ಸ್ಥಿರ ಸಮಾಜ ಮತ್ತು ಚಲನಶೀಲ ಸಮಾಜದ ನಡುವಣ ಅವಧಿಯಲ್ಲಿ ಕಣ್ಣು ಬಿಟ್ಟು, ಕಣ್ಣು ಮುಚ್ಚಿದರು ಡಾ. ಅಬೇಡ್ಕರ್. ಪ್ರೀತಿ-ದ್ವೇಷ, ಹಿಂಸೆ-ಅಹಿಂಸೆ, ನಾಸ್ತಿಕ-ಆಸ್ತಿಕ, ಆತ್ಮಘಾತಕ-ಆತ್ಮವಿಶ್ವಾಸಿ, ದೇಶದ್ರೋಹಿ-ದೇಶಭಕ್ತ, ಬ್ರಾಹ್ಮಣ ದ್ವೇಷಿ- ಬ್ರಾಹ್ಮಣ ಮಿತ್ರ, ಮೂರ್ತ-ಅಮೂರ್ತ, ಸರ್ವಾಧಿಕಾರಿ-ಸ್ವಾತಂತ್ರ್ಯಪ್ರೇಮಿ ಈ ದ್ವಂದಗಳ ಪೆಂಡ್ಯೂಲಂ ಸ್ವಭಾವದ ಸಂಕೀರ್ಣ ವ್ಯಕ್ತಿತ್ವ ಅವರದು. ಧರ್ಮ ನಿರಪೇಕ್ಷಿತ ಲೌಕಿಕ ಬದುಕಿನ ಸಿದ್ಧಾಂತ ಪ್ರತಿಪಾದಕ, ಅಸ್ಪೃಶ್ಯತೆಯ ವಿನಾಶದ ಹಠಯೋಗಿ, ಚಾತುರ್ವಣದ ವಿಗ್ರಹ ಭಂಜಕ, ಪರಿಶಿಷ್ಟ ವರ್ಗದ ಸಮಾನ ಹಕ್ಕುಗಳ ಪ್ರತಿಷ್ಠಾಪನಾಚಾರ್ಯ ಸದಾ ಸಂಘರ್ಷಣೆಯ ಕ್ರಾಂತಿಯಲ್ಲಿಯೇ ಅರ್ಥಕಂಡುಕೊಂಡ ಅಂಬೇಡ್ಕರ್ , ಅವರ ಬದುಕು ಮತ್ತು ತತ್ವಗಳು ಇಂದಿಗೆ ಎಷ್ಟು ಪ್ರಸ್ತುತ-ಅಪ್ರಸ್ತುತ ಎಂದು ಬೆಲೆಗಟ್ಟುವ ಸಮಕಾಲೀನ ಬುದ್ಧಿಜೀವಿಗಳಿಗೆ ಒಂದು ಸವಾಲೇ ಸರಿ.

ಬ್ರಿಟಿಷರ ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಡಲು ಭಾರತೀಯ ಕಾಂಗ್ರೆಸ್‌ಅಸ್ತಿತ್ವಕ್ಕೆ ಬಂದಿತು. ಅದರಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್ಖರು ಸಂಘಟಿತರಾದರು. ಧಾರ್ಮಿಕ ಮತ್ತು ರಾಜಕೀಯ ಮಿಲನದ ಅಪೂರ್ವ ವ್ಯಕ್ತಿತ್ವದ ಗಾಂಧೀಜಿಯಲ್ಲಿ ನಾಯಕತ್ವವನ್ನು ಕಂಡುಕೊಂಡರು. ಈಗಾಗಲೇ ಬ್ರಿಟಿಷರ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ನಡೆಸಿ ಪಡೆದ ಅನುಭವಕ್ಕೆ ಗಾಂಧೀಜಿ ಭಾರತವನ್ನು ಪ್ರಯೋಗಶಾಲೆಯನ್ನಾಗಿಸಿಕೊಂಡರು. ಸ್ವಾತಂತ್ರ್ಯ ಚಳವಳಿಯ ಅವರ ಕರೆಗೆ ನಾಡಿಗೆ ನಾಡೇ ಸ್ಪಂದಿಸಿತು. ಆದರೆ ಹಿಂದೂಗಳ ಸಂಘಟನೆ ಮತ್ತು ಇತರ ಶಕ್ತಿಗಳು, ಮುಸ್ಲಿಂ ಮತ್ತು ಸಿಖ್ಖರಲ್ಲಿ ನಡುಕ ಹುಟ್ಟಿಸಿ, ಅವರಿಗೆ ತಮ್ಮ ಭವಿಷ್ಯ ಕಪ್ಪಿಟ್ಟಂತೆ ಕಂಡು, ಸಂಘಟನೆಯಲ್ಲಿ ಬಿರುಕು ಕಾಣಿಸಿತು. ಅವರಿಗೆ ಪ್ರತ್ಯೇಕ ಮತದಾನ ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯದ ಭರವಸೆಯನ್ನು ಹಿಂದೂಗಳು ಕೊಟ್ಟ ಮೇಲೆ ಅವರ ಅನುಮಾನ ಪರಿಹಾರವಾಗಿ ಚಳವಳಿ ಮತ್ತೆ ಚುರುಕುಗೊಂಡಿತು. ಆದರೆ ಹಿಂದೂಗಳು ತಾವು ಅಮಾನವೀಯತೆಯಿಂದ ನಡೆಸಿಕೊಳ್ಳುತ್ತಿದ್ದ ಪರಿಶಿಷ್ಟ ವರ್ಗದ ಬಗ್ಗೆ ಕಿಂಚಿತ್ತೂ ಚಿಂತಿಸಲಿಲ್ಲ. ಅಂಬೇಡ್ಕರ್ ಮಾತಿನಲ್ಲಿಯೇ ಹೇಳುವುದಾದರೆ ಅರಸರೂ, ಶ್ರೀಮಂತರೂ ಮತ್ತು ಪ್ರತಿಷ್ಠಿತ ವರ್ಗದವರೇ ತುಂಬಿದ್ದ ಕಾಂಗ್ರೆಸ್ಸಿಗೆ ಚಾತುರ್ವರ್ಣ ರಕ್ಷಕ ಮತ್ತು ಹರಿಜನೋದ್ಧಾರಕ ಗಾಂಧೀಜಿಯೇ ಅನಭಿಷಿಕ್ತ ಚಕ್ರವರ್ತಿ!

ಪರಿಶಿಷ್ಟ ವರ್ಗದವರನ್ನು ಮನುಷ್ಯರಾಗಿ ನಡೆಸಿಕೊಳ್ಳದೆ, ಅವರಿಗೆ ಕುಡಿಯಲು ನೀರು ಕೊಡದೆ, ಅವರನ್ನು ದೇವಾಲಯದ ಒಳಕ್ಕೆ ಬಿಟ್ಟುಕೊಳ್ಳದೆ, ಅವರು ಹೇಳಿಕೊಳ್ಳಲೂ ಸಂಕೋಚಪಡುವ ಹಿಂದೂ ಧರ್ಮದ ಚತುರ್ವರ್ಣದ ಮೇಲಿನ ಮೂರು ವರ್ಗಕ್ಕೂ ಗುಲಾಮರಾಗಿ ರಕ್ತ ಬಸಿಯುತ್ತ ನಿತ್ಯ ಕಣ್ಣೀರಿನಲ್ಲಿ ಅವರು ಕೈತೊಳೆಯುತ್ತಿದ್ದರು. ಜನಬಲ, ಹಣಬಲ ಮತ್ತು ಬುದ್ದಿಜೀವಿಗಳ ಬೆಂಬಲವಿಲ್ಲದ ಈ ವರ್ಗ ಹಲವು ಮೌಢ್ಯಗಳಿಗೆ ಬಲಿಯಾಗಿ, ತಮ್ಮ ಹಣೆಬರಹವನ್ನೇ ಎಲ್ಲದಕ್ಕೂ ದೂರುತ್ತ, ಮೂಕ ಪಶುಗಳಾಗಿ ದುಡಿಯುತ್ತಿದ್ದರು. ಯಾವ ಸವಲತ್ತೂ ಮತ್ತು ಅವಕಾಶಗಳಿಂದ ವಂಚಿತರಾದ ಇವರು, ಹೇಳುವ ಕೇಳುವ ದಾತಕರಿಲ್ಲದ ಅನಾಥರು. ತಟಸ್ಥರಾಗಿಯೋ ಮೌನ ಪ್ರೇಕ್ಷಕರಾಗಿಯೊ, ಸಕ್ರಿಯವಾಗಿಯೊ, ತಿಳಿದೊ-ತಿಳಿಯದೆಯೋ ಒಡೆಯರ ನಿಷ್ಠೆಗೆ ಗರುಡರಾಗಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದು ಬಲಿಯಾಗುವ ಕುರಿಗಳು! ಚಿಂದಿಬಟ್ಟೆ, ಕೊಳಚೆಯ ವಾಸದ ಈ ವರ್ಗಕ್ಕೆ ಬರಬಾರದ ರೊಚ್ಚು ಮತ್ತು ಕೆಚ್ಚು ಒಂದು ಪಕ್ಷ ಬಂದರೂ ಮರಳ ಬಾವಿಯಂತೆ ಝರಕ್ಕನೆ ಕುಸಿಯುತ್ತಿತ್ತು. ಮಾಯಲಾಗದ ಅಪಮಾನದ ಗಾಯದ ನೋವನ್ನು ಒಳಗೊಳಗೇ ತಿನ್ನುತ್ತಿದ್ದರು.

