ಭಾರತದ ಸಮಾಜವನ್ನು ಅದರ ಚರಿತ್ರೆಯ ಚಲನೆಗಳಲ್ಲಿಟ್ಟು ಅತ್ಯಂತ ಸೂಕ್ಷ್ಮವಾಗಿ ಮತ್ತು ಸೈದ್ಧಾಂತಿಕವಾಗಿ ವಿವರಿಸಿದ ವಿಶ್ವದ ಕೆಲವೇ ಕೆಲವು ಸಮಾಜಶಾಸ್ತ್ರಜ್ಞರಲ್ಲಿ ಅಂಬೇಡ್ಕರ್ ಅಗ್ರಗಣ್ಯರು. ಅವರನ್ನು ಕೇವಲ ‘ಸಮಾಜಶಾಸ್ತ್ರಜ್ಞ’ ಎಂಬ ಚೌಕಟ್ಟಿನಲ್ಲಿ ಮಾತ್ರ ಗ್ರಹಿಸುವುದು ಅಸಾಧ್ಯ. ಒಬ್ಬ ಧರ್ಮ ಮೀಮಾಂಸಕರಾಗಿ, ರಾಜಕಾರಣಿಯಾಗಿ, ಕಾನೂನು ತಜ್ಞರಾಗಿ ಅಂಬೇಡ್ಕರ್ ಜಗತ್ತಿನ ಮಹತ್ವದ ಚಿಂತಕರಲ್ಲಿ ಅತ್ಯಂತ ವಿಶಿಷ್ಟ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಅಂಬೇಡ್ಕರ್ ಈ ದೇಶದ ಶೋಷಿತರಿಗೆ ನೀಡುವ ಕೊಡುಗೆಗಳೇನು? ಎಂದು ಪಟ್ಟಿ ಮಾಡುವುದಾಗಲಿ, ಶೋಷಿತರ ವರ್ತಮಾನದ ಸ್ಥಿತಿಗೆ ಅಂಬೇಡ್ಕರ್ ಚರಿತ್ರೆಯಲ್ಲಿ ಕಂಡುಕೊಂಡ ಕಾರಣಗಳೇನು? ಎಂದು ವಿವರಿಸುವುದಾಗಲಿ ಸರಳ ಸಂಗತಿಯಲ್ಲ. ಅದು ಆಕಾಶಕ್ಕೆ ಕನ್ನಡಿ ಹಿಡಿವ ಪ್ರಯತ್ನದಂತೆ. ಹಲವು ಸಂಪುಟಗಳಲ್ಲಿ ನಮ್ಮೆದುರಿಗಿರುವ ಅವರ ಬರಹಗಳಲ್ಲಿ ಈ ದೇಶದ ಶೋಷಿತರ ದುಮ್ಮಾನಗಳು ಮತ್ತು ಅವುಗಳಿಗೆ ತಕ್ಕುದಾದ ಪರಿಹಾರೋಪಾಯಗಳೇ ತುಂಬಿಕೊಂಡಿವೆ. ತಮ್ಮ ಜೀವಮಾನವಿಡೀ ಅಂಬೇಡ್ಕರ್ ಈ ದೇಶದ ಅಸಹಾಯಕ ಶೋಷಿತರ ಕುರಿತು ಚಿಂತಿಸಿದ್ದಾರೆ. ಅದಕ್ಕಾಗಿ ಇಡೀ ಜಗತ್ತಿನ ತತ್ವಶಾಸ್ತ್ರವನ್ನು ಅಂಬೇಡ್ಕರ್ ಮುಖಾಮುಖಿ ಮಾಡುತ್ತಾರೆ. ಅವರ ಚಿಂತನೆಯಲ್ಲಿ ಕೇವಲ ಹುಟ್ಟಿನ ಕಾರಣಕ್ಕೆ ನಿತ್ಯನಾರಕಿಯಾಗುವ, ಈ ಸಮಾಜದ ಎಲ್ಲ ಬಗೆಯ ಅಧಿಕಾರಗಳಿಂದ ವಂಚಿತವಾಗುವ ಸಮುದಾಯಗಳ ಕುರಿತ ತೀವ್ರ ಕಾಳಜಿ ಮಡುಗಟ್ಟಿದೆ. ಇಂಡಿಯಾದ ಸಮಾಜ ಶತಮಾನಗಳಿಂದ ಸಾಕಿಕೊಂಡು ಬಂದ ಹಿಂಸೆ ಮತ್ತು ಅಮಾನವೀಯ ಕ್ರೌರ‍್ಯಗಳ ಕುರಿತು ಉಗ್ರ ಆಕ್ರೋಶ ಮಡುಗಟ್ಟಿದೆ. ಸ್ವತಃ ಅಸೃಶ್ಯರಾಗಿದ್ದ ಕಾರಣಕ್ಕೋ ಅಥವಾ ತಮ್ಮ ಸಮಕಾಲೀನ ಬದುಕನ್ನು ಗ್ರಹಿಸುವ ಸೂಕ್ಷ್ಮಜ್ಞನಾಗಿದ್ದಕ್ಕೋ ಏನೋ, ಅಂಬೇಡ್ಕರ್ ಮಡುಗಟ್ಟಿದ ಅಸಹಾಯಕ ಪ್ರತಿರೋಧಗಳ ಸಾಕ್ಷಿ ಪ್ರಜ್ಞೆಯಂತೆ ಕಾಣಬರುತ್ತಾರೆ. ಮತ್ತು ತಣ್ಣಗಿನ ಕ್ರೌರ‍್ಯವನ್ನು ಇಡಿಯಾಗಿ ಧ್ವಂಸ ಮಾಡಿಬಿಡುವ ಜ್ವಾಲಾಮುಖಿಯಂತೆ ಅಂಬೇಡ್ಕರ್ ಗೋಚರಿಸುತ್ತಾರೆ. ಹಾಗಂತ ಅಂಬೇಡ್ಕರ್ ತನ್ನ ಸಮುದಾಯದ ಹೀನ ಸ್ಥಿತಿಯನ್ನು ಬಳಸಿಕೊಂಡು ಭಾವುಕವಾಗಿ ಗದ್ಗದಿತರಾಗುವುದಿಲ್ಲ. ಮಾತೇ ಹೊರಡದಂತಹ ಉಗ್ರ ಆಕ್ರೋಶವನ್ನು ತಂದುಕೊಂಡು ನಿಶ್ಚಲರಾಗುವುದಿಲ್ಲ. ಆವೇಶಗಳ ಹುಚ್ಚು ಪ್ರವಾಹದ ಮಿತಿ ಅರಿತೇ ಅಂಬೇಡ್ಕರ್ ಹಿಂದೂ ಧರ್ಮದ ವಿಮರ್ಶೆಗೆ ತೊಡಗುತ್ತಾರೆ. ಹಿಂದೂ ಧರ್ಮದ ಚಾರಿತ್ರಿಕ ಕ್ರೌರ‍್ಯವನ್ನು ತಕ್ಕ ಪುರಾವೆಗಳ ಮೂಲಕ ನಮ್ಮೆದುರಿಗಿಡುತ್ತಾರೆ. ಅಂಬೇಡ್ಕರ್ ರವರ ಇಡೀ ಬರಹಗಳಲ್ಲಿ ಅವರು ಹಿಂದೂ ಧರ್ಮದ ಕುರಿತು ಎತ್ತುವ ಪ್ರಖರ ಪ್ರಶ್ನೆಗಳಿಗೆ ಪ್ರಾಯಶಃ ಹಿಂದೂ ಧರ್ಮದ ಯಾವ ಸಮರ್ಥಕನೂ ಉತ್ತರಿಸಲಾರ. ಆಧುನಿಕ ಯುಗದಲ್ಲಿ ತನ್ನೆಲ್ಲ ಸಂಕೀರ್ಣ ಆಯಾಮಗಳಿಂದ ಮೈದಾಳಿದ ಶೋಷಕ ವರ್ಗವನ್ನು ಮತ್ತು ಶೋಷಣೆಗೊಳಗಾದ ಅಸಹಾಯಕ ದುಡಿವ ವರ್ಗವನ್ನು ಸೈದ್ಧಾಂತಿಕವಾಗಿ ವಿವರಿಸಿದವರಲ್ಲಿ ಪ್ರಮುಖರೆಂದರೆ ಒಬ್ಬರು ಕಾರ್ಲ್‌ಮಾರ್ಕ್ಸ್, ಇನ್ನೊಬ್ಬರ ಡಾ. ಅಂಬೇಡ್ಕರ್. ಈ ಇಬ್ಬರು ಮಹಾನ್ ಚಿಂತಕರ ಗುರಿ ಒಂದೇ ಆದರೂ, ಚಿಂತನೆಯ ಮಾರ್ಗಗಳು ಮಾತ್ರ ಭಿನ್ನ.

