ಆದಿವಾಸಿಗಳ ಅಭಿವೃದ್ಧಿಯ ಕುರಿತ ಅಂಬೇಡ್ಕರ್ ನಿಲುವುಗಳು

ಅಂಬೇಡ್ಕರ್ ಆದಿವಾಸಿಗಳ ಅಭಿವೃದ್ಧಿಯ ಕುರಿತು ಚಿಂತಿಸುವಾಗ, ತಮ್ಮ ಸಮಕಾಲೀನ ಚಿಂತಕರಾದ ಗಾಂಧೀಜಿ ಮತ್ತು ನೆಹರುವಿಗಿಂತ ಭಿನ್ನವಾಗಿ ಕಾಣುತ್ತಾರೆ. ಗುಡಿಕೈಗಾರಿಕೆಗಳು ಉಳಿಯಬೇಕು, ಹಳ್ಳಿಗಳನ್ನು ಸಂರಕ್ಷಿಸಬೇಕು ಎನ್ನುವ ಗಾಂಧೀಜಿ ಮತ್ತು ಭಾರತದ ವೈವಿಧ್ಯತೆ ವಿಶಿಷ್ಟವಾದದ್ದು. ಅದಕ್ಕಾಗಿ ಆದಿವಾಸಿಗಳು ತಮ್ಮ ಸಂಸ್ಕೃತಿ ಇತ್ಯಾದಿಗಳನ್ನು ರಕ್ಷಿಸಿಕೊಳ್ಳಬೇಕು ಎನ್ನುವ ನೆಹರು ಅವರ ಚಿಂತನೆಗಳಲ್ಲಿ ‘ರಕ್ಷಿಸುವ’ ಉದಾರವಾದಿ ಮನೋಭಾವವಿದೆ. ಸಮಾಜದ ‘ಅತ್ಯುತ್ತಮ’ ಎನ್ನುವ ಮಾದರಿಗಳನ್ನು ಪಂಜರದ ವಸ್ತುವಾಗಿಸಿ ಪ್ರದರ್ಶಿಸುವ ಉಮೇದು ಇವರಲ್ಲಿ ಜಾಗ್ರತವಾಗಿದೆ. ಈ ಬಗೆಯ ‘ರಕ್ಷಿಸುವ’ ಮನಸ್ಥಿತಿ, ಸಮುದಾಯವೊಂದರ ಚಲನಶೀಲತೆಯನ್ನು ಆಳದಲ್ಲಿ ವಿರೋಧಿಸುತ್ತಲೇ ಇರುತ್ತದೆ. ವಸ್ತುಸಂಗ್ರಹಾಲಯದ ಮನಸ್ಥಿತಿ ಮೂಲತಃ ಯುರೋಪಿನದ್ದು. ಅದು ಬದುಕಿನ ಸೃಜನಶೀಲ ಗುಣವನ್ನೇ ನಿರಾಕರಿಸುತ್ತದೆ. ಜೀವಂತ ಮನುಷ್ಯ ಹಸಿದಿದ್ದರೂ ಸಹ, ಅವನು ತನ್ನ ‘ಸಂಸ್ಕೃತಿ’ಯನ್ನು ‘ಉಳಿಸಿ’ ಕೊಳ್ಳಬೇಕೆಂದು ವಾದಿಸುತ್ತದೆ. ಆದರೆ ಅಂಬೇಡ್ಕರ್ ಈ ‘ಮ್ಯೂಸಿಯಂ’ ವಾದಿಗಳನ್ನು ಖಂಡಿಸುತ್ತಾರೆ. ಸಂಸ್ಕೃತಿಯೊಂದನ್ನು ಯಾರೂ ರಕ್ಷಿಸಬೇಕಿಲ್ಲ. ‘ಸಂಸ್ಕೃತಿ’ಯೊಂದು ತನ್ನ ಪರಂಪರೆಯ ಎಲ್ಲ ಬಗೆಯ ಮಾನವೀಯ ಸತ್ವವನ್ನು ಹೀರಿ ಬೆಳೆದಿದ್ದರೆ ಅದು ತಾನಾಗಿಯೇ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಆದಿವಾಸಿಗಳು ಕೇವಲ ಭಾರತದ ವೈವಿಧ್ಯತೆ ಉಳಿಯುವ ಸಲುವಾಗಿಯೇ ಕಾಡಿನಲ್ಲಿ ಪ್ರತ್ಯೇಕವಾಗಿರಕೂಡದು. ಅವರು ಅಭಿವೃದ್ಧಿ ಹೊಂದಬೇಕಾದರೆ, ಕಾಡನ್ನು ಬಿಟ್ಟು ಹೊರಬರಬೇಕು ಎನ್ನುತ್ತಾರೆ.

ಆದಿಮ ಜನಾಂಗಗಳಿಗೆ ಅಭಿವೃದ್ಧಿಯ ಸಾಧ್ಯತೆಯಿಲ್ಲ ಎಂದರೆ ಅದಕ್ಕೆ ಕಾರಣ ಅವರು ಪ್ರತ್ಯೇಕತೆಯಲ್ಲಿಯೇ ಉಳಿದಿರಲು ನಿರ್ಧರಿಸಿರುವುದು. ಆದರೆ, ಒಮ್ಮೆ ಅವರು ತಮ್ಮ ಕಾಡಿನ ಮೂಲೆಗಳಿಂದ ಹೊರ ಬಂದು ನಾಗರಿಕತೆಯಲ್ಲಿ ಪಾಲ್ಗೊಳ್ಳತೊಡಗಿದರೆ ಅವರ ಪ್ರಗತಿಯ ಹಾದಿಯಲ್ಲಿ ಕಂಟಕವಿರಲಾರದು[1]

ಈ ಕಾರಣಕ್ಕಾಗಿಯೇ ಆದಿವಾಸಿಗಳು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕು ಮತ್ತು ಜಗತ್ತಿನ ವೇಗದ ಲಯಗಳಿಗೆ ತಕ್ಕಂತೆ ತಮ್ಮನ್ನು ರೂಪಿಸಿಕೊಳ್ಳಲು ಯತ್ನಿಸಬೇಕು. ಆದಿವಾಸಿಗಳು ಪ್ರತ್ಯೇಕವಾಗಿಯೇ ಬದುಕಿ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಮುಖ್ಯವಾಹಿನಿಯ ಆರ್ಥಿಕ ಪ್ರಗತಿಯ ಭಾಗವಾಗಿ ಅವರು ಬದುಕಲು ಸಾಧ್ಯವಿಲ್ಲ. ಅವರು ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳುವುದಕ್ಕೆ ಅವಕಾಶ ಅರಣ್ಯದಲ್ಲಿ ಸಿಕ್ಕುವುದಿಲ್ಲ.

