ಎಷ್ಟೇ ಪದವಿ, ಪ್ರಶಸ್ತಿ, ಪುರಸ್ಕಾರಗಳು ದೊರೆತಿದ್ದರೂ ಇವರ ಖ್ಯಾತಿ-ಪ್ರಖ್ಯಾತಿ-ಪಂಡಿತ ಭೀಮಸೇನ ಜೋಶಿ ಎಂತಲೇ. ಪಂಡಿತ ಭೀಮಸೇನಜೋಶಿ ಅವರ ಗಾಯನ ವಿವಿಧ ಪ್ರಕಾರಗಳಿಂದ ಕೂಡಿದೆ. ಮುಖ್ಯವಾಗಿ ಇವರ ಸಂಗೀತ ಹಿಂದೀ, ಮರಾಠಿ, ಕನ್ನಡ ತ್ರಿಭಾಷಾ ತ್ರಿವೇಣಿ ಸಂಗಮದ್ದು. ಅಂತೆಯೆ ಇವರು ಹಾಡಿದ, ಮಿಲೇ ಸುರ್ ಮೇರಾ ತುಮ್ಹಾರಾ ಎಂಬ ಭಾರತ ಸರಕಾರದ ಭಾಷಾ ಭಾವೈಕ್ಯ ಸ್ಲೋಗನ್‌ ಅಷ್ಟು ಪ್ರಖ್ಯಾತವಾಯ್ತು.

ಇವರ ವಾಸ ಗದುಗಿನಿಂದ ಪುಣೆಗೆ ಸ್ಥಾನಂತರಿತ. ಇವರ ಪ್ರವಾಸ ಅಖಿಲ ಭಾರತ ವ್ಯಾಪ್ತಿಯುಳ್ಳದ್ದಲ್ಲದೆ,ವಿದೇಶಗಳನ್ನೂ ಆವರಿಸಿಕೊಂಡಿದೆ. ‘ಮಿಲೇಸ್ಟರ ಮೇರಾ ತುಮ್ಹಾರಾ’ ಎಂಬ ಏಕತಾ ಸಂದೇಶವು ಭಾವಗೀತಾತ್ಮಕತೆಯಿಂದ ಬಹುಜನಪ್ರೀತಿ ಹಿತಾವಹವಾಯ್ತು. ಇವಗರ ಪ್ರಥಮ ಖ್ಯಾತಿಯೆಂದರೆ ವೇದವಿದ್ಯಾ ಪಾರಂಗತ ಪಂಡಿತರಾದ ತಂದೆ ಗುರುಚಾರ್ಯ ಜೋಶಿ ಅವರಿಂದ ತಮ್ಮ ಚರಿತ್ರೆಯನ್ನು ಬರೆಸಿಕೊಂಡುದು.

ಮಾಸ್ತಿ ‘ಶ್ರೀನಿವಾಸ’ರ ಶ್ರೇಷ್ಠ ಕಥೆ ‘ಸುಬ್ಬಣ್ಣ’ ಇದರ ಹೋಲಿಕೆಯನ್ನು ಕೊಡಬಹುದು ಭೀಮಸೇನ ಜೋಶಿ ಅವರ ಜೀವನ ಕಥೆಗೆ. ಸುಬ್ಬಣ್ಣನ ತಂದೆಯಂತೆ ಈ ಭೀಮಣ್ಣನ ತಂದೆಯೂ ಈ ಚೊಚ್ಚಿಲು ಮಗ ತಮ್ಮಂತೆಯೆ ಸಂಸ್ಕೃತ ಕಾವ್ಯ, ವೇದ ಶಾಸ್ತ್ರ ಪುರಾಣ ಪಂಡಿತನೆನಿಸಿ ತಮ್ಮ ಮಠದ ಸ್ವಾಮಿಗಳಿಂದ ಕೈತುಂಬ ಸಂಭಾವನೆ ತರಬೇಕು ಎಂಬುದು. ಆದರೆ ಈ ಚಿರಂಜೀವನ ಒಲವೊ ಶಾಲೆಯಿಂದ ಬಹುದೂರ ಸಂಗೀತದತ್ತ. ಹೀಗೆ ತಂದೆ-ಮಗನ ಗುರಿ ಆದರ್ಶಗಳು ಒಂದಕ್ಕೊಂದು ಭಿನ್ನವಾಗಿ ಮಗನು ಏನೊ ನಿಮಿತ್ತ ಮಾಡಿಕೊಂಡು ಮನೆಯಲ್ಲಿ ತಾಯಿಯೊಡನೆ ಜಗಳಾಡಿ ಮನೆ ಬಿಟ್ಟು ಹೊರಟುಬಿಟ್ಟ. ಟಿಕೆಟ್‌ ಇಲ್ಲದೆ ರೈಲು ಪ್ರವಾಸಮಾಡಿದ. ರೈಲು ಅಧಿಕಾರಿಗಳ ಕೈಗೆ ಸಿಕ್ಕಾಗ ಭೀಕ್ಷುಕನಂತೆ ನಟಿಸಿದ. ಹಾಡು ಹೇಳಿದ. ಅಧಿಕಾರಿಗಳು ಕೈಗೆ ಸಿಕ್ಕಗ ಭೀಕ್ಷುಕನಂತೆ ನಟಿಸಿದ. ಹಾಡು ಹೇಳಿದ. ಅಧಿಕಾರಿಗಳು ಕರುಣೆದೋರಿದಾಗ ಮತ್ತೆ ರೈಲು ಹತ್ತಿದ. ಹೀಗೆಯೆ ಇತ್ತ ಕಲಕತ್ತಾ, ಅತ್ತ ಪಂಜಾಬ (ಸ್ವಾತಂತ್ಯ್ರ ಪೂರ್ವದಲ್ಲಿ), ಜಲಂಧರ, ಆಗ್ರಾ, ದಿಲ್ಲಿ ಎಲ್ಲಾ ಸುತ್ತಾಡಿ ಎಲ್ಲಿಯೂ ಫಲ ಕೈಗೆ ಎಟುಕದೆ ಮತ್ತೆ ತನ್ನೂರು ಗದುಗಿಗೇ ಹೇಗೊ ರೈಲಿನಿಂದ ಸಂಚರಿಸಿ ಬಂದ. ಅಂತೂ ಮಗನು ಮರಳಿ ಮನೆಗೆ ಬಂದನಲ್ಲ ಎಂದು ತಂದೆಗೆ ದೊಡ್ಡ ಸಮಾಧಾನ. ಈಗ ಮಾತ್ರ ತಂದೆ ಮಗನ ಗುರಿ ಆದರ್ಶಗಳು ಒಂದಕ್ಕೊಂಡು ಭಿನ್ನವಾಗಿ ಮಗನು ಏನೊ ನಿಮಿತ್ತ ಮಾಡಿಕೊಂಡು ಮನೆಯಲ್ಲಿ ತಾಯಿಯೊಡನೆ ಜಗಳಾಡಿ ಮನೆ ಬಿಟ್ಟು ಹೊರಟುಬಿಟ್ಟ. ಟಿಕೆಟ್‌ ಇಲ್ಲದೆ ರೈಲು ಪ್ರವಾಸಮಾಡಿದ. ರೈಲು ಅಧಿಕಾರಿಗಳ ಕೈಗೆ ಸಿಕ್ಕಗ ಭೀಕ್ಷುಕನಂತೆ ನಟಿಸಿದ. ಹಾಡು ಹೇಳಿದ. ಅಧಿಕಾರಿಗಳು ಕರುಣೆದೋರಿದಾಗ ಮತ್ತೆ ರೈಲು ಹತ್ತಿದ. ಹೀಗೆಯೆ ಇತ್ತ ಕಲಕತ್ತಾ, ಅತ್ತ ಪಂಜಾಬ (ಸ್ವಾತಂತ್ಯ್ರಪೂರ್ವದಲ್ಲಿ), ಜಲಂಧರ, ಆಗ್ರಾ, ದಿಲ್ಲಿ ಎಲ್ಲಾ ಸುತ್ತಾಡಿ ಎಲ್ಲಿಯೂ ಫಲ ಕೈಗೆ ಎಟುಕದೆ ಮತ್ತೆ ತನ್ನೂರು ಗದುಗಿಗೇ ಹೇಗೊ ರೈಲಿನಿಂದ ಸಂಚರಿಸಿ ಬಂದ. ಅಂತೂ ಮಗನು ಮರಳಿ ಮನೆಗೆ ಬಂದನಲ್ಲಲ ಎಂದು ತಂದೆಗೆ ದೊಡ್ಡ ಸಮಾಧಾನ. ಈಗ ಮಾತ್ರ ತಂದೆ ಮಗನ ಒಲವನ್ನರಿತುಕೊಂಡು ಆತನಿಗೆ ಯಾವ ಸಂಗೀತ ಗುರು ಬೇಕು-ಎಂದು ಕೇಳಿದಾಗ ಒಮ್ಮೆ ಈ ಸಂಗೀತಪ್ರಿಯ ಸವಾಯಿ ಗಂಧರ್ವರ ಚಂದ್ರಿಕಾ ಹೀ ಜಣು ಠೇವಿಯಾ ಎಂಬ ರಂಗ ಗೀತವನ್ನು ಗದುಗಿನಲ್ಲಿ ಕೇಳಿದಾಗಲೆ “ನನಗೆ ಇವರೇ ಗುರುಗಳಾಗಬೇಕು ಎಂದು ಸವಾಗುಂವರ ಮಾಡಿ ಸಂಕಲ್ಪಿಸಿ ಬಿಟ್ಟಿದ್ದ. ಸವಾಯಿ ಗಂಧರ್ವರ ಗರುಡಿಯಾದ ಕುಂದಗೋಳದಲ್ಲೇ ಈ ಬಾಲಭೀಮನ ಸಂಗೀತ ತಪಸ್ಸಿಗೆ ಶ್ರೀಕಾರ!

ಆತಾ ಕುಠೆ ಧಾವೆ ಮನ ತುಝೆ ಚರಣ ದೇಖಲಿಯಾ!

ಭೀಮಸೇನ ಜೋಶಿ ಅವರ ಧ್ವನಿ ಮುದ್ರಿಕೆಗಳಲ್ಲಿ-ನನಗೆ ವಿಶೇಷ ಮೆಚ್ಚುಗೆಯಾದ ಅಭಂಗಗಳಲ್ಲಿ-‘ತೀರ್ಥ ವಿಠ್ಠಲ ಕ್ಷೇತ್ರ ವಿಠಲ’ದ ತರುವಾಯ ಮೇಲಿನ ‘ಆತಾ ಕುಠೆ ಧಾವೆ’ ಆ ಮಾದಕ ತಾನ ಲಹರಿ, ಆಮೋದಕ ರಾಗಮಿಶ್ರಣ, ಆ ಮೋಹಕ ಧಾಟಿ ಮುಪ್ಪುರಿಗೊಂಡು ಹೃದಯವನ್ನು ಆನಂದ ತರಂಗಗಳ ಮೇಲೆ ತೇಲಾಡಿಸುತ್ತದೆ. ‘ದೇವಾ, ನಿನ್ನ ಚರಣದರ್ಶನವಾದ ಮೇಲೆ ಚಿತ್ತವು ಇನ್ನೆಲ್ಲಿ ಓಡೀತು>’ ಎಂದು ಭಕ್ತನು ತನಗೆ ಬೇಕಾಗಿದ್ದ ಗುರುವಿನ ಸಾಮೀಪ್ಯ ದೊರೆತಾಗ ಆನಂದದಿಂದ ಹಾಡಿಕೊಂಡಂತಿದೆ.

ಮನಸ್ಸು ದುಗುಡದಿಂದ ಮುದುಡಿಕೊಂಡಾಗ ಕರುಣಿಸೋ ರಂಗಾ ಕರುಣಿಸೋ ಎಂಬ ಹೃದಯ ಸ್ಪರ್ಶಿಯಾದ ಕೀರ್ತನೆಯ ಕ್ಯಾಸೆಟ್‌ ಕೇಳುತ್ತಿದ್ದಾಗ,ಪ್ರತ್ಯಕ್ಷರಾಗಿ ಕೇಳುತ್ತಿದ್ದಾಗಲಂತೂ ಹೇಳುವಂತೆಯ ಇಲ್ಲ, ಏನೊ ಒಂದು ಅಪರೂಪದ ಆಪ್ಯತಾಯನದ ಸವಿ; ಒಂದು ಮಧುರ ಹಿತ. ಅದರ ರಸ-ಭಾವಗಳಿಗೆ ಅನುಗುಣವಾಗಿ ರಾಗ-ತಾಳ ಗಮಕಗಳನ್ನು ಜೋಡಿಸಿ ಹಾಡಿದಾಗ, ಅದರಲ್ಲೂ ‘ಕರುಣಿಸೋ ರಂಗಾ ಕರುಣಿಸೋ ಕೃಷ್ಣಾ ಕರುಣಿಸೊ’ ಎನ್ನುವಾಗ ಒಮ್ಮೆ ರಂಗಾ ಎಂದೊ ಒಮ್ಮೆ ಕೃಷ್ಣಾ ಎಂದೂ ಸಂಬೋಧಿಸಿ ಭಕ್ತನ ದೈನ್ಯ ಭಾವದಿಂದ ಮೊರೆಯಿಟ್ಟು ಪ್ರಾರ್ಥಿಸಿದಾಗ ಕಣ್ಣು ತಟ್ಟನೆ ಹನಿಗೂಡಬೇಕು.

ಅದೇ ರೀತಿ ಎನ್ನ ಪಾಲಿಸೊ ಕರುಣಾಕರಾ ಎಂಬ ಅಂತರಂಗವನ್ನು ನೇರವಾಗಿ ಮುಟ್ಟುವ ಈ ಸಂವೇದನಶೀಲ ದೇವರನಾಮದಲ್ಲಿ ‘ಶ್ರೀ ವತ್ಸಲಾಂಛನ’ ಎಂಬ ಶಬ್ದಾವಳಿಯನ್ನು ಎರಡು ಸಲ ಹೇಳಿ, ಒಂದು ತಾನಿನ ಮುರಕಿಯನ್ನು ಹೊಡೆವ ರೀತಿ ಅವರ ಸಂಗೀತ ವೈಶಿಷ್ಟ್ಯದ ಲಾಂಛನ, ಕಿರಾನಾ ತಾನ್‌. ಹಾಗೆಯೆ ‘ಪನ್ನಗಶಯನ ಗದಾಧರಾ’ ಎಂಬ ಮುಕ್ತಾಐದಲ್ಲೂ ಮಿಂಚಿನ ಸ್ವರಜತಿ ಅಷ್ಟೇ ಚಮತ್ಕಾರಿಕವೆನ ಇಸಿತ್ತು. ಅ.ನ.ಕೃ. ಅವರ ಸಂಧ್ಯಾರಾಗ ಚಿತ್ರದಲ್ಲಿ -ತೇಲಿಸೋ ಇಲ್ಲಾ ಮುಳುಗಿಸೋ ಎಂಬ ಭೀಮಸೇನರ ಪ್ಲೇಬ್ಯಾಕ್‌ ಕೀರ್ತನೆಯಲ್ಲಿ ಒಂದು ಚೇತನದಾಯಿ ಚಮತ್ಕಾರೀ ಸ್ಪರ್ಶವಿದೆ. ‘ಕಾಯೋ ಕರುಣಾನಿಧೇ ಖಗವರ ಗಮನ’ ಎಂಬ ಧ್ವನಿಮುದ್ರಿಕೆಯ ಗೀತ ಗೇಯತೆಯ ಆಲಾಪನೆಯಲ್ಲಿ ನಡುವೆ ಬರುವ ‘ಖಗವರಗಮನಾ’ ಎಂದು ಬಾಲಗಂಧರ್ವರ ತಾನದ ಝುಳುಕು ಮನಕ್ಕೆ ಪಕ್ಕನೆ ಮುದದ ಮಿಂಚು ಬೀರುತ್ತದೆ.

ಕೆಲವರ್ಷಗಳ ಹಿಂದೆ ಬೇಸಗೆಯ ಒಂದು ದಿನ ದಿಲ್ಲಿಯ ಸಮಾರಂಭವೊಂದರಲ್ಲಿ ಭೀಮಸೇನರ ಸಂಗೀತ ಕಚೇರಿ ಏರ್ಪಟ್ಟಿತ್ತು. ವಿಶೇಷವಾದ ಭವ್ಯ ಪೆಂಡಾಲ್‌ ತುಂಬಿತ್ತು. ಪೆಂಡಾಲ್‌ನಲ್ಲಿ ಕಿಕ್ಕಿರಿದಿದ್ದ ಉತ್ಸುಕ ಶ್ರೋತೃವರ್ಗ ತಾವು ಔತ್ತರೇಯರು, ತಾವು ದಾಕ್ಷಿಣಾತ್ಯರು ಎಂಬ ಭೇದವಿಲ್ಲದೆ-ಯಾವ ಭಾಷೆಯಾದರೇನು? ಸಂಗೀತಕ್ಕೆ ಭಾಷೆಯ ಗೋಡೆಗಳಿಲ್ಲ ಎಂಬ ಏಕೋಭಾವದಿಂಧ ತಾನು ಶುದ್ಧ ಶ್ರಾವಕ ವರ್ಗ ಎಂಬಂತೆ ಸಮ್ಮಿಲಿತರಾಗಿದ್ದರು. ಭೀಮಸೇನ ಜೋಶಿಯವರ ಸಂಗೀತ ಕಾರ್ಯಕ್ರಮವೂ ಈ ವಿಶೇಷ ಕಾಸ್ಮೊಪೊಲಿಟನ್‌ ಕಾನ್‌ಫರೆನ್ಸಿನ ಒಂದು ಭಾಗವಾಗಿತ್ತು. ಈ ಕಾರ್ಯಕ್ರಮ ದೂರದರ್ಶನದಿಂದ ಪ್ರಸಾರವಾಗುತ್ತಿದ್ದಂತೆ ನಮಗೆ ವೀಕ್ಷಣೆಯ ಲಾಭ.

