ಅಂಬೇಡ್ಕರ್ ಅವರ ಆಲೋಚನಾಕ್ರಮದ ಬೆಳವಣಿಗೆ ಕೇವಲ ಪಾಶ್ವಿಮಾತ್ಯ ಉದಾರವಾದದಿಂದಲ್ಲ. ಭಾರತದ ಜಾತಿ ವ್ಯವಸ್ಥೆಯಲ್ಲಿ ಚಲನೆಯ ಉದಾರತೆ, ಮಹರ್ ರಲ್ಲಿ ಉದಾರವಾದ ನಿರ್ಮಿಸಿದ್ದ ಪರಿಸ್ಥಿತಿಯಿಂದ ಬೆಳೆದಿದೆ. ಆದ್ದರಿಂದ ಈ ಅಂಶಗಳನ್ನು ಗುರುತಿಸಬೇಕಾಗುತ್ತದೆ. ಇದರ ಜೊತೆಯಲ್ಲಿಯೇ ಭಾರತಕ್ಕೆ ಬಂದ ಉದಾರವಾದದ ರೂಪ ಮತ್ತು ಭಾರತದ ಉದಾರವಾದಿಗಳ ಪರಂಪರೆ ಮತ್ತು ಅಂಬೇಡ್ಕರ್ ರವರ ಆಲೋಚನಾಕ್ರಮ ರೂಪಿತವಾದ ರೀತಿಯನ್ನು ತಿಳಿಯುವುದು ಅಗತ್ಯ.

ಜಾತಿ, ಭಾರತದ ಸಂದರ್ಭದಲ್ಲಿ ವಿಶಿಷ್ಟವಾದ ತನ್ನದೇ ಆದ ಗುಣಗಳನ್ನು ಹೊಂದಿದ್ದ ಸಾಮಾಜಿಕ ಸಂಘಟನೆ. ಜಾತಿಯು ವೃತ್ತಿಯ ಶ್ರೇಣೀಕೃತ ಆಧಾರದ ಮೇಲೆ ವರ್ಗೀಕರಿಸಲ್ಪಟ್ಟಿದೆ. ಈ ಶ್ರೇಣೀಗಳು ಆರ್ಥಿಕ ವ್ಯವಸ್ಥೆಯ ತಳಹದಿ. ಕೆಲಸದ ಸ್ವಭಾವದ ಆಧಾರದ ಮೇಲೂ ಅನೇಕ ಬಾರಿ ವರ್ಗೀಕರಿಸಲ್ಪಟ್ಟಿದೆ. ಅತ್ಯಂತ ಪವಿತ್ರ ವೃತ್ತಿ ಪುರೋಹಿತರದ್ದು. ಅತ್ಯಂತ ಅಪವಿತ್ರ ಭಂಗಿಯದ್ದು. ಮಧ್ಯದ ಜಾತಿಗಳ ವರ್ಗೀಕರಣ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿದೆ. ೧೯ ಈ ವ್ಯವಸ್ಥೆ ಜಡವಾಗಿ ಚಲನರಹಿತವಾಗಿಯೇನೂ ಉಳಿದಿಲ್ಲ. ಒಂದು ಮಿತಿಯೊಳಗೆ ಚಲನೆ ಸಾಧ್ಯವಿತ್ತು. ಅನೇಕ ಬಾರಿ ಗುಂಪುಗಳೂ ಮತ್ತು ಕೆಲವು ಬಾರಿ ವೃತ್ತಿಗಳು ಸಾಮಾಜಿಕ ಅಂತಸ್ತಿನಲ್ಲಿ ಮೇಲೇರಬಹುದಾಗಿತ್ತು. ಆದರೆ ಇದು ಸಾಮಾನ್ಯವಾದಂತಹ ಸಾಧ್ಯತೆಯೇನಲ್ಲ. ರಾಜಕೀಯ ಅಧಿಕಾರ ಗಳಿಸುವಲ್ಲಿ ಈ ಚಲನೆ ಅತ್ಯಲ್ಪ. ಈ ಚಲನೆ ಮಧ್ಯಜಾತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅತೀ ಕೆಳಗಿನ ಜಾತಿಗಳಲ್ಲಿ ಚಲನೆ ಬಹಳ ಅತ್ಯಲ್ಪವಾದ್ದು. ‘ಯಾವನಾದರೂ ಒಮ್ಮೆ, ಚಾಂಡಾಲನೆಂದು ಕರೆಯಲ್ಪಟ್ಟರೆ ಅವನು ಶಾಶ್ವತವಾಗಿ ಚಾಂಡಾಲನಾಗಿ ಉಳಿಯುತ್ತಿದ್ದ. ’೨೦

ಜಾತಿ ವ್ಯವಸ್ಥೆಯನ್ನು ಅಲುಗಾಡಿಸುವ ಪ್ರಯತ್ನವನ್ನು ಉಚ್ಚಜಾತಿಗಳಿಂದ ಬಂದ ಅನೇಕ ಉದಾರವಾದಿ ಸುಧಾರಕರು ಪ್ರಯತ್ನಿಸಿದರು. ಬೌದ್ಧ ಧರ್ಮ, ಜೈನಧರ್ಮ, ವೈಷ್ಣವಮತದ ರಾಮಾನುಜರ ಪ್ರಯತ್ನ, ಬಸವಣ್ಣನವರು ಮತ್ತು ವಿವಿಧ ಭಕ್ತಿಪಂಥಗಳ ಪ್ರಯತ್ನಗಳೆಲ್ಲವೂ ಸಹ ಜಾತಿ ವ್ಯವಸ್ಥೆಯನ್ನು ಅಲುಗಾಡಿಸುವಂತಹವಾಗಿದ್ದವು. ಇವುಗಳು ಆಯಾಕಾಲದ ಸಮಾಜದ ವಿರುದ್ಧ ಪ್ರಾರಂಭದಲ್ಲಿ ಕ್ರಾಂತಿಕಾರಿ ಗುರಿಗಳನ್ನು ಹೊಂದಿದ್ದು, ನಿಧಾನವಾಗಿ ಇವುಗಳೇ ಧರ್ಮ ಅಥವಾ ಜಾತಿಗಳಾಗಿ ಮಾರ್ಪಟ್ಟವು. ಇದು ಭಾರತದ ಇತಿಹಾಸದ ಗತಿ ತಾರ್ಕಿಕತೆ. ಮೇಲೆ ಹೇಳಿದ ಜಾತಿ ವ್ಯವಸ್ಥೆಯ ವಿರುದ್ಧದ ವಿವಿಧ ಪ್ರತಿಭಟನೆಗಳ ಮೂಲ ವಾಸ್ತವವಾಗಿ ಆರ್ಥಿಕ ತಿಕ್ಕಾಟವಾಗಿತ್ತು. ಸಾಮಾಜಿಕ ಅಥವಾ ಸಿದ್ಧಾಂತಗಳ ಮಟ್ಟಗಳಲ್ಲಿ ರ‍್ಯಾಡಿಕಲ್ ಆಗಿದ್ದ ಈ ಚಳುವಳಿಗಳು ಅಪೂರ್ಣವಾಗಿ ಕೊನೆಗೊಂಡವು. ಈ ಚಳುವಳಿಗಳಿಗೆ ಅವಶ್ಯವಾಗಿ ಬೇಕಾಗಿದ್ದ ಹೊಸ ಉತ್ಪಾದನಾ ಸಂಬಂಧಗಳ ಕೊರತೆ ಅಲ್ಲಿತ್ತು. ಹೀಗಾಗಿಯೇ ಈ ಚಳುವಳಿಗಳು ಜಾತಿ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ವಿಫಲವಾದವು. ಇಲ್ಲಿನ ಊಳಿಗಮಾನ್ಯ-ಜಾತಿ ವ್ಯವಸ್ಥೆಯ ಮೂಲ ಸ್ವಲ್ಪವಾಗಿ ಗುಣಾತ್ಮಕ ಬದಲಾವಣೆ ಕಂಡಿದ್ದು ಬ್ರಿಟಿಷ್ ವಸಾಹತುಶಾಹಿ ಹೇಳಿದ ಹೊಸ ಉತ್ಪಾದನಾ ಸಂಬಂಧಗಳಿಂದ.

ಬ್ರಿಟಿಷ್ ವಸಾಹತುಶಾಹಿ ಜಾತಿ ವ್ಯವಸ್ಥೆಯ ಮೇಲೆ ನೆರ ದಾಳಿ ಮಾಡಲಿಲ್ಲ. ಬದಲಾಗಿ ತಮ್ಮ ಲಾಭಕ್ಕೋಸ್ಕರ ಹೊಂದಾಣಿಕೆಯ ನೀತಿಯನ್ನು ಅನುಸರಿಸತೊಡಗಿದರು. ಮಾರ್ಕ್ಸ್ ಗುರುತಿಸಿದಂತೆ ವಸಾಹತುಶಾಹಿ ತನ್ನ ಉದ್ದೇಶಕ್ಕಾಗಿ ರಸ್ತೆ, ರೈಲು ಮಾರ್ಗಗಳನ್ನು ನಿರ್ಮಿಸಿತು. ಆಡಳಿತ ವ್ಯವಸ್ಥೆಯನ್ನು ನಿರ್ಮಿಸಿ ಸ್ಥಳೀಯರಿಗೆ ಆಧುನಿಕ ವಿಜ್ಞಾನಗಳ ವಿದ್ಯಾಭ್ಯಾಸವನ್ನು ಒದಗಿಸಿತು. ಇದು ಪ್ರಾರಂಭಿಸಿದ ನಗರೀಕರಣ ಮತ್ತು ಕೈಗಾರೀಕರಣಗಳು ಪರೋಕ್ಷವಾಗಿ ಜಾತೀಯ ಮೌಲ್ಯಗಳ ಮೇಲೆ ಪ್ರಭಾವ ಬೀರತೊಡಗಿದವು. ಈ ಬದಲಾವಣೆಗಳು ಜಾತಿ ವ್ಯವಸ್ಥೆ ಅಥವಾ ಜಾತಿ ಮೌಲ್ಯಗಳನ್ನು ನಾಶ ಮಾಡತೊಡಗಿದವು. ಈ ಬದಲಾವಣೆಗಳು ಜಾತಿ ವ್ಯವಸ್ಥೆ ಅಥವಾ ಜಾತಿ ಮೌಲ್ಯಗಳನ್ನು ನಾಶಮಾಡುವಗಿರಲಿಲ್ಲ, ಬದಲಾಗಿ ಬೆಳೆಯುತ್ತಿದ್ದ ಸ್ಪರ್ಧಾತ್ಮಕ ಸಮಾಜಕ್ಕೆ ಜಾತಿಯನ್ನು ರೂಢಿಸಿಕೊಳ್ಳುವುದಾಗಿತ್ತು. ೨೧

ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಹೊಸ ಉತ್ಪಾದನಾ ಸಂಬಂಧಗಳ ಪ್ರಭಾವದಿಂದ ಹೊಸಗಣ್ಯ (Elite) ವರ್ಗವೊಂದು ಜನ್ಮ ತಳೆಯಿತು. ಈ ವರ್ಗ ಅನೇಕ ಸಾಮಾಜಿಕ ಸುಧಾರಣೆಗಳ ಚಳುವಳಿಯನ್ನು ಸಂಘಟಿಸಿತು. ಬ್ರಿಟಿಷರ ಹಿಡಿತದಿಂದ ಭಾರತ ಬಿಡುಗಡೆ ಹೊಂದಬೇಕೆಂದು ವಿವಿಧ ಹೋರಾಟವನ್ನು ಆರಂಭಿಸಿದ ವರ್ಗ ಇದು. ಈ ಗಣ್ಯವರ್ಗ ನಡೆಸಿದ ಚಳುವಳಿಗಳು ಸೈದ್ಧಾಂತಿಕವಾಗಿ ಪಾಶ್ವಿಮಾತ್ಯ ಉದಾರವಾದ ತನ್ನ ಜನ್ಮಸ್ಥಳದಲ್ಲಿಯೇ ತನ್ನ ಕ್ರಾಂತಿಕಾರಿ ಸತ್ವಗಳನ್ನು ಕಳೆದುಕೊಂಡಿದ್ದಾಗ ಇಲ್ಲಿ ಅನೇಕ ಪ್ರಜಾಸತ್ತಾತ್ಮಕ ಮೌಲ್ಯಗಳ ಪ್ರಗತಿಪರ ಪ್ರಭಾವ ಬೀರತೊಡಗಿತ್ತು. ರಾಜಕೀಯವಾಗಿ ಉದಾರವಾದಿಯಾಗಿದ್ದ ಈ ವರ್ಗ ಆರ್ಥಿಕವಾಗಿ ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಬಯಸುತ್ತಿತ್ತು. ಈ ಗಣ್ಯವರ್ಗ ಆಧುನಿಕತೆ, ಹೊಸ ಮೌಲ್ಯಗಳು, ವಿಚಾರಗಳು ಮತ್ತು ಸಂಸ್ಥೆಗಳನ್ನು ಎತ್ತಿಹಿಡಿಯತೊಡಗಿತು. ಸುಧಾರಕ ರಾಜಾರಾಮ್ ಮೋಹನರಾಯ್, ಈ ವರ್ಗದ ಬೆಳವಣಿಗೆಯ ಬಗ್ಗೆ ಹೇಳುತ್ತಾ –

ವರ್ಗದ ಜನ್ಮ ಯುಗದ ಅತ್ಯಂತ ಸಂತೋಷದ ಚಿಹ್ನೆ ಮತ್ತು ಹೊಸ ಶಕೆಯ ಆರಂಭ. ಯಾಕೆಂದರೆ ರೀತಿಯ ಜನ ಜನ್ಮ ತಳೆದ ಮೇಲೆ ಸ್ವಾತಂತ್ರ್ಯ ಅವರ ಹಿಂದೆಯೇ ಬಂದಿದೆ. ೨೨ ಗಣ್ಯವರ್ಗ ತನ್ನ ಹಿರಿಯರು ಮತ್ತು ಬ್ರಿಟಿಷರಿಂದ ತನ್ನ ಬೌದ್ಧಿಕ ಸ್ಫೂರ್ತಿ ಪಡೆಯಿತು. ಅಂದಿನ ಸಂಪ್ರದಾಯಬದ್ಧ ಕೊಳೆತ ಸಮಾಜದಲ್ಲಿ ಕ್ರಿಯಾತ್ಮಕತೆ ಮತ್ತು ಜಾನ್ ಸ್ಟುವರ್ಟ್‌ಮಿಲ್‌ನ ತೆರೆದ ಮನಸ್ಸನ್ನು ಬಯಸುತ್ತಿತ್ತು. ಫ್ರೆಂಚ್ ಕ್ರಾಂತಿಯಿಂದ ಉತ್ತೇಜಿತರಾಗಿ ಎಡ್ಮಂಡ್ ಬರ್ಕ್‌ನ ಕೃತಿಗಳನ್ನು ಅಧ್ಯಯನ ಮಾಡಲು ತೊಡಗಿತ್ತು. ಈ ಗಣ್ಯವರ್ಗದ ಕ್ರಾಂತಿಕಾರಿ ಆಕಾಂಕ್ಷೆಯ ವಿಗ್ಹರಿಯನ್ನು (Whiggery) ಅಧ್ಯಯನ ಮಾಡಲು, ಮೆಚ್ಚಿ ಅನುಸರಿಸಲು ಪ್ರೇರೇಪಿಸಿತು. ಈ ರೀತಿಯಲ್ಲಿ ಅದುಹೃದಯದಲ್ಲಿ ಕ್ರಾಂತಿಕಾರಿಯಾಗಿದ್ದರೆ, ಮನಸ್ಸಿನಲ್ಲಿ ಸುಧಾರಣಾವಾದಿಯಾಯಿತು. ೨೩

ಈ ವರ್ಗವು ತನ್ನನ್ನು ತಾನು ಮಹಾನ್ ಹಿರಿಯರ ಸಂತತಿಯರೆಂದುಕೊಂಡರೆ, ಮಾಂಟಿಗೋ ಜೆಲ್ಮ್ ಸ್ಫರ್ಡ್ ವರದಿಯು ಇವರನ್ನು ತಮ್ಮ ‘ಬೌದ್ಧಿಕ ಸಂತತಿ’ ಯೆಂದು ಕರೆಯಿತು. ೨೪

ಸ್ವಾಭಾವಿಕವಾಗಿ ಬ್ರಿಟಿಷ್ ಉದಾರವಾದದಿಂದ ಪ್ರಭಾವಿತವಾದ ಭಾರತದ ಗಣ್ಯವರ್ಗ ಪಾರ್ಲಿಮೆಂಟರಿ ಪ್ರಜಾಸತ್ತೆಯನ್ನು ಆಶಿಸುತ್ತಿತ್ತು. ಈ ವರ್ಗ ವಿಕ್ಟೋರಿಯನ್ ಮಧ್ಯಮವರ್ಗದ ಸಾಧನೆಗಳನ್ನು ಕಂಡು ಕರುಬ ತೊಡಗಿತ್ತು. ವಿಗ್ಹರಿಯಿಂದ ಲೇಪಿತವಾದ ಬ್ರಿಟಿಷ್ ರಾಜ್ಯಾಂಗ ಚರಿತ್ರೆಯು ಅವರಿಗೆ ಕ್ರಮವಾದ (Gradualism) ಮತ್ತು ಸಂವಿಧಾನದ ಪ್ರಯೋಜನಗಳನ್ನು ಅರಿವು ಮಾಡಿಕೊಟ್ಟಿತು. ಆ ಹೊತ್ತಿಗಾಗಲೇ ಬ್ರಿಟಿಷರು ತಮ್ಮ ರಾಜಕೀಯ ಸಂಸ್ಥೆಗಳು ಮತ್ತು ವಿಧಾನಗಳನ್ನು ಭಾರತದಲ್ಲಿ ಹುಟ್ಟು ಹಾಕಿದ್ದರು. ಗಣ್ಯವರ್ಗ ಇವುಗಳ ಬೆಳವಣಿಗೆಗೆ ಸತತ ಪ್ರಯತ್ನ ಮಾಡುತ್ತಿತ್ತು. ಈ ಗಣ್ಯವರ್ಗದ ಅತ್ಯಂತ ದೊಡ್ಡ ಬಲಹೀನತೆ,

ಇವರು ಬ್ರಿಟಿಷ್ ವಿದ್ಯಾಭ್ಯಾಸದಿಂದ ತಯಾರಾದ ವಕೀಲರು, ಭೂಮಾಲೀಕರು, ಉದ್ಯಮಿಗಳು, ಶಿಕ್ಷಣವೇತರು ಮತ್ತು ಪತ್ರಿಕೋದ್ಯಮಿಗಳಾಗಿದ್ದರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಉದಾರವಾದಿಗಳು ಮಾನಸಿಕವಾಗಿ ತಮ್ಮ ದೃಷ್ಟಿಕೋನದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಅನಕ್ಷರಸ್ಥ ಕೆಳವರ್ಗದ ಭಾರತೀಯರ ದೃಷ್ಟಿಕೋನವನ್ನು ಎತ್ತಿಹಿಡಿಯಲು ಅಥವಾ ಗಮನಿಸಲು ವಿಫಲರಾದರು. ೨೫

ಈ ಗಣ್ಯವರ್ಗವೇ ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿತು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಹೊತ್ತಿಗೆ ಕಾಂಗೆಸ್ಸಿನಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬ ಎರಡು ಪ್ರವೃತ್ತಿಗಳಿದ್ದವು. ತೀವ್ರಗಾಮಿಗಳು ರಾಜಕೀಯ ರಂಗದಲ್ಲಿ ಆಕ್ರಮಣಕಾರಿಯಾಗಿದ್ದರೆ, ಸಾಮಾಜಿಕ ವಿಷಯದಲ್ಲಿ ಅಷ್ಟೇನೂ ಆಸಕ್ತಿಯುಳ್ಳವರಾಗಿರಲಿಲ್ಲ. ಆದರೆ ಮಂದಗಾಮಿಗಳು ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಬೇಕೆಂದು ಒತ್ತಾಯಿಸುತ್ತಿದ್ದರು. ೨೬ ರಾನಡೆ ಇವರಲ್ಲಿ ಪ್ರಮುಖರು. ಅಂಬೇಡ್ಕರ್ ರವರಿಗೆ ಬಹಳ ಪ್ರಿಯವಾದ ವ್ಯಕ್ತಿತ್ವ ರಾನಡೆಯವರದ್ದು.

ಭಾರತದ ಗಣ್ಯವರ್ಗದ ರಾಜಕೀಯ ಸಿದ್ಧಾಂತ ಪಾಶ್ವಿಮಾತ್ಯ ಬೂರ್ಜ್ವಾ ಉದಾರವಾದ. ಅದೇ ರೀತಿ ಅಂಬೇಡ್ಕರ್ ರವರ ಆಲೋಚನಾ ಕ್ರಮವೂ ಸಹ ಬೂರ್ಜ್ವಾ ಉದಾರವಾದೀ ಮಾರ್ಗಗಳಲ್ಲಿತ್ತು. ಈ ಸಂದರ್ಭದಲ್ಲಿ ಅವರ ಆಲೋಚನೆಯ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.

ಬರೋಡದ ಮಹಾರಾಜರಿಂದ ದೊರೆತ ವಿದ್ಯಾರ್ಥಿ ವೇತನದ ಆಧಾರದ ಮೇಲೆ ಅಂಬೇಡ್ಕರ್ ಉನ್ನತ ವಿದ್ಯಾಭ್ಯಾಸಕ್ಕೆ ಅಮೆರಿಕೆಗೆ ತೆರಳಿದರು. ಅಲ್ಲಿ ಅವರು ಜಾತಿ ಜಂಜಾಟದ ಪರಿಸರದಿಂದ ದೂರವಾದ ವಾತಾವರಣದಲ್ಲಿ ಸ್ವತಂತ್ರರಾಗಿ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಕಷ್ಟು ದುಡಿದರು. ಅಮೆರಿಕೆಯ ಪಾರ್ಲಿಮೆಂಟರಿ ಪ್ರಜಾಸತ್ತೆ ಮತ್ತು ಎಡ್ಮಂಡ್‌ಬರ್ಕ್ಸ್, ಜಾನ್ ಸ್ಟುವರ್ಟ್‌ಮಿಲ್ ಮತ್ತು ಜಾನ್‌ಡಿವೇರವರ ಚಿಂತನೆಗಳ ಗಾಢವಾದ ಪ್ರಭಾವದಿಂದ ಅಂಬೇಡ್ಕರ್ ರವರು ಪಾರ್ಲಿಮೆಂಟರಿ ಪ್ರಜಾಸತ್ತೆ (ಉದಾರವಾದ) ಮತ್ತು ಸಂವಿಧಾನಾತ್ಮಕ ರಾಜಕೀಯ ತತ್ತ್ವಗಳಲ್ಲಿ ಬಲವಾದ ನಂಬಿಕೆ ಬೆಳೆಸಿಕೊಂಡರು. ಅಲ್ಲಿ ಅಂಬೇಡ್ಕರ್ ರವರ ಮನಸ್ಸಿನಲ್ಲಿ ಎರಡು ವಿಷಯಗಳು ಆಳವಾಗಿ ಅಚ್ಚೊತ್ತಿರಬೇಕು. ಮೊದಲನೆಯದು. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯಾಂಗ, ಅದರಲ್ಲೂ ನೀಗ್ರೋ ಸ್ವಾತಂತ್ರ್ಯ ಘೋಷಿಸುವ ಹದಿನಾಲ್ಕನೆಯ ತಿದ್ದುಪಡಿ. ಎರಡನೆಯದು, ೧೮೧೫ರಲ್ಲಿ ಆಳಿದ ಬುಕರ್ ಟಿ. ವಾರ್ಷಿಂಗ್‌ಟನ್‌ರ ಜೀವನ ಕಥೆ. ವಾಷಿಂಗ್‌ಟನ್ನರು ಅಮೇರಿಕಾದ ನೀಗ್ರೋ ಜನಾಂಗದ ಅಭಿವೃದ್ಧಿಕಾರಕರೂ ಮಹಾಸುಧಾರಕರೂ ಆಗಿದ್ದಲ್ಲದೆ, ಹೃದಯ, ಹಸ್ತ ಮತ್ತು ಮೆದುಳಿನ ಶಿಕ್ಷಣತತ್ತ್ವವನ್ನು ನೀಗ್ರೋಗಳಲ್ಲಿ ಹರಡಿ, ಅವರನ್ನು ಶಾರೀರಕ ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಶತಶತಮಾನಗಳಿಂದ ತುಳಿದು ಹಾಕಿದ್ದ ದಾಸ್ಯ ಶೃಂಖಲೆಯಿಂದ ಬಿಡಿಸಿದಂತಹ ಖಾಸಗೀ ಸಂಸ್ಥೆಯ ಸಂಸ್ಥಾಪಕರೂ ಅಧ್ಯಕ್ಷರೂ ಆಗಿದ್ದರು. ೨೭ ಈ ಎಲ್ಲಾ ಪ್ರಭಾವಗಳಿಂದಾಗಿ ಅಮೆರಿಕೆಯಿಂದ ಹಿಂದಿರುಗುವ ಹೊತ್ತಿಗೆ ಅಂಬೇಡ್ಕರ್ ರವರ ಆಲೋಚನಾಕ್ರಮ ನಿರ್ಧರಿತವಾಗಿತ್ತು. ಅಮೆರಿಕೆಯಲ್ಲಿ ಮಾರ್ಕ್ಸ್‌ವಾದಿಯಾಗಿದ್ದು ಭಾರತಕ್ಕೆ ಹಿಂದಿರುಗಿದ ನಂತರ ಗಾಂಧೀವಾದಿಯಾದ ಜಯಪ್ರಕಾಶ್ ನಾರಾಯಣರಂತೆ ಅವರೇನೂ ಬದಲಾಗಲಿಲ್ಲ. ಅಮೆರಿಕೆಯಲ್ಲಿ ಅಂಬೇಡ್ಕರ್ ರವರನ್ನು ಗದ್ದರ್ ಪಕ್ಷಕ್ಕೆ ಸೇರಿಸುವ ಲಾಲಾ ಲಜಪತರಾಯರ ಯತ್ನ ಸಫಲವಾಗಲಿಲ್ಲ.

ಅಂಬೇಡ್ಕರ್ ಉದಾರವಾದದ ಆಲೋಚನಾ ಕ್ರಮಗಳನ್ನು ಹೊಂದಿದ್ದರೂ ಸಹ ಅವರು ಭಾರತದ ಇತರ ಉದಾರವಾದಿಗಳಂತೆ ಪ್ರಮುಖವಾಗಿ ಕೇವಲ ರಾಜಕೀಯ ಹೋರಾಟಗಳನ್ನು ಸಂಘಟಿಸಲು ಹೋಗಲಿಲ್ಲ. ಇದಕ್ಕೆ ಕಾರಣ ಅಸ್ಪೃಶ್ಯ ಮಹರ್ ಜಾತಿಯ ನಾಯಕರಾದ ಅವರಿಗೆ ಅನೇಕ ಸಾಮಾಜಿಕ ಸಮಸ್ಯೆಗಳೂ ಸಹ ಕಾಡತೊಡಗಿದ್ದವು. ಅಂಬೇಡ್ಕರ್ ರವರು ನಾಯಕರಾಗಿ ಬೆಳೆಯುವ ಮುಂಚೆಯೇ ಮಹರರಲ್ಲಿ ಪ್ರಜಾಸತ್ತಾತ್ಮಕತೆ ಸಾಕಷ್ಟು ಬೆಳೆದಿತ್ತು. ಈ ವಿಶಿಷ್ಟ ಪರಿಸ್ಥಿತಿ ಮಹರರಲ್ಲಿ ಹೇಗೆ ಬೆಳೆಯಿತು ಎಂಬುದನ್ನು ಈಗ ನೋಡಬಹುದು.

ಮಹರುಗಳು

ಸಾಂಪ್ರದಾಯಿಕವಾಗಿ ಮಹರರು ಮಹಾರಾಷ್ಟ್ರದ ಹಳ್ಳಿಗಳ ಸಂಘಟನೆ (ಬಲೂತಿ)ಯ ಹನ್ನೆರಡು ಆನುವಂಶೀಯ ಅಧಿಕಾರ ವರ್ಗದಲ್ಲಿ ಒಬ್ಬರಾಗಿದ್ದರು. ಅವರ ವೃತ್ತಿ ಹಳ್ಳಿಯ ಕಾವಲು, ಪೊಲೀಸ್ ಕೆಲಸ, ಜಮೀನಿನ ಗಡಿ ವಿವಾದಗಳನ್ನು ಬಗೆಹರಿಸುವುದು. ರಸ್ತೆ ಕಸಗುಡಿಸುವುದು, ಸತ್ತ ಪ್ರಾಣಿಗಳನ್ನು ತೆಗೆಯುವುದು. ಇದಕ್ಕೆ ಪ್ರತಿಯಾಗಿ ಅವರಿಗೆ ಧಾನ್ಯ, ಸ್ವಲ್ಪ ಹಣ, ಕೆಲವು ಬಾರಿ ಚೂರು ಜಮೀನು (ವತನ್) ಸಿಗುತ್ತಿತ್ತು. ಇವರು ಸಾಂಪ್ರದಾಯಿಕವಾಗಿ ವ್ಯವಸಾಯ ಅಥವಾ ಕುಶಲಕರ್ಮಿ ವೃತ್ತಿಯರಲ್ಲ. ಬ್ರಿಟಿಷರ ಆಡಳಿತದಲ್ಲಿ ಉಂಟಾಗುತ್ತಿದ್ದ ಬದಲಾವಣೆಗಳಿಂದ ಇವರ ಸಾಂಪ್ರದಾಯಿಕ ಜೀವನ ಕಷ್ಟವಾಗುತ್ತಿದ್ದಂತೆ, ಉದ್ಯೋಗಗಳನ್ನು ಅರಸಿ ಹಡಗುಕಟ್ಟೆ, ರಸ್ತೆ ಮತ್ತು ರೈಲು, ಬಟ್ಟೆ ಗಿರಣಿಗಳು, ಶಾಸ್ತ್ರಾಸ್ತ್ರ ಕಾರ್ಖಾನೆಗಳು ಮುಂತಾದ ಉದ್ಯಮಗಳನ್ನು ಸೇರತೊಡಗಿದರು. ೧೮೬೦ರ ಹೊತ್ತಿಗೆ ಬೊಂಬಾಯಿ, ನಾಗಪುರ ಮತ್ತು ಪುನಾಗಳು ಮಹರ್ ರು ತಮ್ಮ ಸಾಮಾಜಿಕ ಅಂತಸ್ತಿನ ಉನ್ನತಿ ಮತ್ತು ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುವ ಕೇಂದ್ರಗಳಾದವು. ಇವರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಕಾರಣವಾದುದು ಮುಖ್ಯವಾಗಿ ಸೈನ್ಯದಲ್ಲಿನ ಭರ್ತಿಯಿಂದ (ಮಹರ್ ಎಲಾನ್) ಭಾರತದಲ್ಲಿ ಪಾಶ್ವಿಮಾತ್ಯ ಸಂಸ್ಥೆಗಳು ಹೆಚ್ಚಾಗಿ ಹಬ್ಬುವ ಮೊದಲೇ ಇವರುಗಳು ಅವುಗಳ ಪ್ರಭಾವಕ್ಕೆ ಒಳಗಾಗಿದ್ದರು.

೧೮೯೩ರಲ್ಲಿ ಬ್ರಿಟಿಷರು ಹಳೆಯ ಪ್ರೆಸಿಡೆನ್ಸಿ ಸೈನ್ಯವನ್ನು ರದ್ದುಗೊಳಿಸಿ ಅವುಗಳನ್ನು ವರ್ಗಗಳ ಆಧಾರದ ಮೇಲೆ ಸಂಘಟಿಸಲು ಪ್ರಾರಂಭಿಸಿದ ಮೇಲೆ ಮಹರ್ ರಿಗೆ ಸೈನ್ಯದಲ್ಲಿ ಭರ್ತಿಯನ್ನು ನಿರಾಕರಿಸಲಾಯಿತು. ಈ ಬದಲಾವಣೆಯಿಂದ ಮಹರ್ ರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮಧ್ಯೆ ಪ್ರವೇಶಿಸಬೇಕೆಂದು ಮನವಿಯನ್ನು ನೀಡಲು ಪ್ರಾರಂಭಿಸಿದರು. ತಮ್ಮ ಅಂತಸ್ತಿನ ವಿರುದ್ಧದ ಪ್ರತಿಭಟನೆಯ ಆರಂಭವೂ ಸಹ ಇವರಿಂದಾಯಿತು. ೧೮೯೪ರಲ್ಲಿ ಗೋಪಾಲ್ ಬಾಬಾ ವಾಲಿಂಗ್‌ಕರ್ ಎಂಬ ವ್ಯಕ್ತಿ ಅಸ್ಪೃಶ್ಯರನ್ನು ಮತ್ತೆ ಸೈನ್ಯಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿ ಸಲ್ಲಿಸಿದನು. ಇದನ್ನು ಡಾಪೋಲಿಯಲ್ಲಿದ್ದ ಅನಾರ್ಯ ದೋಷ ಪರಿಹಾರ ಕಂ (Non Aryan groups for the removal of wrongs) ಎಂಬ ಪೆನ್ಷನ್‌ದಾರರ ಸಂಘದ ಪರವಾಗಿ ಸಲ್ಲಿಸಲಾಯಿತು. ಅದರಲ್ಲಿ ಸಿಪಾಯಿದಂಗೆಯ ನಂತರ ವಿಕ್ಟೋರಿಯಾ ರಾಣಿ ಕೊಟ್ಟ ಆಶ್ವಾಸನೆಯಂತೆ ತಮ್ಮನ್ನು ಸೈನ್ಯ, ಪೋಲೀಸ್ ಮತ್ತು ಸಿವಿಲ್ ಆಡಳಿತದಲ್ಲಿ ಮತ್ತೆ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳಲಾಗಿತ್ತು. ೨೮ ೧೯೧೦ರಲ್ಲಿ ಕ್ಯಾಪ್ಟನ್ ಬಹಾದುರ್ ಗಂಗರಾಮ್ ಕೃಷ್ಣಾಜೀ ಮತ್ತು ಶಿವರಾಮ್ ಜ್ಞಾನಭಾ ಕಂಬಳೆಯವರು ಅಸ್ಪೃಶ್ಯರನ್ನು ಸೈನ್ಯಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂದು ಇನ್ನೊಮ್ಮೆ ಮನವಿ ಸಲ್ಲಿಸಿದರು. ಅದರಲ್ಲಿ ‘ಬ್ರಾಹ್ಮಣರು ಮತ್ತು ಮಹಮದೀಯರಿಗೆ ಬ್ರಿಟಿಷರು ನಾಗರೀಕ ಹಕ್ಕುಗಳನ್ನು ಕೊಡುವುದಾದರೆ, ಅವುಗಳನ್ನು ತಮಗೂ ನೀಡಬೇಕು’ ಎಂದು ಒತ್ತಾಯಿಸಲಾಗಿತ್ತು. ಇದಕ್ಕೆ ಬ್ರಿಟಿಷರಿಂದ ಉತ್ತರ ದೊರೆತಿದ್ದಕ್ಕೆ ದಾಖಲೆ ಇಲ್ಲ. ಆದರೆ ಮೊದಲನೆಯ ವಿಶ್ವ ಯುದ್ಧದ ಸಮಯದಲ್ಲಿ ಮಹರರನ್ನು ಸೈನ್ಯದಲ್ಲಿ ಕೆಲಸಗಾರರನ್ನಾಗಿ ಸೇರಿಸಿಕೊಂಡು, ನಂತರ ತೆಗೆದು ಹಾಕಲಾಯಿತು. (ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಸೈನ್ಯದ ಅವಶ್ಯಕತೆ ಮತ್ತು ವೈಸ್‌ರಾಯ್ ಮಂತ್ರಿಮಂಡಲದಲ್ಲಿದ್ದ ಅಂಬೇಡ್ಕರ್ ರವರಿಂದಾಗಿ ಮಹರ್ ರೆಜಿಮೆಂಟನ್ನು ಪ್ರಾರಂಭಿಸಲಾಯಿತು). ಈ ಪ್ರಯತ್ನಗಳಿಂದ ಪರಿಹಾರಗಳೇನೂ ದೊರಕಲಿಲ್ಲ. ಆದರೆ ಮಹರ್ ರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಮನವಿ, ಪ್ರತಿಭಟನೆಗಳನ್ನು ಸಲ್ಲಿಸುವ ಪರಂಪರೆಯೊಂದನ್ನು ಹುಟ್ಟು ಹಾಕಿತು.

ಮಹರ್ ರಲ್ಲಿ ಸಮಾನತೆಯ ಆಶಯವನ್ನು ವೃದ್ಧಿಸುವಲ್ಲಿ ಭಕ್ತಿ ಪಂಥವೂ ಸಹ ಪಾಲ್ಗೊಂಡಿದೆ. ಮಹರ್ ರಲ್ಲಿ ಅನೇಕರು ಕಬೀರ್ ಅಥವಾ ರಾಮಾನಂದಿಯ ಪ್ರಭಾವಕ್ಕೆ ಒಳಗಾಗಿದ್ದರು. ತಮ್ಮವನೇ ಆದ ಚೋಖಮೇಲನ ಪ್ರಭಾವ ಅವರ ಮೇಲಿತ್ತು. ಅಂಬೇಡ್ಕರ್ ರವರ ಕುಟುಂಬವೂ ಸಹ ಕಬೀರ್ ಪಂಥಿಯಾಗಿತ್ತು.

ಮಹರ್ ರಲ್ಲಿ ಅಂಬೇಡ್ಕರ್ ರವರ ವಿಚಾರಗಳು ಮೊಳೆಯಲು ಭೂಮಿಕೆಯ ಮೇಲೆ ಹೇಳಿದ ಅಂಶಗಳು ಮುಖ್ಯವಾಗಿ ತಯಾರು ಮಾಡಿದ್ದವು. ಇದರ ಜೊತೆಗೆ ಜ್ಯೋತಿಬಾಫುಲೆಯವರಿಂದ ಪ್ರಾರಂಭವಾದ ‘ಸತ್ಯ ಶೋಧಕ’ ಚಳುವಳಿಯ ಮುಂದಾಳುಗಳಾಗಿದ್ದ ಜಧೆ, ಜವಳ್‌ಕರ್ ಮತ್ತು ಆನಂದಸ್ವಾಮಿಯವರು ಸಂಘಟಿಸಿದ್ದ ಅನೇಕ ಚಳುವಳಿಗಳೂ ಸಹ ಉದಾರವಾದವನ್ನು ಅಸ್ಪೃಶ್ಯರೆಡೆಗೆ ತಂದಿದ್ದವು.

ಮಹರ್ ರಲ್ಲಿ ಬೆಳೆದಿದ್ದ ಪ್ರಜಾಸತ್ತಾತ್ಮಕ ಮೌಲ್ಯಗಳು, ಬ್ರಿಟಿಷರು ಹುಟ್ಟು ಹಾಕಿದ ಹೊಸ ಉತ್ಪಾದನಾ ಸಂಬಂಧಗಳು ಮತ್ತು ಬೂರ್ಜ್ವಾ ಉದಾರವಾದದ ಜತೆ ಜತೆಯಲ್ಲಿಯೇ ಬೆಳೆದಿದ್ದವು. ಅಂಬೇಡ್ಕರ್ ರವರ ಆಲೋಚನಾ ಕ್ರಮವೂ ಸಹ ಮಹರ್ ರ ಸ್ಥಿತಿಯ ಹಿನ್ನೆಲೆ ಮತ್ತು ನರಸತ್ತ ಬೂರ್ಜ್ವಾ ಉದಾರವಾದದಿಂದ ಬೆಳೆಯಿತು. ಈ ರಾಜಕೀಯ ವಿಚಾರಧಾರೆಯು ಅವರ ವಿವಿಧ ಹೋರಾಟಗಳಲ್ಲಿ ಹೇಗೆ ಪ್ರತಿಫಲವಾಯಿತು ಎಂಬುದನ್ನು ಈಗ ಗಮನಿಸಬಹುದು.

ಅಂಬೇಡ್ಕರ್ ೧೯೧೮ರ ಸತ್‌ಬರೋ ಸಮಿತಿಯ ಮುಂದೆ ಅಸ್ಪೃಶ್ಯರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಕಾದಿರಿಸಬೇಕು ಮತ್ತು ಮೀಸಲಾತಿ ಜಾರಿಗೆ ಬರಬೇಕೆಂದು ಮನವಿ ಸಲ್ಲಿಸಿದರು. ಅಸ್ಪೃಶ್ಯರು ಸಾಮಾಜಿಕ ಸಮಾನತೆಯನ್ನು ಸಾಧಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಮುಂದುವರೆದ ಜಾತಿಗಳವರದ್ದು. ‘ಅವರು ಅಸ್ಪೃಶ್ಯರನ್ನು ವಿದ್ಯಾವಂತರು ಮತ್ತು ಪ್ರಜ್ಞಾವಂತರನ್ನಾಗಿಸಬೇಕು. ಈ ನೀತಿಯನ್ನು ಅನುಸರಿಸದಿದ್ದರೆ ಭಾರತ ಹೋಂ ರೂಲ್ ಗಳಿಸುವುದು ದೂರದ ಮಾತು. ’೨೯

೧೯೨೦ರಲ್ಲಿ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಅಂಬೇಡ್ಕರ್ ಆರಂಭಿಸಿದರು. ೧೯೨೪ರಲ್ಲಿ ‘ಬಹಿಷ್ಕೃತ ಹಿತರಕ್ಷಣಾ ಸಭಾ’ ಎಂಬ ಸಂಘಟನೆಯನ್ನು ಅವರು ಸ್ಥಾಪಿಸಿದರು. ಅದರ ಗುರಿ ‘ವಿದ್ಯಾಭ್ಯಾಸ, ಹೋರಾಟ ಮತ್ತು ಸಂಘಟನೆ’. ೧೯೨೭ರಲ್ಲಿ ಮಹರ್ ನ ಚಾದರ್ ಕೆರೆಯ ನೀರನ್ನು ಉಪಯೋಗಿಸಲು ಅಸ್ಪೃಶ್ಯರಿಗೂ ಅವಕಾಶ ಸಿಗಬೇಕೆಂಬ ಬೃಹತ್ ಸತ್ಯಾಗ್ರಹವನ್ನು ಅವರು ಸಂಘಟಿಸಿದರು. ಅದೇ ವರ್ಷ ಬಹಿರಂಗವಾಗಿ ‘ಮನುಸ್ಮೃತಿ’ಯನ್ನು ಸುಡಲಾಯಿತು. ೧೯೩೦ರಲ್ಲಿ ನಾಸಿಕ್ ನ ಕಾಲಾರಾಮ್ ದೇವಸ್ಥಾನದ ಪ್ರವೇಶ ಮತ್ತು ರಥ ಎಳೆಯುವ ಹಕ್ಕಿಗಾಗಿ ಸತ್ಯಾಗ್ರಹವನ್ನು ಸಂಘಟಿಸಿದರು. ಈ ಹಕ್ಕುಗಳು ದೊರೆತದ್ದು ೧೯೩೫ರಲ್ಲಿ. ಈ ಘಟ್ಟದಲ್ಲಿ ನಡೆದ ವಿವಿಧ ಹೋರಾಟಗಳ ತತ್ತ್ವ ಹಿಂದೂಗಳ ಮನಸ್ಸನ್ನು ಚುಚ್ಚುವುದು ಮತ್ತು ಅಸ್ಪೃಶ್ಯರಿಗೆ ಆತ್ಮವಿಶ್ವಾಸವನ್ನು ತಂದು ಕೊಡುವುದಾಗಿತ್ತು.

