ಆತ್ಮ ನಿವೇದನ ಗೀತಿ

ಉಪಕಾರ ಮಾಡಿದವನು, ಕೃತಘ್ನನಾದವನಿಗೆ ತಾನು ಮಾಡಿದ ಸೇವೆ, ತ್ಯಾಗಗಳನ್ನು ನನಪುಮಾಡಿಕೊಟ್ಟು, ಅದಕ್ಕೆ ಪ್ರತಿಯಾಗಿ ಕೃತಘ್ನತೆ ತೋರಿಸುವದರಿಂದ ಪಡುವ ಬವಣಿಯನ್ನು ತೋರಿಸಿಕೊಟ್ಟರೆ ಅದೆಂಥ ಕಲ್ಲೆದೆಯನ್ನಾದರೂ ತಾತ್ಪೂರ್ತಿಕದ ಮಟ್ಟಿಗಂತೂ ಕರಗಿಸದೆ ಬಿಡುವದಿಲ್ಲ. ಮೈಮುರಿದು ದುಡಿದು ಬದುಕು ಮಾಡಿಕೊಟ್ಟ ಎತ್ತು, ತನ್ನ ಮುಪ್ಪಿನ ಕಾಲಕ್ಕೆ ಕುಳಿತು ಉಣ್ಣುವುದನ್ನು ಮನೆಯವರಿಂದ ಸೌಕರ್ಯವನ್ನು ಪಡೆಯದೆ ತನ್ನ ಆತ್ಮನಿವೇದನದಿಂದ ಒಡೆಯನ ಕೃತಘ್ನತೆ ಅಥವಾ ಅರಿವುಗೇಡಿತನವನ್ನು ಕರಗಿಸುವ ಪ್ರಯತ್ನ ಮಾಡಿದೆ. ಆ ‘ಎತ್ತಿನ ಹಾಡಿ’ನ ಕಲ್ಪನೆಯೇ ಒಂದು ವಿಧವಾಗಿದೆ-

ಮಾಗೀಯ ಹೊಡಿಯಾಗ
ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ
ನಾ ಹೋಗಿ ಒಂದು
ತೆನಿಧಂಟ ತಿಂದರ
ಕಲ್ಲಕಲ್ಲಿಲೆ ಹೊಡದ್ಯೋ | ನಮ್ಮ ಜೀವ ಹೋದಾವೊ ಕೈಲಾಸಕ ||
ನಾ ಒಂದ ಬಿತ್ತೀದ ನಾ ಒಂದು ಬೆಳದೀದ
ನಾ ಹೋಗಿ ಒಂದು
ಹೊಡಿಧಂಟ ತಿಂದರ
ಬಡಬಡಗಿಲೆ ಹೊಡದ್ಯೋ | ನಮ್ಮ ಜೀವ ಹೋದಾವೋ ಕೈಲಾಸಕ |

ಇಂದು ನಾನು ಕೆಲಸಕ್ಕೆ ಬಾರದ ಹಳೆಯ ಮುದುಕನಾಗಿದ್ದರೂ, ಈಗ ಸಹ ನನ್ನಿಂದ ನಿನಗೆ ಅನೇಕ ಪ್ರಯೋಜನಗಳಿವೆ; ಇಷ್ಟೆ ಅಲ್ಲ. ನಾಳೆ ನಾನು ಸತ್ತ ಬಳಿಕ ಸಹ ನಿನಗೆ ನಾನು ಉಪಯೋಗ ಬೀಳದೆ ಹೋಗುವದಿಲ್ಲ-

ಇಕ್ಕಿದರ ಹೆಂಡಿನಾದಿನ | ಹಚ್ಚಿದರ ಕುಳ್ಳನಾದಿನ
ದೇವರ ಮುಂದಿನ
ಪರಸಾದ ನಾ ಆದ
ಮತ್ತೇತಕಾದೇನ | ನಮ್ಮ ಜೀವ ಹೋದಾವ ಕೈಲಾಸಕ ||
ಸತ್ತರ ತೊಗಲಾದೇನ | ಮೆಟ್ಟಿದರ ಕೆರವಾದೇನ
ಹೆಗಲ ಮೇಲಾಡಂಥ ಬಾರಕೋಲ ನಾ ಆದ
ಮುತ್ಯಾತಕಾದೇನ | ನಮ್ಮ ಜೀವ ಹೋದಾವ ಕೈಲಾಸಕ ||

ಹಳೆಯ ಎತ್ತು ಸ್ಪಷ್ಟವಾಗಿ ತನ್ನೊಡಲ ಕಳವಳವನ್ನು ಹೇಳಿಕೊಂಡು ಉಪಕಾರಗೇಡಿ ತನವನ್ನು ಚೆನ್ನಾಗಿ ಹೀಗಳಿದಿದ್ದರಿಂದ, ಇನ್ನುಳಿದ ಅವೆಷ್ಟೊ ಎತ್ತುಗಳಿಗೂ ಕಲ್ಯಾಣವಾಗುವದಕಕೆ ಹಾದಿಯಾಯಿತು. ಅಲ್ಲದೆ, ಮುಪ್ಪಿನವರಿಗಾಗುವ ಅವಹೇಳನ-ಅಸಡ್ಡೆಗಳೂ ಈ ಹಾಡಿನಿಂದ ತುಸು ಕಡಿಮೆಯಾಗಬಹುದಾದ ನಿರೀಕ್ಷಣೆ ಇದೆ.

ಓವಿಯ ಒಂದು ಮಾದರಿ

ಯಾರನ್ನಾದರೂ ಕುರಿತು ಅಥವಾ ಏನನ್ನಾದರೂ ಸಂಬೋಧಿಸಿ ಹೊರಹೊಮ್ಮಿಸಲಾಗುವ ಭಾವಗಳು ಹಾಡಾಗಿ ಕಾಣಿಸಿಕೊಂಡರೆ ಅದಕ್ಕೆ ಓವಿ ಎಂಬ ಹೆಸರು. ಅಂಥವುಗಳಲ್ಲಿ ‘ಮಳೆ ಹಾಡು’ ಒಂದು ಮಾದರಿಯದಾಗಿದೆ. ತಡೆಹಿಡಿದು ನಿಂತ ಮಳೆರಾಜನನ್ನು ಕುರಿತು, –

ಬಣ್ಣದ ಗುಬ್ಟ್ಯಾರು ಮಳೆರಾಜಾ | ಅವರು
ಮಣ್ಣಾಗಿ ಹೋದರು ಮಣ್ಣಾಗಿ ಹೋದರು |
ಅನ್ಯದ ದಿನ ಬಂದು ಮಳೆರಾಜಾ || ೧ ||

ಒಕ್ಕಲಗೇರ್ಯಾಗ ಮಳೆರಾಜಾ | ಅವರು |
ಮಕ್ಕಳು ಮಾರ್ಯಾರ ಮಳೆರಾಜಾ |
ಮಕ್ಕಳ ಮಾರೀ ರೊಕ್ಕಾ ಹಿಡಕೊಂಡು
ಭತ್ತಂತ ತಿರಗ್ಯಾರ ಮಳೆರಾಜಾ || ೨ ||

ಗಂಡುಳ್ಳ ಬಾಲ್ಯಾರು ಮಳೆರಾಜಾ | ಅವರು |
ಭಿಕ್ಷಾಕ ಹೊರಟಾರ ಮಳೆರಾಜ |
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದರು |
ಅನ್ಯದ ದಿನ ಬಂದು ಮಳೆರಾಜಾ || ೩ ||

ಸ್ವಾತೀಯ ಮಳೆ ಬಂದು ಮಳೆರಾಜಾ | ಸುತ್ತ |
ದೇಶಾಕ ಆಗ್ಯಾದ ಮಳೆರಾಜ |
ಹಳ್ಳಕೊಳ್ಳ ಹೆಣ ಹರಿದಾಡಿ ಹೋದವು |
ಯಾವಾಗ ಬಂದೆಪ್ಪಾ ಮಳೆರಾಜಾ || ೪ ||

ತಡೆಹಿಡಿದು ನಿಂತ ಮಳೆರಾಜನ ಆಶೆಬಿಟ್ಟು, ಮಾನವತಿಯರು ಹೊರಗೆ ಬಂದವರಲ್ಲವಾದ್ದರಿಂದ ಅವರು ಮಣ್ಣಾಗಿ ಹೋಗುವದು ಅರಿದಲ್ಲ; ಕಣಜದ ಪ್ರಭುಗಳಾದ ಒಕ್ಕಲಿಗರು ಕಾಳಿಗಾಗಿ ಮಕ್ಕಳನ್ನು ಮಾರಿಕೊಳ್ಳುವುದೆಂದರೆ? ದುಡಿದು ತಂದು ಹಾಕುವ ಗಂಡನಿದ್ದರೂ ಬಾಲೆಯರು ಭಿಕ್ಷಕ್ಕೆ ಹೋದ ಮೇಲೆ ಅನ್ಯಾಯದ ದಿನ ಬಂದಂತಾಗಲಿಲ್ಲವೇ? ಕಡೆದಂಡೆಯಲ್ಲಿ ಸ್ವಾತಿಮಳೆ, ಸುತ್ತು ದೇಶಕ್ಕೆಲ್ಲ ಸಾಕಾಗುಷ್ಟು ಬಂದು ಪ್ರಯೋಜನವೇನು? ಹಳ್ಳಕೊಳ್ಳ ಹೆಣ ಹರಿದಾಡಿಹೋದವು! ಈಗ ಬರಬೇಕೆ ಮಳೆರಾಜ? ಉಪಕಾರವಾಗಲಿ ದಾನವಾಗಲಿ ಹೊತ್ತಿಗೊದಗಬೇಕು. ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ ಅಲ್ಲವೇ?

ನಗೆಯ ನವೀನತೆ

ಮಾತಿನ ರಸಿಕತೆಯಲ್ಲಿ ನಗೆ ಬಿಟ್ಟರೆ ಕುಂಟುಬೀಳುವದು. ಅದು ಸೇರಿದರೇ ಮಾತು ‘ಸರ್ವವನ್ನು ಒಳಗೊಳ್ಳುವ’ ಜೀವನಕ್ಕೆ ಒಪ್ಪುವಂಥದಾಗುತ್ತದೆ. ನಗೆ ಚುಚ್ಚಿ ಗಾಯಗೊಳಿಸಬಲ್ಲದು; ನಗೆ ಆದ ಗಾಯವನ್ನು ಮಾಯಿಸಬಹುದು. ನಗೆ ನಾಲ್‌ಬೆರಳ ಘಾಯವೆಂದು ಗರತಿಯರು ಹೇಳುತ್ತಾರೆ.ನಕ್ಕವರ ಹಲ್ಲು ಕಾಣಿಸುವದಾದರೆ ನಗೆಗೇಡು. ನಗುವವರ ಮುಂದೆ ನಗೆಗೆಡು ಆಗಬಾರದು. ನಕ್ಕು ಹೇಳಿದವ ಕೆಡಕು ಹೇಳುವನು. ನಗುವ ಗಂಡಸನನ್ನು ನಂಬಬಾರದು. ನಗೆ ಹೋಗಿ ಹೊಗೆ ಆಗುವದು. ಈ ಮೊದಲಾದ ಮಾತುಗಳೆಲ್ಲ ನಮ್ಮ ನಾಡಿನ ಗರತಿಯರು ನಗೆಯ ವಿಷಯದಲ್ಲಿ ಅನುಭವಕ್ಕೆ ತಂದುಕೊಂಡವುಗಳಾಗಿವೆ. ಹೆರರನ್ನು ಅಳಿಸಿ ನಗುವ ಹೇಸಿ ನಗೆಯೂ, ಹೆರರನ್ನು ನಗಿಸಿ ನಗುವ ಲೇಸುನಗೆಯೂ ನಮ್ಮವರ ಜೀವನದಲ್ಲಿ ಕಾಣಿಸಿಕೊಳ್ಳುವವು. ಮದುವೆಯ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ, ಆದ ಕಾರ್ಯಕ್ರಮದೊಳಗಿನ ಕುಂದುಕೊರತೆಗಳನ್ನು ಬೊಟ್ಟುಮಾಡಿ ತೋರಿಸಿ ಆಡಿಸಾಡುವದುಂಟು. ಆಡಿಸಾಡುವವರ ದೃಷ್ಟಿಯಲ್ಲಿ ಅವು ಅಷ್ಟೊಂದು ಹಿತಕಾರಿಗಳಲ್ಲವೆಂಬುದು ನಿಜ. ಆಡಿಸಿಕೊಳ್ಳುವವರು ಬಿಚ್ಚು ಮನದಿಂದ ಕೇಳಲಿಕ್ಕೆ ಸಿದ್ಧರಿರುವಾಗ ಇಂಥ ಹಾಡು ಹಾಡಬಾರದು. ಪ್ರತಿಪಕ್ಷದವರೂ ಹಾಡುವದೆಂದರೆ ಅಂಥ ಹಾಡು ಕೇಳಲಿಕ್ಕೆ ಸಿದ್ಧರಾಗಿರತಕ್ಕದ್ದು. ಅಷ್ಟು ಮನಸ್ಸಿದಿದ್ದರೆ ಹಾಡಿನ ಹಾಸ್ಯದ ಪ್ರಯೋಜನವೇ ಆಗಲಾರದು. ತಿರುಗಿ ಕೇಳಿದರೆ ಅಪಹಾಸ್ಯಕ್ಕೀಡಾಗಬೇಕಾದೀತು. ಆ ‘ಬೀಗರ ಹಾಡು’ ಮಾದರಿಗಾಗಿ ತುಸು ಆಲಿಸೋಣ.- “ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ” ಎನ್ನುವದು ಆ ಹಾಡಿನ ಪಲ್ಲವಿ. ಒಂದೊಂದು ಕುಂದು-ಕೊರತೆ ಹೇಳಿಕೊಟ್ಟು ಮೇಲೆ ಪಲ್ಲವಿ ಹೇಳುವದು.

ಆನಿ ಬರತಾವಂತ ಆರು ಭಣವಿಕೊಂಡ |
ಆನೆಲ್ಲಿ ನಿಮ್ಮ ದಳವೆಲ್ಲಿ | ಸರಕ್ಕ |
ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ
ಬೋಳ್ಹೋರಿ ಮ್ಯಾಲ ಬರತಾವ |

ಇದರಂತೆ ಒಂಟಿ ಬರುವದೆಂದು ಎಂಟು ಭಣವಿ ಕೊಂಡಿಟ್ಟರೆ, ಬೀಗರು ಕುಂಟು ಹೋರಿಯ ಮೇಲೆ ಬಂದರಂತೆ !

ಬೀಗೂತೊಒಳ್ಳೆವಳಂತೆ ಅಡಗಿಯ ಮನಿ ಕೊಟ್ಟ
ಹೋಳಿಗಿ ಘಳಗಿ ಬಗಲಾಗ | ಸರಕ್ಕ |
ಹೋಳಿಗಿ ಘಳಗಿ ಬಗಲಾಗ | ಅವರಣ್ಣ |
ನೀಡಲಿಕ್ಕಿಲ್ಲೆಂದು ಕಸುಗೊಂಡ ||

ಬೀಗುತಿಯು ಬೋನದ ದುರುಡಿಯನ್ನು ಬಗಲಲ್ಲಿ ಹಿಡಕೊಂಡು ಒಯ್ಯುತ್ತಿರುವಾಗ ಅವರಣ್ಣನು ತನಗೆ ನೀಡಲಿಕ್ಕಿಲ್ಲವೆಂದು ಕಸುಗೊಂಡನು.

