ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ಪ್ರಜಾಪ್ರಭುತ್ವದಲ್ಲಿ ದಲಿತ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲು ಲಭ್ಯವಿರುವ ಆಧಾರಗಳು ಕೇವಲ ಬೆರಳಣಿಕೆಯಷ್ಟು. (ಈ ಮಾತು ಇಡೀ ಭಾರತ ದೇಶಕ್ಕೂ ಸಂಬಂಧಿಸಿದ ಮಾತೇ ಸರಿ) ಅದರಲ್ಲಿಯೂ ಸಿಕ್ಕಂತಹ ಆಧಾರಗಳೂ ಸಹ ಅಸ್ಪೃಶ್ಯರ ಬಗೆಗೆ ತುಂಬಾ ಅಸ್ಪಷ್ಟ ಹಾಗೂ ಸ್ಥೂಲವಾದದ್ದುವುಗಳು ಮಾತ್ರ. ಸಿಕ್ಕಂತಹ ಮಾಹಿತಿಯನ್ನೇ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಅಸ್ಪೃಶ್ಯರ ಬದುಕು ಹೀನಾಯವಾಗಿತ್ತು ಹಾಗೂ ದುರ್ಧರವಾಗಿತ್ತೆಂದು ಪ್ರತ್ಯೇಕವಾಗಿ ಹೇಳಬಾರದೇನೋ. ಇದಕ್ಕಿಂತಲೂ ಮುಖ್ಯವಾಗಿ ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದ ರಾಜಪ್ರಭುತ್ವದ ಚರಿತ್ರೆಯಲ್ಲಿ ದಲಿತರನ್ನು ಗುರುತಿಸುವುದೇ ತುಂಬ ಕ್ಲಿಸ್ಟಕರವಾದ ಸಾಹಸವಾಗಿದೆ.

ಆದರೆ ದಲಿತರ ಸ್ಥಿತಿ ಪ್ರಾಚೀನ ಕಾಲದಿಂದ ಇಂದಿನ ಕಾಲದವರೆವಿಗೂ ಯಾವ ರೀತಿಯಾಗಿದೆ ಎಂಬುದನ್ನು ಲಿಖಿತ ದಾಖಲೆಗಳಿಗಿಂತಲೂ ಪ್ರಮುಖವಾಗಿ ‘ಕಾಲ’ವೆಂಬ ದಾಖಲೆಯು ಒದಗಿಸುತ್ತದೆ. ಏಕೆಂದರೆ ಯಾವುದೇ ವಿಷಯದ ಆಳವಾದ ಅಧ್ಯಯನಕ್ಕೆ ಇಂದಿನ ವರ್ತಮಾನದಲ್ಲಿನ ಆಚರಣೆಗಳು ಹೆಚ್ಚಾಗಿ ಸಹಾಯ ಮಾಡುತ್ತವೆ. ಈ ಸಂದರ್ಭದಲ್ಲಿಯೇ ‘ಕಾಲ’ವೆಂಬುವುದು ಮಹತ್ವವಾದದ್ದು ಎನ್ನಬಹದು. ಇದಂತು ಒಂದರ್ಥದಲ್ಲಿ ಪ್ರಾಚೀನ, ಮಧ್ಯಕಾಲೀನ ಮತ್ತು ಸಮಕಾಲೀನ ಸಂದರ್ಭಗಳು ಒಟ್ಟಿಗೆ ಕಾಡಿಸುತ್ತಿರುವ ಕಾಲವಾಗಿದೆ. ಏಕೆಂದರೆ ಕಾಲ ಮತ್ತು ಮನುಷ್ಯನ ಸಂಬಂಧ ವಿಶಿಷ್ಟವಾದದ್ದು. ಕಾಲದೊಳಗೆ ಮನುಷ್ಯ, ಮನುಷ್ಯನೊಳಗೆ ಕಾಲ ನೆಲೆಯೂರಲು ನಡೆಸುವ ಪ್ರಯತ್ನಗಳ ಪ್ರಕ್ರಿಯಾ ರೂಪವೇ ಬದುಕು. ಯಾವುದೇ ಕಾಲವಾಗಲಿ, ಮೇಲ್ನೋಟಕ್ಕೆ ಸ್ವಾತಂತ್ರ ಪ್ರತ್ಯೇಕ ಘಟಕದಂತೆ ಕಂಡರೂ ಸಹ ಪ್ರಧಾನ ಗುಣಲಕ್ಷಣಗಳ ದೃಷ್ಟಿಯಿಂದ ಇದು ನಿಜವಾಗಿರುತ್ತದೆ. ಆದರೆ ಭೂತಕಾಲವು ವರ್ತಮಾನದ ದೃಷ್ಟಿಯಿಂದ ಭೂತದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಈ ಭೂತಕಾಲವೂ ಒಂದು ಕಾಲದಲ್ಲಿ ವರ್ತಮಾನವೇ ಆಗಿರುತ್ತದೆ. ವರ್ತಮಾನ ಎನ್ನುವುದು ಪ್ರಧಾನ ಗುಣಲಕ್ಷಣಗಳ ದೃಷ್ಟಿಯಿಂದ ‘ವರ್ತಮಾನ’ವೆಂದಾಗಿದ್ದರೂ ಅದರೊಳಗೆ ಭೂತಕಾಲವೂ ಸೇರಿಕೊಂಡಿರುತ್ತದೆ. ಆದರೆ ವರ್ತಮಾನವು ಭೂತದೊಳಗಿಂದ ಹೊರಬರುವಾಗ ಬರಿಗೈಲಿ ಬರುವುದಿಲ್ಲ. ಜೊತೆಗೆ ಭೂತದ ಬುತ್ತಿಯನ್ನು ಹೊತ್ತುಬರುತ್ತದೆ ಎನ್ನುವ ಪ್ರೊ. ಬರಗೂರು ರಾಮಚಂದ್ರಪ್ಪನವರ ಮಾತು ಇಲ್ಲಿ ಪ್ರಸ್ತುವೆನ್ನಿಸುತ್ತದೆ. ಭೂತದ ಬುತ್ತಿಯನ್ನು ಹೊತ್ತು ಬಂದಂತಹ ವರ್ತಮಾನವು ನಂತರದಲ್ಲಿ ತನ್ನ ಹೊರರೂಪ ಪಡೆಯುತ್ತದೆ. ಈ ಹೊರರೂಪವನ್ನು ಒಳಗೆ ಸೆಳೆದುಕೊಂಡು ಕೇಂದ್ರಕ್ಕೆ ಒಗ್ಗಿಸಿಕೊಳ್ಳುವ ಕ್ರಿಯೆ ವರ್ತಮಾನದ ಉಸಿರಾಗಿರುತ್ತದೆ. ಈ ಕ್ರಿಯೆ ಪ್ರಕ್ರಿಯೆಗಳ ಪ್ರಾಣ ರೂಪವೇ ಮನುಷ್ಯ. ಅಂದರೆ ಅಸ್ಪೃಶ್ಯತೆ ಹಾಗೂ ಜಾತಿಯ ವರ್ಗೀಕರಣವನ್ನು ಮಾಡಿಕೊಂಡು ಅನಾದಿ ಕಾಲದಿಂದ ಇಂದಿನವರೆವಿಗೂ ಆಚರಿಸಿಕೊಂಡು ಬಂದವರು ಮನುಷ್ಯರೇ ಹೊರತು ಮತ್ಯಾವ ದೇವಾನು ದೇವತೆಯೋ ಅಲ್ಲ ಎಂಬುದಾಗಿದೆ.

ನಮ್ಮ ಸಂಸ್ಕೃತಿಯು ಭೂತವನ್ನು ಹೇಗೆ ಹೊತ್ತುಕೊಂಡೇ ಬಂದಿದೆ ಎಂಬುದು ಇಂದಿನ ಜನಜೀವನದ ಪಾಲಿನ ಶಾಪ ಹೌದಾದರೂ, ಅದು ಚರಿತ್ರೆಯ ಪಾಲಿಗೆ ವರವಾಗಿ ಕಂಡುಬರುತ್ತದೆ. ನಾಲ್ಕು ಸಾವಿರ ವರ್ಷಗಳ ಚರಿತ್ರೆಯೊಳಗೊಂಡ ಎಲ್ಲ ಸ್ಥಿತ್ಯಾಂತರಗಳೂ, ಅವುಗಳಲ್ಲಿನ ಸಂಘರ್ಷಗಳೂ ತಮ್ಮ ಕುರುಹುಗಳು ನಮ್ಮ ಸುತ್ತಮುತ್ತಲಿನಲ್ಲೇ ಇರುತ್ತವೆ ಎನ್ನಬಹುದು. ಈ ದೃಷ್ಟಿಯಿಂದ ಚರಿತ್ರೆ ಎಂಬುವುದು ಕೇವಲ ಭೂತದಲ್ಲಿಯೇ ಅಲ್ಲದೆ ಹೆಚ್ಚಾಗಿ ವರ್ತಮಾನದಲ್ಲಿಯೂ ಅಡಗಿರುತ್ತದೆ.

ಈ ರಾಷ್ಟ್ರಕ್ಕೆ ಯಾವುದೇ ಹೊಸಹೊಸ ವ್ಯವಸ್ಥೆ ಬಂದಾಗ, ಅದು ಜಾಗತೀಕರಣವಾಗಿರಬಹುದು ಅಥವಾ ರಾಜಕೀಯವಾಗಿ, ಸಾಮಾಜಿಕವಾಗಿ ಬದಲಾವಣೆಯ ಕ್ರಾಂತಿಯೇ ಸಂಭವಿಸಿದರೂ ಸಹ ಅದು ಹಳೆಯ ವ್ಯವಸ್ಥೆಯನ್ನು ನಾಶಪಡಿಸದೆ ತನಗೆ ಬೇಕಾದಂತೆ ತನ್ನೊಳಗೆ ಸೇರಿಸಿಕೊಂಡು ತನ್ನ ಒಳಪದರಗಳಲ್ಲಿ ಅಡಗಿಸಿಟ್ಟುಕೊಳ್ಳುತ್ತದೆ. ಆದ್ದರಿಂದ, ಈ ಅವಶೇಷಗಳು ಹಿಂದುಳಿದ ಸಾಮಾಜಿಕ ಸಮುದಾಯಗಳಲ್ಲಿ ಉಳಿದುಕೊಂಡಿರುತ್ತವೆ. ಈ ‘ಹಿಂದುಳಿದ’ ಎಂದರೆ ಎಲ್ಲೋ ಕಾಡುಗಳಲ್ಲಿ ಉಳಿದವರು ಎಂದರ್ಥವಲ್ಲ. ಇದು ಮಹಾನಗರಗಳಲ್ಲಿಯೂ ಇರಬಹುದಾಗಿದೆ. ಹಾಗೆಯೇ ನಮ್ಮ ಕುಟುಂಬದಲ್ಲಿಯೂ ಇರಬಹುದಾಗಿದೆ.

