ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾಗಿದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ, ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸ ಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ತರಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲು ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಇಂದು ಚರಿತ್ರೆ ಎಂಬುದನ್ನು ಮನುಷ್ಯನ ಮೂಲಕ ಹುಟ್ಟಿ ಅವನ ಮೂಲಕವೇ ಎಲ್ಲಾ ಸ್ಥಿತಿ ಸತ್ಯಗಳ, ವಿವರಗಳ ಗ್ರಹಿಕೆಯಿಂದ ನಿರಂತರ ವಿಕಾಸವಾಗುತ್ತಲೇ ನಾಳಿನ ಎಚ್ಚರಗಳನ್ನು, ನೆನ್ನೆಯ ನೆನಪುಗಳನ್ನು ಸದ್ಯದ ಸಾಮಾಜಿಕ ಸತ್ಯಗಳನ್ನು ನಿರೂಪಿಸುವ ಸಮಷ್ಟಿಯಾದ ಕಾಲ ದೇಶ ಸಮುದಾಯಗಳ ಒಂದು ವಿಸ್ತಾರ ಕಥನವೆನ್ನಬಹುದು. ಏಕೆಂದರೆ ಈ ನಿರ್ವಚನ ತನ್ನ ಕಾಲಕ್ಕನುಗುಣವಾಗಿ ಮನುಷ್ಯನ ಎಲ್ಲ ಜೀವಂತ ಮಾಹಿತಿಯನ್ನು ನೆನೆಯುವುದರ ಜೊತೆಗೆ ತನ್ನ ಅಗತ್ಯಗಳನ್ನು ಚರಿತ್ರೆಯಲ್ಲಿ ಪುನರ್ ಸೃಷ್ಟಿಸಿಕೊಳ್ಳುತ್ತದೆ. ಒಂದರ್ಥದಲ್ಲಿ ಆಧುನಿಕ ಜಗತ್ತಿನ ಇತಿಹಾಸವೆಂದರೆ ಇದೇ ಆಗಿದೆ. ದಲಿತ ಜನಾಂಗದ ಚರಿತ್ರೆಯ ವಿವಿಧ ಆಯಾಮಗಳ ಸಂದರ್ಭದಲ್ಲಿ ಇಂಥ ಅಧ್ಯಯನಗಳು ಹೆಚ್ಚಾಗಿ ನಡೆಯಬೇಕಾಗಿದೆ. ಈ ದೃಷ್ಟಿಯಿಂದ ಕೆಲವು ಆಯ್ದ ಮಹತ್ವದ ವಿಷಯಗಳನ್ನು ಕೇಂದ್ರೀಕರಿಸಿ ಈ ಕೃತಿಯನ್ನು ಹೊರತರಲಾಗಿದೆ. ಒಂದರ್ಥ ಇತಿಹಾಸ ಎಂದಿಗೂ ಸುಳ್ಳು ಹೇಳುವುದಿಲ್ಲ. ಆದರೆ ಇತಿಹಾಸಗಾರರೆಂದು ಕರೆಸಿಕೊಂಡವರು ಇತಿಹಾಸವನ್ನು ಇಂದು ಸುಳ್ಳು ಹೇಳುವ ಹಾಗೆ ಮಾಡಿದ್ದಾರೆ. ಈ ಹಂತದಲ್ಲಿ ಮೊದಲು ಬಲಿ ಭಾರತೀಯ ಸಾಮಾಜಿಕ ಚರಿತ್ರೆ ಎಂದರೆ ತಪ್ಪಾಗದು.