ಎಲ್ಲಾರು ಕಟ್ಯಾರ ಮಲ್ಲಿಗ್ಹೂವಿನ ದಮಡಿ
ಬೀಗೂತಿ ಕಟ್ಯಾಳ ಹುಲ್ಹೊರಿಯ | ಸರಕ್ಕ |
ಬೀಗೂತಿ ಕಟ್ಯಾಳ ಹುಲ್ಹೊರಿ | ಅರವಣ್ಣ ||
ಕುದುರಿಗಿಲ್ಲೆಂದು ಕಸುಗೊಂಡು ||

ಒಂದು ಅಡಕಿ ಒಡೆದು ಒಂಬತ್ತು ಮದುವಿ ಮಾಡಿ
ಇಂದೀನ ಖರ್ಚು ಬಲು ಖರ್ಚು | ಸರಕ್ಕ |
ಇಂದೀನ ಖರ್ಚು ಬಲು ಖರ್ಚು ಬೀಗಾ |
ಖಂಬದ ತೆಕ್ಕಿ ಬಿಡುವಲ್ಲ ||

ಹಂದವೂರದಾಗ ಮಂದಿ ಬಂದು ಎಷ್ಟೊತ್ತಾಯ್ತು
ಕಂಬಳಿಲ್ಲೇನ ಇವರಲ್ಲಿ | ಸರಕ್ಕ |
ಕಂಬಳಿಲ್ಲೇನ ಇವರಲ್ಲಿ ಬೀಗುತಿ
ಕಂಬಳಿಗ್ಹೋಗ್ಯಾಳ ಮನಿಮನಿ ||

ಹೀಗೆಯೇ ಹೊಸೆಯುತ್ತ ಹಾಡು ಮುಗಿಸುವವರೆಗೆ ಮುಗಿಯುವದೇ ಇಲ್ಲ. ಹಾಡಿ ನಗಿಸಲು ತೊಡಗಿದವರು ಜಾಬಾಳ ಬೆಳೆಸಿ ‘ಸಾಕು ಬಿಡಿ’ರೆಂದು ಬೈಸಿಕೊಳ್ಳುವವರೆಗೆ ಮುಗಿಸುವಂತೆ ತೋರುವದಿಲ್ಲ. ನಗೆಗೆಡ ಮಾಡಬಯಸಿ, ನಗೆಗೀಡು ಆಗುವುದೂ ನಗೆಯೊಳಗಿನ ಒಂದು ಪ್ರಕಾದವೇ ಎಂದು ಏಕೆ ಇಟ್ಟುಕೊಳ್ಳಬಾರದು? ‘ಕಿವುಡರ ಹಾಡು’ ಯಾರನ್ನೂ ಚುಚ್ಚಲು ಹೋಗುವದಿಲ್ಲ. ಅದನ್ನು ಕೇಳಿದ ಕಿವುಡರಿಗೆ ನೋವಾಗಬೇಕಲ್ಲವೇ? ಅದು ಅವರಿಗೆ ಕೇಳಿಸಿದಾಗಲ್ಲವೇ ನೋವು-ಗೀವು ಅನ್ನುವುದು? ಹಾಡು ಕೇಳಿಸಿತೆಂದರೆ ಅವರು ಕಿವುಡರಲ್ಲ. ಹಾಡಿದವರರರು ಕಿವುಡರಿದ್ದರೆ ತಮಗೆ ಸಂಬಂಧಿಸಿಸ ವಿಷಯವಾಯಿತು. ಕೇಳುವವರ ಕಿವುಡರ ಹಾಡು, ಕಿವುಡರು ಹಾಡಿದರೆಂದು ಇಮ್ಮಡಿ ನಗೆ. ಆದ್ದರಿಂದ ಕಿವುಡರಲ್ಲದ ನಾವು ಕಿವುಡರ ಹಾಡು ಕೇಳುವುದಕ್ಕೆ ತಪ್ಪೇನಿದೆ?

ಬುತ್ತಿ ಮ್ಯಾಲ ಬುತ್ತೀ ಒಯ್ಯು ಜಾಣಿ |
ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ ||
ಕೋಲೆಣ್ಣ ಕೋಲೆ ?
ನಮ್ಮತ್ತಿ ಕಟ್ಯಾಳ ಒಂದು ಅರದ ರೊಟ್ಟಿ
ಹಾದ್ಯಾಗ ನಾ ಎಲ್ಲಿ ಬಿಚ್ಚಿ ಕೊಡಲಿಪ್ಪಾ || ಕೋ ||
ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್ತಿ ನಿನಗಿರಲಿ
ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ || ಕೋ ||
ಏ ಗಂಡಾ ಏ ಪುರುಷಾ ಹಾದ್ಯಾಗ ನನಗೊಬ್ಬ
ರೊಟ್ಟಿ ಬೇಡುತ್ತಿದ್ದಾ || ಕೋ ||
ಏ ಭಾರ್ಗೆ ಏ ಮೂಳಾ ನಾಕು ಮೂಲಿ ಬೆಳಿಯಲಿ
ಕಿವ್ಯಾಗ್ವಾಲಿ ಬುಗುಡಿ ಮಾಡಸೇನಂದಾ || ಕೋ ||
ಏ ಅತ್ತಿ ಏ ಮಾವಾ ಹೊಲದಾಗ ನನ ಗಂಡಾ
ಮಲಿಯಾರೆ ಊಗಾರೆ ಕೊಯ್ದೇನಂದಾ || ಕೋ ||
ಒಳಗೀನಕ್ಕೆಂತಾ ಅದಾಳ್ಹೋದಾಳೆಂದ ನೆರಮನಿ |
ಕುಂಬಾರ್ಗ ನನಗ ಹಾದರಿಟ್ಟಾಳ || ಕೋ ||
ಅವ್ರಾಣಿ ಅಪ್ರಾಣಿ ದೇವರಾಣಿ ದಿಂಡರಾಣಿ |
ತೊಗರೀ ಗುಗ್ಗರೀ ತಿಂದಿಲ್ಲಿ ಅತ್ತಿ || ಕೋ ||

ಕಥನ ಪ್ರವಾಹ

ಒಂದು ಸಣ್ಣ ಮಾತನ್ನೇ ತಕ್ಕೊಂಡು ಕಥೆಮಾಡಿ ಹೇಳುವುದರಲ್ಲಿ ಹೆಣ್ಣು ಮಕ್ಕಳು ಹುಟ್ಟಾ ನಿಪುಣರು. ತಾವು ಹೇಳಬೇಕಾದ ವಿಷಯವು ಹೊಟ್ಟೆಯಲ್ಲಿ ಇನ್ನೇನೂ ಉಳಿಯಲಿಲ್ಲವೆಂದು ಅನಿಸುವವರೆಗೆ ಅವರ ಹೇಳಿಕೆ ನಿಲ್ಲುವುದೇ ಇಲ್ಲ. ತಮಗಾದ ನೋವು, ಅಸಹ್ಯತೆ, ಅವಮಾನಗಳನ್ನಂತೂ ಇದ್ದಕ್ಕಿದ್ದ ಹಾಗೆ ಚಿತ್ರಿಸಿಬಿಡುವರು. ಬುದ್ಧಿವಂತಿಕೆಯನ್ನು ಉಪಯೋಗಿಸಿ ಅದನ್ನು ಪ್ರಚುರಪಡಿಸುವ ಉದ್ದೇಶವು ಅವರಿಗಿರುವದಿಲ್ಲ. ಆತ್ಮೀಯರಾದರೂ ಸಿಕ್ಕರೆ ಹೃದಯ ಬಿಚ್ಚಿ ಹೊಟ್ಟೆಹೊಕ್ಕು ಹೇಳುವದರಿಂದ, ಅದು ಆತ್ಮೀಯರ ಹೃದಯವನ್ನು ಹೊಕಕು ಹೇಳುವವರಾಗಿರುವ ವೇದನೆಯು ಕೇಳುವವರಿಗೂ ಆಗುವಂತೆ ಮಾಡುತ್ತದೆ. ಒಂದು ಪ್ರಸಂಗವನ್ನು ಬಣ್ಣಿಸಿ ಹೇಳುವಂತೆ ಅದನ್ನೇ ಹಣ್ಣಿಸಿ ಹಾಡುವುದಕ್ಕೂ ಗರತಿಯು ಜಾಣೆಯಾಗಿರುತ್ತಾಳೆ. ಹೊಟ್ಟೆಯ ಕರುಳಿಗಾಗುವ ತೊಂದರೆಯನ್ನು ಅವಳು ನೋಡಲಾರಳು; ಅದಕ್ಕಾಗುವ ವೇದನೆಯನ್ನು ಅವಳು ಸಹಿಸಲಾರಳು. ಆ ಅಸಹನೆಯೇ ಹೊಟ್ಟೆಯಲ್ಲಿ ಕುದಿದು, ಬುದ್ಧಿಯನ್ನು ಬೇಯಿಸಿ ಮೂಗುವಟ್ಟ ಮಾತಿಗೆ ಬಾಯಿ ತೆರೆದು ನಿಲ್ಲುತ್ತದೆ. ಬಾಯಿ ತೆರೆದಿದೆ; ಹೃದಯ ಬೆರೆದಿದೆ; ಬುದ್ಧಿ ಬಿಚ್ಚಿದೆ; ಮಾತು ಕೊಚ್ಚಿದೆ. ಅಂಥಲ್ಲಿ ಕಥನ ಪ್ರವಾಹಕ್ಕೆ ಮಹಾಪೂರವೇ ಬಂದುಬಿಡುತ್ತದೆ. ಹೊಟ್ಟೆಯಲ್ಲಿ ಹೆಂಗೂಸಾಗಿ ಹುಟ್ಟಿ ಬಂದ ಮಗಳನ್ನು ಕೊಡುಗೂಸೆಂದು ಮದುವೆಮಾಡಿ ಕೊಟ್ಟಾಗ, ತಾಯಿಯ ಹೊಟ್ಟೆಯಲ್ಲೇಳುವ ಕಮಲವೆಲ್ಲ ‘ಕೂಸು ಒಪ್ಪಿಸುವ ಹಾಡು” ಆಗಿ ನಿಂತಿದೆ. ಮದುವೆಗಾದ ಮಗಳು ಆಕೆಗಿನ್ನೂ ಕೂಸು! ಅದೊಂದು ಮಾತಿನಿಂದ ಹಾಡಿನ ಹೊವು ತಿಳಿದುಬರುಬಹುದಾಗಿದೆ. ವಧುವರರಿಬ್ಬರ ಕಡೆಯ ಬಳಗದವರೂ ಹಂದರ ಮುಂದೆ ಸೇರಿ ಕುಳಿತಿರುತ್ತಾರೆ. ಆ ಕಾಲಕ್ಕೆ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ಈ ಹಾಡಿಗೇ ಅಗ್ರಗಣ್ಯತೆ ಬರುವದು. ಅದನ್ನು ತಿಳಿಮನಸ್ಸಿನಿಂದ ಹಾಡಿಬಿಟ್ಟರೆ, ಅತ್ತೆಯ ಮನೆಯ ಬಳಗದವರ ಹೃದಯವೂ ಕರಗಿ ಬಿಡುವದು. ಕರಗಿದ ಸಂಧಿಸಾಧಿಸಿ, ಕನ್ಯಾರತ್ನವನ್ನು ಅದರಲ್ಲಿ ಬೆಸೆದು ಬಿಟ್ಟರೆ ಚಿನ್ನಕ್ಕೆ ಕುಂದನ ಕುಳ್ಳಿರಿಸಿದಂತಾಗುತ್ತದೆ.

ಆ ಹಾಡಿನ ಮುಖ್ಯ ಭಾಗಗಳನ್ನು ನಾನಿಲ್ಲಿ ಕಾಣಿಸುತ್ತೇನೆ-

ಒಂಬತ್ತು ತಿಂಗಳು ನಿನ್ನ ತುಂಬಿಕೊಂಡು ತಿರುಗೇನ
ಹಂಬಲಿಸಿ ನಿನ್ನ ಹಡೆದೇನ | ||
ಹಂಬಲಿಸಿ ನಿನ್ನ ಹಡೆದೇನ ಚಿತ್ರ
ಗೊಂಬಿ ನಿನಗೊಪ್ಪಿಸಿ ಕೊಡಲ್ಹಾಂಗ | ಸೋ ||
ಮುಂಜಾನೆದ್ನಮ್ಮಗಳು ತುಪ್ಪಾ ಬಾನುಣ್ಣೂಳು
ಪಟ್ಟಮಂಚದಲಿ ಮಲಗೂಳ | ಸೋ ||
ಪಟ್ಟಮಂಚದಲಿ ಮಲಗೂಳ | ಸೋ ||
ಪಟ್ಟಮಂಚದಲಿ ಮಲಗೂಳ ನಮ್ಮಗಳು
ಕಟ್ಟೂತ ಕತೆಯ ಹೇಳೂಳ | ಸೋ ||
ತೊಟ್ಟಿಲ ತೂಗಂದ್ರ ಸಿಟ್ಟೀಲೆ ಕೂಡೋಳ
ಬಟ್ಟಿಲ ಬೆಳಗಾಕ ಅರಿಯಾಳ | ಸೋ ||
ಬಟ್ಟಿಲ ಬೆಳಗಾಕ ಅರಿಯಾದ ಮಗಳನ್ನ
ಕೊಟ್ಟೇನು ಮಾವನ ಕೈಯೊಳಗ | ಸೋ ||
ನಿಂಬೀಯನೇ ಹಣ್ಣಾನೆಂಬಿ ಗಿಣಿ ಒಯ್ದಾಂಗ
ಇಂದ ನಮ್ಮಗಳ ಕೊಡತೀವ | ಸೋ ||
ಇಂದ ನಮ್ಮಗಳ ಕೊಡತೀವ ಪಾರ್ವತಿ
ಕಂದನ ಸರಿಮಾಡಿ ಸಲಹವ್ವಾ | ಸೋ ||
ಒಂದರಬಿ ಹಾಸೀದ ಒಂದರಬಿ ಹೊಚ್ಚೀದ
ಇಂದರನ ಮಾಡಿ ಸಲಹೀದ | ಸೋ ||
ಇಂದರನ ಮಾಡಿ ಸಲಹಿ ಸಾಕಿದ ಮಗಳ |
ಇಂದೀಗಿ ನಮಗ ಎರವಾದ್ಯಾ | ಸೋ ||
ಎಕ್ಕಿಯ ಗಿಡದಾಗ ಹಕ್ಕಿ ಬೋರ್ಯಾಡಿದಾಂಗ
ಅಕ್ಕ ನೀಲವ್ವನ ಬಳಗಾವು | ಸೋ ||
ಅಕ್ಕ ನೀಲವ್ವನ ಬಳಗದ ಕಣ್ಣಾನ ನೀರಾ
ಸಣ್ಣ ಮುತ್ತಾಗಿ ಸುರದಾವ | ಸೋ ||

ಈ ಪ್ರಸಂಗದಲ್ಲಿ ಕನ್ಯೆ ತಂದೆ, ತಾಯಿ, ಅಣ್ಣ, ತಮ್ಮ ಇವರ ಮನಸ್ಸಿನ ಸ್ಥಿತಿಯನ್ನು ಗರತಿಯು ಬಣ್ಣಿಸಿದರೂ, ಅದು ಬರಿ ಬಣ್ಣನೆ ಅಲ್ಲ. ವಾಸ್ತವಿಕ ಮಾತು ಎಂದು, ತಂದೆ-ತಾಯಿಗಳೂ ಅಣ್ಣ ತಮ್ಮಂದಿರೂ ಒಪ್ಪಿಕೊಳ್ಳಲೇಬೇಕು-

ಕಪ್ಪುರ ಗುಡ್ಡಕ್ಕ ಬೆಂಕಿ ತಪ್ಪದಲೆ ಕೊಟ್ಟಾಂಗವ-
ರಪ್ಪನ ಹೊಟ್ಟಿ ತಳಮಳಿಸಿ | ಸೋ |
ಅಪ್ಪನ ಹೊಟ್ಟಿ ತಳಮಳಿಸಿ ಮಗಳ ನಿನ್ನ
ಒಪ್ಪೀಸಿ ನಾವು ಕೊಡತೇವ | ಸೋ |
ಸುಡುವ ಬೆಂಕಿಗಿ ಎಣ್ಣೀ ಕೊಡುವ ಸುರುವಿದ್ಹಾಂಗ
ಹಡೆದವ್ವನ್ಹೊಟ್ಟಿ ತಳಮಳಿಸಿ | ಸೋ |
ಹಡೆದವವನ್ಹೊಟ್ಟಿ ತಳಮಳಿಸಿ ಮಗಳೆ ನಿನ್ನಾ
ಕೊಡತೇವೊಪ್ಪಿಸಿ ಇವರೀಗಿ | ಸೋ |
ಅಣ್ಣನ ಹೊಟ್ಟಿ ಹೊಯ್ದಾಡೆ | ಸೋ |
ಅಣ್ಣನ ಹೊಟ್ಟಿ ಹೊಯ್ದಾಡಿ ನನ ತಂಗಿ
ನನ್ನ ಮನೆಗಿಂದು ಎರವಾದೆ | ಸೋ |
ಒಮ್ಮನ ಮದ್ದಿಗೆ ಬೆಂಕಿ ಒಮ್ಮಿಲೇ ಕೊಟ್ಹಾಂಗ
ತಮ್ಮನ ಹೊಟ್ಟಿ ತಳಮಳಿಸಿ | ಸೋ |
ರಮ್ಮೀಸಿ ಹಣ್ಣು ಕೊಡುತ್ತಿದೆ’ | ಸೋ |

ಸಣ್ಣ ತಮ್ಮನಾಗಿ ಹುಟ್ಟಿದ್ದರೆ ತಣ್ಣಗೆ ಇರುತ್ತಿದ್ದಿಯಲ್ಲದೆ, ಮಾನ್ಯದ ಹೊಲದಲ್ಲಿ ಸರಿಪಾಲು ತಕ್ಕೊಂಡು ಚಿನ್ನಾ, ನನ್ನ ಹತ್ತಿರ ಇರುತ್ತಿದ್ದೆಯಲ್ಲಾ – ಎಂದು ಅವರಣ್ಣ ಮರುಗುವನು. ಇತ್ತ ಅವರ ತಮ್ಮನು-ಹಿರಿಯ ಅಣ್ಣನಾಗಿದ್ದರೆ ಎರೆಯ ಹೊಲದಲ್ಲಿ ಸರಿಪಾಲು ತಕ್ಕೊಂಡು ಧೊರೆಯೇ, ನನ್ನ ಹತ್ತಿರ ಇರುತ್ತಿದ್ದೆಯಲ್ಲಾ ಎಂದು ಕಳವಳಿಸುವಳು.

ನಮ್ಮ ಮಗಳಲ್ಲವ್ವಾ ನಿಮ್ಮ ಮಗಳೀಕೆಂದು
ಛೆಂದಾಗಿ ಮಗಳನ್ನ ಸಲಹವ್ವಾ | ಸೋ |
ಛೆಂದಾಗಿ ಮಗಳನ್ನ ಸಲಹವ್ವಾ ಅನ್ನೂತ
ಅತ್ತೆವ್ನ ಕೈಯಾಗ ಕೊಡಿರವ್ವಾ | ಸೋ |

ಹೆಣ್ಣು ನಿಮಗೆ, ಬಣ್ಣ ನಮಗೆ, ಎಣ್ಹೋಳಿಗಿ ತುಪ್ಪ ಸಭೆಗೆ ಆಯಿತು. ಆ ಸಭೆಯ ಸಾಕ್ಷಿಯಾಗಿ ನಮ್ಮ ಮಗಳನ್ನು ನಿಮ್ಮ ಕೈಯಲ್ಲಿ ಕೊಡುವೆವು.

ಹಂದರ್ಹಂದರ ಸಾಕ್ಷಿ ಹಂದರ ತಳವಲ ಸಾಕ್ಷಿ
ಹಂದರದಾಗಿರುವ ದೈವ ಸಾಕ್ಷಿ |
ಹಂದರದಾಗಿರುವ ದೈವ ಸಾಕ್ಷಿಯ ಹೇಳಿ
ಇಂದು ನಮ್ಮಗಳ ಕೊಡತೀವ ||
ಎಣ್ಣಿ ನೀಡಲಿ ಬ್ಯಾಡ ನೆತ್ತಿ ಬಸಿಯಲಿ ಬ್ಯಾಡ ಅನ್ನಿಗರ ಮಗಳಂದನಬ್ಯಾಡ |
ಅನ್ನಿಗರ ಮಗಳಂದನಬೇಡ ತಂಗೆವ್ವಾ
ಬಾಲನ ಸರಿಯ ಬಗಿಯವ್ವಾ ||

ಕೊನೆಯಲ್ಲಿ ಗಂಡಿನ ತಂದೆ ಸಣ್ಣ ನಗೆ ನಗುತ್ತ ಸಾಗುತ್ತಾನೆ; ಮನಸ್ಸಿನಲ್ಲಿ “ಹೆರ್ಣಣೊಲ್ಲೆ ಇನ್ನು ಜನಮಾಕ” ಎಂದು ನುಡಿಯುತ್ತಾನೆ. ಈ ವಿಷಯವು ಕಥೆಯಲ್ಲ, ಕಥನವಾಗಿದೆ. ಕಥನದಿಂದಲೇ ಮಾತು ಕಥೆಯಾಗುತ್ತದೆಂಬುದರ ಕಲ್ಪನೆಯು “ಕೂಸು ಒಪ್ಪಿಸುವ ಹಾಡಿ” ನಿಂದ ಬರಬಹುದಾಗಿದೆ. ಇನ್ನು ಹುಟ್ಟಾ ಕತೆಯಾದ ವಿಷಯವು ಕಥನಕಲೆಯಿಂದ ಅದೆಷ್ಟು ಅತ್ಯುಚ್ಚಮಟ್ಟಕ್ಕೇರಬಲ್ಲದೆಂಬುದಕ್ಕೆ ‘ಬರದ ಹಾಡು’ ಉದಾಹರಣೆಯಾಗಿದೆ. ಈ ಹಾಡು ಗರತಿಯರಿಗಲ್ಲದೆ ಇನ್ನಾರಿಗೂ ಬರದ ಹಾಡು. ಬರದ ಹಾಡನ್ನು ಬರುವ ಹಾಡಿಗಿಂತ ರಮ್ಯವಾಗಿ ಹಾಡುವಾಗ, ಹುಟ್ಟುವ ರಸದಲ್ಲಿ ಕರಗಿ ಕೇಳುಗನು ಏಕರೂಪವಾಗಿ ಬಿಡುವನು. ಹಾಗೆ ಆಗ ಗೊಡಲು ಅಣಿಯಾಗಿರೆನ್ನುವ ಸೂಚನೆಯಂತೆಯೋ, ಹಾಗೆ ಆಗಿಬಿಟ್ಟೀರಿ, ಜೋಕೆ ಎನ್ನುವ ಎಚ್ಚರಿಕೆಯಂತೆಯೋ ಈ ಮಾತು ಹೇಳಲಾಗಿದೆ. ಇರಲಿ. ಒಂದಾನೊಂದು ಬರಗಾಲ. ಅಣ್ಣನಿಗಂತೂ ಮಕ್ಕಳಿಲ್ಲ, ತಮ್ಮನಿಗೆ ಸಾಕಷ್ಟು ಮಕ್ಕಳಿದ್ದಾರೆ.

ಏ ಅಣ್ಣಾ ಏ ಅಣ್ಣಾ ಸೊಲಗಿ ಜೋಳಾ ಕಡಾಕೊಡು | ಕೋಲೆನ್ನ ಕೋಲ ||
ಸೊಲಗಿ ಜೋಳಾ ಕಡನೆ ಕೊಟ್ಟರ ನಟ್ಟಕಡಿಯಲಿ ಹೋದೇನಂದಾ || ಕೋ ||

ಒಡಹುಟ್ಟಿದ ಅಣ್ಣನಲ್ಲಿ ಸೊಲಗಿಜೋಳ ಕೈಗಡ ಬೇಡಿದನೆನ್ನುವ ಒಂದೇ ಮಾತು, ಹೃದಯವನ್ನು ಅಲುಗಿಸುತ್ತದೆ. ಸೊಲಗಿ ಜೋಳ ಕೈಗಡಕೊಟ್ಟಾಗಲೇ ತನ್ನ ಮುಂದಿನ ಹಾದಿ ಸಾಗುವದೆನ್ನುವ ಮಾತು, ತಮ್ಮನ ಬಡತನದ ಚಿತ್ರವನ್ನು ಮುಗಿಲಮೇಲಿನ ಮಿಂಚಿನ ಬರಹದಂತೆ ಒಂದೇ ಒಂದು ನಿಮಿಷದಲ್ಲಿ ಕೊರೆದು ನಿಲ್ಲಿಸುತ್ತದೆ.

ಬಿರಿಬಿರಿ ಹೋದನಲ್ಲ ಗಾದ ಮೆತ್ತಿಗೆ ತಗದಾನಲ್ಲ | ಕೋ |
ಗಾದ ಮೆತ್ತಿಗಿ ತೆಗೆದಾನಲ್ಲ ಸೊಲಗಿ ಜೋಳಾ ಕೊಟ್ಟಾನಲ್ಲ | ಕೋ |
ಸೊಲಿಗಿ ಜೋಳಾ ಒಯ್ದ ಕೇರಿ ಸೆಣತಿ ಕೈಯಾಗ ಕೊಟ್ಟಾನಲ್ಲಾ | ಕೋ |
ಒಲೀ ಮ್ಯಾಲ ಎಸರನಿಟ್ಟು ಒಡಿಲಾಕಾದರು ಕುತ್ತ
sಳಲ್ಲ | ಕೋ ||

ಅಷ್ಟು ಹೊತ್ತಿಗೆ ನೆರೆಮನೆಯಿಂದ ನೆಗಿಯಾಣಿಯು ಬೆಂಕಿಗೆಂದು ಬಂದು ಜೋಳವನ್ನು ಗುರುತಿಸಿ, ಒಲೆಯ ಮೇಲಿನ ಎಸರಿನಲ್ಲಿ ಹಿಡಿಕಲ್ಲು ಒಗೆಯುವಳು. ಅಷ್ಟಕ್ಕೆ ಬಿಡದೆ ಬೀಸಿದ ಹಿಟ್ಟಿನಲ್ಲಿ ಮಣ್ಣು ಬೂದಿ ಕಲೆಸಿ, ಮರದೊಳಗಿನ ಜೋಳವನ್ನು ಉಡಿಯಲ್ಲಿ ಸುರುವಿಕೊಂಡು ಹೊರಟು ಹೋಗುವಳು. ತಮ್ಮನ ಹೆಂಡತಿ ಸಣ್ಣವಳು. ನಿರುಪಾಯಳಾದಳು. ಗಂಡನಂತೂ ಕೈಗಡ ಜೋಳ ತಂದು ಕೊಟ್ಟು ಹೊಲಕ್ಕೆ ದುಡಿಯ ಹೋಗಿದ್ದನು. ಆ ಎಂಟು ಮಕ್ಕಳ ತಾಯಿ ಮುಂದೆ ಯಾವ ಉಪಾಯ ಕೈಕೊಳ್ಳಬೇಕು?

ಎಂಟು ಮಕ್ಕಳ ಕರಕೊಂಡು ತವರಮನಿಗೆ ಹೋಗಿದಾಳ | ಕೋ ||
ಏ ಅತಿಗಿ, ಏ ಅತಿಗಿ ಸೇರ ಜೋಳಾ ಕಡಾ ಕೊಡ | ಕೋ ||
ಸೇರ ಜೋಳಾ ನಮ್ಮಲ್ಲಿಲ್ಲಾ ಹೇರ ಜೋಳಾ ನಮ್ಮಲ್ಲಿಲ್ಲ | ಕೋ ||
ಅಷ್ಟು ಮಕ್ಕಳ ಕೈಯಾಗ ತುತ್ತು ರೊಟ್ಟಿ ಕೊಡು ಅವ್ವಾ | ಕೋ ||
ತುತ್ತು ರೊಟ್ಟಿ ಬೇಡಲಿಕ್ಕೆ ಬಿಕ್ಕಿಗಾದರು ಬಂದಿಯೇನ | ಕೋ ||

ಮಕ್ಕಳನ್ನೆಲ್ಲ ಮುಂದೆ ಹಾಕಿಕೊಂಡು ಮನೆಯ ಕಡೆಗೆ ಬಂದಳು. ಆಗ ಇನ್ನೊಂದು ಉಪಾಯವು ಆಕೆಗೆ ತೋಚಿತು.

ತಾಳಿನಾರೆ ತಗೊಂಡಾಳ ಅಂಗಡಿಗಾರೆ ಹೋಗಿದಾಳ | ಕೋ ||
ಅದ್ದನಕ್ಕಿ ಕೊಡಿರೆಪ್ಪಾ ದುಡ್ಡಿನ ವಿಷ ಕೊಡಿರೆಪ್ಪಾ | ಕೋ ||
ಅದ್ದನಕ್ಕಿ ಯಾರಿಗವ್ವ ದುಡ್ಡಿನ ವಿಷ ಯಾರಿಗವ್ವ | ಕೋ ||
ಅದ್ದನಕ್ಕಿ ಮಕ್ಕಳಿಗೆಪ್ಪಾ ದುಡ್ಡಿನ ವಿಷಾ ಹೆಗ್ಗಣಕಪ್ಪಾ | ಕೋ ||

ಅದ್ದನಕ್ಕಿ ತಂದು ಅನ್ನಕ್ಕಿಟ್ಟು, ಅದು ಕುದಿಕುದಿಯುತ್ತಿರುವಾಗಲೇ ಅದರಲ್ಲಿ ವಿಷವನ್ನು ಸುರುವಿಬಿಟ್ಟಳು. ಮರುಕ್ಷಣದಲ್ಲಿ ಅನ್ನ ಸಿದ್ಧವಾಯಿತು.

ನೀಲವ್ಗ ನಿಂಬೆವ್ಗ ಒಂದೆ ಎಡಿ ಮಾಡಿದಾಳ | ಕೋ |
ಗಂಗವ್ಗ ಗೌರವ್ಗ ಒಂದೆ ಎಡಿ ಮಾಡಿದಾಳ | ಕೋ |
ಭೀಮಣ್ಗ ಕಾಮಣ್ಗ ಒಂದೆ ಎಡಿ ಮಾಡಿದಾಳ | ಕೋ |
ರಾಮಣ್ಣಾ ಲಕ್ಷ್ಮಣಗ ಒಂದೆ ಎಡಿ ಮಾಡಿದಾಳ | ಕೋ |
ಗಂಡಹೆಂಡಿರ ನಡುವೆ ಒಂದೆ ಎಡಿ ಮಾಡಿದಾಳ | ಕೋ |

ಬಳಿಕ ಊಟ ಮುಗಿಯುವದು. ಅದು ಸಂಜೆಯ ಊಟವೆಂದು ತೋರುವದು. ಸಂಜೆಯವರೆಗೆ ಏನೂ ಇಲ್ಲ. ಎಲ್ಲರ ಊಟ ಮುಗಿಯುತ್ತಲೇ ಮಲಗಿಕೊಳ್ಳುವ ಸಿದ್ಧತೆ ನಡೆಯುತ್ತದೆ.