ಭಾರತದಲ್ಲಿ ಪರಿಶಿಷ್ಟ ವರ್ಗದಲ್ಲಿ ಹುಟ್ಟಿ, ಅಮೆರಿಕ ಮತ್ತು ಇಂಗ್ಲೆಂಡ್‌ದೇಶಗಳ ಮುಕ್ತ ಸಮಾಜಗಳಲ್ಲಿ ಬದುಕಿ, ಪಾಶ್ಚಾತ್ಯ ಚಿಂತಕರಿಂದ ಪ್ರಭಾವಿತರಾಗಿ, ಅಲ್ಲಿಯ ಪುಸ್ತಕ ಭಂಡಾರವನ್ನು ತಲೆಯಲ್ಲಿ ತುಂಬಿಕೊಂಡು, ಯಾವುದನ್ನೂ ವಿಜ್ಞಾನ ಮತ್ತು ವೈಚಾರಿಕ ದೃಷ್ಟಿಯಿಂದ ತಿಕ್ಕಿ ನೋಡುವ ಚುರುಕು ಬಿದ್ಧಿಯ ಕಾನೂನು ತಜ್ಞ ಅಂಬೇಡ್ಕರ್ ಯೋಗ್ಯತೆಯನ್ನು ಮಾನ್ಯ ಮಾಡಿ ಅವರಿಗೆ ಸಾಮಾನ್ಯ ನಾಗರಿಕನ ಹಕ್ಕುಗಳನ್ನು ಕೊಡಲು ಹಿಂದೂಧರ್ಮ ಮುಂದೆ ಬರಲಿಲ್ಲ. ಅಸಮಾನತೆಯ ಗುಲಾಮಗಿರಿಯ ನೊಗ ಕುತ್ತಿಗೆ ಮೇಲೆ ಹೊತ್ತ ಅವರು ಕಸಿವಿಸಿಗೊಂಡರು. ಹುಟ್ಟಿನ ಸಿದ್ಧಾಂತದ ಮುಂದೆ ಕಲಿಕೆ, ಯೋಗ್ಯತೆ, ಗುಣ, ಪದವಿ, ಪ್ರತಿಭೆ ಮತ್ತು ಪ್ರತಿಷ್ಠೆ ನಿರರ್ಥಕವಾದವು. ಅವರಿಗೆ ಭಗವದ್ಗೀತೆಯ ಹುಟ್ಟು ಮತ್ತು ಗುಣ ಸಾಮರಸ್ಯ ಸಿದ್ಧಾಂತ ಒಂದು ಅಣಕವಾಗಿ ತೋರಿತು. ಅಸ್ಪೃಶ್ಯತೆಯನ್ನು ಎತ್ತಿಹಿಡಿವ ಶಾಸ್ತ್ರಗಳು, ಶಾಸ್ತ್ರ ಪ್ರಮಾಣವನ್ನು ಸಾರುವ ಬ್ರಾಹ್ಮಣರು ಮತ್ತು ಕುರುಡರಾಗಿ ಅನುಕರಿಸುವ ಸವರ್ಣಈಯರ ವಿರುದ್ಧ ಕಿಡಿ ಕಿಡಿಯಾದರು. ಇದೆಲ್ಲ ರಗಳೆಗೂ ಬ್ರಾಹ್ಮಣತ್ವದ ಕುತಂತ್ರವೇ ಕಾರಣವೆಂದು ಬ್ರಾಹ್ಮಣತ್ವದ ದ್ವೇಷವನ್ನು ಬೆಳೆಸಿಕೊಂಡರು.

According to him (Ambedkar) he said, there were Two enemies of the working classes in the country and they were Brahminism and capitalism. `By Brahminism’ he stated `I do not mean the power, privileges and interest of the Brahmin as a community. Thai is not the sense I am using the world. By Brahmin I mean Negation of the sprit of liberty, equalIty and fraternity…. The effects of Brahminism were not confined to social rights such as inter dining and intermarrying. It denied them also the civic rights. So omnisciecent is Brahminism that even it affects the field of Economic opportunities. Dhananjaya keer; Dr. Ambedkar, P. 303

ತಾವು ಹುಟ್ಟಿದ ಪರಿಶಿಷ್ಟ ಜಾತಿಯೇ ತಮ್ಮ ಅಭಿವೃದ್ಧಿಗೆ ಅಡ್ಡವಾಗುವ ಪರಿಸ್ಥಿತಿಗೆ ಕಾರಣರಾದ ಪ್ರತಿಷ್ಠಿತ ವರ್ಗವನ್ನು ದ್ವೇಷಿಸಿದರು. ಪರಿಶಿಷ್ಟ ವರ್ಗದಲ್ಲಿಯೇ ತಮ್ಮನ್ನು ತಾವು ಕಂಡುಕೊಂಡು, ಕ್ರಮೇಣ ಆತ್ಮವಿಶ್ವಾಸ ಹೊಂದಿದರು. ಮುಗ್ಧರೂ, ಅನಕ್ಷರಸ್ಥರೂ, ಅವಿದ್ಯಾವಂತರೂ ಮತ್ತು ಅಸಂಘಟಿತರೂ ಆದ ಪರಿಶಿಷ್ಟ ವರ್ಗದ ಸಂಘಟನೆಗೆ ಕಂಕಣಬದ್ಧರಾದರು. ಅಂಬೇಡ್ಕರ್ ಪರಿಶಿಷ್ಟ ವರ್ಗಕ್ಕೆ ನಾಗರಿಕ ಹಕ್ಕುಗಳನ್ನಾದರೂ ಕೊಡುವಂತೆ ಹಿಂದೂ ನಾಯಕರು ಮತ್ತು ಜನರಲ್ಲಿ ಮನವಿ ಮಾಡಿಕೊಂಡು ವಿಫಲರಾದರು. ಅವರು ಸವರ್ಣೀಯರ ದೌರ್ಜನ್ಯ ಮತ್ತು ಕ್ರೌರ್ಯದ ವಿರುದ್ಧ ಹೋರಾಡಲು ತೀರ್ಮಾನಿಸಿದರು. ಪರಿಶಿಷ್ಟ ವರ್ಗದಲ್ಲಿ ಸುಪ್ತವಾಗಿ ಬೋರಾಡುತ್ತಿದ್ದ ಅತೃಪ್ತಿಯ ಲಾವಾರಸ ರಾಜಕೀಯ ಸಂಘಟನೆಯ ಶಕ್ತಿಯಾಗಿ ಸಿಡಿದು ಹರಿದಾಗಲೇ ಸವರ್ಣೀಯರು, ಬ್ರಿಟಿಷರು ಮತ್ತು ಜಗತ್ತು ಕಣ್ಣು ತೆರೆಯುವುದೆಂದು ನಿಶ್ಚಯಿಸಿ ಅಗ್ನಪರ್ವತರಾದರು.

ಹಿಂದೂ ಧರ್ಮಕ್ಕೆ ಅಸ್ಪೃಶ್ಯರು ಹೊರತಾದರೆ, ಅಸ್ಪೃಶ್ಯರಿಗೆ ಹಿಂದೂ ಧರ್ಮ ಹೊರತು ಎಂದು ಸಾರಿದರೂ, ಹಿಂದೂ ಧರ್ಮ ಮಾತ್ರ ಅವರನ್ನು ಬಿಡದೆ ಬಂಧಿಸುತ್ತಿತ್ತು. ಹಿಂದೂ ಧರ್ಮದಿಂದ ತಪ್ಪಿಸಿಕೊಳ್ಳಲು ಇಸ್ಲಾಮಿಗೂ, ಕ್ರಿಸ್ತ ಅಥವಾ ಮತ್ತಾವುದೊ ಒಂದು ಧರ್ಮಕ್ಕೆ ಮತಾಂತರ ಹೊಂದಬೇಕು! ಅಲ್ಲಿಯೂ ಮತಾಂತರಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಪೃಶ್ಯತೆ ಬೆನ್ನು ಹತ್ತಿ ಕಾಡುವ ಭೂತ! ಹಿಂದೂ ಧರ್ಮದಲ್ಲಿ ಇದ್ದೇ ಹಿಂದೂ ಧರ್ಮವನ್ನು ಪರಿಷ್ಕರಿಸುವ ಮತ್ತು ಸುಧಾರಿಸುವುದೇ ಸೂಕ್ತವಾಗಿ ಕಂಡು ಹೋರಾಟಕ್ಕೆ ಅಂಬೇಡ್ಕರ್ ಪಣತೊಟ್ಟರು.

