Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾನ್ವಿತರಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಹೃದ್ರೋಗ ತಜ್ಞೆ ಶೈಕ್ಷಣಿಕ ವರ್ಷದುದ್ದಕ್ಕೂ ಚಿನ್ನದ ಪದಕಗಳನ್ನು ಸೂರೆಗೊಂಡವರು.
ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮುಚ್ಚಿದ ಖ್ಯಾತಿ ಇವರದು. “ವರ್ಲ್ಡ್ ಕಾಂಗ್ರೆಸ್”ನಲ್ಲಿ ಸತತವಾಗಿ ಎರಡುವರ್ಷ ಮಂಡಿಸಿದ ಸಂಶೋಧನಾತ್ಮಕ ಪ್ರಬಂಧಗಳಿಗೆ ‘ಬೆಸ್ಟ್ ಪೇಪರ್ ಅವಾರ್ಡ್’ ದೊರೆತಿದೆ.
ರಾಷ್ಟ್ರೀಯ ಸಿಎಫ್‌ಐ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಪ್ರಥಮ ಕನ್ನಡತಿ, ಕರ್ನಾಟಕದಲ್ಲಿ ಮಕ್ಕಳ ಹೃದ್ರೋಗ ಚಿಕಿತ್ಸಾಕೇಂದ್ರವನ್ನು ಪ್ರಪ್ರಥಮವಾಗಿ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಬೀದರ್‌ನಲ್ಲಿ ನಡೆದ ಅಖಿಲ ಭಾರತ ೭೨ನಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಏಕೈಕ ಹೃದ್ರೋಗ ತಜ್ಞೆ.
ಡಾ. ಬಿ.ಸಿ. ರಾಯ್ ಪ್ರಶಸ್ತಿ, ಫ.ಗು. ಹಳಕಟ್ಟಿ ಪುರಸ್ಕಾರ, ಅಮೇರಿಕಾದಲ್ಲಿ ಸಾರ್ವಜನಿಕ ಸನ್ಮಾನ, ಚಾಣಕ್ಯ, ಕೌಟಿಲ್ಯ ಗ್ಲೋಬಲ್ ಅವಾರ್ಡ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಮಧ್ಯಪಾನ, ಧೂಮಪಾನ ಚಟಗಳನ್ನು ಸಮಾಜದಿಂದ ತೊಲಗಿಸಲು ಉಪನ್ಯಾಸ, ವಿಚಾರಗೋಷ್ಠಿ, ಕರಪತ್ರ, ಪುಸ್ತಕ ಪ್ರಕಟಣೆ, ಬ್ಯಾಲಿ, ಪಾದಯಾತ್ರೆ ಮೊದಲಾದವುಗಳ ಮೂಲಕ ಜನಜಾಗೃತಿ ಉಂಟು ಮಾಡುತ್ತಿದ್ದಾರೆ.
ವೈದ್ಯ ವೃತ್ತಿ ಹಾಗೂ ಸಮಾಜಸೇವೆಗಳಿಂದ ಪೂರ್ಣವಾಗಿ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಅಪರೂಪದ ಗಣ್ಯವ್ಯಕ್ತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು.