ಕರೆದಲ್ಲಿಗೆ ಹೋಗಿ ಚಿಕಿತ್ಸೆ ನೀಡಿ ಜನತಾ ಸೇವೆಯೇ ಜನಾರ್ದನ ಸೇವೆ ಎಂದು ನಂಬಿ ನಡೆಯುತ್ತಿರುವವರು ಧನ್ವಂತರಿ
ಡಾ. ಬಿ ಆರ್ ಇನಾಂದಾರ್.
ನಗರಕೇಂದ್ರಿತ ವೈದ್ಯಕೀಯ ವ್ಯವಸ್ಥೆಗೆ ಭಿನ್ನವಾಗಿ ಹಳ್ಳಿಗಾಡಿನ ಜನರಿಗೆ ಅಗತ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ವ್ಯಕ್ತಿಗಳು- ಸಂಸ್ಥೆಗಳು ಪ್ರೋತ್ಸಾಹಕ್ಕೆ ಸದಾ ಅರ್ಹರಾಗಿರುತ್ತಾರೆ. ಅದರಲ್ಲೂ ಕರೆದಲ್ಲಿಗೆ ಬಂದು ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಿ ಸಾಂತ್ವನ ನೀಡುವ ಸೇವಾ ಮನೋಧರ್ಮ ಅಪರೂಪವಾದುದು. ಈ ಮಾದರಿಯ ವೈದ್ಯಕೀಯ ಸೇವೆಯನ್ನು ಜೀವನದ ಮುಖ್ಯ ಧೈಯವೆಂದು ಭಾವಿಸಿ ದುಡಿಯುತ್ತಿದ್ದಾರೆ ಡಾ. ಬಿ ಆರ್ ಇನಾಂದಾರ ಅವರು.
ಮೂಲತಃ ಗದಗ ಜಿಲ್ಲೆಯವರಾದ ಡಾ. ಬಿ ಆರ್ ಇನಾಂದಾರ ಅವರು ಮೈಸೂರಿನ ಆಯುರ್ವೇದ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಸಾಮಾಜಿಕ ಬದುಕಿನಲ್ಲಿ ಸೇವಾ ಮೌಲ್ಯವನ್ನು ಸ್ಥಾಪಿಸಬೇಕೆಂಬ ಸದುದ್ದೇಶದಿಂದ ವೈದ್ಯಕೀಯ ಜ್ಞಾನವನ್ನು ಹಳ್ಳಿಗಾಡಿನ ಬಡವರಿಗಾಗಿ ಮುಡುಪಾಗಿಟ್ಟ ಇವರು ವೈದ್ಯರೂ ಹೌದು, ಸಮಾಜ ಸೇವಕರೂ ಹೌದು, ಕೃತಿಕಾರರೂ ಹೌದು.
ಪಾರ್ಶ್ವವಾಯು ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿ ಅಸಂಖ್ಯಾತ ರೋಗಿಗಳನ್ನು ಗುಣಪಡಿಸಿದ ಡಾ. ಬಿ ಆರ್ ಇನಾಂದಾರ ಅವರು ‘ಧನ್ವಂತರಿ’ ಎಂದೇ ಜನಪ್ರಿಯರಾಗಿದ್ದಾರೆ. ದೇಶ ವಿದೇಶಗಳ ಪ್ರವಾಸದಿಂದ ಪಡೆದ ಅನುಭವವನ್ನು ಸ್ಥಳೀಯರಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ.