ಅಹಂಕಾರ ಮಮಕಾರಗಳೇ ಆಧಾರ

ಸಾಮಾನ್ಯ ಜನರು ಕೆಳಪ್ರಕೃತಿಯಲ್ಲಿ ನಿಂತು ಜೀವನ ನಡೆಸುತ್ತಾರೆಂದೂ ಕೆಳಪ್ರಕೃತಿಯೆಂದರೆ ಶರೀರ-ಪ್ರಾಣ-ಮನಗಳ ತಿಳುವಳಿಕೆಯೆಂದೂ ತಿಳಿದಿದ್ದೇವೆ. ಕೆಳಪ್ರಕೃತಿಯಲ್ಲಿ ನಿಂತು ಜೀವನ ನಡೆಸುವವರಿಗೆ ಅಹಂಕಾರ-ಮಮಕಾರ ಅಂದರೆ ನಾನು-ನನ್ನದು ಎಂಬ ಭಾವನೆ ಅನಿವಾರ್ಯವಾಗಿದೆ. ಈ ಭಾವನೆಯಿಂದಲೇ ಪ್ರೀತಿ, ಅಭಿಮಾನ, ಹೆಮ್ಮೆ, ಈರ್ಷೆ, ಮೊದಲಾದವುಗಳು ಮೈದಾಳುತ್ತವೆ. ಅವುಗಳಲ್ಲಿ ಕೆಲವು ಒಂದುಗೂಡಿಸುವುದಕ್ಕೆ ಕಾರಣವಾಗುತ್ತವೆ. ಪಗಡಿ ಆಡುವಾಗ ಒದಗುವ ಏರಿಕೆಯಾಗಲಿ; ಇಳಿಕೆಯಾಗಲಿ ಆಟವೇ ಅನಿಸುತ್ತದೆ. ಏರಿಕೆಯಲ್ಲಿ ಹುರುಪು ತೊಟ್ಟು ಇಳಿಕೆಯಲ್ಲಿ ಅಭಿಮಾನ ತೊಟ್ಟು ಆಡುತ್ತೇವೆ. ಸಂಸಾರ ರಂಗದಲ್ಲಿ ಇದೇ ಪ್ರವೃತ್ತಿಗೆ ಜೀವನನಿಷ್ಠೆ ಅನ್ನುತ್ತಾರೆ. ಈ ಜೀವನ ನಿಷ್ಠೆಯು ಸುಖಪ್ರಾಪ್ತಿಯ ದಾರಿಯೆಂದು ಹೇಳಲಾಗುತ್ತದೆ. ಸಾಮಾನ್ಯ ಜೀವನಕ್ಕೆ ಅಹಂಕಾರ ಮಮಕಾರಗಳೇ ಲಕ್ಷಣವೆಂದೂ ಅವನ್ನಿಟ್ಟುಕೊಳ್ಳುವುದರಲ್ಲಿ ಸಾಮಾನ್ಯ ಜನಕ್ಕೆ ಕಲ್ಯಾಣವೆಂದೂ ಶ್ರೀ ಅರವಿಂದಯೋಗಿಗಳು ಸಾರಿ ಹೇಳುತ್ತಾರೆ. ನನ್ನ ಶರೀರ, ನನ್ನ ಮನೆ, ನನ್ನ ಮಡದಿ ಮಕ್ಕಳು, ನನ್ನ ಹೊಲಮನೆ, ನನ್ನ ಊರು, ನನ್ನ ಹಾಡು, ನನ್ನ ದೇಶ, ನನ್ನ ದನ ಇವೆಲ್ಲವೂ ನನ್ನ ಕಣ್ಣಿಗೆ ಸುಂದರವಾಗಿ ತೋರುತ್ತವೆ; ಶ್ರೇಷ್ಠವಾಗಿ ತೋರುತ್ತವೆ. ಅವು ನನ್ನದಾಗಿರುವುದರಿಂದ ಅವುಗಳಲ್ಲಿ ಪ್ರೀತಿ ಹುಟ್ಟುತ್ತದೆ; ಅದನ್ನು ಕಾಯ್ದುಕೊಳ್ಳುವ ಎಚ್ಚರಿಕೆ ಹುಟ್ಟುತ್ತದೆ. ಅದರ ಸಂರಕ್ಷಣೆಗಾಗಿ ಹೋರಾಡಬೇಕಾಗುತ್ತದೆ. ಹೋರಾಟವು ಮನೆತನದಲ್ಲಿ ನಡೆದರೆ ಅದು ಗೃಹಕಲಹವೆನಿಸುತ್ತದೆ. ಅದು ನಾಡಿಯೊಳಗೆ ನಡೆದರೆ ಅಂತಃಕಲಹವೆಂದೂ, ಹೊರನಾಡಿನವರೊಂದಿಗೆ ನಡೆದರೆ ಯುದ್ಧವೆಂದೂ ಹೇಳಲ್ಪಡುತ್ತದೆ. ಹೀಗೆ ಅಹಂಕಾರ ಮಮಕಾರದಿಂದ ಆರಂಭವಾದ ಜೀವನವು ಯುದ್ಧ, ಸಂಹಾರಗಳಲ್ಲಿ ಕೊನೆಗೊಳ್ಳುವಂತೆ ತೋರಿದರೂ, ಜಗತ್ತಿನಲ್ಲಿಯ ಮಮತೆಯ ಪರಿಪಕ್ವದೆಶೆಯಾದ ಪ್ರೇಮ ವಿಸ್ತಾರವೂ ಸಾಕಷ್ಟಾಗಿದೆಯೆಂದು ಒಟ್ಟಿನಲ್ಲಿ ಹೇಳಬಹುದು. ಒಂದು ರೀತಿಯಿಂದ ನೋಡಿದರೆ ಇಡಿಯ ಜೀವನವೇ ಪ್ರೇಮ ರಸಾಯನವೆಂದು ಹೇಳಬಹುದು. ಪ್ರೀತಿಸುವುದು, ಅಭಿಮಾನಪಡುವುದು ಏತಕ್ಕಾಗಿ? ವಸ್ತುವಿನ ಮೇಲಿನ ಪ್ರೇಮಕ್ಕಾಗಿಯಲ್ಲವೇ? ಮಗು ತನ್ನ ಹತ್ತಿರ ಇದ್ದರೆ ಸುಖವಾಗುವುದು ತಾಯಿಗೆ ಅನಿವಾರ್ಯ. ಪ್ರೇಮಕ್ಕಾಗಿ ಮಗುವನ್ನು ಹತ್ತಿರ ಇರಿಸಿಕೊಳ್ಳುವಳು; ಮಗುವನ್ನು ಬೇರೆಡೆಗೆ ಹೋಗಗೊಡದಿರುವದೂ ಪ್ರೇಮಕ್ಕಾಗಿಯೇ. ಬಿಡುವುದಿಲ್ಲವೆಂದು ತಾಯಿ, ಮತ್ತೆ ಬರುವೆನು ಈಗ ಬಿಟ್ಟು ಬಿಡು ಎಂದು ಮಗು, ಹೀಗೆ ಮಾತಿಗೆ ಮಾತು ಬೆಳೆದು ವಾದವಾಗಿ, ವಾದವು ತಂಟೆಯಾಗಿ ಪರಿಣಮಿಸುವದು. ಆ ತಂಟೆಯ ಉದ್ದೇಶಕ್ಕೆ ಪ್ರೇಮವೆನ್ನದೆ ಗತ್ಯಂತರವಿಲ್ಲ. ತಂಟೆ, ಬಡಿದಾಟ, ಕೊಲೆ, ಅನಾಹುತಗಳೆಲ್ಲ ಪ್ರೇಮವಿಪಾಕವೆನಿಸುವುದಿಲ್ಲವೇ? ವಿರೋಧಕ ಪ್ರವೃತ್ತಿಗಳಲ್ಲಿ ಸಹ ವಿಪಾಕ ಸ್ವರೂಪದಲ್ಲಿಯೇ ಆಗಲೊಲ್ಲದೇಕೆ- ಪ್ರೇಮವನ್ನೇ ಕಾಣುವಾಗ, ಸ್ನೇಹಪರ ಪ್ರವೃತ್ತಿಗಳಲ್ಲಿ ಅದೇ ಪ್ರೇಮವು ಪರಿಪಾಕಗೊಳ್ಳುತ್ತಿರುವುದನ್ನು ಕಾಣುವೆವು.

