ಸಂಕೋಲೆಗಳ ಕಾಲ

ಇದುವರೆಗೆ ವಿಶ್ಲೇಷಿಸಲಾದ ಅಂಬೇಡ್ಕರರ ವಿದ್ಯಾರ್ಥಿ ಜೀವನದ ಘಟನೆಗಳನ್ನೆಲ್ಲಾ ನೋಡಿದಾಗ, ಬಹುಶಃ ಬಹುಮುಖ್ಯವೆನಿಸುವ ಒಂದು ಸಂಗತಿ ವೇದ್ಯವಾಗುವಂತಿದೆ. ಅದೆಂದರೆ, ಬರಿಯ ಸಾಮಾಜಿಕ ಕಷ್ಟ ಸಂಕೋಲೆಗಳೇ ಈ ಬಾಲಕನ ಬದುಕನ್ನು ಮುತ್ತಿ, ಚುಚ್ಚಿ ನೋಯಿಸಿವೆ; ತತ್ಫಲವಾಗಿ ವಿಕಸನದ ವೇಗದ ಕ್ರಿಯೆಗೆ ಸನಿಹವಾದ ಬಾಲ ಮನಸ್ಸು ವಿಕ್ರಾಂತಮಯವಾಗಿ ಬೆಳೆಯುವುದು ಅನಿವಾರ್ಯವಾಗಿರುವಂತೆಯೂ ತೋರುತ್ತದೆ. ಪ್ರಾಯಶಃ ಇನ್ನೊಂದು ಸೂಕ್ಷ್ಮವಾದ ಅಂಶವೂ ಇಲ್ಲೇ ಅಡಗಿರುವಂತೆ ಅನಿಸುತ್ತದೆ. ಪ್ರಸ್ತುತ, ಲಿಖಿತ ರೂಪದಲ್ಲಿ ಉಪಲಬ್ಧವಿರುವ ಅಂಬೇಡ್ಕರರ ವಿದ್ಯಾರ್ಥಿ ದೆಶೆಯ ಘಟನಾವಳಿಗಳನ್ನೆಲ್ಲಾ ತೀವ್ರವಾದ ಪರಿಶೀಲನೆಗೆ ಗುರಿಮಾಡಿರುವುದರಿಂದ, ಆ ಸೂಕ್ಷ್ಮಾಂಶ ತನ್ನ ತಾನೇ ವ್ಯಕ್ತವಾಗುವಂತೆ ಕೂಡ ತೋರುತ್ತದೆ. ಅದೆಂದರೆ, ಅಂಬೇಡ್ಕರರ ವಿದ್ಯಾರ್ಥಿ ಜೀವನದಲ್ಲಿ ಉಂಟಾದ ಕಷ್ಟಕೋಟಲೆಗಳ ಘೋರತೆಯನ್ನು ಅಸ್ಪೃಶ್ಯ ವರ್ಗದಿಂದ ಬರುವ ಇವತ್ತಿನ ವಿದ್ಯಾರ್ಥಿಗಳಲ್ಲೂ ಕಾಣಬಹುದಾಗಿರುವ ವಾಸ್ತವ ಸ್ಥಿತಿಯನ್ನು ಈ ಸಂದರ್ಭದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾದ ಪಕ್ಷದಲ್ಲಿ, ಈಗ್ಗೆ ಎಂಬತ್ತು ತೊಂಬತ್ತು ವರ್ಷಗಳ ಹಿಂದಿನ ಅಸ್ಪೃಶ್ಯರ ಹುಡುಗ ಭೀಮನಿಗೆ ಉಂಟಾಗಿರಬಹುದಾದ ಸಾಮಾಜಿಕ ಸಂಕಷ್ಟಗಳ ಪೈಶಾಚಿಕ ಸ್ವರೂಪವನ್ನು ಸುಲಭವಾಗಿಯೇ ಊಹಿಸಿಕೊಳ್ಳಬಹುದೆನಿಸುತ್ತದೆ.

ಇದು ಒಂದು ಕಡೆಗೆ; ಇನ್ನು ಮತ್ತೊಂದು ಕಡೆಗೆ, ಅಂಬೇಡ್ಕರರ ವಿದ್ಯಾರ್ಥಿ ಜೀವನದಲ್ಲಿ ಕೌಟುಂಬಿಕ ಬಡತಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಸಂಕೋಲೆಗಳೇ ಪ್ರಧಾನವಾಗಿದ್ದು, ಅದು ಅಂಬೇಡ್ಕರರ ಮನಸ್ಸನ್ನು ಅತ್ಯಂತ ನಿರ್ದಯವಾಗಿಯೂ ನಿಷ್ಕಾರಣ್ಯದಿಂದಲೂ ಹಿಂಸೆಗೆ ಗುರಿ ಮಾಡಿರುವುದು ಗೊತ್ತಾಗುತ್ತದೆ. ಹಾಗೆ ನೋಡಿದರೆ, ಅಂದಿನ ಅಸ್ಪೃಶ್ಯ ವಿದ್ಯಾರ್ಥಿ ಭೀಮನಿಗೆ ಉಂಟಾದ ಸಾಮಾಜಿಕ ಸಮಸ್ಯೆ ಹೇಗೋ ಹಾಗೆಯೇ, ಇಂದಿನ ಅಸ್ಪೃಶ್ಯ ವಿದ್ಯಾರ್ಥಿಗೂ ಎದುರಾಗುವ ಸಾಮಾಜಿಕ ಸಮಸ್ಯೆಯ ಘೋರತೆಯನ್ನು ನೋಡಿದಾಗ, ಅಸ್ಪೃಶ್ಯರ ಕೌಟುಂಬಿಕ ಅಥವಾ ಬಡತನ ಅವರಿಗೊಂದು ಸಮಸ್ಯೆಯೇ ಅಲ್ಲವೆನಿಸುತ್ತದೆ. ಅಥವಾ ಈ ಕೌಟುಂಬಿಕ ಸಮಸ್ಯೆ ಅದೇ ಸಾಮಾಜಿಕ ಸಮಸ್ಯೆಯ ಕೇವಲ ಒಂದು ಉಪಸಮಸ್ಯೆ ಮಾತ್ರವಾಗಿರುವಂತಿದೆ. ಅಥವಾ ಇನ್ನೂ ಒಂದು ಮಾತಿನಲ್ಲಿ ಹೇಳುವುದಾದರೆ, ಅಸ್ಪೃಶ್ಯರ ಈ ಉಪಸಸಮ್ಯೆ ಅಥವಾ ಬಡತನವೆಂಬುದು ಕೇವಲ ಅಸ್ಪೃಸ್ಯರ ಸಮಸ್ಯೆ ಮಾತ್ರವಲ್ಲ. ಬದಲಾಗಿ, ಅದು ಸರ್ವರ ಸಮಸ್ಯೆ, ಅಥವಾ ಅದೊಂದು ಸಾರ್ವತ್ರಿಕವಾದ ಸಮಸ್ಯೆಯೇ ಆಗಿದೆ. ಆದ್ದರಿಂದ ಬಡತನವೆಂಬುದು ಸಾರ್ವತ್ರಿಕವಾದ ಸಮಸ್ಯೆಯೇ ಹೊರತು ಅಸ್ಪೃಶ್ಯತೆ ಸಾರ್ವತ್ರಿಕ ಅಥವಾ ಸರ್ವರ ಸಮಸ್ಯೆ ಅಲ್ಲ. ಅಲ್ಲದೆ ಅಸ್ಪೃಶ್ಯರನ್ನು ಮಾತ್ರ ಕಾಡುತ್ತಿರುವ ಸಮಸ್ಯೆಯಾಗಿದೆ. ಅಂದರೆ ಇಷ್ಟನ್ನೆಲ್ಲಾ ವಿವರಿಸಿದುದರ ಉದ್ದೇಶವೆವೇನೆಂದರೆ, ಅಂಬೇಡ್ಕರರ ವಿದ್ಯಾರ್ಥಿ ಜೀವನದ ಬಾಲ್ಯಾನುಭವ ಇಷ್ಟೊಂದು ಸಂಕೀರ್ಣವಾಗಿಯೂ, ತೀವ್ರವಾಗಿಯೂ ಇದ್ದಿರಲೇಬೇಕೆಂಬುದು ಮಾತ್ರವಲ್ಲದೆ ಆ ಸಮಸ್ಯೆ ಅಸ್ಪೃಶ್ಯರಲ್ಲದವರಿಗೆ ಅಸಾಧ್ಯವಾದುದಾಗಿದೆ ಎಂಬುದನ್ನು ಸೂಚಿಸುವುದು. ಅಂದ ಮಾತ್ರಕ್ಕೆ, ಭಾರತೀಯ ಜೀವನ ವ್ಯವಸ್ಥೆಯಲ್ಲಿ, ಅದರಲ್ಲೂ ವೈದಿಕರ ಸಾಮಾಜಿಕ ಜೀವನದ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅಸ್ಪೃಶ್ಯತೆಯಂಥ ಅಮಾನುಷ ನಡವಳಿಕೆಯನ್ನು ರಕ್ಷಿಸುವನೆಂದಾಗಲಿ, ಪೋಷಿಸುವನೆಂದಾಗಲಿ ಭಾವಿಸಲಿಕ್ಕೆ ಆಧಾರವೂ ಇಲ್ಲ ಅದು ಸೂಕ್ತವೂ ಅಲ್ಲ. ಒಂದು ವೇಳೆ ಅದು ನಿಜವೆಂದು ಭಾವಿಸಿದಲ್ಲಿ ಭೀಮನ ವಿದ್ಯಾರ್ಥಿ ಜೀವನದಲ್ಲಿ ತುಂಬ ಪ್ರಭಾವಿ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುವ ಸಾತಾರ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾದ ಅಂಬೇಡ್ಕರ ಮಾಸ್ತರರಾಗಲಿ, ಅಂದಿನ ಹೆಸರಾಂತ ಮರಾಠಿ ಸಾಹಿತಿ ಕೆ. ಎ. ಕೆಳುಸ್ಕರ್ ರವರಿಗಾಗಲಿ, ಜ್ಯೋತಿಭಾ ಫುಲೆಯವರ ಅನುಯಾಯಿಯೂ ಸತ್ಯಶೋಧಖ ಆಂದೋಲನದ ಪ್ರಸಿದ್ಧ ನಾಯಕರೂ ಆಗಿದ್ದ ಎಸ್‌. ಕೆ. ಬೋಲೆಯವರಿಗಾಗಲಿ ಅಥವಾ ಭೀಮನ ಕಾಲೇಜು ಶಿಕ್ಷಣಕ್ಕೆ ಒಂದು ಹೊಸ ತಿರುವನ್ನೇ ನಿರ್ಮಿಸಿಕೊಟ್ಟ ಮುಂಬೈನ ಎಲ್ಫಿನ್‌ಸ್ಟನ್‌ಕಾಲೇಜಿನ ಪ್ರೊಫೆಸರ್ ಮುಲ್ಲರ್ ರವರೇ ಮೊದಲಾದ ಈ ಮಹನೀಯರಿಗೆಲ್ಲಾ ಇಡೀ ಬದುಕಿನುದ್ದಕ್ಕೂ ಸ್ವತಃ ಅಂಬೇಡ್ಕರರೇ ಸಲ್ಲಿಸಿರುವ ಗೌರವವನ್ನೂ, ಅದರ ಮೂಲ ಕಾರಣವನ್ನೂ ಅರ್ಥಮಾಡಿಕೊಂಡಂತಾಗುವುದಿಲ್ಲ.

