ಪುರುಷಸೂಕ್ತ-ಪುರೋಹಿತರ ಸಂವಿಧಾನ?

ಭಾರತೀಯರಾದ ನಾವು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಹಾಗೂ ಆರ್ಥಿಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಂವಿಧಾನವನ್ನು ಒಪ್ಪಿಕೊಂಡು ನಾಲ್ಕು ದಶಕಗಳಾಗಲಿವೆ. ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವು ನಮ್ಮದೆಂದು ಎಷ್ಟೇ ಅರಚಿಕೊಂಡರೂ, ವರ್ಣಾಶ್ರಮ ವ್ಯವಸ್ಥೆಯು ಆದಿಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಹಿಂದೂ ಧರ್ಮದ ಅಡಿಗಲ್ಲಾದ ವೇದಗಳು ಶಾಶ್ವತವಾದುದು ಹಾಗೂ ಅತ್ಯಂತ ಪವಿತ್ರವಾದವುಗಳೆಂದು ನಂಬಿಸಲಾಗಿದೆ. ಜನರಲ್ಲಿ ಇಂತಹ ಮೌಢ್ಯವನ್ನು ಬೆಳೆಸಿರುವ ಆರ್ಯ ಸಮಾಜವಾದಿಗಳ ಕುಯುಕ್ತಿಯನ್ನು ಡಾ. ಬಿ. ಆರ್. ಅಂಬೇಡ್ಕರರು ಬಯಲಿಗೆಳೆದರು. ವೇದಗಳಲ್ಲಿ ಅತ್ಯಂತ ಮುಖ್ಯವಾದ ‘ಪುರುಷ ಸೂಕ್ತವು’ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದೇ ಸೃಷ್ಟಿಸಿಕೊಂಡ ಬ್ರಾಹ್ಮಣರ ಚಿತಾವಣೆ, ಅಂಬೇಡ್ಕರರ ಪ್ರಕಾರ, ಹಿಂದೂ ಸಮಾಜವನ್ನು ಅಚಲಗೊಳಿಸಿದ ಕುತಂತ್ರವನ್ನು ಮಾಡಿದ ಆರ್ಯ ಸಮಾಜವಾದಿಗಳು ವೇದಗಳನ್ನು ಆದಿ ಅಂತ್ಯವಿಲ್ಲದ ಚಿರಸ್ಥಾಯಿಯಾದ ವೈದಿಕ ಸೃಷ್ಟಿಯೆಂದು ಬೋಧಿಸತೊಡಗಿದರು.

ಪುರುಷಸೂಕ್ತವೂ ಚಾತುರ್ವಣ್ಯವನ್ನು ‘ಪವಿತ್ರ ನಿಯಮ’ವನ್ನಾಗಿಯೂ ‘ದೈವಿಕ ಕಟ್ಟಳೆ’ಯನ್ನಾಗಿಯೂ ಮಾಡಿದೆ. ಇದರಲ್ಲಿ, ಪುರುಷನ ಬಾಯಿಯಾಗಿ ಬ್ರಾಹ್ಮಣರನ್ನು, ಕ್ಷತ್ರೀಯ (ಅಥವಾ ರಾಜ)ರನ್ನು ಕೈಗಳಾಗಿ, ವೈಶ್ಯರನ್ನು ತೊಡೆಗಳನ್ನಾಗಿ ಹಾಗೂ ಶೂದ್ರರನ್ನು ಪಾದವನ್ನಾಗಿ ವರ್ಣಿಸಲಾಗಿದೆ. ಅಂದರೆ, ‘ಪುರುಷ ಸೂಕ್ತ’ವನ್ನು ಇಡೀ ವಿಶ್ವದ ಸೃಷ್ಟಿಶಾಸ್ತ್ರವೆಂದು ಹೇಳಲಾಗಿದೆ. ಈಜಿಪ್ಟರ ಸೃಷ್ಟಿಶಾಸ್ತ್ರವೂ ಸಹ ಸ್ವಲ್ಪಮಟ್ಟಿಗೆ ‘ಪುರುಷ ಸೂಕ್ತ’ವನ್ನು ಹೋಲುತ್ತದೆ. ಆದರೆ, ಪುರುಷ ಸೂಕ್ತದಲ್ಲಿರುವ ೧೧ನೇ ಹಾಗೂ ೧೨ನೇ ಚರಣಗಳು ಕೇವಲ ಸೃಷ್ಟಿಶಾಸ್ತ್ರವಾಗಿಲ್ಲ. ಅವು ಒಂದು ನಿರ್ದಿಷ್ಟ ಸಾಮಾಜಿಕ ರಚನೆಗೆ ಅವಶ್ಯಕವಾದ ದೈವಿಕ ಆಜ್ಞೆಯನ್ನು ಒಳಗೊಂಡಿವೆ. ಈ ಸಾಮಾಜಿಕ ರಚನೆಯನ್ನೇ ಚಾತುರ್ವರ್ಣ್ಯವೆಂದು ಹೇಳಿದ ಅಂಬೇಡ್ಕರರು “ಪುರುಷ ಸೂಕ್ತವೂ ನಿರ್ದಿಷ್ಟಪಡಿಸಿದ ಸಾಮಾಜಿಕ ರಚನೆಯನ್ನು ಗೌತಮ ಬುದ್ಧನ ಹೊರತು, ಬೇರಾರೂ ಪ್ರಶ್ನಿಸಿಲ್ಲ” ಎಂದರು. ಪುರುಷ ಸೂಕ್ತದ ಕಲ್ಪನೆಯನ್ನೇ ಮನುವು ದೈವಿಕ ಆಜ್ಞೆಯೆಂದು ಹೊಸತಾಗಿ ಪುನರುಚ್ಛರಿಸಿದನು. ಧರ್ಮದ ಅಂತಿಮ ಅನುಶಾಸನವೇ ವೇದವೆಂದು ಒತ್ತಿ ಹೇಳಿದ ಮನು, ಚಾತುರ್ವರ್ಣ್ಯಕ್ಕೆ ಹಿಂದೆಂದೂ ಇದರ ಸತ್ಯ ಮತ್ತು ದೈವೀಕತೆಯನ್ನು ಆರೋಪಿಸಿದನು.

ಪುರುಷ ಸೂಕ್ತದ ಸಮಾಜ ರಚನೆಯನ್ನು ಅಂಬೇಡ್ಕರ್ ರವರು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಅಂದಿನ ಕೊಳಕು ವಾಸ್ತವತೆಯನ್ನೇ ಶಾಶ್ವತವಾದ ಉನ್ನತ ಆದರ್ಶದ ಮಟ್ಟಕ್ಕೆ ಏರಿಸಲಾಗಿದೆ. ಯಾವುದೇ ಸಮಾಜವು ವರ್ಗ ರಚನೆಯನ್ನು ಒಂದು ಆದರ್ಶವೆಂದು ಪರಿಗಣಿಸಿಲ್ಲ. ಹೆಚ್ಚೆಂದರೆ ಅಂತಹ ವರ್ಗರಚನೆಯನ್ನು ಸಹಜವೆಂದು ಒಪ್ಪಿಕೊಳ್ಳಲಾಗಿದೆ. ಆದರೆ ಪುರುಷ ಸೂಕ್ತವು ವರ್ಗರಚನೆಯನ್ನು ಸಹಜವೆಂದು ಒಪ್ಪಿಕೊಳ್ಳಲಾಗಿದೆ. ಆದರೆ ಪುರುಷ ಸೂಕ್ತವು ವರ್ಗರಚನೆಯನ್ನು ಶಾಶ್ವತವಾದ ಆದರ್ಶ ಮತ್ತು ಸಹಜ ಸ್ಥಿತಿಯೆನ್ನುವುದು ಮಾತ್ರವಲ್ಲದೆ, ಅತ್ಯಂತ ಪವಿತ್ರವಾದದ್ದು ಹಾಗೂ ದೈವಿಕವಾದದ್ದು ಎಂದು ಹೇಳುತ್ತದೆ. ಇದುವರೆಗೂ ಯಾವುದೇ ಸಮಾಜವು, ತನ್ನೊಳಗಿನ ವರ್ಗಗಳ ಸಂಖ್ಯೆಯನ್ನು ಒಂದು ಸಿದ್ಧಾಂತವನ್ನಾಗಿ ರೂಪಿಸಲಿಲ್ಲ. ಆದರೆ ಪುರುಷಸೂಕ್ತವು ತಾನು ವಿಭಜಿಸಿರುವ ನಾಲ್ಕು ವರ್ಗಗಳನ್ನು ಸಿದ್ಧಾಂತವನ್ನಾಗಿ ರೂಪಿಸಲಿಲ್ಲ. ಆದರೆ ಪುರುಷಸೂಕ್ತವು ತಾನು ವಿಭಜಿಸಿರುವ ನಾಲ್ಕು ವರ್ಗಗಳನ್ನು ಸಿದ್ಧಾಂತವನ್ನಾಗಿ ಮಾಡಿದೆ. ಈ ನಾಲ್ಕು ವರ್ಗಗಳ ನಡುವೆ ಗೊತ್ತುಪಡಿಸಿದ ವ್ಯವಹಾರವು ಸ್ಥಿರವಾಗಿದ್ದು, ಯಾವುದೇ ಕಾಲ ಮತ್ತು ಪರಿಸ್ಥಿತಿಯು ಬದಲಾವಣೆ ಮಾಡಲಾರದಾಗಿದೆ. ಇಲ್ಲಿನ ವ್ಯವಹಾರವು ಶ್ರೇಣೀಕೃತ ಅಸಮಾನತೆಯ ನಿಯಮವನ್ನೇ ಆಧರಿಸಿದೆ. ಪುರುಷ ಸೂಕ್ತವು ವರ್ಗ ರಹಿತ ಸಮಾಜ ರಚನೆಯನ್ನೇ ಆದರ್ಶ ಸಮಾಜವೆಂದು ಹೇಳಿದ್ದಿದ್ದರೆ, ಅದು ನಿಜಕ್ಕೂ ವಿಶಿಷ್ಟ ರೀತಿಯದಾಗಿರುತ್ತಿತ್ತು. ಆದರೆ ಪುರುಷ ಸೂಕ್ತವು ಶ್ರಮ ವಿಭಜನೆಯ ತತ್ವದ ಆಧಾರದ ಮೇಲೆ ವರ್ಗಗಳನ್ನು ಸೃಷ್ಟಿಸಿ, ಕೊನೆಗೆ ಶ್ರಮಿಕರನ್ನೇ ವಿಭಜಿಸಿ ಅವರು ಕೈಗೊಂಡ ವೃತ್ತಿಗಳಿಗೇ ಅವರನ್ನು ಶಾಶ್ವತವಾಗಿ ಅಂಟಿಸಿಬಿಟ್ಟಿದೆ. ಪುರುಷ ಸೂಕ್ತವು ಪ್ರತಿಪಾದಿಸುವ ಈ ಆದರ್ಶವು ಒಂದು ರಾಜಕೀಯ ಮೋಡಿಯಾಗಿದ್ದು, ಬೇರಾವುದೇ ಧರ್ಮಗ್ರಂಥಗಳಲ್ಲಿ ಕಾಣುವಂಥಾದ್ದಲ್ಲ. ಇಂತಹ ಜೀವ ವಿರೋಧಿ ವಾಸ್ತವತೆಯನ್ನೇ ಆದರ್ಶವನ್ನಾಗಿ ಮಾಡುವ ಪ್ರಯತ್ನವು ಯಾವುದೇ ಘೋರ ಪಾತಕಕ್ಕೂ ಕಡಿಮೆಯಿಲ್ಲವೆಂದು ಅಂಬೇಡ್ಕರ್ ರವರು ಟೀಕಿಸಿದ್ದಾರೆ. ಇದರ ಉದ್ದೇಶಗಳು ಅತ್ಯಂತ ಹೀನಾಯವಾಗಿದ್ದು, ಫಲಿತಾಂಶಗಳು ಸಮಾಜ ವಿರೋಧಿಯಾಗಿವೆ. ಏಕೆಂದರೆ ಇಲ್ಲಿ ಒಂದು ವರ್ಗವು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವುದನ್ನೇ ನಿರಂತರ ನೀತಿಯನ್ನಾಗಿ ಮಾಡಲಾಗಿದೆ. ನಾಲ್ಕು ವರ್ಗಗಳನ್ನು ದೇಹದ ವಿವಿಧ ಭಾಗಗಳಿಗೆ ಸಮೀಕರಿಸಿರುವುದು ಆಕಸ್ಮಿಕವಲ್ಲ. ಉದ್ದೇಶಪೂರ್ವಕವಾದದ್ದು. ಈ ಭಾಗಗಳು ವರ್ಗದ ಅಂತಸ್ತನ್ನು ಗೊತ್ತುಪಡಿಸಿದಂತೆಯೇ, ಇದೇ ಅಂತಸ್ತು ವರ್ಗವು ಮಾಡಬೇಕಾದ ಕೆಲಸವನ್ನು ಸೂಚಿಸುತ್ತದೆ. ವಿದ್ಯೆ, ಬುದ್ದಿಯ ಗುತ್ತಿಗೆದಾರರನ್ನಾಗಿ ಬ್ರಾಹ್ಮಣರನ್ನೂ, ಯುದ್ಧಕ್ಕಾಗಿ ಕ್ಷತ್ರಿಯರನ್ನೂ, ವಾಣಿಜ್ಯ ಮತ್ತು ಕೈಗಾರಿಕೆಗಳ ಕಾರ್ಯಭಾಗವನ್ನು ವೈಶ್ಯರಿಗೆ ವಹಿಸಿ, ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ಶೂದ್ರರನ್ನು ಅತ್ಯಂತ ಹೊಸಲು ಕೆಲಸ ಮಾಡುವ ಗುಲಾಮರನ್ನಾಗಿ ಮಾಡಲಾಗಿದೆ. ಮೆಲಿನ ಮೂರು ವರ್ಗಗಳಿಗಿರುವ ಎಲ್ಲಾ ಹಕ್ಕುಗಳಿಂದಲೂ ಶೂದ್ರರನ್ನು ವಂಚಿಸಲಾಗಿದೆ.

ಶೂದ್ರರ ಸಾಮಾಜಿಕ ನೆಲೆ

ಶೂದ್ರನಿಗಿರುವ ಸಾಮಾಜಿಕ ನೆಲೆಯ ಸಾರಾಂಶವನ್ನು ಅಂಬೇಡ್ಕರ್ ಸಂಕ್ಷಿಪ್ತಗೊಳಿಸಿ ಹೇಳುತ್ತಾರೆ:

೧. ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರನಿಗೆ ಕೊನೆಯ ಸ್ಥಾನ.

೨. ಶೂದ್ರನು ಅತ್ಯಂತ ಕೊಳಕಾಗಿರುವುದರಿಂದ, ಯಾವುದೇ ಪವಿತ್ರ ಕೆಲಸವನ್ನು ಆತನ ಕಣ್ಣಿಗೆ ಕಾಣುವಂತಾಗಲೀ ಕಿವಿಗೆ ಕೇಳುವಂತಾಗಲಿ ಮಾಡಬಾರದು.

೩. ಇತರ ಮೂರು ವರ್ಗಗಳವರೆಗೆ ನೀಡುವ ಯಾವುದೇ ಗೌರವವನ್ನು ಶೂದ್ರನಿಗೆ ನೀಡಬಾರದು.

೪. ಶೂದ್ರನ ಜೀವಕ್ಕೆ ಯಾವುದೇ ಬೆಲೆಯಿಲ್ಲವಾದ್ದರಿಂದ, ಯಾರೂ ಬೇಕಾದರೂ ಆತನನ್ನು ಕೊಲ್ಲಬಹುದು. ಆತನನ್ನು ಕೊಂದದ್ದಕ್ಕಾಗಿ ಯಾವುದೇ ಪರಿಹಾರವನ್ನೂ ನೀಡಬೇಕಿಲ್ಲ. ಒಂದು ವೇಳೆ ಕೊಡಬೇಕಿದ್ದರೂ, ಅತ್ಯಂತ ಸಣ್ಣ ಮೊತ್ತವನ್ನು ಕೊಡಬಹುದು.

೫. ಶೂದ್ರನಾದವನು ವಿದ್ಯೆಯನ್ನು ಪಡೆಯುವಂತಿಲ್ಲ, ಆತನಿಗೆ ವಿದ್ಯೆಯನ್ನು ಕೊಡುವುದು ಮಹಾ ಪಾಪ ಹಾಗೂ ಪಾತಕ

೬. ಶೂದ್ರನು ಆಸ್ತಿಯನ್ನು ಹೊಂದಬಾರದು ಹಾಗೂ ಆತನ ಆಸ್ತಿಯನ್ನು ಬ್ರಾಹ್ಮಣನು ಇಚ್ಛಾನುಸಾರ ಅನುಭವಿಸಬಹುದು

೭. ಶೂದ್ರನು ಯಾವುದೇ ರಾಜ್ಯಾಧಿಕಾರ ಹೊಂದಬಾರದು

೮. ತನ್ನ ಮೇಲಿನ ಮೂರು ವರ್ಗಗಳ ಸೇವೆ ಮಾಡುವುದೇ ಶೂದ್ರನ ಕರ್ತವ್ಯ ಹಾಗೂ ಅದರಿಂದಲೇ ಆತನಿಗೆ ಮೋಕ್ಷ

೯. ಉಚ್ಚ ವರ್ಗದವರಾರೂ ಶೂದ್ರರನ್ನು ಮದುವೆಯಾಗುವಂತಿಲ್ಲ. ತಮಗಿಷ್ಟವಿದ್ದಲ್ಲಿ, ಶೂದ್ರ ಹೆಣ್ಣನ್ನು ಸೂಳೆಯನ್ನಾಗಿ ಇಟ್ಟುಕೊಳ್ಳಬಹುದು. ಆದರೆ ಶೂದ್ರನಾದವನು ಉಚ್ಚವರ್ಗದ ಹೆಣ್ಣನ್ನು ಮುಟ್ಟಿದರೆ ಸಾಕು, ಅತ್ಯುಗ್ರ ಶಿಕ್ಷೆಗೆ ಗುರಿಯಾಗಬೇಕಿತ್ತು.

೧೦. ಶೂದ್ರನು ಗುಲಾಮನಾಗಿಯೇ ಹುಟ್ಟಿರುವುದರಿಂದ ಸಾಯುವತನಕ ಗುಲಾಮನಾಗಿಯೇ ಉಳಿಯಬೇಕು. ಕ್ಷತ್ರಿಯರಾಗಲಿ, ವೈಶ್ಯರಾಗಲಿ ಶೂದ್ರರ ವಿರುದ್ಧ ಮಾತನಾಡುವ ಹಕ್ಕುಳ್ಳವರಲ್ಲ. ಅಂತಹ ವಿಷಯ ಹಕ್ಕು ಅಧಿಕಾರವುಳ್ಳ ಏಕೈಕ ವ್ಯಕ್ತಿ ‘ಬ್ರಾಹ್ಮಣ’ ಮಾತ್ರ. ಶೂದ್ರನು ಆಸ್ತಿ ಹೊಂದಿದಲ್ಲಿ ಬ್ರಾಹ್ಮಣನಿಗೆ ಅಪಚಾರ. ಮಾಡಿದಂತಾಗುತ್ತಿತ್ತು. ಶೂದ್ರನು ರಾಜನಾಗುವ ನಾಡಿನಲ್ಲಿ ಬ್ರಾಹ್ಮಣ ವಾಸಿಸುವಂತಿಲ್ಲ. ಇಲ್ಲಿ ಅಂಬೇಡ್ಕರ್ ಪ್ರಶ್ನಿಸುತ್ತಾರೆ: ಶೂದ್ರರ ವಿರುದ್ಧ ವಿಷ ಕಕ್ಕುವ ಬ್ರಾಹ್ಮಣರು, ಅವರನ್ನು ತಮ್ಮ ಪರಮ ವೈರಿಯೆಂದು ತಿಳಿಯಲು ಕಾರಣವಾದರೂ ಏನು?

ಬ್ರಾಹ್ಮಣರು Vs ರೋಮನ್ನರು

ಅಂಬೇಡ್ಕರರು, ಇಲ್ಲಿ ರೋಮನ್ನರು ಇತರ ಪ್ರಜೆಗಳನ್ನು ಹಾಗೂ ಬ್ರಾಹ್ಮಣರು ಇತರ ವರ್ಗದವರನ್ನು ನಡೆಸಿಕೊಳ್ಳುವ ರೀತಿಯಲ್ಲಿರುವ ವ್ಯತ್ಯಾಸವನ್ನು ಗುರುತಿಸಿದ್ದಾರೆ. ರೋಮನರು ನಾಗರಿಕ ಅಂತಸ್ತನ್ನು ಪರಿಗಣಿಸಲು ಸ್ವಾತಂತ್ರ್ಯ, ಪೌರತ್ವ ಹಾಗೂ ಕುಟುಂಬಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದರು. ಹಕ್ಕು ಮತ್ತು ಅನರ್ಹತೆಗಳನ್ನು ನಿರ್ಧರಿಸುವ ಆಧಾರ ಎಲ್ಲರಿಗೂ ಒಂದೇ ರೀತಿಯದಾಗಿತ್ತು. ಒಂದು ಪಂಗಡಕ್ಕೂ ಮತ್ತೊಂದು ಪಂಗಡಕ್ಕೂ ಯಾವುದೇ ಭೇದವಿರುತ್ತಿರಲಿಲ್ಲ. ಈ ಏಕರೂಪದ ನೀತಿಗೆ ತದ್ವಿರುದ್ಧವಾಗಿ, ಬ್ರಾಹ್ಮಣಶಾಹಿ ನಿಯಮದಡಿಯಲ್ಲಿ, ಎಲ್ಲಾ ಹಕ್ಕು ಅಧಿಕಾರಗಳನ್ನು ಮೇಲಿನ ಮೂರು ವರ್ಣಗಳಿಗೆ ಮೀಸಲಿಟ್ಟು, ಎಲ್ಲಾ ಅನರ್ಹತೆಗಳನ್ನು ಶೂದ್ರರ ಕೊರಳಿಗೆ ಕಟ್ಟಿದರು. ರೋಮ್‌ದೇಶದಲ್ಲಿ, ಪ್ಲೀಬಿಯನ್ನರು ಗುಲಾಮರಾಗಿರಲಿಲ್ಲ. ಪ್ಯಾಟ್ರಶಿಯನ್ನರು ಮತ್ತು ಪ್ಲೀಬಿಯನ್ನರ ನಡುವೆ ಯಾವುದೇ ಭೇದವಿರದೆ, ಸಂಪೂರ್ಣ ಬೆಸುಗೆಯಾಗಿತ್ತು.

ರೋಮನ್ನರ ಕಾಯಿದೆಯಂತೆ, ಬ್ರಾಹ್ಮಣರೂ ಸಹ ಶೂದ್ರದ ಹಾಗೂ ಉಳಿದ ವರ್ಣಗಳ ನಡುವಿನ ಭೇದವನ್ನು ಅಳಿಸಿ ಸಮಾನತೆಯನ್ನು ಏಕೆ ಸೃಷ್ಟಿಸಲಿಲ್ಲ?

ಈ ಪ್ರಶ್ನೆಗೆ ಅಂಬೇಡ್ಕರ್ ಉತ್ತರ :

ರೋಮನ್ಕಾಯಿದೆಯಲ್ಲಿನ ಹಕ್ಕು ಮತ್ತು ಅನರ್ಹತೆಗಳು ಜಾತಿಯನ್ನಾಧರಿಸಿರಲಿಲ್ಲ. ಆದರೆ, ಬ್ರಾಹ್ಮಣ ನೀತಿಯು ಜಾತಿಯನ್ನು ಮಾತ್ರ ಆಧರಿಸಿದೆ.

ರೋಮನ್ನರು ರಾಜಕೀಯ ಮತ್ತು ಪೌರನೀತಿ ವಿಚಾರಗಳಲ್ಲಿ ಸಮಾನತೆಯನ್ನು ಗುರುತಿಸದಿರಬಹುದು. ಆದರೆ ಅಪರಾಧದ ವಿಷಯದಲ್ಲಿ ಯಾವುದೇ ಭೇದ ತೋರುತ್ತಿರಲಿಲ್ಲ. ಅಪರಾಧಿಯಾದವನು ಪ್ಲೀಬಿಯನ್ನನ್ನೇ ಆಗಿರಲಿ ಪ್ಯಾಟ್ರಿಶಿಯನ್ನೇ ಆಗಿರಲಿ ಯಾವುದೇ ಪಕ್ಷಪಾತವಿಲ್ಲದೆ ದಂಡನೆಗೊಳಗಾಗುತ್ತಿದ್ದನು. ಆದರೆ, ಬ್ರಾಹ್ಮಣರ ಶಾಸನದಲ್ಲಿ, ಫಿರ್ಯಾದಿಯ ಜಾತಿ ಮತ್ತು ಆರೋಪಿಯ ಜಾತಿಯನ್ನು ಆಧರಿಸಿ, ಶಿಕ್ಷೆ ವಿಧಿಸಲಾಗುತ್ತಿತ್ತು.

ಆರ್ಯರು ಯಾರು?

ವೈದಿಕ ಸಾಹಿತ್ಯವು ಆರ್ಯ ಜನಾಂಗಕ್ಕೆ ಸೇರಿದ್ದೆಂದೇ ಎಲ್ಲರೂ ತಿಳಿದಿದ್ದಾರೆ. ಆದರೆ, ವೇದಗಳಲ್ಲಿ ಕಂಡುಬರುವ ‘ಆರ್ಯ’ ಮತ್ತು ‘ಅನಾರ್ಯ’ ಎಂಬ ಪದಗಳು ‘ವಂಶ’ ಎಂಬ ಅರ್ಥದಲ್ಲಿ ಉಪಯೋಗಿಸಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮ ವಾದಕ್ಕೆ ಪ್ರೊ. ಮ್ಯಾಕ್ಸ್‌ಮುಲ್ಲರ್ ರವರ ಅಭಿಪ್ರಾಯವನ್ನು ಸಮರ್ಥನೆಯನ್ನಾಗಿ ಉದ್ಧರಿಸುತ್ತಾರೆ. ‘ಆರ್ಯ’ ಎಂಬ ಪದವು ವೈಜ್ಞಾನಿಕ ಭಾಷೆಯಲ್ಲಿ, ಯಾವುದೇ ಒಂದು ಜನಾಂಗಕ್ಕೆ ಅನ್ವಯಿಸುವುದಿಲ್ಲ. ಅದು ಭಾಷೆಗೆ ಮಾತ್ರ ಅನ್ವಯಿಸುತ್ತದೆ. ನಾವು ‘ಆರ್ಯ ಜನಾಂಗ’ದ ಬಗ್ಗೆ ಮಾತಾಡಿದಾಗ ಅದರ ಅರ್ಥ ನಾವು ‘ಆರ್ಯ ಭಾಷೆ’ಯ ಬಗ್ಗೆ ಮಾತಾಡುತ್ತಿದ್ದೇವೆ ಎಂದೇ ತಿಳಿಯಬೇಕು. . . ಆರ್ಯ ಜನಾಂಗವು ಭಾರತ ದೇಶದ ಮೇಲೆ ದಂಡೆತ್ತಿ ಬಂದ ವಿದೇಶಿಯರು. ತಿಲಕರ ಪ್ರಕಾರ, ಆರ್ಯರು ಆರ್ಕ್ಟಿಕ್ ಪ್ರದೇಶಕ್ಕೆ ಸೇರಿದ ಜನ. ಏಕೆಂದರೆ, ಆರ್ಯರು ಆಚರಿಸುತ್ತಿದ್ದ ‘ಆಶ್ವಮೇಧ’ಯಾಗ (ಕುದುರೆಯ ಬಲಿ)ವು ಆರ್ಕ್ಯಿಕ್ ಪ್ರದೇಶದಲ್ಲಿ ನಡೆಯುತ್ತಿತ್ತು. ಒಂದು ವೇಳೆ, ಕುದುರೆಗಳು ಆರ್ಕ್ಟಿಕ್ ಪ್ರದೇಶದಲ್ಲಿ ಕಂಡುಬರದಿದ್ದಲ್ಲಿ, ಈ ಕಥೆಯು ಪೊಳ್ಳಾಗುತ್ತಿತ್ತು. ಭಾರತ ದೇಶದ ಮೂಲ ನಿವಾಸಿಗಳು ಆರ್ಯನ್ನರಿಗಿಂತ ಭಿನ್ನವಾಗಿದ್ದು. ಅವರನ್ನು ದಾಸರು ಮತ್ತು ದಸ್ಯುಗಳು ಎಂದು ಕರೆಯಲಾಗುತ್ತಿತ್ತು. ಆದರೆ ಋಗ್ವೇದದಲ್ಲಿ ಆರ್ಯರು ಭಾರತದ ಮೇಲೆ ದಂಡೆತ್ತಿಬಂದ ವಿದೇಶಿಯರು ಎಂಬುದರ ಬಗ್ಗೆ ಯಾವುದೇ ಸುಳಿವಿಲ್ಲ, ಭಾರತ ಆರ್ಯರ ತಾಯ್ನಾಡಲ್ಲ ಎಂಬ ಸಿದ್ಧಾಂತಕ್ಕೆ ವಿರುದ್ಧವಾಗಿ ವೈದಿಕ ಸಾಹಿತ್ಯ ಸೃಷ್ಟಿಯಾಗಿದೆ.