ಸೂಕ್ಷ್ಮವಾಗಿ ಅಂದಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿದಾಗ ಪರಿಶಿಷ್ಟ ವರ್ಗ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಸಂಘಟಿತರಾಗಲು ಸ್ವಾತಂತ್ರ್ಯ ಚಳವಳಿ ಕೊಟ್ಟಿರುವ ಯುಗಯುಗದ ಬಳುವಳಿಯಾಗಿ ಕಂಡುಬಂದಿತು. ಶತ ಶತಮಾನಗಳಿಂದ ಇಂಥ ಸುವರ್ಣ ಅವಕಾಶ ಹಿಂದೆ ಒದಗಿರಲಿಲ್ಲ. ಇದನ್ನು ಬಿಟ್ಟರೆ ಮುಂದೆಯೂ ಒದಗುವುದಿಲ್ಲ ಎಂಬ ಅರಿವು ಅಂಬೇಡ್ಕರ್ ರರಿಗೆ ಮೂಡಿತು. ಇಂಥ ಘಳಿಗೆಯನ್ನು ಕಳೆದುಕೊಂಡರೆ ಮುಂದಿನ ಶತಶತಮಾನಕ್ಕೂ ಪರಿಶಿಷ್ಟ ವರ್ಗ ಶಾಪಗ್ರಸ್ಥರಾಗಿ ಪರಿತಪಿಸಬೇಕಾದೀತೆಂದು ಭಾವಿಸಿದರು. ಪರಿಶಿಷ್ಟ ವರ್ಗದ ಪ್ರಜ್ಞೆಯ ಜಾಗೃತ ಚಳವಳಿಗೆ ಮುಂದಾದರು. ಬ್ರಿಟಿಷರ ರಾಜಕೀಯ ಗುಲಾಮಗಿರಿ ಮತ್ತು ಹಿಂದೂಗಳ ಧಾರ್ಮಿಕ ಗುಲಾಮಗಿರಿಯಿಂದ ಬಿಡುಗಡೆಗೆ ಚಳವಳಿಯನ್ನು ತೀವ್ರಗೊಳಿಸಿದರು.

ಧಾರ್ಮಿಕ ವಿಷಯದಲ್ಲಿ ತಟಸ್ಥರಾಗಿಯೇ ನಿಂತು ಭಾರತದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿಯೂ ಪರಿಶಿಷ್ಟ ವರ್ಗದ ಸ್ಥಿತಿಗಳು ಸ್ಥಾಯಿಯಾಗಿಯೇ ಮುಂದುವರಿಯಿತು. ಬ್ರಿಟಿಷರಿಂದ ಅಧಿಕಾರ ಕಾಂಗ್ರೆಸ್ಸಿಗರಿಗೆ ಹಸ್ತಾಂತರವಾದರೂ, ಪರಿಶಿಷ್ಟ ವರ್ಗದ ಸ್ಥಿತಿಗತಿ ಉತ್ತಮವಾಗುವುದರಲ್ಲಿ ವಿಶ್ವಾಸ ಮೂಡಲಿಲ್ಲ. ಶತಶತಮಾನಗಳ ಅನುಭವವೇ ಸಾಕ್ಷಿಯಾಗಿತ್ತು. ಕಾಂಗ್ರೆಸ್ಸಿನ ಹಿಂದೂಗಳು ಪರಿಶಿಷ್ಟವರ್ಗದವರಿಗೆ ಮುಸ್ಲಿಮರು ಮತ್ತು ಸಿಖ್ಖರಿಗೆ ಕೊಟ್ಟ ಸವಲತ್ತುಗಳನ್ನು, ದೇಶ ಛಿದ್ರವಾಗುವ ನೆಪ ಹಾಕಿ ನಿರಾಕರಿಸಿದರು. ಸ್ವಾತಂತ್ರ್ಯ ಬಂದ ಅನಂತರ ಅಸ್ಪೃಶ್ಯತೆ ನಿವಾರಣೆಯ ಸಮಸ್ಯೆ ಎತ್ತಿಕೊಂಡು ಚಳುವಳಿ ನಡೆಸುವುದಾಗಿ ಗಾಂಧೀಜಿಯೂ ಭರವಸೆ ಇತ್ತರು. ಇದಾವುದಕ್ಕೂ ಜಗ್ಗದ ಅಂಬೇಡ್ಕರ್ ಅವರು ಹಿಂದೂಶಾಸ್ತ್ರ, ಹಿಂದೂ ದೇವರು ಮತ್ತು ಹಿಂದೂಗಳ ವಿರುದ್ಧ ದನಿ ಎತ್ತಿ ನಾಗರಿಕ ಹಕ್ಕುಗಳು ಮತ್ತು ಸಮಾನತೆಯ ಬೇಡಿಕೆ ಮುಂದಿಟ್ಟು ಯುದ್ಧ ಘೋಷಿಸಿದರು. ಪರಿಶಿಷ್ಟ ವರ್ಗದವರಿಗೆ ಸರ್ಕಾರಿ ನೌಕರಿಯಲ್ಲಿ ಉದ್ಯೋಗ, ಕಡ್ಡಾಯ ಮತ್ತು ಉಚಿತ ಶಿಕ್ಷಣ, ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ಬಯಸಿ ಸ್ವಾತಂತ್ರ್ಯ ಬೇಡಿಕೆಯ ಸ್ವರೂಪದ ಹಿನ್ನೆಲೆಯನ್ನು ಬ್ರಿಟಿಷರ ಮುಂದಿಟ್ಟರು. ಹಿಂದೂಗಳ ಈ ಬಿರುಕು ಬ್ರಿಟಿಷರಿಗೂ ಮತ್ತು ಅನ್ಯಮತೀಯರಿಗೂ ಒಳಗೊಳಗೇ ಖುಷಿ ತಂದಿತು. ಪರಿಶಿಷ್ಟ ವರ್ಗದ ರಾಜಕೀಯ ಭವಿಷ್ಯ ನಿಶ್ಚಯವಾಗದೇ, ಅಂಬೇಡ್ಕರ್ ರರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದೆ. ನೇರವಾಗಿ ದಲಿತ ಪ್ರತಿನಿಧಿಯಾಗಿ ಬ್ರಿಟಿಷರೊಂದಿಗೆ ವ್ಯವಹರಿಸಿದರು. ಅಂದಿನ ಪರಿಸ್ಥಿತಿಗನುಗುಣವಾಗಿ ಏಕಕಾಲದಲ್ಲಿ ಹಿಂದೂಗಳು ಮತ್ತು ಬ್ರಿಟಿಷರ ದ್ವೇಷ ಕಟ್ಟಿಕೊಂಡರೆ ಮರದ ಮೇಲೆ ನಿಂತು ಕೊಂಬೆ ಕಡಿದಂತೆ ಎಂದು ಭಾವಿಸಿ, ಆಡಳಿತ ನಡೆಸುತ್ತಿರುವ ಬ್ರಿಟಿಷರ ದ್ವೇಷ ಕಟ್ಟಿಕೊಳ್ಳಬಾರದೆಂದು ನಿಶ್ಚಯಿಸಿದರು. ಬ್ರಿಟಿಷರನ್ನು ಬೆಂಬಲಿಸುತ್ತ ಒಲಿಸಿಕೊಂಡು, ಹಿಂದೂಗಳೊಂದಿಗೆ ಹಕ್ಕುಗಳಿಗಾಗಿ ಹೋರಾಡುತ್ತ ಬಗ್ಗಿಸಿಕೊಳ್ಳುವ ಸೂತ್ರವನ್ನು ನಿರೂಪಿಸಿದರು. ಅಂಬೇಡ್ಕರರ ಇಂಥ ದ್ವಿಮುಖ ವ್ಯಕ್ತಿತ್ವ ವಿವಿಧ ವ್ಯಾಖ್ಯಾನಗಳಿಗೆ ಅವಕಾಶ ಮಾಡಿತು. ಯಾವುದಕ್ಕೂ ಜಗ್ಗದ ಅಂಬೇಡ್ಕರ್ ಲಂಡನ್ನಿನಿಂದ ಬಂದ ಸಮಿತಿಗಳು ಮತ್ತು ದುಂಡುಮೇಜು ಸಮ್ಮೇಳನಗಳಲ್ಲಿ ತಪ್ಪದೆ ಭಾಗವಹಿಸಿ ಪರಿಶಿಷ್ಟ ವರ್ಗದ ಸಮಸ್ಯೆಗಳನ್ನು ಪ್ರತಿಪಾದಿಸಿದರು. ಸಭೆ, ಸಮ್ಮೇಳನ ಮತ್ತು ಪತ್ರಿಕೆಗಳಲ್ಲಿ ಬರೆದು ಪರಿಶಿಷ್ಟವರ್ಗದತ್ತ ಅಂತರಾಷ್ಟ್ರೀಯ ಗಮನ ಸೆಳೆದರು. ಈ ವರ್ಗದ ಬೇಡಿಕೆಗಳು ನ್ಯಾಯವಾದವು ಎಂಬುದನ್ನು ಮನದಟ್ಟು ಮಾಡಿಸಿದರು.

