ವಚನ ಚಳವಳಿ ಸಂದರ್ಭ

ವಚನ ಚಳುವಳಿಯ ವೈಫಲ್ಯದಲ್ಲಿದ್ದ ಸಾಮಾಜಿಕ ರಾಜಕೀಯ ಹಾಗೂ ಚಾರಿತ್ರಿಕ ಸನ್ನಿವೇಶಗಳು ಇಂತಹ ಸ್ಥಿತಿಗೆ ಹಿಂದುಳಿದ ವರ್ಗಗಳನ್ನು ನೂಕಿವೆ. ಈ ಮಧ್ಯಕಾಲೀನ ಚರಿತ್ರೆಯಲ್ಲೆ ಅನೇಕ ಬಗೆಯ ಅಲ್ಪಸಂಖ್ಯಾತ ಜಾತಿಗಳು ಬುಡಕಟ್ಟುಗಳು ಹಿಂದುಳಿದ ವರ್ಗಗಳು ಅಸ್ಥಿತ್ವವನ್ನು ಹುಡುಕುತ್ತ ಪಾಲಿನ ವ್ಯವಸ್ಥೆಗೆ ತಮ್ಮನ್ನು ತಾವು ಪ್ರಧಾನ ವ್ಯವಸ್ಥೆಯ ಜೊತೆ ಹೊಂದಿಸಿಕೊಂಡಿವೆ. ಅನೇಕ ದನಗಾಹಿ ಸಮುದಾಯಗಳು ಕರ್ನಾಟಕದ ಉದ್ದಕ್ಕೂ ಮಧ್ಯಕಾಲೀನ ಸಮಾಜದಲ್ಲಿ ರೂಪಾಂತರಗೊಂಡು ಜಾತಿಶ್ರೇಣಿಯಲ್ಲಿ ಅದು ಸ್ಥಾನಗಳನ್ನು ಅಲಂಕರಿಸಿ ಕಲ್ಪಿತ ಸ್ವಾತಂತ್ರ್ಯವನ್ನು ಪಡೆದಿವೆ. ಹಿಂದುಳಿದ ವರ್ಗಗಳು ಹೀಗೆ ಮತ್ತೆ ಮತ್ತೆ ಅಸಂಘಟಿತವಾಗಿರಲು ಅವು ಬೆಳೆದು ಬಂದ ದಾರಿಯೂ ಕಾರಣವಾಗಿದೆ. ಸಂಘಟಿತವಾಗುವಲ್ಲಿಯು ಈ ಸಮುದಾಯಗಳು ಬಿಡಿಯಾಗಿಯೆ ಹೋರಾಟವನ್ನು ಹೂಡುವುದರಿಂದ ದಲಿತತ್ವದ ಅಖಂಡತೆಯಲ್ಲಿ ಇವು ಸಂಯೋಗವಾಗುವುದೇ ಇಲ್ಲ. ಆಧುನಿಕ ರಾಜ್ಯಂಗ ಪದ್ಧತಿಯಲ್ಲೂ ಇಂತಹ ಸಮುದಾಯಗಳು ಯಾವುದರ ಕಡೆಗೂ ಸ್ಪಷ್ಟವಾಗಿ ಗುರುತಿಸಿಕೊಳ್ಳಲಾರವು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಎಂಬ ಈ ಮೂರು ಪ್ರಧಾನ ಗುಂಪುಗಳೂ ಒಟ್ಟಾಗುವುದಕ್ಕೆ ಯಾವ ಹಂತದಲ್ಲಿ ತೊಡಕುಗಳಿವೆ ಎಂಬುದು ಸುಲಭಕ್ಕೆ ಗೋಚರವಾಗುವುದಿಲ್ಲ. ಪ್ರತಿಯೊಂದು ಸಮುದಾಯವು ಅವಿಶ್ವಾಸಗಳಿಂತಲೆ ಆಧುನಿಕತೆಯನ್ನು ಪ್ರವೇಶಿಸಿವೆ. ಆಧುನಿಕತೆಯು ಹೇಳಿಕೇಳಿ ವ್ಯಕ್ತಿ ವಿಕಾಸಕ್ಕೆ ಹಾಗೂ ಅಂತಹ ಸ್ವಾತಂತ್ರ್ಯಕ್ಕೆ ಬೇಕಾದ ಜರೂರನ್ನು ಮುಂದಿಡುತ್ತದೆ. ಈ ಬಗೆಯ ಜರೂರಿನಿಂದಲೆ ಸಮುದಾಯಗಳು ವರ್ತಮಾನದ ಜೊತೆ ಸೆಣೆಸುತ್ತವೆ. ಹೀಗಾಗಿ ಈ ಮೂರೂ ಬಗೆಯ ಪ್ರಧಾನ ಶಕ್ತಿಗಳು ಸಮಷ್ಠಿಯಾಗಿ ಹೋರಾಡುವುದರಿಂದ ತಮ್ಮ ಗುರಿ ಸಾಧ್ಯ ಎಂದು ತಾತ್ವಿಕವಾಗಿ ಒಪ್ಪಿಕೊಂಡರು. ಕಾರ್ಯಗತವಾಗಿ ಇವು ಒಂದೇ ಧ್ಯಾನದಲ್ಲಿ ಕಾಳಜಿಯಲ್ಲಿ ಕೆಲಸ ನಿರ್ವಹಿಸಲಾರವು. ಇವುಗಳ ಸಮಸ್ಯೆಯ ಸ್ವರೂಪದಲ್ಲೆ ವೈರುಧ್ಯಗಳಿವೆ. ತಾವು ಹೊಣೆಯಾಗಬೇಕಾಗಿಲ್ಲದ ಅಪರಾಧಗಳಿಗೆ ಈ ಮೂರೂ ಸಮುದಾಯಗಳು ಹೊಣೆಯಾಗಬೇಕಾಗಿರುತ್ತದೆ. ಹಿಂದುಳಿದ ವರ್ಗಗಳ ಎಷ್ಟೋ ನಡವಳಿಕೆಗಳು ದಲಿತ ಸಮುದಾಯಗಳಿಗೆ ಶಾಪವೂ ಆಗಿರುತ್ತದೆ. ಶೋಷಕರೂ ಶೋಷಣೆಗೆ ಒಳಪಡುವವರೂ ಒಟ್ಟಾಗಿಯೇ ಕೂಡಿ ಇವರಿಬ್ಬರಿಗಿಂತಲೂ ಬಲವಾದ ಇನ್ನೊಂದು ಶಕ್ತಿಯ ವಿರುದ್ಧ ಹೋರಾಡುವುದು ರಮ್ಯ ವೈಚಾರಿಕತೆಯ ದರ್ಶನವಾಗಿದ್ದರೂ ಹೋರಾಟದ ಮಧ್ಯದಾರಿಯಲ್ಲೆ ಇವು ಕವಲು ದಾರಿಯನ್ನು ಕಂಡುಕೊಳ್ಳಲು ಹಾತೊರೆಯುತ್ತಿರುತ್ತವೆ. ವಚನ ಚಳವಳಿಯ ಮೊದಲ ಹಂತದಲ್ಲಿ ಎಲ್ಲ ರೀತಿಯಲ್ಲಿ ಇದೇ ಮೂರು ಪ್ರಧಾನ ಜನವರ್ಗಗಳು ಶೈವ ತತ್ವದಡಿ ದೊಡ್ಡ ಕ್ರಾಂತಿಯನ್ನೇ ಮಾಡಿದರೂ ಅಂದರ ಜೊತೆ ಜೊತೆಯಲ್ಲೆ ಕವಲು ದಾರಿಯಲ್ಲಿ ದೂರ ಸರಿಯುವುದಕ್ಕೆ ಅವಕಾಶಗಳನ್ನು ಅದೇ ಸಮುದಾಯಗಳು ಮಾಡಿಕೊಂಡಿವೆ. ಹನ್ನೆರಡನೆ ಶತಮಾನದ ನಂತರಕ್ಕೆ ಇದೇ ಈ ಮೂರು ಗುಂಪುಗಳು ಮರಳಿ ಜಾತಿಗೆ ಹಿಂತಿರುಗಿದ್ದು ಕೇವಲ ಕ್ರಾಂತಿಯ ವೈಫಲ್ಯದಿಂದ ಮಾತ್ರವೇ ಆಗಿತ್ತೇನು? ಅಂತಹ ಬಲವತ್ತರವಾದ ಆಕಾಂಕ್ಷೆ ಅಥವಾ ಹತಾಶೆ ಈ ಸಮುದಾಯಗಳಿಗೆ ಹೇಗೆ ಉಂಟಾಯಿತು? ಜಾತಿಗೆ ಮರಳಿದ ಮಾತ್ರಕ್ಕೆ ತಾವು ಸುರಕ್ಷಿತ ಎಂದು ಯಾಕೆ ಈ ಸಮುದಾಯಗಳಿಗೆ ಗಾಢವಾಗಿ ಅನಿಸಿದೆ? ಅಸಂಘಟಿತವಾಗಿದ್ದುಕೊಂಡೇ ಸಮುದಾಯ ನಿಷ್ಠ ಕಿರುದಾರಿಗಳಲ್ಲೇ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವುದು ಹೆಚ್ಚು ಸುರಕ್ಷಿತವೆ? ಹುರೂಪಿಯಾಗಿದ್ದುಕೊಂಡೇ ಪ್ರತಿರೋಧವನ್ನು ಕೂಡ ಇಂತಹ ಅಂತರಗಳಿಂದ ವ್ಯಕ್ತಪಡಿಸಲು ಸಾಧ್ಯ ಎಂದು ಈ ಸಮುದಾಯಗಳು ಸಂಬಂಧವೇ? ಇಂತಹ ಹತ್ತಾರು ಪ್ರಶ್ನೆಗಳಿಗೆ ಇವತ್ತಿಗೂ ಸರಿಯಾದ ಉತ್ತರ ಸಿಕ್ಕಿಲ್ಲ. ‘ಅಹಿಂದ’ದ ಸಂಯುಕ್ತ ಪ್ರತಿರೋಧವು ಅನೇಕ ಬಾರಿ ಆದರ್ಶವಾಗಿದ್ದು ಒಳಗೆ ಬಿರುಕಿನಿಂದಲೆ ಅನುಮಾನದಿಂದಲೆ ರಾಜಕೀಯ ಸಮಾನತೆಯನ್ನು ಕೇಳುವುದು ಕೂಡ ದೀರ್ಘಕಾಲೀನ ಎಚ್ಚರದ ಲಕ್ಷಣವಲ್ಲ. ರಾಜಕೀಯ ಅಧಿಕಾರವನ್ನು ಬಲಿಷ್ಠ ಜಾತಿಗಳು ಈ ಕೈಯಲ್ಲಿ ಕೊಟ್ಟು ಆಚೆ ಕೈಯಲ್ಲಿ ಕಿತ್ತುಕೊಂಡಿರುತ್ತವೆ. ಕಪಟಾಧಿಕಾರದಲ್ಲಿ ಪಳಗಿದ ಬಲಿಷ್ಠ ರಾಜಕಾರಣವು ಯಾವತ್ತು ಕೂಡ ಹಿಂದುಳಿದ ವರ್ಗಗಳನ್ನು ತಮ್ಮ ರಕ್ಷಣೆಗೆ ಇಟ್ಟುಕೊಂಡಿರುತ್ತವೆ. ದಲಿತ ಸಮುದಾಯಗಳ ಜೊತೆ ಅಧಿಕಾರ ಹಂಚಿಕೊಳ್ಳುವುದು ಯಾವ ರಾಜಕೀಯ ಪಕ್ಷಕ್ಕೂ ಒಪ್ಪಿಗೆಯಾಗದ ಸಂಘತಿ. ಮಾಯಾವತಿಯ ಜೊತೆಗೆ ಅಧಿಕಾರ ಹಂಚಿಕೊಂಡಿದ್ದಕ್ಕೆ ಬಿಜೆಪಿಗೆ ಇದ್ದ ಬಾಂಧವ್ಯ ಎಂದರೆ ಈ ಬಗೆಯ ಹಿಂದುಳಿದ ವರ್ಗಗಳ ಮೇಲಿನ ಗುರಿಯಿಂದ. ಹಿಂದುಳಿದ ವರ್ಗಗಳು ದಲಿತ ಸಮುದಾಯಗಳ ಜೊತೆ ಕೂಡುವುದನ್ನು ಕೂಡ ಯಾವ ಬಲಿಷ್ಠ ಜಾತಿಯು ಸಹಿಸುವುದಿಲ್ಲ. ಬಿಎಸ್‌ಪಿಯು ಒಂದು ಬಲಿಷ್ಠ ರಾಜಕೀಯ ಪಕ್ಷವಾಗುವ ಮೂಲಕ ದಲಿತರು ಗದ್ದುಗೆಯ ಸಮೀಪ ಬಂದೇ ಬಿಟ್ಟರು ಎಂದಾಗ ಅಂತಹ ಬಿಎಸ್‌ಪಿ ಜೊತೆ ರಾಜಕೀಯ ಸಂಧಾನ ಮಾಡಿಕೊಳ್ಳುವುದು ಅಧಿಕಾರ ರಾಜಕಾರಣದ ತಂತ್ರ ಅಷ್ಟೆ. ಈ ತಂತ್ರವನ್ನು ಬಿಎಸ್‌ಪಿಯೂ ಮಾಡಿದ್ದು ವಿಪರ್ಯಾಸವಲ್ಲ. ಆಧುನಿಕ ಜಾತಿ ವ್ಯವಸ್ಥೆಯ ರಾಜಕಾರಣದಲ್ಲಿ ಯಾವ ಜಾತಿಯಾದರೂ ಇಂತಹ ಕ್ರಮಗಳಲ್ಲೆ ತನ್ನ ನಾಳಿನ ದಾರಿಯನ್ನು ಹುಡುಕಿಕೊಳ್ಳಬೇಕಾಗಿದೆ.

