ದಲಿತರ ಆಂದೋಲನಕ್ಕಾಗಿ ಅಂಬೇಡ್ಕರ್

ದಲಿತರ ಆಂದೋಲನಕ್ಕಾಗಿ ನಿಲ್ಲುವ ಅಂಬೇಡ್ಕರ್ ರನ್ನು ದುರ್ದೈವವಶಾತ್ ಅವರ ಸುತ್ತ ಆವರಿಸಿರುವ ಪಂಥವಾದೀ ದೃಷ್ಟಿಕೋನಗಳಿಂದ ದೂರ ಮಾಡಬೇಕಾಗುತ್ತದೆ. ಮುಖ್ಯವಾಗಿ ಅಂಬೇಡ್ಕರರು ಒಬ್ಬ ಮೂರ್ತಿಭಂಜಕರಾಗಿದ್ದರು. ಆದ್ದರಿಂದ ಪಂಥವಾದಿ ದೃಷ್ಟಿಕೋನದ ಮೂರ್ತಿಗಳನ್ನು ಒಡೆಯ ನಮಗೆ ಅವರೇ ಸ್ಪೂರ್ತಿ ನೀಡಬೇಕು. ಪ್ರತಿಗಾಮಿಗಳು ಹಾಗೂ ಸ್ವಹಿತಾಸಕ್ತಿಯ ಜನರು ಸೃಷ್ಟಿಸಿರುವ ಮೂರ್ತಿಗಳನ್ನು ಇಂದು ದಲಿತರು ನಿರ್ನಾಮ ಮಾಡಬೇಕಾಗಿದೆ. ಅಂಬೇಡ್ಕರರ ಪುನರ್ ವ್ಯಾಖ್ಯಾನದ ಯೋಜನೆಯು ಅವರನ್ನು ಆಳುವ ವರ್ಗದ ಅಡ್ಡಾಗಳಿಂದ ಬಿಡುಗಡೆಗೊಳಿಸಿ, ಕೊಳೆಗೇರಿಯ ಕೊಪ್ಪಲುಗಳಿಗೆ ತರಬೇಕಾಗಿದೆ. ಅವರು ನಿಜವಾಗಿಯೂ ಸಲ್ಲುವ ಗ್ರಾಮಾಂತರದ ದಲಿತ ಜನಕೋಟಿಯೆಡೆಗೆ ಅವರನ್ನು ತಿರುಗಿ ಒಯ್ಯಬೇಕಾಗಿದೆ.

ಅಂಬೇಡ್ಕರರಲ್ಲಿದ್ದ ಒಂದು ಮಹಾನ್ ಗುಣವೆಂದರೆ, ಅವರ ಅಸಾಂಪ್ರದಾಯಿಕ ನಿಲುವು, ಕರ್ಮಠತನ, ಕಂದಾಚಾರಗಳ ಬಗ್ಗೆ ಅವರಲ್ಲಿದ್ದ ತಿರಸ್ಕಾರದ ಭಾವ. ಯಾರೋ ಅಧಿಕಾರವಾಣಿಯಿಂದ ಹೇಳಿದ್ದಾರೆಂದು ಅವರು ಎಂದೂ ಯಾವುದನ್ನೂ ಸ್ವೀಕರಿಸಿಲ್ಲ. ಎಲ್ಲ ತರದ ಮೋಸ ವಂಚನೆ ತಟವಟ ಕಂಡರೆ ಅವರು ಕಿಡಿಕಾರುತ್ತಿದ್ದರು. ಯಾವುದೇ ಸಮಸ್ಯೆ ಇರಲಿ, ಅದನ್ನು ಒಬ್ಬ ವಿದ್ಯಾರ್ಥಿಯ ನಿಷ್ಠೆ ಮತ್ತು ಸಂಶೋಧಕನ ಬೌದ್ಧಿಕ ಪ್ರಾಮಾಣಿಕತೆಯಿಂದ ಕೈಗೆತ್ತಿಕೊಳ್ಳುತ್ತಿದ್ದರು. ಸಿದ್ಧಾಂತಗಳು ಕಾಲ ದೇಶ ಬದ್ಧವಾಗಿರುತ್ತವೆ ಎಂಬ ದೃಷ್ಟಿ ಅವರದಾಗಿತ್ತು. ಯಾವುದೂ ಚಿರವಲ್ಲ ನಿತ್ಯ ಸತ್ಯವಲ್ಲ. ಆದ್ದರಿಂದ ಯಾರೊಬ್ಬರೂ ತನ್ನ ಕಾಲದ ಆಚೆಗೆ ತಮ್ಮ ಪ್ರಸ್ತುತೆಯನ್ನು ಬಯಸಬಾರದು, ನಿರೀಕ್ಷಿಸಲುಬಾರದು ಎಂಬ ನಿಲುವು ಅವರದು. ಆದ್ದರಿಂದ ಅವರ ನೈಜ ಅನುಯಾಯಿಗಳು ಇಂದು ಸಂಪೂರ್ಣ ಸ್ವಾತಂತ್ರ್ಯದಿಂದ, ಅತ್ಯಂತ ಮುಕ್ತತೆಯಿಂದ. ಬದಲಾಗುತ್ತಿರುವ ಈ ಕಾಲದ ತಮ್ಮ ಅನುಭವಗಳಿಗೆ ಅನುಗುಣವಾಗಿ ಚಿಂತಿಸಬೇಕು.

ಈ ದೃಷ್ಟಿಯಿಂದ ನಾವು ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಬೇಕಾಗಿದೆ. ಅವುಗಳ ಬಗ್ಗೆ ನಮಗೆ ಲಭಿಸುವ ಸ್ಪಷ್ಟತೆ ನಮ್ಮ ಚಿಂತನೆಯ ಕೆಲಸಕ್ಕೆ ಸಾರ್ಥಕ ಕಾಣಿಕೆ ನೀಡಬಲ್ಲದು.