ಅನಿಷ್ಟಗಳೊಡನೆ ಹೋರಾಟ

ಜೀವನದಲ್ಲಿ ಇಷ್ಟ-ಅನಿಷ್ಟಗಳೆರಡೂ ಇರುವುದರಿಂದಲೇ ಬದುಕು ಬಾಳುವ ಸಾಹಸ ನಡೆದಿದೆ. ಇಷ್ಟವಾದವುಗಳನ್ನು ಉಳಿಸಿಕೊಳ್ಳವುದಾಗಲಿ, ಅವುಗಳನ್ನು ಸಂಪಾದಿಸಿಕೊಳ್ಳುವದಾಗಲಿ ಒಂದು ಕಡೆಗೆ ಸಾಗಿಸುತ್ತದೆ. ಇನ್ನೊತ್ತಟ್ಟಿಗೆ ಅನಿಷ್ಟವಾದವುಗಳನ್ನು ಹೋಗಲಾಡಿಸುವುದಾಗಲಿ ಅವು ಬಾರದಂತೆ ಕಾವಲು ಮಾಡುವುದಾಗಲಿ ಸಾಗಿರುತ್ತದೆ. ಇಷ್ಟಾನಿಷ್ಟಗಳು ಬೆಳಕು ಕತ್ತಲೆಗಳಂತೆ. ಅರ್ಧ ಸಮಯ ಬೆಳಕು, ಅರ್ಧ ಸಮಯ ಕತ್ತಲೆ ಅಂದರೆ ಹಗಲು ಅರ್ಧವಾದರೆ ರಾತ್ರಿ ಅರ್ಧವೆಂದು ಹೇಳಲಾಗುತ್ತದೆ. ನಿಜವಾಗಿ ನೋಡಿದರೆ ಚಂದ್ರಮನಿಂದ ರಾತ್ರಿಯ ಬಹುಭಾಗವು ಬೆಳಕು ಧರಿಸುವುದನ್ನು ಕಾಣಬಹುದಾಗಿದೆ. ಕಣ್ಣು ಮುಚ್ಚಿಕೊಂಡು ಮಲಗಿ ಹಗಲು ಹೊತ್ತನ್ನೂ ರಾತ್ರಿಯಾಗಿ ಮಾಡಿಕೊಳ್ಳುವರುಂಟು. ರಾತ್ರಿಯ ಕತ್ತಲೆಗೆ ಕಂಗೆಡದೆ, ಹಗಲಿನ ಬೆಳಕನ್ನೂ ಅಲಕ್ಷಿಸದೆ ಇರುವ ಒಂದು ಎಚ್ಚರಿಕೆ ಗರತಿಯರ ಬಾಳಿನ ಕೆಚ್ಚಾಗಿರುತ್ತದೆ. ಆದ್ದರಿಂದಲೇ ಅವರು ಕತ್ತಲೆಯ ರಾತ್ರಿಯಲ್ಲಿಯೂ ದಾರಿ ಕಂಡಿದ್ದಾರೆ; ಬೆಳಕಿನ ಹಗಲಿನಲ್ಲಿ ಕಣ್ಣು ತೆರೆದು ಕಂಡ ಚೆಲುವಿಕೆಗೆ ಹಿಗ್ಗಿ ಹಾಡಿದ್ದಾರೆ. ಈ ಸ್ಥಿತಿಗೆ ರೋಗ ನಿವಾರಿಸಿಕೊಂಡು ಆರೋಗ್ಯ ಪಡೆಯುವ ರೀತಿಯೆನ್ನಬಹುದಾಗಿದೆ. ರೋಗ ಹೋದರೆ ಆರೋಗ್ಯ ಬಂದೀತು. ರೋಗ ನಿವಾರಣೆ ಅನಿವಾರ್ಯವಾದರೆ, ಆರೋಗ್ಯ ಸಂಪಾದನೆ ಅಷ್ಟೇ ಅನಿವಾರ್ಯ. ಅದರಂತೆ ಇಷ್ಟಗಳನ್ನು ಸಂರಕ್ಷಿಸಿಕೊಂಡು ಅನಿಷ್ಟಗಳನ್ನು ತಳ್ಳಿಹಾಕುವ ಕೆಲಸ, ಬೆಳೆಯ ಮೊಳಕೆ ಉಳಿದು ಬೆಳೆದು ಕೈಗೆ ಬರಬೇಕಾದರೆ, ಮೊಳಕೆಗೆ ತಡೆಯಾಗುವ ಕಸವನ್ನು ಕಿತ್ತುಹಾಕಿ, ಅದರ ಬೆಳಿಗೆಗೆ ನೀರು ಹೊಯ್ಯುವ ಕೆಲಸ ನಡೆಯಬೇಕಲ್ಲವೇ? ನಮ್ಮ ಜೀವನಕ್ಕೆ ಬಡತನ, ಗೃಹಕಲಹ, ಬಹುಸಂತಾನ ಈ ಮೂರು ಅನಿಷ್ಟಪ್ರಾಯವಾಗಿವೆ. ಇವುಗಳ ನಿವಾರಣೆಯ ಕಾರ್ಯ ಸಾಗಬೇಕಾಗಿದೆ. ಅದರೊಂದಿಗೆ ಬಡತನದಿಂದ ಸ್ಥಿತಿವಂತಿಕೆಯೂ, ಗೃಹಕಲಹದಿಂದ ಗೃಹ ಶಾಂತಿಯೂ, ಬಹು ಸಂತಾನದಿಂದ ಹಿತಮಿತ ಸಂತಾನವೂ ಮೊಗವೆತ್ತಿ ಬರಬೇಕಾಗಿದೆ. ಬಡತನದ ನಿವಾರಣೆಯ ಸಲುವಾಗಿ ಈ ಹೊತ್ತು ಜಗತ್ತಿನ ಜಾಣರೆಲ್ಲ ವಿಚಾರಿಸತೊಡಗಿದ್ದಾರೆ. ವಿಚಾರಿಸಿದವರು ಮಾಡಿನೋಡತೊಡಗಿದ್ದಾರೆ. ಆದರೆ ಪೂರ್ಣ ಯಶಸ್ಸು ದೊರೆತಂತೆ ತೋರುವದಿಲ್ಲ. ಬಾವಿ ತೋಡ ಹೊರಟಾಗ ಬೇತಾಳ ಕಾಣಿಸಿತಂತೆ. ಬಡತನ ನಿವಾರಣೆ ಮಾಡತೊಡಗುವಷ್ಟರಲ್ಲಿ ಬಡತನವು ಪೆಡಂಭೂತವಾಗಿ ನಿಲ್ಲತೊಡಗಿದೆ. ಆ ದಾರಿಯಲ್ಲಿ ಗರತಿಯರು, ಹಳ್ಳಿಯ ಹೆಂಗಸರು, ವಿದ್ಯಾಹೀನರಾದ ಅಬಲೆಯರು ಅದಾವ ದಾವತಿ ನಡೆಸಬಲ್ಲರು? ಅವರು “ಬಡತನ ನನಗಿರಲಿ ಭಾಳ ಮಕ್ಕಳಿರಲಿ. ಮ್ಯಾಲ ಗುರುವಿನ ದಯವಿರಲಿ” ಎಂಬ ಮಾತಿನಿಂದ, ಜೀವನದ ಮೂರು ಅರಿಷ್ಟಗಳಿಗೆ ಎರಡು ಉಪಾಯಗಳನ್ನು ಹೇಳಿಯೇ ಬಿಟ್ಟಿರುವರು.ಈ ಮಾತು ಅವ್ಯವಹಾರ್ಯವೆಂದು ವ್ಯವಹಾರಕುಶಲರಿಗೆ ಕಂಡುಬರುವುದು ಸಹಜ. ಮೂಢಭಾವನೆಯೆಂದು ಬುದ್ಧಿವಂತರಿಗೆ ಅನಿಸುವುದೇನು ಆಶ್ಚರ್ಯವಲ್ಲ. ಗರತಿಯರು ತಮಗಿರುವ ಬಡತನ ಹಾಗೂ ಬಹುಸಂತಾನ ಎಂಬ ಚಿಂತೆಗಳನ್ನು ಗುರುವಿನ ಮೇಲೆ ಹೊರಿಸಿ ತಾವು ನಿಶ್ಚಿಂತರಾಗಿದ್ದಾರೆ. ಗುರು ಎಂದರೆ ಸಾಮಾನ್ಯವನಲ್ಲ. ಹರ ಮುನಿದರೂ ಗುರು ಕಾಯುವನಂತೆ. ಗುರು ಅಂಥ ಸಮರ್ಥನು. ಹರನು ವಿಶ್ವನ್ಯಾಯದಂತೆ ವರ್ತಿಸುವಾಗ ಲೋಕಕ್ಕೆ ತೀರ ಅನಿಷ್ಟವೊದಗಿಸಿದರೆ ಗುರು ಕಾಯುವುದಕ್ಕೆ ಸಮರ್ಥನಾಗುವನೆಂದು ಅರ್ಥವಾದಂತಾಯಿತು. ಶ್ರೀತಾಯಿಯವರ ಒಂದು ಮಾತಿನಲ್ಲಿ ನಿರೀಕ್ಷಿಸುವಾ-

“ದೈವೀಕೃಪೆಯೊಂದಕ್ಕೇ ಈ ವಿಶ್ವವ್ಯಾಪಕ ನ್ಯಾಯದಲ್ಲಿ ಅಡ್ಡ ಬರುವ ಹಾಗೂ ಬದಲಿಸುವ ಸಾಮರ್ಥ್ಯವಿದೆ. ಅವತಾರಿಯ ಮಹಾಕಾರ್ಯವೆಂದರೆ ದೈವೀಕೃಪೆಯನ್ನು ಪೃಥ್ವಿಯ ಮೇಲೆ ಪ್ರಕಟಗೊಳಿಸುವುದೇ ಆಗಿದೆ.”

ಹರ ಮುನಿದಾಗಲೂ ಕಾಯುವಂಥ ಗುರುವೆಂದರೆ, ವಿಶ್ವವ್ಯಾಪಕ ನ್ಯಾಯಕ್ಕೆ ಅಡ್ಡ ಬರುವ ಹಾಗೂ ಬದಲಿಸುವ ಸಾಮರ್ಥ್ಯವುಳ್ಳವನು; ಅಂದರೆ ದೈವೀಕೃಪೆ ಪಡೆದವನು, ಅಂಥ ಗುರು ಎಲ್ಲ ಕಾಲದಲ್ಲಿಯೂ ಎಲ್ಲ ದೇಶಗಳಲ್ಲಿಯೂ ಇರದಿದ್ದರೆ ಜಗತ್ತೇ ಉಸಿರಾಡಿಸಲಾರದು. ಅಂಥ ಗುರುವನ್ನು ಕಾಣುವುದನ್ನು ನಮಗೆ ಇಷ್ಟವುಂಟಾಗಿಲ್ಲ ಇನ್ನೂ. ಶ್ರೀ ಪುರಂದರದಾಸರು ಚಿಂತೆಯನ್ನು ಕಳಕೊಳ್ಳುವ ಉಪಾಯ ಹೇಳಿದ್ದನ್ನು ಕೇಳಿದ್ದೇವೆ-

“ಮನವು ಮಾಧವನೊಳು ಮರೆಯಾಗುವ ತನಕ |
ಅನುಗಾಲವು ಚಿಂತೆಯು ||
ಪೊಡವಿಯೊಳಗೆ ನಮ್ಮ ಪುರಂದರ ವಿಠಲನ
ಬಿಡದೆ ಸ್ಮರಿಸಿದರೆ ಚಿಂತೆ | ನಿಶ್ಚಿಂತೆ ||

ಇದು ಗರತಿಯ ಮಂತ್ರ

ಬಡತನ ನನಗಿರಲಿ ಭಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದೆಯಯಿರಲಿ ನನ ಗುರುವೆ
ಬಡತನದ ಚಿಂತಿ ನಿನಗಿರಲಿ

ಗುರುವಿನ ದಯೆಯ ಹಿಂಬಲ ಮುಂಬಲದಲ್ಲಿ ಗರತಿಯು – “ಮಕ್ಕಳ ಕೊಡು. ಮುತ್ತೈದೆತನಕೊಡು, ಮಾರಾಯರ ಮುಂದೆ ಮರಣ ಕೊಡು” ಎಂದು ಪ್ರಾರ್ಥಿಸುವಳು. ಮಕ್ಕಳೊಂದಿಗಳಾಗಿರುವುದೂ, ಕೈಹಿಡಿದ ನಲ್ಲನೊಡನೆ ಜೊತೆಗಾರ್ತಿಯಾಗಿರುವುದೂ ಅವಳಿಷ್ಟ. ಬಡತನ ಬಹುಸಂತಾನಗಳು ಅವಳಾಸೆಪಡುವ ಇಷ್ಟಕ್ಕೆ ಅನಿಷ್ಟ ಫಲಗಳಾಗಿ ಪ್ರಾಪ್ತಿಯಾಗುತ್ತಿದ್ದರೂ ಅವುಗಳಿಗೆ ಹೆದರದೆ, ಗುರುವಿನನ್ನು ನಂಬಿ ಜೀವನರಂಗದಲ್ಲಿ ಕುಣಿಯಲು ಮುಂದುವರಿಯುವಳು. “ಇದ್ದದ್ದು ಮರೆಯೋಣ. ಇಲ್ಲದ್ದು ತೆರೆಯೋಣ, ಹಾಲ್ಜೇನು ಸುರಿಯೋನ” ಎನ್ನುವ ಹೂಣಿಕೆ ಇದೇ ಆಗಿರಲಾರದೇ? “ಗುಡ್ಡಾ ತಲೆದೂಗಲಿ, ಹೊಳೆಹಳ್ಳಾ ನೂಗಲಿ, ದರಿಕೊಳ್ಳಾಕೂಗಲಿ” ಎನ್ನುವ ಸೈತು ಇದೇ ಆಗಿರಲಾರದೇ? ಆಕೆಗೆ ಬಿಸಿ ದುಃಖದ ಅರಿವೂ ಇಲ್ಲ; ಹುಸಿ ಸುಖದ ಪರಿವೂ ಇಲ್ಲವೆಂದರೆ ಆಕೆಯು ಅಮಾನುಷಳಾಗಿರಲಾರಳು. ಅವಳು “ಮುರುಕು ತೊಟ್ಟಿಲಿಗೊಂದು ಹರಕು ಚಾಪೆಯ ಹಾಸಿ, ಅರಚುಪಾಪನ ಮಲಗಿಸಿ” ಹಾಡಿ ಹಿಗ್ಗುವಳು. ನುಚ್ಚಂಬಲಿ ಉಣಿಸಿ ಮಕ್ಕಳನ್ನು ಸಲಹುವಳು. ಬಹುಮಕ್ಕಳ ತಾಯೊಬ್ಬಳು, ಮಕ್ಕಳಿಗೆ ಸಾಕಾಗುವಷ್ಟು ಹಾಸಿಗೆ ಇಲ್ಲದಾಗಲು ಉಟ್ಟ ಸೀರೆಯನ್ನೇ ಅರ್ಧ ಹಾಸಿ ಅವುಗಳನ್ನು ಮಲಗಿಸಿದಳೆಂದೂ ಅದರ ಮೇಲೆ ಮಕ್ಕಳು ಮಲಗಿ ಇನ್ನೂ ಸ್ಥಳುಳಿಯಲು ಇನ್ನಿಬ್ಬರು ಮಕ್ಕಳಿದ್ದರೆ ಲೇಸಾಗುತ್ತಿತ್ತೆಂದು ಚಿಂತಿಸಿದಳೆಂದೂ ಜಾನಪದ ಕಥೆಯಿದೆ. “ಸಮುದ್ರಕ್ಕೆ ಡೇತು ಕಟ್ಟುವ ಹನಮಂತನಂಥ ವೀರ ಸೇವಕನಿದ್ದರೂ ಅಡವಿ ಅರಣ್ಯದಾಗ ಹಡೆದಾಳ ಸೀತಮ್ಮ ತೊಡೆಯ ತೊಳಿಯಾಕ ನೀರಿಲ್ಲ” ಎಂಬ ಸೀತೆಯ ಹಾಡು ಬಡವಿಯ ಎದೆಯನ್ನು ಗಟ್ಟಿಗೊಳಿಸುವದು. ಗರತಿಗೆ ಬಡತನ-ಸಿರಿವಂತಿಕೆಗಳ ಪರಿವೆಯಿಲ್ಲ. ಅವುಗಳ ಜೀವಾಳದಲ್ಲಿ ಹುದುಗಿದ ಒಲುಮೆಯನ್ನು ಮಾತ್ರ ಲಕ್ಷಿಸುತ್ತಾಳೆ.-

