ಅರವಿಂದ ಮಾಲಗತ್ತಿ – “ಶತಮಾನಗಳಿಂದ. . . . . ಶೋಷಣೆಗೆ ಒಳಗಾದವರು (ದಲಿತರು) ಒಟ್ಟು ಮನುಷ್ಯ ಸಮಾಜದೊಂದಿಗೆ ಬದುಕಲಾಗದೆ, ಊರ ಹೊರಗೆ ವಾಸಿಸಿ, ಕೀಳು ವೃತ್ತಿಗೆ ಅವಲಂಬಿತರಾಗಿ ಹೆಸರು ಹೇಳಿಕೊಳ್ಳಲು ನಾಚಿಕೆಪಡುವ ಅಸ್ಪೃಶ್ಯರು ಅಥವಾ ಬಹಿಷ್ಕೃತರೆನಿಸಿಕೊಂಡವರೆಲ್ಲ ದಲಿತರೆನಿಸಿಕೊಳ್ಳುತ್ತಾರೆ. ” ಇದರೊಂದಿಗೆ ಸಿದ್ಧಲಿಂಗಯ್ಯ ಅವರ ಮಾತನ್ನೂ ಗಮನಿಸಬೇಕು:

ಆತ ದಲಿತನಾಗಿ ಹುಟ್ಟಬೇಕು, ದಲಿತರ ಬಗ್ಗೆ ಅನುಕಂಪವುಳ್ಳವನಾಗಿರ

ಬೇಕು. ಶೋಷಣೆಯ ದಬ್ಬಾಳಿಕೆ ಅತ್ಯಾಚಾರಗಳ ವಿರುದ್ಧ ರಕ್ತ

ಕುದಿಯುವವನಾಗಿರಬೇಕು, ಇವುಗಳ ಜೊತೆಗೆ ಆತ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಶೋಷಿಸಲ್ಪಟ್ಟು, ಶೋಷಣೆಯ ಪ್ರಜ್ಞೆಯು ಅವನಿಗಿರಬೇಕು. ತಾನಿರುವ ಮಿತಿಯೊಳಗಿಂದ ಹಿರ ಬಂದು ಉಳಿದವರಿಗಿರುವ ಹಕ್ಕುಗಳೆಲ್ಲವನ್ನೂ ಪಡೆದುಕೊಳ್ಳಲು ಹೋರಾಡುಲು ಸಿದ್ಧವಿರಬೇಕು. ಯಾರಿಗೆ ಶೋಷಣೆಯ ಪ್ರಜ್ಞೆ ಇಲ್ಲವೋ, ಯಾರಲ್ಲಿ ಹೋರಾಟದ ಭಾವನೆ ತಣ್ಣಗಿರುತ್ತದೆಯೋ, ಅವರಾರು ದಲಿತರಲ್ಲ.

ಇವು ಮಿಲಿಟೆಂಟ್ (ದಲಿತಪರ) ಚಿಂತನೆಗಳು ಅಸ್ಪೃಶ್ಯನಾಗಿ ಹುಟ್ಟಿದ ದಲಿತ ಕುದಿವ, ಸಿಡಿವ, ಅಗ್ನಿಯಾಗಿ ಉರಿವ ಸ್ಫೋಟಿಸುವ, ರೊಚ್ಚೇಳುವ, ಸಮಯ ಬಂದರೆ ರಕ್ತಪಾತದಿಂದ ಹಿಂಸೆಗೂ ಸಿದ್ಧವಾಗುವ ಮಾತುಗಳನ್ನು ಬಳಸುವುದು ಸಹಜ. ಇವರ ಮಾತಿನಲ್ಲಿ ಅಸ್ಪೃಶ್ಯನಾಗಿ ಹಿಟ್ಟಿದವ ದಲಿತನೇ ಹೊರತು ಮಿಕ್ಕ ಶೋಷಿತರೆಲ್ಲಾ ದಲಿತರಲ್ಲ. ಸಿ. ವೀರಣ್ಣ

ದಲಿತ ಪದದ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಿಂತ, ಅದು ಹಿಟ್ಟಿ ಬೆಳೆದಿರುವ ಹಿನ್ನೆಲೆಯಲ್ಲಿ ಅದನ್ನು ಅಸ್ಪೃಶ್ಯ ಜನಾಂಗಕ್ಕೆ ಸೀಮಿತಗೊಳಿಸುವುದು ಚಾರಿತ್ರಿಕ ಅಧ್ಯಯನದ ದೃಷ್ಟಿಯಿಂದ ಸೂಕ್ತವೆನಿಸುತ್ತದೆ.

ಎನ್ನುತ್ತಾರೆ. ಅಂದರೆ ಇವರ ಪ್ರಕಾರ ದಲಿತ ಪದಕ್ಕೆ ಹುಟ್ಟಿನ ಅಂಶವೇ ಮುಖ್ಯ. ಇವರು ಹುಟ್ಟಿನ ನೆಲಗಟ್ಟಿನ ಮೇಲೆ ನಿಂತು, ಹುಟ್ಟಿನ ತಳಹದಿಯ ಮೇಲೆ ನಿಂತಿರುವ ಸಮಾಜ ರಚನೆಯನ್ನು ಭಂಗಗೊಳಿಸಿ, ಸಾಮಾಜಿಕ ಬದಲಾವಣೆ ಮತ್ತು ಕ್ರಾಂತಿಗೆ ಕಂಕಣಬದ್ಧರಾದ ಕ್ರಾಂತಿಕಾರರು ಮತ್ತು ಅಂಬೇಡ್ಕರ್ ಹಾಗೂ ಮಾರ್ಕ್ಸ್‌ತತ್ವನಿಷ್ಠರು. ಹುಟ್ಟು ಮತ್ತು ಶೋಷಣೆಯ ಮೂಲದ ದಲಿತ ಮಿಲಿಟೆಂಟ್‌ಲಕ್ಷಣಕ್ಕಿಂತ ಭಿನ್ನವಾಗಿ ಹನುಮಯ್ಯನವರು ಮೇಲುವರ್ಗ ವಿರೋಧಿ:

ಸಂಘಟನಾತ್ಮಕ ಹೋರಾಟದ ದೃಷ್ಟಿಯಿಂದ ಪದದ (ದಲಿತ) ವ್ಯಾಪ್ತಿಯನ್ನು ದೊಡ್ಡದು ಮಾಡಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಿತರಾದ ಎಲ್ಲ ಜನವರ್ಗವನ್ನು ಸೇರಿಸಿದರೂ, ಸಾಹಿತ್ಯಿಕವಾಗಿ ಅಸ್ಪೃಶ್ಯತೆಯನ್ನು ನಿವಾರಿಸಲು ಅಸ್ಪೃಶ್ಯರು ಮತ್ತು ಇವರಷ್ಟೇ ಶೋಷಣೆಗೊಳಗಾದ ಕೆಳವರ್ಗದವರು ದಲಿತರಾಗುತ್ತಾರೆ.

ಇವರೊಂದಿಗೆ ದನಿಗೂಡಿಸುವ ಗಂಗಾರಾಂ ಚಾಂಡಾಳರು

ಸಧ್ಯಕ್ಕೆ ಅಸ್ಪೃಶ್ಯ ಜಾತಿಗಳಾದ ಮಾದಿಗ ಹೊಲೆಯರನ್ನೇ ಕೇಂದ್ರೀಕರಿಸಿದರೂ ಬರಬರುತ್ತಾ ತನ್ನ ವ್ಯಾಪ್ತಿಯನ್ನು ಎಲ್ಲಾ ಅವಮಾನಗೊಂಡವರನ್ನೆಲ್ಲಾ ಒಳಗೊಳ್ಳಬೇಕು

ಎನ್ನುತ್ತಾರೆ. ಒಟ್ಟಿನಲ್ಲಿ ದಲಿತ ಲಿಬರಲ್ಸ್‌(ಉದಾರವಾದಿಗಳು) ಬ್ರಾಹ್ಮಣೇತರ ಕೆಳವರ್ಗ ಮತ್ತು ದಲಿತ ಶೋಷಿತರ ಸಂಘಟನೆಯಿಂದ ಸಾಮಾಜಿಕ ಬದಲಾವಣೆಯನ್ನು ವ್ಯವಸ್ಥೆ ಮತ್ತು ಜಾತಿ ವಿರುದ್ಧ ಹೋರಾಡಿ ತರಲು ಸಾಧ್ಯ ಎನ್ನುತ್ತಾರೆ. ಅಲ್ಲದೆ ದಲಿತರು ಮತ್ತು ಕೆಳವರ್ಗ ಒಟ್ಟಿಗೆ ಸೇರಿದರೆ ಬಹುಸಂಖ್ಯಾತರಾಗಿ, ರಾಜಕೀಯ ಬಣವಾಗಿ ಬೆಳೆಯುವ ಅವಕಾಶ ಹೆಚ್ಚಾಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹತ್ತಿರದ ಸಂಬಂಧವಿರುವ ಇವರು ಸುಲಭವಾಗಿ ಸಂಘಟಿತರಾಗಬಹುದು. ಆದರೆ ಯಾವ ಕೆಳವರ್ಗದ ಬೆಂಬಲವನ್ನು ದಲಿತರು ತಮ್ಮ ಹೋರಾಟಕ್ಕೆ ಬಯಸುತ್ತಾರೋ, ಸಾಮಾಜಿಕ ಮತ್ತು ಆರ್ಥಿಕವಾಗಿ, ಅದೇ ಕೆಳವರ್ಗ ಮತ್ತು ದಲಿತರ ಘರ್ಷಣೆ ದಿನೇ ದಿನೇ ಅಧಿಕವಾಗಿ ಹಿಂಸೆಯಲ್ಲಿ ಅಂತ್ಯವಾಗುವುದನ್ನು ಮರೆಯುವಂತಿಲ್ಲ. ಈ ಲಿಬರಲ್‌ದಲಿತರು ಅಂಬೇಡ್ಕರ್ ಮತ್ತು ಲೋಹಿಯಾ ತತ್ವನಿಷ್ಠರು. ಆದರೆ ಅನಂತಮೂರ್ತಿ ಅವರ ಅಸ್ಪೃಶ್ಯತೆಯ ವ್ಯಾಖ್ಯಾನವೇ ತೀರ ಭಿನ್ನವಾಗಿದೆ:

ಇಂಡಿಯಾದಲ್ಲಿ ವಸಾಹತು ಶಾಹಿಯಿಂದಾಗಿ ಎಲ್ಲ ಜನರೂ ಅವಮಾನಿತರು. . . . ಸೌತ್ಆಫ್ರಿಕಾದಲ್ಲಿ ಮೊದಲನೆಯ ದರ್ಜೆಯ ರೈಲು ಡಬ್ಬಿಯಿಂದ ನೂಕಲ್ಪಟ್ಟ ಗಾಂಧಿ ಒಟ್ಟು ಅವಮಾನದ ಪ್ರತೀಕ. ಆದರೆ ಹೀಗೆ ಬಾರ್ ಅಟ್ಲಾ ಮಾಡಿ ಮೊದಲನೇ ದರ್ಜೆ ಡಬ್ಬಿಯಿಂದ ನೂಕಲ್ಪಟ್ಟ ಮನುಷ್ಯನೇ ಅಸ್ಪೃಶ್ಯ.

ಈ ಮಾತಿನೊಂದಿಗೆ ಶಂಕರ ಮೊಕಾಶಿ ಪುಣೇಕರರ ಮಾತೂ ಮುಖ್ಯ :

As Brahmin untouchhabality begins to take effect, the response of other caste is a reverse orthodoxy. the learned among other caste refuse to touch the Brahmin and refuse to touch each other.

ಇದರಿಂದ ವಸಾಹತು ಶಾಹಿಯಿಂದ ಮತ್ತು ಕಲಿತ ಅನ್ಯ ಜಾತಿಯವರಿಂದ ಅವಮಾನಿತರಾದ ಬ್ರಾಹ್ಮಣ ಅಸ್ಪೃಶ್ಯರನ್ನು ಗುರುತಿಸಿದಂತಾಯಿತು. ಇಲ್ಲಿ ಹುಟ್ಟಿಗಿಂತ ಅವಮಾನ ಮತ್ತು ಮುಟ್ಟು ಚಟ್ಟುಗಳ ಆಚರಣೆಯೇ ಅಸ್ಪೃಶ್ಯತೆಯ ನಿರ್ಣಾಯಕ ಅಂಶಗಳು.

ಇದರಂತೆ ಸಮಾಜದ, ಕುಟುಂಬ ಮತ್ತು ವ್ಯಕ್ತಿಗಳೇ ಪರಸ್ಪರ ಅಸ್ಪೃಶ್ಯರಾಗಬಹುದು. ಇಂಥ ವ್ಯವಸ್ಥೆಯ ವೈದಿಕಪರ ಚಿಂತಕರನ್ನೇ ಲೋಹಿಯಾ ಬ್ರಾಹ್ಮಣ-ಬನಿಯಕೂಟ ಎಂದದ್ದು. ವೈದಿಕರೇ ವರ್ಣ ಮತ್ತು ಜಾತಿಯ ಮೂಲ ಪುರುಷರಲ್ಲ ಎಂದು ವಾದಿಸುವುದೇ ಲಿಬರಲ್‌ ಬ್ರಾಹ್ಮಣರ ಸಂಶೋಧನೆಯ ಗುರಿ; ವೇದಗಳಲ್ಲಿ ವರ್ಣವ್ಯವಸ್ಥೆ ಇಲ್ಲ, ವೃತ್ತಿಗಳೇ ವರ್ಣ ಮತ್ತು ಜಾತಿಗೆ ಮೂಲ, ದ್ರಾವಿಡರಲ್ಲಿರುವ ಮುಟ್ಟು ಚಟ್ಟೇ ಜಾತಿಗೆ ಕಾರಣ, ವೇದ ಪರವಾಗಿದ್ದ ವೈದಿಕರೇ ವೇದ ವಿರೋಧಿಸಿದರು, ಪಾಶ್ಚಾತ್ಯ ಮತ್ತು ಆಯಾ ಕೆಳವರ್ಗದ ಸಂತರೇ ಆಯಾ ವರ್ಗದ ವರ್ಣ ಮತ್ತು ಜಾತಿಗೆ ಕಾರಣರು, ವೇದಕಾಲದಲ್ಲಿ ಉದಾರವಾಗಿದ್ದ ವರ್ಣ, ಮುಂದೆ ಪುರಾಣ ಕಾಲದಲ್ಲಿ ಬಿಗಿಯಾಯಿತು, ಆರ್ಥಿಕಮೂಲ ಜಾತಿಪದ್ಧತಿಗೆ ಮುಂದೆ ಸ್ಮೃತಿಕಾರರು ಧಾರ್ಮಿಕ ವಿಧಿಯ ಸ್ವರೂಪ ಕೊಟ್ಟರು, ಬೌದ್ಧ ಕ್ಷತ್ರೀಯರು ಇರಬೇಕು. ನೂರಕ್ಕೆನೂರು ಮೀಸಲಾತಿಯ ವಿಧಾನ ಅದು. ಪೌರೋಹಿತ್ಯ ನೂರಕ್ಕೆ ನೂರು ಬ್ರಾಹ್ಮಣರಿಗೆ, ಕಕ್ಕಸ್ಸನ್ನು ಶುಚಿ ಮಾಡುವುದು ನೂರಕ್ಕೆ ನೂರು ಪಂಚಮರಿಗೆ, ಈಗ ನಾವಿದನ್ನು ರಿಪೇರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅದು ರಿಪೇರಿಷ್ಟೆ.

