ಅಂಬೇಡ್ಕರ್ ರ ವಿಚಾರಗಳನ್ನು ವಿದ್ವಾಂಸರು ವಿಧವಿಧವಾಗಿ ಸಾದರಪಡಿಸಿದ್ದಾರೆ. ಕೆಲವರು ತೀರ ಪರಿಚಿತವಾದ ಅಕಾಡೆಮಿಕ್ ದೃಷ್ಟಿಯಿಂದ ವಿಭಾಗಿಸಿ ಅಧ್ಯಯನ ಮಾಡಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಜೀವನ ಚರಿತ್ರಾತ್ಮಕ ವಿಧಾನದಿಂದ ವಿಶ್ಲೇಷಣೆ ಮಾಡಲು ಪ್ರಯತ್ನಿಸಿದ್ದಾರೆ. ಅಂದರೆ, ಕೆಲವರು ಅವರ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ಮುಂತಾದ ವಿಚಾರಧಾರೆಗಳನ್ನು ಬೇರೆ ಬೇರೆಯಾಗಿಯೇ ಪ್ರಭಾವಿಸಲು ಪ್ರಯತ್ನಿಸಿದರೆ ಇನ್ನು ಕೆಲವರು ಅವರ ಬದುಕು ಬರಹಗಳನ್ನು ಒಟ್ಟಾರೆಯಾಗಿ ಗ್ರಹಿಸಲು ಯತ್ನಿಸಿದ್ದಾರೆ. ಮೊದಲನೇ ಗುಂಪಿನವರ ಸಮಸ್ಯೆಯೆಂದರೆ, ಅವರು ಬಾಬಾಸಾಹೇಬರ ವಿಚಾರಧಾರೆಯನ್ನು ಅಕಾಡೆಮಿಕ್ ಶಿಸ್ತಿನ ಕೃತ್ರಿಮ ಕಂಪಾರ್ಟ್‌ಮೆಂಟ್‌ಗಳನ್ನಾಗಿ ವಿಭಜಿಸಲು ಬಯಸುತ್ತಾರೆ. ಎರಡನೆ ಗುಂಪಿನವರದು ಇದಕ್ಕೆ ವ್ಯತಿರಿಕ್ತವಾದ ಸಮಸ್ಯೆ. ಇವರು ಸಾಮಾನ್ಯವಾಗಿ ವರ್ಣನಾತ್ಮಕ ಧಾಟಿಯಲ್ಲಿ ಆರಂಭಿಸಿ, ಸ್ತುತಿ, ಶ್ಲಾಘನೆಯಲ್ಲಿಯೇ ತಮ್ಮ ಶಕ್ತಿ ವ್ಯಯ ಮಾಡಿಕೊಳ್ಳುತ್ತಾರೆ. ಇವರೆಂದೂ ತರ್ಕಬದ್ಧವಾದ ವಿಶ್ಲೇಷಣೆಗೆ ತೊಡಗುವುದೇ ಇಲ್ಲ. ಹೀಗಾಗಿ, ಎರಡೂ ಗುಂಪಿನವರು ನೈಜ ದೃಷ್ಟಿಯಿಂದ ಬಹುದೂರವೇ ಉಳಿದು ಬಿಡುತ್ತಾರೆ. ಜೊತೆಗೆ ಸಮಗ್ರ ದೃಷ್ಟಿಗೆ ಮಾತ್ರ ದಕ್ಕಬಲ್ಲ ಸೈದ್ಧಾಂತಿಕ ವ್ಯಾಖ್ಯಾನದ ಸಾಧ್ಯತೆಯನ್ನು ಕಳೆದುಕೊಳ್ಳುತ್ತಾರೆ. ಭವಿಷ್ಯತ್ತಿನಲ್ಲಿ ಬಾಬಾ ಸಾಹೇಬರ ವಿಚಾರಧಾರೆಗಳು ಪಡೆದುಕೊಳ್ಳಬಹುದಾದ ಆಯಾಮಗಳನ್ನು ಗ್ರಹಿಸಲು ವಿಫಲರಾಗುತ್ತಾರೆ. ಅಖಂಡ ದೃಷ್ಟಿ ಪರಿಕಲ್ಪನೆಯ ನೆಲೆಯಿಂದ ಮಾತ್ರ ಬಾಬಾ ಸಾಹೇಬರ ಸೈದ್ಧಾಂತಿಕತೆಯ ಸ್ವರೂಪವನ್ನು, ಅದರ ಅನಂತ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳಬಹುದು.

ಮಹಾವ್ಯಕ್ತಿಗಳ ದೃಷ್ಟಿ ಮತ್ತು ಅವರ ಪ್ರತಿಮೆಗಳು

ಪ್ರತಿಯೊಬ್ಬ ಮಹಾವ್ಯಕ್ತಿಗೂ ಅವನದೇ ಆದ ಒಂದು ದೃಷ್ಟಿಕೋನ ಇರುತ್ತದೆ. ಬದುಕಿನ ಬಗೆಗೆ ಅವನದೇ ಆದ ವಿಶಿಷ್ಟ ಒಳನೋಟಗಳಿರುತ್ತವೆ. ಅವನ ಎಲ್ಲ ನಡೆ ನುಡಿಗಳ ಹಿಂದೆ ಆ ದೃಷ್ಟಿಕೋನ, ನೋಟಗಳೇ ಚಾಲಕಶಕ್ತಿಯಾಗಿ ಕೆಲಸ ಮಾಡುತ್ತವೆ. ಈ ದೃಷ್ಟಿಯ ತೀಕ್ಷ್ಣತೆ, ಅದರ ಸದಸದ್ವಿವೇಕದ ಮೊನಚು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ ಅಥವಾ ಒಬ್ಬನೇ ವ್ಯಕ್ತಿಯಲ್ಲಿಯೂ ಕಾಲ ದೇಶಗಳಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುವುದೂ ಇದೆ. ಅವುಗಳನ್ನು ನಿರ್ಧರಿಸುವ ಅಂಶಗಳು ಹಲವಾರು. ಆಯಾ ವ್ಯಕ್ತಿಯನ್ನು ಆವರಿಸಿರುವ ಆಯಾಕಾಲದ ಪರಿಸರ, ಅದರಿಂದ ಹೊರಹೊಮ್ಮುವ ಪರಿಸ್ಥಿತಿಯ ತಳಮಳ, ಆ ಸನ್ನಿವೇಶದಲ್ಲಿ ವ್ಯಕ್ತಿಗಿರುವ ಅಧಿಕಾರದ ಸ್ಥಾನಮಾನ ಇವೆಲ್ಲವನ್ನು ಏಕಕಾಲಕ್ಕೆ ಎದುರಿಸಿ ಎದೆಗೊಡಬಲ್ಲ ಸಾಮರ್ಥ್ಯ ಮತ್ತು ಚರಿತ್ರೆಯ ಆ ಘಟ್ಟದಲ್ಲಿ ತನ್ನ ಪಾತ್ರದ ಬಗ್ಗೆ ಆ ವ್ಯಕ್ತಿಗಿರುವ ಪ್ರಜ್ಞೆ, ಪರಿಕಲ್ಪನೆ ಇವೆಲ್ಲವು ಅವನ ಕಾರ್ಯದ ಜಾಲಶಕ್ತಿಯಾಗಿರಂತೆಯೇ ಅವನ ದೃಷ್ಟಿ ಧ್ಯೇಯಗಳ ನಿರ್ಧಾರಕ ಅಂಶಗಳೂ ಆಗಿರುತ್ತವೆ. ಉದಾಹರಣೆಗೆ, ಕ್ರಾಂತಿಕಾರಿ ಪರಿವರ್ತನೆಯ ತಾತ್ವಿಕ ಹರಿಕಾರನಾಗಿ ಮಾರ್ಕ್ಸ್ ತನ್ನ ದೃಷ್ಟಿಯನ್ನು ಅತ್ಯಂತೆ ನಿಚ್ಚಳವಾದ, ಅಷ್ಟೇ ಸ್ಪಷ್ಟವಾದ ಶಬ್ದಗಳಲ್ಲಿ ಪ್ರತಿಪಾದಿಸಿದರೆ, ಅಂಬೇಡ್ಕರರು ಸಾಮಾಜಿಕ ಬದಲಾವಣೆಗಾಗಿ ಸಾಮೂಹಿಕ ನೇತೃತ್ವದ ಪಾತ್ರ ನಿರ್ವಹಿಸಬೇಕಾಯಿತು. ಮೂಲಭೂತವಾಗಿ ಮಾರ್ಕ್ಸ್‌ನು ಒಬ್ಬ ದೃಷ್ಟಾರನಾಗಿದ್ದರೆ, ಬಾಬಾಸೇಹೇಬರು ಒಬ್ಬ ಮಹಾನಿರ್ಮಾಪಕರಾಗಿದ್ದರು. ಇಡೀ ಮಾನವ ಕುಲದ ಚರಿತ್ರೆಯನ್ನು ಮುಗುಚಿ ಹಾಕುತ್ತ ಅದಕ್ಕೊಂದು ತಾತ್ವಿಕ ತಳಹದಿಯನ್ನು ನಿರ್ಮಿಸಲು, ವೈಚಾರಿಕ ಪ್ರಪಂಚದಲ್ಲಿ ಮೂಲತಃ ಹೋರಾಡುತ್ತಿದ್ದ ಮಾರ್ಕ್ಸ್‌ನ ಕಾರ್ಯಕ್ಷೇತ್ರದ ಪರಿವೇಶದ ಪ್ರಕ್ಷುಬ್ಧತೆ ತುಂಬ ಹೆಚ್ಚೇನು ಇರಲಿಲ್ಲ. ಆದರೆ ಅಂಬೇಡ್ಕರರು ತೊಡಗಿಸಿಕೊಂಡಿದ್ದ ಕಾಲದ ಭಾರತದ ರಾಜಕೀಯ ತಳಮಳ ಹೇಳಲಸದಳವಾಗಿತ್ತು.