ವಚನ ಚಳುವಳಿಯ ಭಗ್ನತೆಯಲ್ಲಿ ದಾರಿತಪ್ಪಿದ ಎಷ್ಟೋ ಸಮುದಾಯಗಳು ಇವತ್ತಿಗೂ ನರಳುತ್ತಿವೆ. ಸಾಂಸ್ಕೃತಿಕವಾದ ಅಂತಹ ಶೈವ ರಾಜಕಾರಣವು ಜಾತಿಯ ವರ್ತುಲದಲ್ಲಿ ಸಿಲುಕಿದ್ದು ಇಂದಿಗೂ ಅಂತದೇ ಪರಿಣಾಮವನ್ನು ಉಂಟುಮಾಡುತ್ತಿದೆ. ಪೆರಿಯಾರರ ದ್ರಾವಿಡ ಚಳುವಳಿ ಕೂಡ ಸಾಂಸ್ಕೃತಿಕವಾದ ರಾಜಕಾರವನ್ನು ‘ಸಂಘಟಿಸಲು ಹೋಗಿ ವಿಫಲವಾದದ್ದು ಅದರ ಉಗ್ರಜಾತಿ ನಿರಾಕರಣೆ ಹಾಗೂ ಧರ್ಮ ನಿರಾಕರಣೆಯಿಂದ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದನ್ನೂ ಉಗ್ರವಾಗಿ ಮುನ್ನುಗ್ಗಿ ಸದೆಬಡಿಯಲು ಸಾಧ್ಯವಿಲ್ಲ. ಸೌಮ್ಯವಾದ ಶೈವ ಶರಣರ ಚಳುವಳಿಯಾಗಲಿ ಭಕ್ತಿ ಪಂಥದ ಸಾಮಾಜಿಕ ಸ್ವಾಸ್ಥ್ಯದ ಚಳುವಳಿಯಾಗಲಿ ಆಳದಲ್ಲಿ ದಲಿತತ್ವದ ಮಾನವೀಯತೆಯನ್ನು ಆತ್ಯಂತಿಕವಾಗಿ ಹಂಬಲಿಸಿದ್ದಂತಲೆ ಆಗಿದ್ದವು. ಉಗ್ರವಾಗಿ ಪ್ರತಿಭಟಿಸಿದ ಕೂಡಲೆ ಇಡೀ ಸಮಾಜದ ಜಾತಿನೆಲೆಗಳು ತಂತಾನೆ ಎದ್ದು ನಿಂತು ಅದಕ್ಕೆ ಪರ್ಯಾಯವಾದ ಪ್ರತಿದಾಳಿಗೆ ಸಜ್ಜಾಗುತ್ತವೆ. ಹಿಂದುಳಿದ ಕೋಮುಗಳು ಇಂತಹ ಸ್ಥಿತಿಯಲ್ಲಿ ಆಲಿಪ್ತ ನೀತಿಯನ್ನು ತಳೆಯುವುದು ಹಿಂದಿನಿಂದಲೂ ಬಂದ ರೂಢಿ. ಹಾಗೆಯೆ ‘ಕೆಳ’ ಜಾತಿಗಳಿಗೆ ನೀಡುವ ಸದಾಕಾಲದ ದಂಡನೆಯು ಹಿಂದುಳಿದ ವರ್ಗಗಳಿಗೆ ಕೊಡುವ ದೈನಂದಿನ ಎಚ್ಚರಿಕೆಯೂ ಆಗಿರುತ್ತದೆ. ಹೀಗಾಗಿ ವಿನಾಕಾರಣ ಅನೇಕ ಸಂದರ್ಭಗಳಲ್ಲಿ ದಲಿತ ಸಮುದಾಯಗಳಿಗೆ ದಂಡಿಸುತ್ತಾ ಹೋಗುವುದು ಉಳಿದೆಲ್ಲರಿಗೂ ಕೊಡುವ ‘ಹುಷಾರ್’ ಸೂಚನೆಯೂ ಆಗಿರುತ್ತದೆ.

ಇಂತಹ ದಂಡನೆಯ ವಾತಾವರಣವು ರಾಜಕಾರಣದಲ್ಲಿ ಕಣ್ಣೊರೆಸುವ ನಾಟಕವನ್ನು ಹುಟ್ಟುಹಾಕುತ್ತಿರುತ್ತದೆ. ಬಸವಣ್ಣನ ಕಾಲಕ್ಕೆ ಇಂತಹ ನಾಟಕಗಳು ಇರಲಿಲ್ಲ. ವದಲಿಗೆ ಬಹುಪಾಲು ಎಲ್ಲ ದಲಿತ ಸಮುದಾಯಗಳು ದುರಂತ ನಾಟಕದ ಮೇಳದಂತೆ ದುರಂತವನ್ನು ಹಾಡಿಕೊಳ್ಳುತ್ತಲೆ ಮರಳಿ ತಮ್ಮ ಜಾತಿಗಳಿಗೆ ಹಿಂತಿರುಗಿವೆ. ಹೀಗೆ ಹಿಂತಿರುಗಿದ ದಲಿತ ಸಮುದಾಯಗಳಲ್ಲಿ ವಿಶೇಷವಾಗಿ ಕಂಡುಬರುವ ಮಹಾಕಾವ್ಯಗಳು ಸಾಂಸ್ಕೃತಿಕ ರಾಜಕಾರಣ ಮಹಾಕಾವ್ಯ ಕಥನಗಳಾಗಿವೆ ಎಂಬುದನ್ನು ಪರಿಶೀಲಿಸಿ ತಿಳಿಯಬೇಕು. ಹೊಲೆ ಮಾದಿಗಳ ಇಬ್ಬರು ಕ್ರಾಂತಿಕಾರಿ ಸಂತರಾದ ಮಲೆ ಮಾದೇಶ್ವರ ಮತ್ತು ಮಂಟೇಸ್ವಾಮಿ- ಇವರಿಬ್ಬರು ಚದುರಿದ ವಿವಿಧ ಕೆಳಜಾತಿಗಳನ್ನು ಜಾತ್ಯತೀತವಾದ Epic organization ಗೆ ಒಳಪಡಿಸಲು ತುಂಬ ಕಷ್ಟ ಪಟ್ಟಿದ್ದಾರೆ. ಜಾತಿ ವಿನಾಶಕ್ಕೆ ಭಕ್ತಿಪಂಥದ ದಾಸವರೇಣ್ಯರು ಹಾಡಿದ್ದು ಒಂದು ಹಂತದ ಘನತೆಯಾದರೆ ಮಂಟೇಸ್ವಾಮಿ ಮತ್ತು ಮಾದೇಶ್ವರರ ಜಾತ್ಯತೀತತೆಯ ‘ವಕ್ಕಲುಪಡೆವ’ ಪವಾಡದ ಕಾಯಕವು ಬಸವಣ್ಣನ ಕ್ರಾಂತಿಗಿಂತ ಭಿನ್ನವಾದದ್ದು. ಮಾದೇಶ್ವರ ಮಂಟೇಸ್ವಾಮಿ ಅವರು ಜಾತಿಯನ್ನು ನಿರಾಕರಿಸಲು ಸಾಂಸ್ಕೃತಿಕವಾದ ರಾಜಕಾರಣವನ್ನು ಮಾಡಿದ್ದಾರೆ. ಕೃಷಿ ಪ್ರಧಾನವಾದ ಸಮುದಾಯಗಳನ್ನು ತನ್ನ ಅನುಯಾಯಿಗಳನ್ನಾಗಿ ಪರಿವರ್ತಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಕೆಳ ಜಾತಿಯಿಂದ ಬಂದ ಇವರಿಗೆ ಮೇಲು ಜಾತಿಗಳ ಯಾಜಮಾನ್ಯವನ್ನು ಭಗ್ನಗೊಳಿಸುವುದೇ ನಿಜವಾದ ಮುಕ್ತಿ ಮಾರ್ಗವಾಗಿತ್ತು. ಆರಾಧನೆ ಆಚರಣೆ ಮಂತ್ರ ವಿದ್ಯೆಗಳ ಮೂಲಕವೆ ಒಂದು ಸಮುದಾಯದ ಮನಸ್ಸನ್ನು ಪಳಗಿಸುವುದು ಇವರ ತಂತ್ರವಾಗಿತ್ತು. ಜಾತಿ ಇರುವುದೇ ಮನಸ್ಸಿನ ತಳದಲ್ಲಿ. ಅದರ ಬೇರನ್ನು ಮಂತ್ರ ವಿದ್ಯೆಯಿಂದ ಅಂದರೆ ಮನಃಪರಿವರ್ತನೆಯ ಮೂಲಕ ತನಗೆ ತಾನೇ ಕಿತ್ತುಕೊಳ್ಳುವಂತೆ ಮಾಡುವುದು ಇವರಿಬ್ಬರ ಗುರಿಯಾಗಿತ್ತು. ಜಾತಿಯ ಮೂಲವನ್ನು ಜಾತಿಯನ್ನು ಕಿತ್ತುಕೊಂಡಾಗ ಅದು ಬುಡಸಮೇತ ಉರುಳಬಲ್ಲದು. ಮನಸ್ಸಿನ ಪರಿವರ್ತನೆಯಲ್ಲಿ ಮಾತ್ರ ಇಂತಹ ಬುಡಮೇಲು ಮಂತ್ರ ಸಾಧ್ಯ. ಮಂಟೇಸ್ವಾಮಿ, ಮಾದೇಶ್ವರರು ಈ ಬಗೆಯ ಹಾದಿಯಲ್ಲಿ ಜಾತ್ಯತೀತ ಸಮಾಜವನ್ನು ಕಟಟಲು ತೊಡಗಿದರು. ಆ ಮೂಲಕ ಬೃಹತ್ ಆದ ಸಮಾಜವನ್ನು ಜಾತ್ಯತೀತವಾಗಿ ಸಂಘಟಿಸಲು ಪವಾಡಗಳ ಮೊರೆ ಹೊಕ್ಕರು. ಹಳೆ ಮೈಸೂರಿನ ಪ್ರಾಂತ್ಯದಲ್ಲಿರುವ ಹಿಂದುಳಿದ ವರ್ಗಗಳನ್ನು ಇವತ್ತಿಗೂ ಇವರಿಬ್ಬರ ಜನಪದ ಕಾವ್ಯಗಳು ಪ್ರಭಾವಿಸುತ್ತಲೆ ಬಂದಿವೆ. ಈ ಅಂಶವನ್ನಿಲ್ಲಿ ವಿಸ್ತರಿಸಿದ್ದಕ್ಕೆ ಕಾರಣವಿದೆ. ವಚನ ಚಳುವಳಿಯಲ್ಲಿ ಕ್ರಿಯಾಶೀಲವಾಗಿದ್ದು ದಲಿತರ ಜೊತೆ ಹೊಂದಿಕೊಂಡಿದ್ದ ಹಿಂದುಳಿದ ವರ್ಗಗಳ ಜೊತೆ ಮತ್ತೊಂದು ಹಂತದಿಂದ ವಿಶ್ವಾಸದ ತೆಕ್ಕೆಗೆ ತೆಗೆದುಕೊಳ್ಳಲು ಈ ಇಬ್ಬರು ಸಾಂಸ್ಕೃತಿಕ ನಾಯಕರು ಸಾದ್ಯಂತ ಯತ್ನಿಸಿದ್ದು, ಇದು ಚಾರಿತ್ರಿಕವಾದ ಪಲ್ಲಟವೊಂದಕ್ಕೆ ನಡೆಸಿದ ಜಿಗಿತವೆ ಆಗಿತ್ತು ಎಂಬುದನ್ನು ನೆನಪಿಸಲು.

