ನಮಗೆ ಸ್ವಾತಂತ್ರ್ಯ ಬಂದ ಈ ಐವತ್ತನೇ ವರ್ಷದಲ್ಲಿ ಗಾಂಧೀಜಿಯ ರಾಷ್ಟ್ರೀಯ ಚಳವಳಿಯನ್ನು ದೇಸಿ ನೆಲೆಯಿಂದ ವಿವೇಚಿಸುವ ಅಗತ್ಯವಿದೆ. ಇಪ್ಪತ್ತನೆ ಶತಮಾನದ ಬಹುದೊಡ್ಡ ಜನಪದ ಸಾಂಸ್ಕೃತಿಕ ವೀರ ಗಾಂಧಿ. ಭಾರತೀಯರನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಗಾಂಧಿಗೆ ಪಶ್ಚಿಮದ ಕ್ರಾಂತಿಯ ಮಾದರಿಗಳ ಅಗತ್ಯ ಇರಲಿಲ್ಲ. ಹಾಗೆಯೇ ಯುರೋಪಿನ ಸಮಾಜದಂತೆಯೂ ಸ್ವಾತಂತ್ರದ ಕಲ್ಪನೆಯಂತೆಯೂ ಭಾರತೀಯ ಸಮುದಾಯಗಳು ಇರಲಿಲ್ಲ. ಗಾಂಧಿಗೆ ತನ್ನದೇ ಆದ ದೇಸೀ ಹೋರಾಟವನ್ನು ಹುಡುಕಿಕೊಳ್ಳಬೇಕಾಗಿತ್ತು. ಜಾತಿ ಉಪಜಾತಿ ಪಂಗಡ ಕೋಮು ಬುಡಕಟ್ಟುಗಳಾಗಿ ಅನೇಕ ರೀತಿಯಲ್ಲಿ ವಿಭಜನೆಗೊಂಡಿದ್ದ ಭಾರತಗಳು ಗಾಂಧಿಯ ಎದುರಿಗಿದ್ದವು. ಇಂತಹ ವಿವಿಧ ಸಮುದಾಯಗಳನ್ನು ಏಕ ಭಾರತವಾಗಿ ಒಗ್ಗೂಡಿಸುವುದಕ್ಕೆ ಬಹುಪಾಲು ನಮ್ಮ ಎಲ್ಲ ರಾಷ್ಟ್ರೀಯ ನಾಯಕರು ವಿಫಲಗೊಂಡಂತೆಯೇ ಕಾಣುತ್ತದೆ. ಮೊದಲು ರಾಜಕೀಯ ಸ್ವಾತಂತ್ರ್ಯ ಪಡೆಯುವುದರ ಜೊತೆಗೆ ಆರ್ಥಿಕ ಹಕ್ಕನ್ನು ಹೊಂದುವಿದು ಅವರ ಪ್ರಧಾನ ಗುರಿಯಾಗಿತ್ತು. ಕಾಂಗ್ರೆಸ್‌ನ ಧುರೀಣರ ಕನಸಿನಲ್ಲಿ ಭಾರತ ಎಂಬ ಮನೆಯ ಒಳಗೇ ಎಷ್ಟೊಂದು ಭಾವನೆಗಳಾಗಲಿ ಗೊತ್ತಿರಲಿಲ್ಲ. ಸಾಂಸ್ಕೃತಿಕ ಸಮಾನತೆಯ ಚಳುವಳಿಯ ಸ್ಪಷ್ಟ ಅರಿವು ಗುರಿ ಮತ್ತು ದಾರಿಗಳು ಕಡೆ ಅವರು ಗಮನಕೊಟ್ಟಂತಿರಲಿಲ್ಲ. ಪ್ರಧಾನ ದನಿಗಳ ಪ್ರಧಾನ ಜನಗಳ ದೊಡ್ಡ ಗದ್ದಲದಲ್ಲಿ ಬಹು ಸಂಖ್ಯಾತರ ಸ್ವಾತಂತ್ರ್ಯಕ್ಕೂ ಮೀರಿದ ಅಂತರಾಳದ ಚರಿತ್ರೆಯ ವಿವರಗಳು ಅಳಿಸಿ ಹೋದವು. ಇಂತಹ ಮಾತುಗಳು ಇವತ್ತು ಹಳಸಲಾಗಿರಬಹುದಾದರೂ ಈ ಮಾತುಗಳ ಹಿಂದಿನ ದೇಶೀ ಚರಿತ್ರೆಯ ಹುಡುಕಾಟದಲ್ಲಿ ಬಹು ಸಂಖ್ಯಾತ ಸಮುದಾಯಗಳ ರಾಷ್ಟ್ರೀಯ ಚರಿತ್ರೆಯನ್ನು ನಮ್ಮ ಸ್ವಾತಂತ್ರ್ಯ ಚಳುವಳಿಯಲ್ಲಿ ಈ ಸಮುದಾಯಗಳ ಅರ್ಥವನ್ನೂ ನಾವು ಅರಿಯಬೇಕಾದದ್ದು ತುಂಬ ಇದೆ. ಈ ಹಿನ್ನೆಲೆಗಳಲ್ಲೇ ದಲಿತರ ರಾಷ್ಟ್ರೀಯತೆಯ ಕಲ್ಪನೆ ದೇಶೀ ರೂಪಗಳಲ್ಲಿ ಆಕೃತಿ ಪಡೆದಿರುತ್ತದೆ. ಅಂತಾದ್ದರ ಒಂದು ಸಂಕೇತವೇ ಗಾಂಧೀಜಿ ಮತ್ತು ಅಂಬೇಡ್ಕರ್.

ಗಾಂಧೀಜಿ ಮೂಲತಃ ಸಾಂಸ್ಕೃತಿಕ ಚಳುವಳಿಗೆ ಮತ್ತು ಆ ನೆಲೆಗಳಿಂದ ಹುಟ್ಟುವ ಸ್ವಾತಂತ್ರ್ಯಕ್ಕೆ ಪ್ರಯತ್ನಿಸಿದರಾದರೂ ಪುರೋಹಿತಶಾಹಿ ಮತ್ತು ಊಳಿಗಶಾಹಿ ಶಕ್ತಿಗಳು ಪೂರ್ಣ ಪ್ರಮಾಣದ ಸಾಂಸ್ಕೃತಿಕ ಕ್ರಾಂತಿ ಆಗದಂತೆ ತಡೆ ಹಿಡಿದು ಬಿಟ್ಟವು. ಹೀಗಾಗಿ ವಿವಿಧ ಸಾಮಾಜಿಕವೂ ಆಗಿ ಪ್ರತ್ಯೇಕ ಗುಂಪುಗಳಂತೆ ಹೊಡೆದು ಹೋಗಿದ್ದ ಹಲವು ಭಾರತಗಳ ಅನೇಕ ಆಶಯಗಳು ಪರಿಧಿಗೆ ಸರಿಯುವಂತಾದವು. ಪ್ರಧಾನರ ಚರಿತ್ರೆ ಪರಧಯಲ್ಲಿರುವವರ ಚರಿತ್ರೆಯ ಮೇಲೆ ಯಾವತ್ತೂ ಯಾಜಮಾನ್ಯವನ್ನೇ ತೋರುತ್ತಿರುತ್ತದೆ. ಇಂತಹ ಪ್ರಧಾನರ ಚರಿತ್ರೆ ಪರಿಧಿಗೆ ಸರಿದುಕೊಂಡ ಚಿರಿತ್ರೆಯನ್ನು ಅಧೀನ ಎಂದೂ ಅಪ್ರಸ್ತುತ ಎಂದೂ ಅಮುಖ್ಯ ಎಂದೂ ಭಾವಿಸುತ್ತ ಬಹುಸಂಖ್ಯಾತರ ಚರಿತ್ರೆಯ ಆಳದ ತಲ್ಲಣ ಸಂಕಟ ಅವಮಾನ ಪ್ರಾಣ ಹಾನಿ ಹಾಗೂ ತ್ಯಾಗವನ್ನು ಹುಸಿಘನತೆಯಿಂದ ವೈಭವೀಕರಿಸಿ ಅವರ ನಿಜದನಿಯನ್ನು ತಾನೇ ನುಂಗಿ ಅವರ ದುರಂತದ ಕಾರಣಗಳನ್ನು ಮತ್ತು ಪ್ರಧಾನ ಚರಿತ್ರೆಯ ಪಾಪಗಳನ್ನು ಅಲಂಕಾರದ ವೀರ ರಾಷ್ಟ್ರೀಯತೆಯ ಪೋಷಾಕಿನಲ್ಲಿ ಬಚ್ಚಿಡುತ್ತಿರುತ್ತದೆ.

ಜನಪರ ಚರಿತ್ರೆಯನ್ನು ಎಡ ಪಂಥೀಯರು ವಿವರಿಸಿ ಹೊಗಳುವಂತೆ ನಾನಿಲ್ಲಿ ಹೇಳಬಯಸುತ್ತಿಲ್ಲವೆಂದು ತಾವು ಗಮನಿಸಬೇಕು. ನೊಂದವರನ್ನು ನಗುವವರ ವಿರುದ್ಧ ಗುಂಪು ಮಾಡಿ ವ್ಯಾಖ್ಯಾನಿಸುವುದು ಮಿತಿ ಎಂದು ಈಗಾಗಲೇ ನಮಗೆಲ್ಲಾ ಅರಿವಿಗೆ ಬಂದಿದೆ. ಮಾರ್ಕ್ಸ್‌ವಾದಿಗಳು ಹೇಳುವಂತಹ ಚರಿತ್ರೆಯ ಘಟಕಗಳಾಗಿ ಜನಪದರನ್ನು ಭಾವಿಸಲಾಗುವುದಿಲ್ಲ. ತಮ್ಮದೇ ಬದುಕಿನ ಸಂಕೀರ್ಣವಾದ ಇಕ್ಕಟ್ಟಿನಲ್ಲಿ ಸಿಲುಕಿ ಸಂಸ್ಕೃತಿ ಮತ್ತು ಪರಂಪರೆಯ ಸಂವಿಧಾನಕ್ಕನುಗುಣವಾಗಿ ಬದುಕುವ ಸಮುದಾಯಗಳು ಸರಳ ರೇಖೆಯಂತಹ ವರ್ಗಗಳಾಗಿ ವಿಭಜನೆ ಗೊಂಡಿರುವುದಿಲ್ಲ. ದಲಿತ ಸಮುದಾಯಗಳ ಸಮಷ್ಠಿ ಪ್ರಜ್ಞೆಯ ವಿಕಾಸದ ಪ್ರಕ್ರಿಯೆಯಲ್ಲಿ ಕಾಲ ದೇಶಗಳನ್ನು ಮೀರಿದ ಮನುಷ್ಯ ಸಮಾಜದ ಪ್ರತಿಬಿಂಬಗಳು ಅಡಗಿರುತ್ತವೆ. ಉತ್ಪಾದನಾ ಘಟಕವಾಗಿ ಒಂದು ಜನಾಂಗ ಇಲ್ಲವೇ ಗುಂಪನ್ನು ವರ್ಗೀಕರಿಸಿದ ಕೂಡಲೆ ಆ ಸಮುದಾಯಗಳ ಆಳದ ಸಂವೇದನೆಗಳನ್ನು ಕಡೆಗಣಿಸಿ ಅಲ್ಲಿನ ಯಾವುದೋ ಒಂದು ಆಯಾಮವನ್ನು ಮಾತ್ರ ಪರಿಗಣಿಸಿದಂತಾಗಿರುತ್ತದೆ. ದಲಿತ ಸಮುದಾಯಗಳು ಮಾರ್ಕ್ಸ್ ಹೇಳುವ ತತ್ವವನ್ನು ಮೊದಲೇ ಅವರೇ ಅವರ ಜೀವನದ ಅನುಭವದಿಂದ ಅರಿತಿದ್ದರೂ ಕೂಡ ಅದಕ್ಕೆ ಅವರೆಲ್ಲ ಯಾವ ಬಗೆಯ ಪರಿಹಾರವನ್ನು ಯಾವ ರೀತಿಯಲ್ಲಿ ಕಂಡುಕೊಂಡರೆಂಬುದರ ಕಡೆಗೆ ನಮ್ಮ ಗಮನ ಹೋಗಬೇಕಾಗಿದೆ. ಇಂತಹ ಒಳ ಅರಿವಿನ ಸೊಲ್ಲನ್ನು ನಮ್ಮ ಗಾಂಧಿ ಭಾರತೀಯ ಸಮುದಾಯಗಳ ಸಂದರ್ಭದಲ್ಲಿ ಬಹಳ ಸೂಕ್ಷ್ಮವಾಗಿ ಗ್ರಹಿಸಿದ್ದನ್ನು ಕಾಣಬಹುದು. ಗಾಂಧಿಗೆ ಮಾರ್ಕ್ಸ್ ಹೇಳಿದ ಚರಿತ್ರೆ ಗೊತ್ತಿದ್ದರೂ ನಮ್ಮ ಜನಪದರ ಎದುರು ಅಂತದ್ದನ್ನೆಲ್ಲ ಸಲೀಸಾಗಿ ಹೇಳಲು ಹಿಂಜರಿದರು. ಸ್ವತಃ ಅಂಬೇಡ್ಕರ್ ಎಡಪಂಥೀಯ ಚಿಂತನೆಗಳನ್ನು ಧಾರಾಕಾರವಾಗಿ ಹೇಳುವ ಎಲ್ಲ ಸಾಧ್ಯತೆಗಳಿದ್ದರೂ ಅಂತಹ ಚರಿತ್ರೆಯ ಪಾಠಗಳಿಂದ ಭಿನ್ನವಾಗಿ ತನ್ನ ಸಂಸ್ಕೃತಿ ಮತ್ತು ಸಮಾಜಗಳ ಅನುಭವದಿಂದ ದಲಿತರ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ವಿಶೇಷವಾಗಿ ವ್ಯಾಖ್ಯಾನಿಸತೊಡಗಿದರು.