ಏಕೆಂದರೆ, ಅಂಬೇಡ್ಕರರು ೧೯೦೯ರಲ್ಲಿ ಎಲ್ಫಿನ್‌ಸ್ಟನ್‌ಕಾಲೇಜಿಗೆ ಮೊದಲ ವರ್ಷದ ಬಿ. ಎ. , ತರಗತಿಗೆ ಸೇರಿದರು; ಆಗ ಸಂಸ್ಕೃತವನ್ನು ಐಚ್ಛಿಕ ವಿಷಯಗಳಲ್ಲಿ ಒಂದನ್ನಾಗಿ ತೆಗೆದುಕೊಳ್ಳಲು ಅಂಬೇಡ್ಕರರು ಇಚ್ಚಿಸಿದಾಗ, ಅದೇ ಕಾಲೇಜಿನ ಸಂಸ್ಕೃತ ಪಂಡಿತರೂ ಹಿಂದೂ ಅಧ್ಯಾಪಕರೂ ತೀವ್ರವಾಗಿ ಆಕ್ಷೇಪಿಸಿದರು. ಇದರಿಂದಾಗಿ ಅಪಾರ ಬೇಸರಗೊಂಡ ಪ್ರೊ. ಮುಲ್ಲರ್ ರವರು, ಸಂಸ್ಕೃತದ ಬದಲು ಇಂಗ್ಲಿಷ್‌ಅನ್ನು ಮೊದಲ ವಿಷಯವನ್ನಾಗಿಯೂ, ರಾಜಕೀಯ ಅರ್ಥಶಾಸ್ತ್ರ ಹಾಗೂ ಪರ್ಷಿಯನ್‌ಭಾಷೆಯನ್ನು ಉಳಿದೆರಡು ವಿಷಯಗಳನ್ನಾಗಿಯೂ ಕೊಡಿಸಿ, ಸ್ವತಃ ಪ್ರೊ. ಮುಲ್ಲರ್ ರವರೇ ಭೀಮನಿಗೆ ಮಾರ್ಗದರ್ಶನ ಮಾಡತೊಡಗಿದರು. ಎಂತಲೇ ಅಂಬೇಡ್ಕರ್ ಅವರ ಬಾಲ್ಯ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿ ಜೀವನಾನುಭವದ ಭಾವಸಂಕೀರ್ಣತೆಯನ್ನೂ, ಅವರ ಮುಂದಿನ ಜೀವನ ಹಾಗೂ ಚಿಂತನೆಯ ಮೇಲೆ ಆ ಅನುಭವ ಬೀರಿದ ಪ್ರಭಾವದ ಸ್ವರೂಪವನ್ನು ಈ ಮುಂದಿನ ಕೆಲವು ಘಟನೆಗಳಿಂದ ತಿಳಿಬಹುದಾಗಿದೆ. ಏಕೆಂದರೆ ಆ ಮೂಲಕ ಅಸ್ಪೃಶ್ಯತೆಯಂಥ ಅಮಾನುಷ ಅನುಭವದಿಂದ ಮೂಡಿ ಬಂದ ಅಂಬೇಡ್ಕರರ ಬದುಕು ತಮ್ಮ ಜೀವಿತ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆ ಸರ್ವರ ಗೌರವವನ್ನು ಸೆಳೆದುಕೊಳ್ಳುವ ಹಾಗೂ ಅಸಹನವಾದ ಸಂಕಷ್ಟಗಳ ನಡುವೆ ಕೂಡ ನಂತರದ ತಲೆಮಾರುಗಳ ವಿದ್ಯಾರ್ಥಿ ಸಮುದಾಯಕ್ಕೂ ಸಾಮಾಜಿಕ ಸಜ್ಜನಿಕೆಗೂ ಅವರ ಬದುಕು ಎಷ್ಟರ ಮಟ್ಟಿಗೆ ಮಾದರಿಯಾಗಿದೆ ಎಂಬುದನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗಬಹುದೆಂದು ತೋರುತ್ತದೆ. ಅದೂ ಅಲ್ಲದೆ, ತನ್ನ ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣದ ದಿನಗಳಲ್ಲಿ ಭೀಮ ಗುರಿಯಾದ ಹಿಂದೂ ಉಪಾಧ್ಯಾಯರ ಅವಮಾನಗಳ ಮೂಲ ಉದ್ದೇಶ, ಈ ಬಗೆಯ ತೇಜೋವಧೆಗಳ ಮೂಲಕ ಅವನ ಶೈಕ್ಷಣಿಕ ಆಸಕ್ತಿಯನ್ನೇ ನಾಶಪಡಿಸುವುದು ಎಂಬುದೇನೋ ತುಂಬಾ ಸ್ಪಷ್ಟವಾಗಿಯೇ ಇದೆ. ಆದರೆ ಆ ಬಗೆಯ ತೇಜೋವಧೆಗಳನ್ನೆಲ್ಲಾ ಮೀರಿ ನಿಂತ ಅವನ ಶೈಕ್ಷಣಿಕ ಆಸಕ್ತಿಯ ಹಿಂದಿನ ಮನೋಧರ್ಮ ದೃಢವಾದ ಸಂಕಲ್ಪದಿಂದ ಕೂಡಿದ್ದುದ್ದಾಗಿದದು, ಅದು ಸ್ಥಾಯಿಯಾದ ವಿಚಾರಗಳಿಂದಲೂ ತುಂಬಿಕೊಂಡಿದ್ದಿರಬಹುದೆ ಎಂಬುದೇ ಇಲ್ಲಿ ಮನಗಂಡುಕೊಳ್ಳಬೇಕಾದ ಮುಖ್ಯ ಸಂಗತಿ ಎನಿಸುತ್ತದೆ. ಅಂತೆಯೇ ಭೀಮನ ವಿದ್ಯಾರ್ಥಿ ಜೀವನಾನುಭವದಿಂದ ವ್ಯಕ್ತವಾಗುವ ಆ ಭಾವ ಸಂಕೀರ್ಣತೆಯನ್ನು ಈ ಕೆಳಗಿನ ಕೆಲವು ವಿಭಿನ್ನ ಘಟನೆಗಳಿಂದ ತಿಳಿಯಲೆತ್ನಿಸಬಹುದು.

೧. ಭೀಮರಾವ್‌ಪ್ರಾಥಮಕಿ ಒಂದನೇ ತರಗತಿಗೆ ಸತಾರದ ಶಾಲೆಯನ್ನು ಸೇರಿದ್ದು ೧೯೦೦ರಲ್ಲಿ. ಭೀಮನ ಮೊದಲ ಹೆಸರು ‘ಭೀಮ ರಾಮ್‌ಜಿ ಅಂಬಾವಾಡೇಕರ್ ’ ಎಂದು. ಹಾಗೆಯೇ ಭೀಮನ ವಂಶದ ಮೂಲ ಹೆಸರು ‘ಸಕ್ಪಾಲ್‌’. ಅಲ್ಲದೆ ಭೀಮನ ಪೂರ್ವಜರಿಗೆ ತಮ್ಮ ಹುಟ್ಟೂರಿನ ಹೆಸರಿನಿಂದ ಕರೆಸಿಕೊಳ್ಳುವುದೇ ಪ್ರಿಯವಾಗಿತ್ತು. ಅಂತೆಯೇ, ಮಹಾ ರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡ್‌ತಾಲೂಕಿನ ಅಂಬಾವಾಡೆ ಭೀಮನ ಹುಟ್ಟೂರು. ಅದೇ ಸತಾರದ ಸರಕಾರಿ ಶಾಲೆಯ ಒಬ್ಬ ಮಾಸ್ತರರ ಹೆಸರು ಕೂಡ ‘ಅಂಬೇಡ್ಕರ್ ’ ಎಂದು. ಏಕೆಂದರೆ ಈ ಮಾಸ್ತರರ ಹುಟ್ಟೂರು ಕೂಡ ಅದೇ ಅಂಬಾವಾಡೆ. ಈ ಅಂಬೇಡ್ಕರ್ ಮಾಸ್ತರರಿಗೆ ಭೀಮನ್ನು ಕಂಡರೆ ಅಪಾರ ಪ್ರೇಮ. ಅಂಬೇಡ್ಕರ್ ಮಾಸ್ತರರು ತಾವು ಶಾಲೆಗೆ ತರುತ್ತಿದ್ದ ಊಟ ತಿಂಡಿಗಳಲ್ಲಿ ಭೀಮನಿಗೂ ಕೊಟ್ಟು, ಅವನನ್ನು ಜೊತೆಜೊತೆಯಲ್ಲಿ ಕೂರಿಸಿಕೊಂಡು ತಿನ್ನುವುದರಲ್ಲೇ ಅವರಿಗೆ ತೃಪ್ತಿ. ಹೀಗಾಗಿ ಅಂಬೇಡ್ಕರ್ ‌ಮಾಸ್ತರರು ಅಂದು ಭೀಮನಿಗೆ ತೋರಿದ ಅನುಪಮ ಪ್ರೇಮಕ್ಕೆ ಪ್ರತಿಯಾಗಿ, ಭೀಮ ತನ್ನ ಹೆಸರನ್ನು ‘ಅಂಬೇಡ್ಕರ್ ’ ಎಂಬುದಾಗಿ ಕರೆಸಿಕೊಳ್ಳಲು ಇಚ್ಛಿಸಿದ್ದು ಮಾತ್ರವಲ್ಲದೆ, ಸ್ವತಃ ಅಂಬೇಡ್ಕರ್ ಮಾಸ್ತರರೇ ಭೀಮನ ಹೆಸರನ್ನು ‘ಅಂಬೇಡ್ಕರ್ ’ ಎಂಬುದಾಗಿ ಶಾಲೆಯ ಹಾಜರಿ ಪುಸ್ತಕದಲ್ಲಿ ತಿದ್ದಿದರು. ಇದಾದ ಎಷ್ಟೋ ವರ್ಷಗಳ ನಂತರ ಡಾ. ಅಂಬೇಡ್ಕರ್ ಮಾಸ್ತರದು ಡಾ. ಅಂಬೇಡ್ಕರರಿಗೊಂದು ಅಭಿನಂದ ಪತ್ರ ಬರೆದಿದ್ದರು”.

೨. ಎರಡನೆಯ ಘಟನೆಯೆಂದರೆ, “ಅಂಬೇಡ್ಕರರು ೧೯೦೭ರಲ್ಲಿ ಮೆಟ್ರಿಕ್ಯೂಲೇಷನ್‌ಪಾಸ್‌ಮಾಡಿದ್ದು. ಮಹರ್ ಕೋಮಿನ ಈ ಹುಡುಗ ಮೆಟ್ರಿಕ್ಯೂಲೇಷನ್‌ಪಾಸ್‌ಮಾಡಿದ್ದು ಆ ಕಾಲದಲ್ಲಿ ನಿಜಕ್ಕೂ ಒಂದು ಗಮನಾರ್ಹವಾದ ಘಟನೆಯೆನಿಸಿದ್ದು. ಭೀಮನ ಕುಟುಂಬದವರಿಗಂತೂ ಅದು ಅಪಾರ ಆನಂದವನ್ನೇ ತಂದಿತ್ತು. ಅಂತೆಯೇ ಸತ್ಯಶೋಧಕ ಆಂಧೋಲನದ ಅಂದಿನ ಪ್ರಮುಖ ನಾಯಕರಾಗಿದ್ದ ಎಸ್‌. ಕೆ. ಬೋಲೆಯವರ ಅಧ್ಯಕ್ಷತೆಯಲ್ಲಿ ಭೀಮನನ್ನು ಅಭಿನಂದಿಸುವ ಒಂದು ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯೂ ಅಂದಿನ ಪ್ರಸಿದ್ಧ ಮರಾಠಿ ಸಾಹಿತಿಗಳೂ ಆಗಿದ್ದ ಕೃಷ್ಣಾಜಿ ಅರ್ಜುನ್‌ಕೆಳುಸ್ಕರ್ ರವರು ಕಾರ್ಯಕ್ರಮದಲ್ಲಿ ಭೀಮನನ್ನು ಮೆಚ್ಚಿ, ತಾವೇ ಮರಾಠಿಯಲ್ಲಿ ರಚಿಸಿದ್ದ ಗೌತಮ ಬುದ್ಧನ ಜೀವನ ಚರಿತ್ರೆಯ ಒಂದು ಪ್ರತಿಯನ್ನು ಭೀಮನ ಉಡುಗೊರೆಯನ್ನಾಗಿ ಕೊಟ್ಟರು.

೩. ಇನ್ನು ಬಹುಮುಖ್ಯವಾದ ಮೂರನೆಯ ಘಟನೆಯೆಂದರೆ “೧೯೧೩ರ ಫೆಬ್ರವರಿ ೨ ರಂದು ಅಂಬೇಡ್ಕರರ ತಂದೆ ರಾಮ್‌ಜಿ ಸಕ್ಪಾಲರ ನಿಧನದ ಸುದ್ದಿ ಅಂಬೇಡ್ಕರರನ್ನು ಅಧೀರರನ್ನಾಗಿಸಿದ್ದು. ಏಕೆಂದರೆ, ಮಗನನ್ನು ಓದಿಸುವ ಸಲುವಾಗಿ ಅಪಾರ ಸಾಲ ಸೋ ಮಾಡಿಕೊಂಡಿದ್ದ ತಂದೆ ಸಕ್ಪಾಲರು, ಮಗ ವಿದೆಶದ ವಿದ್ಯೆಗಾಗಿ ಹೊರಡುವುದನ್ನು ನೋಡಲಾಗಲಿಲ್ಲ”. ಅದೂ ಅಲ್ಲದೆ, ಬರೋಡ ಮಹಾರಾಜರ ವಿದ್ಯಾರ್ಥಿ ವೇತನದಿಂದಲೂ ಮುಂಬೈ ಎಲ್ಫಿನ್‌ಸ್ಟನ್‌ಕಾಲೇಜಿನ ಪ್ರೊ. ಮುಲ್ಲರ್ ರವರ ಆತ್ಮೀಯ ಸಹಾಯದಿಂದಲೂ ೧೯೧೨ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಬಿ. ಎ. , ಪಾಸ್‌ಮಾಡಿದ ಅಂಬೇಡ್ಕರರನ್ನು ಬರೋಡ ಮಹಾರಾಜರು ಬರೋಡ ಸಾಮ್ರಾಜ್ಯದ ಸೇನೆಯ ಲೆಫ್ಟಿನೆಂಟ್‌ಆಗಿ ನೇಮಿಸಿಕೊಂಡರು. ಆದರೆ ಭೀಮ ಈಗಲೇ ಕೆಲಸಕ್ಕೆ ಸೇರುವುದು ಈ ಕಡೆಗೆ ತಂದೆ ಸಕ್ಪಾಲರಿಗೆ ಇಷ್ಟವಿರಲಿಲ್ಲ. ಏಕೆಂದರೆ ಇನ್ನಷ್ಟು ಸಾಲವಾದರೂ ಚಿಂತೆಯಿಲ್ಲ. ಉನ್ನತ ವ್ಯಾಸಂಗಕ್ಕಾಗಿ ಮಗನನ್ನು ವಿದೇಶಕ್ಕೆ ಕಳುಹಿಸಬೇಕೆಂಬುದು ತಂದೆಯ ಇಚ್ಚೆಯಾಗಿತ್ತು. ಅದೇ ಆ ಕಡೆ, ಬಿ. ಎ. ಪದವೀಧರನಾದ ನಂತರವೂ ತಾನು, ಹೆಂಡತಿ ಮತ್ತು ಒಂದು ಮಗುವೂ ಸೇರಿ ತಂದೆಯ, ಕೇವಲ ಪೆನ್ಷನ್‌ದುಡ್ಡಿನಲ್ಲಿ ಬದುಕುವುದು ಸರಿಯಲ್ಲವೆಂತಲೇ ತೀರ್ಮಾನಿಸಿದ್ದ ಅಂಬೇಡ್ಕರರು ಬರೋಡ ಸಾಮ್ರಾಜ್ಯದಲ್ಲಿ ಮಿಲಿಟರಿ ಲೆಫ್ಟಿನೆಂಟ್‌ಆಗಿ ಕೆಲಸಕ್ಕೆ ಸೇರಲು ನಿರ್ಧರಿಸಬೇಕಾಯಿತು.