ಭೀಮಸೇನರ ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಭರ್ತಿ ಮಧ್ಯಾಹ್ನ. ಅವರ ಊಟ ಇನ್ನೂ ಆಗಿರಲಿಲ್ಲವೆಂದು ಕಾಣುತಿತ್ತು. ಆದರೆ ಅಂದು ಭೀಮಸೇನರ ಕಾರ್ಯಕ್ರಮ ಸಂಗೀತ ಭೋಜನವನ್ನೆ ನೀಡಿತ್ತು. ಅದರಲ್ಲೂ ಅವರ ಬೃಂದಾವನೀ ಸಾರಂಗ ಭಾರೀ ಮೇಜುವಾನಿ ಆಗಿತ್ತು. ‘ಬಹುಜನಹಿತಾಯ’ ಎಂಬ ಧ್ಯೇಯ ವಾಕ್ಯಕ್ಕೆ ‘ಸಂಗೀತ’ ಪೂರ್ವಪದವಾಗಿ ಸಂಗೀತ ಭೋಜನಸುಖಾಯ ಎನ್ನುವಂತಿತ್ತು. ನಿಜವಾಗಿಯೂ ಅದು ದೇವತೆಗಳು ಸವಿಯುವ ಊಟವಾಗಿತ್ತು. ಇಂತಹ ರಸಪಾಕವನ್ನು ಭೀಮಸೇನರು-‘ಬಲ್ಲವ’ನಂತೆ-ಅಲ್ಲಿ ನೆರೆದ ಸಾವಿರಾರು ಜನಕ್ಕಲ್ಲದೆ ದೂರದರ್ಶನದ ಮೂಲಕ ಭಾರತದ ಲಕ್ಷಾವಧಿ ವೀಕ್ಷಕ-ಶ್ರೋತೃಗಳಿಗೆ ಆ ರಸಾಯನವನ್ನು ಕಿವಿಯಿಂದ ಈಂಟಿಸಿದ್ದರು. ತುಂಬಿಕೊಂಡ ಭೀಮ ಶರೀರದಿಂದ ಅವರ ಆ ಕಂಚಿನ ಶಾರೀರ, ವಿವಿಧ ಸ್ವರವಾಹಿನಿಯಾಗಿ ಹೊರಹೊಮ್ಮುತ್ತಿದ್ದ ಸವಿಸೊಬಗು ಆ ಉರಿ ಬಿಸಿಲಲ್ಲೂ ಏನೊ ಒಂದು ಶೀತಲ ಚಂದ್ರಿಕಾಪರಿಣಾಮ ಬೀರಿತ್ತು! ಟಿ.ವಿ.ಯ ಮೂಲಕ ಭೀಮಸೇನರ ಬೈಠಕಿನ ಠೀವಿಯನ್ನು ಅವರ ಭಾವ ಭಂಗಿಗಳನ್ನು ನೋಡುವುದೆ ಒಂದು ಇಂದ್ರಿಯಾತೀತ ಆನಂದವೆನಿಸಿತ್ತು. ಬೇಸಗೆಯಲ್ಲೂ ಇದೇನು ಸಿಡಿಲಿನ ಅಬ್ಬರ ಎನ್ನುವಂತೆ ಆ ತಾನಗರ್ಜನೆಗಳು!

ಸವಾಯಿಗಂಧರ್ವರ ಕಿರಾಣ ಗರಡಿ ಸಾಧನೆಗೆ ಪೋಷಕವಾಗಿ ಪ್ರೊ. ಮಲ್ಲಿಕಾರ್ಜುನ ಮನ್ಸೂರ್, ಜಾನೋರಿಕರಬುವಾ, ಫಿರೋಜ್‌ದಸ್ತೂರ್ ಭಾಸ್ಕರ ಬುವಾ ಬಖಲೆ, ರಾಮಕೃಷ್ಣ ಬುವಾ ವಘೆ, ಗಂಗೂಬಾಯಿ ಹಾನಗಲ್‌ ಮೊದಲಾದ ಬೇರೆ ಬೇರೆ ಘರಾನಾಗಳ ಪ್ರಸಿದ್ಧ ಗಾಯಕರ ಪದ್ಧತಿಯ ಪ್ರಕರಾಗಳನ್ನೂ ತಮ್ಮ ಗಾಯನದ ಮುಖ್ಯಪ್ರವಾಹದಲ್ಲಿ ಅಳವಡಿಸಿಕೊಂಡರು. ತಮ್ಮ ಮೂಲ ಬಂಡವಾಳವನ್ನು ಹೆಚ್ಚಿಸಿಕೊಂಡರು. ಇದರಿಂದ ಅವರ ಗಾಯನದ ಸಿರಿ-ಸ್ವಂತಿಕೆಗಳು ಹೆಚ್ಚು ಬಲಗೊಂಡವು. ತಾವೇನು ಹೆಚ್ಚಿನದನ್ನು ಬೆರೆಸಿಕೊಂಡಿದ್ದರೆಂಬುದನ್ನು ಗಾನರಸಿಕರು ಗುರುತಿಸಿದಾಗ ಭೀಮಸೇನ ಜೋಶಿ ಅವರಿಗೆ ಉಂಟಾದ ಸಮಾಧಾನ ದೊಡ್ಡದು. ವಿದ್ಯಾರ್ಥಿಯಾಗಿದ್ದಾಗಲೆ ಧಾರವಡ ಕರ್ನಾಟಕ ಹೈಸ್ಕೂಲ್‌ಗೆಂದು ಕಲಿಯಲು ಬಂದುದು, ಪಿತ್ರೆವಕೀಲರಿಂದ ಸಂಗೀತ ಕಲಿಯುವ ಮುಖ್ಯೋದ್ದೇಶದಿಂದ.

ತಮ್ಮ ಗುರುಗಳ ‘ಚಂದ್ರಿಕಾ ಹೀಜಣು ಠೇವಿಯಾ’ ಎಂಬ ದುರ್ಗಾ ರಾಗದ ರಂಗಗೀತವನ್ನು ಕೇಳಿ ಅವರು ಜೀವನದುದ್ದ್ಕೂ ನೆನಪಿಸಿಕೊಳ್ಳುತ್ತಿದ್ದರೋ ಹಾಗೆ ಭೀಮಸೇನರ ಜೋಗಿಯಾ, ಭೈರವಿಗಳನ್ನು ಕೇಳಿ ಕಣ್ಣೀರು ಹಾಕಿದ ಜನರೂ ಉಂಟು-ಎಂದು ಭೀಮಸೇನರೇ ಹೇಳುತ್ತಿರುತ್ತಾರೆಂತೆ. ಅದೇ ರೀತಿಕ ಕೋಪಿಸಿಗೊಂಡ ಗುರುಗಳು ಒಮ್ಮೆ ಅಡಕೊತ್ತಿನಿಂದ ಶಿಷ್ಯನಿಗೆ ಹೊಡೆದಾಗ ಹಣೆಗೆ ಗಾಯವಾಗಿ ಅದರ ಕಚ್ಚು ಉಳಿದಿರುವುದನ್ನು ಇಂದಿಗೂ ಆಗಾಗ ತೋರಿಸುತ್ತಿರುತ್ತಾರೆ.

“ಸಂಗೀತ ವಿದ್ಯೆ ಒಲಿಯಬೇಕಾದರೆ ಎಂತೆಂತಹ ಕಷ್ಟಗಳನ್ನು ಸಹಿಸಬೇಕಾಗುತ್ತದೆ. ಎಂತಹ ತ್ಯಾಗಕ್ಕೆ ಸಿದ್ಧವಾಗಿರಬೇಕಾಗುತ್ತದೆ- ಎನ್ನುವುದು ನಾನು ಗುರುವಿನ ಗರಡಿಯಲ್ಲಿ ಕಲಿಯುತ್ತಿದ್ದಾಗ ನನ್ರನ ಅನುಭವಕ್ಕೆ ಬಂದಿದೆ” ಎಂದು ಭೀಮಸೇನರು ಹೇಳುವುದನ್ನು ಕೇಳಿದಾಗ ಇವರ ತಂದೆ ತಮ್ಮ ಚಿರಂಜೀವನ ಬಗ್ಗೆ ಬರೆದ ಒಂದೆರಡು ಸಂಗತಿಗಳು ನೆನಪಿಗೆ ಬುರತ್ತವೆ.

