ಅಂಬೇಡ್ಕರ್ ಅವರ ಆರ್ಥಿಕ ನೀತಿ

ಈ ಹಿಂದಿನ ಭಾಗದಲ್ಲಿ ಉದ್ಧರಿಸಲಾದ ಮೂಲ ಪಠ್ಯ ಭಾಗವನ್ನು ಕುರಿತು ಈ ಮುಂದಿನ ಪುಟಗಳಲ್ಲಿ ವಿಚಾರ ಮಾಡುತ್ತ ಆ ಉದ್ಧರಣೆಗಳ ಅರ್ಥಸಾಧ್ಯತೆಗಳನ್ನು ಮನನ ಮಾಡಬಹುದಾಗಿದೆ. ಮೊದಲಿಗೆ, ಈ ಉದ್ಧರಣೆಯಲ್ಲಿ ತೀರಾ ಮೇಲ್ನೋಟಕ್ಕೆ ಕಾಣಸಿಗುವ ಅಂಶವೆಂದರೆ, ಈಸ್ಟ್‌ಇಂಡಿಯಾ ಕಂಪನಿ ಸರಕಾರದ ಆಡಳಿತ ಹಾಗೂ ಹಣಕಾಸಿನಂಥ ಅಥವಾ ಶುದ್ಧ ಅರ್ಥಶಾಸ್ತ್ರದ ಅಥವಾ ಸರಕಾರ ತನ್ನ ಸುಭದ್ರತೆಗಾಗಿ ಭೂ ತೆರಿಗೆಯನ್ನು ವಸೂಲಿ ಮಾಡುವ ಕ್ರಮವನ್ನು ಕುರಿತದ್ದಾಗಿದೆ. ಹಾಗೆಯೇ, ಭೂ ತೆರಿಗೆಯ ವಸೂಲಿಗಾಗಿ ಕಂಪನಿ ಸರಕಾರ ಅಂದು ಅನುಸರಿಸಿದ ವಿಧಾನ ಕೂಡ ಈ ಭಾಗದಲ್ಲಿ ಅತ್ಯಂತ ಸರಳವಾಗಿಯೇ ಕಾಣುತ್ತದೆ. ಆದರೆ, ಈ ವಿಧಾನವನ್ನು ಸರಕಾರ ಜಾರಿಗೊಳಿಸಿದ ವಾಸ್ತವಿಕ ಸ್ಥಿತಿಯನ್ನು ಒಂದು ಪ್ರೌಢ ಪ್ರಬಂಧದ ಚೌಕಟ್ಟಿನಲ್ಲೂ, ಅಲ್ಲದೆ ಅದರ ಮಿತಿಯಲ್ಲೂ ಅಂಬೇಡ್ಕರರು ವ್ಯಕ್ತಪಡಿಸಿದ ರೀತಿ ಅತ್ಯಂತ ಮಾರ್ಮಿಕವಾದುದು ಎಂದೆನಿಸುತ್ತದೆ. ಏಕೆಂದರೆ ವಿಶ್ವ ವಿದ್ಯಾನಿಲಯದ ನಿಯಮಾನುಸಾರಿಯಾದ ಪರೀಕ್ಷೆಯ ಹಾಗೂ ಅದರ ಅವಿಭಾಜ್ಯ ಅಂಗವಾದ ಪ್ರೌಢ ಪ್ರಬಂಧದ ಬರವಣಿಗೆ ಕೆಲವು ನಿಯಮಿತ ಶಿಸ್ತುಗಳನ್ನೂ ಮಿತಿಗಳನ್ನೂ ಎಂದೂ ಮೀರುವಂತಿರುವುದಿಲ್ಲ. ಅಂತೆಯೇ, ಆ ಶಿಸ್ತು ಮತ್ತು ಮಿತಿಗಳಲ್ಲೂ ಯುವಕ ಅಂಬೇಡ್ಕರ್ ಸೃಷ್ಟಿಸಿದ ಸೃಜನಾತ್ಮಕವಾದ ವಿಚಾರ ಪ್ರಪಂಚ ಹಾಗೂ ಕೃತಿಯ ಉದ್ದೇಶದಾಚೆಗಿನ ಅರ್ಥಸಾಧ್ಯತೆಗಳು ಇಲ್ಲಿ ಅತ್ಯಂತ ಮುಖ್ಯವಾದುವು ಎಂದೆನಿಸುತ್ತದೆ. ಉದಾಹರಣೆಗೆ: ವ್ಯಾಪಾರಿ ಸಂಸ್ಥೆಯಾದ ಈಸ್ಟ್‌ಇಂಡಿಯಾ ಕಂಪನಿ ಸರಕಾರಕ್ಕೆ ಮುಖ್ಯವಾಗಿ ಬೇಕಾಗಿದ್ದುದು ಹಣ. ಏಕೆಂದರೆ ಸ್ಥಳೀಯ ಸಂಪನ್ಮೂಲಗಳನ್ನು ಹಿಡಿದುಕೊಳ್ಳುವ ಮೂಲಕ ಸ್ಥಳೀಯರ ಮೇಲೆ ಕಂಪನಿ ಸರಕಾರದ ಆಧಿಪತ್ಯವನ್ನು ಸ್ಥಾಪಿಸುವುದು ಬ್ರಿಟಿಷರ ಮುಖ್ಯ ಗುರಿ. ಅಂದರೆ ಆ ಸಲುವಾಗಿ ಸ್ಥಳೀಯವಾಗಿ ಉಪಲಬ್ಧವಿದ್ಧ ಎಲ್ಲ ಆರ್ಥಿಕ ಸಾಧ್ಯತೆಗಳನ್ನೂ ಬ್ರಿಟಿಷರು ದುರಿಸಿಕೊಂಡರು. ನಿದರ್ಶನಕ್ಕೆ ಕೆಲವು ಪ್ರದೇಶಗಳಲ್ಲಿ ಇಡೀ ಜಿಲ್ಲೆಯ ಸಾಗುವಳಿ ಭೂಮಿಯನ್ನು ಕೆಲವೇ ಮಂದಿ ಜಮೀನ್ದಾರರಿಗೆ ಹಂಚುವ ಮೂಲಕ, ಒಂದೆಡೆ ಜಮೀನ್ದಾರಿ ಪದ್ಧತಿಯನ್ನು ಪೋಷಿಸಿದರು. ಮತ್ತೊಂದೆಡೆ ಭೂ ತೆರಿಗೆ ಮೂಲಕ ಜಮೀನ್ದಾರಿ ಪದ್ಧತಿಯು ಸರಕಾರಿ ಆಡಳಿತ ಒಂದು ಭಾಗವೇ ಎಂಬುದಾಗಿ ಮುಂದುವರಿಯಿತು.

ಇವೆಲ್ಲಕ್ಕಿಂತಲೂ ಮಿಗಿಲಾದುದೆಂದರೆ, ಈಸ್ಟ್‌ಇಂಡಿಯಾ ಕಂಪನಿ ಸರಕಾರ ತನ್ನ ಆಡಳಿತದ ಮುಖ್ಯ ಅಂಗವಾಗಿ ಎಷ್ಟೊಂದು ವ್ಯವಸ್ಥಿತವಾಗಿ ಜಾತಿಪದ್ಧತಿ ಜಮೀನ್ದಾರಿ ಪದ್ಧತಿಯ ಭದ್ರಬುನಾದಿಯಾಗಿ ನೆಲೆಗೊಂಡಿತು. ಇದನ್ನೇ ಇನ್ನೊಂದು ಮಾತಿನಲ್ಲೂ ಹೇಳುವುದಾದರೆ, ಬ್ರಿಟಿಷರು ತಮ್ಮ ಆಡಳಿತಕ್ಕೆ ಬೇಕಾಗಿದ್ದ ಹಣಕಾಸಿನ ಸಂಪನ್ಮೂಲಗಳನ್ನು ಜಮೀನ್ದಾರಿ ಪದ್ಧತಿಯ ಮೂಲಕ ಪಡೆದುಕೊಂಡರೆ, ಅದೇ ಜಮೀನ್ದಾರಿ ಪದ್ಧತಿಯನ್ನು ವೈದಿಕರು, ತಮ್ಮ ಜಾತಿಪದ್ಧತಿಯ ಸುಭದ್ರತೆಗಾಗಿ ಚೆನ್ನಾಗಿ ದುಡಿಸಿಕೊಂಡರು. ಅಂದರೆ ಒಂದೆಡೆ ಅಸ್ಪೃಶ್ಯ ಜಾತಿಗಳು ಜಮೀನ್ದಾರರಾಗುವಂತಿರಲಿಲ್ಲ. ಮತ್ತೊಂದೆಗಡೆ ಬಹುತೇಕ ಮೇಲಿನ ಜಾತಿಗಳ ಕೈಯಲ್ಲಿರುವ ಭೂ ಒಡೆತನವನ್ನು ಅಸ್ಪೃಶ್ಯರಿಗೆ ವರ್ಗಾಯಿಸಿ ಕೊಡುವುದರಿಂದ ಪ್ರಯೋಜನವಾಗಲಿ ಅಥವಾ ಹಾಗೆ ವರ್ಗಾಯಿಸಿ ಕೊಟ್ಟು ಅದಕ್ಕೆ ಪ್ರತಿಯಾಗಿ ಮೇಲಿನ ಜಾತಿಗಳು ವೈರ ವಿದ್ವೇಷಗಳಿಗೆ ಗುರಿಯಾಗುವುದಾಗಲಿ ಕಂಪನಿ ಸರಕಾರಕ್ಕೆ ಬೇಕಿರಲಿಲ್ಲ. ಅಲ್ಲದೆ, ಅದಕ್ಕೂ ಮೊದಲಾಗಿ ‘ಅಸ್ಪೃಶ್ಯರು’ ಎಂಬ ಉಪಮಾನವರೇ ಆಗಿರುವ ಜನಾಂಗಕ್ಕೆ ಭೂ ಒಡೆತನವನ್ನೂ ವಹಿಸಿಕೊಡುವುದು ಮೇಲಿನ ಜಾತಿಗಳ ದೃಷ್ಟಿಯಲ್ಲಿ ಧರ್ಮಬಾಹಿರವೆನಿಸಿದರೆ, ಕಂಪನಿ ಸರ್ಕಾರದ ದೃಷ್ಟಿಯಲ್ಲಿ ತಮ್ಮ ಆಡಳಿತ ವಿರೋಧಿ ಶಕ್ತಿಗಳನ್ನು ತಾವೇ ಸೃಷ್ಟಿಸಿಕೊಂಡಂತಾಗುತ್ತದೆ. ಅದರಷ್ಟೇ ಮುಖ್ಯವಾದ ಇನ್ನೊಂದು ಮಾತೆಂದರೆ, ಅಸ್ಪೃಶ್ಯ ಜಾತಿಗಳೇ ಭೂ ಒಡೆಯರಾಗಿ ಬಿಟ್ಟರೆ ಭೂಮಿಯಲ್ಲಿ ದುಡಿಯುವ ಕೃಷಿ ಕಾರ್ಮಿಕರಾರು? ಜೊತೆಗೆ ಅಸ್ಪೃಶ್ಯರು ಭೂ ಒಡೆಯರಾಗುವುದರ ಅರ್ಥ ಬೇರೇನೂ ಆಗಿರದೆ, ಧರ್ಮ ಬಾಹಿರವಾದ ಪ್ರತಿಲೋಮ ಪದ್ಧತಿಯನ್ನು ಪೋಷಿಸುವ ಆರ್ಥಿಕ ಯತ್ನ ಇದಾಗಿಬಿಡುವ ಅಪಾಯ ಸನಿಹದಲ್ಲೇ ಇತ್ತು.

ಇದಾದ ನಂತರ ಈ ಹಿಂದೆ ಮಾಡಿರುವ ಅಂಬೇಡ್ಕರರ ಉದ್ಧರಣೆಯ ಎರಡನೆ ಭಾಗವನ್ನು ನೋಡಬೇಕು. ಏಕೆಂದರೆ ಸ್ಥಳೀಯವಾಗಿ ಉಪಲಬ್ಧವಿದ್ಧ ಏನೆಲ್ಲ ಸಂಪನ್ಮೂಲಗಳ ಸಾಧ್ಯತೆಗಳನ್ನು ಬ್ರಿಟಿಷ್‌ಸರಕಾರ ತನ್ನ ಸುಭದ್ರತೆಗಾಗಿ ಹೇಗೆ ಬಳಸಿಕೊಂಡಿತು ಎಂಬುದನ್ನು ಅದೇ ಭಾಗದಲ್ಲಿ ಕಾಣಬಹುದಾಗಿದೆ.

ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ ಕಂಪನಿ ಸರಕಾರ, ಅಲ್ಲೆ ತನ್ನ ಆಡಳಿತದ ಭದ್ರತೆಗೂ, ಅದಕ್ಕೆ ಅಗತ್ಯವಾಗಿದ್ದ ಹಣಕಾಸಿಗೂ ಆ ಪ್ರದೇಶಗಳಲ್ಲಿದ್ದಂಥ ಸ್ಥಳೀಯ ಸ್ಥಿತಿಗತಿಗಳನ್ನು ಚೆನ್ನಾಗಿ ದುಡಿಸಿಕೊಂಡಿತು. ಉದಾಹರಣೆಗೆ ಈ ಪ್ರದೇಶಗಳಲ್ಲಿ ಬ್ರಿಟಿಷ್‌ಸರಕಾರ ನೆಲೆಗೊಳ್ಳುವ ಮೊದಲು ಇಲ್ಲಿನ ಮುಸಲ್ಮಾನ ಸಾಮ್ರಾಟರು ಬೇರೊಂದು ರೀತಿಯ ಜಮೀನ್ದಾರಿ ಪದ್ಧತಿಯನ್ನು ಹುಟ್ಟುಹಾಕಿ ಬೆಳೆಸಿದ್ದರು. ಆ ಪದ್ಧತಿಯ ಪ್ರಕಾರ, ಸ್ಥಳೀಯ ಸುಭೇದಾರರು, ಜಮೀನ್ದಾರರು ಹಾಗೂ ತಾಲೂಕುದಾರರು ತಂತಮ್ಮ ಪ್ರದೇಶಗಳ ಸಮಸ್ತ ಭೂಕಂದಾಯವನ್ನು ವಸೂಲಿ ಮಾಡಿ, ವರ್ಷಕ್ಕೊಮ್ಮೆ ಆ ಹಣವನ್ನು ಒಟ್ಟಿಗೆ ಸರಕಾರದ ಖಜಾನೆಗೆ ತುಂಬುವುದಾಗಿತ್ತು. ಸರಿ, ಈ ಪದ್ಧತಿಯನ್ನೂ ಬ್ರಿಟೀಷರು ಇದೇ ಪರಿಯಲ್ಲಿ ದುಡಿಸಿಕೊಂಡರು.

ಇದೇ ರೀತಿಯ ‘ಗ್ರಾಮ ಭೂಕಂದಾಯ ಪದ್ಧತಿ’ಯೂ ಜಾರಿಯಲ್ಲಿತ್ತು. ಆ ಪದ್ಧತಿಯಲ್ಲೂ ಇದೇ ಪಾರಂಪರಿಕ ಜಮೀನ್ದಾರಿ ಪದ್ಧತಿಯೇ ಮುಂದುವರಿಯಿತು. ಅದನ್ನು ಸ್ವತಃ ಅಂಬೇಡ್ಕರರೇ ಹೇಳುತ್ತಾರೆ. “ರಾಜಮನೆತನಗಳು ಆಳಿದವು, ಒಂದು ಕ್ರಾಂತಿ ಇನ್ನೊಂದು ಕ್ರಾಂತಿಯನ್ನು ಬಗ್ಗುಬಡಿಯಿತು. ಹಿಂದೂ ದೊರೆಗಳು ಮೆರೆದರು, ಪಠಾಣರು ಆಳಿದರು, ಮೊಘಲ್‌ಚಕ್ರವರ್ತಿಗಳು ಬಂದರು, ಮರಾಠ ಸಾಮ್ರಾಟರು ಆಳಿದರು, ಕೊನೆಗೆ ಸಿಖ್ಖರು ಇಂಗ್ಲಿಷ್‌ಆಡಳಿತಗಾರರೆಲ್ಲ ಬಂದು ಆಳಿದರು. ಆದರೆ ಗ್ರಾಮೀಣ ವ್ಯವಸ್ಥೆಯ ಜಮೀನ್ದಾರಿ ಜಾತಿಗಳನ್ನು ಅಲ್ಲಾಡಿಸುವುದು ಮಾತ್ರ ಯಾರಿಂದಲೂ ಸಾಧ್ಯವಾಗಲಿಲ್ಲ.

