ಅಂಬೇಡ್ಕರ : ಒಬ್ಬ ಕ್ರಾಂತಿಕಾರಿ ಚಿಂತಕ

ಅಂಬೇಡ್ಕರರನ್ನು ಭಾರತದ ಅತ್ಯಂತ ಮಹಾನ್ ನಾಯಕರೆಂದು ಬಿಂಬಿಸಲು ದಲಿತರು ದಣಿವಿಲ್ಲದೆ ಪ್ರಯತ್ನಿಸುತ್ತಿದ್ದಾರೆ. ಒಮ್ಮೊಮ್ಮೆ ದುರ್ದೈವವಶಾತ್ ಇದು ಯಾವ ಮಟ್ಟಕ್ಕೆ ಹೋಗುತ್ತವೆ ಎಂದರೆ, ಬಾಬಾ ಸಾಹೇಬರ ಬಗ್ಗೆ ಅವರು ತೋರುವ ಭಕ್ತಿ ಕುರುಡು ಭಕ್ತಿಯಾಗಿ ಪರಿಣಿಮಿಸುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಮಹಾನತೆಗೆ ಅಳತೆಗೋಲು ಅವನು ಜನತೆಯ ಬದುಕಿಗೆ ನೀಡುವ ಕಾಣಿಕೆಯಾಗಿದೆ. ಮಾನವರ ಮೇಲ್ಮೆಗಾಗಿ, ಪರಿಹಾರಕ್ಕಾಗಿ ಅವರ ಸ್ಥಿತಿಗತಿಯ ಸುಧಾರಣೆಗಾಗಿ, ಅವರಿಗೆ ಕಾಡುತ್ತಿರುವ ರೋಗರುಜಿನಗಳ ಪರಿಹಾರಕ್ಕಾಗಿ ಅವನು ನೀಡುವ ಕಾಣಿಕೆಯೇ, ಅವನ ಮಹಾನತೆಯ ಒರೆಗಲ್ಲಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಸಮಕಾಲೀನ ಭಾರತೀಯ ರಾಜಕಾರಣಕ್ಕೆ ಅಂಬೇಡ್ಕರರು ಸಲ್ಲಿಸಿದ ಕೊಡುಗೆಯನ್ನು ಆ ಕಾಲದ ಐದು ರಾಜಕೀಯ ಪ್ರವಾಹಗಳಿಗೆ ಸಂಬಂಧಿಸಿದಂತೆ ನೋಡಬಹುದು.

೧. ಸುಧಾರಣಾವಾದಿ ಪ್ರವಾಹ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬೆಂಬಲದೊಂದಿಗೆ ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿಯನ್ನು ಸಾಧಿಸಬಯಸಿದ್ದ ಪ್ರವಾಹ.

೨. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಧಿಪತ್ಯದ ಪರಿಧಿಯೊಳಗೇ ಸ್ವಯಂ ಆಡಳಿತವನ್ನು ತರಬಯಸಿದ್ದ ಭಾರತೀಯ ಬಂಡವಾಳಿಗರ ಪ್ರತಿನಿಧಿಯಾಗಿದ್ದ ಕಾಂಗ್ರೆಸ್ ಪ್ರವಾಹ.

೩. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಂಡಿದ್ದ ಭಯೋತ್ಪಾದಕರ ರಾಷ್ಟ್ರೀಯವಾದಿಗಳ ಪ್ರವಾಹ.

೪. ಭಾರತದಲ್ಲಿ ಬೊಲೈವಿಕ್ ಮಾದರಿಯ ಕ್ರಾಂತಿ ಎಸಗಲು ಪ್ರಯತ್ನಿಸುತ್ತಿದ್ದ ಕಮ್ಯುನಿಸ್ಟ್ ಪ್ರವಾಹ.

೫. ಮುಸ್ಲಿಮರಿಗಾಗಿ ಒಂದು ಪ್ರತ್ಯೇಕತೆಯ ರಂಗ ಆರಂಭಿಸಿದ್ದ ಮುಸ್ಲಿಂ ಲೀಗಿನ ಪ್ರವಾಹ.

ಈ ಮೇಲೆ ಹೇಳಿದ ಯಾವುದೇ ಪ್ರವಾಹವೂ ಭಾರತೀಯ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. ಉದಾಹರಣೆಗೆ ಇವರಲ್ಲಿ ಯಾರೂ ಭಾರತದ ಐದನೇ ಒಂದು ಭಾಗದಷ್ಟಿದ್ದ ದಲಿತರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿರಲಿಲ್ಲ. ಕೊಳಕು ಧರ್ಮದ ಆದೇಶಕ್ಕನುಗುಣವಾಗಿ ಪ್ರಾಣಿಗಿಂತಲೂ ಕನಿಷ್ಟ ಬದುಕಿನ ದುಃಸ್ಥಿತಿಗೆ ದೂಡಲ್ಪಟ್ಟಿದ್ದ ದಲಿತ ಜನಕೋಟಿಯ ಬಗ್ಗೆ ಇವರಾರೂ ಎಳ್ಳಷ್ಟೂ ಗಮನಹರಿಸಿರಲಿಲ್ಲ. ಸ್ವಯಂ ಆಡಳಿತಕ್ಕಾಗಿ, ಸ್ವರಾಜ್ಯಕ್ಕಾಗಿ, ಹಲುಬುತ್ತಿದ್ದವರು ತಮ್ಮ ದೇಶ ಬಾಂಧವರೇ ಆಗಿದ್ದ ದಲಿತರ ದೈನ್ಯಕ್ಕೆ ಕಣ್ಣುಮುಚ್ಚಿಕೊಂಡಿದ್ದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿದ್ದ ಇವರೆಲ್ಲರೂ ಜಾತಿವ್ಯವಸ್ಥೆಯ ದಬ್ಬಾಳಿಕೆಯ ಬಗ್ಗೆ ಮೌನ ವಹಿಸಿದ್ದರು. ಇಡೀ ದೇಶವನ್ನು ಮೇಲಿಂದ ಮೇಲೆ ದಾಸ್ಯಕ್ಕೆ ದೂಡಿದ್ದ ಜಾತಿವ್ಯವಸ್ಥೆಯ ಕರಾಳಮುಖ ಇವರಿಗೆ ಕನಸಿನಲ್ಲೂ ಕಾಡುತ್ತಿರಲಿಲ್ಲ. ಭಾರತದ ಇತಿಹಾಸದ ಬಗ್ಗೆಯಾಗಲಿ, ವರ್ತಮಾನದ ಬಗ್ಗೆಯಾಗಲಿ ಒಂದು ವಸ್ತುನಿಷ್ಠ ವಿಶ್ಲೇಷಣೆಗೆ ಇವರಾರೂ ಕೈಹಾಕಲಿಲ್ಲ. ಅವರ ಚಟುವಟಿಕೆಗಳ ಹಿಂದಿನ ಪ್ರೇರಣೆ ಸಾಮಾನ್ಯವಾಗಿ ಅವರ ವರ್ಗ, ಜಾತಿ ಹಿತಾಸಕ್ತಿಗಳ ಸಂಕುಚಿತ ಭಾವದಿಂದಲೇ ಚಿಮ್ಮುತ್ತಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿದ್ದ ಅವರ ಆಂದೋಲನಗಳ ಅಭಿಲಾಷೆ ಅಮೂರ್ತವಾಗಿತ್ತು ಮತ್ತು ತಮ್ಮದೇ ಜನರ ಮೂರ್ತ ದಾಸ್ಯವನ್ನು ಅವರು ನೋಡಲೂ ಸಿದ್ಧರಲಿಲ್ಲ. ಅಂದು ದೇಶದ ಮುಂದಿದ್ದ ಸಮಸ್ಯೆಗಳು ಗಂಭೀರವಾಗಿದ್ದವು ನಿಜವಾಗಿಯೂ ಸಂಕೀರ್ಣವಾಗಿದ್ದವು ಎಂಬುದವುದನ್ನು ಒಪ್ಪಿದ್ದರೂ ಅದೇ ವೇಳೆಗೆ ದೇಶದ ಬದುಕಿನಲ್ಲಿ ಪ್ರಜಾತಾಂತ್ರಿಕತೆಯ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕಾಗಿದ್ದ ಅವಶ್ಯಕತೆಯನ್ನು ನಿರಾಕರಿಸುವಂತಿರಲಿಲ್ಲ. ಅಂದಿನ ಸಂದರ್ಭದಲ್ಲಿ ಜನತೆಯ ನಿಜವಾದ ರಾಷ್ಟ್ರೀಯ ಆಂದೋಲನವು ಏಕಕಾಲದಲ್ಲಿಯೇ ಹಲವು ಮುಖದ ಹೋರಾಟಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗೆದುರಾಗಿ ನಿಂತಂತೆಯೇ ದೇಶೀ ಧನಿಕರ ವಿರುದ್ಧವೂ ಧ್ವನಿ ಎತ್ತುವ ಅವಶ್ಯಕತೆ ಇತ್ತು. ಭೂಮಾಲೀಕರ ದೌರ್ಜನ್ಯದ ವಿರುದ್ಧ ದಂಗೆ ಎದ್ದಂತೆಯೇ ಬ್ರಾಹ್ಮಣಶಾಹಿಯ ತಂತ್ರ, ಕುತಂತ್ರದ ವಿರುದ್ಧವೂ ಕತ್ತಿ ಎತ್ತಬೇಕಾದ ಅವಶ್ಯಕತೆ ಇತ್ತು. ಈ ನಿಟ್ಟಿನಿಂದ ಕೇವಲ ಬಾಬಾ ಸಾಹೇಬರಿಗೆ ಮಾತ್ರ ಆಂದೋಲನದ ಕುರಿತು ಇಂಥ ಸಮಗ್ರ ದೃಷ್ಟಿ ಇತ್ತು. ಆದ್ದರಿಂದಲೇ ಈ ಬಹುಮುಖಿ ಹೋರಾಟದ ಮಹತ್ವವನ್ನು ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಕಾರಣ ಈ ನಿಟ್ಟಿನಿಂದ ಅವರು ಉಳಿದೆಲ್ಲರಿಗಿಂತ ಖಚಿತವಾಗಿಯೂ ಮುಂದಿದ್ದರು. ಅಸ್ಪೃಶ್ಯತೆಯ ಸ್ವಾನುಭವ ಅವರಿಗೆ ಇದ್ದುದ್ದರಿಂದಲೇ, ಅದರ ಕಹಿ ಮತ್ತು ಕರಾಳತೆಯ ನೇರವಾದ ಅನುಭವ ಅವರಿಗೆ ಆಗಿದ್ದರಿಂದಲೇ, ಅವರು ಅದರ ದೃಷ್ಟಿ ಮುಖವನ್ನು ಉಳಿದೆಲ್ಲರಿಗಿಂತಲೂ ಸ್ಪಷ್ಟವಾಗಿ ಕಂಡುಕೊಂಡಿದ್ದರು. ಆದ್ದರಿಂದ ಅವರು ತಮ್ಮ ಆಂದೋಲನವನ್ನು ಈ ತಿಳುವಳಿಕೆಯ ಆಧಾರದಿಂದಲೇ ಕಟ್ಟಲು ಪ್ರಯತ್ನಿಸಿದರು. ಆದರೆ ದುರ್ದೈವವಶಾತ್ ಎಲ್ಲ ಸಮಸ್ಯೆಗಳನ್ನು ಏಕಕಾಲಕ್ಕೆ ತೆಕ್ಕೆಗೆ ತೆಗೆದುಕೊಳ್ಳಲು ಅವರ ಬಲ ಸಾಲಲಿಲ್ಲ. ಜೊತೆಗೆ ಅದಕ್ಕೆ ಅವಶ್ಯವಿದ್ದ ಸೈದ್ಧಾಂತಿಕ ಮತ್ತು ಕಾರ್ಯಕ್ರಮಾತ್ಮಕ ನಿಚ್ಚಳತೆಯ ಕೊರತೆಯೂ ಇತ್ತು. ತತ್ಪರಿಣಾಮವಾಗಿ, ಅವರು ತಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಬಹುಮುಖಿ ದಬ್ಬಾಳಿಕೆಗೆ ಒಳಗಾಗಿದ್ದ ನತದೃಷ್ಟ ದಲಿತರ ಮೇಲೆಯೇ ಅನಿವಾರ್ಯವಾಗಿ ಕೇಂದ್ರೀಕರಿಸಬೇಕಾಯಿತು. ಈ ಹೋರಾಟ ಸುಗಮವಾಗಿ ಮುನ್ನಡೆಯದೇ ಅನೇಕ ಎಡರು ತೊಡರುಗಳನ್ನೆದುರಿಸುತ್ತ ಕಾಲಕ್ರಮದಲ್ಲಿ ಪ್ರಭುತ್ವವಾದಿ ರಾಜಕಾರಣದಲ್ಲಿ ಪರ್ಯಾವಸಾನವಾದದ್ದು ಭಾರತೀಯ ಚರಿತ್ರೆಯ ಒಂದು ದುರಂತ. ಅಪೂರ್ವ ಶಕ್ತಿ ಸಂಚಯಿಸಿಕೊಂಡು ಮುಂದಡಿ ಇಡಬೇಕಾಗಿದ್ದ ಅದು ಹಿಂದೆ ಸರಿದು ಬಸವಳಿಯ ಕುಸಿದದ್ದು ಶೋಚನೀಯ. ಇದು ಅಂದು ಅಂಬೇಡ್ಕರರಿಗಿದ್ದ ಮಿತಿ ಮತ್ತು ಅಂದಿನ ಪರಿಸ್ಥಿತಿಯಲ್ಲಿ ಅವರ ಮೇಲಿದ್ದ ಒತ್ತಡ ಎರಡನ್ನೂ ಸೂಚಿಸುತ್ತದೆ.

ಅಂಬೇಡ್ಕರರಿಗಿಂತ ಮುಂಚೆ ನಡೆದ ಜಾತಿ ವಿರೋಧಿ ಆಂದೋಲನಗಳು ಮುಖ್ಯವಾಗಿ ಉದ್ಧಾರದ ಧೋರಣೆ ಹೊಂದಿದ್ದವು. ಕೆಲವರು ಜಾತಿ ಶ್ರೇಣಿಯ ಒಳಗಡೆಯೇ ತಮ್ಮ ಜಾತಿಗೆ ಹೆಚ್ಚಿನ ಸ್ಥಾನಮಾನಗಳನ್ನು ಪಡೆಯಲು ಪ್ರಯತ್ನಿಸಿದರೆ, ಇನ್ನೂ ಕೆಲವರು ತಮ್ಮ ಜಾತಿಯ ಕೀಳು ಸಂಸ್ಕೃತಿಯ ಕಾರಣದಿಂದಾಗಿಯೇ ತಮಗೆ ಕಷ್ಟನಷ್ಟಗಳು ಬಂದೊದಗುತ್ತಿವೆಯಾದ್ದರಿಂದ ಅದನ್ನು ಸುಧಾರಿಸುವುದೇ ಮುಖ್ಯ ಗುರಿಯಾಗಿಟ್ಟುಕೊಂಡರು. ಮಹಾತ್ಮಾ ಪುಲೆಯವರ ಆಂದೋಲನ ಇದಕ್ಕೊಂದು ಅಪವಾದವಾಗಿತ್ತು. ಪರಾನ್ನ ಜೀವಿಯ ಜಾತಿಗಳಾಗಿದ್ದ ಶೇಠ್‌ಜಿ ಬಂಡವಾಳಶಾಹಿ ಮತ್ತು ಭಟ್‌ಜಿ ಪುರೋಹಿತಶಾಹಿಗಳ ಶೋಷಣೆಗೆ ವಿರುದ್ಧವಾಗಿ ಅವರು ಶೂದ್ರ ಮತ್ತು ಅತಿಶೂದ್ರ ಜಾತಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ಪುಲೆಯವರನ್ನು ತಮ್ಮ ಮೂರು ಗುರುಗಳಲ್ಲಿ ಒಬ್ಬರೆಂದು ಅಂಗೀಕರಿಸಿದ್ದ ಅಂಬೇಡ್ಕರರು ಅವರ ಬಗ್ಗೆ ಅತ್ಯಂತ ಗೌರವ ತೋರುವುದಲ್ಲದೆ, ಅವರ ಹೋರಾಟದ ವಾರಸುದಾರಿಕೆಯನ್ನು ಅಭಿಮಾನದಿಂದ ಸ್ವೀಕರಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಾತಿವಿನಾಶವೇ ತಮ್ಮ ಆಂದೋಲನದ ಪರಮಗುರಿ ಎಂದು ಸಾರಿ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದಡೆಗೆ ದಾಪುಗಾಲು ಹಾಕಿದರು. ಆ ಸಂದರ್ಭದಲ್ಲಿ ಇದು ಖಂಡಿತವಾಗಿಯೂ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಗ್ರಾಮಾಂತರದಲ್ಲಿಯ ಭೂಸಂಬಂಧಗಳೇ ಜಾತಿವ್ಯವಸ್ಥೆಯ ಬೇರಿಗೆ ನಿರಂತರ ನೀರೆರೆಯುತ್ತಿವೆ. ಅದರ ವಿಶಿಷ್ಟ ಆರ್ಥಿಕ ವ್ಯವಸ್ಥೆಗೆ ಚಿರಂತನ ಬೆಂಬಲವನ್ನು ನೀಡುತ್ತಿವೆ ಎಂದು ಜಾತಿವ್ಯವಸ್ಥೆಯ ರೋಗದ ಮೂಲವನ್ನು ಬಹು ಸಮರ್ಥವಾಗಿಯೇ ಪತ್ತೆ ಹಚ್ಚಿದರು. ಈ ಸಂಬಂಧದ ಸರಪಳಿಯನ್ನು ಕಡಿದೊಗೆಯಲು ದಲಿತರಿಗಾಗಿಯೇ ಪ್ರತ್ಯೇಕ ಆವಾಸಗಳನ್ನು ಸೃಷ್ಟಿಸುವ ಒಂದು ವಿಚಾರ ಅವರಲ್ಲಿ ಮಿಂಚಿ ಮಾಯವಾಯ್ತು. ಮತ್ತೊಮ್ಮೆ ದಲಿತರೆಲ್ಲರೂ ಗ್ರಾಮಾಂತರ ಪ್ರದೇಶ ಬಿಟ್ಟು ನಗರ ಸೇರಬೇಕೆಂದು ಕರೆ ನೀಡಿದ್ದರು. ಹೀಗೆ ಕ್ರಮೇಣ, ಜಾತಿವ್ಯವಸ್ಥೆಯ ಬುನಾದಿಯ ಬಹುಮುಖಿ ಸ್ವರೂಪವನ್ನು ಕಂಡುಕೊಂಡರು. ಅಂದರೆ, ಧಾರ್ಮಿಕ, ಸಾಂಸ್ಕೃತಿಕ ಸಂಬಂಧಗಳು, ಗ್ರಾಮಾಂತರ ಸನ್ನಿವೇಶದಲ್ಲಿ ಅಸ್ತಿತ್ವದಲ್ಲಿದ್ದ ಪಾಳೇಗಾರಿಕೆ ಸಂಬಂಧಗಳು, ಈ ಸಂಬಂಧಗಳ ಜೀವಜೀವಾಳವಾಗಿದ್ದ ಭೂ ಸಂಬಂಧಗಳು ಮತ್ತು ಪ್ರಭುತ್ವದ ಜೊತೆಗಿನ ಸಾಮಾಜಿಕ ರಾಜಕೀಯ ಸಂಬಂಧಗಳು ಈ ಎಲ್ಲ ಸಂಬಂಧಗಳು ಏಕತ್ರಗೊಂಡು ಜಾತಿವ್ಯವಸ್ಥೆಯ ಬುನಾದಿಯಾಗಿ ಕೆಲಸ ಮಾಡುತ್ತಿರುವುದನ್ನು ಕಂಡುಕೊಂಡರು. ಜಾತಿವಿನಾಶವಾಗಬೇಕಾದರೆ, ಈ ಎಲ್ಲ ಸಂಬಂಧಗಳನ್ನು ಧ್ವಂಸಗೊಳಿಸುವ ಅವಶ್ಯಕತೆಯಿತ್ತು. ಇದು ಸಾಧ್ಯವಾಗಬೇಕಾದರೆ, ರಾಜಕೀಯ ಅಧಿಕಾರ ಬೇಕೇ ಬೇಕೆಂಬುದು ಅವರಿಗೆ ಸ್ಪಷ್ಟವಾಯಿತು. ಸಾಮಾಜಿಕ ಪರಿವರ್ತನೆಯ ನಂತರವೂ ಆಳಿದುಳಿದ ಶ್ರದ್ಧೆ ನಂಬುಗೆಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಂಸ್ಕೃತಿಕ ಅಥವಾ ಧಾರ್ಮಿಕ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿಯೂ ರಾಜಕೀಯ ಅಧಿಕಾರದ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಸಮಸ್ಯೆಗಳನ್ನು ಸಾಂಸ್ಕೃತಿಕ ಖೆಡ್ಡದಿಂದ ಮೇಲೆತ್ತಿ, ರಾಜಕೀಯ ಕಾರ್ಯಕ್ರಮದ ಪಟ್ಟಿಗೆ ಸೇರಿಸಿದರು. ದುರ್ದೈವದ ಸಂಗತಿಯೆಂದರೆ, ಈ ರಾಜಕೀಯ ಕಾರ್ಯಕ್ರಮ ಅನತಿಕಾಲದಲ್ಲಿಯೇ ಸಂಸದೀಯ ರಾಜಕಾರಣದ ಕೆಸರಲ್ಲಿ ಸಿಕ್ಕು ದಲಿತ ನೇತಾರರ ಬದುಕಿನ ಪರಮ ಗುರಿ, ಗಮ್ಯವಾಯಿತು.