ಗಾಂಧೀಜಿ ರಾಷ್ಟ್ರೀಯತೆಯ ರೂಪಕವು ಶ್ರೀಸಾಮಾನ್ಯನ ಪ್ರತೀಕವಾಗಿತ್ತು. ಒಬ್ಬ ಬಡಹಳ್ಳಿಗನಂತೆ ಒಬ್ಬ ಕೆಳಜಾತಿಯವನಂತೆ ಗಾಂಧೀಜಿ ಒಂದೇ ಹೊತ್ತಿಗೆ ಭಾರತದ ಒಬ್ಬ ಜನಪದನಾಗಿ ರೂಪಾಂತರಗೊಂಡು ರಾಷ್ಟ್ರಪಿತರ ಹಂತವನ್ನೇರಿದರು. ಅಂದರೆ ಇಂತಹ ಹೋರಾಟ ಹಾದಿಯಲ್ಲೇ ದೇಸೀ ರಾಷ್ಟ್ರೀಯ ಕಲ್ಪನೆ ಅರ್ಥ ಪಡೆದುಕೊಂಡಿರುತ್ತದೆ. ಮುಂದೆ ಅಸಹಕಾರ, ಸತ್ಯಾಗ್ರಹ, ಉಪವಾಸವೂ ಆಗಿ ರೂಪಾಂತರ ಸಂಕೇತ, ಪ್ರತಿಮೆಗಳಾಗಿ ಬೆಳೆಯತೊಡಗುತ್ತವೆ. ಇದು ಜನಸಾಮಾನ್ಯರ ರಾಷ್ಟ್ರೀಯತೆಯ ಸ್ವಭಾವ. ಹೀಗಾಗಿ ದಲಿತರ ರಾಷ್ಟ್ರೀಯತೆಯ ಮೂಲ ಬೇರುಗಳು ಇಂತಹ ಅಮೂರ್ತ ರೂಪಗಳಲ್ಲಿ ಆಕಾರಗೊಂಡಿರುತ್ತವೆ. ಇದರಲ್ಲೇ ಭಾರತದ ಸ್ವಾತಂತ್ರ್ಯ ಚಳುವಳಿಯ ಅಂತರಂಗವೂ ಗೋಚರಿಸುತ್ತ ಈ ಸಮುದಾಯಗಳ ನಿಜವಾದ ಅರ್ಥಗಳು ಖಚಿತಗೊಳ್ಳುತ್ತ ಹೋಗುತ್ತವೆ. ಪರಧಾನರ ಚರಿತ್ರೆಯಿಂದ ಪರಿಧಿಗೆ ಸರಿದುಕೊಂಡವರ ಚರಿತ್ರೆಯ ಆಳದಲ್ಲಿ ರಾಷ್ಟ್ರೀಯತೆಯ ಅರ್ಥ ಪ್ರತ್ಯೇಕವಾಗಿರುತ್ತದೆ. ಇಲ್ಲಿ ಎದುರಾಗುವ ಒಂದೊಂದು ಸಣ್ಣ ಸಮುದಾಯಗಳ ‘ದೇಶ’ ರಾಷ್ಟ್ರದ ಪರಿಕಲ್ಪನೆ ಪ್ರಧಾನರ ವ್ಯಾಖ್ಯಾನಕ್ಕಿಂತಲೂ ಹೊರತಾಗಿ ಆಧುನಿಕ ಯುಗದಲ್ಲಿ ಮತ್ತು ಇವತ್ತಿನ ಅನೇಕ ಸವಾಲುಗಳೆದುರು ಬೇರೆಯದೇ ಆದಂತಹ ವಿಶ್ಲೇಷಣೆಯನ್ನು ಬಯಸುತ್ತವೆ. ಪಶ್ಚಿಮದ ಚರಿತ್ರಕಾರರು ಹೇಳಿಕೊಟ್ಟ ರೀತಿಯಲ್ಲೇ ಮತ್ತು ವೈದಿಕ ಚರಿತ್ರಕಾರರು ರೂಪಿಸಿದ ಕ್ರಮದಲ್ಲೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಡಪಂಥೀಯ ಧೋರಣೆಗಳಾಚೆಯೂ ನಿಂತು ಜನಪದ ಚರಿತ್ರೆಯನ್ನು ಹುಡುಕುವಾಗ ನಮ್ಮ ಎಲ್ಲ ಚಳುವಳಿಗಳು ಪ್ರತ್ಯೇಕವಾದ ವಿಚಾರಗಳನ್ನು ಮಂಡಿಸತೊಡಗುತ್ತವೆ.

ಹಲವು ಭಾರತಗಳ ಹಲವು ರಾಷ್ಟ್ರೀಯತೆಗಳು

ಭಾರತ ಎಂದರೆ ಭಾವನಾತ್ಮಕವಾಗಿ ಮಾತೃಭೂಮಿಯಾಗಿ ಒಂದೇ ಸೂರಿನಡಿಯ ಹಲವರು ಒಂದೇ ನಾಡಿ ಎಂದು ಭಾವಿಸಲು ಆಗುವುದಿಲ್ಲ. ಭಾರತದಲ್ಲಿ ಎಷ್ಟೊಂದು ಬುಡಕಟ್ಟುಗಳ ಅಲೆಮಾರಿ ಸಮುದಾಯಗಳು ಮತ್ತು ಅತ್ಯಂತ ಕೆಳಜಾತಿಗಳು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ್ದವು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ನಮ್ಮ ಅನೇಕ ರಾಷ್ಟ್ರೀಯ ಚಳುವಳಿಗಳು ಇಂತಹ ಸಮುದಾಯಗಳ ಸಮಸ್ಯೆಗಳಿಗೆ ಹೇಗೆ ಪ್ರತಿಕ್ರಿಯಿಸಿವೆ ಹಾಗೂ ಎಂತಹ ಧೋರಣೆ ಹೊಂದಿವೆ ಎಂಬುದನ್ನು ಪರಿಶೀಲಿಸಬೇಕು. ಒಂದೊಂದು ಅಲೆಮಾರಿ ಜನಾಂಗಗಳಿಗೂ ಬುಡಕಟ್ಟುಗಳಿಗೂ ಒಂದೊಂದು ನೆಲೆ ಇಲ್ಲವೇ ಲೋಕ ಎಂಬುವು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿದ್ದವು. ಹೊಲೆಮಾದಿಗರಂತು ದೇಶವೇ ಇರದಂತಹ ಸ್ಥಿತಿ ಇತ್ತು. ಅಂಬೇಡ್ಕರ್ ಬಹಿಷ್ಕೃತ ಭಾರತದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತ ಅಖಂಡತೆ ಮತ್ತು ಏಕತೆಯ ಹುಸಿಯನ್ನು ಬಯಲು ಮಾಡುತ್ತಿದ್ದರು. ಅವರವರ ಕೇರಿಗಳೇ ಎಷ್ಟೋ ಬಾರಿ ಅವರವರ ನೆಲೆಯ ಲೋಕದ ನಾಡಿನ ಸಂಕೇತವಾಗಿರುತ್ತಿದ್ದವು. ಅವರ ಜನಪದ ನಂಬಿಕೆ ಪುರಾಣಕತೆಗಳಲ್ಲಿ ಮಾತ್ರ ಅಸಾದ್ಯವಿಸ್ತಾರದ ಮೂರು ಲೋಕಗಳ ನೂರಾರು ಲೋಕದೆಲ್ಲೆಗಳೆಲ್ಲ ಅವರದೇ ನಾಡಾಗಿ ಲೋಕವಾಗಿ ದೇಶವಾಗಿ ಪರಿಣಮಿಸುತ್ತಿದ್ದವು. ಭೂಮ್ಯಾಕಾಶದಗಲಕ್ಕೂ ಈ ಲೋಕ ಎಂಬ ನಂಬಿಕೆಯಲ್ಲಿ ವಾಸಿಸುತ್ತಿದ್ದರೇ ವಿನಃ ವಾಸ್ತವದಲ್ಲಿ ಇಂತಹ ಅನೇಕ ಸಮುದಾಯಗಳಿಗೆ ದೇಶದ ಕಲ್ಪನೆ ಭಿನ್ನವಾಗಿತ್ತು. ಆಧುನಿಕ ವ್ಯಕ್ತಿವಾದಿ ಪ್ರಭುತ್ವವಾದಿ ಹಾಗೂ ಆರ್ಥಿಕವಾದಿ ನೆಲೆಯಿಂದ ರಾಜಕಾರಣದ ನಕ್ಷೆಯ ದೇಶದಿಂದ ಹುಟ್ಟುವ ರಾಷ್ಟ್ರೀಯತೆಯ ಪರಿಜ್ಞಾನ ಅವರಿಗೆ ಅಗತ್ಯವಾಗಿರಲಿಲ್ಲ. ಒಂದು ಸಾಂಸ್ಕೃತಿಕವಾದ ರಾಷ್ಟ್ರೀಯ ಕಲ್ಪನೆಯಲ್ಲಿದ್ದ ಸಮುದಾಯಗಳು ವಸಾಹತುಶಾಹಿ ನಿರ್ಮಿಸುವ Stateನ ಅರ್ಥದಲ್ಲಿ ಜೀವಿಸುತ್ತಿರಲಿಲ್ಲ. ಆದ್ದರಿಂದಲೇ ದೇಸೀ ರಾಷ್ಟ್ರೀಯತೆಯಲ್ಲಿ ಪರಧಿಯ ಸಮುದಾಯಗಳ ಚರಿತ್ರೆ ನಿರ್ದಿಷ್ಟವಾಗಿ ಒಂದು ಆಕಾರಕ್ಕೆ ಸಿಕ್ಕುವುದಿಲ್ಲ. ಗಾಂಧೀಜಿಯ ಎದುರು ಇಂತಹ ಬದ್ಧವಾದ ಸಾಮೂದಾಯಿಕ ರಾಜ್ಯಗಳಿದ್ದವು. ಅವು ಈಗಲೂ ಅಮೂರ್ತವಾಗಿ ರೂಪಾಂತರಗೊಂಡು ಆಧುನಿಕ ರಾಜಕಾರಣದಲ್ಲಿ ಬಚ್ಚಿಟ್ಟುಕೊಂಡು ಕರಿಯಾಶೀಲವಾಗಿರುತ್ತವೆ. ಆದ್ದರಿಂದಲೇ ಭಾರತದ ರಾಜಕಾರಣದಲ್ಲಿ ಎಂದೆಂದೂ ಮುಗಿಯದ ಸಾಮಾಜಿಕ ಆಐಇðಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸವಾಳು ಸಮಸ್ಯೆ ಗೊಂದಲಗಳು ಸದಾ ತೆಗೆದುಕೊಳ್ಳುತ್ತಲೇ ಇರುತ್ತವೆ. ನಾವು ಇಂತಹ ಬಿಡಿಬಿಡಿಯಾದ ಸಂಸ್ಕೃತಿಬದ್ಧ ಸಮುದಾಯಗಳ ಪ್ರತ್ಯೇಕ ರಾಜ್ಯಗಳನ್ನು ರಾಜಕೀಯ ದ್ವಿಭಾಷೆಯಿಂದ ವಿಂಗಡಿಸಿ ಅರ್ಥ ಮಾಡಿಕೊಳ್ಳುವುದರಿಂದಲೇ ಇವತ್ತಿಗೂ ಭಾರತ ಎಂಬುದರ ನಿರ್ದಿಷ್ಠ ವ್ಯಾಖ್ಯಾನ ಅಭಿವೃದ್ಧಿ ಹಾಗೆಯೇ ಅರ್ಥಪೂಣರ್ವಾದರ ಜಕಾರಣ ಸಾಧ್ಯವಾಗದೆ ಹೋಗಿರುವುದು. ಸಾಂಸ್ಕೃತಿಕ ರಾಜ್ಯ ಎನ್ನುವುದು ಒಂದೊಂದು ಜನಾಂಗವೂ ತನಗೇ ವಿಶಿಷ್ಟವಾದ ಒಬ್ಬ ಸಾಂಸ್ಕೃತಿಕ ವೀರನ ಮಹಾಕಾವ್ಯವನ್ನು ಪುರಾಣವನ್ನು ಹೊಂದಿರುವಂತದ್ದಾಗಿರುತ್ತದೆ. ಅಷ್ಟೇ ಅಲ್ಲದೆ ಆ ಸಮುದಾಯ ನಿರ್ದಿಷ್ಟವಾದ ಒಂದು ಕುಲಕ್ಕೆ ಒಳಪಟ್ಟು ಆ ಕುಲದ ಒಳಗೇ ಉಪಕುಲಗಳನ್ನು ರಚಿಸಿಕೊಂಡು ಒಂದು ಸಾಮಾಜಿಕ ವ್ಯವಸ್ಥೆಯ ಜೊತೆ ಮುಖಾಮುಖಿಯಾಗುತ್ತಿರುತ್ತದೆ. ಬಣ್ಣ ಬೆಡಗು ಎಂಬ ಹೆಸರು ಗುರುತುಗಳಲ್ಲಿ ಅನೇಕ ಸಮುದಾಯಗಳು ಪಣಗಳಾಗಿ ವಿಭಜನೆಗೊಂಡು ಬೃಹತ್ತಾದ ಒಂದು ಗುಂಪಿನಿಂದ ತನ್ನ ಗುಂಪಿನಂತೆ ಇವು ಕಂಡರೂ ಆಳದಲ್ಲಿ ಇವೆಲ್ಲಾ ಸಂಸ್ಕೃತಿ ನಿಷ್ಠವಾದ ಒಂದು ಪ್ರತ್ಯೇಕ ರಾಜಕಾರಣವನ್ನೇ ರೂಪಿಸಿಕೊಂಡಿರುತ್ತವೆ. ಅನೇಕ ಕೆಳಜಾತಿಗಲು ಮೂಲತಃ Epic Community ಗಳಾಗಿರುತ್ತವೆ.

