ಹೆಣ್ಣಿನ ಗೋಳ್ಹತ್ತಿ ಬನ್ನಿಯ ಮರಬೆಂದೊ
ಅಲ್ಲಿ
ಸನ್ಯಾಸಿ ಮಠಬಂದೋ! ಹಾರುವರ
ಪಂಚಾಗ್ಹತ್ತಿ
ಉರಿದಾವೋ

ಅವ್ವನ ಹಾಡು ಹೈಟೆಕ್ ಲೋಕದ ಮಾಧ್ಯಮಗಳ ಗುಂಡಿ ಒತ್ತಿದರೆ ಸಾಕು ಮನೆಯೊಳಗೆ ಬರುತ್ತಿರುವ ಕಾಲದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಕೆಂಪು ಪಾವುಡದಲ್ಲಿ ಕಟ್ಟಿ ಪೂಜೆ ಮಾಡುವ ಸನಾತನ ಮನಸ್ಸು ದಲಿತ ಮತ್ತು ಮಹಿಳೆಯರಲ್ಲಿಯೇ ಗಟ್ಟಿಗೊಂಡಿದೆ. ಧರ್ಮದ ಉಳಿಕೆ ಮತ್ತು ಗಳಿಕೆ ಎರಡಕ್ಕೂ ಹೆಣ್ಣು ಮತ್ತು ದಲಿತರೆ ಕಾರಣ. ಇಂತಹ ಕಾರಣಕರ್ತರ ಮೇಲೆಯೇ ನಿರಂತರ ಧರ್ಮದ ವಕ್ತಾರರೆಂದು ಕರೆದುಕೊಂಡವರ ಸವಾರಿ ನಡೆಯುತ್ತಿದೆ. ಸವಾರನ ದಶಬಾಹುಗಳಲ್ಲಿ ಕತ್ತಿ, ಖಡ್ಗ, ಬಾನ, ಬಿರುಸು, ಬಾಂಬುಗಳೆಲ್ಲ ಫಳಫಳ ಹೊಳೆಯುತ್ತಿದ್ದರೆ ಕಾಲುಗಲು ಮಾತ್ರ ಕಮಲದ ಮೇಲಿವೆ, ಹೃದಯದ ಜಾಗದಲ್ಲಿ ನಂಜು ನಾಲಿಗೆ ಹೊರಳಾಡುತ್ತದೆ. ಬೌದ್ಧ ಪೂರ್ಣಿಮೆಯ ಬೆಳ್ಳಿ ಬೆಳಕಿಗೆ ಹೆದರಿದ ಕರಾಳ ರಾತ್ರಿಗಳ ಕೇಸರಿಗಳು ಪೋಕ್ರಾನ್ ಪ್ರಯೋಗ ನಡೆಸಿದರೆ, ಧರ್ಮಯುದ್ಧಕ್ಕೆ ಹೊರಟ ಮತಾಂಧರು ಶಾಂತಿಪ್ರಿಯ ಮೌನಿಬುದ್ಧನ ವಿಗ್ರಹಕ್ಕೆ ಹೆದರಿ ಭಂಜಕತೆಗೆ ತೊಡಗುತ್ತವೆ. ಸತ್ಯವನ್ನು ಅರಗಿಸಿಕೊಳ್ಳಲಾರದ, ವಾಸ್ತವಕ್ಕೆ ಮುಖಾಮುಖಿ ಆಗದ ಹೇಡಿಗಳು ಹಿಡಿದ ಹಾದಿಯ ಕವಲುಗಳಲ್ಲಿ ಬದುಕುವ ಹಂಬಲವುಳ್ಳ ಹೆಣ್ಣು ಗಂಡುಗಳಲ್ಲದ ಹೃದಯದೊಳಗೆ ಸುಳಿಯುವ ಆತ್ಮಗಳು, ಬರೀ ಆತ್ಮಗಳು.

ಸ್ವಾತಂತ್ರ್ಯ ಬಂದು ಅರ್ಧಶತಕವಾಗಿರಬಹುದು, ಹೊಸ ಶತಮಾನದ ಹುಸಿ ಬೆಳಕಿನ ಕಿರಣಗಳ ಕಣ್ಣು ಕುಕ್ಕು ಮುಸುಕಾಗಬಹುದು. ಹೈಟೆಕ್ನಾಲಜಿ ನಮ್ಮ ಕಾಲು ಉಗುರಿನ ರಿಪೇರಿಗೆ ಡಾಲರುಗಳ ಲೆಕ್ಕದಲ್ಲಿ ಮುನ್ನಡೆದಿರಬಹುದು. ಜಗತ್ತೆಲ್ಲ ಒಂದು ಹಳ್ಳಿಯಾಗಿರಬಹುದು. ಭೂಮಿ ಸುತ್ತುತ್ತಿಲ್ಲ ಓಡುತ್ತಿದೆ ಎನ್ನಬಹುದು. ಈ ಬಹುದೆಲ್ಲವುಗಳಿಂದ ಬಹು ಸಂಖ್ಯಾತ ಹೆಣ್ಣು ಗಂಡುಗಳಿಗೆ ಆದ ಪ್ರಯೋಜನಗಳೆಲ್ಲ ಸಾಯದ ಮನುವಿನ ಒಡೆದ ಕನ್ನಡಿಯ ಚೂರಿನಲ್ಲಿ ಪ್ರತಿಫಲನಗೊಂಡ ಚಿತ್ರಗಳೆನ್ನುವುದರ ಬಗ್ಗೆ ಅನುಮಾನಿಸಬೇಕಿಲ್ಲ. ಮನು ಒಬ್ಬ ವ್ಯಕ್ತಿಯಲ್ಲ, ಅದೊಂದು ಜೀವ ವಿರೋಧಿ ವಿಕೃತ ಮನಸ್ಸು, ಈ ಮನಸ್ಸು ಅಳತೆ ಮಾಡಿ ಜಗತ್ತನ್ನಾ ಆಳಿದ್ದಲ್ಲ. ಆಳುವುದಲ್ಲ. ಯಾವುದೇ ಕಾಲ, ಗಡಿ, ಸೀಮೆ ದಂಡೆ, ಬಹುವಿಲ್ಲದ ಬದುಕಿನ ಪಥ ಸಂಚಲನ ಇದರದು. ಹೆಣ್ಣು ಗಂಡು, ಜಾತಿ ಮತಗಳಾಚೆಯೂ ಇದರ ಸಾಮ್ರಾಜ್ಯದ ವಿಸ್ತೀರ್ಣವುಂಟು. ಹೆಣ್ಣು ಹೆಣ್ಣಿನ ಮೂಲಕ ದಮನಕ್ಕೊಳಪಡುವುದು, ಬಲಿಷ್ಠ ಗಂಡಸು ಬಲಹೀನ ಗಂಡನನ್ನು ಕಾಲಿಗೆ ಸರಪಳಿ ಜಡಿದು ದುಡಿಸಿಕೊಳ್ಳುವುದು, ಸರಪಳಿ ಹಾಕಿದ ಕೈಗಳು, ಹಾಕಿಸಿಕೊಂಡ ಕಾಲುಗಳು ಸೇರೆಯೇ ಹೆಣ್ಣು ಹೆಂಗಸೆಂದು ತುಳಿಯುತ್ತಿರುವುದನ್ನು ದರ್ಮಕಾರಣ ಮುಂದು ಮಾಡಿ ಸಮರ್ಥಿಸಿಕೊಳ್ಳುವುದರಲ್ಲಿಯೇ ವೈರಿಯ ಬುದ್ಧಿವಂತಿಕೆ ಮತ್ತು ಅದರ ಅಸ್ತಿತ್ವ ಭದ್ರಗೊಂಡಿರುವುದು. ಮನುಷ್ಯನ ಅಲೆಮಾರಿ ಜೀವನ, ಬೇಟೆಗಾರಿಕೆಯ ಬದುಕನ್ನು ಹೊರತುಪಡಿಸಿದಂತೆ ಉಳಿದೆಲ್ಲ ಕಾಲಘಟ್ಟವೂ ಹೆಣ್ಣನ್ನು ದಮನಕ್ಕೊಳಪಡಿಸುತ್ತಲೇ ಬಂದಿದೆ. ವೇದ ಮತ್ತು ವೇದಪೂರ್ವಕಾಲಗಳಲ್ಲಿ ಹೆಣ್ಣು ವೇದ, ಮಂತ್ರ, ಯಜ್ಞಯಾಗಾದಿಗಳಲ್ಲಿ ಭಾಗವಹಿಸುತ್ತಿದ್ದಳು. ಸಮಾನತೆಯಿತ್ತೆಂದು ಹೊತ್ತಿಗೆಯ ಹಳೆಯ ಕಡತಗಳನ್ನು ತಿರುವಿ ಸಮರ್ಥಿಸಿಕೊಳ್ಳಲು, ಸಮಾಧಾನಗೊಳ್ಳಲು ಪ್ರಯತ್ನಿಸುತ್ತೇವೆ. ಮಗನಿಲ್ಲದ ಮನೆಯಲ್ಲಿ ಮಗಳು ಉತ್ತರಾಧಿಕಾರತ್ವ ಪಡೆಗಿರುವಳೇ ವಿನಹ ಸಮಾನತೆಯ ಕಾರಣಕ್ಕಾಗಿಯಲ್ಲ. ಗಂಡು ಸಂತಾನವಿಲ್ಲದಾಗ ಕುಟುಂಬ, ಜಾತಿ ಮೂಲದ ಲಾಭನಷ್ಟಗಳಿಗೆ ಅನುಗುಣವಾಗಿ ಮಗಳನ್ನು ಸಾಂಪ್ರದಾಯಿಕವಾಗಿ ಮುಂದೊಡ್ಡಲಾಗಿದೆ. ಪುತ್ರನಿಲ್ಲದಾಗ ಪುತ್ರಿ ಯಜ್ಞಕ್ಕೆ ಕೈ ನೀಡಿ ತಂದೆಯ ಹಕ್ಕು ಬಾಧ್ಯತೆಯನ್ನ ಎತ್ತಿ ಹಿಡಿದಿರುವಳೇ ಹೊರತು ಆಕೆಯ ಹಕ್ಕೆಂಬ ಕಾರಣಕ್ಕಾಗಿಯಲ್ಲ. ಪತಿಪತ್ನಿಯರಿಬ್ಬರೂ ಯಜ್ಞದಂತಹ ಧಾರ್ಮಿಕ ಕಾರ್ಯದಲ್ಲಿ ಸಹ ಸಮಾನ ಪಾಲ್ಗೊಳ್ಳುವಿಕೆಯಿತ್ತು. ನಂತರ ವೇದಗಳ ಕಾಲ ಇದನ್ನು ಗಂಡಸೇ ಮಾಡಬೇಕಾದ ಶ್ರೇಷ್ಠ ಕಾರ್ಯವೆಂದು ಕರೆಯುತ್ತ ಹೆಣ್ಣನ್ನು ಪಕ್ಕಕ್ಕೆ ಸರಿಸಿತು.

ವೇದಯುಗದಲ್ಲಿ ಸಪತ್ನಿಕರಾಗಿಯೇ ಯಜ್ಞಮಾಡುವುದು ಹೆಚ್ಚು ಫಲದಾಯಕವೆಂದು ನಂಬಿದ್ದರು. ಇಂತಹ ಸಂದರ್ಭದಲ್ಲಿ ಹೆಂಡತಿ ಆಕಾಲಮರಣಕ್ಕೆ ಒಳಗಾದರೆ ವಿಧುರನು ಬೇರೆಯೇ ಆದ ಅಗ್ನಿ ಸ್ಥಾಪಿಸಿ ಪೂಜಿಸಬೇಕಾಗಿತ್ತು. ದೈನಂದಿನ ಯಜ್ಞಕಾರ್ಯಗಳಿಗಾಗಿ ಹೊಸ ಹೆಂಡತಿಯನ್ನು ಹೊಂದಲೇಬೇಕಾಗಿತ್ತು. ಹೆಂಡತಿ ಸತ್ತಮೇಲೆ ವಿದುರ ಗಂಡಸಿಗೆ ಎರಡು ಹಾದಿಗಳಿದ್ದವು. ಒಂದು ಪ್ರಪಂಪಿಕತೆಯನ್ನು ಬಿಟ್ಟು ಕಾಡಿಗೆ ಹೋಗಿ (ವಾನಪ್ರಸ್ಥಾಶ್ರಮ) ಯೋಗ-ಧ್ಯಾನದ ಮೂಲಕ ಉಳಿದ ಕಾಲಕಳೆಯಬೇಕು. ಇನ್ನೊಂದು ಗೃಹಸ್ಥ ಸ್ಥಿತಿಯಲ್ಲಿಯೇ ಉಳಿಯಲು ಇಚ್ಚಿಸಿದರೆ ಸ್ವಜಾತಿಯ, ಉತ್ತಮ ಕುಲದ ಅನುರೂಪದ ಕನ್ಯೆಯನ್ನು (ಸೂತಕದ ದಿನಗಳು ಕಳೆದ ತಕ್ಷಣವೆ) ಮದುವೆಯಾಗಿ ಅಗ್ನಿಹೋತ್ರವನ್ನು ಮುನ್ನಡೆಸಿಕೊಂಡು ಹೋಗಬೇಕು. ಹೀಗೆ ಹೆಣ್ಣಿಗೆ ಯಜ್ಞಾಯಾಗಾದಿಗಳಲ್ಲಿ ಗಂಡನ ಪಕ್ಕದಲ್ಲಿರುವ, ಆತನ ಕಾರ್ಯಕ್ಕೆ ಸಹಕರಿಸುವ ಅವಕಾಶವಿತ್ತೇ ಹೊರತು ಹೆಣ್ಣೇ ಮುಂದಾಗಿ ನಿಂತು ಸ್ವತಂತ್ರವಾಗಿ ಯಜ್ಞಯಾಗಾದಿಗಳನ್ನು ಮಾಡುವ ಹಕ್ಕು ಇರಲಿಲ್ಲ. ವಿಧುರ ಗಂಡಸು ಸ್ವಜಾತಿಯ ಕನ್ಯೆಯನ್ನು ಮದುವೆಯಾಗುವುದಕ್ಕೆ ಧಾರ್ಮಿಕ ಮತ್ತು ಸಾಮಾಜಿಕ ಒಪ್ಪಿಗೆ ಇತ್ತು. ಆದರೆ ಅದೇ ವಿಧವೆಗೆ ತೋರಿಸಿದ ಹಾದಿಗಳೆಂಥವು ಎಂಬುದನ್ನು ನೋಡಿದರೆ. ಹಿಂದೂ ಧರ್ಮ, ಪುರುಷ ಪ್ರದಾನ ಸಂಸ್ಕೃತಿಯ ಅನುಕೂಲ ಸಿಂಧು ಪ್ರವೃತ್ತಿ ಮತ್ತು ಅದರ ನೀಚತನ ಅರ್ಥವಾಗುತ್ತದೆ. ವಿವಾಹ ಬಂಧನದ ಪವಿತ್ರತೆಯು ಭಾರತದಲ್ಲಿಯೂ ವಿಧವಾ ವಿವಾಹವನ್ನು ಅಸಾಧ್ಯವೆಂದು ಸಾರಿದೆ. ಗಂಡ ಸತ್ತಮೇಲೆ ವಿಧವೆ ಹೆಣ್ಣಿನ ಹಿಂದೂ ಧರ್ಮ ಕಲ್ಪಿಸಿದ ಅವಕಾಶಗಳೆಂದರೆ ಒಂದು, ಸತ್ತ ಗಂಡನ ಜೊತೆಗೆ ಸ್ಮಶಾನಕ್ಕೆ ಹೋಗಿ ಅವನೊಡಗೂಡಿ ಚಿತೆಯೇರಬೇಕು ಮತ್ತು ಸ್ವರ್ಗದಲ್ಲಿಯು ಅವನ ಅನುವರ್ತಿಯಾಗಿರಬೇಕು. ಇನ್ನೊಂದು ಅವಕಾಶವೆಂದರೆ, ಮಕ್ಕಳಿದ್ದರೆ ಅವರ ಪಾಲನೆ ಪೋಷಣೆಯನ್ನು ಜವಾಬ್ದಾರಿಯಿಂದ ಮಾಡುತ್ತ ಕುಲದ ಉದ್ದಾರಕ್ಕಾಗಿ ದೇಹದಂಡಿಸುತ್ತ ಪರಪುರುಷರ ನೆರಳು ಸಹ ಬೀಳದಂತೆ ಕತ್ತಲೆ ಕೋಣೆಯಲ್ಲಿ ಕುಳಿತು ಬತ್ತಿ ಹೊಸೆಯಬೇಕು ಎಂದು ಹೇಳಿದೆ. ಹೀಗೆ ಕುಟುಂಬ ಜೀವನದಲ್ಲಿ ಅಮಂಗಲೆಯೆಂದು ಹೀಯಾಳಿಸಿಕೊಂಡು, ಅರೆಹೊಟ್ಟೆ ಉಂಡು, ಬೆಳಕು ನೋಡದೆ ತಾಯಿ, ತಂಗಿ ಹೆಂಡತಿ, ಏನೋ ಆಗಿರಬೇಕು ಎಂದು ವೇದಗಳು ಹೆಣ್ಣಿಗೆ ಕರ್ತವ್ಯದ ಶರಪಂಜರದೊಳಗಿಟ್ಟಿವೆ. ಆದರೆ ಎಲ್ಲಿಯೂ ಹೆಂಡತಿ ಸತ್ತ ಗಂಡನನ್ನು ವಿಧುರನೆಂದು ಕರೆದು ಬದುಕಿನ ಸುಖಗಳಿಂದ ವಂಚಿಸಿಲ್ಲ ಮತ್ತು ಕುಟುಂಬ ಕರ್ತವ್ಯಗಳನ್ನು, ಹೊಣೆಗಾರಿಕೆಯನ್ನು ಹೊರಲೇಬೇಕು ಎಂದು ಕಡ್ಡಾಯಗೊಳಿಸಿಲ್ಲ. ಹೀಗೆ ಒಮ್ಮುಖ ನೀತಿಯಿಂದ ಹುಟ್ಟಿದ ಕೌಟುಂಬಿಕ ಹೊಣೆಗಾರಿಕೆಗಳು ಹೆಣ್ಣಿನಿಂದ ನಿರಂತರ ತ್ಯಾಗವನ್ನು ಬಯಸುತ್ತಲೇ, ಆಕೆಯನ್ನು ಪರಾಧೀನತ್ಗೆ ನೂಕುತ್ತವೆ ಮತ್ತು ಕೀಳರಿಮೆ ತುಂಬುತ್ತವೆ.

