ಆಸ್ಥಾನ ವಿದ್ವಾನ್‌, ಪಂಡಿತರತ್ನಂ, ಕೀರ್ತನ ಕೇಸರಿ/ಕೀರ್ತನಾಚಾರ್ಯ ಪದ್ಮಶ್ರೀ ಡಾ.ಬಿ. ಶಿವಮೂರ್ತಿಶಾಸ್ತ್ರಿಗಳು ಹುಟ್ಟಿದ್ದು ಕರ್ನಾಟಕದ ಸಾಂಸ್ಕೃತಿಕ ನೆಲೆವೀಡಾದ ತುಮಕೂರಿನಲ್ಲಿ. ೧೯೦೩ನೇ ಇಸವಿಯ ಫೆಬ್ರವರಿ ೨೩ ರಂದು ತುಮಕೂರಿನ ಹುಲ್ಕುಂಟೆಮಠದ ಬಸವಯ್ಯಸ್ವಾಮಿ-ನೀಲಮ್ಮ ಜಂಗಮ ದಂಪತಿಗಳಿಂದ ಜನ್ಮ ಪಡೆದರು.

ಶಾಸ್ತ್ರಿಗಳ ತಂದೆ ಬಸವಯ್ಯಸ್ವಾಮಿಗಳ ಕಾಯಕ-ಪುರಾಣ ಪ್ರವಚನ. ತುಮಕೂರಿನ ಸಭ್ಯ ವೀರಶೈವ ಮನೆತನಗಳು ಬಸವಯ್ಯಸ್ವಾಮಿಗಳನ್ನು ಕರೆಯದೇ ಯಾವುದೇ ಕಾರ್ಯ ಮಾಡುತ್ತಿರಲಿಲ್ಲ. ಬಸವಯ್ಯಸ್ವಾಮಿಗಳಿಗೆ ಇಬ್ಬರು ಹೆಂಡತಿಯರು. ಮೊದಲನೆಯವರು ರುದ್ರಮ್ಮ. ಅವರಿಂದ ಓರ್ವ ಪುತ್ರಿ ಗೌರಮ್ಮ; ಎರಡನೆ ಹೆಂಡತಿ ನೀಲಮ್ಮನವರಿಂದ ಶಿವಮೂರ್ತಿಶಾಸ್ತ್ರಿ ಎಂಬ ಮಗ ಹಾಗೂ ಸಿದ್ಧಮ್ಮ ಎಂಬ ಮಗಳು. ಮೊದಲ ಹೆಂಡತಿ ಬೇಗ ತೀರಿಹೋಗಿದ್ದು, ಅವರ ಮಗಳು ಗೌರಮ್ಮ ಅಂದಿನ ಶಿಕ್ಷಕರ ವೃತ್ತಿಗೆ ಅಗತ್ಯವಾಗಿದ್ದ ಪರೀಕ್ಷೆ ಮಾಡಿ ಶಿಕ್ಷಕಳಾಗಿ ಸೇರಿದರು. ಬಸವಯ್ಯಸ್ವಾಮಿಗಳ ಕುಟುಂಬ ಬಡತನದಲ್ಲಿದ್ದಿತು. ಗೌರಮ್ಮ ಮದುವೆಯಾದ ಹೊಸದರಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಅದು ಅವಳನ್ನು ಶಿಕ್ಷಕರ ವೃತ್ತಿಯನ್ನು ಅವಲಂಬಿಸುವಂತೆ ಮಾಡಿತು. ಶಿವಮೂರ್ತಿ ಶಾಸ್ತ್ರಿಗಳನ್ನು ಓದಲು ಹುರಿದುಂಬಿಸಿ ಓದುವುದಕ್ಕೆ ಅಗತ್ಯವಾದ ಒತ್ತಾಸೆ ಮಾಡಿದವರೇ ಶಾಸ್ತ್ರಿಗಳ ಸೋದರಿ ಗೌರಮ್ಮ.

ಬಸವಯ್ಯಸ್ವಾಮಿಗಳ ಎರಡನೆ ಹಂಡತಿ ನೀಲಮ್ಮನವರ ಪುತ್ರನ ಜನ್ಮನಾಮ, “ಕುಪ್ಪಯ್ಯ ಶಾಸ್ತ್ರಿ” ಎಂದು. ಈ ಹೆಸರು ಅವರು ಗುಬ್ಬಿಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದಾಗ್ಯೂ ಇದ್ದಿತು. ಶ್ರೀ ರಂಭಾಪುರಿ ವಿರಸಿಂಹಾಸನಾಧೀಶ್ವರ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಆದೇಶದಂತೆ ಶಾಸ್ತ್ರಿಗಳ ಹೆಸರು ಕುಪ್ಪಯ್ಯ ಶಾಸ್ತ್ರಿ ಹೋಗಿ ಶಿವಮೂರ್ತಿಶಾಸ್ತ್ರೀ ಎಂದಾಯಿತು. ಅನಂತರವೇ ಕರ್ನಾಟಕದಲ್ಲಿ ಅವರು ಬಿ. ಶಿವಮೂರ್ತಿಶಾಸ್ತ್ರಿ ಹುಲ್ಕುಂಟೆಮಠ ಎಂದೇ ಖ್ಯಾತರಾದದ್ದು.

೧೯೨೪-೨೫ರ ಸುಮಾರಿನಲ್ಲಿ ಗುಬ್ಬಿಯಲ್ಲಿ ಶಾಸ್ತ್ರಿಗಳು ಅಲ್ಲಿಯ ಮಿಷನ್‌ ಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಆ ಶಾಲೆಗೆ ಆಂಗ್ಲ ಪಾದ್ರಿಯೊಬ್ಬರು ಶಾಲಾ ಮುಖ್ಯೋಪಾಧ್ಯಾಯರು. ಶಾಲೆಗೆ ಅಧ್ಯಾಪಕರಾಗಿ ಶುಭ್ರ ಖಾದಿ ಅಂಗಿ, ಧೋತ್ರ, ಖಾದಿ ಟೋಪಿ ಧರಿಸಿ ಪಾಠ ಪ್ರವಚನ ನಡೆಸುತ್ತಿದ್ದ ಅಂಶ ಪಾದ್ರಿಯವರೆಗೆ ಏಕೋ ಹಿಡಿಸಲಿಲ್ಲ. ಶಾಸ್ತ್ರಿಗಳಿಗೆ ಮೊದಲನೇ ಎಚ್ಚರಿಕೆ ಕೊಟ್ಟರು. ಖಾದಿ ಟೋಪಿ ಹಾಕಿಕೊಂಡು ಬರಕೂಡದು  ಎಂದು – ಆದರೂ  ಶಾಸ್ತ್ರಿಗಳು ಆ ಎಚ್ಚರಿಕೆಯನ್ನು ಗಮನಿಸಲಿಲ್ಲ. ಕೊನೆಗೊಂದು ದಿನ ಬಂದ ಪಾದ್ರಿಗಳು ಅಂತಿಮವಾಗಿ ಎಚ್ಚರಿಸಿದರು. ಖಾದಿ ಟೋಪಿ ಇಲ್ಲದೆ ಶಾಲೆಗೆ ಪ್ರವೇಶ, ಇಲ್ಲವೇ ಕೆಲಸದಿಂದ “ಡಿಸ್‌ಮಿಸ್‌”! ಶಾಸ್ತ್ರಿಗಳ ಕೋಪ ನೆತ್ತಿಗೇರಿತು. “ಪಾದ್ರಿಗಳೇ ಡಿಸ್‌ಮಿಸ್‌ ಅಗತ್ಯವಿಲ್ಲ. ಇದೋ ನನ್ನ ರಾಜೀನಾಮೆ. ಖಾದಿ ಟೋಪಿ ಇಲ್ಲದೆ ನಾನು ಪಾಠ ಪ್ರವಚನ ಮಾಡುವುದಿಲ್ಲ” ಎಂದು ಹೇಳಿ ರಾಜೀನಾಮೆ ಕೊಟ್ಟು ಹಿಂತಿರುಗಿದರು. ಅಂದಿನಿಂದ ಮತ್ತೆ ಎಂದೂ ‘ನೌಕರಿ’ ಯೋಚನೆ ಅವರಿಗೆ ಬರಲೇ ಇಲ್ಲ. ಗಾಂಧೀಜಿಯವರು ತಮ್ಮ ಕರ್ನಾಟಕ ಪ್ರವಾಸದಲ್ಲಿ ತುಮಕೂರಿಗೆ ಭೇಟಿ ನೀಡಿದರು. ಅಂದು ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸ್ತ್ರಿಗಳು ಮುನ್ನುಗ್ಗಿ ಗಾಂಧಿ ಬಗ್ಗೆ ತಾವು ಬರೆದಿದ್ದ ಗೀತೆ ಹಾಡಿದರು. ಗಾಂಧೀಜಿ ನಸುಸಕ್ಕು ‘ಕೋನ್‌ ಹು? ಬಹುತ ಅಚ್ಛಾ’ ಎಂದರು. ಸಭೆಯ ಯೋಜನೆ ಮಾಡಿದ್ದವರಿಗೆ ಹಾಯ್‌ ಎನಿಸಿತು.

