ಸಂಗೀತ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರ ನಂತರ ಬಂದಂಥ ರಚನಕಾರರಲ್ಲಿ ಅವರಷ್ಟೇ ವೈವಿಧ್ಯಮಯವಾದ ಕೃತಿಗಳನ್ನು ಒಳ್ಳೆಯ ಗುಣಮಟ್ಟ ಹಾಗೂ ಸಂಖ್ಯೆಯಲ್ಲಿ ರಚಿಸದವರೆಂದರೆ ಡಾ. ಮುತ್ತಯ್ಯ ಭಾಗವತರ್ ಎಂದು ವಿಮರ್ಶಕರಿಂದ ಹೊಗಳಿಸಿಕೊಂಡ ಅಪರೂಪದ ಕೃತಿಕಾರ ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು.

ಡಾ. ಮುತ್ತಯ್ಯ ಭಾಗವತರು ಸಂಗೀತಗಾರರೂ, ರಚನಕಾರರೂ, ಕಥಾ ಕೀರ್ತನಕಾರರೂ, ಶಿಕ್ಷಕರೂ, ಸಂಶೋಧಕರೂ, ಶಾಸ್ತ್ರಜ್ಞರೂ ಆಗಿ ಸಂಗೀತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ವೈವಿಧ್ಯಮಯ ರಚನೆಗಳೇ ಅವರಲ್ಲಿದ್ದ ಅದ್ಭುತ ಪ್ರತಿಭೆಗೆ, ಅಪರೂಪದ ಗುಣಕ್ಕೆ ಸಾಕ್ಷಿಯಾಗಿವೆ. ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯು ಬಹುಮುಖವಾದುದು, ಅನನ್ಯವಾದುದು. ಅಂತೆಯೇ ಕೀರ್ತನಕಲೆಗೂ ಅವರು ಇತ್ತ ಕೊಡುಗೆ ಬಹು ಅಮೂಲ್ಯವಾದದ್ದು. ಗ್ರಂಥ ಸಂಪಾದನೆಯಲ್ಲೂ ಅವರ ಸೇವೆ ಸ್ಮರಣೀಯ.

೧೮೭೭ನೇ ಇಸವಿಯ ನವೆಂಬರ್ ೧೫ರಂದು ಲಿಂಗಂ ಅಯ್ಯರ್ ಮತ್ತು ಆನಂದಾಂಬಾಳ್‌ ದಂಪತಿಗೆ ಜನಿಸಿದರು ಈ ಮುತ್ತು ಸುಬ್ರಹ್ಮಣ್ಯ. ಒಳ್ಳೆಯ ಸುಸಂಸ್ಕೃತ ಮನೆತನ. ತಾತ ಸುಬ್ಬ ಭಾರತಿಯವರು, ತಮಿಳು ಹಾಗೂ ಸಂಸ್ಕೃತಗಳೆರಡರಲ್ಲೂ ವಿದ್ವತ್ತನ್ನು ಹೊಂದಿದ್ದವರು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ತಿರುನೆಲ್ವೇಲಿಯಲ್ಲಿ ಜನಿಸಿದ ಮುತ್ತುವಿಗೆ ತಂದೆಯವರಿಂದ ಸಾಹಿತ್ಯ, ಹಾಗೂ ಅಪ್ಪುಕ್ಕುಡಂ ಶಾಸ್ತ್ರಿಗಳಿಂದ ಸಂಗೀತ ಶಿಕ್ಷಣವೂ ದೊರಕಿತು. ಸದಾ ಕಿವಿಯ ಮೇಲೆ ಬೀಳುತ್ತಿದ್ದ ಜಾನಪದ ಗೀತೆಗಳು ಎಳವೆಯಲ್ಲಿಯೇ ಮುತ್ತುವಿನ ಮನವನ್ನು ಸಂಗೀತದೆಡೆಗೆ ಆಕರ್ಷಿಸಲು ಸಹಾಯಕವಾಯಿತು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಸೋದರಮಾವನ ರಕ್ಷಣೆಯಲ್ಲೇ ಬೆಳೆದ ಇವರಿಗೆ ಅಕ್ಕ ಕಾಂತಿಮತಿ ಮತ್ತು ತಮ್ಮ ಹರಿಹರನ್‌ ಒಡ ಹುಟ್ಟಿದವರು. ಸೋದರ ಮಾವನ ಅಪ್ಪಣೆಯಂತೆ ಸಂಸ್ಕೃತ ಕಲಿಕೆಗೇ ಹೆಚ್ಚು ಒತ್ತುಕೊಟ್ಟರು. ಆದರೆ ಸಂಗೀತದ ಸವಿಗೆ ಸೋತ ಮನಸ್ಸು ಸಂಗೀತ ಕಲಿಕೆಯನ್ನೇ ಬಯಸುತ್ತಿತ್ತು. ಆ ಸೆಳೆತ ಜೋರಾದಂತೆ ಅವನ ದೃಢ ನಿರ್ಧಾರವೂ ಬಲಿಯಿತು. ಅಲ್ಲಿಂದ ತಿರುವಯ್ಯಾರಿಗೆ ಬಂದು ವಿದ್ವಾನ್‌ ಸಾಂಬಶಿವ ಅಯ್ಯರ್ ರ ಶಿಷ್ಯರಾದರು. ಸುಮಾರು ಆರುವರ್ಷಗಳ ಗುರುಕುಲವಾಸದಲ್ಲಿ ಸಂಗೀತದ ಒಳ ಹೊರಗಿನ ಪರಿಚಯ ಮಾಡಿಕೊಂಡರು.

೧೮೯೩ರಲ್ಲಿ ಅವರು ಹರಿಕೇಶನಲ್ಲೂರಿಗೆ ಹಿಂದಿರುಗಿದಾಗ ಅವರಿಗೆ ಕೇವಲ ಹದಿನಾರು ವರ್ಷ. ಈ ಆಕರ್ಷಕ ತರುಣ ತಮ್ಮ ಸೊಗಸಾದ ಕಂಠಶ್ರೀಯಿಂದ, ಲವಲವಿಕೆಯ ಹಾಡುಗಾರಿಕೆಯಿಂದ ಕೇಳುಗರನ್ನು ಸೆಳೆಯುತ್ತಿದ್ದ. ಅತ್ಯಲ್ಪಕಾಲದಲ್ಲಿಯೇ ಒಳ್ಳೆಯ ಜನಪ್ರಿಯ ಸಂಗೀತಗಾರನೂ ಅದ. ರಾಮನಾಡು, ತಿರುವಾಂಕೂರ್ ಮುಂತಾದ ಕಡೆಗಳಿಂದ ಕಚೇರಿಗೆ ಆಹ್ವಾನ ಬರತೊಡಗಿತು. ೧೮೯೯ರಲ್ಲಿ ಶಿವ ಗಾಮಿ ಅಮ್ಮಾಳರೊಂದಿಗೆ ವಿವಾಹವೂ ಆಯಿತು. ಆದರೆ ಅವರ ವೃತ್ತಿ ಬದುಕಿನಲ್ಲಿ ಆದ ಒಂದು ಆಕಸ್ಮಿಕದಿಂದ ಅವರ ಕಂಠವು ತೊಂದರೆಗೊಳಗಾಯಿತು. ಈ ಕುತ್ತನ್ನು ಬಹಳ ಆತ್ಮಸ್ಥೈರ್ಯದಿಂದ ಎದುರಿಸಿದ ಭಾಗವತರು ಕಚೇರಿಯಿಂದ ಕಥಾಕೀರ್ತನದತ್ತ ಹೊರಳಿದರು. ಇದು ಎರಡೂ ಕ್ಷೇತ್ರಕ್ಕೂ ಲಾಭಕರವಾಗಿ ಪರಿಣಮಿಸಿತು.ಅವರಲ್ಲಿ ಅಡಗಿದ್ದ ಕೃತಿ ರಚನಾ ಕೌಶಲವು ಬೆಳಕಿಗೆ ಬರಲು ಕೀರ್ತನ ಕಲೆ ಸಹಕಾರಿಯಾಯಿತು.ಅವರು ತಮ್ಮಲ್ಲಿ ಸಹಜವಾಗಿದ್ದ ಬುದ್ಧಿವಮತಿಕೆ, ಸ್ವಾರಸ್ಯವಾಗಿ ಕಥೆ ಹೇಳುವ ಗುಣ, ಹಾಸ್ಯಪ್ರಜ್ಞೆ, ಸಮಯ ಸ್ಪೂರ್ತಿಗಳಿಂದಾಗಿ ಸಂಗೀತ-ಸಂಸ್ಕೃತ-ತಮಿಳಿನ ತಳಪಾಯದ ಮೇಲೆ ಕೇಳುಗರನ್ನು ಹಿಡಿದಿಡುವಂಥ ಕಥಾಕೀರ್ತನಕಾರರಾದರು. ಇಲ್ಲಿ ಅವರು ಬಹಳ ಜನಪ್ರಿಯರಾಗಿ ಅದ್ಭುತ ಯಶಸ್ಸು ಗಳಿಸಿದರು.