ದೈನಂದಿನ ಮೂರ್ತ ಕ್ಲಿಷ್ಟ ಸಮಸ್ಯೆಗಳ ಸುಳಿಯಲ್ಲಿಯೇ ತಮ್ಮ ಹೋರಾಟದ ಹಾದಿ ಹುಡುಕುವ ಅನಿವಾರ್ಯತೆ ಅಂಬೇಡ್ಕರರಿಗಿತ್ತು. ಅತುಲ, ತುಮುಲ, ಸಂಘರ್ಷಗಳ ನಡುವೆಯೇ ತಮ್ಮ ಸಿದ್ಧಾಂತವನ್ನು ಸೃಜಿಸಿಕೊಳ್ಳಬೇಕಾದ ಅವಶ್ಯಕತೆ ಅವರಿಗಿತ್ತು. ಹೀಗಾಗಿ, ಅವರ ಹಾದಿ ಪ್ರಧಾನವಾಗಿ ಹೋರಾಟದ್ದಾಗಿತ್ತು. ಮಿಗಿಲಾಗಿ ಹೋರಾಟವೇ ಅವರ ಹಾದಿಯನ್ನು ರಚಿಸಿಕೊಡುತ್ತಿತ್ತು. ಹೋರಾಟ ಅವರ ತತ್ವವೂ ಆಗಿತ್ತು. ತಂತ್ರವೂ ಆಗಿತ್ತು. ಹೀಗೆಂದ ಮಾತ್ರಕ್ಕೆ ಮಾರ್ಕ್ಸ್‌ನು ಕೇವಲ ತತ್ವಪ್ರತಿಪಾದಕನಾಗಿದ್ದ, ಅವನೆಂದೂ ಕ್ರಿಯೆಗೆ ಇಳಿಯಲೇ ಇಲ್ಲ ಎಂದಾಗಲಿ, ಅವನು ತನ್ನ ಜೀವಮಾನದಲ್ಲಿ ಕಂಡುಂಡ ಕಷ್ಟನಷ್ಟಗಳು ಗೌಣವಾಗಿದ್ದವು ಎಂದಾಗಲಿ, ಅರ್ಥವಲ್ಲ. ತನ್ನ ತಾತ್ವಿಕ ಪ್ರತಿಪಾದನೆಯ ಕ್ರಿಯೆ, ಪ್ರಕ್ರಿಯೆಯ ಮಧ್ಯೆಯೂ ಅವನು ಅದರ ಅನುಷ್ಟಾನಕ್ಕೆ ಸಾಕಷ್ಟು ಪ್ರಯತ್ನಿಸಿದ್ದಾನೆ. ಮಾರ್ಕ್ಸ್‌ನ ಕಾರ್ಯಕ್ಷೇತ್ರಕ್ಕೆ ಹೋಲಿಸದರೆ, ಬಾಬಾ ಸಾಹೇಬರ ಕಾರ್ಯಕ್ಷೇತ್ರಕ್ಕೆ ಅನೇಕ ಮಿತಿಗಳಿದ್ದವು. ಅಂಬೇಡ್ಕರರ ಕಾರ್ಯದ ಶಕ್ತಿ ಹಾಗೂ ವ್ಯಾಪ್ತಿಯನ್ನು ನಿರ್ಬಂಧಿಸಿ ಮಿತಗೊಳಿಸಿದ್ದ ಅಧಿಕಾರ ವ್ಯವಸ್ಥೆಯಲ್ಲಿ ಅವರ ಸ್ಥಾನ ತುಂಬ ದುರ್ಬಲವಾಗಿತ್ತು. ಮಾರ್ಕ್ಸ್‌ನಿಗಿರದ ಹಲವಾರು ಎಡರು ತೊಡರುಗಳು ಅವರಿಗಿದ್ದವು. ವೈಯಕ್ತಿಕ ಶಕ್ತಿಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ಅವರಿಬ್ಬರೂ ಸಮಾನವಾಗಿಯೆ ಇದ್ದರು. ತಮ್ಮ ತಮ್ಮ ಸಂದರ್ಭಗಳಲ್ಲಿ ಎದುರಾದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಲ್ಲಿ, ಅವುಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅವರಿಬ್ಬರೂ ಅಷ್ಟೇ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಮಾರ್ಕ್ಸ್ ತಾತ್ವಿಕ ಅಧ್ಯಯನ, ವ್ಯಾಸಾಂಗದೊಂದಿಗೆ ಆರಂಭಿಸಿ ಕ್ರಮೇಣ ಕಾರ್ಮಿಕ ವರ್ಗದ ವರ್ಗಪ್ರಜ್ಞೆಯನ್ನು ಅಳವಡಿಸಿಕೊಂಡನು. ಇದಕ್ಕೆ ವ್ಯತಿರಿಕ್ತವಾಗಿ, ಅಂಬೇಡ್ಕರರು ಸ್ವಯಂಪ್ರಜ್ಞೆಯಿಂದಲೇ ಆರಂಭಿಸಿದರು. ಮಾರ್ಕ್ಸ್‌ನ ಅಧ್ಯಯನಶೀಲ ಸೂಕ್ಷ್ಮ ದೃಷ್ಟಿಗೆ ದಕ್ಕಿದ್ದ ವರ್ಗಪ್ರಜ್ಞೆ ಪರಾನುಭವ ಸ್ವರೂಪದ್ದು. ಅಂಬೇಡ್ಕರರ ಪ್ರಜ್ಞೆ ಸ್ವಾನುಭವ ಮೂಲದ್ದು, ಒಬ್ಬ ಅಸ್ಪೃಶ್ಯನ ಮೂರ್ತ ಅನುಭವದಿಂದ ಆವಿರ್ಭವಿಸಿದ್ದು, ನೇರ ಅನುಭವವೇ ಇವರ ತಾತ್ವಿಕ ಅನ್ವೇಷಣೆಗೆ ಇಂಬುಗೊಂಟ್ಟಿತ್ತು. ತನ್ನ ಕ್ರಾಂತಿಕಾರಿ ಕಾರ್ಯಯೋಜನೆ ಮತ್ತು ಅದರಲ್ಲಿ ತನ್ನ ಪಾತ್ರದ ಬಗ್ಗೆ ಮಾರ್ಕ್ಸ್‌ನಿಗೆ ಸಂಪೂರ್ಣ ಅರಿವಿತ್ತು. ಸಮಗ್ರ ಮಾನವತೆಯ ಹಿತಾಸಕ್ತಿಯನ್ನು ಸಂವಧಿಶಬಲ್ಲ ಬದಲಾವಣೆಗಾಗಿ ಕಾರ್ಮಿಕ ವರ್ಗ ಹೂಡಬೇಕಾಗಿದ್ದ ಹೋರಾಟಕ್ಕೆ ಅವಶ್ಯವಿದ್ದ ಸೈದ್ಧಾಂತಿಕ ಆಯುಧಗಳನ್ನು ಪೂರೈಸುವ ಕೆಲಸ ತನ್ನದೆಂಬುವ ತಿಳುವಳಿಕೆ ಅವನಿಗಿತ್ತು. ಆದರೆ ತಮ್ಮ ಸುತ್ತಲೂ ಆವರಿಸಿಕೊಂಡಿದ್ದ ರಾಜಕೀಯ ಚಕ್ರವ್ಯೂಹದ ಮಧ್ಯೆ ನಿಂತಿದ್ದ ಬಾಬಾ ಸಾಹೇಬರ ಹೆಗಲ ಮೇಲೆ ಅನೇಕ ಕಾತರ ತಳಮಳದ ಭಾರಗಳಿದ್ದವು. ಅತ್ಯಂತ ಅಲ್ಪಾವಧಿಯಲ್ಲಿ ತಮ್ಮ ದಲಿತ ಜನಕೋಟಿಗೆ ಗರಿಷ್ಠ ಅವಕಾಶಗಳು ದಕ್ಕುವಂತೆ ಮಾಡುವ ಕರ್ತವ್ಯ ಅವರದಾಗಿತ್ತು. ಈ ಪ್ರಕ್ರಿಯೆಯಲ್ಲಿ ಕ್ರಮೇಣ ಅವರ ಕದನ ರಂಗದ ವ್ಯಾಪ್ತಿ ವಿಸ್ತೃತಗೊಂಡಂತೆ ಅವರು ನಿರ್ವಹಿಸಬೇಕಾದ ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡವು. ಹೀಗಾಗಿ, ಅವರ ವಿಚಾರಧಾರೆ ಅನಿವಾರ್ಯವಾಗಿ ಕಾಲಬದ್ದ, ಸಂದರ್ಭ ಬದ್ಧವಾಯಿತು. ವಾಸ್ತವಿಕ ಪ್ರಯೋಜನದ ಉದ್ದೇಶದಿಂದಲೇ ಹೊರಹೊಮ್ಮಿದ ಅವರ ವಿಚಾರಗಳು ಹೆಚ್ಚಾಗಿ ವಾಗ್ವಾದದ ಸ್ವರೂಪ ಪಡೆದುಕೊಂಡವು. ಆದ್ದರಿಂದಲೇ ಬಾಬಾ ಸಾಹೇಬರ ಬದುಕು ಬರಹಗಳಲ್ಲಿ ಒಂದು ಸುಸಂಬದ್ಧ ದೃಷ್ಟಿಕೋನವನ್ನು ಗ್ರಹಿಸಿ ವಿವೇಚಿಸುವುದು ತೌಲನಿಕವಾಗಿ ತುಂಬಾ ಕಷ್ಟದ ಕೆಲಸವಾಗಿದೆ.