ಇದೇ ತೆರನ ಪ್ರಕರಣ ಅಂದಿನ ಆಳರಸರಾಗಿದ್ದ ಶ್ರೀಮನ್ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಮಹಾಸ್ವಾಮಿಗಳು ತಮ್ಮ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರವರೊಡನೆ ತುಮಕೂರಿಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ಸಭೆದ ಏರ್ಪಡಿಸಿದವರಿಂದ ಕಷ್ಟಪಟ್ಟು ಅಪ್ಪಣೆ ಪಡೆದು ತಾವು ರಚಿಸಿದ್ದ ಮಹಾರಾಜರ ಸ್ವಾಗತಗೀತೆಯನ್ನು ಶಾಸ್ತ್ರಿಗಳೇ ಹಾಡಿದರು. ಮಹಾರಾಜರು ಸಂತೋಷಪಟ್ಟರು. ಶಾಸ್ತ್ರಿಗಳ ಬಗ್ಗೆ ವಿಚಾರಿಸಿಕೊಂಡರು. ಅದಕ್ಕಿಂತ ಹೆಚ್ಚಾಗಿ ಮಿರ್ಜಾ ಇಸ್ಮಾಯಿಲ್‌ ಅವರು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಲೋಕಮಾನ್ಯ ತಿಲಕರ ಸ್ಮಾರಕ ಮಂದಿರದ ಉದ್ಘಾಟನೆಗೆ ಬಂದಾಗ ಲೋಕಮಾನ್ಯ ತಿಲಕರ ಗುಣಗಾನ ಮಾಡಿದ ಗೀತೆಯನ್ನು ಶಾಸ್ತ್ರಿಗಳು ಹಾಡಿದರು. ಜನರ ಚಪ್ಪಾಳೆ ಗಗನ ಮುಟ್ಟಿತು. ದಿವಾನರಿಗೆ ಈ ಘಟನೆ ಅಚ್ಚೊತ್ತಿತ್ತು. ಶಾಸ್ತ್ರಿಗಳನ್ನು ಕರೆದು ಮಾತನಾಡಿಸಿದರು. ಮಿರ್ಜಾ ಸಾಹೇಬರ ಕೃಪಾದೃಷ್ಟಿ ಶಾಸ್ತ್ರಿಗಳ ಮೇಲೆ ಬಿದ್ದಿತು. ಶಾಸ್ತ್ರಿಗಳಿಗೆ ಬೆಂಗಳೂರಿಗೆ ಬಂದು ಕಾಣಲು ತಿಳಿಸಿದರು. ಈ ದಿವಾನರ ಭೇಟಿ ಶಾಸ್ತ್ರಿಗಳ ಜೀವನದಲ್ಲಿ ಹೊಸ ತಿರುವನ್ನು ಪಡೆಯಿತು. ಮೈಸೂರು ಅರಮನೆ ಪ್ರವೇಶಕ್ಕೆ ದಾರಿಯಾಯಿತು. ಮಿರ್ಜಾ ಸಾಹೇಬರ ಸಖ್ಯವೂ ಬೆಳೆಯಿತು.

ಮಿರ್ಜಾ ಇಸ್ಮಾಯಿಲ್‌ ಸಾಹೇಬರು ಬೆಂಗಳೂರಿನ ನಗರ ಸವಾರಿಯಲ್ಲಿ ಶಾಸ್ತ್ರಿಗಳನ್ನು ಗಾಂಧಿನಗರ ಬಳಿ ಕರದೊಯ್ದರು. ಅಂದು ಅದು ಕಾಡು. ಜನ ಆ ಪ್ರದೇಶಕ್ಕೆ ಹೋಗಲು ಹಿಂಜರಿಯುತ್ತಿದ್ದ ಕಾಲ. ದಿವಾನರು ಶಾಸ್ತ್ರಿಗಳನ್ನು ಕುರಿತು ಶಾಸ್ತ್ರಿಗಳೇ ನಿಮಗೆ “ಇಲ್ಲಿ ಒಂದು ಎಕರೆ ಜಮೀನನ್ನು  ಕೊಡಿಸುತ್ತೇನೆ ತೆಗೆದುಕೊಳ್ಳಿ ಮುಂದೆ ಅನುಕೂಲವಾಗುತ್ತದೆ’ ಎಂದರು. ಲೋಕ ವ್ಯವಹಾರದಲ್ಲಿ ಶೂನ್ಯ ಸಂಪಾದಿಸಿದ್ದ ಶಾಸ್ತ್ರಿಗಳು “ಮಹಾಸ್ವಾಮಿ ನನ್ನಂಥ ಬಡವನಿಗೆ ಇಲ್ಲಿ ಜಮೀನು ಏತಕ್ಕೆ ನನಗೆ ಬೇಡಿ. ಇದು ಬಡವನಿಗೆ ಆನೆ ಬಹುಮಾನವಿತ್ತಂತಗೆ” ಎಂದು ನುಡಿದಿದ್ದರು. ಇಂದು ಗಾಂಧಿನಗರದಲ್ಲಿ ವ್ಯವಹಾರದ ಬೆಲೆ ತಿಳಿದವರು “ಇಂತಹವರೂ ಇದ್ದರು” ಎಂದು ಅಚ್ಚರಿಪಡಲೂ ಸಾಧ್ಯ.

“ನಾಟಕ ರತ್ನ” ಗುಬ್ಬಿವೀರಣ್ಣನವರಿಗೂ ಶಾಸ್ತ್ರಿಗಳಿಗೂ ಅನನ್ಯ ಸ್ನೇಹ. ತಮ್ಮ ಬಹುತೇಕ ನಾಟಕಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಏರ್ಪಡಿಸುವ ಮನ್ನ ಶಾಸ್ತ್ರಿಗಳ ಸಲಹೆ ಪಡೆಯದೆ ಹಾಗೂ ಪೂರ್ವಭಾವೀ ಪ್ರದರ್ಶನಕ್ಕೆ ಕರೆಯದೆ ಇರುತ್ತಿರಲಿಲ್ಲ. ಗುಬ್ಬಿ ಕಂಪನಿಯ ಕೃಷ್ಣಲೀಲ, ಅಕ್ಕಮಹಾದೇವಿ, ಕುರುಕ್ಷೇತ್ರ, ಹಾಗೂ ಅದ್ದೂರಿಯ ನಾಟಕ “ದಶಾವತಾರ” ನಾಟಕಗಳ ಬಗ್ಗೆ ವೀರಣ್ಣನವರು ಶಾಸ್ತ್ರಿಗಳೊಡನೆ ಹಾಗೂ ಹಲವು ನಾಟಕಗಳ ಕತೃಗಳಾಗಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳೊಡನೆ ಮತ್ತು ಬಿ. ಪುಟ್ಟಸ್ವಾಮಯ್ಯನವರ ಜತೆ ಸಮಾಲೋಚನೆ ಅಂತಿಮವಾಗುತ್ತಿತ್ತು. ನಾಟಕರತ್ನ ವೀರಣ್ಣ ಗುಬ್ಬಿಯವರಾದರೆ, ನರಹರಿ ಶಾಸ್ತ್ರಿಗಳು ಬೆಳ್ಳಾವೆಯವರು. ಸಿ.ಬಿ.ಮಲ್ಲಪ್ಪನವರು, ನಟಭಯಂಕರ ಗಂಗಾಧರರಾಯರು ಚಿಕ್ಕನಾಯಕನಹಳ್ಳಿಯವರು. ತೀರ್ಥಪುರದ ತೀ.ನಂ. ಶ್ರೀಕಂಠಯ್ಯನವರು, ಕಡಬದ ಕ.ವೆಂ. ರಾಘವಾಚಾರ್ಯರು, ಹೊಸಕರೆಯ ಚಿದಂಬರಯ್ಯನವರು, ಪ್ರೊ. ವೆಂಕಟನಾರಾಯಣಪ್ಪನವರು, ಹೊಳವನಹಳ್ಳಿಯ ಶೇಷಾಚಾರ್ಯರೇ ಮೊದಲಾದ ಸಾಹಿತಿ ಕಲಾವಿದರೂ ತುಮಕೂರು ಜಿಲ್ಲೆಯವರೇ ಆಗಿದ್ದರೆಂಬುದು ಇತಿಹಾಸ.

