ಸಂವಿಧಾನ: ಉದಾರವಾದಿ ಪ್ರಜಾಸತ್ತೆಯ ಒಂದು ಪ್ರಯೋಗ

ಅವರು ಕೈಗೆತ್ತಿಕೊಂಡಿದ್ದ ವಿಮೋಚನಾ ಯೋಜನೆಯ ಸಂದರ್ಭದಲ್ಲಿ ಉದಾರವಾದಿ ಪ್ರಜಾಸತ್ತೆಗೆ ಇದ್ದ ಮಿತಿಗಳ ಬಗ್ಗೆ ಬಾಬಾ ಸಾಹೇಬರಿಗೆ ಸಂಪೂರ್ಣ ಅರಿವಿತ್ತು. ಹಾಗೆಂದೇ ಅನೇಕ ಸಲ ತಾವು ಒಬ್ಬ ಉದಾರವಾದಿ ಪ್ರಜಾಸತ್ತೆಯ ಪ್ರತಿಪಾದಕನಲ್ಲವೆಂದು ಘೋಷಿಸಿಯೂ ಇದ್ದರು. ಆದರೂ ಅನೇಕ ಕಾರಣಗಳಿಂದಾಗಿ ಅವರು ಉದಾರವಾದಿ ಪ್ರಜಾಸತ್ತೆಯ ಹಿಡಿತದಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉದಾರವಾದಿ ಪ್ರಜಾಪ್ರಭುತ್ವ ಮೂಲತಃ ೧೯ನೇ ಶತಮಾನದ ಯೂರೋಪಿನ ಆಳುವ ವರ್ಗದ ವಿಚಾರಧಾರೆಯಾಗಿತ್ತು ಎಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನು ಆಗಿರಲಿಲ್ಲ. ವ್ಯಕ್ತಿಗಳು ಮತ್ತು ಅವರಿಂದಾದ ಸಮೂಹಗಳು ಮೂಲಭೂತವಾಗಿ ಸ್ವಾರ್ಥತೆಯಿಂದ ಕೂಡಿದ ಘಟಕಗಳಾಗಿರುತ್ತವೆ ಎಂಬುದು ಉದಾರವಾದಿ ಪ್ರಜಾಸತ್ತೆಯ ಪ್ರಧಾನ ಪ್ರಮೇಯ. ವ್ಯಕ್ತಿಗಳಾಗಲಿ, ಸಾಮಾಜಿಕ ಸಮೂಹಗಳಾಗಲಿ, ಕೇವಲ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಸಾಧ್ಯತೆ ಇಲ್ಲದ ದುರ್ಬಲ ವರ್ಗದವರೂ ಸಮಾಜದಲ್ಲಿ ಇರುತ್ತಾರೆ. ಅಭ್ಯಾಸದ ಸಂಗತಿಯೆಂದರೆ ಇಂಥವರ ಸಂಖ್ಯೆಯೇ ಸಮಾಜದಲ್ಲಿ ಹೆಚ್ಚು ಇರುತ್ತದೆ. ಮುಕ್ತ ಸ್ಪರ್ಧೆಗಳಲ್ಲಿ ಭಾಗಬಹಿಸಿ ಗೆಲ್ಲಲಾರದವರು ಹತಾಶೆಯಿಂದ ಈ ಸ್ಪರ್ಧೆಯ ಆಟವನ್ನು ಹಾಳು ಮಾಡಬಲ್ಲ ಪ್ರಚ್ಫನ್ನ ಸಾಧ್ಯತೆಯೂ ಅವರಲ್ಲಿರುತ್ತದೆ. ಫ್ರಾನ್ಸಿನ ಕ್ರಾಂತಿ ಇಂಥ ವ್ಹಿಗ್‌ಗಳು ಇದಕ್ಕೆ ಸಂಬಂಧಿಸಿದ ಆಡಿದ ಮಾತುಗಳು ಗಮನಾರ್ಹವಾಗಿವೆ. ಕ್ರಾಂತಿಯನ್ನು ದೂರವಿಡುವ ಅದನ್ನು ತಪ್ಪಿಸುವ ಅತ್ಯುತ್ತಮ ದಾರಿಯೆಂದರೆ, ಕೆಳವರ್ಗದವರ ಬಗ್ಗೆ ಔದಾರ್ಯದ ಒಲವು ನಿಲುವುಗಳನ್ನು ತೋರುವುದು. ಅವರು ಬಂಡೆದ್ದು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಮುಂಚೆಯೇ ಮೇಲ್ವರ್ಗ ಎಚ್ಚೆತ್ತುಕೊಳ್ಳಬೇಕು. ಕೆಳವರ್ಗದ ರೊಚ್ಚಿನ ಕಿಚ್ಚು ಭುಗಿಲೇಳುವ ಮುಂಚೆಯೇ ಮೇಲಿನವರು ಔದಾರ್ಯದ ಧಾರೆ ಹರಿಸಬೇಕು. ದಯೆ, ಕರುಣೆ, ಅನುಕಂಪೆಯನ್ನು ಸಕಾಲದಲ್ಲಿ ತೋರುವ ಚಾಕಚಕ್ಯತೆ ಮೈಗೂಡಿಸಿಕೊಳ್ಳಬೇಕು. ಒಂದು ವೇಳೆ ಕ್ರಾಂತಿ ಸಂಭವಿಸಿದರೆ, ಅದರರ್ಥ ಜನರು ಕೆಟ್ಟವರು ಎಂದು ಅಲ್ಲ. ಅದಕ್ಕಾಗಿ ಅವರನ್ನು ಇನ್ನೂ ಕ್ರೂರ ದಬ್ಬಾಳಿಕೆಯ ಮೂಲಕ ಸದೆಬಡಿಯಬೇಕಾಗಿತ್ತು ಎನ್ನುವುದು ನಿರರ್ಥಕ. ಯಾವುದೇ ತರದ ದಬ್ಬಾಳಿಕೆಗೆ ಸೋಲು ಕಟ್ಟಿಟ್ಟಿದ್ದು. ಕೆಳವರ್ಗದ ಜನ ದಂಗೆ ಏಳುವವರೆಗೆ ಕಾದು ಆಮೇಲೆ ಅವರನ್ನು ದಬ್ಬಾಳಿಕೆಯ ಮೂಲಕ ಅದುಮಿಡಲು ಪ್ರಯತ್ನಿಸುವುದೆಂದರೆ, ಮೇಲ್ವರ್ಗದವರು ಸಾಕಷ್ಟು ಬುದ್ಧಿವಂತರಲ್ಲ, ಅವರಲ್ಲಿ ಅವಶ್ಯಕ ಆತ್ಮವಿಶ್ವಾಸದ ಕೊರತೆ ಇದೆ, ಸಕಾಲದಲ್ಲಿ ಗಮನರ್ಹಾ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ಸೋತಿದ್ದಾರೆ ಎಂಬುದು ಸಾಬೀತಾಗುತ್ತದೆ. ಆದ್ದರಿಂದ ಉದಾರವಾದಿ ಪ್ರಜಾಸತ್ತೆಯು ತೌಲನಿಕವಾಗಿ ದುರ್ಬಲವಾಗಿರುವ ಜನ ವಿಭಾಗಗಳಿಗೆ ಕೆಲವು ಸೌಲತ್ತು ಸೌಕರ್ಯಗಳನ್ನು ಕಲ್ಪಿಸಿಕೊಡುತ್ತದೆ. ಕೆಲ ಹೊತ್ತಿನವರೆಗೆ ಅವರ ಸಹಾಯಕ್ಕೆ ನಿಂತು ಅವರ ಶಕ್ತಿ ಸಂವರ್ಧಿಸಿ, ಸಾರ್ವತ್ರಿಕ ಸ್ಪರ್ಧೆಯಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಲು ಹವಣಿಸುತ್ತದೆ. ಇಂಥ ಸ್ಪರ್ಧೆಗಳಲ್ಲಿ ಪ್ರಭುತ್ವವು ರೆಫರಿಯ ಪಾತ್ರ ನಿರ್ವಹಿಸುತ್ತದೆ ಮತ್ತು ಸಾಮಾನ್ಯವಾಗಿ ಇಂಥ ಪ್ರಭುತ್ವವು ಸಮಾಜದ ಎಲ್ಲ ಗುಂಪುಗಳ ಪ್ರತಿನಿಧಿಯಾಗಿರುತ್ತದೆ ಎಂದೂ ನಂಬಿಸಲಾಗುತ್ತದೆ. ಈ ಎಲ್ಲ ವಿಷಯ ಬಾಬಾ ಸಾಹೇಬರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಪ್ರಭುತ್ವವು ಒಬ್ಬ ನಿಷ್ಪಕ್ಷಪಾತ, ಸ್ವತಂತ್ರ ರೆಫರಿಯ ಪಾತ್ರ ನಿರ್ವಹಿಸುತ್ತದೆ ಎಂದು ಅವರು ನಿರೀಕ್ಷಿಸಿದ್ದರು.