ಮಂಟೇಸ್ವಾಮಿ ಮತ್ತು ಮಾದೇಶ್ವರರ ಯತ್ನಗಳು ಕೂಡ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿ; ವಾಸ್ತವ ಸಮಾಜದ ರಚನೆಯಲ್ಲಿದ್ದ ಯತಾಸ್ಥಿತಿಯನ್ನೇ ಹಿಂದುಳಿದ ವರ್ಗಗಳು ಒಪ್ಪಿಕೊಳ್ಳುವಂತೆ ವಿಫಲಗೊಂಡದ್ದು ಸಾಂಸ್ಕೃತಿಕವಾಗಿ ಹೆಚ್ಚು ಕಡಿಮೆ ಮುನ್ನೂರು ವರ್ಷಗಳ ಹಿಂದಿನ ಅನುಭವ. ಹದಿನೇಳನೆ ಶತಮಾನದ ಕೊನೆಯ ವೇಳೆಗೆ ಇಂತಹದೊಂದು Epic Strugle ನಿಂತೇ ಹೋಯಿತು. ಇವತ್ತಿನ ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯದ ಮಹಾ ಜಾತ್ರೆಗಳಲ್ಲಿ ಎಲ್ಲ ಹಿಂದುಳಿದ ವರ್ಗಗಳು ನೆನಪಿಗಾಗಿ ಮಾತ್ರ ಭಾಗವಹಿಸಿ ದೂರವನ್ನು ಹಾಗೇ ಕಾಯ್ದುಕೊಳ್ಳುತ್ತವೆ. ಈ ದೂರವು ಆಧುನಿಕ ರಾಜಕಾರಣದಲ್ಲಿ ಮತ್ತೂ ಅಂತರದಿಂದ ಶಕ್ತಿ ರಾಜಕಾರಣದಲ್ಲಿ ವಿಶ್ವಾಸವನ್ನು ಹೊಂದಿದ್ದರೂ ಒಳಗೆ ಬೇರೆಯದೇ ಆಗುವುದು ನಡೆಯುತ್ತಲೇ ಇದೆ. ಜಾತಿಯ ಹೆಸರಿನಿಂದ ಸಂಘಟಿತವಾಗುವುದೇ ಹೆಚ್ಚು ಲಾಭಕರ ಹಾಗೂ ಸುಲಭ ಎಂಬುದು ಇಂದಿನ ವಾಸ್ತವ. ಇವನ್ನು ಮೀರಿದವರೆ ರಾಜಕಾರಣದಲ್ಲಿ ಉಳಿಯಲು ಸಾಧ್ಯವೇ ಇಲ್ಲ ಎಂಬ ಬಲವಾದ ನಂಬಿಕೆ ಎಲ್ಲ ರಾಜಕೀಯ ಪಕ್ಷಗಳಿಗೂ ಬಂದು ಬಿಟ್ಟಿದೆ. ಹೀಗಾಗಿಯೇ ಈ ಕಾಲದಲ್ಲಿ ಒಂದೊಂದು ಸಣ್ಣ ಗುಂಪಿನ ಜನವರ್ಗವನ್ನು ಜಾತಿ ಹೆಸರಿನಿಂದ ಸಂಘಟಿಸಲು ಸ್ವತಃ ರಾಜಕೀಯ ಪಕ್ಷಗಳೇ ಬೆಂಬಲ ಕೊಟ್ಟು ತಮ್ಮ ಅನುಕೂಲಕ್ಕೆ ಸಾಕಿಕೊಳ್ಳುವುದು ನಡೆದಿದೆ.

ಇಂತಲ್ಲಿ ದಲಿತ ರಾಜಕಾರಣವು ಮರುಭೂಮಿಯ ಮೃಗಜಲದಂತೆ ತೋರುತ್ತಿದೆ. ದಲಿತ ಸಮುದಾಯಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲವೆಂದು ಇದರರ್ಥವಲ್ಲ. ಈ ಸಮಾಜವನ್ನು ಆಳುವ ಬಲಿಷ್ಠ ಜಾತಿಗಳು ತಮ್ಮ ಉಳಿವಿಗಾಗಿ ಜಾತಿಗಳನ್ನು ಸದಾ ಜಾತಿಯ ಪಂಜರದಲ್ಲೇ ಇಟ್ಟು ಸಾಕುತ್ತಿರುತ್ತವೆ. ಬೇಕೆನಿಸಿದಾಗ ಒಂದಿಷ್ಟು ಆಹಾರ ಕೊಟ್ಟು ಹತ್ತಿರ ಕರೆದು ದುಡಿಸಿಕೊಂಡು ಮತ್ತೆ ಪಂಜರದಲ್ಲಿ ಜೋಪಾನ ಕಾಯ್ದಿಡುತ್ತವೆ. ಇಂತಹ ಪಂಜರದಲ್ಲಿ ಸ್ವತಃ ಬಾಬಾ ಸಾಹೇಬ ಅಂಬೇಡ್ಕರ್ ರನ್ನೂ, ಬಾಬಾ ಜಗಜೀವನರಾಂಜೀ ಅವರನ್ನೂ ಭಾರತದ ಪಕ್ಷ ರಾಜಕಾರಣವು ಪಳಗಿಸಲು ನೋಡಿ ಆಗದೆ ಕೊನೆಗೆ ಜಗಜೀವನ ರಾಂ ಅವರನ್ನೇ ಅಂಬೇಡ್ಕರ್ ವಿರುದ್ಧ ಎತ್ತಿಕಟ್ಟುವಂತೆ ಜಾಲ ರೂಪಿಸಿತು. ಒಂದೇ ದೇಹವನ್ನು ತುಂಡು ಮಾಡಿ ಒಂದೊಂದು ಅಂಗಕ್ಕೆ ಇಷ್ಟಿಷ್ಟು ಪಾಲು ಎಂಬ ತತ್ವವನ್ನು ಜಾತಿನಿಷ್ಠ ರಾಜಕಾರಣವು ಎಸಗುತ್ತಿರುತ್ತದೆ. ದಲಿತ ಸಮುದಾಯಗಲೆಲ್ಲವೂ ಅಂತಿಮವಾಗಿ ಒಂದೇ ದೇಹದವು. ಈ ಒಂದೇ ದೇಹವನ್ನು ಸ್ವಾತಂತ್ರ್ಯನಂತರದ ರಾಜಕಾರಣವು ಎಷ್ಟೊಂದು ಕ್ರೂರವಾಗಿ ಸೀಳಿ ವಿಂಗಡಿಸಿ ಪ್ರತಿಹಂತದಲ್ಲೂ ಈ ಸೀಳಿಕೊಳ್ಳುವ ಹತ್ಯಾತ್ಮಕ ಹಿಂಸೆಗೆ ಇಂದು ಕೊಡುತ್ತಿರುತ್ತದೆ ಎಂದರೆ ಒಂದೇ ಜೀವವನ್ನು ಕೂಡ ವಿಭಜಿಸಲು ಅದು ಹಿಂದೆ ಮುಂದೆ ನೊಡುವುದಿಲ್ಲ. ದೇಹವನ್ನು ಸೀಳಿದರೆ ಹೇಗಾದರೂ ಬದುಕುಳಿಯಬಹುದು. ಆದರೆ ಪ್ರಾಣವನ್ನೇ ಸೀಳಿ ಬಿಟ್ಟರೆ ಮತ್ತಿನ್ನೇನು ಉಳಿಯುವುದು. ಇಂತಹ ಸ್ಥಿತಿಯಲ್ಲಿ ದಲಿತ ರಾಜಕಾರಣವು ಇನ್ನೂ ಒಂದಿಷ್ಟಾದರೂ ಜೀವದಿಂದ ಎದ್ದು ನಿಲ್ಲಲು ಯತ್ನಿಸುತ್ತಿರುವುದು ಇಪ್ಪತ್ತೊಂದನೆ ಶತಮಾನದ ದೊಡ್ಡ ಸಾಧ್ಯತೆ.

ಈ ತೆರನ ವರ್ತಮಾನದ ಇಕ್ಕಟ್ಟುಗಳಲ್ಲಿ ದಲಿತತ್ವದ ಪರಿಕಲ್ಪನೆಯನ್ನು ಗಾಯಗೊಂಡ ಬೆಳಗು ಎಂದೇ ಕರೆಯಬೇಕಾಗುತ್ತದೆ. ಗಾಯಗೊಂಡ ಈ ಬೆಳಗು ಮಾಗಿ ವಾಸಿಯಾಗುವುದಕ್ಕೆ ಬುದ್ಧತ್ವದಲ್ಲಿ ದಾರಿ ಇದೆ ಎಂಬುದೆ ದೊಡ್ಡ ವಿಶ್ವಾಸ. ದಲಿತ ಸಮುದಾಯಗಳಿಗೆ ಪರ್ಯಾಯ ರಾಜಕಾರಣವೆಂದರೆ ಮರಳಿ ಜಾತಿಗೆ ಹಿಂತಿರುಗುವುದು ಎಂದಲ್ಲ. ಮರಳಿ ಬುದ್ಧತ್ವದ ಕಡೆಗೆ ಹೊರಳುವುದೇ ಭವಿಷ್ಯದಲ್ಲಿ ಅದಕ್ಕಿರುವ ಏಕೈಕ ದಾರಿ. ದಲಿತ ಪರಂಪರೆಗಳು ಬಹುರೂಪಯಾಗಿದ್ದರೂ ಅವೆಲ್ಲವೂ ಮುಕ್ತಿಯ ದಾಹದಲ್ಲಿ ಒಂದೇ ದಿಕ್ಕಿನ ಪಯಣದವು. ಗತಕಾಲದ ಅವುಗಳ ಸ್ಮೃತಿಯನ್ನು ವರ್ತಮಾನದ ಒತ್ತಡಗಳು ಮರೆಗೆ ಸರಿಸಿರುವುದು ದಿಟ. ಆದರೆ ಇದು ವಿಸ್ಮೃತಿಯಲ್ಲ. ಬಿಡುಗಡೆಯ ದಾರಿಯಲ್ಲಿ ಮಾಡಿಕೊಳ್ಳುವ ಆಯ್ಕೆ ಮತ್ತು ಒಪ್ಪಂದ.

ಬುದ್ಧತ್ವ ಈ ನಿಟ್ಟಿನಲ್ಲಿ ಮರೆಗೆ ಸರಿಸಲ್ಪಟ್ಟಿರುವ ವಿಮುಕ್ತಿಯ ಸಮಷ್ಠಿ ಧ್ಯಾನವನ್ನು ಏಕಾಕಾರಣಗೊಳಿಸಬಲ್ಲದು. ಬುದ್ಧತ್ವ ಎಂದರೆ ತಮ್ಮ ಅಸ್ತಿತ್ವದ ವಿಸ್ತರಣೆಗೆ ಹಾಗೂ ಪುನರ್ ಸೃಷ್ಟಿಗೆ ಇರುವ ಅಪಾರ ಆಯ್ಕೆಯ ಸ್ವಾತಂತ್ರ್ಯವಿಲ್ಲದ ಸಮಾಜ ವ್ಯಕ್ತಿಯ ಮುಕ್ತಿಯ ಹಾದಿಯನ್ನೆ ಮುಚ್ಚಿಬಿಟ್ಟಿರುತ್ತದೆ. ಆಯ್ಕೆ ಎಂದರೆ ಸ್ವಾತಂತ್ರ್ಯದ ಮೊದಲ ಹಂತ. ಈ ಆಯ್ಕೆಯು ಅವರವರ ಅಸ್ತಿತ್ವದ ನೆಲೆಯಾಗಿರುತ್ತದೆ. ಜೀವ ಜಾಲದಲ್ಲಿ ಆಯ್ಕೆಯ ಅವಕಾಶ ಮತ್ತು ಸ್ವಾತಂತ್ರ್ಯವಿದ್ದಾಗ ಜೀವ ಸರಪಳಿಯು ನಿಸರ್ಗದ ತಕ್ಕ ಕ್ರಮದಲ್ಲಿ ವಿಕಾಸವಾಗುತ್ತದೆ. ಭಾರತೀಯ ಸಮಾಜವು ಮೊದಲಿಗೆ ಕೊಡಲಿ ಪೆಟ್ಟನ್ನು ಹಾಕುವುದೇ ಆಯ್ಕೆಯ ವಿಷಯವಲ್ಲ. ಆಯ್ಕೆಯೆ ಇಲ್ಲ ಎಂದರೆ ಇದ್ದುದಕ್ಕೇ ದಾಸ್ಯವಾಗಿ ಬದುಕುವುದು ಎಂದರ್ಥ. ಇಲ್ಲವೇ ತನ್ನ ಅಸ್ತಿತ್ವವನ್ನು ತಾನೇ ನಿರಾಕರಿಸಿಕೊಳ್ಳುವುದೆಂದಾಗುತ್ತದೆ. ಜಾತಿಗಳು ಸದಾ ಒಂದರ ಆಯ್ಕೆಯನ್ನು ಮತ್ತೊಂದು ನಿರ್ಧರಿಸುತ್ತವೆ. ಮೇಲು ಜಾತಿಗಳು ಮಾತ್ರ ಅಪರಿಮಿತವಾದ ಸವಾರ್ಥಾವಕಾಶವನ್ನು ಹೊಂದಿದ್ದು ಅವು ನಿರಂಕುಶ ಅವಕಾಶಗಳಿಂದ ಕೊಬ್ಬಿ ಹೋಗಿರುತ್ತವೆ. ಇದು ಆರೋಗ್ಯವಂತೆ ಸಮಾಜದ ಗುಣವಲ್ಲ. ದಲಿತ ಸಮಾಜದ ಎಲ್ಲ ಆಯ್ಕೆಗಳಲ್ಲು ತಾರತಮ್ಯವಿದ್ದು ಅವುಗಳ ಆಯ್ಕೆಯೆ ಹುಸಿಯಾದದ್ದು. ಮೀಸಲಾತಿ ಎನ್ನುವ ಒಂದು ವ್ಯವಸ್ಥೆ ಸಂವಿಧಾನಬದ್ಧವಾಗಿ ಜಾರಿಯಾಗದೆ ಹೋಗಿದ್ದರೆ ಕಿಂಚಿತ್ ಆಯ್ಕೆಯು ದಲಿತರಿಗೆ ಸಾಧ್ಯವಾಗುತ್ತಿರಲಿಲ್ಲ. ಆಯ್ಕೆಯ ಅವಕಾಶವನ್ನು ಕಸಿದುಕೊಳ್ಳುವ ವ್ಯವಸ್ಥೆಯು ಕುರುಡು ನ್ಯಾಯವನ್ನು ಮಾತ್ರ ಪಾಲಿಸಬ್ಲದು. ಬುದ್ಧ ಈ ದೇಶದ ಸಾಮಾಜಿಕ ವ್ಯವಸ್ಥೆಯು ಭಗ್ನತತ್ವದ ಮೇಲೆ ಅಧಿಕಾರವನ್ನು ಚಲಾಯಿಸುತ್ತದೆ ಎಂದು ತಿಳಿದಿದ್ದರಿಂದಲೇ ಸಮಾಜದ ಲೋಭಿತನದ ಬಗ್ಗೆ ಸರಳವಾಗಿಯೆ ಆದರೆ ಗಾಢವಾದ ಮನುಷ್ಯತ್ವದ ದುರಂತ ಪ್ರಜ್ಞೆಯಿಂದಲೆ ಮನುಷ್ಯ ತನ್ನ ಮಿತಿಗಳನ್ನು ಮೀರಿದರೆ ತಾನೇ ತಾನಾಗಿ ಅಖಂಡ ಆಯ್ಕೆಯನ್ನು ಸ್ವಾತಂತ್ರ್ಯವನ್ನು ಪಡೆಯಬಲ್ಲ ಎಂದು ಸಾರಿದ.

