ಮಹಾರಾಷ್ಟ್ರದ ಅಸ್ಪೃಶ್ಯ ಮಹರ್ ಜಾತಿಯ ನಾಯಕ ಭೀಮರಾವ್ ಅಂಬೇಡ್ಕರ್ ತಮ್ಮ ಜೀವಿತ ಕಾಲದಲ್ಲಿ ಹೊಂದಿದ್ದ ಅನುಯಾಯಿಗಳಿಗಿಂತಲೂ, ಇಂದು ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಒಂದು ದಶಕದಿಂದ ಈ ಪ್ರವೃತ್ತಿ ತೀವ್ರವಾಗಿ ಬೆಳೆಯುತ್ತಿದೆ. ಒಂದೆಡೆ ಭಾರತ ದೇಶದ ಆಳುವ ವರ್ಗ ಅಂಬೇಡ್ಕರ್ ರವರು ಯೋಗಿಯೊಬ್ಬನು ವರದಿಂದ ಹುಟ್ಟಿದವರು, ರಾಜ್ಯಾಂಗ ರಚಿಸಿದವರು, ಬೌದ್ಧ ಧಮಕ್ಕೆ ಮತಾಂತರ ಹೊಂದಿದವರು ಎಂದೆಲ್ಲಾ ಪ್ರಚಾರ ಮಾಡುತ್ತಿದೆ. ಇನ್ನೊಂದೆಡೆ ರಸ್ತೆಗಳಿಗೆ, ವೃತ್ತಗಳಿಗೆ ಅಂಬೇಡ್ಕರ್ ರವರು ಹೆಸರಿಡಬೇಕೆಂದೂ, ಪ್ರತಿಮೆಗಳನ್ನು ಸ್ಥಾಪಿಸಬೇಕೆಂದೂ ಫೋಟೋಗಳನ್ನು ಹಾಕಬೇಕೆಂದೂ, ಮತಾಂತರ ಹೊಂದುವವೆಂದೂ ಹೇಳಿಕೆ ನೀಡುತ್ತಿರುವ ಗುಂಪುಗಳೂ ಸಹ ಅಂಬೇಡ್ಕರ್ ರವರಿಂದ ಸ್ಫೂರ್ತಿ ಪಡೆಯುತ್ತಿವೆ. ಅವುಗಳ ಜತೆ ಜತೆಗೆ ಸ್ವಾತಂತ್ರ್ಯೋತ್ತರ ಮುವತ್ತು ವರ್ಷಗಳಲ್ಲಿ ಸವಲತ್ತುಗಳ ಬೆಂಬಲದಿಂದ ವೇಗವಾಗಿ ಬೆಳೆದ ವಿದ್ಯಾವಂತ ‘ಹರಿಜನ’ ಮಧ್ಯಮ ವರ್ಗ ಅಲ್ಲಲ್ಲಿ ಅಸ್ಪೃಶ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಸಂವಿಧಾನ ಹಕ್ಕುಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇವರ ಸ್ಫೂರ್ತಿಯೂ ಸಹ ಅಂಬೇಡ್ಕರ್ ರವರಿಂದ. ಈ ಎಲ್ಲಾ ಗುಂಪುಗಳಿಗೆ ಆಹಾರವಾಗುತ್ತಿರುವ ಅಥವಾ ಸ್ಫೂರ್ತಿ ನೀಡುತ್ತಿರುವ ಅಂಬೇಡ್ಕರ್ ರವರ ರಾಜಕೀಯ ವಿಚಾರಧಾರೆಯ ನೆಲೆ ಏನು ಎಂಬುದನ್ನು ಅರಿಯುವುದು ಇಂದು ಅತ್ಯವಶ್ಯವಾಗಿದೆ. ಈ ದಿಕ್ಕಿನಲ್ಲಿ ಈ ಅಧ್ಯಯನ ಒಂದು ಪ್ರಯತ್ನ.

ಅಂಬೇಡ್ಕರ್ ರವರನ್ನು ಒಂದಲ್ಲ ಒಂದು ಲೇಬಲ್‌ಗೆ ಅಂಟಿಸುವ ಪ್ರಯತ್ನ ಈವರೆಗೆ ನಡೆದಿದೆ. ಕೆಲವು ಅಂಬೇಡ್ಕರ್ ಕಾಂಗ್ರೆಸ್ಸಿಗರಿಗಿಂತ ಭಿನ್ನವಿಲ್ಲವೆಂದರೆ, ಇನ್ನೂ ಕೆಲವರು ಅಂಬೇಡ್ಕರ್ ಬೂರ್ಜ್ವಾ ಸುಧಾರಣಾವಾದಿಯೆಂದು ಕರೆಯುತ್ತಾರೆ. ಅಸ್ಪೃಶ್ಯರಲ್ಲಿ ಅನೇಕ ವಿದ್ಯಾವಂತ ಗುಂಪುಗಳು ಅಂಬೇಡ್ಕರ್ ಕ್ರಾಂತಿಕಾರಿಯೆಂದು ಭಜನೆ, ಕವನಗಳನ್ನು ರಚಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಲೇಖನದ ಉದ್ದೇಶ, ಅಂಬೇಡ್ಕರ್ ರವರಿಗೆ ಬೋರ್ಡು ತಗುಲಿಸುವುದಿಲ್ಲ; ಬದಲಾಗಿ ಅಂಬೇಡ್ಕರ್ ರವರ ರಾಜಕೀಯ ವಿಚಾರಧಾರೆಯ ನೆಲೆಯನ್ನು ಗುರುತಿಸುವುದಾಗಿದೆ.

ಈ ಲೇಖನದಲ್ಲಿ ಮೊದಲು ಅಂಬೇಡ್ಕರ್ ರವರ ರಾಜಕೀಯ ವಿಚಾರಧಾರೆಯನ್ನು ಪ್ರತಿನಿಧಿಸುವ ಪರಿಕಲ್ಪನೆಗಳನ್ನು ಗಮನಿಸಲಾಗುವುದು. ನಂತರ ಈ ದೇಶದ ಜಾತಿ ವ್ಯವಸ್ಥೆಯಲ್ಲಿ ಮತ್ತು ಅಂತಾರಾಷ್ಟ್ರೀಯ ವಿಚಾರಧಾರೆಯಲ್ಲೂ ಯಾವ ಅಂಶವನ್ನು ಮಹರ್ ರಾಗಿ ಅವರು ಪ್ರತಿಪಾದಿಸಿದರು ಎಂಬುದನ್ನು ಗುರುತಿಸಲಾಗುವುದು. ಈ ಹಿನ್ನೆಲೆಯಲ್ಲಿ ಅವರ ರಾಜಕೀಯ ಮಾರ್ಗ ಮತ್ತು ಅವರ ಹೋರಾಟಗಳ ಸಾಮಾಜಿಕ ನೆಲೆಯನ್ನು ವಿವೇಚಿಸಲಾಗುವುದು. ಅಂಬೇಡ್ಕರ್ ರವರ ರಾಜಕೀಯ ವಿಚಾರಗಳೆಲ್ಲವು ಸಹ ಅವರು ಸಾಮಾಜಿಕ ಹೋರಾಟಗಳನ್ನು ಅವಶ್ಯವಿದ್ದಷ್ಟು ಮಾತ್ರ ಗಮನಿಸಲಾಗಿದೆ.

ಅಂಬೇಡ್ಕರ್ ರವರ ರಾಜಕೀಯ ಪರಿಕಲ್ಪನೆಗಳು

ಪ್ರಜಾಸತ್ತೆ : ಅಂಬೇಡ್ಕರ್ ರವರ ಪ್ರಜಾಸತ್ತೆಯ ವ್ಯಾಖ್ಯೆ ಹೀಗಿದೆ :- ‘ನನ್ನ ಮಟ್ಟಿಗೆ ಹೇಳುವುದಾದರೆ ಪ್ರಜಾಸತ್ತೆಯ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರ್ಕಾರದ ರೂಪ ಮತ್ತು ವಿಧಾನ. ’ ಅವರು ವಾಲ್ಟೇರ್ ಬಾಗೇಹಟ್‌ನ ‘ಚರ್ಚೆಯ ಮೂಲಕ ವಾದ ಸರ್ಕಾರ’ ಮತ್ತು ಅಬ್ರಹಾಂ ಲಿಂಕನ್‌ನ ‘ಜನತೆಗಾಗಿ ಜನತೆಯ ಸರ್ಕಾರ’ ಎಂಬ ವ್ಯಾಖ್ಯೆಯನ್ನು ಒಪ್ಪುವುದಿಲ್ಲ. ಅಂಬೇಡ್ಕರ್ ರವರ ವ್ಯಾಖ್ಯೆಯ ಆಶಯ ಸರ್ಕಾರ ಜೀವನದಲ್ಲಿ ಬದಲಾವಣೆಗಳು ತರುವ ಸಾಧನ.

ಅಂಬೇಡ್ಕರ್ ಪಾರ್ಲಿಮೆಂಟರಿ ಸರ್ಕಾರದ ಸಮರ್ಥಕರಾಗಿದ್ದರು. ಅವರ ಪ್ರಕಾರ ಪಾರ್ಲಿಮೆಂಟರಿ ಸರ್ಕಾರದ ಗುಣಗಳು ಮೂರು-

೧. ಆನುವಂಶೀಯ ಆಳ್ವಿಕೆಯ ನಿಷೇಧ. ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಆನುವಂಶೀಯ ಆಳ್ವಿಕೆಗೆ ಮನ್ನಣೆ ಇಲ್ಲ.

೨. ಜನತೆಯ ಚುನಾಯಿತ ಪ್ರತಿನಿಧಿಗಳು ಪಾರ್ಲಿಮೆಂಟಿನಲ್ಲಿ ಕಾನೂನುಗಳನ್ನು ಮಾಡಬೇಕು.

೩. ಎಲ್ಲಾ ಸದಸ್ಯರು ಜನತೆಯ ಬಳಿ ವಾಪಸ್ಸು ಹೋಗಿ ಅವರ ವಿಶ್ವಾಸವನ್ನು ಹೊಸದಾಗಿ ಪಡೆಯಬೇಕು.

ಅಂಬೇಡ್ಕರ್ ರವರಿಗೆ ಯಾವುದೇ ಚಕ್ರವರ್ತಿ ಅಥವಾ ಏಕಪಕ್ಷವು ಜನತೆಯನ್ನು ಆಳುವುದು ಬೇಕಿರಲಿಲ್ಲ. ಜನತೆ ತಮ್ಮನ್ನು ಚುನಾಯಿತ ಸರ್ಕಾರದ ಮೂಲಕ ಆಳಿಸಿಕೊಳ್ಳಬೇಕು. ಏಕೆಂದರೆ ಅದು ಮನುಷ್ಯನ ಅಭಿವೃದ್ಧಿ ಮತ್ತು ಸುಖಕ್ಕೆ ಅತ್ಯುತ್ತಮ ಸಾಧನವೆಂದು ಅವರು ನಂಬಿದ್ದರು.