ಇನ್ನು ಈವರೆಗೆ ವಿವರಿಸಲಾದ ಈ ಮೂರು ಘಟನೆಗಳನ್ನು ವಿಶ್ಲೇಷಿಸಿ, ಚರ್ಚಿಸಿ ನೋಡಬಹುದು. ಮೊದಲಿಗೆ ಭೀಮನಿಗೆ ‘ಅಂಬೇಡ್ಕರ್ ’ ಎಂಬ ಹೆಸರು ಬಂದ ಹಾಗೂ ಆ ಹೆಸರು ಇಂಡಿಯಾದ ಚರಿತ್ರೆಯಲ್ಲಿ ಗಳಿಸಿಕೊಂಡಿರುವ ಅಪಾರ ಪ್ರಾಮುಖ್ಯತೆಯ ಹಿಂದೆ ಒಂದು ಬಹು ದೊಡ್ಡ ಮಾನವ ಪ್ರೇಮವಿರುವುದನ್ನು ಗಮನಿಸಬೇಕು. ಏಕೆಂದರೆ, ಸತಾರ ಪ್ರೈಮರಿ ಶಾಲೆಯ ಅಂಬೇಡ್ಕರ್ ಮಾಸ್ತರರು ಸತಾರ ಶಾಲೆಯಲ್ಲಿ ಭೀಮನಿಗೆ ವಿದ್ಯೆ ಕೊಟ್ಟಿದ್ದು ಮಾತ್ರವಲ್ಲದೆ, ಶಾಲಾ ದಿನಗಳಲ್ಲಿ ಊಟ ತಿಂಡಿಯನ್ನು ಕೊಟ್ಟು, ಅವನನ್ನು ಅವರು ಒಂದು ರೀತಿಯಲ್ಲಿ ಸಾಕಿದುದು ಎರಡನೆಯ ವಿಷಯವೆನಿಸಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂಬುದು ತಾರ್ಕಿಕವಾಗಿ ಸತ್ಯವೇ ಆದರೂ, ಅಂಬೇಡಕರ್ ಮಾಸ್ತರರು ಭೀಮನಿಗೆ ತೋರಿದ ಅಪಾರ ಪ್ರೇಮದ ಹಾಗೂ ಅಮರತ್ವದ ಗುಣ ಒಂದು ಶಾಶ್ವತ ಮೌಲ್ಯವೆನಿಸಿ, ಅದು ಭೀಮನ ಜೀವನದಲ್ಲೂ ನಾಡಿನ ಚರಿತ್ರೆಯಲ್ಲೂ ಪ್ರಥಮ ಸ್ಥಾನದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಅಥವಾ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಭೀಮನ ವಿದ್ಯಾರ್ಥಿ ಸ್ನೇಹದಲ್ಲಿ ತೃಪ್ತಿಯನ್ನು ಕಂಡಂಥ ಅಂಬೇಡ್ಕರ್ ಮಾಸ್ತರರು ಒಂದು ಅನುದ್ದೇಶಿತ ಕೊಡುಗೆಯನ್ನು ಈ ನಾಡಿಗೆ ಇತ್ತಿದ್ದಾರೆ. ಅಂದರೆ ಭೀಮನ್ನು ಪ್ರೇಮಿಸಿದ ಅಂಬೇಡ್ಕರ್ ಮಾಸ್ತರರು, ಭೀಮನ ಚೇತನದ ಮೂಲಕ, ನಿಷ್ಕಳಂಕ ಮಾನವ ಪ್ರೇಮದ ಮೌಲ್ಯವನ್ನು ಜ್ವಲಂತಗೊಳಿಸಿ, ಆ ಜ್ವಲಂತ ಬೆಳಕಿನಲ್ಲಿ ಮತಾಂಧ ವೈದಿಕರು ತಮ್ಮ ಮತಮೌಢ್ಯವನ್ನೂ ಸಾಮಾಜಿಕ ಆಜ್ಞಾನವನ್ನೂ ತಾವೇ ನೋಡಿಕೊಳ್ಳುವಂತೆ ಮಾಡಿದ್ದಾರೆ. ಜೊತೆಗೆ ಭೀಮನ ಹುಟ್ಟೂರು ರತ್ನಾಗಿರಿ ಜಿಲ್ಲೆಯ ಖೇಡ್‌ತಾಲೂಕಿನ ಅಂಬವಾಡೆ ಎಂಬುದು ನಿಜವಾದರೂ, ಹಾಗೆಂದು ಹೆಸರನ್ನು ಬದಲಾಯಿಸಿಕೊಳ್ಳಬೇಕೆಂಬ ಆಸಕ್ತಿಯಾಗಲಿ, ಆಲೋಚನೆಯಾಗಲಿ ಭೀಮನಲ್ಲಿ ಉಂಟಾಗಿರಲಿಲ್ಲ. ಬದಲಾಗಿ ಅದೇ ಅಂಬಾವಾಡೆಯ ಅಂಬೇಡ್ಕರ್ ಮಾಸ್ತರರು, ಭೀಮನ ಹೆಸರನ್ನು ಅಂಬೇಡ್ಕರ್ ಎಂಬುದಾಗಿ ಶಾಲಾ ರಿಜಿಸ್ಟರ್ ನಲ್ಲಿ ತಿದ್ದಿದರು ಎಂಬುದು ವಾಸ್ತವ ಸತ್ಯವಾದರೂ, ಭೀಮನ ಹೆಸರನ್ನು ಹಾಗೆ ತಿದ್ದುವ ಮೂಲಕ ಅಂಬೇಡ್ಕರ್ ಮಾಸ್ತರರು ಈ ನಾಡಿನ ಶತಶತಮಾನಗಳ ಸಾಮಾಜಿಕ ಅನ್ಯಾಯವನ್ನೇ ನ್ಯಾಯ ಸಮ್ಮತವಾಗಿ ತಿದ್ದಿದರು ಎಂಬುದಾಗಿ, ಇದು ಒಂದು ಬಗೆಯ ಕಾವ್ಯ ಸತ್ಯವೆನಿಸುತ್ತದೆ.

ಹಾಗೆಯೇ ಇಷ್ಟೇ ಮುಖ್ಯವಾದ ಅಥವಾ ಇದಕ್ಕಿಂತಲೂ ಮಿಗಿಲಾಗಿ ಹೃದಯವನ್ನು ತಟ್ಟುವ ಸಂಗತಿ ಎಂದರೆ ಅದೇ ಅಂಬೇಡ್ಕರ್ ಮಾಸ್ತರರು, ವಿದ್ಯೆ, ಊಟ ಮತ್ತು ಪ್ರೇಮವನ್ನು ಧಾರೆಯೆರೆದು ಸಾಕಿದ ಅಸ್ಪೃಶ್ಯರ ಹುಡುಗನಾದ ಈ ಭೀಮ ಡಾ. ಅಂಬೇಡ್ಕರ್ ಆಗಿ, ಲೋಕಮಾನ್ಯ ವಿದ್ವಾಂಸನೆನಿಸಿ, ದಲಿತ ಕೋಟೆಯ ಸ್ವಾತಂತ್ರ್ಯ ಸಂಗ್ರಾಮದ ಧೀರ ಪುರುಷನೂ ಎನಿಸಿ, ಲಂಡನ್ನಿನಲ್ಲಿ ನಡೆದ ಮೊಟ್ಟಮೊದಲ ಚಕ್ರಾಧಿವೇಶನಕ್ಕೆ ಹೋದುದನ್ನು ಕೇಳಿದ ಲಂಡನ್ನಿನಲ್ಲಿದ್ದ ಡಾ. ಅಂಬೇಡ್ಕರ್ ರಿಗೆ ಅದೇ ಅಂಬೇಡ್ಕರ್ ಮಾಸ್ತರರು ಅಭಿನಂದೆ ಪತ್ರ ಬರೆದುದು. ಅಂತೆಯೇ, ಈ ಘಟನೆಯಿಂದ ಗಮನಾರ್ಹವೆನಿಸುವ ಎರಡು ಭಾವಾರ್ಥಗಳು ವ್ಯಕ್ತವಾಗುತ್ತಿರುವಂತೆ ತೋರುತ್ತದೆ: ತಾವು ವಿದ್ಯೆ ಕೊಟ್ಟು ಸಾಕಿದ ಈ ಅಸ್ಪೃಶ್ಯರ ಹುಡುಗನಿಗೆ ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ನಂತರ ಲಂಡನ್ನಿಗೆ ಕಾಗದ ಬರೆದು ಡಾ. ಅಂಬೇಡ್ಕರರನ್ನು ಅಭಿನಂದಿಸಿದ ಅಂಬೇಡ್ಕರ್ ಮಾಸ್ತರರರ ನಿರ್ವ್ಯಾಜ ಪ್ರೇಮವೂ ಮಹಾ ಮಾನವತಾವಾದವೂ ಈ ಘಟನೆಯಿಂದ ವ್ಯಕ್ತವಾಗುತ್ತದೆ. ಎರಡನೆಯದಾಗಿ ಬಾಲಕ ಭೀಮನಿಗೆ ಅಂಬೇಡ್ಕರ್ ಮಾಸ್ತರರು ತೋರಿದ ನಿರ್ವ್ಯಾಜ್ಯ ಪ್ರೇಮ ಮೂವತ್ತು ವರ್ಷಗಳ ನಂತರವೂ ಹಾಗೆ ಇದ್ದುದನ್ನು ನೋಡಿದಾಗ, ಆ ಮಾನವ ಪ್ರೇಮ ಹೇಗೆ ಕಾಲಾತೀತೂ ಶ್ರೇಷ್ಠವೂ ಆದ ಮೌಲ್ಯವಾಗಿದೆ ಎಂಬುದು, ಡಾ. ಅಂಬೇಡ್ಕರನು ಕುರಿತ ಚರಿತ್ರೆಯನ್ನೂ ಅವರ ಚಿಂತನೆಯನ್ನೂ ಇಂದು ಓದುತ್ತಾ ನಡೆದಂತೆ ಅದು ವೇದ್ಯವಾಗುತ್ತಾ ಹೋಗುತ್ತದೆ.

ಇನ್ನು ಎರಡನೆಯ ಘಟನೆಯ ಚಾರಿತ್ರಿಕ ಸಂಗತಿಯಿಂದ ಹೊರಡುವ ಭಾವಾರ್ಥಗಳನ್ನು ಹೆಕ್ಕಿ ನೋಡಬಹುದು. ಏಕೆಂದರೆ ಕೊಳದಲ್ಲಿ ನೀರು ಕುಡಿದದ್ದರಿಂದ ಹಿಂದೂಗಳು ಭೀಮನಿಗೆ ಹೊಡೆದದ್ದಾಗಲಿ, ಗಾಡಿಯನ್ನು ಎತ್ತಿ ಮುಗುಚಿ ಅಸ್ಪೃಶ್ಯ ಭೀಮನ್ನು ಮುಳ್ಳು ಗಿಡಗಳ ಗುತ್ತಿಯ ಮೇಲೆ ಬಿಸಾಡಿದ್ದಾಗಲಿ ಅಥವಾ ಹೇರ್ ಕಟಿಂಗ್‌ಸಲೂನ್‌ನಿಂದ ಅವನನ್ನು ಬೀದಿಗೆ ದಬ್ಬಿದ್ದರಿಂದಾಗಲಿ, ಭೀಮ ವಿದ್ಯೆಯಲ್ಲಿ ಅಧೀರನೂ ಆಗದೆ, ವಿಚಲಿತನೂ ಆಗದೆ ಹೋದುದಕ್ಕೆ ಬಹುಶಃ ಮನೆಯ ವಾತಾವರಣದಿಂದ ಅವನಿಗೆ ಲಭ್ಯವಾಗಿದ್ದ ವಾಂಛಲ್ಯದ ಸ್ಥೈರ್ಯ ಒಂದೆಡೆಗಿದ್ದರೆ, ಇನ್ನೊಂದೆಡೆಗೆ ಅಂಬೇಡ್ಕರ್ ಮಾಸ್ತರರನ್ನು ನೋಡಿದಾಗ, ಬಹುಶಃ ಲೋಕದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿರುವುದಿಲ್ಲವೆಂಬ ಸತ್ಯ ಭೀಮನಲ್ಲಿ ಆಶಾಭಾವನೆಯನ್ನು ಮೂಡಿಸಿರಬಹುದು. ಜೊತೆಗೆ ಈ ಹಂತದಲ್ಲಿ, ತಿಳಿಸಬೇಕಾಗಿರುವ ಇನ್ನೊಂದು ಬಹುಮುಖ್ಯವಾದ ಸಂಗತಿ ಎಂದರೆ, ೧೯೦೭ರಲ್ಲಿ ಅಂಬೇಡ್ಕರರು ಮೆಟ್ರಿಕ್ಯೂಲೇಷನ್‌ಪಾಸು ಮಾಡಿದ್ದರ ನಿಮಿತ್ತ ಏರ್ಪಡಿಸಲಾಗಿದ್ದ ಅಭಿನಂದ ಕಾರ್ಯಕ್ರಮ ಅಷ್ಟೇನೂ ಮುಖ್ಯವಾದ ಘಟನೆ ಎನಿಸದಿದ್ದರೂ, ಆ ಕಾರ್ಯಕ್ರಮದ ನೆಪದಲ್ಲಿ, ಭೀಮನಿಗೆ ದೊರೆತ ಎಸ್‌. ಕೆ. ಬೋರೆಯವರಂಥ ಸಮಾಜ ಸುಧಾರಕರ ಹಾಗೂ ನಿಸ್ಸೀಮ ಸಾಮಾಜಿಕ ಕಾಳಜಿ ಹೊಂದಿದ್ದ ಅಂದಿನ ಮರಾಠಿ ಸಾಹಿತಿಗಳಾದ ಕೆ. ಎ. ಕೆಳುಸ್ಕರ್ ರವರ ಸಂಪರ್ಕ, ಹದಿಹರೆಯದ ಭೀಮನ ಮನೋಧರ್ಮವನ್ನು ಜ್ವಲಂತಗೊಳಿಸಿರಬೇಕು. ತನ್ಮೂಲಕ ಭೀಮನಿಗೆ ಕೌಟುಂಬಿಕ ಬಳುವಳಿಯಾಗಿ ಬಂದಿದ್ದ ದೃಢತೆ ಹಾಗೂ ಸಂಕಲ್ಪದ ಧೋರಣೆ ತಾನೇ ತಾನಾಗಿ ಒಂದು ಹೊಸ ದಿಕ್ಕನ್ನು ಪಡೆದುಕೊಂಡಂತಾಗಿರಲೇಬೇಕು.