ಬಸವಣ್ಣ ಕೂಡ ಇದೇ ದಾರಿಯಲ್ಲಿ ಬಂದರೂ ಸಹ ಅವರು ತೋರಿದ ಆಯ್ಕೆ ಮಾತ್ರ ಪರಿಮಿತವಾದುದೇ ಆಗಿತ್ತು. ಕಾಯಕದ ಏಕೈಕ ಆಯ್ಕೆಯು ದೀರ್ಘಕಾಲೀನವಾದುದಲ್ಲ. ಬಸವಣ್ಣನವರು ನಿರ್ಮಿಸಿದ ಆಯ್ಕೆಗಳು ಸಮುದಾಯದ ವೃತ್ತಿಗೆ ಸಂಬಂಧಿಸಿದಂತೆ ಇದ್ದವೇ ಹೊರತು ಆ ವೃತ್ತಿ ವ್ಯಾಪ್ತಿಯನ್ನೂ ಮೀರಿದ ಆಯ್ಕೆಗಳು ಅವರ ಚಳುವಳಿಯಲ್ಲಿ ಇರಲಿಲ್ಲ. ವೃತ್ತಿಯನ್ನು ಬಲಪಡಿಸುವ ಆಯ್ಕೆಗಳು ಕಾಲಾನಂತರದಲ್ಲಿ ಹೊಸ ಯುಗದ ಆವಿಷ್ಕಾರಗಳಲ್ಲಿ ಅದೇ ಆಯ್ಕೆಗಳು ಆ ಸಮುದಾಯಕ್ಕೆ ಬಂಧನವೂ ಆಗಿಬಿಡಬಲ್ಲವು. ವೃತ್ತಿಯ ಆಯ್ಕೆಯು ಜಾತಿಯಾಗಿ ಮಾರ್ಪಟ್ಟು ದೊಡ್ಡ ಚರಿತ್ರೆಯೇ ನಮ್ಮ ಮುಂದೆ ಜೀವಂತವಾಗಿದೆ.

ಕರಕುಶಲ ಸಮುದಾಯಗಳೆಲ್ಲವೂ ವಿಶೇಷವಾಗಿ ಹಿಂದುಳಿದ ವರ್ಗಗಳು ಎಂಬುದನ್ನು ನೆನೆದು ಅವುಗಳ ನೆನ್ನೆಯ ಆಯ್ಕೆಯು ಇಂದು ಯಾವ ಬಗೆಯ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಟ್ಟಿವೆ. ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಕರಕುಶಲ ಸಮುದಾಯಗಳ ಆಯ್ಕೆಗಳು ಸ್ವಯಂ ಆಯ್ಕೆಗಳಾಗಿರಲಿಲ್ಲ. ಹೇರಲ್ಪಟ್ಟ ಆಯ್ಕೆಗಳಾಗಿದ್ದು. ದಲಿತರ ಕಸುಬುಗಳು ಸ್ವಯಂ ಆಯ್ಕೆಯಾಗಿರಲಿಲ್ಲ. ಕೆಳ ಮಧ್ಯಮ ಜಾತಿಗಳ ಉತ್ಪಾದನಾ ಕೌಶಲ್ಯಕೂಡ ಊಳಿಗಮಾನ್ಯ ಸಮಾಜದ ನಿರ್ದೇಶನದಂತೆ ಆಯ್ಕೆ ಮಾಡಿಕೊಂಡಂತವೇ ಆಗಿದ್ದವು. ಕಮ್ಮಾರ, ಚಮ್ಮಾರ, ಕುಂಬಾರ, ಅಗಸ, ಭೋವಿ ತರದ ನೂರಾರು ವೃತ್ತಿ ಪಂಗಡಗಳ ಆಯ್ಕೆಯಲ್ಲಿ ಆರ್ಥಿಕ ಅಧಿಕಾರ ಇರಲೇ ಇಲ್ಲ. ಕ್ರಮಕ್ಕೆ ಮಾತ್ರ ಮಾನ್ಯತೆ ಇತ್ತೆ ವಿನಹ ಪ್ರತಿಫಲಕ್ಕೆ ಅವಕಾಶವಿರಲಿಲ್ಲ. ಕರ್ಮಸಿದ್ಧಾಂತವು ಈ ಆಯ್ಕೆಗಳೆಲ್ಲವೂ ಅಂತಿಮವಾಗಿ ಪರರ ಸುಖಕ್ಕಾಗಿಯೇ ಯೋಜಿಸಲ್ಪಟ್ಟಿದ್ದವು. ಹೀಗಾಗಿ ಹಿಂದುಳಿದ ಈ ಕರಕುಶಲ ಹಾಗೂ ದಲಿತ ಸಮುದಾಯಗಳು ವೃತ್ತಿಯ ಕೌಶಲ್ಯದಲ್ಲಿ ಪಳಗಿದವೇ ಹೊರತು ವೃತ್ತಿಯ ಹಕ್ಕುಬಾಧ್ಯತೆಗಳಲ್ಲಿ ಅವು ಮೌನವಹಿಸಿಕೊಂಡೇ ಬರಬೇಕಾಯಿತು. ಚಾಣಕ್ಯನ ಅರ್ಥಶಾಸ್ತ್ರವೆ ಪರೋಕ್ಷವಾಗಿ ಕರಕುಶಲ ಸಮುದಾಯಗಳ ಪಾಲಿಗೂ ಜಾರಿಗೊಂಡಿದ್ದು ಸ್ವಾವಲಂಬನೆಗೆ ಇಲ್ಲಿ ಅವಕಾಶವೆ ಇರಲಿಲ್ಲ. ಹೀಗಾಗಿಯೇ ಉದ್ದಕ್ಕೂ ಹಿಂದುಳಿದ ವರ್ಗಗಳಿಗೆ ಉತ್ಪಾದನಾ ಶಕ್ತಿ ಇದ್ದೂ ಕೂಡ ಅವು ಸ್ವಾವಲಂಬಿ ಸಮುದಾಯಗಳಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಇಂದಿಗೂ ಕೂಡ ಈ ಎಲ್ಲ ಹಿಂದುಳಿದ ವೃತ್ತಿ ಸಮೂಹಗಳು ಆರ್ಥಿಕವಾಗಿಯೂ ಸಂಘಟಿತವಾಗಲಾರವು. ವೃತ್ತಿಗಳಿಗೂ ಜಾತಿ ಮತ್ತು ಲಿಂಗತಾರತಮ್ಯಗಳ ಶಾಪವಿದೆ. ಪರಂಪರಾನುಗತವಾಗಿ ಬಂದ ವೃತ್ತಿಯನ್ನು ಆಧುನಿಕ ಉತ್ಪಾದನಾ ವ್ಯವಸ್ಥೆಯಲ್ಲಿ ಅನ್ವಯಿಕಗೊಳಿಸಿ ಅವುಗಳ ಸ್ವಾಮ್ಯವನ್ನು ಪಡೆಯುವುದೂ ಕೂಡ ಇವತ್ತಿನ ಬೃಹತ್ ಆರ್ಥಿಕ ಪ್ರವಾಹದಲ್ಲಿ ಈ ಸಮುದಾಯಗಳಿಗೆ ಅಸಾಧ್ಯವಾಗಿದೆ. ಆಯ್ಕೆಯೇ ಎಷ್ಟೋ ಬಾರಿ ದಲಿತ ಸಮುದಾಯಗಳಿಗೆ ಶಿಕ್ಷೆಯಾದದ್ದಿದೆ. ಬದುಕಲು ಮಾಡಿಕೊಳ್ಳುವ ಆಯ್ಕೆಯೇ ದಂಡನೆಯಾಗುವ ದುರಂತವನ್ನು ಸದಾ ಇಂತಹ ಸಮೂಹಗಳು ಅನುಭವಿಸುತ್ತಲೆ ಇರುತ್ತವೆ.

ಬುದ್ಧತ್ವ

ಬುದ್ಧತ್ವವು ಆಯ್ಕೆಯ ಮೂಲಕವೇ ವ್ಯಕ್ತಿಯ ಸಾಕ್ಷಾತ್ಕಾರವಿದೆ ಎಂದು ನಂಬುತ್ತದೆ. ವ್ಯಕ್ತಿಗಳಿಗೆ ನೀಡುವ ಆಯ್ಕೆಯ ಸಾಮಾಜಿಕವಾದ ಅವಕಾಶಗಳಾಗಿ ಮಾರ್ಪಡುತ್ತವೆ. ಅಂಬೇಡ್ಕರ್ ಮಾಡಿಕೊಂಡ ಆಯ್ಕೆಯು ಸಮುದಾಯದ ಅವಕಾಶವಾಗಿ ಬೆಳೆಯಿತು. ಮಂಟೇಸ್ವಾಮಿ ಹಾಗೂ ಮಾದೇಶ್ವರರು ಮಾಡಿಕೊಂಡ ಆಯ್ಕೆಯು ಸಾಂಸ್ಕೃತಿಕವಾದುದಾಗಿತ್ತೇ ಹೊರತು ವರ್ತಮಾನದ ಭೌತಿಕ ಆಯ್ಕೆಯಲ್ಲಿ ಅವರು ಆಸಕ್ತಿ ವಹಿಸಲಿಲ್ಲ. ಸಾಂಸ್ಕೃತಿಕ ವಿಶ್ವಾಸಾತ್ಮಕ ನೆಲೆಯಲ್ಲಿ ಅಖಂಡ ವಿಶ್ವವೇ ಅವರಿಗೆ ಕಿರಿದು. ಜಗತ್ತನ್ನು ಮೀರಿ ಅಲೌಕಿಕದ ಸೆಳೆತವನ್ನೂ ದಾಟಿ ಅಖಂಡವಾದ ಪ್ರಜ್ಞೆಯಲ್ಲಿ ಎಲ್ಲವೂ ತನ್ನದೇ ಈ ಎಲ್ಲವೂ ತನಗೆ ಅಗತ್ಯವಿಲ್ಲ ಎಂಬ ಧಾರ್ಷ್ಟ್ಯ ಅವರಿಗಿದ್ದ ಕಾರಣವಾಗಿಯೇ ಲೌಖಿಕದಲ್ಲಿ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅಲೌಖಿಕದಲ್ಲಿ ವಿಶ್ವಾಸಾತ್ಮಕವಾಗಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯವೆನಿಸಿತು.

ಇಂತಹ ಧೋರಣೆಯು ಬಹುಪಾಲು ದಲಿತ ಪರಂಪರೆಯ ಉದ್ದಕ್ಕೂ ಸಾಗಿ ಬಂದಿದೆ. ದಲಿತರ ತತ್ವ ಪದಗಳಲ್ಲಂತು ಇಂಥ ಭಾವವು ಮಡುಗಟ್ಟಿನಿಂತಿದೆ. ಎಲ್ಲ ವತ್ತಮಾಣದ ಆಯ್ಕೆಯು ಕ್ಷಣಿಕವಾದುದು ಎಂದು ಕೆಳಜಾತಿಗಳು ಆತ್ಯಂತಿಕವಾಗಿ ನಂಬುತ್ತ ಬಂದದ್ದು ಕೂಡ ಇಂದಿನ ಅವರ ಆಯ್ಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ. ಮಂಟೇಸ್ವಾಮಿ ಮತ್ತು ಮಾದೇಶ್ವರರು ದಲಿತ ಸಮೂಹಕ್ಕೆ ನೀಡಿದ ಸಂದೇಶವು ವಿಶ್ವಾತ್ಮಕ ಆಯ್ಕೆಗೆ ಮಾತ್ರವೇ ತಮ್ಮನ್ನು ತಾವು ಹದಗೊಳಿಸಿಕೊಳ್ಳಬೇಕು ಎಂಬುದು ಅಮೂರ್ತವಾಗಿ ಅವರ ಬಗೆಗಿನ ಕಾವ್ಯಗಳಲ್ಲಿ ಕಾಣಸಿಗುತ್ತದೆ. ತಳಪಾಯದ ಸಮಾಜಗಳಿಗಿರುವ ದೊಡ್ಡ ಶಾಪ ಏನೆಂದರೆ ಎಲ್ಲವನ್ನೂ ದೈವಿಕವಾಗಿ ಆರಾಧಿಸಿ ತನ್ನ ಆಯ್ಕೆಯನ್ನು ಆ ಬಗೆಯ ಭಾವನೆಯಲ್ಲಿ ಕಳೆದುಕೊಳ್ಳುವುದು. ಪರಹಿತದ ಈ ಆಶಯವು ವರ್ತಮಾನದ ದಲಿತ ಸಮೂಹಗಳ ಮೇಲೆ ಒಳ್ಳೆಯ ಪರಿಣಾಮವನ್ನೇನು ಬೀರಿಲ್ಲ. ಆಧ್ಯಾತ್ಮಿಕವಾದ ದಂಗೆಗಳಲ್ಲಿ ದಿಗ್ವಿಜಯವಾಗುವ ದಲಿತ ಪರಂಪರೆಗಳು ವರ್ತಮಾನದ ಲೌಖಿಕ ವ್ಯವಸ್ಥೆಯ ಮುಂದೆ ದೀನವಾಗಿ ಸೋಲುತ್ತಿರುತ್ತವೆ. ಮಾದೇಶ್ವರ ಮಂಟೇಸ್ವಾಮಿಯವರು ಆಧ್ಯಾತ್ಮಿಕವಾದ ದಂಗೆಯಲ್ಲಿ ಯಶಸ್ವಿಯಾದರು ತಮ್ಮ ಸಮೂಹಗಳಿಗೆ ಲೌಖಿಕದ ಆಯ್ಕೆಗಳಲ್ಲಿ ಕುರುಹುಗಳನ್ನು ಬಿಟ್ಟು ಹೋಗಲಿಲ್ಲ. ಅಂಬೇಡ್ಕರ್ ಲೌಖಿಕದ ಆಯ್ಕೆಯ ಮೂಲಕವೇ ಆಧ್ಯಾತ್ಮಿಕ ದಂಗೆಗೆ ಬೇಕಾದ ಪರಿಸರವನ್ನು ನಿರ್ಮಿಸಲು ಯತ್ನಿಸಿದರು. ಬೌದ್ಧ ಧರ್ಮಕ್ಕೆ ಮತಾಂತರವಾಗುವ ಅವರ ಕ್ರಮವು ಆಧ್ಯಾತ್ಮಕ ದಂಗೆಯು ಒಂದು ಹಂತವಷ್ಟೇ. ಇಂತಹ ಸ್ಥಿತಿಯು ಆಯಾ ಸಮುದಾಯಗಳ ಆಯ್ಕೆಯ ಪ್ರವೃತ್ತಿಯನ್ನು ಜಾಗೃತಗೊಳಿಸಿ ಆಧುನಿಕ ಜಗತ್ತಿನಲ್ಲಿ ಅಸ್ತಿತ್ವ ಕಾಯ್ದುಕೊಳ್ಳಲು ಬೇಕಾದ ಇಚ್ಛಾಶಕ್ತಿಯನ್ನು ಒಂದಿಷ್ಠಾದರೂ ತುಂಬಬಲ್ಲದು. ಬುದ್ಧತ್ವವು ದಲಿತ ಸಮಾಜದ ತಳಹದಿಯಾಗಿ ಪುನರ್ ರಚಿತವಾದಾಗ ಅವರ ಆಯ್ಕೆಗಳು ಅಪರಿಮಿತವಾಗಬಲ್ಲವು.

