ಒಂದು ಸ್ಪಷ್ಟೀಕರಣದೊಂದಿಗೆ ಈ ಪ್ರಬಂಧವನ್ನು ಪ್ರಾರಂಭಿಲಿಚ್ಫಿಸುತ್ತೇನೆ. ಅದೇನೆಂದರೆ ನಾನು ದಲಿತರ ಮೇಲೆ ಆಧುನಿಕತೆಯ ಒಂದು ಸಿದ್ಧ ಅರ್ಥವನ್ನು ಹೇರಬಯಸುವುದಿಲ್ಲ. ಬದಲಾಗಿ ದಲಿತರೇ ತಮ್ಮ ವಿಮೋಚನಾ ಹೋರಾಟಗಳ ಮೂಲಕ ಪರಿಭಾವಿಸುವ ಮತ್ತು ಅಭಿವ್ಯಕ್ತಿಗೊಳಿಸುವ ಆಧುನಿಕತೆಯ ಪರಿಕಲ್ಪನೆ ತಮ್ಮ ಕಾಳಜಿಯಾಗಿದೆ.

೧. ಆಧುನಿಕತೆಯ ಪರಿಕಲ್ಪನೆಯ ಚಾರಿತ್ರಿಕ ಬೆಳವಣಿಗೆಯನ್ನು ದಲಿತರು ಗ್ರಹಿಸುವ ಕ್ರಮ.

೨. ಆ ಬೆಳವಣಿಗೆಗೆ ದಲಿತರ ಪ್ರತಿಕ್ರಿಯೆ

೩. ಅದರ ಪ್ರಮಾಣಕ (Normative) ನೆಲೆ ಇವುಗಳಿಂದ ದಲಿತರ ಆಧುನಿಕತೆಯ ಪರಿಕಲ್ಪನೆ ಗ್ರಾಹ್ಯವಾಗುತ್ತದೆ.

ಇಂತಹ ಒಂದು ಆಧುನಿಕತೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತರ ವಿಮೋಚನಾ ಪ್ರಣಾಳಿಕೆಯನ್ನು ಯಾವ ರೀತಿಯಲ್ಲಿ ರೂಪಿಸುತ್ತದೆ ಎಂಬ ಪ್ರಶ್ನೆಯನ್ನು ಎತ್ತುವುದು ಈ ಪ್ರಬಂಧದ ಉದ್ದೇಶವಾಗಿದೆ. ದಲಿತರ ಪಾಲಿಗೆ ಆಧುನಿಕತೆ ವ್ಯಕ್ತವಾಗುವ ಪರಿಭಾಷೆ ಯಾವುದೆಂದರೆ ಅದು ಸಮಾನತೆ, ಸ್ವಾತಂತ್ರ್ಯ, ಘನತೆ, ಆತ್ಮಗೌರವ ಮತ್ತು ಮನ್ನಣೆಯ ತಮ್ಮ ಹಕ್ಕುಗಳ ಪರಿಭಾಷೆ. ಅವರ ಈ ಹೊಸ ಪರಿಭಾಷೆ ಮೂಡಿದುದು ಅವರು ಹಿಂದಿನ ನಕಾರಾತ್ಮಕ ಹಕ್ಕುಗಳ ಪರಿಭಾಷೆಯನ್ನು ತಿರಸ್ಕರಿಸಿದುದರಿಂದ. ಆ ನಕಾರಾತ್ಮಕ ಹಕ್ಕುಗಳೆಂದರೆ ಸತ್ತದನದ ಮಾಂಸ ಮತ್ತು ಚರ್ಮಗಳ ಮೇಲಿನ ಹಕ್ಕು, ಹಳೆಯ ಬಟ್ಟೆ ಮತ್ತು ಹಳಸಲು ಆಹಾರದ ಮೇಲಿನ ಹಕ್ಕು. ಈ ಋಣಾತ್ಮಕ ಹಕ್ಕುಗಳು, ಹಿಂದೂ ಊಳಿಗಮಾನ್ಯ ವ್ಯವಸ್ಥೆಯು ದಲಿತರನ್ನು ಅವಮಾನಿಸುವ ರೀತಿ ಮತ್ತು ಉದ್ದೇಶಗಳ ಪ್ರತೀಕ. ಈ ಋಣದ ಹಕ್ಕುಗಳನ್ನು ತಿರಸ್ಕರಿಸಿ ದಲಿತರು ಭಾರತೀಯ ಮತ್ತು ಪಾಶ್ಚಾತ್ಯ ವಿಮೋಚನಾ ಪರಂಪರೆಗಳಿಂದ ಸಮಾನತೆಯ ಭಾಷೆಯನ್ನು ಪಡೆಯುತ್ತಾರೆ. ಈ ಭಾಷೆ ತಮ್ಮನ್ನು ಹೊರಗಿರಿಸುವ ಹಿಂದುತ್ವದ ಮಾದರಿಯನ್ನು ಪ್ರಶ್ನಿಸಲು ತೊಡಗಿಸುವುದಷ್ಟೇ ಅಲ್ಲ, ತಮ್ಮ ಕೌಶಲ್ಯ, ಸಾಮಾರ್ಥ್ಯ ಮತ್ತು ಶ್ರೇಷ್ಠತೆಗಳಂತಹ ಆಧುನಿಕ ಅರ್ಹತೆಗಳ ಆಧಾರದ ಮೇಲೆ ಸಾಮಾಜಿಕ ವ್ಯವಸ್ಥೆ ಮತ್ತು ಅವಕಾಶಗಳಲ್ಲಿ ಒಳಪ್ರವೇಶಕ್ಕೆ ಒತ್ತಾಯಿಸುತ್ತದೆ. ಹೀಗೆ ಸಮಾನತೆ ಹಾಗೂ ಆತ್ಮಗೌರವ ದಲಿತರ ಆಧುನಿಕತೆಯ ಶೋಧದ ಪ್ರಮಾಣಕ (Normative) ನೆಲೆಗಳಾಗುತ್ತವೆ.

ದಲಿತರ ದೈಹಿಕ ಮತ್ತು ಮಾನಸಿಕ ಶ್ರಮದ ಲಾಭವನ್ನು ಅಗ್ಗದ ಅಥವಾ ಪುಕ್ಕಟೆಯಾದ ‘ಜೀತದಾಳು’ ‘ಬಿಟ್ಟಿಚಾಕರಿ’ ಮುಂತಾದ ರೀತಿಗಳಲ್ಲಿ ಪಡೆದುಕೊಳ್ಳುತ್ತಿದ್ದ ವ್ಯವಸ್ಥೆಗೆ ಒಂದು ಪರ್ಯಾಯವನ್ನು ಆಧುನಿಕತೆ ಕಲ್ಪಿಸಿಕೊಟ್ಟಿತು. ನಿಗದಿತ ಮತ್ತು ನಿಯಂತ್ರಿಕ ಕೆಲಸದ ವೇಳೆಯ ಪರಿಕಲ್ಪನೆಯೊಂದಿಗೆ ದಲಿತರು ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಮೌಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಯಿತು. ಆಧುನಿಕತೆ ನೀಡಿದ ಚಲನಶೀಲನೆ ಹಿಂದೂಗಳೊಂದಿಗೆ ಸಾಮಾಜಿಕ ವಿನಿಮಯದ ಅವಕಾಶ ಕಲ್ಪಿಸಿತು. ಈ ಬೆಳವಣಿಗೆ ಮೇಲ್ಜಾತಿಗಳು ದಲಿತರನ್ನು ಶುದ್ಧ ಅಶುದ್ಧದ, ಮಡಿಮೈಲಿಗೆಯ ವಿಚಾರಗಳ ಮೂಲಕ ಸೀಮಿತ ಕೇರಿಗಳಲ್ಲಿ ಕಟ್ಟಿಹಾಕುವುದಕ್ಕೆ ವಿರುದ್ಧವಾಗಿದ್ದಿತು. ಕರ್ನಾಟಕದಲ್ಲಿ ಹೊಲಗೇರಿ, ಮಹಾರಾಷ್ಟ್ರದಲ್ಲಿ ಮಹಾರ್ ವಾಡ, ತಮಿಳುನಾಡಿನಲ್ಲಿ ಪರಯ್ಯಚಾರಿ ದಲಿತಕೇರಿಗಳ ಉದಾಹರಣೆಗಳು. ಆಧುನಿಕತೆಯ ಪ್ರಗತಿ ಮತ್ತು ಬಂಡವಾಳಶಾಹಿಯ ಅಭಿವೃದ್ಧಿ ಭಾರತದ ಅನಾಗರಿಕ ಸಮಾಜವನ್ನು ನಾಗರಿಕಗೊಳಿಸುವ ಭರವಸೆ ಮೂಡಿಸಿದವು. ಹೀಗೆ ಆಧುನಿಕತೆ ಮೂಡಿಸಿದ ದಲಿತರ ವಿಮೋಚನೆಯ ಭರವಸೆ ವಸಾಹತುಶಾಹೀ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಂಡಿತು ಎಂಬುದನ್ನು ಪರಿಶೀಲಿಸೋಣ.

ಬೂರ್ಷ್ವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮಿತಿಗಳು

ವಸಾಹತುಶಾಹೀ ಆಧುನಿಕತೆ ಹಾಗೂ ಸಂವಿಧಾನಿಕ ಕ್ರಮಗಳು ಮತ್ತು ಸರಕಾರದ ಕಲ್ಯಾಣ ನೀತಿಗಳು ದಲಿತರಿಗೆ ಕೆಲವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳನ್ನು ಒದಗಿಸಿದವು ಎಂಬುದು ನಿಜ. ಎಲ್ಲಾ ಹಕ್ಕುಗಳ ನಿರಾಕರಣೆಯ ಹಿಂದಿನ ಸ್ಥಿತಿಗಿಂತ ಈ ಬೆಳವಣಿಗೆ ಸಕಾರಾತ್ಮಕ. ಆದರೆ ವಸಾಹತುಶಾಹೀ ಆಧುನಿಕತೆಯು, ಅವಕಾಶಗಳ ಆಯಾಮಕ್ಕೆ ಗಂಭೀರ ಮಿತಿಗಳಿದ್ದನು. ಸಾಮ್ರಾಜ್ಯಶಾಹೀ ಹಾಗೂ ಸ್ಥಳೀಯ ಬಂಡವಾಳಶಾಹಿಗಳು ಮಡಿ ಮೈಲಿಗೆಯ ಭಾವನೆಗಳನ್ನು ಬಳಸಿ ದಲಿತ ಕಾರ್ಮಿಕರನ್ನು ದಲಿತಕೇರಿಗಳಲ್ಲಿ ಪ್ರತ್ಯೇಕಿಸಿ ಇಟ್ಟರು. ಉದ್ಯಮಗಳಲ್ಲಿ ದಲಿತರನ್ನು ದೈಹಿಕ ಶ್ರಮದ ಇಲ್ಲವೇ ಸಫಾಯಿ ಕಾರ್ಯಗಳಿಗೆ ಸೀಮಿತಗೊಳಿಸಿದರು. ಉತ್ತಮ ವೇತನದ ಕೆಲಸಗಳಿಂದ ದೂರವಿರಿಸಿದರು. ಮೇಲ್ಜಾತಿಯ ಕಾರ್ಮಿಕರು ಮತ್ತು ಬಂಡವಾಳಶಾಹಿಗಳು ಒಂದು ಗೂಡಿ ಆಧುನಿಕತೆ ಮತ್ತು ಪರಂಪರೆಯ ಸಹಯೋಗವನ್ನು ಸಾಧಿಸಿ ಉದ್ಯಮಗಳಲ್ಲಿ ಮತ್ತು ವಾಸಪ್ರದೇಶಗಳಲ್ಲಿ ಅಸ್ಪೃಶ್ಯತೆಯ ಆಚರಣೆಗೆ ಮರುಹುಟ್ಟು ನೀಡಿದರು.