ಪಾರ್ಲಿಮೆಂಟರಿ ವ್ಯವಸ್ಥೆ ಬೆಳೆದು ಅನೇಕ ಶತಮಾನಗಳು ಕಳೆದರೂ ಯೂರೋಪಿನ ಅನೇಕ ದೇಶಗಳಲ್ಲಿ ಅದು ವಿಫಲವಾಗಿದೆ. ಅನೇಕ ದೇಶಗಳಲ್ಲಿ ಅದು ನಾಶವಾಗಿ ಸರ್ವಾಧಿಕಾರಕ್ಕೆ ಎಡೆಮಾಡಿಕೊಟ್ಟಿದೆ. ಈ ಕಾರಣಗಳಿಂದಾಗಿ ಭಾರತದಲ್ಲಿ – ‘ಯಾರಾದರೂ ಕೆಚ್ಚಿನಿಂದ ಪಾರ್ಲಿಮೆಂಟರಿ ಪ್ರಜಾಸತ್ತೆ ಹೊರಗೆ ಕಾಣುವಂತೆ ಅತ್ಯುತ್ತಮವಾದುದಲ್ಲ ಎಂದು ಹೇಳಬೇಕು’ ಎನ್ನುತ್ತಾರೆ; ಅಂಬೇಡ್ಕರ್ ಈ ಪ್ರಶ್ನೆಯನ್ನು ತಾವೇ ಹಾಕಿಕೊಂಡು ಉತ್ತರ ನೀಡುತ್ತಾರೆ.

ಪಾರ್ಲಿಮೆಂಟರಿ ಪ್ರಜಾಸತ್ತೆ ಪ್ರಾರಂಭವಾದದ್ದು ಸಮನಾದ ಮತದಾನದ ಹಕ್ಕಿನ ರೂಪದಲ್ಲಿ ಮತ್ತು ಸಮನಾದ ರಾಜಕೀಯ ಹಕ್ಕುಗಳನ್ನು ಕೊಡುವುದರ ಮೂಲಕ ಈ ಸಮಾನತೆಯ ಹಕ್ಕುಗಳು ಆರ್ಥಿಕ ಹಾಗೂ ಸಾಮಾಜಿಕ ಸಂಬಂಧಗಳಿಗೂ ಸಹ ವಿಸ್ತರಿಸಲ್ಪಟ್ಟವು. ಆದರೆ ತಾತ್ತ್ವಿಕವಾಗಿ ಸಮಾನತೆ ಇದ್ದರೂ ಕಾರ್ಯಾಚರಣೆಯಲ್ಲಿ ಅದು ಜನತೆಗೆ ಸ್ವಾತಂತ್ರ್ಯ ಆಸ್ತಿ ಮತ್ತು ಸುಖದ ಹಕ್ಕನ್ನು ಒದಗಿಸಲು ವಿಫಲವಾಗಿವೆ. ಇದರಿಂದಾಗಿ ಪಾರ್ಲಿಮೆಂಟರಿ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನವಿದೆ. ಇಂತಹ ಪರಿಸ್ಥಿತಿಗೆ ಕಾರಣ ಅಂಬೇಡ್ಕರ್ ರವರ ಪ್ರಕಾರ ತಪ್ಪು ಸಿದ್ಧಾಂತ ಮತ್ತು ಸಂಘಟನೆ.

ಸ್ವಾತಂತ್ರ್ಯದ ಹೆಸರಿನಲ್ಲಿ ಒಪ್ಪಂದದ ಸ್ವಾತಂತ್ರ್ಯತೆಯನ್ನು (Freedom of Contract) ಪವಿತ್ರಗೊಳಿಸಲಾಯಿತು. ಪಾರ್ಲಿಮೆಂಟರಿ ಪ್ರಜಾಸತ್ತೆ ಆರ್ಥಿಕ ಸಮಾನತೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅಸಮಾನರು ವ್ಯವಹಾರ ಮಾಡುವಾಗ ಉಂಟಾಗಬಹುದಾದ ಫಲಗಳನ್ನು ಒಪ್ಪಂದದ ಸ್ವಾತಂತ್ರ್ಯತೆಯ ಹೆಸರಿನಲ್ಲಿ ಪರೀಕ್ಷಿಸಲಿಲ್ಲ. ಅದು ಒಪ್ಪಂದದ ಹೆಸರಿನಲ್ಲಿ ಬಲಹೀನರನ್ನು ಮೋಸಗೊಳಿಸಲು ಬಲವಾದ ಅವಕಾಶ ನೀಡಲಾಯಿತೇ ಎಂಬುದನ್ನು ಗಮನಿಸಲಿಲ್ಲ. ಇದರ ಪರಿಣಾಮವಾಗಿ ಸ್ವಾತಂತ್ರ್ಯದ ಹರಿಕಾರನಾಗಿರುವ ಪಾರ್ಲಿಮೆಂಟರಿ ಪ್ರಜಾಸತ್ತೆಯು ಬಡವರಿಗೆ, ತುಳಿತಕ್ಕೊಳಗಾದವರಿಗೆ ಮತ್ತು ನಿರ್ಗತಿಕರಿಗೆ ಸಂಕಟಗಳನ್ನು ಹೆಚ್ಚಿಸುತ್ತಲೇ ಹೋಯಿತು. ಅಂಬೇಡ್ಕರ್ ರವರ ಪ್ರಕಾರ ‘ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆ ಇಲ್ಲದೆಡೆ ರಾಜಕೀಯ ಪ್ರಜಾಸತ್ತೆ ಸಫಲವಾಗದು’. ಪಾರ್ಲಿಮೆಂಟರಿ ಪ್ರಜಾಸತ್ತೆಯ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಸತ್ತೆಯುಳ್ಳ ಬ್ರಿಟನ್ ಮತ್ತು ಅಮೆರಿಕೆಯಲ್ಲಿ ಸಫಲವಾಯಿತು. ಆದರೆ ಇಟಲಿ ಮತ್ತು ಜರ್ಮನಿಯಲ್ಲಿ ವಿಫಲವಾಯಿತು. ಅವರ ದೃಷ್ಟಿಯಲ್ಲಿ ಸಮಾನತೆಯ ಇನ್ನೊಂದು ಹೆಸರು ಪ್ರಜಾಸತ್ತೆ. ಪಾರ್ಲಿಮೆಂಟರಿ ಪ್ರಜಾಸತ್ತೆ ಸ್ವಾತಂತ್ರ್ಯವನ್ನು ಆಶಿಸುತ್ತದೆ; ಸಮಾನತೆಯನ್ನಲ್ಲ. ಅದು ಸಮಾನತೆಯ ಪ್ರಾಮುಖ್ಯತೆಯನ್ನು ಅರಿಯಲು ವಿಫಲವಾಗಿ ಸ್ವಾತಂತ್ರ್ಯ ಮತ್ತು ಸಮಾನತೆಯ ನಡುವೆ ಹೊಂದಾಣಿಕೆಯನ್ನು ಸಾಧಿಸಲು ಸೋತಿದೆ. ಈ ರೀತಿಯಲ್ಲಿ ಸ್ವಾತಂತ್ರ್ಯವು ಸಮಾನತೆಯನ್ನು ನುಂಗಿ ಪ್ರಜಾಸತ್ತೆಯನ್ನು ಡೋಂಗಿಯನ್ನಾಗಿ ಮಾಡಿದೆ.

ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಕೆಟ್ಟ ಸಿದ್ಧಾಂತಕ್ಕಿಂತಲೂ ಹೆಚ್ಚಾಗಿ ಕೆಟ್ಟ ಸಂಘಟನೆಯೇ ಪ್ರಜಾಸತ್ತೆಯ ವೈಫಲ್ಯಕ್ಕೆ ಕಾರಣವಾಗಿದೆ. ಅವರ ವಿಚಾರ ಈ ರೀತಿಯಿದೆ-

ರಾಜಕೀಯ ಸಮಾಜಗಳೆಲ್ಲವೂ ಆಳುವ ಮತ್ತು ಆಳಿಸಿಕೊಳ್ಳುವ ವರ್ಗಗಳಾಗಿ ವಿಂಗಡಿಸಲ್ಪಟ್ಟಿರುತ್ತವೆ. ಇದು ಒಂದು ಕೆಟ್ಟ ಸ್ಥಿತಿ. ಈ ಪರಿಸ್ಥಿತಿ ಇಲ್ಲಿಯೇ ಮಿತಿಗೊಂಡರೆ ಪರವಾಗಿಲ್ಲ. ಆದರೆ ವಿಂಗಡಣೆ ಎಷ್ಟು ಪ್ರಬಲವಾಗಿದೆಯೆಂದರೆ ಆಳುವವರು ಯಾವಾಗಲೂ ಆಳುವ ವರ್ಗದಿಂದಲೇ ಬಂದಿರುತ್ತಾರೆ. ಆಳಿಸಿಕೊಳ್ಳುವವರು ಎಂದೂ ಆಳುವ ವರ್ಗವಾಗುವುದಿಲ್ಲ. ಇದಕ್ಕೆ ಕಾರಣ, ಜನ ಸರ್ಕಾರವನ್ನು ಆರಿಸಿ ತೃಪ್ತರಾಗಿ ತಮ್ಮ ಪಾಡಿಗೆ ತಾವು ಇದ್ದುಬಿಡುವುದು; ಇದರಿಂದಾಗಿಯೇ ಪಾರ್ಲಿಮೆಂಟರಿ ಪ್ರಜಾಸತ್ತೆಯು ಎಂದೂ ಜನರಿಂದ ಜನರಿಗೆ ಇರುವ ಸರ್ಕಾರವಾಗಿಲ್ಲ. ವಾಸ್ತವವಾಗಿ ಪಾರ್ಲಿಮೆಂಟ್ ಪ್ರಜಾಸತ್ತೆಯ ಸರ್ಕಾರವು ಆನುವಂಶೀಯವಾಗಿ ಆಳಿಸಿಕೊಳ್ಳುವವರ ಮೇಲೆ ಹೇರಿದ ಆಳುವ ವರ್ಗದವರ ಸರ್ಕಾರ. ರಾಜಕೀಯ ಜೀವನದ Vicious ಸಂಘಟನೆಯೇ ಪಾರ್ಲಿಮೆಂಟರಿ ಪ್ರಜಾಸತ್ತೆಯ ದೊಡ್ಡ ವಿಫಲತೆಯಾಗಲು ಕಾರಣವಾಗಿದೆ. ಇದೇ ಕಾರಣದಿಂದಾಗಿ ಪಾರ್ಲಿಮೆಂಟರಿ ಪ್ರಜಾಸತ್ತೆಯು ಸಾಮಾನ್ಯ ಮನುಷ್ಯನಿಗೆ ನೀಡಿದ ಸ್ವಾತಂತ್ರ್ಯ ಆಸ್ತಿ ಮತ್ತು ಸುಖದ ಆಶ್ವಾಸನೆಗಳು ಈಡೇರದಂತಾಗಿವೆ.

ಪಾರ್ಲಿಮೆಂಟರಿ ಪ್ರಜಾಸತ್ತೆಯ ವಿಫಲತೆಗೆ ಕಾರಣ ನೀಡಿದ ಅಂಬೇಡ್ಕರ್, ಅದರ ಸಫಲತೆಗೂ ಸಹ ಕೆಲವು ಅಂಶಗಳನ್ನು ಮುಂದಿಟ್ಟಿದ್ದಾರೆ.