ಶೋಷಣಾ ವಿರೋಧಿ ಅಂಬೇಡ್ಕರ್

ಎಲ್ಲಾ ವಿಧದ ಶೋಷಣೆಯನ್ನು ಕೊನೆಗೊಳಿಸಬೇಕೆಂಬ ಅದಮ್ಯ ಬಯಕೆಯೇ ಅಂಬೇಡ್ಕರರ ಆಚಾರ ವಿಚಾರಗಳಲ್ಲಿ ಹಾಸುಹೊಕ್ಕಾಗಿತ್ತು. ಶೋಷಣಾ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲಬೇಕೆಂಬ ದೃಷ್ಟಿಧೋರಣೆಗಳೇ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣಗಳಾಗಿದ್ದವು. ಶೋಷಣೆ ಕಂಡಾಗಲೆಲ್ಲ ಅವರು ಅದರ ವಿರುದ್ಧ ದನಿ ಎತ್ತುತ್ತಿದ್ದರು. ಎರಡು ಸಹಸ್ರಮಾನಗಳಿಗೂ ಹೆಚ್ಚಿನ ಕಾಲದುದ್ದಕ್ಕೂ ಭಾರತೀಯ ಜನಸಂಖ್ಯೆಯ ಐದನೆಯ ಒಂದು ಭಾಗದಷ್ಟು ಜನರನ್ನು ಪ್ರಾಣಿಗಳಿಂತಲೂ ಕಡೆಯಾಗಿ ಕೀಳೈಸಿದ್ದ, ಅಮಾನವೀಯ ದಬ್ಬಾಳಿಕೆಗೆ ಗುರಿಮಾಡಿದ್ದ ಜಾತಿವ್ಯವಸ್ಥೆಯ ವಿರುದ್ಧ ತಮ್ಮ ಬದುಕಿನುದ್ದಕ್ಕೂ ಸೆಣಸಿದರು. ಇಂತಹ ಕ್ರೂರ ಅಮಾನುಷ ಪದ್ಧತಿಯನ್ನು ದೈವ ಪ್ರಣೀತವೆಂದು ಸಾರುತ್ತಿದ್ದ ಹಿಂದೂ ಧರ್ಮದ ಗೊಡ್ಡು ಕಂದಾಚಾರದ ನಿರ್ನಾಮವೇ ಅವರ ಬದುಕಿನ ಪ್ರಮುಖ ಗುರಿಯಾಗಿತ್ತು. ಜಾತಿವಿನಾಶವೇ ಅವರ ಬದುಕಿನ ಪರಮ ಗಮ್ಯವಾಗಿತ್ತು. ಆದ್ದರಿಂದಲೇ ಅದಕ್ಕೆ ಅನಾದಿಯಿಂದ ಬಲಿಯಾಗಿದ್ದ ಅಸ್ಪೃಶ್ಯರ ನೆಲೆಯಿಂದಲೇ ಜಾತಿವ್ಯವಸ್ಥೆಯ ಮೇಲೆ ದಾಳಿಯಿಟ್ಟ ಅವರು ಕಾದಾಡಿದ ಕದನಗಳು ಹಲವಾರು. ಆರಂಭದಲ್ಲಿ ಹಿಂದೂ ಧರ್ಮಸಂಹಿತೆಯ ಸಂರಕ್ಷಕವಾಗಿದ್ದ ಬ್ರಾಹ್ಮಣವಾದದ ಭದ್ರಕೋಟೆಗೆ ಗುರಿಯಿಟ್ಟರು. ಆಮೇಲೆ ಅದನ್ನು ರಾಜಕೀಯ ಸಂಗ್ರಾಮವಾಗಿ ಮಾರ್ಪಡಿಸಿದರು. ರಾಜಕೀಯ ಹೋರಾಟದಿಂದಲ್ಲದೆ ಬ್ರಾಹ್ಮಣಶಾಹಿಯ ಕೋಟೆ ಬಿರುಕು ಬಿಡದೆಂಬುದು ಅವರಿಗೆ ಅರಿವಾಯಿತು. ಆದ್ದರಿಂದಲೇ ಅವರು ಒಂದರಗಳಿಗೆಯೂ ಈ ಗುರಿಯಿಂದ ತಮ್ಮ ದೃಷ್ಟಿಯನ್ನು ಕದಲಿಸಲಿಲ್ಲ. ರಾಜಕೀಯ ಹೋರಾಟದ ಮೂಲಕವೇ ಬ್ರಾಹ್ಮಣಶಾಹಿಯ ನಿರ್ನಾಮ, ಬ್ರಾಹ್ಮಣಶಾಹಿಯ ನಿರ್ನಾಮದಿಂದಲೇ ಹಿಂದೂ ಧರ್ಮದ ಅವಸಾನ ಹಿಂದೂ ಧರ್ಮದ ಅವಸಾನವಾದಾಗ ಮಾತ್ರ ಜಾತಿವಿನಾಶ ಸಾಧ್ಯ ಎಂಬುದು ಅವರ ದೃಢನಂಬುಗೆಯಾಗಿತ್ತು. ಜಾತಿ ವ್ಯವಸ್ಥೆಯ ವಿರುದ್ಧ ಅವರು ಹೂಡಿದ್ದ ಈ ಬೃಹತ್ ಹೋರಾಟ ಸಹಜವಾಗಿಯೇ ಅವರ ಇತರ ಹೋರಾಟಗಳನ್ನು ಮರೆಮಾಚಿತು. ನಿಜವೆಂದರೆ, ಜಾತಿ ಹೋರಾಟದಾಚೆಗೂ ಅವರು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ವಾಸ್ತವವಾಗಿ ಅವರ ಹೋರಾಟದ ಬದುಕು ಶೋಷಣೆಯ ಎಲ್ಲ ರೂಪಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಅಸ್ಪೃಶ್ಯತೆಯ ವಿರುದ್ಧ ಹೂಡಿದ್ದ ಹೋರಾಟದ ಕೀರ್ತಿಯನ್ನು ಅವರಿಗೆ ಕೊಡಲು ಕೆಲವರು ಹಿಂಜರಿಯುತ್ತಿದ್ದರು. ಆರಂಭದಲ್ಲಿ ಅವರನ್ನು ಸಮಗ್ರ ದಲಿತರ ವಿಮೋಚಕರೆಂದೂ ಒಪ್ಪಿಕೊಳ್ಳದ ಕೆಲವರು, ಅವರನ್ನು ಕೇವಲ ಮಹಾರ್ ಜಾತಿಯ ನೇತಾರರೆಂದು ಬಿಂಬಿಸಲು ಪ್ರಯತ್ನಿಸಿದರು. ಅವರ ಹೋರಾಟ ಅಪಥ್ಯವಾಗಿದ್ದ ವ್ಯವಸ್ಥಾನಿಷ್ಟ ಜನ ಬಾಬಾ ಸಾಹೇಬರ ಹೋರಾಟದ ಮಹತ್ವವನ್ನು ಗೌಣಗೊಳಿಸಲು ಸಾಕಷ್ಟು ಯತ್ನಿಸಿದರು. ಅಂಬೇಡ್ಕರರಿಗೆ ದೊರೆತ ಈ ಪೂರ್ವಗ್ರಹ ಪೀಡಿತ ಉಪಚಾರವೇ ಈ ದೇಶದಲ್ಲಿ ಜಾತಿ ಸಮಸ್ಯೆಯ ತೀಕ್ಷ್ಣತೆ ಎಷ್ಟಿತ್ತೆಂಬುದನ್ನು ತೋರಿಸಿ ಕೊಡುತ್ತದೆ. ಇದೇನೇ ಇದ್ದರೂ ಅವರ ಹೋರಾಟಕ್ಕೆ ಕೇವಲ ಅಸ್ಪೃಶ್ಯರ ವಿಮೋಚನೆ ಅಷ್ಟೇ ಅಲ್ಲ, ಇದೂ ಜಾತಿವ್ಯವಸ್ಥೆಯ ವಿನಾಶದ ಗುರಿ ಇತ್ತೆಂಬುದು ಈಗ ನಿಚ್ಚಳವಾಗಿದೆ. ಅದು ಮೂಲತಃ ಶತಮಾನಗಳಿಂದಲೂ ಅವ್ಯಾಹತವಾಗಿ ನಡೆದುಬಂದಿದ್ದ ಶೋಷಣಾ ವ್ಯವಸ್ಥೆಯ ವಿರುದ್ಧವಾಗಿತ್ತು. ಈ ಅಮಾನವೀಯ ವ್ಯವಸ್ಥೆಯ ವಿರುದ್ಧ ನಡೆಯಬೇಕಾಗಿದ್ದ ಪ್ರತಿಭಟನೆ ಸಮಾಜದ ಮೂರ್ತ ಸನ್ನಿವೇಶದಲ್ಲಿಯೇ ವಿನಾ ಅಮೂರ್ತ ಬಾನ ಬಯಲಿನಲ್ಲಲ್ಲ ಎಂಬ ತಿಳುವಳಿಕೆಯೂ ಅವರಲ್ಲಿತ್ತು. ಇತರ ಹೋರಾಟಗಾರರ ಬದುಕಿನ ಪ್ರಕರಣಗಳಿಗೆ ವ್ಯತಿರಿಕ್ತವಾಗಿ, ಬಾಬಾ ಸಾಹೇಬರ ಹೋರಾಟದ ಮೂಲ ಪ್ರೇರಣೆ, ಛಲ, ಬಲ ಎಲ್ಲವೂ ಅವರ ಸ್ವಂತ ಬದುಕಿನ ಅನುಭವದಿಂದಲೇ ಬಂದಿದ್ದವು. ಬ್ರಾಹ್ಮಣಶಾಹಿಯ ವಿರುದ್ಧ ಅವರು ಟೊಂಕಕಟ್ಟಿ ನಿಂತಿದ್ದರೂ ಅವರಿಗೆ ಯಾವುದೇ ಬ್ರಾಹ್ಮಣರ ಬಗ್ಗೆ ವೈರತ್ವವಿರಲಿಲ್ಲ. ಜಾತಿ ಆಧಾರದ ಮೇಲೆ ಯಾವೊಬ್ಬ ವ್ಯಕ್ತಿಯನ್ನು ಮಿತ್ರನಾಗಿಯೂ, ಶತ್ರುವಾಗಿಯೂ, ಭಾವಿಸುತ್ತಿರಲಿಲ್ಲ. ಅವರ ಹೋರಾಟ ವ್ಯವಸ್ಥೆಯ ವಿರುದ್ಧವಾಗಿತ್ತೆ ಹೊರತು ವ್ಯಕ್ತಿಯ ವಿರುದ್ಧವಲ್ಲ. ಅವರ ಹೋರಾಟದ ವಾಹಕವಾಗಿದ್ದ ಬಹಿಷ್ಕೃತ ಹಿತಕಾರಣಿ ಸಭಾದ ಕಾರ್ಯಸಮಿತಿಯ ಬಹುಸಂಖ್ಯಾತರು ಮೇಲ್ಜಾತಿಯವರೇ ಆಗಿದ್ದರು. ಅನಂತರದ ಮಹಾಡ್ ಹೋರಾಟದ ಸಂದರ್ಭದಲ್ಲಾಗಲಿ ಅಥವಾ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಸಂಘಟನೆಯ ಸಂದರ್ಭದಲ್ಲಾಗಲಿ, ಅವರ ಜಾತ್ಯಾತೀತ ನಿಲುವನ್ನು ಸೂಕ್ಷ್ಮವಾಗಿ ಕಾಣಬಹುದು. ಯಾವುದೇ ಹೋರಾಟದ ಕಾಲದಲ್ಲಿ ತಮ್ಮ ಸಂಘಟನೆ ಜಾತಿಯನ್ನಾಧರಿಸಿಬಾರದೆಂಬುದು ಅವರ ಬಯಕೆಯಾಗಿತ್ತು. ಅವರ ದೃಷ್ಟಿ ತೀರ ಹರಿತವಾಗಿತ್ತು. ಆದ್ದರಿಂದಲೇ ಅಸ್ಪೃಶ್ಯರನ್ನೊಳಗೊಂಡು ಎಲ್ಲ ಜಾತಿಗಳಲ್ಲಿಯೂ ಬ್ರಾಹ್ಮಣವಾದ ಇರುವ ಸಾಧ್ಯತೆಯನ್ನು ಅವರು ಗುರುತಿಸಿದ್ದರು. ಯಾಕೆಂದರೆ, ಬ್ರಾಹ್ಮಣವಾದವೇ ಜಾತಿವ್ಯವಸ್ಥೆಯ ಜೀವ ಜೀವಾಳ. ಹೀಗೆ ಜಾತ್ಯಾತೀತರಾಗಿ ಸರ್ವಶೋಷಿತರ ವಿಮೋಚಕರಾಗಿ ಹೋರಾಡಿದ್ದ ಬಾಬಾ ಸಾಹೇಬರ ಚಳುವಳಿಯನ್ನು ಇಂದು ಕೇವಲ ಪರಿಶಿಷ್ಟ ಜಾತಿಯವರು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಂಡಿದ್ದಾರೆ. ಬಾಬಾ ಸಾಹೇಬರ ಮೇಲೆ ತಮ್ಮ ಸರ್ವಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದಾರೆ. ಇದೊಂದು ದೊಡ್ಡ ದುರಂತ.