ಅಂಬೇಡ್ಕರರ ಪ್ರಕಾರ, ಆರ್ಯರು ಆರ್ಯೇತರ ಜನಾಂಗಗಳಾದ ದಾಸ ಮತ್ತು ದಸ್ಯು ಜನರನ್ನು ಸೈನಿಕ ಆಕ್ರಮಣಗಳಿಂದ ಸೋಲಿಸಿಲ್ಲ. ಈ ವಾದಕ್ಕೆ ಪೂರಕವಾಗಿ ಕೆಳಕಂಡ ಅಂಶಗಳನ್ನು ನೀಡುತ್ತಾರೆ.

೧. ಋಗ್ವೇದದಲ್ಲಿ, ಆರ್ಯರಿಗೆ ಮತ್ತು ದಾಸರಿಗೆ ಯುದ್ಧಗಳಾದುದರ ಬಗ್ಗೆ ಯಾವುದೇ ವಿವರಗಳಿಲ್ಲ. ದಾಸರು, ದಸ್ಯುಗಳು ಹಾಗೂ ಆರ್ಯರ ನಡುವೆ ಆಗಾಗ ನಡೆಯುತ್ತಿದ್ದ ಗಲಭೆಗಳು ಆರ್ಯರು ಸಾಧಿಸಿರಬಹುದಾದ ವಿಜಯದ ಪುರಾವೆಯನ್ನು ನೀಡುವುದಿಲ್ಲ.

೨. ಈ ಎರಡೂ ಜನಾಂಗಗಳು ಗೌರವಯುತವಾಗಿ ಪರಸ್ಪರ ಶಾತಿ ಒಪ್ಪಂದವನ್ನು ಮಾಡಿಕೊಂಡು, ಒಂದಾಗಿ ಬಾಳಲು ತೀರ್ಮಾನ ಮಾಡಿಕೊಂಡಿಬೇಕು. ಏಕೆಂದರೆ, ಇವರಿಬ್ಬರೂ ಒಂದುಗೂಡಿ, ತಮ್ಮ ಶತ್ರುಗಳನ್ನು ಎದುರಿಸಿದ ಪ್ರಸಂಗಗಳ ಉಲ್ಲೇಖ ಋಗ್ವೇದದಲ್ಲಿದೆ.

೩. ಇವರಿಬ್ಬರ ನಡುವೆ ಇದ್ದ ಸಂಘರ್ಷ ಎಷ್ಟೋ ತೀವ್ರವಾಗಿದ್ದರೂ ಅದು ಜನಾಂಗೀಯ ಸಂಘರ್ಷವಾಗಿರಲಿಲ್ಲ. ಇಂತಹ ಸಂಘರ್ಷಗಳು ಧಾರ್ಮಿಕ ಅಭಿಪ್ರಾಯಗಳಿಂದ ಮಾತ್ರ ಹುಟ್ಟಿದಂಥವು. ಅಂದರೆ, ದಾಸರು ಮತ್ತು ದಸ್ಯು ಜನರು ಪ್ರತ್ಯೇಕ ಜನಾಂಗಕ್ಕೆ ಸೇರಿದವರೆಂಬ ವಾದಕ್ಕೆ ಯಾವುದೇ ಸಮರ್ಥನೆ ಇಲ್ಲಿ ಕಂಡುಬರುವುದಿಲ್ಲ. ಅಂಬೇಡ್ಕರರು ಹೇಳುವಂತೆ, ಆರ್ಯರಿಗೂ ದಾಸರು ಮತ್ತು ದಸ್ಯು ಜನರಿಗೂ ನಡುವಿನ ವ್ಯತ್ಯಾಸವು ದೇಹ ಲಕ್ಷಣ ಹಾಗೂ ಬಣ್ಣವನ್ನಾಧರಿಸಿದ ಜನಾಂಗೀಯ ವ್ಯತ್ಯಾಸವಾಗಿರುವುದಿಲ್ಲ. ಆದ್ದರಿಂದಲೇ, ಒಬ್ಬ ದಾಸ ಅಥವಾ ದಸ್ಯು ಆರ್ಯನಾಗಿರುವ ಸಾಧ್ಯತೆಯುಂಟು. ಆರ್ಯರು ಹೊರದೇಶದವರು ಹಾಗೂ ಭಾರತವನ್ನು ಆಕ್ರಮಿಸಿದರು ಎಂಬ ವಾದವು ದೃಢಪಟ್ಟಿಲ್ಲ ಹಾಗೂ ದಾಸರು ಮತ್ತು ದಸ್ಯು ಜನರು ಈ ನಾಡಿನ ಮೂಲ ನಿವಾಸಿಗಳು ಎಂಬ ಕಲ್ಪನೆಗೆ ಯಾವ ಆಧಾರವೂ ಇಲ್ಲ. ‘ಆರ್ಯ ಜನಾಂಗವೆಂಬ’ ಸಿದ್ಧಾಂತವು ಕೇವಲ ಊಹೆಯಲ್ಲದೆ ಬೇರೇನೂ ಅಲ್ಲ. ೧೮೩೫ರಲ್ಲಿ ಪ್ರಕಟಗೊಂಡ “ಕಂಪೇರಿಟಿವ್‌ಗ್ರಾಮರ್ ” ಎಂಬ ಪುಸ್ತಕದಲ್ಲಿ, ಅದರ ಕರ್ತೃ ಡಾ. ಬೋಪ್‌ಆರ್ಯ ಜನಾಂಗ ಸಿದ್ಧಾಂತವನ್ನು ‘ಅರ್ಥಹೀನ’ ಎಂದಿದ್ದಾನೆ. ಯೂರೋಪಿನ ವಿದ್ವಾಂಸರು ‘ವರ್ಣ’ ಎಂಬ ಪದದ ಅರ್ಥ ‘ಬಣ್ಣ’ ಎಂದೇ ಬಲವಾಗಿ ವಾದಿಸಿದ್ದಾರೆ. ಬಹಳಷ್ಟು ಬ್ರಾಹ್ಮಣರೂ ಸಹ ಈ ದೃಷ್ಟಿಕೋನವನ್ನು ಒಪ್ಪಿಕೊಂಡಿದ್ದಾರೆ. ಆದರೆ ವೇದಕಾಲದ ಆರ್ಯರಿಗೆ ಬಣ್ಣದ ಬಗ್ಗೆ ಯಾವುದೇ ಪೂರ್ವಾಗ್ರಹವಿರಲಿಲ್ಲ ಎಂಬುದನ್ನು ಡಾ. ಬೋಪ್ರವರು ಸ್ಪಷ್ಟಪಡಿಸಿದರು. ಕೆಲವು ನಿರ್ದಿಷ್ಟ ನಂಬಿಕೆಗಳುಳ್ಳ ‘ವರ್ಗವನ್ನೇ ‘ವರ್ಣ’ವೆಂದು ಕರೆಯಲಾಯಿತು. ‘ವರ್ಣ’ಕ್ಕೂ ಮೈಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ.

ಆರ್ಯರಲ್ಲೇ ಆರ್ಯರು!

ಪಾಶ್ಚಾತ್ಯ ದೇಶದ ಸಿದ್ಧಾಂತಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಅವುಗಳ ಸಾರಾಂಶವನ್ನು ಮುಂದಿಡುತ್ತಾರೆ.

೧. ವೇದಗಳಲ್ಲಿ ಆರ್ಯ ಜನಾಂಗದ ಬಗ್ಗೆಯಾಗಲೀ, ಇಲ್ಲಿನ ಮೂಲನಿವಾಸಿಗಳಾದ ದಾಸ ಮತ್ತು ದಸ್ಯು ಜನರ ಮೇಲೆ ಆರ್ಯರ ಆಕ್ರಮಣಗಳ ಬಗ್ಗೆಯಾಗಲಿ ಯಾವುದೇ ವಿವರಗಳಿಲ್ಲ.

೨. ಆರ್ಯರು, ದಾಸರು ಮತ್ತು ದಸ್ಯು ಜನರ ನಡುವೆ ಯಾವುದೇ ಜನಾಂಗೀಯ ಭೇದಗಳಿದ್ದುದರ ಬಗ್ಗೆ ಪುರಾವೆಗಳಿಲ್ಲ.

೩. ಆರ್ಯರ ಮೈಬಣ್ಣವು ದಾಸರು ಹಾಗೂ ದಸ್ಯುಗಳ ಮೈಬಣ್ಣಕ್ಕಿಂತ ಬೇರೆಯಾಗಿತ್ತು ಎಂಬ ವಾದವನ್ನು ವೇದಗಳು ಬೆಂಬಲಿಸುವುದಿಲ್ಲ. ಇವಿಷ್ಟೇ ಅಲ್ಲದೆ, ಆರ್ಯ ಜನಾಂಗದ ಸಿದ್ಧಾಂತದ ನಿರರ್ಥಕತೆಯನ್ನು ನಿರೂಪಿಸಲು ಅಂಬೇಡ್ಕರರು ಮತ್ತೊಂದು ಪುರಾವೆಯನ್ನು ಒದಗಿಸುತ್ತಾರೆ. ಇಲ್ಲಿ ಋಗ್ವೇದದ ಮಂತ್ರ (VI ೩೩. ೩)ವೊಂದನ್ನು ಉಲ್ಲೇಖಿಸುತ್ತಾರೆ. “ಓ ಇಂದ್ರ, ನಮ್ಮ ಇಬ್ಬರು ಎದುರಾಳಿಗಳಾದ ದಾಸರು ಮತ್ತು ಆರ್ಯರರನ್ನು ನೀನು ಹತ್ಯೆ ಮಾಡಿದೆ” ಅಂದರೆ ಆರ್ಯರಲ್ಲೇ ಎರಡು ವಿಭಿನ್ನ ಪಂಗಡಗಳಿದ್ದು ಅವರು ಪರಸ್ಪರ ವಿರೋಧಿಗಳಾಗಿದ್ದರು.

ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಆರ್ಯರ ಎರಡು ಪಂಗಡಗಳೂ ಏಕಕಾಲದಲ್ಲೇ ಅಸ್ತಿತ್ವದಲ್ಲಿದ್ದದ್ದು ಆಧಾರ ರಹಿತ ಕಲ್ಪನೆಯೆಲ್ಲೆನ್ನುವ ಅಂಬೇಡ್ಕರ್ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ದಾಖಲೆಗಳನ್ನು ಒದಗಿಸುತ್ತಾರೆ.

ಆರಂಭದಲ್ಲಿ, ಋಗ್ವೇದ ಮತ್ತು ಅಥರ್ವಣ ವೇದವನ್ನು ಅಪವಿತ್ರವೆಂದು ಪರಿಗಣಿಸಲಾಗಿತ್ತು. ಏಕೆ? ಈ ಎರಡೂ ವೇದಗಳು ಆರ್ಯರ ಎರಡು ವಿಭಿನ್ನ ಪಂಗಡಗಳಿಗೆ ಸೇರಿದ್ದವು ಎನ್ನುವ ಅಂಬೇಡ್ಕರ್ , ಈ ಎರಡು ಪಂಗಡಗಳು ಒಂದಾದ ಕಾಲಕ್ಕೆ, ಅಥರ್ವವೇದವನ್ನು ಋಗ್ವೇದಕ್ಕೆ ಸರಿಸಮಾನವಾಗಿ ಪರಿಗಣಿಸಲಾಯಿತು ಎನ್ನುತ್ತಾರೆ. ತಮ್ಮ ಸಮರ್ಥನೆಗೆ ಪೂರಕವಾಗಿ, ತೈತ್ತಿರಿಯ ಸಂಹಿತಿ, ಶತಪಥ ಬ್ರಾಹ್ಮಣ, ಮಹಾಭಾರತ (ವನಪರ್ವ ಮತ್ತು ಆದಿಪರ್ವ) ಹಾಗೂ ರಾಮಾಯಣ (ಎರಡನೆ ಕಾಂಡ)ದ ಅನೇಕ ಶ್ಲೋಕ, ಸನ್ನಿವೇಶಗಳನ್ನು ಉಲ್ಲೇಖಿಸಿದ್ದಾರೆ. ಋಗ್ವೇದದಲ್ಲಿ ತಿಳಿಸಿರುವಂತೆ ಆರ್ಯರ ಎರಡು ಪಂಗಡಗಳು ಅಸ್ತಿತ್ವದಲ್ಲಿದ್ದುದಕ್ಕೆ ವೈಜ್ಞಾನಿಕ ಸಂಶೋಧನೆಗಳು ಹಾಗೂ ಇತಿಹಾಸವು ಗಟ್ಟಿನೆಲವನ್ನು ಒದಗಿಸುತ್ತವೆ. ಆರ್ಯರ ಎರಡು ಪಂಗಡಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದರ ಮೂಲಕ ಒಂದು ಪಂಗಡವು ಮತ್ತೊಂದು ಪಂಗಡವನ್ನು ಯುದ್ಧದಲ್ಲಿ ಸೋಲಿಸಿರುವ ಸಾಧ್ಯತೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಶೂದ್ರರು ಯಾರು?

ಈಗ ಬಹುಮುಖ್ಯ ಸಮಸ್ಯೆಯಾದ ‘ದಾಸ ಮತ್ತು ಶೂದ್ರರ’ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳೋಣ. ಇಲ್ಲಿ ಎರಡು ಸಾಧ್ಯತೆಗಳುಂಟು. ಒಂದು ದಾಸರು ಮತ್ತು ದಸ್ಯು ಜನರು ಒಂದೇ ಪಂಗಡಕ್ಕೆ ಸೇರಿದ ಜನರಾಗಿರಬೇಕು ಮತ್ತು ಎರಡನೆಯದಾಗಿ, ಈ ಜನ ಹಾಗೂ ಶೂದ್ರರು ಒಂದೇ ಪಂಗಡದವರಾಗಿರಬೇಕು. ದಾಸರು ಮತ್ತು ದಸ್ಯು ಜನರ ಒಂದೇ ಪಂಗಡಕ್ಕೆ ಸೇರಿದವರೆಂಬುದು ಅನುಮಾನಾಸ್ಪದ ಸಂಗತಿಯೆಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಋಗ್ವೇದದಲ್ಲಿ, ದಾಸರ ಬಗ್ಗೆ ೭೮ ಕಡೆ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಹಾಗೆಯೇ ದಸ್ಸು ಜನರ ಬಗ್ಗೆಯೂ ೭೮ ಕಡೆ ಉಲ್ಲೇಖಿಸಲಾಗಿದೆ. ಈ ಎರಡೂ ಪಂಗಡಗಳು ಒಂದೇ ಆಗಿದ್ದಲ್ಲಿ, ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯಿರಲಿಲ್ಲ. ಆದ್ದರಿಂದ ದಾಸರು ಮತ್ತು ದಸ್ಯುಜನ ಎರಡು ವಿಭಿನ್ನ ಪಂಗಡಗಳಾಗಿರಲೇಬೇಕು. ಎರಡನೆಯದಾಗಿ, ದಾಸರು ಮತ್ತು ದಸ್ಯು ಜನರೇ ಶೂದ್ರ ಜನರೆಂಬುದಕ್ಕೂ ಸಹ ಯಾವುದೇ ಆಧಾರವಿಲ್ಲ.