ಅಂಬೇಡ್ಕರರ ಕಾಲದಲ್ಲಿಯೇ ಈ ಸಮಸ್ಯೆಯ ಆರ್ಥಿಕ ಆಯಾಮ ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಮಟ್ಟಿಗೆ ಅಲಕ್ಷಿಸಲ್ಪಟ್ಟಿತು. ಅದರಿಂದ ಅವರ ಅನುಯಾಯಿಗಳಲ್ಲಿ ಒಂದು ವಿಧದ ತಪ್ಪು ಕಲ್ಪನೆಯುಂಟಾಗಿತ್ತು. ಆರ್ಥಿಕ ಸಮಸ್ಯೆಗಳನ್ನು ಅಷ್ಟು ಮಹತ್ವದವು ಅಲ್ಲವೇನೋ ಎನ್ನುವ ಭಾವನೆ ಬೆಳೆಯಿತು. ಒಟ್ಟಾರೆ ಅಂದಿನ ಸಂದರ್ಭದಲ್ಲಿ ಇಟ್ಟು ನೋಡಿದಾಗ, ಆರ್ಥಿಕ ಸಮಸ್ಯೆಗಳ ವಿರುದ್ಧ ಹೋರಾಡುವುದು ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆಗಳ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚು ಕಠಿಣವಾಗಿತ್ತು ಎಂಬುವುದನ್ನು ಕಾಣಬಹುದು. ಮೇಲಾಗಿ, ಆರ್ಥಿಕ ಸಮಸ್ಯೆಗಳು ನೇರವಾಗಿ ಪ್ರಭುತ್ವದೊಂದಿಗೆ ಮುಖಾಮುಖಿಯಾಗಿಸುತ್ತಿದ್ದವು. ಅದಕ್ಕೆ ಅಂಬೇಡ್ಕರರು ಖಂಡಿತವಾಗಿಯೂ ಸಿದ್ಧರಲಿಲ್ಲ. ಪರ್ಯಾಯವಾಗಿ, ಭೂಮಿಯನ್ನು ಖಾಸಗಿ ಒಡೆತನದಿಂದ ಬಿಡಿಸಿ, ಸಹಕಾರಿ ಕೃಷಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಗ್ರಾಮಾಂತರ ಭೂ ಸಂಬಂಧಗಳನ್ನು ನಿರ್ನಾಮ ಮಾಡಬಹುದೆಂದು ಅವರು ಭಾವಿಸಿದ್ದರು. ಸಂವಿಧಾನಾತ್ಮಕ ಕ್ರಮದ ಮೂಲಕ ಸಾಮಾಜಿಕ ರಚನೆಯಲ್ಲಿ ಈ ಬದಲಾವಣೆ ತರಬಹುದೆಂದು ಅವರು ನಂಬಿದ್ದರು. ಇದು ದೋಷ ಪೂರ್ಣವಾದ ದೃಷ್ಟಿ ಎಂಬುದು ತೀರ ಶೀಘ್ರವೇ ಅವರಿಗೆ ಮನವರಿಕೆಯಾಯಿತು. ಭಾರತೀಯ ಸಂವಿಧಾನದ ಪ್ರಧಾನ ಶಿಲ್ಪಿಯಾಗಿದ್ದ ಅವರು ಸಂವಿಧಾನ ಸಭೆಯಲ್ಲಿ ಈ ವಿಷಯವನ್ನು ಚರ್ಚಾಪಟ್ಟಿಗೆ ಸೇರಿಸುವಲ್ಲಿಯೇ ವಿಫಲರಾದರು. ಇನ್ನು ಸಂವಿಧಾನದಲ್ಲಿ ಸೇರಿಸುವ ಮಾತಂತು ದೂರವೇ ಉಳಿಯಿತು.

ಆದರ್ಶದ ಪರಿಕಲ್ಪನೆ

ಬಾಬಾ ಸಾಹೇಬ ಅಂಬೇಡ್ಕರರು ತಮ್ಮ ಆದರ್ಶವನ್ನು ಸುಪ್ರಸಿದ್ಧ ಮೂರು ತತ್ವಗಳಲ್ಲಿ ಕಂಡರಿಸಿದ್ದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಈ ಮೂರು ತತ್ವಗಳು ಅವರ ಆದರ್ಶ ಸಮಾಜದ ಬುನಾದಿಯಾಗಿದ್ದವು. ಈ ತತ್ವಗಳನ್ನು ಅವರು ಫ್ರಾನ್ಸಿನ ಕ್ರಾಂತಿಯಿಂದ ತೆಗೆದುಕೊಂಡಿರಲಿಲ್ಲ. ಬದಲಾಗಿ, ಅವುಗಳಣ್ನು ಬುದ್ಧನ ಬೋಧನೆಯಿಂದ ತೆಗೆದುಕೊಂಡುದ್ದಾಗಿ ಹೇಳಿದ್ದಾರೆ. ಈ ತತ್ವಗಳು ಹಿಂದೆ ಫ್ರೆಂಚ್ ಕ್ರಾಂತಿಯ ಕಹಳೆಯಾಗಿ ಮೊಳಗಿದ್ದವು. ಆದರೆ ಆಮೇಲೆ ಯುರೋಪಿನ ಉದಾರವಾದಿ ಬೂರ್ಜ್ವಾಗಳ ಸೈದ್ಧಾಂತಿಕ ಊರುಗೋಲುಗಳಾಗಿ ಪರಿಣಮಿಸಿದ್ದವು. ಈ ತತ್ವಗಳನ್ನು ಮಾರ್ಕ್ಸ್, ಬೂರ್ಜ್ವಾ ಸಮಾಜದ ಭ್ರಮೆಗಳೆಂದು ಗೇಲಿ ಮಾಡಿರುವುದರಿಂದ ಅನೇಕರು ಬಾಬಾ ಸಾಹೇಬರಿಗೂ ಪೆಟಿ ಬೂರ್ಜ್ವಾ ಲಿಬರಲ್ ಡೆಮೊಕ್ರ್ಯಾಟ್‌ಎಂಬ ಹಣೆಪಟ್ಟಿ ಹಚ್ಚಲು ಪ್ರಯತ್ನಿಸಿದರು. ಈ ತತ್ವಗಳನ್ನು ಮಾರ್ಕ್ಸ್‌ನಿಗೆ ಪರಿಚಯವಿದ್ದ ಫ್ರೆಂಚ್ ಕ್ರಾಂತಿಯಿಂದ ತೆಗೆದುಕೊಂಡಿಲ್ಲವೆಂದು ಸ್ವತಃ ಅಂಬೇಡ್ಕರರೇ ಹೇಳಿರುವುದರಿಂದ ಅವರು ಮಾರ್ಕ್ಸ್‌ನ ಗೇಲಿಗೆ ಗುರಿಯಾಗಬೇಕಿಲ್ಲ. ಅದು ಅವರಿಗೆ ಅನ್ವಯಿಸಲಾರದು. ವಾಸ್ತವವಾಗಿ, ಈ ತತ್ವಗಳ ಕುರಿತು ಅವರ ಪರಿಕಲ್ಪನೆ ಲಿಬರಲ್ ಬೂರ್ಜ್ವಾ ಪರಿಕಲ್ಪನೆಗಳಿಗಿಂತ ಸಾಕಷ್ಟು ಭಿನ್ನವಾಗಿತ್ತು. ವಸ್ತುತಃ ಮಾರ್ಕ್ಸ್ ಸೂಚಿಸುತ್ತಿರುವುದು ಬೂರ್ಜ್ವಾ ಸಂಸದೀಯ ಪ್ರಜಾಸತ್ತೆಯ ಘೋಷಣೆಗಳಾದ ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು, ಬೂರ್ಜ್ವಾಗಳ ದೃಷ್ಟಿಯಲ್ಲಿ ಸ್ವಾತಂತ್ರ್ಯ ಎಂದರೆ, ಗುತ್ತಿಗೆ ತೆಗೆದುಕೊಳ್ಳುವ ಸರ್ವಸ್ವಾಮ್ಯ ಸಾಧಿಸುವ ಸ್ವಾತಂತ್ರ್ಯ ಮತ್ತು ಸಮಾನತೆ ಎಂದರೆ ಮಾರುಕಟ್ಟೆಯಲ್ಲಿ ಸಮಾನತೆ. ಇದಕ್ಕೆ ವೃತಿರಿಕ್ತವಾಗಿ, ಆದರ್ಶ ಸಮಾಜ ಕುರಿತ ಅಂಬೇಡ್ಕರರ ಪರಿಕಲ್ಪನೆ ಈ ಮೂರೂ ತತ್ವಗಳನ್ನು ಒಟ್ಟಿಗೇ ಪರಿಭಾವಿಸುತ್ತದೆ. ಯಾವುದೇ ಒಂದರೆ ಗೈರು ಹಾಜರಿಯು ಇದರ ಪರಿಕಲ್ಪನೆಯನ್ನು ವಿರೂಪಗೊಳಿಸುತ್ತದೆ. ಹಾಗಾಗಿ, ಯಾವೊಂದರ ಅಭಾವದಲ್ಲಿ ಉಳಿದವುಗಳನ್ನು ಸ್ವೀಕರಿಸಲು ಅವರು ಸಿದ್ಧರಲಿಲ್ಲ. ಅವರ ಕನಸಿನ ಆದರ್ಶ ಸಮಾಜವನ್ನು ಮಾರ್ಕ್ಸ್ ಕಮ್ಯುನಿಷ್ಟ್ ಸಮಾಜದ ಪರಿಕಲ್ಪನೆಯೊಂದಿಗೆ ಹೋಲಿಸುವುದು ತುಂಬಾ ಕುತೂಹಲಕಾರಿಯಾಗಬಲ್ಲದು. ಚಾರಿತ್ರಿಕ ಭೌತವಾದದ ಗತಿತಾರ್ಕಿಕ ದಾರಿಯನ್ನು ಅನುಸರಿಸುವುದರ ತಮ್ಮ ದೃಷ್ಟಿಕೋನದಿಂದಲೇ ತಮ್ಮ ನಿರ್ಣಯವನ್ನು ನಿರೂಪಿಸಿಕೊಂಡಿದ್ದರು. ಅಂತೆಯೇ ಅದರ ಮೂಲವನ್ನು ಒಂದು ಆಧ್ಯಾತ್ಮಿಕ ಸೆಲೆಗೆ ಆರೋಪಿಸಬೇಕಾದದ್ದು ಅವರಿಗೆ ಅನಿರ್ವಾಯವಾಗಿತ್ತು.

ಬಾಬಾಸಾಹೇಬರಿಗೆ ಸ್ವಾತಂತ್ರ್ಯ, ಸಮತೆ ಮತ್ತು ಭಾತೃತ್ವ ಮೂರು ಮುಪ್ಪರಿಗೊಂಡು ಶೋಷಣಾರಹಿತ ಸಮಾಜದ ಒಂದು ಸ್ಥಿತಿಯನ್ನು, ಪರಸ್ಪರ ಭಾವ-ಬಂಧುರದ ಒಂದು ಪರಿಸರವನ್ನು ಧ್ವನಿಸುತ್ತಿದ್ದವು. ಇದಕ್ಕಿಂತಲೂ ಮುಂದವರೆದು ಆ ಸಾಮಾಜಿಕ ಸ್ಥಿತಿಯ ರೂಪು ರೇಷೆಗಳನ್ನು ವಿವರವಾದ, ಮೂರ್ತವಾದ ಪದಗಳಲ್ಲಿ ವಿವರಿಸುವುದಾಗಲಿ, ಅದನ್ನು ತಲುಪಲು ಅನುಸರಿಸಬೇಕಾದ ಹೋರಾಟದ ವಿಧಿ ವಿಧಾನಗಳನ್ನು ಸೂಚಿಸುವುದಾಗಲಿ ಅವರ ಎಟುಕಿನ ಆಚೆಗಿನ ಮಾತಾಗಿತ್ತು. ಸದಾ ವಾಸ್ತವದ ಬಗ್ಗೆ, ಅದರ ಪ್ರಾಯೋಗಿಕ ಆಯಾಯಮದ ಬಗ್ಗೆ ಗೀಳು ಇದ್ದ ಅವರು ಸಹಜವಾಗಿಯೇ ಅಮೂರ್ತವಾದದ್ದರ ಬಗ್ಗೆ ಧ್ಯಾನಿಸುವ ಗೋಜಿಗೆ ಹೋಗಲಿಲ್ಲ. ಮಿಗಿಲಾಗಿ, ಯಾವುದೇ ನಿರ್ದಿಷ್ಟ ನಿಯಮಗಳು ಮಾನವ ಚರಿತ್ರೆಯ ಪ್ರಭಾವವನ್ನು ಬಂಧಿಸಿಡಲಾರವೆಂಬ ನಂಬುಗೆಯೇ ಅವರ ಚಿಂತನೆಯ ನೆಲೆಗಟ್ಟಾಗಿದ್ದುದರಿಂದ, ಭವಿಷ್ಯತ್ತಿನ ಮಾನವ ಸಮಾಜದ ರೂಪು ರಚನೆಯ ಬಗ್ಗೆ ಊಹಿಸಲು ಅವರು ನಿರಾಕರಿಸಿದ್ದರು. ಮಾರ್ಕ್ಸ್ ಕೂಡಾ ತನ್ನ ಕನಸಿನ ಕಮ್ಯೂನಿಸ್ಟ್ ಸಮಾಜ ಕುರಿತು ಹೆಚ್ಚಿನ ವಿವರ ನೀಡುವುದಿಲ್ಲ. ಅವನಿಗೆ ಪರಿಚಯವಿದ್ದ ವೈರುಧ್ಯಗಳಿಂದ ಮಾತ್ರ ಆ ಸಮಾಜ ಮುಕ್ತವಾಗಿರುತ್ತದೆಂದು ಭಾವಿಸಿದ್ದ. ಇದು ಸತ್ವತಃ ಮನುಷ್ಯನ ಅಭಿಲಾಷೆ ಮತ್ತು ಭೌತವಾಸ್ತವದ ನಡುವಿನ ದ್ವಂದ್ವವನ್ನು ಪ್ರತಿಬಿಂಬಿಸುತ್ತದೆ. ಬಾಬಾ ಸಾಹೇಬರಿಗೆ ಏನು ಮಾಡಲು ಸಾಧ್ಯವಾಯಿತೋ ಅಷ್ಟರಿಂದಲೇ ಅವರ ಆದರ್ಶ ರಾಜ್ಯದ ಪರಿಕಲ್ಪನೆಯನ್ನು ಕಟ್ಟಿಕೊಡಲು ಪ್ರಯತ್ನಿಸುವುದು ಅಪಾಯಕಾರಿ. ಯಾಕೆಂದರೆ, ಮುಂದಿನ ಜನಾಂಗ ತಮ್ಮ ಪರಿಸರ ಪರಿಸ್ಥಿತಿಗಳಿಗೆ ಅನುಗುಣವಾಗಿ ಅದನ್ನು ತಾನೇ ರೂಪಿಸಿಕೊಳ್ಳುವುದಕ್ಕೆ, ಅದರ ಬಗ್ಗೆ ತಾನೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವರು ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದಾರೆ. ತಮಗೆ ಬೇಕಾದದ್ದನ್ನು ರೂಪಿಸಿಕೊಳ್ಳುವುದನ್ನು ಅವರ ಮುಂದಿನ ಪೀಳಿಗೆಗೆ ಬಿಟ್ಟು ಬಿಟ್ಟಿದ್ದಾರೆ. ಆದರೆ ತಾರ್ಕಿಕವಾಗಿ ನೋಡಿದಾಗ, ಬಾಬಾ ಸಾಹೇಬರ ದೃಷ್ಟಿ ಧೋರಣೆಗಳು, ಅವರ ಕನಸಿನ ಸಮಾಜ ಇತ್ಯಾದಿಗಳು ಮಾರ್ಕ್ಸ್‌ನ ಪರಿಕಲ್ಪನೆಯ ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿಯೇ ನಿಜಗೊಳ್ಳಬಹುದು. ಯಾಕೆಂದರೆ, ಅಲ್ಲಿ ಮಾತ್ರ ಎಲ್ಲ ಅಲ್ಲದಿದ್ದರೂ ಹೆಚ್ಚಿನ ವೈರುಧ್ಯಗಳು, ಮಾನವ ಸಮಾಜದ ದ್ವಂದ್ವಗಳು ಪರಿಹಾರ ಕಂಡಿರುತ್ತವೆ.