ಬಾಬಾ ಸಾಹೇಬರು ಕಾಂಗ್ರೆಸ್ಸಿನ ಸಹಕಾರದೊಂದಿಗೆ ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷಗಿರಿಯನ್ನು ಒಪ್ಪಿಕೊಂಡ ನಂತರ ಅವರ ಮೇಲೆ ಉದಾರವಾದಿ ರಾಜಕಾರಣದ ಪ್ರಭಾವ ಇನ್ನೂ ಹೆಚ್ಚಾಗಿ ಆದಂತೆ ಕಂಡುಬರುತ್ತದೆ. ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ನಿನ ಪರವಾಗಿ ಅವರು ಸಂವಿಧಾನ ಸಭೆಗೆ ಸಾದರಪಡಿಸಿದ ಸ್ಟೇಟ್ ಸೋಶಿಯಲಿಜಂನ ಪ್ರಸ್ತಾವವನ್ನು ಈ ನಿರ್ದಿಷ್ಟ ಸಂದರ್ಭದ ಒತ್ತಡದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಅಂದಿನ ಪರಿಸ್ಥಿತಿಯ ವಿಧಿ ನಿಷೇಧಗಳ ಹಿನ್ನೆಲೆಯಲ್ಲಿಯೇ ಅವರ ವಿಚಾರಧಾರೆಯ ಕಸರತ್ತನ್ನು ಪರಿಶೀಲಿಸಬೇಕು. ಅವರು ಸಂವಿಧಾನ ಸಭೆಯನ್ನು ಪ್ರವೇಶಿಸುವ ನಿಕಟಪೂರ್ವದಲ್ಲಿ ಒಂದು ರೀತಿಯ ರಾಜಕೀಯ ಅಜ್ಞಾತವಾಸದ ಕಹಿ ಉಂಡಿದ್ದರು. ಅವರ ಈ ಅನುಭವ ಒಂದು ವಿಧದ ಸಂದಿಗ್ಧತೆಯನ್ನು ಸೃಷ್ಟಿಸಿತ್ತು. ಯಾವ ಮಹತ್ತರ ಸಾಧನೆಯನ್ನು ಕಾಣದೆ ಅವರು ತಮ್ಮ ಬದುಕು ಕೊನೆಗೊಳ್ಳುವ ಸಾಧ್ಯತೆಗಳನ್ನು ತುಂಬ ಹತ್ತಿರದಿಂದ ವೀಕ್ಷಿಸಿದ್ದರು. ಕಾರಣ ಅವರು ಸಂವಿಧಾನ ಸಭೆಯನ್ನು ಪ್ರವೇಶಿಸಿ, ಮುಂದೆ ಅವತರಿಸಲಿದ್ದ ಸಂವಿಧಾನದಲ್ಲಿ ತಮ್ಮ ಜನತೆಗಾಗಿ ಕೆಲವಾದರೂ ಸಂವಿಧಾನಿಕ ಅವಕಾಶಗಳನ್ನು ಕಲ್ಪಿಸಿಕೊಂಡುವ ತುರ್ತು ಅವರ ಮುಂದೆ ಬಂದು ನಿಂತಿತ್ತು. ಆದ್ದರಿಂದಲೇ ಸಂವಿಧಾನ ರಚನೆಯ ಅವಕಾಶವನ್ನು ಕಾಂಗ್ರೆಸ್ಸು ಅವರ ಮುಂದಿಟ್ಟಾಗ ಕೆಲವು ಮಿತಿಗಳ ಹೊರತಾಗಿಯೂ ಅವರು ಅದನ್ನು ಸ್ವೀಕರಿಸಿದರು. ತಾವು ಜನತೆಗಾಗಿ ಕೈಗೊಳ್ಳಬೇಕಾಗಿದ್ದ ತಮ್ಮ ಬದುಕಿನ ಮಹತ್ವಾಕಾಂಕ್ಷೆಯ ಸಾಕಾರಕ್ಕಾಗಿ ಕೆಲವು ಇತಿಮಿತಿಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿತ್ತು. ಈ ವಿನಿಮಯದಲ್ಲಿ ಅವರು ಪಡೆದುಕೊಂಡದ್ದರ ಮಹತ್ವವೇನೂ ಕಡಿಮೆ ಇರಲಿಲ್ಲ. ಆದ್ದರಿಂದ ಅವರ ಮೇಲಿದ್ದ ಒತ್ತಡಗಳನ್ನು ಅಲಕ್ಷಿಸುವಂತಿಲ್ಲ. ಅವು ತುಂಬಾ ಸ್ಪಷ್ಟವಾಗಿವೆ. ಸ್ಟೇಟ್ಸ್ ಆಂಡ್ ಮೈನಾರಿಟಿಜ್ ಪ್ರಸ್ತಾವ ಅವರ ವಿಚಾರಗಳನ್ನು ಯಾವ ಸಂದಿಗ್ಧತೆಗೂ ಎಡೆ ಇಲ್ಲದೆ ಪ್ರತಿಪಾದಿಸಿದೆ. ಅದರ ಪ್ರಕಾರ, ಅತ್ಯಂತ ಉತ್ಪಾದನಾಶೀಲ ಆಸ್ತಿ ಪಾಸ್ತಿಗಳೆಲ್ಲವೂ ಪ್ರಭುತ್ವದ ಸ್ವತ್ತಾಗಬೇಕು. ಇದು ಸಹಜವಾಗಿಯೇ ಉದಾರವಾದಿ ಪ್ರಜಾಸತ್ತೆಯ ತತ್ವಕ್ಕೆ ವಿರುದ್ಧವಾದದ್ದು. ೧೭ನೇ ಶತಮಾನದ ಜಾನ್‌ಲಾಕ್ ಮತ್ತು ಥಾಮಸ್ ಹಾಬ್ಸ್‌ರ ಕಾಲದಿಂದಲೂ ಆಸ್ತಿ ಹಕ್ಕಿನ ಕುರಿತಿದ್ದ ಉದಾರವಾದಿ ಸಿದ್ಧಾಂತವು ಖಾಸಗಿ ಆಸ್ತಿಯ ಮಹತ್ವವನ್ನು ಒತ್ತಿ ಹೇಳುತ್ತಲೇ ಬಂದಿದೆ. ಖಾಸಗಿ ಆಸ್ತಿಯನ್ನು ರಕ್ಷಿಸುವ ಹೊಣೆ ಸರಕಾರದ್ದು. ಅದುವೇ ಅದರ ಆದ್ಯ ಕರ್ತವ್ಯ ಎಂದು ಪ್ರತಿಪಾದಿಸುತ್ತಲೇ ಬರಲಾಗಿದೆ. ಆದ್ದರಿಂದ ಬಾಬಾ ಸಾಹೇಬರು ಕಾಂಗ್ರೆಸ್ಸಿನ ಉದಾರವಾದಿ ನಿಲುವಿಗೆ ಶರಣಾಗಬೇಕಾಯಿತು. ನಮ್ಮ ಸಂವಿಧಾನದ ಜೀವಜೀವಾಳವಾಗಿರುವ ಆಸ್ತಿ ಹಕ್ಕಿಗೆ ಬದ್ಧರಾಗಬೇಕಾಯಿತು. ಇದು ಅಧಿಕಾರದ ಕೇಂದ್ರೀಕರಣ ಮತ್ತು ಇನ್ನು ಕೆಲವು ಮೂಲಭೂತ ಹಕ್ಕುಗಳ ಬಗ್ಗೆಯೂ ಅಷ್ಟೇ ಸ್ಪಷ್ಟವಾಗಿದೆ. ಇವೆಲ್ಲವೂ ಬಂಡವಾಳಶಾಹಿ ವರ್ಗಕ್ಕೆ ತುಂಬಾ ಅನುಕೂಲಕರವಾಗಿದ್ದವು. ಅದರ ಬೆಳವಣಿಗೆಗೆ ಫಲವತ್ತಾದ ನೆಲೆ ಒದಗಿಸಿದವು. ಅಂದಿನ ಅಧಿಕಾರದ ರಚನೆಯನ್ನು ಪರಿವರ್ತನೆಗೆ ಒಡ್ಡುವ ಬದಲು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ದೃಷ್ಟಿಧೋರಣೆಗಳನ್ನು ಬೆಂಬಲಿಸುವ ಸಂವಿಧಾನಿಕ ಅವಕಾಶಗಳನ್ನು ಅವರು ಅನಿವಾರ್ಯವಾಗಿ ಅಂಗೀಕರಿಸಬೇಕಾಯಿತು. ಅವರು ಬದುಕಿನ ಜೀವಜೀವಾಳವೆಂದು ಬಹುವಾಗಿ ಬಗೆದಿದ್ದ ಸಾಮಾಜಿಕ ಪ್ರಜಾಸತ್ತೆಯ ತತ್ವಗಳನ್ನು ಸಂವಿಧಾನದ ನಿರ್ದೇಶಕ ಸೂತ್ರಗಳಂತಹ ಅಪರಿಣಾಮಕಾರಿ ಅಧ್ಯಾಯದಲ್ಲಿ ಮಾತ್ರ ಸೇರಿಸುವಂತಹ ಅನಿವಾರ್ಯ ಒತ್ತಡಕ್ಕೆ ಒಳಗಾದರು. ತಾವು ಯಾವಾಗಲೂ ಗುಮಾನಿ ದೃಷ್ಟಿಯಿಂದಲೇ ನೋಡುತ್ತಿದ್ದ, ಮಾಜಿ ಅಸ್ಪೃಶ್ಯರ ಬದುಕು ಮತ್ತು ಸ್ವಾತಂತ್ರ್ಯಕ್ಕೆ ಅತ್ಯಂತ ಅಪಾಯಕಾರಿಯೆಂದು ಭಾವಿಸಲಾಗಿದ್ದ ಸಂಸದೀಯ ಕಾರ್ಯಾಂಗವನ್ನು ಸ್ವತಃ ಅವರೇ ಒಪ್ಪಿಕೊಳ್ಳುವಂತಾಯ್ತು.

ದಲಿತರು ಮತ್ತು ದಮನಿತರ ದೃಷ್ಟಿಯಿಂದ ಮೀಸಲಾತಿಯ ಒಂದಿಷ್ಟು ಸೌಲಭ್ಯವನ್ನು ಬಿಟ್ಟರೆ ಸಂವಿಧಾನದಿಂದ ಹೆಚ್ಚಿನ ಯಾವುದೇ ಭೌತಿಕ ಲಾಭಗಳು ದೊರೆಯಲಾರವು ಎನ್ನುವ ಸತ್ಯ ಬಾಬಾ ಸಾಹೇಬರಿಗೆ ಗೊತ್ತೆ ಇತ್ತು. ದೀನದಲಿತರಿಗೆ ಸಹಾಯ ಮಾಡದೆ ಉಳ್ಳವರ ಸೇವೆಗೆ ಈ ಸಂವಿಧಾನ ತೊಡಗಲಿದೆ ಎಂಬುವುದೂ ಅವರಿಗೆ ಗೊತ್ತಿತ್ತು. ಎಲ್ಲ ಅಧಿಕಾರದ ಅನುಕೂಲಗಳು, ಸೇವಾ ಸೌಲಭ್ಯದ ಅವಕಾಶಗಳು ಸಿರಿವಂತರ ಮಡಿಲಿಗೆ, ಸಾಂಪ್ರದಾಯಿಕ ಗಣ್ಯರ ಉಡಿಗೆ ಬೀಳುವಂತೆ ಮಾಡುವ ವಿಶೇಷ ವ್ಯವಸ್ಥೆ ಸಂವಿಧಾನದಲ್ಲಿದೆ ಎನ್ನುವುದು ಬಾಬಾ ಸಾಹೇಬರಿಗೆ ಸ್ಪಷ್ಟವಾಗಿತ್ತು. ಕತ್ತೆಯ ಮುಂದೆ ಹಿಡಿ ಹುಲ್ಲಿನ ಆಮಿಷ ತೋರಿಸಿದಂತೆ, ದಲಿತ ದಮನಿತರಿಗಾಗಿ ಮೀಸಲಾತಿ ಮತ್ತು ಸಂವಿಧಾನಿಕ ಸುರಕ್ಷಣೆಗಳು ಕೇವಲ ಮೂಗಿಗೆ ತುಪ್ಪ ಒರೆಸುವ ಹುನ್ನಾರದಿಂದ ಕೂಡಿದ್ದವು. ಪಾಶ್ಚಿಮಾತ್ಯ ಪ್ರಜಾಸತ್ತೆಯ ನೆಲೆಯ ಮೇಲೆ ನಿಂತಿದ್ದ. ರಾಜಕೀಯ ಕ್ಷೇತ್ರದಲ್ಲಿ ಪ್ರತಿಯೊಬ್ಬನಿಗೂ ಒಂದೇ ಮತ, ಪ್ರತಿ ಮತಕ್ಕೂ ಒಂದೇ ಮೌಲ್ಯ ತತ್ವವನ್ನು ಅನುಸರಿಸಿ ರಾಜಕೀಯ ಸಮಾನತೆಯನ್ನು ಘೋಷಿಸಿದ್ದ ನಮ್ಮ ಸಂವಿಧಾನ ಈಗಾಗಲೇ ಆಸ್ತಿತ್ವದಲ್ಲಿರುವ ಸಾಮಾಜಿಕ, ಆರ್ಥಿಕ ರಚನೆಗೆ ಯಾವುದೇ ಧಕ್ಕೆ ತಗಲುದಂತೆ ಎಚ್ಚರ ವಹಿಸಿತು. ನಮ್ಮ ಸಂವಿಧಾನದೊಳಗೆ ನುಸುಳಿಕೊಂಡಿರುವ ಬಿರುಕಿನ ಬೀಜ ಬಾಬಾ ಸಾಹೇಬರಿಗೆ ಅತೀವ ಅಸಮಾಧಾನವನ್ನುಂಟು ಮಾಡಿತು. ಆ ಕುರಿತು ಅವರು ತಮ್ಮ ವ್ಯಗ್ರತೆಯನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ಒಮ್ಮೆ ಅವರ ಆಕ್ರೋಶ ಅಸ್ಫೋಟಗೊಂಡು ಎಚ್ಚರಿಕೆಯ ಮಾತುಗಳು ಹೊರಬಿದ್ದವು. ಅಂದು ಅವರು ನೀಡಿದ ಆ ಎಚ್ಚರಿಕೆ ಜನಜನಿತವಾಗಿದೆ. ಒಂದು ನಿರ್ದಿಷ್ಟ ಸಮಯದೊಳಗಾಗಿ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಸಾಧಿಸದಿದ್ದರೆ, ಅಸಮಾನತೆ ಅನ್ಯಾಯಕ್ಕೊಳಗಾದ ಜನ ನಮ್ಮ ರಾಜಕೀಯ ಪ್ರಜಾಸತ್ತೆಯನ್ನು ಅಸ್ಫೋಟಿಸಿ ಬಿಡುತ್ತಾರೆ. ರಾಜಕೀಯ ಪ್ರಜಾಸತ್ತೆಯು ಸಾರ್ವತ್ರಿಕ ಮತದಾನದ ಹಕ್ಕು ಮತ್ತು ನಿಯತಕಾಲಿಕವಾಗಿ ನಡೆಯುವ ಚುನಾವಣೆಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಇಂಬುಗೊಡಲಿದೆ ಎಂಬ ನಂಬಿಗೆ ದೋಷಯುಕ್ತವಾದದ್ದು ಎನ್ನುವ ಪ್ರಜ್ಞೆ ಬಾಬ ಸಾಹೇಬರಿಗಿತ್ತು. ಅನೇಕ ಚುನಾವಣೆಗಳ ಸೋಲಿನ ಪ್ರಕ್ರಿಯೆಗಳ ಮೂಲಕ ಅವರು ಈ ಕಹಿ ಹಣ್ಣಿನ ರುಚಿ ನೋಡಿದ್ದರು. ಮುಕ್ತ ಮಾರುಕಟ್ಟೆಯ ತತ್ವದ ಮೇಲೆ ನಡೆಯುವ ಯಾವುದೇ ರಾಜಕೀಯ ವ್ಯವಸ್ಥೆ ಎಂದೂ ಸಮಾನತೆಯನ್ನು ಸಾಧಿಸದು. ಅದು ಆಗಾಗ ಉಚ್ಚರಿಸುವ ಸಮಾಜವಾದ, ಸಾಮಾಜಿಕ ನ್ಯಾಯ, ಸಮಾನತೆ ಮುಂತಾದವುಗಳು ಕೇವಲ ಜನರನ್ನು ಮೋಸ ಮಾಡುವ ಕಪಟ ನಾಟಕಗಳು, ಇನ್ನು ಚುನಾವಣಾ ರಾಜಕಾರಣ, ಅದರ ಮಾತೇ ಬೇರೆ. ಚುನಾವಣಾ ರಾಜಕಾರಣದ ವ್ಯಾಕರಣ, ಅದರ ಆಟ, ಅರ್ಥ ಇವತ್ತಿಗೂ ದಲಿತರ ಕೈಗೆ ದಕ್ಕಿಲ್ಲ. ಯಾಕೆಂದರೆ, ಇಂತಹ ವ್ಯವಸ್ಥೆಯಲ್ಲಿ ಚುನಾವಣಾ ರಾಜಕಾರಣವು ಸಾಮಾನ್ಯವಾಗಿ ರಾಜಕಾರಣಿಗಳು ಭೂಮಾಲೀಕರ, ಬಂಡವಾಳಶಾಹಿಗಳ ಮತ್ತು ದಲ್ಲಾಳಿ ಧನಿಕ ಪ್ರಭುಗಳ ಹಿತಾಸಕ್ತಿಯನ್ನು ಕಾಯುವ ದಿಕ್ಕಿನಲ್ಲಿಯೇ ಹೆಜ್ಜೆ ಇಡುವಂತೆ ಮಾಡುವ ಅನಿವಾರ್ಯತೆ ಪೂರ್ವನಿಯೋಜಿತವಾಗಿರುತ್ತದೆ. ಆದ್ದರಿಂದ ಧನಿಕ ದಲ್ಲಾಳಿಗಳ ಆಶೀರ್ವಾದವಿಲ್ಲದೆ ದಲಿತ ರಾಜಕಾರಣಿಗಳು ಬದುಕಲಾರರು, ಬದುಕಿದರೂ ಮುಕ್ತ ರಾಜಕೀಯ ಸ್ಪರ್ಧೆಯಲ್ಲಿ ಗೆಲ್ಲಲಾರರು. ಉದಾರವಾದಿ ಮೌಲ್ಯಗಳು ಮತ್ತು ಉದಾರವಾದಿ ಸಂಸ್ಥೆಗಳು, ರಾಜಕೀಯ ಅಧಿಕಾರದ ಮೇಲೆ ಉಳ್ಳವರ ವರ್ಗ ಸರ್ವಸ್ವಾಮ್ಯ ಸಾಧಿಸುವುದನ್ನು ತಡೆಯಲು ಅಸಮರ್ಥವಾಗಿರುತ್ತವೆ ಎಂಬ ಪರಮ ಸತ್ಯ ಬಾಬಾ ಸಾಹೇಬರ ಗಮನಕ್ಕೆ ಬರದೇ ಇದ್ದಿರಲಿಕ್ಕಿಲ್ಲ.

