ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರು ಹಾಡಿದ ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಎಂಬ ಅಕ್ಕನ ವಚನದ ಗಾನಮುದ್ರಿಕೆಯನ್ನು ಕೇಳಿ ರಾಷ್ಟ್ರಕವಿ ಕುವೆಂಪು ಅವರು-“ಆ ವಚನದ ಸೊಗಸಾದ ಗಾಯನದ ಮೂಲಕ ಮಹಾದೇವಿಯಕ್ಕನ ಮಧುರವಾದ ಆಧ್ಯಾತ್ಮಿಕ ಮನೋಲೋಕವನ್ನು ಪ್ರವೇಶಿಸಿದ ಅನುಭವ ನನಗಾಯಿತು” ಎಂದು ಉದ್ಗಾರ ತೆಗೆದರಂತೆ! ಖಾನ ಸಾಹೇಬ ಅಲ್ಲಾದಿಯಾ ಖಾನರ ಜಯಪೂರ-ಅತ್ರೋಲಿ ಘರಾಣೆಯ ಗಾನ ಸಂಪತ್ತನ್ನು ಗುರುಮುಖೇನ ಆತ್ಮಸಾತ್ತಾಗಿ ಮಾಡಿಕೊಂಡ ಸಮರ್ಥರಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರು ಅಗ್ರಮಾನ್ಯರಾಗಿದ್ದಾರೆ. ದಿಲ್ಲಿಯಲ್ಲಿ ಧಾರವಾಡ ಎಂದರೆ ಮಲ್ಲಿಕಾರ್ಜುನರ ಊರು ಎಂದು ಗುರುತಿಸಲ್ಪಡುತ್ತಿತ್ತಂತೆ. ಅಂತಹ ‘ಸಂಗೀತ ರತ್ನ’ವನ್ನು ದೈವ ದಿಲ್ಲ-ಧಾರವಾಡಗಳಿಗೆ ಕಾಣಿಕೆಯಾಗಿ ಕೊಟ್ಟಿದೆ. ಭುವನದ ಭಾಗ್ಯ!

ಹತ್ತು ವರುಷದ ಬಾಲನಟ ‘ಭಕ್ತಪ್ರಹ್ಲಾದನ’ನಾಗಿ ರಂಗಭೂಮಿಯ ಮೇಲೆ ಕಂಗೊಳಿಸಿ ಸಂಗೀತದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಮಲ್ಲಿಕಾರ್ಜುನರನ್ನು ಕಂಡ ಎಂಟು ವರುಷದ ನಾನು ಅವರಿಗೆ ಆಗಿನಿಂದ ಮಾರು ಹೋಗಿದ್ದೇನೆ. ಕೆಲವು ಕಾಲದ ಹಿಂದೆ ಡಾ. ಮಲ್ಲಿಕಾರ್ಜುನ ಮನ್ಸೂರ್‌ ಉಲ್ಭಣಿತ ಮೂತ್ರಾಶಯ ತೊಂದರೆಯಿಂದ ಬಳಲುತ್ತಿದ್ದಾಗ ಅವರನ್ನು ಜರೂರಿಯಾಗಿ ಬೆಂಗಳೂರಿನ ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಗುರಿಪಡಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲೂ ಮನ್ಸೂರರು ಸಂಗೀತದ ಸ್ವರಗಳನ್ನೆ ಗುಣಗುಣಿಸುತ್ತಿದ್ದರಂತೆ! ಡಯಾಲಿಸಿಸ್‌ ಪ್ರಯೋಗಿಸುತ್ತ ಶುದ್ಧರಕ್ತವು ಮತ್ತೆ ಈ ಸ್ವರಯೋಗಿಯ ಮೈತುಂಬ ಹರಿದಾಡುವಂತೆ ಶುದ್ಧರಕ್ತವು ಮತ್ತೆ ಈ ಸ್ವರಯೋಗಿಯ ಮೈತುಂಬ ಹರಿದಾಡುವಂತೆ ಮಾಡಿದ ತಜ್ಞವೈದ್ಯ ಡಾ. ತಳವಲಕರರು “really music is in his blood” ಎಂದು ಉದ್ಗಾರ ತೆಗೆದರಂತೆ!

ವರಕವಿ ಅಂಬಿಕಾತನಯ ದತ್ತರು ಹೀಗೆ ಉದ್ಗರಿಸಿದ್ದಾರೆ:

ಗಾಂಧರ್ವ ಮಾಯೆಯೇ
ಕುಣಿದಿತಪ್ಸರೆಯಂತೆ
ಮಿಂಚು ಬೇಲಿಗೆ ಬೆಳೆದ
ಸ್ವಾತಿಯಾ ಹನಿಯಂತೆ
ಕನ್ನಡದ ರಾಗವೇ
ಕಾಮೋದೆಗೆದ್ದಂತೆ
ಮಲ್ಲಿಕಾರ್ಜುನ ಶಿಖರ
ಮಲ್ಲಿಗೆಯೊಳಗಿದ್ದಂತೆ
ಶಿವನ ತಾಂಡವ ಮುಗಿಯೆ
ಶಿವಲಾಸ್ಯಕೆದ್ದಂತೆ
ಬಿಸಿಲ್‌ ಹಣ್ಣನುಂಡು ಚಂದ್ರನ
ಜೇನು ಮೆದ್ದಂತೆ
ಮನಸೂರೆ ಹೋಯಿತೋ
ಮನಸೂರೆ ಹೋಯಿತೋ
ಹೂ ಇದ್ದಕಿದ್ದಂತೆ.