ರಾಗೀಯ ಒಣರೊಟ್ಟಿ ರಾಜಗೋಳಿಯ ಪಲ್ಲೆ
ರಾಜಕು ತವರು ಬಡವರ | ಮನಿಯಾಗ |
ನಾಕು ದಿನವಿದ್ದು ಬರುವೇನ ||

ತವರು ಮನೆಯ ರಾಗಿಯ ಒಣರೊಟ್ಟಿ, ರಾಜಗೋಳಿಯ ಪಲ್ಲಿ ಊಟಮಾಡಿ ನಾಲ್ಕು ದಿನ ಇದ್ದು ಬಂದರೆ, ಗರತಿಗೆ ಹೊಸ ಜೀವ ಬರುತ್ತದೆ; ಜೀವಕಕೆ ಬಿಸಿರಕ್ತ ಬರುತ್ತದೆ. ಅಂತೆಯೇ ಆಕೆ ಹೇಳುವದೇನಂದರೆ-

ತಾಯಿಯ ಮನಿಗ್ಹೋಗಿ ಬಾಯಿ ಬೇಡಿದ್ದುಂಡೆ
ಶಾಂವೀಗಿ ಉಂಡೆ ಸೈದಾನ | ಹಡೆದೌವ್ನ |
ಮಾರಿ ನೋಡಿ ಉಂಡೆ ಮೊಲೆ ಹಾಲ ||

ತಾಯಿಯ ಮುಖನೋಡುತ್ತ ತವರುಮನೆಯಲ್ಲಿ ನಾಲ್ಕೊಪ್ಪತ್ತು ಇದ್ದು ಬಂದರೆ, ಮತ್ತೊಮ್ಮೆ ಕೂಸಾಗಿ ಮೊಲೆಹಾಲ ಉಂಡ ಹಾಗೆಯೇ ಆಗುತ್ತದೆ. ಅದೇ ಹಂಬಲಕ್ಕಾಗಿ ಹಡೆದವ್ವನನ್ನು ತನ್ನಲ್ಲಿಗೆ ಕರೆಯಿಸಿಕೊಳ್ಳುವಳು. ಹಡೆದವ್ವನು ಬರುವಳೆಂದು ಗರತಿಯು ನಡೆಯಿಸಿದ ಸಿದ್ಧತೆ, ಮನಸ್ಸಿನೊಳಗಿಟ್ಟ ಹಂಬಲ ನೋಡಬಹುದು-

ಹಡೆದವ್ವ ಬರತ್ಯೆಂದು ಹರವೀಲಿ ನೀರಿಟ್ಟ
ಕರಿಗೆರಿಯ ಸೀರಿ ಹೊರಗಿಟ್ಟ | ಹೆತ್ತವ್ಗ
ಹರದಾರಿ ಮ್ಯಾಲ ನೆದರಿಟ್ಟ |

ಹರವಿಯಂಥ ಮಣ್ಣಭಾಂಡೆಯಲ್ಲಿ ನೀರು ಕಾಯಿಸಿಕೊಳ್ಳುವ ಪರಿಸ್ಥಿತಿಯಿದೆ. ಬಡತನದಲ್ಲಿಯೇ ಬಡಿವಾರವೆನ್ನುವಂತೆ ‘ಕರಿಗೆರಿಯ ಸೀರಿ’ಯನ್ನು ಗಂಟಿನಿಂದ ಹೊರಗೆ ತೆಗೆದಿದ್ದಾಳೆ. ಮೇಲಾಗಿ ಹರದಾರಿ ಮ್ಯಾಲ ನೆದರಿಟ್ಟ ಮಾತು ಅವಳ ಹಂಬಲಿಕೆಗೆ ಸಾಕಷಿ. ಶ್ರೀರಾಜಾರಾಮ ಮೋಹನರಾಯ ಅವರಲ್ಲಿ ಒಂದು ಹಿರಿದಾದ ಗುಣವಿತ್ತೆಂದು ಹೇಳುತ್ತಾರೆ. ಭಾರತೀಯರ ಕುಂದುಕೊರತೆಗಳನ್ನು ಅವರ ಮುಖದ ಮುಂದೆಯೇ ತೆಗಳಿ, ಅವರ ಕೀರ್ತಿಯನ್ನು ಅನ್ಯರ ಮುಂದೆ ಬಣ್ಣಿಸುತ್ತಿದ್ದರು. ಅಂಥ ಗುಣವು ನಮ್ಮ ಗರತಿಯರಲ್ಲಿಯೂ ಸಾಕಷ್ಟಿದೆಯೆಂದು ತೋರುವದು. ತವರು ಮನೆಗೆ ಬಂದಾಗ ವಸ್ತು ಬೇಕು, ವಸ್ತ್ರಬೇಕು-ಎಂದು ಕಾಡಿಬೇಡುವಳಾದರೂ ಕೊಟ್ಟಷ್ಟರಿಂದ ಸಮಾಧಾನವಾಗುವುದೇ ಇಲ್ಲವೆನ್ನಬಹುದು. ಆದರೆ ಅನ್ನಿಗರಲ್ಲಿ ಆ ಸುದ್ದಿ ಹೇಳುವಾಗ ತವರವರ ಕೊಡುಗೆಯನ್ನು ದೊಡ್ಡದು ಮಾಡಿ ಹೇಳಿಕೊಳ್ಳುವಳು-

ಅವರೀಗಿ ಅವರಣ್ಣ ಅವಲಕ್ಕಿ ಖಳುವ್ಯಾನ
ನಮ್ಮಣ್ಣನೇನು ಬಡವೇನ | ಖ್ಯಾದೀಗಿ |
ಗರಿಯೊಳಗ ಘಳಗಿ ಖಳಸ್ಯಾನ

ಅಣ್ಣ ತಮ್ಮಂದಿರು ಸಹೋದರಿಯ ಮನೆಗೆ, ಬರುವಂತೆ ಬಂದರೂ ಆಕೆಯ ಕಣ್ಣಿಗೆ ರಾಜ ವೈಭವವೇ ಕಾಣಿಸುತ್ತದೆ.

ಸರದಾರ ಬರುವಾಗ ಸುರಿದಾವ ಮಲ್ಲೀಗಿ
ಧೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ |
ಗೊನಿಬಾಗಿ ಹಾಲ ಸುರಿದಾವ ||
ಕುದುರೀಯ ಕುಣಿಸುತ ಆನೀಯ ನಡಿಸುತ
ಅರಗಿಣಿಗೆ ಮಾತ ಕಲಿಸೂತ | ಬರತಾನ |
ಬರಿಗೊಡದಮ್ಮ ಬದಿಗಾಗ ||

ಅಣ್ಣನಾಗಲಿ ತಮ್ಮನಾಗಲಿ ಶ್ರೇಷ್ಠರಾಗಿ ತೋರುವಂತೆ ಗರತಿಯ ಕಣ್ಣಿಗೆ ಅವರು ಮಾಡುವ ಉದ್ಯೋಗವೂ ಶ್ರೇಷ್ಠತರದ್ದಾಗಿ ಕಾಣುವದು. ಬೆಳೆಗಾಲದಲ್ಲಿ ಹಕ್ಕಿ ಹೊಡೆಯಲಿ, ರಾಶಿಯ ಕಾಲಕ್ಕೆ ಜೋಳ ತೂರಲಿ, ಆ ಕೆಲಸಗಳೆಲ್ಲ ಅವಳಿಗೆ ದಿವ್ಯವಾಗಿಯೇ ತೋರುವವು.

ಮಲ್ಹಾಡದ್ಹಕ್ಕೀಗಿ ಮಂಚ್ಹಾಕಿ ನನ ತಮ್ಮ
ಕಂಚೀನ ಗುಂಡು ಕವಣೀಯ | ಹೊಡೆದರ |
ಕೆಂಚು ನಿನ ತೋಳ ಹೊಳದಾವ ||
ಕೆಂಚ ನನ ತಮ್ಮಯ್ಯ ಕೆಮಜೋಳ ತೂರ್ಯಾನ
ಸುಂಕ ಹಾರ್ಯಾವ ಸುರಪೂರ | ಬಾಲ್ಯಾರು |
ಸುಂಕ ನೋಡುತಲೆ ಬೆರಗ್ಯಾರ ||

ಕಂಚೀನ ಗುಂಡು ಕವಣಿಯು ಅದಾವ ಕನಸಿನ ನಾಡಿನದೊ ತಿಳಿಯದು. ಕೆಂಜೋಳದ ಸುಂಕು ನೋಡಿ ಬೆರಗಿದ ಸುರಪುರ ಬಾಲ್ಯಾರು, ಕಲಬುರ್ಗಿ ಜಿಲ್ಹೆಯ ಸುರಪುರದವರೋ ಅಮರಾವತಿಯ ನಗರದವರೋ ಹೇಳಿಕ್ಕಾಗದು. ಅಣ್ಣತಮ್ಮರಂತೆ ಅಕ್ಕತಂಗಿಯರೂ ಚೆಲುವಿಯರೇ. ಗಿಡ್ಡ ನಿಲವಿನಲ್ಲಿ ಒಂದು ಚೆಲುವು ಕಂಗೊಳಿಸಿದರೆ, ಉದ್ದ ನಿಲವಿನಲ್ಲಿ ಇನ್ನೊಂದು ಚೆಲುವು ಮನಗೊಳಿಸುತ್ತದೆ.

ಗಿಡ್ಡರು ನಡೆದರೆ ಗಿಣಿಹಿಂಡು ನಡೆದಂಗ |
ಉದ್ದನ ಬಾಲಿ ನನ ತಂಗಿ | ನಡೆದರ |
ರುದ್ದರನ ಥೇರ ಎಳೆದಾಂಗ ||

ತನ್ನವರ ರೂಪ, ಗುಣ, ಮಾತು, ಕಥೆ ಎಲ್ಲವೂ ಚೆನ್ನವೇ, ತಮ್ಮನ ಮಾತು ಬಂಡೀಗಿ ಕೀಲು ಜಡಿದಂತೆ, ಪುಂಡೀಯ ಪಲ್ಲೀಯ ಚಂಡೀಯ ಕಡಿದಂತೆ. ಎಲಿಬಳ್ಳಿಯೊಳಗೆ ಸುಳಿದರೆ ತಮ್ಮನು ಎಲೆಗೊಂದು ಮಾತು ಒಗೆಯುವನಂತೆ. ಹಸಿವೆ ನೀರಡಲಿಕೆ ಹಾರಿಸುವಂಥ ತೋಟ ಅಣ್ಣನಿಗಿರುತ್ತದೆ. ಅವನು “ತೋಟದ ಹೂವ ತೆಲಿತುಂಬ ಇಟಗೊಂಡು ಊಟದ ಹಂಬಲ ಮರೆಯುವನಂತೆ. ತಮ್ಮನು ಕುರಿ ಕಾಯ್ದರೂ ಚಂದವೇ ಅವನ ಉಪಕರಣಗಳು ಚಂದವೇ.”

ಎಳಿಹುಲ್ಲು ಅಡವ್ಯಾಗ ತಿಳಿನೀರು ಕೊಳದಾಗ
ಬಲವುಳ್ಳ ನಾಯಿ ಸಾಕ್ಯಾನ | ನನ ತಮ್ಮ |
ಒನಪೀಲೆ ಕುರಿಯ ಕಾಯ್ದಾನ ||

ತಮ್ಮನ ಹೋರಿಗಳು ಅವೆಷ್ಟು ಬಲಶಾಲಿ-ವೇಗಶಾಲಿ! ನೋಡಿರಿ.