ಈ ಲೇಖನ ಅಂಬೇಡ್ಕರ್, ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡಗಳಿಗೆ ಅಥವಾ ಬುಡಕಟ್ಟುಗಳಿಗೆ ಸಂವಿಧಾನಾತ್ಮಕವಾಗಿ ಯಾವ ಯಾವ ಸವಲತ್ತುಗಳನ್ನು ಒದಿಗಸಲು ಯತ್ನಿಸಿದರು ಮತ್ತು ಯಾವ ಯಾವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದರು ಎಂಬುದನ್ನು ವಿವರಿಸುವುದಿಲ್ಲ. ಈ ದೇಶದ ಕೆಳಜಾತಿಗಳಿಗೆ ಮತ್ತು ಸಾಮಾಜಿಕವಾಗಿ ಶೋಷಣೆಗಳಾದ ಸಮುದಾಯಗಳಿಗೆ ಕಲ್ಪಿಸಿದ ‘ಮೀಸಲಾತಿ’ಯು ಅಂಬೇಡ್ಕರ್ ಅವರ ಬಹುದೊಡ್ಡ ಕೊಡುಗೆಯಾಗಿದೆ. ಈ ಮೀಸಲಾತಿಯನ್ನು ಕೇಳುವ ಮತ್ತು ರೂಪಿಸುವ ಹಂತದಲ್ಲಿ ಅಂಬೇಡ್ಕರ್ ಅತ್ಯಂತ ವಿಲಕ್ಷಣ ರಾಜಕೀಯ ಸವಾಲುಗಳನ್ನು ಎದುರಿಸಿದ್ದಾರೆ. ಈ ದೇಶದಲ್ಲಿನ ದನಿ ಇಲ್ಲದ ಮತ್ತು ಶತಮಾನಗಳಿಮದ ಶೊಷಣೆಗೊಳಗಾದ ಸಮುದಾಯಗಳಿಗೆ ‘ರಾಜಕೀಯಾರ್ಥಿಕ’ ಸವಲತ್ತುಗಳನ್ನು ಒದಗಿಸುವ ಮೀಸಲಾತಿಯನ್ನು ಕೇಳಿದಾಕ್ಷಣ ಮಹಾತ್ಮ ಗಾಂಧೀಜಿಯವರನ್ನು ಒಳಗೊಂಡಂತೆ ಅಂದಿನ ಕಾಂಗ್ರೆಸ್‌ನ ಬಹುತೇಕ ದೊಡ್ಡ ‘ವ್ಯಕ್ತಿತ್ವ’ಗಳೆಲ್ಲ ಅಂಬೇಡ್ಕರ್ ರವರನ್ನು ‘ದೇಶದ್ರೋಹಿ’ ಎಂದೇ ಪ್ರತಿಬಿಂಬಿಸಿದ್ದವು. ‘ಹಿಂದೂ’ ಧರ್ಮದಲ್ಲಿ ಒಡಕವನ್ನುಂಟು ಮಾಡುವ ‘ಪಾತಕಿ’ ಎಂದೇ ಅಂಬೇಡ್ಕರ್ ರವರನ್ನು ಅವರ ವಾರಿಗೆಯ ಕಾಂಗ್ರೆಸ್ ನಾಯಕರು ಪರಿಗಣಿಸಿದ್ದರು. ಆದರೆ ಅಂಬೇಡ್ಕರ್, ‘ಪರ‍್ಯಾಯ’ಗಳೇ ಇಲ್ಲದೆ ಅನಿವಾರ‍್ಯವಾಗಿ ಒಪ್ಪಿಕೊಳ್ಳಲೇಬೇಕಿದ್ದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಷಿತರಿಗೆ ‘ಕನಿಷ್ಠ’ ಮೀಸಲಾತಿಯನ್ನಾದರೂ ಕಲ್ಪಿಸಬೇಕೆಂದು ಪಣತೊಟ್ಟು ಅದರಲ್ಲಿ ಯಶಸ್ಸನ್ನು ಕಂಡರು. ಪರಿಶಿಷ್ಟಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಎಂದು ನಾವೀಗ ಕರೆಯುತ್ತಿರುವ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಕೊಟ್ಟ ದೊಡ್ಡ ಕೊಡುಗೆ ಎಂದರೆ ಮೀಸಲಾತಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಲೇಖನದಲ್ಲಿ, ಆ ಮೀಸಲಾತಿಯ ಸ್ವರೂಪ ಮತ್ತು ಅದರ ಸಫಲತೆ ಮತ್ತು ವಿಫಲತೆಗಳನ್ನು ಚರ್ಚಿಸಲು ಹೋಗಿಲ್ಲ. ಜೊತೆಗೆ ಈ ಮೀಸಲಾತಿಯ ಕಾರ್ಯಕ್ರಮಗಳ ಕುರಿತು ಇಲ್ಲಿ. ವಿವರಿಸಿಲ್ಲ. ಅಂಬೇಡ್ಕರ್ ತಮ್ಮ ಸಮಕಾಲೀನ ಸಂದರ್ಭದಲ್ಲಿ ಈ ದೇಶದ ಕೆಳಜಾತಿಗಳನ್ನು ಮತ್ತು ಆದಿವಾಸಿಗಳನ್ನು ಹೇಗೆ ಗ್ರಹಿಸಿದ್ದರು? ಯಾವ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಈ ಸಮುದಾಯಗಳ ಸ್ಥಿತಿಗತಿಗಳನ್ನು ವಿವರಿಸಿಕೊಳ್ಳಲು ಯತ್ನಿಸಿದರು? ಅದರಲ್ಲೂ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಉದ್ಭವಿಸಿದ ಆದಿವಾಸಿಗಳ ಅಭಿವೃದ್ಧಿ ಮತ್ತು ಅವರು ಕೇಳುತ್ತಿದ್ದ ಸ್ವಯಂ ಆಡಳಿತದ ಕುರಿತ ಸಮಸ್ಯೆಗಳನ್ನು ಅಂಬೇಡ್ಕರ್ ತಮ್ಮ ಸಮಕಾಲೀನರ ಜೊತೆ ಯಾವ ರೀತಿಯಲ್ಲಿ ಮುಖಾಮುಖಿ ಮಾಡಿದರು? ಎಂಬ ಪ್ರಶ್ನೆಗಳನ್ನು ಮುಖ್ಯವಾಗಿಟ್ಟುಕೊಂಡು ಈ ಬರಹವನ್ನು ರೂಪಿಸಲೆತ್ನಿಸಲಾಗಿದೆ.

ಪ್ರಸ್ತುತ ಲೇಖನ ನಾಲ್ಕು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದೆ.

೧. ಅಂಬೇಡ್ಕರ್ ಅವರ ಗ್ರಹಿಕೆಯಲ್ಲಿ ಆದಿವಾಸಿಗಳು

೨. ಆದಿವಾಸಿಗಳ ಸಂಸ್ಕೃತಿ ರಕ್ಷಣೆ ಮತ್ತು ಅಂಬೇಡ್ಕರ್

೩. ಆದಿವಾಸಿಗಳ ಅಭಿವೃದ್ಧಿಯ ಕುರಿತು ಅಂಬೇಡ್ಕರ್ ನಿಲುವುಗಳು

೪. ಆದಿವಾಸಿಗಳ ರಾಷ್ಟ್ರೀಯತೆ ಮತ್ತು ಸ್ವಯಂ ಆಡಳಿತ

ಅಂಬೇಡ್ಕರ್ ಅವರ ಗ್ರಹಿಕೆಯಲ್ಲಿ ಆದಿವಾಸಿಗಳು

ಅಂಬೇಡ್ಕರ್ ‘ಹಿಂದೂ’ ಅಥವಾ ಭಾರತೀಯ ಸಮಾಜವನ್ನು ಮೂರು ಹಂತದಲ್ಲಿ ವಿವರಿಸಿಕೊಳ್ಳುತ್ತಾರೆ. ೧. ಸವರ್ಣೀಯ ಹಿಂದು. ೨. ಅವರ್ಣೀಯ ಆದಿಮ ಜನಾಂಗಗಳು ೩. ಅಹಿಂದ, ಅಸ್ಪೃಶ್ಯರು. ಈ ಮೂರು ವಿಭಾಗಗಳನ್ನು ಅವುಗಳ ಒಟ್ಟು ಚಾರಿತ್ರಿಕ ವಿಕಾಸದಲ್ಲಿಟ್ಟು ಅಂಬೇಡ್ಕರ್ ಮೇಲಿನ ವಿಂಗಡನೆ ಮಾಡಿದ್ದಾರೆ. ಜೊತೆಗೆ ಹಿಂದೂಧರ್ಮದ ಪಾರಂಪರಿಕ ನಿಯಮಗಳಿಗನುಗುಣವಾಗಿ ಶೋಷಣೆಗೊಳಗಾದ ಸಮುದಾಯಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ.

ಇಲ್ಲಿನ ಪತಿತ ಮಾನವಕುಲ ಮೂರು ಪಂಗಡಗಳಲ್ಲಿ ಹಂಚಿಕೊಂಡಿದೆ. ಮೊದಲನೆಯದು, ಅದಿಮ ಜನಾಂಗವೆಂದು ಹೆಸರಾದ ಜನವರ್ಗ, ಎರಡನೆಯದು ಅಪರಾಧಿ ಜನಾಂಗವೆಂದು ಪಟ್ಟಿಮಾಡಿರುವ ಜಾತಿಗಳದ್ದು, ಮೂರನೆಯದು ಅಸ್ಪೃಶ್ಯರೆಂದು ಪರಿಗಣಿತರಾದವರ ವಿಶಿಷ್ಟ ಪಂಗಡ[1] ಮೂರು ಶೋಷಿತ ಜನವರ್ಗಗಳ ಸಮಾನ ಶತ್ರವೆಂದು ಅವರು ಪರಿಗಣಿಸುವುದು ಹಿಂದೂ ಧರ್ಮವನ್ನೆ. ಹಿಂದೂ ನಾಗರಿಕತೆಯ ಮೂಲತತ್ವಗಳೇ ಆದಿಮ ಜನಾಂಗಗಳ, ಅಪರಾಧಿ ಬುಡಕಟ್ಟುಗಳ ಹಾಗೂ ಅಸ್ಪೃಶ್ಯವರ್ಗದ ಹೀನ ಸ್ಥಿತಿಗೆ ಕಾರಣವಾಗಿವೆ ಎನ್ನುವುದರಲ್ಲಿ ಕಿಂಚಿತ್ತು ಸಂದೇಹವಿಲ್ಲ.

ಹಿಂದೂ ಧರ್ಮ ತನ್ನೆಲ್ಲ ಪಾರಂಪರಿಕ ಸಮರ್ಥನೆಗಳ ಮೂಲಕ ಪೋಷಿಸಿಕೊಂಡು ಬಂದ ಶ್ರೇಣೀಕೃತ ಸಮಾಜದ ಅಂಚಲ್ಲಿ ಆದಿಮ ಜನಾಂಗಗಳು ಬದುಕುತ್ತಿವೆ. ಕಾಡೊಳಗಿರುವ ಈ ಜನಾಂಗಗಳು ಈ ಸಮಾಜದ ‘ನಾಗರಿಕತೆಯ’ ಆಚೆಗಿರುವ ಅನಾಗರಿಕ ಸಮುದಾಯಗಳು. ಅವು ಯಾವ ಸಮಾಜದ ನಾಗರಿಕತೆಯನ್ನು ಹೊಂದಿಲ್ಲ. ಜೊತೆಗೆ ನಾಗರಿಕವೂ ಆಗಿಲ್ಲ. ಕಾಡೊಳಗಿನ ಕಂದಮೂಲಗಳು, ಅರೆಬೆತ್ತಲು ಮತ್ತು ಅಸಹಜ ಸಾವುಗಳು ಅವರ ಜನ್ಮಾಂತರದಲ್ಲಿ ಮಾಡಿದ ಪಾಪಗಳಿಂದಾಗಿ ಅವರಿಗೆ ಲಭಿಸುತ್ತಿವೆ. ಇನ್ನು ಅಪರಾಧಿ ಬುಡಕಟ್ಟುಗಳು ಹುಟ್ಟು ಕಳ್ಳರು, ದರೋಡೆಕೋರರು ಮತ್ತು ಕೊಲೆಗಡುಕರು. ಇಂತಹ ಸಮುದಾಯಗಳನ್ನು ಪಾರಂಪರಿಕ ನಿಯಮಗಳು ಮೂಲಕ ನಿಯಂತ್ರಿಸಬೇಕು. ಜೊತೆಗೆ ಹಿಂದೂ ಧರ್ಮದ ನಿಯಮಗಳಿಗೆ ಅನುಗುಣವಾಗಿ ಅವರು ಯಾವುದೇ ಕಠಿಣ ಶಿಕ್ಷೆಗೆ ಅರ್ಹರು ಎಂದೂ ಹಿಂದೂ ಧರ್ಮದ ಶಾಸ್ತ್ರಗ್ರಂಥಗಳು ಪ್ರತಿಪಾದಿಸುತ್ತವೆ. ಹೀಗೆ ಪರಿಗಣಿಸಲ್ಪಡುವ ಸಮುದಾಯಗಳು ಅಕ್ಷರಶಃ ಪ್ರಾಣಿಗಳಿಗಿಂತಲೂ ಹೀನ ಕೃತ್ಯವೆಸಗಿ ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಅನುಕೂಲ ಈ ದೇಶದ ನಾಗರಿಕರಿಗಿದೆ. ಏಕೆಂದರೆ ಅವರು ಸಾವಿರಾರು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬಂದ ನಾಗರೀಕತೆಯ ವಾರಸುದಾರರು.

ನಾಗರಿಕತೆ, ಅದರ ಸೆರಗಿನಲ್ಲೇ ಬದುಕಿಕೊಂಡಿರುವ ಆದಿಮ ಜನಾಂಗದ ಇಪ್ಪತ್ತೈದು ಮಿಲಿಯ ಜನಕ್ಕೆ ಏನನ್ನುಕೊಟ್ಟಿತು? ತನ್ನ ನಡುವಿನಲ್ಲೇ ಬದುಕಿಕೊಂಡಿರುವ ಐದು ಮಿಲಿಯ ಅಪರಾಧಿ ಜನಾಂಗದವರಿಗೆ ಏನನ್ನು ಕೊಟ್ಟಿತು? ತನ್ನ ಮಧ್ಯೆಯೇ ಬದುಕುತ್ತಿರಿವುದು ಮಾತ್ರವಲ್ಲದೆ ತನ್ನನ್ನು ಸೇವಿಸಿ ಪೋಷಿಸಲು ನೇಮಿಸಿಕೊಂಡಿರುವ ಐವತ್ತು ಮಿಲಿಯ ಅಸ್ಪೃಶ್ಯರಿಗೆ ನಾಗರೀಕತೆ ಏನನ್ನು ಕೊಟ್ಟಿತು? ಅವರನ್ನು ತನ್ನ ಆವಾರದೊಳಕ್ಕೆ ಕರೆದುಕೊಳ್ಳಲು ಯಾವ ಪ್ರಯತ್ನವನ್ನೂ ಮಾಡದಿರುವ ನಾಗರಿಕತೆಯ ಬಗ್ಗೆ ಆದಿಮ ಜನಾಂಗದವರು ಏನೆಂದಾರು?[2] ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ.

ತಮ್ಮೆದುರಿಗೆ, ಹಿಂದೂಧರ್ಮದ ಪ್ರತಿಪಾದಕರು ಸಾವಿರಾರು ವರ್ಷಗಳ ತಮ್ಮ ನಾಗರಿಕತೆಯ ಕುರಿತು ಕಿರುಚಿಕೊಳ್ಳುವಾಗ ಅಂಬೇಡ್ಕರ್

ನಾಗರಿಕತೆ ಎಷ್ಟು ಪ್ರಾಚೀನವಾದದ್ದು ಹಾಗೂ ಎಷ್ಟು ದೀರ್ಘ ಬಾಳಿತು ಎನ್ನುವುದರಲ್ಲಿ ಅದರ ಮೌಲ್ಯ ಎಷ್ಟು? ದೀರ್ಘಕಾಲ ಬಾಳಿದ್ದರೆ ಯಾವ ಕಾರಣದಿಂದ ಬಾಳಿತು ಎನ್ನುವುದು ಮುಖ್ಯ ಪ್ರಶ್ನೆ[3] ಎಂದು ತಿರುಗೇಟು ನೀಡುತ್ತಾರೆ.

ತಮ್ಮವರಲ್ಲದವರಿಂದ ಮುಟ್ಟಿಸಿಕೊಳ್ಳುವುದೇ ಪಾಪವೆಂದು ಪರಿಗಣಿಸುವ ಧರ್ಮಕ್ಕೆ ಮತ್ತು ಅದನ್ನು ಪೋಷಿಸುವ ಜೀವನ ವಿಧಾನಕ್ಕೆ ಮಾನವೀಯ ಸಂವೇದನೆಗಳಿರಲು ಸಾಧ್ಯವೇ? ಕಾಡಲ್ಲಿಯೇ ಇದ್ದು ಗಡ್ಡೆಗೆಣಸು ತಿನ್ನುತ್ತ ಬದುಕುವ ಜನರು ತನ್ನ ಸಮಾಜದ ಸೆರಗಂಚಲ್ಲಿಯೇ ಬದುಕುತ್ತಿರುವಾಗ, ತಾವು ಜೀವಿಸಲೋಸುಗ ಅಪರಾಧಗಳನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಸಮುದಾಯಗಳು ಬದುಕಲು ಸಂರ್ಘರ್ಷ ಮಾಡುತ್ತಿರುವಾಗ ಧರ್ಮಸಭೆಗಳಲ್ಲಿ ತಮ್ಮ ನಾಗರಿಕತೆಗೆ ತಾವೇ ಪರಾಕು ಹೇಳಿಕೊಳ್ಳುವ ಜನರನ್ನು ಅಂಬೇಡ್ಕರ್ ಕೆಂಗಣ್ಣಿನಿಂದ ಪ್ರಶ್ನಿಸುತ್ತಾರೆ.