 

ತಮ್ಮ ಮೆಹಫಿಲ್‌ಗಳನ್ನು ಕುರಿತು ಸ್ವತಃ ಮನ್ಸೂರರೇ ಹೇಳುತ್ತಿದ್ದರು ‘ಐವತ್ತು ವರ್ಷ ನಾನು ಮೆಹಫಿಲುಗಳಲ್ಲಿ ಹಾಡುತ್ತ ಬಂದಿದ್ದೇನೆ. ಸಂಗೀತವು ಮುಗಿಯುವ ವಿಷಯವಲ್ಲದ ಮೂಲಕ ಅದರ ಲೆಕ್ಕವನ್ನೆ ನಾನು ಇಟ್ಟಿಲ್ಲ. ಪ್ರತಿಯೊಂದು ಸಲ ಹಾಡುವಾಗ ಯಾವುದೋ ಒಂಧು ದೃಷ್ಟಿಕೋನವನ್ನಿಟ್ಟು ನಾನು ಹಾಡುತ್ತೇನೆ…. ಇನ್ನೊಮ್ಮೆ ಅದು ಬೇರೆ ದೃಷ್ಟಿಯಿಂದಲೆ ಸೃಷ್ಟಿಯಾಗುತ್ತಿರುತ್ತದೆ. ಅಂದಮೇಲೆ ಯಾವ ಸಭೆಯು ಹೆಚ್ಚು ಯಶಸ್ವಿ ಆಯಿತು ಎಂಬುದು ಶ್ರೋತೃಗಳೇ ಹೇಳಬೇಕಾದ ವಿಷಯ. ಯಾವ ಸಭೆಯಲ್ಲಿ ಎಷ್ಟು ಜನ ನೆರೆದಿದ್ದರು, ಅವರ ಚಪ್ಪಾಳೆಗಳ ಸದ್ದು ಎಷ್ಟಾಯಿತು ಎಂಬುದರ ಕಡೆಗೂ ನನ್ನ ಲಕ್ಷ್ಯವಿರುವುದಿಲ್ಲ. ತಂಬೂರಿಯ ಧ್ವನಿಯು ನಮ್ಮೀ ನಿತ್ಯವ್ಯವಹಾರದ ಲೋಕದ ಮೇಲೆ ತೆರೆಯನ್ನು ಹಾಕುತ್ತಲೆ ನಾನು ನೋಡುವುದು ಸ್ವರ ಸೃಷ್ಟಿಯನ್ನಲ್ಲದೆ ಇನ್ನಾವೂದೂ ಅಲ್ಲ…….. ಇದು ನನ್ನ ದೊಡ್ಡತನವೆಂದು ಹೇಳುವುದಿಲ್ಲ. ಅದು ನನ್ನ ಜೀವಮಾನಕ್ಕೆ ಅಂಟಿಕೊಂಡಿರುವ ಸ್ವಭಾವ …. ನನ್ನ ಮನಸ್ಸಿನಲ್ಲೇ ತಾಸುಗಟ್ಟಲೆ ಸಂಗೀತ ಮೆಹಫಿಲ್‌ ನಡೆಯುತ್ತಿರುತ್ತದೆ….” (೧೯೮೦) ಹೀಗೆ ರಸವೇ ಮಲ್ಲಿಕಾರ್ಜುನ ಮನ್ಸೂರ್ ಅವರು ಆರಾಧಿಸುತ್ತ ಬಂದಿರುವ ಪರಮ ಮೌಲ್ಯ. ಅವರ ಜೀವನವೆಂದರೇನೆ ಸಂಗೀತ. ಅಂತೆಯೆ ಅದು ಒಂದು ‘ರಸಯಾತ್ರೆ’. ೧೯೮೧ರಲ್ಲಿ ಮಧ್ಯಪ್ರದೇಶ ಸರಕಾರವು ಅವರಿಗೆ ಸಲ್ಲಿಸಿದ ಒಂದು ಲಕ್ಷ ಮೌಲ್ಯದ ‘ಕಾಳಿದಾಸ’ ಮಹಾಪ್ರಶಸ್ತಿ ಈ ಮಾತನ್ನು ಖುಜುವಾತು ಪಡಿಸುವಂತಿದೆ. ಈ ಪ್ರತಿಷ್ಠೆಯ ಪ್ರಶಸ್ತಿ ಪಡೆದವರಲ್ಲಿ ಮನ್ಸೂರರೇ ಪ್ರಥಮರು.

೧೯೪೧-೪೨! ಆಗ ನಾನು ಹೈಸ್ಕೂಲ್‌ ಶಿಕ್ಷಕನಾಗಿದ್ದೆ. ಮಲ್ಲಿಕಾರ್ಜುನ ಮನ್ಸೂರ್ ಅವರ ಅಣ್ಣ ಬಸವರಾಜರು ರಂಗನಟರಾಗಿದ್ದು ತಮ್ಮದೇ ಒಂದು ಕಂಪನಿ ನಡೆಸುತ್ತಿದ್ದರು. ನನಗೆ ಒಂದು ನಾಟಕ ಬರೆಯಲು ಹೇಳಿದ್ದರು. ಈ ಸಂದರ್ಭದಲ್ಲಿ ನನ್ನ ಹೊಸ ನಾಟಕದಲ್ಲಿ ಬರಬೇಕಾದ ರಂಗ ಗೀತೆಗಳ ಚಾಲಿಗಳನ್ನು ಮಲ್ಲಿಕಾರ್ಕುನ ಮನ್ಸೂರರು ಹಾಡಿ ತೋರಿಸುತ್ತಿದ್ದರು. ಆಗ ಅವರು ಮಾಳಮಡ್ಡಿಯಲ್ಲಿ ನನ್ನ ಮನೆಯ ಹತ್ತಿರವೇ ಇರುತ್ತಿದ್ದರು. ಆ ಕಾಲಕ್ಕೆ ಲವರ ಗಳಿಕೆಯೆಂದರೆ ಹೊರಗಿನ ಸಂಗೀತ ಕಾರ್ಯಕ್ರಮಗಳಿಂದ ಬಂದ ಆದಾಯ ಮಾತ್ರ. ಇತ್ತ ಗುರುಗಳ ಬಳಿ ಅವರ ಸಂಗೀತ ಸಾಧನೆಯೂ ನಡೆದಿತ್ತು.