ಆದಿಮ ಜನಾಂಗಗಳ ಸಮಸ್ಯೆಯಿರುವುದು ಭೌಗೋಳಿಕ ಪ್ರತ್ಯೇಕತೆಯಲ್ಲಿ ಮತ್ತು ಉತ್ತಮಗೊಳ್ಳಲು ಬೇಕಾದ ಸದವಕಾಶಗಳನ್ನು ತಾವು ಪಡೆದುಕೊಳ್ಳಬೇಕು ಎಂಬ ಹಂಬಲವೇ ಹುಟ್ಟದಿರುವ ಜಡತೆಯಲ್ಲಿ[2]

ಈ ಕಾರಣಗಳಿಗಾಗಿ ಆದಿವಾಸಿಗಳು ಮುಖ್ಯವಾಹಿನಿಯ ಭಾಗವಾಗುವುದು ಮತ್ತು ಜನತಂತ್ರದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಅನಿವಾರ‍್ಯವೆಂದು ಅಂಬೇಡ್ಕರ್ ಭಾವಿಸುತ್ತಾರೆ.

ಆದಿವಾಸಿಗಳ ರಾಷ್ಟ್ರೀಯತೆ ಮತ್ತು ಸ್ವಯಂ ಆಡಳಿತ

ಆದಿವಾಸಿಗಳ ಸ್ವಯಂ ಆಡಳಿತ ಮತ್ತು ಅವರು ಬಯಸುವ ಪ್ರತ್ಯೇಕ ಆಡಳಿತ ಪ್ರಾಂತಗಳ ಕುರಿತು ಅಂಬೇಡ್ಕರ್ ವೈರುಧ್ಯಮಯ ಅಭಿಪ್ರಾಯಗಳನ್ನು ಪ್ರಕಟಿಸುತ್ತಾರೆ. ಅವರು ಅತ್ಯಂತ ಬಲಿಷ್ಠ ಕೇಂದ್ರ ಸರಕಾರವಿರುವ ಆಡಳಿತ ವ್ಯವಸ್ಥೆಯನ್ನು ಬಯಸುತ್ತಾರೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರಲ್ಲೂ ಸಂಯುಕ್ತ ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ಬಲಿಷ್ಠವಾದ ಕೇಂದ್ರ ಸರಕಾರವಿರುವುದು ಅವಶ್ಯ ಎಂಬುದು ಅಂಬೇಡ್ಕರ್ ಅವರ ಪ್ರತಿಪಾದನೆ. ಅಲ್ಲದೆ ದೇಶದಲ್ಲಿ ಏಕಭಾಷಾ ಸೂತ್ರ ಅಳವಡಿಸಿ, ಆಡಳಿತ ಭಾಷೆಯಾಗಿ ಹಿಂದಿಯನ್ನು ಒಪ್ಪಿಕೊಳ್ಳುವುದು ಅನಿವಾರ‍್ಯವೆನ್ನುತ್ತಾರೆ.

ಭಾಷಾವಾರು ತತ್ವದ ಆಧಾರದ ಮೇಲೆ ಪ್ರಾಂತಗಳು ಪುನಃ ನಿರ್ಮಾಣವಾಗಬೇಕೆನ್ನುವ ಬೇಡಿಕೆಯನ್ನು ಅಂಗೀಕರಿಸುವಾಗ, ಕೇಂದ್ರದಲ್ಲಿರುವ ಆಡಳಿತ ಭಾಷೆಯೇ ಎಲ್ಲ ಪ್ರಾಂತಗಳ ಆಡಳಿತ ಭಾಷೆ ಆಗಬೇಕೆಂದು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕು. ಕೇವಲ ಭೂಮಿಕೆಯ ಆಧಾರದ ಮೇಲೆ ನಾನು ಭಾಷಾವಾರು ಪ್ರಾಂತಗಳ ಬೇಡಿಕೆಯನ್ನು ಅನುಮೋದಿಸುತ್ತೇನೆ. [3]

ಈ ಬಗೆಯ ಅವರ ನಿಲುವನ್ನು ಅಂಬೇಡ್ಕರ್ ಹೀಗೆ ಸಮರ್ಥಿಸಿಕೊಳ್ಳುತ್ತಾರೆ. ಭಿನ್ನ ಭಿನ್ನ ಭಾಷೆಗಳನ್ನು ಮಾತಾಡುವ ಜನ ರಾಜಕೀಯ ಪ್ರತ್ಯೇಕತೆಯನ್ನು ಬಯಸಿದರೆ ಭಾರತ ಒಂದು ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ. ಜೊತೆಗೆ ಅನೇಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿಯೇ ಒಂದು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ಆಗುವುದಿಲ್ಲ. ಭಾಷೆಗಳ ಕಾರಣಕ್ಕಾಗಿ ಪ್ರತ್ಯೇಕ ರಾಷ್ಟ್ರಗಳಾಗಿ ರೂಪಗೊಂಡ ಯುರೋಪಿನ ದೇಶಗಳು ಅನೇಕ ಬಗೆಯ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಜಾಗತಿಕ ಯುದ್ಧಗಳನ್ನೇ ಸೃಷ್ಟಿಸಿದವು. ಅಲ್ಲದೆ ಜಗತ್ತಿನಾದ್ಯಂತ ಹಲವು ಬಗೆಯ ಸಂಘರ್ಷಗಳಿಗೆ ಈ ದೇಶಗಳು ಕಾರಣವಾಗಿವೆ. ಭಾಷಾವಾರು ಪ್ರಾಂತಗಳ ಅನನ್ಯತೆಗಳು ಅಪಾಯಕಾರಿಯೂ ಆಗಬಲ್ಲವು ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯ. ಆದರೆ ಇವರೇ ಇನ್ನೊಂದೆಡೆ,

ಪ್ರಾಂತ್ಯಗಳು ವಿಶಿಷ್ಟ ರಾಷ್ಟ್ರೀಯತೆಯ ಅಂಶಗಳನ್ನು ಹೊಂದಿರುತ್ತವೆ. ರಾಷ್ಟ್ರೀಯತೆಯನ್ನು ಪೂರ್ಣ ಬೆಳೆಸುವುದಕ್ಕೆ ಅವುಗಳಿಗೆ ಸ್ವಾತಂತ್ರ್ಯ ಇರಬೇಕು[4] ಎನ್ನುತ್ತಾರೆ.