ನಕ್ಕರ ನಗತಾವ ಚಿಕ್ಕ ತಮ್ಮನ ಹೋರಿ
ಹಕ್ಕಿ ಹರಿದರ ಬೆದರ್ಯಾವ | ನಗರದ |
ಜಕ್ಕಾತಿ ಮೀರಿ ಬರತಾವ ||

ಹಂತಿಯ ಎತ್ತುಗಳು ನಮ್ಮವು ! ಅವು ಸುಂಕದಲ್ಲಿ ಮುಳುಗಿದರೆ ಸಮಾಧಾನವಿಲ್ಲದ ಅಕ್ಕನಿಗೆ, ಅವುಗಳ ಮೈಯನ್ನು ಸೆರಗಿನಿಂದ ಒರಸುತ್ತಾಳೆ. ಬೇಸರವಿಲ್ಲ. ಹಂತಿಯ ಎತ್ತು ಹದಿನಾರಿವೆ-

ಹಂತೀಯ ನಮ್ಮೆತ್ತು ಹಂತೀಲಿ ಬಂದರ
ಸೆರಗೀಲಿ ಸುಂಕ ವರಸೇನ | ತಮ್ಮನ |
ಹಂತೀಯ ಎತ್ತು ಹದಿನಾರ ||

ಗರತಿಯ ಗೆಳತಿಯ ಗಾತ್ರ, ರೂಪ, ತೊಡುಗೆಗಳನ್ನು ಹೊಂದಿಸಿ, ಆಕೆಯ ಆಕಾರವನ್ನು ಕಲ್ಪಿಸಬಹುದು. ಅವಳೆಂದರೆ ಗರತಿಗೆ ಅದೆಷ್ಟು ಅಕ್ಕರತೆಯೋ.

ಮೂಗುತಿ ಮುಂಭಾರ ತುರುಬಿನ ಹಿಂಭಾರ
ಸೇರಿನ ಒಂಕಿ ಕೈಭಾರ | ನನ ಗೆಳದಿ |
ನಾ ಕೊಟ್ಟ ಸೀರಿ ನಿಲಿಭಾರ ||

ಭಾರವಾದ ಮೂಗುತಿ ಮುಂಜಗ್ಗುತ್ತಿದೆ; ದೊಡ್ಡ ತುರುಬು ಹಿಂಜೆಗ್ಗುತ್ತಿದೆ. ಭಾರವಾದ ಒಂಕಿಗಳು ಮಗ್ಗುಲಗಳನ್ನು ಜಗ್ಗುತ್ತಿವೆ. ಅಂಥ ಗೆಳತಿಗೆ ಕೆಳಗೆ ಜಗ್ಗುವಂತೆ ಭಾರವಾದ ಸೀರೆಯನ್ನು ಗರತಿಯು ಬೇಕಂತಲೇ ಕೊಟ್ಟು ಅಕ್ಕರೆಪಡುತ್ತಿದ್ದಾಳೆ. ಇನ್ನು ಎಳ್ಳಹೂವಿನ ಸೀರೆಯುಟ್ಟು ಕೊರಳಲ್ಲಿ ಚಿತ್ತಾಕ ಧರಿಸಿ ರಾತ್ರಿಯೇ ಒಂದು ಎತ್ತು ಇಳಿದ ಗೆಳತಿಯನ್ನು ಕಾಣಹೋದ ಗರತಿಯು ಧಾವಿಸಿ “ಅರಳೇಲಿ ಮಗನ ಹೆಸರೇನ?” ಎಂದು ಕೇಳಿದರೆ ಆಶ್ಚರ್ಯವೇನಲ್ಲ. ಇನ್ನು ಗರತಿಗೆ ಗೆಳತಿ ಕೊಟ್ಟ ಕುಬಸ ಹೇಗಿದೆ? ಚೆಂದಕ್ಕೆ ಚಂದ ಬೆರೆತಿದೆ!

ಗೆಳತಿ ಮಾಡಿದ ಕುಬಸ ತಿಳಿನೀರಾಗೊಗೆತದೇನ |
ಬಿಳಿ ಉಸುಬಿನಾಗ ಹರವೇನ | ಮಲ್ಲಾಡ |
ಗಿಣಿ ಬಂದು ಮಗ್ಗಿ ತಗದಾವ ||

ಈ ವರೆಗಿನ ವಿವರವೆಲ್ಲವೂ ಪ್ರೇಮಪರಿಪಾಕ ಕ್ರಿಯೆಯ ಮಾತಾಯಿತು. ಆದರೆ ಜೀವನದಲ್ಲಿ ಪರಿಪಾಕದೊಂದಿಗೆ ವಿಪಾಕವೂ ಒಂದಿರುತ್ತದೆ. ಅದು ಅತ್ತೆಯ ಮನೆಯಲ್ಲಿ ನಡೆಯುತ್ತದೆ. ಆದರೆ ಅಲ್ಲಿ ವಿಪಾಕದೊಂದಿಗೆ ಪರಿಪಾಕೂ ಕಾಣತೊಡಗುತ್ತದೆ. ಅತ್ತೆಯ ಮನೆಯೆಂದರೆ ಬೆಳದಿಂಗಳು ಬೀಸಲಾಗುವ ಸ್ಥಳ ಸೊಸೆಗೆ. ಸರಮುತ್ತು ಮಾಡಿ ತವರವರು ಸಲಹಿದ ಸೊಸೆಯು, ಅಡಿಗೆಯ ಮನೆಯಲ್ಲಿ ಅರವತ್ತು ಗಂಗಾಳ ಬೆಳಗಿದರೂ ಅತ್ತೆಯ ಬೈಗಳು ತಪ್ಪುವದಿಲ್ಲ. ಆಗ ಸೊಸೆ ತನ್ನಲ್ಲಿ ತಾನು ಹೀಗೆ ಹಾಡಿಕೊಳ್ಳುತ್ತಾಳೆ.-

ಚಿಂತಾಕು ಇಡಲಿಲ್ಲ ಚಿಂತಿ ಬಿಟ್ಟಿರಲಿಲ್ಲ
ಎಂಥಲ್ಲಿ ಕೊಟ್ಟಿ ಹಡೆದವ್ವ | ನಡುಮನಿ |
ಜಂತಿ ಜರೆದ್ಹಾಂಗ ಜರದೇನ ||

ಅದೆಷ್ಟು ಸೋಸಿ ನಡೆದರೂ ಅತ್ತೆಗೆ ಅರಿಕೆಯೇ ಇರುವದಿಲ್ಲ. ಅಸಹಾಯಳಾದ ಸೊಸೆ ಏನು ಮಾಡುವಳು? ಕಾಳಿದಾಸನ ಯಕ್ಷನು ಮೇಘವನ್ನೇ ದೂತನನ್ನಾಗಿ ಮಾಡಿ ಕಳಿಸಿದಂತೆ, ಗರತಿಯು ಗೋಕಾವಿ ಮುಂದಿನ ಕಾಕೀಯ ಗಿಡಗಳೊಡನೆ ಹೇಳಿಕಳಿಸುತ್ತಾಳೆ. ಏನೆಂದರೆ-“ಅತ್ತೇ ಮನೆಯ ಇಗ್ಗರ ಬಹಳವಾಗಿದೆ. ಇರಲಾರೆ.” ಭಾವನಾಗಲಿ, ಭಾವನ ಹೆಂಡತಿಯಾಗಲಿ ಮುನಿದರೆ ತಪ್ಪು ಒಪ್ಪಿಕೊಳ್ಳುವುದು.

ಭಾವಯ್ಯ ಮುನಿದರ ಬಲಗಾಲ ಹಿಡಿದೇನ
ಭಾವಯ್ಯನ ಮಡದಿ ನೆಗೆಣ್ಣಿ | ಮುನಿದರ |
ಬಾರಕ್ಕನೆಂದು ಕರೆದೇನ ||

ಗರುಡನು ಬಯ್ದರೂ ಮಾತನಾಡಿಸಿದರೆಂದು ಹಿಗ್ಗು. ಹೊಡೆದರೆ ತನ್ನೊಡವೆಯಾಗಿ ಹತ್ತಿರಕ್ಕೆ ಬಂದವರೆಂದು ಹಿಗ್ಗು. ಅದಕ್ಕೆ ಕಣ್ಣೀರು ಹಾಕುವುದೇ ಇಲ್ಲ. ಆದರೆ ಮೈದುನನು ವಯಸ್ಸಿನಲ್ಲಿ ಚಿಕ್ಕವನು. ತಮ್ಮನಂತೆ ಅವನು ಅಧಿಕಾರ ನಡೆಸಹತ್ತಿದರೆ ಗರತಿಗೆ ಸಹನವಾಗುವುದಿಲ್ಲ. ಅತ್ತು ಅತ್ತು ಮೋಡವಿಲ್ಲದ ಮಳೆಯನ್ನೇ ಸುರಿಸುತ್ತಾಳೆ. ಹೆತ್ತಾಯಿಗೆ ಸರಿಯಾದ ಅತ್ತಿಗೆ ಬಯ್ಯುವರೇ?

ಮಾರಾಯರು ಬೈದರೆ ಬಾರಾವು ಕಣ್ಣೀರು
ಮಾರಾಯರ ತಮ್ಮ ಮೈದೂನ | ಬೈದರ |
ಮಾಡಿಲ್ಲದ ಮಳೆಯು ಸುರಿದಾಂಗ ||
ಮೈದುನ ಬೈದರ ಹೊಯ್ದ ಹೋಳಿಗಿಯಾದ
ಕೊಯ್ದ ಮಲ್ಲೀಗಿ ನನೆಯಾದ || ಮರ್ತ್ಯಾದಾಗ
ಅತ್ತೀಗಿ ಹೆತ್ತಾಯಿ ಸರಿಯಂದ ||

ಮೈದುನನೇ ಮಗನ ಸರಿಯಾಗಿರಬೇಕೆಂದಾಗ ಅವನ ಹೆಂಡತಿ ಹಾಲುಗಲ್ಲ ಆರದ ಬಾಲೆ ಬೆಣ್ಣೆಯಲ್ಲಿ ಮುಳ್ಳು ಮುರಿದಂತೆ ಮಾತನಾಡಿದರೆ ನೇಗೆಣ್ಣಿ ಸಣ್ಣಾಕೆಯನ್ನಬಹುದೇ? ಅತ್ತೆಯ ಮನೆಯ ಸೊಸೆಯೆಂದರೆ ದೀನಲೀನವಾಗಿ ಜೀವನ ನಡೆಸಬೇಕೆಂದರೇನು? ಇಲ್ಲ. ವಿನಯವು ಸಾಕಷ್ಟಿದ್ದರೆ ತೀರಿತು. ಅದು ದೀನತೆ-ಲೀನತೆಗಳ ಸೀಮೆಗೆ ಇಳಿಯಬಾರದು. ಅಕ್ಕರೆ ತೋರಿದಲ್ಲಿ ಗರತಿ ಸವಿಸಕ್ಕರೆ; ಆಡಿಕೊಂಡವರನ್ನು ಈಡಾಡುವಳೇ ಸರಿ.