೧೯೪೬! ನಾನು ಮುಂಬಯಿಯ ಆಕಾಶವಾಣಿಯಲ್ಲಿದ್ದಾಗ ಅದೇ ವರ್ಷ ನನ್ನ ಮಿತ್ರ ಶಾಂತೇಶ ಪಾಟೀಲ-ಶ್ರೀಸೌಂಡ್‌ ಸ್ಟುಡಿಯೋದ ಖ್ಯಾತ ಸೌಂಡ್‌ ರೆಕಾರ್ಡಿಂಗ್‌ ಎಂಜಿನಿಯರ್!-‘ಪಂಪಾ ಪಿಕ್ಚರ್ಸ್ ಲಿಮಿಟೆಡ್‌’ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಅದರ ಪ್ರಥಮ ನಿರ್ಮಿತ ‘ಚಂದ್ರಹಾಸ’. ಅದಕ್ಕೆ ಕಥೆ-ಸಂಭಾಷಣೆ ನಿರೂಪಣೆ ಬರೆಯಲು ನನ್ನನ್ನೆ ಕೇಳಿಕೊಂಡರು. ಅದರ ಸಂಗೀತ ನಿರ್ದೇಶನಕ್ಕಾಗಿ ನಮ್ಮ ಮನ್ಸೂರರೆ ಇರಲಿ ಎಂದು ನಾನು ಮಿತ್ರ ಶಾಂತೇಶ ಪಾಟೇಲರಿಗೆ ಸೂಚಿಸಿದ್ದೆ. ಅದರಂತೆ ಪಾಟೀಲರು ಮಲ್ಲಿಕಾರ್ಜುನ ಮನ್ಸೂರರನ್ನೇ ಸಂಗೀತ ನಿರ್ದೇಶಕರೆಂದು ನೇಮಿಸಿಕೊಂಡಿದ್ದರು. ಅವರ ಅಣ್ಣ ಬಸವರಾಜ ಮನ್ಸೂರ ಅವರು ಹಿನ್ನೆಲೆ ಗಾಯಕರಾಗಿ ಬಂದಿದ್ದರು. ಶ್ರೀ ಮಲ್ಲಿಕಾರ್ಜುನ ಮನ್ಸೂರರು ‘ಚಂದ್ರಹಾಸ’ಕ್ಕಾಗಿ ಕೂಡಿಸಿದ ಗೀತ-ಸಂಗೀತ ಜೋಡಣೆ ಆಕರ್ಷಕವಾಗಿತ್ತು. ಹೀಗೆ ಐವತ್ತು ವರ್ಷಗಳ ದೀರ್ಘಾವಧಿಯಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ ಅವರೊಂದಿಗೆ ನನ್ನ ಸಂಬಂಧ ಸ್ನೇಹ-ಸೋದರ್ಯಗಳ ಸರಸವನ್ನುಂಡು ಬೆಳೆದುಕೊಂಡು ಬಂದಿದೆ. ಆದರೆ ಇನ್ನೂ ಒಂದು ವಿಶೇಷವೆಂದರೆ ನಮ್ಮ ಸ್ನೇಹ-ಪರಿಚಯಗಳ ಪೂರ್ವದ ಸಂಬಂಧ! ಅಂದರೆ ವಾಮನರಾವ್‌ ಮಾಸ್ತರ ಅವರ ನಾಟಕ ರಂಗಭೂಮಿಯ ಮೇಲೆ ಬಾಲಕ ಮಲ್ಲೇಶಪ್ಪ ಭಕ್ತಪ್ರಹ್ಲಾದನ ಪಾತ್ರವನ್ನೂ, ಹದಿನಾರರ ಮಲ್ಲೇಶಪ್ಪ ಮನ್ಸೂರರು ವೀರ ಅಭಿಮನ್ಯು ನಾಟಕದಲ್ಲಿ ಶಕುನಿಯ ಪಾತ್ರವನ್ನೂ ವಹಿಸಿ ಹಾಡುಗಾರಿಕೆಯ ವೈಖರಿಯನ್ನು ಪ್ರದರ್ಶಿಸಿದುದನ್ನೂ ನಾನು ಪ್ರೇಕ್ಷಕನಾಗಿ ಪ್ರತ್ಯಕ್ಷ ಕಂಡು ಪರಮಾನಂದವನ್ನೂ ಅನುಭವಿಸಿದ್ದೇನೆ. ಈ ಎಲ್ಲ ಸವಿ ಸ್ಮೃತಿಗಳೆಂದರೆ ನನ್ನ ಪಾಲಿನ ಚಿನ್ನದ ಪುಟಗಳು! ಈ ಅಪೂರ್ವ ಸಂಗೀತ ಶಿಶು ಜನ್ಮಿಸಿದ್ದು ೧೯೧೦ ಡಿಸೆಂಬರ್ ೩೧.