ದಲಿತರು ಈ ದೃಷ್ಟಿಯನ್ನು ಅಂತರ್ಗತ ಮಾಡಿಕೊಂಡು ಅದರ ಈಡೇರಿಕೆಗೆ ಯತ್ನಿಸಬೇಕಾಗಿದೆ. ಅಂಬೇಡ್ಕರರು ತಮ್ಮ ತತ್ವಗಳಾದ ಸ್ವಾತಂತ್ರ್ಯ, ಸಮತೆ ಮತ್ತು ಭಾತೃತ್ವಗಳನ್ನು ಮಾರ್ಕ್ಸ್‌ವಾದಕ್ಕಿಂತಲೂ ವಿಶಾಲವಾದ ಅರ್ಥದಲ್ಲಿ ಅರ್ಥೈಸುವ ಕ್ರಾಂತಿ ದೃಷ್ಟಿ ಹೊಂದಿದ್ದರು. ಮಾರ್ಕ್ಸ್‌ವಾದ ಕೇವಲ ಸಮಾನತೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದ ಅವರು, ಈ ಮೂರು ತತ್ವಗಳಿಗೆ ಸಮಾನ ಮಹತ್ವ ಕೊಡುವ ಒಂದು ಹೊಸ ವಿಚಾರಧಾರೆಯ ಅವಶ್ಯಕತೆ ಇದೆಯೆಂದು ಹೇಳಿದ್ದಾರೆ. ಧರ್ಮದ ಒಂದು ಅನುಕೂಲಕರ ಪರಿಕಲ್ಪನೆಯನ್ನು ಸಾದರಪಡಿಸುವ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸಿದ್ದಾರೆ. ವ್ಯಂಗ್ಯವೆಂದರೆ, ಮುಂದಿನ ಜನಾಂಗವನ್ನು ತಮ್ಮ ದೃಷ್ಟಿ ಧೋರಣೆಗಳಿಂದ ಬಂಧಿಸಲು ನಿರಾಕರಿಸಿದ್ದ ಅವರ ವೈಚಾರಿಕತೆ ೨೫ ಶತಮಾನಗಳ ಹಿಂದೆ ಹೇಳಿದ್ದ ತತ್ವಗಳಿಂದ ತನ್ನನ್ನು ತಾನೇ ಬಂಧಿಸಿಕೊಂಡಿತ್ತು! ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆದರ್ಶಗಳ ಅಭಿವ್ಯಕ್ತಿ ತುಂಬ ಸರಳವಾದದ್ದು. ಆದರೆ ಆ ಕನಸಿನ ಜಗತ್ತು ಭೂಮಿಯ ಮೇಲೆ ಸಾಕಾರಗೊಳ್ಳುವುದು ಕಠಿಣ. ಅದರ ಸ್ಥಾಪನೆಗೆ ಆಧ್ಯಾತ್ಮಿಕ ಉವಾಚ ಯಾವುದೇ ಸುಳಿವು, ಸೂತ್ರಗಳನ್ನು ಕೊಡುವುದಿಲ್ಲ. ಹೆಚ್ಚೆಂದರೆ, ಅದಕ್ಕೆ ತೀರಾ ಪರಿಚಿತವಾದ ಪರಿಹಾರವನ್ನು ಮಾತ್ರ ಅದು ಸೂಚಿಸಬಲ್ಲದು. ಭೌತ ಜಗತ್ತನ್ನು ಮರೆತು, ವಾಸ್ತವಕ್ಕೆ ಬೆನ್ನು ತಿರುಗಿಸಿ, ಕಂಡ ಕನಸುಗಳನ್ನೆಲ್ಲ ಮನಸ್ಸಿನಲ್ಲಿಯೇ ನನಸಾಗಿಸಿಕೊಳ್ಳಬೇಕು! ಮಾನವರಿಗೆ ಬಂದೊದಗಿರುವ ಕಷ್ಟ-ಕಾರ್ಪಣ್ಯಗಳು, ಅವರಿಗೆ ಅನಪೇಕ್ಷಿತವಾಗಿ ಅಪ್ಪಳಿಸುವ ಅನಿಷ್ಟ ಮುಂತಾದವು ಮಾನವ ಸಮಾಜದ ವಿಭಜನೆಯ ಪರಿಣಾಮಗಳೆಂಬುದನ್ನು ಧಾರ್ಮಿಕರು ಒಪ್ಪವುದಿಲ್ಲ. ಅವುಗಳ ನಿರ್ಮೂಲನೆಗಾಗಿ, ಕಷ್ಟಕ್ಕೆ ಬಲಿಯಾದವರೆಲ್ಲ ಒಗ್ಗಟ್ಟಿನಿಂದ ಎದ್ದು ನಿಲ್ಲಬೇಕಾಗುತ್ತದೆ, ಧೈರ್ಯ ಧೀಮಂತಿಕೆಯಿಂದ ಹೋರಾಟಕ್ಕೆ ತೊಡಗಬೇಕಾಗುತ್ತದೆ, ತಮ್ಮ ಶೋಷಕರ ವಿರುದ್ಧ ಸೆಣಸಬೇಕಾಗುತ್ತದೆ ಎಂಬ ಇತ್ಯಾದಿ ಸತ್ಯಗಳನ್ನು ಸ್ವೀಕರಿಸಲು ಅವರು ಸಿದ್ಧರಿರುವುದಿಲ್ಲ. ಧರ್ಮ ಆಂತರಿಕವಾಗಿ ಎಷ್ಟೇ ವೈಚಾರಿಕತೆಯಿಂದ ಕೂಡಿದ್ದರೂ ಅಥವಾ ಅದನ್ನು ಎಷ್ಟೇ ಕ್ರಾಂತಿಕಾರಿಯಾಗಿ ವ್ಯಾಖ್ಯಾನಿಸಿದ್ದರೂ ಅದು ಈ ಮಿತಿಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಬಾಬಾ ಸಾಹೇಬರು ತಮ್ಮ ಕ್ರಾಂತಿಕಾರಿ ವ್ಯಾಖ್ಯಾನದೊಂದಿಗೆ ನಮಗೆ ಕೊಟ್ಟ ಬೌದ್ಧಧರ್ಮದ ವಿಷಯದಲ್ಲಿಯೂ ಇದೇ ಮಾತನ್ನ ಹೇಳಬಹುದು. ‘ಧಮ್ಮ’ ಮತ್ತು ‘ಧರ್ಮ’ದ ನಡುವಿನ ವ್ಯತ್ಯಾಸದ ಬಗ್ಗೆ ದಲಿತರಲ್ಲಿ ಇಂದು ನಡೆಯುತ್ತಿರುವ ಚಿರಪರಿಚಿತವಾದ, ಅರ್ಥವಿಲ್ಲದ ವಾಗ್ವಾದದ ಹೊರತಾಗಿಯೂ ಬೌದ್ಧ ಧರ್ಮಕ್ಕೆ ಇನ್ನುಳಿದ ಯಾವುದೇ ಧರ್ಮದ ಗತಿಯೇ ಒಂದೊದಗಿರುವುದನ್ನು ನೋಡುತ್ತೇವೆ. ಮಾರ್ಕ್ಸ್‌ವಾದವು ಅಂಬೇಡ್ಕರರ ಆದರ್ಶಗಳನ್ನು ಒಳಗೊಂಡಿರುವುದೇ ಎಂಬುದು ಬೇರೆ ಪ್ರಶ್ನೆ. ಆದರೆ ಯಾವುದೇ ವಿಧದ ಸಂವಿಧಾನಿಕ ಸರ್ಕಸ್ಸಿನಿಂದಾಗಲಿ, ಯಾವುದೇ ಧ್ಯಾನ ತಪಸ್ಸಿನ ಮೂಲಕವಾಗಲೀ ಆ ಅದರ್ಶಗಳನ್ನು ನೈಜಗೊಳಿಸುವುದು ಮಾತ್ರ ಸುತಾರಾಂ ಸಾಧ್ಯವಿಲ್ಲ.