ಪರಿಶಿಷ್ಟವರ್ಗದ ವ್ಯಕ್ತಿ ಮತಾಂತರಿಯಾಗಿ ಕ್ರಿಶ್ಚಿಯನ್ನನೋ ಅಥವಾ ಮುಸ್ಲಿಮನೋ ಆದಾಗ ಹಿಂದೂಗಳು ಅವನೊಂದಿಗೆ ಹೊಕ್ಕು ಬಳಸಿ ಸುವರ್ಣಣೀಯನಾಗಿ ಸ್ವೀಕರಿಸಿದಂತೆ, ಪರಿಶಿಷ್ಟ ವರ್ಗದವನನ್ನು ಒಳಕ್ಕೆ ಬಿಟ್ಟುಕೊಂಡು ತಿದ್ದುವ ತಂಟೆಗೆ ಹಿಂದೂಗಳು ಹೋಗಲಿಲ್ಲ. ಆತ್ಮದ ಹಂತದಲ್ಲಿ ಸಮಾನತೆ, ಸಾರಿ, ಸಾಮಾಜಿಕದ ಎಲ್ಲಾ ಹಂತಗಳಲ್ಲಿಯೂ ಅಸಮಾನತೆಯನ್ನೇ ಸ್ಥಾಯಿಯಾಗಿ ಆಚರಣೆಯಲ್ಲಿ ತಂದರು, ಹಿಂದೂ ಸಂಪ್ರದಾಯವಾದಿಗಳಾಗಲಿ, ಧಾರ್ಮಿಕ ಸುಧಾರಕರಾಗಲಿ, ಹಿಂದೂ ಶಾಸ್ತ್ರಗಳಿಗೆ ವೈಚಾರಿಕ ಅಥವಾ ವೈಜ್ಞಾನಿಕ ವ್ಯಾಖ್ಯಾನವನ್ನು ಕಾಲಕಾಲಕ್ಕೆ ಮಾಡಿದರೂ, ಚಾತುರ್ವರ್ಣದ ಚೌಕಟ್ಟಿಗೆ ಎಂದೂ ಭಂಗ ಬರದಂತೆ ರಕ್ಷಿಸುತ್ತಿರುವುದು ಕಂಡುಬರುತ್ತದೆ. ಬ್ರಾಹ್ಮಣರು ಒಂದು ಪಕ್ಷ ಬ್ರಾಹ್ಮಣತ್ವ ಬಿಟ್ಟರೂ ಶೂದ್ರರು ಬ್ರಾಹ್ಮಣತ್ವ ರಕ್ಷಣೆಗೆ ಕಂಕಣಬದ್ಧರಾಗುವ ವಿಷವರ್ತುಲ ಸೃಷ್ಟಿಯಾಗಿದೆ. ಊರ್ಧ್ವ ಮುಖ ಸಾಮಾಜಿಕ ಬದಲಾವಣೆಗೆ ಶೂದ್ರರಿಗೆ ಅವಕಾಶ ಒದಗಿಸಿದ ಬ್ರಾಹ್ಮಣರು, ಜಗತ್ತನ್ನು ಅಲ್ಲಗಳೆಯುತ್ತಲೇ ಶೂದ್ರ ಉತ್ಪಾದನೆಯ ಎಲ್ಲಾ ಭೋಗವಸ್ತುಗಳಿಗೂ ಮೇಲು ವರ್ಗದವರನ್ನು ಗುತ್ತಿಗೆದಾರರನ್ನಾಗಿ ಅನುಭೋಗಿಸುತ್ತಿರುವುದು ಒಂದು ವಿಪರ್ಯಾಸವೇ ಸರಿ. ಬ್ರಾಹ್ಮಣರು ಶಾಸ್ತ್ರ ವಿರುದ್ಧ ಕೀಳು ವೃತ್ತಿಗಳಲ್ಲಿ ತೊಡಗಿದರೂ ಅವರ ಧಾರ್ಮಿಕ ಅನುಶ್ರೇಣಿಗೆ, ಸಾಮಾಜಿಕ ಸ್ಥಾನಮಾನಕ್ಕಾಗಲಿ, ಸವಲತ್ತು ಸೌಲಭ್ಯಗಳಿಗಾಗಲಿ ಭಂಗ ಬರುವುದಿಲ್ಲ. ಆದರೆ ಕೆಳವರ್ಗದವರ ಶಿಕ್ಷಣವಾಗಲಿ, ಶ್ರೀಮಂತಿಕೆಯಾಗಲಿ, ಆಧ್ಯಾತ್ಮಿಕ ಸಾಧನೆಯಾಗಲಿ, ಅವರ ಧಾರ್ಮಿಕ ಅನುಶ್ರೇಣಿ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ. ಅಂಬೇಡ್ಕರ್ ರರಿಗೆ ಹಿಂದೂ ಧರ್ಮದ ಮೋಸದ ಚಾರಿತ್ರಿಕ ಸತ್ಯ ಚನ್ನಾಗಿ ಅರಿವಾಗಿತ್ತು.

ಪರಿಶಿಷ್ಟ ವರ್ಗದವರು ನಂಬಿದ ಹಿಂದೂ ಧರ್ಮವಾಗಲಿ ಅಥವಾ ಅವರು ನಂಬಿ ಆಚರಿಸುತ್ತ ಬರುತ್ತಿರುವ ತಮ್ಮ ಧಾರ್ಮಿಕ ವಿಧಿಗಳಾಗಲಿ ಎಂದೂ ಸ್ಥಿತಿಗತಿಯನ್ನು ಬದಲಿಸದೆ ಮತ್ತಷ್ಟು ಬಡತನ, ನೋವು ಸಂಕಟಗಳಿಗೆ ಕಾರಣವಾಗುತ್ತಿತ್ತು. ಪರಿಶಿಷ್ಟರ ಪ್ರಜ್ಞಾಜಾಗೃತಿ ಚಳವಳಿ, ತಮ್ಮ ನೆಲದಲ್ಲಿಯೇ ತಾವು ಅಸ್ಪೃಶ್ಯತೆ ಬೋಧಿಸುವ ಹಿಂದೂ ಧರ್ಮವನ್ನೂ ಮತ್ತು ತಮ್ಮ ಹೀನ ಸ್ಥಿತಿಗೆ ಕಾರಣವಾಗಿರುವ ತಲ ತಲಾಂತರದ ಧಾರ್ಮಿಕ ಸಂಪ್ರದಾಯಗಳನ್ನು ತಿರಸ್ಕರಿಸಿತು. ತಮ್ಮ ಹೀನ ಸ್ಥಿತಿಗೆ ಪರಿಹಾರವನ್ನು ಧಾರ್ಮಿಕ ಪರಿಸರದಲ್ಲಿ ಕಂಡುಕೊಳ್ಳುವುದನ್ನು ಅಲ್ಲಗಳೆದರು. ಸ್ವಪ್ರಯತ್ನದಿಂದ ಲೌಕಿಕದಲ್ಲಿಯೇ ಹೋರಾಟದಿಂದ ಪರಿಹಾರ ಕಂಡುಕೊಳ್ಳುವ ಯೋಜನೆಗಳನ್ನು ಸಿದ್ಧಪಡಿಸಿದರು. ಧಾರ್ಮಿಕ ಕೇಂದ್ರ ಬಿಂದುವಿನಿಂದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಬಗೆಹರಿಯದೆ ಮತ್ತಷ್ಟು ಧಾರ್ಮಿಕ ಸುಧಾರಣಾ ಸಂತರಿಂದ ಜಟಿಲವಾಗುತ್ತಿರುವುದು ಅಂಬೇಡ್ಕರ್ ರಿಗೆ ಮನದಟ್ಟಾಗಿತ್ತು. ಜಾತಿಪದ್ಧತಿಯೇ ಭಾರತದ ಪ್ರಗತಿಗೆ ಅಡ್ಡಿ. ಜಾತಿ ಪದ್ಧತಿ ಜನರ ಮತ್ತು ಮತ್ತು ದೇಶದ ಅವನತಿಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಧರ್ಮ ಸೋತಿದೆ, ಅದು ಮತ್ತೆ ಸಮಸ್ಯೆಗಳಿಗೆ ಮುದ್ದಾಗಲಾರದು ಎಂದು ತಿಳಿದರು.

You must abolish your slavery yourselves do not de Pend for its abolition upon god or superman. You Salvation lies in political powers and not in making Piligrimages and observance of fasts, devotion to Scriptures would not free you from your bondage, Want and poverty. Your forefathers have been doing its for generations, but there has been no respite not even slight difference in your miserable life in any way. Like your forefathers you wear rags. Like them, you subsist on thrown out crumbs; like them, you perish in utter slums and hovels and like them, you fall victims to disease with a death rate that rages among poultry. Your religious fasts, austerities and penances have not saved you from starvation. Dhananjaya Keer; Dr. Ambedkar, p. 235