ಮಲ್ಲಿಕಾರ್ಜುನನು ಹೇಗೊ ನಾಲ್ಕು ಇಯತ್ತೆಗಳನ್ನು ಪೂರ್ತಿಮಾಡಿ ಧಾರವಾಡದ ಅಜ್ಜಿಯ ಮನೆಯಲ್ಲಿ ತೆರವಾದ ತನ್ನ ಅಣ್ಣನ ಸ್ಥಾನದಲ್ಲಿ ಪ್ರವೇಶಪಡೆದ. ಮದಿಹಾಳದವರೆಗೂ ಬೇಡವಾದ ಶಾಲೆ ಬಹಳ ದೂರ! ಅಣ್ಣನು ನಟಿಸುತ್ತಿದ್ದ ಹುಬ್ಬಳ್ಳಿಯ ‘ವಿಶ್ವಗುಣಾದರ್ಶ ನಾಟಕ ಮಂಡಳಿ’ ಹೆಚ್ಚು ಸಮೀಪವೆನಿಸಿತು. ಮುಂದೆ ಕೆಲವೇ ದಿನಗಳಲ್ಲಿ ಕಂಪನಿ ಧಾರವಾಡಕ್ಕೆ ಕ್ಯಾಂಪ್‌ ಹಾಕಿತ್ತು. ಅಣ್ಣ ಬಸವರಾಜ ಮನ್ಸೂರ ಅವರ ಜೊತೆ ಮಲ್ಲಿಕಾರ್ಜುನರೂ ಪ್ರಾಥಮಿಕ ನಾಲ್ಕನೆಯ ಇಯತ್ತೆಗೆ ಶರಣು ಹೊಡೆದು ವಾಮನರಾವ ಮಾಸ್ತರರ ಕಂಪನಿಯನ್ನೆ ಸೇರಿದರು. ವಾಮನರಾವ್‌ ಮಾಸ್ತರರ ವಿಶ್ವಗುಣಾದರ್ಶ ನಾಟಕ ಮಂಡಳಿಯ ಈ ನಾಟಕ ಪ್ರಹ್ಲಾದನ ಪಾತ್ರ ವಹಿಸಿದ್ದ ಕುಮಾರ ಮಲ್ಲೇಶಿಯ ಸರಸ ಸಂಗೀತ, ಸೊಗಸಾದ ಅಭಿನಯಗಳಿಂದಾಗಿ ಪ್ರೇಕ್ಷಕರನ್ನು ಬಹು ಸಂಖ್ಯೆಯಲ್ಲಿ ಆಕರ್ಷಿಸುತ್ತಿತ್ತು. ಮುಂದೆ ಭರ್ಜರಿಯಾಗಿ ಆರಂಭವಾದ ವಾಣಿ ವಿಲಾಸ ಕಂಪನಿಯಲ್ಲಿ ವರಪ್ರದಾನ, ಕಿತ್ತೂರು ರುದ್ರಮ್ಮ, ಮೊದಲಾದ ನಾಟಕಗಳಲ್ಲಿ ಇವರ ಸಂಗೀತದಿಂಧಾಗಿ ರಂಗಭೂಮಿ ರಂಗೇರುತ್ತಿತ್ತು. ಈಗ ರಂಗಭೂಮಿಯೇ ಮಲ್ಲಿಕಾರ್ಜುನನ ಶಿಕ್ಷಣರಂಗವಾಯಿತು. ಸಂಗೀತ ಶಾರದೆ ಈ ಎಳೆಯ ಪ್ರತಿಭೆಯನ್ನು ಹುಡುಕಿಕೊಂಡು ಬಂದಳು. ನೀಲಕಂಠ ಬುವಾ ಅವರು ಮೀರಜದಿಂದ ಆಕಸ್ಮಾತ್ತಾಗಿ ಬಾಗಲಕೋಟೆಗೆ ಬಂದಾಗ ಮಲ್ಲಿಕಾರ್ಜುನನ ಸಂಗೀತ ಕೇಳಿ ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು.

ಪ್ರತಿದಿನ ಬೆಳಿಗ್ಗೆ ಎರಡುಮೂರು ತಾಸು ಸ್ವರ ಮತ್ತು ಅಲಂಕಾರಗಳ ಉಪಾಸನೆಯೆ ನಡೆಯುತ್ತಿತ್ತು. ಇದರ ನಂತರ ಒಂದು ಛೋಟಾಖ್ಯಾಲ್‌ ಕಲಿಸುತ್ತ ಗುರುಗಳು ತಾವೇ ಡಗ್ಗಾ ಬಾರಿಸುವರು. ಅದರಿಂದ ತಾಲಜ್ಞಾನವೂ ಆಗುತ್ತಿತ್ತು. ಹೀಗೆ ಅನೇಕ ರಾಗಗಳ ಛೋಟಾಖ್ಯಾಲ್‌ ಆಮೇಲೆ ಬಡಾಖ್ಯಾಲಗಳ ಅಭ್ಯಾಸ. ಒಂದು ರಾಗದ ವಿಸ್ತಾರ, ಬೆಳವಣಿಗೆ ಹೇಗೆ ಮಾಡಬೇಕೆಂಬುದರ ಪೂರ್ಣಕಲ್ಪನೆ ಉಂಟಾಯಿತು ಶಿಷ್ಯ ಮಲ್ಲಿಕಾರ್ಜುನನಿಗೆ. ಹೀಗೆ ಆರು ವರುಷ ಕಾಲ ಸಂಗೀತ ಪಾಠ ಒಂದು ತಪಸ್ಸಿನಂತೆ ನಡೆಯಿತು. ಈ ಅವಧಿಯಲ್ಲಿ ರಾಗ ಬಿಹಾಗ, ಮಾಲಕಂಸ, ಭೂಪ, ಕಾಮೋದ,ತೋಡಿ, ಹಮೀರ,ದರಬಾರಿ, ಯಮನ, ಕೇದಾರ,ಪೂರಿಯಾ, ಮಾರವ, ಅಲೈಯಾ ಬಿಲಾವಲ, ಲಲಿತ ಹೀಗೆ ಸುಮಾರು ಐವತ್ತು ರಾಗಗಳ ಹಾಡುಗಾರಿಕೆಯ ರಹಸ್ಯವನ್ನೂ ಕೈವಶಮಾಡಿಕೊಂಡ ಶಿಷ್ಯ ಮಲ್ಲಿಕಾರ್ಜುನ. ಬೆಳಗಿನ ಸಂಗೀತಸಾಧನೆಯ ನಂತರ ತಾಯಿಯ ಸಮಾನವಿದ್ದ ಗುರುಪತ್ನಿಗೆ ಗೃಹಕೃತ್ಯಗಳಲ್ಲಿ ನೆರವಾಗುತ್ತಿದ್ದ.