ಹೀಗಾಗಿಯೇ ಹೊಲಮಾದಿಗರಿಗೆ ಹೇಗೆ ಮಹಾಕಾವ್ಯದ ಸಾಂಸ್ಕೃತಿಕ ನಾಯಕರು ಇರುತ್ತಾರೋ ಅಂತೆಯೇ ಬುಡಕಟ್ಟು ಅಲೆಮಾರಿಗಳಿಗೂ ಒಂದು ಸಂಸ್ಕೃತಿಯ ವಿಕಾಸ ಚಕ್ರವಿದ್ದು ಅದರ ಆಕಾರಕ್ಕೆ ತಕ್ಕಂತೆ ಸಮುದಾಯಗಳು ಆಧುನಿಕತೆಯ ಜೊತೆ ಪ್ರಧಾನರ ರಾಷ್ಟ್ರೀಯತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಇಲ್ಲವೇ ವಿರೋಧಿಸಿ ಒಳಗಿದ್ದು ಹೊರಗಿದ್ದಂತೆ ತೋರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತವೆ. ರಾಷ್ಟ್ರೀಯತೆಯನ್ನು ಗುರುತಿಸುವಾಗಲೆಲ್ಲ ನಾವು ಕೇವಲ ಭಾಷೆ ಹಾಗೂ ಭೌಗೋಳಿಕ ಪರಿಸರ ಮತ್ತು ಅದರ ಆಶಯಗಳನ್ನೆಲ್ಲ ಮರೆತು ಬಿಟ್ಟಿರುತ್ತೇವೆ. ಅಂದರೆ ಒಂದು ಪ್ರಾದೇಶಿಕವಾದ ರಾಷ್ಟ್ರೀಯತೆಯಿಂದ ವಿಶ್ವದ ಆಕಾರವನ್ನು ಅರಿಯುವ ಜನಪದರ ರಾಷ್ಟ್ರೀಯತೆಯ ರಾಜಕಾರಣದ ಮತ್ತು ವಿಶ್ವದ ಆಧುನೀಕರಣದಿಂದ ಕೆಳಗಿನ ಅಂದರೆ ಭಿನ್ನ ರೀತಿಯಿಂದ ನೋಡಬೇಕು. ವಿಶ್ವದ ರಾಜಕಾರಣ ಮತ್ತು ವಿಶ್ವದ ಆಧುನೀಕರಣದಿಂದ ಕೆಳಗಿನ ಅಂದರೆ ಪ್ರಾದೇಶಿಕವಾದ ಪುಟ್ಟ ಹಾಗೆಯೇ ಮೂಲ ಘಟಕವೂ ಆಗಿರುವ ನಮ್ಮ ನೆಲೆ ಅಥವಾ ನಾಡನ್ನು ವ್ಯಾಖ್ಯಾನಿಸುತ್ತಿರುತ್ತೇವೆ. ವಿಶ್ವದ ರಾಷ್ಟ್ರೀಯತೆಯಿಂದ ಪ್ರಾದೇಶಿಕ ರಾಷ್ಟ್ರೀಯತೆಯನ್ನು ಅರಿಯುವುದು ಸೂಕ್ತವಾದ ಕ್ರಮ ಅಲ್ಲ. ಇಂತಹ ವಿಶ್ಲೇಷಣೆಗಳಿಂದಲೇ ಭಾರತದ ಅಸಂಖ್ಯಾತರ ಕೆಳಜಾತಿಗಳ ಒಟ್ಟು ರಾಷ್ಟ್ರೀಯತೆ ಚರಿತ್ರೆಯಲ್ಲಿ ನಿರೂಪಿಸಲ್ಪಡಲಿಲ್ಲ. ಅಥವಾ ಸರಿಯಾಗಿ ವ್ಯಾಖ್ಯಾನಿಸಲ್ಪಡಲಿಲ್ಲ.

ಭಾರತದ ಉತ್ತಕ್ಕೂ ಹೀಗಾಗಿಯೇ ಅನೇಕ ಬಗೆಯ ನಿಗೂಢ ಬುಡಕಟ್ಟುಗಳು ನಾಡನ್ನು ಮತ್ತು ಆಧುನಿಕರು ಭಾವಿಸುವ ರಾಷ್ಟ್ರೀಯತೆಯನ್ನು ತಿರಸ್ಕರಿಸಿ ಪ್ರತ್ಯೇಕ ವ್ಯವಸ್ಥೆಯನ್ನು ತಾವೇ ಕಟ್ಟಿಕೊಂಡಿದ್ದವು. ಜೊತೆಗೆ ಭಕ್ತಿಪಂಥ ಚಳುವಳಿಯ ತಾತ್ವಿಕ ಸ್ವರೂಪದಲ್ಲಿ ಭಿನ್ನವಾಗಿ ಉಳಿಯುವ ಎಷ್ಟೋ ಮಾಂತ್ರಿಕಾಚರಣೆಯ ಹಾಗೂ ನಿರೀಶ್ವರವಾದಿ ಸ್ವಭಾವದ ಸಮುದಾಯಗಳು ಹಲವು ಭಾರತಗಳಿಂದಲೇ ಅನ್ಯವಾಗಿ ಉಳಿದ್ದಿದ್ದನ್ನು ಕೂಡ ನಾವಿಲ್ಲಿ ನೆನೆಯಬೇಕು. ಒಂದೊಂದು ಸಮುದಾಯವೂ ಒಂದೊಂದು ಭಾರತವಾಗಿದ್ದನ್ನು ಮಧ್ಯಯುಗದ ಹಿಂದಿನ ಚರಿತ್ರೆಯಿಂದಲೂ ನಿಚ್ಛಳವಾಗಿ ಕಾಣಬಹುದು. ಇಂತಹ ಬಿಡಿ ಭಾರತಗಳನ್ನು ಒಂದಾಗಿಸುವಲ್ಲಿ ನಮ್ಮ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ತುಂಬ ಪ್ರಯತ್ನಿಸಿವೆ. ಹೀಗೆ ಕಾವ್ಯದ ಮೂಲಕ ಏಕಾತ್ಮತೆಯನ್ನು ಕಾಣುವ ಹಾಗೂ ಹಾಗಿದ್ದೇ ಅದರಲ್ಲೂ ತನ್ನತನವನ್ನು ರೂಪಿಸಿಕೊಂಡು ಉಳಿಸುವ ಇಂತಹ ರಾಷ್ಟ್ರೀಯತೆಯನ್ನು ಎಪಿಕ್ ನ್ಯಾಷಿನಾಲಿಟಿ ಎಂದು ಕರೆದು ಬಿಡಬಹುದು. ನಮ್ಮ ರಾಜಕಾರಣದ ತತ್ವಕ್ಕೆ ಇಂತಹ ಶಕ್ತಿ ಭಾರತದಲ್ಲಿ ಈತನಕ ಬಂದೇ ಇಲ್ಲ. ಹಾಗೆ ನೋಡಿದರೆ ನಮ್ಮ ಎಲ್ಲಾ ಸಮುದಾಯಗಳು ಬೃಹತ್ ಭಾರತವನ್ನು ತಮತಮಗೆ ತಿಳಿದಂತೆ ಅನುಕೂಲಕ್ಕೆ ಬಂದಂತೆ ಸಾಂಸ್ಕೃತಿಕವಾಗಿ ವಿಭಜನೆಗೊಂಡು ತಮ್ಮ ಕಾವ್ಯ ಐತಿಹ್ಯ ಪುರಾಣ ಸಾಂಸ್ಕೃತಿಕ ವೀರರು ಮತ್ತು ಇತ್ಯಾದಿಗಳ ಮೂಲಕ ಪ್ರತ್ಯೇಕ ಭಾರತಗಳನ್ನು ಕಟ್ಟಿಕೊಂಡಿವೆ. ಈ ಎಲ್ಲವುಗಳ ಐಕ್ಯ ರಾಷ್ಟ್ರೀಯತೆ ಈ ತನಕ ನಮಗೆ ಸಾಧ್ಯವಾಗಿಲ್ಲ. ಸ್ವಾತಂತ್ರ ಬಂದು ಐವತ್ತು ವರ್ಷಗಳಾದರೂ ಒಂದೊಂದು ಸಮುದಾಯಗಳ ಸೂಕ್ಷ್ಮಪ್ರತ್ಯೇಕತೆಗಳು ಹಾಗೇ ಉಳಿದುಕೊಂಡು ಅವು ಪ್ರತ್ಯೇಕತೆಯ ಸೊಲ್ಲಿನಲ್ಲಿ ಒಳರಾಜಕಾರಣದ ವಿಕಾರದಲ್ಲೂ ಬಲಿಯಾಗುವ ಅಪಾಯದ ತುದಿಯಲ್ಲಿವೆ.