ತಂದೆ ಗುರಾಚಾರ್ಯರು ಭೀಮಸೇನನನ್ನು ಕುಂದಗೋಳದ ಗುರುಮನೆಯಲ್ಲಿಟ್ಟ ಮೇಲೆ ಗುರುಗಳು ಈ ಶಿಷ್ಯ ತಮ್ಮ ಮನೆಯಲ್ಲೇ ಊಟಮಾಡಿಕೊಂಡಿರಲಿ ಎಂದು ಇಟ್ಟುಕೊಂಡರು. ಆದರೆ ಅಲ್ಲಿಲಯ ಗುರುಸೇವೆ ಎಂದರೆ ಒಂದು ಅಸಿಧಾರಾವ್ರತ. ಗುರುಪತ್ನಿ ಈ ಶಿಷ್ಯನಿಗೆ ನೀಡುತ್ತಿದ್ದ ಊಟದ ಪ್ರಮಾಣ ಸಾಕಾಗುತ್ತಿದ್ದಿಲ್ಲ. ಗುರುಗಳ ಮನೆಗೆ ಹಾಲು ಕೊಡುತ್ತಿದ್ದ ಮುದುಕಿ ಈ ಹುಡುಗನಿಗೆ ತನ್ನ ಮನೆಯ ರೊಟ್ಟಿಗಳನ್ನು, ಹಾಲನ್ನೂ ವಾತ್ಸಲ್ಯ ಭಾವದಿಂದ ಕೊಡುತ್ತಿದ್ದಳಂತೆ.ಒಮ್ಮೆ ತಂದೆ ಗುರಾಚಾರ್ಯರು ಮಗನ ಪಾಠಕ್ರಮ ಹೇಗೆ ಸಾಗಿದೆಯೆಂದು ನೋಡಿಬರಬೇಕೆಂಬ ಕಾಳಜಿಯಿಮದೆ ಕುಂದಗೋಳಕ್ಕೆ ರೈಲಿನಿಂಧ ಬಂದು ಗುರುಮನೆ ಸಮೀಪಿಸಿದಾಗ ಕಂಡದ್ದೇನು? ಮೊದಲೇ ಕುಂದಗೋಳ ನೀರಿನ ಅಡಚಣೆಗಾಗಿ ಪ್ರಸಿದ್ಧ. ಅಂತಹದರಲ್ಲಿ ಸಮೀಪದ ಆಳವಾದ ಭಾವಿಯಿಂದ ನೀರು ಜಗ್ಗಿ ಜೋಡುಕೊಡ ಹೊತ್ತುಕೊಂಡು ನಿಂತಿದ್ದಾನೆ ಮಗ. “ಇದೇನಪಾ ಭೀಮೂ?” ಎಂದು ಕಂಗೆಟ್ಟ ತಂದೆ ಬಿಸಿಲಿಗೆ ಕಣ್ಣು ಕೆಂಪಾಗಿಸಿಕೊಂಡು ನಿಂತಿದ್ದ ಮಗನನ್ನು ಕಂಡಾಗ ಕಸಿವಿಸಿಗೊಂಡು-”ನಡೀ ಕೇಳ್ತಿನಿ. ಇದನ್ನೆ ಏನು ನಿಮ್ಮ ಗುರುಗಳು ಕಲಿಸಿದ್ದು?” ಎಂದಾಗ ಮಗನು ಜೋಡುಕೊಡ ಹೊತ್ತುಕೊಂಡೇ ತಂದೆಯನ್ನು ಕೈಯಿಂದ ತಡೆದು-“ಅಪ್ಪಾ ಹಾಂಗೆಲ್ಲಾ ಕೇಳಬ್ಯಾಡಾ. ಗುರುಗಳು ನೀಡಿದ ವಿದ್ಯಕ್ಕ ಇಷ್ಟು ಸೇವಾ ಮಹತ್ವದ್ದಲ್ಲ. ಈ ಸೇವಾ ಸಂತೋಷದಿಂದ ಮಾಡ್ತೀನಿ” ಎಂದಾಗ ತಂದೆಗೆ ಅಭಿಮಾನದ ಆನಂದಾಶ್ರು, ಕನಿಕರದ ಕಂಬನಿ ಕೂಡಿಯೆ ಕಣ್ಣಿಂದ ಹೊರಸೂಸಿದವು.

ಹೀಗೆ ಗುರುವಿನ ಸಂಗೀತ ವಿದ್ಯಾ ವಿತರಣೆ ವರುಷಾನುಗಟ್ಟಲೆ ನಡೆಯಿತು. ಭೀಮಸೇನನ ಜೊತೆಗೆ ಹಾಗೂ ಹಿಂದೆ ಮುಂದೆ ನೀಲಕಂಠಬುವಾ ಗಾಡಗೋಳಿ, ಕೃಷ್ಣಾಬಾಯಿ ರಾಮದುರ್ಗ,ವೆಂಕಟರಾವ್‌ ರಾಮದುರ್ಗ, ಫಕೀರಪ್ಪ ಕುಂದಗೋಳ, ಗಂಗೂಬಾಯಿ ಹಾನಗಲ್ಲ, ಮೊದಲಾದವರು. ಎಲ್ಲರಿಗೂ ಗುರುಗಳ ಸಂಗೀತ ವಿದ್ಯಾ ವಿತರಣೆಯ ಕ್ರಮ ಕಠಿಣ ವ್ರತವೆಂಬ ಸಾಮಾನ್ಯ ಅನುಭವ. ವರ್ಷಾನುಗಟ್ಟಲೆ ಒಂದೇ ರಾಗ ಹೇಳಿದರೂ ತಮ್ಮ ಘರಾಣೆಯ ಬುನಾದಿಯನ್ನೆ ಶಿಷ್ಯರಲ್ಲಿ ಕಟ್ಟುತ್ತಿದ್ದರು. ದಿನಗಟ್ಟಲೆ ಡ್ರಿಲ್‌ಮಾಡಿಸಿದಂತೆ ತಂಬೂರಿ ಶ್ರುತಿಗೆ ಎರಡು-ಮೂರು ಸ್ವರಗಳನ್ನು ಮಾತ್ರ ಗಂಟೆಗಟ್ಟಲೆ ನುಡಿಸಲು ಹಚ್ಚುತ್ತಿದ್ದರು.

ಗುರುವಿನಿಂದ ಸಂಗೀತ ವಿದ್ಯಾಸಂಪನ್ನನಾದ ಭೀಮಸೇನ ಮರಳಿ ಮನೆ ಸೇರಿದ ಮೇಲೆ ಒಂದು ರೀತಿ ನಿರುದ್ಯೋಗಿಯೆ ಆದ.ನೌಕರಿ ಕಳೆದುಕೊಂಡ ಅಳಿಯನು ಮನೆ ಸೇರಿದರೆ ಮನೆಯ ಯಜಮಾನನಾದ ಮಾವನಿಗೆ ಒಂದು ಘೋರ ಸಮಸ್ಯೆ ಎದುರಾದಂತೆ ಈಗ ತಂದೆ ಗುರಾಚಾರ್ಯರಿಗೆ ಮಗನು ಸಮಸ್ಯೆಯಾದ.ಆಗೊಮ್ಮೆ ಮಗ ಓಡಿಹೋದನೆಂಬ ಚಿಂತೆ ಕಾಡಿದರೆ ಈಗ ಆತ ಮನೆಹಿಡಿದು ಕೂಡಬೇಕಾಯಿತಲ್ಲ ಎಂಬ ಚಿಂತೆ. ಮಗನ ಭವಿಷ್ಯವೇನು ಎಂಬ ಪ್ರಶ್ನೆ ಈಗ ಕಾಡತೊಡಗಿತು. ಒಂದು ರೀತಿ ದಿಙ್ಮೂಢರಾದರು. ಈ ಕ್ಷುಬ್ಧ ಶೂನ್ಯತೆಯಲ್ಲಿ ಕ್ಷತಿಜವೊಂದು ತೆರೆದೀತೆ ಎಂದು ದಿಕ್ಕುದಿಕ್ಕಿಗೆ ಪರದಾಡಿದರು.