ಹೀಗೆ ಸಂಶೋಧನೆಯಲ್ಲಿ ತೊಡಗಿದ ಯುವ ಸಂಶೋಧಕ ಅಂಬೇಡ್ಕರರು ತಮ್ಮ ಈ ಪ್ರೌಢಪ್ರಬಂಧದಲ್ಲಿ ಈಸ್ಟ್‌ಇಂಡಿಯಾ ಕಂಪೆನಿ ಆಡಳಿತದಲ್ಲಿನ ಹಣಕಾಸಿನ ಸಂಪನ್ಮೂಲಗಳನ್ನು ಕುರಿತಂತೆ, ಪೂರ್ವಾಪರ ಪರಿವೆಯಿಂದೊಡಗೂಡಿದ ಜಿಜ್ಞಾಸೆಯಲ್ಲಿ ತೊಡಗುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ, ‘ಉಪ್ಪಿನ ತೆರಿಗೆ’ ‘ಸ್ಟಾಂಪ್‌ತೆರಿಗೆ’ ಮತ್ತು ‘ಅಪೀಮು ತೆರಿಗೆ’ಯೇ ಮುಂತಾದ ಹಲವಾರು ತೆರಿಗೆಗಳ ಮೂಲಕ ಕಂಪನಿ ಸರಕಾರ ತನ್ನ ಅಧಿಪತ್ಯದ ಸುಭದ್ರತೆಗಾಗಿ ಸ್ಥಳೀಯವಾಗಿ ದೊರೆಯುತ್ತಿದ್ದ ಸಮಸ್ತ ಸಂಪನ್ಮೂಲಗಳನ್ನೂ ದುಡಿಸಿಕೊಂಡಿತೆಂಬುದನ್ನು ಅಪಾರ ಅಂಕಿಅಂಶಗಳ ಸಹಿತವಾಗಿ ಅಂಬೇಡ್ಕರ್ ತಮ್ಮ ವಾದವನ್ನು ಸಮರ್ಥಿಸಿ ಪ್ರೌಢ ಪ್ರಬಂಧವನ್ನು ಸಿದ್ಧಪಡಿಸುತ್ತಾರೆ. ಇಲ್ಲಿನ ಗಮನಾರ್ಹವಾದ ಇನ್ನೊಂದು ಮಾತೆಂದರೆ, ಉಪ್ಪು ಸ್ಟಾಂಪು ಮುಂತಾದವುಗಳ ಮೇಲೆ ಬ್ರಿಟಿಷರು ಎಷ್ಟೇ ತೆರಿಗೆ ವಿಧಿಸಿದ್ದರೂ ಭಾರತೀಯರು ಆ ತೆರಿಗೆಗಳನ್ನೆಲ್ಲಾ ಮರುಮಾತಿಲ್ಲದೆ ಕಟ್ಟುತ್ತಿದ್ದರು. ಅದಕ್ಕೆ ಕಾರಣ, ಬಹುಸಂಖ್ಯಾತರಾದ ವೈದಿಕ ಜಾತಿಗಳ ಜಾತಿ ವ್ಯವಸ್ಥೆಯನ್ನಾಗಲಿ ಅದರಿಂದ ವೈದಿಕರು ನಿರಾಯಾಸವಾಗಿ ಪಡೆಯುತ್ತಿದ್ದ ಪ್ರತಿಷ್ಠೆ ಮತ್ತು ಸೌಲತ್ತುಗಳನ್ನಾಗಲಿ ಬ್ರಿಟಿಷರು ಎಂದಿಗೂ ಪ್ರಶ್ನಿಸಲೇ ಇಲ್ಲ.

ಇಷ್ಟೆಲ್ಲಾ ಆದ ನಂತರವೂ, ಕಂಪನಿ ಸರಕಾರವನ್ನು, ಇಂಗ್ಲೆಂಡ್‌ಮತ್ತು ಭಾರತಗಳ ನಡುವೆ ನಿಲ್ಲಿಸಿಕೊಂಡು, ಅಂಬೇಡ್ಕರ್ ಮಾಡುವ ಸಮತೋಲನವೂ ವಿಶ್ಲೇಷಣಾತ್ಮಕವೂ ಆದ ಚಿಂತನೆ ಹಾಗೂ ಆ ಬಗೆಗಿನ ಅವರ ತೀರ್ಪು ಬಹುಶಃ ಒಬ್ಬ ನೈಜ ಮಾನವತಾವಾದಿಗೆ ಮಾತ್ರ ಸಾಧ್ಯವೆಂದು ತೋರುತ್ತದೆ. ಅವರು ಹೇಳುತ್ತಾರೆ.

ಇಷ್ಟೆಲ್ಲಾ ಆದ ಮೇಲೆ ಕೂಡ, ಭಾರತಕ್ಕೆ ಇಂಗ್ಲೆಂಡಿನ ಕೊಡುಗೆ ಎಷ್ಟೆಂಬುದನ್ನು ವಿಚಾರ ಮಾಡಬೇಕಾದುದು ಉಳಿದೇ ಉಳಿಯುತ್ತದೆ. ಅದೇ ಸಂದರ್ಭದಲ್ಲಿ ಇಂಗ್ಲೆಂಡಿನ ಕೊಡುಗೆ ಏನೇನೂ ಇಲ್ಲವೇನೋ ಎಂಬಷ್ಟು ಆಶ್ಚರ್ಯಕರವಾದ ವಿಷಯವೆನಿಸುತ್ತದೆ. ಆದರೆ, ಆರ್ಥಿಕ ದೃಷ್ಟಿಯಿಂದ ನೋಡಿದಾಗ ಮೇಲಿನ ಎರಡು ಹೇಳಿಕೆಗಳೂ ಸತ್ಯಸಂಗತಿಗಳು ಎಂದೆನಿಸುತ್ತವೆ. ಆದಾಗ್ಯೂ ಇದಕ್ಕಿಂತಲೂ ಮಿಗಿಲಾದ ಇನ್ನೊಂದು ಸತ್ಯಸಂಗತಿಯೂ ಇಲ್ಲಿದೆ; ಅದನ್ನು ಕಡೆಗಣಿಸುವುದು ಸರ್ವತಾ ಸಾಧ್ಯವಿರುವಂತಿಲ್ಲ. ಅದೆಂದರೆ ಭಾರತ ಇಂಗ್ಲೆಂಡಿಗೆ ಸಲ್ಲಿಸಿದ ತರಿಗೆ ಅಥವಾ ಶುಲ್ಕವನ್ನು ನ್ಯಾಯ ಹಾಗೂ ಮಾನವೀಯತೆಗಳ ಮಾನದಂಡಗಳಿಂದ ಅಳೆಯುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಭಾರತಕ್ಕೆ ಸಂದಿರುವ ಇಂಗ್ಲೆಂಡಿನ ಕೊಡುಗೆಯನ್ನು ಬೆಳ್ಳಿ ಮತ್ತು ಬಂಗಾರದ ನಾಣ್ಯಗಳಿಂದ ಅಳತೆ ಮಾಡುವುದೂ ಸಾಧ್ಯವಿರುವಂತಿಲ್ಲ.

ಅದರಲ್ಲೂ ಈ ಕೊನೆಯ ಹೇಳಿಕೆಯಂತೂ ಬರಿಯ ಭಾಷೆಯಲ್ಲಿ ಹೇಳಲಾಗದಷ್ಟರ ಮಟ್ಟಿನ ಭಾವಭರಿತ ಸತ್ಯವಾಗಿದೆ. ಹಾಗೆ ನೋಡಿದರೆ, ಭಾರತದ ಚಿನ್ನ ಮತ್ತು ಬೆಳ್ಳಿಯನ್ನು ಇಂಗ್ಲೆಂಡು ಎಂದಿಗೂ ವೃದ್ಧಿಪಡಿಸಲಿಲ್ಲ, ಬದಲಾಗಿ, ಇಂಗ್ಲೆಂಡು ಭಾರತವನ್ನು ಪಾಪರ್ ದೇಶವನ್ನಾಗಿ ಮಾಡಿತು. ಅದಾಗ್ಯೂ ಭಾರತಕ್ಕೆ ಸಂದ ಇಂಗ್ಲೆಂಡಿನ ಕೊಡುಗೆಯನ್ನು ಆರ್ಥಿಕ ಮಾತುಗಳಲ್ಲಿ ಹೇಳುವುದಾಗಲಿ, ಅದನ್ನು ನಾಣ್ಯಗಳಿಂದ ಅಳತೆ ಮಾಡುವ ಯತ್ನ ಕೂಡ ಸಾಧ್ಯವೇ ಇಲ್ಲವೆಂಬುದನ್ನು ನೆನಪಿಡಬೇಕು.

ಅತಿಗರ್ವದ ಹುಸಿ ತೃಪ್ತಿಯಿಂದದಿದ್ದರೂ ಕೊನೆಯ ಪಕ್ಷ ನ್ಯಾಯಬದ್ಧವಾದ ಹೆಮ್ಮೆಯಿಂದಾದರೂ, ಇಂಗ್ಲಿಷ್‌ಜನ ಭಾರತದಲ್ಲಿ ಮಾಡಿದ ಕೆಲಸ ಕಾರ್ಯಗಳ ಮೇಲೆ ಒಂದು ಹಿನ್ನೋಟದ ಅವಲೋಕನ ಮಾಡಬಹುದಾಗಿದೆ. ಮಾನವನ ಮಹಾ ಆಕಾಂಕ್ಷೆಯಾದ ಶಾಂತಿಯನ್ನು ಭಾರತದಲ್ಲಿ ನೆಲೆಗೊಳಿಸಿದವರು ಇಂಗ್ಲಿಷ್‌ಜನ. ಅತ್ಯಂತ ಪ್ರಾಚೀನವೂ ಅನಾಗರಿಕವೂ ಆಗಿದ್ದಂಥ ಭಾರತದಲ್ಲಿ ನೆಲೆಗೊಳಿಸಿದವರು ಇಂಗ್ಲಿಷ್‌ಜನ. ಅತ್ಯಂತ ಪ್ರಾಚೀನವೂ ಅನಾಗರಿಕವೂ ಆಗಿದ್ದಂಥ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣವನ್ನು ನೆಲೆಗೊಳಿಸುವ ಮೂಲಕ, ಆಧುನಿಕ ಜೀವನ ವಿಧಾನವನ್ನು, ಸಂಘ ಸಂಸ್ಥೆಗಳನ್ನೂ ಭಾರತದಲ್ಲಿ ಹುಟ್ಟು ಹಾಕಿದವರು ಬ್ರಿಟಿಷರು. ಬ್ರಿಟಿಷರು ಭಾರತದಲ್ಲಿ ಜಾರಿಗೊಳಿಸಿದ ಆಡಳಿತ ಪದ್ಧತಿ ಸರ್ವಶ್ರೇಷ್ಠವಾದುದೇನೂ ಅಲ್ಲವೆಂಬುದು ಸತ್ಯವಾದರೂ, ಅವರ ಆಡಳಿತ ಸುಭದ್ರವಾದುದು ಮಾತ್ರವಲ್ಲದೆ, ಗುಣಾತ್ಮಕವೂ ಆದುದೆಂಬುದನ್ನು ಮರೆಯುವಂತಿಲ್ಲ. ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಪ್ರಬುದ್ಧ ಕಾನೂನುಗಳು ಮಾತ್ರವಲ್ಲದೆ. ಅವರು ಸ್ಥಾಪಿಸಿದ ನ್ಯಾಯಾಲಯಗಳು ಕೂಡ ಎಷ್ಟೊಂದು ಪರಿಶುದ್ಧವಾಗಿದ್ದೆಂದರೆ, ಈ ಧರೆಯ ಮೇಲಿನ ಯಾವುದೇ ರಾಷ್ಟ್ರದಲ್ಲೂ ಸರಿಸಾಟಿಯಿಲ್ಲದ ಸಂಸ್ಥೆಗಳೇ ಅವಾಗಿದ್ದವು. ಅಂದರೆ, ಭಾರತದಲ್ಲಿ ಬ್ರಿಟಿಷರ ಸಾಧನೆಗಳನ್ನು ಕುರಿತು ವಿಚಾರ ಮಾಡುವ ಯಾವುದೇ ಸಂದರ್ಭದಲ್ಲಿ ಅಂತರಂಗ ಪ್ರಮಾಣವುಳ್ಳ ಯಾವನೇ ವಿಮರ್ಶಕ, ಭಾರತದಲ್ಲಿನ ಬ್ರಿಟಿಷರ ಈ ಸಾಧನೆಗಳನ್ನು ಮೆಚ್ಚದಿರುವಂತಿಲ್ಲ, ಮರೆಮಾಚುವುದಂತೂ ಸಾಧ್ಯವೇ ಇಲ್ಲ.