ಹೀಗೆ ವಸಾಹತುಶಾಹೀ ಆಧುನಿಕತೆ ದಲಿತರ ಪಾಲಿಗೆ ಮಿಶ್ರ ವರವಾಯಿತು. ಒಂದು ಕಡೆ ಊಳಿಗಮಾನ್ಯ ವ್ಯವಸ್ಥೆ ಕಪಿಮುಷ್ಠಿಯಿಂದ ದಲಿತರನ್ನು ಬಿಡುಗಡೆಗೊಳಿಸುವಂತೆ ಕಂಡಿತು. ಆದರೆ ಅವರ ವಿಮೋಚನೆಯ ಕ್ಷೇತ್ರ ವಿಸ್ತಾರವಾಗದೆ ದಲಿತರು ಒಂದು ಮಿತಿಗೆ ಕಟ್ಟಿಹಾಕಲ್ಪಟ್ಟರು. ಸ್ವಾತಂತ್ರೋತ್ತರ ಕಾಲದ ಸಂವಿಧಾನಾತ್ಮಕ ಕ್ರಮಗಳು ಹಾಗೂ ಸರ್ಕಾರದ ಕಲ್ಯಾಣ ನೀತಿಗಳು ದಲಿತರನ್ನು ಅವಕಾಶಗಳಿಂದ ವಂಚಿಸುವುದನ್ನು ತಡೆಯುವ ಉದ್ದೇಶ ಹೊಂದಿದ್ದವು. ಹೀಗಾಗಿ ದಲಿತರಲ್ಲಿ ಕೆಲವರು ತಾಂತ್ರಿಕ ಮತ್ತು ವೃತ್ತಿ ಶಿಕ್ಷಣವನ್ನು ಪಡೆದರು. ಕೆಲವರು ಪಾರ್ಲಿಮೆಂಟನ್ನೂ, ಶಾಸನಸಭೆಗಳನ್ನೂ, ಇನ್ನು ಕೆಲವರು ಸೇವಾ ವಲಯವನ್ನೂ ಪ್ರವೇಶಿಸಿದರು. ಅನೇಕರು ತಮ್ಮ ಜೀವನಶೈಲಿಯನ್ನು ಬದಲಾಯಿಸಿ ಪಾಶ್ಚಾತ್ಯ ಜೀವನ ಶೈಲಿಯನ್ನು ಅನುಸರಿಸತೊಡಗಿದರು. ಆದರೆ ಬಹುಪಾಲು ದಲಿತರ ಆಧುನಿಕತೆಯ ಹಕ್ಕು ಪ್ರಭುತ್ವದಿಂದಾಗಲೀ ಹಿಂದೂ ಸಮಾಜದಿಂದಾಗಲೀ ಮನ್ನಣೆ ಪಡೆಯದೆ ಸೊರಗಿತು. ಭಾರತ ಸರ್ಕಾರ ದಲಿತರಿಗೆ ಹೆಚ್ಚು ಘನತೆಯುಳ್ಳ ಬದಲೀ ವೃತ್ತಿಗಳನ್ನು ಒದಗಿಸುವುದರಲ್ಲಿ ವಿಫಲವಾಯಿತು. ಹೆಚ್ಚಿನ ದಲಿತರು ಚರ್ಮ ಹದಮಾಡುವ, ಚಿಂದಿ ಹಾಯುವ ಮತ್ತು ಸಫಾಯಿ (ಜಾಲಮಾಲಿ) ಕೆಲಸಗಳನ್ನೇ ಮಾಡಬೇಕಾಯಿತು. ದಲಿತರ ಪ್ರತ್ಯೇಕ ಕೇರಿಗಳನ್ನು ಇಲ್ಲವಾಗಿಸಿ ಎಲ್ಲಾ ಜನಾಂಗದವರ ವಾಸ ಪ್ರದೇಶಗಳನ್ನು ನಿರ್ಮಿಸುವ ಅರೆಮನಸ್ಸಿನ ಪ್ರಯತ್ನಗಳು ವಿಫಲವಾದವು. ಭಾರತದ ನಗರಗಳಲ್ಲಿ ದಲಿತರ ಕೇರಿಗಳು ಮರುಜನ್ಮ ಪಡೆದವು.

ದಲಿತರ ಪ್ರತ್ಯೇಕಕರಣ ಕೇವಲ ವಾಸಸ್ಥಳಗಳಿಗೆ ಸೀಮಿತವಾಗದೆ ಅವರ ಮಾರುಕಟ್ಟೆಗಳಿಗೂ ವಿಸ್ತರಣೆಗೊಂಡಿತು. ಕೊಳ್ಳುವ ಶಕ್ತಿಯ ಮಿತಿಯಿಂದಾಗಿ ಅವರು ಕೆಳದರ್ಜೆಯ ಅಥವಾ ಖೋಟಾ ಸರಕುಗಳ ಶನಿವಾರ ಭಾನುವಾರದ ಬಜಾರುಗಳಲ್ಲಿ ಮಾತ್ರ ವ್ಯವಹರಿಸಬೇಕಾಯಿತು. ಈ ಮಾರುಕಟ್ಟೆಗಳು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕೀಳೆಂದು ಪರಿಗಣಿತವಾದವುಗಳು.

ಹೀಗೆ ಆಧುನಿಕತೆ ದಲಿತರಿಗೆ ಘನತೆ ಹಾಗೂ ಸಮಾನತೆಯ ಪೂರ್ಣ ಅವಕಾಶಗಳನ್ನು ಸೃಷ್ಟಿ ಮಾಡಲಿಲ್ಲ. ಅದು ಕೇವಲ ವಿಕಲವೂ, ಭಿನ್ನವೂ ಆದ ಸ್ವಾತಂತ್ರ್ಯವನ್ನು ಸಮಯ ಪ್ರಜ್ಞೆಯನ್ನೂ ದಲಿತರಿಗೆ ನೀಡಿದೆ. ನಿಗದಿತ ಕೆಲಸದ ಅವಧಿಯಿಂದ ಉದ್ಯೋಗಗಳಲ್ಲಿ ಸಮಯದ ಮೇಲಿನ ಹಿಡಿತ ಕೆಲವು ದಲಿತರಿಗೆ ಸಾಧ್ಯವಾಗಿದೆ. ಆದರೆ ಪರಿಣಾಮಕಾರಿಯಾದ ಕೊಳ್ಳುವ ಶಕ್ತಿಯಿರದ ಕಾರಣ, ಅವರು ಮಾರುಕಟ್ಟೆಯ ಸಮಯದ ಮೇಲೆ ತಮ್ಮ ಹಿಡಿತ ಹೊಂದಿಲ್ಲ. ಸರಕುಗಳು ಹೊಸತಾಗಿಯೂ, ಉತ್ತಮ ಗುಣಮಟ್ಟದ್ದಾಗಿಯೂ ಇರುವಾಗ ಅವರನ್ನು ಮಾರುಕಟ್ಟೆಯಿಂದ ದೂರ ಇರಿಸಲಾಗುತ್ತದೆ. ದಲಿತರು ಅಥವಾ ಇನ್ನಾರೇ ಬಡವರು ವಸ್ತುಗಳು ಹಳತೂ, ಗುಣಮಟ್ಟದಲ್ಲಿ ಕನಿಷ್ಟವೂ ಆದಾಗ ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸಬಲ್ಲರು. ಬಡತನ ಕನಿಷ್ಟ ಗುಣಮಟ್ಟದ ಜೀವನಕ್ಕೆ ಜನರನ್ನು ಕಟ್ಟಿಹಾಕುತ್ತದೆ. ಹೀಗೆ ಸಮಯದ ಮೇಲಿನ ಸಾಪೇಕ್ಷೆ ಹಿಡಿತದಿಂದ ದಲಿತರು ಸಮಯದ ನಷ್ಟಕ್ಕೆ ಒಳಗಾಗುತ್ತಾರೆ. ಸದಾ ಹೆಚ್ಚುತ್ತಿರುವ ಆರ್ಥಿಕ ಅಗತ್ಯದಿಂದಾಗಿ ಅವರು ಒಬ್ಬರಿಗಿಂತ ಹೆಚ್ಚು ಮಾಲೀಕರ ಕೆಳಗೆ ಬೇರೆ ಬೇರೆ ಅವಧಿಗಳಲ್ಲಿ ಕೆಲಸ ಮಾಡುತ್ತಾ ಸ್ವಾತಂತ್ರ್ಯ ಹರಣಕ್ಕೆ ಒಳಗಾಗುತ್ತಾರೆ. ಹೀಗೆ ಒಂದು ಸ್ಥಿರ ಮತ್ತು ನಿಯಂತ್ರಿತ ಸಮಯಪ್ರಜ್ಞೆಯಿಂದ ಹೊರಗುಳಿಯುವುದರಿಂದ ದಲಿತರ ಆಧುನಿಕತೆಯ ಹಂಬಲ, ಹುಡುಕಾಟ ಯಶಸ್ವಿಯಾಗುವುದರ ಬದಲು ದುರಂತಮಯವಾಗುತ್ತದೆ.

