ಇಬ್ಬರ ವಿಚಾರಧಾರೆಗಳಲ್ಲಿ ಈ ಸಾಮ್ಯಗಳಿದ್ದುದಲ್ಲದೆ ಬಾಬಾ ಸಾಹೇಬರು ತಮ್ಮ ಬದುಕಿನುದ್ದಕ್ಕೂ ಆಗಾಗ ಮಾರ್ಕ್ಸ್‌ನ ಹೆಸರನ್ನು ಪ್ರಸ್ತಾಪಿಸುತ್ತಲೇ ಬಂದರು. ತಮ್ಮ ವಿಚಾರಧಾರೆಯನ್ನು ಒರೆಗೆ ಹಚ್ಚಲು ಅವನನ್ನು ಒಂದು ವಿಶೇಷ ಒರೆಗಲ್ಲಾಗಿ ಬಳಸುತ್ತಿದ್ದರು. ಆದರೆ ವಿಷಾದನೀಯ ಸಂಗತಿಯೆಂದರೆ, ತಮ್ಮ ಯಾವುದೇ ಚರ್ಚೆ, ಜಿಜ್ಞಾಸೆಯ ಸಂದರ್ಭದಲ್ಲಿಯೂ ಮಾರ್ಕ್ಸ್‌ನನ್ನು ತೀಕ್ಷ್ಣವಾದ ವಿಶ್ಲೇಷಣೆಗೆ ಗುರಿ ಮಾಡಲಿಲ್ಲ. ಆಳವಾದ ಚಿಂತನೆಗೆ ತೊಡಗಲಿಲ್ಲ. ಸಾಮಾನ್ಯವಾಗಿ ಅವರ ಮಾತುಗಳೆಲ್ಲ ಮಾರ್ಕ್ಸ್‌ವಾದದ ಮೇಲು ಮೇಲಿನ ಸಂಗತಿಗಳ ಸುತ್ತಲೇ ಸುತ್ತುತ್ತಿದ್ದವು. ಅಥವಾ ಅದರ ಬಗೆಗಿದ್ದ ಅಂತೆ ಕಂತೆಗಳಿಗೇ ಸೀಮಿತಗೊಂಡವು. ಮಾರ್ಕ್ಸ್‌ವಾದಿ ಗಂಭೀರ ಚಿಂತಕರು ಮಾರ್ಕ್ಸ್‌ವಾದ ಕುರಿತಿದ್ದ ಬಾಬಾ ಸಾಹೇಬರ ಪರಿಕಲ್ಪನೆಯನ್ನು ಕಂಡು ಆಶ್ಚರ್ಯಪಡುವುದುಂಟು. ಆದರೆ, ಈ ಆಶ್ಚರ್ಯ ತೀರ ಅಲ್ಪಾಯುಷಿಯಾದದ್ದು. ಮಾರ್ಕ್ಸ್ ಮತ್ತು ಅಂಬೇಡ್ಕರರು ಬದುಕಿ ಬಾಳಿದ ಕಾಲ, ಪರಿಸರ, ಪರಿಸ್ಥಿತಿಗಳ ಅಗಾಧ ಭಿನ್ನತೆಯನ್ನು ನೆನಪಿಸಿಕೊಟ್ಟರೆ ಸಾಕು, ಮಾರ್ಕ್ಸ್‌ವಾದಿ ಚಿಂತಕರು ತಮ್ಮ ಆಶ್ಚರ್ಯವನ್ನುಳಿದು ಅವಾಕ್ ಆಗುತ್ತಾರೆ. ಭಾರತದಲ್ಲಿದ್ದ ಎಲ್ಲ ಮಾರ್ಕ್ಸ್‌ವಾದಿಗಳಿಗಿಂತಲೂ ಹೆಚ್ಚು ಮಾರ್ಕ್ಸ್‌ವಾದಿ ಗ್ರಂಥಗಳನ್ನು ತಾವು ಓದಿರುವುದಾಗಿ ಘೋಷಿಸಿಕೊಂಡಿದ್ದರೂ ಅವರಿಗೆ ಲಭಿಸಿದ್ದ ಮಾರ್ಕ್ಸ್‌ವಾದಿ ಮಾಹಿತಿ ಅಲ್ಪ ಸ್ವಲ್ಪವೆಂದೇ ಹೇಳಬೇಕು. ಯಾಕೆಂದರೆ, ಅಂದಿನ ದಿನಮಾನಗಳಲ್ಲಿ ಮಾರ್ಕ್ಸ್‌ವಾದ ಕುರಿತ ಹೆಚ್ಚಿನ ಮಾಹಿತಿ, ತಾತ್ವಿಕ ಗ್ರಂಥಗಳು ಭಾರತದಲ್ಲಿ ಸುಲಭ ಲಭ್ಯವಿರಲಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಏನಾದರೂ ಕೈಗೆ ಸಿಕ್ಕರೂ ಅದು ಬೊಲ್ಷೆವಿಕ್ ಕ್ರಾಂತಿಯ ಕುರಿತಾಗಿರುತ್ತಿತ್ತು. ಅಂದಿನ ಸೋವಿಯೆತ್ ರಶಿಯಾದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಬಗ್ಗೆ ಇರುತಿತ್ತು.

ಆಗಿನ ಮಾರ್ಕ್ಸ್‌ವಾದಿಗಳ ವೃತ್ತಗಳಲ್ಲಿಯೂ ಶುದ್ಧ ತಾತ್ವಿಕ ಚರ್ಚೆ ನಡೆಯುತ್ತಿದ್ದುದು ತುಂಬ ವಿರಳವೆಂದೇ ಹೇಳಬೇಕು. ಆದ್ದರಿಂದ ಬಾಬಾ ಸಾಹೇಬರು ಗಂಭೀರ ಪರಿಶೀಲನೆಯ ನಂತರವೇ ಮಾರ್ಕ್ಸ್‌ವಾದವನ್ನು ತಿರಸ್ಕರಿಸಿದ್ದರು ಎಂದು ಪ್ರಚಾರ ಮಾಡಿದ್ದುದು, ಮಾಡುತ್ತಿರುವುದು ಪಟ್ಟಭದ್ರ ಹಿತಾಸಕ್ತಿಯ ಹುನ್ನಾರ ಎನ್ನದೆ ವಿಧಿಯಿಲ್ಲ. ಕೆಲವರು ತಮ್ಮ ಸ್ವಾರ್ಥದ ಹಿತದೃಷ್ಟಿಯಿಂದಲೇ ಈ ಅಭಿಪ್ರಾಯವನ್ನು ಎಲ್ಲೆಲ್ಲೂ ಹರಡಿಸಿದ್ದಾರೆ. ಆದ್ದರಿಂದ ಬಾಬಾ ಸಾಹೇಬರು ಮಾರ್ಕ್ಸ್‌ವಾದವನ್ನು ತಿರಸ್ಕರಿಸಿದ್ದರೆಂಬುದು ಶುದ್ಧ ಸುಳ್ಳು. ಅದರ ಕುರಿತು ಅವರ ತಿಳುವಳಿಕೆ ಏನೇ ಇರಲಿ, ಕೊನೆಯವರೆಗೂ ಅದರ ಬಗ್ಗೆ ಅವರ ಆಸಕ್ತಿ ಮಾತ್ರ ಕೊಂಚೂ ಕಮ್ಮಿಯಾಗಿರಲಿಲ್ಲ. ಅಂತೆಯೇ ಅವರು ಭವಿಷ್ಯ ನುಡಿದ್ದಿದ್ದರು; ‘ಒಂದು ವೇಲೆ ಬೌದ್ಧಧರ್ಮದ ಅಪೇಕ್ಷಿತ ಫಲ ನೀಡಲು ವಿಫಲವಾದರೆ, ಇಡೀ ಜಗತ್ತು ಮಾರ್ಕ್ಸ್‌ವಾದದ ಮಾರ್ಗದಲ್ಲಿಯೇ ಹೋಗಬೇಕಾಗುತ್ತದೆ’. ಎರಡನೆಯದಾಗಿ, ಮಾರ್ಕ್ಸ್‌ವಾದದ ಪರಿಪೂರ್ಣತೆ ಕುರಿತು ಅವರಿಗಿದ್ದ ಅನಿಸಿಕೆ ಅಂದು ಅವರಿಗೆ ಲಭ್ಯವಿದ್ದ ತೆಳುವಾದ ಚಿತ್ರಣದಿಂದ ಬಂದುದಾಗಿತ್ತು; ನೈಜ ಮಾರ್ಕ್ಸ್‌ವಾದದ ಆಳ ಅಧ್ಯಯನದಿಂದ ಬಂದುದಾಗಿರಲಿಲ್ಲ.

