ದಲಿತತ್ವ ಮತ್ತು ಬುದ್ಧತ್ವ

ದಲಿತತ್ವ ಎಂಬ ಪರಿಕಲ್ಪನೆ ತೀರ ಇತ್ತೀಚಿನ ಕಂಡು ಬಂದರೂ ಅದರ ತಾತ್ವಿಕ ಬೇರು ಪ್ರಾಚೀನ ಭಾರತದ ನೆಲೆಯಿಂದಲೂ ಆರಂಭಗೊಂಡಿದೆ. ವೈದಿಕ ಪೂರ್ವ ಭಾರತದ ಜನಪದಗಳು ಚದುರಿಹೋಗಿದ್ದವು. ಈ ಜನಪದಗಳು ನಿಸರ್ಗಾರಾಧನೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದವು. ಮಂತ್ರ ವಿದ್ಯೆಯು ಪ್ರಾಚೀನ ಸಮುದಾಯಗಳ ಆಲೋಚನಾ ಕ್ರಮದಲ್ಲಿ ಪ್ರಧಾನವಾಗಿ ಬೆಸೆದುಕೊಂಡಿದ್ದವು. ಮಾತೃದೇವತಾರಾಧನೆಯು ಅನಂತರದ ಕಾಲದಲ್ಲಿ ಇಂತಹ ಚದುರಿದ ಗುಂಪುಗಳಲ್ಲಿ ಬಹುರೂಪಿಯಾಗಿ ವಿಸ್ತರಿಸಿಕೊಂಡಿದೆ. ದಲಿತ ಸಮುದಾಯಗಳ ಆಳದ ಪ್ರಜ್ಞೆಯಲ್ಲಿ ಇಂದಿಗೂ ವೈದಿಕ ಪೂರ್ವ ಯುಗದ ಜೀವನ ಮೌಲ್ಯಗಳು ಉಳಿದುಕೊಂಡಿವೆ.

ದಲಿತತ್ವ

ದಲಿತತ್ವ ಎಂದರೆ ಸಾಂಸ್ಕೃತಿಕವಾಗಿ; ಬಹು ಅನನ್ಯತೆಗಳ ಬೃಹತ್ ಒಕ್ಕೂಟ. ಈ ಬೃಹತ್ ಒಕ್ಕೂಟವು ತನಗೆ ಮಾತ್ರವೆ ವಿಶಿಷ್ಠ ಎನಿಸುವ ಚಹರೆಯನ್ನು ಅಳವಡಿಸಿ ಕೊಂಡಿರುತ್ತದೆ. ಒಂದೊಂದು ಸಮುದಾಯವು ತಮ್ಮ ಅಸ್ತಿತ್ವದ ಕಾರಣಕ್ಕಾಗಿ ಸಾಮಾಜಿಕ ವಾದ ಗಡಿಗಳನ್ನು ರೂಪಿಸಿಕೊಂಡಿರುತ್ತವೆ. ಒಂದು ಸಮುದಾಯದ ಜೊತೆ ನಿರ್ದಿಷ್ಟವಾದ Space ಮತ್ತು Function ಗಳನ್ನು ನಿರ್ಧರಿಸಿ ಕೊಂಡಿರುತ್ತವೆ. ಹೀಗಾಗಿಯೆ ಒಂದು ಸಮುದಾಯ ಮತ್ತೊಂದು ಸಮುದಾಯದ ಒಳ ಹೊರ ಅಂತರಗಳನ್ನು ಸದಾ ಕಟ್ಟೆಚ್ಚರದಿಂದ ನಿಭಾಯಿಸಿಕೊಂಡು ಸಾಗುತ್ತಿರುತ್ತವೆ. ಇದು ದಲಿತ ಸಮುದಾಯಗಳ ವಿಶೇಷ ಗುಣ. ಪರೋಕ್ಷವಾಗಿ ಸ್ವಯಂ ನಿಯಂತ್ರಣ ವ್ಯವಸ್ಥೆ. ಇದು ಜಾತಿ ರಚನೆಯ ಶ್ರೇಣಿಕರಣಕ್ಕಿಂತ ಭಿನ್ನ. ಸ್ವ ಅನನ್ಯತೆಯು ಈ ಸಮುದಾಯಗಳಿಗೆ ಸ್ವಾತಂತ್ರ್ಯವನ್ನು ಮತ್ತು ತನ್ನ ಮಿತಿಯನ್ನು ಏಕಕಾಲಕ್ಕೆ ತೀರ್ಮಾನಿಸುವಂತಿರುತ್ತದೆ. ಬಹು ಅನನ್ಯತೆಗಳು ಹೊರ ಕವಚದಲ್ಲಿ ತುಂಬ ಬಲಿಷ್ಠವಿದ್ದಂತೆ ತೋರುವುದು ದಿಟ. ಒಳ ರಚನೆಯಲ್ಲಿ ದಲಿತ ಸಮುದಾಯಗಳು ದೂರವಿದ್ದುಕೊಂಡೇ ತಮ್ಮ ತಮ್ಮ ರಕ್ಷಣೆಯ ಕ್ರಮಗಳನ್ನು ಜಾಗೃತವಾಗಿರಿಸಿಕೊಂಡಿರುತ್ತವೆ. ನಿಸರ್ಗವನ್ನು ಆರಾಧಿಸುವ ಮಾಂತ್ರಿಕ ಪದ್ಧತಿಯ ಸಾಂಸ್ಕೃತಿಕ ರೀತಿ ನೀತಿಗಳು ಬಹುಪಾಲು ಈ ಎಲ್ಲ ದಲಿತ ಸಮುದಾಯಗಳಿಗೆ ತಾತ್ವಿಕವಾದ ತಳಹದಿಯಾಗಿರುತ್ತದೆ.

ಇದರಿಂದಾಗಿ ಸಾಂಸ್ಕೃತಿಕವಾದ ಲೋಕದಲ್ಲಿ ದಲಿತ ಸಮುದಾಯಗಳು ಒಂದೇ ತತ್ವಕ್ಕೆ ಬದ್ಧವಾದರೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಭಿನ್ನವಾದ ಮನೋಧರ್ಮಕ್ಕೆ ಒಳಪಟ್ಟಿರುತ್ತವೆ. ಒಕ್ಕಲು ಕಸುಬುಗಳಲ್ಲಿ ಸಾಂಸ್ಕೃತಿಕವಾದ ಒಪ್ಪಂದಗಳು ಯಾವ ಅಡೆತಡೆಯೂ ಇಲ್ಲದಂತೆ ಏರ್ಪಟ್ಟರೂ; ಯಾವುದೇ ಬಗೆಯ ಆಸ್ತಿ ಹಾಗೂ ಅಧಿಕಾರದ ಸಂದರ್ಭದಲ್ಲಿ ವೈರುಧ್ಯ ಸಂಬಂಧಗಳು ತಂತಾನೆ ಎದುರಾಗಿ ರಾಜಕೀಯವಾಗಿ ಅಸಂಘಟಿತ ಬಿಡಿ ಗುಂಪುಗಳಾಗಿಯೆ ಉಳಿದು ಬಿಡುತ್ತವೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಸಮುದಾಯಗಳ ಇಂತಹ ವೈಚಿತ್ರ್ಯದ ಒಪ್ಪಂದಗಳನ್ನು ಬಲ್ಲವರಾಗಿದ್ದರಿಂದಲೆ ಇಡೀ ದಲಿತ ಸಮುದಾಯದ ಸಬಲೀಕರಣಕ್ಕೆ ಪೂರಕವಾದ ಸಂವಿಧಾನಬದ್ಧ ಪರ್ಯಾಯಗಳನ್ನು ರೂಪಿಸಿದರು. ದಲಿತ ಸಂಸ್ಕೃತಿಯ ತಿರುಳಿನಲ್ಲಿ ಅನ್ಯತೆಯ ಸಂವೇದನೆ ಕಡಿಮೆ ಇದ್ದರೂ ಕೂಡ ಆಧುನಿಕ ಭಾರತದ ರಾಜಕೀಯ ಪರಿಸರ ಹಾಗೂ ಅಧಿಕಾರದ ರಚನೆಯಲ್ಲಿ ಬಲಿಷ್ಠ ಸಮುದಾಯಗಳು ದಲಿತ ಸಮುದಾಯಗಳನ್ನು ನಿರ್ಣಾಯಕವಾಗಿ ಖರೀದಿಸುವ ಬಲವನ್ನು ಹೊಂದಿರುತ್ತವೆ. ಇದರಿಂದಾಗಿ ಸ್ವಾತಂತ್ರ್ಯವಿದ್ದೂ ದಲಿತ ಸಮುದಾಯಗಳು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಲೆ ಇರುತ್ತವೆ. ಅಂದರೆ ದಲಿತತ್ವದ ಆಳದ ಸಮಷ್ಠಿ ಪ್ರಜ್ಞೆಯು ಆಧುನಿಕ ರಾಜಕಾರಣ ಮತ್ತು ಆರ್ಥಿಕ ಸಂಬಂಧಗಳಲ್ಲಿ ಭಗ್ನಗೊಳ್ಳುತ್ತಲೇ ಆ ಭಗ್ನತೆಯನ್ನೆ ತನ್ನ ರಾಜಕೀಯ ಮೀಸಲಾತಿಗಾಗಿ ಬಳಸಿಕೊಳ್ಳುವ ವಿಪರ್ಯಾಸವಿದೆ.

ಇಂತಹ ವೈರುಧ್ಯಗಳ ರಾಜಕೀಯಾರ್ಥಿಕ ಒಪ್ಪಂದಗಳ ನಡುವೆಯೆ ಇಂದು ದಲಿತ ಸಮುದಾಯಗಳು ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಇದು ನ್ಯಾಯ ಕೇಳುತ್ತಲೆ ನ್ಯಾಯವನ್ನು ಕಳೆದುಕೊಳ್ಳುವ ಅಥವಾ ನ್ಯಾಯದ ವ್ಯಾಪ್ತಿಯನ್ನು ಕಿರಿದುಗೊಳಿಸಿಕೊಳ್ಳುತ್ತಾ ಸಾಗಿ ಕೊನೆಗೆ ವ್ಯಕ್ತಿನಿಷ್ಠೆ ನ್ಯಾಯದ ತೃಪ್ತಿಯಲ್ಲಿ ಸಮುದಾಯದ ಸಮಷ್ಠಿ ಹಿತವನ್ನು ಕಳೆದುಕೊಳ್ಳುವಂತೆ ಜಾಲದ ಜೊತೆ ಸ್ನೇಹ ಮಾಡಿಕೊಳ್ಳುವ ಅನಿವಾರ್ಯತೆಯನ್ನು ತೋರುತ್ತದೆ. ಸ್ವಾತಂತ್ರ್ಯಾನಂತರದ ದಲಿತ ಸಮುದಾಯಗಳ ಎಚ್ಚರವು ಇಂತಹ ವೈರುದ್ಧಗಳಲ್ಲಿ ಸಾಗುತ್ತ ಬಂದಿದ್ದು ಕಾಲಕಾಲದ ಆಳ್ವಿಕೆಗಳು ದಲಿತತ್ವದ ಸಮಗ್ರ ಶಕ್ತಿಯನ್ನು ತಮಗೆ ಬೇಕಾದಂತೆಲ್ಲ ಬಳಸಿ ಬಳಸಿ ಆ ಶಕ್ತಿಯೆ ಅಪಮೌಲ್ಯಕ್ಕೆ ಒಳಗಾಗುವಂತೆ ಮಾಡಿವೆ. ಬೃಹತ್ ಅನನ್ಯತೆಯನ್ನು ಸಾಧಿಸಬಹುದಾಗಿದ್ದ ದಲಿತ ಸಮುದಾಯಗಳು ಈ ದಾರಿಯಲ್ಲಿ ಪ್ರತಿ ದಶಕದಿಂದಲೂ ಕಿರುದುಗೊಳಿಸುವದರಲ್ಲೆ ತಾವು ಪ್ರಧಾನ ಧಾರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ ಎಂಬ ತೃಪ್ತಿಯನ್ನು ಪಡುತ್ತಿರುತ್ತವೆ. ಇದರಿಂದ ತೀರಾ ಅಂಚಿನ ಅಲಕ್ಷಿತ ಗುಂಪುಗಳು ತಮ್ಮ ಅವಕಾಶವನ್ನು ರುಪಿಸಿಕೊಳ್ಳಲು ಸಾಧ್ಯವಾಗಿದ್ದರೂ ಇದು ಮತ್ತೆ ಮತ್ತೆ ಸಮುದಾಯಗಳು ಅನನ್ಯತೆಯ ಗೋಡೆಗಳನ್ನು ಕಟ್ಟಿಕೊಳ್ಳುವಂತೆ ಜಾಲ ರೂಪಿಸಿದೆ.