ವೈದಿಕ ಯುಗದಲ್ಲಿ ಹೆಣ್ಣು ಕುಟುಂಬದ ಆಸ್ತಿಯ ಭಾಗವಾಗಿರುವುದರಿಂದಲೇ ಆಕೆಯನ್ನು ಕುಟುಂಬದ ಯಜಮಾನ ಮಾರುವ, ಕೊಳ್ಳುವ ಹಾಗೂ ಒತ್ತೆ ಇಡುವ ಹಕ್ಕುಗಳನ್ನೆಲ್ಲಾ ಧರ್ಮ ಸಮ್ಮತವಾಗಿಯೇ ಪಡೆದುಕೊಂಡಿದ್ದ ಮತ್ತು ಇದು ಯಜಮಾನ ಸಂಸ್ಕೃತಿಯ ಮಲ್ಯವೆಂದೇ ಭಾವಿಸಿದ್ದ. ಹೀಗೆ ಹೆಣ್ಣುಗಳನ್ನು ಆಕಳು, ಪುಸ್ತಕ, ನೆಲ, ಹಣದ ಜೊತೆಗೆ ಇಟ್ಟು ನೋಡಿರುವುದರಿಂದಲೇ ಸಾಮಾಂತಶಾಹಿ ಆಕ್ರಮಣದ ಸಂದರ್ಭದಲ್ಲಿ ಇವುಗಳನ್ನು ಗಂಡಸಾದವನು ರಕ್ಷಿಸಬೇಕು. ಹೀಗೆ ರಕ್ಷಿಸುವ ಗಂಡಸಿನ ಗುಣ, ಪರಾಕ್ರಮ, ಶೌರ್ಯ, ಸಾಹಸಗಳು ಮೌಲ್ಯಧರ್ಮವೆಂದು ಒತ್ತಿ ಒತ್ತಿ ಪುರೋಹಿತವರ್ಗ ಶೂದ್ರವರ್ಗಕ್ಕೆ ಹೇಳುತ್ತಾ ಬಂದಿದೆ.

ವೈದಿಕ ಧರ್ಮಧ ಈ ಪಕ್ಷಪಾತ ನಿಲುವನ್ನು, ಧೋರಣೆಯನ್ನು ಪ್ರತಿಭಟಿಸುತ್ತಾ ಬಂದ ಬೌದ್ಧ ಧರ್ಮ ಹೆಣ್ಣಿನ ವಿಷಯದಲ್ಲಿ ಮೃದುವಾಗಿತ್ತು. ಪ್ರಾರಂಭದ ಹಂತದಲ್ಲಿ ಬುದ್ಧನು ಸಹ ಹೆಣ್ಣಿಗೆ ‘ಸಂಘ’ ಸೇರುವ ಅವಕಾಶವನ್ನು ಮುಕ್ತವಾಗಿ ನೀಡಿಲ್ಲ. ತಾಯಿಯ ಬಲವಂತಕ್ಕೆ ಕಟ್ಟುಬಿದ್ದ ಗೌತಮ ಬುದ್ಧನು ಮಹಿಳೆಯರಿಗೆ ಅವರದೇ ಸಂಘ ಕಟ್ಟಿಕೊಳ್ಳಲು ಭಿಕ್ಷುಣಿಯಾಗಲು ಒಪ್ಪಿಗೆ ನೀಡಿರುವನು. ಹೀಗೆ ಸಂಘ ಸೇರುವ ಮಹಿಳೆಯರಿಗೆ ಎಂಟು ಕರಾರುಗಲನ್ನು ಹಾಕಿರುವನು. ಗೌತಮ ಬುದ್ಧನಿಗೂ ಹೆಣ್ಣಿನ ವಿಷಯದಲ್ಲಿ ಭಯ ಕಾಡಿದೆ. ಅದಕ್ಕೆಂದೇ ಹೇಳುತ್ತಾನೆ,

ಭಿಕ್ಷುಗಳು ಇದ್ದ ಕಡೆಗೆ ಭಿಕ್ಷುಣಿಯರು ಮಳೆಗಾಲದಲ್ಲಿ ಇರಕೂಡದಂದು ಕಟ್ಟಪ್ಪಣೆ ಮಾಡುತ್ತಾನೆ. ಹಿಂದೂ ಧರ್ಮದ ಬೂರ್ಜ್ವಾ ನೈತಿಕ ನ್ಯಾಯ ಬುದ್ಧನಂಥವರ ಮನಸ್ಸಿನಲ್ಲಿಯೂ ಕೆಲಸಮಾಡಿದೆ. ಉಚ್ಚಮಟ್ಟದ ದೀಕ್ಷೆಯಲ್ಲಿ ಬಹು ಹಿಂದೆಯೇ ದೀಕ್ಷೆ ಪಡೆದ ಭಿಕ್ಷುಣಿಯಾದರೂ ಅದೇ ಆಗ ದೀಕ್ ಪಡೆದ ಬಾಲಕ ಭಿಕ್ಷುವೊಬ್ಬ ಎದುರು ಬಂದಾಗ ಎದ್ದು ನಿಂತು ನಮಸ್ಕರಿಸಬೇಕು.

ಎಂದು ಕಟ್ಟುಪಾಡುಗಳನ್ನು ಹಾಕುತ್ತಾನೆ. ಇದು ಏನನ್ನು ತೋರುತ್ತದೆ ಎಂದರೆ ಹೆಣ್ಣಿನ ಬುದ್ಧಿ, ವಯಸ್ಸು, ಹಿರಿತನ, ಅನುಭವದ ಬಲಗಳಿಗಿಂತಲೂ ಗಂಡಾಗಿ ಹುಟ್ಟುವುದೊಂದೇ ಶ್ರೇಷ್ಠವೆಂಬ ವೈದಿಕ ಹಿತಾಸಕ್ತಿ ಬುದ್ಧನಲ್ಲಿಯೂ ಇತ್ತು. ಈ ನೆಲದಲ್ಲಿ ಗಂಡಾಗಿ ಹುಟ್ಟುವುದೊಂದೇ ಶ್ರೇಷ್ಠವೆಂಬ ವೈದಿಕ ಹಿತಾಸಕ್ತಿ ಬುದ್ಧನಲ್ಲಿಯು ಇತ್ತು. ಈ ನೆಲದಲ್ಲಿ ಗಂಡಾಗಿ ಹುಟ್ಟುವುದೊಂದೇ ಸಾಮಾನ್ಯವಾಗಿ ಶ್ರೇಷ್ಠವೆಂದು ಕರೆಯಿಸಿಕೊಂಡಿದ್ದರೂ ಒಳಗಡೆಗೆ ಜಾತಿ ಶ್ರೇಣಿಕರಣ ಶ್ರೇಷ್ಠ ಕನಿಷ್ಠತೆಗಲನ್ನು ಮಾಡಿಟ್ಟಿವೆ. ಹೊರಗಡೆಗೆ ಮಾತ್ರ ಗಂಡಸಾಗಿ ಹುಟ್ಟುವುದೇ ಶ್ರೇಷ್ಠವೆದು ಸಾರುತ್ತ ಬರಲಾಗಿದೆ. ಇಂತಹ ಸಮಾಜದಲ್ಲಿಯೇ ಬುದ್ಧನಂತವರು ಬೆಳೆದಿರುವರು. ಈ ಕಾರಣಕ್ಕಾಗಿ ಅವನಲ್ಲಿಯೂ ಪುರುಷ ಪ್ರಧಾನ ಸಂಸ್ಕೃತಿ ‘ಲಿಂಗನೆಲೆ’ಯ ಜೀವವಿರೋಧಿ ವಾಸನೆ ಎಲ್ಲೋ ಒಂದು ಕಡೆ ಹುದುಗಿಕೊಂಡು ಹೆಚ್ಚಿನ ವಿಷಯದಲ್ಲಿ ಒಂದಿಷ್ಟು ಭಯಗ್ರಸ್ಥನನ್ನಾಗಿಸಿದೆ. ಬುದ್ಧನ ಮೃದು ಧೋರಣೆಯ ಕಾರಣದಿಂದ ಅವನೆಲ್ಲಾ ಕರಾರುಗಳಿಗೆ ಒಪ್ಪಿ ಸಂಘ ಸೇರಿ ಭಿಕ್ಷುಣಿಯಾದವರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ‘ಬುದ್ಧ ಕುಂಡಲ’ ಕೇಸಾಳಂತಹವನು ಹೆಣ್ಣನ ಶಕ್ತಿಯ ಬಗ್ಗೆ ಮಾತನಾಡಿದ್ದಾಳೆ. ಇಂತಹ ಮಾತುಗಳಿಂದ ಪುರುಷ ಪ್ರಧಾನ ಸಂಸ್ಕೃತಿಯ ಗರ್ವ ಸೋರಿಹೋಗಬೇಕಾಗಿತ್ತು. ಆದರೆ ಕರಗದಿರುವುದೇ, ಸೋರದಿರುವುದೇ ಅದರ ಹುಟ್ಟುಗಣವಾಗಿರುವುದರಿಂದ ಇಂದಿಗೂ ಹಾಗೇ ಉಳಿದುಕೊಂಡು ಬಂದಿದೆ. ಹೆಣ್ಣಿನ ಶಕ್ತಿಯುಕ್ತಿಯ ಬಗ್ಗೆ ಕೇಸಾ ಹೀಗೆ ಹೇಳುತ್ತಾಳಘೆ.

ಪುರುಷನೆ ಜಾಣನೇನಲ್ಲ ಎಲ್ಲ ಕಾಲದೊಳಗೆ
ಹೆಣ್ಣು
ಜಾಣೆಯಾಗಿರುತ್ತಾಳೆತುಸುವೇಗದೊಳಗೆ
ಗಂಡೇ
ವಿವೆಕಯೇನಲ್ಲ, ಎಲ್ಲ ಕಾಲಗಳಲ್ಲಿ
ಹೆಣ್ಣು
ಹಾಗನಿಸುವಳು ಕ್ಷಣ ಕಾಲ ಚಿಂತಿಸಿದಲ್ಲಿ

(ಥೇರಿಗಾಥಾ – ಡಾ. ಮಧು ವೆಂಕಾರೆಡ್ಡಿ) ಹೆಣ್ಣಿನ ಬುದ್ಧಿ ವಿಕಾಸ, ದೈಹಿಕ ಬಲವರ್ಧನೆಯನ್ನು ಈ ಸಮಾಜ ಎಂದೂ ಬಯಸಿಲ್ಲ. ಬುದ್ಧಿ ಬಲಿತರೆ ಪ್ರಶ್ನಿಸಬಲ್ಲಳೆಂದು ಅಕ್ಷರ ಕಲಿಕೆಯಿಂದಲೂ ದೂರವಿಟ್ಟಿತು. ದೇಹ ಬಲಿತರೆ ಪ್ರತಿಭಟಿಸಬಲ್ಲಳೆಂಬ ಭಯದಿಂದ ವ್ರತಾಚಾರಗಳನ್ನು ಹೇಳಿ ಉಪವಾಸಕ್ಕೆ ತೊಡಗಿಸಿತು.

ಭಾರತೀಯ ಸಂದರ್ಭದಲ್ಲಿ ಧರ್ಮವೇ ಪ್ರಧಾನವಾದ್ದರಿಂದ ಎಲ್ಲರನ್ನು, ಎಲ್ಲವನ್ನೂ ಅದರ ಮೂಲಕವೇ ಅಳೆಯುತ್ತೇವೆ. ಹೀಗಾಗಿ ಇಲ್ಲಿ ಒಂದು ಧರ್ಮ ಇನ್ನೊಂದು ಧರ್ಮವನ್ನು ವಿರೋಧಿಸಿ ಜನ ಮನ್ನಣೆಯನ್ನು ಪಡೆಯುವ ಸಲುವಾಗಿ ಹುಡುಕಿಕೊಂಡ ಹಾದಿ ಸ್ತ್ರೀಯರನ್ನು, ದಮನಕ್ಕೊಳಗಾದವರನ್ನು ಆಪ್ತವಾಗಿ ಎತ್ತಿಕೊಳ್ಳುವುದು. ಇದೇ ತಂತ್ರಗಾರಿಕೆಯನ್ನಿಟ್ಟುಕೊಂಡೇ ಬೌದ್ಧ ಧರ್ಮವೂ ತನ್ನ ಕಾಲದಲ್ಲಿ ಮಹಿಳೆಯರ ಬಗ್ಗೆ ಮೃದು ಧೋರಣೆ ಹೊಂದಿರಬೇಕು.