ಇನ್ನಾವುದೇ ಬೇರೆ ಗುರುವನ್ನು ಹುಡುಕುವುದು ಭೀಮಸೇನನಿಗೆ ಬೇಕಿರಲಿಲ್ಲ. ಕಿರಾನಾ ಸಂಗೀತ ಬಿಟ್ಟು ಕುಲಗೆಡಲಾರೆ ಎಂದು ಪಟ್ಟು ಹಿಡಿದರು. ಸರಿ, ಸದ್ಯಕ್ಕಂತೂ ಮನೆಯಲ್ಲಿಯ ತಾಲೀಮು ನಡೆಯಲಿ ಎಂದುಕೊಂಡು ಗುರುಬಂಧು ಹಳ್ಳೆಪ್ಪನವರನ್ನು ಪೇಟೀ ಬಾರಿಸಲೂ, ಹೊಂಬಳ ಶಂಕರಭಟ್ಟ ಎಂಬ ತಬಲಜಿಯನ್ನೂ, ರೊಟ್ಟಿ ಶೀನಪ್ಪನನ್ನು ತಂಬೂರಿ ಸಾಥ್‌ಗಾಗಿಯೂ ಶೇಖರಿಸಿ ಮೂವರನ್ನೂ ಮನೆಯಲ್ಲೇ ಇಟ್ಟುಕೊಂಡು ಅವರ ಯೋಗಕ್ಷೇಮವನ್ನೂ ಜೋಶಿ ಗುರಾಚಾರ್ಯ ಮಾಸ್ತರರು ನೋಡಿಕೊಂಡರು .

ಇಲ್ಲಿ ಒಂದು ಪವಾಡಸದೃಶ ಸಂಗತಿಯನ್ನು ನೆನೆಯಬೇಕು. ನಿಷ್ಠಾವಂತ ಗುರಾಚಾರ್ಯರು ಮಂತ್ರಾಲಯದ ಗುರುರಾಯರ ಪರಮಭಕ್ತರಾಗಿದ್ದರು. ಮಗ ಭೀಮಸೇನನೂ ಅಷ್ಟೇ ನಿಷ್ಠಾವಂತ ಭಕ್ತನಾಗಿದ್ದ. ಕೆಲದಿನ ಮಂತ್ರಾಲಯದಲ್ಲಿ ರಾಯರಸೇವೆಗೆ ನಿಂತು, ರಾಯರಿಗೆ ಸಂಗೀತ ಸೇವೆಯನ್ನೇ ಅರ್ಪಿಸಿದರೆ ಹೇಗೆ ಎಂಬ ತಂದೆಯ ಸೂಚನೆಗೆ ಸಂತೋಷದಿಂದ ಒಪ್ಪಿಕೊಳ್ಳಲು ಈ ಮೂವರೂ ಸಾಥೀದಾರರನ್ನು ಕೂಡಿಕೊಂಡು ಮಂತ್ರಾಲಯದ ದಾರಿ ಹಿಡಿದರು. ‘ಅನುಗ್ರಹ ಶಕ್ತೋನ್ಯೋ ರಾಘವೇಂದ್ರಾನ್ನ ವಿದ್ಯತೇ’ ಎಂಬ ಸ್ತೋತ್ರಶ್ಲೋಕದಲ್ಲಿ ಶ್ರದ್ಧೆಯಿಟ್ಟು ನಿತ್ಯ ವೃಂದಾವನದ ಮುಂದೆ ಎರಡೂ ಹೊತ್ತು ದೇವರನಾಮ ಸಂಕೀರ್ತನಾರಾಧನೆ ನಡೆಯಿತು. ಎರಡು ತಿಂಗಳವರೆಗೆ ನಡೆದ ಈ ಏಕಾಗ್ರಸೇವೆ ತನ್ನ ಸಾಮರ್ಥ್ಯವನ್ನು ದೃಷ್ಟಾಂತದ ಮೂಲಕ ತೋರಿಯೇ ಬಿಟ್ಟಿತು. ಗುರು ಸವಾಯಿ ಗಂಧರ್ವರು ಸಂಗೀತ ಶಿಕ್ಷಣದ ಎಳೆಯನ್ನು ಎಲ್ಲಿಗೆ ಬಿಟ್ಟಿದ್ದರೊ, ಅಲ್ಲಿಂದ ಮುಂದೆ, ನಿತ್ಯಸ್ವಪ್ನದಲ್ಲಿ ಸ್ವತಃ ವೀಣಾವಿಶಾರದರೂ, ಸಂಗೀತ ಪ್ರಾಜ್ಞರೂ ಆದ ಗುರುಸಾರ್ವಭೌಮರು ಆ ಸಂಗೀತ ಪಾಠವನ್ನು ಮುಂದುವರಿಸಿದಂತೆ ಅನುಭವವಾಗ ತೊಡಗಿತು. ಅನುಭವವೆಂದರೇನು ಸ್ವಪ್ನದಲ್ಲಿ ಕಲಿತ ಪಾಠ ಜಾಗ್ರತಾವಸ್ಥೆಯಲ್ಲಿ ಕರತಲಾಮಲಕ! ಎಂಟುದಿನ ನಿಂತು ತಂದೆ ಹಿಂತಿರುಗಿದ ನಂತರ ಭೀಮಸೇನನು ಸಾಥೀದಾರರೊಂದಿಗೆ ಅಲ್ಲಿಯೆ ಉಳಿದನು. ಹಿಂದಿನ ಸ್ವಪ್ನದಲ್ಲಿ ಕಲಿತುದನ್ನು ಮರುದಿನ ಹಗಲಿನಲ್ಲಿ ತಾಲೀಮು ಮಾಡುವುದು ನಡೆಯಿತು. ರಾತ್ರಿಯೇ ಏಕಾಂತದಲ್ಲಿ ಭೀಮಸೇನನೊಬ್ಬನೆ ರಾಯರ ಪಾದುಕೆಗಳು ಮೂಡಿರುವ ತುಂಬಭದ್ರೆಯ ತೀರದ ಬಂಡೆಗಲ್ಲಿನ ಬಳಿ ಕುಳಿತು ತಾರಕದ ಸ್ವರಗಳನ್ನೆತ್ತಿ ಎತ್ತರದ ಕಂಠದಿಂದ ಸಂಗೀತ ಹೇಳಿದಾಗ ಒಂದು ಕರಿ ನಾಯಿ ಬಂದು ಬಳಿಯಲ್ಲಿ ಕುಳಿತು ಕೇಳುತ್ತಿತ್ತಂತೆ! ಸ್ವಲ್ಪ ಹೊತ್ತಿನಲ್ಲಿ ಆ ನಾಯಿ ಕಣ್ಮರೆ. ಮರದಿನ ರಾತ್ರಿ ಮತ್ತೆ ಈ ಭಕ್ತಶಿಷ್ಯನ ಸಂಗೀತದ ಹೊತ್ತಿಗೆ ಮತ್ತೆ ಹಾಜರ! ಒಂದು ದೂರದರ್ಶನ ಸಂದರ್ಶನದಲ್ಲಿ ಸ್ವತಃ ಭೀಮಸೇನ ಜೋಶಿ ಅವರೇ ಈ ಪವಾಡ ಸದೃಶ ಘಟನೆಯನ್ನು ನಿರೂಪಿಸಿದ್ದಾರೆ.

ಮರಳಿ ಊರಿಗೆ ಬಂದಮೇಲೆ ನಿತ್ಯದ ‘ರಿಯಾಜ್‌’ ಜೊತೆಯ ಸಾಥಿದಾರರೊಂದಿಗೆ ತಪ್ಪದೆ ನಡೆದೇ ಇತ್ತು. ಸ್ವಂತ ಸಾಧನೆ ಒಂದು ಹದಕ್ಕೆ ಬಂದಮೇಲೆ ಹೊರಗಿನ ಕಾರ್ಯಕ್ರಮಗಳು ಜರುಗತೊಡಗಿದವು. ಹಾನಗಲ್‌, ಶಿರಸಿ, ಶಿವಮೊಗ್ಗಾ, ತೀರ್ಥಹಳ್ಳಿ, ಮುಳಬಾಗಲ ಸಂಚಾರವಾಯಿತು. ಮುಳಬಾಗಲದಲ್ಲಿ ಎರಡೇ ರೂಪಾಯಿ ಕಲೆಕ್ಷನ್‌ ಆದಾಗಲೂ ಅಷ್ಟೇ ಸಂತೋಷ, ತೀರ್ಥಹಳ್ಳೆಯಲ್ಲಿ ತಿಪ್ಪಾಜೋಯಿಸರಿಂದ ೨೫ ರೂಪಾಯಿ ಬಹುಮಾನ ದೊರೆತಾಗಲೂ ಅಷ್ಟೇ ಸಂತೋಷ. ಮಂಗಳೂರಿನಲ್ಲಿ ಮಾತ್ರ ನೂರು ರೂಪಾಯಿಗಳ ಕಾಣಿಕೆ ಕೈಗೆ ಬಂದಾಗ ಅದೊಂದು ವಿಜಯ ಯಾತ್ರೆಯೇ ಆಯಿತು. ಹಾಗೆಯೆ ಮದ್ರಾಸ್‌ ವರೆಗೂ ದಿಗ್ವಿಜಯ ಬೆಳೆಸಿ ಮೂರು ತಿಂಗಳ ನಂತರ ಗದುಗಿಗೆ ಹಿಂತಿರುಗಿದಾಗ ಭೀಮಸೇನ ಜೋಶಿ ಅವರಲ್ಲಿ ಆತ್ಮ-ವಿಶ್ವಾಸ ಬಲವಾಗಿ ನೆಲೆಸಿತ್ತು. ಗುರುಚಾರ್ಯರ ಮಗ ಭೀಮಸೇನ ಜೋಶಿ ಹೋಗಿ, ಗುರಾಚಾರ್ಯರನ್ನೆ ಭೀಮಸೇನ ಜೋಶಿಯ ತಂದೆ ಎಂದು ಗುರುತಿಸುವ ಕಾಲವೂ ಬಂದಿತ್ತು.