ತನ್ನ ಕಾಲ, ದೇಶದಲ್ಲಿ ಭದ್ರವಾಗಿ ನೆಲೆಯೂರಿರುವ ಒಬ್ಬ ಮಹಾಪುರುಷ ತನ್ನ ಕಾಲದ, ತನ್ನ ದೇಶದ ಇತಿಮಿತಿಗಳ ಗಡಿಯನ್ನು ದಾಟಿ ಮತ್ತೊಂದು ಕಾಲ ಪರಿಸ್ಥಿತಿಗೆ ಎಷ್ಟರಮಟ್ಟಿಗೆ ಪ್ರಸ್ತುತನಾಗಬಲ್ಲ, ಪರಿಣಾಮಕಾರಿಯಾಗಬಲ್ಲ ಎಂಬುದು ಬಹುಮಹತ್ವದ ಅಂಶವಾಗಿದೆ. ಮೂಲತಃ ಯಾವುದೇ ಒಬ್ಬ ಮಹಾನ್ ವ್ಯಕ್ತಿಯು ತನ್ನ ಸಮಕಾಲೀನ ಸಾಮಾಜಿಕ ಸಂಬಂಧಗಳ ಉತ್ಪತ್ತಿಯಾಗಿರುತ್ತಾನೆ. ಅಂದರೆ, ಎಲ್ಲಾ ಮಹಾನ್ ವ್ಯಕ್ತಿಗಳು ಅವರವರ ಕಾಲ ದೇಶಗಳ ಕೂಸುಗಳೇ, ಚರಿತ್ರೆಯ ಆಯಾ ಕ್ಷಣಗಳೇ ಇಂತಹ ಮಹಾನ್ ವ್ಯಕ್ತಿಗಳ ಅವಶ್ಯಕತೆಯನ್ನು ಬಿಂಬಿಸುತ್ತವೆ. ಅಷ್ಟೇ ಅಲ್ಲ, ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹೀಗೆ ಚರಿತ್ರೆಯ ಆಯಾ ಘಟ್ಟದ ಸತ್ವ, ಸಾರ ಉಂಡು ಬೆಳೆದ ವ್ಯಕ್ತಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮಾಜಿಕ ಸನ್ನಿವೇಶಗಳಿಗನುಗುಣವಾಗಿ ಚರಿತ್ರೆಯ ಆ ಕ್ಷಣಗಳನ್ನು ಅರ್ಥೈಸುತ್ತ, ಆ ಕ್ಷಣಗಳಲ್ಲಿ ಕಂಡುಬರುವ ವೈರುಧ್ಯಗಳನ್ನು ಸುಸೂತ್ರವಾಗಿ ನಿರ್ವಹಿಸಬಲ್ಲ ಆಂದೋಲನಗಳನ್ನು ಆರಂಭಿಸುತ್ತಾರೆ. ಆ ಮೂಲಕ ಚರಿತ್ರೆಯ ಸೃಷ್ಟ್ಯಾತ್ಮಕ ಶಕ್ತಿಗಳನ್ನು ವಿಶಿಷ್ಟ ದಿಕ್ಕಿನಲ್ಲಿ ಹರಿಯಬಿಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಯಾವ ಜನಸಮೂಹದ ಗುರಿಸಾಧನೆಗೆ ಅವರು ಹೆಣಗುತ್ತಿರುತ್ತಾರೆಯೋ ಆ ಜನರು ತಮ್ಮ ಸಮಷ್ಟಿ ಪ್ರಜ್ಞೆಗನುಗುಣವಾಗಿ ಅವರ ಅನುಯಾಯಿಗಳಾಗಿ ಬೆಂಬತ್ತುತ್ತಾರೆ. ಒಬ್ಬ ಮಹಾನ್ ವ್ಯಕ್ತಿಯ ವಿಚಾರಧಾರೆಯ ಆಯುರ್ಮಾನವನ್ನು ನಿರ್ಧರಿಸುವ ಅಂಶಗಳು ಹಲವಾರು ಯಾವುದೇ ಒಂದು ಚಾರಿತ್ರಿಕ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ವೈರುಧ್ಯಗಳ ಸ್ವರೂಪ, ಅವುಗಳಿಂದ ಆವಿರ್ಭವಿಸುವ ಸಮಸ್ಯೆಗಳ ಗಾತ್ರ, ವ್ಯಾಪ್ತಿ ಮತ್ತು ಅವು ಕಾಣಿಸಿಕೊಳ್ಳುವ ಸನ್ನಿವೇಶದ ಸಂಕೀರ್ಣತೆ ಇತ್ಯಾದಿಗಳು. ಇಂತಹ ವ್ಯಕ್ತಿಗಳ ದೃಷ್ಟಿ, ಧೋರಣೆಗಳನ್ನು ಆರಾಧಿಸಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬಯಸುವ ಜನ ಸಹಜವಾಗಿಯೇ ಇಂತಹ ವ್ಯಕ್ತಿಗಳಿಗೆ ತಂತಮ್ಮ ವರ್ಗಹಿತಾಸಕ್ತಿಗಳಿಗೆ ಅನುಕೂಲವಾಗಿರುವ ಗುಣವಿಶೇಷಗಳನ್ನು ಆರೋಪಿಸಿ ದೈವೀಕರಿಸುತ್ತಾರೆ. ಇದು ಎಲ್ಲೆಲ್ಲೂ ಸಾಮಾನ್ಯವಾಗಿ ಕಂಡುಬರುವ ಸಂಗತಿ. ತಮ್ಮ ನೆಚ್ಚಿನ ನಾಯಕನನ್ನು ವೈಭವೀಕರಿಸಿ ಮೂರ್ತಗೊಳಿಸುತ್ತಾರೆ. ಕ್ರಮೇಣ ಹೀಗೆ ಸಂಸ್ಥಾಪನೆಗೊಂಡ ಮೂರ್ತಿ ಸ್ಥಾಯಿಯಾಗಿ ಸಾಂಸ್ಥೀಕರಣದ ಪ್ರಕ್ರಿಯೆಗೂ ಒಳಗಾಗುತ್ತದೆ. ಇಂತು ಆ ವ್ಯಕ್ತಿಯ ವಿಚಾರಧಾರೆಗೆ ಸಂದರ್ಭದ ಸೆರೆ ಬಿಡಿಸಿ, ಸಾರ್ವಕಾಲಿಕ ಸಿದ್ಧಾಂತದ ರೂಪ ಕೊಡಲು ಪ್ರಯತ್ನಿಸುತ್ತಾರೆ. ಆ ವ್ಯಕ್ತಿಯ ಮೂರ್ತಿ, ಅವನ ವಿಚಾರಧಾರೆ ತಮ್ಮ ಅಧಿನಾಯಕತ್ವದ ನೆಲೆಗೆ ಲಾಭಕರವೆಂದು ಕಂಡುಕೊಂಡೊಡನೆಯೇ ಅವನ ವಿಚಾರಗಳನ್ನು ಸಾರ್ವತ್ರಿಕ ಪ್ರಮೇಯಗಳನ್ನಾಗಿ ಪರಿವರ್ತಿಸುತ್ತಾರೆ. ಕೇವಲ ದೀರ್ಘ ಕಾಲಾವಧಿಯ ನಂತರ ಮಾತ್ರ ಈ ವಿದ್ಯಮಾನದ ಹಿಂದಿನ ಸಂಚು ಹೊಂಚು ನಿಚ್ಚಳವಾಗುತ್ತವೆ. ಉದಾಹರಣೆಗೆ ಒಂದು ನಿರ್ದಿಷ್ಟ ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಧಾರ್ಮಿಕ ತತ್ವಗಳು ಇನ್ನಾವುದೇ ಕಾಲ ದೇಶದಲ್ಲಿಯ ಆಳುವ ವರ್ಗದ ಹಿತಾಸಕ್ತಿಗಳನ್ನು ಕಾಯುವಂತಿದ್ದರೆ ಅಲ್ಲಿಯೂ ಅವುಗಳಿಗೆ ಸಾಕಷ್ಟು ನೀರು ಗೊಬ್ಬರ ದೊರೆಯಬಲ್ಲವು. ಅಂತೆಯೇ ತಾವು ಜನ್ಮ ತಳೆದ ಮಣ್ಣಿನಿಂದ ಬಹುದೂರದಲ್ಲಿಯೂ ಆಳುವವರ ಅನುಕೂಲಕ್ಕೆ ತಕ್ಕಂತೆ ಅರಳಬಲ್ಲವು. ಸ್ಥೂಲವಾಗಿ ಹೇಳುವುದಾದರೆ, ಮಹಾನ್ ವ್ಯಕ್ತಿಗಳ ವೈಭವೀಕರಣ ಮತ್ತು ದೈವೀಕರಣದ ಮೂಲಕ ಅವರನ್ನು ಸಾಂಸ್ಥೀಕರಿಸಲು ಮಾಡಲಾಗುತ್ತಿರುವ ಪ್ರಯತ್ನಗಳಿಂದ ಸಮಾಜದ ಯಥಾಸ್ಥಿತಿವಾದೀ ಶಕ್ತಿಗಳ ಒಂದು ಅಂದಾಜು ನನಗೆ ದೊರೆಯುತ್ತದೆ. ಅದರಿಂದ ಅವುಗಳ ಪ್ರಯತ್ನದ ಹಿಂದಿನ ಹುನ್ನಾರಿನ ಅರ್ಥ ನಮಗೆ ಸ್ಪಷ್ಟವಾಗುತ್ತದೆ.

ಅಂಬೇಡ್ಕರರ ಬದ್ಧತೆ ಮತ್ತು ಅನಿವಾರ್ಯತೆಗಳು

ಬಾಬಾಸಾಹೇಬ ಅಂಬೇಡ್ಕರರ ವಿಷಯದಲ್ಲಿ ಅವರ ಮೂರ್ತೀಕರಣೆ ಅನಿವಾಯವಾಗಿತ್ತು. ಇದಕ್ಕೆ ಅನೇಕ ಸಂಗತಿಗಳು ತಮ್ಮ ಕಾಣಿಕೆಯನ್ನು ನೀಡಿವೆ. ಅವರ ಉದಾತ್ತ ವ್ಯಕ್ತಿತ್ವ, ಜನತೆಯ ಗುರಿಸಾಧನೆಗೆ ಅವರ ಸಮರ್ಪಣಾ ಭಾವ, ಅವರು ಬದುಕಿದ್ದ ಕಾಲದ ಚಾರಿತ್ರಿಕ ಸನ್ನಿವೇಶ, ತೀತ ಅಲ್ಪ ಪ್ರಮಾಣದ ಸಾಕ್ಷರತೆ, ಜನಪದರ ರಾಜಕೀಯ ಪ್ರಜ್ಞಾವಿಹೀನತೆ ಮತ್ತು ಒಳಗಿನ ಹಾಗೂ ಹೊರಗಿನ ಸ್ಥಾಪಿತ ಹಿತಾಸಕ್ತರ ಸಂಚು ಮುಂತಾದವುಗಳೇ ಅವರ ಮೂರ್ತೀಕರಣದ ಕ್ರಿಯೆಗೆ ಚಾಲನೆ ನೀಡಿವೆ. ಹಾಗೆ ನೋಡಿದರೆ, ಸಮಸ್ಯೆ ಮೂರ್ತೀಕರಣೆದ ಕ್ರಿಯೆಗೆ ಚಾಲನೆ ನೀಡಿವೆ. ಹಾಗೆ ನೋಡಿದರೆ, ಸಮಸ್ಯೆ ಮೂರ್ತೀಕರಣದ್ದಲ್ಲ, ಅದರ ಸಂಖ್ಯಾ ಬಾಹುಳ್ಳದ್ದು. ಇಲ್ಲಿ ಒಂದು ಸಮುಚಿತ ಪ್ರಶ್ನೆ ಉದ್ಭವಿಸುತ್ತದೆ. ಅಂಬೇಡ್ಕರರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಒಂದೇ ಪ್ರತಿಮೆ ಪ್ರತಿನಿಧಿಸಬಲ್ಲುದೆ ಬಾಬಾಸಾಹೇಬರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರೊ. ಉಪೇಂದ್ರ ಬಕ್ಷಿಯವರು ತಮ್ಮ ಒಂದು ಲೇಖನದಲ್ಲಿ ನಮ್ಮಲ್ಲಿ ಅನೇಕ ಅಂಬೇಡ್ಕರರಿದ್ದರು. ಯಾವ ಅಂಬೇಡ್ಕರರನ್ನು ನಾವೀಗ ಸ್ಮರಿಸುತ್ತಿದ್ದೇವೆ ಎಂದು ಕೇಳಿದ ಪ್ರಶ್ನೆ ತುಂಬ ಮಾರ್ಮಿಕವಾದದ್ದು.

ಪ್ರೊ. ಬಕ್ಷಿಯವರು ಆಡಿದ ಈ ಮಾತುಗಳು ಬಾಬಾಸಾಹೇಬರ ವ್ಯಕ್ತಿತ್ವದ ವಿವಿಧ ಮುಖಗಳ ಕುರಿತಾಗಿದ್ದವು ಎಂಬುದು ನಿರ್ವಿವಾದ. ಅಲ್ಲದೆ, ಈ ಎಲ್ಲ ಮುಖಗಳು ವಸ್ತುತಃ ಪರಸ್ಪರ ಭಿನ್ನವಾಗಿರುವುದೂ ಅಷ್ಟೇ ನಿಜವಾಗಿದೆ. ಇನ್ನೂ ಹೆಚ್ಚಿನದೆಂದರೆ ಅವರ ವ್ಯಕ್ತಿತ್ವದ ಈ ಎಲ್ಲ ಆಯಾಮಗಳನ್ನು ನಾವು ಕಾಲಕ್ರಮದಲ್ಲೂ ವಿಭಾಗಿಸಬಹುದು. ಉದಾಹರಣೆಗೆ ೧೯೪೨ರ ಪೂರ್ವದ ಅಂಬೇಡ್ಕರ್, ಅಂದರೆ ಅಪ್ರತಿಮ ಪಾಂಡಿತ್ಯ, ಪ್ರತಿಭೆಯ ಯುವ ಅಸ್ಪೃಶ್ಯ, ತನ್ನ ಜನತೆಯ ವಿಮೋಚನೆಗಾಗಿ ಹಗಲಿರುಳು ಸೆಣಸುತ್ತಿದ್ದ ಧೀರ ನೇತಾರ ಅಂಬೇಡ್ಕರ್. ಈ ಅಂಬೇಡ್ಕರ್ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಸದಸ್ಯರಾಗಿದ್ದ ಅಂಬೇಡ್ಕರ್ ರರಿಗಿಂತಲೂ ಅಥವಾ ಸ್ವಾತಂತ್ರ್ಯೋತ್ತರ ಭಾರತದ ನೆಹರೂ ಸಂಪುಟದಲ್ಲಿ ಕಾಯ್ದೆಯ ಮಂತ್ರಿಯಾಗಿದ್ದ ಅಂಬೇಡ್ಕರರಿಗಿಂತಲೂ ಸಾಕಷ್ಟು ಭಿನ್ನವಾಗಿದ್ದರು. ಭಾರತೀಯ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರರು ಅನಂತರದ ವರ್ಷಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಬೌದ್ಧ ಧರ್ಮದೊಂದಿಗೆ ತಾದ್ಯಾತ್ಮಗೊಳಿಸಿಕೊಂಡಿದ್ದ ಆಧ್ಯಾತ್ಮಿಕ ಅಂಬೇಡ್ಕರರಿಗಿಂತಲೂ ಬೇರೆಯಾಗಿದ್ದರು.