ಹಚ್ಚಿಕೊಂಡವ್ವಗ ಚೊಚ್ಚೀಲ ಮಗಳಾದ
ಬಿಚ್ಚಾಡಿಕೊಳುವ ವೈರೀಯ | ಮನಿಮುಂದ?
ಬಿಚ್ಚುಗತ್ಯಾಗಿ ಹೊಳೆದೇನ||

ಬಡವರ ಸೊಸೆಗೆ, ಬಾಯಿ ಸಡಿಲು ಬಿಡುವವರೆಲ್ಲರೂ ಅತ್ತೆಗಳೇ ಆಗುತ್ತಾರೆಂದು ಶ್ರೀ ಬೇಂದ್ರೆಯವರು ಒಂದು ಕಡೆಯಲ್ಲಿ ಹೇಳಿದ್ದಾರೆ. ಅಂಥ ಊರ ಅತ್ತೆಗಳಿಗೆ ಹೆದರಿ ಮುದುರುವವಳು ಗರತಿಯೇ ಅಲ್ಲವೆನ್ನಬೇಕಾದೀತು. ಆಕೆಯಲ್ಲಿ ನೈತಿಕ ಬಲವಿರುವದಲ್ಲದೆ, ಅತ್ತೆಯ ಮನೆಯ ನಿರ್ಭಯ ಜೀವನದ ಪರಿವೆಯೂ ಇರುತ್ತದೆ-

ಅಂಜೀಕಿ ತೋರಿದರ ಅಂಜುವರ ಮಗಳಲ್ಲ |
ಮುಂಜಾನದಾಗ ಹಿಲಿಕರಡಿ | ತೋರಿದರ |
ಅಂಜಿ ತಿರುಗುವರ ಸೊಸಿಯಲ್ಲ ||

ತವರವರು ದೂರದಲ್ಲಿ ಇಳಿದರು. ಅತ್ತಿ ಪ್ರತಿಕಕ್ಷಿ. ಪರಸ್ಥಳ; ಅಪರಿಚಿತ ಜನ. ಗಂಡನ ಕೃಪೆ ಇನ್ನೂ ಪ್ರಾಪ್ತವಾಗಿಲ್ಲ. ಅಂಥ ಪ್ರಸಂಗದಲ್ಲಿ ಅತ್ತೆಯ ಮನೆ ಕಟ್ಟಾರಣ್ಯವೇ ಸರಿ. ಸಹಾಯಕರಿಲ್ಲದೆ, ಪ್ರತಿಕೂಲಶಕ್ತಿಗಳು ಎದುರು ನಿಂತಿವೆ. ಇನ್ನೊಂದು ಬೆಂಬಲವಿಲ್ಲದೆ, ಅಸಹಾಯಳಾಗಿ ಗೆದ್ದೇ ತೀರಬೇಕಾಗಿದೆ. ಆಕೆಯ ನೈತಿಕ ಶಕ್ತಿಯೇ ಆಕೆಗೆ ವಜ್ರಕವಚ-

ಅರಣ್ಯದಡವ್ಯಾಗ ಯಾರಾಣಿ ಕೊಡಲೆವ್ವ
ಸೂರ್ಯ ನಿನ್ನಾಣಿ ಶಿವನಾಣಿ | ಕೊಟ್ಟೇನ |
ಆರ್ಯಾಣ ಗೆದ್ದು ಬರುವೇನ ||

ಕೊಲುವೆನೆಂಬ ಭಾಷೆ ದೇವನದೂ ಗೆಲುವೆನೆಂಬ ಭಾಷೆ ಭಕ್ತನದೂ ಇರುತ್ತದಂತೆ ಅದರಲ್ಲಿ ನೂರು ಸಂಕಟಗಳು ಆಡರಿದರೂ, ಸಾವಿರ ಪರೀಕ್ಷೆಗಳು ಸುತ್ತುವರಿದರೂ ಭಕ್ತನಿಗೇ ಗೆಲವು ಕಟ್ಟಿಟ್ಟಿರುತ್ತದೆ. ಕೊಲುವೆವೆನ್ನುವ ಪರಿಸ್ಥಿತಿಯ ಕೈಯೊಳಗಿಂದ ಪಾರಾಗಿ, ಗರತಿ ಗೆದ್ದು ನಿಲ್ಲುವಳು. ಆಕೆಯು ಹಾರಯಿಸುವ ಅತ್ತೆಯ ಮನೆಯ ಪರಿಸ್ಥಿತಿಯು ಹೇಗಿರಬೇಕೆಂದರೆ-

ಆಕಳಂಥಾ ಅತ್ತಿ ಗೋಕುಲಂಥಾ ಮಾವ
ಶ್ರೀಕೃಷ್ಣನಂತ ಪತಿರಾಯ | ನಿದ್ದರ |
ಸಾಕೀದ ತವರ ಮರೆತೇನ ||

ಈ ಪರಿಸರವು ಸಾಕಿದ ತವರುಮನೆಯನ್ನು ಮರೆಯಿಸಬಲ್ಲದಾದರೆ, ಅತ್ತೆಯ ಮನೆಯಲ್ಲಿ ಬದುಕು ಮಾಡುವುದಕ್ಕೆ ಇನ್ನಿಷ್ಟು ಅನುಕೂಲತೆಗಳು ಬೇಕೆಂದು ಗರತಿ ಅಪೇಕ್ಷಿಸುತ್ತಾಳೆ-

ಅರಸುತೂಕದ ನಲ್ಲ ಗಳಿಸೂವ ಮೈದೂನ
ನಡಿಸಿಕೊಳ್ಳುವತ್ತಿ ಸಿರಿಗಂಗಿ | ಮನಿಯಾಗ
ಬದುಕು ಮಾಡುವದು ಅರಿದೇನ ||

ಇಂಥ ನಿಲುವಿಗೆ ಬಂದ ಬಳಿಕ ‘ಸತಿಪತಿ’ಯರ ಪ್ರೇಮಪರಿಪಾಕವು ಸಳಮಳಿಸತೊಡಗುವದು. ಗರತಿಯ ಮಹಾಕಾವ್ಯದಲ್ಲಿ ಅದೇ ಪ್ರಕರಣವು ಸ್ಥಾಯಿಯಾದುದು. ಅದನ್ನು ಮೂಲವನ್ನಾಗಿರಿಸಿಕೊಂಡೇ ಇನ್ನೆಲ್ಲ ತೊಂಗೆ ತಿಸಿಲುಗಳು ಹರಹಿಕೊಳ್ಳುವವು. ಅದೂ ಒಂದು ಸತ್ವಪರೀಕ್ಷೆ; ಅದೇಕೆ ಅಗ್ನಿ ಪರೀಕ್ಷೆ ಭೂಮಿಯ ಮಗಳು ಸೀತಾಮಾತೆಗೂ ಆಗ್ನಿಪರೀಕ್ಷೆ ತಪ್ಪಲಿಲ್ಲ. ಪ್ರತ್ಯಕ್ಷ ಆಗ್ನಿ ಪರೀಕ್ಷೆಗೇ ಆಎ ಒಳಗಾದಳು. ಆದರೆ ಗರತಿಯರದು ಪ್ರತ್ಯಕ್ಷ ಅಗ್ನಿ ಪರೀಕ್ಷೆ ಆಗಲಾರದಾದರೂ, ಅದು ಅಗ್ನಿಯಂಥ ಪರೀಕ್ಷೆಯಿದ್ದುದೇನೂ ಸುಳ್ಳಲ್ಲ. ಅಂಥ ಉದಾಹರಣೆಗಳು ನಮ್ಮ ಸುತ್ತಮುತ್ತಲೂ ಕಾಣಸಿಗುತ್ತವೆ. ಅವು ಸುದ್ದಿಯಾಗಿ ಸಂಗತಿಯಾಗಿ ಕಥೆಯಾಗಿ ಹಾಡಾಗಿ ಜನಜೀವನದಲ್ಲಿ ನೆಲೆ ನಿಂತಿರುತ್ತವೆ. ಆ ಹಾಡು-ಕಥೆಗಳು, ಮುಂದಿನವರಿಗೆ ಆದರ್ಶವಾಗಿ ಮಾರ್ಗದರ್ಶಕವಾಗಿ ಇನ್ನೂ ಬಹುಕಾಲ ಉಳಿಯಲಿವೆ. ಅವುಗಳಿಗೆ ನಮ್ಮೊಳಗಿನವರ ಅವೆಷ್ಟೋ ಜೀವನ ಕಥೆಗಳು ಸೇರಿಕೊಳ್ಳಬೇಕಾಗಿವೆ. ನಾಡಿನಲ್ಲಿ ಅಂಥ ಸಾಹಿತ್ಯದ ರಾಶಿಯೇ ಒಟ್ಟಿಕೊಂಡಿದೆ. “ಹಾಡಿನ ಹಾಗೆಯೇ ನನ್ನಲ್ಲಿದೆ; ಹಳೆ ಮಾಪು ತಂದು ಅಳೆದುಕೋ” ಎಂದು ಹೇಳಲಾಗುತ್ತಿದೆ.

ವ್ಯಾಪಾರಕ್ಕೆಂದು ಪರದೇಶಕ್ಕೆ ಹೋದ ಗಂಡನು ಒಂದು ಸಾರೆ ಬಹಳ ದಿವಸ ಊರಿಗೆ ಬರಲೇ ಇಲ್ಲ. ಹಾಗಾದಾಗ ಜೀವನವು ಒಮ್ಮೊಮ್ಮೆ ಹದಗೆಡುವುದೂ ಉಂಟು; ಹಸಗೆಡುವುದೂ ಉಂಟು. ಹಾಗಾಗಬಾರದೆಂದೇ ಗರತಿ ಎಚ್ಚರಿಕೆ ಕೊಡುವುದಕ್ಕೆ ಮರೆಯುವುದಿಲ್ಲ. ಅದು ಅಪ್ರಾಸಂಗೀಕವಾದರೂ ಅಪ್ರಯೋಜಕವಲ್ಲವಾದುದರಿಂದ ಅದನ್ನಿಲ್ಲಿ ಉದಾಹರಿಸುತ್ತೇನೆ-

ವಾಲೀಕಾರಾ ನಿನಗೆ ಒಳ್ಳೆ ಹೆಂಡತಿಯಾಕೋ?
ನೀ ಹೋದಿ ದೇಶ ತಿರುಗೂತ | ಮನಿಯಾನ ಬಾಲಿ |
ಒಣಗ್ಯಾಳೊ ಬಾಳಿಸುಳಿಯಾಂಗ ||

ಬಹಳ ದಿನ ಕಳೆದ ಮೇಲೆ ಆ ವ್ಯಾಪಾರಿಗೆ ಮನೆಯ ನೆನಪಾಯಿತು; ಮನೆಯವಳ ನೆನಪೂ ಆಯಿತು. “ಮನಿಯಾನ ಬಾಲಿ ಬಾಳಿಸುಳಿಯಂಗ ಒಣಗ್ಯಾಳೋ” ಇಲ್ಲವೆ ಇನ್ನಾವುದಾದರೂ ಹೊಯ್‌ನೀರಿನಿಂದ ಚಿಗಿಯುತ್ತಿರುವಳೋ ಅರಿತುಕೊಳ್ಳಬೇಕಾದರೆ, ವೇಷ ಬದಲಿಸುವುದು ಅವಶ್ಯಕವೆನಿಸಿತು. ಹಾಗೆಯೇ ಮಾಡಿದನು. ತನ್ನೂರ ಹಾದಿ ಹಿಡಿದನು; ಮನೆಗೆ ಬಂದನು; ಮನೆಯವಳನ್ನು ಕಂಡನು. ತನ್ನ ಗುರುತು ತೋರಗೊಡಲಿಲ್ಲ. ಮನೆಯವಳಿಗೆ ಕೌಶಲ್ಯದ ಪ್ರಶ್ನೆಗಳನ್ನು ಮಾಡುತ್ತಾನೆ. ಅದಕ್ಕೆ ಸರಿಯಾದ ಉತ್ತರಗಳೂ ದೊರೆಯುತ್ತವೆ. ಅದರಿಂದ ಆಕೆಯ ಪಾತಿವ್ರತ್ಯದ ಪರೀಕ್ಷೆಯೂ ಆಗುತ್ತದೆ. ತೇರ್ಗಡೆ ಆಗಿಬಿಡುತ್ತಾಳೆ-