೧೯೪೨ರಲ್ಲಿ ಭೀಮಸೇನ ಜೋಶಿಕ ಮುಂಬಯಿ ಆಲ್‌ ಇಂಡಿಯಾ ರೇಡಿಯೋದಲ್ಲಿ ಧ್ವನಿ ಪರೀಕ್ಷೆ ಕೊಟ್ಟು, ಮೇಲ್ತರಗತಿಯ ಶಾಸ್ತ್ರೀಯ ಸಂಗೀತಗಾರನೆಂದು ಗುರುತಿಸಲ್ಪಟ್ಟು ಮುಂಬಯಿ AIR ದಿಂದ ಸಂಗೀತ ಪ್ರಸಾರ ಮಾಡತೊಡಗಿದರು. ಇತ್ತ H.M.V. ಗ್ರಾಮೊಫೋನ್‌ ಕಂಪನಿಯಿಂದ ದಾಸರಪದಗಳ, ಬೇಂದ್ರೆ ಅವರ ಭಾವಗೀತಗಳ- (ನನ್ನ ಹರಣ ನಿನಿಗೆ ಶರಣ! ಮತ್ತು ‘ಉತ್ತರ ಧ್ರುವದಿಂ’) ಸಂಗೀತದ ಧ್ವನಿಮುದ್ರಿಕೆಗಳು ಹೊರಬಂದು ಸಾಕಷ್ಟು ಕೈಯಲ್ಲಿ ದುಡ್ಡು ಓಡಾಡತೊಡಗಿತು.

೧೯೪೪ರಲ್ಲಿ ಭೀಮಸೇನರ ವಿವಾಹ. ಒಂದು ಕ್ರಮಬದ್ಧ ಜೀವನ ನಡೆಯಲೆಂದು ತಂದೆ ಚಿರಂಜೀವನಿಗೆ ಗೃಹಸ್ಥಾಶ್ರಮ ದೀಕ್ಷೆ ಕೊಡಿಸಿದರು. ಸಂಗೀತ ಬಲ್ಲ ಸಹ ಧರ್ಮಿಣಿ ದೊರೆತಿದ್ದರೆ ಭೀಮಸೇನರ ಸಂಗೀತ ವೃತ್ತಿಗೆ ಅರ್ಧಾಂಗಿಯ ಅರ್ಧಗಬಲ ಬಂದಂತಾಗುತ್ತಿತ್ತು. ‘ಅವನ ಜೀವನದಲ್ಲಿ ಅನುಕೂಲ ಪ್ರತಿಕೂಲಗಳೆರಡೂ ಸಂಗೀತ ನಿಷ್ಠೆಯನ್ನು ಬೆಳೆಸುತ್ತಲೆ ಬಂದಿವೆ’ ಎಂಬ ತಂದೆಯ ನುಡಿಗಳು ಮಗನ ಅಂತಃಸತ್ವವನ್ನು ತೆರೆದು ತೋರಿದಂತಿವೆ.ಇನ್ನೂ ಒಂದು ಮಾತು. ಮಗನ ನಿರ್ವಿಕಾರ,ಭಾವಾವೇಗರಹಿತ.ನಿಶ್ಚಂಚಲದ ಸ್ಥಿರ ಸ್ವಭಾವವನ್ರನು ಕುರಿತದ್ದು. ಅದೇ ವರುಷವೆ ಭೀಮಸೇನರಿಗೆ ತಾಯಿಯ ವಿಯೋಗ.ಮಾತೃವಿಯೋಗದಿಂದ ಕಾಲಕ್ರಮೇಣ ಚೇತರಿಸಿಕೊಂಡು ಈ ಸಂಗೀತ ಕಲೋಪಾಸಕ ಮತ್ತೆ ತನ್ನ ಸಂಗೀತ ಜೈತ್ರಯಾತ್ರೆಯನ್ನು ಮುಂದುವರಿಸಿದ. ಏನೋ ಖಾಸಗೀ ಕಾರಣಗಳಿಂದಾಗಿ ಗುರುವಿನ ಆಗ್ರಹಕ್ಕೆ ಒಳಗಾಗಿದ್ದು ಶಿಷ್ಯನ ವಿಷಾದಯೋಗವನ್ನು ಆತನ ಹಿತಚಿಂತಕರು ಉಪಾಯದಿಂದ ನಿವಾರಿಸಿದರು. ಈ ಶಿಷ್ಯನ ಪ್ರಗತಿಯ ತೀವ್ರತೆಯನ್ನು ಗುರು ಶಿಷ್ಯನಿಗೆ ಕಾಣಿಸಿಕೊಳ್ಳದಂತೆ ಆತನ ಒಂದು ಬೈಠಕನ್ನು ಕೇಳುವಂತೆ ಏರ್ಪಾಡು ಮಾಡಿದರು. ಶಿಷ್ಯನ ಈ ಪಳಗಿದ ಪ್ರಗತಿಯನ್ನು ನೋಡಿ ಗುರುವಿಗೆ ವಿಶೇಷ ಸಮಾಧಾನ ತೃಪ್ತಿಗಳುಂಟಾಗಿ ಆ ಪೂರ್ವಗ್ರಹದ ಮುನಿಸು ಮಾಯಾವಾಗಿತ್ತು. ದೂಷಿತ ಅಭಿಪ್ರಾಯಗಳು ದೂರಾಗಿದ್ದವು.

೧೯೪೬ರಲ್ಲಿ ಕುಂದಗೋಳ, ಹುಬ್ಬಳ್ಳಿಗಳಲ್ಲಿ ಜರುಗಿದ ಗುರುಗಳ ಷಷ್ಟ್ಯಬ್ದಿ ಸಮಾರಂಭದಲ್ಲಿ ಭೀಮಸೇನನು ತಂದೆಯೊಡನೆ ಬಂದು ಉತ್ಸವದಲ್ಲಿ ಭಾಗವಹಿಸಿ ಗುರುಗಳಿಗೆ ‘ಆಹೇರಿ’ ಮಾಡಿದನು.ಈ ಸಂದರ್ಭದಲ್ಲಿ ಸುಂದರವಾದ ಉತ್ತಮವಾದ ಗೌರವ ಗ್ರಂಥವೊಂದು ಪ್ರಕಟವಾಗಿ, ಅದಕ್ಕೆ ಭಾರತದ ಬೇರೆಬೇರೆ ಘರಾಣೆಗಳ ಶ್ರೇಷ್ಠ ಗಾಯಕರು ತಂತಮ್ಮ ಲೇಖನಗಳ ಮೂಲಕ ಗೌರವ ಸಲ್ಲಿಸಿದ್ದರು. ಇವರಲ್ಲಿ ಗೋವಿಂದರಾವ ಟೇಂಬೆ, ಮಾಸ್ತರ ಕೃಷ್ಣರಾವ್‌,ವಿನಾಯಕ ರಾವ್‌ ಪಟವರ್ಧನ ಮೊದಲಾದವರ ಹೆಸರುಗಳು ಉಲ್ಲೇಖನೀಯ.

ಈಗ ಶಿಷ್ಯನ ಬಗ್ಗೆ ಗುರುವಿನ ಪೂರ್ವಗ್ರಹವೆಲ್ಲಾ ಕಳೆದುದರಿಂದ ಶಿಷ್ಯನ ಯೋಚನೆಯನ್ನು ಗುರು ಸ್ವೀಕೃತಿಯಿಂದ ಸಮ್ಮತಿಸಿದಾಗ ಮತ್ತೊಮ್ಮೆ ಔಪಚಾರಿಕವಾದ ಗಂಡಾ ಸಮಾರಂಭ ಜರುಗಿತು. ಸಾವಿರ ರೂಪಾಯಿಯ ಗುರುದಕ್ಷಿಣೆ ಶಿಷ್ಯನಿಂದ ಸಂದಾಯವಾಯಿತು. (ಅರ್ಥಾತ್‌ ಶಿಷ್ಯನ ತಂದೆ ಗುರಾಚಾರ್ಯರು ಸಂಗ್ರಹಿಸಿಕೊಟ್ಟದು.) ಮತ್ತೆ ಮಗನು ಮನೆ ಹಿಡಿದು ಕೊಡುವಂತಾಗಲಿಲ್ಲವಲ್ಲ ಎಂಬ ಸಮಾಧಾನ ತಂದೆಗೆ. ಆದೆ ದುರ್ದೈಗವದ ಸಂಗತಿಯೆಂದರೆ ಗುರುಗಳು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದರು. ಶಿಷ್ಯ ಭೀಮಸೇನ ಗುರುಗಳಿಂಧ ಎಷ್ಟು ಪಡೆಯಬೇಕಾಗಿತ್ತೋ ಅಷ್ಟು ದೊರಕದೆ ಹೋಯಿತು.

ಇಷ್ಟು ಮಾತ್ರ ನಿಜ. ಗುರುಗಳಿಂದ ಪಡೆದಷ್ಟು ಶಿಕ್ಷಣ ಭೀಮಸೇನ ಜೋಶಿ ಅವರ ಭವಿಷ್ಯಕ್ಕೆ ಬಂಗಾರದ ಗಟ್ಟಿಯಂತಹ ತಳಹದಿಯನ್ನು ಹಾಕಿತು. ಗುರುಗಳಿಂದ ಪಡೆದ ಶಿಕ್ಷಣ,ಶ್ರವಣಮಾಡಿದ ಸಂಗೀತ ಗುರುಗಳ ಪ್ರತಿಭೆ, ಪಾಂಡಿತ್ಯ, ಶಿಷ್ಯನ ಸ್ವಂತ ಬುದ್ಧಿ, ಸ್ವಂತಿಕೆಯ ಕಲ್ಪನಾಶಕ್ತಿ, ಜನರು ತೋರಿದ ಆದರ ಔದಾರ್ಯಗಳ ಬಗ್ಗೆ ಬರೆಯುತ್ತ ಸ್ವತಃ ಭೀಮಸೇನರೆ ಹೀಗೆ ಬರೆದಿದ್ದಾರೆ: (ನಡೆದು ಬಂದ ದಾರಿ ೩ನೆಯ ಸಂಪುಟ-ಪುಟ ೨೪೦೧-೨).

“ನಮ್ಮ ಗುರುಗಳು ಆಲಾಪನೆ ಮಾಡುವಾಗ ಚೆಂಡಿನ ಆಟದಲ್ಲಿ ಒಂದು ಸಲ ಬಂದ ಹಾಗೆ, ಚೆಂಡು ಹೇಗೆ ಅದೇ ರೀತಿ ಮತ್ತೆ ಬರುವುದಿಲ್ಲವೊ ಹಾಗೆ ಇವರ ಸ್ವರಗಳ ಪುಟಿಚೆಂಡಾಟ ನಡೆಯುತ್ತಿತ್ತು. ಅಂತೆಯೆ ಅವರು ಮೂರು ನಾಲ್ಕೇ ಸ್ವರಗಳಲ್ಲಿಯೆ ಅರ್ಧ ಗಂಟೆಯ ವರೆಗೆ ಆಶ್ಚರ್ಯವಾಗುವಂತೆ, ಬೇಸರವಾಗದಂತೆ ಆಲಾಪನೆ ಮಾಡುತ್ತಿದ್ದರು. ಹಾಗೆಯೆ ಒಂದೇರಾಗವನ್ನು ಹತ್ತು ಸಲ ಹಾಡಿದರೂ ಹತ್ತುತರಹದ ವೈವಿಧ್ಯ-ನವರಾತ್ರಿಯಲ್ಲಿ ದೇವರಿಗೆ ಹತ್ತು ಬೇರೆ ಬೇರೆ ಅಲಂಕಾರ ಮಾಡಿದ ಹಾಗೆ, ಏಕ ಮಾತ್ರ ರಾಗ ದೇವತೆ ಹತ್ತು ಬೇರೆ ಬೇರೆ ಅಲಂಕಾರಗಳಿಂದ ದರುಶನ ಕೊಟ್ಟಂತೆ ಇರುತ್ತಿತ್ತು” ಎಂದು ನುಡಿದಿದ್ದಾರೆ.

ಗುರುಗಳು ಕಲಿಸಿದ ರಾಗಗಳು ಅಚ್ಚಳಿಯದಂತೆ ಇನ್ನೂ ಶಿಷ್ಯನ ಸ್ಮೃತಿಯಲ್ಲಿ, ನಾಲಗೆಯಮೇಲೆ ಉಳಿದಿರುವ ರಾಗಗಳೆಂದರೆ-ಪೂರಿಯಾ, ಪೂರಿಯಾಧನಾಶ್ರಿ, ಶುದ್ಧಕಲ್ಯಾಣ, ಆಭೋಗಿ, ದುರ್ಗಾ, ಮಲ್ಹಾರ ಪ್ರಕಾರಗಳು, ಬಸಂತ, ಹಿಂದೋಲ, ಆಢಾನಾ, ಬಹಾರ, ತೋಡಿ ಪ್ರಕಾರಗಳು, ಲಲಿತ, ಆಸಾವರಿ, ಯಮನ್‌ ಬಿಲಾವಲ್‌, ಅಲ್ಹೈಯಾ ಬಿಲಾವಲ್‌,ಮಾರವಾ, ಗೌರಿ,ದೇಸ.ಭೈರವೀ ಅಂತೂ ಸೈ. ಇವೆಲ್ಲಾ ಅಲ್ಲದೆ ಈಗ ಇನ್ನೂ ಅನೇಕ ಜೋಡು ರಾಗಗಳನ್ನು ಅಪರೂಪದ ರಾಗಗಳನ್ನೂ ಗುರುಪರಂಪರಾಗತವಾದ, ಸ್ವಯಾರ್ಜಿತವಾದ ಶೈಲಿಗಳಲ್ಲಿ ಹಾಡುತ್ತಾರೆ.

೧೯೫೦ರಲ್ಲಿ ಬೇಂದ್ರೆ ಲಕ್ಷ್ಮಣರಾಯರು ಬರೆದ ‘ಪರಿವರ್ತನ’ ಮತ್ತು ‘ಭಾಗ್ಯಶ್ರೀ’ ಎಂಬ ನಾಟಕಗಳಲ್ಲಿ ಹೀರೊ ಆಗಿ ಅಭಿನಯಿಸಿದ ಭೀಮಸೇನರು ತಮ್ಮ ಗುರುಗಳಂತೆ ರಂಗನಟರಾಗಿ ಖ್ಯಾತರಾಗಬಹುದಿತ್ತು. ಆದರೆ ಸವಾಯಿ ಗಂಧರ್ವರಂತೆ ನಟನಿಗೆ ಬೇಕಾದ ಮುಖ, ಅದರ ಚಹರೆಗಳು ಇವರಿಗಿರಲಿಲ್ಲ. ಮೇಲಿನ ಎರಡೂ ನಾಟಕಗಳ ಹೀರೊ ಆಗಿ ನಟಿಸಿದಾಗ ಇವರೊಂದಿಗೆ ನಟಿಸಿದ ವತ್ಸಲಾ ಮುಧೋಳಕರ ಮಾತ್ರ ಇವರ ಜೀವನ ನಾಟಕ ಹಿರೊಯಿನ್‌ ಆಗಿಯೆ ಉಳಿದುಬಿಟ್ಟರು. ಹೀಗಾಗಿ ಭೀಮಸೇನರು ದ್ವಭಾರ್ಯಾಕರಾದರು. ಮುಂದೆ ಪುಣೆಯಲ್ಲಿ ನೆಲೆನಿಂತು ಏಕಕಾಲಕ್ಕೆ ಬೇರೆ ಬೇರೆಯಾಗಿ ಎರಡು ಮನೆಮಾಡಿ ಎರಡು ಪ್ರತ್ಯೇಕ ಸಂಸಾರಗಳನ್ನು ನಡೆಸತೊಡಗಿದರು. ಇಬ್ಬರು ಪತ್ನಿಯರಿಂದಲೂ ಮಕ್ಕಳನ್ನು ಪಡೆದರು.

ಕೆಲ ಕಾಲದ ನಂತರ ಪ್ರಥಮ ಪತ್ನಿ ಸೌ. ನಂದಾಬಾಯಿ ಅವರು ತಮ್ಮ ಹಿಂದೆ ಎರಡು ಗಂಡು, ಎರಡು ಹೆಣ್ಣು ಹೀಗೆ ನಾಲ್ಕು ಬೆಳೆದು ದೊಡ್ಡವರಾದ ಮಕ್ಕಳನ್ನು ಬಿಟ್ಟು ವೈಕುಂಠವಾಸಿಯಾದರು. ಹೆಣ್ಣು ಮಕ್ಕಳು ವಿವಾಹಿತರಾಗಿ ತಂತಮ್ಮ ಪತಿಗೃಹದಲ್ಲಿ ನೆಮ್ಮದಿಯಿಂದಿದ್ದರೆ, ಗಂಡುಮಕ್ಕಳು ಉದ್ಯೋಗಸ್ಥರಾಗಿದ್ದಾರೆ. ಸೌ. ವತ್ಸಲಾತಾಯಿ ಅವರಿಗೆ ಎರಡು ಗಂಡು ಒಬ್ಬ ಹೆಣ್ಣುಮಗಳು. ಮಗಳು ವಿವಾಹಿತಳಾಗಿ ಸುಖವಾದ ಸಂಸಾರ ಸಾಗಿಸಿಕೊಂಡು ಬಂದಿದ್ದಾರೆ. ಮಗ ಸಂಗೀತಗಾರನಾಗಿ ತಂದೆಗೆ ವೋಕಲ್‌ ಅಕಂಪನಿಮೆಂಟ್‌ ಕೊಡುತ್ತಾನೆ. ಸ್ವತಃ ಸಂಗೀತಗಾರನೂ ಆಗಿದ್ದಾನೆ. ಹೀಗೆ ಈಗ ೮೧ರ ಭೀಮಣ್ಣನವರ ಪರಿಗವಾರವೆಲ್ಲವೂ ಪುಣೆಯಲ್ಲಿಯೆ ನೆಲೆ ನಿಂತಿದೆ. ಭೀಮಣ್ಣನವರು ಸೌ. ವತ್ಸಲಾತಾಯಿ ಅವರೊಂದಿಗೆ ತಮ್ಮ ಭವ್ಯವಾದ ‘ಕಲಾಶ್ರೀ’, ವೈಭವದ ಮನೆಯಲ್ಲಿ ಸಪ್ತಸ್ವರಗಳ ಮಧುರ ಸಂಸಾರಿಗರಾಗಿ ಸೌಖ್ಯದ ವೃದ್ಧಾಪ್ಯವನ್ನು ಕಳೆಯುತ್ತಿದ್ದಾರೆ.

ಫೆಬ್ರವರಿ, ೨೦೦೨, ರಥಸಪ್ತಮಿಯಂದು ಭೀಮಸೇನ ಜೋಶಿ ಅವರಿಗೆ ೮೦ ಪೂರ್ತಿಯಾದ ಸಂದರ್ಭದಲ್ಲಿ ಸಹಸ್ರ ಚಂದ್ರ ದರ್ಶಋನ ಸಮಾರಂಭ. ಅವರನ್ನು ಸನ್ಮಾನಿಸಲು ಪುಣೆಯ ‘ಕಲಾಶ್ರೀ’ಗೆ ಮುತ್ತಿಗೆಯನ್ನು ಹಾಕಿದರು ಅವರ ಅಭಿಮಾನಿಗಳು, ಶಿಷ್ಯರು, ಫ್ಯಾನ್‌ಗಳು!.

ಮಹಾರಾಷ್ಟ್ರ ಭೂಷಣ ಎಂಬ ಪ್ರಶಸ್ತಿಯೊಂದಿಗೆ ಐದು ಲಕ್ಷದ ಹಮ್ಮಿಣಿ ಸಮರ್ಪಣೆ. ಅಕ್ಕ ಗಂಗೂ ಬಾಯಿಯಿಂದ (ಸೆಂಚುರಿ ಬ್ಯಾಟ್ಸ್ಮನ್‌ ಎಂದು ಧಾರವಾಡದ ಸಮಾರಂಭದಲ್ಲಿ ಭೀಮಸೇನರು ಅಕ್ಕನಿಗೆ ನೀಡಿದ ವಿನೋದದ ಬಿರುದು) ಶುಭಾಶೀರ್ವಾದ ಪಡೆದರು. ಈ ತಮ್ಮನಿಗೆ ಅಕ್ಕನಿಗಿಂತ ಮೊದಲೆ ಪದ್ಮವಿಭೂಷಣ ಪ್ರಶಸ್ತಿ! ಅದೂ ಅಕ್ಕನಿಗೊಂದು ಅಭಿಮಾನವೆ?

ಮಹಾರಾಷ್ಟ್ರದ ಕಲಾಭಿಮಾನಿಗಳ ಸಂಘ-ಭೀಮಸೇನರ ರಸಿಕ ಬಳಗ-ಸ್ವರಾಧಿರಾಜ ಎಂಬ ಚಿತ್ರಮಯ, ವರ್ಣಮಯ, ಸುಂದರ ಅಭಿಮಾನದ ಲೇಖನಮಯ ಪರಿಪೂರ್ಣ ಗೌರವ ಗ್ರಂಥವೊಂದನ್ನು ಸಮರ್ಪಿಸಿತು. ಗುಲ್ಬರ್ಗಾ, ಮೈಸೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿ ತಮ್ಮನ್ನ ತಾವು ಗೌರವಿಸಿಕೊಂಡವು.

ತಮ್ಮ ಗುರುಗಳ ಪುಣ್ಯ ಸ್ಮರಣಾರ್ಥವಾಗಿ ಪ್ರತಿ ವರುಷ ಪಂಡಿತ ಭೀಮಸೇನ ಜೋಶಿ ಅವರು ಜರುಗಿಸುವ ಭವ್ಯ-ಬೃಹತ್‌ ಸಂಗೀತ ಸಮಾರಂಭಕ್ಕೆ ತಿಂಗಳುಗಟ್ಟಲೆ ಮೊದಲೆ ತಿಕೀಟುಗಳು ಮುಂಗಡ ಮಾರಾಟವಾಗಿ ಬಿಟ್ಟಿರುತ್ತವೆ. ಮೂರು ದಿನಗಳವರೆಗೆ ನಡೆಯುವ ಈ ಸಹಸ್ರಾಋಉ ಜನ ಸಮೂಹದ ಸಮಾರಾಧನೆಗೆ ಇಲ್ಲಿಯ ಸಂಗೀತ ವೇದಿಕೆಯಿಂದ ತಮ್ಮ ಸಂಗೀತ ಸೇವೆಯನ್ನರ್ಪಿಸಲು ಭಾರತದ ವಿವಿಧ ಭಾಗಗಳಿಂದ ವಿವಿಧ ಘರಾಣೆಗಳ ಗಾಯಕರು ನಾ ಮುಂದೆ ತಾ ಮುಂದೆ ಎಂದು ಭೀಮಸೇನ ಜೋಶಿ ಅವರಲ್ಲಿ ಅರಿಕೆ ಸಲ್ಲಿಸುತ್ತಾರೆ.

ಇನ್ನೂ ಈ ಸ್ವರಾಧಿರಾಜನ ಶಾಸ್ತ್ರೀಯ ಸಂಗೀತದ, ಮರಾಠಿ ಅಭಂಗಗಳ ಕ್ಯಾಸೆಟ್‌ಗಳು ಹೊರ ಬರುತ್ತಲೇ ಇವೆ. ಸಾಲದ್ದಕ್ಕೆ ಹಳೆಯ ಧ್ವನಿ ಮುದ್ರಿತ ಕ್ಯಾಸೇಟ್‌ಗಳು ‘ರಿಮೇಕ್‌’ ಆಗಿ ಮತ್ತೆ ಮಾರುಕಟ್ಟೆಗೆ ಬಂದೇ ಬರುತ್ತವೆ. ಭೀಮಸೇನ ಜೋಶಿ ಅವರ ಜನಪ್ರಿಯ ‘ಸಂತವಾಣಿ’ ಮರಾಠಿ ಕಾರ್ಯಕ್ರಮಗಳ ಕ್ಯಾಸೆಟ್‌ಗಳೂ, ಹಿಂದೊಮ್ಮೆ ಧಾರವಾಡದಲ್ಲಿ ಮರಾಠಿ ಸಂತವಾಣಿ ಮಾದರಿಯಲ್ಲಿ ‘ಕನ್ನಡ ದಾಸವಾಣಿ’ ಕಾರ್ಯಕ್ರಮವೂ ಜರುಗಿತು. ಕಲಾಭವನ ಕಿಕ್ಕಿರಿದು ತುಂಬಿ ತುಂಬಿ ಹೊರಚೆಲ್ಲವಂತಾಗಿತ್ತು. ಅಂದಿನ ಈ ಕಿರಾನಾ ಕಿರೀಟರಾಜನ ಸಂಗೀತವೂ ಸೂಸಿ ಹೊರ ಚೆಲ್ಲಿತ್ತು.

ಮಹಾರಾಷ್ಟ್ರ ಭೂಷಣ ಎಂಬ ಬಿರುದು ಬಂದರೂ ಈಗ ಪುಣೆಯೇವಾಸಸ್ಥಳವಾಗಿದ್ದರೂ ಕರ್ನಾಟಕದ ಕುಮಾರವ್ಯಾಸನ, ವೀರನಾರಾಯಣನ ಗದುಗಿನ ಶಿಶು ಇವರು ಎಂಬ ತಾಯಿ ಮಮತೆ ಎಂದಾದರೂ ಅಳಿದೀತೆ? ಕಡಿಮೆ ಆದೀತೆ?