ಡಾ. ಬಿ. ದೇವೇಂದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ ದಿನಾಂಕ ೩.೬.೧೮೯೯ ರಲ್ಲಿ ಜನಿಸಿದರು. ಇವರ ತಂದೆ ಶ್ರೀ ಬಿ.ಎಸ್‌. ರಾಮಯ್ಯನವರು, ತಾಯಿ ಶ್ರೀಮತಿ ತುಳಸಮ್ಮನವರು. ರಾಮಯ್ಯನವರು ಚಿತ್ರದುರ್ಗದ ಪ್ರಖ್ಯಾತ ಮದಕರಿನಾಯಕನ ಮನೆತನಕ್ಕೆ ಸೇರಿದವರು. ಸಂಗೀತ ಶಾಸ್ತ್ರ ಪ್ರವೀಣ ಮುಂತಾದ ಬಿರುದಾಂಕಿತರಾದ ಶ್ರೀ ಬಿ.ಎಸ್‌. ರಾಮಯ್ಯನವರು ಸಂಗೀತವಲ್ಲದೇ ಭರತನಾಟ್ಯದಲ್ಲೂ ಪರಿಣತರು. ಕನ್ನಡ ರಂಗಭೂಮಿಇಯಲ್ಲಿ ೨೫ ವರ್ಷಗಳ ಅವಿಚ್ಛಿನ್ನವಾಗಿ ಸೇವೆ ಮಾಡಿ ‘ನಾಟ್ಯನಿಪುಣ’ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು. ಪ್ರಸಿದ್ಧ ಪಂಚವಾದ್ಯ ಗವಾಯಿಗಳಾಗಿದ್ದ ಇವರು ಶ್ರೀ ಬೆಟಗೇರಿ ಮಹಾಸ್ವಾಮಿಗಳ ಶಿಷ್ಯರು. ರಾಮಯ್ಯನವರ ಇತರ ಮಕ್ಕಳೆಂದರೆ ಬಿ. ಶೇಷಪ್ಪ, ಬಿ. ಪರಶುರಾಮ್‌, ಬಿ. ಕೃಷ್ಣಪ್ಪ ಹಾಗೂ ನಾಲ್ಕು ಪುತ್ರಿಯರು.

ದೇವೇಂದ್ರಪ್ಪನವರು ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಆರನೇ ವಯಸ್ಸಿನಿಂದಲೇ ತಂದೆಯಿಂದ ಪಡೆಯತೊಡಗಿದರು. ೧೬ನೇ ವಯಸ್ಸಿನಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊನ್ನಾಳಿಯಲ್ಲಿ ಶಾಲಾಶಿಕ್ಷಕರಾಗಿ ಕೆಲಸಕ್ಕೆ ಸೇರಿಕೊಂಡರು. ಅವರ ಮನೆಯಲ್ಲಿದ್ದ ದಿಲ್‌ರುಬಾ, ಸಿತಾರ್, ಪಿಟೀಲು, ಗೋಟುವಾದ್ಯ, ಜಲತರಂಗ್‌ ಮುಂತಾದ ಹಲವು ವಾದ್ಯಗಳ ಮೇಲೆ ಕೈಯಾಡಿಸುತ್ತಾ ಈ ವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣರಾದರು. ಸೂಕ್ಷ್ಮಮತಿಗಳಾಗಿದ್ದ ಇವರು ಈ ವಾದ್ಯಗಳನ್ನು ನುಡಿಸುವ ಮರ್ಮ, ತಂತ್ರವನ್ನು ಬಹು ಬೇಗ ತಿಳಿದುಕೊಳ್ಳುತ್ತಿದ್ದರು.

ಒಂದು ದಿನ ಶಿರಾಳ ಕೊಪ್ಪದ ಗದಿಗೆಯ್ಯ ಗವಾಯಿಗಳ ಮುಂದೆ ತಮಗೆ ನುಡಿಸಲು ಬರುವ ಕೆಲವು ವಾದ್ಯಗಳನ್ನು ನುಡಿಸಿದರು. ಗವಾಯಿಗಳು ತುಂಬಾ ಸಂತೋಷಗೊಂಡು ದೇವೇಂದ್ರಪ್ಪನವರನ್ನು ಹಾಡಲು ಅಪ್ಪಣೆ ಕೊಡಿಸಿದರು ಹಾಗೂ ‘ಅವ್ವಲ್‌ಗಾನಾ ದೂಯಂ ಬಜಾನಾ’ ಎಂಬ ನಾಣ್ಣುಡಿಯನ್ನು ಉದಾಹರಿಸಿ ವಾದ್ಯ ಸಂಗೀತಕ್ಕಿಂತ ಹಾಡುಗಾರಿಕೆ ಶ್ರೇಷ್ಠವೆಂದು ಹೇಳಿ ಹಾಡಲು ತಿಳಿಸಿದರು. ಎಲ್ಲ ಗಂಡು ಮಕ್ಕಳಿಗೂ ಹದಿಹರೆಯದ ವಯಸ್ಸಿನಲ್ಲಿ ಸಹಜವಾಗಿ ಆಗುವಂತೆ ದೇವೇಂದ್ರಪ್ಪನವರಿಗೂ ಗಂಟಲು ಒಡೆದಿತ್ತು. ಹಾಗಾಗಿ ಅಂದು ದೇವೇಂದ್ರಪ್ಪನವರಿಗೆ ಸರಿಯಾಗಿ ಹಾಡಲಾಗಲಿಲ್ಲ. ಆದರೆ ಗದಿಗೆಯ್ಯನವರು ದೇವೇಂದ್ರನವರ ಪ್ರಯತ್ನವನ್ನು ಪ್ರಶಂಸಿಸಿ ಹಾಡುಗಾರಿಕೆಯನ್ನು ಚೆನ್ನಾಗಿ ಅಭ್ಯಾಸಮಾಡಲು ತಿಳಿಸಿದರು.

ಮೈಸೂರಿನ ಖ್ಯಾತ ವಿದ್ವಾಂಸರಾಗಿದ್ದ ಆಸ್ಥಾನ ವಿದ್ವಾನ್‌ ಬಿಡಾರಂ ಕೃಷ್ಣಪ್ಪನವರ ಅನೇಕ ಗ್ರಾಮಫೋನ್‌ ರೆಕಾರ್ಡ್‌‌ಗಳನ್ನು ಕೇಳಿದ್ದ ದೇವೇಂದ್ರಪ್ಪನವರು ಕೃಷ್ಣಪ್ಪನವರ ಸಂಗೀತವನ್ನು ತುಂಬಾ ಮೆಚ್ಚಿ ಕೊಂಡಿದ್ದರು. ಗದಿಗೆಯ್ಯನವರ ಆದೇಶದಂತೆ ಹಾಡುಗಾರಿಕೆ ಕಲಿಯುವುದಾದರೆ ಬಿಡಾರಂ ಕೃಷ್ಣಪ್ಪನವರ ಬಳಿಯೇ ಕಲಿಯಬೇಕೆಂದು ಮೈಸೂರಿಗೆ ಹೊರಟರು.