೧. ಸಮಾಜದಲ್ಲಿ ಎದ್ದು ಕಾಣುವ ಅಸಮಾನತೆಗಳಿರಬಾರದು, ಸಂಪೂರ್ಣ ಹೊರೆ ಹೊತ್ತ ಶೋಷಿತರು ಮತ್ತು ಎಲ್ಲಾ ಸವಲತ್ತುಗಳನ್ನು ಹೊಂದಿರುವ ವರ್ಗಗಳಿರಬಾರದು. ಅಂತಹ ಸಮಾಜದಲ್ಲಿ ರಕ್ತಕ್ರಾಂತಿಯ ಬೀಜಗಳಿದ್ದು ಪ್ರಜಾಸತ್ತೆಯು ಅವುಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಈ ಬಗ್ಗೆ ಎಚ್ಚರಿಕೆ ನೀಡುತ್ತಾ, ಅಂಬೇಡ್ಕರ್- ಪ್ರಜಾಸತ್ತೆಯಲ್ಲಿ ಶೋಷಕರು ಮತ್ತು ಶೋಷಿತರು ಸಹ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ನಾವು ಬಹುಮತದ, ನಿರ್ಣಯದ ಪ್ರಕಾರ ಬಹುಮತ ಸರ್ಕಾರವನ್ನು ರಚಿಸುವ ವಿಧಾನವನ್ನು ಅನುಸರಿಸುವುದರಿಂದ, ಸವಲತ್ತುಗಳುಳ್ಳ ಕೆಲವರು ತಮ್ಮ ಸವಲತ್ತುಗಳನ್ನು ತಾವಾಗಿಯೇ ಮನಸಾರೆ ತ್ಯಾಗ ಮಾಡುವುದಿಲ್ಲ. ಹೀಗಾಗಿ ಅವರ ಕೆಳಗಿನ ಜನರ ನಡುವೆ ಅಂತರ ಹೆಚ್ಚುತ್ತಲೇ ಇರುತ್ತದೆ. ಇಂತಹ ಬೆಳವಣಿಗೆಗಳಿಂದ, ಕೆಳಗಿನವರು ಪ್ರಜಾಸತ್ತೆಯನ್ನು ನಾಶಮಾಡಿ. ಬೇರೆ ವ್ಯವಸ್ಥೆಯನ್ನು ಜಾರಿಗೊಳಿಸುವರು.

೨. ಪ್ರಜಾಸತ್ತೆಯು ಯಶಸ್ವಿಯಾಗಲು ಬಹುಪಕ್ಷಗಳ ವ್ಯವಸ್ಥೆ ಇರಬೇಕು. ಪ್ರಜಾತೆ ಆನುವಂಶೀಯ ಮತ್ತು ನಿರಂಕುಶ ಅಧಿಕಾರಿಗಳ ವ್ಯತಿರಿಕ್ತ. ಪಾರ್ಲಿಮೆಂಟಿನಲ್ಲಿ ಸರ್ಕಾರದ ನಿಲುವುಗಳನ್ನು ವಿರೋಧಿಸುವ ಪಕ್ಷವೊಂದು ಇರಲೇಬೇಕು. ವಿರೋಧ ಪಕ್ಷಗಳ ಕ್ರಿಯಾಶೀಲತೆಯ ಬಗ್ಗೆ ಅಂಬೇಡ್ಕರ್ ಬ್ರಿಟನ್, ಕೆನಡಾಗಳ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಮೆಚ್ಚುತ್ತಾರೆ.

೩. ಪ್ರಜಾಸತ್ತೆಯು ಸುಲಲಿತವಾಗಿ ಕೆಲಸ ಮಾಡಲು ಕಾರ್ಯಾಂಗದ ಭಯವಿಲ್ಲದೆ ಸರ್ಕಾರದ ನೀತಿಗಳನ್ನು ಜಾರಿಗೊಳಿಸುವ ಶಾಶ್ವತ ಸಿವಿಲ್ ಸರ್ವಿಸ್ ಇರಬೇಕು.

೪. ಸಂವಿಧಾನಾತ್ಮಕ ಮೌಲ್ಯಗಳ ಪರಂಪರೆ ಸತತವಾಗಿ ಬೆಳೆಯಬೇಕು ಮತ್ತು ಜನರು ಆ ಮೌಲ್ಯಗಳನ್ನು ಕ್ರಮವಾಗಿ ಆಚರಿಸಬೇಕು. ನಾಯಕರ ಬಗ್ಗೆ ಇರುವ ಗೌರವ ಮತ್ತು ವಿಧೇಯತೆ ಭಕ್ತಿಪಂಥದ ಕುರುಡು ವಿಧೇಯತೆಯಂತಾಗಬಾರದು ಎಂದು ಅವರು ಒತ್ತಿ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಅಮೇರಿಕೆಯ ಅಧ್ಯಕ್ಷ ಸ್ಥಾನಕ್ಕೆ ಎರಡನೆಯ ಬಾರಿ ಸ್ಪರ್ಧಿಸಬೇಕೆಂದು ಜನ ಒತ್ತಾಯಿಸಿದಾಗ ಜಾರ್ಜ್ ವಾಷಿಂಗ್‌ಟನ್‌ರು ಹೇಳಿದ ಮಾತನ್ನು ಅಂಬೇಡ್ಕರ್ ಉದ್ಧರಿಸಿದರು – ಪ್ರಿಯ ಜನತೆಯೇ, ನಾವು ಈ ಸಂವಿಧಾನವನ್ನು ರಚಿಸುದುದರ ಉದ್ದೇಶವನ್ನು ಮರೆತಿದ್ದೀರಿ. ನಾವು ಸಂವಿಧಾನವನ್ನು ಆನುಸಂಶೀಯ ಆಳ್ವಿಕೆಯ ಜಾರಿಗೊಳ್ಳದಂತೆ ತಡೆಯಲು ಮತ್ತು ಅನುವಂಶೀಯ ಅಥವಾ ಸರ್ವಾಧಿಕಾರಿಯ ಆಳ್ವಿಕೆ ಬರದಂತೆ ನೋಡಿಕೊಳ್ಳಲು ರಚಿಸಿದ್ದೇವೆ.

೫. ಪ್ರಜಾಸತ್ತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರ ದಬ್ಬಾಳಿಕೆ ಸಲ್ಲದು.

೬. ಹೆರಾಲ್ಡ್ ಲಸ್ಕಿಯವರು ಒತ್ತಿ ಹೇಳುತ್ತಿದ್ದ ಪ್ರಜಾಸತ್ತೆಯ ನೈತಿಕ ಮೌಲ್ಯಗಳ ಅವಶ್ಯಕತೆಯನ್ನು ಅಂಬೇಡ್ಕರ್ ಅನುಮೋದಿಸುತ್ತಾರೆ. ಅಂತಹ ಮೌಲ್ಯಗಳಿಲ್ಲದಿದ್ದರೆ ಪ್ರಜಾಸತ್ತೆ ಛಿದ್ರವಾಗುತ್ತದೆ. ಅಂತಹ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ‘ಸಾರ್ವಜನಿಕ’ ಪ್ರಜ್ಞೆ ಇರಬೇಕು; ಯಾರಿಗಾದರೂ ಅನ್ಯಾಯವಾದರೆ ಅದನ್ನು ಬಗೆಹರಿಸಲು ‘ಸಾರ್ವಜನಿಕ ಪ್ರಜ್ಞೆ’ ಮುಂದಾಗಬೇಕು. ಈ ಸಂದರ್ಭದಲ್ಲಿ (ಭಾರತದ) ಪ್ರತಿಹಳ್ಳಿಗಳಲ್ಲೂ ದಕ್ಷಿಣ ಆಫ್ರಿಕ ಅಸ್ತಿತ್ವದಲ್ಲಿದೆ. ಆದರೂ ಸಹ ಅಸ್ಪೃಶ್ಯೇತರರು ಅಸ್ಪೃಶ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡುದನ್ನು ನಾನು ಕಂಡೇ ಇಲ್ಲ ಎಂದು ಅಂಬೇಡ್ಕರ್ ವಿಷಾದಿಸುತ್ತಾರೆ.

ಭಾರತದ ಪರಿಸ್ಥಿತಿಯಲ್ಲಿ ಪ್ರಜಾಸತ್ತೆಯನ್ನು ಕುರಿತು ಅಂಬೇಡ್ಕರ್ ರವರ ವಿಚಾರ ಗಮನಾರ್ಹ. ೧೯೩೮ರಲ್ಲಿ ಸೊಲ್ಲಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತ ‘ಎಲ್ಲಾ ಸಂದರ್ಭ ಮತ್ತು ಪರಿಸ್ಥಿತಿಯಲ್ಲಿ ಪ್ರಜಾಸತ್ತೆಯೇ ಆದರ್ಶ ಎಂದು ನಂಬುವವನು ನಾನಲ್ಲ. ಈ ದೇಶದಲ್ಲಿರುವ ಪ್ರಜಾಸತ್ತೆ ತನ್ನ ಬೌದ್ಧಿಕತೆಯನ್ನು ಕಳೆದುಕೊಂಡಿದೆ. ಅದು ಏಕೈಕ ಸಂಘಟನೆಗೆ ತನ್ನ ಕೈಕಾಲುಗಳನ್ನು ಕಟ್ಟಿಕೊಂಡಿದೆ. ಈ ಸಂಘಟನೆಯ ಆಲೋಚನೆ ಮತ್ತು ಕ್ರಿಯೆಯ ಬಗ್ಗೆ ತೀರ್ಪು ನೀಡಲು ಅದು ತಯಾರಿಲ್ಲ. ನನ್ನ ಪ್ರಕಾರ ಈ ಪರಿಸ್ಥಿತಿ ಅತ್ಯಂತ ದುಃಖಮಯ ಮತ್ತು ರೋಗಪೂರಿತ. ಇದರಿಂದ ಜನರೆಲ್ಲಾ ಮತ್ತು ಗೊಳಿಸಲ್ಪಟ್ಟಿದ್ದಾರೆ-

ಮಹಾತ್ಮರೆಂದು ಕರೆಯಲ್ಪಡುವವರನ್ನು ಜನ ಕುರಿಗಳಂತೆ ಹಿಂಬಾಲಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮಸೂದೆಯ ಮೂಲಕ ಪಡೆದ (೧೯೩೫)ರ ರಾಜಕೀಯ ಬೆಳವಣಿಗೆಯಿಂದ ನಾವು ಏನೂ ಪ್ರಯೋಜನ ಹೊಂದಲಾರೆವು.

೧೯೪೯ರಲ್ಲಿ ಸಂವಿಧಾನ ಸಭೆಯಲ್ಲಿ ಮಾತನಾಡುತ್ತ ಅಂಬೇಡ್ಕರ್ ಜಾನ್ ಸ್ಟುವರ್ಟ್‌ಮಿಲ್‌ನ-

ಯಾವುದೇ ಮಹಾನ್ ವ್ಯಕ್ತಿಯ ವಾದದ ಬಳಿ ನಮ್ಮ ಸ್ವಾತಂತ್ರ್ಯವನ್ನು ಇಡಬಾರದು. ಅವನಿಗೆ ಸಂಸ್ಥೆಗಳನ್ನು ಬುಡಮೇಲು ಮಾಡಬಲ್ಲ ಯಾವುದೇ ಅಧಿಕಾರವನ್ನು ಕೊಡಬಾರದು ಎಂಬ ಹೇಳಿಕೆಯನ್ನು ಉದ್ಧರಿಸಿದರು.