ಭಾಷೆಯಲ್ಲಿ ಪ್ರೌಢತೆ

ಇನ್ನು ಅಂಬೇಡ್ಕರರ ವಿದ್ಯಾರ್ಥಿ ಜೀವನದಿಂದ ತಿಳಿದು ಬರುವ ಇನ್ನೊಂದು ಮುಖ್ಯವಾದ ಸಂಗತಿ, ಅವರ ವಿದ್ವತ್ತನ್ನು ಅನುಗಾಲವೂ ಶ್ರೀಮಂತಗೊಳಿಸಿದ ಒಂದು ಕಲೆ ಎಂದರೆ, ವಿದ್ಯಾರ್ಥಿ ದಿನಗಳಲ್ಲೇ ಅವರು ರೂಢಿಸಿಕೊಂಡಿದ್ದ ಭಾಷಾಂತರದಲ್ಲಿನ ಅಪಾರ ಆಸಕ್ತಿ. ಭೀಮ ಮುಂಬೈ ಮರಾಠ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾಗ, ತಂದೆ ಸಕ್ಪಾಲರ ಬಳಿಯಲ್ಲಿ ಕುಳಿತು ಮರಾಠಿಯಿಂದ ಹಿಂದಿಗೂ ಹಿಂದಿಯಿಂದ ಮರಾಠಿಗೂ ಭಾಷಾಂತರಿಸುವ ಕಲೆಯನ್ನು ರೂಢಿಸಿಕೊಂಡಿದ್ದಲ್ಲದೆ, ಇದರಿಂದ ಮರಾಠಿ ಮತ್ತು ಹಿಂದಿಗಳಿಂದ ಹಲವಾರು ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಇಂಗ್ಲಿಷ್‌ಗೆ ಯಶಸ್ವಿಯಾಗಿ ಅನುವಾದಿಸುವುದು ಕೂಡ ತುಂಬಾ ಸರಳವಾದ ಕಲೆಯಾಗಿ ಭೀಮನಿಗೆ ಕರಗತವಾಯಿತು. ಇದರಿಂದ ಮುಂದೆ ಭೀಮನಿಗೆ ಸಾಧಿತವಾದ ಎರಡು ಅಪರೂಪದ ಉಪಕರಣಗಳೆಂದರೆ

ಮೊದಲನೆಯದಾಗಿ ಪ್ರೌಢಶಾಲೆಯ ಹಂತದಲ್ಲೇ ಭೀಮನಿಗೆ ಅಪಾರ ಶಬ್ದ ಸಂಪತ್ತು ಪ್ರಾಪ್ತವಾಯಿತು. ಎರಡನೆಯದಾಗಿ ಹಾಗೆ ಸಾಧಿತವಾದ ಶಬ್ದ ಸಂಪತ್ತಿನ ಮೇಲೆ ವಯಸ್ಸಿಗೆ ಮೀರಿದ ಹಿಡಿತವಿದ್ದುದರಿಂದಲೇ, ಮುಂದಿನ ಹಂತಗಳಲ್ಲಿ ಬರವಣಿಗೆ, ಚಿಂತನೆ, ನಿರರ್ಗಳವಾದ ಭಾಷಣಕಲೆ ಅಂಬೇಡ್ಕರರಿಗೆ ಅತ್ಯಂತ ಸಹಜವಾಗಿಯೂ, ತುಂಬಾ ಸರಾಗವಾಗಿಯೂ ಸಾಧಿತವಾಗಿರುವಂತೆ ತೋರುತ್ತದೆ.

ಇಂಥ ಪ್ರಸಂಗಗಳನ್ನೆಲ್ಲಾ ನೋಡಿದಾಗ, ಓದಿನಲ್ಲಿ ಭೀಮನಿಗಿದ್ದ ತೀವ್ರ ಆಸೆ ಮತ್ತು ಆಸಕ್ತಿಗಳು ಮಾತ್ರವಲ್ಲದೆ, ಶಬ್ದ ಮತ್ತು ಸಂಪತ್ತು ಹಾಗೂ ವಿಷಯ ವಿಮರ್ಶೆಯೇ ಮುಂತಾದ ಹಲವಾರು ತೆರನಾಗಿದ್ದವು ಎಂಬ ವಿಚಾರಗಳೇನೋ ಇದರಿಂದ ವ್ಯಕ್ತವಾಗುತ್ತವೆ. ಆದರೆ, ಇಲ್ಲಿ ಗಮನಾರ್ಹವೆನಿಸಿ ಅತ್ಯಂತ ಮುಖ್ಯವಾದ ವಿಚಾರವೆಂದರೆ, ಭೀಮನ ವಿದ್ಯಾರ್ಥಿ ಜೀವನದಲ್ಲಿ ಸಂಭವಿಸಿದ ಸಾಮಾಜಿಕ ಅವಮಾನಗಳನ್ನು ಅಸ್ಪೃಶ್ಯರ ಈ ತಬ್ಬಲಿ ಹುಡುಗ ಅರ್ಥಮಾಡಿಕೊಂಡ ರೀತಿ ತುಂಬಾ ಅನ್ಯಾದೃಶ್ಯವಾದುದು ಎನಿಸುತ್ತದೆ. ಏಕೆಂದರೆ ಭೀಮನ ವಿದ್ಯಾರ್ಥಿ ಜೀವನದಲ್ಲಿ ಕೇವಲ ಬಡತನವೇ ಅವನನ್ನು ಬಾಧಿಸಿದ ಸಮಸ್ಯೆಯಾಗಿದ್ದರೆ, ಬಹುಶಃ ಅವನ ವಿದ್ಯಾರ್ಥಿ ಜೀವನದ ಸಮಸ್ಯೆಗಳು ಇಂದು ಅತ್ಯಂತ ಭಿನ್ನವಾಗಿರುತ್ತಿದ್ದವು; ಜೊತೆಗೆ ಅವುಗಳನ್ನು ಒಂದು ವಿಭಿನ್ನವಾದ ರೀತಿಯಲ್ಲೇ ಇಂದು ಅರ್ಥಮಾಡಿಕೊಂಡು ವಿಚಾರ ಮಾಡಬೇಕಾಗುತ್ತಿತ್ತು.

ಭೀಮನ ವಿದ್ಯಾರ್ಥಿ ಜೀವನದಲ್ಲಿ ಕಂಡುಬರುವ ಇನ್ನೆರಡು ಕುತೂಹಲಕಾರಿಯಾದ ಘಟನೆಗಳು ಅಥವಾ ವಿಚಾರಗಳೆಂದರೆ, ಮೊದಲನೆಯದು ಆತನಲ್ಲಿ ಉಂಟಾದ ಪುಸ್ತಕಗಳ ಮೇಲಿನ ಅನನ್ಯ ಪ್ರೇಮಕ್ಕೆ ಮೂಲ ಹೇತುವಾದ ತಂದೆ ಭೀಮನಿಗೆ ಪುಸ್ತಕ ಕೊಂಡುಕೊಡುತ್ತಿದ್ದ ಒಂದು ವಿಚಿತ್ರವಾದ ರೀತಿ. ಹಾಗೆಯೇ ಎರಡನಯೆ ಘಟನೆಯೆಂದರೆ, ವಿದ್ಯಾರ್ಥಿ ಜೀವನದಲ್ಲಿ ಭೀಮ ತೋರಿದ ಸಾಹಸ ಪ್ರವೃತ್ತಿ ಹಾಗೂ ತನ್ನನ್ನು ಅವಮಾನಗೊಳಿಸಲು ಯತ್ನಿಸಿದ ಯಾವನೇ ವ್ಯಕ್ತಿಗಾದರೂ ಈ ವಿದ್ಯಾರ್ಥಿ ಕೊಡುತ್ತಿದ್ದ ದಿಟ್ಟ ಉತ್ತರದ ಹಿಂದಿನ ಧೈರ್ಯ. ಭೀಮನ ವಿದ್ಯಾರ್ಥಿ ಜೀವನದಲ್ಲಿ ಇದೊಂದು ಗಮನಾರ್ಹ ವಿಷಯವೆಂದು ಏಕೆ ಎನಿಸುತ್ತದೆ ಎಂದರೆ ಅಂಬೇಡ್ಕರರ ಬಾಲ್ಯದ ಚರಿತ್ರೆಯನ್ನು ಓದುತ್ತಿರುವಾಗ ಭೀಮ ಅಸ್ಪೃಶ್ಯನಾದ ಒಂದೇ ಒಂದು ಕಾರಣದಿಂದಾಗಿ, ಬಹುಶಃ ಎಲ್ಲಾ ಸಂದರ್ಭಗಳಲ್ಲೂ ಅವನು ಹೆದರಿಕೊಳ್ಳುತ್ತಿದ್ದ ಎಂಬ ಭಾವನೆ ಉಂಟಾಗಿ ಬಿಡುತ್ತದೆ. ಆದರೆ ಅದು ವಾಸ್ತವವಲ್ಲ.