ಇಷ್ಟೆಲ್ಲಾ ಆದ ಮೇಲೂ ಒಂದು ಮಾತು ಉಳಿದೇ ಉಳಿಯುತ್ತದೆ. ಅದೆಂದರೆ, ಕೇವಲ ಅರ್ಥಪ್ರಧಾನವೂ ಪ್ರಾಣಿಸದೃಶ್ಯವೂ ಆದ ಶಾಂತಿ ಮಾತ್ರ ಸಾಕೆ? ಅಥವಾ ಅದನ್ನೂ ಮೀರಿ ಮುನ್ನಡೆಯಲು ಅಗತ್ಯವೆನಿಸಿ ಇನ್ನೇನಾದರೂ ಇದೆಯೇ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾದಿದ್ದಿದೆ. ಭಾರತ ಮತ್ತು ಇಂಗ್ಲೆಂಡುಗಳನ್ನು ಕುರಿತು ಅಂಬೇಡ್ಕರ್ ಅವರು ಈ ವಿಶ್ಲೇಷಣೆಯನ್ನು ಒಂದು ಕ್ಷಣ ಮರೆತು ಸಮಕಾಲೀನ ಭಾರತದ ನೆಲೆಯಲ್ಲಿ ನಿಂತು, ನಮ್ಮ ರಾಷ್ಟ್ರೀಯ ಬದುಕಿನ ಚರಿತ್ರೆಯ ಅವಲೋಕನ ಮಾಡಿದಾಗ ಅತ್ಯಂತ ಮಹತ್ವಪೂರ್ಣವಾದ ಎರಡು ಸಂಗತಿಗಳು ಗೋಚರವಾಗುತ್ತವೆ. ಮೊದಲನೆಯದಾಗಿ, ಬ್ರಿಟಿಷರು ನಮ್ಮ ನಾಡಿಗೆ ಬರುವ ಮೊದಲು ಇಲ್ಲಿದ್ದ ನ್ಯಾಯಾಲಯಗಳೇನಾದರೂ ಇದ್ದಿದ್ದರೆ ಅವುಗಳ ನ್ಯಾಯವಿತರಣದ ವಿಧಾನ ಯಾವುದು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅಥವಾ ಇವೆಲ್ಲಕ್ಕಿಂತಲೂ ಮಿಗಿಲಾಗಿ, ಬ್ರಿಟಿಷರಿಗೂ ಮೊದಲಿನ ಭಾರತದ ನ್ಯಾಯಶಾಸ್ತ್ರ ಯಾವುದೆಂದು ಪ್ರಶ್ನಿಸಬೇಕಾಗುತ್ತದೆ; ಮನುಸ್ಮೃತಿಯೇ? ಬ್ರಹ್ಮಸೂತ್ರಗಳೇ ಮತ್ತಾವುದು?

ಎರಡನೆಯದಾಗಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಹುತೇಕ ಎಲ್ಲ ಮಹಾಪುರುಷರೂ ಇಂಗ್ಲಿಷರ ಆಧುನಿಕ ಶಿಕ್ಷಣದಿಂದಲೇ ಬಂದವರೆಂಬುದನ್ನು ಸದಾ ನೆನಪಿಡಬೇಕಾಗುತ್ತದೆ. ಭಾರತದಲ್ಲಿ ಬ್ರಿಟಿಷರ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಇಲ್ಲದೆ ಹೋಗಿದ್ದಲ್ಲಿ ಎಷ್ಟು ಜನ ಶೂದ್ರಾತಿ ಶೂದ್ರರಿಗೆ ಇಲ್ಲಿ ಶಿಕ್ಷಣ ಸ್ವಾತಂತ್ರ್ಯವಿತ್ತು ಎಂಬುದನ್ನು ಅನುಕ್ಷಣವೂ ಚಿಂತಿಸಬೇಕಾಗುತ್ತದೆ. ಅಂದರೆ, ಇಂಥ ಜ್ವಲಂತ ಸತ್ಯಗಳು ಅತ್ಯಂತ ಚಿಕ್ಕ ವಯಸ್ಸಿನ ಅಂಬೇಡ್ಕರ್ ಗೆ ಅಸಹಜವಾದವು ಎಂದೇನೂ ಅನಿಸದಿದ್ದರೂ ಅಸಾಧಾರಣವಾದುದು ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಅಂತೆಯೇ ಇಷ್ಟೊಂದು ಚಿಕ್ಕ ವಯಸ್ಸಿನ ಅಂಬೇಡ್ಕರರ ವಿಮರ್ಶನ ದೃಷ್ಟಿಯ ಪ್ರಕರಥೆಯನ್ನೂ, ಅವರ ವಿಮರ್ಶೆಯ ಸೈದ್ಧಾಂತಿಕ ಭೂಮಿಕೆಯ ದೃಢತೆಯನ್ನೂ ಕುರಿತು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದ ಆ ಯುಗದ ಪ್ರಖ್ಯಾತ ಅರ್ಥಶಾಸ್ತ್ರಜ್ಞನಾದ ಎಡ್ವಿನ್‌ಆರ್. ಎ. ಸಲಿಗ್‌ಮನ್‌ಹೀಗೆ ಬರೆಯುತ್ತಾನೆ.