ಅಂಬೇಡ್ಕರರು ಕನಿಷ್ಠ ಕಾಲದಲ್ಲಿ ಗರಿಷ್ಠ ಫಲ ಪಡೆಯುವ ಕ್ರಿಯಾಶೀಲರು. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿದರು. ಅಸ್ಪೃಶ್ಯರಿಗೆ ಬಹಿಷ್ಕೃತವಾದ ಕೆರೆಯ ನೀರಿನ ಬಳಕೆ ಮತ್ತು ದೇವಾಲಯ ಪ್ರವೇಶಕ್ಕೆ ಚಳವಳಿ ಮೇಲೆ ಹಲ್ಲೆ ನಡಸಿದರು, ಅವರ ವಿರುದ್ಧ ಕಾನೂನಿನ ರಕ್ಷಣೆ ಪಡೆದರು. ಆದರೂ ಚೌಡರ್ ಕೆರೆಯ ಸತ್ಯಾಗ್ರಹ ಮತ್ತು ನಾಸಿಕದ ಕಳಾರಾಮ ಮಂದಿರ ಪ್ರವೇಶದ ಹೋರಾಟಗಳು ನೈತಿಕ ಸ್ಥೈರ್ಯ ಮತ್ತು ರಾಜಕೀಯ ಸ್ಥಾನಮಾನ ದೊರಕಿಸಿಕೊಟ್ಟವು. ಶೋಷಕರೇ ತಮ್ಮ ಪೋಷಕರಾಗುವುದನ್ನು ಸ್ಪಷ್ಟವಾಗಿ ನಿರಾಕರಿಸಿದರು. ಅಸ್ಪೃಶ್ಯರ ಸಮಸ್ಯೆ ಅಮೆರಿಕದ ನಿಗ್ರೋ ವರ್ಗ ಅಸ್ಪೃಶ್ಯರಲ್ಲ. ಬಿಳಿಯರು ಅವರನ್ನು ಹೊಕ್ಕು ಬಳಸುತ್ತಿದ್ದರು. ನೀಗ್ರೋ ಮಾದರಿಯ ಚಳವಳಿ ಜಾತಿ ಪದ್ಧತಿಯ ಭಾರತದಲ್ಲಿ ಅನುಕರಣೀಯವಲ್ಲ. ಕಮ್ಯೂನಿಸ್ಟ್‌, ಕ್ಯಾಪಿಟಿಲಿಸ್ಟ್‌ಮತ್ತು ಸೋಷಿಯಲಿಸ್ಟ್‌ತತ್ವಗಳ ಮಾದರಿಯೂ ಇಲ್ಲಿಗೆ ಒಗ್ಗುವಂತದಲ್ಲ. ಹೀಗಾಗಿ ಮತಾಂತರ ಅಥವಾ ಪಕ್ಷಾಂತರಕ್ಕೆ ಅಂಬೇಡ್ಕರ್ ರವರು ಗಮನ ಕೊಡಲಿಲ್ಲ. ಅವುಗಳಿಗೆ ಜನ ಸಾಮಾನ್ಯರ ಹಿತ ಮುಖ್ಯವಲ್ಲ ಎಂದು ನಿರಾಕರಿಸಿದರು. ಆರ್ಥಿಕ ಕೇಂದ್ರ ಬಿಂದುವಿನ ಯಾವ ತತ್ವಗಳೂ ಮತ್ತು ಸಿದ್ಧಾಂತಗಳೂ ಪರಿಶಿಷ್ಟ ವರ್ಗದ ಸಮಸ್ಯೆಗಳಿಗೆ ಪರಿಹಾರವಲ್ಲ. ಶತಮಾನದಿಂದ ಆಳವಾಗಿ ಬೆಳೆದುಬಂದಿರುವ ಅಸ್ಪೃಶ್ಯತೆಯ ರೋಗಕ್ಕೆ ಸಾಮಾಜಿಕ ಬದಲಾವಣೆಯೇ ಸೂಕ್ತ ಪರಿಹಾರ ಎಂದು ಅಂಬೇಡ್ಕರ್ ಕಂಡುಕೊಂಡರು. ಸಾಮಾಜಿಕ ಬದಲಾವಣೆಯ ಗುರಿ ಮುಟ್ಟುವುದಕ್ಕೆ ರಾಜಕೀಯ ಪ್ರತಿನಿಧ್ಯವೇ ದಾರಿ ಎಂದರು. ಅಂಬೇಡ್ಕರ್ ಎಂದೂ ಆಶಾವಾದಿಗಳು, ಸತತವಾಗಿ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಪರಿಶಿಷ್ಟ ವರ್ಗಕ್ಕೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆತು ಸ್ಥಾನಮಾನಗಳು ಉತ್ತಮಗೊಂಡವು.

Learn to live world with self respect. You should always cherish some ambition to do something in this world. They alone rise to strive. Some of you nurse wrong notion that you will not rise in this world. But remember that the age of helpless is ended. A new epoch has set in. All things are now possible because of your able to participate in the politics and legislauters of this country.

ಧರ್ಮ ನಿರಪೇಕ್ಷಿತ ಪರಿಸರ ಸೃಷ್ಟಿಸಿಕೊಂಡು, ಸಾಮಾನ್ಯ ಜನರ ಚಳವಳಿಯನ್ನಾಗಿಸಿ, ಪರಿಶಿಷ್ಟ ವರ್ಗದ ರಾಜಕೀಯ ಪ್ರಜ್ಞೆಯನ್ನು ಜಾಗೃತಿಗೊಳಿಸಿ ಮೂಲಭೂತ ಹಕ್ಕುಗಳನ್ನು ಸಂವಿಧಾನಬದ್ಧವಾಗಿಸಿ, ಅವರ ಸ್ಥಿತಿಗತಿ ಉತ್ತಮಗೊಳಿಸಿ, ಮಾನವರಂತೆ ತಲೆಯೆತ್ತಿ ಬದುಕುವಂತೆ ಹೋರಾಟ ನಡೆಸಿ, ಸ್ವಪ್ರಯತ್ನದಿಂದಲೇ ಪರಿಶಿಷ್ಟ ವರ್ಗದಲ್ಲಿದ್ದೇ ಉತ್ತಮ ಜಾತಿಯ ವ್ಯಕ್ತಿ ಸಾಧಿಸಬಹುದಾದ್ದನ್ನೆಲ್ಲಾ ಸಾಧಿಸಿ ತೋರಿಸಿದ್ದೇ ಅಲ್ಲದೆ, ಮನಸ್ಸು ಮಾಡಿದರೆ, ಯಾರೇ ವ್ಯಕ್ತಿ ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟ ಅಂಬೇಡ್ಕರ್ ಪರಿಶಿಷ್ಟ ವರ್ಗದಲ್ಲಿ ಮೂಡಿ ಬಂದ ಅಪರೂಪದ ವ್ಯಕ್ತಿ.

ಮನುಸ್ಮೃತಿ ಸುಡುವುದಾಗಲಿ, ದೇವಾಲಯ ಪ್ರವೇಶವಾಗಲಿ, ಬ್ರಾಹ್ಮಣರಿಂದ ಜನಿವಾರವನ್ನು ದಲಿತರಿಗೆ ಧರಿಸಿದ್ದಾಗಲಿ, ಹಿಂದೂ ದೇವರ ಪೂಜೆಯನ್ನು ಬಹಿಷ್ಕರಿಸಿದ್ದಾಗಲಿ, ತಮ್ಮ ಪತ್ನಿ ಸತ್ತಾಗ ಹಿಂದೂ ಧಾರ್ಮಿಕ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಸಿದ್ದಾಗಲಿ, ಬ್ರಾಹ್ಮಣ ಜಾತಿಯ ಎರಡನೆಯ ಹೆಂಡತಿಯ ವಿವಾಹವಾಗಲಿ, ಕೊನೆಗೆ ಬೌದ್ಧಧರ್ಮ ಸ್ವೀಕರಿಸಿದ ವಿಷಯಗಳು ಅವರ ಸೇಡಿಗೋ, ಸೋಲಿಗೋ, ರಾಜಿ ಮನೋಭಾವಕ್ಕೋ ತಾಳೆ ಹಾಕಿ ನೋಡುವುದರಲ್ಲಿ, ಅವರ ದ್ವಂದ್ವ ವ್ಯಕ್ತಿತ್ವಕ್ಕೆ ಸಾಕ್ಷಿ ಎನ್ನುವವರು ಈ ಯಾವ ಪ್ರಸಂಗಗಳೂ ಅವರನ್ನು ದಲಿತ ಪ್ರಜ್ಞೆಯಿಂದ ವಿಚಲಿತರನ್ನಾಗಿಸಲಿಲ್ಲ ಎಂಬ ಅಂಶವನ್ನು ಮನಗಂಡರೆ, ಅಂಬೇಡ್ಕರ್ ಅವರ ದ್ವಂದ್ವ ಮತ್ತು ಗೊಂದಲಗಳು ಬಗೆಹರಿಯುತ್ತವೆ.

Ambedkar now became the most hated man in India; He was stigmatized as an uncivil, insolent, inordinately rudeman, devoid of human consideration. He was represented as a devil, was cursed as a public nuisance number one and dammed a reactionary, a stoog of British Government, a traitor of the country and destroyer of Hinduism