ದಲಿತರಿಗೆ ತೆರೆದ ಅಕ್ಷರ ಲೋಕವಾಗಲಿ, ಸಂವಿಧಾನ ರಕ್ಷಣೆಯಾಗಲಿ, ಮೀಸಲಾತಿಯಾಗಲಿ, ಮತಾಂತರವಾಗಲಿ, ಶಿಕ್ಷಣವಾಗಲಿ, ಉದ್ಯೋಗ ಅವಕಾಶಗಳಾಗಲಿ, ನಗರೀಕರಣವಾಗಲಿ, ವೃತ್ತಿ ಬದಲಾವಣೆ ಆಗಲಿ, ಸವರ್ಣೀಯರ ನಡುವಣ ವಾಸವಾಗಲಿ, ಅಂತರಜಾತಿಯ ವಿವಾಹವಾಗಲಿ, ಅಸ್ಪೃಶ್ಯತೆ ವಿರೋಧಿ ಕಾನೂನುಗಳಾಗಲಿ, ರಾಜಕೀಯ ಅಧಿಕಾರ ಮತ್ತು ಸಂಪತ್ತು ಇವು ದಲಿತರ ಒಂದು ವರ್ಗದ ದುಃಸ್ಥಿತಿಯ ಉತ್ತಮಿಕೆಗೆ ಒಂದಿಷ್ಟು ಅವಕಾಶವಾಗಿರಬಹುದೇ ಹೊರತು, ದಲಿತರ ಅನುಕರಣೆ, ಅವರ ಸಂಸ್ಕೃತಿಯ ನಾಶಕ್ಕೆ ಕಾರಣವಾಗಿ, ಅವರ ವರ್ಗದಿಂದಲೇ ಅವರನ್ನು ಬೇರ್ಪಡಿಸಿ, ಹೊಸ ಹೊಸ ಪ್ರಲೋಭನೆಗಳು ಅವರ ಸಮಗ್ರ ಬದುಕನ್ನೇ ಭ್ರಷ್ಟಗೊಳಿಸಿ, ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿದೆ ಮತ್ತು ಬಡ ದಲಿತರ ಬದುಕು ಮತ್ತಷ್ಟು ಕ್ರೌರ್ಯಕ್ಕೆ ತುತ್ತಾಗಿ, ಅಕ್ಷರಸ್ಥ ದಲಿತರೇ ಅನರಸ್ಥ ದಲಿತರು ಮತ್ತು ಗ್ರಾಮೀಣ ಅನಕ್ಷರಸ್ಥ ಸವರ್ಣೀಯರ ಶೋಷಣೆಗೆ ತೊಡಗುತ್ತಿರುವುದು ಬದುಕಿನ ವ್ಯಂಗ್ಯವೇ ಸರಿ. ಶೋಷಿತರೇ ಶೋಷಕರಾಗುವ ಪರಿಸರದ ದುರಂತದ ಬಗ್ಗೆ ತೀವ್ರವಾಗಿ ಚಿಂತಿಸಬೇಕಿದೆ.

ದಲಿತ ನಾಯಕತ್ವ ಬಗ್ಗೆ ಮಾತನಾಡಿರುವ ಸಿ. ಜಿ. ಕೆ. ರೆಡ್ಡಿಯವರು ಮೇಲ್ವರ್ಗವನ್ನು ಪ್ರತಿನಿಧಿಸುವ ನಾನು ಬಡವರ ಪರವಾಗಿ ಬಂಡಾಯ ಎದ್ದರೆ ಅದು ಸಮಗ್ರ ಕ್ರಾಂತಿಯಾಗದು. ಕ್ರಾಂತಿ ಸಮಗ್ರರೂಪ ತಾಳಬೇಕಾದರೆ, ಅದಕ್ಕೆ ನಿಜವಾದ ಅರ್ಥ ಮತ್ತು ಕಳೆ ಬರಬೇಕಾದರೆ, ಅದು ಬಡವರ ನೆಲಗಟ್ಟಿನಿಂದ ವ್ಯಪಕವಾಗಿ ಹುಟ್ಟಬೇಕು. ದೇಶದಲ್ಲಿ ಯಾವುದೇ ಜನಾಂದೋಲನ ಯಶಸ್ವಿಯಾಗಬೇಕಾದರೆ ಅದು ದಲಿತರ, ಶೋಷಿತರ, ನಿಮ್ನ ವರ್ಗದವರ ನಾಯಕತ್ವದಲ್ಲಿ ಮಾತ್ರ ನಡೆಯಬೇಕು.

ಇದರೊಂದಿಗೆ ಚಂದ್ರಶೇಖರ ಪಾಟೀಲರ ಮಾತನ್ನೂ ಪ್ರಸ್ತಾಪಿಸುವುದು ಅತ್ಯಗತ್ಯ:

ಸಾವಿರಾರು ರೂಪಾಯಿ ಪಗಾರ ಇದೆ. ಹೆಂಡತಿ, ಮಕ್ಕಳು, ಮನೆ, ಸ್ಕೂಟರ ಇಟ್ಟುಕೊಂಡಿರುವ ನಾನು ದಲಿತ ಎಂದು ಕರೆದುಕೊಳ್ಳಲಾರೆ. ದಲಿತರಿಗಾಗುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಶೋಷಣೆ ಅಪಮಾನಗಳು ನನ್ನವಲ್ಲ. . . ನನ್ನಂಥವರಿಗೆ ಅಂದರೆ ಉಚ್ಚ ಶ್ರೇಣಿಯಲ್ಲಿರುವವರಿಗೆ ಬಂಡಾಯದಹಕ್ಕುಇದ್ದರೂ, ಬಂಡಾಯಕ್ಕೆ ಅನಿವಾರ್ಯವಾದ ಕಾರಣ ಇಲ್ಲ. ಇಂಥ ಸಮಯದಲ್ಲಿ ನಾನು ನನ್ನ ಜಾತಿಯ ವಿರುದ್ಧ, ಅಲ್ಲಿರುವ ಜಂಗಮ ಶಾಹಿ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ನಾನೊಬ್ಬ ಬಂಡಾಯ ಸಾಹಿತಿಯಾಗಬಲ್ಲೆ. ಒಕ್ಕಲಿಗೆ ಯುವಜನರು ಒಕ್ಕಲಿಗ ಪಾಳೆಗಾರಿಕೆ ವಿರುದ್ಧ, ಬ್ರಾಹ್ಮಣ ಬಂಡವಾಳಶಾಹಿ ವಿರುದ್ಧ ಸಿಡಿದೇಳಬೇಕು. ಅಂದಾಗ ಮಾತ್ರ ಇವರಿಗೆ ಬಂಡಾಯದಲ್ಲಿ ಪಾಲುಗೊಳ್ಳಲು ‘Credibility’(ಅರ್ಹತೆ) ಬರುತ್ತದೆ.

ದಲಿತ ಚಳವಳಿ ಜನಾಂದೋಲನವಾಗಿ, ಅದಕ್ಕೆ ದಲಿತ ನಾಯಕತ್ವ ಸಿಗಬೇಕು ಎಂದು ವಾದಿಸುವ ಹಿಂದುಳಿದ ವರ್ಗದ ಪ್ರತಿಷ್ಠಿತರ ಮಾತು ಮೆಚ್ಚತಕ್ಕದ್ದೇ ಸರಿ. ಚಳವಳಿ ಯಶಸ್ವಿಯಾಗಲು ಆಂತರಿಕವಾಗಿ ಒಳಪಂಗಡಗಳ ಜಾತಿ ವಿರುದ್ಧ ಮತ್ತು ಹೊರಗೆ ವರ್ಣ ಮತ್ತು ಜಾತಿವಾದಿಗಳ ವಿರುದ್ಧ ಏಕಕಾಲದಲ್ಲಿ ಹೋರಾಟ ನಿರಂತರವಾಗಿ ನಡೆಯಬೇಕು.

In practice, revolution primarily means simultaneously of struggle and change… more a struggle than a change

ಜಯಪ್ರಕಾಶ ನಾರಾಯಣರ ಮಾತು ಅತ್ಯಂತ ಮೌಲಿಕವಾದದ್ದು. ಅಂದರೆ ಚಳವಳಿಗಾರರ ಆತ್ಮವಿಮರ್ಶೆ ಮತ್ತು ಸಮಾಜ ವಿಮರ್ಶೆ ಜೊತೆಜೊತೆಯಾಗಿ ನಡೆಯಬೇಕಾದ ಕ್ರಿಯೆಗಳು. ಇಲ್ಲದಿದ್ದರೆ ಸಾಮಾಜಿಕ ನ್ಯಾಯ ದೊರಕುವುದಿಲ್ಲ. ಸಾಮಾಜಿಕ ನ್ಯಾಯ ಎಂದರೇನು ಎಂಬ ಪ್ರಶ್ನೆ ಎದುರಾಗುತ್ತದೆ.

What after all, does social justice mean to the out caste and dispossessed? Most obviously it means gaining admission to every thing from which middle class selfishness excludes them

ಎಂಬ ವಿದ್ವಾಂಸರೊಬ್ಬರ ಈ ಚುಚ್ಚು ನುಡಿಯ ಬಗ್ಗೆ ಅರಿವು ಅಗತ್ಯ. ದಲಿತರ ಹಕ್ಕಿನ ಮೇಲಿನ ಚಳವಳಿಯ ಮುಖ್ಯ ಗುರಿ ಹಿಂಸೆಯಲ್ಲ ಅಥವಾ ಮಾನವೀಯ ಸಂಬಂಧಗಳ ನಾಶವಲ್ಲ; ಪರಿಣಾಮಕಾರಿಯಾಗಿ ಶೋಷಣೆಯನ್ನು ತಡೆಯುವ ಪರಿಸರ ಸೃಷ್ಟಿಸುವುದು. ಕ್ರಾಂತಿಯ ಉದ್ದೇಶ ಶೋಷಿತರನ್ನು ಭೌತಿಕ ಮತ್ತು ಮಾನಸಿಕವಾಗಿ ಹಿಂಸೆಯಿಂದ ಬಿಡುಗಡೆ ಮಾಡುವುದು. ಭಯೋತ್ಪಾದನೆಯು ಎಡ ಮತ್ತು ಬಲ ಪಂಥೀಯರು ಸ್ವಹಿತ ಸಾಧನೆಗೆ ಬಳಸುವ ಮತ್ತು ಸಾಮಾನ್ಯ ಜನರನ್ನು ಬಲಿತೆಗೆದುಕೊಳ್ಳುವ ಅಸ್ತ್ರ. ದಲಿತರಲ್ಲಿ ತಮ್ಮ ವರ್ಗಕ್ಕೆ ಬದ್ಧರಾದ ಅಂಬೇಡ್ಕರ್ ಅಂತಹ ನಾಯಕರು ಬಾರದಿರುವುದು ಒಂದು ವಿಷಾದನೀಯ ಅಂಶ. ದಲಿತರ ಸಾಧನೆ ರಾಜಕೀಯದ ಗಡಿ ದಾಟದಿರುವುದು ಒಂದು ಗಂಭೀರ ವಿಷಯ. ಈ ಸಂಘಟನೆಯ ಭ್ರೂಣಾವಸ್ಥೆಯಲ್ಲಿಯೇ ದಲಿತರು ಮತ್ತು ಹಿಂದುಳಿದ ವರ್ಗದ ನಾಯಕರ ನಡುವೆ ಪರಸ್ಪರ ಅನುಮಾನ ಮೂಡಿದುದು ಚಳವಳಿಗೆ ಹಿಡಿದ ಗ್ರಹಣವೇ ಸರಿ. ಇಂಥ ಬಿರುಕು ಮೇಲುವರ್ಗದ ಶೋಷಕರಿಗೆ ಮತ್ತಷ್ಟು ಕುಮ್ಮಕ್ಕು ಕೊಟ್ಟಂತೆಯೇ ಆಗುತ್ತದೆ.

ಕರ್ಮ ಮತ್ತು ಪುನರ್ಜನ್ಮ ವೈದಿಕ ಸಿದ್ಧಾಂತವಾದರೂ ಕಟ್ಟುನಿಟ್ಟಾಗಿ ಅನ್ವಯವಾದದ್ದು ಬ್ರಾಹ್ಮಣೇತರರು ಮತ್ತು ದಲಿತರಿಗೆ ಮಾತ್ರ. ಅದು ವೈದಿಕ ವಿರೋಧಿ ಮತಗಳ ಮೇಲೂ ಪ್ರಭಾವ ಬೀರದೆ ಬಿಡಲಿಲ್ಲ. ವರ್ಣಧರ್ಮದ ಪ್ರಕಾರ ಮಾನವನ ಮುಕ್ತಿಗೆ ಅರ್ಹವಾದ ಬ್ರಾಹ್ಮಣ ಜನ್ಮವೇ ಕೊನೆಯದು. ಆದ್ದರಿಂದ ಅವರಿಗೆ ಮತ್ತೆ ಪುನರ್ಜನ್ಮವಿಲ್ಲ. ಒಂದು ಪಕ್ಷ ಈ ಜನ್ಮದಲ್ಲಿ ಮಾಡಬಹುದಾದ ಪಾಪ ಪ್ರಾಯಶ್ಚಿತ್ತ ವಿಧಿಯಿಂದ ಬಿಡುಗಡೆಯಾಗುತ್ತದೆ. ಬ್ರಾಹ್ಮಣೇತರರಿಗೆ ಪಾಪ ಪುಣ್ಯ ಅನುಸರಿಸಿ ಉತ್ತಮ ಅಥವಾ ಕನಿಷ್ಠ ಜನ್ಮ ಪ್ರಾಪ್ತವಾಗುತ್ತದೆ. ಬ್ರಾಹ್ಮಣರಿಗೆ ಪ್ರಾಯಶ್ಚಿತ್ತ, ಬ್ರಾಹ್ಮಣೇತರರಿಗೆ ಕರ್ಮ ಮತ್ತು ಪುನರ್ಜನ್ಮ ಸದ್ಯದ ಸ್ಥಿತಿಯ ಬಿಡುಗಡೆಯ ಸಾಧನಗಳು. ಆದ್ದರಿಂದಲೇ ಬ್ರಾಹ್ಮಣರಿಗೆ ವಸಾಹತುಶಾಹಿ ಬಳಿ ನೌಕರನಾಗಿ ದುಡಿದು ಗುಲಾಮನಾಗಿ ಬಾಳಿದ್ದು ಗೌಣವಾಗುತ್ತದೆ. ವಿದೇಶಿಯರಿಂದ ಅವಮಾನಗೊಂಡ ಬಾರ್ ಅಟ್‌ಲಾ ಓದಿದ ಗಾಂಧಿ ಪ್ರಸ್ತುತನಾಗುತ್ತಾನೆ. ಬ್ರಾಹ್ಮಣ ಅಥವಾ ಗಾಂಧಿನಿಂದೆ ದೇಶದ ಪ್ರತೀಕವಾಗುತ್ತದೆ ಮತ್ತು ಸಾಮೂಹಿಕವಾಗುತ್ತದೆ. ಅಂಬೇಡ್ಕರ್ ರರಿಗೆ ದೇಶೀಯರಿಂದ ಆದ ನಿಂದೆ ಸ್ಥಳೀಯವಾಗುತ್ತದೆ ಮತ್ತು ವ್ಯಕ್ತಿಗತವಾಗುತ್ತದೆ. ಮೇಲು ಜಾತಿಯವರು ಬ್ರಿಟಿಷರಿಗೆ ಕೊಟ್ಟ ಸಹಕಾರ ಕರ್ತವ್ಯವಾಗುತ್ತದೆ. ಅಂಬೇಡ್ಕರ್ ದೇಶೀಯವರಿಂದ ತಮ್ಮ ಜಾತಿಯ ಜನರ ಬಿಡುಗಡೆ ಅಸಾಧ್ಯ ಎಂದು ತೋರಿದಾಗ, ಬ್ರಿಟಿಷರ ಸಹಕಾರ ಕೋರಿದ್ದು ದೇಶ ದ್ರೋಹವಾಗುತ್ತದೆ. ಆದ್ದರಿಂದಲೇ ಮೇಲುವರ್ಗದವರಿಗೆ ವರ್ಣಾಶ್ರಮ ಬೆಂಬಲಿಸಿದ ಗಾಂಧಿ ಪ್ರಸ್ತುತ, ವರ್ಣಧರ್ಮ ವಿರೋಧಿಸಿದ ಅಂಬೇಡ್ಕರ್ ಅಪ್ರಸ್ತುತ. ಆದ್ದರಿಂದಲ ದಲಿತ ಮತ್ತು ಗಾಂಧಿ ಸಂಬಂಧವಾಗಿ ಅನಂತಮೂರ್ತಿ ಅವರು ಹೇಳುವ ಮಾತು ಅಷ್ಟು ಸೂಕ್ತವಲ್ಲ; ಅಸ್ಪೃಶ್ಯನಿಗೆ ಆಳುವ ವಿದೇಶಿಯರಿಂದಲೂ ಅವಮಾನ, ಆಳಲ್ಪಟ್ಟ ಸ್ವದೇಶಿಯರಿಂದಲೂ ಅವಮಾನವಾಗುವ ಸ್ಥಿತಿ ಇತ್ತು. ಈ ಎರಡೂ ಒಟ್ಟಾಗಿ ತನ್ನನ್ನು ಅವಮಾನಿಸುತ್ತದೆ ಒಂದು ತಿಳಿಯುವ ದಲಿತನ ಪ್ರಜ್ಞೆ ಅತ್ಯಂತ ಮಹತ್ವದ್ದು. ಆದರೆ ಬ್ರಾಹ್ಮಣನನ್ನು ಅವಮಾನಿಸುವ ವಸಾಹತುಶಾಹಿ ತನ್ನ ಬಿಡುಗಡೆಗೆ ಅನುಕೂಲವಾಗಬಹುದು ಎಂದು ಒಬ್ಬ ದಲಿತ ತಿಳಿಯುವುದು ಸಾಧ್ಯವಿತ್ತು. ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ಗೊಂದಲ ಈ ಬಗೆಯದು. ದಲಿತನನ್ನು ಹೊಗಳುತ್ತಲೇ ತೆಗಳುವ ಈ ಮಾತು ಜಾಣತನದ್ದು ಮತ್ತು ಗೊಂದಲ ಹುಟ್ಟಿಸುವಂತದ್ದು. ಮೇಲುವರ್ಗ ಸದಾ ರಾಷ್ಟ್ರೀಯತೆ ಮತ್ತು ಅಂತರರಾಷ್ಟ್ರೀಯತೆಯ ಮಾತನಾಡುತ್ತ, ಅದನ್ನು ಪ್ರಾಂತೀಯ ಮತ್ತು ಸ್ಥಳೀಯರಿಗೆ ತಾವು ಮಾಡುತ್ತಿರುವ ಮೋಸವನ್ನು ಮುಚ್ಚಿಕೊಳ್ಳುವ ಸಾಧನವನ್ನಾಗಿ ಬಳಸುತ್ತದೆ.

ಕರ್ನಾಟಕದಲ್ಲಿ ಬಂಡಾಯ ಚಳವಳಿಗಳು ಅಸ್ತಿತ್ವಕ್ಕೆ ಬಂದದ್ದು ಸಾಹಿತ್ಯಿಕ ಚಳವಳಿಗಳಿಂದ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಮತ್ತು ಕ್ರಾಂತಿ ಮಾಡಬಯಸಿದ ಎಡಪಂಥೀಯರು, ಜನಪರ ನಿಲುವು ತಾಳಿ, ರಾಜಕೀಯ ಪ್ರಜ್ಞೆಯಿಂದ ಸಾಮಾಜಿಕ ಬದ್ಧರಾದ ಸಾಹಿತಿಗಳಲ್ಲಿ ಸಂಘಟಿಸಲು ಬಂಡಾಯ ಸಾಹಿತ್ಯ ವೇದಿಕೆಯನ್ನು ಹುಟ್ಟು ಹಾಕಿದರು. ಅದರಲ್ಲಿ ದಲಿತರು ಮತ್ತು ಹಿಂದುಳಿದವರ ಪಾತ್ರವೇ ಪ್ರಧಾನ; ಕೆಲವು ಬ್ರಾಹ್ಮಣರ ಬೆಂಬಲ ದೊರೆತದ್ದು ಅಚ್ಚರಿಯ ಸಂಗತಿ. ಸಾಹಿತ್ಯದಲ್ಲಿ ಸಾಮಾಜಿಕ ಮನುಷ್ಯ ಸೃಷ್ಟಿಯಾಗಲಿಲ್ಲ. ಸಮಾನ್ಯರ ವಿವಿಧ ವರ್ಗಗಳಿಂದ ಮೂಡಿಬಂದ ವಚನಕಾರರಿಗೂ ಅದು ಸಾಧ್ಯವಾಗಲಿಲ್ಲ ಎಂಬುದಕ್ಕೆ ಜಿ. ಎಸ್. ಶಿವರುದ್ರಪ್ಪನವರ ಮಾತೇ ಸಾಕ್ಷಿ.

ವಚನಕಾರರು ಮಾತ್ರ ನೇರವಾಗಿ ಹಾಗೂ ವ್ಯಕ್ತಿನಿಷ್ಠವಾಗಿ ತಮ್ಮ ಪರಿಸರವನ್ನು ಪ್ರಶ್ನಿಸಿದರೂ ಒಟ್ಟಾರೆಯಾಗಿ ಅವರ ಧೋರಣೆಗಳು ನೈತಿಕ ಹಾಗೂ ಪಾರಮಾರ್ಥಿಕ ಮನುಷ್ಯನನ್ನು ನಿರ್ಮಾಣಮಾಡುವ ಉದ್ದೇಶ ವಾಗಿದೆಯೆ ಹೊರತು, ನಿಜವಾದ ಸಾಮಾಜಿಕ ಮನುಷ್ಯನನ್ನು ನಿರ್ಮಿಸುವ ಉದ್ದೇಶದವುಗಳಾಗಿಲ್ಲ.

ಸಾಮಾಜಿಕ ಕಳಕಳಿಯ ವಚನಕಾರರೇ ಸಾಮಾಜಿಕ ಮನುಷ್ಯನನ್ನು ಸೃಷ್ಟಿಸುವಲ್ಲಿ ವಿಫಲರಾದರು ಎಂದ ಮೇಲೆ, ಬ್ರಾಹ್ಮಣ ವರ್ಣಧರ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಲೆಂದೇ ರಚನೆಯಾದ ಕೀರ್ತನ ಸಾಹಿತ್ಯದಿಂದ ಸಾಮಾಜಿಕ ಮನುಷ್ಯನನ್ನು ಅಪ್ಪಿತಪ್ಪಿಯೂ ನಿರೀಕ್ಷಿಸುವಂತಿಲ್ಲ. ನವೋದಯ ಮತ್ತು ನವ್ಯವೂ ಅದೇ ಜಾಡು ಹಿಡಿಯಿತು. ಸಾಮಾಜಿಕ ಮನುಷ್ಯನನ್ನು ಚಿತ್ರಿಸುವುದೇ ಬಂಡಾಯ ಮತ್ತು ದಲಿತ್ತ ಸಾಹಿತ್ಯದ ಮುಖ್ಯ ಗುರಿಯಾಯಿತು. ಇದನ್ನು ಜಿ. ಎಸ್‌. ಶಿವರುದ್ರಪ್ಪನವರ ಮಾತು ಮತ್ತಷ್ಟು ಸ್ಪಷ್ಟಪಡಿಸುತ್ತದೆ.

ಗ್ರಾಮೀಣ ಭಾರತದ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ, ತನ್ನಿಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ, ಪ್ರತಿಭಟನೆಯ ದನಿ ಎತ್ತಿರುವುದು ನ್ಯಾಯವಾಗಿದೆ. ಹೀಗಾಗಿ ಪ್ರತಿಭಡನೆಯನ್ನು ಒಂದು ಮೌಲ್ಯವಾಗಿ ಉಳ್ಳ, ರಾಜಕೀಯ ಪ್ರಜ್ಞೆಯಿಂದ ಮೂಡಿದ ಸಾಹಿತ್ಯ, ಸೌಂದರ್ಯದ ತನ್ಮಯತೆಯನ್ನು ತರುವ, ಉದಾತ್ತ ತತ್ವವನ್ನು ಹೇಳುವ, ಪೌರಾಣಿಕ, ಧಾರ್ಮಿಕ ಅದ್ಭುತಗಳನ್ನುತೆರೆದು ತೋರುವ, ಬುದ್ಧಿ ಕಸರತ್ತುಗಳನ್ನು ಪ್ರದರ್ಶಿಸುವ ಉದ್ದೇಶದ್ದಲ್ಲ: ಅದು ಇರುವ ವಾಸ್ತವವನ್ನು ತೆರೆದು ತೋರುತ್ತ, ವೈಚಾರಿಕ ಎಚ್ಚರಿಕೆಯನ್ನು ಹುಟ್ಟಿಸುತ್ತ, ಪ್ರಶ್ನೆ ಹಾಗೂ ಪ್ರತಿಭಟನೆಗಳ ಮೂಲಕ ಸಮಾಜಿಕ ಬದಲಾವಣೆಯನ್ನು ತರುವ ಉದ್ದೇಶದ್ದು.

ಮತ್ತು ಸಿದ್ಧಲಿಂಗಯ್ಯ ಸಾಹಿತಿಗಳ ಜವಾಬ್ದಾರಿಯನ್ನು ಜಾಗ್ರತಗೊಳಿಸುವ ಮಾತನಾಡಿದ್ದಾರೆ.

ಇಂಡಿಯಾ ಉರಿಯುತ್ತಿದೆ. ದಲಿತರ ಕೆಲೆಯಾಗದ,ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡದ, ಅವರ ಗುಡಿಸಲಿಗೆ ಬೆಂಕಿ ಇಡದ ಒಂದು ದಿನವನ್ನೂ ನೀವು ಇಂಡಿಯಾದ ಚರಿತ್ರೆಯಲ್ಲಿ ಹುಡುಕಲಾರಿರಿ. ರಕ್ತ ಸಿಕ್ತವಾದ ಇಂಡಿಯಾದ ಇತಿಹಾಸ ಪುಟಗಳಲ್ಲಿ ಮನುಷ್ಯನ ದರ್ಶನ ದುರ್ಲಭವಾದುದು. ಜಮೀನುದಾರಿ ಮತ್ತು ಬಂಡವಾಳಶಾಹಿ ಪದ್ದತಿಯ ಸೈಜುಗಲ್ಲಿನಡಿಯಲ್ಲಿ ಸಿಕ್ಕಿ ಜಜ್ಜಿ ಹೋಗುತ್ತಿರುವ ಮಾನವೀಯತೆಯನ್ನು ರಕ್ಷಿಸುವ ಜವಾಬ್ದಾರಿ ಸಾಹಿತಿಗಳ ಮೇಲೆದೆ. ಯಾಕೆಂದರೆ ಸಾಹಿತಿ ಸಮಾಜದ ಅವಿಭಾಜ್ಯ ಅಂಗ. ಭಾರತದ ಜಾತಿ ಪದ್ಧತಿ ಮನುಷ್ಯರಲ್ಲಿ ಪರಸ್ಪರ ಪ್ರೀತಿವಿಶ್ವಾಸವನ್ನು ಅಸಾಧ್ಯವಾಗಿಸಿದೆ. ಇದರ ವಿರುದ್ಧ ಉಗ್ರ ಹೋರಾಟ ಆಗಬೇಕಿದೆ. ಮೂಲಭೂತ ಬದಲಾವಣೆಗಾಗಿ ಕ್ರೀಯಾಶೀಲನಾಗುವುದು ಸಾಹಿತಿಯ ಜವಾಬ್ದಾರಿ. ಬರವಣಿಗೆಯ ಮೀಲಕ ನಡೆಯುವ ನಮ್ಮ ಹೋರಾಟ, ಹೆಚ್ಚು ಪರಿಣಾಮಕಾರಿಯಾದದ್ದು.

ಈ ಮಾತುಗಳಲ್ಲಿ ಕೆಳವರ್ಗ ಮತ್ತು ದಲಿತರು ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ರಾಜಕೀಯವಾಗಿ ಎಚ್ಚರಗೊಳಿಸುವ ಅಗತ್ಯದ ಬಗ್ಗೆ ಒತ್ತಾಯವಿದೆ.

ಬಂಡಾಯ ಸಾಹಿತ್ಯ ಗರಿಗಟ್ಟಿಕೊಳ್ಳುತ್ತಿರುವಾಗಲೇ ಒಳ ಮತ್ತು ಹೊರ ‍‘ಡಿಸ್ಟರ್ಬ್’ಆದ ಶಕ್ತಿಗಳು ಬಂಡಾಯ ಸಾಹಿತ್ಯ ಸಂಘಟನೆಯನ್ನು ಒಡೆಯುವಲ್ಲಿ ಯಶಸ್ವಿಯಾದರು. ಬಂಡಾಯ ಸಂಘಟನೆಯ ನಾಯಕತ್ವ ಕಟು ಟೀಕೆಗೆ ಒಳಗಾಗಿ ಪರಸ್ಪರ ಅನುಮಾನ ಹೆಚ್ಚಿತು. ಬಿ. ಕೃಷ್ಣಪ್ಪನವರ ಮಾತಿನಲ್ಲಿ ಬಿರುಕಿನ ಕಾರಣಗಳನ್ನು ಗುರುತಿಸಬಹುದು:

ಮಾರ್ಕ್ಸಿಸ್ಟ್ ಪಕ್ಷದಲ್ಲಿ ಬರಿ ಬ್ರಾಹ್ಮಣರೇ ಏಕೀದ್ದಾರೆ? ಸಮಾಜವಾದಿ ಪಕ್ಷದಲ್ಲಿ ಬರಿ ಗೌಡ, ಲಿಂಗಾಯಿತ ಶೂದ್ರರೇ ಏಕೀದ್ದಾರೆ? (ಇದಕ್ಕೆ ಅಪವಾದಗಳೂ ಉಂಟು)

ಎಂಬ ಪ್ರಶ್ನೆ ಎತ್ತಿ ಬ್ರಾಹ್ಮಹ್ಣರೇ ತುಂಬಿರುವ ಮಾರ್ಕ್ಸ ಪಕ್ಷಕ್ಕೇ ವರ್ಗ ಮುಖ್ಯವೇ ಹೊರತು ಜಾತಿ ವಿನಾಶ ಮುಖ್ಯವಲ್ಲ. ಒಕ್ಕಲಿಗ ಮತ್ತು ಲಿಂಗಾಯತರೇ ತುಂಬಿರುವ ಸಮಾಜವಾದಿಗಳಿಗೆ ಬ್ರಾಹ್ಮಣಶಾಹಿ ನಾಶವೇ ಹೊರತು ಜಮೀನುದಾರಿ ಶಾಹಿಯ ವಿನಾಶ ಮುಖ್ಯವಲ್ಲ. ಮಾರ್ಕ್ಸ ಮತ್ತು ಸಮಾಜವಾದಿಗಳಿಂದ ದಲಿತರ ಉದ್ಧಾರ ಅಸಾಧ್ಯ ಎಂದು ಹೇಳಿ, ದಲಿತರ ಉದ್ಧಾರಕ್ಕಾಗಿ ದಲಿತರೇ ಹೋರಾಡಬೇಕೆಂದು ಘೋಷಿಸಿದರು. ಮತ್ತು ಇದಕ್ಕೆ ಪೂರಕವಾಗಿ ಯಜಮಾನ ಸಂಸ್ಕೃತಿಯ ವಕ್ತಾರರು ಬಂಡಾಯ ಸಂಘಟನೆಯನ್ನು ಸಾಂಸ್ಕೃತಿಕವಾಗಿ ಪುರಸ್ಕರಿಸಿ, ಮಹತ್ವದ ಲೇಖಕರನ್ನು ಆಕಾರಣವಾಗಿ ವಿರೋಧಿಸುವ ಪ್ರಯತ್ನ, ದಲಿತರನ್ನು ಮಾರ್ಕ್ಸ ಪಕ್ಷದತ್ತ ಸೆಳೆಯುವ ಸಂಚು ಮತ್ತು ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಪಾಠ ಹೇಳುವ ಮೇಷ್ಟರುಗಳ ಚಟ ಎಂದು ದೂರಿದರು. ವಿಫಲರಾದ ಬರಹಗಾರರ ಒಕ್ಕೂಟದ ಶೂದ್ರರ ಸಾಹಿತ್ಯಿಕ ಬದುಕಿನ ಮರು ಹುಟ್ಟಿನ ಪ್ರಯತ್ನವೇ ಬಂಡಾಯ ಸಂಘಟನೆ ಎಂದೂ ಕೆಲವರು ಟೀಕಿಸಿದರು.

ಒಟ್ಟಿನಲ್ಲಿ ದಲಿತ ಸಾಹಿತಿಗಳು ಬಂಡಾಯ ಸಂಘಟನೆಯಿಂದ ಕಿತ್ತುಕೊಂಡು ಪ್ರತ್ಯೇಕವಾಗಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಿದರು. ಕೇವಲ ವಾರ್ಷಿಕ ಸಮ್ಮೇಳನಗಳಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸುವ ಬಂಡಾಯ ಮತ್ತು ದಲಿತ ಸಂಘಟನೆಗಳು ಕೇವಲ ಕಲವೇ ಮಂದಿಯ ಗುತ್ತಿಗೆಯಾಗಿ, ಜನಾದೋಲನ ವ್ಯಾಪ್ತಿಯನ್ನು ಕಳೆದುಕೊಂಡು, ಕ್ರಿಯಾವಿಮುಖವಾಗಿ, ಮಹತ್ವ ಕೃತಿಗಳ ರಚನೆಗೆ ಪ್ರೇರಕ ಶಕ್ತಿಯಾಗದೇ ಮೇಲುವರ್ಗದ ಕಟುಟೀಕೆಗೆ ತುತ್ತಾದದ್ದು ವಿಷಾದದ ಸಂಗತಿ. ಆದರೆ ಈ ಸಂಘಟನೆಗಳ ಕೊಡುಗೆ ಬಗ್ಗೆ ಲಂಕೇಶರು ಆಡಿರುವ ಮಾತನ್ನು ನಿರಾಕರಿಸುವಂತಿಲ್ಲ.

ಒಕ್ಕೂಟದಿಂದ ಏನಿಲ್ಲವೆಂದರೂ ಬಹು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ, ಸಂಕೋಚದ, ಶೋಷಿತ ಲೇಖಕರು ತಮ್ಮ ಅನುಭವವನ್ನು ಮೈಚಳಿ ಬಿಟ್ಟು ತಮ್ಮದೇ ಆದ ಭಾಷೆಯಲ್ಲಿ, ಹೇಳುವ ತಾಕತ್ತು ದೊರೆಯಿತು. ಜಾಣತನವನ್ನು ಪ್ರತಿಭೆಯೆಂದೂ,ನಾಜೂಕನ್ನು ಪ್ರೌಢಿಮೆಯೆಂದೂ ಸುಲಭವಾಗಿ ತೀರ್ಮಾನಿಸುವ ನಮ್ಮ ವೈದಿಕ ವಾತಾವರಣದಲ್ಲಿ ಪ್ರತಿಭೆಗೆ ಹೊಸ ಅರ್ಥ ದೊರೆತಂತಾಯಿತು.

ಅಂತೂ ಶೋಷಿತ ವರ್ಗಕ್ಕೆ ಮಾನಸಿಕ ಬಿಡುಗೆಗೆ ಸಿದ್ಧತೆಯ ಪರಿಸರ ಸೃಷ್ಟಿಯಾದದ್ದು ಒಂದು ಮಹತ್ವದ ಸಾಧನೆ. ಬಂಡಾಯ ಮತ್ತು ದಲಿತ ಸಾಹಿತ್ಯವನನು “ಫ್ಯೂಡಲ್‌ಏಸ್ಥಿಟಿಕ್ಸ್‌, (Feudal Aesthetics)ಸೂತ್ರಗಳಿಂದ ವಿಮರ್ಶಿಸಿಸುವುದು ಸರಿಯಲ್ಲ. ಪ್ರತಿಭಟನೆ ಸಾಹಿತ್ಯ ಬಹುಮುಖ ಸಮಾಜಗಳಿಂದ ಕೂಡಿದ್ದು, ಅದಕ್ಕೆ ತನ್ನದೇ ಆದ ವಿಶಿಷ್ಟ ಗುಣಗಳಿವೆ. ಅಂಥ ವಿಶಿಷ್ಟ ಗುಣಗಳ ರಕ್ಷಣೆಯ ವಿಮರ್ಶೆಯ ಸೂತ್ರಗಳ ಮಾನದಂಡದಿಂದ ಮಾತ್ರ ಕೆಳವರ್ಗದ ಕೃತಿಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ಮಿಲ್ಲರನ ಮಾತು ಅತ್ಯಂತ ಮುಖ್ಯವಾಗುತ್ತದೆ.

The anthropomorphic tendency is so strongly rooted In human nature that a people are to from their ideals in their own image and stamp upn them the impress of their own physical and social peculiarities. This circumstances renders any type unsuited to artstic or literary uses among a people of different clime, colour and degree.

ಯಜಮಾನ ಸಂಸ್ಕೃತಿಯ ಸಾಹಿತ್ಯ ವಿಮರ್ಶೆಯ ಟೀಪು, ಶೋಷಿತರ ಸಾಹಿತ್ಯ ವಿಮರ್ಶೆಯ ಮಾನದಂಡವಲ್ಲ. ಆದರೆ ಬಂಡಾಯ ಮತ್ತು ದಲಿತ ಸಾಹಿತ್ಯ ಸ್ಪಷ್ಟವಾಗಿ ತಮ್ಮ ತಮ್ಮ ಸಂಸ್ಕೃತಿಯ ಬೇರುಗಳನ್ನು ಗುರುತಿಸಿಕೊಳ್ಳುವುದರಲ್ಲಿ ವಿಫಲವಾದದ್ದೇ ಬಂಡಾಯ ಮತ್ತು ದಲಿತ ಸಾಹಿತ್ಯದ ಬೆಳವಣಿಗೆಗೆ ಮಾರಕವಾಯಿತು. ಬದುಕಿನ ನೇರ ಅನುಭವವಿಲ್ಲದ ಕೇವಲ ಸೈದ್ಧಾಂತಿಕ ಬದ್ಧ ಸೂತ್ರ ಬದುಕಿನ ಅಭಿವ್ಯಕ್ತಿ ಕಪ್ಪು ಸಾಹಿತ್ಯ ಮತ್ತು ಕೆಂಪು ಸಾಹಿತ್ಯದ ಗುಹಾ ಧ್ವನಿಯಾಯಿತು.

ರಾಜಕೀಯ ಪಕ್ಷಗಳು ದಲಿತರನ್ನು ತಮ್ಮ ಹಿತಕ್ಕೆ ಬಳಸಿಕೊಂಡರೆ ಹೊರತು ಅವರ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಮತ ಪೆಟ್ಟಿಗೆಗಳೂ ಸಾಮಾಜಿಕ ಬದಲಾವಣೆಯನ್ನು ತರಲಿಲ್ಲ. ಜೆ. ಪಿ. ಅವರ

Victory of the ballot box is not victory of the voice of the people, but of craft, cunning tricks, and all round dishonesty

ಈ ಮಾತು ಇಂದಿಗೂ ಅಕ್ಷರ ಅಕ್ಷರವೂ ಸತ್ಯ. ಅವರು ಸಮಗ್ರ ಕ್ರಾಂತಿಯಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎನ್ನುತ್ತಾರೆ. ಆದರೆ ಬುದ್ಧ ಮತ್ತು ಗಾಂಧೀಜಿಯ ಅಹಿಂಸಾ ತತ್ವಬದ್ಧ ಭಾರತೀಯರು ಶಾಂತಪ್ರಿಯರೇ ಹೊರತು, ಮಾರ್ಕ್ಸ್‌ವಾದಿ ಕ್ರಾಂತಿಗೆ ಜನರ ಮನಸ್ಸು ಹದಗೊಳ್ಳದು. ಆದರೆ ವ್ಯವಸ್ಥೆಯ ಸಂಪೂರ್ಣ ಬದಲಾವಣೆಯಿಂದ ಮತ್ತು ಕ್ರಾಂತಿ ಯಶಸ್ವಿಯಾಗುತ್ತದೆ.