ಅಂಬೇಡ್ಕರ್ ರಾಷ್ಟ್ರೀಯತೆಗಳ ಹೋರಾಟ ಮತ್ತು ಸ್ವಯಂ ಆಡಳಿತ ಹಕ್ಕೊತ್ತಾಯಗಳನ್ನು ಬೇರೆಯದೇ ಆದ ಅರ್ಥದಲ್ಲಿ ವಿವರಿಸಿಕೊಳ್ಳುತ್ತಾರೆ. ವಸಾಹತು ಆಡಳಿತದ ಸಂದರ್ಭದಲ್ಲಿ ಮಾನಸಿಕವಾಗಿ ಭಾರತದೇಶದಿಂದ ದೂರ ಸರಿದಿದ್ದ ಆದಿವಾಸಿಗಳು, ಸ್ವಾತಂತ್ರ್ಯಾನಂತರ ಸಹಜವಾಗಿಯೇ ಭಾರತ ಒಕ್ಕೂಟದಲ್ಲಿ ಪ್ರತ್ಯೇಕ ರಾಜ್ಯ ಮತ್ತು ಸ್ವಯಂ ಆಡಳಿತದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟವು. ಈಶಾನ್ಯ ಭಾರತದ ಆದಿವಾಸಿಗಳು, ಬಿಹಾರ್, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ದಂಡಕಾರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಈ ಸ್ವಯಂ ಆಡಳಿತದ ಕುರಿತು ಚಳುವಳಿಗಳನ್ನೇ ರೂಪಿಸಿದರು. ಈ ಬಗೆಯ ಪ್ರತ್ಯೇಕ ರಾಜ್ಯ ಮತ್ತು ಸ್ವಯಂ ಆಡಳಿತದ ಬೇಡಿಕೆಗಳ ಹಿಂದೆ ಅನೇಕ ಸಾಮಾಜಿಕಾರ್ಥಿಕ ಕಾರಣಗಳು ಅಡಗಿವೆ. ವಸಾಹತು ಆಡಳಿತದ ಸಂದರ್ಭದಲ್ಲಿ ಆದಿವಾಸಿಗಳು ಕಂಪನಿ ಸರ್ಕಾರದ ಮತ್ತು ಭಾರತದ ಊಳಿಗಮಾನ್ಯಶಾಹಿ ಆಕ್ರಮಣಗಳಿಂದ ದಿಕ್ಕೆಟ್ಟು ಹೋಗಿದ್ದರು. ಅವರ ಕೃಷಿ ಭೂಮಿಗಳು ಎಸ್ಟೇಟುಗಳಾಗಿ, ವಾಣಿಜ್ಯ ಬೆಳೆಗಳನ್ನು ಬೆಳೆವ ಪ್ಲಾಂಟರುಗಳು ವಶವಾದವು. ಸಂತಾಲರು, ಜಾರ್ಖಡಿಗಳು, ಬೋಡೋಗಳು ಆರಂಭದಲ್ಲಿಯೇ ಕಂಪನಿ ಸರ್ಕಾರದ ಸೈನ್ಯಕ್ಕೆ ಮುಖಾಮುಖಿಯಾದರು. ಬಹಳ ಸಲ ಆದಿವಾಸಿಗಳು ಈ ಮುಖಾಮುಖಿಯಲ್ಲಿ ಹಿಂಸಾತ್ಮಕವಾಗಿ ಹತ್ತಿಕ್ಕಲ್ಪಟ್ಟರು. ವಸಾಹತು ಶಾಹಿಗೆ ವಸಾಹತು ರಾಷ್ಟ್ರಗಳ ಅಮಾಯಕ ಮೂಕ ಸಮುದಾಯಗಳನ್ನು ಹತ್ತಿಕ್ಕುವುದು ಕಷ್ಟಕರ ಕೆಲಸವಾಗಿರಲಿಲ್ಲ. ಆದರೆ ವಸಾಹತು ಆಡಳಿತದ ಸಂದರ್ಭದಲ್ಲಿ ಈ ಭಾಗದ ಆದಿವಾಸಿಗಳು ಪದೇ ಪದೇ ತಮ್ಮ ಪಾರಂಪರಿಕ ನೆಲೆಗಳಿಗಾಗಿ ಹೋರಾಟ ಮಾಡುತ್ತಲೇ ಬಂದರು. ಈ ಹೋರಾಟಗಳು ಸ್ವಾತಂತ್ರ್ಯಾ ನಂತರವೂ ಮುಂದುವರೆದವು. ಆದರೆ ಭಾರತ ಸರ್ಕಾರವು ಸಹ ಈ ಜನತಂತ್ರ ಹೋರಾಟಗಳನ್ನು ವಿದೇಶೀ ಏಜೆಂಟರ ಇಲ್ಲವೇ ಮಿಶಿನರಿಗಳ ಪಿತೂರಿ ಎಂದೇ ಭಾವಿಸಿತು.

ಆದಿವಾಸಿಗಳ ಹೋರಾಟಗಳು ಅವರ ಸಾಮಾಜಿಕಾರ್ಥಿಕ ನೆಲೆಗಳಿಂದ ರೂಪಗೊಂಡಿವೆ ಎಂದು ಅಂದಿನ ರಾಷ್ಟ್ರ ನಾಯಕರು ಭಾವಿಸಲಿಲ್ಲ. ‘ಸರ್ವಶಕ್ತ ಬೃಹತ್ ಭಾರತ’ ಮಾತ್ರ ಅವರ ಪ್ರಧಾನ ಪರಿಗಣನೆಯಾಗಿತ್ತು. ಭಾರತದ ವೈವಿಧ್ಯಮಯ ಸಮಾಜವನ್ನು ಇನ್ನೂ ಶ್ರೀಮಂತಗೊಳಿಸಲು ಆದಿವಾಸಿಗಳು ಈ ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲೇ ಬೇಕೆಂಬುದು ಅವರ ಆಸೆಯಾಗಿತ್ತು. ಅವರಿಗೆ ಬೇಕಾದ ಶಾಲೆ, ರಸ್ತೆಗಳನ್ನು ಕೊಟ್ಟು ಬಿಡೋಣ ಆದರೆ ಆದಿವಾಸಿಗಳು ತರಲೆ ಮಾಡದೆ ಭಾರತದ ಭಾಗವಾಗಿ ಬದುಕಬೇಕು ಎಂಬುದು ಅವರ ವಾದವಾಗಿತ್ತು. ಸ್ವಯಂ ಆಡಳಿತದ ಹಕ್ಕನ್ನು ಒಂದು ಸಮುದಾಯ ಯಾಕಾಗಿ ಪದೇ ಪದೇ ತನ್ನ ಅಸ್ತಿತ್ವದ ಕಾರಣಕ್ಕಾಗಿ ಮಂಡಿಸುತ್ತಿದೆ ಎಂಬ ರಾಜಕೀಯ ಪ್ರಶ್ನೆ ಅಂಬೇಡ್ಕರ್ ಮತ್ತು ನೆಹರು ಅವರ ಚಿಂತನೆಯಲ್ಲಿ ಗೈರು ಹಾಜರಾಗಿದೆ. ಆದಿವಾಸಿಗಳ ಹೋರಾಟಗಳು ದೇಶದ್ರೋಹಿ ಚಟುವಟಿಕೆಗಳೆಂದೇ ಸರಳೀಕರಿಸಿ ಅರ್ಥೈಸಲ್ಪಟ್ಟಿವೆ. ತಮ್ಮ ರಾಜಕೀಯಾರ್ಥಿಕ ಕಾರಣಗಳಿಗಾಗಿ ಮತ್ತು ಸಾಮಾಜಿಕ ಅವಮಾನಗಳನ್ನು ಮೀರಿ ನಿಲ್ಲುವುದಕ್ಕಾಗಿ ಸಂಘಟಿತವಾದ ಹೋರಾಟಗಳನ್ನು ನೆಹರು ತಮ್ಮ ಅಮಿತ ರಾಷ್ಟ ಪ್ರೇಮದ ಭ್ರಮೆಗಳಲ್ಲಿ ಕ್ಷುಲ್ಲಕವಾಗಿಯೇ ಕಂಡಿದ್ದಾರೆ. ಈ ಬಗೆಯ ಅಸೈದ್ಧಾಂತಿಕ ರಾಜಕೀಯ ನಿಲುವು ನೆಹರು ಅವರ ಆದಿವಾಸಿಗಳ ಕುರಿತ ಚಿಂತನೆಗಳಲ್ಲಿ ಪ್ರಕಟವಾಗುತ್ತಲೇ ಬಂದಿದೆ. ಆದಿವಾಸಿಗಳ ಹೋರಾಟಗಳನ್ನು ನೆಹರು ಸೈದ್ಧಾಂತಿಕವಾಗಿ ವಿವರಿಸಿಕೊಳ್ಳಲು ಸಾಧ್ಯವಾದಂತಿಲ್ಲ. ಅಸೈದ್ಧಾಂತಿಕ ರಾಷ್ಟ್ರೀಯತೆ ಮತ್ತು ಅಖಂಡ ಭಾರತದ ಕಲ್ಪನೆಗಳು ನೆಹರು ಅವರನ್ನು ನಿಯಂತ್ರಿಸಿವೆ.

ಆದಿವಾಸಿಗಳ ಬದುಕಿನಲ್ಲಿ ಯಾವ ಮೂಲಭೂತ ಬದಲಾವಣೆಗಳನ್ನು ತರದೆ, ಅವರು ಅಖಂಡ ಭಾರತದ ಭಾಗವಾಗಿ ಬದುಕಬೇಕೆಂಬ ಅವರ ಆಶಯವೇ ಅಪ್ಪಟ ಊಳಿಗಮಾನ್ಯಶಾಹಿ ಮೌಲ್ಯಗಳಿಮದ ಪ್ರೇರೇಪಿತವಾದದ್ದು. ದುಡಿವ ವರ್ಗಗಳ ಹಕ್ಕು ಬಾಧ್ಯತೆಗಳ ಕುರಿತು ಭಾರತದ ಆಡಳಿತ ವ್ಯವಸ್ಥೆ ಯಾವತ್ತೂ ಕುರುಡಾಗಿ ಬೇಜವಾಬ್ದಾರಿಯ ದಾಪುಗಾಲನ್ನಿಡುತ್ತಲೇ ಬಂದಿದೆ. ಒಂದು ಗಣರಾಜ್ಯವಾಗಿ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಎಲ್ಲಾ ಸಾಮಾಜಿಕ ಅನನ್ಯತೆಗಳನ್ನು, ಅವುಗಳ ಸಹಜ ಹಕ್ಕುಗಳನ್ನು ರಕ್ಷಿಸುವ ಮತ್ತು ದುರ್ಬಲ ಸಮುದಾಯಗಳಿಗೆ ರಾಜಕೀಯಾರ್ಥಿಕ ಅವಕಾಶಗಳನ್ನು ಕಲ್ಪಿಸುವ ಸದಾಶಯಗಳಿಂದ ರೂಪಗೊಂಡ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಭಾರತದ ಶಕ್ತಿ ರಾಜಕಾರಣ ನಡೆದುಕೊಂಡು ಬಂದಿದೆ. ಈ ದೇಶದ ಆದಿವಾಸಿಗಳ ಮತ್ತು ಕೆಳವರ್ಗಗಳ ಹೋರಾಟಗಳನ್ನು, ಹುಸಿ ರಾಷ್ಟ್ರೀಯತೆಯ ಕಾರಣಗಳಿಗಾಗಿ ಕ್ಷುಲ್ಲಕವಾಗಿ ಕಂಡು, ಅವುಗಳನ್ನು ಹತ್ತಿಕ್ಕುವ ಪ್ರಯತ್ನಗಳು ನೆಹರುವಿನ ಕಾಲದಿಂದಲೇ ಪ್ರಾರಂಭವಾದವು. ಇದಕ್ಕೆ ಬಹುದೊಡ್ಡ ಉದಾಹರಣೆಯೆಂದರೆ ನೆಹರು ಸರ್ಕಾರದ ಸೈನ್ಯ ತೆಲಂಗಾಣದ ರೈತ ಹೋರಾಟವನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದು. ಇದನ್ನು ನೆಹರುವಿನ ವ್ಯಕ್ತಿಗತ ತಾತ್ವಿಕ ಮಿತಿಯೆಂದು ನೋಡುವುದಕ್ಕಿಂತ ಅಂದಿನ ಭಾರತದ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿದ ಊಳಿಗಮಾನ್ಯಶಾಹಿ ಆಶಯಗಳ ಭಾಗವಾಗಿ ಈ ರಾಜಕಾರಣವನ್ನು ಅರ್ಥ ಮಾಡಿ ಕೊಳ್ಳಬೇಕು.

ಅಂದಿನ ರಾಷ್ಟ್ರೀಯತೆಯ ಕಲ್ಪನೆಯೇ ಇಂದು ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯೆಂಬ ಭೂತವಾಗಿ ಭಾರತದ ಕೋಮು ಸಾಮರಸ್ಯವನ್ನು ಕದಡುತ್ತಿದೆ. ಭಾರತದ ಏಕರೂಪೀ ಸಮಾಜದ ನಿರ್ಮಾಣಕ್ಕೆ ಇಲ್ಲಿನ ವೈವಿಧ್ಯಮಯ ಜಗತ್ತುಗಳನ್ನು ಅದು ನಾಶ ಮಾಡುತ್ತಿದೆ. ಇತ್ತಿಚಿನ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಪ ಸಂಖ್ಯಾತರನ್ನು ಕೊಲ್ಲಲು ಅಲ್ಲಿನ ಸಂಘ ಪರಿವಾರ ಬಳಸಿಕೊಂಡದ್ದು ಅಮಾಯಕ ಆದಿವಾಸಿಗಳನ್ನು ಈ ಬಗೆಯ ಮತೀಯ ಅತಿರೇಕಗಳು ಯಾವ ತಾತ್ವಿಕ ನೆಲೆಯಿಲ್ಲದ ಹುಸಿ ರಾಷ್ಟ್ರೀಯತೆಯಿಂದಲೇ ಹುಟ್ಟುವುದು. ನೆಹರು ಸರ್ವಶಕ್ತ ಭಾರತ ವೆಂಬುದು ಕೇವಲ ಅಗಾಧ ರಾಷ್ಟ ಪ್ರೇಮದಿಂದ ಉದ್ಭವಿಸಬಲ್ಲದು, ಆ ಕಾರಣಕ್ಕಾಗಿ ಈ ಕ್ಷಣಕ್ಕೆ ‘ಆಂತರಿಕ ಏರುಪೇರುಗಳನ್ನು’ ಎಲ್ಲರೂ ಸಹಿಸಿಕೊಳ್ಳಬೇಕೆಂಬ ನಿಲುವನ್ನು ತಳೆದಿದ್ದರು. ಜೊತೆಗೆ ಆದಿವಾಸಿಗಳು ತಮ್ಮ ಸಹಜ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳನ್ನು ಅರಾಜಕ ದೊಂಬಿಗಳೆಂದು ಪರಿಗಣಿಸಿ, ಆದಿವಾಸಿಗಳನ್ನು ಉದ್ಧಾರ ಮಾಡುವ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಯತ್ನಿಸಿದರು. ಅಂಬೇಡ್ಕರ್ ಸಹ ಈ ಬಗೆಯ ಹೋರಾಟಗಳ ಕುರಿತು ಗಂಭೀರ ದನಿ ಎತ್ತಿದ್ದರು ಎಂದೆನ್ನಿಸುವುದಿಲ್ಲ. ಭಾಷಾವಾರು ಪ್ರಾಂತಗಳ ಕುರಿತು ಅವರ ಒಟ್ಟು ಚಿಂತನೆಯು ಬೃಹತ್ ಭಾರತದಲ್ಲಿ ಉಳಿದೆಲ್ಲ ಸಾಮಾಜಿಕ ಘಟಕಗಳು ಸಂಕರಗೊಳ್ಳಬೇಕು ಎಂಬುದನ್ನು ಒಪ್ಪಿಕೊಳ್ಳುತ್ತದೆ.

ಯಾವ ಪ್ರಾಂತವೂ ಸಾಮಾಜಿಕ ರಚನೆ ದೃಷ್ಟಿಯಿಂದ ಏಕರೂಪವಿರುತ್ತದೆಯೋ ಅದುವೇ ನಿಜವಾದ ಭಾಷಾವಾರು ಪ್ರಾಂತವೆಂದು ನನಗನ್ನಿಸುತ್ತದೆ[5]

ಎಂದು ಅಂಬೇಡ್ಕರ್ ಯಾವ ಪ್ರಾಂತಗಳೂ ಅಂತಿಮವಾಗಿ ಈ ಅಖಂಡ ಭಾರತದ ಭಾಗವಾಗಿ ರೂಪಗೊಳ್ಳಬೇಕೆಂಬ ವಾದದ ಕಡೆಗೇ ಹೆಚ್ಚು ವಾಲುತ್ತಾರೆ. ಮತ್ತೆ ರಾಷ್ಟ್ರೀಯತೆಗಳ ಕುರಿತು ಕೆಲವು ಕಡೆ ಹೆಚ್ಚು ಗೊಂದಲಕಾರಿ ನಿಲುವುಗಳೇ ಅವರ ಬರಹದಲ್ಲಿ ವ್ಯಕ್ತವಾಗಿವೆ. ಅದರಲ್ಲೂ ಇಡೀ ಭಾರತದ ಆಡಳಿತ ಭಾಷೆ ಹಿಂದಿಯಾಗಿರಬೇಕು ಎಂಬ ಕುರಿತು ಅಂಬೇಡ್ಕರ್ ತುಸು ಹೆಚ್ಚೆನ್ನಿಸುವಂತೆ ವಕಾಲತ್ತು ವಹಿಸುತ್ತಾರೆ.

ಪ್ರಾಂತ ಭಾಷೆಗಿಂತ ಭಿನ್ನವಾದ, ಅಖಿಲಭಾರತದ ಆಡಳಿತ ಭಾಷೆಯನ್ನು ಭಾಷಾವಾರು ಪ್ರಾಂತದ ಮೇಲೆ ಹೇರುವುದರಿಮದ ಅದರ ಸಂಸ್ಕೃತಿಯನ್ನು ಉಳಿಸಲು ಏನೂ ಆತಂಕವಾಗದು. ಸರಕಾರಿ ವಲಯಗಳಲ್ಲಿ ಮಾತ್ರ ಆಡಳಿತ ಭಾಷೆಯನ್ನು ಬಳಸಲಾಗುವುದು. ಉಳಿದ ಕಡೆಗಳಲ್ಲಿ, ಅಂದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಾಂತ ಭಾಷೆಯನ್ನು ಬಳಸಲು ಮಾರ್ಗ ಇನ್ನೂ ಮುಕ್ತವಿರುತ್ತದೆ. ಆಡಳಿತ ಭಾಷೆ ಮತ್ತು ಆಡಳಿತಕ್ಕೆ ಬಳಸದ ಭಾಷೆಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಯಬಹುದು. ಒಂದು ಇನ್ನೊಂದನ್ನು ಹೊರಹಾಕಲು ಯತ್ನಿಸಬಹುದು. ಆಡಳಿತ ಭಾಷೆ ಪ್ರಾಂತಭಾಷೆಯನ್ನು ಹೊರಹಾಕುವಲ್ಲಿ ಯಶಸ್ವಿಯಾದರೆ ಅದಕ್ಕಿಂತ ಉತ್ತಮವಾದದ್ದು ಇನ್ನಾವುದೂ ಇಲ್ಲ[6] ಎನ್ನುತ್ತಾರೆ.