ಕ್ರಾಂತಿಯ ಕುರಿತು

ಬಾಬಾ ಸಾಹೇಬರಿಗೆ ಕ್ರಾಂತಿ ಎಂಬ ಪದದ ಬಗ್ಗೆ ಒಂದು ವಿಧದ ಜಿಗುಪ್ಸೆ ಭೀತಿ ಇತ್ತೆಂದು ಕಾಣುತ್ತದೆ. ಆದ್ದರಿಂದಲೇ ಅವರು ಸುಧಾರಣೆಯನ್ನು ಪ್ರತಿಪಾದಿಸಿ ಪ್ರಚುರಪಡಿಸುತ್ತಿದ್ದರೆಂದು ಅನಿಸುತ್ತದೆ. ಹೀಗೆಂದು ನಿಜವಾಗಿಯೂ ನಂಬುವುದು ತುಂಬ ಅಪಾಯಕಾರಿ. ಯಾಕೆಂದರೆ, ಅದು ತೋರಿಕೆಗೆ ಮಾತ್ರ. ಆದರೆ ವಾಸ್ತವವಾಗಿ, ಕ್ರಾಂತಿಯ ಬಲವಾದ ವಾಂಛೆ ಅವರ ಮನದಾಳದಲ್ಲಿ ಮನೆ ಮಾಡಿತ್ತು. ಇನ್ನಿತರ ಅನೇಕ ಪದಪುಂಜಗಳಂತೆ ಅವರ ಕ್ರಾಂತಿಯ ಪರಿಕಲ್ಪನೆಯೂ ವಿಶಿಷ್ಟವಾದುದ್ದಾಗಿತ್ತು. ವಿಶೇಷವಾಗಿ ಮಾರ್ಕ್ಸ್‌ವಾದಿಗಳ ವಲಯದಲ್ಲಿ ಬಳಸುವ ಅರ್ಥದಲ್ಲಿ ಅವರು ಈ ಪದವನ್ನು ಬಳಸುತ್ತಿರಲಿಲ್ಲ. ಕ್ರಾಂತಿಯಲ್ಲಿ ಕಾಣಿಸಿಕೊಳ್ಳುವ ಹಿಂಸೆಯನ್ನು ಅವರು ದ್ವೇಷಿಸುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಅವರು ದಂಗೆ, ಕ್ರಾಂತಿ ಮತ್ತು ಬಂಡಾಯವನ್ನು ಹಿಂಸೆಯೊಂದಿಗೆ ಸಮೀಕರಿಸಿದ್ದನ್ನು ಕಾಣುತ್ತೇವೆ. ಬಂಡಾಯದ ವಿಧಿ ವಿಧಾನಗಳೊಂದಿಗೂ ಅವರಿಗೆ ಸಮ್ಮತವಿರಲಿಲ್ಲ. ಜನಪದರ ತಿಳುವಳಿಕೆ ಹೆಚ್ಚದೆ, ಪ್ರಜ್ಞೆ ಪಕ್ವಗೊಳ್ಳದೆ ಕ್ರಾಂತಿಕಾರಿ ಬದಲಾವಣೆ ಸಾಧ್ಯವಿಲ್ಲ. ಮುಗ್ಧರು, ಮೂಕರನ್ನು ಕಟ್ಟಿಕೊಂಡು ಮಾಡುವ ಬಂಡಾಯ ಎಂದೂ ಯಶಸ್ವಿಯಾಗಲಾರದು ಎಂಬುದು ಅವರ ವಿಚಾರವಾಗಿತ್ತು. ಮೇಲಾಗಿ, ಕ್ರಾಂತಿಯ ನ್ಯಾಯಪರತೆಯ ಬಗ್ಗೆ, ನ್ಯಾಯಬದ್ಧತೆಯ ಬಗ್ಗೆ ಅವರಲ್ಲಿ ಸಾತ್ವಿಕ ಸಂಶಯವಿತ್ತೆಂದು ಕಾಣುತ್ತದೆ. ಯಾಕೆಂದರೆ, ಸಾಮಾನ್ಯವಾಗಿ ಕ್ರಾಂತಿಯ ಯಶಸ್ಸು ವ್ಯಕ್ತಿಯ ಮೇಲೆ ಸಮುದಾಯದ ಗೆಲುವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯನ್ನು ಮೂಲೆಗುಂಪು ಮಾಡಿ ಸಮೂಹ ತಾನೇ ತಾನಾಗಿ ಮೆರೆಯುತ್ತದೆ. ವ್ಯಷ್ಟಿ ಸಮಷ್ಟಿಗಳ ತಾಕಲಾಟದಲ್ಲಿ ವ್ಯಷ್ಟಿ ನಶಿಸಿ ಸಮಷ್ಟಿ ವಿಜೃಂಭಿಸುತ್ತದೆ ಎನ್ನುವ ಭೀತಿ ಅವರನ್ನು ಕಾಡುತ್ತಿತ್ತು. ಅವರ ಈ ಭಯ ಭೀತಿಗಳ ಮೂಲ ಅವರ ಮೇಲೆ ಪ್ರಭಾವ ಬೀರಿದ್ದ ಉದಾರವಾದಿ ಪ್ರಜಾಸತ್ತೆಯಲ್ಲಿಯೇ ಇದೆ. ಅವರ ಬದುಕಿನ ದೃಷ್ಟಿಕೋನ ರೂಪುಗೊಂಡ ದಿನಗಳಲ್ಲಿ ಅವರ ಮನ ಹೊಕ್ಕು ನರ ನಾಡಿಗಳಲ್ಲಿ ಹಬ್ಬಿಕೊಂಡಿದ್ದ ಉದಾರವಾದಿ ಪ್ರಜಾಷತ್ತೆಯ ಸಿದ್ಧಾಂತವೇ ಈ ಎಲ್ಲ ಭಯ ನಂಬುಗೆಗಳ ಮೂಲ ಸ್ತೋತ್ರವಾಗಿತ್ತು. ಉದಾರವಾದಿ ಪ್ರಜಾಸತ್ತೆಯ ದೃಷ್ಟಿಯಲ್ಲಿ ವ್ಯಕ್ತಿಯೇ ಪರಮ ಮೌಲ್ಯ. ಅವನ ಶ್ರೇಯೋಭಿವೃದ್ಧಿ ಅಂತಿಮ ಗುರಿ. ಆದ್ದರಿಂದ ಅಲ್ಲಿ ವ್ಯಕ್ತಿಗೇ ಅಗ್ರಮಣೆ, ಅಧಿಕ ಬೆಲೆ. ವ್ಯಕ್ತಿಯ ಬಗೆಗಿದ್ದ ಅವರ ಕಾಳಜಿ ಕಂದಾಚಾರದಿಂದ ಕೂಡಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವ, ಬದುಕು ಬೆಲೆಯುಳ್ಳದ್ದು ಎಂಬ ಮೌಲ್ಯದಿಂದ ಹೊರಹೊಮ್ಮಿದ್ದ ಕಾಳಜಿ ಅದಾಗಿತ್ತು. ವ್ಯಕ್ತಿಯ ಬಗ್ಗೆ ತೋರುವ ಅಮಿತ ಕಾಳಜಿಯೇ, ಯಾವುದೇ ಕಾಲದಲ್ಲಿ ಸಮುದಾಯದಿಂದ ಅವನ ಮೇಲಾಗುವ ಅತ್ಯಾಚಾರ, ಅನ್ಯಾಯಗಳಿಂದ ಅವನನ್ನು ರಕ್ಷಿಸುವ ಅತ್ಯುತ್ತಮ ಅಸ್ತ್ರವೆಂದು ಅವರು ನದರು. ಕಾರ್ಮಿಕ ವರ್ಗದ ಸರ್ವಾಧಿಕಾರದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಸೋವಿಯತ್ ವ್ಯವಸ್ಥೆ ಕುಸಿದುಹೋದ ಇಂದಿನ ಸಂದರ್ಭದಲ್ಲಿ ಈ ಮಾನವ ಕೇಂದ್ರಿತ ಮೌಲ್ಯಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿದೆ. ಮೌಲ್ಯಗಳಿಗೂ ಒಂದು ಭೌತ ನೆಲೆ ಇರಬೇಕಾಗುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಯಾವುದೇ ಮೌಲ್ಯ ಆಕಾಶದಿಂದ ಉದುರುವುದಿಲ್ಲ. ಆದ್ದರಿಂದ ವ್ಯಷ್ಟಿ ಸಮಷ್ಟಿಗಳ ನಡುವಿನ ದ್ವಂದ್ವವನ್ನು ನಾವು ಒಂದು ಮೂರ್ತ ಸನ್ನಿವೇಶದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಈ ಮೇಲೆ ಹೇಳಿದ ಸಾತ್ವಿಕ ಸಂಶಯದ ಹೊರತಾಗಿ ಅಂಬೇಡ್ಕರರಿಗೆ ಕ್ರಾಂತಿಯ ಗುರಿ, ಗಮ್ಯದ ಬಗ್ಗೆ ಇನ್ಯಾವುದೇ ತಕರಾರು ಇರಲಿಲ್ಲ.