ಶಿವಮೂರ್ತಿ ಶಾಸ್ತ್ರಿಗಳ ಮೇಲೆ ಪ್ರಾರಂಭಿಕ ಕಾಲದಲ್ಲಿ ಹೆಚ್ಚು ಪ್ರಭಾವ ಬೀರಿ ಮಾರ್ಗದರ್ಶನ ಮಾಡಿದವರು ಆಸ್ಥಾನ ವಿದ್ವಾನ್‌ ಪಿ.ಆರ್. ಕರಿಬಸವ ಶಾಸ್ತ್ರಿಗಳು ಹಾಗೂ ಮಾಗಡಿಯ ವೀರಪ್ಪ ಶಾಸ್ತ್ರಿಗಳು. ಅದನ್ನು ಶಾಸ್ತ್ರಿಗಳು ಜೀವನದ ಕೊನೆಯವರೆಗೂ ಸ್ಮರಿಸುತ್ತಿದ್ದರು. ಸಾಹಿತ್ಯ-ಸಾಂಸ್ಕೃತಿಕ ಜಗತ್ತಿನಲ್ಲಿ ಶಾಸ್ತ್ರಿಗಳಿಗೆ ಸಹಕಾರವಿತ್ತವರಲ್ಲಿ ಮಂಜೇಶ್ವರದ ಗೋವಿಂದ ಪೈ, ಕಪಬ್ರಾಳ ಕೃಷ್ಣರಾಯರು, ಎಂ.ಆರ್. ಶ್ರೀನಿವಾಸಮೂರ್ತಿಗಳು, ಡಿ.ಎಲ್‌. ನರಸಿಂಹಾಚಾರ್ಯರು, ಎಂ.ಆರ್.ಶ್ರೀನಿವಾಸಮೂರ್ತಿಗಳು, ಡಿ.ಎಲ್‌. ನರಸಿಂಹಾಚಾರ್ಯರು, ಕೆ.ಜಿ. ಕುಂದಣಗಾರರು , ಶ್ರೀ ಶಿವಬಸವನಾಳರು, ಪ್ರೊ.ಪಿ.ಜಿ. ಹಳಕಟ್ಟಿಯವರು, ಹರ್ಡೇಕರ ಮಂಜಪ್ಪನವರು, ಕಾ.ಸ. ಧರಣೇಂದ್ರಯ್ಯನವರು, ಸಿಂಪಿ ಲಿಂಗಣ್ಣನವರು, ಪ್ರೊ. ಕೆ. ಕೃಷ್ಣರಾವ್‌, ಪ್ರೊ ಎಂ.ಎಚ್‌. ಕೃಷ್ಣ, ಪ್ರೊ. ಸಾಲೆತ್ತೂರ್ ಅವರು, ತೀ.ನಂ. ಶ್ರೀಕಂಠಯ್ಯನವರು, ಸಂಸ್ಕೃತ ವಿದ್ವಾನ್‌ ನ. ರಾಮಚಂದ್ರಾಯರು, ಎಂ.ಪಿ.ಎಲ್‌. ಶಾಸ್ತ್ರಿಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು, ಸ.ಸ. ಮಾಳವಾಡ ದಂಪತಿಗಳುಲ, ಭೂಸನೂರುಮಠರು ಮುಂತಾದವರನ್ನು ನೆನಪಿಸಿಕೊಳ್ಳಬಹುದು.

೧೯೩೬-೩೭ ರಲ್ಲಿ ತಮ್ಮ ಕಾರ್ಯಸ್ಥಾನವನ್ನು ತುಮಕೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದ ನಂತರ ಅವರ ಪ್ರಥಮ ಸಾಹಸ “ಶರಣ ಸಾಹಿತ್ಯ” ಮಾಸಿಕ ಪ್ರಾರಂಭಿಸಿದುದು. ಬೆಂಗಳೂರಿನ ಸುಲ್ತಾನ ಪೇಟೆಯಲ್ಲಿದ್ದ ಒಂದು ಮನೆಯಲ್ಲಿ ವಾಸ್ತವ್ಯ ಮಾಡಿ ಅಲ್ಲೇ ಇದ್ದ ಪ್ರೆಸ್ಸಿನಲ್ಲಿ ಮುದ್ರಣ ಮಾಡಿಸುತ್ತ ಶರಣ ಸಾಹಿತ್ಯ ಪ್ರಕಟಿಸಲಾರಂಭಿಸಿದರು. ಅದುವರೆಗೆ ವೀರಶೈವ ಸಾಹಿತ್ಯ, ವಚನ ಸಾಹಿತ್ಯಗಳಿಗೆ ಮೀಸಲಿದ್ದ ಹಳಕಟ್ಟಿಯವರ ಶಿವಾನುಭವಕ್ಕೆ ಶರಣ ಸಾಹಿತ್ಯ ಹೊಯ್‌ ಕೈ ಆಗಿ ಕೆಲಸ ಮಾಡಲಾರಂಭಿಸಿ ಶರಣ ಸಾಹಿತ್ಯದ ಪ್ರಥಮ ಸಂಚಿಕೆಯನ್ನು ಚಾಮರಾಜಪೇಟೆಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಬಿಡುಗಡೆ ಮಾಡಿಸಿದುದು ಅಂದಿನ ಎಲ್ಲ ಹಿರಿಯ ಸಾಹಿತಿಗಳು ಸಮಾರಂಭಕ್ಕೆ ಹಾಜರಿದ್ದು ಹರಸಿದುದೂ ಇಂದಿಗೂ ಹಿರಿಯರ ಮನಸ್ಸಿನಲ್ಲಿ ಸ್ಥಿರವಾಗಿದೆ.

೧೯೩೭ರಲ್ಲಿ ಆರಂಭವಾದ “ಶರಣ ಸಾಹಿತ್ಯ” ೧೯೭೦ರವರೆಗೆ ಪ್ರಕಟವಾಯಿತು. ಶಾಸ್ತ್ರಿಗಳು ತಮ್ಮ ಸ್ವಂತ ಮುದ್ರಣಾಲಯ ‘ಸ್ವತಂತ್ರ ಕರ್ನಾಟಕ ಪ್ರೆಸ್‌’ ೧೯೭೦ರ ಸುಮಾರಲ್ಲಿ ಮಾರಿ, ಅವರಿದ್ದ ಬೆಂಗಳೂರಿನ ರಂಗಸ್ವಾಮಿ ಗುಡಿ ಬೀದಿಯ ಮನೆಯನ್ನೂ ಮಾರಿ ರಾಜಾಜಿನಗರದ ಐದನೇ ಬ್ಲಾಕಿನಲ್ಲಿ ಹೊಸ ಮನೆಯನ್ನು ಕಟ್ಟಿಸಿಕೊಂಡು ವಾಸ್ತವ್ಯ ಬದಲಾಯಿಸಿದರು. ಸುಮಾರು ೧೯೪೫ ರಿಂದ ೧೯೭೦ ರವರೆಗೆ ಅವರ ಕಾರ್ಯ ಕ್ಷೇತ್ರವಾಗಿದ್ದ ರಂಗಸ್ವಾಮಿ ಗುಡಿ ಬೀದಿ ೧೬೪ನೆ ನಂ. ಮನೆ ಇಂದು ಭವ್ಯ ಜೈನ ದೇವಾಲಯವಾಗಿರುವುದೂ ಒಂದು ಪುಣ್ಯ ಸಂಕೇತವೇ ಆಗಿದೆ.

ಶಾಸ್ತ್ರಿಗಳು ‘ಶರಣ ಸಾಹಿತ್ಯ’ ಮಾಸಿಕದೊಡನೆ ೧೯೩೯ರ ಸುಮಾರಿಗೆ ಸ್ವತಂತ್ರ ಕರ್ನಾಟಕ ವಾರ ಪತ್ರಿಕೆಯನ್ನು ಆರಂಭಿಸಿದ್ದರುಇ. ಈ ವಾರಪತ್ರಿಕೆ ಸುಮಾರು ೧೯೪೫ ರವರೆಗೆ ನಡೆಯಿತು. ಅಂದಿನ ವಾರಪತ್ರಿಕೆ ‘ಪ್ರಜಾಮತ’ಕ್ಕೆ ಸರಿಸಮನಾಗಿ ಹೊರ ಬೀಳಲಾರಂಭಿಸಿದ್ದಾಗ ಶಾಸ್ತ್ರಿಗಳ ಪತ್ರಿಕೆಯ ಮುದ್ರಣ ಲೆಕ್ಕ ಪತ್ರಗಳ ಜವಾಬ್ದಾರಿಯನ್ನು ಹೊತ್ತಿದ್ದ ನಿರ್ವಹಣಾಧಿಕಾರಿಗಳ ಹೊಸ ತಂತ್ರಗಾರಿಕೆಯಿಂದ ಹಿನ್ನಡೆ ಪಡೆದು ನಿಲ್ಲಬೇಕಾಯಿತು.