ಅಂಬೇಡ್ಕರ್ ಮಹರ್ ರ ಭೂಮಿ ಸಮಸ್ಯೆಯನ್ನು ಬಗೆಹರಿಸಲು ಒಂದು ಪ್ರಯತ್ನವನ್ನು ಮಾಡಿದ್ದರು. ೧೯೨೮ರಲ್ಲಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ‘ವತನ್’ ಪದ್ಧತಿಯ ವಿರುದ್ಧ ಮಸೂದೆಯೊಂದನ್ನು ಮಂಡಿಸಿದ್ದರು. ‘ವತನ್’ ಪದ್ಧತಿ ಪ್ರಕಾರ ಮಹರ್ ರು ಸವರ್ಣೀಯ ಹಿಂದೂಗಳ ಸೇವೆಯನ್ನು ಹಗಲು ರಾತ್ರಿ ಮಾಡಿದುದರ ಪ್ರತಿಫಲವಾಗಿ ಒಂದು ಚೂರು ನೆಲ- ‘ವತನ್’ ಮತ್ತು ೨ ಆಣೆಯಿಂದ ೧೧/೨ ರೂ. ವರೆಗೆ ಹಣ ದೊರೆಯುತ್ತಿತ್ತು. ಇಂತಹ ಪದ್ಧತಿಯಿಂದ ಮಹರ್ ರ ಆತ್ಮಗೌರವ, ಆಸೆ, ಆಕಾಂಕ್ಷೆ ಇಂಗಿಹೋಗಿತ್ತು. ವತನ್ ರದ್ಧತಿ ಮಸೂದೆಗೆ ಬೆಂಬಲವಾಗಿ ಅಂಬೇಡ್ಕರ್ ಸಭೆ ಮೆರವಣಿಗೆಗಳನ್ನು ಸಂಘಟಿಸಿದ್ದರು. ಈ ಮಸೂದೆಯಲ್ಲಿ ಗೇಣಿದಾರರಿಗೆ ಅನುಭವದ ಹಕ್ಕನ್ನು ಕೊಡಬೇಕು ಮತ್ತು ಮಹರ್ ರು ಸವರ್ಣೀಯರಿಗೆ ಸೇವೆ ಮಾಡುವುದನ್ನು ನಿಲ್ಲಿಸಬೇಕೆಂದು ಕೇಳಲಾಗಿತ್ತು. ರೈತವಾರಿ ಪದ್ಧತಿಯನ್ನು ಜಾರಿಗೆ ತಂದು ಅದರಿಂದಾಗುವ ನಷ್ಟಕ್ಕೆ ಬದಲಾಗಿ ಮಹರ್ ರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಈ ಮಸೂದೆಯ ಬಗ್ಗೆ ರಚಿತವಾದ ಸಮಿತಿಯಲ್ಲಿನ ಮುಸ್ಲಿಂ ಸದಸ್ಯರ ನಿಲುವಿನಿಂದಾಗಿ ಏನೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅಂಬೇಡ್ಕರ್ ತಮ್ಮ ಮಸೂದೆಯನ್ನು ಜುಲೈ ೨೪, ೧೯೨೯ರಲ್ಲಿ ಹಿಂತೆಗೆದುಕೊಂಡರು. ಅಂತಿಮವಾಗಿ ಈ ಪದ್ಧತಿ ನಿರ್ಮೂನವಾದದ್ದು ೧೯೫೯ರ ಬೊಂಬಾಯಿ ಕೆಳದರ್ಜೆ ಗ್ರಾಮಗಳ ವತನ್ ನಿರ್ಮೂಲನ ಮಸೂದೆಯಿಂದ.

೧೯೩೭ರಲ್ಲಿ ೧೯೩೫ರ, ಮಸೂದೆಯ ಪ್ರಕಾರ ಚುನಾವಣೆಗಳು ನಡೆಯಬೇಕಿದ್ದವು. ಆ ಸಮಯದಲ್ಲಿ ಪರಿಶಿಷ್ಟ ವರ್ಗಗಳ ಹಿತಾಸಕ್ತಿಯನ್ನು ಪ್ರತಿನಿಧಿಸಲು ಯಾವುದೇ ರಾಜಕೀಯ ಪಕ್ಷವಿರಲಿಲ್ಲ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ೧೯೩೬ರಲ್ಲಿ ‘ಇಂಡಿಪೆಂಡೆಂಟ್ ಲೇಬರ್ ಪಕ್ಷ’ವನ್ನು ಸಂಘಟಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಗಳು ಜಾತಿಯ ಆಧಾರದ ಮೇಲೆ ಸಂಘಟಿಸಲು ಸಾಧ್ಯವಿಲ್ಲ. ಪರಿಶಿಷ್ಟ ವರ್ಗಗಳು ಮತ್ತು ಇತರ ವರ್ಗಗಳ ನಡುವೆ ರಾಜಕೀಯ ಸಹಕಾರದ ಅವಶ್ಯಕತೆ ಇದೆ ಎಂದರು. ಅಂಬೇಡ್ಕರ್ ತಮ್ಮ ಸ್ನೇಹಿತರ ಅಭಿಲಾಷೆಯಂತೆ ಅದರ ಹೆಸರು ಮತ್ತು ಕಾರ್ಯಕ್ರಮವನ್ನು ವಿಶಾಲಗೊಳಿಸಿದರು. ಅದರ ಪ್ರಣಳಿಕೆಯಲ್ಲಿ-

ಮುಖ್ಯವಾಗಿ ಕಾರ್ಮಿಕ ವರ್ಗಗಳ ಕ್ಷೇಮಾಭಿವೃದ್ಧಿಯನ್ನು ಮುಂದುವರಿಸಲು ಸಂಘಟನೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಪರಿಶಿಷ್ಟ ವರ್ಗಗಳು ಎಂಬ ಹೆಸರಿಗೆ ಬದಲಾಗಿಕಾರ್ಮಿಕಎಂಬ ಪದವನ್ನು ಉಪಯೋಗಿಸಲಾಗಿದೆ, ಏಕೆಂದರೆ ಕಾರ್ಮಿಕರಲ್ಲೂ ಪರಿಶಿಷ್ಟ ವರ್ಗದವರಿದ್ದಾರೆ ಎಂದು ಪ್ರಕಟಿಸಲಾಯಿತು.

ಈ ಪಕ್ಷವು ಭೂರಹಿತರು, ಬಡ ಗೇಣಿದಾರರು, ಕೃಷಿಕರು ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಉತ್ತರ ನೀಡುವ ಸಮಗ್ರ ಕಾರ‍್ಯಕ್ರಮವನ್ನು ಹಾಕಿಕೊಂಡಿತು. ಅದು ಕಾಂಗ್ರೆಸ್ ಪಕ್ಷವು ಗೇಣಿ, ಮುಷ್ಕರ ವಿರೋಧಿ ಮಸೂದೆ, ಖೋತಿ ಮಸೂದೆಯ ಬಗ್ಗೆ ಹೊಂದಿದ್ದ ನಿಲುವುಗಳನ್ನು ಟೀಕಿಸುತ್ತಿತ್ತು. ಅದು ೧೯೩೭ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೧೭ ಸ್ಥಾನಗಳ ಪೈಕಿ ೧೫ ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಅಸ್ಪೃಶ್ಯರನ್ನು ಪ್ರತಿನಿಧಿಸುತ್ತಿಲ್ಲವೆಂದು ತೋರಿಸಿಕೊಟ್ಟಿತು. ಮೇಲೆ ಹೇಳಿದ ಎರಡು ರಾಜಕೀಯ ಮಜಲುಗಳಲ್ಲಿ ಅಂಬೇಡ್ಕರ್ ರವರು ರೈತರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪ್ರತಿನಿಧಿಸಲು ಪ್ರಯತ್ನಿಸಿದ್ದರು. ಅದರಲ್ಲಿ ಅವರಿಗೆ ಸಿಕ್ಕಿದ ಯಶಸ್ಸು ಅಲ್ಪ. ಅವರ ಜೀವನದಲ್ಲಿ ಇಂಡಿಪೆಂಡೆಂಟ್ ಲೇಬರ್ ಪಕ್ಷದ ಕಾಲದಲ್ಲಿ ಮಾತ್ರ ವಿಶಾಲ ಜನತೆಯೊಡನೆ ಒಡನಾಡಲು ಪ್ರಯತ್ನಿಸಿದ್ದರು. ಅದು ಸಾಕಷ್ಟು ಪುರೋಹಿಗಾಮಿ ವಿಚಾರಗಳನ್ನು ಹೊಂದಿತ್ತು.

ಮೇಲೆ ಗಮನಿಸಿದ ಎರಡು ಭಿನ್ನ ರಾಜಕೀಯವನ್ನು ಬಿಟ್ಟರೆ ಅಂಬೇಡ್ಕರ್ ರವರ ರಾಜಕೀಯವೆಲ್ಲವೂ ಸಹ ಅಸ್ಪೃಶ್ಯರಿಗೆ ವ್ಯವಸ್ಥೆಯೊಳಗೆ, ಸಂವಿಧಾನಾತ್ಮಕ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡುವುದೇ ಆಗಿದ್ದವು. ಸೈಮನ್ ಕಮೀಷನ್, ದುಂಡು ಮೇಜಿನ ಸಭೆಗಳಲ್ಲಿ ವಾದಿಸಿ ಅಸ್ಪೃಶ್ಯರಿಗೆ ಮೀಸಲಾತಿ ಮತ್ತು ರಕ್ಷಣೆಗಾಗಿ ಅಂಬೇಡ್ಕರ್ ಪ್ರಯತ್ನಿಸಿದರು. ಅಸ್ಪೃಶ್ಯರಿಗೆ ಬೇರೆ ಮತ ಕಟ್ಟೆಗಳು ಮತ್ತು ಸೀಟುಗಳ ಕಾದಿರುಸುವಿಕೆಯ ಕಮ್ಯೂನಲ್ ಅವಾರ್ಡ್‌ನಲ್ಲಿ ದೊರಕಿದರೂ ಸಹ ಅಂಬೇಡ್ಕರ್ ಗಾಂಧಿಯವರ ಬೆದರಿಕೆಗೆ ಮಣಿದು ಪೂನಾ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು.

೧೯೩೫ರಲ್ಲಿ ಅಸ್ಪೃಶ್ಯರಿಗೆ ಸಂವಿಧಾನ ಕಾಯಿದೆಯ ಮೂಲಕ ಸವಲತ್ತುಗಳು, ಲೋಕಸೇವಾ ಆಯೋಗದ ಸೇವೆಗಳಲ್ಲಿ ಅಸ್ಪೃಶ್ಯರಿಗೆ ಪ್ರಾತಿನಿಧ್ಯ ಮತ್ತು ತಮ್ಮ ಪ್ರತಿನಿಧಿಗಳನ್ನು ವಯಸ್ಕರ ಮತದಾನದ ಮೂಲಕ ಆರಿಸಲು ಅವಕಾಶಕ್ಕಾಗಿ ಅಂಬೇಡ್ಕರ್ ಒತ್ತಾಯಿಸಿದರು.