ಮಹಾಭಾಷ್ಯ (೧. ೨. ೩)ದಲ್ಲಿ ಪತಂಜಲಿಯು ಶೂದ್ರರು ಅಭಿರ ಜನತೆ ಜತೆ ಇದ್ದುರಾಗಿ ಹೇಳುತ್ತಾನೆ. ಮಹಾಭಾರತ (ಸಭಾಪರ್ವದ ೨೨ನೇ ಅಧ್ಯಾಯದಲ್ಲಿ) ಶೂದ್ರರ ಗಣರಾಜ್ಯವನ್ನು ಉಲ್ಲೇಖಿಸಿದೆ. ವಿಷ್ಣು ಪುರಾಣ ಹಾಗೂ ಮಾರ್ಕಂಡೇಯ ಪುರಾಣಗಳಲ್ಲಿ, ಶೂದ್ರರು ಇತರ ಬುಡಕಟ್ಟು ಜನರಂತೆ, ಒಂದು ಬುಡಕಟ್ಟು ಜನಾಂಗವಾಗಿದ್ದು, ವಿಂದ್ಯಪರ್ವತಗಳಿಗೂ ಮೇಲಿನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದುದಾಗಿ ಹೇಳುತ್ತೇವೆ. ಇಲ್ಲಿ, ಅಂಬೇಡ್ಕರರು ಮುಖ್ಯವಾದ ಪ್ರಶ್ನೆಯನ್ನು ಮುಂದಿಡುತ್ತಾರೆ.

ದಾಸರು ಮತ್ತು ದಸ್ಯು ಜನರು ಎಂಬುದು ಆರ್ಯೇತರ ಪಂಗಡಗಳನ್ನು ಸೂಚಿಸುವ ಪದಗಳೋ? ಅಥವಾ ಅವರು ದೇಶದ ಮೂಲ ನಿವಾಸಿಗಳೆಂಬುದನ್ನು ಸೂಚಿಸುವಂಥಾದೇನಾದರೂ ಇದೆಯೋ?

ಮಹಾಭಾರತದಲ್ಲಿ ತಿಳಿಸಿರುವಂತೆ, ದಸ್ಯು ಜನ ಎಂಬುದು ಆರ್ಯೇತರ ಪಂಗಡಗಳು ಎಂಬರ್ಥದಲ್ಲಿ ಬಳಸಿಲ್ಲ. ‘ದಸ್ಯು’ ಎಂಬ ಪದವನ್ನು ಇಂಡೋಆರ್ಯನ್ನರು ತಮ್ಮ ಶತ್ರುಗಳ ವಿರುದ್ಧ ತುಚ್ಛವಾದ ಅರ್ಥದಲ್ಲಿ ಬಳಸಿದ್ದಾರೆ. ಇದು ನಿಜವೇ ಆಗಿದ್ದಲ್ಲಿ, ದಸ್ಸು ಜನರು ಈ ದೇಶದ ಮೂಲನಿವಾಸಿಗಳೆಂಬುದನ್ನು ಒಪ್ಪಲಾಗದು.

ಅಂಬೇಡ್ಕರ್ ಪ್ರಕಾರ ದಾಸರು ಮತ್ತು ದಸ್ಸು ಜನರು ಪ್ರಾಚೀನ ಅನಾಗರಿಕ ಜನರಲ್ಲ. ಅವರು ಆರ್ಯರಷ್ಟೇ ನಾಗರಿಕರಾಗಿದ್ದರು. ಅಲ್ಲದೆ, ಆರ್ಯರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ದಾಸರು ಮತ್ತು ದಸ್ಯು ಜನರಿಬ್ಬರೂ ಒಂದೇ ಎಂಬುದು ಕಲ್ಪನೆಯಷ್ಟೇ, ವೈದಿಕ ಸಾಹಿತ್ಯದಲ್ಲಿ, ಬರುಬರುತ್ತಾ, ಈ ಪದಗಳು ಸಂಪೂರ್ಣ ಮರೆಯಾಗಿವೆ. ಇದರ ಅರ್ಥ, ಅವರು ಆರ್ಯರೊಂದಿಗೆ ಸಂಪೂರ್ಣವಾಗಿ ಬೆರೆತುಹೋದರು ಎಂಬುದಾಗಿದೆ. ಪ್ರಾಚೀನ ವೈದಿಕ ಸಾಹಿತ್ಯದಲ್ಲಿ, ಶೂದ್ರರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ನಂತರದ ವೈದಿಕ ಸಾಹಿತ್ಯದಲ್ಲಿ ‘ಶೂದ್ರ’ ಎಂಬ ಪದವು ಅನೇಕ ಕಡೆ ಕಾಣಿಸಿಕೊಂಡಿದೆ. ಇದರಿಂದಾಗಿ ಶೂದ್ರರೆಂಬುವವರು ದಾಸರು ಮತ್ತು ದಸ್ಯು ಜನರಿಗಿಂತ ಭಿನ್ನರಾದವರು ಎಂಬ ನಿರ್ಧಾರಕ್ಕೆ ಅಂಬೇಡ್ಕರ್ ಬಂದಿದ್ದಾರೆ.

ಧರ್ಮಸೂತ್ರಗಳು ಶೂದ್ರನಾದವನು ವೇದಗಳನ್ನು ಕಲಿಯಬಾರದೆಂದು ಹೇಳಿವೆ. ಆದರೆ ಜೈಮಿನಿಯ ಬದರಿಯೆಂಬುವವನ ಬಗ್ಗೆ ಹೇಳುತ್ತಾ, ಶೂದ್ರನಾದವನು ವೈದಿಕ ಯಜ್ಞವನ್ನು ಮಾಡಬಹುದೆನ್ನುತ್ತಾನೆ. ಶೂದ್ರನಾದವನು ಸೋಮರಸವನ್ನು ಕುಡಿಯಬಾರದೆಂದು ಹೇಳಲಾಗಿದೆ. ಆದರೆ ಅಶ್ವಿನಿಗಳ ಕಥೆಯಲ್ಲಿ ಶೂದ್ರನಾದವನಿಗೆ ಸೋಮರಸವನ್ನು ಕುಡಿಯುವ ಹಕ್ಕಿತ್ತು ಎಂದು ಖಚಿತವಾಗಿ ಹೇಳಲಾಗಿದೆ. ಮನುವಿನ ಪ್ರಕಾರ, ಶೂದ್ರನಾದವನು ಆರ್ಯೇತರನಾಗಿದ್ದನು. ಅಂಬೇಡ್ಕರರ ಪ್ರಕಾರ, ಮನುವಿನ ಅಭಿಪ್ರಾಯವು ಕೌಟಿಲ್ಯನ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ಕೌಟಿಲ್ಯನು ಶೂದ್ರರನ್ನೂ ಆಹ್ವಾನಿಸಲಾಗಿತ್ತು. ಅಲ್ಲದೆ, ಶೂದ್ರರಾದವರು ಪೌರ ಮತ್ತು ಜನಪದ ಎಂಬ ರಾಜಕೀಯ ಸಭೆಗಳ ಸದಸ್ಯರಾಗಿದ್ದರು ಹಾಗೂ ಸಭಾಸದಸ್ಯರಾಗಿ ಬ್ರಾಹ್ಮಣರಿಂದಲೂ ವಿಶಿಷ್ಟ ಗೌರವಾದರಗಳಿಗೆ ಪಾತ್ರವಾಗಿದ್ದರು. ಶೂದ್ರನು ರಾಜನಾಗಿರುವ ಪ್ರದೇಶದಲ್ಲಿ ಬ್ರಾಹ್ಮಣನು ವಾಸಿಸಬಾರದೆಂದು ಮನು ಹೇಳುತ್ತಾನೆ (IV : ೬೧). ಇದರರ್ಥ, ಶೂದ್ರರೂ ಸಹಜರಾಗಿ ಮೆರೆದಿದ್ದರು ಎಂದಾಗುತ್ತದೆ. ಶೂದ್ರರು ಮಂತ್ರಿಗಳಾಗಿದ್ದುದನ್ನೂ, ಶ್ರೀಮಂತರಾಗಿದ್ದುದ್ದನ್ನೂ ಹಾಗೂ ಬ್ರಾಹ್ಮಣರಿಗೆ ಸಮಸಂಖ್ಯೆಯಲ್ಲಿ ಇದ್ದುದ್ದನ್ನು ಮಹಾಭಾರತವು ಹೇಳುತ್ತದೆ.

ಮೇಲಿನ ಎಲ್ಲಾ ವಿಷಯಗಳನ್ನು ಅವಲೋಕಿಸಿದಾಗ, ಅಂಬೇಡ್ಕರರ ಒಟ್ಟಾರೆ ಅಭಿಪ್ರಾಯ ಸಾರಾಂಶವು ಹೀಗಿದೆ:

೧. ಶೂದ್ರರು ಆರ್ಯರೇ ಆಗಿದ್ದರು.

೨. ಶೂದ್ರರು ಕ್ಷತ್ರೀಯ ವರ್ಗಕ್ಕೆ ಸೇರಿದವರಾಗಿದ್ದರು.

೩. ಕ್ಷತ್ರಿಯ ವರ್ಗದವರಾಗಿ, ಶೂದ್ರರು ಪ್ರಮುಖರಾಗಿದ್ದರು. ಪ್ರಾಚೀನ ಆರ್ಯ ಜನಾಂಗದ ಕ್ಷತ್ರಿಯರಲ್ಲಿ, ಹಲವಾರು ಶೂದ್ರರೇ ಆಗಿದ್ದರು. ಆರಂಭದಲ್ಲಿ, ಇಂಡೋ-ಆರ್ಯನ್ನರಲ್ಲಿ, ಮೂರು ವರ್ಣಗಳು ಮಾತ್ರ ಇದ್ದವು. ಋಗ್ವೇದವು ಶೂದ್ರರ ಬಗ್ಗೆ ಏನನ್ನೂ ವರ್ಣದವರೆಂದು ಎಲ್ಲಿಯೂ ಹೇಳಿಲ್ಲ. ನಾಲ್ಕು ವರ್ಣಗಳು ಇದ್ದುದ್ದಾಗಿ ಹೇಳುವ ಪುರುಷಸೂಕ್ತವು ಇತ್ತೀಚಿನ ಸೃಷ್ಟಿಯಾಗಿದೆ. ಅನೇಕ ಕಳ್ಳಕೆಲಸಗಳನ್ನು ಮಾಡಿರುವ ಭಾರತದ ಬ್ರಾಹ್ಮಣರು, ‘ಪುರುಷಸೂಕ್ತ’ದಲ್ಲೂ ಕುತಂತ್ರ ನಡೆಸಿದ್ದಲ್ಲಿ ಆಶ್ಚರ್ಯವೇನಿಲ್ಲ. ನಾಲ್ಕನೆಯ ವರ್ಣವು ಅಸ್ತಿತ್ವಕ್ಕೆ ಬಂದ ಕಾಲದಲ್ಲೇ, ಚಾತುರ್ವರ್ಣ್ಯಕ್ಕೆ ಧರ್ಮದ ಮುದ್ರೆಯನ್ನೊತ್ತಲು, ಪುರುಷಸೂಕ್ತವನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಈ ‘ಸೂಕ್ತ’ವು ಋಗ್ವೇದಕ್ಕೆ ಮಾಡಿದ ಇತ್ತೀಚಿನ ಸೇರ್ಪಡೆಯಾಗಿದ್ದು, ಆದಿಕಾಲದಿಂದಲೂ, ನಾಲ್ಕು ವರ್ಣಗಳು ಅಸ್ತಿತ್ವದಲ್ಲಿದ್ದುದ್ದನ್ನು ನಿರೂಪಿಸಲು ತಕ್ಕ ಆಧಾರ ಎನಿಸುವುದಿಲ್ಲ. ಮೊದಲಿನಿಂದಲೂ, ಮೂರೇ ವರ್ಣಗಳಿದ್ದು, ಶೂದ್ರರು ಕ್ಷತ್ರೀಯ ವರ್ಣಕ್ಕೆ ಸೇರಿದವರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಶೂದ್ರರು ಕ್ಷತ್ರಿಯರೇ ಆಗಿದ್ದ ಪಕ್ಷದಲ್ಲಿ, ಅವರನ್ನು ಕೆಳ ಹಂತಕ್ಕೆ ಇಳಿಸಲು ಕಾರಣವೇನು? ಶೂದ್ರರು ಮತ್ತು ಬ್ರಾಹ್ಮಣರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯೇ ಶೂದ್ರರ ಅಧೋಗತಿಗೆ ಕಾರಣ. ಬ್ರಾಹ್ಮಣ ಋಷಿಯಾದ ವಸಿಷ್ಟನಿಗೂ ಕ್ಷತ್ರಿಯ ರಾಜನಾದ ಸೂದಾಸನಿಗೂ ನಡೆದ ಹಿಂಸಾತ್ಮಕ ಘರ್ಷಣೆಗೆ ಪ್ರತ್ಯಕ್ಷ ಆಧಾರಗಳಿವೆ. ವಸಿಷ್ಟನಿಗೂ ವಿಶ್ವಾಮಿತ್ರನಿಗೂ ಇದ್ದ ವೈರತ್ವು, ಕೇವಲ ಇಬ್ಬರು ತಪಸ್ವಿಗಳ ನಡುವಿನ ವೈರತ್ವವಾಗಿರಲಿಲ್ಲ. ಅದು ಕ್ಷತ್ರಿಯ ತಪಸ್ವಿ ಹಾಗೂ ಬ್ರಾಹ್ಮಣ ತಪಸ್ವಿಯ ನಡುವೆ ಇದ್ದ ಬದ್ದ ವೈರತ್ವವಾಗಿತ್ತು. ವಿಶ್ವಾಮಿತ್ರನು ಋಗ್ವೇದದ ಅನೇಕ ಸ್ತೋತ್ರ, ಮಂತ್ರಗಳನ್ನು ಬರೆದಿದ್ದನು. ಗಾಯತ್ರಿ ಮಂತ್ರವನ್ನು ಬರೆದವನೇ ವಿಶ್ವಾಮಿತ್ರನು! (ಋಗ್ವೇದ, III-೬೨. ೧೦). ಅಂಬೇಡ್ಕರರ ಪ್ರಕಾರ

ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಿನ ವೈಮನಸ್ಸು ಮತ್ತು ಕಲಹಗಳು ಮೂರು ವಿಷಯಗಳ ಸುತ್ತ ಕೇಂದ್ರಿಕೃತಗೊಂಡಿದ್ದವು. ದಾನವನ್ನು ಪಡೆಯುವ ಹಕ್ಕು, ವೇದವನ್ನು ಬೋಧಿಸುವ ಹಕ್ಕು, ಯಜ್ಞದ ಪೌರೋಹಿತ್ಯವನ್ನು ನಿರ್ವಹಿಸುವ ಹಕ್ಕು. ಶೂದ್ರರನ್ನು ತುಳಿಯಲು ಬ್ರಾಹ್ಮಣರು ಉಪಯೋಗಿಸಿದ ತಂತ್ರಗಳನ್ನು ಅಂಬೇಡ್ಕರರು ಸ್ಪಷ್ಟವಾಗಿ ವಿವರಿಸಿದ್ದಾರೆ. ಮೊದಲನೆಯದಾಗಿ, ಶೂದ್ರರಿಗೆ ಉಪನಯನ ಮಾಡುವುದನ್ನು ನಿಲ್ಲಿಸಲಾಯ್ತು. ಉಪನಯನವೆಂಬುದು ಜನಿವಾರ ತೊಡಿಸುವ ವಿಧಿಯಾಗಿದೆ. ಆದರೆ, ಅಂಬೇಡ್ಕರರ ಪ್ರಕಾರ, ಜನಿವಾರದ ವಿಧಿ ಹಾಗೂ ಉಪನಯನಗಳಿಗೆ ವಿಭಿನ್ನ ಉದ್ದೇಶಗಳಿದ್ದವು. ಕಾಲಕ್ರಮೇಣ ಇವೆರಡನ್ನು ಒಂದು ಮಾಡಲಾಯಿತು. ಉಪನಯನವೆಂದರೆ, ವೈದಿಕ ಬ್ರಾಹ್ಮಣನಿಂದ ವೇದಗಳ ಉಪದೇಶ.

ಇಲ್ಲಿ ಅಂಬೇಡ್ಕರರು ನಾಲ್ಕು ಪ್ರಶ್ನೆಗಳನ್ನು ಕೇಳುತ್ತಾರೆ. ಉಪನಯನವಾಗದಿರುವುದು ಶೂದ್ರತ್ವದ ಪರೀಕ್ಷೆಯೇ? ಶೂದ್ರರಿಗೆ ಹಿಂದೆಂದಾದರೂ ಉಪನಯನವನ್ನು ಪಡೆಯುವ ಹಕ್ಕಿತ್ತೆ? ಉಪನಯನವಿಲ್ಲದಿರುವುದು ಶೂದ್ರರು ಕೆಳಸ್ಥಾನಕ್ಕಿಳಿಯಲು ಹೇಗೆ ಕಾರಣವಾಯಿತು? ಶೂದ್ರರಿಗೆ ಉಪನಯನವನ್ನು ತಿರಸ್ಕರಿಸಲು ಬ್ರಾಹ್ಮಣರಿಗೆ ಇದ್ದ ಅಧಿಕಾರವೇನು?

ಮೊದಲನೆಯದಾಗಿ, ಭೂಮಿ ಸಂಪತ್ತುಗಳನ್ನು ದಾನ ಮಾಡುವ ಸಾಮರ್ಥ್ಯವುಳ್ಳವನು ಮಾತ್ರ ಅವುಗಳ ಒಡೆತನವನ್ನು ಹೊಂದಬಹುದಿತ್ತು. ದಾನ ಧರ್ಮ ಮಾಡಬೇಕಾದಲ್ಲಿ ಉಪನಯನ ಆಗಿರಲೇಬೇಕಿತ್ತು. ಅಂದರೆ ಸಂಪತ್ತುಗಳನ್ನುಗಳಿಸಬೇಕಾದಲ್ಲಿ, ಉಪನಯನವನ್ನು ಪಡೆಯುವುದು ಕಡ್ಡಾಯವಾಗಿತ್ತು. ಎರಡನೆಯದಾಗಿ, ದಾನಧರ್ಮಗಳನ್ನು ನಡೆಸುವಾಗ ವೇದ ಮಂತ್ರಗಳನ್ನು ಪಠಿಸಬೇಕಿತ್ತು. ಇದರ ಅರ್ಥ, ದಾನಿಯಾದವನು ವೇದಗಳ ಅಧ್ಯಯನ ಮಾಡುವುದು ಕಡ್ಡಾಯವಾಗಿತ್ತು. ಆದರೆ, ಉಪನಯನವನ್ನು ಪಡೆದವನು ಮಾತ್ರ ವೇದಗಳನ್ನು ಅಧ್ಯಯನ ಮಾಡುವ ಹಕ್ಕುಳ್ಳವನಾಗಿದ್ದನು. ಅಂದರೆ ಆಸ್ತಿಯ ಒಡೆತನ ಹಾಗೂ ವೇದಾಧ್ಯನಕ್ಕೆ ‘ಉಪನಯನ’ವು ಅನಿವಾರ್ಯವಾಗಿತ್ತು. ಶೂದ್ರರಿಗೆ ‘ಉಪನಯನ’ವನ್ನು ತಿರಸ್ಕರಿಸುವುದರ ಮೂಲಕ, ಬ್ರಾಹ್ಮಣರು ಈ ಎರಡೂ ಹಕ್ಕುಗಳನ್ನು ಶೂದ್ರರಿಂದ ಕಸಿದುಕೊಂಡರು. ಇಡೀ ಶೂದ್ರ ಜನಾಂಗಕ್ಕೆ ಗೋರಿ ತೋಡಿಬಿಟ್ಟರು. ಇಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ. ಬ್ರಾಹ್ಮಣರು ಉಪನಯನ ಮಾಡದಿದ್ದರೇನಂತೆ” ಶೂದ್ರರೇ ಮಾಡಿಕೊಳ್ಳಬಹುದಿತ್ತಲ್ಲ? ‘ಉಪನಯನ’ವನ್ನು ನಡೆಸಿಕೊಡುವುದು ಬ್ರಾಹ್ಮಣರಿಗೆ ಮಾತ್ರ ಇದ್ದಂತಹ ಅಧಿಕಾರವಾಗಿತ್ತು. ಬ್ರಾಹ್ಮಣೇತರನಿಂದ, ಮಾಡಿಸಿದ ಉಪನಯನವು ಅನೂರ್ಜಿತಗೊಳ್ಳುತ್ತಿತ್ತು. ಹಿಂದೂ ಸಮಾಜದ ಯಾವನೇ ಒಬ್ಬ ಸದಸ್ಯನ ಸ್ಥಾನಮಾನಗಳು ಬ್ರಾಹ್ಮಣನ ಇಚ್ಚೆಯನ್ನು ಅವಲಂಭಿಸಿತ್ತು. ಈ ವಿಶ್ಲೇಷಣೆಯನ್ನು ಸಮರ್ಥಿಸಲು, ಅಂಬೇಡ್ಕರರು ಶಿವಾಜಿಯ ಪಟ್ಟಾಭಿಷೇಕವನ್ನು ಉಲ್ಲೇಖಿಸುತ್ತಾರೆ. ದಿನಾಂಕ ೬. ೬. ೧೬೭೪ ರಂದು ನಡೆದ ಈ ವೈದಿಕ ರೀತಿಯ ಪಟ್ಟಾಭಿಷೇಕವನ್ನು ಸಾಮಾಜಿಕ ಮಾನ್ಯತೆಯನ್ನು ಪಡೆಯಲೆಂದೇ ಮಾಡಲಾಗಿತ್ತು. ಶಿವಾಜಿಯನ್ನು ಶೂದ್ರನೆಂದು ತಿಳಿದಿದ್ದ ಆತನ ಮಂತ್ರಿಗಳು, ವೈದಿಕ ಪಟ್ಟಾಭಿಷೇಕವನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಕಾನೂನು ಬಾಹಿರ ಪಟ್ಟಾಭಿಷೇಕವನ್ನು ನಡೆಸಿಕೊಟ್ಟ ಗಾಗ ಭಟ್ಟನನ್ನು ಸಂತೋಷಪಡಿಸಲು, ಮಡಿಕೆಗಿಂತ ಹೆಚ್ಚಿನ ದಕ್ಷಿಣೆಯನ್ನು ಕೊಡಲಾಯಿತು.

ಒಂದು ಕಾಲಕ್ಕೆ ಕ್ಷತ್ರಿಯರೇ ಆಗಿದ್ದ ಶೂದ್ರರು ರಾಜರಾಗಿಯೂ ಆಡಳಿತ ನಡೆಸಿದ್ದರು. ಆಗ ಯಾವನೋ ಒಬ್ಬ ಅಥವಾ ಕೆಲವು ರಾಜರು ಮತ್ತು ಬ್ರಾಹ್ಮಣರ ನಡುವೆ ಉಂಟಾದ ವೈಮನಸ್ಸಿನಿಂದ ಬ್ರಾಹ್ಮಣರು ಇವರ ವಿರುದ್ಧ ಕಾರ್ಯಾಚರಣೆಗಿಳಿದರು. ‘ಶೂದ್ರ’ರನ್ನು ವಿದ್ಯೆ, ಸಂಪತ್ತುಗಳಿಂದ ದೂರವಿಟ್ಟರು. ಯಾರೋ ಕೆಲವು ರಾಜರೊಂದಿಗೆ ನಡೆದ ಕಲಹಕ್ಕಾಗಿ, ಬ್ರಾಹ್ಮಣರು ಇಡೀ ‘ಶೂದ್ರ’ ಜನಾಂಗದ ವೈರಿಗಳು ಹೇಗಾದರು? ಬ್ರಾಹ್ಮಣರು, ತಮ್ಮ ವಿರುದ್ಧ ವರ್ತಿಸಿದ ರಾಜರನ್ನು ಮಾತ್ರವಲ್ಲದೆ, ಎಲ್ಲಾ ಶೂದ್ರರನ್ನೂ ದ್ವೇಷಿಸತೊಡಗಿದರು; ಉಪನಯನವನ್ನು ಎಲ್ಲಾ ಶೂದ್ರರಿಗೂ ಬಹಿಷ್ಕರಿಸಿದರು. ತಮ್ಮ ಶ್ರೇಷ್ಠತೆ ಹಾಗೂ ವಿಶೇಷ ಹಕ್ಕುಗನ್ನು ಮೆರೆಯಲು ಎಲ್ಲಾ ಮಾಧ್ಯಮಗಳನ್ನೂ ಬಳಸಿಕೊಂಡರು. ವೀರರಾದ ಕ್ಷತ್ರಿಯರು ತಮ್ಮ ಮುಂದೆ ಅತ್ಯಂತ ದಯನೀಯ ರೀತಿಯಲ್ಲಿ ಶರಣಾಗುವಂತೆ ಸೂಚಿಸುವ ಪುರಾಣಗಳನ್ನು ಸೃಷ್ಟಿಸಿದರು. ಚಕ್ರಾಧಿಪತಿಯ ಕನಸು ಕಂಡಿದ್ದಕ್ಕಾಗಿ ವಾಮನ ಪಾದದಡಿ ಪಾತಾಳಕ್ಕಿಳಿದ ಬಲಿಚಕ್ರವರ್ತಿಯ ಕಥೆ, ತನ್ನ ತಂದೆಯನ್ನು ಕಳೆದುಕೊಂಡರೂ ನರಸಿಂಹನಿಗೆ ಶರಣಾಗುವ ಪ್ರಹ್ಲಾದ ಮುಂತಾದ ಅವಮಾನಕರವಾದ ಸುಳ್ಳು ಕಥೆಗಳನ್ನು, ಅವಹೇಳನಕಾರಿಯಾದ ಕಳ್ಳ ಪುರಾಣಗಳನ್ನು ಐತಿಹಾಸಿಕ ಸತ್ಯಗಳೆಂಬಂತೆ ಒಪ್ಪಿಕೊಳ್ಳಲು ಯಾರಿಗೆ ಸಾಧ್ಯ? ಬ್ರಾಹ್ಮಣಶಾಹಿಯನ್ನು ಬಲವಾಗಿ ಬೆಂಬಲಿಸುವವನು ಮಾತ್ರ ಒಪ್ಪಿಕೊಳ್ಳಲು ಸಾಧ್ಯ.

ಶೂದ್ರರ ಇತಿಹಾಸದ ಸಾರಾಂಶರೂಪ ಹೀಗಿದೆ. ಶೂದ್ರರು ಸೂರ್ಯವಂಶದ ಆರ್ಯಜನಾಂಗದಲ್ಲಿ ಒಬ್ಬರಾಗಿದ್ದರು. ಇಂಡೋ-ಆರ್ಯನ್‌ಸಮಾಜದಲ್ಲಿ ಕ್ಷತ್ರಿಯ ವರ್ಣಕ್ಕೆ ಸೇರಿದವರಾಗಿದ್ದರು. ಆ ಕಾಲಕ್ಕೆ, ಮೂರೇ ವರ್ಣಗಳನ್ನು ಗುರುತಿಸಲಾಗಿತ್ತು. ಶೂದ್ರರು ಪ್ರತ್ಯೇಕ ವರ್ಣವಾಗಿರದೆ. ಕ್ಷತ್ರಿಯರಲ್ಲೇ ಒಂದಾಗಿದ್ದರು. ಶೂದ್ರ ರಾಜರಿಗೂ ಬ್ರಾಹ್ಮಣರಿಗೂ ಸತತವಾಗಿ ಜಗಳವಾಗುತ್ತಿದ್ದು, ಶೂದ್ರರಿಗೆ ಅನೇಕ ರೀತಿಯ ಹಿಂಸೆ, ಅವಮಾನಗಳನ್ನು ಮಾಡಲಾಯಿತು. ಶೂದ್ರರು ಜನಿವಾರ ತೊಡುವುದನ್ನು ನಿಷೇಧಿಸಲಾಯ್ತು. ಜನಿವಾರವಿಲ್ಲದಿದ್ದರಿಂದ ಸಂಪತ್ತು ಮತ್ತು ವಿದ್ಯೆಗಳಿಂದ ದೂರವಾದ ಶೂದ್ರರು ವೈಶ್ಯರಿಗಿಂತ ಕೆಳಮಟ್ಟಕ್ಕಿಳಿದರು. ಅವರನ್ನು ನಾಲ್ಕನೇ ವರ್ಣದವರೆಂದು ಪರಿಗಣಿಸಲಾಯ್ತು.