ಬುದ್ಧತತ್ವದಲ್ಲಿ ಅಂಬೇಡ್ಕರ್ ಅವರಿಗೆ ಸಮಾನತೆ ಕಂಡಿತ್ತು ಎಂದು ಹೇಳಿದರೆ ಸಾಲದು. ಅಖಂಡವಾದ ಮಾನವೀಯತೆ ಬುದ್ಧತ್ವದಲ್ಲಿ ಸರಳ ತತ್ವವಾಗಿ ಬೆಳಕಾಗಿತ್ತು. ಎಲ್ಲ ಗಡಿಗಳನ್ನು ಮೀರುವ ದರ್ಶನ ಬುದ್ಧತವದಲ್ಲಿತ್ತು. ಅದೇ ವೇಳೆಗೆ ಲೌಖಿಕದ ಆಯ್ಕೆಗಳಲ್ಲಿಯೇ ಮುಕ್ತಿ ಇದೆ ಎಂಬುದನ್ನು ಬುದ್ಧನ ನೀತಿಯು ಸೂಚಿಸಿತ್ತು. ಈ ಬಗೆಯ ಸ್ವಭಾವ ಹಿಂದೂ ಧರ್ಮದ ಯಾವ ಕರ್ಮದಲ್ಲು ಕಾಣಿಸಲು ಸಾಧ್ಯವಿರಲಿಲ್ಲ. ಭಗವದ್ಗೀತೆಯು ಕರ್ತವ್ಯದ ದಾಸನಾಗುವುದೇ ಪರಮಸುಖ ಎಂದು ಸುತ್ತಿ ಬಳಸಿ ಹೇಳುತ್ತದೆ. ಕರಕುಶಲ ಸಮುದಾಯಗಳು ಕರ್ತವ್ಯದ ದಾಸ್ಯಕ್ಕೆ ಒಳಗಾದವು. ಆ ಮೂಲಕ ಜಾತಿ ಪದ್ಧತಿಯ ಭೇದವನ್ನೂ ಅನುಸರಿಸಿದವು. ಅವರವರ ಕರ್ಮವು ಅವರವರ ಪೂರ್ವಜನ್ಮದ ಫಲ ಎಂದು ಸಾರುವಲ್ಲಿಯೇ ಸಮುದಾಯಗಳ ಆಯ್ಕೆಗಳು ನಿಷೇಧಿಸಲ್ಪಟ್ಟಿರುತ್ತವೆ.

ಅಂಬೇಡ್ಕರ್ ಬುದ್ಧತ್ವವನ್ನು ಸಂವಿಧಾನದಲ್ಲಿ ಅಳವಡಿಸಿದರು. ಗಾಂಧೀಜಿಯು ಅಂತಃಕರಣದಲ್ಲು ಬುದ್ಧತತ್ವವು ಅಂತರ್ಗತವಾಗಿತ್ತು. ಇವರಿಬ್ಬರ ದಲಿತಪರ ಸಂವೇದನೆಯು ಸ್ವರೂಪದಲ್ಲಿ ಭಿನ್ನವೆಂಬುದು ನಿಜವಿದ್ದರೂ ಕೆಲವು ಘಟನೆಗಳಲ್ಲಿ ವೈರುಧ್ಯವಿದ್ದರೂ ಅಂತರಾಳದಲ್ಲಿ ಆತ್ಯಂತಿಕೆ ತುಡಿತದಿಂದಲೇ ಸಾಮಾಜಿಕ ನ್ಯಾಯದ ಆಧ್ಯಾತ್ಮವನ್ನು ಗಾಢವಾಗಿ ಪ್ರತಿಪಾದಿಸಿದರು. ಅಂಬೇಡ್ಕರ್ ತನ್ನ ಭಗ್ನಗೊಂಡ ಸಮುದಾಯಗಳ ಬಿಡಿ ಅನನ್ಯತೆಯನ್ನು ಸಂವಿಧಾನದ ಕಕ್ಷೆಯ ಮೂಲಕ ಒಂದು ಮಾಡಲು ತೊಡಗಿದರು. ಇಡೀ ಸಂವಿಧಾನದ ತಿರುಳು ಬುದ್ಧತತ್ವವೇ ಆಗಿದೆ. ಅಪರಿಮಿತ ಆಯ್ಕೆ ಮತ್ತು ಸ್ವಾತಂತ್ರ್ಯಗಳ ಕಡೆಗೆ ಸಮಾಜ ವಿಕಾಸವಾಗಬೇಕು ಎಂಬುದು ಸಂವಿಧಾನದ ಮೂಲಕ ಆಶಯ. ಇದು ಒಡ ಮೂಡಿದ್ದು ಬುದ್ಧತತ್ವದ ಮೂಲಕವೇ. ಸಮಾಜಗಳು ಅಭಿವೃದ್ಧಿ ಆಗುವುದು ಎಂದರೆ ಬದುಕುವ ಆಯ್ಕೆಯಲ್ಲಿ ಯಾವ ಬಗೆಯಲ್ಲೂ ಸಮುದಾಯಗಳಿಗೆ ಆತಂಕವಿರಬಾರದು ಹಾಗೂ ಅಪ್ರಾಮಾಣಿಕತೆಯಲ್ಲೇ ಸದಾ ಸಂಘರ್ಷದಲ್ಲಿರುತದೆ. ಇದು ಅಭಿವೃದ್ಧಿಗೆ ಮಾರಕ. ಬುದ್ಧತತ್ವವು ನಿರಾತಂಕವಾದ ಮಾನವ ಪ್ರೇಮದ ಸ್ವಚ್ಛ ವ್ಯಕ್ತಿತ್ವದ ವೈಚಾರಿಕ ನೀತಿಯನ್ನು ಅನುಸರಿಸಲು ಒತ್ತಾಯಿಸುತ್ತದೆ. ಅಂಬೇಡ್ಕರ್ ಅವರ ಚಿಂತನೆಯಲ್ಲೂ ಇಂತದೇ ಒಲವಿದೆ.

ಇಪ್ಪತ್ತೊಂದನೇ ಶತಮಾನದ ಜೊತೆ ಪಯಣಕ್ಕೆ ಸಿದ್ಧವಾಗಿರುವ ದಲಿತ ಸಮುದಾಯಗಳು ಚರಿತ್ರೆಯಿಂದ ಅನೇಕ ಪೆಟ್ಟುಗಳಿಂದ ಪಾಠವನ್ನು ಕಲಿತಿವೆ. ರಾಜಕಾರಣವು ನಿರ್ಣಾಯಕವಾದ ಹೊಸದೊಂದು ಸಮ್ಮಿಶ್ರ ಒಕ್ಕೂಟಕ್ಕೂ ತನ್ನನ್ನು ತಾನು ಪರೀಕ್ಷಿಸಿಕೊಳ್ಳುತ್ತಿದೆ. ಒಕ್ಕೂಟ ರಾಜಕಾರಣವು ಬಿಡಿಯಾದ ಒಪ್ಪಂದಗಳಿಂದಲೇ ತಮ್ಮ ಅಸ್ತಿತ್ವಕ್ಕೆ ಬೇಕಾದ ಶಕ್ರಿಯನ್ನು ತಂದುಕೊಳ್ಳುತ್ತಿವೆ. ಇಂತಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳು ಸಾಂಪ್ರದಾಯಿಕ ಶಕ್ತಿ ರಾಜಕಾರಣದ ಜೊತೆ ಪೈಪೋಟಿ ಮಾಡುವುದು ಸೂಕ್ತವಾದ ಆಯ್ಕೆಯಲ್ಲ. ಶಕ್ತಿಗೆ ಬದಲು ಯುಕ್ತಿಯನ್ನೆ ದಲಿತ ರಾಜಕಾರಣವು ಅನುಸರಿಸಬೇಕಾದಿದ್ದೆ. ಈ ಯುಕ್ತಿಯು ಬುದ್ಧತತ್ವದ ಮೂಲಕ ಪರಿಷ್ಕಾರಗೊಳ್ಳಬೇಕು. ಜಾತಿ ವಿನಾಶವೊಂದೇ ದಲಿತ ರಜಕಾರಣದ ಗುರಿಯಾಗಬೇಕಾದ್ದಿಲ್ಲ. ಹಾಗೆ ನೋಡಿದರೆ ಅದು ಉಳಿದವರಂತೆ ಜಾತಿಗಳ ಮೂಲಕವೆ ರಾಜಕಾರಣದ ಮೊದಲ ಹಂತಗಳನ್ನು ದಾಟಬೇಕಾಗಿದೆ. ಜಾತಿ ವಿನಾಶದ ಹೋರಾಟದ ಮೂಲಕವೆ ದಲಿತರು ರಾಜಕೀಯದಲ್ಲಿ ಫಲಿತಂಶ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಜಾತಿಯು ಎಲ್ಲೆಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೊ ಅಲ್ಲೆಲ್ಲ ದಲಿತ ರಾಜಕಾರಣವು ಬುದ್ಧನ ತಿಳುವಳಿಕೆಯನ್ನು ಬಿತ್ತಬೇಕಾಗುತ್ತದೆ. ಇಲ್ಲವಾದರೆ ಅದರ ತಾತ್ವಿಕತೆಯು ಕೇವಲ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ಜಾರಿ ಬೀಳುತ್ತದೆ.

ಬುದ್ಧನ ತತ್ವ ಯಾವತ್ತೂ ಅರಾಜಕತೆಯನ್ನು ಒಪ್ಪಲಾರದು. ಸಾಮಾಜಿಕ ವ್ಯವಸ್ಥೆಯು ಮಾನವೀಕರಣಗೊಳ್ಳುತ್ತಲೆ ಸಾಗಿ ನಾಗರಿಕತೆಯು ತನ್ನ ನೈತಿಕತೆಯನ್ನು ಎಂದಿಗೂ ಉಳಿಸಿಕೊಳ್ಳಬೇಕು ಎಂಬುದನ್ನು ಬುದ್ಧನ ಚಿಂತನೆಗಳು ಮಂಡಿಸಿವೆ. ದಲಿತ ದಮುದಾಯಗಳು ಸಾಂಸ್ಕೃತಿಕವಾಗಿ ಬುದ್ಧನ ಧ್ಯಾನದಲ್ಲೇ ಸಾಗಬೇಕು. ಹಳೆಯ ಸಂಸ್ಕೃತಿಗಳು ಸೀಮಿತವಾದ ಆಯ್ಕೆಗಳಲ್ಲಿ ಸುಖವಾಗಿದ್ದವು. ಆಧುನಿಕ ಜಗತ್ತು ವಿಸ್ತರಿಸಿದಂತೆಲ್ಲ ಆಯ್ಕೆಗಳು ಮತ್ತೂ ಕಿರಿದಾಗಿ ಬಿಟ್ಟಿವೆ. ಬಹುಬಗೆಯ ಆಯ್ಕೆಗಳಿರುವಂತೆ ಕಂಡರೂ ವಾಸ್ತವರಲ್ಲಿ ಅವು ಹುಸಿ ಆಯ್ಕೆಗಳನ್ನೇ ತೋರುತ್ತಿರುತ್ತಿವೆ. ಆಧುನಿಕ ಸಮಾಜಗಳು ಬೆಳೆಯುವ ವೇಗದಲ್ಲಿ ದಲಿತ ಸಮಾಜವು ಬೆಳೆಯಲು ಆಗದಿರುವುದು ಈ ಕಾರಣದಿಂದಲೂ ಆಗಿದೆ.