ಇಂದು ದಲಿತ ಎನ್ನುವ ಪದವೇ ಒಂದು ಚರ್ಚಿತ ವಿಷಯವಾಗಿದೆ. ಈ ಮೂರು ಅಕ್ಷರ ಅಸ್ಪಶ್ಯರಾಗಿರುವ ಹೊಲೆಯ ಹಾಗು ಮಾದಿಗ ಜನಾಂಗದ ಕುರಿತು ಬಳಸುವ ಪದವಾಗಿದ್ದರೂ ಸಹ ಇವರ ವಿವರಣೆ ಇದಕ್ಕೆ ಹೊರತಾದದ್ದಾಗಿದೆ. ದಲಿತ ಎಂಬ ಪದ ಇಂದು ವಿವಿಧ ಅರ್ಥಗಳನ್ನು ನೀಡುತ್ತದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಕೆಳಸ್ತರದಲ್ಲಿರುವ ಎಲ್ಲರಿಗೂ ಸಹ ದಲಿತರೇ ಎಂಬ ಕಲ್ಪನೆ ಒಂದು ವರ್ಗದಲ್ಲಿ ಚರ್ಚೆಗೀಡಾಗಿದೆ. ಸಾಮಾಜಿಕವಾಗಿ ಉತ್ತಮ ಶ್ರೇಣಿಯಲ್ಲಿದ್ದು ಆರ್ಥಿಕವಾಗಿ ಕೆಳಸ್ತರದಲ್ಲಿರುವವರೆಲ್ಲರೂ ದಲಿತರೇ ಎನ್ನುವ ವಾದ ಇಂದು ಹೆಚ್ಚು ಹೆಚ್ಚಾಗಿ ಚರ್ಚೆಯಲ್ಲಿದೆ. ಈ ದೃಷ್ಟಿಯಿಂದ ಇಂದು ದಿನನಿತ್ಯ ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ದಲಿತರ ಮೇಲೆ ನಡೆಯುವ ದೌರ್ಜನ್ಯ ಎಂದು ಕರೆಯುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಮೂಡುತ್ತದೆ. ಈ ಜನಾಂಗಕ್ಕೆ ದಲಿತ ಎಂಬ ಪದ ಬಳಸುವ ಬದಲು ಅಸ್ಪೃಶ್ಯ ಎಂಬ ಪದವನ್ನೇ ಬಳಸಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

ಅಸ್ಪೃಶ್ಯ ಪದಕ್ಕೆ ಪರ್ಯಾಯವಾಗಿ ದಲಿತ ಎಂಬ ಪದ ಇಂದು ಹೆಚ್ಚುಹೆಚ್ಚಾಗಿ ಚರ್ಚೆಯಲ್ಲಿದೆ. ಒಟ್ಟಾರೆ ಅದರ ಅರ್ಥವೂ ಸಹ ಅಸ್ಪೃಶ್ಯರ ದೃಷ್ಟಿಕೋನದಲ್ಲಿಯೇ ನಮ್ಮ ಬರಹಗಾರರು, ಚಿಂತಕರು, ಮಾಧ್ಯಮಗಳು ಬಿಂಬಿಸುವಂತಾಗಿದೆ. ಆದರೆ ಅಸ್ಪಶ್ಯ ಹಾಗೂ ದಲಿತ ಪದದ ಅರ್ಥವೇ ಸಂಪೂರ್ಣ ಬೇರು.

ದಿನನಿತ್ಯ ನಡೆಯುತ್ತಿರುವ ಅಸ್ಪೃಶ್ಯತಾಚರಣೆ ಕುರಿತಂತೆ ಹಿಂದುಗಳಿಗೆ (ವೈದಿಕರು ಹಾಗೂ ಅಸ್ಪೃಶ್ಯರು) ನಾಚಿಕೆಯೇ ಆಗುವುದಿಲ್ಲ. ಇದರ ಬದಲು ಅವರು ಅಸ್ಪೃಶ್ಯತೆಯನ್ನು ಸಮರ್ಥಿಸಿಕೊಳ್ಳಲು ಕೂಡ ಮುಂದಾಗಿರುವುದಕ್ಕೆ ಜೀವಂತ ಸಾಕ್ಷಿಗಳಿವೆ. ದ್ರಾವಿಡ ಬಡುಕಟ್ಟುಗಳನ್ನೇ ಜಾತಿಗಳೆನ್ನಲಾಗಿದೆ ಎಂಬುದು ಹಳೆಯ ವಾದ. ಕುರುಬ, ಹೊಲೆಯ, ಮಾದಿಗ ಬುಡಕಟ್ಟುಗಳು ಕುರುಬ, ಹೊಲೆಯ, ಮಾದಿಗ ಜಾತಿಗಳಾದವೆಂದು ಉದಾಹರಣೆಗಳನ್ನು ಸಹ ನೀಡುತ್ತಾರೆ. ಆದರೆ ಹೊಲೆಯ ಮತ್ತು ಮಾದಿಗರು ಉಳಿದ ಯಾವ ಜಾತಿಗಳಿಗೂ ಅನ್ವಯಿಸದಂತೆ ಅಸ್ಪೃಶ್ಯರಾದದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಕಾಡದಿರದು. ಅಸ್ಪೃಶ್ಯರನ್ನು ಪಂಚಮ ವರ್ಣವೆಂದು, ಚಾಂಡಾಲರೆಂದು ವರ್ಣನೀತಿ ಕಲ್ಪಿಸಿದೆ. ನಾಲ್ಕು ವರ್ಣಗಳ ಆಚೆ, ಐದನೇ ವರ್ಣದವರೆಂದು ಇದರರ್ಥ. ಶೂದ್ರರನ್ನೇ ಹೀನಾಯವಾಗಿ ಕಾಣುತ್ತಿದ್ದ ವ್ಯವಸ್ಥೆ ಚಾಂಡಾಲರನ್ನು ಹೇಗೆ ನಡೆಸಿಕೊಂಡಿರಲಾರದು. ಭಾರತದಲ್ಲೆಡೆ ಇದ್ದ ಬಹುಸಂಖ್ಯಾತ ಹೊಲೆಯ ಹಾಗೂ ಮಾದಿಗರು ಅಸ್ಪೃಶ್ಯರಾದುದು ಅಚ್ಚರಿಯಲ್ಲವೇ ಅಸ್ಪೃಶ್ಯತೆಯ ಅತಿರೇಕ ವಿದೇಶಗಳಲ್ಲಿದ್ದಂತಹ ಗುಲಾಮಗಿರಿಯನ್ನು ನಾಚಿಸುವಂತಿದೆ. ಆದರೆ ಮುಟ್ಟಿದರೆ ಮೈಲಿಗೆಯಾಗುವ ಜಾತಿಯನ್ನು ಸೃಷ್ಟಿ ಮಾಡಿದ ಭಾರತ ಭೂಮಿ ನಮ್ಮದು. ಮಾನವೀಯತೆಗೆ ಮಸಿ ಬಳಿದ ಇಂಥ ಯಾವ ಉದಾಹರಣೆಯೂ ಜಗತ್ತಿನಲ್ಲಿ ಸಿಗುವುದಿಲ್ಲ. ಇಂಥ ಅವಮಾನಕರ ಸ್ಥಿತಿಯನ್ನು ಏಕೆ ಕಲ್ಪಿಸಲಾಯಿತು ಎಂಬ ಪ್ರಶ್ನೆ ಏನೆಲ್ಲಾ ಚರ್ಚೆ ಮತ್ತು ಸಂಶೋಧನೆ ನಡುವೆಯೂ ಪ್ರಶ್ನೆಯಾಗಿಯೇ ಉಳಿದಿದೆ. ಇಂದಿಗೂ ಕರ್ನಾಟಕ, ಭಾರತದ ಉದ್ದಗಲಕ್ಕೂ ಅಸ್ಪೃಶ್ಯರ ಸ್ಥಿತಿಗತಿ ಹೀನಾಯವಾಗಿಯೇ ಇದೆ. ಕುಡಿಯುವ ನೀರು, ಕೆರೆ, ಕಟ್ಟೆ, ಬಾವಿಗಳಿಗೆ ನಿರ್ಬಂಧವಿದೆ. ಸಭೆ, ಸಮಾರಂಭ, ಮೆರವಣಿಗೆಗಳಿಗೆ ಕಡಿವಾಣಗಳಿವೆ. ಇದು ತುಂಬ ಸಂಕೀರ್ಣವಾದ ಪ್ರಶ್ನೆ. ಇದಕ್ಕೆ ಸುಲಭವಾದ ಉತ್ತರ ಸಾಧ್ಯವಿಲ್ಲದಿದ್ದರೂ ಭಾರತೀಯ ಸಮಾಜದ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಈ ಸಮಸ್ಯೆಯನ್ನು ಅರಿತುಕೊಳ್ಳಲು ಪ್ರಯತ್ನಿಸಲೇಬೇಕಾಗಿದೆ. ಈ ಹಂತದಲ್ಲಿ ನಮಗೆಲ್ಲರಿಗೂ ಪ್ರಸ್ತುತವಾಗುವವರೆಂದು ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು.

ಭಾರತೀಯ ಸಾಮಾಜಿಕ ಇತಿಹಾಸದ ಆರಂಭಯುಗದ ಚಿತ್ರಣಕ್ಕೆ ಕ್ರಿ. ಪೂ. ೧೫೦೦-೧೦೦೦ ಅವಧಿಯ ವೇದಗಳೇ ಪ್ರಮುಖ ಆಧಾರಗಳು. ವೇದಗಳಲ್ಲಿ ಕಂಡುಬರುವ ವರ್ಣವ್ಯವಸ್ಥೆಯೇ ಮುಂದೆ ಜಾತಿಗಳಿಗೆ ಎಡೆಗೊಟ್ಟಿತು ಎಂದು ಸಾಮಾನ್ಯವಾಗಿ ಎಲ್ಲ ವಿದ್ವಾಂಸರ ನಂಬಿಕೆ. ಪ್ರಮುಖ ವರ್ಣಗಳದಂತವುಗಳು ತಮ್ಮ ಹುಟ್ಟನ್ನು ವೈಭವೀಕರಿಸಿಕೊಂಡಿದ್ದದ್ದು ಹೀಗೆ. ಮುಖದಿಂದ ಹುಟ್ಟಿದ ಬ್ರಾಹ್ಮಣರು ಮುಖ್ಯರು, ಬಾಹುವಿನಿಂದ ಹುಟ್ಟಿದ ರಾಜನ್ಯರು ಶಕ್ತರು, ಉದರದಿಂದ ಹುಟ್ಟಿದ ವೈಶ್ಯರು, ‘ತಿನ್ನಲ್ಪಡಬೋಕಾದವರು’ (ಎಂದರೆ, ಹೆಚ್ಚು ತೆರಿಗೆ ಹಾಕಿ ವಸೂಲು ಮಾಡಬೇಕಾದವರು), ಕಾಲಿಂದ ಹುಟ್ಟಿದ ಶೂದ್ರರು. ಇತರರನ್ನು ಹೊರಬೇಕಾದವರು ಎಂದರೆ ಆಯಾ ಗುಂಪಿನ ಕರ್ತವ್ಯಗಳಿಗೆ ಒಂದು ದೈವೀಕರಣವನ್ನು ಮೇಲಿನ ವಿಶ್ವಪುರುಷನ ಅಂಗಗಳ ಪ್ರತಿಮ ಒದಗಿಸುತ್ತದೆ.