ಈ ಪರಾಮರ್ಶನದಿಂದ ಸ್ಪಷ್ಟವಾಗುವುದೇನೆಂದರೆ, ಬಾಬಾಸಾಹೇಬರ ದೃಷ್ಟಿಯಲ್ಲಿ, ಉಂಟಾದ ಬದಲಾವಣೆಗಳು ಮತ್ತು ಅವರು ನಿರ್ವಹಿಸಿದ ಪಾತ್ರದಲ್ಲಿ ಕಾಣಿಸಿಕೊಂಡ ವ್ಯತ್ಯಾಸಗಳು ಮುಖ್ಯವಾಗಿ ಅವರ ಸದೃಡ ಬದ್ಧತೆಯ ಫಲಗಳಾಗಿದ್ದವು ಎಂಬುದು. ತುಳಿತಕ್ಕೊಳಗಾದ ಸಕಲ ಮಾನವ, ವಿಶೇಷವಾಗಿ ದಲಿತರ, ವಿಮೋಚನೆಯ ಗುರಿಸಾಧನೆಯ ಬಗ್ಗೆ ಅವರಿಗಿದ್ದ ಅತ್ಯುಚ್ಚ ಬದ್ಧತೆಯೇ ಅವರ ದೃಷ್ಟಿ ಧೋರಣೆಗಳ ಹಿಂದಿನ ಪ್ರೇರಕ ಶಕ್ತಿಯಾಗಿತ್ತು. ತಮ್ಮ ಕೈಗೆತ್ತಿಕೊಂಡ ಸಮಸ್ಯೆಯ ಸಫಲ ನಿರ್ವಹಣೆಗೆ ಅವರಲ್ಲಿ ಸಮುಚಿತ ಸಾಧನ, ವಿಧಾನಗಳಿದ್ದಿರಲಿಕ್ಕಿಲ್ಲ. ಮೂಲಭೂತವಾಗಿ ಸಾಮಾಜಿಕ ಶಿಲ್ಪಿಗಳ ಪಂಥಕ್ಕೆ ಸಂಬಂಧಿಸಿದ ಉಪಕರಣಗಳನ್ನು ಬಳಸಿ ಅವರು ಚರಿತ್ರೆಯನ್ನು ಬಿಚ್ಚಲು, ಬಗೆದು ನೋಡಲು ಪ್ರಯತ್ನಿಸಿದ್ದಾರೆ. ವಿಚಿತ್ರವೆಂದರೆ, ಆಳುವ ವರ್ಗದ ಅನುಕೂಲಕ್ಕಾಗಿ ಸೃಷ್ಟಿಯಾದ ಸಲಕರಣೆಗಳನ್ನೆ ಬಳಸಿ, ಸ್ಥಾಪಿತ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಅವರು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಅವರಿಗೆ ದೊರೆತ ತರಬೇತಿಯಲ್ಲಿ ಕೊರತೆಗಳಿದ್ದವು. ಹೀಗಾಗಿ ಚರಿತ್ರೆ ಎಂಬುವುದು ಮಾನವನ ಹೋರಾಟದ ಒಂದು ನಿರಂತರ ಪ್ರವಾಹ ಹರಿಯುವ ಅದಕ್ಕೆ ತನ್ನದೆ ಆದ ಆಂತರಿಕ ತರ್ಕವಿದೆ ಎಂಬಿತ್ಯಾದಿಯಾಗಿ, ಚರಿತ್ರೆಯನ್ನು ವೈಜ್ಞಾನಿಕವಾಗಿ ನೋಡುವ ಸಾಧನ ಸೌಲಭ್ಯಗಳು ಅವರಿಗೆ ಲಭಿಸಿರಲಿಲ್ಲ. ಹಾಗಾಗಿ ಅವರು ಚರಿತ್ರೆಯನ್ನು ಮಾನವನ ಹಲವಾರು ಘಟನೆ, ಪ್ರಕರಣಗಳ ಉಲ್ಲೇಖವೆಂದೇ ಭಾವಿಸಿದರು. ಅದಕ್ಕೆ ಒಂದು ವಿಧದ ತರ್ಕವನ್ನೂ ಆರೋಪಿಸಿದರು. ಆದರೆ ಅದರ ಚಾಲಕಶಕ್ತಿಯ ನೆಲೆಗಳು ಮಾತ್ರ ಎಲ್ಲೋ ಹೊರಗಡೆಯೇ ಇರುವುದಾಗಿ ಪರಿಭಾವಿಸಿದರು.

ಗತಿತಾರ್ಕಿಕೇತರ ಪರಿಹಾರ : ಪ್ರಭುತ್ವ ಮತ್ತು ಧರ್ಮ

ಬಾಬಾಸಾಹೇಬ ಅಂಬೇಡ್ಕರರು ಬುದ್ಧನ ಅನಿತ್ಯವಾದ ಮತ್ತು ಆನಂತರದ ಕ್ಷಣಿಕವಾದದ ಸಿದ್ಧಾಂತವನ್ನು ನಿಜವಾಗಿಯೂ ಅಂತರ್ಗತ ಮಾಡಿಕೊಂಡಿದ್ದರೆಂದು ಕಾಣುತ್ತದೆ. ಆದ್ದರಿಂದಲೇ ಅವರು ತಮ್ಮ ವಿಚಾರ ಅಭಿಪ್ರಾಯಗಳಲ್ಲಿ ಸಾಂಗತ್ಯ ಕಾಯ್ದುಕೊಳ್ಳುವ ಕಾಳಜಿಯನ್ನು ತಿರಸ್ಕರಿಸಿದ್ದಾರೆ. ಕ್ಷಣಿಕವಾದದ ಪ್ರಕಾರ ಎಲ್ಲವೂ ಅವ್ಯಾಹತ ಸ್ಥಿತ್ಯಂತದಲ್ಲಿರುತ್ತವೆ. ಸಕಲವೂ ಪರಿವರ್ತನಶೀಲವಾದುದು. ಪ್ರತಿ ಕ್ಷಣಕ್ಕೂ ಬದಲಾಗುತ್ತ ಆಗುವಿಕೆಯ ಮೂಲಕವೇ ತಮ್ಮ ಅಸ್ತಿತ್ವವನ್ನು ಪಡೆಯುತ್ತವೆ. ಅಂದರೆ, ಈ ಸಾರ್ವತ್ರಿಕ, ಸಾರ್ವಕಾಲಿಕ, ಪ್ರವಾಹ ಪ್ರಕ್ರಿಯೆಯಲ್ಲಿ ಮನಸ್ಸು ಕೂಡಾ ನಿಶ್ಚಲವಾಗಿರುವುದಿಲ್ಲ. ಪರಿಣಾಮವಾಗಿ, ಮನುಷ್ಯನ ಪ್ರಜ್ಞಾಪ್ರವಾಹ ಸತತ ಬದಲಾಗುತ್ತಿರುವ ಭೌತ ಜಗತ್ತಿನೊಂದಿಗೆ ತನ್ನ ಸಾಂಗತ್ಯ, ಸಾಮ್ಯತೆಯನ್ನು ಸಾಧಿಸಬೇಕಾಗುತ್ತದೆ. ಸ್ವತಃ ಮನುಷ್ಯ ಬಹಿರಂಗದ ಭೌತ ಪ್ರಪಂಚದ ಗತಿಶೀಲತೆಯೊಂದಿಗೆ ಹೆಜ್ಜೆ ಹಾಕುತ್ತಾನೆ. ಆದ್ದರಿಂದ ಬದಲಾಗುತ್ತಿದ್ದ ಪರಿಸರ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ವಿಚಾರ ಆಚಾರಗಳನ್ನು ಬದಲಿಸಿಕೊಳ್ಳಲು ಬಾಬಾಸಾಹೇಬರು ಎಂದೂ ಹಿಂದೆ ಮುಂದೆ ನೋಡಲಿಲ್ಲ. ಇನ್ನೊಂದು ನಿಟ್ಟಿನಿಂದಲೂ ಈ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಬಹುದು. ಆಚಾರ ವಿಚಾರಗಳಲ್ಲಿ ಸಾಂಗತ್ಯದ ಪ್ರಮಾಣವು ಸಾಮಾನ್ಯವಾಗಿ ವ್ಯಕ್ತಿ ತನ್ನ ಪರಿಸರದ ನಿಯಂತ್ರಣ ಕೇಂದ್ರದಿಂದ ಇರುವ ದೂರದ ವಿಲೋಮ ಅನುಪಾತದಲ್ಲಿರುತ್ತದೆ. ತಮ್ಮ ಪರಿಸರದ ಮೇಲೆ ಬಾಬಾಸಾಹೇಬರಿಗೆ ಯಾವುದೇ ನಿಯಂತ್ರಣವಿರಲಿಲ್ಲ. ತತ್ಪರಿಣಾಮವಾಗಿ, ಅವರು ಪ್ರತಿಯೊಂದು ಸಂದರ್ಭದಲ್ಲಿಯೂ ತಮ್ಮ ಹೋರಾಟದಕ್ಕೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತ, ಸೂಕ್ತ ತಂತ್ರವನ್ನು ರೂಪಿಸಿಕೊಳ್ಳುತ್ತ ಹೋಗಬೇಕಾದ ಅನಿವಾರ್ಯತೆ ಇತ್ತು. ಹಾಗೇ ಮಾಡುವುದರ ಮೂಲಕ ಮಾತ್ರ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳಬಹುದಾಗಿತ್ತು. ವಾಸ್ತವವಾಗಿ ಪರಿಸ್ಥಿತಿಯ ಗತಿಶೀಲತೆಯನ್ನು ನಿರ್ಧರಿಸುವ ಶಕ್ತಿಗಳು ಅವರ ವಿರೋಧಿಗಳ ಕ್ಯಾಂಪಿನಲ್ಲಿದ್ದವು. ಅವರು ತಾವೇ ಪರಿಭಾವಿಸಿ ಆರಿಸಿದ ಹೋರಾಟದ ಚೌಕಟ್ಟು ಅವರನ್ನು ಪರಿಸ್ಥಿತಿಯ ಗತಿಶೀಲತೆಗೆ ನೇರವಾಗಿ ಒಡ್ಡುತ್ತಿತ್ತು. ಅಂಬೇಡ್ಕರರ ವಿಚಾರಧಾರೆಯ ಪ್ರಧಾನ ಲಕ್ಷಣವೆಂದರೆ, ಗತಿಶೀಲವಾದ ತಾರ್ಕಿಕ ಬುನಾದಿ. ಎಲ್ಲ ಸಮಸ್ಯೆ ಸಂದರ್ಭಗಳನ್ನು ಅರಿತು ಅರ್ಥೈಸಲು, ಅವುಗಳಿಗೆ ಸ್ಪಂದಿಸಲು ಬೇಕಾಗಿದ್ದ ಸಶಕ್ತ ತಂತ್ರವನ್ನು ರೂಪಿಸಲು ಅವರು ಈ ತಾರ್ಕಿಕ ನೆಲೆಯನ್ನೇ ಅವಲಂಬಿಸುತ್ತಿದ್ದರು. ಆದ್ದರಿಂದ ಅಂಬೇಡ್ಕರರನ್ನು ಗತಿವಿಹೀನ, ನಿಶ್ಚಲ ಪದ ಪರಿಕಲ್ಪನೆಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವರ ನೈಜಪ್ರತಿಮೆ, ಅವರ ಬದುಕಿನ ಉಸಿರಾಗಿದ್ದ, ಬದುಕೇ ಆಗಿದ್ದ ಗತಿಶೀಲತೆಯನ್ನು ಪ್ರತಿನಿಧಿಸಬೇಕಾಗುತ್ತದೆ. ಇದು ಕಾರ್ಯಸಾಧ್ಯವಲ್ಲದ ಮಾತು. ಆದ್ದರಿಂದ ಅವರ ಸೂಕ್ತ ಪ್ರತಿಮೆಯೊಂದನ್ನು ನಿರ್ಮಿಸಲು ಅವರ ಕೃತಿಗಳ ಹಿಂದಿರುವ ಪ್ರಧಾನ ದೃಷ್ಟಿ, ಅವರ ಸಮಗ್ರ ಧ್ಯೇಯಕ್ಕಿದ್ದ ಕ್ಷಣಿಕವಲ್ಲದ ಸತ್ವ ಇತ್ಯಾದಿಗಳನ್ನು ಗುರುತಿಸಬೇಕಾಗುತ್ತದೆ. ಇಂತಹ ಪ್ರತಿಮೆ ಮಾತ್ರ, ಅದು ನಮಗೆ ಚಿರಪರಿಚಿತವಾಗಿರುವ ಅಂಬೇಡ್ಕರರನ್ನು ಎಳ್ಳಷ್ಟೂ ಹೋಲದೇ ಇದ್ದರೂ ಕೂಡಾ, ದಲಿತ ಆಂದೋಲನದ ಪ್ರಖರ ದಾರಿದೀಪವಾಗಬಲ್ಲದು.