ದಲಿತರಲ್ಲಿಯೇ ಪ್ರತಿಷ್ಠಿತವಾದ ವರ್ಗದ ಆಧುನಿಕತೆಯ ಅನುಸರಿಕೆ, ಇನ್ನೊಂದು ಅರ್ಥದಲ್ಲಿ ದುಃಖಾಂತವಾಗುತ್ತದೆ. ಶ್ರೇಣೀಕೃತ ಸಮಾಜ ದಲಿತರ ಆಧುನಿಕತೆಯ ಹಕ್ಕನ್ನು ನಿರಾಕರಿಸುತ್ತದೆ. ಜಾತೀ ವ್ಯವಸ್ಥೆ, ದಲಿತರ ಸುತ್ತ ಹಗರಣಗಳು, ವದಂತಿಗಳು ಹಾಗೂ ಮಾತ್ಸರ್ಯಪೂರ್ಣ ಜಾತೀಪ್ರಕರಣಗಳನ್ನು ಕಟ್ಟುತ್ತಾ ಅವರನ್ನು ತುಚ್ಫೀಕರಿಸುತ್ತದೆ. ದಲಿತರ ಆಧುನಿಕತೆಯ ಅಪೇಕ್ಷೆಗೆ ಇನ್ನೊಂದು ಭಯವಿದೆ. ಮೇಲ್ಜಾತಿ ತನ್ನ ಆಧುನಿಕತೆಯ ಸ್ವಾಧೀನವೂ ಅಸ್ಥಿರ ಹಾಗೂ ಅಸತ್ಯ ಎಂದು ನಂಬಿಸುತ್ತದೆ. ಮೇಲ್ಜಾತಿಯ ಮಂದಿ ದಲಿತರನ್ನು ಅಧೈರ್ಯಗೊಳಿಸಲು ಆಧುನಿಕತೆಯ ತಂತ್ರಗಲನ್ನೇ ಬಳಸುತ್ತಾರೆ. ದಲಿತರು ತಮ್ಮದೇ ಆದ ಸಮುದಾಯದೊಂದಿಗೆ ವ್ಯವಹರಿಸುವಾಗ ಆಧುನಿಕತೆಯ ತತ್ವವಾದ ತಟಸ್ಥತೆ ಅಥವಾ ನಿಷ್ಪಕ್ಷಪಾತತೆಯನ್ನು ತೋರಲಾರರು ಎನ್ನುತ್ತಾರೆ. ಈ ಕುತಂತ್ರದ ಒಳಾರ್ಥಗಳು ಎರಡಾಗಿವೆ. ಒಂದು ದಲಿತರು ತಮ್ಮ ಆಧುನಿಕತೆಯ ಅರ್ಹತೆಯನ್ನು ಮೇಲ್ಜಾತಿಯವರಿಂದ ಪ್ರಮಾಣೀಕರಿಸಿಕೊಳ್ಳಬೇಕು ಎಂಬುದು. ಆದರೆ ಮೇಲ್ಜಾತಿಯವರು ದಲಿತರಿಗೆ ಈ ಮನ್ನಣೆಯನ್ನು ಎಂದೂ ನೀಡಲಾರರು. ಆದರೆ ಮೇಲ್ಜಾತಿಗಿರುವ ಆಧುನಿಕತೆಯ ಅರ್ಹತೆ ಎಂದೂ ಪ್ರಶ್ನೆಗೊಳಗಾಗದು. ಬಹುಮಂದಿ ದಲಿತರು ತಮ್ಮ ಆಧುನಿಕತೆಯನ್ನು, ಸಾರ್ವತ್ರಿಕ ಪ್ರಮಾಣಗಳ ಬದಲು, ಮೇಲ್ಜಾತಿಯವರು ಹಾಕಿಕೊಟ್ಟ ಪ್ರಮಾಣಗಳನ್ನೇ ಆಧರಿಸಿ ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ದಲಿತರು ತಮ್ಮ ಕುಟುಂಬ ಮತ್ತು ಸಮುದಾಯಗಳೊಂದಿಗೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನೇ ಕಡಿದುಕೊಳ್ಳುವಂತಹ ತ್ಯಾಗಕ್ಕೆ ಸಿದ್ಧವಾಗುತ್ತಾರೆ. ಆಧುನಿಕತೆಯ ಹುಚ್ಚು ಅರಸುವಿಕೆಯಿಂದಾಗಿ ತಮ್ಮ ಕುಟುಂಬ ಹಾಗೂ ಸಮುದಾಯದ ಬಗೆಗೆ ಪ್ರೀತಿಯ ಬದಲು ತಿರಸ್ಕಾರ, ಚುತ್ಫೀಕಾರ ಹಾಗೂ ದ್ವೇಷದ ಭಾವನೆಗಳು ಉಳಿಯುತ್ತವೆ. ಹೀಗೆ ಆಧುನಿಕತೆಯ ನಿರರ್ಥಕ ಹುಡುಕಾಟ ದಲಿತರನ್ನು ಒಂದು ರೀತಿಯ ಅನೀತಿಯುತ ವ್ಯಕ್ತಿವಾದಕ್ಕೆ ಎಳೆಯುತ್ತದೆ.

ಈ ರೀತಿಯ ಆಧುನಿಕತೆಯ ಹುಡುಕಾಟ ದಲಿತರಿಂದಲೇ ಉಗ್ರವಾದ ಟೀಕೆಗೆ ಒಳಗಾಗುತ್ತದೆ. ಈ ಟೀಕೆಯ ನೆಲೆಗಳು ಎರಡು. ಮೊದಲನೆಯದು ಆಧುನಿಕತೆ ಅಂತರ ಸಮುದಾಯಿಕ ಸಮಾನತೆಯ ತತ್ವದಲ್ಲಿ ಕೆಲಸಮಾಡಲು ವಿಫಲವಾಗಿದೆ ಎಂಬುದು. ಈ ಟೀಕೆಯ ಇನ್ನೊಂದು ನೆಲೆ ಸಮುದಾಯವಾದ. (Communitarianism).

ಆಧುನಿಕತೆಯ ಅನುಸಂಧಾನದ ಕ್ರಮಕ್ಕೆ ಭಿನ್ನಮತ ಹಲವು ದಲಿತವರ್ಗಗಳಿಂದ ಮೂಡಿಬರುತ್ತದೆ. ಆ ವರ್ಗಗಳಲ್ಲಿ ಕೆಲವೆಂದರೆ ಆಂಧ್ರದ ಮಾದಿಗರು, ಮಹಾರಾಷ್ಟ್ರದ ಮಾಂಗರು, ಕರ್ನಾಟಕದ ಆದಿದ್ರಾವಿಡರು, ತಮಿಳುನಾಡಿನ ಚಾಕಳಿಯಾರರು ಹೀಗೆ. ಈ ಸಮುದಾಯಗಳು, ಅಂತರ ಸಮುದಾಯ ಸಮಾನತೆಯನ್ನು ಒತ್ತಾಯಿಸುವಲ್ಲಿ ಸೃಜನಾತ್ಮಕ ಪ್ರೇರಣೆಯಿದೆ. ಆದರೆ ಅಂತಹ ಸಮಾನತೆಯ ಪರ್ಯಾಯದ ಹುಡುಕಾಟ ಹಾಲಿ ಇರುವ ಅಸಮಾನತೆಯ ಬೂರ್ಷ್ವಾ ಚೌಕಟ್ಟಿನೊಳಗೇ ನಡೆಯುತ್ತಿರುವುದು ದುರದೃಷ್ಟಕರ. ಸಮಾನತೆಯ ವಿಚಾರದಲ್ಲೇ ಒಂದು ಅನಂತ ಸಾಪೇಕ್ಷತೆಯಿದೆ. ಆದರೆ ತನ್ನೊಳಗೆ ಕೆಲವರನ್ನು ಮಾತ್ರ ಒಳಗೊಂಡು ಬಹುಮಂದಿಯನ್ನು ಹೊರಗಿಡುತ್ತದೆ. ಆದರೆ ಪರಿಮಿತಿಗೊಳಿಸುವ ಆಧುನಿಕತೆ ವಿರುದ್ಧದ ಅಭಿವ್ಯಕ್ತಿ ಪ್ರತಿಗಾಮಿ ಹಿಂದುತ್ವಶಕ್ತಿಗಳ ಚಿತಾವಣೆಯಿಂದಾಗಿ ವಿವಿಧ ಸಮುದಾಯಗಳ ಅಂತಃಕಲಹಕ್ಕೆ ಕಾರಣವಾಗಿದೆ. ವಿವಿಧ ಕಾರ್ಮಿಕ ಅಲ್ಪಸಂಖ್ಯಾತರು ಹಾಗೂ ಸಣ್ಣಪುಟ್ಟ ಉಪಜಾತಿಗಳು ಮೀಸಲಾತಿಯ ಬೇಡಿಕೆಯನ್ನು ಮುಂದೊಡ್ಡಿರುವುದು ಆಧುನಿಕತೆಯ ವಿದ್ಯಮಾನದ ಅಂತರ್ ವಿರೋಧಗಳನ್ನು ಬಹಿರಂಗಪಡಿಸುತ್ತದೆ.

ದಲಿತರ ಈ ಘಾಸಿಗೊಂಡ ಅಥವಾ ಕಳಂಕಿತ ಆಧುನಿಕತೆ, ದಲಿತರ ಸಮುದಾಯದಿಂದಾಗಲೇ ಇನ್ನೊಂದು ಪರೀಕ, ಎಯನ್ನು ಎದುರಿಸಬೇಕಾಗಿದೆ. ಸಮುದಾಯಕ್ಕೆ ಬೆನ್ನು ತಿರುಗಿಸಿರುವ ಆಧುನಿಕ ದಲಿತರ ಬಗೆಗಿನ ಕೋಪ, ಟೀಕೆಗಳು ‘ದಲಿತ ಬ್ರಾಹ್ಮಣ’ ಎಂಬ ಪದಗಟ್ಟಿನಲ್ಲಿ ವ್ಯಕ್ತವಾಗುತ್ತವೆ. ಸಮುದಾಯವಾದೀ ದಲಿತರು ದಲಿತ ಆಧುನಿಕತೆಯನ್ನು, ಹಿಮ್ಮುಖವಾಗಿ, ಬ್ರಾಹ್ಮಣವಾದದ ಜೊತೆ ಸಮೀಕರಿಸುತ್ತಾರೆ. ಸಮುದಾಯವಾದೀ ದಲಿತರು/ದಲಿತ ಆಧುನಿಕತೆಯನ್ನು ಎರಡು ಕಾರಣಗಳಿಂದ ಟೀಕಿಸುತ್ತಾರೆ. ಮೊದಲನೆಯ ಕಾರಣ ಆಧುನಿಕ ದಲಿತನ ವಿಶಿಷ್ಟವಾದ ಜೀವನಶೈಲಿಗೆ ಸಂಬಂಧಿಸಿದುದು. ಎರಡನೆಯದು ದಲಿತ ಪುರುಷರು ಮೇಲ್ಜಾತಿಯ ಮಹಿಳೆಯರನ್ನು ವಿವಾಹವಾಗುವ ಸಂದರ್ಭದಿಂದ ಪ್ರೇರಿತವಾದುದು. ಅಂತಹ ವಿವಾಹ ದಲಿತ ಸಮುದಾಯಕ್ಕೆ ಎರಡು ರೀತಿಯ ನಷ್ಟವನ್ನುಂಟು ಮಾಡುತ್ತದೆ ಎಂಬುದು ಅವರ ನಿಲುವು. ಮೊದಲನೆಯದಾಗಿ ಸಾಮಾಜಿಕ ನಷ್ಟ. ಎರಡನೆಯದು ಸಾಂಸ್ಕೃತಿಕ ಮತ್ತು ಭವನಾತ್ಮಕ ನಷ್ಟ. ಒಬ್ಬ ದಲಿತ ಮಹಿಳೆ ಒಂದು ಉತ್ತಮ ಜೀವನದ ಅವಕಾಶವನ್ನು ಕಳೆದುಕೊಳ್ಳುವುದರಿಂದ ಅದು ಸಾಮಾಜಿಕ ನಷ್ಟ. ಆ ದಲಿತನ ತಂದೆ ತಾಯಿಗಳು ಹಾಗೂ ಸಮುದಾಯದ ಪಾಲಿಗೆ ಅದು ಸಾಂಸ್ಕೃತಿಕ ಮತ್ತು ಭಾವನಾತ್ಮಕ ನಷ್ಟ. ಹೀಗೆ ದಲಿತ ಸಮುದಾಯದ ಒಬ್ಬ ಮುಂದುವರಿದ ಯುವಕ ಒಬ್ಬಳು ವಿಷಕನ್ಯೆಯಿಂದಾಗಿ ನಷ್ಟವಾಗುತ್ತಾನೆ. ಆಧುನೀಕರಣಗೊಂಡ ಒಬ್ಬ ದಲಿತ ಯುವಕ ತನ್ನ ಸಮುದಾಯದೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳುವಂತೆ ಮಾಡುವ ಮೇಲ್ಜಾತಿಯ ಹುಡುಗಿಗೆ ಉಗ್ರವಾದೀ ಸಮುದಾಯವಾದಿಗಳು ಅನ್ವಿಸುವ ಪ್ರತೀಕ ‘ವಿಷಕನ್ಯೆ’ ಯದಾಗಿದೆ.

ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತರು

ನಮ್ಮ ಮುಂದಿನ ಪ್ರಶ್ನೆಯೆಂದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತ ಸಮುದಾಯವಾದಿಗಳಿಗೆ ಬೆಂಬಲ ಸಿಗಲಿದೆಯೇ ಎಂಬುದು. ಎರಡು ಕಾರಣಗಳಿಂದಾಗಿ ಈ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿರುತ್ತದೆ. ಸುಶಿಕ್ಷಿತ ದಲಿತ ಮಹಿಳೆಯರು ಸಮುದಾಯವಾದಿಗಳ ಪೋಲೀಸುಗಿರಿಯನ್ನು ವಿರೋಧಿಸುತ್ತಾರೆ. ಕಾರಣ ಅದು ಅವರನ್ನು ಆಧುನಿಕತೆಯಿಂದ ದೂರವಿಡುತ್ತದೆ. ಆದ್ದರಿಂದ ದಲಿತ ಪಿತೃ ಪ್ರಾಧಾನ್ಯತೆ ಉಂದೊಡ್ಡುವ ಸಮುದಾಯವಾದೀ ತರ್ಕವನ್ನು ಅವರು ಪ್ರಶ್ನಿಸುತ್ತಾರೆ. ಎರಡನೆಯದಾಗಿ ದೇಶದಲ್ಲಿ (ಅದರಲ್ಲೂ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ) ವೃದ್ಧಿಗೊಳ್ಳುತ್ತಿರುವ ದಲಿತ ಮಧ್ಯಮವರ್ಗದಿಂದಾಗಿ, ಸುಶಿಕ್ಷಿತ ದಲಿತರಿಗೆ ಅಂತರಜಾತೀಯ ವಿವಾಹದ ಅಗತ್ಯ ಕಡಿಮೆಯಾಗುತ್ತದೆ. ಆಗ ವಿಷಕನ್ಯೆ ರೂಪ ಮೇಲ್ಜಾತಿಯ ಹುಡುಗಿಯರಿಂದ ಮಧ್ಯಮವರ್ಗದ ದಲಿತ ಹುಡುಗಿಯರಿಗೆ ವರ್ಗಾಯಿಸಲ್ಪಡುತ್ತದೆ. ಮಧ್ಯಮ ವರ್ಗದ ದಲಿತ ಮಹಿಳೆಯ ವ್ಯಕ್ತಿವಾದ, ವ್ಯಕ್ತನಿಷ್ಟತೆಗಳು, ಅವಳನ್ನು ಸಮುದಾಯವಾದೀ ತರ್ಕವನ್ನು ಮೌನವಾಗಿ ಒಪ್ಪಿಕೊಳ್ಳಲು ಬಿಡುವುದಿಲ್ಲ. ತಮ್ಮ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಗೆ ಭಂಗ ತರುವ ಸಮುದಾಯವಾದೀ ಪೋಲೀಸುಗಿರಿಯನ್ನು ಅವರು ಪ್ರಶ್ನಿಸುವುದು ಸಹಜ. ಈ ಪ್ರಕ್ರಿಯೆ ದೇಶದ ಹಲವು ಭಾಗಗಳಲ್ಲಿ ಈಗಲೇ ಪ್ರಾರಂಭವಾಗಿದೆ. ಹೀಗೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತ ಸಮುದಾಯದಲ್ಲೇ ಅಂತರಗಳನ್ನು ಸೃಷ್ಟಿ ಮಾಡುವುದರಲ್ಲಿ ಆಧುನಿಕತೆ ಪ್ರಮುಖ ಪಾತ್ರವಹಿಸುತ್ತದೆ. ಈ ಅಂತರಗಳು ಲಿಂಗಾಧಾರಿತವಾಗಿಯೂ ಇರುತ್ತವೆ.

ಆದರೆ ಈ ಪ್ರಕ್ರಿಯೆಗೂ ಒಂದು ಮಿತಿ ಇದೆ. ಏಕೆಂದರೆ ಜಾಗತೀಕರಣದ ಯುಗದಲ್ಲಿ ಮಹಿಳೆಯರು ಅದರಲ್ಲೂ ವಿಶೇಷವಾಗಿ ದಲಿತ ಮಹಿಳೆಯರು ಉತ್ಪಾದಕ ಹಾಗೂ ಲಾಭದಾಯ. ಕ ವೃತ್ತಿಗಳಿಂದ ಹೊರಗುಳಿಯುತ್ತಾರೆ. ಬೂರ್ಷ್ವಾ ಆಧುನಿಕತೆಯ ಸಾಂಸ್ಕೃತಿಕ ಆಧಾರ ಉತ್ಪಾದಕ ಶ್ರಮವೇ ಆಗಿದೆ. ಇಪ್ಪತ್ತೊಂದನೆಯ ಶತಮಾನ ದಲಿತ ಮಹಿಳೆಗೆ ದ್ವಂದ್ವಾತ್ಮಕವಾಗಿರುತ್ತದೆ. ಒಂದು ಕಡೆ ಸಾಮಾಜಿಕ ಹಾಗೂ ದಲಿತ ಪಿತೃಪ್ರಧಾನ ವ್ಯವಸ್ಥೆಗಳಿಂದ ವಿಮೋಚನೆಗೊಳಿಸುವ ವ್ಯಕ್ತಿನಿಷ್ಠತೆಯನ್ನು ಆಧುನಿಕತೆ ಒದಗಿಸುತ್ತದೆ. ಇನ್ನೊಂದೆಡೆ ಈ ಬಂಡವಾಳಶಾಹೀ ಚೌಕಟ್ಟಿನಲ್ಲಿ, ವಾಸ್ತವಿಕ ನೆಲೆಯನ್ನು ಹಂದಿರದ ಆಧುನಿಕತೆಯ ಸಾಕಾರಕ್ಕಾಗಿ ಅವರು ಹೆಣಗುತ್ತಾರೆ. ಅವರ ಹೆಣಗಾಟ ಒಂದು ಹುಸಿಯಾದ ಹಾಗೂ ಘಾಸಿಗೊಂಡ ಆಧುನಿಕತೆಯ ಸ್ವಾಧೀನದಲ್ಲಿ ಪರಿಣಮಿಸುತ್ತದೆ.

ಇಂತಹ ಸ್ಥಿತಿಯಲ್ಲಿ ಆದುನಿಕತೆಯ ಬಗೆಗಿನ ದಲಿತರ ನಿಲುವು ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಂದಿಗ್ಘಮಯವಾಗಿರುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ದಲಿತರು ಆಧುನಿಕತೆಯತ್ತ ಆಕರ್ಷಿತರಾಗುತ್ತಾರೆ. ಆಧುನಿಕತೆ, ಕೀಳೆಂದು ಪರಿಗಣಿಸಲ್ಪಡುವ ವೃತ್ತಿಗಳಿಂದ ದಲಿತರನ್ನು ಬಿಡುಗಡೆಗೊಳಿಸಬಲ್ಲ ವಿಮೋಚನಾ ಮಾರ್ಗವಾಗಿ ಕಾಣುತ್ತದೆ. ತಮ್ಮನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಿಡುಗಡೆಗೊಳಿಸುವಂತಹ ಉದ್ಯೋಗಗಳನ್ನು ದಲಿತರು ಹುಡುಕಬಯಸುತ್ತಾರೆ. ಆದರೆ ಅವರ ಪಾಲಿಗೆ ಈ ರೀತಿಯ ಆಧುನಿಕತೆ ಮರೀಚಿಕೆಯಾಗಲಿದೆ. ಏಕೆಂದರೆ ದಲಿತರು ಹೀನಾಯವೆನಿಸಿಕೊಂಡು ವೃತ್ತಿಗಳಿನ್ನು ತ್ಯಜಿಸಿ ಗೌರವಯುತ ಎನಿಸಿಕೊಂಡ ವೃತ್ತಿಗಳನ್ನು ಪಡೆಯುವ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಭಾರತದ ಕಳಂಕರಹಿತ, ಪರ್ಯಾಯ ಉದ್ಯೋಗಗಳನ್ನು ಒದಗಿಸಲು ವಿಫಲವಾಗುತ್ತದೆ. ದೇಶದ ಯಥಾಸ್ಥಿತಿ ಬಂಡವಾಳಶಾಹಿಯ ನಿರೀಕ್ಷೆಗಳಿನ್ನು ಪೂರ್ಣಗೊಳಿಸುವುದರಿಂದ ಜಾತೀ ವ್ಯವಸ್ಥೆಯ ನಿವಾರಣೆ ಬಂಡವಾಳಶಾಹಿಗೆ ಬೇಕಿರುವುದಿಲ್ಲ. ದಲಿತರಿಗೆ ಸಾಮಾಜಿಕ ಘನತೆಯುಳ್ಳ ವೃತ್ತಿಗಳು ದೂರವುಳಿಯುವುದರಿಂದ ಅವರು ತಮ್ಮ ಹೀನಾಯಗೊಂಡ ವೃತ್ತಿಗಳ ಮೈಲಿಗೆಯ ಭಾವನೆಯನ್ನು ತೊಡೆಯಲು ತಮ್ಮ ವೃತ್ತಿಗಳಲ್ಲಿ ತಾಂತ್ರಿಕ ಸುಧಾರಣೆಯನ್ನೂ ಯಾಂತ್ರೀಕರಣವನ್ನೂ ಒತ್ತಾಯಿಸುತ್ತಾರೆ. ಹೀಗೆ ತಾಂತ್ರಿಕ ಆಧುನಿಕತೆ ತಮ್ಮ ಕಸುಬುಗಳಿಗೆ ಘನತೆಯನ್ನು ತಂದುಕೊಡುವ ನಿಟ್ಟಿನಲ್ಲಿ ದಲಿತರನ್ನು ಆಕರ್ಷಿಸುತ್ತದೆ.