ಭಾರತದ ಭಕ್ತಿಯ ರಾಜಕೀಯದಲ್ಲೂ ಪ್ರಭಾವ ಹೊಂದಿದೆ. ಇದು ಇನ್ನಾವ ದೇಶದಲ್ಲೂ ಕಾಣಸಿಗುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕ ಪೂಜೆ ಅವನತಿ ಮತ್ತು ಸರ್ವಾಧಿಕಾರಕ್ಕೆ ಶತಃಸಿದ್ಧ ಮಾರ್ಗವೆಂದರು. ಇಲ್ಲಿನ ಸಮಾಜದಲ್ಲಿ ಅರ್ಥಿಕ ಮತ್ತು ಸಾಮಜಿಕ, ಸಮಾನತೆ ಇಲ್ಲವೇ ಇಲ್ಲ. ಕೆಲವರು ಮೇಲು, ಕೆಲವರು ಕೀಳು, ಆರ್ಥಿಕವಾಗಿ ಕೆಲವರ ಸಂಪತ್ತು, ಅನೇಕರ ಬಡತನ ಇಲ್ಲಿನ ವಾಸ್ತವತೆ. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಒಂದೇ ಓಟು ಮತ್ತು ಒಂದೇ ಮೌಲ್ಯ. ಆದರೆ ಇಲ್ಲಿನ ಸಾಮಾಜಿಕ, ಆರ್ಥಿಕ ಜೀವನದಲ್ಲಿ ಒಬ್ಬ ಮನುಷ್ಯನಿಗೆ ಒಂದೇ ಮೌಲ್ಯವನ್ನು ನಿರಾಕರಿಸುತ್ತಾ ಬರಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪ್ರಜಾಸತ್ತೆಯನ್ನು ಆರ್ಥಿಕ, ಸಾಮಾಜಿಕ ಪ್ರಜಾಸತ್ತೆಯನ್ನಾಗಿ ಪರಿವರ್ತಿಸಬೇಕು. ಇಲ್ಲಿದ್ದರೆ ಈ ವೈರುಧ್ಯಗಳಿಂದಾಗಿ, ‘ಈ ಸಭೆಯ ಶ್ರಮವಹಿಸಿ ರಚಿಸಿದ ರಾಜಕೀಯ ಸ್ವಾತಂತ್ರ್ಯವನ್ನು ಅಸಮಾನತೆಗೆ ಗುರಿಯಾದ ಜನ ಸಿಡಿಸುವರು’ ಎಂದು ಎಚ್ಚರಿಸಿದನು.

ಪ್ರಭುತ್ವ (State)

ಅಂಬೇಡ್ಕರ್ ರವರು ಹಾಬ್ಸ್, ಹೆಗಲ್, ಬೋಸ್ಟಾನ್ ಕೋಟ್ ರವರ – ಪ್ರಭುತ್ವ ಸಾಪೇಕ್ಷರಹಿತ (Absolute) ಎಂಬ ವಾದವನ್ನು ಒಪ್ಪುವುದಿಲ್ಲ. ಪ್ರಭುತ್ವ ಪರಿಕೀಯ, ಅಧ್ಯಾತ್ಮಗಳನ್ನು ಹೊಂದಿದೆ. ಭೂಮಿಯ ಮೇಲೆ ಭಗವಂತನ ಅವತಾರವೆಂಬ ವಾದ ಅವರ ಪ್ರಕಾರ ಅಸಂಬದ್ಧ. ಅಂಬೇಡ್ಕರ್ ರವರ ಪ್ರಕಾರ ಪ್ರಭುತ್ವ ಮಾನವೀಯವಾದ ಮತ್ತು ಅವಶ್ಯವಾದ ಸಂಘಟನೆ. ಪ್ರಭುತ್ವವನ್ನು ಕುರಿತು ಅಂಬೇಡ್ಕರ್ ರವರ ವಿಚಾರಗಳು ಪ್ರಮುಖವಾಗಿ ಅಖಿಲ ಭಾರತ ಷೆಡ್ಯೂಲ್ಡ್‌ಕ್ಯಾಸ್ಟ್ ಫೆಡರೇಷನ್ ನ ಪರವಾಗಿ ೧೯೪೭ರಲ್ಲಿ ಸಂವಿಧಾನ ಸಭೆಗೆ ಅರ್ಪಿಸಿದ ಬಿನ್ನವತ್ತಳೆ “States and Minorities” ನಲ್ಲಿ ಅಡಕವಾಗಿದೆ.

ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಪ್ರಭುತ್ವದ ಗುರಿ ಬಹುಮುಖ ಮತ್ತು ಅನೇಕ ರೂಪಗಳನ್ನು ಹೊಂದಿದೆ. ಮೊದಲನೆಯದಾಗಿ, ಪ್ರತಿಯೊಬ್ಬ ವ್ಯಕ್ತಿಯ ಜೀವನ, ಸ್ವಾತಂತ್ರ್ಯ ಸುಖವನ್ನು ಗಳಿಸುವ ಮತ್ತು ವಾಕ್ ಸ್ವಾತಂತ್ರ್ಯ, ಧರ್ಮವನ್ನು ಆಚರಿಸುವ ಹಕ್ಕನ್ನು ರಕ್ಷಿಸುವುದು. ಎರಡನೆಯದಾಗಿ, ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು. ಹಿಂದುಳಿದ ವರ್ಗಗಳಿಗೆ ಉತ್ತಮ ಅವಕಾಶ ನೀಡುವುದು. ಮೂರು, ಕೊರತೆ ಮತ್ತು ಭಯವನ್ನು ಮುಕ್ತಗೊಳಿಸಿ ಸ್ವಾತಂತ್ರ್ಯವನ್ನು ಅನುಭವಿಸಲು ಅವಕಾಶ ಮಾಡಿಕೊಡುವುದು. ನಾಲ್ಕು, ಆಂತರಿಕ ಅಭದ್ರತೆ ಮತ್ತು ಹೊರಗಿನ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು. ೫ ಅವರ ಪ್ರಕಾರ ಆರ್ಥಿಕ, ಸಾಮಾಜಿಕ ಬದಲಾವಣೆಗಳನ್ನು ತರಲು ಸಾಧನ ಪ್ರಭುತ್ವ; ಪ್ರಭುತ್ವ ಸಮಾಜದ ಸೇವೆ ಮಾಡಬೇಕು. ಸರ್ಕಾರದ ಭದ್ರತೆಗೆ ಪ್ರಭುತ್ವಕ್ಕೆ ವಿಧೇಯತೆ ಅವಶ್ಯ. ಅಂಬೇಡ್ಕರ್ ರವರ ದೃಷ್ಟಿಯಲ್ಲಿ- ‘ಅವಿಧೇಯತೆಯಲ್ಲಿನ ನಂಬಿಕೆ, ಅರಾಜಕತಾವಾದದಲ್ಲಿನ ನಂಬಿಕೆ’ ಪ್ರಭುತ್ವ ಜನ ವಿರುದ್ಧ ದಬ್ಬಾಳಿಕೆ ನಡೆಸಿದರೆ ಜನತೆ ತಲೆಬಾಗದೆ ಸಂವಿಧಾನತ್ಮಕವಾಗಿ ಅವರ ವಿರುದ್ಧ ಹೋರಾಡಬೇಕೆಂದು ಅವರು ಕರೆ ನೀಡುತ್ತಾರೆ.

ಅಂಬೇಡ್ಕರ್ ರವರ ಪ್ರಕಾರ ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಭುತ್ವದ ಅಧಿಕಾರ ಅತ್ಯುತ್ತಮವಾಗಿ ರಕ್ಷಿಸಬಲ್ಲದು. ಪ್ರಭುತ್ವ ಅತಿಯಾದ ಮಧ್ಯಪ್ರವೇಶದಿಂದ ಜನತೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಿಲ್ಲವೇ ಎನ್ನುವುದಕ್ಕೆ ಅಂಬೇಡ್ಕರ್ ರವರ ಉತ್ತರ ಹೀಗಿದೆ:

ಸಂಪೂರ್ಣ ಸ್ವಾತಂತ್ರ್ಯ ಯಾವುದೇ ಸಮಾಜದಲ್ಲಿ ಸಾಧ್ಯವಿಲ್ಲ. ಪ್ರಭುತ್ವವಿರುವುದು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ವೃದ್ಧಿಗೊಳಿಸಲು. ಹೀಗಾಗಿ ಪ್ರಭುತ್ವದ ಅಧಿಕಾರ ಮತ್ತು ವ್ಯಕ್ತಿಯ ಸ್ವಾತಂತ್ರ್ಯದ ನಡುವೆ ಸಮತೋಲನ ಏರ್ಪಡಬೇಕು. ಪ್ರಭುತ್ವದ ಅಸ್ತಿತ್ವದೌರ್ಜನ್ಯ, ದಬ್ಬಾಳಿಕೆ ಮತ್ತು ಅನ್ಯಾಯವನ್ನು ತಡೆಯಲು, ಬಲಹೀನರ ಸೇವೆ ಮಾಡಲು. ಹಕ್ಕುಗಳನ್ನು ಸಾಮಾಜಿಕ ಮತ್ತು ನೈತಿಕ ಪ್ರಜ್ಷೆ ರಕ್ಷಿಸಬೇಕು. ಕಾನೂನಿನಿಂದಲ್ಲ. ಕಾನೂನಿನ ಮೂಲಕ ಜಾರಿಗೆ ತರುವ ಹಕ್ಕಗಳನ್ನು ಸಮಾಜ ಮನ್ನಿಸಿದರೆ ಹಕ್ಕುಗಳು ಉಳಿಯುತ್ತವೆ, ಮೂಲಭೂತ ಹಕ್ಕುಗಳನ್ನು ಸಮಾಜ ವಿರೋಧಿಸಿದರೆ ಯಾವುದೇ ಪಾರ್ಲಿಮೆಂಟ್, ಯಾವುದೇ ನ್ಯಾಯಾಂಗವು ಹಕ್ಕುಗಳನ್ನು ನಿಜವಾದ ಅರ್ಥದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ.

ಪ್ರಭುತ್ವ ಸಮಾಜವಾದ (State Socialism)

ಅಂಬೇಡ್ಕರ್ ಅತಿ ‘ಪುರೋಹಿಗಾಮಿ’ ವಿಚಾರಗಳು ಅವರ ‘ಪ್ರಭುತ್ವ ಸಮಾಜವಾದ’ದ ಪ್ರತಿಪಾದನೆಯಲ್ಲಿ ವ್ಯಕ್ತವಾಗಿದೆ. ಭಾರತದ ಕೈಗಾರಿಕೀಕರಣವು ಎಲ್ಲಾ ವ್ಯವಸಾಯ ಸಮಸ್ಯೆಗಳಿಗೆ ಮದ್ದು ಮತ್ತು ಅಸ್ಪೃಶ್ಯರ ಉದ್ಧಾರಕ್ಕೂ ಏಕೈಕ ಮಾರ್ಗವೆಂದು ಅವರು ನಂಬಿದ್ದರು. ಈ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ೧೯೧೮ರಲ್ಲಿಯೇ ತಮ್ಮ “Small holdings in India and their Remedies” ಎಂಬ ಪ್ರಬಂಧದಲ್ಲಿ ಪ್ರಸ್ತಾಪಿಸಿದ್ದರು. ಭಾರತದ ಕೈಗಾರಿಕೀರಣವನ್ನು ಖಾಸಗಿ ಬಂಡವಾಳಗಾರರು ಮಾಡಲಾರರು. ಪ್ರಭುತ್ವವೇ ಅದನ್ನು ಮಾಡಬೇಕೆಂದು ಅಂಬೇಡ್ಕರ್ ಆಶಿಸುತ್ತಾರೆ. ಕೈಗಾರಿಕೆ ಮತ್ತು ವ್ಯವಸಾಯವನ್ನು ಪ್ರಭುತ್ವ ಹತೋಟಿಗೆ ತೆಗೆದುಕೊಂಡು ಸಮಾಜವಾದವನ್ನು ಸ್ಥಾಪಿಸಬೇಕೆಂದು ಅವರು ಪ್ರತಿಪಾದಿಸುತ್ತಾರೆ. ೧೯೪೭ರಲ್ಲಿ ಸಂವಿಧಾನ ಸಭೆಗೆ ಅರ್ಪಿಸಿದ ಮನವಿ “State and minorities”ನ Article II clause IVರಲ್ಲಿ ಅವರು ಕೆಳಗಿನ ತಮ್ಮ ಯೋಜನೆಯನ್ನು ಮುಂದಿಟ್ಟಿದ್ದಾರೆ.