೧೯೩೩! ಕಂಗನವಾ ಮೋರಾ ಹಾತ್‌ ರಾಗ ಅಠಾಣಾ! ಅದರ ಹಿಮ್ಮಗ್ಗುಲು ಗೌಡಸಾರಂಗ ರಾಗದಲ್ಲಿ ಸುರಂಗ ಚುನರಿಯಾ ಎಂಬ ಚೀಜುಳ್ಳ ಮಲ್ಲಿಕಾರ್ಜುನ ಮನ್ಸೂರ್ ಅವರ ಪ್ರಥಮ ಎಚ್‌.ಎಂ.ವಿ. ಧ್ವನಿ ಮುದ್ರಿಕೆ ಮಾರುಕಟ್ಟೆಗೆ ಬಿಡುಗಡೆಯಾದಾಗ ಮಲ್ಲಿಕಾರ್ಜುನ ಮನ್ಸೂರ್ ಹೆಸರು ಕರ್ನಾಟಕವನ್ನು ದಾಟಿ ಮಹಾರಾಷ್ಟ್ರವನ್ನು ಮುಟ್ಟಿತು. ನಿಜವಾಗಿಯೂ ಧಾರವಾಡ ಮತ್ತು ಧಾರವಾಡ ಜಿಲ್ಲೆ ಹಿಂದುಸ್ತಾನೀ ಸಂಗೀತದ ಕೇಂದ್ರಸ್ಥಾನವಾದುದು ಇಪ್ಪತ್ತನೆಯ ಶತಮಾನದ ಪ್ರಾರಂಭ ದಶಕದಿಂದ ಭಾಸ್ಕರಬುವಾ ಒಖಲೆ ಅವರಿಂದಾಗಿ.

ಮಲ್ಲಿಕಾರ್ಜುನ ಮನ್ಸೂರ್ ಅವರ ತಾಜಾಗಾನ ಮುದ್ರಿಕೆಗಳು ಒಂದಾದ ಮೇಲೆ ಒಂದು ಹೊರಬೀಳುತ್ತ ಒಂದು ಹೊಸ ಅಲೆಯನ್ನೆ ನಿರ್ಮಿಸತೊಡಗಿದವು. ಇವುಗಳಲ್ಲಿ ಶಂಕರಾ, ಮಾಲಕಂಸ, ಲಲಿತಾ, ಗೇರಿತೋಡಿ ಮೊದಲಾದ ರಾಗದಾರೀ ಧ್ವನಿ ಮುದ್ರಿಕೆಗಳು ಮುಖ್ಯ. ಇವು ಒಂದು ಪ್ರಕಾರವಾದರೆ ದೇಹಾತಾಯ ಶರಣಾಗತಾ, ತೇರನೆಳೆಯುತಾರ ತಂಗಿ ಮೊದಲಾದ ರಂಗಗೀತೆ, ಭಾವಗೀತೆ, ಠುಮರಿ,ಕ ತತ್ವಪದಗಳಂತಹ ಸಂಕೀರ್ಣ ಸಂಗೀತ ಇನ್ನೊಂದು ಪ್ರಕಾರ.

ಮುಂಬಯಿಯಲ್ಲಿ, ಮುಂಬಯಿ ಹೊರಗೆ ಸಂಗೀತ ಕಚೇರಿ ಮಾಡುವ ಅವಕಾಶಗಳು, ಗ್ರಾಮೋಫೋನ್‌ ಕಂಪನಿಯ ರೂಪಜಿ ಅವರು ಒದಗಿಸುತ್ತಿದ್ದ ಅವಕಾಶ, ಆಕಾಶವಾಣಿಯ ನಿಯತಕಾಲಿಕ ಕಾರ್ಯಕ್ರಮಗಳು ಇವುಗಳಿಂದಾಗಿ ಮನ್ಸೂರ್ ಅವರು ಕೆಲಕಾಲ ಮುಂಬಯಿಯಲ್ಲೇ ವಾಸ್ತವ್ಯ ಹೂಡಿದರು. ನಿಜವಾದ ತಪಸ್ಸು ಎಂದರೆ ಇದು. ತಾಪ-ತಾಪತ್ರಯಗಳ ಸಹಿಷ್ಣುತೆಯೂ ಒಂದು ತಪಸ್ಸಿನ ಭಾಗವೇ. ಕಾರ್ಯಕ್ರಮ ಮಾಡಿ ಬಂದ ಹಣದಲ್ಲಿ ಖಾನವಳಿಗೆ ಕೊಡಬೇಕು. ಊರಿಗೆ ಸಂಸಾರದ ಖರ್ಚಿಗಾಗಿ ಕಳಿಸಬೇಕು. ಆದಾಯ ಅಲ್ಪವಾದರೂ ಸಂಗೀತ ಸಾಧನೆಯ ಗುಣಮಟ್ಟ ಮಾತ್ರ ಅಲ್ಪವಾದುದಾಗಿರಲಿಲ್ಲ.