ಎಂದು ದೂಷಿಸಿದ ನಾಲಿಗೆಗಳೇ ಇಂದು ವೇದಿಕೆಗಳ ಮೇಲೆ ಹಾಡಿ ಹೊಗಳುತ್ತಿರುವುದನ್ನು ಕಂಡು ಹೇಸಿಗೆಯಾಗುತ್ತದೆ. ಹಿಂದೂ ಧರ್ಮದ ವಿರುದ್ಧ ತಿರುಗಿಬಿದ್ದ ಸಿದ್ಧಾಂತ, ಯಾವ ವ್ಯಕ್ತಿ, ಸಂಸ್ಥೆ ಮತ್ತು ಯಾವ ಮತವನ್ನೂ ಬ್ರಾಹ್ಮಣತ್ವ ಸಹಿಸುವುದಿಲ್ಲ. ಲೋಕಾಯುತ ಜೈನ ಮತ್ತು ಬೌದ್ಧ ಧರ್ಮಗಳನ್ನು ನಾಶಮಾಡಿದ್ದೇ ಭಾರತದ ಧಾರ್ಮಿಕ ಚರಿತ್ರೆ, ದೇವರ ಅಸ್ತಿತ್ವವನ್ನು ಒಪ್ಪಿಕೊಂಡ ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಮೊಗಲರು ಮತ್ತು ಬ್ರಿಟಿಷ್‌ಆಡಳಿತದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿತು. ಪಂಡಿತರಿಂದ ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಮತದ ತುಲನಾತ್ಮಕ ಅಧ್ಯಯನ ನಡೆದು, ಧಾರ್ಮಿಕ ಸಾಮರಸ್ಯಕ್ಕೆ ತೀವ್ರ ಪ್ರಯತ್ನ ನಡೆದಿರುವುದು ಕಂಡುಬರುತ್ತದೆ. ಧಾರ್ಮಿಕ ಮಾನ್ಯದ ವೈಜ್ಞಾನಿಕ ಮತ್ತು ವೈಚಾರಿಕತೆಯನ್ನು ಅಂತರ್ಗತಗೊಳಿಸಿಕೊಂಡು ಸ್ಥಾಯಿ ಮೌಲ್ಯಗಳನ್ನೇ ನವೀಕರಿಸಿ ಕಾಲಕಾಲಕ್ಕೆ ಪ್ರಸ್ತುತವಾಗುವ ಸೋಗಿನ ಧರ್ಮಗಳು ಎಂದೂ ಶುದ್ಧ ವೈಚಾರಿಕತೆ ಮತ್ತು ವೈಜ್ಞಾನಿಕ ಸತ್ಯಗಳನ್ನು ಇಚ್ಛಿಸುವುದಿಲ್ಲ. ಭಾರತಕ್ಕೆ ಅನುಗುಣವಾದ ಭೌತಿಕವಾದದ ಚಿಂತನೆಯಿಂದಲೇ ಪರಿಶಿಷ್ಟ ವರ್ಗವನ್ನು ಹೋರಾಟಕ್ಕೆ ತೊಡಗಿಸಿ ಚಾರ್ತುವರ್ಣ ವ್ಯವಸ್ಥೆಯನ್ನೇ ಅಲ್ಲಗಳೆದ ಅಂಬೇಡ್ಕರ್ ರರ ವೈಜ್ಞಾನಿಕವಾದ ಅತ್ಯಾಧುನಿಕ ಚಿಂತನೆಗಳು ಸನಾತನಿಗಳಿಗೆ ನುಂಗಲಾರದ ತುತ್ತಾಯಿತು. ಹಿಂದೂ ಧರ್ಮದ ವಿಕಾರಗಳು ದಿನೇ ದಿನೇ ಬಯಲಾಗುತ್ತಿದ್ದಂತೆ ಸಂಪ್ರದಾಯಸ್ಥ ಧರ್ಮಾಂಧರ ಪಿತ್ತ ನೆತ್ತಿಗೇರಿ ಅಂಬೇಡ್ಕರ್ ರ ಬಗ್ಗೆ ವಿಷಕಾರಿ ಬಗ್ಗುಬಡಿವ ಪ್ರಯತ್ನಕ್ಕೆ ಅವರ ಮೇಲಿನ ನಿಂದೆಯ ಮಾತೇ ಸಾಕ್ಷಿ. ಗಾಂಧಿ ತತ್ವಗಳನ್ನು ಅನುಸರಿಸಬೇಡಿರೆಂದು ಪರಿಶಿಷ್ಟರಿಗೆ ಅಂಬೇಡ್ಕರ್ ರು ಕೊಟ್ಟ ಕರೆಯಂತೂ ಭಿನ್ನಾಭಿಪ್ರಾಯದ ಪರಾಕಾಷ್ಠೆ ಮುಟ್ಟಿತು.

If there was any `Ism’ he further observed, which had made full use of religion as an opiate to lull the people false beliefs and false security, it was Gandhism. So he warned the untouchables to be on their guard against the in roads of Gandhism. Dhananjaya Keer; Dr. Ambedkar, p. 235

ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರೂ ಸ್ವಾತಂತ್ರ್ಯ ಪಡೆಯುವಲ್ಲಿ ಕಳಕಳಿ ಹೊಂದಿದವರು. ಆದರೆ ವಿಭಿನ್ನ ದಾರಿ ಹಿಡಿದವರು. ಇಬ್ಬರ ಭಿನ್ನಾಭಿಪ್ರಾಯ ಭಾರತ ಸ್ವಾತಂತ್ರಯಗಳಿಸುವುದಕ್ಕೆ ಅಡ್ಡಿಯಾಗಲಿಲ್ಲ. ಗಾಂಧೀಜಿ ರಾಜಕೀಯ ಸ್ವಾತಂತ್ರ್ಯಕ್ಕೆ ಧರ್ಮವನ್ನು ಬಳಸಿದರೆ, ಅಂಬೇಡ್ಕರ್ ರು ಸಾಮಾಜಿಕ ಬದಲಾವಣೆಗೆ ರಾಜಕೀಯವನ್ನು ಬಳಸಿಕೊಂಡರು.

ಸನಾತನರು ಜಗತ್ತನ್ನು ಮಿಥ್ಯ ಎಂದರೆ, ಧಾರ್ಮಿಕ ಸುಧಾರಕರು ಸತ್ಯ ಎಂದರು. ಅಂಬೇಡ್ಕರ್ ರರು ಪರಿಶಿಷ್ಟ ವರ್ಗಕ್ಕೆ ಮಿಥ್ಯ ಸತ್ಯಕ್ಕಿಂತ, ಅನ್ನ, ಬಟ್ಟೆ, ನೀರು, ನೆರಳು ಮುಂತಾದ ಪ್ರಾಥಮಿಕ ಅಗತ್ಯಗಳಿಗೆ ತೀವ್ರ ಹೋರಾಟವೇ ಮುಖ್ಯ ಎಂದರು. ಹೊಟ್ಟೆ ತುಂಬಿದವರ ವಿರಾಮ ವೇಳೆಯ ಧರ್ಮಚಿಂತನೆಯ ತತ್ವಗಳು ಪರಿಶಿಷ್ಟ ವರ್ಗವನ್ನು ಭಕ್ತಿಯ ಶ್ರೀಮಂತಿಕೆಯ ಪಟ್ಟ ಕಟ್ಟಿ ಸದಾ ಬಡತನ ಬೆನ್ನು ಹತ್ತಿ ತಿನ್ನುವ ಧಾರ್ಮಿಕ ಪರಿಸರದಲ್ಲಿಟ್ಟಿತು. ಧರ್ಮ ಕೆಳಗಿದ್ದವರನ್ನು ಮೇಲಕ್ಕೆ ಎತ್ತಿ ಸಮಾನ ಅವಕಾಶ ಒದಗಿಸದೆ, ಮತ್ತೆ ಮತ್ತೆ ಅವರನ್ನು ಕೆಳಕ್ಕೆ ತಳ್ಳುವ ಸಂಚಿನಲ್ಲಿ ತೊಡಗಿತ್ತು. ಸಮಾನ ಅವಕಾಶ ಕಲ್ಪಿಸುವ ಸರ್ಕಾರ ಅನ್ನ, ಬಟ್ಟೆ, ವಸತಿ, ಆರೋಗ್ಯ, ವಿದ್ಯೆ, ಔಷಧಿ, ಉದ್ಯೋಗ ಮತ್ತು ರಾಜಕೀಯದಲ್ಲಿ ಪ್ರಾತಿನಿಧ್ಯ ಕೊಡುವುದು ಪ್ರಥಮ ಕರ್ತವ್ಯ ಎಂದು ಮನೆಗಾಣಿಸಲು ತೀವ್ರ ಹೋರಾಟವನ್ನು ನಡೆಸಿದರು. ಅರಮನೆ, ಗುರುಮನೆ ಮತ್ತು ಪ್ರತಿಷ್ಠಿತ ಶ್ರೀಮಂತರಲ್ಲಿ ಹೆಪ್ಪುಗಟ್ಟಿದ್ದ ಸಂಪತ್ತಿನ ವಿತರಣೆಗೆ ಮೇಲು ವರ್ಗದಲ್ಲಿ ತೀವ್ರ ವಿರೋಧ ಹುಟ್ಟಿತು. ಆದರೆ ಸ್ವಾತಂತ್ರ್ಯ ಬಂದು ಸರ್ವರಿಗೂ ಸಮಾನ ಮೂಲಭೂತ ಹಕ್ಕುಗಳನ್ನು ಸಂವಿಧಾನ ಮಾನ್ಯ ಮಾಡಿತು. ಈ ಹೊಸ ತಿರುವಿಗೆ ಅಂಬೇಡ್ಕರ್ ರ ಕೊಡುಗೆ ಅಪೂರ್ವವಾದುದು. ಆದರೆ ಧರ್ಮದಲ್ಲಿ ಸೃಷ್ಟಿಗೊಂಡಿದ್ದ ವಿಷರ್ತುಲವೇ, ಸಂವಿಧಾನ ಬದ್ಧ ಕಾರ್ಯಾಂಗದ ಆಚರಣೆಯಲ್ಲಿಯೂ ಪುನರಾವರ್ತನಗೊಂಡಿತು! ಪರಿಶಿಷ್ಟ ವರ್ಗದ ನಾಯಕರು ಪ್ರತಿಷ್ಠಿತ ವರ್ಗ ಒಡ್ಡಿದ ಆಮಿಷಕ್ಕೆ ಬಲಿಯಾದರು. ಪರಿಶಿಷ್ಟ ವರ್ಗದಲ್ಲಿ ಮತ್ತು ಬ್ರಾಹ್ಮಣೇತರ ಸವರ್ಣೀಯರಲ್ಲಿಯೇ ಬ್ರಾಹ್ಮಣತ್ವ ಹುಟ್ಟಿತು. ತಮ್ಮ ತಮ್ಮ ವರ್ಗದ ಹಿತಾಸಕ್ತಿಯನ್ನು ತಮ್ಮ ಸ್ವಾರ್ಥಸಾಧನೆಗೆ ಬಲಿಗೊಟ್ಟರು! ಅಂಬೇಡ್ಕರ್ ರ ಜೀವಿತ ಕಾಲದಲ್ಲಿಯೇ ಇದು ಅನುಭವಕ್ಕೆ ಬಂದು ಎಚ್ಚರಿಸಿ ವಿಫಲರಾದಾಗ ನೊಂದು ನುಡಿದರು:

The touchables and untouchables cannot be held tograther by law, certainly not by any electrical law substituting joint electorate for separate electrorate, the only thing that can hold them together is love