ಯಾವುದೇ ಕ್ರಾಂತಿ ಸಮಾಜದ ಸಾಮಾಜಿಕ ಸಂಬಂಧಗಳಲ್ಲಿ ಮೂಲಭೂತವಾದ ಬದಲಾವಣೆ ತರಬಯಸುತ್ತದೆಯಾದ್ದರಿಂದ ಯಥಾಸ್ಥಿತಿವಾದಿ ಶಕ್ತಿಗಳು ಅದನ್ನು ಶತಾಯಗತಾಯ ವಿರೋಧಿಸುತ್ತವೆ. ಕ್ರಾಂತಿಯಿಂದ ಅವರ ಭೌತಿಕಹಿತಾಸಕ್ತಿಗಳಿಗೆ ನೇರವಾಗಿ ಅಪಾಯವಿರುವುದರಿಂದ ಅದರ ಬಗ್ಗೆ ಅವರು ತೋರುವ, ಪ್ರತಿರೋಧ ಸೋಜಿಗದ ಸಂಗತಿಯೇನು ಅಲ್ಲ. ಇದಕ್ಕೆ ಪ್ರತಿಯಾಗಿ, ಕ್ರಾಂತಿಕಾರಿ ಶಕ್ತಿಗಳು ತಮಗೆ ಲಭ್ಯವಿರುವ ಎಲ್ಲ ಸಾಧನ ಮಾರ್ಗಗಳನ್ನು ಬಳಸಿ ಈ ಪ್ರತಿರೋಧವನ್ನು ಮೆಟ್ಟಿ, ಮೀರಿ ನಿಲ್ಲಬೇಕಾದದ್ದು ಅನಿವಾರ್ಯ. ಧುಮ್ಮಿಕ್ಕಿ ಬರುವ ಕ್ರಾಂತಿಯ ಪ್ರವಾಹವನ್ನು ತಡೆಯುವ ಉದ್ದೇಶದಿಂದ, ಪ್ರತಿಗಾಮಿ ಪಂಥೀಯರು ಅನೇಕ ಸಾಮಾಜಿಕ ನೀತಿ, ನಿಯಮಗಳ ಒಡ್ಡು ಕಟ್ಟಲು ಪ್ರಯತ್ನಿಸುತ್ತಾರೆ. ತಮ್ಮ ಆತ್ಮರಕ್ಷಣೆಗಾಗಿ ಅನೇಕ ಹಿಕಮತ್ತು ಹುನ್ನಾರಗಳ ಬಲೆ ಹೆಣೆಯುತ್ತಾರೆ. ಆದರೆ, ಕ್ರಾಂತಿಕಾರಿಗಳು ಈ ನೀತಿ-ನಿಯಮಗಳನ್ನು ನಿರ್ಭಿಡೆಯಿಂದ ಧಿಕ್ಕರಿಸುತ್ತಾರೆ. ಯಾಕೆಂದರೆ, ಕ್ರಾಂತಿಯೇ ಅವರಿಗೆ ಪರಮಮೌಲ್ಯ. ಸಾಮಾನ್ಯವಾಗಿ, ಕ್ರಾಂತಿಗಳು ದಮನಕ್ಕೊಳಗಾದವರ ದಂಗೆಗಳಾಗಿರುವುದರಿಂದ ಅಲ್ಲಿ ತುಸು ರಕ್ತಪಾತವಾಗಬಹುದು, ಹಿಂಸೆಯ ಸಾಧ್ಯತೆಗಳೂ ಹಣಿಕಿಕ್ಕಬಹುದು. ಆದರೆ, ಆ ಹಿಂಸೆ ರಕ್ತಪಾತವೆಲ್ಲ ಪ್ರತಿಗಾಮಿಗಳ ಪ್ರತಿಭಟನೆಯ ಪರಿಣಾಮವಾಗಿ ಕಾಣಿಸಿಕೊಳ್ಳುತ್ತವೆಯೇ ವಿನಾ ದಂಗೆಯೆದ್ದ, ದಲಿತ ದಮನಿತರ ರಕ್ತ ಪಿಪಾಸುತನದಿಂದಲ್ಲ. ನಿಜಸ್ಥಿತಿ ಹೀಗಿರುವುದರಿಂದ ಕ್ರಾಂತಿ ಹಿಂಸಾಮಯವಾದದ್ದು. ನೀತಿನಿಯಮಗಳ ಹಂಗು ಹರಿದುಕೊಂಡದ್ದು ಎಂಬ ಮಾತು ಪಟ್ಟಭದ್ರರ ಅಂತರಾಳದಿಂದ ಹೊಮ್ಮುವ ಹತಾಶೆಯ ಆರ್ತನಾದವೆಂದೇ ತಿಳಿಬೇಕು. ಇದಕ್ಕೆ ಪ್ರತಿಯಾಗಿ, ಕ್ರಾಂತಿಕಾರಿಗಳು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತ, ಮನುಕುಲವನ್ನು ಪ್ರಸಕ್ತದ ಮರಣಾಂತಿಕ ಬಲೆಯಿಂದ ಬಿಡಿಸಲು ಪ್ರಯತ್ನಿಸುವ ಜೀವಪ್ರಿಯ ಧೀರರಾಗಿರುತ್ತಾರೆ. ತ್ಯಾಗಿಗಳಾಗಿರುತ್ತಾರೆ.

ಆದ್ದರಿಂದ ರಕ್ತಪಿಪಾಸುತನ ಅವರ ಬಳಿಯೂ ಸುಳಿಯಲಾರದು ಎಂಬುದು ಹೆಚ್ಚು ತಾರ್ಕಿಕವಾದ ಮಾತು. ಅವರ ಚಟುವಟಿಕೆಯ ಹಿಂದಿನ ಪ್ರೇರಣೆ ಸ್ವಾರ್ಥಮೂಲವದ್ದಲ್ಲ. ಬದಲಾಗಿ, ಸಮಸ್ತ, ಮಾನವರನ್ನು ಮೇಲೆತ್ತುವ ವಿಶ್ವವಿಶಾಲ, ನಭೋಸ್ಪರ್ಶಿ ಧೋರಣೆಯಿಂದ ಬಂದದ್ದು. ಕ್ರಾಂತಿಯ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಹಿಂಸೆ ಕಾಣಿಸಿಕೊಂಡರೆ, ಅದಕ್ಕೆ ಕಾರಣ ಆಳುವವರೇ ವಿನಾ ಆಳಿಸಿಕೊಳ್ಳುವವರಲ್ಲ. ದಬ್ಬಾಳಿಕೆಯ ಸಂಸ್ಕೃತಿಯನ್ನು ಮೆಚ್ಚಿಕೊಂಡವರೇ ರಕ್ತಪಾತಕ್ಕೂ ಇಳಿಯುತ್ತಾರೆ ಹಿಂಸೆ ಚರಿತ್ರೆಯ ಸೂಲಗಿತ್ತಿ ಎಂದು ಮಾರ್ಕ್ಸ್ ಹೇಳಿದ್ದು ಇದೇ ಅರ್ಥದಲ್ಲಿ ಯಾವುದೇ ಕ್ರಾಂತಿಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಪ್ರತಿಕ್ರಾಂತಿಗಳು ತಮ್ಮ ಸ್ಥಾನಮಾನಗಳನ್ನು ಕಾಯ್ದುಕೊಳ್ಳಲು ಶಸ್ತ್ರ ಕೈಗೆತ್ತಿಕೊಂಡರೆ, ಕ್ರಾಂತಿಗಾಗಿ ಹಂಬಲಿಸುವ ಬಹುಸಂಖ್ಯಾತರು ಅದಕ್ಕೆ ಸಮನಾದ ಪ್ರತಿಭಟನೆಯನ್ನು ಒಡ್ಡಬೇಕಾಗುತ್ತದೆ. ಪರಿಣಾಮವಾಗಿ, ರಕ್ತ ಹರಿದರೆ ಅದಕ್ಕೆ ಕಾರಣ ಯಾರು ಇಲ್ಲಿ ಪೂರ್ವಭಾವಿಯಾಗಿ ಗಮನಿಸಬೇಕಾದ ಒಂದು ಅವಶ್ಯಕತೆಯಿದೆ. ಕ್ರಾಂತಿ ನಿಜವಾಗಿಯೂ ಬಹುಸಂಖ್ಯಾತರ ಹಂಬಲವನ್ನು ಪ್ರತಿನಿಧಿಸಬೇಕು. ಒಂದು ವೇಳೆ ಅದು ಬಹುಸಂಖ್ಯಾತರ ಅಭಿಲಾಷೆಯನ್ನು ಪ್ರತಿನಿಧಿಸದೇ ಕೆಲವೇ ಜನರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾಗಿ ಹೊರಹೊಮ್ಮಿದ ಹಿಂಸೆಯಾಗಿದ್ದರೆ ಎಷ್ಟೇ ಉದಾತ್ತವಾದ ಧ್ಯೇಯವನ್ನಾಧರಿಸಿದ್ದರೂ ಅದು ಕ್ರಾಂತಿಯ ಅರ್ಥವನ್ನೇ ತಿರುಚುತ್ತದೆ. ಕ್ರಾಂತಿಯ ಹೆಸರಿನಲ್ಲಿ ಬಹುಸಂಖ್ಯಾತರ ಸಂಕಲ್ಪದ ವಿರುದ್ಧದ ತನ್ನ ರಕ್ಷಣೆಗಾಗಿ, ಇಲ್ಲದ ಸಬೂಬುಗಳನ್ನು ಹುಡುಕುವ ಹಿಕಮತ್ತಾಗತ್ತದೆ. ಈ ಅರ್ಥದಲ್ಲಿ ಮತ್ತು ಇತ್ತೀಚಿನ ಚರಿತ್ರೆ ತೋರಿಸಿಕೊಟ್ಟ ರೀತಿಯಲ್ಲಿ ಒಮ್ಮೊಮ್ಮೆ ಕ್ರಾಂತಿಗಳೂ ವ್ಯಕ್ತಿಯ ಹಕ್ಕುಗಳನ್ನು ಹೊಸಕಿ ಹಾಕುತ್ತವೆ ಎಂಬ ಅಭಿಪ್ರಾಯವನ್ನು ತಳವಿಲ್ಲದ ತಕರಾರೆಂದು ತಳ್ಳಿಹಾಕುವಂತಿಲ್ಲ.