ಬೌದ್ಧ ಧರ್ಮದ ನಂತರ ಬಂದ ಜೈನ ಧರ್ಮವೂ ಹೆಣ್ಣಿನ ಬಗ್ಗೆ ಅಂತಹ ಮಹತ್ತರವಾದದ್ದೇನನ್ನು ಮಾಡಲಿಲ್ಲ. ಬೌದ್ಧಧರ್ಮಧ ಹಾಗೇ ಜೈನ ಧರ್ಮಧಲ್ಲಿಯೂ ಧರ್ಮ ಪ್ರಸಾರ ಕಾರ್ಯದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಿತು. ಕಂತಿಯರಾಗಿ ಧರ್ಮ ಪ್ರಸಾರ ಮಾಡುವ ಅವಕಾಶವೇನೋ ಹೆಣ್ಣಿಗೆ ಸಿಕ್ಕಿತ್ತು ನಿಜ. ಆದರೆ ‘ಮೋಕ್ಷ’ ಪಡೆಯಲು ‘ಜೀವ’ ಗಂಡು ಶರೀರ ಪಡೆಯಬೇಕೆಂದು ಒತ್ತಿ ಒತ್ತಿ ಹೇಳುವುದರ ಮೂಲಕ ಹೆಣ್ಣು ದೇಹವನ್ನು ನಿರಾಕರಿಸಿತು. ಇಂತಹ ತಾತ್ವಿಕ ಲಿಂಗವಿರೋಧಿ ಸಂಗತಿಗಳು ಧರ್ಮದೊಳಗಿದ್ದುಕೊಂಡು ಸ್ತ್ರೀ ಬಿಡುಗಡೆಯಗೆ ಮಾತನಾಡಿದವು ಎಂಬುದೇ ದುರಂತ. ಎಲ್ಲ ಧರ್ಮಗಳಿಗಿಂತಲೂ ದೇಶಿ ನೆಲೆಯ ವೀರಶೈವ ಧರ್ಮ ಹೆಣ್ಣಿನ ಬಿಡುಗಡೆಯ ಬಗ್ಗೆ ಹೆಣ್ಣು ದೇಹದ ಬಗ್ಗೆ ಅತ್ಯಂತ ಪ್ರಗತಿಪರವಾಗಿಯೇ ಮಾತನಾಡಿತೆಂದರೂ ಅದು ಶರಣತಿ. ಲಿಂಗ ಪತಿ ಎಂಬುದರ ಮಲೂಕ ವೈದಿಕ ಧರ್ಮದ ಗಂಡಸಿನ ಶ್ರೇಷ್ಠತೆ ಅಹಮ್ಮಿಕೆಯನ್ನು, ಸತಿಯ ವಿನಯ, ವಿಧೇಯತೆಯನ್ನು ಅಂತರ್ಗತ ಮಾಡಿಕೊಂಡೇ ಸಾಮಾಜಿಕ ಬದಲಾವಣೆಗೆ ತೊಡಗಿದ್ದನ್ನು ನೋಡಬಹುದು.

ವೀರಶೈವ ಜೈನಧರ್ಮಗಳಿಗಿಂತಲೂ ಬೌದ್ಧ ಧರ್ಮ ಹೆಚ್ಚು ಅಪಾಯಕಾರಿಯಾಗಿ ಹಿಂದೂ ಧರ್ಮಕ್ಕೆ ಕಾಣಿಸಿಕೊಂಡಿದೆ. ಬೌದ್ಧಧರ್ಮ ಮಹಿಳೆಯರಿಗೆ ಮೊಟ್ಟಮೊದಲಿಗೆ ಸಾರ್ವಜನಿಕ ಬದುಕಿನಲ್ಲಿ ಬೆರೆತುಕೊಳ್ಳಲು ಅವಕಾಶ ಕಲ್ಪಿಸಿದ್ದೇ ಹಿಂದೂ ಧರ್ಮಕ್ಕೆ ನುಂಗಲಾರದ ತುತ್ತಾಗಿದೆ. ಸಿದ್ಧಾರ್ಥನಂಥ ರಾಜಕುಮಾರ ಬುದ್ಧನಾಗುವಲ್ಲಿ ಹೆಣ್ಣಿನ ಧ್ವನಿಯೇ ಕಾರಣವೆಂಬುದನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಾ ಬಂದ ಹಾಗಿದೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಸಾಂದಭಿರ್ಕ ಕಾರಣ, ಘಟನೆಗಳನ್ನು ಕತೆಮಾಡಿ ಹೇಳುವುದರಲ್ಲಿ ವೈದಿಕರ ಕುಹಕತನ ಅಡಿಗಿದೆ ಎಂಬುದೇ ನಮಗರ್ಥವಾಗುತ್ತಿಲ್ಲ. ಹೆಣ್ಣಿನ ವಿಷಯದಲ್ಲಂತೂ ಇದು ಇನ್ನು ನಿಗೂಢವಾಗುತ್ತದೆ. ಬುದ್ಧನಾಗಲು, ಜ್ಞಾನಿಯಾಗಲು ಸಿದ್ಧಾರ್ಥನಿಗೆ ಹೆಣ್ಮಿನ ಹಾಡೊಂದು ಕಾರಣವೆಂಬುದನ್ನು ನಾವ್ಯಾರು ಇಲ್ಲಿಯವರೆಗೂ ಹೇಳಿಲ್ಲ, ಕೇಳಿಲ್ಲ. ಯಾಕೆಂದರೆ ಹೆಣ್ಣಿನಿಂದ ಬುದ್ಧನಾದನೆಂದರೆ ಸಮಸ್ತ ಗಂಡುಕುಲಕ್ಕೆ ಅಪಮಾನ. ಅದಕ್ಕಾಗಿ ನಾವು ಬರೀ ರೋಗಿ, ಮುಪ್ಪು, ಸಾವು, ಬಡತನವನ್ನು ಮುಂದೆ ಮಾಡಿ ಬುದ್ಧನ ಜ್ಞಾನೋದಯವನ್ನು ಅಳೆದಿರುವೆವು. ಕತ್ತಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ರಾಜಕುಮಾರನನ್ನು ಕೈ ಹಿಡಿದು ಬೆಳಕಿನೆಡೆಗೆ ತಂದು ಬುದ್ಧನಾಗಿಸಿದ್ದು ಹೆಣ್ಣಿನ ಅಂತರಾಳದ ಹಾಡಿನ ಮರ್ಮವೆಂಬುದನ್ನು ಅರಿಯಬೇಕಾಗಿದೆ. ಬದುಕಿನ ಸತ್ಯ ಎಂತೆಂತಹ ರೂಪದಲ್ಲಿ, ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ.

ಸಿದ್ಧಾರ್ಥ ಬುದ್ಧನಾಗಲು ಪ್ರಬಲ ಕಾರಣವೊಂದು ಹೀಗಿದೆ.

ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನಸ್ಥನಾದ ಸಿದ್ದಾರ್ಥನಿಗೆ eಜಾನದ ಹೊಳಹು ಸಿಕ್ಕಿದ್ದೇ ಹೆಣ್ಣಿನ ಹಾಡಿನ ಎಳೆಯೊಂದರಲ್ಲಿ ದುಃಖಮೂಲದ ಬದುಕಿಗೆ ಜಿಗುಪ್ಸೆಗೊಂಡು, ಸುಖದ ಶಂಬ್ರಮದ ಬದುಕಿನಿಂದ ಎದ್ದು ಹೋದವನನ್ನು ಕೈ ಹಿಡಿದು ಕರೆದು ಬದುಕಿನ ಜಂಜಡಗಳನ್ನು ಅರುಹಿದ್ದು ಹೆಣ್ಣೊಬ್ಬಳ ಅಂತರಾಳದ ರಾಗಪೂರಿತ ಹಾಡಿನ ಹಂಬಲ ಬರೀ ಹಂಬಲ. ವೈರಾಗ್ಯಕ್ಕೆ ಕಾರಣವಾದ ಭೋಗಬದುಕಿನ ಬೋಗುಣೆಯನ್ನು ಬೋರಲು ಹಾಕಿ ದಿನಕ್ಕೊಂದು ಅಕ್ಕಿ ಕಾಳಿನ ಮೇಲೆ ಬದುಕಿದ್ದ, ಜೀವಿಸ್ದದ ರಾಜಕುಮಾರ ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತನಾಗಿ ಹೋಗಿದ್ದ, ಆದರೂ ಸತ್ಯ ಸಿಕ್ಕಿರುವುದಿಲ್ಲ.

ಎಂದು. ಒಂದು ದಿನ ಮುಂಜಾವಿನ ಮುಂಗೋಳಯ ಧ್ವನಿ ಸೂರ್ಯನಿಗೆ ಶುಭಕೋರಿತ್ತು. ಜಗತ್ತೆಲ್ಲ ಎಚ್ಚರಗೊಂಡಾಗ ಸಿದ್ಧಾರ್ತನಿಗೆ ಅರೆಬರೆ ನಿದ್ರಾಸ್ಥಿತಿ. ಮುಂಜಾನೆಯ ತಂಗಾಳಿಯಲ್ಲಿ ತೇಲಿಬಂದ ಹೆಣ್ಣಿನ ಹಾಡಿನ ಧ್ವನಿ ಅವನನ್ನು ಬಡಿದೆಬ್ಬಿಸುತ್ತದೆ. ಯುವತಿಯರ ಗುಂಪೊಂದು ಆ ಹಾದಿಗುಂಟ ಸಾಗುತ್ತಿರುತ್ತದೆ. ಗುಂಪಿನಲ್ಲಿದ್ದಾಕೆ ಒಬ್ಬಳು ಮಧುರವಾಗಿ ಹಾಡುತ್ತಿರುತ್ತಾಳೆ. ಹಾಡಿನ ಅರ್ಥವೇನೆಂದರೆ

ನಲ್ಲನ ಒಲವನ್ನು ಸಂಪಾದಿಸುವುದಕ್ಕೆ ತಾನು ತಂತಿಯನ್ನು ಸರಿಯಾಗಿ ಶೃತಿ ಮಾಡಿ ಹಾಡಬೇಕು. ಹೆಚ್ಚು ಬಿಗಿದರೆ ತಂತಿ ಹರಿಯುತ್ತದೆ. ಬಿಗಿಯದೆ ಇದ್ದರೆ ಸಂಗೀತ ಹುಟ್ಟುವುದಿಲ್ಲ.

ಎಂದು. ಹಾಡು ಕೇಳಿದ ಸಿದ್ಧಾರ್ತನ ಕೃಶಗೊಂಡ ದೇಹದಲ್ಲಿ ಸಾವಿರ ಆವೆಬಲ ತುಂಬಿದಂತಾಗಿ ದಿಗ್ಗನೆ ಎದ್ದು ಕುಳಿತುಕೊಳ್ಳುವನು. ನಲ್ಲನೆಂಬುದು ಇಲ್ಲಿ ಗಂಡಲ್ಲ, ಬದುಕು. ಬದುಕನ್ನು ಹದ ಮಾಡಿಕೊಂಡು ಸಹ್ಯಮಾಡಿಕೊಳ್ಳುವ ಶಕ್ತಿ ಮನುಷ್ಯನಲ್ಲಿಯೇ ಇರುವುದು. ಹುಟ್ಟು, ಸಾವು, ಬಡತನ, ರೋಗರುಜಿನ, ಮುಪ್ಪುಗಳೆಲ್ಲ ಬದುಕಿನ ಮೂಲದಲ್ಲಿಯೇ ಇರುವಂಥವುಗಳು. ಅವುಗಳನ್ನು ಸ್ವೀಕರಿಸುವ ಮನಸ್ಸು, ದೇಹ, ಬುದ್ಧಿ, ಭಾವಗಳೆಲ್ಲ ವಾಸ್ತವದ ಮೇಲೆ ಹದಗೊಂಡಿದ್ದರೆ ಎಲ್ಲವೂ ಸಹ್ಯವಾಗಬಲ್ಲವು. ಮನುಷ್ಯ ರೂಪಿತ ಬದುಕನ್ನು ಮನುಷ್ಯನೇ ಹದಗೊಳಿಸಿಕೊಳ್ಳಬೇಕು ಎಂಬ ಜೀವನದ ಮರ್ಮ ಅರ್ಥವಾಗುತ್ತದೆ. ಈ ಅರ್ಥ ಮೂಲದಿಂದಲೇ ಬುದ್ಧ ಧರ್ಮಬೋಧನೆಗೆ ತೊಡಗುತ್ತಾನೆ. ಕಠಿಣದೇಹ ದಂಡನೆಯ ನಂತರವೂ ಸಿದ್ಧಾರ್ತ ಸುಜಾತ ಎಂಬ ಹೆಣ್ಣೊಬ್ಬಳ ಕೈಯಿಂದ ಅನ್ನ ಸ್ವೀಕರಿಸಿ ತಾನು ತಿರಸ್ಕರಿಸಿ ಹೋದ ಬದುಕನ್ನು ಹದಮಾಡಿ ಹಾಡಲು ಮೌನಿಯಾಗಿ ನಡೆದು ಬರುತ್ತಾನೆ ಜಗತ್ತಿನೊಳಗೆ.

ಹೆಣ್ಣಿನ ಕೈಯಲ್ಲಿ ಬದುಕಿನ ವೀಣೆ ನಿಸರ್ಗ ಸಹಜವಾಗಿಯೇ ಸಿಕ್ಕಿದೆ. ಅದನ್ನು ಹದಗೊಳಿಸಲು ಆಕೆಯ ವಿವೇಚನೆಗೆ ಬಿಟ್ಟಿಲ್ಲ. ಗಂಡಸು ಹೆಣ್ಣಿನ ಬೆನ್ನಲ್ಲಿ ಕತ್ತಿಯಾಗಿ ಆಕೆಯಿಂದ ಹಾಡಿವ, ಶೃತಿಗೊಳಿಸುವ ವಕ್ತಾರನಾಗಿರುವುದರಿಂದ ಬದುಕಿನ ವೀಣೆಯ ತಂತಿ ಒಂದೊಂದು ಸಲ ಹರಿಯುವ, ಸಡಿಲಗೊಳ್ಳುವ ಅಪಸ್ವರಗೊಳ್ಳುವುದು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿದೆ. ಬೌದ್ಧಯುಗದಲ್ಲಿ ಹೆಣ್ಣಿಗೆ ಸಿಕ್ಕ ಸ್ಥಾನಮಾನಗಳ ಬಗ್ಗೆ ಸ್ಮೃತಿಗಳ ಕಾಲಕ್ಕೆ ಬಂದಾಗ ವೈದಿಕರಿಗೆ ಭಯ ಕಾಡಿದೆ. ಬೌದ್ಧ ಧರ್ಮದ ಕೃಶಗೊಂಡ ದೇಹ ಮನಸ್ಸಿನೊಳಗೆ ವೈದಿಕ ಹಿತಾಸಕ್ತಿಗಳು ಮೆಲ್ಲನೆ ನುಸುಳಿ ಆಶ್ರಯ ಪಡೆಯುತ್ತವೆ. ಅದರ ಕತ್ತು ಹಿಚುಕಿ ಮತ್ತೆ ಅಂತಿಮವಾಗಿ ಇದಕ್ಕೆ ಮೊಳೆ ಜಡಿದವನು ‘ಮನು’ ಎಂಬ ಜೀವ ವಿರೋಧಿ ವಿಕೃತ ಮನಸ್ಸಿನ ವ್ಯಕ್ತಿಯೆನ್ನಬಹುದು. ಬೌದ್ಧಯುಗ್ದಲ್ಲಿ ಹೆಣ್ಣು ಪಡೆದಿದ್ದ ಸ್ವಾತಂತ್ರ್ಯದ ಬಲದಿಂದ ವರ್ಣಸಂಕರವಾಗುವ ಅವಕಾಶಗ್‌ದವು. ಮೇಲು ಜಾತಿಯ ಹೆಣ್ಣುಗಳು ತಮಗೆ ದೊರೆತ ಸ್ವಾತಂತ್ರ್ಯದ ಬಲದಿಂದ ಶ್‌ರನನ್ನು ಮದುವೆಯಾಗಿ ವರ್ಣ ವ್ಯವಸ್ಥೆಯನ್ನು ನಾಶಪಡಿಸಬಲ್ಲಳೆಂಬುದನ್ನು ಮನು ಅರ್ಥಮಾಡಿಕೊಂಡಿದ್ದ. ವರ್ಣಮೂಲದಲ್ಲಿಯೇ ತನ್ನ ಉಳಿಕೆಯನ್ನು ಕಂಡುಕೊಂಡಿದ್ದವನು ಅದನ್ನು ಗಟ್ಟಿಗೊಳಿಸಲು ಬೇಕಾದ ನೀತಿಸಂಹಿತೆಯನ್ನು ಬರೆದು ಅದಕ್ಕೊಂದು ಧಾರ್ಮಿಕ ಮತ್ತು ರಾಜಕೀಯ ಮನ್ನಣೆಯನ್ನು ಪಡೆಯುತ್ತಲೇ ಸಾಮಾಜಿಕ ಶಾಸನವಾಗಿಸಿದ. ಮನುವಿನ ದೃಷ್ಟಿಯಲ್ಲಿ ಹೆಣ್ಣು ಮತ್ತು ಶೂದ್ರ (ಶ್ರಮ ಸಂಸ್ಕೃತಿಯ ನೇತಾರರು) ಅತ್ಯಂತ ಅಪಾಯಕಾರಿಗಳಾಗಿ ಮತ್ತು ಬಲಿಷ್ಠರಾಗಿ ಕಾಣಿಸಿದ್ದಾರೆ. ಈ ಶಕ್ತಿಗಳಿಗೆ ಹೆದರಿರುವ ಕಾರಣವೇ ಇವರ ಸ್ವಾತಂತ್ರ್ಯವನ್ನು ಅಪಹರಿಸುವುದೇ ತನ್ನ ಯೋಜಿತ ಕಾರ್ಯದ ಬಹುಮುಖ್ಯ ಅಜೆಂಡಾವಾಗಿಸಿರುವನು.