ಅವರು ಅರಸುತ್ತಿದ್ದುದ್ದನ್ನು ಕೊಡಲು ಮಾರ್ಕ್ಸ್‌ವಾದದಲ್ಲಿ ಇರಲಿಲ್ಲವೆಂಬುದು ಸ್ಪಷ್ಟ. ಅವರ ಬೇಡಿಕೆಯನ್ನು ಪೂರೈಸಲು ಮಾರ್ಕ್ಸ್‌ವಾದ ಸಿದ್ಧ ಸ್ಥಿತಿಯಲ್ಲಿರಲಿಲ್ಲ. ದೈನಂದಿನ ವ್ಯವಹಾರದ ಕ್ಷೇತ್ರದಲ್ಲಿಯೂ ಸಹಜವಾಗಿಯೇ ಅವರಿಗೆ ಕಮ್ಯುನಿಸ್ಟ್‌ರೊಂದಿಗೆ ಸಾಧ್ಯವಾಗಬೇಕಾಗಿದ್ದ ಐಕ್ಯತೆಯೂ ಚಿಗುರೊಡೆಯಲಿಲ್ಲ. ಅದಕ್ಕೆ ಕಾರಣ ಅವರಲ್ಲ. ಪ್ರತಿಯಾಗಿ, ಅಂದಿನ ಭಾರತೀಯ ಕಮ್ಯುನಿಸ್ಟ್‌ರೇ! ಜಾತಿಯ ಸಮಸ್ಯೆಯನ್ನು ಪರಿಗಣಿಸಲೂ ಸಿದ್ಧರಿಂದ ಭಾರತೀಯ ಕಮ್ಯುನಿಸ್ಟ್‌ರ ಯಾಂತ್ರಿಕ ದೃಷ್ಟಿಕೋನ ಇಬ್ಬರ ನಡುವಿನ ಮೈತ್ರಿಯ ಸಾಧ್ಯತೆಯನ್ನು ಹೊಸಕಿ ಹಾಕಿತ್ತು. ಎಂದೋ ತನ್ನ ಗತಿಯನ್ನು ಕಳೆದುಕೊಂಡು ಸ್ತಗಿತಗೊಂಡಿದ್ದ, ಚಲನಶೀಲತೆಯನ್ನು ಕಳೆದುಕೊಂಡು ಹೆಪ್ಪುಗಟ್ಟಿದ್ದ ಈ ನೆಲದ ವಾಸ್ತವವನ್ನು ಕಿಂಚಿತ್ತು ಪರಿಗಣಿಸದೇ ಅದಕ್ಕೆ ಬೆನ್ನು ತಿರುಗಿಸಿ, ಆಷ್ಟ್ರಿಚ್ ಪಕ್ಷಿಯಂತೆ ಮುಖ ಮುಚ್ಚಿಕೊಳ್ಳುತ್ತಿದ್ದ ಕಮ್ಯುನಿಸ್ಟರ ವರ್ತನೆ ನಿಜವಾಗಿಯೂ ‘ಅಮಾರ್ಕ್ಸ್‌ವಾದಿ’ ಯಾಗಿತ್ತು. ಆದರೂ ಅಂಬೇಡ್ಕರರು ತಮ್ಮ ಇಂಡಿಪೆಂಡೆಂಟ್ ಲೇಬರ್ ಪಕ್ಷದ ದಿನಗಳಲ್ಲಿ ಅವರೊಂದಿಗೆ ಕೈಗೂಡಿಸಿದ್ದರು. ಕಾರ್ಮಿಕ ವಿರೋಧಿ ವಿಧೇಯಕದ ಪರಿಣಾಮವಾಗಿ ಕಾಣಿಸಿಕೊಂಡಿದ್ದ ಬಾಂಬೇ ಕಾರ್ಮಿಕರ ಚರಿತ್ರಾರ್ಹ ಪ್ರತಿಭಟನಾ ಮುಷ್ಕರದ ಸಂದರ್ಭದಲ್ಲಿ ಬಾಬಾ ಸಾಹೇಬರು ಕಮ್ಯುನಿಸ್ಟ್‌ರೊಂದಿಗೆ ಕೂಡಿ ಹೋರಾಡಿದ್ದನ್ನು ಯಾರೂ ಮರೆಯುಂತಿಲ್ಲ. ಆದರೆ, ಆ ಮೈತ್ರಿ ಮಿತವಾಗಿತ್ತು. ಹೆಚ್ಚು ಕಾಲ ಮುಂದುವರಿಯಲಿಲ್ಲ. ಸಾಮಾಜಿಕ ವಿದ್ಯಮಾನವನ್ನು ವಿಶ್ಲೇಷಿಸುವ ಅತ್ಯಂತ ಬಲಿಷ್ಠ ತಾತ್ವಿಕ ಸಾಧನ, ಸಲಕರಣೆಗಳನ್ನು ಹೊಂದಿದ್ದ ಕಮ್ಯುನಿಸ್ಟರು ಬಾಬಾ ಸಾಹೇಬರನ್ನು ತಿಳಿದುಕೊಳ್ಳುವ ಅವಶ್ಯಕತೆಯಿತ್ತು. ಮತ್ತು ಅದು ಅವರ ಕರ್ತವ್ಯವೂ ಆಗಿತ್ತು. ಅದಕ್ಕೆ ವ್ಯತಿರಿಕ್ತವಾಗಿ, ಬಾಬಾ ಸಾಹೇಬರೇ ಕಮ್ಯುನಿಸ್ಟ್‌ರನ್ನು ಅರಿತುಕೊಳ್ಳುವ ಅವಶ್ಯಕತೆ ಇರಲಿಲ್ಲ. ಹಾಗೆಯೇ ಅದರ ಪ್ರಮೇಯವೂ ಉದ್ಭವಿಸಲಿಲ್ಲ. ಯಾಕೆಂದರೆ, ಅವರನ್ನು ತಿಳಿದುಕೊಳ್ಳುವ ಕರ್ತವ್ಯ ಬಾಬಾ ಸಾಹೇಬರದಾಗಿರಲಿಲ್ಲ. ಕಮ್ಯುನಿಸ್ಟರು ಇನ್ನೂ ಮುಂದುವರೆದು ಬಾಬಾ ಸಾಹೇಬರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದದ್ದು ಅಷ್ಟೇ ಅಲ್ಲ, ವೈರತ್ವದಿಮದ ಅವರನ್ನು ವಿರೋಧಿಸತೊಡಗಿದ್ದರು. ಈ ಎಲ್ಲದಕ್ಕೂ ಕಾರಣವೆಂದರೆ, ಮಾರ್ಕ್ಸ್‌ವಾದದಲ್ಲಿಯೂ ನುಸುಳಿಕೊಂಡಿದ್ದ ‘ಬ್ರಾಹ್ಮಣಿಕೆ’ ಮತ್ತು ಅದರ ‘ಮಡಿವಂತಿಕೆ’ ಅಂದು ಬಾಬಾ ಸಾಹೇಬರ ಕುರಿತು ಕಮ್ಯುನಿಸ್ಟರಿಗಿದ್ದ ನಿಲುವಿನ ದೋಷ, ನ್ಯೂನತೆಗಳನ್ನು ಕಾಲವೇ ಸಾಬೀತುಗೊಳಿಸಿದೆ. ಅವರು ನಿಜವಾಗಿಯೂ ಕ್ರಾಂತಿಗೆ ಬದ್ಧರಾಗಿದ್ದರೆ, ಈ ದೇಶದ ಅತ್ಯಂತ ತುಳಿತಕ್ಕೊಳಗಾದ ಜನಕೋಟಿ ಅವರ ಕ್ರಾಂತಿಕಾರಿ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಬೇಕಾಗಿತ್ತು. ತಮ್ಮ ನೆಲೆಗೆ ಪ್ರಚ್ಫನ್ನ ಶಕ್ತಿ ಒದಗಿಸಬಹುದಾದ ಒಂದು ಮಹಾಸ್ರೋತ್ತವಾಗಿ ಪರಿಗಣಿಸಲ್ಪಡಬೇಕಾಗಿತ್ತು. ಆದ್ದರಿಂದ ಕಮ್ಯುನಿಸ್ಟ್‌ರ ಕ್ರಾಂತಿಯ ಯಾವುದೇ ಯೋಜನೆ, ಯುಕ್ತಿಗಳಲ್ಲಿ ದಲಿತರಿಗೆ ಪ್ರಪ್ರಥಮ ಪ್ರಾಶಸ್ತ್ಯ ದೊರೆಯಬೇಕಾಗಿತ್ತು. ಆದರೆ ಅವರ ದೃಷ್ಟಿಯಲ್ಲಿ ದಲಿತರೇ ಇರಲಿಲ್ಲ. ಹೀಗಾಗಿ, ಅವರ ಎಲ್ಲ ಯೋಜನೆಗಳಲ್ಲಿ ದಲಿತರಿಗೆ ಅವಕಾಶ ದೊರೆಯಲಿಲ್ಲ. ಭಾರತದ ಕ್ರಾಂತಿಗೆ ದ್ರೋಹ ಬಗೆದ ಹೊಣೆಗಾರಿಕೆ ನಮ್ಮ ಕಾಮ್ರೇಡ್‌ಗಳ ಹೆಗಲ ಮೇಲಿದೆಯೇ ವಿನಾ ಅಂಬೇಡ್ಕರರ ಹೆಗಲ ಮೇಲಲ್ಲ. ಕ್ರಾಂತಿಯ ಸಾಧ್ಯತೆಯನ್ನು ನೈಜಗೊಳಿಸಬಲ್ಲ ಸಾಮಾಜಿಕ ಶಕ್ತಿಗಳ ಬಗ್ಗೆ ತಪ್ಪು ತಿಳುವಳಿಕೆ ಇದ್ದವರು ಅಂದಿನ ಕಮ್ಯುನಿಸ್ಟ್ ಕಾಮ್ರೇಡರೇ ಹೊರತು ಅಂಬೇಡ್ಕರರಲ್ಲ.

ಅಂದು ಮುಂಬೈಯಲ್ಲಿದ್ದ ಮುಂಚೂಣಿ ಕಮ್ಯುನಿಸ್ಟ್ ನಾಯಕರಂತೆ, ಮೇಲ್ವರ್ಗದಿಂದ ಕೆಳಗಿಳಿದು, ಕಾರ್ಮಿಕರ ವರ್ಗಪ್ರಜ್ಞೆಯನ್ನು ಅಂತರ್ಗತ ಮಾಡಿಕೊಳ್ಳುವ ಅವಶ್ಯಕತೆ ಬಾಬಾ ಸಾಹೇಬರಿಗಿರಲಿಲ್ಲ. ಯಾಕೆಂದರೆ, ಅವರು ಕಾರ್ಮಿಕ ವರ್ಗದಿಂದಲೇ ಬಂದಿದ್ದರು. ಮೇಲಾಗಿ, ಮುಂಬೈಯಲ್ಲಿ ಮಿಲ್ ಕಾರ್ಮಿಕರ ಕ್ವಾರ್ಟರ್ಸ್‌ಗಳ ಮಧ್ಯೆ ಇದ್ದ ಒಂದು ಚಾಳಿನಲ್ಲಿಯೇ ಅವರು ವಾಸಿಸುತ್ತಿದ್ದರು. ಅಮೇರಿಕಾ ಮತ್ತು ಯುರೋಪ್‌ನಲ್ಲಿದ್ದಾಗಲೂ ಅವರು ಕಡುಬಡತನದ ಬದುಕನ್ನೇ ನಡೆಸುತ್ತಿದ್ದರು. ಎಷ್ಟೋ ಸಲ ಉಣ್ಣಲು ಸಾಕಷ್ಟು ಆಹಾರ ದೊರಕುತ್ತಿರಲಿಲ್ಲ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ದೇಶೀ ಪೋಷಾಕಿನ ಸೋಗಲಾಡಿತನವನ್ನು ಧಿಕ್ಕರಿಸಲೋ ಎಂಬಂತೆ ಅವರು ಧರಿಸುತ್ತಿದ್ದ ಪಾಶ್ಚಾತ್ಯ ಮಾದರಿಯ ವೇಷಭೂಷಣವೊಂದನ್ನು ಬಿಟ್ಟರೆ ಅವರು ಯಾವಾಗಲೂ ಜನಸಾಮಾನ್ಯರೊಂದಿಗೆ, ಕಾರ್ಮಿಕ ವರ್ಗದೊಂದಿಗೆ ಕಲೆತು ಬದುಕುತ್ತಿದ್ದರು; ಅವರ ಕಷ್ಟ ಕಾರ್ಪಣ್ಯಗಳಲ್ಲಿ, ನೋವು ನಲಿವುಗಳಲ್ಲಿ ಒಂದಾಗುತ್ತಿದ್ದರು. ತಮ್ಮ ಈ ಅನನ್ಯತೆಯನ್ನು ಹೊರಗಿನ ಯಾವುದೇ ಸಾಧನ ಸಲಕರಣೆಗಳ ಮೂಲಕ ನಿರ್ದೇಶಿಸಿಸುವ ಅವಶ್ಯಕತೆ ಇರಲಿಲ್ಲ. ಕಾಲಕ್ರಮೇಣ ಅವರೊಳಗಿನ ರಾಜಕಾರಣಿ ಈ ಪ್ರಜ್ಞೆಯನ್ನು ಮಸಕುಗೊಳಿಸಿದ್ದರ ಪರಿಣಾಮವಾಗಿ ಅವರು ನೇರ ಹೋರಾಟಗಳನ್ನು ಬದಿಗಿರಿಸುತ್ತ, ಹೆಚ್ಚಾಗಿ ತಕ್ಷಣವೇ ಫಲ ಕೊಡುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವಂತಾಯಿತು.