ತುಂಬಾ ಬಾಲ್ಯಾವಸ್ಥೆಯಿಂದಲೂ ಭೀಮನಿಗೆ ಪುಸ್ತಕಗಳ ಮೇಲೆ ಉಂಟಾದ ಅಮಿತ ಪ್ರೇಮ ಅಥವಾ ತಣಿಸಲಾಗದ ಮೋಹಕ್ಕೆ ಕಾರಣ, ತಂದೆ ಸಕ್ಪಾಲ್‌ರಾಮ್‌ಜಿ ವಿದ್ಯಾರ್ಥಿದೆಸೆಯಲ್ಲೇ ಮಗನಲ್ಲಿ ಈ ಬಗೆಯ ಪುಸ್ತಕ ಪ್ರೇಮವನ್ನು ಹುಟ್ಟು ಹಾಕಿದುದು. ಸ್ವತಃ ರಾಮ್‌ಜಿ ಎಂಥ ಅಕ್ಷರ ಪ್ರೇಮಿಯೆಂದರೆ, ಸಂತಕಬೀರ್ ದಾಸರ ಹಾಗೂ ತುಕಾರಾಮರ ಸಾವಿರಾರು ಮರಾಠಿ ವಚನಗಳನ್ನೂ ಹಿಂದಿ ಕೀರ್ತನೆಗಳನ್ನೂ ಕಂಟಸ್ಥ ಮಾಡಿಕೊಂಡಿದ್ದರಂತೆ. ಹೀಗೆ ಪುಸ್ತಕಗಳ ಮೇಲೆ ಇಂಥ ಆಸಕ್ತಿಯ ಹಿನ್ನೆಲೆಯಿದ್ದ ಸಕ್ಪಾಲ್‌ರಾಮ್‌ಜಿ, ವಿದ್ಯಾರ್ಥಿಯಾದ ಮಗನಿಗೆ ಪುಸ್ತಕಗಳನ್ನು ಕೊಂಡುಕೊಡುತ್ತಿದ್ದುದು ಸಹಜವಾಗಿಯೇ ಇತ್ತಾದರೂ, ಅದೊಂದು ವಿಚಿತ್ರವಾದ ವಿಧಾನ. ಈಗಾಗಲೇ ಸೂಚಿಸಿರುವಂತೆ ನಿಭಾಯಿಸುತ್ತಿದ್ದುದು ಕೇವಲ ಅವರ ಐವತ್ತು ರೂಪಾಯಿ ಪೆನ್ಷನ್‌ನಿಂದ. ಸರಿ, ಇದರಿಂದ ಆರುಕಾಸು ಮೂರುಕಾಸುಗಳೂ ಉಳಿಯುವ ಸಂಭವವಿಲ್ಲ ಎಂದ ಬಳಿಕ, ಇನ್ನು ಪುಸ್ತಕ ಕೊಂಡುಕೊಳ್ಳುವ ಪ್ರಶ್ನೆ ಎಲ್ಲಿ ಬಂತು? ಇದರಿಂದಾಗಿ ಅವರು ಹಿಂದೆ ಕೆಲಸ ಮಾಡುತ್ತಿದ್ದ ಮಿಲ್ಟ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬಂದ ಕಾಲದಲ್ಲಿ ಅವರಿಗೆ ಪಾಠ ಹೇಳುವುದು. ಇದರಿಂದ ಬರುತ್ತಿದ್ದ ಅಷ್ಟು ಇಷ್ಟು ದುಡ್ಡಿನಿಂದ ಭೀಮನಿಗೆ ಪುಸ್ತಕ ಕೊಂಡುಕೊಡುವುದು. ಇದು ಒಂದು ವಿಧಾನ, ಎರಡನೆಯದಾಗಿ ಮುಂಬೈ ಬಟ್ಟೆ ಗಿರಣಿ ಚಾವಲ್‌ನಲ್ಲೇ ವಾಸಿಸುತ್ತಿದ್ದ ಸಕ್ಪಾಲರ ಇಬ್ಬರು ವಿವಾಹಿತ ಹೆಣ್ಣು ಮಕ್ಕಳಾದ ಮಂಜು ಮತ್ತು ತುಳಸಿಯರಿಂದ, ಒಂದು ರೂಪಾಯಿ ಎರಡು ರೂಪಾಯಿ ಸಾಲ ಇಸಕೊಂಡು ಪುಸ್ತಕ ಕೊಂಡುಕೊಳ್ಳುವುದು. ಆನಂತರ ಪೆನ್ಷನ್‌ಬಂದ ಮೇಲೆ ಅವರ ಸಾಲ ತೀರಿಸುವುದು. ಬಹುಶಃ ಈ ಎರಡು ವಿಧಾನಗಳೂ ಭೀಮನಿಗೆ ಗೊತ್ತೆ ಇದ್ದವು. ಆದರೆ ಅವನನ್ನು ಅತ್ಯಂತ ಗಾಢವಾಗಿ ಕಲಕಿ, ಜೀವನದುದ್ದಕ್ಕೂ ಭೀಮ ಪುಸ್ತಕಗಳನ್ನು ತನ್ನ ಜೀವಕ್ಕಿಂತಲೂ ಪರಮವಾಗಿ ಪ್ರೇಮಿಸಿದುದಕ್ಕೆ ಮೂರನೆಯದಾದ ಈ ಮುಂದೆ ಹೇಳುವ ಘಟನೆ ಕಾರಣವಾಯಿತು ಎನಿಸುತ್ತದೆ. ಭೀಮ ೧೯೦೯ರಲ್ಲಿ ಎಲ್ಫಿನ್‌ಸ್ಟನ್‌ಕಾಲೇಜಿನ ಮೊದಲನೆ ವರ್ಷದಲ್ಲಿ ಬಿ. ಎ. , ತರಗತಿಯಲ್ಲಿ ಓದುತ್ತಿದ್ದ ಒಂದು ದಿನ, ಆಕಸ್ಮಾತ್‌ತಂದೆ ಹಾಗೂ ಅಕ್ಕ ತುಳಸಿಯೊಡನೆ ಪೇಟೆಗೆ ಹೋಗಬೇಕಾಗಿ ಬಂತು. ಯಾಕೆ ಎಂಬುದು ಮಾತ್ರ ಅವನಿಗೆ ಗೊತ್ತಿರಲಿಲ್ಲ ಅಥವಾ ತಂದೆಯೂ ಅಕ್ಕನೂ ಉದ್ದೇಶಪೂರ್ವಕವಾಗಿ ಕೂಡ ಭೀಮನನ್ನು ಜೊತೆಗೆ ಕರೆದುಕೊಂಡು ಹೋಗಿರಲಿಲ್ಲ. ಸುಮ್ಮನೆ ಜೊತೆಯಲ್ಲಿ ಹೋದ, ಅಷ್ಟೆ. ಆದರೆ ಅದಾದ ಅರ್ಧ ಗಂಟೆಯ ನಂತರ ತಿಳಿದುಬಂದ ಸಂಗತಿಯಿಂದ, ಅವನ ಕಿಶೋರ ಮನಸ್ಸು ಒಂದು ರೀತಿಯ ವಿಚಿತ್ರವಾದ ವಿಸ್ಮಯಕ್ಕೆ ಗುರಿಯಾಯಿತು. ಏಕೆಂದರೆ, ಆ ದಿನ ಪೇಟೆಗೆ ಹೋಗಿದ್ದು ಅದರ ಹಿಂದಿನ ತಿಂಗಳು ಅವರ ತಂದೆ ಅವನಿಗೆ ಇಂಗ್ಲಿಷ್‌ಸಾಹಿತ್ಯದ ಪುಸ್ತಕಗಳನ್ನು ಕೊಂಡುಕೊಟ್ಟಿದ್ದು ತುಳಸಿಯ ಕಿವಿ ಓಲೆಗಳನ್ನು ಅಡವಿಟ್ಟು ಎಂಬುದು, ಆ ದಿನ ಅವುಗಳನ್ನು ಬಿಡಿಸಿಕೊಂಡ ನಂತರ ಭೀಮನಿಗೆ ಅರಿವಾಯಿತು. ಬಹುಶಃ ಇದು, ಭೀಮ ಜೀವನವಿಡೀ ಓದಿದ ಲಕ್ಷಾಂತರ ಪುಸ್ತಕಗಳನ್ನು ಕೊಂಡ ರೀತಿಯ ಮೂಲ. ಇದಾದ ನಂತರ ಅಮೆರಿಕದಲ್ಲಿ ಫೈನಲ್‌ಎಂ. ಎ. , ಪಾಸ್‌ಮಾಡುವ ಹೊತ್ತಿಗೆ ಸುಮಾರು ಏಳೆಂಟು ಸಾವಿರ ಗ್ರಂಥಗಳನ್ನು ಸಂಗ್ರಹಿಸಿದ್ದ ಅಂಬೇಡ್ಕರರು, ಅವುಗಳನ್ನು ಅಣ್ಣ ಬಲರಾಮ್‌ಅಂಬೇಡ್ಕರರ ಹೆಸರಿಗೆ ಅಮೆರಿಕಾದಿಂದ ಮುಂಬೈಗೆ ಹಡಗಿನಲ್ಲಿ ಪಾರ್ಸಲ್‌ಮಾಡಿದ್ದನ್ನು ಅವರ ಜೀವನದ ಆನಂತರದ ಚರಿತ್ರೆಯಿಂದ ತಿಳಿಯಬಹುದಾಗಿದೆ.

ಇಲ್ಲಿ ಇನ್ನೊಂದು ಮಾತನ್ನು ಸೇರಿಸುವುದಾದರೆ ೧೯೪೬-೪೭ರ ವೇಳೆಗೆ ಅಂಬೇಡ್ಕರರ ಸ್ವಂತ ಲೈಬ್ರರಿಯಲ್ಲಿ ಸುಮಾರು ಏರಡೂಕಾಲು ಲಕ್ಷ ಗ್ರಂಥಗಳಿದ್ದವು ಎಂಬುದಾಗಿ ತಿಳಿದುಬರುತ್ತದೆ. ಇದು ದೇಶದಲ್ಲಿ ಮಾತ್ರವಲ್ಲದೆ ಅಂದಿನ ಇಡೀ ಏಷ್ಯಾ ಖಂಡದಲ್ಲೇ ಬಹುದೊಡ್ಡ ವೈಯಕ್ತಿಕ ಲೈಬ್ರರಿ ಎಂತಲೂ ತಿಳಿದುಬರುತ್ತದೆ.

ಹಾಗೆಯೇ ಅವರು ತಮ್ಮ ಜೀವಿತ ಕಾಲದಲ್ಲಿ ಕಟ್ಟಿದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಾದ ಮುಂಬೈ ಸಿದ್ಧಾರ್ಥ ಕಾಲೇಜು, ‘ಪೀಪಲ್ಸ್ಎಜುಕೇಶನ್ ಸೊಸೈಟಿಮತ್ತು ಔರಂಗಾಬಾದಿನಮಿಲಿಂದ್ವಿದ್ಯಾಲಯಗಳ ಗ್ರಂಥಾಲಯಗಳಿಗೆ ಅಂಬೇಡ್ಕರರ ಸ್ವಂತ ಲೈಬ್ರರಿಯ ಸಾವಿರಾರು ಗ್ರಂಥಗಳನ್ನು ಕೊಡುಗೆಯಾಗಿ ಕೊಡಮಾಡಲಾಯಿತೆಂಬುದು ಕೂಡ ಸತ್ಯ ಸಂಗತಿಯೇ ಆಗಿದೆ.

ಅಂದ ಮೇಲೆ ಅಂಬೇಡ್ಕರರ ಅಕ್ಕ ತುಳಸಿಯ ಕಿವಿಯ ಓಲೆಗಳನ್ನು ಅಡವಿಟ್ಟುಕೊಂಡು ತಂದ ಗ್ರಂಥಗಳು ಕೂಡ ಈ ಗ್ರಂಥಾಲಯಗಳಿಗೂ ಈ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪರಂಪರೆಗೂ ಸಂದಿಸಿರಬೇಕಲ್ಲವೆ? ಇನ್ನು ಎರಡನೆಯ ಘಟನೆಯೆಂದರೆ, ಭೀಮ ಪ್ರೌಢಶಾಲೆಯ ಮೊದಲನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದದ್ದು. ಒಂದು ದಿನ ಆ ತರಗತಿಯ ಒಬ್ಬ ಬ್ರಾಹ್ಮಣ ಉಪಾಧ್ಯಾಯ ಬೋರ್ಡ್‌ಮೇಲೆ ಲೆಕ್ಕ ಮಾಡಲು ಭೀಮನನ್ನು ಬೋರ್ಡಿನ ಹತ್ತಿರಕ್ಕೆ ಬರಹೇಳಿದ. ಸರಿ, ಭೀಮ ಇನ್ನೇನೂ ಕೂತಲ್ಲಿಂದ ಎದ್ದು ಹೆಜ್ಜೆಗಳನ್ನು ಬೋರ್ಡಿನತ್ತ ಇಡಬೇಕು. ಅಷ್ಟರಲ್ಲಿ ಬಾಕಿ ಜಾತಿಯ ಹಿಂದೂ ವಿದ್ಯಾರ್ಥಿಗಳೆಲ್ಲಾ, ಒಬ್ಬರಿಗೊಬ್ಬರು ನೂಕಾಡಿಕೊಂಡು ಬೋರ್ಡಿನ ಹತ್ತಿರ ನುಗ್ಗಿದರು. ಏಕೆಂದರೆ ಬೋರ್ಡಿನ ಹಿಂದಿದ್ದ ತಮ್ಮ ಊಟದ ಡಬ್ಬಿಗಳು ಈ ಅಸ್ಪೃಶ್ಯನಿಂದ ಮೈಲಿಗೆಯಾಗುತ್ತವೆ ಎಂದು, ತಂತಮ್ಮ ಡಬ್ಬಿಗಳನ್ನು ವಿದ್ಯಾರ್ಥಿಗಳು ಎತ್ತಿಕೊಂಡು ದೂರ ಸರಿದು ನಿಂತರು. ಆದರೆ ಕ್ಷಣ ಮಾತ್ರದಲ್ಲಿ ನಡೆದುಹೋದ ಇಷ್ಟೆಲ್ಲಾ ಅವಮಾನವೂ ಆ ಬೋಡಿರ್ನ ಮೇಲೆ ಅಡಿಗಿದೆಯೋ ಎಂಬಂತೆ, ಒಂದು ರೀತಿಯ ಅವ್ಯಕ್ತ ರೋಷದಿಂದ, ಭೀಮ ದುರುಗುಟ್ಟಿಕೊಂಡು ಆ ಬೋರ್ಡನ್ನೆ ನೋಡುತ್ತ ನಿಂತ. ತತ್ಪರಿಣಾಮವಾಗಿ, ಲೆಕ್ಕ ಮಾಡಲು ಸಿದ್ಧವಾಗಿದ್ದ ಭೀಮನ ಮನಸ್ಸು ಕುದಿಗೊಂಡ ರೋಷದಿಂದ ತುಂಬಿಹೋಗಿತ್ತು. ಅಂದರೆ, ಲೆಕ್ಕ ಮಾಡುವ ಸ್ಥಿತಿಯಲ್ಲಿರಲಿಲ್ಲ. ಸರಿ, ಇದರಿಂದ ಹರ್ಷಗೊಂಡ ಬ್ರಾಹ್ಮಣ ಉಪಾಧ್ಯಾಯ “ನಿನ್ನಂಥವರೆಲ್ಲಾ ಓದೋಕೆ ಬಂದ್ರೆ ಹೀಗೆ ಆಗೋದು” ಎಂದುಬಿಟ್ಟ. ಇಡೀ ತರಗತಿ ಗೊಳ್ಳನೆ ನಕ್ಕಿತು. ಈ ಒಂದು ನಿಮಿಷ ಮೌನವಾಗಿದ್ದ ಭೀಮ, ಬ್ರಾಹ್ಮಣ ಉಪಾಧ್ಯಾಯನಿಗೆ ‘ಮರ್ಯಾದೆಯಾಗಿ ನನ್ನ ಕೆಲಸ ನೀ ಮಾಡೊ ಯೋಗ್ಯತೆ ನಿನಗಿದೆಯಾ? ಅದು ನೋಡ್ಕೊ’ ಎಂದು ಭೀಮ ನಿರ್ದಾಕ್ಷಿಣ್ಯವಾಗಿ ಉತ್ತರ ಕೊಟ್ಟ. ಆದರೆ, ಈ ಅನಿರೀಕ್ಷಿತ ಉತ್ತರದಿಂದ ಅವಾಕ್ಕಾದ ಬ್ರಾಹ್ಮಣ ಉಪಾಧ್ಯಾಯ, ತನ್ನದಲ್ಲದ ಕೋಪ ತೋರುವ ಅಸಹಾಯಕ ಯತ್ನ ಅವನ ಮುಖದ ಮೇಲಿದ್ದಂತಿತ್ತು.