ಹೆಣ್ಣಿನ ಮತ್ತು ಶೂತ್ರದ ಆಸ್ತಿಯ ಹಕ್ಕನ್ನು ಕಿತ್ತುಕೊಳ್ಳುವುದರ ಮೂಲಕ ಅವರನ್ನು ಪರಾಧೀನಗೊಳಿಸಿದ. ಆಸ್ತಿ, ಹಣ, ಮನುಷ್ಯನ ಬಾಯಿ ತೆರೆಯಿಸುವ ಬೀಗದ ಕೈಗಳೆಂದು ಗೊತ್ತು. ಅದಕ್ಕಾಗಿಯೇ ಮೊಟ್ಟ ಮೊದಲಿಗೆ ಅದನ್ನು ಕಿತ್ತುಕೊಳ್ಳುವುದರ ಮೂಲಕ ಬಲಿಷ್ಠ ಜನಸಮುದಾಯವನ್ನು ಬಲಹೀನಗೊಳಿಸಿದ. ಹೆಂಡತಿ, ಮಗ, ಆಳು ಇವರಿಗೆ ಆಸ್ತಿ ಇರಬಾರದು ಎಂದು ಹೇಳುವುದರ ಮೂಲಕವೇ ಕುಟುದೊಳಗೆ ಮತ್ತು ಸಮಾಜದೊಳಗೆ ಏಕಕಾಲದಲ್ಲಿಯೇ ಯಜಮಾನ ಸಂಸ್ಕೃತಿಯ ಹಿಡಿತಕ್ಕನುಗುಣವಾಗಿ ನೀತಿ ಸಂಹಿತೆ ರೂಪಿಸುತ್ತಾನೆ. ಹೆಣ್ಣಿನ ಬಗ್ಗೆಯಂತೂ ಎಂತಹ ಭಯವಿತ್ತೆಂದರೆ ಹೆಮ್ಣು ಮಗು, ಹೆಂಡತಿ, ಸಹೋದರಿ, ತಾಯಿಯಾದಿಯಾಗಿ ಗಂಡಸು ಎನಿಸಿಕೊಳ್ಳುವ ಪ್ರಾಣಿಯ ಜೊತೆಯಲ್ಲಿ ಏಕಾಂತನಾಗಿರಕೂಡದೆಂದು ವಾರ್ನಿಂಗ್ ಮಾಡುತ್ತಾನೆ. ಹೆಣ್ಣು ಕೆಡಿಸುವುದಕ್ಕಾಗಿಯೇ ಹುಟ್ಟಿದ ಜೀವವೆನ್ನುತ್ತಾನೆ. ಚಂಚಲೆಯೇ ಹೆಣ್ಣೆಂದು ಕರೆದ ಮನು ಗಂಡಸು ದೌರ್ಬಲ್ಯಗಳ ಮೂಟೆ ಎನ್ನಲ್ಲಿಲ. ಗಂಡು ಸ್ಥಿತಪ್ರಜ್ಞನಾಗಿಯೇ ಇರಬಲ್ಲ. ಆದರೆ ಹೆಣ್ಣು ಅವನಲ್ಲಿ ಲಲಾಸೆ ಮೂಡಿಸಬಲ್ಲವಳಾಗಿರುವುದರಿಂದ ಅವಳು ಯಾವುದೇ ರೂಪ, ವಯಸ್ಸಿನಲ್ಲಿದ್ದರೂ,ಗಂಡಿನ ಜೊತೆ ಏಕಾಂತವಾಗಿರಕೂಡದೆಂದು ಕಟ್ಟೆಚ್ಚರಿಕೆ ನೀಡುತ್ತಾನೆ.

ಬುದ್ಧನ ವಿಚಾರಗಳ ಬಗ್ಗೆ ಸಹಮತವಿಲ್ಲದ ಅವನ ಅನುಯಾಯಿಗಳು ಹೆಣ್ಣಿನ ವಿಷಯದಲ್ಲಿ ಜಗ್ಗಾಡಿರುವರು, ಎಷ್ಟೋ ಸಲ ಬುದ್ಧ ಮತ್ತು ಅವನ ಅನುಯಾಯಿಗಳ ಜೊತೆಯಲ್ಲಿ ಹಿಂದೂ ವಕ್ತಾರರೂ ಚರ್ಚೆ ನಡೆಸಿರುವರು. ಇಂತಹ ಚರ್ಚೆಯ ಸಂದರ್ಭದಲ್ಲಿ ಸ್ತ್ರೀ ಸಂಬಂಧಿ ಸಂಗತಿಗಳು ಬಂದಿವೆ. ಕುಟುಂಬದಾಚೆಗೆ ಮಹಿಳೆಯನ್ನಿಟ್ಟು ನೋಡುವ ಪ್ರಯತ್ನವನ್ನು ಬುದ್ಧನಿಗೆ ಹೀಗೆ ಹೇಳಿದನಂತೆ. ಉಚ್ಚಕುಲದಲ್ಲಿ ಜನಿಸಿದ ಸ್ತ್ರೀಯೇ ಸರ್ವಶ್ರೇಷ್ಠ ಸದ್ಗ್ರುಹಿಣಿಯಾಗಬಲ್ಲಳು.

ಎಂದು ಅದಕ್ಕೆ ಬುದ್ಧ ನೀಡಿದ ಉತ್ತರ

ಸರ್ವೋತ್ಕೃಷ್ಟ ಸಂಸಾರ ಮಾಡುವ ಸ್ತ್ರೀಯೇಸವೊತಮ ಗೃಹಿಣಿಯಾಗಬಲ್ಲಳು. ಪತಿಯು ಪತ್ನಿಯನ್ನು ಸನ್ಮಾನಿಸಬೇಕು. ಗೌರವಿಸಬೇಕು. ಅವಳ ಜೊತೆ ವಿನಯದಿಂದ ವರ್ತಿಸಬೇಕು. ಅವಳಿಗೆ ಗಂಡನಾದವನು ಆಭರಣವನ್ನು ಕೊಡಿಸಬೇಕು. ಅದಕ್ಕೆ ಬದಲಾಗಿ ಪತ್ನಿಯು ಪತಿಯ ಮೇಲೆ ಪ್ರೇಮದ ಮಳೆ ಸುರಿಸಬೇಕು. ಗೃಹಕೃತ್ಯವನ್ನು ಜವಾಬ್ದಾರಿಯಿಂದ ಸಂಬಾಳಿಸಿಕೊಂಡು ಹೋಗಬೇಕು. ಗೃಹಕೃತ್ಯವನ್ನು ಜವಾಬ್ದಾರಿಯಿಂದ ಸಂಬಾಳಿಸಿಕೊಂಡು ಹೋಗಬೇಕು. ತನ್ನ ತಂದೆ ತಾಯಿ, ಅತ್ತೆ ಮಾವಂದಿರಿಂದ, ಉಳಿದ ಸಂಬಂಧಿಕರನ್ನು ಯೋಗ್ಯ ರೀತಿಯಲ್ಲಿ ಆಧರಿಸಿ ಸತ್ಕರಿಸಬೇಕು. ತನ್ನ ಸ್ವಾಂತ್ರ್ಯದಿಂದ ಅವನ ವಿಶ್ವಾಸವನ್ನು ಗಳಿಸಬೇಕು.

(ವಿಚಾರ ಸಾಹಿತ್ಯ ಮಹಿಳೆ; (ಸಂ) ಅನುಸೂಯಕಾಂಬಳೆ) ಎನ್ನುವ ಮಾತುಗಳನ್ನು ನೋಡಿದಾಗ ಬುದ್ದನಲ್ಲಿಯು ಸ್ತ್ರೀ ಸಂಬಂಧಿ ಸಂಗತಿಗಳು ಕುಟುಂಬದಾಚೆಗೆ ನೋಡುವುದರಿಂದ ಮೂಡಿದವುಗಳು ಎನಿಸುವುದಿಲ್ಲ. ಖಾಸಗಿ ಆಸ್ತಿಯ ಉಗಮದೊಂದಿಗೆ ಗಟ್ಟಿಗೊಂಡ ಕುಟುಂಬ ಸಂಸ್ಥೆಯಲ್ಲಿ ಹೆಣ್ಣು ಕೂಲಿರಹಿತ ನಿಷ್ಠಾವಂತ ಜೀತದಾಳು. ಸಂತಾನೋತ್ಪತ್ತಿಯನ್ನು ಲೈಂಗಿಕ ಪಾವಿತ್ರ್ಯತೆಯ ಮೂಲಕ ಮುಂದುವರಿಸಿಕೊಂಡು ಹೋಗಬೇಕಾದ ಪ್ರಾಣಿ ಎಂದು ಹಿಂದೂ ಸನಾತನದ ವ್ಯಾಖ್ಯಾನವನ್ನೇ ಒಂದಿಷ್ಟು ಹಿಂದುಮುಂತಾಗಿ ಹೇಳಿದಂತೆ ತೋರುವುದೇ ಹೊರತು ಸ್ತ್ರೀ ಬದುಕಿನ ಸ್ಥಿತ್ಯಂತರಕ್ಕೆ ಕಾರಣವಾಗಬಹುದಾದ ಮಾತುಗಳು ಎನಿಸಲಾರವುವು.

ಈ ನೆಲ ಕಂಡ ಯಾವುದೇ ಸಾಮಾಜಿಕ, ಧಾರ್ಮಿಕ ಚಳುವಳಿಗಳು, ಚಳುವಳಿಯ ನಾಯಕರು ಹೆಣ್ಣಿಗೆ ಸಂಬಂಧಿಸಿದ ಹಾಗೆ ಇರುವ ಸಮಸ್ಯೆಗಳಘನ್ನು ಇಡಿಯಾಗಿ ಗ್ರಹಿಸಿದಂತೆ ಕಾಣಿಸುವುದಿಲ್ಲ. ಅಂದಂದಿನ ಕಾಲದ ಒಳಗಡೆ ಹೆಣ್ಣನ್ನು ಇಟ್ಟು ಅವಳ ತತ್‌ಕ್ಷಣದ ಸಮಸ್ಯೆಗಳ ಬಗ್ಗೆ ಆಲೋಚಿಸಿ ಸುಧಾರಣೆ ತರಬಯಸಿರುವರೆ ವಿನಹ ಬದಲಾವಣೆಗೆ ತೊಡಗಿಲ್ಲ. ಅದನ್ನು ನಾವು ಆರೋಪಿಸುವುದು ಸರಿಯಲ್ಲ. ಆ ಕಾಲದ ಬೆಳವಣಿಗೆಯ ಮಧ್ಯದಲ್ಲಿ ಅವರಿಗೆ ಕಾಣಿಸಿಕೊಂಡ ಕಣ್ಣ ಬೆಳಕಿನ ನೆಲೆಯಲ್ಲಿ ಸದಾಶಯದಿಂದ ಸುಧಾರಣೆಗೆ ತೊಡಗಿರುವರು. ಹೆಣ್ಣನ್ನು ಕುಟುಂಬ ನೆಲೆಯಲ್ಲಿ ಆಸ್ತಿಯ ಭಾಗವಾಗಿಯೇ ನೋಡುವ ಒತ್ತಡಗಳನ್ನು ಮೀರುವ ಸಾಧ್ಯತೆಗಳೇಕೆ ಚರಿತ್ರೆಯಲ್ಲಿ ಕಾಣದೇ ಹೋದವು ಎಂಬುದರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ. ಬುದ್ಧ, ಬಸವರ ನಂತರ ಬಂದ ಶಂಕರಾಚಾರ್ಯರು ಹೆಣ್ಣನ್ನು ನರಕಕ್ಕೆ ದಾರಿ ಎಂದೇ ಕರೆದಿರುವುದರ ಹಿಂದೆ ಕೆಲಸಮಾಡಿದ ಮನಸ್ಸಿನ ಸೈದ್ಧಾಂತಿಕ ನೆಲೆಯನ್ನು ಕಂಡುಹಿಡಿಯಬೇಕಾಗಿದೆ.

ಅಹಿಂಸೆ, ತ್ಯಾಗ, ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಮಗಾಂಧೀಜಿಯವರಲ್ಲಿಯೂ ಸನಾತನ ಹಿಂದೂ ಮಹಿಳೆಯ ಚಿತ್ರವೇ ಉಳಿದುಕೊಂಡಿರುವುದಕ್ಕೆ ವಿಷಾದವೆನಿಸುತ್ತದೆ. ಹನ್ನೆರಡನೆಯ ಶತಮಾನದ ನಂತರ ಸಾಮೂಹಿಕವಾಗಿ ಮಹಿಳೆಯರು ಹೊರಬಂದು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿದುಡಿದಂತೆ ಆಧುನಿಕ ಕಾಲದಲ್ಲಿ ಗಾಂಧೀಜಿಯ ಒತ್ತಾಸೆಯಿಂದಲೇ ಮಹಿಳೆಯರು ಮನೆಯ ಹೊಸಿಲು ದಾಟಿ ಹೊರ ಬಂದು ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಕೊಳ್ಳುವಂತಾಯಿತೆಂಬುದು ಹೆಮ್ಮೆಯ ಸಂಗತಿ ನಿಜ. ಆದರೆ ಗಾಂಧೀಜಿಗೆ ಒಂದು ನಿಶ್ಚಿತವಾದ ಗುರಿಸಾಧನೆಯಲ್ಲಿ ಸ್ತ್ರೀಶಕ್ತಿಯ ಅವಶ್ಯಕತೆ ಕಾಣಿಸಿಕೊಂಡಿರುವುದರಿಂದ ಸ್ತ್ರೀಯರಿಗೆ ಸಾಮಾಜಿಕವಾಗಿ ಹೊರಬರುವಂತೆ ಒತ್ತಾಯಿಸಲಾಯೇತಿ ಹೊರತು ಹೆಣ್ಣಿನ ಉದ್ಧಾರಕ್ಕಾಗಿಯಲ್ಲ. ಅಂತರಿಕವಾಗಿ ಗಾಂಧೀಜಿಯಲ್ಲಿ ಸನಾತನ ಸಂಸ್ಕೃತಿಯ ಚೌಕಟ್ಟಿನೊಳಗಿರುವ ಹೆಣ್ಣಿನ ಬಗ್ಗೆ ಗೌರವಾಧಾರಗಳಿದ್ದವೇ ಹೊರತು ಚೌಕಟ್ಟಿನಾಚೆಗೆ ಬದುಕಲು ಇಚ್ಚಿಸುವ ಮಹಿಳೆಯರ ಕುರಿತ ಹಾಗೆ ಸದಭಿಪ್ರಾಯವಿರಲಿಲ್ಲ. ಗಾಂಧೀಜಿಯ ಸನಾತನ ಮನಸ್ಸು ಹೆಣ್ಣನ್ನು ಗೌರವಿಸುತ್ತದೆ, ಪೂಜಿಸುತ್ತದೆ. ಆದರೆ ಸಮಾನ ನೆಲೆಯಲ್ಲಿ ಬರುವುದನ್ನು, ಇರುವುದನ್ನು ಸಹಿಸಿಕೊಳ್ಳಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಒಪ್ಪಿದ ಗಾಂಧೀಜಿ ಗೃಹಿಣಿಗೆ ಗೃಹದಾಚೆಗೆ ಬದುಕಿಲ್ಲವೆಂದೇ ಭಾವಿಸಿರುವರು. ಹೆಣ್ಣು ಗಂಡಿನ ಸಮಾನತೆಯ ಬಗ್ಗೆ ಗಾಂಧೀಜಿಯಲ್ಲಿ ಗೊಂದಲಗಳಿದ್ದವು. ಸ್ತ್ರೀ ಬದುಕಿಗೆ ಒಳಪಟ್ಟು ಮಾತನಾಡುವಾಗಲೆಲ್ಲ ಗಾಂಧೀಜಿಯ ಗಂಟಲಲ್ಲಿ ಮನು ಕಾಣಿಸಿಕೊಳ್ಳುತ್ತಾನೆ.