ಋಗ್ವೇದದಲ್ಲಿ ‘ವರ್ಣ’ ಎಂಬ ಪದವು ಬಣ್ಣ ಎಂಬರ್ಥದಲ್ಲಿ ‘ಆರ್ಯ’ ಮತ್ತು ‘ದಾಸ’ ವರ್ಗಗಳನ್ನು ಬೇರ್ಪಡಿಸಿ ಹೇಳುವುದಕ್ಕೆ ಬಳಕೆಯಾಗಿದೆ. ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ “ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ” ಎಂಬ ಕೃತಿಯಲ್ಲಿ ಹೇಗೆ ಹೇಳಿದ್ದಾರೆ.

ಋಗ್ವೇದದಲ್ಲಿ ಜಾತಿಗಳ ಉಲ್ಲೇಖವಿಲ್ಲವಾದರೂ ಬಡಗಿ, ಚಮ್ಮಾರ, ನಾಯಕ, ಅಕ್ಕಸಾಲಿ, ವ್ಯಾಪಾರಿ, ರಥಕಾರ ಮುಂತಾದ ವೃತ್ತಿಕಾರಕ ಹೆಸರಿವೆ, ಅವುಗಳಲ್ಲಿ ಯಾವುಗಳು ಯಾವ ವರ್ಣಕ್ಕೆ ಸೇರಿದ್ದುವೆಂಬುದನ್ನು ಹೇಳುವುದು ಅಸಾಧ್ಯ. ಅಥವಾ ಅವು ಒಂದೊಂದು ಪರಸ್ಪರ ಹೊರತಾದ ಗುಂಪುಗಳೇ ಎಂಬುದನ್ನು ಹೇಳುವ ಸ್ಥಿತಿಯಲ್ಲೂ ನಾವು ಇಲ್ಲ. ಏಕೆಂದರೆ ರಥಕಾರರನ್ನು ಶೂದ್ರನಿಗಿಂತ ಉತ್ಕೃಷ್ಟನಾಗಿದ್ದನೆಂದು ನಾವು ಹೇಳಬಹುದು

ಎಂದು. ಇಲ್ಲಿ ನಾವು ಅಂದಿನ ಕಾಲದಲ್ಲಿನ ಶ್ರೇಣಿಕೃತ ಜಾತಿವ್ಯವಸ್ಥೆಯನ್ನು ಗಂಭೀರವಾಗಿ ಗಮನಿಸಬಹುದಾಗಿದೆ. ವರ್ಣಗಳ ಗುಂಪಿಗೆ ಸೇರದೆ ಹೊರಗುಳಿದ ಜನರೇ ಚಂಡಾಲರು ಅಥವಾ ಅಸ್ಪೃಶ್ಯರು. ಇಂದಿನ ಪದದ ಪ್ರಕಾರ ದಲಿತರು. ಯಜುರ್ವೇದದಲ್ಲಿ ‘ಚಂಡಾಲ’ರ ಉಲ್ಲೇಖವಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಚಂಡಾಲರ ಸಂತತಿಯು ನಾಯಿ ಹಂದಿಗಳಂತೆ ತುಚ್ಛವಾದುದು ಎಂದಿದೆ. ಇವರು ತೀರ ನಿಕೃಷ್ಟರಾದ ಜನ. ಮೂಲತಃ ಇವರು ಯಾರು, ಈ ಜಾತಿಯ ಹುಟ್ಟು ಹೇಗೆ, ಅಸ್ಪೃಶ್ಯತೆ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ಏಕಾಭಿಪ್ರಾಯವಿಲ್ಲದಿದ್ದರೂ ಸಹ ಡಾ. ಬಿ. ಆರ್. ಅಂಬೇಡ್ಕರ್ ಅವರು ಇವರ ಬಗ್ಗೆ

ಭಾರತಕ್ಕೆ ಹೊರಗಿನಿಂದ ಬಂದ ವಿದೇಶಿಯರು ದಮನ ಮಾಡಿದ ದೇಶೀಯ ಜನರೇ ಈಗಿನ ಅಸ್ಪೃಶ್ಯರೆಂದೂ, ಅವರನ್ನು ಗೆದ್ದವರು ತಮ್ಮ ಕಾವಲುಗಾರರನ್ನಾಗಿ ಮಾಡಿಕೊಂಡಿದರ ಪರಿಣಾಮವೇ ಅಸ್ಪೃಶ್ಯತೆಗೆ ಕಾರಣವಾಯಿತು

ಎಂದು ಅಭಿಪ್ರಾಯಪಡುತ್ತಾರೆ. ಅಂದು ಅವರ ಮನೆಯ ಹೊರಗಿನ ಕಾವಲುಗಾರರಾಗಿದ್ದಂತಹ ಜನತೆಯೇ ನಂತರದಲ್ಲಿ ಅಸ್ಪೃಶ್ಯರಾಗಿ, ಊರ ಕಾವಲುಗಾರರಾಗಿ ಊರ ಹೊರಗೆ ಇರಬೇಕಾಯಿತ್ತು. ಆ ಕಾರಣ ಅವರನ್ನು ‘ಅಂತ್ಯಜ’ (ಊರ ಹೊರಗಿನವರು) ಎಂದು ಕರೆದರೆಂದೂ ಅವರು ವಾದಿಸುತ್ತಾರೆ. ಈ ವಾದಕ್ಕೆ ಪೂರಕವಾಗಿಯೇ ನಮ್ಮ ದೇಶದ ಚರಿತ್ರೆಗಾರರು ಬಹುಪಾಲು ಅಸ್ಪೃಶ್ಯರು ಭಾರತದ ಮೂಲ ನಿವಾಸಿಗಳೆಂಬುದಕ್ಕೆ ಒಪ್ಪಿಗೆ ನೀಡಿದ್ದಾರೆ. ಹೊರಗಿನಿಂದ ಬಂದ ಆರ್ಯರು ಈ ಕಾಡು ಜನರಂತಿದ್ದ ಮೂಲನಿವಾಸಿಗಳನ್ನು ತಿರಸ್ಕಾರದಿಂದ ಕಂಡಿರಬೇಕು. ಅವರ ಅನಾಗರೀಕ ವರ್ತನೆಯನ್ನು ನೋಡಿ ಅವರ ಜೊತೆ ಯಾವುದೇ ಸಂಪರ್ಕವನ್ನಿರಿಸಿಕೊಳ್ಳುವುದು ಮೈಲಿಗೆ ಉಂಟು ಮಾಡುತ್ತದೆ ಎಂದು ಭಾವಿಸಿರಬೇಕು. ಇದು ಬಹುಶಃ ಅಸ್ಪೃಶ್ಯತೆಗೆ ಕಾರಣವಾಗಿರಬೇಕು ಎಂಬುವುದು ನನ್ನ ಅಭಿಪ್ರಾಯವಾಗಿದೆ.

ಅಸ್ಪೃಶ್ಯರು ಮೂಲತಃ ಯಾರು, ಅಸ್ಪೃಶ್ಯತೆ ಹೇಗೆ ಆಚರಣೆಗೆ ಬಂತು ಎಂಬಲ್ಲಿ ಇತ್ತಿಚ್ಚಿನವರೆವಿಗೂ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅಸ್ಪೃಶ್ಯತೆ ಎನ್ನುವುದು ಮಾತ್ರ ಭಾರತಕ್ಕೆ ವಿಶಿಷ್ಟವಾದುದು. ಬೇರೆ ದೇಶಗಳೂ ಸಹ ಕೆಲವು ಗುಂಪುಗಳನ್ನು ಅಲ್ಲಿನ ಬ್ರಾಹ್ಮಣವನ್ನು ಅಳವಡಿಸಿಕೊಂಡಿರುವ ಜನರು (ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅನುಕೂಲಕರ ಸ್ಥಿತಿಯಲ್ಲಿರುವವರು) ಹೀನಾಯವಾಗಿ ಕಂಡಿರುವುದುಂಟು. ಉದಾಹರಣೆ ಅಮೆರಿಕದ ನಿಗ್ರೋಜನ. ಇವರು ಬಿಳಿಯರಿಂದ ಪಟ್ಟ ಬವಣಿ, ಅನುಭವಿಸಿದ ದೈಹಿಕಯಾತನೆ, ಹರಿಸಿದ ಕಣ್ಣೀರು ಇತಿಹಾಸದಿಂದ ನಮ್ಮಗೆಲ್ಲರಿಗೂ ತಿಳಿದ ವಿಷಯವೇ. ಆದರೆ ಈ ಭಾರತದ ಮೂಲನಿವಾಸಿಗಳನ್ನೇ ಮುಟ್ಟಲೂ ಯೋಗ್ಯರಲ್ಲವೆಂದು ಊರಿನಿಂದ ಹೊರಗೆ ಇಟ್ಟ ಉದಾಹರಣೆ ಭಾರತವನ್ನು ಬಿಟ್ಟರೆ ಬೇರೆಲ್ಲೂ ದೊರಕಲಾರದು. ಭಾರತದಲ್ಲಿ ಮುಟ್ಟಿದರೆ ಮೈಲಿಗೆಯಾಗುವ ೪೨೯ ಜಾತಿಗಳಿವೆ ಎಂದು ಅಂಕಿಅಂಶಗಳೂ ತಿಳಿಸುತ್ತವೆ.