ಇಂತಹ ಸ್ಥಿತಿಯಲ್ಲಿ ಅಂಬೇಡ್ಕರ್ ವಾದವು ಒಂದೊಂದು ಗುಂಪಿನ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗಿ ಅದರ ಸಮಗ್ರ ದರ್ಶನವೆ ಕಾಣದಂತಾಗಿದೆ. ದಲಿತತ್ವದ ಪ್ರಾಚೀನ ರೂಪವು ಹೆಚ್ಚಾಗಿ ಸಂಸ್ಕೃತಿ ನಿಷ್ಠವಾಗಿದ್ದರೆ ಇವತ್ತಿನ ವರ್ತಮಾನದ ಸ್ಥಿತಿಯಲ್ಲಿ ಇದೇ ದಲಿತತ್ವದ ಅರ್ಥವು ರಾಜಕೀಯಾರ್ಥಿಕ ಪ್ರಶ್ನೆಗಳ ಮೂಲಕ ತನ್ನ ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಯತ್ನಿಸುತ್ತಿದೆ. ಆಧುನಿಕ ಜಗತ್ತಿನ ಎಲ್ಲ ಬಗೆಯ ಜರೂರುಗಳ ಪ್ರವಾಹದಲ್ಲಿ ದಲಿತತ್ವದ ಸಾಮಸ್ಕೃತಿಕ ಮೌಲ್ಯಗಳು ಜಾರಿ ಹೋಗುತ್ತಿರುತ್ತವೆ. ಆದರೆ ಇಂತಹ ಸಮುದಾಯಗಳಿಗೆ ಆಧುನಿಕ ಜಗತ್ತಿನಲ್ಲಿ ಯಾವ ಬಗೆಯ ಚಹರೆ ಇರಬೇಕು ಎಂಬುದನ್ನು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ತಮ್ಮ ಚೌಕಟ್ಟಿನಲ್ಲಿ ಆಳವಾಗಿ ಚಿಂತಿಸಿದ್ದಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರೂ ಸ್ವಾತಂತ್ರ್ಯ ಮತ್ತು ಸಮಾನತೆಯ ಬಗ್ಗೆ ಮಂಡಿಸಿದ ಚಿಂತನೆಗಳು ವೈರುಧ್ಯದಂತೆ ಕಂಡರೂಲ ಇವರಿಬ್ಬರ ಆಲೋಚನೆಗಳನ್ನು ಅರಗಿಸಿಕೊಳ್ಳಲಾರದ ಇವತ್ತಿನ ದಲಿತ ಸಮುದಾಯಗಳು ಕವಲುದಾರಿಯಲ್ಲಿ ಸಾಗುತ್ತಿರುವುದು ಇಡೀ ‘ದಲಿತತ್ವ’ದ ಸಮಗ್ರ ಕಲ್ಪನೆಯನ್ನೆ ಪ್ರಶ್ನಿಸುತ್ತಿವೆ.

ಸ್ವಾತಂತ್ರ್ಯ ಮತ್ತು ರಾಜಕೀಯ ಸಮಾನತೆಯನ್ನು ಆರ್ಥಿಕ ಪರಿಭಾಷೆಗಳಲ್ಲಿ ಕೇಳುತ್ತಿರುವ ಇವತ್ತಿನ ದಲಿತತ್ವದ ತಿರುಳಿನಲ್ಲಿ ಸಂಯುಕ್ತ ನ್ಯಾಯಕ್ಕಿಂತ ವಿಭಾಜಿತ ಸಮಾನತೆಯೆ ದಟ್ಟವಾಗಿದೆ. ವಿಭಜಿತ ಸಮಾನತೆಯು ಬಹುರೂಪಿ ಸಮಾಜದಲ್ಲಿ ಎಂದೆಂದಿಗೂ ಅಸಾಧ್ಯ ಹಾಗೂ ನ್ಯಾಯೋಚಿತವಲ್ಲದ್ದು. ಇದು ಮತ್ತೆ ಜಾತಿ ವರ್ಗ ವರ್ಣ ಲಿಂಗ ತಾರತಮ್ಯಗಳನ್ನು ಪ್ರಜಾಪ್ರಭುತ್ವದ ಸುಂದರ ಮೌಲ್ಯಗಳಲ್ಲೆ ಆಧುನೀಕರಿಸಿಬಿಡುತ್ತದೆ. ಇಂತಲ್ಲಿ ಶೋಷಣೆಯ ಹೊಸ ಬಗೆಯ ರೂಪಗಳು ಬುದ್ಧಿಪೂರ್ವಕ ಕೌಶಲ್ಯದಿಂದ ಎಲ್ಲ ರಂಗಗಳಲ್ಲೂ ಮತ್ತೆ ಹೊಸದಾಗಿ ಬೇರು ಬಿಟ್ಟು ಬಲಗೊಳ್ಳುತ್ತವೆ. ವ್ಯವಸ್ಥೆಯು ಇಂತಹ ಹೊಸ ರೂಪಗಳಲ್ಲಿ ಒಡೆದು ಅಳುವ ನೀತಿಯನ್ನು ಯಶಸ್ವಿಯಾಗಿ ವಿಂಗಡಿಸುವಲ್ಲಿಯೂ ಇಂತಹ ಅಪಾಯವಿದೆ. ಸಾಂಸ್ಕೃತಿಕವಾಗಿ ದಲಿತತ್ವವನ್ನು ವ್ಯಾಖ್ಯಾನಿಸುವುದು ರಮ್ಯ ವೈಚಾರಿಕತೆಗೆ ಬಹಳ ಸುಲಭ. ಅದರ ಗತಕಾಲದ ಸಾಂಸ್ಕೃತಿಕ ನಂಬಿಕೆಗಳ ಮೂಲಕ ದಲಿತ ಅಥವಾ ದಲಿತತ್ವ, ದಲಿತ ಸಂವೇದನೆಯಂತಹ ಪರಿಕಲ್ಪನೆಗಳು ಅನೇಕ ಬಾರಿ ವಿಜೃಂಭಿಸಲ್ಪಡುತ್ತವೆ. ಹೀಗೆ ಅವುಗಳನ್ನು ವಿಜೃಂಭಿಸುವುದರಿಂದ ವರ್ತಮಾನದ ಸಮಸ್ಯೆಗಳು ಪರಿಹಾರವಾದಂತೆಲ್ಲ ಅಥವಾ ಆ ಬಗೆಯ ವ್ಯಾಖ್ಯೆಗಳು ಪರ್ಯಾಯ ಕೂಡ ಆಗಲಾರವು. ಬೌದ್ಧಿಕವಾಗಿ ಇಂತಹ ವಿಚಾರಗಳು ಗಟ್ಟಿಯಾಗಿದ್ದರೂ ಸಹ ಸಮಕಾಲೀನ ಸಮಾಜದ ನಿರ್ಣಾಯಕ ಅಧಿಕಾರವನ್ನು ಪಡೆದಿರಲಾರವು. ಹೀಗಾಗಿಯೆ ಅಧಿಕಾರ ಮತ್ತು ಬೌದ್ಧಿಕ ಕಥನಗಳು ಒಂದನ್ನೊಂದು ಪುನರ್ ಸೃಷ್ಠಿಸುವ ಬದಲು ಭಂಗಪಡಿಸುತ್ತಲೇ ದೂರನಿಂತು ಪ್ರತಿರೋಧವನ್ನು ಹೊರಡಿಸಿ; ಒಂದು ಹಂತ ತಲುಪಿದ ನಂತರ ಅದೇ ವ್ಯವಸ್ಥೆಯ ಜೊತೆಗೆ ಖಾಸಗೀ ನ್ಯಾಯವನ್ನು ಪಡೆದು ಮರೆಗೆ ಸರಿಯುತ್ತವೆ. ಖಾಸಗೀ ನ್ಯಾಯವು ಸಮುದಾಯದ ದೊಡ್ಡ ನ್ಯಾಯವನ್ನು ನುಂಗಿ ವ್ಯಕ್ತಿಗತವಾಗಿ ಕೆಲವೇ ಕೆಲವರಿಗೆ ಖಾಸಗೀ ನ್ಯಾಯವನ್ನು ನೀಡುವುದು ಹೊಸದೇನಲ್ಲ. ವ್ಯವಸ್ಥೆಯು ಯಾವತ್ತೂ ಕೂಡ ಅಖಂಡವಾದದ್ದನ್ನು ತುಂಡು ಮಾಡುವುದರಲ್ಲಿ ನಿರತವಾಗಿರುತ್ತದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ಅನನ್ಯತೆ ಹಾಗೂ ಅದರ ಸಬಲೀಕರಣದ ಪ್ರಶ್ನೆಗಳು ಸದಾ ಸಮಾನಾಂತರ ಬೆಳವಣಿಗೆಯಲ್ಲಿ ಸಾಗುವುದು ತೀರ ಅಪರೂಪ. ಸಂಸ್ಕೃತಿ ಎನ್ನುವ ವ್ಯವಸ್ಥೆಯನ್ನು ಸರ್ಕಾರಗಳು ತಮ್ಮ ವೈಭವೀಕರಣಕ್ಕೆ ಬಳಸಿಕೊಳ್ಳುತ್ತಿರುತ್ತವೆ. ಜನತೆ ಅದೇ ವೇಳೆಗೆ ತಮ್ಮ ಸಾಂಸ್ಕೃತಿಕ ರಮ್ಯತೆಯನ್ನು ವಿಜೃಂಭಿಸಿ ಅದರಲ್ಲಿ ಮೈಮರೆತು ನಿಜವಾದ ಸಾಮಾಜಿಕ ವಾಸ್ತವನ್ನು ಮರೆಯುತ್ತಿರುತ್ತದೆ. ದಲಿತತ್ವದ ಸಮಸ್ಯೆ ಬಹುಪಾಲು ಇದೇ ಹಾದಿಯಲ್ಲಿದೆ. ಅಖಂಡ ಪ್ರಜ್ಞೆಯಲ್ಲಿ ದಲಿತತ್ವ ಎನ್ನುವುದು ರಮ್ಯ ವೈಚಾರಿಕ ರೂಪಕ. ಇದರ ಗುರಿ ಬಿಡುಗಡೆ. ಹಾಗೆಯೆ ಸಮಾನತೆಯ ಹಸಿವು. ಇವೆರಡೂ ವಾಸ್ತವ ಸಮಾಜದಲ್ಲಿ ಛಿದ್ರಗೊಂಡು ಈ ವಿಚ್ಛಿದ್ರತೆಯಲ್ಲೆ ಮತ್ತೆ ಮತ್ತೆ ನ್ಯಾಯವನ್ನು ಬಿಡಿಬಿಡಿಯಾಗಿ ಒತ್ತಾಯಿಸುತ್ತದೆ. ವರ್ತಮಾನದ ನಿರ್ಣಾಯಕ ಅಧಿಕಾರದ ಮುಂದೆ ಈ ಬಿಡಿ ಗುಂಪುಗಳು ಅಖಂಡ ಪ್ರಜ್ಞೆಯನ್ನು ಹೊರಲಾರದೆ ತಮ್ಮ ವ್ಯಾಪ್ತಿಗೆ ಮಾತ್ರ ಸೀಮಿತವಾಗುತ್ತವೆ. ಘನವಾದ ಅರ್ಥದಲ್ಲಿ ದಲಿತತ್ವ ಎನ್ನುವುದು ಅಖಂಡವಾಗಿದ್ದರೂ ವರ್ತಮಾನದ ವ್ಯವಸ್ಥೆಯ ಕೈಯಲ್ಲಿ ಅದು ಅಖಂಡವಲ್ಲ. ರಮ್ಯ ಬೌದ್ಧಿಕತೆಯ ಅರ್ಥ ವ್ಯಾಖ್ಯಾನದಲ್ಲಿ ಇಂತಹ ಪರಿಕಲ್ಪನೆಗಳು ನ್ಯಾಯೋಚಿತವಾಗಿ ಕಂಡರೂ ಸಮುದಾಯಗಳು ರೂಪಿಸಿಕೊಳ್ಳುವ ತಾತ್ವಿಕತೆಯಲ್ಲಿ ಇವು ಸೇರ್ಪಡೆಯಾಗುವುದು ತುಂಬ ವಿರಳ. ಒಂದು ವೇಳೆ ಪ್ರವೇಶಗೊಂಡರೂ ಬೌದ್ಧಿಕವಾದ ಪರಿಕಲ್ಪನೆಗಳು ಸಮಾಜದ ಧ್ವನಿಯಾಗುವುದು ಮತ್ತು ಅಪರೂಪ. ಹೀಗಾಗಿ ದಲಿತ ಸಮುದಾಯಗಳ ಸಾಂಸ್ಕೃತಿಕ ಪರಿಕಲ್ಪನೆಗಳಿಗೂ ಅವುಗಳ ವರ್ತಮಾನದ ಬೌದ್ಧಿಕ ವ್ಯಾಖ್ಯಾನಗಳಿಗೂ ಸೂಕ್ತವಾದ ಸಂಪರ್ಕ ಇನ್ನೂ ಸಾಧಿತವಾಗಿಲ್ಲ.