ಅದುವರೆಗೆ ರೂಢಿಯಲ್ಲಿರದಿದ್ದ ಪ್ರಸಂಗಗಳನ್ನು ಆರಿಸಿಕೊಂಡು ಅದಕ್ಕೆ ಪೂರಕವಾಗಿ ಬೇಕಾಗಿದ್ದ ಹಾಡುಗಳನ್ನು ತಾವೇ ರಚಿಸಿದ್ದಲ್ಲದೆ, ಬಾಲ್ಯದಿಂದಲೂ ಕೇಳುತ್ತಿದ್ದ ಜನಪದ ರೂಪವಾದ ಕಾವಡಿ ಚಿಂದುಗಳನ್ನು ಸೇರಿಸಿ ಒಟ್ಟಾರೆ ಕಥಾಕೀರ್ತನ ಬಹಳ ಆಕರ್ಷಕವಾಗುವಂತೆ ಮಾಡಿದರು. ‘ವಲ್ಲೀ ಪರಿಣಯ’, ಆನಂದ ರಾಮಾಯಣದಿಂದ ಆರಿಸಿಕೊಂಡಿದ್ದ ‘ಸತೀ ಸುಲೋಚನ’ ಮುಂತಾದವು ಭಾಗವತರು ನೀಡಿದ ಹೊಸ ಕೊಡುಗೆಗಳು. ಹೊಸ ಹೊಸ ಕತೆಗಳನ್ನು, ವಿಷಯಗಳನ್ನು ಆರಿಸಿಕೊಂಡು ವೈವಿಧ್ಯಮಯವಾಗಿ, ಸ್ವಾರಸ್ಯಕರವಾಗಿ ಮಾಡುತ್ತಿದ್ದ ಇವರ ಹರಿಕತೆಯು ತಮಿಳುನಾಡಿನಲ್ಲಿ ಮನೆಮಾತಾಯಿತು. ಎಲ್ಲ ಕಡೆಗಳಿಂದಲೂ ಇವರಿಗೆ ಆಹ್ವಾನ ಬರತೊಡಗಿತು. ಚೆಟ್ಟಿನಾಡು, ಬರ್ಮಾ, ಶ್ರೀಲಂಕಾಗಳಿಂದ ವಿಶೇಷ ಆಹ್ವಾನಿತರಾಗಿ ಹೋಗಿ ರಾಮಾಯಣದ ಅನೇಕ ಪ್ರಸಂಗಗಳನ್ನು ಪ್ರಚಾರಕ್ಕೆ ತಂದರು.