ಈ ಆದಿಮ ಜನಾಂಗಗಳು, ಅಪರಾಧಿ ಬುಡಕಟ್ಟುಗಳು ಮತ್ತು ಅಸ್ಪೃಶ್ಯರನ್ನು ವಿವರಿಸುವಾಗ ಅಂಬೇಡ್ಕರ್ ಕೆಲವು ಸೂಕ್ಷ್ಮಗಳನ್ನು ಗುರುತಿಸಲು ಯತ್ನಿಸುತ್ತಾರೆ. ಬುಡುಕಟ್ಟುಗಳ ಸಮಸ್ಯೆ ‘ಅಸ್ಪೃಶ್ಯರ’ ಸಮಸ್ಯೆಗಳಿಗಿಂತ ಭಿನ್ನ ಎಂದು ಅಂಬೇಕ್ಡರ್ ಬಲವಾಗಿ ಪ್ರತಿಪಾದಿಸುತ್ತಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಹೀಗಿವೆ. ಹಿಂದೂ ಸಮಾಜದ ದೃಷ್ಟಿಯಲ್ಲಿ ಬುಡಕಟ್ಟುಗಳು ‘ಸ್ಪೃಶ್ಯ’, ಆದರೆ ಹೊಲೆ ಮಾದಿಗರು ಅಸ್ಪೃಶ್ಯರು. ಅಷ್ಟರಮಟ್ಟಿಗೆ ಬುಡಕಟ್ಟುಗಳು ಹಿಂದೂಧರ್ಮಧ ಚೌಕಟ್ಟಿನಲ್ಲಿ ಕೆಲವು ಸಾಮಾಜಿಕ ರಿಯಾಯಿತಿಗಳನ್ನು ಪಡೆದುಕೊಂಡಿವೆ. ಜೊತೆಗೆ ಕೆಲವು ಬುಡಕಟ್ಟುಗಳು ಸ್ವತಃ ತಾವೇ ಅಸ್ಪೃಶ್ಯತೆಯನ್ನು ಆಚರಿಸುತ್ತವೆ. ಹೊಲೆಯರು ಮತ್ತು ಮಾದಿಗರನ್ನು ಹಲವು ಬುಡಕಟ್ಟುಗಳು ಅಸ್ಪೃಶ್ಯರೆಂದೇ ಭಾವಿಸುತ್ತವೆ ಎಂದು ಅಂಬೇಡ್ಕರ್ ಹೇಳುತ್ತಾರೆ. ಇನ್ನೊಂದೆಡೆ “ಈ ಆದಿವಾಸಿಗಲು ಅನಾಗರಿಕ ಸ್ಥಿತಿಯಲ್ಲಿ ಉಳಿಯಲು ಹಿಂದುವಿನ ಜಾತಿಯೊಂದೇ ಕಾರಣ. ತಮ್ಮ ನಾಗರೀಕತೆಯ ಮಧ್ಯದಲ್ಲಿ ಇವರನ್ನು ಅನಾಗರಿಕ ಸ್ಥಿತಿಯಲ್ಲಿಡಲು ಹಿಂದುಗಳಿಗೆ ನಾಚಿಕೆಯಾಗಲಿ, ಪಶ್ಚಾತ್ತಾಪವಾಗಲಿ ಇಲ್ಲವೇ ಇಲ್ಲ. ’’[4] ಎನ್ನುತ್ತಾರೆ. ಒಟ್ಟಿನಲ್ಲಿ ಅಂಬೇಡ್ಕರ್ ಈ ದೇಶದ ಸಾಮಾಜಿಕ ಅನಿಷ್ಟಗಳನ್ನೆಲ್ಲ ಹುರಿಮಾಡಿಕೊಂಡು ಹಿಂದೂ ಧರ್ಮವನ್ನು ಸೈದ್ಧಾಂತಿಕವಾಗಿ ಮಣಿಸಲು ಯತ್ನಿಸುತ್ತಾರೆ. ಆದರೆ ಒಬ್ಬ ಆದಿವಾಸಿ ಮತ್ತು ಒಬ್ಬ ಅಸ್ಪೃಶ್ಯನ ನಡುವೆ ಸಾಮಾಜಿಕವಾಗಿ ಒಂದು ತೆಳುವಾದ, ಆದರೆ ಕಣ್ಣಿಗೆ ಕಾಣುವ ಗೆರೆಯೊಂದನ್ನು ಅಂಬೇಡ್ಕರ್ ಎಳೆಯುತ್ತಾರೆ. ಆರ್ಥಿಖವಾಗಿ ಅಸ್ಪೃಶ್ಯನಿಗಿಂತ ಆದಿವಾಸಿಯು ಹಿಂದುಳಿದಿದ್ದರೂ, ಅವನು ಸ್ಪೃಶ್ಯನಾಗಿರುವ ಕಾರಣಕ್ಕಾಗಿ ಆದಿವಾಸಿಗಳಿಗೆ ಹಿಂದೂ ಸಮಾಜದಲ್ಲಿ ಮಾನ್ಯತೆ ಇದೆ ಎಂದು ಅಂಬೇಡ್ಕರ್ ಭಾವಿಸುತ್ತಾರೆ. ಆದರೆ ಭಾರತ ಸಮಾಜದ ಸಂರಚನೆ ಶ್ರೇಣೀಕೃತಗೊಂಡದ್ದೇ ಆರ್ಥಿಕ ವಿಷಮತೆಯ ಕಾರಣಕ್ಕಾಗಿ. ಅಸ್ಪೃಶ್ಯರಿಗೆ ಎಲ್ಲೆಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಅಧಿಕಾರಗಳಿಲ್ಲವೋ ಅಲ್ಲೆಲ್ಲ ಆದಿವಾಸಿಗಲೂ ಅಸ್ಪೃಶ್ಯರಂತೆಯೇ ಪರಿಗಣಿಸಲ್ಪಟ್ಟಿದ್ದಾರೆ. ಮತ್ತು ಭಾರತದ ಸನಾತನ ಆರ್ಥಿಕ ಅಸಮಾನತೆಯಲ್ಲಿ ಅಸ್ಪೃಶ್ಯರು ಮತ್ತು ಆದಿವಾಸಿಗಳೂ ಸಮಾನ ದುಃಖಿಗಳೇ ಆಗಿದ್ದಾರೆ. ಇಂಡಿಯಾದ ಈ ಬಗೆಯ ಸನಾತನ ರಾಜಕೀಯಾರ್ಥಿಕ ಅಸಮಾನತೆಯ ವಿರುದ್ಧ ಹೋರಾಡುವಾಗ ಈ ಕಾರಣಗಳಿಗಾಗಿ ನೊಂದ ಎಲ್ಲ ಸಮುದಾಯಗಳನ್ನು ಸೈದ್ಧಾಂತಿಕವಾಗಿ ಒಗ್ಗೂಡಿಸಬೇಕಾಗುತ್ತದೆ. ಸಾಮಾಜಿಕವಾಗಿ ಆದಿವಾಸಿಯೊಬ್ಬ ಸ್ಪೃಶ್ಯನಾದ ಒಂದೇ ಕಾರಣಕ್ಕೆ, ಇಂಡಿಯಾದಲ್ಲಿನ ಅಸಮಾನತೆಯಲ್ಲಿ ಆತನಿಗೆ ಭಾರೀ ರಿಯಾಯತಿಗಳೇನೂ ಸಿಕ್ಕಿಲ್ಲ. ಅಸ್ಪೃಶ್ಯನಷ್ಟೇ ಆದಿವಾಸಿಯೊಬ್ಬ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತುಳಿಯಲ್ಪಟ್ಟಿದ್ದಾನೆ. ಈ ಕಾರಣಕ್ಕಾಗಿ ಆದಿವಾಸಿಗಳು, ಈ ದೇಶ ಸಾರಿಕೊಂಡು ಬಂದ ಎಲ್ಲ ಬಗೆಯ ಅಸಮಾನತೆಗಳಿಂದ ನೊಂದವರೇ ಆಗಿದ್ದಾರೆ. ಇಂಡಿಯಾದ ಅಮಾನವೀಯ ಅಸಮಾನತೆಯನ್ನು ಜೀವಂತವಾಗಿಡುವ ಹಿನ ರಾಜಕಾರಣವನ್ನು ಧ್ವಂಸ ಮಾಡಬೇಕಾದಾಗೆಲ್ಲ ಅಸ್ಪೃಶ್ಯರ ಜೊತೆ ಎಲ್ಲ ಶೋಷಿತರು ಕೈ ಜೋಡಿಸಬೇಕಾಗುತ್ತದೆ. ಸಾವಿರಾರು ವರ್ಷಗಳ ಕಾಲ ಸಾಮಾಜಿಕಾರ್ಥಿಕ ಅಸಮಾನತೆ ಜಗತ್ತಿನಲ್ಲಿ ಜೀವಂತವಿದೆ ಎಂದಾದರೆ ಅದು ಭಾರತದಲ್ಲಿ ಮಾತ್ರ. ಹೀಗೆ ಜೀವಂತವಿರುವ ಅಸಮಾನತೆಯನ್ನು ಪೋಷಿಸುವ ಸನಾತನ ಕೇಂದ್ರಗಳಲ್ಲಿ ಈ ವಿಷಮತೆಯನ್ನು ಸಮರ್ಥಿಸುವ ಯಾವುದೇ ಶಕ್ತಿಶಾಲಿ ಸೈದ್ಧಾಂತಿಕ ನಿಲುವುಗಳಿಲ್ಲ. ಆದರೆ ಈ ದುರ್ಬಲ ಕರ್ಮಠ ಕೇಂದ್ರಗಳನ್ನು ನಾಶ ಮಾಡಲು ಯತ್ನಿಸುವ ಶೋಷಿತರಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಹುಟ್ಟಿಕೊಂಡ ಕೃತಕ ಕಂದಕಗಳಿವೆ. ಈ ಕಂದಕಗಳು ದುರ್ಬಲವಾಗಿದ್ದರೂ, ಈ ಕ್ಷಣಕ್ಕೆ ಶೋಷಿತರೆಲ್ಲ ಒಂದೆಡೆ ಒಗ್ಗೂಡುವ ಕ್ರಿಯೆಗೆ ಈ ಕಂದಕಗಳು ಅಡ್ಡಿ ಮಾಡುತ್ತಿವೆ. ಈ ಕಾರಣಕ್ಕಾಗಿ ದುರ್ಬಲ ಕರ್ಮಠ ಕೇಂದ್ರಗಳು ಅಗಾಧ ಶಕ್ತಿಯನ್ನು ಪಡೆದುಕೊಳ್ಳುತ್ತಲೇ ಹೋಗುತ್ತಿವೆ. ನಮ್ಮನ್ನು ನಾವು ಸೈದ್ಧಾಂತಿಕವಾಗಿ ವಿವರಿಸಿಕೊಳ್ಳಲು ವಿಫಲರಾಗಿರುವುದರಿಂದ ಮತ್ತು ಇಂಡಿಯಾದ ಶೋಷಿತರ ಅನೈಕ್ಯತೆಯಿಂದ ಈ ದೇಶದ ಊಳಿಗಮಾನ್ಯತೆ ಕೊಬ್ಬುತ್ತಲೇ ಹೋಗಿದೆ. ಸಮಾನ ಕಾರಣಗಳಿಗಾಗಿ ತುಳಿಯಲ್ಪಟ್ಟವರು ರಾಜಕೀಯವಾಗಿ ಐಕ್ಯತೆ ಸಾಧಿಸದೆ ಸಾಂಸ್ಕೃತಿಕ ಕಾರಣಗಳನ್ನು ಮುಂದು ಮಾಡಿ ಪಲ್ಲಟಗೊಳ್ಳುವುದು ಈ ದೇಶದಲ್ಲಿ ಅನೂಚಾನವಾಗಿ ನಡೆದುಬಂದಿದೆ.