ದಲಿತತ್ವದ ಸೈದ್ಧಾಂತಿಕ ಪ್ರತಿಮೆಯು ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಈ ಮೂರು ಶಕ್ತಿಗಳಿಂದ ನಿರ್ಮಿತವಾಗಿದ್ದರೂ ಇದೇ ಪ್ರತಿಮೆಯು ಅಖಂಡವಾದ ಜಾಗೃತಿಯನ್ನು ನಿರ್ವಹಿಸಲಾರದ ಸ್ಥಿತಿಯಿದೆ. ಅಸಂಖ್ಯವಾದ ಜನ ವರ್ಗಗಳು ಜಾತಿಯ ವಿಂಗಡನೆಯಲ್ಲಿ ಸದಾ ಕಳೆದು ಹೋಗುತ್ತಲೆ ಇರುತ್ತವೆ. ಎಚ್ಚರವಾಗುತ್ತಲೆ ಎಚ್ಚರ ತಪ್ಪುವ ಶಾಪವೂ ಎಲ್ಲ ಕೆಳ ಜಾತಿಗಳಿಗೆ ಹಿಂದಿನಿಂದಲೂ ಅಂಟಿಕೊಂಡು ಬಂದಿದೆ. ವಿಶೇಷವಾಗಿ ಎಲ್ಲ ಸಮುದಾಯಗಳಿಗೂ ರಾಜಕಾರಣದ ಆಕರ್ಷಣೆ ಹಿಂದೆಂದಿಗಿಂತಲೂ ಈ ಕಾಲದಲ್ಲಿ ತೀವ್ರವಾಗಿ ಉಂಟಾಗುತ್ತಿದೆ. ಈ ಆಕರ್ಷಣೆಯು ಎಂತಹ ಮೋಹಕವಾದದ್ದೆಂದರೆ ತನ್ನ ಕೆಳಗಿನವನನ್ನು ತುಳಿದು ಅವನ ಮೇಲೆ ನಿಂತು ಮೇಲಿನ ಒಂದು ಪುಟ್ಟ ಅವಕಾಶವನ್ನು ಎಟುಕಿಸಿಕೊಳ್ಳುವ ಲೆಕ್ಕಾಚಾರದ್ದಾಗಿದೆ. ಹೀಗಾಗಿ ತಂತಾನೆ ಅಖಂಡ ಎಚ್ಚರವು ಸಾಧ್ಯವಾಗದೆ ಅಸಹಾಯಕವಾಗಿ ದುರ್ಬಲ ಲಕ್ಷಣಗಳ ಹೊಂದಾಣಿಕೆಯ ರಾಜಕಾರಣದಲ್ಲಿ ತಮ್ಮನ್ನು ತಾವು ಬಲಿಷ್ಠ ರಾಜಕಾರಣದ ವ್ಯಾಪಾರದಲ್ಲಿ ಮಾಡಿಕೊಳ್ಳುವ ಕ್ರೂರ ಒಪ್ಪಂದವನ್ನು ಇಂದಿನ ಸಂದರ್ಭದಲ್ಲಿ ಕಾಣಬಹುದು. ಇಂತಲ್ಲಿ ಸ್ವತಃ ಬಾಬಾಸಾಹೇಬ ಅಂಬೇಡ್ಕರ್ ಅವರು ಅಂತಿಮವಾಗಿ ಕನಸಿದ್ದ ಸಾಮಾಜಿಕ ಸಮಾನತೆಯಾಗಲಿ ರಾಜಕೀಯ ಸಮಾನತೆಯಾಗಲಿ ಎರಡೂ ಅಸ್ತಿತ್ವ ಕಳೆದು ಕೊಳ್ಳುತ್ತಲೆ ಇರುವುದು ವಿಪರ್ಯಾಸ.

ದಲಿತತ್ವ ಏಕಕಾಲಕ್ಕೆ ಸಾಮಾಜಿಕ ರಚನೆಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೆ ಸಾಮಾಜಿಕ ರಚನೆಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೆ ಸಾಮಾಜಿಕ ರಚನೆಯಲ್ಲಿ ತನಗೆ ಇಂತಿಷ್ಟು ಅಧಿಕಾರ ಸ್ಥಾನಮಾನ ಗುರುತುಬೇಕೆಂದು ಒತ್ತಾಯಿಸುತ್ತದೆ. ಕಾಯ್ದುಕೊಳ್ಳಲು ಉಂಟಾದ ಎಚ್ಚರ. ಈ ಎಚ್ಚರವು ಅಖಂಡವಾಗಿರುವಂತೆ ತೋರಿಕೊಂಡರೂ ಒಳಗೆ ವಿವಿಧ ನೆಲೆಯ ಅಂತರಗಳನ್ನು ಕಾಯ್ದುಕೊಳ್ಳುವ ಸ್ವಭಾವದ್ದು. ಇಂತಹ ವರ್ತನೆಯ ದಲಿತತ್ವವು ಕಾಲದ ಅಗತ್ಯಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಲೆ ಪಾಲು ಕೇಳುವ ಗುಣವನ್ನು ಅಳವಡಿಸಿಕೊಂಡಿದೆ. ಇದರ ಒತ್ತಾಯದ ಪರಿಣಾಮ ಎಷ್ಟರ ಮಟ್ಟಿಗೆ ಬೇರು ಬಿಡುತ್ತಿದೆ ಎಂದರೆ ಸರ್ಕಾರದ ವ್ಯವಸ್ಥೆಯು ಕೊಡಮಾಡುವ ಯಾವುದೇ ಸೌಲಭ್ಯ ಅಥವಾ ಯೋಜನೆಗಳಲ್ಲಿ ದಲಿತರಿಗೆ ಇಂತಿಷ್ಟು ಎಂದು ತೋರಿಕೆಗೆ ಒಂದಿಷ್ಟು ಅವಕಾಶ ಕಲ್ಪಿಸಿ ಉಳಿದ ಪಾಲನ್ನು ಇತರರಿಗೆ ಅದೇ ನ್ಯಾಯದಲ್ಲಿ ಹಂಚುವುದು ಈಗ ಮಾಮೂಲು ನಿಯಮ. ಇದು ಸ್ವತಃ ಸರ್ಕಾರಗಳೆ ಸಮುದಾಯಗಳನ್ನು ಮೆಚ್ಚಿಸಲು ರೂಪಿಸಿಕೊಂಡಿರುವ ಮೌಖಿಕ ಇಲ್ಲವೆ ಮೌನ ಅನುಶಾಸನ. ಈ ಬಗೆಯ ಮುಗುಂ ಆದ ಮೌನ ಅನುಶಾಸನವು ನ್ಯಾಯ ಪಡೆದುಕೊಳ್ಳಬಹುದು ಎಂಬ ನಿಯಮವನ್ನು ಪಾಲಿಸುವಂತಹದು. ಇದು ಪ್ರಜಾಪ್ರಭುತ್ವದಲ್ಲಿ ಅದರಲ್ಲೂ ದಲಿತರ ಅಸ್ತಿತ್ವದ ಹಿನ್ನೆಲೆಯಲ್ಲಿ ಪರಮ ಅಪರಾಧದ ಸಂಗತಿಯೇ ಸರಿ. ಇಂತಲ್ಲಿ ದಲಿತತ್ವದ ಎಲ್ಲ ಬಗೆಯ ಹಕ್ಕೊತ್ತಾಯದ ದನಿಯು ಪ್ರಭುತ್ವದ ಆಮಿಷಗಳಿಗೆ ಬಲಿಯಾಗಬೇಕಾದ ಅಪಾಯವಿರುತ್ತದೆ.

ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲಿ ದಲಿತತ್ವವು ಎಷ್ಟೊಂದು ಸುಲಭವಾಗಿ ಕ್ರಯಕ್ಕೆ ಒಳಪಡಬಹುದು ಎಂಬುದನ್ನು ಯಾರೆ ಆದರೂ ಅರ್ಥಮಾಡಿಕೊಳ್ಳಬಲ್ಲರು. ಇಡೀ ದೇಶದ ಎಲ್ಲ ಸಮುದಾಯಗಳು ತಮ್ಮ ತಮ್ಮ ಅಸ್ತಿತ್ವದ ನೆಲೆಯಲ್ಲಿಯ ಜಾತಿ ಧರ್ಮಗಳ ಹತಾರಗಳಿಂದಲೆ ಚುನಾವಣೆಯನ್ನು ಮುಗಿಸಿ ಅಧಿಕಾರದ ಗದ್ದುಗೆ ಏರಿ ತಮ್ಮ ಪರಾಕ್ರಮವನ್ನು ಮೆರೆಯುವಾಗ ದಲಿತತ್ವದ ವೈಚಾರಿಕೆ ವ್ಯಾಖ್ಯಾನಗಳೆಲ್ಲವೂ ಗಾಳಿಗೆ ಹಾರಿಹೋಗಿರುತ್ತವೆ. ಇಂತಹ ವೈರುಧ್ಯದ ವರ್ತಮಾನದಲ್ಲಿ ಇಡೀ ದಲಿತತ್ವದ ಪ್ರಜ್ಞೆಯೆ ಮತದಾನದ ಶಕ್ತಿಯಾಗಿ ಸಂಘಟಿತವಾಗುವುದಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಸಮುದಾಯಗಳು ಹಕ್ಕೊತ್ತಾಯವನ್ನು ಚಲಾಯಿಸಬಲ್ಲವಾಗಿರುತ್ತವೆಯೇ ಹೊರತು ವ್ಯವಸ್ಥೆಯನ್ನು ತಮ್ಮ ನ್ಯಾಯಕ್ಕಾಗಿ ಗೆದ್ದುಕೊಳ್ಳುವ ಮತ ಶಕ್ತಿ ಇಲ್ಲದೇ ಇರುವುದರಿಂದ ದಲಿತತ್ವದ ಎಷ್ಟೆಲ್ಲ ಬಹುರೂಪಿಯಾದ ಬಿಡಿಬಿಡಿ ಸಂಸ್ಥೆಗಳು ಹೋರಾಟಗಳು ವಿಫಲವಾಗುತ್ತಲೆ ಇರುತ್ತಿವೆ. ಭಾರತೀಯ ಸಮಾಜವೆ ಸದಾ ಕಾಲದಲ್ಲಿ ವಿಭಜಿತ ಪ್ರಜ್ಞೆಯಲ್ಲೆ ಯೋಚಿಸುತ್ತಿರುತ್ತದೆ. ಈ ಸಮಾಜಗಳಿಗೆ ಸ್ವಯಂ ಪರಿಪೂರ್ಣ ಎನ್ನುವ ಭಾವನೆಯನ್ನು ಬೆಳೆಸಿಬಿಟ್ಟಿದೆ. ಒಂದು ಜಾತಿಯು ಇನ್ನೊಂದು ಜಾತಿಗಿಂತ ಅನ್ಯ ಎಂದು ಕೊಳ್ಳುತ್ತಲೆ ಮೇಲೇರಿ ಮೈಯಲ್ಲಿ ಸದಾ ತನ್ನ ಹೊರಗಿನವರನ್ನು ನಿಯಂತ್ರಿಸುವ ನಿರ್ದೇಶಿಸುವ ಶೋಷಿಸುವ ಮೌಲ್ಯಗಳೇ ಸರಿ ಎಂದು ತಿಳಿದುಕೊಂಡಿರುತ್ತವೆ. ಅನ್ಯತೆಯು ಕೂಡ ಅನನ್ಯತೆಯ ನಂಬಿಕೆಗಳಿಗೆ ದಾರಿ ಮಾಡಿದೆ. ಶೋಷಣೆ ಮಾಡುವುದು ಸರಿ-ತಪ್ಪು ಎಂಬ ಲೆಕ್ಕಕ್ಕಿಂತ ಅದು ನಡೆದು ಬಂದ ದಾರಿ ಎಂಬಂತೆ ಮೇಲು ಜಾತಿಗಳು ಪಾಲಿಸುವುದು ಇಂತಹ ತಿಳುವಳಿಕೆಯಿಂದಲೆ.

ಆದರೆ, ಇಂತಹ ಮೂಢ ನಂಬಿಕೆಗಳನ್ನು ನಾಶಪಡಿಸಲೆಂದೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ದಲಿತರಿಗೆ ಕೊಡಮಾಡಿದ್ದರೂ ಅದೇ ಸಂವಿಧಾನವನ್ನು ಮೂಢನಂಬಿಕೆಗಳಿಗೆ ಅನುಸಾರವಾಗಿಯೆ ತಿದ್ದುಪಡಿ ಮಾಡುವ ಹಠಗಳೂ ನಡೆಯುತ್ತಿವೆ. ಒಂದು ದೇಶದ ಸರ್ವೋಚ್ಚ ನೈತಿಕತೆಯೆ ತಾರತಮ್ಯದಿಂದ ವರ್ತಿಸಿದರೆ ದಲಿತತ್ವದ ಯಾವ ಜಾಗೃತಿಯೂ ಫಲಗೊಳ್ಳುವುದಿಲ್ಲ. ಅಖಂಡವಾದ ನೈತಿಕ ಪ್ರಜ್ಞೆಯನ್ನು ಕಳೆದುಕೊಳ್ಳುವ ಯಾವ ಪ್ರಭುತ್ವವೂ ರಾಜಕಾರಣವೂ ತನ್ನ ನಾಡಿನ ಎಲ್ಲ ಸಮುದಾಯಗಳನ್ನು ಉನ್ನತ ನಾಗರಿಕತೆಯ ಕಡೆಗೆ ಕೊಂಡೊಯ್ಯಲಾರದು. ಪ್ರತಿಸಲದ ಚುನಾವಣೆಗಳನ್ನು ಗಮನಿಸಿದರೆ; ಬಹುಸಂಖ್ಯಾತರಾದ ದಲಿತ ಸಮುದಾಯಗಳ ಉನ್ನತ ನಾಗರಿಕ ಪ್ರಜ್ಞೆಯನ್ನು ಮತ್ತೆ ಮತ್ತೆ ಕಿರಿದುಗೊಳಿಸುವ ರಾಜಕಾರಣವೇ ವಿಜೃಂಭಿಸುತ್ತಿರುವುದು ಹೆಚ್ಚಾಗುತ್ತಿದ್ದು; ಭವಿಷ್ಯವೂ ಮತ್ತಷ್ಟು ಆತಂಕಕಾರಿಯಾದದು ಎಂಬುದನ್ನು ಸೂಚಿಸುತ್ತದೆ. ದಲಿತರ ಬಿಡುಗಡೆಯ ಸ್ಥಿತಿಯು ಮುಂದೆ ಯಾವ ರೀತಿ ವಿರೂಪಗೊಳ್ಳಬಲ್ಲದು ಎಂಬುದು ಇದರಿಂದ ತಿಳಿಯುತ್ತಿದೆ.

ಈ ಮೇಲೆ ಪ್ರಸ್ತಾಪಿಸಿದ ‘ವಿಭಜಿತ ಪ್ರಜ್ಞೆ’ಯಿಂದ ದಲಿತತ್ವದ ಇನ್ನೊಂದು ನೆಲೆಯನ್ನು ಆಲೋಚಿಸಬಹುದು. ದಲಿತ ಸಂಸ್ಕೃತಿ, ಸಾಹಿತ್ಯ, ಪರಂಪರೆ ಮುಂತಾದವುಗಳಿಂದ ನಾವು ಭಾವಿಸಿಕೊಂಡಷ್ಟು ಸಲೀಸಾಗಿ ಸಮಾಜದ ರಚನೆಯಲ್ಲಿ ದಲಿತ ಸಮುದಾಯಗಳು ಇಲ್ಲ. ಬೃಹತ್ ವರ್ಣ ಸಮಾಜದ ಒಳಗಿನ ದಲಿತ ಸಮಾಜದ ರಚನೆಯ ಒಳಗೆಯೆ ಹತ್ತಾರು ನೂರಾರು ರೀತಿಯ ಬಿಡಿ ಸಮಾಜಗಳಿವೆ. ಛಿದ್ರ ಸಮಾಜದ ಒಳಗಿನ ಅಪನಂಬಿಕೆಗಳು ಬಿಡಿಸಲಾರದಷ್ಟು ಪ್ರಕ್ಷುಬ್ಧವಾಗಿ ಇಪ್ಪತ್ತನೆ ಶತಮಾನದ ಕೊನೆಯ ವೇಳೆಗೆ ಭಾರತದ ಜಾತಿ ರಾಜಕಾರಣವು ಪ್ರಬಲಗೊಂಡು, ಜಾತಿಗಳು ಮತ್ತೆ ಪೆಟ್ಟಿಗೆಯ ಲೆಕ್ಕಾಚಾರಗಳಿಗೆ ಒಳಪಟ್ಟ ಮೇಲೆ ಜಾತಿ ಪದ್ಧತಿಯ ಮೂಲ ಸ್ವರೂಪವೇ ಬದಲಾಗಿ ಹೋಗಿದೆ. ಕೆಲವು ಜಾತಿಗಳು ತಮ್ಮ ಸನಾತನ ಅಧಿಕಾರಗಳನ್ನು ಕೆಲವು ಹಂತಗಳಲ್ಲಿ ಕಳೆದುಕೊಂಡಿದ್ದರೆ ಶೂದ್ರ ಸಮುದಾಯಗಳು ಹೊಸ ಬಗೆಯ ರಾಜ್ಯಧಿಕಾರದಲ್ಲಿ ಒಂದಿಷ್ಟು ಅಧಿಕಾರವನ್ನು ನಿರ್ಣಾಯಕವಾಗಿ ಪಡೆದಿವೆ. ಬಲಿಷ್ಠವಾದ ಕೆಲವೇ ಜಾತಿಗಳು ಅಸ್ಪೃಶ್ಯತೆಯ ಹಳೆಯ ಮಾದರಿಯ ಶೋಷಣೆಯನ್ನು ಬಿಟ್ಟುಕೊಟ್ಟು ಒಂದಿಷ್ಟು ಸಮೀಪವಾಗಿ ದಲಿತ ಸಮುದಾಯಗಳ ಹತ್ತಿರಕ್ಕೆ ಬಂದಿದ್ದರೂ ಅಂತಿಮವಾದ ಗದ್ದುಗೆಯ ಹತ್ತಿರಕ್ಕೆ ಯಾವ ದಲಿತರನ್ನು ಒಳಕ್ಕೆ ಬಿಟ್ಟುಕೊಡದೆ ಹೊರಗೇ ಉಳಿಸಿವೆ.

ಇಂತಹ ಪರಿಸರದಲ್ಲಿ ವರ್ಣ ಸಮಾಜವು ಪರಿಸ್ಕಾರಗೊಂಡಿರುವುದು ಸಹಜ. ತನ್ನ ಅಧಿಕಾರ ಹಾಗೂ ಅಸ್ತಿತ್ವದ ಕಾರಣವಾಗಿ ಇಂತಹ ಹೊಂದಾಣಿಕೆಯನ್ನು ಮೇಲು ಸಮಾಜಗಳು ರೂಢಿಸಿಕೊಂಡಿವೆ. ಆದರೆ, ಸ್ವತಃ ತಳಸಮುದಾಯಗಳ ‘ದಲಿತ ಸಮಾಜ’ದ ಒಳಗಿನ ವೈರುಧ್ಯ ಘರ್ಷಣೆಗಳು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ರಾಜ್ಯಾಧಿಕಾರದ ಜೊತೆ ತಾನು ಸೇರಿ ಪತನದ ಅಂಚಿನಿಂದ ತಪ್ಪಿಸಿಕೊಳ್ಳಬೇಕು ಎಂಬಂತೆ ಆಲೋಚಿಸುವ ಬಿಡಿ ಬಿಡಿ ಸಮುದಾಯಗಳ ಬಿಡುಗಡೆಯ ದಾಹವು ಒಂಟಿ ಪಯಣದಲ್ಲೆ ಸಮುದ್ರವನ್ನು ಹಾಯಬಹುದು ಎಂಬ ದುರಂತ ಸಾಹಸಕ್ಕೆ ತಮ್ಮನ್ನು ತಾವು ಕಿತ್ತುಕೊಳ್ಳುತ್ತಿವೆ. ಒಂದೇ ಜಾತಿಯ ಒಳ ಭೇದಗಳು, ಸಮೀಪದಲ್ಲೇ ಬದುಕುವ ಸಮಾನ ಜಾತಿಗಳು ತಮ್ಮ ಬಗ್ಗೆಯೆ ವಿಪರೀತ ಅಪನಂಬಿಕೆಗಳನ್ನು ಸ್ವಾತಂತ್ರ್ಯಾ ನಂತರದ ಭಾರತದ ಧ್ಯಿಮ್ಮಡಿಸಿ ಕೊಂಡಿರುವುದು ವಿಚಿತ್ರವಾಗಿದೆ. ಸಂವಿಧಾನಬದ್ಧ ಅವಕಾಶದಲ್ಲಿ ಕೆಳ ಜಾತಿಗಳು ಸಂಘಟಿತವಾಗುವುದಕ್ಕೆ ಅಷ್ಟೆಲ್ಲ ಶಕ್ತಿಯಿದ್ದರೂ ಅವು ಒಂದರಿಂದ ಇನ್ನೊಂದು ದೂರ ಸರಿಯುವುದಕ್ಕೆ ಬದ್ಧವಾಗುತ್ತಿವೆ.