ಪ್ರಭುತ್ವ

ಪ್ರಭುತ್ವ ಕುರಿತ ಅಂಬೇಡ್ಕರರ ಪರಿಕಲ್ಪನೆಯ ಪ್ರಕಾರ ಅದು ಆಳುವ ವರ್ಗದ ಅದಿನಾಯಕತ್ವದಿಂದ ತುಸು ಸ್ವಾಯತ್ತತೆಯನ್ನು ನಡೆದುಕೊಳ್ಳಬೇಕೆಂದು ನಿರೀಕ್ಷಿಸಿದ್ದಾರೆ. ಈ ನಿರೀಕ್ಷೆ ಅನುಗುಣವಾಗಿಯೇ ಅವರು ದಲಿತ ಪರವಾದ ಕೆಲವು ಅವಕಾಶಗಳನ್ನು ಸಂವಿಧಾನದಲ್ಲಿ ಒಳಗೊಳ್ಳಲು ಪ್ರಯತ್ನಿಸಿದರು. ಆದರೆ ಅವರು ವಾಸ್ತವವಾಗಿ ಸಂವಿಧಾನ ಸಭೆಯನ್ನು ತಲುಪಿದಾಗ, ಅದರ ರಚನಾ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ ಬಹುಶಃ ಪ್ರಭುತ್ವದ ಇತಿಮಿತಿಗಳು ಅವರಿಗೆ ಚೆನ್ನಾಗಿ ಅರಿವಾಗಿರಬೇಕು. ಪ್ರಭುತ್ವದ ಗದ್ದಿಗೆಯ ಹತ್ತಿರಕ್ಕೆ ಹೋದಂತೆ ಅದರ ನಿಜ ಸ್ವರೂಪ ಅವರ ಗಮನಕ್ಕೆ ಬಂದಿರಬೇಕು! ಅವರು ಅದರ ನೇರ ಸಂಪರ್ಕ, ಸಾನಿಧ್ಯಕ್ಕೆ ಬಂದ ಮೇಲೆ ಅದರ ಸ್ವಾಯತ್ತತೆಯ ಮಿತಿಗಳು ಮತ್ತು ಮೂಲಭೂತ ವರ್ಗಧಾರಿತ ಪಕ್ಷಪಾತ ಇತ್ಯಾದಿಗಳೆಲ್ಲವೂ ಅವರಿಗೆ ಢಾಳಾಗಿ ಕಂಡಿರಬೇಕು. ತನ್ನ ಜನತೆಗಾಗಿ, ವಿಶೇಷವಾಗಿ ದಲಿತರ ಉದ್ಧಾರಕ್ಕಾಗಿ, ಕೆಲವಾದರೂ ಅವಕಾಶಗಳನ್ನು ಸಂವಿಧಾನದಲ್ಲಿ ರಚಿಸಲು ‘ಬಾಡಿಗೆಯ ಕುದುರೆ’ಯಾಗಿ ದುಡಿಯುವ ಪ್ರಸಂಗ ಬಂದರೂ ಅವಧಾನದಿಂದ ಅಂಗೀಕರಿಸಿದ್ದರು. ಚೂರುಪಾರು ಸಂವಿಧಾನಿಕ ಅವಕಾಶಗಳನ್ನು ದಕ್ಕಿಸಿಕೊಳ್ಳುವ ಧಾವಂತದಲ್ಲಿ ಆಳುವ ವರ್ಗ ಹಾಗೂ ವರ್ಣ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಾದ ದುರ್ಭರ ಸ್ಥಿತಿಯನ್ನು ಎದುರಿಸಿದರು. ಇದ್ದ ಇತಿಮಿತಿಗಳೊಳಗೇ ಸಂವಿಧಾನವು ತುಳಿತಕ್ಕೊಳಗಾದ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸುವಂತೆ ಮಾಡುವುದರಲ್ಲಿ ಅವರು ಹೆಚ್ಚು ಕಡಿಮೆ ಗೆಲುವನ್ನೇ ಸಾಧಿಸಿದ್ದರು. ಅಂತಹ ಇಕ್ಕಟ್ಟಿನ ನಡುವೆಯೂ ಒಂದಿಷ್ಟು ಒಳ್ಳೆಯ ಕೆಲಸ ಮಾಡಿದ ಭಾವ ಸಂತೃಪ್ತಿ ಅವರದ್ದಾಗಿತ್ತು. ನಿರ್ದೇಶಕ ಸೂತ್ರಗಳಾದಿಯಾಗಿ ಸಂವಿಧಾನದುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುವ ಅನೇಕ ಕಾಯ್ದೆ ಬದ್ಧ ಅವಕಾಶಗಳು ಅವರ ಆಶೆ ಆಕಾಂಕ್ಷೆಗಳ ಛಾಪು ಪಡೆದಿರುವುದನ್ನು ಕಾಣುತ್ತೇವೆ. ಅವುಗಳ ಇಂದಿನ ಅಸ್ತಿತ್ವಕ್ಕೆ ಅವರೇ ಕಾರಣವೆಂದರೆ ಅತಿಶಯೋಕ್ತಿಯೇನಲ್ಲ. ಈ ಅವಕಾಸಗಳಿಗೂ ಅನೇಕ ಅಡ್ಡಿ ಆತಂಕಗಳಿದ್ದವು. ಅವು ಆಳುವವರು ಕೊಟ್ಟ ಇಕ್ಕಟ್ಟಿನ ಸ್ಥಳಗಳಲ್ಲಿ ಮಾತ್ರ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಸಂವಿಧಾನವು ಯಾರಿಗೂ ಒಳ್ಳೆಯದನ್ನು ಮಾಡಲಾರದು. ಏಕೆಂದರೆ, ಅದು ಅಷ್ಟು ಪರಿಣಾಮಕಾರಿಯಾಗಿ ಜಾತಿ ಆಗಲಾರದು ಎಂಬ ಹತಾಶೆಯ ಸ್ಥಿತಿಯಲ್ಲಿ ‘ಅದು ಯಾರಿಗೂ ಒಳ್ಳೆಯದು ಮಾಡದಿದ್ದರೆ ಅದನ್ನು ಸುಟ್ಟುಬಿಡುವುದರಲ್ಲಿ ತಾವೇ ಮೊದಲನೆಯ ವ್ಯಕ್ತಿ ಆಗುವುದಾಗಿ’ ವ್ಯಗ್ರತೆಯಿಂದ ನುಡಿದಾಗ ಬಹುಶಃ ‘ಪ್ರಭುತ್ವ’ದ ಬಗ್ಗೆ ಅವರಿಗೆ ನಿಜವಾದ ಜ್ಞಾನೋದಯವಾಗಿರಬಹುದು. ಕೆಲವೇ ದಿನಗಳಲ್ಲಿ ಜನ ಆ ಸಂವಿಧಾನವನ್ನು ಆಸ್ಫೋಟಿಸಲಿದ್ದಾರೆ ಎಂದು ಹೇಳಿದ್ದ ಅವರ ಮಾತುಗಳು ನಿಜವಾಗಲಿಲ್ಲ. ಯಾಕೆಂದರೆ, ಅವು ನಿಖರವಾಗಿರಲಿಲ್ಲ. ವಾಸ್ತವವಾಗಿ, ಮೇಲ್ಜಾತಿ ಮೇಲ್ವರ್ಗದ ಕೂಟಕ್ಕೆ ಸಂವಿಧಾನವು ಸಾಕಷ್ಟು ಒಳ್ಳೆಯದನ್ನೇ ಮಾಡಿರುವುದರಿಂದ ಅವರು ತುಂಬ ಜಾಗರೂಕತೆಯಿಂದ ಅದನ್ನು ಕಾಯುತ್ತಿದ್ದಾರೆ. ೧೯೪೭ ರಿಂದ ಇಂದಿನವರೆಗೆ ರಾಜಕೀಯ ಅಧಿನಾಯಕತ್ವವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಂಡಿರುವ ಈ ಕೂಟ ಸಹಜವಾಗಿಯೇ ಸಂವಿಧಾನದ ರಕ್ಷಣೆಗೆ ಕಟಿಬದ್ಧವಾಗಿ ನಿಂತಿದೆ. ತಾವು ಮತ್ತು ಇತರರು ಕೂಡಿ ಕಟ್ಟಿದ ಸಂವಿಧಾನಿಕ ಮಂದಿರಕ್ಕೆ ಕಾಂಗ್ರೆಸ್ಸಿನ ಕೆಲವು ದೆವ್ವಗಳು ಹೊಕ್ಕಿಕೊಂಡಿರುವವು ಎಂದು ಅವರು ಹೇಳಿದ ಮಾತು ನಿಜವಾಗಿತ್ತು. ಅವರು ಇನ್ನೂ ಕೆಲವು ದಿನ ಬದುಕಿದ್ದರೆ, ಆ ಮಂದಿರದ ನಿರ್ಮಾಣದಲ್ಲಿ ಯಾರನ್ನು ಅವರು ತಮ್ಮ ಸಹೋದ್ಯೋಗಿಗಳೆಂದು ಭಾವಿಸಿದ್ದರೋ ಅವರೇ ಮುಂದೆ ಆ ದೆವ್ವಗಳ ಏಜೆಂಟರಾಗಿ ಪರಿಣಮಿಸಿದ್ದನ್ನು ನೋಡಬಹುದಾಗಿತ್ತು.

ಈ ದೆವ್ವಗಳ ಮುನ್ನಡೆಯನ್ನು ಜನ ಬಲದ ಮೂಲಕ ತಡೆಯುವ ಉದ್ದೇಶದಿಂದ ಅವರು ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಎಂಬ ಒಂದು ಸಂಸದೀಯ ಪಕ್ಷವನ್ನು ಕಟ್ಟಿದ್ದರು. ಅದರ ಮೂಲಕ ದೆವ್ವಗಳ ದಾಪುಗಾಲನ್ನು ತಡೆಯುವ ಆಶೆ ಅವರದಾಗಿತ್ತು. ಆದರೆ ಇದೆಲ್ಲವೂ ದೆವ್ವಗಳು ವಾಸಿಸಿದ್ದ ದೇವಾಲಯದ ಪ್ರಕಾರದಲ್ಲಿಯೇ ನಡೆದುದ್ದರಿಂದ, ಆ ದೆವ್ವಗಳ ಅನತಿ ಕಾಲದಲ್ಲಿಯೇ ಎಲ್ಲವನ್ನೂ ತಿಂದು ತೇಗಿದ್ದವು.

ಪ್ರಭುತ್ವವೆಂಬುದು ಒಂದು ಸಾಧನ; ಆಳುವ ವರ್ಗಗಳು ಆಳಲ್ಪಡುವವರನ್ನು ದಬ್ಬಾಳಿಕೆಯ ಮೂಲಕ ತಮ್ಮ ಅಡಿಯಾಳನ್ನಾಗಿ ಮಾಡಿಕೊಳ್ಳಲು, ಆ ಮೂಲಕ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಹವಣಿಸುತ್ತವೆ ಎಂಬ ಸಂಗತಿ ಕೊನೆಗೂ ಬಾಬಾ ಸಾಹೇಬರರ ತಿಳುವಳಿಕೆಗೆ ತಟ್ಟಲೇ ಇಲ್ಲ. ಸ್ವತಃ ತುಳಿತಕ್ಕೊಳಗಾದವರ ಕೈಗೆ ಅಧಿಕಾರ ಬಂದು ಅವರೇ ಆಳುವ ವರ್ಗವಾಗಿ ಪರಿಣಮಿಸುವವರೆಗೆ ಪ್ರಭುತ್ವ ಅವರ ಯಾವ ಹಿತವನ್ನೂ ಕಾಯದು, ಅವರಿಗೆ ಯಾವುದೇ ಒಳ್ಳೆಯದನ್ನು ಮಾಡದು. ಅಂತಿಮ ತುಲನೆಯಲ್ಲಿ ಅದರ ಬಹುಪಾಲು ಆಳುವವರ ಉಡಿಯಲ್ಲಿಯೇ ಬಿದ್ದಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.