ದಲಿತರ ವಿಮೋಚನೆಯೇ ಒಂದು ಬಹುದೊಡ್ಡ ಸಮಸ್ಯೆ. ಆ ಸಮಸ್ಯೆಯ ಅಗಾಧತೆ ಅಪಾರವಾದದದ್ದು. ಅದರ ವಿರುದ್ಧವೇ ತಮ್ಮ ಜೀವಮಾನವಿಡೀ ಸೆಣಸಿದರೂ ಸಾಲದು ಎಂಬ ಅರಿವಿದ್ದೂ ಅವರು ಇತರ ನೊಂದವರಿಗಾಗಿಯೂ ಹೋರಾಟ ಕಟ್ಟಿದ್ದರು. ಕಾರ್ಮಿಕರ, ರೈತರ ಮತ್ತು ಮಹಿಳೆಯರ ಸಮಸ್ಯೆಗಳ ವಿರುದ್ಧವೂ ಅವರು ಸಂಗ್ರಾಮ ಸಾರಿದ್ದರು. ಒಮ್ಮೆ ಆದಿವಾಸಿಗಳ ಕುರಿತು ಅವರು ನೇರವಾಗಿಯೇ ಉತ್ತರ ಕೊಟ್ಟಿದ್ದರು. ತಾವು ಕೈಗೆತ್ತಿಕೊಂಡಿರುವ ಸಮಸ್ಯೆಗಳೇ ಬದುಕಿನುದ್ದಕ್ಕೂ ಪರಿಹಾರ ಕಾಣದ ಸಾಧ್ಯತೆಗಳಿರುವಾಗ ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಮೇಯ ಎಲ್ಲಿಯದು ಮಿಗಿಲಾಗಿ, ತಾನು ಇಡೀ ಮಾನವ ಕುಲಕ್ಕಾಗಿ ಹೋರಾಡುತ್ತಿದ್ದೇನೆಂದು ಎಂದೂ ಹೇಳಿಯೇ ಇಲ್ಲವಲ್ಲ ಎಂದು ವ್ಯಗ್ರವಾಗಿ ನುಡಿದಿದ್ದರು. ಗೊಂದಲಗೊಳಿಸುವ ಇಂತಹ ಘಟನೆಗಳನ್ನು ಅವುಗಳ ನಿರ್ದಿಷ್ಟ ಸಂದರ್ಭದಲ್ಲಿಯೇ ಅರ್ಥಮಾಡಿಕೊಳ್ಳಬೇಕು. ದಲಿತರ ಸಾಮಾಜಿಕ ಆರ್ಥಿಕ ವಂಚಿತ ಸ್ಥಿತಿಯ ಬಗ್ಗೆ ಚಿಂತಿಸುತ್ತಲೇ, ಸರ್ವರ ಶೋಷಣೆಯನ್ನು ನಿರಂತರಗೊಳಿಸುವ ವ್ಯವಸ್ಥೆಯ ಕೆಲವು ಆಯಾಮಗಳನ್ನೂ ಗುರುತಿಸಿದ್ದರು. ಅವರ ಕಾರ್ಯಕ್ಷೇತ್ರ ಸೀಮಿತವಾಗಿದ್ದರೂ ದೃಷ್ಟಿ ವಿಶಾಲವಾಗಿತ್ತು. ಅದು ಎಲ್ಲವನ್ನೂ ಏಕಕಾಲಕ್ಕೆ ಗ್ರಹಿಸುವ ವ್ಯಾಪ್ತಿ ಮತ್ತು ಸೂಕ್ಷ್ಮವಾಗಿ ವಿಶ್ಲೇಷಿಸುವ ಮೊನಚು ಪಡೆದಿತ್ತು. ಉದಾಹರಣೆಗೆ ತಮ್ಮ ಸಮಸ್ಯೆಯ ಮೂಲವಾಗಿದ್ದ ಮರಣಾಸನ್ನ ಪಾಳೆಗಾರಿಕೆ ವ್ಯವಸ್ಥೆಯ ಜೊತೆಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆಯ ಬಗ್ಗೆಯೂ ಅವರ ಗ್ರಹಿಕೆ ಸ್ಪಷ್ಟವಾಗಿತ್ತು. ಅರಿವು ಅಪಾರವಾಗಿತ್ತು.

ಬಂಡವಾಳವಾದ

ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ಬಂಡವಾಳಶಾಹಿ ಮೆಲ್ಲನೆ ಬೇರು ಬಿಡತೊಡಗಿತ್ತು. ಆ ಕೆಲಸದಲ್ಲಿ ಬ್ರಿಟಿಷ್ ಬಂಡವಾಳಗರೊಂದಿಗೆ ಭಾರತೀಯ ಬಂಡವಾಳಿಗರೂ ಕೈಗೂಡಿಸಿದ್ದರು. ಇಲ್ಲಿಯ ವಾಣಿಜೋದ್ಯಮಿಗಳಿಗೆ ವಿಪುಲ ಸಹಕಾರ ದೊರೆತುದ್ದರಿಂದಲೇ ಇಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸಮೃದ್ಧವಾಗಿ ಬೆಳೆಯತೊಡಗಿತು. ಯುರೋಪಿನಲ್ಲಾದರೋ ಕನಿಷ್ಠ ಪಕ್ಷ ಅದು ಪಾಳೇಗಾರ ವ್ಯವಸ್ಥೆಯ ವಿರುದ್ಧ ಹಣಾಹಣಿಗೆ ಇಳಿಯಬೇಕಾಗಿತ್ತು. ಆದರೆ ಭಾರತದಲ್ಲಿ ಅಂತಹ ಪ್ರಮೇಯವೇ ಉದ್ಭವಿಸಲಿಲ್ಲ. ಪ್ರತಿಯಾಗಿ, ಇಲ್ಲಿಯಾ ಪಾಳೆಗಾರಿಕೆ ವ್ಯವಸ್ಥೆಯ ಹೆಗಲ ಮೇಲೆ ಕುಳಿತೇ ಬಂಡವಾಳಶಾಹಿ ಸವಾರಿ ಹೊರಟಿತು ಪಾಳೆಗಾರಿಕೆ ವ್ಯವಸ್ಥೆಯನ್ನು ಸಮೂಲ ನಾಶಮಾಡಿ ಅದರ ಸ್ಥಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಅಂಕುರಿಸಿದ್ದರೆ ನಮ್ಮ ಚರಿತ್ರೆಯ ಗತಿಯೇ ಬದಲಾಗುತ್ತಿತ್ತು. ಆದರೆ ಅವರೆಡೂ ಸಖ್ಯತೆಯ ಸಹಬಾಳ್ವೆ ಆರಂಭಿಸಿದ್ದರ ಪರಿಣಾಮವಾಗಿ ನಮ್ಮ ನಗರ ಪಟ್ಟಣಗಳಲ್ಲಿಯ ಬಂಡವಾಳಶಾಹಿ ಸಂಸ್ಥೆಗಳಲ್ಲೂ ಜಾತಿಯ ತಾರತಮ್ಯ ಕಾಣಿಸಿಕೊಂಡಿತು. ಬಂಡವಾಳಶಾಹಿ ಸಂಸ್ಥೆಗಳು ಮತ್ತು ಪಾಳೇಗಾರಿಕೆ ವ್ಯವಸ್ಥೆಯ ಪಳೆಯುಳಿಕೆಯಾಗಿದ್ದ ಜಾತಿ ಎರಡೂ ಏಕಕಾಲದಲ್ಲಿಯೇ ತಮ್ಮ ಅಸ್ತಿತ್ವವನ್ನು ಮುಂದುವರಿಸಿದ್ದವು. ಬಂಡವಾಳಶಾಹಿ ಸಾಧ್ಯತೆಗಳ ವ್ಯವಸ್ಥೆಯ ಒಳಗೇ ಅವ್ಯಕ್ತವಾಗಿ ಮನೆ ಮಾಡಿಕೊಂಡಿರುವ ಶೋಷಣೆಯ ಸಾಧ್ಯತೆಗಳ ಬಗ್ಗೆ ಬಾಬಾ ಸಾಹೇಬರಿಗೆ ಸ್ಪಷ್ಟವಾದ ಅರಿವಿತ್ತು. ಇನ್ನು ಜಾತಿವ್ಯವಸ್ಥೆಯ ಕರಾಳ ಮುಖದ ಅನುಭವ ಅವರ ಬದುಕಿನ ಅಂಗವಾಗಿಯೇ ಬಂದಿತ್ತು. ಆದ್ದರಿಂದಲೇ ಬಂಡವಾಳಶಾಹಿ ಮತ್ತು ಬ್ರಾಹ್ಮಣವಾದ ಈ ಎರಡೂ ತಮ್ಮ ಆಂದೋಲನದ ವೈರಿಗಳೆಂದು ಅವರು ಘೋಷಿಸಿದ್ದರು.