ಈ ಹಿಂದೆಯೇ ತಿಳಿಸಿರುವಂತೆ ಅಂಬೇಡ್ಕರ್ ಇಂಡಿಯಾದಲ್ಲಿ ಓದಿದ್ದು ಬಿ. ಎ. , ವರೆಗೆ ಮಾತ್ರವಾಗಿದ್ದು, ಅವರು ಎಂ. ಎ. ಪದವಿಯನ್ನು ಪಡೆದದ್ದು ಅಮೆರಿಕದಲ್ಲಿ. ಅಂದರೆ ಇಲ್ಲಿ ಎರಡು ಸಂಗತಿಗಳು ಗಮನಾರ್ಹವಾದವು. ಮೊದಲನೆಯದಾಗಿ ಈ ಹಿಂದೆಯೇ ಒಂದು ಮಾತಿನಲ್ಲಿ ತಿಳಿಸಿರುವಂತೆ

ಭಾರತದ ಪ್ರಥಮ ಸಾಲಿನ ರಾಜಕೀಯ ತತ್ವ ಚಿಂತಕರಲ್ಲಿ ಅಮೆರಿಕದಂಥ ದೇಶದಲ್ಲಿ ಶಿಕ್ಷಣ ಪಡೆದ ಮೊದಲಿಗರು ಅಂಬೇಡ್ಕರರು. ಅದರಲ್ಲೂ ಮುಖ್ಯವಾಗಿ ಯಾವ ನೆಲದಲ್ಲಿ ದಾಸ್ಯ ಮತ್ತು ಅಸಮಾನತೆಗಳ ವಿರುದ್ಧ ಅಬ್ರಾಹಾಂ ಲಿಂಕನ್ಹಾಗೂ ವಾಷಿಂಗ್ಟನ್ಬೂಕರ್ ರಂಥ ಮಹಾ ಮಾನವತಾವಾದಿಗಳು, ಜಗತ್ವಿಖ್ಯಾತ ಯುದ್ಧ ಸಾರಿ ಜಗತ್ತಿಗೆ ಸರ್ವ ಸಮಾನತೆ ಹಾಗೂ ಮಾನವ ಘನತೆಗಳ ಪಾಠ ಕಲಿಸಿದರೋ, ನೆಲದಲ್ಲಿ ಅಂಬೇಡ್ಕರ್ ರವರು, ಅದೂ ವಿಶ್ವವಿದ್ಯಾನಿಲಯ ಹೆಮ್ಮೆ ಪಡಬಹುದಾದ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು ಎಂಬುದು ಕೂಡ ಪರಸ್ಪರ ಪೂರಕವಾದ ಐತಿಹಾಸಿಕ ದಾಖಲೆಗಳಾಗಿರುವುದನ್ನು ಮನನ ಮಾಡಬೇಕಾಗುತ್ತದೆ.

ಅಂದರೆ, ಭಾರತ ಮತ್ತು ಅಮೆರಿಕಗಳಂತ ಎರಡು ದೇಶಗಳಲ್ಲಿನ ಸಾಮಾಜಿಕ ಸಂಸ್ಕೃತಿಗಳ ಎತ್ತರ ಬಿತ್ತರಗಳನ್ನೂ, ಅದರ ವಿಸ್ತಾರದ ಅಂಶ ಅಂಶವನ್ನೂ ಕುರಿತು ತೀವ್ರ ಯೌವನಾವಸ್ಥೆಯಲ್ಲೇ ಅತ್ಯಂತ ಜ್ವಲಂತವಾದ ವ್ಯಾಖ್ಯಾನ ಸಾಮರ್ಥ್ಯರಾದವರಿಗೂ ಅಂಬೇಡ್ಕರ್ ಅವರು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವಾಯಿತೆಂಬುದನ್ನು ಅವರು ತಮ್ಮ ಎಂ. ಎ. , ಪದವಿಗಾಗಿ ಬರೆದ ಡಿಸೆರ್ಟೇಶನ್‌ನಲ್ಲೂ ವಿಶ್ವವಿಖ್ಯಾತ ಗೋಯಿಡನ್‌ವೀಸರ್ ಸ್ಮರಣಾರ್ಥ ಮಾನವಶಾಸ್ತ್ರ ಸಮ್ಮೇಳನದಲ್ಲಿ ಅವರು ಮಂಡಿಸಿದ “ಭಾರತದಲ್ಲಿ ಜಾತಿಗಳು” ಎಂಬ ಅವರ ಪ್ರೌಢ ಪ್ರಬಂಧದಲ್ಲೂ ತಿಳಿಯಬಹುದಾಗಿದೆ. ಆದ್ದರಿಂದ ಒಂದು ಮಾತಿನಲ್ಲಿ ಸ್ಪಷ್ಟಪಡಿಸುವುದಾದರೆ, ಬಿ. ಎ. , ಪದವಿವರೆಗಿನ ಅಂಬೇಡ್ಕರರ ವಿದ್ಯಾರ್ಥಿ ಜೀವನವನ್ನು ಕಲ್ಪಿಸಿ ಚಿತ್ರಿಸಲು ಇದುವರೆಗೆ ಉಪಲಬ್ಧವಿರುವ ಅನ್ಯ ಲೇಖಕರ ಜೀವನ ಚರಿತ್ರೆಗಳನ್ನು ಆಧರಿಸಲಾಗಿದೆ. ಆದರೆ ಇಲ್ಲಿಂದ ಮುಂದೆ ಎಂ. ಎ. , ಪದವಿಯರೆಗಿನ ಅವರ ವಿದ್ಯಾರ್ಥಿ ಚಿತ್ರವನ್ನು ಬಿಡಿಸಲು ಸ್ವತಃ ಅವರ ಬರಹಗಳನ್ನೇ ಆಧರಿಸಲು ಯತ್ನಿಸಲಾಗಿದೆ. ಸದ್ಯ ಇಲ್ಲಿ ಅಂಬೇಡ್ಕರ್ ಎಂ. ಎ. , ವಿದ್ಯಾರ್ಥಿಯಾಗಿ ಅಮೆರಿಕಾವನ್ನು ತಲುಪಿದ ಕೆಲವು ದಿನಗಳ ನಂತರ ಭಾರತದಲ್ಲಿನ ತಮ್ಮ ತಂದೆಯ ಮಿತ್ರರೊಬ್ಬರಿಗೆ ಬರೆದ ಒಂದು ಪತ್ರದ ಪರಸಂಗವನ್ನು ಡಾ. ಧನಂಜಯ ಕೀರ್ ರವರು ಹೀಗೆ ವರ್ಣಿಸುತ್ತಾರೆ. “೧೯೧೮ರ ಜುಲೈ ಮೂರನೆಯ ವಾರದಲ್ಲಿ ಅಂಬೇಡ್ಕರರು ನ್ಯೂಯಾರ್ಕ್‌ತಲುಪಿದರು. ಅಲ್ಲಿನ ಲಿವಿಂಗ್‌ಸ್ಟೋನ್‌ಹಾಲ್‌ಹಾಸ್ಟೇಲ್‌ನಲ್ಲಿ ಅಂಬೇಡ್ಕರರಿಗೆ ಭೇಟಿಯಾದ ಮೊಟ್ಟಮೊದಲ ಭಾರತೀಯ ಗೆಳೆಯ ಹಾಗೂ ಅಂಬೇಡ್ಕರರಿಗೆ ಬದುಕಿನುದ್ದಕ್ಕೂ ಗೆಳೆಯನಾದ ಪಾರ್ಸಿ ವಿದ್ಯಾರ್ಥಿಯೆಂದರೆ ನವಲ್‌ಭಾಥೇನ”.

ವಿದೇಶಿ ನೆಲವಾದ ಅಮೆರಿಕದಲ್ಲಿನ ಜೀವನ ಒಂದು ಅವಿಸ್ಮರಣೀಯ ಸ್ಫೂರ್ತಿಯಾಗಿಯೂ, ಅದೊಂದು ಜೀವನನದಿ ಆಗಿಯೂ ಅಂಬೇಡ್ಕರ್ ಅವರಿಗೆ ಸ್ಫೂರ್ತಿದಾನವನ್ನು ಮಾತ್ರವಲ್ಲದೆ, ಜೀವದಾನವನ್ನೂ ಮಾಡಿದ್ದರೆ ಆ ಬಗ್ಗೆ ಎಡರು ಮಾತಿಲ್ಲ; ಅಲ್ಲಿನ ಸಹವಿದ್ಯಾರ್ಥಿಗಳ ಜೊತೆಗಿನ ವಿಮುಕ್ತ ನಡೆನುಡಿ ವಿಶಿಷ್ಟ ಅರ್ಥವುಳ್ಳದ್ದೇ ಸರಿ. ಅಲ್ಲಿ ಅಂಬೇಡ್ಕರ್ ಯಾವ ಆತಂಕವೂ ಇಲ್ಲದೆ ಓದಬಹುದಿತ್ತು, ಬರೆಯಬಹುದಿತ್ತು, ಸ್ನಾನ ಮಾಡಬಹುದಿತ್ತು, ಒಳ್ಳೆಯ ಬಟ್ಟೆಗಳನ್ನು ಉಡಬಹುದಿತ್ತು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಸತ್ಯಸತ್ಯ ಸಮಾನತೆಯಿಂದ ಅಸ್ಪೃಶ್ಯನ ಜೀವಕ್ಕೆ ಅಲ್ಲಿ ನೆಮ್ಮದಿ ಹಾಗೂ ರಕ್ಷಣೆ ಇತ್ತು. ಕೊಲಂಬಿಯಾ ವಿಶ್ವವಿದ್ಯಾನಿಲಯ ಕ್ಯಾಂಪಸ್ಅಂಬೇಡ್ಕರರಿಗೊಂದು ಅಂತರ್ಜ್ಞಾನದ ಜಲಕಣ್ಣಾಯಿತು. ಅದೊಂದು ಹೊಸ ಲೋಕ. ಲೋಕದ ಉದ್ದಗಲಗಳನ್ನೆಲ್ಲಾ ವ್ಯಾಪಿಸಿಕೊಂಡಿತ್ತು. ಅಂಬೇಡ್ಕರರ ಬುದ್ಧಿ ಮನಸ್ಸು; ಅಂಬೇಡ್ಕರರ ಬದುಕು, ಒಂದು ಹೊಸ ಅಸ್ತಿತ್ವವನ್ನು ಪಡೆದುಕೊಂಡುದು ಅಮೆರಿಕದಲ್ಲಿ. ಅವರ ಬದುಕಿಗೊಂಡು ಹೊಸ ಅರ್ಥವುಂಟಾದುದು ಅಮೆರಿಕದಲ್ಲಿ.

ಈ ಹೊಸ ಬದುಕಿನ ಪ್ರದೇಶವನ್ನು ಪ್ರವೇಶಿಸಿದ ಕೆಲ ದಿನಗಳ ನಂತರ ತಮ್ಮ ತಂದೆಯ ಒಬ್ಬ ಸ್ನೇಹಿತರಿಗೆ ಅಂಬೇಡ್ಕರರು ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಅಂಬೇಡ್ಕರರ ಬುದ್ಧಿ ಮನಸ್ಸುಗಳ ಆಳ ವಿಸ್ತಾರಗಳ ಒಂದು ನಕಾಶೆಯನ್ನೇ ಯಾರಾದರೂ ಕಾಣಬಹುದಾಗಿದೆ. ಆ ಪತ್ರದಲ್ಲಿನ ಇನ್ನೊಂದು ಮಹತ್ವ ಪೂರ್ಣವೂ ಜ್ವಲಂತ ಅರ್ಥಗಳ ಶೇಕ್ಸ್‌ಪಿಯರ್ ನ ಎರಡು ಸಾಲುಗಳನ್ನು ಬರೆಯುತ್ತಾರೆ;

There is a tide in the affairs of men which, taken at the flood, leads on to fortune.

ಇದು ಶೇಕ್ಸ್‌ಪಿಯರ್ ನ ‘ಜೂಲಿಯಸ್ ಸೀಸರ್’ ನಾಟಕದಲ್ಲಿ ಬರುವ ಬ್ರೂಟಸ್ ಕಾಸಿಯಸ್‌ನಿಗೆ ಹೇಳುವ ಮಾತು. ರೋಮನ್ ಚಕ್ರಾಧಿಪತ್ಯದಲ್ಲಿ ಸೀಸರನ ಸರ್ವಾಧಿಕಾರದ ಮಹತ್ವಾಕಾಂಕ್ಷೆಯನ್ನು ಸೆನೆಟ್ ಹಾಲ್‌ನಲ್ಲೆ ಕೊಲೆಗೈದು, ಅಲ್ಲಿ ಗಣತಂತ್ರಾತ್ಮಕ ಸಮಾನತೆಯನ್ನು ಸ್ಥಾಪಿಸುವ ಸಲುವಾಗಿ ಹೋರಾಡಿದ ಇಬ್ಬರು ಮಹಾನ್ ದೇಶಭಕ್ತರಾದ, ಬ್ರೂಟಸ್ ಮತ್ತು ಕ್ಯಾಸಿಯರ್ ನಡುವಿನ ಒಂದು ವಿರಸದ ಸಂದರ್ಭದಲ್ಲಿ ಉಂಟಾದ ಮಾತು ಇದಾಗಿದ್ದರು, ಭಾರತೀಯ ಸಮಾಜದಲ್ಲಿ ದಲಿತ ಜನಕೋಟಿಯ ಬಗ್ಗೆ ಮಾತನಾಡ ಹೊರಟಿರುವ ಅಂಬೇಡ್ಕರರ ಉದ್ದೇಶದ ಹಾಗೂ ಅದರಾಚೆಗಿನ ವಿಶಿಷ್ಟ ಧ್ವನಿ ರಮ್ಯ ಶಕ್ತಿ ಮೇಲಿನ ಮಾತುಗಳಲ್ಲಿರುವುದನ್ನು ಮನಗಾಣಬಹುದಾಗಿದೆ.