ಸ್ತ್ರೀ ಪುರುಷರ ಸಮಾನತೆಯೆಂದರೆ ಉದ್ಯೋಗಗಳ ಸಮಾನತೆಯೆಂದು ಅರ್ಥವಲ್ಲ. ಒಬ್ಬ ಸ್ತ್ರೀ ಬೇಟೆಯಾಡುವುದಕ್ಕೆ ಭರ್ಜಿಯನ್ನು ಉಪಯೋಗಿಸುವುದಕ್ಕೂ ನ್ಯಾಯಬದ್ಧ ಪ್ರತಿಬಂಧವಿರಲಾರದು. ಆದರೆ ಪುರುಷನೇ ಮಾಡಬೇಕಾದ ಕಾರ್ಯದಿಂದ ಅವಳು ಸ್ವಾಭಾವಿಕವಾಗಿಯೇ ಹಿಂಜರಿಯುತ್ತಾಳೆ. ಸ್ತ್ರೀ ಪುರುಷರಿಗೆ ಅವರವರ ದೇಹರಚನೆಗೆ ತಕ್ಕಂತೆ ಅವರವರ ಕಾರ್ಯ ನಿರ್ಧರಿತವಾಗಿದೆ. ಪ್ರಕೃತಿ ಪರಸ್ಪರ ಪೂರಕ ದೃಷ್ಟಿಯಿಂದ ಲಿಂಗಭೇದವನ್ನು ಸೃಷ್ಟಿಸಿದೆ.

ಇನ್ನು ಮುಂದುವರಿದು ಹೇಳುವ ಮಾತುಗಳು

ವಿವಾಹಿತ ದಂಪತಿಗಳಲ್ಲಿ ಬಾಹ್ಯ ಕರ್ಮಗಳಿಗೆ ಸಂಬಂಧಿಸಿದಂತೆ ಪುರುಷನೇ ಶ್ರೇಷ್ಠ. ಆದುದರಿಂದ ಅದರ ಬಗೆಗೆ ಅವನು ವಿಶೇಷ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಯುಕ್ತವಾದುದು. ಇದಕ್ಕೆ ಪ್ರತಿಯಾಗಿ ಗೃಹಜೀವನ ಪೂರ್ಣವಾಗಿ ಮಹಿಳೆಯ ಕ್ಷೇತ್ರ. ಆದುದರಿಂದ ಗೃಹಕೃತ್ಯದಲ್ಲಿಯೂ ಮಕ್ಕಳ ಪಾಲನೆ ಮತ್ತು ಶಿಕ್ಷಣಗಳಲ್ಲಿಯೂ ಆಕೆ ವಿಶೇಷ ಜ್ಞಾನವನ್ನು ಸಂಪಾದಿಸಬೇಕು. ಸ್ತ್ರೀಯರು ಜೀವನೋಪಾಂiಕಾಗಿ ದುಡಿಯಬೇಕೆಂಬುದರಲ್ಲಾಗಲಿ, ವಾಣಿಜ್ಯೋದ್ಯಮಗಳಲ್ಲಿ ಭಾಗವಹಿಸ ಬೇಕೆಂಬುದರಲ್ಲಾಗಲಿ ನನಗೆ ನಂಬಿಕೆಯಿಲ್ಲ. ಮುಂದುವರಿದ ಸಾಮಾನ್ಯವಾಗಿ ತನ್ನ ಗಂಡನ ನೆರವಿಲ್ಲದೆ ಸ್ವತಂತ್ರವಾದ ಉದ್ಯಮದಲ್ಲಿ ತೊಡಗಿರುವ ಪತ್ನಿಯನ್ನು ನಾನು ಭಾವಿಸಲಾರೆ. ಮಕ್ಕಳ ಪೋಷಣೆ, ಗೃಹಕೃತ್ಯ ನಿರ್ವಹಣೆ ಇವೇ ಆಕೆಯನ್ನು ಶಕ್ತಿ ಸಾಮಾರ್ಥ್ಯಗಳನ್ನೆಲ್ಲಾ ಒಳಗೊಳ್ಳಲು ಸಾಕೆನಿಸುತ್ತದೆ.

ಆಧುನಿಕ ಕಾಲದ, ಸಮುದ್ರ ಪರ್ಯಟನೆ ಮಾಡಿ ಬಂದ ಗಾಂಧೀಜಿಯೂ ಕೂಡ ಹೆಣ್ಣಿನ ಕುರಿತ ಹಾಗೇ ವೈಜ್ಞಾನಿಕವಾಗಿ ಆಲೋಚಿಸಲು ಸಾಧ್ಯವಾಗಿಲ್ಲ. ಸನಾತನ ಧರ್ಮಸಂಸ್ಕೃತಿಯ ಬಗ್ಗೆ ಉದಾರತೆಯು ಗಾಂಧೀಜಿಯಲ್ಲಿ ಇರದೆ ಹೋಗಿರುವುದಕ್ಕೆ ಅಸಹ್ಯಪಡುವಂತಾಗಿದೆ. ಹೀಗೆ ಹುಟ್ಟಿಗೊಂಡ ಜೀವವಿರೋಧಿ ಸರಪಳಿಯನ್ನು ತುಂಡರಿಸುವುದಕ್ಕೆ ಶಕ್ತಿಯಾಗಿ ಮಹಾಚೇನವಾಗಿದ್ದವರು ಮಹಾತ್ಮ ಜ್ಯೋತಿಬಾಪೂಲೆ, ಪೆರಿಯಾರ್ ರಾಮಸ್ವಾಮಿಯವರೆನ್ನಬಹುದು. ಅವರ ದಿಟ್ಟ ನಿಲುವು ಮತ್ತು ಸ್ಪಷ್ಟವಾದ ವಿಚಾರಗಳು ಮಹಿಳೆಯ ಬದುಕಿನ ಬದಲಾವಣೆಯ ದಿಕ್ಕು ದೆಸೆಗಳನ್ನು ವೈಚಾರಿಕವಾಗಿಯೇ ಗುರುತಿಸಿವೆ. ಮಹಾತ್ಮ ಜ್ಯೋತಿಬಾಪೂಲೆ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು ಗುರುವಿನ ವಿಚಾರಗಳಿಗೆ ಕಾನೂನಿನ ಚೌಕಟ್ಟು ತೊಡಿಸಿ ಅನುಷ್ಟಾನಕ್ಕೆ ತರಬಯಸಿದರು. ಮಹಿಳಾ ಶಿಕ್ಷಣದ ಬಗ್ಗೆ ಮೊಟ್ಟಮೊದಲಿಗೆ ರೂಢಿಗತ, ಸಾಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ್ದಷ್ಟೇ ಅಲ್ಲ ವಿಧವಾ ವಿವಾಹವನ್ನು ಎತ್ತಿ ಹಿಡಿಯುತ್ತ ಬಹುಪತ್ನಿತ್ವದ ಬಗ್ಗೆ ಕಂಡಿಸುತ್ತ, ಸಾಮಾಜಿಕ ಅನಿಷ್ಟಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವದಲ್ಲಿತಂದ ಧೀಮಂತ ವ್ಯಕ್ತಿತ್ವ ಜ್ಯೋತಿಬಾ ಅವರದು. ಗುರುವಿನ ಮಹತ್ವಾಕಾಂಕ್ಷೆಯನ್ನು, ಬದಲಾವಣೆಯ ಹಾದಿಯನ್ನು ಕಂಡು ಮುನ್ನಡೆದಿದ್ದ ಬಾಬಾ ಸಾಹೆಬರಿಗೆ ಹಿಂದೂ ಧರ್ಮದ ಒಳಹೊಕ್ಕು ಜಾಲಾಡಲು ಸಾಧ್ಯವಾಯಿತು. ಮಹಾತ್ಮ ಪುಲೆಯವರು ಮಹಿಳೆಯರ ಬಗ್ಗೆ ಸಾಮಾಜಿಕವಾಗಿ ಹೇಳಿದ ವಿಷಯಗಳನ್ನು ಕಾನೂನು ಸಮ್ಮತಗೊಳಿಸುವಲ್ಲಿ ಅಂಬೇಡ್ಕರ್ ಅವರು ತಳೆದ ದಿಟ್ಟ ನಿಲುವಿಗೆ ಅನುಗುಣವಾದ ಫಲ ಸಾಮಾಜಿಕವಾಗಿ ನ್ಯಾಯ ಸಮ್ಮತವಾಗಿ ಸಿಗುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮನು ಮೂಲವೇ ಕೈಗೆ ಸಿಗುವುದು.

ನಾವು ಭಾವಿಸಿದಂತೆ ಭಾರತೀಯ ಸಮಾಜ, ಬದುಕು, ಜನರನ್ನ ಮುನ್ನಡೆಸುವ ಶಕ್ತಿ ಬರೆಯಲ್ಪಟ್ಟ ಸಂವಿಧಾನಕ್ಕಿಲ್ಲ. ಸಾಮಾಜಿಕ ಮನ್ನಣೆಯನು ಪಡೆದುಕೊಳ್ಳುತ್ತಲೆ ಧಾರ್ಮಿಕ ಒತ್ತಾಸೆಯ ನೆಲೆಯಲ್ಲಿರುವ ಮನು ವಿಚಾರಧಾರೆಯೇ ನಮ್ಮನ್ನು ವಾಸ್ತವವಾಗಿ ಆಳುತ್ತಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ವ್‌ತು ಸಮಾನವಾದ ಅಧಿಕಾರ, ಅವಕಾಶಗಳೆಲ್ಲ ಸಂವಿಧಾನಾತ್ಮಕವಾಗಿ ಕೊಡಮಾಡಲ್ಪಟ್ಟಿವೆ ಎಂಬುದನ್ನೇ ನಾವು ಜಗತ್ತಿಗೆಲ್ಲ ಸಾರುತ್ತಾ ಬಂದಿದ್ದೇವೆ. ವಾಸ್ತವವಾಗಿ ಹೆಣ್ಣನ್ನು ಮನು ನಿರ್ದೇಶಿತ ಸ್ಥಾನದಲ್ಲಿಟ್ಟು ಸುತ್ತಲೂ ಬೇಲಿ ಹಾಕಿ ಒಳಗಡೆಗೆ ವರ್ಗಹಿತಾಸಕ್ತಿ, ಸರಕು ಸಂಸ್ಕೃತಿಯ ಹಿತಾಸಕ್ತಿ, ಸನಾತನ ಮೌಲ್ಯಗಳಕರೆಂಟು ಹರಿಯಬಿಟ್ಟಿದ್ದೇವೆ. ಬೇಲಿ ದಾಟುವ ಮಹಿಳೆಯರು ಒಂದಿಲ್ಲಾ ಒಂದು ಕಾರಣಕ್ಕಾಗಿ ಅಫಗಾತಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕಾಗದದ ಮೇಲೆ ಕಾನೂನುಗಳಿದ್ದರೆ ಸಮಾಜದೊಳಗೆ ಮನುಧೋರಣೆ ಜೀವಂತವಾಗಿದೆ. ಹೀಗಿರುವಾಗ ಸಂವಿಧಾನದ ಸವಲತ್ತುಗಳನ್ನು ಪಡೆಯುವುದೆಂತು?