೧೯೩೫! ಮಲ್ಲಿಕಾರ್ಜುನ ಮನ್ಸೂರರ ಜೀವನದಲ್ಲಿ, ಅವರ ಕಲಾನ್ವೇಷಣೆಯ ಪಥದಲ್ಲಿ ಒಂದು ಮಹತ್ವದ ಮೈಲುಗಲ್ಲು. ದೇವಪ್ರೇಷಿತವಾಗಿ ಒದಗಿ ಬಂತು ಆ ಸುಯೋಗ. ಬಹುಕಾಲದಿಂದ ತಾವು ಯಾವ ಒಬ್ಬ ಬ್ರಹ್ಮಸಮಾನ ಗುರುವನ್ನು ತಮ್ಮ ಜೀವನದಲ್ಲಿ ಪಡೆದರೆ ತಮ್ಮ ಸಂಗೀತ ಸಾಧನೆಯು ಸಾರ್ಥಕವಾಗಬಹುದೆಂದು ಭಾವಿಸಿದ್ದರೋ ಆ ಸುಪ್ರಸಿದ್ಧ ಸ್ವರಯೋಗಿ ಖಾನಸಾಹೇಬ ಅಲ್ಲಾದಿಯಾ ಖಾನ ಅವರೆ ಖುದ್ದಾಗಿ ಅಲ್ಲದಿದ್ದರೂಫ ಅವರ ಔರಸ ಚಿರಂಜೀವ ಖಾನಸಾಹೇಬ ಮಂಜೀಖಾನ ಅವರು ಗುರುದೇವಸ್ಥಾನದಲ್ಲಿ ದೊರಕಿದರು.

ಮಂಜೀಖಾನ ಸಾಹೇಬರು ಮಾತುಕೊಟ್ಟಂತೆ ಎರಡು ವಾರಗಳ ನಂತರ ಗಂಡಾ ಸಮಾರಂಭವೂ ಜರುಗಿತು. ಖಾನಸಾಹೇಬರು ತಮ್ಮ ವಂಶದ ಹಿರಿಯರನ್ನು ಸ್ಮರಿಸಿ, ವಿಧ್ಯುಕ್ತವಾಗಿ ಮಲ್ಲಿಕಾರ್ಜುನರನ್ನು ಶಿಷ್ಯನೆಂದು ಸ್ವೀಕರಿಸಿದುದರ ಸಂಕೇತವಾಗಿ ಆತನ ಕೈಗೆ ಕೆಂಪುದಾರದ ಪವಿತ್ರ ಲಾಂಛನವನ್ನು ಕಟ್ಟಿದರು. ಗುರುದಕ್ಷಿಣೆ ನೀಡಿ ಶಿಷ್ಯನು ನಮನ ಸಲ್ಲಿಸಿದರು. ಮಂಜೀಖಾನ ಸಾಹೇಬರ ಸಂಗೀತ ಎದುರಿಗೇ ಸಮುದ್ರದಂಥೆ ಬಿತ್ತರಿಸಿ ಬಿದ್ದುಕೊಂಡಿದೆ. ಅದನ್ನು ಗಿಂಡಿಯಿಂದಲ್ಲ, ಕೊಡದಂತೆ ತುಂಬಿಕೊಂಡರಾದರೂ ಆದೀತೇ-ಎನಿಸಿತು ಶಿಷ್ಯನಿಗೆ. ಅಗಸ್ತ್ಯನಂತೆ ಸಮುದ್ರವನ್ನೇ ಆಪೋಶನಕೊಳ್ಳುವುದು ತನ್ನಿಂದ ಆಗದು. ತಮ್ಮ ಬಳಿಯಿದ್ದ ಸಂಗೀತ ಖಜಾನೆಯ ಚೀಜುಗಳೆಂಬ ವಜ್ರ ವೈಢೂರ್ಯಗಳ ಬಾಗಿಲನ್ನೆ ತೆರೆದಿಟ್ಟು, ಬೇಕಾದಷ್ಟು ಬಳೆದುಕೋ ಎಂದು ಹೇಳುವಂತಿತ್ತು ಗುರುಗಳ ಔದಾರ್ಯ! “ಈ ತಾಲೀಮು ಶುರುವಾದ ನಂತರ ನನ್ನ ವ್ಯಕ್ತಿತ್ವದಲ್ಲಿಯೇ ಪರಿವರ್ತನೆ ಆಗಲಾರಂಭಿಸಿತು. ಸಂಗೀತದ ಹೋರತು ಇನ್ನಾವೂದೂ ಬೇಡವೆನಿಸಿತು”, ಎಂದು ಮನ್ಸೂರರು ಹೇಳುತ್ತಿದ್ದರು.

ಮಲ್ಲಿಕಾರ್ಜುನ ಮನ್ಸೂರ್ ಅವರು ತಮ್ಮ ಕಚೇರಿಯ ಮುಕ್ತಾಯಕ್ಕೆ ಭೈರವಿ ಹಾಡುವಾಗ ಜೋಗಿ ಮತ ಜಾ ಎಂಬ ಮೀರಾ ಭಜನೆಯನ್ನು ಆಯ್ದುಕೊಳ್ಳುವ ರೂಢಿ. ಆ ಗೀತದ ಭಾವ, ಭಕ್ತಿರಸಗಳ ಆಶಯವನ್ನು ಅನುಭವಿಸಿ ಹಾಡುವಾಗ ಗಾಯಕರೂ ಶ್ರವಾಕರೂ ಕೂಡಿಯೆ ತಲ್ಲೀನರಾಗಿಬಿಡುವರು. ಪಾವ ಪಡೂ ಮೈತೇರಿ ಜೋಗೀ ಮತ ಜಾ (ನಿನ್ನಡಿಗೆ ಪೊಡಮಡುವೆ ಪೋಗದಿರೆಲೋ ಜೋಗಿ) ಎಂದು ಆರ್ತಧ್ವನಿಯಿಂದ ಎತ್ತಿರಿಸಿ ಹಾಡಿದಾಗ ಮೈ ತುಂಬ ಮುಳ್ಳು ಸಿಡಿದೇಳಬೇಕು.