The value of Mr. Ambedkar’s contribution to this discussion lise in the objective recitation of, the facts and the impartial analysis of the interesting development that has taken place in his native country.

ಅಂಬೇಡ್ಕರರ ಜ್ವಲಂತ ಪ್ರತಿಭೇತಿಯ ಬಗ್ಗೆ ಬರೆಯುತ್ತಿರುವ ಎಡ್ವಿನ್‌ಸಲಿಗ್‌ಮನ್‌ಅಂಬೇಡ್ಕರರಿಗೆ ಎಂ. ಎ. , ತರಗತಿಯಲ್ಲಿ ರಾಜಕೀಯ ಅರ್ಥಶಾಸ್ತ್ರದ ಪಾಠ ಹೇಳಿದ ಗುರು ಎಂಬುದು ಸತ್ಯವಾದರೂ, ಆ ಯುಗದ ಸಾರ್ವಜನಿಕ ಹಣಕಾಸಿನಂಥ ವಿಷಯದಲ್ಲಿ, ಪ್ರಪಂಚದ ಕೆಲವೇ ಮಂದಿ ವಿದ್ವಾಂಸರಲ್ಲೊಬ್ಬರು ಪ್ರೊ. ಸಿಲಿಗ್‌ಮನ್‌ಎಂಬುದನ್ನು ಗಮನಿಸಬೇಕು. ಇಲ್ಲಿನ ಇನ್ನೊಂದು ಕುತೂಹಲದ ಸಂಗತಿಯೆಂದರೆ, ಅಂಬೇಡ್ಕರ್ ತಮ್ಮ ಫೈನಲ್‌ಎಂ. ಎ. , ಪ್ರೌಢಪ್ರಬಂಧದ ರಚನೆಗಾಗಿ ಈಸ್ಟ್‌ಇಂಡಿಯಾ ಕಂಪನಿಯ ಆಡಳಿತ ಹಾಗೂ ಹಣಕಾಸಿನಂಥ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಮಾತ್ರವಲ್ಲದೆ, ಅದರಲ್ಲಿ ಅವರು ತೋರಿದ ಸ್ಟೋಪಜ್ಞ ಪ್ರತಿಭೆಯನ್ನೂ ಜಾಗೃತ ಮನಸ್ಥಿತಿಯ ಜ್ವಲಂತತೆಯನ್ನೂ ಕಾಣಬಹುದಾಗಿದೆ. ಹಾಗೆಂದೆ, ಅಂಬೇಡ್ಕರ್ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಶರದ್‌ಪವಾರ್ ರವರ ಒಂದು ಮಾತಿನಲ್ಲಿ ಉಲ್ಲೇಖಿಸುವುದು ಯಾಥಾರ್ಥಾವಾದುದೆನಿಸುತ್ತದೆ.

It is, readers will judge for themselves an out standing Achievement for a young man of 24 years, that was Dr. Ambedkar in 1915.

ಅಂತೂ ಅಂಬೇಡ್ಕರರ ವಿದ್ಯಾರ್ಥಿ ಜೀವನವನ್ನು ಕುರಿತಂತೆ ಎಷ್ಟೇ ವಿಚಾರ ಮಾಡಿದರೂ ರೋಮನ್‌ಚಕ್ರಾಧಿಪತ್ಯವನ್ನು ಸರ್ವಾಧಿಕಾರದಿಂದ ಪಾರು ಮಾಡಿ ಆ ನಾಡನ್ನು ಗಣತಂತ್ರ ಭವಿಷ್ಯಕ್ಕೆ ಸಿದ್ಧಪಡಿಸಿದ ಬ್ರೂಟಸ್‌ನ ಮಾತನ್ನು ಅಂಬೇಡ್ಕರರು, ತಮ್ಮ ವಿದ್ಯಾರ್ಥಿ ದೆಶೆಯಲ್ಲೇ ಅರ್ಥಮಾಡಿಕೊಂಡುದರ ಪರಿಣಾಮವನ್ನು, ಅನಂತರದ, ಇಂದಿನ ಗಣತಂತ್ರ ಭಾರತದ ಬದುಕಿನಲ್ಲಿ ಸಮಸ್ತ ವಿದ್ಯಾರ್ಥಿ ಜನಾಂಗ ಕಾಣಬಹುದಾಗಿದೆ. ಅಂತೆಯೇ ಅದೇ ಅರ್ಥದ ಹಿನ್ನೆಲೆಯಲ್ಲಿ ಶೇಕ್ಸ್‌ಪಿಯರ್ ನ ಮಾತು ಮತ್ತೊಮ್ಮೆ ನೆನೆಯಲು ಅನರ್ಹವೆನಿಸುತ್ತದೆ.