ಭಾರತ ಸಂಯುಕ್ತ ಸಂಸ್ಥಾನವು ರಾಜ್ಯಾಂಗದ ಕಾನೂನಿನ ಭಾಗವಾಗಿ ಈ ರೀತಿ ಘೋಷಿಸಬೇಕು.

೧. ಪ್ರಮುಖ ಕೈಗಾರಿಕೆಗಳು ಮತ್ತು ಪ್ರಮುಖ ಕೈಗಾರಿಕೆಗಳೆಂದು ಘೋಷಿಸಲ್ಪಡುವವು, ಪ್ರಭುತ್ವದ ಮಾಲೀಕತ್ವ ಮತ್ತು ನಿರ್ವಹಣೆಗೆ ಒಳಪಡಬೇಕು.

೨. ಪ್ರಮುಖ ಕೈಗಾರಿಕೆಗಳಲ್ಲದವು, ಆದರೆ ಮೂಲಭೂತ ಕೈಗಾರಿಕೆಗಳು ಸರ್ಕಾರದ ಮಾಲೀಕತ್ವದಲ್ಲಿದ್ದು, ಅವುಗಳು ಸರ್ಕಾರ ಅಥವಾ ಸರ್ಕಾರದಿಂದ ನೇಮಕವಾದ ಕಾರ್ಪೋರೇಷನ್‌ಗಳಿಂದ ನಡೆಸಬೇಕು.

೩. ವ್ಯವಸಾಯವು ಪ್ರಭುತ್ವದ ಕೈಗಾರಿಕೆಯಾಗಬೇಕು. ಕೈಗಾರಿಕೆ ಅಥವಾ ಜಮೀನಿನ ಮಾಲೀಕನಿಗೆ ಅವುಗಳ ಮೌಲ್ಯಕ್ಕೆ ತಕ್ಕಂತೆ ಪರಿಹಾರವನ್ನು ಡಿಬೆಂಚರ್ ಮೂಲಕ ನೀಡಬೇಕು.

೪. ವ್ಯವಸಾಯದ ಕೈಗಾರಿಕೆಯನ್ನು ಕೆಳಕಂಡಂತೆ ಸಂಘಟಿಸಬೇಕು.

(i) ವಶಕ್ಕೆ ತೆಗೆದುಕೊಂಡ ಜಮೀನನ್ನು ಸರ್ಕಾರವು ನಿರ್ದಿಷ್ಟ ಗಾತ್ರದಲ್ಲಿ ವಿಂಗಡಿಸಬೇಕು. ಆ ಫಾರಂಗಳನ್ನು ಹಳ್ಳಿಯ ನಿವಾಸಿಗಳಿಗೆ ಗೇಣಿಯ ರೂಪದಲ್ಲಿ (ಕುಟುಂಬಗಳ ಗುಂಪುಗಳಿಗೆ) ಬೆಳೆ ತೆಗೆಯಲು ಕೆಳಕಂಡ ಷರತ್ತುಗಳ ಮೇಲೆ ನೀಡಬೇಕು.

(a) ಫಾರಂ ಅನ್ನು ಸಾಮೂಹಿಕ ಫಾರಂ ಆಗಿ ಕೃಷಿಗೊಳಿಸಬೇಕು.

(b) ಫಾರಂ ಕೃಷಿಯನ್ನು ಸರ್ಕಾರದ ಕಾನೂನು ಮತ್ತು ನಿರ್ದೇಶನದಂತೆ ಮಾಡಬೇಕು.

(c) ಫಾರಂಗೆ ನಿರ್ದಿಷ್ಟಗೊಳಿಸಿದ ಉತ್ಪನ್ನದ ಭಾಗವನ್ನು ನೀಡಿ; ಉಳಿದ ಭಾಗವನ್ನು ಗೇಣಿದಾರರು, ತಮ್ಮಲ್ಲೇ ಹಂಚಿಕೊಳ್ಳಬೇಕು.

(ii) ಜಾತಿ ಮತ ಭೇದವಿಲ್ಲದೆ ಜಮೀನನ್ನು ಗೇಣಿಗೆ ನೀಡಬೇಕು. ಇದರ ಪರಿಣಾಮವಾಗಿ ಭೂಮಾಲೀಕರಾಗಲೀ, ಗೇಣಿದಾರಾಗಲೀ ಅಥವಾ ಭೂರಹಿತ ಕೃಷಿ ಕಾರ್ಮಿಕರಾಗಲೀ ಇರಕೂಡದು.

೫. ಈ ಯೋಜನೆಯನ್ನು ರಾಜ್ಯಾಂಗವು ಜಾರಿಗೆ ಬಂದ ಹತ್ತು ವರ್ಷದೊಳಗಾಗಿ ಕಾರ್ಯಗತಗೊಳಿಸಬೇಕು.

ಈ ಯೋಜನೆಯನ್ನು ಉದ್ದೇಶ, ವ್ಯವಸಾಯದಲ್ಲಿ ಪ್ರಭುತ್ವ ಮಾಲೀಕತ್ವ ಮತ್ತು ಸಾಮೂಹಿಕ ಉತ್ಪಾದನೆ, ಜೊತೆಗೆ ಕೈಗಾರಿಕಾ ರಂಗದಲ್ಲಿ ಮಾರ್ಪಟ್ಟ ಪ್ರಭುತ್ವ ಸಮಾಜವಾದ. ಬಂಡವಾಳವನ್ನು ಎರಡು ರಂಗಗಳಲ್ಲೂ ಪ್ರಭುತ್ವವೇ ಹೂಡಬೇಕು. ಸಲಕರಣೆಗಳನ್ನು ಪ್ರಭುತ್ವವೇ ಒದಗಿಸಬೇಕು. ಅಸ್ಪೃಶ್ಯರಿಗೆ ಗೇಣಿಶಾಸನದಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಅಸ್ಪೃಶ್ಯರಲ್ಲಿ ೬೦ ಮಿಲಿಯನ್ ಭೂರಹಿತ ಕೃಷಿ ಕಾರ್ಮಿಕರಿದ್ದಾರೆ. ಮೇಲೆ ಹೇಳಿದಂತೆ ಸಾಮಾಜಿಕ ಕೃಷಿಯೇ ಅವರ ಸಮಸ್ಯೆಯನ್ನು ಬಗೆಹರಿಸಬಲ್ಲದು.

ಅಂಬೇಡ್ಕರ್ ರವರ ಪ್ರಕಾರ, ಈ ಯೋಜನೆಯಲ್ಲಿ ಎರಡು ವಿಶೇಷ ಅಂಶಗಳಿವೆ. ಒಂದು ಮುಖ್ಯ ಆರ್ಥಿಕ ರಂಗದಲ್ಲಿ ಪ್ರಭುತ್ವ ಸಮಾಜವಾದ, ಎರಡು, ಪ್ರಭುತ್ವ ಸಮಾಜವಾದದ ಸ್ಥಾಪನೆಯನ್ನು ಶಾಸಕಾಂಗದ ಮರ್ಜಿಗೆ ಬಿಡದಿರುವುದು. ಅದನ್ನು ರಾಜ್ಯಾಂಗದ ಕಾನೂನಿನ ಭಾಗವನ್ನಾಗಿ ಮಾಡಿ, ಶಾಸಕಾಂಗವಾಗಲೀ, ಕಾರ್ಯಾಂಗವಾಗಲೀ, ಅದನ್ನು ಬದಲಾಯಿಸುವಂತೆ ಮಾಡುವುದು. ಈ ಯೋಜನೆಯ ಇನ್ನೊಂದು ಮುಖ; ಪಾರ್ಲಿಮೆಂಟರಿ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವುದು. ಪ್ರಭುತ್ವ ಸಮಾಜವಾದವನ್ನು ಸರ್ವಾಧಿಕಾರ ಸಹ ಸ್ಥಾಪಿಸಬಲ್ಲದು. ಆದರೆ ಮುಖ್ಯ ಉದ್ದೇಶ ಪಾರ್ಲಿಮೆಂಟರಿ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವುದು ಮತ್ತು ರಾಜ್ಯಾಂಗದ ಮೂಲಕ ಸ್ಥಾಪನೆ ಮಾಡುವುದು. ಇದನ್ನು ಪಾರ್ಲಿಮೆಂಟರಿ ಶಾಸಕಾಂಗದ ನಿಲುಕಿಗೆ ಸಿಗದಂತೆ ಮಾಡಿದಾಗ ಮಾತ್ರ ಅಂಬೇಡ್ಕರ್ ರವರ ಪ್ರಕಾರ ಮೂರು ಉದ್ದೇಶಗಳನ್ನು ಸಾಧಿಸಬಹುದು. ಅವುಗಳೆಂದರೆ : ಸಮಾಜವಾದದ ಸ್ಥಾಪನೆ, ಪಾರ್ಲಿಮೆಂಟರಿ ಪ್ರಜಾಸತ್ತೆಯ ರಕ್ಷಣೆ ಮತ್ತು ಸರ್ವಾಧಿಕಾರವನ್ನು ತಪ್ಪಿಸುವುದು.

ಕಮ್ಯೂನಿಸಂ

ಅಂಬೇಡ್ಕರ್ ಜೀವನದುದ್ದಕ್ಕೂ ಸಹ ಕಮ್ಯೂನಿಸಂನ ವಿರೋಧಿಯಾಗಿದ್ದರು. ಆದರೆ ಈ ಬಗ್ಗೆ ಅವರಲ್ಲಿ ಸ್ವಲ್ಪ ತಾಕಲಾಟವಿತ್ತು. ೧೯೩೭ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಖೋತಿ ವತನ್ ಮಸೂದೆಯ ಹಿನ್ನೆಲೆಯಲ್ಲಿ, ಅಂಬೇಡ್ಕರ್ ರವರು.

ಕಮ್ಯೂನಿಷ್ಟರಿಂದ ನಡೆಸಲ್ಲಡುತ್ತಿರುವ ಶ್ರಮಜೀವಿ ಆಂದೋಲನಕ್ಕೆ ತಾವು ಸೇರುವ ಸಾಧ್ಯತೆಯಿಲ್ಲವೆಂದರು. ತಮ್ಮ ರಾಜಕೀಯ ಗುರಿಗಳ ಸಾಧನೆಗಾಗಿ ಶ್ರಮಜೀವಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಮ್ಯೂನಿಷ್ಟರ ಪರಮ ಶತ್ರು ತಾವು ಎಂದು ಸಾರಿದರು.