ಈ ಮಧ್ಯೆ ಒಬ್ಬಳೇ ಮಗಳಾದ ಕಾಂತಿಮತಿ ಮೃತಳಾದಳು. ಇದು ಅವರ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿತು. ಆಗ ಮನಶ್ಯಾಂತಿಯನ್ನು ಅರಸುತ್ತಾ ಉತ್ತರ ಭಾರತದ ಯಾತ್ರಾಸ್ಥಳಗಳಿಗೆ ಭೇಟಿಕೊಟ್ಟರು. ಕಾಶಿಯಲ್ಲೂ ಕೆಲವು ಕಾಲ ತಂಗಿದ್ದರು. ಆ ಸಮಯದಲ್ಲಿಯೂ ನಾದಕ್ಕೆ ಮನಸೋತ ಅವರ ಮನಸ್ಸು ಹಿಂದುಸ್ತಾನೀ ಸಂಗೀತದತ್ತ ಮುಖಮಾಡಿತು. ಹಂಸಾನಂದಿ, ಗೌಡ ಮಲ್ಹಾರ್, ಮೋಹನಕಲ್ಯಾಣಿ ಮುಂತಾದ ರಾಗಗಳಲ್ಲಿ ಅವರು ಕೃತಿ ರಚಿಸಿದ್ದು ಇದರ ಪರಿಣಾಮವಾಗಿಯೇ. ಅವರು ಹರಿಕಥೆಗಾಗಿಯೇ ಅನೇಕ ಕೃತಿಗಳನ್ನು ಬರೆದರು. ಕಾಪಿ ರಾಗದ ‘ಕಲಿಲೋ ಹರಿ ಸ್ಮರಣ’, ಹಂಸಾನಂದಿ ರಾಗದ ‘ನೀದು ಮಹಿಮಾ’, ‘ಸಹಜ ಗುಣ ರಾಮ’, ‘ಶರಣಾಗತ ವತ್ಸಲ’ ಇವೆಲ್ಲವೂ ಕಥಾಕೀರ್ತನಕ್ಕೆ ಪೂರಕವಗಿ ರಚಿತವಾದವು. ಇದರಿಂದಾಗಿ ಪರೋಕ್ಷವಾಗಿ ಅವರಲ್ಲಿಯ ವಾಗ್ಗೇಯಕಾರನೂ ಬೆಳೆಯುತ್ತಿದ್ದ. ಅಸಂಖ್ಯಾತ ಕಾರ್ಯಕ್ರಮದಿಂದಾಗಿ ಒಮ್ಮೆ ಕುಂಠಿತವಾಗಿದ್ದ ಅವರ ಕಂಠಸಿರಿಯೂ ಮತ್ತೆ ಮಧುರಗೊಂಡು, ವಿಜೃಂಭಿಸಲಾರಂಭಿಸಿತು. ಹೀಗಾಗಿ ಮತ್ತೆ ಅವರು ಸಂಗೀತ ಕಚೇರಿಗಳನ್ನು ಮಾಡತೊಡಗಿದರು. ಅನೇಕ ಸಂಸ್ಥಾನ, ಗುರುಮನೆ, ಅರಮನೆಗಳಿಂದ ಸನ್ಮಾನಿತರಾದರು.

ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ಭಾಗವತರಿಗೆ ತ್ಯಾಗರಾಜರ ಮೇಲೆ ಅಪಾರ ಗೌರವ, ಅಭಿಮಾನ. ಮಧುರೆಯಲ್ಲಿ ೧೯೨೦ರಲ್ಲಿ ತ್ಯಾಗರಾಜ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿದ್ದಲ್ಲದೆ, ತಾವು ಭೇಟಿಕೊಟ್ಟ ಸ್ಥಳಗಳಲ್ಲೆಲ್ಲಾ ತ್ಯಾಗರಾಜ ಆರಾಧನಾ ಮಹೋತ್ಯವವು ನಡೆಯುವಂತೆ ಏರ್ಪಾಡು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ತ್ಯಾಗರಾಜರ ಕೀರ್ತನೆಗಳನ್ನೆಲ್ಲಾ ಅಧ್ಯಯನ ಮಾಡಿ, ಅವುಗಳನ್ನು ಬಳಸಿಯೇ ತ್ಯಾಗರಾಜರ ಜೀವನ ಚರಿತ್ರೆಯನ್ನು ನಿರೂಪಿಸುವ ಕಾರ್ಯಕ್ರಮವನ್ನು ತಾವು ನಡೆಸುತ್ತಿದ್ದ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ಮೂರು ದಿನಗಳ ಕಾಲ ಪ್ರಸ್ತುತ ಪಡಿಸುತ್ತಿದ್ದರು. ಇದು ಅವರ ವಿಮರ್ಶಾತ್ಮಕ ಅಧ್ಯಯನದ ಫಲ.