ಬೌದ್ಧಧರ್ಮದಲ್ಲಿಯ ಅನಿತ್ಯವಾದದ ಪರಿಕಲ್ಪನೆ ಸತ್ವ ಗತಿತರ್ಕಶಾಸ್ತ್ರಕ್ಕೆ ಸಂಬಂದಿಸಿದ್ದುದಾಗಿದೆ. ಆದ್ದರಿಂದಲೇ ಬುದ್ಧ ನಮ್ಮ ಆರಂಭದ ಗತಿತಾರ್ಕಿಕ ದಾರ್ಶನಿಕನಾಗಿದ್ದಾನೆ. ಯಾವುದೇ ಒಂದು ವಿಚಾರಧಾರೆಯಲ್ಲಿ ನುಸುಳುವ ಅಸಂಬದ್ಧತೆಯ ಬಿರುಕನ್ನು ಗತಿತಾರ್ಕಿಕ ವಿಧಾನದಿಂದಲೇ ಪರಿಹರಿಸಬಹುದು. ಅಂಬೇಡ್ಕರರು ಅನುಸರಿಸಿದ ವಿಧಾನ ಗತಿತಾರ್ಕಿವಾಗಿತ್ತೆ ಎಂಬ ಪ್ರಶ್ನೆ ಏಳುವುದು ಸಹಜ ವಿಶ್ವದಲ್ಲಿ ಎಲ್ಲೆಲ್ಲೂ ಕಂಡುಬರುವ ಚಲನಶೀಲತೆ, ಪರಿವರ್ತನಶೀಲತೆಯ ಹಿಂದಿನ ನಿರಂತರ ಆಗುವಿಕೆಯ ತತ್ವವನ್ನು ಅವರು ಒಪ್ಪುತ್ತಾರಾದರೂ, ವಿಶ್ವದಲ್ಲಿ ಕಂಡುಬರುವ ಕ್ರಮಬದ್ಧ ವ್ಯವಸ್ಥೆಯ ಪರಿಕಲ್ಪನೆಗೆ ಸಂಬಂಧಿಸಿದಂತೆ, ಅವರು ಒಂದು ಬಿಕ್ಕಟ್ಟನ್ನು ಎದುರಿಸುವುದು ಕಂಡುಬರುತ್ತದೆ. ಇದನ್ನು ಬಹು ಸರಳವಾಗಿ ಪರಿಹರಿಸಬಹುದು. ಗತಿತಾರ್ಕಿಕವಾಗಿ, ವ್ಯವಸ್ಥೆಯ ಸ್ವಯಂ ನಿಯಂತ್ರಣದ ಗುಣಧರ್ಮಗಳನ್ನು ಗುರುತಿಸುವ ಮೂಲಕ, ಅಂದರೆ ಯಾವುದೇ ಒಂದು ವ್ಯವಸ್ಥೆಯ ಒಳಗೇ ಅವ್ಯಕ್ತವಾಗಿರುವ ಆಂತರಿಕ ನಿಯಂತ್ರಣ ವಿಶಿಷ್ಟತೆಯನ್ನು ಗುರುತಿಸುವ ಮೂಲಕ ಈ ತಾತ್ವಿಕ ಸಂಕಟಕ್ಕೆ ಪರಿಹಾರ ಸೂಚಿಸಬಹುದು. ಆದರೆ ವ್ಯವಸ್ಥೆಯ ಕುರಿತಿರುವ ಸಾಂಪ್ರದಾಯಿಕ ಪರಿಕಲ್ಪನೆಯು, ಸತ್ವ ‘ಗತಿತಾರ್ಕಿಕ’ ತತ್ವಕ್ಕೆ ವಿರುದ್ಧವಾಗಿರುವ ಈ ಪರಿಕಲ್ಪನೆಯು ತನ್ನ ನಿಯಂತ್ರಣದ ನೆಲೆಯನ್ನು ವ್ಯವಸ್ಥೆಯ ಹೊರಗೆ ಹುಡುಕುತ್ತದೆ. ಅಂತರಂಗದಲ್ಲಿರುವುದನ್ನು ಬಹಿರಂಗದಲ್ಲಿ ಅನ್ವೇಷಿಸಲು ತೊಡಗುತ್ತದೆ. ಚರಿತ್ರೆಯ ಪಾಶವೀ ಆಯಾಮಗಳನ್ನು, ಮನುಷ್ಯನಿಂದ ಮನುಷ್ಯನಿಗಾಗುತ್ತಿದ್ದ ನಿರಂಕುಶ ಶೋಷಣೆಯನ್ನು ಖುದ್ದಾಗಿ ಅನುಭವಿಸಿದ್ದ ಅಂಬೇಡ್ಕರರಿಗೆ ಎರಡು ಸ್ತರಗಳಲ್ಲಿ ಕೆಲಸ ನಿರ್ವಹಿಸಬಲ್ಲ ಒಂದು ನಿಯಂತ್ರಣೆ ಮೆಕ್ಯಾನಿಸಂನ ಅವಶ್ಯಕತೆ ಇತ್ತು. ಒಳಗಿನಿಂದಲೂ, ಹೊರಗಿನಿಂದಲೂ ವ್ಯವಸ್ಥೆಯ ವಿದ್ಯಮಾನವನ್ನು ನಿಯಂತ್ರಿಸಬಲ್ಲ ಒಂದು ಕಾರ್ಯಸಾಧು ಶಕ್ತಿ ಸಮುಚ್ಫಯದ ಜರೂರಿ ಇತ್ತು. ಅದರ ಮುಖಾಂತರ ಸಾಮಾಜಿಕ ವ್ಯವಸ್ಥೆಯನ್ನು ತಮ್ಮ ಅಭಿಲಾಷೆಗೆ ಅನುಗುಣವಾದ ಸ್ಥಿತಿಯಲ್ಲಿಡಲು ಸಾಧ್ಯ ಎಂದು ಅವರು ಭಾವಿಸಿದ್ದರು. ಅವರ ಪ್ರಕಾರ ವ್ಯಕ್ತಿ ಹಾಗೂ ವ್ಯವಸ್ಥೆಯನ್ನು ಆಂತರಿಕವಾಗಿ ನಿಯಂತ್ರಿಸುವ ಕ್ರಿಯೆಯನ್ನು ನೀತಿಸಂಹಿತೆ – ಧರ್ಮದಿಂದ ಆವಿಷ್ಕರಿಸುವ ನೀತಿ ಸಂಹಿತೆ ಮಾಡಬಲ್ಲದು. ಆಗ ಬಹಿರಂಗದ ನಿಯಂತ್ರಣ ಕೇಂದ್ರವಾಗಿ ಪ್ರಭುತ್ವ ಕಾರ್ಯವೆಸಗಬಲ್ಲದು. ಎಲ್ಲ ವ್ಯಕ್ತಿಯ ಮತ್ತು ವ್ಯಕ್ತಿಗಳ ಸಮೂಹದಿಂದಲೇ ಸೃಷ್ಟಿಯಾಗುವ ಸಮಾಜ, ಈ ನೀತಿಸಂಹಿತೆಯನ್ನು ಅಂತರ್ಗತ ಮಾಡಿಕೊಂಡುದ್ದಾದರೆ, ಸಮಾಜದಲ್ಲಿ ಆಂತರಿಕ ಸುವ್ಯವಸ್ಥೆ ತಾನೇ ತಾನಾಗಿ ಸ್ಥಾಯಿಗೊಳ್ಳುವುದೆಂದು ನಿರೀಕ್ಷಿಸಲಾಗಿತ್ತು. ಕೆಲವು ಜನ ಅಥವಾ ಗುಂಪುಗಳು ತಮ್ಮ ಸಂಘರ್ಷದಿಂದಾಗಿ ಅಥವಾ ಇನ್ನಾವುದೇ ಕಾರಣಕ್ಕಾಗಿ ಸಮಾಜದ ಸದ್‌ವ್ಯವಸ್ಥೆಯನ್ನು ಧಿಕ್ಕರಿಸಿದಾಗ ಮಾತ್ರ, ಪ್ರಭುತ್ವ ಪ್ರವೇಶಿಸ ಸೂಕ್ತ ಕ್ರಮಗಳ ಮೂಲಕ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವ ಕೆಲಸ ಮಾಡಬಲ್ಲದು ಮತ್ತು ಮಾಡಬೇಕು. ಪ್ರಭುತ್ವವು ಇಂತು ಸಮಷ್ಟಿ ಸಂಕಲ್ಪದ ಸಂವಿಧಾನಬದ್ಧ ಸಾಕಾರವೆಂದು ಅವರು ಬಗೆದಿದ್ದರು. ಇದು ಉದಾರವಾದಿ ದೃಷ್ಟಿಕೋನ. ಆದ್ದರಿಂದಲೇ ‘ಧರ್ಮವೆಂಬುದು ಜನತೆಗೆ ತಿನ್ನಿಸಲಾಗುವ ಅಫೀಮು’ ಎಂಬ ಮಾರ್ಕ್ಸ್‌ನ ನಿಲುವಿಗೆ ಬಾಬಾಸಾಹಬೇರ ಸಮ್ಮತಿ ಇರಲಿಲ್ಲ. ಜೊತೆಗೆ ಮಾರ್ಕ್ಸ್ ಹೇಳಿದ್ದ, ಕ್ರಮೇಣ ಪ್ರಭುತ್ವವೆಂಬುದು ಅಳಿದು ಹೋಗುತ್ತದೆ ಎಂಬ ಇನ್ನೊಂದು ಪ್ರತಿಪಾದನೆಯನ್ನೂ ಅಂಬೇಡ್ಕರರು ಅಂಗೀಕರಿಸಿರಲಿಲ್ಲ. ಕ್ರಮಬದ್ಧ ಸ್ಥಿತಿಯು ವ್ಯವಸ್ಥೆಯ ಅವಿಭಾಜ್ಯ ಗುಣಧರ್ಮವೇ ಆಗಿರಬಹುದು ಎಂಬುದು ಬಾಬಾಸಾಹೇಬರಿಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ. ಕಾರಣ ಅರವತ್ತರ ದಶಕದಲ್ಲಿ ಸೈಬರ್ ನೆಟಿಕ್ಸ್ ಸೂತ್ರಗಳು ಬೆಳಕಿಗೆ ಬಂದ ಮೇಲೆ ಮಾತ್ರ ‘ಸಂಕೀರ್ಣ ಸಂಭಾವ್ಯತೆ’ಯ ವ್ಯವಸ್ಥೆಗಳು ಆಂತರಿಕ ನಿಯಂತ್ರಣದ ಮತ್ತು ಸ್ವಯಂ ಸಂಘಟನಾ ನಿಯಂತ್ರಣದ ಸಾಮರ್ಥ್ಯವನ್ನು ಪಡೆದಿರುತ್ತವೆ ಎಂಬುದು ಸಾಬೀತಾಯಿತು. ಸಾಮಾಜಿಕ ವ್ಯವಸ್ಥೆಗಳು ಖಂಡಿತವಾಗಿಯೂ ‘ಸಂಕೀರ್ಣ ಸಂಭಾವ್ಯತೆ’ಯ ವ್ಯವಸ್ಥೆಗಳಾಗಿರುವುದರಿಂದ ಅವುಗಳ ಸ್ವಯಂ ನಿಯಂತ್ರಣದ ಶಕ್ತಿ ಅವುಗಳ ಆಂತರ್ಯದಲ್ಲಿಯೇ ಮನೆ ಮಾಡಿಕೊಂಡಿರುತ್ತವೆ ಎಂದು ಈಗ ಖಚಿತವಾಗಿ ಹೇಳಬಹುದಾಗಿದೆ.