೧೯೪೨ರಲ್ಲಿ ಎರಡು ರಾಷ್ಟ್ರಗಳ ಸಿದ್ಧಾಂತ ಚರ್ಚೆಯಲ್ಲಿದ್ದಾಗ, ಅಂಬೇಡ್ಕರ್ ರ ಅಸ್ಪೃಶ್ಯರಿಗೆ ಬೇರೆ ವಾಸಸ್ಥಾನಗಳು (Separate Settelement) ಬೇಕೆಂದು ವಾದಿಸಿದ್ದರು. ಅಸ್ಪೃಶ್ಯರು ಹಕ್ಕುಗಳನ್ನು ಪಡೆಯಲು ಯತ್ನಿಸಿದಾಗ ಸವರ್ಣೀಯರ ದಬ್ಬಾಳಿಕೆ ತೀವ್ರವಾಗಬಹುದು. ಅಸ್ಪೃಶ್ಯತೆಯಿಂದ ಪಾರಾಗಲು ಮತ್ತು ಆರ್ಥಿಕ, ಸಾಮಾಜಿಕ ಭದ್ರತೆಯನ್ನು ಪಡೆಯಲು ಹಳ್ಳಿಯ ರಚನೆಯಲ್ಲಿಯೇ ಮೂಲಭೂತ ಬದಲಾವಣೆಯಾಗಬೇಕೆಂದು ಅವರು ಒತ್ತಾಯಿಸಿದರು. ಇದನ್ನು ೧೯೪೨ರಲ್ಲಿ ನಾಗಪುರದಲ್ಲಿ ನಡೆದ ಅಖಿಲ ಭಾರತ ಷೆಡ್ಯೂಲ್ ಕ್ಯಾಸ್ಟ್ ಫೆಡರೇಷನ್‌ನ ಸಭೆಯಲ್ಲಿ ಗೊತ್ತುವಳಿಯನ್ನಾಗಿ ಸ್ವೀಕರಿಸಲಾಯಿತು. ಇದಕ್ಕೆ ಅಂತಾರಾಷ್ಟ್ರೀಯ ಪ್ರಚಾರ ನೀಡಲು ೧೯೪೩ರಲ್ಲಿ ಕ್ಯೂಬೆಕ್ ನಲ್ಲಿ ನಡೆದ ‘Pecific Relation Committee’ ಯ ಸಭೆಯಲ್ಲಿ ಮಂಡಿಸಿದ ಪ್ರಬಂಧವೊಂದರಲ್ಲಿ ಅಂಬೇಡ್ಕರ್ ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ಈ ಬೇಡಿಕೆಯನ್ನು ಸತತವಾಗಿ ಎತ್ತಿ ಹಿಡಿಯಲಿಲ್ಲ. ೧೯೪೪ರ ನಂತರ ಸಂವಿಧಾನದಲ್ಲಿ ಅಂಬೇಡ್ಕರ್ ಅಸ್ಪೃಶ್ಯರ ಹಕ್ಕುಗಳಿಗಾಗಿ ಪ್ರಯತ್ನಿಸತೊಡಗಿದರು. ನೆಹರೂ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದು, ಹಿಂದೂ ಕೋಡ್ ಬಿಲ್ ಅನ್ನು ಮಂಡಿಸಲು ವಿಫಲರಾದ ಮೇಲೆ ರಾಜೀನಾಮೆ ಕೊಟ್ಟು ಹೊರ ಬಂದರು. ೧೯೫೫ರ ಅಕ್ಟೋಬರ್ ನಲ್ಲಿ AISCF ನ ಕಾರ್ಯಕಾರಿ ಸಮಿತಿಯ ಚುನಾವಣೆಯ ಮಟ್ಟದಲ್ಲಿಯೂ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಕರೆ ನೀಡಿತು.

೧೯೫೬ರಲ್ಲಿ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ನಂತರ ಮಾಡಿದ ಭಾಷಣವೊಂದರಲ್ಲಿ, ಸೀಟುಗಳ ಮೀಸಲಾತಿಯಿಂದ ಏನೂ ಪ್ರಯೋಜನವಿಲ್ಲ. ದೇಶದ ಐಕ್ಯತೆ ಮುಖ್ಯವೆಂದರು. ಆ ಹೊತ್ತಿಗಾಗಲೇ ಅವರಿಗೆ ಹೊಸ ಪಕ್ಷವನ್ನೇ ಕಟ್ಟುವ ಯೋಜನೆ ಇತ್ತು. ಆ ಪಕ್ಷವು

ಸಾರ್ವಜನಿಕ ಮತ್ತು ವ್ಯಕ್ತಿಯ ಹಿತಾಸಕ್ತಿಗಳಿಗೆ ಪಾರ್ಲಿಮೆಂಟರಿ ವ್ಯವಸ್ಥೆಯ ಸರ್ಕಾರವೇ ಅತ್ಯುತ್ತಮ ಎಂಬುದನ್ನು ಎತ್ತಿಹಿಡಿಯುತ್ತದೆ. ಅದು ಉದಾರವಾದ, ವಿಚಾರವಾದ, ಮಾನವತಾವಾದ, ಸಮಾಜವಾದ, ಅನುಭವೈಕವಾದ (Empiricism) ಪ್ರೇಮ ಮತ್ತು ಸ್ನೇಹದ ಹೊಸ ಅರ್ಥವನ್ನು ಹೊಂದಿದೆ ಎಂದು ಘೋಷಿಸಲಾಯಿತು.

ಅಂಬೇಡ್ಕರ್ ರವರ ನಿಧನದ ನಂತರ ರಿಪಬ್ಲಿಕನ್ ಪಕ್ಷವನ್ನು ಸ್ಥಾಪಿಸಲಾಯಿತು.

ಅಂಬೇಡ್ಕರ್ ಸ್ವಾತಂತ್ರ ಚಳುವಳಿಯ ವಿರೋಧಿಯಲ್ಲ. ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಎಂದೂ ನೇರವಾಗಿ ಭಾಗವಹಿಸಲಿಲ್ಲ. ಅವರ ಏಕೈಕ ಗುರಿ ಅಸ್ಪೃಶ್ಯರಿಗೆ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡುವುದಾಗಿತ್ತು. ಅದಕ್ಕಾಗಿ ಅವರು ಸಿಕ್ಕ ಅವಕಾಶಗಳನ್ನೆಲ್ಲಾ ಉಪಯೋಗಿಸಿಕೊಂಡರು. ಆದರೆ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿ ರಚಿಸಿದ ಸಂವಿಧಾನದ ವಿಫಲತೆ ಕೊನೆಗೆ ಅವರಿಗೆ ಅರಿವಾಗಿರಬೇಕು. ಈ ಬಗ್ಗೆ ಅವರು ಹೇಳಿದ ಮಾತುಗಳು ಗಮನಾರ್ಹ,

ನಾವು ಸಂಪ್ರದಾಯವೊಂದನ್ನು ಉತ್ತರಾಧಿಕಾರದಿಂದ ಪಡೆದಿದ್ದೇವೆ. ಓಹೋ, ನೀವು ರಾಜ್ಯಾಂಗದ ನಿರ್ಮಾತೃ ಎಂದು ನನಗೆ ಹೇಳುತ್ತಲೇ ಇರುತ್ತಾರೆ. ನನ್ನ ಉತ್ತರವು ನಾನು ಬಾಡಿಗೆ ಕುದುರೆಯಾಗಿದ್ದೆನೆಂದೂ, ಮಾಡು ಎಂದು ನನಗೆ ಹೇಳಿದ್ದನ್ನು ಮನಸ್ಸಿಲ್ಲದಿದ್ದರೂ ನಾನು ಮಾಡಿದೆ.

ಇನ್ನೊಮ್ಮೆ ಅಲ್ಪ ಸಂಖ್ಯಾಕರ ಹಿತರಕ್ಷಣೆಗೆ ಅವಕಾಶವಿಲ್ಲದ ರಾಜ್ಯಾಂಗದ ಕರಡನ್ನು ಅಂಬೇಡ್ಕರ್ ರವರೇ ತಯಾರಿಸಿದ್ದಾರೆಂದು ಅಂದಿನ ಗೃಹಸಚಿವ ಕಟ್ಟು ಹೇಳಿದಾಗ ಅಂಬೇಡ್ಕರ್ ಸಿಡಿದೆದ್ದರು.

ಸ್ವಾಮಿ, ನನ್ನ ಮಿತ್ರರು ರಾಜ್ಯಾಂಗವನ್ನು ನಾನು ಮಾಡಿದೆನೆಂದು ಹೇಳುತ್ತಾರೆ. ಆದರೆ ಅದನ್ನು ಸುಟ್ಟು ಹಾಕಲು ನಾನೇ ಮೊದಲ ವ್ಯಕ್ತಿಯಾಗಿ ತಯಾರಾಗಿರುವೆನೆಂದು ಹೇಳಲು ನಾನು ಸಿದ್ಧ. ನನಗದು ಬೇಕಾಗಿಲ್ಲ. ಯಾರಿಗೂ ಸಹ ಅದು ಹೊಂದುವುದಿಲ್ಲ ಅದೇನೇ ಇರಲಿ, ನಮ್ಮ ಜನಗಳು ಅದನ್ನು ಕಾರ್ಯಗತ ಮಾಡಲು ಬಯಸಿದರೆ, ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಇದ್ದಾರೆಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.

ಉದಾರವಾದ, ಪಾರ್ಲಿಮೆಂಟರಿ ಪ್ರಜಾಸತ್ತೆ, ಹಿಂದೂ ಸಮಾಜದ ಪ್ರಜ್ಞೆಯ ಬದಲಾವಣೆಯ ಪ್ರಯತ್ನಗಳಲ್ಲಿ ಅಲ್ಪ ಯಶಸ್ಸು ಕಂಡು ಕೊನೆಗೆ ಹತಾಶರಾದ ಅಂಬೇಡ್ಕರ್ ಬೌದ್ಧ ಧರ್ಮದಲ್ಲಿ ಕಮ್ಯೂನಿಸಂಗೆ ಪರ್ಯಾಯ ಮತ್ತು ಆತ್ಮೋದ್ಧಾರವನ್ನು ಕಂಡರು. ೧೯೫೪ರಲ್ಲಿ ‘ನನ್ನ ವೈಯಕ್ತಿಕ ವೇದಾಂತ’ ಎಂಬ ಮಾಲಿಕೆಯಲ್ಲಿ ಭಾಷಣ ಮಾಡುತ್ತಾ ಅಂಬೇಡ್ಕರ್-

ನಿಜವಾಗಿಯೂ, ನನ್ನ ಸಾಮಾಜಿಕ ವೇದಾಂತವು ಸ್ವಾಂತ್ರ್ಯ, ಸೋದರತೆ ಮತ್ತು ಸಮಾನತೆಗಳೆಂಬ ಮೂರು ಪದಗಳಲ್ಲಿ ಪೂಜಾರ್ಹವಾಗಿ ಅಡಕವಾಗಿವೆ. ನನ್ನ ವೇದಾಂತವನ್ನು ಫ್ರಾನ್ಸಿನ ಕ್ರಾಂತಿಯಿಂದ ತೆಗೆದುಕೊಂಡಿದ್ದೇನೆಂದು ಯಾರೂ ಹೇಳತಕ್ಕದ್ದಲ್ಲ. ನಾನು ಹಾಗೆ ತೆಗೆದುಕೊಂಡಿಲ್ಲ. ನನ್ನ ವೇದಾಂತದ ಬೇರುಗಳು ಮತದಲ್ಲಿವೆಯೇ ಹೊರತು ವಿಜ್ಞಾನದಲ್ಲಿಲ್ಲ. ಅವುಗಳನ್ನು ನನ್ನ ಒಡೆಯ ಬುದ್ಧನಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ೩೦