ಮೈಸೂರಿಗೆ ಬಂದ ಕೂಡಲೇ ತಮ್ಮ ಕನಸಿನ ಗುರುಗಳಾಗಿದ್ದ ಕೃಷ್ಣಪ್ಪನವರನ್ನೂ ಭೇಟಿಮಾಡಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಪರಿಚಯ ತಿಳಿಸಿ ತಮ್ಮ ಮಹೋದ್ದೇಶ ಹಾಗೂ ಹಾಡುಗಾರಿಕೆ ಕಲಿಯುವ ತಮ್ಮ ಆಸೆಯನ್ನು ತೋಡಿ ಕೊಂಡರು ದೇವೇಂದ್ರಪ್ಪನವರು. ಹುಡುಗನ ಸಂಗೀತ ಜ್ಞಾನದ ಮಟ್ಟವನ್ನು ತಿಳಿಯಲು “ನಿನಗೆ ಬರುವ ಒಂದು ಹಾಡನ್ನು ಹಾಡು” ಎಂದರು ಕೃಷ್ಣಪ್ಪನವರು. ದೇವೇಂದ್ರಪ್ಪ ತಮಗೆ ಬರುತ್ತಿದ್ದ ಒಂದು ಹಾಡನ್ನು ಹಾಡಿದರು. ಇವರ ಗಡಸು ಶಾರೀರವನ್ನು ಕೇಳಿ “ನಿನಗೆ ಹಾಡುಗಾರಿಕೆ ಸರಿ ಹೊಂದುವುದಿಲ್ಲ, ನಿನ್ನ ಶಾರೀರ ಚೆನ್ನಾಗಿಲ್ಲ” ಎಂದು ಬಿಟ್ಟರು ಕೃಷ್ಣಪ್ಪನವರು. ಈ ಮಾತನ್ನು ಕೇಳಿ ಆಕಾಶದಿಂದ ಒಮ್ಮೆಲೆ ಪಾತಾಳಕ್ಕಿಳಿದ ಅನುಭವವಾಯಿತು ದೇವೇದ್ರಪ್ಪನವರಿಗೆ. ಅವರ ಮಹತ್ವಾಕಾಂಕಲ್ಷೆಗೆ ತಣ್ಣೀರನ್ನೆರಚಿದಂತಾಯ್ತು. ಬೇರೆ ಯಾರಾದರೂ ಗುರುಗಳು ಸಿಕ್ಕಬಹುದೆಂದು ಇತರ ವಿದ್ವಾಂಸರ ಮನೆಗಳಿಗೂ ಅಲೆದು ತಮ್ಮ ಬೇಡಿಕೆಯನ್ನು ತಿಳಿಸಿ ಅವರಿಂದಲೂ ತಿರಸ್ಕರಿಸಲ್ಪಟ್ಟರು. ನಿರಾಶೆ, ನಿರುತ್ಸಾಹ, ಬಡತನ, ಹಿರಿಯ ವಿದ್ವಾಂಸರ ತಿರಸ್ಕಾರ ಇವುಗಳಿಂದ ಸೋತು ನಿರುಪಾಯರಾಗಿ ಆತ್ಮಹತ್ಯೆಗೂ ಪ್ರಯತ್ನಿಸಿದರು. ಈ ಮಧ್ಯೆ ಪ್ರಿನ್ಸ್ ಗೋಪಾಲ ರಾಜೇಅರಸ್‌ರವರ ಮನೆಯಲ್ಲಿ ಖ್ಯಾತ ಹಿಂದುಸ್ಥಾನಿ ವಿದ್ವಾಂಸರಾದ ಅಬ್ದುಲ್‌ ಕರೀಂಖಾನರ ಗಾಯನವನ್ನು ಕೇಳುವ ಸುಯೋಗ ಒದಗಿಬಮತು. ಆ ಗಂಧರ್ವಗಾನವನ್ನು ಕೇಳಿದ ದೇವೇಂದ್ರಪ್ಪನವರು ತಮ್ಮ ನಿಲುವನ್ನು ಬದಲಿಸಿದರು. ಖಾನರ ಸಿರಿಕಂಠದಂತಹ ಶಾರೀರವನ್ನು ಸಂಪಾದಿಸಲು ಪಣತೊಟ್ಟರು.

ಅಂದಿನ ಪ್ರತಿ ದಿನ ಬೆಳಗ್ಗೆ ೩ ಗಂಟೆಗೆ ಎದ್ದು ತಮಗೆ ತಿಳಿದಿದ್ದ ಅಕಾರ, ವಿವಿಧ ವರಸೆಗಳು ಮುಂತಾದ ಸಾಧನೆಗಳನ್ನು ಮಾಡಲಾರಂಭಿಸಿದರು. ಅವರ ಶ್ರದ್ಧೆ, ಆಸಕ್ತಿಗಳನ್ನು ಮೆಚ್ಚಿ ಬಿ.ರಾಜಪ್ಪನವರು ಎರಡು ಕೀರ್ತನೆಗಳನ್ನು, ವಿದ್ವಾನ್‌ ತಿಟ್ಟೆ ನಾರಾಯಣ ಅಯ್ಯಂಗಾರ್ಯರು ಮುವತ್ತೈದು ಕೀರ್ತನೆಗಳನ್ನು ವೀಣೆ ಸುಬ್ಬಣ್ಣನವರು ಒಂದು ವರ್ಣ, ಒಂದು ಸ್ವರಜತಿಯನ್ನು ಹೇಳಿಕೊಟ್ಟರು. ಆದರೆ ಬಿಡಾರಂರವರ ಬಳಿ ಹಾಡುಗಾರಿಕೆ ಕಲಿಯಲಾಗಲಿಲ್ಲವೆಂಬ ಕೊರಗಿನಿಂದ ಮೈಸೂರನ್ನು ತೊರೆದು ತಮ್ಮೂರಿಗೆ ಹಿಂದಿರುಗಲು ನಿಶ್ಚಯಿಸಿ, ಕೃಷ್ಣಪ್ಪನವರನ್ನು ಕಂಡು ಅವರನ್ನು ಬೇಡಿ ಅವರ ಭಾವಚಿತ್ರ ಒಂದನ್ನು ಪಡೆದು ಊರಿಗೆ ಹಿಂದಿರುಗಿದರು ದೇವೇಂದ್ರಪ್ಪನವರು.

ಸಂಗೀತವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವ ಆಸೆ ದೂರವಾಗಿತ್ತು. ಶಾಲಾಶಿಕ್ಷಕನಾಗಿಯಾದರೂ ಜೀವನ ಸಾಗಿಸಬೇಕೆಂದುಕೊಂಡು ಶಿವಮೊಗ್ಗಕ್ಕೆ ತೆರಳಿ ಅಲ್ಲಿ ಶಿಕ್ಷಕರ ಟ್ರೈನಿಂಗ್‌ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇವರ ರಕ್ತದ ಕಣ ಕಣಗಳಲ್ಲೂ ಸಂಗೀತವು ಹರಿಯುತ್ತಿದ್ದು ಬಾಹ್ಯಗೋಚರವಾಗಲು ಕಾಯುತ್ತಿದ್ದುದರಿಂದ ಸ್ಪೂರ್ತಿಬಂದಾಗ ಅವರಿಗೆ ಅರಿಯದಂತೆ ಹಾಡತೊಡಗುತ್ತಿದ್ದರು ಅಥವಾ ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದರು. ದೇವೇಂದ್ರಪ್ಪನವರ ತರಗತಿಯ ಸಹಪಾಠಿಗಳು ದೇವೇಂದ್ರಪ್ಪನವರ ಸಂಗೀತದಿಂದ ಆಕರ್ಷಿತರಾದರು. ದೇವೇಂದ್ರಪ್ಪನವರ ಮೈಸೂರಿನ ಕಹಿ ಅನುಭವವನ್ನು ಕೇಳಿದ ಅವರು ದೇವೇಂದ್ರಪ್ಪನವರನ್ನು ಹುರಿದುಂಬಿಸುತ್ತಾ ಅವರಿಂದ ಹಾಡಿಸುತ್ತಾ ಅವರಿಗಾಗಿದ್ದ ದುಃಖವನ್ನು ಮರೆಯುವಂತೆ ಮಾಡುತ್ತಿದ್ದರು. ಸ್ನೇಹಿತರ ಈ ರೀತಿಯ ಪ್ರಚೋದನೆ ಮತ್ತು ತಮ್ಮನ್ನೂ ಸೇರಿದಂತೆ ಇತರರೂ ಪಾಠ ಪ್ರವಚನಗಳಿಗೆ ಹೆಚ್ಚು ಗಮನ ಕೊಡದ ಪರಿಣಾಮ ಆ ಸಲದ ಪರೀಕ್ಷೆಯಲ್ಲಿ ಎಲ್ಲಾ ಅರವತ್ತು ವಿದ್ಯಾರ್ಥಿಗಳೂ ನಪಾಸಾಗಿದ್ದರು. ತನಗೆ ತೃಪ್ತಿ ಕೊಡುವ ಗಾಯನವನ್ನು ಕೇಳಿ ಆನಂದಿಸುತ್ತಾ ಓದದೇ ಅನುತ್ತೀರ್ಣರಾದರು ಹಾಗೂ ಕಂಠವು ಸುಶ್ರಾವ್ಯವಾಗಿದ್ದರೆ ಇನ್ನೂ ಏನಾಗುತ್ತಿತ್ತೋ ಎಂದು ಊಹಿಸಿಕೊಂಡ ದೇವೇಂದ್ರಪ್ಪನವರು ಗಾಯನದ ಸಾಧನೆಗೇ ಹೆಚ್ಚು ಗಮನ ಕೊಡಲಾರಂಭಿಸಿದರು. ದುಸ್ಸಾಧ್ಯವಾದುದನ್ನು ಸಾಧಿಸಬೇಕೆಂದು ದೃಢ ನಿರ್ಧಾರದಿಂದ ಛಲತೊಟ್ಟು ಗುರುಗಳಿಂದ ಪಡೆದಿದ್ದ ಭಾವಚಿತ್ರವನ್ನೇ ಎದುರಿಗಿಟ್ಟುಕೊಂಡು ಏಕಲವ್ಯನಂತೆ, ಅವರ ಆಶೀರ್ವಾದದೊಡನೆ, ಸಾಧನೆ ಮಾಡತೊಡಗಿದರು. ಅವರ ಈ ಯಮಸಾಧನೆಗೆ ಅವರ ಕೃಶ ಶರೀರ ನಲುಗಿತು. ದೇಹ ಬಳಲಿ ಡಬ್ಬಲ್‌ ನ್ಯುಮೋನಿಯಾ ಬೇನೆಗೆ ಈಡಾಯಿತು. ಈ ಬೇನೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ ಒಂದು ಪವಾಡ ನಡೆಯಿತು. ಮರದ ಕೊರಡಿನಂತಿದ್ದ ಅವರ ಕಂಠವು ಕಂಚಿನ ಕಂಠವಾಗಿ ಮಾರ್ಪಾಡಾಗಿತ್ತು. ಅದು ಅವರ ಕಠೋರ ತಪಸ್ಸಿಗೆ ಸಮಾನವಾದ ಸಾಧನೆಯ ಫಲವೂ ಆಗಿರಬಹುದು. ತಮ್ಮ ಶಾರೀರ ಸುಧಾರಿಸಿ ಸಾಣೆ ಹಿಡಿದ ವಜ್ರದಂತೆ ವಿಶೇಷ ರೂಪ ತಳೆದಿರುವುದನ್ನು ಗಮನಿಸಿದ ದೇವೇಂದ್ರಪ್ಪನವರಿಗೆ ಕಮರಿಹೋಗಿದ್ದ ಸಂಗೀಥ ಕಲಿಯುವ ಆಸೆ ಮತ್ತೆ ಚಿಗುರೊಡೆಯಿತು. ಈ ಹೊಸ ಕಂಠಶ್ರೀಯನ್ನು ಬಿಡಾರಂ ಕೃಷ್ಣಪ್ಪನವರು ಖಂಡಿತಾ ಮೆಚ್ಚಿ ತನಗೆ ವಿದ್ಯಾದಾನ ಮಾಡೇ ಮಾಡುತ್ತಾರೆಂಬ ದೃಢ ವಿಶ್ವಾಸಿಂದ ೧೯೨೨ ರಲ್ಲಿ ಮತ್ತೆ ಮೈಸೂರಿಗೆ ಬಂದರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪನವರಿಗೆ ಶ್ರೀಮಂತ ವ್ಯಾಪಾರಿಯೊಬ್ಬರ ಪರಿಚಯವಾಯಿತು. ಈ ವ್ಯಾಪಾರಿ ದೇವೇಂದ್ರಪ್ಪನವರ ಜನಾಂಗದವರೇ ಆಗಿದ್ದು ಅರಮನೆಗೆ ಒಡವೆ ವಜ್ರ ವೈಡೂರ್ಯವನ್ನು ಮಾರಾಟ ಮಾಡುತ್ತಿದ್ದರು. ವ್ಯಾಪಾರಿಗೆ ದೇವೇಂದ್ರಪ್ಪನವರ ಸಂಗೀತ ಸಾಧನೆ, ಜಲತರಂಗ್‌ ಮುಂತಾದ ವಾದ್ಯಗಳ ಮೇಲಿನ  ಹತೋಟಿ ಕಂಡು ತುಂಬಾ ಮೆಚ್ಚುಗೆಯಾಯಿತು. ಅವರು ಮಹಾರಾಜರನ್ನು ಕಂಡು ದೇವೇಂದ್ರಪ್ಪನವರ ಗುಣಗಾನ ಮಾಡಿ ಪ್ರಭುಗಳ ವರ್ಧಂತಿ ಸಮಯದಲ್ಲಿ ದೇವೇಂದ್ರಪ್ಪನವರ ಜಲತರಂಗ್‌ ವಾದನವನ್ನು ಏರ್ಪಾಡು ಮಾಡಿದರು. ಆಗಿನ ಸಂದರ್ಭದಲ್ಲಿ ಮಹಾರಾಜರ ಸಮ್ಮುಖದಲ್ಲಿ ಸಂಗೀತ ಕಾರ್ಯಕ್ರಮ ಕೊಡುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಆಸ್ಥಾನ ವಿದ್ವಾಂಶರುಗಳಾದ ಬಿಡರಂ ಕೃಷ್ಣಪ್ಪ, ವೀಣಾಭಕ್ಷಿ ಸುಬ್ಬಣ್ಣ, ವೀಣಾ ಶೇಷಣ್ಣ ಅವರುಗಳು ಕಾರ್ಯಕ್ರಮ ಮೆಚ್ಚಿ ಕೃಪೆ ತೋರಿದರೆ ಮಾತ್ರ ಪ್ರಭುಗಳ ಸಮ್ಮುಖದಲ್ಲಿ ಕಾರ್ಯಕ್ರಮ ಕೊಡಲು ಸಾಧ್ಯವಾಗುತ್ತಿತ್ತು. ಆದರೆ ಈ ಕಾರ್ಯಕ್ರಮ ಆಸ್ಥಾನ ವಿದ್ವಾಂಸರ ಪೂರ್ವಪರೀಕ್ಷೆ ಇಲ್ಲದೆಯೇ ರತ್ನ ವ್ಯಾಪಾರಿಯ ಶಿಫಾರಸಿನಿಂದ ಏರ್ಪಾಡಾದುದಾಗಿದ್ದಿತು.

ಹಿಂದೂಸ್ಥಾನಿ ಸಂಗೀತವನ್ನು ಮಾತ್ರ ನುಡಿಸಲಾಗುತ್ತಿದ್ದ ಜಲತರಂಗ್‌ ವಾದ್ಯದಲ್ಲಿ ಕರ್ನಾಟಕ ಸಂಗೀತವನ್ನು ದೇವೇಂದ್ರಪ್ಪನವರು ಅಚ್ಚುಕಟ್ಟಾಗಿ ನುಡಿಸಿದರು. ಅಮೋಘವಾದ ಕಾರ್ಯಕ್ರಮವದಾಗಿದ್ದಿತು. ಪ್ರಭುಗಳಿಗೆ ಬಹಳ ಸಂತೋಷವಾಯಿತು. ನಿಮ್ಮ ಗುರುಗಳು ಯಾರು? ಎಂದು ಪ್ರಭುಗಳು ದೇವೇಂದ್ರಪ್ಪನವರನ್ನು ಕೇಳಿದರು. ಎದುರಿಗೆ ಉಪಸ್ಥಿತರಿದ್ದ ಬಿಡಾಋಂ ಕೃಷ್ಣಪ್ಪನವರನ್ನು ‘ಇವರೇ ನನ್ನ ಗುರುಗಳು’ ಎಂದು ತೋರಿಸಿದರು. ಕೃಷ್ಣಪ್ಪನವರು ಕಕ್ಕಾಬಿಕ್ಕಿಯಾದರೂ ತೋರಿಸಿಕೊಳ್ಳಲಿಲ್ಲ. ಹುಡುಗ ಚೆನ್ನಾಗಿ ನುಡಿಸುತ್ತಾನೆ, ಒಳ್ಳೆಯ ಭವಿಷ್ಯವಿದೆ, ಚೆನ್ನಾಗಿ ತಯಾರು ಮಾಡಿ ಎಂದು ಪ್ರಭುಗಳು ಕೃಷ್ಣಪ್ಪನವರಿಗೆ ತಿಳಿಸಿದರು. ಕೃಷ್ಣಪ್ಪನವರು ನಸುನಗೆಯಿಂದ ಸಮ್ಮತಿಸಿ ಮನಸ್ಸಿನಲ್ಲೇ ದೇವೇಂದ್ರಪ್ಪನವರ ಸೌಜನ್ಯ, ಬುದ್ಧಿವಂತಿಕೆ, ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡರು. ದೈವ ಒಲಿದಿತ್ತು. ದೇವೇಂದ್ರಪ್ಪನವರು ಕೃಷ್ಣಪ್ಪನವರ ಮನಸ್ಸನ್ನು ಗೆದ್ದುಕೊಂಡರು. ಕೃಷ್ಣಭೂಪಾಲರು ಅಂದಿನಿಂದಲೇ ದೇವೇಂದ್ರಪ್ಪನವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು. ಕೃಷ್ಣಪ್ಪನವರೂ ತಮ್ಮ ಈ ಏಕಲವ್ಯನ್ನು ಪರಿಗ್ರಹಿಸಿ ಶಿಷ್ಯರನ್ನಾಗಿಸಿಕೊಂಡರು. ಪ್ರಭುಗಳಿಗೆ ದೇವೇಂದ್ರಪ್ಪನವರನ್ನು ಪರಿಚಯ ಮಾಡಿಸಿದ ಶ್ರೀಮಂತ ವ್ಯಾಪಾರಿ ತಮ್ಮ ಮಗಳಾದ ಶ್ರೀಮತಿ ತಾಯಮ್ಮನನ್ನು ದೇವೇಂದ್ರಪ್ಪನವರಿಗೆ ವಿವಾಹ ಮಾಡಿಕೊಟ್ಟರು. ಮುಂದೆ ಇವರಿಗೆ ಇಬ್ಬರು ಗಂಡು ಮಕ್ಕಳಾದರು ಇವರೇ ಬಿ.ಡಿ. ಲಕ್ಷ್ಮಣ್‌ ಮತ್ತು ಬಿ.ಡಿ. ವೇಣುಗೋಪಾಲ್‌.

ಅಪಾರ ಔದಾರ್ಯದಿಂದ ಹೊಸ ಆತ್ಮೀಯ ಶಿಷ್ಯನಿಗೆ ಮನಬಿಚ್ಚಿವಿದ್ಯಾದಾನ ಮಾಡತೊಡಗಿದರು. ಏಕಸಂಧಿಗ್ರಾಹಿಯಾಗಿದ್ದ ದೇವೇಂದ್ರಪ್ಪನವರೂ ಸಿಕ್ಕಿದ ಈ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಗುರುವಿನ ಗುಲಾಮನಾಗಿ ವಿದ್ಯೆಯಲ್ಲಿ ಸಿದ್ಧಿಪಡೆದರು. ಗುರುಗಳ ಪೂರ್ಣ ಆಶೀರ್ವಾದ ಪಡೆದ ದೇವೇಂದ್ರಪ್ಪನವರ ಸಂಗೀತ ಜ್ಞಾನದಾಹ ಹಿಂಗಿತು. ವಿದ್ಯಾಸಿದ್ಧಿಯ ಸಫಲತೆಯ ದ್ಯೋತಕವೋ ಎಂಬಂತೆ ೧೯೪೫ ಡಿಸೆಂಬರ್ ತಿಂಗಳಲ್ಲಿ ಶ್ರೀ ಜಯಚಾಮರಾಜ ಒಡೆಯರ್ ರವರು ದೇವೇಂದ್ರಪ್ಪನವನರನ್ನು ಆಹ್ವಾನಿಸಿ ಒಂಬತ್ತು ದಿನಗಳು ಸತತವಾಗಿ ಹಾಡುಗಾರಿಕೆ, ಪಿಟೀಲು, ಗೋಟುವಾದ್ಯ ಮುಂತಾದ ಹಲವು ವಿಧದ ಕಾರ್ಯಕ್ರಮಗಳನ್ನು ನಡೆಸಲು ನಿಯೋಜಿಸಿದರು. ಈ ಅಮೋಘವಾದ ಕಾರ್ಯಕ್ರಮ ದೇವೇಂದ್ರಪ್ಪನವರ ನಾನಾವಿಧ ಪ್ರತಿಭೆಯ ಒರೆಗಲ್ಲಾಗಿ ಶೋಭಿಸಿತು. ಒಡೆಯರ್ ರವರು ತಮ್ಮ ಸಂತೋಷ ಹಾಗೂ ಮೆಚ್ಚುಗೆಯ ಪ್ರತೀಕವಾಗಿ ತಮ್ಮ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ದೇವೇಂದ್ರಪ್ಪನವರಿಗೆ ಗಾನವಿಶಾರದ ಎಂಬ ಪ್ರಶಸ್ತಿಯನ್ನೂ ರಾಜಲಾಂಛನ ‘ಗಂಡಭೇರುಂಡ’ದ ಸ್ವರ್ಣಪದಕವನ್ನೂ ರಾಜೋಚಿತ ಮರ್ಯಾದೆಗಳನ್ನೂ ನೀಡಿ ಗೌರವಿಸಿದರು. ತಮ್ಮ ಗುರುಗಳ ಉಪಸ್ಥಿತಿಯಲ್ಲಿ ತಮ್ಮ ಗುರುಗಳಿಗೆ ಸಂದಿದದ ‘ಗಾನವಿಶಾರದ’ ಪ್ರಶಸ್ತಿ ತಮಗೂ ದೊರಕಿದುದಕ್ಕಾಗಿ ದೇವೇಂದ್ರಪ್ಪನವರಿಗೆ ಹೆಮ್ಮೆ ಎನಿಸಿತು.

ದೇವೇಂದ್ರಪ್ಪನವರ ವಿದ್ವತ್ತನ್ನು ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಅವರಿಗೆ ತುಂಬಾ ಹಣಕೊಟ್ಟು ದಕ್ಷಿಣ ದೇಶಕ್ಕೆ ಹೋಗಿ ದಿಗ್ವಿಜಯ ಮಾಡಿಕೊಂಡು ಬರುವಂತೆ ಆಣತಿ ಇತ್ತರು. ಅವರು ಈ ಸದವಕಾಶವನ್ನು ಉಪಯೋಗಿಸಿಕೊಂಡು ತಂಜಾವೂರನ್ನು ಕೇಂದ್ರವನ್ನಾಗಿರಿಸಿಕೊಂಡು ಇಡೀ ದಕ್ಷಿಣ ಭಾರತವನ್ನೇ ಸುತ್ತಿ ಅಲ್ಲೆಲ್ಲಾ ಮೈಸೂರಿನ ಕೀರ್ತಿ ಪತಾಕೆಯನ್ನು ಹಾರಿಸಿದರು. ಬೆಳಗಾವಿ, ಪುಣೆ, ಮುಂಬಯಿ ಹೈದರಾಬಾದ್‌, ತಿರುಚಿರಾಪಳ್ಳಿ ಮುಂತಾದ ಸ್ಥಳಗಳಲ್ಲೂ ಮನೆಮಾತಾದರು. ಮದರಾಸಿನಲ್ಲಿ ಸಿ.ಆರ್. ಶ್ರೀನಿವಾಸಯ್ಯಂಗಾರ್ಯರು ಒಂದು ವಿದ್ವತ್‌ ಸಭೆಯನ್ನು ಸೇರಿಸಿ ಗಾಯಕರತ್ನ ಎಂಬ ಬಿರುದನ್ನು ನೀಡಿದರು. ಹೈದರಾಬಾದಿನಲ್ಲಿ ರಾಗಾಲಾಪನ ಚತುರ, ಬಳ್ಳಾರಿಯಲ್ಲಿ ಗಾನಕೇಸರಿ, ರಂಭಾಪುರಿ ಜಗದ್ಗುರುಗಳಿಂದ ಗಾನಾಲಂಕಾರ, ಪ್ರೊದತ್ತೂರಿನ ಶ್ರೀ ಸಮರ್ತನಾರಾಯಣ ಮಹಾರಾಜರಿಂದ ಗಾಯಕ ಸಾರ್ವಭೌಮ ಮುಂತಾದ ಗೌರವ ಪ್ರಶಸ್ತಿಗಳ ಮಹಾಪೂರವೇ ದೇವೇಂದ್ರಪ್ಪನವರ ಬಳಿಗೆ ಹರಿದು ಬಂತು. ೧೯೪೫ ರಲ್ಲಿ ಮದರಾಸಿನ ತ್ಯಾಗಬ್ರಹ್ಮ ಸಭೆಯಲ್ಲಿ ನಡೆದ ಇವರ ಕಾರ್ಯಕ್ರಮದ ಬಗ್ಗೆ ತಮಿಳುಪತ್ರಿಕೆ ‘ಸ್ವದೇಶ್‌ ಮಿತ್ರನ್‌’ ವಿಮರ್ಶಿಸುತ್ತಾ ಕೆಲವರಿಗೆ ಪ್ರಶಸ್ತಿಗಳು ಇರುತ್ತವೆ ಆದರೆ ಅವರಿಗೆ ಹಾಡಲೇ ಬರುವುದಿಲ್ಲ. ಕೆಲವರಿಗೆ ಹಾಡಲು ಬರುತ್ತದೆ ಆದರೆ ಪ್ರಶಸ್ತಿಗಳು ಇರುವುದಿಲ್ಲ. ದೇವೇಂದ್ರಪ್ಪನವರಿಗೆ ಎರಡೂ ಇದೆ’ ಎಂದು ಪ್ರಕಟಿಸಿತ್ತು. ಗೋಖಲೆ ಹಾಲ್‌ನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮವನ್ನು ಕುರಿತು an unchallenged Vocalist of South India ಎಂದು ವಿಮರ್ಶಿಸಿದ್ದರು.

ತಮ್ಮ ಪುತ್ರ ಬಿ.ಡಿ. ಲಕ್ಷ್ಮಣ್‌ರವರ ವಿವಾಹವಾದ ಸ್ವಲ್ಪದಿನಗಳಲ್ಲೇ ದೇವೇಂದ್ರಪ್ಪನವರಿಗೆ ಪತ್ನೀ ವಿಯೋಗವಾಯಿತು. ದೇವೇಂದ್ರಪ್ಪನವರು ಶ್ರೀಮತಿ ಚಂದ್ರಮ್ಮನವರನ್ನು ವಿವಾಹವಾದರು. ಶ್ರೀಮತಿ ಚಂದ್ರಮ್ಮನವರು ಪದವೀಧರೆಯಾಗಿದ್ದು, ಮೃದುಸ್ವಭಾವದವರೂ, ಸೌಜನ್ಯಶೀಲರೂ ಪತಿಯ ಛಾಯಾನುವರ್ತಿಯೂ ಆಗಿದ್ದು ಪತಿಯ ಸಂಗೀತ ಕಲೆಯ ಏಳಿಗೆಗೆ ಸಕಲ ವಿಧದಿಂದಲೂ ಸಹಕರಿಸಿದರು.

೧೯೫೩ರಲ್ಲಿ ದೇವೇಂದ್ರಪ್ಪನವರು ಭಾರತೀಯ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ಚೀನಾದೇಶಕ್ಕೆ ಹೋಗಿ ತಮ್ಮ ವಿದ್ವತ್ತು ಹಾಗೂ ಪ್ರೌಢಿಮೆಗಳಿಂದ ಚೀನೀಯರ ಮನಗೆದ್ದು ಭಾರತದ ಖ್ಯಾತಿಯನ್ನು ಬೆಳಗಿಸಿದರು.

ಭಾರತ ಸರ್ಕಾರ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ೧೯೬೩ರಲ್ಲಿ ರಾಷ್ಟ್ರಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ೧೯೬೨ರಲ್ಲಿ ೧೯೬೪ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಸಂಗೀತ ಸಾಹಿತ್ಯ ಕ್ಷೇತ್ರಗಳಲ್ಲಿ ಶ್ರೀಯುತರು ನೀಡಿರುವ ಸೇವೆನ್ನು ಗಮನಿಸಿ ಮೈಸೂರು ವಿಶ್ವವಿದ್ಯಾನಿಲಯವು ೧೯೭೨ ರಲ್ಲಿ ಇವರಿಗೆ ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿ ಗೌರವಿಸಿತು.

ಎತ್ತರದ ನಿಲುವು, ತಿದ್ದಿದ ಮುಖಲಕ್ಷಣ, ಸರಳವಾದ ನಗುಮುಖ, ಮೈಸೂರಲ್ಲಿ ಅಪರೂಪವಾಗಿ ಕಂಡು ಬರುವ ಉತ್ತರದ ಕೋರೆ ರುಮಾಲು, ಲಾಂಗ್‌ ಕೋಟು, ಭುಜದ ಮೇಲೆ ಜರತಾರಿ ಶಲ್ಯ. ಕತ್ತಿನಲ್ಲಿ ಮಹಾರಾಜರು ದಯಪಾಲಿಸಿದ ಗಂಡಭೇರುಂಡ ಲಾಂಛನದ ಸುವರ್ಣ ಪದಕ, ಹಣೆಯಲ್ಲಿ ಕುಂಕುಮ, ನಡಿಗೆಯ ಕೋಲನ್ನು ಹಿಡಿದು ಕಾರ್ಯಕ್ರಮಕ್ಕೆ ಹೋದರೆ ಹಿಂದೂಸ್ಥಾನಿ ಸಂಗೀತ ಪ್ರಿಯರಿಗೆ ಗಗವಾಯಿಗಳಂತೆಯೂ, ದಕ್ಷಿಣಾದಿ ಸಂಗೀತದ ರಸಿಕರಿಗೆ ಕರ್ನಾಟಕ ಸಂಗೀತ ವಿದ್ವಾಂಸರಂತೆಯೂ ಕಾಣುತ್ತಿದ್ದರು. ಯಾವ ಕಾರ್ಯಕ್ರಮವೇ ಆಗಲಿ, ಯಾವ ಪಕ್ಕವಾದ್ಯದವರೇ ಆಗಲಿ ಜಗ್ಗದ ದೇವೇಂದ್ರಪ್ಪನವರು ಸಭೆಯ ಪಕ್ಕವಾದ್ಯಗಾರರ ದರ್ಜೆ ಏರಿದಂತೆ ವಿಶೇಷ ಕೆಚ್ಚಿನಿಂದ ಅದ್ಭುತವಾಗಿ ಹಾಡಿ ಜಯಭೇರಿ ಹೊಡೆದು ಬರುವ ಧೀರ ಸ್ವಭಾವದವರಾಗಿದ್ದರು.