ಅಂದಿನ ಮುಂಬೆ ಕಮ್ಯುನಿಸ್ಟ್‌ರ ಮುಖ್ಯ ನೆಲೆ ಬಟ್ಟೆ ಗಿರಣಿ ಕಾರ್ಮಿಕರ ಟ್ರೇಡ್ ಯುನಿಯನ್‌ಗಳಾಗಿದ್ದವು. ಆ ಬಟ್ಟೆ ಗಿರಣಿಗಳಲ್ಲಿ ಹೆಚ್ಚು ಸಂಬಳ ಸಿಗುತ್ತಿದ್ದ ಕೆಲಸಗಳು ದಲಿತರಿಗೆ ದೊರೆಯುತ್ತಿರಲಿಲ್ಲ. ‘ಬಂಡವಾಳಶಾಹಿ’ ಬಟ್ಟೆ ಗಿರಣಿಗಳಲ್ಲಿಯೂ ಪಾಳೇಗಾರಿಕೆ ಜಾತೀಯತೆಯ ತಾರತಮ್ಯ ತಲೆ ಎತ್ತಿತ್ತು! ಆದರೂ ಟ್ರೇಡ್ ಯೂನಿಯನ್ ಮುಖಂಡರು ಅದರ ಬಗ್ಗೆ ತುಟಿಪಿಟಿಕ್ಕೆನ್ನುತ್ತಿರಲಿಲ್ಲ. ಹಾಗಾಗಿ ಬಟ್ಟೆ ಗಿರಣಿಗಳಲ್ಲಿ ಹೆಚ್ಚು ಕೂಲಿ ಇದ್ದ ನೇಯ್ಗೆಯ ವಿಭಾಗದಲ್ಲಿ ದಲಿತರಿಗೆ ಪ್ರವೇಶ ಇರಲಿಲ್ಲ. ಮಿಲ್ಲುಗಳ ಹೊರಗಡೆಯೂ ಸವರ್ಣೀಯ ಕಾರ್ಮಿಕರಿಗಿಂತ ದಲಿತ ಕಾರ್ಮಿಕರ ಆರ್ಥಿಕ ಸ್ಥಿತಿ ದಾರುಣವಾಗಿತ್ತು. ಅಂದಿನ ಕಮ್ಯುನಿಸ್ಟ್‌ರು ಟ್ರೇಡ್ ಯೂನಿಯನ್‌ಗಳನ್ನು ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಬಳಸದೇ ತಮ್ಮ ರಾಜಕೀಯ ಲಾಭಕ್ಕಾಗಿ ಉಪಯೋಗಿಸುವುದನ್ನು ಬಾಬಾ ಸಾಹೇಬರು ಗಮನಿಸಿದ್ದರು. ಮಿಲ್ ಮಾಲೀಕರ ಶೋಷಣೆಯ ವಿರುದ್ಧ ತಮ್ಮ ಕ್ರಮ ತೀವ್ರಗೊಳಿಸಿ, ಮುಷ್ಕರ ಹೂಡಿದಾಗಲೆಲ್ಲ ಕಾರ್ಮಿಕರು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದರು. ಆದರೆ ಆ ಕಾರ್ಮಿಕರಲ್ಲಿಯೇ ದಲಿತ ಕಾರ್ಮಿಕರ ಕಷ್ಟಗಳು ಇನ್ನೂ ತೀವ್ರವಾಗಿರುತ್ತಿದ್ದವು. ಯಾಕೆಂದರೆ ಆ ಮಿಲ್ಲುಗಳಲ್ಲಿ ದೊರೆಯುತ್ತಿದ್ದ ಸ್ಥಾನಗಳು ಜಾತಿಯನ್ನಾಧರಿಸಿದ್ದವು. ಅಂಬೇಡ್ಕರರು ಎರಡು ನಿಟ್ಟಿನಿಂದ ಆ ಟ್ರೇಡ್ ಯೂನಿಯನ್ ನೇತಾರರ ‘ಬೇಜವಾಬ್ದಾರಿ’ ವರ್ತನೆಯನ್ನು ಆಕ್ಷೇಪಿಸಿದ್ದರು. ಒಂದು, ಆ ಮುಷ್ಕರಗಳು ಕಾರ್ಮಿಕ ವರ್ಗದಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸುವ ಬದಲು ‘ಆರ್ಥಿಕವಾದ’ದ ಪ್ರೇರಣೆಯಿಂದಲೇ ನಡೆಯುತ್ತಿದ್ದವು; ಎರಡು, ಆ ಮುಷ್ಕರಗಳನ್ನು ತಮ್ಮ ರಾಜಕೀಯ ಹಿತಾಸಕ್ತಿ ಸಂವರ್ಧಿಸಿಕೊಳ್ಳಲು ಅವರು ಕಾರ್ಮಿಕ ವರ್ಗವನ್ನು ಬಂದೂಕಿನ ಮದ್ದಿನಂತೆ ಬಳಸಲೆತ್ತಿಸುತ್ತಿದ್ದರು. ಈ ಎರಡೂ ಕಾರಣಗಳಿಗಾಗಿ ಅಂಬೇಡ್ಕರರು ಅಂದಿನ ಕಮ್ಯುನಿಸ್ಟ್ ಟ್ರೇಡ್ ಯೂನಿಯನ್ ಅಂದೋಲನವನ್ನು ಗುಮಾನಿಯಿಂದ ನೋಡುತ್ತಿದ್ದರು. ಕಮ್ಯುನಿಸಂ ಮತ್ತು ಮಾರ್ಕ್ಸಿಸಂ ಕುರಿತ ಅಂಬೇಡ್ಕರರ ಬರವಣಿಗೆಗಳು ಹೆಚ್ಚಾಗಿ ಮುಂಬೈ ಕಮ್ಯುನಿಸ್ಟ್‌ರ ಬಗ್ಗೆ ಅವರಿಗಿದ್ದ ಜುಗುಪ್ಸೆಯ ಬಣ್ಣ ಗಾಢವಾಗಿಯೇ ಬಳಿದುಕೊಂಡಿವೆ. ಮಾರ್ಕ್ಸ್‌ವಾದವನ್ನು ಅದರ ಸ್ವಯಂಘೋಷಿತ ಅನುಯಾಯಿ ಆಚಾರಿಗಳೊಂದಿಗೆ ಗುರುತಿಸುವ ಪ್ರವೃತ್ತಿಯ ಈ ಬಳುವಳಿ ಇವತ್ತಿಗೂ ದಲಿತರಲ್ಲಿ ಕಂಡುಬರುತ್ತಿದೆ. ಆದ್ದರಿಂದಲೇ ಮಾರ್ಕ್ಸ್‌ವಾದದ ವಿಫಲತೆಯನ್ನು ಎತ್ತಿ ತೋರಿಸಲು ಅವರು ಇಂದಿಗೂ ಸಂಸದೀಯ ಕಮ್ಯುನಿಸ್ಟ್ ಪಕ್ಷಗಳ ಚ್ಯುತಿ ನ್ಯೂನ್ಯತೆಯ ನಿದರ್ಶನ ನೀಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಸರಿ ಮಾರ್ಕ್ಸ್‌ವಾದಕ್ಕೆ ವಿಮರ್ಶೆಯ ಅವಶ್ಯಕತೆ ಇದೆ. ಆದರೆ ಅದನ್ನು ಕೈಗೊಳ್ಳುವ ಮುಂಚೆ ಅದರ ಗಂಭೀರ ಅಧ್ಯಯನದ ಅವಶ್ಯಕತೆಯೂ ಅಷ್ಟೇ ಇದೆ ಎಂಬುದನ್ನು ದಲಿತರು ಇಂದು ಅನಿವಾರ್ಯವಾಗಿ ಅರಿಯಬೇಕಾಗಿದೆ. ಅನೇಕರಿಗೆ ಕಮ್ಯುನಿಸ್ಟ್‌ರು ಒಡ್ಡುವ ಅತ್ಯಂತ ದೊಡ್ಡ ಅಡ್ಡಿ ಎಂದರೆ, ಅವರ ಆ ಮಾರ್ಕ್ಸ್‌ವಾದಿ ನಿಲುವು ಮತ್ತು ಮಡಿವಂತಿಕೆಯ ದೃಷ್ಟಿ. ಭಾರತದಲ್ಲಿ ಇದಕ್ಕೆ ಕಾರಣ ಸಹಜವಾಗಿಯೇ ಬ್ರಾಹ್ಮಣಶಾಹಿಗೆ ಆರೋಪಿಸಲಾಗುತ್ತದೆ. ಅದರ ಗುಣ, ಗತ್ತು ಗೈರುತ್ತುಗಳೆಲ್ಲ ಎಲ್ಲರಿಗೂ ಗೊತ್ತಿರುವವೇ. ಇದಕ್ಕೆ ಇನ್ನೂ ಒಂದು ಕಾರಣವೆಂದರೆ, ಕಮ್ಯುನಿಸ್ಟ್ ನೇತಾರರೆಲ್ಲ ಹೆಚ್ಚಾಗಿ ಬ್ರಾಹ್ಮಣರೇ ಆಗಿದ್ದರು. ಮತ್ತು ಇನ್ನು ಕೆಲವರಿದ್ದರೂ ಅವರೂ ‘ದ್ವಿಜ’ ಜಾತಿಗಳಿಂದಲೇ ಬಂದವರಾಗಿದ್ದರು. ವೈಜ್ಞಾನಿಕ ಅನ್ವೇಷಣೆ, ಪರಿಸ್ಥಿತಿಗಳ ಗತಿಶೀಲ ಗ್ರಹಿಕೆ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಸಹನೆಯಿಂದ ಪರಿಭಾವಿಸುವ ಸಂಯಮ ಇತ್ಯಾದಿ ಪೂರ್ವಭಾವಿ ಭೂಮಿಕೆಯನ್ನು ನಿರೀಕ್ಷಿಸುತ್ತದೆ, ಮಾರ್ಕ್ಸ್‌ವಾದ. ಈ ಗುಣಗಳೇ ಅದರ ಸತ್ವೂ ಹೌದು, ಸಾರವೂ ಹೌದು. ತಮ್ಮ ‘ಅಧಿಕೃತ’ ಮಾರ್ಗದಲ್ಲಿ ಚಕಾರವೆತ್ತದೆ ಹೆಜ್ಜೆ ಹಾಕಲು ನಿರಾಕರಿಸುವವರನ್ನು ದ್ರೋಹಿ, ಪ್ರತಿಗಾಮಿ, ಪರಿಷ್ಕರಣವಾದಿ ಇತ್ಯಾದಿ ಹಣೆಪಟ್ಟಿಗಳನ್ನು ಅಂಟಿಸಲು ಸಾಂಸ್ಥೀಕೃತ ಮಾರ್ಕ್ಸ್‌ವಾದಿ ಸದಾ ಸಿದ್ಧವಾಗಿಯೇ ಇತ್ತೆಂದು ಕಾಣುತ್ತದೆ. ಹೀಗೆ ಅಧಿಕೃತ ಮಾರ್ಕ್ಸ್‌ವಾದಿ ತಾತ್ವಿಕ ದೃಷ್ಟಿಯಲ್ಲಿ ಅಧಃಪತನಗೊಂಡ ಸಂಗಾತಿಗಳನ್ನು ವರ್ಗವೈರಿಗಳಿಗಿಂತಲೂ ಕೆಟ್ಟದ್ದಾಗಿ ಪರಿಗಣಿಸಿ, ಕ್ರಾಂತಿಗೆ ಅವರು ನೀಡಿದ ಇಡೀ ಬದುಕಿನ ಕಾಣಿಕೆಯನ್ನು ಒಂದೇ ಉಸಿರಿಗೆ ಹುದುಗಿ ಹಾಕುವ ಪ್ರವೃತ್ತಿ ಎಲ್ಲೆಲ್ಲೂ ವ್ಯಾಪಿಸಿತ್ತು. ಕ್ರಮೇಣ ಅದು ಒಂದು ಪರಂಪರೆಯಾಗಿಯೇ ಬೆಳೆದು ಮಾರ್ಕ್ಸ್‌ವಾದಿಗಳ ವಲಯದಲ್ಲಿ ಅಪ್ರಜ್ಞಾಪೂರ್ವಕ ಕಂದಾಚಾರದ ವರ್ತನೆಯನ್ನು ಬೆಳೆಸಿತು. ಅತ್ಯಂತ ಶಕ್ತಿಯುತವಾದ ವಿಶ್ಲೇಷಣಾ ಸಲಕರಣೆಗಳಿರುವ ಮಾರ್ಕ್ಸ್‌ವಾದಿಗಳ ವಿಶ್ಲೇಷಣೆ ಉಳಿದವರಿಗೆ ಹೋಲಿಸಿದರೆ, ಇವತ್ತಿಗೂ ಶ್ರೇಷ್ಠವಾಗಿಯೇ ಇರುತ್ತದೆ. ಆದರೆ ಈ ದಾರಿಯಲ್ಲಿ ಅವರು ತಮ್ಮ ಹಳೆಯ ‘ಕಂದಾಚಾರದ ಸಿಂಧುತ್ವ’ ವನ್ನು ಸದಾ ಸಿದ್ಧಮಾಡಿ ತೋರಿಸಲು ಹೊಸ ಸಂಗತಿಗಳನ್ನೂ ತಮ್ಮ ಹಳೆಯ ತರ್ಕ ತೀರ್ಮಾನಗಳಲ್ಲಿ ತುಂಬುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಉದಾಹರಣೆಗೆ; ಅವರು ಈಗ ಜಾತಿ ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಒಪ್ಪುತ್ತಿರುವಂತೆ ಅಂಬೇಡ್ಕರರ ಕಾಲದಲ್ಲಿಯೂ ಒಪ್ಪಿದ್ದರೆ ಈ ದೇಶದ ಚರಿತ್ರೆಯೇ ತುಸು ಭಿನ್ನವಾಗಿರಬಹುದಾಗಿತ್ತು. ಕ್ರಾಂತಿಯ ಬಗ್ಗೆ ಅಮಿತ ಬದ್ಧತೆ ಇರುವವರ ಒಂದೇ ಒಂದು ಕೊರಗೆಂದರೆ, ಅಧಿಕೃತ ಮಾರ್ಕ್ಸ್‌ವಾದಿಗಳ ಅಂದಿನ ನಿಲುವು ವಸ್ತುನಿಷ್ಠವಾಗಿರಲಿಲ್ಲ ಎಂಬುದು. ಅಷ್ಟೇ ಏಕೆ, ಅವರ ಇಂದಿನ ನಿಲುವಿನಲ್ಲೂ ಹೇಳಿಕೊಳ್ಳುವಂಥ ಯಾವುದೇ ಬದಲಾವಣೆ ಕಾಣಬರುವುದಿಲ್ಲ. ಅದಕ್ಕೆಂದೇ ಅವರು ಬಂಡವಾಳಶಾಹಿ ವ್ಯವಸ್ಥೆಯಲ್ಲಾದ ಉತ್ಪಾದನಾ ವಿಧಾನಗಳ ಬದಲಾವಣೆಯನ್ನು ಪರಿಗಣಿಸುವುದೇ ಇಲ್ಲ; ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾಗಳಲ್ಲಾದ ಮುನ್ನಡೆಯನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಬಂಡವಾಳಶಾಹಿ ಸಂಘಟನೆಗಳು ತಾಂತ್ರಿಕ ಅಭಿವೃದ್ಧಿಯೊಂದಿಗೆ ಹೊಸ ಹೊಸ ಸಂಗತಿ, ಸಾಧ್ಯತೆಗಳನ್ನು ಮೈಗೂಡಿಸಿಕೊಳ್ಳುತ್ತ ಹೋಗುತ್ತಿವೆ. ಈ ಸಂಘಟನೆಗಳು ನವೋನವೀನ ಅವಶ್ಯಕತೆಗಳಿಗೆ ತಕ್ಕಂತೆ ಹಿಗ್ಗುತ್ತ, ಕುಗ್ಗುತ್ತ, ಬಾಗುತ್ತ, ಬಳುಕುತ್ತ ಹೋಗುತ್ತಿವೆ. ಮಾಹಿತಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕರತಲಾಮಲಕ ಮಾಡಿಕೊಂಡಿರುವ ಬಂಡವಾಳಶಾಹಿ ಸಂಘಟನೆಗಳು ಹೊಸ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮನ್ನು ತಾವು ಪುನರ್ ರೂಪಿಸಿಕೊಳ್ಳುತ್ತಿವೆ. ಸಹಸ್ರಾರು ಕಾರ್ಮಿಕರನ್ನು ಸೇವೆಗೆ ನೇಮಿಸಿಕೊಳ್ಳುತ್ತಿದ್ದ ಫ್ಯಾಕ್ಟರಿಗಳು ಇಂದು ಮಾಯವಾಗಿವೆ. ಅಂತಹ ಫ್ಯಾಕ್ಟರಿಗಳಲ್ಲಿ ಏಕತಾನತೆಯಿಂದ ಕೂಡಿದ್ದ ಕೆಲಸ ಮಾಡುತ್ತಾ ತನ್ನ ಉತ್ಪಾದನೆಯಿಂದ ತಾನೇ ದೂರಾಗಿ ಪರಕೀಯ ಭಾವನೆಗೆ ಗುರಿಯಾಗುವ ಪ್ರಮೇಯ ಈಗ ಕಾರ್ಮಿಕರ ಮಧ್ಯೆ ಉದ್ಭವಿಸುವುದೇ ಇಲ್ಲ. ಇಂತಹ ಹಳೆಯ ಉತ್ಪಾದನಾ ವ್ಯವಸಥೆಯ ಸ್ಥಾನದಲ್ಲಿ ಈಗ ಹೊಸ ವ್ಯವಸ್ಥೆಗಳು ಆವಿಷ್ಕಾರಗೊಂಡಿವೆ. ಈಗಿನ ಕಾರ್ಮಿಕರು ಹಿಂದಿನವರಿಗಿಂತ ತುಂಬಾ ಭಿನ್ನವಾಗಿದ್ದಾರೆ. ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಹೆಚ್ಚಿನ ಸ್ವಾಯತ್ತತೆ, ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಅವರ ಮೇಲೆ ಯಾವುದೇ ನಿರಂಕುಶ ಅಧಿಕಾರದ ದಬ್ಬಾಳಿಕೆ ಇರುವಂತೆ ಕಾಣುವುದಿಲ್ಲ. ಅಷ್ಟೇ ಅಲ್ಲ, ತಾವು ಸೇವೆ ಸಲ್ಲಿಸುತ್ತಿರುವ ಸಂಘಟನೆಗಳ ಲಾಭಾಂಶಗಳಲ್ಲಿ ಪಾಲು ಪಡಯುವ ದಾರಿಗಳು ಅವರ ಮುಂದೆ ತೆರೆದುಕೊಳ್ಳುತ್ತಿವೆ. ಬಡದೇಶಗಳ ಜನತೆಯನ್ನು ಮೂಲೆಗುಂಪು ಮಾಡುವ ಅಗೋಚರ ಧೋರಣೆಯೊಂದಿಗೆ ಮೈಚಾಚಿಕೊಳ್ಳುತ್ತಿರುವ ಜಾಗತೀಕರಣ ಇಂಥ ಬದಲಾವಣೆಯ ಇನ್ನೊಂದು ರೂಪವಾಗಿದೆ. ಅನೇಕರ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ, ಬಂಡವಾಳಶಾಹಿಯ ಈ ತಥಾಕಥಿತ ಸಡಿಲತೆ ಮಾರ್ಕ್ಸ್‌ವಾದಿ ಸಿದ್ಧಾಂತದ ಪ್ರಸ್ತುತತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ಈ ಬದಲಾವಣೆಗಳಿಗನುಗುಣವಾಗಿ ಮಾರ್ಕ್ಸ್‌ವಾದಿಗಳು ತಮ್ಮ ಕಾರ್ಯವ್ಯೂಹದಲ್ಲಿ ಸಮುಚಿತ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಹಾಗೆ ಮಾಡಿಕೊಳ್ಳುವಂತೆ ಅವರ ಮೇಲೆ ಯಾವುದೇ ಪ್ರಭಾ ಆಗದೇ ಇದ್ದದ್ದು ಖೇದದ ವಿಷಯ. ತಮ್ಮ ಕಾರ್ಯಕ್ರಮದ ಪುನರ್ ನಿರೂಪಣೆಯ ಯೋಜನೆಯು ಹೊಸದಾಗಿ ಉದ್ಭವಿಸುತ್ತಿರುವ ಈ ಪ್ರಪಂಚದ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಮಾರ್ಕ್ಸ್‌ವಾದವನ್ನು ಒಪ್ಪುವಲ್ಲಿ ಅಂಬೇಡ್ಕರರಿಗೆ ಇನ್ನೂ ಒಂದು ಸಮಸ್ಯೆ ಎದುರಾಗಿತ್ತೆಂದು ಕಾಣುತ್ತದೆ. ಕ್ರಾಂತಿಯ ನಂತರ ಸಮಾಜವಾದಿ ವ್ಯವಸ್ಥೆಯಿಂದ ಸಾಮ್ಯವಾದಿ ವ್ಯವಸ್ಥೆಯೆಡೆಗಿನ ಸ್ಥಿತ್ಯಂತರದ ಕಾಲದಲ್ಲಿ ‘ಕಾರ್ಮಿಕ ವರ್ಗದ ಸರ್ವಾಧಿಕಾರ’ ಇರಬೇಕೆಂದು ಮಾರ್ಕ್ಸ್‌ವಾದ ಸೂಚಿಸುತ್ತದೆ. ಆದರೆ ಅಂಬೇಡ್ಕರರಿಗೆ ಯಾವುದೇ ತರಹದ ಸರ್ವಾಧಿಕಾರವೂ ಅಪಥ್ಯವಾಗಿತ್ತು. ಅವರು ಸರ್ವಾಧಿಕಾರವನ್ನು ನಿರಂಕುಶ ರಾಜಶಾಹಿಗೆ ಸಮವೆಂದೇ ಭಾವಿಸುತ್ತಾರೆ. ಕಾರ್ಮಿಕ ವರ್ಗದ ಸರ್ವಾಧಿಕಾರದ ಹಿಂದೆ ಇರುವ ಮೂಲಭೂತ ವೈಚಾರಿಕ ಕಾರಣವನ್ನು ಅವರು ಸರಿಯಾಗಿ ಗ್ರಹಿಸಿದ್ದಿಲ್ಲ ಎಂಬುವುದೇನೋ ನಿಜವೇ ಅಥವಾ ಅದರಿಂದ ಸಾಧಿತ ಪರಿಕಲ್ಪನೆಯನ್ನು ಅವರು ಸರಿಯಾಗಿ ಅರ್ಥೈಸಿರಲಿಲ್ಲ ಎಂಬುದೂ ನಿಜ. ಆದರೆ ಆ ಕುರಿತು ಅವರಿಗಿದ್ದ ಅನುಮಾನ, ಭೀತಿಗಳು ನಿರಾಧಾರವಾಗಿರಲಿಲ್ಲ ಎಂಬುವುದನ್ನು ಅನಂತರ ಸಮಾಜವಾದಿ ದೇಶಗಳಲ್ಲಿ ಕಾಣಿಸಿಕೊಂಡ ಬೆಳವಣಿಗೆಗಳು ಸಂಶಯಾತೀತವಾಗಿ ರುಜುವಾತುಗೊಳಿಸಿವೆ. ಮಾರ್ಕ್ಸ್‌ವಾದದ ಈ ನ್ಯೂನ್ಯತೆಯನ್ನು ಸರಿಪಡಿಸಲು ಅವರು ಅದಕ್ಕೆ ತುಸು ಭಿನ್ನವಾದ ಬೇರೆ ಒಂದು ಮಧ್ಯಮ ಮಾರ್ಗದ ಪರಿಹಾರವನ್ನು ಸೂಚಿಸಿದ್ದಾರೆ. ಅದುವೇ ‘ಪ್ರಭುತ್ವ ಸಮಾಜವಾದ’ (ಸ್ಟೇಟ್ ಸೋಷಲಿಸಂ) ಸಂಸದೀಯ ಪ್ರಜಾಸತ್ತೆಯನ್ನು ಅಳಿಸಿಹಾಕದೇ ಪ್ರಭುತ್ವವೇ ಸಮಾಜವಾದಿ ದಾರಿಯಲ್ಲಿ ಹೆಜ್ಜೆ ಇಡಬಲ್ಲದು ಮತ್ತು ಇಡಬೇಕು ಎಂಬುದು ಅವರ ಅನಿಸಿಕೆಯಾಗಿತ್ತು. ಇನ್ನೂ ಮುಂದುವರೆದು, ಸಂಸದೀಯ ಪ್ರಜಾಪ್ರಭುತ್ವದೊಳಗಿರುವ ಅರೆ-ಕೊರೆಗಳನ್ನು ಸರಿಪಡಿಸಲು ಮತ್ತು ಸಂಸತ್ತಿನ ಸಾರ್ವಭೌಮತ್ವಕ್ಕೆ ಒಂದು ಮಿತಿಯನ್ನು ಹಾಕಲು ನಿರ್ದಿಷ್ಟ ಅರ್ಥವ್ಯವಸ್ಥೆಯ ರೂಪು ರಚನೆಯನ್ನು ಸಂವಿಧಾನದ ಒಳಗೆ ಅಳವಡಿಸುವಂತೆ ಕೆಲವು ಸಲಹೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಹೀಗೆ ಮಾಡುವುದರ ಮೂಲಕ ಒಂದೇ ಒಂದು ಹನಿ ‘ರಕ್ತಪಾತ’ ವಿಲ್ಲದೆ ಅಥವಾ ಸರ್ವಾಧಿಕಾರದ ಹಂಗಿಲ್ಲದೆ ಸಮಾಜವಾದಿ ವ್ಯವಸ್ಥೆಯನ್ನು ನಿರ್ಮಿಸಬಹುದೆಂದು ಅವರು ಭಾವಿಸಿದ್ದರು. ವಿಷಾದನೀಯ ಸಂಗತಿ ಎಂದರೆ, ರಾಜಕೀಯ ಅರ್ಥವ್ಯವಸ್ಥೆಯ ಚೌಕಟ್ಟಿನೊಳಗೆ ಅಂತರ್ಗತವಾಗಿರುವ ದೋಷವನ್ನು ನಿರ್ದಿಷ್ಟವಾಗಿ ಗ್ರಹಿಸುವ ಬದಲು ಅವರು ಇಂತಹ ಅವಾಸ್ತವಿಕ ಪರಿಹಾರಗಳನ್ನು ಪ್ರತಿಪಾದಿಸಲು ಪ್ರಯತ್ನಿಸಿದರು.

ದಲಿತರು ಮತ್ತು ಕಮ್ಯುನಿಸ್ಟ್ ಆಂದೋಲನಗಳ ನಡುವಿನ ‘ಕಂದರ’ ಭಾರತದಲ್ಲಿ ಕಾಣಿಸಿಕೊಳ್ಳಬೇಕಾಗಿದ್ದ ಕ್ರಾಂತಿಗೆ ಮಹತ್ತರ ಹಾನಿಯನ್ನುಂಟು ಮಾಡಿದೆ. ದಲಿತರು ಮತ್ತು ಅತ್ಯಂತ ತುಳಿತಕ್ಕೊಳಗಾದ ಜನತೆಯೇ ಕಮ್ಯುನಿಸ್ಟ್ ಆಂದೋಲನದ ಬೆನ್ನೆಲುವಾಗಿ ನಿಲ್ಲಬೇಕಾಗಿತ್ತು. ಆದರೆ, ಅವರೇ ಅದರಿಂದ ದೂರ ಉಳಿಯುವಂತಾದದ್ದು ಅದರ ಬೆಳವಣಿಗೆಯನ್ನು ಮೊಟಕುಗೊಳಿಸಿದೆ. ಒಂದೆಡೆ, ದಲಿತರನ್ನು ಅಪ್ಪಿಕೊಲ್ಳದ ಕಮ್ಯುನಿಸ್ಟ್‌ರು, ಇನ್ನೊಂದೆಡೆ ಕಮ್ಯುನಿಸ್ಟ್‌ರನ್ನು ಒಪ್ಪಿಕೊಳ್ಳದ ದಲಿತರು ಹೀಗೆ ಬಿರುಕು ಹೆಚ್ಚಾಗುತ್ತಲೇ ಬಂದಿದೆ. ವರ್ಗ ಹೋರಾಟದ ಸಿದ್ಧಾಂತವನ್ನು ತಿರಸ್ಕರಿಸಿರುವುದರಿಂದ ದಲಿತ ಆಂದೋಲನವು ದಲಿತರ ನಿಜವಾದ ಸಮಸ್ಯೆಗಳೊಂದಿಗೆ ತೆಕ್ಕೆಗೆ ಬೀಳಲು ಸಾಧ್ಯವಾಗದೆ, ಅವುಗಳ ಪರಿಹಾರಕ್ಕೆ ಸಮರ್ಥ ಸಾಧನವೊಂದನ್ನು ಕಂಡುಕೊಳ್ಳುವುದು ಕನಸಾಗಿಯೇ ಉಳಿಯಿತು. ಜಾತಿವ್ಯವಸ್ಥೆಯ ಧರ್ಮ ಸೂಕ್ಷ್ಮಗಳಿಗೆ ಬೆನ್ನು ತಿರುಗಿಸಿದ ಕಮ್ಯುನಿಸ್ಟ್ ಆಂದೋಲನ, ವರ್ಣವ್ಯವಸ್ಥೆಯನ್ನು ನಿರ್ನಾಮಿಸದೇ ವರ್ಗ ಹೋರಾಟವನ್ನು ಕಟ್ಟುವ ಹಂಬಲದಲ್ಲಿ ಈ ದೇಶದ ಬಹುಸಂಖ್ಯಾತ ದಲಿತರ ಬೆಂಬಲವಿಲ್ಲದೇ ಬಲಹೀನವಾಯಿತು. ಇದರ ಒಟ್ಟು ಪರಿಣಾಮವಾಗಿ, ದಲಿತ ಸಮುದಾಯದ ಸ್ಥಿತಿ ಹದಗೆಡುತ್ತಲೇ ಬರುತ್ತಿದೆ ಮತ್ತು ಅವರ ಆಂದೋಲನವು ನೈಜ ಸಮಸ್ಯೆಯ ನಾಡಿ ಹಿಡಿಯದೆ, ನಿರುಪಯುಕ್ತ ನಗಣ್ಯ ಕಾರಣಗಳ ಸುತ್ತ ಸುತ್ತುತ್ತಿದೆ. ಕ್ಷಣಿಕ ಸಮಸ್ಯೆಗಳ ವಿರುದ್ಧವೇ ಸೆಣಸುತ್ತ, ಭಾವನಾತ್ಮಕ ಸಮಸ್ಯೆ ಸವಾಲುಗಳನ್ನು ಎದುರಿಸುವುದರಲ್ಲಿಯೇ ಬಸವಳಿಯುತ್ತಿದೆ. ದಲಿತರು ತಮ್ಮ ನಿಜವಾದ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಂತೆ ಮಾಡುವ ಆಳುವ ವರ್ಗದ ವಂಚನೆಯ ಸಂಚು ದಲಿತರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಮೂಲಭೂತ ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ದಲಿತರ ಪ್ರಯತ್ನದ ಮೇಲೆ ಹಿಡಿ ಮಣ್ಣು ಹಾಕಲು ಸದಾ ಸಿದ್ಧವಾಗಿರುವ ಆಳುವ ವರ್ಗ, ದಲಿತರನ್ನು ಭಾವನಾತ್ಮಕ ಸಮಸ್ಯೆಗಳ ಕೆಸರಲ್ಲಿಯೇ ಸಿಲುಕಿಸಲು ಹೆಣಗುತ್ತಿದೆ. ಇನ್ನು ದಲಿತ ನಾಯಕರದು ಬೇರೆಯೇ ಕಥೆ. ತಮ್ಮ ತಮ್ಮ ಸ್ವಾರ್ಥ ಹಿತಾಸಕ್ತಿಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಇವರು ಆಳುವ ವರ್ಗಗಳ ಅಧಿಕಾರದ ‘ಮಾಯಾಜಾಲ’ದಲ್ಲಿ ಸಿಲುಕಿ ಯಥಾಸ್ಥಿತಿವಾದಿ ರಾಜಕಾರಣದಲ್ಲಿ ತೊಡಗಿದ್ದಾರೆ. ಇಂದು ಅಂಬೇಡ್ಕರರನ್ನು ಪುನರ್ ನಿರೂಪಿಸುವ ಯೋಜನೆಯಲ್ಲಿ ಎರಡು ಹೆಜ್ಜೆಗಳನ್ನು ಇಡಬೇಕಾಗಿದೆ. ಒಂದು, ಅಂಬೇಡ್ಕರರ ಎಲ್ಲ ಪರಿಕಲ್ಪನೆಗಳನ್ನು ಸುಸಂಬದ್ಧವಾಗಿ ಪರಿಕ್ಷಿಸುವುದು; ಎರಡು, ಮಾರ್ಕ್ಸ್‌ವಾದಕ್ಕೆ ಸಂಬಂಧಿಸಿದಂತೆ ಅವರನ್ನು ಪುನರ್ ಪ್ರಸ್ಥಾಪಿಸುವುದು.

ಕಾರ್ಯವ್ಯೂಹ ಮತ್ತು ಕಾರ್ಯತಂತ್ರಗಳ ಆಯಾಮಗಳು

ಕ್ರಾಂತಿಕಾರಿ ಕಾರ್ಯವ್ಯೂಹದ ಸಂದರ್ಭದಲ್ಲಿ ಬಾಬಾ ಸಾಹೇಬರ ಕೊಡುಗೆಗಳು ನಿಜವಾಗಿಯೂ ಗಮನಾರ್ಹವಾಗಿವೆ. ಬ್ರಾಹ್ಮಣಶಾಹಿಯ ವಿರುದ್ಧದ ಸಾಮಾಜಿಕ, ಸಾಂಸ್ಕೃತಿಕ ಹೋರಾಟವನ್ನು ಅವರು ರಾಜಕೀಯ ರಣಾಂಗಣಕ್ಕೆ ತಂದಿದ್ದಾರೆ. ರಾಜಕೀಯ ಅಧಿಕಾರದ ಬೆಂಬಲವಿಲ್ಲದಿದ್ದರೆ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ತಮ್ಮಷ್ಟಕ್ಕೆ ತಾವೇ ಕುಸಿದು ಬೀಳುತ್ತವೆ ಎಂದು ತೀರ್ಮಾನಿಸಿದ ಅವರು, ದಲಿತರು ರಾಜಕೀಯ ಅಧಿಕಾರವನ್ನು ಹಸ್ತಗತ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಆದರೆ ಅವರ ರಾಜಕೀಯ ಅಧಿಕಾರದ ಪರಿಕಲ್ಪನೆಗೆ ಸಂಸದೀಯ ಚೌಕಟ್ಟಿನ ಕಟ್ಟುನಿಟ್ಟಿನ ಮಿತಿಗಳಿದ್ದವು. ಸಂಸದೀಯ ಚೌಕಟ್ಟಿನಲ್ಲಿ ರಾಜಕೀಯ ಅಧಿಕಾರ ಹಿಡಿಯಬೇಕಾದರೆ, ಪ್ರಧಾನವಾಗಿ ‘ಚೌಕಾಸಿ ರಾಜಕಾರಣ’ ದಲ್ಲಿಯೇ ತೊಡಗಬೇಕಾಗುತ್ತದೆ. ಅಂತೆಯೇ ಕುರ್ಚಿಗಾಗಿ ನಡೆಸುವ ‘ರಾಜಕೀಯ ಚೌಕಾಸಿಯ ಚಾಳಿ’ ಅನೇಕ ಸಲ ಗೀಳಾಗಿ ಕಾಡುತ್ತ ಹಲವರನ್ನು ಹಾದಿ ತಪ್ಪಿಸಿತು; ಕೆಲವರಲ್ಲಿ ಇಲ್ಲದ ಭ್ರಮೆಗಳನ್ನು ಸೃಷ್ಟಿಸುತ್ತ ವಿಧವಿಧದ ಕೃತಿ, ವಿಕೃತಿಗಳಿಗೆ ದಾರಿ ಮಾಡಿಕೊಟ್ಟಿತು. ಸ್ವತಃ ಬಾಬಾ ಸಾಹೇಬರ ಕಾಲದಲ್ಲಿಯೇ ಪ್ರಚಲಿತವಿದ್ದ ‘ರಾಜಕಾರಣ’ ಹಲವು ಸಾಧ್ಯತೆಗಳ ಮೇಲಾಟವಾಗಿತ್ತು. ಅವರು ಅದರಲ್ಲಿ ಪಾಲ್ಗೊಂಡುದ್ದೇ ತಡ ಅವರನ್ನೂ ತನ್ನ ಸುಳಿಗೆ ಸೆಳೆದು ಆಪೋಶನಗೊಳ್ಳಲು ಪ್ರಯತ್ನಿಸಿತು. ತತ್ಕಾರಣವಾಗಿ, ಅವರ ವ್ಯಕ್ತಿತ್ವದ ವಿವಿಧ ಆಯಾಮಗಳ ಮೇಲೆ ರಾಜಕಾರಣವೇ ತನ್ನ ಅಧಿಕ್ಯವನ್ನು ಸ್ಥಾಪಿಸಿತು; ಅವರ ಎಲ್ಲ ಚಟುವಟಿಕೆಗಳುದ್ದಕ್ಕೂ ಅದೇ ಹಾಸುಹೊಕ್ಕಾಗತೊಡಗಿತ್ತು; ಕ್ರಮೇಣ ಅಧಿಕಾರ ರಾಜಕಾರಣದ ಪ್ರಭಾವ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತು. ಅಂದಂದಿನ ವಿದ್ಯಮಾನಗಳಿಗೆ ಆ ಕ್ಷಣವೇ ಸ್ಪಂದಿಸುವ ಅನಿವಾರ್ಯತೆ ಉಂಟಾಯಿತು. ಆದ್ದರಿಂದಲೇ ಅವರ ಬದುಕಿನ ಆ ಘಟ್ಟದಲ್ಲಿ ಅನೇಕ ಅಸಾಂಗತ್ಯಗಳು ಕಾಣಿಸಿಕೊಂಡವು. ದೈನಂದನ ಸಮಸ್ಯೆ ಸವಾಲುಗಳನ್ನು ಎದುರಿಸಲು ಸೂಕ್ತ ತಂತ್ರ, ಉಪಾಯಗಳ ಶೋಧನೆಯ ಕೆಲಸವೇ ಪ್ರಮುಖವಾಗಿ, ದೂರಗಾಮಿ ಪರಿಣಾಮದ ಕಾರ್ಯವ್ಯೂಹ ಕಣ್ಮರೆಯಾಗ ತೊಡಗಿತು. ನಿಜ, ಇದೆಲ್ಲ ಅವರ ಬದುಕಿನ ಕೊನೆಯ ಘಟ್ಟದಲ್ಲಿ ಬಂದೆರಗಿದ ದುರ್ಭರ ಸ್ಥಿತಿಯ ಪರಿಣಾಮವಾಗಿತ್ತು. ಆದರೆ ಇದ್ಯಾವುದನ್ನು ಚಾರಿತ್ರಿಕ ದೃಷ್ಟಿಯಿಂದ ನೋಡದೇ ಇಂದಿನ ದಲಿತ ನಾಯಕರು ಸಂಸದೀಯ ರಾಜಕೀಯದ ಈ ಚಳುವಳಿಯನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಬಹುಶಃ ಸಂಸದೀಯ ರಾಜಕಾರಣವೇ ಇವರ ರಾಜಕೀಯ ಬದುಕಿನ ಸರ್ವಸ್ವವಾಗಿದೆ. ಇಂತಹ ರಾಜಕಾರಣದ ಒಲವು, ನಿಲುವುಗಳು, ದಲಿತ ಆಂದೋಲನಕ್ಕೆ ಮಾಡಿರುವ ಅಪಾರ ಹಾನಿಯ ಕುರಿತು ಶೋಧಿಸುವುದು ತುಂಬ ಕುತೂಹಲಕಾರಿ ಕ್ರಿಯೆಯಾಗಬಹುದು.

ತಮ್ಮ ರಾಜಕೀಯ ಆಚರಣೆಗಾಗಿ ಸಂಸದೀಯ ಪ್ರಜಾಸತ್ತೆಗೆ ಪರ್ಯಾಯವಾದ ದಾರಿ ಮಾರ್ಗಗಳೇನಾದರೂ ಅಂಬೇಡ್ಕರರಿಗಿದ್ದವೆ? ಎಂಬುವುದು ತೀರ ಬೇರೆಯೇ ಪ್ರಶ್ನೆ. ಅವರಿಗಿದ್ದ ಸಂಪನ್ಮೂಲಗಳ ಕೊರತೆ, ವೈರ, ವಿರೋಧದಿಂದ ಕೂಡಿದ್ದ ಪರಿಸರ ಮತ್ತು ಕೆಲಮಟ್ಟಿಗೆ ಅವರ ವೈಯಕ್ತಿಕ ಮಿತಿಗಳು ಈ ಎಲ್ಲವುಗಳ ಸಂದರ್ಭದಲ್ಲಿ ನೋಡಿದಾಗ ಅವರಿಗೆ ಪರ್ಯಾಯ ರಾಜಕಾರಣದ ಸಾಧ್ಯತೆಗಳಿರಲಿಲ್ಲ ಎಂದು ವಾದಿಸಬಹುದು. ಹಾಗಾಗಿ, ಅವರು ಅಂದು ಅನುಸರಿಸಿದ ಅನಿವಾರ್ಯ ಮಾರ್ಗ ಸರಿಯೆಂದು ಒಪ್ಪಿದರೂ ಅದನ್ನು ಆ ಸಂದರ್ಭಕ್ಕೆ ತಕ್ಕ ಒಂದು ಕಾರ್ಯತಂತ್ರ, ಕಾರ್ಯೋಪಾಯವೆಂದೇ ಭಾವಿಸಬಹುದು. ಒಂದು ಸಂದರ್ಭದಲ್ಲಿ ಅನಿವಾರ್ಯವಾಗಿ ಕಾಣಿಸಿಕೊಂಡಿದ್ದ ಆ ಸಂದರ್ಭಕ್ಕೇ ಸೀಮಿತವಾಗಬೇಕು ಎನ್ನುವುದನ್ನು ಮರೆಯಲಾಗದು. ಅಂದರೆ, ಸಂದರ್ಭದ ಶಿಶುವಾಗಿ ಜನಿಸಿದ ಯಾವುದಕ್ಕೂ ಚಿರಂತನ ಮೌಲ್ಯ ಇರಲಾರದು ಮತ್ತು ಇರಬಾರದು.

ಅಂಬೇಡ್ಕರರ ರಾಜಕೀಯ ಆಚಾರ ಮತ್ತು ವಿಚಾರಗಳ ಮುಖ್ಯ ಸೆಲೆ ಪ್ರಭುತ್ವ ಮತ್ತು ಧರ್ಮದ ಕುರಿತ ಅವರ ಪರಿಕಲ್ಪನೆಯೇ. ಸಾಮಾಜಿಕ ವಿದ್ಯಮಾನಗಳ ಪ್ರವಾಹ ಮತ್ತು ಅವುಗಳಲ್ಲಿ ಅವಶ್ಯವಾಗಿರಬೇಕಾದ ವ್ಯವಸ್ಥಿತ ಇವುಗಳಲ್ಲಿ ಸಾಮರಸ್ಯವನ್ನು ಸಾಧಿಸಲು ಬಾಹ್ಯದಲ್ಲಿ ಅವರು ಬಳಸಿದ ಸಾಧನಗಳೇ ಅವರ ಪರಿಕಲ್ಪನೆಯ ‘ಪ್ರಭುತ್ವ’ ಮತ್ತು ‘ಧರ್ಮ’. ಪ್ರಭುತ್ವವಾಗಲಿ, ಧರ್ಮವಾಗಲಿ ಎರಡೂ ಮಾನವ ಸಮಾಜದ ವಿಕಾಸ ಪ್ರಕ್ರಿಯೆಯ ಫಲಶ್ರುತಿಗಳೇ ಎಂಬುವುದನ್ನು ಅರಿಯುವ ಅವಶ್ಯಕತೆಯಿದೆ. ಅವುಗಳಲ್ಲಿ ಅನಿವಾರ್ಯವಾದದ್ದೇನೂ ಇಲ್ಲ. ಮಾರ್ಕ್ಸ್‌ನ ದೃಷ್ಟಿಯಲ್ಲಿ ‘ಪ್ರಭುತ್ವ’ ಆಳುವ ವರ್ಗಗಳು ಜನಪದರನ್ನು ಬಡಿದಿಡುವ ದಬ್ಬಾಳಿಕೆಯ ಸಾಧನವಾಗಿದ್ದರೆ, ‘ಧರ್ಮ, ಜನಜಂಗುಳಿಗೆ ಗುಂಗು ಹಿಡಿಸುವ ಅಫೀಮು’ ಆಗಿತ್ತು. ಅಂಬೇಡ್ಕರರ ಕಲ್ಪನೆಯ ಕಲ್ಯಾಣ ಪ್ರಭುತ್ವದ (ವೆಲ್ ಫೇರ್ ಸ್ಟೇಟ್) ಅನುಭವವನ್ನು ದಲಿತರು ಕಳೆದ ಐದು ದಶಕಗಳುದ್ದಕ್ಕೂ ಕಂಡುಂಡಿದ್ದಾರೆ. ಈ ಅನುಭವ ಏನು ಹೇಳುತ್ತದೆ? ದಲಿತರು ಭೂಮಾಲೀಕರೆದುರು ಸಂಘರ್ಷಕ್ಕಿಳಿದಾಗ ಅದು ದಲಿತರ ಪರ ನಿಲ್ಲುತ್ತಿದೆಯೆ? ದಿನ ಬೆಳಗಾದರೆ ಅವರ ನಾಲ್ಕಾರು ಹೆಣ್ಣುಮಕ್ಕಳ ಮೇಲೆ ಬಲಾತ್ಕಾರ ನಡಯುತ್ತಿದೆ, ಪ್ರಭುತ್ವ ಅವರ ರಕ್ಷಣೆಗೆ ಬರುತ್ತಿದೆಯೇ? ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಬೀದಿಬೀದಿಗಳಲ್ಲೂ ಮೆರವಣಿಗೆ ಮಾಡುತ್ತಿದ್ದಾಗ ಅವರ ಮಾನಮರ್ಯಾದೆಯನ್ನು ರಕ್ಷಿಸಲು ಪ್ರಭುತ್ವ ಮುಂದಡಿ ಇಟ್ಟಿತೆ? ಗ್ರಾಮಾಂತರದ ದಲಿತರು ಹಳ್ಳಿ ಹಳ್ಳಿಗಳಲ್ಲಿ ಭೂಮಾಲೀಕರ ವಿರುದ್ಧ, ಸುಲಿಗೆಕೋರ ಸಾಲಿಗರ ವಿರುದ್ಧ ಸೆಟೆದು ನಿಂತಾಗ ಅಥವಾ ಆಧುನಿಕ ಪರಿಸರದಲ್ಲಿಯ ದಲಿತ ಕಾರ್ಮಿಕರು ತಮ್ಮ ಮ್ಯಾನೇಜ್‌ಮೆಂಟಿನ ವಿರುದ್ಧ ತಿರುಗಿ ನಿಂತಾಗ ಈ ಉದಾರವಾದಿ ಪ್ರಭುತ್ವ ಇವರೆಲ್ಲರ ಬೆನ್ನು ತಟ್ಟಿ ನಿಲ್ಲುತ್ತಿದೆಯೇ ಸಂವಿಧಾನಬದ್ಧವಾಗಿ ತಮಗೆ ದೊರಕಬೇಕಾದದ್ದನ್ನು ದಕ್ಕಿಸಿಕೊಳ್ಳಲು ಹೋರಾಟಕ್ಕಿಸಿದಾಗ ಸಂವಿಧಾನ ಅವರನ್ನು ಬೆಂಬಲಿಸುತ್ತಿದೆಯೆ? ಅಥವಾ ಅದನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾನೇಜ್‌ಮೆಂಟುಗಳನ್ನು ಶಿಕ್ಷಿಸುತ್ತಿದೆಯೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ: ‘ಇಲ್ಲ’ ಕೆಲವು ಅಯೋಗ್ಯರು ಸಂವಿಧಾನಿಕ ಸ್ಥಾನಮಾನಗಳನ್ನು ಆಕ್ರಮಿಸಿಕೊಂಡಾಗ, ‘ದೆವ್ವಗಳೇ ದೇವರ ಗುಡಿ ಹಿಡಿದಿವೆ’ ಎಂದು ಅಂಬೇಡ್ಕರರು ವಿಷಾದದಿಂದ ನುಡಿದದ್ದು ನಮಗೆ ಗೊತ್ತಿದೆ. ಆದರೆ, ವಾಸ್ತವ ಅದಕ್ಕೂ ಭಿನ್ನವಾಗಿದೆ. ನಿಜವೆಂದರೆ, ಯಾವುದೇ ‘ಪ್ರಭುತ್ವ’ ತನ್ನ ಯಜಮಾನ ವರ್ಗದ ಗುಣಧರ್ಮಗಳನ್ನೇ ಹೊಂದಿರುತ್ತದೆ. ಭಾರತದಲ್ಲಿ ಮೇಲ್ಜಾತಿಯ ಧನಿಕರು, ಭೂಮಾಲೀಕರು ಮತ್ತು ಉನ್ನತ ನೌಕರಶಾಹಿಗಳೇ ಆಳುವ ವರ್ಗದ ಅವಿಭಾಜ್ಯ ಅಂಗಗಳಾಗಿರುವುದರಿಂದ ಪ್ರಭುತ್ವದಲ್ಲಿ ಸಂತರು, ಶರಣರು ಇರಲು ಸಾಧ್ಯವೇ? ದಲಿತರ ಶೋಷಣೆಯೇ ಗುರಿಯಾಗಿರುವವರು ದಲಿತರ ಉದ್ಧಾರ ಮಾಡಲು ಸಾಧ್ಯವೆ? ಬಿ. ಎಸ್. ಪಿ. ಯಂತಹ ದಲಿತರ ಪಕ್ಷವೇ ಸರ್ಕಾರ ರಚಿಸಿದರೂ ಅದನ್ನು ಒಂದು ದಲಿತರ ಪ್ರಭುತ್ವವನ್ನಾಗಿ ಮಾರ್ಪಡಿಸಲಾಗದು ಎನ್ನುವುದು ಈಗ ಸಾಬೀತಾಗಿರುವ ಸತ್ಯ!