ಸಂವಿಧಾನದ ಅನುಚ್ಛೇದ ಹದಿನಾಲ್ಕರ ಪ್ರಕಾರ ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಮುಂದೆ ಸಮಾನರು ಎಂದಿದೆ. ವಾಸ್ತವದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕವಾಗಿ ಒಂದು ದೂರವನ್ನು ಕಾಪಾಡಿಕೊಂಡು ಹೋಗುವಂತೆ ಮಾನಸಿಕವಾಗಿ ತರಬೇತಿ ನೀಡಿದ್ದೇವೆ. ಸಂವಿಧಾನದ ಹದಿನೈದನೆಯ ಅನುಚ್ಛೇದ ಹೇಳುವುದೇನೆಂದರೆ ಸರ್ಕಾರವು ಭಾರತದ ಯಾವುದೇ ಪ್ರಜೆಯನ್ನು ಮತ, ಜಾತಿ, ಕುಲ, ಲಿಂಗ, ಹುಟ್ಟಿನ ಆಧಾರದ ಮೇಲೆ ತಾರತಮ್ಯ ಮಾಡತಕ್ಕದ್ದಲ್ಲ. ಆದರೆ ಇರುವ ಸ್ಥಿತಿ ಎಂತಹದ್ದು. ಸಾಮಾಜಿಕ ಕಾನೂನು ಎಂದು ಬದುಕಿನೊಳಗಡೆಗೆ ಪರಿಗಣಿಸಲ್ಪಟ್ಟಹಿಂದುತ್ವ ಆಗಿರಬಹುದು. ಪುರುಷ ಪ್ರಧಾನತೆಯಾಗಿರಬಹುದು. ಇವೆಲ್ಲವುಗಳು ವಾಸ್ತವವಾಗಿ ಮನುಷ್ಯನನ್ನು ಕುಲ, ನೆಲ, ಲಿಂಗ, ಮತ, ಧರ್ಮಧ ಮೂಲಕವೇ ನೋಡುವುದಷ್ಟೇ ಅಲ್ಲ. ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಸೃಷ್ಟಿಮಾಡಿದ ಅಲಿಖಿತ ಕಾನೂನನ್ನು ಒಪ್ಪಿಸುತ್ತದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಲಿಂಗನೆಲೆಯ ಬರ್ಬರತೆಯನ್ನು ಕಾಪಾಡಿಕೊಂಡು ಹೋಗುವ ಸಾಮಾಜಿಕ ರೂಢಿನಿಯಮಗಳನ್ನು ಯಾವ ಕಾನೂನಿನಿಂದಲೂ ಮುರಿಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮುಜುರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಜಾತಿಕಾರಣಕ್ಕಾಗಿ ದಲಿತರನ್ನು, ಲಿಂಗಕಾರಣಕ್ಕಾಗಿ ಹೆಣ್ಣನ್ನು ಒಳ ಬಿಡದೆ ಸಾರ್ವಜನಿಕವಾಗಿ ಅಪಮಾನಿಸುವ ವಿಧಾನಗಳು ಎಷ್ಟೆಲ್ಲ ನಮ್ಮ ಕಣ್ಣೆದುರಿಗಿವೆ. ಆಳುವ ಸರಕಾರಗಳಿಗೂ ಕಾನೂನು ಪಾಲಕರಿಗೂ, ತಜ್ಞರಿಗೂ ಗೊತ್ತಿದ್ದೂ ಏನು ಮಾಡದ ಸ್ಥಿತಿಯಲ್ಲಿರಲು ಕಾರಣವೆಂದರೆ ಸಮಾಜಿಕ ಸಂವಿಧಾನವಾದ ಸ್ಮೃತಿಯ ನಿಯಂತ್ರಣವೆನ್ನಬಹುದು. ಇಂದಿಗೂ ಪುರಿಜಗನ್ನಾಥ ದೇವಾಲಯಕ್ಕೆ ರಾಷ್ಟ್ರಟ್‌ಟದ ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ದೇವದಾಸಿಯರನ್ನು ಅದರಲ್ಲಿಯೂ ಕೆಳಜಾತಿಯ ಮಹಿಳೆಯರನ್ನು ನಿಯುಕ್ತಿಗೊಳಿಸುವ ಕ್ರಮವನ್ನು ಯಾವ ಕಾನೂನು ತಡೆಯಲು ಸಾಧ್ಯವಾಗಿದೆ? ನಮ್ಮನ್ನು ಆಳುತ್ತಿರುವುದು ಬರೆಯಲ್ಪಟ್ಟ ಘೋಷಿತ ಕಾನೂನುಗಳಲ್ಲೆಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ದೈನಂದಿನ ಬದುಕಿನಲ್ಲಿ ಬಹುಸಂಖ್ಯಾತ ಜನರು ಹಿಂಸೆಯನ್ನು ಅನುಭವಿಸುತ್ತಿರುವುದಕ್ಕೆ ಸಾಕ್ಷಿಗಳು ಬೇಕಾಗಿಲ್ಲ. ಏಕಲವ್ಯನ ಬೌದ್ಧಿಕತೆಗೆ ಹೆದರಿದ ರಾಜಸತ್ತೆ, ಪುರೋಹಿತ ಮನಸ್ಸುಗಳ ಅಪವಿತ್ರ ಮೈತ್ರಿಯಿಂದ ಗುರುದಕ್ಷಿಣೆಯ ಹೆಸರಿನಲ್ಲಿ ಹೆಬ್ಬೆರಳು ಕೇಳಿದರೆ, ಶಂಭೂಕನ ಶ್ರದ್ಧೆಗೆ ಹೆದರಿದ ಇದೇ ಶಕ್ತಿ ಅವನನ್ನು ಮೋಸದಿಂದ ಕೊಂದು ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯದೆ ಲೋಕಕಲ್ಯಾಣಕಾರಕ ಸಂಗತಿಯಾಗಿ ಪಠಣಕ್ಕೆಳಿಸಿತು. ಗಂಡಸಿನ ಮಹಾತ್ವಾಕಾಂಕ್ಷೆಯ ಅಮಲಿನಲ್ಲಿ ಸೀತೆ ಆತ್ಮಹತ್ಯೆ ಮಾಡಿಕೊಂಡರೆ ಅಹಲ್ಯೆ ಕಲ್ಲಾಗಬೇಕಾಯಿತು. ರೇಣುಕಾ ಮಗನಿಂದಲೇ ಕೊಲ್ಲಲ್ಪಡಬೇಕಾದ ಸತ್ಯಗಳೆಲ್ಲ ಆರಾಧಕ ಸಂಗತಿಗಳಾದವೆ ಹೊರತು ಕರಾಳ ಘಟನೆಗಳಾಗಲಿಲ್ಲ. ಇಂತಹ ಸಂಗತಿಗಳನ್ನು ಪುರಾಣ ಪುಣ್ಯಕಥೆಗಳನ್ನಾಗಿಸಿ, ಓದುವ ಮಕ್ಕಳಿಗೆ ಪಠ್ಯವಾಗಿಸಿ ಎಳೆಯ ಮನಸ್ಸಿನಲ್ಲಿ ಜೀವವಿರೋಧಿತನ ಬೆಳೆಯುವ ಎಲ್ಲ ಏರ್ಪಾಡನ್ನು ವ್ಯವಸ್ಥಿತವಾಗಿಯೇ ಮಾಡಿಟ್ಟು ಸಂವಿಧಾನದ ಕಡೆ ಮುಖಮಾಡಿದರೆ ಸಿಗುವ ಲಾಭವಾದರೂ ಏನು? ಉದ್ಯೋಗದ ಅವಕಾಶ ಸ್ತ್ರೀ ಪುರುಷರಿಗೆ ಸಮಾನವಾಗಿ ನೀಡಬೇಕು ವ್‌ತು ಸಮಾನ ದುಡುಮೆಗೆ ಸಮಾನ ವೇತನವೆಂದು ಸಂವಿಧಾನದಲ್ಲೇನೋ ಹೇಳಲಾಗಿದೆ. ವಾಸ್ತವವಾಗಿ “ಉದ್ಯೋಗಂ ಪುರಷ ಲಕ್ಷಣಂ’’ ಎಂದು ಸಂಸ್ಕೃತಿಕರಣಗೊಳಿಸಿ ಹೆಣ್ಣನ್ನು ಅಪಮಾನಿಸಲಾಗಿದೆ. ಇದೇ ಹಿತ ಗಾಂಧಿಯಲ್ಲಿಯೂ ಕೆಲಸ ಮಾಡಿದೆ. ಬಲಿಷ್ಟ ಜಾತಿ ವರ್ಗಗಳು ಮಾತ್ರ ಸುರಕ್ಷಿತ ನೆಲೆಯ ಸಂಬಳಸಹಿತ ಉದ್ಯೋಗಗಳನ್ನು ಪಡೆದುಕೊಂಡರೆ ತುತ್ತು ಕೂಳಿಗಾಗಿ ಹಗಲಿರುಳುಕಾಲಿಗೆ ಸರಪಳಿ ಬಿಗಿಸಿಕೊಂಡು ಜೀತಕ್ಕೆ ಜೀವ ತೇಯುವ ಕೋಟ್ಯಾಂತರ ಜನರಿಗೆ ಬರೆದಿಟ್ಟ ಸಂವಿಧಾನದ ಕಾನೂನುಗಳು. ಮನುಸಂಹಿತೆಯ ಬದುಕಿನ ಭದ್ರಬುನಾದಿಯಾಗಿರುವುದರಿಂದ ಈ ಎಲ್ಲ ನೋವು ಅಪಮಾನಗಳನ್ನು ಸಹಿಸಿಕೊಳ್ಳಬೇಕಾಗಿದೆ.

ಸಮಾನ ದುಡಿಮೆಗೆ ಸಮಾನ ವೇತನವೆಂಬುದು ವಾಸ್ತವವನ್ನು ಅಣಕಿಸುವಂತಿದೆ. ಹಗಲಿರುಳು ಮನೆಯಲ್ಲಿ, ಹೊಲದಲ್ಲಿ ದುಡಿಯುವ ವ್ಯಕ್ತಿಯ ಸಂಬಳಕ್ಕೂ, ಗಡಿಯಾರದ ಮುಳ್ಳಿಗೆ ಜೋತುಬಿದ್ದವರ ಸರ್ಕಾರದ ದುಡಿಮೆಗಾರರಿಗೂ ದೊರೆಯುವ ಸಂಬಳಕ್ಕೂ, ಅಂತರವನ್ನು ಗುರುತಿಸುವುದೇ ಅಪರಾಧನೆನಿಸುತ್ತದೆ. ಇದೆಲ್ಲ ಹೋಗಲಿ ಹೆಂಗಸರಿಗೂ, ಗಂಡಸರಿಗೂ ವೇತನದಲ್ಲಿ ತಾರತಮ್ಯತೆ ತರುವುದರ ಮಲೂಕವು ವರ್ಗಾಹಿತಾಸಕ್ತಿ ಲಿಂಗ ವೈರುಧ್ಯತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಮೂಲಭೂತವಾಗಿ ಹೆಣ್ಣಿನ ದುಡಿಮೆಯನ್ನು ಈ ಸಮಾಜ ಗೌರವಿಸಿಲ್ಲ. ಹೀಗಿರುವಾಗ ಹೆಂಗಸರು ದುಡಿದು ತರುವ ಸಂಬಳ ನಗಣ್ಯ. ಅದುಲೆಕ್ಕಕ್ಕೆ ತೆಗೆದುಕೊಳ್ಳುವ ಸಂಗತಿಯಲ್ಲ. ದುಡಿಮೆಯ ಬಲದಿಂದ ಹೆಣ್ಣು ಮಕ್ಕಳೇನಾದರೂ ಮಾತನಾಡಿದರೆ, ಪ್ರತಿಭಟಿಸಿದರೆ ಸಾಮಾಜಿಕ ಮತ್ತು ಕೌಟುಂಬಿಕ ಹಿಂಸೆಗೆ ಒಳಗಾಗಬೇಕಾಗುತ್ತದೆ. ಸರಕಾರಿ ಕೆಲದಲ್ಲಿ ಹೆಣ್ಣಿಗೆ ಗಂಡಿಗೆ ಸಮಾನ ವೇತನವಿದೆ. ಆದರೆ ಹೆಣ್ಣಿನ ವೇತನಕ್ಕೆ ಸಾಮಾಜಿಕ ಮನ್ನಣೆಯಿಲ್ಲ. ಕೂಲಿ ಹಂತದಲ್ಲಿ ಗಂಡಸಿರಗೂ, ಹೆಂಗಸರಿಗೂ ಸಮಾನ ವೇತನವಿಲ್ಲ. ಈ ದುಡಿಯುವ ವರ್ಗವನ್ನು ಸಮಾಜ, ಸಂಸ್ಕೃತಿ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಹೀಗಾಗಿ ಈ ವರ್ಗಕಾನೂನಿನ ಚೌಕಟ್ಟಿನ ಒಳಗಡೆಗೆ ಬರುವುದೇ ಇಲ್ಲ. ಕಾನೂನಿನ ಚೌಕಟ್ಟಿನ ಒಳಗಡೆ ಬರುವ ಸರಕಾರಿ ನೌಕರರ ಬಗ್ಗೆ ಲಿಂಗನೆಲೆಯಲ್ಲಿ ಸಾಮಾಜಿಕ ನೀತಿ ಸಂಹಿತೆಯೊಂದು ನಿರಂತರ ಎಚ್ಚರವಾಗಿದ್ದು ಹೆಣ್ಣನ್ನು ನಿಯಂತ್ರಿಸುತ್ತಿರುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ದುಡಿಯುವ ಮಹಿಳೆಯನ್ನು ಕಾಣುವ ದೃಷ್ಟಿಕೋನದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಕುಟುಂಬ ಒಳಗಡೆಗೆ ಮತ್ತು ದುಡಿಯುವ ಸ್ಥಳಗಳಲ್ಲಿ ಹೆಣ್ಣು ಅಪಮಾನ, ಹಿಂಸೆ, ನೋವು ಅನುಭವಿಸುವುದನ್ನು ಕಾನೂನಿನ ಮೂಲಕ ತಡೆಯಲು ಸಾಧ್ಯವಾಗದು. ಮೂಲಭೂತವಾಗಿ ಹೆಣ್ಣನ್ನು, ಕಾಯುವ, ಕಟ್ಟುವ, ಕದಿಯುವ, ಹೊತ್ತೊಯ್ಯೂವ ವಸ್ತುವಾಗಿಯೇ ಹಿಂದು ಸಂಸ್ಕೃತಿ ನೋಡಿರುವುದರಿಂದ ಈ ಎಲ್ಲ ಆತಂಕಗಳು ನಿರಂತರವಾಗಿ ಸಾಂಸ್ಕೃತಿಕ ವಾಹಿನಿಯ ಮೂಲಕ ಹರಿಯುತ್ತ ಸಮಾಜ ಸಮ್ಮತ ಸಂಗತಿಗಳಾಗಿ ನ್ಯಾಯೋಚಿತ ಎನ್ನುವ ರೀತಿಯಲ್ಲಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಯುತ್ತಿರುತ್ತದೆ. ಲೈಂಗಿಕ ಸಂಬಂಧಿ ಸಂಗತಿಗಳಲ್ಲಿ ಹುರಿಗೊಂಡಿರುವ ಪುರುಷ ರಾಜಕಾರಣದ ಶೋಷಣೆಯ ಅಸ್ತ್ರಗಳು ಕಾಲದಿಂದ ಕಾಲಕ್ಕೆ ಸೂಕ್ಷ್ಮಗೊಳ್ಳುತ್ತಲೇ ಇವೆ. ಉನ್ನತ ಹುದ್ದೆಯಲ್ಲಿರುವ ಗಂಡಸರು ತಮ್ಮ ಜೊತೆಗೆ ಕೆಲಸಮಾಡುವ ಮಹಿಳೆಯನ್ನು ಸಮಾನ ನೆಲೆಯಲ್ಲಿ ಕಾಣುವುದಕ್ಕೆ ಸಿದ್ಧರಿಲ್ಲ. ಹೆಂಗಸೆಂಬ ಅಸಡೆಡ ನಿರಂತರವಾಗಿ ಗಂಡಸಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಹೆಣ್ಣಿನ ವಿದ್ಯೆ, ಬುದ್ಧಿ, ಸ್ಥಾನ, ಅಧಿಕಾರಗಳೆಲ್ಲವೂ ಸಾಮಾಜಿಕವಾಗಿ ಕೌಟುಂಬಿಕವಾಗಿಯೂ ಒಪ್ಪಿತ ಸಂಗತಿಗಳಾಗಿಲ್ಲ. ಎಷ್ಟೋ ಜನ ಉನ್ನತ ಸ್ಥಾನದಲ್ಲಿರುವ ಹೆಂಗಸರು ಗಂಡಸರ ಲೈಂಗಿಕ ಕಿರುಕುಳವನ್ನು ಹೊರಗಡೆಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕ ಹಿಂಸೆ, ಅಪಮಾನದಿಂದ ಬೇಯುತ್ತಿರುವ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಉದಾಹರಣೆಗಳು ದಿನಬೆಳಗಾದರೆ ಕೇಳಿ ಮರೆಯುವ ಸಾಮಾನ್ಯ ಸಂಗತಿಗಳಾಗುತ್ತಿವೆ. ಕೌಟುಂಬಿಕ ನೋವುಗಳನ್ನು ಹೊರಗಡೆಗೆ ಹೇಳಿಕೊಂಡರೆ ಅದನ್ನು ಬಂಡವಾಳವಾಗಿರಿಸಿಕೊಂಡು ಶೋಷಿಸುವವರಿಗೂ ಕೊರತೆ ಇಲ್ಲ. ಹೀಗಾಗಿ ಸಂವಿಧಾತ್ಮಕವಾಗಿ ಸಿಕ್ಕಿರುವ ಸಮಾನ ದುಡಿಮೆಗೆ ಸಮಾನ ವೇತನವೆಂಬುದನ್ನು ಅರ್ಥಪೂರ್ಣಗೊಳಿಸುವಲ್ಲಿ ಮನುಪ್ರಣೀತ ಸಾಮಾಜಿಕ ಬದುಕಿನಲ್ಲಿ ಸಾಧ್ಯವಾಗದ ಮಾತು.

ಇಷ್ಟೆಲ್ಲದರ ಮಧ್ಯದಲ್ಲಿಯೂ ಸ್ತ್ರೀ ಪರವಾದ ಅಂಬೇಡ್ಕರ್ ಅವರ ಚಿಂತನೆ ಹೆಣ್ಣಿನ ಬದುಕಿನಲ್ಲಿ ಮೂಲಭೂತ ಬದಲಾವಣೆಯನ್ನು ಕಾಲಾಂತರದಲ್ಲಾದರೂ ಕಾಣಲು ಸಾಧ್ಯವೆನ್ನುವ ನಂಬಿಕೆಯಿದೆ. ಮಹಿಳೆಯರ ಸ್ವಾತಂತ್ರ್ಯ, ಸಮಾನತೆಂiನು ಕುರಿತು ಮಾತನಾಡಿದ ಭಾರತೀಯ ಚಿಂತಕರಿಗಿಂತಲೂ ಹೆಚ್ಚು ವೈಜ್ಞಾನಿಕವಾಗಿ, ವಾಸ್ತವವಾಗಿ ಚಿಂತನೆಗೈದವರು ಅಂಬೇಡ್ಕರ್ ಅವರೇ ಮೊದಲಿಗರು. ಸಂವಿಧಾನದ ಕರಡು ರಚನಾಕಾರರಾಗಿ, ಸ್ವತಂತ್ರ ಭಾರತದ ಕಾನೂನು ಮಂತ್ರಿಯಾಗಿ “ಹಿಂದೂ ಕೋಡ್ ಬಿಲ್’’ ನ್ನು ೧೯೫೧ರ ಫೆಬ್ರವರಿ ೧೫ ರಂದು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದಾಗ ಮನುವಾದಿಗಳೆಲ್ಲ ತತ್ತರಿಸಿಹೋದರು. ಆಡಳಿತ ಪಕ್ಷದಲ್ಲಿದ್ದ ಅತ್ಯಂತ ಉದಾರವಾದಿ ನೆಲೆಯ ಕಾಂಗ್ರೆಸ್ಸಿನ ಒಳಗಡೆ ಇದ್ದ ಮಡಿವಂತ ಹಿಂದೂಗಳು ತೀವ್ರವಾಗಿ ವಿರೋಧಿಸಿ ತಮ್ಮ ಬಣ್ಣವನ್ನು ಬಯಲು ಮಾಡಿಕೊಂಡಿರುವರು. ಎಲ್ಲ ಪ್ರತಿರೋಧದ ಮಧ್ಯದಲ್ಲಿಯೂ ಡಾ. ಅಂಬೇಡ್ಕರ್ ಅವರು ಮಹಿಳೆಯರನ್ನು ಕುರಿತು ನಾಲ್ಕು ಮಹತ್ವದ ಮಸೂದೆಗಳನ್ನು ಮಂಡಿಸಿ ಅವುಗಳಿಗೆ ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಗುವಂತೆ ನೋಡಿಕೊಂಡರು. ಮಹಿಳಾ ಬದುಕಿನ ಅತ್ಯಂತ ಪ್ರಮುಖ ಆದಾರಸ್ತಂಭಗಳಾದ ಕಾನೂನುಗಳೆಂದರೆ

೧. ೧೯೫೫ರಲ್ಲಿ ಮಂಡಿತವಾದ ಹಿಂದೂ ವಿವಾಹ ಕಾನೂನು

೨. ೧೯೫೬ರಲ್ಲಿ ಮಂಡಿತವಾದ ಹಿಂದೂ ಉತ್ತರಾಧಿಕಾರದ ಕಾನೂನು

೩. ೧೯೫೬ರಲ್ಲಿಯೇ ಮಂಡಿತವಾದ ಹಿಂದೂ ಅಪ್ರಾಪ್ತತೆ ಮತ್ತ ಪೋಷಕತ್ವ ಕಾನೂನು

೪. ಹಿಂದು ದತ್ತಕ ಮತ್ತು ಜೀವನಾಂಶ ಕಾನೂನು.

