ವೈದ್ಯಕೀಯ ಶುಕ್ರೂಷಾ ಪರಿಚಾರಿಕೆಯಲ್ಲಿ ವಿನೂತನ ಯೋಜನೆಯನ್ನು ರೂಪಿಸಿ ವೃದ್ಧರು ಮತ್ತು ನಿರ್ಗತಿಕರಿಗೆ ಸದಾ ಸಹಾಯಹಸ್ತ ಚಾಚಿರುವ ಸಮಾಜ ಸೇವಕಿ ಡಾ|| ರಾಧಾ ಎಸ್. ಮೂರ್ತಿ ಅವರು.
ಬೆಂಗಳೂರಿನ ಸೇಂಟ್ ಜಾನ್ ಮೆಡಿಕಲ್ ಕಾಲೇಜಿನ ಪದವೀಧರರಾಗಿರುವ ಶ್ರೀಮತಿ ರಾಧಾ ಅವರು ಮೊದಲಿನಿಂದಲೂ ಕ್ರಿಯಾಶೀಲರಾದವರು. ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಅವಗಣನೆಗೆ ಗುರಿಯಾದ ಕ್ಷೇತ್ರವನ್ನು ಅರಸುತ್ತ ಅಲ್ಲಿ ತಮ್ಮ ಸೇವೆಯನ್ನು ನೀಡಬೇಕೆಂದು ಹಂಬಲಿಸುತ್ತಿರುವಾಗ ಅವರಿಗೆ ಗೋಚರಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ತಲುಪಲಾಗದ ಅಶಕ್ತರು ಹಾಗೂ ಬಡ ವೃದ್ದರು.
೧೯೯೬ನೆಯ ಇಸವಿಯಲ್ಲಿ ‘ನೈಟಿಂಗೇಲ್ಸ್ ಹೋಂ ಹೆಲ್ತ್ ಸರ್ವಿಸಸ್’ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಉದಾತ್ತ ಆಶಯದಂತೆ ಮನೆ ಬಾಗಿಲಿಗೆ ತೆರಳಿ ಸಾಧ್ಯವಾದ ಎಲ್ಲ ರೀತಿಯ ವೈದ್ಯಕೀಯ ಆರೈಕೆ ಮಾಡತೊಡಗಿದರು. ಸೇವಾ ಕೈಂಕರ್ಯದಲ್ಲಿ ತೊಡಗಿ ವಯೋವೃದ್ಧರ ಅನೇಕ ಸಮಸ್ಯೆಗಳಿಗೆ ಸಹಾಯ ನೀಡುತ್ತಿದ್ದಾರೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಂಸ್ಥೆ ಸ್ಥಾಪಿಸಿ ತಮ್ಮ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡ ಶ್ರೀಮತಿ ರಾಧಾ ಮೂರ್ತಿ ಅವರು. ನೈಟಿಂಗೇಲ್ಸ್ ಎಲ್ಲರ್ಸ್ ಎನ್‌ರಿಚ್‌ಮೆಂಟ್ ಸೆಂಟರ್, ನೈಟಿಂಗೇಲ್ಸ್ ಲೈಫ್ ಸೇವಿಂಗ್ ಸರ್ವಿಸಸ್, ನೈಟಿಂಗೇಲ್ಸ್ ಪ್ರಾಜೆಕ್ಟ್ ಫಾರ್ ದಿ ಅಂಡರ್ ಪ್ರಿವಿಲೇಜ್ ಎಲ್ಡರ್ಸ್, ಎಲ್ಡರ್ಸ್ ಹೆಲ್ತ್‌ಲೈನ್ ೧೦೯೦ ಮೊದಲಾದ ಉಪ ಸೇವಾ ವಿಭಾಗಗಳನ್ನು ತೆರೆದು ಸೇವಾ ನೀಡಿಕೆಯಲ್ಲಿ ಶಿಸ್ತು ಹಾಗೂ ನಿಖರ ಫಲಿತಾಂಶವನ್ನು ಸಾಧಿಸಿದರು.
‘ಎಲ್ಲರ್ ಟಾಸ್ಕ್ ಫೋರ್ಸ್’ನಲ್ಲಿ ಡಾ. ರಾಧಾ ಅವರು ಸದಸ್ಯರಾಗಿದ್ದಾರೆ. ವೃದ್ಧ ಸೇವಾ ಕೈಂಕರ್ಯದಲ್ಲಿ ಇನ್ನೂ ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸುತ್ತ ಸೇವೆಯಲ್ಲಿಯೇ ಸಂತೋಷವನ್ನು ಕಾಣುತ್ತ, ಸಮಾಜಕ್ಕಾಗಿಯೇ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು ಡಾ. ರಾಧಾ ಎಸ್. ಮೂರ್ತಿ ಅವರು.
Categories
ಡಾ|| ರಾಧಾ ಎಸ್. ಮೂರ್ತಿ
