ನಾಡಿನ ವೈದ್ಯಕೀಯ ಕ್ಷೇತ್ರಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸುತ್ತಿರುವ ಪ್ರತಿಭಾವಂತ ದಂತ ವೈದ್ಯರು ಪ್ರೊ. ಯು.ಎಸ್. ಕೃಷ್ಣಾ ನಾಯಕ್ ಅವರು.
೧೯೬೧ರಲ್ಲಿ ಜನಿಸಿದ ಶ್ರೀ ಕೃಷ್ಣಾನಾಯಕ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿ ಮಣಿಪಾಲದ ಕರ್ನಾಟಕ ವೈದ್ಯಕೀಯ ಕಾಲೇಜಿನಿಂದ ಬಿ.ಡಿ.ಎಸ್. ಪದವಿ, ಎಂ.ಡಿ.ಎಸ್. ಪದವಿ ಪಡೆದರು.
ಮಂಗಳೂರಿನ ಎಂ.ಬಿ. ಶೆಟ್ಟಿ ಸ್ಮಾರಕ ದಂತವಿಜ್ಞಾನ ಸಂಸ್ಥೆಯಲ್ಲಿ ಆರ್ಥೋಡಾಂಟಿಕ್ಸ್ ಮತ್ತು ಡೆಂಟೋ ಫಿಸಿಯಲ್ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಅಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಪ್ರಸಕ್ತ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ ಡೀನಾಗಿ, ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಮತ್ತು ಶೈಕ್ಷಣಿಕ ಪರಿಷತ್ತಿಗೆ ಎರಡು ಬಾರಿ ಸದಸ್ಯರಾಗಿ, ಪ್ರಸಕ್ತ ಮಂಗಳೂರಿನ ದಂತ ಶಸ್ತ್ರಚಿಕಿತ್ಸಾ ಅಧ್ಯಯನಗಳ ಮಂಡಳಿ ಸದಸ್ಯರಾಗಿ, ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಮತ್ತು ಯೂನಿವರ್ಸಿಟಿ ಆಫ್ ಹೆಲ್ತ್ ಅಂಡ್ ಸೈನ್ಸಸ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರು, ಬೆಂಗಳೂರು, ಮೈಸೂರು, ಕರ್ನಾಟಕ, ಗೋವಾ ಮೊದಲಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗೆ ಪರೀಕ್ಷಕರಾಗಿರುವ ಶ್ರೀಯುತರು ದಂತವೈದ್ಯಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಫೆಲೋ ಆಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಶ್ರೀಯುತರ ಹಲವಾರು ಲೇಖನಗಳು ಪ್ರಕಟವಾಗಿವೆ. ಭಾರತೀಯ ದಂತ ವೈದ್ಯ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ, ಭಾರತದ ಉತ್ತಮ ನಾಗರಿಕ ಪ್ರಶಸ್ತಿ ಮುಂತಾದವು ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು. ‘ಹೆತ್ತಿ ಟೀತ್ ಫಾರ್ ಹೆಲ್ತ್ ಲೈಫ್’ ಪುಸ್ತಕವನ್ನು ಪ್ರಕಟಿಸಿರುವ ಶ್ರೀಯುತರು ಸಕ್ರಿಯ ರೊಟೇರಿಯನ್ನಾಗಿ ಹಲವಾರು ದಂತ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದಾರೆ.
ದಂತ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರತಿಭಾವಂತ ದಂತ ಚಿಕಿತ್ಸಾ ತಜ್ಞ ಶ್ರೀ ಕೃಷ್ಣಾ ನಾಯಕ್ ಅವರು.
Categories
ಡಾ. ಯು.ಎಸ್. ಕೃಷ್ಣಾ ನಾಯಕ್