ಬುದ್ಧತತ್ವವನ್ನು ಹಿಡಿಯಾಗಿ ರಾಜಕಾರಣದಲ್ಲಿ ವಿಲೀನಗೊಳಿಸುವುದು ಅಷ್ಟು ಸುಲಭ ಅಲ್ಲ ಎಂಬ ವಾಸ್ತವದ ಅರಿವಿನ ಜೊತೆಯಲ್ಲೆ ಹೇಗೆ ಇಡೀ ದಲಿತ ಸಮುದಾಯಗಳೇ ಬುದ್ಧತತ್ವದ ಕಡೆಗೆ ಪಯಣಿಸಬೇಕು ಎಂಬುದರ ಕಡೆಗೆ ನಮ್ಮ ಪ್ರಯತ್ನಗಳು ಮುಖ್ಯವಾಗುತ್ತವೆ. ಬುದ್ಧ ಧರ್ಮದ ಕಡೆಗೆ ದಲಿತರು ಮತಾಂತರವಾಗುವುದೇ ಎಲ್ಲ ಸಾಮಾಜಿಕ ಅನಿಷ್ಠಗಳಿಗೂ ಮದ್ದು ಎಂದು ಅಂಬೇಡ್ಕರ್ ಅವರು ಭಾವಿಸಿದ್ದರು. ಇವತ್ತಿಗೂ ಇಂತಹ ಮತಾಂತರದ ಯತ್ನಗಳು ನಡೆಯುತ್ತಲೆ ಇವೆ. ಹೀಗೆ ಬುದ್ಧ ಧರ್ಮದಲ್ಲಿ ವಿಲೀನಗೊಂಡ ಮಾತ್ರಕ್ಕೆ ದೇಶದ ಎಲ್ಲ ದಲಿತರ ಸಮಸ್ಯೆ ಬಗೆಹರಿದು ಬಿಡುತ್ತವೆಯೇ ಎಂಬ ಪ್ರಶ್ನೆಗಳೂ ಇವೆ. ಬುದ್ಧ ಧರ್ಮದಲ್ಲೂ ಕೂಡ ದಲಿತ ಬೌದ್ಧರು ಎಂಬ ಪಂಗಡ ಇದೆಯೆಲ್ಲಾ ಎಂಬ ಹತಾಶೆಯೂ ನಮ್ಮ ವಿಚಾರಗಳ ಜೊತೆಯೇ ಇದೆ. ಅಲ್ಲದೆ ಈಗಾಗಲೆ ಬೌದ್ಧಧರ್ನ ಕೂಡ ಹಿಂದೂ ಪುರೋಹಿತಶಾಹಿ ವಿನ್ಯಾಸಗಳನ್ನು ತನ್ನಲ್ಲಿ ಅಳವಡಿಸಿಕೊಂಡಿಲ್ಲವೇ ಎಂಬ ಗಂಭೀರ ಆರೋಪವೂ ಇದೆ. ಇವೆಲ್ಲ ನಿಜ ಕೂಡ. ಹೀಗೆ ವರ್ತಮಾನವು ದಲಿತ ವಿಮುಕ್ತಿಯ ಸಾಧ್ಯತೆಗಳನ್ನು ಕಬಳಿಸುತ್ತಿವೆ ಎಂಬ ಕೂಡಲೇ ಹಿಂಜರಿಯಬೇಕಾದ್ದಿಲ್ಲ. ದಲಿತ ಸಮುದಾಯಗಳ ಆಳದ ಸಾಂಸ್ಕೃತಿಕ ಭಿತ್ತಿಯಲ್ಲಿ ಬುದ್ಧತ್ವದ ಅಂತರ್ಜಲವಿದೆ. ದಲಿತ ಸಮುದಾಯಗಳು ಎಂದೂ ಯಾವುದಕ್ಕೂ ಅತಿಯಾಸೆಪಟ್ಟವಲ್ಲ. ಭೌತಿಕ ಜಗತ್ತಿನ ಆಯ್ಕೆಗಳು ಕ್ಷಣಿಕ ಎಂದು ನಿರಾಕರಿಸಿದ್ದಕ್ಕೆ ದಲಿತ ಪರಂಪರೆಯಲ್ಲಿ ಅಪಾರ ಸಾಕ್ಷ್ಯವಿದೆ. ಸ್ವತಃ ಸ್ವಯಂ ಬುದ್ಧನೇ ಸಾಮ್ರಾಜ್ಯದ ಸರ್ವಸ್ವವನ್ನು ತ್ಯಜಿಸಿ ಅನಾದರ ಬದುಕಿನ ನರಕ ಕಂಡು ಬೆಳಕನ್ನು ಹುಡುಕುತ್ತ ಓಡಿ ಹೋಗಿ ಮರಳಿ ಜನ ಸಾಮಾನ್ಯರ ಮನೆಗಳಿಗೆ ಬಂದು ಬೆಳಕಾದವನು ದಲಿತರು ಆಸೆಯನ್ನು ತ್ಯಜಿಸಿ ಸರಳ ನೈಸರ್ಗಿಕ ಜೀವನದಲ್ಲಿ ಮುಕ್ತಿಯನ್ನು ಹುಡುಕಿದವರು. ಅವರ ಜನಪದ ಕತೆಗಳ ವಿನ್ಯಾಸದಲ್ಲೆ ಆಶಯದಲ್ಲೆ ಬುದ್ಧ ತನ್ನ ನೀತಿಯನ್ನು ಬೋಧಿಸಿದ. ಜನಸಾಮಾನ್ಯರ ನುಡಿಗಟ್ಟಿನ ನಾಡಿ ಬಡಿತವನ್ನು ಬುದ್ಧ ತಿಳಿದಿದ್ದಂತೆಯೇ ಬುದ್ಧನ ಅಂತಃ ಸತ್ವವನ್ನು ದಲಿತರು ಕೂಡ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಮಧ್ಯಕಾಲೀನ ಊಳಿಗಮಾನ್ಯ ವ್ಯವಸ್ಥೆಯು ದಲಿತರ ಮೇಲೆ ಕ್ರೂರ ಆಳ್ವಿಕೆಯನ್ನು ನಡೆಸುವಾಗಲೂ ದಲಿತರು ಹಿಂಸೆಗೆ ಬೀಳಲಿಲ್ಲ. ಅಹಿಂಸೆ ದಲಿತ ಜೀವನದ ಅವಿಭಾಜ್ಯ ಅಂಗ. ಅವರು ಬೇಟೆ ಆಡಿ ಮಾಂಸಾಹಾರ ಪದ್ಧತಿಯನ್ನು ಅನುಸರಿಸಿದ ಮಾತ್ರಕ್ಕೆ ಅವರು ಹಿಂಸೆಯನ್ನು ಪ್ರತಿನಿಧಿಸುತ್ತಾರೆ ಎಂದಲ್ಲ. ಹಿಂಸೆಯ ವ್ಯಾಖ್ಯೆಯೆ ಸರಿಯಾಗಿ ಆಗಿಲ್ಲ. ಜಾತಿ ವ್ಯವಸ್ಥೆಯಷ್ಟು ಬರ್ಬರ ಹಿಮಸೆ ಮತ್ತೊಂದಿಲ್ಲ.

ಬುದ್ಧ ಈ ಬರ್ಬರ ಹಿಂಸೆಯನ್ನು ಅಹಿಂಸಾ ನೆಲೆಯಲ್ಲಿ ವಿರೋಧಿಸಿದ. ದಲಿತ ಪರಂಪರೆಯ ಎಲ್ಲ ಸಾಂಸ್ಕೃತಿಕ ನಾಯಕರು ಕೇಡಿನ ವಿರುದ್ಧ ಅಹಿಂಸೆಯ ದಾರಿಯಲ್ಲೆ ಪರಿವರ್ತಿಸಲು ತೊಡಗಿದರು. ದಲಿತ ಸಮುದಾಯಗಳು ಒಂದು ವೇಳೆ ಹಿಂಸೆಯ ಮಾರ್ಗಕ್ಕೆ ಇಳಿದಿದ್ದರೆ ಈ ದೇಶವನ್ನು ಎಷ್ಟು ಬಾರಿ ಸುಟ್ಟು ಬಿಡಬಲ್ಲವರಾಗಿದ್ದರೊ! ಎಲ್ಲ ಬಗೆಯ ಹಿಂಸೆಯನ್ನು ಸಹಿಸುವ ಅಪಾರವಾದ ತಾಳ್ಮೆಯು ಅವರಿಗೆ ತಮ್ಮ ಪರಂಪರೆಯಿಂದ ದತ್ತವಾಗಿದೆ. ಹಿಂಸಿಸುವುದಕ್ಕಿಂತಲೂ ಬುಹುದೊಡ್ಡ ಶಕ್ತಿಯಾವುದೆಂದರೆ ಹಿಂಸೆಯನ್ನು ಸಹಿಸಿಕೊಳ್ಳುವುದು. ದ್ವೇಷಕ್ಕಿಂತ ದೈತ್ಯಶಕ್ತಿಯಾವುದೆಂದರೆ ಪ್ರೀತಿ. ಎಲ್ಲ ಸ್ಪೋಟಕ್ಕಿಂತ ಆತ್ಯಂತಿಕ ಶಕ್ತಿ ಯಾವುದೆಂದರೆ ತಾಳ್ಮೆ. ಮಹಾತ್ಮಗಾಂಧಿಗೂ ಬಾಬಾಸಾಹೇಬ ಅಂಬೇಡ್ಕರ್ ಅವರಿಗೂ ಇಂತಹ ಶಕ್ತಿಯು ಇದ್ದಿದ್ದ ದಲಿತರು ವಹಿಸಿದ ಕಾಲಾಂತರದ ಅಹಿಂಸೆಯು ಈ ದೇಶವನ್ನು ಕಾಪಾಡಿದೆ. ಹಿಂದುಳಿದ ವರ್ಗಗಳು ತೋರಿದ ತಾಳ್ಮೆಯಿಂದ ಈ ದೇಶದ ಉತ್ಪಾದನಾ ಶಕ್ತಿ ಹೆಚ್ಚಿದೆ. ಈ ದೇಶದ ಅರ್ಧದಷ್ಟು ಮಹಿಳೆಯರು ತೋರಿದ ಪ್ರೀತಿಯಿಂದ ಈ ಸಮಾಜಗಳು ಬದುಕುಳಿದಿವೆ. ಇಂತಹ ನೀತಿಯೆ ಬುದ್ಧ ತತ್ವವೂ ಹೌದು ದಲಿತತ್ವವೂ ಹೌದು.

ಅಹಿಂಸೆಯ ಮಹೋಪಮೆಗಳು ಜನಪದರ ಸಾಹಿತ್ಯದಲ್ಲಿ ಅಪಾರವಾಗಿವೆ. ಇಂತಹ ಪದಗಳನ್ನು ಕಟ್ಟಿ ಹಾಡಿ ಜೀವನಕ್ಕೆ ಅಳವಡಿಸಿಕೊಂಡ ದಲಿತ ಸಮಾಜವು ಜೀವನದ ಸಾಕ್ಷಾತ್ಕಾರಕ್ಕೆ ಅಹಿಂಸೆಯೇ ಮೂಲ ಎಂದು ನಂಬಿದವರು. ಅವರ ಉಗ್ರ ಆಚರಣೆಗಳು ಭೀಭತ್ಸವಾಗಿದ್ದರೂ ಅವುಗಳ ಹಿಂದಿನ ಆಶಯ ಅಪರಿಮಿತವಾದ ಮಾನವೀಯತೆಯನ್ನು ಹೊಂದಿರುತ್ತವೆ. ಹಿಂಸೆಯ ಆನಂದ ಮಾತ್ರ ಅತ್ಯಂತ ದೂರವಾದ ಹಿಂಸೆ. ದಲಿತ ಸಮಾಜವು ತನ್ನ ಆಚರಣೆಗಳ ಸಂದರ್ಭದಲ್ಲಿ ಮಾಡುವ ಬಲಿ ವಿಧಾನಗಳು ಆನಂದಕ್ಕಾಗಿ ಮಾಡಿಕೊಂಡವಲ್ಲ. ನಿಸರ್ಗವನ್ನು ಆರಾಧಿಸುವ ಕಾರಣಕ್ಕಾಗಿ ಅಂತಹ ಆದಿಮ ವರ್ತನೆಗಳು ಉಳಿದುಕೊಂಡಿವೆ. ಇಲ್ಲಿ ಮುಖ್ಯವಾದದ್ದೇನೆಂದರೆ ಮಾನವತ್ವದ ವಿರುದ್ಧ ದಲಿತ ಸಮುದಾಯಗಳು ವರ್ತಿಸುತ್ತಿಲ್ಲ. ದಲಿತ ಸಂಸ್ಕೃತಿಯು ಕಾಲದಿಂದ ಕಾಲಕ್ಕೆ ವಿಕಾಸಗೊಂಡು ಉದ್ದಕ್ಕೂ ತಾಳ್ಮೆಯಿಂದಲೇ ತನ್ನ ಸುತ್ತಲ ಪರಿಸರವನ್ನು ಮಮಕಾರದಿಂದ ಕಂಡಿದೆ. ಮಾನವ ದ್ವೇಷ ದಲಿತ ಸಮಾಜಕ್ಕೆ ಮುಖ್ಯವಾಗಿ ಬಿಟ್ಟಿದ್ದಿದ್ದರೆ ಅದರ ಪರಂಪರೆಯಲ್ಲಿ ಯಾವುದೇ ಒಂದು ಒಳ್ಳೆಯ ಅಂಶವೂ ಉಳಿದಿರುತ್ತಿರಲಿಲ್ಲ. ಬುದ್ಧ ಈ ಕಾರಣಕ್ಕಾಗಿಯೆ ಜನಸಾಮಾನ್ಯರ ಭೌಷೆಯ ನಾಡಿಯನ್ನು ಹಿಡಿದು ಅಹಿಮಸೆಯ ಇಂತಹ ಸಮುದಾಯಗಳ ದಾರಿಯಲ್ಲಿ ಸಾಗಿಬಂದದು.