ಅಸ್ಪೃಶ್ಯತೆ ಕುರಿತು ಹೇಳುವುದಾದರೆ “ಅಸ್ಪೃಶ್ಯತೆ ಜಾತಿ ವ್ಯವಸ್ಥೆಯ ಒಂದು ವಿಶಿಷ್ಟ ಆಯಾಮ. ಜಾತಿ ವ್ಯವಸ್ಥೆಯ ಮೂಲದಲ್ಲಿ ಮಡಿ, ಮೈಲಿಗಳ ಕಲ್ಪನೆ, ಮೇಲುಕೀಳುಗಳ ಕಲ್ಪನೆ, ಗೋತ್ರ ವಿವಾಹದ ಕಲ್ಪನೆಗಳಿವೆ. ಪ್ರತಿಯೊಂದು ಜಾತಿಯೂ ಬ್ರಾಹ್ಮಣನನ್ನು ಕೇಂದ್ರವಾಗಿಟ್ಟುಕೊಂಡು ಅಥವಾ ತೀರ ಮೇಲೆ ಇಟ್ಟು ತನ್ನ ಸ್ಥಾನವನ್ನು ನಿರ್ಣಯಿಸಿಕೊಳ್ಳುತ್ತದೆ. ಬ್ರಾಹ್ಮಣನಿಗೆ ತನಗಿಂತ ಕೆಳಗಿನ ಎಲ್ಲರೂ ಒಂದಲ್ಲ ಒಂದು ಪ್ರಮಾಣದಲ್ಲಿ ಮೈಲಿಗೆ ಉಂಟುಮಾಡುವವರೇ. ಹಾಗೆ ನೋಡಿದರೆ ಮೈಲಿಗೆಯ ಕಲ್ಪನೆ ವಿಶ್ವ ಸಾಮಾನ್ಯವಾದುದು. ಹುಟ್ಟು, ಋತುಸ್ರಾವ, ಸಾವು ಗರ್ಭಧಾರಣೆ ಇವುಗಳಿಗೆ ಸಂಬಂಧಿಸಿದಂತೆ ಅಶೌಚದ ಭಾವನೆ ಎಲ್ಲ ದೇಶಗಳಲ್ಲೂ ಕಂಡುಬರುತ್ತದೆ. ಆದರೆ ಅಸ್ಪೃಶ್ಯ ಉಂಟುಮಾಡುವ ಮೈಲಿಗೆ ಸವರ್ಣೀಯರಿಗೆ ತೀವ್ರ ಸ್ವರೂಪದ್ದು. ಭಯಾನಕವಾದದ್ದು. ಅಶೌಚ್ಚ ಅಥವಾ ಮೈಲಿಗೆ ಸಾಮಾನ್ಯವಾಗಿ ತಾತ್ಕಾಲಿಕವಾದ್ದು. ಕೆಲವು ವ್ಯಕ್ತಿ ಅಥವಾ ವಸ್ತುಗಳು ಒಂದು ನಿರ್ದಿಷ್ಟ ಅವಧಿಗೆ ಮೈಲಿಗೆಯಾಗುತ್ತವೆ. ಒಂದು ಉದ್ದೇಶ ಸಾಧಿತವಾಗಿ ಆ ಅವಧಿ ಮುಗಿದರೆ ಮೈಲಿಗೆ ಕೊನೆಗೊಳ್ಳುತ್ತದೆ. ಆದರೆ ಅಸ್ಪೃಶ್ಯತೆಯು ಅಸ್ಪೃಶ್ಯರಿಗೆ ಶಾಶ್ವತವಾಗಿ ಅಂಟಿದ ಶಾಪ. ಅವರನ್ನು ಮುಟ್ಟಿದರೆ ಹಿಂದೂಗಳು ಶುಚಿಗೊಳಿಸುವ ಕ್ರಿಯಾವಿಧಿಗಳ ಮೂಲಕ ಶುದ್ಧವಾಗಬಹುದು. ಆದರೆ ಅಸ್ಪೃಶ್ಯರನ್ನು ಶುದ್ಧಗೊಳಿಸುವಂತಹದು ಇಲ್ಲವೇ ಇಲ್ಲ ಎಂದು ಹೇಳಬಹುದು.

ಈ ಅಸ್ಪೃಶ್ಯತೆಯು ಇಂದಿನ ದಿನವರೆವಿಗೂ ಉಳಿದುಬಂದಿದೆ. ಹಾಗೆಯೇ ಇನ್ನೂ ಮುಂದೆಯೋ ಹಲವು ಕಾಲ ಮುಂದುವರೆಯುವ ಲಕ್ಷಣಗಳೇ ಕಾಣಿಸುತ್ತಿವೆ. ನಮ್ಮ ದೇಶದಲ್ಲಂತೂ ಇದಕ್ಕೆ ಸಾವೇ ಇಲ್ಲ. ಇಲ್ಲಿ ನಮ್ಮ ಲಿಖಿತ ಸಂವಿಧಾನದ ಆದೇಶ ಸತ್ತುಹೋಗಿದೆ. ಜೀತ ಪದ್ಧತಿ, ಬಲವಂತ ದುಡಿಮೆ, ಕೂಲಿಕಾರರ ಮಾರಾಟ ಇಂಥ ಅನಿಷ್ಟ ಪದ್ಧತಿಗಳಿಗೆಲ್ಲಾ ಇಂದು ಬಲಿಯಾಗುತ್ತಾ ಇರುವವರು ಬಹುಮಟ್ಟಿಗೆ ದಲಿತರೇ. ಗಣ್ಯ ರಾಜಕಾರಣಿಗಳು ಹಾಗೂ ಅಧಿಕಾರಿಗಳೆನ್ನಿಸಿಕೊಂಡವರು ಏನೇ ಹೇಳಿಕೊಳ್ಳಲಿ, ಇಂಥ ಅನಿಷ್ಟ ಪರಂಪರೆಗಳು ಹೆಚ್ಚುತ್ತಲೇ ಇವೆ. ಕಾನೂನು ಏನು ಹೇಳುತ್ತದೆ ಎಂಬುದು ಮುಖ್ಯವಲ್ಲ. ಅದು ಏನು ಮಾಡುತ್ತದೆ ಎಂಬುದೇ ನಿಜವಾದ ಕಾನೂನು. ನಿಜವಾಗಿ ಹೇಳುವುದಾದರೆ, ಕಾನೂನನ್ನು ಗೌರವಿಸುವಂತೆ ಜನರು ನಟಿಸುವ ಹಾಗೆ ಮಾತನಾಡುವುದಾಗಲಿ, ಸಂವಿಧಾನಾತ್ಮಕ ಆದೇಶಗಳೆನೆಂದು ಜನರಿಗೆ ತಿಳಿಯಪಡಿಸುವುದಷ್ಟೇ ಆಗಲಿ ಅದು ಕೇವಲ ನಾಟಕೀಯ ತಂತ್ರವಾಗುತ್ತದೆ. ಕಾನೂನನ್ನು ಜಾರಿಗೆ ತರುವಂತೆ ಮಾಡುವುದು ಅತ್ಯಂತ ತುರ್ತಿನ ಕೆಲಸ. ಇಂದು ದಲಿತರಿಗೆ ತೋರಿಸಲಾಗುತ್ತಿರುವ ಮಹಾ ವಿಶ್ವಾಸಘಾತವು ಸಂವಿಧಾನದ ಪ್ರತಿಜ್ಞೆಯನ್ನೇ ಅಸಂಬದ್ಧಗೊಳಿಸುತ್ತಿರುತ್ತದೆ. ಆದರೂ ಇದು ಸತ್ಯ. ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಎಂಬ ಪದಗಳೆಲ್ಲ ಕೇವಲ ಬೂಟಾಟಿಕೆಯ ಮಾತಾಗಿದೆ. ಏಕೆಂದರೆ ಸಮಕಾಲೀನ ಭಾರತದ ಸಾಮಾಜಿಕ ಆರ್ಥಿಕ ನೆಲೆಗಳಲ್ಲಿ “ಸಾಮಾಜಿಕ ನ್ಯಾಯ” ಎಂಬ ಒಂದು ವಿನೂತನ ಪರಿಕಲ್ಪನೆ ರಾಜಕೀಯ ನೆಲೆಯಲ್ಲಿ ರಾಜಕೀಯವಾಗಿ ಮಾತ್ರ ಬಳಕೆಯಾದರೆ, ನ್ಯಾಯಾಂಗದ ನೆಲೆಯಲ್ಲಿ ಅದನ್ನು ತುಂಬಾ ವ್ಯಾಪಕವಾದ ಅರ್ಥವ್ಯಾಪ್ತಿಯಲ್ಲೇ ಬಳಸಲಾಗುವುದು. ಅದರಲ್ಲೂ ಸಾಮಾಜಿಕ ಅಸಮಾನತೆಯಲ್ಲಿ ತೊಳಲಾಡುತ್ತಿರುವ ಭಾರತದಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ನ್ಯಾಯದ ಕುರಿತು ಯಾವುದೇ ಸಂದರ್ಭದಲ್ಲಿಯೂ ಶಾಹು ಮಹಾರಾಜ, ಜ್ಯೋತಿಬಾ ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್, ಗಾಂಧೀಜಿ, ಸವಾಮಿ ವಿವೇಕಾನಂದ, ಪೆರಿಯಾರ್ ಇತ್ತೀಚಿನ ದೇವರಾಜ ಅರಸರವರ ಸಾಮಾಜಿಕ ತತ್ವ ಚಿಂತನೆಯು ಅನಿವಾರ್ಯವಾಗಿ ಪ್ರಸ್ತಾಪಿಸಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಅವರುಗಳು ಕೈಗೊಂಡಂತಹ ಸಾಮಾಜಿಕ ನ್ಯಾಯದ ಮೂಲಧಾತುವೇ ಕಾರಣವಾಗಿರಬಹುದು.

ಸಾಮಾಜಿಕ ನ್ಯಾಯ ಎಂಬ ಪ್ರಶ್ನೆಗೆ ಉತ್ತರ ಸುಲಭವೂ ಹೌದು ಹಾಗೆಯೇ ಕಠಿಣವೂ ಹೌದು. ಅಲಸ್‌ಡೈರ್ (Alasdyre) ಅವರ ಪ್ರಕಾರ ಸಾಮಾಜಿಕ ನ್ಯಾಯ ಎಂಬುದು ಒಳಿತು. ನಿಷ್ಪಕ್ಷಪಾತ ಎಂಬ ಪದಕ್ಕೆ ಸಮಾನವಾದ ಪದವಾಗಿದೆ. ಹಾಗಾದರೆ ಬೇರೆಯವರಿಗೆ ನ್ಯಾಯ ಸಲ್ಲಿಸುವುದು, ಒಳಿತು ಮಾಡುವುದು, ಅವರವರಿಗೆ ತಕ್ಕ ಸ್ಥಾನಮಾನವನ್ನು ನೀಡುವುದು. ‘ಅರ್ಹತೆ’ ಎಂಬುದು ‘ನ್ಯಾಯ’ ಪರಿಕಲ್ಪನೆಯ ಒಂದು ಅಂಶ. ಆದರೆ ಈ ‘ಅರ್ಹತೆ’, ‘ತಕ್ಕ’ ಎಂಬುದು ಪರಂಪರೆಯಿಂದ ಪರಂಪರೆಗೆ ಭಿನ್ನವಾಗುತ್ತದೆ. ಉದಾಹರಣೆಗೆ ಕರ್ಮ ಸಿದ್ಧಾಂತದ ಪ್ರಕಾರ ಅವರವರಿಗೆ ತಕ್ಕ ಸ್ಥಿತಿ ತನ್ನಿಂದ ತಾನೇ ಉಂಟಾಗುತ್ತದೆ. ಅಂದರೆ ಅವರವರ ಕರ್ಮದ ಪರಿಣಾಮವಾಗಿ ಅವರವರ ಸ್ಥಾನ ಲಭ್ಯವಾಗುತ್ತದೆ. ಆದರೆ ನಾವು ವ್ಯಾಖ್ಯಾನಿಸುವ ವಿಚಾರವಾದಿ ರೀತಿ ಈ ಬಗೆಯದಲ್ಲ ಎಂದು ಮೈನಲ್‌ ಮೀರಿ ಹೇಳುತ್ತಾರೆ.