ಶರಣರ ವಚನಗಳನ್ನು ಹಾಡುವಲ್ಲಿಯಂತೂ ಮನ್ಸೂರ್ ಅವರು ಒಂದು ಅನನ್ಯ ಶೈಲಿಯನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ಅಧಿದೈವ ಸಮಾನವೆಂಧು ನಂಬಿಕೊಂಡಿದ್ದ ಪೂಜ್ಯ ಮೃತ್ಯಂಜಯಪ್ಪಗಳು (ಮುರುಘಾಮಠ, ಧಾರವಾಡ) ಮಲ್ಲಿಕಾರ್ಕುನರಿಗೆ ವಚನಗಳನ್ನು ಹಾಡಲು ಪ್ರೇರೇಪಿಸಿದರು. ಲಿಂ||ಪ್ರೊ ಬಸವನಾಳರು ಸಂಗೀತಕ್ಕೆ ಅನುಗುಣವಾದ ವಚನಗಳನ್ನು ಆಯ್ಕೆಮಾಡಿಕೊಟ್ಟರಲ್ಲದೆ ಅವುಗಳ ಸರಿಯಾದ ಪಾಠಾಂತರವನ್ನೂ, ಅರ್ಥವೈಚಿತ್ರವನ್ನೂ ವಿವರಿಸಿ ಹೇಳಿ, ತಾಳಕ್ಕೆ ಯಾವುವು ಸರಿಹೋಗಬಹುದೆಂಬುದನ್ನು ಎತ್ತಿ ತೋರಿಸಿದರು. ವಚನಗಳನ್ನು ತಾಳಕ್ಕೆ ಹಚ್ಚಿಹಾಡಿದರೆ ಅರ್ಥಕ್ಕೆ ವ್ಯತ್ಯಯ ಬರುತ್ತದೆಂಬ ಒಂದು ಅಡಿಕೆಯನ್ನು ಮನ್ಸೂರರು ಹುಸಿಮಾಡಿ, ವಚನಗಳನ್ನು ಸಮರ್ಥವಾಗಿ, ಸಮರ್ಪಕವಾಗಿ ತಾಳಕ್ಕೆ ಜೋಡಿಸಿ ಹಾಡತೊಡಗಿದಾಗ ಅವರದೇ ಒಂದು ಶೈಲಿ ಪ್ರಚುರಗೊಂಡಿತು. ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ ಎಂಬ ಬಸವಣ್ಣನವರ ವಚನವನ್ನಾಗಲಿ, ಅಕ್ಕ ಮಹಾದೇವಿಯ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ (ಶ್ರೋತೃಗಳಿಗೆ ಅತ್ಯಂತ ಪ್ರಿಯವಾದದ್ದು) ಎಂಬ ವಚನವನ್ನಾಗಲಿ, ತೇರನೆಳೆಯುತಾರ ತಂಗಿ ಎಂಬ ಶರೀಫಸಾಹೇಬರ ಜಾನಪದ ತತ್ವಪದವನ್ನಾಗಲಿ ಆಯಾ ವಚನರಚನೆಯ ರಸಭಾವಗಳನ್ನನುಭವಿಸಿ ಅನುಸರಿಸಿ ಶಾಸ್ತ್ರೀಯ, ಲಘು ಶಾಸ್ತ್ರೀಯ ರಾಗಗಳನ್ನು ಜೋಡಿಸಿ ಹಾಡಿದಾಗ ಕೇಳುವುದಕ್ಕೆ ಆಪ್ಯಾಯಮಾನವಾಗಿರುತ್ತಿತ್ತು.

ಅಪರೂಪ ರಾಗಗಳನ್ನು ಪರಿಚಿತ ರಾಗಗಳಷ್ಟೇ ನಿರಾಯಾಸದಿಂದ ಸಹಜ ಸುಂದರವಾಗಿ ಹಾಡಬಲ್ಲ ಇವರು ಸುಮಾರು ೧೨೫ ರಾಗಗಳ ಪ್ರಭುತ್ವವನ್ನು ಪಡೆದಿದ್ದರು. ಇಂದು ಜೈಪುರ ಘರಾಣೆಯ ವೈಜಯಂತಿಯನ್ನು ಜೀವಂತವಾಗಿರಿಸಿದ ಮನ್ಸೂರರರ ಘರಾಣಾ ಪರಂಪರೆಯ ಪಾವಿತ್ಯ್ರ, ಪ್ರಾತಿಭ ಪ್ರಾಗತಿಕ ಲಕ್ಷಣ.

ಪದ್ಮಶ್ರೀ, ಪದ್ಮವಿಭೂಷಣ, ಡಾಕ್ಟರ್ ಮಲ್ಲಿಕಾರ್ಜುನ ಮನ್ಸೂರ್ ಅವರು ಪುರಸ್ಕಾರಗಳ ಗಾಳಿಪಟಗಳನ್ನು ಹಿಡಿಯಲು ಹಾಡಿದವರಲ್ಲ. ಅವು ತಾವಾಗಿಯೇ ಹಾರಿಬಂದು ಇದರ ಕೊರಳಿಗೆ ತೊಡಕಿವೆ.

೧೯೬೨ರಲ್ಲಿ  ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ೧೯೭೨ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ೧೯೭೦ರಲ್ಲಿ ಪದ್ಮಶ್ರೀ ಪ್ರಶಸ್ತಿ, ೧೯೭೬ರಲ್ಲಿ ಪದ್ಮಭೂಷಣ ಪ್ರಶಸ್ತಿ ರಾಷ್ಟ್ರಪತಿಗಳ ಹಸ್ತದಿಂದ ನೀಡಲ್ಪಟ್ಟವು.

೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಡಿ.ಲಿಟ್‌ ಎಂಬ ಗೌರವ ಡಾಕ್ಟರೇಟ್‌ ಪದವಿಯೊಡನೆ ಸಂಗೀತ ರತ್ನ ಎಂಬ ಗೌರವ ಗ್ರಂಥ(೧೯೭೬)ವನ್ನೆ ಪ್ರಕಟಿಸಿ ಅವರನ್ನು ಗೌರವಿಸಿತು.

೧೯೮೧ರಲ್ಲಿ ಮಧ್ಯಪ್ರದೇಶ ಸರಕಾರವು ಕಾಳಿದಾಸ ಸಮ್ಮಾನ, ಆಗಿನ ಪ್ರಧಾನಿ ಇಂದಿರಾಗಾಂಧಿ ಹಸ್ತದಿಂದ ನೀಡಿತು. ೧೯೯೧ರಲ್ಲಿ ಖಾನಸಾಹೇಬ್‌ ಹಾಫಿಜ ಅಲಿಖಾನ ಪ್ರಶಸ್ತಿ ಅವರ ಚಿರಂಜೀವ ಅಮ್ಜಾದ್‌ ಖಾನ ಅವರಿಂದ ನೆರವೇರಿತು.

“ನನ್ನ ಸಾಧನೆಯು ನಡೆಯುತ್ತಿರುವಾಗ ಒದಗಿದ ಕಷ್ಟನಷ್ಟಗಳು ಇಂತಿಷ್ಟಿಲ್ಲ. ಅವುಗಳನ್ನೆಲ್ಲಾ ಧೈರ್ಯದಿಂದ ಸಹಿಸಿ ಸಂಸಾರವನ್ನೂ ತೂಗಿಸಿಕೊಂಡು ಹೋದ ಶ್ರೇಯಸ್ಸಿನ ಸಿಂಹಪಾಲು ನನ್ನ ಹೆಂಡತಿಯಾದಕ ಗಂಗಮ್ಮನಿಗೆ ಸಲ್ಲುತ್ತದೆ”, ಎಂದು ಮಲ್ಲಿಕಾರ್ಜುನರು ತಮ್ಮ ಸಂಸಾರ ರಥದ ಒಂದು ಚಕ್ರವಾಗಿದ್ದ ತಮ್ಮ ಧರ್ಮಪತ್ನಿಯ ಧೈರ್ಯ, ಕಷ್ಟಸಹಿಷ್ಣತೆಗಳನ್ನು ಮೆಚ್ಚಿಕೊಂಡು ಹೇಳುತ್ತಿದ್ದರು.

ಮನ್ಸೂರರ ದ್ವಿತೀಯ ಪುತ್ರಿ ಶ್ರೀಮತಿ ನೀಲಮ್ಮ ಕೊಡ್ಲಿ ಅವರು ಶಾಸ್ತ್ರೀಯ ಹಾಗೂ ಲಘುಸಂಗೀತದಲ್ಲಿ ಇಂದು ಒಂದು ಉತ್ತಮ ಸ್ಥಾನಮಾನ ಪಡೆದವರಾಗಿದ್ದಾರೆ. ನೀಲಮ್ಮ ಕೊಡ್ಲಿ ಅವರಿಗೆ ತಂದೆ ಮಲ್ಲಿಕಾರ್ಜುನರೆ ಸಂಗೀತ ಗುರುಗಳು.

ಇಂಗ್ಲಿಷ್‌ ಪ್ರಾಧ್ಯಾಪಕರದ ಪ್ರೊ. ರಾಜಶೇಖರ ಮನ್ಸೂರ್ ಅವರಿಗೂ ತಂದೆಯದೆ ಸಂಗೀತ ದೀಕ್ಷೆ, ಏಳು ಜನ ಹೆಣ್ಣುಮಕ್ಕಳಜೊತೆ ಇವರು ಒಬ್ಬರೇ ಪುತ್ರರು. ಮಲ್ಲಿಕಾರ್ಜುನ ಮನ್ಸೂರರ ಇನ್ನುಳಿದ ಶಿಷ್ಯವರ್ಗದಲ್ಲಿ ಪಂಚಾಕ್ಷರಿ ಮತ್ತಿಗಟ್ಟಿ, ಲಿಂ. ಸಿದ್ಧರಾಮ ಜಂಬಲದಿನ್ನಿ ಅದರಂತೆ ಲಿಂ||ಎ.ಯು. ಪಾಟೀಲ (ಇವರ ಅಳಿಯಂದಿರು) ಇವರೇ ಮೊದಲಾದವರು.

ತಮ್ಮ ಕೊನೆಯದಿನಗಳನ್ನು ಮಲ್ಲಿಕಾರ್ಜುನ ಮನ್ಸೂರ್ ಅವರು ಅತ್ಯಂತ ತೀವ್ರವೇದನೆಯ ಕಾಯಿಲೆಯಿಂದಾಗಿ ನರಳುತ್ತ ಸೆಪ್ಟೆಂಬರ್ ೧೨; ೧೯೯೨ರಂದು ಕೊನೆಯುಸಿರೆಳೆದರು. ಅವರ ಮರಣದಿಂದಾಗಿ ಕರ್ನಾಟಕದ ಏಕಮೇವ ಶ್ರೇಷ್ಠ ಜೈಪುರ ಘರಾಣೆಯ ಸಂಗೀತರತ್ನ ಒಂದು ಕಳಚಿದಂತಾಯಿತು.