ಇದು ಸ್ವತಃ ಸಮಾಜದ ಒಳಗೆಯೇ ಇಪ್ಪತ್ತನೆ ಶತಮಾನದಲ್ಲಿ ಗುಪ್ತವಾದ ಜಾತಿಯು ಇನ್ನಷ್ಟು ಬಲವಾಗಿ ಬೇರು ಬಿಡುವಂತೆ ಮಾಡುತ್ತಿದೆ. ಕೆಳಜಾತಿಗಳಲ್ಲೆ ಜಾತಿ ಕಲಹ ಹಲ್ಲೆ ಆಕ್ರಮಣ ಬಹಿಷ್ಕಾರ ಮುಂತಾದ ಹೇಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಪ್ರತಿ ವರ್ಷವು ಅವುಗಳ ಪ್ರಮಾಣ ಹೆಚ್ಚುತ್ತಿದೆ. ಒಳಜಾತಿಗಳಲ್ಲೆ ಉಂಟಾಗುವ ಇಂತಹ ದುರಂತಗಳು ಹೊರಗೆ ವ್ಯವಸ್ಥೆಯ ಕೇಂದ್ರದಲ್ಲಿ ಕುಳಿತ ಮೇಲು ಜಾತಿಗಳಿಗೆ ಯಾವ ಬಗೆಯ ಅಪಾಯವನ್ನು ತುರುವುದಿಲ್ಲ. ಕಂಬಾಲಪಲ್ಲಿಯಲ್ಲಿ ಉಂಟಾದ ನರಮೇಧದಿಂದ ಬಲಿಷ್ಠ ಜಾತಿ ಸಮಾಜಕ್ಕೆ ರಾಜಕೀಯವಾಗಿ ಯಾವ ಸೋಲೂ ಉಂಟಾಗುವುದಿಲ್ಲ. ಇಂದು ಕೆಳ ಜಾತಿಗಳ ಒಳಗೆಯೇ ಅನ್ಯತ್ವದ ಪ್ರಜ್ಞೆಯು ದಟ್ಟವಾಗಿದ್ದು ತನ್ನ ಸಮೀಪದ ಅಥವಾ ಕೆಳಗಿನ ಜಾತಿನ ಮೇಲೆಯೆ ಅದು ಮೊದಲ ಆಕ್ರಮಣವನ್ನು ಮಾಡುತ್ತಿರುವುದು. ಈ ಆಕ್ರಮಣಕ್ಕೆ ಉಳಿದ ಮೇಲು ಜಾತಿಗಳ ಅಡ್ಡಿ ಇರುವುದಿಲ್ಲ. ಮುಗುಂ ಆಗಿ ‘ಆಗಲಿ ಬಿಡು’ ಎಂಬ ತಂತ್ರವಿರುತ್ತದೆ. ಅಷ್ಟೇ ಅಲ್ಲದೆ ಸ್ವಯಂ ತನ್ನ ಒಳಜಾತಿಯ ಒಳಗೆ ಕೂಡ ಸಂದರ್ಭಬಂದಾಗ ಬಹುಸಂಖ್ಯಾತ ಮನೋಧರ್ಮಕ್ಕೆ ಹೊಂದಿಕೊಂಡು ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲ. ಹೀಗಾಗಿ ಒಳಜಾತಿಗಳು ತಮ್ಮ ತಮ್ಮ ವಿರುದ್ಧವಾಗಿ ಮಾಡಿಕೊಳ್ಳುವ ಹಲ್ಲೆಗಳಿಗೆ ಬಲಿಷ್ಠವಾದ ಮೇಲೆ ಸಮಾಜವು ನಿರ್ಣಾಯಕವಾದ ಘಟ್ಟದಲ್ಲಿ ಹಿಂದೆ ಸರಿದು ಇದು ಅವರವರ ಕರ್ಮ ಎಂದು ಮರೆಗೆ ಸರಿಯುತ್ತದೆ. ಒಳಜಾತಿಗಳ ಒಳಗಿನ ಆಕ್ರಮಣಗಳು ಯಾವ ಬಗೆಯ ನ್ಯಾಯಕ್ಕಾಗಿ ಹೀಗೆ ವರ್ತಿಸುತ್ತವೆ ಎಂಬುದನ್ನು ಗಮನಿಸಬೇಕು. ಇಲ್ಲಿ ರಾಜಕೀಯ ಪಾಲಿನ ಒಳಜಗಳ ಒಂದು ಕಡೆಗಿದ್ದರೆ; ಇಡೀ ದೊಡ್ಡ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡು ಅವುಗಳ ಜೊತೆ ಸ್ಪರ್ಧೆಗಿಳಿದು ಹತಾಶೆಯಿಂದ ಆತ್ಮಹತ್ಯಾತ್ಮಕವಾಗಿ ಒಬ್ಬರನ್ನೊಬ್ಬರು ಸ್ವಯಂ ನಿಷೇಧಿಸಿಕೊಳ್ಳತ್ತಲೇ ಸ್ವಯಂ ಹಲ್ಲೆಗಳಿಗೆ ಮುಖಾಮುಖಿಯಾಗುತ್ತಿರುತ್ತವೆ. ಇದು ಜಾತಿಯ ಮೂಲ ಪ್ರಜ್ಞೆಯು ಆಧುನಿಕ ಸಮಾಜದಲ್ಲಿ ಮತ್ತೆ ವಿಭಜಿತ ನ್ಯಾಯದ ಕ್ರಮದಲ್ಲಿ ವಿಕೃತಗೊಳ್ಳುವ ಸ್ಥಿತಿ.

ಇಂತಹ ವಿಭಜಿತ ಸಮಾನತೆಗೆ ಒತ್ತಾಯಿಸುವ ಸಮುದಾಯಗಳ ಭವಿಷ್ಯ ಅನಿಶ್ಚಿತತವೇ. ಹಾಗೆಯೆ ಈ ದಲಿತ ಸಮಾಜ ಮುಂದೆ ಈಗಿರುವುದಕ್ಕಿಂತಲೂ ಹೆಚ್ಚಾಗಿ ತಮಗೆ ತಾವೇ ಅಪಾಯಕಾರಿಯಾಗಿ ತಂತಮ್ಮ ವಿರುದ್ಧವಾಗಿಯೆ ಬಡಿದಾಡಿಕೊಂಡು ಮತ್ತೆ ಅದೇ ಹಳೆಯ ಯಜಮಾನನ ಮುಂದೆ ನ್ಯಾಯ ಕೇಳುತ್ತ ಕಾಯಬೇಕಾಗುತ್ತದೆ. ದಲಿತ ಸಮಾಜದ ವಿಪರ್ಯಾಸವೇ ಇದಿರಬೇಕೇನೊ. ತಾನು ಎಚ್ಚರಗೊಳ್ಳುತ್ತಲೇ ಅದು ತನ್ನ ನಿಜವಾದ ಶತ್ರುವಿನ ಕಡೆ ನೋಡುವುದಿಲ್ಲ. ನೋಡಿದರೂ ಅದನ್ನು ಪಳಗಿಸುವ ಪರಿಯು ಬಲಿಷ್ಠ ರಾಜಕಾರಣಕ್ಕೆ ಕರಗತವಾಗಿರುತ್ತದೆ. ಸಮುದಾಯಗಳು ಹೀಗೆ ಸೀಳಿಕೊಳ್ಳುವುದು ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣ ಹಾಗೂ ಶಕ್ತಿಯುತಗೊಳಿಸುತ್ತದೆ.

ತಮ್ಮ ಎಲ್ಲ ಬಿಡುಗಡೆಯೂ ಸರ್ಕಾರದ ಮೂಲಕವೆ ಆಗಿಬಿಡುತ್ತದೆ ಎಂಬ ಭ್ರಮೆಯು ಅನೇಕ ಸಂಘಟನೆಗಳಿಗೆ ಇದೆ. ಆರಮಬದಲ್ಲಿ ದಸಂಸ ತಮ್ಮ ಚಳುವಳಿಯ ಉದ್ದಕ್ಕೂ ಸರ್ಕಾರದ ವಿರುದ್ಧವಾಗಿಯೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿತು. ಅದು ಅನಿವಾರ್ಯವು ಆಗಿತ್ತು. ಸಮಾಜದ ಜೊತೆ ನೇರ ಹೋರಾಟ ಆಡುವುದು ಅವತ್ತಿಗೆ ಅಷ್ಟು ಸಲೀಸಾದ ಕೆಲಸವಾಗಿರಲಿಲ್ಲ. ವಿಧಾನಸೌಧದ ಮುಂದೆ ಧರಣಿ ಕುಳಿತು ಘೋಷಣೆ ಕೂಗಿದರೆ ಅದು ಪರೋಕ್ಷವಾಗಿ ಜಾತಿನಿಷ್ಠ ಸಮಾಜಕ್ಕೆ ಎಚ್ಚರವನ್ನು ಕೊಟ್ಟಂತಾಗುತ್ತಿತ್ತು. ಆದರೆ ಅಂಬೇಡ್ಕರ್ ಅವರೊಬ್ಬರೆ ಇಡೀ ದೇಶದ ಒಟ್ಟು ಸಮಾಜವನ್ನೇ ಅಂತಹ ಮಹಾತ್ಮಗಾಂಧಿಯನ್ನೇ ಎದುರು ಹಾಕಿಕೊಂಡು ಏಕಾಂಗಿಯಾಗಿ ತನ್ನ ಬಹು ಸಮಾಜಗಳನ್ನು ಬೆನ್ನಮೇಲೆ ಹೊತ್ತುಕೊಂಡು ಇಡೀ ವಸಾಹತುಶಾಹಿ ಜಗತ್ತೇ ಒಮ್ಮೆ ಕೇಳಿಸಿಕೊಂಡು ಸ್ಪಂದಿಸುವಂತೆ ವೈಚಾರಿಕವಾದ ಆಕ್ರಂಧವನ್ನು ಮಾಡಿದರು. ಆ ವೈಚಾರಿಕ ಕಹಳೆಗೆ ಗಾಂಧಿ ತಲೆಬಾಗಿದರು. ಅವತ್ತಿನ ಇಡೀ ದೇಶದಲ್ಲೇ ದಲಿತ ಸಮುದಾಯದ ಪ್ರತಿನಿಧಿಯಾಗಿ ಅಂಬೇಡ್ಕರ್ ಸಂಚಲನೆ ಉಂಟು ಮಾಡಿದರು. ಆದರೂ ಅಂತಹ ಧೀಮಂತ ನಾಯಕನಿಗೆ ಅವತ್ತು ಕೂಡ ಇಡೀ ದೇಶದ ದಲಿತ ಹೋರಾಟಗಳಲ್ಲಿ ಎಡಗೈ ಬಲಗೈ ರಾಜಕೀಯವು ಮೂರ್ತ ರೂಪವನ್ನು ಪಡೆದುಕೊಳ್ಳುತ್ತಾ ತನ್ನ ಅನನ್ಯತೆಯ ಮೂಲಕವೆ ಅನ್ಯಗೊಳ್ಳುವ ಹಂತವನ್ನು ತಲುಪುತ್ತಿವೆ.

ಈ ಬಗೆಯ ವೈರುಧ್ಯದಿಂದಲೆ ಕೆಳಜಾತಿಗಳು ಆಧುನಿಕ ಭಾರತದಲ್ಲಿ ರಾಜಕೀಕರಣಗೊಳ್ಳುತ್ತಲೇ ಅವು ಪ್ರಧಾನ ಜಾತಿಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗಿದ್ದು ಜಾತ್ಯಾತೀತೆಯ ಮೂಲಾಶಯವೇ ಅಪಮೌಲ್ಯಗೊಂಡುಬಿಟ್ಟಿದೆ. ಅಂಬೇಡ್ಕರ್ ಅವರ ಜಾತಿ ವಿನಾಶದ ಚಿಂತನೆಗಳೆಲ್ಲವೂ ಇವತ್ತಿನ ಇಂತಹ ಒಳಜಾತಿಗಳ ಬಿಗಡಾಯಿಸಿದ ಸಂಬಂದಗಳಲ್ಲಿ ಯಾವ ರೀತಿಯಲ್ಲಿ ಉಪಯುಕ್ತ ಎಂಬ ಅನುಮಾನಕ್ಕೆ ಒಳಪಡುತ್ತಿವೆ. ತೀರ ಕೆಳಜಾತಿಗಳು ರಾಜಕೀಕರಣಗೊಳ್ಳುವುದು ಅಪರಾಧವಲ್ಲ. ಪ್ರಬುದ್ಧ ರಾಜಕೀಯ ಸಮುದಾಯವಾಗಿ ಇಡೀ ದಲಿತ ಸಮುದಾಯ ಪರಿವರ್ತನೆ ಆಗಬೇಕಾದ ಅಗತ್ಯ ಇದೆ ಎಂದು ಅಂಬೇಡ್ಕರ್ ಅವರ ಒಟ್ಟು ಚಿಂತನೆಯಲ್ಲಿ ತಿಳಿಯುತ್ತದೆಯಾದರೂ ಇಂತಹ ಆಶಯವೇ ಇಂದಿನ ರಾಜಕಾರಣದಲ್ಲಿ ಅಸಾಧ್ಯವಾಗುತ್ತಿದೆ. ಬಲಿಷ್ಠ ಜಾತಿಗಳು ಈಗಾಗಲೇ ಪ್ರಭುತ್ವದ ರಾಜಕೀಕರಣಗೊಂಡು ಬಹಳ ದೂರ ಹೊರಟು ಹೋಗಿವೆ. ಜಾತಿನಿಷ್ಠವಾಗಿ ರಾಜಕಾರಣವು ಕೊಬ್ಬಿ ಹೋಗಿವೆ. ಜಾತಿಯನ್ನು ಹೊರತುಪಡಿಸಿ ಯಾವ ಪಕ್ಷವೂ ರಾಜಕಾರಣಕ್ಕೆ ಇಳಿಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಜಾತ್ಯಾತೀತೆಯ ಹೆಸರಿನಲ್ಲಿ ಜಾತಿಯ ಅಪರಾಧಗಳು ದೈತ್ಯವಾಗಿ ಬೆಳೆಯುತ್ತಿವೆ.