ಜೊತೆಗೆ, ಜಗತ್ತಿನ ಅತ್ಯುನ್ನತ ಮಟ್ಟದ ಕಾವ್ಯದ ಸಾಲುಗಳನ್ನು ಉದ್ಧರಿಸುವಲ್ಲಿ ಅಂಬೇಡ್ಕರರ ಸಾಹಿತ್ಯದ ಅಭಿರುಚಿ ಒಂದೆಡೆಗೆ ವ್ಯಕ್ತವಾದರೆ, ಮತ್ತೊಂದೆಡೆಗೆ ವಿದ್ಯಾರ್ಥಿದೆಶೆಯಲ್ಲಿ ಅಂಬೇಡ್ಕರ್ ಎಂಥ ಪ್ರತಿಭಾವಂತ ವಿಮರ್ಶಕ ಎಂಬುದೂ ವ್ಯಕ್ತವಾಗುತ್ತದೆ. ಇನ್ನೊಂದೆಡೆಗೆ ಸಾಹಿತ್ಯದ ಸಾಲುಗಳಲ್ಲಿ ಸಾಮಾಜಿಕ ಪರಿವರ್ತನೆಯನ್ನು ಕಾಣಿಸುವ ಸಮಕಾಲೀನ ದಲಿತ ಬಂಡಾಯದ ಧಾಟಿಯನ್ನು ಈ ಪ್ರಸಂಗದಲ್ಲಿ ಕಾಣಬಹುದಾಗಿದೆಯಲ್ಲವೆ? ಇಲ್ಲಿ ನೆನಪಿಸಬಹುದಾದ ಇನ್ನೊಂದು ಮಹತ್ವದ ಸಂಗತಿಯೂ, ಅವರ ಜೀವನ ಚರಿತ್ರೆಗಾರರಲ್ಲಿ ಬಹುಮಂದಿ ಗಮನಿಸಲಾಗದೆಯೂ ಇರುವ ಸಂಗತಿ ಎಂದರೆ, ಅಂಬೇಡ್ಕರ್ ಮೂಲತಃ ಸಾಹಿತ್ಯದ ವಿದ್ಯಾರ್ಥಿ ಎಂಬುದು. ಏಕೆಂದರೆ ಅವರು ಬಿ. ಎ. , ನಲ್ಲಿ ಓದಿದ್ದು ಮುಖ್ಯವಾಗಿ ಎರಡು ವಿಷಯಗಳು: ಒಂದು ಇಂಗ್ಲಿಷ್‌ಸಾಹಿತ್ಯ, ಮತ್ತೊಂದು ಪರ್ಷಿಯನ್‌ಸಾಹಿತ್ಯ; ಅದರಲ್ಲೂ ಸಾಹಿತ್ಯ ವಿಮರ್ಶೆಯ ಮೇಲೆ ಅವರಿಗೆ ವಿಶೇಷ ಒಲವಿತ್ತು ಎಂಬುದನ್ನು ಆನಂತರದ ತಮ್ಮ ಸಂಶೋಧನೆಯ ಸಂದರ್ಭದಲ್ಲಿ ಮ್ಯಾಥ್ಯೂ ಅರ್ನಾಲ್ಡ್‌ಮತ್ತು ಐ. ಎ. ರಿಚರ್ಡ್ಸ್‌ರಂಥ ಪಾಶ್ಚಾತ್ಯ ವಿಮರ್ಶಕರ ಮಾತುಗಳನ್ನು ಮೇಲಿಂದ ಮೇಲೆ ಉದ್ಧರಿಸುವಲ್ಲಿಯೂ ತಿಳಿಬಹುದಾಗಿದೆ. ಹಾಗೆಯೇ, ಬಿ. ಎ. ನಲ್ಲಿ ಇಂಗ್ಲಿಷ್‌ಜೊತೆಗೆ ಪರ್ಷಿಯನ್‌ತೆಗೆದುಕೊಳ್ಳಬೇಕಾಗಿ ಬಂದುದಕ್ಕೆ, ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಬಯಸಿದಾಗ, ಮುಂಬೈ ಎಲ್ಫಿನ್‌ಸ್ಟನ್‌ಕಾಲೇಜಿನ ಸಂಸ್ಕೃತ ಬ್ರಾಹ್ಮಣ ಅಧ್ಯಾಪಕರು ಅಂಬೇಡ್ಕರರನ್ನು ಜಾತಿ ಹಿಡಿದು ಬೈದು ಅವಮಾನಿಸಿ ಕಳಿಸಿದುದೇ ಜನಜನಿತ ಕಾರಣವಾಗಿದೆ.

ಇದುವರೆಗೆ ಅಂಬೇಡ್ಕರ್ ಇಂಡಿಯಾದಲ್ಲಿ ಪಡೆದ ಅಥವಾ ಪಡೆಯಲು ಸಾಧ್ಯವಾದ ಶೈಕ್ಷಣಿಕ ಅವಕಾಶಗಳ ಬಗ್ಗೆ ಚರ್ಚಿಸಿದ್ದೇವೆ. ಇಂಡಿಯಾದ ಸಾಮಾಜಿಕ ವ್ಯವಸ್ಥೆಯ ಅಸ್ಪೃಶ್ಯತೆ ಜಾತಿಯ ಭದ್ರಮುಷ್ಠಿಯಲ್ಲಿ ಸಿಲುಕಿರುವ ಶೈಕ್ಷಣಿಕ ಸಂದರ್ಭದಲ್ಲಿ ಅಂಬೇಡ್ಕರ್ ರಂಥ ಒಬ್ಬ ನತದೃಷ್ಟ ಅಸ್ಪೃಶ್ಯರ ಹುಡುಗ ವಿದ್ಯೆಗಾಗಿ ಏನೆಲ್ಲ ಯಾತನೆಗಳೊಡನೆ ಹೋರಾಡಬೇಕಾಯಿತು ಎಂಬುದನ್ನು ಈ ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ.

ಪ್ರಸ್ತುತ ಎಂ. ಎ. ಓದಲಿಕ್ಕಾಗಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಹೋದ ಅಂಬೇಡ್ಕರ್ , ಆ ಸಮಾಜ ಜೀವನ ವ್ಯವಸ್ಥೆಯಲ್ಲೂ, ಅಲ್ಲಿನ ಶೈಕ್ಷಣಿಕ ಸಂದರ್ಭದಲ್ಲೂ, ಪಡೆದ ಅವಕಾಶಗಳನ್ನೂ, ಅದಕ್ಕೆ ಪ್ರತಿಯಾಗಿ ತೋರಿದ ಪ್ರತಿಭೆಯನ್ನೂ, ಅಲ್ಲಿನ ವಿಶ್ವವಿದ್ಯಾನಿಲಯ ಅವರ ಪ್ರತಿಭೆ ಹಾಗೂ ಸಂಶೋಧನೆಯ ಬಗ್ಗೆ ತೋರಿದ ತೀವ್ರ ಆಸಕ್ತಿಯನ್ನೂ ಕಾಣಬಹುದಾಗಿದೆ. ತತ್ಫಲವಾದ ಅವರ ವಾದ ವೈಖರಿಯನ್ನು, ಅವರು ಅಳವಡಿಸಿದ ಸಂಶೋಧನಾ ವಿವರಗಳನ್ನೂ, ಅವರು ತಮ್ಮ ವಿಷಯ ಮಂಡನೆಗೆ ಅನುಸರಿಸಿದ ತರ್ಕಸರಣೀಯ ಬಗ್ಗೆ ಅಲ್ಲಿನ ಸಂಶೋಧಕರು ತೋರಿದ ಪ್ರತಿಕ್ರಿಯೆಯ ಸ್ವರೂಪವೇ ಮುಂತಾದ ಕೆಲವು ವಿಚಾರಗಳನ್ನು ಈ ಭಾಗದಲ್ಲಿ ಚರ್ಚಿಸಲು ಯೋಚಿಸಲಾಗಿದೆ. ಜೊತೆಗೆ ಈ ಹಿಂದೆಯೇ ಒಂದು ಮಾತಿನಲ್ಲಿ ತಿಳಿಸಿರುವಂತೆ ಅಂಬೇಡ್ಕರ್ ಎಂ. ಎ. ವಿದ್ಯಾರ್ಥಿಯಾಗಿದ್ದಾಗ ಆ ಪರೀಕ್ಷೆಯ ಮುಖ್ಯ ಅಂಗವೇ ಆಗಿ ಅವರು ರಚಿಸಿದ ಡೆಸರ್ಟೆಷನ್‌ಅಥವಾ ಪ್ರೌಢ ಪ್ರಬಂಧದ ಹೆಸರು “Administration and Finance of the East India Company” ಎಂಬುದಾಗಿತ್ತು. ಈ ಪ್ರೌಢ ಪ್ರಬಂಧವನ್ನು ಕೊಲಂಬಿಯಾದ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದು ೧೯೧೫ರ ಮೇ ೧೫ ರಂದು ಆ ವರ್ಷ ಅಂಬೇಡ್ಕರ್ ಕೇವಲ ಇಪ್ಪತ್ತನಾಲ್ಕು ವರ್ಷ ವಯಸ್ಸಿನ ಹುಡುಗ. ಆದರೆ ೧೯೧೫ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಈ ಪ್ರೌಢ ಪ್ರಬಂಧವನ್ನು ಅಂದು ಪ್ರಕಟಿಸಲಾಗಲಿಲ್ಲ. ಈ ಅಪ್ರಕಟಿತ ಹಸ್ತಪ್ರತಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಡಾ. ಎಫ್‌. ಎಫ್‌. ಕೋಲನ್‌ರವರಿಂದ ಪಡೆದುಕೊಂಡಿದ್ದು, ಮಹಾರಾಷ್ಟ್ರ ಸರಕಾರ ಅದನ್ನಿಂದು ಪ್ರಕಟಿಸಿದೆ. ಅಂದರೆ ಈ ಅಪ್ರಕಟಿತ ಪ್ರೌಢ ಪ್ರಬಂಧದಿಂದ ಎಂ. ಎ. , ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಂಡ ಅಂಬೇಡ್ಕರರ ಅಧ್ಯಯನ ಬಲವನನ್ನೂ ಪ್ರತಿಭೆಯ ಸ್ವರೂಪವನ್ನೂ ತಿಳಿಯಲು ಸಾಧ್ಯವಾಗಿದೆ.