ಆಗ ಮೈಸೂರು ಪ್ರಮುಖ ಸಂಗೀತ ಕೇಂದ್ರವಾಗಿತ್ತು. ದೇಶದಾದ್ಯಂತ ಸಂಗೀತಗಾರರು ಮೈಸೂರಿಗೆ ಬಂದು ಮಹಾರಾಜರ ಎದುರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಿ, ಅವರಿಂದ ಸನ್ಮಾನಿತರಾಗಬೇಕಿಎಂದು ಬಯಸುತ್ತಿದ್ದರು. ಮಹಾರಾಜರ ಎದುರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಿ, ಅವರಿಂದ ಸನ್ಮಾನಿತರಾಗಬೇಕೆಂದು ಬಯಸುತ್ತಿದ್ದರು. ಮಹಾರಾಜರ ಸಮ್ಮುಖದಲ್ಲಿ ಕಚೇರಿ ಮಾಡುವುದೂ ಸಹಷ್ಟೇನೂ ಸುಲಭದ ಮಾತಾಗಿರಲಿಲ್ಲ. ೧೯೨೭ರಲ್ಲಿ ದಸರಾ ಹಬ್ಬದಲ್ಲಿ ಭಾಗವತರು ಮೈಸೂರಿನಲ್ಲಿ ಕಚೇರಿ ನೀಡಿದರು. ಮಹಾರಾಜರಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದ ಅವರಿಗೆ ಸ್ವಲ್ಪ ನಿರಾಶೆಯೇ ಆಯಿತೆನ್ನಬೇಕು. ಆದರೆ ಅವರು ಒಂದು ದಿನ ಚಾಮುಂಡಿ ಬೆಟ್ಟದ ಮೇಲೆ ದೇವಿಯ ಸನ್ನಿಧಿಯಲ್ಲಿ ‘ತಪ್ಪಲನ್ನಿಯು ತಾಳುಕೊಮ್ಮು ಚಾಮುಂಡೇಶ್ವರಿ ನಾದು’ ಎಂಬ ತಮ್ಮ ರಚನೆಯನ್ನು ಭಕ್ತಯಿಂದ ಮೈ ಮರೆತು ಹಾಡುತ್ತಿದ್ದಾಗ ಅನಿರೀಕ್ಷಿತವಾಗಿ ಅಲ್ಲಿಗೆ ಮಹಾರಾಜರು ಆಗಮಿಸಿದರು. ಭಾಗವತರ ಸಂಗೀತ ಸುಧೆಯನ್ನು ಸವಿದರು. ಮೆಚ್ಚುಗೆಯಿಂದ ಅವರನ್ನು ಅರಮನೆಗೆ ಬರಮಾಡಿಕೊಂಡು ಮತ್ತೆ ಅವರ ಸಂಗೀತವನ್ನು ಕೇಳಿ ಸಂಭಾವನೆಯ ಜೊತೆಗೆ ವಜ್ರದುಂಗುರವನ್ನು ನೀಡುದುದಲ್ಲದೆ ಅವರನ್ನು ಆಸ್ಥಾನ ವಿದ್ವಾಂಸರನ್ನಾಗಿಯೂ ಮಾಡಿದರು. ಭಾಗವತರ ಬಯಕೆಯು ಚಾಮುಂಡಾಂಬೆಯ ಕೃಪೆಯಿಂದ ಕೈಗೂಡಿತು.