ದಲಿತ ಪರವಾದ ಸರ್ಕಾರಿ ಶಾಸನಗಳು ಎಂದೂ ಜಾರಿಯಾಗಿ, ಅದರಿಂದ ದೊರೆಯುವ ಸೌಲಭ್ಯಗಳು ದಲಿರತರನ್ನು ತಲುಪುವುದೇ ಇಲ್ಲ. ಬಡ ದಲಿತರ ಸೌಲಭ್ಯಗಳನ್ನು ಅಧಿಕಾರಶಾಹಿ ಮತ್ತು ದಲಿತ ನಾಯಕರೇ ಕಬಳಿಸುತ್ತಾರೆ. ಅಲ್ಲದೆ ಸೌಲಭ್ಯಗಳ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ದಲಿತ ಸಂಘಟನೆಗಳು ತಮ್ಮ ಹಕ್ಕುಗಳನ್ನು ದುರ್ಬಲ ಸವರ್ಣೀಯರ ಮೇಲೆ ಚಲಾಯಿಸಿ, ತಮ್ಮ ಸಾಮರ್ಥ್ಯದ ಬಲ ಪ್ರದರ್ಶಿಸುತ್ತವೆ ಹೊರತು ಪ್ರಬಲ ಕೋಮಿನ ಭ್ರಷ್ಟಾಚಾರದ ಬಗ್ಗೆ, ಅದನ್ನು ಎದುರು ಹಾಕಿಕೊಳ್ಳದೇ, ತಟಸ್ಥ ನೀತಿಯನ್ನು ಅನುಸರಿಸುತ್ತವೆ. ತಮ್ಮ ಅಸ್ತಿತ್ವಕ್ಕೆ ಮೇಲು ವರ್ಗದ ಎಲ್ಲಾ ಕುತಂತ್ರಗಳನ್ನೂ ದಲಿತ ಸಂಘರ್ಷ ಸಂಘಟನೆ ಬಳಸುವುದರಿಂದ, ಸಮಾನ ಶೋಷಿತರಲ್ಲಿ ವಿಶ್ವಾಸ ಮತ್ತು ಅನುಕಂಪ ಹುಟ್ಟುತ್ತಿಲ್ಲ. ದಲಿತರಲ್ಲಿಯೂ ಸಂಘಟನೆ ಅಸಾಧ್ಯ ಎಂಬ ದನಿಯನ್ನು ಸಮಾಜಶಾಸ್ತ್ರ ಪ್ರಜ್ಞೆ ಪಾರ್ವತಮ್ಮನವರ ಮಾತಿನಲ್ಲಿ ಸ್ಪಷ್ಟವಾಗುತ್ತದೆ.

ದಲಿತರಲ್ಲಿಯೂ ವಿಭಿನ್ನ ಅಭಿರುಚಿ ಬೆಳೆದಿದೆ. ಹಾಗಾಗಿ ದಲಿತರೆಲ್ಲಾ ಒಟ್ಟಾಗುವುದು ಸಧ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇವರ ನೇತಾರರೂ, ಬುದ್ಧಿವಾದ ಹೇಳುವವರೂ ಮೇಲುಜಾತಿದಲಿತರ ಪರಎಂದು ಬಣ್ಣಿಸಿಕೊಳ್ಳುವಸೋಗಲಾಡಿಗಳೇಆಗಿದ್ದಾರೆ. ಅಂಬೇಡ್ಕರ್ ನಂತರ ನಿಜ ಮುಖಂಡತ್ವಹೊರಬಲ್ಲವರು ಇನ್ನೂ ಹುಟ್ಟಿ ಬರಬೇಕಾಗಿದೆ. ಅಂಬೇಡ್ಕರ್ ಹೆಸರು ಹೇಳಿ ಜೀವನೋಪಾಯ ಗಿಟ್ಟಿಸುವವರು ಅಪಾರ ಇದ್ದಾರೆ.

ಎನ್ನುವ ಅವರ ಮಾತಿನ ಸತ್ಯ ಅರಿತು ದಲಿತರು ತಮ್ಮ ಆತ್ಮ ವಿಮರ್ಶೆಗೆ ತೊಡಗಬೇಕಿದೆ.

ದಲಿತರಿಗೆ ಸಾಮಾಜಿಕ ನ್ಯಾಯ ಖಂಡಿತವಾಗಿಯೂ ದೊರಕಬೇಕಿದೆ. ಅವರಿಗೆ ಮೇಲು ಜಾತಿಯ ಮೊಸಳೆ ಕಣ್ಣೀರಿನ ಅನುಕಂಪ ಅನಗತ್ಯ. ಅವರಿಗೆ ನ್ಯಾಯಬದ್ಧವಾಗಿ ದೊರಕಬಹುದಾದ ಹಕ್ಕುಗಳು ದೊರೆತರೆ ಸಾಕಾಗಿದೆ. ಪ್ರಾಥಮಿಕ ಅಗತ್ಯಗಳ ಪೂರೈಕೆಯ ಹಂತದಲ್ಲಿಯೇ ಒದ್ದಾಡುತ್ತಿರುವ ಮುಗ್ಧ ದಲಿತರ ಅಸಂಘಟನೆ, ಆಕ್ರೋಶ, ದುರಾಸೆ-ಇವೆಲ್ಲವೂ ಸಹಜವೇ. ಆದರೆ ದಲಿತ ಅಧಿಕಾರಿಗಳು “ಭ್ರಷ್ಠರಾಗುತ್ತಿಲ್ಲವೆ’ ಎಂಬ ಪ್ರಶ್ನೆಗೆ” “ಬ್ರಾಹ್ಮಣರು ಮತ್ತು ಸವರ್ಣೀಯ ಅಧಿಕಾರಿಗಳು ಭ್ರಷ್ಟರಲ್ಲವೆ” ಎಂದು ಮರು ಪ್ರಶ್ನೆಯಿಂದ ಉತ್ತರಿಸಿದರೆ, ಅದರಲ್ಲಿ ಅವರ ದುರಂತ ಮತ್ತು ದೇಶದ ದುರಂತ ಅಡಗಿದೆ. ಮತಾಂತರ, ಧರ್ಮ, ಪಕ್ಷ, ಸಿದ್ಧಾಂತ” ಯಾವುದರಿಂದಲೂ ಉದ್ಧಾರ ಅಸಾಧ್ಯ ಎಂದು ಅರಿತ ದಲಿತರ ಉದ್ಧಾರ ದಲಿತರಿಂದಲೇ ಎಂಬ ಸತ್ಯದ ಅರಿವಾದ ಮೇಲೆ, ನೈತಿಕ ಶಕ್ತಿಯೇ, ಅವರ ಕ್ರಾಂತಿಯ ಆಯುಧವಾದುದಾಗಲೇ, ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ.

ಪರಾಮರ್ಶನ ಗ್ರಂಥಗಳು

೧. ಪ್ರೊ. ಕೆ. ಜಿ. ನಾಗರಾಜಪ್ಪ ಇಕ್ಕಟ್ಟು-ಬಿಕ್ಕಟ್ಟು, ಅನಿಕೇತನ ಸಾಹಿತ್ಯ ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ತುಮಕೂರು, ೧೯೯೮

೨. ಡಾ. ಅರವಿಂದ ಮಾಲಗತ್ತಿ, ಡಾ. ಅಂಬೇಡ್ಕರ್ ವಿಚಾರಧಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೧.

೩. ಡಾ. ಮ. ನ. ಜವರಯ್ಯ, ಅಂಬೇಡ್ಕರ್ ವಿಚಾರ ಸಾಹಿತ್ಯ : ಸಮಗ್ರ ಅಧ್ಯಯನ, ಸಿದ್ಧಾರ್ಥ ಗ್ರಂಥಮಾಲೆ, ಕುವೆಂಪುನಗರ, ಮೈಸೂರು-೨೩.

—-
* ಇಕ್ಕಟ್ಟು-ಬಿಕ್ಕಟ್ಟು, ಪ್ರೊ. ಕೆ. ಜಿ. ನಾಗರಾಜಪ್ಪ, ಅನಿಕೇತನ ಸಾಹಿತ್ಯ ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ತುಮಕೂರು, ೧೯೯೮, ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಒಪ್ಪಿಗೆ ನೀಡಿದ ಲೇಖಕರಿಗೆ ವಂದನೆಗಳು (ಸಂ).