ಇಂತಾದ್ದರ ಅವತಾರಗಳಿಂದಲೇ ವರ್ಣ ವ್ಯವಸ್ಥೆಯಲ್ಲಿ ದುರ್ಬಲವಾದ ನೂರಾರು ಆತಿಗಳು ದಾರಿ ತಪ್ಪಿ ರಾಷ್ಟ್ರೀಯತೆಯ ಭಾವನೆ ದಿನೇ ದಿನೇ ರೂಪಾಂತರಗೊಳ್ಳುತ್ತಾ ಸಾಗುತ್ತದೆ. ಗಾಂಧಿಯ ರಾಷ್ಟ್ರೀಯ ಕಾಂಗ್ರೆಸ್‌ನ ಚಳುವಳಿಯಲ್ಲಿ ಅನೇಕ ಕೆಳಜಾತಿಗಳು ನಿರ್ಲಿಪ್ತ ನೀರಿಯನ್ನು ಅನುಸರಿಸಿದ್ದು ಕೂಡ ಅವರವರ ಸಾಂಸ್ಕೃತಿಕ ನೀತಿಯನ್ನು ಹೇಳುತ್ತಿರುತ್ತದೆ. ಅಂದರೆ ಹಲವು ಭಾಗರಗಳಾಗಿ ವಿಭಜನೆಗೊಂಡಿದ್ದ ಭಾರತದ ಹಲವು ರಾಷ್ಟ್ರೀಯತೆಗಳು ಗಾಢವಾಗಿ ಒಂದನ್ನೊಂದು ಅಪ್ಪಿಕೊಳ್ಳಲೇ ಇಲ್ಲ. ಭಾರತ ಮತ್ತು ಪಾಕಿಸ್ತಾನದ ವಿಭಜನೆಗಿಂತಲೂ ಸಂಕೀರ್ಣವಾಗಿ ಇಕ್ಕಟ್ಟಾಗಿದ್ದುದೆಂದರೆ ಒಳಗಿನ ಭಾರತದ ಅನೇಕ ಸಮುದಾಯಗಳೇ ಹೀಗೆ ಪ್ರತ್ಯೇಕ ರಾಷ್ಟ್ರೀಯತೆಯ ಎಂತಹ ಮಟ್ಟಿನದು ಎಂಬುದನ್ನು ಹೇಳುವಂತಿತ್ತು. ರಾಷ್ಟ್ರೀಯ ಕಾಂಗ್ರೆಸ್ ಮುಂದೆ ಅನೇಕ ಭಾರತಗಳು ಇದ್ದರೂ ಅವರು ಆಯ್ಕೆ ಮಾಡಿಕೊಂಡಿದ್ದು ಯಾವುದೋ ಒಂದು ಭಾರತವನ್ನು. ಮುಸ್ಲಿಂ ಸಮುದಾಯ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿಲು ತೋರುತ್ತಿದ್ದ ಗುಮಾನಿಗಳಿಗೂ ಇಂತಾದ್ದೇ ಕಾರಣವಿರಬೇಕು. ನಮ್ಮ ರಾಷ್ಟ್ರೀಯತೆಯನ್ನು ನಾವು ನಮ್ಮ ನಮ್ಮ ಮನೆ ಊರು ಕೇರಿಗಳಿಂದಲೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ದೆಹಲಿಯ ಕೆಂಪುಕೋಟೆಯ ಮೇಲಿಂದ ಬಾವುಟ ಹಾರಿಸಿ ರಾಷ್ಟ್ರೀಯತೆಯನ್ನಾಗಲೀ ನಮ್ಮ ಸ್ವಾತಂತ್ರ್ಯ ಚಳುವಳಿಯನ್ನಾಗಲಿ ಅಳತೆ ಮಾಡಲು ಸಾಧ್ಯವಾಗುವುದಿಲ್ಲ. ಹೊಲಗೇರಿಯಿಂದ ಬಂದ ದಲಿತನ ಸ್ವಾತಂತ್ರ್ಯದ ಪ್ರಜ್ಞೆಗೂ ಅಗ್ರಹಾರದಿಂದ ಬಂದ ವೈದಿಕನ ರಾಷ್ಟ್ರೀಯತೆಯ ಗ್ರಹಿಕೆಗೂ ಮೂಲಭೂತ ವ್ಯತ್ಯಾಸಗಳಿರುತ್ತವೆ. ಇಂತಹ ವ್ಯತ್ಯಾಸಗಳ ಸಂಗಮ ಬಿಂದುವಿಗಾಗಿ ಭಾರತದ ಇಷ್ಟು ಕಾಲದ ರಾಜಕಾರಣ ಸಂಪೂರ್ಣ ಸೋತಿದೆ.

ಮೂಲಭೂತವಾಗಿ ಭಾರತದ ಜಾತಿ ಬುಡಕಟ್ಟುಗಳು ಒಂದು ನಿರ್ದಿಷ್ಟ ರಾಷ್ಟ್ರೀಯ ಹಿಡಿತಕ್ಕೆ ಬದ್ಧವಾಗುವ ಸ್ವರೂಪದವು. ಇದರಿಂದಾಗಿಯೇ ಅನೇಕ ಇಕ್ಕಟ್ಟುಗಳನ್ನು ಭಾರತ ಯಾವತ್ತೂ ಎದುರಿಸುತ್ತಲೇ ಇರಬೇಕಾಗುತ್ತದೆ. ಈ ಸಮುದಾಯಗಳು ಆಧುನಿಕ ರಾಷ್ಟ್ರೀಯ ಚಿಂತೆಯ ಚಾವಡಿಗೆ ಇನ್ನೂ ಬಂದೇ ಇಲ್ಲ. ಬಂದಿದ್ದರೂ ಕೂಡ ಅದು ಕೇವಲ ರಾಜಕಾರಣದ ವಿಕೃತ ಸ್ವರೂಪದಲ್ಲಿ ಮಾತ್ರ. ಮಾನಸಿಕ ಗಡಿರೇಖೆಗಳಲ್ಲಿ ಪುರಾಣ ಪ್ರದೇಶದಲ್ಲಿ ರಾಷ್ಟ್ರೀಯತೆಯನ್ನು ಇಂತಹ ಸಮುದಾಯಗಳು ರೂಪಿಸಿಕೊಳ್ಳುತ್ತಿರುತ್ತವೆ. ಅಂದರೆ ಹಳ್ಳಿಯ ಬಲಿಷ್ಠ ಜಾತಿಗಳು ಕೇಳುವ ರಾಜಕೀಯ ಹಕ್ಕುಗಳಿಗೂ ಅದೇ ಹಳ್ಳಿಯ ಕೆಳಜಾತಿಗಳು ಸಾಮಾಜಿಕ ಹಕ್ಕಿಗಾಗಿ ಕೇಳುವ ನಿಲುವುಗಳಿಗೂ ಮೂಲಭೂತ ಅಂತರಗಳು ಏರ್ಪಡುತ್ತವೆ. ವಿಚಿತ್ರ ಎಂದರೆ ಎಂತಹ ಸಾಂಸ್ಕೃತಿಕ ಬಿಡಿ ಭಾರತದ ಸಮುದಾಯಗಳ ರಾಷ್ಟ್ರೀಯತೆ ಒಂದನ್ನೊಂದು ಅವಲಂಬಿಸಿದಂತಿರುತ್ತದೆ. ಹಾಗೆ ಅವಲಂಬಿಸಿಕೊಂಡೇ ಮತ್ತೊಂದರ ರಾಷ್ಟ್ರೀಯತೆಯನ್ನು ಕಬಳಿಸುವ ಹವಣಿಕೆಯಲ್ಲಿ ಸದಾ ಸಜ್ಜಾಗಿರುತ್ತದೆ. ಒಂದರ ರಾಷ್ಟ್ರೀಯತೆ ಹೆಚ್ಚಾದಷ್ಟು ಇನ್ನೆಲ್ಲೊ ಇನ್ನೊಂದು ಸಮುದಾಯ ಕಸಿವಿಸಿಗೊಳಗಾಗುತ್ತದೆ. ಅಂದರೆ ಭಾರತಕ್ಕೆ ಈ ತನಕ ನಿರ್ದಿಷ್ಟ ರಾಷ್ಟ್ರ ಮತ್ತು ರಾಜ್ಯ ಇಲ್ಲವೇ ರಾಷ್ಟ್ರೀಯತೆಯ ಆಯಾಮಗಳೆ ಪೂರ್ಣಗೊಂಡಿಲ್ಲ. ಇಂತಹ ಸಂದಿಗ್ಧಕ್ಕೆ ಆಯಾಮ ಸಮುದಾಯಗಳು ರೂಪಿಸಿಕೊಂಡಿರುವ ಸಾಂಸ್ಕೃತಿಕ ಸಂವಿಧಾನವೇ ಮೂಲಕಾರಣ. ಇದರಿಂದಾಗಿಯೇ ಹಲಗಲಿಯ ಬೇಡರ ಹೋರಾಟಕ್ಕೂ ಸಂಗೊಳ್ಳಿರಾಯಣ್ಣನ ಕ್ರಾಂತಿಗೂ ಗೋಡ್ಸೆಯ ಲೆಕ್ಕಚಾರಿಗಳಿಗೂ ದಲಿತ ಸಂಘಟನೆಗಳ ಹೋರಾಟಕ್ಕೂ ಆರ್ ಎಸ್‌ಎಸ್ ಸಂಘಟನೆಗಳ ತಾತ್ವಿಕ ಬದ್ಧತೆಗೂ ವಿಪರ್ಯಾಸಕರ ಭೇದಗಳು ಸೃಷ್ಟಿಯಾಗುವುದು. ಬಂಗಾಳದ ಕಲ್ಪತ್ತಾ ನಗರದಲ್ಲಿ ನಡೆಯುತ್ತಿದ್ದ ಚಳುವಳಿಗೂ ಪ್ರಾದೇಶಿಕ ಒತ್ತಡಗಳಿಂದ ಹುಟ್ಟಿಕೊಳ್ಳುತ್ತಿದ್ದ ಚಳುವಳಿಗಳಿಗೂ ಇದರಿಂದಲೇ ಆಗ ವೈಪರೀತ್ಯಗಳು ಉಂಟಾಗುತ್ತಿದ್ದುದ್ದು. ಅಂದರೆ ಹಲವು ಭಾರತಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧಿ ಜೊತೆ ಕೈಗೂಡಿಸಿದ್ದರೂ ಇಲ್ಲದಿದ್ದರೂ ಅಂತಿಮವಾಗಿ ಒಂದು ದೇಸೀ ರಾಷ್ಟ್ರೀಯತೆಯ ಮೂಲ ಬೇರುಗಳನ್ನು ನಮ್ಮ ಎಲ್ಲ ಚಳುವಳಿಗಳು ಸೂಕ್ತವಾಗಿ ಅರಿಯಲಿಲ್ಲ-ಬೆಳಸಿಕೊಳ್ಳಲಿಲ್ಲ. ಹೀಗಾಗಿಯೇ ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವುದು ಬಹು ದೊಡ್ಡ ಸುಳ್ಳಿನ ದಾಖಲೆಯಾಗುತ್ತದೆ. ನಮ್ಮ ಸಮುದಾಯಗಳು ಪ್ರತ್ಯೇಕ ಸ್ವಾತಂತ್ರ್ಯವನ್ನು ಬಯಸುತ್ತವೆ ಹೊರತು ಅವು ಎಲ್ಲರಿಗೂ ಸ್ವಾತಂತ್ರ್ಯವನ್ನು ಹಂಚುದ ಕ್ರಮಕ್ಕೆ ಹೊಂದಿಕೊಳ್ಳಲಾರದವು. ಒಂದೊಂದು ಸಮುದಾಯವೂ ತನ್ನದೇ ಆದ ಸಾಂಸ್ಕೃತಿಕ ನೀತಿ ನಿಯಮ ನಂಬಿಕೆಗಳಿಂದ ಸೃಷ್ಟಿಮಾಡಿಕೊಂಡ ಸಂವಿಧಾನ ಅಲಿಖಿತವಾಗಿದ್ದು, ಅದರ ಪರಂಪರೆಗೆ ನ್ಯಾಯಕ್ಕೆ ಬದ್ಧವಾಗಿರುವುದರಿಂದ ರಾಜಕೀಯ ಸಂವಿಧಾನ ಅಂತಹ ಸಮುದಾಯಗಳಿಗೆ ಅಪೂರ್ಣವಾಗಿ ಕಾಣುತ್ತದೆ. ಅಂದರೆ ಕೆಳಜಾತಿಯ ಸಮುದಾಯಗಳು ಎಲ್ಲೊ ಮತ್ತೊಂದು ರೀತಿಯಲ್ಲಿ ಸಾಂಸ್ಕೃತಿಕ ಸಂವಿಧಾನದ ಅಗತ್ಯವನ್ನು ಬಯಸುತ್ತಿವೆ ಎಂಬುದನ್ನು ಸ್ವಾತಂತ್ರ ಚಳುವಳಿಯ ಕಾಲದಿಂದಲೂ ಈವತ್ತಿನವರೆಗೆ ಚಳುವಳಿಗಳಿಂದಲೂ ಗಮನಿಸಬಹುದು.