ಪ್ರತ್ಯೇಕತೆಯ ಅಂತಿಮ ಗುರುತುಗಳ ಕುರಿತು ಅಂಬೇಡ್ಕರ್ ಗೆ ಅಂತಹ ಒಲವಿದ್ದಂತೆ ಕಾಣುವುದಿಲ್ಲ. ಪ್ರತ್ಯೇಕಿಸುವ ಎಲ್ಲ ಗೆರೆಗಳೂ ಅಳಿಸಿಹೋಗಿ ಅಖಂಡತೆ ನೆಲೆಸುವುದರಿಂದ ಈ ಸಮಾಜದ ಅಂಚಿನ ಸಮುದಾಯಗಳ ಸಂಕಟಗಳು ನಿವಾರಣೆಯಾಗುತ್ತವೆ ಎಂದು ಅಂಬೇಡ್ಕರ್ ನಂಬುತ್ತಾರೆ.

ಕೊನೆಯ ಮಾತುಗಳು

ಅಂಬೇಡ್ಕರ್ ತಮ್ಮ ಬರಹಗಳುದ್ದಕ್ಕೂ ಅಸ್ಪೃಶ್ಯರ, ಶೋಷಿತ ಆದಿವಾಸಿಗಳ ಈವತ್ತಿನ ಸ್ಥಿತಿಗೆ ಹಿಂದೂ ಧರ್ಮದಲ್ಲಿರುವ ಅಮಾನವೀಯ ವೈಚಾರಿಕತೆಯೇ ಕಾರಣ ಎಂಬುದನ್ನು ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ವಿವರಿಸುತ್ತಾರೆ. ಅಂಬೇಡ್ಕರ್ ತಮ್ಮ ಪ್ರಖರ ವೈಚಾರಿಕ ದಾಳಿಗೆ ತಕ್ಕುದಾದ ಸಾಕ್ಷಿಗಳನ್ನು ಹಿಂದೂಧರ್ಮದ ಶಾಸ್ತ್ರಗ್ರಂಥಗಳ ಮೂಲಕವೇ ಹೆಕ್ಕಿ ತೆಗೆಯುತ್ತಾರೆ ಮತ್ತು ಯಾವ ಧರ್ಮ ಪಂಡಿತನೂ ಎಂದಿಗೂ ಉತ್ತರಿಸಲಾರದ ಮಾರ್ಮಿಕ ಪ್ರಶ್ನೆಗಳನ್ನು ಕೇಳಿಬಿಡುತ್ತಾರೆ. ಧರ್ಮವೆನ್ನುವುದು ಅಲೌಕಿಕ ಆಚರಣೆಗಳ, ಅರ್ಥವಾಗದ ಶ್ಲೋಕ ನುಡಿಗಟ್ಟುಗಳಿಂದ ಕೂಡಿದ, ಶೂನ್ಯಕ್ಕೆ ಸಂಬಂಧಿಸಿದ ವಿಷಯವಲ್ಲ. ಧರ್ಮ ಮನುಷ್ಯನಿಗೆ ಸಂಬಂಧಿಸಿದ್ದು. ಅದು ಮನುಷ್ಯನ ಕಲ್ಯಾಣಕ್ಕೆ ಮತ್ತು ಮಾನವತೆಯ ನಿರ್ಮಾಣಕ್ಕೆ ಸಂಬಂಧಿಸಿದ್ದು ಎಂಬುದು ಅಂಬೇಡ್ಕರ್ ವಾದದ ಬಹಳ ಮುಖ್ಯವಾದ ತಿರುಳುಗಳಲ್ಲೊಂದು ಅದಕ್ಕೆ ಅಂಬೇಡ್ಕರ್

ಧರ್ಮವನ್ನು ಸ್ವೀಕರಿಸಿ ಬದುಕುವ ವ್ಯಕ್ತಿಗೆ ಧರ್ಮದಿಂದ ಸಮಾಜಕ್ಕೆ ಎಷ್ಟರಮಟ್ಟಿಗೆ ಕಲ್ಯಾಣ ಸಾಧನೆಯಾಗಿದೆ ಎಂದು ಪ್ರಶ್ನಿಸುವ ಹಕ್ಕು ಇರಬೇಕಾದದು ಅಗತ್ಯ[7] ಎನ್ನುತ್ತಾರೆ.

ಪ್ರಾಯಶಃ ಆಧುನಿಕ ಜಗತ್ತಿನಲ್ಲಿ ಸದ್ದಿಲ್ಲದೆ ಹಿಂಸೆಗೆ ಕಾರಣವಾಗುವ ಎಲ್ಲ ಧರ್ಮಗಳಿಗೂ ಅಂಬೇಡ್ಕರ್ ಕೊಡುವ ಛಡಿ ಏಟು ಇದು.

ಹೀಗೆ ವರ್ತಮಾನದ ಶೋಷಿತ ವರ್ಗದವರ ಸ್ಥಿತಿಗತಿಗಳಿಗೆ ಚರಿತ್ರೆಯಲ್ಲಿ ಕಾರಣಗಳನ್ನು ಹುಡುಕುವ ಅಂಬೇಡ್ಕರ್ ರವರಿಗೆ ವಿಪುಲ ಪುರಾವೆಗಳು ಲಭ್ಯವಾದದ್ದು ಸತ್ಯ. ಅಂಬೇಡ್ಕರ್ ವಾದದ ಹೆಚ್ಚುಗಾರಿಕೆ ಇರುವುದೇ, ಅದು ಶೋಷಿತರ ವರ್ತಮಾನದ ಸ್ಥಿತಿಯನ್ನು ಚಾರಿತ್ರಿಕವಾಗಿ ವಿವರಿಸುವುದರಲ್ಲಿ. ಧಾರ್ಮಿಕ ಮತ್ತು ಆಧ್ಯಾತ್ಮಿಕವೆನ್ನುವ ಕಾರಣಗಳಿಗಾಗಿಯೇ ವಿಭಜಿಸಲ್ಪಟ್ಟ ಇಂಡಿಯಾದ ಸಮಾಜದ ಚಾರಿತ್ರಿಕ ಬೆಳವಣಿಗೆಯನ್ನು ಅಂಬೇಡ್ಕರ್ ರವರಷ್ಟು ವಸ್ತುನಿಷ್ಠವಾಗಿ ವಿವರಿಸಿದ ಸಮಾಜಶಾಸ್ತ್ರಜ್ಞರಿಲ್ಲ. ಜೊತೆಗೆ, ಸಾವಿರಾರು ವರ್ಷಗಳ ವೈಚಾರಿಕ ನಡೆಗೆ ಇದೆ ಎಂದುಕೊಳ್ಳುವ ಧರ್ಮವೊಂದನ್ನು ಎದುರಿಗೆ ನಿಲ್ಲಿಸಿ ಗಟ್ಟಿದನಿಯಲ್ಲಿ ಪ್ರಶ್ನೆ ಮಾಡುತ್ತ ನಿರುತ್ತರಗೊಳಿಸಿದವರು ಸಹ ವಿರಳವೆ. ಧರ್ಮ ಮತ್ತು ಪರಂಪರೆಯ ಕುರಿತ ಈ ಬಗೆಯ ವೈಚಾರಿಕ ಪ್ರತಿರೋಧ ಅಂಬೇಡ್ಕರ್ ವಾದದ ಬಹುದೊಡ್ಡ ಹೆಚ್ಚುಗಾರಿಕೆ ಹೇಗೋ ಅದರ ಮಿತಿಯೂ ಹೌದು. ಹೆಚ್ಚುಗಾರಿಕೆ ಯಾವುದೆಂದರೆ, ಪರಂಪರೆಯೊಂದರ ಭಾಗವಾಗಿ ಬದುಕುತ್ತಲೇ ಅದರ ಚಾರಿತ್ರಿಕ ಅನ್ಯಾಯಗಳ ವಿರುದ್ಧ ಬಂಡೆದ್ದು ಸೆಣೆಸಾಡಲು ಸಿದ್ಧವಾಗುವುದು. ಮತ್ತು ಈ ಬಗೆಯ ಸಿದ್ಧತೆಯು ವರ್ತಮಾನದ ಚಲೆನಗಳನ್ನು ಗಮನಿಸಿದೆ ಮತ್ತು ಸಮಕಾಲೀನ ವೈರಿಯ ಸ್ವರೂಪವನ್ನು ಅರಿಯದೆ ಯುದ್ಧ ಮಾಡಲು ಪುರತಾನ ಆಯುಧಗಳನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರ ವಿಪರ್ಯಾಸದ ಸಂಗತಿ.