ವರ್ತಮಾನದ ಈ ವಿರಾಟ್ ಜಾತಿ ಕಥನಗಳು ಇಡೀ ಭಾರತದ ಪ್ರಜಾ ವ್ಯವಸ್ಥೆಯನ್ನೆ ನಿಯಂತ್ರಿಸಬಲ್ಲವು. ಧರ್ಮಕ್ಕಿಂತಲೂ ಜಾತಿಯೇ ಇವತ್ತಿನ ವಾಸ್ತವ. ದಲಿತ ಸಮುದಾಯಗಳು ಜಾತಿಯ ಚಹರೆಯಿಂದಲೆ ಪೈಪೋಟಿ ನಡೆಸಬೇಕಾದ ಇಕ್ಕಟ್ಟು ಇದರಿಂದಲೇ ಉಂಟಾಗಿರುವುದು. ಜಾತಿಯನ್ನು ಬಿಡಬೇಕೆಂಬುದು ದಲಿತತ್ವದ ತಾತ್ವಿಕತೆಯಾದರೂ ಅದರ ಇನ್ನೊಂದು ತುದಿಯಲ್ಲಿ ತಾನು ಅದೇ ಜಾತಿಯ ಏಣಿಯನ್ನು ಏರಿಯೇ ರಾಜಕಾಣರದ ಎತ್ತರದ ‘ಆ ಮನೆಗೆ’ ಪ್ರವೇಶಿಸಬೇಕಾದ ಧಾವಂತವಿದೆ. ಹೀಗೆ ಜಾತಿಯ ಏಣಿಗಳನ್ನು ಅನಿವಾರ್ಯವಾಗಿ ಪ್ರತಿಯೊಬ್ಬ ದಲಿತ ನಾಯಕನೂ ಸದಾಕಾಲ ಕಂಕುಳಲ್ಲಿ ಹೊತ್ತುಕೊಂಡೇ ಪ್ರತಿ ಹಂತವನ್ನು ಏರಿ ಇಳಿದು ಸುತ್ತ ಬೆಳಕಿನ ಆಚೆ ತೀರದ ದಾರಿ ತಲುಪುವ ವೇಳೆಗೆ ಆತ ರಾಜಕೀಯ ಸನ್ಯಾಸ ಸ್ವೀಕರಿಸುವ ಹಂತಕ್ಕೆ ಬಂದಿರುತ್ತಾನೆ. ಅಷ್ಟರ ಮಟ್ಟಿಗೆ ಅವನ ದಲಿತ ಸಮೂಹವೂ ವಿಫಲಗೊಂಡಿರುತ್ತದೆ. ಜಾತಿಯ ಈ ಏಣಿಗಳಲ್ಲೆ ಪೈಪೋಟಿಯು ಈಗ ವಿಪರೀತ. ದಲಿತ ಜಾತಿಗಳು ತಮ್ಮವರ ಏಣಿಗಳನ್ನೇ ಬೀಳಿಸಿ ದೊಡ್ಡ ದೊಡ್ಡ ಜಾತಿ ಏಣಿಗಳ ಮುಂದೆ ತಲೆಬಾಗಿ ನಿಲ್ಲುತ್ತವೆ.

ಜಾತಿ ಮತ್ತು ಶ್ರೇಣೀಕರಣ

ಜಾತಿ ವ್ಯವಸ್ಥೆಯು ಶ್ರೇಣೀಕರಣದಲ್ಲಿದೆ ಎಂಬುದು ನಿಜವೇ. ಆದರೆ, ರಾಜಕಾರಣದಲ್ಲಿ ಸ್ವಯಂ ಜಾತಿಗಳು ಏಣಿಗಳಾಗಿ ಪರಿವರ್ತನೆಯಾಗುವ ರೀತಿಯು ಇಡೀ ಸಮಾಜದ ವ್ಯವಸ್ಥೆಯನ್ನೆ ಹೊಸ ಕಾಲದಲ್ಲಿ ಬಲಯುತವಾಗಿ ತನ್ನ ತೆಕ್ಕೆಗೆ ತಂದುಕೊಳ್ಳುತ್ತದೆ. ಈ ಬಗೆಯಲ್ಲಿ ರಾಜಕೀಕರಣಗೊಳ್ಳುವ ಕೆಳ ಜಾತಿಗಳು ಬಹಳ ದೂರ ಕ್ರಮಿಸಲಾರವು. ಈಗಾಗಲೇ ಬಲಿಷ್ಠವಾಗಿ ರಾಜಕೀಕರಣಗೊಂಡಿರುವ ಮೇಲು ಜಾತಿಗಳು ತನಗಿಂತ ಕೆಳಗಿನಿಂದ ಬಂದ ಜಾತಿಯ ಏಣಿಗಳನ್ನು ಉಪ್ಪರಿಗೆಯ ಮೇಲೆ ನಿಂತು ನಿಭಾಯಿಸಬಲ್ಲವು. ಹಾಗೆಯೇ ತನಗೆ ಈ ಏಣಿಯ ಅಗತ್ಯ ಇಲ್ಲ ಎಂದಾಗ ಒದ್ದು ಬಿಡಬಲ್ಲದು. ಇದು ಆ ಮಟ್ಟಿಗೆ ಆ ಒಂದು ಜಾತಿಯ ವೈಫಲ್ಯವಾಗಿರದೆ ಇಡೀ ಸಮಾಜದ ವೈರುಧ್ಯ ಬಾಂಧವ್ಯದ ಹುಸಿಯನ್ನು ತೋರುತ್ತಲೆ ಮೇಲು ಜಾತಿಗಳು ರಾಜಕೀಯ ಸಮುದಾಯಗಳಾಗಿ ಬೆಳೆದು ಬಿಟ್ಟ ಮೇಲೆ ಯಾರನ್ನು ಬೇಕಾದರೂ ದಂಡಿಸಿ ಗೆದ್ದುಕೊಳ್ಳಬಲ್ಲೆವು ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತಿರುತ್ತದೆ. ಇಂತಲ್ಲಿ ದಲಿತ ಸಮುದಾಯಗಳು ತಮ್ಮೊಳಗೇ ನಡೆಸುವ ರಾಜಕೀಯ ಪಾಲಿನ ಪೈಪೋಟಿಯು ಅಂಬೇಡ್ಕರ್ ಅವರ ಕನಸನ್ನು ಭಗ್ನಗೊಳಿಸುತ್ತಲೆ ಸಾಗುತ್ತದೆ. ಇನ್ನು ದಲಿತತ್ವದ ಪ್ರಜ್ಞೆಯನ್ನು ಇಂತಹ ಭಗ್ನತೆಯಲ್ಲಿ ಸಂಯೋಜಿಸುವುದು ಭಗೀರಥ ಪ್ರಯತ್ನದಂತೆಯೇ ಕಾಣುತ್ತಿದೆ. ದಲಿತ ರಾಜಕಾರಣವನ್ನು ಬೇರೊಂದು ಆಯಾಮದಿಂದ ರೂಪಿಸಿದ ಕಾನ್ಸಿರಾಂ ಮಾಯಾವತಿಯವರ ರಾಜಕೀಯ ಚಳುವಳಿಯು ಚಾರಿತ್ರಿಕವಾದುದು. ದಲಿತತ್ವದ ಒಂದು ಸಾಧ್ಯತೆ ಬಿಎಸ್‌ಪಿ. ಜಾತಿಗಳನ್ನು ರಾಜಕೀಯಗೊಳಿಸುತ್ತಲೆ ಮೇಲು ಜಾತಿಗಳ ಜಾತಿ ರಾಜಕಾರಣದ ಜೊತೆಗೆ ಪೈಪೋಟಿಗಿಳಿದು ರಾಜ್ಯಾಧಿಕಾರವನ್ನು ಹಿಡಿದ ಮಾಯಾವತಿಯ ರಾಜಕೀಯ ಪ್ರಯೋಗಗಳು ಹೇಗೆ ಮತ್ತೆ ಮತ್ತೆ ಜಾತಿಗಳು ಆಧುನಿಕ ಭಾರತದ ರಾಜಕಾರಣದಲ್ಲಿ ಹೊಸದಾಗಿ ನವೀಕರಿಸಿಕೊಂಡು; ಜಾತಿಯನ್ನು ಅನಿವಾರ್ಯವಾಗಿಯೇ ಉಳಿಸಿಕೊಳ್ಳಬೇಕಾದ ದಲಿತರ ದುರಂತ ಸ್ಥಿತಿಯನ್ನು ಬಿಂಬಿಸುತ್ತಿವೆ.