ಆದರೆ ೧೯೩೮ರಲ್ಲಿ ಬೊಂಬಾಯಿ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಗಿದ್ದ ‘ಕೈಗಾರಿಕಾ ಮಸೂದೆ’ಯ ವಿರುದ್ಧ ನಡೆದ ಯಶಸ್ವಿ ಮುಷ್ಕರದಲ್ಲಿ ಅಂಬೇಡ್ಕರ್ ತಮ್ಮ ಬೆಂಬಲಿಗರೊಡನೆ ಕಮ್ಯೂನಿಷ್ಟರ ಜೊತೆ ಸೇರಿದರು. ಇದು ಅಂಬೇಡ್ಕರ್ ಕಮ್ಯೂನಿಸ್ಟರೊಡನೆ ಮಾಡಿದ ಮೊದಲನೆಯ ಮತ್ತು ಕೊನೆಯ ಸಹಕಾರ.

ಸಾಮಾಜಿಕ ಸುಧಾರಣೆಗಳಿಗೆ ಒತ್ತುಕೊಡುತ್ತಿದ್ದ ಅಂಬೇಡ್ಕರ್ ಒಮ್ಮೆ ಸಮಾಜವಾದಿಗಳಿಗೆ ಸವಾಲನ್ನೆಸೆದಿದ್ದರು. ‘ಸಮಾಜವಾದಿಗಳು, ಸಮಾಜವಾದವನ್ನು ನಿರ್ದಿಷ್ಟ ವಾಸ್ತವತೆಯನ್ನಾಗಿ ಮಾಡಬೇಕೆಂದರೆ, ಅವರು ಸಾಮಾಜಿಕ ಸುಧಾರಣೆಯ ಸಮಸ್ಯೆಯು ಮೂಲಭೂತವೆಂದು ಒಪ್ಪಬೇಕು. ಇದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ೧೦ ಅವರು ಆರ್ಥಿಕ ಸುಧಾರಣೆಗಳು ಆಗುವ ಮುಂಚೆ ಸಾಮಾಜಿಕ ಸುಧಾರಣೆಗಳು ಆಗಬೇಕೆಂದು ಒತ್ತಾಯಿಸುತ್ತಿದ್ದರು. ೧೯೫೩ರಲ್ಲಿ ಬೌದ್ಧಮತಕ್ಕೆ ಮತಾಂತರ ಹೊಂದುವ ಮುಂಚೆ ಸಂದರ್ಶನವೊಂದರಲ್ಲಿ-

ಸಾಮಾಜಿಕ ರಚನೆಯ ಬದಲಾಯಿಸಲ್ಪಡದಿದ್ದರೆ ಶೀಘ್ರದಲ್ಲಿ ಸದ್ಯದ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆಯಿದೆ. ಪ್ರಜಾಪ್ರಭುತ್ವವು ಭಾರತದಲ್ಲಿ ಯಶಸ್ವಿಯಾಗದಿದ್ದರೆ, ಅದಕ್ಕೆ ಬದಲು ಸಮಂಜಸವಾದದ್ದು, ಕಮ್ಯೂನಿಸಂನ ಯಾವುದಾದರೂ ಒಂದು ರೂಪ೧೧ ಎಂದು ನುಡಿದರು.

ಇಲ್ಲಿ ಅಂಬೇಡ್ಕರ್ ರವರ ಕಮ್ಯೂನಿಸಂ ವಿರೋಧ ತಾಕಲಾಟದಿಂದ ಕೂಡಿದೆ ಎಂಬುದು ಸ್ಪಷ್ಟ.

ಅಂಬೇಡ್ಕರ್ ತಮ್ಮ ಜೀವನದ ಅಂತಿಮ ಘಟ್ಟದಲ್ಲಿ ಮಾರ್ಕ್ಸ್‌ವಾದ ಮತ್ತು ಬೌದ್ಧಧರ್ಮವನ್ನು ಸಮತೋಲನ ಮಾಡಲು ಪ್ರಯತ್ನಿಸಿದ್ದರು. ೧೯೫೩ರಲ್ಲಿ ಮಾತನಾಡುತ್ತಾ ‘ಸದ್ಯದ ಪೀಳಿಗೆಯವರು ಅಥವಾ ಮುಂದಿನ ಪೀಳಿಗೆಯವರು ಅಂತ್ಯದಲ್ಲಿ ಬುದ್ಧನ ತತ್ವ ಅಥವಾ ಮಾರ್ಕ್ಸ್‌ನ ತತ್ವಗಳಲ್ಲಿ ಒಂದನ್ನಾರಿಸಬೇಕೆಂಬ ನಿರ್ಧಾರಕ್ಕೆ ತಾವು ಬಂದಿದ್ದೇನೆಂದರು. ೧೨ ಒಮ್ಮೆ ಬುದ್ಧನ ತತ್ವಗಳಲ್ಲಿ ಅವರು ಮಾರ್ಕ್ಸ್‌ನನ್ನು ಕಾಣುತ್ತಾರೆ- ಬುದ್ಧನ ಪ್ರಕಾರ ಪ್ರಪಂಚದಲ್ಲಿ ದುಃಖವಿದೆ. ಅವನು ಶೋಷಣೆಯೆಂಬ ಪದವನ್ನು ಉಪಯೋಗಿಸಲಿಲ್ಲ. ಆದರೆ ದುಃಖದ ಆಧಾರದ ಮೇಲೆ ತನ್ನ ಧರ್ಮದ ತಳಹದಿಯನ್ನು ನಿರ್ಮಿಸಿದನು. ದುಃಖ ಎಂಬ ಪದವನ್ನು ‘ಆಸ್ತಿ’ ಎಂಬ ಅರ್ಥದಲ್ಲಿ ಬುದ್ಧ ಉಪಯೋಗಿಸಿದ್ದಾನೆ. ಮಾರ್ಕ್ಸ್ ಶೋಷಣೆಯನ್ನು ಕೊನೆಗೊಳಿಸಲು ಪ್ರಭುತ್ವ ಉತ್ಪಾದನಾ ಸಂಬಂಧಗಳನ್ನು ಹೊಂದಿರಬೇಕೆಂದನು. ಬುದ್ಧ ಯಾವುದೇ ಭಿಕ್ಷುವು ಆಸ್ತಿಯನ್ನು ಹೊಂದಿರಬಾರದೆಂದನು. ೧೩ ಭಾರತದ ವಿದೇಶಾಂಗ ನೀತಿಯ ಬಗ್ಗೆ ಅಂಬೇಡ್ಕರ್ ರವರು ಹೊಂದಿದ್ದ ಅಭಿಪ್ರಾಯಗಳು ಅವರ ಕಮ್ಯೂನಿಸಂ ವಿರೋಧದ ಪರಾಕಾಷ್ಠೆಯನ್ನು ಸಾರುತ್ತದೆ. ಅಂದಿನ ಪ್ರಧಾನಿ ನೆಹರೂರವರ ಪ್ರಕಾರ ಭಾರತದ ವಿದೇಶಾಂಗ ನೀತಿಯ ಆಧಾರ-ಶಾಂತಿ, ಅಲಿಪ್ತತೆ, ವರ್ಣವಿಭೇದ ನೀತಿಯ ವಿರೋಧ, ಶೋಷಿತ ಜನತೆಯ ವಿಮೋಚನೆ, ಸ್ವಾತಂತ್ರ್ಯದ ರಕ್ಷಣೆ, ಪಂಚಶೀಲ ಎಂದರು. ೧೪

ಅಂಬೇಡ್ಕರ್ ರವರ ಪ್ರಕಾರ ನೆಹರೂ ಸರ್ಕಾರದ ವಿದೇಶಾಂಗ ನೀತಿಯ ಆಧಾರ-ಶಾಂತಿ, ಕಮ್ಯೂನಿಸಂ ಮತ್ತು ಪ್ರಜಾಸತ್ತೆಯ ನಡುವೆ ಸಹಬಾಳ್ವೆ ಮತ್ತು ಸೀಟೋ (South east Asian treaty Organization)ಗೆ ವಿರೋಧ. ಅವರ ದೃಷ್ಟಿಯಲ್ಲಿ ಅಂತಾರಾಷ್ಟ್ರೀಯ ಸಮಸ್ಯೆಗಳಲ್ಲಿ ಸ್ವತಂತ್ರ ರಾಷ್ಟ್ರಗಳ ಮುಖ್ಯ ಸಮಸ್ಯೆ, ಕಮ್ಯೂನಿಸಂ ಅನ್ನು ತಡೆಗಟ್ಟುವುದು. ಈ ಸಂದರ್ಭದಲ್ಲಿ ಒಮ್ಮೆ – ‘ನಿಮಗೆ ಪಾರ್ಲಿಮೆಂಟರಿ ಸರ್ಕಾರ ಬೇಕಾದರೆ, ಪಾರ್ಲಿಮೆಂಟರಿ ವ್ಯವಸ್ಥೆಯ ವಿರುದ್ಧದ ದಾಳಿಯನ್ನು ಎದುರಿಸುತ್ತಿರುವವರ ಜೊತೆ ಸ್ನೇಹದಿಂದಿರಬೇಕು. ೧೫

ಅಮೆರಿಕಾದಲ್ಲಿ ಮೆಕಾರ್ಥಿಯಿಸಂ (Mecarthyism) ಪ್ರಬಲವಾಗಿದ್ದ ಕಾಲವದು. ಈ ರೀತಿಯಲ್ಲಿ ಅಂಬೇಡ್ಕರ್ ರವರ ನೀತಿ ಅಂತಾರಾಷ್ಟ್ರೀಯ, ಬ್ರಿಟನ್, ಅಮೆರಿಕಾಗಳನ್ನು ಹಂಬಲಿಸುವುದಾಗಿತ್ತು. ಮೇಲೆ ಗಮನಿಸಿದ ಅಂಬೇಡ್ಕರ್ ರವರ ಪರಿಕಲ್ಪನೆಗಳನ್ನು ಒಟ್ಟಾಗಿ ನೋಡಿದಾಗ ಕೆಲವು ಅಂಶಗಳು ಕಂಡು ಬರುತ್ತವೆ. ಅಂಬೇಡ್ಕರ್ ರವರು ಪಾರ್ಲಿಮೆಂಟರಿ ಪ್ರಜಾಸತ್ತೆಯು ಅತ್ಯುತ್ತಮವಾದ ವ್ಯವಸ್ಥೆಯೆಂದು ನಂಬುತ್ತಾರೆ. ಅವರ ಪ್ರಕಾರ ಪ್ರಜಾಸತ್ತೆ ಸಫಲವಾಗಲು ಸಮಾನತೆ ಅತ್ಯವಶ್ಯ. ರಾಜಕೀಯ ಪ್ರಜಾಸತ್ತೆ, ಸಾಮಾಜಿಕ, ಆರ್ಥಿಕ ಪ್ರಜಾಸತ್ತೆಯಾಗಬೇಕು. ಹಾಗಾಗದಿದ್ದರೆ ಅದರ ವಿನಾಶ ನಿಶ್ಚಿತ. ಪಾರ್ಲಿಮೆಂಟರಿ ಪ್ರಜಾಸತ್ತೆಯನ್ನು ಎತ್ತಿ ಹಿಡಿಯುವ ಪಾಶ್ವಿಮಾತ್ಯ ಉದಾರವಾದಿಗಳಲ್ಲಿ ಅನೇಕರು ಅಂಬೇಡ್ಕರ್ ರವರಂತೆಯೇ ಎಚ್ಚರಿಕೆಗಳನ್ನು ನೀಡಿದ್ದಾರೆ. ಅಮೆರಿಕೆಯ ಜಾನ್ ಡೀವೇ ಮತ್ತು ಅಂಬೇಡ್ಕರ್ ರವರ ವಿಚಾರಗಳು ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಸಾಮ್ಯ ಹೊಂದಿವೆ. ಜಾನ್‌ಡೀವೇ ‘Neture of Democracy’ ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾನೆ.

ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಜಾಸತ್ತೆಯ ಮೂಲಗಳನ್ನು ಪ್ರಶ್ನಿಸಲಾಗುತ್ತಿದೆ. ಕೆಲವು ದೇಶಗಳಲ್ಲಿ ಅದನ್ನು ನಿಷ್ಠುರವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ ನಾಶ ಮಾಡಲಾಗಿದೆ. ಪ್ರಜಾಸತ್ತೆ ಸುವ್ಯವಸ್ಥೆ ಮತ್ತು ಬದ್ಧತೆಯನ್ನು ಒದಗಿಸಬಲ್ಲುದೇ ಎಂಬ ಟೀಕೆ ಮತ್ತು ಸಂಶಯಗಳನ್ನು ಎಲ್ಲೆಡೆಯಲ್ಲೂ ಎತ್ತಲಾಗುತ್ತಿದೆ. ರಾಜಕೀಯ ಪ್ರಜಾಸತ್ತೆ ನಾಶವಾಗಿರುವ ದೇಶಗಳಲ್ಲಿ ಕಾರಣ ಬಹಳ ಸಂಕೀರ್ಣ. ಒಂದು ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಪ್ರಜಾಸತ್ತೆ ಸ್ಥಾಪಿತವಾದೆಡೆಯೆಲ್ಲಾ ಅದು ವಿಶೇಷವಾಗಿ ರಾಜಕೀಯ ರೂಪದಲ್ಲಿ ಜಾರಿಗೆ ಬಂದಿದೆ. ಅದು ಜನತೆಯ ನಿತ್ಯಜೀವನದಲ್ಲಿ ರಕ್ತಮಾಂಸದಂತಹ ಭಾಗವಾಗಿಲ್ಲ. ಪ್ರಜಾಸತ್ತೆಯ ರೂಪಗಳು ಕೇವಲ ಪಾರ್ಲಿಮೆಂಟ್, ಚುನಾವಣೆ ಮತ್ತು ಪಕ್ಷಗಳ ನಡುವಿನ ತಿಕ್ಕಾಟಕ್ಕೆ ಮಾತ್ರ ಸೀಮಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದು ನಿರ್ಣಯಕ್ಕೆ ಬರಬಹುದು. ಪ್ರಜಾಸತ್ತಾತ್ಮಕ ಮೌಲ್ಯಗಳು ಜನತೆಯ ಆಲೋಚನೆ ಮತ್ತು ಕ್ರಿಯೆಯ ಭಾಗವಾಗದಿದ್ದರೆ ರಾಜಕೀಯ ಪ್ರಜಾಸತ್ತೆ ಅಭದ್ರ. ಎಲ್ಲಾ ಸಾಮಾಜಿಕ ಸಂದರ್ಭಗಳಲ್ಲಿನ ಪ್ರಜಾಸತ್ತೆಯಿಂದ ರಾಜಕೀಯ ಪ್ರಜಾಸತ್ತೆ ಬೆಂಬಲಿತವಾಗಬೇಕು. ಇದು ಬೇರೆಯಾಗಿರಲು ಸಾಧ್ಯವಿಲ್ಲ.

ಬ್ರಿಟಿಷ್ ಉದಾರವಾದಿಗಳಾದ ಟಿ. ಎಚ್. ಗ್ರೀನ್, ಹಾಬ್‌ಹೌಸ್, ಪಿ. ಸಿ. ಸ್ಕಾಟ್ ಇವರೂ ಸಹ ಸಾಮಾಜಿಕ ಸಮಾನತೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು. ಇವರಲ್ಲಿ ರಾಮ್‌ಸೇ. ಮೆಕ್ ಡನಾಲ್ಡ್ ಎಂಬುವನು ‘ಉದಾರವಾದವು ಗಳಿಸಿದ ರಾಜಕೀಯ ಪ್ರಜಾಸತ್ತೆಯನ್ನು ಸಾಮಾಜಿಕ ಪ್ರಜಾಸತ್ತೆಯನ್ನಾಗಿ ಪರಿವರ್ತಿಸಬೇಕು’ ಎಂದು ನೇರವಾಗಿ ಹೇಳಿದ್ದ. ಅಂಬೇಡ್ಕರ್ ರವರ ಪ್ರಕಾರ ಪ್ರಜಾಸತ್ತೆ ಅಮೆರಿಕಾ, ಬ್ರಿಟನ್ ಗಳಲ್ಲಿ ಸಫಲವಾಯಿತು. ಆದರೆ ಜರ್ಮನಿ ಇಟಲಿಯಲ್ಲಿ ವಿಫಲವಾಯಿತು. ಅಂಬೇಡ್ಕರ್ ರವರ ವಿಚಾರದ ಪ್ರಕಾರ ಭಾರತದಲ್ಲೂ ಪ್ರಜಾಸತ್ತೆ ಎಂದೂ ಸಫಲವಾಗಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ನಾವು ಬರಬಹುದು. ಇದಕ್ಕೆ ಕಾರಣ ಈ ದೇಶದ ವ್ಯವಸ್ಥೆಯ ತಳಹದಿ ಅಸಮಾನತೆ ಆಗಿರುವುದು.

ಸಮಾನತೆಯ ಆಶಯ ಅಂಬೇಡ್ಕರ್ ರವರ ಎಲ್ಲಾ ವಿಚಾರಗಳಲ್ಲೂ ಕಂಡು ಬರುತ್ತದೆ. ಆದರೆ ಅದನ್ನು ಈ ವ್ಯವಸ್ಥೆಯೊಳಗೇ ಪ್ರಭುತ್ವದ ಮೂಲಕ ಸಾಧಿಸಬಹುದೆಂದು ಅವರು ನಂಬುತ್ತಾರೆ. ಅಂಬೇಡ್ಕರ್ ರವರು ಪ್ರಭುತ್ವದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ನಿರೀಕ್ಷಿಸಿದ್ದನ್ನು ನೋಡಿದರೆ ಇತರ ಎಲ್ಲಾ ಉದಾರವಾದಿಗಳಂತೆಯೇ ಅವರೂ ಸಹ- ‘ಸಮಾಜ ಅಥವಾ ಜನಾಂಗ ಬೇರೆ, ಪ್ರಭುತ್ವ ಬೇರೆ’೧೬ ಎಂದು ನಂಬಿರುವುದು ಸ್ಪಷ್ಟ. ಉದಾರವಾದದ ಪ್ರಮುಖ ಸಿದ್ಧಾಂತಿ ಜಾನ್ ಸ್ಟುವರ್ಟ್‌ಮಿಲ್ ೧೮೨೦ರಲ್ಲಿ ತನ್ನ Essay on Government ಎಂಬ ಲೇಖನದಲ್ಲಿ

ಅತಿ ಹೆಚ್ಚಿನ ಜನರಿಗೆ ಅತಿ ಹೆಚ್ಚಿನ ಸುಖವನ್ನು ದೊರಕಿಸುವುದೇ ಸರ್ಕಾರದ ಗುರಿ. ಈ ಗುರಿ ಸಾಧಿಸಲು ಹೆಚ್ಚಿನ ಸಂಖ್ಯೆಯ ಜನರು ಸೇರಿ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಿ ತಮ್ಮನ್ನು ರಕ್ಷಿಸಲು ಅವರಿಗೆ ಅಧಿಕಾರ ನೀಡಬೇಕು. ಇದರ ರೂಪವೇ ಸರ್ಕಾರ ಎಂದನು.

ಅಂಬೇಡ್ಕರ್ ರವರ ಆಶಯವೂ ಇದೆ. ಅಂಬೇಡ್ಕರ್ ಎಂದೂ ಪ್ರಭುತ್ವವು ಆಳುವ ವರ್ಗದ ದಬ್ಬಾಳಿಕೆಯ ಸಾಧನವೆಂದು ಪರಿಗಣಿಸಲಿಲ್ಲ. ಈ ಹಾದಿಯಲ್ಲೇ ಅವರು ಯಾವುದೇ ರೀತಿಯ ಅವಿಧೇಯತೆಯನ್ನು ಪುರಸ್ಕರಿಸಲಿಲ್ಲ. ಈ ಸಂದರ್ಭದಲ್ಲಿ ಅವಿಧೇಯತೆಯನ್ನೇ ಮುಖ್ಯ ರಾಜಕೀಯ ಹೋರಾಟ ಮಾರ್ಗವನ್ನಾಗಿ ಅನುಸರಿಸಿದ ಎಂ. ಕೆ. ಗಾಂಧಿಗಿಂತಲೂ ಸಹ ಅಂಬೇಡ್ಕರ್ ಕಳಪೆಯಾಗಿ ಕಾಣುತ್ತಾರೆ.

ಪ್ರಭುತ್ವ, ವರ್ಗಗಳಿಗೆ ಹೊರತಾದದ್ದು ಎಂಬುದು ಅಂಬೇಡ್ಕರ್ ರವರ ಪ್ರಭುತ್ವ ಮತ್ತು ಪ್ರಭುತ್ವ ಸಮಾಜವಾದದ ಪರಿಕಲ್ಪನೆಯ ಮುಖ್ಯ ಧಮನಿ. ಪ್ರಭುತ್ವ, ಸಾಮಾಜಿಕ ನ್ಯಾಯ ದೊರಕಿಸಬೇಕು ಮತ್ತು ಸಮಾಜವಾದವನ್ನು ಸಹ ಸ್ಥಾಪಿಸಬೇಕು. ಇದು ಫೇಬಿಯನ್ನರ ತತ್ತ್ವ, ಅಂಬೇಡ್ಕರ್ ರವರ ವಿಚಾರದಲ್ಲಿಯೂ ಸಹ ಇದರ ವಾಸನೆ ಬಹಳವಿದೆ.