ನೀಲವ್ಗ ನಿಂಬೆವ್ಗ ತನ್ನ ಬಲಕ ಹಾಕಿದಾಳ | ಕೋ |
ಗಂಗವ್ಗ ಗೌರವ್ಗ ತನ್ನ ಎಡಕ ಹಾಕಿದಾಳ | ಕೋ |
ರಾಮಣ್ಣಗ ಲಕ್ಷ್ಮಣಗ ಗಂಡನ ಬಲಕ ಹಾಕಿದಾಳ | ಕೋ |
ಭೀಮಣ್ಗ ಕಾಮಣ್ಗ ಗಂಡನ ಎಡಕ ಹಾಕಿದಾಳ | ಕೋ |
ಗಂಡಹೆಂಡರಿಗಿ ನಟ್ಟನಡುವೆ ಹಾಸಿದಾಳ | ಕೋ |

ಗಂಡುಮಕ್ಕಳು ನಾಲ್ವರೂ ಗಂಡ ಎಡಕ್ಕೂ ಬಲಕ್ಕೂ ಹೆಣ್ಣು ಮಕ್ಕಳು ತನ್ನ ಎಡಕ್ಕೂ ಬಲಕ್ಕೂ ಮಲಗುವಂತೆ ಹಾಸಿಗೆಯ ಸಿದ್ಧತೆ ಮಾಡುವಳು. ಬಳಿಕ ತಲೆವಾಗಿಲನ್ನು ಮುಚ್ಚಲು ಹೋಗುವಳು. ಆಕಾಲಕ್ಕೆ ಅವಳಿಗೆ ಭಾವನೆಗಳ ಮೇಲೆ ಭಾವನೆಗಳು ಬರತೊಡಗುವವು. ಈಗ ನಾನು ಮುಚ್ಚಿದ ಬಾಗಿಲನ್ನು ತೆರೆಯುವವರು ಯಾರು ? ಯಾವಾಗ ? – ಇತ್ಯಾದಿ.

ಮಾಯದ ನನ್ನ ಅಣ್ಣಾ ಮಲ್ಲಾಡಕಾರೆ ಹೋಗಿದಾನ | ಕೋ ||
ದಿಕ್ಕಿಲ್ಲದ ಬರ ನಮ್ಮ ಮಕ್ಕಳ ಸುತ್ತ ಬಂದಿತ್ತೇನ | ಕೋ ||
ರಾಜಾಕಿಲ್ಲದ ಬರ ನಮ್ಮ ರಾಯರ ಸುತ್ತ ಬಂದಿತ್ತೇನ | ಕೋ ||

ಹೀಗೆ ಯೋಚಿಸುತ್ತಿರುವಾಗಲೇ ಎಂಟು ಮಕ್ಕಳೂ ಗಂಡಹೆಂಡರೂ ನಿದ್ದೆ ಹೋದರು. ಅತ್ತ ಆಕೆಯ ಅಣ್ಣನು, ತನ್ನ ತಂಗಿಯಾದ ನೀಲವ್ವನ ಸುದ್ದಿಯನ್ನು ತಾಯಿಗೆ ಕೇಳುವನು.

ಮೊನ್ನೆ ಯಾರೆ ಬಂದಿದಳಪ್ಪ ಸೇರ ಜೋಳಾ ಬೇಡಿದಳಪ್ಪಾ | ಕೋ ||
ಸೇರ ಜೋಳಾ ಬೇಡಿದರ ಹೇರ ಜೋಳಾ ಕೊಡೂದಿತ್ತ | ಕೋ ||
ಮಕ್ಕಳಗಿತ್ತಿ ಬಡವ್ಯಾದರ ಇದ್ದಾಳವ್ವ | ಕೋ ||

ಎಂದವನೆ ಹೇರು ಜೋಳ ತೆಗೆದುಕೊಂಡು ತಂಗಿಯ ಊರಿಗೆ ಹೊರಡುವನು. ಅದೇಕೋ ಅವನಿಗೆ ತಂಗಿಯ ಸಮಾಚಾರ ತಿಳಕೊಳ್ಳುವ ಆತುರವು ಪ್ರಬಲವಾಗತೊಡಗಿತು.-

ನೀರೀಗಿ ಬಂದ ಅವ್ವಗಳಿರಾ ನೀಲನ ಸುದ್ದಿ ಕೇಳಿದರೇನ | ಕೋ |
ಆಕೀ ಸುದ್ದಿ ಕೇಳಿಲ್ಲಪ್ಪಾ ಆಕೀ ಮನಿಗಿ ಹೋಗಿಲಲಪ್ಪಾ | ಕೋ |

ಜೋಳದ ಹೇರು ತಕ್ಕೊಂಡು ತಂಗಿಯ ಮನೆಗೆ ಬರುವನು. ಹೊತ್ತು ಹೊರಟು ಇಷ್ಟು ಹೊತ್ತೇರಿದರೂ ತಂಗಿಯ ಸುಳಿವಿಲ್ಲ. ಬೆಳಗಾಗಿ ಇಷ್ಟು ವೇಳೆಯಾದರೂ ಬೀಗನ ಸುಳಿವಿಲ್ಲ. ಬಿಸಿಲು ಬಿದ್ದು ಇಷ್ಟು ಹೊತ್ತಾದರೂ ಮಕ್ಕಳ ಉಲಿವು ಇಲ್ಲ. ಅದೇಕೆ? ಮನೆಯ ಬಾಗಿಲು ಮುಂದೆ ಮಾಡಿದೆ. ಮನೆಯಲ್ಲಾದರೂ ಇರುವರೋ ಇಲಲವೋ ಎಂದು, ಯೋಚಿಸುತ್ತ ಬಾಗಿಲು ನೂಕುವನು. ಅದೇನು ದೃಶ್ಯ ಅದು !

ಬಾಗಿಲು ತೆರೆದು ನೋಡೂತನಾ ಹತ್ತು ಹೆಣಾ ಬಿದ್ದೀದಾವ | ಕೋ ||
ಹತ್ತರ ಕೂಡ ಹನ್ನೊಂದಂತ ಪೇಟಗಟಾರ ಮಾಡಿಕೊಂಡ | ಕೋ ||

ಹೀಗೆ ಹೃದಯದ್ರಾವಕವಾದ ಕಥೆಯು ದುಃಖದಲ್ಲಿ ಮುಗಿದು ಬಿಡುತ್ತದೆ. ಕಲ್ಲು ಹೃದಯ ಕರಗಿಸಲಿಕ್ಕೆ ಇಂಥ ದುಃಖಾಂತ ಕಥೆಗಳೇ ತಕ್ಕವೆಂದು ತೋರುವದು. ಸತ್ತು ಹೋದ ಆ ಹನ್ನೊಂದು ಜನರ ಅಂತ್ಯವಿಧಿಯನ್ನು ಮಾತ್ರ ಬಳಗದವರು ಬಹಳ ಚೆನ್ನಾಗಿ ಮಾಡಿದರೆಂದು ಹೇಳಿಬಿಡದೆ ಅದನ್ನು ತುಸು ವಿವರವಾಗಿ ಹೇಳಬೇಕು.-

ನೀಲವ್ವನ ನಿಂಬೆವ್ವನ ನಂಬೀ ಬನದಾಗಿಟ್ಟೀದಾರ | ಕೋ |
ಗಂಗವ್ವನ ಗೌರವ್ನ ಬಾಳೀ ಬನದಾಗಿಟ್ಟೀದಾರ | ಕೋ |
ರಾಮಣಗ ಲಕ್ಷ್ಮಣಗ ತೆಂಗಿನ ಬನದಾಗಿಟ್ಟೀದಾರ | ಕೋ |
ಗಂಡ ಹೆಂಡರನೊಯ್ದು ಶಿವನ ಪಾದದಲ್ಲಿಟ್ಟೀದಾರ | ಕೋ |
ಮಾಯದ ಅಣ್ಣನ ಒಯ್ದು ತಂಗೀ ಪಾದದಲ್ಲಿಟ್ಟೀದಾರ | ಕೋ |

ಈ ಅಂತ್ಯವಿಧಿಯ ವಿವರವನ್ನೂ ಅದನ್ನು ಆಚರಿಸಿದವರ ಬಳಗದವರನ್ನೂ ಬಗೆದು ನಾಚಿಕೆ ಪಡದೆ ಇರುವ ಜೀವವಾವುದಾದರೂ ಇದ್ದರೆ ಅದು ಜೀವವೇ ಅಲ್ಲ; ಕಲ್ಲು. ಇದನ್ನು ಕೇಳಿದ ಕಲ್ಲು ಸಹ ‘ತೀರಕೊಂಡು ತಂದರೂ ಕರಕೊಂಡು ತಿನ್ನಬೇಕೆಂದು” ನಿಶ್ಚಯಿಸಿ ಬಿಡಬಹುದು. ಆದ್ದರಿಂದಲೇ ಈ ಹಾಡಿನ ಫಲವಾಗಿ – “ಪ್ರೇಮಿಸೆಲೆ ಪ್ರೇಮಿಸು ಜೀವ ಜಡ ಭಾವವಿರಲು” ಎಂಬ ತತ್ವವು ಪ್ರತಿಧ್ವನಿ ಕೊಡುವದೆಂದು ಹೇಳಬಹುದು.