ಮಹಾರಾಜರ ಸೂಚನೆಯಂತೆ ಅವರ ಆರಾಧ್ಯದೇವತೆಯಾದ ಚಾಮುಂಡೇಶ್ವರಿಯ ಅಷ್ಟೋತ್ತರ ಶತನಾಮಾವಳಿಯ ಕೀರ್ತನೆಗಳನ್ನು ರಚಿಸಿದರು. ಕನ್ನಡದ ಈ ರಚನೆಗಳನ್ನು ದೇವಿಯ ಮುಂದೆ ಹಾಡಿ ಪ್ರಭುಗಳಿಗೆ ಅರ್ಪಿಸಿದರು. ಇವು ಬಹಳ ಅಪರೂಪದ ರಾಗಗಳಲ್ಲಿರುವುದಲ್ಲದೆ ಕೆಲವು ಹೊಸ ರಾಗಗಳಲ್ಲೂ ರಚಿತವಾಗಿರುವುದೊಂದು ವಿಶೇಷ. ನಿರೋಷ್ಠ, ವಿಜಯನಾಗರಿ, ಉರ್ಮಿಕಾ, ವೀಣಾಧರಿ ಮುಂತಾದ ರಾಗದ ಈ ರಚನೆಗಳು ಬಹು ಮುದ್ದಾಗಿವೆ. ಇವರ ಚಾಮುಂಡೇಶ್ವರಿ ಅಷ್ಟೋತ್ತರ ಕೀರ್ತನೆಗಳ ರಚನೆಗೆ ಬಹಳವಾಗಿ ಸಹಾಯ ಮಾಡಿದವರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ ರವರು.

ಇದರ ನಂತರ ಶಿವಾಷ್ಟೋತ್ತರ ಕೃತಿಗಳನ್ನು ರಚಿಸಿದರು. ಇವರ ಅಂಕಿತ ಹರಿಕೇಶ. ತೆಲುಗು, ಸಂಸ್ಕೃತ, ಕನ್ನಡ, ತಮಿಳಿನಲ್ಲಿರುವ ನಾನೂರಕ್ಕೂ ಹೆಚ್ಚಿನ ಇವರ ಕೃತಿ ತಾನವರ್ಣ, ದರುವರ್ಣ, ಕೃತಿ, ರಾಗಮಾಲಿಕೆ, ತಿಲ್ಲಾನ, ಮುಂತಾದವುಗಳನ್ನು ಒಳಗೊಂಡಿವೆ.

ಸ್ವಾತಿ ತಿರುನಾಳರ ಕೃತಿಗಳ ಪ್ರಚಾರ ಕಾರ್ಯದಲ್ಲೂ ಮುತ್ತಯ್ಯ ಭಾಗವತರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ತಿರುವಾಂಕೂರು ಸಂಸ್ಥಾನದಲ್ಲಿ ಪ್ರಕಟವಾಗದೇ ಉಳಿದಿದ್ದ ಸ್ವಾತಿ ತಿರುನಾಳರ ಅನೇಕ ಕೃತಿಗಳನ್ನು ಪರಿಷ್ಕರಿಸಿ, ರಾಗ ತಾಳಗಳಿಗೆ ಅಳವಡಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ನಾಲ್ಕು ವರ್ಷಗಳ ಕಾಲ ಸತತವಾಗಿ ಶ್ರಮಪಟ್ಟು ಸ್ವಾತಿ ತಿರುನಾಳರ ನೂರಾರು ಕೀರ್ತನೆಗಳನ್ನು ಸ್ವರಪ್ರಸ್ತಾರದೊಡನೆ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು.

ತಿರುವಾಂಕೂರಿನಲ್ಲಿ ‘ಸ್ವಾತಿ ತಿರುನಾಳ್‌ಸಂಗೀತ ಕಲಾಶಾಲೆ’ಯು ಪ್ರಾರಂಭವಾದಾಗ ಇವರೇ ಅದರ ಪ್ರಥಮ ಪ್ರಾಚಾರ್ಯರಾದರು. ೧೯೪೦ರಲ್ಲಿ ‘ಶ್ರೀಮತ್‌ ತ್ಯಾಗರಾಜ ವಿಜಯ’ ಎಂಬ ಸಂಸ್ಕೃತ ಕಾವ್ಯವನ್ನು ರಚಿಸಿದರು. ‘ಸಂಗೀತ ಕಲ್ಪ ದ್ರುಮಂ’ ಎಂಬುದು ಅವರು ಬರೆದ ಸಂಗೀತ ಲಕ್ಷಣ ಗ್ರಂಥ. ಈ ಎಲ್ಲಾ ಸಂಗೀತ ಸೇವೆಯನ್ನು ಪರಿಗಣಿಸಿ ತಿರುವಾಂಕೂರ್‌ ವಿಶ್ವವಿದ್ಯಾಲಯವು ೧೯೪೩ರಲ್ಲಿ ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ಪ್ರದಾನ ಮಾಡಿತು. ಅದೇ ವರ್ಷ ತಿರುವಾಂಕೂರ್‌ ವಿಶ್ವವಿದ್ಯಾಲಯದಿಂದ ನಿವೃತ್ತರಾದರು.