ತಾಂತ್ರಿಕ ಆಧುನಿಕತೆ ಮಧ್ಯಮವರ್ಗದ ದಲಿತರನ್ನು ಆಕರ್ಷಿಸುತ್ತದೆ. ದಲಿತರಲ್ಲದ ಇತರ ಹಿಂದುಳಿದ ವರ್ಗಗಳು ದಲಿತರಿಗಾಗಿ ಕೆಲಸಮಾಡಲು ನಿರಾಕರಿಸುತ್ತದೆ. ಇಂತಹ ಕೆಲಸಗಳಿಗೆ ಮಾನವಶ್ರಮದ ಬದಲು ಯಂತ್ರಗಳನ್ನೇ, ದಲಿತರು ಅಪೇಕ್ಷಿಸುತ್ತಾರೆ. ಏಕಂದರೆ ಯಂತ್ರಗಳು ಜಾತಿ ಅಥವಾ ಅಸ್ಪೃಶ್ಯತೆಯ ಆಧಾರದ ಮೇಲೆ ದಲಿತರ ವಿರುದ್ಧ ತಾರತಮ್ಯ ಮಾಡುವುದಿಲ್ಲ. ಹೀಗೆ ತಾಂತ್ರಿಕ ಆಧುನಿಕತೆ ದಲಿತರ ಸಬಲೀಕರಣದ ಶಕ್ತಿಯಾಗುತ್ತದೆ. ಆದರೆ ಅದೇ ವೇಳೆ ಇಂತಹ ಆಧುನಿಕತೆ ದಲಿತರನ್ನು ಕ್ರಿಯಾತ್ಮಕ ಮತ್ತು ಸೃಜನಶೀಲ ಸಾಮಾಜಿಕ ಸಂಬಂಧಗಳಿಂದ ಹೊರಗಿಡುತ್ತದೆ. ಹೀಗೆ ದೃಢನಂಬಿಕೆಯ ಬದಲು ಅನಿವಾರ್ಯತೆಯಿಂದ ಸ್ವೀಕರಿಸಿದ ಆಧುನಿಕತೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತರ ಪಾಲಿಗೆ ದ್ವಂದ್ವಾತ್ಮಕ ಉಳಿಯಲಿದೆ.

ಈ ಪರಿಸ್ಥಿತಿ ಇಪ್ಪತ್ತೊಂದನೆಯ ಶತಮಾನದ ದಲಿತ ಸಂವೇದನೆಯ ಶಾಶ್ವತ ಸ್ಥಿತಿಯಾಗಲಿದೆಯೇ? ಆಧುನಿಕತೆಯ ಸಮಸ್ಯೆ ದಲಿತರ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರವೃತ್ತಿಗಳನ್ನು ಒಮ್ಮೆಗೇ ಒಳಗೊಳ್ಳುತ್ತದೆಯೇ? ಈ ಪ್ರಶ್ನೆಗೆ ಉತ್ತರವನ್ನು ಹೆಚ್ಚು ನಿಖರವಾಗಿ ಮಾತಿನಲ್ಲಿ ನೀಡಬಹುದು. ಬಹುಪಾಲು ದಲಿತರಿಗೆ ಆಧುನಿಕತೆಯ ಭ್ರಮನಿರಸನ ಕೇವಲ ನಿಷ್ಟ್ರಿಯವಾಗಿ ಉಳಿಯದು. ಅದು ವಿಮೋಚನೆಯ ಅಯವನ್ನು ಒಳಗೊಂಡು, ಪ್ರಸ್ತುತ ವಸ್ತುಸ್ಥಿತಿಯ ಹಾಗೂ ಸಾಮಾಜಿಕ ದರ್ಶನದ ವಿಮರ್ಶೆಯಾಗುತ್ತದೆ.

ಆಧುನಿಕತೆಯ ಬಗೆಗಿನ ಭ್ರಮನಿರಸನಗಳು

ದಲಿತರಿಗೆ ಉಂಟಾಗಲಿರುವ ಆಧುನಿಕತೆಯ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳು ಹಿಗಿವೆ. ಮೊದಲನೆಯದಾಗಿ ದಲಿತರಿಗೆ ಹಾಗೂ ಸಮಾಜದ ಬಡವರ್ಗಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳು ಕಡಿಮೆಯಾಗುತ್ತಾ ಹೋಗಿ ಅವರ ಆಧುನಿಕತೆಯ ನೆಲೆಗಳು ಕ್ಷೀಣಿಸುತ್ತವೆ. ಇಲ್ಲವೇ ಅರ್ಥಹೀನವಾಗುತ್ತವೆ. ಉಪಯುಕ್ತ ಶಿಕ್ಷಣ ಎಂದರೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಾಧಾರಿತವಾಗಿರುತ್ತದೆ. ಅಂತಹ ಶಿಕ್ಷಣ ಕೇವಲ ಖಾಸಗಿ ಕ್ಷೇತ್ರದಲ್ಲಿದ್ದು, ದುಬಾರಿಯಾಗಿರುವುದರಿಂದ ದಲಿತರಿಗೆ ಮತ್ತು ಬಡವರ್ಗಗಳಿಗೆ ನಿಲುಕುವಂತಹುದಲ್ಲ. ಜಾಗತೀಕರಣದ ಒತ್ತಡದಿಂದಾಗಿ ಸರಕಾರ ಶೈಕ್ಷಣಿಕ ಕ್ಷೇತ್ರದಿಂದ ಹಿಂದೆ ಸರಿಯುತ್ತಿರುವುದರಿಂದ ದಲಿತರು ಮತ್ತು ಬಡವರು ಉಪಯುಕ್ತ ಶಿಕ್ಷಣದಿಂದ ವಂಚಿತಗೊಳ್ಳಲಿದ್ದಾರೆ. ದಲಿತ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ ತೃಪ್ತಿಪಡಬೇಕಾಗುತ್ತದೆ. ಶೈಕ್ಷಣಿಕ ಹಿಂದುಳಿಕೆ ಮತ್ತು ತೀವ್ರ ಬಡತನವಿರುವ ಉತ್ತರದ ರಾಜ್ಯಗಳಲ್ಲಿ ದಲಿತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ ಸಿಗದೆ ಹೋಗಬಹುದು.

ಎರಡನೆಯದಾಗಿ ದಲಿತರು ಶಿಕ್ಷಣದಿಂದ ಹೊರಗೆ ಉಳಿಯುವುದರಿಂದ ಮೀಸಲಾತಿ ವ್ಯವಸ್ಥೆ ಅಪ್ರಯೋಜಕವಾಗುತ್ತದೆ. ಖಾಸಗೀಕರಣ ಮತ್ತು ಜಾಗತೀಕರಣದ, ವಿಶ್ವಬ್ಯಾಂಕ್ ಒತ್ತಡಗಳಿಂದಾಗಿ ಕೆಲಸದ ಆಯ್ಕೆ ಪೂರ್ಣವಾಗಿ ಮೆರಿಟ್ ಆಧರಿತವಾಗುತ್ತದೆ. ಬಿ. ಜೆ. ಪಿ. ನಾಯಕತ್ವದ ಹಿಂದುತ್ವ ಸರ್ಕಾೞ ದಲಿತರಿಗಿದ್ದ ಮೀಸಲಾತಿ ಅವಕಾಶಗಳನ್ನು ಕಡಿತಗೊಳಿಸಿ ಐದು ಆಜ್ಞೆಗಳನ್ನು ಹೊರಡಿಸಿದೆ. ಹೆಚ್ಚುಗಳಿಕೆಯ, ಸಾಮಾಜಿಕ ಘನತೆಯುಳ್ಳ ವೃತ್ತಿಗಳು ಶ್ರೀಮಂತ ದ್ವಿಜರ ಏಕಸ್ವಾಮ್ಯಕ್ಕೆ ಒಳಪಡುತ್ತವೆ. ದಲಿತರು ಎಂದಿನಂತೆ ಹೀನಾಯಗೊಂಡ ಜಾಡಮಾಲಿಗಳಾಗಿ ಇಲ್ಲವೇ ಚರ್ಮಧ ಕೆಲಸ ಮಾಡುತ್ತಾ, ಚಿಂದಿ ಆಯುತ್ತಾ ಕಾಲದೂಡಬೇಕಾಗುತ್ತದೆ. ಈ ವೃತ್ತಿಗಳಿಗೆ ಮನ್ನಣೆಯಾಗಲೀ, ಪೈಪೋಟಿಯಾಗಲೀ ಇರದು. ಅವು ಆಧುನಿಕವೆನಿಸಿಕೊಳ್ಳುವುದಿಲ್ಲ. ದಲಿತರೆಲ್ಲರೂ ಆಧುನಿಕತೆಯಿಂದ ಹೊರಗುಳಿಯುವುದರಿಂದ ಅವರಲ್ಲಿ ಹಿಂದುಳಿದ ಮತ್ತು ಆಧುನೀಕೃತ ಸಮುದಾಯಗಳ ನಡುವೆ ಸಂಘರ್ಷವಿರುವುದಿಲ್ಲ. ಮೇಲಿನ ಪ್ರಕ್ರಿಯೆಯ ಸಾಂಸ್ಕೃತಿಕ ಆಕಾಂಕ್ಷೆಗಳನ್ನು ನೆಲಸಮಗೊಳಿಸುವಂಥದ್ದು. ಇದರಿಂದಾಗಿ ಸಮುದಾಯವಾದೀ ದಲಿತರು ಆಧುನೀಕೃತಗೊಂಡ ದಲಿತರಿಂದ ಸಮುದಾಯ ನಿಷ್ಟೆಯನ್ನು ಒತ್ತಾಯಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಏಕೆಂದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತರಲ್ಲಿ ಒಂದು ಆಧುನಿಕೃತಗೊಂಡ ಸಮುದಾಯವೇ ಇರುವುದಿಲ್ಲ. ದಲಿತ ಸಮುದಾಯ ಗಾಢವಾದ ಮತ್ತು ತೀವ್ರವಾದ ಸಾಂಸ್ಕೃತಿಕ ಮತ್ತು ಭೌತಿಕ ಆಕಾಂಕ್ಷೆಗಳಿಂದ ವಂಚಿತವಾದಾಗ ಸಮುದಾಯವಾದದ ತರ್ಕ ಕೆಲಸ ಮಾಡುವುದಿಲ್ಲ. ಏಕೆಂದರೆ ಸಮುದಾಯವಾದ ಅಂತಹ ಆಕಾಂಕ್ಷೆಗಳ ಸಂಪೂರ್ಣ ನಷ್ಟವನ್ನಾಧರಿಸದೆ ಸಾಪೇಕ್ಷ ಭಂಗವನ್ನಾಧರಿಸಿದೆ.