ಉದಾರವಾದ ಮತ್ತು ಸುಧಾರಣಾವಾದ

ಶಿಕ್ಷಣ ಮತ್ತು ತರಬೇತಿ ಎರಡೂ ಸಂದರ್ಭಗಳಲ್ಲಿಯೂ ಪಾಶ್ವಾತ್ಯ ಉದಾರವಾದ ಬಾಬಾಸಾಹೇಬರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಸ್ವತಃ ಅವರೇ ಒಪ್ಪುವಂತೆ ಪಾಶ್ಚಾತ್ಯ ಸಮಾಜದ ಮುಕ್ತತೆ ಮತ್ತು ಉದಾರ ಮೌಲ್ಯಗಳು ಅವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದವು. ಅವರು ಮಾರ್ಕ್ಸ್‌ವಾದವನ್ನು ಅಧ್ಯಯನ ಮಾಡಿದ್ದರೆಂದು ನಂಬುವುದಕ್ಕೂ ಒಂದು ಕಾರಣವಿದೆ. ಜಾತಿವ್ಯವಸ್ಥೆಯನ್ನು ಕುರಿತ ಅವರ ಪ್ರಥಮ ಪ್ರಬಂಧ ಮಾರ್ಕ್ಸ್‌ನ ವಿಶ್ಲೇಷಣಾ ಮಾರ್ಗವನ್ನು ಬಿಂಬಿಸುತ್ತದೆ. ಅವರ ಪಠ್ಯಕ್ರಮದ ವಿಷಯಗಳಲ್ಲಿ ಮಾರ್ಕ್ಸ್‌ನ ಸಮಾಜವಾದಕ್ಕೆ ಸಂಬಂಧಿಸಿದ ವಿಷಯವೂ ಒಂದಿತ್ತು. ಅವರ ಮಾರ್ಗದರ್ಶಕನಾಗಿದ್ದ ಪ್ರೊ. ಸೆಲಿಗ್‌ಮನ್ ಕೂಡಾ ಚರಿತ್ರೆಯ ಆರ್ಥಿಕ ವ್ಯಾಖ್ಯಾನದ ವಿದ್ವಾಂಸನಾಗಿದ್ದ. ಆದರೆ ಅವರ ಅನಂತರದ ಕೃತಿಗಳು ಸೂಚಿಸುವಂತೆ, ಬಾಬಾಸಾಹಾಬರು ಮಾರ್ಕ್ಸ್‌ವಾದಕ್ಕಿಂತಲೂ ಉದಾರವಾದಿ ಪರಂಪರೆಗೆ ಹೆಚ್ಚು ಹತ್ತಿರವಾಗಿದ್ದರು. ಆದಾಗ್ಯೂ ಅವರೆಂದೂ ಪ್ರಜ್ಞಾಪೂರ್ವಕವಾಗಿ ಉದಾರವಾದದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಉದಾರವಾದದ ನ್ಯೂನತೆಗಳ ಅರಿವು ಅವರಿಗೆ ಇದ್ದುದ್ದರಿಂದ ತಾವು ಉದಾರವಾದಿ ಸುಧಾರಕರಲ್ಲವೆಂದು ಘೋಷಿಸಿದ್ದರು. ಮಾರ್ಕ್ಸ್‌ವಾದದ ಅನೇಕ ಸೂತ್ರ, ಸಂಗತಿಗಳೊಂದಿಗೆ ಅವರ ಸುಮ್ಮತಿ ಇರಲಿಲ್ಲವಾದರೂ, ತಾವು ಅದರೆಡೆಗೆ ಆಕರ್ಷಿತರಾಗಿದ್ದದ್ದನ್ನು ಮಾತ್ರ ಬಚ್ಚಿಡಲು ಸಾಧ್ಯವಾಗಲಿಲ್ಲ.

ಅವರ ಚಿಂತನೆಯ ನ್ಯೂನತೆಯ ನೆಲೆಯನ್ನು ಧರ್ಮದ ಕುರಿತ ಅವರ ಪರಿಕಲ್ಪನೆಯಲ್ಲಿಯೇ ಕಾಣಬಹುದು. ಭೌತ ವಾಸ್ತವದಿಂದ ವಿಮುಕ್ತವಾದ ಧರ್ಮದ ನೈತಿಕ ಶಕ್ತಿಯ ಕುರಿತು ಅವರಿಗಿದ್ದ ಪರಿಕಲ್ಪನೆಯಲ್ಲಿಯೇ ಅವರ ಚಿಂತನೆಯ ಚ್ಯುತಿ ಚಿಗುರೊಡೆದಿರುವುದನ್ನು ಕಾಣುತ್ತೇವೆ. ಧರ್ಮದ ನೈತಿಕ ಶಕ್ತಿಯನ್ನು ಬಲವಾಗಿ ನಂಬಿದ್ದ ಅವರು ಸಹಜವಾಗಿಯೇ ಯಾವುದೇ ರಕ್ತಪಾತವಾವಿಲ್ಲದೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನಾಧರಿಸಿದ ಸಮಾಜವನ್ನು ನಿರ್ಮಿಸಬಹುದೆಂದು ಆಶಿಸಿದ್ದರು. ಹಾಗೆಂದೇ ಈ ಆಶಯದಿಂದ ಮೇಲೆ ಹೇಳಿದ ತತ್ವಗಳ ಆಧಾರದ ಮೇಲೆ ಒಂದು ಸಂವಿಧಾನಿಕ ಪ್ರಭುತ್ವದ ಪರಿಕಲ್ಪನೆಯನ್ನು ಅವರು ಸಾದರಪಡಿಸಿದ್ದಾರೆ. ಇಂತಹ ಸದಭಿಲಾಷೆಯ ಚಿಂತನೆಯಿಂದಾಗಿಯೇ ಅವರು ಆಳುವ ವರ್ಗಗಳ ಹಲವು ಹುನ್ನಾರ ಹಿಕಮತ್ತುಗಳನ್ನು ಅಲಕ್ಷಿಸುತ್ತಾರೆ. ಆಳುವ ವರ್ಗಗಳು ಉದಾರವಾಗಿ ನಡೆದುಕೊಳ್ಳುವಂತ ಎಷ್ಟೇ ಗತಾಯ ಮುಂದುವರೆಸಿಕೊಂಡು ಹೋಗುವುದಲ್ಲಿಯೇ ತಲ್ಲೀನವಾಗಿರುತ್ತವೆ. ಉದಾರ ಆಳ್ವಿಕೆಯ ಪ್ರಭಾವವು, ವೈವಿಧ್ಯಮಯವಾಗಿ ಹಲವು ಕಡೆ ಹರಡಿರುವ ಅಸಮಾನತೆಯನ್ನು ಕಿತ್ತೊಗೆಯಲು ಸಾಸಿವೆಯಷ್ಟೂ ಸಹಾಯ ಮಾಡುವುದಿಲ್ಲ. ಬದಲಾಗಿ ಈ ಉದಾರವಾದ, ಜಾತಿ ರಾಜಕಾರಣಕ್ಕೆ ನೀರೆರೆಯುತ್ತದೆ. ಕೋಮುವಾದಕ್ಕೆ ಕುಮ್ಮಕ್ಕು ಕೊಡುತ್ತದೆ. ದಲಿತರ ನಡುವಿನ ಒಡಕನ್ನು ವರ್ಧಿಸಿ, ತಮ್ಮ ರಾಜಕೀಯ ಅಧಿಕಾರದ ಆಟದಲ್ಲಿ ಅವರನ್ನು ದಾಳಗಳನ್ನಾಗಿ ಬಳಸುತ್ತದೆ. ಅವರ ನೆಜ ಸಮಸ್ಯೆಗಳನ್ನು ತಿರುಚಿ, ಕೆಲವೇ ಶ್ರೀಮಂತರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಉದಾರವಾದಿ ಪ್ರಜಾಸತ್ತೆಯು ವಾಸ್ತವವಾಗಿ ಬೂರ್ಜ್ವಾಗಳ ರಾಜಕೀಯ ಅಧಿಕಾರದ ಅವಿರ್ಭಾವವಾಗಿರುತ್ತದೆ. ಹೀಗಿದ್ದೂ, ಧನಿಕರ ಸೇವಕನಾಗಿರುವ ಉದಾರವಾದಿ ಪ್ರಜಾಸತ್ತೆ ನಿರ್ಗತಿಕರಿಗೆ ನ್ಯಾಯ ಒದಗಿಸುಬಹುದೆಂದು ಭಾವಿಸುವದೇ ಒಂದು ಆಭಾಸ. ಅದು ದುರ್ಬಲರಿಗೆ ಆಗೀಗ ಒಂದಿಷ್ಟು ಸವಲತ್ತು ರಿಯಾಯ್ತಿ ಕೊಡುವ ಸೋಗು ಹಾಕಬಹುದಾದರೂ, ನಿಜವಾಗಿ ಅದರ ಉದ್ದೇಶ ಆಳುವ ವರ್ಗದ ಅಧಿನಾಯಕತ್ವವನ್ನು ಮುಂದುವರೆಯುತ್ತಲೇ ಆಗಿರುತ್ತದೆ. ಕೊಳಕು ಹಿಂದೂ ಜಾತಿವ್ಯವಸ್ಥೆಗೆ ಹೋಲಿಸಿದರೆ, ಉದಾರವಾದಿ ಪ್ರಜಾಸತ್ತೆ ತುಸು ಉತ್ತಮವಾಗಿ ಕಾಣಬಹುದು. ಆದರೂ ದಲಿತರ ಹಿತಾಸಕ್ತಿಯನ್ನು ಕಾಯಬಲ್ಲ ಯಾವುದೇ ನಿಜವಾದ ಬದಲಾವಣೆಯನ್ನು ಅದು ತರಲಾರದು. ಯಾಕೆಂದರೆ, ವಾಸ್ತವವಾಗಿ ಅದರಲ್ಲಿ ಅಂತಹ ಸಾಮರ್ಥ್ಯವೂ ಇರುವುದಿಲ್ಲ. ಮನಸ್ಸೂ ಇರಲು ಸಾಧ್ಯವಿಲ್ಲ. ಪ್ರತಿಯಾಗಿ, ಅದು ಶೋಷಕ, ವ್ಯವಸ್ಥೆಯಲ್ಲಿ ಸಮಸ್ಯೆ ಉಲ್ಬಣಿಸಿ ಭುಗಿಲೇಳಬಹುದಾದ ಜ್ಞಾಲೆಯ ಮೇಲೆ ತಣ್ಣೀರೆರಚಿಸಿ, ಸಮಾಜದ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಶೋಷಣೆಗೆ ಪಕ್ಕಾದವರ ದುಃಖ ದುಮ್ಮಾನ ಉಮ್ಮಳಿಸದಂತೆ ಕ್ರಾಂತಿಕಾರಿ ಪ್ರೇರಣೆಯನ್ನು ಕೊಲ್ಲುತ್ತದೆ.