ಅವರ ಕಾಲದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಅದೇ ಆಗ ಕಣ್ಣು ಬಿಡುತ್ತಿದ್ದ ಕೂಸಾಗಿತ್ತು. ಆದರೆ ಬ್ರಾಹ್ಮಣ ವಾದದ ಹರವು ತುಂಬ ವಿಸ್ತಾರವಾಗಿತ್ತು. ಅದು ಪ್ರಾಚೀನ ಗುಲಾಮಗಿರಿಯಿಂದ ಹಿಡಿದು ಪಾಳೇಗಾರಿಕೆ ವ್ಯವಸ್ಥೆಯ ಆಚೆಗೂ ವ್ಯಾಪಿಸಿಕೊಂಡು ಇತ್ತೀಚೆಗೆ ಸಾಮಾಜ್ಯಶಾಹಿಯವರೆಗೂ ತನ್ನ ಕರಾಳ ಹಸ್ತವನ್ನು ಚಾಚಿತ್ತು, ಮೇಲಾಗಿ, ಅದೇ ಆಗ ವಿಕಾಸ ಹೊಂದುತ್ತಿದ್ದ ದೇಶೀ ಬಂಡವಾಳಶಾಹಿಗಳ ಪ್ರತಿಗಾಮಿ ದಲ್ಲಾಳಿ ಸ್ವರೂಪವನ್ನು ಅವರು ಸರಿಯಾಗಿಯೇ ಗುರುತಿಸಿದ್ದರು. ಆ ಕಾಲದ ಆರ್ಥಿಕ ವ್ಯವಸ್ಥೆಯಲ್ಲಿ ಈ ದಲ್ಲಾಳಿಗಳು ನಡೆಸುತ್ತಿದ್ದ ದರ್ಬಾರು ಮತ್ತು ಅವರಿಂದ ಹೊರಹೊಮ್ಮುತ್ತಿದ್ದ ಅಪಾರ ಶೋಷಣೆ, ವಿಶೇಷವಾಗಿ ಕಾರ್ಮಿಕರ ಅಮಾನವೀಯ ಶೋಷಣೆಯನ್ನು ಬಾಬಾ ಸಾಹೇಬರು ಬಹು ಸೂಕ್ಷ್ಮವಾಗಿ ಗಮನಿಸಿದ್ದರು. ಅವರ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ (I. L. P) ಮುಖ್ಯ ಉದ್ದೇಶ ಬಂಡವಾಳಶಾಹಿ ಶೋಷಣೆಗೆ ಎದುರೇಟು ಕೊಡುವದಷ್ಟೇ ಅಲ್ಲ, ಆ ಮೂಲಕ ಜಾತಿ ಮತ್ತು ವರ್ಗದ ನೆಲೆಯ ಮೇಲೆ ಒಂದು ಹೊಸ ಹೋರಾಟವನ್ನು ಕಟ್ಟುವದಾಗಿತ್ತು. ಜಾತಿಯ ವಿರುದ್ಧದ ಹೋರಾಟ ಮತ್ತು ವರ್ಗ ಸಂಘರ್ಷ ಎರಡನ್ನೂ ಏಕೀಭವಿಸುವ ಮೂಲಕ ಮಾತ್ರ ಅಂದಿನ ಭಾರತೀಯ ವ್ಯವಸ್ಥೆಯ ದಾರುಣ ಸ್ಥಿತಿಯಿಂದ ಬಿಡುಗಡೆ ಸಾಧ್ಯ ಎಂಬುವುದು ಅವರ ನಿಶ್ಚಲ ನಂಬುಗೆಯಾಗಿತ್ತು. ಹಾಗೆಂದೇ ಅನೇಕ ಕಾರ್ಮಿಕರ ಸಮಸ್ಯೆಗಳನ್ನು ಅವರ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ತನ್ನ ಕೈಗೆತ್ತಿಕೊಂಡಿತು. ಜೊತೆಗೆ ಗಿರಣಿ ಕಾರ್ಮಿಕರ ಮುಷ್ಕರದ ನೇತೃತ್ವದಲ್ಲಿಯೂ ಪಾಲ್ಗೊಂಡಿತು. ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆಕ್ಟಿಗೆ ಸಂಬಂಧಿಸಿದಂತೆ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ಅದು ಸಂಸದೀಯ ಹೋರಾಟಕ್ಕೂ ಸಿದ್ಧವಾಯಿತು. ಇದೆಲ್ಲಕ್ಕಿಂತ ಹೆಚ್ಚಾಗಿ, ಬಾಬಾ ಸಾಹೇಬರು ವೈಸ್‌ರಾಯನ ಎಕ್ಸಿಕ್ಟೂಟಿವ್ ಕೌನ್ಸಿಲ್ ಸದಸ್ಯರಾಗಿದ್ದಾಗ ಕಾರ್ಮಿಕರ ಸಮಸ್ಯೆಗಳ ಕುರಿತು ಅನೇಕ ಕಾನೂನಿನ ಸುಧಾರಣೆಗಳನ್ನು ತಂದರು. ಈ ಎಲ್ಲ ನಿದರ್ಶನಗಳಿಮದ ಶೋಷಿತ ಕಾರ್ಮಿಕರ ಬಗೆಗಿದ್ದ ಬಾಬಾ ಸಾಹೇಬರ ಕಾಳಜಿ ಮತ್ತು ಕಳಕಳಿ ವ್ಯಕ್ತವಾಗುತ್ತದೆ. ಈ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಅವರು ಅನುಸರಿಸಿದ ಮಾರ್ಗ ಮಾತ್ರ ಸೋಷಲಿಸ್ಟರ ಮಾರ್ಗಕ್ಕೆ ತೀರ ಹತ್ತಿರವಾಗಿತ್ತು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟವಾಗಿಯೇ ಇತ್ತು. ಆ ಕಾಲಕ್ಕೆ ನಿಕಟ ಪೂರ್ವದಲ್ಲಿ ಫೆಬಿಯನ್ ಸೋಷಲಿಸ್ಟರು ಅವರಿಗೆ ತುಂಬ ಪರಿಚಿತವಾಗಿದ್ದ ಹಾಗೂ ಪ್ರಯೋಜಕವಾಗಿದ್ದ ಕಾರಣಕ್ಕಾಗಿಯೇ ಹೊರತು ಅದನ್ನು ಸೈದ್ಧಾಂತಿಕ ನೆಲೆಗಟ್ಟಿನ ವಿಚಾರಧಾರೆಯಾಗಿ ಸ್ವೀಕರಿಸಿದ್ದರೆಂದಲ್ಲ. ಬದಲಾಗಿ, ಅದೊಂದು ಈ ಕ್ಷಣದ ಕಾರ್ಯತಂತ್ರವಾಗಿತ್ತು. ಅಷ್ಟೇ. ಅವರು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಟೊಂಕ ಕಟ್ಟಿಯೇ ನಿಂತಿದ್ದರೆಂಬುದು ನಿಸ್ಸಂಶಯ. ಆದರೆ ಅದನ್ನು ವಿರೋಧಿಸಲು ಒಂದು ಸುಸಂಬದ್ಧವಾದ, ಸಮರ್ಥವಾದ ಸೈದ್ಧಾಂತಿಕ ನೆಲೆಗಟ್ಟನ್ನು ಪ್ರಸ್ತಾಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಅವರ ಪ್ರಯತ್ನಗಳೆಲ್ಲ ಕಾರ್ಮಿಕರ ಕಲ್ಯಾಣಕ್ಕಾಗಿ ಬದ್ಧವಾಗಿದ್ದ ತಕ್ಷಣದ ಗುರಿಗಳೇ ಮಿತಗೊಳ್ಳಬೇಕಾಯಿತು. ಕಾರ್ಮಿಕರ ಅಂತಿಮ ವಿಮೋಚನೆಗೆ ಒಂದು ಹೊಸ ದೃಷ್ಟಿಯನ್ನು ನೀಡುವುದು ಸಾಧ್ಯವಾಗಲಿಲ್ಲ.

ಸಾಮ್ರಾಜ್ಯವಾದ

ಡಾ. ಬಾಬಾ ಸಾಹೇಬರು ಸಾಮ್ರಾಜ್ಯವಾದಿ ವ್ಯವಸ್ಥೆಯ ವಿರುದ್ಧ ತಳೆದಿದ್ದ ನಿಲುವುಗಳನ್ನು ಸಾಕಷ್ಟು ವಿರೂಪಗೊಳಿಸಲಾಗಿದೆ. ಸಾಮ್ರಾಜ್ಯವಾದ ಮತ್ತು ಸಾಮ್ರಾಜ್ಯಶಾಹಿಗಳ ಬಗೆಗಿನ ಅವರ ದೃಷ್ಟಿ ಧೋರಣೆಗಳನ್ನು ಮನಬಂದಂತೆ ತಿರುಚಲಾಗಿದೆ. ಇದು ಯಾವಾಗಲೋ ಒಮ್ಮೆ ನಡೆದ ಘಟನೆಯಲ್ಲ. ಅವರ ರಾಜಕೀಯ ಬದುಕಿನ ಆರಂಭದಲ್ಲಿಯೂ ಇದನ್ನೇ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ತಿರಸ್ಕರಿಸಿದ್ದುದು. ಅಥವಾ ಅದಕ್ಕಿಂತಲೂ ಹೆಚ್ಚಾಗಿ, ಕೆಲವು ಮಂದಮತಿಗಳ ದೃಷ್ಟಿಯಲ್ಲಿ ಸಾಮ್ರಾಜ್ಯವಾದದ ವಿರೋಧದ ಸಾಕಾರವಾಗಿದ್ದ ಗಾಂಧೀಜಿಯನ್ನು ವಿರೋಧಿಸುತ್ತಿದ್ದರು ಎಂಬುದು. ವಸಾಹತುಶಾಹಿ ಪ್ರಭುತ್ವಕ್ಕೆ ಸಂಬಂಧಿಸಿದಂತೆ ಅವರು ತಳೆಯುತ್ತಿದ್ದ ತಟಸ್ಥ ನಿಲುವು ಒಂದು ರಾಜಕೀಯ ತಂತ್ರವಾಗಿತ್ತು. ಅವರ ಪ್ರಕಾರ ಯಾವುದೇ ಸಂಪನ್ಮೂಲಗಳಿಲ್ಲದ ದಲಿತರು ಬೃಹತ್ ಶಕ್ತಿಯ ಎಲ್ಲ ದೈತ್ಯರನ್ನು ಏಕಕಾಲಕ್ಕೆ ಎದುರಿಸುವುದು ಸಾಧ್ಯವಿರಲಿಲ್ಲ. ತಮ್ಮ ವೈರಿಗಳನ್ನು ಒಂದೊಂದಾಗಿ ಎದುರಿಸುತ್ತ ಸೆಣಸಿ, ಸೋಲಿಸಬೇಕಾದ ಅನಿವಾರ್ಯತೆ ಇತ್ತು. ತಮಗಿದ್ದ ಮಿತವಾದ ಶಕ್ತಿಸಾಮರ್ಥ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಚದುರಿಸಲು ಅವರು ಸಿದ್ಧರಲಿಲ್ಲ. ತಮ್ಮ ವೈರಿಗಳನ್ನು ಕ್ರಮವಾಗಿ ಎದುರಿಸಬೇಕಾದುದ್ದರ ಅರಿವು ಅವರಲ್ಲಿ ಅಪಾರವಾಗಿತ್ತು. ಇದೇನೆ ಇದ್ದರೂ ವಸಾಹತುಶಾಹಿ ಆಡಳಿತದ ಶೋಷಕ ಸ್ವಭಾವದ ಬಗ್ಗೆ ಅವರಿಗೆ ಸಾಕಷ್ಟು ಪರಿಜ್ಞಾನವಿತ್ತು. ಅನೇಕ ಸಂದರ್ಭಗಳಲ್ಲಿ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಮತ್ತು ಭಾರತದ ಪಾಳೇಗಾರಿಕೆ ಪ್ರಭುಗಳು ಇಬ್ಬರೂ ಒಟ್ಟಾಗಿಯೇ ಭಾರತೀಯರ ರಕ್ತ ಹೀರುತ್ತಿರುವ ಜಿಗಣೆಗಾಳಗಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಅಸ್ಫೋಟಿಸಿದ್ದುಂಟು (B. B. 58(8)). ಮುಖ್ಯವಾಗಿ, ಈ ವಿಷಯ ಕುರಿತು ಉಳಿದೆಲ್ಲರಿಗಿಂತ ಬಾಬಾ ಸಾಹೇಬರ ದೃಷ್ಟಿ ಭಿನ್ನವಾಗಿತ್ತು. ಹಲವರ ನಿಲುವಿನ ಬಗ್ಗೆ ಬಾಬಾ ಸಾಹೇಬರಿಗೆ ಮೂಲಭೂತವಾದ ಭಿನ್ನಮತವಿತ್ತು. ಉದಾಹರಣೆಗೆ ಸಾಮ್ರಾಜ್ಯಶಾಹಿಯನ್ನು ವಿರೋಧಿಸುವುದೆಂದರೆ, ಬ್ರಿಟಿಷರನ್ನು ವಿರೋಧಿಸುವುದಕ್ಕೆ ಸಮ ಎನ್ನುವುದನ್ನು ಅವರೆಂದೂ ಒಪ್ಪುತ್ತಿರಲಿಲ್ಲ. ಬ್ರಿಟಿಷರನ್ನು ವಿರೋಧಿಸುವುದು ನಿಷ್ಪಲವಾದದ್ದು, ಬ್ರಿಟಿಷರ ದೇಶೀ ಬೆಂಬಲದ ನೆಲೆಯನ್ನು ಬುಡಮಟ್ಟ ಕೀಳದ ಹೊರತು, ಸಾಮ್ರಾಜ್ಯಶಾಹಿ ವಿರೋಧಿ ಆಂದೋಲನ ನಿಜವಾದ ಅರ್ಥದಲ್ಲಿ ಶಕ್ತಿ ಸಂಚಯಿಸಿಕೊಳ್ಳಲಾರದು ಎನ್ನುವುದು ಅವರ ದೃಢ ನಂಬುಗೆಯಾಗಿತ್ತು. ಅಂದಿನ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಮಾನವೇಂದ್ರನಾಥ ರಾಯ್ ಒಮ್ಮೆ ಬಾಬಾ ಸಾಹೇಬರ ಮನೆಯಲ್ಲಿ ಭೇಟಿಯಾಗಿ ದೀರ್ಘ ಚರ್ಚೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಸಾಮ್ರಾಜ್ಯಶಾಹಿಗಳನ್ನು ನಿರ್ನಾಮ ಮಾಡುವುದೇ ಭಾರತೀಯ ರಾಜಕಾರಣದ ಪ್ರಪ್ರಥಮ ಗುರಿಯಾಗಿರಬೇಕೆಂದು ವಾದಿಸಿದರು. ಮತ್ತೆ ಮತ್ತೆ ಪುನರ್ ಒತ್ತಿ ಹೇಳಿದ್ದರು. ಅವರ ಈ ದೃಷ್ಟಿಗೆ ಮಾರುತ್ತಿರುವ ಬಾಬಾ ಸಾಹೇಬರ ಮಾತುಗಳು ಈ ಸಮಸ್ಯೆ ಕುರಿತು ತುಂಬ ಸಾರಭೂತವಾಗಿದ್ದವು. ಅವರು ರಾಯ್‌ಗೆ ಬಹು ಸ್ಪಷ್ಟವಾಗಿಯೇ ಉತ್ತರಿಸಿದರು. ಭಾರತದಲ್ಲಿ ಸಾಮ್ರಾಜ್ಯವಾದಿಗಳ ಮಿತ್ರರಾಗಿರುವ ಭೂಮಾಲಿಕರು, ಮಿಲ್ ಮಾಲೀಕರು, ಲೇವಾದೇವಿಗಾರರು ಮುಂತಾದವರ ವಿರುದ್ಧ ಹೋರಾಡದಿದ್ದರೆ, ಸಾಮ್ರಾಜ್ಯಶಾಹಿಗಳ ವಿರುದ್ಧದ ಹೋರಾಟ ಪರಿಣಾಮಕಾರಿಯಾಗಲು ಸಾಧ್ಯವೇ ಇಲ್ಲ. ಈ ಮಾತಿನ ಬಗ್ಗೆ ಯಾರೂ ವಿವಾದಕ್ಕಿಳಿಯಬಹುದು. ಸರಿ, ಅದರ ಸತ್ಯಾಸತ್ಯತೆಯ ಪ್ರಶ್ನೆ ಸಂಶೋಧನೆಯ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಆದರೆ ಅವರ ಸಾಮ್ರಾಜ್ಯವಾದ ವಿರೋಧಿ ನಿಲುವು ವಿದ್ಯಾರ್ಥಿಯಾಗಿದ್ದಾಗ ಬರೆದ ಲೇಖನಗಳಲ್ಲಿಯೂ ಹಾಸುಹೊಕ್ಕಾಗಿದೆ.

ಅವರ ಈ ನಿಲುವಿನ ಸಿಂಧುತ್ವವನ್ನು ಸುಮಾರು ಅರ್ಧ ಶತಮಾನದ ನಂತರ ಬಹು ಸಮರ್ಥವಾಗಿ ರುಜುವಾತುಗೊಳಿಸಲಾಗಿದೆ. ಅದು ಕೂಡಾ ಸಂಪೂರ್ಣವಾಗಿ ಅವರಿಗೆ ಸಂಬಂಧಪಡದವರಿಂದ. ಸುನೀತಿಕುಮಾರ ಘೋಷ್ ಅವರು ೧೯೮೫ ಮತ್ತು ೧೯೯೫ರಲ್ಲಿ ಪ್ರಕಟಿಸಿದ ತಮ್ಮ ಎರಡು ಗ್ರಂಥಗಳಲ್ಲಿ ಈ ಕುರಿತು ಸಾಕಷ್ಟು ವಿವರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ತಥಾಕಥಿತ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಕಾಂಗ್ರೆಸ್ ಪಕ್ಷ ದೇಶೀ ಭೂಮಾಲಿಕ ಮತ್ತು ಬಂಡವಾಳಶಾಹಿಗಳ ಪ್ರತಿನಿಧಿಯಾಗಿದ್ದು, ತನ್ನ ದಲ್ಲಾಳಿ ಪಾತ್ರ ನಿರ್ವಹಿಸುತ್ತ ಹೇಗೆ ಸಾಮ್ರಾಜ್ಯಶಾಹಿಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಿತ್ತು ಎಂಬುದನ್ನು ಅವರು ನಿರ್ಭಿಡೆಯಿಂದ ಬಿಚ್ಚಿಟ್ಟಿದ್ದಾರೆ. ಅಷ್ಟೇ ಯಾಕೆ, ೧೯೪೭ರಲ್ಲಾದ ಅಧಿಕಾರದ ಹಸ್ತಾಂತರ ನಂತರವೂ ಕಾಂಗ್ರೆಸ್ಸಿನ ದಲ್ಲಾಳಿ ಸೇವೆಯಿಂದಾಗಿ, ಸಾಮ್ರಾಜ್ಯಶಾಹಿಗಳ ಹಿಡಿತ ದುರ್ಬಲಗೊಳ್ಳುವ ಬದಲು ಇನ್ನೂ ಹೆಚ್ಚು ಸಶಕ್ತವಾಗುತ್ತ ಬಂದಿತು ಎಂಬುವುದನ್ನೂ ಅವರು ಮನೋಜ್ಞವಾಗಿ ದಾಖಲಿಸಿದ್ದಾರೆ. ಆದ್ದರಿಂದ ಡಾ. ಅಂಬೇಡ್ಕರರ ನಿಲುವು ಅವರ ಸಮಕಾಲೀನರಾಗಿದ್ದ ಅನೇಕ ರಾಜಕಾರಣಿಗಳದ್ದಕ್ಕಿಂತ ಹೆಚ್ಚು ಸಮಂಜಸವಾಗಿತ್ತೆಂಬುದನ್ನು ಇದು ಸೂಚಿಸುವುದಿಲ್ಲವೆ? ಬಾಬಾ ಸಾಹೇಬರು ಕೇವಲ ವೈಸ್‌ರಾಯನ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯತ್ವವನ್ನು ಒಪ್ಪಿಕೊಂಡದ್ದಕ್ಕಾಗಿಯೋ ಅಥವಾ ಸೈಮನ್ ಕಮಿಷನ್‌ನೊಂದಿಗೆ ಮಾತುಕತೆಗೆ ಮುಂದಾದರು ಎಂಬ ಕಾರಣಕ್ಕಾಗಿಯೋ ಅವರು ಬ್ರಿಟಿಷರ ಕೈಗೊಂಬೆಯಾಗಿದ್ದರು ಎಂದು ವಾದಿಸುವವರೆಲ್ಲ ಪೂರ್ವಗ್ರಹಪೀಡಿತರು ಎನ್ನದೇ ವಿಧಿಯಿಲ್ಲ. ಇದು ಚರಿತ್ರೆಯ ಬಗ್ಗೆ ಅವರಿಗಿರುವ ಹಸಿಬಿಸಿ ಮಾಹಿತಿಯ ತೀರ್ಮಾನವಲ್ಲದೆ ಬೇರೇನೂ ಅಲ್ಲ. ಅಷ್ಟೇ ಅಲ್ಲ, ಅದು ಅವರ ಚಾರಿತ್ರಿಕ ಪ್ರಜ್ಞೆಯ ಬಡತನವೂ ಹೌದು, ಆಂತರ್ಯದ ಜಾತಿಐತೆಯ ವಾಂತಿಯೂ ಹೌದು. ತೋರಿಕೆಗೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಭಾಗವಾಗಿದ್ದೂ ಜನತೆಯ ಸಬಲೀಕರಣದ ಮೂಲಕ ಆ ಸಾಮ್ರಾಜ್ಯದ ತಾಯಿ ಬೇರಿಗೇ ಕೊಡಲಿ ಹಾಕಲು ಯತ್ನಿಸಿದ್ದ ಬಾಬಾ ಸಾಹೇಬರಿಗೂ ಮತ್ತು ಇತರ ಸೋಗಲಾಡಿ ರಾಷ್ಟ್ರೀಯವಾದಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೊರಗೆ ಸಾಮ್ರಾಜ್ಯಶಾಹಿ ವಿರೋಧಿ ಮುಖವಾಡ ಧರಿಸಿ ಒಳಗೊಳಗೆ ಅದರ ಆಧಾರಸ್ತಂಭಗಳನ್ನು ಗಟ್ಟಿಗೊಳಿಸುತ್ತಿದ್ದ ಖೋಟಾ ದೇಶಭಕ್ತರನ್ನು ಬಾಬಾ ಸಾಹೇಬರೊಂದಿಗೆ ಹೋಲಿಸುವುದೇ ತಪ್ಪು. ಆದ್ದರಿಂದ ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಹೋಲಿಕೆಯ ಬಗ್ಗೆ ನಾವಿಂದು ಪುನರ್ ಚಿಂತನೆ ನಡೆಸಬೇಕಾಗಿದೆ.