ಶಾಸ್ತ್ರಿಗಳು ಸ್ವತಂತ್ರ ಕರ್ನಾಟಕ ವಾರ ಪತ್ರಿಕೆ ‘ಉಷಾ’ ಎಂಬ ಕತೆ-ಕಾದಂಬರಿ ಸಿನಿಮಾಗಳಿಗೆ ಮೀಸಲಾದ ಸಾಂಸ್ಕೃತಿಕ ಪತ್ರಿಕೆಯನ್ನು ನಾಲ್ಕು ವರ್ಷಗಳವರೆಗೆ ನಡೆಸಿ ಅನಂತರ ಅದರ ಪ್ರಕಟಣೆಯನ್ನು ಕಲ್ಯಾಣ ಭವನದ ಮಾ.ನಂ. ಶಿವಪ್ಪ ಸೋದರರಿಗೆ ವಹಿಸಿಕೊಟ್ಟರು.

ಪತ್ರಿಕೋದ್ಯಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಮುದ್ರಣಕಾರರ ಸಹಕಾರೀ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರೆಂಬುದು ಗಮನಾರ್ಹ. ಶಾಸ್ತ್ರಿಗಳು ತಮ್ಮ ಪತ್ರಿಕಾ ವ್ಯವಸಾಯದೊಡನೆ ಶರಣ ಸಾಹಿತ್ಯ ಗ್ರಂಥ ಮಾಲೆಯನ್ನು ಆರಂಭಿಸಿ ೭೦ ಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿ-ಪ್ರಕಟಿಸಿದರು. ಅವುಗಳಲ್ಲಿ ಬಹುಮುಖವಾದುವು ವೀರಶೈವ ಸಾಹಿತ್ಯ ಮತ್ತು ಇತಿಹಾಸ ನಾಲ್ಕು ಭಾಗಗಳಾಗಿ, ವೀರಶೈವ ಮಹಾಪುರುಷರು, ಕರ್ನಾಟಕ ದರ್ಶನ, ಕರ್ನಾಟಕ ಸಂಸ್ಕೃತಿ-ಸಾಹಿತ್ಯ, ಸರ್ವಜ್ಞ ಶಿವಪ್ಪನಾಯಕ, ಕೆಳದಿ ಚೆನ್ನಮ್ಮಾಜಿ, ದುಂಬಿ-ನಾದ ಕವನ ಸಂಗ್ರಹ, ಶರಣ ಸಾಹಿತ್ಯದ ಬಸವೇಶ್ವರರನ್ನು ಕುರಿತಾದ ವಿಶೇಷ ಸಂಚಿಕೆ, ಸಂಶೋಧಿತ ಕೃತಿ, ರಾಘವಾಂಕನ ವೀರೇಶ ಚರಿತೆ, ಪಾಲ್ಕುರಿಕೆ ಸೋಮನಾಥನ ಬಸವೋದಾಹರಣಮ್‌, ನಿಜಗುಣ ಶಿವಯೋಗಿಗಳ ಪುರಾತನರ ತ್ರಿವಿಧಿ, ಕರ್ನಾಟಕ ಸರ್ಕಾರಕ್ಕಾಗಿ ಸಂಪಾದಿಸಿದ್ದ ಕವಿ ಲಕ್ಷ್ಮೀಶನ ‘ಜೈಮಿನಿ ಭಾರತ’ ಮೊದಲಾದವು ಮುಖ್ಯವಾದವು.

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಇದೆ. ಶಾಸ್ತ್ರಿಗಳು ಕೈಯಾಡಿಸದ ವೃತ್ತಿಗಳೇ ಇಲ್ಲ. ಕೀರ್ತನಕಾರರಾಗಿ, ಸಾಹಿತಿಗಳಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ, ಸಂಘಟಕರಾಗಿ, ಮುದ್ರಣಕಾರರಾಗಿ, ನೇಪಥ್ಯದ ರಾಜಕಾರಣ ಪಟುವಾಗಿ, ಕರ್ನಾಟಕ ಏಕೀಕರಣದ ಮುಂಚೂಣಿಯ ನಾಯಕರಾಗಿ ಹಲವು ವಿಧದಲ್ಲಿ ಹಲವು ತೆರೆನಲ್ಲಿ ಕನ್ನಡ ನುಡಿಗೆ ನಾಡಿಗೆ ಸೇವೆ ಸಲ್ಲಿಸಿದವರು.

ಶಿವಮೂರ್ತಿ ಶಾಸ್ತ್ರಿಗಳು ಇಡೀ ಕರ್ನಾಟಕದ ಹಾಗೂ ದಕ್ಷಿಣ ಭಾರತದಲ್ಲಿ ಹೆಸರಾದುದು ಪ್ರಥಮವಾಗಿ ಅವರ ಕೀರ್ತನ ಕಲೆಯಿಂದ. ಕೀರ್ತನಕಾರರಾಗಿ ಅವಿಶ್ರಾಂತವಾಗಿ ೧೯೨೫ ರಿಂದ ೧೯೫೦ ರವರೆಗೆ ಹಳೆಯ ಮೈಸೂರು, ಮದ್ರಾಸ್‌ ರಾಜ್ಯ, ಮಹಾರಾಷ್ಟ್ರ, ಮತ್ತು ಹಿಂದಿನ ಮದ್ರಾಸ್‌ ರಾಜ್ಯ ಹೈದರಾಬಾದ್‌ ಪ್ರದೇಶಗಳನ್ನು ಸಂಚರಿಸಿದರು. ಅವರ ಸಿದ್ಧಿ ಅತ್ಯದ್ಭುತ. ಜನಮೆಚ್ಚಿಸುವ ಕಲೆ-ಉತ್ತಮ ಕಂಚಿನ ಕಂಠ,ಆಜಾನುಬಾಹು ವ್ಯಕ್ತಿತ್ವ, ಎಲ್ಲಾ ವರ್ಗದ ಜನರ ಮನ್ನಣೆಗಳಿಗೆ ಕಾರಣವಾಯಿತು. ಅರಮನೆ-ಗುರುಮನೆಗಳಲ್ಲಿ ಹಾಗೂ ಜನಮನಗಳಲ್ಲಿ ಅವರ ಕೀರ್ತನ ಕಲೆಗೆ ಮಾನ್ಯತೆ ದೊರೆತಿತ್ತು. ಆದುದರಿಂದಲೇ ಅವರು “ಕೀರ್ತನೆ ಕೇಸರಿ”ಯಾದರು. ತದನಂತರ ಕೀರ್ತನಾಚಾರ್ಯರಾದರು.

ಅಂದಿನ ಕಾಲದ ಕೀರ್ತನಕಾರರಲ್ಲಿ ಶಾಸ್ತ್ರಿಗಳ ಶೈಲಿ ವೈಶಿಷ್ಯ ಪೂರ್ಣವಾದುದಾಗಿದ್ದಿತು. ಸಂಪ್ರದಾಯ ಕೀರ್ತನೆಗಳಿಗಿಂತ ಭಿನ್ನವಾದ ನೂತನ ಆಯ್ಕೆ ಮಾಡಿಕೊಂಡು ಸಾಹಿತ್ಯ-ಪೌರಾಣಿಕ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರೀಯ ಆಂದಸೋಲನವನ್ನು ಮೇಳ್‌ಐಸಿಕೊಂಡು ರಾಷ್ಟ್ರಭಕ್ತಿಯನ್ನು ಹುರಿದುಂಬಿಸುತ್ತಿದ್ದುದೂ, ಆಗಾಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಉಪಕತೆಗಳನ್ನು ಹೇಳುತ್ತಿದ್ದ ವರಸೆ ಎಲ್ಲರ ಆಕರ್ಷಣೆಗೆ ಕಾರಣವಾಗುತ್ತಿದ್ದಿತು. ಶುಭ್ರ ಖಾದಿ ವಸ್ತ್ರಧಾರಿಗಳಾಗಿ ನಿಲುವಂಗಿ, ತಲೆಗೆ ಬಣ್ಣದ ಪೇಟ, ಕೆಲವೊಮ್ಮೆ ಜರತಾರಿ ಪಂಚೆ, ಕೈಯಲ್ಲಿ ತಾಳ ಇಲ್ಲವೇ ಚಿಟಿಕೆಗಳನ್ನು  ಉಪಯೋಗಿಸುತ್ತ, ಪಕ್ಕವಾದಯಗಳಲ್ಲಿ ಹಾರ್ಮೋನಿಯಂ, ಪಿಟೀಲು, ತಬಲ, ಖಂಜರಿ ಹಗೂ ಶ್ರುತಿಗೆ ತಂಬೂರಿ ಅವರ ಕಥೆಗೆ ಪರಿಕರಗಳಾಗಿದ್ದವು. ಇದಲ್ಲದೆ ತಮ್ಮ ಕೀರ್ತನ ಕಾಲಕ್ಷೇಪದಲ್ಲಿ ಹುಲಿಯ ಚರ್ಮವೊಂದನ್ನು  ನೆಲ ಹಾಸಿಗೆಯಾಗಿ ಉಪಯೋಗಿಸುತ್ತಿದ್ದದ್ದು ಆಕರ್ಷಣೀಯವಾಗಿದ್ದಿತು. ಬೆಂಗಳೂರಿಗೆ ಬಂದ ಮೇಲೆ ಶಾಸ್ತ್ರಿಗಳ ಕಥೆಗೆ ಹಾರ್ಮೋನಿಯಂ ನುಡಿಸಲು ಖ್ಯಾತ ಹಾರ್ಮೋನಿಯಂ ಮಾಂತ್ರಿಕ ಅರುಣಾಚಲಪ್ಪನವರು, ಶೇಷಾದ್ರಿ ಗವಾಯಿಯ ವರು, ಮುನಿರಾಜಪ್ಪ (ಸಂಗೀತ ನಿರ್ಧೇಶಕರಾದ ರಾಜನ್‌ ನಾಗೇಂದ್ರರವರ ತಂದೆ), ವಿದ್ವಾನ್‌ ಸೀತಾರಾಮಯ್ಯ ಮೊದಲಾದವರೂ , ಪಿಟೀಲ್‌ ವಿದ್ವಾನ್‌ ವೆಂಕಟರಾಯಪ್ಪ, ಮುನಿರತ್ನಂ, ಎ. ವೀರಭದ್ರಯ್ಯನವರು, ಮೃದಂಗಕ್ಕೆ ಪುಟ್ಟಾಚಾರ್, ಎಂ.ಎಸ್‌. ರಾಮಯ್ಯ, ಶ್ರೀವತ್ಸರಂತಹವರು, ಇವರೊಂದಿಗೆ ವಿದ್ವಾನ್‌ ರೇವಣ್ಣನವರು  ಖಂಜರಿ ನುಡಿಸಲು ಸಹಕಿರಿಸುತ್ತಿದ್ದರೆಂದ ಮೇಲೆ ಇವರ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ.

ಕೀರ್ತನಕಾರರಾದ ಶಿವಮೂರ್ತಿಶಾಸ್ತ್ರಿಗಳ ಕೀರ್ತನೆಗೆ ಮೆಚ್ಚಿ ಶಿಷ್ಯರಾಗಿ ಹೆಸರು ಪಡೆದವರು ಸಿನಿಮಾ ನಟಿ ಪಂಢರಿಬಾಯಿಯವರ ಸಹೋದರ ವಿಮಲಾನಂದದಾಸರು. ದಾಸರು ಶಾಸ್ತ್ರಿಗಳೊಡನೆ ೧೯೩೮ ರಿಂದ ೧೯೪೫ ರವರೆಗೆ ಸಹವರ್ತಿಗಳಾಗಿದ್ದು, ತದನಂತರ ತಮ್ಮದೇ ಆದ ನಾಟಕ ಕಂಪನಿಯನ್ನು ಆರಂಭಿಸಿ ಕೀರ್ತನೆಯನ್ನು ಗೌಣವಾಗಿಸಿಕೊಂಡರು. ಶಾಸ್ತ್ರಿಗಳ ಕೀರ್ತನದಿಂದ ಸ್ಪೂರ್ತಿಗೊಂಡವರು ಅನೇಕರು. ಅವರಲ್ಲಿ ಪ್ರಮುಖರು ಶಿವಲಿಂಗಸ್ವಾಮಿ ಹಿರೇಮಠರು, ವಿದ್ವಾನ್‌ ರಾಮಸ್ವಾಮಿ ನಾಯ್ಡು ಹಾಗೂ ಅವರ ಪುತ್ರ ಗುರುರಾಜಲು ನಾಯ್ಡು ಅವರು. ನಾಯ್ಡು ಅವರು ಶಾಸ್ತ್ರಿಗಳ ಕೀರ್ತನ ಸಖ್ಯವನ್ನು ಪಡೆದಿದ್ದರು.

ಶಾಸ್ತ್ರಿಗಳ ಕೀರ್ತನೆ ಎಷ್ಟು ಖ್ಯಾತಿ ಪಡೆದಿತ್ತೆಂದರೆ ಮಲೆನಾಡಿನ ಅನೇಕ ಶ್ರೀಮಂತ ಮನೆತನಗಳು ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಮದುವೆ-ಶಿವದೀಕ್ಷೆ ಸಮಾರಂಭಗಳಲ್ಲಿ ವರಪೂಜೆಯ ದಿನ ತಪ್ಪದೆ ಶಾಸ್ತ್ರಿಗಳ ಕೀರ್ತನೆ ಏರ್ಪಡಿಸುತ್ತಿದ್ದರು. ಅವರಲ್ಲಿ ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳಾದ ಬಸವೇಗೌಡರು, ಚಂದ್ರೇಗೌಡರು, ಅನಂತರ ನಿರ್ವಾಣೇಗೌಡರು, ಬಿರೂರಿನ ಪತ್ರೆ ಚನ್ನವೀರಪ್ಪನವರು ಮೊದಲಾದವರು ಪ್ರಮುಖರು.

ಶಾಸ್ತ್ರಿಗಳು ಹರಿಕಥೆಯನ್ನು ಶಿವಕಥೆಯಾಗಿಯೂ ಪರಿವರ್ತಿಸಿದವರು. ಕೀರ್ತನ ಕಲೆಗೆ ಮೆರುಗು ತಂದು ಕೊಟ್ಟವರು. ಶಾಸ್ತ್ರಿಗಳ ಕಥೆಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದುದು “ಗಿರಿಜಾ ಕಲ್ಯಾಣ”, “ಸುಭದ್ರಾವಿಜಯ”, “ರಾಜಶೇಖರ ವಿಳಾಸ”, ಶ್ರೀ ರಾಮಪಟ್ಟಾಭಿಷೇಕ”, “ಕರ್ನಾಟಕ ವಿಜಯ” ಮುಂತಾದುವನ್ನು ಹೆಸರಿಸಬಹುದು. ಕರ್ನಾಟಕ ವಿಜಯದ ಕಥಾವಸ್ತು ಏಕೀಕೃತ ಕರ್ನಾಟಕದ ಅಗತ್ಯತೆಗೆ ಒತ್ತುಕೊಡುವ, ಕರ್ನಾಟಕದ ಹಿರಿಮೆಯನ್ನು ಸಾರುವ ಪ್ರಸಂಗಗಳಲು, ಪುರಾಣ ಕಥೆಗಳಿಂದ ಕೂಡಿ ಅತಿ ಜನಾನುರಗ ಪಡೆದಿದ್ದಿತು. ಶಾಸ್ತ್ರಿಗಳು ಗುಲಬರ್ಗದಲ್ಲಿ ಕೀರ್ತನ ನಡೆಸುತ್ತಿದ್ದಾಗೈ ಇವರ ಕೀರ್ತನೆಗಳಿಗೆ ಸೇರುತ್ತಿದ್ದ ಅಗಾಧ ಜನಸ್ತೋಮಕ, ಕೀರ್ತನದಲ್ಲಿ ಹೇಳಲಾಗುತ್ತಿದ್ದ ಸ್ವಾತಂತ್ಯ್ರದ ಕಲ್ಪನೆಗಳ ಬಗ್ಗೆ ಈ ಕೀರ್ತನದ ಬಗ್ಗೆ ವಿಕೃತ ವರದಿ ಪಡೆದ ಅಂದಿನ ಹೈದ್ರಾಬಾದಿನ ನಿಜಾಮರು, ಶಾಸ್ತ್ರಿಗಳು ಹೈದ್ರಾಬಾದ್‌ ರಾಜ್ಯಕ್ಕೆಕ ಕಾಲಿಡಕೂಡದು ಎಂದು ‘ಫರ್ಮಾನ’ ಹೊರಡಿಸಿ ಗುಲಬರ್ಗದಿಂದ ಉಚ್ಚಾಟಿಸಿದ್ದರು. ಈ ಫರ್ಮಾನನ್ನು ಸರ್ ಮಿರ್ಜಾ ಇಸ್ಮಾಯಿಲ್‌ ಅವರು ಹೈದ್ರಾಬಾದಿನ ದಿವಾನರಾದ ನಂತರ ಹಿಂತೆಗೆದುಕೊಂಡು ಶಾಸ್ತ್ರಿಗಳನ್ನು ಹೈದ್ರಾಬಾದಿಗೆ ಬರ ಮಾಡಿಕೊಂಡಿದ್ದರೆಂಬುದು ಇತಿಹಾಸದ ಸಂಗತಿ.

ಶಾಸ್ತ್ರಿಗಳ ಕೀರ್ತನದ ಪ್ರಭಾವ ಎಷ್ಟಾಗಿದ್ದಿತ್ತೆಂದರೆ, ಡಾ. ಸೂರ್ಯನಾಥ ಕಾಮತರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುವಂತೆ-“ಬಿಜಾಪುರದಲ್ಲಿ ಶಾಸ್ತ್ರಿಗಳು ತಿಂಗಳುಗಟ್ಟಲೆ ಕೀರ್ತನೆ ಮಾಡಿದ ಪ್ರಭಾವದಿಂದ ಅಲ್ಲಿಯ ವರ್ತಕರು ತಮ್ಮ ಲೆಕ್ಕ ಪತ್ರಗಳನ್ನು  ಮರಾಠಿ-ಮೋಡಿ ಅಕ್ಷರಗಳಿಂದ ಕನ್ನಡಕ್ಕೆ ಬದಲಾಯಿಸಲು ಮನಸ್ಸು ಮಾಡಿದ್ದರೆಂಬುದು” ಸಹ ಒಂದು ಅಪೂರ್ವ ದಾಖಲೆ.

ಕರ್ನಾಟಕ ಏಕೀಕರಣ ಶಾಸ್ತ್ರಿಗಳ ಇನ್ನೊಂಧು ಹಿರಿದಾಸೆ. ಹಳೆಯ ಮೈಸೂರಿನ ಅರಸೊತ್ತಿಗೆಯೊಡನೆ ಬೊಂಬಾಯಿ ಪ್ರಾಂತ್ಯದ ಹೈದ್ರಾಬಾದ್‌ ಪ್ರಾಂತ್ಯದ, ಮದ್ರಾಸ್‌ ಪ್ರಾಂತ್ಯದ ಎಲ್ಲ ಕನ್ನಡ ಭಾಗಗಳು ಸೇರಿ ಸ್ವತಂತ್ರವದ ಕರ್ನಾಟಕ ಏಕೀಕರಣ ಅವರ ಬಯಕೆಯಾಗಿತ್ತು. ಆದರೆ ಕನಸು ಈಡೇರದಿದ್ದರೂ ಕರ್ನಾಟಕ ರಾಜ್ಯವಾಗಿ ಮೂಡಿಬಂದುದು ಅವರಿಗೆ ದೊಡ್ಡ ನೆಮ್ಮದಿಯನ್ನು ತಂದಿತ್ತು. ಕರ್ನಾಟಕ ಏಕೀಕರಣಕ್ಕಾಗಿ ಕರ್ನಾಟಕದ ತುಂಬೆಲ್ಲ ತಿರುಗಾಡಿದ್ದರಲ್ಲದೆ ಫಜಲಾಲಿ ಕಮೀಷನ್ನಿನ ಮುಂದೆ, ಮಹಾಜನ್‌ ಆಯೋಗದ ಮುಂದೆ ಶಾಸ್ತ್ರಿಗಳು ತಮ್ಮ ಅಹವಾಲನ್ನು ಮಂಡಿಸಿದ್ದರು. ಈ ಏಕೀಕರಣದ ಆಂದೋಲನದಲ್ಲಿ ಮೊದಮೊದಲು ಅವರ ಜತೆಗೆ ನಿಂತವರು , ಬೆನಗಲ್‌ ರಾಮರಾಯರು, ಮುದುವೀಡು  ಕೃಷ್ಣರಾಯರು, ಜಿ.ವಿ. ಹಳ್ಳಿಕೇರಿ, ಮಂಗಳವ್ಹೇಡೆ ಶ್ರೀನಿವಾಸರಾಯರು, ನಿಟ್ಟೂರು ಶ್ರೀನಿವಾಸರಾಯರು , ಅನಂತರದಲ್ಲಿ, ಹಿಂದಿನ ಸಚಿವರಾಗಿದ್ದ ಬಿ. ಬಸವಲಿಂಗಪ್ಪನವರು, ಎಂ.ಪಿ. ಆಗಿದ್ದ ಬಿ.ಟಿ. ಕೆಂಪರಾಜ್‌ ಅವರು, ಖ್ಯಾತ ಸಹಕಾರಿ ಧುರೀಣರಾಗಿದ್ದ ಮಾಜಿ ಮೇಯರ್ ಆರ್. ಅನಂತರಾಮನ್‌, ಅದ್ಯರಾಮಾಚಾರ್ಯ, ಎಚ್‌.ಎಸ್‌. ಸೀತಾರಾಂ. ವಿ.ಆರ್. ನಾಯಿಡು, ಆಲ್‌ ಕಲಾಂ ಗೌಸ್‌ ಮೊಹಿಯುದ್ದೀನ್‌, ಅಬ್ದುಲ್‌ ಗಫಾರ್ ಸಾಹೇಬರು ಇವರುಗಳನ್ನು ನೆನೆಸಿಕೊಳ್ಳಬೇಕು. ಈ ಏಕೀಕರಣಕ್ಕಾಗಿ ಮಾಸ್ತಿ, ಅನಕೃ, ದೇವುಡು ಮೊದಲಾದವರನ್ನು ಕರೆದುಕೊಂಡು ಸಂಘಟಿಸಿದುದು ಶಾಸ್ತ್ರಿಗಳ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದ್ದಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಶಿವಮೂರ್ತಿಶಾಸ್ತ್ರಿಗಳು ಸಲ್ಲಿಸಿದ ಸೇವೆ ಅಪಾರ. ಕೇವಲ ಮಡಿವಂತಿಕೆಯಿಂದ ಇದ್ದ ಪರಿಷತ್ತಿಗೆ ಶ್ರೀ ಸಾಮಾನ್ಯನಿಗೆ ಪ್ರವೇಶ ದೊರತುದು ಶಾಸ್ತ್ರಿಗಳ ಕಾಲದಿಂದಲೇ. ಏಳು ವರ್ಷಗಳ ಕಾಲ ೧೯೫೬ ರಿಂದ ೧೯೬೩ರ ವರೆಗೆ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ಡಿ.ಎಲ್‌. ನರಸಿಂಹಾಚಾರ್ಯರು , ಕೆ.ಜಿ. ಕುಂದಣಗಾರರು , ಕುವೆಂಪು, ಅನಕೃ, ರಂ.ಶ್ರೀ . ಮುಗಳಿ ಮೊದಲಾದವರು ಶಾಸ್ತ್ರಿಗಳ ಕಾಲದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದವರು.

ಇವರ ಕಾಲದಲ್ಲಿ ಆದ ಮತ್ತೊಂದು ಮಹತ್ಕಾರ್ಯ ‘ಕನ್ನಡ ನಿಘಂಟು’. ಸರ್ಕಾರದ ಮನವೊಲಿಸಿ ಪರಿಷತ್ತು ಹೊರತಂದಿತು. ಕನ್ನಡ ನಿಘಂಟಿನ ಪ್ರಕಟನೆಗೆ ಶಾಸ್ತ್ರಿಗಳ ಸೇವೆ ಅವಿಸ್ಮರಣೀಯ.

೧೯೬೩ರಲ್ಲಿ ವಿಜಯನಗರದ ಸಹಸ್ರಮಾನೋತ್ಸವ ಹಂಪೆಯಲ್ಲಿ ನಡೆಯಿತು. ಆ ಉತ್ಸವಕ್ಕೆ ಶಾಸ್ತ್ರಿಗಳೂ, ಅವರೊಡನೆ ಅಂದಿನ ಖ್ಯಾತ ಕೀರ್ತನಕಾರರಾಗಿದ್ದ ಬೇಲೂರು ಕೇಶವದಾಸರೂ ಒಟ್ಟಾಗಿ ಹೋಗಿದ್ದರು . ಹಂಪೆಯ ಪಂಪಾಸರೋವರದಲ್ಲಿ ಸ್ನಾನ ಮಾಡಲು ಇಳಿದಾಗ ಕಾಲುಜಾರಿ ನದಿಯಲ್ಲಿ ಮುಳುಗಿದರು. ಅಲ್ಲಿ ಹೆಚ್ಚು ಜನರಿರಲಿಲ್ಲ. ಗಾಬರಿಯಾದ ಕೇಶವದಾಸರು ತಮ್ಮ ಪಂಚೆಯನ್ನು ತಂಬಿಗೆಯೊಂದಕ್ಕೆ ಸುತ್ತಿ ನದಿಗೆಸೆದು ಶಾಸ್ತ್ರಿಗಳನ್ನು ಬದುಕಿಸಿದ ಅಂಶವನ್ನು ಶಾಸ್ತ್ರಿಗಳು ಸ್ಮರಿಸುತ್ತಿದ್ದುದು  ಉಂಟು.

ಕರ್ನಾಟಕ ಏಕೀಕರಣ ಕೇವಲ ಭೂಪಟದಲ್ಲಿ ಆಗದೆ ಸಾಂಸ್ಕೃತಿಕ ಸಂಬಂಧಗಳಿಂದ ಬಲಪಡಿಸಬೇಕೆಂದು ಆಶಿಸಿದ್ದ ಶಾಸ್ತ್ರಿಗಳು ತಮ್ಮ ಮಗ ರೇಣುಕ ಪ್ರಸಾದರಿಗೆ ಅಂದಿನ ಬೊಂಬಾಯಿ ರಾಜ್ಯದ (ಮಹಾರಷ್ಟ್ರದ) ಗಡಿ ಸಾಂಗ್ಲಿಯಲ್ಲಿದ್ದು ಅಲ್ಲಿನ ಮುನಿಸಿಪಲ್‌ ಕಮೀಷನರ್ ಆಗಿದ್ದ ವಿ.ಎಸ್‌. ಹಿರೇಮಠ, ಗುರುದೇವಿ ಹಿರೇಮಠರ ಪುತ್ರಿಯಾದ ಲೀಲಾದೇವಿಯನ್ನು ಸೊಸೆಯಾಗಿ ತಂದುಕೊಂಡು ದಿನಾಂಕ ೫.೭.೧೯೫೩ ರಂದು ಬೆಂಗಳೂರಿನಲ್ಲಿ ವೈಭವದಿಂಧ ಮದುವೆ ನಡೆಸಿದ್ದರು. ಆ ಮದುವೆಗೆ ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರಾದಿಯಾಗಿ ಸಚಿವೋಪಸಚಿವರು, ಸಾಹಿತಿಗಳು ಕಲಾವಿದರು  ಬಂದಿದ್ದರು. ಸಂಜೆ ನಡೆದ ಅರತಕ್ಷತೆಗೆ ಸಂಗೀತ ಕಲಾನಿಧಿ ಟಿ. ಚೌಡಯ್ಯನವರ ಸೋಲೋ ಪಿಟೀಲು ವಾದನವಿದ್ದದ್ದು ಸ್ಮರಣೆಯಲ್ಲಿ ನಿಂತಿದೆ.

ಶಾಸ್ತ್ರಿಗಳ ಮೊದಲನೆ ಹೆಂಡತಿ ಅನ್ನಪೂರ್ಣಮ್ಮ ಗುಬ್ಬಿಯ ಯಜಮಾನ್‌ ದೊಡ್ಡಕಣ್ಣಪ್ಪನವರ ಪುತ್ರಿ. ಇವರಿಗೆ ಆರು ಜನ ಮಕ್ಕಳು ಓರ್ವ ಹೆಣ್ಣು ಮಗಳು (ಭುವನೇಶ್ವರಿ). ಆದರೂ ಉಳಿದವರು ಒಬ್ಬರೇ, ಎಚ್‌.ಎಸ್‌. ರೇಣುಕ ಪ್ರಸಾದ ಮಾತ್ರ ಶ್ರೀಮತಿ ಅನ್ನಪೂರ್ಣಮ್ಮ ೨೧.೧.೧೯೫೫ ರಂದು ನಿಧನಹೊಂದಿದರು.

ಎರಡನೆ ಹೆಂಡತಿ ಮುದ್ದುವೀರಮ್ಮ ತಮಿಳುನಾಡಿನ ಮಧುರೈ ಜಿಲ್ಲೆಯ ಪೆರೆಯೂರಿನವರು. ಕುಂಭಕೋಣದ ಮಠದ ಏಜೆಂಟರಾಗಿದ್ದ ಕುಮಾರ ವೀರಯ್ಯನವರ ಒತ್ತಾಸೆಯಿಂದ ಎರಡನೆ ಮದುವೆ ನಡೆಯಿತು. ಇವರಿಗೆ ಓರ್ವ ಪುತ್ರ ಎಚ್‌.ಎಸ್‌. ಶಿವಪ್ರಕಾಶ್‌, ಶ್ರೀಮತಿ ಮುದ್ದುವೀರಮ್ಮನವರು  ೩.೯.೧೯೭೧ರಲ್ಲಿ ನಿಧನಹೊಂದಿದರು.

ಶಾಸ್ತ್ರಿಗಳು ಮೂಲತಃ ಗಾಂಧಿವಾದಿಗಳು, ಖಾದಿ ಪ್ರೇಮಿ. ಆದರೆ ಕಾಂಗ್ರೆಸ್‌ ಪಕ್ಷವನ್ನು ಸೇರಲಿಲ್ಲ. ಹಿಂದೂ ಸಂಸ್ಕೃತಿಯ ಕಟ್ಟಾಭಿಮಾನಿಗಳಾಗಿ ವೀರಸಾವರಕರ್ ಮೂಂಚೆ ಅವರ ಅಭಿಮಾನಿಗಳಾಗಿದ್ದರೂ ಯಾವುದೇ ಪಕ್ಷ ಸೇರಲಿಲ್ಲ. ಆದರೂ ಒಮ್ಮೆ ಅಂದಿನ ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ವಿಧಾನ ಪರಿಷತ್ತಿಗೆ ಚುನಾವಣೆಗೆ ನಿಂತಿದ್ದರು. ಸ್ಥಳೀಯ ಸಂಸ್ಥೆಗಳ ಒಂದು ವಿಭಾಗದಿಂದ ಆ ಚುನಾವಣೆ ಮತಪತ್ರಗಳನ್ನು ಅಭ್ಯರ್ಥಿಯು ಸಂಗ್ರಹಿಸಬಹುದಾಗಿದ್ದ ಕಾಲ. ತ್ರಿಕೋನ ಸ್ಪರ್ಧೆ ಏರ್ಪಟ್ಟಿತು. ಕಾಂಗ್ರೆಸ್ಸಿನಿಂದ ಶ್ರೀ ಗಂಗಶೆಟ್ಟರು , ಶ್ರೀ ಶಿವಮೂರ್ತಿ ಶಾಸ್ತ್ರಿಗಳು ಹಾಗೂ ಕೃಷ್ಣಸ್ವಾಮಿ ಪಿಳ್ಳೆ ಎಂಬ ಉದ್ಯ ಮಿ. ಶಾಸ್ತ್ರಿಗಳು ಉದ್ಯಮಿ ಪಿಳ್ಳೆಯ ಹಣದ ಬಲದ ಮುಂದೆ ನಿಲ್ಲದಾದರು. ಎರಡು ವೋಟುಗಳ ಅಂತರದಲ್ಲಿ ಸೋತರು. ವಿಧಾನ ಪರಿಷತ್ತಿನ ಸದಸ್ಯರಾಗಬೇಕೆಂಬ ಹಂಬಲ ಹಂಬಲವಾಗಿಯೇ ಉಳಿಯಿತು. ಕೆಂಗಲ್‌ ಹನುಮಂತಯ್ಯನವರು ಶಾಸ್ತ್ರಿಗಳ ಹೆಸರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಮನಸ್ಸು ಹೊಂದಿದ್ದರಾದರೂ ಕಾರ್ಯರೂಪಕ್ಕೆ ತರಲಾಗಲಿಲ್ಲ. ಈ ಮನೋವ್ಯಥೆ ಅವರನ್ನು ಕೊನೆಯವರೆಗೂ ಕಾಡಿತು.

ಶಾಸ್ತ್ರಿಗಳು ಅಪ್ಪರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ  ಯಾವುದೇ ವಿಶ್ವವಿದ್ಯಾಲಯ ಪದವಿ ಪಡೆದಿರಲಿಲ್ಲ. ಅವರ ಸರ್ವತೋಮುಖ ಪ್ರತಿಭೆಗೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಾಲಕ್ರಮೇಣ ಕೇಂದ್ರ ಸರ್ಕಾರ ೧೯೬೬ ರಲ್ಲಿ ಪದ್ಮಶ್ರೀ ಬಿರುದನ್ನು ನೀಡಿ ಅವರ ಸೇವೆಯನ್ನು ಗುರುತಿಸಿತು. ಇದಕ್ಕೆ ಹಿಂದೆಯೇ ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಶಾಸ್ತ್ರಿಗಳನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದ್ದುದಲ್ಲದೆ. ಪಂಡಿತ ರತ್ನಂ ಎಂಬ ಅಪೂರ್ವವಾದ ಬಿರುದನ್ನೂ, ಗಂಡಭೇರುಂಡ ಚಿಹ್ನೆಯ ಚಿನ್ನಡ ತೋಡಾವನ್ನು ನೀಡಿ ಗೌರವಿಸಿದ್ದರು. ಇದಕ್ಕೆ ಪೂರಕವಾಗಿ ಚಿತ್ರದುರ್ಗದ ಶ್ರೀ ಬೃಹನ್ಮಠದ ಜಯದೇವ ಜಗದ್ಗುರುಗಳು, ಬಾಳೆಹೊನ್ನೂರು ಸಂಸ್ಥಾನದ ಪಂಚಾಚಾರ್ಯರೂ ಅಂದಿನ ಜಗದ್ಗುರುಗಳಾಗಿದ್ದ ಶಿವಾನಂದ ಮಹಾಸ್ವಾಮಿಗಳೂ, ಹೊಂಬುಚ ಜೈನ ಜಗದ್ಗುರುಗಳೂ, ಧರ್ಮಸ್ಥಳದ ಹೆಗ್ಗೆಡೆಯವರೂ, ಶರಣ ಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಅವರೇ ಮೊದಲಾದ ಅನೇಕ ಮಠಮಾನ್ಯಗಳು ಬಿರುದುಗಳನ್ನಿತ್ತಿದ್ದು ಅವುಗಳಲ್ಲಿ ಕೀರ್ತನಾಚಾರ್ಯ, ಕೀರ್ತನ ಕೇಸರಿ, ಸಮಾಜಭಾಸ್ಕರ, ವಿದ್ಯಾವಾರಿಧಿ, ಮುಂತಾದವುಗಳು ಉಲ್ಲೇಖನೀಯ.

ಇದಲ್ಲದೆ ಇತಿಹಾಸ-ಸಂಶೋಧನೆ ಶಾಸ್ತ್ರಿಗಳ ಅತ್ಯಂತ ನೆಚ್ಚಿನ ಹವ್ಯಾಸ. ಅವರು ಕೊನೆಯ ಉಸಿರು ಎಳೆವ ಮೂರು ತಿಂಗಳ ಮೊದಲು, ವೈದ್ಯರು ಪ್ರಯಾಣ ಬೇಡವೆಂದಿದ್ದರೂ ಬಿಜ್ಜಾವರ ಅರಸರ ಬಗ್ಗೆ ವಿಶೇಷ ಲೇಖನ ಬರೆಯಬೇಕೆಂಬ ಹಂಬಲದಿಂದ ತುಮಕೂರು ಜಿಲ್ಲೆಯ ಬಿಜ್ಜಾವರ ಪ್ರದೇಶವನ್ನು ಬಹು ಕಷ್ಟದಿಂದ ನೋಡಿ ಬಂದಿದ್ದರು. ಇದಕ್ಕೆ ಹಿಂದೆ ಶರಣ ಸಾಹಿತ್ಯದಲ್ಲಿ ಬೀಳಗಿ ಅರಸರು, ಕೊಡಗಿನ ಹಾಲೇರಿ ಅರಸರು, ಸ್ವಾದಿ ಅರಸು ಮನೆತನ, ಮಲೆನಾಡಿನ ಕೆಳದಿ ಅರಸು ಮನೆತನಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದರು. ಶರಣರ-ಹಾಗೂ ಕನ್ನಡ ನಾಡಿನ ಇತಿಹಾಸಕ್ಕೆ ಸಂಬಂಧಿಸಿದ ಅಪ್ರಕಟಿತ ಅನೇಕ ಶಾಸನಗಳನ್ನು ಶಾಸ್ತ್ರಿಗಳು ಪ್ರಕಟಿಸಿದ್ದರು. ಇವು ನಾಡಿನ ಇತಿಹಾಸ ಸಾಹಿತ್ಯಕ್ಕೆ ಶಾಸ್ತ್ರಿಗಳ ಅಮೂಲ್ಯ ಕೊಡುಗೆಯಾಯಿತು.

“ಶರಣರ ಸಾವು ಮರಣದಲ್ಲಿ ನೋಡು” ಎಂಬ ಮಾತಿದೆ. ಶಾಸ್ತ್ರಿಗಳ ಮರಣವೂ ಅಂತಹುದೇ! ಸಂಕ್ರಾಂತಿಯ ಶುಭದಿನ ಬೆಳಿಗ್ಗೆ ಸ್ನಾನ ಶಿವಪೂಜೆ ಮಾಡಿ ಉಪಹಾರ ಸ್ವೀಕರಿಸಿ ಮನೆಯ ಹೊರಾಂಗಣದಲ್ಲಿ ದಿನಪತ್ರಿಕೆ ಓದುತ್ತ ಕುಳಿತಿದ್ದರು. ತಮ್ಮ ಮಗ ರೇಣುಕ ಪ್ರಸಾದರನ್ನು, ಮೊಮ್ಮಗ ಪ್ರಭು ಪ್ರಸಾದರನ್ನು  ಹಬ್ಬದ ಊಟಕ್ಕೆ ಕರೆಸಿದರು. ಊಟ ಮಾಡಿದ ಸ್ವಲ್ಪ ವಿಶ್ರಾಂಥಿ ತೆಗೆದುಕೊಳ್ಳುತ್ತೇನೆಂದು ಮಲಗಿದವರು ಮತ್ತೆ ಏಳಲಿಲ್ಲ. ವೈದ್ಯರು ಬಂದು ನೋಡಿದರು . ಕೊನೆಯ  ಉಸಿರು ಎಂದು ಹೇಳಿದರು. ದಿನಾಂಕ ೧೫.೧.೧೯೭೬ರ ಸಂಕ್ರಾಂತಿಯ ಶುಭದಿನ ಸಂಜೆ ೫.೩೦ರ ಸುಮಾರಿಗೆ ಸಂಕ್ರಾಂತಿ ಪರ್ವಕಾಲಲ ಶಾಸ್ತ್ರಿಗಳು ಶಿವೈಕ್ಯರಾದರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಬೆಂಗಳೂರಿನ ರಾಜಾಜಿನಗರದ ಐದನೆ ಬಡಾವಣೆಯ ಮನೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರೊಂದಿಗೆ ಅವರ ಸಚಿವರುಗಳು ಸಾಹಿತಿಗಳು,ಕಲಾವಿದರು, ಪಂಡಿತರು ತಂಡ ತಂಡವಾಗಿ ಬಂದು ಅಂತಿಮ ದರ್ಶನ ಪಡೆದರು. ಅವರ ಅಂತ್ಯ ಸಂಸ್ಕಾರ, ಶಾಸ್ತ್ರಿಗಳ ತಮ್ಮ ಜೀವಿತ ಕಾಲದಲ್ಲಿಯೇ ಆಶಿಸಿದ್ದಂತೆ ಹಾಗೂ ಅವರ “ವಿಲ್‌”ನಲ್ಲಿ ಪ್ರಸ್ತಾಪಿಸಿದ್ದಂತೆ, ಸಿದ್ಧಗಂಗೆಯ ಪುಣ್ಯಭೂಮಿಯಲ್ಲಿ, ಶ್ರೀಗಳ ನೇತೃತ್ವದಲ್ಲಿ ಕ್ರಿಯಾ ಸಮಾಧಿ ೧೬.೧.೧೯೭೬ ರಂದು ನೆರವೇರಿತು. ಮಹಾಚೇತನವೊಂದು ಕಣ್ಮರೆಯಾಯಿತು. ಅವರು ಸಂಗ್ರಹಿಸಿದ್ದ ಅಪಾರ ಬೆಲೆ ಬಾಳುವ ಪುಸ್ತಕಗಳನ್ನು ಶಾಸ್ತ್ರಿಗಳ ಇಚ್ಚೆಯಂತೆ ಡಾ. ಬಿ.ಡಿ. ಜತ್ತಿಯವರ ಅಧ್ಯಕ್ಷತೆಯ ಬಸವ ಸಮಿತಿಗೆ ದಾನ ಮಾಡಲಾಯಿತು. ಅವರ ಹೆಸರನ್ನು  ಬಸವ ಸಮಿತಿ ಡಾ. ಬಿ. ಶಿವಮೂರ್ತಿಶಾಸ್ತ್ರಿಗಳ ಗ್ರಂಥ ಭಂಡಾರವಾಗಿ ಸ್ಥಾಪಿಸಿ ಮುನ್ನಡೆಸುತ್ತಿರುವುದು ಇಂದಿಗೂ ಕಾಣಬಹುದಾಗಿದೆ.