ಯಾವುದೇ ಒಂದು ಕಾಲ ಮತ್ತುದೇಶದ ವಾಸ್ತವಕ್ಕೆ ಸಂಬಮಧಿಸದಿರುವ ಕೇವಲವಾದ ಸ್ವಾತಂತ್ರ್ಯ ಮಾರಿಕಟ್ಟೆಯಲ್ಲಿ ಸಿಕ್ಕದ್ದು. ಸ್ವಾತಂತ್ರ್ಯವೆನ್ನುವುದು ಮತ್ತೇನನ್ನೇ ಸೂಚಿಸಲಿ ಬಿಡಲಿ, ಹಲವಾರು ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನಂತೂ ನಿಶ್ಚಿತವಾಗಿ ಸೂಚುಸುತ್ತದೆ. ಆಯ್ಕೆಯೆಂದರೆ ನಿಜವಾದ ಆಯ್ಕೆ. ನಾಮಮಾತ್ರವಾದುದ್ದಲ್ಲ. ಅಂದರೆ ವಾಸ್ತವಾಗಿಯೂ ಹಲವಾರು ವಸ್ತುಗಳ ಎದುರಿನಲ್ಲಿದ್ದು ಅವುಗಳಲ್ಲಿ ತನಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾದ ನಿಜವಾದ ಅಧಿಕಾರ ಕಾಗದದಲ್ಲಷ್ಟೇ ನಮೂದಾಗಿರುವ ಅಮುರ್ತ ಅಧಿಕಾರದಲ್ಲಿ, ಸ್ವಾತಂತ್ರ್ಯದ ಅರ್ಥ, ಸಂಕ್ಷೇಪವಾಗಿ ನಿಶ್ಚಿತ ಸಂದರ್ಭದ ನಿಶ್ಚಿತ ಕ್ಷಣದಲ್ಲಿ ನಿಶ್ಚಿತವಾದ ಯಾವುದೋ ಒಂದನ್ನು ಮಾಡಲು ಆಥವಾ ಮಾಡದೇ ಇರಲು ನಮಗೆ ಅಧಿಕಾರವಿರುವುದು. ಹಾಗಿಲ್ಲದಿದ್ದಲ್ಲಿ ಸ್ವಾತಂತ್ರ್ಯ ವೆಂಬುದಕ್ಕೆ ಅರ್ಥವೇ ಇಲ್ಲ. ಚಿಂತನೆ, ಸಂಕಲ್ಪ, ಕ್ರಿಯೆ ಇವುಗಳಿದ್ದಲ್ಲಿ ಮನುಷ್ಯ ಪೂರ್ಣ ಮನುಷ್ಯನಾಗುತ್ತಾನೆ ಎಂದೆನ್ನಿಸುತ್ತದೆ. ಹಾಗೆಂದುಕೊಂಡು ಕವಿಗಳು ಲೇಖಿಸುವ ಚಿತ್ರರೇಖೆಗಳು ಮೋಹವೆನ್ನುಸುತ್ತವೆ. ಅದೇನೇ ಇರಲಿ. ಕಾವ್ಯ ಬಿಟ್ಟು ದಿನನಿತ್ಯದ ಬದುಕಿನ ಗದ್ಯದಲ್ಲಿ ಸ್ವಾತಂತ್ರ್ಯವೆನ್ನುವುದು ಬದಿಕಿನ ಒಂದು ಅಂಗ, ವಾಸ್ತವವಾದದ್ದು ಮತ್ತು ಕ್ರಿಯಾ ರೂಪವುಳ್ಳದ್ದು. ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ನಿಶ್ಚತವಾದ ಅಗತ್ಯಗಳಿವೆ. ಬದುಕಿರಲು ಬೇಕಾದ ಭೌತಿಕವಸ್ತು ಸರಕುಗಳಿಂದ ಮೊದಲುಗೊಂಡ ಮಾತು ಬರವಣಿಗೆಗಳ ಮೂಲಕ ತನ್ನನ್ನು ಅಭಿವ್ಯಕ್ತಗೊಳಿಸಿಕೊಳ್ಳುವ ಅಗತ್ಯದ ತನಕ. ಸಾರ್ವತ್ರಿಕ ಆಸಕ್ತಿಯ ವ್ಯವಹಾರಗಳಲ್ಲಿ ತಾನೂ ಪಾಲಿಗೊಳ್ಳಬೇಕೆಂಬ ಅಗತ್ಯದ ತನಕ. ತನ್ನದೆ ರೀತಿಯಲ್ಲಿ ತನ್ನ ದೇವರನ್ನು ಪೂಜಿಸುವ ಅಥವಾ ಪೂಜಿಸುವುದಿಲ್ಲ ಎಂದು ನಿಷೇಧಿಸುವ ಅಗತ್ಯದ ತನಕ. ವ್ಯಕ್ತಿಯ ಸ್ವಾಸ್ಥ್ಯ ಉಳಿಸಿಕೊಳ್ಳಲಿಕ್ಕೆ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಸಂಕ್ಷೇಪದಲ್ಲಿ ಸಾರಾಂಶ ಹೇಳುವುದಾದರೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವೆಂಬುದು, ನಿಸರ್ಗದ ಮಿತಿಯಲ್ಲಿ ಮತ್ತು ತನ್ನ ಹಾಗೇ ಬದುಕುವ ಇತರ ಸಹವಾಸಿಗಳಿಗೂ ಇಂಥ ಫಲಾನುಭವ ಸಿಗಬೇಕಾಗುವ ಮಿತಿಯಲ್ಲಿ. ತನ್ನ ಭೌತಿಕ ಹಾಗೂ ಭೌತಿಕೇತರ ಅಗತ್ಯಗಳನ್ನು ಪೂರೈಸಿಕೊಳ್ಳಲಿಕ್ಕೆ ಸಿಗುವ ಅಧಿಕಾರ.

ಎಂದು ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿಶ್ಲೇಷಿಸುತ್ತಾರೆ. ಅಂಬೇಡ್ಕರ್ ರವರ ಮೇಲಿನ ಸಾಲುಗಳಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ವ್ಯಕ್ತವಾಗುವ ಅಂಶಗಳು ಕಂಡುಬರುತ್ತವೆ. ಈ ರಾಷ್ಟ್ರದ ವೈರುಧ್ಯ ಸಂಸ್ಕೃತಿಯನ್ನು ಅಂಬೇಡ್ಕರ್ ಗೂ ಹಿಂದೆ ಅನೇಕರು ಪ್ರಶ್ನಿಸಿದ್ದರೂ ಸಹ, ಅದು ಫಲಕಾರಿಯಾದಂತೆ ಕಂಡುಬರುವುದಿಲ್ಲ. ಆದರೆ ಅಂಬೇಡ್ಕರ್ ಜನಾಂದೋಲನದ ಮೂಲಕ ಮೊದಲ ಬಾರಿಗೆ ಪ್ರಶ್ನಿಸಿ ಸ್ಪಷ್ಟ ಸಂಸ್ಕೃತಿಯನ್ನು ರೂಪಿಸಿದ ಮಹಾನ್ ವ್ಯಕ್ತಿ. ಯಜಮಾನ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಸಮ ಸಂಸ್ಕೃತಿಯನ್ನು ಬೆಳೆಸಿದ ಅಂಬೇಡ್ಕರ್ ಈ ದೇಶದ ನಿಜವಾದ ಸಂಸ್ಕೃತಿಯನ್ನು ಪ್ರತಿಪಾದಿಸಿದ ವಾರಸುದಾರರಾದವರು. ಸಂವಿಧಾನದ ಮೂಲಕ ಜೀವನ ವಿಧಾನದ ಅನೇಕ ಮಜಲುಗಳನ್ನು ಸಮಾನತೆಯ ಹಿನ್ನೆಲೆಯಲ್ಲಿ ಸರಳೀಕೃತಗೊಳಿಸಿ ಸ್ಪಷ್ಟ ಸಂಸ್ಕೃತಿ ಮೂಡಲು, ಮೂಡಿಬರಲು ಕಾರಣರಾದರು. ನಮ್ಮ ರಾಷ್ಟ್ರದ ಹಾಗೂ ಹಿಂದೂಗಳೆಂದು ಹೇಳಿಕೊಳ್ಳವವರು ಸೃಷ್ಟಿಸಿರುವ ಸಂಸ್ಕೃತಿಯನ್ನು ಸ್ಪಷ್ಟವಾಗಿ ತಿಳಿಯದ ಹೊರತು ಹಾಗೂ ನಮ್ಮ ಜೀವನದ ನೆಲೆಗನ್ನರಿಯದ ಹೊರತು ನಮಗೆ ನಮ್ಮ ಸಾಮಾಜಿಕ ಅನ್ಯಾಯದ ಬಗ್ಗೆ ಮಾತನಾಡಲು ಪ್ರತಿಪಾದಿಸಲು ಹಾಗೂ ಕೇಳಲು ಸಾಧ್ಯವಾಗುವುದಿಲ್ಲ. ಪುರೋಹಿತಶಾಹಿಗಳು ಅಜ್ಞಾನಿಗಳನ್ನಾಗಿ ಮಾಡಿದ್ದಂತಹ ಶೂದ್ರ ಹಾಗೂ ಪಂಚಮರ ಮೇಲೆ (ದಲಿತರು) ತಮ್ಮ ಭವ್ಯ ಸಂಸ್ಕೃತಿಯೆಂದು ಹೇಳಿಕೊಳ್ಳುತ್ತಿದ್ದಂತಹ ಧರ್ಮ, ದೇವರು, ದೇವಸ್ಥಾನ, ಹಬ್ಬ, ದಿಬ್ಬಣ, ಮದುವೆ, ಸಂಸಾರ, ಕರ್ಮ ಇವೆಲ್ಲವುಗಳಿಗೆ ಅಂಬೇಡ್ಕರ್ ನೀಡಿದ್ದ ಉತ್ತರ ಸ್ಪಷ್ಟ ಹಾಗು ಸರಳವಾದುದಾಗಿತ್ತು. ಈ ನಿಟ್ಟಿನಲ್ಲಿ ಅವರ ಬರಹಗಳು ಮತ್ತು ಭಾಷಣಗಳು ಎಂಬ ೨೦ ಸಂಪುಟಗಳು ಮಹಾನ್ ಕೃತಿಗಳಾಗಿ ಕನ್ನಡದಕ್ಕೆ ಅನುವಾದಗೊಂಡಿವೆ. ಇಂದಿನ ಯುವಜನತೆ ಹೆಚ್ಚುಹೆಚ್ಚಾಗಿ ಈ ಕೃತಿಗಳನ್ನು ಪರಾಮರ್ಶಿಸಬೇಕಾಗಿದೆ. ಏಕೆಂದರೆ ಪ್ರಸ್ತುತ ಸಾಮಾಜಿಕ ಸಂದರ್ಭದ ಅನೇಕ ಜ್ವಲಂತ ಸಮಸ್ಯಗಳಿಗೆ ಅಂಬೇಡ್ಕರ್ ಅವರ ಬರವಣಿಗೆಯಲ್ಲಿ ಉತ್ತರವಿದೆ. ೧೯ನೇ ಶತಮಾನದ ಕೊನೆಯಲ್ಲಿ ಜನಿಸಿ ೨೦ನೇ ಶತಮಾನದ ಯುಗಪುರುಷನಾಗಿ ದೀನ-ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇಎ ಮುಡುಪಾಗಿಟ್ಟು ಮಹಾತ್ಮ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಬರವಣಿಗೆ ಹಾಗೂ ಭಾಷಣಗಳಿಂದ ದಲಿತರಲ್ಲಿ ಜ್ಞಾನದ ಪ್ರಜ್ಞೆಯನ್ನು ಹುಟ್ಟುಹಾಕಿದರು. ಸಹಸ್ರಾರು ನೊಂದ ಜೀವಿಗಳ ದನಿಯಾಗಿ ನಿಂತ ಅಂಬೇಡ್ಕರ್ ಬದಿಕಿನ ಅನೇಕ ನಿಷ್ಠೂರತೆಗಳನ್ನು ತಮ್ಮ ಬರವಣಿಗೆ ಮೂಲಕ ತಿಳಿಸಿದ್ದಾರೆ. ಇಲ್ಲಿಯ ಅನೇಕ ವಿಚಾರಗಳು ಇಂದಿಗೂ ಹಾಗೂ ಮುಂದೆಯೂ ಪ್ರಸ್ತುತವೆನಿಸದೇ ಇರದು. ಪ್ರಸ್ತುತ ಸಾಮಾಜಿಕ ನ್ಯಾಯ, ಸಾಮಾಜಿಕ ಪರಿವರ್ತನೆ ಹಾಗೂ ಬದಲಾವಣೆ ಎನ್ನುವ ಈ ಪದಗಳಿಗೆ ಸೂಕ್ತವಾದ ಉತ್ತರವನ್ನು ಅವರ ಬರವಣಿಗೆಗಳು ಸಂಕ್ಷಿಪ್ತವಾಗಿ ವಿವರಿಸುತ್ತವೆ.