ಬ್ರಿಟಿಷ್ ಆಳ್ವಿಕೆಗೆ ಸಂಬಂಧಿಸಿದಂತೆ ಡಾ. ಅಂಬೇಡ್ಕರರು ಮುಖ್ಯವಾಗಿ ಎರಡು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದು, ಕಾಂಗ್ರೆಸ್ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರೋಧದ ಮೂಲಕ ನಡೆದ ತಥಾಕಥಿತ ಸ್ವಾತಂತ್ರ್ಯ ಹೋರಾಟ. ಮೂಲತಃ ಕಾಂಗ್ರೆಸ್ಸು ಪಾಳೆಗಾರಿಕೆ ಪ್ರಭುಗಳನ್ನು ಮತ್ತು ನಗರದ ಬಂಡವಾಳಶಾಹಿಗಳನ್ನು ಪ್ರತಿನಿಧಿಸುವ ಒಂದು ಆಳುವ ವರ್ಗದ ಸಂಘಟನೆ, ಭಾರತೀಯ ಜನಪದರನ್ನು ಸುಲಿದು ಶೋಷಿಸುತ್ತಿದ್ದ ಎರಡು ಅವಳಿ ಶಕ್ತಿಗಳ ಜಂಟಿ ಸಂಘಟನೆ ಎನ್ನುವುದು ಬಾಬಾ ಸಾಹೇಬರ ವಾದವಾಗಿತ್ತು. ಗಾಂಧೀಜಿಯ ಚಿತ್ತಾಕರ್ಷಕ ವ್ಯಕ್ತಿತ್ವದ ಮೂಲಕ ಅದು ಅಸಂಖ್ಯಾತ ಜನರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿತ್ತಾದರೂ, ವಾಸ್ತವವಾಗಿ ಅಧಿಕಾರದಲ್ಲಿ ಹೆಚ್ಚಿನ ಪಾಲುದಾರಿಕೆ ದೊರಕಿಸಿಕೊಳ್ಳಲು ಅದು ವಸಾಹತುಶಾಹಿ ಆಳರಸರೊಂದಿಗೆ ಹೆಚ್ಚಾಗಿ ಚೌಕಾಸಿ ಮಾಡುವುದರಲ್ಲಿಯೇ ತಲ್ಲೀನವಾಗಿರುತ್ತಿತ್ತು. ಜನಪದರ ಬೆಂಬಲದ ಚೌಕಾಸಿ ರಾಜಕಾರಣವೇ ಕಾಂಗ್ರೆಸ್ಸಿನ ಜೀವಜೀವಾಳವಾಗಿತ್ತು. ಹಾಗೆಂದೇ ಅದು ೧೯೪೨ರಂತೆ ಸ್ವಯಂಸ್ಫೂರ್ತಿಯಿಂದ ಧುಮ್ಮಿಕ್ಕಿ ಹೊರಬಂದ ಜನತೆಯ ಆಂದೋಲನಗಳನ್ನು ಅದು ಮಾಡಲು ಪ್ರಯತ್ನಿಸಿತು. ಜನತೆಯ ಸಾಮೂಹಿಕ ಹೋರಾಟದ ಎಲ್ಲ ಸಂದರ್ಭಗಳಲ್ಲೂ ಅದು ಹೀಗೇ ನಡೆದುಕೊಂಡದ್ದಕ್ಕೆ ವಿಪುಲ ಸಾಕ್ಷಿ ಸಿಕ್ಕುತ್ತವೆ. ಅದರ ಈ ಸ್ವಭಾವದಿಂದಾಗಿಯೇ ಭಗತ್‌ಸಿಂಗರಂತಹ ಕ್ರಾಂತಿಕಾರಿಗಳ ಸಾಮ್ರಾಜ್ಯಶಾಹಿ ವಿರೋಧದ ನೈಜ ಹೋರಾಟಗಳನ್ನು ಅದು ಹೊಸಕಿ ಹಾಕಲು ಸಾಕಷ್ಟು ಪ್ರಯತ್ನಿಸಿತು. ನಿಜವೆಂದರೆ, ಕಾಂಗ್ರೆಸ್ಸಿಗೆ ಇಂತಹ ಹೋರಾಟಗಳನ್ನು ಕಂಡರಾಗುತ್ತಿರಲಿಲ್ಲ. ಹೀಗೆ, ಬಾಬಾ ಸಾಹೇಬರು ಕಾಂಗ್ರೆಸ್ಸಿನ ಸ್ವಭಾವದ ಒಳಮುಖವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದರೆನ್ನಿಸುತ್ತದೆ. ತಮ್ಮದೇ ಆದ ರೀತಿಯಲ್ಲಿ ಕಾಂಗ್ರೆಸ್ಸಿನ ಅಂತರಂಗ ಬಹಿರಂಗವನ್ನು ಬಲ್ಲವರಾಗಿದ್ದ ಅವರು, ಕಾಂಗ್ರೆಸ್ಸು ನಿಜವಾಗಿಯೂ ಸಾಮ್ರಾಜ್ಯಶಾಹಿ ವಿರೋಧಿಸಿ ಸಂಗ್ರಾಮ ಸಾರಿದ್ದರೆ, ನಾನು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೆ ಎಂದು ಹೇಳಿದುಂಟು. ಈ ಆವೇಶದ ಮಾತಿನ ಅರ್ಥ ಒತ್ತಟ್ಟಿಗಿರಲಿ. ಯಾಕೆಂದರೆ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದಲ್ಲಿ ನಿಜವಾಗಿಯೂ ತೊಡಗಿಕೊಂಡಿದ್ದ ಇತರರ ಬಗ್ಗೆಯೂ ಅಂದರೆ, ಭಗತ್‌ಸಿಂಗ್ ಮುಂತಾದವರ ಬಗ್ಗೆಯೂ ಅವರು ಅಷ್ಟಾಗಿ ಗಮನ ಹರಿಸಿಲ್ಲವೆಂಬುದು ಸ್ಪಷ್ಟ. ಆದರೂ, ಈ ಮಾತು ಸಾಮ್ರಾಜ್ಯಶಾಹಿಗಳ ಬಗ್ಗೆ ಅವರ ನಿಲುವನ್ನು ನಿಚ್ಚಳಗೊಳಿಸುತ್ತದೆ. ಜೊತೆಗೆ ಕಾಂಗ್ರೆಸ್ಸಿನ ವರ್ಗ ಸ್ವಭಾವದ ಬಗ್ಗೆ ಅವರಿಗಿದ್ದ ಅಸಂದಿಗ್ಧ ಅರಿವನ್ನೂ ತೋರಿಸುತ್ತದೆ. ಕಾಂಗ್ರೆಸ್ಸು ಏನೆಲ್ಲ ಮಾಡಿದರೂ ಅದರ ವರ್ಗ ಸ್ವಭಾವದಿಂದಾಗಿಯೇ ಅದು ವಾಸ್ತವವಾಗಿ ತನ್ನ ಪಾತ್ರವನ್ನು ನಿರ್ವಹಿಸಲಾರದೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕಾಂಗ್ರೆಸ್ಸಿನ ಮುಖವಾಡದ ಹಿಂದೆ ಅವಿತುಕೊಂಡಿದ್ದ ನಿಜವಾದ ವಿಷದ ಹಲ್ಲುಗಳು ಸದಾ ಜನಪದರನ್ನು ಹರಿದು ತಿನ್ನಲು ಹವಣಿಸುತ್ತಿದ್ದವು ಎಂಬುದು ಬಾಬಾ ಸಾಹೇಬರ ಸೂಕ್ಷ್ಮ ದೃಷ್ಟಿಗೆ ಸ್ಪಷ್ಟವಾಗಿ ಗೋಚರಿಸಿತ್ತು. ಆದ್ದರಿಂದ ಬಹುಶಃ ವಸಾಹತುಶಾಹಿ ಆಳರಸಗಿಂತಲೂ ಹೆಚ್ಚು ಶೋಷಿಸುತ್ತಿದ್ದ, ಶೋಷಕರ ಬೆಂಬಲಕ್ಕೆ ನಿಲ್ಲುತ್ತಿದ್ದ ಕಾಂಗ್ರೆಸ್ಸಿನ ಜೊತೆಗೂಡುವುದು