ಸಮಾಜದಲ್ಲಿ ನೈತಿಕ ವ್ಯವಸ್ಥೆಯನ್ನು ಸ್ಥಾಯಿಗೊಳಿಸಲು ಧರ್ಮ ಅವಶ್ಯಕವೆಂಬುದು ಅಂಬೇಡ್ಕರರ ಕಲ್ಪನೆ. ಈ ಆದರ್ಶವಾದಿ ನಿರೀಕ್ಷಣೆಯನ್ನು ಧರ್ಮ ಯಾವ ಮಟ್ಟಿಗೆ ಸಫಲಗೊಳಿಸುತ್ತಿದೆ ಎನ್ನುವುದರ ವಿಶ್ಲೇಷಣೆ ಕುತೂಹಲಕಾರಿಯಾಗಬಲ್ಲದು. ನಿಸ್ಸಂಶಯಾವಾಗಿಯೂ ಅತ್ಯಂತ ವೈಚಾರಿಕತೆಯಿಂದ ಕೂಡಿದ ಬೌದ್ಧಧರ್ಮ ಕಳೆದ ಎರಡು ಸಹಸ್ರಮಾನಗಳುದ್ದಕ್ಕೂ ಭಾರತದಲ್ಲಿ ಅಸ್ತಿತ್ವದಲ್ಲಿದ್ದರೂ ಅಂಬೇಡ್ಕರರ ಕಲ್ಪನೆಯ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಿಂದೊಡಗೂಡಿದ ಸಾಮಾಜಿಕ ವ್ಯವಸ್ಥೆಯನ್ನು ಸಂಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಯಾವ ಸಾಕ್ಷಿ ಪುರಾವೆಗಳೂ ಸಿಕ್ಕುವುದಿಲ್ಲ. ಬೌದ್ಧ ಭಿಕ್ಷುಗಳ ಸಂಘ ಸಮತಾ ಸಮಾಜದ ಮಾದರಿಯಾಗಿತ್ತೆಂಬ ಅಂಬೇಡ್ಕರರ ವಾದ ಅಷ್ಟು ಗಟ್ಟಿಯಾಗಿ ನಿಲ್ಲುವುದಿಲ್ಲ. ಉತ್ಪಾದನಾ ಪ್ರಕ್ರಿಯೆಯಲ್ಲಿ ಆ ಸಂಘದ ಪಾತ್ರವೇನು? ಎಂಬ ಪ್ರಶ್ನೆಯ ಸಮ್ಮುಖದಲ್ಲಿ ಅವರ ವಾದ ಬಲಹೀನವಾಗುತ್ತದೆ. ಅಂದು ಕಣ್ಮರೆಯಾಗುತ್ತಿದ್ದ ಗಣರಾಜ್ಯ ವ್ಯವಸ್ಥೆಯ ಮೌಲ್ಯವನ್ನು ಪುನರ್ ಸೃಷ್ಟಿಸಲು ಹೆಣಗಿದ, ರಾಜಶಾಹಿಯ ಕೆಡುಕಿಗೆ ಬದಲಾಗಿ, ಸಣ್ಣ ಸಣ್ಣ ಗಣರಾಜ್ಯಗಳನ್ನು ಪುನರ್ ಪ್ರತಿಷ್ಠಾಪಿಸಲು ಗತದ ಗೀಳಿನಿಂದ ಪ್ರಯತ್ನಿಸಿದ ಸಂಘ ಮತ್ತು ಅದರ ತತ್ವಗಳು ಅನಾಮತ್ತಾಗಿ ಮೇಲೆದ್ದು, ಇಂದಿನ ಬಂಡವಾಳಶಾಹಿ ಯುಗದ ಸವಾಲುಗಳನ್ನು ಸ್ವೀಕರಿಸಲಾರವು. ಇದಕ್ಕೆ ಪ್ರತಿಯಾಗಿ, ಅವು ಹಿಂದಿನಂತೆಯೇ, ಶೋಷಕರ ಸಹಾಯಕರಾಗಿಯೇ ಪರಿಣಮಿಸುವವು! ಈ ವಿಕೃತ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕಾದರೆ, ಸಂಘ ಮತ್ತು ಅದರ ತತ್ವ ಕ್ರಾಂತಿಯ ವೇಗವರ್ಧಕಗಳಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಳ್ಳಬೇಕು. ಹಾಗೆಯೇ, ಬೌದ್ಧಧರ್ಮದ ನೈತಿಕ ತತ್ವಗಳು ಶೋಷಣೆಯ ಆಕರ್ಷಣೆಯನ್ನು ಸದೆಬಡಿಯಲಾರವು; ಬಂಡವಾಳಶಾಹಿ ಮೌಲ್ಯಗಳಿಗೆ ಎದುರಾಗಿ ಸಡ್ಡು ಹೊಡೆಯಲಾರವು. ಯಾಕೆಂದರೆ, ಈ ವ್ಯವಸ್ಥೆಯಲ್ಲಿ ಶೋಷಣೆಯೇ ಒಂದು ಮೌಲ್ಯವಾಗಿ, ಅದರ ನೆಲೆ ಬೆಲೆ ಎಲ್ಲವೂ ಆಗಿ, ಎಲ್ಲದರ ಮೇಲೆ ತನ್ನ ಅಧಿಪತ್ಯದ ಛಾಪನ್ನು ಒತ್ತುತ್ತದೆ.

ಹೀಗಾಗಿ ಇಲ್ಲಿ ಧರ್ಮ ಯಾವುದೇ ಇತ್ಯಾತ್ಮಕ ಕ್ರಿಯೆಗಿಳಿಯಲು ಸಾಧ್ಯವಿಲ್ಲ. ಏನಾದರೂ ಸಾಧ್ಯವಾದರೆ ಅದು ವ್ಯವಸ್ಥೆಯ ಪರವಾದ ದಾರಿಯಲ್ಲಿಯೇ ಇರುವುದು ಖಚಿತ. ಶೋಷಿತರು ಏಕತ್ರಗೊಂಡು ತೋರಬಯಸುವ ಪ್ರತಿಭಟನೆ ಸೊಲ್ಲಡಗಿಸುವುದರಲ್ಲಿಯೇ, ಅವರ ಶಕ್ತಿ ಕುಂದಿಸುವುದರಲ್ಲಿಯೇ ಧರ್ಮದ ಪಾತ್ರ ಪ್ರಧಾನವಾಗಿ ಎದ್ದು ಕಾಣುತ್ತದೆ! ವಾಸ್ತವಿಕ ಬದುಕಿನಲ್ಲಿ ನಾವು ಪ್ರತ್ಯಕ್ಷವಾಗಿ ನೋಡುತ್ತಿರುವಂತೆ, ಬಾಬಾ ಸಾಹೇಬರ ಪರಿಕಲ್ಪನೆಯ ಬೌದ್ಧಧರ್ಮವು ಅದರ ಅನುಯಾಯಿಗಳಲ್ಲಿ ಎಳ್ಳಷ್ಟೂ ನೈತಿಕತೆಯನ್ನು ಸೃಷ್ಟಿಸುವುದರಲ್ಲಿ ಸಫಲವಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅದು ಜನಪದರಲ್ಲಿ ವಿಲೋಮವಲ್ಲದಿದ್ದರೂ, ವಿರೂಪಗೊಂಡ ವಿಶ್ವದೃಷ್ಟಿಯನ್ನು ಸೃಜಿಸುತ್ತಿದೆ. ತಮ್ಮನ್ನು ಶೋಷಿಸುತ್ತಿರುವ ವಾಸ್ತವಕ್ಕೆ ಕಣ್ಣು ತೆರೆಯಿಸುವ ಬದಲು, ಅವರನ್ನು ಕಣ್ಣುಮುಚ್ಚಿಸುತ್ತಿದೆ; ತಮ್ಮ ಕಷ್ಟ ನಿಷ್ಠುರಗಳಿಗೆ ಬಹಿರಂಗದಲ್ಲಿ ಕಾರಣ ಹುಡುಕುವಂತೆ ಮಾಡುವ ಬದಲು, ಶೋಷಿತರನ್ನು ಅಂತರ್ ಮುಖಿಗಳನ್ನಾಗಿ ಮಾಡುತ್ತಿದೆ. ಹೊರಗಿನ ಏರು ಪೇರುಗಳಿಗೆ ತನ್ನನ್ನು ತಾನು ಬಿಚ್ಚಿಕೊಳ್ಳುವ ಬದಲು, ತನ್ನ ಆಂತರ್ಯದ ಸ್ಥಿತಿಪ್ರಜ್ಞತೆಗಾಗಿ ಕಣ್ಣುಮುಚ್ಚಿಕೊಳ್ಳುವವನು ಒಂದು ತೆರನಾದ ಮಾನಸಿಕ ಶಾಂತಿ ಸಂತೋಷವನ್ನೇನೋ ಪಡೆಯಬಹುದು. ಆದರೆ ಅದು ಆಮಲೇರಿದ ಆನಂದವಾಗಿರುತ್ತದೆಯೇ ವಿನಾ ವಾಸ್ತವದ ನೆಲೆಯಿಂದ ಬಂದುದ್ದಾಗಿರುವುದಿಲ್ಲ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮ ಪ್ರಭುತ್ವಗಳಂತಹ ಸಾಧನ ಸಲಕರಣೆಗಳ ಕುರಿತು ಪುನರ್ ವ್ಯಾಖ್ಯಾನದ ಯೋಜನೆಯನ್ನು ಸ್ವೀಕರಿಸಬೇಕಾಗಿದೆ. ಅಂಬೇಡ್ಕರರು ಅವುಗಳನ್ನು ಅಂಗೀಕರಿಸಿದ್ದುದರ ಹಿಂದಿನ ಅವಶ್ಯಕತೆ ಮತ್ತು ಆಕಸ್ಮಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಭುತ್ವ ಮತ್ತು ಧರ್ಮದ ಸಾಧ್ಯಾಸಾಧ್ಯತೆಗಳನ್ನು ಮತ್ತೆ ಹೊಸದಾಗಿ ವಿವೇಚಿಸಬೇಕಾಗಿದೆ.