ಕಾವ್ಯಮಾತೆಯ ವಿವಿಧಾಂಗ

ಕಾವ್ಯಮಾತೆಯ ವಿವಿಧಾಂಗಗಳನ್ನೊಳಗೊಂಡ ಕನ್ನಡ ಸಾಹಿತ್ಯ ದೇವಿಯ ವಿರಾಟ ದರ್ಶನದಂತೆ, ಕಂಗೊಳಿಸುವ ಸ್ವರೂಪವನ್ನು ಸ್ಥೂಲಮಾನದಿಂದ ನಿರೀಕ್ಷಿಸಿದಂತಾಯಿತು. ಕಥೆ, ಭಾವಗೀತೆ, ಸಂವಾದ, ಓವಿ, ಆತ್ಮ ನಿವೇದನವೇ ಮೊದಲಾದ ರೀತಿಗಳನ್ನೂ, ಚುಚ್ಚುನುಡಿ, ಒಡಪುಗಳನ್ನೂ ಅಷ್ಟಿಷ್ಟು ಸವಿದದ್ದಾಯಿತು. ಆಕೆ ಸಾಹಿತ್ಯ ನಂದನದಲ್ಲಿ ಹಾಯ್ದ ಹೆಜ್ಜೆಯ ಸುಳುವು ಹಿಡಿದು, ಅನೇಕ ಕವಿರಾಜರು ರಾಜಮಾರ್ಗಗಳನ್ನು ನಿರ್ಮಿಸಿದರು. ಆಕೆಯು ಕಟ್ಟಿದ ಮಟ್ಟುಗಳ ಮಾದರಿಯಿಂದ ಷಷ್ಟಪದಿಗಳ ಕಟ್ಟೆಗಳನ್ನೂ, ಸಾಂಗತ್ಯದ ಸೋಪಾನಗಳನ್ನೂ, ರಗಳೆಗಳ ರಂಗಮಂಟಪಗಳನ್ನೂ ನಿರ್ಮಿಸಿ ಕ್ರಾಂತಿಕವಿಗಳೆನಿಸಿಕೊಂಡರು. ಆಕೆಯು ಪವಣಿಸಿದ ಕನ್ನಡದ ಕಟ್ಟುನುಡಿಗಳನ್ನು ನುಡಿಗಟ್ಟಿನಲ್ಲಿರಿಸಿ ಅಲಂಕಾರಗಳನ್ನು ಅಳವಡಿಸಿದರು. ಕನ್ನಡದ ಹೆಮ್ಮೆಯ ಸಾಹಿತ್ಯಕ್ಕೆಲ್ಲ ಕಾವ್ಯಮಾತೆಯ ಕೃತಿಗಳೇ ಕಾವ್ಯಮಾತೆಯಾಗಿ, ಅನೇಕ ಅಮರ ಸಂತಾನಗಳನ್ನು ಹೆತ್ತವು. ಹಾಲೂಡಿಸಿದವು. ಬೋಳಯಿಸಿದವು. ಮೈದಡವಿದವು ಸರ್ವಜ್ಞನು ಮುಂದುವರಿದು ಜನಪದ ಸಾಹಿತ್ಯಾಚಾರ್ಯನೆನಿಸಿಕೊಂಡನು. ಹರಿಹರನು ರಗಳೆಗಳ ಮಾದರಿಯಿಂದ ಸಾಹಿತ್ಯವನ್ನು ಸಾಮಾನ್ಯರಲ್ಲಿ ಹರಡಿದನು. ರಾಘವಾಂಕನು ಷಟ್ಪದಿಯ ದಾರಿಯಲ್ಲಿ ಮಾರ್ಗದರ್ಶಕನಾದನು. ರತ್ನಾಕರನು ಸಾಂಗತ್ಯದ ಸೌಂದರ್ಯ ಸೂಸಿ ಹರಿಯಿಸಿದನು. ಕಾವ್ಯಮಾತೆಯ ಸ್ತನ್ಯದಿಂದಲೇ ನಾಗರಿಕ ಸಾಹಿತ್ಯವು ಮೈಹಿಡಿಯಿತು. ಅದರ ಮನೋಪ್ರಕೃತಿಯು ಮಾರ್ಪಟ್ಟಿತು. ಅದರ ಆತ್ಮ ತೇಜಸ್ಸು ಆಕಾಶದವರೆಗೆ ಏರಿ ನಿಂತಿತು. ಕಾವ್ಯಮಾತೆಯು ಸೃಷ್ಟಿಯ ಹೊತ್ತಿಗೆಯೊಳಗಿನ ಅವ್ಯಕ್ತ ಭಾಷೆಯ ಮರ್ಮವನ್ನರಿತು ಇಂದಿಗೂ ಹಾಡುತ್ತಿರುವಳು. ಶತಶತಮಾನಗಳು ಉರುಳಿ ಹೋದರೂ ಆಕೆಯ ಹಾಡು ಮುಗಿದಿಲ್ಲ; ಆಕೆ ಹಾಡಿ ಬೇಸತ್ತಿಲ್ಲ. ದಿನಕ್ಕೊಂದು ಪರಿಯಂತೆ ಹೊಸ ಹಾಡು ಹೊಮ್ಮಿಸುತ್ತಿರುವಳು. ನುಡಿಯು ಆಕೆಯ ಬಾಯಿಯಲ್ಲಿ ಬೆಣ್ಣೆಯಂತೆ ಮಿದುವಾಗಿ ಮಿದ್ದಿದಂತೆ ಮಾರ್ಪೋಳೆಯುತ್ತಿರುವದು. ನಾಳಿನ ಹೊಸ ಕಾಲದ ಅರುಣೋದಯದಲ್ಲಿ ಮುಂಬೆಳಗಿನ ಉಷಾಗೀತಗಳನ್ನು ದಣಿವಿಲ್ಲದ ಎಚ್ಚರದಿಂದ ಕಲ್ಪಿಸುತ್ತಿರುವಳು. ಕಾವ್ಯಮಾತೆಯ ಶೈಲಿಯೇ ಶೈಲಿ. ಆಕೆಯ ಛಂದಸ್ಸೇ ಛಂಸ್ಸು, ನುಡಿಕಟ್ಟೇ ನುಡಿ ಕಟ್ಟಾಗಿ ಸಾಹಿತ್ಯದ ಸಿಂಗಾರವನ್ನು ನೂರು ಬಗೆಯಲ್ಲಿ ಬಗೆಗೊಳಿಸುತ್ತಿರುವದು. ಆ ಕಾವ್ಯ ಮಾತೆಯ ದಿವ್ಯ ಜೀವನವು ದಿವ್ಯ ಸಂತಾನವನ್ನು ಅಣಿಗೊಳಿಸುತ್ತಿರುವುದು ಆಕೆ ನೆಲದ ಹುಡಿಯಲ್ಲಿ ಕುಡಿಯನ್ನು ಮಿಂಚಿಸುತ್ತಿರುವಳು. ಮುಗಿಲಿನ ಬಯಲ ಹಾಳೆಯಲ್ಲಿ ಹಲವು ಬಗೆಯ ಹಾಡುಗಳನ್ನು ಹೆಣೆಯುತ್ತಿರುವಳು. ಅದಿಂದು ನವಜನ್ಮಕೆ ದಾರಿಯಾಗುತ್ತಿದೆ. ನವಜನ್ಮದ ನವಮಾಸವು ತುಂಬುತ್ತಿದೆ.