“ಹಣ್ಣ ಬಂದಾವ ಹಣ್ಣ ಮಗಿಯ ಮಾವೀನಹಣ್ಣ ಜಾಣಿ
ಹಣ್ಣ ಕೊಳುತೇವ ಹಣ್ಣಿನ ಬೆಲೆಯ ಹೇಳ ಜಾಣೀ ||
ಬೆಲೆಯ ಹೇಳುವ ಜಾಣ ಮಲ್ಲಾಡದೇಶಕ್ಹೋಗ್ಯಾನಲ್ಲೋ ಜಾಣ
ತಿಳಿಯಲಾರದ ಬೆಲೆಯ ನಾ ಏನ್ಹೇಳಲೋ ಜಾಣ||
ಕೆರಿಯ ಪಾಳ್ಯದಮ್ಯಾಲ ಕರಿಕಬ್ಬ ಹಚ್ಚಾರಲಮ
s ಜಾಣಿ
ಅದರಾಗ ತುಡುಗ ದನ ಹೊಗತಾವಲಮ ಜಾಣಿ ||
ತುಡುಗ ದನ ಹೊಕ್ಕರ ಹೊಡದಾರ ಬಡದಾರೊ ಜಾಣ
ನಾಲ್ವರು ಕೂಡಿ ಬುದ್ಧಿ ಹೇಳುವರಲ್ಲೋ ಜಾಣಾ ||
ಭಾಂಯಾದರ ಕಟ್ಯಾರಲ್ಲ ಅರೊಟಿಗ್ಯಾದರಿಟ್ಟಾರಲಮ ಜಾಣಿ
ಅದರಾಗ ದಾನಧರ್ಮ ಇಲ್ಲ ಏನ
s ಜಾಣಿ ||
ಅನ್ನ ವಸ್ತ್ರ ದಾನ ಬೆಳ್ಳಿ ಬಂಗಾರ ದಾನೊ ಜಾಣ
ಹೆಣ್ಣ ಮಕ್ಕಳ ದಾನ ಕೊಡುವರೇನೊ ಜಾಣ ||
ಗುಡಿಯಾದರೂ ಕಟ್ಯಾರಲ್ಲ ಕಳಸಾದರಿಟ್ಟಾರಲಮ
s ಜಾಣೀ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮ
s ಜಾಣಿ ||
ಒಡೆದಾರೆ ಒಡೆಯಾಲಿ ಒಡೆದುನೆ ಛಲ್ಲುವಲೊ ಜಾಣ ||

ಸತೀಪರೀಕ್ಷೆ, ಸತ್ವಪರೀಕ್ಷೆ ಮುಗಿದು ಹೋಗುವದು. ಮದುವೆಯಾಗುವುದರಿಂದ ಶರೀರ ಸಂಬಂಧವಾದಂತಾಗುವದು. ಇನ್ನು ಸಂಸಾರದ ಕಾವಿನಿಂದ ಎರಡು ಆತ್ಮಗಳು ಒಂದಾಗಿರಬೇಕಾಗಿರುವುದು. ಎರಡು ಬತ್ತಿಗಳ ತುದಿಯಲ್ಲಿ ಒಂದೇ ಬೆಳಕು ಬೆಳಗಬೇಕು; ಎರಡು ಕಣ್ಣುಗಳಿಂದ ಒಂದೇ ವಸ್ತುವನ್ನು ದೃಷ್ಟಿಸಬೇಕು. ಅದೀಗ ಸಿದ್ಧಿ. ಆ ಸಿದ್ಧಿ ಪ್ರಾಪ್ತವಾಗುವವರೆಗೆ ಅವೆಷ್ಟೋ ಕೋಲಾಹಲ ನಡೆಯಬೇಕು. ಕೋಲಾಹಲದ ಉದ್ದೇಶ ತಿಳಿದರೆ, ಕೋಲಾಹಲದ ಕೂರ್ದವಡೆ ಒಂದಿಷ್ಟು ಮೊಂಡು ಆದೀತು, ಸಿದ್ಧಿಯ ಕಾಲ-ಆತಂಕವೂ ಕಡಿಮೆಯಾದೀತು. ಸತಿಪತಿಯರು ಕೂಡಿಕೆಯಲ್ಲಿ ಕನಕ್ಕಣಿಯಾಗುಉದೂ, ಅಗಲಿಕೆಯಲ್ಲಿ ವಿರಹಕ್ಕೊಳಗಾಗುವುದೂ ಹೊಸತಾಗಿ ಕಂಡುಬರುತ್ತದೆ. ಕೂಡಿಕೆಯಲ್ಲಿ ಕದನವೆಂದರೆ, ಹುಸಿಮುನಿಸಿನಂತೆ ಹುಸಿ ಕಲಹ. ವಿರಸವಾದಾಗ ನಿಜವಾದ ಕಲಹ ಅಥವಾ ಕಲಹ ಕೋಲಾಹಲವೇ. ವ್ಯಾಪಾರಕ್ಕೆಂದೋ ಉದ್ಯೋಗಕ್ಕೆಂದೋ ಪರ ಊರಿಗೆ ಹೊರಟು ನಿಂತ ಪತಿಯನ್ನು ಒಂದಿಷ್ಟು ಅಗಲುವೆನೆಂದೂ ಆ ಅಗಲಿಕೆಯು ವಿರಹಕ್ಕೀಡು ಮಾಡುವುದೆಂದೂ ಸತಿಗೆ ಗೊತ್ತು. ಆ ಸಂಕಟವು ಪತಿಯನ್ನೂ ಆವರಿಸದೆ ಇರುವುದಿಲ್ಲ. ಆತನ ಮುಖ ಬಾಡಿರುತ್ತದೆ. ಮೈ ಬೆವತಿರುತ್ತದೆ.

ಊರೀಗಿ ಹೋಗವರ ಮಾರ್ಯಾಕ ಬಾಡ್ಯಾವ
ಗೀರ ಗಂಧ್ಯಾಕ ಬೆವತಾವ | ಮಡದೀನ |
ಬಿಟ್ಟು ಹೊಂಟಾನ ಪರನಾಡ ||

ಹೆಂಡತಿ ತವರಿಗೆ ಹೋದಾಗಲು ಗಂಡನಿಗೆ ಭಣಭಣವಾಗುವದು.

ಅಡಗೀಯ ಮನಿಯಾಗ ಮಡದೀಯ ಸುಳವಿಲ್ಲ
ಅಡಿಗಿ ಬಾಯೀಗಿ ರುಚಿಯಿಲ್ಲ | ಹಡೆದವ್ವ |
ಮಡದಿ ತವರೀಗಿ ಹೋಗ್ಯಾಳ ||

ಗಂಡಸು ತನಗಾದ ಅವಸ್ಥೆಯನ್ನು ಬಾಯಿಬಿಚ್ಚಿ ಆಡಿರಲಿಕ್ಕಿಲ್ಲ. ಆದರೆ ಚಾಣಾಕ್ಷಳಾದ ಆತನ ತಾಯಿಗೆ ಹೊರಗಿನಿಂದ ಬಂದ ಮಗನು ಅಡಗಿಯ ಮನೆಯ ಕಡೆಗೆ ಕಿವಿ ನಿಮಿರಿಸಿ ನಿಲ್ಲುವುದೂ, ನಿಲುವುಗಣೆಯ ಮೇಲಿನ ಸೀರೆ ಕುಪ್ಪಸಗಳು ಅವೆಯೋ ಇಲ್ಲವೋ ಎಂದು ಕಣ್ಣರಳಿಸಿ ನೋಡುವುದೂ ತಿಳಿಯುತ್ತದೆ. ಮಗನನ್ನು ಊಟಕ್ಕೆಬ್ಬಿಸುತ್ತಾಳೆ. ‘ಹೆಂಡತಿ ಬಟ್ಟೆ ಒಗೆಯಲು ಹೋಗಿರಬೇಕೇನು?’ ಎಂಬ ಸಂಶಯದಿಂದ ಮಡಿಯರಿವೆಯಿಡುವ ಸ್ಥಳದ ಕಡೆಗೆ ದೃಷ್ಟಿ ಹರಿಯಿಸುತ್ತಾನೆ. ಆದರೆ ತಾಯಿಗೆ ಕೇಳಿ ಹೆಂಡತಿಯ ಸಮಾಚಾರ ತಿಳಿಕೊಳ್ಳುವುದಕ್ಕೆ ನಾಚುತ್ತಾನೆ. ಊಟಕ್ಕೆ ಕುಳಿತುಕೊಳ್ಳುವನು. ತಾಯಿ ಉಣಬಡಿಸುವಳು. ಹೆಂಡತಿಯ ಮುಖ ಮರೆಮಾಚಿದ್ದರಿಂದ ಬಾಯಲ್ಲಿಟ್ಟ ತುತ್ತು ಮುಗಿಯುವುದೇ ಇಲ್ಲ. “ಮಾರೀ ನೋಡಿದರೆ ನ್ಯಾರೀ ಮಾಡಿದಾಂಗ” ಎಂದು ಹೇಳುವುದರಲ್ಲಿ ಹೆಂಡತಿಯ ಮಾರಿ (ಮುಖ)ಯೇ ಇರಬೇಕು. ಆ ಮುಖ ಇಲ್ಲದಿದ್ದರೆ ಊಟವೂ ರುಚಿಸುವುದಿಲ್ಲ. ಹೀಗೆ ಗಂಡಸು ತಾನು ಮನೆಬಿಟ್ಟು ಹೊರಟರೂ ಬಾಡುತ್ತಾನೆ; ಹೆಂಡತಿ ತವರು ಮನೆಗೆ ಹೋದರಂತೂ ಊಟವನ್ನೇ ಬಿಡುತ್ತಾನೆ. ಈ ಅವಸ್ಥೆಯು ಹೆಂಡತಿಗೂ ಆಗದಿರುವುದಿಲ್ಲ.

ವಾರೀತಿ ರಾಯರು ಊರೀಗಿ ಹೋದರ
ಸೇರ ಬಂಗಾರ ತೆಗೆದಂಗ | ಮಲ್ಲೀಗಿ |
ಮುಡಿದು ಅಂಗಳಕ ಒಗೆದಂಗ ||
ಎಂದು ಬರತಿರಿ ನನ್ನ ಗಂಧದ ರತಿಗಾರ
ರುಮ್ಮಾಲ ಎಲ್ಲ ಪರಿಮಳ | ನನ ನಲ್ಲ |
ಎಂದ ಬರತೀರಿ ನನಗ್ಹೇಳ ||

ಎಂದು ಸಂಧಿಸಾಧಿಸಿ ಕೇಳಿಯೇ ಬಿಡುತ್ತಾಳೆ. ಯಾಕೆಂದರೆ –

ಕಮಳದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲೀಗೆ ಮಾಯ ಬಿಡಲಾರೆ | ಕೇದಿಗೆ |
ಗರಿ ನನ್ನನಗಲಿ ಇರಲಾರೆ

ಆಗಲಿ ಇರಲಾರದ ಗರತಿ ನಾಳೆ ತವರೂರಿಗೆ ಹೋಗುವದಿಲ್ಲವೇ? ಜೊತೆಗೆ ಗಂಡನನ್ನು ಕರಕೊಂಡೇ ಹೋಗುವಳೇ? ಒಮ್ಮೊಮ್ಮೆ ತವರುಮನೆಗೆ ಬರುವ ಮನಸ್ಸೂ ಇಲ್ಲವೆಂದು ತಿಳಿಸುತ್ತಾಳೆ ತಾಯಿಗೆ-

ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ ಬಿಚ್ಚಿ ನನಮ್ಯಾಗ ಒಗೆವಂಥ | ರಾಯನರನ |
ಬಿಟ್ಹ್ಯಾಂಗ ಬರಲೆ ಹಡೆದವ್ವ ||

ಯಾಕೆಂದರೆ-

ಹಣಚಿಬಟ್ಟಿನ ಮ್ಯಾಲೆ ಹರಿದಾಡು ಕುಂಕುಮ
ವಾರೀರಿ ಪುರುಷ ಇದರೀಗಿ | ಕುಂತರ |
ಹೆಚ್ಚೀನ ತವರ ಮರತೇನ ||
ಸರದಾರ ನಿಮ್ಮಿಂದ ಸರುವೆಲ್ಲ ಮರೆತೇನ
ಸರದಾಗ ಇರುವ ಗುಳದಾಳಿ | ನಿಮ್ಮಿಂದ |
ಸರುವ ಬಳಗೆಲ್ಲ ಮರೆತೇನ ||