ಮದ್ರಾಸ್‌ ಮ್ಯೂಸಿಕ್‌ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಭಾಗವತರು ಸಂಗೀತ ಕಲಾನಿಧಿ ಬಿರುದಾಂಕಿತರಾದರು. ಅಕಾಡೆಮಿ ನಡೆಸುತ್ತಿದ್ದ ಸಂಗೀತ ಉಪಾಧ್ಯಾಯರ ತರಬೇತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.

ಅವರ ಅನೇಕ ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ. ಮಧುರೆ ಮಣಿ ಅಯ್ಯರ್, ಗೋಟುವಾದ್ಯ ನಾರಾಯಣ ಅಯ್ಯಂಗಾರ್, ಸ್ವರಮೂರ್ತಿ ವಿ.ಎನ್‌.ರಾವ್‌, ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿ ಮುಂತಾದವರೆಲ್ಲ ಅವರ ಗರಡಿಯಲ್ಲಿ ಪಳಗಿದವರೇ. ಗೋಟುವಾದ್ಯದಲ್ಲೂ ನಿಷ್ಣಾತರಾಗಿದ್ದ ಭಾಗವತರು ತಮ್ಮ ಕಚೇರಿಯ ಕೊನೆಯಲ್ಲಿ ಅದನ್ನುನುಡಿಸಿ, ರಸಿಕರನ್ನು ರಂಜಿಸುತ್ತಿದ್ದರು. ಅವರ ದತ್ತು ಪುತ್ರರಾದ ವೈದ್ಯಲಿಂಗಂರವರು ಮದ್ರಾಸಿನ ಅಕಾಡೆಮಿಯ ನೆರವಿನಿಂದ ಮುತ್ತಯ್ಯ ಭಾಗವತರ ಎಲ್ಲಾ ರಚನೆಯಗಳನ್ನು ತಮಿಳಿನಲ್ಲಿ ಪ್ರಕಟಿಸಿದ್ದಾರೆ. ಭಾಗವತರು ತಮ್ಮ ಅರವತ್ಮೂರನೇ ವಯಸ್ಸಿನಲ್ಲಿ ೩೦.೬.೧೯೪೫ರಂದು ಈಶ್ವರನ ಪಾದಾರವಿಂದ ಸೇರಿದರು.

ಬದುಕಿನ ಅನೇಕ ಏಳು ಬೀಳುಗಳ ನಡುವೆ ಧೃತಿಗೆಡದೆ ಕಲೆಯ ಪ್ರಸಾರ, ಸಂಶೋಧನೆ, ಕಥಾಕೀರ್ತನ, ನವೀನ ಪ್ರಯೋಗ, ವಿದ್ಯಾದಾನ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಬದುಕನ್ನು ಕಲಾಸೇವೆಗಾಗಿಯೇ ಮುಡಿಪಾಗಿಟ್ಟ ಮುತ್ತಯ್ಯ ಭಾಗವತರು ಮೈಸೂರಿನೊಡನೆ ಅವಿಭಾಜ್ಯ ಸಂಬಂಧ ಹೊಂದಿದ್ದರೆಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಇದರ ದ್ಯೋತಕವಾಗಿ ಮೈಸೂರಿನಲ್ಲಿ ಅವರು ಪ್ರಾರಂಭಿಸಿದ ‘ತ್ಯಾಗರಾಜ ಸಂಗೀತ ವಿದ್ವತ್‌ಸಭೆ’ಯನ್ನು ಇಲ್ಲಿ ಸ್ಮರಿಸಿಬಹುದು.