ದಲಿತ ಸಮುದಾಯಗಳಲ್ಲಿದ್ದ ಅಹಿಂಸೆಯ ತಾತ್ವಿಕ ಸ್ವಭಾವವನ್ನು ಬುದ್ಧ ತನ್ನ ಬುದ್ಧತ್ವದಲ್ಲಿ ಪುನರ್ ಸೃಷ್ಟಿಸಿದ. ಹೀಗಾಗಿ ದಲಿತ ಸಮುದಾಯಗಳ ಇಂದಿನ ಸ್ಥಿತಿಗೆ ಬುದ್ಧ ತತ್ವವೆ ಪರಮ ಆಯ್ಕೆ. ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಬಹುಪಾಲು ಎಲ್ಲ ದಲಿತ ಸಮುದಾಯಗಳು ಮರಳಿ ತಮ್ಮ ಸಂಸ್ಕೃತಿಗೆ ಹಿಂತಿರುಗುವುದು ಇಂದು ಸಾಧ್ಯವಿಲ್ಲ. ಹಾಗೆ ಹಿಂತಿರುಗಿದರೆ ಅವು ಸನಾತನ ಹಿಂದೂ ಪದ್ಧತಿಯಲ್ಲೆ ಜೊತೆಗೂಡಿದಂತಾಗುತ್ತದೆ. ದಲಿತ ಸಂಸ್ಕೃತಿಯ ಪೂರ್ವ ರೂಪಗಳು ಈಗ ಇನ್ನೂ ಅಪಮೌಲ್ಯಗೊಂಡಿವೆ. ಸಂಸ್ಕೃತಿ ಮತ್ತು ನಾಗರೀಕತೆಗಳೆರಡನ್ನು ಒಂದು ಇನ್ನೊಂದರ ಅನಿವಾರ್ಯವಾಗುವಂತೆ ಹೊಂದಿಸಿಕೊಳ್ಳಲು ಕೂಡ ಈ ಹೊತ್ತಿನ ಜಗದ ವರ್ತಮಾನಗಳಲ್ಲಿ ಅಸಾಧ್ಯ. ಅಪಮೌಲ್ಯಗಳನ್ನೇ ಸಂಸ್ಕೃತಿ ಎಂದು ದಲಿತ ಸಮುದಾಯಗಳಿಗೆ ಹಿಂದುತತ್ವ ಒಪ್ಪಿಸಿರುವ ಪ್ರಮಾಣ ಅಪಾರವಾಗಿದೆ.

ಹೀಗೆಯೆ ಹಿಂದುಳಿದ ವರ್ಗಗಳಿಗೂ ಖಚಿತವಾದ ಸಂಸ್ಕೃತಿಯ ಮಾನದಂಡಗಳಿಲ್ಲ. ಮೇಲುಜಾತಿಗಳಿಗೆ ಅನುಕೂಲವಾಗುವಂತಹ ಮೌಲ್ಯಗಳನ್ನೇ ಹಿಂದುಳಿದ ವರ್ಗಗಳು ತಮ್ಮ ಸಂಸ್ಕೃತಿ ಎಂದು ಒಪ್ಪಿಕೊಳ್ಳಬೇಕಾಗಿದೆ. ವಕ್ಕಲು ಕಸುಬಿಗೆ ಹೊಂದಿಕೊಂಡ ಸಮುದಾಯಗಳು ತನ್ನ ಸಮೀಪದ ಕರಕುಶಲ ಸಮುದಾಯಗಳ ಸಂಸ್ಕೃತಿಯ ಮೇಲೆ ಊಳಿಗಮಾನ್ಯ ವ್ಯವಸ್ಥೆಯ ಭಾರವನ್ನು ಹೊರಿಸಿದೆ. ಇಂತಹ ಸಂಸ್ಕೃತಿಗಳು ಕೂಡ ಪರಿಮಿತ ವ್ಯಾಪ್ತಿಯಲ್ಲೇ ತಮ್ಮ ಆಯ್ಕೆಗಳನ್ನು ಕಳೆದುಕೊಂಡಿರುತ್ತವೆ. ಬುದ್ಧನ ತತ್ವದಲ್ಲಿ ಯಾವುದೇ ಸಮಾಜಕ್ಕೂ ಹೊಂದುವ ಮಾನವೀಯ ಮೌಲ್ಯಗಳಿವೆ. ಇಷ್ಟೊಂದು ಮಾಯಾಜಾಲದಲ್ಲಿ ಆರ್ಥಿಕವಾಗಿ ತಂತ್ರಜ್ಞಾನದ ನೆಲೆಯಲ್ಲಿ ನಮ್ಮ ಸಮಾಜಗಳು ಮುನ್ನುಗ್ಗಿ ಮುಗ್ಗರಿಸಬೇಕಾದಿಲ್ಲ. ಆರ್ಥಿಕ ಅಭಿವೃದ್ಧಿಗಿಂತ ಮಾನವೀಕರಣಗೊಳ್ಳುವ ರಾಜಕಾರಣವೇ ನಿಜವಾದ ಸುಖ. ಇಂತಹ ರಾಜಕೀಯವನ್ನು ಗಾಂಧೀಜಿ ಕನಸಿದ್ದರಾದರೂ ಅವರ ರಾಜಕೀಯ ತತ್ವವನ್ನು ಹಿಂದೂ ಪದ್ಧತಿಗಳು ಅವರನ್ನೂ ವಂಚಿಸಿ ಸೇರಿಕೊಂಡಿದ್ದರಿಂದ ವರ್ತಮಾನದಲ್ಲಿ ಅಳವಡಿಸುವುದು ಕಠಿಣವಾಗುತ್ತದೆ. ದಲಿತರು ಹಿಂದುಳಿದವರು ಬುದ್ಧನ ದಾರಿಯಲ್ಲಿ ಸಾಗಿದಾಗ ಅವರು ತಮ್ಮದೆಂದು ಒಪ್ಪಿಕೊಂಡಿರುವ ಹುಸಿ ಸಂಸ್ಕೃತಿಗಳೂ ಹುಸಿ ದೈವಾಚಾರಗಳೂ ಮರೆಗೆ ಸರಿದು ಆಧುನಿಕ ಜಗತ್ತಿನಲ್ಲಿ ತಮ್ಮ ಅಸ್ತಿತ್ವಕ್ಕೆ ಅನುರೂಪವಾಗುವಂತಹ ಆಯ್ಕೆಗಳು ಸ್ಥಾಪಿತವಾಗುತ್ತವೆ. ಬುದ್ಧನ ನೀತಿಯು ದಲಿತ ಹಿಂದುಳಿದ ರಾಜಕಾರಣದ ಪ್ರಣಾಳಿಕೆಯಾಗಿ ಪ್ರಧಾನ ಜೀವನಧಾರೆಯಲ್ಲಿ ಬೆರೆತು ಹೋಗುವಂತಹ ವಾತಾವರಣವನ್ನು ಸಮಷ್ಠಿಯಾದ ಹೋರಾಟಗಳಿಂದಲೇ ಮಾಡಬೇಕಾಗುತ್ತದೆ. ಒಂಟಿ ಒಂಟಿಯಾಗಿ ಒಂದೊಂದು ಸಮುದಾಯವೂ ಪುಟ್ಟ ತೆಪ್ಪದಲ್ಲಿ ಮುರುಕು ದೋಣಿಯಲ್ಲಿ ಯಾವುದೋ ಮರದ ದಿಮ್ಮಿ ಮೇಲೆ ಕುಳಿತು ಸಮುದ್ರವನ್ನು ಹಾಯಲು ಪಯಣಿಸುತ್ತಿರುವುದು ವಿಪರ್ಯಾಸಕರವಾಗಿದೆ. ಆಧುನಿಕೋತ್ತರ ಸಮಾಜಗಳು ಕಠಿಣವಾದ ವ್ಯಕ್ತಿನಿಷ್ಠೆಯನ್ನು ಹಠಹಿಡಿದು ಸಮರ್ಥಿಸುವುದು ಈ ಕಾಲದ ಧೋರಣೆಯಾದರೂ ಇದು ಅಖಂಡ ಪಯಣಕ್ಕೆ ತಕ್ಕುನಾದುದಲ್ಲ.

ಭಗ್ನ ಚಹರೆಯಲ್ಲಿ ದಿಕ್ಕು ತಪ್ಪಿರುವ ದಲಿತ ಹಿಂದುಳಿದ ಸಮೂಹಗಳಿಗೆ ಬೌದ್ಧಧರ್ಮವೇ ಅಖಂಡ ಚಹರೆಯನ್ನು ತಂದುಕೊಡಬಲ್ಲದು. ಆಧುನಿಕೋತ್ತರ ಸಮುದಾಯದ ಚಹರೆಗಳು ಆರ್ಥಿಕ ರಾಜಕಾರಣದಲ್ಲಿ ಕಲುಷಿತಗೊಂಡಿವೆ. ಆಧುನಿಕತೆಯು ಒಂದು ಹಂತದ ನಾಗರಿಕತೆಯ ಮುಕ್ತಿಯಾಗಿದ್ದರೂ ಅತ್ಯಾಧುನಿಕತೆಯು ಹೆಚ್ಚಿದಂತೆಲ್ಲಾ ಆರ್ಥಿಕ ಯಾಜಮಾನ್ಯವು ಇಡೀ ಸಮೂಹಗಳ ವರ್ತನೆ ಚಹರೆ ಅಭಿರುಚಿಗಳನ್ನು ಬದಲಿಸಿಬಿಡಬಲ್ಲವು. ಇಂತಲ್ಲಿ ಬಲವಿದ್ದ ಸಮುದಾಯಗಳು ಮಾತ್ರ ಮತ್ತಷ್ಟು ಬಲಗೊಳ್ಳುತ್ತಲೆ ಸಾಗುತ್ತಿರುತ್ತವೆ. ದುರ್ಬಲಗೊಂಡವು ಉಳಿಯುವುದೇ ದುಸ್ತರವಾಗುತ್ತದೆ. ಬೃಹತ್ ಬೌದ್ಧಿಕ ಪ್ರತಿಮೆಗಳು ಕೂಡ ಒಂದು ಸಮಾಜದ ಸಂಪತ್ತು. ದಲಿತ ಸಮಾಜದ ಪ್ರಾಚೀನ ರೂಪಕಗಳು ಉತ್ಪಾದನೆಯ ಕೌಶಲ್ಯಗಳು ಬುದ್ಧತತ್ವದ ತಾತ್ವಿಕತೆಯಲ್ಲಿ ಪರಿಷ್ಕಾರಕ್ಕೆ ಒಳಪಡಬೇಕಾದ ಜರೂರಿದೆ.

ಬುದ್ಧತ್ವದ ಜೊತೆಯಲ್ಲೆ ಆಧುನಿಕ ಜಗತ್ತಿನ ಬಿಡುಗಡೆಯ ಸಾರ್ವತ್ರಿಕ ಕಥನಗಳನ್ನೂ ದಲಿತರು ತಮ್ಮ ಹೋರಾಟಕ್ಕೆ ತುಂಬಿಕೊಳ್ಳಬೇಕು. ಬುದ್ಧತ್ವವನ್ನು ಈ ಹಾದಿಯಲ್ಲಿ ಸಮಕಾಲೀನ ಜಗತ್ತಿನ ಪರಿಭಾಷೆಯಲ್ಲಿ ಅನ್ವಯಿಕಗೊಳಿಸದೆ ಹೋದರೆ ಬರಿಯ ಬುದ್ಧತತ್ವದ ಪಠನದಿಂದ ನಷ್ಟವೇ ಹೆಚ್ಚಾಗುವ ಸಾಧ್ಯತೆಯಿದೆ. ಬೌದ್ಧತತ್ವ ಕಾರ್ಯಶೀಲವಾದಾಗ ಮಾತ್ರವೇ ದಲಿತ ಸಮುದಾಯಗಳಿಗೆ ಆತ್ಮ ವಿಶ್ವಾಸ ಹೆಚ್ಚುವುದು. ಈ ಅರ್ಥದಲ್ಲಿ ಬುದ್ಧತ್ವ ಮುಖ್ಯವೇ ಹೊರತು ಆ ಬುದ್ಧತ್ವದ ಧಾರ್ಮಿಕ ಚಹರೆ ಅಂತಿಮ ಅಲ್ಲ. ಮತಾಂತರ ಎಂದರೆ ಜಾತಿ ಕಳೆದುಕೊಂಡು ಇನ್ನೊಂದು ಧಾರ್ಮಿಕ ಸಂಕೇತವನ್ನು ತೊಟ್ಟುಕೊಳ್ಳುವುದು ಎಂದಲ್ಲ. ಈ ವರೆಗಿನ ಬಹುಪಾಲು ಎಲ್ಲ ಮತಾಂತರಗಳು ಜಾತಿ ಹಾಗೂ ಮತೀಯ ಧಾರ್ಮಿಕ ಭೀತಿಗಳಿಂದ ಆಗಿದೆಯೆ ಹೊರತು ಅವು ವಿಶ್ವಾಸ ಮತ್ತು ನಿಷ್ಠೆ ಹಾಗೂ ಪ್ರೀತಿಯಿಂದ ಆಗಿಲ್ಲ. ಒಂದು ಧರ್ಮದಿಂದ ಹಿಂಸೆ ತಪ್ಪಿಸಿಕೊಳ್ಳಲು ಇನ್ನೊಂದು ಧರ್ಮವನ್ನು ಅನುಸರಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅಂದರೆ ಮತಂತರವೇ ದಲಿತರ ಮುಕ್ತಿ ಮಾರ್ಗವಲ್ಲ. ಹೀಗೆ ಹಲವು ಕಾಲಗಳಲ್ಲಿ ಹಲವು ಮತ ಧರ್ಮಗಳಿಗೆ ರಕ್ಷಣೆಗಾಗಿ ಪಲಾಯನ ಮಾಡಿದ ದಲಿತರ ಸಂಖ್ಯೆಯನ್ನು ಅಳೆದರೆ ಪರೋಕ್ಷವಾಗಿ ಅಖಂಡ ದಲಿತ ಸಮೂಹವೆ ಭಗ್ನಗೊಂಡು ಅಥವಾ ಕಳಚಿದ ಕೊಂಡಿಯಾಗಿ ತನ್ನ ಗುಂಪನ್ನೆ ಕಿರಿದಾಗಿಸಿಕೊಂಡಿದೆ ಎಂಬುದು ವೇದ್ಯವಾಗುತ್ತದೆ. ಇಸ್ಲಾಂ, ಕ್ರೈಸ್ತ, ಬೌದ್ಧ ಧರ್ಮಗಳಿಗೆ ಮತಾಂತರಗೊಂಡ ದಲಿತರು ಅಲ್ಲಿ ಕೂಡ ‘ದಲಿತ’ ಪದವಿಯನ್ನು ಅಂಟಿಸಿಕೊಂಡೆ ಪ್ರತ್ಯೇಕವಾಗಿ ಉಳಿಯಬೇಕಾಗಿದೆ. ಮತಾಂತರವಾಗಬೇಕಾಗಿದ್ದು ವ್ಯಕ್ತಿಗಳಲ್ಲ. ವ್ಯಕ್ತಿತ್ವವನ್ನೆ ತಮಗೆ ಬೇಕಾದ ತತ್ವಕ್ಕೆ ಪುನರ್ ಸೃಷ್ಟಿಸಿಕೊಂಡಾಗ ಅದು ನಿಜವಾದ ರೂಪಾಂತರವಾಗುತ್ತದೆ. ‘ಮತ’-ದ ಅಂತರ ಮತ್ತೊಂದು ‘ಮತ’ ಇರುವಿಕೆಯನ್ನ ಪ್ರತಿಪಾದಿಸುತ್ತದೆ. ವ್ಯಕ್ತಿಗಳು ಸಮುದಾಯಗಳು ಮತಾಂತರಗೊಂಡು ತಮ್ಮ ಮೂಲ ವ್ಯಕ್ತಿತ್ವದ ಸಾಂಸ್ಕೃತಿಕ ಚಹರೆಗಳನ್ನು ಆಳದಲ್ಲಿ ಉಳಿಸಿಕೊಂಡೇ ಇರುತ್ತಾರೆ. ಇದು ಕೂಡ ಆಧ್ಯಾತ್ಮದ ಆಯ್ಕೆಯಲ್ಲಿ ಗೊಂದಲವನ್ನೇ ಅಂತಹ ಸಮುದಾಯಗಳಿಗೆ ಸೃಷ್ಟಿಸಿರುತ್ತದೆ. ಮತಾಂತರಕ್ಕಿಂತ ವ್ಯಕ್ತಿತ್ವದ ಮರು ಸೃಷ್ಟಿಯೇ ಪ್ರಧಾನವಾಗಬೇಕು.

ಈ ಅರ್ಥದಲ್ಲಿ ಬುದ್ಧತ್ವವು ದಲಿತ ಹಿಂದುಳಿದ ಸಮುದಾಯಗಳಿಗೆ ಹೊಸ ಬಗೆಯ ವ್ಯಕ್ತಿತ್ವವನ್ನು ತಂದುಕೊಡುವಂತಾಗಬೇಕು. ಎಷ್ಟೋ ಬಾರಿ ಮತಾಂತರಗಳು ಧಾರ್ಮಿಕ ಯಾಜಮಾನ್ಯಕ್ಕೆ ಸಮುದಾಯಗಳನ್ನು ಸಿಲುಕಿಸುತ್ತಿರುತ್ತವೆ. ಬೇರೊಂದು ಧರ್ಮಕ್ಕೆ ಒಳಪಡುವುದು ಎಂದರೆ ಪರೋಕ್ಷವಾಗಿ ತನ್ನ ಹಳೆಯ ಆಯ್ಕೆಯ ಅವಕಾಶವನ್ನು ತಾನೇ ನಿರಕರಿಸಿ ಹೊಸದೊಂದು ಆಯ್ಕೆ ಹಾಗೂ ಜೀವನಾವಕಾಶದಲ್ಲಿ ಅಸ್ತಿತ್ವವನ್ನು ಹುಡುಕಿಕೊಳ್ಳುವುದು. ಹೊಸ ಧರ್ಮದಲ್ಲಿ ಮೊದಲೆ ಬೇರು ಬಿಟ್ಟ ಸಮುದಾಯಗಳು ಹೊಸದಾಗಿ ಸೇರ್ಪಡೆಗೊಂಡ ಸಮುದಾಯಗಳನ್ನು ಕೀಳಾಗಿ ಕಾಣುವುದು ಮನುಷ್ಯನ ಧೂರ್ತ ಸ್ವಭಾವ. ಈ ಸ್ವಭಾವ ಆದಿ ಕಾಲದಿಂದಲೂ ಬಂದು ಬಿಟ್ಟಿದೆ. ಹೊಸ ದೊಂದು ಧಾರ್ಮಿಕ ಪರಿಸರದಲ್ಲಿ ಮುಕ್ತವಾದ ಆಯ್ಕೆಗಳಿರುವುದಿಲ್ಲ. ಹೀಗಾಗಿಯೇ ‘ದಲಿತ ಕ್ರೈಸ್ತರ’ ‘ಮುಸ್ಲಿಂ ದಲಿತರ’ ಸಮಸ್ಯೆಗಳು ಪರಿಹಾರವಾಗದಂತೆ ಉಪೇಕ್ಷೆಗೆ ಒಳಗಾಗಿ ಯಾವ ಕಡೆಗೂ ಹೋಗದಂತೆ ಸ್ವಯಂ ನಿರ್ಬಂಧವನ್ನು ಹಾಕಿಕೊಂಡು ನರಳುತ್ತವೆ. ದಲಿತ ಕ್ರೈಸ್ತರ ಸಮಸ್ಯೆಗಳನ್ನು ನೋಡಿದರೆ ಅಂತಹ ಮುಕ್ತ ಧರ್ಮ ಕೊಡ ಹೊಸಬರನ್ನು ತೀರ ಕೀಳಾಗಿ ನೋಡುತ್ತಲೇ ಅವರ ಮೇಲೆಯೇ ಜಾತಿ ವರ್ಗದ ಶ್ರೇಷ್ಠತೆಯ ಪ್ರಮಾಣಗಳನ್ನು ಹೇರಿ ಅವರನ್ನು ಕಡೆಗಣಿಸುತ್ತದೆ.

ಅಂದರೆ ಮತಾಂತರ ಎನ್ನುವುದೇ ದಲಿತರಿಗೆ ಮತ್ತೊಂದು ಬಗೆಯ ಸಂಕೋಲೆ. ಇದ್ದ ವ್ಯವಸ್ಥೆಯೂ ಅವರಿಗೆ ಆತಂಕದ ಮನೆ. ಹೊರಗಿನದೂ ಕೂಡ ಅವರಿಗೆ ಅನಿಶ್ಚತತೆಯ ನೆಲೆ. ಇವೆರಡರ ಗೊಡವೆಯೂ ಇಲ್ಲದೆ ಅಲೆಮಾರಿಯಾಗಿ ಆದಿವಾಸಿಯಾಗಿ ಬದುಕುವ ನೂರಾರು ಸೂಕ್ಷ್ಮ ಸಮುದಾಯಗಳ ಕಥೆಯಂತು ಯಾವ ಮಾನದಂಡಕ್ಕೂ ಸಿಗದಂತೆ ನುಚ್ಚು ನೂರಾಗಿವೆ. ಇಂತಲ್ಲಿ ಮತಾಂತರದ ಬಗ್ಗೆ ಠರಾವುಗಳನ್ನು ಹೊರಡಿಸುವ ಸ್ವಾಮೀಜಿಗಳೂ ಇದ್ದಾರೆ. ಮತಾಂತರದಿಂದ ಹಿಂದೂ ಧರ್ಮಕ್ಕೆ ಹೊಡೆತ ಉಂಟಾಗುತ್ತಿದೆ ಎಂದು ದಲಿತರನ್ನು ಹಿಂದೂ ಧರ್ಮದ ಬೋನಿನಲ್ಲೇ ಕೂಡಿ ಹಾಕಲು ತಂತ್ರಗಳೂ ನಡೆದು ಮತೀಯವಾದ ಮೂಲಭೂತವಾದಗಳು ಕೂಡ ತಮ್ಮ ಹೊಸ ಕವಚದಲ್ಲಿ ಹಿಂದುತ್ವದ ಕಹಳೆಯನ್ನು ಮೊಳಗಿಸುತ್ತಿವೆ. ಅತ್ತದರಿ ಇತ್ತ ಪುಲಿ ಎಂಬಂತೆ ದಲಿತರು ನಿಂತಿರುವಾಗ ಬುದ್ಧತ್ವವೇ ಅವರಿಗೆ ಸದ್ಯದ ತಕ್ಕ ಆಯ್ಕೆಯಾಗಿ ಕಾಣುತ್ತಿದೆ.

ಆದರೆ ಇರುವ ಸಮಸ್ಯೆಯಾವುದೆಂದರೆ ಇಡಿಯಾಗಿ ದಲಿತ ಹಿಂದುಳಿದ ಸಮೂಹಳು ಹೇಗೆ ಬುದ್ಧತ್ವವನ್ನು ತಮ್ಮ ಸಮಾಜದ ವ್ಯಕ್ತಿತ್ವವಾಗಿಸಿಕೊಳ್ಳಬೇಕು ಎಂಬುದು. ಇದಕ್ಕೆ ಇಡೀ ದಲಿತ ಸಮುದಾಯಗಳ ಜೀವನ ವಿಧಾನದಲ್ಲಿ ಬುದ್ಧತತ್ವಕ್ಕೆ ಅವಕಾಶ ಉಂಟಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕಾರಣದಲ್ಲಿ ನಮ್ಮ ಹೋರಾಟಗಳಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಸಮೂಹ ಮಾಧ್ಯಮಗಳಲ್ಲಿ ನಮ್ಮ ಆಚಾರ ವಿಚಾರಗಳಲ್ಲಿ ಮತ್ತು ನಮ್ಮ ನಮ್ಮ ಕೌಟುಂಬಿಕ ವ್ಯವಸ್ಥೆಯ ಒಳಗೆ ಬೌದ್ಧ ಧರ್ಮದ ತಂತ್ರಗಳು ಈ ಹೊತ್ತಿನ ಅಗತ್ಯದ ರೂಪದಲ್ಲಿ ಪುನರ್ ಸೃಷ್ಠಿಗೊಂಡು ಬೆರೆತಾಗ ನಮ್ಮ ಸಮುದಾಯಗಳಿಗೆ ಬುದ್ಧತ್ವದ ಚಹರೆ ಏರ್ಪಡುತ್ತದೆ. ಈ ದಿಕ್ಕಿನಲ್ಲಿ ದಲಿತತ್ವವೇ ಮರು ಸೃಷ್ಠಿಗೊಂಡು ಅಖಂಡ ಸಮಾಜವನ್ನು ಕಟ್ಟುವ ಅದರ ಲೋಪವನ್ನು ತಿದ್ದಿ ಸರ್ವೋದಯದ ದಿಕ್ಕಿನಲ್ಲಿ ಪಯಣಿಸುವ ಕಾರ್ಯಕ್ಕೆ ತೊಡಗಬೇಕಾಗುತ್ತದೆ.

ಪರಾಮರ್ಶನ ಗ್ರಂಥಗಳು

೧. ಡಾ. ಮೊಗಳ್ಳಿ ಗಣೇಶ್, ದಲಿತ ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೨.

೨. ಡಾ. ಮೊಗಳ್ಳಿ ಗಣೇಶ್, ದಲಿತ ಕಥನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬.

೩. ಡಾ. ಮೊಗಳ್ಳಿ ಗಣೇಶ್, ದಲಿತರು ಮತ್ತು ಜಾಗತೀಕರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

—-
* ದಲಿತ ಚಿಂತನೆ (ಸಂ) ಮೊಗಳ್ಳಿ ಗಣೇಶ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೨ ಕೃತಿಯಿಂದ ಆಯ್ದುಕೊಂಡ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ವಂದನೆಗಳು (ಸಂ).