ಈ ದಾರಿಯಲ್ಲಿ ಉತ್ತರ ಭಾರತದ ರಾಜಕಾರಣದಲ್ಲಿ ಜೊತೆಗೊಂಡ ಹಲವಾರು ಕೆಳಜಾತಿಗಳು ತಮ್ಮ ಒಳಗೇನು ಗಾಢವಾದ ಒಪ್ಪಂದಗಳನ್ನು ಭವಿಷ್ಯದ ಕಾರಣಕ್ಕಾಗಿ ಮಾಡಿಕೊಂಡಿರಲಿಲ್ಲ. ಸದ್ಯದ ಅಧಿಕಾರದ ಹಂಚಿಕೆಯಲ್ಲಿ ಮಾತ್ರ ಪ್ರತಿಯೊಂದು ಜಾತಿಯೂ ಅದರ ರಾಜಕೀಯ ಪಕ್ಷವೂ ಲೆಕ್ಕ ಹಾಕುತ್ತಿರುತ್ತವೆ. ಮಾಯಾವತಿಯ ಜೊತೆ ಅಧಿಕಾರ ಹಂಚಿಕೊಳ್ಳುವುದು ಮೇಲು ಜಾತಿಗಳಿಗೆ ತತ್ಕಾಲೀನ ಒಪ್ಪಂದವಾಗಿತ್ತೆ ಹೊರತು ಅದು ದಲಿತ ಸಮುದಾಯಗಳ ಭವಿಷ್ಯದ ಆಶಯದಿಂದಲ್ಲ. ರಾಜಕೀಕರಣಗೊಂಡಿರುವ ಸಮುದಾಯಗಳು ಯಾವತ್ತೂ ತಮ್ಮ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಬಿಟ್ಟರೂ ಮುಂದಿನ ಅಧಿಕಾರ ಹಿಡಿಯುವ ತಂತ್ರಕ್ಕೆ ಬಿಟ್ಟಿರುತ್ತವೆ. ದಲಿತ ಸಮಾಜವು ಇದರಲ್ಲೇ ಹೋರಾಡುತ್ತ ಪ್ರತಿತಂತ್ರ ಮಾಡುತ್ತ ಅಖಂಡವಾದ ಹಾದಿಯಲ್ಲಿ ಚಲಿಸಲಾಗದೆ ಅಧಿಕಾರದ ಕೇಂದ್ರದ ಸುತ್ತಲೆ ಸುತ್ತುವ ಇಕ್ಕಟ್ಟಿಗೆ ಸಿಲುಕುತ್ತದೆ. ಇದು ಒಂದು ಸಮುದಾಯದ ಸಮಷ್ಠಿ ನ್ಯಾಯಕ್ಕೆ ಬೇಕಾದ ರಾಜಕಾರಣವಾಗಿರುವುದಿಲ್ಲ. ಹಿಂದುಳಿದ ವರ್ಗಗಳೆಲ್ಲವೂ ಕ್ಷಣಿಕವಾದ ರಾಜಕೀಯ ಒಪ್ಪಂದ ಹಾಗೂ ನಂಬಿಕೆಗಳಲ್ಲೇ ಮುಂದುವರಿದು ಶಾಶ್ವತವಾಗಿ ಎಲ್ಲರ ಬಗೆಗೂ ಅವಿಶ್ವಾಸವನ್ನೆ ಇಟ್ಟುಕೊಳ್ಳಬೇಕಾದ ಸಾಮಾಜಿಕ ಮೌಲ್ಯಗಳ ಹೇರಿಕೆ ಇರುವುದರಿಂಧ ಅಖಂಡವಾದ ದಲಿತ ರಾಜಕಾರಣವಾಗಲಿ ಹಿಂದುಳಿದ ವರ್ಗಗಳ ಸಮ್ಮಿಶ್ರ ರಾಜಕಾರಣವಾಗಲಿ ಘಟಿಸುವುದೇ ಇಲ್ಲ ಎಂಬಷ್ಟು ಹತಾಶೆಯ ವಾತಾವರಣ ನಿರ್ಮಾನವಾಗಿದೆ. ದೇವರಾಜ ಅರಸು ಅವರ ಕಾಲದ ರಾಜಕೀಯ ಎಚ್ಚರವು ಈ ಹೊತ್ತಿಗೆ ಒಂದು ಬಲವಾದ ಹಂತವನ್ನು ತಲುಪಿದ್ದರೂ ಅದಕ್ಕೆ ರಾಜ್ಯಾಧಿಕಾರದ ಹಂತವನ್ನು ತಲುಪುವುದು ಇನ್ನೂ ಅಸಾಧ್ಯವಾಗಿಯೇ ಉಳಿದಿದೆ. ಹೀಗೆ ಅಲಕ್ಷ್ಯಕ್ಕೆ ಒಳಗಾಗಿರುವ ಎಲ್ಲ ಹಿಂದುಳಿಕ ಸಮುದಾಯಗಳು ಕೂಡ ದಲಿತ ಸಮುದಾಯಗಳನ್ನು ನಂಬಲಾರವು ಹಾಗೆಯೇ ದಲಿತ ಸಮಾಜವು ಹಿಂದುಳಿದ ವರ್ಗಗಳ ಸಾಮಾಜಿಕ ರಚನೆಯ ಜೊತೆ ಬೆರೆಯಲು ಸಾಧ್ಯವಾಗಿಲ್ಲ. ಹೀಗೆ ಅಖಂಡವಾಗಿರಲಾಗದ ಇಂತಹ ಸಮುದಾಯಗಳು ರಾಜಕೀಕರಣಗೊಳ್ಳುತ್ತಿರುವ ರೀತಿಯು ತಾತ್ವಿಕವಾಗಿ ದಲಿತತ್ವದ ಚೌಕಟ್ಟಿನಲ್ಲಿ ಕಂಡರೂ ಈ ಬಗೆಯ ಪಯಣವೇ ಮುಂದಿನ ಹಂತದಲ್ಲಿ ರಾಜಕೀಯವಾಗಿ ಇವೆಲ್ಲವೂ ಮತ್ತೆ ಕಳಚಿದ ಕೊಂಡಿಗಳಾಗಿ ಬಿಡುವುದಕ್ಕೆ ಬೇಕಾದ ಸ್ವಭಾವವನ್ನೂ ಒಳಗೇ ಉಳಿಸಿಕೊಂಡಿರುತ್ತವೆ. ಸಾಮಾಜಿಕ ವ್ಯವಸ್ಥೆಯ ಮೂಲ ಪಾಯ ಎಂದರೆ ವಿಶ್ವಾಸ. ಅಪನಂಬಿಕೆಯಲ್ಲಿ ಬೆಳೆದ ಸಾಮಾಜಿಕ ವರ್ತನೆಯು ಸ್ವತಃ ತನ್ನನ್ನು ತಾನೇ ಕಾಯ್ದು ಕೊಳ್ಳಲಾರದ ಸ್ಥಿತಿಯಲ್ಲಿರುತ್ತದೆ. ನಂಬಿಕೆ ಇಲ್ಲದ ಸಮಾಜದಲ್ಲಿ ಎಲ್ಲವೂ ಕೃತಕ ಮಾನವ ಒಪ್ಪಂದಗಳಲ್ಲೆ ನಡೆಯುತ್ತಿರುತ್ತದೆ. ಜಾತಿ ವ್ಯವಸ್ಥೆಯು ಈ ಕಾರಣದಿಂದಲೆ ಯಾರನ್ನೂ ಒಪ್ಪದ ಪ್ರೀತಿಸದ ಕ್ರಮದಲ್ಲಿ ಜಾಲ ರೂಪಿಸುತ್ತಿರುತ್ತದೆ.

ಹೀಗಾಗಿಯೇ ಕಲ್ಪಿತ ಸ್ವಾತಂತ್ರ್ಯದಲ್ಲಿ ಬಹುಪಾಲು ಎಲ್ಲ ಸಮುದಾಯಗಳು ವಿಹರಿಸುತ್ತಿರುತ್ತವೆ. ದಲಿತ ವರ್ಗಗಳ ಸ್ವಾತಂತ್ರ್ಯವು ಯಾವುದೇ ಹೊತ್ತಿನಲ್ಲೂ ಬಲಿಷ್ಠ ಕೋಮುಗಳಿಂದ ಹರಣವಾಗುವುದು ಇದರಿಂದಲೆ. ಜಾತಿ ಸಮಾಜವು ವ್ಯಕ್ತಿಗಳಿಗೆ ಮೂಗು ದಾರ ಬಿಗಿದಿರುತ್ತದೆಯಾದ ಕಾರಣ ಪ್ರತಿ ಸಮುದಾಯವು ಅದರ ಎಲ್ಲೆಯಲ್ಲೇ ವ್ಯವಹರಿಸಬೇಕಾಗಿರುತ್ತದೆ. ಕಟ್ಟಿರುವ ಹಗ್ಗದಷ್ಟೆ ವ್ಯಾಪ್ತಿಯಲ್ಲಿ ಅದು ತನ್ನ ಅನನ್ಯತೆಯನ್ನೊ ಸಬಲೀಕರಣವನ್ನೋ ಮಾಡಿಕೊಳ್ಳಬೇಕಾಗಿರುತ್ತದೆ. ಈ ನಿಯಮ ಮೇಲು ಜಾತಿಗಳಿಗೆ ಅನ್ವಯಿಸುವುದಿಲ್ಲವಾದ್ದರಿಂದ ಅವು ನಿರಂಕುಶ ಸಮುದಾಯಗಳಾಗಿಯೆ ಅಧಿಕಾರವನ್ನು ಉಳಿಸಿಕೊಂಡು ಅಪರಿಮಿತ ಸ್ವಾತಂತ್ರ್ಯವನ್ನು ಪಡೆದಿರುತ್ತವೆ. ಹೀಗೆ ಸ್ವಾತಂತ್ರ್ಯ ಕೂಡ ಜಾತಿಯ ಲೆಕ್ಕದಲ್ಲಿ ವಿಭಜನೆಗೊಂಡು ಸಮಾನತೆಯ ಹೋರಾಟವು ಕೊನೆಗೂ ಜಾತಿಯಿಂದಲೇ ಪರ್ಯವಸಾನಗೊಳ್ಳುವುದಿದೆ.

ಮರಳಿ ಜಾತಿಗೆ ಪಯಣಿಸುವ ಈ ಬಗೆಯ ವಿರಾಟ್ ಹಿಮ್ಮುಖ ಚಲನೆಯು ಭಾಗಶಃ ಪ್ರತಿರೋಧದ ಮತ್ತೊಂದು ಸ್ವರೂಪವಿರಬೇಕು. ಹನ್ನೆರಡನೆ ಶತಮಾನದಲ್ಲಿ ನಡೆದ ವಚನ ಚಳುವಳಿಯು ದಲಿತತ್ವದ ಚಾರಿತ್ರಿಕ ಹಂತ. ಕಾಯಕದ ಈ ಚಳುವಳಿಯ ಆಳದಲ್ಲಿ ಜಾತ್ಯಾತೀತೆಯು ಪ್ರಧಾನ ಧ್ಯಾನವಾಗಿ ಧ್ವನಿಹೊರಡಿಸಿತ್ತು. ತಳಸಮುದಾಯಗಳ ಬಿಡುಗಡೆಯ ತಾತ್ವಿಕತೆಯೂ ಇದರಲ್ಲಿತ್ತು. ಅದಕ್ಕೆ ಬೇಕಾದ ಬೌದ್ಧಿಕತೆಯೂ ಆ ಕಾಲದ ದಲಿತ ಸಮಾಜದಲ್ಲಿ ಇತ್ತು. ಅಲ್ಲದೆ ಸಾಂಸ್ಕೃತಿಕವಾದ ಹುಸಿ ಅನನ್ವಯತೆಗಳನ್ನು ಭಂಗಪಡಿಸಿ ಒಂದು ವಿಶಾಲ ತಳಹದಿಯ ಕಾಯಕ ಚಹರೆಗೆ ಒಳಪಡಿಸುವ ಯತ್ನವನ್ನು ಬಸವಣ್ಣ ಮಾಡಿದ್ದರು. ಬಹು ಅನನ್ಯತೆಗಳು ವೈದಿಕ ಯಾಜಮಾನ್ಯವನ್ನು ಗೆಲ್ಲಲಾರವು ಎಂಬುದು ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು. ಆದುದರಿಂದಲೇ ಬೊರ ದೈವ ಮಡಕೆ ದೈವಗಳ ನಿರಾಕರಿಸಿದ್ದ. ಅವರು ಜಾತ್ಯಾತೀತ ವಚನ ತತ್ವವನ್ನು ಸಾಮಾಜಿಕ ಮೌಲ್ಯವ್ಯವಸ್ಥೆಯನ್ನಾಗಿಸಲು ಹೋರಾಡಿದರು. ಈ ಪರಿಯ ಯತ್ನ ಮುಂದೆ ಏನೇನಾಗಿ ಇಂದು ಯಾವ ಹಂತದಲ್ಲಿದೆ ಎಂಬುದು ತಿಳಿದ ಸಂಗತಿಯೇ. ಆದರೆ ಹನ್ನೆರಡನೆಯ ಶತಮಾನದ ಸಾಂಸ್ಕೃತಿಕ ರಾಜಕಾರಣವಾಗಿ ವಚನ ಚಳುವಳಿಯು ಅನೇಕ ಪಾಠಗಳನ್ನು ಬಿಟ್ಟು ಹೋಗಿದೆ. ವಚನ ಚಳುವಳಿ ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ರಾಜಕಾರಣದ ಕ್ರಾಂತಿಯನ್ನು ಮಾಡಿ ವಿಫಲಗೊಂಡ ಕಾಲ. ಕ್ರಾಂತಿಯನ್ನು ಹೀಗೆ ಜಾತಿನಿಷ್ಠ ಸಮಾಜದಲ್ಲಿ ಮಾಡುವುದೇ ಮಹಾಕಷ್ಟ. ಆದರೆ, ಅಂತಹ ಜೀವನ್ ಮರಣದ ಸವಾಲಿನ ಕ್ರಾಂತಿ ಕೂಡ ವಿಫಲವಾಗುತ್ತದೆ ಯಾಕೆ ಎಂದು ಯೋಚಿಸಿದರೆ; ಭಾಗಶಃ ಎಲ್ಲ ಬಗೆಯ ಅವೈದಿಕ ಹೋರಾಟಗಳ ಹುಟ್ಟಿನ ಜೊತೆಯಲ್ಲೇ ಆ ಸಾಹಸವನ್ನು ನಿಶ್ಪಲಗೊಳಿಸುವ ಶಕ್ತಿಗಳೂ ನಮ್ಮ ಒಳಗೆಯೇ ಬೆಳೆದಿರುತ್ತವೆ. ಬಸವಣ್ಣನ ಜೊತೆಯಲ್ಲೆ ಕ್ರಾಂತಿಯನ್ನು ವಿಕಾರಗೊಳಿಸುವ ಜಾತಿ ಶಕ್ತಿಗಳು ಅಡಗಿದ್ದವು. ಜಾತಿಯನ್ನು ನಾಶಪಡಿಸಲು ಸಿದ್ಧವಾದ ಕೂಡಲೇ ಅದರ ಅಮೂರ್ತ ಕೈಗಳು ನಮ್ಮ ಎಲ್ಲ ಪ್ರತಿ ತಂತ್ರಗಳನ್ನು ಮರಳಿ ತನ್ನ ರೂಪಕ್ಕೆ ಎರಕವಾಗುವಂತೆ ಜಾಲ ರೂಪಿಸಬಲ್ಲದು. ಹೀಗಾಗಿಯೆ ಶೈವ ಚಳುವಳಿ ಧಾರ್ಮಿಕವಾದ ಮತಭೇದಗಳಿಂದ ಜಾತಿಯ ಎರಕಕ್ಕೆ ಹೊಂದಿಕೊಂಡದ್ದು.