ಈಸ್ಟ್‌ಇಂಡಿಯಾ ಕಂಪನಿಯ ಬ್ರಿಟಿಷ್‌ಆಡಳಿತದಲ್ಲಿನ ಭಾರತದ ಹಣಕಾಸಿನ ಪರಿಸ್ಥಿತಿಯಂಥ ಶುದ್ಧ ಅರ್ಥಶಾಸ್ತ್ರದ ವಿಷಯವನ್ನು ತಮ್ಮ ಪ್ರೌಢ ಪ್ರಬಂಧಕ್ಕೆ ಒಂದೆಡೆ, ಬ್ರಿಟಿಷರ ವ್ಯಾಪಾರ ಮೂಲವಾದ ಆಡಳಿತಾತ್ಮಕ ಧೋರಣೆಯನ್ನೂ ಮತ್ತೊಂದೆಡೆ, ಆ ಧೋರಣೆಯಿಂದಲೇ ಆಳಲ್ಪಟ್ಟ ಭಾರತದ ಸಾಮಾಜಿಕ ಆರ್ಥಿಕ ದುರ್ದೆಶೆಯನ್ನೂ ಮುಂದಿರಿಸಿಕೊಂಡು, ಅವುಗಳ ಮೇಲೆ ತಮ್ಮ ವೈಜ್ಞಾನಿಕ ವಿಶ್ಲೇಷಣೆಯ ಹೊಳಹುಗಳನ್ನು ಚೆಲ್ಲುತ್ತಾ ನಡೆಯುವುದನ್ನು ಈ ಪ್ರೌಢ ಪ್ರಬಂಧದ ಸಂದರ್ಭದಲ್ಲಿ ಕಾಣಬಹುದಾಗಿದೆ. ಅಂದರೆ ಕೇವಲ ಇಪ್ಪತ್ನಾಲ್ಕು ವರ್ಷ ವಯಸ್ಸಿನಲ್ಲೇ ಈ ಅಸ್ಪೃಶ್ಯರ ಹುಡುಗ ತನ್ನ ಪ್ರೌಢ ಪ್ರಬಂಧದ ಸಂದರ್ಭದಲ್ಲಿ ತೋರಿದ ಪ್ರೌಢಿಮೆಯನ್ನೂ ತನ್ನ ಚಿಂತನಾಲಹರಿಯ ಹಿನ್ನೆಲೆಯಲ್ಲಿ ನಡೆಸಿರುವ ಒಂದು ತತ್ವಬದ್ಧವಾದ ಸಂಕಲ್ಪದ ಸ್ವರೂಪವನ್ನು ಅನಂತರದ ಭಾರತದ ನಾಣ್ಯಪದ್ಧತಿ ಹಾಗೂ ಹಣಕಾಸಿನ ಬಗ್ಗೆ ರಾಯಲ್‌ಕಮಿಷನ್‌ಮುಂದೆ ಅವರು ಮಂಡಿಸಿದ ವಾದದಿಂದಲೂ ತಿಳಿಯಬಹುದಾಗಿದೆ. ಬಹುಶಃ ಈ ಸಂದರ್ಭದಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದು ಸೂಕ್ತವೆಂದು ತೋರುತ್ತದೆ: ಏಕೆಂದರೆ ಈ ಹಿಂದಿನ ಅಧ್ಯಾಯಗಳಲ್ಲಿ ಅಂಬೇಡ್ಕರರ ವಿದ್ಯಾರ್ಥಿ ಜೀವನದ ಘಟನೆಗಳನ್ನೇ ಮುಂದುವರಿಸಿಕೊಂಡು ವಿಶ್ಲೇಷಣಾತ್ಮಕವಾದ ಚರ್ಚೆಯನ್ನು ನಡೆಸಿದ್ದೇವೆ. ಆದರೆ ಪ್ರಸ್ತುತದಲ್ಲಿ ಹಿಂದಿನ ಅಧ್ಯಾಯಗಳ ಘಟನೆಗಳಿಗಿಂತಲೂ ವಿಶಿಷ್ಟವೆನಿಸುವ ಸ್ವತಃ ಅವರ ಪ್ರೌಢ ಪ್ರಬಂಧವನ್ನೇ ಪ್ರವೇಶಿಸುವ ಮೂಲಕ ಎಂ. ಎ. , ಶಿಕ್ಷಣದ ಹಂತದಲ್ಲಿ ಅಂಬೇಡ್ಕರು ತೋರಿದ ಅಸಾಧಾರಣ ಪ್ರತಿಭೆಯನ್ನು ಕಲ್ಪಿಸಿಕೊಳ್ಳುವುದು ಈ ಭಾಗದ ಚಿತ್ರಣದ ಮುಖ್ಯೋದ್ದೇಶವಾಗಿದೆ. ಏಕೆಂದರೆ ಅಸ್ಪೃಶ್ಯರ ಹುಡುಗನಾದ ಅಂಬೇಡ್ಕರರಿಗೆ ಓದುವ ಸ್ವಾತಂತ್ರ್ಯವೇ ಇಲ್ಲವೆಂದು ಭಾರತದ ಶಾಲೆಗಳಲ್ಲಿ, ಉಪಾಧ್ಯಾಯರು ವಿದ್ಯಾರ್ಥಿಗಳು ಮತ್ತು ಜವಾನರು ಸಹಿತವಾಗಿ ಬೆಲೆಯೇ ಇಲ್ಲದ ಯಾವುದೋ ಒಂದು ಪ್ರಾಣಿಯೋ ಎಂಬಂತೆ ಅಟ್ಟಾಡಿ ಇಟ್ಟಾಡಲ್ಪಟ್ಟ ಅಂಬೇಡ್ಕರ್ , ಅದೇ ಓದುವ ಸ್ವಾತಂತ್ರ್ಯ ಸರ್ವರಿಗೂ ಉಳ್ಳ ಅಮೆರಿಕದಂಥ ದೇಶದಲ್ಲಿ, ಆ ಯುವಕ ತನ್ನ ಸಂಶೋಧನೆಯಲ್ಲಿ ತೋರಿದ ದಿಟ್ಟತನ, ಖಚಿತ ನಿಲುವಿನ ವಾದವೈಖರಿ, ಅಸ್ಖಲಿತ ಅಂಕಿ ಅಂಶಗಳ ಮಂಡನೆ ಮತ್ತು ಇವೆಲ್ಲವನ್ನೂ ಬಳಸಿಕೊಂಡು, ಈ ಪ್ರೌಢಪ್ರಬಂಧದ ಸಂದರ್ಭದಲ್ಲಿ ಅವರು ಸೃಷ್ಟಿಸುವ ವಿಚಾರ ಪ್ರಪಂಚ ಭಾವನಾತ್ಮಕವಾಗಿ ತನ್ನ ತಾನೇ ವಿಶಿಷ್ಟವಾದುದು ಮಾತ್ರವಲ್ಲದೆ, ದೇಶದ ಸ್ವಾತಂತ್ರ್ಯ ಆಂದೋಲನ ತೀವ್ರಗತಿಯನ್ನು ಪಡೆದುಕೊಳ್ಳುತ್ತಿದ್ದುದರ ಹಿನ್ನೆಲೆಯಲ್ಲಿ ಕೂಡ, ಈ ಪ್ರೌಢಪ್ರಬಂಧದಲ್ಲಿ ಅಂಬೇಡ್ಕರರು ಸೃಷ್ಟಿಸಿದ ಭಾವಪ್ರಪಂಚ ಜ್ವಲಂತವಾದ ಅರ್ಥಗಳಿಂದ ತುಂಬಿದೆ ಎಂಬುದನ್ನು ಮನಗಾಣಬಹುದಾಗಿದೆ.

ಈಗ ಮೊದಲಿಗೆ, ಆ ಯುಗದ ಬ್ರಿಟಿಷ್‌ಅಧಿಕಾರಿಯಾದ ಕಾರ್ನ್‌ವಾಲೀಸನು ಜಾರಿಗೆ ತಂದ ವಸಾಹತು ಜಮೀನ್ದಾರಿ ಪದ್ಧತಿಯನ್ನು ಕುರಿತು ಅಂಬೇಡ್ಕರ್ ಮಾಡುವ ವಿಶ್ಲೇಷಣಾತ್ಮಕವಾದ ವಿಚಾರ ಮಂಡನೆಯನ್ನೇ ನೋಡಬಹುದಾಗಿದೆ.

ಪದ್ಧತಿಯಲ್ಲಿನ ತುಂಬಾ ಗುಣಾತ್ಮಕವಾದ ಪ್ರಯೋಜನವೆಂದರೆ, ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಸಂಗ್ರಹವಾಗುತ್ತಿದ್ದ ಭೂಕಂದಾಯದ ವಸೂಲಿ. ಏಕೆಂದರೆ, ತುಂಬಾ ವ್ಯಾಪಕವಾದ ಇಡೀ ಜಿಲ್ಲೆಯ ಕಂದಾಯವನ್ನು ಕೇವಲ ಕೆಲವೇ ಮಂದಿ ಜಮೀನ್ದಾರರ ಮೂಲಕ ಸಂಗ್ರಹಿಸುವುದು ಅತ್ಯಂತ ಸುಲಭ ಸಾಧ್ಯವಾಗಿದ್ದು, ಇಡೀ ಜಿಲ್ಲೆಯ ಸ್ವತಃ ಸರ್ಕಾರಿ ಅಧಿಕಾರಿಗಳಿಗೆ ಸೇರಿದರೂ ಸಂಗ್ರಹಿಸಲು ಸಾಧ್ಯವಾಗದಷ್ಟು ಮೊತ್ತದ ಭೂಕಂದಾಯದ ವಸೂಲಿಯನ್ನು, ಕೇವಲ ಕೆಲವೇ ಮಂದಿ ಜಮೀನ್ದಾರರ ಮುಖಾಂತರ ವಸೂಲಿ ಮಾಡುವುದು ಸಾಧ್ಯವಾಗುತ್ತಿತ್ತು. ಹಾಗೆಯೇ, ಪದ್ಧತಿಯ ಬಹು ಮುಖ್ಯವಾದ ಇನ್ನೊಂದು ಪ್ರಯೋಜನವೆಂದರೆ, ಕಂದಾಯ ಹೆಚ್ಚಿನ ಪ್ರಮಾಣದಲ್ಲಿ ನಿಸ್ಸಂದೇಹವಾಗಿ ವಸೂಲಾಗುತ್ತಿದ್ದುದು; ಅಂದರೆ ಕಂಪನಿ ಸರಕಾರಕ್ಕೆ ಬೇಕಾಗಿದ್ದುದು ಕೂಡ ಅಷ್ಟೆ.

ಬಂಗಾಳದ ದೇವಾಣಿ, ಬಿಹಾರ ಹಾಗೂ ಒರಿಸ್ಸಾಗಳಲ್ಲಿ ಈಸ್ಟ್‌ಇಂಡಿಯಾ ಕಂಪನಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ಬಳಿಕ, ಅಲ್ಲಿ ಅವರಿಗೆ ಅತ್ಯಂತ ಅನುಕೂಲಕರವಾಗಿ ಕಂಡ ಇನ್ನೊಂದು ರೀತಿಯ ಜಮಿನ್ದಾರಿ ಪದ್ಧತಿ ಎಂದರೆ, ಆ ಪ್ರದೇಶಗಳ ಮುಸಲ್ಮಾನ್‌ಸಾಮ್ರಾಟರು, ಸ್ಥಳೀಯ ಸುಭೇದಾರರು, ಜಮಿನ್ದಾರರು ಹಾಗೂ ತಾಲೂಕುದಾರರನ್ನು ನೇಮಿಸಿ ಅವರು ತಂತಮ್ಮ ಪ್ರದೇಶಗಳ ಭೂಕಂದಾಯಗಳನ್ನೆಲ್ಲಾ ವಸೂಲಿ ಮಾಡಿ, ವರ್ಷಕ್ಕೊಮ್ಮೆ ಸರಕಾರಿ ಖಜಾನೆಗೆ ತುಂಬುವುದು. ಅಂದರೆ, ಈ ಪ್ರದೇಶಗಳಲ್ಲಿ ಉಂಟಾದ ಈ ಪರಿಯ ಸುಭೇದಾರರು, ಜಮೀನ್ದಾರರು ಹಾಗೂ ತಾಲೂಕುದಾರರು ಅನಂತರ ಬಹುಕಾಲದವರೆಗೂ ಪಾರಂಪರಿಕವಾಗಿ ಜಮೀನ್ದಾರರಾಗಿಯೇ ಮುಂದುವರಿದರು ಎಂಬುದನ್ನು ಗಮನಿಸಬೇಕು. ಅದೇನೇ ಇದ್ದರೂ ಬ್ರಿಟಿಷರಿಗೆ ಬೇಕಾಗಿದ್ದುದು ಕೂಡ ಅದೇ ಆಗಿದ್ದು, ಅದನ್ನವರು ಸರಿಯಾಗಿಯೇ ದುಡಿಸಿಕೊಂಡರು. ಇದರಿಂದಾಗಿ ಈಸ್ಟ್‌ಇಂಡಿಯಾ ಕಂಪನಿ ಸರ್ಕಾರ ಏಕಕಾಲದಲ್ಲಿ ಸಾಧಿಸಿದ ಎರಡು ಮಹತ್ವದ ಸಾಧನೆಗಳೆಂದರೆ: ಒಂದು, ಪ್ರದೇಶದ ತುಂಬೆಲ್ಲಾ ಶ್ರೀಮಂತ ಭೂಮಾಲೀಕರ ಪರಂಪರೆಯನ್ನೇ ಸೃಷ್ಟಿಸಿದುದು. ಎರಡನೆಯದೂ ಮೊದಲನೆಯದಕ್ಕಿಂತ ಮುಖ್ಯವೂ ಆದುದೆಂದರೆ, ರೈತರು ಹಾಗೂ ಸಣ್ಣ ಹಿಡುವಳಿದಾರರಿಗೆ ಸರಕಾರವೇ ನೇರವಾಗಿ ರಕ್ಷಣೆ ಕೊಡುವ ಮೂಲಕ ಜಮೀನ್ದಾರಿ ಪದ್ಧತಿಯನ್ನು ಸುಭದ್ರವಾಗಿ ನೆಲೆಗೊಳಿಸಿದುದು.

ಇನ್ನು ಇದುವರೆಗೆ ಉದ್ಧರಿಸಿದ ಅಂಬೇಡ್ಕರರ ಲೇಖಕ ಭಾಗವನ್ನು ತುಂಬಾ ಸಾವಕಾಶವಾಗಿ ವಿಚಾರ ಮಾಡಬೇಕಾಗುತ್ತದೆ. ಏಕೆಂದರೆ ಕೇವಲ ಇಪ್ಪತ್ತಮೂರು ಅಥವಾ ಇಪ್ಪತ್ತನಾಲ್ಕು ವರ್ಷಗಳ ಯುವಕ ಅಂಬೇಡ್ಕರರಲ್ಲಿ ವಯಸ್ಸಿಗೆ ಸಹಜವೇ ಎನಿಸಬಹುದಾಗಿದ್ದ ಆಕ್ರೋಶ ಅವಮಾನಾದಿಗಳೆಲ್ಲಾ ಅವರ ಅಭಿವ್ಯಕ್ತಿಯಲ್ಲಿ ತೋರಿಕೊಳ್ಳಬೇಕಿತ್ತು. ಆದರೆ ಹಾಗಾಗಿಲ್ಲ. ಬದಲಾಗಿ, ಆ ವಯಸ್ಸಿಗೆ ತೀರಾ ಅಸಹಜವೇ ಎನ್ನಬಹುದಾದ ಸಂಯಮ, ಭಾಷೆ ಹಾಗೂ ಭಾವನೆಗಳೆರಡರಲ್ಲೂ ನಡೆದಿರುವುದನ್ನು ನೋಡಿದರೆ, ವಿದ್ಯಾರ್ಥಿ ದೆಸೆಯಲ್ಲೇ, ಅವರ ಪ್ರತಿಭೆ ತುಂಬಾ ಅಸಾಧಾರಣವಾದುದು ಎನಿಸದಿರುವಂತಿಲ್ಲ. ಆದ್ದರಿಂದ ಅವರ ಬರಹಗಳ ಶಕ್ತಿಯನ್ನು ಅವುಗಳನ್ನು ಕುರಿತ ಸ್ವತಃ ವಿಶ್ಲೇಷಣೆಯಿಂದಲೇ ಮುಂದಿನ ಪುಟಗಳಲ್ಲಿ ತಿಳಿಯಬಹುದಾಗಿದೆ.