೧೯೪೭ರ ನಂತರ ಪ್ರಭುತ್ವವು ಹಗಲು ರಾತ್ರಿ ದಣಿವಿಲ್ಲದೆ ದಲಿತರ ಮತ್ತು ಬಡವರ ಬಗ್ಗೆ ತನಗಿರುವ ಕಾಳಜಿಯ ಕುರಿತು ಸಾಕಷ್ಟು ಪ್ರಚಾರ ಮಾಡುತ್ತಲೇ ಬಂದಿದೆ. ಆದರೆ ವಾಸ್ತವವಾಗಿ, ತನ್ನ ಧೋರಣೆಗಳ ಕಾರಣದಿಂದಾಗಿಯೇ ಜಾತಿ ಸಮಸ್ಯೆ ಇನ್ನೂ ಉಲ್ಪಣಿಸುವಂತೆ ಮಾಡುವುದರಲ್ಲಿ ಅನುಪಮ ಸೇವೆ ಸಲ್ಲಿಸಿದೆ. ತೋರಿಕೆಗೆ ಪ್ರಗತಿಪರ ಧೋರಣೆಗಳ ಪರಿಣಾಮವೆಂದು ಕಂಡುಬರುವ ಭೂಮಿತಿಯ ಕಾಯ್ದೆ, ಹಸಿರು ಕ್ರಾಂತಿ, ಗರೀಬಿ ಹಟಾವೋ ಕಾರ್ಯಕ್ರಮ, ಸೇವಾ ರಂಗದಲ್ಲಿ ದಲಿತರಿಗೆ ಮೀಸಲಾತಿ ಮತ್ತು ಮಂಡಲ ಆಯೋಗ ವರದಿ ಇತ್ಯಾದಿಗಳೆಲ್ಲವೂ ಅವುಗಳ ಘೋಷಿತ ಉದ್ದೇಶಗಳಿಗೆ ವಿರುದ್ಧವಾದ ಫಲವನ್ನೇ ನೀಡಿವೆ. ಭೂಮಿತಿ ಕಾಯ್ದೆಯು ಮಧ್ಯಮ ಜಾತಿ ರೈತರ ಒಂದು ಸಾಮಾಜಿಕ ಸ್ತರವನ್ನು ಸೃಷ್ಟಿಸಿತು. ಕ್ರಮೇಣ ಈ ಸ್ತರ ಒಂದು ದುರ್ದಮ್ಯ ಶಕ್ತಿಯಾಗಿ ಪರಿಣಮಿಸಿತು. ಸಾಮಾಜಿಕ ಶ್ರೇಣಿಯಲ್ಲಿ ಸಾಂಪ್ರದಾಯಿಕವಾಗಿ ದಲಿತರಿಗಿಂತ ತುಸು ಮೇಲಿದ್ದ ಈ ಗುಂಪು ಭೂಹಿಡುವಳಿಗಳ ಮೇಲೆ ಹಿಡಿತ ಸಾಧಿಸಿದ್ದೆ ತಡ ಒಂದು ಹೊಸ ಅವತಾರವನ್ನು ತಾಳಿತು. ತಮ್ಮ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಇದು ಅಕ್ಷರಶಃ ಬ್ರಾಹ್ಮಣವಾದದ ಭದ್ರಕೋಟೆಯಾಯಿತು! ದಿನ ಬೆಳಗಾದರೆ ದಲಿತರ ಮೇಲೆ, ಭೂಹೀನ ಕಾರ್ಮಿಕರ ಮೇಲೆ ತನ್ನ ದಬ್ಬಾಳಿಕೆಯನ್ನು ದಟ್ಟೈಸುತ್ತ ಅವರನ್ನು ತೊತ್ತಳ ತುಳಿಯತೊಡಗಿತು. ಅಲ್ಲಿ, ಇಲ್ಲಿ ಕಾಣಿಸಿಕೊಳ್ಳುತ್ತಿದ್ದ ದಲಿತರ ಸಣ್ಣ ಪುಟ್ಟ ಪ್ರತಿಭಟನೆಯನ್ನು ಚಿಗುರಿನಲ್ಲಿಯೇ ಚಿವುಟಿ ಹಾಕಿತು.

ಹಸಿರು ಕ್ರಾಂತಿಯ ಪರಿಣಾಮವು ಹೆಚ್ಚು ಕಡಿಮೆ ದಲಿತರಿಗೆ ಇಂತಹ ಕುತ್ತುಗಳನ್ನೇ ತಂದೊಡ್ಡಿತು. ಅದರ ನೇರ ಫಲವಾಗಿ ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಶಕ್ತಿಗಳು ನುಸುಳಿಕೊಂಡವು. ಪ್ರಭುತ್ವದ ಬೆಂಬಲದೊಂದಿಗೆ ದಾಪುಗಾಲಿಟ್ಟ ಹಸಿರುಕ್ರಾಂತಿ ಬೃಹತ್ ಪ್ರಮಾಣದ ದವಸ ಧಾನ್ಯ ಬೆಳೆಯಲು ಸಹಾಯ ಮಾಡುತ್ತ ದೊಡ್ಡ ದೊಡ್ಡ ರೈತರ ಕಿಸೆ ಮತ್ತು ಕೈ ಎರಡನ್ನೂ ಬಲಪಡಿಸಿತು. ಅವರಲ್ಲಿ ಮೊದಲೇ ಮನೆಮಾಡಿದ್ದ ‘ಭೂದಾಹ’ಕ್ಕೆ ಇನ್ನಷ್ಟು ಕುಮ್ಮಕ್ಕು ಕೊಟ್ಟಿತು. ಇದರಿಂದಾಗಿ ಭಾರತದ ಅಭಿವೃದ್ಧಿಯಲ್ಲಿ ಭೌಗೋಳಿ ಅಸಮಾನತೆ ಕಾಣಿಸಿಕೊಂಡಿತು. ಕೆಲವು ಹಿಂದೆ ಪ್ರದೇಶಗಳು ಸಮೃದ್ಧವಾಗಿ ಬೆಳೆದು ಮುನ್ನಡೆ ಸಾಧಿಸಿದರೆ, ಇನ್ನೂ ಕೆಲವು ಹಿಂದಬಿದ್ದವು. ಜೊತೆಗೆ ವ್ಯಾಪಾರ ಉದ್ಯಮದ ಕ್ಷೇತ್ರದಲ್ಲಿ ನಗರಪರವಾದ ಸ್ಥಿತಿ ನಿರ್ಮಾಣವಾಯಿತು. ಈ ಎಲ್ಲದರ ಪರಿಣಾಮ ಭೂಮಿತಿ ಕಾಯ್ದೆಗಿಂತಲೂ ಹೆಚ್ಚು ತೀಕ್ಷ್ಣವಾಗಿ, ಕ್ರೂರವಾಗಿ ದಲಿತರ ಮೇಲಾಯಿತು. ಇನ್ನು ‘ಗರೀಬಿ ಹಟಾವೋ’ ಕಾರ್ಯಕ್ರಮವಂತೂ ಕೇವಲ ಪ್ರಚಾರದ ತುತ್ತೂರಿಯಾಗಿಯೇ ಪರಿಣಮಿಸಿತು. ಈ ಕಾರ್ಯಕ್ರಮದ ಫಲವಾಗಿ, ಒಂದೆಡೆ ದಲಿತರ ಆಸೆ ಆಕಾಂಕ್ಷೆಗಳು ಆಳುವವರ ಭರವಸೆಯ ಬೆನ್ನೇರಿ ಆಕಾಶಯಾನ ಮಾಡಿದರೆ, ಇನ್ನೊಂದೆಡೆ ದಲಿತೇತರ ಬಡಜನರು ಹತಾಶೆಯಿಂದ ಕನಲುತ್ತ ಕರುಬತೊಡಗಿದರು. ಯಾಕೆಂದರೆ ದಲಿತರ ಏಳ್ಗೆಗಾಗಿ ಆರಂಭಿಸಲಾಗಿದ್ದ ವಿಶೇಷ ಕಾರ್ಯಕ್ರಮಗಳು ತಮ್ಮನ್ನು ನಿರ್ಲಕ್ಷಿಸುತ್ತಿವೆ. ಏಳಿಗೆಯ ಅವಕಾಶಗಳಿಂದ ತಮ್ಮನ್ನು ವಂಚಿಸುತ್ತಿವೆ ಎಂಬ ಭಾವನೆ ದಲಿತೇತರ ಬಡವರಲ್ಲಿ ಕಾಣಿಸಿಕೊಂಡಿತು. ಅದರಿಂದ ಹೊರಹೊಮ್ಮಿದ ಸಾಮಾಜಿಕ ಘರ್ಷಣೆ ಮತ್ತು ಸೆಳೆತ ಜಾತಿವ್ಯವಸ್ಥೆಯನ್ನು ಇನ್ನೂ ಭದ್ರಗೊಳಿಸಿದವು. ಪರಿಣಾಮತಃ ಜಾತಿ ಆಧಾರಿತ ಬೇಡಿಕೆಗಳು ಉಲ್ಬಣಗೊಂಡು ಜಾತಿ ಜಾತಿಗಳ ಮಧ್ಯ ಇದ್ದ ಬಿರುಕು ಇನ್ನೂ ಅಗಲವಾಯಿತು.