ಪುವರ್ ನಿರೂಪಣೆಯ ಯೋಜನೆ

ಬಾಬಾಸಾಹೇಬರು ತಮ್ಮ ಕ್ರಿಯಾಶೀಲ ಬದುಕಿನುದ್ದಕ್ಕೂ ಬಳಸಿದ ಸೈದ್ಧಾಂತಿಕ ಸಾಧನಗಳ ರೂಪ ರಚನೆಗಳಿಗೆ ನಿರ್ದಿಷ್ಟವಾದ ಅರ್ಥವಿದೆ. ಮೊದಲನೆಯದಾಗಿ, ಅವು ತೋರುತ್ತಿರುವಂತೆ, ಪರಿಪೂರ್ಣವಾದುವುಗಳಲ್ಲ. ಅವೆಲ್ಲವುಗಳ ಮೂಲನೆಲೆ ಬಾಬಾಸಾಹೇಬರ ಮೂಲಭೂತ ಧ್ಯೇಯದಲ್ಲಿಯೇ ಇದೆ. ಜಾತಿವ್ಯವಸ್ಥೆಯನ್ನು ನಿರ್ನಾಮ ಮಾಡಿ ಸ್ವಾತಂತ್ರ್ಯ, ಸಮತೆ ಮತ್ತು ಭಾತೃತ್ವವನ್ನಾಧರಿಸಿದ ಸಮಾಜ ನಿರ್ಮಾಣದ ಅವರ ಅಭಿಲಾಷೆಯಿಂದಲೇ ಈ ಎಲ್ಲ ರಚನೆಗಳು ರೂಪು ತಾಳಿವೆ. ಅವರಿಗೆ ಅತ್ಯಮತ ಪ್ರಿಯವಾಗಿದ್ದ ಈ ಮೂರು ತತ್ವಗಳನ್ನು ಅವರು ಫ್ರೆಂಚ್ ಕ್ರಾಂತಿಯಿಂದ ತೆಗೆದುಕೊಂಡಿರಲಿಲ್ಲ. ಮೇಲಾಗಿ ಅವುಗಳ ಸಾಂಪ್ರದಾಯಿಕ ಅರ್ಥದಲ್ಲಿಯೂ ಅವರು ಬಳಸುತ್ತಿರಲಿಲ್ಲ. ಈ ತತ್ವಗಳನ್ನು ಅವರ ನೇರವಾಗಿ ಬುದ್ಧನಿಂದ ಪಡೆದಿರುವುದಾಗಿ ಹೇಳುತ್ತಿದ್ದರು. ಈ ಕುರಿತು ಬುದ್ಧ ಏನು ಹೇಳಿದನೆಂಬುದನ್ನು ನಾವು ಬಾಬಾಸಾಹೇಬರ ವ್ಯಾಖ್ಯಾನದಿಂದಲೇ ಅರಿಯಬೇಕಾಗಿದೆ. ಯಾಕೆಂದರೆ, ಬಾಬಾ ಸಾಹೇಬರು ಅರ್ಥೈಸಿರುವ ರೀತಿ ಸಾಂಪ್ರದಾಯಿಕ ಬೌದ್ಧ ಧರ್ಮೀಯರ ದೃಷ್ಟಿಗಿಂತಲೂ ಭಿನ್ನವಾಗಿರಲು ಸಾಧ್ಯವಿದೆ. ಇದು ಎಷ್ಟರ ಮಟ್ಟಿಗೆಂದರೆ, ಬೌದ್ಧ ಮಠಗಳು ಬಾಬಾ ಸಾಹೇಬರ ಅರ್ಥವನ್ನು ಅಲ್ಲಗೆಳೆಯುವ ಸಾಧ್ಯತೆಯೂ ಇಲ್ಲದಿಲ್ಲ! ನಿದರ್ಶನಕ್ಕೆ ಬಾಬಾಸಾಹೇಬರು ‘ಬುದ್ಧ ಮತ್ತು ಅವನ ಧರ್ಮ’ ಎಂಬ ಕೃತಿಯನ್ನು ಪ್ರಕಟಿಸಿದಾಗಲೂ ಆರಂಭದಲ್ಲಿ ಅನೇಕ ಬೌದ್ಧ ಮತಧರ್ಮೀಯರಿಂದ ಇಂತಹ ತಿರಸ್ಕಾರದ ಮಾತುಗಳು ಕೇಳಿ ಬಂದಿದ್ದವು. ಆದ್ದರಿಂದ ಅಂಬೇಡ್ಕರರನ್ನು ಅರಿಯಲು ಅವರು ಬಳಸುವ ಸೈದ್ಧಾಂತಿಕ ರಚನೆ ಮತ್ತು ಪರಿಕಲ್ಪನೆಗಳ ವಿಶಿಷ್ಟ ಅರ್ಥದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಕಾಳಜಿಯ ಅಭಾವದಿಂದಾಗಿ ಅನೇಕರಲ್ಲಿ ಈಗಾಲೇ ಸಾಕಷ್ಟು ತಪ್ಪು ಕಲ್ಪನೆಗಳು ಕಾಣಿಸಿಕೊಂಡಿವೆ. ಅವರು ಹೇಳಿದ್ದನ್ನು, ಮಾಡಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಬೇರೆ, ಭವಿಷ್ಯತ್ತಿನ ಆಂದೋಲನವನ್ನು ರೂಪಿಸಲು ಬಳಸಬಹುದಾದ ರೀತಿಯಲ್ಲಿ ಅವರ ಮೂಲಧ್ಯೇಯಕ್ಕೆ ಸಮ್ಮತವಾದ ಹೊಸ ಸಂಗತಿಗಳನ್ನು ಸೇರಿಸುವುದೇ ಬೇರೆ. ಮಾರ್ಕ್ಸ್‌ನು ತತ್ವಶಾಸ್ತ್ರವನ್ನು ಕುರಿತು ಹೇಳಿದಂತೆಯೇ ನಾವು ಅಂಬೇಡ್ಕರರನ್ನು ಕುರಿತು ಹೇಳಬಹುದು. ನಮ್ಮ ಮುಂದಿರುವ ಮುಖ್ಯ ಸಮಸ್ಯೆ, ಬಾಬಾ ಸಾಹೇಬರು ತಮ್ಮ ಜೀವನಮಾನವನ್ನೇ ಸಮರ್ಪಿಸಿದ್ದ ಹೋರಾಟವನ್ನು ಮುನ್ನಡೆಸಲು ಅವಶ್ಯವಿರುವ ಅಸ್ತ್ರವನ್ನಾಗಿ ಅವರನ್ನು ನಾವು ಹೇಗೆ ಉಪಯೋಗಿಸಬಹುದು ಎಂಬುದೇ ವಿನಾ ಬಾಬಾ ಸಾಹೇಬರು ಹೇಗಿದ್ದರು ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಲ್ಲ.

ಇಲ್ಲಿ ಪ್ರಸ್ತಾಪಿಸಿರುವ ಪುನರ್ ವ್ಯಾಖ್ಯಾನ ಮುಖ್ಯವಾಗಿ ಈ ಎರಡೂ ಸಮಸ್ಯೆಗಳನ್ನು ಪರಿಗಣಿಸಬೇಕು. ಕ್ರಾಂತಿಕಾರಿ ಬದಲಾವಣೆಯನ್ನು ಬಯಸುವ ದೃಷ್ಟಿಯಿಂದ ಅಂಬೇಡ್ಕರರ ಬಗ್ಗೆ ಹಲವಾರು ವಿಮರ್ಶಾತ್ಮಕ ವ್ಯಾಖ್ಯಾನಗಳ ಸಾಧ್ಯತೆ ಇದೆ. ಅವರು ಸೂತ್ರೀಕರಿಸಲು ಬಳಸಿರುವ ಅನೇಕ ಪರಿಕಲ್ಪನೆಗಳ ಬೇರು ಪ್ರತಿಗಾಮಿ ಕ್ಯಾಂಪಿನಲ್ಲಿವೆ. ವಿಚಿತ್ರವೆಂದರೆ, ಅವರು ಈ ಪರಿಕಲ್ಪನೆಗಳ ಸರಕು ಸಾಮಗ್ರಿಗಳನ್ನೇ ಬಳಸಿ, ವಿಮೋಚನಾ ಯೋಜನೆಯನ್ನು ರಚಿಸಿದ್ದಾರೆ. ಈ ವಿಮೋಚನೆಯ ಕಲ್ಪನೆ ಯಾವ ಕ್ರಾಂತಿಗೂ ಕಡಿಮೆಯಾದುದ್ದಲ್ಲ. ಈ ಪರಿಕಲ್ಪನೆಗಳಲ್ಲಿ ಮುಖ್ಯವಾದವುಗಳೆಂದರೆ ಪ್ರಭುತ್ವ, ಧರ್ಮ, ಉದಾರವಾದಿ ಪ್ರಜಾಸತ್ತೆ, ಸಂವಿಧಾನವಾದ, ಕ್ರಾಂತಿ, ಹಿಂಸೆ ಮತ್ತು ಮಾರ್ಕ್ಸ್‌ವಾದ. ಒಂದಿಲ್ಲೊಂದು ಕಾರಣದಿಂದ ಈ ಪರಿಕಲ್ಪನೆಗಳೆಲ್ಲ ಬಾಬಾ ಸಾಹೇಬರ ಬಗ್ಗೆ ವಿಪುಲ ಪೂರ್ವಗ್ರಹಗಳನ್ನು, ದೃಷ್ಟಿದೋಷಗಳನ್ನು ಹುಟ್ಟುಹಾಕಿವೆ.

ಅಂಬೇಡ್ಕರರು ಸತ್ವಃ ವೈಚಾರಿಕ ನೆಲೆಯ ಕ್ರಾಂತಿಕಾರಿ ಧೋರಣೆಯ ಅನ್ವೇಷಣಾ ಪ್ರಕ್ರಿಯೆಯನ್ನು ಬಳಸುತ್ತಿದ್ದರೆಂಬುದು ಬಹು ಸ್ತುತ್ಯಾರ್ಹ ಸಂಗತಿ. ನಿರ್ದಿಷ್ಟವಾದ ಅವರ ವಿಚಾರ ವಿನ್ಯಾಸದಲ್ಲಿ ದೋಷಗಳಿರಬಹುದು. ಅವರ ಜ್ಞಾನದ ಘಟ್ಟ ಮತ್ತು ಸನ್ನಿವೇಶದ ಸಂಕೀಣತೆಯನ್ನವಲಂಬಿಸಿ, ಅವರ ಶೋಧನ ಪ್ರಕ್ರಿಯೆಯ ಅನ್ವಯಿಕ ಆಯಾಮದಲ್ಲಿಯೂ ಅರೆ ಕೊರೆಗಳಿರಬಹುದು. ಇದಲ್ಲದೆ ಒಂದು ಶೋಧನಾ ಪ್ರಕ್ರಿಯೆಯ ಅಂತಿಮ ಫಲಿತಾಂಶ ಆ ಶೋಧನೆಗಾಗಿ ಬಳಸಲ್ಪಡುವ ಪರ್ಯಾಯಗಳ ಪಟ್ಟಿಯನ್ನು ಅವಲಂಬಿಸುತ್ತದೆ. ಇದರ ಅರ್ಥವೇನೆಂದರೆ, ಬಾಬಾ ಸಾಹೇಬರ ಒಂದು ನಿರ್ದಿಷ್ಟವಾದ ವಿಧಾನ, ವಿಚಾರ ಅಥವಾ ಕ್ರಿಯೆ ಚಾರಿತ್ರಿಕ ತಥ್ಯವನ್ನು ಒಳಗೊಂಡಿರಬಹುದು. ಹಾಗೆಂದು ಅವುಗಳ ಮುಖ ಬೆಲೆಯನ್ನೆ ಆಧರಿಸಿ ನಾವು ಬಾಬಾ ಸಾಹೇಬರ ವಿಚಾರಧಾರೆಯ ವಿವಿಧ ಆಯಾಮಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.