ಆದಿವಾಸಿಗಳ ಸಂಸ್ಕೃತಿ ರಕ್ಷಣೆ ಮತ್ತು ಅಂಬೇಡ್ಕರ್

ಈ ಮೊದಲೇ ಹೇಳಿದಂತೆ ಹಿಂದೂ ಧರ್ಮ ಸಾಕಿಕೊಂಡು ಬಂದ ಶ್ರೇಣೀಕೃತ ವ್ಯವಸ್ಥೆಯನ್ನು ಸಂಸ್ಕೃತಿ ಪಂಡಿತರು ವೈವಿಧ್ಯತೆಯಲ್ಲಿ ಹೆಸರಲ್ಲಿ ಎಷ್ಟೇ ಹೊಗಳಿದರೂ, ಅಂಬೇಡಕ್ರ ಅದನ್ನು ಉಗ್ರವಾಗಿ ಖಂಡಿಸುತ್ತಾರೆ. ವೈವಿಧ್ಯತೆಯ ಹೆಸರಲ್ಲಿ ಇಂಡಿಯಾದ ಸಮಾಜ ಮುಂದುವರಿಸಿಕೊಂಡು ಬಂದ ಸಾಮಾಜಿಕಾರ್ಥಿಕ ಅಸಮಾನತೆಗಳನ್ನು ಮತ್ತು ಹೇಯ ಸಾಮಾಜಿಕ ನಿಯಮಗಳನ್ನು ಅಂಬೇಡ್ಕರ್ ಅವರು ‘ಸಂಸ್ಕೃತಿ’ ಎಂಬುದು ಉಳಿಸಿಕೊಳ್ಳಬಹುದಾದ ಮೌಲ್ಯವೇನಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ. ಆತ್ಮಪ್ರತ್ಯಯವೇ ಇಲ್ಲದ ಅಸಹಾಯಕ ಸಮುದಾಯವೊಂದು ತನ್ನ ಹುಟ್ಟನ್ನೇ ದ್ವೇಷಿಸಿಕೊಳ್ಳುವ ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಮತ್ತುಯಾರ ಸಂಸ್ಕೃತಿ ಉಳಿಯಬೇಕು? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಮನುಷ್ಯನ ವ್ಯಕ್ತಿತ್ವದ ಉದಾತ್ತತೆಯ ಅನಾವರಣವನ್ನು ದ್ವೇಷಿಸುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಬಗೆಯ ಸಂಸ್ಕೃತಿ ರೂಪಗೊಂಡಿರಲು ಸಾಧ್ಯ? ಅದರಲ್ಲೂ ಅಸ್ಪೃಶ್ಯನೊಬ್ಬ ತನ್ನ ಮುಂದಿನ ತಲೆಮಾರು ಹೆಮ್ಮೆಪಡಬಹುದಾದ ಯಾವುದಾದರೊಂದು ಸಂಗತಿ ಅವನಲ್ಲಿ ರೂಪುಗೊಳ್ಳುವಂತಾಗಲು ಈ ಶ್ರೇಣೀಕೃತ ವ್ಯವಸ್ಥೆ ಅನುವು ಮಾಡಿಕೊಟ್ಟಿದೆಯೇ? ತನ್ನ ಬದುಕನ್ನೇ ದ್ವೇಷಿಸುವಂತೆ ಮಾಡಿರುವ ಅವನ ಜೀವನ ವಿಧಾನ ಯಾಕಾಗಿ ಸಂರಕ್ಷಿಸಲ್ಪಡಬೇಕು? ಹಿಂದೂಧರ್ಮದಿಂದ ನೇರವಾಗಿ ಲಾಭ ಪಡೆದುಕೊಳ್ಳುವ ಜನ, ತಮ್ಮ ಸೇವೆ ಮಾಡಲೆಂದೇ ಹುಟ್ಟಿರುವ ನಿಕೃಷ್ಠರ ಬದುಕಲ್ಲಿ ಮಾದರಿಯಾಗಿ ನಿಲ್ಲಬಲ್ಲ ಯಾವ ಅಂಶಗಳೂ ರೂಪುಗೊಳ್ಳದಂತೆ ನಾಶ ಮಾಡಿದ್ದಾರೆ. ಜೊತೆಗೆ, ಯಾವ ಶೋಷಿತನೂ ತನ್ನ ವರ್ತಮಾನದ ಹಿಂಸಾತ್ಮಕ ಬದುಕನ್ನು ಯಾವತ್ತಿಗೂ ರಕ್ಷಿಸಿಕೊಳ್ಳ ಕೂಡದು. ಆದಿವಾಸಿಗಳ ಬದುಕು ‘ನಾಗರಿಕರಿಗೆ’ ವಿಲಕ್ಷಣವಾಗಿ, ಸುಂದರವಾಗಿ ಕಾಣಬಹುದು ಆದರೆ, ಅವರು ನಿತ್ಯದ ಬದುಕಲ್ಲಿ ಎದುರಿಸುವ ಕಷ್ಟಗಳಿಗೆ ಅವರ ‘ಸಂಸ್ಕೃತಿ’ ಎಂದಿಗೂ ನೆರವಾಗಲಾರದು. ಸಂಸ್ಕೃತಿಯೆಂಬುದು ಮನುಷ್ಯನ ನಡುವೆ ಅನೇಕ ಕಾರಣಗಳಿಗಾಗಿ ರೂಪುಗೊಳ್ಳುವಂತಹದ್ದು. ಅದು ಮಾನವ ಬದುಕಿನ ಒಂದು ಅಮೂರ್ತ ಸಂಗತಿ ಮಾತ್ರ. ಹಸಿವಿನಿಂದ ನರಳುವದು, ಸಾಮಾಜಿಕವಾಗಿ ಅವಮಾನಕ್ಕೀಡಾಗುವುದು ಮತ್ತು ಸಮುದಾಯದ ಆತ್ಮ ಪ್ರಯತ್ನವನ್ನೆ ನಾಶಮಾಡುವ ಜೀವನ ವಿಧಾನವನ್ನೇ ಸಂಸ್ಕೃತಿ ಎನ್ನುವುದಾದರೆ ಅಂಬೇಡ್ಕರ್ ಅದು ಉಳಿಯಕೂಡದು, ಅದು ನಾಶಕ್ಕೆ ಅರ್ಹವಾದದ್ದು ಎನ್ನುತ್ತಾರೆ. ಈ ಕಾರಣಕ್ಕೆ, ಅಂಬೇಡ್ಕರ್ ಸಂಸ್ಕೃತಿಯನ್ನು ‘ರಕ್ಷಿಸುವ’ ಆವತ್ತಿನ ನೆಹರುವಿನ ಚಿಂತನೆಗೆ ತದ್ವಿರುದ್ಧ ನಿಲುವನ್ನು ತಳೆದಿದ್ದರು.