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು ಎಂಬ ಸಂಪಾದಿತ ಕೃತಿಯು ಭಾರತದ ಸಾಮಾಜಿಕ ಚರಿತ್ರೆ ಹಾಗೂ ಸಮಕಾಲೀನ ಆಯಾಮಗಳ ಒಂದು ಮಹದ್ಧರ್ಶನ ಕಟ್ಟಿಕೊಡುತ್ತದೆ. ದಲಿತರು ಪ್ರಸ್ತುತದ ಜೊತೆ ನಿರಂತರ ಕಾದಾಟದಲ್ಲಿರುವುದನ್ನು ಇಲ್ಲಿ ಮನಗಾಣಬಹುದು. ಕೆಲವು ಲೇಖನಗಳು ಐತಿಹಾಸಿಕ ಹಾಗೂ ಸಮಾಜವನ್ನು ಪರಿಭಾವಿಸುವ ಕ್ರಮಗಳ ಜೊತೆಗೆ ಆಶ್ಚರ್ಯಗಳನ್ನು ನೀಡುತ್ತವೆ. ಆದರೆ ಇಂದಿನ ಕಾಲಘಟ್ಟದಲ್ಲಿ ಇಂಥ ಕೃತಿಗಳು ಓದುವುದು ಕಡಿಮೆಯಾಗುತ್ತಿದೆ. ಏಕೆಂದರೆ ಯಾರ ಪರವಹಿಸಿ ಇಂಥ ಕೃತಿಗಳು ಹೊರಬರುತ್ತಿವೆಯೋ ಅವರಿಗೆ ಓದೋಕೆ ಬರುತ್ತಿಲ್ಲ. ಯಾರನ್ನು ವಿರೋಧಿಸಿ ಬರೀತಾಇದ್ದರೋ ಅವರು ಈ ಕೃತಿಗಳನ್ನು ಓದೋಕೆ ಹೋಗಲ್ಲ. ಈ ವೈರುಧ್ಯದ ಮಧ್ಯೆ ಇಂದಿನ ದಲಿತ ಚರಿತ್ರೆ ತೆವಳಾಡುತ್ತಿದೆ. ಸ್ವತಂತ್ರ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅರವತ್ತು ವಸಂತಗಳನ್ನು ಪೂರೈಸಿದರೂ ದಲಿತರು ಮಾತ್ರ ಪ್ರಾಚೀನ ಸಾಮಾಜಿಕ ಸಂದರ್ಭದಲ್ಲಿಯೇ ಬದುಕು ನಡೆಸುತ್ತಿರುವುದು ನಮ್ಮ ಭಾರತದ ಸಾಮಾಜಿಕ ಅಸಂಸ್ಕೃತಿ ಚರಿತ್ರೆಗೆ ಹಿಡಿದ ಕನ್ನಡಿಯಾಗಿದೆ.

ಇಂದಿನ ಸನ್ನಿವೇಶದಲ್ಲಿ ಬ್ರಿಟಿಷರಿಂದ ನಮ್ಮ ರಾಷ್ಟ್ರವನ್ನು ಮುಕ್ತಗೊಳಿಸಿದವೆಂದು ಹಾಗೂ ಇಂದು ಭಾರತವು ಪ್ರಜಾತಂತ್ರ ದಾರಿಯಲ್ಲಿ ದಾಪುಗಾಲು ಹಾಕುತ್ತಾ ಸಾಧಿಸಿದ ಹಾಗೂ ಸಾಧಿಸುತ್ತಿರುವ ಅಭಿವೃದ್ಧಿಯೇ ಮಹಾನ್‌ಸಾಧನೆ ಎಂದು ನಮ್ಮ ರಾಷ್ಟ್ರನಾಯಕರೆನ್ನಿಸಿಕೊಂಡವರು ಆಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ವಿಶ್ವದಲ್ಲೇ ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘಂಟಾಘೋಷವಾಗಿ ಹೇಳುತ್ತಾ ಅಭಿಮಾನದಿಂದ ಬೀಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇಂದು ಭಾರತ ವಿಶ್ವದ ಪ್ರಮುಖ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ, ಜಾಗತಿಕ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯ ಸ್ಥಾನ ಅಲಂಕರಿಸಿದೆ ಹಾಗೂ ಆಧುನಿಕ ಕೈಗಾರಿಕೋದ್ಯಮದಲ್ಲಿಯೂ ಅಷ್ಟೇ ಮುನ್ನಡೆಯನ್ನು ಸಾಧಿಸಿದೆ ಎಂದು ಅಭಿಮಾನಪಡುತ್ತಿದ್ದಾರೆ. ಹಾಗಿದ್ದರೆ ನಾವು ಚರಿತ್ರೆಯಲ್ಲಿ ಅಧ್ಯಯನ ಮಾಡಿರುವ ಪ್ರಗತಿಯ ನೋಟ ಸುಳ್ಳಾದಂತಾಗುವುದಿಲ್ಲವೇ? ಇದರ ಜೊತೆಗೆ ಈ ಸರ್ವಾಂಗೀಣ ಬೆಳವಣಿಗೆಯು ಭಾರತದ ಕೋಟ್ಯಾಂತರ ಪ್ರಜೆಗಳ ಬದುಕಿನ ಮಟ್ಟ ಎತ್ತರಿಸುವಲ್ಲಿ ವಿಫಲವಾಗದದ್ದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಬಡತನದ ರೇಖೆಯ ಕೆಳಗೆ ಅರೆಮಾನವ ಜೀವನ ನಡೆಸುತ್ತಿರುವ ಲಕ್ಷಲಕ್ಷ ಜನರ ದಾರುಣವಾದ ಅಸ್ತಿತ್ವಕ್ಕೆ ಕಾರಣರಾರು? ತನ್ನ ಕೋಟ್ಯಾಂತರ ಪ್ರಜೆಗಳನ್ನು ಇಂಥಾ ಔದಾಸೀನ್ಯ ನಿರ್ಲಕ್ಷತೆಯಿಂದ ನೋಡಿಕೊಳ್ಳುತ್ತಿರುವ ದೇಶವನ್ನು ಒಂದು ಸುಸಂಸ್ಕೃತ ನಾಗರಿಕ ದೇಶವೆಂದು ಕರೆಯಬಹುದೆ? ರಾಷ್ಟ್ರದ ವ್ಯವಹಾರವನ್ನು ಸಂಘಟಿಸುವ, ದೇಶದ ಆಡಳಿತವನ್ನು ನಡೆಸುವ ಅನೇಕ ಪ್ರಕರಣಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಉತ್ತಮವಾದ ಹಾಗೂ ಉದಾತ್ತವಾದ ವಿಧಾನವೆಂದು ಹೇಳಲಾಗುತ್ತದೆ. ಇದಕ್ಕಾಗಿ ನಾವು ನಮ್ಮ ಅಖಂಡ ಭಾರತಕ್ಕೆ ಈ ವಿಧಾನವನ್ನೇ ಅಳವಡಿಸಿಕೊಂಡಿದ್ದೇವೆ. ಆದರೆ ಈ ಕುರಿತು ಸಾದರಪಡಿಸಲಾಗುವ ವಾದ ಹೀಗಿರುತ್ತದೆ. ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾದ, ಸೇವಾ ಸೌಲಭ್ಯಗಳಿಂದ ದೂರವಾಗಿ ಮೂಲೆಗೆ ತಳ್ಳಲ್ಪಟ್ಟ ಜನಸಮುದಾಯ ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ವಾತಂತ್ರ್ಯದ ಮೂಲಕ ಮಾತ್ರ ಮಾನವೀಯ ಘನತೆಯೊಂದಿಗೆ ಬದುಕಿ ಬಾಳುವ ಹಕ್ಕನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂಬ ಆಶಯದ ಮೇಲೆ ಸ್ವೀಕರಿಸಲಾಗಿದೆ. ಆದರೆ ಇಂಥ ಪ್ರಜಾಪ್ರಭುತ್ವದ ಆಶಯ ಭಾರತೀಯ ನಾಗರಿಕರ ಅರ್ಧದಷ್ಟು ಜನರಿಗೆ ಘನತೆ ಗೌರವದ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳಲು ವಿಫಲವಾಗಿರುವುದೇಕೆ? ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ತಮ್ಮ ಪ್ರಜಾತಾಂತ್ರಿಕ ಹಕ್ಕುಗಳನ್ನು ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಬಳಸಿ ನಮ್ಮ ಬದುಕಿನ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳುವಲ್ಲಿ ಸೋತದ್ದೇಕೆ? ಭಾರತದ ಕೆಳವರ್ಗದ ಅರ್ಧದಷ್ಟು ಜನರು ಮಾನವೀಯ ಘನತೆಯಿಂದ ಬದುಕಲೂ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿ, ಮೂಲಭೂತ ಹಕ್ಕುಗಳನ್ನು, ಪ್ರಜಾಪ್ರಭುತ್ವದ ಅವಕಾಶಗಳನ್ನು ಅನುಭೋಗಿಸಲು ಸಾಧ್ಯವೇ? ಕಳೆದ ಅರವತ್ತು ವರ್ಷಗಳಿಂದ ಜೀವಂತಿಕೆಯಿಂದ ಪುಟಿಯುತ್ತಿರುವ ಪ್ರಜಾಪ್ರಭುತ್ವದ ಹೊರತಾಗಿಯೂ ಬಹುಸಂಖ್ಯೆಯ ಜನರು ಕಡುಬಡತನದಲ್ಲಿ ತೊಳಲಾಡುತ್ತಿರುವುದನ್ನು ಹಾಗೂ ಅರ್ಧದಷ್ಟು ಜನರು ಅನೇಕ ಅವಕಾಶಗಳಿಂದ ವಂಚಿತರಾಗುತ್ತಿರುವುದನ್ನು ನಾವು ಸಮರ್ಥಿಸಿಕೊಳ್ಳಲು ಸಾಧ್ಯವೆ? ಜೀವಂತ ಪ್ರಜಾಪ್ರಭುತ್ವದಲ್ಲಿಯೇ ಈ ರೀತಿಯ ಕಡುಬಡತನ, ದಾರಿದ್ರ್ಯ, ದೌರ್ಜನ್ಯ, ಅಸ್ಪೃಶ್ಯತೆ, ಜೀತಗಾರಿಕೆ, ಸಾಮಾಜಿಕ ದುಃಸ್ಥಿತಿಗಳು ಹಾಗೂ ಮತಾಂತರದಂತಹ ಘಟನೆಗಳು ನಿರಂತರವಾಗಿ ಕಲ್ಪನೆಗೂ ನಿಲುಕದ ಅಸಂಗತಿಗಳಾಗಿರುವಾಗ ಇನ್ನು ರಾಜಪ್ರಭುತ್ವದ ಕಲ್ಪನೆ ಅಸಾಧ್ಯವೆನಿಸುತ್ತದೆ. ಭಾರತೀಯ ಸಮಾಜದೊಂದಿಗೆ ದಲಿತರು ಹೇಗೆ ಜೀವನ ನಡೆಸಿದ್ದಾರೆ, ನಡೆಸುತ್ತಿದ್ದಾರೆ ಎಂಬ ವಿಷಯ ಕುರಿತು ಈ ಕೃತಿಯಲ್ಲಿರುವ ಲೇಖನಗಳು ಚರ್ಚಿಸಲು ತೊಡಗಿಸಿಕೊಳ್ಳುತ್ತವೆ.

ಇಂಥ ಮಹತ್ವದ ಕೃತಿಯನ್ನು ಸಂಪಾದಿಸಿದ ಚರಿತ್ರೆ ವಿಭಾಗದ ಮುಖ್ಯಸ್ಥರೂ ಹಾಗೂ ಸಹ ಪ್ರಾಧ್ಯಾಪಕರು ಆದ ಡಾ. ಎನ್‌. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು. ಸೋಸಲೆ ಅವರು ಈ ಹಾದಿಯಲ್ಲಿ ಹೆಚ್ಚಿನ ಕೆಲಸ ಮಾಡಲೆಂದು ಹಾರೈಸುತ್ತೇನೆ. ಈ ಕೃತಿಯನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಂಗದ ನಿರ್ದೇಶಕರಾದ ಡಾ. ಎ. ಮೋಹನ್‌ಕುಂಟಾರ್ ಅವರಿಗೆ, ಸಹ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.

ಡಾ. ಮುರಿಗೆಪ್ಪ
ಕುಲಪತಿಗಳು