ಅರ್ಥವಿಲ್ಲದ್ದು ಎಂಬ ಅಭಿಪ್ರಾಯ ಅವರದಾಗಿತ್ತು. ಬಹುಶಃ ಆ ಕಾರಣಕ್ಕಾಗಿಯೇ ದಲಿತರ ವಿಮೋಚನೆಯ ದಾರಿಯಲ್ಲಿ ಆಗಾಗ ಅಡ್ಡಬರುತ್ತಿದ್ದ ಕಾಂಗ್ರೆಸ್ಸನ್ನು ಖುಲ್ಲಂ ಖುಲ್ಲಾ ವಿರೋಧಿಸಲು ಅವರು ಹಿಂಜರಿಯಲಿಲ್ಲ. ತಮ್ಮ ಪಾಳ್ಯದಲ್ಲಿಯೇ ಇದ್ದ ಕೆಲವು ಜನರ ಮೇಲೆ ನಡೆಯುತ್ತಿದ್ದ ಅಮಾನವೀಯ ಶೋಷಣೆಯ ಅಸ್ತಿತ್ವವನ್ನು ಗಮನಿಸದ ಹೋರಾಟಗಳು ಕೊಳೆತು ನಾರುತ್ತಿದ್ದವು. ಅಂತೆಯೇ ಜನತೆಯ ವಾಸ್ತವ ನೋವಿಗೆ ಬೆನ್ನು ತಿರುಗಿಸಿದ್ದವು. ಇಂಥ ಹೋರಾಟಗಳ ಆಂತರ್ಯದ ಕೊಳಕನ್ನು ಬಾಬಾ ಸಾಹೇಬರು ಚೆನ್ನಾಗಿಯೇ ಗುರುತಿಸಿದ್ದರು. ಡಾ. ಅಂಬೇಡ್ಕರರು ಎತ್ತಿದ್ದ ಇನ್ನೊಂದು ಪ್ರಶ್ನೆ ಹಿಂದೂ ಸಾಮ್ರಾಜ್ಯಶಾಹಿಗೆ ಸಂಬಂಧಿಸಿದ್ದುದು. ಅದು ತನ್ನ ಜಾತಿ ವ್ಯವಸ್ಥೆ ಮೂಲಕ ಬ್ರಿಟಿಷ್ ಆಳ್ವಿಕೆಗಿಂತಲೂ ಸಹಸ್ರ ಪಟ್ಟು ಕ್ರೂವಾಗಿ ಅಮಾನವೀಯವಾಗಿ ಶೋಷಿಸುತ್ತ ಬಂದಿದೆ. ಆದ್ದರಿಂದಲೇ ಅದರ ಕ್ರೌರ್ಯಕ್ಕೆ ಬಲಿಯಾದವರು ಬ್ರಿಟಿಷ್ ಆಳ್ವಿಕೆಯಲ್ಲಿ ಅಪ್ಯಾಯಮಾನವಾದದ್ದನ್ನೇ ನಿಲುವನ್ನು ಪ್ರಶ್ನಿಸುವವರು, ಅದರ ಸಂದರ್ಭದಲ್ಲಿ ಬಾಬಾ ಸಾಹೇಬರು ಭಾರತದ ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಈ ದೇಶದ ಜಾತಿವ್ಯವಸ್ಥೆಯ ಕುರಿತ ಪ್ರಶ್ನೆ ಯಾಕೆ ಚರ್ಚೆಗೆ ಬರಲಿಲ್ಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಷ್ಟೇ ದೊಡ್ಡ ದೊಡ್ಡ ಮಾತುಗಳಾಡುತ್ತಿದ್ದರೂ, ಒಮ್ಮೆಯೂ ಜಾತಿವ್ಯವಸ್ಥೆಯ ಬಗ್ಗೆ ಅಥವಾ ತನ್ನ ಐದನೆಯ ಒಂದು ಭಾಗದಷ್ಟು ಅಮಾಯಕ ಜನತೆಯನ್ನು ಪಶು ಸದೃಶವಾದ ದಾರುಣ ಸ್ಥಿತಿಗಿಳಿಸಿದ್ದ ಅಸ್ಪೃಶ್ಯತೆಯ ಬಗ್ಗೆ ವಿರೋಧಿ ಹೋರಾಟದ ಅಭಿಲಾಷೆಯನ್ನು ಸಮಾಜದ ವರ್ಗವರ್ಣ ವಿಭಜನೆಯ ಸಂದರ್ಭದಲ್ಲಿಟ್ಟು ನೋಡಬೇಕಾಗಿದೆ. ಕಳೆದುಕೊಂಡಿದ್ದ ತಮ್ಮ ಗದ್ದುಗೆಗಳ ಪುನರ್ ಪ್ರಾಪ್ತಿಗಾಗಿ ಸೋತ ಪ್ರಭುಗಳು ಸಾರಿದ್ದ ಕದನಕ್ಕೆ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಮುಖವಾಡ ತೊಡಿಸಿ, ಪಾಳೆಗಾರಿಕೆ ವಿರುದ್ಧ ಹೋರಾಟದ ಮೂಲಕ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಅಭಿಲಾಷೆಯನ್ನಿರಿಸಿಕೊಂಡಿದ್ದ ಜನತೆಯ ನೈಜ ಹೋರಾಟವನ್ನು ಸಾಮ್ರಾಜ್ಯಶಾಹಿ ಪರ ಹೋರಾಟವೆಂದು ಖಂಡಿಸಲಾಗುತ್ತಿತ್ತು. ಯಾಕೆಂದರೆ, ಪಾಳೇಗಾರಿ ಪ್ರಭುಗಳ ವಿರುದ್ಧದ ಹೋರಾಟವು ತನ್ನ ಬಂದೂಕನ್ನು ನೇರವಾಗಿ ಸಾಮ್ರಾಜ್ಯಶಾಹಿಗಳ ಕೈಕಾಲುಗಳಾಗಿದ್ದವರೆಡೆಗೆ ತಿರುಗಿಸಿತ್ತು. ಸಹಜವಾಗಿಯೇ, ತಮ್ಮೆಡೆಗೆ ಗುರಿಯಿಟ್ಟಿರುವ ಜನತೆಯ ಹೋರಾಟವನ್ನು ಪಾಳೇಗಾರಿಕೆ ಪ್ರಭುಗಳು, ದೇಶಿ ಬಂಡವಾಳಶಾಹಿಗಳು ತಮಗೆ ಸಾಧ್ಯವಿದ್ದ ಎಲ್ಲ ಮಾರ್ಗಗಳನ್ನು ಅನುಸರಿಸಿ ಸದೆಬಡಿಯಲು ಪ್ರಯತ್ನಿಸಿದ್ದರು. ಸಾಮ್ರಾಜ್ಯಶಾಹಿ ವಿರೋಧದ ನೈಜ ಅಭಿಲಾಷೆ ಜನತೆಯದಾಗಿತ್ತು. ಅಂತಹ ಅಭಿಲಾಷೆ ಸಾಕಾರಗೊಳ್ಳುವುದು. ಸಾರ್ಥಕಗೊಳ್ಳುವುದು ಕೇವಲ ಜನಾಂದೋಲನದಿಂದ ಮಾತ್ರ ಸಾಧ್ಯ. ಜನತೆ ಆರಂಭಿಸಿದ್ದ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನು ಖೋಟಾ ದೇಶಭಕ್ತರು ಅನತಿ ಕಾಲದಲ್ಲೆ ಅಪಹರಣ ಮಾಡಿದ್ದರು. ಅವರ ನಿಜವಾದ ಉದ್ದೇಶ ಸ್ಪಷ್ಟವಾಗಿತ್ತು. ದೇಶೀಯ ಹೊಡೆದುಕೊಳ್ಳುವಂತೆ ಸಹಾಯ ಮಾಡುವುದು. ಭಾರತ ಮಾತೆಯ ಶೋಷಕ ಪುತ್ರರು ಬ್ರಿಟಿಷ್ ವಿರೋಧಿ ಹೋರಾಟದ ನಾಟಕದ ದೃಶ್ಯಾವಳಿಗಳನ್ನು ಅಭಿನಯಿಸುತ್ತಿದ್ದಾಗಲೇ ಬಾಬಾ ಸಾಹೇಬರು ಅದೇ ಮಾತೆಯ ಶೋಷಿತರ ನೈಜ ವಿಮೋಚನೆಗಾಗಿ, ಮೇಲ್ಮೆಗಾಗಿ ಹೋರಾಟದ ದಾರಿ ದಿಕ್ಕುಗಳನ್ನು ರೂಪಿಸುವುದರಲ್ಲಿ ತಲ್ಲೀನರಾಗಿದ್ದರು.

ಮಹಿಳೆಯರ ಮೇಲಿನ ದಬ್ಬಾಳಿಕೆ

ಬಾಬಾ ಸಾಹೇಬರು ಶೋಷಣೆಯ ಮುಖ್ಯ ಪ್ರವಾಹಗಳನ್ನಲ್ಲದೆ ಅವುಗಳ ಉಪಪ್ರವಾಹಗಳನ್ನೂ ಸಾಕಷ್ಟು ಕಾಳಜಿಯಿಂದಲೇ ಗಮನಿಸಿದ್ದರು. ಮಹಿಳಾ ಶೋಷಣೆಯಂತಹ ವಿಷಯವನ್ನೂ ಅವರು ಗಂಭೀರವಾಗಿಯೇ ಪರಿಶೀಲಿಸಿದ್ದರು. ಅದೂ ಅವರ ಕಾರ್ಯಚಟುವಟಿಕೆಯ ಪ್ರಧಾನ ಪಟ್ಟಿಯಲ್ಲಿತ್ತು. ಅವರ ದೃಷ್ಟಿಯಲ್ಲಿ ಮಹಿಳೆ ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಹೆಚ್ಚು ದಬ್ಬಾಳಿಕೆಗೆ ಒಳಗಾದವಳು. ಮಹಿಳಾ ಸಮಸ್ಯೆಗಳನ್ನು ಬಗೆಹರಿಸಲು ಅವರು ಅನುಸರಿಸಿದ ಮಾರ್ಗ ವಿಶಿಷ್ಟವಾಗಿತ್ತು. ಇಲ್ಲಿ ಅವರು ಒಬ್ಬ ಉದಾರವಾದಿ ಪ್ರಜಾತಾಂತ್ರಿಕನ ಮಾರ್ಗ ಅನುಸರಿಸಿದ್ದರು. ಹಾಗಾಗಿ, ಇನ್ನುಳಿದ ಅನೇಕ ವಿಷಯಗಳಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಕೂಡಾ ಈ ಸಮಸ್ಯೆ ಕುರಿತಂತೆ ಅವರ ಅಭಿವ್ಯಕ್ತಿಗೆ ಅನೇಕ ಮಿತಿಗಳು ಕಾಣಿಸಿಕೊಂಡವು. ಆ ಮಿತಿಗಳು ಅವರು ಅನುಸರಿಸಿದ ಮಾರ್ಗದಿಂದಲೇ ಉದ್ಭವಿಸಿದವು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಬಾಬಾ ಸಾಹೇಬರನ್ನು ಪುನರ್ ನಿರೂಪಿಸುವ ಯೋಜನೆಯಲ್ಲಿ ದಲಿತರು ಈ ವಿಷಯವನ್ನು ಕುರಿತು ಬಹುಗಂಭೀರವಾಗಿ ಚಿಂತಿಸಬೇಕಾಗಿದೆ. ತಮಗೆ ದೊರೆತ ಯಾವುದೇ ಅವಕಾಶದಲ್ಲಿಯೂ, ಸಮಾಜದಲ್ಲಿಯ ಮಹಿಳೆಯರ ದಯನೀಯ ಸ್ಥಿತಿ, ಅವರಿಗೆ ನೀಡಲಾಗುತ್ತಿದ್ದ ತಾರತಮ್ಯದ ಉಪಚಾರದಂತಹ ಯಾವುದೇ ಸಮಸ್ಯೆ ವಿರುದ್ಧ ಅವರು ತಮ್ಮ ದನಿ ಎತ್ತುತ್ತಿದ್ದರು ಎಂಬುದನ್ನು ಇಲ್ಲಿ ಹೇಳಿದರೂ ಸಾಕು. ಸಮಾಜ ನಿರ್ಮಾಣದ ಅವರ ಮೂಲಭೂತ ನಿಯಮಗಳ ಪ್ರಕಾರ, ಸಮಾಜದ ಅತ್ಯಂತ ತುಳಿತಕ್ಕೊಳಗಾದವನ, ಕಟ್ಟಕಡೆಯ ಮನುಷ್ಯನ ನೆಲೆಯಿಂದಲೇ ಸಾಮಾಜಿಕ ಕ್ರಾಂತಿಗಳು ಆರಂಭವಾಗಬೇಕು. ಮೂಕನಾಯಕ ಮತ್ತು ಬಹಿಷ್ಕೃತ ಭಾರತದಂತಹ ಪತ್ರಿಕೆಯ ದಿನಗಳಿಂದಲೂ ಅವರು ಮಹಿಳೆಯರ ನ್ಯಾಯಕ್ಕಾಗಿ ಕಂಕಣಬದ್ಧರಾಗಿದ್ದುದನ್ನು ಕಾಣುತ್ತೇವೆ. ಅವರು ತಮ್ಮ ಎಲ್ಲ ಹೋರಾಟಗಳಲ್ಲಿ ಮಹಿಳೆಯರನ್ನು ಒಳಗೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಅವರಿಗೆ ಯಾವಾಗಲೂ ಮುಂಚೂಣಿಯ ಸ್ಥಾನವನ್ನು ಕಲ್ಪಿಸಿಕೊಡುತ್ತಿದ್ದರು. ಆದ್ದರಿಂದ ಮಹಿಳೆಯರ ಸಮಸ್ಯೆಯ ಬಗ್ಗೆ ಅವರಿಗಿದ್ದ ಕಾಳಜಿ ಕಳಕಳಿ ಅನುಪಮ ರೂಪದ್ದಾಗಿತ್ತು. ಉದಾಹರಣೆಗೆ ಮಹಾಡ್ ಹೋರಾಟದ ಸಂದರ್ಭದಲ್ಲಿ ಅವರು ರೂಪಿಸಿದ್ದ ಚರಿತ್ರಾರ್ಹ ಮೆರವಣಿಗೆಯ ಮುಂಚೂಣಿಯಲ್ಲಿ ಸುಮಾರು ೫೦೦ ಮಹಿಳೆಯರು ಧೈರ್ಯ, ಧೀಮಂತಿಕೆಯಿಂದ ಹೆಜ್ಜೆ ಹಾಕಿದ್ದರು. ಸಾರ್ವಜನಿಕ ಕೆರೆಯಿಂದ ನೀರು ಕುಡಿಯುವ ಅಸ್ಪೃಶ್ಯರ ಹಕ್ಕೊತ್ತಾಯಕ್ಕಾಗಿ ನಡೆದ ಆ ಆಂದೋಲನದಲ್ಲಿ ಮಹಿಳೆಯರು ನಿರ್ವಹಿಸಿದ ಪಾತ್ರ ಚಿರಸ್ಮರಣೀಯ. ಮನುಸ್ಮೃತಿಯಂತಹ ಹಿಂದೂಶಾಸ್ತ್ರ, ಸ್ಮೃತಿ ಸಂಹಿತೆಗಳು ಮಹಿಳೆಯರನ್ನು ಶೈಕ್ಷಣಿಕ ಅವಕಾಶಗಳಿಂದ, ಧಾರ್ಮಿಕ ಹಕ್ಕುಗಳಿಂದ ಖಾಯಂ ಆಗಿ ವಂಚಿತರನ್ನಾಗಿ ಮಾಡಿದ್ದು ಬಾಬಾ ಸಾಹೇಬರಿಗೆ ಅಪಾರ ನೋವನ್ನುಂಟುಮಾಡಿತ್ತು. ಈ ಕುರಿತು ಅವರು ಅನುಭವಿಸಿದ ಯಾತನೆ ಮಾತಿಗೆ ಮೀರಿದ್ದು. ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಅವರ ಮನಸ್ಸು ಎಂದೂ ಒಪ್ಪುತ್ತಿರಲಿಲ್ಲ. ಪ್ರಜಾತಾಂತ್ರಿಕ ಪ್ರಜ್ಞೆಯ ಮೂರ್ತರೂಪವಾಗಿದ್ದ ಅವರು ಈ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಈ ಕುರಿತು ಹೆಚ್ಚು ಮಾತಾಡಿದರೆ, ಅದೊಂದು ಪುರುಷ ಕೇಂದ್ರಿತ ತಂತ್ರವೆಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂಬ ಅಳುಕು ಎಷ್ಟೇ ಸಲ ಅವರ ಮಾತಿಗೆ ಮಿತಿ ಹೇರಿತೆಂದು ಕಾಣುತ್ತದೆ. ಸಾಮಾನ್ಯವಾಗಿ ಮಹಿಳೆರು ತಮ್ಮ ಮಕ್ಕಳ ಬದುಕನ್ನು ಸರಿಯಾಗಿ ರೂಪಿಸಬಲ್ಲ ಒಳ್ಳೆಯ ತಾಯಂದಿರಾಗಬೇಕೆಂದು, ಒಳ್ಳೆಯ ಗೃಹಿಣಿಯರಾಗಬೇಕೆಂದು ಆ ಮೂಲಕ ಸಮುದಾಯದ ಸಾಂಸ್ಕೃತಿಕ ಬಳುವಳಿಯ ವಾಹಕರಾಗಬೇಕೆಂದು ಬಯಸುತ್ತಿದ್ದರಾದರೂ, ಅವರು ಮಂಡಿಸಿದ್ದ ಹಿಂದೂ ಕೋಡ್‌ಬಿಲ್‌ನಿಂದ ನಿಚ್ಚಳವಾಗಿ ಸಾಬೀತಾಗಿರುವಂತೆ, ಅವರು ಮಹಿಳಾ ಸಮಾನತೆಯ ಹಕ್ಕುಗಳಿಗಾಗಿಯೂ ಸಾಕಷ್ಟು ಹೋರಾಡಿದ್ದರು. ನಮ್ಮ ಸಮಕಾಲೀನ ಸಂದರ್ಭದಲ್ಲಿ ಸಮಾಜಸಮ್ಮತವಾಗಿ, ಧರ್ಮಸಮ್ಮತವಾಗಿ ಜರುಗುತ್ತಿರುವ ವಿವಾಹಗಳ ಬಗ್ಗೆ ಅವರು ಆಡಿರುವ ಮಾತು ತುಂಬ ಮಾರ್ಮಿಕವಾಗಿದ್ದವು. ಅವರ ಪ್ರಕಾರ ಈ ಮದುವೆಗಳು ಪುರುಷನಿಗೆ ಬಹು ಪತ್ನಿತ್ವದ ಅವಕಾಶ ಕಲ್ಪಿಸಿಕೊಟ್ಟರೆ, ಮಹಿಳೆಯರನ್ನು ನಿರಂತರ ದಾಸ್ಯಕ್ಕೆ ದೂಡುತ್ತಿವೆ. ಯಾಕೆಂದರೆ, ಗಂಡ ಎಷ್ಟೇ ಕೆಟ್ಟವನಾಗಿದ್ದರೂ, ಅವನೊಂದಿಗಿನ ದಾಂಪತ್ಯದ ಬದುಕು ಎಷ್ಟೇ ಧಾರುಣವಾಗಿದ್ದರೂ ಮಹಿಳೆ ಅವನಿಂದ ಬಿಡುಗಡೆ ಪಡೆಯುವುದಿಲ್ಲ. ಕಣ್ಣೀರಲ್ಲಿ ಕೈ ತೊಳೆಯುತ್ತ, ಹತಾಶೆಯ ನಿಟ್ಟುಸಿರುಬಿಡುತ್ತ ದಿನಗೆಳೆಯುವುದೇ ಅವಳ ಮೋಕ್ಷದ ದಾರಿ. ಇಂತಹ ಅಸಹ್ಯ ಸ್ಥಿತಿಯಿಂದ ಮಹಿಳೆಯರನ್ನು ಮೇಲೆತ್ತುವ ಗಂಭೀರ ಗುರಿ ಅವರಿಗಿತ್ತು. ಆದ್ದರಿಂದಲೇ ಮಹಿಳೆಗೆ ಅವಳಿಚ್ಫೆಗನುಗುಣವಾಗಿ ವಿವಾಹ ಬಂಧನದಿಂದ ಹೊರಹೋಗುವ ಸ್ವಾತಂತ್ರ್ಯ ಇರಬೇಕೆಂದು ಅವರು ವಾದಿಸಿದ್ದರು.