ಆದಿವಾಸಿಗಳ ಮತ್ತು ಅಸ್ಪೃಶ್ಯರ ವರ್ತಮಾನದ ಹಸಿವು ಮತ್ತು ಅಸಹಾಯಕತೆಗಳಿಗೆ ಚರಿತ್ರೆಯಲ್ಲಿ ಕಾರಣ ಹುಡುಕುವ ಪ್ರಖರ ವೈಚಾರಿಕತೆ, ತನ್ನ ಸಮಕಾಲೀನ ಬದುಕಿನ ಸಮಸ್ಯೆಗಳಿಗೆ ಮತ್ತದೇ ಧಾರ್ಮಿಕ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳಲು ಪ್ರೇರೇಪಿಸುತ್ತದೆ. ಅಂಬೇಡ್ಕರ್ ತಾನು ಪ್ರತಿನಿಧಿಸುವ ಸಮುದಾಯದ ನಿಕೃಷ್ಟನ ಸ್ಥಿತಿಗತಿಯು ಪೌರಾಣಿಕ ಮತ್ತು ಚಾರಿತ್ರಿಕ ಸಂದರ್ಭದಲ್ಲಿ ಹಾದು ಬಂದ ರೀತಿಯನ್ನು ಅದ್ಭುತವಾಗಿ ವಿವರಿಸುತ್ತಾರೆ. ಚರಿತ್ರೆಯ ಆಯಾ ಕಾಲಘಟ್ಟದ ಉತ್ಪಾದನಾ ಸಂಬಂಧಗಳ ಕುರಿತು ವಿವರಿಸುವಾಗ ಮಾರ್ಕ್ಸ್‌ನ ಪರೋಕ್ಷ ಸಹಾಯ ಪಡೆಯುವ ಅಂಬೇಡ್ಕರ್, ವರ್ತಮಾನಕ್ಕೆ ಬರುತ್ತಲೇ ತಮ್ಮ ಸಮಕಾಲೀನ ಸಂದರ್ಭವನ್ನು ಎದುರಿಸುವ ಪ್ರಶ್ನೆಗಳಿಗೆ ನಿರುತ್ತರರಾಗುತ್ತಾರೆ. ಭಾರತದ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಬಯಸಿದ್ದ ಅಂಬೇಡ್ಕರ್ ಅಂತಿಮವಾಗಿ ಸ್ವಾತಂತ್ರ್ಯಾನಂತರ ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿದ್ದು ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡದ್ದು ಮೇಲಿನ ವಾದಕ್ಕೆ ಪೂರಕವಾಗಿದೆ. ವರ್ತಮಾನದಲ್ಲಿ ಅಂಬೇಡ್ಕರ್ ದಲಿತರ ಬದುಕಲ್ಲಿ ಸಂಭವಿಸುವ ಯಾವ ಅವಮಾನಗಳನ್ನೂ ಸಹಿಸುವಂತವರಾಗಿರಲಿಲ್ಲ. ದಲಿತನೊಬ್ಬ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಯಾವ ಘಟನೆಗಳೂ ಅವನ ನಿತ್ಯದ ಬದುಕಲ್ಲಿ ಸಂಭವಿಸುತ್ತಿಲ್ಲ. ದಲಿತರ ಸಾಮಾಜಿಕ ಘನತೆಯನ್ನು ಹೆಚ್ಚಿಸುವ ಯಾವ ಆರ್ಥಿಕ ಮೂಲಗಳೂ ಅವರಿಗೆ ದಕ್ಕುತ್ತಿಲ್ಲ ಎಂಬುದನ್ನು ಅಂಬೇಡ್ಕರ್ ಅರಿತವರಾಗಿದ್ದರು. ಹಳ್ಳಿಗಳು ಫ್ಯೂಡಲಿಸಂನ್ನು ಸಾಕುವ ಕಾರ್ಯಾಗಾರಗಳೆಂಬ ಕಾರಣಕ್ಕಾಗಿಯೇ ಆಧುನಿಕ ನಾಗರಿಕತೆಯನ್ನು ಮೋಹಿಸುವ ಅಂಬೇಡ್ಕರ್, ಬಂಡವಾಳಶಾಹಿ ಪ್ರಣೀತ ಉತ್ಪಾದನಾ ವ್ಯವಸ್ಥೆಯಲ್ಲಿ ಶೋಷಿತರ ಬಿಡುಗಡೆಗೆ ದಾರಿಗಳನ್ನು ಹುಡುಕಲು ಯತ್ನಿಸುತ್ತಾರೆ. ಆಧುನಿಕತೆಯೆಂಬುದು ಬಂಡವಾಳ ಶಾಹಿ ವ್ಯವಸ್ಥೆಯ ಉಪಉತ್ಪನ್ನ, ಈ ಆಧುನಿಕತೆಯಿಂದ ಲಭ್ಯವಾಗುವ ಅವಕಾಶಗಳು ಶೋಷಿತರಿಗೆ ವ್ಯಕ್ತಿಗತವಾಗಿ ಸಿಗುತ್ತಿರುವ ಆಕಸ್ಮಿಕ ಕೊಡುಗೆಗಳೆಂದು ಅಂಬೇಡ್ಕರ್ ಭಾವಿಸುವುದು ಕಡಿಮೆ. ಹೀಗಿದ್ದ ದಲಿತರ ವರ್ತಮಾನಕ್ಕೆ ಹಿಂದೂ ಧರ್ಮ ಸಾಕಿಕೊಂಡು ಬಂದ ‘ಪರಂಪರೆಯೇ’ ಕಾರಣ ಎಂದು ಅಂಬೇಡ್ಕರ್ ಭಾವಿಸಿದ್ದರು.