ಅಂಬೇಡ್ಕರ್ ಮೊದಲು ಹಿಂದೂ ಧರ್ಮೀಯರ ಮನಸ್ಸನ್ನು ಚುಚ್ಚುವುದು ಅದರಲ್ಲೇ ಸಮಾನತೆಗೆ ಹೋರಾಟಗಳನ್ನು ನಡೆಸಿದರು. ನಂತರದ ಘಟ್ಟದಲ್ಲಿ ಪಾಶ್ವಿಮಾತ್ಯ ಬೂರ್ಜ್ವಾ ಉದಾರವಾದೀ ಮೌಲ್ಯಗಳ ಆಧಾರಮ ಮೇಲೆ ರಾಜಕೀಯ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಿದರು. ಅದರಲ್ಲಿ ಅಲ್ಪ ಯಶಸ್ಸು ಗಳಿಸಿ ಹತಾಶರಾದ ಮೇಲೆ ತಮ್ಮ ಉದ್ಧಾರವನ್ನು ಭಾರತದಲ್ಲಿನ ಜಾತಿ ವ್ಯವಸ್ಥೆಯ ವಿರೋಧಿ ಉದಾರವಾದಿ ಪರಂಪರೆಯಲ್ಲಿ ಕಂಡರು. ಈ ಕಾರಣದಿಂದಾಗಿಯೇ ಅಂತಿಮವಾಗಿ ಆತ್ಮೋದ್ಧಾರದ ಗುರಿಯುಳ್ಳ ಬೌದ್ಧಧರ್ಮ ಅವರಿಗೆ ಆಕರ್ಷಕವಾಗಿ ಕಂಡಿರಬೇಕು. ಪಾಶ್ವಿಮಾತ್ಯ ಬೂರ್ಜ್ವಾ ಉದಾರವಾದದೊಡನೆ ಅವರು ನಡೆಸಿದ ಮಧುಚಂದ್ರ ಅಂತಿಮವಾಗಿ ಅವರಿಗೆ ಭ್ರಮನಿರಸನ ಮಾಡಿರಬೇಕು.

ಅಂಬೇಡ್ಕರ್ ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಅವರು ಮಹಾರಾಷ್ಟ್ರದ ವಿಶಾಲ ಅಸ್ಪೃಶ್ಯರನ್ನು ಬೆಂಬಲಿಗರಾಗಿ ಹೊಂದಿದ್ದರೇ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರ ಅವರ ಚಳುವಳಿಯ ಸಾಮಾಜಿಕ ನೆಲೆಯನ್ನು ಗಮನಿಸಿದಾಗ ವ್ಯಕ್ತವಾಗುತ್ತದೆ.

ಅಂಬೇಡ್ಕರ್ ರವರ ರಾಜಕೀಯ ಚಳುವಳಿಯ ಸಾಮಾಜಿಕ ನೆಲೆ

ಈ ಮೊದಲೇ ಹೇಳಿದಂತೆ ಮಹಾರಾಷ್ಟ್ರದ ವಿವಿಧ, ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಿಗೆ ಸ್ಪಂದಿಸುವವರು ಭೂಮಿಯ ಜೊತೆ ಸಂಬಂಧ ಹೊಂದಿದ್ದ, ಸೈನ್ಯದ ಹಿನ್ನೆಲೆಯುಳ್ಳ ಅಸ್ಪೃಶ್ಯ ಮಹರ್ ರೇ ಆಗಿದ್ದರು. ಅಂಬೇಡ್ಕರ್ ಮಹರ್ ರಲ್ಲಿ ಹೊಂದಿದಷ್ಟು ಬೆಂಬಲವನ್ನು ಇತರ ಅಸ್ಪೃಶ್ಯ ಜಾತಿಗಳಾದ ಮಾಂಗ್ ಮತ್ತು ಚಮ್ಮಾರರಲ್ಲಿ ಹೊಂದಲಾಗಲಿಲ್ಲ.

ಅವರ ಎಲ್ಲಾ ಹೋರಾಟಗಳ ಬೆಂಬಲಿಗರು ಮತ್ತು ಅನುಯಾಯಿಗಳು ಮಹರ್ ರೇ ಆಗಿದ್ದರು. ಅವರ ಷೆಡ್ಯೂಲ್ ಕ್ಯಾಸ್ಟ್ ಫೆಡರೇಶನ್ ಕಾರ್ಯದರ್ಶಿಯಾಗಿ ಚಮ್ಮಾರ ಜಾತಿಗೆ ಸೇರಿದ ರಾಜ ಭೋಜ್ ಇದ್ದರೂ ಸಹ, ಅವರು ಆ ಜಾತಿಯನ್ನು ಹೆಚ್ಚಾಗಿ ಚಳುವಳಿಗೆ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಮ್ಮಾರರು ಆಗಲೇ ತಮ್ಮ ಚರ್ಮದ ಕೆಲಸದ ಮೂಲಕ ಆರ್ಥಿಕ ಪ್ರಗತಿ ಸಾಧಿಸಿದ್ದರು. ಅಸ್ಪೃಶ್ಯರಲ್ಲೆಲ್ಲಾ ಮಾಂಗ್‌ರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಚಮ್ಮಾರರಾಗಲೀ, ಮಾಂಗ್‌ರಾಗಲೀ ಅಂಬೇಡ್ಕರ್ ರವರನ್ನು ತಮ್ಮ ಮುಕ್ತಿಯ ನಾಯಕನೆಂದು ಪರಿಗಣಿಸಲಿಲ್ಲ. ಆದರೆ ಅಂಬೇಡ್ಕರ್ ಪ್ರಾರಂಭಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಈ ಮಿತಿಯನ್ನು ಮೀರಲು ಪ್ರಯತ್ನಿಸಿತ್ತು.

೧೯೩೯ರ ಚಮ್ಮಾರ ಸಮ್ಮೇಳನದಲ್ಲಿ ಅಂಬೇಡ್ಕರ್ ಕೇವಲ ಮಹರ್ ರ ನಾಯಕರು ಎಂದು (ಮಾಡಲಾದ) ಟೀಕೆ ಮಾಡಲಾಯಿತು. ಇದಕ್ಕೆ ಉತ್ತರವಾಗಿ ಅಂಬೇಡ್ಕರ್ ಬಾಂಬೆ ಕ್ರಾನಿಕಲ್ ‘ಪತ್ರಿಕೆಯಲ್ಲಿ’ ವಿವರವಾದ ಉತ್ತರ ಬರೆದರು. ‘ಅದರಲ್ಲಿ ನನಗೇನೂ ಮಹರ್ ರ ಬಗ್ಗೆ ವಿಶೇಷ ಪ್ರೀತಿಯಿಲ್ಲ. ಅವರನ್ನು ಜಾತಿಯಾಗಿ ನಿರ್ಮೂಲನ ಮಾಡಲು ಕೈಲಾದನ್ನೆಲ್ಲಾ ಮಾಡುತ್ತೇನೆ. ಆದರೆ ಅವರು ಮನುಷ್ಯರಾಗಿ ಅಭಿವೃದ್ಧಿ ಹೊಂದುವುದನ್ನು ಆಶಿಸುತ್ತೇನೆ’ ಎಂದರು. ೧೯೪೧ರ ಜೂನ್ ೧೪ರ ಬೊಂಬಾಯಿ, ‘ಜನತಾ’ ಸಂಚಿಕೆಯಲ್ಲಿ ಡಿ. ಎನ್. ಕಂಬಳೆಯವರು, ‘ನಿಜಾಂ ಸಂಸ್ಥಾನದ ಪ್ರಪ್ರಥಮ ವಿದ್ಯಾವಂತ ಮಾಂಗ್‌ನ ಪುತ್ರ’ ಎಂಬ ಶಿರೋನಾಮೆಯಲ್ಲಿ ಪತ್ರವೊಂದನ್ನು ಬರೆದರು. ಅದರಲ್ಲಿ ಅಂಬೇಡ್ಕರ್ ರವರಿಗೆ ಕೆಲವು ಕೋರಿಕೆಗಳನ್ನು ಮಾಡಲಾಗಿತ್ತು.

೧. ಮಹರ್ ರು ಮಾಂಗ್‌ರನ್ನು ಸಮನಾಗಿ ಕಾಣಬೇಕು.

೨. ಮಾಂಗ್ ಯುವಕರು ಮುಂದೆ ಬರಲು ಅವಕಾಶ ನೀಡಬೇಕು.

೩. ಮಹರ್ ಮಾಂಗ್‌ರ ವತನ್‌ದಾರಿ, ಹಕ್ಕುಗಳನ್ನು ಕಿತ್ತುಕೊಳ್ಳಬಾರದು.

೪. ಮಹರ್ ರು ಮಾಂಗ್‌ರ ಸೊತ್ತಿಗೆ ತಡೆಯೊಡ್ಡಬಾರದು.

೫. ಮಹರ್ ರಿಗೆ ನೀಡುವ ಪ್ರಾಮುಖ್ಯತೆಯನ್ನು ಮಾಂಗ್‌ರಿಗೂ ಸಹ ನೀಡಬೇಕು. ಇದಕ್ಕೆ ಉತ್ತರಿಸುತ್ತಾ ಅಂಬೇಡ್ಕರ್,

ತಾವು ಯಶಸ್ವಿಯಾಗಿ ಅಂತರ್ ಜಾತೀಯ ಸಹ ಭೋಜನವನ್ನು ಉತ್ತೇಜಿಸಿರುವುದಾಗಿಯೂ ಮತ್ತು ಮಹರ್ ವಿದ್ಯಾರ್ಥಿನಿಲಯಗಳಲ್ಲಿ ಎಲ್ಲರಿಗೂ ಪ್ರವೇಶಾವಕಾಶವಿದೆಯೆಂದರು. ಮತ್ತು ಇಂಡಿಪೆಂಡೆಂಟ್ ಲೇಬರ್ ಪಕ್ಷಕ್ಕೆ ಬೇಕಾದ್ದು ಗುಣವೇ ಹೊರತು ಜಾತಿಯಲ್ಲ ಎಂದರು.

ಮಾಂಗ್‌ರು ಕಾಂಗ್ರೆಸ್ ಹಾದಿ ಹಿಡಿಯುತ್ತಿರುವುದರ ವಿರುದ್ಧ ಎಚ್ಚರಿಸಿದರು. ಈ ಎಲ್ಲಾ ಆಶಯಗಳನ್ನು ಹೊಂದಿದ್ದ ಅಂಬೇಡ್ಕರ್ ರವರ ಚಳುವಳಿ ಮಾಂಗ್ ಮತ್ತು ಚಮ್ಮಾರರ ಬಹುಪಾಲು ಜನರನ್ನು ಹೊಂದಲು ವಿಫಲವಾಗಯಿತು. ೩೧ ಬೌದ್ಧಧರ್ಮಕ್ಕೆ ಮತಾಂತರ ಹೊಂದುವ ಅವರ ಕಾರ್ಯಕ್ರಮಕ್ಕೆ ಬೆಂಬಲ ದೊರಕಿದ್ದು ಮಹರ್ ರಿಂದ ಮಾತ್ರ. ಇತ್ತೀಚಿನ ದಲಿತ ಫ್ಯಾಂಥರ್ ಚಳುವಳಿಯ ಸಾಮಾಜಿಕ ನೆಲೆ-ನವ-ಬೌದ್ಧರದ್ದು. ಅಂಬೇಡ್ಕರ್ ರವರು ಎಲ್ಲಾ ರಾಜಕೀಯ ಚಟುವಟಿಕೆಗಳನ್ನು ಅಸ್ಪೃಶ್ಯರ ಪ್ರತಿನಿಧಿಯಾಗಿ ನಡೆಸುತ್ತಿದ್ದರೂ ಸಹ ಅವರ ಹೋರಾಟಗಳ ಸಾಮಾಜಿಕ ನೆಲೆ ಮಹರ್ ಜಾತಿಯಲ್ಲಿದೆ.