ವಿಫಲತೆಗೆ ಕಾರಣಗಳು

ಸಮುದಾಯವಾದೀ ತರ್ಕ ವಿಫಲವಾಗುವ ಅಂತಿಮ ಕಾರಣ ಹೀಗಿದೆ. ದಲಿತರಿಗೆ ಚರಿತ್ರೆಯಲ್ಲಿ ತಾವು ಒಮ್ಮೆ ಮೇಲ್ಮೈಯಾದ ಅಥವಾ ಅಧಿಕಾರವನ್ನನುಭವಿಸಿದ ಸ್ಮೃತಿಯಾಗಲೀ, ಅಂತಹ ಸ್ಮೃತಿಯಿಂದ ಮೂಡುವ ಹಳವಂಡ (Nostalgia)ವಾಗಲೀ ಸಾಧ್ಯವಿಲ್ಲ. ದಲಿತರಿಗೆ ಸಾಧ್ಯವಾಗುವುದು ಅಪಮಾನ ಶೋಷಣೆಗಳ ಚರಿತ್ರೆಯ ಸ್ಮೃತಿ. ಅಂಬೇಡ್ಕರ್ ಆಗಾಗ್ಗೆ ಹೇಳುತ್ತಿದ್ದಂತೆ ಯಾವುದೇ ಸಕ್ತಿಯ ಸಂಪನ್ಮೂಲಗಳಿರದ ಒಂದು ಸಮುದಾಯದ, ಸ್ಮೃತಿ ಅಥವಾ ಸಮುದಾಯ ಪ್ರಜ್ಞೆ ಸಬಲಗೊಳಿಸುವುದಕ್ಕಿಂತ ದುರ್ಬಲಗೊಳಿಸುವಂತಹುದೇ ಆಗಿರುತ್ತದೆ. ಇಂದಿಗೂ ದಲಿತರಿಗೆ ಒಂದು ಸಮುದಾಯದ ಆಸ್ತಿಭಾರವಾದ ಸ್ವತ್ತುಗಳಿಲ್ಲ. ಮೇಲ್ಮೈಯಾಗಿರುವ, ಐಹಿಕವಾಗಿ ಶ್ರೀಮಂತವಾದ ಸಮುದಾಯಗಳು ತಮ್ಮ ಸಂಪತ್ತನ್ನು ಕಾಪಾಡಲು ಮತ್ತು ವೃದ್ಧಿಸಿ, ಸಮುದಾಯದೊಳಗೇ ಉಳಿಸಲು ಸಮುದಾಯಿಕ ತರ್ಕವನ್ನು ಬಳಸುತ್ತವೆ. ಜಾಗತೀಕರಣದ ಯುಗದಲ್ಲೂ ಮೇಲ್ಜಾಜಿ ಮೇಲ್ವರ್ಗದ ಸಮುದಾಯಗಳು ಅಪಾರ ಸಂಪನ್ಮೂಲಗಳನ್ನು ಹೊಂದಿವೆ. ತಮ್ಮ ಸಮುದಾಯಿಕ ಮಾಹಿತಿ ಜಾಲವನ್ನು, ದೇಶ-ವಿದೇಶಗಳಲ್ಲಿ ಚಲನಶೀಲತೆಗಾಗಿ ಬಳಸಿಕೊಳ್ಳುತ್ತವೆ. ವಿಶ್ವಹಿಂದೂ ಪರಿಷತ್‌ಗಿರುವ ಮೇಲ್ಜಾಜಿಯ, ವಿದೇಶಿ ನೆಲೆಗಳ ಬೆಂಬಲವನ್ನು ಈ ಸಂದರ್ಭದಲ್ಲಿ ತಿಳಿಯಬೇಕು. ಈ ವಾಸ್ತವ ದಲಿತರನ್ನು ಎಚ್ಚರಗೊಳಿಸಬೇಕು. ಒಂದೆಡೆ ಅವರು ಈ ದೂರನೆಲೆಯ ದೇಶೀವಾದವನ್ನು ವಿಮರ್ಶಿಸಬೇಕು. ಇನ್ನೊಂದೆಡೆ ಹಿಂದುತ್ವದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರಶ್ನಿಸಬೇಕು. ಸಂಪನ್ಮೂಲರಹಿತರಾಗಿ, ಅವಕಾಶಗಳಿಂದ ವಂಚಿತರಾಗುವ ದಲಿತರು ಇಂದು ಭಾರತದ ಪ್ರಭುತ್ವಕ್ಕೆ ಬೆನ್ನು ತಿರುಗಿಸಲಾಗದು. ರಾಷ್ಟ್ರ ಎನ್ನುವ ಒಂದು ಭೌತಿಕ ವಾಸ್ತವದ ಮೂಕದರ್ಶಿಗಳಾಗಿರುವ ಅವರು ತಮ್ಮ ಸಾಂಸ್ಕೃತಿಕ ಆಕಾಂಕ್ಷೆಗಳ ಸಾಕಾರಕ್ಕಾಗಿ ರಾಷ್ಟ್ರೀಯತೆಯ ಪುನರ್ ವ್ಯಾಖ್ಯಾನ ಮಾಡಬೇಕು. ದಲಿತರ ರಾಷ್ಟ್ರೀಯತೆಯ ಪರಿಕಲ್ಪನೆ ಸಮಾನತೆಯ ಮೌಲ್ಯದಿಂದ ಮುನ್ನಡೆಯುತ್ತದೆ. ಬುರ್ಷ್ವಾ ಆಧುನಿಕತೆ ಮತ್ತು ಫ್ಯಾಸಿಸಂನ ಮೌಲ್ಯಗಳಾದ ದಮನ ಅಥವಾ ತಾತ್ಕಾಲಿಕ ಗೆಲುವಿನಿಂದ ನಿರ್ದೇಶಿಲ್ಪಡುವುದಿಲ್ಲ. ಇಪ್ಪತ್ತೊಂದನೆಯ ಶತಮಾನದ ದಲಿತ ಪ್ರಜ್ಞೆ ಸಮಾನತೆ ಮತ್ತು ಘನತೆಯ ವಿಚಾರಗಳನ್ನಾಧರಿಸಿ ರೂಪಿತವಾಗುತ್ತದೆ. ಹೀಗೆ ಒಂದು ಪರ್ಯಾಯ ಆಧುನಿಕತೆ ಅಥವಾ ಹೊಸ ದಲಿತ ಪ್ರಜ್ಞೆ ಭೌತಿಕ ರಚನೆಗಳನ್ನಾಧರಿಸಬೇಕು. ಶ್ರಮದ ಶೋಷಣೆ ಮತ್ತು ಮೀರುವಿಕೆಯನ್ನಾಧರಿಸಿ ಅನಾದಿಯಲ್ಲದ ಸಾಮಾಜಿಕ ವಾಸ್ತವದ ಮೇಲೆ ನಿಲ್ಲಬೇಕು.

ಈ ದಲಿತ ಪ್ರಜ್ಞೆ ಸಂಪ್ರದಾಯವಾದಿಗಳು, ಪರಿಸರವಾದಿಗಳು ಮತ್ತು ಗಾಂಧೀವಾದಿಗಳು ಸೂಚಿಸುವ ಪರ್ಯಾಯಗಳನ್ನು ಪ್ರಶ್ನೆಗೊಡ್ಡುತ್ತದೆ. ಜಾಗತೀಕರಣದ ಸಕ್ತಿಗಳು ಸಮುದಾಯಗಳ ಮೇಲೆ ನಡೆಸುವ ನಾಗರೀಕತೆಯ ಹಿಂಸೆಯ ಸಂದರ್ಭದಲ್ಲಿ ಈ ಮೂರು ಪರ್ಯಾಯಗಲು ಉದಯಿಸಿದವು ಎಂದು ಹೇಳಲಾಗುತ್ತದೆ. ಈ ವಾದದಲ್ಲಿ ದಲಿತರು ತಮ್ಮ ಪಾರಂಪಾರಿಕವಾದ ಸಮುದಾಯ ಆಧರಿತ ಕಸುಬುಗಳನ್ನು ಮರಳಿ ಪಡೆಯಲು ಹೋರಾಡಬೇಕೆಂಬ ಸೂಚನೆಯಿದೆ. ದಲಿತರು ತಮ್ಮ ಪಂಗಡದ ಹಾಗೂ ಮೇಲ್ಜಾತಿಯ ಪರಂಪರಾವಾದಿಗಳು ಮತ್ತು ಸಮುದಾಯವಾದಿಗಳ ಉಪದೇಶವನ್ನು ಒಪ್ಪಿಕೊಳ್ಳುವರೇ? ಇಲ್ಲ. ಇಂತಹ ಉಪದೇಶ ಅಪಾಯಕಾರಿ ಎಂಬುದನ್ನು ಅವರು ನಾಲ್ಕು ಕಾರಣಗಳಿಂದ ಮನಗಾಣುತ್ತಾರೆ.

೧. ದಲಿತರನ್ನು ಪ್ರತ್ಯೇಕಿಸಿ ತಮ್ಮ ಸಮುದಾಯಿಕ ವೃತ್ತಿಗಳಿಗೆ ಬಂಧಿಸಲಿರುವ ಈ ಪರ್ಯಾಯಗಳು ಮೇಲ್ಜಾಜಿ ಹಾಗೂ ಮೇಲ್ವರ್ಗಗಳಿಗೆ ಸಂಪನ್ಮೂಲಗಳ ಹಾಗೂ ಲಾಭಕರ ವೃತ್ತಿಗಳ ಏಕಸ್ವಾಮ್ಯವನ್ನೂ, ಅಪ್ರಶ್ನಿತ ಒಡೆತನವನ್ನೂ ನೀಡುತ್ತವೆ.

೨. ಈ ಪರ್ಯಾಯಗಲು ದಲಿತರನ್ನು ಸಶಕ್ತಗೊಳಿಸುವುದಿಲ್ಲ. ನಾಗರಿಕ ಸಮಾಜ ಹಾಗೂ ಮಾರುಕಟ್ಟೆಯಲ್ಲಿ ಅವರ ಸ್ಥಾನ ಮತ್ತು ವಿಶ್ವಾಸಾರ್ಹತೆಗಳನ್ನು ಉತ್ತಮಪಡಿಸುವುದಿಲ್ಲ.

೩. ರಾಜಕೀಯವಾಗಿ ದಲಿತರ ಅಸಹಾಯಕತೆಯನ್ನು ಪ್ರತಿಬಿಂಬಿಸುವ ಈ ಪರ್ಯಾಯ, ಅವರು ತಮ್ಮ ಹೀನಾಯಗೊಳಿಸಿದ ವೃತ್ತಿಗಳಲ್ಲಿ ಮುಂದುವರಿಯುವುದು ಅನಿವಾರ್ಯ ಮತ್ತು ಅಪರಿಹಾರ್ಯ ಎಂಬುದಾಗಿ ಒಪ್ಪಿಸುತ್ತದೆ.

೪. ಚಾರಿತ್ರಿಕ ಮತ್ತು ರಾಜಕೀಯ ನೆಲೆಯಲ್ಲಿ ಈ ಪರ್ಯಾಯ, ದಲಿತರ ಪ್ರತಿಸಾಂಸ್ಕೃತಿಕ ಏಕತೆಯ ಹಾಗೂ ಸಾಮೂಹಿಕ ಪ್ರತಿಭಟನೆಯ ಸಾಧ್ಯತೆಯನ್ನು ತಿರಸ್ಕರಿಸುತ್ತದೆ. ಪ್ರತಿಭಟನೆಗಳನ್ನು, ಅಸಮಾನತೆ ಮತ್ತು ಶೋಷಣೆಯ ಇಡೀ ವ್ಯವಸ್ಥೆಗೆ ಪ್ರತಿಯಾಗಿ ರೂಪಿಸಲು ಸಾಧ್ಯವಾಗದಂತೆ ಮಾಡಿ, ಅವುಗಳನ್ನು ಸ್ಥಳೀಯ ಮಿತಿಗೆ ಒಳಪಡಿಸುತ್ತದೆ.

ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತ ಪ್ರಜ್ಞೆ ಮೇಲೆ ಹೇಳಿದ ಪರ್ಯಾಯಗಳ ಅಪಾಯವನ್ನು ಗ್ರಹಿಸುತ್ತದೆ. ದಲಿತರಿಗೆ ಭಿನ್ನ ಮತ್ತು ಕಳಂಕಿತ ಆಧುನಿಕತೆಯನ್ನು ನೀಡಿದ ಮೀಸಲಾತಿಯಂತಹ ಕ್ರಮಗಳ ಮಿತಿಯನ್ನು ಗುರುತಿಸುತ್ತದೆ. ಈ ಅರಿವು ಮೀಸಲಾತಿಯ ಚೌಕಟ್ಟಿನಹೊರಗೆ ಅಂತರ ಸಮುದಾಯಗಳ ಪ್ರಶ್ನೆಯನ್ನು ಎತ್ತುವಂತೆ ದಲಿತರನ್ನು ಪ್ರೇರೇಪಿಸಿದೆ. ಸಮಾನ ಹಕ್ಕು, ಸಂಪನ್ಮೂಲಗಳ ಸಮಾನ ವಿತರಣೆ ಮತ್ತು ಸಂಪನ್ಮಲಗಳಿಗೆ ಸಮಾನ ಪ್ರವೇಶಾವಕಾಶ ಇವು ಸಮಾನತೆಯ ಪ್ರಮುಖ ವಿಚಾರಗಳಾಗುತ್ತವೆ. ವ್ಯಕ್ತಗತ ಮೇಲ್ಮುಖ ಚಲನೆ ಈ ದೇಶದ ಶೇ. ೧೫ರಷ್ಟಿರುವ ದಲಿತರ ಪಾಲಿಗೆ ಅಪ್ರಸ್ತುತವಾಗುತ್ತದೆ. ಬಹುಪಾಲು ದಲಿತರ ದೃಷ್ಟಿಯಿಂದ, ಸಾಂಸ್ಕೃತಿಕವಾಗಿ ಚಲನಶೀಲರಾದ, ಪ್ರತಿಷ್ಠಿತ ದಲಿತರು ಒಂದು ಮಾನಂದಡವಾಗುವುದಿಲ್ಲ. ಹೊಸ ದಲಿತ ಪ್ರಜ್ಞೆ ಸಾಮಾಜಿಕ ವಿಚಾರವನ್ನು ವ್ಯಕ್ತಿಗತ ಮುಖದಿಂದ ಬೇರ್ಪಡಿಸುತ್ತದೆ. ದಲಿತರು ತಮ್ಮ ವಿಚಾರ ಮತ್ತು ಕ್ರಿಯೆಗಳನ್ನು ಸಾಮಾಜಿಕ ನೆಲೆಯಲ್ಲಿ ರೂಪಿಸಿಕೊಳ್ಳಲಿದ್ದಾರೆ. ಈ ಪ್ರಕ್ರಿಯೆ ದಲಿತರೊಳಗೆ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಸಮಾನಾಂತರವಾದ ಮತ್ತು ಲಂಬವಾದ ಸಾಮಾಜಿಕ ಪಥಗಳನ್ನು ಏರ್ಪಡಿಸುತ್ತದೆ. ಅಲ್ಲದೆ ಸಾಮಾಜಿಕ ಮನ್ನಣೆ ಹಾಗೂ ರಾಜಕೀಯ ಮುನ್ನಡೆಗಳಿಗೆ ಅಗತ್ಯವಾದ ನೈತಿಕ ಯಜಮಾನ್ಯವನ್ನು ಪಡೆಯಲು ದಲಿತರಿಗೆ ಸಹಾಯ ಮಾಡುತ್ತದೆ. ಈ ನೈತಿಕ ಯಜಮಾನ್ಯ ಪಾರದರ್ಶಕ ರಾಜಕೀಯ ಉದ್ದೇಶಗಳು ಹಾಗೂ ಕ್ರಿಯೆಗಳನ್ನು ಆಧರಿಸಿರುತ್ತದೆ. ಮತ್ತು ಸಾರ್ವಜನಿಕವಾಗಿ ಪ್ರಜಾಪ್ರಭುತ್ವದ ಅವಕಾಶಗಳನ್ನು ವಿಸ್ತರಿಸುವ ಬಾಧ್ಯತೆ ಹೊಂದಿರುತ್ತದೆ. ಬಡತನ ಮತ್ತು ಉತ್ಪಾದಕ ಚಟುವಟಿಕೆಗಳಿಂದ ಹೊರಗುಳಿಯುವ ದಲಿತರಲ್ಲಿ ವಾಸ್ತವದ ಅರಿವು ಮತ್ತು ಸಾಧ್ಯತೆಯ ಕಲ್ಪನೆಗಳು ಬೆಸುಗೆಯಾಗಲಿವೆ. ಪರಿಣಾಮವಾಗಿ ದಲಿತರು ಅವರ ನಾಯಕರ ಆಧುನೀಕರಣ ಕಾರ್ಯಕ್ರಮದಿಂದ ದೂರ ಉಳಿಯುತ್ತಾರೆ. ದಲಿತರ ಖಾಸಗಿ ಸಂಬಂಧಗಳನ್ನೂ, ಜೀಗುಟುತನವನ್ನು ಪರಿಗಣಿಸಿದೆ ನಾಯಕರು ಹಾಕಿಕೊಳ್ಳುವ ದಲಿತೀಕರಣದ ಅಥವಾ ಬೌದ್ಧ ಧಮೀಯ ಯೋಜನೆಗಳು ವಿಫಲಗೊಳ್ಳುವುದು ಸಹಜ. ಪರ್ಯಾಯ ಆಧುನಿಕತೆಯಲ್ಲಿ ದಲಿತರು ಪರದ್ವೇಷಿಯಾದ ಅಹಂಭಾವದ ನೆಲೆಯನ್ನು ಮೀರಿ ಸಹನಶೀಲವಾದ, ಪರಸ್ಪರ ವಿನಿಮಯದ ಸಾಧ್ಯತೆಯ, ಸಾಮೂಹಿಕ ನೆಲಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾಗುವುದು ಉದಾರವಾದದ ವ್ಯಾಪಕತೆಯನ್ನು ಅವಲಂಬಿಸಿದೆ. ಉದಾಹರಣೆಗೆ, ಸಂಘರ್ಷ ದಲಿತರು ಮತ್ತು ಆಸ್ತಿಯ ಒಡೆಯರುಗಳ ನಡುವೆ ಇರುತ್ತದೆ. ಸಾಮಾಜಿಕ ರಚನೆಗಳು ತಮ್ಮ ವಿರುದ್ಧವಾಗಿದ್ದು ಬಡವರಾದ ಇತರ ಹಿಂದುಳಿದ ವರ್ಗಗಳ ಸಹಕಾರವಿರದ ಸಂದರ್ಭಗಳಲ್ಲಿ ದಲಿತರು ತಮ್ಮ ಹೋರಾಟವನ್ನು ಏಕಾಏಕಿಯಾಗಿ ನಡೆಸಬೇಕಾಗುತ್ತದೆ.

ಎಲ್ಲಿ ಉದರವಾದವು ಬಹುಜನ ಸಮಾಜದ ಪ್ರಜ್ಞೆಯ ಮೇಲೆ ನಾಗರಿಕ ಪರಿಣಾಮ ಹೊಂದಿದೆಯೋ ಅಲ್ಲಿ ದಲಿತರಿಗೆ ಅವರ ಹೋರಾಟಗಳಲ್ಲಿ ಸಹಕಾರ ದೊರೆಯುತ್ತದೆ. ಉದಾಹರಣೆಗೆ ಮಹಾರಾಷ್ಟದಲ್ಲಿ ದಲಿತರು ಮತ್ತು ಬಹುಜನ ಸಮಾಜದ ನಡುವಿನ ತಿಕ್ಕಾಟಗಳು ಸೌಮ್ಯಗೊಳ್ಳುತ್ತಿದೆ. ಬಡತನದ ಸಾರ್ವತ್ರೀಕರಣದಿಂದಾಗಿ ಶ್ರಮಿಕ ವರ್ಗಗಳ ನಡುವಿನ ಭೇದಭಾವಗಳು, ಅಂತರಗಳು ಕಡಿಮೆಯಾಗುತ್ತಿವೆ. ಜಾಗತೀಕರಣದ ಯುಗದಲ್ಲಿ ಗ್ರಾಮೀಣ ಕ್ಷೇತ್ರಗಳು ಉಪೇಕ್ಷೆ ಗೊಳಲಾಗುವುದರಿಂದ ಮೇಲಿನ ಪ್ರಕ್ರಿಯೆ ತೀವ್ರವಾಗುತ್ತದೆ. ಬಡಜಾತಿಗಲು ಒಂದುಗೂಡುತ್ತವೆ. ಈ ಜಾತಿಗಳು ತಮ್ಮ ವಿರೋಧಿಗಳನ್ನು ಸರಿಯಾಗಿ ಗುರುತಿಸಿ, ಸಾಮೂಹಿಕವಾಗಿ ನಿರ್ಣಾಯಕವಾದ ಹೋರಾಟದಲ್ಲಿ ತೊಡಗಲಿವೆ. ಸಮಾನ ಹಿತಾಸಕ್ತಿಗಳಿಂದಾಗಿ ದಲಿತರ ಮತ್ತು ಇತರ ಹಿಂದುಳಿದ ವರ್ಗಗಳ ನಡುವಿನ ಮಡಿ ಮೈಲಿಗೆಯ ತಾರತಮ್ಯಗಳು ಕಡಿಮೆಯಾಗುತ್ತವೆ. ಇಂದು ದಲಿತರ ವಿವಾಹ ಕೂಟಗಳಲ್ಲಿ ಇತರ ಹಿಂದುಳಿದ ವರ್ಗಗಳ ಜನ ಕೆಲಸ ಮಾಡುತ್ತಾರೆ. ಅವರು ದಲಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಇಂತಹ ಒಗ್ಗೂಡುವಿಕೆ ಯಜಮಾನ್ಯದ ಚೌಕಟ್ಟಿನ ಹೊರಗೆ ನಾಗರಿಕ ಸಮಾಜದಲ್ಲಿ ಮಾತ್ರ ನಡೆಯುತ್ತದೆ. ಅದು ತನ್ನ ವಿಸ್ತಾರ ಮತ್ತು ಪ್ರಮಾಣದಲ್ಲಿ ಪ್ರತಿರೋಧಿ ರಚನೆಗಳ ಹರಡುವಿಕೆಗೆ ಅನುಗುಣವಾಗಿ ಅಸಮಾನವಾಗಿರುತ್ತದೆ.

ಇಂತಹ ದಲಿತ ಮತ್ತು ಹಿಂದುಳಿದ ವರ್ಗಗಳ ಬಾಂದವ್ಯ ಇಂದಿನ ಮಹಾರಾಷ್ಟ್ರ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಾಧ್ಯ. ಆದರೆ ದಲಿತ ವಿರೋಧಿ ರಚನೆಗಳು ಇನ್ನೂ ಗಟ್ಟಿಯಾಗಿರುವ ಉತ್ತರ ಭಾರತದಲ್ಲಿ ಹಾಗೂ ತಮಿಳುನಾಡು ಮತ್ತು ಆಂಧ್ರಗಳಲ್ಲಿ ಈ ವರ್ಗ ಬಾಂಧವ್ಯ ಸಾಧ್ಯವಾಗಲು ಕೆಲಕಾಲ ಬೇಕಾಗುತ್ತದೆ. ಈ ಪ್ರದೇಶಗಳಲ್ಲಿ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ನಡುವೆ ಆಗಾಗ ನಡೆಯುವ ಘರ್ಷಣೆಗಳು ಈ ಮಾತಿಗೆ ಆಧಾರವಾಗಿದೆ.