ಚಾರಿತ್ರಿಕವಾಗಿ ಕ್ರಾಂತಿಯೆಂದರೆ, ಒಂದು ಪ್ರಕ್ರಿಯೆ. ಅದು ಪ್ರಸಕ್ತದ ವ್ಯವಸ್ಥೆಯಲ್ಲಿ ಉತ್ಪಾದನಾ ಶಕ್ತಿಗಳನ್ನು ಇನ್ನೂ ಹೆಚ್ಚಿನ ಗುಣಾತ್ಮಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೆ, ಮಾನವ ಕುಲದ ಸರ್ವಾಂಗೀಣ ಪ್ರಗತಿಗೆ ಅಡ್ಡಿಯುಂಟು ಮಾಡುವ ಎಡರು ತೊಡರುಗಳನ್ನು ಗುರುತಿಸಿ, ನಾಶ ಮಾಡುವ ಒಂದು ನಿರಂತರ ಪ್ರಕ್ರಿಯೆ. ಇಲ್ಲಿಯವರೆಗೆ ಮಾನವ ಕುಲ ಸಾಧಿಸಿರುವ ಪ್ರಗತಿ, ಮೂಲಭೂತವಾಗಿ ಪರಿಮಾಣಾತ್ಮಕ ಬದಲಾವಣೆಯು ಗುಣಾತ್ಮಕ ಪರಿವರ್ತನೆಯಾಗಿ ಮಾರ್ಪಟ್ಟಿದ್ದರ ಫಲಿತಾಂಶವಾಗಿದೆ. ಅವ್ಯಾಹತವಾಗಿ ನಡೆಯುವ ಇದು ಕ್ರಾಂತಿಯ ಪ್ರಧಾನ ಲಕ್ಷಣವಾಗಿದೆ. ಕ್ರಮೇಣ ಕಾಯಿಸುತ್ತ ಹೋದರೆ ಒಂದು ಹಂತದಲ್ಲಿ ಆವಿಯಾಗಿ ಮಾರ್ಪಡುವ ನೀರಿನಂತೆ, ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ಕಾಣಿಸಿಕೊಳ್ಳಬೇಕಾದರೆ, ಕ್ರಾಂತಿಕಾರಿಗಳ ಸತತ ಪ್ರಯತ್ನ ಸಾಂದ್ರಗೊಳ್ಳಬೇಕು. ಅಂದರೇನೆ ಸಮಾಜದಲ್ಲಿ ಮೂರ್ತ ಬದಲಾವಣೆ ಕಾಣಿಸಿಕೊಳ್ಳುವುದು. ಇಂತಹ ಸಂದರ್ಭದಲ್ಲಿ ಕ್ರಾಂತಿಕಾರಿ ಶಕ್ತಿ ಹಿಂಸೆಯಾಗಿಯೂ ಹರಿಯಬಹುದು. ಬಾಬಾ ಸಾಹೇಬರು ಹಿಂಸೆಯ ಅವಶ್ಯಕತೆಯನ್ನು ಅಲಕ್ಷಿಸಿರಲಿಲ್ಲ.

ದಲಿತರು ಪ್ರಭಾವಶಾಲಿಯಾಗಲು, ಅವರ ಹೋರಾಟ ಪ್ರಭಾವಕಾರಿಯಾಗಲು ಅವಶ್ಯವಿದ್ದರೆ, ಅವರು ತೋಪು ತುಪಾಕಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒಮ್ಮೆ ಹೇಳಿದ್ದುಂಟು. ಹಿಂಸೆಯ ಬಗೆಗಿದ್ದ ಅವರ ವಿರೋಧ ಆದರ್ಶವಾದಿಯಾಗಿತ್ತೆಂದು ಅಥವಾ ಕಂದಾಚಾರದಿಂದ ಕೂಡಿತ್ತೆಂದು ತೀರ್ಮಾನಿಸುವುದು ತಪ್ಪು. ಯಾಕೆಂದರೆ, ಅವರಿಗೆ ಹಿಂಸೆಯ ಬಗ್ಗೆ ಕಟ್ಟಾಮಡಿವಂತಿಕೆಯೇನು ಇರಲಿಲ್ಲ. ಅವಶ್ಯವಿದ್ದರೆ ಅದನ್ನು ಅನುಸರಿಸಬಹುದೆಂದು ಹೇಳಿದ್ದಾರೆ. ಅವರ ಗುರುವಾಗಿದ್ದ ಬುದ್ಧನದೂ ಇದೇ ನಿಲುವಾಗಿತ್ತದು. ಅಹಿಂಸೆಯ ಮಹಾಮೂರ್ತಿಯೆಂದು ಗೌರವಿಸಲ್ಪಡುವ ಬದ್ಧನು ಹಿಂಸೆಯ ಬಗ್ಗೆ ತುಂಬ ವಾಸ್ತವಿಕ ವಿಚಾರವುಳ್ಳವನಾಗಿದ್ದನು. ಅಹಿಂಸೆಯಾಗಲಿ, ಉದಾರವಾದಿ ಪ್ರಜಾಸತ್ತೆಯ ಪ್ರತಿಪಾದಕರು ಎತ್ತಿ ಹಿಡಿವ ವ್ಯಕ್ತಿವಾದಿ ಮೌಲ್ಯವಾಗಲಿ ಬಾಬಾ ಸಾಹೇಬರಿಗೆ ಎಂದೂ ಗೀಳಾಗಿ ಕಾಡಿರಲಿಲ್ಲ. ಜಾತಿ ವ್ಯವಸ್ಥೆಯಲ್ಲಾದಂತೆ, ಕ್ರಾಂತಿಯ ನೆಪದಲ್ಲಿ ಕೆಲವೇ ಜನರು ಬಹುಸಂಖ್ಯಾತರ ಸಂಕಲ್ಪದ ಮೇಲೆ ಸವಾರಿ ಮಾಡುವ ಸಾಧ್ಯತೆಗಳ ಬಗ್ಗೆ ಅವರಿಗೆ ಅನುಮಾನಗಳಿದ್ದವು. ಅವಕಾಶ ಸಿಕ್ಕರೆ ಕ್ರಾಂತಿಯ ನೆಪದಲ್ಲಿ ಕೆಲವರೇ ಹಲವರನ್ನು ಸುಲಿಯುವ ವಂಚನೆಯ ಸಂಚು ನಡೆಸಬಹುದು ಎಂಬುವುದು ಅವರ ಗುಮಾನಿಗೆ ಕಾರಣವಾಗಿತ್ತು. ಇನ್ನೊಂದು ನೆಪದಲ್ಲಿ ಜಾತಿ ಮತ್ತೆ ಸಾಂಸ್ಥೀಕರಣಗೊಳ್ಳುವುದನ್ನು ಅವರು ಬಯಸುತ್ತಿರಲಿಲ್ಲ. ಆಪ್ರಕ್ರಿಯೆಯ ಬಗ್ಗೆ ಅವರಿಗೆ ಎಲ್ಲಿಲ್ಲದ ದ್ವೇಷ. ಆದ್ದರಿಂದಲೇ ಗುರಿ ಎಷ್ಟೇ ಉದಾತ್ತವಾಗಿದ್ದರೂ ಅವರ ಯೋಜನೆಯಲ್ಲಿ ಎಂದೂ ಅವರು ಪ್ರಜಾಪ್ರಭುತ್ವದ ಮೌಲ್ಯವನ್ನು ಬಲಿಕೊಡಲು ಸಿದ್ಧರಿರಲಿಲ್ಲ. ಬಹುಸಂಖ್ಯಾತರ ಅಭಿಲಾಷೆಯ ಬಗ್ಗೆ ರಾಜೀ ಮಾಡಿಕೊಳ್ಳಲು ತಯಾರಿರಲಿಲ್ಲ.

ಅನೇಕರು ಭಾವಿಸಿರುವಂತೆ, ಅಂಬೇಡ್ಕರರು ಸುಧಾರಣೆಯನ್ನು ಕ್ರಾಂತಿಗೆ ವಿರುದ್ಧವಾಗಿ ಪ್ರತಿಪಾದಿಸಲಿಲ್ಲ. ಈ ಪದಗಳ ಬಳಕೆಯ ಸಂದರ್ಭದಲ್ಲಿ ಅವರು ಅವುಗಳನ್ನು ಗತಿತಾರ್ಕಿಕ ಭೌತವಾದಿ ಪರಿಭಾಷೆಯಲ್ಲಿ ಗ್ರಹಿಸಿದಂತೆ ತೋರುವುದಿಲ್ಲ. ಅನೇಕ ಸಲ, ಕ್ರಾಂತಿಯೆಂದರೆ ಅಸ್ತಿತ್ವದಲ್ಲಿರುವ ಆಳುವಿಕೆಯನ್ನು ಹಿಂಸಾತ್ಮಕವಾಗಿ ಕಿತ್ತೊಗೆದು, ಅದರ ಸ್ಥಾನದಲ್ಲಿ ಹೊಸ ಆಳುವಿಕೆಯನ್ನು ಸಂಸ್ಥಾಪಿಸುವುದು ಎಂದೇ ಅರ್ಥೈಸಿದ್ದಾರೆ. ಅಂತೆಯೇ, ಸುಧಾರಣೆಗಳು ಗುಣಾತ್ಮಕ ಬದಲಾವಣೆಗಳನ್ನು ತರಲಾರವು ಎಂಬುದನ್ನು ಅವರು ಒಪ್ಪಿಕೊಂಡಂತೆ ತೋರುವುದಿಲ್ಲ. ಆದ್ದರಿಂದ ಅವರ ದೃಷ್ಟಿಯಲ್ಲಿ ಕ್ರಾಂತಿಯೆಂದರೆ, ಒಂದು ದೊಡ್ಡ ಆಸ್ಫೋಟದ ರೀತಿಯಲ್ಲಿ ನವೋನವೀನವಾದ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವುದು. ಬಾಬಾ ಸಾಹೇಬರು ತಮ್ಮ ಸ್ವಂತ ಕೃತಿ ಬಗ್ಗೆ ಏನೇ ಹೇಳಿರಲಿ, ಕ್ರಾಂತಿ ಯಾವಾಗಲೂ ದೊಡ್ಡ ಆಸ್ಫೋಟದ ರೀತಿಯಲ್ಲಿ ನಡೆಯಲಾರದು. ನಿಜವೆಂದರೆ, ಕ್ರಾಂತಿಯೆಂಬುದು ಒಂದು ಕಾಲಬಿಂದುವಿನಲ್ಲಿ ಕಾಣಿಸಿಕೊಳ್ಳುವ ಕ್ರಿಯೆಯಲ್ಲ, ಒಂದು ಯಃಕಶ್ಚಿತ್ ಘಟನೆಯೂ ಅಲ್ಲ. ಅದು ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ, ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಕ್ರಾಂತಿ ಒಂದು ಬಿಂದುವಲ್ಲ, ಒಂದು ಗೆರೆ. ಆದರೆ ಜನಸಾಮಾನ್ಯರು ಅದನ್ನು ತಪ್ಪಾಗಿ ಭಾವಿಸಿದ್ದಾರೆ. ಆದ್ದರಿಂದ ಅದರ ಕುರಿತ ಅವರ ಪರಿಕಲ್ಪನೆಯು ದೋಷಯುತವಾದದ್ದು. ಮಾವೋತ್ಸೆತುಂಗನ ಕಾರ್ಮಿಕ ವರ್ಗದ ಸಾಂಸ್ಕೃತಿಕ ಮಹಾಕ್ರಾಂತಿ ಇದಕ್ಕೆ ಒಂದು ಒಳ್ಳೆಯ ನಿದರ್ಶನ. ಅನೇಕ ಚಿಕ್ಕಪುಟ್ಟ ಘಟನೆಗಳು ಒಂದರೊಡನೆ ಒಂದು ಹೆಣೆದುಕೊಂಡು ತಮ್ಮ ಉದ್ದೇಶಿತ ಶಕ್ತಿ ಸಂಚಯಿಸಿಕೊಳ್ಳುತ್ತ ಒಂದು ಘಟ್ಟ ಮುಟ್ಟಿದೊಡನೆಯೇ ಸಮಾಜವನ್ನು ಗುಣಾತ್ಮಕವಾಗಿ ದಿಢೀರನೆ ಮೇಲೆತ್ತಬಲ್ಲವು, ಪ್ರಗತಿಯ ಏಣಿಯ ಮೇಲೆ ಒಂದು ಮೆಟ್ಟಿಲಿನಿಂದ ಮತ್ತೊಂದಕ್ಕೆ ನೆಗೆಯಬಲ್ಲವು. ಇಂತಹ ಸಂಚಿತ ಶಕ್ತಿಯ ಮುನ್ನಗೆತವೇ ಕ್ರಾಂತಿ. ಇಂತು ಕಾಣಿಸಿಕೊಳ್ಳುವ ಬದಲಾವಣೆ ಒಂದು ಕ್ಷಣದಲ್ಲಿ ನಡೆದರೂ ಅದನ್ನು ಪ್ರೇರೇಪಿಸಿದ ಪ್ರಕ್ರಿಯೆ ದೀರ್ಘ ಕಾಲದುದ್ದಕ್ಕೂ ನಡೆದು ಬಂದಿರುತ್ತದೆ. ಒಂದು ಕ್ಷಣದಲ್ಲಿ ಕಾಣಿಸಿಕೊಳ್ಳುವ ಆಸ್ಫೋಟದ ರೀತಿಯ ಬದಲಾವಣೆಯಷ್ಟೇ ಕ್ರಾಂತಿ ಎನಿಸಿಕೊಳ್ಳಲಾರದು.