ನೆಹರು ಈ ದೇಶದ ವೈವಿಧ್ಯತೆ ಮತ್ತು ಆದಿವಾಸಿಗಳ ಕಲೆ, ನೃತ್ಯಗಳನ್ನು ಕಂಡು ವಿಸ್ಮಯಗೊಳ್ಳುತ್ತಿದ್ದರು. ರೋಮಾಂಚನಗೊಂಡು, ಮೈತುಂಬಿ ಆದಿವಾಸಿಗಳ ಸಭೆಗಳಲ್ಲಿ ಅವರ ‘ಸಂಸ್ಕೃತಿ’ಯನ್ನು ಉಳಿಸಿಕೊಳ್ಳುವ ಭಾಷಣ ಮಾಡುತ್ತಿದ್ದರು. ಆದಿವಾಸಿಗಳ ಅಭಿವೃದ್ಧಿಗಾಗಿ ನೆಹರು ರೂಪಿಸಿದ ಪಂಚಶೀಲ ತತ್ವಗಳಲ್ಲೂ ಸಹ ಈ ‘ರಕ್ಷಿಸುವ’ ಮನೋಧರ್ಮ ಕಣ್ಣಿಗೆ ಕಟ್ಟಿದಂತೆ ವ್ಯಕ್ತವಾಗುತ್ತದೆ. ನೆಹರು ಯುರೋಪಿನ ಮನೋಭಾವದವರಾದರೆ, ಅಂಬೇಡ್ಕರ್ ಶ್ರೇಣೀಕರಣದ ಕಟ್ಟ ಕಡೆಯ ಮನುಷ್ಯ. ಈ ದೇಶಧ ಭಾರೀ ಶ್ರೀಮಂತರಲ್ಲಿ ಶ್ರೀಮಂತ ನೆಹರು. ಅಂಬೇಡ್ಕರ್ ಈ ದೇಶದ ಹತಭಾಗ್ಯರ ಪ್ರತಿನಿಧಿ. ನೆಹರುವಿನದು ಉದಾರವಾದಿ ವಿಶಾಲ ದೃಷ್ಟಿಕೋನ. ಅಂಬೇಡ್ಕರ್ ಅವರದು ದಂಗೆಯ ಪ್ರವೃತ್ತಿಯ ಸಕೀಲ ದೃಷ್ಟಿಕೋನ. ಯುರೋಪಿನ ಮಾನವಶಾಸ್ತ್ರದ ಚಿಂತನೆಗಳಿಂದ ನೆಹರು ಪ್ರಭಾವಿತರಾಗಿದ್ದರೆ, ಅಂಬೇಡ್ಕರ್ ಈ ದೇಶದ ನೊಂದವರ ಬವಣೆಗಳಿಂದ ರೂಪಗೊಂಡವರಾಗಿದ್ದರು. ಈ ಕಾರಣಕ್ಕಾಗಿಯೇ, ಭಾರತದ ವೈವಿಧ್ಯತೆ ನೆಹರುವಿಗೆ ರೋಮಾಂಚನ ಹುಟ್ಟಿಸಿದರೆ, ಅಂಬೇಡ್ಕರ್ ರವರಲ್ಲಿ ರೋಷವನ್ನು ಚಿಮ್ಮಿಸುತ್ತಿತ್ತು.

ಹಳ್ಳಿಗಳು ಪುನರುಜ್ಜೀವನಗೊಳ್ಳಬೇಕು. ಅಲ್ಲಿನ ಗುಡಿಕೈಗಾರಿಕೆಗಳು ಮತ್ತೆ ಜೀವ ಪಡೆದು ಭಾರೀ ಯಂತ್ರಗಳ ರಾಕ್ಷಸ ಸಂಸ್ಕೃತಿ ಭಾರತವನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಬೇಕು ಎಂದು ಗಾಂಧೀಜಿ ನಂಬಿದ್ದರು. ಆದರೆ ಅಂಬೇಡ್ಕರ್ ಗೆ ಹಳ್ಳಿಗಳು, ಪ್ಯೂಡಲಿಸಂನ್ನು ಪೋಷಿಸುವ ವೇದಿಕೆಗಳಂತೆಯೇ ಗೋಚರಿಸಿದವು. ಹಳ್ಳಿಯೊಂದು ತನೆಲ್ಲಾ ಸ್ವಯಂಪೂರ್ಣತೆಯೊಂದಿಗೆ, ಈದೇಶದ ಸನಾತನ ಕ್ರೌರ್ಯವನ್ನು ಅಕ್ಷರಶಃ ಆಚರಣೆಗೆ ತರುವ ಸಾಮಾಜಿಕ ಘಟಕ ಎಂದು ಅಂಬೇಡ್ಕರ್ ಭಾವಿಸುತ್ತಾರೆ. ಜೊತೆಗೆ ಗುಡಿಕೈಗಾರಿಕೆಗಳು ಮತ್ತು ಪಾರಂಪರಿಕ ಕುಲಕಸಬುಗಳು ಉಳಿಯಬೇಕೆಂದು ಕರೆಕೊಡುವ ಗಾಂಧೀಜಿಯವರಿಗೆ ಅಂಬೇಡ್ಕರ್

ಕುಲವೃತ್ತಿ ತನ್ನ ಶಕ್ತಿಗಳಿಗೆ ಒಗ್ಗದೆ ಇದ್ದಾಗ ಕೂಡ, ಅದು ಈಗ ಲಾಭದಾಯಕವಾಗಿಲ್ಲವೆಂದಾಗ ಕೂಡ ಅದನ್ನು ಕೈಗೊಂಡು ಮುಂದುವರಿಸಬೇಕೇ? ತಮ್ಮ ಕುಲವೃತ್ತಿ ಅನೈತಿಕವಾಗಿದ್ದರೂ ಕೂಡ ಅಂಥವರು ಅದರಿಂದಲೇ ಉಪಜೀವಿಸಬೇಕೇ? ಪ್ರತಿಯೊಬ್ಬರೂ ತಮ್ಮ ಕುಲವೃತ್ತಿಯನ್ನೇ ಕೈಗೊಳ್ಳಬೇಕಾದರೆ ತಲೆಹಿಡುಕನ ವಂಶದವರು ತಲೆಹಿಡುಕರಾಗಿಯೇ ಬದುಕತಕ್ಕದ್ದು. ಮತ್ತು ವೇಶ್ಯೆಯ ಮೊಮ್ಮಗಳು ವೇಶ್ಯೆಯೇ ಆಗಿರತಕ್ಕದ್ದು ಎಂದಾಗುತ್ತದೆ. ತಮ್ಮ ತತ್ವದ ಮೇರೆಗೆ ತರ್ಕಬದ್ಧವಾಗಿ ಬರುವ ನಿರ್ಣಂವನ್ನು ಮಹಾತ್ಮರು ಒಪ್ಪಿಕೊಳ್ಳುವರೇ? ಪ್ರಾಚೀನ ಕುಲವೃತ್ತಿಯ ಆದರ್ಶವು ಅವ್ಯವಹಾರ್ಯವೂ ಆಗಿರುವುದಷ್ಟೇ ಅಲ್ಲದೆ, ನೈತಿಕವಾಗಿ ಅಸಮರ್ಥನೀಯವೂ ಆಗಿದೆ[5] ಎನ್ನುತ್ತಾರೆ.