ಜನಪದ ಸಮುದಾಯಗಳು ರಚಿಸಿಕೊಂಡಿದ್ದ ಪಣ ಸಮಾಜದ ಕಲ್ಪನೆಯೂ ಇದಕ್ಕೆ ಪೂರಕವಾಗಿದೆ. ಹದಿನೆಂಟು ಜಾತಿ ಬಣ್ಣಗಳು ಒಂದು ಗ್ರಾಮೀಣ ಪರಿಸರದಲ್ಲಿ ರೂಪಿಸಿಕೊಂಡಿದ್ದ ವ್ಯವಸ್ಥೆಯನ್ನು ಪರಿಶೀಲಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ವರ್ಣ ವ್ಯವಸ್ಥೆಯ ಇನ್ನೊಂದು ಭಿನ್ನ ಮಾದರಿಯಂತಿದ್ದ ಪಣ ಸಮಾಜದಲ್ಲಿ ವೈದಿಕ ಮನೋಧರ್ಮದ ಧಾರ್ಮಿಕ ರಾಷ್ಟ್ರೀಯತೆ ಇರಲಿಲ್ಲ. ವಿಚಿತ್ರವಾದ ಒಳಸಂಬಂಧಗಳನ್ನು ರೂಪಿಸಿಕೊಂಡ ವಿವಿಧ ಜಾತಿಗಳ ಪಣ ಸಮಾಜದಲ್ಲಿ ಒಬ್ಬೊಬ್ಬರ ಅಸ್ತಿತ್ವದ ರಾಷ್ಟ್ರೀಯತೆಯಲ್ಲಿ ಸಾಂಸ್ಕೃತಿಕ ಸಮಾನತೆ ಇತ್ತು. ಇಂತದ್ದನ್ನು ಆಧುನಿಕ ಇಲ್ಲವೇ ವಸಾಹತೋತ್ತರ ರಾಜಕಾರಣ ಬಹುಪಾಲು ಕಡೆಗಣಿಸಿ ಅಂತಹ ರಾಷ್ಟ್ರೀಯತೆಯ ಅನೇಕ ಗುಂಪುಗಳನ್ನು ಓಟುಗಳಾಗಿ ರೂಪಾಂತರಿಸಿದ್ದರಿಂದಲೇ ಜಾತಿಗಳು ವಿಕೃತವಾಗಿ ಬೆಳೆಯಲು ಅವಕಾಶಮಾಡಿಕೊಟ್ಟಿತು. ಹದಿನೆಂಟು ಜಾತಿಗಳ ಈ ಹಳೆಯ ಸಾಮಾಜಿಕ ರಚನೆಯಲ್ಲಿ ಆರ್ಥಿಕ ಮತ್ತು ಸ್ವಾಮ್ಯ ಮತ್ತು ಹಕ್ಕು ವಿಶೇಷವಾಗಿ ವಕ್ಕಲುತನ ಮಾಡುವ ಜಮೀನ್‌ದಾರಿ ಜಾತಿಗಳಿಗೆ ಸೇರಿತ್ತಾದರೂ ಅಂತಹ ಅಧಿಕಾರವನ್ನು ಏಕಸ್ವಾಮ್ಯದ ಅಪಾಯದಿಂದ ಬಿಡಿಸುವ ಮಟ್ಟಿಗೆ ಕೆಳಜಾತಿಗಳು ಪ್ರತ್ಯೇಕವಾದ ಸಾಂಸ್ಕೃತಿಕ ಪರಿನಿಯಮಗಳನ್ನು ರಚಿಸಿಕೊಂಡು ತಡೆಹಿಡಿದಿದ್ದವು. ಅಂದರೆ ಇಂತಹ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ತಡೆದುಕೊಳ್ಳಲು ಕೂಡ ಕೆಲಸಮುದಾಯಗಳು ಅಂತರಂಗದಲ್ಲಿ ಸಾಂಸ್ಕೃತಿಕ ನ್ಯಾಯದ ಮೊರೆ ಹೋಗಿ ಅಲ್ಲಿ ಮತ್ತೆ ಕೆಳಜಾತಿಗಳ ರಾಷ್ಟ್ರೀಯತೆಯ ಕಲ್ಪನೆ ಅಸಲಿಯಾಗಿ ಪ್ರಾದೇಶಿಕವಾದದ್ದೇ. ಅದು ನಿಂತ ನೆಲೆಯನ್ನು ಬಾಳುವೆಯ ತಾಣವನ್ನು ನಂಬಿ ದೇಶವನ್ನು ಕಟ್ಟಿಕೊಂಡಿದೆ. ಈ ಹಿನ್ನೆಲೆಗಳಿಂದ ರಾಷ್ಟ್ರೀಯ ಚಳುವಳಿಯಲ್ಲಿಯೂ ಕೆಳಜಾತಿಗಳು ಪ್ರಧಾನವಾಗಿ ಮುಂಚೂಣಿಯಲ್ಲಿ ಭಾಗವಹಿಸಲಿಲ್ಲ ಎಂಬುದು ಅರಿವಾಗುತ್ತದೆ.

ದಾಸ್ಯ ಮತ್ತು ಕನಸು

ಪ್ರತಿಯೊಂದು ಸಂಸ್ಕೃತಿಯೂ ದಾಸ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಸ್ವಾತಂತ್ರ್ಯದ ಕನಸು ಕಾಣುತ್ತದೆ. ಹಾಗೆಯೇ ಪ್ರತಿಯೊಂದು ಜಾತಿಯೂ ಬಲಿಷ್ಠ ಆಕ್ರಮಣಶೀಲ ಜಾತಿಗಳಿಂದ ಮುಕ್ತಗೊಳ್ಳು ಸಂಸ್ಕೃತಿಯ ಒಳಗೇ ಪರಿಹಾರವನ್ನು ಕಂಡುಕೊಳ್ಳಲು ಸೃಷ್ಟಿಶೀಲವಾಗಿರುತ್ತದೆ. ಆದ್ದರಿಂದಲೇ ಆಧುನಿಕ ರಾಜಕಾರಣ ಹೇಳುವ ಸ್ವಾತಂತ್ರ್ಯದ ಕಲ್ಪನೆಗೂ ಸಂಸ್ಕೃತಿಯ ಒಳಗಿನಿಂದಲೇ ರೂಪ ಧರಿಸುವ ಹಕ್ಕು ಹಾಗೂ ಸ್ವಾತಂತ್ರ್ಯದ ನೆಲೆಗೂ ಭಿನ್ನತೆಯಿರುವುದು. ಈ ಹಿನ್ನೆಲೆಯಲ್ಲೇ ಗಾಂಧಿಜಿಯು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಚಳುವಳಿ ಹೂಡುವಾಗ ಅಂಬೇಡ್ಕರ್ ಅವರಿಗೆ ತನ್ನ ಸಮುದಾಯದ ಬಿಡುಗಡೆಯ ಹೋರಾಟವನ್ನು ರೂಪಿಸುವುದು ಅನಿವಾರ್ಯವಾಗಿತ್ತು. ಇದೇ ಮಾತು ಒಂದು ಪ್ರಾದೇಶಿಕ ಚೌಕಟ್ಟಿನ ಒಂದು ಸಣ್ಣ ಸಮುದಾಯಕ್ಕೂ ಕೂಡ ಹೊಂದುವಂತಾಗಿರುತ್ತದೆ. ಸ್ವಾತಂತ್ರ್ಯ ಬಂದೀ ಐವತ್ತನೇ ವರ್ಷದಲ್ಲೂ ಭಾರತದ ಅನೇಕ ಆದಿವಾಸಿ ಸಮುದಾಯಗಳು ಮತ್ತು ಪ್ರದೇಶಗಳು ಪ್ರತ್ಯೇಕತೆಯನ್ನು ಬಯಸುವ ಚಳುವಳಿಯಲ್ಲಿ ತೊಡಗಿವೆ ಎಂದರೆ ಎಲ್ಲೋ ನಮ್ಮ ಒಟ್ಟು ಬೃಹತ್ ಭಾರತದ ಏಕತೆಯ ಕಲ್ಪನೆಯಲ್ಲೇ ಪರಿಹರಿಸಲಾರದಷ್ಟು ಸಮಸ್ಯೆಗಳಿವೆ ಎಂಬುದನ್ನು ಹೇಳುತ್ತದೆ. ಆಧುನಿಕ ಯುಗದ ಪ್ರವೃತ್ತಿಯೇ ಇಂತಾದ್ದು. ಬೃಹತ್ ರಾಷ್ಟ್ರ ಕಲ್ಪನೆ ಅರ್ಥಪುರ್ಣ ಪ್ರಜಾಪ್ರಭುತ್ವವನ್ನು ಹೊಡೆದು ಹಾಕುವಂತದು ಮತ್ತು ಅಂತಹ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಶಯಗಳಿಗೆ ಅವಕಾಶವೇ ಇಲ್ಲದಂತಾಗಿ ಪ್ರಭುತ್ವ ಶಕ್ತಿಗೆ ಮಣಿಯಬೇಕಾದ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅನೇಕ ಅಲ್ಪಸಮಖ್ಯಾತ ಸಮುದಾಯಗಳು ದಿಕ್ಕುತಪ್ಪುತ್ತವೆ. ಈ ಬಗೆಯ ನಂಬಿಕೆ ರಾಷ್ಟ್ರೀಯ ಕಾಂಗ್ರೆಸ್‌ಗೆ ಇರಲಿಲ್ಲವಾದ್ದರಿಂದ ಅವರಿಗೆ ರಾಜ್ಯಗಳ ಒಳಗೇ ಇರುವ ಅನೇಕ ಸಮಸ್ಯೆಗಳು ಗೊತ್ತಾಗಲಿಲ್ಲ ಮತ್ತು ಸ್ವಾತಂತ್ರ್ಯ ಎಂಬ ಹೋರಾಟದಲ್ಲಿ ಯಾರ್ಯಾರಿಗೆ ಈ ಸ್ವಾತಂತ್ರ್ಯವನ್ನು ರಾಷ್ಟ್ರೀಯತೆಯನ್ನು ರೂಪಿಸುತ್ತಿದ್ದೇವೆಂಬ ಎಚ್ಚರವಿರಲಿಲ್ಲ. ಗಾಂಧಿಗೆ ಆ ದೂರದೃಷ್ಟಿ ಇತ್ತಾದರೂ ಅವರ ರಾಮರಾಜ್ಯದ ಕನಸಿನಲ್ಲಿ ಯಾರ್ಯಾರು ಎಷ್ಟೆಷ್ಟು ಸುಖವಾಗಿರುತ್ತಾರೆಂಬ ಅಂದಾಜು ಇರಲಿಲ್ಲ. ಅವರ ಆಶಯ ದೊಡ್ಡದಾಗಿತ್ತೇ ಹೊರತು ಪ್ರಾಯೋಗಿಕವಾಗಿ ಭಿನ್ನ ನೆಲೆಯ ಪರಂಪರೆಯ ಸಮುದಾಯಗಳ ಕನಸಿನ ಪ್ರತಿಬಿಂಬ ಅವರ ಕಣ್ಣಿಗೆ ಬೀಳಲಿಲ್ಲ.