ಹಿಂದುಸ್ತಾನಿ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರಿಂದ ದೇವೇಂದ್ರಪ್ಪನವರು ಗಾಯನದಲ್ಲಿ ಕರ್ಣಾಟಕ ಹಿಂದೂಸ್ಥಾನಿ ಪದ್ಧತಿಗಳ ಉತ್ತಮಾಂಶಗಳನ್ನು ಬೆರೆಸಿ ತಮ್ಮದೇ ಆದ ಒಂದು ವಿಶಿಷ್ಟ ಬಗೆಯ ಶೈಲಿಯನ್ನು ರೂಢಿಸಿಕೊಂಡರು. ಯಾವ ಭಾಷೆಯ ಕೃತಿಯನ್ನೇ ಹಾಡಿದರೂ ಅದರ ಅರ್ಥವನ್ನು ತಿಳಿದು ಅರ್ಥಕ್ಕೆ ಚ್ಯುತಿಬಾರದಂತೆ ಶುದ್ಧವಾಗಿ ಹಾಡುತ್ತಿದ್ದರು. ಸಾಹಿತ್ಯ ವಿನ್ಯಾಸ ಮಾಡುವಾಗ ಆಗಲೀ, ಕೃತಿಯ ಪ್ರಸ್ತಾರಕ್ಕೆ ನಿಲುಗಡೆ ಕೊಡುವಾಗ ಆಗಲಿ ಸಾಹಿತ್ಯ ಆಭಾಸವಾಗದಂತೆ ಕಟ್ಟೆಚ್ಚರ ವಹಿಸುತ್ತಿದ್ದರು. ಕೃತಿಗೆ ರಾಗಭಾವಕ್ಕೆ ಹೊಂದಿಕೆಯಾಗುವಷ್ಟು ಮಾತ್ರ ಸ್ವರಕಲ್ಪನೆ ಮಾಡುತ್ತಿದ್ದರು. ಸ್ವರಕಲ್ಪನೆಯಲ್ಲಿ ಲೆಕ್ಕಾಚಾರಕ್ಕಿಂತಲೂ ರಾಗರಸದ ಕಡೆಗೇ ಹೆಚ್ಚುಗಮನ ಕೊಡುತ್ತಿದ್ದರು. ಕೆಲವು ಸಾಹಿತ್ಯಕ್ಕೆ ತಕ್ಕಂತೆ ನಾಲ್ಕು ಐದುಕಡೆ ಎಡುಪಿಗೆ ಸ್ವರಹಾಕುತ್ತಿದ್ದುದೂ ಉಂಟು. ಮಾರ್ದವತೆ, ಓಜಸ್ಸುಗಳೊಡನೆ ಇವರ ಕಂಚಿನಕಂಠದಲ್ಲಿನ ಒಂದು ರೀತಿಯ ಜೀರು ಇವರ ಗಾಯನದಲ್ಲಿ ಕಾಣಬಹುದಾಗಿತ್ತು. ಇವರ ಕಂಠಕ್ಕೆ ತಕ್ಕಂತ ವಿಶೇಷವಾಗಿ ನಿರ್ಮಿಸಿದ್ದ ಎರಡು ಜೋಡಿ ತಂಬೂರಿಗಳನ್ನು ಉಪಯೋಗಿಸುತ್ತಿದ್ದರು. ಈ ತಂಬೂರಿಗಳ ಹೆಸರು ರಾಮ-ಲಕ್ಷ್ಮಣ ಹಾಗೂ ಉಮಾಮಹೇಶ್ವರ ಲಕ್ಷ್ಮೀನಾರಾಯಣ. ಶ್ರುತಿ ಶುದ್ಧಿಯಾಗಿ ಲಯಶುದ್ಧವಾಗಿ ಈ ಜೋಡಿ ತಂಬೂರಿಯೊಡನೆ ದೇವೇಂದ್ರಪ್ಪನವರು ಹಾಡುತ್ತಿದ್ದರೆ ಶ್ರೋತೃಗಳು ಮಂತ್ರಮುಗ್ಧರಾಗುತ್ತಿದ್ದರು. ಇವರದು ಮನೋಧರ್ಮ ಸಂಗೀತ. ಪ್ರತಿಸಲದ ಕಚೇರಿಯಲ್ಲೂ ಹೊಸ ಹೊಸ ಕಲ್ಪನೆಗಳು ಮೂಡಿ ಬರುತ್ತಿದ್ದವು. ದಾಸರ ಪದಗಳನ್ನು, ಶಿವಶರಣರ ವಚನಗಳನ್ನು, ಶಿಶುನಾಳ ಷರೀಫರ ರಚನೆಗಳನ್ನು ಅರ್ಥ ಪೂರ್ಣವಾಗಿ ಹಾಡುತ್ತಿದ್ದರು. ಕೆಲವು ಬಾರಿ ರಾಗಾಲಾಪನೆಯಲ್ಲಿ ಉತ್ತರಾದಿ ಶೈಲಿ ಮಿಳಿತವಾಗುವುದನ್ನು ಕೆಲವು ಮಡಿವಂತರು ಒಪ್ಪದಿದ್ದುದೂ ಉಂಟು. ಇಂತಹ ಒಣ ಮಡಿವಂತಿಕೆಗೆ ದೇವೇಂದ್ರಪ್ಪನವರು ಸೊಪ್ಪು ಹಾಕುತ್ತಿರಲಿಲ್ಲ. ಅವರ ರಾಗ ನಿರೂಪಣೆ ಉಳಿದೆಲ್ಲ ವಿದ್ವಾಂಸರ ವಿಧಾನಗಳಿಗಿಂತ ಭಿನ್ನವಾಗಿದ್ದು ಸಾಮಾನ್ಯವಾಗಿ ಕೇಳಿ ಅಭ್ಯಾಸವಿಲ್ಲದ ಅನೇಕ ನವೀನ ಸಂಚಾರಗಳು ಭಿನ್ನವಾಗಿಯೂ ರಂಜಕವಾಗಿಯೂ ಇರುತ್ತಿದ್ದವು. ಅವರಿಗೆ ಸರಿ ಎಂದು ಕಂಡ ರೀತಿಯಲ್ಲಿ ಹಾಡುತ್ತಿದ್ದರು. ರ್ಶರೋತೃಗಳ ಮೆಚ್ಚುಗೆ ಅಥವಾ ಟೀಕೆ ವಿಮರ್ಶೆಗಳಿಗೆ ಹೆದರಿ ಅವರು ತಮ್ಮ ಹಾದಿ ಬದಲಾಯಿಸುತ್ತಿರಲಿಲ್ಲ.

‘ಶ್ರುತಿಲಯಗಳ ಆಧಾರದ ಮೇಲೆ ನಿಂತಿರುವ ಭಾರತೀಯ ಸಂಗೀತದ ಉಭಯ ಪದ್ಧತಿಗಳೂ ನಾಣ್ಯದ ಎರಡು ಮುಖಗಳಂತಿವೆ. ಒಂದು ಪದ್ಧತಿಯು ಇನ್ನೊಂದಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು’ ಎಂಬುದು ದೇವೇಂದ್ರಪ್ಪನವರ ಅಭಿಪ್ರಾಯವಾಗಿದ್ದಿತು.

‘ಡಾಕ್ಟರು, ಇಂಜಿನಿಯರುಗಳು ಆರು ವರ್ಷಗಳಲ್ಲಿ ವೃತ್ತಿಯಲ್ಲಿ ಪ್ರಾವೀಣ್ಯತೆ ಪಡೆದುಕೊಳ್ಳಬಹುದು ಆದರೆ ಸಂಗೀತಕ್ಷೇತ್ರದಲ್ಲಿ ಪ್ರಾವೀಣ್ಯತೆ ಗಳಿಸಲು ಈ ಅವಧಿ ಎಷ್ಟೂ ಸಾಲದು, ಕೇವಲ ವಿಶ್ವ ವಿದ್ಯಾಲಯಗಳ ಪದವಿಯಿಂದ ಮನುಷ್ಯನ ಯೋಗ್ಯತೆಯನ್ನು ಅಳೆಯಲಾಗದು, ಹೃದಯ ಸಂಸ್ಕಾರದ ಮಟ್ಟವೇ ಯೋಗ್ಯತೆಯ ಅಳತೆಗೋಲಾಗಿರಬೇಕು, ಆತ್ಮ ಸಂಸ್ಕಾರಕ್ಕೆ ಮಿಗಿಲಾದ ಮಾರ್ಗವಿಲ್ಲ’ ಎಂಬುದು ದೇವೇಂದ್ರಪ್ಪನವರ ನಿಲುವು.

ಅವರ ಶೈಲಿಯನ್ನು ಕುರಿತು ಅ.ನ.ಕೃ ರವರು ‘ಸಿಂಹವೈಖರಿ’ ಎಂದು ಕರೆದರೆ ಮದರಾಸಿನ ಖ್ಯಾತ ಸಂಗೀತ ಶಾಸ್ತ್ರಜ್ಞ ಸಂಗೀತ ಕಲಾನಿಧಿ ಪ್ರೊ||ಸಾಂಬಮೂರ್ತಿಯವರು ‘ಗಂಡು ಹಾಡುಗಾರಿಕೆ’ ಎಂದು ಕರೆದಿದ್ದಾರೆ. ಅವರ ಹಾಡುಗಾರಿಕೆಯಲ್ಲಿ ಕಂಡು ಬರುವ ಕೆಚ್ಚು ಮತ್ತು ಗಂಡು ಶೈಲಿ ಅವರ ವೀಣಾವಾದನದಲ್ಲೂ ಕಂಡು ಬರುತ್ತಿತ್ತು. ಸ್ವಲ್ಪವೂ ತಡವರಿಸದೆ, ಮುಗ್ಗರಿಸದೇ, ಪಕ್ವ ವೈಣಿಕರಂತೆ ನುಡಿಸುತ್ತಿದ್ದರು’ ಎಂದು ಖ್ಯಾತ ವಿಮರ್ಶಕ ರಾಜಶ್ರೀ ಇವರ ವೀಣಾ ವಾದನ ಶೈಲಿಯನ್ನು ಬಣ್ಣಿಸಿದ್ದಾರೆ.

ಗಮಕವನ್ನೇ ನುಡಿಸಲಾಗದ ಜಲತರಂಗ್‌ ವಾದ್ಯದಲ್ಲಿ ಬಿದಿರಿನ ಕಡ್ಡಿಯ ಹೊಡೆತದಿಂದ ಬಟ್ಟಲಿನಲ್ಲಿರುವ ನೀರಿನಲ್ಲಿ ಅಲೆಗಳು ಬರುವಂತೆ ಮಾಡಿ ಗಮಕವನ್ನು ಹೊರಹೊಮ್ಮಿಸುತ್ತಿದ್ದರು. ವೇಗವಾಗಿ ಬಟ್ಟಲುಗಳನ್ನು ಸವರಿದಂತೆ ಮಾಡಿ ಬಿರ್ಕಾಗಳನ್ನೂ ನಿರಾಯಾಸವಾಗಿ ನುಡಿಸುತ್ತಿದ್ದರು.

ಎಸ್‌.ಎಂ. ಅಡ್ಯಂತಾಯ ತಮ್ಮ Melody Music of India ಎಂಬ ಕೃತಿಯಲ್ಲಿ ಖ್ಯಾತ ಸಂಗೀತ ವಿದ್ವಾಂಸರ ಬಗ್ಗೆ ಬರೆಯುತ್ತಾ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮುಡಿಗೊಂಡಾಣ್‌ ವೆಂಕಟಾಯ ಅಯ್ಯರ್, ಮಧುರೆಮಣಿ, ಅಯ್ಯರ್, ಡಿ.ಕೆ. ಪಟ್ಟಮ್ಮಾಳ್‌, ಮೈಸೂರು ಟಿ. ಚೌಡಯ್ಯ, ಮೈಸೂರು ಬಿ. ದೇವೇಂದ್ರಪ್ಪ ಇವರುಗಳನ್ನು ಹೆಸರಿಸಿ. Every one of these may be classed as a master of musician of carnatic music each excelling in one aspect or the other of carnatic music and impressing his/her own individuality” ಎಂದು ತಿಳಿಸಿದ್ದಾರೆ.

ಇವರ ವಿದ್ವತ್ತಿಗೆ ಮಾರು ಹೋಗಿ ದೇಶದ ನಾನಾ ದಿಕ್ಕುಗಳಿಂದ ಸಂಗೀತ ಕಲಿಯಲು ಅನೇಕ ಶಿಷ್ಯರು ಇವೆರೆಡೆಗೆ ಧಾವಿಸಿದರು. ಸಂಗೀತ ಕಲಿಯಲು ತಾನು ಕಷ್ಟವನ್ನು ಅನುಭವಿಸಿದ್ದರಿಂದ ಇವರು ಯಾರಿಗೂ ಇಲ್ಲ ಎನ್ನಲಿಲ್ಲ. ಅವರ ಬಳಿ ಸಂಗೀತ ಕಲಿಯಲು ಬಂದವರಿಗೆಲ್ಲಾ ಊಟ ವಸತಿ ಕೊಟ್ಟು ಉಚಿತವಾಗಿ ವಿಶಾಲ ಮನಸ್ಸಿನಿಂದ ಹಾಡುಗಾರಿಕೆ, ಜಲತರಂಗ್‌, ಕೊಳಲು, ಪಿಟೀಲು ಮುಂತಾದ ವಾದ್ಯಗಳನ್ನು ಮುಚ್ಚುಮರೆಯಿಲ್ಲದೆ ಜಾತಿ ಕುಲಭೇದವೆಣಿಸದೆ ವಾತ್ಸಲ್ಯದಿಂದ ಹೇಳಿಕೊಟ್ಟರು.

ಬೆಳಿಗ್ಗೆ ೪.೩೦ ಗಂಟೆಗೇ ಎದ್ದು ಶಿಷ್ಯರನ್ನೂ ಎಬ್ಬಿಸಿ ಮಂದ್ರಸ್ಥಾಯಿ ಸಾಧಕಗಳನ್ನು ಹೇಳಿಕೊಡುತ್ತಾ ಅವರೊಂದಿಗೆ ತಾವೂ ಸಾಧನೆ ಮಾಡುತ್ತಿದ್ದರು. ಶಿಷ್ಯರಿಗೆ ಅತಿಥಿಗಳಿಗೆ ಅವರ ಮನೆಯಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆ ಬಹುಶಃ ಇಡೀ ದಕ್ಷಿಣದೇಶದ ಯಾವ ಸಂಗೀತ ವಿದ್ವಾಂಸರ ಮನೆಯಲ್ಲಿಯೂ ನಡೆದಿರಲಾರದು. ಗುರುಕುಲದಂತೆ ನಡೆಯುತ್ತಿದ್ದ ಇವರ ಮನೆಯಲ್ಲಿ ವೈದ್ಯ ಎಂಬ ಶಿಷ್ಯೋತ್ತಮ ನಳಪಾಕವನ್ನು ಮಾಡಿ ಎಲ್ಲರಿಗೂ ತೃಪ್ತಿಪಡಿಸುವ ಮೂಲಕ ತಮ್ಮ ಕೈಂಕರ್ಯ ಮಾಡುತ್ತಿದ್ದರು. ದೇವೇಂದ್ರಪ್ಪನವರ ಶಿಷ್ಯವರ್ಗ ಬಹಳ ದೊಡ್ಡದು. ಅವರಲ್ಲಿ ಕೆಲವು ಪ್ರಮುಖರು ಚಕ್ರಕೋಡಿನಾರಾಯಣಶಾಸ್ತ್ರಿ, ಪಲ್ಲವಿ ಚಂದ್ರಪ್ಪ, ಜಿ.ಆರ್. ದಾಸಪ್ಪ, ಪರಮಶಿವನ್‌, ಪಿಟೀಲು ಶಿವರಾಮಯ್ಯ, ಎಂ.ಎಸ್‌. ಸುಬ್ರಹ್ಮಣ್ಯಂ, ಎಂ.ಎಸ್‌. ರಾಮಯ್ಯ , ಎಂ.ಎಸ್‌. ಗೋವಿಂದಸ್ವಾಮಿ, ಎ.ಬಿ. ರಮಾನಂದ್‌, ಎ.ಬಿ.ರಮಾಪತಿ, ಸಣ್ಣ ಹನುಮಂತಪ್ಪ, ಕೊಳಲು ರಂಗಪ್ಪ, ವಾಸುದೇವ ಮೂರ್ತಿ, ಶ್ರೀನಿವಾಸಮೂರ್ತಿ, ಲಕ್ಷ್ಮೀದಾಸ್‌, ಭೀಮಾಚಾರ್ಯ, ತಮ್ಮ ಮಕ್ಕಳಾದ ಬಿ.ಡಿ. ಲಕ್ಷ್ಮಣ್‌, ಬಿ.ಡಿ. ವೇಣುಗೋಪಾಲ್‌, ತಮ್ಮನ ಮಗ ಬಿ.ಎಸ್‌. ವಿಜಯರಾಘವನ್, ಅಲ್ಲದೆ ತಮಿಳು ನಾಡಿನಿಂದ ಬಂದ ರಂಗಯ್ಯ ಭಾಗವತರು, ಆಂಧ್ರದಿಂದ ಆಗಮಿಸಿದ ನೂಕಲ ಚಿನ್ನಸತ್ಯನಾರಾಯಣ ಮುಂತಾದವರು.

ಶಿಸ್ತಿನ ಜೀವನ ನಡೆಸುತ್ತಿದ್ದ ಅವರು ಪ್ರತಿದಿನ ಬೆಳಿಗ್ಗೆ ಎದ್ದು ಶಿಷ್ಯರನ್ನು ಸಾಧಕಕ್ಕೆ ತೊಡಗಿಸಿ ಬೆಳಗಿನ ವಾಯುಸೇವನೆಗೆ ಹೋಗುತ್ತಿದ್ದರು. ನಂತರ ಅಂಗಸಾಧನೆ, ಆಮೇಲೆ ಸ್ನಾನಪೂಜೆ, ೮ ಗಂಟೆಗೆ ಉಪಾಹಾರ ನಂತರ ೧೧.೩೦ ರವರೆಗೆ ಪಿಟೀಲು ಅಭ್ಯಾಸ, ೧೨ಗಂಟೆಗೆ ಊಟ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ, ವೀಣೆ ಗೋಟುವಾದ್ಯಗಳ ಅಭ್ಯಾಸ, ಇತರ ಶಿಷ್ಯರಿಗೆ ಸಂಗೀತಪಾಠ ಮತ್ತೆ ೫.೩೦ ಕ್ಕೆ ವಾಯುಸಂಚಾರ, ೭ಗಂಟೆಗೆ ಊಟ, ಗೋಟುವಾದ್ಯ ದಿಲ್‌ರುಬಾಗಳ ಅಭ್ಯಾಸದ ನಂತರ ಮಲಗುತ್ತಿದ್ದರು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುತ್ತಿರಲಿಲ್ಲ. ತುಪ್ಪದಿಂದ ಮಾಡಿದ ತಿಂಡಿಪದಾರ್ಥಗಳನ್ನು ಮಾತ್ರ ತಿನ್ನತ್ತಿದ್ದರು. ಕದು ಆರಿದ ನೀರನ್ನೇ ಕುಡಿಯುತ್ತಿದ್ದರು. ಯಾರೊಂದಿಗೂ ವೃಥಾ ಕಾಡುಹರಟೆ ಹೊಡೆಯುತ್ತಿರಲಿಲ್ಲ. ಪ್ರತಿ ಶನಿವಾರ ಸಂಜೆ ಅವರ ಮನೆಯಲ್ಲಿ ಭಜನೆ ಏರ್ಪಡಿಸಿ ಎಲ್ಲರೂ ಹಾಡುವಂತೆ ಮಾಡಿ ತಾವೂ ಹಾಡುತ್ತಿದ್ದರು.

ಅವರು ಕಚೇರಿಗಳಲ್ಲಿ ಸಾಮಾನ್ಯವಾಗಿ ತಾರಸ್ಥಾಯಿ ಸಂಚಾರವಿರುವ ಕೃತಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಇವರು ಕನ್ನಡ, ತೆಲುಗು ಭಾಷೆಗಳಲ್ಲಿ ಮೂವತ್ತು ಕೀರ್ತನೆಗಳನ್ನು ರಚಿಸಿದ್ದಾರೆ. ಕನ್ನಡದ ವಿಶಿಷ್ಟ ರಚೆನಗಳಾದ ವಚನಗಳನ್ನು ಸಂಗೀತಕ್ಕೆ ಅಳವಡಿಸಿದ್ದಾರೆ. ‘ಶ್ರೀ ಬಸವೇಶ್ವರ ಅಷ್ಟೋತ್ತರ ವಚನಕೀರ್ತನ ಸುಧಾ’ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದ್ದಾರೆ.

ದೇವೇಂದ್ರಪ್ಪನವರ ಬಾಲ್ಯದ ದಿನಗಳಲ್ಲಿ ದೊರೆತ ಒಂದು ಸಾಲಿಗ್ರಾಮ ಶಿಲೆಯ ಮುದ್ದಾದ ಮಾರುತಿಯ ವಿಗ್ರಹ ಅವರನ್ನು ಮಾರುತಿಯ ಭಕ್ತರನ್ನಾಗಿಸಿತು. ಗಂಟೆಗಟ್ಟಲೆ ಮಾರುತಿ ವಿಗ್ರಹದ ಮುಂದೆ ಕುಳಿತು ಮೈಮರೆತು ದಾಸಭಾವದಿಂದ ಹಾಡುತ್ತಿದ್ದರು. ೧೯೩೦ರಲ್ಲಿ ಅವರು ತಮ್ಮ ಶಿಷ್ಯರನ್ನೆಲ್ಲಾ ಸೇರಿಸಿಕೊಂಡು ವೀಣೆ, ಪಿಟೀಲು, ದಿಲ್‌ರುಬ, ನಾಗಸ್ವರ, ಜಲತರಂಗ್‌, ಖಂಜರಿ, ಮೃದಂಗ, ತಬಲಾ, ಘಟ ಮುಂತಾದ ವಾದ್ಯಗಳೊಡಗೂಡಿದ ‘ಶ್ರೀ ಮಾರುತಿ ಸೇವಾ ವಾದ್ಯ ಮೇಳ’ ಎಂಬ ವಾದ್ಯಗೋಷ್ಟಿಯನ್ನು ಸ್ಥಾಪಿಸಿದರು. ೧೯೩೨ರಲ್ಲಿ ‘ಶ್ರೀ ಮಾರುತಿ ಸೇವಾ ಸಂಘ’ವನ್ನು ಸ್ಥಾಪಿಸಿ ಪ್ರತಿವರ್ಷವೂ ಹತ್ತು ದಿನಗಳ ಕಾಲ ‘ಶ್ರೀಹನುಮಜ್ಜಯಂತಿ’ ಉತ್ಸವವನ್ನು ಅತಿ ವಜೃಂಭಣೆಯಿಂದ ಆಚರಿಸುತ್ತಾ ಬಂದರು.

ಭಾರತದ ಎಲ್ಲಾ ಕಡೆಗಳಿಂದಲೂ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತದ ವಿದ್ವಾಂಸರುಗಳನ್ನು ಆಹ್ವಾನಿಸಿಕ ಹನುಮಜ್ಜಯಂತಿಯ ಸಂದರ್ಭದಲ್ಲಿ ಅವರುಗಳಿಂದ ಕಾರ್ಯಕ್ರಮ ಏರ್ಪಡಿಸಿ ಯಥೋಚಿತ ರೀತಿಯಲ್ಲಿ ಸನ್ಮಾನಿಸಿ ಬಿರುದು ಬಾವಲಿಗಳನ್ನು ನೀಡಿ ಗೌರವಿಸುತ್ತಿದ್ದರು. ಏನೇ ಎಡರು ತೊಡರುಗಳು ಬಂದರೂ ಹನುಮಜ್ಜಯಂತಿಯನ್ನು ನಡೆಸಲು ಬದ್ಧ ಕಂಕಣರಾಗಿದ್ದ ಅವರು ಅದನ್ನು ಬಿಡಲಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜಯಂತಿ ಆಚರಿಸಲಾಗದ ಸಂದರ್ಭದಲ್ಲಿ ಮನೆಯಲ್ಲಿದ್ದ ಒಡವೆ ವಸ್ತುಗಳನ್ನು ಮಾರಿ ಅದರಿಂದ ಬಂದ ಹಣದಿಂದ ಹನುಮಜ್ಜಯಂತಿ ಆಚರಿಸಿದರು. ಮತ್ತೊಮ್ಮೆ ಅವರ ಆರೋಗ್ಯಸ್ಥಿತಿ ತುಂಬಾ ಕೆಟ್ಟಿದ್ದರೂ ಅದನ್ನು ಲೆಕ್ಕಿಸದೇ ಉತ್ಸವವನ್ನು ವಿಜೃಂಭಣೆಯಿಂದಲೇ ಆಚರಿಸಿದರು. ಮಾರುತಿಯ ಅಂತರಂಗ ಭಕ್ತರಾಗಿದ್ದ ದೇವೇಂದ್ರಪ್ಪನವರಿಗೆ ಬೇಹಾಗ್‌ ರಾಗದ ‘ಎಲ್ಲಿರುವೆ ತಂದೆ ಬಾರೋ ಮಾರುತಿ’ ಅತ್ಯಂತ ಮೆಚ್ಚಿನ ಕೃತಿ. ಅವರು ಈ ಕೃತಿಯನ್ನು ಭಕ್ತಿಪರವಶರಾಗಿ ಮೈ ಮರೆತು ಹಾಡುತ್ತಿದ್ದಾಗ ಅವರ ಹೃದಯಮಂದಿರದಲ್ಲಿ ಶ್ರೀ ಮಾರುತಿ ಪ್ರತ್ಯಕ್ಷವಾಗಿ ಬಂದು ನಿಲ್ಲುತ್ತಿದ್ದನಂತೆ.

ಆ ಜೀವನಪರ್ಯಂತ ಅವಿಶ್ರಾಂತ ಸಾಧನೆ ತಪಸ್ಸು ಕಲೋಪಾಸನೆ ಮಾಡಿ ಕಲಾಸಿದ್ಧಿಯನ್ನು ಪಡೆದ ಕಲಿಯುಗದ ಏಕಲವ್ಯ ದೇವೇಂದ್ರಪ್ಪನವರು ೮೭ ವರ್ಷಗಳ ಸಾರ್ಥಕ ಜೀವನ ನಡೆಸಿ ೬.೬.೧೯೮೬ ರಂದು ಇಹಲೋಕವನ್ನು ತ್ಯಜಿಸಿ ಮಾರುತಿಯ ಪಾದಾರವಿಂದವನ್ನು ಸೇರಿದರು.