಶೋಷಣೆಗಳ ಹಿನ್ನೆಲೆಯಲ್ಲಿ ಪ್ರತ್ಯೇಕಿಸಿ ಬೇರೆ ಬೇರೆ ಮನೆಗಳಲ್ಲಿ ಒಂದಾಗಿ ಇರಿಸುವಂತೆ ಆ ಮೂಲಕ ಸಮಷ್ಠಿ ಭಾರತದ ಐಕ್ಯತೆಯನ್ನು ಸಾಧಿಸುವಂತೆ ನಿರೀಕ್ಷಿಸಿದ್ದರು. ಅಂತರಂಗದಲ್ಲಿ ಇವೆರಡೂ ನೀತಿಗಳು ಬೇರೆ ಎಂದು ನನಗೆ ಕಾಣುವುದಿಲ್ಲ. ಸ್ವರೂಪದಲ್ಲಿ ಶೈಲಿಯಲ್ಲಿ ಇವರಿಬ್ಬರೂ ಬೇರೆಯಾಗಿದ್ದರೂ ಅಂತಿಮವಾಗಿ ಭಾರತೀಯ ಪರಂಪರೆಯ ಅವಮಾನ ಮತ್ತು ನೀರಿ ರಹಿತ ಸಾಮಾಜಿಕ ಆಕರ್ಷಣೆಗಳು ರೂಪಿಸಿದ ಮಹಾಶಕ್ತಿಗಳು.

ಗಾಂಧೀಜಿಯವರು ವಿವಿಧ ಏಕಾಕಾರಗಳಿಂದ ಒಂದು ಸಮ್ಮಿಶ್ರ ರಾಷ್ಟ್ರೀಯ ನೀತಿಯನ್ನು ಅರಿವನ್ನೂ ಅಂತಹ ರಾಜಕೀಯ ಇಚ್ಛೆಯನ್ನು ಪ್ರತಿನಿಧಿಸಿದರೆ ಅಂಬೇಡ್ಕರ್ ಅವರು ವಿವಿಧ ಕೃತಿಗಳಿಂದ ವಿವಿಧ ಮುಕ್ತಿ ವಿವಿಧ ಬಿಡುಗಡೆ ವಿವಿಧ ಪ್ರಾದೇಶಿಕ ಹಾಗೂ ಬಹುಮುಖಿ ಸಂವೇದನೆಗಳನ್ನು ಭಿನ್ನ ನೆಲೆಯಲ್ಲಿ ಅದರದೇ ಅನನ್ಯತೆಯಲ್ಲಿ ಹುಟ್ಟುವ ರಾಜಕೀಯ ಸಂಯೋಗವನ್ನು ಪ್ರತಿನಿಧಿಸುತ್ತಾರೆ. ವಿನಾಕಾರಣ ಇವರಿಬ್ಬರನ್ನು ಆಧುನಿಕ ಭಾರತದ ಜಾತಿ ರಾಜಕಾರಣದ ಕತ್ತಿಗಳ ಮಸೆಗಲ್ಲಿಗೆ ಇಟ್ಟು ಉಜ್ಜಿತೀಡಿ ರಂಪ ಮಾಡುವುದು ಸಾಂಸ್ಕೃತಿಕ ಅಪರಾಧವೆಂದು ನನಗೆ ತೋರುತ್ತದೆ.

ಒಟ್ಟು ಈ ಕಾಲದಲ್ಲಿ ದಲಿತರ ರಾಷ್ಟ್ರೀಯತೆಯ ನೆಲೆಗಳನ್ನು ಶೋಧಿಸುವಾಗ ಎಡಪಂಥೀಯ ಚಿಂತನೆಗಳಿಂದಲೂ ದಾಟಿದಂತೆ ನಮ್ಮ ನಮ್ಮ ಸಂಸ್ಕೃತಿ ಮತ್ತು ಜಾನಪದ ತೋರುವ ಅರಿವಿನಿಂದ ಸೂಚನೆಗಳಿಂದ ಆಧುನಿಕ ಕಾಲದ ಪ್ರಸ್ತುತ ಪ್ರಜ್ಞೆಗಳಿಂದಲೂ ಹುಡುಕಾಡುತ್ತಲೇ ದಲಿತ ಸಮುದಾಯಗಳು ವೈಚಾರಿಕ ಆಕೃತಿಗಳನ್ನು ಕಟ್ಟಿಕೊಳ್ಳಬೇಕಾದ ಕಾಲ ಇದಾಗಿದೆ ಎನಿಸುತ್ತದೆ. ಸಂಸ್ಕೃತಿಯನ್ನು ರಾಜಕೀಯ ಪಲ್ಲಟಗಳಲ್ಲಿ ಅರ್ಥಪೂರ್ಣವಾಗಿ ಸಂಯೋಗಿಸುತ್ತಲೇ ಬಹುತ್ವ ಪ್ರಭುತ್ವದ ಆಶಯಕ್ಕಾಗಿ ಆಶಿಸುತ್ತಲೇ ಅಲಕ್ಷಿತ ಸಮುದಾಯಗಳು ಬೇರೆ ಬೇರೆ ಸವಾಲುಗಳಿಗೆ ಮುಖಾಮುಖಿಯಾಗಬೇಕಾಗಿದೆ.