ಮಹಿಳಾ ಬದುಕಿನಲ್ಲಿ ಬೆಳ್ಳಿ ಕಿರಣಗಳನ್ನು ಮೂಡಿಸಿದ ಈ ಕಾನುನುಗಳನ್ನು ವಾಸ್ತವವಾಗಿ ಹಿಂದೂ ಕಾನೂನು ಎಂದೆ ಕರೆಯಿಸಿಕೊಳ್ಳುವ ಮನುಸ್ಮೃತಿಯ ಕಾನೂನುಗಳು ನುಂಗಿಹಾಕುತ್ತಿವೆ. ಅನಕ್ಷರಸ್ಥ ಮತ್ತು ಅನ್ಯಾಶ್ರಯದಲ್ಲಿರುವ ಮಹಿಳೆ ಸಂವಿಧಾನಾತ್ಮಕವಾದ ಊರುಗೋಲುಗಳನ್ನು ಹಿಡಿದು ಎದ್ದು ನಿಲ್ಲಲ್ಲು ನಿರಂತರ ಹೋರಾಡಬೇಕಾಗಿದೆ. ‘ಹಿಂದೂ ವಿವಾಹ ಕಾನೂನಿನ ಪರಿಚ್ಛೇದ ೨೬ರ’ ಪ್ರಕಾರ ದ್ವಿಪತ್ನಿತ್ವವನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ಇಂದಿಗೂ ಊಳಿಗಮಾನ್ಯ ಸಂಸ್ಕೃತಿ ಮತ್ತು ಬಂಡವಾಳ ಶಾಹಿ ಸಂಸ್ಕೃತಿಗಳೆರೆಡೂ ಹೆಣ್ಣನ್ನು ಹಿಗ್ಗಾಮುಗ್ಗಾ ಜಗ್ಗಾಡುತ್ತಿವೆ. ಬಹುಪತ್ನಿತ್ವವನ್ನು ಸಮಾಜ ಸಮ್ಮತ ಮತ್ತು ಧಾರ್ಮಿಕ ಸಮ್ಮತವಾಗಿಯು ಒಪ್ಪಿಕೊಂಡಿರುವ ಮನಸ್ಸುಗಳಿಗೆ ಕಾನೂನಿನ ಭಯವಿಲ್ಲ. ಹೀಗಾಗಿ ಆಳುವವನಿಗೆ ಹದಿನಾರು ಸಾವಿರ ಜನ ಹೆಂಡಂದಿರು ಎಂಬ ಅಲಿಖಿತ ಸಾಮಾಜಿಕ ನೀತಿಯಿರುವಾಗ ಏಕಪತ್ನಿತ್ವದಡಿಯಲ್ಲಿ ಬರಲು ಗಂಡಸು ಸಿದ್ಧನಿಲ್ಲ. ಎಷ್ಟೋ ಜನ ವಿದ್ಯಾವಂತ, ಕಾನೂನು ಬಲ್ಲ ಗಂಡಸರೇ ಉಪಪತ್ನಿಯರ ಸಂಖ್ಯಾಬಲದ ಮೂಲಕ ಬೀಗುವುದನ್ನು ನೋಡಿಯೂ ನೋಡದಂತಿರುವ ಸ್ಥಿತಿ ಕುಟುಂಬದೊಳಗಡೆಗೂ ಇದೆ ಹೊರಗಡೆಯೂ ಇದೆ. ಸಾಮಾಜಿಕವಾಗಿಯೇ ಈ ಕಾನೂನು ಸಮ್ಮತಿಯನ್ನು ಪಡೆದಾಗ ಮಾತ್ರ ಮಹಿಳಾ ಬದುಕಿನಲ್ಲಿ ಇದರ ಅರ್ಥಪೂರ್ಣತೆ ಕಾಣಿಸಿಕೊಳ್ಳಲು ಸಾಧ್ಯ. ಕಾನೂನು ಸಮ್ಮತಿಯನ್ನು ಪಡೆದಾಗ ಮಾತ್ರ ಮಹಿಳಾ ಬದುಕಿನಲ್ಲಿ ಇದರ ಅರ್ಥಪೂರ್ಣತೆ ಕಾಣಿಸಿಕೊಳ್ಳಲು ಸಾಧ್ಯ. ಕಾನೂನು ಎಂಬುದು ಉಳ್ಳವರ ಕೈಯಲ್ಲಿನ ಉದಾರ ಕೋಲಿದ್ದಂತೆ. ನಮ್ಮ ಜನರು ಸಾಮಾಜಿಕ ಕಾನೂನುಗಳಿಗೆ ಒಗ್ಗಿಕೊಂಡಿರುವರೇ ಹೊರತು, ಸಂವಿಧಾನಾತ್ಮಕವಾದ ಕಾನೂನುಗಳಿಗಲ್ಲ.

ಹಿಂದೂ ಸಮಾಜದಲ್ಲಿ ಗಂಡನ ಆಶ್ರಯದಲ್ಲಿದ್ದಾಗಲೇ ನಿರಂತರ ಬಳಲುವುದು ಹೆಣ್ಣಾದವಳಿಗೆ ತಪ್ಪಿಲ್ಲ. ಸಾಮಾಜಿಕವಾಗಿ, ಧಾರ್ಮಿಕವಾಗಿ ಗಂಡ ಸತ್ತ ಹೆಣ್ಣನ್ನು ವಿಧವೆಯೆಂದು ಕರೆದು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಆರ್ಥಿಕ ಬಲವಿಲ್ಲದೆ, ಸಾಮಾಜಿಕ ಸಾಂಸ್ಕೃತಿಕ ಮನ್ನಣೆಯಿಲ್ಲದೆ ಅಥವಾ ಸ್ತ್ರೀ ಸಂತಾನವಿಲ್ಲದ ಅಥವಾ ಸ್ತ್ರೀಯಂತ ದಯನೀಯವಾದ ಸ್ಥಿತಿಯಲ್ಲಿರುವುದನ್ನು ಧಾರ್ಮಿಕ ಮೂಲದಲ್ಲಿಯೇ ಸಹಜವಾಗಿಸಿದ್ದೇವೆ. ಇಂತಹ ಮಹಿಳೆಯರು ಬಯಲಿಗೆ ಬೀಳದಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಬೇಕಿತ್ತು. ಸಾಮಾಜಿಕವಾಗಿಯೇ ಈ ಮಹಿಳೆಯರಿಗೆ ಕಾನೂನು ಸಮ್ಮತವಾಗಿ ಬದುಕನ್ನ ಕಟ್ಟಿಕೊಳ್ಳುವ ವಿಶಿಷ್ಟ ಅವಕಾಶವೊಂದನ್ನು ಕಲ್ಪಿಸಿದರು. ಡಾ. ಬಿ. ಆರ್. ಅಂಬೇಡ್ಕರ್ ೧೯೫೬ರ ಹಿಂದೂ ಉತ್ತರಾಧಿಕಾರದ ಕಾನೂನಿನ ಪ್ರಕಾರ ವಿಧವೆಯಾದ ಮಹಿಳೆಗೆ ತನ್ನ ಆಸ್ತಿಯ ವಾರಸುದಾರಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಾದ ದತ್ತು ಸ್ವೀಕಾರವನ್ನು ಕಾನೂನು ಸಮ್ಮತಗೊಳಿಸಿದ್ದು ಭಾರತೀಯ ಸಂದರ್ಭದಲ್ಲಿ ಗಮನಾರ್ಹ ಸಂಗತಿ. ಗಂಡನ ಆಸ್ತಿಯನ್ನು ಹೊಂದುವ, ಅದನ್ನು ಸ್ವತಂತ್ರವಾಗಿ ಅನುಭೋಗಿಸುವ ಅವಕಾಶ ಇದರ ಮೂಲಕ ಹೆಣ್ಣಿಗೆ ಸಿಕ್ಕಿತು. ಆಸ್ತಿಯನ್ನು ಪರಭಾರೆಮಾಡುವುದನ್ನು, ಉಯಿಲು ಬರೆಯುವ ಮೂಲಕ ಅವಳಿಗೆ ನೀಡಲಾಯಿತು. ಒಂದು ವೇಳೆ ಉಯಿಲು ಬರೆಯದೆ ನಿಧನ ಹೊಂದಿದರೆ ಆಸ್ತಿಯ ಉತ್ತರಾಧಿಕಾರವನ್ನು ಮಗ ಮತ್ತು ಮಗಳು ಸಮಾನವಾಗಿ ಹೊಂದುವರು ಎಂದು ಹೇಳಲಾಗಿದೆ. ಇಡು ಡಾ. ಬಾಬಾ ಸಾಹೇಬ ಅಂಬೇಡ್ಕರ್ ನೀಡಿದ ಫಲವಾದರೆ ವಾಸ್ತವ ಸಮಾಜದಲ್ಲಿ, ಬದುಕಿನಲ್ಲಿ ಇರುವುದೇ ಬೇರೆಯಿದೆ. ಇಂದಿಗೂ ಯಾವ ಮಹಿಳೆಯು ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಗನುಗುಣವಾಗಿ ಪಾಲು ತೆಗೆದುಕೊಂಡ ಉದಾಹರಣೆಗಳಿಲ್ಲ. ವರದಕ್ಷಿಣೆ ತರಲಿಲ್ಲವೆಂದು ವಧುವನ್ನು ಹಾಡುಹಗಲೇ ಸುಟ್ಟು ದಕ್ಕಿಸಿಕೊಳ್ಳುವ ಜನರಿದ್ದಾರೆ. ಆಸ್ತಿ ಸಮಪಾಲು ತೆಗೆದುಕೊಳ್ಳಲು ಮುಂದಾದರೆ ಮಗಳನ್ನು ಸುಡುವುದರಲ್ಲಿ ಅನುಮಾನವಿಲ್ಲ. ಏನಿದ್ದರೂ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎನ್ನುವ ಮಾತುಗಳಿಗೆ ನಿತ್ಯ ಬದುಕಿನಲ್ಲಿ ನ್ಯಾಯ ಸಮ್ಮತಿ ಇದೆ. ಮನು ಹೇಳಿದಂತೆ ಹೆಂಡತಿ, ಆಳು ಮತ್ತು ಮಗಳಿಗೆ ಆಸ್ತಿ ಇರಬಾರದೆಂದು ವಾಸ್ತವಿಕವಾಗಿ ವಾದಿಸಲಾಗುತ್ತದೆ. ಈ ಮೂರು ಜನರು ಯಜಮಾನನ ಕೈಯಲ್ಲಿಯ ಗುಲಾಮರು. ಹೀಗಾಗಿ ಈ ಗುಲಾಮರು ಆಸ್ತಿ ಹೊಂದುವಂತಾದರೆ ಯಜಮಾನನ ಆಳ್ವಿಕೆ ನಡೆಯಲಾರದು. ಈ ಪ್ರಸಂಗದಲ್ಲಿಯೂ ಒಂದು ಅನುಕೂಲವಿದೆ. ಏನೆಂದರೆ ಮಗನಾದವನು ತಂದೆಯ ನಂತರ ಆ ಆಸ್ತಿಯ ವಾರಸುದಾರನಾಗಿ ಮುಂದುವರಿಯುವನು. ಆದರೆ ಯಾವುದೇ ಕಾರಣಕ್ಕೂ ಹೆಂಡತಿಗೆ ಮತ್ತು ಆಳಿಗೆ ಈ ಅವಕಾಶ ಸಿಗದಂತೆ ನೋಡಿಕೊಳ್ಳಲಾಗಿದೆ.