ಸರ್ವ ಬಳಗವನ್ನು ಮರೆತು ಪತಿಯೇ ಸರ್ವಸ್ವ ಎಂದು ತಿಳಿದಿರುವ ಪತಿಯ ಅಗಲಿಕೆ ಸಹಿಸುವದು ಕಠಿಣವಾಗುತ್ತದೆ. ಹೋಗುವ ರಾಯರ ಹೋಲಿಕೆಯನ್ನು ಆಕೆ ನೋಡಿಯೇ ಬಿಟ್ಟಿರುತ್ತಾಳೆ. ನಲ್ಲನ “ಕಾಲ ಹಿಂಬಡ ಕಮಲವು, ಸಂಜೀಯ ಚಂದರನಕ್ಕಿಂತ ಬಲು ಚಲುವಾ”ಗಿ ಕಾಣಿಸುತ್ತದೆ. ಇನ್ನು ಕೂಡಿಕೆಯಲ್ಲಿ ಸರಸವು ಕಾಣಿಸಿಕೊಂಡಾಗ ಪತಿ ಹಾಸಿಗೆ ಹಾಸೆನ್ನುವನು; ಮಲ್ಲಿಗೆ ಮುಡಿಯೆನ್ನುವನು. ಬೇಸತ್ತರೆ ಮಡದೀ ಮಲಗು ಎನ್ನುವನು. ತನ್ನ ನೋಡಿ ತವರು ಮರೆ ಅನ್ನುವರು- ಈ ಮಾತಿನ ಸಂದರ್ಭವೊದಗಲು ಕಾರಣವೇನಿರಬಹುದು. ಏಕಾಂತದಲ್ಲಿ ಸತಿಯನ್ನು ಪತಿ ಕಂಡಾಗ ಅವಳಲ್ಲಿ ಅದೇಕೋ ನಿರುತ್ಸಾಹಭಾವ ಕಂಡು ಬಂದಿರಬೇಕು. ಅದನ್ನು ಹೋಗಲಾಡಿಸಬೇಕೆಂದು ಹಾಸಿಗೆ ಹಾಸಲಿಕ್ಕೂ ಮಲ್ಲಿಗೆ ಮುಡಿಯಲಿಕ್ಕೂ ಹೇಳಿರಬಹುದು. ಯಾಕೆಂದರೆ ಈ ಮೊದಲು ಅದೆಷ್ಟೋ ಸಾರೆ ಈ ಉಪಾಯವು ಉತ್ಸಾಹದಾಯಕವಾಗಿ ಪರಿಣಮಿಸಿದೆ.

ಹಾಸೀಗಿ ಹಾಸೆಂದ್ರು ಮಲ್ಲೀಗಿ ಮೂಸೆಂದ್ರು
ನಿಂತು ನೂರೆಲಿಯ ಮಡಿಚೆಂದ್ರು | ರಾಯರಿಗೆ |
ಎಂಥ ಸಿರಿಗಂಗಿ ಹಡೆದಾಳ ||

ಆದರೆ ಈ ಸಾರೆ ಹಾಗೆ ಮಾಡುವುದರಿಂದ ಉತ್ಸಾಹ ಕಂಡುಬರಲಿಲ್ಲ. ಹೆಂಡತಿಯಲ್ಲಿ ಬೇಸರಿಕೆ ಕಂಡುಬಂದಿತು. ಬೇಸರಿಕೆ ಕಳೆಯುವುದಕ್ಕೆ ತವರಿಗೆ ಹೋಗಿ ಬರಲು ಕೇಳಿಕೊಂಡಿರಬೇಕು. ಅಂತೆಯೇ-“ಬೇಸತ್ತರೆ ಮಡದೀ ಮಲಗು,” ಎಂದು ಹೇಳಿಬಿಡದೆ “ತನ್ನ ನೋಡಿ ತವರು ಮರೆ” ಅನ್ನುವನು. ಆಕೆ ಮರೆಯುವುದು ಹೇಗೆ? ಸರಸವು ತುಸು ವಿರಸಕ್ಕಿಳಿಯಿತು. ಮಾತಿನ ವಿರಸವು ಕೃತಿಯ ವಿರಸದವರೆಗೂ ಹೋಯಿತೆನ್ನೋಂ. ಪತಿ ಸಿಟ್ಟು ಮಾಡಿದಾಗಲೇ ಗರತಿ ಕೇಳಿಕೊಂಡಳು-

ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿ ಬ್ಯಾಡ
ಬಿಟ್ಟು ಬಂದೀದ ಬಳಗೆಲ್ಲ | ಪತಿಪುರುಷ
ಕಟ್ಯಾರ ತಮ್ಮ ಪದರಾಗ |

ವಿನಯಿಸುವ ಈ ನುಡಿ ಕೇಳಿ, ಅದೇಕೋ ಸಹಿಸದೆ ಒಂದೆಟು ಕೊಟ್ಟನೆಂದು ತೋರುತ್ತದೆ. ಅಷ್ಟರಿಂದ ಆಕೆಯ ಗಂಗೆ-ಯಮುನೆಗಳಿಗೆ ಮಹಾಪೂರ ಬಂದುಬಿಟ್ಟಿದ್ದು, ಬಹಳ ಹೊತ್ತು ಕಡಿಮೆ ಆಗಲೇ ಇಲ್ಲ. ಕೊನೆಗೆ ಹೊಡೆದವನೇ ಸೋತು, ಅಳುವವಳೇ ಗೆಲ್ಲುವ ಹೊತ್ತು ಬರುವದು. ಆಗ-

ಮಡದೀನ ಬಡಿದಾನ ಮನದಾಗ ಮರಗ್ಯಾನ
ಒಳಗ್ಹೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ್ಹೆಚ್ಚೋ ||

ಈ ಸುದ್ದಿ ತಾಯಿಗೂ ಗೊತ್ತಾಗುತ್ತದೆ. ಆಕೆ ಮಗನಿಗೆ ಕೇಳುತ್ತಾಳೆ.

ಮಾತೀನ ಮಡದೀಗ ಸೂತರದ ಗೊಂಬೀಗ |
ಯಾತರಲೆ ಹೊಡದಿ ನನ ತಮ್ಮ ||

ಅದಕ್ಕೆ ಮಗನು ಮರುನುಡಿಯುವನು-

ಕಾಕಿ ಹಣ್ಣಿಲಿ ಹೊಡೆದ ಕಮಳದ್ಹೂವಿಲಿ ಹೊಡೆದ
ತ್ವಾಟದಾಗಿರುವ ಗಜಲಿಂಬಿ | ಲ್ಹೊಡೆದರೆ |
ಮೋಜಿಲಳತಾಳೆ ಹಡೆದವ್ವ ||

ಇನ್ನೊಮ್ಮೆ ರಾಯರೇ ಮುನಿಸಾಗುತ್ತಾರೆ.ಆಗ ಅವರನ್ನು ಗರತಿಯೇ ಪರಾಮರಿಸಬೇಕಾಗುತ್ತದೆ. ಹಾಸಿದ ಹಾಸಿಗೆ ಬಿಟ್ಟು ಹಾದಿಗೆ ಬಂದು ಮಲಗುತ್ತಾರೆ. ಸುಳಿಗಾಳಿಗೂ ಬಳುಕುವ ಸೂಕ್ಷ್ಮ ಪ್ರಕೃತಿ ಅವರದು. ಪ್ರಕೃತಿಯ ಮೇಲೆ ಪರಿಣಾಮವೇನಾದರೂ ಆದೀತೆಂದು, ಆಕೆಯೇ ಸಾವಿರ ಸಾರೆ ಕಾಲು ಹಿಡಿದು ತಪ್ಪು ಮನ್ನಿಸಿರೆನ್ನುವಳು. ಮತ್ತೊಮ್ಮೆ ಬೇರೊಂದು ಲಗ್ನವಾಗುವ ಸೊಲ್ಲು ಕೇಳಿಸುತ್ತದೆ. ಅದರ ಇತ್ಯರ್ಥವಾಗುವ ಬಗೆಯಂತು? ಅದಕ್ಕೆ ಸಂದರ್ಭವೂ ಒಮ್ಮೆ ಒದಗಿಬರುವದು. ಪರಊರಿಗೆ ಹೋದವರು ರಾತ್ರಿ ಬಂದು ಊರು ಸೇರಿದರು. ಆ ಏಕಾಂತ, ಆ ಸೇವಾಸಂದರ್ಭಗಳು ಒದಗಿಬಂದಿರುವುದೇ ಸುಸಂದರ್ಭವೆಂದು ಆಕೆ ಬಗೆಯುವಳು. ತನ್ನ ಬಗೆಯನ್ನು ಕದಡುತ್ತಿದ್ದ ವಿಷಯವನ್ನು ಎತ್ತಿಯೆ ಬಿಡುವಳು.

ರಾಯ ಬರತಾರಂತ ರಾತ್ರೀಲಿ ನೀರಿಟ್ಟ
ರನ್ನ ಬಚ್ಚಲಕ ಮಣಿಹಾಕಿ | ಕೇಳೇನ |
ಸಣ್ಣವಳ ಮ್ಯಾಲ ಸಂವತ್ಯಾಕ?

ಮಕ್ಕಳಾಗಲಿಲ್ಲವೆನ್ನುವರೇ? ಇನ್ನೂ ಸಣ್ಣವಳು ನಾನು. ಇನ್ನೂ ಮಕ್ಕಳಾಗುವುದಕ್ಕೆ ಅವಕಾಶವೇ ಅದೇ. ಹಾಗಿದ್ದರೂ ಸಣ್ಣವಳ ಮೇಲೆ ಸವತಿಯೇಕೆ? ಎಂದು ಹೊಟ್ಟಿ ಹೊಕ್ಕು ಕೇಳಿಕೊಳ್ಳವಳು.

“ಮಕ್ಕಳ ಮಾತು ಹಾಗಿರಲಿ. ಆಳುವವಗೆ ಅರವತ್ತು ಹೆಂಡಿರು” ಎಂದು ರಾಯರು ಗಂಡು-ಉತ್ತರವನ್ನು ಬಹುಶಃ ಹೇಳಿರಲೇಬೇಕು. ಅದಕ್ಕೆಂತಲೇ ಹೆಂಡತಿಯು-

ಅಂಗೀಯ ಮ್ಯಾಲಂಗಿ ಛಂದೇನೋ ನನ ರಾಯ |
ರಂಬಿಮ್ಯಾಲ ರಂಬಿ ಪ್ರತಿರಂಬಿ | ಬಂದರ |
ಛಂದೇನೋ ರಾಯ ಮನಿಯಾಗ ||

ಮೇಲಿನಂಗಿಯಿಂದ ಒಳಗಿನ ಅಂಗಿಯ ಚೆಲುವು ಸಿರಿ ಅಪ್ರಯೋಜಕವಾಗುತ್ತದೆ. ನಾನು ಲಕ್ಷಣವಂತಿಯೇ ಇದ್ದೇನೆ. ಹಾಗಿರದಿದ್ದರೆ ಬೇರೊಬ್ಬ ಚೆಲುವೆಯನ್ನು ತರಬಹುದಿತ್ತು. ಈಗ ಹಾಗೆ ಮಾಡುವುದು ಚಂದವೇ? ಎಂದು ಕೇಳಿದ್ದಕ್ಕೆ ಆತನು ನಿರುತ್ತರನಾಗಿರಬೇಕು. ಈ ಪ್ರಸಂಗದಿಂದ ಅವರಲ್ಲಿ ಒಂದು ಒಪ್ಪಂದವಾದಂತೆ ತೋರುತ್ತದೆ. ಕೆಳಗಿನ ಪದ್ಯವೋದಿದರೆ ಆ ಒಪ್ಪಂದವು ಏನಿರಬಹುದೆಂದು ಊಹಿಸಬಹುದು-

ಗಂಡಪಂಡಿತರಾಯ…ಯ ಮಾಡಿದರೆ
ಭಂಡ ಮಾಡವರ ಮಗಳಲ್ಲ | ಕೊರಳಾನ |
ಗುಂಡು ಬೇಡಿದರೆ ಕೊಡುವೇನ ||

ಕೂಲಿ ಮಾಡಿದರೂ ಕೋರಿ ಹೊತ್ತರು ಹೆಂಡತಿಗೆ ಗಂಡ ಬಡವಲ್ಲ, ಬಂಗಾರ ಮಾಲ ಇದ್ದಂತೆ-ಯೆಂದು ಆಕೆಯೇ ಒಪ್ಪಿಕೊಳ್ಳುವಳು. ಅದರಂತೆ ಗಂಡನು ಪಂಡಿತರಾಯನೂ ಇರಬಹುದು.