‘ಮಹಾತ್ಮರಿಗೆ ಒಂದು ಪ್ರತ್ಯುತ್ತರ’ ಎಂಬ ಅಂಬೇಡ್ಕರ್ ರವರ ಸುದೀರ್ಘ ಲೇಖನದಲ್ಲಿ ವೈಚಾರಿಕ ಆವೇಶ ಗಾಂಧೀಜಿಯವರ ಉದಾರವಾದಿ ಮಾನವತಾವಾದವನ್ನು ಕೊಚ್ಚಿ ಹರಿದಿದೆ. ಸಮುದಾಯವೊಂದು ರೂಢಿಸಿಕೊಂಡು ಬಂದ ಸಂಸ್ಕೃತಿಯು ಅದರ ಉತ್ಪಾದಕ ಚಟುವಟಿಕೆಗಳಿಂದಾಗಿಯೇ ರೂಪಗೊಂಡಿರುತ್ತದೆ. ಸಂಸ್ಕೃತಿ ಯಾವತ್ತೂ ಸೃಜನಶೀಲ ಶ್ರಮಪ್ರವೃತ್ತಿಯ ಕಾರಣಕ್ಕಾಗಿ ರೂಢಿಯಲ್ಲಿರುತ್ತದೆ ಎಂಬುದನ್ನು ಮಾರ್ಕ್ಸ್‌ವಾದೀ ಸಂಸ್ಕೃತಿ ಮೀಮಾಂಸೆಯ ಮೂಲಕ ಅಂಬೇಡ್ಕರ್ ವಿವರಿಸುತ್ತಾರೆ. ಹೀಗಾಗಿ ‘ಸಂಸ್ಕೃತಿ’ ಎಂಬುದು ಮನುಷ್ಯನ ದುಡಿಮೆಗೆ ನೇರವಾಗಿ ಸಂಬಂಧಿಸಿದ್ದು, ಪರಂಪರೆಯ ರಕ್ಷಣೆಯ ಕಾರಣಕ್ಕೆ ಸಾಂಪ್ರದಾಯಿಕ ಕುಲಕಸಬುಗಳು ಉಳಿಯಬೇಕೆಂದರೆ, ಸನಾತನ ಉತ್ಪಾದನಾ ವ್ಯವಸ್ಥೆ ಮತ್ತು ಉತ್ಪಾದನಾ ಸಂಬಂಧಗಳು ಯಾವ ಬದಲಾವಣೆಗೂ ಒಳಗಾಗದೆ ಉಲಿಯಬೇಕಾಗುತ್ತದೆ. ಜೊತೆಗೆ ಪರಪಂರೆಯು ಸೃಷ್ಟಿಸಿದ ವರ್ಣಶ್ರೇಣಿಯೂ ಮತ್ತು ಅದರ ಹೇಯ ಕ್ರೌರ್ಯಗಳೂ ಜೀವಂತವಾಗಿರಬೇಕಾಗುತ್ತದೆ. ಸಂಸ್ಕೃತಿಯನ್ನು ‘ರಕ್ಷಿಸುವ’ ತರ್ಕ ಅಂತಿಮವಾಗಿ ಈ ಎಲ್ಲ ಮೂರ್ತ ಸತ್ಯಗಳನ್ನು ಅರಗಿಸಿಕೊಳ್ಳುವುದಿಲ್ಲ ಮತ್ತು ಈ ದೇಶದಲ್ಲಿ ಯಾವ ಅಧಿಕಾರಗಳನ್ನು, ಹಕ್ಕುಗಳನ್ನು ಹೊಂದದ ಮತ್ತು ಆತ್ಮಪ್ರತ್ಯಯವನ್ನೇ ನಾಶಮಾಡಿಕೊಂಡು ಪರಂಪರೆಯ ಹೆಸರಲ್ಲಿ ನಿತ್ಯ ಅವಮಾನಿತನಾಗುವ ಯಾವ ಮನುಷ್ಯನೂ ತನ್ನ ಸಂಸ್ಕೃತಿ ‘ಉಳಿಯಲಿ’ ಎಂದು ಬಯಸುವುದಿಲ್ಲ. ಅಂಬೇಡ್ಕರ್ ಈ ಅರ್ಥದಲ್ಲಿ ‘ರಕ್ಷಿಸುವ’ ಧೋರಣೆಯ ಪಂಡಿತರ ತರ್ಕಗಳನ್ನು ಸ್ಫೋಟಿಸುತ್ತಾರೆ.

ಇನ್ನು ಮತಾಂತರದ ವಿಷಯದಲ್ಲಿ ಅಂಬೇಡ್ಕರ್ ಅವರ ನಿಲುವು ಬಹುತೇಕ ಎಲ್ಲರಿಗೂ ಚಿರಪರಿಚಿತವಾದದ್ದೇ ಆಗಿದೆ. ಸ್ವತಃ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು. ಅಂಬೇಡ್ಕರ್ ಯಾವತ್ತೂ ಮತಾಂತರದ ಪರವಾಗಿಯೇ ಇದ್ದವರು. ಅರಣ್ಯದಲ್ಲಿನ ಆದಿವಾಸಿಗಳನ್ನು ಮತ್ತು ಹಳ್ಳಿಗಳಲ್ಲಿನ ಅಸ್ಪೃಶ್ಯರನ್ನು ಇಂಗ್ಲೆಂಡಿನ ಚರ್ಚ್‌ಗಳು ಮತಾಂತರಗೊಳಿಸುತ್ತಿವೆ. ಈ ಮುಗ್ಧ ಜನರಿಗೆ ಅನೇಕ ಆಮಿಷಗಳನ್ನು ಒಡ್ಡಿ ಅವರನ್ನು ಕ್ರೈಸ್ತಧರ್ಮಕ್ಕೆ ಧರ್ಮಾಂತರಗೊಳಿಸಲಾಗುತ್ತದೆ. ಕೆಲವು ಕಡೆ ಮತಾಂತರ ಬಲಪ್ರಯೋಗದ ಮೂಲಕ ನಡೆಯುತ್ತಿದೆ. ಮತ್ತು ಭಾರತ ದೇಶದ ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಮಿಶನರಿಗಳು ಅವರನ್ನು ಮತಾಂತರ ಗೊಳಿಸುತ್ತಿದ್ದಾರೆ ಎಂಬ ಆರೋಪಗಳು ಅಂದೂ ಇದ್ದವು. ಈವತ್ತೂ ಸಹ ಸಂಘ ಪರಿವಾರ ಇವೇ ವಾಕ್ಯಗಳನ್ನು ಕಿರಿಚುತ್ತಿದೆ. ಗಾಂಧೀಜಿ ಮತ್ತು ನೆಹರು ಸಹ ಇದೇ ಬಗೆಯ ಧೋರಣೆಯನ್ನು ಹೊಂದಿದ್ದವರು. ಮತಾಂತರ ಮುಂದುವರೆದರೆ ಮುಂದೊಂದು ದಿನ ಹಿಂದೂಧರ್ಮ ಇಲ್ಲವಾಗುತ್ತದೆ ಎಂದು ಗಾಂಧೀಜಿ ಆತಂಕಪಡುತ್ತಿದ್ದರೆ, “ಅಸ್ಪೃಶ್ಯತೆ ಸದಾ ಉಳಿಯುವುದೇ ಆದರೆ, ನಾನು ಹಿಂದೂ ಧರ್ಮ ನಾಶವಾಗಲೆಂದು ಬಯಸುತ್ತೇನೆ’’[6] ಎನ್ನುತ್ತಾರೆ ಅಂಬೇಡ್ಕರ್. ಮನುಷ್ಯನ ಸೃಜನಶೀಲತೆಯ ಅನಾವರಣವನ್ನು ಮತ್ತು ಮಾನವಪ್ರೇಮವನ್ನು ದ್ವೇಷಿಸುವ ಹಿಂದೂ ಧರ್ಮದಲ್ಲಿ ಬದುಕುವುದು ಅಸಾಧ್ಯವೆಂದು ಅಂಬೇಡ್ಕರ್ ಯಾವತ್ತೋ ತೀರ್ಮಾನಿಸಿದ್ದರು. ಅದಕ್ಕಾಗಿ

ಅಸ್ಪೃಶ್ಯರು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ನಾನು ನಿಷೇಧಿಸಲರೆ. ಹಿಂದೂ ಧರ್ಮವು ಒಡೆದು ಹಳ್ಳಿ ಹಳ್ಳಿಯೂ ಎರಡುಭಾಗಗಳಾಗುವುದಕ್ಕಿಂತ ಇದನ್ನೇ ನಾನು ಸಹಿಸಿಯೇನು[7] ಎನ್ನುತ್ತಾರೆ.