ಅಸ್ಪೃಶ್ಯತೆಯ ಸ್ವರೂಪ

ಅಸ್ಪೃಶ್ಯತೆಯೆಂದರೆ ಮೈಲಿಗೆ, ಕೀಳುಜಾತಿಯಲ್ಲಿ ಹುಟ್ಟಿದವನನ್ನು ಮುಟ್ಟುವುದರಿಂದ ಮೈಲಿಗೆಯಾಗುತ್ತದೆ ಎನ್ನಲಾಗಿದೆ. ಮನುಷ್ಯರಲ್ಲಿ ಮೇಲು ಕೀಳೆಂಬ ಜಾತಿಗಳನ್ನು ನಿರ್ಮಿಸಿ, ಮನುಷ್ಯನನ್ನು ಮುಟ್ಟುಪ್ಪುವುದರಿಂದ ಮೈಲಿಗೆಯಾಗುತ್ತದೆ ಎನ್ನುವ

ಹಿಂದೂ ನಾಗರಿಕತೆಯು ನಾಗರಿಕತೆಯೇ ಅಲ್ಲ. ಇಡೀ ಮಾನವೀಯತೆಯನ್ನೇ ತುಳಿದು, ಗುಲಾಮರಿಗೆ ತಳ್ಳುವ ಪೈಶಾಚಿಕ ನಿರಂತರ ಯೋಜನೆಯೇ ಹಿಂದೂ ನಾಗರಿಕತೆ

ಎಂದಿದ್ದಾರೆ ಅಂಬೇಸ್ಕರ್. ಮೈಲಿಗೆಯ ಬಗ್ಗೆ ಯೋಚಿಸಿದ್ದ ಪ್ರಾಚೀನ ಸಮಾಜ, ಅದರ ನಿವಾರಣೆಗಾಗಿ ಕೆಲವು ವಿಧಾನಗಳನ್ನು ಬಳಕೆಗೆ ತಂದಿತು. ಕೊಳಕು ಕೆಲಸ ಮಾಡುವ ವ್ಯಕ್ತಿಗಳೇ ಮೈಲಿಗೆಯನ್ನಂಟಿಸಿ, ಅವನನ್ನು ಮುಟ್ಟುವುದರಿಂದಲೇ ಮೈಲಿಗೆಯಾಗುತ್ತದೆಯೆನ್ನುವ ಪದ್ಧತಿಯನ್ನು ಹುಟ್ಟುಹಾಕಲಾಯಿತು. ಹೀಗೆ, ಮೈಲಿಗೆ ಎಂಬ ಮಾನಸಿಕ ಕಲ್ಪನೆಯನ್ನು ವೈಕ್ತಿಯೊಬ್ಬನಿಗೆ ಭೌತಿಕವಾಗಿ ವರ್ಗಾಯಿಸುವುದರ ಮೂಲಕ ಅಸ್ಪೃಶ್ಯತೆ ಆಚರಣೆಗೆ ಬಂದಿತು.

ಅಂತ್ಯಜರು ಹಳ್ಳಿಯ ಹೊರಗಡೆ ವಾಸಿಸಬೇಕೆಂದು ಮನು ಹೇಳಿದ್ದಾನೆ. ಇಲ್ಲಿ ಅಂಬೇಡ್ಕರರು ಎರಡು ಸಾಧ್ಯತೆಗಳನ್ನು ಮುಂದಿಡುತ್ತಾರೆ. ಈ ಜನ, ಆದಿಕಾಲದಿಂದಲೂ, ಊರಿನ ಹೊರಗೆ ವಾಸಿಸಿದ್ದಿರಬೇಕು ಅಥವಾ ಮೊದಲಿಗೆ ಊರ ಮಧ್ಯದಲ್ಲೇ ವಾಸಿಸಿದ್ದು, ನಂತರ ಹೊರಗೆ ಹೋಗಿರಬೇಕು. ಅಂತ್ಯಜರು ಊರಿನ ಮಧ್ಯದಲ್ಲೇ ವಾಸಿಸಿದ್ದು, ಕ್ರಮೇಣ ಹೊರಗೆ ಹೋಗಿದ್ದಿದ್ದರೆ, ಅದರ ಸೂಚನೆಗಳು, ಎಲ್ಲಾದರೂ ಒಂದು ಕಡೆ ಕಾಣುತ್ತಿದ್ದವು. ಆದರೆ, ದೇಶದ ಯಾವುದೇ ಭಾಗದಲ್ಲೂ ನೋಡಿದರೂ, ಇವರು ಊರಹೊರಗೆ ಬದುಕುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಹಾಗಾಗಿ, ಇವರು ಮೊದಲಿನಿಂದಲೂ ಊರ ಹೊರಗಡೆಯೇ ವಾಸಿಸುತ್ತಿದ್ದ ಸಾಧ್ಯತೆಯೇ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ.

ಪ್ರಾಚೀನ ಸಮಾಜದಲ್ಲಿ, ರಕ್ತ ಸಂಬಂಧವನ್ನಾಧರಿಸಿದ ಅಲೆಮಾರಿ ಜನಾಂಗಗಳಿದ್ದವು. ಈ ಜನಾಂಗಗಳು ಇದ್ದದ್ದು ವಲಸೆಯು ದೃಷ್ಟಿಯಿಂದಲ್ಲ. ಪ್ರಾಚೀನ ಸಮಾಜದ ಏಕೈಕ ಸಂಪತ್ತು ಪಶುವಾಗಿತ್ತು. ಪಶುಗಳು ಒಂದು ಹುಲ್ಲುಗಾವಲಿನಿಂದ ಮತ್ತೊಂದು ಹುಲ್ಲುಗಾವಲಿಗೆ ಹೋಗಬೇಕಿತ್ತು. ಇವುಗಳನ್ನು ಆಧರಿಸಿದ ಜನರೂ ಸಹ ಅವುಗಳ ಹಿಂದೆಯೇ ಹೋಗಬೇಕಿತ್ತು. ಇವುಗಳನ್ನು ಆಧರಿಸಿದ ಜನರೂ ಸಹ ಅವುಗಳ ಹಿಂದೆಯೇ ಹೋಗಬೇಕಿತ್ತು. ಆದರೆ ಇದೇ ಸಮಾಜವು ಭೂಮಿಯನ್ನು ಸಂಪತ್ತು ಸಾಧನವನ್ನಾಗಿ ಹೊಂದಿದಾಗ, ಒಂದೆಡೆ ನೆಲೆಸುವುದು ಅನಿವಾರ್ಯವಾಯಿತು. ವ್ಯವಸಾಯದ ಪ್ರಗತಿಯು ಪ್ರಮುಖ ಆದಾಯ ಮೂಲವನ್ನು ಸೃಷ್ಟಿಸಿತು. ಅದರ ಸುತ್ತ ಇಡೀ ಸಮಾಜ ತಳವೂರಿತು ಪ್ರಾಚೀನ ಸಮಾಜದ ಎಲ್ಲಾ ಪಂಡಗಳೂ ಏಕಕಾಲಕ್ಕೆ ನೆಲೆಯಾಗಿ ನಿಲ್ಲಲಿಲ್ಲ. ಕೆಲವು ಪಂಗಡಗಳು ಮಾತ್ರ, ನೆಲ ಊಳುತ್ತಾ ಸ್ಥಿರವಾಗಿ ಒಂದು ಕಡೆ ನಿಂತವು. ಸ್ಥಿರವಾಗಿ ನಿಂತ ಜನರಿಗೂ ಅಲೆಮಾರಿಗಳಾದ್ದವರಿಗೂ ಆಗಾಗ ಕದನ ನಡೆಯುತ್ತಿತ್ತು. ಇದರ ಪರಿಣಾಮವಾಗಿ, ಪರಾಜಿತಗೊಂಡ ಪಂಗಡಗಳು ಹುಟ್ಟಿಕೊಂಡವು. ಈ ಪಂಗಡಗಳು ಛಿದ್ರಗೊಂಡ ಸಣ್ಣ ಸಣ್ಣ ಗುಂಪುಗಳಾಗಿದ್ದು, ದಿಕ್ಕುದೆಸೆಯಿಲ್ಲದೆ ಅಲೆದಾಡುವವರಾಗಿದ್ದರು. ಈ ಛಿದ್ರಗೊಂಡ ಗುಂಪುಗಳಿಗೆ ನೆರಳು ಮತ್ತು ರಕ್ಷಣೆ ಸಮಸ್ಯೆಯಾಯಿತು. ಆಗ, ನೆಲೆಗೊಂಡ ಜನರ ಹಾಗೂ ಅಲೆಮಾರಿ ಜನರ ನಡುವೆ ಒಂದು ಒಪ್ಪಂದ ಏರ್ಪಟ್ಟಿತು. ಅಲೆಮಾರಿ ಜನರು ನೆಲೆಗೊಂಡ ಜನರ ಆಸ್ತಿಪಾಸ್ತಿಗಳನ್ನು ಕಾವಲು ಕಾಯುವ ಕೆಲಸವನ್ನು ಒಪ್ಪಿಕೊಂಡರು. ಈ ಕಾವಲಿನ ಕೆಲಸಕ್ಕೆ ಪ್ರತಿಯಾಗಿ, ಅವರಿಗೆ ಊಟ ಮತ್ತು ಆಶ್ರಮವನ್ನು ಕೊಡಲು ಸ್ಥಿರಗೊಂಡ ಜನ ಒಪ್ಪಿದರು. ಅಲೆಮಾರಿ ಜನರು ಪರಕೀಯರಾದ್ದರಿಂದ, ಊರ ಹೊರಗೆ ವಾಸಮಾಡತೊಡಗಿದರು. ಹೀಗಾಗಿ ಈ ಜನ ಮೊದಲಿನಿಂದಲೂ ಊರಹೊರಗೆ ವಾಸ ಮಾಡತೊಡಗಿದರು. ಹೀಗಾಗಿ ಈ ಜನ ಮೊದಲಿನಿಂದಲೂ, ಊರಹೊರಗೆ ವಾಸ ಮಾಡುವುದು ಸಹಜವಾಯ್ತು. ಊರ ಹೊರಗೆ ಉಳಿದವರೇ ಮುಂದೆ ಅಸ್ಪೃಶ್ಯರಾದವರು ಎನ್ನುತ್ತಾರೆ ಅಂಬೇಡ್ಕರ್.

ಅವರ್ಣೀಯ ಅಸ್ಪೃಶ್ಯರು

ಅಂಬೇಡ್ಕರರ ಪ್ರಕಾರ, ಅಸ್ಪೃಶ್ಯರು ವರ್ಣವ್ಯವಸ್ಥೆಯ ಹಿಡಿತದಲ್ಲಿಲ್ಲ. ಶೂದ್ರರು ವರ್ಣವ್ಯವಸ್ಥೆಯಲ್ಲಿರುವ ‘ಸವರ್ಣೀಯ’ರಾಗಿದ್ದರೆ, ಅಸ್ಪೃಶ್ಯರು ‘ಅವರ್ಣೀಯ’ರಾಗಿದ್ದಾರೆ. ಹಿಂದೂ ಸಿದ್ಧಾಂತದಲ್ಲಿನ ‘ಸೃಷ್ಟಿ ಪ್ರಾಮುಖ್ಯತೆ’ಯು ಅಸ್ಪೃಶ್ಯನಿಗೆ ಅನ್ವಯಿಸುವುದಿಲ್ಲ. ಅಸ್ಪೃಶ್ಯರನ್ನು ಅಂತ್ಯ, ಅಂತ್ಯಜ ಮತ್ತು ಅಂತ್ಯವಾಸಿನ್‌ಎಂದು ಕರೆಯಲಾಗಿದೆ. ಅಂತ್ಯ ಎಂದರೆ ಸೃಷ್ಟಿಯ ಕೊನೆಯಲ್ಲ. ಊರಿನ ಕೊನೆ ಎಂದು ಅರ್ಥ. ಊರ ಹೊರಗಿನ ಅಂಚಿನಲ್ಲಿ ವಾಸ ಮಾಡುವವರನ್ನು ಅಂತ್ಯಜ ಎಂದು ಕರೆಯಲಾಗುತ್ತಿತ್ತು. ಪ್ರಾಚೀನ ಸಮಾಜವು ಬುಡಕಟ್ಟಿನ ಲಕ್ಷಣಗಳನ್ನು ಕಳೆದುಕೊಂಡು ಪ್ರಾಂತೀಯ ಲಕ್ಷಣಗಳನ್ನು ಪಡೆದುಕೊಂಡಾಗ ಕಾವಲು ಕಾಯುತ್ತಿದ್ದ ಛಿದ್ರಗೊಂಡ ಗುಂಪು ಪ್ರತ್ಯೇಕವಾಗಿಯೇ ಉಳಿಯುವುದು ಅನಿವಾರ್ಯವಾಯಿತು. ಮಹಾರಾಷ್ಟ್ರದ ‘ಮಹರ’ರು ಆದಿಕಾಲದಿಂದಲೂ ಊರ ಹೊರಗಡೆಯೇ ನೆಲೆಸಿದ್ದರು. ಏಕೆಂದರೆ, ಕೃಷಿಪ್ರದೇಶಗಳ ಒಡೆತನ ಹೊಂದಿದ್ದ ನೆಲೆಗೊಂಡ ಗುಂಪುಗಳಿಗೆ ಇವರು ಸೇರಿರಲಿಲ್ಲ. ಅಸ್ಪೃಶ್ಯರು ಬೇರೆಯ ಬುಡಕಟ್ಟು ಮತ್ತು ಬೇರೆ ರಕ್ತಕ್ಕೆ ಸೇರಿದ್ದರಿಂದ, ಪ್ರತ್ಯೇಕವಾಗಿ ನೆಲೆಸುವುದು ಸ್ಥಿರವಾಗಿ ಉಳಿಯಿತು.