ಚಾತುರ್ವರ್ಣದ ವಿರುದ್ಧ ಪ್ರತಿಭಟಿಸಲು ಸಾಂಕೇತಿಕವಾಗಿ ಜನಿವಾರ ಧರಿಸಿದ ಪರಿಶಿಷ್ಟ ವರ್ಗದಲ್ಲಿಯೇ ಬ್ರಾಹ್ಮಣತ್ವ ನುಸುಳಿ ಕ್ರಮೇಣ ಬ್ರಾಹ್ಮಣೇತರ ಚಳವಳಿಗಳು ತೀವ್ರತೆ ಕಳೆದುಕೊಂಡುದೇ ಒಂದು ವ್ಯಂಗ್ಯ! ನೈತಿಕ ಮೌಲ್ಯಗಳು ಸಮಾಜದ ತಳಹದಿಯಾಗದಿದ್ದಾಗ ಇಂಥ ವಿಕಾರಗಳು ತಲೆದೋರುವುದು ಸಹಜ, ಪರಸ್ಪರ ಪ್ರೀತಿ ಸರಿಸಮಾನರಲ್ಲಿ ಸಹಜವಾಗಿರುತ್ತದೆ, ಅಸಮಾನರ ನಡುವಣ ಪ್ರೀತಿ ಭ್ರಷ್ಟಾಚಾರದಲ್ಲಿ ಬೇರೂರಿರುತ್ತದೆ. ಇಬ್ಬರಲ್ಲಿಯೂ ಮಾನಸಿಕ ಕ್ರಾಂತಿಯಾದಾಗ ಮಾತ್ರ ಹೃದಯ ಹೃದಯ ಬೆಸೆಯಲು ಸಾಧ್ಯ. ಅಂಬೇಡ್ಕರ್ ನರಳುತ್ತಿರುವ ಸಮಗ್ರ ಮಾನವರ ವರ್ಗದ ನಾಯಕರೆ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಅವರೇ ಕೊಟ್ಟ ಉತ್ತರ:

I have never claimed to be a universal leader of suffering humanity. The problem of untouchables is quite enough for my slender strength. I do not say that other causes are not equally noble. But knowing that life is short, one can only serve one cause and I have never aspired to be more than serve the untouchables

ಇಂಥ ಪ್ರಾಮಾಣಕ ವ್ಯಕ್ತಿತ್ವದಲ್ಲಿಯೇ ವಿಶ್ವನಾಯಕತ್ವ ಅಡಕವಾಗಿರುವುದು. ಜನತಾ ನಾಯಕರೆಂದು ಜಾಹೀರಾತು ಮಾಡಿಸಿಕೊಳ್ಳುವ ಇಂದಿನ ಹುಸಿನಾಯಕರು ಈ ಮಾತಿನ ಮರ್ಮವನ್ನು ಅರಿಯಬೇಕಿದೆ.

ಅಂಬೇಡ್ಕರ್ ರರು ಎಂದೂ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ. ವ್ಯಕ್ತಿ ಪೂಜೆ ಕರ್ತವ್ಯ ನಿರ್ವಹಣೆಗೆ ಕುತ್ತು ಎಂದರು. ವ್ಯಕ್ತಿಯ ದೈವೀಕರಣ ವ್ಯಕ್ತಿಯ ವಿನಾಶವೇ ಸರಿ. ಸಮಾಜದ ಬದಲಾವಣೆಯ ಗುರಿಗೆ ದ್ವೇಷ, ಹಿಂಸೆ, ಎದುರಾಳಿಯನ್ನು ರೊಚ್ಚಿಗೇಳಿಸುವ ತಂತ್ರ ಬಳಕೆಯ ಔಚಿತ್ಯವನ್ನು ಮೇಲು ವರ್ಗ ಪ್ರಶ್ನಿಸುತ್ತದೆ. ಧರ್ಮಕ್ಕೆ ಚ್ಯುತಿ ಬಂದಾಗ ಮೇಲುವರ್ಗ ಕತ್ತಿ ಎತ್ತಿ ರಕ್ತ ಹರಿಸುವ ಹಿಂಸೆಯನ್ನು ಧಾರ್ಮಿಕ ಮೌಲ್ಯವಾಗಿ ಪರಿಗಣಿಸಿದಲ್ಲಿಯೇ, ಅಧಿಕ ಸಂಖ್ಯೆಯ ಪರಿಶಿಷ್ಟ ವರ್ಗದ ಹಿತರಕ್ಷಣೆಗೆ ದ್ವೇಷ ಸಮರ್ಥನೆ ಅಡಗಿದೆ, ಪರಿಶಿಷ್ಟ ವರ್ಗಕ್ಕೆ ಅನ್ನ ಬಟ್ಟೆಯ ಪ್ರಾಥಮಿಕ ಅಗತ್ಯ ಪೊರೈಕೆಯೇ ಅಂತಿಮ ಗುರಿ ಎಂದು ಹೇಳಲಿಲ್ಲ. ಅದರ ಜೊತೆಗೆ ನೀತಿ, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಮತ್ತು ಮಾನವೀಯ ಮೌಲ್ಯಗಳ ಸಾಧನೆಯನ್ನು ಗೊತ್ತುಪಡಿಸಿದರು. Educate, agitate ಮತ್ತು Oranise ಮಂತ್ರ ಪಠಣವೇ ಅಂಬೇಡ್ಕರ್ ರ ಉಸಿರು ಬಸಿರಾಗಿತ್ತು. ಮಾನವೀಯತೆಯೇ ಮಡುಗಟ್ಟಿದ ಬಹಮುಖ ವ್ಯಕ್ತಿತ್ವದ ಅಂಬೇಡ್ಕರ್ ಅವರ ಪ್ರತಿಭೆ ಭಾರತದ ನೆಲದಿಂದಲೇ ಮೂಡಿ ಬಂದ ಅಮೂಲ್ಯ ನಿಧಿ.

ದಲಿತೋದ್ಧಾರ: ಒಂದು ಸಂಕ್ಷಿಪ್ತ ಸಮೀಕ್ಷೆ      

ದಲಿತ ಪದದ ಅರ್ಥ ಹಿಗ್ಗು ಕುಗ್ಗಿನಿಂದ ಗೊಂದಲಕ್ಕೆ ಸಿಕ್ಕಿ ತೀವ್ರ ಚರ್ಚೆಯಾಗಿದೆ. ಅದನ್ನು ಅಮಾನಿತರು, ಶೋಷಿತರು, ಬಡವರು, ಬಹಿಷ್ಕೃತರು, ಅಸ್ಪೃಶ್ಯರು, ಬಂಡಾಯಗಾರರು, ಕ್ರಾಂತಿಕಾರರು, ಹಿಂಸೆ ಮತ್ತು ಕ್ರೌರ್ಯಕ್ಕೆ ತುತ್ತಾದವರು, ಮಾನವೀಯ ಸಾಧ್ಯೆತೆಯಿಂದ ಮತ್ತು ಅಕ್ಷರ ಮಾಧ್ಯಮದಿಂದ ವಂಚಿತರು, ವ್ಯವಸ್ಥೆಯ ಮತ್ತು ಯಜಮಾನ ಸಂಸ್ಕೃತಿಯ ವಿರೋಧಕರು, ನಾಗರಿಕ ಹಕ್ಕುಗಳ ಹೋರಾಟಗಾರರು ಎಂದೆಲ್ಲಾ ಅರ್ಥದಲ್ಲಿ ಬಳಸಲಾಗಿದೆ. ಅದರಲ್ಲಿ ವರ್ಣ, ವರ್ಗ, ವೃತ್ತಿ ಮತ್ತು ಜಾತಿ ಅಂಶಗಳು ಕೂಡಿ, ಬಲ ಮತ್ತು ಎಡ ಪಂಥೀಯ ವ್ಯಾಖ್ಯಾನಕ್ಕೂ ಒಗ್ಗಿ ಸ್ಥಿತಿ ಸ್ಥಾಪಕತ್ವ ಪಡೆದಿದೆ. ಅದೇ ಪದ ಇಂದು ಸಾಮಾಜಿಕ-ಧಾರ್ಮಿಕ, ಸಾಮಾಜಿಕ-ಆರ್ಥಿಕ, ಸಾಮಾಜಿಕ-ರಾಜಕೀಯ, ಸಾಮಾಜಿಕ- ಸಾಂಸ್ಕೃತಿಕ, ರಾಜಕೀಯ- ಸಾಹಿತ್ಯಿಕ ಸಮಸ್ಯಗಳ ತೊಡಕಿನ ಬೃಹದಾಕಾ ಸ್ವರೂಪದಿಂದ ಸಂಕೀರ್ಣಗೊಂಡಿದೆ.