ಬುದ್ಧ ರಾಜಮನೆತನದಲ್ಲಿ ಹುಟ್ಟಿ ರಾಜ ವೈಭವವನ್ನು ತಿರಸ್ಕರಿಸಿದರೆ, ಬಸವಣ್ಣ ರಾಜಸತ್ತೆಯಲ್ಲಿದ್ದುಕೊಂಡೇ ಅದನ್ನು ನಿರ್ಲಕ್ಷಿಸಿದ. ಬುದ್ಧನ ದಯೆ ಬಸವಣ್ಣನಲ್ಲಿ ಧರ್ಮವಾಗಿ ಫಲ್ಲವಿಸಿದರೆ, ಬಸವಣ್ಣನ ದಲಿತ ವಿಮೋಚನಾ ಚಳುವಳಿ ಅಂಬೇಡ್ಕರ್ ಅವರಲ್ಲಿ ಚಿಗುರೊಡೆದು ನಿಲ್ಲುತ್ತದೆ. ಆದುದರಿಂದಲೇ ಈ ದೇಶದಲ್ಲಿ ಬುದ್ಧ-ಬಸವಣ್ಣ-ಅಂಬೇಡ್ಕರ್ ಅವರೆಲ್ಲ ಹೊಸ ವ್ಯವಸ್ಥೆಯ ನಿರ್ಮಾಣಕ್ಕಾಗಿ, ಸಾಮಾಜಿಕ ಬದಲಾವಣೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಪ್ರಯತ್ನಿಸಿದವರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಂದರ್ಭವು ಎಲ್ಲ ಕ್ಷೇತ್ರದಲ್ಲಿಯೂ ಬೆಳವಣಿಗೆಯಾಗಿದೆ. ಆದರೆ ಪ್ರಮುಖವಾಗಿ ಬೇಕಾಗಿದ್ದಂತಹ ಮಾನವೀಯ ಮೌಲ್ಯಗಳು ಮಾತ್ರ ನಿರೀಕ್ಷಿಸಿದಂತೆ ಬೆಳೆದುಬಂದಿಲ್ಲ. ಅವು ಬೆಳೆದು ಬರುವಂತೆಯೂ ಕಾಣುತ್ತಿಲ್ಲ. ಏಕೆಂದರೆ ಮನುಷ್ಯ ಏನೆಲ್ಲ ಆಗಬಹುದು ಆದರೆ ಮನುಷ್ಯನಾಗಿ ಬದುಕುವುದು ಕಷ್ಟ. ಬುದ್ಧ- ಬಸವಣ್ಣ-ಅಂಬೇಡ್ಕರ್ ಅವರ ವ್ಯಕ್ತಿತ್ವದ ಘನತೆ ಇರುವುದು ಇಲ್ಲಿಯೆ. ಮಾನವೀಯ ಮೌಲ್ಯಗಳ ಹರಿಕಾರರಂತೆ ಕಾಣುವ ಇವರುಗಳು ಮನುಷ್ಯರ ಪ್ರಯತ್ನದ ಗೌರವದ ಸಂಕೇತವಾಗಿ ಕಾಣುತ್ತಾರೆ. ಇಂದಿನ ಸಮಾಜದಲ್ಲಿ ದ್ವೇಷ, ವೈಷಮ್ಯ, ದೌಜನ್ಯ, ಅತ್ಯಾಚಾರ, ಕೊಲೆ, ಸುಲಿಗೆ, ಅರಾಜಕತೆ, ಪ್ರತ್ಯೇಕತೆಗಳು ತಾಂಡವಾಡಿತ್ತಲಿವೆ. ಕಾಶ್ಮೀರದಲ್ಲಿ ನಿತ್ಯವೂ ಉಗ್ರಗಾಮಿಗಳ ಗುಂಡಿಗೆ ಆಹುತಿಯಾಗುತ್ತಿರುವ ದೇಹಗಳಿಗೆ ಇಂದು ಆಶ್ಚರ್ಯ ಹುಟ್ಟಿಸದ, ದುಃಖಿಸದ ಸಂದರ್ಭ ಬಂದೊದಗಿದೆ. ಇವುಗಳು ನಡೆಯದೆ ಇರುವ ದಿನಗಳೇ ಇಲ್ಲವೆಂದಾಗಿದೆ. ಜಾತಿಯತೆ ತಾಂಡವಾಡುತ್ತಿದೆ. ಕೋಮು ಗಲಭೆ ದಿನೇದಿನೇ ಉಲ್ಬಣಗೊಳ್ಳುತ್ತಿದೆ. ದಲಿತರ ಮೇಲಿನ ದೌರ್ಜನ್ಯಕ್ಕೆ ಎಡೆಯೇ ಇಲ್ಲವಾಗಿದೆ. ಆದರೆ ಮನುಷ್ಯ ತನ್ನನ್ನು ತಾನರಿತರೆ, ಸಮಾಜ ವ್ಯವಸ್ಥೆಯಲ್ಲಿ ತನ್ನನ್ನು ಮನುಷ್ಯನಂತ ಗುರುತಿಸಿಕೊಂಡರೆ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದೇನೋ. ಆದರೆ ಇಂದು ದೇಶವೇ ಇವೆಲ್ಲವುಗಳಿಂದ ಉರಿಯತೊಡಗಿದೆ. ಇಂತಹ ಸಂದರ್ಭದಲ್ಲಿ ಈ ದೇಶದ ವಿಚಾರವಾದಿಗಳು ಚಿಂತಕರ ಆಲೋಚನೆಗಳು ಹೆಚ್ಚುಹೆಚ್ಚು ಪ್ರಸ್ತುತವಾಗಿ ಕಾಣಿಸುತ್ತಿವೆ. ಈ ದೃಷ್ಟಿಯಲ್ಲಿ ಈ ಕೃತಿಯಲ್ಲಿನ ಲೇಖನಗಳು ಓದುಗರನ್ನು ಚಿಂತನೆಗೆ ಎಡೆಮಾಡುತ್ತವೆನ್ನಬಹುದು.

ಭಾರತದಲ್ಲಿ ಇಂಥ ವ್ಯತ್ಯಾಸ ಏಕಿದೆ? ಏಕೆ ಸವರ್ಣೀಯರೆಂದು ಅಮೆರಿಕದಲ್ಲಿ ಕರೆಸಿಕೊಳ್ಳುವ ಬಿಳಿಯರು ಕರಿಯರಾದ ನೀಗ್ರೋಗಳ ಏಳ್ಗೆಗಾಗಿ ಇಷ್ಟೆಲ್ಲ ಸೇವೆ ತ್ಯಾಗಗಳ ಶ್ರಮ ಹಾಕುತ್ತಿದ್ದಾರೆ. ಏಕೆ ಹಿಂದೂಗಳಲ್ಲಿಯೇ ಸವರ್ಣಿಯರೆಂದು ಕರೆದುಕೊಂಡಿರುವವರು ಅಸ್ಪೃಶ್ಯರ ಏಳಿಗೆಗಾಗಿ ಏನು ಮಾಡಲು ಆಸಕ್ತಿ ತೋರಿಸಿಲ್ಲ? ಉತ್ತರವೂ ನಮ್ಮ ಬಳಿಯಲ್ಲಿ ದೊರಕದೆ ಇರದು. ಇದಕ್ಕೆ ಉತ್ತರ, ಅಮೆರಿಕನ್ನರಿಗೆ ಸಾಮಾಜಿಕ ಪ್ರಜ್ಞೆಯಿದೆ, ಹಿಂದೂಗಳಿಗೆ ಸಾಮಾಜಿಕ ಪ್ರಜ್ಞೆಯಿಲ್ಲ ಎಂಬುದು. ಇದರರ್ಥ ಹಿಂದೂಗಳಿಗೆ ಸರಿ-ತಪ್ಪು, ಒಳಿತು-ಕೆಡಕು, ನೀತಿ- ಅನೀತಿಗಳ ಅರಿವು ಇಲ್ಲ ಎಂದರ್ಥವಲ್ಲ. ಅವರ ನೈತಿಕ ಕಾಳಜಿಗಳು ಸಣ್ಣ ಜನವರ್ಗವೊಂದಕ್ಕೆ ಮಾತ್ರ ಅಂದರೆ ತನ್ನ ಜಾತಿಯ ಜನರಿಗೆ ಮಾತ್ರ ಸೀಮಿತವಾಗಿ ಬಿಟ್ಟಿದೆ. ಇದು ಹಿಂದೂಗಳಲ್ಲಿ ಇರುವ ಪ್ರಮುಖ ದೋಷ.