ಹೀಗಾಗಿಯೇ ಹೊಲೆಮಾದಿಗ ದಾಸ್ಯದಿಂದ ಮುಕ್ತನಾಗಲು ಕಾಣುವ ಕನಸಿಗೂ ಒಬ್ಬ ಮಧ್ಯಮವರ್ಗದ ಮಹಿಳೆ ಕಾಣುವ ಸ್ವಾತಂತ್ರ್ಯದ ಕನಸಿಗೂ ಹಾಗೆಯೇ ಒಬ್ಬ ಮುಸ್ಲಿಂ ಹೆಣ್ಣು ಮಗಳು ಕಾಣುವ ಕನಸಿಗೂ ಅಂತೆಯೇ ಒಬ್ಬ ಮೇಲ್‌ಜಾತಿಯವನು ಕಾಣುವ ಬಯಸುವ ಸ್ವಾತಂತ್ರ್ಯ ಮತ್ತು ಹಕ್ಕಿನ ಪ್ರಶ್ನೆಗಳಿಗೂ ಈ ದೇಶದಲ್ಲಿ ಯಾವತ್ತೂ ತಗಾದೆ ಇರುವುದು ಮತ್ತು ಅವರವರ ಹೋರಾಟದ ದಾರಿ ಹಾಗೂ ತಾತ್ವಿಕ ನೆಲೆಗಳು ಬೇರೆ ಬೇರೆ ನಿಟ್ಟಿನಲ್ಲಿ ಕೆಲಸಮಾಡುವುದು. ಅಂದರೆ ಆಧುನಿಕ ಕಾಲದ ಪ್ರವೃತ್ತಿಯೇ ಹೆಚ್ಚು ಹೆಚ್ಚು ಪ್ರತ್ಯೇಕತಾ ಭಾವನೆಯನ್ನು ಅರ್ಥಪೂರ್ಣ ಸಂಬಂಧಗಳಿಂದ ಕಟ್ಟಿಕೊಳ್ಳುತ್ತಾ ಒಂದೇ ರಾಷ್ಟ್ರದ ಸೂರಿನಡಿ ಹಲವು ಪ್ರಾದೇಶಿಕ ರಾಷ್ಟ್ರೀಯತೆಗಳನ್ನು ಬಯಸುತ್ತದೆ. ಇದು ಪ್ರಭುತ್ವ ಮತ್ತು ರಾಜಕಾರಣದ ಕೇಂದ್ರದಿಂದ ವಿಛಿದ್ರಕಾರಿಯಾಗಿ ಕಂಡರೂ ಸಮುದಾಯಗಳ ಹಿಡಿತದಿಂದ ಅಪೇಕ್ಷಣೀಯವಾದದ್ದು. ಪರಂಪರೆಯ ಹಲವು ಬಗೆಯ ಧ್ಯಾನಗಳಿಂದ ಹುಟ್ಟುವ ರಾಷ್ಟ್ರೀಯತೆಯ ಚಿಂತನೆಗಳು ಇದರಿಂದ ವಿಶಿಷ್ಟ ಆಯಾಮಗಳನ್ನು ಪಡೆಯಬಲ್ಲವು. ಈ ಹಿನ್ನೆಲೆಯಿಂದ ನೋಡಿದರೆ, ಅಲಕ್ಷಿತ ಸಮುದಾಯಗಳು ಸ್ವಾತಂತ್ರ್ಯ ಭಾರತದಲ್ಲಿದ್ದುಕೊಂಡೇ ಇನ್ನೂ ತಮ್ಮ ಸ್ವಾತಂತ್ರ್ಯದ ಹಕ್ಕೊತ್ತಾಯದಲ್ಲಿ ತೊಡಗಿರುವುದು ಪರೋಕ್ಷವಾಗಿ ದೇಶೀ ರಾಷ್ಟ್ರೀಯತೆಗಳು ಈಗಲೂ ಪೂರ್ಣ ಮಟ್ಟದಲ್ಲಿ ಸ್ವತಂತ್ರರಾಗಲಿಲ್ಲ ಎಂಬುದನ್ನೇ ಹೇಳುತ್ತಿದೆ. ಆಧುನಿಕ ಪ್ರಭುತ್ವ ಎನ್ನುವುದು ತನ್ನ ಬಲಿಷ್ಠ ಅಸ್ತ್ರಗಳಾದ ಮಾಧ್ಯಮ ಮತ್ತು ಮಾರುಕಟ್ಟೆಯಿಂದ ಹಾಗೂ ಹುಸಿ ಕನಸುಗಳನ್ನು ಬಿತ್ತುವುದರಿಂದ ಅಲಕ್ಷಿತ ಕೆಳ ಸಮುದಾಯಗಳನ್ನು ದಾಸ್ಯದಲ್ಲೇ ಉಳಿಸಿರುತ್ತದೆ. ದಲಿತರ ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಬಹುಪಾಲು ಎಲ್ಲ ಹೋರಾಟಗಳಲ್ಲೂ ಪ್ರಧಾನವಾಗಿ ಈ ಬಗೆಯ ದನಿಯೇ ಕೆಲಸಮಾಡಿರುವುದು ಸ್ಪಷ್ಟವಾಗಿದೆ ಅಂತೆಯೇ ಆದಿವಾಸಿಗಳು ಕೂಡ ಈ ಬಗೆಯ ಪ್ರಭುತ್ವ ಮತ್ತು ರಾಜಕಾರಣವನ್ನು ತಿರಸ್ಕರಿಸುವ ರೀತಿಯಲ್ಲೇ ಇವೆ ಎಂಬುದು ಕಾಣಬಹುದು.

ಅಂದರೆ ಭಾರತ ಇವತ್ತು ಜಗತ್ತಿನ ಅತಿ ವಿಸ್ತಾರವಾದ ಅರ್ಥಪೂರ್ಣವಾದ ಭದ್ರವಾದ ಪ್ರಜಾಪ್ರಭುತ್ವದ ದೇಶ ಎಂದು ಬೀಗುವುದರ ಬೆನ್ನ ಹಿಂದೆಯೇ ಅದು ಸುಳ್ಳು ಎಂಬಂತೆ ಪ್ರತ್ಯೇಕ ಪ್ರಾದೇಶಿಕ ರಾಷ್ಟ್ರೀಯರೆಯ ಹೋರಾಟವನ್ನು ಇಟ್ಟುಕೊಂಡೇ ಅನೇಕ ಸಮುದಾಯಗಳು ಉಳಿದಿವೆ ಎಂಬುದನ್ನು ಹೇಳುತ್ತಿವೆ. ಸರ್ಕಾರಗಳ ಮುಂದೆ ಬಹುಪಾಲು ಎಲ್ಲ ದುರ್ಬಲ ವರ್ಗಗಳೂ ಸವಲತ್ತುಗಳಿಗಾಗಿ ದೀನರಾಗಿ ನಿಲ್ಲುವುದು ಮತ್ತು ಪ್ರತಿಬಾರಿ ಮೂರ್ಖತನಕ್ಕೆ ಒಳಪಡಿಸುವಂತೆ ಸರ್ಕಾರಗಳು ನಡೆದುಕೊಳ್ಳುವುದು ನಮ್ಮ ನಮ್ಮ ರಾಷ್ಟ್ರೀಯತೆ ಇವತ್ತು ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದೆ. ಇಂತಾದ್ದನ್ನು ಮನಗಂಡೆ ಆಗ ಹಿಂದೆ ಸ್ವತಃ ಅಂಬೇಡ್ಕರ್ ಅವರೇ ಪ್ರತ್ಯೇಕ ದಲಿತ್ ಸ್ಥಾನ ಬಗ್ಗೆ ಪ್ರಸ್ಥಾಪಿಸಿದ್ದು. ಜಾತಿಗಳಿಗಾಗಿ ವಿಂಗಡಿಸಲ್ಪಟ್ಟ ಸಮುದಾಯಗಳಿಗೆ ಪ್ರಜಾಪ್ರಭುತ್ವ ವರವಾಗುವುದಕ್ಕಿಂತ ಹೆಚ್ಚಾಗಿ ಶಾಪವಾಗಿ ಪರಿಣಮಿಸಿರುತ್ತದೆ. ಜಾತಿಗಳು ಮತಗಟ್ಟೆಗಳಾಗಿ ಭಯಂಕರವಾಗಿ ಬೆಳೆದು ನಿಜವಾದ ಒಂದು ‘State’ನ ಆದರ್ಶ ಕಲ್ಪನೆ ಒಡೆದು ಹೋಗುತ್ತದೆ. ಭಾರತದಲ್ಲಿ ಸಮುದಾಯಗಳನ್ನು ರಾಜಕೀಯ ಮತಗಟ್ಟೆಗಳಾಗಿ ರೂಪಾಂತರಿಸಿದ್ದೇ ಈ ಪ್ರಜಾಪ್ರಭುತ್ವ. ಭಾರತದ ಯಾವ ರಾಜಕೀಯ ಪಕ್ಷಗಳೂ ಈ ಮಿತಿಯನ್ನು ದಾಟಲು ಸಾಧ್ಯವಾಗಲಿಲ್ಲ. ಇಂತಾದ್ದು ಜಾತಿಗಳನ್ನು ರಾಜ್ಯವಾಗಿ ರೂಪಿಸುವ ಅಪಾಯವನ್ನೇ ಯಾವತ್ತೂ ಮಾಡುತ್ತಿರುತ್ತದೆ. ಇವತ್ತಿನ ಭಾರತದ ರಾಜ್ಯಗಳೆಲ್ಲ ಜಾತಿ ಪ್ರಧಾನವಾದವೇ. ಇದರೊಳಗೇ ಮೀಸಲು ಕ್ಷೇತ್ರಗಳು ಹೋರಾಟಬೇಕಾಗಿರುತ್ತದೆ. ಎಲ್ಲಿ ಜಾತಿ ಬಲಿಷ್ಠವಾಗಿರುತ್ತದೋ ಅಂತಹ ಜಾತಿ ಯಾವತ್ತೂ ಅಧಿಕಾರದಲ್ಲಿರುತ್ತದೆ. ಪ್ರಭುತ್ವ ಜಾತಿಗೆ ಬದ್ಧವಾಗಿರುತ್ತದೆ. ಪ್ರಭುತ್ವದ ಭುಜಗಳಿಗೆ ಜಾತಿಯ ಹಂಗಿರುತ್ತದೆ. ಬಲಿಷ್ಠ ಪ್ರಜಾಪ್ರಭುತ್ವವನ್ನು ತನ್ನ ಆಕಾರಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಶಕ್ತಿ ಹೊಂದಿರುತ್ತದೆ ಅಲ್ಪಸಂಖ್ಯಾತ ಕೆಳ ಜಾತಿಗಳು ಇಂತಹ ಪೈಪೋಟಿಯಲ್ಲಿ ತಮ್ಮನ್ನು ತಾವೇ ಮಾರಿಕೊಳ್ಳುತ್ತವೆ. ಭಾರತದ ರಾಜಕಾರಣ ಎಂದರೆ ಕನಸಿಕ ಕನ್ನಡಿ ತೋರಿ ಸಮುದಾಯಗಳನ್ನು ಗುತ್ತಿಗೆ ಪಡೆಯುವುದೇ ಆಗಿರುವುದರಿಂದ ಅನೇಕ ಸಮುದಾಯಗಳಿಗೆ ನಿಜವಾದ ಒಂದು ದೇಶವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಎಷ್ಟೋ ಪಕ್ಷಗಳು ಜಾತಿಗಳು ದುರ್ಬಲ ಸಮುದಾಯಗಳನ್ನು ಚುನಾವಣೆಯ ಕಾಲದಲ್ಲಿ ಬಾಡಿಗೆಗೆ ಪಡೆದುಕೊಳ್ಳುವ ಮೂಲಕ ಅಧಿಕಾರವನ್ನು ಹಿಡಿಯುತ್ತವೆ. ನಮ್ಮ ದೇಶದ ಬಹುಪಾಲು ಪಕ್ಷಗಳೂ ಪ್ರಾದೇಶಿಕವಾದ ಜನಪದವಾದ ದೇಶೀ ರಾಷ್ಟ್ರೀಯತೆಯ ಅರಿವೇ ಇಲ್ಲದೆ ಇರುವುದರಿಂದ ಅವು ಕೇವಲ ಬಡತನ ಮತ್ತೆ ಸಮಾನತೆಯ ಹಳೆಯ ತಗಡು ಹಾಡಿನಿಂದ ನಿರ್ಜೀವವಾಗಿ ಕುಳಿತಿರುತವೆ. ಕುರುಡು ರಾಜಕಾರಣದ ಮೇಲೆ ಹೆಳವನನ್ನು ಕೂರಿಸಿ ಪ್ರಗತಿಯ ಪಥವನ್ನು ಸರ್ಕಾರಗಳು ಅಳೆಯುತ್ತಿರುತ್ತವೆ. ಇಂತಲ್ಲಿ ಅಲಕ್ಷಿತ ಸಮುದಾಯಗಳನ್ನು ಮತ್ತೆ ಮತ್ತೆ ಹೇಳುವ ಮತ್ತು ಕುರುಡನ್ನಾಗಿಸಿ ಆಡ ಆಡುವುದು ಪ್ರಭುತ್ವದ ಮೋಜಾಗಿರುತ್ತದೆ.