ಭಾರತದಲ್ಲಿ ಹುಟ್ಟು ಮತ್ತು ಗುಣ ಸಿದ್ಧಾಂತಗಳು ಏಕಕಾಲದಲ್ಲಿ ಪರಿಸರವನ್ನು ತಿಳಿಗೊಳಿಸುವುದಕ್ಕೆ ಮತ್ತು ರಾಡಿ (ಬಗ್ಗಡಿ)ಗೊಳಿಸುವ ಗೋಸುಂಬಿ ಸ್ವಭಾವದಿಂದ ಧಾರ್ಮಿಕ-ಸಾಮಾಜಿಕ ಬದುಕಿನಲ್ಲಿ ಇಂದಿಗೂ ಚಲಾವಣೆಯಲ್ಲಿವೆ. ಈ ಸಿದ್ಧಾಂತಗಳನ್ನು ಸಾಮರಸ್ಯಗೊಳಿಸಲೆಂದೇ ಲೆಕ್ಕಾಚಾರದಿಂದ ರಚಿತವಾದ ಭಗವದ್ಗೀತೆಯ ತಾತ್ವಿಕ ಗೊಂದಲವೇ ಇದಕ್ಕೆ ಸಾಕ್ಷಿ. ವೈದಿಕ ಪರ ಮತ್ತು ವೈದಿಕ ವಿರೋಧಿ ಮತಗಳಲ್ಲಿಯೂ ಈ ಗೊಂದಲವೇ ನುಸುಳಿ ನಾಗತೀಕ ಭಾರತೀಯನನ್ನು ಆಧುನಿಕ ಕಾಲದಲ್ಲಿಯೂ ತಲೆ ತಿನ್ನುತ್ತಿವೆ. ಅನುವಂಶಿಕ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣನ ಸ್ಥಾನ ಮೊದಲನೆಯದು, ದಲಿತನ ಸ್ಥಾನ ಕಟ್ಟಕಡೆಯದು ಎಂದು ನಿಗದಿಯಾಗಿದೆ. ಇವೆರಡರ ನಡುವೆ ಇತರ ಜಾತಿಗಳ ಪರಸ್ಪರ ಸ್ಥಾನಮಾನಗಳ ಬಗ್ಗೆ ಸಾಕಷ್ಟು ಗೊಂದಲವಿದೆ. ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರ ಬಿಂದುವಿನ ಪರಸ್ಪರ ಬ್ರಾಹ್ಮಣ ಚಂಡಾಲ (ಬ್ರಾಹ್ಮಣ ಅನಾಚಾರಿ), ಚಂಡಾಲ ಬ್ರಾಹ್ಮಣ (ಚಂಡಾಲ ಸದಾಚಾರಿ) ಪದಗಳೇ ಸಾಮಾಜಿಕ ಕೇಂದ್ರ ಬಿಂದುವಿನ ಪರಿಸರದಲ್ಲಿ ದಲಿತ ಅಸ್ಪೃಶ್ಯ ಮತ್ತು ಬ್ರಾಹ್ಮಣ ಅಸ್ಪೃಶ್ಯ ಪದಗಳ ರೂಪ ತಾಳಿ, ಹುಟ್ಟು-ಗುಣ ಸಿದ್ಧಾಂತಗಳ ಸಾಮರಸ್ಯದ ವಿಫಲ ಪ್ರಯತ್ನದ ನಿರಂತರತೆ, ಮತ್ತೆ ಮತ್ತೆ ಹುಟ್ಟಿನ ಸಿದ್ಧಾಂತಕ್ಕೆ ಭಾರತೀಯರ ಬದುಕು ಜೋತು ಬೀಳುವಂತೆ ಮಾಡಿ, ಅದೇ ಇಂದು ಸಾಮಾಜಿಕ ಜೀವನದ ನಿರ್ಣಾಯಕ ಅಂಶವಾಗಿ, ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಅಣಕವಾಗುತ್ತಿರುವುದನ್ನು ಒಂದು ದುರಂತ. ಸಾರ್ವಜನಿಕವಾಗಿ ಜಗಜೀವನರಾಂ ಅವರಿಂದ ಉದ್ಘಾಟಿಸಲ್ಪಟ್ಟ ವಿಗ್ರಹ ಅನಂತರ, ಶಾಸ್ತ್ರೋಕ್ತವಾಗಿ ಮತ್ತೆ ಶುದ್ಧಿಯಾದ ಪ್ರಸಂಗವೇ ಇದಕ್ಕೆ ಸಾಕ್ಷಿ. ಸೌಲಭ್ಯ, ಅಧಿಕಾರ ಭದ್ರತೆ ಮತ್ತು ಸ್ಥಿರತೆಗಳನ್ನು ಅನಿವಂಶಿಕ ಆಸ್ತಿಯಾಗಿ ಬದಲಾಗುತ್ತಿರುವ ಚಾರಿತ್ರಿಕ ಕಾಲದಲ್ಲಿಯೂ ಹುಟ್ಟಿನ ಸಿದ್ಧಾಂತದ ಬುದ್ಧಿವಂತರು ತಮ್ಮ ಕುತಂತ್ರಗಳಿಂದ ರಕ್ಷಿಸಿಕೊಂಡು ಬಂದಿದ್ದಾರೆ. ಫ್ಯೂಡಲ್ ಕಾಲದಲ್ಲಿ ಸೌಲಭ್ಯಗಳಿಗಾಗಿ ಬ್ರಾಹ್ಮಣರಾಗ ಬಯಸುತ್ತಿದ್ದವರೇ ಇಂದು ಅಸ್ಪೃಶ್ಯರಾಗಲೂ ಕಿತ್ತಾಟ ನಡೆಸಿತ್ತಿದ್ದಾರೆ. ಅವರು ತಮ್ಮ ವರ್ಗದ ಹಿತಕ್ಕಾಗಿ, ವರ್ಗಕ್ಕೆ ಮಾತ್ರ ಹುಟ್ಟಿನ ಸಿದ್ಧಾಂತವನ್ನು ಸಮುದಾಯವಾಗಿ ಅನ್ವಯಿಸಿ, ಗುಣ ಸಿದ್ಧಾಂತವನ್ನು, ತಮ್ಮೊಂದಿಗೆ ಹೊಂದಿಕೊಳ್ಳುವ ಅಧಿಕ ಸಂಖ್ಯೆಯ ಅನ್ಯಜಾತಿಯ ಕೆಲವೇ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಅನ್ವಯಿಸಿ, ಹುಟ್ಟು-ಗುಣ ಸಿದ್ಧಾಂತವನ್ನು ಸಂದರ್ಭೋಚಿತವಾಗಿ ಬಳಸಿ, ಸಾಮೂಹಿಕ ಜೀವನದಲ್ಲಿ ಅಸಮಾನತೆಯ ಬೀಜ ಬಿತ್ತಿ ಒಂದು ವಿಷ ವರ್ತುಲ ಸೃಷ್ಟಿಯಾದುದೇ ಇಂದಿನ ಸಮಗ್ರ ಸಮಸ್ಯೆಗಳ ಮೂಲ.

ಬ್ರಾಹ್ಮಣ-ದಲಿತ ಬ್ರಾಹ್ಮಣ-ಶೂದ್ರ- ದಲಿತ, ಬಲಗೈ-ಎಡಗೌ, ಎಡಪಂಥ-ಬಲಪಂಥ, ಲೋಹಿಯಾವಾದಿ-ಮಾರ್ಕ್ಸವಾದಿ, ಲೋಹಿಯವಾದಿ-ಅಂಬೇಡ್ಕರ್ ವಾದಿ, ಮಾರ್ಕ್ಸ್‌ವಾದಿ-ಸಂಘರ್ಷ ಈ ವಿಷವರ್ತುಲದ ಫಲ. ಇತರ ಜಾತಿಯ ಅಧಿಕ ಸಂಖ್ಯೆಯ ಮುಗ್ಧರನ್ನು ಮತ್ತು ದೇಶವನ್ನು ಬಲಿ ತೆಗೆದುಕೊಳ್ಳಲು ಸಂಚಿನ ಸೂತ್ರ ರಚಿಸುತ್ತಿರುವ ಸಮಾಜ ಛಿದ್ರಕ ದೇಶವನ್ನು ವಿಧಿಯ ಪಾವಿತ್ರ ಹುಟ್ಟಿನ ಅಲ್ಪಸಂಖ್ಯಾತವರ್ಗ, ಇನ್ನು ಮುಂದೆ ದೀರ್ಘ ಕೇವಲ ತಮ್ಮ ತರ್ಕ ಮತ್ತು ಕುತಂತ್ರಗಳಿದಲೇ ನೆಮ್ಮದಿಯಿಂದಿರಲು ಸಾಧ್ಯವಿಲ್ಲ.

ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗೆ ಧಾರ್ಮಿಕ ಊರ್ಧ್ವಮುಖ ಚಲನೆಗೆ ಅಡ್ಡಿ ಇದ್ದರೆ, ಈಗ ಅದೇ ಆರ್ಥಿಕ ವ್ಯವಸ್ಥೆಯಲ್ಲಿ ಅವರಿಗೆ ಅಧೋಮುಖ ಚಲನೆಗೆ ಅಡ್ಡಿಯಾಗಿ, ಶೂದ್ರವರ್ಗದಲ್ಲಿ ಬಡತನ ದಿನೇ ದಿನೇ ಅಧಿಕವಾಗುತ್ತಿದೆ. ಆದರೆ ಬ್ರಾಹ್ಮಣರ ಅಧೋಮುಖ ಚಲನೆ ಇಂದು ಅವರ ಭೋಗ ಜೀವನಕ್ಕೆ ಸಾಧನವಾಗಿದೆ. ಊರ್ಧ್ವಮುಖ ಚಲನೆಯೇ ಅಂತರ್ಮುಖೀ ಜೀವನ, ಅಧೋಮುಖ ಚಲನೆಯೇ ಬಹಿರಂಗದ ಲೌಕಿಕ ಬದುಕು. ಕೆಲವು ಅಭಿಪ್ರಾಯಗಳ ಪರಿಶೀಲನೆಯಿಂದ ಇದು ಸ್ಪಷ್ಟವಾಗುತ್ತದೆ.