ಉದಾಹರಣೆಗೆ ಈ ಮೇಲಿನ ಪರಿಕಲ್ಪನೆಗಳ ಬಳಕೆಯ ಸಂದರ್ಭದಲ್ಲಿ ಅವರು ಅವುಗಳಿಗೆ ಅಕಾಡೆಮಿಕ್ ಕಟ್ಟುನಿಟ್ಟಿನ ಚೌಕಟ್ಟು ನೀಡುವುದಿಲ್ಲ. ಇದಕ್ಕೆ ಒಂದು ಬಲವಾದ ಕಾರಣವಿದೆ. ಅವರು ಹೆಚ್ಚಾಗಿ ಸಂಭಾಷಿಸಿದ್ದು, ಸಂಬೋಧಿಸಿದ್ದು ಅಕಾಡೆಮಿಕೇತರ ಜನಸಾಮಾನ್ಯರನ್ನು, ಅಶಿಕ್ಷಿತರ, ಹೆಚ್ಚು ಶಿಕ್ಷಿತರಲ್ಲದವರ ಮಧ್ಯ ಮಾತಾಡುವಾಗ ಸಹಜವಾಗಿಯೇ ಅಕಾಡೆಮಿಕ್. ಶಿಸ್ತಿಗೆ ಅರ್ಥವಿರುವುದಿಲ್ಲ. ಶ್ರೀಸಾಮಾನ್ಯರನ್ನುದ್ದೇಶಿಸಿ ಮಾತನಾಡಿದಾಗೆಲ್ಲ ಅವರು ತಾವು ಬಳಸುತ್ತಿದ್ದ ಪದ, ಪರಿಕಲ್ಪನೆಗಳಿಗೆ ತಮ್ಮದೇ ಆದ ವಿಶೇಷ ಅರ್ಥ ಆರೋಪಿಸುತ್ತಿದ್ದರು. ಬದಲಾದ ಸಂದರ್ಭಗಳಲ್ಲಿ ಅಥವಾ ಹೊಸ ಮಾಹಿತಿಯ ಸಮ್ಮುಖದಲ್ಲಿ ಅವರು ತಮ್ಮ ನಿಲುವನ್ನು ಬದಲಿಸುತ್ತಿದ್ದರು. ತಮ್ಮ ನಂಬುಗೆ ಅಭಿಪ್ರಾಯಗಳ ಅನಪೇಕ್ಷಿತ ಬೆಳವಣಿಗೆಯನ್ನು ಕಂಡು ತಮ್ಮ ಅಭಿಪ್ರಾಯಗಳನ್ನು ಬದಲಿಸುತ್ತಿದರು. ಸ್ವತಃ ತಾವೇ ಬಹು ಪರಿಶ್ರಮಪಟ್ಟು ಸಿದ್ಧಪಡಿಸಿದ್ದ ಮತ್ತು ಅಷ್ಟೇ ಸಶಕ್ತವಾಗಿ ಸಮರ್ಥಿಸಿಕೊಂಡಿದ್ದ ಸಂವಿಧಾನವನ್ನೇ ಅವರು ಧಿಕ್ಕರಿಸಲಿಲ್ಲವೇ? ಅದರ ರಚನೆಗೆ ತಮ್ಮನ್ನು ಒಂದು ಬಾಡಿಗೆಯ ಕುದುರೆಯಂತೆ ದುಡಿಸಿಕೊಳ್ಳಲಾಗಿದೆಯೆಂದು ಆಕ್ರೋಶಿಸಲಿಲ್ಲವೇ? ಅವರೇನೇ ಮಾಡಿದ್ದರೂ ಅದಕ್ಕೆ ಹಲವಾರು ಮಿತಿಗಳಿದ್ದವು. ತಮ್ಮ ಮನಸಾಕ್ಷಿಗನುಗುಣವಾಗಿ, ಹಿಂದೆ ತಾವೇ ಮಂಡಿಸಿದ್ದ ಅಭಿಪ್ರಾಯ ಅಥವಾ ತಳೆದ ನಿಲುವನ್ನು ಬದಲಿಸಲು ಅವರು ಎಂದೂ ಹಿಂಜರಿಯುತ್ತಿರಲಿಲ್ಲ. ತಾವು ಮಾಡುತ್ತಿರುವುದು ಸರಿ ಎಂದು ಕಂಡರೆ ಸಾಕು, ಅದನ್ನು ಅಪ್ಪಿಕೊಳ್ಳುತ್ತಿದ್ದರು. ಆದ್ದರಿಂದ ಇಲ್ಲಿ ಉದ್ದೇಶಿಸಲಾಗಿರುವ ಅವರ ಪುನರ್ ವ್ಯಾಖ್ಯಾನದ ಯೋಜನೆಯಲ್ಲಿ ಹೊಸದೇನೂ ಇಲ್ಲ. ಅವರು ತಮ್ಮ ಬದುಕಿನುದ್ದಕ್ಕೂ ಮಾಡುತ್ತಲೇ ಬಂದಿರುವ, ಬದುಕಿದ್ದರೆ ಇನ್ನೂ ಮಾಡುತ್ತಲೇ ಇರಬಹುದಾಗಿದ್ದ ಒಂದು ಸಾಮಾನ್ಯ ಕ್ರಿಯೆ. ಇದು ಸತ್ವಃ ಅಪೂರ್ಣವಾಗಿ ಉಳಿದಿರುವ ಅವರ ಮಹಾಕಾರ್ಯದ ಮುಂದುವರಿಕೆಯೇ ಆಗಿದೆ.

ಈ ಕೆಲಸ ಎಷ್ಟು ಗಂಭೀರವಾದದ್ದೋ ಅಷ್ಟೇ ಸೂಕ್ಷ್ಮವಾದದ್ದು. ಇದಕ್ಕಾಗಿ ನಾವು ಬಳಸಬೇಕಾಗಿರುವ ವಿಧಾನದ ಆಯಾಮಗಳಲ್ಲಿ ಮುಖ್ಯವಾದುದೆಂದರೆ, ಅವರ ಬದುಕಿನ ವಿಶ್ಲೇಷಣಾತ್ಮಕ ಅಧ್ಯಯನದ ಮೂಲಕ ಅವರ ಪ್ರಧಾನ ದೃಷ್ಟಿ ಮತ್ತು ವೈಚಾರಿಕ ಒಲವುಗಳನ್ನು ಗುರುತಿಸುವುದು. ಹೀಗೆ ಗುರುತಿಸಿದ್ದನ್ನು ಹೊಸ ಪರಿಕಲ್ಪನೆಗಳಲ್ಲಿ ಸೆರೆಹಿಡಿಯುವುದು ಮತ್ತು ಅವರ ವಿಚಾರಧಾರೆಯಲ್ಲಿ ನಿರಂತತೆಯನ್ನು ಸ್ಥಾಯಿಗೊಳಿಸುವುದು. ಇದೆಲ್ಲವೂ ಒಂದು ಮೂಲಭೂತ ಉದ್ದೇಶಕ್ಕಾಗಿಯೇ ನಡೆಯಬೇಕು. ಅಂದರೆ, ನಮ್ಮ ಸದ್ಯದ ದಲಿತರ ವಿಮೋಚನಾ ಆಂದೋಲನಗಳನ್ನು ಅವರು ಎಷ್ಟು ಮತ್ತು ಹೇಗೆ ಪ್ರೇರೇಪಿಸಬಲ್ಲರು, ಪ್ರಭಾವಿಸಬಲ್ಲರು, ಆ ಮೂಲಕ ಇಡೀ ಭಾರತೀಯ ಸಮಾಜವನ್ನು ಪ್ರಜಾಸತ್ತೆಯ ದಾರಿಯಲ್ಲಿ ಮುನ್ನಡೆಸಬಲ್ಲರು ಎಂಬುದನ್ನು ಅರಿಯುವ ಉದ್ದೇಶಕ್ಕಾಗಿಯೇ ನಡೆಯಬೇಕು. ಈ ಪ್ರಕ್ರಿಯೆಯಲ್ಲಿ ಪಕ್ಷಪಾತ ನುಸುಳುವ ಸಾಧ್ಯತೆ ಇಲ್ಲದಿಲ್ಲ. ಒಂದರ್ಥದಲ್ಲಿ ಪಕ್ಷಪಾತದ ದೃಷ್ಟಿಯಿಂದಲೇ ಈ ಕ್ರಿಯೆ ಜರುಗಬೇಕಾಗುತ್ತದೆ. ಅರ್ಥಾತ್ ನಾವು ಬಯಸುವ ಬದಲಾವಣೆ ದೀನದಲಿತರ ಪರವಾಗಿರಬೇಕೆ ಹೊರತು ಇಲ್ಲಿಯವರೆಗೆ ಚರಿತ್ರೆಗೆ ತಮ್ಮದೇ ಬಣ್ಣ ಬೆಡಗು ನೀಡುತ್ತ ಬಂದಿರುವ ಆಳುವ ವರ್ಗದ ಪರವಾಗಿಯಲ್ಲ, ಇನ್ನು ಮುಂದೆ ದಲಿತರು ಮಾಡಲಿರುವ ಹೋರಾಟಗಳಲ್ಲಿ ಬಾಬಾ ಸಾಹೇಬರನ್ನು ಒಂದು ಸಬಲ ಅಸ್ತ್ರವನ್ನಾಗಿ ಬಳಸುವ ದೃಷ್ಟಿಯಿಂದಲೇ ಈ ಕೆಲಸ ಜರುಗಬೇಕಾಗಿದೆ. ವಿವಿಧ ಸೈದ್ಧಾಂತಿಕ ಮಾದರಿಗಳಲ್ಲಿ ಸಂಯೋಜಿಸಿ, ಅವುಗಳ ಕುರಿತು ಪರಿಕಲ್ಪನೆಗಳನ್ನು ಸೃಷ್ಟಿಸುತ್ತ, ಅವುಗಳನ್ನು ಸ್ಥಳೀಯ ಮತ್ತು ಜಾಗತಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಪರೀಕ್ಷಿಸುತ್ತ ಹೋಗಬೇಕು ಇಂತಹ ಪರೀಕ್ಷೆಯ ಫಲವಾಗಿ ದೊರೆತ ಫಲಿತಾಂಶಗಳನ್ನು ಹೊಸ ಹೊಸ ಸಂದರ್ಭಗಳಿಗೆ ಅನ್ವಯಿಸುತ್ತ ಅವುಗಳನ್ನು ಸುಧಾರಿಸುತ್ತ ಹೋಗಬೇಕು. ಈ ಸುಧಾರಣೆಯ ಪ್ರಕ್ರಿಯೆ ಅಂತಿಮ ಘಟ್ಟ ಮುಟ್ಟುವವರೆಗೂ ಈ ಕ್ರಿಯೆ ಜರುಗುತ್ತಲೇ ಇರಬೇಕು. ಇಂತಹ ಕ್ರಿಯೆಗೆ ಗುರಿ ಮಾಡುವ ಮೂಲಕ ಮಾತ್ರ ಇಡೀ ಕಾರ್ಯಕ್ರಮವನ್ನು ಕ್ರಾಂತಿಕಾರಿಗೊಳಿಸಬಹುದು. ಹೀಗೆ ಸತತವಾಗಿ ನಡೆಯುವ ಪರೀಕ್ಷಣೆ, ಪ್ರಯೋಗದಿಂದಲೇ ವೈಜ್ಞಾನಿಕ ವಿಧಾನದಿಂದಲೇ ಸಿದ್ಧಾಂತದಲ್ಲಿಯ ಕ್ಷಣಿಕವಾದದ್ದನ್ನು ತಿರಸ್ಕರಿಸಿ ಸಾರ್ವಕಾಲಿಕವಾದದ್ದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವ ರೀತಿ ನೀತಿಗಳನ್ನು ತೋರಿಸಲು ಈ ಪುಸ್ತಕದ ಮಿತಿಯಲ್ಲಿ ಸಾಧ್ಯವಿಲ್ಲವಾದ್ದರಿಂದ ಅಂಬೇಡ್ಕರ್ ಬದುಕಿನ ಮುಖ್ಯ ಆಯಾಮಗಳ ಚರ್ಚೆಯ ಮೂಲಕವೇ ಅವರ ಸಿದ್ಧಾಂತದ ಸಾತತ್ಯದ ಸತ್ವವನ್ನು ಸೆರೆಹಿಡಿಯಲು ಪ್ರಯತ್ನಿಸಲಾಗಿದೆ.