ಆದರೆ ಶೈವ ಪರಂಪರೆಯ ಆದಿ ಸ್ವರೂಪದಲ್ಲಿದ್ದ ದಲಿತ ಸಮಾಜಕ್ಕೆ ಮರಳಿ ಜಾತಿಗೆ ಹೋಗುವುದೇ ಇದ್ದ ಏಕೈಕ ಅವಕಾಶ. ಮೇಲು ಜಾತಿಗಳಿಗೆ ಅವು ಮತಾಂತರಗೊಳ್ಳುವುದು ಸಾಧ್ಯವಿರಲಿಲ್ಲ. ಬಸವಣ್ಣನವರು ಕೆಳಜಾತಿಗಳನ್ನು ಶೈವ ತತ್ವದ ರೀತಿ ನೀತಿಗೆ ಬಹಳ ಸುಲಭವಾಗಿ ಮತಾಂತರಗೊಳಿಸಿದ್ದರು. ಇದು ಕೂಡ ಸಲೀಸಿದ್ದಿತು. ಯಾಕೆಂದರೆ ಮೂಲದಲ್ಲಿ ಶೈವಾಚಾರಗಳಿಗೆ ನೆಲೆಯಾಗಿದ್ದ ದಲಿತ ಸಮುದಾಯಗಳು ಲಿಂಗಧಾರಣೆ ಮಾಡಿಕೊಳ್ಳುವುದು ಕಷ್ಟವೇನಿರಲಿಲ್ಲ. ದಲಿತತ್ವದ ಆಳದಲ್ಲಿ ಶೈವ ಪರಂಪರೆಯ ಗುಣಗಳಿದ್ದವು. ಆದರೆ ಇಂತಹ ಸ್ವರೂಪ ಕೂಡ ಜಾತಿಯ ಜಾಲದಲ್ಲಿ ವಿರೂಪಗೊಂಡಿತು. ಬಸವಣ್ಣ ದಲಿತತ್ವವನ್ನೇ ಸಂಘಟಿಸಲು ಹೋರಾಡಿದ್ದು. ಈ ಯತ್ನದಲ್ಲಿ ವಿಶೇಷವಾಗಿ ದಲಿತ ಸಮುದಾಯಗಳು ಭಾಗಿಯಾಗಿದ್ದುದು ಸಮಷ್ಠಿಯಾದ ನ್ಯಾಯದ ಒಪ್ಪಂದಗಳಿಂದಲೇ. ಬಸವಣ್ಣನ ಕ್ರಾಂತಿಯ ವಿಫಲತೆಯ ಬೆನ್ನ ಹಿಂದೆಯೆ ಕಾಯಕ ಸಮುದಾಯಗಳಲ್ಲಿ ಯಾಜಮಾನ್ಯದ ಪೈಪೋಟಿ ನಡೆದು ಲಿಂಗಾಯತ ಜಾತಿಯು ಪ್ರವರ್ಧಮಾನಕ್ಕೆ ಬಂದು ಇದ್ದು ಎಲ್ಲ ಪೈಪೋಟಿ ನಡೆದು ಲಿಂಗಾಯತ ಜಾತಿಯು ಪ್ರವರ್ಧಮಾನಕ್ಕೆ ಬಂದು ಇದ್ದ ಎಲ್ಲ ಕಾಯಕ ಸಮುದಾಯಗಳನ್ನು ತನ್ನ ಹಿಡಿತಕ್ಕೆ ತಂದುಕೊಂಡಿತು. ಇದು ದಲಿತತ್ವದ ಸಾಂಗಿಕ ಯತ್ನಕ್ಕೆ ಬಿದ್ದ ನಿರ್ಣಾಯಕವಾದ ಪೆಟ್ಟು. ಮಧ್ಯಕಾಲೀನ ಸಮಾಜದಲ್ಲಿ ಇಂತಹ ಜಾತಿಯ ಯಾಜಮಾನ್ಯದ ರಚನೆಯ ಮೇಲುಸ್ತರಗಳಲ್ಲಿ ಸೇರಿಕೊಂಡವು. ಈ ಮಧ್ಯಕಾಲೀನ ಸಮಾಜದ ಕಾಲದಲ್ಲಿಯೇ ಅನೇಕ ಬಗೆಯ ಹಿಂದುಳಿದ ಜನವರ್ಗಗಳು ಅತ್ತ ತೀರ ಮೇಲು ಜಾತಿಗಳಲ್ಲೂ ಜಾಗ ಪಡೆಯಲಾಗದೆ ಇತ್ತ ಕೆಳಜಾತಿಗಳ ಜೊತೆಗೂ ಕೊಡಲಾಗದೆ ಅತಂತ್ರ ಸ್ಥಿತಿಯಲ್ಲಿ ಮದ್ಯಮಸ್ಥನಕ್ಕಾಗಿ ಸಾಂಸ್ಕೃತಿಕವಾದ ಏನೇನೊ ಒಪ್ಪಂದಗಳನ್ನು ಎಲ್ಲ ಮೇಲು ಜಾತಿಗಳ ಜೊತೆ ಮಾಡಿಕೊಂಡು ದಿಕ್ಕಪಾಲಾಗಿ ಬಿಟ್ಟವು. ಅಲ್ಪ ಸಂಖ್ಯತವಾದ ಹಿಂದುಳಿದ ವರ್ಗಗಳಿಗೆ ಯಾವ ಆಯ್ಕೆಯೂ ಇರಲಿಲ್ಲ. ಮೇಲು ಜಾತಿಗಳು ಬೇಡ ಎಂದು ಬಿಟ್ಟ ಜಾಗದಲ್ಲೆ ಅವು ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳಬೇಕಿತ್ತು. ಅತ್ತ ದಲಿತ ಸಮಾಜದಲ್ಲಿದ್ದ ಸ್ಥಾನಮಾನಗಳಿಗೂ ಅವರು ಹೋಗುವಂತಿರಲಿಲ್ಲ. ಈ ಅವಸ್ಥೆಯಲ್ಲಿ ಹಿಂದುಳಿದ ವರ್ಗಗಳು ನಿರ್ಣಾಯಕವಾದ ಸಮುದಾಯಗಳಾಗಿ ಪಾತ್ರವಹಿಸಲು ಸಾಧ್ಯವೇ ಆಗದಾಗಿ ಇವತ್ತಿಗೂ ಅದೇ ಸ್ಥಿತಿಯಲ್ಲಿ ಅವು ವ್ಯವಹರಿಸಬೇಕಾದ ವಿಪರ್ಯಾಸವಿದೆ.

ಜಾತಿ ವ್ಯವಸ್ಥೆಯಲ್ಲಿ ಹೀಗೆ ಅತ್ತ ಇತ್ತ ಎತ್ತಲೂ ಸೇರದಂತೆ ವಿಚಿತ್ರ ಅನನ್ಯತೆಯಲ್ಲಿ ತೊಳಲುವ ಇಂತಹ ಸಮುದಾಯಗಳ ಒಟ್ಟು ಶಕ್ತಿಯೆ ವ್ಯರ್ಥವಾಗುತ್ತಿರುತ್ತದೆ. ಅದರಲ್ಲೂ ಜಾತಿ ಕೋಟೆಯ ಸಮಾಜದಲ್ಲಿ ಈ ಬಗೆಯಲ್ಲಿ ಇಷ್ಟೊಂದು ಹಿಂದುಳಿದ ವರ್ಗಗಳ ಶಕ್ತಿಯು ಯಾರ ವಿರುದ್ಧವೂ ಇಲ್ಲದಂತೆ ಹಾಗೆಯೇ ಯಾರ ಪರವಾಗಿಯೂ ಇಲ್ಲದಂತೆ ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕಾದ ಸ್ಥಿತಿಯಲ್ಲಿರುವುದು ದಲಿತ ಸಮುದಾಯಗಳು ಅನುಭವಿಸುವ ಯಾತನೆಗಿಂತಲೂ ದೊಡ್ಡದು. ಆಧುನಿಕ ಭಾರತದ ರಾಜಕಾರಣದಲ್ಲಿ ದಲಿತರು ನಿರ್ದಿಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವುದು ಸಾಧ್ಯವಿದೆ. ಆದರೆ ಹಿಂದುಳಿದ ವರ್ಗಗಳು ನಿರ್ಣಾಯಕವಾದ ಯಾವ ಆಯ್ಕೆಯಲ್ಲೂ ಪಾಲುಗೊಳ್ಳಲಾರರು ಎಂದರೆ ಅದು ಸ್ವತಃ ತಮ್ಮ ಅಸ್ತಿತ್ವವನ್ನು ಅವರೇ ನಿರಾಕರಿಸಿಕೊಂಡಂತೆ. ಇದಕ್ಕಿಂತ ಮಿಗಿಲಾದದ್ದೇನೆಂದರೆ; ತೀರಾ ಮೇಲಿರುವ ಜಾತಿಗಳ ಸಮೀಪಕ್ಕೆ ತೀರಾ ಕೆಳಗಿರುವ ಜಾತಿಗಳು ಹೋಗದಂತೆ ತಡೆಯಲು ಇಂತಹ ಹಿಂದುಳಿದ ವರ್ಗಗಳನ್ನು ಜಾತಿ ನಿಷ್ಠ ಸಮಾಜವು ರಚಿಸಿಕೊಂಡಿರುತ್ತದೆ. ಈ ಒಂದೊಂದು ಜಾತಿಯ ಕೋಟೆಗಳನ್ನು ದಾಟಿಕೊಂಡು ಮೇಲಿನ ಉಪ್ಪರಿಗೆಯ ಜಾತಿಗಳವರೆಗೆ ಬರುವಷ್ಟರಲ್ಲಿ ಆ ಪ್ರತಿರೋಧವೆಲ್ಲ ಕರಗಿ ಹೋಗಿರುತ್ತದೆ. ಇಲ್ಲವೆ ಆಯಾ ಜಾತಿಗಳೆ ಕದನದಲ್ಲಿ ಸದಾ ನಿರತವಾಗಿರುತ್ತವೆ. ಭಾರತದ ಬಹುಪಾಲು ಎಲ್ಲ ಹಿಂದುಳಿದ ವರ್ಗಗಳ ‘ವಿಧಿ’ ಇದೇ ಇರಬೇಕು. ಈ ಗುಂಪುಗಳು ಪೂರ್ಣ ಪ್ರಮಾಣದಲ್ಲಿ ತನ್ನ ಕೆಳಗಿನ ದಲಿತ ಸಮುದಾಯವನ್ನು ನಿರಾಕರಿಸಲಾರವು. ಅಂತೆಯೇ ಗಾಢವಾಗಿ ಮೇಲು ಜಾತಿಗಳ ಜೊತೆ ವಿಶ್ವಾಸವನ್ನು ಮಾಡಲಾರವು. ಒಂದು ವೇಳೆ ಹಿಂದುಳಿದ ವರ್ಗಗಳು ವಿಶ್ವಾಸ ಮಾಡಿದರೂ ತಲೆಮರೆಸಿಕೊಂಡು ಅಂದರೆ ಚಹರೆಗೆಟ್ಟು ಪಲಾಯನ ಮಾಡಬೇಕಾದ್ದನ್ನೇ ಮೇಲು ಜಾತಿಗಳು ಇಂತಹ ಹಿಂದುಳಿದ ವರ್ಗಗಳಿಗೆ ಕಲಿಸಿರುತ್ತವೆ.