ಸಮಾಪ್ತಿ

ಭಾರತವನ್ನು ತಲುಪಿದ ಪಾಶ್ಚಿಮಾತ್ಯ ಉದಾರವಾದ ಕ್ರಾಂತಿಕಾರಿಯಲ್ಲದಿದ್ದರೂ, ಇಲ್ಲಿನ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವಲ್ಲಿ ಗಮನಾರ್ಹ ಪಾತ್ರವಹಿಸಿತು. ಈ ಉದಾರವಾದ ಭಾರತದಲ್ಲಿ ಹುಟ್ಟುಹಾಕಲ್ಪಟ್ಟ ಹೊಸ ಉತ್ಪಾದನಾ ಸಂಬಂಧಗಳೊಡನೆಯೇ ಬೆಳೆಯುತ್ತಾ ಬಂದಿತು. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಈ ಉದಾರವಾದದ ಕೊಡುಗೆ ಆ ಕಾಲದಲ್ಲಿ ಪ್ರಗತಿಗಾಮಿ, ರಾಷ್ಟ್ರೀಯವಾದಿ ಚಳುವಳಿಯಲ್ಲಿ ಅಸ್ಪೃಶ್ಯರ ಸಮಸ್ಯೆಗಳನ್ನು ಪ್ರಬಲವಾಗಿ ಪ್ರತಿನಿಧಿಸುವವರು ಯಾರೂ ಇಲ್ಲದ ಸಂದರ್ಭದಲ್ಲಿ ಅಂಬೇಡ್ಕರ್ ಕಾಣಿಸಿಕೊಂಡರು. ತಮ್ಮ ಅಪಾರ ಬೌದ್ಧಿಕ ಪ್ರೌಢಿಮೆಯಿಂದ ಉದಾರವಾದೀ ಮೌಲ್ಯಗಳ ಆಧಾರದ ಮೇಲೆ ಅಸ್ಪೃಶ್ಯರನ್ನು ಪ್ರತಿನಿಧಿಸಲು ಪ್ರಯತ್ನಿಸಿದರು. ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಾ, ಕೇವಲ ಮಹರ್ ರ ಬೆಂಬಲವಿದ್ದರೂ ಅಸ್ಪೃಶ್ಯರಿಗೆ ರಾಜಕೀಯ ಹಕ್ಕುಗಳಿಗಾಗಿ ಹೋರಾಡಿದರು. ಮಹರ್ ರಲ್ಲಿ ಅವರು ಗಳಿಸಿ ಕೊಟ್ಟ ಆತ್ಮ ಗೌರವ, ವಿಶ್ವಾಸ ಮಹತ್ತರವಾದದ್ದು. ಮಹರ್ ರಿಗಾಗಿ ಅವರು ನಡೆಸಿದ ಸಾಮಾಜಿಕ ರ‍್ಯಾಡಿಕಲ್ ಹೋರಾಟಗಳು ಗಮನಾರ್ಹವಾದವು. ಅಂಬೇಡ್ಕರ್ ಈ ರೀತಿ ಅಸ್ಪೃಶ್ಯರ ಹೋರಾಟದ ಒಂದು ಪ್ರಮುಖ ಘಟ್ಟ.

ನರಸತ್ತ ಬೂರ್ಜ್ವಾ ಉದಾರವಾದೀ ಮೌಲ್ಯಗಳಿಂದ ಪ್ರಭಾವಿತರಾದ ಅಂಬೇಡ್ಕರ್ ವಿವಿಧ ಉದಾರವಾದೀ ಮೌಲ್ಯಗಳನ್ನು ಅನುಮಾನದಿಂದಲೇ ನೋಡುತ್ತಾರೆ. ಉದಾ: ಪ್ರಜಾಸತ್ತೆ, ರಾಜ್ಯಾಂಗದ ಫಲಗಳು. ಈ ಎಲ್ಲಾ ಮೌಲ್ಯಗಳಿಂದ ಅವರು ಅಂತಿಮವಾಗಿ ಭ್ರಮನಿರಸನ ಹೊಂದಿದರು. ಈ ಎಲ್ಲಾ ಗೊಂದಲಗಳಿಗೆ ಕಾರಣ ಬೂರ್ಜ್ವಾ ವರ್ಗ ತನ್ನ ಉಗಮದ ಸಮಯದಲ್ಲಿ ಹೊಂದಿದ್ದ ಕ್ರಾಂತಿಕಾರಿ ಉದಾರವಾದೀ ಮೌಲ್ಯಗಳನ್ನು ಈ ಯುಗದಲ್ಲಿಯೂ ಸಹ ಹೊಂದಿದೆ ಎಂದು ಅವರು ನಂಬಿದ್ದೇ ಆಗಿದೆ. ಅವರ ತಾಕಲಾಟಗಳ ಮೂಲ ಇದೇ. ಹಾಗಾದರೆ ಅಂಬೇಡ್ಕರ್ ಬೂರ್ಜ್ವಾ ಸುಧಾರಣಾವಾದೀ ಎಂದು ನಿರ್ಧರಿಸುವುದು ಮೂರ್ಖತನವಾಗುತ್ತದೆ. ಅವರ ಆಲೋಚನಾಕ್ರಮ ನರಸತ್ತ ಬೂರ್ಜ್ವಾ ಉದಾರವಾದದಲ್ಲಿತ್ತು ಅಷ್ಟೇ.

ಇಂದು ಈ ದೇಶದ ಅನೇಕ ಅಸ್ಪೃಶ್ಯರ ಗುಂಪುಗಳಿಗೆ ಅಂಬೇಡ್ಕರ್ ಸ್ಫೂರ್ತಿಯಾಗಿ ಉಳಿಯಲು ಕಾರಣ, ಅವರು ಆ ಕಾಲದಲ್ಲಿ ಪ್ರಾರಂಭಿಸಿದ ಸಾಮಾಜಿಕ ರ‍್ಯಾಡಿಕಲ್ ಧೋರಣೆಯಿಂದ ಮತ್ತು ಅವರ ಆತ್ಮವಿಶ್ವಾಸದ ಹೋರಾಟಗಳಿಂದ. ಇದು ಅಂಬೇಡ್ಕರ್ ರವರ ಅಪೂರ್ವ ಸಾಧನೆ.

ಈ ದೇಶದ ಆಳುವ ವರ್ಗ ಅಂಬೇಡ್ಕರ್ ರವರ ಪಾರ್ಲಿಮೆಂಟರಿ ಉದಾರವಾದಿ ಮೌಲ್ಯಗಳನ್ನು ಮಾತ್ರ ಪ್ರಚಾರ ಮಾಡುತ್ತಾ ಅಸ್ಪೃಶ್ಯರಿಗೆ ಮಂಕು ಬೂದಿ ಎರಚುತ್ತಿದೆ. ಇಂದು ಈ ದೇಶದ ಪ್ರಜ್ಞಾವಂತ ಅಸ್ಪೃಶ್ಯರಿಗೆ ಉಳಿದಿರುವ ಮಾರ್ಗ ಕೇವಲ ಎರಡು. ಒಂದನೆಯದು, ಅಂಬೇಡ್ಕರ್ ನಡೆಸಿ ಅರ್ಧಂಬರ್ಧವಾದ ಸಾಮಾಜಿಕ, ಆರ್ಥಿಕ ಹೋರಾಟಗಳನ್ನು ಸ್ವತಂತ್ರ ಪ್ರಜಾಸತ್ತಾತ್ಮಕ ಚಳುವಳಿಗಳನ್ನಾಗಿ ಬೆಳೆಸುವುದು. ಇಲ್ಲವಾದರೆ, ಎರಡನೆಯದಾಗಿ, ಅಂಬೇಡ್ಕರ್ ನಂಬಿದ್ದ ನರಸತ್ತ ಬೂರ್ಜ್ವಾ ಉದಾರವಾದದ ಮರೀಚಿಕೆಯನ್ನು ಬೆನ್ನಟ್ಟಿ ಅಂಬೇಡ್ಕರ್ ರಂತೆಯೇ ಹತಾಶರಾಗುವುದು.

ಈ ದೇಶದಲ್ಲಿ ಜಾತಿ ವ್ಯವಸ್ಥೆ ಇರುವವರೆಗೂ ಜಾತಿ ವಿರೋಧಿ ಚಳುವಳಿಗಳು ಹುಟ್ಟುತ್ತಲೇ ಇರುತ್ತವೆ. ಈ ಚಳುವಳಿಗಳು ತಮ್ಮ ಜಾತಿಗಳ ಪರಿಧಿಯನ್ನು ಮೀರಲು ಸಾಧ್ಯವಿಲ್ಲ. ಕ್ರಾಂತಿಕಾರಿಯಾಗಲೂ ಸಹ ಸಾಧ್ಯವಿಲ್ಲ. ಅತಿ ಹೆಚ್ಚು ಎಂದರೆ ಪ್ರಜಾಸತ್ತಾತ್ಮಕ ಚಳುವಳಿಗಳಾಗಿ ಮಾರ್ಪಾಡಾಗಲು ಸಾಧ್ಯ. ಇಂತಹ ಚಳುವಳಿಗಳನ್ನು ಸಮನ್ವಯಗೊಳಿಸುವ ಮತ್ತು ಸಹಕರಿಸುವ ಜವಾಬ್ದಾರಿ ದುಡಿಯುವ ವರ್ಗದ್ದು. ಯಾಕೆಂದರೆ : ಕೇವಲ ಜಾತಿ ಹೋರಾಟದ, ಜಾತಿ ವ್ಯವಸ್ಥೆಯನ್ನು ನಾಶ ಮಾಡಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆಯ ಸೃಷ್ಟಿ ಅನಿವಾರ‍್ಯ.

ಪರಾಮರ್ಶನ ಗ್ರಂಥಗಳು

೧. B. R. Ambedkar- Speech-Conditions Precedent for the succesful working of Democracy.

೨. Ambedkar-What Gandhi and Congress have done to Untouchables.

೩. Dr. Baba, Saheb Ambedkar, Writings and Speeches, Education Dept. Maharastra.

೪. Ambedkar’s address to AISCF Session, Bombay 6th May 1945. Quoted in W. N. Kuber’s Ambedkar- A Critical Study.

೫. Lohiya – The Caste System – Hyderabad.

೬. ಧನಂಜಯ ಖೀರ್ – ಡಾ. ಅಂಬೇಡ್ಕರ್ – ಜೀವನ, ಸಾಧನೆ.

೭. ಅಂಬೇಡ್ಕರ್ – ಜಾತಿವಿನಾಶ – ಅನು. ಮ. ನ. ಜ.

—-
* ಡಾ. ಅಂಬೇಡ್ಕರ್ ವಿಚಾರಧಾರೆ, ಸಂ. ಡಾ. ಅರವಿಂದ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೧ ಕೃತಿಯಿಂದ ಆಯ್ದುಕೊಂಡಿರುವ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ. )