ಸೇವಾ ಕ್ಷೇತ್ರದಲ್ಲಿ ದಲಿತರಿಗೆ ದೊರೆತ ಮೀಸಲಾತಿ ಸಾಕಷ್ಟು ಫಲ ನೀಡಿದೆ. ಆದರೆ ರಾಜಕೀಯ ದೃಷ್ಟಿಯಿಂದ ಅದು ಅಷ್ಟೇ ಹಾನಿಯನ್ನೂ ಮಾಡಿದೆ. ಮೀಸಲಾತಿ ದಲಿತರಲ್ಲಿ ಭರವಸೆ ಮೂಡಿಸಿತು; ಅವರ ಆಸೆ ಆಕಾಂಕ್ಷೆಗಳಿಗೆ ಇಂಬುಗೊಟ್ಟಿತು. ಜೊತೆಗೆ ಈ ವ್ಯವಸ್ಥೆಯ ಬಗ್ಗೆ ನಂಬುಗೆಯನ್ನೂ ಸೃಷ್ಟಿಸಿತು. ಹಾಗಾಗಿ ವ್ಯವಸ್ಥೆಯ ಬಗ್ಗೆ ಅವರಲ್ಲುಂಟಾದ ಸದ್ಭಾವ ಅದರ ವಿರುದ್ಧ ಕಟ್ಟಬೇಕಾಗಿದ್ದ ಹೋರಾಟದ ತೀವ್ರತೆಯನ್ನು ಸಡಿಲಗೊಳಿಸಿತು. ತತ್ಕಾರಣ ಈ ವ್ಯವಸ್ಥೆಯಿಂದ ಕ್ರಮೇಣ ದಲಿತರಲ್ಲಿ ಹುಟ್ಟಬಹುದಾಗಿದ್ದ ಪರಕೀಯತೆಯ ಪ್ರಜ್ಞೆ ಮಸುಕುಗೊಂಡಿತು. ಮೀಸಲಾತಿಯ ಅವಕಾಶ ಪಡೆದು ಮುಂದೆ ಬಂದವರು ರಾಜಕೀಯವಾಗಿ ನಿರ್ವೀರ್ಯರಾದರು ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ವ್ಯವಸ್ಥೆಯ ರಕ್ಷಕರಾಗಿ, ಸಂರಕ್ಷಕರಾಗಿ ಪರಿಣಮಿಸಿದರು. ಉದ್ಯೋಗಗಳ ಅಭಾವದ ಸಂದರ್ಭವನ್ನು ಪ್ರತಿಗಾಮಿಗಳು ಸರಿಯಾಗಿಯೇ ಬಳಸಿಕೊಂಡರು. ಯುವಜನತೆಯನ್ನು ಜಾತಿ ಆಧಾರದ ಮೇಲೆ ಒಡೆದು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಛೂ ಬಿಡುವ ಅಮಿತ ಅವಕಾಶ ದೊರೆಯಿತು. ಪ್ರತಿಗಾಮಿ ಶಕ್ತಿಗಳಿಗೆ, ಹಿಂದುಳಿದ ಜಾತಿಗಳೂ ಮೀಸಲಾತಿಯ ಲಾಭ ದೊರಕಿಸಿ ಕೊಡಲು ನೇಮಕಗೊಂಡ ಮಂಡಲ ಆಯೋಗ ತನ್ನ ವರಿದಯ ಮೂಲಕ ಅನೇಕ ಪ್ರಗತಿಪರ ಪಕ್ಷಗಳಲ್ಲಿ ಹೊಸ ಉತ್ಸಾಹವನ್ನೇನೋ ಮೂಡಿಸಿತು. ಆದರೆ ಅದರ ಪರಿಣಾಮ ಮಾತ್ರ ನೆಟ್ಟಗಾಗಲಿಲ್ಲ. ಹಿಂದುಳಿದ ಜಾತಿಗಳನ್ನು ಸಬಲಗೊಳಿಸಿ ಅವರನ್ನು ಜಾತ್ಯಾತೀತ ಹೋರಾಟಕ್ಕೆ ಅಣಿಗೊಳಿಸುವ ಬದಲು, ಹಿಂದುಳಿದವರ ಅನೇಕ ಜಾತಿಗಳ ಅನನ್ಯತೆಯನ್ನು ಗಟ್ಟಿಗೊಳಿಸಿ, ಅವರವರ ಮಧ್ಯೆ ಜಾತಿಯ ಪ್ರಜ್ಞೆ ಸ್ಥಾಯಿಗೊಳಿಸಿತು. ಅದು ಹಿಂದುಳಿದ ಜಾತಿಗಳ, ವಿಶೇಷವಾಗಿ ಆಯಾ ಜಾತಿಗಳಲ್ಲಿಯ ಸಿರಿವಂತರ, ಕೈಬಲಪಡಿಸಿತು. ಆ ಮೂಲಕ ಅವರಿಗೆ ಸಂಬಂಧಿಸಿದಂತೆ ತೌಲನಿಕವಾಗಿ ‘ಹಿಂದುಳಿದ ಜಾತಿಗಳ ಸ್ಥಿತಿವಂತರು’ ಬಲಿಷ್ಟರಾದಂತೆಲ್ಲಾ ‘ಬಡ ದಲಿತರ’ ಬವಣೆ ಹೆಚ್ಚಾಗುವುದು ನಿಶ್ಚಿತವಾಯಿತು.

ಈ ರೀತಿಯಾಗಿ ಪ್ರಭುತ್ವವು ಎಷ್ಟೇ ಕಲ್ಯಾಣಕಾರಕ ಮುಖವಾಡ ತೊಟ್ಟರೂ, ಉದ್ಧಾರದ ಸೋಗು ಹಾಕಿದರೂ ಅದಕ್ಕೆ ವಾಸ್ತವದಲ್ಲಿ ದಲಿತರ, ಬಡಜನರ ಬದುಕಿನಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗಿಲ್ಲ. ನಿಜವೆಂದರೆ, ಅದು ಅವರ ಹಿತಾಸಕ್ತಿಯ ವಿರುದ್ಧವೇ ಸತತವಾಗಿ ಕೆಲಸ ಮಾಡುತ್ತ ಬರುತ್ತಿದೆ. ಅದರ ದೃಷ್ಟಿ ನೀತಿ ನಿರಂತರವಾಗಿ ದಲಿತರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಬಾಬಾ ಸಾಹೇಬರು ಬಯಸಿದ್ದೆ ಬೇರೆ, ಆಮೇಲೆ ಆದದ್ದೇ ಬೇರೆ. ಪ್ರಭುತ್ವದ ಸ್ವಾಯತ್ತತೆಯ ನೆರಳಿನಲ್ಲಿ ದಲಿತರು ಒಂದಿಷ್ಟು ದಣಿವಾರಿಸಿಕೊಳ್ಳಬಹುದೆಂದು ಆಶಿಸಿದ್ದ ಅವರ ನಂಬುಗೆ ಪೂರಾ ಹುಸಿಯಾಗಿ ಹೋಗಿದೆ. ಪ್ರಭುತ್ವದ ಅಡಿಯಲ್ಲಾದರೂ ನಿರ್ಗತಿಕರು, ವಿಶೇಷವಾಗಿ ದಲಿತರು, ಗರಿಷ್ಠ ಲಾಭ ಪಡೆಯುವಂತಾಗಲೂ ಬಾಬಾ ಸಾಹೇಬರು ಮಾಡಿದ ಪ್ರಯತ್ನ ನಿರೀಕ್ಷಿಸಿದ ಫಲ ನೀಡಿಲ್ಲ. ಪ್ರಭುತ್ವವು ಒಂದಿಷ್ಟಾದರೂ ಸ್ವಾಯತ್ತತೆಯಿಂದ ನಡೆದುಕೊಳ್ಳುತ್ತದೆ. ಎಂದು ಭಾವಿಸುವುದೇ ಬೇರೆ, ಅದು ವರ್ಣ, ವರ್ಗದಾಚೆಗೆ ನಿಂತು ಜಾತ್ಯಾತೀತಿವಾಗಿ ವರ್ಗಾತೀತವಾಗಿ ಒಂದು ವಿಧದ ತಟಸ್ಥ ನಿಲುವು ತಾಳಬೇಕೆಂದು ಅಪೇಕ್ಷಿಸುವುದೇ ಬೇರೆ. ದುರ್ದೈವಶಾತ್ ದಲಿತ ರಾಜಕೀಯ ನೇತಾರರು ಇಂತಹ ತಪ್ಪನ್ನೇ ಮಾಡುತ್ತ ಬಂದಿದ್ದಾರೆ. ಪ್ರಭುತ್ವ ವರ್ಣಾತೀತ, ಜ್ಯಾತೀತವಾದ ಒಂದು ತಟಸ್ಥ ನಿಲುವು ತಳೆಯುತ್ತದೆಂದು ಇವತ್ತಿಗೂ ಭಾವಿಸುತ್ತಿದ್ದಾರೆ. ಈ ಭಾವನೆ ಈಗಾಗಲೇ ದಲಿತರ ಹಿತಾಸಕ್ತಿಗಳಿಗೆ ದಲಿತರ ಕಾರಣಕ್ಕಾಗಿ ಒಂದು ತಂತ್ರವಾಗಿ ಬಳಸುವ ಉಮೇದು ಇಟ್ಟುಕೊಂಡಿರಬಹುದೇ ವಿನಾ ಅದು ಜಾತಿ ವರ್ಗ ತಟಸ್ಥವಾಗಿರುತ್ತದೆಂದು ಭಾವಿಸಿರುವುದು ಸಾಧ್ಯವಿಲ್ಲ.