ಭಾರತದ ದಂಗೆಯ ಪ್ರವೃತ್ತಿಯ ವೈಚಾರಿಕ ಚಳುವಳಿಗಳಿಗೆ ಮೊದಲು ಮುಖಾಮುಖಿಯಾಗುವುದು ಪರಂಪರೆಯಲ್ಲಿನ ವಿಕಾರ ಆಕೃತಿಗಳು. ಆಧುನಿಕಪೂರ್ವ ಇಂಡಿಯಾದ ಸಾಮಾಜಿಕ ಸ್ಥಿತಿಯು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬದಲಾಗುವ ಪರಿಯನ್ನು ಅರ್ಥಮಾಡಿಕೊಳ್ಳಲು ಬೇರೆಯದೇ ಆದ ರಾಜಕೀಯ ಸಿದ್ಧಾಂತ ಅವಶ್ಯವಾಗಿತ್ತು. ಆದರೆ ಅವರ ಬದುಕಿನ ಕಡೆಯ ಘಟ್ಟದಲ್ಲಿ, ಅಂಬೇಡ್ಕರ್ ಸಂಸದೀಯ ಪ್ರಜಾಪ್ರಭುತ್ವ ಮತ್ತು ಬೌದ್ಧಧರ್ಮಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡರು. ಬೌದ್ಧ ಧರ್ಮದ ಅವರ ಆಯ್ಕೆಯ ಅವರ ಚಾರಿತ್ರಿಕ ಮತ್ತು ಸಮಕಾಲೀನ ಹಿಂದೂ ಧರ್ಮದ ಸಮರ್ಥಕರನ್ನು ಸೈದ್ಧಾಂತಿಕವಾಗಿ ಮಣಿಸಿತು. ಆದರೆ ಅವರು ನಂಬಿದ ರಾಜಕೀಯ ಸಿದ್ಧಾಂತವು ವರ್ತಮಾನದ, ಆಧುನಿಕ ತರಾವರಿ ಶತ್ರುಗಳನ್ನು ಸೋಲಿಸಲು ಮತ್ತು ಎಲ್ಲ ಶೋಷಿತರ ದನಿಗಳನ್ನು ಹುರಿಗೊಳಿಸಲು ವಿಫಲವಾಯಿತು. ಕಾರಣ ಅಂಬೇಡ್ಕರ್ ಗೆ ಸಹಜವಾಗಿಯೇ ಮೊದಲ ಶತ್ರುವಾಗಿದ್ದು ಹಿಂದೂಧರ್ಮ. ಅನಂತರ ಈ ಧರ್ಮವನ್ನು ರಾಜಕೀಯವಾಗಿ ಪೋಷಿಸಲು ಹೆಣಗುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ಧರ್ಮಕ್ಕೆ ಹಸುವಿನ ಮುಖವಾಡ ತೊಡಿಸಿ ಸೈದ್ಧಾಂತಿಕವಾಗಿ ಸಮರ್ಥಿಸಲು ಯತ್ನಿಸುತ್ತಿದ್ದ ಗಾಂಧೀಜಿಯವರು. ಅಂಬೇಡ್ಕರ್ ಈ ಮೂರೂ ಶತ್ರುಗಳನ್ನು ತಮ್ಮ ಜೀವಮಾನವಿಡೀ ಪ್ರತಿರೋಧಿಸುತ್ತಲೇ ಬಂದರು. ಅವರ ಬಹುಪಾಲು ಬರವಣಿಗೆಯನ್ನು ಈ ಮೂರು ಸಂಗತಿಗಳೇ ಆಕ್ರಮಿಸಿಕೊಂಡಿವೆ.

ಬರಹಕ್ಕೆ ಪೂರಕವಾದ ಗ್ರಂಥಗಳು

೧. ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂಪುಟ -೧ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ೧೯೯೦

೨. ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂಪುಟ -೫ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ೧೯೯೬

೩. ನನ್ನ ಕಲ್ಪನೆಯ ಸಮಾಜವಾದ, ಮೂಲ : ಮಹಾತ್ಮಾ ಗಾಂಧೀಜಿ ಅನು : ಸ್ವಾ ರಾ ಕುಲಕರ್ಣಿ, ಭಾರತೀಯ ವಿದ್ಯಾಭವನ, ಬೆಂಗಳೂರು ೧೯೮೭

೪. ಹಿಂದ್ ಸ್ವರಾಜ್, ಮಹಾತ್ಮಾ ಗಾಂಧೀಜಿ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ೧೯೯೭

೫. Jawaharalal Nehru, Tribes and Tribal policy (Proceeding of a Seminar) Ed; K. S. Singh, Anthropological Sarvery of India, Calcutta – 1989

  1. Jawaharalal Nehru’s Speechs, Vol-3-1953-57, Publication Division, Ministry of information and broadcasting Govt. of India 1955
  2. Nehru : Tribal and Woman Welfare, M. H. Gavit, Attar Chand, H. K. Publishers and Distributes, New Delhi – 1989
  3. Tribal World of Verrier Elwin – An Autobiography, Oxford University, Third Edition – 1992
  4. Savaging the civilized – Ramachandra Guha (Oxford University Press, 2001)
  5. Philanthropologist, (Selected writings of Verrier Elwin) Edited by Nari Rustomji, Oxford University, Press, 2001

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೨೧೮

[2] ಅದೇ ಪು – ೨೧೯

[3] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೧, ಪು – ೧೪೭

[4] ಅದೇ ಪು – ೧೪೩

[5] ಅದೇ ಪು – ೧೪೮

[6] ಅದೇ ಪು – ೧೪೯

[7] ಡಾ. ಬಾಬಾಸೇಬ್ ಅಂಬೇಡ್ಕರ್ ಬರಹಗಳು ಭಾಷಣಗಳು ಸಂ-೫, ಪು – ೫೪೫