ಜನಾಂಗ ಮತ್ತು ವೃತ್ತಿಯ ಸಿದ್ಧಾಂತ

ಅಸ್ಪೃಶ್ಯತೆಯ ಹುಟ್ಟು ಮತ್ತು ಬೆಳವಣಿಗೆಗಳನ್ನು ಹೇಳುವ ಹಲವು ಸಿದ್ಧಾಂತಗಳಿವೆ. ಸ್ಟ್ಯಾನ್ಲಿರಾಸ್ನ್‌ಪ್ರಕಾರ,

ಅಸ್ಪೃಶ್ಯರು ಆರ್ಯೇತರರು ಹಾಗೂ ದ್ರಾವಿಡೇತರರಾದ ಮೂಲ ನಿವಾಸಿಗಳು. ಅಲ್ಲದೆ ದ್ರಾವಿಡರಿಂದ ಸೋಲಿಸಲ್ಪಟ್ಟ ಜನ, ಇವರು ಆರ್ಯರಿಂದ ಸೋಲಿಸಲ್ಪಟ್ಟವರಲ್ಲ. ಈತನ ಪ್ರಕಾರ ಅಸ್ಪೃಶ್ಯತೆಯ ಮೂಲ ಎರಡು ಪರಿಸ್ಥಿತಿಗಳಲ್ಲಿ ಕಂಡು ಬರುತ್ತದೆಜನಾಂಗ ಮತ್ತು ವೃತ್ತಿ. ಈತ ಮತ್ತೊಂದು ಹೇಳುತ್ತಾನೆ: ಭಾರತ ದೇಶವು ಎರಡು ಬಾರಿ ಆಕ್ರಮಣಕ್ಕೊಳಗಾಯಿತು. ಒಮ್ಮೆ ದ್ರಾವಿಡರಿಂದ, ಮತ್ತೊಮ್ಮೆ ಆರ್ಯರಿಂದ.

ರಾಸ್ರ್ ಸಿದ್ಧಾಂತವನ್ನು ‘‘ತೀರಾ ಯಾಂತ್ರಿಕವಾದ ಊಹೆ”ಎನ್ನುತ್ತಾರೆ ಅಂಬೇಡ್ಕರ್. ಅಂಬೇಡ್ಕರರ ಪ್ರಕಾರ,

ದ್ರಾವಿಡ ಮತ್ತು ನಾಗಾ ಎಂಬುದು ಒಂದೇ ಜನಾಂಗಕ್ಕಿದ್ದ ಭಿನ್ನ ಹೆಸರುಗಳು. ನಾಗಾ ಜನರು ದಕ್ಷಿಣದಲ್ಲಿ ಮಾತ್ರವಿರದೆ, ಇಡೀ ಭಾರತಾದ್ಯಂತ ಹರಡಿದ್ದಾರೆ. ಉತ್ತರ ಭಾರತದ ನಾಗಾ ಜನ ತಮ್ಮ ಮಾತೃಭಾಷೆಯಾದ ತಮಿಳನ್ನು ಬಿಟ್ಟು, ಅದರ ಸ್ಥಾನದಲ್ಲಿ ಸಂಸ್ಕೃತವನ್ನು ಒಪ್ಪಿಕೊಂಡರು. ಇದರರ್ಥ, ‘ನಾಗಾಎಂಬುದು ಜನಾಂಗೀಯ ಅಥವಾ ಸಾಂಸ್ಕೃತಿಕ ಹೆಸರು. ಆದರೆದ್ರಾವಿಡಎಂಬುದು ಭಾಷಾಧಾರಿತ ಹೆಸರು. ದಾಸರು ನಾಗಾಜನರೇ ಆಗಿದ್ದರು ಮತ್ತು ನಾಗಾಜನರೇ ದ್ರಾವಿಡರಾಗಿದ್ದರು.

ಆದ್ದರಿಂದ, ಇಲ್ಲಿ ಆರ್ಯರು ಮತ್ತು ನಾಗಾಜನ ಮಾತ್ರ ಇದ್ದರೆನ್ನುವುದು ಸ್ಪಷ್ಟ. ಅಲ್ಲದೆ, ಅಸ್ಪೃಶ್ಯರು ಆರ್ಯ ದ್ರಾವಿಡರಿಗಿಂತ ಹೊರತಾದ ಜನಾಂಗಕ್ಕೆ ಸೇರಿದ್ದರೆನ್ನುವುದು ಸುಳ್ಳಾಗುತ್ತದೆ. ಮಾನವಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳು, ಬ್ರಾಹ್ಮಣರು ಹಾಗೂ ಅಸ್ಪೃಶ್ಯರು ಒಂದೇ ಜನಾಂಗಕ್ಕೆ ಸೇರಿದವರು ಎಂಬುದನ್ನು ನಿರೂಪಿಸಿದೆ. ಇದು ವಾಸ್ತವ ಸಂಗತಿಯಾಗಿರುವಾಗ ದಾಸರ ಸಿದ್ಧಾಂತವು ಸುಳ್ಳು ಆಧಾರಗಳ ಮೇಲೆ ನಿಂತಿದೆ ಎನ್ನಬೇಕಾಗುತ್ತದೆ.

ವೃತ್ತಿಯಿಂದಲೇ ಅಸ್ಪೃಶ್ಯತೆ ಹುಟ್ಟಿತೆನ್ನುವುದನ್ನು ಅಂಬೇಡ್ಕರ್ ಒಪ್ಪುವುದಿಲ್ಲ. ಚವತುರ್ವರ್ಣ್ಯ ವ್ಯವಸ್ಥೆಯ ಆಧಾರ ಸ್ಥಂಭವೇ ಅಸಮಾನತಾ ತತ್ತ್ವವಾಗಿದೆ. ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರು, ಅಸಮಾನತೆಯನ್ನು ಆಧರಿಸಿ, ತಮ್ಮ ಮೇಲಿನವರಿಗೆ ಗುಲಾಮರಾಗಿದ್ದ ಹಾಗೆಯೇ ಮೇಲಿನವರ ಸೇವೆಯ ಹೆಸರಿನಲ್ಲಿ ಅನೇಕ ಹೊಲಸು ಕೆಲಸಗಳನ್ನು ಮಾಡಿರುತ್ತಾರೆ. ಆದರೆ ಅವರಾರೂ ಅಸ್ಪೃಶ್ಯರಾಗಿರಲಿಲ್ಲ. ಹಾಗಿರುವಲ್ಲಿ, ವೃತ್ತಿಯಿಂದ ಅಸ್ಪೃಶ್ಯತೆ ಹುಟ್ಟಿತೆಂದು ಹೇಳುವುದು ಸಮರ್ಥನೀಯವಲ್ಲ.

ಗೋಮಾಂಸ ತಿಂದ ಬ್ರಾಹ್ಮಣರು

ಅಂಬೇಡ್ಕರರ ಪ್ರಕಾರ, ಛಿದ್ರಗೊಂಡ ಜನರು ಬೌದ್ಧರಾಗಿದ್ದರು. ಬೌದ್ಧರಿಗೂ ಬ್ರಾಹ್ಮಣರಿಗೂ ಇದ್ದ ವೈರತ್ವದಿಂದಾಗಿ, ಬ್ರಾಹ್ಮಣರು ಛಿದ್ರಗೊಂಡ ಜನರ ವಿರುದ್ಧ ದ್ವೇಷ ಮತ್ತು ತಿರಸ್ಕಾರಗಳನ್ನು ಬೋಧಿಸಿದರು. ಆದ್ದರಿಂದಲೇ, ಛಿದ್ರಗೊಂಡ ಜನ ಅಸ್ಪೃಶ್ಯರಾಗಿ ಪರಿಗಣಿಸಲ್ಪಟ್ಟರು. ಅಸ್ಪೃಶ್ಯತೆಯನ್ನು ಮತ್ತಷ್ಟು ತೀವ್ರಗೊಳಿಸಲು ಇನ್ನಿತರ ಪರಿಸ್ಥಿತಿಗಳು ಪಾತ್ರವಹಿಸಿವೆ ಎಂಬುದು ಸ್ಪಷ್ಟ. ಅಸ್ಪೃಶ್ಯತೆಯ ಮೂಲವನ್ನು ಗೋಮಾಂಸ ಭಕ್ಷಣೆ ಕಾಣಬಹುದು. ಈ ಸಂಗತಿಯು ಸ್ಮೃತಿಕಾರರಿಗೂ ಗೊತ್ತಿತ್ತು. ಛಿದ್ರಗೊಂಡ ಜನರು ಬೌದ್ಧರಾಗಿರುವುದು ಮಾತ್ರವಲ್ಲದೆ, ಗೋಮಾಂಸ ಭಕ್ಷಣೆಯ ಅಭ್ಯಾಸವನ್ನೂ ಉಳಿಸಿಕೊಂಡಿದ್ದರು. ಬೌದ್ಧರ ವಿರುದ್ಧ ತಿರಸ್ಕಾರವನ್ನು ಹುಟ್ಟುಹಾಕಲು ಸಾಧನವಾಗಿ ಬಳಸಿಕೊಳ್ಳಲಾಯಿತು.

ಮನಸ್ಮೃತಿಯಲ್ಲಿ, ಗೋಹತ್ಯೆಯನ್ನು ನಿಷೇಧಿಸಿಲ್ಲ. ಬ್ರಾಹ್ಮಣರು ಎಲ್ಲರಿಗಿಂತ ಗೋಮಾಂಸ ಭಕ್ಷಕರಾಗಿದ್ದರು. ಬ್ರಾಹ್ಮಣರು ನಡೆಸುತ್ತಿದ್ದ ಯಜ್ಞವು, ಧರ್ಮದ ಹೆಸರಿನಲ್ಲಿ ನಡೆಯಿತ್ತಿದ್ದ ಸಾಧುಪ್ರಾಣಿಗಳ ಹತ್ಯೆಯಾಗಿತ್ತು: ಗೋಮಾಂಸ ಭಕ್ಷಣೆಯ ಆಸೆಯನ್ನು ನೇರವೇರಿಸಿಕೊಳ್ಳುವ ಕಳ್ಳವೇಷವಾಗಿತ್ತು. ಮನು ಹಸುವನ್ನು ಪವಿತ್ರಪ್ರಾಣಿ ಎಂದು ಪರಿಗಣಿಸಿಲ್ಲ. ಬದಲಿಗೆ, ಅದನ್ನು ಕೊಳಕು ಪ್ರಾಣಿಯಂತಲೂ, ಅದನ್ನು ಮುಟ್ಟುವುದರಿಂದ ಮೈಲಿಗೆಯಾಗುವುದೆಂದೂ ಹೇಳಿದ್ದಾನೆ. ಆದರೆ, ಹಸುವಿನ ಮಾಂಸ ತಿನ್ನುವುದರ ಬಗ್ಗೆ ಯಾವುದೇ ಆಕ್ಷೇಪವನ್ನು ಹೇಳಿಲ್ಲ: ಗೋಹತ್ಯೆಯು ಅಪರಾಧವೆಂದೂ ಹೇಳಿಲ್ಲ. ಹಾಗಿದ್ದಲ್ಲಿ, ಬ್ರಾಹ್ಮಣರು ಸಸ್ಯಹಾರಿಗಳಾಗಲು ಕಾರಣವೇನು? ಒಂದು ಕಾಲದಲ್ಲಿ, ಬೌದ್ಧಧರ್ಮವು ಭಾರತದ ಬಹುತೇಕ ಜನರ ಧರ್ಮವಾಗಿತ್ತು. ಬಹುಕಾಲದವರೆಗೆ ಬೌದ್ಧ ಧರ್ಮವೇ ಭಾರತೀಯರ ಧರ್ಮವಾಗಿ ಮುಂದುವರಿಯಿತು. ಅಲ್ಲದೆ, ಬ್ರಾಹ್ಮಣ ಧರ್ಮವನ್ನು ನಿರ್ನಾಮ ಮಾಡತೊಡಗಿತು. ಆಗ , ಬ್ರಾಹ್ಮಣರಿಗೆ ಬೌದ್ಧಧರ್ಮದ ವಿರುದ್ಧ ಹೋರಾಡುವುದು ಸಾಧ್ಯವೇ ಇರಲಿಲ್ಲ. ಬೌದ್ಧಧರ್ಮದ ನೀತಿ ನಿಯಮಗಳನ್ನೇ ಅತ್ಯುನ್ನತ ರೂಪದಲ್ಲಿ ಆಚರಣೆಗೆ ತರುವುದರೆ ಮೂಲಕ ಮಾತ್ರ ಬೌದ್ಧಧರ್ಮವನ್ನು ಎದುರಿಸಲು ಸಾಧ್ಯ ಎಂದು ಕಂಡುಕೊಂಡರು. ಆದ್ದರಿಂದ, ಪ್ರಾಣಿಬಲಿಗಳನ್ನು, ಯಜ್ಞ ಹಾಗೂ ಗೋಹತ್ಯೆಗಳನ್ನು ಬಿಡುವುದರ ಮೂಲಕ ಬ್ರಾಹ್ಮಣರು ತಮ್ಮ ಸ್ಥಾನವನ್ನು ಉತ್ತಮಪಡಿಸಲು ಯೋಚಿಸಿದರು. ಅಂಬೇಡ್ಕರರ ಪ್ರಕಾರ, ಗೋವಿನ ಪೂಜೆಯು ಬ್ರಾಹ್ಮಣರ ಹಾಗೂ ಬೌದ್ಧರ ನಡುವಿನ ಕಲಹದ ಫಲವಾಗಿದೆ. ಬೌದ್ಧ ಧರ್ಮವು ಹಸುವನ್ನು ಒಳಗೊಂಡು, ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಿತ್ತು. ಹಿಂದೂ ಧರ್ಮದ ಪ್ರತಿಪಾದಕರಾದ ಗುಪ್ತವಂಶದ ರಾಜರು ಗೋಹತ್ಯೆಯನ್ನು ಘೋರಪಾತಕವನ್ನಾಗಿ ಮಾಡಿದರು. ಬ್ರಾಹ್ಮಣರು ಗೋಭಕ್ಷಣೆಯನ್ನು ಕೈಬಿಡಲು ಮುಖ್ಯಕಾರಣ, ಬೌದ್ಧರ ಶ್ರೇಷ್ಠತೆಯನ್ನು ಕಸಿದುಕೊಳ್ಳುವುದೇ ಆಗಿತ್ತು. ಬೌದ್ಧರು ಪ್ರಾಣಿ ದಯೆಯ ಬಗ್ಗೆ ಬೋಧಿಸಿ ಯಜ್ಞ ಯಾಗಾದಿಗಳನ್ನು ನಿಷೇಧಿಸಿದ್ದರು. ಬ್ರಾಹ್ಮಣರು ಒಂದು ಹೆಜ್ಜೆ ಮುಂದೆ ಹೋಗಿ, ಸಂಪೂರ್ಣವಾಗಿ ಸಸ್ಯಹಾರಿಗಳಾದರು. ಕಳೆದು ಹೋಗಿದ್ದ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಹೂಡಿದ ಈ ತಂತ್ರ ಫಲಿಸಿತು. ಅಂಬೇಡ್ಕರರ ಪ್ರಕಾರ ‘ಗೋಮಾಂಸ ಭಕ್ಷಣೆ’ಯೇ ಅಸ್ಪಶ್ಯತೆಗೆ ಮೂಲಕಾರಣ.