ಏಕೆಂದರೆ ಒಬ್ಬ ಮನುಷ್ಯ ಒಂದು ಸೀಮಿತ ಜನವರ್ಗದ ಸಭ್ಯ ಸದಸ್ಯನಾಗಿದ್ದುಕೊಂಡು ನೈತಿಕವಾಗಿ ಒಳ್ಳೆಯ ಮನುಷ್ಯನಾಗದೇ ಇರಲು ಸಾಧ್ಯವಿದೆ. ತನ್ನ ವೈಯಕ್ತಿಕ ಜೀವನ ತತ್ವವನ್ನು ಸಂಬದ್ಧವಾಗಿ ಆಚರಣೆಗೆ ತರುವ ಒಬ್ಬ ಮನುಷ್ಯನಲ್ಲಿ ನೈತಿಕ ಔನ್ನತ್ಯದ ಸೂಚನೆ ಅಥವಾ ಛಾಯೆ ಇದೆಯೆಂದು ಆಗಾಗ ಅನಿಸುವುದುಂಟು, ಅಂಥ ಒಂದು ಗುಣವನ್ನು ಯಾವ ಸಮಾಜದ ಸದಸ್ಯನಾಗಿದ್ದರೂ ಸರಿ, ಕಳ್ಳಗುಂಪಿನ ಸದಸ್ಯನಾಗಿದ್ದರು ಕೂಡ ಈ ಆದರ್ಶ ಇರಬಹುದು ಅನಿಸುವುದುಂಟು. ಆದರೆ ಕಳ್ಳರ ಗುಂಪಿನಲ್ಲಿ ಗೌರವಯುತ ಸದಸ್ಯರಿದ್ದಾರೆ ಎಂದ ಮಾತ್ರಕ್ಕೆ ಕಳ್ಳರನ್ನೇ ಗೌರವಸ್ಥರು ಎನ್ನಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಜವಾದ ಅರ್ಥದಲ್ಲಿ ನೈತಿಕತೆಯ ಒಳ್ಳೆಯತನವಿರುವ ಒಬ್ಬ ಮನುಷ್ಯ ಒಂದು ಸೀಮಿತ ಸಮಾಜದ ಸತ್ಸದಸ್ಯನಾಗಿದ್ದರೆ ಸಾಲದು, ವಿಸ್ತಾರ ಜನವರ್ಗದ, ಹಲವು ಸಮಾಜಗಳನ್ನೊಳಗೊಂಡ ವಿಶಾಲ ಸಮಾಜದ ಸತ್ಸದಸ್ಯನಾಗಿರಬೇಕು. ಇಂಥ ವಿಶಾಲ ಸಮಾಜದಲ್ಲಿದ್ದು ಆತ ಎಲ್ಲ ಸಮಾಜಗಳ ಉದ್ದೇಶಗಳನ್ನು ಹೊರಗಿಟ್ಟು ಅದಕ್ಕೆ ವಿರುದ್ಧವಾದ ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತಹ ಪ್ರತ್ಯೇಕತೆಯನ್ನು ಸೃಷ್ಟಿಸಿಕೊಳ್ಳಬಾರದು. ಆದರೆ ಇಂದು ಆಗುತ್ತಿರುವುದೆಲ್ಲವೂ ಇದಕ್ಕೆ ವಿರುದ್ಧವಾದದ್ದು. ಈಗಾದಾಗ ಸಾಮಾಜಿಕ ನ್ಯಾಯ ಅಥವಾ ಸುಧಾರಣೆ ಎಲ್ಲಿಂದ ಸಾಧ್ಯ?.

ಮಾನವನ ಹುಟ್ಟು ಆಕಸ್ಮಿಕ ಎಂಬ ಮಾತೊಂದಿದೆ. ಹುಟ್ಟಿನಿಂದ ಒಬ್ಬ ಮಾನವನ ಮೇಲು ಮತ್ತೊಬ್ಬ ಕೀಳು ಎಂಬುದು ಅತ್ಯಂತ ಅಮಾನವೀಯವಾದ ನಿಯಮ. ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಹುಟ್ಟಿನ ಆಧಾರದಿಂದ ವಿಭಜನೆಯಾಗಿ ಇಡೀ ಸಮಾಜದ ಪ್ರಗತಿಗೆ ಮಾರಕವಾಗುವುದನ್ನು ನಮ್ಮ ಇತಿಹಾಸದಿಂದ ಅರಿಯಬಹುದಾಗಿದೆ. ಆದಿಕಾಲದ ಮಾನವರು ನಾಗರಿಕ ಬದುಕಿಗೆ ಬರುವ ಸಂದರ್ಭದಲ್ಲಿ ಹಲವು ಮಾರ್ಪಾಡುಗಳಾಗಿ, ತಮ್ಮ ಅನುಕೂಲಕ್ಕಾಗಿ ಹಲವು ವ್ಯಾಖ್ಯಾನಗಳನ್ನು ಕಟ್ಟಿಕೊಂಡರು. ಅವು ಜಡವಾಗಿ, ಮೂಢನಂಬಿಕೆಗಳಾಗಿ ಮಾನವರು ತನ್ನ ಸ್ವಾರ್ಥಕ್ಕೆ ಸುಖ ಲೋಲಪತೆಗೆ ನೂರಾರು ಕಟ್ಟುಪಾಡುಗಳನ್ನು ವಿಧಿಸಿಕೊಂಡರು. ಇದನ್ನು ನಾವು ಜಗತ್ತಿನ ಎಲ್ಲ ನಾಗರಿಕತೆಗಳಲ್ಲಿ ಸಾಧ್ಯವಾಗಿದೆ ಎಂದರೆ ತಪ್ಪಾಗದು. ಇಂಥ ಮೌಢ್ಯ ಹಾಗೂ ಶೋಷಣೆಯನ್ನು ಸುಧಾರಿಸಲು ಕಾಲಕಾಲಕ್ಕೆ ಹಲವು ಸುಧಾರಕರು ಜನಿಸಿದ್ದಾರೆ. ತಮ್ಮ ಚಿಂತನೆಗಳನ್ನು ಮಂಡಿಸಿ ಜನರ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಭಾರತದ ಚರಿತ್ರೆಯಲ್ಲಿ ಇಂಥ ಸುಧಾರಕರು ಕ್ರಾಂತಿಕಾರಿಗಳು ಹಲವರು. ಈ ಹಂತದಲ್ಲಿ ಬುದ್ಧನ ಆದರ್ಶಪರತೆ, ಬಸವನ ಕಾರ್ಯತತ್ಪರತೆ, ಅಂಬೇಡ್ಕರ್ ಅವರ ಅಹಿಂಸಾತ್ಮಕ ಪ್ರಬಲ ಪ್ರತಿಭಟನಾತ್ಮಕ ಜನತಾ ಹೋರಾಟಗಳು ಅಪೂರ್ವವಾದವು

ವರ್ಣವ್ಯವಸ್ಥೆ ತನ್ನ ಬಿಗಿಮುಷ್ಠಿಯಲ್ಲಿ ಇಂದು ದಲಿತ ಜನರನ್ನು ಸಿಕ್ಕಿಸಿಕೊಂಡು ತನ್ನ ಬಾಹುಗಳನ್ನು ಚಾಚು ತಪ್ಪುತ್ತಿರುವ ಹಿಂದೂ ಸಮಾಜ ಒಂದರ್ಥದಲ್ಲಿ ಜಿಡ್ಡುಗಟ್ಟಿ ಹೋಯಿತು. ಭಾರತೀಯ ಹಿಂದೂ ಸಮಾಜ ಜಾತಿಗಳಾಗಿ ಬಿಗಿ ಹಾಗೂ ಕಟ್ಟುಪಾಡುಗಳಾಗಿ ಬೆಳೆದುಬಂದವು. ವರ್ಣದಿಂದಾಚೆ ಜನಾಂಗವೊಂದು ಉಳಿಯಿತು. “ಅಸ್ಪೃಶ್ಯ” ಜನಾಂಗವೊಂದು ಭಾರತೀಯ ಸಮಾಜದ ಶ್ರೇಣಿಯಲ್ಲಿ ಕಟ್ಟಕಡೆಯ ಹಂತವಾಯಿತು. ಅಂಬೇಡ್ಕರ್ ಈ ಸಮಾಜದ ನಿರ್ಲಕ್ಷ್ಯಕ್ಕೊಳಗಾದ ಅಸ್ಪೃಶ್ಯ ಜನಾಂಗದಲ್ಲಿ ಹುಟ್ಟಿನಿಂದಲೇ ಅವರ ಕಷ್ಟಗಳಿಗೆ ದನಿಯಾದರು, ಆ ಜನಾಂಗಕ್ಕೆ ಬಾಯಿಯಾದರು. ನಿಜವಾದ ಭಾರತದ ಸಾಮಾಜಿಕ ಚರಿತ್ರೆಗೆ ಮುನ್ನುಡಿ ಬರೆದರು ಮೂಕ ಮಾನವ ಕುಲದ ಮಾತಿನ ಸಂಕೇತವಾದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಪ್ರತಿಭಟನೆಯ ಕಿಡಿಯಾದರು. ಆದರೆ ಇಂದಿಗೂ ಈ ವರ್ಣವ್ಯವಸ್ಥೆ ಜಾರಿಯಲ್ಲಿದ್ದರೂ ನಮ್ಮ ದಲಿತ ಸಂಘಟನೆಗಳು ಅಂಬೇಡ್ಕರ್ ಆದರ್ಶಗಳನ್ನು ಮರೆತು ಸ್ವಾರ್ಥ ಕೆಲಸಗಳಲ್ಲಿ ತೊಡಗಿ ತಮ್ಮ ಅಸ್ತಿತ್ವವನ್ನು ಉಳಿಗಮಾನ್ಯ ಶಾಹಿಗಳು ಹಾಗೂ ಬಂಡವಾಳಶಾಹಿತ್ವದ ರಾಜಕಾರಣಿಗಳಿಗೆ ಮಾರಿಕೊಂಡು ಸತ್ಯಕ್ಕೆ ಮಂಗಳ ಹಾಡುತ್ತಿದ್ದಾರೆ.

ಅಸ್ಪೃಶ್ಯತೆ ಮತ್ತು ವರ್ಣಭೇದಗಳು ಪ್ರಪಂಚದ ಎರಡು ಅಮಾನವೀಯ ಕ್ರೌರ್ಯಗಳು. ಇವುಗಳ ವಿರುದ್ಧದ ಹೋರಾಟ ಮಾನವೀಯತೆ ಪರವಾದ ಹೋರಾಟವಾಗಿದೆ. ಭಾರತದಲ್ಲಿ ಇಂತಹ ಹೋರಾಟದ ಮುಂಚೂಣಿಯಲ್ಲಿದ್ದ ಅಂಬೇಡ್ಕರ್ ಅಸ್ಪೃಶ್ಯರಾಗಿ ಜನಿಸಿ, ಸ್ವಪ್ರಯತ್ನದಿಂದ ಜ್ಞಾನನಿಧಿಯಾಗಿ, ವಿದ್ವಾಂಸರಾಗಿ, ವಿದ್ವತ್ಪೂರ್ಣ ಲೇಖನ, ಬರಹಗಳಿಂದ ಹಿಂದೂ ಸಮಾಜದ ಅಸಮಾನತೆಯ ವಿರುದ್ಧ ಅಹಿಂಸಾತ್ಮಕ ಪ್ರತಿಭಟನಾತ್ಮಕ ಚಳವಳಿಗಳನ್ನು ಸಂಘಟಿಸಿದರು. ಚಳವಳಿಗೆ ಪೂರಕವಾದ ಪತ್ರಿಕೆಗಳನ್ನು, ಸಿದ್ಧಾಂತಗಳನ್ನು ತಮ್ಮ ಅಧ್ಯಯನಗಳಿಂದ ರೂಪಿಸಿ ಹರಿತವಾದ ವಿಮರ್ಶೆಯಿಂದ ಸಮಕಾಲೀನರನ್ನು ದಂಗುಬಡಿಸಿದರು. ಭಾರತದ ಸ್ವಾತಂತ್ರ್ಯಚಳವಳಿಯ ಜೊತೆಯಲ್ಲೇ ದಲಿತರ ವಿಮೋಚನೆಯ ಕನಸು ಕಂಡರು. ಸ್ವಾತಂತ್ರ್ಯ ಚಳವಳಿಯ ಮುಖ್ಯ ಘಟನೆಯಾದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಲು ತಮ್ಮದೇ ವಿಚಾರಗಳನ್ನು ಮಂಡಿಸಿ ಬ್ರಿಟಿಷರನ್ನು ಬೆರಗುಗೊಳಿಸಿದರು. ಸಾಂಪ್ರದಾಯಿಕ ಭಾರತೀಯರನ್ನು ಎಚ್ಚರಗೊಳಿಸಿದರು.

ಭಾರತೀಯ ಸಮಾಜದಲ್ಲಿನ ಇಂತಹ ಎಚ್ಚರಗೊಳಿಸುವ ಹೋರಾಟಗಳು ಇಂದಿಗೂ ಪ್ರಸ್ತುತವಾಗಿವೆ. ಅಂದಿನ ಸಾಮಾಜಿಕ ಪಿಡುಗುಗಳಾದ ಜಾತಿ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಬಡತನ, ನಿರುದ್ಯೋಗ ಇಂದಿಗೂ ಭಾರತದ ಬಹುದೊಡ್ಡ ಸಮಸ್ಯಗಳಾಗಿವೆ. ಅಸ್ಪೃಶ್ಯತೆ ರೂಪಾಂತರ ಹೊಂದುತ್ತಾ ಅಂತರ್ಮುಖವಾಗುತ್ತಿದೆ. ಜಾತಿ ಸರ್ವರಂಗದಲ್ಲಿ ತನ್ನ ಕರಾಳ ಹಸ್ತಗಳನ್ನು ಚಾಚಿದೆ. ಮಾನವ ಕೇಂದ್ರೀತವಾಗಬೇಕಾದ ಚಿಂತನೆಗಳು, ಜಾತಿ, ಧರ್ಮ, ಕೇಂದ್ರವಾಗುತ್ತಿವೆ. ಧರ್ಮ ವಿನಾಶದ ಅಂಚಿನಲ್ಲಿದೆ. ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವ ಬೆಳೆಯುತ್ತಿದೆ. ಇದನ್ನೇ ಜಾತ್ಯಾತೀತ ಉನ್ನತ ಮೌಲ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಸ್ವಾತಂತ್ರ್ಯ ಸಮಾನತೆ ಭಾತೃತ್ವಗಳ ಮೂಲಕ ಬೆಳೆಯಬೇಕಾದ “ಪ್ರಜಾಪ್ರಭುತ್ವ” ವ್ಯವಸ್ಥೆ ಹುಸಿಗೊಳ್ಳುತ್ತಿದೆ. ಹೀಗಾಗಿ ದಲಿತರು ತಮ್ಮ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಇಂದು ಕೂಡ ಪ್ರಸ್ತುತವೆನಿಸುತ್ತದೆ. ಇಂದಿನ ದಲಿತರು ಈ ಹೋರಾಟದ ಪರಿಸ್ಥಿತಿಯನ್ನು ಮರೆತು ಬೂಟಾಟಿಕೆಯ ಹೋರಾಟಕ್ಕೆ ಹೊರಟಿರುವುದು ಇಂದಿನ ದಲಿತ ಸಮಾಜದ ಅಧೋಗತಿಗೆ ಕಾರಣವಾಗಿದೆ. ಅಂಬೇಡ್ಕರ್ ಅವರನ್ನು ಇಂದಿನ ದಲಿತ ಹೋರಾಟಗಾರರು ಕೇವಲ ಅನುಕೂಲಕರ ಸರಕಾಗಿ ಬಳಸಿಕೊಳ್ಳುತ್ತಿರುವುದು ಈ ರಾಷ್ಟ್ರದ ಪ್ರತಿಯೊಬ್ಬ ಸಾಮಾಜಿಕ ಪ್ರಜ್ಞಾವಂತರನ್ನು ಮುಖಾಮುಖಿ ಮಾಡುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಲೇಖನಗಳನ್ನು ಓದುಗರನ್ನು ಮುಖಾಮುಖಿಯಾಗುಸುತ್ತವೆ. ಸಂಪುಟದ ಲೇಖಕರು ಆಯಾ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದವರು. ಕೆಲ ಲೇಖನಗಳು ವಿವಿಧ ಕೃತಿಗಳಲ್ಲಿ ಪ್ರಕಟಗೊಂಡು ಮಹತ್ವದ ಚರ್ಚೆಗೆ ಎಡೆಮಾಡಿರುವುದೂ ಉಂಟು. ಇಂಥ ಲೇಖನಗಳನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ವಿದ್ವತ್ ಲೋಕದ ಎಲ್ಲ ಲೇಖಕರಿಗೂ ವಿನಮ್ರವಾಗಿ ವಂದಿಸುತ್ತೇನೆ.

ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡಲು ಸೃಷ್ಟಿಯಾದ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಹಾಗೂ ಸರ್ಕಾರದಿಂದ ದೊರಕುವ ಆರ್ಥಿಕ ಸೌಲಭ್ಯಗಳ ಲಭ್ಯತೆಗೆ ಅನುಕೂಲವಾಗುವ ದೃಷ್ಟಿಯಿಂದ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕವು ವಿದ್ಯಾರ್ಥಿಗಳ ಶೈಕ್ಷಣಿಕ ಮುಂದಾಗುವುದರ ಜೊತೆಗೆ ದಲಿತ ಜನಾಂಗದ ಪ್ರಾತಃ ಸ್ಮರಣೀಯರೆನ್ನಿಸಿಕೊಂಡಿರುವ ಮಹರ್ಷಿ ವಾಲ್ಮೀಕಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಪ್ರತಿವರ್ಷ ಕಾಲಕಾಲಕ್ಕೆ ಆಚರಿಸಿಕೊಂಡು ಬರುತ್ತಿದೆ. ೨೦೦೭ರಿಂದ ೨೦೧೦ರ ವರೆಗೆನಾನು ಈ ವಿಶೇಷ ಘಟಕದ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದಾಗ ಆಚರಿಸಿದ ಜಯಂತಿಗಳಲ್ಲಿ ವಿವಿಧ ವಿದ್ವಾಂಸರಿಂದ ಮಂಡನೆಯಾದ ವಿದ್ವತ್ ಲೇಖನಗಳು ಹಾಗೂ ಅಂಬೇಡ್ಕರ್ ಕುರಿತು ಈಗಾಗಲೇ ಪ್ರಕಟಗೊಂಡು ಮಹತ್ವದ್ದೆನ್ನಿಸಿಕೊಂಡಿರುವ ಲೇಖನಗಳನ್ನು ಸಂಗ್ರಹಿಸಿ ಈ ಕೃತಿಯನ್ನು ಸಂಪಾದಿಸಲಾಗಿದೆ.

ಇಂಥದೊಂದು ಸಂಪಾದಿತ ಕೃತಿಯ ಮಹತ್ವದ ಯೋಜನೆಯನ್ನು ಕೈಗೊಂಡು ಪ್ರಕಟಿಸಲು ಪ್ರೀತಿಯ ಆದೇಶ ನೀಡಿದ ನೆಚ್ಚಿನ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ ವಿನಮ್ರವಾಗಿ ವಂದಿಸುತ್ತೆನೆ. ಈ ರೀತಿಯ ಕೆಲಸಗಳಿಗೆ ಎಂದೆಂದಿಗೂ ನಮ್ಮ ಬೆನ್ನೆಲುಬಾಗಿರುವ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ್ ಕುಂಟಾರ್ ಅವರಿಗೆ ವಂದನೆಗಳು.

ಕೃತಿಯ ಪ್ರಕಟನೆಗೆ ಪೂರ್ವದಲ್ಲಿ ಇಲ್ಲಿ ಸಂಗ್ರಹಿಸಿರುವ ಲೇಖನಗಳನ್ನು ವಿಷಯ ತಜ್ಞರಾಗಿ ಪರಿಶೀಲಿಸಿ ಸೂಕ್ತ ಸಲಹೆ ನೀಡಿ ಕೃತಿ ರೂಪದಲ್ಲಿ ಪ್ರಕಟಿಸಬೇಕೆಂದು ಶಿಪಾರಸ್ಸು ಮಾಡಿದ ಡಾ. ಮಲ್ಲಿಕಾ ಘಂಟಿ ಅವರಿಗೆ ವಂದನೆಗಳು. ಮಲ್ಲಿಕಾ ಘಂಟಿಯ ಅವರು ಈ ನಾಡು ಕಂಡ ಪ್ರಸಿದ್ಧ ಮಹಿಳಾ ವಾದ ಹಾಗೂ ಬಂಡಾಯ ಸಾಹಿತ್ಯದ ಮುಂಚೂಣಿ ಬರಹಗಾರರಲ್ಲಿ ಪ್ರಮುಖರು. ಅವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಡಂಬನೆಗಳ ಕುರಿತು ಸಾಹಿತ್ಯ ನಿರೂಪಿಸುವ ರೀತಿ ಹಾಗೂ ಅವರು ಈ ನಿಟ್ಟಿನಲ್ಲಿ ಎತ್ತುವ ಪ್ರಶ್ನೆಗಳು ಸಂಶೋಧಕರಿಗೆ ಹಾಗೂ ಸಮಾಜ ಚಿಂತಕರಿಗೆ ಉತ್ತಮ ಮಾರ್ಗದರ್ಶನದಂತಿರುತ್ತವೆ. ಇವರು ಈ ಕೃತಿಯ ಲೇಖನಗಳು ಸಮಗ್ರವಾಗಿ ಪರಾಮರ್ಶಿಸಿ ಪ್ರಕಟಿಸಲು ಒಪ್ಪಿಗೆ ನೀಡಿರುತ್ತಾರೆ.

ಕೃತಿಯು ಅಚ್ಚುಕಟ್ಟಾಗಿ ಪ್ರಕಟವಾಗಲು ಸಹಕರಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀಬಿ. ಸುಜ್ಞಾನಮೂರ್ತಿ, ಶ್ರೀ ಹೆಚ್. ಬಿ. ರವೀಂದ್ರ, ಮುಖಪುಟ ರಚಿಸಿರುವ ಕಲಾವಿದ ಶ್ರೀ ಕೆ. ಕೆ. ಮಕಾಳಿ ಹಾಗೂ ಅಕ್ಷರ ಸಂಯೋಜನೆ ಶ್ರೀವೀರೇಶ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.