ಹೀಗೆ ಆಧುನಿಕ ರಾಜಕಾರಣ ಪ್ರಣೀತವಾದ ಆರ್ಥಿಕ ಯೋಜನೆಗಳಿಗೆ ಒಳಗಾಗಿಯೇ ಹಾಗೂ ಅದರ ಎದುರು ಹೋರಾಡಲಾರದೆ ಅನೇಕ ವೃತ್ತಿ ಪ್ರಧಾನ ಸಮುದಾಯಗಳು ತಾಂತ್ರಿಕತೆಯೂ ನಾಶವಾಗಿದ್ದನ್ನು ಇಲ್ಲಿ ಗಮನಿಸಬೇಕು. ಕುಂಬಾರ ಚಿನ್ನಿಗೆ ಬೆಸ್ತ ಬೇಡ ಚಮ್ಮಾರ ತರದ ಪಣ ಸಮಾಜದ ಉತ್ಪಾದನಾ ಪ್ರಧಾನವಾದ ಸಮುದಾಯಗಳು ರೂಪಿಸಿಕೊಂಡಿದ್ದ ಆರ್ಥಿಕ ವ್ಯವಸ್ಥೆ ಮತ್ತು ತಂತ್ರಜ್ಞಾನ ಇದರಿಂದ ಭಾರತದಲ್ಲಿ ಮೂಲೆಗುಂಪಾಯಿತು. ಅಷ್ಟೇ ಅಲ್ಲ ಅಂತಹ ಸಮುದಾಯಗಳಿಗೆ ಒಂದು Economic State ಇಲ್ಲವಾಯಿತು. ದೇಸೀ ತಂತ್ರಜ್ಞಾನ ನಾಶವಾಯಿತು. ದೇಸೀ ತಂತ್ರಜ್ಞಾನದಿಂದ ಬೆಳೆಯುತ್ತಿದ್ದ ದೇಸೀ ಆರ್ಥಿಕ ವ್ಯವಸ್ಥೆಯೂ ಮರೆಯಾಯಿತು. ಆದರೆ ಭಾರತದ ಆಧುನಿಕತೆ ಮತ್ತು ವಿಜ್ಞಾನ ಹಾಗೂ ಪ್ರಭುತ್ವ ಶಕ್ತಿಗಳು ಇಂತಹ ಸಮುದಾಯಗಳ ಸಾಂಪ್ರದಾಯಿಕ ಅರಿವನ್ನು ಕಡೆಗಣಿಸಿ ಪಶ್ಚಿಮಾಭಿಮುಖವಾಗಿ ಕುಳಿತು ಉತ್ತರಾಭಿಮುಖವಾಗಿ ಪಯಣ ಮಾಡುತ್ತಿದ್ದೇವೆಂಬಂತಹ ಭ್ರಮೆಯನ್ನು ಬಿತ್ತಿದವು. ಕರಕುಶಲ ಸಮುದಾಯಗಳನ್ನು ಯುರೋಪಿನ ತಂತ್ರಜ್ಞಾನಕ್ಕೆ ನೇರವಾಗಿ ಮತಾಂತರಿಸುವ ಪ್ರಕ್ರಿಯೆಯಿಂದಾಗಿಯೇ ಪ್ರಾದೇಶಿಕ ಉತ್ಪಾದನಾಮೂಲಗಳು ಭಾರತದಲ್ಲಿ ದಿಕ್ಕಾಪಾಲಾದವು. ಇದು ಭಾಗಶಃ ಭಾರತದ ಒಟ್ಟು ಆರ್ಥಿಕ ವ್ಯವಸ್ಥೆಯ ಬೇರುಗಳನ್ನೇ ದುರ್ಬಲಗೊಳಿಸಿತು. ಹೀಗಾಗಿಯೇ ಇವತ್ತು ನಮ್ಮ ಮಾರಾಟಕ್ಕೆ ಎಂದರೆ ಅದು ಅನುಭೋಗಿಗಳನ್ನೇ ಮಾರಾಟ ಮಾಡುವ ಮತ್ತು ಗ್ರಾಹಕರನ್ನೇ ಕೊಂಡುಕೊಳ್ಳುವ ಏಜೆಂಟಾಗಿ ಪರಿವರ್ತನೆಯಾಗಿದೆ. ಮಾರುಕಟ್ಟೆಯಲ್ಲಿ ನಾವು ಕೊಂಡುಕೊಳ್ಳುವ ನೆಪದಲ್ಲಿ ಆಯಾಯ ಉತ್ಪಾದನಾ ಸಂಸ್ಥೆಗಳಿಗೆ ಹಾಗೂ ಭಾರತದ ಆರ್ಥಿಕ ಯೋಜನೆಗೆ ಮಾರಾಟವಾಗಲ್ಪಟ್ಟಿರುತ್ತೇವೆ.

ಹೀಗಿರುವಲ್ಲಿ ಇವತ್ತು ಭಾರತದ ಕೆಳಜಾತಿಗಳ ರಾಷ್ಟ್ರೀಯತೆಯನ್ನು ಈ ಎಲ್ಲ ವಲಯಗಳಿಂದ ಪರಿಶೀಲಿಸುತ್ತಾ ಹೋದರೆ ಇವೆಲ್ಲ ನಮಗೆ ಹೊಂದದ ವ್ಯವಸ್ಥೆಗಳಾಗಿಯೇ ಕಾಣುತ್ತವೆ. ಮತ್ತು ಹೀಗೆ ರೂಪುಗೊಳ್ಳುತ್ತಾ ಜಾಗತಿಕವಾಗಿ ಬೆಳೆಯುವ ಜಾಗತೀಕರಣ ಪ್ರಕ್ರಿಯೆ ಕೂಡ ಮೂಲಕ ನಮ್ಮ ಪ್ರಾದೇಶಿಕವಾದ ರಾಷ್ಟ್ರೀಯತೆಯನ್ನು ಭಂಗಪಡಿಸುತ್ತಿರುತ್ತದೆ. ಅಂದರೆ ಪ್ರಾದೇಶಿಕ ರಾಷ್ಟ್ರೀಯತೆ ಅನ್ನುವುದು ಆಯಾ ಸಮುದಾಯದ ಸಾಂಸ್ಕೃತಿಕ ಸಂವಿಧಾನದ ಜಾನಪದ ಪರಂಪರೆ ಮತ್ತು ಆ ಮೂಲಕ ರೂಪಗೊಂಡ ಚರಿತ್ರೆ ಹಾಗೂ ಸಮೂಹನಿಷ್ಠ ಸಾಮಾಜಿಕ ಸಂಬಂಧಗಳ ಒಂದು ವ್ಯವಸ್ಥೆ. ಈ ವ್ಯವಸ್ಥೆ ಗಾಂಧೀ ಮತ್ತು ಲೋಹಿಯಾ ಅಥವಾ ಅಂಬೇಡ್ಕರ್ ಹಾಗೂ ಎಡವಾದಿಗಳು ಭಾವಿಸಿದ್ದಂತಲ್ಲ. ಸಾಂಸ್ಕೃತಿಕ ಅನನ್ಯತೆಯ ಮೂಲಕ ಉಳಿದ ಸಹ ಸಮುದಾಯಗಳ ಅಸ್ತಿತ್ವವನ್ನು ಗೌರವಿಸುತ್ತಾ ಪ್ರಾದೇಶಿಕತೆಯಲ್ಲೇ ವಿಶ್ವವನ್ನು ಅರಿಯುವ ಸ್ವಭಾವ ಅದಕ್ಕಿರುತ್ತದೆ. ಜಾಗತೀಕರಣವಾದಿಗಳು ಅಂತದನ್ನೆಲ್ಲಾ ಹುಸಿ ಎಂಬಂತೆ ತಿರಸ್ಕರಿಸಲು ಮುಂದಾಗುತ್ತಾರೆ. ಆದರೆ ವಿಚಿತ್ರ ಎಂದರೆ ಜಾಗತೀಕರಣದ ಪ್ರಕ್ರಿಯೆಯೇ ಪ್ರಾದೇಶಿಕತೆಯನ್ನು ನುಂಗಿ ವಿಶ್ವದ ಏಕ ಮಾದರಿ ವ್ಯವಸ್ಥೆಯನ್ನು ಬಲಪಡಿಸುವುದು.

ಹೀಗಾದಾಗಲೆಲ್ಲ ಭಾರತದಂತಹ ದೇಶಗಳ ಪ್ರಜಾಪ್ರಭುತ್ವದ ಬುನಾದಿಯಂತಿರುವ ಅಲಕ್ಷಿತ ಸಮುದಾಯಗಳ ರಾಷ್ಟ್ರೀಯ ಕಲ್ಪನೆ ಮತ್ತು ಅಂತಹ ಜೀವನ ವಿಧಾನದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿ ಕೊನೆಗೆ ವಿಶ್ವದ ಅತಿ ದೊಡ್ಡ ಭಾಷೆ ಅಥವಾ ಸರ್ಕಾರ ಇಲ್ಲವೇ ಒಂದು ಜನಾಂಗದ ಅಭಿರುಚಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಗೆ ತಳ್ಳುತ್ತವೆ. ಭಾರತದಂತಹ ಸರ್ಕಾರಗಳು ಈ ಬಗೆಯ ಪ್ರಕ್ರಿಯೆಯನ್ನು ಅಭಿವೃದ್ಧಿ ಹಾಗೂ ಬದಲಾವಣೆ ಎಂದು ಹೇಳಿಕೊಂಡು ಬೀಗುತ್ತವೆ.