ಕಾಗೀಗ ಕಣ್ಣಿಟ್ಟ ಕರಿಯ ಹುಬ್ಬಿನ ಜಾಣ |
ಮಾವಿನಹಣ್ಣು ಮನಿಯಾಗ | ಇಟುಗೊಂಡು |
ನೀರಲಕ್ಯಾಕ ನೆದರಿಟ್ಟಾ ||
ಹೆರವರ್ಹೆಣ್ಣೀಗಾಗಿ ಹೊರಗ ಮಲಗುವ ಜಾಣ
ಗಿಡದ ಮ್ಯಾಲೆರಡು ಗಿಣಿ ಕೂತು | ನುಡಿದಾವ |
ಎರವನ್ನೊ ರಾಯ ನಿನ ಜೀವ ||

ಈ ಮಾತಿಗೆ ಕಪ್ಪು ಹೆಂಡತಿ ಕಾರಣವೆಂದು ಸಮಾಧಾನ ಹೇಳಬಹುದು. ಆದರೆ –

ಕಪ್ಪು ಹೆಂಡತಿಯೆಂದು ಕರಕರಿ ಮಾಡಬ್ಯಾಡ
ನೀರಲದ ಹಣ್ಣು ನಲು ಕಪ್ಪು | ಇದ್ದರು |
ತಿಂದು ನೋಡಿದರ ರುಚಿ ಭಾಳ ||

ಎಂದು ಗಂಡನಿಗೆ ಬುದ್ಧಿ ಹೇಳಿದ ಬಳಗದವರು ಅವನ ಹೆಂಡತಿಗೂ ಒಂದು ಸಮಾಧಾನವನ್ನು ಹೇಳದೆ ಬಿಡುವದಿಲ್ಲ. ಆ ಮಾತು ಯಾವುದೆಂದರೆ-

ಪರಿಮಳದ ಪರನಾರಿಗ್ಹೋದರ |
ಮನಿ ಮಡದಿ ಬಾಯಿ ಬಿಡಬ್ಯಾಡ | ತಾವ್ತಮ್ಮ |
ಮನ ಹೇಸಿ ಮನಿಗೆ ಬರತಾರೆ ||

ಆದರೆ ಗರತಿಯ ತಪ್ಪಿನ ಪ್ರಭಾವದಿಂದ ಸರಿಯಾದ ದಾರಿಯ ಮೇಲೆ ಬಂದವರೂ ಇದ್ದಾರೆ. ತನ್ನ ದಾರಿಯೇ ಸರಿಯೆಂದು ಬಗೆದವರು ಇದ್ದಾರೆ.

ಸೂಳೀಗಿ ಹೋಗುವನ ಸುಳಿದು ಮಟ್ಟೀಕಟ್ಟಿ
ಊರ ಹೊರಗವನ ಹೆಡಮುರಗಿ | ಕಟ್ಟಿದರ |
ಸೂಳೆಂಬ ಶಬ್ದ ಬಿಡುವಲ್ಲ ||

ಇಂಥ ಬಾಳ್ವೆಯನ್ನು ಹೇಗೋ ಹೊಂದಿಸಿಕೊಂಡು, ಸೊಸೆಯಾದ ಗರತಿಯಾದ ಗರತಿಯು ಒಮ್ಮೆ ತಾಯಾಗಿ ಬಿಡುವಳು. ಮೊದಲು ಮಗುವಾಗುವ ಚಿಂತೆ ಬಳಿಕ ಅದು ದೊಡ್ಡದಾಗುವ ಚಿಂತೆ. ತರುವಾಯ ಪ್ರಬುದ್ಧನಾಗಲೆಂಬ ಚಿಂತೆ. ಆ ಚಿಂತೆಯ ಪರಿಹಾರಕ್ಕೆ ಗರತಿ ಏನೇನು ಮಾಡಬೇಕಾಯಿತು?

ಅಂಗಿ ತೊಡುವ ಬಾಳಾ ಎಂದಿಗಾದಾನೆಂದ |
ಕಂಡ ದೇವರಿಗೆ ಕೈಮುಗಿದ | ನನ ಬಾಳಾ |
ಎಂದಿಗಾದಾನು ಪರಬುದ್ಧ ||

ಮಗನ ಚೆಲುವೇ ಚೆಲುವು. ಅವನ ಬಲವೇ ಬಲ-

ಕಾಮನಂಥಾ ಕಣ್ಣು ಭೀಮನಂಥಾ ಹುಬ್ಬು
ರಾವಣನಕಿಂತ ನಡುಸಣ್ಣ || ನನ ಬಾಲ |
ಹುಲಿಯೆ ನಿನಗ್ಯಾರು ಕೆಣಕ್ಯಾರ ||

ಅವನ ತೋಟ, ಅವನ ಬೆಳೆ ಈ ಲೋಕದವಲ್ಲ –

ಕಾಮನ ತೋಟಕ ಭೀಮನು ಕಾವಲ
ಜೇನುತುಪ್ಪದಲ್ಲೆ ಮಡಿಯೆಳಡದು | ನನ ಬಾಲ |
ಕಾಮ ಬೆಳೆದಾನ ಕರಿಕಬ್ಬ ||

ಅಂತೆಯೇ ಗರತಿಯು ಚದುರು ಮುಡಿದ ಹೂ ಚಾವಡಿ ಏರಲೆಂದೂ ಕುದುರೆ ರಾವುತನಾದ ನನ್ನ ಬಾಲನು ಮುಡಿದ ಹೂ ಉದರಲಿ ನನ್ನ ಉಡಿಯಾಗ ಎಂದೂ ಹಾರಯಿಸುತ್ತಾಳೆ; ಹೀಗೆ ಹಾರಯಿಸುವಾಗ ನಾಳೆ ಸೊಸೆ ಬಂದ ಮೇಲೆ ಆಗಲಿರುವ ವ್ಯತ್ಯಾಸವನ್ನು ಬಗೆತಂದಿರುವದಿಲ್ಲ. ಮಗನ ಚೆಲುವಿನಲ್ಲಿ ಬಲವು ಹಬ್ಬಿರುತ್ತದೆ. ಅದರಂತೆ ಮಗಳ ಚೆಲುವಿನಲ್ಲಿ ನಲಿವು ತಬ್ಬಿರುತ್ತದೆ. ಕರವತಕಾಟ ಪತ್ತಲವುಟ್ಟು, ಉಗುರುಹಚ್ಚಿ ನಿರಿಗೆಹೊಯ್ದು ಕೈಬೀಸುತ್ತ ಹೊರಟ ಮಗಳು ಕರ್ನಾಟಕ ಗೊಂಬೆಯಂತೆ ಕಂಗೊಳಿಸುತ್ತಾಳೆ. ಇನ್ನೊಮ್ಮೆ-

ಹಲ್ಲೀಗಿ ಹಲಪುಡಿ ಗಲ್ಲಕ ಅರಿಷಿಣ
ಗೊಲ್ಲರರೋಣ್ಯಾಗ ಬರುವಳು | ಕಂದವ್ವ |
ನಲ್ಯಾರ ಒಳಗ ಕರಚೆಲುವಿ ||

ಹೀಗೆ ಕಾಣಿಸುವಳು. ಸೊಸೆ ಬಂದು ಮಗನನ್ನು ಕಸುಗೊಂದು ಹೋದಾಗಲೂ, ಕೊಡುಗೂಸನ್ನು ಗಂಡನ ಮನೆಗೆ ಕಳಿಸಿದಾಗಲೂ ಹೃದಯದ ಕಳವಳವು ಪ್ರೇಮವಿಪಾಕದ ಕಾರ್ಯವನ್ನು ಕೈಕೊಳ್ಳುತ್ತದೆ. ಆಗಲೂ ಪರಿಪಾಕದ ಗಳಿಗೆ ಬರದೆ ಹೋಗುವದಿಲ್ಲ. ಗರತಿಯು ಬಿಸಿಲು-ನೆರಳುಗಳ ದಾರಿಯಲ್ಲಿ ಸಾಗಿಸಾಗಿದಂತೆ ಬಿಸಿಲಿನ ತಾಪವು ಅವಳಿಗೆ ಪರಿಚಯದ್ದಾಗುತ್ತದೆ. ನೆರಳಿನ ತಂಪು ಅವಳಿಗೆ ಗೊತ್ತಿನದಾಗುತ್ತದೆ. ಆ ಬಿಸಿಲೇ ಮಾಗಿದಾಗ ಬೆಳದಿಂಗಳಾಗಿಬಿಡುತ್ತದೆ. ಇದು ಅದರಿಂದಾಗ ಹೃದಯ ಕಳವಳವು ಆಜನ್ಮವೂ ಕಂಗೆಡಿಸದೆ ಇರಲಾರದು. ಏತಕ್ಕೆಂದರೆ-

ಕಂದನೆತ್ತಲಿಲ್ಲ ಕೈಬೀಸಿ ನಡಿಲಿಲ್ಲ
ಗಂಡನ ಪುಣ್ಯ ಉಣಲಿಲ್ಲ | ಶಿವರಾಯ |
ರಂಡಿತನಕ್ಹೀಗ ಗುರಿಯಾಗಿ ||

ಎನ್ನುವ ಪರಿತಾಪವೇ ಜೀವನ ತಪಸ್ಸು. ಹೇಗಿದ್ದರೂ ಆಕೆ ಒಂದು ಧೈರ್ಯಕ್ಕೆ ತಲುಪುತ್ತಾಳೆ. ಆ ಧೈರ್ಯದಿಂದ ಜೀವನಸಾಗರವನ್ನು ಈಸುವ ನಿಶ್ಚಯ ಮಾಡುತ್ತಾಳೆ-

ಭಾಗಾದಿ ಬಲಕಿರಲಿ ವೈರಿ ತಾ ಎಡಕಿರಲಿ
ಛಾಡಿ ನಿನ ಮನಿಯು ಇದರಿರಲಿ |ಬಲಭೀಮ |
ದೇವನ ನನ ಮ್ಯಾಲ ದಯವಿರಲಿ ||

ಬಲಭೀಮದೇವರ ದಯೆಯೊಂದಿದ್ದರೆ,ಭಾಗಾಧಿ, ವೈರಿ, ಛಾಡಿ ಇವರೇನು ಮಾಡಬಲ್ಲರು?-“ದಿವ್ಯ….ಅನುಗ್ರಹ ರಕ್ಷಣೆಗಳು ನಿನ್ನೊಡನಿರುವಾಗ ನಿನ್ನನ್ನು ಯಾವುದು ಮುಟ್ಟಬಲ್ಲದು? ನೀನು ಅಂಜಬೇಕಾದುದು ಯಾರಿಗೆ?” ಎಂದು ಶ್ರೀ ಅರವಿಂದರು ಕೇಳುವರಲ್ಲದೆ – “ಯಾವ ಭೀತಿಗೂ ಸೊಪ್ಪು ಹಾಕದೆ, ದೃಶ್ಯ. ಅದೃಶ್ಯ ಲೋಕಗಳ ಎಂಥ ಬಲಾಢ್ಯ ವಿರೋಧಕ್ಕೂ ಕುಗ್ಗದೆ ಇರುವ ಅನುಗ್ರಹ ಅದು. ಅದರ ಸ್ಪರ್ಶವು ನಿನ್ನ ತೊಂದರೆಗಳನ್ನು ಸುಸಂಧಿಗಳನ್ನಾಗಿ, ಸೋಲನ್ನು ಗೆಲುವನ್ನಾಗಿ, ದುರ್ಬಲತೆಯನ್ನು ಅಮೋಘ ಶಕ್ತಿಯಾನ್ನಾಗಿ ಮಾರ್ಪಡಿಸಬಲ್ಲದು” ಎಂದು ಅಮರ ಆಶೀರ್ವಾದ ಸಲ್ಲಿಸಿರುವರು.