ಈ ಕಾನೂನು ಏನಿದ್ದರೂ ಜಮೀನ್ದಾರಿ ಲೋಕದಲ್ಲಿ ತಳಮಳವನ್ನುಂಟುಮಾಡಿದೆ. ಆಸ್ತಿಯೇ ಇಲ್ಲದೆ ಕೋಟ್ಯಾಂತರ ದಲಿತರು ಇದರ ವ್ಯಪ್ತಿಗೆ ಬರಲಾರರು. ಭಾರತೀಯ ಸನಾತನ ಮನಸ್ಸುಗಳು ಇಂದಿಗೂ ಡಾ. ಬಾಬಾ ಸಾಹೇಬರನ್ನು ದೇಶಕಂಡ ಶ್ರೇಷ್ಠನಾಯಕನೆಂದು ರಾಷ್ಟ್ರಪುರುಷನೆಂದು ಭಾವಿಸುತ್ತಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಮಹಿಳೆಯರ ಕುರಿತ ಹಾಗೇ ಮಾಡಿದ ಕಾನೂನುಗಳ ನೇರ ಫಲಾನುಭವಿಗಳೂ ಮೇಲ್ವರ್ಗದ ಮೇಲ್ಜಾತಿಯ ಮಹಿಳೆರೆನ್ನುವುದರ ಬಗ್ಗೆಯೂ ಆಲೋಚಿಸಬೇಕಾಗಿದೆ. ದಲಿತ ಲೋಕದಲ್ಲಿ ವಿಧವಾ ವಿವಾಹವಿದೆ. ಆಸ್ತಿಯೇ ಇಲ್ಲದಿರುವಾಗ ಈ ವರ್ಗದ ಮಹಿಳೆಯರ ಕುರಿತು ಆಸ್ತಿ ಹಕ್ಕಿನ ಪ್ರಶ್ನೆಯೇ ಉದ್ಭವಿಸದು. ದಲಿತರ ಗಂಡಸಿಗೆ ಸಮಾನ ದುಡಿಮೆಗೆ ಸಮಾನ ವೇತನವೆಂಬುದನ್ನು ಅನ್ವಯಿಸದೆ ಇರುವಾಗ ಮಹಿಳೆಯ ದುಡುಮೆಗೆ ಕಾನೂನು ಬದ್ಧವಾಗಿ ಸಮಾನ ವೇತನವೆಂದು ಮಾತನಾಡುವ ನೈತಿಕ ಬಲವೆಲ್ಲಿದೆ. ಆದರೆ ಒಂದು ಸತ್ಯವನ್ನು ನೆನಪಿಟ್ಟುಕೊಳ್ಳಬೇಕು. ಸ್ಥಿತ್ಯಂತರಕ್ಕೆ ಒಳಗಾಗುತ್ತಿರುವ ಜಾತಿ ವರ್ಣದೊಳಗಿನ ಒಟ್ಟು ಮಹಿಳೆಯರನ್ನು ಮನ ವಿಚಾರ ಧಾರೆಯಿಂದ ಪುರುಷ ಪ್ರಧಾನ ಸಂಸ್ಕೃತಿ ಆಳುತ್ತಿದೆಯೆಂದು, ಈ ಕಗಾರಣದಿಂದ ಅಂಬೇಡ್ಕರ್ ಅವರು ಈ ಗುಲಾಮಗಿರಿಯಿಂದ ಮಹಿಳೆಯರನ್ನು ರಕ್ಷಿಸುವ ಹಲವು ಹತ್ತು ಹಕ್ಕುಗಳನ್ನು ಒತ್ತಿ ಒತ್ತಿ ಹೇಳುವುದರ ಮೂಲಕ ಕಾನೂನು ಸಮ್ಮತಗೊಳಿಸಿರುವರು. ಇಡೀ ಮಹಿಳಾ ವರ್ಗ ಇಂದು ತಮ್ಮ ಆತ್ಮೋದ್ದಾರಕ ಡಾ. ಬಿ. ಆರ್. ಅಂಬೇಡ್ಕರ್ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹಿಂದುತ್ವದ ಜೀವ ವಿರೋಧಿತನವನ್ನು ನಿರಾಕರಿಸಬೇಕು. ದಲಿತ ಮತ್ತು ಹಿಂದುಳಿದ, ಬಡವರ, ಮಹಿಳೆಯರ ಪರವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅತ್ಯಂತ ವೈಜ್ಞಾನಿಕವಾಗಿ ಮತ್ತು ಮಾನವೀಯ ನೆಲೆಯಲ್ಲಿ ಚಿಂತನಗೈದರು. ಬರೀ ಚಿಂತನಗೈಯುವುದರ ಮೂಲಕ ಅಂಬೇಡ್ಕರ್ ಉಳಿದುಕೊಂಡಿದ್ದರೆ ಈ ವ್ಯವಸ್ಥೆ ಅವರನ್ನು ಹಾಡಿಹರಸಬಹುದಾಗಿತ್ತು. ಆದರೆ ಅವರು ಆಲೋಚಿಸಿದ ನಿಟ್ಟಿನಲ್ಲಿ ಅನುಷ್ಠಾನಗೊಳಿಸುವ ಅತ್ಯಂತ ಅಗತ್ಯದ ಕಾರ್ಯ ಮಾಡಿದರು. ಪ್ರಜಾಪ್ರಭುತ್ವವಿರುವವರೆಗೂ ಕಾನೂನು ಸಮ್ಮತವಾದ ದಲಿತ ಹಿಂದುಳಿದ ಮಹಿಳೆಯರ ಹಕ್ಕುಗಳು ಹೊಸ ಬದುಕಿನ ದಿಗಂತದೆಡೆಗಿನ ನಡಿಗೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂತಹ ವೈಜ್ಞಾನಿಕವಾದ ಸಂವಿಧಾನಾತ್ಮಕ ಹಕ್ಕುಗಳು ದಲಿತರ, ಮಹಿಳೆಯರ ಆತ್ಮಗೌರವವನ್ನು ಕೆರಳಿಸುವ, ಸಮಾನತೆಯೆಡೆಗೆ ಕೊಂಡೊಯ್ಯುವ ಶಕ್ತಿ ಎಂಬ ಕಾರಣಕ್ಕಾಗಿ ಸವರ್ಣಿಯರು ಅಂಬೇಡ್ಕರ್ ಅವರ ಹೆಸರನ್ನು ಕೇಳಿದರೆ ಚೇಳು ಕಡಿದವರಂತೆ ಒದ್ದಾಡುವರು. ಈ ನೆಲದಲ್ಲಿ ಜೀವ ವಿರೋಧಿ ಶಕ್ತಿಗಳ ಎಷ್ಟೊಂದು ಆಳವಾಗಿ ಬೇರು ಬಿಳಲುಗಳನ್ನು ಬಿಟ್ಟು ಜನರ ಭಯಭಕ್ತಿಗಳನ್ನು ಬಾಚಿಕೊಳ್ಳುತ್ತವೆ ಎಂದರೆ ಇಂದಿಗೂ ಗುಜರಾನ ಹೈಕೋರ್ಟ್‌ನಲ್ಲಿ ಮನುವಿನ ವಿಗ್ರಹವನ್ನಿಟ್ಟು ಪೂಜಿಸುತ್ತ ಇಡೀ ಸಂವಿಧಾನಕ್ಕೆ, ಗಣತಂತ್ರ ವ್ಯವಸ್ಥೆಗೆ ಅಪಮಾನಿಸುವ ಕೆಲಸ ನಡೆಯುತ್ತಲೇ ಇರುತ್ತದೆ.

೧೯೫೬ರಲ್ಲಿ ಮಂಡಿಸಲ್ಪಟ್ಟ ‘ಹಿಂದೂ ಅಪ್ರಾಪ್ತತೆ ಮತ್ತು ಕಾನೂನು ಪೋಷಕತ್ವ’ ಭಾರತೀಯ ಕುಟುಂಬ ಪದ್ಧತಿಯಲ್ಲಿ ಮೊಟ್ಟ ಮೊದಲಿಗೆ ತಾಯಿಯಾದವಳು ಹಕ್ಕಿನಿಂದ ಮಾತನಾಡುವ, ಹಕ್ಕು ಚಲಾಯಿಸುವ ಶಕ್ತಿ ಪಡೆದುಕೊಳ್ಳಲು ಸಹಾಯ ಮಾಡಿತು. ಹಿಂದೂ ಸಮಾಜದಲ್ಲಿ ಕುಟುಂಬದ ಬಗ್ಗೆ ಬಣ್ಣದ ಮಾತುಗಳಿಂದ ಕಥೆಕಟ್ಟಿ ಹೇಳುವುದು ಅಂದಿನಿಂದ ಇಂದಿನವರೆಗೂ ನಿಂತಿಲ್ಲ,. ಕುಟುಂಬ ಎನ್ನುವಂತಹದು ಒಂದು ಸಾಮಾಜಿಕ ಸಂಸ್ಥೆಯಾಗಿ ಎಂದಿಗೂ ಕಾಣಿಸಿಕೊಂಡಿಲ್ಲ. ಕಾನೂನುರಹಿತವಾದ ಜೈಲುಗಳಂತೆ ಅವುಗಳ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇವೆ. ಗಂಡ ಹೆಂಡತಿ, ಮದುವೆ ಎನ್ನುವಂತಹದ್ದು ಪರಸ್ಪರ ಒಪ್ಪಿಗೆಯ ಮೂಲಕ ಹೊಂದಬೇಕಾದ ಒಪ್ಪಂದವೆಂದು ಸಾರ್ವಜನಿಕವಾಗಿ ಹೇಳಿದವರನ್ನು ಮನೆಮುರುಕರೆಂದು ಕರೆದು ದೂರವಿಡುವರು. ಕುಟುಂಬದ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಎಂದಿಗೂ ಗಂಡಸಿಗೆ, ಯಜಮಾನನಿಗೆ ಕರ್ತವ್ಯಗಳಾಗಿ ಕಾಣಿಸಿಕೊಂಡಿಲ್ಲ. ಗಂಡಸಾಗಿರುವ ಕಾರಣಕ್ಕಾಗಿ ದಕ್ಕುವ ಯಜಮಾನ ಪಟ್ಟದ ಮೂಲಕ ಮನೆಯ ಸದಸ್ಯರನ್ನೆಲ್ಲ ದುಡಿಸಿಕೊಳ್ಳುವ, ದಮನಿಸುವ ಹಕ್ಕು ಮಾತ್ರ ಧಾರಾಳವಾಗಿ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ನೆಲೆ ಒಪ್ಪಿತ ಮೌಲ್ಯಗಳೆಂದೇ ಕರೆಯಲ್ಪಟ್ಟಿವೆ.

ಹಿಂದೂ ಅಪ್ರಾಪ್ತತೆ ಮತ್ತು ಪೋಷಕತ್ವ ಕಾನೂನು ತಂದೆಯಾದವನು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೆ ಹೋದರೆ ಅಥವಾ ಅವನಲ್ಲಿ ಅಪರಾಧಿ ಗುಣಗಳು ಕಂಡುಬಂದಲ್ಲಿ ತಾಯಿಯಾದವಳು ಉಯಿಲು ಬರೆಯುವುದರ ಮೂಲಕ ಅವನನ್ನು ತೆಗೆದು ಹಾಕುವ ಹಕ್ಕನ್ನು ಪಡೆದುಕೊಂಡಳು. ಇಂದಿಗೂ ವಿಚ್ಛೇದಿತ ಮಹಿಳೆಯೇ ಮಕ್ಕಳ ಜವಾಬ್ದಾರಿಯನ್ನು ಹೊರಬೇಕು ಎಂದು ಎಲ್ಲಿಯೂ ನೀತಿ ಸಂಹಿತೆಯನ್ನು ರೂಪಿಸಿಲ್ಲ.

೧೯೫೬ರಲ್ಲಿಯೇ ಇನ್ನೊಂದು ಪ್ರಮುಖ ಮಸೂದೆಯನ್ನು ಕಾಯ್ದೆಯಾಗಿಸಿದರು. ‘ಹಿಂದೂ ದತ್ತಕ ಮತ್ತು ಜೀವನಾಂಶ ಕಾನೂನು’. ಇದು ಇಡೀ ಮಹಿಳಾಲೋಕ ಉಪಕೃತರಾಗಿ ಬದುಕಿರುವರೆಗೂ ಅಂಬೇಡ್ಕರ್ ಅವರನ್ನು ನೆನೆಯುವಂತೆ ಮಾಡಿತು. ಹಿಂದೂ ಧರ್ಮ ಹೆಣ್ಣನ್ನು ಅದರಲ್ಲಿಯೂ ಸ್ವಜಾತಿಯ ಉತ್ತಮ ಗುಣದ ಮಹಿಳೆಯನ್ನು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಧರ್ಮಪತ್ನಿಯ ಪಟ್ಟ ನೀಡಬೇಕು. ಉಳಿದಂತೆ ಕೆಳಜಾತಿಯ ಹೆಣ್ಣುಗಳನ್ನು ಉಪಪತ್ನಿಯರನ್ನಾಗಿ ಇಟ್ಟುಕೊಳ್ಳುವ ಬೇಡವಾದಾಗ ಬಿಡುವುದೆಲ್ಲವನ್ನು ಗಂಡಸಿನ ಅನುಕೂಲಕ್ಕಾಗಿಯೇ ನಿಯಮಗಳನ್ನು ಮಾಡಿತ್ತು. ಬದುಕಿನುದ್ದಕ್ಕೂ ಕೈ ಹಿಡಿದು ನಡೆಯುತ್ತೇನೆಂದು ಉರಿಯುವ ಬೆಂಕಿಯ ಮುಂದೆ ಆಣೆ ಪ್ರಮಾಣ ಮಾಡಿದ ಗಂಡಸರು ಕಾಲಾಂತರದಲ್ಲಿ ಹೆಂಡತಿಯಲ್ಲಿ ದೋಷಗಳನ್ನು ಹುಡುಕುತ್ತಾ ಬೇರೆ ಬೇರೆ ಹೆಣ್ಣುಗಳ ಬೇಟೆಗೆ ತೊಡಗುವಾಗಲೆಲ್ಲ ತಾಳಿ ಕಟ್ಟಿದ ಹೆಂಡತಿಯನ್ನೇನು ಬಿಡುಗಡೆಗೊಳಿಸುತ್ತಿದ್ದಿಲ್ಲ. ತೊತ್ತಿನಂತೆ ಅವಳನ್ನು ಕಾಣುವುದರಲ್ಲಿಯೇ ಗರ್ವ ಪಟ್ಟಿರುವರು. ಇಂತಹ ಸಂದರ್ಭದಲ್ಲಿ ಹೆಣ್ಣುಗಂಡಿನಿಂದ ವಿಚ್ಛೇದನ ಬಯಸಿದರೆ ಅದು ಸರಳವಾಗಿ ಸಿಗುವಂತಾಗಬೇಕು ಮತ್ತು ಅವಳ ಜೀವನಾಂಶವನ್ನು ಗಂಡನಾದವನು ಕೊಡಲೇಬೇಕು ಎಂಬುದನ್ನ ಕಾನೂನು ಕಾಯ್ದೆಯ ಮೂಲಕ ಕಡ್ಡಾಯಗೊಳಿಸಿದರು. ಇಷ್ಟೆಲ್ಲಕಾನೂನು, ಕಾಯ್ದೆಗಳು ಇದ್ದರೂ ಹೆಣ್ಣು ಬೇಡವಾದ ಗಂಡನಿಂದ ಸರಳವಾಗಿ ವಿಚ್ಛೇದನೆ ಪಡೆದು ಸಮಾಜದಲ್ಲಿ ಗೌರವದಿಂದ ಬದುಕುವಂಥ ವಾತಾವರಣವೇ ಇಲ್ಲದಿರುವಾಗ ಮಹಿಳೆ ಬಿಡುಗಡೆಯೆಡೆಗೆ ಹಂಬಲಿಸುವುದಕ್ಕಿಂತಲು ಗುಲಾಮಗಿರಿಯಲ್ಲಿಯೇ ದಿನ ಕಳೆಯುವುದೇ ಮೇಲು ಎಂದುಕೊಳ್ಳುವಂತಾಗಿದೆ. ಮಕ್ಕಳಾಗದೇ ಇದ್ದಾಗ ಕುಟುಂಬದ ಮುಂದುವರಿಕೆಗಾಗಿ ದತ್ತು ತೆಗೆದುಕೊಳ್ಳುವುದು ನಮ್ಮಲ್ಲಿ ಸಹಜವಾಗಿತ್ತು. ಹೀಗೆ ದತ್ತು ತೆಗೆದುಕೊಳ್ಳುವಾಗ ಸಾಮಾಜಿಕ ರೂಢಿಯಾಗಿತ್ತು. ಆದರೆ ಅಂಬೇಡ್ಕರ್ ಅವರು ದತ್ತು ತೆಗೆದುಕೊಳ್ಳುವಾಗ ಹೆಂಡತಿಯ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಕಾನೂನಿನಲ್ಲಿಯೇ ಅವಕಾಶ ಕಲ್ಪಿಸಿದರು. ಅಷ್ಟೇ ಅಲ್ಲ ದತ್ತು ತೆಗೆದುಕೊಳ್ಳುವಾಗ ಹೆಣ್ಣಉ ಗಂಡೆಂದು ಲಿಂಗಭೇದವೆಸಗಿದ್ದು ತಿಳಿದು ಬಂದರೆ ಉಗ್ರಶಿಕ್ಷೆ ನೀಡುವುದು ಕಾನೂನಿನ ವ್ಯಾಪ್ತಿಯ ಒಳಗಡೆಗೆ ಸೇರಿಕೊಂಡಿತು. ಲಿಂಗ ತಾರತಮ್ಯತೆಯ ಬಗ್ಗೆ ಮತ್ತು ಮತ್ತೆ ಶಿಕ್ಷಾರ್ಹ ಅಪರಾಧವೆಂದು ಒತ್ತಿ ಒತ್ತಿ ಹೇಳುವುದರ ಮೂಲಕ ಸಮಾಜದಲ್ಲಿ ಒಂದು ಜಾಗೃತಿಯನ್ನು ತಂದರು. ಇಷ್ಟೆಲ್ಲವನ್ನು ಮಹಿಳಾ ಕುಲದ ಉದ್ಧಾರಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಮೇಲ್ವರ್ಗ, ಮೇಲ್ಜಾತಿಯ ಜನರನ್ನು ಎದುರು ಹಾಕಿಕೊಂಡು ಕಾಯ್ದೆ ಕಾನೂನುಗಳನ್ನು ಮಾಡಿದ್ದರು. ವಾಸ್ತವವಾಗಿ ಇವುಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ಬೀಗ ಜಡಿದು ಜೀವ ವಿರೋಧಿ ಮನುವನ್ನು ಅಂಗಳದುದ್ದಕ್ಕೂ ರಂಗೋಲಿ ಹಾಕಿ ಜಗುಲಿಯ ಮೇಲಿಟ್ಟು ಪೂಜಿಸುತ್ತ ಅವನ ನಿರ್ದೇಶನದಂತೆ ಬದುಕುವ ದುರುಂತದ ಮುಕ್ತಾಯ ಎಂದು ಎಂಬುದನ್ನು ಆಶಾವಾದಿಗಳಾಗಿಯೇ ಕಾಯಬೇಕಾಗಿದೆ.