There is a tide in the affairs of men which, taken at fllod, Leads on to fortune

ಇನ್ನು ಕೊನೆಯದಾಗಿ, ಅಂಬೇಡ್ಕರರ ವಿದ್ಯಾರ್ಥಿ ಜೀವನವನ್ನು ಕುರಿತು ಇಷ್ಟೆಲ್ಲಾ ವಿಚಾರ ಮಾಡಿದ ನಂತರವೂ ಇಲ್ಲಿ ಏನೋ ಒಂದು ಗಂಭೀರವಾದ ಕೊರತೆ ಕಾಡುತ್ತಿದೆ ಎಂಬುದನ್ನು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬಲ್ಲವರು ಸುಲಭವಾಗಿಯೇ ಊಹಿಸಬಹುದಾಗಿದೆ. ಅದೆಂದರೆ ಅಸ್ಪೃಶ್ಯ ವಿದ್ಯಾರ್ಥಿ ಅಂಬೇಡ್ಕರರು ಅಮೆರಿಕದಂಥ ನೆಲದಲ್ಲಿ ಉಚ್ಚ ಶಿಕ್ಷಣವನ್ನು ಪಡೆಯಲು ಕಾರಣರಾದವರು ಅಂದಿನ ಬರೋಡಾ ಸಾಮ್ರಾಜ್ಯದ ಮಹಾರಾಜರಾಗಿದ್ದ ಶ್ರೀ ಸಯ್ಯಾಜಿರಾವ್‌ಗಾಯಕವಾಡ್‌ರವರು. ಅಂದರೆ ಅಂದು ಅವರು ಆ ಸಹಾಯವನ್ನು ನೀಡದೇ ಹೋಗಿದ್ದಲ್ಲಿ ಬಹುಶಃ ಅಂಬೇಡ್ಕರರು ಪಡೆದ ಶಿಕ್ಷಣದ ಚರಿತ್ರೆಯೇ ಇಂದು ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು ಎಂಬುದನ್ನು ಮರೆಯದಿರಬೇಕಾಗಿದೆ. ಆದ್ದರಿಂದಲೇ ಸಯ್ಯಾಜಿರಾವ್‌ಗಾಯಕವಾಡರ ಪಾತ್ರದ ಪ್ರಸ್ತಾಪವಿಲ್ಲದೆ ಅಂಬೇಡ್ಕರರ ವಿದ್ಯಾರ್ಥಿ ಜೀವನ ಚರಿತ್ರೆ ಇರಲಿಕ್ಕೆ ಸಾಧ್ಯವೇ ಇಲ್ಲವೆಂಬುದು ಯಥಾರ್ಥವಾದುದು ಎಂದೆನಿಸುತ್ತದೆ. ಅಂತೆಯೇ ಈವರೆಗೆ ಚರ್ಚಿಸಲಾದ ಅತ್ಯಂತ ಗಂಭೀರವೂ ವಿದ್ವತ್‌ಪೂರ್ಣವೂ ಆದ ಪ್ರೌಢಪ್ರಬಂಧವನ್ನು ರಚಿಸಿದ ಅಂಬೇಡ್ಕರರು, ಅತ್ಯಂತ ವಿನಮ್ರತಾಪೂರ್ವಕವಾಗಿಯೂ ತಮ್ಮ ಕೃತಜ್ಞತೆಯ ಸಂಕೇತವಾಗಿಯೂ ಅದೇ ಪ್ರೌಢ ಪ್ರಬಂಧವನ್ನು ಬರೋಡಾ ಮಹಾರಾಜರಿಗೆ ಸಮರ್ಪಣೆ ಮಾಡಿರುತ್ತಾರೆ. ಆದ್ದರಿಂದ ಅಂಬೇಡ್ಕರರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಾಕಿಕೊಟ್ಟ ಈ ಕೃತಜ್ಞತಾ ಭಾವನಾ ಸಮಸ್ತ ವಿದ್ಯಾರ್ಥಿ ಸಮುದಾಯಕ್ಕೆ ಒಂದು ಮೇಲ್ಪಂಕ್ತಿ ಮಾತ್ರವಲ್ಲದೆ, ಅದೊಂದು ಅತ್ಯುಚ್ಚಮಟ್ಟದ ಮೌಲ್ಯವೂ ಆಗಿದೆ ಎಂಬುದರಲ್ಲಿ ಎರಡು ಮಾತಿದ್ದಂತಿಲ್ಲ.

ಪರಾಮರ್ಶನ ಗ್ರಂಥಗಳು

೧. ಡಾ. ಮ. ನ. ಜವರಯ್ಯ, ‘ಅಂಬೇಡ್ಕರ್ ವಿಚಾರ ಸಾಹಿತ್ಯ : ಸಮಗ್ರ ಅಧ್ಯಯನ. (ಸಂಶೋಧನಾ ಮಹಾಪ್ರಬಂಧ) ಸಿದ್ಧಾರ್ಥ ಗ್ರಂಥಮಾಲೆ, ಕುವೆಂಪುನಗರ, ಮೈಸೂರು-೨೩.

೨. ಡಾ. ಮ. ನ. ಜವರಯ್ಯ, ‘ಭಾರತದಲ್ಲಿ ಜಾತಿಗಳು’ ಸಿದ್ಧಾರ್ಥ ಗ್ರಂಥಮಾಲೆ, ಕುವೆಂಪುನಗರ, ಮೈಸೂರು-೨೩.

೩. ಡಾ. ಮ. ನ. ಜವರಯ್ಯ, ‘ದಲಿತ ಯುಗ ಮತ್ತು ಕನ್ನಡ ಸಾಹಿತ್ಯ’, ಸಿದ್ಧಾರ್ಥ ಗ್ರಂಥಮಾಲೆ, ಕುವೆಂಪುನಗರ, ಮೈಸೂರು-೨೩.

—-
* ಅಂಬೇಡ್ಕರ್ ವಿಚಾರ ಸಾಹಿತ್ಯ : ಸಮಗ್ರ ಅಧ್ಯಯನ, ಡಾ. . . ಜವರಯ್ಯ, ಪ್ರಕಾಶನ: ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು. ಕೃತಿಯಿಂದ ಈ ಲೇಖನವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ವಂದನೆಗಳು (ಸಂ).