ಇಪ್ಪತ್ತನೆಯ ಶತಮಾನದ ದಲಿತರು

ಇಪ್ಪತ್ತನೆಯ ಶತಮಾನದ ದಲಿತ ಚಿಂತನೆಯಲ್ಲಿ ಮೂರು ಪ್ರವೃತ್ತಿಗಳನ್ನು ಗುರುತಿಸಬಹುದು. ಒಂದು ಅಂಬೇಡ್ಕರ್ ವಿಚಾರಧಾರೆಯ ಪರಿಪೂರ್ಣವಾದ (Essentialisation). ಇದರ ಇದರ ಪ್ರಕಾರ ಅಂಬೇಡ್ಕರ್ ವಿಚಾರಧಾರೆಗೆ ಹೊರತಾದುದೂ ಯಾವುದೂ ಇಲ್ಲ. ಎರಡನೆಯ ಪ್ರವೃತ್ತಿ ಅಂಬೇಡ್ಕರ್ ಚಿಂತನೆಯ ವೈಚಾರೀಕರಣ (Ideologisation). ಇದರ ಅನುಯಾಯಿಗಳು ಅಂಬೇಡ್ಕರ್ ವಿಚಾರಧಾರಯೆನ್ನು ಗಾಂಧಿಯನ್ನೋ, ಮಾರ್ಕ್ಸ್‌ನನ್ನೋ ಕೇವಲ ಕಂಡಿಸಲು ಬಳಸುವುದಿಲ್ಲ. ಬದಲಾಗಿ ಅಂಬೇಡ್ಕರ್ ರ ವಿಚಾರಧೌರೆಯೊಂದಿಗೆ ಮಾರ್ಕ್ಸ್ ಅಥವಾ ಗಾಂಧಿಯನ್ನು ಅಗತ್ಯಕ್ಕೆ ಅನುಗುಣವಾಗಿ ಅನುಸಂಧಾನ ಮಾಡಿಕೊಳ್ಳುತ್ತಾರೆ. ಮೂರನೆಯ ಪ್ರವೃತ್ತಿ ಅಂಬೇಡ್ಕರ್ ರ ತಿರಸ್ಕರಣ ಈ ಮಾರ್ಗದ ಅನುಯಾಯಿಗಳು ಅಂಬೇಡ್ಕರ್ ರ ಸೃಜನಶೀಲ ವ್ಯಖ್ಯಾನವನ್ನೇ ಅನುಮಾನಿಸಿ, ಅಪಹಾಸ್ಯ ಮಾಡಿ ತಿರಸ್ಕರಿಸುತ್ತಾರೆ. ಇವರಿಗೆ ತಮ್ಮದೇ ವರ್ಗಕ್ಕೆ ಸೇರಿದ ಅಂಬೇಡ್ಕರ್ ಅವರನ್ನು ಸಮರ್ಥಿಸಿಕೊಳ್ಳುವ ಬೌದ್ಧಿಕ ಬಲವಾಗಲೀ ನೈತಿಕ ಸ್ಥೈರ್ಯವಾಗಲೀ ಇರಲಿಲ್ಲ. ಇದು ಒಂದು ರೀತಿಯ ಬೌದ್ಧಿಕ ದೌರ್ಬಲ್ಯದಿಂದ, ಅಭದ್ರತೆಯಿಂದ ಹೊರಟ ಆಧುನಿಕ ವಿರೋಧಿ ನಿಲುವು.

ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ದಲಿತರು ಅಂಬೇಡ್ಕರ್ ಅವರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿದ್ದಾರೆ. ಅಂಬೇಡ್ಕರ್ ಅವರ ಓದು ಕೇವಲ ಅವರ ಸಮರ್ಥನೆಗಾಗಿ ಇರುವುದಿಲ್ಲ. ಅದು ಗಾಂಧಿ, ಮಾರ್ಕ್ಸ್ ಮತ್ತು ಪೆರಿಯಾರರ ವಿಚಾರಧಾರೆಗಳೊಂದಿಗಿನ ಸಮಾನ ಅಂಶಗಳ ಶೋಧಕ್ಕಾಗಿ ಇರುತ್ತದೆ. ಅಂಬೇಡ್ಕರರ ಪುನರ್ ವ್ಯಾಖ್ಯಾನ ಮತ್ತು ನಿರ್ದಿಷ್ಟ ಚೌಕಟ್ಟುಗಳಲ್ಲಿ ಅಂಬೇಡ್ಕರ್ ರ ಪುನರ್ ಸ್ಥಾಪನೆ ಇವು ದಲಿತರ ವೈಚಾರಿಕ ಕಾರ್ಯಕ್ರಮವಾಗುತ್ತವೆ. ಅವರ ಬಗೆಗಿನ ಚರ್ಚೆ ವ್ಯಾಪಕವಾಗಿರುವ ಮಹಾರಾಷ್ಟ್ರ ಮತ್ತು ಆಂಧ್ರಗಳಲ್ಲಿ ಅವರ ವಿಚಾರಗಳ ಮರು ವ್ಯಾಖ್ಯಾನವಾಗಲಿದೆ. ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಅಂಬೇಡ್ಕರ್ ವಿಚಾರಧಾರೆಯ ಮರು ಸಮರ್ಥನೆ ನಡೆಯಲಿದೆ. ಅಂಬೇಡ್ಕರ್ ಅವರನ್ನು ಅಲಕ್ಷಿಸಿ ನೇರವಾಗಿ ಮಾರ್ಕ್ಸ್‌ವಾದಕ್ಕೆ ಜಿಗಿದಿದ್ದ ಪಶ್ಚಿಮ ಬಂಗಾಲಳದ ದಲಿತ ನಕ್ಸಲೀಯರು ಈಗ ಅಂಬೇಡ್ಕರ್ ವಿಚಾರಧಾರೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರ ಅನುಸಂಧಾನ ಪ್ರಯತ್ನಗಳು ವೈಚಾರಿಕನೆಲೆಗಿಂತ ಹೆಚ್ಚಾಗಿ ಭಾವುಕತೆಯಲ್ಲಿ ಮುಳುಗಿವೆ. ಭಾವುಕತೆ, ವೈಚಾರಿಕತೆಯ ವಿರುದ್ಧ ಸ್ಫೋಟಗೊಳ್ಳುವ ವಿಪರ್ಯಾಸವನ್ನು ಕಾಣುತ್ತೇವೆ.

ದಲಿತ ಚಿಂತನೆ ಕೇವಲ ಒಳಗಿನ ವಿರೋಧಿಗಳ ವಿರುದ್ಧ ಮಾತ್ರವಲ್ಲದೆ ರಾಜಕೀಯವಾಗಿ ಮತ್ತು ವೈಚಾರಿಕವಾಗಿ ನೈತಿಕ ಯಜಮಾನ್ಯದ ವಿರುದ್ಧವೂ ಆಗಿರುತ್ತದೆ. ಅದು ಒಳಗಿನ ಶಕ್ತಿಗಳು ಹಾಗೂ ಹೊರಗಿನ ಮಿತ್ರರೊಂದಿಗಿನ ವಾಗ್ವಾದ ಮತ್ತು ಸಂಭಾಷಣೆಗಳನ್ನು ಆಧರಿಸುತ್ತದೆ. ಚಾರಿತ್ರಿಕವಾಗಿ ಎಡಪಂಥೀಯ ಶಕ್ತಿಗಳು ದಲಿತ ಚಿಂತನೆಯ ಸತ್ವವನ್ನೂ, ಪ್ರಕಾರಗಳನ್ನು, ಸಂಕೇತಗಳನ್ನೂ ಅರಗಿಸಿಕೊಳ್ಳಬೇಕಾಗುತ್ತದೆ. ತಮಿಳುನಾಡಿನ ಎಡ ಪಂಥೀಯರು ಶ್ರಮಿಕ ಜನತೆಯನ್ನು ಜಾತಿಯ ಆಧಾರದ ಮೇಲೆ ಒಂದೂಗೂಡಿಸಲು ನಡೆಸುತ್ತಿರುವ ಹೊಸತೂ, ಸ್ವತಂತ್ರವೂ ಆದ ಪ್ರಯತ್ನ ಈ ದಿಸೆಯಲ್ಲಿ ಒಂದು ಬೆಳವಣಿಗೆ. ದಲಿತರ ಪಾಲಿಗೆ ಇಪ್ಪತ್ತೊಂದನೆಯ ಶತಮಾನ ಚರಿತ್ರೆಯ ಅಂತ್ಯವಲ್ಲ. ಅದು ಹೊಸ ಚರಿತ್ರೆಯ ಸೃಷ್ಟಿಕಾಲ. ಅದು ವಿವಿಧ ವಿರೋಧಿ ಬಣಗಳ ಎದುರಿನ ಹೋರಾಟದ ಚರಿತ್ರೆ. ಅಸಮಾನತೆಗೆ ಆಧಾರವಾದ ಮತ್ತು ಅಸಮಾನತೆಗೆ ಮರುಹುಟ್ಟುಗಳನ್ನು ನೀಡುವ ರಚನೆಗಳನ್ನು ಬದಲಾಯಿಸುವುದರಲ್ಲಿ ಆಸಕ್ತಿ ಇರುವ ಎಲ್ಲಾ ಗುಂಪುಗಳ ನಡುವಿನ ಕೊಡುಕಳ್ಳುವಿಕೆಯ ಚರಿತ್ರೆ. ಇದು ನಿಜವಾದ ಪರ್ಯಾಯ ಆಧುನಿಕತೆಯ ಪ್ರಣಾಳಿಕೆ. ಇದು ಆಧುನಿಕತೆಯಲ್ಲಿ ದಲಿತರ, ಕೇವಲ ವಾಕ್ಚಾತುರ್ಯದ ಒಳಗೊಳ್ಳುವಿಕೆಯನ್ನಾಧರಿಸಿಲ್ಲ. ಬದಲಾಗಿ ಪ್ರತಿಯೊಬ್ಬ ಮಾನವನ ಪರಸ್ಪರ ಮನ್ನಣೆಯ ತತ್ವವನ್ನಾಧರಿಸಿದೆ.

—-
* ಭಾರತೀಯ ಇತಿಹಾಸ, ಸಮಾಜ ಮತ್ತು ಸಂಸ್ಕೃತಿ (ವಸಾಹತೋತ್ತರ ಸಂದರ್ಭದಲ್ಲಿ ನೂತನ ವ್ಯಾಖ್ಯಾನಗಳು) ಸಂ. ಡಾ. ರಾಜಾರಾಮ ಹೆಗಡೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ಈ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಮತ್ತು ಸಂಪಾದಕರಿಗೆ ವಂದನೆಗಳು (ಸಂ. )