ಚರಿತ್ರೆಯ ನಿರ್ದಿಷ್ಟವಾದ ಘಟ್ಟ ತನ್ನೊಳಗೆ ಗರ್ಭೀಕರಿಸಿಕೊಳ್ಳಬಹುದಾದ ಬದಲಾವಣೆಗಳ ಮೇಲೆ ಅನೇಕ ಮಿತಿಗಳನ್ನು ಹೇರುತ್ತದೆ. ಬದಲಾವಣೆಗೆ ಪಕ್ಕಾದ, ಅರ್ಹವಾದ ಸಂಗತಿಗಳು ಚರಿತ್ರೆಯ ಗರ್ಭ ಸೇರಿ ವಿವಿಧ ರೀತಿಯ ಸಂಯೋಜನೆ, ಸಂಕಲನಗೊಂಡು ಉಮ್ಮಳಿಸಿ ಹೊರಬೀಳುತ್ತವೆ. ಅದೇ ಕ್ರಾಂತಿ, ಪ್ರಾಚೀನ ಗುಲಾಮಿ ವ್ಯವಸ್ಥೆಯಲ್ಲಿ ಒಬ್ಬ ಸಮಾಜವಾದಿ ಕ್ರಾಂತಿಯ ಬಗ್ಗೆ ಕನಸು ಕಾಣುತ್ತಿದ್ದರೆ, ಅದು ಅವನ ಹಗಲುಗನಸಾಗಿ ಮಾತ್ರ ಪರಿಣಮಿಸಬಲ್ಲದು, ಒಂದು ರೀತಿಯ ರೋಮ್ಯಾಂಟಿಕ್ ಕಲ್ಪನೆಯಾಗಬಲ್ಲದೇ ವಿನಾ ಕ್ರಾಂತಿಯಾಗಲಾರದು. ಹಾಗೆಯೇ ಒಂದು ಕ್ರಾಂತಿ ಘಟಿಸುವುದಕ್ಕಿಂತ ಮುಂಚೆ ಅನೇಕ ಪರಿಮಾಣಾತ್ಮಕ ಸಿದ್ಧತೆಗಳು ನಡೆಯಬೇಕಾಗುತ್ತದೆ. ಒಂದು ಕ್ರಾಂತಿಯ ಯೋಜನೆ ಸಫಲವಾಗಲು ನಿರ್ದಿಷ್ಟವಾದ ಚಾರಿತ್ರಿಕ ಘಟ್ಟದಲ್ಲಿ ಅನೇಕ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಕ್ರಾಂತಿಯ ಕುರಿತು ಜಿಜ್ಞಾಸೆ ನಡೆಸುವಾಗಲೆಲ್ಲ ಅಂಬೇಡ್ಕರರು ಹೆಚ್ಚಾಗಿ ಈ ಎಲ್ಲ ವಿಧದ ಕಾಳಜಿಗಳನ್ನು ಬಿಂಬಿಸುತ್ತಾರೆ. ಅಂದಿನ ಭಾರತೀಯ ಸಂದರ್ಭ ಕ್ರಾಂತಿಕಾರಿ ಬದಲಾವಣೆಗೆ ಪಕ್ವವಾಗಿರಲಿಲ್ಲವೆಂದು ಅವರು ನಂಬಿದ್ದರು. ಅವರ ಪ್ರಕಾರ ಜಾತಿಯ ಸಮಸ್ಯೆಯನ್ನು ಪರಿಹರಿಸದೆ ಇಲ್ಲಿ ಕಾಣಿಸಿಕೊಳ್ಳುವ ಯಾವುದೇ ಬದಲಾವಣೆ ದಲಿತರಿಗೆ ತುಂಬಾ ಅಪಾಯಕಾರಿಯಾಗಿರುವುದಲ್ಲದೆ ಅದು ಅಷ್ಟೇ ಅಲ್ಪಾಯುಷಿಯೂ ಆಗಿರುತ್ತಿತ್ತು.

ಸಮಕಾಲೀನ ಸಾಮಾಜಿಕ ಪರಿಸ್ಥಿತಿ ಮತ್ತು ಅದರ ಸ್ಥಿತ್ಯಂತರದ ಸಾಮಾಜಿಕ ಸಂದರ್ಭದಲ್ಲಿಯೇ ಬಾಬಾ ಸಾಹೇಬರ ಸಾಧನೆಯ ಹಿರಿಮೆ ಗರಿಮೆಯನ್ನು ಅಳೆಯಬಹುದು. ಅದರ ಮಹತ್ವವನ್ನು ಅರಿತುಕೊಳ್ಳಬಹುದು. ಭಾರತೀಯ ಸಮಾಜ ಒಂದು ವಿಶಿಷ್ಟ ಪಾಳೇಗಾರಿಕೆ ವ್ಯವಸ್ಥೆಯ ಹೆಣಭಾರ ಹೊತ್ತೇ ಹೊರಟಿದೆ. ಅದರ ಪ್ರಧಾನ ಲಕ್ಷಣ ಜಾತಿ ಪದ್ಧತಿ ಈ ಜಾತಿ ಶೇಕಡಾ ಹದಿನೈದರಷ್ಟು ಜನಪದರನ್ನು ಹೆಳವರನ್ನಾಗಿ ಮಾಡಿದೆ. ಅವರ ಶಕ್ತಿ ಸಾಮರ್ಥ್ಯ ಕುಸಿದು, ಅಸಹಾಯಕರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಸಾಮಾಜಿಕ ಶ್ರೇಣಿಯ ತಳಕ್ಕೆ ತುಳಿದು ಪಶು ಸದೃಶವಾದ ದಾರುಣ ಸ್ಥಿತಿಗೆ ಹೂಡಿದೆ. ಇನ್ನುಳಿದ ಜನಸಂಖ್ಯೆಯ ಹೆಚ್ಚಿನ ಭಾಗದವರು ಒಂದಿಲ್ಲೊಂದು ವಿಧದ ಅವಮಾನವನ್ನು ಅನುಭವಿಸುತ್ತಲೇ ಬಂದಿದ್ದಾರೆ. ಯಾವುದೋ ಒಂದು ಕಾಲದಲ್ಲಿ ಸಕಾರಣವಾಗಿಯೇ ಅಸ್ತಿತ್ವಕ್ಕೆ ಬಂದಿರಬಹುದಾದ ಶ್ರೇಣೀಕೃತ ಸಾಮಾಜಿಕ ವಿಭಜನೆ ಎಂದೋ ನಶಿಸಿಹೋಗಬೇಕಾಗಿತ್ತು. ಆದರೆ ಅದು ಇವತ್ತಿಗೂ ಉಳಿದುಕೊಂಡು ಬಂದಿರುವುದರಿಂದ ಆ ಸತ್ತ ವ್ಯವಸ್ಥೆಯ ಹೆಣ ಗಬ್ಬೆದ್ದು ನಾರುತ್ತಿದೆ. ಪರಿಣಾಮವಾಗಿ, ಭಾರತೀಯ ಸಮಾಜ ಶತಮಾನಗಳುದ್ದಕ್ಕೂ ತನ್ನ ಗತಿಶೀಲತೆಯನ್ನು ಕಳೆದುಕೊಂಡು ಪಳೆಯುಳಿಕೆಯಾಗಿ ಬಿಟ್ಟಿದೆ. ವಾಸ್ತವವಾಗಿ, ಈ ಜಾತಿ ವ್ಯವಸ್ಥೆ ಕೆಲವೇ ಜನರ ಭೌತಿಕ ಅವಶ್ಯಕತೆಗಳನ್ನು ಪೂರೈಸುತ್ತ ಅವರ ಹಿತಾಸಕ್ತಿಯನ್ನು ಮಾತ್ರ ಕಾಯುತ್ತಿದೆಯಾದರೂ ಅದರ ಶ್ರೇಣಿಕೃತ ರಚನೆಯಿಂದಾಗಿ ಕೆಳಗಿನಿಂದ ಮೇಲಿನವರೆಗೆ ಪ್ರತಿಯೊಂದು ಮೆಟ್ಟಿಲಿನ ಮೇಲಿನವರೂ ವ್ಯವಸ್ಥೆಯಲ್ಲಿ ತಮ್ಮದೇ ಆದ ಹಿತ ಕಾಣುತ್ತಿದ್ದಾರೆ. ಅದನ್ನೊಂದು ದೈವ ಪ್ರಣೀತ ಧರ್ಮವೆಂಬಂತೆ ಅಂತರ್ಗತಗೊಳಿಸಿಕೊಂಡು ಅತ್ಯಂತ ಭಕ್ತಿ ಆಸಕ್ತಿಗಳಿಂದ ಆಚರಿಸುತ್ತಿದ್ದಾರೆ.

ಬಹುಶಃ ಇದಕ್ಕೆ ಅಪವಾದವೆಂದರೆ ದಲಿತರು. ಏಕೆಂದರೆ, ಈ ಶ್ರೇಣೀಕೃತ ಜಾತಿವ್ಯವಸ್ಥೆಯ ಏಣಿಯ ಅತ್ಯಂತ ಕೆಳಗಿನ ಮೆಟ್ಟಿಲಿನ ಮೇಲಿರುವ ಅವರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ಆಸಕ್ತಿ ಇರಲು ಸಾಧ್ಯವಿಲ್ಲ. ಈ ವ್ಯವಸ್ಥೆ ಅವರಿಗೆ ಏನನ್ನೂ ಕೊಡಲಾರದು. ಅದರಲ್ಲಿಯೂ ವಿಶೇಷವಾಗಿ, ದಲಿತರಲ್ಲಿಯೇ ಇನ್ನೂ ಕೆಳಹಂತದಲ್ಲಿದ್ದ, ಮಾಡಲು ಯಾವುದೇ ಜಾತಿಯಾಧಾರಿತ ನಿರ್ದಿಷ್ಟ ವೃತ್ತಿ ಇಲ್ಲದ ಕೆಲವರು ಮಾತ್ರ ಈ ಜಾತಿವ್ಯವಸ್ಥೆಯಿಂದ ವಿಮುಖಗೊಳ್ಳಲು ಸಾಧ್ಯವಾಯಿತು. ಪರಿಣಾಮವಾಗಿ, ಅವರು ಆಧುನಿಕ ನಗರ ಬದುಕಿನ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಸಾಧ್ಯತೆ ಕೈಗೂಡಿತು. ಹಾಗಾಗಿ ಅವರು ಬ್ರಾಹ್ಮಣರ ಅಧಿನಾಯಕತ್ವದಿಂದ ತಪ್ಪಿಸಿಕೊಂಡು ಇಡೀ ವ್ಯವಸ್ಥೆಗೆ ಒಂದು ಸವಾಲಾಗಿ ಮಾರ್ಪಟ್ಟರು. ಆದರೆ ದಲಿತರ ಒಳಗೂ ಇರುವ ಜಾತಿಯ ಶ್ರೇಣಿ ಅವರು ನಗರಗಳ ಸಂದರ್ಭದಲ್ಲಿಯೂ ಒಟ್ಟುಗೂಡುವುದಕ್ಕೆ ಅಡ್ಡಿಯಾಯಿತು. ಪರಿಣಾಮ ಆ ಸವಾಲು ಜಾತಿ ಜಾತಿಗಳ ವಿಭಿನ್ನ ಅಭಿವ್ಯಕ್ತಿಯಾಗಿ ಕಾಣಿಸಿಕೊಂಡಿತು. ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಕ್ರಮೇಣ ಬೇರು ಬಿಟ್ಟ ಬಂಡವಾಳಶಾಹಿಗಳು ಇಲ್ಲಿಯ ಜಾತಿವ್ಯವಸ್ಥೆಯೊಂದಿಗೆ ಸಂಧಾನ ಮಾಡಿಕೊಂಡರು. ಭಾರತದಲ್ಲಿ ಬಂಡವಾಳ ವ್ಯವಸ್ಥೆಯ ಹರಿಕಾರರಾಗಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಈ ಮಾತಿಗೆ ಹೊರತಾಗಿರಲಿಲ್ಲ. ಈ ಎಲ್ಲ ಚಾರಿತ್ರಿಕ ಸಂಗತಿಗಳ ಹಿನ್ನೆಲೆಯಲ್ಲಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಟದ ಒಂದು ಮಾದರಿಯನ್ನು ಕಲ್ಪಿಸಿಕೊಳ್ಳುವುದೇ ಕಠಿಣವಾಗಿದೆ. ಮೇಲಾಗಿ, ಅಂಥ ಹೋರಾಟವೊಂದನ್ನು ಕಟ್ಟುವ ಕೆಲಸ ಇನ್ನೂ ದುಸ್ತರವಾದದ್ದು. ವಸಾಹತುಶಾಹಿ ಕಾಲದಲ್ಲಿ ಅನೇಕ ಕಾರಣಗಳಿಂದಾಗಿ ಇಂಥ ಹೋರಾಟಗಳು ಹೆಚ್ಚಾದ ಮಹಾರಾಷ್ಟ್ರ ಮತ್ತು ದಕ್ಷಿಣದ ಪ್ರಾಂತಗಳಲ್ಲೇ ಕಾಣಿಸಿಕೊಂಡವು. ಏಕೆಂದರೆ, ಇಲ್ಲಿಯ ಸಾಮಾಜಿಕ ರಚನೆ ಉಳಿದೆಡೆಗಿಂತ ಹೆಚ್ಚು ತೀಕ್ಷ್ಣವಾದ ತಾರತಮ್ಯವನ್ನು ಪ್ರತಿಬಿಂಬಿಸುತ್ತಿತ್ತು. ಅಂದರೆ ದೇಶದ ಈ ಭಾಗಗಳಲ್ಲಿ ದಲಿತರ ಮತ್ತು ದಲಿತೇತರ ನಡುವಿನ ಬಿರುಕು ಬಹು ದೊಡ್ಡದಾಗಿತ್ತು. ಕಾರಣ, ಈ ಸಾಮಾಜಿಕ ವಿಭಾಗಗಳ ದೃಡೀಕರಣ ತುಂಬಾ ತೀಕ್ಷ್ಣವಾಗಿತ್ತು. ಭಾರತದ ಸಾಮಾಜಿಕ, ರಾಜಕೀಯ ಕ್ಷಿತಿಜದಲ್ಲಿ ಬಾಬಾ ಸಾಹೇಬರ ಪ್ರವೇಶ ಈ ಧೃವೀಕರಣದ ಉತ್ತುಂಗವೆನ್ನಬಹುದು. ಅವರ ನೇತೃತ್ವದಲ್ಲಿ ಹುರಿಗೊಂಡ ಹೋರಾಟ ಏಕಕಾಲಕ್ಕೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಎರಡರ ಮೇಲೂ ತನ್ನ ದಾಳಿ ಇಟ್ಟಿತು. ಪರಸ್ಪರ ಸಖ್ಯತೆ ಇದ್ದ ಆ ಎರಡೂ ಶಕ್ತಿಗಳನ್ನು ಸಮಸಮನಾಗಿ ಎದುರಿಸುತ್ತ ದಲಿತರ ಸಂಘಟನೆಯ ಮೇಲೆ ತನ್ನ ಗಮನ ಕೇಂದ್ರೀಕರಿಸಿತು. ತನ್ನ ವಿಶಾಲವಾದ ಛತ್ರದಡಿ ಎಲ್ಲ ಪ್ರಗತಿಪರ ಶಕ್ತಿಗಳು ಮೇಳೈಸಲು ಅವಕಾಶ ಮಾಡಿಕೊಟ್ಟಿತ್ತು. ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ನೆಲೆಯ ಮೇಲೆ ಹೊಸ ಸಮಾಜವೊಂದನ್ನು ಕಟ್ಟುವ ಇಂತಹ ಗುರಿಯೊಂದಿಗೆ ಜಾತಿವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಕರೆ ಕೊಟ್ಟಿತ್ತು. ಜಾತಿವ್ಯವಸ್ಥೆಯ ಮೂಲೋತ್ಪಾದನೆಗೆ ರಣಕಹಳೆ ಮೊಳಗಿಸಿತು.

ಈ ಹೋರಾಟ, ಭಾರತೀಯ ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸಬೇಕಾಗಿದ್ದ ವಿಶಿಷ್ಟ ಚಾರಿತ್ರಿಕ ಅವಕಾಶವನ್ನು ಪ್ರತಿಬಿಂಬಿಸಿತು. ಹಾಗೆ ಮಾಡದ ವಿನಾ ಇಲ್ಲಿಯ ಉತ್ಪಾದನಾ ಶಕ್ತಿಗಳು ತಮ್ಮ ಗತಿ ಕಳೆದುಕೊಂಡು ಸ್ಥಿತಿಗೊಂಡು ಸಾಯುವುದು, ಖಂಡಿತವಾಗಿತ್ತು. ಈ ಕೆಲಸ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತುಂಬಾ ದೊಡ್ಡದಾದ ಜವಾಬ್ದಾರಿ ಹೊರಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಅದಕ್ಕೆ ಒಂದು ರಾಜಕೀಯ ಆಯಾಮ ಕಲ್ಪಿಸಿಕೊಟ್ಟ ಕೀರ್ತಿ ಅಂಬೇಡ್ಕರರಿಗೆ ಸಲ್ಲಬೇಕು. ಅವರ ಪ್ರಗಲ್ಭ ಪಾಂಡಿತ್ಯ, ಹರಿತವಾದ ಬುದ್ಧಿ ಮತ್ತು ಸಮುಚಿತ ಮುತ್ಸದ್ದಿತನ ಈ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಿದವು. ಆದರೂ ಅವರ ಹೋರಾಟ ಸುಧಾರಣೆಯ ಮಾರ್ಗ ಮಾತ್ರ ಅನುಸರಿಸಬೇಕಾಯಿತು. ಕಮ್ಯನಿಸ್ಟರ ಕ್ರಾಂತಿಯ ಕುರಿತ ಮಾತುಗಳು ಅಕಾಲಿಕವೆಂದು ಅವರು ಮನಗಂಡಿದ್ದರು. ಯಾಕೆಂದರೆ, ಭಾರತದಲ್ಲಿ ಕ್ರಾಂತಿಕಾರಿ ಪ್ರಕ್ರಿಯೆಗೆ ಆಗ ಇನ್ನೂ ಕಾಲ ಪಕ್ವವಾಗಿರಲಿಲ್ಲವೆನ್ನುವುದು ಅವರ ಅನಿಸಿಕೆಯಾಗಿತ್ತು. ಚಾರಿತ್ರಿಕ ಭೌತವಾದದ ತತ್ವಗಳನ್ನು ಅವರು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಅದು ಮಾನವನ ಚತುರತೆಯನ್ನು ಅಲ್ಲಗಳೆಯುವುದಲ್ಲದೆ, ಅವನ ಚಟುವಟಿಕೆಗಳನ್ನು ಒಂದು ಪೂರ್ವ ನಿರ್ಧಾರಿತ ಮಾರ್ಗದಲ್ಲಿ ನಿರ್ದೇಶಿಸುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಭಾರತದಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿದ್ದ ಜಾತಿವ್ಯವಸ್ಥೆಯ ಕಾರಣದಿಂದಾಗಿ, ವರ್ಗಪ್ರಜ್ಞೆ ಮೊಳಕೆ ಒಡೆಯಲು ನೆಲ ಅನುಕೂಲಕರವಾಗಿಲ್ಲ ಎಂದು ವಾದಿಸಿದರು. ಆದ್ದರಿಂದ ಅವರ ಕ್ರಾಂತಿಕಾರಿ ಕಾರ್ಯಕ್ರಮದ ಪಟ್ಟಿಯಲ್ಲಿ ಜಾತಿ ವಿನಾಶದ ಜವಾಬ್ದಾರಿ ಪ್ರಪ್ರಥಮ ಸ್ಥಾನ ಪಡೆದಿತ್ತು. ದುಃಖದ ಸಂಗತಿಯೆಂದರೆ, ಅನೇಕ ಕಮ್ಯನಿಸ್ಟ್ ಕ್ರಾಂತಿಕಾರಿಗಳು ಬಾಬಾ ಸಾಹೇಬರ ಕಾರ್ಯಧೋರಣೆಯ ಬಗ್ಗೆ ತಮ್ಮ ಹಳೆಯ ಹಾಡನ್ನೆ ಇವತ್ತಿಗೂ ಗಳಪುತ್ತಿದ್ದಾರೆ. ಹಿಂದೆ ಅವರ ಪೂರ್ವಿಕರು ಸಿದ್ಧಪಡಿಸಿದ ಪಾಶ್ಚಿಮಾತ್ಯ ಸಿದ್ಧಾಂತಗಳನ್ನೇ ತುಸು ತುಸು ತಿನ್ನುತ್ತ ತಿಂದುದ್ದನ್ನೆ ಮೆಲುಕು ಹಾಕುತ್ತಿದ್ದಾರೆ.

ಜಾತಿವ್ಯವಸ್ಥೆಯ ವಿರುದ್ಧ ನಡೆಯುವ ಎಲ್ಲ ಹೋರಾಟಗಳು ಭಾರತೀಯ ಸಮಾಜವನ್ನು ಪ್ರಜಾಸತ್ತಾತ್ಮಕ ದಾರಿಯಲ್ಲಿ ಕೊಂಡೊಯ್ಯುಬಲ್ಲವು. ಮುಂದೊಂದು ದಿನ ಅವೇ ಭಾರತದ ದೇಶಿ ಕ್ರಾಂತಿಕಾರಿ ಚಳುವಳಿಯಾಗಿ ಮಾರ್ಪಡಬಲ್ಲವು ಎಂದು ಆಶಿಸಲಾಗಿದೆ. ಅಲ್ಲಿಯವರೆಗೆ ಜಾತಿವ್ಯವಸ್ಥೆಯ ವಿರುದ್ಧದ ಹೋರಾಟದಂಥ ಚಾರಿತ್ರಿಕ ಕೆಲಸವನ್ನು ಸುಧಾರಣೆಯೇ ಅಥವಾ ಕ್ರಾಂತಿ ಎಂದು ವಾದ ವಿವಾದಕ್ಕಿಳಿಯುವುದು ಅರ್ಥವಿಲ್ಲದ್ದು. ಯಾಕೆಂದರೆ, ನಾವು ಗಮನಿಸಬೇಕಾದದ್ದು ನಮ್ಮ ಮಾತಿನ ಹೂರಣವೇ ವಿನಾ ವ್ಯಾಕರಣವಲ್ಲ. ಇನ್ನೂ ದುರ್ದೈವದ ಸಂಗತಿಯೆಂದರೆ, ಅಂಬೇಡ್ಕರವಾದಿ ದಲಿತರು ಈ ಚಾರಿತ್ರಿಕ ಕಾಣಿಕೆಯ ಕೀರ್ತಿಗೆ ಬೆನ್ನು ತಿರುಗಿಸಿ ಕ್ರಾಂತಿಕಾರಿ ಕಾರ‍್ಯಕ್ರಮದಿಂದ ತಮ್ಮನ್ನು ತಾವು ಪರಭಾರೆಗೊಳಿಸಿಕೊಳ್ಳುತ್ತಿದ್ದಾರೆ. ಕ್ರಾಂತಿಕಾರಿ ಕಾರ‍್ಯಕ್ರಮ ತಮ್ಮದಲ್ಲವೆಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಹಾಗೆ ಪರಿಣಾಮತಃ ಕ್ರಾಂತಿಕಾರಿ ಪ್ರಕ್ರಿಯೆಗೆ ತಮ್ಮದೇ ಆದ ಕಾಣಿಕೆ ನೀಡುವ ಚಾರಿತ್ರಿಕ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಂತಿಮ ವಿಮೋಚನೆಯನ್ನೂ ತಡೆಗಟ್ಟುತ್ತಿದ್ದಾರೆ.