ಮತಾಂತರ ಒಂದು ಜನತಾಂತ್ರಿಕ ಆಶೆಯವಾಗಿದ್ದು, ಯಾವೊಬ್ಬ ಪ್ರಜೆಯೂ ತನಗೆ ಬೇಕಾದ ಧರ್ಮವನ್ನು ಆಯ್ದುಕೊಳ್ಳುವಲ್ಲಿ ಸರ್ವಸ್ವತಂತ್ರನಾಗಿರುತ್ತಾನೆ. ತನ್ನ ಜೀವಮಾನದ ಇಷ್ಟಗಳು ಮತ್ತು ತನ್ನ ಅಂತರಂಗ ವಿಕಸಿಸಲು ಆಸ್ಪದ ಕೊಡುವ ಯಾವುದೇ ಆಧ್ಯಾತ್ಮಿಕ ವಲಯವನ್ನು ಒಬ್ಬ ವ್ಯಕ್ತಿ ಆಯ್ದುಕೊಳ್ಳಬಹುದು. ಈ ಬಗೆಯ ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿ ಹುಟ್ಟುತ್ತಲೇ ಪಡೆದು ಕೊಳ್ಳುತ್ತಾನೆ. ಮತಾಂತರಗೊಳ್ಳುವ ಭಾರತದ ಅಂಚಿನ ಸಮುದಾಯಗಳು ಸಾಮಾಜಿಕ ಅವಮಾನಗಳನ್ನು ಮೀರಿ ನಿಲ್ಲಲು ಹಂಬಲಿಸುತ್ತಿವೆ. ಈ ಬಗೆಯ ಹಂಬಲಗಳು ಕೇವಲ ಒಪ್ಪತ್ತಿನ ಹಸಿವೆಯ ಕಾರಣಕ್ಕಾಗಿ ಹುಟ್ಟುವುದಿಲ್ಲ. ಸಾವಿರಾರು ವರ್ಷಗಳ ಕಾಲ ತನ್ನ ಅಂತರಂಗವನ್ನು ಬಚ್ಚಿಟ್ಟುಕೊಂಡ ಜನತೆಯ ಸೃಜನಶೀಲ ಆಧ್ಯಾತ್ಮ ಅನಾವರಣಗೊಳ್ಳುವ ಸಲುವಾಗಿ ಈ ಬಗೆಯ ಹಂಬಲಗಳು ಹುಟ್ಟುತ್ತವೆ ಎಂದು ಅಂಬೇಡ್ಕರ್ ಭಾವಿಸಿದ್ದರು.

ಮತಾಂತರದ ವಾದವಿವಾದಗಳಲ್ಲಿ ಯಾವನೇ ಒಬ್ಬ ಹಿಂದೂ ಕೂಡ, ಹಿಂದೂ ಧರ್ಮದಲ್ಲಿ ಯಾವ ದೋಷವಿದೆ ಎಂದು ಸಿದ್ಧ ಮಾಡಿ ತೋರಿಸಲು ಯಾವ ಅಸ್ಪೃಶ್ಯರನ್ನೂ ಆಹ್ವಾನಿಸಿಲ್ಲ[8]

ಏಕೆಂದರೆ ಅಮಾನವೀಯತೆಯೇ ಸ್ಥಾಯಿಯಾಗಿರುವ ಧರ್ಮದಲ್ಲಿ ಚರ್ಚೆಗೆ ಮತ್ತು ಸಂವಾದಕ್ಕೆ ಯಾವತ್ತೂ ಅವಕಾಶಗಳಿರುವುದಿಲ್ಲ. ಧಾರ್ಮಿಕ ಆವೇಶಗಳು ಮಾನವೀಯತೆಯನ್ನು ತುಳಿದು ಮುನ್ನುಗ್ಗಿ ಬಿಡುತ್ತವೆ. ಅದಕ್ಕಾಗಿ

ಅಸ್ಪೃಶ್ಯರು ಎರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಸಾಮಾಜಿಕನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು. ಅಂಥ ಕೆಲಸವನ್ನು ಬೇಕಾದರೆ ಇಸ್ಲಾಂ ಧರ್ಮ, ಕ್ರೈಸ್ತ ಅಥವಾ ಬೌದ್ಧ ಧರ್ಮಗಳು ಮಾಡಬಲ್ಲವು[9] ಎನ್ನುತ್ತಾರೆ.

ಜೊತೆಗೆ ಭಾರತದಲ್ಲಿನ ಚರ್ಚ್‌ಗಳ ಸೇವೆಯನ್ನು ಅಂಬೇಡ್ಕರ್ ಶ್ಲಾಘಿಸುತ್ತಾರೆ. ಕೆಳಜಾತಿಯವರನ್ನು ಮುಟ್ಟಿದರೆ ಅಸಹ್ಯಿಸಿ ಕೊಳ್ಳುವ ಧರ್ಮದಲ್ಲಿ ಹುಟ್ಟಿದ ಸಮುದಾಯಗಳ ಪರಂಪರೆಯ ಗಾಯಗಳಿಗೆ ಮುಲಾಮು ಹಚ್ಚಿದ್ದು ಕ್ರಿಶ್ಚಿಯನ್ ಮಿಷನರಿಗಳು. ಸಿಡಬು ಮತ್ತು ಪ್ಲೇಗ್ ಬಂದು ಹುಳಗಳಂತೆ ಜನರು ಸಾಯುತ್ತಿದ್ದಾಗ, ಘಾಸಿಕೊಂಡ ಅಂತಃಕರಣದ ಮೂಲಕ ಇಂಡಿ ಯಾವ ಹತಭಾಗ್ಯ ಸಮುದಾಯಗಳಿಗೆ ಪ್ರೀತಿಯಿಂದ ಔಷಧಿ ಕೊಟ್ಟು ಸಾಂತ್ವಾನ ನೀಡಿದ್ದು ಕ್ರಿಶ್ಚಿಯನ್ ಪಾದ್ರಿಗಳು.

ಕ್ರೈಸ್ತ ಧರ್ಮ ಸಂಸ್ಥೆಗಳು ದೀನದಲಿತರಿಗಾಗಿ, ಕಷ್ಟ ಜೀವಿಗಳಿಗಾಗಿ ಸಲ್ಲಿಸುತ್ತಿರುವ ಸೇವೆ ಅವರ ಧರ್ಮದ ಅಗತ್ಯ ಕರ್ತವ್ಯವೆಂದು ನಂಬಲು ಯಾಕೆ ಸಾಧ್ಯವಿಲ್ಲ? ಇಂತಹ ಒಂದು ಪ್ರಕ್ರಿಯೆಯಿಂದಾಗಿ ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮದಿಂದ ಆಕರ್ಷಿತನಾದರೆ ಅದು ತಪ್ಪೇ[10] ಎನ್ನುತ್ತಾರೆ.

ಮಾನವೀಯ ಸಮಾಜ ರೂಪುಗೊಳ್ಳಲು ಮತ್ತು ಮಾನವಪ್ರೇಮ ಅನಾವರಣಗೊಳ್ಳಲು ತಾಯ್ತತನದ ಧರ್ಮವೊಂದು ಮನುಷ್ಯನಿಗೆ ಅವಶ್ಯ ಎಂದು ಅಂಬೇಡ್ಕರ್ ನಂಬಿದ್ದರು. ಈ ಕಾರಣಕ್ಕಾಗಿಯೇ ಅವರು ಹಿಂದೂ ಧರ್ಮವನ್ನು ಎದುರು ಹಾಕಿಕೊಂಡು ಜಗಳ ಮಾಡುವ ಯಾವ ಸಂದರ್ಭಗಳನ್ನೂ ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ಹಿಂದೂ ಧರ್ಮದಲ್ಲಿ ಸಾಮಾಜಿಕ ನ್ಯಾಯಕ್ಕೆ ಎಂದೂ ಅವಕಾಶವಿಲ್ಲ ಎಂದು ಅವರು ಬಲವಾಗಿ ನಂಬಿದ್ದರು.

[1] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೧೯೬

[2] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೨೧೦

[3] ಅದೇ ಪು. ೨೦೭

[4] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೧, ಪು – ೭೫

[5] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೧, ಪು – ೧೨೭

[6] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೪೧೯

[7] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೪೧೯

[8] ಅದೇ ಪು – ೫೨೮ – ೫೩೯

[9] ಅದೇ ಪು – ೫೨೯

[10] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೫೯೫