ಅಸ್ಪೃಶ್ಯತೆ ಹುಟ್ಟಿದ್ದು ಯಾವಾಗ

ವೇದ ಕಾಲದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಧರ್ಮಸೂತ್ರಗಳ ಕಾಲದಲ್ಲಿ ‘ಅಶುದ್ಧಿ’ ಇತ್ತು. ಆದರೆ ಅಸ್ಪೃಶ್ಯತೆಯಿರಲಿಲ್ಲ. ಮನುಸ್ಮೃತಿಯ ಕಾಲದಲ್ಲಿ ಕೇವಲ ನಾಲ್ಕು ವರ್ಣಗಳು ಮಾತ್ರ ಇದ್ದವು. ಐದನೆಯ ವರ್ಣವಿರಲಿಲ್ಲ. ಮನುವಿನ ಕಾಲದಲ್ಲಿ ಅಸ್ಪೃಶ್ಯತೆಯಿರಲಿಲ್ಲ. , ‘ಅಶುದ್ಧಿ’ಯಿತ್ತು. ನಾರದಸ್ಮೃತಿಯ ಕಾಲವನ್ನು ನಿರ್ಧರಿಸಲು ಯತ್ನಿಸಿದ್ದಾರೆ. ಬುಹ್ಲರ್ ರ ಪ್ರಕಾರ, ಅದು ಎರಡನೇ ಶತಮಾನ: ದಪ್ತರೇಯರ ಪ್ರಕಾರ ಕ್ರಿ. ಪೂ. ೧೮೫ರ ನಂತರ, ಪುಷ್ಪಮಿತ್ರ ಮತ್ತು ಮನುವಿನ ಸಿದ್ಧಾಂತದ ನಡುವಿನ ಸಂಬಂಧವು, ಮನುಸ್ಮೃತಿಯು ಕ್ರಿ. ಪೂ. ೧೮೫ರ ನಂತರವಷ್ಟೇ ಅಸ್ತಿತ್ವಕ್ಕೆ ಬಂದಿದೆಯೆಂಬುದನ್ನು ತೋರಿಸುತ್ತದೆ. ಎರಡನೆಯ ಶತಮಾನದಲ್ಲಿ ಅಸ್ಪೃಶ್ಯತೆಯಿರಲಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕ್ರಿ. ಪೂ. ೪೦೦ರಲ್ಲಿ ಭಾರತಕ್ಕೆ ಭೇಟಿಯಿತ್ತ ಚೀನಾದ ದೇಶದ ಯಾತ್ರಿಕನಾದ ಫಾ-ಹಿಯಾನನು ಚಂಡಾಲರ ಬಗ್ಗೆ ಹೇಳುತ್ತಾನೆ. ಆತನು ವಿವರಿಸಿರುವ ಅಂದಿನ ಸ್ಥಿತಿಗತಿಗಳು ಅಸ್ಪೃಶ್ಯತೆಯ ಅಸ್ತಿತ್ವದ ಬಗ್ಗೆ ಹೇಳುವುದಿಲ್ಲ. ಬ್ರಾಹ್ಮಣ ಧರ್ಮದ ಪೋಷಕರಾದ ಗುಪ್ತವಂಶದ ರಾಜರ ಕಾಲದಲ್ಲಿ, ಭಾರತಕ್ಕೆ ಭೇಟಿಯಿತ್ತ ಫಾ-ಹಿಯಾನ್‌ನು ಕಂಡಿರುವುದು ಅಶುದ್ಧಿಯ ಅತಿರೇಕವೇ ವಿನಾಃ ಅಸ್ಪೃಶ್ಯತೆಯಲ್ಲ. ಬಾಣನ ‘ಕಾದಂಬರಿ’ಯಲ್ಲಿ ಚಂಡಲಾರ ವರ್ಣನೆಯಿದೆ. ಬಾಣನ ಕಾಲದಲ್ಲಿ ಚಂಡಾಲರಲ್ಲಿ ಆಳುವ ಮನೆತನಗಳೂ ಇದ್ದವು. ಏಕೆಂದರೆ, ಆತನ ‘ಕಾದಂಬರಿ’ಯಲ್ಲಿ ಬರುವ ಚಂಡಾಲ ಕನ್ಯಯನ್ನು ‘ರಾಜಕುಮಾರಿ’ಯೆಂದು ಕರೆಯಲಾಗುತ್ತದೆ. ಬಾಣನ ಕಾಲವು ಕ್ರಿ. ಶ. ೬೦೦ ಎಂದು ಹೇಳಲಾಗಿದೆ. ಆ ಕಾಲದಲ್ಲಿ ಚಂಡಾಲರು ಅಸ್ಪೃಶ್ಯರಾಗಿರಲಿಲ್ಲ. ಫಾ-ಹಿಯಾನ್‌ನ ನಂತರ ಬಂದ ಯು ಆನ್‌ಚ್ವಾಂಗನ್ನು ಚಂಡಾಲರ ಬಗ್ಗೆ ಮಾತ್ರವಲ್ಲದೆ ಇತರರ ಬಗ್ಗೆಯೂ ಹೇಳಿದ್ದಾನೆ. ಯುಆನ್‌ಚಾಂಗನು ಭಾರತಕ್ಕೆ ಬಂದ ಕಾಲದಲ್ಲೇ ಅಸ್ಪೃಶ್ಯತೆಯು ಕಾಣಿಸಿಕೊಂಡಿರಬಹುದು. ಕ್ರಿ. ಶ. ೨೦೦ರಲ್ಲಿ ಕಾಣದಿದ್ದ ಅಸ್ಪೃಶ್ಯತೆಯು ಕ್ರಿ. ಶ. ೬೦೦ರಲ್ಲಿ ಬಲವಾಗಿ ಬೆಳೇದಿರಬಹುದು. ನಾಲ್ಕನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಗೋಹತ್ಯಯನ್ನು ಮಹಾಅಪರಾಧವೆಂದು ಘೋಷಿಸಲಾಗಿತ್ತು. ಆದ್ದರಿಂದ ಅಸ್ಪೃಶ್ಯತೆಯು ಕ್ರಿ. ಶ ೪೦೦ರಲ್ಲಿ ಹುಟ್ಟಿರಬಹುದು. ಅಸ್ಪೃಶ್ಯತೆಯು ಬ್ರಾಹ್ಮಣ-ಬೌದ್ಧರ ಕಲಹದಿಂದ ಹುಟ್ಟಿದೆ.

ಜಾತಿ ಪದ್ಧತಿ

ಜಾತಿ ಪದ್ಧತಿಯನ್ನು ಕುರಿತಂತೆ, ಅಂಬೇಡ್ಕರರ ಮೊದಲ ಲೇಖನವನ್ನು ದಿನಾಂಕ ೯. ೫. ೧೯೧೦ ರಂದು ನ್ಯೂಯಾರ್ಕ್‌ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಡೆದ ಡಾ. ಎ. ಎ. ಓಲ್ಡನ್‌ವೈಸ್‌ರವರ ವಿಚಾರ ಸಂಕಿರಣದಲ್ಲಿ ಮಂಡಿಸಲಾಯಿತು, ಈ ಲೇಖನದಲ್ಲಿ ಜಾತಿಗಳ ಅರ್ಥ ನಿರೂಪಣೆಯು ಸೆನೆರ್ಟ, ನೆಸ್‌ಫೀಲ್ಡ್, ರಿಸ್ಲೆ ಹಾಗೂ ಎಸ್. ವಿ. ಕೇಟ್ಕರ್ ರವರು ಹೇಳಿದ್ದೇ ಆಗಿದೆ.

ಭಾರತದಲ್ಲಿ, ಜಾತಿಗಳು ಎಲ್ಲಿಯತನಕ ಇರುವವೋ ಅಲ್ಲಿಯ ತನಕ ಹಿಂದೂಗಳು ಅಂತರ್ಜಾತೀಯ ವಿವಾಹವನ್ನು ಒಪ್ಪಲಾರರು. ಹಿಂದೂಗಳು ಈ ಭೂಮಿಯ ಇತರ ಭಾಗಗಳಿಗೆ ವಲಸೆ ಹೋದಲ್ಲಿ, ಜಾತಿಯೆಂಬುದು ಜಗತ್ತಿನ ಸಮಸ್ಯೆಯಾಗಿ ಬಿಡುತ್ತದೆ.

ಎಂದು ಎಸ್. ವಿ. ಕೇಟ್ಲರ್ ಹೇಳಿದ್ದಾರೆ. ಜಾತಿಯಲ್ಲಿನ ಎರಡು ಮುಖ್ಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು: ಮೊದಲನೆಯದು, ಅದರಲ್ಲೇ ಹುಟ್ಟಿದವರಿಗೆ ಮಾತ್ರ ಅದರ ಸದಸ್ಯತ್ವ ಸೀಮಿತ ಮತ್ತು ಎರಡನೆಯದಾಗಿ, ಅದರ ಸದಸ್ಯರು ಇತರ ಜಾತಿಯವರನ್ನು ಮದುವೆಯಾಗುವಂತಿಲ್ಲ. ಜಾತಿಗೆ ಧರ್ಮದ ಗಂಧವಿದ್ದುದ್ದರಿಂದಲೇ ಮೈಲಿಗೆಯೆಂಬ ಕಲ್ಪನೆ ಹುಟ್ಟಿಕೊಂಡಿತು. ಹೊರಗಿನವರೊಂದಿಗೆ ಸಹಬೋಜನ ಮಾಡುವುದನ್ನು ಬಹಿಷ್ಕರಿಸಿರುವುದೂ ಸಹ ಜಾತೀಯತೆಯಲ್ಲಿನ ಪ್ರತ್ಯೇಕತೆಯ ಸಹಜ ಪ್ರತಿಫಲವಾಗಿದೆ. ಆದರೆ ಭಾರತೀಯ ಜನ ಸಮೂಹಕ್ಕೆ ಜಾತಿ ಎಂಬುದು ಸಹಜವಾಗಿರಲಿಲ್ಲ.

ನಿರ್ದಿಷ್ಟ ಪ್ರದೇಶಗಳನ್ನು ಆವರಿಸಿದ್ದ ಭಾರತದ ವಿವಿಧ ಜನಾಂಗಗಳು ಒಂದರೊಡನೆ ಮತ್ತೊಂದು ಬೆರೆತು ಸಾಂಸ್ಕೃತಿಕ ಐಕ್ಯತೆಯನ್ನು ಹೊಂದಿದ್ದವು. ತಮ್ಮ ತಮ್ಮ ಪಂಗಡಗಳಲ್ಲೇ ಮದುವೆಯಾಗುವ ಪದ್ಧತಿಯಲ್ಲಿ ಈ ಸಾಂಸ್ಕೃತಿಕ ಐಕ್ಯತೆಯು ಪ್ರತಿಬಿಂಬಿತವಾಗಿದೆ. ಆದ್ದರಿಂದ, ಈ ಪಂಗಡಗಳಲ್ಲೇ ಇರಬಹುದಾದ ವಿವಾದ ಯೋಗ್ಯ ಘಟಕಗಳಲ್ಲಿನ ಭಿನ್ನಮತವನ್ನು ಸರಿಪಡಿಸಲೆಂದೇ ಜಾತಿಪದ್ಧತಿ ಜಾರಿಗೆ ಬಂದಿರಬಹುದು. “ಜಾತಿಯ ಮೂಲ, ಸಗೋತ್ರ, ವಿವಾಹ ಪದ್ಧತಿಯ ಮೂಲವೇ ಆಗಿದೆ” ಎಂದಿದ್ದಾರೆ ಅಂಬೇಡ್ಕರ್. ಈ ಜಾತಿಪದ್ಧತಿಯನ್ನು ಉಳೆಸಲೆಂದೇ, ಜನರಿಗೆ ಶಸ್ತ್ರಾಸ್ತ್ರ ವಿದ್ಯ ಮತ್ತು ಆಸೆಯ ಹಕ್ಕನ್ನು ನಿರಾಕರಿಸಲಾಗಿತ್ತು. ಜಾತಿಪದ್ಧತಿಯು ಆಳುವ ಜನರಿಂದ ಆಳಿಸಿಕೊಂಡವರ ಮೇಲೆ ಬಲವಂತದ ಹೇರಿಕೆಯಾಗಿತ್ತೇ ಹೊರತು ಸಹಜ ಸ್ಥಿತಿಯಾಗಿರಲಿಲ್ಲ.

ಜಾತಿಯ ಬಗ್ಗೆ ಅಂಬೇಡ್ಕರರ ಅಧ್ಯಯನವು ನಾಲ್ಕು ಅಂಶಗಳನ್ನು ಒಳಗೊಂಡಿದೆ. ಹಿಂದೂ ಜನಸಮೂಹವು ವಿಭಿನ್ನ ಜನಾಂಗಗಳ ರಚನೆಯಾಗಿದ್ದರೂ, ಆಳದಲ್ಲಿ ಸಾಂಸ್ಕೃತಿಕ ಐಕ್ಯತೆಯನ್ನು ಹೊಂದಿದೆ: ಬೃಹತ್ ಸಾಂಸ್ಕೃತಿಕ ಐಕ್ಯತೆಯ ಸಣ್ಣ ಘಟಕವಾಗಿ ಜಾತಿ ರೂಪುಗೊಂಡಿದೆ: ಆರಂಭದಲ್ಲಿ, ಒಂದೇ ಜಾತಿಯು ಇದ್ದಿತ್ತು : ಹೊಸ ಪ್ರವೇಶ ಮತ್ತು ಬಹಿಷ್ಠಾರಗಳಿಂದ, ಒಂದೇ ಜಾತಿಯಲ್ಲಿನ ವರ್ಗಗಳೇ ಜಾತಿಗಳಾಗಿ ಬಿಟ್ಟವು. *

ಪರಾಮರ್ಶನ ಗ್ರಂಥಗಳು

೧. ಡಾ. ಬಿ. ಆರ್. ಅಂಬೇಡ್ಕರ್, ಅಸ್ಪೃಶ್ಯರು, ಅನುವಾದ; ಕುಮಾರ ವೆಂಕಣ್ಣ

೨. ಡಾ. ಬಿ. ಆರ್. ಅಂಬೇಡ್ಕರ್, ಜಾತಿ ವಿನಾಶ, ಅನುವಾದ: ಮ. ನ. ಜವರಯ್ಯ

—-
* ಡಾ. ಅಂಬೇಡ್ಕರ್ ವಿಚಾರಧಾರೆ: (ಸಂ) ಡಾ. ಅರವಿಂದ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೧ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ).