Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮೈಸೂರು ಎಂ. ಮಂಜುನಾಥ್

ಪ್ರತಿಭಾವಂತ ಪಿಟೀಲು ವಾದಕ ಡಾ. ಮೈಸೂರು ಎಂ. ಮಂಜುನಾಥ್ ಅವರು.
ಸಂಗೀತ ಕುಟುಂಬದಲ್ಲಿ ಜನಿಸಿದ ಡಾ. ಮೈಸೂರು ಎಂ. ಮಂಜುನಾಥ್ ಅವರ ತಂದೆ ಪ್ರಸಿದ್ದ ಸಂಗೀತ ವಿದ್ವಾಂಸರಾದ ಶ್ರೀ ಮಹದೇವಪ್ಪ, ಸಹೋದರ ಮೈಸೂರು ನಾಗರಾಜ್ ಅವರು. ತಂದೆಯವರಲ್ಲಿ ಶಿಕ್ಷಣ ಪಡೆದು, ಎಂಟನೆಯ ವಯಸ್ಸಿನಲ್ಲಿಯೇ ಸಂಗೀತ ಕಚೇರಿಯನ್ನು ನೀಡಿ ವಿಸ್ಮಯಗೊಳಿಸಿದ ಶ್ರೀಯುತರು ಅದ್ಭುತ ಬಾಲಪ್ರತಿಭೆಯೆಂದು ಸಂಗೀತ ವಿದ್ವಾಂಸರು, ಕಲಾಭಿಮಾನಿಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾದರು.
ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ರವರು ರಾಜ್ಯದ ಹೆಮ್ಮೆಯ ದ್ವಂದ್ವ ಪಿಟೀಲು ವಾದಕರು. ಅಮೆರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಸಿಂಗಾಪುರ ಹಾಗೂ ಇನ್ನಿತರ ದೇಶಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಕ್ರಮ ನೀಡಿರುವ ಡಾ. ಮೈಸೂರು ಎಂ. ಮಂಜುನಾಥ್ ತಮ್ಮ ಪಿಟೀಲು ಕಾರ್ಯಕ್ರಮಗಳ ಮೂಲಕ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವುದಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಮ್ಯೂಸಿಕ್ ಪದವಿಯಲ್ಲಿ ಪ್ರಥಮ ಬ್ಯಾಂಕನ್ನು ಪಡೆದ ಶ್ರೀಯುತರು ಪಿಹೆಚ್.ಡಿ. ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆಗೈದಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ಶ್ರೀಯುತರು ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಅಸಂಖ್ಯಾತ ಜುಗಲ್‌ಬಂದಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುವ ಶ್ರೀಯುತರು ಅತ್ಯುತ್ತಮ ವಯೋಲಿನ್ ವಾದಕ ಪ್ರಶಸ್ತಿ, ಪ್ರತಿಷ್ಠಿತ ಅಮೆರಿಕನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಭಾಜನರು.
ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಲೋಕದಲ್ಲಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಅನನ್ಯ ಕಲಾವಿದರು ಡಾ. ಮೈಸೂರು ಎಂ. ಮಂಜುನಾಥ ಅವರು.