ಅಂಬೇಡ್ಕರ್ ಪ್ರಭುತ್ವ ಸಮಾಜವಾದದ ಸ್ಥಾಪನೆಗೆ ಪ್ರತಿಪಾದಿಸುವ ಸಾಮೂಹಿಕ ಬೇಸಾಯ ಪದ್ಧತಿ ಜಾತಿ ವ್ಯವಸ್ಥೆಗೆ ಪ್ರಬಲ ಪೆಟ್ಟು ಕೊಡುವಂತಹದ್ದು ಎಂಬುದು ಸತ್ಯ ಸಂಗತಿ. ಆದರೆ ಅಂಬೇಡ್ಕರ್ ಭಾರತದ ಉತ್ಪಾದನಾ ಸಂಬಂಧಗಳನ್ನು ಮೂಲಭೂತವಾಗಿ ಬದಲಾಯಿಸದೆಯೇ ಇಂತಹ ಪರಿಸ್ಥಿತಿಯನ್ನು ಆಶಿಸುತ್ತಾರೆ. ಹಳೆಯ ಉತ್ಪಾದನಾ ಸಂಬಂಧಗಳು ನಾಶವಾಗದೇ ಹೊಸ ಉತ್ಪಾದನಾ ಸಂಬಂಧಗಳ ಬೆಳವಣಿಗೆ ಯಾವುದೇ ಸಮಾಜದಲ್ಲಿ ಅಸಾಧ್ಯ. ಪಾರ್ಲಿಮೆಂಟರಿ ವ್ಯವಸ್ಥೆ, ಪ್ರಭುತ್ವಗಳು ಹಳೆಯ ಸಮಾಜವನ್ನು ಉಳಿಸಲು ಬೆಳೆಸಿದ ಸಂಸ್ಥೆಗಳು. ಅವುಗಳ ಅಡಿಯಲ್ಲಿಯೇ ಸಮಾಜವಾದ ಸ್ಥಾಪನೆಯಾಗಬೇಕೆಂಬ ವಿಚಾರ ಮೇಲ್ನೋಟಕ್ಕೆ ಆಕರ್ಷಕ. ಆದರೆ ವಾಸ್ತವತೆಯಾಗಲು ಸಾಧ್ಯವಿಲ್ಲ. ಈ ಪ್ರಭುತ್ವ ಸಮಾಜವಾದವನ್ನು ಯೂರೋಪಿನಲ್ಲಿ ಸಾಕಷ್ಟು ಹಿಂದೆ ಅನೇಕ ಸೋಶಿಯಲ್ ಡೆಮೋಕ್ರಾಟ್‌ಗಳು ಪ್ರತಿಪಾದಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಆಲೋಚನೆಯನ್ನು ಗಮನಿಸುವುದು ಅಗತ್ಯ.

ಜರ್ಮನಿಯ ಲಸಲ್ಲೆ (೧೮೨೫-೧೮೬೪) ಪ್ರಭುತ್ವವು ವರ್ಗಗಳ ಹಿಡಿತದಿಂದ ಹೊರತಾದದ್ದು ಎಂದು ತಿಳಿಸಿದ್ದನು. ಈತನು ತನ್ನ ಆದರ್ಶವಾದಿ ತತ್ತ್ವಗಳಿಗನುಗುಣವಾಗಿ ಪ್ರಷ್ಯನ್ (ಜರ್ಮನಿ) ಪ್ರಭುತ್ವದ ಮೂಲಕ ಉತ್ಪಾದಕರ ಸಂಘಗಳನ್ನು ಸ್ಥಾಪಿಸಿ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಬಹುದೆಂದು ನಂಬಿದ್ದನು. ಲಸಲ್ಲೆಯ ಪ್ರಕಾರ ಜರ್ಮನಿಯಲ್ಲಿ ಸಾರ್ವತ್ರಿಕ ಮತದಾನದ ಜಾರಿ- ‘ಸ್ವತಂತ್ರ ಜನತೆಯ ಪ್ರಭುತ್ವ’ವನ್ನು ಸ್ಥಾಪಿಸುತ್ತದೆ. ಈ ಆಲೋಚನೆಯನ್ನು ಕುರಿತು ಮಾರ್ಕ್ಸ್ ಒಮ್ಮೆ ಲಸಲ್ಲೆ ‘Royal Prussion State Socialism’ನ್ನು ಪ್ರತಿಪಾದಿಸುತ್ತಿದ್ದಾನೆ ಎಂದು ಹೇಳಿದನು. ಜರ್ಮನಿಯ ಬ್ರೆಂಟನೋ (೧೮೪೪-೧೯೩೧) ಎಂಬ ಅರ್ಥಶಾಸ್ತ್ರಜ್ಞನೂ ಸಹ ಪ್ರಭುತ್ವ ಸಮಾಜವಾದವನ್ನು ಪ್ರತಿಪಾದಿಸಿದ್ದನು. ಬಂಡವಾಳಶಾಹಿ ಚೌಕಟ್ಟಿನೊಳಗೆ ಸುಧಾರಣೆಗಳ ಮೂಲಕ ಬಂಡವಾಳಗಾರರ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಾಜಿಮಾಡಿ ಸಾಮಾಜಿಕ ಸಮಾನತೆಯನ್ನು ಸ್ಥಾಪಿಸಬೇಕೆಂದು ನಂಬಿದ್ದನು. ಇವನು ‘ಕೆಥೇಡರ್ ಸೋಷಿಯಲಿಸ್ಟ್ ಸ್ಕೂಲ್’ನ ಪ್ರತಿಪಾದಕ. ೧೭ ಅಂಬೇಡ್ಕರ್ ರವರ ‘ಪ್ರಭುತ್ವ ಸಮಾಜವಾದ’ದ ಪರಿಕಲ್ಪನೆ ಲಸಲ್ಲೆ, ಬ್ರೆಂಟನೋ ಮತ್ತಿತರರ ಮಾದರಿಯ ಪಡಿಯಚ್ಚಲ್ಲ. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ಸಮಾಜವಾದವನ್ನು ತರಬಹುದೆಂಬ ಭ್ರಮೆಯಲ್ಲಿ ಸಾಮ್ಯತೆ ಇದೆ. ಈ ಸಂದರ್ಭದಲ್ಲಿ ಫೇಬಿಯನ್ ಸಮಾಜವಾದದ ಬಗ್ಗೆ ಜಾರ್ಜ್ ಬರ್ನಾಡ್‌ಷಾನ ಮಾತುಗಳು ಸಾಂದರ್ಭಿಕ –

ಫೆಬಿಯನ್ನರು ಅತ್ಯಂತ ಶಾಂತ ಮತ್ತು ಕನಿಷ್ಠ ಕ್ರಾಂತಿಕಾರಿಗಳು ಅವರಲ್ಲಿ ಯಾರೂ ಸಹ ಹಿಂಸೆಯ ಮದ್ಯವನ್ನು ಕುಡಿದ ಪಾಪ ಮಾಡಿಲ್ಲ. ಒಂದು ದೃಷ್ಟಿಯಲ್ಲಿ ಅವರ ಸಮಾಜವಾದ ಅತ್ಯಂತ ಸರಳ ಮನಸ್ಸಿನಿಂದ ಕೂಡಿದ್ದು ಮತ್ತು ಪ್ರಭುತ್ವದ ಚಟುವಟಿಕೆಗಳ ವಿಸ್ತರಣೆಯಷ್ಟೆ.

ಅಂಬೇಡ್ಕರ್ ರವರ ಮಾರ್ಕ್ಸ್‌ವಾದ ಮತ್ತು ಕಮ್ಯೂನಿಸಂನ ವಿರೋಧ ತಾಕಲಾಟದಿಂದ ಕೂಡಿದುದು. ಒಮ್ಮೆ ತಾವು ಕಮ್ಯೂನಿಸಂನ ಕಟು ವಿರೋಧಿ ಎಂಬ ಘೋಷಿಸಿದರೆ, ಇನ್ನೊಮ್ಮೆ ಕಮ್ಯೂನಿಸಂ ಸಮಂಜಸವಾದುದು ಎನ್ನುತ್ತಾರೆ. ಮಾರ್ಕ್ಸ್‌ವಾದವನ್ನು ತರ್ಕದಿಂದ ವಿರೋಧಿಸದೆ ಸರಳೀಕೃತ ಹೇಳಿಕೆಗಳ ಮೂಲಕ ಬೌದ್ಧಮತಕ್ಕೆ ಸಮತೋಲನ ಮಾಡಿದ್ದಾರೆ. ಬೌದ್ಧಧರ್ಮದ ಕೆಲವು ಅಂಶಗಳು ಬುದ್ಧನ ಕಾಲದಲ್ಲಿ ಕ್ರಾಂತಿಕಾರಿಯಾಗಿದ್ದು, ಅನೇಕ ಗತಿ ತಾರ್ಕಿಕ ದೃಷ್ಟಿಕೋನಗಳನ್ನು ಹೊಂದಿತ್ತು. ಆದರೆ ಬಂಡವಾಳಶಾಹಿ ಸಮಾಜವನ್ನು ವಿಶ್ಲೇಷಿದ ಮಾರ್ಕ್ಸ್‌ವಾದಕ್ಕೆ ಅದು ಸಾಟಿಯಾಗಲಾರದು. ಹೀಗಾಗಿ ಅಂಬೇಡ್ಕರ್ ರವರ ಪ್ರಯತ್ನ ಬಾಲಿಶ. ಈ ಸ್ಥಿತಿಗೆ ಕಾರಣ : ಅಂಬೇಡ್ಕರ್ ತಮ್ಮ ಜೀವನದ ಅಂತಿಮ ಕಾಲದಲ್ಲಿ ಉದಾರವಾದದಲ್ಲಿ ಹೊಂದಿದ ಹತಾಶತೆ ಮತ್ತು ಮಾರ್ಕ್ಸ್‌ವಾದವನ್ನು ಒಪ್ಪಿಕೊಳ್ಳಬಾರದೆಂಬ ಹಟ ಕಾರಣವಿರಬಹುದು. ಅಂಬೇಡ್ಕರ್ ಕಮ್ಯೂನಿಸಂನ ವಿರೋಧ ಅಂತಾರಾಷ್ಟ್ರೀಯವಾಗಿ ಬಂಡವಾಳಶಾಹಿ ದೇಶಗಳನ್ನು ಬೆಂಬಲಿಸಿ ಎನ್ನುವುದರಲ್ಲಿ ಪರಿಣಮಿಸಿತು. ಪ್ರಪಂಚದ ಶಕ್ತಿ ಬಣಗಳ ವಿರುದ್ಧ ಮೂರನೇ ಪ್ರಪಂಚದ ದೇಶಗಳು ಆಲಿಪ್ತನೀತಿಯ ಆಧಾರದ ಮೇಲೆ ಪ್ರತಿರೋಧ ಆರಂಭಿಸಿದವು. ಈ ಪ್ರವೃತ್ತಿಯನ್ನು ವಿರೋಧಿಸಿದ ಅಂಬೇಡ್ಕರ್ ರವರ ವಿಚಾರಗಳು ದುರದೃಷ್ಟಕರ.

ಮೇಲೆ ಗಮನಿಸಿದ ಅಂಶಗಳಿಂದ ಅಂಬೇಡ್ಕರ್ ಅವರ ರಾಜಕೀಯ ಪರಿಕಲ್ಪನೆಗಳು ಹೇಗೆ ಪಾಶ್ವಿಮಾತ್ಯ ಉದಾರವಾದವನ್ನು ಆಧರಿಸಿದ್ದವು ಎಂದು ಸ್ಥೂಲವಾಗಿ ತಿಳಿಯುತ್ತದೆ. ಇದೇ ಅಂಶವನ್ನು ಸೋಷಿಯಲ್ ಡೆಮೋಕ್ರಾಟ್ ಚಿಂತಕ ರಾಮಮನೋಹರ ಲೋಹಿಯಾ ಸಹ ಗುರುತಿಸುತ್ತಾರೆ. ಪತ್ರವೊಂದರಲ್ಲಿ ಅವರು ‘ಡಾ. ಅಂಬೇಡ್ಕರ್ ಅವರ ಬಗ್ಗೆ ಇರುವ ಅತ್ಯಂತ ದೊಡ್ಡ ತೊಂದರೆಯೆಂದರೆ ಅವರ ಸಿದ್ಧಾಂತದ ನೆಲೆ ಅಟ್ಲಾಂಟಿಕ್ ಕ್ಯಾಂಪ್‌ನಲ್ಲಿರುವುದು’೧೮ ಎಂದು ಬರೆದಿದ್ದಾರೆ.