ಮುಕ್ತ ಮಾರುಕಟ್ಟೆಯಲ್ಲಿ ಇಂಟರ್ ನೆಟ್ ಸಂಸ್ಕೃತಿಯಾಗಿರಲಿ ಮುಂದೊಂದು ದಿನ ಒಟ್ಟು ಭಾರತದ ರಾಷ್ಟ್ರೀಯತೆಯ ಅಸ್ತಿತ್ವವನ್ನೇ ದಿಕ್ಕಾಪಾಲುಗೊಳಿಸಬಲ್ಲವು. ಯಾವಾಗ ಆರ್ಥಿಕ ಪ್ರಭುತ್ವ ಮಾನವೀಯ ರಾಜಕಾರಣವನ್ನು ತನ್ನ ಕೈ ಕೆಳಗೆ ಹಾಕಿಕೊಳ್ಳುತ್ತದೋ ಆವಾಗ ಬಂಡವಾಳಶಾಹಿ ಪ್ರಭುತ್ವ ಇಂತಹ ಉದಾರೀಕರಣ ಮತ್ತು ಉದಾರ ವಿಜ್ಞಾನದ ಸೌಲಭ್ಯಕೇಂದ್ರಿತ ಸಿದ್ಧಾಂತಗಳನ್ನು ಹುಟ್ಟು ಹಾಕಿ ಮೂರನೇ ವಿಶ್ವದ ಆರ್ಥಿಕ ಪರಂಪರೆಯನ್ನು ಬದಲಿಸಿ ಬಿಡಬಲ್ಲದು. ಹೀಗೆ ಆದಾಗಲೆಲ್ಲ ಭಾರತದಂತಹ ಕೆಳಜಾತಿ ಮತ್ತು ಅಲ್ಪಸಂಖ್ಯಾತ ಆರ್ಥಿಕ ಸಮುದಾಯಗಳು ನಾಶವಾಗುವುದೇನು ಆಗ ಹೊಸದಲ್ಲ. ವಸಾಹತುಶಾಹಿ ಆಳ್ವಿಕೆಯ ವೇಳೆ ಭಾರತದ ದೇಸೀ ತಂತ್ರ ಕೌಶಲ್ಯದ ಉತ್ಪಾದಕ ಸಮುದಾಯಗಳು ಹೇಗೆ ಆಧುನಿಕ ಯುರೋಪಿನ ತಂತ್ರಜ್ಞಾನದ ಎದುರು ಮುಳುಗಿ ಹೋದವೆಂದು ಈಗಾಗಲೇ ಕಂಡಿದ್ದೇವೆ. ತನ್ನ ಸಂಸ್ಕೃತಿಗೆ ಪೂರಕವಾಗಿಯೇ ಯಾವುದೇ ತಂತ್ರಜ್ಞಾನ ಬೆಳೆಯ ಬೇಕಾಗಿರುತ್ತದೆ. ನಮ್ಮಲ್ಲಿ ವಿಜ್ಞಾನವನ್ನೂ ತಂತ್ರಜ್ಞಾನವನ್ನೂ ಸಂಸ್ಕೃತಿಯನ್ನೂ ರಾಜಕಾರಣವನ್ನೂ ಪ್ರತ್ಯೇಕವಾಗಿಟ್ಟು ನೋಡುವುದು ಹೊಸದೇನಲ್ಲ. ಒಂದಕ್ಕೊಂಡು ಪೂರಕ ಸಂಬಂಧಗಳಿಲ್ಲದೇ ಘಟಿಸುವ ಅಭಿವೃದ್ಧಿಗಳು ದೀರ್ಘಕಾಲದಲ್ಲಿ ಆಪತ್ತುಗಳನ್ನೇ ತಂದೊಡ್ಡುತ್ತವೆ. ವಿಜ್ಞಾನ ಮತ್ತು ಸಂಸ್ಕೃತಿ ಎರಡೂ ಬೇರೆ ಎಂತಲೂ ಅವು ಒಂದಕ್ಕೊಂದು ವಿರುದ್ಧ ಎಂದು ಬಾಜಿಕಟ್ಟಿ ವಿಚಾರ ಸಂಶೋಧನೆಗಳನ್ನು ರೂಪಿಸಿರುವುದರಿಂದಲೇ ಅನೇಕ ಸಮುದಾಯಗಳು ವಿಶ್ವದ ಮಾರುಕಟ್ಟೆಗೆ ಈಗ ಮಾರಾಟವಾಗಿ ಬಿಡುತ್ತಿವೆ. ಹೀಗೆ ಸಂಸ್ಕೃತಿಯಿಂದ ಬಿಡಿಸಿಕೊಂಡು ಬರುವ ಜ್ಞಾನ ಮತ್ತು ಬೆಳವಣಿಗೆಗಳು ಸ್ವತಃ ಮನುಷ್ಯರನ್ನೇ ಒಂದು ಕಮಾಡಿಟಿಗಾಗಿ ವಸ್ತುವನ್ನಾಗಿಸಿ ಬಿಡುತ್ತದೆ. ಆದ್ದರಿಂದಲೆ ಇವತ್ತು ಅನೇಕ ದಲಿತ ಸಮುದಾಯಗಳು ಬಹುರಾಷ್ಟ್ರೀಯ ಸಂಸ್ಕೃತಿಯ ಪ್ರತಿನಿಧಿಯಂತಿರುವ ಮಾರುಕಟ್ಟೆಯಲ್ಲಿ ದಿಕ್ಕಾಪಾಲಾಗಿ ನಿಲ್ಲುವುದು. ವಿಶ್ವದ ಶ್ರೇಷ್ಠ ಉತ್ಪಾದನೆ ಎಂದು ಬರುವ ಎಲ್ಲದರ ಮುಂದೆ ಸ್ವತಃ ಮನುಷ್ಯನೇ ಅತ್ಯಂತ ಕಡಿಮೆ ಬೆಲೆಯ ವಸ್ತುವಾಗುವ ವೈಚಿತ್ರ್ಯ ಈಗ ಬಂದಿದೆ. ಇಂತಹ ಆರ್ಥಿಕ ಪ್ರಭುತ್ವಗಳ ರಾಜಕಾರಣ ಈಗ ವಿಶ್ವದ ಮಾದರಿಯಲ್ಲೇ ರೂಪಾಂತರಗೊಂಡು ದೇಸೀ ಸ್ವರೂಪದಿಂದ ದೂರ ಸರಿಯುತ್ತವೆ. ಇದು ಪರೋಕ್ಷವಾಗಿ ದೇಸೀ ರಾಷ್ಟ್ರೀಯ ಪ್ರಜ್ಞೆಯನ್ನು ಕೆಡಿಸುತ್ತದೆ.

ಹೀಗಿರುವಾಗ ದೇಸೀ ಸಮುದಾಯಗಳ ಪ್ರಾದೇಶಿಕ ಮೂಲಕ ತನ್ನ ಊರಿನ ನಾಡಿನ ಎಲ್ಲೆಯ ರಾಷ್ಟ್ರೀಯ ತಹತಹಿಕೆ ಯಾವ ಸ್ಥಿತಿಗೆ ಬಂದು ನಿಲ್ಲುತ್ತದೆ ಎಂದು ಗಮನಿಸಬೇಕು. ಇಂತಹ ಇಕ್ಕಟ್ಟುಗಳೇ ನಿರಂತರವಾಗಿ ಸಣ್ಣ ಸಣ್ಣ ಸಮುದಾಯಗಳನ್ನು ಆರ್ಥಿಕ ರಾಜಕೀಯ ದಾಸ್ಯಕ್ಕೆ ಒಳಪಡಿಸುವುದಲ್ಲದೆ ಅವುಗಳ ಸೃಜನಶೀಲತೆಯನ್ನು ನಾಶಪಡಿಸುತ್ತಾ ವಿಸ್ಮೃತಿಗೆ ಒಳಪಡಿಸುತ್ತವೆ. ಇದು ಬೌದ್ಧಿಕ ವಿಸ್ಮೃತಿಗಿಂತ ಅನುತ್ಪಾದಕ ವಿಸ್ಮೃತಿ ಸ್ಥಿತಿಗೆ ಒಳಪಡಿಸಿ ಒಂದು ಪ್ರಾದೇಶಿಕ ಸಾಮೂದಾಯಿಕ ಅರ್ಥ ಚಿಂತನೆಯ ನೆಲೆಗಳನ್ನು ತನ್ನ ವಿಶ್ವದ ಮಾದರಿಯ ಪ್ರಭುತ್ವದಿಂದ ಹೊಡೆದು ಹಾಕುತ್ತದೆ. ಇದನ್ನೆಲ್ಲ ಇವತ್ತಿನ ದೇಸೀ ಉತ್ಪನ್ನ ಸಮುದಾಯಗಳ ಸಂದರ್ಭದಲ್ಲಿ ಗಮನಿಸಿದರೆ ಹೊಳೆಯುತ್ತದೆ. ದೇಸೀ ಉತ್ಪನ್ನ ಸಮುದಾಯಗಳು ಆರ್ಥಿಕ ಮುಗ್ಗಟ್ಟಿಗೆ ಒಳಗಾಗುವುದೇ ಇನ್ನೊಂದು ಬಗೆಯಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ವಸಾಹತು ತಂತ್ರಜ್ಞಾನ ಭಾರತಕ್ಕೆ ಬಂದ ಮೇಲೆ ಇಲ್ಲಿನ ದೇಸೀ ತಂತ್ರಜ್ಞಾನ ನಾಶವಾಗಿ ಮುಂದೆ ಅಂತಹ ಸಮುದಾಯಗಳು ಎಂತಹ ಸವಾಲುಗಳಿಗೆ ಒಳಗಾದವೆಂಬುದನ್ನು ಕಂಡಿದ್ದೇವೆ. ಅಂದರೆ ಆರ್ಥಿಕ ಸ್ವಾತಂತ್ರ ಎಲ್ಲಿ ಹರಣವಾಗುತ್ತಾ ಆ ಬಗೆಯ ಜ್ಞಾನದ ಮೇಲೆ ಸಂಸ್ಕೃತಿ ರಹಿತ ವಿಜ್ಞಾನದ ಪ್ರಭುತ್ವ ಕುಳಿತು ಬಿಡುತ್ತದೋ ಆಗ ಅಂತಲ್ಲಿ ಅಭಿವೃದ್ಧಿ ಎನ್ನುವುದು ಸುಳ್ಳು ಹಾಗೆಯೇ ಆ ಬಗೆಯ ದುರಂತಸ್ಥಿತಿಯೇ ನಮ್ಮ ರಾಷ್ಟ್ರೀಯ ಪ್ರಜ್ಞೆಗೆ ದಕ್ಕೆ ತಂದು ಬಿಡುತ್ತವೆ.

ಇಂತಹ ಸಂಕಷ್ಟದಲ್ಲಿ ದಾಸ್ಯ ಮತ್ತು ಅದರ ಕನಸು ಹಾಗೆಯೇ ಅವೆರಡರಿಂದ ಹುಟ್ಟುವ ಜ್ಞಾನ ಸಂಕೇತಗಳೇ ವೈಚಾರಿಕ ಆಕೃತಿಗಳೇ ಪ್ರತ್ಯೇಕತೆಯನ್ನು ಕೇಂದ್ರೀಕೃತವಾದ ಸ್ಥಿರೀಕೃತ ಪ್ರಭುತ್ವಗಳ ಜೊತೆ ಬಯಸಿ ಪ್ರತ್ಯೇಕ ಪ್ರದೇಶಿಕ ರಾಷ್ಟ್ರೀಯ ಹೋರಾಟಗಳನ್ನು ರೂಪಿಸಿಕೊಳ್ಳುತ್ತದೆ. ಇದನ್ನೆಲ್ಲ ಈಗ ನಾವು ಭಾರತದಲ್ಲೇ ಇರುವ ಪ್ರತ್ಯೇಕತಾ ಚಳವಳಿಗಳ ಒಳಗೇ ಕಾಣಲು ಸಾಧ್ಯವಿದೆ.