ಕ್ರಾಂತಿಗೆ ಸಂಬಂಧಿಸಿದಂತೆ ದಲಿತರು ತಮ್ಮ ನಿಲುವಿನ ಬಗ್ಗೆ ಪುನರ್ ಚಿಂತಿಸಬೇಕಾಗಿದೆ. ಬಾಬಾ ಸಾಹೇಬರ ಕನಸಿನ ಸಮಾಜ ಅಂದರೆ, ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದಿಂದ ಕೂಡಿದ ಸಮಬಾಳು, ಸಮಪಾಲು ಕಲ್ಪಿಸಿಕೊಡಬಹುದಾದ ಸಮಾಜದ ರಚನೆ ಕ್ರಾಂತಿಯಿಂದಲ್ಲದೆ ಬೇರೆ ಯಾವ ಮಾರ್ಗದ ಮೂಲಕವೂ ಸಾಧ್ಯವಿಲ್ಲ. ಆದ್ದರಿಂದ ದಲಿತರು ಬಾಬಾಸಾಹೇಬರ ಬದುಕು ಮತ್ತು ಸಾಧನೆಯನ್ನು ಈ ದೃಷ್ಟಿಯಿಂದಲೇ ಬಗೆಯಬೇಕಾಗಿದೆ. ಭಾರತದ ಸಾಮಾಜಿಕ ವಾಸ್ತವವನ್ನು ಸ್ವತಂತ್ರವಾಗಿ ಗ್ರಹಿಸಿ ಅದರ ದ್ವಂದ್ವ, ವೈರುಧ್ಯಗಳನ್ನು ಪರಿಹರಿಸಲು ಅವರು ನೀಡಿದ ಕಾಣಿಕೆಯೇ ಭಾರತೀಯ ಕ್ರಾಂತಿಗೆ ಅವರು ಕೊಟ್ಟ ಕೊಡುಗೆಯಾಗಿದೆ. ಭಾರತದಲ್ಲಿ ಕಾಣಿಸಿಕೊಂಡ ಪ್ರತಿಯೊಬ್ಬ ಕ್ರಾಂತಿಕಾರಿಯ ಮುಂದೆಯೂ ಭಾರತೀಯ ಚರಿತ್ರೆ ತನ್ನ ಮಡುವುಗಟ್ಟಿದ್ದ ಪಾಳೆಗಾರಿಕೆ ವ್ಯವಸ್ಥೆಯ ಸವಾಲನ್ನು ಒಡ್ಡುತ್ತಲೇ ಬಂದಿದೆ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅದರಿಂದ ತಪ್ಪಿಸಿಕೊಳ್ಳುತ್ತ ಬಂದಿದ್ದಾರೆ. ಆರಂಭದಲ್ಲಿ ಅದೊಂದು ಮೇಲ್ ರಚನೆ, ಮೂಲರಚನೆ ಕ್ರಾಂತಿಕಾರಿ ರೀತಿಯಲ್ಲಿ ಬದಲಾದೊಡನೆಯೇ ಅದು ತನ್ನಷ್ಟಕ್ಕೆ ತಾನು ಕಾಣೆಯಾಗುತ್ತದೆ ಎಂದು ವಾದಿಸಿದರೆ, ಈಗ ಏಳು ದಶಕಗಳ ನಂತರ ಅದು ಮೇಲ್ ರಚನೆ ಮತ್ತು ಮೂಲರಚನೆ ಎರಡಕ್ಕೂ ಸಂಬಂಧಿಸಿದ ಸಮಸ್ಯೆಯಾಗಿದೆ ಎಂದೂ ಒಂದು ಕ್ರಾಂತಿಕಾರಿ ಚಟುವಟಿಕೆಯ ಮೂಲಕ ಮಾತ್ರ ಅದನ್ನು ಪರಿಹರಿಸಬಹುದೆಂದು ವಾದಿಸಲಾಗುತ್ತಿದೆ. ಏನಿದ್ದರೂ ಈ ಜಾತಿಯ ಭೂತದ ಕುತ್ತಿಗೆ ಹಿಡಿಯಲು ಅವಶ್ಯವಿರುವ ಸ್ಪಷ್ಟತೆ ಮತ್ತು ಧೈರ್ಯ ಇನ್ನೂ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಅಂಬೇಡ್ಕರರಿಗೆ ಯಾವುದೇ ಗೊಂದಲಗಳಿರಲಿಲ್ಲ. ಹಾಗೆಂದೇ ಅವರು ಸಮಸ್ಯೆಗಳನ್ನು ಸಮ್ಮಿಶ್ರಗೊಳಿಸುತ್ತಿರಲಿಲ್ಲ. ಯಾವುದೇ ಕ್ರಾಂತಿಯನ್ನು ಕೈಗೆತ್ತಿಕೊಳ್ಳುವುದಕ್ಕಿಂತ ಮುಂಚೆ ಜಾತಿವಿನಾಶಕ್ಕಾಗಿ ಪ್ರಜ್ಞಾಪೂರ್ವಕ ಕ್ರಮ ಜಾತಿವ್ಯವಸ್ಥೆಯ ಸಾಂಸ್ಥಿಕ ಬುನಾದಿ ಗ್ರಾಮಾಂತರ ಭಾರತದಲ್ಲಿದೆಯೆಂದು ಗುರುತಿಸಿದ್ದರು. ಭಾರತದಾದ್ಯಂತ ಪಸರಿಸಿರುವ ಲಕ್ಷಾವಧಿ ಹಳ್ಳಿಗಳಲ್ಲಿ ಕಾಣಸಿಗುವ ಭೂ ಸಂಬಂಧಗಳು ಮತ್ತು ಜಾತಿಯಾಧಾರಿತ ಶ್ರಮವಿಭಜನೆಯೇ ಅದರ ಆರ್ಥಿಕ ಬೆಂಬಲಕ್ಕೆ ನಿಂತಿರುವ ಸೂಕ್ಷ್ಮವನ್ನು ಬಯಲಿಗೆಳೆದರು. ಆದರೆ ಉಳುವವನಿಗೆ ಭೂಮಿಯೆಂದು ಘೋಷಿಸಿದ ಕಮ್ಯುನಿಸ್ಟ್‌ರ ಭೂಸುಧಾರಣೆ ಬಗ್ಗೆ ಅವರಿಗೆ ನಂಬುಗೆ ಇರಲಿಲ್ಲ. ಯಾಕೆಂದರೆ, ಭಾರತದ ಪ್ರತಿಯೊಬ್ಬ ಭೂಹೀನನಿಗೂ ಭೂಮಿ ಒದಗಿಸಿ ಕೊಡುವುದು ಆ ಮೂಲಕ ಅವನ ಭೂಹಸಿವನ್ನು ಹಿಂಗಿಸುವುದು ಸಾಧ್ಯವಿಲ್ಲ. ಎರಡನೆಯದಾಗಿ, ಭೂಹೀನ ಸಣ್ಣ ರೈತರಿಗೆ ಒಂದಿಷ್ಟು ಭೂಮಿ ಕೊಡಲಿದ್ದ ಭೂಸುಧಾರಣಾ ಕ್ರಮಗಳಿಂದ ದಲಿತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಮೂರನೆಯದಾಗಿ, ನಿರೀಕ್ಷೆಗೆ ವ್ಯತಿರಿಕ್ತವಾಗಿ ಭೂಸುಧಾರಣೆಗಳು ಜಾತಿಸಮಸ್ಯೆಯನ್ನು ಇನ್ನೂ ಉಲ್ಬಣಗೊಳಿಸುತ್ತವೆ. ಇತ್ತೀಚಿನ ಅಂಕಿಸಂಖ್ಯೆಗಳು ಇದನ್ನು ನಿಸ್ಸಂಶಯವಾಗಿ ತೋರಿಸಿಕೊಟ್ಟಿವೆ ಇತ್ಯಾದಿ ಕಾರಣಗಳಿಂದಾಗಿ ಕಮ್ಯುನಿಸ್ಟ್‌ರೊಂದಿಗೆ ಅವರು ಭಿನ್ನಮತ ಹೊಂದಿದ್ದರು. ಹಾಗಾಗಿ, ಭೂಸುಧಾರಣೆ ಕ್ರಮದ ಬದಲು ಭೂಮಿಯನ್ನು ರಾಷ್ಟ್ರೀಕರಿಸುವ, ಸಹಕಾರಿ ಕೃಷಿ ಕ್ಷೇತ್ರವನ್ನು ವಿಸ್ತರಿಸುವ ಪ್ರಸ್ತಾವನೆಗಳನ್ನು ಮಂಡಿಸಿದರು. ಗಮನಾರ್ಹ ಸಂಖ್ಯೆಯ ದಲಿತ ಜನತೆಯನ್ನು ಗ್ರಾಮಾಂತರದಿಂದ ಹೊರ ತೊಗೆದು ಅವರನ್ನು ನಗರ, ಪಟ್ಟಣಗಳಲ್ಲಿಯ ಔದ್ಯಮಿಕ ಕ್ಷೇತ್ರದಲ್ಲಿ ಮುಖ್ಯವಾಗಿ ಸಾರ್ವಜನಿಕ ಉದ್ಯಮರಂಗದಲ್ಲಿ ತೊಡಗಿಸಬೇಕಾದುದ್ದರ ಅವಶ್ಯಕತೆಯನ್ನು ಮನಗಂಡಿದ್ದರು. ಈಗ ಹಿಂತಿರುಗಿ ನೋಡಿದರೆ, ಕೊನೆಯಪಕ್ಷ ಈ ಅಂಶಗಳಾದರೂ ಪ್ರಜಾಸತ್ತಾತ್ಮಕ ಕ್ರಾಂತಿಯ ಒಂದು ಕಾರ್ಯಸಾಧು ಯೋಜನೆಯನ್ನು ಸಾಂಗಗೊಳಿಸಬಹುದಾಗಿದ್ದವು. ೧೯೯೫ರಲ್ಲಿ ಒಬ್ಬ ಎಡವಾದಿ ವಿದ್ವಾಂಸ ತುಂಬಾ ಸೂಕ್ಷ್ಮವಾಗಿ ಮಂಡಿಸಿದಂತೆ, ಜಾತಿವಿನಾಶದ ಪ್ರಶ್ನೆಯನ್ನು ಸ್ವತಂತ್ರವಾಗಿ ಪರಿಭಾವಿಸಿ, ಅದನ್ನು ಭೂಸಮಸ್ಯೆಯೊಂದಿಗೆ ಜೋಡಿಸಿದ್ದ ಅಂಬೇಡ್ಕರರನ್ನು ಜನತೆಯ ಪ್ರಜಾಸತ್ತಾತ್ಮಕ ಕ್ರಾಂತಿಯ ದೀಪಧಾರಿಯೆಂದು ಯಾವ ಅಳುಕಿಲ್ಲದೆ ಕರೆಯಬಹುದು.