ಜನತೆಯ ದೃಷ್ಟಿ ಅವರ ನಿಜವಾದ ಸಮಸ್ಯೆಗಳೆಡೆಗೆ ಹರಿಯದಂತೆ ಮಾಡಲು ಆಳುವ ವರ್ಗ ಸತತವಾಗಿ ಪ್ರಯತ್ನಿಸುತ್ತದೆ. ಅದಕ್ಕಾಗಿಯೇ ತನ್ನ ಎಲ್ಲ ಶಕ್ತಿಸಾಮರ್ಥ್ಯಗಳನ್ನು ವಿನಿಯೋಗಿಸುತ್ತದೆ. ಆ ಮೂಲಕ ಜನತೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಶ್ಯಸ್ತ್ರಗೊಳಿಸಲು ಹವಣಿಸುತ್ತದೆ. ದೈಹಿಕವಾಗಿ ಅವರು ಐಕ್ಯತೆ ಸಾಧಿಸದಂತೆ ಮತ್ತು ಸೈದ್ಧಾಂತಿಕವಾಗಿ ಅವರ ಪ್ರಜ್ಞೆ ಪ್ರಜ್ವಲಿಸದಂತೆ ನೋಡಿಕೊಳ್ಳುತ್ತದೆ. ಈ ಮಹತ್ತರ ಧ್ಯೇಯವನ್ನು ಸಾಧಿಸಲು ಆಳುವ ವರ್ಗದ ಬಳಿ ಅನೇಕ ತಂತ್ರೋಪತಂತ್ರಗಳಿರುತ್ತವೆ. ಅವುಗಳ ಜಾರಿಗಾಗಿ ವಿಭಿನ್ನ ರಂಗಗಳಲ್ಲಿ ಹಲವು ಪ್ರಯತ್ನಗಳು ಏಕಕಾಲದಲ್ಲಿಯೇ ನಡೆದಿರುತ್ತವೆ. ಮೊಟ್ಟಮೊದಲನೆಯದಾಗಿ ಆಳುವ ವರ್ಗದ ಮುಂಚೂಣಿ ಪಕ್ಷಗಳು ಭಾವನಾತ್ಮಕ ಸಮಸ್ಯೆಗಳನ್ನು ಸೃಷ್ಟಿಸಿ ಜನತೆಯ ಗಮನ ಹಿಡಿದಿಡಬಯಸುತ್ತವೆ. ದೈನಂದಿನ ಬದುಕಿನ ಮೂರ್ತ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ತುಸು ಕಾಣಿಸಿಕೊಂಡರೂ ಸಾಕು, ಜನತೆಯ ಮುಂದೆ ಅಮೂರ್ತ ಸಮಸ್ಯೆಯೊಂದರ ವಿರಾಟ್ ರೂಪ ಮಂಡಿಸಿ ಭಾವಾವೇಶದ ಬೆಂಕಿಯನ್ನು ಭುಗಿಲೆಬ್ಬಿಸುತ್ತವೆ. ಎರಡನೆಯದಾಗಿ, ಜನತೆಯಲ್ಲಿ ಗೊಂದಲವೆಬ್ಬಿಸಲು ತಾವೂ ಪ್ರಗತಿಪರರ ಸೋಗು ಹಾಕುತ್ತಾರೆ. ತಮ್ಮ ‘ಹಳಸಲು’ ವಿಚಾರಧಾರೆಯ ಅನ್ನಕ್ಕೆ ಕ್ರಾಂತಿಕಾರಿ ಸಿದ್ಧಾಂತದ ‘ಒಗ್ಗರಣೆ’ ಹಾಕಿ ಉಣಬಡಿಸುತ್ತಾರೆ. ಈ ತಂತ್ರ ಬಹು ಯಶಸ್ವಿಯಾಗಿದೆ ಎಂಬುದು ಈಗ ನಿರ್ವಿವಾದ. ಈ ಉದ್ದೇಶಕ್ಕಾಗಿಯೇ ಇತ್ತೀಚೆಗೆ ಎಲ್ಲ ಆಳುವ ಪಕ್ಷಗಳು ಬಾಬಾ ಸಾಹೇಬರನ್ನು ಹೊತ್ತು ತಿರುಗಲು, ಎತ್ತಿ ಮೆರೆಸಲು ಪರಸ್ಪರ ಪೈಪೋಟಿ ನಡೆಸುತ್ತಿವೆ. ತಾವೇ ಬಾಬಾ ಸಾಹೇಬರ ‘ನೈಜ’ ವಾರಸುದಾರರೆಂದು ಒಕ್ಕೊರಲಿನಿಂದ ಕೂಗುತ್ತಿವೆ. ಉಸಿರುಸಿರಿಗೂ ಬಾಬಾ ಸಾಹೇಬರ ಹೆಸರನ್ನು ಹೇಳುತ್ತಲೇ ಬದುಕಬೇಕಾದ ಅನಿವಾರ್ಯತೆ ಅವುಗಳಿಗುಂಟಾಗಿದೆ. ಭಾರತೀಯ ಕಾರ್ಮಿಕ ವರ್ಗದ ಕೈಯಲ್ಲಿ ಅಂಬೇಡ್ಕರರು ಒಂದು ಪರಮಾಸ್ತ್ರವಾಗಿ ಪರಿಣಮಿಸಬಲ್ಲರು. ಅವರು ದುಡಿಯುವ ವರ್ಗದ ಪ್ರಚ್ಫನ್ನ ಸೈದ್ಧಾಂತಿಕ ಶಕ್ತಿಯಾಗಿದ್ದಾರೆ. ಆ ಶಕ್ತಿಯ ಆಸ್ಫೋಟ ಆಳುವ ವರ್ಗಗಳಿಗೆ ಅಪಾರ ಅಪಾಯವನ್ನುಂಟು ಮಾಡಬಲ್ಲದು. ಆದ್ದರಿಂದಲೇ ಬಾಬಾ ಸಾಹೇಬರು ಈ ದೇಶದ ಕಾರ್ಮಿಕರ ಕೈ ಸೇರದಂತೆ ಆಳುವ ವರ್ಗಗಳು ಶತ ಪ್ರಯತ್ನ ಮಾಡುತ್ತಿವೆ; ಆ ಸ್ಫೋಟದ ಸಾಧ್ಯತೆಯನ್ನು ದೂರೀಕರಿಸಲು ಹಗಲಿರುಳು ಶ್ರಮಿಸುತ್ತಿವೆ. ಬಾಬಾ ಸಾಹೇಬರನ್ನು ಸ್ತುತಿಸುವ ನೆಪದಲ್ಲಿ ದಲಿತರನ್ನು ತಮ್ಮ ಚುನಾವಣಾ ಲಾಭದ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದು ಒಂದೆಡೆಯಾದರೆ, ಇನೊಂದೆಡೆ, ಅವರನ್ನು ಹೊಗಳಿ, ಹೊಗಳಿ, ಹೊನ್ನ ಶೂಲಕ್ಕೇರಿಸುವ, ಆ ಮೂಲಕ ಅವರ ಕ್ರಾಂತಿಕಾರಿ ಸೈದ್ಧಾಂತಿಕ ಶಕ್ತಿಯನ್ನು ತಟಸ್ಥಗೊಳಿಸುವ ಹುನ್ನಾರ, ಹಿಕಮತ್ತುಗಳನ್ನು ಬಳಸಲಾಗುತ್ತಿದೆ. ಬಾಬಾ ಸಾಹೇಬರನ್ನು ಶ್ಲಾಘಿಸುವ ನೆಪದಲ್ಲಿ ಅವರ ದೃಷ್ಟಿ ಧೋರಣೆಗಳನ್ನು ವಿರೂಪಗೊಳಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅಂಬೇಡ್ಕರನ್ನು ಪುನರ್ ವ್ಯಾಖ್ಯಾನಿಸಿದ ನಂತರವೂ ಅವರ ಸೈದ್ಧಾಂತಿಕ ಸಾಧನ ಸಲಕರಣೆಗಳ ಬಗ್ಗೆ ತಾತ್ವಿಕ ಆಸ್ತಿ-ಪಾಸ್ತಿಯ ಬಗ್ಗೆ ದಲಿತರು ಸದಾ ಎಚ್ಚರದಿಂದಿರಬೇಕಾದ ಅವಶ್ಯಕತೆ ಇದೆ.

ಪರಾಮರ್ಶನ ಗ್ರಂಥಗಳು

೧. ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ ದಿಕ್ಕು, ಅನುವಾದ: ತೇಲ್‌ತುಂಬ್ದೆ, ಅನುವಾದ: ಚಿಂತನ ಪುಸ್ತಕ, ಬೆಂಗಳೂರ. ೪೧, ೨೦೦೯.

೨. ಹಿಂದುತ್ವ ಮತ್ತು ದಲಿತರು (ಕೋಮುವಾದಿ ರಾಜಕಾರಣ ಒಂದು ತಾತ್ವಿಕ ಪರಾಮರ್ಶೆ) ಸಂ. ಆನಂದ ತೇಲ್‌ತುಂಬ್ದೆ. ಅನುವಾದ: ಪ್ರೊ. ಬಿ. ಗಂಗಾಧರಮೂರ್ತಿ, ಚಿಂತನ ಪುಸ್ತಕ, ಬೆಂಗಳೂರು. ೪೧,೨೦೦೯.

೩. ಕೋಮುವಾದಿ ಕಾರ್ಯಚರಣೆ ಮತ್ತು ದಲಿತ ಪ್ರತಿಸ್ಪಂದನೆ, ಸಂಪಾದಕ, ಆನಂದ ತೇಲ್ತುಂಬ್ದೆ, ಅನುವಾದ: ಪ್ರೊ. ಬಿ. ಗಂಗಾಧರಮೂರ್ತಿ ಹಾಗೂ ಶಿವಸುಂದರ. ಲಡಾಯಿ ಪ್ರಕಾಶನ, ಗದಗ, ೨೦೧೦.

—-
* ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿದಿಕ್ಕು. ಲೇ. ಆನಂದತೇಲ್‌ತುಂಬ್ಡೆ, ಅನುವಾದ ರಾಹು. ಚಿಂತನಾ ಪುಸ್ತಕ ಪ್ರಕಾಶನ, ಬೆಂಗಳೂರು. ೪೧, ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಅನುವಾದಕರಿಗೆ ವಂದನೆಗಳು (ಸಂ).